ಇಲ್ಲಿ ಮಹಾಯುದ್ಧ ಯಾಕಾಯಿತು ಎನ್ನುವುದಕ್ಕಿಂತಲೂ ಮಹಾಯುದ್ಧದ ನಂತರ ಆದ ರಾಜಕೀಯ ಮತ್ತು ಆರ್ಥಿಕ ಏರುಪೇರುಗಳು ಮಹತ್ವದ್ದು. ಮಹಾಯುದ್ಧಕ್ಕೆ ಮೊದಲೇ ಬ್ರಿಟನ್ ತನ್ನ ಅಂತರ್‌ರಾಷ್ಟ್ರೀಯ ಯಜಮಾನಿಕೆಯನ್ನು ಹಂತಹಂತವಾಗಿ ಕಳಕೊಳ್ಳುತ್ತಿತ್ತು. ಅದರ ವಶದಲ್ಲಿದ್ದ ವಸಾಹತುಗಳು ಸ್ವತಂತ್ರಗೊಂಡವು, ಅಂತರ್‌ರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಟನ್‌ನ ಪಾಲು ಕಡಿಮೆಯಾಗುತ್ತಾ ಬಂತು ಮತ್ತು ಪೌಂಡು ತನ್ನ ಮೌಲ್ಯಕಳಕೊಂಡಿತ್ತು. ಯುದ್ಧದಲ್ಲಿ ನೇರವಾಗಿ ಪಾಲುಗೊಂಡ ದೇಶಗಳಲ್ಲಿನ ಆರ್ಥಿಕ ಮತ್ತು ರಾಜಕೀಯ ಸ್ಥಿತಿ ತುಂಬಾ ಶೋಚನೀಯವಾಗಿತ್ತು. ಕುಟುಂಬ ವ್ಯವಸ್ಥೆ ಕುಸಿದಿತ್ತು. ನಿರುದ್ಯೋಗ, ಬಡತನ, ವ್ಯಾಪಾರದ ಕುಸಿತ ಇವೇ ಮುಂತಾದ ಸಮಸ್ಯೆಗಳು ಯುರೋಪಿನ ರಾಷ್ಟ್ರಗಳನ್ನು ಪುನಃ ಎದ್ದುನಿಲ್ಲಬಲ್ಲವೋ ಎನ್ನುವ ಸ್ಥಿತಿಗೆ ತಂದಿದ್ದವು. ಈ ಯುದ್ಧದಲ್ಲಿ ನೇರವಾಗಿ ಪಾಲು ಗೊಳ್ಳದ ಅಮೆರಿಕಾ, ಇದೇ ಸಂದರ್ಭದಲ್ಲಿ ತನ್ನ ಯಜಮಾನಿಕೆಯನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೌಂಡಿನ ಸ್ಥಾನವನ್ನು ಡಾಲರ್ ಆಕ್ರಮಿಸಲು ಪ್ರಯತ್ನಿಸುತ್ತಿತ್ತು. ಆದಾಗ್ಯೂ ಅಮೆರಿಕಾದ ಸ್ವಯಂತಂತ್ರವಾದಿ ಅಥವಾ ಮಾರುಕಟ್ಟೆ ಆಧಾರಿತ ಅಭಿವೃದ್ದಿ ಮಾದರಿ ಆಗತಾನೆ ಸ್ವತಂತ್ರಗೊಂಡ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಅಪ್ಯಾಯಮಾನವಾಗಿರಲಿಲ್ಲ. ಅದಕ್ಕೆ ಮುಖ್ಯಕಾರಣಗಳು ಎರಡು – ೧. ಮುಕ್ತ ಮಾರುಕಟ್ಟೆ ಮಾದರಿಯನ್ನು ಪ್ರತಿಪಾದಿಸುವ ಯುರೋಪಿನ ದೇಶಗಳ ಆರ್ಥಿಕ ಸ್ಥಿತಿ ಎರಡು ಮಹಾಯುದ್ಧಗಳಲ್ಲಿ ಪಾಲ್ಗೊಂಡು ತುಂಬಾ ಹದಗೆಟ್ಟಿತ್ತು ಮತ್ತು ೨. ರಷ್ಯಾದ ಯೋಜಿತ ಅಭಿವೃದ್ದಿ ಮಾದರಿ ಇದು ಪ್ರಪಂಚಕ್ಕೆ ಪಾಶ್ಚಿಮಾತ್ಯವಲ್ಲದ ಅಭಿವೃದ್ದಿಯ ಒಂದು ಮಾದರಿಯನ್ನು ಕೊಡಲು ಪ್ರಯತ್ನಿಸುತ್ತಿತ್ತು. ಇದರ ಯೋಜಿತ ಅಭಿವೃದ್ದಿಯ ಹಿಂದೆ ಬಹುದೊಡ್ಡ ಸಂಖ್ಯೆಯ ನರಬಲಿಯಿತ್ತು. ಅದರ ಸಾಮೂಹಿಕ ಕೃಷಿಯ ಹಿಂದೆ ಬಲಿತ್ಕಾರವಿತ್ತು- ಅದಾಗ್ಯೂ ಅದು ೧೯೨೯ ಮತ್ತು ೧೯೪೦ರ ನಡುವೆ ಬಲಿಷ್ಠವಾದ ಕೈಗಾರಿಕೆ ವ್ಯವಸ್ಥೆಯನ್ನು ನಿರ್ಮಾಣ ಮಾಡಿತ್ತೆಂದು ಎರಿಕ್ ಹಾಬ್ಸ್‌ವಾಮ್‌ನ ಅಭಿಪ್ರಾಯ. ಗಣನೀಯ ಪ್ರಮಾಣದ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ಸಾಧ್ಯವಾದುದು ಕೂಡ ಈ ಯೋಜಿತ ಅಭಿವೃದ್ದಿಯಿಂದ ಎಂದು ಆತ ಅಭಿಪ್ರಾಯ ಪಡುತ್ತಾನೆ. ಆದುದರಿಂದಲೇ ಇದು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಆಕರ್ಷಕವಾಗಿತ್ತು. ಇದಕ್ಕಾಗಿಯೇ ಡಬ್ಲ್ಯು. ಡಬ್ಲ್ಯು. ರಸ್ತೊ ರಷ್ಯಾದ ಕಮ್ಯುನಿಸಂನ್ನು ‘‘ಪರಿವರ್ತನೆಯ ರೋಗ’’ ಎಂದು ಕರೆದಿದ್ದ ಮತ್ತು ಆರ್ಥಿಕ ಅಭಿವೃದ್ದಿ ಮೇಲಿನ ತನ್ನ ಪುಸ್ತಕವನ್ನು ‘‘ಎ ನಾನ್ ಕಮ್ಯುನಿಸ್ಟ್ ಮೆನಿಫೆಸ್ಟ್ ’’ ಎಂದು ಕರೆದಿದ್ದ.

