೧೪. ಕೈಗಾರಿಕಾ ಕ್ರಾಂತಿ ಮತ್ತು ಬಂಡವಾಳವಾದದ ಉಗಮ

ವಿ.ಎಸ್.ಎಲಿಜಬೆತ್
ಅನುವಾದ
: ಎಸ್. ಸಿರಾಜ್ ಅಹಮದ್

 

ವೈಚಾರಿಕತೆ, ವಿಜ್ಞಾನ ಮತ್ತು ಪ್ರಗತಿ-ಇವು ಸಮಾಜವಾದ ಎಂಬ ಹೊಸ ಸಿದ್ಧಾಂತದ ಮೂಲಭೂತ ತತ್ವಗಳಾಗಿದ್ದವು. ಸಮಾಜವಾದಿಗಳು ಕೈಗಾರಿಕಾ ಕ್ರಾಂತಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದರಿಂದ ಆಧುನಿಕ ಸಮಾಜವಾದ ಹುಟ್ಟಲು ಕಾರಣವಾಯಿತು. ಸಮಾಜವಾದಿ ಸಿದ್ಧಾಂತವನ್ನು ಯುರೋಪಿನ ಇತಿಹಾಸದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಪಾದಿಸಲಾಗಿದೆ ಹಾಗೂ ಆಚರಣೆಗೆ ತರಲಾಗಿದೆ. ಹತ್ತೊಂಬತ್ತನೆಯ ಶತಮಾನದ ಕೈಗಾರಿಕಾ ಕ್ರಾಂತಿಯ ಫಲವಾಗಿ ಹುಟ್ಟಿದ ವ್ಯಕ್ತಿವಾದ ಮತ್ತು ಉದಾರ ಆರ್ಥಿಕ ನೀತಿಗಳು ದುಡಿಯುವ ವರ್ಗದ ಜನರ ಕಷ್ಟಗಳಿಗೆ ಕಾರಣವಾದವು. ಇವು ನಂತರ ಜನರಲ್ಲಿ ಪ್ರತಿಭಟನೆಯ ಶಕ್ತಿ ತುಂಬುವ ಸಾಮಾಜಿಕ ಚಳವಳಿಗಳ ಬೆಳವಣಿಗೆಗೆ ಕಾರಣವಾದವು.

ಯುಟೋಪಿಯನ್ ಸಮಾಜವಾದ

೧೮೪೮ರ ಕ್ರಾಂತಿಗಿಂತಲೂ ಮೊದಲಿನ ಸಮಾಜವಾದಿಗಳು ಬೇರೆ ಬೇರೆ ಬಗೆಯ ವರಾಗಿದ್ದರೂ ಕೆಲವು ಸಮಾನ ಅಭಿಪ್ರಾಯಗಳನ್ನು ಹೊಂದಿದ್ದರು. ಅವರೆಲ್ಲರ ಅಭಿಪ್ರಾಯದಲ್ಲಿ ಆಗಿನ ಆರ್ಥಿಕ ವ್ಯವಸ್ಥೆ ಗೊತ್ತುಗುರಿಯಿಲ್ಲದ, ನಿರ್ದಿಷ್ಟ ಸ್ವರೂಪವಿಲ್ಲದ ಹಾಗೂ ನಿಸ್ಸಂಶಯವಾಗಿ ಅನ್ಯಾಯದ ತಳಹದಿಯ ಮೇಲೆ ನಿಂತ ವ್ಯವಸ್ಥೆಯಾಗಿತ್ತು. ಅವರೆಲ್ಲರೂ ಖಾಸಗಿ ಒಡೆತನವನ್ನು ವಿರೋಧಿಸಿದರು ಮತ್ತು ಬ್ಯಾಂಕುಗಳು, ಕಾರ್ಖಾನೆಗಳು, ಯಂತ್ರಗಳು, ಭೂಮಿ ಮತ್ತು ಸಾರಿಗೆಯಂಥ ಉತ್ಪಾದಕ ಸಂಸ್ಥೆಗಳಲ್ಲಿ ಸಾಮೂಹಿಕ ಒಡೆತನವನ್ನು ಸ್ಥಾಪಿಸುವುದನ್ನು ಅನುಮೋದಿಸಿದರು. ಅವರೆಲ್ಲರೂ ಸ್ಪರ್ಧೆಯಷ್ಟನ್ನೇ ಮೂಲತತ್ವವನ್ನಾಗಿ ಒಪ್ಪಿಕೊಳ್ಳದೆ ಅದಕ್ಕೆ ಬದಲಾಗಿ ಸಾಮರಸ್ಯ, ಸಹಭಾಗಿತ್ವ, ಸಂಘಗಳು ಅಥವಾ ಸಂಘಟಿತ ಯತ್ನವನ್ನು ಅಂಗೀಕರಿಸಿದರು. ಅವರೆಲ್ಲರೂ ಆರ್ಥಿಕ ಚಟುವಟಿಕೆಗಳಲ್ಲಿ ರಾಜ್ಯ ಹಸ್ತಕ್ಷೇಪ ಮಾಡಬಾರದು ಎನ್ನುವ ಉದಾರವಾದಿಗಳ ಹಾಗೂ ರಾಜಕೀಯ ಅರ್ಥಶಾಸ್ತ್ರಜ್ಞರ ‘‘ಲೆಸ್ಸ-ಫೇರ್’’ ಎಂಬ ಸಿದ್ಧಾಂತವನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಮೊದಲ ಹಂತದ ಈ ಸಮಾಜವಾದಿಗಳು ಉತ್ಪಾದನೆಯನ್ನು ಹೆಚ್ಚಿಸುವ ವಿಧಾನಗಳಿಗಿಂತ, ಆದಾಯವನ್ನು ಸಮಾಜದ ಉಪಯುಕ್ತ ಸದಸ್ಯರ ನಡುವೆ ಹೇಗೆ ಸಮಾನವಾಗಿ ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಹಂಚಬೇಕು ಎನ್ನುವ ಬಗ್ಗೆ ಯೋಚಿಸಿದರು. ಫ್ರೆಂಚ್ ಕ್ರಾಂತಿಯು ತಂದುಕೊಟ್ಟ ನಾಗರಿಕ ಹಾಗೂ ಕಾನೂನು ಬದ್ಧ ಸಮಾನತೆಗಿಂತ ಮಿಗಿಲಾಗಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ಗಳಿಸಿಕೊಳ್ಳಲು ಪ್ರಯತ್ನ ನಡೆಸಬೇಕೆಂಬುದು ಅವರ ನಂಬಿಕೆಯಾಗಿತ್ತು. ಈ ಸಮಾಜವಾದಿಗಳು – ಜನಗಳ ನಡುವೆ ಪರಸ್ಪರ ಸಹಕಾರ, ಶ್ರಮದ ಮಹತ್ವ ಮತ್ತು ಉಪಯೋಗ, ಮನುಷ್ಯ ಕುಲವನ್ನು ಪುನಶ್ಚೇತನಗೊಳಿಸಲು ಬೇಕಾದ ಸಾಮರಸ್ಯದಿಂದ ತುಂಬಿದ ಸಮಾಜ ಇತ್ಯಾದಿ ನೈತಿಕ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದರು. ಅವರು ಪ್ರತಿಪಾದಿಸಿದ ಹೊಸ ಸಮಾಜದಲ್ಲಿ ಪ್ರತಿಯೊಬ್ಬರೂ ಸಂತೋಷವಾಗಿರುವುದಷ್ಟೇ ಅಲ್ಲದೆ, ಅಲ್ಲಿ ಬದುಕುವ ಪ್ರತಿ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಅರಿತುಕೊಂಡವ ನಾಗಿರುತ್ತಿದ್ದ. ಅಲ್ಲಿ ಸ್ವಾತಂತ್ರ್ಯವೇ ಸಾರ್ವಭೌಮವಾಗಿದ್ದು ಸರ್ಕಾರವು ಕಡ್ಡಾಯವಾಗಿ ಇಲ್ಲದಾಗಬೇಕಿತ್ತು. ಇಷ್ಟೇ ಅಲ್ಲದೆ ಈ ಅವಧಿಯ ಸಮಾಜವಾದಿಗಳು ಇಂಥ ಕಾಲ್ಪನಿಕ ರಾಜ್ಯ-ಯುಟೋಪಿಯಾವನ್ನು ಸ್ಥಾಪಿಸುವ ರೀತಿಗಳನ್ನೂ ಸಹ ಸೂಚಿಸಿದರು. ಅವರು ಮನುಷ್ಯ ಮೂಲತಃ ಸಂಘಜೀವಿ ಎಂಬ ಮಾನವ ಸಮುದಾಯದ ಅತ್ಯಂತ ಪ್ರಾಚೀನ ತತ್ವವನ್ನು ತಮ್ಮ ಸಿದ್ಧಾಂತವಾಗಿಸಿಕೊಂಡರು. ಅವರ ರಮ್ಯ ಆದರ್ಶಗಳು ಮತ್ತು ಕಾಲ್ಪನಿಕ ಸಿದ್ಧಾಂತಗಳು ಅವರಿಗೆ ನಿಜವಾದ ಅರ್ಥದಲ್ಲಿ ಯುಟೋಪಿಯನ್ ಸಮಾಜ ವಾದಿಗಳೆಂಬ ಹೆಸರನ್ನು ತಂದುಕೊಟ್ಟವು. ಅವರ ಪರಿಪೂರ್ಣತೆಯ ಹಂಬಲವೇ ಅವರನ್ನು ನಿರಾಶೆಯ ಅಂಚಿಗೆ ತಳ್ಳಿತು.

ಮೊದಲ ಹಂತದ ಈ ಸಮಾಜವಾದಿಗಳಲ್ಲಿ ಮುಖ್ಯನಾದವನು ರಾಬರ್ಟ್ ಓವೆನ್ (೧೭೭೧-೧೮೭೮). ಬಟ್ಟೆ ಕೈಗಾರಿಕೆಯ ಮುಂಚೂಣಿಯಲ್ಲಿದ್ದ ಈತ ಒಳ್ಳೆಯ ಸಮಾಜವೊಂದನ್ನು ಕಟ್ಟುವ ಸಾಧ್ಯತೆಯನ್ನು ಮನುಷ್ಯನ ಪ್ರಾವೀಣ್ಯತೆಯಲ್ಲಿ ಮಾತ್ರವಲ್ಲ, ಕೈಗಾರಿಕಾ ಕ್ರಾಂತಿ ಸೃಷ್ಟಿಸಿದ ವಿಪುಲ ಅವಕಾಶಗಳಲ್ಲಿ ಸಹ ಕಂಡುಕೊಂಡಿದ್ದ. ತನ್ನ ಕೆಲಸಗಾರರಿಗಾಗಿ ಈತ ಕಟ್ಟಬೇಕೆಂದು ಬಯಸಿದ ಮಾದರಿ ಸಮಾಜದಲ್ಲಿ ಕೆಲಸಗಾರರಿಗೆ ಹೆಚ್ಚು ಸಂಬಳವಿದ್ದರೂ ಕಡಿಮೆ ಕೆಲಸವಿತ್ತು. ಅಲ್ಲಿ ಅವರಿಗಾಗಿ ಶಾಲೆಗಳು, ವಸತಿ ಮತ್ತು ಕಡಿಮೆ ದರದಲ್ಲಿ ಕೆಲಸಗಾರರಿಗೆ ಅಗತ್ಯ ವಸ್ತುಗಳನ್ನು ಮಾರುವ ಕಂಪನಿ ಸ್ಟೋರ್ ಗಳಿದ್ದವು. ಹಾಗೆಯೇ ಅಲ್ಲಿ ಕುಡಿತಕ್ಕೆ, ಕೆಟ್ಟ ಅಭ್ಯಾಸಗಳಿಗೆ ಕಠಿಣ ಶಿಕ್ಷೆ ಕಾದಿತ್ತು. ಧಾರ್ಮಿಕ ವಿಷಯಗಳ ಬಗ್ಗೆ ರಾಬರ್ಟ್ ಓವೆನ್‌ನ ವೈಚಾರಿಕ ನಿಲುವುಗಳಿಗೆ ಇದ್ದ ವಿರೋಧ ಮತ್ತು ಇತರ ಕೈಗಾರಿಕೋದ್ಯಮಿಗಳ ವಿರೊಧದ ನಡುವೆಯೂ, ಈತ ತನ್ನ ಜೀವನದ ಬಹುಪಾಲು ಸಮಯವನ್ನು ಸಾಮಾಜಿಕ ಸುಧಾರಣೆಯನ್ನು ತರಲು ಹೋರಾಡುವುದರಲ್ಲಿ ಕಳೆದ.

ಮೊದಲ ಅವಧಿಯ ಬಹುಪಾಲು ಸಮಾಜವಾದಿಗಳು ಫ್ರೆಂಚರಾಗಿದ್ದರು. ಅವರು ಪೂರ್ಣಗೊಳ್ಳದ ಒಂದು ಕ್ರಾಂತಿಯ ಅರಿವಿನಿಂದ ಪ್ರೇರಣೆ ಪಡೆದಿದ್ದರು. ಅವರಲ್ಲಿ ಒಬ್ಬ ಗಣ್ಯವ್ಯಕ್ತಿ ಕೌಂಟ್ ಡಿ ಸೇಂಟ್ ಸಿಮೋನ್(೧೭೬೦-೧೮೨೫). ಈತ ಮತ್ತು ಈತನ ಅನುಯಾಯಿಗಳು ವ್ಯವಸ್ಥಿತ ಸಮಾಜವೊಂದರ ಕಲ್ಪನೆಯನ್ನು ತಿರಸ್ಕರಿಸಿದರು. ಇವರು ಕೈಗಾರಿಕಾ ಯಂತ್ರಗಳ ಮೇಲೆ ಸಾಮೂಹಿಕ ಒಡೆತನವನ್ನು ಪ್ರತಿಪಾದಿಸಿದರು. ಅಷ್ಟೇ ಅಲ್ಲ, ಜನರಿಗೆ ಉಪಯೋಗವಾಗುವಂಥ ಬೃಹತ್ ಯೋಜನೆಗಳನ್ನು ರೂಪಿಸುವ, ಉದಾಹರಣೆಗೆ : ಸೂಯೆಜ್ ಕಾಲುವೆಯನ್ನು ನಿರ್ಮಿಸುವುದು ಮತ್ತು ಕೆಲಸಗಾರರೊಂದಿಗೆ ಒಡನಾಡುತ್ತ ಎಲ್ಲ ಸಂಪನ್ಮೂಲಗಳನ್ನು, ಅಭಿವೃದ್ದಿಗೆ ಬಳಸುವ ಸಾಮರ್ಥ್ಯ ಇರುವಂಥವರ ಕೈಯಲ್ಲಿ ಮಾತ್ರ ಇತರ ಬಂಡವಾಳದ ವಹಿವಾಟುಗಳನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇವರಿಗಿಂತ ಭಿನ್ನವಾದ ಇನ್ನೊಬ್ಬ ಚಿಂತಕ ಚಾರ್ಲ್ಸ್ ಫೋರಿಯ (೧೭೭೨-೧೮೩೭). ಸ್ವಲ್ಪಮಟ್ಟಿಗೆ ಯಾವಾಗಲೂ ಸಿದ್ಧಾಂತಗಳನ್ನು ಪ್ರತಿಪಾದಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಈತ ಎಲ್ಲ ರೀತಿಯ ಸಂಸ್ಥೆಗಳನ್ನು ಕಟುವಾಗಿ ಟೀಕಿಸಿದ. ಈತ ಸಮಾಜವನ್ನು ‘‘ಫ್ಯಾಲೆಂಸ್ಟೀರ್’’ ಎಂದು ಕರೆಯುವ ಸಣ್ಣಸಣ್ಣ ಭಾಗಗಳನ್ನಾಗಿ ವಿಭಜಿಸಬೇಕೆಂದು ಹೇಳಿದ. ಈ ಪ್ರತಿಯೊಂದು ಭಾಗದಲ್ಲಿಯೂ ಒಟ್ಟು ೧೬೨೦ ಜನಗಳಿದ್ದು, ಅವರು ತಮಗಿಷ್ಟವಾದ ಕೆಲಸಗಳನ್ನು ಮಾಡಬಹುದಿತ್ತು. ಆದರೆ ಮೊದಲ ಹಂತದ ಸಮಾಜವಾದಿಗಳು ಪ್ರತಿಪಾದಿಸಿದ ಈ ಫ್ಯಾಲೆಂಸ್ಟೀರ್‌ಗಳು ಹಾಗೂ ಪ್ರಾಯೋಗಿಕವಾಗಿ ರೂಪಿಸಿದ ಕಾಲೋನಿಗಳು ಅಮೆರಿಕಾದಲ್ಲಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯಲಿಲ್ಲ. ಯಾಕೆಂದರೆ ಈ ಯೋಜನೆಗಳು ಜನರಿಗೆ ತಮ್ಮಷ್ಟಕ್ಕೆ ತಾವೇ ಬದುಕುವ ಅವಕಾಶ ನೀಡಲಿಲ್ಲ ಮತ್ತು ಇವುಗಳಿಂದ ಒಟ್ಟಾರೆಯಾಗಿ ಔದ್ಯೋಗಿಕ ಯುಗದ ಸಮಾಜದ ಸಮಸ್ಯೆಗಳ ಪರಿಹಾರ ಸಾಧ್ಯವಿರಲಿಲ್ಲ.

