ಮಾರ್ಕ್ಸ್‌ನ ಇತಿಹಾಸದ ಪರಿಕಲ್ಪನೆಯಲ್ಲಿ, ಉತ್ಪಾದನಾ ಶಕ್ತಿಗಳು ಆರ್ಥಿಕ ವಿತರಣೆಯ ಕ್ರಮ ಮತ್ತು ಇವುಗಳಿಂದ ಸಮಾಜದಲ್ಲಿ ಉಂಟಾದ ವರ್ಗ ವಿಭಜನೆಗಳೇ ಇತಿಹಾಸವನ್ನು ಮುನ್ನಡೆಸುವ ಚಾಲಕ ಶಕ್ತಿಗಳಾಗಿರುತ್ತವೆ. ವರ್ಗಗಳ ನಡುವಿನ ಸಂಘರ್ಷವೇ ಅಭಿವೃದ್ದಿಯನ್ನು ಉಂಟು ಮಾಡುತ್ತದೆ. ಆದ್ದರಿಂದಲೇ ಮಾರ್ಕ್ಸ್‌ಗೆ ರಾಷ್ಟ್ರೀಯತೆಯಲ್ಲಿ ನಂಬಿಕೆ ಇರಲಿಲ್ಲ. ಇದಕ್ಕೆ ಬದಲಾಗಿ ದುಡಿಯುವ ವರ್ಗದ ಜನರ ನಡುವೆ ಪರಸ್ಪರ ನಂಬಿಕೆ ವಿಕಾಸಗಳಿಗೆ ಪ್ರಾಮುಖ್ಯತೆ ನೀಡಿದ. ಮಾರ್ಕ್ಸ್‌ನ ಸಿದ್ಧಾಂತ ಸಾಮಾಜಿಕ ಕ್ರಾಂತಿಗೆ ಅಗತ್ಯವಾದ ಪ್ರೇರಣೆಯನ್ನು ಹಾಗೂ ಶ್ರಮಿಕ ವರ್ಗದವರನ್ನು ಬಡತನ ಮತ್ತು ಶೋಷಣೆ ಯಿಂದ ಮುಕ್ತವಾಗಿಸುವ ಮಾರ್ಗವನ್ನು ತೋರಿಸಿಕೊಟ್ಟಿತು.

ಸಮಾಜಶಾಸ್ತ್ರದ ವಿಷಯಗಳನ್ನು ಭೌತಶಾಸ್ತ್ರದಂಥ ವಿಜ್ಞಾನದ ವಿಷಯಗಳಂತೆ ನಿಖರವಾಗಿ, ಕರಾರುವಕ್ಕಾಗಿ ಅಧ್ಯಯನ ಮಾಡಲು ಸಾಧ್ಯ ಎಂಬುದನ್ನು ತೋರಿಸಲು ಮಾರ್ಕ್ಸ್ ದ್ವಂದ್ವಾತ್ಮಕ ಅಥವಾ ತಾರ್ಕಿಕ ಭೌತಿಕವಾದ ಎಂಬ ತತ್ವವನ್ನು ತನ್ನ ವಿಶ್ಲೇಷಣೆಯಲ್ಲಿ ಬಳಸಿದ. ಸಮಾಜದ ಭೌತಿಕ ಸ್ಥಿತಿಗತಿಗಳೇ ಇತಿಹಾಸವನ್ನು ನಿರ್ಧರಿಸುವ ಅಂಶಗಳು ಎಂದು ಮಾರ್ಕ್ಸ್ ನಂಬಿದ್ದ. ಎರಡನೆಯದಾಗಿ ಭೌತಿಕವಾದವು ಧರ್ಮದ ಪ್ರಾಮುಖ್ಯತೆಯನ್ನು ತಿರಸ್ಕರಿಸಿ, ಒಂದು ರೀತಿಯಲ್ಲಿ, ಉಗ್ರರೂಪದ ನಾಸ್ತಿಕವಾದವಾಗಿ ಪರಿಣಮಿಸಿತು. ದ್ವಂದ್ವಮಾನ ಭೌತಿಕವಾದವು ಎಲ್ಲ ಬಗೆಯ ಪರಿಪೂರ್ಣ ಸತ್ಯಗಳು ಹಾಗೂ ಮನುಷ್ಯ ಅನುಭವವನ್ನು ಮೀರಿದ ಅತೀಂದ್ರಿಯ ಮೌಲ್ಯಗಳನ್ನು ಪ್ರಶ್ನಿಸಿತು. ಮಾರ್ಕ್ಸ್‌ನ ತೀರ್ಮಾನದಲ್ಲಿ ಇಂಥ ಎಲ್ಲ ಬಗೆಯ ಸತ್ಯಗಳು ಸಮಾಜವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು, ಶೋಷಣೆ ಮಾಡುವ ವರ್ಗವನ್ನು ಪೋಷಿಸಲು ಸೃಷ್ಟಿ ಯಾದಂಥವುಗಳಾಗಿದ್ದವು. ಆದ್ದರಿಂದ ಧರ್ಮವು ಅಲ್ಲಿಯವರೆಗೆ, ನಿಜವಾದ ಸಂತೋಷವನ್ನು ನೀಡದೆ ಸಂತೋಷದ ಭ್ರಮೆಯನ್ನು ಮಾತ್ರ ಜನರಲ್ಲಿ ಉಂಟುಮಾಡುತ್ತಿತ್ತು. ಆದ್ದರಿಂದ ಧರ್ಮವು ಶೋಷಿತ ಜನರನ್ನು ಯಾವುದೇ ರೀತಿಯ ಪ್ರತಿಭಟನೆಗೆ ಪ್ರೇರೇಪಿಸದಂತೆ ತಡೆದು ಅವರನ್ನು ಭ್ರಮಾಲೋಕಕ್ಕೆ ತಳ್ಳುವ ಆಫೀಮು ಎಂಬ ಮಾರ್ಕ್ಸ್ ನಿರ್ಧರಿಸಿದ.

ಭೌತಿಕವಾದವು ಕ್ರಾಂತಿಯನ್ನು ನಿಜವಾಗಿಸುವ, ಅತ್ಯಂತ ದೂರಗಾಮಿ ಪರಿಣಾಮವನ್ನು ಮಾಡುವ ಒಂದು ಹೊಸ ರೀತಿಯ ಸಾಧನವಾಗಿತ್ತು. ಯಾಕೆಂದರೆ ಉತ್ಪಾದನೆಯ ವಿಧಾನಗಳು ಸಾಮಾಜಿಕವಾದ ಮೇಲೆ ಅಲ್ಲಿ ಶೋಷಣೆಗೆ, ಸಾಮಾಜಿಕ ಅಸಮಾನತೆಗೆ ಸ್ಥಾನವಿರಲಿಲ್ಲ.

ಕೈಗಾರಿಕಾ ಕ್ರಾಂತಿ ಮತ್ತು ಬಂಡವಾಳವಾದದ ಉಗಮ

ಇದು ಮೂಲಭೂತವಾಗಿ ಆರ್ಥಿಕ ಕ್ರಾಂತಿಯಾಗಿತ್ತು. ಆದ್ದರಿಂದ ಇಲ್ಲಿ ‘ಕ್ರಾಂತಿ’ ಯನ್ನು ಸಾಂಕೇತಿಕ ಅರ್ಥದಲ್ಲಿ ಪರಿಭಾವಿಸಬೇಕು. ಇದು ಸಂಪತ್ತಿನ ಉತ್ಪಾದನೆ, ಉತ್ಪಾದನೆಯ ತಾಂತ್ರಿಕ ವಿಧಾನಗಳು, ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಗ್ರಾಹಕರಿಗೆ ಉತ್ಪಾದಿಸಿದ ವಸ್ತುಗಳನ್ನು