ನಮ್ಮನ್ನು ಬಿಡಲಿಲ್ಲ. ಕನ್ನಡ ವಿಶ್ವವಿದ್ಯಾಲಯದಲ್ಲಿ ಇಂತಹ ಪ್ರಶ್ನೆಗಳು ಎದುರಾದಾಗಲೆಲ್ಲ ಅವುಗಳನ್ನು ಬಗೆಹರಿಸುವುದು ಹೇಗೆ ಎಂಬ ಚಿಂತನೆಯೂ ಆರಂಭವಾಗುತ್ತದೆ. ಇಂತಹ ಚಿಂತನೆಯ ಹಿನ್ನೆಲೆಯಲ್ಲಿ ನಾವು `ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳನ್ನು’ ಹೊರತರುತ್ತಿದ್ದೇವೆ.

ಚರಿತ್ರೆಯು ಪ್ರತಿಯೊಬ್ಬರ ಜೀವನದ ಭಾಗವಾಗಿ ಕೆಲಸ ಮಾಡುತ್ತಿರುವ ಪ್ರತಿ ಸಮುದಾಯಃವರ್ಗದ ನೆರಳಾಗಿ ಕಾಡುತ್ತಾ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿರುವ ಜ್ಞಾನಶಿಸ್ತಾಗಿ ರೂಪುಗೊಂಡ ಬಗೆಗಳನ್ನು ಪ್ರಸ್ತುತ ಸಂಪುಟಗಳು ಅನಾವರಣಗೊಳಿಸಲು ಯತ್ನಿಸಿವೆ. ಜನರಲ್ ನಾಲೆಡ್ಜ್‌ನ ಭಾಗವಾಗಿ ಚರಿತ್ರೆಯನ್ನು ನೋಡುವ ಕ್ರಮಕ್ಕಿಂತ ಭಿನ್ನವಾದ ಕ್ರಮ ಇದು. ನಮ್ಮದಲ್ಲದ ಸಂಸ್ಕೃತಿ, ನಾಗರಿಕತೆ, ರಾಜಕೀಯ ಬೆಳವಣಿಗೆಗಳು, ರಾಜ್ಯಗಳ ರೂಪುಗೊಳ್ಳುವಿಕೆ, ವ್ಯವಸ್ಥೆಯ ವಿವಿಧ ಮಜಲುಗಳು, ಸಂಘರ್ಷ, ಹೋರಾಟ ಮುಂತಾದ ಪ್ರಕ್ರಿಯೆಗಳನ್ನು ಏಷ್ಯಾ, ಯುರೋಪ್, ಆಫ್ರಿಕಾಗಳ ಸಂದರ್ಭದಲ್ಲಿ ದಾಖಲಿಸಲು ಪ್ರಸ್ತುತ ಸಂಪುಟಗಳು ಪ್ರಯತ್ನಿಸಿವೆ. ಭಾರತ ಉಪಖಂಡ ಸಂಪುಟಗಳು ಹಾಗೂ ಸಮಕಾಲೀನ ಸಂಪುಟವು ನಮ್ಮೊಳಗಿನ ಸಂಕೀರ್ಣ ವ್ಯವಸ್ಥೆ, ಸಂಘರ್ಷ, ಸೌಹಾರ್ದತೆ ಮತ್ತು ವೈರುಧ್ಯಗಳ ವಿವಿಧ ಆಯಾಮಗಳನ್ನು ಒಳಗೊಳ್ಳುವ ಪ್ರಯತ್ನಗಳನ್ನು ಮಾಡಿವೆ. ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನದ ಸಂಪುಟವು ಜಗತ್ತಿನ ಬೇರೆ ಬೇರೆ ಪರಂಪರೆಗಳ ಬೌದ್ದಿಕ ವಾಙ್ಮಯಗಳನ್ನು ಕನ್ನಡದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಿದೆ.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಎಚ್.ಜೆ.ಲಕ್ಕಪ್ಪಗೌಡ ಅವರ ಸಂದರ್ಭದಲ್ಲಿ ಎ೨೦೦೧ರಲ್ಲಿಏ ಬಿಡುಗಡೆಯಾದ `ಚರಿತ್ರೆ ವಿಶ್ವಕೋಶ್ಬಕ್ಕೆ ನಂತರದ ದಿನಗಳಲ್ಲಿ ಅಷ್ಟೊಂದು ಬೇಡಿಕೆ ಇರುತ್ತದೆ ಎಂದು ನಾನಾಗಲಿ ಅಥವಾ ನಮ್ಮ ಸಂಪಾದಕ ಬಳಗದ ಸದಸ್ಯರಾಗಲಿ ಅಂದುಕೊಂಡಿರಲಿಲ್ಲ. ೧೯೯೬ರಲ್ಲಿ ನಮ್ಮ ಆರಂಭಿಕ ಕುಲಪತಿ ಗಳಾಗಿದ್ದ ಡಾ. ಚಂದ್ರಶೇಖರ ಕಂಬಾರ ಹಾಗೂ ಆಗಿನ ಕುಲಸಚಿವರಾಗಿದ್ದ ಡಾ. ಕೆ.ವಿ.ನಾರಾಯಣ ಅವರ ಒತ್ತಾಸೆಯ ಫಲವೇ ಚರಿತ್ರೆ ವಿಶ್ವಕೋಶ ಎಂದರೆ ಅತಿಶಯೋಕ್ತಿ ಯೇನಲ್ಲ. ನಂತರದ ಕುಲಪತಿಗಳಾಗಿದ್ದ ಡಾ. ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ಮತ್ತು ಚರಿತ್ರೆ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಕೆ.ಮೋಹನ್‌ಕೃಷ್ಣ ರೈ ಅವರ ಸಹಕಾರದಿಂದ ವಿಭಾಗದ ಯೋಜನೆಯಾಗಿ ಬಲು ಬೇಡಿಕೆಯಿದ್ದ ಚರಿತ್ರೆ ವಿಶ್ವಕೋಶವನ್ನು ಬಿಡಿ ಬಿಡಿ ಪುಸ್ತಕಗಳನ್ನಾಗಿ ತರುವ ಯೋಜನೆಯನ್ನು ೨೦೦೫ರಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಶೋಧಕರಿಗೆ, ಅಧ್ಯಾಪಕರಿಗೆ ಮತ್ತು ಬಹಳ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸುಲಭ ಬೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಸಂಪುಟಗಳು ಸಿಗುವಂತೆ ಯೋಜನೆಯನ್ನು ಕಾರ್ಯಗತಗೊಳಿಸಲಾಯಿತು. ಹೀಗಾಗಿ ಚರಿತ್ರೆ ವಿಶ್ವಕೋಶದ ಪ್ರತಿ ಬಿಡಿ ಭಾಗಗಳನ್ನು ಪರಿಷ್ಕಾರಕ್ಕೆ ಒಳಪಡಿಸಬೇಕೆಂದು ತೀರ್ಮಾನಿಸಿ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಆರಂಭಿಸಲಾಯಿತು. ಹಾಗೆಯೇ ಅನೇಕ ಬಿಡಿ ಭಾಗಗಳಲ್ಲಿ ತೀರಾ ಅಗತ್ಯವಾಗಿ ಬೇಕಾಗಿದ್ದ ಇನ್ನೂ ಕೆಲವು ಲೇಖನಗಳನ್ನು ಸಿದ್ಧಪಡಿಸಿ ಪ್ರತಿ ಸಂಪುಟವು ಓದುಗರ ಅಪೇಕ್ಷೆಯನ್ನು ಪೂರ್ಣಗೊಳಿಸುವಂತೆ ಅವಿರತ ಶ್ರಮವನ್ನು ಹಾಕಲಾಯಿತು. ಚರಿತ್ರೆ ವಿಶ್ವಕೋಶದ ಸಂಪಾದಕೀಯ ಸಮಿತಿಯಲ್ಲಿದ್ದ ಡಾ. ಕೆ.ಮೋಹನ್‌ಕೃಷ್ಣ ರೈ ಹಾಗೂ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರೊಂದಿಗೆ ಈ ಯೋಜನೆಯಲ್ಲಿ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಪಾಲ್ಗೊಂಡು ಪರಿಷ್ಕೃತ ಆವೃತ್ತಿಗಳನ್ನು ಯಶಸ್ವಿಯಾಗಿ ಹೊರತರಲು ಶ್ರಮ ವಹಿಸಿದರು. ಈ ಹಿನ್ನೆಲೆಯಲ್ಲಿ ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನ, ಭಾರತ ಉಪಖಂಡದ ವಸಾಹತುಪೂರ್ವ ಚರಿತ್ರೆ, ಭಾರತ ಉಪಖಂಡದ ಆಧುನಿಕ ಚರಿತ್ರೆ, ಏಷ್ಯಾ, ಯುರೋಪ್, ಆಫ್ರಿಕಾ, ಅಮೆರಿಕ ಹಾಗೂ ಸಮಕಾಲೀನ ಕರ್ನಾಟಕದ ಮೇಲೆ ವಿವಿಧ ಸಂಪುಟಗಳನ್ನು ಸಿದ್ಧಪಡಿಸಲಾಗಿದೆ. ಏಷ್ಯಾ ಮತ್ತು ಯುರೋಪ್‌ನ ಸಂಪುಟಗಳ ಸಂಪಾದಕರಾಗಿ ಡಾ. ಕೆ.ಮೋಹನ್‌ಕೃಷ್ಣ ರೈ ಅವರು, ಆಫ್ರಿಕಾ ಹಾಗೂ ಸಮಕಾಲೀನ ಕರ್ನಾಟಕ ಸಂಪುಟಗಳ ಸಂಪಾದಕರಾಗಿ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರು, ಅಮೆರಿಕ ಸಂಪುಟದ ಸಂಪಾದಕರಾಗಿ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು, ಚರಿತ್ರೆ ಬರವಣಿಗೆ ಕ್ರಮ ಮತ್ತು ವಿಧಾನ ಸಂಪುಟದ ಸಂಪಾದಕರಾಗಿ ಡಾ. ವಿಜಯ್ ಪೂಣಚ್ಚ ತಂಬಂಡ ಮತ್ತು ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಹಾಗೂ ಡಾ. ವಿಜಯ್ ಪೂಣಚ್ಚ ತಂಬಂಡ ಸಂಪಾದಕತ್ವದಲ್ಲಿ `ಭಾರತ ಉಪಖಂಡ ವಸಾಹತುಪೂರ್ವ ಮತ್ತು ಆಧುನಿಕ ಚರಿತ್ರೆ’ ಎಂಬ ಸಂಪುಟಗಳು ಹೊರಬಂದಿವೆ. ಪ್ರಧಾನ ಸಂಪಾದಕನಾಗಿ ಈ ಎಂಟು ಸಂಪುಟಗಳನ್ನು ಹೊರತರಬೇಕೆಂದು ಹಾಕಿಕೊಂಡ ಯೋಜನೆಯ ಸಫಲತೆಗೆ ಕಾರಣರಾದ ಸಂಪಾದಕ ಮಂಡಳಿಯ ನನ್ನ ಸಹೋದ್ಯೋಗಿಗಳಿಗೆ, ಸಂಪುಟಗಳಲ್ಲಿ ಲೇಖನಗಳನ್ನು ಬರೆದ ಎಲ್ಲ ಲೇಖಕರಿಗೆ ಹಾಗೂ ಅನುವಾದಕರಿಗೆ ನಾನು ಆಭಾರಿಯಾಗಿದ್ದೇನೆ.

