ಎಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಸ್ಥಿರವಾಗಿ ಇದ್ದು, ಹಲವು ದಶಕಗಳ ಕಾಲ ಎರಡನೆಯ ಸೂಪರ್ ಪವರ್ ಆಗಿ ಮೆರೆದ ಮತ್ತು ಹೊಸ ಸಾಮಾಜಿಕ ವ್ಯವಸ್ಥೆಯನ್ನೇ ಕಟ್ಟಿ ಬೆಳೆಸಿ ನಿರ್ಮಿಸಿದ ಸೋವಿಯತ್ ಒಕ್ಕೂಟದಂತಹ ದೊಡ್ಡ ದೇಶ ಹಠಾತ್ತಾಗಿ ಮಾಯವಾಗಿದ್ದು ಹೇಗೆ? ಇದಕ್ಕೆ ಕಾರಣಗಳೇನು? ಇದರ ಅರ್ಥ ಏನು? ಪರಿಣಾಮಗಳೇನು? ಅದರ ಸಾಧನೆಗಳೇನು? ಸಾರ್ವಕಾಲಿಕ ಕೊಡುಗೆಗಳೇನು? ಇದರಿಂದ ಏನು ಕಲಿಯಬಹುದು? ಇವೆಲ್ಲ ಪ್ರಶ್ನೆಗಳು ಏಕಕಾಲಕ್ಕೆ ಮೂಡುತ್ತವೆ. ಇವೆಲ್ಲದಕ್ಕೂ ಆಖೈರು ಎನ್ನಬಹುದಾದ ಮತ್ತು ಸರ್ವಸಮ್ಮತ ಉತ್ತರ ಇಲ್ಲ.

ಸೋವಿಯತ್ ವಿಘಟನೆ ಯಾಕೆ? ಹೇಗೆ? ಎಂಬ ಪ್ರಶ್ನೆಯನ್ನು ಮೊದಲಿಗೆ ಎತ್ತಿಕೊಂಡರೆ, ಇದಕ್ಕೆ ಹಲವು ಉತ್ತರಗಳಿವೆ. ಬಂಡವಾಳಶಾಹಿ ವ್ಯವಸ್ಥೆಯೇ ಅತ್ಯಂತ ಸರಿಯಾದ ಏಕಮಾತ್ರ ವ್ಯವಸ್ಥೆ ಎಂದು ನಂಬಿರುವವರ ಉತ್ತರ ಇದಕ್ಕೆ ಬಹಳ ಸರಳ. ಸೋವಿಯತ್ ಒಕ್ಕೂಟ ಸ್ಥಾಪಿಸಿ ಬೆಳೆಸಲು ಪ್ರಯತ್ನಿಸಿದ ಸಮಾಜವಾದಿ ವ್ಯವಸ್ಥೆ ಕಾರ್ಯ ಸಾಧ್ಯವಾದ ವ್ಯವಸ್ಥೆ ಅಲ್ಲ. ಸಂಪತ್ತಿನ ಖಾಸಗಿ ಒಡೆತನ. ಹಣ ಸಂಗ್ರಹಿಸಲು ಆಸೆ. ಸಾರ್ವತ್ರಿಕ ಮತದಾನ ಮತ್ತು ಬಹುಪಕ್ಷೀಯ ಪ್ರಜಾಪ್ರಭುತ್ವ ಇಲ್ಲದ ವ್ಯವಸ್ಥೆ ಸಾಧ್ಯವಿಲ್ಲ. ಯಾರಾದರೂ ಅಂತಹ ವ್ಯವಸ್ಥೆ ಬಲವಂತವಾಗಿ ಕಟ್ಟಲು ಪ್ರಯತ್ನಿಸಿದರೆ ಅದು ಹೆಚ್ಚು ಕಾಲ ಬಾಳಲು ಸಾಧ್ಯವಿಲ್ಲ. ಅದೇ ಸೋವಿಯತ್ ಒಕ್ಕೂಟಕ್ಕೆ ಆದದ್ದು, ಅದರಲ್ಲಿ ಏನೂ ಆಶ್ಚರ್ಯವಿಲ್ಲ. ಅದು ಅನಿವಾರ್ಯವಾಗಿತ್ತು ಮತ್ತು ಒಳ್ಳೆಯ ಬೆಳವಣಿಗೆ ಕೂಡಾ. ಈ ಅಭಿಪ್ರಾಯ ಹೊಂದಿರುವವರು ಸೋವಿಯತ್ ಒಕ್ಕೂಟ ಎಪ್ಪತ್ತರಷ್ಟು ಹೆಚ್ಚು ವರ್ಷ ಕಾಲ ಸ್ಥಿರವಾಗಿ ಹೇಗೆ ಇತ್ತು? ವಿಶಿಷ್ಟವಾದ ಸಾಧನೆಗಳನ್ನು, ಚಾರಿತ್ರಿಕ ಮೈಲಿಗಲ್ಲುಗಳನ್ನು ಹೇಗೆ ಸೃಷ್ಟಿಸಿತು ಎಂಬುದಕ್ಕೆ ಸಮಜಾಯಿಷಿ ಕೊಡಬೇಕಾಗುತ್ತದೆ.

ಸಮಾಜವಾದಿ ವ್ಯವಸ್ಥೆಯ ಬೆಂಬಲಿಗರು ಮತ್ತು ಅದರ ಚಾರಿತ್ರಿಕ ಮಹತ್ತರ ಬಗ್ಗೆ ಆಸಕ್ತಿ ಇರುವವರಲ್ಲೂ ಈ ಬಗ್ಗೆ ಒಮ್ಮತವಿಲ್ಲ. ಸಮಾಜವಾದಿಗಳು, ಮಾರ್ಕ್ಸ್ ವಾದಿಗಳಲ್ಲೂ ಒಂದು ವಿಭಾಗ ಸಹ ಇದು ಅನಿವಾರ್ಯವಾಗಿತ್ತು, ಸೋವಿಯತ್ ಸಮಾಜ ವ್ಯವಸ್ಥೆ(ಆಶ್ಚರ್ಯಕರ ರೀತಿಯಲ್ಲಿ) ಕಾರ್ಯಸಾಧ್ಯ ವ್ಯವಸ್ಥೆ ಆಗಿರಲಿಲ್ಲ ಎಂದು ಮೊದಲನೆಯ ಗುಂಪಿನವರ ಅಭಿಪ್ರಾಯಕ್ಕೆ ಪ್ರತಿ ಧ್ವನಿ ಕೊಡುತ್ತಾರೆ. ಇವರ ಪ್ರಕಾರ ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದಿ ವ್ಯವಸ್ಥೆ ಇರಲಿಲ್ಲ. ಅದು ಒಂದು ಪಕ್ಷದ ಸರ್ವಾಧಿಕಾರವಾಗಿತ್ತು. ಕಾರ್ಮಿಕ ವರ್ಗದ ನಾಯಕತ್ವದ ಸಮಾಜವಾದಿ ಪ್ರಭುತ್ವ ಆಗಿರಲೇ ಇಲ್ಲ ಎನ್ನುತ್ತಾರೆ ಇವರು. ಇದೇ ಅಭಿಪ್ರಾಯದ ಇನ್ನೊಂದು ವಿಧ ಎಂದರೆ ಒಂದೇ ದೇಶದಲ್ಲಿ ಸಮಾಜವಾದಿ ವ್ಯವಸ್ಥೆ ಕಟ್ಟಲು ಸಾಧ್ಯವಿಲ್ಲ. ಅದರಲ್ಲೂ ಬಂಡವಾಳ ಶಾಹಿ ಬೆಳೆಯಿಂದ ಹಿಂದುಳಿದ ಕೃಷಿ ಪ್ರಧಾನ ದೇಶದಲ್ಲಿ ಸಮಾಜವಾದ ಕಟ್ಟುವುದು ಸಾಧ್ಯವಿಲ್ಲ. ಆದ್ದರಿಂದ ಅಂತಹ ಪ್ರಯತ್ನ ಒಂದಲ್ಲ ಒಂದು ದಿನ ವಿಫಲವಾಗುವುದು ನಿರೀಕ್ಷಿತವಾಗಿತ್ತು. ಸಮಾಜವಾದ ಅತ್ಯಂತ ಅಭಿವೃದ್ದಿಗೊಂಡ ಬಂಡವಾಳಶಾಹಿ ದೇಶಗಳಲ್ಲೆಲ್ಲಾ ಏಕಕಾಲಕ್ಕೆ ಆಗಬೇಕು. ಆಗ ಮಾತ್ರ ಅದು ‘ಶಾಶ್ವತ ಕ್ರಾಂತಿ’ಯಾಗುತ್ತದೆ. ಇದು ಟ್ರಾಟಸ್ಕಿವಾದ. ಈ ಗುಂಪಿನವರೂ ಈ ವ್ಯವಸ್ಥೆ ಎಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕಾರ್ಯ ಸಾಧ್ಯ ವ್ಯವಸ್ಥೆಯಾಗಿತ್ತು. ಅದರ ಸಾಧನೆಗಳು, ಅದು ವಹಿಸಿದ ಚಾರಿತ್ರಿಕ ಪಾತ್ರ, ಮಾಡಿದ ಭಾರಿ ಬದಲಾವಣೆಗಳ ಬಗ್ಗೆ ಸಮಜಾಯಿಷಿ ಕೊಡಬೇಕಾಗುತ್ತದೆ.