ವಿತರಿಸುವ ಕ್ರಮದಂಥ ವಿಷಯಗಳಿಗೆ ಪ್ರಾಮುಖ್ಯತೆ ನೀಡಿತು. ಕೈಗಾರಿಕಾ ಕ್ರಾಂತಿಯು ಮಾನವ ಜನಾಂಗ ಇದುವರೆಗೂ ಕಾಣದಿದ್ದ ಮಹತ್ವಪೂರ್ಣ ಬದಲಾವಣೆಗಳನ್ನು ತಂದಿತು. ಈ ಕ್ರಾಂತಿಯು ಇನ್ನೊಂದು ಬಗೆಯಲ್ಲಿ ಹತ್ತೊಂಬತ್ತನೆಯ ಹಾಗೂ ಇಪ್ಪತ್ತನೆಯ ಶತಮಾನದ ನಾಗರಿಕತೆಗಳ ಆರಂಭಕ್ಕೆ ಕಾರಣವಾಯಿತು. ಕೈಗಾರಿಕಾ ಕ್ರಾಂತಿ ಎಂಬ ಪದವು ೧೮೮೦ ರಿಂದ ಬಳಕೆಗೆ ಬಂತು. ಮುಖ್ಯವಾಗಿ ೧೮ನೆಯ ಶತಮಾನದ ಎರಡನೆಯ ಭಾಗದಲ್ಲಿ ಬಹಳ ಕ್ಷಿಪ್ರಗತಿ ಯಲ್ಲಿ ಉಂಟಾದ ತಾಂತ್ರಿಕ ಬೆಳವಣಿಗೆಗಳ ಕಾರಣದಿಂದ ಇದನ್ನು ಸಾಮಾನ್ಯವಾಗಿ ‘‘ಕೈಗಾರಿಕಾ ಕ್ರಾಂತಿ’’ ಎಂದು ಕರೆಯಲಾಗುತ್ತದೆ. ೧೮೦೦ಕ್ಕಿಂತ ಮುಂಚೆ ಸನ್ನೆಗಳು ಅಥವಾ ಏತಗಳನ್ನು ಬಳಸಿ ಮನುಷ್ಯ ಅಥವಾ ಪ್ರಾಣಿಗಳ ಬಲದ ಸಹಾಯದಿಂದ ಶಕ್ತಿಯನ್ನು ಉತ್ಪಾದಿಸಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ರಭಸದಿಂದ ಹರಿಯುವ ನೀರು ಮತ್ತು ಬೀಸುವ ಗಾಳಿಯನ್ನು ಬಳಸಲಾಗುತ್ತಿತ್ತು. ಇದಾದ ನಂತರ ಮನುಷ್ಯ ತನ್ನ ನೈಪುಣ್ಯತೆಯನ್ನು ಬಳಸಿ, ಹಬೆ, ವಿದ್ಯುತ್, ಅನಿಲಗಳ ದಹನ ಮತ್ತು ಕೊನೆಗೆ ಪರಮಾಣುಗಳ ಸಹಾಯದಿಂದಲೂ ಸಹ ಶಕ್ತಿಯನ್ನು ಉತ್ಪಾದಿಸುವ ವಿಧಾನಗಳನ್ನು ಕಂಡುಹಿಡಿದ. ಮನುಷ್ಯ ಕೈಯಿಂದ ಬಳಸುವ ಸಾಧನಗಳ ಹಂತದಿಂದ, ವಿವಿಧ ಶಕ್ತಿಗಳ ಸಹಾಯದಿಂದ ಚಲಿಸುವ ಯಂತ್ರಗಳನ್ನು ಬಳಸುವ ಸ್ಥಿತಿಗೆ ತಲುಪಿದ್ದು, ಕೈಗಾರಿಕಾ ಕ್ರಾಂತಿಯು ತಂದ ಬಹುಮುಖ್ಯ ಬದಲಾವಣೆ.

