ಧರ್ಮಪುತ್ರನ ತಂದೆ ಯಮರಾಜ; ಅವನ ತಾಯಿ ಕುಂತಿ; (ಶ್ರೀಕೃಷ್ಣನ ತಂದೆಯಾದ) ವಸುದೇವ ಸೋದರಮಾವ ಇವನೊಬ್ಬ ಯೋಧ, ಶೌರ್ಯದ ಆರಾಧಕ; ಅವನ ತಮ್ಮಂದಿರೋ, ಪ್ರಸಿದ್ಧರಾದ ಭೀಮಾರ್ಜುನರು ಮತ್ತು ಅವಳಿ ಸೋದರರಾದ ನಕುಲ ಸಹದೇವರು; (ಕೋಪಗೊಳ್ಳದ ಅವನು ಕೋಪಗೊಂಡರೆ) ಅವನ ಕೋಪ ಎಂದಿಗೂ ವ್ಯರ್ಥವಾಗದು; ಬಿಲ್ಲುವಿದ್ಯೆಯ ಗುರು ದ್ರೋಣಾಚಾರ್ಯ – ಎಂದ ಮೇಲೆ, ಚಂದ್ರವಂಶದಲ್ಲಿ ಹುಟ್ಟಿದವನೂ ಭರತವಂಶಕ್ಕೆ ಕಿರೀಟಪ್ರಾಯನೂ ಆದ ಧರ್ಮಪುತ್ರನು ಸಾಮಾನ್ಯನಲ್ಲ.

ದಾನಮಾಡಿದರೆ ಅದು ಒಳ್ಳೆಯ ಮಾತಿನಿಂದ ಕೂಡಿರಬೇಕು. ಜ್ಞಾನವನ್ನು ಹೊಂದಿರುವವನು ಗರ್ವವನ್ನು ಹೊಂದಿರಬಾರದು, ಶೂರನಾದವನು ದಯೆಯಿಂದ ಕೂಡಿರಬೇಕು – ಎಂಬ ಈ ಮಾತಿಗೆ ಅನುಗುಣವಾಗಿ ಇದ್ದುವು, ಧರ್ಮಪುತ್ರನು ಮಾಡುತ್ತಿದ್ದ ದಾನ, ಅವನ ಜ್ಞಾನ, ಮತ್ತು ಅವನ ಕ್ಷಮಾಗುಣ.

ನಾರಾಯಣಂ ನಮಸ್ಕೃತ್ಯ ನರಂ ಚೈವ
ನರೋತ್ತಮಂ ದೇವೀಂ ಸರಸ್ವತೀಂ
ವ್ಯಾಸಂ ತತೋ ಜಯ ಮುದೀರಯೇತ್‌

“ನಾರಾಯಣ (ಕೃಷ್ಣ), ನರರಲ್ಲಿ ಉತ್ತಮನಾದ ನರ (ಅರ್ಜುನ), ಸರಸ್ವತಿದೇವಿ, ವ್ಯಾಸಮಹರ್ಷಿ ಇವರಿಗೆ ನಮಸ್ಕಾರ ಮಾಡಿ ಆಮೇಲೆ ಭಾರತದ ಕಥೆಯನ್ನು ಹೇಳಬೇಕು.” ಇದು ಸಂಪ್ರದಾಯ.

ಯಾರಾದರೂ ಬಹಳ ನ್ಯಾಯವಾಗಿ ನಡೆಯುತ್ತಾರೆ, ಒಳ್ಳೆಯವರು ಎಂದು ಹೇಳಬೇಕಾದರೆ ‘ಅವನೊಬ್ಬ ಧರ್ಮರಾಯ’ ಎನ್ನುತ್ತೇವೆ.

‘ಧರ್ಮರಾಯ’ ಎನ್ನಿಸಿಕೊಂಡವನು, ಸಾವಿರಾರು ವರ್ಷಗಳಿಂದ ಜನರ ಮನಸ್ಸಿನಲ್ಲಿ ನೆಲೆ ನಿಂತವನು ಮಹಾಭಾರತದ ಯುಧಿಷ್ಠಿರ.

ಪಾಂಡವ ಕೌರವರ ಕಥೆಯೇ ಮಹಾಭಾರತ. ಇವರು ಕುರುವಂಶಕ್ಕೆ ಸೇರಿದ ರಾಜರು. ಪಾಂಡವರು ಪಾಂಡುಮಹಾರಾಜನ ಮಕ್ಕಳು. ಕೌರವರು ಧೃತರಾಷ್ಟ್ರನ ಮಕ್ಕಳು. ಕುರುಕುಲ ಪಿತಾಮಹನಾದ ಭೀಷ್ಮನ ಲಾಲನೆಪಾಲನೆಯಲ್ಲಿ ಇವರೆಲ್ಲ ಬೆಳೆದರು.

ಭೀಷ್ಮನು ತಾನು ಮದುವೆಯಾಗುವುದಿಲ್ಲವೆಂದೂ, ತನ್ನ ಮಲತಮ್ಮನಾದ ವಿಚಿತ್ರವೀರ್ಯನಿಗೇ ರಾಜ್ಯವನ್ನು ವಹಿಸಿಕೊಡುವುದಾಗಿಯೂ ತನ್ನ ತಂದೆಗೆ ಮಾತು ಕೊಟ್ಟಿದ್ದನು. ವಿಚಿತ್ರವೀರ್ಯನು ಅಲ್ಪಾಯುವಾಗಿ ತೀರಿಕೊಂಡ ಮೇಲೆ, ಇನ್ನೂ ಚಿಕ್ಕವರಾಗಿದ್ದ ಅವನ ಮಕ್ಕಳು ಧೃತರಾಷ್ಟ್ರನನ್ನೂ ಪಾಂಡುವನ್ನೂ ಅಕ್ಕರೆಯಿಂದ ಬೆಳೆಸಿ, ಮುಂದಕ್ಕೆ ತಂದನು. ಅವರಿಬ್ಬರಿಗೂ ಸಕಾಲದಲ್ಲಿ ಮದುವೆ ಮಾಡಿಸಿದನು. ಧೃತರಾಷ್ಟ್ರನ ಹೆಂಡತಿ ಗಾಂಧಾರಿ. ಪಾಂಡುವಿಗೆ ಇಬ್ಬರು ಹೆಂಡಿರು; ಮೊದಲನೆಯವಳು ಕುಂತೀಭೋಜ ಎಂಬ ರಾಜನ ಸಾಕುಮಗಳಾದ ಕುಂತಿ. ಇವಳು ವಸುದೇವನ ತಂಗಿ; ಶ್ರೀಕೃಷ್ಣನ ಸೋದರತ್ತೆ. ಎರಡನೆಯ ಹೆಂಡತಿ ಮುದ್ರರಾಜನ ಮಗಳಾದ ಮಾದ್ರಿ. ಧೃತರಾಷ್ಟ್ರ ಹುಟ್ಟು ಕುರುಡ. ಆದ್ದರಿಂದ ಪಾಂಡುವೇ ದೊರೆಯಾಗಿದ್ದವನು.

ಪಾಂಡುವಿನ ಹಿರಿಯ ಹೆಂಡತಿಯಾದ ಕುಂತಿ ಕನ್ಯೆಯಾಗಿದ್ದಾಗ ದೂರ್ವಾಸ ಮುನಿಗೆ ಅತಿಥಿಸತ್ಕಾರ ಮಾಡಿ, ಆತನನ್ನು ಸಂತೋಷಪಡಿಸಿದ್ದಳು. ಸಂತುಷ್ಟರಾದ ಅವರು ಅವಳಿಗೆ ಐದು ಮಂತ್ರಗಳನ್ನು ಉಪದೇಶಿಸಿದ್ದರು. ಕನ್ಯೆಯಾಗಿದ್ದಾಗಲೇ ಸೂರ್ಯಮಂತ್ರದ ಬಲದಿಂದ ಕರ್ಣನನ್ನು ಪಡೆದಿದ್ದಳು. ಜನ ಆಡಿಕೊಳ್ಳುವರೆಂದು ಹೆದರಿ, ಮಗುವನ್ನು ಅವಳು ಗಂಗೆಗೆ ಹಾಕಿಬಿಟ್ಟಿದ್ದಳು.

ಅನೇಕ ವರ್ಷ ರಾಜ್ಯವಾಳಿದ ಮೇಲೆ ಪಾಂಡುವಿಗೆ ವೈರಾಗ್ಯವುಂಟಾಗಿ, ತಪಸ್ಸು ಮಾಡಲು ಕಾಡಿಗೆ ತೆರಳಿದನು. ಅವನ ಹೆಂಡಿರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವರೆಲ್ಲರೂ ತಪಸ್ಸು ಮಾಡುತ್ತ ನಿಶ್ಚಿಂತೆಯಾಗಿದ್ದರು. ಎಷ್ಟು ತಪಸ್ಸು ಮಾಡಿದರೇನು? ಗಂಡು ಮಕ್ಕಳಿಲ್ಲ ಎಂದು ಪಾಂಡು ಕೊರಗಿದನು; ತನ್ನ ಕೊರಗನ್ನು ಕುಂತಿಯ ಮುಂದೆ ತೋಡಿಕೊಂಡನು. ಆಗ ಕುಂತಿ ದೂರ್ವಾಸರಿಂದ ತನಗೆ ದೊರೆತಿದ್ದ ಮಂತ್ರಗಳ ವಿಚಾರವನ್ನು ಪಾಂಡುವಿಗೆ ತಿಳಿಸಿದಳು. ಅವನ ಒಪ್ಪಿಗೆ ಪಡೆದು, ಕುಂತಿ ಯಮಧರ್ಮನ ವರದಿಂದ ಯುಧಿಷ್ಠಿರನನ್ನೂ, ವಾಯುದೇವನ  ವರದಿಂದ ಭೀಮಸೇನನ್ನೂ, ಇಂದ್ರನ ವರದಿಂದ ಅರ್ಜುನನನ್ನೂ ಪಡೆದಳು. ಉಳಿದಿದ್ದ ಒಂದು ಮಂತ್ರವನ್ನು ಮಾದ್ರಿಗೆ ಹೇಳಿಕೊಟ್ಟಳು. ಮಾದ್ರಿ ಅಶ್ವಿನೀ ದೇವತೆಗಳ ವರದಿಂದ ನಕುಲ, ಸಹದೇವ ಎಂಬ ಅವಳಿ ಮಕ್ಕಳನ್ನು ಪಡೆದಳು.

ಪ್ರಪಂಚ ಒಂದು ರಣರಂಗ; ಮನುಷ್ಯನ ಮನಸ್ಸು ಅವನ ಅಂತರಂಗ. ಎರಡರಲ್ಲಿಯೂ ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಯಾವಾಗಲೂ ಹೋರಾಟ ನಡೆಯುತ್ತಲೇ ಇರುತ್ತದೆ. ಒಳ್ಳೆಯತನವೇ ಧರ್ಮ; ಅದರಿಂದಲೇ ಜಗತ್ತು ನಿಂತಿರುವುದು. ಯಮ ಧರ್ಮಸ್ವರೂಪ, ಕ್ರೂರಿಯಲ್ಲ. ತನ್ನ ಹಿರಿಯ ಮಗನೂ , ಧರ್ಮಸ್ವರೂಪನಾಗಬೇಕೆಂದು ಪಾಂಡು ಇಷ್ಟಪಟ್ಟಿದ್ದನು; ಯಮಧರ್ಮನ ವರದಿಂದ ಅಂತಹ ಮಗನನ್ನು ಪಡೆಯಬೇಕೆಂದು ಕುಂತಿಗೆ ಹೇಳಿದನು. ಅದರಂತೆ ಅವಳು ಯಮಧರ್ಮನ ವರದಿಂಧ ಪಾಂಡುವಿಗಾಗಿ ಹಿರಿಯ ಮಗನನ್ನು ಪಡೆದಳು. ಆದ್ದರಿಂದ ಅವನು ಧರ್ಮಪುತ್ರ ಎಂದು ಹೆಸರು ಪಡೆದನು. ಮನಸ್ಸಿನಲ್ಲಿ ನಡೆಯುವ ಒಳಿತು ಕೆಡಕುಗಳ ಹೋರಾಟದಲ್ಲಿ ಅವನ ಮನಸ್ಸುಕದಲದೆ ಸ್ಥಿರವಾಗಿರುತ್ತಿತ್ತು; ಒಳಿತಿನ ಕಡೆಗೇ ಬಾಗುತ್ತಿತ್ತು. ಧರ್ಮಯುದ್ಧದಲ್ಲಿ ಸ್ಥಿರವಾದ ಮನಸ್ಸನ್ನು ಉಳ್ಳ ಈ ಧರ್ಮಪುತ್ರನಿಗೆ ಯುಧಿಷ್ಠಿರ ಎಂದು ಹೆಸರಾಯಿತು. ಈ ಹೆಸರು ಧರ್ಮಪುತ್ರನ ಬಾಳಿನ ಉದ್ದಕ್ಕೂ ಸಾರ್ಥಕ ಎನಿಸಿತು. ಯುಧಿಷ್ಟಿರ ಧರ್ಮವಂತನಾಗಿ, ಸತ್ಯವಂತನಾಗಿ ಬಾಳಿದನು; ಧರ್ಮರಾಜ ಎಂದು ಲೋಕಪ್ರಸಿದ್ಧನಾದನು. ಧರ್ಮ ಯಾವ ಕಡೆಗೆ ಇರುತ್ತದೆಯೋ ಆ ಕಡೆ ಜಯ ಸಿದ್ಧ ಎಂಬ ಸತ್ಯವನ್ನು ನೆಲೆಗೊಳಿಸಿದನು.

