ಯುರೋಪ್ ವೈವಿಧ್ಯಮಯ ಹವಾಮಾನಗಳಿಂದಲೂ ಮತ್ತು ಭೌಗೋಳಿಕ ಅಂಶಗಳಿಂದಲೂ ಕೂಡಿದ ಖಂಡ. ಯುರೋಪಿನ ತುಂಬೆಲ್ಲ ದ್ವೀಪಗಳು, ನದಿ ಕಣಿವೆಗಳು, ಫಲವತ್ತಾದ ಬಯಲು ಪ್ರದೇಶಗಳು ಮತ್ತು ಪರ್ವತಗಳಿಂದ ಕೂಡಿದ್ದು, ಅದರ ಪ್ರಮುಖ ಭೌಗೋಳಿಕ ಅಂಶಗಳೆಂದರೆ ಉತ್ತರದ ಮತ್ತು ಪೂರ್ವದ ಪ್ರಖ್ಯಾತ ಬಯಲು – ಉಕ್ರೈನ್ ಹುಲ್ಲುಗಾವಲಿನಿಂದ ಬಾಲ್ಟಿಕ್ ಸಮುದ್ರದ ಮಣ್ಣಿನ ಹೆಬ್ಬಂಡೆಗಳವರೆಗೆ ಮತ್ತು ದಕ್ಷಿಣದ ಪರ್ವತ ಶ್ರೇಣಿಗಳು, ಅದರಲ್ಲಿ ಪ್ರಮುಖವಾಗಿ ಆಲ್ಪ್ಸ್, ಪಿರಾನಿಸ್ ಮತ್ತು ಕಾರ್‌ಪೆಥಿಯನ್ಸ್ ಮುಂತಾದವು. ಇಲ್ಲಿಯ ಹವಾಗುಣವು ವೈವಿಧ್ಯಮಯವಾಗಿದ್ದು, ಮೆಡಿಟರೇನಿಯನ್ ವಲಯದ ಒಣ ಉಷ್ಣ ಬೇಸಿಗೆಗಳಿಂದ ಹಿಡಿದು, ಶೀತ ಹಾಗೂ ಹವಾಮಾನದಿಂದ ಅಟ್ಲಾಂಟಿಕ್ ಸಮುದ್ರ ತೀರದ ತೇವಾಂಶದ ಹಾಗೂ ಸಮಶೀತೋಷ್ಣ ಹವೆಯವರೆಗೆ ಮತ್ತು ಪೂರ್ವಯುರೋಪ್ ಅತ್ಯಂತ ತೀವ್ರ ಚಳಿಗಾಲದಂತಹ ಹವಾಮಾನದವರೆಗೂ ವೈವಿಧ್ಯಮಯವಾಗಿದೆ.

ಯುರೋಪಿನ ಕಲ್ಪನೆ ಮತ್ತು ಹೆಸರು ಕ್ರಿ.ಪೂ.೬ ಮತ್ತು ೫ನೇ ಶತಮಾನದ ಗ್ರೀಸ್‌ನ ಭೌಗೋಳಶಾಸ್ತ್ರಜ್ಞರ ಸೃಷ್ಟಿಯಾಗಿದೆ. ಇತಿಹಾಸ ಪಿತಾಮಹ ಹೆರೊಡೊಟಸ್ ಬರವಣಿಗೆ ಗಳಲ್ಲಿ ಸಿಗುವಂತೆ, ಮನುಷ್ಯನ ವಾಸದ ತಾಣಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ದ್ದಾನೆ. ಅವುಗಳೆಂದರೆ ಯುರೋಪ್, ಏಷ್ಯಾ, ಲಿಬಿಯಾ (ಆಫ್ರಿಕಾ). ನಂತರದ ಲೇಖಕರು ಸಾಮಾನ್ಯವಾಗಿ ಇದೇ ಹೆಸರನ್ನು ಮುಂದುವರೆಸಿದರು.

ಇಷ್ಟಾದರೂ ಗ್ರೀಕ್ ಪೂರ್ವದ ಯುರೋಪಿನ ಬಗ್ಗೆ ತಿಳಿಯಲು ನಾವು ಪ್ರಾಗೈತಿಹಾಸಿಕ ಸಂಸ್ಕೃತಿಗಳಿಂದ ಪ್ರಾರಂಭಿಸಬೇಕಾಗುತ್ತದೆ. ಇದನ್ನು ನಾವು ನಮ್ಮ ಅಭ್ಯಾಸದ ಅನುಕೂಲಕ್ಕಾಗಿ ಈ ಕೆಳಕಂಡ ಉಪಶೀರ್ಷಿಕೆಗಳೊಂದಿಗೆ ಅಭ್ಯಸಿಸಬಹುದಾಗಿದೆ.

೧. ಫ್ಲೆಯಿಸ್ಟೋಸಿನ ಯುಗ

೨. ಮಾನವನ ವಿಕಾಸ

೩. ಹಳೆಯ ಶಿಲಾಯುಗ

೪. ಮಧ್ಯ ಶಿಲಾಯುಗ

೫. ನವ ಶಿಲಾಯುಗ

೬. ಲೋಹಗಳ ಬಳಕೆಯ ಕಾಲ

೭. ಗ್ರೀಕ್‌ರ ಪೂರ್ವದ ನಾಗರಿಕತೆಗಳು

ಪ್ಲೆಯಿಸ್ಟೋಸಿಸ್ ಯುಗ

ಯುರೋಪಿನ ಸಾಂಸ್ಕೃತಿಕ ಪಳೆಯುಳಿಕೆಗಳು ನಿರ್ದಿಷ್ಟವಾಗಿ ಹಿಮಯುಗಕಾಲದ (ಗ್ಲೇಷಿಯರ್) ಮತ್ತು ಅಂತರ ಹಿಮಯುಗದ (ಇಂಟರ್ ಗ್ಲೇಷಿಯರ್) ಅವಶೇಷಗಳೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಯೂರೋಪಿನ ವಿಜ್ಞಾನಿಗಳು ಮತ್ತು ಪ್ರಾಕ್ತನ ಶಾಸ್ತ್ರಜ್ಞರಿಗೆ ಯುರೋಪ್ ಪ್ರದೇಶದ ಕಾಲಮಾನದ ಬಗ್ಗೆ ಚೆನ್ನಾಗಿ ತಿಳಿಯಲು ಅನುಕೂಲಕರವಾಗಿದೆ. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಪ್ಲೆಯಿಸ್ಟೋಸಿನ ಸಂಸ್ಕೃತಿ ದೊರೆತಿದ್ದರೂ ಯುರೋಪಿನ ನಿಖರತೆ ಕಾಣುವುದಿಲ್ಲ.

ಈ ಪ್ಲೆಯಿಸ್ಟೋಸಿನ ಯುಗ ಸುಮಾರು ೨-೪ ಮಿಲಿಯನ್‌ಗಳ ಕಾಲವನ್ನು ಹೊಂದಿತ್ತೆಂದು ಭೂಗರ್ಭಶಾಸ್ತ್ರೀಯ ಕಾಲಮಾನದ ಪ್ರಕಾರ ನಿರ್ಧರಿಸಲಾಗಿದೆ. ಈ ಕಾಲದಲ್ಲಿ ಯುರೋಪಿನ ಖಂಡದಲ್ಲಿ ಬಹಳಷ್ಟು ಹವಾಮಾನದ ವೈಚಾರಿಕತೆಗಳು ಕಂಡುಬಂದಿದ್ದು, ಇದೇ ಕಾಲದಲ್ಲಿ ಪ್ರಥಮ ಬಾರಿಗೆ ಆದಿಮಾನವನ ವಿಕಾಸಗೊಂಡ ಕಾಲವು ಆಗಿತ್ತು. ಈ ಪ್ಲೆಯಿಸ್ಟೋಸಿನ ಮತ್ತು ಮುಂದೆ ಬಂದಂತಹ ಹೊಲೋಸಿನ್ ಯುಗವನ್ನು ಭೂಗರ್ಭಶಾಸ್ತ್ರದ ಪ್ರಕಾರ ಕ್ವಾರ್ಟನರಿ ಕಾಲ ಎಂದು ಕರೆಯುತ್ತಾರೆ. ಹಾಗೆಯೇ ಸುಮಾರು ೧೦,೦೦೦ ವರ್ಷಗಳ ಹಿಂದೆ ಪ್ಲೆಯಿಸ್ಟೋಸಿನ್ ಕಾಲವು ಕೊನೆ ಗೊಂಡಿದ್ದು ಹೊಲೋಸಿನ್ ಯುಗದ ಪ್ರಾರಂಭವನ್ನು ಗುರುತಿಸಲಾಗಿದೆ.

ಈ ಪ್ಲೆಯಿಸ್ಟೋಸಿನ ಕಾಲವನ್ನು ಅಭ್ಯಾಸದ ಅನುಕೂಲಕ್ಕಾಗಿ ಮೂರು ಹಂತಗಳನ್ನಾಗಿ ವಿವರಿಸಬಹುದಾಗಿದೆ. ಅದ್ಯಾವುದೆಂದರೆ ಆದಿ ಪ್ಲೆಯಿಸ್ಟೋಸಿನ ಕಾಲ, ಮಧ್ಯದ ಪ್ಲೆಯಿಸ್ಟೋಸಿನ ಹಾಗೂ ನಂತರದ ಪ್ಲೆಯಿಸ್ಟೋಸಿನ ಕಾಲ.

ಹಾಗೆಯೇ ಭೂ ವಿಜ್ಞಾನಿಗಳ ಪ್ರಕಾರ ಈ ಯುರೋಪಿನ ಕ್ವಾರ್ಟನರಿ ಕಾಲವನ್ನು ಮತ್ತೊಮ್ಮೆ ತಮ್ಮ ಅನುಕೂಲಕ್ಕಾಗಿ ನಾಲ್ಕು ಪ್ರಮುಖ ಹಿಮಯುಗದ ಕಾಲವನ್ನಾಗಿ ವಿಂಗಡಿಸಲಾಗಿದೆ. ಅದು ಯಾವುದೆಂದರೆ ಗುಂಜ್, ಮಿಂಡೆಲ್, ರಿಸೆ ಮತ್ತು ವುರ್ಮ. ಈ ಹೆಸರುಗಳನ್ನು ಅಲ್ಪೈನ್ ಕಣಿವೆಗಳಿಂದ ತೆಗೆದುಕೊಳ್ಳಲಾಗಿದೆ.

ಒಟ್ಟಿನಲ್ಲಿ ಈ ಪ್ಲೆಯಿಸ್ಟೋಸಿಸ್ ಯುಗವನ್ನು ನಾವು ಒಂದು ಸಂಸ್ಕೃತಿಯ ಹಿನ್ನೆಲೆ ಯಾಗಿ ಅಭ್ಯಸಿಸಬಹುದಾಗಿದೆ. ಅದನ್ನೇ ನಾವು ಶಿಲಾಯುಗ ಸಂಸ್ಕೃತಿ ಕಾಲ ಎಂದು ಕರೆಯುತ್ತೇವೆ.

