ಮಾನವಕೋಟಿಯ ಇತಿಹಾಸದಲ್ಲಿ ಎರಡು ಮಹಾಯುದ್ಧಗಳ ನಡುವಿನ (೧೯೧೯-೧೯೩೯) ಐತಿಹಾಸಿಕ ಸಂಗತಿಗಳು ಯುರೋಪಿನ ವಿಭಜನೆ ಮತ್ತು ಯುದ್ಧಗಳಿಗೆ ಕಾರಣವಾಗಿ ಅರಾಜಕತೆ, ಭೀತಿ ಮತ್ತು ಅಶಾಂತಿಗಳು ಎಲ್ಲೆಡೆ ಕಾಣಿಸಿಕೊಂಡವು. ಯುರೋಪಿನ ವಿಭಜನೆಯ ಮತ್ತು ಇಪ್ಪತ್ತನೆಯ ಶತಮಾನದಲ್ಲಿ ರಾಜಕೀಯ ಶಕ್ತಿಗಳಾಗಿ ರಾರಾಜಿಸಿದ ಪ್ರಜಾಪ್ರಭುತ್ವ, ಸಮತಾವಾದ, ಫ್ಯಾಸಿಸಂ, ನಾಜಿಸಂ ಮತ್ತು ಜಪಾನಿನಲ್ಲಿಯ  ಉಗ್ರರಾಷ್ಟ್ರೀಯತೆ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯತೆಯ ಪ್ರಜ್ಞೆಯನ್ನು ಕಾಣುತ್ತೇವೆ. ತಮ್ಮದೇ ಆದ ಸರ್ಕಾರವನ್ನು ಸ್ಥಾಪಿಸಿಕೊಂಡು ದೇಶಾಭಿಮಾನ ಮತ್ತು ಅದರ ಸಮಗ್ರತೆ ಹಾಗೂ ಸಂಸ್ಕೃತಿಯ ಪ್ರತೀಕಗಳಾದ ನೆಲ, ಭಾಷೆ, ಜನಾಂಗ, ಧರ್ಮ, ಕಲೆ, ಸಾಹಿತ್ಯ, ಸಂಗೀತ ಇತ್ಯಾದಿಗಳನ್ನು ರಕ್ಷಿಸಿಕೊಳ್ಳುವಲ್ಲಿ ರಾಷ್ಟ್ರೀಯತೆ ನಿರ್ಣಾಯಕ ಪಾತ್ರ ವಹಿಸಿದೆ. ೧೭೭೬ರ ಅಮೆರಿಕ ಸ್ವಾತಂತ್ರ್ಯ ಯುದ್ಧ ಮತ್ತು ೧೭೮೯ರ ಫ್ರಾನ್ಸ್ ಕ್ರಾಂತಿಯಿಂದ ಯುರೋಪಿನಲ್ಲಿ ರಾಷ್ಟ್ರೀಯತೆಯ ಭಾವನೆ ರೂಪುಗೊಂಡಿತು. ಇಂಗ್ಲೆಂಡಿನಲ್ಲಿ ರಾಷ್ಟ್ರೀಯತೆಯ ಉದಯದಲ್ಲಿ ಚರ್ಚಿನ ಚಟುವಟಿಕೆಗಳು ಕಾರಣವಾದರೆ ಫ್ರಾನ್ಸಿನಲ್ಲಿ ರೂಸೋ ಪ್ರತಿಪಾದಿಸಿದ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯದ ವಿಚಾರಗಳು (ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವ) ರಾಷ್ಟ್ರೀಯತೆ ರೂಪುಗೊಳ್ಳಲು ಕಾರಣವಾದವು. ರಾಷ್ಟ್ರೀಯತೆಯ ಬೆಳವಣಿಗೆಯಿಂದ ಕಾಲಕ್ರಮೇಣ ಅರಸೊತ್ತಿಗೆ, ಊಳಿಗಮಾನ್ಯ ಪದ್ಧತಿಗಳು ಜನರಿಂದ ತಿರಸ್ಕರಿಸಲ್ಪಟ್ಟು ಜಾತ್ಯಾತೀತ ಹಾಗು ಪ್ರಜಾಪ್ರಭುತ್ವ ತತ್ವಗಳು ಪುರಸ್ಕರಿಸಲ್ಪಟ್ಟವು. ರಾಷ್ಟ್ರೀಯತೆ ಮತ್ತು ದೇಶಭಕ್ತಿ ಇವುಗಳ ಅರ್ಥ ಅವಿನಾಭಾವ ಸಂಬಂಧವುಳ್ಳದ್ದಾಗಿದೆ.

ರಾಷ್ಟ್ರೀಯತೆ

ಜನತೆಗಾಗಿ ದೇಶ ಹಾಗೂ ದೇಶಕ್ಕಾಗಿ ಜನರ ಸ್ವಯಂ ಆಡಳಿತ ಎಂಬ ಹೊಸ ಪ್ರಜ್ಞೆ ರಾಷ್ಟ್ರೀಯತೆಯಿಂದ ಮೂಡಿತು. ಇದರಿಂದ ಫ್ರಾನ್ಸಿನ ಬೋರ್ಬನ್ ವಂಶದ ರಾಜಪ್ರಭುತ್ವ ನಶಿಸಿ ಸಮಾನತೆ, ಸ್ವಾತಂತ್ರ್ಯ ಹಾಗೂ ಭಾತೃತ್ವ ವಿಚಾರಗಳ ತಳಹದಿಯ ಮೇಲೆ ಫ್ರಾನ್ಸಿ ನಲ್ಲಿ ಪ್ರಜಾರಾಜ್ಯ ಅಸ್ತಿತ್ವಕ್ಕೆ ಬಂದಿತು. ರಾಷ್ಟ್ರೀಯತೆಯ ಭಾವನೆ ಪ್ರಬಲವಾದದ್ದರಿಂದ, ಸ್ಪೆಯಿನ್ ಮತ್ತು ಪೋರ್ಚುಗೀಸರು ಭಾವನಾತ್ಮಕವಾಗಿ ಹೋರಾಡಿ ಇಡೀ ಯುರೋಪನ್ನಾಳಿದ ನೆಪೋಲಿಯನ್ನನ ಸೈನ್ಯವನ್ನು ಸ್ಪೆಯಿನಿನ ದ್ವೀಪದಿಂದ ಹೊಡೆದೋಡಿಸಿ ತಮ್ಮ ತಾಯ್ನಡಿನ ಸ್ವಾತಂತ್ರ್ಯವನ್ನು ರಕ್ಷಿಸಿದರು. ೧೮೩೦ರಲ್ಲಿ ಫ್ರಾನ್ಸಿನ ದೊರೆ ಹತ್ತನೆಯ ಚಾರ್ಲ್ಸನು ಪತ್ರಿಕಾ ಸ್ವಾತಂತ್ರ್ಯವನ್ನು ಕಳೆದುಕೊಂಡು ಜನರ ಮತದಾನದ ಹಕ್ಕನ್ನು ಮೊಟಕುಗೊಳಿಸಲೆತ್ನಿಸಿದಾಗ ಅಲ್ಲಿನ ಜನರು ಈತನ ವಿರುದ್ಧ ಕ್ರಾಂತಿ ಮಾಡಲು ಅವರಲ್ಲಿದ್ದ ರಾಷ್ಟ್ರೀಯ ಪ್ರಜ್ಞೆ ಕಾರಣವಾಯಿತು. ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಜನತೆ ಚಾರ್ಲ್ಸನನ್ನು ಉಚ್ಛಾಟಿಸಿ ಜನಾಭಿಮಾನಿಯಾಗಿದ್ದ ಲೂಯಿ ಫಿಲಪ್ ನನ್ನು ಫ್ರೆಂಚರು ದೊರೆಯನ್ನಾಗಿ ಮಾಡಿಕೊಂಡರು. ೧೮೧೫ರ ವಿಯನ್ನ ಸಮ್ಮೇಳನವು ಬೆಲ್ಜಿಯನ್ನರ ಇಚ್ಛೆಗೆ ವಿರುದ್ಧವಾಗಿ ಬೆಲ್ಜಿಯಮ್ ಅನ್ನು ಹಾಲೆಂಡಿನೊಡನೆ ವಿಲೀನಗೊಳಿಸಿತ್ತು. ಬೆಲ್ಜಿಯನ್ನರು ಭಾಷೆ, ಧರ್ಮ ಹಾಗೂ ಆರ್ಥಿಕ ಜೀವನದ ದೃಷ್ಟಿಯಿಂದ ಹಾಲೆಂಡಿನ ಡಚ್ಚರಿಗಿಂತ ಭಿನ್ನರಾಗಿದ್ದರು. ಬೆಲ್ಜಿಯಂ ಕ್ಯಾಥೊಲಿಕ್ ನಾಡಾಗಿತ್ತು. ಹಾಲೆಂಡ್ ಪ್ರೊಟೆಸ್ಟಂಟರ ನಾಡಾಗಿತ್ತು. ಅಲ್ಪ ಸಂಖ್ಯಾತರಾಗಿದ್ದ ಡಚ್ಚರು ಬೆಲ್ಜಿಯನ್ನರಿಗಿಂತಲೂ ಅಧಿಕ ಪ್ರಮಾಣದ ರಾಜಕೀಯ ಅಧಿಕಾರ ಚಲಾಯಿಸುವುದನ್ನು ಕಂಡ ಬೆಲ್ಜಿಯನ್ನರಿಗೆ ಸ್ವಾಭಾವಿಕವಾಗಿಯೇ ತೀವ್ರ ಅಸಮಾಧಾನವಾಗಿತ್ತು. ಡಚ್ಚರು ಡಚ್ಚ್ ಭಾಷೆಯನ್ನು ಆಡಳಿತಭಾಷೆಯಾಗಿ ಮಾಡಲು ಯತ್ನಿಸಿದ್ದಾರೆಂದು ಬೆಲ್ಜಿಯನ್ನರು ಕೋಪೋದ್ರಿಕ್ತರಾದರು. ಅವರು ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಹಾಲೆಂಡಿನ ದೊರೆಯನ್ನು ಒತ್ತಾಯಿಸಿದರು. ದೊರೆ ವಿಲಿಯಂನು ಅವರ ಬೇಡಿಕೆಯನ್ನು ತಿರಸ್ಕರಿಸಿದನು. ೧೮೩೦ರ ಫ್ರಾನ್ಸಿನ ಜುಲೈ ಕ್ರಾಂತಿಯಿಂದ ಸ್ಫೂರ್ತಿ ಪಡೆದು ಹಾಲೆಂಡಿನ ಪ್ರಭುತ್ವದ ವಿರುದ್ಧ ದಂಗೆ ಎದ್ದರು. ದೊರೆಯ ಸೈನ್ಯವನ್ನು ಸೋಲಿಸಿ ೧೮೩೦ರ ಅಕ್ಟೋಬರ್‌ನಲ್ಲಿ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿದರು. ಬೆಲ್ಜಿಯಂನ ಸ್ವಾತಂತ್ರ್ಯ ರಾಷ್ಟ್ರೀಯತೆಯ ತತ್ವಕ್ಕೆ ಲಭಿಸಿದ ವಿಜಯವಾಗಿತ್ತು.