ರಾಜಕೀಯವಾಗಿ ಬಹಳ ಮುಖ್ಯವಾದ ಹಾಗೂ ಸಮಾಜವಾದದ ಅತ್ಯಂತ ಪ್ರಾಚೀನ ರೂಪ ಯಾವುದೆಂದರೆ, ಫ್ರಾನ್ಸ್‌ನ ದುಡಿಯುವ ವರ್ಗದ ನಡುವೆ ಕ್ರಾಂತಿಕಾರಿ ಪ್ರಜಾಪ್ರಭುತ್ವ ಮತ್ತು ಸಮಾಜವಾದಗಳ ಮಿಶ್ರಣದಿಂದ ಹುಟ್ಟಿದ ಒಂದು ಚಳವಳಿ. ರಾಜಕೀಯವಾಗಿ ಪ್ರಜ್ಞಾವಂತರಾದ ಪ್ಯಾರಿಸ್‌ನ ದುಡಿಯುವ ವರ್ಗದ ಜನ ತಮ್ಮ ಆಶೋತ್ತರಗಳ ವಕ್ತಾರನನ್ನು ಅಲ್ಲಿನವನೇ ಆದ ಲೂಯಿ ಬ್ಲಾಂಕ್ ಎಂಬ ಪತ್ರಕರ್ತನಲ್ಲಿ ಕಂಡುಕೊಂಡರು. ಈತ ‘ರಿವ್ ಡಿ ಪ್ರೊಗ್ರೆಸ್’ ಎಂಬ ಪತ್ರಿಕೆಯ ಸಂಪಾದಕನಾಗಿದ್ದೇ ಅಲ್ಲದೆ ಸಮಾಜವಾದದ ಆದಿ ಭಾಗವನ್ನು ಕುರಿತು ಬರೆದ ಬಹಳ ಪರಿಣಾಮಕಾರಿ ಪುಸ್ತಕ ‘ಆರ್ಗನೈಜೇಶನ್ ಆಫ್ ವರ್ಕ್’ನ ಲೇಖಕನೂ ಆಗಿದ್ದ.

ವೈಜ್ಞಾನಿಕ ಸಮಾಜವಾದ

ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಒಂದು ವಿಶಿಷ್ಟ ಬಗೆಯ ಸಮಾಜವಾದ ಅಥವಾ ಕಮ್ಯೂನಿಸಂ ಕಂಡುಬಂತು. ಅದು ಸಂಪೂರ್ಣವಾಗಿ ಭೌತಿಕ ಉದ್ದೇಶಗಳನ್ನಿಟ್ಟುಕೊಂಡಿದ್ದರೂ ವೈಜ್ಞಾನಿಕವೆಂದು ತೋರಿಸಿಕೊಂಡಿದ್ದರಿಂದ ಅಂದಿನ ವಿಜ್ಞಾನದ ಮತ್ತು ಭೌತಿಕವಾದದ ಯುಗದಲ್ಲಿ ಬಹಳಷ್ಟು ಜನರನ್ನು ಆಕರ್ಷಿಸಿತು.

ಎಂಗೆಲ್ಸ್ ಮತ್ತು ಮಾರ್ಕ್ಸ್ ಅವರುಗಳು ತಾವು ಬದುಕುತ್ತಿದ್ದ ಸಮಾಜದಲ್ಲಿದ್ದ ಕೈಗಾರಿಕತೆ, ಹೆಚ್ಚುತ್ತಿದ್ದ ಭೌತಿಕವಾದ, ಲೋಕಸಿದ್ಧವಾದ(ಪಾಸಿಟಿವಿಸಂ) ಮತ್ತು ವೈಚಾರಿಕ ಮನೋಭಾವಗಳಿಂದ ಪ್ರಭಾವಿತರಾಗಿದ್ದರು. ಮಾರ್ಕ್ಸ್ ಕಮ್ಯುನಿಸಂ ಅನ್ನು ‘‘ಔದ್ಯೋಗಿಕತೆಯ ಫಲವಾಗಿ ಬೆಳೆದ ಪರಕೀಯತೆಯನ್ನು ಇಲ್ಲವಾಗಿಸಿ ಮಾನವತಾ ವಾದದವನ್ನು ಮತ್ತೆ ಸ್ಥಾಪಿಸುವ ಒಂದು ಪ್ರಯತ್ನ’’ ಎಂದು ವ್ಯಾಖ್ಯಾನಿಸಿದ (ಪ್ಯಾರಿಸ್ ಹಸ್ತಪ್ರತಿಗಳು, ೧೮೪೪). ಈ ರೀತಿ ಒಂದು ಹೊಸ ಬಗೆಯ ಸಮಾಜವಾದವನ್ನು ಪ್ರತಿಪಾದಿಸಿದ ಕಾರ್ಲ್‌ಮಾರ್ಕ್ಸ್ ಹುಟ್ಟಿದ್ದು ೧೮೧೮ರಲ್ಲಿ, ಪ್ರಷ್ಯಾದ ಟ್ರಯರ್ ಎಂಬ ಸ್ಥಳದಲ್ಲಿ ಯಹೂದಿ ಮೂಲದ ದಂಪತಿಗಳ ಮಗನಾಗಿ ಮಾರ್ಕ್ಸ್ ಜನಿಸಿದ. ಈತ ೧೮೪೩-೪೪ರಲ್ಲಿ ದೇಶಭ್ರಷ್ಟನಾಗಿ ಪ್ಯಾರಿಸ್‌ನಲ್ಲಿ ಆಶ್ರಯ ಪಡೆದ. ೧೮೪೫ರಲ್ಲಿ ಪ್ಯಾರಿಸ್‌ನಿಂದ ಬಹಿಷ್ಕೃತನಾಗಿ, ಅಲ್ಲಿಂದ ಬ್ರಸ್ಸೆಲ್ಸ್‌ಗೆ ಪ್ರಯಾಣ ಬೆಳೆಸಿದ. ಮಾರ್ಕ್ಸ್‌ಗೆ ಪ್ಯಾರಿಸ್‌ನಲ್ಲಿರುವಾಗಲೇ ಫ್ರೆಡರಿಕ್ ಎಂಗೆಲ್ಸ್‌ನನ್ನು ಭೇಟಿ ಮಾಡುವ ಅವಕಾಶ ಒದಗಿಬಂತು. ನಂತರ ಮಾರ್ಕ್ಸ್ ಮತ್ತು ಎಂಗೆಲ್ಸ್ ಇಬ್ಬರೂ ೧೮೪೭ರಲ್ಲಿ ‘ಕಮ್ಯೂನಿಸ್ಟ್ ಲೀಗ್’ ಎಂಬ ಹೊಸ ಹೆಸರು ಪಡೆದ ‘ಲೀಗ್ ಆಫ್ ದ ಜಸ್ಟ್’ ಎಂಬ ಸಂಘಟನೆಯನ್ನು ಸೇರಿದರು. ಇದಾದ ಮೇಲೆ ಮಾರ್ಕ್ಸ್ ಮತ್ತು ಎಂಗೆಲ್ಸ್ ಇಬ್ಬರೂ ಸೇರಿ ೧೮೪೮ರಲ್ಲಿ ಕಮ್ಯುನಿಸ್ಟ್ ಲೀಗ್‌ನ ಪ್ರಣಾಳಿಕೆ (ಕಮ್ಯುನಿಸ್ಟ್ ಮ್ಯಾನಿಪೆಸ್ಟೊ)ಯನ್ನು ರಚಿಸಿದರು. ಈ ಕಮ್ಯುನಿಸ್ಟ್ ಪ್ರಣಾಳಿಕೆ ತನ್ನ ವರ್ಗ ಸಂಘರ್ಷ ಮತ್ತು ಕ್ರಾಂತಿಯ ತತ್ವಗಳಿಂದ ಓವೆನ್ಸ್, ಸೇಂಟ್ ಸಿಮೋನ್, ಫೋರಿಯೆ ಮತ್ತು ಲೂಯಿ ಬ್ಲಾಂಕ್ ಮುಂತಾದವರು ಪ್ರತಿಪಾದಿಸಿದ ಯುಟೋಪಿಯನ್ ಹಾಗೂ ಆದರ್ಶವಾದಿ ಸಮಾಜವಾದವನ್ನು ಬದಿಗೊತ್ತಿತು. ಮಾರ್ಕ್ಸ್ ಕಲೋನ್‌ಗೆ ಭೇಟಿ ನೀಡಲು ಬ್ರಸ್ಸೆಲ್ಸ್‌ಗೆ ತೆರಳಿದ. ನಂತರ ಅಲ್ಲಿಂದ ಬ್ರಿಟನ್‌ಗೆ ಹೋಗಿ ಅಲ್ಲಿಯೇ ತನ್ನ ಬೃಹತ್ ಗ್ರಂಥ ‘‘ದಾಸ್ ಕ್ಯಾಪಿಟಲ್’’ ಅನ್ನು ಬರೆದ. ಮುಂದೆ ಈ ಪುಸ್ತಕ ಇಪ್ಪತ್ತು ವರ್ಷಗಳಲ್ಲಿಯೇ ಯುರೋಪಿನ ಮೂಲೆ ಮೂಲೆಗಳಿಗೂ ತಲುಪಿ ಎಲ್ಲೆಡೆ ಪ್ರಭಾವ ಬೀರಿತು. ಮತ್ತು ನೂರು ವರ್ಷಗಳಲ್ಲಿ ಮಾನವ ಜನಾಂಗದ ಅರ್ಧದಷ್ಟು ಜನರ ಅಧಿಕೃತ ರಾಜಕೀಯ ಸಿದ್ಧಾಂತವಾಗಿ ರೂಪುಗೊಂಡಿತು. ಆಧುನಿಕ ಇತಿಹಾಸದಲ್ಲಿ ಈ ಪುಸಕ ಮಹತ್ವದ ದಾಖಲೆಯಾಗಿ ಉಳಿದಿದೆ.