ಮೂರನೆಯ ಗುಂಪಿನಲ್ಲಿ ಸಮಾಜವಾದಿ ವ್ಯವಸ್ಥೆಯ ಹೆಚ್ಚು ಬೆಂಬಲಿಗರು ಮತ್ತು ಈ ವ್ಯವಸ್ಥೆ ಬಗ್ಗೆ ಮೆಚ್ಚುಗೆ, ಗೌರವ, ಆಸಕ್ತಿ ಇರುವವರು ಬರುತ್ತಾರೆ. ಸೋವಿಯತ್ ಒಕ್ಕೂಟದ ವ್ಯವಸ್ಥೆ ಉತ್ತಮವಾಗಿತ್ತು. ಖಂಡಿತ ಹಲವು ಸಮಸ್ಯೆಗಳು ಇದ್ದವು. ಆದರೆ ಅವು ಪರಿಹಾರ ಕಾಣದ ಸಮಸ್ಯೆಗಳೇನೂ ಆಗಿರಲಿಲ್ಲ. ಒಕ್ಕೂಟದ ಮತ್ತು ವ್ಯವಸ್ಥೆಯ ವಿಫಲತೆಗೆ ಮುಖ್ಯ ಕಾರಣ ಬಾಹ್ಯ(ಅಮೆರಿಕಾ) ಹಸ್ತಕ್ಷೇಪ. ಗ್ಲಾಸ್‌ನೋಸ್ತ್ ಮತ್ತು ಪೆರೆಸ್ಟ್ರೊಯಿಕ ಹೆಸರಲ್ಲಿ ಗೋರ್ಬಚೇವ್ ಈ ಹಸ್ತಕ್ಷೇಪಕ್ಕೆ ಸುಲಭವಾಗಿ ಅವಕಾಶ ಮಾಡಿಕೊಟ್ಟರು. ಈ ವಾದದ ಇನ್ನೊಂದು ವಿಧ ಎಂದರೆ ಗೊರ್ಬಚೇವ್ ಅಮೆರಿಕನ್ ಏಜೆಂಟ್‌ನಾಗಿದ್ದ. ಅಮೆರಿಕ ಗೋರ್ಬಚೇವ್‌ನನ್ನು ಬಳಸಿ ಸೋವಿಯತ್ ಒಕ್ಕೂಟದ ವಿಘಟನೆಗೆ ಭಾರಿ ಸಂಪನ್ಮೂಲ ಸುರಿದು ಅದು ಆಗುವಂತೆ ಮಾಡಿತು. ಅಮೆರಿಕ ಮಾತ್ರವಲ್ಲ, ಇನ್ನು ಹಲವು ಪಾಶ್ಚಿಮಾತ್ಯ ದೇಶಗಳು ಸೋವಿಯತ್ ಒಕ್ಕೂಟದ ವಿಘಟನೆಗೆ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದ್ದವು. ಭಾರಿ ಸಂಪನ್ಮೂಲಗಳನ್ನು ಖರ್ಚು ಮಾಡಿದ್ದವು. ಆದರೆ ಎಪ್ಪತ್ತು ವರ್ಷಗಳ ಕಾಲ ಅದನ್ನು ಎದುರಿಸಿ ಸೋವಿಯತ್ ಒಕ್ಕೂಟ ಬೆಳೆದಿತ್ತು. ಗೋರ್ಬಚೆವ್ ಅವರನ್ನು ಬಾಹ್ಯಶಕ್ತಿಗಳು ನಿಯಂತ್ರಿಸಿದ್ದು ನಿಜವಾದರೆ ಈ ವ್ಯವಸ್ಥೆಯ ಬೆನ್ನೆಲುಬಾಗಿದ್ದ, ಹಿಂದೆ ಇಂತಹ(ಹಲವು ಬಾರಿ ಇದಕ್ಕಿಂತಲೂ ಹೆಚ್ಚು ತೀವ್ರವಾಗಿದ್ದ) ಬಾಹ್ಯ ಅತಿಕ್ರಮಣ (ಫ್ಯಾಸಿಸ್ಟ್ ವಿರೋಧಿ ಯುದ್ಧ ಇದಕ್ಕೆ ಉತ್ತಮ ಉದಾಹರಣೆ) ಎದುರಿಸಿ ಗೆದ್ದಿದ್ದ, ಕಮ್ಯುನಿಸ್ಟ್ ಪಕ್ಷದ ಹೆಚ್ಚು ಕಡಿಮೆ ಒಂದು ಕೋಟಿ ಸದಸ್ಯರು ಮತ್ತು ಕಾರ್ಮಿಕ ವರ್ಗ ದೇಶದ ವ್ಯವಸ್ಥೆಯ ರಕ್ಷಣೆಗೆ ಧಾವಿಸಲಿಲ್ಲವೇಕೆ? ಕನಿಷ್ಟ ಪ್ರತಿರೋಧವೂ ತೋರಿಸಲಿಲ್ಲವೇಕೆ? ಎಂಬುದರ ಬಗ್ಗೆ ವಿವರಣೆ ನೀಡಬೇಕಾಗುತ್ತದೆ. ಈ ಗುಂಪಿನವರು ಸ್ವಾಭಾವಿಕವಾಗಿಯೇ ಈ ವಿಘಟನೆ ಅನಿವಾರ್ಯವಿರಲಿಲ್ಲ, ಅಮೆರಿಕನ್ ಹಸ್ತಕ್ಷೇಪವಿಲ್ಲದಿದ್ದರೆ ಇದು ನಡೆಯುತ್ತಿರಲಿಲ್ಲ ಎನ್ನುತ್ತಾರೆ.

ನಾಲ್ಕನೆಯ ಗುಂಪು – ಸೋವಿಯತ್ ವಿಭಜನೆ ಪ್ರಮುಖವಾಗಿ ಆಂತರಿಕ ಕಾರಣಗಳಿಂದ ಆಗಿದ್ದು, ಅಮೆರಿಕನ್ ಹಸ್ತಕ್ಷೇಪದ ಪಾತ್ರ ಇತ್ತಾದರೂ ಅದು ನಿರ್ಣಾಯಕ ಪಾತ್ರ ವಹಿಸಲಿಲ್ಲ ಎನ್ನುತ್ತಾರೆ. ಈ ಗುಂಪಿನಲ್ಲಿ ಜಗತ್ತಿನ ಹೆಚ್ಚಿನ ಕಮ್ಯುನಿಸ್ಟ್ ಪಕ್ಷಗಳು ಬರುತ್ತವೆ. ೧೯೯೩ರಲ್ಲಿ ಕಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ(ಮಾರ್ಕ್ಸ್‌ನ ೧೭೫ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ನಡೆದ) ವಿಚಾರ ಸಂಕಿರಣದಲ್ಲಿ ೨೭ ಕಮ್ಯುನಿಸ್ಟ್ ಪಕ್ಷಗಳು ವ್ಯಕ್ತಪಡಿಸಿದ ಅಭಿಪ್ರಾಯದಿಂದ ವ್ಯಕ್ತವಾಗುತ್ತದೆ. ನಮ್ಮ ದೇಶದ ಸಿಪಿಐ(ಎಂ) ಈ ಗುಂಪಿನ ಅಭಿಪ್ರಾಯವನ್ನು ಪ್ರತಿನಿಧಿಸುವಂತಹದ್ದು. ಸಿಪಿಐ(ಎಂ) ೧೯೯೨ರ ೧೪ನೆಯ ಮಹಾಧಿವೇಶನದಲ್ಲಿ ಅಂಗೀಕರಿಸಿದ ನಿರ್ಣಯ(ಈ ಕೆಳಗಿನ ಭಾಗ ತೋರಿಸುವಂತೆ) ಈ ಅಭಿಪ್ರಾಯದ ಉತ್ತಮ ಉದಾಹರಣೆ.