ರಾಷ್ಟ್ರೀಯತೆಯ ಪ್ರಜ್ಞೆಯಿಂದಾಗಿ ರಷ್ಯಾ ಪುನರುತ್ಥಾನ ಹೊಂದಿತ್ತು. ತದನಂತರ ೧೮೪೮ರಲ್ಲಿ ಫ್ರಾನ್ಸಿನ ಜನತೆಯು ಬೊರ್ಬನ್ ವಂಶದ ದೊರೆ ಲೂಯಿ ಫಿಲಿಫನ ವಿರುದ್ಧ ದಂಗೆ ಎದ್ದು ಅವನನ್ನು ಹಾಗೂ ಅವನ ಪ್ರಧಾನಮಂತ್ರಿ ಗಿಜೊಟ್‌ನನ್ನು ಪದಚ್ಯುತಗೊಳಿಸಿ ಫ್ರಾನ್ಸಿನಲ್ಲಿ ಎರಡನೆಯ ಗಣರಾಜ್ಯವನ್ನು ಸ್ಥಾಪಿಸಿದರು. ಈ ಕ್ರಾಂತಿಯ ಪರಿಣಾಮವಾಗಿ ವಿಯನ್ನಾದಲ್ಲಿ ೧೯೪೮ರ ಮಾರ್ಚ್ ೧೩ರಂದು ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ದಂಗೆಯೆದ್ದು ‘‘ಮೆಟರ್ನಿಕ್ ತೊಲಗಲಿ’’ ಎಂಬ ಘೋಷಣೆಯೊಂದಿಗೆ ಕ್ರಾಂತಿ ಮಾಡಿದರು. ಇದರಿಂದಾಗಿ ೩೯ ವರ್ಷಗಳ ಕಾಲ ಆಸ್ಟ್ರಿಯಾ ಸಾಮ್ರಾಜ್ಯದ ಚಾನ್ಸಲರಾಗಿದ್ದ ಮೆಟರ್ನಿಕ್‌ನು ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಪಲಾಯನ ಮಾಡಿದನು. ಅಲ್ಲದೆ ಆಸ್ಟ್ರಿಯಾದ ಚಕ್ರವರ್ತಿ ಒಂದನೆಯ ಫರ್ಡಿನಾಂಡನು ಪತ್ರಿಕಾ ಸ್ವಾತಂತ್ರ್ಯ, ಪೌರಸ್ವಾತಂತ್ರ್ಯ ಮತ್ತು ಪಾರ್ಲಿಮೆಂಟ್ ತತ್ವದಿಂದ ಕೂಡಿದ ಹೊಸ ಉದಾರವಾದ ಸಂವಿಧಾನವನ್ನು ಜನರಿಗೆ ದಯಪಾಲಿಸಿದನು. ಈ ಘಟನೆ ಆಸ್ಟ್ರಿಯನ್ನರ ರಾಷ್ಟ್ರೀಯತೆಯ ಪ್ರಜ್ಞೆಗೆ ಕುರುಹಾಗಿದೆ. ಜನರು ರಾಷ್ಟ್ರೀಯತೆಯಿಂದ ಪ್ರಭಾವಿತರಾಗಿ ತಮ್ಮ ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ ಆದಮ್ಯ ಹೋರಾಟ ನಡೆಸಿದರು. ಬಿಸ್ಮಾರ್ಕನ ನಾಯಕತ್ವದಲ್ಲಿ ಜರ್ಮನಿ ಮತ್ತು ಜೊಸೆಫ್ ಮೆಜನಿ, ಗಾರಿಬಾಲ್ಡಿ, ಕೆವೂರ್ ಇವರ ನಾಯಕತ್ವದಲ್ಲಿ ಇಟಲಿ ದೇಶಗಳ ಏಕೀಕರಣದ ಆಂದೋಲನಗಳು ಇದಕ್ಕೆ ನಿದರ್ಶಗಳಿವೆ. ರೋಂ ಸಾಮ್ರಾಜ್ಯದ ಮೌಲ್ಯಗಳನ್ನು ರೂಢಿಸಿಕೊಳ್ಳಲು ಹಾಗೂ ಅವುಗಳನ್ನು ಯುರೋಪಿನಲ್ಲಿ ಪ್ರಚಾರ ಮಾಡಲು ಇಟಲಿಯನ್ನರ ಏಕತೆ ಅವಶ್ಯಕವೆಂದು ತಿಳಿಸಿದ ಜೋಸೆಫ್ ಮೆಜನಿ ತನ್ನ ಗುರಿ ಸಾಧಿಸಲು ಯಂಗ್ ಇಟಲಿಯನ್ನು ಬಳಸಿದನು. ಗಾರಿಬಾಲ್ಡಿಯ ಗುಪ್ತಸಂಘಗಳು ಇಟಲಿಯು ಇಟಲಿಯನ್ನರಿಗಾಗಿ ಎಂದು ವಾದಿಸಿ ಅವರಲ್ಲಿ ಏಕತೆಯ ಸ್ಫೂರ್ತಿ ಉಂಟುಮಾಡಿದನು. ಇಂಗ್ಲಿಷ್ ಉದಾರವಾದ ಮತ್ತು ಸಂವಿಧಾನತೆಯಲ್ಲಿ ವಿಶ್ವಾಸ ಹೊಂದಿದ ಇಟಲಿಯ ಕೆವೂರ್(೧೮೧೦-೬೧) ಭೌಗೋಳಿಕ ನೆಲಗಟ್ಟಿನಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ಮುಕ್ತವ್ಯಾಪಾರಕ್ಕೆ ಒಳಪಡಿಸಿ ರಾಜಕೀಯ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಸಂಸದೀಯ ತಳಹದಿಯ ಅಖಂಡರಾಜ್ಯವು ಇಟಲಿಯನ್ನರಿಗೆ ಅವಶ್ಯವೆಂದು ಪ್ರತಿಪಾದಿಸಿದನು. ಬಾಲ್ಕನ್ ರಾಜ್ಯಗಳ ಉದಯಕ್ಕೆ ಅಲ್ಲಿಯ ಜನರ ರಾಷ್ಟ್ರೀಯತೆಯ ಪ್ರಜ್ಞೆಯೆ ಕಾರಣ. ತಮ್ಮ ಜನಾಂಗ ಹಾಗೂ ಪ್ರದೇಶಗಳ ಸ್ವಾತಂತ್ರ್ಯಕ್ಕಾಗಿ ಬಾಲ್ಕನ್ನರು ಗುಲಾಮಗಿರಿಯನ್ನು ವಿರೋಧಿಸಿದರು. ೧೮೭೮ರ ಹೊತ್ತಿಗೆ ಯುರೋಪಿನಲ್ಲಿ ಮಿಲಿಟರಿ ಸ್ವರೂಪದ ರಾಷ್ಟ್ರೀಯತೆಯ ಬೆಳವಣಿಗೆಯಿಂದಾಗಿ ವಿಯನ್ನಾ ಕಾಂಗ್ರೆಸ್‌ನಿಂದ ಆರಂಭಗೊಂಡಿದ್ದ ಪ್ರತಿಗಾಮಿಗಳ ಯುಗ ಕೊನೆಗೊಂಡಿತು. ಸಮಾಜವಾದಿಗಳ ಉದಯ ಆರಂಭಗೊಂಡು ಯುರೋಪಿನಲ್ಲಿ ಗಣರಾಜ್ಯಗಳು ಉದಯವಾದವು. ಆಟೊಮನ್ ಸಾಮ್ರಾಜ್ಯದ ಸುಲ್ತಾನ್ ಎರಡನೆಯ ಅಬ್ದುಲನ ವಿರುದ್ಧ ೧೯೦೯ರಲ್ಲಿ ಕೆಮಲ್ ಪಾಷಾನ ನಾಯಕತ್ವದಲ್ಲಿ ನಡೆದ ಯಂಗ್‌ಟರ್ಕ್ ಚಳವಳಿಯು ಬಲ್ಗೇರಿಯನ್ನರಲ್ಲಿ, ರುಮೇನಿ ಯನ್ನರಲ್ಲಿ, ಅಲ್ಬೆನಿಯನ್ನರಲ್ಲಿ, ಅರಮಿನ್‌ರಲ್ಲಿ, ಸರ್ಬಿಯನ್ನರಲ್ಲಿ ಮತ್ತು ಗ್ರೀಕರಲ್ಲಿ ಸ್ವಾತಂತ್ರ್ಯ ದಾಹವನ್ನು ಹೆಚ್ಚಿಸಿತು. ಯುರೋಪಿನ ರಾಜಕೀಯ ಮತ್ತು ಆರ್ಥಿಕ ಸಾರ್ವಭೌಮತ್ವ ಸ್ಥಾಪಿಸಲು ಪ್ರಬಲ ರಾಷ್ಟ್ರಗಳಾದ ಇಂಗ್ಲೆಂಡ್ ಹಾಗೂ ಫ್ರಾನ್ಸ್‌ಗಳ ವಿರುದ್ಧ ಹೋರಾಡಲು ಇಟಲಿ ಮತ್ತು ಜರ್ಮನ್ ದೇಶಗಳಿಗೆ ರಾಷ್ಟ್ರೀಯತೆ ಸ್ಫೂರ್ತಿ ದಾಯಕವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಥಮ ಮಹಾಯುದ್ಧವು ಯುರೋಪಿನ ರಾಷ್ಟ್ರೀಯತೆಗೆ ದೊರೆತ ವಿಜಯವಾಗಿತ್ತು. ಪ್ರಜಾಪ್ರಭುತ್ವದ ಪ್ರಸಾರವು ಪ್ರಥಮ ಮಹಾಯುದ್ಧದ ಮಹತ್ವದ ಪರಿಣಾಮಗಳಲ್ಲಿ ಒಂದಾಗಿತ್ತು. ಜರ್ಮನಿ, ಆಸ್ಟ್ರಿಯಾ, ರಷ್ಯಾ ಹಾಗು ಆಟೊಮನ್ ಸಾಮ್ರಾಜ್ಯಗಳು ಪತನ ಹೊಂದಿ ಅವುಗಳ ಅವಶೇಷಗಳ ಮೇಲೆ ಉದಯಿಸಿದ ನೂತನ ಗಣರಾಜ್ಯಗಳು ಪ್ರಜಾಸತ್ತಾತ್ಮಕ ಸಂವಿಧಾನಗಳನ್ನು ಅಂಗೀಕರಿಸಿದವು. ಸಾಮ್ರಾಜ್ಯಶಾಹಿ ರಷ್ಯಾ ಪತನಗೊಂಡು ಅಲ್ಲಿ ಸ್ವತಂತ್ರ ಗಣರಾಜ್ಯಗಳಾದ ಫಿನ್ಲೆಂಡ್, ಇಸ್ತೋನಿಯ, ಲಾಟ್ವಿಯ ಮತ್ತು ಲಿತ್ವಾನಿಯ ಉದಯಿಸಿದವು. ಇದರಂತೆ ಆಸ್ಟ್ರಿಯಾ, ಜರ್ಮನಿ ಮತ್ತು ರಷ್ಯಾಗಳ ಅಧೀನದಲ್ಲಿ ತುಂಡುತುಂಡಾಗಿ ಹೋಗಿದ್ದ ಪೋಲೆಂಡ್ ಸ್ವತಂತ್ರ ರಾಜ್ಯವಾಗಿ ಹೊರಹೊಮ್ಮಿತ್ತು.