ರಷ್ಯಾ ಹದಿನೇಳು ಮತ್ತು ಹದಿನೆಂಟನೆಯ ಶತಮಾನದ ನಿರಂಕುಶಪ್ರಭುತ್ವಕ್ಕೆ ಒಂದು ಉತ್ತಮ ನಿದರ್ಶನ. ಇಲ್ಲಿನ ಬೆಳವಣಿಗೆಯನ್ನು ನಾವು ಮೂರು ಹಂತದಲ್ಲಿ ವಿವೇಚಿಸಲು ಸಾಧ್ಯತೆಗಳಿವೆ. ಕ್ರಿ.ಶ.೧೬೮೯ರಿಂದ ೧೭೨೫ರ ವರೆಗಿನ ಪ್ರಥಮ ಹಂತದಲ್ಲಿ ಪೀಟರ್ ಮಹಾಶಯ ರಷ್ಯಾದ ನಿರಂಕುಶ ಪ್ರಭುವಾಗಿದ್ದ. ೧೭೨೫ರಿಂದ ೧೭೬೨ರ ಎರಡನೆಯ ಹಂತ ಹೆಚ್ಚು ಕ್ರಿಯಾಶೀಲವಾಗಿದ್ದು ಈ ಅವಧಿಯನ್ನು ಹೊಸ ಪ್ರಯೋಗಗಳ ಅವಧಿ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ರಷ್ಯಾ ಪಾಶ್ಚಿಮಾತ್ಯ ರಾಷ್ಟ್ರಗಳೊಡನೆ ನೇರವಾಗಿ ವ್ಯವಹರಿಸಲು ಪ್ರಾರಂಭಿಸಿತು. ೧೭೬೨ರಿಂದ ೧೭೯೬ರ ಮೂರನೆಯ ಹಂತ ದಲ್ಲಿ ರಷ್ಯಾದ ರಾಣಿ ಕೆಥೆರಿನ್ ನಿರಂಕುಶ ಅಧಿಕಾರವನ್ನು ಹೊಂದಿದ್ದಳು. ಯುರೋಪಿನಲ್ಲಿ ಹುಟ್ಟಿಕೊಂಡಿದ್ದ ಅನೇಕ ಹೊಸ ಸಿದ್ಧಾಂತಗಳನ್ನು ತನ್ನ ಆಳ್ವಿಕೆಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದಳು.

ನಿರಂಕುಶಪ್ರಭುತ್ವದ ಸಹಜ ಲಕ್ಷಣವಾದ ನಿರಂಕುಶ ಯುದ್ಧವನ್ನು ಪೀಟರನ ಆಳ್ವಿಕೆಯಲ್ಲು ಗಮನಿಸಬಹುದು. ಅವನು ಮೂವತ್ತಾರು ವರುಷದ ದೀರ್ಘ ಆಳ್ವಿಕೆಯಲ್ಲಿ ಇಪ್ಪತ್ತಾರು ವರುಷವನ್ನು ಟರ್ಕಿ ಮತ್ತು ಸ್ವೀಡನ್ ದೇಶಗಳೊಡನೆ ಯುದ್ಧ ಮಾಡುವುದ ಕ್ಕಾಗಿಯೇ ಮುಡಿಪಾಗಿಟ್ಟ. ಪೀಟರ್ ಮಹಾಶಯನ ಆಳ್ವಿಕೆಯ ಬಗ್ಗೆ ರಷ್ಯಾದ ಇತಿಹಾಸಕಾರರ ಪ್ರತಿಕ್ರಿಯೆ ಮಿಶ್ರವಾದದ್ದಾಗಿದೆ. ಕೆಲವರು ಕ್ರಾಂತಿಕಾರಿ ಎಂಬುದಾಗಿ ಬಣ್ಣಿಸಿದರೆ ಇನ್ನು ಕೆಲವರು ಸಂಪ್ರದಾಯವಾದಿ ಎಂಬುದಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸೋಲೋವೀವ್ ಎಂಬ ಇತಿಹಾಸಕಾರನ ಪ್ರಕಾರ ರಷ್ಯಾ ಪ್ರಗತಿಪಥದಲ್ಲಿ ಮುಂದುವರಿಯಲು ಪೀಟರನ ಸುಧಾರಣೆಗಳೇ ಪ್ರಮುಖ ಕಾರಣ. ಪೀಟರ್‌ನನ್ನು ರಷ್ಯಾದ ನೌಕಾದಳದ ಪಿತಾಮಹ ಎಂದು ಕರೆಯಲಾಗಿದೆ. ಯುದ್ಧೋಪಕರಣಗಳ ಉತ್ಪಾದನೆಗೆ ಪೂರಕವಾದ ಕೈಗಾರಿಕೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಇಲ್ಲಿ ನಾವು ಗಮನಿಸತಕ್ಕಂತಹ ಅಂಶವೆಂದರೆ ಪೀಟರನ ಸುಧಾರಣೆಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸುವುದಕ್ಕೋಸ್ಕರ ರೂಪಿತವಾಗಿದ್ದವೇ ಹೊರತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಾಗಿರಲಿಲ್ಲ. ರಷ್ಯಾದ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪೀಟರ್ ಸಂಪೂರ್ಣವಾಗಿ ವಿಫಲನಾಗಿದ್ದ. ಇವನ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸೆನೆಟ್ ೧೭೨೫ರ ನಂತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಒಂದನೆಯ ಕೆಥೇರಿನ್, ಎರಡನೆಯ ಪೀಟರ್ ಮತ್ತು ಅನ್ನಾ ಇವರುಗಳು ಸೆನೆಟನ್ನು ನಿರ್ಲಕ್ಷಿಸಿ ನೊಬಿಲಿಟಿಯ ಸಲಹೆಯಂತೆ ಆಡಳಿತ ನಡೆಸಲು ಪ್ರಾರಂಭಿಸಿದನು. ನಂತರ ಅಧಿಕಾರಕ್ಕೆ ಬಂದ ಎಲಿಜೆಬೆತ್ ಸೆನೆಟನ್ನು ಪುನರ್ ಸ್ಥಾಪಿಸಿದರೂ ಆಗ ತಾನೇ ಹುಟ್ಟಿಕೊಂಡಿದ್ದ ನೊಬಿಲಿಟಿಯ ಪ್ರಾಬಲ್ಯವುಳ್ಳ ಕಾನ್ ಪೆರೆಂಟ್ಸ್ ಎಂಬ ಸಂಸ್ಥೆಯಿಂದಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ.

ಕೆಥಿರೆನ್, ಸೆನೆಟಿನ ಅಧಿಕಾರವನ್ನು ಕುಂಠಿತಗೊಳಿಸಿ ತನ್ನದೇ ಆದ ಇಂಪೀರಿಯಲ್ ಕೌನ್ಸಿಲ್‌ನ ಸಹಾಯದಿಂದ ಅಧಿಕಾರ ನಡೆಸಲು ಪ್ರಾರಂಭಿಸಿದಳು. ಇವಳ ಆಳ್ವಿಕೆ ರಷ್ಯಾದ ಇತಿಹಾಸಕ್ಕೆ ಹೊಸ ತಿರುವನ್ನು ತಂದುಕೊಟ್ಟರೂ ಅಸ್ಪಷ್ಟವಾದ ವಿರೋಧಗಳಿಂದ ಕೊನೆ ಗೊಂಡಿತು. ಹದಿನೆಂಟನೆ ಶತಮಾನದಲ್ಲಿ ಯುರೋಪಿನಾದ್ಯಂತ ಪ್ರಾರಂಭಗೊಂಡ ಹೊಸ ಚಿಂತನೆಗಳೊಡನೆ ಕೆಥೆರಿನ್ ನೇರ ಸಂಪರ್ಕ ಹೊಂದಿದ್ದಳು. ಪ್ರೆಂಚ್ ದಾರ್ಶನಿಕರಾದ ಮೊಂಟೆಸ್ಕ್ಯೊ, ವಾಲ್ಟೇರ್, ಡಿಡಿರೋಟ್, ಡಿ’ ಆಲಮ್‌ಬರ್ಟ್‌ಮುಂತಾದವರ ಸೈದ್ಧಾಂತಿಕ ನಿಲುವುಗಳನ್ನು ತನ್ನ ಆಳ್ವಿಕೆಯಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನವನ್ನು ಮಾಡಿದಳು. ಇಲ್ಲಿ ನಾವು ರಾಣಿಯ ರಾಜಕೀಯ ಉದ್ದೇಶಗಳನ್ನೂ ಗಮನದಲ್ಲಿ ಇಟ್ಟುಕೊಂಡಿರಬೇಕಾಗು ತ್ತದೆ. ಈ ಹೊಸ ಪ್ರಯೋಗ ಯಶಸ್ವಿಯಾಗದೆ ಸಾಂಪ್ರದಾಯಿಕ ಸುಧಾರಣೆಗಳನ್ನೇ ಜಾರಿಗೆ ತರಬೇಕಾಯಿತು. ಇದಕ್ಕೆ ಉತ್ತಮ ಉದಾಹರಣೆ ಕ್ರಿ.ಶ.೧೭೭೫ರ ಪುಗೇಚೆವ್ ದಂಗೆ.