ಏಕೀಕರಣಪೂರ್ವ ಕರ್ನಾಟಕ ಚರಿತ್ರೆಯನ್ನು ಕನ್ನಡ ವಿಶ್ವವಿದ್ಯಾಲಯವು ಈಗಾಗಲೇ ಏಳು ಸಂಪುಟಗಳಲ್ಲಿ ಪ್ರಕಟಿಸಿರುವುದರಿಂದ ಅವುಗಳನ್ನು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಚರ್ಚಿಸಿಲ್ಲ. ಪ್ರಸ್ತುತ ಎಂಟು ಕೃತಿಗಳಲ್ಲಿ ಪ್ರಾಚೀನ ಹಾಗೂ ಮಧ್ಯಯುಗೀನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಇರುವ ಅನೇಕ ವಿವರಗಳನ್ನು ಮತ್ತು ಚರಿತ್ರೆ ಬರವಣಿಗೆ ಕ್ರಮದಲ್ಲಿನ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಭಾರತ ಉಪಖಂಡದ ವಸಾಹತುಪೂರ್ವ ಸಂಪುಟ ಬಿಟ್ಟರೆ ಉಳಿದ ಸಂಪುಟಗಳು ಆಧುನಿಕ ಚರಿತ್ರೆಯನ್ನು ಪ್ರಮುಖವಾಗಿ ವಿಶ್ಲೇಷಿಸಿವೆ. ಸಾಮ್ರಾಜ್ಯಶಾಹಿ ಶಕ್ತಿಗಳು ಬೇರೆ ಬೇರೆ ಖಂಡಗಳ ಅನೇಕ ದೇಶಗಳನ್ನು ವಸಾಹತುಗಳನ್ನಾಗಿ ಮಾಡಿದ ಹಾಗೂ ಆ ವಸಾಹತುಶಾಹಿ ಸರಕಾರಗಳಿಗೆ ವಿರೋಧವಾಗಿ ಜನಾಂದೋಲನಗಳನ್ನು ಸಂಘಟಿಸಿದ ಸ್ಥಳೀಯ ರಾಷ್ಟ್ರೀಯ ಹೋರಾಟಗಳನ್ನು ಇವು ಒಳಗೊಂಡಿವೆ. ಹೋರಾಟದ ಪ್ರತಿಕ್ರಿಯೆಗಳ ಪ್ರಕ್ರಿಯೆಗಳನ್ನು ಈ ಸಂಪುಟಗಳು ವಿವರವಾಗಿ ಚರ್ಚಿಸಲು ಪ್ರಯತ್ನಿಸಿವೆ. ಆಫ್ರಿಕಾ ಮತ್ತು ಅಮೆರಿಕಾಗಳಲ್ಲಿನ ಮೂಲನಿವಾಸಿ ಬುಡಕಟ್ಟುಗಳು ಸಾಮ್ರಾಜ್ಯಶಾಹಿಗಳ ತುಳಿತಕ್ಕೆ ನೇರವಾಗಿ ಬಲಿಯಾದ ಚರಿತ್ರೆಯ ವಿವಿಧ ಘಟ್ಟಗಳನ್ನು ದಾಖಲು ಮಾಡಲು ಪ್ರಯತ್ನಿಸಲಾಗಿದೆ. ಈ  ಮೂಲನಿವಾಸಿಗಳ ಪ್ರತಿಭಟನೆಯನ್ನು ಅವರ ಸಾಂಸ್ಕೃತಿಕ ಗುರುತೇ ಇಲ್ಲದ ರೀತಿಯಲ್ಲಿ ಮಟ್ಟ ಹಾಕಿ ವಸಾಹತುಶಾಹಿಗಳು ಭದ್ರವಾಗಿ ಬೇರುಬಿಟ್ಟ ಬಗೆಗಳನ್ನು ಅರಿಯಲು ಈ ಸಂಪುಟಗಳು ಪ್ರಯತ್ನಿಸಿವೆ.