ಕೆಲವು ಕಾಲದ ಮೇಲೆ ಪಾಂಡು ತೀರಿಕೊಂಡನು. ಮಾದ್ರಿ ಗಂಡನೊಂದಿಗೆ ಸಹಗಮನ ಮಾಡಿದಳು. ಗಂಡನನ್ನು ಕಳೆದುಕೊಂಡ ಕುಂತಿ ಐದು ಮಂದಿ ಪಾಂಡು ಕುಮಾರರೊಂದಿಗೆ ಹಸ್ತಿನಾವತಿಗೆ ಹಿಂದಿರುಗಿ, ಧೃತರಾಷ್ಟ್ರನ ಆಸರೆಯಲ್ಲಿ ನೆಲಸಿದಳು.

ಕೌರವರ ದ್ವೇಷದ ಉರಿ ಹೊತ್ತಿತು

ಕುಂತಿ ಮಾದ್ರಿಯರು ಮಕ್ಕಳನ್ನು ಪಡೆದಾಗಲೇ ಧೃತರಾಷ್ಟ್ರನ ಮಡದಿಯದ ಗಾಂಧಾರಿಯೂ ನೂರು ಮಂದಿ ಗಂಡು ಮಕ್ಕಳನ್ನೂ ಒಂದು ಹೆಣ್ಣು ಕೂಸನ್ನೂ ಪಡೆದಳು. ನೂರರಲ್ಲಿ ದುರ್ಯೋಧನನೇ ಹಿರಿಯ; ಎರಡನೆಯವನೇ ದುಶ್ಯಾಸನ. ಯುಧಿಷ್ಠಿರನು ಹುಟ್ಟಿದ ದಿನವೇ ದುರ್ಯೋಧನನೂ ಹುಟ್ಟಿದನು. ಪಾಂಡುವಿನ ಮಕ್ಕಳೂ ಧೃತರಾಷ್ಟ್ರನ ಮಕ್ಕಳೂ ಒಂದೇ ಕುರುವಂಶಕ್ಕೆ ಸೇರಿದವರು. ಆದರೂ ಧೃತರಾಷ್ಟ್ರನ ಮಕ್ಕಳು ಮಾತ್ರ ಕೌರವರೆಂದು ಪ್ರಸಿದ್ಧರಾದರು.

ಧೃತರಾಷ್ಟ್ರನ ಮೇಲ್ವಿಚಾರಣೆಯಲ್ಲಿ ಕೌರವ ಪಾಂಡವರಿಗೆ ಅಸ್ತ್ರಶಸ್ತ್ರಗಳ ಶಿಕ್ಷಣವಾಯಿತು. ಧನುರ್ವಿದ್ಯಾ ಪಾರಂಗತರಾಗಿದ್ದ ದ್ರೋಣಾಚಾರ್ಯರು ಎಲ್ಲರಿಗೂ ಗುರು.

ದ್ರೋಣಾಚಾರ್ಯರ ಬಳಿ ವಿದ್ಯಾಭ್ಯಾಸ ಮಾಡಿದವರಲ್ಲಿ ಭೀಮ ದುರ್ಯೋಧನರು ಗದಾಯುದ್ಧದಲ್ಲಿ ನಿಪುಣರಾದರು. ಭೀಮನನ್ನು ಕಂಡರೆ ದುರ್ಯೋಧನನಿಗೆ ಮೊದಲಿನಿಂದಲೂ ಆಗದು; ಈಗಂತೂ ಅವನ ಮೇಲಿನ ಹಗೆತನ ಹೆಚ್ಚಾಯಿತು; ಅವನನ್ನು ಕೊಲ್ಲಬೇಕೆಂದು ಹಲವು ಸಲ ಪ್ರಯತ್ನಪಟ್ಟನು. ಆದರೆ ಅವನ ಪ್ರಯತ್ನ ಯಾವುದೂ ನಡೆಯಲಿಲ್ಲ. ಪಾಂಡವರನ್ನೆಲ್ಲಾ ಒಟ್ಟಿಗೆ ನಾಶಮಾಡಿಕೊಟ್ಟರೆ ತಾವು ಅಣ್ಣತಮ್ಮಂದಿರು ರಾಜ್ಯವಾಳಿಕೊಂಡು ಸುಖವಾಗಿ ಇರಬಹುದು ಎಂಬ ಕೆಟ್ಟ ಯೋಚನೆ ಹೊಂದಿದ್ದನು.

ಯುಧಿಷ್ಠಿರನು ರಥದಲ್ಲಿ ಕುಳಿತು ಯುದ್ಧ ಮಾಡುವುದರಲ್ಲಿ ಗಟ್ಟಿಗನಾದನು. ನಕುಲ ಸಹದೇವರು ಖಡ್ಗ ವಿದ್ಯೆಯಲ್ಲಿ ಸಮರ್ಥರಾದರು. ಅರ್ಜುನನು ಎಲ್ಲ ವಿದ್ಯೆಗಳನ್ನೂ ಕಲಿತು, ಬಿಲ್ಲುವಿದ್ಯೆಯಲ್ಲಿ ಎಲ್ಲರನ್ನೂ ಮೀರಿಸಿದನು;  ದ್ರೋಣರ ಮೆಚ್ಚಿನ ಶಿಷ್ಯನಾದನು. ಇದು ದುರ್ಯೋಧನನ ಪಾಂಡವದ್ವೇಷವನ್ನು ಹೆಚ್ಚುಮಾಡಿತು.

“ಪಾಂಡವರಲ್ಲಿ ಹಿರಿಯನಾದ ಯುಧಿಷ್ಠಿರನೇ ರಾಜನಾಗಲು ತಕ್ಕವನು. ಅವನು ಧರ್ಮಶೀಲ; ಸತ್ಯವಂತ; ತಾಳ್ಮೆಯುಳ್ಳವನು; ಗುರುಹಿರಿಯರಲ್ಲಿ ಭಕ್ತಿಯುಳ್ಳವನು. ಯಾರಿಗೂ ಕೆಡುಕನ್ನು ಬಗೆಯದೆ ಎಲ್ಲರಿಗೂ ಒಳ್ಳೆಯದನ್ನೇ ಮಾಡುವವನು. ಅವನು ರಾಜನಾದರೆ ಪ್ರಜೆಗಳೂ ನೆಮ್ಮದಿಯಿಂದಿರುತ್ತಾರೆ” ಎಂದು ಜನರೆಲ್ಲಾ ಧರ್ಮಪುತ್ರನ ಗುಣವನ್ನು  ಕೊಂಡಾಡುತ್ತಿದ್ದರು.

ಜನರ ಮಾತು ದುರ್ಯೋಧನನ ಕಿವಿಗೂ ಬಿತ್ತು. ಅವನು ತನ್ನ ತಂದೆಯ ಬಳಿಗೆ ಹೋಗಿ, ಜನ ಹೇಳಿಕೊಳ್ಳುತ್ತಿರುವಂತೆ ರಾಜನಾಗಿಬಿಟ್ಟರೆ ತಾವೆಲ್ಲ ಪಾಂಡವರ ಅಡಿಯಾಳುಗಳಂತೆ ಇರಬೇಕಾಗುವುದೆಂದು ತನ್ನ ದುಃಖವನ್ನು ತೋಡಿಕೊಂಡನು.

ಯುಧಿಷ್ಠಿರನ ಸದ್ಗುಣಗಳೆಲ್ಲವನ್ನೂ ಧೃತರಾಷ್ಟ್ರನು ಅರಿತವನಾಗಿದ್ದನು. ಪಾಂಡುವಿನ ಬಳಿಕ ಅವನ ಹಿರಿಯ ಮಗನಾದ ಯುಧಿಷ್ಠಿರನೇ ರಾಜನಾಗುವುದು ನ್ಯಾಯ ಎಂದು ತಿಳಿಯಹೇಳಿದನು. ಆದರೆ ದುರ್ಯೋಧನನಿಗೆ ತಾನೇ ರಾಜನಾಗಬೇಕೆಂಬ ಹೆಬ್ಬಯಕೆ. ಅವನು ತಂದೆಯ ಮನಸ್ಸನ್ನು ಒಲಿಸಿಕೊಂಡು, ವಾರಣಾವತ ಎಂಬ ಪಟ್ಟಣದಲ್ಲಿ ಕಟ್ಟಿಸಿದ್ದ ಅರಗಿನ ಮನೆಯಲ್ಲಿ ಪಾಂಡವರನ್ನು  ಸುಡಿಸುವ ಸನ್ನಾಹ ಮಾಡಿದನು. ಸಂಚಿನ ಸುಳಿವನ್ನು ಅರಿತಿದ್ದ ವಿದುರನು ವಾರಣಾವತಕ್ಕೆ ಹೋದ ಪಾಂಡವರನ್ನು ಮೊದಲೇ ಎಚ್ಚರಿಸಿದ್ದನು. ಅವರು ಅರಗಿನ ಮನೆಗೆ ತಾವೇ ಬೆಂಕಿಹಾಕಿ ಸುರಂಗಮಾರ್ಗದಿಂದ ಹೊರ ಬಿದ್ದರು.

ಪಾಂಡವರು ಅರಗಿನ ಮನೆಯಲ್ಲಿ ಭಸ್ಮವಾದರೆಂಬ ಸುದ್ದಿಯೇನೋ ಹಸ್ತಿನಾವತಿಗೆ ಮುಟ್ಟಿತು. ಹೀಗೆ ಅಪಾಯದಿಂದ ಪಾರಾಗಿ, ಅವರು ಕಾಡುಮೇಡು ಅಲೆಯುತ್ತ, ದಕ್ಷಿಣ ದಿಕ್ಕಿನ ಕಡೆಗೆ ಪ್ರಯಾಣ ಮಾಡಿ, ದಟ್ಟವಾದ ಒಂದು ಕಾಡನ್ನು ಸೇರಿದರು.

ರಾಣಿಯೊಡನೆ ಮತ್ತೆ ರಾಜ್ಯಕ್ಕೆ

ಕಾಡಿನಿಂದ ಕಾಡಿಗೆ ಅಲೆಯುತ್ತ ಪಾಂಡವರ ಬ್ರಾಹ್ಮಣವೇಷದಲ್ಲಿ ಏಕಚಕ್ರಪುರವನ್ನು ಪ್ರವೇಶಿಸಿದರು. ಅಲ್ಲಿ ಒಬ್ಬ ಬಡಬ್ರಾಹ್ಮಣನ ಮನೆಯಲ್ಲಿ ಬಿಡಾರ ಮಾಡಿದರು. ಮೊದಲು ಅರಮನೆಯಲ್ಲಿ ಸುಖವಾಗಿದ್ದ ಪಾಂಡವರು ಭಿಕ್ಷಾನ್ನದಿಂದ ಹೊಟ್ಟೆ ಹೊರೆಯುವ ಕಾಳ ಬಂದಿತು.

ಈ ಸಮಯದಲ್ಲಿ ಪಟ್ಟಣದ ಕುಟುಂಬಗಳಿಗೆಲ್ಲ ಮೃತ್ಯುಪ್ರಾಯನಾಗಿದ್ದ ಬಕ ಎಂಬ ರಾಕ್ಷಸನನ್ನು ಭೀಮನು ಕೊಂದು, ತಮಗೆ ಆಶ್ರಯ ಕೊಟ್ಟಿದ್ದ ಬ್ರಾಹ್ಮಣ ಕುಟುಂಬವನ್ನು ಕಾಪಾಡಿದನು.

ಹೀಗಿರಲು, ಪಾಂಡವರು ಇಳಿದುಕೊಂಡಿದ್ದ ಮನೆಗೆ ಒಬ್ಬ ಬ್ರಾಹ್ಮಣನು ಅತಿಥಿಯಾಗಿ ಬಂದನು. ಅವನು ತನ್ನ ದೇಶಸಂಚಾರದ ಅನುಭವಗಳನ್ನು ತಿಳಿಸುತ್ತ ಪಾಂಚಾಲದೇಶದ ದೊರೆಯಾದ ದ್ರುಪದನು ತನ್ನ ಮಗಳಾದ ದ್ರೌಪದಿಯ ಸ್ವಯಂವರವನ್ನು ಏರ್ಪಡಿಸಿರುವ ವಿಚಾರವನ್ನು ತಿಳಿಸಿದನು. ಕುಂತಿಯ ಒಪ್ಪಿಗೆ ಪಡೆದು, ಪಾಂಡವರು ಬ್ರಾಹ್ಮಣರ ವೇಷದಲ್ಲಿಯೇ ಪಾಂಚಾಲ ದೇಶಕ್ಕೆ ಹೋದರು.

ದ್ರೌಪದಿಯ ಸ್ವಯಂವರಕ್ಕೆ ನಾನಾ ದೇಶಗಳಿಂದ ರಾಜರು ಬಂದಿದ್ದರು. ಬ್ರಾಹ್ಮಣವೇಷದಲ್ಲಿದ್ದ ಪಾಂಡವರೂ ಸ್ವಯಂವರ ಮಂಟಪಕ್ಕೆ ಹೋಗಿ ಬ್ರಾಹ್ಮಣರ ಮಧ್ಯೆ ಕುಳಿತರು. ಕ್ಷತ್ರಿಯರಾರಿಗೂ ಅಲ್ಲಿ ಇರಿಸಿದ್ದ ಬಿಲ್ಲಿಗೆ ಹೆದೆಯೇರಿಸಲು ಕೂಡ ಆಗಲಿಲ್ಲ. ಅಗ ಅರ್ಜುನನು ಎದ್ದುಹೋಗಿ ಮತ್ಸ್ಯ ಯಂತ್ರವನ್ನು ಭೇದಿಸಿದನು. ದ್ರೌಪದಿ ಅವನ ಕೊರಳಿಗೆ ಹೂಮಾಲೆ ಹಾಕಿದಳು.