ಮಾರ್ಕ್ಸ್‌ನ ಸಿದ್ಧಾಂತದ ಮೂಲತತ್ವ ಐತಿಹಾಸಿಕ ಭೌತಿಕವಾದ. ಮಾರ್ಕ್ಸ್ ಇತಿಹಾಸದ ಬೆಳವಣಿಗೆಯನ್ನು, ತಡೆಯಲು ಸಾಧ್ಯವಾಗದ ಹಾಗೂ ಪರಿವರ್ತನೆ ಮಾಡಲು ಅಸಾಧ್ಯವಾದ ಆರ್ಥಿಕ ಶಕ್ತಿಗಳ ದ್ವಂದ್ವಾತ್ಮಕ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಲು ಯತ್ನ ನಡೆಸಿದ. ಈ ಆರ್ಥಿಕ ಶಕ್ತಿಗಳ ಪ್ರಚೋದನೆಯೇ ಮನುಷ್ಯನ ಎಲ್ಲ ಹಂಬಲ ಆಕಾಂಕ್ಷೆಗಳ ಮೂಲ ಎಂಬುದು ಮಾರ್ಕ್ಸ್‌ನ ಮೂಲ ಸಿದ್ಧಾಂತ ಮತ್ತು ಈ ಪ್ರಚೋದನೆಯೇ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ಮನುಷ್ಯನ ಎಲ್ಲ ಚಟುವಟಿಕೆಗಳು, ನಿರ್ಧಾರಗಳು, ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಡೀ ಸಮಾಜವನ್ನು ನಿಯಂತ್ರಿಸಬಲ್ಲದು ಎಂದು ವಾದಿಸಿದ. ಮೂಲತಃ ಧರ್ಮ, ಕಲೆ ಮತ್ತು ತತ್ವಶಾಸ್ತ್ರದ ಸಿದ್ಧಾಂತಗಳು ಈ ಆರ್ಥಿಕ ಶಕ್ತಿಗಳ ಪರಿಣಾಮದಿಂದ ಸೃಷ್ಟಿಯಾಗುತ್ತವೆ ಎಂದು ಪ್ರತಿಪಾದಿಸಿದ. ಹಾಗೆಯೇ ಇತಿಹಾಸದಲ್ಲಿನ ಸ್ಥಿತ್ಯಂತರಗಳು ಹಾಗೂ ಬಿಕ್ಕಟ್ಟುಗಳು ನಿಜವಾದ ಅರ್ಥದಲ್ಲಿ ಆರ್ಥಿಕ ನೆಲೆಯಲ್ಲಿಯೇ ಉಂಟಾಗುತ್ತವೆ ಎಂದು ವಿವರಿಸಿದ.

೧೮೪೮ರ ನಂತರ ವಿಜ್ಞಾನ ಸಮಾಜದಲ್ಲಿ ಮಹತ್ವದ ಪಾತ್ರ ವಹಿಸಿತು. ಆ ಸಂದರ್ಭದಲ್ಲಿ ಎಲ್ಲ ರಾಜಕೀಯ ಚಿಂತಕರು ಮತ್ತು ಸಮಾಜವಾದಿಗಳು ವೈಜ್ಞಾನಿಕ ಚಿಂತನೆಯಿಂದ ಪ್ರಭಾವಿತರಾದರು. ಈ ರೀತಿಯ ಬೌದ್ದಿಕ ಕ್ರಾಂತಿಯಿಂದ ಉಂಟಾದ ಹೊಸ ಪರಿಸರದಲ್ಲಿ ಮಾರ್ಕ್ಸ್‌ವಾದ ಎಲ್ಲ ಕಡೆ ಹರಡಲು ಈ ಸಂದರ್ಭ ಸಮ ಯೋಚಿತವಾಗಿತ್ತು. ಮಾರ್ಕ್ಸ್ ಮತ್ತು ಎಂಗೆಲ್ಸ್ ಅವರುಗಳು ನೀಡಿದ ಆರ್ಥಿಕ ಅಂಕಿ ಅಂಶಗಳ ವಿವರಗಳು ವೈಜ್ಞಾನಿಕ ವಿಶ್ಲೇಷಣಾ ಕ್ರಮಗಳಾದ ಅವಲೋಕನ, ಸಂಗ್ರಹಣೆ ಮತ್ತು ಪರಿಶೀಲನೆಯ ಆಧಾರದ ಮೇಲೆ ನಿಂತಿದ್ದವು. ಅವರು ಪ್ರತಿಪಾದಿಸಿದ- ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಬದಲಾವಣೆಗಳು ಉತ್ಪಾದನಾ ವಿಧಾನಗಳ ಬದಲಾವಣೆಯಿಂದ ಮಾತ್ರ ಸಾಧ್ಯ ಮತ್ತು ಎಲ್ಲ ಇತಿಹಾಸಗಳೂ ವರ್ಗ ಸಂಘರ್ಷದ ಇತಿಹಾಸಗಳೇ ಆಗಿವೆ. ಇದಕ್ಕೆ ಆರ್ಥಿಕ ವ್ಯವಸ್ಥೆ ಕಾರಣ ಎಂಬ ಎರಡೂ ತತ್ವಗಳು ಮೇಲೆ ಹೇಳಿದ ಅಂಕಿ ಅಂಶಗಳ ಆಧಾರ ಮೇಲೆಯೇ ಪ್ರತಿಪಾದಿಸಲ್ಪಟ್ಟಿವೆ. ಇವುಗಳು ಯಾರ ವೈಜ್ಞಾನಿಕ ಸಿದ್ಧಾಂತದ ತತ್ವಗಳಿಗಿಂತ ಕಡಿಮೆಯೇನಲ್ಲ. ಮಾರ್ಕ್ಸ್ ಪ್ರತಿಪಾದಿಸಿದ ಈ ತತ್ವಗಳು ಹಳೆಯ ರಮ್ಯ ಅಥವಾ ಯುಟೋಪಿಯನ್ ಸಮಾಜವಾದದ ತತ್ವಗಳ ಸ್ಥಾನವನ್ನು ಪಲ್ಲಟಗೊಳಿಸಿದವು. ಈ ಹೊಸ ಸಮಾಜವಾದದ ಸಿದ್ಧಾಂತವು ತಾನು ಅನುಸರಿಸಿದ ವೈಜ್ಞಾನಿಕ ವಿಶ್ಲೇಷಣಾ ಕ್ರಮದಿಂದ ಎಲ್ಲರಿಂದ ಅತ್ಯಂತ ‘‘ವೈಜ್ಞಾನಿಕ’’ ಸಿದ್ಧಾಂತ ಎಂಬ ಮನ್ನಣೆ ಗಳಿಸಿತು. ಅದು ಮನುಷ್ಯನ ಸೀಮಿತ ಉದ್ದೇಶಗಳು, ಹಂಬಲಗಳನ್ನು ಕುರಿತದ್ದಾಗಿರಲಿಲ್ಲ. ಬದಲಾಗಿ ಅದು ಮನುಷ್ಯ ಸಮಾಜದ ರೂಢಿಗತ ಪದ್ಧತಿಯನ್ನು ಕುರಿತು ವಿಶ್ಲೇಷಣೆ ನಡೆಸಿತು ಮತ್ತು ಸಮಾಜದ ಭೌತಿಕ ಪರಿಸರವು ಎಲ್ಲ ಬಗೆಯ ಸಂಘರ್ಷಗಳಿಗೂ ಮೂಲ ಕಾರಣ ಎಂಬುದನ್ನು ತೋರಿಸಿಕೊಟ್ಟಿತು.