೧೯೮೬ರಲ್ಲಿ ಚೀನಾ ಜನತಾ ಗಣರಾಜ್ಯದಲ್ಲಿ ಸಮಾಜವಾದವನ್ನು ಆಂತರಿಕವಾಗಿಯೇ ಬುಡಮೇಲು ಮಾಡಲು ಸಾಮ್ರಾಜ್ಯಶಾಹಿಯ ಇಂಥದೇ ಪ್ರಯತ್ನವನ್ನು ಚೀನಾ ಕಮ್ಯುನಿಸ್ಟ್ ಪಕ್ಷ ಮತ್ತು ಜನತಾ ವಿಮೋಚನೆ ಸೇನೆ (ಪಿಎಲ್‌ಎ) ಯಶಸ್ವಿಯಾಗಿ ವಿಫಲಗೊಳಿಸಿತು. ಸಮಾಜವಾದವನ್ನು ನಾಶ ಮಾಡುವ ಮತ್ತು ಒಕ್ಕೂಟವನ್ನು ವಿಚ್ಛಿದ್ರಗೊಳಿಸುವ ಪ್ರಕ್ರಿಯೆ ಯನ್ನು ತಡೆಯಲು ಸೋವಿಯತ್ ಒಕ್ಕೂಟದಲ್ಲಿ ಕೂಡಾ ಪ್ರಯತ್ನ ನಡೆಸಲಾಯಿತು. ಆದರೆ ಅದು ವಿಫಲವಾಯಿತು. ಆ ಹಿನ್ನೆಲೆಯಲ್ಲಿ ವ್ಯಾಪಕ ಕಮ್ಯುನಿಸ್ಟ್ ವಿರೋಧ ಶಕ್ತಿಗಳ ಈ ಯಶಸ್ಸುಗಳಿಗೆ ಜನರಲ್ಲಿ ಅತೃಪ್ತಿ ಉಂಟಾಗಿ ಅವರು ಪಕ್ಷದಿಂದಲೂ, ಪ್ರಭುತ್ವದಿಂದಲೂ ದೂರ ಸರಿಯುವಂತೆ ಮಾಡಿದ ಕಾರಣವಾಗಿ ಹಿಂದಿನ ದೌರ್ಬಲ್ಯಗಳು, ತಪ್ಪುಗಳು ಮತ್ತು ವಿಕೃತಿಗಳೇ ಮುಖ್ಯ ಕಾರಣ ಎಂದು ಒತ್ತಿ ಹೇಳಲೇಬೇಕು. ಇದನ್ನು ತಿದ್ದಿಕೊಂಡು ಸರಿಪಡಿಸುವ ಬದಲು, ೨೦ನೆಯ ಮಹಾಧಿವೇಶನ ನಂತರ ಸೋವಿಯತ್ ಕಮ್ಯುನಿಸ್ಟ್ ಪಕ್ಷ ಅನುಸರಿಸಿಕೊಂಡು ಬಂದ ಮತ್ತು ಗೋರ್ಬಚೇವ್ ನಾಯಕತ್ವದಲ್ಲಿ ತೀವ್ರಗೊಂಡ ಪರಿಷ್ಕರಣವಾದಿ ನೀತಿಗಳು, ಸಮಾಜವಾದಿ ವ್ಯವಸ್ಥೆ ಮತ್ತು ಸೋವಿಯತ್ ಒಕ್ಕೂಟವನ್ನು ಕಳಚಿ ಹಾಕುವುದಕ್ಕೆ ಕಾರಣವಾದವು.

ಸಿಪಿಐ(ಎಂ)ನ ಈ ನಿರ್ಣಯದಲ್ಲಿ ಈ ನ್ಯೂನ್ಯತೆಗಳು, ತಪ್ಪುಗಳು ಮತ್ತು ವಿಕೃತಿಗಳು ಯಾವುವು ಎಂದು ಗುರುತಿಸಲಾಗಿದೆ.

೧. ಸಮಾಜವಾದಿ ಪ್ರಜಾಪ್ರಭುತ್ವ ವಿಸ್ತರಿಸಿ ಅದನ್ನು ಆಳಗೊಳಿಸುವಲ್ಲಿ, ಜನಗಳು ಹೆಚ್ಚು ಹೆಚ್ಚಾಗಿ ಭಾಗವಹಿಸುವಲ್ಲಿನ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಸಾಧ್ಯವಾಗದ ನ್ಯೂನ್ಯತೆ.

೨. ಹೆಚ್ಚುತ್ತಿದ್ದ ಅಧಿಕಾರಶಾಹಿತ್ವ, ಸಮಾಜವಾದಿ ಕಾನೂನು ಬದ್ಧತೆಯ ಉಲ್ಲಂಘನೆ, ವೈಯಕ್ತಿಕ ಸ್ವಾತಂತ್ರ್ಯದ ದಮನ ಮುಂತಾದ ವಿಕೃತಿಗಳು.

೩. ‘ಕಾರ್ಮಿಕ ವರ್ಗದ ಸರ್ವಾಧಿಕಾರ’ ಎಂಬ ಪರಿಕಲ್ಪನೆ, ಜಾರಿ ಮಾಡುವಾಗ ಕಮ್ಯುನಿಸ್ಟ್ ಪಕ್ಷದ ಅಥವಾ ಕೆಲವು ನಾಯಕರ ಸರ್ವಾಧಿಕಾರವಾಗಿ ವಿಕೃತಗೊಂಡಿದ್ದು.

೪. ಆಳುವ ಕಮ್ಯುನಿಸ್ಟ್ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ನೀತಿಗಳ ತೀವ್ರ ಉಲ್ಲಂಘನೆ.

೫. ಕೇಂದ್ರೀಕೃತ ಯೋಜನೆಯ ವ್ಯವಸ್ಥೆಯಲ್ಲಿ ಹಲವು ಬಾರಿ ಕೆಳಮಟ್ಟದಲ್ಲಿ ಉತ್ಪಾದಕ ಶಕ್ತಿಗಳ ಬೆಳವಣಿಗೆಯಲ್ಲಿ ಸೃಜನಶೀಲತೆ ಮತ್ತು ಮುಂದಾಳತ್ವ ಹೊಸಕುವ ಅತಿ-ಕೇಂದ್ರೀಕರಣದ ತಪ್ಪುಗಳು.

೬. ಪ್ರತಿ ಹಂತದ ಆರ್ಥಿಕ ಬೆಳವಣಿಗೆ ತಕ್ಕುದಾದ ಆರ್ಥಿಕ ನಿರ್ವಹಣಾ ವಿಧಾನಗಳನ್ನು ಬದಲಾಯಿಸುವುದರಲ್ಲಿ ವಿಳಂಬ ಮತ್ತು ನ್ಯೂನ್ಯತೆಗಳು.

೭. ಹಲವು ರೂಪಗಳ ಆಸ್ತಿಯ ಅಗತ್ಯತೆಯನ್ನು ಮನಗಾಣದೆ ಹೋದದ್ದು ಮತ್ತು ಈ ರೂಪಗಳ ಆಸ್ತಿದಾರರ ಹಕ್ಕುಗಳ ಉಲ್ಲಂಘನೆಯ ತಪ್ಪು.

೮. ಯೋಜನೆಯ ವಿಧಾನ ಮಾರುಕಟ್ಟೆ ಶಕ್ತಿಗಳು ಮತ್ತು ಸೂಚಕಗಳನ್ನು ಬಳಸದೆ ಹೋದ ತಪ್ಪು.

೯. ಪಕ್ಷದ ನಾಯಕತ್ವದಲ್ಲಿ, ಸದಸ್ಯರಲ್ಲಿ ಮತ್ತು ಜನಸಾಮಾನ್ಯರಲ್ಲಿ ಕ್ರಾಂತಿಕಾರಿ ಎಚ್ಚರ ಮತ್ತು ಸಮಾಜವಾದಿ ಸಾಮೂಹಿಕ ಪ್ರಜ್ಞೆ ಸವೆದು ಹೋದದ್ದು.

ಸ್ವಾಭಾವಿಕವಾಗಿಯೇ ಈ ಗುಂಪು ಸಮಾಜವಾದ ಮತ್ತು ಸೋವಿಯತ್ ವಿಘಟನೆ ಅನಿವಾರ್ಯವಾಗಿರಲಿಲ್ಲ. ಅದರ ನ್ಯೂನ್ಯತೆಗಳು, ತಪ್ಪುಗಳು, ವಿಕೃತಿಗಳಿಂದ ಕಲಿತು ಸಮಾಜವಾದಿ ವ್ಯವಸ್ಥೆ ಬೆಳೆಯಲು, ಮುಂದೆ ಹೋಗಲು ಸಾಧ್ಯ. ಇಂತಹ ತಪ್ಪು, ವಿಕೃತಿಗಳಿಲ್ಲದ ಚೀನಾ, ವಿಯೋಟ್ನಾಮ್, ಕ್ಯೂಬಾ ಮುಂತಾದ ಕಡೆ ಸಮಾಜವಾದಿ ವ್ಯವಸ್ಥೆ ಮುಂದುವರೆಯುತ್ತಿರುವುದು; ಬಂಡವಾಳಶಾಹಿ ವ್ಯವಸ್ಥೆ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಒದಗಿಸದೆ ಇರುವುದು; ಅದಕ್ಕೆ ಬದಲಾಗಿ ಸಮಾಜವಾದಿ ವ್ಯವಸ್ಥೆ ಬೆಳೆಸ ಬೇಕಾಗಿರುವುದು – ಮುಂದೇನು? ಎಂಬ ಪ್ರಶ್ನೆಗೆ ಗುಂಪಿನ ಉತ್ತರ.