ಅರ್ಜುನನು ಸ್ವಯಂವರದಲ್ಲಿ ಗೆದ್ದ ದ್ರೌಪದಿಯೊಂದಿಗೆ ಪಾಂಡವರು ತಮ್ಮ ಬಿಡಾರಕ್ಕೆ ಹಿಂದಿರುಗಿದರು. ಮನೆಯ ಬಾಗಿಲ ಮುಂದೆ ನಿಂತು – “ಅಮ್ಮಾ! ಭಿಕ್ಷೆ ತಂದಿದ್ದೇವೆ” ಎಂದು ಗಟ್ಟಿಯಾಗಿ ಕೂಗಿ ಹೇಳಿದರು. ಕುಂತಿ – “ಎಂದಿನ ಹಾಗೆ ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ” ಎಂದು ಒಳಗಿನಿಂದಲೇ ಹೇಳಿಬಿಟ್ಟಳು. ಪಾಂಡವರು ಒಬ್ಬರ ಮುಖವನ್ನು ಒಬ್ಬರು ನೋಡಿ ನಕ್ಕರು. ಕುಂತಿ ಹೊರಗೆ ಬಂದು ನೋಡುತ್ತಾಳೆ, ಅವರು ತಂದಿದ್ದ ಭಿಕ್ಷೆ ಒಬ್ಬ ಹೆಣ್ಣು!

ಕುಂತಿ, “ಎಂಥ ಮಾತು ನನ್ನಿಂದ ಹೊರಟುಬಿಟ್ಟಿತು! ಈ ಹೆಣ್ಣು ಯಾರು? ಹೇಗೆ ನಿಮ್ಮ ಜೊತೆ ಬಂದಳು!” ಎಂದು ಆಶ್ಚರ್ಯಪಟ್ಟು ಕೇಳಿದಳು.

ಯುಧಿಷ್ಠಿರನು, ಸ್ವಯಂವರದಲ್ಲಿ ದ್ರೌಪದಿಯನ್ನು ಅರ್ಜುನ ಗೆದ್ದ ಸಂಗತಿಯನ್ನು ವಿವರಿಸಿದನು.

ಕುಂತಿ ಯುಧಿಷ್ಠಿರನನ್ನು ಕುರಿತು “ಮಗೂ,ನೀವು ಅನ್ನ ತಂದಿರುವಿರಿ ಎಂದು ತಿಳಿದು ನಾನು ಹಾಗೆ ಹೇಳಿಬಿಟ್ಟೆ. ಐವರು ಒಬ್ಬಳನ್ನು ಮದುವೆಯಾಗುವುದು ಅಧರ್ಮ. ಯುಧಿಷ್ಠಿರಾ, ಈ ಸಮಸ್ಯೆಯನ್ನು ನೀನೇ ಬಗೆಹರಿಸಬೇಕು” ಎಂದಳು.

ಯುಧಿಷ್ಠಿರ – “ಅಮ್ಮಾ, ತಾಯಿಯ ಮಾತು ಮೀರತಕ್ಕದ್ದಲ್ಲ. ಆದರೂ, ಅವಳನ್ನು ಗೆದ್ದವನು ಅರ್ಜುನ. ಅವನು ಅವಳನ್ನು ಮದುವೆಯಾಗಲಿ. ಇದು ನ್ಯಾಯ.”

ಅರ್ಜುನ-“ಅಣ್ಣಾ ಇದು ಲೋಕದ ನ್ಯಾಯ. ಆದರೆ ಧರ್ಮವಲ್ಲ. ನನ್ನನ್ನು ಅಧರ್ಮಕ್ಕೆ ಗುರಿ ಮಾಡುವೆಯಾ? ತಾಯಿಯ ಮಾತನ್ನು ನಡೆಸಬೇಕಾದದ್ದು ಎಲ್ಲಕ್ಕಿಂತ ಹಿರಿಯ ಧರ್ಮ. ನಿಜವಾದ ಸಂಗತಿ ತಿಳಿಯದೆ ಆಡಿದ ಮಾತು, ದಿಟ. ನಾವು ಕೂಡ ಹಿಂದೆಮುಂದೆ ನೋಡದೆ ಹೆಣ್ಣನ್ನು ಭಿಕ್ಷೆ ಎಂದು ವಿನೋದಕ್ಕೆ ಹೇಳಿಬಿಟ್ಟೆವು. ತಾಯಿಯ ಮಾತು ನಿರ್ಮಲವಾದ ಹೃದಯದಿಂದ ಬಂದದ್ದು. ಆದ್ದರಿಂದ, ಅದರಂತೆ ನಾವು ನಡೆಯಬೇಕು.”

ಯುಧಿಷ್ಠಿರ – “ನಿನ್ನ ಅಭಿಪ್ರಾಯ ತಿಳಿದ ಹಾಗಾಯಿತು. ದ್ರೌಪದಿ ನಿನ್ನ ಹೆಂಡತಿಯಾಗಬೇಕಾದವಳು. ಅವಳನ್ನೂ ಒಂದು ಮಾತು ಕೇಳಬೇಕಾದದ್ದು ಅಗತ್ಯ.”

ಹೀಗೆ ಹೇಳಿ, ಯುಧಿಷ್ಠಿರನು ‘ನಿನ್ನ ಇಷ್ಟ ಏನು?’ ಎಂದು ಕೇಳುವಂತೆ ದ್ರೌಪದಿಯ ಕಡೆ ತಿರುಗಿ ನೋಡಿದನು. ದ್ರೌಪದಿ ಮಾತಾಡಲಿಲ್ಲ; ಪಂಚಪಾಂಡವರ ಮುಖವನ್ನು ಒಂದು ಸಲ ನೋಡಿ, ಮುಗುಳುನಗೆ ಬೀರಿದಳು; ನಾಚಿಕೆಯಿಂದ ತಲೆ ತಗ್ಗಿಸಿದಳು.

ಯುಧಿಷ್ಠಿರನು ದ್ರೌಪದಿಯ ಮನಸ್ಸನ್ನು ಅರಿತನು. ತಾಯಿಯ ಕಡೆ ತಿರುಗಿ, “ಅಮ್ಮಾ, ನಿನ್ನ ಮಾತನ್ನು ಸುಳ್ಳಾಗಿಸಲು ನಾವು ಯಾರೂ ಸಿದ್ಧರಿಲ್ಲ. ನಮ್ಮೆಲ್ಲರ ಪತ್ನಿಯಾಗಿರಲು ದ್ರೌಪದಿಯೂ ಒಪ್ಪಿದ ಹಾಗೆ ಕಾಣುತ್ತದೆ. ಅವಳು ಐವರಿಗೂ ಹೆಂಡತಿಯಾಗಿದ್ದುಕೊಳ್ಳಲಿ” ಎಂದು ತನ್ನ ನಿಶ್ಚಯವನ್ನು ತಿಳಿಸಿದನು.

ಬ್ರಾಹ್ಮಣವೇಷದಲ್ಲಿ ಬಂದಿದ್ದವರು ಯಾರೆಂಬುದು ದ್ರುಪದನಿಗೂ ಗೊತ್ತಾಯಿತು. ಅವನು ವಿಧಿಪೂರ್ವಕವಾಗಿ ದ್ರೌಪದಿಯನ್ನು ಐದು ಮಂದಿಗು ಮದುವೆಮಾಡಿಕೊಟ್ಟನು.ಮದುವೆಗೆ ಕೌರವರೂ ಹೋಗಿದ್ದರು. ಪಾಂಡವರಿಗೆ ದ್ರುಪದರಾಜನಂತಹ ಪ್ರಬಲನಾದ ದೊರೆಯ ಸಂಬಂಧ ದೊರೆತದ್ದು ದುರ್ಯೋಧನನ ಹೊಟ್ಟೆಯಕಿಚ್ಚಿಗೆ ತುಪ್ಪ ಎರೆದ ಹಾಗಾಯಿತು; ಅವರನ್ನು ಕಂಡು ಭಯವೂ ಹೆಚ್ಚಿತು. ದ್ರುಪದ, ಕೃಷ್ಣ, ಬಲರಾಮ ಮುಂತಾದವರ ನೆರವಿನಿಂದ ಈಗ ತಾವು ಅನುಭವಿಸುತ್ತಿರುವ ರಾಜ್ಯವನ್ನು ಯುಧಿಷ್ಠಿರನು ಎಲ್ಲಿ ಕಿತ್ತುಕೊಂಡು ಬಿಡುವನೋ ಎಂದು ದುರ್ಯೋಧನನ ಭಯ. ಅವರನ್ನು ಹೇಗಾದರೂ ಮಾಡಿ ತೀರಿಸಿ ಬಿಡಬೇಕೆಂದು ಅವನು ಆಲೋಚಿಸಿದನು. ಮಗನ ಇಷ್ಟ ನಡೆಯಲಿ ಎಂದು ಒಳಗೊಳಗೆ ಧೃತರಾಷ್ಟ್ರನ ಹಂಬಲ. ಆದರೆ ಭೀಷ್ಮ ವಿದುರರಂತಹ ಹಿರಿಯರು ಹೇಳಿದ ಬುದ್ಧಿವಾದವನ್ನು ಮೀರುವುದಕ್ಕೂ ಅವನಿಗೆ ಇಷ್ಟವಿರಲಿಲ್ಲ. ಹಾಗೂ ಹೀಗೂ ತೂಗಾಡಿ, ಪಾಂಡವರನ್ನು ಪಾಂಚಾಲ ನಗರದಿಂದ ಹಸ್ತಿನಾವತಿಗೆ ಕರೆಸಿಕೊಂಡನು; ಅವರಿಗೆ ಅರ್ಧರಾಜ್ಯವನ್ನು ಕೊಡಿಸಿ, ಖಾಂಡವಪ್ರಸ್ಥವೆಂಬ ಪ್ರದೇಶದಲ್ಲಿ ಅವರನ್ನು ನೆಲೆಗೊಳಿಸಿದನು. ಅಲ್ಲಿ ಪಾಂಡವರು ಇಂದ್ರಪ್ರಸ್ಥವೆಂಬ ಸೊಗಸಾದ ನಗರವನ್ನು ಕಟ್ಟಿಸಿಕೊಂಡು ನೆಮ್ಮದಿಯಿಂದ ಇದ್ದರು.

ದಾಳ ಅಪಮಾನಕ್ಕೆ, ಕಾಡಿಗೆ ಉರುಳಿಸಿತು

ಯುಧಿಷ್ಠಿರನು ತಮ್ಮಂದಿರ ಸಹಾಯದಿಂದ ಸಮಸ್ತ ರಾಜರನ್ನೂ ಗೆದ್ದು, ವೈಭವದಿಂದ ರಾಜಸೂಯ ಯಾಗವನ್ನು ನೆರವೇರಿಸಿದನು. ಯಾದವರು, ಕೌರವರು ಮುಂತಾಗಿ ರಾಜಾಧಿರಾಜರೆಲ್ಲ ಯಾಗಕ್ಕೆ ಬಂದಿದ್ದರು. ಯುಧಿಷ್ಠಿರನು ಶ್ರೀಕೃಷ್ಣನಿಗೆ ಅಗ್ರಪೂಜೆ ಮಾಡಿದ ಮೇಲೆ, ಯಾಗಕ್ಕೆ ಬಂದಿದ್ದ ಅತಿಥಿಗಳೆಲ್ಲ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು. ದುರ್ಯೋಧನ ಶಕುನಿಯರಿಬ್ಬರು ಮಾತ್ರ ಉಳಿದು ಕೊಂಡರು. ಯಾಗದ ಅತಿಥಿಗಳಿಗಾಗಿ ಯುಧಿಷ್ಠಿರನು ಕಟ್ಟಿಸಿದ್ದ ರಾಜಭವನದಲ್ಲಿ ದುರ್ಯೋಧನನು ಒಮ್ಮೆ ಕೊಳದಂತೆ ಕಾಣುತ್ತಿದ್ದ ಹೊಳಪು ನೆಲದ ಮೇಲೆ ಎಚ್ಚರಿಕೆಯಿಂದ ನಡೆಯುತ್ತ, ಕೊಳವೇ ಸಿಕ್ಕಿದಾಗತ ನೆಲವೆಂದು ಭ್ರಮಿಸಿ ಅದರಲ್ಲಿ ಬಿದ್ದುಬಿಟ್ಟನು. ಅಲ್ಲಿದ್ದ ಭೀಮಾರ್ಜುನರು ಗೊಳ್ಳನೆ ನಕ್ಕರು. ಇದರಿಂದ ಇವನಿಗೆ ಅಪಮಾನವಾದಂತೆ ಆಯಿತು. ಪಾಂಡವರು ರಾಜಸೂಯ ಯಾಗವನ್ನು ಮಾಡಿ ಏಳಿಗೆ ಹೊಂದಿದ್ದುನ್ನು ಕಂಡು ಅವನಿಗೆ ಮೊದಲೇ ಹೊಟ್ಟೆಯಕಿಚ್ಚು; ಈಗ ಆದ ಅಪಮಾನದಿಂದ ಅದಕ್ಕೆ ಗಾಳಿ ಬೀಸಿದಂತಾಯಿತು. ಅವನು ತನ್ನ ದುಃಖವನ್ನು ಶಕುನಿಯ ಮುಂದೆ ಹೇಳಿಕೊಂಡನು. ಶಕುನಿ-“ಯುಧಿಷ್ಠಿರನನ್ನು ಗೆದ್ದರೆ ಪಾಂಡವರನ್ನು ಗೆದ್ದಹಾಗೆಯೆ. ಅವನಿಗೆ ಪಗಡೆಯ ಆಟ ಎಂದರೆ ಪ್ರಾಣ. ಆದರೆ ಆಡುವುದು ಗೊತ್ತಿಲ್ಲ. ಅವನನ್ನು ಪಗಡೆಯ ಜೂಜಿಗೆ ಒಪ್ಪಿಸಿ ಕರೆದು ತಾ. ನಾನು ಅವನನ್ನು ಸೋಲಿಸಿ, ಅವನ ಐಶ್ವರ್ಯವನ್ನೂ ರಾಜ್ಯವನ್ನೂ ಗೆದ್ದು ಕೊಡುತ್ತೇನೆ” ಎಂದು ಉಪಾಯ ಹೇಳಿಕೊಟ್ಟನು.