ರಸ್ತೋನ ಪುಸ್ತಕ ಬಿಡುಗಡೆಯಾದ ಎಂಟು ವರ್ಷಗಳ ನಂತರ ಸ್ವಾಮ್‌ವೆಲ್ ಹಂಟಿಂಗ್ ಟನ್ ಕೂಡ ಪಶ್ಚಿಮದ ರಾಷ್ಟ್ರಗಳನ್ನು ಈ ವಿಚಾರ ಕುರಿತು ಎಚ್ಚರಿಸಿದ್ದಾನೆ. ಅಭಿವೃದ್ದಿಯ ಬದಲೀ ಮಾದರಿಯೊಂದನ್ನು ಕೊಡದಿದ್ದರೆ ಪಶ್ಚಿಮದ ರಾಷ್ಟ್ರಗಳು ತೃತೀಯ ಜಗತ್ತಿನಲ್ಲಿ ಲೆನಿನಿಸಂನೊಂದಿಗೆ ಸ್ಪರ್ಧಿಸುವುದು ಕಷ್ಟವಾಗಬಹುದೆಂದು ಆತ ಪಶ್ಚಿಮದ ರಾಷ್ಟ್ರಗಳನ್ನು ಎಚ್ಚರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಧುನೀಕರಣ ಥಿಯರಿಗಳ ಪಾತ್ರವನ್ನು ಗಮನಿಸ ಬೇಕಾಗಿದೆ. ಅಂತರ್‌ರಾಷ್ಟ್ರೀಯ ಆರ್ಥಿಕ ವ್ಯವಹಾರಗಳಲ್ಲಿ ಅಮೆರಿಕಾ ತನ್ನ ಯಜಮಾನಿಕೆ ಯನ್ನು ಸ್ಥಾಪಿಸಲು ಪ್ರಯತ್ನಿಸಿದರೂ ರಾಜಕೀಯವಾಗಿ ಅದು ತನ್ನ ಮುಕ್ತ ಮಾರುಕಟ್ಟೆ ಆಧಾರಿತ ಅಭಿವೃದ್ದಿ ಮಾದರಿಯನ್ನು ಆಗ ತಾನೇ ಸ್ವತಂತ್ರಗೊಂಡ ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಹೇರುವ ಸ್ಥಿತಿಯಲ್ಲಿರಲಿಲ್ಲ. ಆ ಸಂದರ್ಭದಲ್ಲಿ ಅಮೆರಿಕಾದ ಉಪಯೋಗಕ್ಕೆ ತುಂಬಾ ಸಹಕಾರಿಯಾದ ಅಂಶವೆಂದರೆ ಬ್ರೆಟನ್ ವೂಡ್ಸ್ ಸಂಸ್ಥೆಗಳು. ೧೯೪೪ರಲ್ಲಿ ಬ್ರೆಟನ್ ವೂಡ್ಸ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಆರ್ಥಿಕ ಸಮ್ಮೇಳನದಲ್ಲಿ ರೂಪಪಡೆದ ವ್ಯವಸ್ಥೆ ಇದಾದ್ದರಿಂದಲೇ ಆ ಹೆಸರು. ಇದರ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದ ಮುಖ್ಯ ಸಂಸ್ಥೆಗಳೆಂದರೆ ಐಎಂಎಫ್, ವಿಶ್ವಬ್ಯಾಂಕ್, ಮತ್ತು ಗ್ಯಾಟ್. ಐಎಂಎಫ್ ಅಂತರ್‌ರಾಷ್ಟ್ರೀಯ ಸಹಕಾರ, ವ್ಯಾಪಾರ ಅಭಿವೃದ್ದಿ ಮತ್ತು ವಿನಿಮಯ ದರದ ನಿಯಂತ್ರಣ ಗಳನ್ನು ತನ್ನ ಮುಖ್ಯ ಉದ್ದೇಶಗಳೆಂದು ಹೇಳಿಕೊಂಡಿದ್ದರೆ, ವಿಶ್ವಬ್ಯಾಂಕು ಹಿಂದುಳಿದ ದೇಶಗಳ ಅಭಿವೃದ್ದಿಗಳಿಗಾಗಿ ಯೋಜನೆಗಳನ್ನು ರೂಪಿಸುವುದು, ಅವುಗಳನ್ನು ಅನುಷ್ಟಾನಕ್ಕೆ ತರುವುದು ಮತ್ತು ಅಭಿವೃದ್ದಿ ಸಾಲ ನೀಡುವುದು ಮುಂತಾದವುಗಳನ್ನು ತನ್ನ ಮುಖ್ಯ ಆಶಯವೆಂದು ಹೇಳಿಕೊಂಡಿದೆ. ಈ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆ ಯಾವ ರೀತಿಯಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಬಂಡವಾಳಶಾಹಿ ಉತ್ಪಾದನಾ ಕ್ರಮ ಪಸರಿಸಲು ನೆರವಾಯಿತು ಎನ್ನುವುದನ್ನು ನೋಡೋಣ. ಯುದ್ಧದಿಂದ ಗಳಿಸಲಾಗದ ಮಾರುಕಟ್ಟೆಯನ್ನು ಹೊಸ ಸಂಬಂಧಗಳು, ಹೊಸ ಆವಲಂಬನಾ ನೀತಿಗಳು ಮತ್ತು ಹೊಸ ಅಭಿವೃದ್ದಿ ಯೋಜನೆಗಳ ಮೂಲಕ ಸಾಧಿಸಲು ಆಮೆರಿಕಾ ಬ್ರಿಟನ್ನಿನೊಡನೆ ಸೇರಿ ಮಾಡಿದ ಸನ್ನಾಹವೆ ಇಂದಿನ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆ. ಜಗತ್ತಿನ ಬಹುತೇಕ ರಾಷ್ಟ್ರಗಳನ್ನೊಳ ಗೊಂಡ ಈ ವ್ಯವಸ್ಥೆಗಳಿಂದಾಗಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವಲ್ಲಿ ಅಮೆರಿಕಾ ಮತ್ತು ಅದರ ಸಹರಾಷ್ಟ್ರಗಳು ಪೂರ್ಣ ಯಶಸ್ವಿಯಾಗಿವೆ. ಹೆಚ್ಚಿನ ಬಡರಾಷ್ಟ್ರಗಳಲ್ಲಿ ಆರ್ಥಿಕ ನೀತಿಗಳಿಗೆ ಸಂಬಂಧಪಟ್ಟ ನಿರ್ಧಾರಗಳು ಅಲ್ಪಸಂಖ್ಯಾತ ಗುಂಪಿನ ಕಾರ್ಯವಾಗಿದ್ದು ಈ ವರ್ಗದ ದೃಷ್ಟಿಯಿಂದ ಅಭಿವೃದ್ದಿ ಹೊಂದುವುದೆಂದರೆ ಅಮೆರಿಕಾ ಅಥವಾ ಇನ್ನಾವುದೇ ಪಶ್ಚಿಮದ ದೇಶಗಳು ಹೊಂದಿರುವ ಎಲ್ಲಾ ತಂತ್ರಜ್ಞಾನವನ್ನು ನಾವು ಪಡೆಯುವುದು ಎಂದಾಗಿರುವುದರಿಂದಲೇ ಬಲಿಷ್ಟ ದೇಶಗಳ ಅಭಿವೃದ್ದಿ ರಾಜಕೀಯ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆಯಲ್ಲಿ ಶಾಸನ ಬದ್ಧಗೊಂಡು ಸುಲಲಿತವಾಗಿ ನಡೆದಿದೆ. ಈ ರಾಜಕೀಯದ ಸರಳೀಕೃತ ನಡವಳಿಕೆ ಹೀಗಿರುತ್ತದೆ. ಅಭಿವೃದ್ದಿಯೆಂದರೆ ಬಂಡವಾಳ ವೃದ್ದಿಯೆಂದು ವ್ಯಾಖ್ಯಾನಿಸುವುದು, ಆ ವ್ಯಾಖ್ಯಾನದ ಪ್ರಕಾರ ಕೆಲವು ಸೂಚ್ಯಾಂಕಗಳನ್ನು ಗುರುತಿಸುವುದು, ಅದನ್ನು ಹಿಂದುಳಿದ ವ್ಯವಸ್ಥೆಯೊಂದಿಗೆ ಹೋಲಿಸಿ ಎಷ್ಟರ ಮಟ್ಟಿಗೆ ಅದು ಹಿಂದುಳಿದಿದೆ ಮತ್ತು ಆ ಸ್ಥಿತಿಯಿಂದ ಅದು ಮುಂದುವರಿಯಬೇಕಾದರೆ ಅಥವಾ ಅಭಿವೃದ್ದಿ ಹೊಂದ ಬೇಕಾದರೆ ಯಾವ ಆರ್ಥಿಕ ನೀತಿಯನ್ನು ಅನುಸರಿಸಬೇಕಾಗುತ್ತದೆ ಎಂದು ಸಲಹೆ ನೀಡುವುದು. ಆಗ ಬಡದೇಶಗಳು ಈ ಕ್ರಮದ ಅಭಿವೃದ್ದಿಗೆ ಅಗತ್ಯವಾದ ಬಂಡವಾಳ, ತಂತ್ರಜ್ಞಾನ ಮತ್ತು ತಾಂತ್ರಿಕ ಪರಿಣತಿಗಳ ಕೊರತೆಗಳನ್ನು ಹೇಳಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳು ತಮ್ಮ ಹತೋಟಿಯಲ್ಲಿರುವ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಮೂಲಕ ಎರಡು ರೀತಿಯಲ್ಲಿ ಸಹಕರಿಸಲು ಮುಂದಾಗುತ್ತದೆ. ೧. ಸಹಾಯಧನ ನೀಡಲು ಮತ್ತು ೨. ಅಂತರ್ ರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಮೂಲಕ ಸಾಲ ಕೊಡಿಸಲು. ಇದು ಅಮೆರಿಕಾದ ಮಾದರಿಯ ಅಭಿವೃದ್ದಿಯನ್ನು ಪಸರಿಸಲು ಅನುಸರಿಸಿದ ಕ್ರಮ ಮತ್ತು ಇದರಿಂದಾಗಿ ನಾವಿಂದು ಕಾಣುವ ಬಹುರಾಷ್ಟ್ರೀಯ ಕಂಪನಿಗಳ ಮೂಲರೂಪಗಳನ್ನು ಪ್ರತಿ ರಾಷ್ಟ್ರದಲ್ಲು ಹುಟ್ಟುಹಾಕಲು ಸಾಧ್ಯವಾಯಿತು.