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಆಡಳಿತಾತ್ಮಕ ವಿಷಯಗಳ ಪ್ರಾಬಲ್ಯಕ್ಕಾಗಿ ಜನಾಂಗ, ಭಾಷೆ ಮತ್ತು ಧಾರ್ಮಿಕ ಭಿನ್ನತೆಗಳು ಕಾಣಿಸಿಕೊಂಡಾಗ ಯುರೋಪಿನಲ್ಲಿ ರಾಷ್ಟ್ರೀಯತೆ ಸಂಘರ್ಷದ ರೂಪತಾಳಿ ಬೆಳೆಯಿತು. ಉದಾಹರಣೆಗೆ ಬೊಹಿಮಿಯಾದಲ್ಲಿ ರೈತರು ಮತ್ತು ಭೂ ಒಡೆಯರು ಕ್ಯಾಥೊಲಿಕ್ ಧರ್ಮಕ್ಕೆ ಸೇರಿದವರಾಗಿದ್ದರು. ಅಲ್ಲಿಯ ಬಹುಸಂಖ್ಯಾತ ರೈತರು ಜೆಕ್ ಭಾಷೆಯವರಾಗಿದ್ದರು. ಆದರೆ ಭೂ ಒಡೆಯರು ಜರ್ಮನ್ ಭಾಷೆಯವರಾಗಿದ್ದರು. ಗಲಿಸಿಯಾದಲ್ಲಿ ರೈತರು ರುಥೀನಿಯನ್ನರಾಗಿದ್ದು ಅವರು ಧರ್ಮ ದಲ್ಲಿ ಏಕಾಭಿಪ್ರಾಯ ಹೊಂದಿದ್ದರು. ಆದರೆ ಅವರ ಆಡಳಿತಗಾರರು ರೋಮನ್ ಕ್ಯಾಥೊಲಿಕ್ ಧರ್ಮಕ್ಕೆ ಸೇರಿದ ಪೊಲ್ಸರಾಗಿದ್ದರು. ಸ್ಲಾವಕಿಯಾದಲ್ಲಿ ಸ್ಲಾವರು ರೈತರಾಗಿ ದ್ದರು. ಆದರೆ ಅವರ ಒಡೆಯರು ಹಂಗೇರಿಯನ್ನರಾಗಿದ್ದರು. ಬಾಲ್ಕನ್ ರಾಜ್ಯಗಳ ಸೈನ್ಯ ಮತ್ತು ಕೇಂದ್ರಾಡಳಿತದಲ್ಲಿ ಮಹಮ್ಮದೀಯರಿದ್ದರು. ಆದರೆ ಅಲ್ಲಿನ ಜನರು ಹೆಚ್ಚಾಗಿ ಕ್ರಿಶ್ಚಿಯನ್ನರಾಗಿದ್ದರು. ಟರ್ಕಿಯಲ್ಲಿ ಗ್ರೀಕರ ಆಡಳಿತ ಪ್ರಾಬಲ್ಯ ಹೆಚ್ಚಿತು. ಈ ನಿಮಿತ್ತ ಆಯಾ ಜನಾಂಗ, ಭಾಷೆ, ಧರ್ಮದ ಜನರು ತಮ್ಮ ಹಕ್ಕು ಬಾಧ್ಯತೆಗಳನ್ನು ರಕ್ಷಿಸಿ ಕೊಳ್ಳುವ ಸಲುವಾಗಿ ಪ್ರತ್ಯೇಕ ಪ್ರಾದೇಶಿಕ ಒಡೆತನ ಮತ್ತು ಅದರ ಸ್ವಾತಂತ್ರ್ಯ ಸಾಧಿಸಲು ರಾಷ್ಟ್ರೀಯತೆಯ ಸ್ಫೂರ್ತಿಯಿಂದ ಹೋರಾಡಲು ಮುಂದಾದರು. ರಾಷ್ಟ್ರಗೀತೆಗಳು ಕವಿಗಳಿಂದ ರಚಿತಗೊಂಡವು. ಉದಾ. ಟ್ರೈನ್ಸಿಲ್‌ವೇನಿಯಾದ ಪ್ರಣಯ ಗೀತೆಗಳ ಕವಿ ಆ್ಯಂಡ್ರೂ ಮುರಿಸಿನು ರುಮಾನಿಯಾ ಸ್ವಾತಂತ್ರ್ಯಕ್ಕೆ ಜನರನ್ನು ಈ ರೀತಿ ಹುರಿದುಂಬಿಸಿದನು. ‘‘ಎದ್ದೇಳಿ ರುಮಾನಿಯನ್ನರೆ, ಸಾವಿನ ಶಯನದಿಂದೇಳಿ; ಶತೃಗಳ ನೆತ್ತರ ಹೀರಿ, ಗುಲಾಮಗಿರಿಯನಳಿಸಲು ಭವ್ಯತೆಯ ಬಾಳ ಭವಿಷ್ಯ ರೂಪಿಸಲು’’. ಅಲ್ಲದೇ ಫ್ಯಾಸಿಸಂ, ನಾಜಿಸಂ, ಸ್ಪೆಯಿನಿನ ಅಂತರ್ ಯುದ್ಧ ಹಾಗೂ ರೋಂ-ಬರ್ಲಿನ್-ಟೊಕಿಯೊ ಆ್ಯಕ್ಸಿನ್ ಒಪ್ಪಂದಗಳನ್ನು ಉಲ್ಲೇಖಿಸಿ ಯುದ್ಧ ಬೆಂಬಲಿಸುವ ಹಾಗೂ ಈ ದೇಶಗಳು ಸ್ವಾತಂತ್ರ್ಯ ಪಡೆಯುವ ವಿಚಾರವಾಗಿ ಅನೇಕ ಯುದ್ಧ ಕವಿಗಳು ದೇಶಭಕ್ತಿ ಗೀತೆಗಳನ್ನು ರಚಿಸಿ ರಾಷ್ಟ್ರೀಯತೆಯನ್ನು ಪೋಷಿಸಿದರು. ಪ್ರಥಮ ಮಹಾಯುದ್ಧದಲ್ಲಿ ವಿಜಯಿಗಳಾದ ಮಿತ್ರರಾಷ್ಟ್ರಗಳು ಯುದ್ಧದ ಹೊಣೆ ಮತ್ತು ವೆಚ್ಚಗಳನ್ನು ಜರ್ಮನಿಯ ಮೇಲೆ ಹೇರಲು ೧೯೧೯ರಲ್ಲಿ ವರ್ಸೇಲ್ಸ್ ಒಪ್ಪಂದ ಮಾಡಿಕೊಂಡಾಗ ಯುರೋಪಿನಲ್ಲಿ ರಾಷ್ಟ್ರೀಯತೆ ಉಗ್ರರೂಪ ಅಥವಾ ಸೈನಿಕ ಸ್ವರೂಪ(ಮಿಲಿಟೆಂಟ್ ನ್ಯಾಷನಲಿಸಂ) ತಾಳಿತು. ೧೯೧೯-೧೯೩೯ರ ಅವಧಿಯಲ್ಲಿ ಜನಾಂಗ ಆಧಾರಿತ ರಾಷ್ಟ್ರೀಯ ಪ್ರಜ್ಞೆಯ ಭಾವನಾತ್ಮಿಕ ಅತಿರೇಕವನ್ನು ಮುಟ್ಟಿದಾಗ ಮತ್ತು ಯುರೋಪ್ ೧೯೨೩ ಹಾಗು ೧೯೨೯ರಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದಾಗ(ಎಕನಾಮಿಕ್ ಡಿಪ್ರೆಷನ್) ಅಲ್ಲಿಯ ಜನರು ತಮ್ಮ ತಮ್ಮ ಜನಾಂಗಗಳ ಶ್ರೇಷ್ಟತೆ ಮತ್ತು ಸಂಸ್ಕೃತಿ ಆಧಾರದ ಮೇಲೆ ರಾಷ್ಟ್ರದ ಅಭಿವೃದ್ದಿ ಸಾಧಿಸಲು(ಪ್ರಜಾಪ್ರಭುತ್ವಾಧಾರಿತ ಗಣರಾಜ್ಯಗಳು ವಿಫಲವಾದಾಗ) ಮುಸ್ಸೋಲಿನಿಯ ಫ್ಯಾಸಿಸಂ, ಹಿಟ್ಲರನ ನ್ಯಾಸಿಸಂ ಮತ್ತು ಲೆನಿನ್- ಸ್ಟಾಲಿನ್ನರ ಕಮ್ಯುನಿಸಂ ಸರಕಾರಗಳ ಅಡಳಿತಕ್ಕೊಳಗಾದರು. ಪ್ರಥಮ ಮಹಾಯುದ್ಧದ ನಂತರ ವಿಶ್ವದಲ್ಲಿ ಶಾಂತಿಯನ್ನು ನೆಲೆಗೊಳಿಸಲು ಅಮೆರಿಕದ ಅಧ್ಯಕ್ಷನಾದ ವುಡ್ರೊವಿಲ್ಸನ್ನನ ‘‘ಸ್ವಯಂ ನಿರ್ಧಾರದ ಹಾಗೂ ರಾಷ್ಟ್ರೀಯತೆಯ’’ ಸೂತ್ರಗಳನ್ನಯ ಘೋಷಿಸಿದ ೧೪ ಅಂಶಗಳು ಯುರೋಪಿನಲ್ಲಿ ರಾಷ್ಟ್ರೀಯತೆ ಬೆಳವಣಿಗೆಗೆ ಪ್ರೋ ನೀಡಿದವು. ಆದರೆ ಶಾಂತಿಗಾಗಿ ಸ್ಥಾಪಿಸಲ್ಪಟ್ಟ ರಾಷ್ಟ್ರ ಸಂಘವು ಕೇವಲ ಬೃಹತ್ ರಾಷ್ಟ್ರಗಳ ಆಶೆ ಆಕಾಂಕ್ಷೆಗನುಗುಣವಾಗಿ ವರ್ತಿಸಿದಾಗ ಜರ್ಮನಿ, ಇಟಲಿ ಹಾಗೂ ಜಪಾನ್ ದೇಶಗಳು ತಮ್ಮ ದೇಶಗಳ ಹಿತಾಸಕ್ತಿಗಳನ್ನು ಕಾಪಾಡಲು ೧೯೩೩ರಲ್ಲಿ ನಡೆದ ಜಿನೀವಾ ನಿಶ್ಯಸ್ತ್ರೀಕರಣ ಸಮ್ಮೇಳನದಿಂದ ಹೊರಬಂದು ರಾಷ್ಟ್ರ ಸಂಘದ ಸಂಬಂಧವನ್ನು ಕಡಿದುಕೊಂಡವು. ಸ್ವಾತಂತ್ರ್ಯ ಮತ್ತು ಜನಾಂಗಗಳ ರಕ್ಷಣೆಗೋಸ್ಕರ ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್, ರಷ್ಯಾಗಳ ಮಾದರಿಯಲ್ಲಿ ಹಿಟ್ಲರ್ ಮತ್ತು ಮುಸ್ಸೊಲಿನಿ, ಮಾರಕ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಮಹತ್ವ ಕೊಟ್ಟರು, ಸೈನ್ಯ, ನೌಕ ಮತ್ತು ವಿಮಾನ ಬಲಗಳನ್ನು ಅಪಾರವಾಗಿ ವೃದ್ದಿಸಿಕೊಂಡರು. ಮುಸ್ಸೊಲಿನಿ ಕಳೆದು ಹೋದ ರೋಂ ಸಾಮ್ರಾಜ್ಯವನ್ನು ಹಾಗೂ ಅವುಗಳಲ್ಲಿ ಅಡಕವಾಗಿರುವ ಯುರೋಪ್ ನಾಗರಿಕತೆಯ ಮೌಲ್ಯಗಳನ್ನು ಪುನಃ ಸ್ಥಾಪಿಸಲು ನಿರ್ಧರಿಸಿದರೆ, ಇತ್ತ ಹಿಟ್ಟರನು ಜರ್ಮನ್ ಜನಾಂಗದ ಶ್ರೇಷ್ಟತೆಯನ್ನು ವಿಶ್ವಕ್ಕೆ ತೋರಿಸಲು ಆಸ್ಟ್ರಿಯಾ ಜಕೊಸ್ಲೊವಾಕಿಯಾ ಮತ್ತು ಪೋಲೆಂಡ್‌ಗಳನ್ನೊಳಗೊಂಡ ಜರ್ಮನಿಯ ಸ್ಥಾಪನೆಗೆ ಮುಂದಾದನು. ಜರ್ಮನ್ನರ ಬಡತನ, ಅಸಮಗ್ರತೆಗೆ ಮತ್ತು ಪ್ರತಿಷ್ಟೆಗಳ ಕ್ಷೀಣತೆಗೆ ಯಹೂದಿ ಜನಾಂಗ ಕಾರಣವೆಂದು ವಾದಿಸಿ, ಹಿಟ್ಲರನು ಯಹೂದಿರಹಿತ ಜರ್ಮನ್ ನಿರ್ಮಾಣಕ್ಕೆ ಏಕತೆ ಅವಶ್ಯವೆಂದು ಸಾರಿದನು. ಲೆನಿನ್, ಮುಸ್ಸೊಲಿನಿ ಮತ್ತು ಹಿಟ್ಲರನ ರಾಜಕೀಯ ಸಿದ್ಧಾಂತಗಳು ಇಡೀ ಯುರೋಪಿನಲ್ಲಿ ಸೈನಿಕ ಸ್ವರೂಪದ ರಾಷ್ಟ್ರೀಯತೆಯ ಬೆಳವಣಿಗೆಗೆ ಕಾರಣವಾಗಿ ೧೯೩೯ರಲ್ಲಿ ಎರಡನೆಯ ಮಹಾಯುದ್ದಕ್ಕೆ ಎಡೆಮಾಡಿಕೊಟ್ಟಿ ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಈ ತರಹದ ಉಗ್ರ ರಾಷ್ಟ್ರೀಯತೆ ಯುರೋಪಿನ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡದೆ ಅದರ ಮತ್ತು ಅಂತರ್‌ರಾಷ್ಟ್ರೀಯ ಶಾಂತಿ ಸೌಹಾರ್ದತೆಯನ್ನು ಕಲಕಿದ್ದು ಈಗ ಇತಿಹಾಸವಾಗಿದೆ. ಪ್ರಾದೇಶಿಕ ಮತ್ತು ಕೋಮುಭಾವನೆ ಗಳನ್ನು ಉದ್ರೇಕಿಸದ, ಯುದ್ಧ ಮತ್ತು ವ್ಯಕ್ತಿಪೂಜೆಯನ್ನು ವಿರೋಧಿಸುವ, ಭಾಷೆ, ಸಂಸ್ಕೃತಿ ಮತ್ತು ಸ್ವಾತಂತ್ರ್ಯಗಳನ್ನು ಪೋಷಿಸುವಂತಹ ರಾಷ್ಟ್ರೀಯತೆಯನ್ನು ವಿಶ್ವವು ಇಂದು ಪ್ರೋ