ದುರ್ಯೋಧನನು ತಂದೆಯ ಬಳಿಗೆ ಹೋಗಿ ತನ್ನ ಸಂಕಟವನ್ನು ಹೇಳಿಕೊಂಡನು; ಶಕುನಿ ಹೇಳಿಕೊಟ್ಟ ಉಪಾಯವನ್ನೂ ತಿಳಿಸಿದನು. ಧರ್ಮರಾಜನನ್ನು ಪಗಡೆಯ ಜೂಜಿಗೆ ಕರೆಸಬೇಕೆಂದು ಹಟ ಹಿಡಿದನು; ‘ಹಾಗೆ ಮಾಡದಿದ್ದರೆ ಸಾಯುತ್ತೇನೆ’ ಎಂದು ಹೆದರಿಸಿದನು. ಮಗನ ಮೇಲಿನ ಪ್ರೀತಿಯಿಂದ ಧೃತರಾಷ್ಟ್ರ ಧರ್ಮರಾಜನನ್ನು ಪಗಡೆಯ ಆಟಕ್ಕೆ ಕರೆಸಲು ಒಪ್ಪಿಕೊಂಡನು.

ಪಾಂಡವರನ್ನು ಜೂಜಿಗೆ ಕರೆಯುವ ಭಾರ ವಿದುರನ ಮೇಲೆ ಬಿದ್ದಿತು. ವಿದುರನು ಮನಸ್ಸಿಲ್ಲದ ಮನಸ್ಸಿನಿಂದ ಇಂದ್ರಪ್ರಸ್ಥಕ್ಕೆ ಹೋಗಿ, ತಾನು ಬಂದ ಕಾರ್ಯದ ವಿಚಾರವನ್ನು ಯುಧಿಷ್ಠಿರನಿಗೆ ತಿಳಿಸಿದನು; “ಜೂಜು ಕೆಟ್ಟದ್ದೆಂದು ನಾನು ಬಲ್ಲೆ. ನಿನಗೂ ಹಾಗೆಯೇ ಹೇಳುತ್ತೇನೆ. ಆದರೆ ಧೃತರಾಷ್ಟ್ರನ ಕೋರಿಕೆಯಂತೆ ನಿನ್ನನ್ನು ಕರೆಯಲು ಬಂದೆ. ಏನು ಮಾಡಿದರೆ ಒಳ್ಳೆಯದೋ ಹಾಗೆ ಮಾಡು” ಎಂದು ವಿದುರನು ಹೇಳಿದನು.

ಯುಧಿಷ್ಠಿರ – “ಕೌರವರ ಕಡೆ ಜೂಜು ಆಡುವವರು ಯಾರು?”

ವಿದುರ – “ಮುಖ್ಯವಾಗಿ ಆಡುವವನು ಶಕುನಿ. ಇತರರೂ ಆಡುತ್ತಾರೆ.”

ಶಕುನಿಯ ಹೆಸರನ್ನು ಕೇಳಿದ ಕೂಡಲೆ ಧರ್ಮಪುತ್ರನಿಗೆ ಚೇಳು ಕುಟುಕಿದಂತಾಯಿತು. ಜೂಜಿನ ಪರಿಣಾಮ ಒಳ್ಳೆಯದಾಗುವುದಿಲ್ಲ ಎಂದು ತೋರಿತು.

ಯುಧಿಷ್ಠಿರ – “ಶಕುನಿ ಪಕ್ಕಾ ಮೋಸಗಾರ. ಅವನ ಸಂಗಡ ಆಡುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ ಧೃತರಾಷ್ಟ್ರ ಮಹಾರಾಜನ ಅಪ್ಪಣೆಯನ್ನು ಮೀರಲಾರೆ. ನಾನಾಗಿ ಜೂಜಾಡುವುದಿಲ್ಲ; ಜೂಜಿಗೆ ಕರೆದರೆ ಒಲ್ಲೆ ಎನ್ನುವುದಿಲ್ಲ. ಇದು ಕ್ಷತ್ರಿಯ ಧರ್ಮ; ನನ್ನ ವ್ರತ. ಆದ್ದರಿಂದ, ಜೂಜಿಗೆ ಬರುತ್ತೇನೆ”- ಎಂದು ಜೂಜಿಗೆ ಹೋಗಲು ಒಪ್ಪಿಕೊಂಡನು; ತಮ್ಮಂದಿರು ಮತ್ತು ದ್ರೌಪದಿಯೊಂದಿಗೆ ಹಸ್ತಿನಾವತಿಗೆ ಹೋದನು. ಅಲ್ಲಿ ಆಟ ಮೊದಲಾಯಿತು.

ಆಟಕ್ಕೆ ಮುಂಚೆ ಪಣ ಒಡ್ಡಬೇಕು. ದುರ್ಯೋಧನ, ಯುಧಿಷ್ಠಿರ ಇಬ್ಬರೂ ರತ್ನದ ಒಡವೆಗಳನ್ನು ಪಣವಾಗಿ ಒಡ್ಡಿದರು. ಶಕುನಿ ದಾಳವನ್ನು ಉರುಳಿಸಿದನು; ಅವನು ಹೇಳಿದ ಗರ ಬಿದ್ದಿತು. ಶಕುನಿ ಗೆದ್ದನು. ಆಟ ಸಾಗಿತು . ಯುಧಿಷ್ಠಿರ ಸಾವಿರ ಸಾವಿರ ಹೊನ್ನು, ರಥ ಆನೆ, ಕುದುರೆ, ದಾಸದಾಸಿಯರು – ಇವೆಲ್ಲವನ್ನೂ ಪಣವಾಗಿ ಒಡ್ಡಿ, ಸೋತನು.

ಯುಧಿಷ್ಠಿರ ಸೋಲುತ್ತ ಬಂದುದನ್ನು ಕಂಡು, ‘ಇದು ಏಕೋ ವಿಪರೀತಕ್ಕೆ ಇಟ್ಟಕೊಂಡಿತು’ ಎಂದು ವಿದುರನಿಗೆ ದಿಗಿಲಾಯಿತು; ಆಟವನ್ನು ನಿಲ್ಲಿಸುವಂತೆ ಧೃತರಾಷ್ಟ್ರನನ್ನು ಬೇಡಿಕೊಂಡನು. ಅವನ ಬುದ್ಧಿವಾದ  ವ್ಯರ್ಥವಾಯಿತು. ಯುಧಿಷ್ಠಿರನು ಪಣದ ಮೇಲೆ ಪಣ ಒಡ್ಡುತ್ತ, ತನ್ನ ಸಕಲ ಐಶ್ವರ್ಯವನ್ನೂ ತಮ್ಮಂದಿರನ್ನೂ ಸೋತನು; ಕೊನೆಗೆ ತನ್ನನ್ನೇ ಪಣವಾಗಿ ಒಡ್ಡಿ ಸೋತನು.

ಆಗ, ಮಾಯಾವಿಯೂ ನೀಚನೂ ಆದ ಶಕುನಿ- “ಯುಧಿಷ್ಠಿರಾ, ನಿನ್ನ ಬಳಿ ಒಂದು ರತ್ನ ಉಳಿದಿದೆ; ಸ್ತ್ರೀ-ರತ್ನ, ದ್ರೌಪದಿ. ಅವಳನ್ನು ಒಡ್ಡಿ, ಈ ಆಟವನ್ನಾದರೂ ಗೆಲ್ಲು; ಸೋತಿರುವುದನ್ನೆಲ್ಲಾ ಹಿಂದಕ್ಕೆ ಪಡೆದುಕೋ”- ಎಂದು ಆಸೆ ಹುಟ್ಟಿಸಿದನು.

ಯುಧಿಷ್ಠಿರ ಒಂದು ಕ್ಷಣ ಮೌನವಾಗಿದ್ದ: “ಹೌದು, ದ್ರೌಪದಿಯನ್ನು ಒಡ್ಡಿ, ಸೋತಿರುವುದನ್ನೆಲ್ಲಾ ಏಕೆ ಮರಳಿ ಪಡೆಯಬಾರದು?” ಎಂದು ಜೂಜುಕೋರರಿಗೆ ಸಹಜವಾದ ರೀತಿಯಲ್ಲಿ ಆಲೋಚಿಸಿ, “ಇದೋ, ದ್ರೌಪದಿಯನ್ನು ಪಣವಾಗಿ ಒಡ್ಡಿದ್ದೇನೆ” ಎಂದ ಘೋಷಿಸಿದನು.

ಜೂಜಿನ ಸಭೆ ‘ಪರಿಣಾಮ ಏನಾಗುವುದೋ’ ಎಂದು ನಿಬ್ಬೆರಗಾಗಿ ನಿರುಕಿಸುತ್ತ ಕುಳಿತಿತ್ತು. ಕೆಲವರಿಗೆ ಆಶ್ಚರ್ಯ. ಕೆಲವರಿಗೆ, “ಧರ್ಮರಾಜ ಎಂಥ ಕೆಲಸ ಮಾಡಿಬಿಟ್ಟ!” ಎಂದು ಕೋಪ. ಇನ್ನು ಕೆಲವರಿಗೆ, “ಅಯ್ಯೋ, ಎಂಥ ಕೇಡುಗಾಲ ಬಂತು” ಎಂದು ದುಃಖ. ಭೀಷ್ಮ ದ್ರೋಣರು ಕಂಗೆಟ್ಟರು; ವಿದರು ದಿಕ್ಕುಕಾಣದಾದ. ದುರ್ಯೋಧನಾದಿಗಳಿಗೆ ಮಾತ್ರ ಒಳಗೊಳಗೇ ಹಿಗ್ಗು.

ಯುಧಿಷ್ಠಿರನು ವಿನಯದಿಂದ, “ನೀನು ಯಾರು?” ಎಂದು ಕೇಳಿದನು.

ಶಕುನಿ ದಾಳ ಉರುಳಿಸಿದನು; “ಗೆದ್ದೆ” ಎಂದು ಸಾರಿದನು.

ದುರ್ಯೋಧನನು ವಿದುರನ ಕಡೆ ತಿರುಗಿ, “ವಿದರು, ನೀನು ಹೋಗಿ ದ್ರೌಪದಿಯನ್ನು ಕರೆದುಕೊಂಡು ಬಾ, ಇನ್ನು ಅವಳು ನಮ್ಮ ದಾಸಿ!” ಎಂದನು. ಈ ಕೀಳು ಕೆಲಸ ಮಾಡಲು ವಿದುರನು ಒಪ್ಪಲಿಲ್ಲ. ಆಗ, ದುರ್ಯೋಧನನು ಪ್ರಾತಿಕಾಮಿ ಎಂಬ ತನ್ನ ಸಾರಥಿಯ ಮಗನನ್ನು ಕಳುಹಿಸಿದನು.

ಪ್ರಾತಿಕಾಮಿ ದ್ರೌಪದಿಯ ಬಳಿಗೆ ಹೋಗಿ, “ಅಮ್ಮಾ, ಯುಧಿಷ್ಠಿರನು ಜೂಜಿನಲ್ಲಿ ನಿನ್ನನ್ನು ಸೋತಿದ್ದಾನೆ. ನೀನು ಈಗ ಕೌರವರ ದಾಸಿಯಂತೆ. ಬಾ ತಾಯಿ” ಎಂದನು . ದ್ರೌಪದಿ ಬೆರಗಾಗಿ, ನಿಜಸಂಗತಿ ತಿಳಿದ ಮೇಲೆ, ಧರ್ಮಪುತ್ರನು ತನ್ನನ್ನು ಸೋತದ್ದು ಸರಿಯೇ ಎಂಬ ಪ್ರಶ್ನೆಗೆ ಸಭಿಕರಿಂದ ಉತ್ತರ ತರುವಂತೆ ಪ್ರಾತಿಕಾಮಿಯನ್ನು ಕಳಿಸಿದಳು. “ದ್ರೌಪದಿಯೇ ಬಂದು ಸಭೆಯಲ್ಲಿ ಕೇಳಲಿ” ಎಂದು ದುರ್ಯೋಧನನು ಪ್ರಾತಿಕಾಮಿಯನ್ನು ಮತ್ತೆ ಕಳಿಸಿ, ದ್ರೌಪದಿಯನ್ನು ಕರೆಸಿಕೊಂಡನು. ಅವಳು ದೈವದ ಮೇಲೆ ಭಾರ ಹಾಕಿ, ಉಟ್ಟಸೀರೆಯಲ್ಲಿ ಸಭೆಗೆ ಬಂದು ದೂರದಲ್ಲಿ ನಿಂತಳು. ಅಣ್ಣನ ಅಪ್ಪಣೆಯಂತೆ ದುಶ್ಯಾಸನನು ಅವಳ ಕೂದಲನ್ನು ಹಿಡಿದೆಳೆದು ಸಭೆಯ ಮಧ್ಯದಲ್ಲಿ ನಿಲ್ಲಿಸಿದನು. ದ್ರೌಪದಿ ಕೋಪದಿಂದಲೂ ದುಃಖದಿಂದಲೂ ತನ್ನ ಪತಿಗಳ ಕಡೆ ತಿರುಗಿ ನೋಡಿದಳು. ಧರ್ಮಪುತ್ರನು ಸುಮ್ಮನಿದ್ದನು; ಅವನ ತಮ್ಮಂದಿರಿಗೆ ಕೋಪ ಉಕ್ಕೇರಿತು. ಅಪ್ಪಣೆಗಾಗಿ ಅಣ್ಣನ ಮುಖವನ್ನು ನೋಡಿದರು. ಯುಧಿಷ್ಠಿರನು ಶಾಂತವಾಗಿಯೆ ಇದ್ದನು. ಭೀಮನು ಕೋಪವನ್ನು ತಡಯಲಾಗದೆ, ಬಾಗಿಲಿನ ಭಾರಿ ಅಗಣಿಯನ್ನು  ದುರುಗುಟ್ಟಿ ನೋಡಿದನು. ತಮ್ಮನ ಮನಸ್ಸು ಕೆರಳಿದೆ ಎಂದು ಅರಿತ ಯುಧಿಷ್ಠಿರನು ಸಹನೆಯಿಂದಿರುವಂತೆ ಅವನಿಗೆ ಸನ್ನೆ ಮಾಡಿದನು. ಆದರೆ, ಕೇಡುಗರಾದ ಕೌರವ ಸೋದರರು ಸುಮ್ಮನಿರಬೇಕಲ್ಲ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆಯತೊಡಗಿನದು; ದೈವಕೃಪೆಯಿಂದ ಅದು ಅಕ್ಷಯವಾಯಿತು. ಇತ್ತ ದುರ್ಯೋಧನನು ದ್ರೌಪದಿಯನ್ನು ದಾಸಿ ಎಂದು ಕರೆದು, ತನ್ನ ತೊಡೆಯನ್ನು ತಟ್ಟಿ ತೋರಿಸಿದನು. ದ್ರೌಪದಿ ಕೆರಳಿ, ನಿನ್ನ ತೊಡೆಯಿಂದಲೇ ನಿನಗೆ ಮರಣವಾಗಲಿ” ಎಂದು ಶಪಿಸಿದಳು.