ಭಾಗ ೩

ಹಿಂದಿನ ಪುಟಗಳಲ್ಲಿ ಊಳಿಗಮಾನ್ಯ ವ್ಯವಸ್ಥೆ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆ ಯಾಗಿ ಪರಿವರ್ತನೆಗೊಂಡ ಯುರೋಪಿನ ಮಾದರಿ ಯಾವ ರೀತಿಯಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳ ಅಭಿವೃದ್ದಿ ಯೋಜನೆಗಳಿಗೆ ಮಾದರಿಯಾಗಿದೆ ಎಂದು ವಿವರಿಸಲಾಗಿದೆ. ಇಲ್ಲಿ ಬಂಡವಾಳ ವೃದ್ದಿಯನ್ನು ಅಭಿವೃದ್ದಿ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ಅಭಿವೃದ್ದಿಯ ಈ ವ್ಯಾಖ್ಯಾನವನ್ನು ಅದರ ಪ್ರಚಾರದ ಮೇಲೆ ತೃತೀಯ ಜಗತ್ತಿನ ರಾಷ್ಟ್ರಗಳು ಅನುಸರಿಸಲು ಆರಂಭಿಸಲಿಲ್ಲ. ಬದಲಿಗೆ ೧೯೪೫ರ ನಂತರ ಆದ ಅಂತರ್‌ರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಏರುಪೇರುಗಳು ಅಭಿವೃದ್ದಿಯ ಈ ವ್ಯಾಖ್ಯಾನ ಜಗತ್ತಿಗೆ ಹಬ್ಬುವಂತೆ ಮಾಡಿತು. ಮಹಾಯುದ್ದದ ನಂತರ ಬ್ರಿಟನ್ ತನ್ನ ಯಜಮಾನಿಕೆ ಸ್ಥಾನವನ್ನು ಅಮೆರಿಕಕ್ಕೆ ಬಿಟ್ಟುಕೊಡ ಬೇಕಾಯಿತು, ಮತ್ತು ಅಮೆರಿಕಾ ತನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಐಎಂಎಫ್, ವಿಶ್ವಬ್ಯಾಂಕು, ಗ್ಯಾಟ್ ಮುಂತಾದವುಗಳು ಹೇಗೆ ಸಹಕಾರಿಯಾದವು ಎಂದು ವಿವರಿಸಲಾಗಿದೆ. ಈ ಭಾಗದಲ್ಲಿ ವರ್ತಮಾನದಲ್ಲಿ ಚಾಲ್ತಿಯಲ್ಲಿರುವ ಜಾಗತೀಕರಣ ಚರಿತ್ರೆಯ ಯಾವ ಘಟ್ಟದಲ್ಲಿ ಮತ್ತು ಯಾವ ಕಾರಣಕ್ಕಾಗಿ ಹುಟ್ಟಿಕೊಂಡಿತು ಎನ್ನುವುದನ್ನು ವಿವರಿಸಲಾಗಿದೆ. ಇಲ್ಲಿ ಸಂದಾಯ ಶಿಲ್ಕು (ಬ್ಯಾಲೆನ್ಸ್ ಆಫ್ ಪೇಮೆಂಟ್) ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರವಾಗಿ ಹುಟ್ಟಿಕೊಂಡ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು (ಇದನ್ನು ಇಂಗ್ಲಿಷಿನಲ್ಲಿ ಸ್ಟ್ರಕ್ಚರಲ್ ಆಜ್ಜ್‌ಸ್ಟ್‌ಮೆಂಟ್ ಪ್ರೋ ಎಂದು ಕರೆಯುತ್ತಾರೆ ಮತ್ತು ಈಗ ಇದು ಎಸ್.ಎ.ಪಿ. ಎಂದು ಪ್ರಚಾರದಲ್ಲಿದೆ) ಯಾವ ರೀತಿಯಲ್ಲಿ ಅಮೆರಿಕಾ ಮತ್ತು ಇತರ ಶ್ರೀಮಂತ ರಾಷ್ಟ್ರಗಳ ಸಮಸ್ಯೆಯೂ ಆಗಿತ್ತು, ಆದಾಗ್ಯೂ ಆ ಸಮಸ್ಯೆಯನ್ನು ಇಡೀ ಜಗತ್ತಿನ ಸಮಸ್ಯೆಯೆಂದು ವ್ಯಾಖ್ಯಾನಿಸುವ ಮೂಲಕ ಎಸ್.ಎ.ಪಿ.ಹೇಗೆ ಪ್ರಪಂಚದ ಎಲ್ಲಾ ದೇಶಗಳ ಅದರಲ್ಲೂ ಅಭಿವೃದ್ದಿಶೀಲ ದೇಶಗಳ ಮೇಲೆ ಹೇರಲಾಯಿತು. ಇದರಿಂದಾಗಿ ಈ ದೇಶಗಳು ತಮ್ಮ ಆರ್ಥಿಕ ನೀತಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಯಿತು ಎಂಬುದನ್ನು ವಿವರಿಸಲಾಗಿದೆ.

ವರ್ತಮಾನದಲ್ಲಿ ಚಾಲ್ತಿಯಲ್ಲಿರುವ ಜಾಗತೀಕರಣ ಎಂದು ಇಲ್ಲಿ ಉದ್ದೇಶ ಪೂರ್ವಕ ವಾಗಿಯೇ ಬಳಸಲಾಗಿದೆ. ಯಾಕೆಂದರೆ ಬಂಡವಾಳದ ಜಾಗತೀಕರಣ ತೊಂಬತ್ತರ ದಶಕದಲ್ಲಿ ಹುಟ್ಟಿಕೊಂಡದ್ದಲ್ಲ. ಬದಲಿಗೆ ಬಂಡವಾಳದ ಹುಟ್ಟಿನೊಂದಿಗೆ ಅದು ತನ್ನ ವಿಸ್ತರಣೆಗೆ ಪ್ರಯತ್ನಿಸಿದೆ. ವ್ಯಾಪಾರಿ ಬಂಡವಾಳ ಯಾವ ರೀತಿಯಲ್ಲಿ ಜಾಗತೀಕರಣಕ್ಕೆ ಪ್ರಯತ್ನಿಸಿತು, ಆದರೆ ಅದು ಯಾಕೆ ಸಫಲವಾಗಲಿಲ್ಲ. ಅದು ಯಾವ ರೀತಿಯಲ್ಲಿ ಕೈಗಾರಿಕಾ ಕ್ರಾಂತಿಗೆ ಅನುಕೂಲಕರವಾಗುವ ಪರಿಸರ ನಿರ್ಮಾಣ ಮಾಡಿತು ಮತ್ತು ಆ ಸಂದರ್ಭದಲ್ಲಿ ರೂಪುಗೊಂಡ ಬಂಡವಾಳಶಾಹಿ ಉತ್ಪಾದನಾ ಘಟಕಗಳೇ ಇಂದಿನ ಬಹುರಾಷ್ಟ್ರೀಯ ಕಂಪನಿಗಳ ಮೂಲ ಎಂದು ವಿವರಿಸಲಾಗಿದೆ. ಈ ಬಹುರಾಷ್ಟ್ರೀಯ ಕಂಪನಿಗಳು ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಏಕಾಏಕಿ ಬೆಳೆದು ಪ್ರಪಂಚದ ಎಲ್ಲಾ ಮೂಲೆಗಳಿಗೆ ಹರಡಿದೆ ಎನ್ನುವುದು ಅವಾಸ್ತವಿಕ. ಬಂಡವಾಳ ಅದರಷ್ಟಕ್ಕೇ ಅದು ಬೆಳೆಯುವುದಿಲ್ಲ. ಅದರ ಬೆಳವಣಿಗೆಗೆ ಪೂರಕವಾದ ವಾತಾವರಣ ಅಗತ್ಯ. ಅದು ಯಾವುದೆಂದರೆ, ಬಂಡವಾಳದ ಬೆಳವಣಿಗೆಯು ಇಡೀ ಸಮಾಜದ ಬೆಳವಣಿಗೆ ಎನ್ನುವ ಮೌಲ್ಯ ನಿರ್ಮಾಣವಾಗುವುದು. ಇದು ನಿರ್ಮಾಣವಾದಾಗ ಬಂಡವಾಳದ ಬೆಳವಣಿಗೆಗೆ ಅಡ್ಡಿಯಾಗುವ ವಿಚಾರಗಳು ಯಾವುವು ಎಂದು ನಿರ್ಧಾರವಾಗುತ್ತವೆ. ಮತ್ತು ಆ ತಡೆಗೋಡೆಗಳನ್ನು ಇಲ್ಲದಾಗಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತವೆ. ಇದು ೧೯೪೫ರ ನಂತರ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ನಡೆದಿದೆ. ವಸಾಹತುಶಾಹಿಗಳ ಬಿಗಿಮುಷ್ಟಿಯಿಂದ ಬಿಡುಗಡೆಗೊಂಡ ತೃತೀಯ ಜಗತ್ತಿನ ರಾಷ್ಟ್ರಗಳು ಬಂಡವಾಳದ ಬೆಳವಣಿಗೆಗೆ ಅಭಿವೃದ್ದಿಯನ್ನು ವ್ಯಾಖ್ಯಾನಿಸುವ ಮೂಲಕ ಮತ್ತು ಅದನ್ನು ತಮ್ಮ ಅಭಿವೃದ್ದಿ ಯೋಜನೆಗಳ ಅವಿಭಾಜ್ಯ ಅಂಗವಾಗಿಸಿಕೊಂಡಾಗಲೇ ನಾವಿಂದು ಕಾಣುವ ಬಹುರಾಷ್ಟ್ರೀಯ ಕಂಪನಿಗಳ ಹುಟ್ಟಿಗೆ ಅನುಕೂಲವಾದ ವಾತಾವರಣವನ್ನು ಸೃಷ್ಟಿಸಿಕೊಂಡಂತಾಗಿದೆ. ಆದ್ದರಿಂದ ಈಗಿನ ಜಾಗತೀಕರಣ ಮತ್ತು ಅದು ಪ್ರಸರಿಸಲು ನೆರವಾಗುವ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಹಬ್ಬುವಿಕೆಗೆ ಅನುಕೂಲವಾದ ವಾತಾವರಣವನ್ನು ಈ ಹಿಂದೇಯೇ ಸೃಷ್ಟಿಸಿಕೊಂಡಿವೆ. ಬಹುರಾಷ್ಟ್ರೀಯ ಕಂಪನಿಗಳು ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಈಗ ಪ್ರಚಲಿತದಲ್ಲಿರುವ ಎಸ್.ಎ.ಪಿ.ಗಳು ಜಾರಿಗೆ ಬರುವ ಹಿಂದೆಯೇ ಕಾರ್ಯನಿರ್ವಹಿಸುತ್ತಿದ್ದವು. ಉದಾಹರಣೆಗೆ : ನಮ್ಮದೇ ದೇಶದಲ್ಲಿ ಕೆಲವು ಬಹುರಾಷ್ಟ್ರೀಯ ಕಂಪನಿಗಳನ್ನು ಹೆಸರಿಸಬಹುದು ಕಾಲ್ಗೇಟ್, ನೆಸ್ಲೆ, ಹಿಂದುಸ್ತಾನ್ ಲಿವರ್ಸ್ ಮತ್ತು ಇತರ ಹಲವಾರು ಕಂಪನಿಗಳು ವಿವಿಧ ಕ್ಷೇತ್ರಗಳಲ್ಲಿ ೧೯೯೧ರ ಮೊದಲೇ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ೧೯೭೫ರ ಎಮರ್‌ಜೆನ್ಸಿಯ ನಂತರ ಬಂದ ಜನತಾ ಸರ್ಕಾರ ಕೊಕೊಕೋಲವನ್ನು ನಮ್ಮಲ್ಲಿಂದ ಹೊರ ದಬ್ಬಿದ್ದು ಇನ್ನೂ ನಮ್ಮ ನೆನಪಿನಿಂದ ಮಾಸಿರಲಿಕ್ಕಿಲ್ಲ. ಇನ್ನು ಇಲ್ಲಿನ ಕಂಪನಿಗಳೊಂದಿಗೆ ಸಹಭಾಗಿಯಾಗಿ ಕಾರ್ಯನಿರ್ವಹಿ ಸುತ್ತಿರುವ ಕಂಪನಿಗಳು ಹಲವಾರು ಇದ್ದವು, ಉದಾಹರಣೆಗೆ ಮಾರುತಿ ಉದ್ಯೋಗ (ಜಪಾನಿನ ಸುಜುಕಿ ಕಂಪನಿಯೊಂದಿಗೆ), ಐ.ಟಿ.ಸಿ.(ಬ್ರಿಟಿಷ್ ಅಮೇರಿಕನ್ ಟೊಬಾಕೊ ಕಂಪನಿಯೊಂದಿಗೆ) ಮುಂತಾದ ಸಹಭಾಗಿತ್ವ ಪ್ರಕ್ರಿಯೆಗಳು ನಮ್ಲಲ್ಲಿನ ಸ್ವಯಂ ತಂತ್ರವಾದಿ ನಿಲುವಿನೊಂದಿಗೆ ಹುಟ್ಟಿಕೊಂಡವಲ್ಲ. ಅದಾಗ್ಯೂ ಬಂಡವಾಳದ ಜಾಗತೀಕರಣ ಯಾಕೆ ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಪ್ರಚಾರ ಪಡೆಯಿತು ಮತ್ತು ವರ್ತಮಾನದಲ್ಲಿ ಪ್ರಚಾರದಲ್ಲಿರುವ ಜಾಗತೀಕರಣ ಚರಿತ್ರೆಯ ಯಾವ ಘಟ್ಟದಲ್ಲಿ ಮತ್ತು ಯಾವ ಕಾರಣಕ್ಕಾಗಿ ರೂಪುಗೊಂಡಿತ್ತು, ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಪ್ರಚಲಿತದಲ್ಲಿರುವ ಜಾಗತೀಕರಣವನ್ನು ಅರ್ಥಮಾಡಿಕೊಳ್ಳಬಹುದು.