ಎರಡು ಜಾಗತಿಕ ಯುದ್ಧಗಳ ನಡುವಿನ ಯುರೋಪ್(೧೯೧೯೧೯೩೯)

ಎರಡು ಮಹಾಯುದ್ಧಗಳ ನಡುವಣ ಇತಿಹಾಸವನ್ನು ‘ವಿಫಲತೆಯ ಇತಿಹಾಸ’ವೆಂದು ಸಾಮಾನ್ಯವಾಗಿ ಕರೆಯಲಾಗಿದೆ. ಯುದ್ಧವನ್ನು ಪೂರ್ಣಗೊಳಿಸಿ ಜಗತ್ತನ್ನು ಶಾಂತಿ ಮತ್ತು ಪ್ರಜಾಸತ್ತೆಗೆ ಕೊಂಡೊಯ್ಯಲು ಅಮೆರಿಕದ ಅಧ್ಯಕ್ಷ ವುಡ್ರೊವಿಲ್ಸನ್ ಮಾಡಿದ ಘೋಷಣೆ ಕೇವಲ ಘೋಷಣೆಯಾಗಿ ಉಳಿಯಿತು. ಯುದ್ಧ ಕೊನೆಗೊಳಿಸಲು ಮಾಡಿಕೊಂಡ ಪ್ಯಾರಿಸ್ ಸಮ್ಮೇಳನದ ಒಪ್ಪಂದಗಳು ಯುರೋಪಿನಲ್ಲಿ ಶಾಂತಿ, ಸಂತೃಪ್ತಿ ಸಮಾಧಾನಗಳನ್ನು ಉಂಟು ಮಾಡುವ ಬದಲು ಅಶಾಂತಿ, ಅಸಂತೃಪ್ತಿ, ಅಸಮಾಧಾನಗಳನ್ನು ಮತ್ತು ಸೇಡಿನ ಕಿಡಿಗಳನ್ನು ಸೃಷ್ಟಿಸಿದವು. ಈ ಒಪ್ಪಂದಗಳು ಯುರೋಪಿನ ವಿಭಜನೆಗೆ ಕಾರಣವಾಗಿ ಅನೇಕ ಪ್ರಜಾಪ್ರಭುತ್ವ ಆಧಾರಿತ ಗಣರಾಜ್ಯಗಳನ್ನು ಸೃಷ್ಟಿಸಿದವು. ಆದರೆ ಇವೆಲ್ಲವುಗಳ ಸೃಷ್ಟಿಯ ಹಿಂದೆ ವಿಜೇತ ರಾಷ್ಟ್ರಗಳು ಸೋತ ರಾಷ್ಟ್ರಗಳಾದ ಜರ್ಮನಿ, ಆಸ್ಟ್ರೀಯಾ ಮತ್ತು ಟರ್ಕಿದೇಶಗಳ ಸ್ವಾತಂತ್ರ್ಯ, ಆತ್ಮ ಗೌರವ ಮತ್ತು ಸಾರ್ವಭೌಮತ್ವವನ್ನು ಸಮಾಧಿ ಮಾಡಿದವು. ತತ್ಪರಿಣಾಮವಾಗಿ ರಾಷ್ಟ್ರ ರಾಷ್ಟ್ರಗಳ ನಡುವೆ ಯುದ್ಧದ ಕಿಡಿಗಳು ಕಾಣಿಸಿ ಕೊಂಡವು. ವಿಶ್ವಶಾಂತಿಗಾಗಿ ಸ್ಥಾಪಿತಗೊಂಡ ರಾಷ್ಟ್ರ ಸಂಘವು ವಿಜೇತ ರಾಷ್ಟ್ರಗಳ ಪ್ರಭಾವಕ್ಕೊಳಗಾಗಿ ಯುರೋಪಿನಲ್ಲಿ ಸಂಭವಿಸಿದ ಯುದ್ಧಾಕ್ರಮಣಗಳನ್ನು ತಡೆಯುವಲ್ಲಿ ವಿಫಲವಾಯಿತು. ಕಾರಣ ಇಟಲಿ, ಜರ್ಮನಿ ಮತ್ತು ಜಪಾನ್ ದೇಶಗಳು ರಾಷ್ಟ್ರ ಸಂಘ ದಿಂದ ಹೊರಬಂದು ತಮ್ಮ ವಸಾಹತುಗಳನ್ನು ಪುನಃ ವಶಪಡಿಸಿಕೊಳ್ಳಲು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ತೊಡಗಿ ಮತ್ತೆ ಯುರೋಪನ್ನು ಯುದ್ಧರಂಗವನ್ನಾಗಿ ಮಾರ್ಪಡಿಸಿದವು. ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಪೂರ್ವ ಮತ್ತು ಕೇಂದ್ರ ಯುರೋಪಿನಲ್ಲಿ ಅಸ್ತಿತ್ವಕ್ಕೆ ಬಂದ ಗಣರಾಜ್ಯಗಳು ಮತ್ತು ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕಾ ದೇಶಗಳು ೧೯೨೩ ಮತ್ತು ೧೯೨೯ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುವಲ್ಲಿ ವಿಫಲ ವಾದವು. ಈ ಪರಿಣಾಮವಾಗಿ ಜನರು ಯುರೋಪಿನಲ್ಲಿ ಪ್ರಜಾಪ್ರಭುತ್ವ ಸರಕಾರಗಳ ಮೇಲೆ ವಿಶ್ವಾಸ ಕಳೆದುಕೊಂಡರು. ಪರಿಸ್ಥಿತಿಗಳ ಉಪಯೋಗವನ್ನು ಪಡೆದು ಇಟಲಿಯಲ್ಲಿ ಫ್ಯಾಸಿಸಂ, ಜರ್ಮನಿಯಲ್ಲಿ ನಾಜಿಸಂ, ರಷ್ಯಾದಲ್ಲಿ ಬೊಲ್ಷಿವಿಸಂ ಮತ್ತು ಜಪಾನಿನಲ್ಲಿ ರಾಷ್ಟ್ರೀಯ ಚ್ಯುವಿನಿಸಂ ಸಿದ್ಧಾಂತದ ಸರಕಾರಗಳು ಅಸ್ತಿತ್ವಕ್ಕೆ ಬಂದು ಅಲ್ಲಿನ ಗಣರಾಜ್ಯಗಳು ಪತನಗೊಂಡವು. ತತ್ಪರಿಣಾಮವಾಗಿ ಎರಡು ಮಹಾಯುದ್ಧಗಳ ನಡುವಿನ ಯುರೋಪ್ ಪ್ರಜಾಪ್ರಭುತ್ವವಾದಿಗಳ ಹಾಗೂ ಸರ್ವಾಧಿಕಾರಿ ಸಿದ್ಧಾಂತಗಳ ರಣರಂಗವಾಗಿ ಯುರೋಪಿಯನ್ನರಿಗೆ ೧೯೧೯-೧೯೩೯ರ ಅವಧಿಯಲ್ಲಿ ಶಾಂತಿ, ಸಮೃದ್ದಿಗಳ ಗಗನ ಕುಸುಮಗಳಾದವು.