ಆಗ ತುಂಬಿದ ಸಭೆಯಲ್ಲಿ ದ್ರೌಪದಿಗಾದ ಅಪಚಾರವನ್ನು ಕಂಡು ಭೀಮನ ಸಹನೆ ಮೀರಿತು. ಅವನು ಸಿಂಹದಂತೆ ಕೆರಳಿ ಗರ್ಜಿಸಿ, “ಯುದ್ಧದಲ್ಲಿ ದುಶ್ಯಾಸನನ ಬಸಿರನ್ನು ಬಗಿದು, ಅವನ ರಕ್ತವನ್ನು ಕುಡಿಯುತ್ತೇನೆ. ದುರ್ಯೋಧನನ ತೊಡೆಯನ್ನು ಗದೆಯಿಂದ ಮುರಿಯುತ್ತೇನೆ” ಎಂದು ಪ್ರತಿಜ್ಞೆ ಮಾಡಿದನು. ಆಗ ಅರಮನೆಯಲ್ಲಿ ಅಪಶಕುನಗಳಾದವು. ಇದನ್ನು ಕಂಡು, ತನ್ನ ಮಕ್ಕಳಿಗೆ ಕೇಡು ಕಾದಿದೆ ಎಂದು ಧೃತರಾಷ್ಟ್ರನು ಹೆದರಿದನು. ಭೀಷ್ಮನೂ ವಿದುರನೂ – “ದ್ರೌಪದಿಯನ್ನು ಸಮಧಾನಪಡಿಸು” ಎಂದು ಅವನಿಗೆ ಬುದ್ಧಿವಾದ ಹೇಳಿದರು. ಆಗ ಧೃತರಾಷ್ಟ್ರನು ದ್ರೌಪದಿಯನ್ನು ಬಳಿಗೆ ಕರೆದು, “ಅಮ್ಮಾ, ನೀನು ನನ್ನ ಮಗಳ ಸಮಾನ. ನಿನಗೆ ಇಷ್ಟ ಬಂದ ವರವನ್ನು ಕೇಳಿಕೋ, ಕೊಡುತ್ತೇನೆ” ಎಂದನು. ಐವರು ಪತಿಗಳಿಗೂ ಬಿಡುಗಡೆಯಾಗಲಿ, ಅವರ ರಥಗಳೂ ಆಯುಧಗಳೂ ಅವರಿಗೆ ಮತ್ತೆ ದೊರಕುವಂತಾಗಲಿ ಎಂದು ಎರಡು ವರಗಳನ್ನು ಕೇಳಿಕೊಂಡಳು. ಧೃತರಾಷ್ಟ್ರನು ‘ಆಗಲಿ’ ಎಂದು, ಇನ್ನೂ ಒಂದು ವರವನ್ನು ನೀಡಿದನು.

ಯುಧಿಷ್ಠಿರನು ಧೃತರಾಷ್ಟ್ರನ ಬಳಿಗೆ ಹೋಗಿ, “ಮಹಾರಾಜ, ನಿನ್ನ ಅಪ್ಪಣೆಯಂತೆ ನಡೆಯುತ್ತೇವೆ, ದಯವಿಟ್ಟು ಅಪ್ಪಣೆ ಮಾಡು” ಎಂದು ವಿನಯದಿಂದ ಕೇಳಿಕೊಂಡನು. ಧೃತರಾಷ್ಟ್ರನು, “ಯುಧಿಷ್ಠಿರಾ! ನೀನು ಅಜಾತಶತ್ರು; ಜ್ಞಾನಿ; ಧರ್ಮಸ್ವರೂಪವನ್ನು ಬಲ್ಲವನು; ವಿನಯಶಾಲಿ; ಕ್ಷಮಾಮೂರ್ತಿ; ಶಾಂತಗುಣವುಳ್ಳವನು. ಆದ್ದರಿಂದ ನನ್ನ ಮಕ್ಕಳು ನಿಮ್ಮ ವಿಚಾರದಲ್ಲಿ ತೋರಿಸಿದ ದುಷ್ಟತನವನ್ನು ಮರೆತುಬಿಡು. ಇಂದ್ರಪ್ರಸ್ಥಕ್ಕೆ ಹೋಗಿ ರಾಜ್ಯವಾಳಿಕೊಂಡು ಸುಖವಾಗಿರಿ” ಎಂದು ಒಳ್ಳೆಯ ಮಾತಾಡಿ ಪಾಂಡವರನ್ನು ಕಳಿಸಿಕೊಟ್ಟನು. ಪಾಂಡವರು ಇಂದ್ರಪ್ರಸ್ಥಕ್ಕೆ ಹಿಂದಿರುಗಿದರು.

ದುಷ್ಟ ಚತುಷ್ಟಯರು ಎನ್ನಿಸಿದ ದುರ್ಯೋಧನ, ದುಶ್ಯಾಸನ, ಕರ್ಣ, ಶಕುನಿ ಇವರುಗಳಿಗೆ ಧೃತರಾಷ್ಟ್ರನು ಮಾಡಿದ ಏರ್ಪಾಡು ಸರಿಬೀಳಲಿಲ್ಲ. ದುರ್ಯೋಧನನು ತನ್ನ ಮೂವರೂ ಸಂಗಡಿಗರೊಂದಿಗೆ ಧೃತರಾಷ್ಟ್ರನ ಬಳಿಗೆ ಹೋಗಿ, “ಪಾಂಡವರನ್ನು ಮತ್ತೆ ಜೂಜಿಗೆ ಕರೆಯೋಣ. ಅವರು ಜೂಜಿನಲ್ಲಿ ಸೋತರೆ, ಹನ್ನೆರಡು ವರ್ಷ ವನವಾಸ ಮಾಡಬೇಕು. ಒಂದು ವರ್ಷ ಅಜ್ಞಾತವಾಸ. ಅಜ್ಞಾತವಾಸದಲ್ಲಿ ಅವರನ್ನು ಕಂಡುಹಿಡಿದರೆ, ಮತ್ತೆ ಹನ್ನೆರಡು ವರ್ಷ ವನವಾಸ, ಇದು ಜೂಜಿನ ಕಟ್ಟಳೆ” ಎಂದು ಶಕುನಿ ಹೇಳಿಕೊಟ್ಟಿದ್ದ ಉಪಾಯವನ್ನು ವಿವರಿಸಿ, ತಂದೆಯನ್ನು ಒಲಿಸಿಕೊಂಡನು.

ಜೂಜಾಡಲು ಧೃತರಾಷ್ಟ್ರನಿಂದ ಮತ್ತೆ ಪಾಂಡವರಿಗೆ ಕರೆ ಹೋಯಿತು. ಸುಖದುಃಖಗಳು ಒದಗುವುದು ದೈವಸಂಕಲ್ಪದಿಂದ; ಅದನ್ನು ಮೀರಲು ಸಾಧ್ಯವಿಲ್ಲ; ಅಲ್ಲದೆ, ಹಿರಿಯನಾದ ಧೃತರಾಷ್ಟ್ರನ ಇಷ್ಟದಂತೆ ನಡೆಯುವುದು ಕರ್ತವ್ಯ ಎಂದು ಆಲೋಚಿಸಿ, ಯುಧಿಷ್ಠಿರನು ಪಗಡೆಯಾಟಕ್ಕೆ ಒಪ್ಪಿಕೊಂಡನು. ಮೊದಲಿನ ಹಾಗೆಯೇ ಹಸ್ತಿನಾವತಿಯಲ್ಲಿ ಜೂಜು ನಡೆಯಿತು. ಯುಧಿಷ್ಟಿರನು ಸೋತನು; ಜೂಜಿನ ಗೊತ್ತುಪಾಡಿನಂತೆ ತಮ್ಮಂದಿರನ್ನೂ ದ್ರೌಪದಿಯನ್ನೂ ಕೂಡಿಕೊಂಡು ಕಾಡಿಗೆ ತೆರಳಿದನು. ಕುಂತಿ ಮಾತ್ರ ವಿದುರನ ಮನೆಯಲ್ಲಿ ಉಳಿದುಕೊಂಡಳು.

ನನಗೆ ಧರ್ಮ ಪ್ರಾಣಕ್ಕಿಂತ ಹೆಚ್ಚು

ವನವಾಸಕ್ಕೆ ತೆರಳಿದ ಪಾಂಡವರನ್ನು ಪುರಜನರು ದುಃಖದಿಂದ ಬೀಳ್ಕೊಟ್ಟರು. ಯುಧಿಷ್ಠಿರನು ಹಿಂದಿರುಗುವಂತೆ ಒತ್ತಾಯ ಮಾಡದೆ ಹೋಗಿದ್ದರೆ, ಅವರು ಅವನನ್ನು ಕಾಡಿಗೆ ಹಿಂಬಾಲಿಸಿ ಹೋಗುವುದಕ್ಕೂ ಸಿದ್ಧವಾಗಿದ್ದರು. ಯುಧಿಷ್ಠಿರ ಎಂದರೆ, ಪುರಜನಕ್ಕೆ ಅಷ್ಟು ಪ್ರೀತಿ; ಅಪಾರ ಗೌರವ.

ದ್ವೈತವನದಲ್ಲಿದ್ದಾಗ ಒಂದು ದಿನ ಪಾಂಡವರು ತಮ್ಮ ಸ್ಥಿತಿಗತಿಯನ್ನು ಕುರಿತು ಮಾತಾಡುತ್ತಿದ್ದರು. ಆಗ ದ್ರೌಪದಿ, ಯುಧಿಷ್ಠಿರನ ಸಹನೆ ಸಜ್ಜನಿಕೆ ದಯೆ ದಾಕ್ಷಿಣ್ಯ ಮುಂತಾದ ಗುಣಗಳು ಸ್ವಲ್ಪ ಅತಿಯಾದುವೆಂದು ಮೃದುವಾಗಿ ಆಕ್ಷೇಪಿಸಿದಳು; ಕ್ಷತ್ರಿಯರಿಗೆ ಕೋಪವೂ ಅಗತ್ಯವೆಂದು ವಾದಿಸಿದಳು; ‘ನಿನ್ನ ಧರ್ಮ ನಿನ್ನನ್ನು ಕಾಪಾಡುತ್ತಿಲ್ಲ’ ಎಂದಳು. ಆಗ ಯುಧಿಷ್ಠಿರನು, “ದ್ರೌಪದೀ ಒಳ್ಳೆಯ  ಗುಣ ಹೆಚ್ಚಾದರೆ ನಮಗೆ ಮಾತ್ರ ಸ್ವಲ್ಪ ಕೆಡುಕೆನಿಸಬಹುದು . ಕೋಪ ಅತಿಯಾದರೆ ತನಗೂ ಕೇಡು, ಪರರಿಗೂ ಕೇಡು. ಒಟ್ಟಿನಲ್ಲಿ ಕೋಪವೇ ಕೆಟ್ಟದ್ದು. ಕೋಪದಿಂದ ಎಲ್ಲ ಬಗೆಯ ಅನರ್ಥಗಳೂ ಸಂಭವಿಸುತ್ತವೆ. ಧರ್ಮಕ್ಕಾಗಿ ಧರ್ಮವನ್ನು ಆಚರಿಸಬೇಕು; ಅದರಿಂದ ಫಲವನ್ನು ನಿರೀಕ್ಷಿಸಬಾರದು” ಎಂದನು. ಯುಧಿಷ್ಠಿರನ ಮಾತಿನಿಂದ ದ್ರೌಪದಿಗೆ ಸಮಾಧಾನ ಆಗಲಿಲ್ಲ. ಭೀಮನೂ ಅವಳಿಗೆ ಒತ್ತಾಸೆ ಕೊಟ್ಟು ಮಾತನಾಡಿದನು. ಸೈನ್ಯಬಲವನ್ನು ಕೂಡಿಸಿಕೊಂಡು ಕೌರವರೊಂದಿಗೆ ಯುದ್ಧ ಮಾಡಿ ರಾಜ್ಯವನ್ನು ಹಿಂದಕ್ಕೆ ಪಡೆಯಬೇಕೆಂದು ಅವರ ಅಪೇಕ್ಷೆ. ಯುಧಿಷ್ಠಿರನು-

“ಭೀಮಾ, ನೀವಿಬ್ಬರೂ ದುಃಖದಿಂದ ಈ ರೀತಿ ಮಾತನಾಡುತ್ತಿರುವಿರಿ. ನಿಧಾನವಾಗಿ ಆಲೋಚನೆ ಮಾಡಿ ನೋಡಿ. ನಾನು ರಾಜಧರ್ಮಕ್ಕೆ ಕಟ್ಟುಬಿದ್ದು ದ್ಯೂತಕ್ಕೆ ಹೋದೆ. ನಾನು ಸೋತದ್ದಕ್ಕೆ ಶಕುನಿಯ ಮೋಸದ ಆಟ ಕಾರಣ. ಈಗ ವನವಾಸದ ಪ್ರತಿಜ್ಞೆಯನ್ನು ಪೂರೈಸಬೇಕಾದದ್ದು ನಮ್ಮ ಧರ್ಮ. ನನಗೆ ಧರ್ಮ ಪ್ರಾಣಕ್ಕಿಂತ ಹೆಚ್ಚು. ನಿಮ್ಮನ್ನು ಸಂತೋಷಪಡಿಸುವುದಕ್ಕೆ, ಅಥವಾ ಗಡುವಿಗೆ ಮುಂಚೆ ರಾಜ್ಯವನ್ನು ಪಡೆಯುವುದಕ್ಕೆ, ನಾನು ಧರ್ಮವನ್ನು ಬಿಟ್ಟು ನಡೆಯಲಾರೆ. ಒಳ್ಳೆಯ ಕಾಲ ಬಂದೇ ಬರುತ್ತದೆ. ಸಕಾಲದಲ್ಲಿ, ಅಗತ್ಯಬಿದ್ದರೆ, ಯುದ್ಧಮಾಡಿ, ನಮ್ಮ ರಾಜ್ಯವನ್ನು ಹಿಂದಕ್ಕೆ ಪಡೆದುಕೊಳ್ಳೋಣ. ವಿದ್ಯೆಗೆ ವಿನಯ ಹೇಗೆ ಭೂಷಣವೋ ಶೌರ್ಯಕ್ಕೆ ತಾಳ್ಮೆ ಹಾಗೆ ಭೂಷಣ” ಎಂದು ಭೀಮನನ್ನೂ ದ್ರೌಪದಿಯನ್ನೂ ಸಮಾಧಾನಪಡಿಸಿದನು.