ವಸಾಹತುಶಾಹಿಗಳು ಇದೇ ರೀತಿಯಲ್ಲಿ ಏಷ್ಯಾದ ದೇಶಗಳನ್ನೂ ಸುಲಿಗೆ ಮಾಡಿ ಜನರ ಹೋರಾಟಗಳನ್ನು ಸುಮಾರು ಒಂದೂವರೆ ಶತಮಾನಗಳ ಕಾಲ ದಮನಿಸಿದವು. ಆದರೂ, ದ್ವಿತೀಯ ಮಹಾಯುದ್ಧದ ನಂತರ ಮುಖ್ಯವಾಗಿ ಏಷ್ಯಾದಲ್ಲಿ ತಮ್ಮದೇ ಗುರುತನ್ನು ಸ್ಥಾಪಿಸಲು ಈ ರಾಷ್ಟ್ರೀಯ ಹೋರಾಟಗಳಿಗೆ ಸಾಧ್ಯವಾಯಿತು. ವಸಾಹತುಶಾಹಿ ಚರಿತ್ರೆಯನ್ನು ವಿಶ್ಲೇಷಿಸು ವುದರೊಂದಿಗೆ ಪ್ರಸಕ್ತ ವಿದ್ಯಮಾನಗಳನ್ನು ಸಂದರ್ಭೋಚಿತವಾಗಿ ನಮ್ಮ ಸಂಪುಟಗಳಲ್ಲಿ ವಿದ್ವಾಂಸರು ಚರ್ಚಿಸಿದ್ದಾರೆ. ಭಿನ್ನ ಭಿನ್ನ ಬೌದ್ದಿಕ ಸಿದ್ಧಾಂತಗಳು, ಸಾಮಾಜಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಗಳು ಧ್ರುವೀಕರಣಗೊಳ್ಳುವ ಭಿನ್ನ ಭಿನ್ನ ಬಗೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳನ್ನು ಪ್ರಸ್ತುತ ಸಂಪುಟಗಳು ಮಾಡಲು ಪ್ರಯತ್ನಿಸಿವೆ. ಇದರೊಂದಿಗೆ ಪ್ರಥಮ ಮತ್ತು ದ್ವಿತೀಯ ಮಹಾಯುದ್ಧಗಳು, ಶೀತಲಯುದ್ಧ, ಸೋವಿಯತ್ ರಷ್ಯಾದ ವಿಘಟನೆ ಹಾಗೂ ಜಾಗತೀಕರಣ ಪ್ರಕ್ರಿಯೆಗಳ ರಾಜಕೀಯಸಾಮಾಜಿಕಸಾಂಸ್ಕೃತಿಕ ಸಂಘರ್ಷಗಳನ್ನು ದಾಖಲಿಸುವ ಯತ್ನವನ್ನು ಮಾಡಲು ನಮ್ಮ ಸಂಪುಟಗಳು ಪ್ರಯತ್ನಿಸಿವೆ. ಹಾಗೆಯೇ ಬೇರೆ ಬೇರೆ ದೇಶಗಳ ಮತ್ತು ಜನರ ಸಾಮಾಜಿಕ, ಆರ್ಥಿಕ ಸಾಮ್ಯತೆಗಳನ್ನು, ಭಿನ್ನತೆಗಳನ್ನು, ಸಾಮರಸ್ಯಗಳನ್ನು, ಸಂಘರ್ಷಗಳನ್ನು ಮತ್ತು ಸಂಕೀರ್ಣ ಸಂಬಂಧಗಳನ್ನು ಪ್ರಸ್ತುತ ಸಂಪುಟಗಳು ವಿಶ್ಲೇಷಿಸುವ ಪ್ರಯತ್ನಗಳನ್ನು ಮಾಡಿವೆ.