ಪ್ಯಾರಿಸ್ ಶಾಂತಿ ಒಪ್ಪಂದಗಳುಪರಿಣಾಮಗಳು

ಪ್ರಥಮ ಮಹಾಯುದ್ಧವು ೧೯೧೯ ಜನವರಿ ೧೮ರಂದು ಪ್ಯಾರಿಸ್ಸಿನ ವರ್ಸೇಲ್ಸ್‌ನಲ್ಲಿ ೭೦ಕ್ಕೂ ಹೆಚ್ಚು ಯುರೋಪ್ ದೇಶಗಳ ಪ್ರತಿನಿಧಿಗಳು ಶಾಂತಿ ಸಮ್ಮೇಳನದಲ್ಲಿ ಕೈಗೊಳ್ಳಲಾದ ಒಪ್ಪಂದಗಳೊಂದಿಗೆ ಕೊನೆಗೊಂಡಿತು. ಅಮೆರಿಕದ ಅಧ್ಯಕ್ಷ ವುಡ್ರೊವಿಲ್ಸನ್, ಇಂಗ್ಲೆಂಡಿನ ಪ್ರಧಾನಿ ಜಾರ್ಜ್‌ಲಾಯ್ಡ, ಫ್ರಾನ್ಸಿನ ಪ್ರಧಾನಿ ಕ್ಲೆಮಿನ್ ಸೊ, ಇಟಲಿಯ ಪ್ರಾಧಾನಿ ಒರ್ಲಾ ಡೊ, ಪೋಲೆಂಡಿನ ಓವಸ್ಕಿ ಮುಂತಾದವರು ಪ್ಯಾರಿಸ್ ಸಮ್ಮೇಳನದ ಪ್ರಮುಖ ವ್ಯಕ್ತಿಗಳಾಗಿದ್ದರು. ಸೋತ ರಾಷ್ಟ್ರಗಳ ಅನುಪಸ್ಥಿತಿಯಲ್ಲಿ ಅವರ ವಿಚಾರಗಳನ್ನು ನಿರ್ಲಕ್ಷಿಸಿ ಹಾಗೂ ಆ ರಾಷ್ಟ್ರಗಳನ್ನು ಬಲಹೀನಗೊಳಿಸುವ ದೃಷ್ಟಿಯಿಂದ ಪ್ರಬಲ ವಿಜೇತ ರಾಷ್ಟ್ರಗಳಾದ ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್, ಇಟಲಿ ಮತ್ತು ಜಪಾನ್‌ಗಳ ಸೂಚನೆಯಂತೆ ಪ್ಯಾರಿಸ್ ಸಮ್ಮೇಳನದಲ್ಲಿ ಕೆಲವು ಪ್ರಮುಖ ಒಪ್ಪಂದಗಳನ್ನು ಕೈಗೊಳ್ಳಲಾಯಿತು. ಅವುಗಳಲ್ಲಿ ೧೯೧೯ ಜೂನ್ ತಿಂಗಳಲ್ಲಿ ಜರ್ಮನ್ ದೇಶದೊಡನೆ ಮಾಡಿಕೊಂಡ ವರ್ಸೇಲ್ಸ್ ಒಪ್ಪಂದ, ಸೆಪ್ಟೆಂಬರ್ ತಿಂಗಳಲ್ಲಿ ಬಲ್ಗೇರಿಯಾದೊಂದಿಗೆ ಮಾಡಿಕೊಂಡ ನೆವುಲಿ ಒಪ್ಪಂದ, ೧೯೨೦ ಜೂನ್ ತಿಂಗಳಲ್ಲಿ ಹಂಗೇರಿಯಾದೊಂದಿಗೆ ಮಾಡಿಕೊಂಡ ಟ್ರಿಯಾನ್ ಒಪ್ಪಂದ ಮತ್ತು ಟಿರ್ಕಿಯೊಡನೆ ಮಾಡಿಕೊಂಡ ಸೇವರ್ಸ್ ಒಪ್ಪಂದಗಳು ಪ್ರಮುಖವಾದವು.

ಪ್ಯಾರಿಸ್ ಶಾಂತಿ ಒಪ್ಪಂದಗಳಿಗನುಗುಣವಾಗಿ ಇಡೀ ಯುರೋಪಿನ ರಾಜ್ಯಗಳನ್ನು ವಿಭಜಿಸಿ ಪುನರ್ರಚಿಸಿಲಾಯಿತು. ವರ್ಸೇಲ್ಸ್ ಒಪ್ಪಂದದ ಪ್ರಕಾರ ಜರ್ಮನಿಯ, ಅಲ್ ಸೆಸ್-ಲೊರೈನ್ ಪ್ರದೇಶಗಳು ಫ್ರಾನ್ಸ್‌ಗೆ ಸೇರ್ಪಡೆಯಾದವು. ಇದರಿಂದ ಫ್ರಾನ್ಸ್  ದೇಶವು ಸಹರ ಕಲ್ಲಿದ್ದಲು ಪ್ರದೇಶದ ಮೇಲೆ ಹಿಡಿತಹೊಂದಿತು. ರಷ್ಯಾ, ಪ್ರಷ್ಯಾ ಮತ್ತು ಆಸ್ಟ್ರಿಯಾದ ಕೆಲವು ಪ್ರದೇಶಗಳನ್ನೊಳಗೊಂಡ ಸ್ವತಂತ್ರ ಪೋಲೆಂಡ್ ರಾಜ್ಯ ರಚನೆಯಾಯಿತು. ಷೆಲ್ಸವಿಗ್ ಪ್ರದೇಶದ ಡ್ಯಾನಿಷ್ ಜಿಲ್ಲೆಗಳನ್ನು ಡೆನ್‌ಮಾರ್ಕಿಗೆ ವರ್ಗಾಯಿಸಲಾಯಿತು. ಡ್ಯಾನ್ಜಿಗ್‌ನ್ನು ರಾಷ್ಟ್ರ ಸಂಘದ ಅಧೀನದಲ್ಲಿ ಮುಕ್ತನಗರವನ್ನಾಗಿ ಮಾಡಲಾಯಿತು. ಬೊಹಿಮಿಯಾ ಮತ್ತು ಮೊರ್ವಿಯಾ ಪ್ರದೇಶಗಳನ್ನೊಳಗೊಂಡ ಪ್ರದೇಶವನ್ನು ಜೆಕೊಸ್ಲೊವಾಕಿಯಾ ಎಂದು ಕರೆಯಲಾಯಿತು. ಆಸ್ಟ್ರಿಯಾ ಮತ್ತು ಹಂಗೇರಿ ಪ್ರತ್ಯೇಕ ಸ್ವತಂತ್ರ್ಯಗಣರಾಜ್ಯಗಳಾದವು. ಜರ್ಮನಿಯ ವಶದಲ್ಲಿದ್ದ ಆಫ್ರಿಕನ್ ವಸಾಹತುಗಳು ಮಿತ್ರರಾಷ್ಟ್ರಗಳ ಆಡಳಿತಕ್ಕೊಳಪಟ್ಟವು. ಆಸ್ಟ್ರಿಯಾದ ದಕ್ಷಿಣ ಟೈರೊಲ್ ದ್ವೀಪ ಇಟಲಿಯ ವಶವಾಯಿತು. ೧೯೧೯ರ ನೆವುಲಿ ಒಪ್ಪಂದದ ಪ್ರಕಾರ ಬಲ್ಗೇರಿಯಾವು ತನ್ನ ಕರಾವಳಿ ಪ್ರದೇಶವನ್ನು ಗ್ರೀಸ್‌ಗೆ ಬಿಟ್ಟುಕೊಟ್ಟಿತು. ೧೯೨೦ರ ಟ್ರೆಯಾನ್ ಒಪ್ಪಂದದ ಪ್ರಕಾರ ಹಂಗೇರಿ ಚಿಕ್ಕ ಸ್ವತಂತ್ರ ರಾಜ್ಯವಾಯಿತು. ಸೆವರ್ಸ ಒಪ್ಪಂದದ ಪ್ರಕಾರ ಏಷಿಯಾ ಮೈನರ್ ಸೇರಿದಂತೆ ಟರ್ಕಿಯ ಅನೇಕ ಪ್ರದೇಶಗಳು ಗ್ರೀಸ್‌ನ ವಶವಾದವು. ಫಿನ್ ಲ್ಯಾಂಡ್, ಎಸ್ತೊನಿಯ, ಲಿಥೊನಿಯಗಳನ್ನು ರಷ್ಯಾ ಪ್ರದೇಶದಿಂದ ಬೇರ್ಪಡಿಸಿ, ಸ್ವತಂತ್ರ ಗಣರಾಜ್ಯಗಳನ್ನಾಗಿ ಮಾಡಲಾಯಿತು.

ವುಡ್ರೊವಿಲ್ಸನ್ನನ ೧೪ ಅಂಶಗಳು ಸ್ವಯಂ ನಿರ್ಧರಿತ ಹಾಗೂ ರಾಷ್ಟ್ರೀಯತೆಯ ತತ್ವಗಳ ಆಧಾರದ ಮೇಲೆ ರೂಪುಗೊಂಡಿದ್ದವು. ಗೌಪ್ಯರಹಿತ ಒಪ್ಪಂದ, ಮುಕ್ತಮನಸ್ಸಿನ ಅಂತಾರಾಷ್ಟ್ರೀಯ ವ್ಯವಹಾರ ವಸಾಹತುಗಳ ರಕ್ಷಣೆಯಲ್ಲಿ ಪಕ್ಷಪಾತ ನಿವಾರಣೆ, ಜನಾಂಗ ಭೇದಭಾವ ವಿರುದ್ಧ ಸಮರ, ಸಮುದ್ರದ್ವಾರ ವ್ಯಾಪಾರ ಸೌಲಭ್ಯಕ್ಕೆ ಸ್ವಾತಂತ್ರ್ಯ, ಯುದ್ಧ ನಿವಾರಣೆಗಾಗಿ ನಿಶ್ಯಸ್ತ್ರೀಕರಣ ಮತ್ತು ಸೈನ್ಯಮಿತಿ ಹಾಗೂ ಸಣ್ಣ ಸಣ್ಣ ರಾಷ್ಟ್ರಗಳ ಸ್ವಾತಂತ್ರ್ಯ ರಕ್ಷಣೆ ಮುಂತಾದವುಗಳು ವಿಲ್ಸನ್ ಪ್ರತಿಪಾದಿಸಿದ ಅಂಶಗಳಾಗಿದ್ದವು. ಈ ಅಂಶಗಳ ಮೇಲೆ ಪ್ಯಾರಿಸ್ ಶಾಂತಿ ಒಪ್ಪಂದಗಳು ರೂಪುಗೊಳ್ಳುವವೆಂಬ ಭರವಸೆಯನ್ನು ವಿಜೇತ ರಾಷ್ಟ್ರಗಳು ಈ ಪ್ಯಾರಿಸ್ ಸಮ್ಮೇಳನದಲ್ಲಿ ಉಲ್ಲಂಘಿಸಿದ್ದು ದುರದೃಷ್ಟಕರ ಸಂಗತಿಯಾಯಿತು. ಯುದ್ಧಪೂರ್ವದ ಜರ್ಮನಿ, ಟರ್ಕಿ, ಬಲ್ಗೇರಿಯಾಗಳ ಸಾಮ್ರಾಜ್ಯಗಳನ್ನು ವಿಭಜಿಸಿ ಯುರೋಪನ್ನು ಪುನರ‌್ರಚಿಸಿದ ಮಿತ್ರರಾಷ್ಟ್ರಗಳು ಈ ದೇಶಗಳ ಆತ್ಮಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮತ್ತು ಊಹಿಸಲಾಗದಷ್ಟು ಯುದ್ಧ ವೆಚ್ಚಗಳನ್ನೆಲ್ಲ ಇವುಗಳ ಮೇಲೆ ಹೇರಲಾಯಿತು. ಮಿತ್ರ ರಾಷ್ಟ್ರಗಳು ಯುದ್ಧನಷ್ಟದ ಹಣ ೬,೬೦,೦೦೦,೦೦೦ ಪೌಂಡ್ಸಗಳನ್ನು ಜರ್ಮನ್ ರಾಷ್ಟ್ರ ಒಂದೇ ಕೊಡಬೇಕೆಂದು ವಿಧಿಸಿದವು. ತತ್ಪರಿಣಾಮವಾಗಿ ಜರ್ಮನಿಯ ಜನರು ಮತ್ತು ಗಣರಾಜ್ಯದ ಪ್ರತಿನಿಧಿಗಳು ವರ್ಸೇಲ್ಸ್ ಒಪ್ಪಂದವನ್ನು ವಿರೋಧಿಸಿದರು. ಜರ್ಮನಿ ಅರಾಜಕತೆಯ ತಾಣವಾಯಿತು. ಜನರ ವಿರೋಧವನ್ನು ಎದುರಿಸಲಾರದೆ ದೊರೆ ಕೈಸರ್ ವಿಲಿಯಂನು ಹಾಲೆಂಡಿಗೆ ಪಲಾಯನ ಗೈದನು. ಇತ್ತ ಟರ್ಕಿಯಲ್ಲಿ ರಾಷ್ಟ್ರೀಯವಾದಿ ಪಕ್ಷವು ಮುಸ್ತಾಫ್ ಕೆಮಲನ ನಾಯಕತ್ವದಲ್ಲಿ ಸೇವರ್ಸ ಒಪ್ಪಂದವನ್ನು ಉಗ್ರವಾಗಿ ವಿರೋಧಿಸಿತು. ರಷ್ಯಾದೇಶವು ತನ್ನ ಯುರೋಪಿನ ಮುಕ್ತ ವ್ಯಾಪಾರಕ್ಕೆ ತಡೆ ಒಡ್ಡಲು ಫಿನ್‌ಲ್ಯಾಂಡ್ ಮತ್ತು ಲಿಥೊನಿಯಾ ರಾಜ್ಯಗಳನ್ನು ನಿರ್ಮಿಸಿ ದ್ದಕ್ಕೆ ತನ್ನ ಪ್ರತಿನಿಭಟನೆಯನ್ನು ವ್ಯಕ್ತಪಡಿಸಿತು. ಈ ರೀತಿ ಪ್ಯಾರಿಸ್ ಶಾಂತಿ ಒಪ್ಪಂದಗಳು ಯುರೋಪಿನಲ್ಲಿ ರಾಜಕೀಯ ಸ್ಥಿರತೆಯನ್ನು ಒದಗಿಸುವ ಬದಲು ರಾಜಕೀಯ ಅರಾಜಕತೆ ಯನ್ನು ಮತ್ತು ಸೇಡನ್ನು ಸೃಷ್ಟಿಸಿದವು.

ಪ್ರಜಾಪ್ರಭುತ್ವದ ಪ್ರಸಾರ

ಪ್ರಜಾಪ್ರಭುತ್ವದ ಪ್ರಸಾರವು ಪ್ರಥಮ ಮಹಾಯುದ್ಧದ ಪರಿಣಾಮಗಳಲ್ಲಿ ಒಂದಾಗಿತ್ತು. ಪೂರ್ವ ಹಾಗೂ ಮಧ್ಯ ಯುರೋಪಿನಲ್ಲಿಯ ಜರ್ಮನಿ, ಆಸ್ಟ್ರಿಯಾ, ರಷ್ಯಾ, ಬಲ್ಗೇರಿಯಾ, ಟರ್ಕಿ (ಆಟೊಮನ್ ಸಾಮ್ರಾಜ್ಯ) ಸಾಮ್ರಾಜ್ಯಗಳು ಪತನಗೊಂಡು ಅವುಗಳ ಅವಶೇಷಗಳ ಮೇಲೆ ಉದಯಿಸಿದ ಅನೇಕ ಗಣರಾಜ್ಯಗಳು ಪ್ರಜಾಸತ್ತಾತ್ಮಕ ಸಂವಿಧಾನಗಳನ್ನು ಅಂಗೀಕರಿಸಿದವು. ಹೀಗಾಗಿ ಯುರೋಪಿನಲ್ಲಿ ಅನೇಕ ಪಕ್ಷಗಳು ಅಂದರೆ ಸಮಾಜವಾದಿ, ಕನ್‌ಜರ್‌ವೇಟಿವ್, ಕಮ್ಯುನಿಸ್ಟ್, ಫ್ಯಾಸಿಸ್ಟ್ ಮತ್ತು ನಾಸಿಸ್ಟ ಪಕ್ಷಗಳು ಅಸ್ತಿತ್ವಕ್ಕೆ ಬಂದು ಚುನಾವಣೆ ಮುಖಾಂತರ ಅಧಿಕಾರ ಗ್ರಹಣ ಮಾಡಿ ಸರಕಾರ ರಚಿಸುವ ಪದ್ಧತಿ ಆರಂಭವಾಯಿತು. ೧೯೧೮ರಲ್ಲಿ ಡಾಕ್ಟರ್ ಕಾರ್ಲರಿನೆ ಆಸ್ಟ್ರಿಯಾ ಗಣರಾಜ್ಯದ, ಕೌಂಟ ಮೈಕಲ್ ಹಂಗೇರಿ ಗಣರಾಜ್ಯದ, ಜನರಲ್ ಫಿಲ್ಸಿಡಸ್ಕಿ ಪೋಲಂಡ ಗಣರಾಜ್ಯದ ಅಧ್ಯಕ್ಷರುಗಳಾಗಿ ಆಯ್ಕೆಯಾದರು. ೧೯೧೯ರಲ್ಲಿ ಜರ್ಮನಿ ವೀಮರ್ ಸಂವಿಧಾನವನ್ನು ಅಳವಡಿಸಿಕೊಂಡು ಇಬರ್ಟನ ಅಧ್ಯಕ್ಷತೆಯಲ್ಲಿ ಗಣರಾಜ್ಯವಾಯಿತು. ೧೯೨೨ರಲ್ಲಿ ಕೆಮಲ ಪಾಷಾನ ಅಧ್ಯಕ್ಷತೆಯಲ್ಲಿ ಟರ್ಕಿ ಗಣರಾಜ್ಯವಾಯಿತು. ಬ್ರಿಟಿನಿನಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಸತ್ವಶಾಲಿಯಾಯಿತು. ಅಲ್ಲದೆ ಬ್ರಿಟಿಷ್ ಪಾರ್ಲಿಮೆಂಟು ೧೯೨೮ರಲ್ಲಿ ಶಾಸನ ಒಂದನ್ನು ಜಾರಿಮಾಡಿ, ೨೧ ವರ್ಷ ವಯಸ್ಸಾದ ಎಲ್ಲಾ ಸ್ತ್ರೀ ಪುರುಷರಿಗೂ ಮತದಾನದ ಹಕ್ಕನ್ನು ಒದಗಿಸಿತು.