ರಷ್ಯಾದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಜೀತದಾಳುಗಳು ತಮ್ಮ ಸಾಮಾಜಿಕ ಬೇಡಿಕೆ ಗಳನ್ನು ಈಡೇರಿಸುವುದಕ್ಕೋಸ್ಕರ ಮತ್ತು ದಾಸತ್ವವನ್ನು ರದ್ದುಗೊಳಿಸಲು ೧೭೭೫ರಲ್ಲಿ ಸರಕಾರದ ವಿರುದ್ಧ ದಂಗೆ ಎದ್ದರು. ಈ ದಂಗೆಯನ್ನು ಪುಗೇಚೆವ್ ದಂಗೆ ಎಂದು ಕರೆಯಲಾಗಿದೆ. ಈ ಸಂಕೀರ್ಣ ಸಂದರ್ಭದಲ್ಲಿ ಕೆಥೆರಿನ್ ನೊಬಿಲಿಟಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಂಗೆಯನ್ನು ಹತ್ತಿಕ್ಕಿದಳು. ಇಲ್ಲಿ ನಾವು ಮೂರು ರೀತಿಯ ಪ್ರಶ್ನೆಗಳನ್ನು ಎತ್ತಬೇಕಾಗುತ್ತದೆ. ಒಂದು ರಷ್ಯಾದ ಒಟ್ಟು ಆಡಳಿತ ಕ್ರಮದಲ್ಲಿ ನೊಬಿಲಿಟಿ ವಹಿಸು ತ್ತಿದ್ದ ಪಾತ್ರ. ಎರಡನೆಯದು, ರಾಣಿಯ ಸಾಮಾಜಿಕ ಕಳಕಳಿ ಹಾಗೂ ಮೂರನೆ ಯದಾಗಿ, ‘ಹೊಸ ಚಿಂತನೆಗಳಿಂದ ರೂಪಿತಗೊಂಡ ಸರಕಾರ’ ಎಂಬ ಶೀರ್ಷಿಕೆಗೆ ಸಂಬಂಧಪಟ್ಟದ್ದು. ನೊಬಿಲಿಟಿ ರಷ್ಯಾದಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಿತ್ತು ಎನ್ನುವ ಸಂಗತಿ ಈ ದಂಗೆಯ ಹತ್ತಿಕ್ಕುವಿಕೆಯಿಂದ ಸ್ಪಷ್ಟವಾಗುತ್ತದೆ. ಉಳಿದೆರಡು ಪ್ರಶ್ನೆಗಳು ಕೇವಲ ಜನರ ಬೆಂಬಲವನ್ನು ಪಡೆಯುವುದಕ್ಕೋಸ್ಕರ ರೂಪಿಸಿದ ತಂತ್ರ ಎನ್ನುವುದು ವಾಸ್ತವ. ರಷ್ಯಾದ ಖ್ಯಾತ ಚಿಂತಕ ಹಾಗೂ ಬರಹಗಾರ ಅಲೆಗ್ಸಾಂಡರ್ ರೆಡಿಸ್ಕೇವ್ ತನ್ನ, ಜರ್ನೀ ಫ್ರಮ್ ಸೈಂಟ್ ಪೀಟರ್ಸ್ ಬರ್ಗ್ ಟು ಮೋಸ್ಕೋ (೧೭೯೦) ಎಂಬ ಗ್ರಂಥದಲ್ಲಿ ಕೆಥೆರಿನ್‌ಳ ಆಡಳಿತ ಕ್ರಮದ ಕುರಿತು ಚರ್ಚಿಸಿದ್ದಾನೆ. ಕೆಥೆರಿನ್ ತನ್ನ ಆಳ್ವಿಕೆಯ ಆರಂಭದಲ್ಲಿನ ಪ್ರಗತಿಪರ ಚಿಂತನೆಗಳಿಂದ ಎಷ್ಟು ಹಿಂದಕ್ಕೆ ಸರಿದಿದ್ದಾಳೆಂದು  ಅಲ್ಲಿರುವ ದ್ವಂದ್ವಗಳನ್ನು ಚೆನ್ನಾಗಿ ವಿಮರ್ಶಿಸಿದ್ದಾನೆ. ರಷ್ಯಾದಲ್ಲಿ ನಿರಂಕುಶ ಪ್ರಭುತ್ವವನ್ನು ಮುಂದುವರಿಸಿಕೊಂಡು ಹೋಗುವುದೇ ಕೆಥೆರಿನ್‌ಳ ಮೂಲ ಉದ್ದೇಶವಾಗಿತ್ತು ಎನ್ನುವುದು ರೆಡಿಸ್ಕೇವ್‌ರವರ ವಾದವಾಗಿದೆ.

ಆಸ್ಟ್ರೀಯಾ ದೇಶದ ನಿರಂಕುಶಪ್ರಭುತ್ವ ಕುರಿತು ಚರ್ಚಿಸುವಾಗ ಮಾರಿಯ ತೆರೆಸಾ ಮತ್ತು ಎರಡನೆಯ ಜೋಸೆಫ್ ಪ್ರಮುಖರಾಗುತ್ತಾರೆ. ಇವರಿಬ್ಬರೂ ಆಸ್ಟ್ರೀಯಾದ ಆಂತರಿಕ ಸುಧಾರಣೆಗೆ ಪ್ರಥಮ ಆದ್ಯತೆಯನ್ನು ನೀಡಿದರು. ಮಾರಿಯ ತೆರೆಸಾಳ ಪ್ರಕಾರ ಸುಧಾರಣೆ ಅಂದಿನ ತುರ್ತು. ಇದಕ್ಕೆ ಬಲವಾದ ಕಾರಣ ಇದೆ. ಕ್ರಿ.ಶ.೧೭೪೦ ರಿಂದ ೧೭೪೫ರವರೆಗೆ ನಡೆದ ಪ್ರಥಮ ಮತ್ತು ದ್ವಿತೀಯ ಸಿಲೀಸಿಯಾ ಯುದ್ಧದಲ್ಲಿ ಆಸ್ಟ್ರಿಯಾ ಪ್ರಷ್ಯಾ ದೇಶದೆದುರು ಹೀನಾಯ ಸೋಲನ್ನು ಅನುಭವಿಸಬೇಕಾಗಿ ಬಂತು. ಮತ್ತೊಮ್ಮೆ ಬಲಿಷ್ಟವಾದ ಆಸ್ಟ್ರಿಯಾವನ್ನು ನಿರ್ಮಿಸುವುದಕ್ಕೆ ಆಂತರಿಕ ಸುಧಾರಣೆಯ ಅಗತ್ಯವಿತ್ತು. ಇಲ್ಲಿ ಸುಧಾರಣೆ ಎಂದಾಕ್ಷಣ ಮಾರಿಯ ತೆರೆಸಾ ಯುರೋಪಿನಾದ್ಯಂತ ಪ್ರಚಾರಗೊಳ್ಳುತ್ತಿದ್ದ ಹೊಸ ಸಿದ್ಧಾಂತಗಳ ಕಡೆಗೆ ಆಕರ್ಷಿತಳಾಗಿದ್ದಳು ಎನ್ನುವುದು ತಪ್ಪಾಗುತ್ತದೆ. ಅವಳ ಸುಧಾರಣೆ ನಿರಂಕುಶಪ್ರಭುತ್ವವನ್ನು ಗಟ್ಟಿಗೊಳಿಸುವ ಅಂಶವಾಗಿ ಮಾತ್ರ ಕಾರ್ಯ ನಿರ್ವಹಿಸಿತ್ತು. ಹೊಸ ಸಿದ್ಧಾಂತಗಳಿಂದ ಪ್ರಭಾವಿತರಾದ ಆಸ್ಟ್ರಿಯಾದ ಜನರು ರಾಜಕುಮಾರ ಎರಡನೆಯ ಜೋಸೆಫ್‌ನೊಡನೆ ಗುಟ್ಟಾಗಿ ವ್ಯವಹರಿಸುತ್ತಿದ್ದರು. ಇದರಿಂದಾಗಿ ರಾಣಿ ಮಾರಿಯಾ ತೆರೆಸಾ ತನ್ನ ಆಳ್ವಿಕೆಯ ದ್ವಿತೀಯಾರ್ಧದಲ್ಲಿ ಅಧಿಕಾರವನ್ನು ಉಳಿಸು ವುದಕ್ಕೋಸ್ಕರವಾಗಿಯೇ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಂತೆ ಕಾಣುತ್ತದೆ. ಇಂದು ನಮಗೆ ನಿರಂಕುಶ ಪ್ರಭುತ್ವದ ಮಿತಿಗಳನ್ನು ಸೂಚಿಸುತ್ತದೆ. ಅಂದರೆ ನಿರಂಕುಶ ಪ್ರಭುತ್ವ ಕೇಂದ್ರದಲ್ಲಿನ ಸರಕಾರದ ಅಥವಾ ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿಕೊಂಡಿರುತ್ತದೆ. ಇದು ನಿರಂಕುಶಪ್ರಭುತ್ವದ ದೌರ್ಬಲ್ಯವೂ ಹೌದು.

