ರಾಷ್ಟ್ರ ಸಂಘದ ಕಾರ್ಯವೈಫಲ್ಯ

ಪ್ಯಾರಿಸ್ ಶಾಂತಿ ಒಪ್ಪಂದದ ಪರಿಣಾಮವಾಗಿ ಜನಿಸಿದ ರಾಷ್ಟ್ರ ಸಂಘವು ಪ್ರಥಮ ಮಹಾಯುದ್ಧದ ವಿಜೇತ ರಾಷ್ಟ್ರಗಳ ಹಿತಾಸಕ್ತಿಗಳನ್ನು ರಕ್ಷಿಸುವ ಸಂಸ್ಥೆಯಾಯಿತು. ಯುರೋಪಿನಲ್ಲಿ ಸಂಭವಿಸಿದ ಯುದ್ಧಗಳನ್ನು ನಿಯಂತ್ರಿಸುವಲ್ಲಿ ವಿಫಲವಾಯಿತು. ಅಮೆರಿಕ, ರಷ್ಯಾಗಳನ್ನೊಳಗೊಂಡು ಅನೇಕ ರಾಷ್ಟ್ರಗಳು ರಾಷ್ಟ್ರ ಸಂಘದ ಸದಸ್ಯತ್ವವನ್ನು ತ್ಯಜಿಸಿದವು. ಜರ್ಮನಿಯನ್ನು ಯಾವಾಗಲೂ ಅಪರಾಧ ದೃಷ್ಟಿಯಿಂದ ನೋಡುವ ರಾಷ್ಟ್ರ ಸಂಘವು ಯುರೋಪಿನಲ್ಲಿ ಜರ್ಮನಿ ಮತ್ತು ರಷ್ಯಾಗಳ ಆಕ್ರಮಣಗಳನ್ನು ನಿಯಂತ್ರಿಸಲು ಗ್ರೀಕೋ-ಇಟಲಿಯನ್ನರ ಹಾಗೂ ಸ್ಪ್ಯಾನಿಷ್ ಅಂತರ್‌ಯುದ್ಧವನ್ನು ನಿಲ್ಲಿಸಲು ಅಸಮರ್ಥ ವಾಯಿತು. ರಾಷ್ಟ್ರೀಯತೆ ಮತ್ತು ಜನಾಂಗ ಗೌರವಗಳನ್ನು ಕಾಪಾಡುವಲ್ಲಿ ರಾಷ್ಟ್ರ ಸಂಘ ಯಶಸ್ವಿಯಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೋಲೆಂಡಿನ ಮೇಲೆ ದಾಳಿ ನಿಲ್ಲಿಸುವಂತೆ ಮಿತ್ರರಾಷ್ಟ್ರಗಳಾದ ಫ್ರಾನ್ಸ್ ಮತ್ತು ಇಂಗ್ಲೆಂಡ್‌ಗಳು ಹಿಟ್ಲರನಿಗೆ ಆದೇಶವಿತ್ತವು. ಹಿಟ್ಲರನು ಇವರ ಆದೇಶವನ್ನು ಧಿಕ್ಕರಿಸಿ ಸೆಪ್ಟಂಬರ್ ೧, ೧೯೨೯ ಬೆಳಗಿನ ಜಾವ ೫-೩೦ ಗಂಟೆಗೆ ಪೋಲೆಂಡಿನ ಮೇಲೆ ದಾಳಿಮಾಡಿದಾಗ ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳು ಜರ್ಮನಿಯ ಮೇಲೆ ಯುದ್ಧ ಘೋಷಿಸಿದವು. ಇದರಿಂದ ಎರಡನೆಯ ಮಹಾಯುದ್ಧ ಆರಂಭವಾಯಿತು.

ಸಮತಾವಾದದ ಪ್ರಸಾರ

ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯ ಫಲವಾಗಿ ಬಂಡವಾಳಶಾಹಿಗಳು, ವ್ಯಾಪಾರ ಮತ್ತು ಕೈಗಾರಿಕೆಗಳ ಮೇಲೆ ವಿಧಿಸಿದ ಅನೇಕ ಸರ್ಕಾರದ ನಿಬಂಧನೆಗಳು ತಮ್ಮ ಉತ್ಸಾಹವನ್ನು ತಡೆದು ದೇಶದ ಸಂಪತ್ತಿಗೆ ಅಡಚಣೆಯನ್ನುಂಟುಮಾಡಿವೆಯೆಂದು ಆಪಾದಿಸಲು ಆರಂಭಿಸಿದರು. ಇದೇ ಕಾಲಕ್ಕೆ ಮತ್ತೊಂದು ವರ್ಗವು ಎಲ್ಲಾ ಉತ್ಪಾದಕ ಕೈಗಾರಿಕೆಗಳನ್ನು ಸರಕಾರವೇ ವಹಿಸಿಕೊಂಡು ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗಾವಕಾಶ ಗಳನ್ನು ಕಲ್ಪಿಸಿಕೊಡಬೇಕೆಂಬ ವಾದವನ್ನು ಮಂಡಿಸಿತು. ಈ ವಿಚಾರ ಸಂಘರ್ಷವು ಸಮತಾವಾದದ ಹುಟ್ಟು ಮತ್ತು ಬೆಳವಣಿಗೆಗೆ ಕಾರಣವಾಯಿತೆಂದು ಹೇಳಬಹುದು. ಸಮತಾವಾದಕ್ಕೆ ಮಾರ್ಕ್ಸ್‌ವಾದ, ವೈಜ್ಞಾನಿಕ ಸಮಾಜವಾದ, ಕ್ರಾಂತಿಕಾರಕ ಸಮಾಜವಾದ ಎಂಬ ಹೆಸರುಗಳಿವೆ. ಸಮತಾವಾದ ಸಿದ್ಧಾಂತದ ಪ್ರತಿಪಾದಕ ಜರ್ಮನಿಯ ಅರ್ಥಶಾಸ್ತ್ರಜ್ಞ ರಾಗಿದ್ದಂತಹ ಕಾರ್ಲ್‌ಮಾರ್ಕ್ಸ್. ಈತನನ್ನು ಸಮಾಜವಾದದ ಪಿತಾಮಹನೆನ್ನುವರು. ಇವರ ಪ್ರಸಿದ್ಧ ಕೃತಿ ‘ದಾಸ್ ಕ್ಯಾಪಿಟಲ್’ (ಬಂಡವಾಳ) ಮತ್ತು ತನ್ನ ಸಹೋದ್ಯೋಗಿ ಫೆಡರಿಕ್ ಏಂಗೆಲ್ಸನೊಂದಿಗೆ ರಚಿಸಿದ ‘‘ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’’ (ಕಮುನಿಸ್ಟ್ ಘೋಷಣೆ) ಸಮತಾವಾದದ ಮೂಲ ಗ್ರಂಥಗಳಾಗಿವೆ. ಕಾರ್ಲ್‌ಮಾರ್ಕ್ಸ್‌ನ ನಂತರ ರಷ್ಯಾದ ನಾಯಕರುಗಳಾದ ಲೆನಿನ್ ಮತ್ತು ಸ್ಟ್ಯಾಲಿನ್ ಹಾಗು ಚೀನಾ ದೇಶದ ಮಾವೋತ್ಸೆತುಂಗ ಅವರು ಮಾರ್ಕ್ಸನ ಸಿದ್ಧಾಂತಗಳನ್ನಳವಡಿಸಿಕೊಂಡು ಸಮತಾವಾದವನ್ನು ಕಾರ್ಯರೂಪಕ್ಕಿಳಿಸಿದರು.

ಸಮತಾವಾದದ ಸಿದ್ಧಾಂತವು ಪ್ರಾಚೀನ ಕಾಲದಿಂದಲೂ ತಿಳುವಳಿಕೆ ಮತ್ತು ಸೌಮ್ಯ ಸ್ವರೂಪದ ಕಾರ್ಯಾಚರಣೆಯಲ್ಲಿತ್ತು. ಗ್ರೀಸ್ ದೇಶದ ತತ್ವಜ್ಞಾನಿ ಪ್ಲೇಟೊ ರಚಿಸಿರುವ ‘‘ರಿಪಬ್ಲಿಕ್’’ ಗ್ರಂಥದಲ್ಲಿ ಸಮತಾವಾದದ ಸಿದ್ಧಾಂತದ ಮೂಲಗಳನ್ನು ಕಾಣುತ್ತೇವೆ. ಮೆಕ್ಸಿಕೊ ಪ್ರಾಂತದ ಇಜಿಡೊದಲ್ಲಿ ಕೈಗೊಳ್ಳುತ್ತಿದ್ದ ಸಾಮೂಹಿಕ ಬೇಸಾಯ ಹಾಗೂ ಪರಿ ಶ್ರಮಕ್ಕೆ ತಕ್ಕಂತೆ ಅದರ ಉತ್ಪನ್ನದ ಹಂಚಿಕೆ ಕ್ರಮಕಾಲ ಸಮತಾವಾದದ ಸ್ವರೂಪವನ್ನು ತಿಳಿಸುತ್ತದೆ. ಕೆಲವು ವರ್ಷಗಳನಂತರ ಅಂದರೆ ಕ್ರಿ.ಶ.೧೭೯೪ರಲ್ಲಿ ಬಾಬಿಫ್ ಎಂಬ ಫ್ರೆಂಚ್ ವಿಚಾರವಾದಿ ಸಂಪತ್ತಿನ ಹಾಗೂ ಆರ್ಥಿಕ ಅವಕಾಶದ ಅಸಮಾನತೆಯನ್ನಿಟ್ಟುಕೊಂಡು ರಾಜಕೀಯ ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಮಾತನಾಡುವುದು ಸರಿಯಲ್ಲವೆಂದು ಪ್ರಚಾರ ನಡೆಸಿ ಸಮತಾವಾದ ವಿಚಾರಕ್ಕೆ ಪ್ರೋ ದೊರೆಯುವಂತೆ ಮಾಡಿದನು. ತತ್ಪರಿಣಾಮವಾಗಿ ಫ್ರಾನ್ಸಿನ ಅರಸರು ಈತನನ್ನು ಮರಣಕ್ಕೀಡು ಮಾಡಿದರು.

೧೮ನೆಯ ಶತಮಾನದ ಕೈಗಾರಿಕಾ ಕ್ರಾಂತಿಯ ತರುವಾಯ ಪ್ರಸಿದ್ಧ ಸಮಾಜವಾದಿ ಹಾಗೂ ಮಾನವತಾವಾದಿ ಚಿಂತಕರಾಗಿದ್ದ ರಾರ್ಬಟಿ ಓವನ್(೧೭೧೭-೧೮೫೮, ಇಂಗ್ಲಿಷ್ ಸಮತಾವಾದಿ ಪಿತಾಮಹ), ಚಾರ್ಲ್ಸ್ ಪೋರಿಯರ್, ಸೇಂಟ ಸೈಮನ್, ಲಾರ್ಡ್ ಯಾಸ್ಲಿ, ಲುಯಿಬ್ಲಾಂಕನ್ ಮುಂತಾದವರು ಕಾರ್ಮಿಕರ ಹಾಗೂ ರೈತರ ಹಿತಾಸಕ್ತಿಗಳ ಬಗ್ಗೆ ಹೋರಾಟ ನಡೆಸಿದರು. ಇದರಿಂದಾಗಿ ಇಂಗ್ಲೆಂಡಿನಲ್ಲಿ ೧೮೩೩ರಲ್ಲಿ ಕಾರ್ಖಾನೆ ಕಾನೂನನ್ನು ಜಾರಿಗೆ ತರಲಾಯಿತು. ನೂಲುವ ಹಾಗು ನೇಯ್ಗೆಯ ವಿರುದ್ಧ ಕೂಗೆಬ್ಬಿಸಲಾಯಿತು. ೧೮ನೆಯ ಶತಮಾನದಲ್ಲಿ ಉದ್ಯಮಿದಾರರು ಹಾಗು ಶ್ರೀಮಂತರು ಬಡವರನ್ನು ಹಾಗೂ ಕಾರ್ಮಿಕರನ್ನು ಹೇಗೆ ಶೋಷಿಸುತ್ತಿದ್ದರೆನ್ನುವುದನ್ನು ಚಾರ್ಲ್ಸ್ ಡಿಕನ್ಸನು (೧೮೧೨-೧೮೭೦) ತನ್ನ ಪ್ರಸಿದ್ಧ ಕೃತಿ ಡೆವಿಡ್ ಕಾಪರ್‌ಫೀಲ್ಡನಲ್ಲಿ ಚಿತ್ರಿಸಿದ್ದಾನೆ. ೧೮೩೩ರ ನಂತರ ಜಾರಿಗೊಳಿಸಲಾದ ಕಾರ್ಮಿಕರ ಶಾಸನಗಳು ಕಾರ್ಮಿಕ ಜಗತ್ತಿನಲ್ಲಿ ಜಾಗೃತಿಯನ್ನು ಮೂಡಿಸಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬಂಡವಾಳಗಾರರ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದಲು ಆರಂಭಿಸಿದರು. ಇದೇ ಅವಧಿಯಲ್ಲಿ ಫ್ರಾನ್ಸಿನಲ್ಲಿಯೂ ಸಹ ಲೂಯಿ ಫಿಲಿಫ್ ಹಾಗೂ ಅವನ ಪ್ರಧಾನ ಮಂತ್ರಿ ಗಿಜೋಟ್‌ನ ಬಿಗಿಯಾದ ಸಾಂಪ್ರದಾಯ ಧೋರಣೆಯನ್ನು ಬಲವಾಗಿ ವಿರೋಧಿಸಿದರು.

ಈ ಬೆಳವಣಿಗೆಗಳಿಂದಾಗಿ ಯುರೋಪಿನ ಬುದ್ದಿಜೀವಿಗಳು ಹಾಗು ಲೇಖಕರು ಔದ್ಯಮಿಕ ಸಂಘಟನೆ, ಹಣ ಮತ್ತು ಮಾನವಶ್ರಮ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಸಂದಿಗ್ಧ ಸಮಸ್ಯೆಗಳನ್ನು ಕುರಿತು ಹೊಸ ಸಿದ್ಧಾಂತಗಳನ್ನು ಬೆಳಕಿಗೆ ತಂದರು. ಇವುಗಳನ್ನು ಸಮಾಜವಾದಿ ಸಿದ್ಧಾಂತಗಳೆಂದು ಕರೆಯಲಾಯಿತು. ಯುರೋಪಿ ನಾದ್ಯಂತ ಬಂಡವಾಳಶಾಹಿಗಳ ಕಠೋರ ನೀತಿಯಿಂದಾಗಿ ತಮ್ಮ ಶ್ರಮಕ್ಕೆ ಅನುಗುಣವಾಗಿ ಪ್ರತಿಫಲ ದೊರೆಯಲಿಲ್ಲವೆಂದು ನಂಬಿಕೊಂಡಿದ್ದ ಲಕ್ಷೋಪಲಕ್ಷ ಶ್ರಮಜೀವಿಗಳು ಈ ಸಿದ್ಧಾಂತಗಳಿಂದ ಆಕರ್ಷಿತರಾದರು. ಬಹುಸಂಖ್ಯೆ ಜನತೆಯ ಹಿತಾಸಕ್ತಿಗನುಗುಣವಾಗಿ ಸಮಾಜ ಪುನಾರಚನೆಯ ವಿಚಾರವನ್ನು ಕ್ಲೌಡಿ ಸೇಂಟ ಸೈಮನ್‌ನು ಮಂಡಿಸುತ್ತ ಉತ್ಪಾದನೆಯ ಸಾಧನಗಳನ್ನು ಸರ್ಕಾರವು ತನ್ನ ಅಧೀನದಲ್ಲಿರಿಸಿಕೊಂಡು ‘ಸಾಮರ್ಥ್ಯಕ್ಕೆ ತಕ್ಕ ಶ್ರಮ’ ಹಾಗೂ ‘ಸೇವೆಗೆ ತಕ್ಕ ಪ್ರತಿಫಲ’ ಎಂಬು ತತ್ವಕ್ಕನುಗುಣವಾಗಿ ಉದ್ಯಮಗಳನ್ನು ಸಂಘಟಿಸಬೇಕೆಂದು ಘೋಷಿಸಿದನು. ಈತನು ಪ್ರತಿಪಾದಿಸಿದ ತತ್ವದಂತೆ ಯುರೋಪಿನ ಪ್ರಬಲ ರಾಜಕೀಯ ಶಕ್ತಿಯಾಗಿದ್ದ ಲೂಯಿ ಬ್ಲಾಂಕನು ಸಮಾಜವಾದಿ ಪಕ್ಷ ಸ್ಥಾಪಿಸಿ ಲೂಯಿ ಫಿಲಿಪ್ ಕಾರ್ಮಿಕ ಹಾಗೂ ರೈತ ವಿರೋಧಿ ಅರಸೊತ್ತಿಗೆಯನ್ನು ಕಿತ್ತೊಗೆಯುವಲ್ಲಿ ಮತ್ತು ಅನಂತರ ಸ್ಥಾಪಿಸಲ್ಪಟ್ಟ ಗಣರಾಜ್ಯದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದನು. ಉದ್ಯೋಗಾವಕಾಶ ಪ್ರತಿಯೊಬ್ಬನ ಹಕ್ಕೆಂದು ಅದನ್ನು ಒದಗಿಸುವುದು ಸರ್ಕಾರದ ಕರ್ತವ್ಯವೆಂದು ಲೂಯಿ ಬ್ಲಾಂಕನು ಘೋಷಿಸಿದನು. ಸರಕಾರವು ತನ್ನ ಸ್ವಂತ ಹಣ ತೊಡಗಿಸಿ ರಾಷ್ಟ್ರೀಯ ಉದ್ಯಮಗಳನ್ನು ಸ್ಥಾಪಿಸಬೇಕು. ಶ್ರಮ ಜೀವಿಗಳೇ ಅಂತಹ ಆಡಳಿತವನ್ನು ನಿರ್ವಹಿಸಿ ಶ್ರಮದ ಸಂಪೂರ್ಣ ಲಾಭವನ್ನು ಪಡೆಯಬೇಕೆಂದು ತಿಳಿಸಿದನು. ಈ ಸಿದ್ಧಾಂತವು ಕೈಗಾರಿಕೆಗಳ ರಾಷ್ಟ್ರೀಕರಣಕ್ಕೆ ನಾಂದಿ ಹಾಡಿ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವೆ ಹೋರಾಟ ಸೃಷ್ಟಿಸಿ ವೈಜ್ಞಾನಿಕ ಸಮಾಜವಾದ ಸ್ಥಾಪನೆಗೆ(ಕಮ್ಯುನಿಸಂ) ಅನುವು ಮಾಡಿಕೊಟ್ಟಿತು.

ಕ್ರಾಂತಿಗಾಗಿ ಕಾರ್ಮಿಕರನ್ನು ಹಾಗೂ ರೈತರನ್ನು ಸಂಘಟಿಸಲು ಬ್ರಿಸೆಲ್‌ಗೆ ಕಾರ್ಲ್‌ಮಾರ್ಕ್ಸ್ ತೆರಳಿದನು. ಅಲ್ಲಿ ‘ಸಮತಾವಾದಿಗಳ ಪಡೆ’ ಎಂಬ ಸಂಘವನ್ನು ಕಟ್ಟಿದನು. ೧೮೪೭ರಲ್ಲಿ ಈ ಪಡೆಯ ಸಮ್ಮೇಳನ ಲಂಡನ್ನಿನಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ತಾನು ಮಂಡಿಸಿದ ಕಮ್ಯುನಿಸ್ಟ್ ಮ್ಯಾನಿಫೆಸ್ಟೊಗೆ ಸರ್ವಸಮ್ಮತಿ ದೊರೆಯಿತು. ಕಮ್ಯುನಿಸ್ಟ್ ಘೋಷಣೆ ಕುರಿತು ಮಾತನಾಡುತ್ತ ಕಾರ್ಲ್‌ಮಾರ್ಕ್ಸ್ ಈ ರೀತಿ ಹೇಳುತ್ತಾನೆ.