ಇವು ನಾಲ್ಕು ಪ್ರಮುಖ ಉತ್ತರಗಳಾದರೂ, ಇನ್ನೂ ಹಲವು ವಿವರಣೆಗಳು ಇವೆ. ಈ ಪ್ರಶ್ನೆಗಳಿಗೆ ವಿವರವಾದ ಉತ್ತರ ಸಮಾಜಶಾಸ್ತ್ರೀಯ ಅಧ್ಯಯನದಲ್ಲಿ ಪ್ರಮುಖ ಸಂಶೋಧನೆಯ ವಿಷಯ ಆಗಿದ್ದು, ಹಲವು ಅಕಾಡೆಮಿಕ್ ಸಂಶೋಧಕರು ಈ ಬಗ್ಗೆ ವಿವರವಾದ ಅಧ್ಯಯನ ಮಾಡುತ್ತಿದ್ದಾರೆ. ಇದು ವಿಘಟನೆಯ ನಂತರ ಮಾಜಿ ಸೋವಿಯತ್ ಒಕ್ಕೂಟದ ದೇಶಗಳ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಅಗತ್ಯ ಮಾಹಿತಿ ಕೂಡಾ. ಇಂತಹ ಅಕಾಡೆಮಿಕ್ ಉತ್ತರಗಳಿಂದ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಬಹುದು. ಅಕ್ಟೋಬರ್ ಕ್ರಾಂತಿಯ ನಂತರ ಸಮಾಜವಾದಿ ವ್ಯವಸ್ಥೆ ಕಟ್ಟುವಲ್ಲಿ ಅದ್ಭುತ ಪ್ರಗತಿ ತೋರಿಸಿದ್ದರೂ, ಅದು ಕಳೆದ ಕೆಲವು ದಶಕಗಳಿಂದ ಸಮಾಜವಾದಿಯಾಗಿ ಉಳಿದಿರಲಿಲ್ಲ. ಸೋವಿಯತ್ ಒಕ್ಕೂಟದ ಬೆಳವಣಿಗೆಯ ಒಂದು ಹಂತದಲ್ಲಿ(ಸುಮಾರು ೪೦-೫೦ರ ದಶಕದಲ್ಲಿ) ಪಕ್ಷದ ಉನ್ನತ ನಾಯಕತ್ವ, ಹಿರಿಯ ಮಿಲಿಟರಿ ನಾಯಕತ್ವ, ಕೈಗಾರಿಕಾ-ಕೃಷಿ ಸಂಕೀರ್ಣಗಳ ಡೈರೆಕ್ಟರುಗಳು. ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳ ನಾಯಕತ್ವ ಇತ್ಯಾದಿಗಳು ಸೇರಿದ ಮೇಲಿನ ಪದರ ಒಂದು ವರ್ಗವಾಗಿ ಬೆಳೆಯಿತು. ಗೋರ್ಬಚೇವ್, ಯೆಲ್ಸಿನ್, ಪುಟಿನ್ ಈ ವರ್ಗದ ಪ್ರತಿನಿಧಿ ಗಳು. ಈ ವರ್ಗ ರೂಪಗೊಂಡು ಬಲಗೊಂಡು ತನ್ನ ಹಿತಾಸಕ್ತಿಗಳಿಗೆ ಬೇಕಾದ ಸುಧಾರಣೆಗೆ ಹಿಂದಿನ ವ್ಯವಸ್ಥೆಯೊಳಗೆ ಮೊದಲು ಪ್ರಯತ್ನಿಸಿ, ಆಗದೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತಂದಿತು. ಪ್ರಭುತ್ವ ಈಗಾಗಲೇ ಈ ವರ್ಗದ ಕೈಯಲ್ಲಿ ಇದ್ದದ್ದು ಈ ಬದಲಾವಣೆ ಶಾಂತಿಯುತವಾಗಿ ಆಗಲು ಸಾಧ್ಯವಾಯಿತು. ವಿದೇಶಿ ಶಕ್ತಿಗಳು ಮತ್ತು ಈ ವರ್ಗದ ಹಿತಾಸಕ್ತಿಗಳಲ್ಲಿ ಬಹಳ ಸಾಮ್ಯ ಇದ್ದುದರಿಂದ ಇದು ಇನ್ನಷ್ಟು ಸುಲಭವಾಯಿತು. ಈ ವಿವರಣೆ ಪ್ರತಿಪಾದಿಸುವವರಿಗೆ ಉದಾಹರಣೆ ‘ಮಂತ್ಲೀ ರಿವ್ಯೆ’ ಎಂಬ ಅಮೆರಿಕನ್ ಪತ್ರಿಕೆಯ ಸಂಪಾದಕೀಯ ಗುಂಪು ಮತ್ತು ಡೇವಿಡ್ ಲೇನ್ ಎಂಬ ವಿಶ್ವವಿದ್ಯಾಲಯದ ಪ್ರೊಫೆಸರ್, ಸೋವಿಯತ್ ಒಕ್ಕೂಟ ಆರಂಭಿಸಿದ ‘ಮಾರುಕಟ್ಟೆ ಸುಧಾರಣೆ’ಗಳು ಇಡೀ ದೇಶದ, ವ್ಯವಸ್ಥೆಯ ವಿಭಜನೆಯಲ್ಲಿ ಪರಿಣಮಿಸುವುದು ಅನಿವಾರ್ಯವಾಗಿರಲಿಲ್ಲ; ಇದಕ್ಕೆ ಸೋವಿಯತ್ ನಾಯಕತ್ವದ ಕೆಲವು ಗುರುತರ ತಪ್ಪುಗಳು ಕಾರಣ; ಇಂತಹ ತಪ್ಪುಗಳನ್ನು ಮಾಡದ ಚೀನಾದಲ್ಲಿ ಇಂತಹುದೇ ಸುಧಾರಣೆಗಳು ಬಹಳ ಸಫಲವಾಗಿದ್ದು ಇದಕ್ಕೆ ದೃಷ್ಟಾಂತ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ವಿಜೇತ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗಲಿಟ್ ಝ್. ಸೋವಿಯತ್ ಸುಧಾರಣೆಗಳ ವೈಫಲ್ಯ ಮತ್ತು ಚೀನಾದ ಸುಧಾರಣೆಗಳ ಸಫಲತೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡುವ ಪರಂಪರೆ ಬೆಳೆದಿದೆ. ಇದರಲ್ಲಿ ಕೆಲವರು ಚೀನಾದ ಬೆಳವಣಿಗೆಯ ಈ ಹಂತದ ನೀತಿಗಳು, ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಿದ ಹಂತದಲ್ಲಿದ್ದ ಸೋವಿಯತ್ ಸುಧಾರಣೆಗಳಿಗೆ ಉತ್ತರವಾಗಿರಲು ಸಾಧ್ಯವಿಲ್ಲ. ಸೋವಿಯತ್ ಆರ್ಥಿಕ ಮತ್ತು ಸಮಾಜ ಎದುರಿಸಿದ ಸಮಸ್ಯೆಗಳು ವಿಶಿಷ್ಟವಾಗಿದ್ದು, ಇಲ್ಲಿಯವರೆಗೆ ಗೊತ್ತಿರುವ ಸಿದ್ಧ ಪರಿಹಾರಗಳು ಯಾವುದೂ ಕೆಲಸ ಮಾಡುತ್ತಿರಲಿಲ್ಲ. ಚೀನಾ ಮುಂದಿನ ಹಂತದಲ್ಲಿ ಇದನ್ನು ಎದುರಿಸಲಿದೆ ಎನ್ನುತ್ತಾರೆ.

ಸೋವಿಯತ್ ಒಕ್ಕೂಟದ ವಿಘಟನೆಗೆ ಕಾರಣವಾದ ನ್ಯೂನ್ಯತೆಗಳು, ಸಮಸ್ಯೆಗಳು ಮತ್ತು ವಿಕೃತಿಗಳ ಬಗ್ಗೆ ನೋಡಲಾಗಿದೆ. ಅದರ ಕೊಡುಗೆಗಳು, ಸಾಧನೆಗಳು, ಅನುಸರಿಸ ಬಹುದಾದ ಒಳ್ಳೆಯ ಮಾದರಿಗಳು ಏನು ಎಂಬುದರ ಬಗೆಗೂ ಒಮ್ಮತದ ಅಭಿಪ್ರಾಯ ಗಳಿಲ್ಲ. ಆದರೆ ಕೆಲವು ಸರ್ವೇ ಸಾಮಾನ್ಯವಾದ ಅಂಶಗಳನ್ನು ಹೀಗೆ ಗುರುತಿಸಬಹುದು.

೧. ಬಂಡವಾಳಶಾಹಿ ಸಾಧಿಸಿದ ಎಲ್ಲಾ ಬೆಳವಣಿಗೆಗಳನ್ನು (ಕೈಗಾರಿಕೆ, ತಂತ್ರಜ್ಞಾನ) ಬಳಸಿ, ಅದೇ ಅಥವಾ ಇನ್ನೂ ಹೆಚ್ಚಿನ ಮಟ್ಟದ ಸಮೃದ್ದಿ ಸಾಧಿಸಿ ಅದನ್ನು ಸಮಾನತೆ, ಶಾಂತಿಯ ಧ್ಯೇಯ ಈಡೇರಿಸಲು ಬಳಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದು.

೨. ಬಂಡವಾಳಶಾಹಿ ಪ್ರಮುಖ ಸಮಸ್ಯೆಗಳು (ನಿರುದ್ಯೋಗ, ಯುದ್ಧ, ಶೋಷಣೆ) ಇಲ್ಲದ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯವಿದೆ ಎಂದು ತೋರಿಸಿಕೊಟ್ಟಿದ್ದು.