ಮಾರಿಯಾ ತೆರೆಸಾಳ ನಂತರ ಅಧಿಕಾರಕ್ಕೆ ಬಂದ ಎರಡನೆಯ ಜೋಸೆಫ್ ನಿರಂಕುಶ ಪ್ರಭುವಾಗಿದ್ದರೂ ಜನಪರ ಧೋರಣೆಗಳನ್ನು ಹೊಂದಿದ್ದ. ಇವನ ಆಳ್ವಿಕೆಯನ್ನು ಪ್ರಜ್ಞಾವಂತ ರಾಜಪ್ರಭುತ್ವವೆಂದು ಕರೆಯಲಾಗಿದೆ. ಜೋಸೆಫ್‌ನ ಮಾತಿನಲ್ಲಿಯೇ ಹೇಳುವುದಾದರೆ, ‘‘ನಾನು ಸಿಂಹಾಸನಕ್ಕೆ ಬಂದ ದಿನದಿಂದ ತತ್ವಜ್ಞಾನವನ್ನು ತನ್ನ ಸಾಮ್ರಾಜ್ಯದ ವಿಧಿ ಸ್ಥಾಪಕನನ್ನಾಗಿ ಮಾಡಿದ್ದೇನೆ. ನಾನು ಒತ್ತುಕೊಟ್ಟು ಹೇಳುತ್ತಿರುವುದು ಏನೆಂದರೆ ನಾನು ಹೊರಡಿಸಿದ ಆಜ್ಞೆಗಳು ಮತ್ತು ತತ್ವಗಳನ್ನು ಯಾವ ವಿನಾಯಿತಿಯೂ ಇಲ್ಲದೆ ಪ್ರತಿಯೊಬ್ಬರೂ ಅನುಸರಿಸಬೇಕು.’’ ಇಲ್ಲಿ ನಾವು ಇಬ್ಬಗೆಯ ವಾದಗಳನ್ನು ಗುರುತಿಸಲು ಸಾಧ್ಯ. ಒಂದನೆಯದು ನಿರಂಕುಶಪ್ರಭುತ್ವದ ಅವಶ್ಯಕತೆ, ಎರಡನೆಯದು ತತ್ವಜ್ಞಾನಗಳ ಅನುಷ್ಠಾನ. ಅಂದರೆ ಹೊಸ ಸಿದ್ಧಾಂತಗಳನ್ನು ಅನುಷ್ಟಾನಗೊಳಿಸಬೇಕಾದರೆ ನಿರಂಕುಶ ಪ್ರಭುತ್ವದ ಅವಶ್ಯಕತೆ ಇದೆ ಎಂದಾಯಿತು. ಇಲ್ಲಿ ಬಲವಂತವಾಗಿ ಹೊಸ ಯೋಜನೆಗಳನ್ನು ಅಥವಾ ನೀತಿಗಳನ್ನು ಜನಸಾಮಾನ್ಯರ ಮೇಲೆ ಹೇರುವ ಹುನ್ನಾರ ಅಡಕವಾಗಿದೆ. ಎರಡನೆಯ ಜೋಸೆಫ್‌ನ ಆಳ್ವಿಕೆಯಲ್ಲಿನ ದೌರ್ಬಲ್ಯವೆಂದರೆ, ಸಾಕಷ್ಟು ಪೂರ್ವತಯಾರಿ ಇಲ್ಲದೇ ಅಥವಾ ಸಮಾಲೋಚನೆ ನಡೆಸದೆ ನಿರ್ಣಯಗಳನ್ನು ಕೈಗೊಳ್ಳು ವುದು. ಈ ರೀತಿ ಜಾರಿಗೆ ತಂದ ಸುಧಾರಣೆಗಳಿಂದಾಗಿ ಜನರಿಂದ ವಿರೋಧವನ್ನು ಎದುರಿಸಬೇಕಾಗಿ ಬಂತು. ಆಡಳಿತ ಉದ್ದೇಶಕ್ಕಾಗಿ ಮಂತ್ರಿಗಳನ್ನು ನೇಮಕ ಮಾಡಿ ಕೊಂಡಿದ್ದರೂ ಅವರ ಸಲಹೆ ಸೂಚನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿರಲಿಲ್ಲ. ಅರಸು ಮನೆತನದ ಅಧಿಕಾರ ಕುಂಠಿತಗೊಳ್ಳಬಹುದು ಎನ್ನುವ ಭಯವೇ ಇದಕ್ಕೆ ಮುಖ್ಯ ಕಾರಣ. ಇದೇ ರೀತಿಯ ಅಭಿಪ್ರಾಯವನ್ನು ಪ್ರಷ್ಯಾದ ಅರಸ ಫೆಡ್‌ರಿಕನೂ ಹೊಂದಿದ್ದ. ಆದರೂ ರಷ್ಯಾಕ್ಕೆ ಹೋಲಿಸಿದರೆ ಆಸ್ಟ್ರೀಯಾ ಮತ್ತು ಪ್ರಷ್ಯಾ ದೇಶದ ಅರಸರುಗಳು ಮಂತ್ರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದ್ದರು ಎಂಬುದಾಗಿಯೇ ಹೇಳಬೇಕಾಗುತ್ತದೆ. ಮಹತ್ತರ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಬೇಕಾದರೆ ಮಂತ್ರಿಮಂಡಲದ ಸಭೆಯನ್ನು ಕರೆಯುತ್ತಿದ್ದರು. ಸಚಿವರುಗಳ ಸ್ಥಾನಮಾನ ಅರಸರ ಆಸಕ್ತಿಯನ್ನು ಅವಲಂಬಿಸಿ ಕೊಂಡಿರುತ್ತಿತ್ತು.