ಎಲ್ಲ ಸಮಾಜಗಳ ಇತಿಹಾಸವು ವರ್ಗ ಕಲಹಗಳ ಇತಿಹಾಸ ಸಮಾಜದ ಯಾವ ಅಂಶದ ಪ್ರಗತಿಗೇ ಆಗಲಿ ಅದಕ್ಕೆ ವ್ಯತಿರಿಕ್ತವಾದ ವಿರುದ್ಧ ಶಕ್ತಿಯೊಂದು ಬೆಳೆಯುತ್ತದೆ. ಈ ಎರಡು ಶಕ್ತಿಗಳು ಸಂಘರ್ಷಿಸಿದಂತೆ ಅವೆರಡಕ್ಕೂ ಭಿನ್ನವಾದ ನೂತನ ಅಂಶವೊಂದು ಸಿದ್ದಿಸುತ್ತದೆ. ಈ ಸತ್ಯಾಂಶ ಆರ್ಥಿಕ ಸಮಸ್ಯೆಗಳಿಗೂ ಅನ್ವಯಿಸುತ್ತದೆ. ಜಗತ್ತಿನಲ್ಲಿ ಬಂಡವಾಳಶಾಹಿಗಳು ರಾಷ್ಟ್ರದ ಸಂಪನ್ಮೂಲಗಳಿಗೆ ಒಡೆಯರಾಗಿ ಅವರು ನಡೆಸುವ ಶೋಷಣೆಯ ಫಲವಾಗಿ ಕಾರ್ಮಿಕರ ಕಷ್ಟಗಳು ಹೆಚ್ಚುತ್ತವೆ. ಎಲ್ಲರಿಗೂ ಸಮಾನ ಹಕ್ಕು ಬಾಧ್ಯತೆಗಳಿದ್ದು, ಸಮಾನ ಆಸ್ತಿಪಾಸ್ತಿಗಳನ್ನು ಹೊಂದಲು ಬಂಡವಾಳಶಾಹಿತ್ವ ರೂಪುಗೊಳ್ಳಲು ಅವಕಾಶವಿಲ್ಲದ ರಾಜ್ಯ ಪದ್ಧತಿಯನ್ನು ಕಟ್ಟಬೇಕಾಗಿದೆ. ಇದು ಕ್ರಾಂತಿಯಿಂದ ಮಾತ್ರ ಸಾಧ್ಯವೆಂದು

ಸಾರಿದನು. ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸಿ ರಾಷ್ಟ್ರೀಕರಣದ ನೀತಿಯೊಂದಿಗೆ ಸಾಮೂಹಿಕ ಬೇಸಾಯವನ್ನು ಆರಂಭಿಸಲು ಬೇಕಾಗುವ ಸರ್ಕಾರವನ್ನು ಸ್ಥಾಪಿಸಲು ರೈತ ಹಾಗೂ ಕಾರ್ಮಿಕರ ನಡುವೆ ಮಧುರ ಬಾಂಧವ್ಯವನ್ನು ಕಲ್ಪಿಸುವ ವಿಷಯವನ್ನು ಒತ್ತಿ ಹೇಳಿದನು.

ಯುರೋಪ್ ದೇಶಗಳ ಮೇಲೆ ಈ ಘೋಷಣೆ ಮಹತ್ವಪೂರ್ಣ ಪ್ರಭಾವ ಬೀರಿತು. ಭೂ ಒಡೆಯರಿಗೂ ಶ್ರಮಜೀವಿಗಳಿಗೂ ಉದ್ದಿಮೆದಾರರಿಗೂ ಮತ್ತು ಕಾರ್ಮಿಕರಿಗೂ ಎಲ್ಲೆಡೆ ಘರ್ಷಣೆ ಆರಂಭವಾದುವು. ೧೮೪೮ರಲ್ಲಿ ಫ್ರಾನ್ಸ್‌ನಲ್ಲಿ ಕ್ರಾಂತಿ ನಡೆಯಿತು. ನಂತರ ಮಾರ್ಕ್ಸ್‌ನು ಪ್ಯಾರಿಸ್‌ಗೆ ಹೋಗಿ ಪ್ರಾನ್ಸಿನ ಕಾರ್ಮಿಕರಿಗೆ ಮಾರ್ಗದರ್ಶನ ಮಾಡಲು ಪ್ರಾರಂಭಿಸಿದನು. ಮಾರ್ಕ್ಸ್‌ನನ್ನು ಅಪಾಯಕಾರಿ ವ್ಯಕ್ತಿಯೆಂದು ಘೋಷಿಸಿ ಸರ್ಕಾರ ಆತನನ್ನು ಅಲ್ಲಿಂದ ಓಡಿಸಿತು. ಮಾರ್ಕ್ಸನು ಜರ್ಮನಿಗೆ ಬಂದು ‘ಕ್ರಾಂತಿ’ ಎಂಬ ಪತ್ರಿಕೆಯೊಂದನ್ನು ಆರಂಭಿಸಿ ಯುರೋಪ್ ದೇಶಗಳಲ್ಲಿ ಕಾರ್ಮಿಕ ಮುಖಂಡರ ಬೆಂಬಲವನ್ನು ಸಮತಾವಾದಕ್ಕೆ ದೊರಕಿಸಿಕೊಟ್ಟನು.

ಸಮಾಜದಲ್ಲಿ ಬಂಡವಾಳಶಾಹಿ ಪದ್ಧತಿಯನ್ನು ತೊಡೆದುಹಾಕಿ ಕೇಂದ್ರೀಕೃತ ಸಂಪತ್ತನ್ನು ವಿಕೇಂದ್ರಗೊಳಿಸಿ, ದುಡಿಯುವ ಕೈಗಳಿಗೆ ಸಮಾನ ಅವಕಾಶ ಕಲ್ಪಿಸಿ, ಮಾದರಿ ರಾಜ್ಯ (ಸರ್ವರ) ಹಿತ ಸಾಧಿಸುವುದು ಸಮತಾವಾದದ ಗುರಿಯಾಗಿತ್ತು. ಇದರ ಮುಖ್ಯ ತತ್ವಗಳು ವರ್ಗ ಸಂಘರ್ಷ ಮತ್ತು ಮಹಾಕ್ರಾಂತಿ ಅಂದರೆ ಹಿಂಸಾತ್ಮಕ ಮಾರ್ಗದ ಮೂಲಕ ಕಾರ್ಮಿಕರ ಸರ್ವಾಧಿಕಾರವನ್ನು ವ್ಯಕ್ತಿ ಸ್ವಾತಂತ್ರ್ಯ, ಸೃಜನಶೀಲತೆ ಮತ್ತು ಆತನ ಸರ್ವಾಂಗೀಣ ಅಭಿವೃದ್ದಿಗಾಗಿ ಬಲಾತ್ಕಾರ ಪೂರ್ವಕವಾಗಿ ಸ್ಥಾಪಿಸುವುದು.

ಕಾರ್ಮಿಕರ ಸರ್ವಾಧಿಕಾರದ ಕುರಿತು ಮಾರ್ಕ್ಸ್ ಈ ರೀತಿ ಅಭಿಪ್ರಾಯಪಡುತ್ತಾನೆ.

ಹಳೆಯ ಸಮಾಜವನ್ನು ಕೊನೆಗೊಳಿಸಿ ಹೊಸ ಸಮಾಜ ಸ್ಥಾಪನೆಗೆ ಕಾರ್ಮಿಕರ ಸರ್ವಾಧಿಕಾರದ ಸ್ಥಾಪನೆ ಅಗತ್ಯ. ಇಂತಹ ರಾಜ್ಯದಲ್ಲಿ ಅಧಿಕಾರ ಸೂತ್ರವನ್ನು ವಹಿಸುವ ನಾಯಕರ ಅಧಿಕಾರ ವ್ಯಾಪ್ತಿಗೆ ಮಿತಿ ಇರಬಾರದು. ಅಂದಾಗ ಮಾತ್ರ ರಾಜ್ಯದ ನೈಸರ್ಗಿಕ ಸಂಪತ್ತನ್ನು ರಾಷ್ಟ್ರೀಕರಣಗೊಳಿಸಲು ಮತ್ತು ಬಂಡವಾಳ ಪದ್ಧತಿಯನ್ನು ನಿರ್ಮೂಲ ಮಾಡಲು ಸಾಧ್ಯ. ಇಂತಹ ಸಮತಾವಾದ ಸರ್ಕಾರ ವರ್ಗ ರಹಿತ ಸಮಾಜವನ್ನು ಸೃಷ್ಟಿಸಿ ಜನರ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಬಲ್ಲದು. ಕಾರ್ಲ್ ಮಾರ್ಕ್ಸನು ಈ ಆದರ್ಶ ರಾಜ್ಯದ ಪ್ರಾರಂಭದಲ್ಲಿ ಜನರು ಪರಿಶ್ರಮಕ್ಕೆ ತಕ್ಕ ಫಲವನ್ನು ಅಪೇಕ್ಷೆ ಮಾಡಿ ಮುಂದಿನ ದಿನಗಳಲ್ಲಿ ಕೆಲಸ ಸಂಸ್ಕೃತಿಯನ್ನು ರೂಢಿಸಿಕೊಳ್ಳುವರು. ಆಗ ಜನರು ಹೆಚ್ಚು ಹೆಚ್ಚು ದುಡಿದು ರಾಜ್ಯದ ಸಂಪತ್ತನ್ನು ಹೆಚ್ಚಿಸುವರು. ಉತ್ಪಾದನೆಯ ಎಲ್ಲಾ ಸಂಪತ್ತು ರಾಜ್ಯದ ಸೊತ್ತಾಗಿರುವುದರಿಂದ ಜನರ ಎಲ್ಲ ಅವಶ್ಯಕತೆಗಳನ್ನು ಈಡೇರಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಸರಕಾರವೇ ಹಮ್ಮಿಕೊಳ್ಳುತ್ತದೆ. ತತ್ಪರಿಣಾಮವಾಗಿ ಶ್ರೀಮಂತ, ಬಡವ ಎನ್ನುವ ಭೇದ ನಶಿಸಿ ಬಡತನ ನಿವಾರಣೆಯಾಗಿ ಶಾಂತಿ ಮತ್ತು ಸುಖವುಳ್ಳ ಸಮಾಜದಲ್ಲಿ ನೆಲೆಗೊಳ್ಳು ವುದು. ಸಮತಾವಾದದ ತತ್ವಗಳಿಂದಾಗಿ ರಾಷ್ಟ್ರೀಯ ಪ್ರಜ್ಞೆಯ ಜೊತೆಗೆ ಅಂತಾರಾಷ್ಟ್ರೀಯ ಪ್ರಜ್ಞೆ ಉದಯಿಸಿ ಯುದ್ಧ ಭೀತಿಗಳು ಮಾಯವಾಗುತ್ತದೆ.