ಕೈಗಾರಿಕಾ ಕ್ರಾಂತಿಯು ಯಾವಾಗ ಆರಂಭವಾಯಿತು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಅದು ೧೭೮೦ರ ನಂತರದ ಐವತ್ತು ವರ್ಷಗಳಲ್ಲಿ ಗ್ರೇಟ್ ಬ್ರಿಟನ್‌ನಲ್ಲಿ ಸ್ಪಷ್ಟ ಸ್ವರೂಪವನ್ನು ಪಡೆಯಿತು ಎಂದು ಹೇಳಲಾಗುತ್ತದೆ. ೧೮೭೦ರವರೆಗೆ ಕೈಗಾರಿಕಾ ಕ್ರಾಂತಿಯು ಬ್ರಿಟನ್ನಿಗೆ ಮಾತ್ರ ಸೀಮಿತವಾಗಿತ್ತು. ನಂತರದ ಅವಧಿಯಲ್ಲಿ ಇದು ಯೂರೋಪಿನ ಎಲ್ಲ ಕಡೆ ಹರಡಿ, ನಂತರ ನಿಧಾನವಾಗಿ ಪಾಶ್ಚಿಮಾತ್ಯ ನಾಗರಿಕತೆಯ ಗಡಿಗಳನ್ನು ದಾಟಿ ಬೆಳೆಯಲಾರಂಭಿಸಿತು. ಇದು ಇಂಗ್ಲೆಂಡಿನಲ್ಲಿಯೇ ಹುಟ್ಟುವುದಕ್ಕೆ ಇಂಗ್ಲಿಷ್ ಸಮಾಜದ ರಾಜಕೀಯ ಲಕ್ಷಣಗಳು ಕಾರಣವಾಗಿದ್ದವು. ಮೇಲಾಗಿ ಇಂಗ್ಲೆಂಡಿಗೆ ಕೈಗಾರಿಕೆ ಹಾಗೂ ನೌಕಾಯಾನಗಳ ಯಶಸ್ಸಿನಿಂದ ಪ್ರಪಂಚದ ಮಾರುಕಟ್ಟೆಗಳಿಗೆ ಪ್ರವೇಶ ಲಭ್ಯವಿತ್ತು. ಈ ಬೆಳವಣಿಗೆಗಳು ಹೊಸದನ್ನು ಆವಿಷ್ಕರಿಸುವ ಮನಸ್ಸುಗಳಿಗೆ ಸಹಾಯಕಾರಿ ಯಾಗಿದ್ದವು. ಇನ್ನೊಂದು ಮುಖ್ಯ ಅಂಶವೆಂದರೆ ಇದಕ್ಕಿಂತ ಹಿಂದೆ ವ್ಯವಸಾಯ ಕ್ಷೇತ್ರದಲ್ಲಿ ನಡೆದ ಕ್ರಾಂತಿ. ಇದರಿಂದಾಗಿ ಕೂಲಿಕಾರ ವರ್ಗ ಹಾಗೂ ಸಂಪತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುವಂತಾಯಿತು. ಈ ಎರಡೂ ಕಾರಣಗಳು ಕೈಗಾರಿಕಾ ಕ್ರಾಂತಿಯನ್ನು ಸಾಧ್ಯವಾಗಿಸಲು ಅತ್ಯಗತ್ಯವಾಗಿದ್ದವು. ವ್ಯವಸಾಯ ಕ್ರಾಂತಿಯ ಪರಿಣಾಮಗಳು ಹದಿನೆಂಟನೆಯ ಶತಮಾನದ ಅವಧಿಯಲ್ಲಿ, ನಂತರ ಹತ್ತೊಂಬತ್ತನೆಯ ಶತಮಾನದಲ್ಲಿ ಆಗುವ ಸಮಯದಲ್ಲಿಯೇ ಬ್ರಿಟೀಷರು ತಮ್ಮ ವಸಾಹತುಶಾಹಿ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಅಷ್ಟೇ ಅಲ್ಲದೆ ಅವರು ಅಮೆರಿಕಾ ಮತ್ತು ಯೂರೋಪಿನ ಎಲ್ಲ ಕಡೆ ಮಾರುಕಟ್ಟೆಗಳನ್ನು ಆರಂಭಿಸಿ, ಬೃಹತ್ ನೌಕಾನೆಲೆಗಳನ್ನು ಸ್ಥಾಪಿಸಿ ಸಮುದ್ರದ ಮೇಲೂ ತಮ್ಮ ಅಧಿಪತ್ಯವನ್ನು ವಿಸ್ತರಿಸಿದ್ದರು. ಬ್ರಿಟೀಷ್ ವರ್ತಕ ಹೆಚ್ಚು ಉತ್ಪಾದಿಸಿದರೆ ಮಾತ್ರ ಹೆಚ್ಚು ವಸ್ತುಗಳನ್ನು ಮಾರುವ ಸ್ಥಿತಿಯಲ್ಲಿದ್ದ. ಅವನಿಗೆ ತನ್ನ ವಸ್ತುಗಳನ್ನು ಕೊಳ್ಳುವ ಗ್ರಾಹಕರಿದ್ದರು, ಹಡಗುಗಳಿದ್ದವು ಮತ್ತು ಹೊಸ ಯೋಜನೆಗಳನ್ನು ಆರಂಭಿಸಲು ಬಂಡವಾಳ ಸಿಗುತ್ತಿತ್ತು. ಹೀಗಿದ್ದಾಗ ಲಾಭದ ಹಂಬಲ ಅವನನ್ನು ಇನ್ನೂ ತ್ವರಿತ ಗತಿಯಲ್ಲಿ ವಸ್ತುಗಳನ್ನು ಉತ್ಪಾದಿಸುವ ವಿಧಾನಗಳನ್ನು ಕಂಡುಹಿಡಿಯಲು ಪ್ರೇರೇಪಿಸಿತು. ವಿವಿಧ ಕ್ರೆಡಿಟ್ ಹಾಗೂ ಸ್ಟಾಕ್ ಕಂಪನಿಗಳು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಆರಂಭದಿಂದ ಬಂಡವಾಳವು ಎಲ್ಲ ರೂಪಗಳಲ್ಲೂ ದೊರೆಯು ತ್ತಿತ್ತು. ಯಾವ ದೇಶ ವ್ಯಾಪಾರ ಮತ್ತು ವ್ಯವಸಾಯ ರಂಗದಲ್ಲಿ ಸಂಪದ್ಭರಿತವಾಗಿತ್ತೋ ಅಂಥ ದೇಶಕ್ಕೆ ಮಾತ್ರ ಯಂತ್ರ ನಾಗರಿಕತೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಿತ್ತು. ಇಂಗ್ಲೆಂಡ್ ಅಂಥ ದೇಶಗಳಲ್ಲಿ ಮೊಟ್ಟಮೊದಲನೆಯದಾಯಿತು. ಆ ಸಮಯದಲ್ಲಿಯೇ ಪ್ರಜಾಪ್ರಭುತ್ವಕ್ಕಾಗಿ ಇಂಗ್ಲೆಂಡಿನಲ್ಲಿ ಕ್ರಾಂತಿಯಾಗುತ್ತಿತ್ತು. ಇವೆರಡರ ಸಹಾಯದಿಂದ ಪಾಶ್ಚಾತ್ಯರಿಗೆ ಹಿಂದೆಂದೂ ಸಾಧ್ಯವಾಗದ ರೀತಿಯಲ್ಲಿ ಬಹಳ ಕಾಲದವರೆಗೆ ಹಾಗೂ ಬಹಳ ದೂರದವರೆಗೆ ಜನರನ್ನು ಮತ್ತು ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಘಟಿಸಲು ಸಾಧ್ಯವಾಯಿತು. ಅಲ್ಲಿಯವರೆಗೆ ಪ್ರಪಂಚದ ಯಾವ ದೇಶದಲ್ಲೂ ಇಂಥ ಬೃಹತ್ ಪ್ರಮಾಣದಲ್ಲಿ ಬದಲಾವಣೆ ಸಾಧ್ಯ ವಾಗಿರಲಿಲ್ಲ. ಇದು ಇಂಗ್ಲೆಂಡ್‌ನಲ್ಲಿ ಸಾಧ್ಯವಾಗಿದ್ದರಿಂದಲೇ ಅಲ್ಲಿನ ಜನರಿಗೆ ಪ್ರಪಂಚದ ಎಲ್ಲ ಭಾಗದ ಜನರನ್ನು ತಲುಪಲು ಸಾಧ್ಯವಾಯಿತು.

ಹದಿನೆಂಟನೆಯ ಶತಮಾನದಲ್ಲಿ ಆದ ಅತ್ಯಂತ ದೊಡ್ಡ ತಾಂತ್ರಿಕ ಬೆಳವಣಿಗೆಗಳು ಮೊದಲು ಬ್ರಿಟನ್ನಿನ ಬಟ್ಟೆ ಕೈಗಾರಿಕೆಗೆ ಮಾತ್ರ ಸೀಮಿತವಾಗಿದ್ದವು. ೧೭೬೯ರ ನಂತರ ಜೇಮ್ಸ್‌ವ್ಯಾಟ್ ಹಬೆಯ ಶಕ್ತಿಯನ್ನು ಬಳಸಿಕೊಳ್ಳುವ ಬಗೆಯನ್ನು ಕಂಡುಹಿಡಿದ ನಂತರ ಹಬೆಯ ಎಂಜಿನ್ನುಗಳನ್ನು ಬಳಸಬಹುದಾದ ಹೊಸ ಯಂತ್ರಗಳನ್ನು ಸೃಷ್ಟಿಸಲಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಆದ ಆಮೂಲಾಗ್ರ ಬೆಳವಣಿಗೆಗಳು ಎಲ್ಲ ಕಡೆಯ ಉತ್ಪಾದನಾ ಕೇಂದ್ರಗಳಿಗೆ ತಲುಪಿದವು. ಇದರಿಂದ ಬೃಹತ್ ಕೈಗಾರಿಕಾ ಕೇಂದ್ರಗಳನ್ನು ತೆರೆಯಲು ಹಾಗೂ ಹಿಂದೆಂದೂ ಉತ್ಪಾದಿಸದೇ ಇದ್ದ ವಸ್ತುಗಳನ್ನು ತಯಾರಿಸಲು ಸಾಧ್ಯವಾಯಿತು.