೩. ಹಿಂದುಳಿದ ಕೃಷಿ-ಪ್ರಧಾನ ದೇಶಕ್ಕೆ ತೀವ್ರ ಬೆಳವಣಿಗೆಗೆ ಬಂಡವಾಳಶಾಹಿ ಅಲ್ಲದ ಹಲವು ದಾರಿಗಳಿವೆ ಎಂದು ತೋರಿಸಿಕೊಟ್ಟಿದ್ದು.

೪. ಸಮಾಜದ ಆರ್ಥಿಕ-ಸಾಮಾಜಿಕ ಸಮತೋಲಿತ ಬೆಳವಣಿಗೆಗೆ ಸಮಗ್ರ ಯೋಜನೆ ಅಗತ್ಯ. ಇಂತಹ ಯೋಜನೆ ಮಾಡಿ ತೀವ್ರ ಬೆಳವಣಿಗೆ ಸಾಧಿಸಲು ಸಾಧ್ಯ.

೫. ಈ ಎಲ್ಲಾ ಮಹಾನ್ ಬದಲಾವಣೆಗಳಲ್ಲಿ ಚರಿತ್ರೆಯಲ್ಲೇ ಕಂಡರಿಯದ ಪ್ರಮಾಣದಲ್ಲಿ ಬಹುಸಂಖ್ಯಾತ ದುಡಿಯುವ ಜನತೆಯನ್ನು ಒಳಗೊಂಡದ್ದು.

೬. ಸಮಾಜದ ಒಳತಿಗೆ ಬೇಕಾದ, ಮನುಕುಲದ ಕುತೂಹಲ, ಜ್ಞಾನದ ದಾನ ತಣಿಸುವ ವಿಜ್ಞಾನ-ತಂತ್ರಜ್ಞಾನವನ್ನು ಸಾಮಾಜಿಕವಾಗಿ ಯೋಜಿತವಾಗಿ ಬೆಳೆಸಲು ಸಾಧ್ಯ. ಇದು ಕೆಲವು ಸ್ವಯಂ-ಸ್ಫೂರ್ತ ವಿಜ್ಞಾನಿಗಳಿಂದ ಅಥವಾ ಭಾರಿ ಶ್ರೀಮಂತಿಕೆ ತಂದುಕೊಡುವ ಸಂಶೋಧನೆಗಳ ದಾರಿಯೇ ತುಳಿಯಬೇಕಾಗಿಲ್ಲ ಎಂದು ತೋರಿಸಿಕೊಟ್ಟದ್ದು.

೭. ಒಂದು ಸಮಾಜದ ಬೆಳವಣಿಗೆಗೆ ಮುಂಚೂಣಿ ಪಾತ್ರ ವಹಿಸುವ, ಅದಕ್ಕೆ ಬೇಕಾದ ಉನ್ನತ ಪ್ರಜ್ಞೆಯ, ವೈಜ್ಞಾನಿಕ ಕಣ್ಣೋಟ ಹೊಂದಿದ, ಸಾಮಾಜಿಕ ಒಳಿತಿಗೆ ಬದ್ಧವಾದ ವ್ಯಕ್ತಿಗಳ ಒಂದು ಪಕ್ಷದ ನಾಯಕತ್ವದ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ.

ಅದೇ ರೀತಿ ಸೋವಿಯತ್ ಒಕ್ಕೂಟ ತನ್ನ ವಿಶಿಷ್ಟವಾದ ಚರಿತ್ರೆಯಲ್ಲಿ ಯಾರೂ ಕಂಡರಿಯದ ಪಯಣದಲ್ಲಿ ತೀವ್ರ ಅಡೆ-ತಡೆಗಳನ್ನು ಎದುರಿಸಿತು. ಭಾಗಶಃ ಈ ತಪ್ಪು ಗಳು, ನ್ಯೂನ್ಯತೆಗಳು, ವಿಕೃತಿಗಳಿಗೆ ಕಾರಣವಾಗಿದೆ. ಅಂತಹ ಅಡೆತಡೆಗಳನ್ನು ಹೀಗೆ ಗುರುತಿಸಬಹುದು.

ಸತತವಾಗಿ ಬಾಹ್ಯ ಶಕ್ತಿಗಳಿಂದ(೧೯೧೭-೨೧ರಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು, ೧೯೩೯-೪೫ರಲ್ಲಿ ಫ್ಯಾಸಿಸ್ಟ್ ಶಕ್ತಿಗಳು ೧೯೪೫ ರಿಂದ ಅಮೆರಿಕದ ಅಣ್ವಸ್ತ್ರಗಳು) ಸತತ ಅಪಾಯ ಶಸ್ತ್ರಾಸ್ತ್ರಗಳ ಮೇಲೆ ಆಗಿನ ಆರ್ಥಿಕ ಶಕ್ತಿ ಮೀರಿದ ಭಾರಿ ಸಂಪನ್ಮೂಲಗಳನ್ನು ತೆಗೆದಿರಿಸುವುದು ಮತ್ತು ಹಲವು ಆಂತರಿಕ ವಿಕೃತಿಗಳಿಗೆ ಕಾರಣವಾಯಿತು.

ಸಮಾಜವಾದಿ ಹಾದಿಯಲ್ಲಿ ನಡೆದ ಮೊದಲ ದೇಶವಾಗಿ ಯಾವುದೇ ಮಾದರಿ ಉದಾಹರಣೆಗಳು ಇರಲಿಲ್ಲ. ಪ್ರತಿಯೊಂದಕ್ಕೂ ಮೊದಲ ಮಾದರಿ ತಾವೇ ತಯಾರಿಸ ಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಚರ್ಚೆ ವಾದ-ವಿವಾದಗಳು ಸ್ವಾಭಾವಿಕ. ಈ ಚರ್ಚೆ ವಾದ-ವಿವಾದಗಳು ಸಾಧ್ಯವಾದಷ್ಟು ಪ್ರಜಾಸತ್ತಾತ್ಮಕವಾಗಿ ನಡೆದು, ಬೇಗನೆ ಸರ್ವಸಮ್ಮತ ನಿರ್ಧಾರಕ್ಕೆ ಬರುವುದು ಯಾವಾಗಲೂ ಸಾಧ್ಯವಿರಲಿಲ್ಲ. ಇದು ಭಿನ್ನಮತದ ದಮನದಂತಹ ವಿಕೃತಿಗಳಿಗೆ ಕಾರಣವಾಯಿತು.

ಅಕ್ಟೋಬರ್ ಕ್ರಾಂತಿಗೆ ಮತ್ತು ಆ ಮೇಲಿನ ಹಂತಗಳಲ್ಲೂ ಭಾರಿ ತ್ಯಾಗ-ಬಲಿದಾನಗಳನ್ನು ಮಾಡಿದ ದುಡಿಯುವ ಜನತೆಯ ಜೀವನ ಮಟ್ಟದಲ್ಲಿ ಸತತ ಏರಿಕೆಯ ಆಶೋತ್ತರಗಳನ್ನು ಈಡೇರಿಸುವುದು, ಇದಕ್ಕಾಗಿ ಸತತವಾಗಿ ತೀವ್ರ ಬೆಳವಣಿಗೆಯ ದರಕ್ಕೆ ಒತ್ತಡ ಹಲವು ಅವಸರದ ತಪ್ಪು ನಿರ್ಧಾರಗಳಿಗೆ, ವಿಕೃತಿಗಳಿಗೆ ಕಾರಣವಾಯಿತು.

ಸೋವಿಯತ್ ಒಕ್ಕೂಟದ ಈ ಸಾಧನೆಗಳು, ಕೊಡುಗೆಗಳು(ತೀವ್ರ ಅಡೆತಡೆಗಳಿ ದ್ದಾಗ್ಯೂ)  ಅದರ ವಿಘಟನೆಯಿಂದಾಗಿ ಅಪ್ರಸ್ತುತವಾಗಿವೆ ಎಂದು ಪರಿಗಣಿಸಬೇಕಾಗಿಲ್ಲ. ಅದರ ನ್ಯೂನ್ಯತೆ, ವಿಕೃತಿ, ತಪ್ಪುಗಳನ್ನು ಮಾಡದೆ (ಅಥವಾ ಅಂತಹ ತೀವ್ರ ಅಡೆತಡೆಗಳು ಇಲ್ಲವಾದಾಗ) ಕೊಡುಗೆಗಳನ್ನು, ಸಾಧನೆಗಳನ್ನು ಪುನರಾವರ್ತಿಸಲು ಪ್ರಯತ್ನಿಸಬಹುದು. ಇದು ಈ ಎಪ್ಪತ್ತು ವರ್ಷಗಳ ಅನುಭವದ ಸಾರ ಎನ್ನಬಹುದು.