ಕಾರ್ಲ್‌ಮಾರ್ಕ್ಸ್‌ನ ಮೇಲಿನ ವಿಚಾರಗಳಿಂದ ಪ್ರೇರಿತವಾಗಿ ೧೯೧೭ರಲ್ಲಿ ಲೆನಿನ್ ಮತ್ತು ಸ್ಟಾಲಿನ್‌ರು ರಷ್ಯಾದಲ್ಲಿ ಕ್ರಾಂತಿ ಮಾಡಿ ಸಮತಾವಾದ ರಾಜ್ಯವನ್ನು ಸ್ಥಾಪಿಸಿದರು. ಕಾರ್ಲ್‌ಮಾರ್ಕ್ಸನ ಸಿದ್ಧಾಂತಗಳನ್ನು ಜರ್ಮನಿಯಲ್ಲಿ ಅನುಷ್ಟಾನಗೊಳಿಸಲು ಕಮ್ಯುನಿಸ್ಟರು ೧೯೨೩ರವರೆಗೂ ತಮ್ಮನ್ನು ರಾಜಕೀಯದಲ್ಲಿ ಸಕ್ರಿಯವಾಗಿ ಅರ್ಪಿಸಿಕೊಂಡರು. ೧೯೧೯ರಲ್ಲಿ ಹಂಗೇರಿ ಕಮ್ಯುನಿಸ್ಟರ ಆಡಳಿತಕ್ಕೊಳಪಟ್ಟಿತ್ತು. ೧೯೪೮ರಲ್ಲಿ ಚೀನಾ ದೇಶದಲ್ಲಿ ಮಾವೋತ್ಸೆತುಂಗ್‌ನ ನಾಯಕತ್ವದಲ್ಲಿ ಕ್ರಾಂತಿ ಸಂಭವಿಸಿ ಸಮತಾವಾದದ ಸರ್ಕಾರವು ಸ್ಥಾಪಿಸಲ್ಪಟ್ಟಿತು. ಮುಂದಿನ ದಿನಗಳಲ್ಲಿ ಯುಗೋಸ್ಲೋವಿಯ, ಉತ್ತರ ವಿಯಟ್ನಾಂ ಮತ್ತು ಕ್ಯೂಬಾ ದೇಶಗಳು ಮಾರ್ಕ್ಸ್ ತತ್ವಾಧಾರಿತ ಸಮತಾವಾದದ ಸರ್ಕಾರಗಳಿಗೆ ಅವಕಾಶ ಮಾಡಿಕೊಟ್ಟವು.

ರಷ್ಯಾದಲ್ಲಿ ಝಾರನ ಪ್ರಭುತ್ವವನ್ನು ಕೊನೆಗಾಣಿಸಿದ ಲೆನಿನ್ನನು ಕಾರ್ಲ್‌ಮಾರ್ಕ್ಸನ ವಿಚಾರಧಾರೆಯನ್ನು ರಷ್ಯಾದಲ್ಲಿ ಹರಡಿದನು. ಲೆನಿನ್ನನು ರಷ್ಯಾದ ರಾಜಧಾನಿಯನ್ನು ಸೇಂಟ ಪೀಟರ್ಸ್‌ಬರ್ಗ್‌ನಿಂದ ಮಾಸ್ಕೊಗೆ ವರ್ಗಾಯಿಸಿ ತ್ವರಿತಗತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳನ್ನು ಕೈಕೊಂಡನು. ಸಮತಾವಾದದ ತತ್ವಗಳನ್ನು ಪ್ರಸಿದ್ಧ ಕಾದಂಬರಿಕಾರನಾಗಿದ್ದ ಮ್ಯಾಕ್ಸಿಂಗಾರ್ಕಿ ಹರಡಿದನು. ೧೯೧೮ರಲ್ಲಿ ಸೋವಿಯತ್ ಸಂವಿಧಾನವು ಶಾಸಕಾಂಗವನ್ನು ಸ್ಥಾಪಿಸಿತು. ಈ ನಿಮಿತ್ತ ಬೊಲ್ಷವಿಕ್ ಅಥವಾ ಕಮ್ಯುನಿಸ್ಟ್ ಪಕ್ಷವನ್ನು ಹೊರತು ಎಲ್ಲ ಪಕ್ಷಗಳನ್ನು ಲೆನಿನ್ ನಿಷೇಧಿಸಿದನು. ಲೆನಿನ್ನನು ‘‘ಹೊಸ ಆರ್ಥಿಕ ನೀತಿ’’ಯನ್ನು ಉದ್ಘಾಟಿಸುತ್ತ ‘‘ಭಯೋತ್ಪಾದನೆ ಹಾಗೂ ಹಿಂಸಾಚಾರ ಗಳಿಲ್ಲದೆ ಶ್ರಮಜೀವಿಗಳ ಸರ್ವಾಧಿಕಾರತ್ವ ಸಾಧ್ಯವಿಲ್ಲ. ಬಂಡವಾಳಶಾಹಿಗಳ ವಿರುದ್ಧ ರಕ್ತಪಾತ ಮಾಡುವುದನ್ನು ದೃಢವಾಗಿ ಸಮರ್ಥಿಸುತ್ತೇನೆ’’ ಎಂದು ಸಾರಿದನು. ತನ್ನ ಆರ್ಥಿಕ ನೀತಿಯಂತೆ ಬಲಾತ್ಕಾರವಾಗಿ ಎಲ್ಲ ಖಾಸಗಿ ಆಸ್ತಿಯನ್ನು ಜಪ್ತಿ ಮಾಡಲಾಯಿತು. ಕಾರ್ಖಾನೆಗಳು, ಗಿರಿಣಿಗಳು, ರೈಲುಗಳು ಮತ್ತು ಬ್ಯಾಂಕುಗಳು ಸಹ ರಾಷ್ಟ್ರದ ಒಡೆತನಕ್ಕೆ ಸೇರಿದವು. ಜಮೀನುದಾರರ ಜಾಗೀರುಗಳನ್ನು ಸ್ವಾಧೀನಪಡಿಸಿಕೊಂಡ ಪರಿಣಾಮವಾಗಿ ಬಹುಶಃ ೧೩ ಕೋಟಿ ೫೦ ಲಕ್ಷ ಎಕರೆ ಜಮೀನು ಜನತೆಯ ಒಂದು ಹೊಸ ವರ್ಗಕ್ಕೆ ವರ್ಗಾವಣೆಯಾಯಿತು. ಮಧ್ಯಮ ಹಾಗು ಶ್ರೀಮಂತ ವರ್ಗಗಳು ನಾಶವಾದವು. ರೈತರು ಮತ್ತು ಕಾರ್ಮಿಕರು ಸರಕಾರ ನಡೆಸುವ ಅಧಿಕಾರ ಪಡೆದು ರಷ್ಯಾದ ಹಳೆಯ ರಾಜಕೀಯ ವ್ಯವಸ್ಥೆಯನ್ನು ಕೊನೆಗೊಳಿಸಿದರು. ಸಾವಿರಾರು ಜನರ ಜೀವ ಮತ್ತು ಸ್ವಾತಂತ್ರ್ಯಗಳನ್ನು ಬಲಿ ತೆಗೆದುಕೊಂಡು ಲೆನಿನ್ನನು ಈ ಗುರಿಯನ್ನು ಸಾಧಿಸಿದನು.

ಲೆನಿನ್ನನ ನಂತರ ಅಧಿಕಾರಕ್ಕೆ ಬಂದ ಸ್ಟ್ಯಾಲಿನ್ನನು ಎಲ್ಲ ಖಾಸಗಿ ಒಡೆತನವನ್ನು ರದ್ದುಗೊಳಿಸಿ ರಷ್ಯಾದ ಸರ್ವತೋಮುಖ ಅಭಿವೃದ್ದಿಗಾಗಿ ೧೯೨೮ರಲ್ಲಿ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದನು. ಇದರಿಂದ ಕೈಗಾರಿಕಾ ಉತ್ಪನ್ನಗಳು ಹೆಚ್ಚಿದವು. ಉದ್ದಿಮೆ ಮತ್ತು ವ್ಯಾಪಾರಗಳನ್ನು ರಾಷ್ಟ್ರೀಕರಣಗೊಳಿಸಿ ಸಾಮೂಹಿಕ ಪದ್ಧತಿಯ ಬೇಸಾಯವನ್ನು ಜಾರಿಗೆ ತಂದನು. ಇತ್ತ ಯುಗೋಸ್ಲಾವಿಯಾದಲ್ಲಿ ಎರಡನೆ ಮಹಾಯುದ್ಧ ನಡೆಯುವಾಗ ಜೆ.ಬಿ.ಟಿಟೊನ್ (೧೮೨೯-೧೯೮೦) ನಾಯಕತ್ವದಲ್ಲಿ ಕಮ್ಯುನಿಸ್ಟ್ ಚಳವಳಿ ಪ್ರಬಲಗೊಂಡಿತು. ಚೀನಾದಲ್ಲಿ ೧೯೨೧ರಲ್ಲಿ ಮಾವೋತ್ಸೆತುಂಗನ (೧೮೯೩-೧೯೭೬) ನಾಯಕತ್ವದಲ್ಲಿ ಕಮ್ಯುಮಿಸ್ಟ್ ಪಕ್ಷ ಉದಯವಾಯಿತು. ಈತನು ರಾಜಪ್ರಭುತ್ವವಾದಿಯಾದ ಕೈಷೇಕ್‌ನ ವಿರುದ್ಧ ಕ್ರಾಂತಿಮಾಡಿ ೧೯೪೮ರಲ್ಲಿ ಚೀನಾ ದೇಶದಲ್ಲಿ ಕಮ್ಯುನಿಸ್ಟ್ ಸರಕಾರ ವನ್ನು ಸ್ಥಾಪಿಸಿದನು. ೧೯೧೯ರ ಮಾರ್ಚ್‌ನಲ್ಲಿ ಬೇಲಾಕುನ್ ಹಾಗೂ ಅವನ ಸಂಗಡಿಗರು ಹಂಗೇರಿಯಲ್ಲಿ ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದನು. ರಷ್ಯಾ ಮಾದರಿಯಲ್ಲಿ ಸುಧಾರಣೆ ಕೈಕೊಂಡ ಕಮ್ಯುನಿಸ್ಟ್ ನಾಯಕ ಬೇಲಾಕುನ್‌ನು ಆರು ತಿಂಗಳ ನಂತರ ಅಂದರೆ ಆಗಸ್ಟ್ ೧೯೧೯ರಲ್ಲಿ ಜನತೆಯ ವಿರೋಧವನ್ನೆದುರಿಸಲಾರದೆ ಅಧಿಕಾರ ಕಳೆದುಕೊಂಡನು. ಯುರೋಪಿನಲ್ಲಿ ಸಮತಾವಾದದ ಬೆಳವಣಿಗೆಯಿಂದಾಗಿ ಸಮಾಜವಾದ, ಸಾಮೂಹಿಕವಾದ ಮತ್ತು ಮಾರ್ಕ್ಸವಾದಗಳು ಜನ ಸಾಮಾನ್ಯನ ಹೃದಯದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ತತ್ವಗಳಷ್ಟೇ ಜನಪ್ರಿಯವಾಗಿ ನೆಲೆಸಿದವು.