ಆದರೆ ಈ ಶಿಲಾಯುಗ ಸಂಸ್ಕೃತಿಯನ್ನು ವಿವರವಾಗಿ ಅಭ್ಯಸಿಸುವ ಮುನ್ನ ನಾವು ಪ್ಲೆಯಿಸ್ಟೋಸಿಸ್ ಯುಗದ ಪ್ರಮುಖ ಅಂಶಗಳನ್ನು ಚರ್ಚಿಸಿ ಮುಂದುವರೆಯಬಹುದು.

ಆದಿ ಪ್ಲೆಯಿಸ್ಟೋಸಿಸ್

ಪ್ಲಿಯೋಸಿನ್ ಕಾಲದ ಕೊನೆ ಮತ್ತು ಪ್ಲೆಯಿಸ್ಟೋಸಿಸ್ ಕಾಲದ ಪ್ರಾರಂಭವನ್ನು ಸಾಮಾನ್ಯವಾಗಿ ೧.೬ ಮಿಲಿಯನ್ ವರುಷಗಳ ಹಿಂದೆ ಎಂದು ಗುರುತಿಸಬಹುದಾಗಿದೆ. ಈ ರೀತಿಯ ವಿಭಜನೆಯನ್ನು ಸಾಮಾನ್ಯವಾಗಿ ಪಳೆಯುಳಿಕೆಗಳ ಮತ್ತು ಹವಾಮಾನದ ವೈಪರೀತ್ಯಗಳ ಮೇಲೆ ವಿಭಾಗಿಸಲಾಗಿದೆ. ಕೆಳಗಿನ ಪ್ಲೆಯಿಸ್ಟೋಸಿಸ್ ಕಾಲದಲ್ಲಿ ಇದ್ದಂತಹ ಪ್ರಾಣಿ ವರ್ಗಗಳು ಸಾಮಾನ್ಯವಾಗಿ ಪ್ಲಿಯೋಸಿನ್‌ನ ಕಾಲದಲ್ಲಿ ಜೀವಿಸಿದ್ದ ಹಾಗೂ ಪ್ಲೆಯಿಸ್ಟೋಸಿಸ್ ಕಾಲದವರೆಗೂ ಬದುಕಿದ ಜೀವಿಗಳ ಪಳೆಯುಳಿಕೆಗಳು ಆಗಿವೆ. ಇದರ ಜೊತೆಗೆ ಪ್ರಪ್ರಥಮ ಬಾರಿಗೆ ಕೆಳಗಿನ ಪ್ಲೆಯಿಸ್ಟೋಸಿಸ್ ಕಾಲದಲ್ಲಿ ಕಾಣಿಸಿಕೊಂಡ ಪ್ರಾಣಿಗಳು ಯಾವುದೆಂದರೆ ಕಾಡು ಕುದುರೆ, ದನಗಳು, ಆನೆಗಳು ಮತ್ತು ಒಂಟೆಗಳಾಗಿವೆ. ಇದೇ ಕಾಲದಲ್ಲಿ ಮೊಟ್ಟ ಮೊದಲನೆ ಬಾರಿಗೆ ಹೋಮ್ ಎರಕ್ಟ್‌ಸ್ ಸಂತತಿಯ ವಿಕಾಸ ಆಫ್ರಿಕಾದಲ್ಲಿ ಆಗಿ, ನಿಧಾನವಾಗಿ ಆಫ್ರಿಕಾ ಖಂಡದಿಂದ ಏಷ್ಯಾ ಮತ್ತು ಯುರೋಪಿನ ಖಂಡಗಳ ಕಡೆ ವಲಸೆ ಬಂದಿರುವುದನ್ನು ಕಾಣಬಹುದಾಗಿದೆ.

ಮಧ್ಯ ಪ್ಲೆಯಿಸ್ಟೋಸಿಸ್ ಯುಗ

ಮಧ್ಯ ಪ್ಲೆಯಿಸ್ಟೋಸಿಯ ಯುಗದ ಬಹಳ ಪ್ರಮುಖವಾದ ಬದಲಾವಣೆಗಳನ್ನು ಸಸ್ಯ ಕ್ಷೇತ್ರದಲ್ಲಿ ಗುರುತಿಸಬಹುದಾಗಿದೆ. ಕಾರಣವೇನೆಂದರೆ ಮಧ್ಯ ಹಾಗೂ ನಂತರದ ಪ್ಲೆಯೋಸ್ಟೋಸಿಸ್ ಕಾಲವು ಸುಮಾರು ಎರಡು ಮಧ್ಯಂತರ ಹಿಮಯುಗವನ್ನು ಕಂಡಂತಹ ಕಾಲವಾಗಿದೆ. ಈ ಕಾಲದಲ್ಲಿ ಯುರೋಪಿನಲ್ಲಿ ಮತ್ತು ಉತ್ತರ ಆಫ್ರಿಕಾದಲ್ಲಿ ಮರಗಳಿಲ್ಲದ ಸ್ಟೇಪ್ಪಿ ಮತ್ತು ಥಾಂಡ್ರಗಳಂತಹ ಬಯಲುಗಳು ಕಂಡುಬಂದಿದೆ. ಆದರೆ ಮುಂದೆ ಬಂದ ಅಂತರ್-ಹಿಮಯುಗ ಕಾಲದಲ್ಲಿ ಸಮಶೀತೋಷ್ಣ ವಲಯದ ಹಿಮಗಳು ಈ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಅಂತರ್ ಹಿಮ ಯುಗದ ಬೆಚ್ಚಗಿನ ಅಥವಾ ಪ್ರತಿಕೂಲ ವಾತಾವರಣದಲ್ಲಿ ನಮಗೆ ಮಾನವನ ನೆಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಆ ಮಾನವರು ದೊಡ್ಡ ಸಂಖ್ಯೆಯಲ್ಲಿ ಒಟ್ಟಾಗಿ ಒಂದೇ ಪ್ರದೇಶದಲ್ಲಿ ವಾಸ ಮಾಡುವವರಂತಾಗಿರದೆ ಅವರು ಅಲೆಮಾರಿ ಜನಾಂಗದ ಸಣ್ಣ ಸಣ್ಣ ಗುಂಪುಗಳೂ ಬೇಟೆಯಲ್ಲಿ ನಿಷ್ಣಾತತೆಯನ್ನು ಪಡೆದ ಗುಂಪುಗಳೂ ಆಗಿದ್ದು ಸಾಮಾನ್ಯವಾಗಿ ಯುರೋಪಿನ ನದಿ ಕಣಿವೆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಾರೆ.

ಮೇಲಿನ ಪ್ಲೆಯಿಸ್ಟೋಸಿಸ್

ಈ ಕಾಲವು ಕೊನೆಯ ಅಂತರ್ ಹಿಮಯುಗ ಮತ್ತು ಹಿಮಯುಗದ ಕಾಲಕ್ಕೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತವೆ. ಈ ಕಾಲದಲ್ಲಿ ಹೆಚ್ಚಿನ ಸಮಶೀತೋಷ್ಣವಲಯದ ಕಾಡುಗಳು ಯುರೋಪಿನಲ್ಲೆಲ್ಲಾ ಕಾಣಿಸಿಕೊಂಡವು. ಕೊನೆಯ ಹಿಮಯುಗ ಹಿಂದೆ ಸರಿದ ನಂತರದ ಅಥವಾ ಇತ್ತೀಚಿನ ಕಾಲವನ್ನು ಹೊಲೊಸಿನ್ ಎಂದೂ ಸಹ ಕರೆಯುತ್ತಾರೆ. ಹಾಗೆಯೇ ಈ ಕಾಲ ಶೀಘ್ರವಾಗಿ ಬಹಳಷ್ಟು ಬದಲಾವಣೆಗಳನ್ನು ಕಂಡ ಕಾಲವಾಗಿದೆ.

ಒಟ್ಟಿನಲ್ಲಿ ಪ್ಲೆಯಿಸ್ಟೋಸಿಸ್ ಯುಗ ಮಾನವನ ಪ್ರಾಗೈತಿಹಾಸಕ್ಕೆ ಒಂದು ಸಮರ್ಪಕವಾದ ಚೌಕಟ್ಟನ್ನು ನೀಡುತ್ತದೆ. ಹಾಗೆಯೇ ಈ ಕಾಲದ ಅಭ್ಯಾಸವನ್ನು ಮಾಡುವುದರಿಂದ ನಮಗೆ ಮಾನವ ವಿಕಾಸದ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೀಗೆ ವಿಸ್ತಾರ ವಾಗಿ ನಾವು ಪ್ಲೆಯಿಸ್ಟೋಸಿಸ್ ಯುಗವನ್ನು ಅಭ್ಯಾಸ ಮಾಡಿದರೆ ನಮಗೆ ಮಾನವನ ದೈಹಿಕ ಹಾಗೂ ಸಾಮಾಜಿಕ ವಿಕಾಸವನ್ನು ಹಂತ ಹಂತವಾಗಿ ತಿಳಿಯಲು ಸಾಧ್ಯವಾಗುತ್ತದೆ. ಹಾಗೆಯೇ ಈ ಯುಗದ ಬಗ್ಗೆ ಅಭ್ಯಸಿಸುವುದರಿಂದ, ಅಂದಿನ ಕಾಲದಲ್ಲಿ ಪರಿಸರದಲ್ಲಿ ಆದಂತಹ ಗುರುತರ ಬದಲಾವಣೆಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಈ ಕಾಲವನ್ನು ಮನುಕುಲಯುಗ ಎಂದೂ ಸಹ ಕರೆಯಲಾಗಿದೆ. ಕಾರಣವೇನೆಂದರೆ ಮೊಟ್ಟ ಮೊದಲು ಈ ಕಾಲದಲ್ಲಿ ಮನುಷ್ಯನು ಪ್ರಪಂಚದ ಎಲ್ಲಾ ಭೌಗೋಳಿಕ ನೆಲೆಗಳಲ್ಲಿ ತನ್ನ ವಾಸ ಸ್ಥಾನವನ್ನು ಮಾಡಿಕೊಂಡು ಹಾಗೆಯೇ ತನ್ನದೇ ಆದ ಸಮಾಜದ ನಿರ್ಮಾಣ ಮಾಡಿಕೊಳ್ಳುವುದನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ ವಿಕಾಸ ಹೊಂದಿದ ಮಾನವ ನಂತರ ಒಂದೇ ಸ್ಥಳದಲ್ಲಿ ನೆಲೆ ನಿಂತು ತೀವ್ರ ವ್ಯವಸಾಯ ಪದ್ಧತಿಯನ್ನು ತನ್ನ ಆರ್ಥಿಕ ಜೀವನದ ಆಧಾರವನ್ನಾಗಿ ಮಾಡಿಕೊಂಡಂತಹ ವಿಚಾರವನ್ನು ನಾವು ಗುರುತಿಸಬಹುದಾಗಿದೆ.

ಆದರೆ ನಾವು ಯುರೋಪಿನಲ್ಲಿ ಉಂಟಾದ ಮಾನವನ ಸಂಸ್ಕೃತಿಯ ಬೆಳವಣಿಗೆಯನ್ನು ವಿಸ್ತಾರವಾಗಿ ತಿಳಿದುಕೊಳ್ಳುವ ಮುನ್ನ ಮೊಟ್ಟಮೊದಲ ಬಾರಿಗೆ ಮಾನವ ಯಾವಾಗ ಯುರೋಪಿನಲ್ಲಿ ಕಾಣಿಸಿಕೊಂಡ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಂಡರೆ ಮುಂದಿನ ಅವನ ಸಂಸ್ಕೃತಿಯ ವಿಕಾಸವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.