ಪೆರೆಸ್ಟ್ರೊಯಿಕಾಗ್ಲಾಸ್‌ನೋಸ್ತ್(೧೯೮೫೧೯೯)

೧೯೮೦ರ ದಶಕದ ಆರಂಭದ ಹೊತ್ತಿಗೆ ತಲೆದೋರಿದ್ದ ಆರ್ಥಿಕ ಸ್ಥಗಿತತೆ, ಜೀವನ ಮಟ್ಟ ಸಹ ಸ್ಥಗಿತಗೊಂಡಿದ್ದರ ಬಗ್ಗೆ ಜನತೆಯ ತೀವ್ರ ಅತೃಪ್ತಿ, ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳ ಉಲ್ಲಂಘನೆಗಳಿಗೆ ಕಾರಣವಾದ ಅಧಿಕಾರಶಾಹಿಯ ಬೆಳವಣಿಗೆ, ಅಮೆರಿಕಾದ ಮಿಲಿಟರಿ ಬೆದರಿಕೆ, ವಿಸ್ತಾರದ ಹಾದಿಯಿಂದ ತೀವ್ರವಾದ ಬೆಳವಣಿಗೆ ಹಾದಿಗೆ ಬದಲಾಯಿಸುವುದರಲ್ಲಿ ವಿಳಂಬ, ಕೃಷಿ-ಕೈಗಾರಿಕೆಗಳ ದಕ್ಷತೆ ಹೆಚ್ಚಿಸುವ ಸವಾಲು- ಇವೆಲ್ಲ ಒಟ್ಟಾಗಿ ಬಿಕ್ಕಟ್ಟಿನ ಸ್ಥಿತಿ ಬಂದಿತ್ತು. ೧೯೮೫ರಲ್ಲಿ ಸೋವಿಯತ್ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ಇದಕ್ಕಾಗಿ ಸಮಾಜವಾದಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ತರುವ ಬಗ್ಗೆ ತೀವ್ರ ಚರ್ಚೆ ನಡೆಸಿತು. ಇದು ೧೯೮೬ರಲ್ಲಿ ನಡೆದ ಪಕ್ಷದ ೨೭ನೆಯ ಮಹಾಧಿವೇಶನದಲ್ಲಿ ನಿಶ್ಚಿತ ರೂಪ ತಳೆದವು. ೨೭ನೆಯ ಮಹಾಧಿವೇಶನದಲ್ಲಿ ಅಂಗೀಕರಿಸಲಾದ ನಿರ್ಣಯಗಳಲ್ಲಿ ಸಮಗ್ರ ಮತ್ತು ತೀವ್ರ ಸುಧಾರಣೆಗಳಿಗೆ ಹಲವು ನಿರ್ದಿಷ್ಟ ಪ್ರಸ್ತಾಪಗಳಿದ್ದವು. ವ್ಯಾಪಕ ಹಂತದಿಂದ ತೀವ್ರತೆಯ ಹಂತಕ್ಕೆ ಆರ್ಥಿಕ ಬೆಳವಣಿಗೆಯನ್ನು ಬದಲಾಯಿಸಲು ಮತ್ತು ವೇಗವರ್ಧನೆಗೆ ಮಹಾಧಿವೇಶನ ಹಲವು ನಿರ್ದೇಶನ ಸೂತ್ರಗಳನ್ನು ಕೊಟ್ಟಿತು. ವೈಜ್ಞಾನಿಕ ಮತ್ತು ತಾಂತ್ರಿಕ ಕ್ರಾಂತಿಯ ಫಲಗಳನ್ನು ಬಳಸಿ ಆರ್ಥಿಕವನ್ನು ಆಧುನೀಕರಿಸುವುದು, ಸಮಗ್ರ ಆಹಾರ ಕಾರ್ಯಕ್ರಮಕ್ಕೆ ಆದ್ಯತೆ, ಆರ್ಥಿಕ ನಿರ್ವಹಣಾ ಕ್ರಮಗಳನ್ನು ಹೊಸ ಸವಾಲುಗಳನ್ನು ಎದುರಿಸಲು ತಕ್ಕಂತೆ ಬದಲಾಯಿಸುವುದು, ವಿಶ್ವಶಾಂತಿ ಸಾಧಿಸಲು ಸಮಗ್ರ ನಿಶ್ಶಸ್ತ್ರೀಕರಣಕ್ಕೆ ಹೊಸ ದಿಟ್ಟ ಪ್ರಸ್ತಾವಗಳನ್ನು ಮಂಡಿಸುವುದು, ಹೆಚ್ಚೆ ಹೆಚ್ಚು ಸಮಾಜದ ಪ್ರಜಾಪ್ರಭುತ್ವೀಕರಣ, ಜನತೆಯ ಸಮಾಜವಾದಿ ಸ್ವರಾಜ್ಯಕ್ಕೆ ಪ್ರೋ ಜನತೆಯ ಜತೆ ಪಕ್ಷದ ಸದಸ್ಯರ ಸಂಬಂಧ ಉತ್ತಮಪಡಿಸುವುದು ಇತ್ಯಾದಿ ಆ ನಿರ್ದೇಶನ ಸೂತ್ರಗಳು ಆಗಿದ್ದವು. ಆರ್ಥಿಕ-ಸಾಮಾಜಿಕ ಬೆಳವಣಿಗೆಯ ೧೫ ವರ್ಷಗಳ(೨೦ನೆಯ ಶತಮಾನದ ಕೊನೆಯವರೆಗಿನ ಅವಧಿಗೆ) ನೀಲನಕ್ಷೆ, ೧೨ನೆಯ ಯೋಜನೆಯ ಮುಖ್ಯ ಅಂಶಗಳ ಬಗ್ಗೆ ನಿರ್ದೇಶನವನ್ನು- ೨೭ನೆಯ ಮಹಾಧಿವೇಶನ ಅಂಗೀಕರಿಸಿತು. ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮವನ್ನು ಪುನರ್ನವೀಕರಿಸಿ ಅಂಗೀಕರಿಸಲಾಯಿತು. ಹೊಸ ಕಾರ್ಯಕ್ರಮ ಸಮಾಜವಾದಿ ವ್ಯವಸ್ಥೆಯನ್ನು ಬೆಳೆಸಿ ಕ್ರೋಢೀಕರಿಸಲು ೭೦ ವರ್ಷಗಳ ಸತತ ಪ್ರಯತ್ನದ ಫಲಾಫಲಗಳನ್ನು ಪರಾಮರ್ಶೆ ಮಾಡಿತು. ವಿವಿಧ ಹಂತಗಳಲ್ಲಿ ಪಕ್ಷ ಕೈಗೊಂಡ ನೀತಿಗಳ ಪುನರ್ವಿಮರ್ಶೆ ಮಾಡಿತು. ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಪಕ್ಷದ ಕರ್ತವ್ಯಗಳು ಮತ್ತು ಕಾರ್ಯ ಯೋಜನೆಯನ್ನು ಮಂಡಿಸಿತು.

ಸೋವಿಯತ್ ಕಮ್ಯುನಿಸ್ಟ್ ಪಕ್ಷದ ೨೭ನೆಯ ಮಹಾಧೀವೇಶನದಲ್ಲಿ ಪಕ್ಷ ಮುಂದಿಟ್ಟ ಸಮಗ್ರ ಸುಧಾರಣೆಗಳು, ಬೆಳವಣಿಗೆಯ ವೇಗವರ್ಧನೆ ಮತ್ತು ಪ್ರಜಾ ಪ್ರಭುತ್ವೀಕರಣದ ಪ್ರಸ್ತಾವಗಳಿಗೆ ಸೋವಿಯತ್ ಒಕ್ಕೂಟದಲ್ಲಿ, ಇಡೀ ಜಗತ್ತಿನಲ್ಲೂ ಸಂಭ್ರಮದ ಸ್ವಾಗತ ಸಿಕ್ಕಿತು. ಎಲ್ಲೆಡೆ ಈ ಬಗ್ಗೆ ಹಿಂದೆಂದೂ ಕಾಣದ ಆಸಕ್ತಿ, ಉತ್ಸಾಹ ಕಂಡುಬಂತು. ೨೭ನೆಯ ಮಹಾಧಿವೇಶನದಲ್ಲಿ ಪಕ್ಷದ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾದ ಮಿಖೈಲ್ ಗೋರ್ಬಜೆವ್ ಈ ಮಹಾಧಿವೇಶನದ ಪ್ರಸ್ತಾವಗಳನ್ನು ಜನತೆಯ ಬಳಿ ಕೊಂಡೊಯ್ಯಲು ಎರಡು ಪದಗಳಲ್ಲಿ ಅದನ್ನು ಸಂಕ್ಷೇಪಿಸುವ ಪ್ರಯತ್ನ ಮಾಡಿದರು. ಗ್ಲಾಸ್‌ನೋಸ್ತ್ ಮತ್ತು ಪೆರೆಸ್ತ್ರೊಯಿಕ-ಇವೇ ಆ ಎರಡು ರಷ್ಯನ್ ಪದಗಳು. ಗ್ಲಾಸ್‌ನೋಸ್ತ್(ಓಪನ್‌ನೆಸ್)ಅಂದರೆ  ಮುಕ್ತತೆ ಎಂದು ರಷ್ಯಾನ್‌ನಲ್ಲಿ ಅರ್ಥ. ಪೆರಸ್ತ್ರೊಯಿಕ ಎಂದರೆ ಪುನರ್ರಚನೆ(ರಿಸ್ಟ್ರಕ್ಚರಿಂಗ್)ಎಂದರ್ಥ. ಗೋರ್ಬಜೇವ್ ಈ ಎರಡು ಶಬ್ದಗಳ ಮೂಲಕ ಸಮಗ್ರ ಸುಧಾರಣೆಗಳ ಆಶಯ ಮತ್ತು ಸಾರವನ್ನು ಸೋವಿಯತ್ ಮತ್ತು ಜಗತ್ತಿನ ಜನತೆಗೆ ಹರಡಿ ಆ ಬಗ್ಗೆ ಪ್ರಜ್ಞೆ, ಆಸಕ್ತಿ ಮತ್ತು ಉತ್ಸಾಹ ತುಂಬುವುದರಲ್ಲಿ ಸಾಕಷ್ಟು ಯಶಸ್ವಿಯಾದರು. ‘ಪೆರೆಸ್ತ್ರೊಯಿಕ’ ಎಂಬ ಅವರ ಪುಸ್ತಕ ಜಗತ್ತಿನಲ್ಲೇ ಜನಪ್ರಿಯವಾಯಿತು. ‘‘ಈ ಮಹಾನ್ ಕ್ರಾಂತಿಯ ೭೦ನೆಯ ವಾರ್ಷಿಕೋತ್ಸವ ಒಂದು ಹೆಮ್ಮೆಯ ಕ್ಷಣ.. ಸಮಾಜವಾದಕ್ಕಾಗಿ ದುಡಿದ ಲಕ್ಷಾಂತರ ಜನರನ್ನು ನೆನೆಸಿಕೊಳ್ಳುವ ಒಂದು ನೆನಪಿನ ಕ್ಷಣ. ಸಮಾಜವಾದದ ವಿಜಯಗಳು, ಸೋಲುಗಳ ಬಗ್ಗೆ ಒಂದು ಚಿಂತನೆಯ ಕ್ಷಣ. ವಿಶ್ವದ ಭವಿಷ್ಯದ ಬಗ್ಗೆ ಒಂದು ಮುಂಗಾಣ್ಕೆಯ ಕ್ಷಣ..’’ ಎಂದು ಗೋರ್ಬಚೆವ್ ಅಕ್ಟೋಬರ್ ಕ್ರಾಂತಿಯ ೭೦ನೆಯ ವಾರ್ಷಿಕೋತ್ಸವದಲ್ಲಿ ಕೊಟ್ಟ ಸಮಾಜವಾದಿ ಪುನರ್ನವೀಕರಣದ ಚೈತನ್ಯಶೀಲ ಸಂದೇಶ ಇಡೀ ಜಗತ್ತಿನ ಜನತೆಯಲ್ಲಿ ಪುಳಕ ತಂದಿತು.