ಈಗ ಚಾಲ್ತಿಯಲ್ಲಿರುವ ಎಸ್.ಎ.ಪಿ ಅಥವಾ ಜಾಗತೀಕರಣ (ಎಸ್.ಎ.ಪಿ ಅಂದರೆ ಬಂಡವಾಳ ಚಲನೆಗೆ ಅಡ್ಡಿಯಾಗುವ ತಡೆಗೋಡೆಗಳನ್ನು ಇಲ್ಲದಾಗಿಸಿ ಅಥವಾ ಅಡ್ಡಿ ಆತಂಕಗಳನ್ನು ಕಡಿಮೆಗೊಳಿಸಿ ಪ್ರಪಂಚದ ಎಲ್ಲಾ ಕಡೆ ಬಂಡವಾಳ ಸಲೀಸಾಗಿ ಚಲಿಸುವಂತೆ ಮಾಡುವ ಕಾರ್ಯಕ್ರಮಗಳು)ವನ್ನು ಯಾವುದೋ ಒಂದು ಚಾರಿತ್ರಿಕ ಘಟ್ಟಕ್ಕೆ ಸೀಮಿತ ಗೊಳಿಸುತ್ತಿದ್ದರೆ (ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ) ಅದನ್ನು ೧೯೭೦ರ ನಂತರದ ಅಂತರ್‌ರಾಷ್ಟ್ರೀಯ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳೊಂದಿಗೆ ಗುರುತಿಸಬಹು ದಾಗಿದೆ. ಇದು ಯಾಕೆಂದರೆ ೧೯೪೫ರಿಂದ ೧೯೭೩ರವರೆಗೆ ಬಂಡವಾಳ ಅತಿಯಾಗಿ ಬೆಳೆದಿದೆ ಮತ್ತು ಪ್ರಪಂಚದ ಎಲ್ಲಾ ಮೂಲೆಗಳಿಗೆ ಪಸರಿಸಲು ಅಗತ್ಯವಾದ ವಾತಾವರಣವನ್ನು ನಿರ್ಮಿಸಿಕೊಂಡಿದೆ. ಆದುದರಿಂದಲೇ ಈ ಅವಧಿಯನ್ನು ಎರಿಕ್ ಹಾಬ್ಸ್‌ವಾಮ್ ಬಂಡವಾಳದ ‘‘ಸುವರ್ಣಯುಗ’’ ಎಂದು ಕರೆದಿದ್ದಾನೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಿಳಿದು ಕೊಳ್ಳುವ ಮೂಲಕ ನಂತರದ ದಿನಗಳಲ್ಲಿ ಬಂಡವಾಳ ಕಂಡ ದುರ್ಭರ ದಿನಗಳತ್ತ ಬೆಳಕು ಚೆಲ್ಲಲು ಅನುಕೂಲವಾಗುತ್ತದೆ. ಈ ಕೆಳಗಿನ ಮೂರು ಕಾರಣಗಳಿಂದಾಗಿ ಬಂಡವಾಳ ತನ್ನ ಸುವರ್ಣಯುಗವನ್ನು ಕಾಣಲು ಸಾಧ್ಯವಾಯಿತೆಂದು ಎರಿಕ್ ಹಾಬ್ಸ್ ವಾಮ್ ಅಭಿಪ್ರಾಯಪಡುತ್ತಾನೆ. ೧. ಶೀತಲ ಸಮರ ೨. ಸಾಮ್ರಾಜ್ಯಶಾಹಿಗಳ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರಗೊಂಡ ರಾಷ್ಟ್ರಗಳಲ್ಲಿನ ಅಭಿವೃದ್ದಿ ಯೋಜನೆಗಳು ಮತ್ತು ೩. ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡು ಜರ್ಜರಿತಗೊಂಡ ದೇಶಗಳ ಪುನರ್ ನಿರ್ಮಾಣ ಕಾರ್ಯಕ್ರಮಗಳು.

ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸಿದ ಅಮೆರಿಕಾ ಮತ್ತು ಬ್ರಿಟನ್‌ಗಳು ಕೇನ್ಸ್ ತಯಾರಿಸಿದ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಸ್ಥೆ ಆತನ ಇಚ್ಛಾ ಪ್ರಕಾರ ಕಾರ್ಯರೂಪಕ್ಕೆ ಬರದಂತೆ ನೋಡಿಕೊಂಡವು. ಯಾವುದೇ ಒಂದು ದೇಶದ ನಾಣ್ಯ ಬ್ಯಾಲೆನ್ಸ್ ಆಫ್ ಪೇಮೆಂಟಿನ ಅಥವಾ ವಿದೇಶಿ ವಿನಿಮಯದ ಮಾನದಂಡವಾಗಿರುವುದು ಸಮಸ್ಯೆಗೆ ಎಡೆಮಾಡಿಕೊಡಬಹುದೆಂದು ಕೇನ್ಸ್‌ನ ಅಭಿಪ್ರಾಯವಾಗಿತ್ತು. ಅದಕ್ಕಾಗಿ ಆತ ಐ.ಎಮ್.ಎಫ್. ರಾಷ್ಟ್ರ ರಾಷ್ಟ್ರಗಳ ನಡುವಿನ ಬ್ಯಾಲೆನ್ಸ್ ಆಫ್ ಪೇಮೆಂಟ್ ಸಮಸ್ಯೆಗಳನ್ನು ಪರಿಹರಿಸಲು ಬೇರೆಯೇ ಪರಿಹಾರ ಕಂಡುಕೊಳ್ಳಬೇಕೆಂದು ಅಭಿಪ್ರಾಯಪಟ್ಟಿದ್ದ. ಆದರೆ ಅದು ಆ ರೀತಿ ಆಗಲಿಲ್ಲ. ಆತನ ನಕ್ಷೆಯನ್ನು ಉಪಯೋಗಿಸಿಕೊಂಡು ಅಮೆರಿಕಾ ಡಾಲರನ್ನು ಅಗ್ರಪಂಕ್ತಿಯ ನಾಣ್ಯವನ್ನಾಗಿ ಖಾಯಂಗೊಳಿಸಿತ್ತು. ಪ್ರಚಲಿತದಲ್ಲಿರುವ ವ್ಯವಸ್ಥೆಯ ಪ್ರಕಾರ ಅಂತರ್‌ರಾಷ್ಟ್ರೀಯ ಹಣಕಾಸು ವ್ಯವಹಾರಗಳ ಯಾವುದೇ ನಿರ್ಣಯ ಅಂಗೀಕಾರವಾಗುವುದು ಮತ್ತು ಬದಲಾವಣೆ ಹೊಂದು ವುದು ಆ ನಿರ್ಣಯಗಳು ಪಡೆಯುವ ಓಟುಗಳ ಆಧಾರದ ಮೇಲೆ. ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ವಂತಿಗೆ ನೀಡುವುದರಿಂದ ಅವುಗಳ ಮತದಾನದ ಹಕ್ಕು ಕೂಡ ಇತರ ಬಡರಾಷ್ಟ್ರಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಿದೆ. ಉದಾಹರಣೆಗೆ : ಜಾಗತಿಕ ಬ್ಯಾಂಕಿನ ಒಟ್ಟು ಮತಗಳಲ್ಲಿ ಅಮೆರಿಕಾ ಒಂದೇ ಶೇಕಡಾ ೩೦ರಷ್ಟು ಹೊಂದಿದೆ. ೧೦೦ಕ್ಕಿಂತಲೂ ಹೆಚ್ಚಿರುವ ಅಭಿವೃದ್ದಿಶೀಲ ದೇಶಗಳು ಒಟ್ಟು ಸೇರಿ ಹೊಂದಿರುವ ಮತದಾನದ ಹಕ್ಕು ಸರಿಸುಮಾರು ಇಷ್ಟೇ ಆಗುತ್ತದೆ.

ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿನ ಈ ಹತೋಟಿ ಅಮೆರಿಕಾಕ್ಕೆ ತನ್ನ ಯಜಮಾನಿಕೆಯನ್ನು ಸ್ಥಾಪಿಸುವಲ್ಲಿ ಅನುಕೂಲವಾಗಿತ್ತು. ಆದರೆ ಬಹುದೊಡ್ಡ ತೊಡಕೆಂದರೆ ಆಗ ತಾನೆ ಬಲಗೊಳ್ಳುತ್ತಿದ್ದ ರಷ್ಯಾ ಮತ್ತು ಅದರ ಯೋಜಿತ ಅಭಿವೃದ್ದಿಯ ಮಾದರಿ. ರಷ್ಯಾದ ಪ್ರಭಾವವನ್ನು ಕಡಿಮೆಗೊಳಿಸಲು ಆಗ ಅಮೆರಿಕಕ್ಕೆ ಇದ್ದ ದಾರಿಯೆಂದರೆ ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸುತ್ತಿದ್ದ ಆದರೆ ಯುದ್ಧದಿಂದ ಜರ್ಜರಿತಗೊಂಡ ಯುರೋಪಿನ ದೇಶಗಳನ್ನು ಪುನರುಜ್ಜೀವನಗೊಳಿಸುವುದು. ಅದಕ್ಕಾಗಿ ಅಮೆರಿಕಾ ಮಾರ್ಸಲ್ ಪ್ಲಾನಿನ ಹೆಸರಿನಲ್ಲಿ ಯುರೋಪಿನ ದೇಶಗಳಿಗೆ ಡಾಲರ್‌ನ ಪ್ರವಾಹವನ್ನೇ ಹರಿಸಿತು. ಇದರ ಜೊತೆಗೆ ತನ್ನ ಮಿಲಿಟರಿ ಶಕ್ತಿಯನ್ನು ಬಲಯುತಗೊಳಿಸುವ ನೆಲೆಯಲ್ಲಿ ಅದು ಯುರೋಪ್ ಮತ್ತು ಪೂರ್ವ ಏಷ್ಯಾ ದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿತು. ಅಮೆರಿಕಾದ ಈ ಕ್ರಮಗಳು ಬಂಡವಾಳದ ತೀರ ಹಿನ್ನೆಡೆಯನ್ನು ಕಂಡಿದ್ದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ನ ಚಲಾವಣೆ ತುಂಬಿಕೊಳ್ಳುವಂತೆ ಮಾಡಿದೆ. ಶೀತಲ ಸಮರದ ಸಂದರ್ಭದಲ್ಲಿ ನಡೆದ ಎರಡು ಯುದ್ಧಗಳು -ವಿಯೆಟ್ನಾಂ ಮತ್ತು ಕೋರಿಯಾ, ಜಪಾನ್ ಮತ್ತು ದಕ್ಷಿಣ ಕೋರಿಯಾ ದೇಶಗಳ ಆರ್ಥಿಕ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ತೃತೀಯ ಜಗತ್ತಿನ ರಾಷ್ಟ್ರಗಳು ಕೂಡ ತಕ್ಕಮಟ್ಟಿನ ಅಭಿವೃದ್ದಿಯನ್ನು ಇದೇ ಸಂದರ್ಭದಲ್ಲಿ ಕಂಡಿದ್ದವು. ಇದಕ್ಕೆ ಮುಖ್ಯ ಕಾರಣ ಬಹುತೇಕ ಅಭಿವೃದ್ದಿಶೀಲ ರಾಷ್ಟ್ರಗಳು ಮತ್ತೆ ಮಾರುಕಟ್ಟೆಯ ಬದಲು ಒಂದು ರೀತಿಯ ಮಿಶ್ರ ಆರ್ಥಿಕ ನೀತಿಗಳನ್ನು ಅನುಸರಿಸಿದ್ದಾಗಿದೆ. ಇಲ್ಲಿ ಸಾರ್ವಜನಿಕ ಮತ್ತು ಖಾಸಗಿ ಬಂಡವಾಳ ಜತೆಜತೆಯಾಗಿ ಕಾರ್ಯ ನಿರ್ವಹಿಸಬೇಕಿತ್ತು ಮತ್ತು ವಿದೇಶ ಬಂಡವಾಳದ ನೇರ ವಿನಿಯೋಜನೆಯನ್ನು ಪ್ರೋ ಕಾರ್ಯ ಕ್ರಮಗಳಿರಲಿಲ್ಲ. ಜೊತೆಗೆ ಆಮದನ್ನು ನಿಯಂತ್ರಿಸುವ ಮತ್ತು ರಫ್ತನ್ನು ಪ್ರೋ ಅಂತಾರಾಷ್ಟ್ರೀಯ ವ್ಯಾಪಾರ ನೀತಿಗೆ ಒತ್ತುಕೊಡಲಾಯಿತು. ಇವೆಲ್ಲವು ಶೀತಲ ಸಮರದ ಸಂದರ್ಭದಲ್ಲಿ ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ ದೊಡ್ಡ ಸಂಗತಿಗಳಾಗಲಿಲ್ಲ. ಈ ತಂತ್ರದಿಂದಾಗಿ ಪ್ರತಿ ತೃತೀಯ ಜಗತ್ತಿನ ರಾಷ್ಟ್ರದಲ್ಲೂ ಅಭಿವೃದ್ದಿ ಹೊಂದಿದ ರಾಷ್ಟ್ರಗಳಲ್ಲಿನ ಮಧ್ಯಮ ವರ್ಗಗಳನ್ನು ಹೋಲುವ ಒಂದು ಪ್ರತಿಷ್ಟಿತ ವರ್ಗ ರೂಪುಗೊಳ್ಳಲು ಅನುಕೂಲವಾಯಿತು ಮತ್ತು ಪ್ರಚಲಿತದಲ್ಲಿರುವ ಜಾಗತೀಕರಣಕ್ಕೆ ಮಾರುಕಟ್ಟೆಯಾಗಿ ಕೆಲಸ ಮಾಡುತ್ತಿರುವುದು ಕೂಡ ಈ ರೀತಿಯ ಆಧುನೀಕರಣ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸ್ವಲ್ಪ ಮಟ್ಟಿಗೆ ಆಧುನೀಕರಣವನ್ನು ಮೈಗೂಡಿಸಿಕೊಂಡಿರುವ ಈ ವರ್ಗವೇ.