ಇಟಲಿಯಲ್ಲಿ ಫ್ಯಾಸಿಸಂಫ್ಯಾಸಿಸ್ಟ್ ಸಿದ್ಧಾಂತದ ಉದಯ

ಔದ್ಯೋಗಿಕರಣ ಮತ್ತು ನಗರೀಕರಣಗಳ ವೈಫಲ್ಯಗಳಿಂದಾಗಿ ಮತ್ತು ಪ್ರಥಮ ಮಹಾಯುದ್ಧದ ನಂತರ ಯುರೋಪಿನಲ್ಲಿ ಕಾಣಿಸಿಕೊಂಡ ರಾಜಕೀಯ ಮತ್ತು ಆರ್ಥಿಕ ಅವ್ಯವಸ್ಥೆಗಳಿಂದಾಗಿ ಬಂಡವಾಳಶಾಹಿ ವ್ಯವಸ್ಥೆ, ಪ್ರಜಾಪ್ರಭುತ್ವ ಮತ್ತು ಕಮ್ಯುನಿಸ್ಟ್ ನೀತಿಗಳನ್ನು ಅಲ್ಲಿಯ ಜನ ಅದರಲ್ಲೂ ಇಟಲಿಯನ್ನರು ಮತ್ತು ಜರ್ಮನ್ನರು ತಿರಸ್ಕರಿಸಿ ದರು. ಈ ಸನ್ನಿವೇಶದಲ್ಲಿ ಜನ್ಮತಾಳಿದ ಫ್ಯಾಸಿಸ್ಟವಾದವು ಇಪ್ಪತ್ತನೆಯ ಶತಮಾನದ (೧೯೨೨-೧೯೪೫) ಇಟಲಿಯ ರಾಜಕೀಯ ಸಿದ್ಧಾಂತವಾಗಿದೆ. ಇದಕ್ಕೆ ಚಾರಿತ್ರಿಕ ಘಟನೆಗಳನ್ನು ಬಿಟ್ಟರೆ ಬೇರೆ ಯಾವ ತತ್ವಗಳು ಕಾಣುವುದಿಲ್ಲ. ಕೆಳಕಾಣಿಸಿದ ಅಂಶಗಳನ್ನು ಬೆನಿಟೊ ಮುಸ್ಸಲೋನಿ ಪ್ರತಿಪಾದಿಸಿದ, ಫ್ಯಾಸಿಸಂನ ಉದಯಕ್ಕೆ ಕಾರಣವಾದವು. ಇಟಲಿಯ ನೆರವಿನೊಂದಿಗೆ ಜಯ ಸಾಧಿಸಿದ ಮಿತ್ರ ರಾಷ್ಟ್ರಗಳು ಪ್ರಥಮ ಮಹಾಯುದ್ಧದ ನಂತರ ತಮ್ಮ ಆಶ್ವಾಸನೆಯಂತೆ ಆಸ್ಟ್ರಿಯಾಕ್ಕೆ ಸೇರಿದ ಎರಡು ಜಿಲ್ಲೆಗಳಾದ ಟ್ರೆನ್‌ಟಿನೊ ಮತ್ತು ಟ್ರಿಸ್ವೆಗಳನ್ನು ಆಫ್ರಿಕಾದ ಜರ್ಮನ್ ವಸಾಹತುಗಳನ್ನು, ಫಿಯುಮಿ ಕೋಟೆಯನ್ನು ಇಟಲಿಗೆ ಕೊಡಲು ನಿರಾಕರಿಸಿದವು. ಇದರಿಂದಾಗಿ ಇಟಲಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರತಿಷ್ಟೆಗೆ ಧಕ್ಕೆಯುಂಟಾಯಿತು.

ಯುದ್ಧದಲ್ಲಿ ಹೋರಾಡಿ ಘಾಸಿಗೊಂಡಿದ್ದ ಮುಸ್ಸೊಲೋನಿಯು, ಅನೇಕ ದೇಶಭಕ್ತರು, ಕಾರ್ಮಿಕರು, ಬುದ್ದಿಜೀವಿಗಳು, ಮಾಜಿ ಸೈನಿಕರು ಹಾಗು ಕ್ರಾಂತಿಕಾರಿ ಸಮಾಜವಾದಿಗಳು ಇತರರು ಮಿತ್ರರಾಷ್ಟ್ರಗಳ ಧೋರಣೆಯಿಂದ ಅವಮಾನಿತರಾದರು. ಇವರೆಲ್ಲರು ಯುದ್ಧೋತ್ತರ ಇಟಲಿಯಾ ಈ ದುಸ್ಥಿತಿಗೆ ಇಟಲಿಯ ಗಿಯೊಲಿಟ್ಟಿ (ಮಧ್ಯಮ ವರ್ಗದ ಉದಾರವಾದಿ) ನಾಯಕತ್ವದ ದುರ್ಬಲ ಸರಕಾರವೆ ಕಾರಣವೆಂದು ನಿರ್ಧರಿಸಿ ಆತನ ಸರಕಾರವನ್ನು ಕಿತ್ತೆಸೆಯಲು ಪಣತೊಟ್ಟರು. ಇವರೆಲ್ಲ ‘‘ಫ್ಯಾಸಿಯೊ’’ ಎಂಬ ಸಂಘವನ್ನು ಮುಸೊಲೋನಿ ನಾಯಕತ್ವದಲ್ಲಿ ಕಟ್ಟಿಕೊಂಡು ಇಟಲಿಯಲ್ಲಿಯ ರಾಜಕೀಯ ಅಸ್ಥಿರತೆಗೆ (ಬೊಲ್ಷವಿಕ್ಸ್) ಮತ್ತು ಅರಾಜಕತೆಗೆ ಕಾರಣರಾದ ಸಮಾಜವಾದಿಗಳ, ಕಮ್ಯುನಿಸ್ಟರ ಹಾಗೂ ರಷ್ಯಾ ಪ್ರೇರಿತ (ಬೊಲ್ಷವಿಕ್ಸ್) ಕ್ರಾಂತಿಕಾರಿ ದುಷ್ಟ ಶಕ್ತಿ ಸಂಘಟನೆಗಳನ್ನು ಬಗ್ಗು ಬಡಿಯಲು ಪ್ರತಿಜ್ಞೆಗೈದರು. ಕಳೆದು ಹೋದ ಇಟಲಿಯ ರೋಮ್ ಸಾಮ್ರಾಜ್ಯದ ವೈಭವವನ್ನು ಪುನಃಸ್ಥಾಪಿಸಿ ಸಂಸ್ಕೃತಿ ಪರಂಪರೆಯನ್ನು ಕಾಯ್ದುಕೊಂಡು ಹೋಗಲು ನಿರ್ಧರಿಸಿದರು. ಪ್ರಥಮ ಮಹಾಯುದ್ಧದ ಪರಿಣಾಮವಾಗಿ ಇಟಲಿ ಆರ್ಥಿಕ ಸಂಕಷ್ಟಕ್ಕೊಳ ಗಾಯಿತು. ಹಣವು ತನ್ನ ಮೌಲ್ಯವನ್ನು ಕಳೆದುಕೊಂಡದ್ದರಿಂದ ಇಟಲಿಯನ್ನರು ಹಣ ದುಬ್ಬರದ ಸಮಸ್ಯೆಯನ್ನು ಎದುರಿಸಬೇಕಾಯಿತು. ವಾಣಿಜ್ಯ ವ್ಯಾಪಾರಗಳು ಸ್ಥಗಿತಗೊಂಡವು. ನಿರುದ್ಯೋಗ ಸಮಸ್ಯೆಯು ಅಲ್ಲಿನ ಯುವಕರನ್ನು ಮಾಜಿ ಸೈನಿಕರನ್ನು ಹಾಗೂ ಕಾರ್ಮಿಕರನ್ನು ಕಂಗೆಡಿಸಿತು. ತತ್ಪರಿಣಾಮವಾಗಿ ಬಡತನ, ಅರಾಜಕತೆ ತಾಂಡವವಾಡಲು ಪ್ರಾರಂಭಿಸಿತು.

ದೋಷಪೂರಿತ ಮತದಾನ ವ್ಯವಸ್ಥೆಯಿಂದ ಇಟಲಿಯ ‘‘ಚೇಂಬರ್ ಆಫ್ ಡೆಪ್ಯುಟಿಸ್’’ (ಪಾರ್ಲಿಮೆಂಟ)ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಸಮಾಜವಾದಿಗಳು, ಕಮ್ಯುನಿಸ್ಟರು, ಪಾಪ್ಯುಲರ್ ಪಕ್ಷದವರು, ಕೇವಲ ಸರ್ಕಾರವನ್ನು ಟೀಕಿಸುವುದರಲ್ಲಿ ಮತ್ತು ಪಕ್ಷ ಜಗಳಗಳಲ್ಲಿ ಕಾಲಕಳೆದರು. ಸಮರ್ಥ ನಾಯಕರಿಲ್ಲದ ಪ್ರಯುಕ್ತ ಇವರಾರು ಇಟಲಿಗೆ ಸ್ಥಿರ ಸರಕಾರವನ್ನು ಕೊಡುವ ಸ್ಥಿತಿಯಲ್ಲಿರಲಿಲ್ಲ. ಇದು ಇಟಲಿಯಾದ್ಯಂತ ರಾಷ್ಟ್ರೀಯರ ಹಾಗು ದೇಶಾಭಿಮಾನಿಗಳ ಮನಸ್ಸನ್ನು ಕೆರಳಿಸಿ ಇಟಾಲಿಯನ್ನರ ಅತೃಪ್ತಿ ಅಸಮಾಧಾನಗಳಿಗೆ ಕಾರಣವಾಯಿತು. ಇಂತಹ ಪರಿಸ್ಥಿತಿಯನ್ನು ಗಮನಿಸಿದ ಜನರು ಮತ್ತು ಮಾಜಿ ಸೈನಿಕರುಗಳು ಇಟಲಿಯ ಏಕತೆ, ಶಕ್ತಿ ಮತ್ತು ಶಿಸ್ತಿನ ಸಂಕೇತವಾಗಿದ್ದ ಮುಸ್ಸೊಲೊನಿ ನಾಯಕತ್ವದ ಕ್ರೀಯಾಶೀಲ ರಾಜಕೀಯ ‘ಫ್ಯಾಸಿಸ್ಟ್’ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ ಪರಿಣಾಮವಾಗಿ ‘ಫ್ಯಾಸಿಸಂ ಉದಯಿಸಿತು.’