ಯುರೋಪಿನಲ್ಲಿ ಮಾನವನ ವಿಕಾಸ

೧೮೫೯ರಲ್ಲಿ ಡಾರ್ವಿನ್‌ನ ನೈಸರ್ಗಿಕ ಆಯ್ಕೆಯ ವಿಕಾಸ ಸಿದ್ಧಾಂತದ ಪ್ರಕಟಣೆಯೊಂದಿಗೆ ಮನುಷ್ಯನ ವಿಕಾಸದ ಪುರಾವೆಯ ಬಗ್ಗೆ ಮತ್ತು ಅದನ್ನು ಕೂಲಂಕಷವಾಗಿ ತಿಳಿಯುವುದರ ಬಗ್ಗೆ ಶೋಧ ಪ್ರಾರಂಭವಾಯಿತು. ಆದರೆ ಮಾನವನ ವಿಕಾಸದ ಅಧ್ಯಯನ ಪಳೆಯುಳಿಕೆ ಮತ್ತು ಬದಲಾದ ದೃಷ್ಟಿಕೋನಗಳನ್ನು ಆಧರಿಸಿತ್ತು.

ಇದರ ಪ್ರಕಾರವಾಗಿ ಏಳು ಮಿಲಿಯನ್ ವರ್ಷಗಳ ಹಿಂದೆ ಮೊದಲು ಆದಿಮಾನವನ ವಿಕಾಸದೊಂದಿಗೆ ಮಾನವನ ವಿಕಾಸ ಪ್ರಾರಂಭವಾಯಿತು. ಆದಿಮಾನವ ಎಂಟರಿಂದ ಆರು ಮಿಲಿಯನ್ ವರ್ಷಗಳ ಹಿಂದೆ ಮೊಟ್ಟ ಮೊದಲ ಆಫ್ರಿಕಾದಲ್ಲಿ ಕಾಣಿಸಿಕೊಂಡ. ಆದರೆ ಈವರೆವಿಗೂ ಅದು ಪಳೆಯುಳಿಕೆ ಪುರಾವೆಯಿಂದ ಸಾಬೀತಾಗಿಲ್ಲ. ಆದರೆ ಐದು ಮಿಲಿಯನ್ ವರ್ಷಗಳ ಹಿಂದೆ ವಿವಾದಾತೀತ ಆದಿಮಾನವರ ಪಳೆಯುಳಿಕೆಗಳು ಕಾಣಿಸಿ ಕೊಂಡವು. ಇವು ಪ್ರಥಮ ಬಾರಿಗೆ ಪೂರ್ವ ಆಫ್ರಿಕಾದಲ್ಲಿ ಸಿಕ್ಕಿದ್ದು, ಆಫ್ರಿಕಾವೇ ಆದಿಮಾನವನ ಮೂಲ ಭೂಮಿ ಎಂಬುವನ್ನು ದೃಢಪಡಿಸುತ್ತವೆೆ. ಹೀಗೆ ಗೊತ್ತಿರುವ ಕಾಲಘಟ್ಟದಿಂದ ಎರಡು ಮಿಲಿಯನ್ ವರ್ಷಗಳ ಹಿಂದಿನವರೆಗೆ ಮೊದಲ  ಆದಿಮಾನವ ಮತ್ತು ತರುವಾಯದ ಆದಿಮಾನವರ ವಿಶ್ಲೇಷಣೆಯಿಂದ ಪ್ರಾರಂಭವಾದ ಆದಿಮಾನವನ ವಿಕಾಸದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಸಾಕ್ಷಿಯನ್ನು ಒದಗಿಸುತ್ತದೆ. ಹಾಗೆಯೇ ಈ ವಿಕಾಸದ ಅಧ್ಯಯನದಿಂದ ಸಾಮಾನ್ಯವಾಗಿ ಅಸ್ಟ್ರಲೋಪೆಥಿಸಿನ್ ಎಂದು ಕರೆಯಲ್ಪಡುವ ಜೀವಿಗಳ ವಿಕಾಸದ ಬಗ್ಗೆಯು ಹೆಚ್ಚಿನ ಮಾಹಿತಿಗಳು ತಿಳಿಯುತ್ತದೆ. ಈ ಅಸ್ಟ್ರಲೋಪಿಥಿಸಿನ್ ಗುಂಪಿನಲ್ಲಿಯೇ ಹಲವಾರು ಪ್ರಭೇದಗಳು ಕಂಡುಬಂದಿವೆ. ಅಸ್ಟ್ರಲೋಪೆಥಿಸಿನ್ ದ್ವಿಪಾದಿ ಗಳಾಗಿದ್ದು, ಮನುಷ್ಯನ ಮುಂದಿನ ವಿಕಾಸದ ಪ್ರಮುಖ ಲಕ್ಷಣಗಳಲ್ಲಿ ಒಂದೆನಿಸುವುದರ ಜೊತೆಗೆ ಉಳಿದವುಗಳಿಂದ ಬೇರ್ಪಟ್ಟ ಆದಿಮಾನವನಾಗಿದ್ದಾನೆ. ಆದರೆ ಈ ಆದಿಮಾನವನಿಗೆ ಯಾವುದೇ ತಂತ್ರಜ್ಞಾನದ ತಿಳುವಳಿಕೆ ಇರಲಿಲ್ಲ.

ನಂತರ ೨-೫ ಮಿಲಿಯನ್ ವರ್ಷಗಳಿಂದ ೨ ಮಿಲಿಯನ್ ವರ್ಷದ ಪೂರ್ವದಲ್ಲಿ ಆದಿಮಾನವನ ವಿಕಾಸದಲ್ಲೇ ನಿರ್ದಿಷ್ಟ ಮನುಷ್ಯ ಪ್ರಭೇದ ಕಾಣಸಿಗಲಿಲ್ಲ. ನಂತರದ ಕಾಲದಲ್ಲಿ ಪ್ರಪ್ರಥಮ ಬಾರಿಗೆ ಮನುಷ್ಯ ಸಂತತಿ ಜಿನಸ್ ಹೋಮೋ ಕಾಣಿಸಿಕೊಂಡಿತು. ಈ ಪ್ರಭೇದದ ಮುಖ್ಯ ಗುಣಲಕ್ಷಣಗಳಾವುವೆಂದರೆ ಬೆಳೆದಂತಹ ಮೆದುಳು (ಅಂದರೆ ವಾನರಗಿಂತ ದೊಡ್ಡದಾದ ಮೆದುಳು). ಈ ಪ್ರಥಮ ವಿಕಾಸ ಹೊಂದಿದ ಪ್ರಭೇದವನ್ನು ಹೋಮೋ ಹೇಬಿಲಸ್ ಎಂದು ಕರೆಯಲಾಗಿದೆ. ಅದು ನೋಡಲು ಸಣ್ಣ ದೇಹಾಕೃತಿಯನ್ನು ಹೊಂದಿದ್ದು, ಹಾಗೆಯೇ ಅಸ್ಟ್ರಲೋಪೆಥಿಸಿನ್‌ನ ಅನೇಕ ಪ್ರಮುಖ ಗುಣ ಲಕ್ಷಣಗಳನ್ನು ಹೊಂದಿದ್ದು, ಆದರೆ ದೊಡ್ಡದಾದ ಮೆದುಳಿನ ಗಾತ್ರವನ್ನು ಹೊಂದಿದ್ದವುದಾಗಿದೆ.

ನಂತರದ ವಿಕಸನ ಹಂತದಲ್ಲಿ ಮನುಷ್ಯನ ಬಾಹ್ಯ ಆಕಾರ ಹಾಗೂ ಈ ಪ್ರಭೇದದ ವಂಶವಾಹಿನಿ ನಿರ್ಧಾರಗೊಂಡು ಅದನ್ನು ಹೋಮೋ ಎರೆಕ್ಟಸ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಇದರ ಪ್ರಮುಖ ಲಕ್ಷಣಗಳು ಯಾವುದೆಂದರೆ ಅವನು ಪೂರ್ತಿಯಾಗಿ ನೆಟ್ಟನೆ ನಿಲ್ಲುತ್ತಿದ್ದನು. ಅವನ ಮೆದುಳು ನಿರ್ದಿಷ್ಟವಾಗಿ ಬೆಳೆದು ಅತಿಗಾತ್ರದ ದೇಹವನ್ನು ಹೊಂದಿದ್ದನು, ಹಾಗೂ ಕೆಲವೊಂದು ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿದ್ದನು. ಉದಾಹರಣೆಗೆಹರಣೆಗೆ ಹೋಮೋ ಎರೆಕ್ಟ್‌ಸ್‌ಗೆ ಪ್ರಪ್ರಥಮ ಬಾರಿಗೆ ಪೂರ್ವ ಮತ್ತು ದಕ್ಷಿಣ ಆಫ್ರಿಕಾ ದಲ್ಲಿ ಕಂಡುಬಂದಿದ್ದು ನಂತರ ನಿಧಾನವಾಗಿ ಆಫ್ರಿಕಾ ಖಂಡದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಡಿಕೊಂಡಿರುವುದನ್ನು ನೋಡಬಹುದಾಗಿದೆ. ಸುಮಾರು ಒಂದು ಮಿಲಿಯನ್ ವರ್ಷ ಗಳ ಸುಮಾರಿಗೆ ಹೋಮೋ ಎರೆಕ್ಟಸ್ ಏಷ್ಯಾದ ಕೆಲವೊಂದು ಶೀತಲ ಪ್ರದೇಶಗಳಲ್ಲೂ ಹಾಗೂ ಸಮಶೀತೋಷ್ಣ ವಲಯದ ಯುರೋಪಿನ ಪ್ರಾಂತ್ಯಗಳಲ್ಲೂ ಹರಡಿರುವುದನ್ನು ಗಮನಿಸಬಹುದಾಗಿದೆ. ಈ ಹೋಮೋ ಎರೆಕ್ಟಸ್‌ನ ವಿಕಾಸದೊಂದಿಗೆ ಶಿಲಾಯುಗದ ತಂತ್ರಜ್ಞಾನವಾದ ಆಯುಧ ತಯಾರಿಕೆಗಳು ಪ್ರಾರಂಭವಾಯಿತೆಂದು ನಿಖರವಾಗಿ ಹೇಳಬಹುದು.

ಒಟ್ಟಿನಲ್ಲಿ ಹೋಮೋ ಎರೆಕ್ಟಸ್‌ನ ವಿಕಾಸ ಹಾಗೂ ಬೆಳವಣಿಗೆ ಹಾಗೂ ಅವನು ಪ್ರಪಂಚದ ಬೇರೆ ಬೇರೆ ಸ್ಥಾನಗಳಿಗೆ ವಲಸೆ ಹೋಗಿರುವುದು ಅತಿ ಗಮನಾರ್ಹ ಅಂಶವಾಗಿದೆ.