ಒಟ್ಟಾರೆಯಾಗಿ ಹೇಳುವುದಾದರೆ ೧೯೪೫ ಮತ್ತು ೧೯೭೦ರ ನಡುವೆ ನಡೆದ ಶೀತಲ ಸಮರ, ಪರಮಾಣು ಯುದ್ಧ ತಂತ್ರಗಾರಿಕೆಯ ಸ್ಪರ್ಧೆ, ಅವುಗಳ ಮಧ್ಯೆ ಅಮೆರಿಕಾ ನಡೆಸಿದ ಕೆಲವು ಯುದ್ಧಗಳು ಕೇವಲ ರಾಜಕೀಯ ಕಾರಣಗಳಿಂದಾಗಿ ಆಗಿದೆ ಎನ್ನುವಂತಿಲ್ಲ. ಇವುಗಳ ಹಿಂದೆ ಬಂಡವಾಳದ ಜಾಗತೀಕರಣವನ್ನು ಗಟ್ಟಿಗೊಳಿಸುವ ತಂತ್ರಗಾರಿಕೆಯು ಇತ್ತು ಎನ್ನ ಬಹುದು. ಆದರೆ ಈ ಬೆಳವಣಿಗೆಗಳನ್ನು ಕೇವಲ ನಕಾರಾತ್ಮಕ ದೃಷ್ಟಿಯಿಂದಲೇ ನೋಡ ಬೇಕೆಂದೇನಿಲ್ಲ. ಯಾಕೆಂದರೆ ಈ ಅವಧಿಯಲ್ಲಿ ಪ್ರಪಂಚದ ಬಹುತೇಕ ಪ್ರದೇಶಗಳಲ್ಲಿನ ಜನರ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ತಕ್ಕಮಟ್ಟಿನ ಪರಿವರ್ತನೆಯಾಗಿದೆ. ಶ್ರೀಮಂತ ದೇಶಗಳು ತಮ್ಮ ಶ್ರಮಿಕ ವರ್ಗವನ್ನು ಹತೋಟಿಯಲ್ಲಿಡುವ ಉಪಕ್ರಮವಾಗಿ ವೆಲ್‌ಫೇರ್ ಸ್ಟೇಟಿನ ಪರಿಕಲ್ಪನೆಗೆ ಒತ್ತು ನೀಡಿದ್ದವು. ಇದು ಮತ್ತು ಇತರ ಕಾರ್ಯಕ್ರಮಗಳು ಉತ್ಪಾದನೆ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿ ಖಚಿತ ಪಾತ್ರವಹಿಸಿವೆ. ಆದುದರಿಂದಲೇ ೧೯೫೦ ಮತ್ತು ೧೯೭೦ರ ನಡುವೆ ಸರಕು ಮತ್ತು ಸೇವೆಗಳ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಿದೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಹತ್ತುಪಟ್ಟು ವೃದ್ದಿಗೊಂಡಿತ್ತು. ಇದರ ಸಾಧ್ಯತೆಯಲ್ಲಿ ಬಂಡವಾಳದ ಜಾಗತೀಕರಣದ ಪಾತ್ರವನ್ನು ಕೂಡ ಅಲ್ಲಗಳೆಯುವಂತಿಲ್ಲ. ಅಭಿವೃದ್ದಿಶೀಲ ರಾಷ್ಟ್ರಗಳು, ಶ್ರೀಮಂತ ರಾಷ್ಟ್ರಗಳು ಉತ್ಪಾದಿಸುವ ಕ್ಯಾಪಿಟಲ್ ಗೂಡ್ಸ್‌ಗಳಿಗೆ ಮಾರುಕಟ್ಟೆ ಒದಗಿಸಿದರೆ, ಬಂಡವಾಳದ ಕುಸಿತದಿಂದ ಆಗ ತಾನೇ ಚೇತರಿಸುತ್ತಿದ್ದ ಯುರೋಪಿನ ರಾಷ್ಟ್ರಗಳು ಅಮೆರಿಕಾದ ಅನುಭೋಗ ಶೈಲಿಯನ್ನು ಅನುಕರಿಸುವ ನಿಟ್ಟಿನಲ್ಲಿ ಖಾಸಗಿ ಕಾರು, ಪ್ರವಾಸೋದ್ಯಮ, ಟೆಲಿಫೋನ್, ವಾಷಿಂಗ್ ಮಿಷಿನ್ ಮುಂತಾದವುಗಳಿಗೆ ಮಾರುಕಟ್ಟೆ ಒದಗಿಸಿವೆ. ಈ ಅವಧಿಯಲ್ಲಿ ಪ್ರಪಂಚದ ಹಲವಾರು ರಾಷ್ಟ್ರಗಳು ಕೃಷಿ ಪ್ರಧಾನ ಆರ್ಥಿಕ ವ್ಯವಸ್ಥೆಯಿಂದ ಕೈಗಾರಿಕೀಕರಣದತ್ತ ಚಲಿಸಿವೆ.

ಬಂಡವಾಳದ ಈ ಸ್ವರ್ಣಯುಗ ಹೆಚ್ಚು ಸಮಯ ಮುಂದುವರಿಯಲಿಲ್ಲ. ೧೯೭೩ರ ನಂತರ ಅಂತಾರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಳು ಹಂತಹಂತವಾಗಿ ಬಂಡವಾಳದ ಕುಸಿತವನ್ನು ತಂದವು. ಇದರಲ್ಲಿ ಅಮೆರಿಕಾದ ಪಾತ್ರ ಮಹತ್ತರವಾದುದು. ಮಹಾಯುದ್ಧದ ನಂತರ ಜಾಗತಿಕ ವ್ಯವಸ್ಥೆ ಬಹುಮಟ್ಟಿಗೆ ಅಮೆರಿಕಾದಿಂದ ಹೇರಲ್ಪಟ್ಟ ವ್ಯವಸ್ಥೆಯಾಗಿತ್ತು. ಆ ಹೊತ್ತಿಗಾಗಲೇ ಅಮೆರಿಕಾ ಶಸ್ತ್ರಸ್ತ್ರ ಸಂಗ್ರಹಣೆ, ಉತ್ಪಾದನಾ ಸಾಮರ್ಥ್ಯ ಮತ್ತು ಆರ್ಥಿಕ ಬಲಗಳ ಮೂಲಕ ಇತರ ಬಂಡವಾಳಶಾಹಿ ದೇಶಗಳ ಆರ್ಥಿಕ ನೀತಿಗಳ ಮೇಲೆ ತನ್ನ ಪ್ರಭಾವ ಬೀರಲು ಶಕ್ತವಾಗಿತ್ತು. ಬ್ರಿಟನ್ ವೂಡ್ಸ್ ಒಪ್ಪಂದದಿಂದ ಮೊದಲಿದ್ದ ಸ್ವರ್ಣ ಪರಿಮಾಣ ಪದ್ಧತಿಯ ಜಾಗದಲ್ಲಿ ಅಮೆರಿಕಾ ಡಾಲರ್ ಜಗತ್ತಿನ ಮುಖ್ಯ ನಾಣ್ಯವೆಂಬ ಹೆಗ್ಗಳಿಕೆ ಜೊತೆಗೆ ಸೆಂಟ್ರಲ್ ಬ್ಯಾಂಕುಗಳು ತಾವು ಹೊಂದಿರುವ ಡಾಲರ್‌ಗಳಿಗೆ ಬದಲಾಗಿ ಚಿನ್ನವನ್ನು ಪಡೆಯಬಹುದೆಂಬ ಅಮೆರಿಕಾದ ಭರವಸೆಯಿಂದ ಡಾಲರ್‌ಗಳ ಮಹತ್ವ ಇನ್ನಷ್ಟು ಹೆಚ್ಚಾಯಿತು. ಹೀಗೆ ಪರಿಸ್ಥಿತಿಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಅಮೆರಿಕಾ, ಇಂಗ್ಲೆಂಡ್ ತನ್ನ ಉಚ್ಛ್ರಾಯದ ದಿನಗಳಲ್ಲಿ ಮಾಡಿದಂತೆ ತಾನು ಮುಕ್ತ ಮಾರುಕಟ್ಟೆ ಮತ್ತು ಮುಕ್ತ ವ್ಯಾಪಾರ ನೀತಿಗಳನ್ನು ವಿಸ್ತರಿಸಲು ಯತ್ನಿಸುವುದು, ಸಾಮ್ರಾಜ್ಯವಾದಿ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸುವ ದೇಶಗಳನ್ನು ಯುದ್ಧ ಮತ್ತು ಇತರ ಕ್ರಮಗಳಿಂದ ಮರಳಿ ವಶಕ್ಕೆ ತೆಗೆದುಕೊಳ್ಳುವುದು ಮುಂತಾದವುಗಳ ಮೂಲಕ ತನ್ನ ಯಜಮಾನಿಕೆಯನ್ನು ಸಾಧಿಸುತ್ತಿತ್ತು. ಆದರೆ ೧೯೬೦ರಂತೆ ಇತರ ಬಂಡವಾಳಶಾಹಿ ದೇಶಗಳು ಮುಖ್ಯವಾಗಿ ಜರ್ಮನಿ ಮತ್ತು ಜಪಾನ್ ತಮ್ಮ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡದುದಲ್ಲದೆ ಅಂತರ್‌ರಾಷ್ಟ್ರೀಯ ವ್ಯಾಪಾರ ಮತ್ತು ಹಣಕಾಸಿಗೆ ಸಂಬಂಧಿಸಿದ ಅಮೇರಿಕಾದ ಅಧಿಪತ್ಯವನ್ನು ಪ್ರಶ್ನಿಸತೊಡಗಿದವು. ಡಾಲರ್‌ಗಿದ್ದ ವಿಶೇಷ ಸ್ಥಾನಮಾನಗಳನ್ನು ಅಮೆರಿಕಾ ತನ್ನ ಸ್ವಂತದ ಲಾಭಕ್ಕಾಗಿ ಉಪಯೋಗಿಸುತ್ತಿದ್ದ ರೀತಿಯಿಂದಾಗಿಯೂ ಪ್ರಬಲ ಮಿಲಿಟರಿ ದೇಶಗಳ ಮಧ್ಯದ ಸಾಮರಸ್ಯ ಇನ್ನಷ್ಟು ಹದಗೆಟ್ಟಿತ್ತು. ಯುದ್ಧಗಳಲ್ಲಿ ತೊಡಗುವುದು, ಮಿಲಿಟರಿ ನೆಲೆಗಳನ್ನು ಬೆಳೆಸುವುದು, ಗಿರಾಕಿ ರಾಷ್ಟ್ರಗಳಿಗೆ ಹಣ ಒದಗಿಸು ವುದು ಮತ್ತು ಬಹುರಾಷ್ಟ್ರೀಯ ಕಂಪನಿಗಳ ವಿದೇಶಿ ಶಾಖೆಗಳಲ್ಲಿ ಹಣ ತೊಡಗಿಸು ವುದು ಮುಂತಾದ ಕಾರಣಗಳಿಂದಾಗಿ ಆಗಾಧ ಮಟ್ಟದ ಡಾಲರ್ ಹೊರ ದೇಶಗಳಲ್ಲಿ ಜಮಾಯಿಸತೊಡಗಿತು. ಹೀಗೆ ಮಾಡುವಾಗ ಅಮೆರಿಕಾ ವಿದೇಶಗಳಲ್ಲಿ ಸಂಗ್ರಹವಾದ ಡಾಲರ್‌ಗಳ ಮೌಲ್ಯಕ್ಕೆ ಸಮಾನವಾದ ಚಿನ್ನ ಹೊಂದಿರುವುದಾಗಿ ತಾನು ಈ ಹಿಂದೆ ನೀಡಿದ್ದ ವಾಗ್ದಾನವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಅಮೆರಿಕಾ ತನ್ನಲ್ಲಿರುವ ಚಿನ್ನ ಕಡಿಮೆ ಯಾದಂತೆ ಐಎಮ್‌ಎಫ್‌ನ ಒಡಂಬಡಿಕೆಗೆ ಅನುಗುಣವಾಗಿ ತಾನು ನೀಡಿದ್ದ ವಾಗ್ದಾನವನ್ನು ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿತು. ಈ ಬೆಳವಣಿಗೆಯಿಂದ ಅಮೆರಿಕಾ ಆವರೆಗೂ ಹೊಂದಿದ್ದ ಅನುಕೂಲಕರ ವ್ಯವಸ್ಥೆ ಕೊನೆಗೊಳ್ಳಲಿದೆ ಎಂದು ಅನೇಕರು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಆ ವೇಳೆಗೆ ಹೊರದೇಶಗಳಲ್ಲಿ ಮುಖ್ಯವಾಗಿ ಆ ದೇಶಗಳಲ್ಲಿನ ಸೆಂಟ್ರಲ್ ಬ್ಯಾಂಕುಗಳ ಬೊಕ್ಕಸಗಳಲ್ಲಿ ಡಾಲರ್‌ನ ಶೇಖರಣೆ ಎಷ್ಟು ಬೆಳೆದಿತ್ತು ಎಂದರೆ ಡಾಲರ್‌ನ ಮೌಲ್ಯ ಕುಸಿದರೆ ಅವು ಅಪಾರ ನಷ್ಟ ಅನುಭವಿಸಬೇಕಾದ ಸ್ಥಿತಿಯಿತ್ತು. ಹೀಗಾಗಿ ಅಂತಹ ದೇಶಗಳು ಡಾಲರಿನ ಮೌಲ್ಯಕ್ಕೆ ಬೆದರಿಕೆ ಒಡ್ಡುವ ಸ್ಥಿತಿಯಲ್ಲಿರಲಿಲ್ಲ. ಪರಿಣಾಮ ವಾಗಿ ೧೯೭೧ರ ನಂತರ ಅಮೆರಿಕಾ ಮೊದಲಿನಂತೆಯೇ ಡಾಲರನ್ನು ಹರಿಯಬಿಡಲಾರಂಭಿಸಿತು. ಆದರೆ ಈ ಸ್ಥಿತಿ ಹೆಚ್ಚು ಸಮಯ ಬಾಳುವಂತಾಗಿರಲಿಲ್ಲ. ಆದುದರಿಂದಲೇ ೧೯೭೩ರ ಹೊತ್ತಿಗೆ ಈ ಪ್ರಮುಖ ದೇಶಗಳು ಅಂತಾರಾಷ್ಟ್ರೀಯ ಹಣಕಾಸಿನ ವಹಿವಾಟಿನಲ್ಲಿ ಮುಕ್ತ ವಿನಿಮಯ ದರಗಳನ್ನು ಜಾರಿಗೆ ತರಲೇಬೇಕಾಯಿತು. ಬೆಲೆಗಳ ಏರುಪೇರುಗಳನ್ನು ಅವಲಂಬಿಸಿ ಲಾಭ ಗಳಿಸುವ ಚಟುವಟಿಕೆಗಳನ್ನು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅನಿಯಂತ್ರಿತವಾಗಿ ಹಬ್ಬಲು ಇದು ಎಡೆಮಾಡಿಕೊಟ್ಟಿತು. ವಿನಿಮಯ ದರಗಳನ್ನು ಸ್ಪರ್ಧಾತ್ಮಕ ವ್ಯಾಪಾರದ ಸಾಧನವನ್ನಾಗಿ ಉಪಯೋಗಿಸಲು ಇದು ಎಡೆಮಾಡಿಕೊಟ್ಟಿತು. ಇದರಿಂದಾಗಿ ದೇಶದೇಶಗಳ ನಡುವಿನ ಬಂಡವಾಳದ ಚಲನೆಯಲ್ಲಿ ವಿಪರೀತ ಏರುಪೇರುಗಳು ಕಾಣಿಸಿಕೊಂಡವು. ಮಾತ್ರವಲ್ಲದೆ ಮುಂದುವರಿದ ಬಂಡವಾಳಶಾಹಿ ದೇಶಗಳ ನಡುವೆ ದೊಡ್ಡ ಮಟ್ಟದ ಕರೆಂಟ್ ಅಕೌಂಟ್ ಅಸಮತೋಲನಕ್ಕೂ ಇದು ದಾರಿಮಾಡಿಕೊಟ್ಟಿತು.