ಈ ಬೆಳವಣಿಗೆಗಳನ್ನು ಎರಡು ಹಂತಗಳಲ್ಲಿ ಕಾಣಬಹುದು. ೧೮೭೦ರವರೆಗೆ ನಡೆದ ಬಹುಪಾಲು ಪ್ರಾಯೋಗಿಕ ಆವಿಷ್ಕಾರಗಳು, ಸಾಮಾನ್ಯಜ್ಞಾನ ಮತ್ತು ಪರಂಪರಾನುಗತ ಕುಶಲತೆಗಳನ್ನು ನಂಬಿದ ತಾಂತ್ರಿಕ ಪರಿಣತರಿಂದ ಹಾಗೂ ಶ್ರಮವಹಿಸಿ ಕೆಲಸ ಮಾಡುವ ಉದ್ಯಮಿಗಳಿಂದ ಮಾತ್ರ ಕೈಗೂಡುತ್ತಿದ್ದವು. ಅವರಿಗೆ ಕ್ರಮಬದ್ಧ ಸಂಶೋಧನೆ ಅಥವಾ ಶಿಸ್ತುಬದ್ಧ ವಿಜ್ಞಾನದ ಅಂಶಗಳಾದ ಕಲ್ಲಿದ್ದಲು, ಹಬೆ, ರೈಲು ಮಾರ್ಗಗಳು, ಹಡಗುಗಳ ಮೂಲಕ ವ್ಯಾಪಾರ, ಉಕ್ಕು, ಹಬೆಯಿಂದ ಚಲಿಸುವ ಯಂತ್ರಗಳು ಇತ್ಯಾದಿಗಳ ಪರಿಚಯ ಇರಲಿಲ್ಲ. ಈ ಹಂತದಲ್ಲಿ ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ಪ್ರತಿಯೊಂದು ವಿಭಾಗದ ಮೇಲೂ ಬ್ರಿಟನ್ ತನ್ನ ಅಧಿಕಾರವನ್ನೂ ಸ್ಥಾಪಿಸಿತು. ಹೊಸ ತಂತ್ರಜ್ಞಾನಕ್ಕೆ ಬೇಕಾದ ಅಡಿಪಾಯವನ್ನು ಬಟ್ಟೆ ಕೈಗಾರಿಕೆಯು ಯಂತ್ರಗಳು, ಹಬೆಯ ಎಂಜಿನ್‌ಗಳು, ರೈಲು ಮಾರ್ಗಗಳು, ಹಬೆಯಿಂದ ಚಲಿಸುವ ಹಡಗುಗಳು, ಕಲ್ಲಿದ್ದಲು ಮತ್ತು ಉಕ್ಕಿನ ಕೈಗಾರಿಕೆ ಗಳು ಒದಗಿಸಿಕೊಟ್ಟವು. ಇವೆಲ್ಲವನ್ನೂ ಮೊದಲು ಆರಂಭ ಮಾಡಿದ ಅಥವಾ ಇವು ಗಳನ್ನು ಹೇರಳ ಪ್ರಮಾಣದಲ್ಲಿ ಉತ್ಪಾದಿಸಿದ ಶ್ರೇಯಸ್ಸು ಬ್ರಿಟನ್‌ಗೆ ಸಿಕ್ಕುತ್ತದೆ.