ಈ ಮನುಷ್ಯನ ವಿಕಾಸದ ಕೊನೆಯ ಹಂತವೇ ಹೋಮೋ ಸಿಪಿಯನ್ಸ್ ಎಂದು ಕರೆಯಲ್ಪಡುವ ಮಾನವ ಸಂಕುಲವಾಗಿದೆ. ಆದರೆ ಹೋಮೋ ಎರೆಕ್ಟ್‌ಸ್‌ನಿಂದ ಬೇರೆ ಬೇರೆ ರೀತಿಯ ಗುಣಲಕ್ಷಣಗಳನ್ನು ಉಳ್ಳ ಅನೇಕ ಪ್ರಭೇದಗಳು ಬೇರೆ ಯಾವುದೇ ಸಂಸ್ಕೃತಿಯ ನೆರವಿನಿಂದ ಹುಟ್ಟಿಕೊಂಡು ಹಾಗೆಯೇ ತನ್ನ ಸುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ವಿಕಾಸ ಹೊಂದಿದ ಕಾರಣದಿಂದ ಮನುಷ್ಯನ ಬಾಹ್ಯ ರೂಪದಲ್ಲಿ ಅನೇಕ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಈ ವಿಷಯದ ನಿಖರತೆಯ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯ ಇನ್ನೂ ಮೂಡಿಲ್ಲ.

ಆದರೆ ಯುರೋಪ್ ಖಂಡದಲ್ಲಿ ಹಿಮಯುಗದ ಕಾಲದಲ್ಲಿ ಮೊಟ್ಟ ಮೊದಲ ಬಾರಿಗೆ ಈ ಹೋಮೋ ಎರೆಕ್ಟ್‌ಸ್ ಗುಂಪಿಗೆ ಸೇರಿದ ನಿಯಾನ್‌ಡರ್ತಲ್ ಮಾನವನ ಉಗಮವಾಯಿತು. ಈ ಪ್ರಭೇದದ ಕಾಲವನ್ನು ಸುಮಾರು ೨೦೦,೦೦೦ ವರ್ಷಗಳ ಹಿಂದೆ ಆಗಿರಬಹುದೆಂದು ಅಂದಾಜು ಮಾಡಲಾಗಿದೆ. ಇಡೀ ಯುರೋಪಿನ ಪ್ಲೆಯಿಸ್ಟೋಸಿಸ್ ಯುಗದಲ್ಲಿ ಬಹಳ ಆರ್ಕೈಕ್ ಆದ ಗುಂಪು ಇದಾಗಿದೆ.

ಈ ನಿಯಾನ್‌ಡರ್ತಲ್ ಮನುಷ್ಯನಿಗೆ ಬೆಳೆದಂತಹ (ದೊಡ್ಡವಾದ) ಮೆದುಳು ಇದ್ದು, ಅವನು ಪೂರ್ತಿಯಾಗಿ ದ್ವಿಪಾದಿಯಾಗಿದ್ದನು. ಹಾಗೆಯೇ ಅವನಿಗೆ ಕಲ್ಲಿನ ಆಯುಧಗಳ ಬಳಕೆ ಹಾಗೂ ಉಪಯೋಗವು ತಿಳಿದಿತ್ತು. ಅವನ ಕಾಲ ಹಿಮಯುಗದ ಕಾಲವಾದ್ದರಿಂದ ಅತಿ ಶೀತದ ವಾತಾವರಣವನ್ನು ಎದುರಿಸಲು ಅವನು ಕಲ್ಲಿನ ಗುಹೆಗಳನ್ನು ತನ್ನ ವಾಸಸ್ಥಾನ ಮಾಡಿಕೊಂಡಿರುವುದು ಕಂಡುಬರುತ್ತದೆ. ಹಾಗೂ ಬೇರೆ ಬೇರೆ ರೀತಿಯ ಆಯುಧ ತಯಾರಿಕೆಯ ತಂತ್ರಜ್ಞಾನ ಇವನಿಗೆ ತಿಳಿದಿತ್ತು. ಇವನ ಕಾಲದ ಸಮಾಜ ಒಂದು ರೀತಿಯ ಬೇಟೆ ಹಾಗೂ ಆಹಾರ ಸಂಗ್ರಹಿಸುವ ಗುಂಪು ಆಗಿತ್ತು. ಹಾಗೆಯೇ ಪ್ರಪಂಚದಲ್ಲಿ ಮೊಟ್ಟ ಮೊದಲನೆ ಬಾರಿಗೆ ಸತ್ತವರನ್ನು ವಿಧಿ ವಿಧಾನಗಳೊಂದಿಗೆ ಶವಸಂಸ್ಕಾರ ಮಾಡುತ್ತಿದ್ದ ಜನಾಂಗ ಇದಾಗಿತ್ತು.

ಸುಮಾರು ೩೫,೦೦೦ ವರ್ಷಗಳ ಹೊತ್ತಿಗೆ ಹೋಮೇ ಸೇಪಿಯನ್ ಅಲ್ಲಿ ನೆಲೆಸುವ ತನಕ ಈ ನಿಯಾನ್‌ಡರ್ತಲ್ ಸೆಪಿಯನ್ ಎಂಬ ಮನುಷ್ಯನ ಗುಂಪು ಯುರೋಪಿನಲ್ಲಿ ಕಂಡುಬರುತ್ತದೆ.

ಯುರೋಪಿನ ಹಳೆಯ ಶಿಲಾಯುಗ ಸಂಸ್ಕೃತಿ

ಈ ಶಿಲಾಯುಗ ಸಂಸ್ಕೃತಿಯು ಕಾಕತಾಳೀಯವಾಗಿ ಯುರೋಪಿನ ಹಿಮಯುಗ (ಗ್ಲೇಸಿಯರ್) ಮತ್ತು ಹಿಮಯುಗಗಳ ನಡುವಿನ ಕಾಲ (ಇಂಟರ್ ಗ್ಲೇಸಿಯರ್) ಕಾಲಾವಧಿಯಲ್ಲಿ ಬರುತ್ತದೆ. ಇದು ಸುಮಾರು ೭೦೦,೦೦೦ ವರ್ಷಗಳ ಹಿಂದೆ ಹಳೇ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಕಾಲಿಟ್ಟು ಪ್ರಾರಂಭವಾಯಿತು ಹಾಗೂ ಆದಿಮಾನವರ ವಿಕಾಸದೊಂದಿಗೆ ಮುಂದುವರೆದು ೧೦,೩೦೦೦ ವರ್ಷಗಳ ಹಿಂದೆ ಮುಕ್ತಾಯಗೊಂಡಿತು. ಈ ಕಾಲದಲ್ಲಿ ಯುರೋಪಿನ ಎಲ್ಲಾ ಭಾಗಗಳಲ್ಲೂ ನಿರಂತರವಾಗಿ ಜನಜೀವನ ಇರಲಿಲ್ಲ. ಅ ಕಾಲದಲ್ಲಿ ಮನುಷ್ಯ ಬದಲಾಗುತ್ತಿದ್ದ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳಬೇಕಾಗಿತ್ತು. ತನ್ನ ನೆಲೆಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಬದಲಾಯಿಸಬೇಕಾಗಿತ್ತು. ಯಾಕೆಂದರೆ ಮನುಷ್ಯ ಆಗ ಬೇಟೆಗಾರ ಹಾಗೂ ಆಹಾರ ಸಂಗ್ರಹಗಾರನಾಗಿದ್ದ. ಅಂದಿನ ಮನುಷ್ಯನ ಚಟುವಟಿಕೆಯ ಮೂಲಭೂತ ಸಾಕ್ಷಿಯಾಗಿ ವಿವಿಧ ರೂಪದ ಕಲ್ಲಿನ ಆಯುಧಗಳು ಮತ್ತು ಅವುಗಳ ತಯಾರಿಕೆಯ ಸಂದರ್ಭದ ಉಳಿದ ಚೂರುಗಳು ಮತ್ತು ಪ್ರಾಣಿಗಳ ಮೂಳೆಗಳು ಹಾಗೂ ಮಾನವರುಗಳ ಆಸ್ಥಿಗಳು ದೊರೆತಿವೆ. ಈ ಮೇಲೆ ತಿಳಿಸಿದ ವಸ್ತುಗಳು ಸಾಮಾನ್ಯವಾಗಿ ಗುಹೆಗಳಲ್ಲಿ ಕಲ್ಲಿನ ಆಶ್ರಯಗಳಲ್ಲಿ ಬಯಲುಗಳಲ್ಲಿ ಹಾಗೂ ನದಿಗಳ ಸ್ತರಗಳಲ್ಲಿ ಕಂಡುಬಂದಿದೆ. ಸಾಂಪ್ರದಾಯಿಕವಾಗಿ ಶಿಲಾಯುಗದ ಕಾಲವನ್ನು ಕೆಳ, ಮಧ್ಯಮ ಮತ್ತು ಮೇಲಿನ ಶಿಲಾಯುಗಗಳೆಂದು ಉಪ ವಿಭಾಗಿಸಲಾಗಿದೆ. ಕೆಳ ಶಿಲಾಯುಗದ ಕಾಲ ೭೦೦,೦೦೦ ವರ್ಷಗಳ ಹಿಂದೆ ಪ್ರಾರಂಭವಾಗುತ್ತದೆ. ಮಧ್ಯ ಶಿಲಾಯುಗ ಈಗ್ಗೆ ೨೫೦,೦೦೦ ವರ್ಷಗಳ ಮೊದಲು ಪ್ರಾರಂಭವಾಗಿರಬಹುದೆಂದು ನಂಬಲಾಗಿದೆ. ಹಾಗೆಯೇ ಮೇಲಿನ ಶಿಲಾಯುಗ ಕಾಲವು ಮಧ್ಯ ಮತ್ತು ಮೇಲಿನ ಪ್ಲೆಯಿಸ್ಟೋಸಿಸ್ ಹವಾಮಾನ ಕಾಲ ದೊಂದಿಗೆ ಸಮಕಾಲೀನವಾಗಿದ್ದು, ಇದರ ಕಾಲವನ್ನು ೧,೩೦,೦೦೦ ವರ್ಷಗಳೆಂದು ಅಂದಾಜಿಸಲಾಗಿದೆ.

ಈ ಕೆಳ, ಮಧ್ಯಮ ಮತ್ತು ಮೇಲಿನ ಶಿಲಾಯುಗದ ಕಾಲಗಳ ಉಪ ವಿಭಾಗಗಳನ್ನು ತಯಾರಿಸಲ್ಪಟ್ಟ ಶಿಲಾ ಆಯುಧಗಳ ಮಾದರಿಯ ಮೇಲೆ ವ್ಯಾಖ್ಯಾನಿಸಲಾಗಿದೆ. ಉದಾಹರಣೆಗೆ. ಕೆಳ ಶಿಲಾಯುಗದಲ್ಲಿ ನಮಗೆ ಸರಳವಾಗಿ ಕಲ್ಲಿನಿಂದ ತಯಾರಿಸಿದ ಕೈಕೊಡಲಿಗಳು ಕಂಡುಬಂದರೆ, ಮಧ್ಯಶಿಲಾಯುಗದ ಕಾಲದಲ್ಲಿ ಲೆವಲೈಸ್ ತಂತ್ರಜ್ಞಾನದಿಂದ ತಯಾರಿಸಿದ ಚಿಕ್ಕ ಆಯುಧಗಳ ಬಳಕೆ ಹಾಗೂ ನಂತರ ಮೇಲಿನ ಶಿಲಾಯುಗದ ಕಾಲದಲ್ಲಿ ಕಲ್ಲಿನ ಬ್ಲೇಡುಗಳ ಬಳಕೆ ಕಂಡುಬರುತ್ತದೆ.