ಆಧುನಿಕ ಚರಿತ್ರೆ ಎಂದರೆ ಯುರೋಪಿನ ಚರಿತ್ರೆಯೇ ಎನ್ನುವಷ್ಟರ ಮಟ್ಟಿಗಿನ ಮಾತು ಉತ್ಪ್ರೇಕ್ಷೆಯಂತೆ ಕಂಡರೂ ಅದು ಉತ್ಪ್ರೇಕ್ಷೆಯಲ್ಲ. ಐರೋಪ್ಯ ರಾಷ್ಟ್ರಗಳು ತಮ್ಮ ತಮ್ಮ ರಾಷ್ಟ್ರೀಯತೆಗಳನ್ನು ಬಲಪಡಿಸಿಕೊಳ್ಳುತ್ತಲೇ ಶಕ್ತಿಶಾಲಿಗಳಾಗಿ ರೂಪುಗೊಂಡವು. ಹಾಗೆಯೇ ಅವುಗಳು ಶಕ್ತಿ ರಾಜಕಾರಣದಲ್ಲಿ ಪರಸ್ಪರ ಕಾದಾಡಿಕೊಂಡು ಶಕ್ತಿ ಸಂವರ್ಧನೆ ಮಾಡಿಕೊಂಡ ದ್ದನ್ನು ನಾವು ಗಮನಿಸಬಹುದು. ಅವರ ಘರ್ಷಣೆ, ಕಾದಾಟ, ಯುದ್ಧ, ಮಹಾಯುದ್ಧಗಳು ಯುರೋಪಿನಲ್ಲಿ ಆರಂಭವಾದರೂ ಅವುಗಳ ಪರಿಣಾಮದಿಂದ ಇಡೀ ಜಗತ್ತೆ ತತ್ತರಿಸು ವಂತಾಯಿತು. ಅವರ ಮೇಲಾಟಗಳಿಂದಾಗಿ ಯುರೋಪಿನಿಂದಾಚೆಗೆ ವಸಾಹತುಗಳು ನಿರ್ಮಾಣವಾದವು. ಅವುಗಳನ್ನು ಹಿಂಡಿ ಯುರೋಪ್ ಜಗತ್ತು ವಿರಾಟ ಸ್ವರೂಪವನ್ನು ಪಡೆದು ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಮಾನದಲ್ಲಿಯೂ ತನ್ನದಲ್ಲದ ಜಗತ್ತಿನ ಎಲ್ಲ ವ್ಯವಹಾರಗಳಲ್ಲಿಯೂ ಮೂಗು ತೂರಿಸುವ ಸಾಮರ್ಥ್ಯವನ್ನು ಪಡೆಯಿತು. ವಸಾಹತುಗಳು ನಿರ್ವಸಾಹತೀಕರಣಗೊಂಡ ಸಂಕ್ರಮಣ ಕಾಲಘಟ್ಟದಲ್ಲಿ ಐರೋಪ್ಯ ರಾಷ್ಟ್ರಗಳು ಅಮೆರಿಕ, ಆಫ್ರಿಕಾ ಮತ್ತು ಏಷ್ಯಾಗಳೊಡನೆ ಸ್ಪಲ್ಪ ಹೊಂದಿಕೊಂಡು ಹೋಗುವ ವಾತಾವರಣ ನಿರ್ಮಾಣವಾಯಿತು. ಈ ಎಲ್ಲ ಸಂವಾದಗಳನ್ನು ಪ್ರಸ್ತುತ ‘ಯುರೋಪ್ ಚರಿತ್ರೆಯ ವಿವಿಧ ಆಯಾಮಗಳು’ ಎನ್ನುವ ಸಂಪುಟ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದೆ. ಪ್ರಸ್ತುತ ಸಂಪುಟದ ಸಂಪಾದಕರಾದ ಡಾ.ಕೆ.ಮೋಹನ್ ಕೃಷ್ಣ ರೈ ಅವರಿಗೆ ಅಭಿನಂದನೆಗಳು.

ಡಾ. ಎಸ್.ಎ.ಬಾರಿ ಹಾಗೂ ಡಾ. ರಾಜಾರಾಮ ಹೆಗಡೆ ಅವರ ಮಾರ್ಗದರ್ಶನದಲ್ಲಿ ಚರಿತ್ರೆ ವಿಶ್ವಕೋಶವನ್ನು ಸಮರ್ಥವಾಗಿ ರಚಿಸಲು ಸಾಧ್ಯವಾದದ್ದನ್ನು ನಾನು ನೆನಪಿಸಿ ಕೊಳ್ಳಲೇಬೇಕು. ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ಎ.ಬಾರಿ ಹಾಗೂ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಾರಾಮ ಹೆಗಡೆ ಅವರು ನಮ್ಮ ಸಂಪುಟಗಳ ವಿಷಯತಜ್ಞರಾಗಿ ಸಾಕಷ್ಟು ಸಲಹೆಸೂಚನೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳನ್ನು ಯಶಸ್ವಿಯಾಗಿ ಹೊರತರಲು ಸಾಧ್ಯವಾಯಿತು. ಈ ಇಬ್ಬರು ವಿದ್ವಾಂಸರಿಗೆ ಸಂಪಾದಕ ಮಂಡಳಿಯು ಆಭಾರಿಯಾಗಿದೆ.

ಪ್ರಸ್ತುತ ಸಂಪುಟಗಳನ್ನು ಹೊರತರಲು ನಮಗೆ ಎಲ್ಲ ಬಗೆಗಳಿಂದಲೂ ಪ್ರೋ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರಿಗೆ, ಕುಲಸಚಿವರಾದ  ಹಾಗೂ ಪ್ರಸಾರಾಂಗದ ನಿರ್ದೇಶಕರಾದ  ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಹಿಂದಿನ ಕುಲಸಚಿವರಾದ ಡಾ. ಹಿ.ಚಿ.ಬೋರಲಿಂಗಯ್ಯ ಅವರಿಗೆ, ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ. ಮೋಹನ ಕುಂಟಾರ್ ಅವರಿಗೆ ಸಂಪಾದಕ ಮಂಡಳಿಯ ಪರವಾಗಿ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ. ಎನ್.ಚಿನ್ನಸ್ವಾಮಿ ಸೋಸಲೆ ಅವರ ಸಹಕಾರಕ್ಕಾಗಿ ನಾನು ಆಭಾರಿ ಯಾಗಿದ್ದೇನೆ. ಪ್ರಸ್ತುತ ಸಂಪುಟ ಹೊರಬರಲು ನಿರಂತರವಾಗಿ ನಮಗೆ ಸಹಕರಿಸಿದ ಚರಿತ್ರೆ ವಿಭಾಗದ ಸಹೋದ್ಯೋಗಿ ಡಾ. ಸಿ.ಆರ್.ಗೋವಿಂದರಾಜು ಹಾಗೂ ಪ್ರೊ. ಲಕ್ಷ್ಮಣ್ ತೆಲಗಾವಿ ಇವರಿಗೆ ಸಂಪಾದಕ ಮಂಡಳಿ ಆಭಾರಿಯಾಗಿದೆ.