ವಿದ್ಯುತ್ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ರಸಾಯನಶಾಸ್ತ್ರದ ಅವಿಷ್ಕಾರಗಳು ಕೈಗಾರಿಕೆಗಳಲ್ಲಿ ಬಳಕೆಯಾದದ್ದರಿಂದ ಕೈಗಾರಿಕಾ ಕ್ರಾಂತಿಗೆ ಹೊಸದಿಕ್ಕು ಕಾಣಿಸಿತು. ವಿಜ್ಞಾನದ ಹೊಸ ಹೊಸ ಸಿದ್ಧಾಂತಗಳು ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಅರಿತು ಕೊಂಡಿದ್ದ ವಿಜ್ಞಾನಿಗಳು, ಇಂಜಿನಿಯರುಗಳು ಬಹಳ ಕ್ರಮಬದ್ಧವಾಗಿ ಪ್ರಯೋಗಾಲ ಯಗಳಲ್ಲಿ ಸಂಶೋಧನೆಗಳನ್ನು ನಡೆಸಲು ಆರಂಭಿಸಿದ್ದರಿಂದ, ಕ್ರಮೇಣ ಬೇರೆ ಬೇರೆ ವ್ಯಕ್ತಿಗಳು ಅಲ್ಲಲ್ಲಿ ನಡೆಸುತ್ತಿದ್ದ ಸಂಶೋಧನೆಗಳಿಗೆ ಪ್ರಾಮುಖ್ಯತೆ ಕಡಿಮೆಯಾಯಿತು.

ಈ ಎಲ್ಲ ಬದಲಾವಣೆಗಳಿಂದ ಅತ್ಯಂತ ಹೆಚ್ಚಿನ ಪ್ರಯೋಜನ ಪಡೆದದ್ದು ಜರ್ಮನಿ. ಯಾಕೆಂದರೆ ಜರ್ಮನಿಯಲ್ಲಿ ಇಂಥ ಸಿದ್ಧಾಂತಗಳಲ್ಲಿ ತರಬೇತಿ ಹಾಗೂ ಕುಶಲತೆ ಪಡೆದ ಬಹಳಷ್ಟು ಜನ ದೊರಕುತ್ತಿದ್ದರು. ಆದ್ದರಿಂದಲೇ ಮೊದಲನೆಯ ಮಹಾಯುದ್ಧ ಆರಂಭವಾಗುವ ವೇಳೆಗೆ ಜರ್ಮನಿಯೊಂದೇ ಎಲ್ಲಾ ಕಡೆಗಳಿಗೆ ಕೈಗಾರಿಕೆಗಳಿಗೆ ಬೇಕಾದ ರಾಸಾಯನಿಕಗಳನ್ನು ಪೂರೈಸುತ್ತಿತ್ತು. ಇಷ್ಟೇ ಅಲ್ಲ ಜರ್ಮನಿಯ ವಿದ್ಯುತ್ ಕೈಗಾರಿಕೆಗಳು ತಮ್ಮ ಕುಶಲತೆ ಮತ್ತು ದಕ್ಷತೆಯಿಂದ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದವು. ಜರ್ಮನಿ ಯಲ್ಲಿ ಗೊತ್ತಾದ ಉದ್ದೇಶಗಳಿಗಾಗಿ ಅವಿಷ್ಕಾರಗಳನ್ನು ಮಾಡಬೇಕಾದ ಅಗತ್ಯ ಉಂಟಾಗಿದ್ದು ಇಪ್ಪತ್ತನೆಯ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳ ಕಾಲ ದಲ್ಲಿ ಮಾತ್ರ, ಅದಕ್ಕಿಂತ ಮುಂಚೆ ಅಲ್ಲ.