ಅಮೆರಿಕಾ ತನ್ನ ಅಧಿಪತ್ಯದ ಉಳಿವಿಗಾಗಿ ಡಾಲರ್‌ನ ಪ್ರವಾಹ ಹರಿಸುವುದರೊಂದಿಗೆ ಹಲವಾರು ಶ್ರೀಮಂತ ರಾಷ್ಟ್ರಗಳು ಸಂದಾಯ ಶುಲ್ಕ ಸಮಸ್ಯೆ ಎದುರಿಸಬೇಕಾಯಿತು. ಇದೇ ಸಂದರ್ಭದಲ್ಲಿ ತಲೆದೋರಿದ ತೈಲ ಬಿಕ್ಕಟ್ಟು (ಆಯಿಲ್ ಕ್ರೈಸಿಸ್ ) ಈ ಬ್ಯಾಲೆನ್ಸ್ ಆಫ್ ಪೇಮೆಂಟ್ ಸಮಸ್ಯೆಯನ್ನು ಜಾಗತೀಕರಣಗೊಳಿಸುವಲ್ಲಿ ಸಹಕರಿಸಿತು. ೧೯೭೦ರ ನಂತರ ಪೆಟ್ರೋಲಿಯಂ ಪದಾರ್ಥವನ್ನು ಉತ್ಪಾದಿಸುವ ಮಧ್ಯಪೂರ್ವ ಅರಬ್ ರಾಷ್ಟ್ರಗಳು ಒಂದಾಗಿ ಪೆಟ್ರೋಲಿಯಂ ರಫ್ತು ಮಾಡುವವರ ಒಂದು ಒಕ್ಕೂಟವನ್ನು ರಚಿಸಿಕೊಂಡರು (ಒ.ಪಿ.ಇ.ಸಿ). ಈ ಒಕ್ಕೂಟದ ಉದ್ದೇಶ ಪೆಟ್ರೋಲಿಯಂ ಪದಾರ್ಥಗಳ ಪೂರೈಕೆಯನ್ನು ನಿಯಂತ್ರಿಸುವುದರ ಮೂಲಕ ಅದರ ಮಾರುಕಟ್ಟೆ ಮತ್ತು ಬೆಲೆಗಳ ಮೇಲೆ ಪ್ರಭಾವ ಬೀರುವುದು. ಇದರಿಂದಾಗಿ ಒಮ್ಮಿಂದೊಮ್ಮೆಲೆ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಏರಿತು. ಇದು ಪ್ರಪಂಚದ ಎಲ್ಲಾ ದೇಶಗಳ ವಿದೇಶಿ ವಿನಿಮಯದ ಮೇಲೆ ಗಾಢವಾದ ಪರಿಣಾಮ ಬೀರಿತು. ಅದರಲ್ಲೂ ತೃತೀಯ ಜಗತ್ತಿನ ಅಭಿವೃದ್ದಿಶೀಲ ರಾಷ್ಟ್ರಗಳು ಈ ಹೊರೆಯನ್ನು ತಮ್ಮ ರಫ್ತಿನಿಂದ ಬರುವ ಆದಾಯದಿಂದ ಬರಿಸುವ ಸಾಧ್ಯತೆಯಿರಲಿಲ್ಲ. ಇದು ಅವರ ವಿದೇಶಿ ವಿನಿಮಯದ ಕೊರತೆಯನ್ನು ಉಲ್ಬಣಗೊಳಿಸಿತು. ಬ್ಯಾಲೆನ್ಸ್ ಆಫ್ ಪೇಮೆಂಟ್ ಸಮಸ್ಯೆಯಿಂದ ಹೊರಬರಲು ಅವರಿಗಿದ್ದ ದಾರಿಯೆಂದರೆ ಪೆಟ್ರೋಲಿಯಂ ಪದಾರ್ಥಗಳ ಬಳಕೆಯನ್ನು ಕಡಿಮೆಗೊಳಿಸುವುದು ಅಥವಾ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಮಾಡುವುದು. ಮೊದಲಿನ ಆಯ್ಕೆ ಅಂದರೆ ಪೆಟ್ರೋಲಿಯಂ ಬಳಕೆ ಕಡಿಮೆಗೊಳಿಸುವ ಸಾಧ್ಯತೆ. ಅವರುಗಳು ಅನುಸರಿಸುತ್ತಿದ್ದ ಅಭಿವೃದ್ದಿ ಮಾದರಿ ಮತ್ತು ಅದು ಅವರಲ್ಲಿ ಅಭಿವ್ಯಕ್ತಗೊಂಡ ಕ್ರಮದಿಂದಾಗಿ ಇದು ಸಾಧ್ಯವಿರಲಿಲ್ಲ. ಇನ್ನುಳಿದ ಮಾರ್ಗವೆಂದರೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲಮಾಡುವುದು. ಇದನ್ನು ಹೊರತುಪಡಿಸಿದ ಮತ್ತೊಂದು ಸಾಧ್ಯತೆಯಿತ್ತು ಮತ್ತು ಅದು ಸಾಧ್ಯವಾಗುತ್ತಿದ್ದರೆ ಇಂದು ಅಂತಾರಾಷ್ಟ್ರೀಯ ಆರ್ಥಿಕ ಸ್ಥಿತಿ ಭಿನ್ನವಾಗಿರುತ್ತಿತ್ತು. ಅದೇನೆಂದರೆ ಈ ಅರಬ್ ರಾಷ್ಟ್ರಗಳು ತಮ್ಮ ಬೊಕ್ಕಸಕ್ಕೆ ಹರಿಯುತ್ತಿದ್ದ ಪೆಟ್ರೋಲಿಯಂ ಡಾಲರ್‌ಗಳನ್ನು ಒಂದೋ ತಮ್ಮ ಸೆಂಟ್ರಲ್ ಬ್ಯಾಂಕುಗಳಲ್ಲಿ ಜಮಾಯಿಸು ವುದು ಅಥವಾ ಅರಬ್ ರಾಷ್ಟ್ರಗಳೆಲ್ಲಾ ಸೇರಿ ಈ ಪೆಟ್ರೋ ಡಾಲರ್‌ಗಳ ವ್ಯವಹಾರಕ್ಕೆ ಒಂದು ಬ್ಯಾಂಕನ್ನು ತೆರೆದು ಬಡರಾಷ್ಟ್ರಗಳಿಗೆ ಸಾಲ ಕೊಡುತ್ತಿದ್ದರೆ ಬೇರೆಯದೆ ರೀತಿಯ ಬೆಳವಣಿಗೆಯಾಗುತ್ತಿತ್ತು. ಆದರೆ ಈ ರೀತಿ ಆಗಲಿಲ್ಲ. ಅರಬ್ ರಾಷ್ಟ್ರಗಳು ತಮ್ಮ ಪೆಟ್ರೋಡಾಲರ್‌ಗಳನ್ನು ಅಮೆರಿಕಾ ಮತ್ತು ಯುರೋಪಿಯನ್ ಬ್ಯಾಂಕುಗಳಲ್ಲಿ ಜಮಾಯಿಸುವುದು ಈಗಾಗಲೇ ಅತಿ ಚಲಾವಣೆಯಲ್ಲಿದ್ದ ಡಾಲರಿನ ಸಂಗ್ರಹ ಇನ್ನು ಹೆಚ್ಚಾಗುವಂತೆ ಮಾಡಿತು. ಜೊತೆಗೆ ಬಡರಾಷ್ಟ್ರಗಳಿಗೆ ಸಾಲದ ಒಂದು ಹೊಸ ಮೂಲ ಕೂಡ ಇಲ್ಲದಾಯಿತು. ೧೯೮೦ರ ಹೊತ್ತಿಗೆ ಈ ಸಮಸ್ಯೆ ಬಿಗಡಾಯಿಸಿ ಅಭಿವೃದ್ದಿಶೀಲ ರಾಷ್ಟ್ರಗಳು ಬ್ಯಾಲೆನ್ಸ್ ಆಫ್ ಪೇಮೆಂಟ್ ಸಮಸ್ಯೆಯಿಂದ ಹೊರಬರಲು ವಿದೇಶಿ ಸಾಲಕ್ಕಾಗಿ ವಿಶ್ವಬ್ಯಾಂಕನ್ನು ಕೋರುವುದು ಅನಿವಾರ್ಯವಾಯಿತು. ಆ ಸಂದರ್ಭದಲ್ಲಿ ವಿಶ್ವಬ್ಯಾಂಕು ಹೊಸ ಸಾಲ ಮಂಜೂರು ಆಗಬೇಕಿದ್ದರೆ ಸಾಲಕ್ಕೆ ಅರ್ಜಿ ಸಲ್ಲಿಸುವ ದೇಶಗಳು ತಮ್ಮ ಆರ್ಥಿಕ ಮಿತಿಯಲ್ಲಿ ಆಮೂಲಾಗ್ರ ಪರಿವರ್ತನೆಯನ್ನು ಮಾಡಿಕೊಳ್ಳಬೇಕೆಂಬ ಷರತ್ತನ್ನು ಇಟ್ಟಿತು. ಖಾಸಗಿ ಬಂಡವಾಳಕ್ಕೆ ಪ್ರಾಮುಖ್ಯತೆ ಕೊಡುವುದು, ವಿದೇಶ ಬಂಡವಾಳದ ಮೇಲಿನ ನಿರ್ಬಂಧವನ್ನು ಕಡಿಮೆಗೊಳಿಸುವುದು, ಸಹಾಯಧನ ಮೂಲಕ ದೇಶೀ ಬಂಡವಾಳ ರಕ್ಷಿಸುವ ಕ್ರಮವನ್ನು ಕಡಿಮೆಗೊಳಿಸುವುದು, ಇವೇ ಮುಂತಾದ ನೀತಿಗಳಿಗೆ ಒತ್ತುಕೊಡುವ ರೀತಿಯಲ್ಲಿ ತನ್ನ ಆರ್ಥಿಕ ನೀತಿಗಳನ್ನು ಬದಲಾಯಿಸಿಕೊಳ್ಳಬೇಕೆಂದು ವಿಶ್ವಬ್ಯಾಂಕು ಸೂಚಿಸಿತು. ತಮ್ಮ ಬ್ಯಾಲೆನ್ಸ್ ಆಫ್ ಪೇಮೆಂಟ್ ಸಮಸ್ಯೆಯಿಂದ ಹೊರಬರಲು ಮತ್ತು ಮುಂದಿನ ಅಭಿವೃದ್ದಿಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಗೌರವ ಉಳಿಸಿಕೊಳ್ಳುವ ನೆಲೆಯಲ್ಲಿ ಅಭಿವೃದ್ದಿ ಶೀಲ ರಾಷ್ಟ್ರಗಳಿಗೆ ಈ ಷರತ್ತುಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಈ ರೀತಿಯಲ್ಲಿ ಎಸ್.ಎ.ಪಿ.ಗಳನ್ನು ಪ್ರಪಂಚದ ಎಲ್ಲಾ ದೇಶಗಳ ಅದರಲ್ಲೂ ಅಭಿವೃದ್ದಿ ಶೀಲ ದೇಶಗಳ ಮೇಲೆ ಹೇರಲಾಯಿತು ಮತ್ತು ಈ ಸಂದರ್ಭದಲ್ಲಿ ಒತ್ತಾಯ ಪೂರ್ವಕವಾಗಿ ಆರ್ಥಿಕ ನೀತಿಗಳಲ್ಲಿ ಮಾಡಿಕೊಂಡ ಬದಲಾವಣೆಗಳು ಬಂಡವಾಳದ ಜಾಗತೀಕರಣಕ್ಕೆ ಅನುಕೂಲವಾದ ವಾತಾವರಣ ಸೃಷ್ಟಿಸಿದವು.