ಪ್ರಸ್ತುತ ಸಂಪುಟಗಳ ಪುಟವಿನ್ಯಾಸ ಮಾಡಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ,  ಮುಖಪುಟ ವಿನ್ಯಾಸ ಮಾಡಿದ ಶ್ರೀ ಯು.ಟಿ.ಸುರೇಶ್ ಅವರಿಗೆ, ಅಕ್ಷರ ಜೋಡಣೆ ಮಾಡಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್ ಅವರಿಗೆ ಹಾಗೂ ಸಂಪುಟಗಳನ್ನು ಮುದ್ರಿಸಿದ ಲಕ್ಮೀ ಮುದ್ರಣಾಲಯ ದವರಿಗೆ ನನ್ನ ಕೃತಜ್ಞತೆಗಳು.

 

 


 

ಸಂಪುಟ ಸಂಪಾದಕರ ಮಾತು

ಡಾ.ಕೆ.ಮೋಹನ್‌ಕೃಷ್ಣ ರೈ

 

ಯುರೋಪ್ ತಾನು `ಆಧುನಿಕ’ ಎಂಬುದಾಗಿ ಸ್ವಯಂ ಘೋಷಿಸಿಕೊಂಡು ಪ್ರಪಂಚವನ್ನು ಆಳಿದ್ದು ಜಾಗತಿಕ ಚರಿತ್ರೆ ಅಧ್ಯಯನ ಸಂದರ್ಭದಲ್ಲಿ ಕಂಡುಬರುವ ಬಹುಮುಖ್ಯ ಸಂಗತಿ. ಯುರೋಪಿನ ದೃಷ್ಟಿಕೋನದಿಂದಲೇ ಇತರ ಭೂಖಂಡಗಳ ಚರಿತ್ರೆಯನ್ನು ನಿರ್ಮಿಸುವ ಯುರೋಪ್ ಕೇಂದ್ರಿತ ಅಧ್ಯಯನ ವಿಧಾನವನ್ನು ಹುಟ್ಟು ಹಾಕಲಾಯಿತು. ಇದು ಯಾವುದೇ ದೇಶದ ಚರಿತ್ರೆ ನಿರ್ಮಾಣ ಸಂದರ್ಭದಲ್ಲಿ ತುಂಬ ಪ್ರಭಾವಶಾಲಿಯಾಗಿ ಹಾಗೂ ಸೈದ್ಧಾಂತಿಕವಾಗಿಯೂ ಅಷ್ಟೇ ಗಟ್ಟಿಯಾಗಿ ತನ್ನ ಛಾಪನ್ನು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಸಾಮ್ರಾಜ್ಯಶಾಹಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳ ಮೂಲಕ ಈ ವಿಧಾನ ಅಧಿಕೃತತೆಯನ್ನು ಪಡೆದುಕೊಂಡಿತು. ಚರಿತ್ರೆ ಅಧ್ಯಯನದಲ್ಲಿ ಹೊಸ ಆಯಾಮಗಳು ಕಾಣಿಸಿಕೊಂಡ ಬಳಿಕ ಯುರೋಪ್ ಕೇಂದ್ರಿತ ಅಧ್ಯಯನ ಕ್ರಮದಲ್ಲಿ ಸ್ವಲ್ಪಮಟ್ಟಿನ ಸಡಿಲಿಕೆ ಕಾಣಿಸಿಕೊಂಡಿತು. ಏಕೆಂದರೆ ಈ ವಿಧಾನದಲ್ಲಿ ಅಧ್ಯಯನಕ್ಕೆ ಒಳಪಡುವ ವಿಚಾರ ಸ್ವತಂತ್ರವಾಗಿ ಚರ್ಚಿತವಾಗಲು ಸಾಧ್ಯವಿಲ್ಲ. ಅದು ಹೇರಲ್ಪಟ್ಟ ಸಿದ್ಧಾಂತದ ಚೌಕಟ್ಟಿನಲ್ಲಿಯೇ ವ್ಯವಹರಿಸಬೇಕಾದ ಮಿತಿಗೆ ಒಳಪಟ್ಟಿರುತ್ತದೆ. ಆದರೆ ಇಂದು ಚರಿತ್ರೆ ಅಧ್ಯಯನವು ಈ ಹೇರಲ್ಪಟ್ಟ ಅಧ್ಯಯನ ಮಾದರಿಯಿಂದ ಬಿಡುಗಡೆಗೊಂಡು ಆಯಾ ಪ್ರದೇಶದ ಚರಿತ್ರೆ, ಸಂಸ್ಕೃತಿಯ ಹಿನ್ನೆಲೆಯಲ್ಲಿ ವ್ಯಾಖ್ಯಾನಗೊಳ್ಳುವತ್ತ ಸಾಗುತ್ತಿದೆ. ಇದರರ್ಥ ಚರಿತ್ರೆ ಹಾಗೂ ಚರಿತ್ರೆಕಾರ ಸ್ವತಂತ್ರವಾಗಿ ವ್ಯವಹರಿಸುವಂತಾಗಿದೆ ಎಂದಲ್ಲ. ಬಂಡವಾಳಶಾಹಿ ವ್ಯವಸ್ಥೆಯೊಳಗೇ ಸ್ವಲ್ಪಮಟ್ಟಿನ ಸ್ವಾತಂತ್ರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎನ್ನುವುದಷ್ಟೇ ಸತ್ಯ.