ಸ್ವೀಡನ್ ದೇಶದಲ್ಲಿ ಹದಿನೇಳು ಮತ್ತು ಹದಿನೆಂಟನೆಯ ಶತಮಾನದಲ್ಲಿ ಅಸ್ತಿತ್ವ ದಲ್ಲಿದ್ದ ಸರಕಾರದ ಕುರಿತು ಚರ್ಚಿಸುವಾಗ ಇಬ್ಬರು ವ್ಯಕ್ತಿಗಳೂ ಪ್ರಮುಖರಾಗುತ್ತಾರೆ. ಅವರುಗಳೆಂದರೆ ಗುಸ್ಟೋವಸ್ ಅಡಾಲ್ಪಸ್(೧೬೧೧-೩೨) ಮತ್ತು ಹನ್ನೆರಡನೆಯ ಚಾರ್ಲ್ಸ್ (೧೬೯೭-೧೭೧೮). ಸ್ವೀಡನ್ ದೇಶದ ಅರಸರುಗಳ ನಿರಂಕುಶಪ್ರಭುತ್ವದ ಸಾಮರ್ಥ್ಯ ಹಾಗೂ ಮಿತಿಗಳು ಅಲ್ಲಿನ ಸೈನ್ಯದ ಸಾಮರ್ಥ್ಯವನ್ನು ಅವಲಂಬಿಸಿತ್ತು. ಯುರೋಪಿನಲ್ಲಿ ಸ್ವೀಡನ್ ಒಂದು ಬಲಿಷ್ಟ ರಾಷ್ಟ್ರವಾಗಿ ರೂಪುಗೊಳ್ಳಲು ಇದೇ ಪ್ರಮುಖ ಕಾರಣ. ಗುಸ್ಟೋವ್ ಅಡಾಲ್ಪಸ್ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಅಳವಡಿಸಿ ಸೈನ್ಯದಲ್ಲಿ ಮಹತ್ತರ ಸುಧಾರಣೆಯನ್ನು ಜಾರಿಗೆ ತರುವ ಯೋಜನೆಯನ್ನು ಹಮ್ಮಿಕೊಂಡಿದ್ದ. ಈ ಸೈನಿಕ ಸುಧಾರಣೆಯಿಂದಾಗಿಯೇ ಯುರೋಪಿನ ಇತಿಹಾಸದಲ್ಲೇ ಪ್ರಸಿದ್ಧವಾದ ಮೂವತ್ತು ವರ್ಷಗಳ ಯುದ್ಧದಲ್ಲಿ ಸ್ವೀಡನ್ ಜಯಶಾಲಿಯಾಯಿತು ಮತ್ತು ಬಾಲ್ಟಿಕ್ ಪ್ರಾಂತ್ಯದ ಪ್ರಶ್ನಾತೀತ ರಾಣಿಯಾಗಿ ರೂಪುಗೊಂಡಿತು. ದೇಶದ ಆರ್ಥಿಕ ಪ್ರಗತಿಯ ಉದ್ದೇಶಕ್ಕಾಗಿ ಉತ್ತರ ಹಾಗೂ ಮಧ್ಯ ಯುರೋಪಿನ ರಾಷ್ಟ್ರಗಳೊಡನೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿಕೊಂಡಿತ್ತು. ಸ್ವೀಡನ್‌ನಲ್ಲಿ ಅಗಾಧವಾದ ಕಬ್ಬಿಣದ ಅದಿರು ಹಾಗೂ ತಾಮ್ರ ಲಭ್ಯವಿದ್ದುದರಿಂದಾಗಿ ಯುರೋಪಿನ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಹೊಂದಲು ಸಾಧ್ಯವಾಯಿತು. ಇದು ಅಲ್ಲಿನ ನಿರಂಕುಶ ಪ್ರಭುತ್ವಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿಯಾಯಿತು.

ಗುಸ್ಟೋವ್ ಅಡಾಲ್ಪಸ್ ಸಂವಿಧಾನಾತ್ಮಕ ಪ್ರಭುತ್ವದಲ್ಲಿ ನಂಬಿಕೆಯಿಟ್ಟಿದ್ದ. ಶಾಸಕಾಂಗ ಹಾಗೂ ಕೌನ್ಸಿಲ್‌ನೊಡನೆ ಉತ್ತಮ ಸಂಬಂಧವನ್ನು ಹೊಂದಿದ್ದ. ರಷ್ಯಾದ ಅರಸ ಪೀಟರ್ ಜಾರಿಗೆ ತಂದಿದ್ದ ಆಡಳಿತ ಕ್ರಮವನ್ನು ಸ್ವೀಡನ್‌ನಲ್ಲಿ ಅನುಷ್ಟಾನಕ್ಕೆ ತರುವ ಪ್ರಯತ್ನವನ್ನು ಮಾಡಿದ. ಇವನ ಆಡಳಿತದಲ್ಲಿ ಆ್ಯಕ್ಸಲ್ ಓಕ್ಸನ್ ಸ್ಟೀರ್‌ನಾ ಎಂಬ ಸಚಿವ ಪ್ರಮುಖ ಸ್ಥಾನವನ್ನು ಹೊಂದಿದ್ದ. ಇವನು ಆಡಳಿತದ ವಿಕೇಂದ್ರೀಕರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಸಂವಿಧಾನಾತ್ಮಕ ಮಾದರಿಯ ಸರಕಾರದ ರಚನೆಗೆ ಪೋತ್ಸಾಹವನ್ನು ನೀಡಿದ. ಆದರೆ ಕುಲೀನ ಪ್ರಭುತ್ವದ ಪ್ರಭಾವದಿಂದಾಗಿ ನಿರಂಕುಶ ಆಡಳಿತವೇ ಕೇಂದ್ರದಲ್ಲಿ ಗಟ್ಟಿಯಾಗಿ ರೂಪುಗೊಳ್ಳಲಾರಂಭಿಸಿತು. ಸ್ವೀಡನ್‌ನಲ್ಲಿ ಅಸೆಂಬ್ಲಿಗೆ ತನ್ನ ದೈನಂದಿನ ಕಾರ್ಯ ಕಲಾಪಗಳನ್ನು ನಿಭಾಯಿಸಲು ಒಂದು ಖಾಯಂ ಸ್ಥಳವೇ ಇರಲಿಲ್ಲ. ಅಲ್ಲಿ ನೊಬಿಲಿಟಿಯ ಪ್ರತಿಷ್ಠೆಯನ್ನು ಹೆಚ್ಚಿಸುವುದಕ್ಕೋಸ್ಕರ ಅಸೆಂಬ್ಲಿಯನ್ನು ಉಪಯೋಗಿಸಲಾಗುತ್ತಿತ್ತು. ಹನ್ನೆರಡನೆಯ ಚಾರ್ಲ್ಸ್‌ನ ಆಡಳಿತವೂ ಈ ಬೆಳವಣಿಗೆಗೆ ಹೊರತಾಗಿರಲಿಲ್ಲ. ಆದ್ದರಿಂದ ಸಂವಿಧಾನಾತ್ಮಕ ಮಾದರಿಯ ಸರಕಾರದ ಪ್ರಯತ್ನ ವಿಫಲಗೊಂಡಿತು. ಸ್ವೀಡನ್ ದೇಶದ ನಿರಂಕುಶಪ್ರಭುತ್ವ ಕೇವಲ ಸೈನ್ಯದ ಸಾಮರ್ಥ್ಯವನ್ನು ಮಾತ್ರ ಅವಲಂಬಿಸಿಕೊಂಡಿದ್ದರಿಂದಾಗಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಭದ್ರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಬಲಿಷ್ಠವಾದ ಸೈನ್ಯಕ್ಕೆ ಅಷ್ಟೇ ಸಾಮರ್ಥ್ಯದ ಹಾಗೂ ಗುಣಾತ್ಮಕವಾದ ಅಂತಾರಾಷ್ಟ್ರೀಯ ನೀತಿ ಮತ್ತು ರಾಯಭಾರಿತ್ವದ ಅಗತ್ಯತೆ ಇರುತ್ತದೆ. ಇದರ ಜತೆಗೇ ಆಂತರಿಕ ಹಾಗೂ ವಿದೇಶಾಂಗ ನೀತಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದೂ ಪ್ರಾಮುಖ್ಯವಾಗುತ್ತದೆ. ಈ ಎಲ್ಲಾ ಅಂಶಗಳ ವಿಫಲತೆಯೇ ಸ್ವೀಡನ್ ದೇಶದ ನಿರಂಕುಶ ಪ್ರಭುತ್ವ ಅವನತಿಯನ್ನು ಹೊಂದಲು ಮೂಲಭೂತ ಕಾರಣವಾಯಿತು. ಹನ್ನೆರಡನೆಯ ಚಾರ್ಲ್ಸ್‌ನ ಆಳ್ವಿಕೆಯ ನಂತರದ ಅವಧಿಯಲ್ಲಿ ಸ್ವೀಡನ್, ಸಂವಿಧಾನಾತ್ಮಕ ರಾಜಪ್ರಭುತ್ವ ಹಾಗೂ ಆಡಳಿತದ ವಿಕೇಂದ್ರೀಕರಣದಿಂದಾಗಿ ಅಂತರಿಕ ಸ್ಥಿರತೆಯನ್ನು ಸಾಧಿಸಲು ಸಾಧ್ಯವಾಯಿತು.