೨೭ನೆಯ ಮಹಾಧಿವೇಶನ ನಿರ್ಣಯದಂತೆ ವಿಶ್ವಶಾಂತಿಗೆ ಗೋರ್ಬಚೆವ್ ಸೋವಿಯತ್ ಒಕ್ಕೂಟದ ಕಡೆಯಿಂದ ಹಲವು ಹೊಸ ದಿಟ್ಟ ಪ್ರಸ್ತಾವಗಳನ್ನು ಪುಂಖಾನುಪುಂಖವಾಗಿ, ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದೇಶಗಳ ಮುಂದಿಟ್ಟರು. ಹಲವು ಸೋವಿಯತ್ ಶಸ್ತ್ರಾಸ್ತ್ರ ಕಡಿತಗಳು, ಮೊದಲ ಅಣ್ವಸ್ತ್ರ ದಾಳಿ ಸನ್ಯಾಸ, ಹೊಸ ರೀತಿಯ ಶಸ್ತ್ರಾಸ್ತ್ರ ಬೆಳವಣಿಗೆ ಸನ್ಯಾಸ -ಮುಂತಾದ ಸ್ವಯಂ-ಸ್ಫೂರ್ತ ನಿರ್ಧಾರಗಳನ್ನು ಘೋಷಿಸಿದರು. ಸಾಮೂಹಿಕ ನಾಶದ ಮಾರಕಾಸ್ತ್ರಗಳನ್ನು ತೀವ್ರವಾಗಿ ಕಡಿತ ಮಾಡಿ ೨೦೦೦ರೊಳಗೆ ಪೂರ್ಣ ನಾಶ ಮಾಡುವ ಅವರ ಪ್ರಸ್ತಾವಕ್ಕೆ ಪಾಶ್ಚಿಮಾತ್ಯ ಜಗತ್ತಿನಲ್ಲೂ ಜನತೆಯ ಅತ್ಯುತ್ಸಾಹಭರಿತ ಸಂಭ್ರಮದ ಪ್ರತಿಕ್ರಿಯೆ ವ್ಯಕ್ತವಾಯಿತು. ಇದು ಪಾಶ್ಚಿಮಾತ್ಯ ಸರ್ಕಾರಗಳು ಅದರಲ್ಲೂ ಅಮೆರಿಕನ್ ಸರ್ಕಾರದ ಮೇಲೆ ಭಾರಿ ಒತ್ತಡ ಹೇರಿತು. ಇದಕ್ಕೆ ಗೋರ್ಬಚೇವ್‌ರ ನಾಯಕತ್ವದಲ್ಲಿ ಸೋವಿಯತ್ ಶಾಂತಿ ದಾಳಿ ಎನ್ನುತ್ತಾರೆ. ಇದು ಗೋರ್ಬಚೇವ್‌ಗೆ ವಿಶ್ವದಲ್ಲೆಲ್ಲಾ ಶಾಂತಿಯ ಹರಿಕಾರ ಎಂಬ ಪ್ರಸಿದ್ದಿ ತಂದುಕೊಟ್ಟಿತು. ವಿಶ್ವಶಾಂತಿಗೆ ಸೋವಿಯತ್ ಒಕ್ಕೂಟ ಪೂರ್ಣವಾಗಿ ಬದ್ಧವಾಗಿದೆ. ಇದು ಸೋವಿಯತ್ ಒಕ್ಕೂಟಕ್ಕೂ ಇಡೀ ವಿಶ್ವಕ್ಕೂ ಒಳ್ಳೆಯದು. ಶಸ್ತ್ರಾಸ್ತ್ರ ಪೈಪೋಟಿಯನ್ನು ತೀವ್ರವಾಗಿ ಕಡಿತ ಮಾಡಿ ನಾಶ ಮಾಡುವ ಮತ್ತು ಆ ಮೂಲಕ ಸಿಗುವ ಅಪಾರ ಸಂಪನ್ಮೂಲಗಳನ್ನು ಜನರ ಜೀವನಮಟ್ಟ ಉತ್ತಮಪಡಿಸಲು ತೀವ್ರ ಬೆಳವಣಿಗೆಯ ಹೂಡಿಕೆಗೆ ಬಳಸುವುದು, ಗೋರ್ಬಚೆವ್ ‘ಶಾಂತಿದಾಳಿ’ಯ ಉದ್ದೇಶವಾಗಿತ್ತು. ಅಲ್ಲದೆ ಸೋವಿಯತ್ ಒಕ್ಕೂಟದ ರಕ್ಷಣೆಗೆ ಹೆಚ್ಚೆ ಹೆಚ್ಚು ಶಸ್ತ್ರಾಸ್ತ್ರಗಳ ಉತ್ಪಾದನೆಯ ಬದಲು ಶಾಂತಿ ಬಗ್ಗೆ ತೀವ್ರ ರಾಜಕೀಯ ಪ್ರಚಾರದ, ಸೋವಿಯತ್ ಮತ್ತು ವಿಶ್ವದ ಜನತೆಯ ರಾಜಕೀಯ ಪ್ರಜ್ಞೆ ಎತ್ತರಿಸುವ ಹೊಸ ವಿಧಾನ ಅನುಸರಿಸಿದರು. ಮೊದಲ ಹಂತಗಳಲ್ಲಿ ಇದು ಸಾಕಷ್ಟು ಯಶಸ್ವಿಯೂ ಆಯಿತು. ಆಗಿದ್ದ ಅಣ್ವಸ್ತ್ರಗಳ ಐದನೆಯ ಒಂದು ಭಾಗ ಮತ್ತು ದೂರಗಾಮಿ ಕ್ಷಿಪಣಿಗಳಲ್ಲೂ ಕಡಿತವಾಯಿತು. ಎರಡನೆಯ ಮಹಾಯುದ್ಧದ ಭೀಕರ ಅನುಭವ ಇದ್ದ ಸೋವಿಯತ್ ಜನತೆ ಸಹ ‘ಶಾಂತಿದಾಳಿ’ಯನ್ನು ಉತ್ಪಾಹದಿಂದ ಸ್ವಾಗತಿಸಿದರು. ಶಾಂತಿ ಮತ್ತು ಬೆಳವಣಿಗೆಯ ಈ ಹೊಸ ಪ್ರಯೋಗವನ್ನು ಜಗತ್ತಿನ ಜನ ಅತಿ ಕುತೂಹಲದಿಂದ ಗಮನಿಸುತ್ತಿದ್ದರು.

