ಮಧ್ಯಯುಗದ ಈ ಧರ್ಮಯುದ್ಧಗಳಲ್ಲಿ
ಮೈಯೆಲ್ಲ ಗಾಯ.

ನರನರಗಳಲ್ಲಿ ಬಿಸಿರಕ್ತ ಬಿರುಗಾಳಿ ಬೀಸಿ
ಅಲುಗಿಸಿದಾಗ, ಕುದುರೆ ಹತ್ತಿದ್ದೊಂದೇ ಗೊತ್ತು,
ಮಿರಿ ಮಿರಿ ಮೈಯ ನಾಗಾಲೋಟದಲ್ಲಿ
ಬೆಟ್ಟಗಳನ್ನೇರಿ ಘಟ್ಟಗಳನ್ನಿಳಿದು
ದಾರಿ ಉದ್ದಕ್ಕೂ ಹೊಡೆದಾಡುತ್ತ
ಕಡೆಗೆ ಇಗೋ ಇಲ್ಲಿ ಬಂದು ಹೇಗೋ ಸಿಕ್ಕಿ ಬಿದ್ದೆ
ಮಧ್ಯಯುಗದ ಈ ರಣರಂಗದ
ನಟ್ಟ ನಡೂಮಧ್ಯೆ.

ಕೃಷ್ಣ ಗೀತೋಪದೇಶ ಮಾಡಿದ್ದು
‘ಮಧ್ಯೇ ಮಹಾಭಾರತೇ’
‘ಸೇನೋರುಭಯೋರ‍್ಮಧ್ಯೆ’ ಕವಿದ
ಕತ್ತಲಿನಲ್ಲಿ ಆ ಪಾರ್ಥನಿಗೆ
ಕೃಷ್ಣವಾಣಿಯ ಬೆಳಕು.
ಈ ನನಗೋ, ಯುದ್ಧದ ಮಧ್ಯೆ
ವಿಷಾದ ರೋಗ.
ಕೃಷ್ಣನಿಲ್ಲದ ಕೃಷ್ಣ ಪಕ್ಷ
ಜರ್ಝರಿತ ವಕ್ಷ.