ಸ್ಪೈಯಿನ್‌ನಲ್ಲಿ ಬೂರ್ಬನ್ ರಾಜವಂಶದ ಆಳ್ವಿಕೆ ಇದ್ದುದ್ದರಿಂದಾಗಿ ಹದಿನಾಲ್ಕನೆಯ ಲೂಯಿಯ ಆಡಳಿತಕ್ರಮವನ್ನೇ ಅನುಸರಿಸಲಾಗುತ್ತಿತ್ತು. ಇಲ್ಲಿ ಅರಸರಿಗಿಂತ ಮಂತ್ರಿಗಳೇ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಇಲ್ಲಿನ ಸರಕಾರವನ್ನು ಮಂತ್ರಿಗಳ ನಿರಂಕುಶ ಪ್ರಭುತ್ವ ಎಂಬುದಾಗಿಯೂ ಕರೆಯಲಾಗಿದೆ. ಉದಾಹರಣೆಗೆ, ಆರನೆಯ ಪರ್ಡಿನೇಂಡ್‌ನ ಅವಧಿಯಲ್ಲಿ ಎನ್‌ಸಿನೇಡಾ ಮತ್ತು ಅರೇಂಡಾ ಎಂಬ ಮಂತ್ರಿಗಳು ಸಂಪೂರ್ಣವಾಗಿ ಆಡಳಿತವನ್ನು ನಡೆಸುತ್ತಿದ್ದರು. ಐದನೆಯ ಫಿಲಿಫ್‌ನ ಆಡಳಿತ ಅವಧಿಯಲ್ಲಿ ಜಿಯಾನ್ ಓರೀ, ಕಾರ್ಡಿನಲ್ ಆರ್‌ಬೆರೋನಿ, ಪೆಟಿನೋ ಮುಂತಾದ ಮಂತ್ರಿಗಳು ಆಡಳಿತವನ್ನು ನಿರ್ವಹಿ ಸುತ್ತಿದ್ದರು. ಐದನೆಯ ಫಿಲಿಪ್ ಬೂರ್ಬನ್ ವಂಶಸ್ಥನಾಗಿದ್ದು ಒಂದು ಸಂಕೀರ್ಣ ರಾಜಕೀಯ ಸ್ಥಿತ್ಯಂತರದ ಫಲವಾಗಿ ಸ್ಪೈಯಿನ್‌ನ ಅರಸನಾಗಿ ನೇಮಕಗೊಂಡ. ಸ್ಪೈಯಿನ್ ನಲ್ಲಿ ಸಿಂಹಾಸನಕ್ಕಾಗಿ ಕಿತ್ತಾಟ ಪ್ರಾರಂಭವಾಗಿ ಸ್ಪೈಯಿನ್ ವಿಭಜನೆಯಾಗುವ ಹಂತಕ್ಕೆ ತಲುಪಿತ್ತು. ಫ್ರಾನ್ಸ್‌ನ ಬೂರ್ಬನ್ ಅರಸರ ಮಧ್ಯಪ್ರದೇಶದಿಂದಾಗಿ ಹೋರಾಟ ಕೊನೆಗೊಂಡು ಬೂರ್ಬನ್ ವಂಶಸ್ಥನೇ ಹೊಸ ಅರಸನಾಗಿ ನೇಮಕಗೊಂಡ. ಇದು ಯುರೋಪಿನ ರಾಜವಂಶಗಳ ಸಾಮ್ರಾಜ್ಯದ ವಿಸ್ತರಣೆಯ ನೀತಿಯನ್ನು ಸೂಚಿಸುತ್ತದೆ.

ಸ್ಪೈಯಿನ್‌ನಲ್ಲಿ ನಿರಂಕುಶ ಪ್ರಭುತ್ವ ರೂಪುಗೊಳ್ಳುವುದಕ್ಕೆ ಎರಡು ಪ್ರಮುಖ ಕಾರಣ ಗಳಿವೆ. ಒಂದನೆಯದಾಗಿ ಕ್ಯಾಸ್ಟಿಲೇ ಮತ್ತು ಅರೆಗೋನ್ ಎಂಬ ಎರಡು ರಾಷ್ಟ್ರಗಳು ಸ್ಪೈಯಿನ್‌ನೊಡನೆ ವಿಲೀನಗೊಂಡಿರುವುದು. ಇದು ವೈವಾಹಿಕ ಸಂಬಂಧದ ಮೂಲಕ ಸಾಧ್ಯವಾಯಿತು. ಅಂದರೆ ಸ್ಪೈಯಿನ್‌ನ ಅರಸ ಎರಡನೆಯ ಫರ್ಡಿನೇಂಡ್‌ನ ವಿವಾಹ ಹಾಬ್ಸ್‌ಬರ್ಗ್ ಮನೆತನದ ಒಂದನೆಯ ಇಸಾಬೆಲ್ಲಾಳೊಡನೆ ನಡೆಯಿತು. ಎರಡನೆಯದಾಗಿ, ಸಮುದ್ರದಾಚೆಯ ಸಾಮ್ರಾಜ್ಯದ ಸ್ಥಾಪನೆ. ಹದಿನೇಳನೆಯ ಶತಮಾನದ ದ್ವಿತೀಯಾರ್ಧದಲ್ಲಿ ಸ್ಪೆಯಿನ್ ಪ್ರಪಂಚದ ಅನೇಕ ಭಾಗಗಳಲ್ಲಿ ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸಿತು. ಹೊರದೇಶಗಳೊಡನೆ ಹೊಂದಿದ್ದ ವ್ಯಾಪಾರ ಸಂಬಂಧ ಸ್ಪೆಯಿನ್‌ನ ಆರ್ಥಿಕ ಏಳಿಗೆಗೆ ದಾರಿಮಾಡಿಕೊಟ್ಟಿತು. ಸ್ಪೆಯಿನ್‌ನ ಆಂತರಿಕ ವ್ಯವಸ್ಥೆಯ ಕುರಿತು ಚರ್ಚಿಸುವಾಗ ಇದು ಯುರೋಪಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ಕಂಡುಬರುತ್ತದೆ. ಇಲ್ಲಿ ನೊಬಿಲಿಟಿ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ಕಂಡುಬರುತ್ತದೆ. ಇಲ್ಲಿ ನೊಬಿಲಿಟಿ ಹೆಚ್ಚಿನ ಅಧಿಕಾರ ಮತ್ತು ಸವಲತ್ತುಗಳನ್ನು ಹೊಂದಿತ್ತು. ನೆಪೋಲಿಯನ್ ಬೊನೋಪಾರ್ಟೆಯ ಆಳ್ವಿಕೆಯ ಅವಧಿಯಲ್ಲೂ ಈ ವರ್ಗ ಸ್ಪೆಯಿನ್‌ನ ಅರ್ಧದಷ್ಟು ಭೂಪ್ರದೇಶದ ಮೇಲೆ, ಅದರಲ್ಲೂ ಮುಖ್ಯವಾಗಿ ಪೇಟೆ-ಪಟ್ಟಣಗಳ ಮೇಲೆ ತನ್ನ ಹತೋಟಿಯನ್ನು ಸಾಧಿಸಿದ್ದು ಕಂಡುಬರುತ್ತದೆ. ಸ್ಪೆಯಿನ್‌ನ ನೊಬಿಲಿಟಿಯನ್ನು ಗ್ರಾಂಡೀಸ್ ಎಂಬ ಹೆಸರಿನಿಂದ ಕರೆಯಲಾಗಿದೆ. ನೊಬಿಲಿಟಿಗೆ ಅಷ್ಟೊಂದು ಅಧಿಕಾರವನ್ನು ನೀಡಲು ಮುಖ್ಯ ಕಾರಣ, ಅರಸುಮನೆತನಗಳ ಆಳ್ವಿಕೆಯ ಮುಂದುವರಿಕೆಯ ಮತ್ತು ಸರಕಾರವನ್ನು ದಿವಾಳಿತನದಿಂದ ಕಾಪಾಡುವ ಉದ್ದೇಶವೇ ಆಗಿತ್ತು. ಊಳಿಗದೊರೆಗಳು, ಪಾದ್ರಿಗಳು ಮತ್ತು ಇತರ ಕುಲೀನ ವರ್ಗದ ಜನರು ಆಡಳಿತಾತ್ಮಕ ಹಾಗೂ ನ್ಯಾಯ ವ್ಯವಹಾರದ ಅಧಿಕಾರವನ್ನು ಪಡೆದುಕೊಂಡಿದ್ದರು. ಇಲ್ಲಿ ನಿರಂಕುಶ ಪ್ರಭುತ್ವ ಒತ್ತಡ ಹೇರುವ ವರ್ಗಗಳೊಡನೆ ಒಡಂಬಡಿಕೆಯನ್ನು ಮಾಡಿಕೊಳ್ಳುವುದು ಅನಿವಾರ್ಯವಾಯಿತು.

