ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ !

ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು – ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಷ್ಟಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ ;
ಬಂದ ಚೈತ್ರ ಚಿಗುರಿನಂದದ
ಮಂದಹಾಸವೆ ಉಳಿಯಲಿ.