 

ಪರಾಮರ್ಶನ ಗ್ರಂಥಗಳು

೧. ಕಾರ್ಲ್‌ಪೊಲಾನಿಯ, ೧೯೫೭. ದಿ ಗ್ರೇಟ್ ಟ್ರಾನ್ಸ್‌ಫಾರ್ಮೇಷನ್, ಬೋಸ್ಪನ್, ಬೆಕನ್ ಪ್ರೆಸ್

೨. ಡ್ರಾಫ್ ಹೆನ್ರಿ ಮ್ಯಾಗ್, ೧೯೯೬, ಸಾಮ್ರಾಜ್ಯವಾದದ ಪರಿಕಲ್ಪನೆ ಎಷ್ಟು ಪ್ರಸ್ತುತ? ಮಂತ್ಲಿ ರಿವ್ಯೆ, ಸೆಪ್ಟೆಂಬರ್ ೧೯೯೩, ಅನುವಾದ: ವಸಂತ  ಬನ್ನಾಡಿ,  ಸಂಸ್ಕೃತಿ   ಚಿಂತನೆ, ಮಂಗಳಗಂಗೋತ್ರಿ: ಅರಿವು ಬರಹ ಪ್ರಕಾಶನ.

೩. ಎರಿಕ್ ಹಾಬ್ಸ್‌ವಾಮ್, ೧೯೭೫, ದಿ ಏಜ್ ಆಫ್ ಕ್ಯಾಪಿಟಲ್, ಗ್ರೇಟ್ ಬ್ರಿಟನ್, ಸ್ಪಿಯರ್ ಬುಕ್ಸ್

೪. ಇಮ್ಯಾನ್‌ವಲ್ ವೆಲರ್‌ಸ್ಪೇನ್, ೧೯೭೯. ದಿ ಕ್ಯಾಪಿಟಲಿಸ್ಟ್ ವರ್ಲ್ಡ್ ಎಕಾನಮಿ,  ಲಂಡನ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್,