ಪೋಲೆಂಡ್‌ನಲ್ಲಿ ಯುರೋಪಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾದ ರಾಜಕೀಯ ವ್ಯವಸ್ಥೆ ಇತ್ತು. ಇಲ್ಲಿ ಗಣರಾಜ್ಯ ವ್ಯವಸ್ಥೆ ಇದ್ದರೂ ಅದು ರಾಜಪ್ರಭುತ್ವವಾಗಿ ಪರಿವರ್ತನೆ ಹೊಂದಬೇಕಾಯಿತು. ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ರಾಜಕೀಯ ಗಲಭೆಗಳು ಪ್ರಾರಂಭವಾಗಿ ಹೊರರಾಜ್ಯಗಳು ಹಸ್ತಕ್ಷೇಪ ನಡೆಸಲಾರಂಭಿಸಿದವು. ಇದರೊಡನೆ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದ್ದರಿಂದಾಗಿ ಪೋಲೆಂಡ್ ಗಣತಂತ್ರವಾದಿ ವ್ಯವಸ್ಥೆಯನ್ನು ಬಲಪಡಿಸಲಾಗಲಿಲ್ಲ. ರಷ್ಯಾ, ಪ್ರಷ್ಯಾ ಹಾಗೂ ಆಸ್ಟ್ರೀಯಾ ದೇಶಗಳು ತಮ್ಮ ಸ್ವಂತ ಹಿತಾಸಕ್ತಿಗಳ ಈಡೇರಿಕೆಗೆ ಪೋಲೆಂಡ್ ದೇಶವನ್ನು ಸಾಧನವನ್ನಾಗಿ ಉಪಯೋಗಿಸಿಕೊಂಡರು. ನಿರಂಕುಶ ಪ್ರಭುತ್ವವನ್ನು ಬಲಪಡಿಸದ ಅಥವಾ ಆ ನೀತಿಯನ್ನು ಅಳವಡಿಸದ ರಾಷ್ಟ್ರಗಳ ಪರಿಸ್ಥಿತಿ ಪೋಲೆಂಡ್ ದೇಶದಂತೆಯೇ ಆಗುತ್ತಿತ್ತು. ಗಣತಂತ್ರವಾದಿ ವ್ಯವಸ್ಥೆ ಯುರೋಪಿನಲ್ಲಿ ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡರೂ ಗಟ್ಟಿಯಾಗಿ ನಿಲ್ಲಲ್ಲು ಸಾಧ್ಯವಾಗಲಿಲ್ಲ.

ಯುರೋಪಿನ ಸರಕಾರದ ವಿವಿಧ ಮಾದರಿಗಳ ಕುರಿತು ಚರ್ಚಿಸುವಾಗ ಗಣರಾಜ್ಯ ವ್ಯವಸ್ಥೆಯೂ ಪ್ರಾಮುಖ್ಯವೆನಿಸುತ್ತದೆ. ಏಕೆಂದರೆ ಇದು ನಿರಂಕುಶ ಪ್ರಭುತ್ವದ ವಿರುದ್ಧ ದಂಗೆ ಏಳುತ್ತಿದ್ದವು. ಆದರೆ ದಂಗೆ ಕ್ರಾಂತಿಯ ಸ್ವರೂಪವನ್ನು ಪಡೆದಿರಲಿಲ್ಲ. ಗಣ ರಾಜ್ಯಗಳು ಸೀಮಿತ ಭೂಪ್ರದೇಶವನ್ನು ಹೊಂದಿದ್ದವು ಎನ್ನುವ ಅಂಶ ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿ ಅಧಿಕಾರದ ವಿಕೇಂದ್ರೀಕರಣವಿದ್ದು ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗವೆನ್ನುವ ಆಡಳಿತದ ಮೂರು ವ್ಯವಸ್ಥೆಗಳು ಇರುತ್ತಿದ್ದವು. ಇಲ್ಲಿ ಮಂತ್ರಿ ಮಂಡಲದ ಸಲಹೆ ಸೂಚನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯತೆ ಇದ್ದು ಬಹುಮತದ ಆಧಾರದ ಮೇಲೆ ಸರಕಾರ ಕಾರ್ಯ ನಿರ್ವಹಿಸಬೇಕಿತ್ತು. ಪ್ರಮುಖ ಗಣರಾಜ್ಯಗಳನ್ನು ಉದಾಹರಿಸು ವುದಾದರೆ, ಡಚ್ ಗಣರಾಜ್ಯ ಇಟಲಿ ದೇಶದ ಕೆಲವು ಪ್ರಾಚೀನ ರಾಜ್ಯಗಳಾದ ವೇನಿಸ್, ಜಿನೋವಾ, ಲುಕ್ಕಾ ಇತ್ಯಾದಿ.

ತಮ್ಮ ಸಮಕಾಲೀನ ನಿರಂಕುಶ ಪ್ರಭುತ್ವವಾದಿ ಬೃಹತ್ ರಾಷ್ಟ್ರಗಳನ್ನು ಪ್ರಶ್ನಿಸುವಷ್ಟು ಸಾಮರ್ಥ್ಯವನ್ನು ಗಣತಂತ್ರವಾದಿ ದೇಶಗಳು ಹೊಂದಿರಲಿಲ್ಲ. ಆದ್ದರಿಂದ ಮೇಲೆ ಹೆಸರಿಸಿದ ದೇಶಗಳಲ್ಲಿ ಯಾವುದೇ ರೀತಿಯ ದಂಗೆ ನಡೆದರೂ ಯುರೋಪಿನಾದ್ಯಂತ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಿರಲಿಲ್ಲ. ಆದರೂ ಜನಸಾಮಾನ್ಯರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಮಾತ್ರ ಸಫಲವಾಗಿದ್ದವು. ಇದಕ್ಕೆ ಉತ್ತಮ ನಿದರ್ಶನ ಹದಿನೆಂಟನೆಯ ಶತಮಾನದ ದ್ವಿತೀಯಾರ್ಧದಲ್ಲಿ ಆರಂಭವಾದ ಕ್ರಾಂತಿಗಳು. ಗಣತಂತ್ರ ವ್ಯವಸ್ಥೆಯಲ್ಲಿ ಅನೇಕ ಪ್ರಾಂತ್ಯಗಳಿದ್ದು ಪ್ರತಿಯೊಂದು ಪ್ರಾಂತ್ಯವೂ ಪ್ರಾಂತ್ಯಾಧಿಕಾರಿಗಳನ್ನು ಹೊಂದಿರುತ್ತಿತ್ತು. ಕೇಂದ್ರದ ಹಸ್ತಕ್ಷೇಪವಿಲ್ಲದೆ ಪ್ರಾಂತ್ಯಗಳಲ್ಲಿ ಪ್ರಾಂತ್ಯಾಧಿಕಾರಿಗಳೇ ಆಡಳಿತವನ್ನು ನಡೆಸುತ್ತಿದ್ದರು. ಪ್ರತಿಯೊಂದು ಪ್ರಾಂತ್ಯವೂ ಕೌನ್ಸಿಲ್ (ಆಲೋಚನಾ ಸಭೆ) ಹೊಂದಿದ್ದು ಒಮ್ಮತದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿತ್ತು. ವಿಶಾಲಾರ್ಥದಲ್ಲಿ ಗಣರಾಜ್ಯಗಳ ಒಟ್ಟು ಸ್ವರೂಪವನ್ನು ಕುರಿತು ಚರ್ಚಿಸುವಾಗ ಶಾಂತಿ, ತಟಸ್ಥ ನೀತಿ, ಧಾರ್ಮಿಕ ಸಹಿಷ್ಣುತೆ, ವ್ಯಾಪಾರದ ಅಭಿವೃದ್ದಿಗೆ ಪೂರಕವಾಗಿರುವ ನೀತಿಗಳನ್ನು ಕಾಣಬಹುದು. ಒಟ್ಟಾರೆಯಾಗಿ ಹದಿನೇಳನೆಯ ಮತ್ತು ಹದಿನೆಂಟನೆಯ ಶತಮಾನದ ಗಣರಾಜ್ಯಗಳ ಅಧ್ಯಯನ ನಡೆಸುವಾಗ ಆಶಾದಾಯಕ ಉತ್ತರ ಸಿಗುವುದಿಲ್ಲ.