ಇದೇ ಕಾಲದಲ್ಲಿ ಅರ್ಜುನನು ಅಣ್ಣನ ಅನುಜ್ಞೆಯಂತೆ ಇಂದ್ರಕೀಲ ಪರ್ವತದಲ್ಲಿ ಘೋರವಾದ ತಪಸ್ಸು ಮಾಡಿ ಪರಮೇಶ್ವರನಿಂದ ಪಾಶುಪತಾಸ್ತ್ರವನ್ನೂ ಇಂದ್ರಾದಿ ದೇವತೆಗಳಿಂದ ಇನ್ನೂ ಅನೇಕ ದಿವ್ಯಾಸ್ತ್ರಗಳನ್ನೂ ಸಂಪಾದಿಸಿದನು.

ಪಾಂಡವರು ವನವಾಸ ಕಾಲದಲ್ಲಿ ಒಂದೇ ಕಡೆ ಇರುತ್ತಿರಲಿಲ್ಲ. ಬೇರೆ ಬೇರೆ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದರು. ಹೋದ ಕಡೆಯಲ್ಲೆಲ್ಲಾ ಋಷಿಗಳೂ ತಪಸ್ವಿಗಳೂ ಯುಧಿಷ್ಠಿರನನ್ನು ಬಹಳ ಗೌರವದಿಂದ ಕಂಡು ಉಪಚಾರ ಮಾಡುತ್ತಿದ್ದರು. ಅವರು ಹೇಳುತ್ತಿದ್ದ ಅನೇಕ ಪುರಾಣಕಥೆಗಳನ್ನೂ ಕೇಳಿ, ಯುಧಿಷ್ಠಿರನ ಧರ್ಮಶ್ರದ್ಧೆ ಬಲವಾಗುತ್ತಿತ್ತು; ಅವನ ತಮ್ಮಂದಿರ ಮನಸ್ಸಿಗೆ ಶಾಂತಿ ದೊರಕುತ್ತಿತ್ತು.

ಪಾಂಡವರು ದ್ವೈತವನದಲ್ಲಿದ್ದಾಗ ಅವವು ಕಷ್ಟಪಡುವುದನ್ನು ನೋಡಿ ಸಂತೋಷಪಡಬೇಕೆಂದು ದುರ್ಯೋಧನನಿಗೆ ಆಸೆಯಾಯಿತು. ಅವನು ಸೇನಾ ಪರಿವಾರ ಸಮೇತನಾಗಿ ದ್ವೈತವನದ ಸಮೀಪಕ್ಕೆ ಬಂದನು. ಅಲ್ಲಿ ಕೆಲವರು ಗಂಧರ್ವರಿಗೂ ಕೌರವರಿಗೂ ಹೋರಾಟ ಮೊದಲಾಯಿತು. ದುರ್ಯೋಧನನೇ ಮೊದಲಾದವರು ಗಂಧರ್ವರ ಸೆರಯಾಳುಗಳಾದರು. ಕೌರವನ ಪರಿವಾರದವರು ಯುಧಿಷ್ಠಿರನ ಬಳಿಗೆ ಬಂದು ಮೊರೆಯಿಟ್ಟರು. “ಕೌರವರಿಗೆ ತಕ್ಕ ಶಾಸ್ತಿಯಾಯಿತು. ಅವರಿಗೆ ಸಹಾಯ ಮಾಡಕೂಡದು” ಎಂದು ಭೀಮನು ಅಡ್ಡಿಪಡಿಸಿದನು. ಯುಧಿಷ್ಠಿರನು, “ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡಬೇಕಾದದ್ದು ಕ್ಷತ್ರಿಯ ಧರ್ಮ. ನಾವೂ ಕೌರವರೂ ದಾಯಾದಿಗಳು. ಆದ್ದರಿಂದ ರಾಜ್ಯಕ್ಕಾಗಿ ಅವರು ನಮ್ಮ ಮೇಲೆ ಹಗೆತನ ಬೆಳೆಸಿದರು. ಇಷ್ಟೇ ಹೊರತು, ಹೊರಗಿನ ಶತ್ರುಗಳ ವಿಷಯದಲ್ಲಿ ನಾವೂ ಅವರೂ ಒಂದೇ ಕುಟುಂಬ” ಎಂದು ಅವನಿಗೆ ತಿಳುವಳಿಕೆ ಕೊಟ್ಟು, ಕೌರವರನ್ನು ಸೆರೆಯಿಂದ ಬಿಡಿಸುವಂತೆ ತಮ್ಮಂದಿರಿಗೆ ಹೇಳಿದನು. ಅದರಂತೆ ಅವರು ಹೋಗಿ, ಗಂಧರ್ವರೊಂದಿಗೆ ಹೋರಾಡಿ ಕೌರವರನ್ನು ಬಿಡುಗಡೆ ಮಾಡಿದರು.

ಯಕ್ಷಪ್ರಶ್ನೆ

ಪಾಂಡವರು ದ್ವೈತವನದಲ್ಲಿದ್ದಾಗ ಒಂದು ವಿಚಿತ್ರ ಸಂಗತಿ ನಡೆಯಿತು. ಒಂದುದಿನ ಬ್ರಾಹ್ಮಣನೊಬ್ಬನು ಪಾಂಡವರಿದ್ದಲ್ಲಿಗೆ ಬಂದನು. ಹೋಮಕಾರ್ಯಕ್ಕೆ ಅಗ್ನಿ ಉತ್ಪತ್ತಿ ಮಾಡುವ ತನ್ನ ಅರಣಿ ಕಡ್ಡಿಗಳನ್ನು ಜಿಂಕೆಯೊಂದು ಕೊಂಬಿಗೆ ಸಿಕ್ಕಿಸಿಕೊಂಡು ಓಡಿಹೋಯಿತೆಂದೂ, ಅವನ್ನು ತಂದುಕೊಡಬೇಕೆಂದೂ ಬೇಡಿದನು. ಬ್ರಾಹ್ಮಣರಲ್ಲಿ ಅಪಾರ ಭಕ್ತಿಯುಳ್ಳ ಯುಧಿಷ್ಠಿರನು ತನ್ನ ತಮ್ಮಂದಿರ ಜೊತೆ ಜಿಂಕೆಯನ್ನು ಹುಡುಕಿಕೊಂಡು ಹೊರಟನು. ಜಿಂಕೆಯೇನೋ ಕಣ್ಣಿಗೆ ಬಿದ್ದಿತು. ಆದರೆ ಅದು ಬೆನ್ನಟ್ಟಿ ಬಂದ ಇವರ ಕೈಗೆ ಸಿಕ್ಕದೆ ನಾಗಾಲೋಟದಲ್ಲಿ ಓಡುತ್ತಿತ್ತು. ಎಲ್ಲರಿಗೂ ತಡೆಯಲಾರದ ಬಾಯಾರಿಕೆ, ಧರ್ಮರಾಜನ ಸೂಚನೆಯಂತೆ, ನಕುಲನು ಒಂದು ಮರವನ್ನು ಹತ್ತಿ ನೋಡಿದನು. ಸ್ವಲ್ಪ ದೂರದಲ್ಲಿ ಒಂದು ಸರೋವರವು ಗೋಚರಿಸಿತು.  ಯುಧಿಷ್ಠಿರನು ನೀರನ್ನು ತರಲು ನಕುಲನನ್ನು ಅಲ್ಲಿಗೆ ಕಳಿಸಿದನು. ನಕುಲನು ಸರೋವರದ ಬಳಿಗೆ ಹೋಗಿ, ನೀರನ್ನು ತೆಗೆದುಕೊಳ್ಳುವುದಕ್ಕೆ ಮೊದಲು ತಾನು ನೀರು ಕುಡಿಯಲು ಹೋದನು. “ಅಯ್ಯಾ, ಇದು ನನ್ನ ಸರೋವರ. ನನ್ನ ಅಪ್ಪಣೆ ಇಲ್ಲದೆ ನೀರು ಕುಡಿಯಕೂಡದು. ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನೀರು ಕುಡಿ”  ಎಂದು ಯಾರೋ ಮಾತನಾಡಿದ ಹಾಗಾಯಿತು. ಸುತ್ತ ನೋಡಿದರೆ ಯಾರೂ ಇಲ್ಲ! ನಕುಲನಿಗೆ ಬಹಳ ಬಾಯಾರಿಕೆಯಾಗಿತ್ತು. ಕೇಳಿಬಂದ ಮಾತಿಗೆ ಬೆಲೆ ಕೊಡದೆ ನೀರು ಕುಡಿದನು; ದಡಕ್ಕೆ ಬಂದಕೂಡಲೆ, ಕೆಳಕ್ಕೆ ಉರುಳಿಬಿದ್ದನು.

ಹಿಂದಿರುಗಿ ಬಾರದವರನ್ನು ಹುಡುಕುವುದಕ್ಕೂ ನೀರು ತರುವುದಕ್ಕೂ ಯುಧಿಷ್ಠಿರನು ಕಳಿಸಿದ ಉಳಿದ ತಮ್ಮಂದಿರಿಗೂ ಅದೇ ಗತಿ ಕಾದಿತ್ತು.

ಕೊನೆಗೆ ಧರ್ಮರಾಜನೇ ಅಲ್ಲಿಗೆ ಧಾವಿಸಿದನು. ಸತ್ತು ಒರಗಿದ್ದ ತಮ್ಮಂದಿರನ್ನು ಕಂಡನು. ಬಳಿಯಲ್ಲಿ ಯಾರೂ ಇಲ್ಲ! ಕ್ರೂರ ಮೃಗಗಳ ಸುಳಿವಿಲ್ಲ! ಅವರ ಸಾವಿಗೆ ಕಾರಣ ಏನೆಂದು ಧರ್ಮರಾಜನಿಗೆ ತಿಳಿಯಲಾಗಲಿಲ್ಲ. ಬಾಯಾರಿಕೆಯಿಂದ ಬಳಲಿದ್ದ ಅವನೂ ನೀರು ಕುಡಿಯ ಹೋದನು. ಅವನಿಗೂ ಅದೇ ಅಶರೀರವಾಣಿ ಕೇಳಿ ಬಂದಿತು. ಆಗ ಯುಧಿಷ್ಠಿರನು – “ಅಯ್ಯಾ, ನೀನು ಯಾರು? ನನ್ನ ತಮ್ಮಂದಿರ ಸಾವಿಗೆ ನೀನೇ ಕಾರಣ ಎಂದು ತೋರುತ್ತಿದೆ. ವಿನಯದಿಂದ ಕೇಳಿಕೊಳ್ಳುತ್ತೇನೆ. ನೀನು ಯಾರು?” ಎಂದು ಕೇಳಿದನು. “ಹೌದು, ನಿನ್ನ ತಮ್ಮಂದಿರನ್ನು ಕೊಂದವನು ನಾನೆ. ನಾನು ಈ ಸರೋವರದ ಒಡೆಯನಾದ ಯಕ್ಷ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡದೆ ನೀರು ಕುಡಿದದ್ದರಿಂದ ನಿನ್ನ ತಮ್ಮಂದಿರು ಸತ್ತರು. ನೀರು ಕುಡಿಯಬೇಕಿದ್ದರೆ, ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು”  ಎಂದು ಯಕ್ಷ ಪ್ರತ್ಯಕ್ಷನಾದನು. ಯುಧಿಷ್ಠಿರನು, “ನಾನು ತಿಳಿದಮಟ್ಟಿಗೆ ಉತ್ತರ ಹೇಳುತ್ತೇನೆ” ಎಂದು ಒಪ್ಪಿಕೊಂಡನು.

ಯಕ್ಷ – “ಸಮುದ್ರಕ್ಕೆ ಸಮನಾದದ್ದು ಯಾವುದು? ಭೂಲೋಕಕ್ಕೆ ಒಳ್ಳೆಯದನ್ನು ಮಾಡುವವರು ಯಾರು ? ಮನುಷ್ಯರಿಗೆ ತಾಯಿ ಯಾರು? ಸೂರ್ಯನ ಪ್ರಕಾಶಕ್ಕೆ ಸರಿಯಾದದ್ದು ಯಾವುದು?”