ಮಾರ್ಕ್ಸ್‌ವಾದ ಹುಟ್ಟಿದ್ದು ಕೈಗಾರಿಕಾ ಯುಗದ ದುಡಿಯುವ ವರ್ಗದ ಜನರಲ್ಲಿ ಉಂಟಾದ ರಾಜಕೀಯ ಪ್ರಜ್ಞೆ ಮತ್ತು ರಾಜಕೀಯ ಅಧಿಕಾರಿಗಳ ಅರಿವಿನ ಕಾರಣದಿಂದ. ಮಾರ್ಕ್ಸ್‌ನ ಸಾಮಾಜಿಕ ಚಿಂತನೆ ಈ ಅಂಶಗಳ ಆಧಾರದ ಮೇಲೆಯೇ ನಿಂತಿದೆ. ಈ ವಿಷಯವನ್ನು ಜನರ ಗಮನಕ್ಕೆ ತಂದವರಲ್ಲಿ ಮಾರ್ಕ್ಸ್ ಮೊದಲಿಗ ಎನ್ನಬಹುದು. ಹತ್ತೊಂಬತ್ತನೆಯ ಶತಮಾನದಲ್ಲಿ ಉಂಟಾದ ಸಾಮಾಜಿಕ ಬದಲಾವಣೆಯಲ್ಲಿ ರಾಜಕೀಯ ಪ್ರಜ್ಞೆ ಮತ್ತು ಅಧಿಕಾರಗಳ ಪಾತ್ರ ಮುಖ್ಯವಾದದ್ದು. ಈ ಬದಲಾವಣೆಯನ್ನು ಬಹಳ ಬೇಗ ಗ್ರಹಿಸಿದ ಮಾರ್ಕ್ಸ್ ಮೊಟ್ಟಮೊದಲ ಬಾರಿಗೆ ಬಂಡವಾಳಶಾಹಿಯನ್ನು ಕುರಿತು ವಿಶ್ಲೇಷಿಸಿದ. ಮಾರ್ಕ್ಸ್‌ನ ಪ್ರಕಾರ ಬಂಡವಾಳಶಾಹಿಯು ಒಂದು ಭದ್ರ ವ್ಯವಸ್ಥೆಯಾಗಿದ್ದು, ಅದರಿಂದಾಗಿಯೇ ಸಮಾಜದ ಒಂದು ವರ್ಗದ ಜನ ಯಾವತ್ತಿಗೂ ದುಡಿಮೆಯ ಆಧಾರದ ಮೇಲೆ ಬದುಕುವಂತಾಗಿತ್ತು. ಅವರಿಗೂ ಮಾಲಿಕರಿಗೂ ಇದ್ದ ಒಂದೇ ಒಂದು ಸಂಬಂಧವೆಂದರೆ ಅದು ಹಣದ ಸಂಬಂಧ ಮಾತ್ರ. ಈ ಕಾರಣದಿಂದ ಮಾಲಿಕ ಮತ್ತು ಕೆಲಸಗಾರರ ನಡುವೆ ಯಾವ ಮನುಷ್ಯ ಸಂಬಂಧವೂ ಏರ್ಪಡದೆ ಅವರಿಬ್ಬರ ನಡುವೆ ಯಾವ ನೈತಿಕ ಜವಾಬ್ದಾರಿಗಳೂ ಇರಲಿಲ್ಲ. ಅದು ಬರೀ ಒಂದು ಅಧಿಕಾರದ ಸಂಬಂಧ ಮಾತ್ರ ಆಗಿತ್ತು. ಆಧುನಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಂಶವಾಗಿರುವ ಈ ವಿಷಯವನ್ನು ಮಾರ್ಕ್ಸ್ ಸಮರ್ಥವಾಗಿ ಗ್ರಹಿಸಿದ. ಮಾಲಿಕತ್ವ ಉತ್ಪಾದನೆ ಮತ್ತು ಲಾಭ ಗಳಿಸುವ ಒಂದೇ ಒಂದು ಉದ್ದೇಶ ಇವುಗಳನ್ನು ಇಟ್ಟುಕೊಂಡ ವರ್ಗ ಒಂದು ಕಡೆ ಮತ್ತು ಯಾವುದೇ ಬಗೆಯ ಅಧಿಕಾರ ಇಲ್ಲದ ಬಡ ಕೂಲಿಕಾರ ವರ್ಗ ಇನ್ನೊಂದು ಕಡೆ ಇದ್ದಂಥ ಸಂದರ್ಭದಲ್ಲಿ ಬಲಿಷ್ಟ ಜನ ಸಂಘಟನೆಗಳನ್ನು ಕಟ್ಟುವ ಮೂಲಕ ಮಾತ್ರ ದುಡಿಯುವ ವರ್ಗದ ಜನರಿಗೆ ಅಧಿಕಾರ ನೀಡಲು ಸಾಧ್ಯ ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸಲು ಸಾಧ್ಯ ಎಂದು ಮಾರ್ಕ್ಸ್ ಅರ್ಥಮಾಡಿಕೊಂಡ. ಈ ಐತಿಹಾಸಿಕ ಸತ್ಯವನ್ನು ಅರಿತುಕೊಂಡಿದ್ದ ಮಾರ್ಕ್ಸ್‌ಗೆ ಬಂಡವಾಳಶಾಹಿ ವ್ಯವಸ್ಥೆ ಹುಟ್ಟಿದ್ದು ಕಾಲಾತೀತವಾದ ಆರ್ಥಿಕ ನೀತಿಗಳಿಂದ ಅಲ್ಲ, ಬದಲಾಗಿ ಅದು ಆಧುನಿಕ ಸಮಾಜದ ವಿಕಾಸದ ಒಂದು ಹಂತ ಎಂದು