ಹೀಗೆ ಶಿಲಾಯುಗದ ಯುರೋಪ್ ನಿರಂತರವಾಗಿ ಆದಿಮಾನವರ ಪ್ರಭೇದಗಳ ನೆಲೆಯಾಯಿತು. ಈ ಪ್ರಭೇದಗಳಲ್ಲಿ ಹೋಮೋ ಎರೆಕ್ಟಸ್, ಹೋಮೋ ಸಪೈನ್ ಮತ್ತು ಕೊನೆಯದು ಹೋಮೋ ಸೆಪೆಯನ್ ಸೆಪಿಯಸ್ ಅಥವಾ ಆಧುನಿಕ ಮಾನವನ ವಿಕಾಸವಾಯಿತು. ಹೀಗೆ ಆಫ್ರಿಕಾದ ಪ್ರಭೇದಗಳ ಹರಡುವಿಕೆಯಿಂದಾಗಿ ಯುರೋಪಿನಲ್ಲಿ ಮೊದಲು ಹೋಮೋ ಎರೆಕ್ಟ್‌ಸ್‌ಗಳು ಕಾಣಿಸಿಕೊಂಡವು. ಆದರೆ ನಿಯಾನ್‌ಡರ್ತಲ್‌ವನ್ನು ಯುರೋಪಿನ ನಿರ್ದಿಷ್ಟ ಪರಿಸರದ ಸ್ಥಿತಿಗಳಿಗೆ ಪ್ರತ್ಯುತ್ತರವಾಗಿ ಹುಟ್ಟಿಕೊಂಡ ಪ್ರಭೇದವೆಂದು ಪರಿಗಣಿಸಲಾಗಿದೆ.

ಯುರೋಪಿನ ಹಳೆಯ ಶಿಲಾಯುಗ ಸಂಸ್ಕೃತಿ

ಹೀಗೆ ಯುರೋಪಿನ ಹಳೇ ಶಿಲಾಯುಗವು ಪ್ಲೆಯಿಸ್ಟೋಸಿಸ್ ಯುಗದೊಂದಿಗೆ ಸಮೀಕರಿಸಲ್ಪಟ್ಟಿದೆ. ಈ ಹೋಮಿನಿಡ್ ಗುಂಪು ಯುರೋಪಿನ ವಿವಿಧ ಪರಿಸರದ ಸ್ಥಿತಿಗತಿಗೆ ಹೊಂದಿಕೊಂಡು ತಮ್ಮದೇ ಆದಂತಹ ಬೇಟೆಗಾರ ಹಾಗೂ ಆಹಾರ ಸಂಗ್ರಹ ಕಾರರಾಗಿ ಹೊಂದಿಕೊಂಡರು.

ಯುರೋಪಿನ ಆದಿ ಹಳೆಯ ಶಿಲಾಯುಗ ಸಂಸ್ಕೃತಿ

ಆದಿಮಾನವರು ಮೊದಲು ಯಾವಾಗ ಯುರೋಪಿನಲ್ಲಿ ಕಾಣಿಸಿಕೊಂಡರು ಮತ್ತು ಯಾವ ಸಂಪನ್ಮೂಲಗಳನ್ನು ಬಳಸಿದರು ಎಂಬ ಮೂಲಭೂತ ಪ್ರಶ್ನೆಯೊಂದಿಗೆ ಕೆಳ ಶಿಲಾಯುಗದ ಅಧ್ಯಯನ ಪ್ರಾರಂಭವಾಗುತ್ತದೆ.

ಇಟಲಿಯ ಎಂಬ ವಸತಿ ಪ್ರದೇಶ ಯುರೋಪಿನಲ್ಲಿ ಸಿಕ್ಕ ಮೊಟ್ಟ ಮೊದಲನೆಯ ನಿರ್ದಿಷ್ಟ ನೆಲೆಯೆಂದು ಪ್ರಾಕ್ತನ ಶಾಸ್ತ್ರಾಧಾರಗಳಿಂದ ತಿಳಿದುಬಂದಿದೆ. ಇದರ ಕಾಲಮಾನ ಇಂದಿನ ಸುಮಾರು ೭೦೦೦,೦೦೦ ವರ್ಷ ಹಿಂದೆ ಎಂದು ನಿರ್ಧರಿಸಲ್ಪಟ್ಟಿದ್ದು, ಅಲ್ಲಿ ಅಂದಿನ ಕಾಲದ ಶಿಲಾ ಆಯುಧೋಪಕರಣಗಳು ಹಾಗೂ ಪ್ರಾಣಿಗಳ ಮೂಳೆಗಳ ಅವಶೇಷಗಳು ದೊರೆತಿವೆ. ಆದರೆ ಇಂದಿಗೆ ೫೦೦,೦೦೦ ವರ್ಷಗಳ ಹಿಂದೆ ಯುರೋಪಿನ ಹೆಚ್ಚಿನ ಪ್ರದೇಶಗಳಲ್ಲಿ ಮನುಷ್ಯನ ನೆಲೆಗಳು ದೊರೆತಿವೆ. ಈಗಾಗಲೇ ಮೇಲೆ ತಿಳಿಸಿರು ವಂತೆ ಅವನು ತಯಾರಿಸಿದ ಸರಳವಾದ ಕಲ್ಲಿನ ಆಯುಧಗಳ ವಿಶೇಷವಾಗಿ ಕೈಕೊಡಲಿಗಳು ನಮಗೆ ದೊರೆತಿವೆ. ಅಶುಲಿಯನ್ ವಿಧಾನದ ಶಿಲಾಯುಧದ ಮಾದರಿಯನ್ನು ಅನುಸರಿಸಿ ಆಯುಧಗಳನ್ನು ತಯಾರಿಸುತ್ತಿದ್ದರು. ಸೇಂಟ್ ಅಶುಲ್ ಎಂಬುದು ಫ್ರಾನ್ಸ್‌ದಲ್ಲಿರುವ ಒಂದು ಪ್ರದೇಶವಾಗಿದ್ದು, ಅಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಈ ಆಯುಧಗಳು ಸಿಕ್ಕಿವೆ. ದೊರೆತಿರುವ ಆಯುಧಗಳಲ್ಲಿ ವಿವಿಧ ಗಾತ್ರದ ಕೈಕೊಡಲಿಗಳು ಹಾಗೂ ಚಾಪರ್ ಟೂಲ್ಸ್‌ಗಳು ಒಳಗೊಂಡಿವೆ. ಅಶುಲಿಯನ್ ಕೈಕೊಡಲಿಗಳು ಪ್ರಮಾಣಬದ್ಧವಾಗಿದ್ದು, ತೀರ ಸೂಕ್ಷ್ಮವಾಗಿ ಹಾಗೂ ನೀಟಾಗಿ ಕೆತ್ತಲ್ಪಟ್ಟಿರುತ್ತವೆ ಯಾದ್ದರಿಂದ ಆದಿ ಹಳೆಶಿಲಾ ಯುಗದಲ್ಲೇ ಒಂದು ತಂತ್ರಜ್ಞಾನದ ಪ್ರೌಢಾವಸ್ಥೆ ಎಂದು ಇದನ್ನು ಗುರುತಿಸುತ್ತಾರೆ.

ದೊರೆತಿರುವ ಪುರಾವೆಗಳಲ್ಲಿ ಅನೇಕ ದೊಡ್ಡ ಗಾತ್ರದ ಪ್ರಾಣಿಗಳ ಮೂಳೆಗಳು ಸಿಕ್ಕಿದ್ದು, ಪ್ರಾಯಶಃ ಪ್ರಾರಂಭದ ಆದಿಮಾನವರಿಂದ ಬೇಟೆಯಾಡಲ್ಪಟ್ಟಿದ್ದವು. ಉದಾಹರಣೆಗೆ. ಆನೆ. ಆದರೆ ಇತ್ತೀಚಿನ ಸಿದ್ಧಾಂತಗಳ ಪ್ರಕಾರ ಪ್ರಾರಂಭದ ಆದಿಮಾನವರು ದೊಡ್ಡ ಪ್ರಾಣಿಗಳನ್ನು ಬೇಟೆಯಾಡುತ್ತಿರಲಿಲ್ಲ. ಚಳಿಗಾಲದಲ್ಲಿ ವಲಸೆ ಹೋಗುವ ಇತರ ಮೃಗಗಳನ್ನು ಕೊಂದು ಮಾಂಸವನ್ನು ಬಹುಶಃ ಸಂಗ್ರಹಿಸುತ್ತಿದ್ದರೆಂದು ಊಹಿಸಲಾಗಿದೆ.

ಮಧ್ಯ ಹಳೆ ಶಿಲಾಯುಗ

ಕೆಳ ಹಳೆ ಶಿಲಾಯುಗ ಮತ್ತು ಮಧ್ಯ ಹಳೆ ಶಿಲಾಯುಗಗಳ ನಡುವೆ ಯಾವುದೇ ನಿರ್ದಿಷ್ಟ ಸೀಮಾರೇಖೆಯನ್ನು ಎಳೆಯುವಂತಿಲ್ಲ. ಇದರ ಕಾಲವನ್ನು ಇಂದಿಗೆ ೨೫೦,೦೦೦ ವರ್ಷ ಪೂರ್ವದಿಂದ ಎಂದು ನಿರ್ಧಾರವಾಗಿದ್ದು, ಆ ಕಾಲದ ಸಂಸ್ಕೃತಿಗಳು ಬಹಳಷ್ಟು ಬದಲಾವಣೆಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಮಾಡಿಕೊಂಡಿರುವುದನ್ನು ಕಾಣಬಹು ದಾಗಿದೆ. ಹಾಗೇ ಅವರಲ್ಲಿ ಇನ್ನೂ ಹೆಚ್ಚಿನ ಸಂಘಟನೆಯ ಪ್ರಯತ್ನಿಗಳು ನಡೆದಿರುವುದನ್ನು ತಿಳಿಯಬಹುದಾಗಿದೆ.

ಕಲ್ಲಿನ ಚಕ್ಕೆಗಳ ಶಿಲಾಯುಧ ಉತ್ಪಾದನೆ (ಕೈಗಾರಿಕೆಗಳು) ಗೊತ್ತಿದ್ದ ಆದಿಮಾನವ ವರ್ಗದೊಂದಿಗೆ ಈ ಕಾಲವನ್ನು ಗುರುತಿಸಲಾಗಿದೆ. ಅವರ ಆಯುಧಗಳ ಸಂಗ್ರಹಕ್ಕೆ ಮುಸ್ಪೇರಿಯನ್ ಎಂದು ಕರೆಯಲಾಗಿದ್ದು, ಇದು ಲಿ ಮೆಸ್ಟೆರ್ ಎಂಬ ದಕ್ಷಿಣ ಫ್ರಾನ್ಸ್‌ನ ಒಂದು ಪ್ರದೇಶವಾಗಿದೆ. ಅವರ ಆಯುಧಗಳನ್ನು ಸಿದ್ಧಪಡಿಸಿದ ತಿರುಳುಗಳ ಆಯುಧ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟಿದ್ದು. ಅವರ ಪ್ರಮುಖವಾದ ಆಯುಧಗಳಲ್ಲಿ ಕಲ್ಲಿನ ಬ್ಲೇಡ್ (ಹೆರೆಗತ್ತಿ) ಮುಂತಾದವುಗಳಿವೆ. ಈ ನಿಯಾನ್‌ಡರ್ತಲ್ ಎಂಬ ಪ್ರಭೇದದ ಮನುಷ್ಯರು ಅತಿ ಹೆಚ್ಚಿನ ಶೀತದ ವಾತಾವರಣಕ್ಕೆ ತಮ್ಮನ್ನು ತಾವು ಹೊಂದಿಸಿಕೊಂಡಿದ್ದರು. ಅವರ ಅನೇಕ ಅಸ್ಥಿಪಂಜರಗಳು ಯುರೋಪಿನ ಬೇರೆಬೇರೆ ಪ್ರಾಂತ್ಯಗಳಲ್ಲಿ ಅದರಲ್ಲೂ ಫ್ರಾನ್ಸ್ ಮತ್ತು ಸ್ಪೈನ್ ಪ್ರದೇಶಗಳಲ್ಲಿ ದೊರೆತಿವೆ.