ಯುಧಿಷ್ಠಿರ – “ಸಮುದ್ರಕ್ಕೆ ಸಮ ಆಕಾಶ. ಭೂಮಿಗೆ ಹಿತವನ್ನು ಮಾಡುವವನು ದೇವೇಂದ್ರ. ಮನುಷ್ಯರಿಗೆ ಗೋಮಾತೆಯ ತಾಯಿ. ಸೂರ್ಯನ ಬೆಳಕಿಗೆ ಸರಿಯಾದದ್ದು ಸತ್ಯ.”

ಯಕ್ಷ- “ಬ್ರಾಹ್ಮಣರಲ್ಲಿ ಶ್ರೋತ್ರಿಯನು ಯಾರು?, ಕ್ಷತ್ರಿಯರಲ್ಲಿ ಶ್ರೇಷ್ಠನಾದವನು ಯಾರು?”

ಯುಧಿಷ್ಠಿರ – “ಶ್ರುತಿಯನ್ನು ಬಲ್ಲವನೆ ಶ್ರೋತ್ರಿಯಾದ ಬ್ರಾಹ್ಮಣ. ಸಾವಿಗಂಜದೆ ಶಸ್ತ್ರಾಸ್ತ್ರಗಳನ್ನು ಹಿಡಿದು ಯುದ್ಧ ಮಾಡುವವನೆ ಶ್ರೇಷ್ಠನಾದ ಕ್ಷತ್ರಿಯ.”

ಯಕ್ಷ – “ಧನ ಯಾವುದರಿಂದ ಲಭಿಸುತ್ತದೆ?  ಉತ್ತಮವಾದ ಧನ ಯಾವುದು? ನಿಜವಾದ ಭಾಗ್ಯ ಯಾವುದು?”

ಯುಧಿಷ್ಠಿರ – “ದುಡಿಮೆಯಿಂದ ಧನ. ವಿದ್ಯೆಯೇ ಉತ್ತಮವಾದ ಧನ. ಆರೋಗ್ಯವೇ ನಿಜವಾದ ಭಾಗ್ಯ.”

ಯಕ್ಷ- “ಭೂಮಿಗಿಂತ ದೊಡ್ಡ ವಸ್ತು ಯಾವುದು? ಆಕಾಶಕ್ಕಿಂತ ಎತ್ತರವಾದದ್ದು ಯಾವುದು?”

ಯುಧಿಷ್ಠಿರ – “ಭೂಮಿಗಿಂತ ದೊಡ್ಡ ವಸ್ತು ತಾಯಿ. ಆಕಾಶಕ್ಕಿಂತ ಉನ್ನತವಾದ ವಸ್ತು ತಂದೆ.”

ಯಕ್ಷ- “ಗಾಳಿಗಿಂತ ವೇಗವಾದದ್ದು ಯಾವುದು?” ಮನುಷ್ಯನನ್ನು ಯಾವಾಗಲೂ ಕಾಡುವುದು ಯಾವುದು?”

ಯುಧಿಷ್ಠಿರ- “ಗಾಳಿಗಿಂತ ವೇಗವಾದದ್ದು ಮನಸ್ಸು. ಮನುಷ್ಯನನ್ನು ಯಾವಾಗಲೂ ಕಾಡುವುದು ಚಿಂತೆ.”

ಯಕ್ಷ- “ಮಹಾಪುರುಷನು ಯಾರು?”

ಯುಧಿಷ್ಠಿರ- “ಅಹಿಂಸೆಯಲ್ಲಿ ಪ್ರೀತಿಯುಳ್ಳವನು.”

ಯಕ್ಷ- “ನಿನ್ನ ಉತ್ತರಗಳಿಂದ ನಾನು ಸುಪ್ರೀತನಾದೆನು. ನಿನ್ನ ತಮ್ಮಂದಿರಲ್ಲಿ ಯಾರು ಬದುಕಲಿ?”

ಯುಧಿಷ್ಠಿರ – “ನಕುಲ.”

ಹೀಗೆ ಕ್ರಮವಾಗಿ ಯುಧಿಷ್ಠಿರನು ತನ್ನ ತಮ್ಮಂದಿರನ್ನೆಲ್ಲಾ ಬದುಕಿಸಿಕೊಂಡನು. “ಒಡಹುಟ್ಟಿದವರಾದ ಭೀಮಾರ್ಜುನರನ್ನು ಮೊದಲು ಬದುಕಿಸಿಕೊಳ್ಳಲಿಲ್ಲ. ಮಲತಾಯಿಯ ಮಕ್ಕಳಾದ ನಕುಲ ಸಹದೇವರನ್ನು ಬದುಕಿಸಿಕೊಂಡದ್ದೇಕೆ?” ಎಂದು ಯಕ್ಷನು ಕೇಳಿದನು. “ನನಗೆ ಸ್ವಂತ ತಮ್ಮಂದಿರು, ಮಲತಮ್ಮಂದಿರು ಎಂಬ ಭೇದವಿಲ್ಲ” ಎಂದು ಯುಧಿಷ್ಠಿರನು ಉತ್ತರ ಕೊಟ್ಟನು. ಆಗ ಯಕ್ಷರೂಪದ ಯಮಧರ್ಮನು ತನ್ನ ನಿಜರೂಪವನ್ನು ತೋರಿಸಿ, “ನೀವು ಧರ್ಮಪರರಾದ್ದರಿಂದ ನಿಮಗೆ ಜಯ ಲಭಿಸುತ್ತದೆ” ಎಂದು ಹರಸಿ, ಅಂತರ್ಧಾನನಾದನು.

ಅನಂತರ, ಪಾಂಡವರು ಅರಣಿಯನ್ನು ತಂದು ಬ್ರಾಹ್ಮಣನಿಗೆ ಕೊಟ್ಟರು.

ಯುದ್ಧ ಬಿಟ್ಟು ಬೇರೆ ದಾರಿಯಿಲ್ಲ

ಪಾಂಡವರು ಹನ್ನೆರಡು ವರ್ಷಗಳ ವನವಾಸವನ್ನು ಮುಗಿಸಿ, ಒಂದು ವರ್ಷ ಕಾಲ ಅಜ್ಞಾತವಾಸ ಮಾಡಲು ವಿರಾನ ರಾಜ್ಯವನ್ನು ಆರಿಸಿಕೊಂಡರು. ವಿರಾಟನಗರಕ್ಕೆ ಹೋಗುವುದಕ್ಕೆ ಮುಂಚೆ ಪಾಂಡವರು ತಮ್ಮ ವೇಷಗಳನ್ನೂ ಹೆಸರುಗಳನ್ನೂ ಬದಲಾಯಿಸಿಕೊಂಡರು.

ಯುಧಿಷ್ಠಿರನು ಕಂಕಭಟ್ಟನೆಂಬ ಬ್ರಾಹ್ಮಣನಾಗಿ, ಭೀಮನು ವಲಲ ಎಂಬ ಅಡಿಗೆಯ ಭಟ್ಟನಾಗಿ, ಅರ್ಜುನನು ಬೃಹನ್ನಳೆ ಎಂಬ ನಪುಂಸಕವೇಷದ ನಾಟ್ಯಾಚಾರ್ಯನಾಗಿ, ನಕುಲನು ಗ್ರಂಥಿಕ ಎಂಬ ಕುದುರೆ ಲಾಯದ ಅಧಿಕಾರಿಯಾಗಿ ನಿಂತರು. ಸಹದೇವನು ತಂತ್ರೀಪಾಲ ಎಂಬ ಗೋಶಾಲೆಯ ಗೋರಕ್ಷಕನಾಗಿ, ದ್ರೌಪದಿ ರಾಣಿ ವಾಸದಲ್ಲಿ ಸೈರಂಧ್ರಿಯಾಗಿ ಕೆಲಸಗಳನ್ನು ಪಡೆದುಕೊಂಡು ಕಾಲ ಕಳೆಯತೊಡಗಿದರು.

ಅಜ್ಞಾತವಾಸ ಮುಗಿಯುವಷ್ಟರಲ್ಲಿ, ದ್ರೌಪದಿಯನ್ನು ಮೋಹಿಸಿದ ರಾಣಿ ಸುಧೇಷ್ಣೆಯ ತಮ್ಮ ಕೀಚಕನು ಭೀಮನಿಂದ ಹತನಾದನು. ಕೀಚಕನ ವಧೆ ಕೌರವರಿಗೆ ಪಾಂಡವರ ಸುಳಿವನ್ನು ಕೊಟ್ಟಿತು. ಅವರು ಪಾಂಡವರನ್ನು ಕಂಡುಹಿಡಿಯುವ ಉದ್ದೇಶದಿಂದ ವಿರಾಟನ ಗೋವುಗಳನ್ನು ಹಿಡಿದರು. ಅರ್ಜುನನು ವಿರಾಟಪುತ್ರ ಉತ್ತರನ ಸಾರಥಿಯಾಗಿ ಹೋಗಿ ಗೋವುಗಳನ್ನು ಬಿಡಿಸಿಕೊಂಡು ಬಂದನು. ಈ ವೇಳೆಗೆ ಅಜ್ಞಾತವಾಸದ ಅವಧಿ ಮುಗಿದಿತ್ತು.  ಪಾಂಡವರು ವಿರಾಟನಿಗೆ ತಮ್ಮ ನಿಜಸ್ವರೂಪವನ್ನು ಬಹಿರಂಗಪಡಿಸಿದರು. ವಿರಾಟನು ಸಂತೋಷಪಟ್ಟು, ಜಯಶಾಲಿಯಾಗಿದ್ದ ಅರ್ಜುನನನ್ನು ಗೌರವಿಸಲು ಅವನ ಮಗ ಅಭಿಮನ್ಯುವಿಗೆ ತನ್ನ ಮಗಳು ಉತ್ತರೆಯನ್ನು ಕೊಟ್ಟು ಮದುವೆ ಮಾಡಿದನು.

ಈಗ ಯುಧಿಷ್ಠಿರನು ತನ್ನ ಪ್ರತಿಜ್ಞೆಯನ್ನು ನೆರವೇರಿಸಿ, ಸತ್ಯವನ್ನು ಪರಿಪಾಲಿಸಿ, ಪೊರೆ ಬಿಟ್ಟ ಹಾವಿನಂತೆ ಹೊಸ ಕಳೆಯಿಂದಲೂ ಶಕ್ತಿಯಿಂದಲೂ ಬೆಳಗುತ್ತಿದ್ದನು. ಅವನಿಗೆ ಶ್ರೀಕೃಷ್ಣ ವಿರಾಟ, ದ್ರುಪದ ಮುಂತಾದ ಅನೇಕ ರಾಜರ ಸಹಾಯವಿದ್ದಿತು. ಅವನ ತಮ್ಮಂದಿರೇನೂ ಧೈರ್ಯ ಶೌರ್ಯಗಳಲ್ಲಿ ಕಡಿಮೆಯಾದವರಲ್ಲ. ಅವನು ಮನಸ್ಸು ಮಾಡಿದ್ದರೆ, ತನ್ನ ಕಡೆಯವರನ್ನೆಲ್ಲಾ ಕಟ್ಟಿಕೊಂಡು ಕೌರವರ ಮೇಲೆ ದಂಡೆತ್ತಿ ಹೋಗಿ, ಅವರನ್ನು ಸೋಲಿಸಿ, ತನ್ನ ರಾಜ್ಯವನ್ನು ಪಡೆಯಬಹುದಾಗಿತ್ತು. ಆದರೆ, ಯುಧಿಷ್ಠಿರನಿಗೆ ಬೇಕಾಗಿದ್ದುದು ಶಾಂತಿ; ಯುದ್ಧವಲ್ಲ.  ಧರ್ಮಮಾರ್ಗದಲ್ಲಿ ನಡೆದು, ತಮಗೆ ಬರಬೇಕಾದ ಅರ್ಧ ರಾಜ್ಯವನ್ನು ಒಳ್ಳೆಯ ಮಾತಿನಿಂದಲೇ ಕೌರವರಿಂದ ಪಡೆಯಬೇಕೆಂಬುದು ಧರ್ಮರಾಜನ ಸಂಕಲ್ಪ. ಅವನ ತಮ್ಮಂದಿರು ಯುದ್ಧ ಮಾಡಿಯೇ ತಮ್ಮ ಅರ್ಧ ರಾಜ್ಯವನ್ನು ಪಡೆಯಬೇಕೆಂದು ವಾದಿಸಿದರು. ಆದರೆ, ಅಣ್ಣನ ಮಾತನ್ನು ಮೀರಲು ಅವರು ಸಿದ್ಧರಾಗಿರಲಿಲ್ಲ.

ಯುಧಿಷ್ಠಿರನ ಅಪೇಕ್ಷೆಯಂತೆ ಶ್ರೀಕೃಷ್ಣನು ಪಾಂಡವರಿಗೂ ಕೌರವರಿಗೂ ಸಂದಿ ಮಾಡಿಸಲು ಯತ್ನಿಸಿದನು. ಆದರೆ ಅವನ ಪ್ರಯತ್ನ ಮುರಿದುಬಿತ್ತು. ಕೊನೆಗೆ ಯುದ್ಧವೇ ನಡೆಯಬೇಕಾಯಿತು.

ನಾಯಿ ಬರದಿದ್ದರೆ ಸ್ವರ್ಗ ಬೇಡ

ಕೌರವ ಪಾಂಡವ ಸೇನೆಗಳು ಯುದ್ಧಕ್ಕಾಗಿ ಕುರುಕ್ಷೇತ್ರದಲ್ಲಿ ನೆರೆದುವು. ಎರಡು ಕಡೆಯೂ ಅಪಾರ ಸಂಖ್ಯೆಯ ಸೈನ್ಯವಿದ್ದಿತು. ಯುದ್ಧವು ಹದಿನೆಂಟು ದಿನಗಳ ಕಾಲ ಘೋರವಾಗಿ ನಡೆಯಿತು. ಯುದ್ಧದಲ್ಲಿ ದ್ರೋಣ, ಕರ್ಣ, ಶಲ್ಯ ಮುಂತಾದ ಮಹಾವೀರರೆಲ್ಲ ಮಡಿದರು. ಪಾಂಡವರ ಕಡೆಯೂ ಅನೇಕರು ಮಡಿದರು; ಅಭಿಮನ್ಯು ಘಟೋತ್ಕಚಯ ಯುದ್ಧದಲ್ಲಿ ಮಡಿದರು. ಆಗ ಯುಧಿಷ್ಟಿರನ ದುಃಖ ಹೇಳತೀರದು. ಕಡೆಯ ದಿನ, ಭೀಮನು ಗಧಾಯುದ್ಧದಲ್ಲಿ ದುರ್ಯೋಧನನನ್ನು ಕೊಂದು ತನ್ನ ಪ್ರತಿಜ್ಞೆಯನ್ನು ನೆರವೇರಿಸಿಕೊಂಡನು.