ಬೆನಿಟೊ ಮುಸ್ಸೊಲೊನಿ (೧೮೮೩೧೯೪೫)

ಬೆನಿಟೊ ಮುಸ್ಸೊಲೊನಿ ಇಟಲಿಯ ರೊಮಾಗ್ನ ಪ್ರಾಂತದ ಪ್ರಡಾಸಿಯೊ ಎಂಬ ಸ್ಥಳದಲ್ಲಿ ೧೮೮೩ರಲ್ಲಿ ಕಾರ್ಮಿಕ ವರ್ಗದ ಕಮ್ಮಾರ ಕುಟುಂಬದಲ್ಲಿ ಜನಿಸಿದನು. ಸ್ವಿರ್ಜರ್ಲೆಂಡಿನ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿಕೊಂಡು ಶಿಕ್ಷಕನಾಗಿ ತನ್ನ ವೃತ್ತಿಯನ್ನು ಪ್ರಾರಂಭಿಸಿದನು. ಫ್ರಾನ್ಸಿನ ತತ್ವಜ್ಞಾನಿ ಜಾರ್ಜಸ್ ಸೊರೆಲ್(೧೮೪೭-೧೯೨೨) ಅವರ ತತ್ವಗಳಿಂದ ಪ್ರಭಾವಿತನಾಗಿ (ಉಗ್ರರಾಷ್ಟ್ರೀಯತೆ, ತಾರ್ಕಿಕವಾದ, ಪುರಾಣ ತಳಹದಿಯ ಮೇಲೆ ರಾಜಕೀಯ ಶಕ್ತಿಯ ಬೆಳವಣಿಗೆ, ಉತ್ಕೃಷ್ಟನಾಯಕತ್ವ) ಸಮಾಜವಾದಿ ಪಕ್ಷದ ಸದಸ್ಯನಾಗಿ ಎಡಪಂಥಿ ವಿಚಾರಗಳನ್ನು ಇಟಲಿಯ ಭದ್ರತೆ ಮತ್ತು ಸರ್ವತೋಮುಖ ಅಭಿವೃದ್ದಿಗಾಗಿ ಪ್ರತಿಪಾದಿಸಿದನು. ಮುಂದೆ ಸಮಾಜವಾದಿ ಪಕ್ಷದ ವರ್ತಮಾನ ಪತ್ರಿಕೆ ‘ಆವಂತಿ’ಯ ಸಂಪಾದಕನಾಗಿ ಸೇವೆ ಸಲ್ಲಿಸಿದನು.

ಸ್ವಿಡ್ಜರ್‌ಲೆಂಡ್‌ನಲ್ಲಿ ತಾನು ನಡೆಸಿದ ಕ್ರಾಂತಿಕಾರಕ ಚಟುವಟಿಕೆಗಳಿಗಾಗಿ ಬಂಧಿತನಾದನು. ನಂತರ ಈತನನ್ನು ಸರ್ಕಾರವು ಗಡಿಪಾರು ಮಾಡಿತು. ಪ್ರಥಮ ಮಹಾಯುದ್ಧದಲ್ಲಿ ಇಟಲಿಯ ಪರ ಕಲಿತನದಿಂದ ಯುದ್ಧದಲ್ಲಿ ಹೋರಾಡಿ ತನ್ನ ಸಾಹಸ ಕಾರ್ಯಗಳಿಂದ ಅನೇಕ ಬಿರುದುಗಳನ್ನು ಪದಕಗಳನ್ನು ಪಡೆದನು. ಉನ್ನತಮಟ್ಟದ ಸಂಘಟನೆ, ಶಿಸ್ತಿನ ಬುದ್ದಿ, ವಿವೇಚನಾ ಶಕ್ತಿ ಮತ್ತು ಸಮಯೋಚಿತ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಮುಸ್ಸೊಲೊನಿ ಇಟಲಿಯ ಗೌರವ ಮತ್ತು ಹಿತಾಸಕ್ತಿಗಳನ್ನು ಕಾಪಾಡಲು ಸಮಾಜವಾದಿ ಮತ್ತು ಕಮ್ಯುನಿಸ್ಟರ ಆಡಳಿತವನ್ನು ಕೊನೆಗಾಣಿಸಿ ಫ್ಯಾಸಿಸ್ಟ್ ಸರ್ವಾಧಿಕಾರದ ಸರಕಾರ ಸ್ಥಾಪನೆಗೆ ಕ್ರಾಂತಿಕಾರಕ ಜನಾಂದೋಲನವನ್ನು ಪ್ರಾರಂಭಿಸಿದನು. ತನ್ನ ಫ್ಯಾಸಿಸ್ಟವಾದದ ತತ್ವಗಳನ್ನು ಪ್ರಚಾರಮಾಡಲು ‘ಇಟಾಲಿಯ’ ಎನ್ನುವ ಪತ್ರಿಕೆಯನ್ನು ಆರಂಭಿಸಿದನು.

ಫ್ಯಾಸಿಸ್ಟ್ ತತ್ವಗಳು

ಫ್ಯಾಸಿಸಂ ಎಂಬ ಇಂಗ್ಲಿಷ್ ಪದವು ಲ್ಯಾಟಿನ್‌ನ ಫ್ಯಾಸಿಯೊ ಪದದಿಂದ ಬಂದಿದೆ. ಫೈಸಿಯೊ ಎಂದರೆ ದಂಡಗಳ ಕಟ್ಟು ಮತ್ತು ಒಂದು ಕೊಡಲಿ ಎಂದಾಗುತ್ತದೆ. ಪ್ರಾಚೀನ ರೋಂ ಚಕ್ರಧಿಪತ್ಯದಲ್ಲಿ ಇವುಗಳು ರಾಜ್ಯ ಸರ್ವಾಧಿಕಾರದ ಚಿಹ್ನೆಯಾಗಿ ಏಕತೆ, ಶಕ್ತಿ ಮತ್ತು ಶಿಸ್ತನ್ನು ಸೂಚಿಸುತ್ತವೆ. ಮುಸ್ಸೊಲೊನಿ ಪ್ರತಿಪಾದಿಸಿದ ಫ್ಯಾಸಿಸ್ಟ್ ಸಿದ್ಧಾಂತದ ಮೂಲಸ್ವರೂಪಗಳನ್ನು ಕೆಳಗಿನಂತೆ ವಿವರಿಸಬಹುದು. ಈ ಸಿದ್ಧಾಂತಕ್ಕೆ ಕ್ರಾಂತಿಕಾರಕ ಚಳವಳಿಯೆ ಮೂಲಾಧಾರವಾಗಿದೆ. ಇದನ್ನು ವಿವರಿಸುವ ಮೂಲಗ್ರಂಥಗಳಿಲ್ಲ. ಜೋಸೆಫ್ ಮೆಜನಿಯಾ ಆದರ್ಶವಾದ, ಸೊರೆಲ್ಲನ ಕಾರ್ಯವಿಧಾನ, ಹೆಗಲ್‌ನ ರಾಷ್ಟ್ರೀಯವಾದ ಹಾಗೂ ಸರ್ವಾಧಿಕಾರ ತತ್ವ, ಬರ್ಗಸನ್‌ನ ಬುದ್ದಿ ವಿರೋಧವಾದ ಮೊದಲಾದವುಗಳನ್ನು ತನಗೆ ಅನುಕೂಲವಾಗುವಂತೆ ಮಾರ್ಪಡಿಸಿಕೊಂಡು ಫ್ಯಾಸಿಸಂ ವಾದದ ವಿಚಾರಗಳನ್ನು ತಿಳಿಸುತ್ತಾನೆ.

ವಾಸ್ತವಿಕತೆ

ಅನುಭವ ಮತ್ತು ವಾಸ್ತವಿಕತೆಯು ಫ್ಯಾಸಿಸಂನ ತಿರುಳು. ಮುಸ್ಸೊಲೊನಿ ಅಭಿಪ್ರಾಯ ದಂತೆ ಸಮತಾವಾದದ ಆಧಾರದ ಸಿದ್ಧಾಂತವಾದರೆ, ವಾಸ್ತವಿಕತೆಯು ಫ್ಯಾಸಿಸ್ಟವಾದದ ಆಧಾರವಾಗಿದೆ. ಅವನು ಹೇಳಿರುವಂತೆ

ನಾವು ಖಂಡಿತವಾದಿಗಳು ವಾಸ್ತವಿಕವಾಗಿ ಮತ್ತು ನಿಜವಾಗಿ ವರ್ತಿಸಬೇಕು. ತರ್ಕ, ವಿತರ್ಕ, ಮತ್ತು ಸಿದ್ಧಾಂತಗಳ ಮಬ್ಬು ಮುಸುಕಿನಿಂದ ಹೊರಬರಲು ಬಯಸುತ್ತೇವೆ. ಕಾರ್ಯಸಾಧನೆಯೆ ನಮ್ಮ ಕಾರ್ಯಕ್ರಮ, ಬರಿಯ ಮಾತಲ್ಲ.

ಪ್ರಜಾಪ್ರಭುತ್ವದ ವಿರೋಧ

ಮಸ್ಸೊಲೊನಿ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದಾನೆ. ಈತನ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಕೊಳೆತು ನಾರುತ್ತಿರುವ ಹೆಣ. ಇದು ಶ್ರೀಮಂತರ ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸಿ ರಾಷ್ಟ್ರದ ಅಭ್ಯುದಯಕ್ಕೆ ಮಾರಕವಾಗುವುದು.