ಸರ್ವಾಧಿಕಾರಿ ಸರಕಾರಗಳ ಸ್ಥಾಪನೆ

ಪ್ಯಾರಿಸ್ ಒಪ್ಪಂದದ ಫಲವಾಗಿ ಯುರೋಪಿನಲ್ಲಿ ಸೃಷ್ಟಿಯಾದ ಗಣರಾಜ್ಯಗಳು ಬಹುಕಾಲ ಉಳಿಯಲಿಲ್ಲ. ಪ್ರಜಾಪ್ರಭುತ್ವದ ಈ ಗಣರಾಜ್ಯಗಳು ಜನರ ಆಶೋತ್ತರಗಳಿಗೆ ಸ್ಪಂದಿಸಲು ವಿಫಲವಾದವು. ಅಲ್ಲದೆ ೧೯೨೩ ಮತ್ತು ೧೯೨೯ರಲ್ಲಿ ಅಮೆರಿಕ ಮತ್ತು ಯುರೋಪಿನಲ್ಲಿ ಸಂಭವಿಸಿದ ಆರ್ಥಿಕ ಸಂಕಷ್ಟವನ್ನು(ಎಕನಾಮಿಕ್ ಡಿಫ್ರೆಷನ್) ಎದುರಿಸು ವಲ್ಲಿ ಈ ರಾಷ್ಟ್ರಗಳು ಅಸಮರ್ಥವಾದುವು. ಯುರೋಪಿನ ಅನೇಕ ರಾಜ್ಯಗಳಲ್ಲಿ ವ್ಯವಸಾಯೋತ್ಪನ್ನ ಹೆಚ್ಚಿದರೂ ರೈತರ ಉತ್ಪಾದನೆಗಳಿಗೆ ಮಾರುಕಟ್ಟೆ ದೊರೆಯದೆ ರೈತರ ಆದಾಯದಲ್ಲಿ ಕಡಿತವುಂಟಾಯಿತು. ಯುರೋಪಿನ ಪೂರ್ವ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಮಹಾಯುದ್ಧದ ದುಷ್ಟಪರಿಣಾಮದಿಂದ ಮತ್ತು ಅವುಗಳ ಪುನರ‌್ರಚನೆಯಿಂದ ಹಾಗೂ ಆ ರಾಜ್ಯಗಳಲ್ಲಿ ಸಂಭವಿಸಿದ ಅತಿವೃಷ್ಟಿ, ಅನಾವೃಷ್ಟಿಗಳಿಂದ ಹಣದುಬ್ಬರದ ಸಮಸ್ಯೆ ತಲೆದೋರಿತು. ತತ್ಪರಿಣಾಮವಾಗಿ ಯುರೋಪಿನಲ್ಲಿ ಬ್ಯಾಂಕುಗಳು ದಿವಾಳಿಯಾದವು. ರಫ್ತು ಮತ್ತು ಆಮದುಗಳು ಕುಗ್ಗಿದವು. ನಿರುದ್ಯೋಗ ಸಮಸ್ಯೆ ಹೆಚ್ಚಿತು ಮತ್ತು ಬಂಗಾರದ ಮಟ್ಟವನ್ನು(ಗೋಲ್ಡ ಸ್ಟ್ಯಾಂಡರ್ಡ್) ನಿರ್ಲಕ್ಷಿಸಿ ಹಣಮುದ್ರಿತಗೊಂಡಿತು. ಈ ಕಾರಣಗಳಿಂದ ಈ ರಾಜ್ಯಗಳಲ್ಲಿ ಐಕ್ಯತೆ ನಶಿಸಿ ಆರ್ಥಿಕ ವಿಷಯಗಳಲ್ಲಿ ತಮ್ಮ ಸ್ವಾರ್ಥ ಸಾಧಿಸಲು ಪ್ರಯತ್ನಿಸಿದವು. ಇದು ಅತಿ ಪ್ರಸರಣಕ್ಕೆ ಕಾರಣವಾಯಿತು. ಜರ್ಮನಿ ಹಾಗೂ ಇತರ ರಾಷ್ಟ್ರಗಳು ಇಂಗ್ಲೆಂಡಿನಿಂದ ಸಾಲ ಪಡೆದಿದ್ದವು. ಇಂಗ್ಲೆಂಡ್ ಅಮೆರಿಕದಿಂದ ನೂರು ಕೋಟಿ ಪೌಂಡುಗಳ ಸಾಲ ಪಡೆದಿತ್ತು. ಆರ್ಥಿಕ ಸಂಕಷ್ಟಕ್ಕೊಳಗಾದ ಅಮೆರಿಕ, ಇಂಗ್ಲೆಂಡನ್ನು ಸಾಲಮರುಪಾವತಿಗೆ ಆಗ್ರಹಿಸಿತು. ಇದಕ್ಕನುಗುಣವಾಗಿ ಇಂಗ್ಲೆಂಡ್ ತನ್ನ ಸಾಲಗಾರರನ್ನು ಸಾಲ ಮರುಪಾವತಿಗೆ ಕೇಳಿಕೊಂಡಿತು. ಇಂತಹ ಸಂದರ್ಭದಲ್ಲಿ ಜರ್ಮನಿ ಯನ್ನೊಳಗೊಂಡು ಸೋತ ರಾಷ್ಟ್ರಗಳು ಯುದ್ಧವೆಚ್ಚವನ್ನು ಭರಿಸುವ ಶಕ್ತಿಯನ್ನು ಕಳೆದುಕೊಂಡು ವರ್ಸೇಲ್ಸ್ ಒಪ್ಪಂದವನ್ನು ಉಲ್ಲಂಘಿಸಿದವು. ಈ ಪರಿಸ್ಥಿತಿಯಲ್ಲಿ ಯುರೋಪಿನಲ್ಲಿ ತಮ್ಮ ಆರ್ಥಿಕ ಹಿಡಿತವನ್ನು ಸಾಧಿಸಲು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಗಳಾದ ಅಮೆರಿಕ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಪುನರ‌್ರಚಿತವಾದ ಸಣ್ಣ ಸಣ್ಣ ಗಣರಾಜ್ಯಗಳನ್ನು ತಮ್ಮ ವಸಾಹತುಗಳಂತೆ ಉಪಯೋಗಿಸುವ ನಿಟ್ಟಿನಲ್ಲಿ ವಿದೇಶಿ ನೀತಿಯನ್ನು ರೂಪಿಸಿದವು. ಇದು ಪ್ರಜಾಪ್ರಭುತ್ವ ಹೊಂದಿದ ರಾಜ್ಯಗಳಲ್ಲಿ ಅತೃಪ್ತಿ ವಾತಾವರಣ ಮತ್ತು ಪರಸ್ಪರ ವೈಮನಸ್ಸಿಗೆ ಕಾರಣವಾಯಿತು.

ಯುರೋಪ್ ರಾಷ್ಟ್ರಗಳು ಪ್ಯಾರಿಸ್ ಒಪ್ಪಂದದ ಬಗ್ಗೆ ಅತೃಪ್ತಿ, ಅಸಮಾಧಾನಗಳನ್ನು ಪ್ರಕಟಿಸಿದ್ದವು. ವರ್ಸೇಲ್ಸ್ ಒಪ್ಪಂದದಿಂದ ಜರ್ಮನ್ ರಾಜ್ಯದ ಸಮಗ್ರತೆ ಜನಾಂಗದ ಪ್ರತಿಷ್ಟೆಗಳಿಗೆ ಕುಂದುಂಟಾಗಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅದು ತನ್ನ ವರ್ಚಸ್ಸನ್ನು ಕಳೆದುಕೊಂಡಿತ್ತು. ಮಂಚೂರಿಯಾ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯದಲ್ಲಿ ಜಪಾನ್ ಮತ್ತು ಚೀನಾ ದೇಶಗಳಲ್ಲಿ ವೈಮನಸ್ಸುಂಟಾಯಿತು. ಇಟಲಿ ತನಗೆ ಬರಬೇಕಾದ ಪ್ರದೇಶಗಳು ಬರಲಿಲ್ಲವೆಂದು ಗೊಣಗಾಡಿತು. ಇಸ್ತೊನಿಯ, ಲಾಟ್ವಿಯಾ ಮತ್ತು ಲುಥೀನಿಯ ರಾಜ್ಯಗಳ ನಿರ್ಮಾಣದಿಂದ ರಷ್ಯಾವು ಯುರೋಪಿನೊಡನೆ ನೇರ ವ್ಯಾಪಾರ ಸಂಪರ್ಕದ ಕೊರತೆಯುಂಟಾದ್ದರಿಂದ ಜರ್ಮನಿ ಮತ್ತು ಜಪಾನ್ ರಾಜ್ಯಗಳ ಜೊತೆ ಸ್ನೇಹ ಬೆಳೆಸಿತು.

ಈ ಎಲ್ಲಾ ಆರ್ಥಿಕ ಮತ್ತು ರಾಜಕೀಯ ಅಸಂತೃಪ್ತಿಗಳ ಉಪಯೋಗ ಪಡೆದು ಮುಸ್ಸೊಲಿನಿಯು ಬ್ಲ್ಯಾಕ್ ಷರ್ಟ್ಸ್ ಪಡೆಗಳ ಮುಖಾಂತರ ರೋಮನ್ ಸಾಮ್ರಾಜ್ಯದ ವೈಭವವನ್ನು ಪುನರುಜ್ಜೀವನಗೊಳಿಸಿ ಇಟಲಿ ದೇಶವನ್ನು ಮಹಾಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ೧೯೨೯ರ ಚುನಾವಣೆಯಲ್ಲಿ ಗ್ರ್ಯಾಂಡ್ ಕೌನ್ಸಿಲಿನ ೨/೩ ರಷ್ಟು ಸ್ಥಾನಗಳನ್ನು ಗೆದ್ದು ಇಟಲಿಯ ಫ್ಯಾಸಿಸ್ಟ್ ಸರಕಾರದ ಸರ್ವಾಧಿಕಾರಿಯಾದನು. ಇತ್ತ ಜರ್ಮನಿಯಲ್ಲಿ ಹಿಟ್ಲರನು ರೈತರ, ಕಾರ್ಮಿಕರ ಹಾಗೂ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಕಮ್ಯುನಿಸ್ಟರ, ಯಹೂದಿಗಳ ಮತ್ತು ಅಸಮರ್ಥ ರಿಪಬ್ಲಿಕ್ ಪಕ್ಷ ಇವುಗಳನ್ನು ತುಳಿದು ನಾಜಿ ಸಿದ್ಧಾಂತವನ್ನು ಕಾರ್ಯಗತಗೊಳಿಸಲು ೧೯೩೩ರಲ್ಲಿ ತನ್ನ ಸ್ಟಾರ್ಮ ಟ್ರೂಪರ್ಸ ಪಡೆಗಳ ಸಹಾಯದಿಂದ ಸರ್ವಾಧಿಕಾರಿಯಾದನು. ರಷ್ಯಾದಲ್ಲಿ ೧೯೧೭ರ ಕ್ರಾಂತಿಯ ಮೂಲಕ ಲೆನಿನ್ನನು ಜಾರ್ ಎರಡನೆಯ ನಿಕೋಲಸ್‌ನ ಅರಸೊತ್ತಿಗೆಯನ್ನು ಕಿತ್ತೆಸೆದು ಕಮ್ಯುನಿಸ್ಟ್ ಆಡಳಿತದ ಸರ್ವಾಧಿಕಾರಿ ಯಾದನು. ಜಪಾನಿನಲ್ಲಿ ರಾಷ್ಟ್ರೀಯ ಷಾವಿನಿಸಂ ಪ್ರಬಲಗೊಂಡಿತು. ೧೯೧೭-೧೯೩೩ರ ಅವಧಿಯ ರಾಜಕೀಯ ಬೆಳವಣಿಗೆಯನ್ನು ವಿಶ್ಲೇಷಿಸಿದಾಗ ಯುರೋಪ್ ನಲ್ಲಿ ಪ್ರಜಾಪ್ರಭುತ್ವವಾದಿಗಳ ಹಾಗೂ ಸರ್ವಾಧಿಕಾರಿಗಳ ರಾಜ್ಯಗಳು ಉದಯವಾಗಿ ತಮ್ಮ ಪ್ರಾಬಲ್ಯ ಸ್ಥಾಪಿಸಲು ಸಮರಕ್ಕೆ ಸಜ್ಜಾದವು.