ಮೇಲಿನ ಹಳೆ ಶಿಲಾಯುಗ

ಮಧ್ಯ ಹಾಗೂ ಮೇಲಿನ ಹಳೆ ಶಿಲಾಯುಗ ಸಂಸ್ಕೃತಿಯ ನಡುವೆ ಹಲವು ದಮನೀಯ ವ್ಯತ್ಯಾಸಗಳಿದ್ದವು. ದೇಹ ರಚನೆಯಲ್ಲಿ ಆಧುನಿಕ ಕ್ರೊಮ್ಯಾಗ್ನನ್ ಮಾನವ ಪ್ರಭೇದದ ಆಗಮನದೊಂದಿಗೆ ನಿಯಾನ್‌ಡರ್ತಲ್ ಪ್ರಭೇದ ಮರೆಯಾದದ್ದು ಕ್ಷಿಪ್ರವೆಂದು ನಂಬಲಾಗಿದೆ. ಇದರೊಂದಿಗೆ ಮಧ್ಯ ಹಾಗೂ ಮೇಲಿನ ಹಳೆಯ ಶಿಲಾಯುಗಗಳಲ್ಲಿ ಪರಿವರ್ತನೆ ಪಶ್ಚಿಮ ಯುರೋಪಿನಲ್ಲಿ ಬೇಗ ಆಯಿತು. ಈ ಕಾಲದಲ್ಲಿ ಕಲ್ಲು ಮತ್ತು ಮೂಳೆಗಳಲ್ಲಿ ಸುಧಾರಿಸಿದ ಆಯುಧಗಳನ್ನು ತಯಾರಿಸಿದ್ದು ಕಂಡು ಬಂದಿದೆ. ಈ ಕಾಲದಲ್ಲಿ ವರ್ಣಚಿತ್ರ ಹಾಗೂ ಕೆತ್ತನೆ ಚಿತ್ರಕಲೆ ಒಂದೇ ಪ್ರಾಣಿಯನ್ನು ಬೇಟೆಯಾಡು ವುದರಲ್ಲಿ ನಿಷ್ಣಾತ, ಹೊಸ ಪರಿಸರಗಳನ್ನು ಬಳಸಿಕೊಳ್ಳುವ ಕಲೆ ಹಾಗೂ ಹೊಸ ತಾಣಗಳ ಶೋಧ ಮುಖ್ಯವಾಗಿ ಕಂಡುಬರುತ್ತದೆ. ಸುಮಾರು ೩೫,೦೦೦ ವರ್ಷಗಳ ಹಿಂದೆ ಈ ಕಾಲ ಪ್ರಾರಂಭವಾಗಿ ಮುಂದಿನ ಹತ್ತು ಸಾವಿರ ವರುಷದವರೆಗೆ ಮನುಷ್ಯನ ನಡಾವಳಿಯಲ್ಲಿ ನಿರಂತರ ಬದಲಾವಣೆಗಳನ್ನು ತಂದಿತು.

ಮೇಲಿನ ಹಳೆ ಶಿಲಾಯುಗದ ಕಾಲದಲ್ಲಿ ಬ್ಲೇಡ್‌ಗಳನ್ನು ಹೆರೆಗತ್ತಿ ಹಾಗೂ ಸೂಕ್ಷ್ಮ ಕಲ್ಲಿನ ಆಯುಧಗಳನ್ನು ಬಳಸುತ್ತಿದ್ದರು. ಜೊತೆಗೆ ಭರ್ಜಿಗಳನ್ನು ಮತ್ತು ಅನಂತರ ಬಿಲ್ಲು ಬಾಣಗಳನ್ನು ಉಪಯೋಗಿಸಲು ಕಲಿತರು. ಅವರು ಬಳಸಿರುವ ಕಚ್ಛಾ ಸಾಮಗ್ರಿಗಳ ಆಧಾರದ ಮೇಲೆ ವಿವಿಧ ಭೌಗೋಳಿಕ ಪ್ರದೇಶಗಳೊಂದಿಗಿದ್ದ ವ್ಯಾಪಾರೀ ಸಂಬಂಧ ಅಥವಾ ವಿಶಾಲವಾದ ವಿಭಿನ್ನ ಭೌಗೋಳಿಕ ವಲಯಗಳನ್ನು ಅವರು ಬಳಸಿಕೊಂಡ ರೀತಿಯ ಕುರಿತು ತಿಳಿಯಬಹುದು.

ಆಯುಧಗಳನ್ನು ನಿಖರವಾಗಿ ಪ್ರಾದೇಶಿಕ ಗುಂಪುಗಳಾಗಿ ವಿಂಗಡಿಸಿರುವುದು ಪ್ರಾಯಶಃ ಪ್ರತ್ಯೇಕ ಪ್ರಾದೇಶಿಕ ಸಂಸ್ಕೃತಿಯನ್ನು ಸೂಚಿಸುತ್ತದೆ. ಇವುಗಳು ಈ ಕೆಳಗಿನ ಸಾಮಾಜಿಕ ಗುಂಪುಗಳಾಗಿ ವಿಂಗಡಿಸಲ್ಪಟ್ಟಿದೆ.

೧. ಫ್ರಾನ್ಸಿನ ಚಟಲ್‌ಪೆರೋನಿಯನ್

೨. ಆರಿಗ್ನೇಶಿಯನ್ ಸಂಸ್ಕೃತಿ

೩. ಗ್ರೇವೆಲಸಿಯನ್ ಸಂಸ್ಕೃತಿ

೪. ಸೊಲಿಟ್ರಯನ್ ಮತ್ತು ಮ್ಯಾಗಡಲೇನಿಯನ್

ಒಟ್ಟಿನಲ್ಲಿ ಸಾಮಾನ್ಯವಾಗಿ ವಿಸ್ತಾರವಾದ ಮೇಲೆ ಹಳೇ ಶಿಲಾಯುಗದ ಸಂಸ್ಕೃತಿಯ ನೆಲೆಗಳು ನಮಗೆ ಸಂಪನ್ಮೂಲಭರಿತವಾದ ರೇನ್‌ಡಿರ್ ಮುಂದಿರುವ ಪ್ರದೇಶಗಳಲ್ಲಿ ಕಂಡುಬಂದಿದೆ, ಹಾಗೂ ಅಲ್ಲಿ ಹೆಚ್ಚಿನ ಜನ ವಸತಿ ಇದ್ದು ಅವರು ಒಟ್ಟಾಗಿ ರೇನ್‌ಡಿರ್‌ನ  ಬೇಟೆ ಮಾಡುತ್ತಿದ್ದರೆನ್ನಲಾಗಿದೆ. ಅವರ ನೆಲೆಗಳು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿದ್ದು ಅದು ಬೇಟೆ ಹಾಗೂ ಆಹಾರ ಹುಡುಕುವ ಸಮಾಜದ ನೆಲೆಗಳಾಗಿದ್ದವು. ಈ ಗುಂಪುಗಳು ಪ್ರಾರಂಭದಲ್ಲಿ ಕೆಲವು ಕೈ ಕೆಲಸಗಳನ್ನು ಮತ್ತು ಹೊಸ ನಡವಳಿಕೆಗಳನ್ನು ಆರಂಭಿಸಿದ್ದು, ಈ ಕಾಲದ ಪ್ರಕಾರದಲ್ಲಿ ಕಂಡುಬರುತ್ತದೆ. ಈ ಕಲೆಯಲ್ಲಿ ಪ್ರಾತಿನಿಧಿಕ ಮತ್ತು ಅಮೂರ್ತ ಎಂದು ಎರಡು ಬಗೆಯನ್ನು ಕಾಣಬಹುದು. ಪ್ರಾತಿನಿಧಿಕ ಕಲೆಯಲ್ಲಿ ಕೊರೆದ ಸ್ತ್ರೀ ಪ್ರತಿಮೆಗಳು ಯುರೋಪಿನಾದ್ಯಂತ ದೊರೆತಿವೆ. ವಾಯುವ್ಯ ಯುರೋಪಿನ ಕ್ಲೆವ್‌ಸಾಕ್ಸ್ ಮತ್ತು ಅಲ್ತಮೀರು, ಫ್ರಾನ್ಸ್ ಮತ್ತು ಸ್ಪೈನ್ ಗುಹೆಗಳಲ್ಲಿ ವರ್ಣ ಚಿತ್ರಗಳು ದೊರೆತಿವೆ. ಈಗ ಸಿಕ್ಕಿರುವ ಇಂತಹ ಗುಹೆಗಳ ಸಂಖ್ಯೆ ೨೦೦ಕ್ಕೆ ಮೀರಿದೆ. ಪ್ರಾಯಶಃ ಕೆಲವು ನಿರ್ದಿಷ್ಟ ವಿಧಿಗಳ ಮುಖೇನ ಈ ಕಲೆ ಕೆಲವು ವಿಶೇಷ ಮಾಹಿತಿಯನ್ನು ಸಂಕೇತ ಭಾಷೆಯ ಮೂಲಕ ಸೂಚಿಸುತ್ತದೆ.

ಅವರ ಚಿತ್ರಕಲೆಯಲ್ಲಿ ಪ್ರಕೃತಿ ಸಹಜವಾದ ಪ್ರಾಣಿಗಳ ಚಿತ್ರಗಳು, ಕೆಲವೊಂದು ಮನುಷ್ಯ ರೂಪದ ಕೆಲವೊಮ್ಮೆ ಮನುಷ್ಯಾಕೃತಿಯನ್ನು ಹೋಲುವ ಚಿತ್ರಗಳ ಜೊತೆಗೆ, ಹತ್ತು ಹಲವು ನಿಗೂಢ ಚಿನ್ನೆಗಳೂ ಅವರ ಬೇಟೆ ಚಿತ್ರಕಲೆಯ ಮುಖ್ಯ ವಿಷಯಗಳಾಗಿವೆ. ಈ ಕಲಾ ಪ್ರಕಾರಗಳ ಅರ್ಥಗಳನ್ನು ವಿಶ್ಲೇಷಿಸುವುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯ ಗಳಿವೆ. ಒಂದು ಗುಂಪಿನ ವಿದ್ವಾಂಸರ ಪ್ರಕಾರ ದೃಶ್ಯ ಸಂಜ್ಞೆಗಳು ಮಾನವ ಪರಿಸರ ಮತ್ತು ಋತು ಚಕ್ರದ ಸಂಬಂಧಿಸಿ ಇವೆ. ಆದರೆ ಇನ್ನೊಂದು ಗುಂಪಿನ ವಿದ್ವಾಂಸರ ಪ್ರಕಾರ ಈ ಕಲಾ ಪ್ರಕಾರಗಳು ಧಾರ್ಮಿಕ ಮಾಂತ್ರಿಕ ಅರ್ಥಗಳನ್ನು ಸೂಚಿಸುತ್ತವೆ.