ಸಮಾಜವಾದಿ ಪ್ರಜಾಪ್ರಭುತ್ವ ಬೆಳೆಸುವ ನಿಟ್ಟಿನಲ್ಲೂ ಉತ್ತಮ ಆರಂಭಿಕ ಪ್ರಗತಿ ಆಯಿತು. ಸುಪ್ರೀಮ್ ಸೋವಿಯತ್ ಬದಲು, ಜನತಾ ಪ್ರತಿನಿಧಿಗಳ ಕಾಂಗ್ರೆಸ್ (ನಮ್ಮ ಪಾರ್ಲಿಮೆಂಟಿನಂತೆ) ಅಸ್ತಿತ್ವಕ್ಕೆ ಬಂತು. ಈ ಕಾಂಗ್ರೆಸ್‌ನ ಮೂರನೆಯ ಎರಡು ಭಾಗ ಸದಸ್ಯರು ನೆಯರವಾಗಿ ಆಯ್ಕೆಯಾದರು. ಎಲ್ಲಾ ಹಂತಗಳಲ್ಲೂ ಸೋವಿಯತ್ ಚುನಾಯಿತ ಸಂಸ್ಥೆ ಆಗಿರಬೇಕು. ಪಕ್ಷ ತನ್ನ ಸದಸ್ಯರನ್ನು ಚುನಾವಣೆಗೆ ಅಭ್ಯರ್ಥಿ ಮಾಡುವ ಮೂಲಕ ಭಾಗವಹಿಸಬೇಕು. ಪಕ್ಷ ಸ್ಥೂಲ ನೀತಿ ನಿರ್ದೇಶನ, ಕಾರ್ಯಕ್ರಮಗಳನ್ನು ಕೊಡಬೇಕು. ಕಾನೂನು ಮಾಡುವ, ಕಾರ್ಯಕ್ರಮಗಳ ಜಾರಿ, ದೈನಂದಿನ ಆಡಳಿತ ಸೋವಿಯತ್ ಗಳದ್ದು ಆಗಿರಬೇಕು ಎಂಬ ಬದಲಾವಣೆ ತರಲಾಯಿತು. ಸೋವಿಯತ್‌ಗಳಲ್ಲಿ ತೀವ್ರ ಚರ್ಚೆಗಳಾದವು. ಭಿನ್ನಮತದ ಬಗ್ಗೆ ಸರ್ಕಾರ, ಪಕ್ಷಗಳ ನೀತಿ ಬದಲಾಗಿ ಸಾಕಷ್ಟು ಉದಾರವಾಯಿತು. ನಿಜವಾದ ಮುಕ್ತತೆ(ಗ್ಲಾಸ್‌ನೋಸ್ತ್) ಕಾಣಲಾರಂಭಿಸಿತು. ದೇಶದ ಎಲ್ಲಾ ಸಮಸ್ಯೆಗಳ, ಪರಿಹಾರದ ಹಾದಿಗಳ ಬಗ್ಗೆ ಆವೇಶಭರಿತ ಸಾಮೂಹಿಕ ಚರ್ಚೆ ಗಳಾದವು. ಗ್ಲಾಸ್‌ನೋಸ್ತ್ ಪತ್ರಿಕೆ, ಟೀವಿ, ರೇಡಿಯೋ ಮುಂತಾದ ಸಾಮೂಹಿಕ ಮಾಧ್ಯಮಗಳಲ್ಲೂ, ಪುಸ್ತಕ ಸಾಹಿತ್ಯಗಳಲ್ಲೂ ಪರಿಣಾಮ ಬೀರಿದವು. ಪ್ರಸಿದ್ಧ ಭಿನ್ನಮತೀಯರಾಗಿದ್ದ ಸಖರೋವ್ ಮತ್ತು ಇತರರನ್ನು ಬಿಡುಗಡೆ ಮಾಡಲಾಯಿತು. ಸಖರೋವ್ ಜನತಾ ಪ್ರತಿನಿಧಿಗಳ ಕಾಂಗ್ರೆಸ್ ಸದಸ್ಯನಾಗಿ ಆಯ್ಕೆಯಾದ ಕೂಡಾ.   ಕಾಂಗ್ರೆಸ್‌ನ ಮತ್ತು ಸೋವಿಯತ್‌ಗಳ ವಿದ್ಯಮಾನವನ್ನು ‘ನೇರ ಪ್ರಸಾರ’ ಮಾಡುವ ಪದ್ಧತಿಯನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ತರಲಾಯಿತು. ಕಾಂಗ್ರೆಸ್ ಅಧ್ಯಕ್ಷರನ್ನು ನೇರವಾಗಿ ಆರಿಸುವ ಪದ್ಧತಿ ಜಾರಿಗೆ ಬಂದಿತು. ಜನತಾ ಪ್ರತಿನಿಧಿಗಳ ಕಾಂಗ್ರೆಸ್ ಗೋರ್ಬಚೇವ್‌ರನ್ನು ಅಧ್ಯಕ್ಷರಾಗಿ ಆರಿಸಿತು. ಒಟ್ಟಾರೆಯಾಗಿ ಶಾಂತಿ, ಪ್ರಜಾಪ್ರಭುತ್ವ ಮತ್ತು ಮುಕ್ತತೆಯಲ್ಲಿ ಉತ್ತಮ ಆರಂಭಿಕ ಪ್ರಗತಿ ‘ಗ್ಲಾಸ್‌ನೋಸ್ತ್’- ಪೆರೆಸ್ಟ್ರೊಯಿಕ’ ಬಗ್ಗೆ ಜನತೆಯ ನಿರೀಕ್ಷೆಗಳನ್ನು ಗಗನಕ್ಕೇರಿಸಿತು.

ಆದರೆ ಪೆರೆಸ್ಟ್ರೊಯಿಕ ಮತ್ತು ಗ್ಲಾಸ್‌ನೋಸ್ತ್ ಕ್ರಮೇಣ ಹಲವು ಭಾಷ್ಯಗಳಿಗೆ  ಅರ್ಥಗಳಿಗೆ ಒಳಗಾಗುತ್ತಾ ಹೋಯಿತು. ಪಕ್ಷ, ಸರ್ಕಾರ ಮತ್ತು ಸೋವಿಯತ್ ಸಮಾಜದಲ್ಲೂ ಈ ಹಲವು ಭಾಷ್ಯಗಳಿಗೆ-ಅರ್ಥಗಳಿಗೆ ಅಂಟಿಕೊಂಡ ಹಲವು ಬಣಗಳು ಹುಟ್ಟಿಕೊಂಡವು. ೨೭ನೆಯ ಮಹಾಧಿವೇಶನ ಹಾಕಿಕೊಟ್ಟಿದ್ದ ಹಾದಿಯಲ್ಲಿ ಹೋಗುವ ಬದಲು, ಮುಂದಿನ ಹಾದಿಯ ಬಗ್ಗೆ ಚರ್ಚೆ ವಿವಾದ ಆರಂಭವಾಯಿತು. ಇಂತಹ ಚರ್ಚೆ ವಿವಾದ ಸೋವಿಯತ್ ಸಮಾಜದಲ್ಲಿ ಹೊಸತೇನಲ್ಲ. ಸೋವಿಯತ್ ಕಮ್ಯುನಿಸ್ಟ್ ಪಕ್ಷ ಮತ್ತು ಸರ್ಕಾರದ ಹಿರಿಯ ನಾಯಕತ್ವ ಈ ಚರ್ಚೆ ವಿವಾದಗಳನ್ನೆಲ್ಲಾ ಕ್ರೋಢೀಕರಿಸಿ, ಸಂಯೋಜಿಸಿ ಸಾಧ್ಯವಾದಷ್ಟು ಸರ್ವಸಮ್ಮತ ಹಾದಿ ಆಯ್ಕೆ ಮಾಡುವುದರಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದರು. ಗೋರ್ಬಚೆವ್ ಮತ್ತು ಅವರ ಸುತ್ತಲಿನ ನಾಯಕತ್ವ ಈ ಪಾತ್ರ ವಹಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಗೋರ್ಬಚೇವ್ ಒಮ್ಮೆ ಈ ಬಣದ, ಇನ್ನೊಮ್ಮೆ ಆ ಬಣದ ವಕ್ತಾರನಾಗಿ; ಮತ್ತೊಮ್ಮೆ ಎಲ್ಲಾ ಬಣಗಳನ್ನು ಕ್ರೋಢೀಕರಿಸಿ ಒಮ್ಮತ ತರುವ ನಾಯಕ-ಈ ರೀತಿ ಬಹುಪಾತ್ರಗಳನ್ನು ವಹಿಸಲಾರಂಭಿಸಿದರು. ಹಿಂದೆ ಇದ್ದಂತೆ ಸರ್ವಸಮ್ಮತ ಹಾದಿ ಆಯ್ಕೆ ಮಾಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಲ್ಲಿ ವಿಫಲರಾದರು. ಅದರಲ್ಲೂ ಆರ್ಥಿಕ ನೀತಿಗಳಿಗೆ ಬಂದಾಗ ಚರ್ಚೆ ವಿವಾದಗಳು ಹೆಚ್ಚು ಹೆಚ್ಚು ‘ಅರಾಜಕ’ವಾದವು. ಹಲವು ಹಾದಿಗಳು/ಬಣಗಳು ಹುಟ್ಟಿಕೊಂಡವು. ಸೋವಿಯತ್ ಒಕ್ಕೂಟ ಈ ಬಣಗಳ ತಿಕ್ಕಾಟದ ರಣರಂಗವಾಯಿತು.