ಹದಿನೆಂಟನೆಯ ಶತಮಾನದ ಯುರೋಪನ್ನು ‘ಪ್ರಜ್ಞಾವಂತ ರಾಜಪ್ರಭುತ್ವದ ಯುಗ’ ಎಂಬುದಾಗಿಯೂ ಕರೆಯಲಾಗಿದೆ. ಇದು ಯುರೋಪ್‌ಕೇಂದ್ರಿತ ಅಧ್ಯಯನದ ಸೃಷ್ಟಿಯಾದರೂ ಕೆಲವೊಂದು ಸಿದ್ಧಾಂತಗಳು ರೂಪುಗೊಂಡಿರುವುದಂತೂ ನಿಜ. ತಮ್ಮ ಪ್ರಜೆಗಳ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಜನಪರ ಧೋರಣೆಗಳನ್ನು ತಳೆದ ಅರಸರುಗಳನ್ನು ಪ್ರಜಾವಂತ ರಾಜರುಗಳು ಎಂದು ಹೆಸರಿಸಲಾಗಿದೆ. ಫ್ರಾನ್ಸಿನ ತತ್ವಜ್ಞಾನಿ ಗಳಾದ ಮೊಂಟೆಸ್ಕ್ಯೊ ಇಂಗ್ಲೆಂಡಿನ ಅಧಿಕಾರದ ಸ್ವರೂಪದತ್ತ ಒಲವು ತೋರಿಸಿದರೆ, ವಾಲ್ಟೇರ್ ಪ್ರಷ್ಯಾದ ಉದಾರವಾದಿ ನಿರಂಕುಶ ಪ್ರಭುತ್ವವನ್ನು ಬೆಂಬಲಿಸುತ್ತಾನೆ. ಆದರೆ ರೂಸ್ಸೋ ಜನಸಾಮಾನ್ಯರ ಶ್ರೇಷ್ಠಾಧಿಕಾರದ ಕುರಿತು ತನ್ನ ಸಿದ್ಧಾಂತವನ್ನು ಮಂಡಿಸುತ್ತಾನೆ. ಜೋನ್‌ಲಾಕ್, ಸಿಡ್ನೀ ಮುಂತಾದ ಅನೇಕ ತತ್ವಜ್ಞಾನಿಗಳು ನಿರಂಕುಶಪ್ರಭುತ್ವ, ಚರ್ಚ್ ಹಾಗೂ ಊಳಿಗಮಾನ್ಯ ಪದ್ಧತಿಯ ವಿರುದ್ಧ ತಮ್ಮ ಬರವಣಿಗೆಯ ಮೂಲಕ ಜನಜಾಗೃತಿ ಯನ್ನು ಉಂಟುಮಾಡಲು ಶ್ರಮಿಸುತ್ತಿದ್ದನು. ಪ್ರಜ್ಞಾವಂತ ಅರಸರುಗಳ ಕೇಂದ್ರ ಮನೋ ಭಾವನೆಯನ್ನು ಈ ರೀತಿ ವ್ಯಾಖ್ಯಾನಿಸಲು ಸಾಧ್ಯ, ‘‘ಅರಸ ಎಷ್ಟಾದರೂ ನಿರಂಕುಶ, ಆದರೆ ಅವನು ಪ್ರಜೆಗಳ ಶ್ರೇಷ್ಠ ಪ್ರತಿನಿಧಿ ಮತ್ತು ಪ್ರಥಮ ಸೇವಕ.’’ ಈ ಹಿನ್ನೆಲೆಯಲ್ಲಿ ಅರಸರುಗಳು ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು. ಈ ಸುಧಾರಣೆಗಳು ತತ್ವಜ್ಞಾನಿಗಳ ಸಿದ್ಧಾಂತಗಳಲ್ಲಿ ಅಡಕವಾಗಿರುವ ಅಂಶಗಳೇ ಆಗಿದ್ದುವು. ಆದರೆ ನಿರಂಕುಶ ಆಡಳಿತವೂ ಇದ್ದುದ್ದರಿಂದಾಗಿ ಹೊಸ ಸುಧಾರಣೆಗಳು ಅಷ್ಟೊಂದು ಸುಲಭವಾಗಿ ಜಾರಿಗೆ ಬರುವಂತಿರಲಿಲ್ಲ. ಇದಕ್ಕೆ ಕ್ರಾಂತಿಯ ಅನಿವಾರ್ಯತೆ ಇತ್ತು.

ನಿರಂಕುಶಪ್ರಭುತ್ವದ ಪರ ಹಾಗೂ ವಿರೋಧಿ ನಿಲುವುಗಳನ್ನು ಇಲ್ಲಿ ಅಧ್ಯಯನ ನಡೆಸುವುದು ಸೂಕ್ತ ಎನಿಸುತ್ತದೆ. ಹದಿನೇಳನೆಯ ಶತಮಾನದ ದ್ವಿತೀಯಾಧರ್ ಮತ್ತು ಹದಿನೆಂಟನೆಯ ಶತಮಾನದ ಅಂತ್ಯದ ನಡುವಿನ ಅವಧಿಯಲ್ಲಿ ವಿಚಾರ ಯುಗ ಕಾಣಿಸಿಕೊಂಡಿತು. ಇದನ್ನು ಸಿದ್ಧಾಂತಗಳ ಯುಗ ಅಥವಾ ನಂಬಿಕೆಯ ಯುಗ ಎಂದೂ ಕರೆಯಲಾಗಿದೆ. ಈ ಬೆಳವಣಿಗೆಗೆ ಸ್ವಲ್ಪ ಹಿಂದೆ ಅಂದರೆ ಕ್ರಿ.ಶ.ಹದಿನಾರನೆಯ ಶತಮಾನ ದಲ್ಲಿ ನಿರಂಕುಶ ಪ್ರಭುತ್ವಕ್ಕೆ ಸಿಕ್ಕಿದ ಕೊಡುಗೆಯೆಂದರೆ ಮೆಕ್ಕಾವಿಲೆಯ ಪ್ರಿನ್ಸ್. ಈ ಪುಸ್ತಕ ನಿರಂಕುಶ ಪ್ರಭುತ್ವವನ್ನು ನ್ಯಾಯ ಸಮ್ಮತಗೊಳಿಸಿದ್ದು ಮಾತ್ರವಲ್ಲದೆ ನಿರಂಕುಶಪ್ರಭು ಹೊಂದಿರಬೇಕಾದ ಎಲ್ಲಾ ಗುಣಗಳನ್ನು ಗರ್ಭೀಕರಿಸಿಕೊಂಡಿತ್ತು. ಹದಿನೇಳನೆಯ ಶತಮಾನದಲ್ಲಿ ನಾವು ಡೆಕಾರ್ಟ್, ಬೇಕನ್, ನ್ಯೂಟನ್,  ಸ್ಪಿನೋಚಾ, ಹಾಬ್ಸ್, ಬೋಸ್ ವೆಟ್, ಫಿಲ್ಮರ್, ಲಾಕ್ ಮುಂತಾದವರನ್ನು ಹೆಸರಿಸಿದರೆ, ಹದಿನೆಂಟನೆಯ ಶತಮಾನದಲ್ಲಿ ಡಿಡಿರೋಟ್, ಮೊಂಟೆಸ್ಕ್ಯೊ, ಕ್ವೆಸ್ನೇ, ಡೇವಿಡ್ ಹ್ಯೂಮ್, ವಾಲ್ಟೇರ್, ರೂಸ್ಸೋ ಮುಂತಾದವರನ್ನು ಹೆಸರಿಸಬಹುದು. ಇವರಲ್ಲಿ ಕೆಲವರು ನಿರಂಕುಶ ಪ್ರಭುತ್ವವನ್ನು ಪುಷ್ಟಿಕರಿಸಿದರೆ ಇನ್ನು ಕೆಲವರು ವಿರೋಧಿಸಲು ಪ್ರಾರಂಭಿಸಿದರು. ಉದಾಹರಣೆಗೆ, ಹೋಬ್ಸ್, ಬೊಸ್‌ವೆಟ್, ಫಿಲ್ಮರ್ ಇವರುಗಳು ನಿರಂಕುಶ ಪ್ರಭುತ್ವದ ಪರವಾಗಿ ವಾದಿಸಿದರೆ, ಸಿಡ್ನೀ, ಜೋನ್ ಲಾಕ್, ಮೊಂಟೆಸ್ಕ್ಯೊ, ರೂಸ್ಸೋ ಇವರುಗಳು ನಿರಂಕುಶ ಪ್ರಭುತ್ವವನ್ನು ಬಲವಾಗಿ ಟೀಕಿಸಿ ತಮ್ಮ ವಾದ ಮಂಡಿಸಿದರು. ಇಲ್ಲಿ ವಾದ ಯಾವ ರೀತಿಯದ್ದಾದರೂ ಯುರೋಪಿನಲ್ಲಿ ಒಂದು ಹೊಸ ಆಲೋಚನಾ ಕ್ರಮವನ್ನು ಹುಟ್ಟ ಹಾಕಿದ್ದಂತೂ ನಿಜ.