ಯುರೋಪ್ ಕೇಂದ್ರಿತ ಅಧ್ಯಯನ ವಿಧಾನಕ್ಕೆ ಸಂಬಂಧಪಟ್ಟಂತೆ ಇಲ್ಲಿ ಚರ್ಚಿಸಿರುವುದಕ್ಕೂ ಈ ಸಂಪುಟಕ್ಕೂ ನೇರ ಸಂಬಂಧವಿದೆ. ಪ್ರಸ್ತುತ ಸಂಪುಟವು ಯುರೋಪಿನ ಚರಿತ್ರೆಯನ್ನು ಪ್ರಾಚೀನದಿಂದ ಆಧುನಿಕ ಸಂದರ್ಭದವರೆಗೆ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಿದೆ. ಯುರೋಪಿನ ಚರಿತ್ರೆಯನ್ನು ಅರ್ಥೈಸಿಕೊಂಡಾಗ ಮಾತ್ರ ಯುರೋಪ್ ಕೇಂದ್ರಿತ ಅಧ್ಯಯನ ವಿಧಾನದ ಹಿಂದಿನ ಧೋರಣೆಗಳು ಒಂದೊಂದಾಗಿ ಮನವರಿಕೆಯಾಗಲು ಸಾಧ್ಯ. ಯುರೋಪಿಯನ್ನರು ತಮ್ಮ ಚರಿತ್ರೆಯನ್ನು ಕಟ್ಟಿಕೊಂಡ ಬಗೆ ಹಾಗೂ ಅದನ್ನು ಇನ್ನಿತರ ದೇಶಗಳ ಚರಿತ್ರೆಗಿಂತ ಭಿನ್ನವಾಗಿ ನಿರೂಪಿಸಿರುವ ಬಗೆಗಳೆರಡೂ ಕುತೂಹಲಕರವಾದ ಅಧ್ಯಯನಕ್ಕೆ ಎಡೆಮಾಡಿಕೊಡುತ್ತವೆ. ಈ ಸಂಪುಟದಲ್ಲಿರುವ ಎಲ್ಲ ಲೇಖನಗಳೂ ಯುರೋಪಿನ ಆಯಾ ಕಾಲಘಟ್ಟದ ಚರಿತ್ರೆಯನ್ನು ದಾಖಲಿಸುವುದರ ಜೊತೆ ಜೊತೆಗೆ ವಿಶ್ಲೇಷಿಸುವ ಪ್ರಯತ್ನವನ್ನೂ ಮಾಡಿವೆ. ಈ ಸಂಪುಟವು ಗ್ರೀಕ್ ನಾಗರಿಕತೆಯ ಪೂರ್ವದ ಯುರೋಪ್ ಎನ್ನುವ ಆರಂಭದ ಲೇಖನದಿಂದ ಜಾಗತೀಕರಣ ಎನ್ನುವ ಕೊನೆಯ ಲೇಖನದವರೆಗೆ ಯುರೋಪಿನಲ್ಲಾದ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಸ್ಥಿತ್ಯಂತರಗಳ ವಿವರಗಳನ್ನು ನೀಡುತ್ತದೆ. ಯುರೋಪಿನಲ್ಲಿ ಚರ್ಚ್ ಹಿನ್ನೆಲೆಯ ಸಂಪ್ರದಾಯವಾದಿ ಧೋರಣೆಯನ್ನು ವಿಜ್ಞಾನ, ತಂತ್ರಜ್ಞಾನ ಹಾಗೂ ವಿಚಾರಗಳು ಮುಖಾಮುಖಿಯಾಗಿರುವುದು ಹಾಗೂ ಆ ಮೂಲಕ ವೈಜ್ಞಾನಿಕ ಮನೋಧರ್ಮವನ್ನು ಹುಟ್ಟುಹಾಕಿರುವುದು ಇಲ್ಲಿ ಹೆಚ್ಚು ಚರ್ಚಿತವಾಗಿವೆ.