ತಿಳಿದಿತ್ತು. ದುಡಿಯುವ ವರ್ಗದ ಜನ ಅಧಿಕಾರಕ್ಕಾಗಿ ಸಂಘರ್ಷ ನಡೆಸಲು ಸಹಾಯಕವಾಗುವಂಥ ಸಾಮಾಜಿಕ ಸಿದ್ಧಾಂತವನ್ನು ಮಾರ್ಕ್ಸ್ ರೂಪಿಸಿದ. ದುಡಿಯುವ ವರ್ಗದ ಬಡ ಜನಸಮೂಹ ತನ್ನ ಅಧಿಕಾರಗಳನ್ನು ಪಡೆಯಲು ಸಾಮಾಜಿಕ ಕ್ರಾಂತಿ ಅನಿವಾರ್ಯ ಎಂದು ಮಾರ್ಕ್ಸ್ ನಂಬಿದ್ದ. ಇದು ಅಧಿಕಾರದಲ್ಲಿದ್ದ ಮಾಧ್ಯಮ ವರ್ಗವನ್ನು ಬದಿಗೊತ್ತಿ, ಯಾವುದೇ ಆಸ್ತಿ ಇಲ್ಲದ ಮನುಷ್ಯನ ಹಕ್ಕುಗಳನ್ನು ಪ್ರತಿಪಾದಿ ಸುವ ಸಮಾಜವಾದಿ ಸಿದ್ಧಾಂತಗಳಲ್ಲಿ ನಂಬಿಕೆ ಇದ್ದ ದುಡಿಯುವ ವರ್ಗದವರಿಂದ ಮಾತ್ರ ಸಾಧ್ಯವಾಗುವ ವಿಷಯವಾಗಿತ್ತು. ಈ ಮೊದಲು ನಡೆದ ಕ್ರಾಂತಿಗಳ ಹಾಗೆ ದುಡಿಯುವ ವರ್ಗದ ಜನರ ಕ್ರಾಂತಿಯು, ಶೋಷಣೆಯನ್ನು ಮುಂದುವರಿಸುವ ಸಲುವಾಗಿ ಅಧಿಕಾರವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಸ್ತಾಂತರಿಸದೆ ಶೋಷಣೆಯನ್ನೇ ಸಂಪೂರ್ಣವಾಗಿ ನಾಶಗೊಳಿಸುವ ಉದ್ದೇಶ ಹೊಂದಿತ್ತು. ಯಾಕೆಂದರೆ ದುಡಿಯುವ ವರ್ಗದವರ ಅಧೀನದಲ್ಲಿ ಯಾವ ವರ್ಗವೂ ಇಲ್ಲದೇ ಇದ್ದುದರಿಂದ ಅಲ್ಲಿ ಶೋಷಣೆ ಉಳಿಯುವ ಹಾಗಿರಲಿಲ್ಲ. ಈ ಕ್ರಾಂತಿಯನ್ನು ಯಾವುದೇ ವರ್ಗ ಭೇದಗಳಿಲ್ಲದ ಸಮಾಜವನ್ನು ನಿರ್ಮಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆ ಎಂದು ಭಾವಿಸಲಾಯಿತು ಮತ್ತು ಈ ಕ್ರಾಂತಿಯ ಅವಧಿಯನ್ನು ಮನುಷ್ಯನ ಅಸ್ತಿತ್ವದ ಮಹತ್ವವನ್ನು ಅರ್ಥಮಾಡಿಕೊಂಡ ಯುಗದ ಆರಂಭ ಎನ್ನಲಾಯಿತು. ಮನುಷ್ಯ ಸಮಾಜದ ನೈಜ ಚಿತ್ರವನ್ನು ಅರ್ಥಮಾಡಿಕೊಂಡಿದ್ದ ಮಾರ್ಕ್ಸ್‌ವಾದಿ ಸಿದ್ಧಾಂತ ಸಾಧಿಸಲು ಹೊರಟಿದ್ದು ಇದನ್ನೇ. ಹಾಗೆಯೇ ಒಂದು ರಾಜಕೀಯ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆಯಲಿಕ್ಕಾಗಿ ಹಂತಹಂತವಾಗಿ ಇತಿಹಾಸವು ಸರಿಯದ ದಿಕ್ಕಿನಲ್ಲಿ ವಿಕಾಸ ಹೊಂದುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ಮಾರ್ಕ್ಸ್‌ನ ಅಭಿಪ್ರಾಯವಾಗಿತ್ತು. ಮಾರ್ಕ್ಸ್‌ನ ಪ್ರಕಾರ ಬಡ ಕೂಲಿಕಾರನ ಪಾತ್ರದಿಂದ ಸಾಮಾಜಿಕ ಇತಿಹಾಸ ಅತ್ಯಂತ ಎತ್ತರಕ್ಕೆ ಏರಿತು ಮತ್ತು ಈ ವರ್ಗ ಮುಂದೆ ಸಮಾಜದ ರಚನೆಯಲ್ಲಿ ಎಷ್ಟು ಪ್ರಮುಖವಾದ ಸ್ಥಾನ ಪಡೆಯಬಹುದು ಎಂಬುದರ ಬಗ್ಗೆ ಅವನು ಬಹಳ ಕಾತರಗೊಂಡಿದ್ದ.