ಮೇಲಿನ ಹಳೆ ಶಿಲಾಯುಗದ ಕಾಲದ ಕೆಲವು ನಿರ್ದಿಷ್ಟ ನೆಲೆಗಳನ್ನು ಪರೀಕ್ಷಿಸಿದಾಗ ಅಲ್ಲಲ್ಲಿ ಅವರು ವಾಸ ಮಾಡಿದಂತಹ ಗುಡಿಸಲುಗಳು, ಅವರು ಬಳಸಿದಂತಹ ಕಲ್ಲಿನ ಒಲೆಗಳು, ಹಾಗೂ ಆಹಾರ ಶೇಖರಣೆಗಾಗಿ ತೋರಬಹುದಾದ ಆಳವಾದ ಗುಂಡಿಗಳು ಕಂಡುಬಂದಿವೆ. ಈ ಸಂಸ್ಕೃತಿಯ ಜನ ಪರಿಣಿತ ಬೇಟೆಗಾರರಾಗಿದ್ದರು. ರೇಂಡೀರ್‌ನಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಇಷ್ಟೇ ಅಲ್ಲದೆ ಅವರಿಗೆ ಕಾಡೆಮ್ಮೆ, ಕುದುರೆ, ಗಡ್ಡದ ಹೋತಗಳು ವೂಲಿ ಛೇಂಡಾ ಮೃಗಗಳು ಹಾಗೂ ಕಾಡು ದನದಂತಹ ಸಸ್ತನಿಗಳ ಪರಿಚಯವು ಇತ್ತು. ನೀಲಿ ಬಿರ್ಟಿ ಹಣ್ಣು ಹಾಗೂ ಕೆಂಪು ಚೆರ್ರಿ ಹಣ್ಣುಗಳಲ್ಲದೆ ಹಲವು ಸಸ್ಯಾಹಾರವೂ ಆ ಕಾಲದ ಜನರಿಗೆ ಗೊತ್ತಿತ್ತು. ಬೇಟೆ ಮತ್ತು ಆಹಾರ ಸಂಗ್ರಹಣೆ ಸಂಬಂಧಿಸಿದಂತೆ ಮೇಲಿನ ಹಳೇ ಶಿಲಾಯುಗದ ಜನರು ನಿರಂತರ ಹವಾಮಾನದ ಬದಲಾವಣೆಗಳನ್ನು ಅನುಸರಿಸಿ ತಮ್ಮ ಆಹಾರ ಪದ್ಧತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿತ್ತು.

ಯುರೋಪಿನ ಮಧ್ಯ ಶಿಲಾಯುಗದ ಕಾಲ

ಮೆಸೊಲಿಥಿಕ್ ಎಂದರೆ ಮಧ್ಯ ಶಿಲಾಯುಗ ಎಂದು ಅರ್ಥ. ಇದು ಹಳೆ ಮತ್ತು ಹೊಸ ಶಿಲಾಯುಗಗಳ ನಡುವಿನ ಕಾಲವಾಗಿತ್ತು. ಈ ಕಾಲ ಯುರೋಪಿನ ಕೊನೆ ಹಿಮಯುಗದ ಅಂತ್ಯವನ್ನು ಸೂಚಿಸುವುದರ ಜೊತೆಗೆ ಪ್ರಾರಂಭಿಕ ವ್ಯವಸಾಯದ ಸಂಸ್ಕೃತಿಗೂ ಪೂರ್ವದ ಕಾಲವಾಗಿದೆ. ಹಿಮಯುಗ ಹಿಂದೆ ಸರಿದಂತೆ ಯುರೋಪಿನಲ್ಲಿ ಬೇಟೆ ಹಾಗೂ ಆಹಾರ ಸಂಗ್ರಹಣೆಯಲ್ಲಿ ತೊಡಗಿದ್ದ ಮನುಷ್ಯ ಬದಲಾದ ಬೆಚ್ಚನೆಯ ಹವಾಮಾನಕ್ಕೆ ಹೊಂದಿಕೊಳ್ಳಬೇಕಾಯಿತು. ನಂತರ ಹವಾಮಾನದ ಯುಗಾಂತರದಲ್ಲಿ ಆಗಿನ ಮನುಷ್ಯ ವಾತಾವರಣಕ್ಕೆ ತಕ್ಕಂತೆ ತನ್ನ ಸಾಮಾಜಿಕ ಆರ್ಥಿಕ ಬದುಕನ್ನು ರೂಪಿಸಿ ಕೊಳ್ಳಬೇಕಾಗಿ ಬಂತು. ಈ ಕಾಲವನ್ನು ಇಂದಿಗೆ ೧೩೦೦೦ ದಿಂದ ೧೦೦೦ ವರ್ಷಗಳ ಹಿಂದಿನ ಕಾಲ ಎಂದೂ ಅಂದಾಜು ಮಾಡಬಹುದು. ಮತ್ತು ಆ ಕಾಲದಲ್ಲೇ ಕೊನೆ ಹಿಮಯುಗ ಹಿಂಜರಿಯುತ್ತಿತ್ತು. ಅಗ್ನೇಯ ಯುರೋಪ್‌ನಲ್ಲಿ ಇಂದಿಗೆ ೮೦೦೦ ವರ್ಷ ಗಳ ಹಿಂದೆ ಮತ್ತು ಉತ್ತರ ಅಟ್ಲಾಂಟಿಕ್ ನದಿಗಳಲ್ಲಿ ಈಗ್ಗೆ ೫೦೦೦ ವರ್ಷದ ಹಿಂದೆ ಯುರೋಪಿನ ಮಧ್ಯ ಶಿಲಾಯುಗದ ಕಾಲವಾಗಿತ್ತು.

ಹಿಮಯುಗೋತ್ತರದ ಯುರೋಪಿನಲ್ಲಿ ಈ ಮಧ್ಯೆ ಶಿಲಾಯುಗದ ಕಾಲವು ಮನುಷ್ಯ ಜೀವಿಸುತ್ತಿದ್ದುದಕ್ಕಾಗಿ ಮಾಡುತ್ತಿದ್ದ ಬೇಟೆ ಮತ್ತು ಆಹಾರ ಸಂಗ್ರಹಣೆಯನ್ನು ಸೂಚಿಸು ತ್ತದೆ. ಜೊತೆಗೆ ಯುರೋಪಿನಾದ್ಯಂತ ಭೌತಿಕ ಸಂಸ್ಕೃತಿಯ ವೈವಿಧ್ಯತೆಯೊಂದಿಗೆ ಸಾಮಾಜಿಕ ಆರ್ಥಿಕ ಜೀವನದ ಸಂಘಟನೆಯಲ್ಲಿಯೂ ಬದಲಾವಣೆಗಳನ್ನು ಕಾಣಬಹು ದಾಗಿದೆ. ಹಿಮಯುಗೋತ್ತರದ ಕಾಲದಲ್ಲಿ ಹಿಮದ ಹಿಂಜರಿಕೆಯಿಂದ ಸಮುದ್ರದ ಮಟ್ಟ ಏರಿತ್ತು. ಇದರಿಂದ ತೀರ ಪ್ರದೇಶ ಮತ್ತು ಭೂಮಿಯ ಮೇಲ್ಮೈಯಲ್ಲೂ ಬದಲಾವಣೆ ಗಳಾದವು. ಸಮುದ್ರದ ಮಟ್ಟ ಏರಿದ ಪ್ರಯುಕ್ತ ಮೊದಲು ಬೇಟೆಯಾಡಲು ಯೋಗ್ಯ ವಾಗಿದ್ದ ಎಷ್ಟೋ ಕಾಡುಗಳು ಸಮುದ್ರದಲ್ಲಿ ಮುಳುಗಿದ್ದು, ವಿಶ್ವದಾದ್ಯಂತ ಕ್ಷಿಪ್ರವಾಗಿ ಹೆಚ್ಚಾದ ಶಾಖದಿಂದಾಗಿ ಯುರೋಪಿನಲ್ಲಿಯು ಪ್ರಾಣಿ ಮತ್ತು ಸಸ್ಯ ಸಂಕುಲಗಳಲ್ಲಿ ಬಹಳಷ್ಟು ಬದಲಾವಣೆಗಳಾಯಿತು. ಪುಷ್ಪ ಪರಾಗಗಳ ವಿಸ್ತೃತವಾದ ವಿಶ್ಲೇಷಣೆಯಿಂದ ದಾಖಲಾಗಿರುವಂತೆ ಉತ್ತರ ಯುರೋಪಿನ ಕೊನೆ ಹಿಮಯುಗದ ಬಯಲು ಥಾಂಡ್ರ ಹವಾಮಾನದಿಂದ ೮೦೦೦ ವರ್ಷಗಳ ಹಿಂದೆ ಮಿಶ್ರ ಓಕ್ ವೃಕ್ಷ ತಾಣಗಳವರೆಗೆ ಆದ ಸ್ಥಿತ್ಯಂತರವನ್ನು ತಿಳಿಯಬಹುದು. ಈ ಕಾಲದಲ್ಲಿ ಹಿಮಾಸಾರಂಗನಂತಹ ದೊಡ್ಡ ಸಸ್ಯಾಹಾರಿಗಳು ಯುರೋಪಿನ ಉತ್ತರಕ್ಕೆ ವಲಸೆ ಹೋದರೆ, ಕೆಂಪು ಜಿಂಕೆಗಳು ರೈನ್‌ಡೀರ್ ಚಿಕ್ಕ ಚಿಕ್ಕ ಮಂದೆಗಳಲ್ಲಿ ವಾಸ ಮಾಡುತ್ತ ಕಾಡಿನ ಪರಿಸರಕ್ಕೆ ಹೊಂದಿ ಕೊಂಡವು. ದೈತ್ಯಾಕಾರದ ಪ್ರಾಣಿಗಳು ಮಾಯವಾದರೆ ರೈನ್‌ಡೀರ್ ಮತ್ತು ಕಾಡುಹಂದಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡವು. ಜೊತೆಗೆ ಅನೇಕ ಚಿಕ್ಕ ಚಿಕ್ಕ ಹೊಸ ಪ್ರಾಣಿಗಳು ಕಾಣಿಸಿಕೊಂಡವು.