ಪುನರುಜ್ಜೀವನ, ಸುಧಾರಣೆ, ವೈಜ್ಞಾನಿಕ ಕ್ರಾಂತಿ, ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ ಹಾಗೂ ವಿಚಾರಗಳ ಕ್ರಾಂತಿ ಮುಂತಾದ ಹಲವಾರು ಮೊದಲುಗಳನ್ನು ಕಂಡಿರುವ ಯುರೋಪ್ ಅವುಗಳ ಮೂಲಕ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಂಡು ಇತರರ ಅಸ್ತಿತ್ವ ವನ್ನು ನಿರಾಕರಿಸುವುದರ ಕುರಿತಾಗಿಯೂ ಪ್ರಸ್ತುತ ಸಂಪುಟದಲ್ಲಿ ಚರ್ಚಿಸಲಾಗಿದೆ. ಪ್ರಪಂಚ ಕಂಡ ಎರಡು ಜಾಗತಿಕ ಯುದ್ಧಗಳು ಯುರೋಪನ್ನು ಕೇಂದ್ರವಾಗಿಟ್ಟು ಕೊಂಡಿದ್ದರೂ, ಅದರಲ್ಲಿ ಯುರೋಪೇತರ ದೇಶಗಳೂ ಭಾಗಗಳಾಗಿದ್ದವು. ಈ ಯುದ್ಧಗಳಲ್ಲಿ ಯಾವ ದೇಶಗಳು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಕ್ಷೀಣಿಸಿದವು ಹಾಗೂ ವೃದ್ದಿಸಿದವು ಎನ್ನುವುದು ಅಂದಿನ ಸಂದರ್ಭದ ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆಯಾಗುತ್ತದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆಯೂ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಜಾಗತಿಕ ಯುದ್ಧಗಳ ಸಂದರ್ಭದಲ್ಲಿ ಅಮೆರಿಕಾ, ಬ್ರಿಟನ್ ಮುಂತಾದ ದೇಶಗಳು ಮತ್ತೊಂದು ಸೂಪರ್‌ಪವರ್ ಆಗಿ ಹೊರಹೊಮ್ಮಿದ ಸೋವಿಯೆತ್ ಒಕ್ಕೂಟವನ್ನು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಕ್ಷೀಣಿಸುವಂತೆ ಮಾಡುಲು ಪ್ರಯತ್ನಪಟ್ಟವು. ಬಂಡವಾಳಶಾಹಿ ಹಾಗೂ ಸಮಾಜವಾದಿ ಬಣಗಳ ಮಧ್ಯದ ಈ ಪೈಪೋಟಿ ಶೀತಲಸಮರಕ್ಕೆ ಕಾರಣವಾಗಿ ವಿಶ್ವವನ್ನೇ ಎರಡು ಬಣಗಳನ್ನಾಗಿ ವಿಂಗಡಿಸಿತು. ಇದರ ಪರಿಣಾಮಗಳ ಕುರಿತು ಇಲ್ಲಿ ಸವಿಸ್ತಾರವಾದ ಚರ್ಚೆಯನ್ನು ಮಾಡಲಾಗಿದೆ. ಸೋವಿಯೆತ್ ಒಕ್ಕೂಟ ವಿಘಟನೆಗೊಂಡು ಬಂಡವಾಳ ಶಾಹಿಯೇ ಏಕೈಕ ಸೂಪರ್‌ಪವರ್ ಆಗಿ ಹೊರಹೊಮ್ಮಿದ್ದುದರ ಪರಿಣಾಮವೇ ಜಾಗತೀಕರಣ. ಇದು ವಿಜ್ಞಾನ, ತಂತ್ರಜ್ಞಾನ ಹಾಗೂ ಬಂಡವಾಳದ ಮೂಲಕ ಪ್ರಪಂಚ ವನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರೂ, ಇದರ ಹಿಂದಿರುವ ಧೋರಣೆಗಳು ಜಾತಿಯಾಧಾರಿತ ಶ್ರೇಣೀಕೃತ ಸಮಾಜ ವ್ಯವಸ್ಥೆಗಿಂತ ಯಾವ ರೀತಿಯಲ್ಲೂ ಹೊರತಾಗಿಲ್ಲ. ಜಾಗತೀಕರಣದ ಹುಟ್ಟು, ಬೆಳವಣಿಗೆ ಹಾಗೂ ಅದು ಅಭಿವೃದ್ದಿಶೀಲ ದೇಶಗಳ ಮೇಲೆ ಬೀರಿದ ಪರಿಣಾಮಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಯುರೋಪಿನ ಚರಿತ್ರೆಯ ಅಧ್ಯಯನ ನಡೆಸುವಾಗ ಅದರ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಂದರ್ಭಗಳಲ್ಲಿ ಜಾಗತಿಕ ಸಂಬಂಧದ ವಿಚಾರವಾಗಿ ಹಲವಾರು ಸಾಮ್ಯತೆಗಳು ಕಂಡುಬರುತ್ತವೆ. ಇದು ಚರಿತ್ರೆ ಚಲನಶೀಲವಾದದ್ದು ಹಾಗೂ ನಿರಂತರ ಪ್ರಕ್ರಿಯೆಗಳಿಗೆ ಸಂಬಂಧಪಟ್ಟದ್ದು ಎನ್ನುವ ಚಾರಿತ್ರಿಕ ವಿಶ್ಲೇಷಣೆಗೆ ಸಂಬಂಧಪಟ್ಟ ವಿಚಾರವಾದರೂ, ಇಲ್ಲಿ ಮುಖ್ಯವೆನಿಸುವುದು ಈ ಕಾಲಘಟ್ಟಗಳಲ್ಲಿನ ರಾಜಕಾರಣ. ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯಗಳು ವಿದೇಶಿ ವ್ಯಾಪಾರ ಸಂಪರ್ಕದ ಮೂಲಕ ಜಾಗತಿಕ ಸಂಬಂಧವನ್ನು ಹೊಂದಿದ್ದವು. ಮಧ್ಯಕಾಲೀನ ಸಂದರ್ಭದ ಯುರೋಪ್ ಹೊಸ ಶೋಧ, ಆವಿಷ್ಕಾರಗಳ ಪ್ರಯೋಗಶಾಲೆಯಾಗಿ ಕಂಡುಬರುತ್ತದೆ. ಜಲಮಾರ್ಗಗಳ ಆವಿಷ್ಕಾರ ಯುರೋಪಿನ ರಾಷ್ಟ್ರಗಳ ಸ್ವರೂಪವನ್ನೇ ಬದಲಾಯಿಸಿತು. ವ್ಯಾಪಾರದ ಜೊತೆ ಜೊತೆಗೆ ಹೊಸ ಭೂಪ್ರದೇಶಗಳನ್ನು `ವಸಾಹತುಶಾಹಿ’ ಎನ್ನುವ ಪರಿಕಲ್ಪನೆಯೊಂದಿಗೆ ಆಕ್ರಮಿಸಿಕೊಳ್ಳುವ ಪ್ರಯತ್ನಗಳು ಆರಂಭವಾಗತೊಡಗಿದವು. ಹೀಗಾಗಿ ವಸಾಹತುಗಳಾಗಿ ಪರಿವರ್ತನೆಗೊಂಡ ದೇಶಗಳು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡವು. ಆಧುನಿಕ ಸಂದರ್ಭದಲ್ಲಿ ಎರಡು ಘಟ್ಟಗಳನ್ನು ಗುರುತಿಸಬಹುದಾಗಿದೆ. ಒಂದನೆಯದು ಯುರೋಪಿನಯ್ನರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳು ಹಾಗೂ ಆ ಸಂದರ್ಭದಲ್ಲಿ ಯುರೋಪಿಯನ್ ರಾಷ್ಟ್ರಗಳು ಹೊಂದಿದ್ದ ಧೋರಣೆಗಳು. ಎರಡನೆಯದು ಸ್ವತಂತ್ರಗೊಂಡ ರಾಷ್ಟ್ರಗಳಿಗೆ ಜಾಗತೀಕರಣದ ಮೂಲಕ ಮರು ಪ್ರವೇಶ ಪಡೆದಿರುವುದು. ಆಧುನಿಕ ಸಂದರ್ಭದಲ್ಲಿ ಯುರೋಪ್ ವ್ಯಾಪಾರ ಹಾಗೂ ಕೈಗಾರಿಕಾ ಬಂಡವಾಳದ ಮೂಲಕ ಜಗತ್ತಿನ ರಾಷ್ಟ್ರಗಳಿಗೆ ಪ್ರವೇಶ ಪಡೆಯಿತು. ಇಂದು ಜಾಗತೀಕರಣವು ಅಮೆರಿಕಾ ಕೇಂದ್ರಿತವಾಗಿ ಕಂಡುಬಂದರೂ ಅದರ ತವರೂರು ಯುರೋಪ್ ಎನ್ನುವುದು ವಾಸ್ತವ ಸಂಗತಿ. ಈ ಮೂರು ಕಾಲಘಟ್ಟಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಪ್ರಧಾನ ಅಂಶವಾಗಿ ಕಂಡುಬಂದರೂ ರಾಜಕಾರಣ ಮಾತ್ರ ಬೇರೆ ಬೇರೆಯದ್ದೇ ಆಗಿತ್ತು. ವ್ಯಾಪಾರದ ಜೊತೆಗೆ ಸಾಮ್ರಾಜ್ಯಶಾಹಿ ಹಾಗೂ ಬಂಡವಾಳಶಾಹಿ ಧೋರಣೆಗಳು ಸ್ಪಷ್ಟವಾಗಿ ಕಾಣಿಸಿಕೊಂಡದ್ದು ಆಧುನಿಕ ಸಂದರ್ಭದಲ್ಲಿ. ಈ ಲಕ್ಷಣಗಳನ್ನು ಪ್ರಾಚೀನ ಸಂದರ್ಭದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲವಾದರೂ, ಮಧ್ಯಕಾಲೀನ ಸಂದರ್ಭದಲ್ಲಿ ಈ ಲಕ್ಷಣಗಳು ಚಿಗುರೊಡೆದಿರುವುದನ್ನು ಕಾಣಬಹುದಾಗಿದೆ. ಯುರೋಪಿನ ಈ ಮೂರು ಕಾಲಘಟ್ಟಗಳನ್ನು ಸಮರ್ಥವಾಗಿ ಗ್ರಹಿಸುವ ಪ್ರಯತ್ನವನ್ನು ಈ ಸಂಪುಟದ ಲೇಖನಗಳು ಮಾಡಿವೆ.