ಕುರುಕ್ಷೇತ್ರದ ಮಹಾಯುದ್ಧದಲ್ಲಿ ಉದ್ದಕ್ಕೂ ಶ್ರೀವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಸಹಾಯ ಇದ್ದೇ ಇದ್ದಿತು. ಎಂಥ ಇಕ್ಕಟ್ಟಿನ ಪ್ರಸಂಗದಲ್ಲೂ ಯುಧಿಷ್ಠಿರನು ಧರ್ಮದ ದಾರಿಯನ್ನು ಬಿಟ್ಟು ಕದಲುತ್ತಿರಲಿಲ್ಲ. ಯುದ್ಧ ಮಾಡಲೇಬೇಕಾಗಿ ಬಂದಾಗ, ಕ್ಷತ್ರಿಯ ಧರ್ಮಕ್ಕೆ ಅನುಸಾರವಾಗಿ ಯುದ್ಧಕ್ಕೆ ಹೋದನು. ಎಷ್ಟೋ ಸಂದರ್ಭಗಳಲ್ಲಿ ಸ್ವತಃ ಆಯುಧವನ್ನು ಹಿಡಿದು ಯುದ್ಧ ಮಾಡಿದನು. ಶಾಂತಿಕಾಲದಲ್ಲೂ ಯುದ್ಧಕಾಲದಲ್ಲೂ ಸ್ಥಿರ ಮನಸ್ಸಿನಿಂದ ಕೂಡಿದವನಾಗಿ, ತನ್ನ ಹೆಸರನ್ನು ಸಾರ್ಥಕ ಪಡಿಸಿಕೊಂಡನು. ಹೀಗೆ, ಧರ್ಮದಿಂದ ನಡೆದುಕೊಂಡು ಕುರುವಂಶದ ರಾಜ್ಯವನ್ನು ಗೆದ್ದು, ಅದಕ್ಕೆ ಒಡೆಯನಾದನು. ತಮ್ಮಂದಿರೊಡಗೂಡಿ ರಾಜ್ಯವಾಳತೊಡಗಿದನು. ಯುದ್ಧ ಮುಗಿಯುವ ಹೊತ್ತಿಗೆ ಎಲ್ಲರಿಗೂ ಹಿರಿಯನಾದ ಭೀಷ್ಮನು ಗಾಯಗೊಂಡು ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದನು. ಶ್ರೀಕೃಷ್ಣನ ಮಾತಿನಂತೆ ಯುಧಿಷ್ಠಿರನು ಅವನನ್ನು ಕಂಡನು. ಮಹಾಜ್ಞಾನಿಯಾದ ಭೀಷ್ಮನು ಆತನಿಗೆ, ರಾಜನಾದವನು ಹೇಗೆ ನಡೆದುಕೊಳ್ಳಬೇಕು, ಪ್ರಜೆಗಳ ಸುಖವನ್ನು ಹೇಗೆ ಸಾಧಿಸಬೇಕು ಎಂಬುದನ್ನು ವಿವರಿಸಿದನು. ಯುಧಿಷ್ಠಿರನು ತನಗಿದ್ದ ಸಂದೇಹಗಳನ್ನು ಅವನ ಮುಂದೆ ಇಟ್ಟು ತಿಳುವಳಿಕೆ ಪಡೆದನು. ಆದರೆ, ದಾಯಾದಿಗಳನ್ನು ಕೊಂಡು ಪಡೆದ ಜಯದಿಂದ ಯುಧಿಷ್ಠಿರನಿಗೆ ಸಂತೋಷವಿರಲಿಲ್ಲ. ತಾನು ಮಾಡಿದ ಪಾಪಕೃತ್ಯದ ಪರಿಹಾರಕ್ಕಾಗಿ ವ್ಯಾಸರ ಸಲಹೆಯಂತೆ ಅಶ್ವಮೇಧ ಯಾಗವನ್ನು ಮಾಡಿದನು.

ಕೆಲವು ಕಾಲವಾದ ಮೇಲೆ ಧೃತರಾಷ್ಟ್ರ, ವಿದುರ, ಗಾಂಧಾರಿ, ಕುಂತಿ – ಇವರು ತಪೋವನಕ್ಕೆ ತೆರಳಿದರು. ಯುಧಿಷ್ಠಿರನಿಗೂ ರಾಜ್ಯಭಾರದಲ್ಲಿ ಬೇಸರವಾಗಿ, ವೈರಾಗ್ಯ ಹುಟ್ಟಿತು. ಈ ವೇಳೆಗೆ ಕೃಷ್ಣ, ಧೃತರಾಷ್ಟ್ರ, ವಿದುರ-ಇವರೆಲ್ಲ ತೀರಿಕೊಂಡಿದ್ದರು. ಯುಧಿಷ್ಠಿರನು ದುರ್ಯೋಧನನ ಅರ್ಧ ರಾಜ್ಯವನ್ನು ವಿದುರನ ಮಗನಾದ ಯುಯುತ್ಸುವಿಗೂ, ತಮ್ಮ ಭಾಗದ ರಾಜ್ಯವನ್ನು ಅಭಿಮನ್ಯುವಿನ ಮಗನಾದ ಪರೀಕ್ಷಿತನಿಗೂ ಕೊಟ್ಟು ಪಟ್ಟಿಗಟ್ಟಿದ; ಬಳಿಕ, ಧರ್ಮಸಾಧನೆಗಾಗಿ ತಮ್ಮಂದಿರೊಂದಿಗೆ ಮಹಾಯಾತ್ರೆ ಯನ್ನು ಕೈಗೊಂಡನು. ಹೋಗುವಾಗ ಪಾಂಡವರು ಎಲ್ಲವನ್ನೂ ತೊರೆದು, ಪುರಜನರನ್ನು ಬೀಳ್ಕೊಂಡು, ನಾರುಬಟ್ಟೆಯುಟ್ಟು ಹೊರಟರು. ಎಲ್ಲರೂ ಹಿಂದಿರುಗಿದರೂ ಒಂದು ನಾಯಿ ಮಾತ್ರ ಪಾಂಡವರನ್ನು ಯಾತ್ರೆ ಯುದ್ದಕ್ಕೂ ಹಿಂಬಾಲಿಸುತ್ತಿತ್ತು.

ಪಾಂಡವರು ಅನೇಕ ಸ್ಥಳಗಳನ್ನು ದಾಟಿ ಮೇರು ಪರ್ವತವನ್ನು ಏರುತ್ತಿದ್ದರು; ನಾಯಿಯೂ ಹಿಂಬಾಲಿಸುತ್ತಿತ್ತು. ದಾರಿಯಲ್ಲಿ ನಕುಲನಿಂದ ತೊಡಗಿ ದ್ರೌಪದಿಯವರೆಗೆ ಎಲ್ಲರೂ ಒಬ್ಬೊಬ್ಬರಾಗಿ ಕೆಳಕ್ಕೆ ಬಿದ್ದು ದೇಹತ್ಯಾಗ ಮಾಡಿದರು.

ಯುಧಿಷ್ಠಿರನು ದುಃಖವಾದರೂ ಸಂಕಲ್ಪವನ್ನು ಬಿಡದೆ ಮುಂದೆ ಮುಂದೆ ಹೋಗುತ್ತಿದ್ದನು. ನಾಯಿ ಹಿಂಬಾಲಿಸುತ್ತಲೇ ಇತ್ತು.

ಆಗ, ದೇವೇಂದ್ರನು ಯುಧಿಷ್ಠಿರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗಲು ದಿವ್ಯವಾದ ರಥಸಮೇತ ಬಂದು, “ರಥವನ್ನು ಏರು, ಬಾ” ಎಂದು ಕರೆದನು.

ಯುಧಿಷ್ಠಿರ – “ನನ್ನ ತಮ್ಮಂದಿರೆಲ್ಲಾ ಸತ್ತು ಬಿದ್ದಿದ್ದಾರೆ. ಅವರನ್ನು ಬಿಟ್ಟು, ಸ್ವರ್ಗವಾದರೂ ನನಗೆ ಬೇಡ.”

ಇಂದ್ರ- “ಧರ್ಮಪುತ್ರಾ, ನಿನ್ನ ತಮ್ಮಂದಿರು ಮತ್ತು ದ್ರೌಪದಿ ತಮ್ಮ ಮನುಷ್ಯ ದೇಹಗಳನ್ನು ಇಲ್ಲಿ ಬಿಟ್ಟರು, ಅಷ್ಟೆ. ಅವರೆಲ್ಲಾ ದಿವ್ಯದೇಹಗಳನ್ನು ಪಡೆದು ಆಗಲೇ ಸ್ವರ್ಗಕ್ಕೆ ಹೋಗಿದ್ದಾರೆ. ಯುದ್ಧದಲ್ಲಿ ಸತ್ತ ಕೌರವರೇ ಮುಂತಾದ ಎಲ್ಲ ವೀರರೂ ಸ್ವರ್ಗ ಪಡೆದಿದ್ದಾರೆ. ನೀನು ಯೋಚನೆ ಮಾಡಬೇಡ. ನೀನು ಎಲ್ಲರಿಗಿಂತಲೂ ಪುಣ್ಯಶಾಲಿಯಾದ್ದರಿಂದ ಈ ಮನುಷ್ಯ ದೇಹದಿಂದಲೇ ಸ್ವರ್ಗಕ್ಕೆ ಬರಬಹುದು. ಬಾ, ರಥವನ್ನೇರು.”

ಯುಧಿಷ್ಠಿರ – “ಈ ನಾಯಿ ನನ್ನನ್ನೇ ಹಸ್ತಿನಾವತಿಯಿಂದ ಹಿಂಬಾಲಿಸಿಕೊಂಡು ಬಂದಿದೆ. ಅದು ನನ್ನಲ್ಲಿ ಅಷ್ಟೊಂದು ವಿಶ್ವಾಸ ತೋರುತ್ತಿದೆ. ಅದನ್ನು ಬಿಟ್ಟು ನಾನೊಬ್ಬನೆ ಬರಲು ಇಷ್ಟವಿಲ್ಲ.”

ಯುಧಿಷ್ಠಿರನು ‘ನಾಯಿಯನ್ನು ಬಿಟ್ಟು ನಾನೊಬ್ಬನೇ ಸ್ವರ್ಗಕ್ಕೆ ಬರಲು ಇಷ್ಟವಿಲ್ಲ’ ಎಂದು ಇಂದ್ರನಿಗೆ ಹೇಳಿದನು.

ಇಂದ್ರ – “ನಾಯಿಗೆ ನರಕವಲ್ಲದೆ ಸ್ವರ್ಗಲೋಕವುಂಟೆ? ಏನು ಮಾತಾಡುತ್ತೀಯೆ ನೀನು?”

ಯುಧಿಷ್ಠಿರ- “ದೇವೇಂದ್ರ, ನನ್ನನ್ನು ನಂಬಿದವರನ್ನೂ ಶರಣಾಗತರನ್ನೂ ಎಂದಿಗೂ ಕೈಬಿಡಲಾರೆ. ಇದು ನನ್ನ ವ್ರತ. ನನ್ನನ್ನು ನಂಬಿ ಹಿಂಬಾಲಿಸಿದ ನಾಯಿಗೆ ಸ್ವರ್ಗದಲ್ಲಿ ಸ್ಥಳವಿಲ್ಲದಿದ್ದರೆ, ಆ ಸ್ವರ್ಗ ನನಗೂ ಬೇಡ.”

ಆ ನಾಯಿ, ನಾಯಿಯ ರೂಪದಲ್ಲಿದ್ದ ಯಮಧರ್ಮ; ಯುಧಿಷ್ಠಿರನ ತಂದೆ. ಅವನು ಪ್ರತ್ಯಕ್ಷನಾಗಿ ಯುಧಿಷ್ಠಿರನನ್ನು ಕುರಿತು – “ನೀನು ಮಹಾಪುರುಷ, ಧರ್ಮಿಷ್ಠ, ನಿನ್ನ ಭೂತದಯೆಯು ಅಮೋಘವಾದದ್ದು. ನಿನಗೆ ತಮ್ಮಂದಿರು ಹೆಚ್ಚಲ್ಲ, ನಾಯಿ ಕಡೆಯಲ್ಲ. ನಿನ್ನ ನಡತೆ ಭೂಲೋಕದವರಿಗೆ ಮೇಲ್ಪಂಕ್ತಿಯಾಗಿ ಉಳಿಯುತ್ತದೆ. ಈಗ ನಿಶ್ಚಿಂತನಾಗಿ ರಥವನ್ನು ಹತ್ತು” ಎಂದನು.

ಯುಧಿಷ್ಠಿರನಿಗೆ ನೆಮ್ಮದಿಯಾಯಿತು; ತಂದೆಗೂ ಇಂದ್ರನಿಗೂ ನಮಸ್ಕಾರ ಮಾಡಿ, ರಥವನ್ನು ಏರಿದನು. ಇಂದ್ರನೊಂದಿಗೆ ದೇವಲೋಕವನ್ನು ಸೇರಿದನು. ಅಲ್ಲಿ ದಿವ್ಯ ದೇಹದಾರಿಗಳಾಗಿದ್ದ ಬಂಧುಬಾಂಧವರನ್ನು ಕಂಡು ಸುಖಪಟ್ಟನು.