ಯುರೋಪಿನ ಬಹುತೇಕ ಎಲ್ಲಾ ರಾಷ್ಟ್ರಗಳೂ ನಿರಂಕುಶ ಪ್ರಭುತ್ವದ ಸಂಕೀರ್ಣತೆಯ ಅನುಭವಗಳನ್ನು ತಮ್ಮ ಇತಿಹಾಸದಲ್ಲಿ ದಾಖಲಿಸಿಕೊಂಡಿವೆ. ದರ್ಪಿಷ್ಟತೆ ಹಾಗೂ ದಬ್ಬಾಳಿಕೆಯಿಂದಲೇ ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಬೇಕಾದ ಅಗತ್ಯತೆ ಅಂದಿನ ಅರಸು ಮನೆತನಗಳಿಗೆ ಇತ್ತು ಎನ್ನುವ ಅಂಶ ಇಂದಿನ ಸಂಶೋಧನೆಗಳಿಂದ ವ್ಯಕ್ತವಾಗಿರುವ ಸಂಗತಿ. ಇದು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ, ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸಂಬಂಧಪಟ್ಟಂತೆ ಸ್ವರೂಪದಲ್ಲಿ ಬದಲಾವಣೆಗಳನ್ನು ಕಂಡಿರುವ ಅಂಶವನ್ನು ಈಗಾಗಲೇ ಚರ್ಚಿಸಲಾಗಿದೆ. ಉದಾಹರಣೆಗೆ, ನಿರಂಕುಶ, ಉದಾರವಾದಿ, ಪ್ರಜ್ಞಾವಂತ ರಾಜಪ್ರಭುತ್ವ ವೆನ್ನುವ ಸರಕಾರದ ವಿವಿಧ ಮಾದರಿಗಳು. ನಿರಂಕುಶ ಪ್ರಭುತ್ವ ಪರಿಸ್ಥಿತಿ ಹಾಗೂ ಪರಿಸರಕ್ಕೆ ಅನುಗುಣವಾಗಿ ಕೆಲವೊಂದು ಮಾರ್ಪಾಡುಗಳೊಂದಿಗೆ ಬಣ್ಣ ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದೂ ಉಂಟು. ಈ ಬೆಳವಣಿಗೆ ವಂಶಪಾರಂಪರ್ಯವಾಗಿ ಬಂದ ಅಧಿಕಾರವನ್ನು ಅನುಭವಿಸಲು ಹಾಗೂ ಮುಂದುವರಿಸಿಕೊಂಡು ಹೋಗಲು ಅವಶ್ಯಕ ವಾಗಿದ್ದಿರಬೇಕು. ನಿರಂಕುಶಪ್ರಭುತ್ವ ತನ್ನ ಹುಟ್ಟಿನಿಂದ ಅವನತಿಯವರೆಗೂ ವಿರೋಧಗಳನ್ನು ಎದುರಿಸುತ್ತಲೇ ಇರಬೇಕಾಗಿತ್ತು. ವಿರೋಧಗಳು ಅನೇಕ ಬಗೆಯವು. ಶ್ರೀಮಂತ ವರ್ಗದ ವಿರೋಧ, ಮಧ್ಯಮ ವರ್ಗದ ವಿರೋಧ, ಮಂತ್ರಿಗಳ ಹಾಗೂ ಇನ್ನಿತರ ಅಧಿಕಾರಗಳ ವಿರೋಧ, ತತ್ವಜ್ಞಾನಿಗಳ ಸೈದ್ಧಾಂತಿಕ ನಿಲುವುಗಳು ಹಾಗೂ ಇತರ ರಾಜಮನೆತನಗಳ ವಿರೋಧ. ಈ ಎಲ್ಲಾ ವಿರೋಧಗಳಿದ್ದರೂ ಇದು ಯುರೋಪಿನಲ್ಲಿ ಕ್ರಾಂತಿಯ ಯುಗ ಆರಂಭವಾಗುವಲ್ಲಿಯವರೆಗೆ ಒಟ್ಟು ರಾಜಕೀಯ ವ್ಯವಸ್ಥೆಯ ಮೇಲೆ ಹಿಡಿತವನ್ನು ಸಾಧಿಸಿತ್ತು. ನಿರಂಕುಶ  ಪ್ರಭುತ್ವ  ಒಂದು ಸಿದ್ಧಾಂತವಾಗಿ ರೂಪುಗೊಂಡಿದ್ದು ಹತ್ತೊಂಬತ್ತ ನೆಯ ಶತಮಾನದಲ್ಲಿ. ಇದರಿಂದಾಗಿ ಸಂಶೋಧನಾ ಅಧ್ಯಯನಗಳು ಆರಂಭಗೊಂಡು ನಿರಂಕುಶ ಪ್ರಭುತ್ವದ ಸ್ವರೂಪ ಹಾಗೂ ವ್ಯಾಪ್ತಿ ಚರ್ಚೆಯ ವಸ್ತುವಾಯಿತು.

 

ಪರಾಮರ್ಶನ ಗ್ರಂಥಗಳು

೧. ಜ್ಯೋಪ್ರೀ ಪಾರ್ಕರ್, ೧೯೭೯. ಯುರೋಪ್ ಇನ್ ಕ್ರೈಸಿಸ್ ೧೫೯೮೧೬೪೮, ಫಾಂಟಾನಾ ಪ್ರೆಸ್.

೨. ಅಲ್ವಿನ್ ಹಪ್ಟನ್, ಯುರೋಪ್: ಪ್ರಿವಿಲೇಜ್ ಆ್ಯಂಡ್ ಪ್ರೊಟೆಸ್ಟ್: ೧೭೩೦೧೭೮೯, ಫಾಂಟಾನಾ ಫ್ರೆಸ್.

೩. ಪೆರ್ರೀ ಆ್ಯಂಡರ್‌ಸನ್, ೧೯೭೮. ಲಿನ್ಯೇಜಸ್ ಆಫ್ ಅಬ್ಸಲ್ಯೂಟಿಸ್ಟ್ ಸ್ಟೇಟ್, ಲಂಡನ್: ಹ್ಯುಮೇನಿಟೀಸ್ ಪ್ರೆಸ್.

೪. ಆ್ಯಂಡರ್‌ಸನ್ ಎಂ.ಎಸ್., ೧೯೭೬. ಯುರೋಪ್ ಇನ್ ದ ಎಟೀನ್ತ್ ಸೆಂಚುರಿ (ಎರಡನೆಯ ಮುದ್ರಣ), ಲಾಂಗ್ ಮೇನ್

೫. ಥಿಯೋಡೋರ್ ರಾಬ್ ಕೆ., ೧೯೭೫. ಸ್ಟ್ರಗಲ್ ಫಾರ್ ಸ್ಟೆಬಿಲಿಟಿ ಇನ್ ದ ಆರ್ಲೀ ಮಾಡರ್ನ್ ಯುರೋಪ್, ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.

೬. ಹಿಲ್ಟನ್ ರೋಡ್ನೀ, ೧೯೭೮. ದ ಟ್ರಾನ್‌ಸೀಶ್ಯನ್ ಪ್ರಮ್ ಪ್ಯೂಡಲಿಸಂ ಟು ಕ್ಯಾಪಿಟಾಲಿಸಂ, ವರ್ಸೋ

೭. ವಿಲ್ಯಮ್ ಡೋಯ್ಲಿ,  ೧೯೭೮. ದಿ ಓಲ್ಡ್ ಯುರೋಪಿಯನ್ ಆರ್ಡರ್ ೧೬೬೦೧೮೦೦, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್