ಪ್ರಸ್ತುತ ಸಂಪುಟವು ಚರಿತ್ರೆ ವಿಶ್ವಕೋಶದಲ್ಲಿ ಒಂದು ಭಾಗವಾಗಿ ಈ ಹಿಂದೆ ಪ್ರಕಟ ವಾಗಿತ್ತು. ಅಲ್ಲಿದ್ದ ಲೇಖನಗಳನ್ನು ಪರಿಷ್ಕರಿಸಿ ಹಾಗೂ ಕೆಲವು ಹೊಸ ಲೇಖನಗಳನ್ನು ಸೇರಿಸುವುದರ ಮೂಲಕ ಈ ಸಂಪುಟವು ಹೊಸ ಆಲೋಚನೆಗಳೊಂದಿಗೆ ಹೊಸದಾಗಿ ರೂಪುಗೊಂಡಿದೆ. ಚರಿತ್ರೆ ವಿಶ್ವಕೋಶ ಯೋಜನೆಯು ಆರಂಭಗೊಂಡಿದ್ದು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರ ಅವರ ಅವಧಿಯಲ್ಲಿ. ಅವರು ನೀಡಿದ ಸ್ಫೂರ್ತಿಯೇ ಇಂದು ಈ ಸಂಪುಟ ಪ್ರಕಟಗೊಳ್ಳುತ್ತಿರುವುದಕ್ಕೆ ಮೂಲ ಕಾರಣ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರಸ್ತುತ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರು ಈ ಸಂಪುಟವನ್ನು ಹೊರತರುವಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಅವರನ್ನು ವಿಶೇಷವಾಗಿ ನೆನೆಯುತ್ತೇನೆ. ಈ ಸಂಪುಟವು ಹೊರಬರುವಲ್ಲಿ ನೆರವಾದ ಕುಲಸಚಿವರಾದ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ.ಮಂಜುನಾಥ ಬೇವಿನಕಟ್ಟಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಅವರ ಎಲ್ಲ ರೀತಿಯ ಸಹಕಾರಗಳಿಗಾಗಿ ಕೃತಜ್ಞನಾಗಿದ್ದೇನೆ. ಈ ಸಂಪುಟದ ಪ್ರಧಾನ ಸಂಪಾದಕರಾದ ಡಾ.ತಂಬಂಡ ವಿಜಯ್ ಪೂಣಚ್ಚ ಅವರು ಪ್ರತಿಯೊಂದು ಹಂತದಲ್ಲೂ ಸೂಕ್ತ ಸಲಹೆ ಸೂಚನೆ ಹಾಗೂ ನೆರವನ್ನು ನೀಡಿ ಸಂಪುಟ ರೂಪುಗೊಳ್ಳುವುದಕ್ಕೆ ಕಾರಣರಾಗಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಸಂಪುಟದ ವಿಷಯತಜ್ಞರಾಗಿ ಸಾಕಷ್ಟು ಸಲಹೆ ಸೂಚನೆ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಸ್.ಎ.ಬಾರಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ  ಪ್ರಾಧ್ಯಾಪಕರಾದ ಡಾ.ರಾಜಾರಾಮ ಹೆಗಡೆ ಅವರಿಗೆ ಅಭಾರಿಯಾಗಿದ್ದೇನೆ. ಚರಿತ್ರೆ ವಿಭಾಗದ ನನ್ನ ಸಹೋದ್ಯೋಗಿಗಳಾದ ಪ್ರೊ.ಲಕ್ಷ್ಮಣ್ ತೆಲಗಾವಿ, ಡಾ.ಸಿ.ಆರ್. ಗೋವಿಂದರಾಜು ಹಾಗೂ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಸಂಪುಟಕ್ಕೆ ಲೇಖನಗಳನ್ನು ಬರೆದುಕೊಟ್ಟ ಎಲ್ಲ ವಿದ್ವಾಂಸರಿಗೆ ಹಾಗೂ ಇಂಗ್ಲಿಶ್ ಲೇಖನಗಳನ್ನು ಕನ್ನಡದಲ್ಲಿ ಅನುವಾದ ಮಾಡಿಕೊಟ್ಟ ಭಾಷಾಂತರಕಾರರಿಗೆ ನಾನು ಕೃತಜ್ಞನಾಗಿದ್ದೇನೆ. ವಿಷಯಸೂಚಿಯನ್ನು ಸಿದ್ಧಪಡಿಸುವಲ್ಲಿ ನೆರವಾದ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಹಿರೇಬಿದ್ರಿ ಹೊಳಿಬಸಪ್ಪ, ಎಸ್.ಮುನಿರಾಜ್, ಆಲ್ಕೋಡ್ ಅಮರೇಶ ಹಾಗೂ ವೆಂಕಟೇಶ್ ಅವರಿಗೆ ಕೃತಜ್ಞತೆಗಳು. ಸಂಪುಟವನ್ನು ಅಚ್ಚುಕಟ್ಟಾಗಿ ಹೊರತರುವಲ್ಲಿ ನೆರವಾದ ಪ್ರಸಾರಾಂಗದ ಹಿಂದಿನ ನಿರ್ದೇಶಕರಾದ ಡಾ.ಎ.ಮೋಹನ ಕುಂಟಾರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಸಂಪುಟದ ಪುಸ್ತಕವಿನ್ಯಾಸ ಮಾಡಿದ ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ವಿನ್ಯಾಸವನ್ನು ಮಾಡಿದ ಶ್ರೀ ಯು.ಟಿ. ಸುರೇಶ್ ಅವರಿಗೆ ಹಾಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀಮತಿ ರಶ್ಮಿಕೃಪಾಶಂಕರ್ ಅವರಿಗೆ ನನ್ನ ಕೃಜ್ಞತೆಗಳು.