 

ಯುರೋಪಿನಲ್ಲಿಯ ಯುದ್ಧಾಕ್ರಮಣಗಳು ಮತ್ತು ಒಪ್ಪಂದಗಳು

ಬಲಾತ್ಕಾರವಾಗಿ ಜರ್ಮನಿಯ ಮೇಲೆ ಹೇರಿದ್ದ ವರ್ಸೇಲ್ಸ್ ಒಪ್ಪಂದವನ್ನು ಉಲ್ಲಂಘಿಸಿ ಸಮರದ ಮೂಲಕ ಆಸ್ಟ್ರಿಯಾ, ಜಕೊಸ್ಲೊವಾಕಿಯಾ ಮತ್ತು ಪೋಲೆಂಡ್ ಗಳನ್ನು ವಶಪಡಿಸಿಕೊಂಡ ಜರ್ಮನ್ ಜನಾಂಗದ ವಿಶಾಲ ಸಾಮ್ರಾಜ್ಯ ಸ್ಥಾಪಿಸುವುದು ತನ್ನ ಗುರಿಯೆಂದು ಹಿಟ್ಲರನು ಘೋಷಣೆ ಮಾಡಿದನು. ಫ್ರಾನ್ಸ್, ಇಂಗ್ಲೆಂಡ್, ರಷ್ಯಾ ದೇಶಗಳು ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಗಮನಿಸಿ ಅವರಿಗೆ ಸಮನಾದ ಮಾರಕಾಸ್ತ್ರಗಳನ್ನು ಉತ್ಪಾದಿಸಲು ಕ್ರಮಕೈಕೊಂಡನು. ೧೯೩೩ರಲ್ಲಿ ಜಿನೀವಾ ನಿಶ್ಯಸ್ತ್ರೀಕರಣ ಸಮ್ಮೇಳನದಿಂದ ಮತ್ತು ರಾಷ್ಟ್ರ ಸಂಘದಿಂದ ಜರ್ಮನಿ ಹೊರಬರುವಂತೆ ಮಾಡಿದನು. ಮಿತ್ರ ರಾಷ್ಟ್ರಗಳ ಹಿತಾಸಕ್ತಿಗೆ ವಿರುದ್ಧವಾಗಿ ರೀನಿಲ್ಯಾಂಡನ್ನು ವಶಪಡಿಸಿಕೊಂಡನು. ತನ್ನ ಶಕ್ತಿಯನ್ನು ವೃದ್ದಿಸಿಕೊಳ್ಳಲು ೧೯೩೬ರಲ್ಲಿ ಸ್ಪೆಯಿನ್ ಅಂತಃಕಲಹದಲ್ಲಿ(ಇಟಲಿಯ ಮುಸ್ಸೊಲಿನಿ ಸಹಾಯದಿಂದ) ಹಸ್ತಕ್ಷೇಪಮಾಡಿ ಸ್ಪೆಯಿನಿನ ಜನರಲ್ ಫ್ರಾಂಕೊನಿಗೆ ಸೈನಿಕ ನೆರವು ನೀಡಿ ಆತನನ್ನು ಅಧಿಕಾರಕ್ಕೆ ತಂದನು. ಇಂಗ್ಲೆಂಡ್, ಫ್ರಾನ್ಸ್, ರಷ್ಯಾಗಳಿಂದೊದಗುವ ಅಪಾಯವನ್ನು ಲಕ್ಷಿಸಿ ಇಟಲಿ ಮತ್ತು ಜಪಾನ್ ದೇಶಗಳೊಂದಿಗೆ ‘‘ರೋಮ್-ಬರ್ಲಿನ್-ಟೋಕಿಯೊ ಆ್ಯಕ್ಸಿಸ್’’ ಎನ್ನುವ ರಕ್ಷಣಾ ಒಪ್ಪಂದವನ್ನು ೧೯೩೭ರಲ್ಲಿ ಮಾಡಿಕೊಂಡನು. ೧೯೩೮ ಮಾರ್ಚ್ ೧೨ರಂದು ಜರ್ಮನ್ ಸೇನಾಪಡೆಗಳು ಆಸ್ಟ್ರಿಯಾದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡವು. ನಂತರ ಜಕೊಸ್ಲೊವಾಕಿಯಾದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡನು.

ಇತ್ತ ಇಟಲಿಯ ಮುಸ್ಸೊಲಿನಿಯು ಪೋಪನೊಡನೆ ಸೌಹಾರ್ದ ಒಪ್ಪಂದ (೧೯೨೯ರ ಲ್ಯಾಟಿರಾನ್ ಒಪ್ಪಂದ) ಮಾಡಿಕೊಂಡು ಇಟಲಿ ದೇಶವನ್ನು ಮಹಾಶಕ್ತಿಶಾಲಿ ದೇಶವನ್ನಾಗಿ ಮಾಡಲು ನಿರ್ಧರಿಸಿದನು. ಟರ್ಕಿದೇಶದ ಮೇಲೆ ಯುದ್ಧಸಾರಿ ಲೋಸಾನಿ ಒಪ್ಪಂದ ಮಾಡಿಕೊಂಡು ಮೆಡಿಟರೇನಿಯನ್ ಸಮುದ್ರದ ಮೇಲೆ ಹಿಡಿತ ಸಾಧಿಸಿದನು. ಇಟಲಿಯನ್ನರಿಗೆ ಕೊಟ್ಟ ವಾಗ್ದಾನದಂತೆ ೧೯೨೪ರಲ್ಲಿ ಯುಗೊಸ್ಲಾವಿಯಾದ ಮೇಲೆ ದಾಳಿಮಾಡಿ ಮಿತ್ರ ರಾಷ್ಟ್ರಗಳು ಕೊಡಲು ನಿರಾಕರಿಸಿದ ಫಿಯುಮಿ (ಕೋಟೆ)ಯನ್ನು ವಶಪಡಿಸಿಕೊಂಡನು. ಮುಂದೆ ೧೯೩೫ರಲ್ಲಿ ಅಲ್ಬೇನಿಯ ಮತ್ತು ೧೯೩೯ರಲ್ಲಿ ಅಬ್ಸೀನಿಯಗಳ ಮೇಲೆ ದಾಳಿಮಾಡಿ ಅವುಗಳನ್ನು ವಶಪಡಿಸಿಕೊಂಡನು. ೧೯೩೧ರಲ್ಲಿ ಜಪಾನ್, ಚೀನಾದೇಶದ ಮಂಚೂರಿಯಾದ ಮೇಲೆ ದಾಳಿಮಾಡಿ ಅದನ್ನು ಆಕ್ರಮಿಸಿ ಅದು ಸ್ವತಂತ್ರ ರಾಜ್ಯವೆಂದು ಘೋಷಿಸಿತು. ರಾಷ್ಟ್ರ ಸಂಘವು ಜಪಾನಿನ ಈ ಕ್ರಮವನ್ನು ಅನುಮೋದಿಸಲು ನಿರಾಕರಿಸಿದಾಗ, ಜಪಾನ್ ರಾಷ್ಟ್ರ ಸಂಘದಿಂದ ಹೊರಬಂದಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ವಿದೇಶ ನೀತಿಯನ್ನು ಪ್ರತಿಭಟಿಸಿ ರಾಷ್ಟ್ರಸಂಘದಿಂದ ಹೊರಬಿದ್ದ ಮುಸ್ಸೊಲಿನಿಯು ಜರ್ಮನಿ ಮತ್ತು ಜಪಾನುಗಳೊಂದಿಗೆ ಸ್ನೇಹ ಬೆಳೆಸಿದನು. ಜರ್ಮನಿ, ಇಟಲಿ ಮತ್ತು ಜಪಾನು ದೇಶಗಳು ಸೈನಿಕ ಶಕ್ತಿಯನ್ನು ಅಪಾರಮಟ್ಟದಲ್ಲಿ ವೃದ್ದಿಸಿಕೊಂಡದ್ದನ್ನು ಅವುಗಳು ಮಾಡಿದ ದಾಳಿಗಳನ್ನು ಲಕ್ಷಿಸಿದ ರಷ್ಯಾ, ಫ್ರಾನ್ಸ್, ಪೋಲೆಂಡ್, ಇಂಗ್ಲೆಂಡ್, ಬೆಲ್ಜಿಯಂ ದೇಶಗಳು ಹಿಟ್ಲರ್ ಮತ್ತು ಮುಸ್ಸೊಲಿನಿಯ ದಾಳಿಗಳನ್ನೆದುರಿಸಲು ಸೈನಿಕ ಒಪ್ಪಂದವನ್ನು ಮಾಡಿಕೊಂಡವು. ಹೀಗಾಗಿ ಯುರೋಪ್ ಎರಡು ವಿರೋಧಿ ಸೈನಿಕ ಶಿಬಿರಗಳ ನೆಲೆಯಾಗಿ ಪರಿವರ್ತನೆಗೊಂಡಿತು.