ಉಗ್ರರಾಷ್ಟ್ರೀಯತೆ

ಫ್ಯಾಸಿಸ್ಟಸ್‌ವಾದವು ಉಗ್ರರಾಷ್ಟ್ರೀಯತೆ ಮತ್ತು ಕ್ಷಾತ್ರ ಭಾವವನ್ನು ಆಧರಿಸಿದೆ. ಫ್ಯಾಸಿಸ್ಟ್ ವಾದಿಗಳ ಪ್ರಕಾರ ರಾಜ್ಯಕ್ಕಾಗಿ ವ್ಯಕ್ತಿಯೆ ಹೊರತು ವ್ಯಕ್ತಿಗಾಗಿ ರಾಜ್ಯವಲ್ಲ. ಪ್ರತಿಯೊಬ್ಬನು ರಾಜ್ಯದ ಹಿತಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಬೇಕು. ರಾಜ್ಯಕ್ಕೋಸ್ಕರ ಒಬ್ಬ ಶ್ರೇಷ್ಠ ವ್ಯಕ್ತಿ ಎನ್ನುವ ಹೆಗೆಲ್‌ನ ವಾದವನ್ನು ಫ್ಯಾಸಿಸ್ಟರು ಒಪ್ಪುತ್ತಾರೆ. ರಾಜ್ಯದ ಹಿತಕ್ಕಾಗಿ ವ್ಯಕ್ತಿ ಸ್ವಾತಂತ್ರ್ಯವನ್ನು ವಿರೋಧಿಸಬೇಕು. ರೇಡಿಯೊ, ಸಿನಿಮಾ, ಶಿಕ್ಷಣ, ಪತ್ರಿಕೆ, ಹಣ, ಪರಿಶ್ರಮ, ಸಂಪನ್ಮೂಲಗಳು ರಾಜ್ಯದ ಹತೋಟಿಯಲ್ಲಿರಬೇಕು. ಈ ದೃಷ್ಟಿಯಿಂದ ಪ್ರತಿಯೊಂದು ವಸ್ತು ರಾಜ್ಯಕ್ಕಾಗಿ, ರಾಜ್ಯಕ್ಕೆ ವಿರೋಧವಾದದ್ದೇನು ಇಲ್ಲ, ರಾಜ್ಯದ ಹೊರಗಡೆ ಏನು ಇಲ್ಲ ಅಥವಾ ರಾಜ್ಯವೇ ಸ್ವರ್ಗ ಎನ್ನುವುದು ಫ್ಯಾಸಿಸ್ಟರ ವಾದ. ಈ ಹಿನ್ನೆಲೆಯಲ್ಲಿ ಮುಸ್ಸೊಲಿನಿಯ ಸರ್ಕಾರ ಬಂಡವಾಳಗಾರರ ಸಂಪತ್ತನ್ನು ಅವರ ಇಚ್ಛೆಯಂತೆ ವಿನಿಯೋಗಿಸಲು ಅನುಮತಿಸಲಿಲ್ಲ. ಅಲ್ಲದೆ ಕಾರ್ಮಿಕರು ಕೈಕೊಳ್ಳುವ ಸಂಪಿನ ಅಧಿಕಾರವನ್ನು ಮೊಟಕುಗೊಳಿಸಿತು. ಹೀಗಾಗಿ ಬಂಡಾವಾಳಗಾರರು ಮತ್ತು ಕಾರ್ಮಿಕರು ರಾಜ್ಯದ ಅಧೀನರಾದರು.

ರಾಜ್ಯದ ಸರ್ವಸ್ವಾಮ್ಯಸ್ವರೂಪ

ಸಮತಾವಾದದ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳಾಗಿದ್ದ ಫ್ಯಾಸಿಸ್ಟರ ವಿಚಾರದಲ್ಲಿ ರಾಜ್ಯವು ಎಲ್ಲಾ ಆಡಳಿತ ವಿಷಯಗಳಲ್ಲಿ ಪರಮಾಧಿಕಾರ ಹೊಂದಿದೆ. ರಾಜ್ಯದ ಸ್ಥಿರತೆ ಮತ್ತು ಸಮಗ್ರತೆಗಾಗಿ ವ್ಯಕ್ತಿಯ ಸಾಮಾಜಿಕ ಧಾರ್ಮಿಕ, ಆರ್ಥಿಕ, ನೈಸರ್ಗಿಕ, ನೈತಿಕ ಮೊದಲಾದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರವೇಶಿಸಲು ರಾಜ್ಯಕ್ಕೆ ಸರ್ವಾಧಿಕಾರವಿದೆ.

ಏಕಪಕ್ಷ ಮತ್ತು ಏಕನಾಯಕ

ರೋಮ್ ಸಾಮ್ರಾಜ್ಯದ ವೈಭವ ಮತ್ತು ಇಟಲಿಯನ್ನರ ಸಂಸ್ಕೃತಿ ಮತ್ತು ಪರಂಪರೆ ಯನ್ನು ಕಾಪಾಡಿಕೊಂಡು ಹೋಗಲು ಬಹುಪಕ್ಷ ಪದ್ಧತಿ ಮತ್ತು ಬಹುನಾಯಕತ್ವವನ್ನು ಫ್ಯಾಸಿಸ್ಟರು ವಿರೋಧಿಸಿದರು. ಇದರಿಂದಾಗಿ ವಿರೋಧಪಕ್ಷಗಳನ್ನೆಲ್ಲ ರದ್ದುಪಡಿಸಿ ಮುಸ್ಸೊಲೊನಿ ತನ್ನ ಏಕೈಕ ಫ್ಯಾಸಿಸ್ಟ್ ಪಕ್ಷದ ನಿರಂಕುಶ ಪ್ರಭುವಾಗಿ ಇಟಲಿಯನ್ನು ಆಳಿದನು. ಸರಕಾರದ ನೀತಿಗಳನ್ನು ಟೀಕಿಸಲು ಯಾರಿಗೂ ಅಧಿಕಾರವಿಲ್ಲ. ರಾಜ್ಯದ ರಕ್ಷಣೆಗಾಗಿ ಹಾಗೂ ವಿರೋಧಿಗಳನ್ನು ಸದೆಬಡಿಯಲು ಗುಪ್ತ ಪೋಲೀಸ್ ಪಡೆಯನ್ನು ಮುಸ್ಸೊಲೊನಿ ರಚಿಸಿದನು.

ಸಾಮ್ರಾಜ್ಯ ಪದ್ಧತಿ ಮತ್ತು ಯುದ್ಧ ಬೆಂಬಲ

ಮನೋಕಾರ್ಲಿಯನ ಅಭಿಪ್ರಾಯದಂತೆ ಫ್ಯಾಸಿಸ್ಟ್ ಸಿದ್ಧಾಂತವು ಯುದ್ಧದಿಂದ ಹುಟ್ಟಿದೆ. ಅವರ ಶಕ್ತಿ, ಸಾಮರ್ಥ್ಯದ ಪ್ರದರ್ಶನಕ್ಕೆ ಯುದ್ಧವು ಸ್ತ್ರೀಯರಿಗೆ ಮಕ್ಕಳನ್ನು ಹೆರುವುದು ಎಷ್ಟು ಸ್ವಾಭಾವಿಕವೊ ಹಾಗೆಯೇ ಯುದ್ಧ ಮಾಡುವುದು ಫ್ಯಾಸಿಸ್ಟರಿಗೆ ಸ್ವಾಭಾವಿಕವೆಂದು ಮುಸ್ಸೊಲೊನಿಯು ಸಾರಿದನು. ಫ್ಯಾಸಿಸ್ಟರು ಶಾಂತಿ ಪ್ರಿಯರಾಗಿರಲಿಲ್ಲ. ಶಾಂತಿ ತಮ್ಮ ರಾಷ್ಟ್ರದ ವೈಭವ, ಘನತೆ, ಗೌರವಗಳಿಗೆ ಕುಂದು ಎಂದು ಭಾವಿಸಿದ್ದರು.

ಸಂಸ್ಥಾರೂಪದ ರಾಜ್ಯ

ಮುಸ್ಸೊಲೊನಿಯ ಸಂಸ್ಥಾರೂಪದ ರಾಜ್ಯನಿರ್ಮಾಣದ ಗುರಿ ಹೊಂದಿದ್ದನು. ಈತನ ಪ್ರಕಾರ ಫ್ಯಾಸಿಸ್ಟ್ ನಾಯಕರಿಗೆ ಮಾತ್ರ ದೇಶದ ಹಾಗೂ ಜನತೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ಅಂತೆಯೇ ಫ್ಯಾಸಿಸ್ಟ ನಾಯಕರೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅರ್ಹರು. ಕಾರ್ಮಿಕರು, ರೈತರು, ವಕೀಲರು, ಭೂ ಒಡೆಯರು ಮತ್ತು ಬಂಡವಾಳಗಾರರು ಮೊದಲಾದವರಿಗೆ ತಮ್ಮ ಉದ್ಯೋಗಗಳಲ್ಲಿ ಬರುವ ಸಮಸ್ಯೆಗಳನ್ನು ಮಾತ್ರ ಅರ್ಥವಾಗುವುದರಿಂದ ಅವರಿಗೆ ದೇಶದ ಸಮಸ್ಯೆಗಳು ಅರ್ಥವಾಗುವುದಿಲ್ಲ. ಇದಕ್ಕಾಗಿ ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಸೇರಿದಂತೆ ಎಲ್ಲವೂ ಸಂಪೂರ್ಣವಾಗಿ ಸಂಸ್ಥಾರೂಪದ ರಾಜ್ಯದ ಹತೋಟಿಯಲ್ಲಿರಬೇಕು ಎಂಬುದಾಗಿತ್ತು.