ಇಷ್ಟಾದರೂ ದಕ್ಷಿಣ ಯುರೋಪಿನ ಪ್ಲೆಯಿಸ್ಟೋಸಿನ್ ಮತ್ತು ಹೊಲೋಸಿನ್ ಯುಗಗಳ ನಡುವೆ ಪ್ರಾಣಿಗಳ ಮತ್ತು ಸಸ್ಯ ಸಂಕುಲಗಳ ಯಾವುದೇ ಬದಲಾವಣೆಗಳು ಇರದೆ ಮನುಷ್ಯನ ಬದುಕಿನಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಮುಂದುವರಿಕೆಯನ್ನು ಕಾಣುತ್ತೇವೆ. ಮಧ್ಯ ಶಿಲಾಯುಗದಲ್ಲಿ ಸಂಬಂಧಿಸಿದಂತೆ ಪ್ರಾಕ್ತನಶಾಸ್ತ್ರಾಧಾರ ಮನುಷ್ಯನ ಹೊಸ ಪರಿಸರಗಳ ಅನ್ವೇಷಣೆಯನ್ನು ಮತ್ತು ಅವುಗಳನ್ನು ಬಳಸಿಕೊಂಡದ್ದನ್ನು ತಿಳಿಸುತ್ತದೆ. ಈ ಕಾಲದಲ್ಲಿ ನಿರಂತರವಾಗಿ ತಂತ್ರಜ್ಞಾನದಲ್ಲಿ ಹೊಸತನವನ್ನು ನೋಡುತ್ತೇವೆ. ಮಧ್ಯ ಶಿಲಾಯುಗದ ಅತಿ ಗಮನೀಯ ಅಂಶವೆಂದರೆ ಅತಿಸೂಕ್ಷ್ಮ ಶಿಲಾಯುಧಗಳ ತಯಾರಿಕೆ ಮತ್ತು ಉಪಯೋಗ. ಈ ಸೂಕ್ಷ್ಮ ಶಿಲಾಯುಧಗಳು ವಿವಿಧ ಆಕಾರ ಮತ್ತು ಗಾತ್ರದಿಂದ ಕೂಡಿದ್ದು, ದಕ್ಷಿಣ ಸ್ಕ್ಯಾಂಡಿನೇವಿಯದಂತಹ ಪ್ರದೇಶದಲ್ಲಿ ಕಾಲಮಾನವನ್ನು ನಿರ್ಧರಿಸಲು ಸಹಾಯಕವಾಗಿದೆ. ಮಧ್ಯಶಿಲಾಯುಗದ ಸಂಸ್ಕೃತಿಯನ್ನು ಮೂರು ಪ್ರಮುಖ ವಿಭಾಗಗಳಾಗಿ ಅಭ್ಯಸಿಸಬಹುದು. ಅವೆಂದರೆ-

ಎ. ಮ್ಯಾಗ್ಲೇಮೋಸ್ – ೯೫೦೦ ರಿಂದ ೭೬೦೦

ಬಿ. ಕೊಂಗೀಮೋಸ್ – ೭೬೦೦ ರಿಂದ ೬೫೦೦

ಸಿ. ದಿ ಎರ್ ಟಿಬೋಲ್ – ೬೫೦೦ ರಿಂದ ೫೦೦೦

ಈ ಸಂಸ್ಕೃತಿಗೆ ಸೇರಿದ ಕಲ್ಲಿನ ಪುಟ್ಟ ಆಯುಧಗಳಲ್ಲಿ ಪ್ರಮುಖವಾಗಿ ಮೊನೆಗಳು,  ಕುಳಿಗಳು ಇರುತ್ತಿದ್ದವು. ಅಂದು ತಯಾರಿಸುತ್ತಿದ್ದ ಮೀನು ಹಿಡಿಯುವ ಗಾಳ, ಸಣ್ಣ ದೋಣಿ ಹಾಗೂ ಹೊಲಿದ ಬಟ್ಟೆಗಳು ಕಂಡುಬಂದಿವೆ.

ಮಧ್ಯ ಶಿಲಾಯುಗದ ಕಾಲದಲ್ಲಿ ಆದ ಕ್ಷಿಪ್ತ ಪರಿಸರದ ಬದಲಾವಣೆ ಹಾಗೂ ಯುರೋಪಿನಾದ್ಯಂತ ಇದ್ದ ವೈವಿಧ್ಯಮಯ ಪ್ರಾಣಿ ಮತ್ತು ಸಸ್ಯ ಸಂಕುಲಗಳು ಆ ಕಾಲದ ಆರ್ಥಿಕ ಜೀವನದ ಬಗ್ಗೆ ಅಧ್ಯಯನ ಮಾಡಲು ಸಹಾಯಕವಾಗುತ್ತವೆ. ಅವರು ಜಿಂಕೆಗಳನ್ನು ಬೇಟೆಯಾಡುತ್ತಿದ್ದರು. ಅವರ ಬದುಕಿನಲ್ಲಿ ಸಮುದ್ರ ಸಂಪನ್ಮೂಲಗಳು ಹೆಚ್ಚು ಪ್ರಮುಖ ಪಾತ್ರವಹಿಸಿದಂತೆ ಕಂಡುಬರುತ್ತದೆ. ಇದಲ್ಲದೆ ಸಸ್ಯಗಳ ಆಹಾರವು ವಿಪುಲವಾಗಿ ದೊರೆಯುತ್ತಿತ್ತು. ವ್ಯವಸಾಯದ ಆರಂಭದ ಕೆಲವೊಂದು ಲಕ್ಷಣಗಳು ಕಂಡುಬಂದಿದ್ದು, ನಿರ್ದಿಷ್ಟ ಗಿಡಗಳ ಕೃಷಿ ಮಾಡಿರಬಹುದಾದ ಸಾಧ್ಯತೆಗಳು ಕಂಡುಬಂದಿದೆ. ವಿಶೇಷ ಚಟುವಟಿಕೆಗಳಾಗಿ ಬೇಟೆ ತಾಣಗಳು ಮತ್ತು ಮೀನು ಹಿಡಿಯುವ ಬಲೆಗಳು ಕಂಡುಬಂದಿದ್ದು, ಆ ಕಾಲದ ಜನ ಒಂದು ನಿರ್ದಿಷ್ಟ ನೆಲೆಗಳಲ್ಲಿ ವಾಸಿಸುತ್ತಿದ್ದರು ಎನ್ನ ಬಹುದು. ಹೀಗೆ ಅವರ ಜೀವನೋಪಾಯ ಮತ್ತು ಜೀವನ ವಿಧಾನ ಹೆಚ್ಚು ಸಂಕೀರ್ಣ ವಾಗಿತ್ತು.

ಮಧ್ಯ ಶಿಲಾಯುಗದ ಮನುಷ್ಯ ಮರದ ತೊಗಟೆ ಮತ್ತು ಮರಗಳನ್ನು ಹಾಸಿದ ನೆಲೆಗಳ ದೊಡ್ಡ ದೊಡ್ಡ ಗುಡಿಸಲುಗಳಲ್ಲಿ ವಾಸಿಸುತ್ತಿದ್ದನು. ಸತ್ತವರನ್ನು ಸ್ಮಶಾನಗಳಲ್ಲಿ ವಿವಿಧ ಭಂಗಿಗಳಲ್ಲಿ ಹೂಳುವ ಪದ್ಧತಿ ಕಂಡುಬಂದಿದೆ. ಕೆಲವು ಸಮೂಹಗಳ ಅಧ್ಯಯನ ದಿಂದ ಮಧ್ಯ ಶಿಲಾಯುಗದ ಸಮಾಜಗಳು ವಂಶಪಾರಂಪರಿಕ ಸಾಮಾಜಿಕ ಸ್ಥಾನಮಾನಗಳನ್ನು ಗುರುತಿಸಿರುವಂತೆ ತೋರುತ್ತದೆ.

ಆ ಕಾಲದ ಆರ್ಥಿಕ ಮತ್ತು ಸಾಮಾಜಿಕ ಅಭ್ಯುದಯಕ್ಕೆ ಹೆಚ್ಚುತ್ತಿದ್ದ ಸಮುದ್ರ ಮಟ್ಟ ಮತ್ತು ಬೆಳೆಯುತ್ತಿದ್ದ ಜನಸಂಖ್ಯೆಗಳ ಅಸಮತೋಲನ ಕಾರಣವಾಗಿದ್ದಿರಬಹುದು. ಇದಲ್ಲದೆ ವಲಸೆ ಹೋಗುವ ಮೀನುಗಳು ಹಾಗೂ ದೊರೆಯುತ್ತಿದ್ದ ಅತ್ಯಂತ ಹೆಚ್ಚಿನ ಸಂಪನ್ಮೂಲಗಳು ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಿದ್ದಲ್ಲದೆ ಸಂಪತ್ತು ಮತ್ತು ಅಧಿಕಾರವನ್ನು ಗಳಿಸಲು ಒಂದು ಮಾಧ್ಯಮವಾಗಿರುವಂತೆಯೂ ತೋರುತ್ತದೆ.

ಉತ್ತರ ಜರ್ಮನಿಯಲ್ಲಿ ಪ್ರಾರಂಭದ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಬಹಳ ಕಾಲದ ನಂತರವೂ ದಕ್ಷಿಣ ಸ್ಕ್ಯಾಂಡಿನೇವಿಯಾದಲ್ಲಿ ಬೇಟೆಯಾಡುವ ಮತ್ತು ಆಹಾರವನ್ನು ಸಂಗ್ರಹಿಸುವ ಆರ್ಥಿಕ ಚಟುವಟಿಕೆ ಮುಂದುವರೆದಿದ್ದು ಕಂಡುಬಂದಿದೆ. ಹಾಗೆಯೇ ಯುರೋಪಿನ ಉಳಿದ ಪ್ರದೇಶಗಳಲ್ಲಿ ವ್ಯವಸಾಯದ ಪ್ರಸಾರ ವಲಸೆ ಬರುತ್ತಿದ್ದ ಜನಗಳ ಮತ್ತು ಸ್ಥಳೀಯ ಆರ್ಥಿಕ ಬೆಳವಣಿಗೆ ಸಂಕೀರ್ಣವಾಗಿ ತೋರುತ್ತದೆ.

ಯುರೋಪಿನ ಇತಿಹಾಸಪೂರ್ವ ಕಾಲದಲ್ಲಿ ಮಧ್ಯ ಶಿಲಾಯುಗದ ಸಂಸ್ಕೃತಿ ಪರಿವರ್ತನೆಯ ಪ್ರಮುಖವಾದ ಘಟ್ಟವಾಗಿದೆ. ಮಧ್ಯ ಶಿಲಾಯುಗ ಸಂಸ್ಕೃತಿಯ ಅಂತ್ಯ ಕಾಲದಲ್ಲಾದ ಮೂರು ಪ್ರಮುಖ ಬೆಳವಣಿಗೆಗಳು ನಂತರದ ಇತಹಾಸಪೂರ್ವ ಯುಗದ ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯನ್ನು ತಿಳಿಯಲು ಗಮನಾರ್ಹವಾಗಿದೆ. ಆ ಬೆಳವಣಿಗೆಗಳೆಂದರೆ-

ಎ. ಶ್ರೇಣೀಕೃತ ಸಮಾಜಗಳ ಹುಟ್ಟು

ಬಿ. ವ್ಯವಸಾಯ ಪ್ರಧಾನ ಆರ್ಥಿಕ ವ್ಯವಸ್ಥೆಯ ಅಳವಡಿಕೆ ಮತ್ತು

ಸಿ. ಬದಲಾದ ಪರಿಸರಕ್ಕೆ ಹೊಂದಿಕೊಂಡು ಜೀವನವನ್ನು ನಡೆಸುವುದು