ಮುಸ್ಸೊಲಿನಿಯ ಅಧಿಕಾರ ಗ್ರಹಣ

ಮೇಲ್ಕಾಣಿಸಿದ ಫ್ಯಾಸಿಸ್ಟ್ ವಿಚಾರಗಳನ್ನು ಇಟಲಿಯಲ್ಲಿ ಅನುಷ್ಟಾನಗೊಳಿಸಲು ಮುಸ್ಸೊಲಿನಿ ಫ್ಯಾಸಿಸ್ಟ್ ಪಕ್ಷ ಸ್ಥಾಪಿಸಿ ಮಾರ್ಚ್ ೨೩, ೧೯೧೯ರಲ್ಲಿ ಮಿಲನ್ ಎಂಬ ಸ್ಥಳದಲ್ಲಿ ಸೈನಿಕ ಸಂಘಟನೆಯನ್ನು ಮಾಡಿದನು. ಇದಕ್ಕೆ ‘‘ಕಪ್ಪು ಅಂಗಿಗಳ ಸೈನ್ಯ’’ವೆಂದು ಕರೆದನು. ದೇಶಾಭಿಮಾನವು ಫ್ಯಾಸಿಸ್ಟ್ ವಾದದ ಜೀವದುಸಿರಾಗಿತ್ತು. ಸಮತಾವಾದದ ಸಾವು ಫ್ಯಾಸಿಸ್ಟರ ಸೂತ್ರವಾಗಿತ್ತು. ಅನೇಕ ಒಳಜಗಳಗಳಿಂದ ರಾಜಕಾರಣಿಗಳ ಸ್ವಾರ್ಥದಿಂದ ಮತ್ತು ಮಹಾಯುದ್ಧದ ದುಷ್ಟಪರಿಣಾಮಗಳಿಂದ ಪಾತಾಳಕ್ಕೆ ತಳ್ಳಲ್ಪಟ್ಟ ಇಟಲಿ ದೇಶವನ್ನು ಫ್ಯಾಸಿಸ್ಟರು ಮಾತ್ರ ಉಳಿಸಬಲ್ಲರೆಂಬ ಭರವಸೆ ಇಟಲಿ ದೇಶದ ಜನರಲ್ಲಿ ಮೂಡಿತು. ಸಂದರ್ಭದ ಸದಾವಕಾಶವನ್ನು ಉಪಯೋಗಿಸಿಕೊಂಡ ಮುಸ್ಸೊಲೊನಿ ಕಮ್ಯುನಿಸ್ಟರ ಹಾಗೂ ಸಮಾಜವಾದಿಗಳ ದೌರ್ಬಲ್ಯಗಳ ಬಗ್ಗೆ ವಿದ್ವತ್ಪೂರ್ಣ ಭಾಷಣಗಳನ್ನು ಮಾಡಿದನು. ತತ್ಪರಿಣಾಮವಾಗಿ ಕಮ್ಯುನಿಸ್ಟರಿಗೂ ಮತ್ತು ಫ್ಯಾಸಿಸ್ಟರಿಗೂ ಘರ್ಷಣೆಗಳುಂಟಾದವು. ೧೯೨೧ರ ಫೆಬ್ರವರಿ ವೇಳೆಗೆ ಇಟಲಿಯಲ್ಲಿ ಅಂತರ್ಯುದ್ಧದ ಪರಿಸ್ಥಿತಿಯುಂಟಾಯಿತು. ಕಮ್ಯುನಿಸ್ಟರು ಫ್ಯಾಸಿಸ್ಟರನ್ನು, ಫ್ಯಾಸಿಸ್ಟರು ಕಮ್ಯುನಿಸ್ಟರನ್ನು ಕೊಲೆ ಮಾಡಿದರು. ಈ ಸಂದರ್ಭದಲ್ಲಿ ಶಿಸ್ತಿನ ಸೇನಾನಿಗಳು ಕಪ್ಪು ಅಂಗಿಗಳು ಬೀದಿ ಬೀದಿಗಳಲ್ಲಿ ಸಂಚರಿಸಿ ಬಾಂಬು ಮತ್ತು ಇತರ ಮಾರಕಾಸ್ತ್ರಗಳನ್ನು ಉಪಯೋಗಿಸಿ ಕಮ್ಯುನಿಸ್ಟರ ದುಷ್ಕೃತ್ಯಗಳನ್ನು ಅಡಗಿಸಿದರು. ಮಧ್ಯಮವರ್ಗದ ಜನರಿಗೆ, ರೈತರಿಗೆ ರಕ್ಷಣೆ ಕೊಡುವುದರ ಮೂಲಕ ಮುಸ್ಸೊಲೊನಿ ಸೇನಾನಿಗಳು ಇಟಾಲಿಯನ್ನರ ಆಶಾ ಕಿರಣವಾದರು, ಕಮ್ಯುನಿಸ್ಟರನ್ನು ಎದುರಿಸುವಾಗ ಈ ಸೇನಾನಿಗಳು ಫ್ಯಾಸಿಸ್ಟ ಪಕ್ಷವನ್ನು ‘‘ನಂಬಿರಿ, ಅದಕ್ಕೆ ವಿಧೇಯರಾಗಿರಿ ಮತ್ತು ಅದರೊಡನೆ ಕೂಡಿ ಹೋರಾಡಿರಿ’’ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದರು. ಭೀತಿ ಮತ್ತು ಹಿಂಸೆಗಳಿಂದ ಕೂಡಿದ ವಾತಾವರಣದಲ್ಲಿ ೧೯೨೧ರ ಮೇ ತಿಂಗಳಲ್ಲಿ ಸಾರ್ವಜನಿಕ ಚುನಾವಣೆಗಳು ನಡೆದವು. ಕೈಗಾರಿಕೆಗಳ ರಾಷ್ಟ್ರೀಕರಣ, ಆರ್ಥಿಕ ಸ್ಥಿರತೆ, ದುಡಿಯುವ ಕೈಗಳಿಗೆ ಕೆಲಸ, ಅತಿ ಭಾರದ ತೆರಿಗೆ ರದ್ಧತಿ, ಶ್ರಮಜೀವಿಗಳಿಗೆ ಎಂಟು ತಾಸು ಕೆಲಸ, ಬೇಸಾಯ ಸುಧಾರಣೆ, ಸೆನೆಟ್‌ನ ರದ್ಧತಿ ಮತ್ತು ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳು ಕೊಡಲು ನಿರಾಕರಿಸಿದ ಪ್ರದೇಶಗಳನ್ನು ವಶಪಡಿಸಿ ಕೊಳ್ಳುವಿಕೆ ಮೊದಲಾದ ಭರವಸೆಗಳನ್ನು ಜನತೆಗೆ ಮುಸ್ಸೊಲೊನಿ ನೀಡಿದನು. ಫ್ಯಾಸಿಸ್ಟರು ಈ ಚುನಾವಣೆಯಲ್ಲಿ ಮುಸ್ಸೊಲೊನಿಯನ್ನೊಳಗೊಂಡು ಮುವತ್ತೈದು ಸದಸ್ಯರು ಚುನಾಯಿತರಾದರು. ೧೯೨೨ ಮಾರ್ಚ್ ಮೂರರಂದು ಫ್ಯಾಸಿಸ್ಟರು ಪಿತೂರಿ ನಡೆಸಿ ದಂಗೆ ಎದ್ದು ಫಿಯುಮಾದಲ್ಲಿ ಪ್ರಾಂತೀಯ ಸರಕಾರವನ್ನು ಉರುಳಿಸಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ತದನಂತರ ಆಗಸ್ಟ್ ತಿಂಗಳಲ್ಲಿ ಕಮ್ಯುನಿಸ್ಟರು ವ್ಯವಸ್ಥೆ ಗೊಳಿಸಿದ್ದ ರಾಷ್ಟ್ರಮಟ್ಟದ ಮುಷ್ಕರವನ್ನು ದಮನ ಮಾಡಿ ಮುಷ್ಕರದ ವೇಳೆಯಲ್ಲಿ ಜನತೆಗೆ ರಕ್ಷಣೆ ಮತ್ತು ಅವರು ಬಯಸುವ ಅತ್ಯಾವಶ್ಯಕ ವಸ್ತುಗಳನ್ನು ಒದಗಿಸಿದರು. ಈ ಬೆಳವಣಿಗೆ ಕಮ್ಯುನಿಸ್ಟರಿಗೆ ಭಾರಿ ಆಘಾತವನ್ನುಂಟುಮಾಡಿತು.

೧೯೨೨ ಅಕ್ಟೋಬರ್ ೨೪ರಂದು ನವಲ್ಸ್‌ನಲ್ಲಿ ಮುಸ್ಸೊಲಿನಿಯು ತನ್ನ ರಾಜಕೀಯ ಶಕ್ತಿಯನ್ನು ತೋರಿಸಲು ಗ್ರಾಂಡ್ ಫ್ಯಾಸಿಸ್ಟ್ ಸಮ್ಮೇಳನವನ್ನು ಕರೆದನು. ಈ ಸಮ್ಮೇಳನದಲ್ಲಿ ಸೈನಿಕ ಸಮವಸ್ತ್ರ ಧರಿಸಿದ್ದ ನಲವತ್ತು ಸಾವಿರ ಫ್ರಾಸಿಸ್ಟ್ ಸೈನಿಕ ಪಡೆ ಪಥ ಚಲನೆ ನಡೆಸಿತು. ಈ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತ ಇಟಲಿಯ ಅರಸ ನಮಗೆ ಸರಕಾರವನ್ನು ಒಪ್ಪಿಸಬೇಕು. ಇಲ್ಲವಾದಲ್ಲಿ ಅದನ್ನು ಹೇಗೆ ವಶಪಡಿಸಿಕೊಳ್ಳ ಬೇಕೆಂಬುದು ಫ್ಯಾಸಿಸ್ಟರಿಗೆ ಗೊತ್ತಿದೆಯೆಂದು ಬೆದರಿಗೆ ಹಾಕಿದನು. ತರುವಾಯ ತನ್ನ ಕಪ್ಪು ಅಂಗಿಯ ಸೇನಾನಿಗಳಿಗೆ ರೋಂ ನಗರದ ಮೇಲೆ ದಾಳಿ ಮಾಡಲು ಸೂಚಿಸಿದ ಪರಿಣಾಮವಾಗಿ ೧೯೨೨ರ ಅಕ್ಟೋಬರ್ ೨೮ರಂದು ಕ್ಷಿಪ್ರ ಮಿಲಿಟರಿ ಕ್ರಾಂತಿ ನಡೆಸಿ ಮುಸ್ಸೊಲೊನಿ ರೋಂ ನಗರವನ್ನು ವಶಪಡಿಸಿಕೊಳ್ಳಲು ಮುಂದಾದನು. ಈ ಬೆಳವಣಿಗೆ ಯಿಂದ ಭಯಭೀತನಾದ ಇಟಲಿಯ ಅರಸ ಮೂರನೆಯ ವಿಕ್ಟರ್ ಇಮ್ಯಾನುಯಲ್‌ನು ಸೈನ್ಯವನ್ನುಪಯೋಗಿಸಿ ಮುಸ್ಸೊಲೋನಿಯನ್ನು ಹತ್ತಿಕ್ಕುವ ಬದಲು ದಿನಾಂಕ ಅಕ್ಟೋಬರ್ ೩೦, ೧೯೨೨ರಂದು ಮುಸ್ಸೊಲೊನಿಯನ್ನು ಪ್ರಧಾನ ಮಂತ್ರಿಯನ್ನಾಗಿ ನಿಯಮಿಸಿದನು. ಅಧಿಕಾರ ಸ್ವೀಕರಿಸಿದ ಮುಸ್ಸೊಲೊನಿಯು ‘‘ಫ್ಯಾಸಿಸ್ಟ ಸರಕಾರ ಹೇಗೆ ಆಡಳಿತ ನಡೆಸಬೇಕೆಂಬುದನ್ನು ತಿಳಿದುಕೊಂಡಿದೆ. ಹಾಗೂ ಆ ರೀತಿ ಆಡಳಿತ ನಡೆಸುವುದೆಂದು’’ ಪ್ರಕಟಿಸಿದನು.