ಹೀಗೆ ಕೈಗಾರಿಕೆಗಳು ಹೆಚ್ಚುತ್ತಾ ಹೋದಂತೆ ಹಳೆಯ ತಾಂತ್ರಿಕ ವಿಧಾನಗಳಲ್ಲಿ ಮತ್ತು ತಯಾರಿಕೆಯ ತಂತ್ರಜ್ಞಾನದಲ್ಲಿ ಮೂಲಭೂತ ಬದಲಾವಣೆಗಳು ಉಂಟಾದವು. ಇದರಲ್ಲಿ ಅತ್ಯಂತ ಮಹತ್ವದ ಬದಲಾವಣೆ ಯಾವುದೆಂದರೆ ಉತ್ಪಾದನಾ ತಂತ್ರಜ್ಞಾನ ಹಾಗೂ ಉತ್ಪಾದಿಸಿದ ವಸ್ತುಗಳಲ್ಲಿ ಆದ ಸುಧಾರಣೆ. ಇದು ಇನ್ನೊಂದು ರೀತಿಯಲ್ಲಿ ಕೆಲಸಗಾರರ ಕಾರ್ಯಕ್ಷಮತೆಯಲ್ಲಿಯೂ ಸುಧಾರಣೆ ತಂದಿತು. ಅದು ಹೇಗೆಂದರೆ ಪ್ರತಿಯೊಬ್ಬ ಕೆಲಸಗಾರನೂ ಒಂದು ನಿಯಮಿತ ಸಮಯ ಹಾಗೂ ನಿಯಮಿತ ವೇಗದಲ್ಲಿ ವಸ್ತುಗಳನ್ನು ಉತ್ಪಾದಿಸುವ ಕ್ರಮವನ್ನು ಅರಿತುಕೊಳ್ಳಬೇಕಾಯಿತು. ಇದರಿಂದ ಕೈಗಾರಿಕೆಯ ಒಟ್ಟು ಕೆಲಸ ಕಾರ್ಯಗಳು ಸುಗಮವಾಗಿ ನೆರವೇರುತ್ತಿದ್ದವು. ಯಾವುದೇ ಕಾರಣಕ್ಕಾಗಿ ಕೆಲಸ ಮಾಡುವ ಮನುಷ್ಯರಿಂದ ಅಥವಾ ಉತ್ಪಾದನೆಗೆ ಬೇಕಾದ ವಸ್ತುಗಳಿಂದ ಕೆಲಸ ಸ್ಥಗಿತಗೊಂಡರೆ ಅದರಿಂದ ಬಹಳ ಹಾನಿ ಉಂಟಾಗುತ್ತಿತ್ತು. ಆದ್ದರಿಂದ ಹೇರಳವಾದ ಪ್ರಮಾಣದಲ್ಲಿ ಕಚ್ಚಾವಸ್ತುಗಳು, ಬಂಡವಾಳ ಮತ್ತು ಕೆಲಸಗಾರರನ್ನು ಸಂಗ್ರಹಿಸಿಟ್ಟು ಕೊಳ್ಳಲಾಗುತ್ತಿತ್ತು. ಇವುಗಳಲ್ಲಿ ಯಾವುದರ ಕೊರತೆ ಉಂಟಾದರೂ ಇಡೀ ಕಾರ್ಖಾನೆ ಸ್ಥಗಿತಗೊಳ್ಳುತ್ತಿತ್ತು. ಇಷ್ಟಕ್ಕೂ ಮೀರಿ ಕೆಲಸ ಸ್ಥಗಿತಗೊಂಡರೆ ಆದ ಹಾನಿಯನ್ನು ತುಂಬಿ ಕೊಳ್ಳಲಿಕ್ಕಾಗಿ ಎಲ್ಲ ವಸ್ತುಗಳು ಸರಿಯಾದ ಪ್ರಮಾಣದಲ್ಲಿ ದೊರಕುತ್ತಿದ್ದ ಸಂದರ್ಭದಲ್ಲಿ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲಾಗುತ್ತಿತ್ತು. ಇಂಥ ತ್ವರಿತಗತಿಯ ಉತ್ಪಾದನೆಯಿಂದ ಹಳೆಯ ಕರಕುಶಲ ಕಲೆಗಳು ಮೂಲೆ ಗುಂಪಾದವು. ಹಳೆಯ ವಿಧಾನಗಳನ್ನು ಮಾತ್ರ ಅರಿತಿದ್ದ ಕುಶಲಕರ್ಮಿಗಳಿಗೆ ಅಗ್ಗದ ದರದಲ್ಲಿ ಯಂತ್ರಗಳ ಸಹಾಯದಿಂದ ಸಾಮೂಹಿಕವಾಗಿ ತಯಾರಾದ ವಸ್ತುಗಳ ಜೊತೆ ಸ್ಪರ್ಧಿಸಲು ಆಗಲಿಲ್ಲ.

ಆದ್ದರಿಂದ ಕೈಗಾರಿಕಾ ಕ್ರಾಂತಿಯ ಎದ್ದು ಕಾಣುವ ಲಕ್ಷಣಗಳು ಯಾವುದೆಂದರೆ ಹೆಚ್ಚು ಶಕ್ತಿ, ಕಚ್ಚಾವಸ್ತುಗಳು, ಹೆಚ್ಚು ಉತ್ಪಾದನೆ, ನಷ್ಟ, ಸಾರಿಗೆ, ಗುಮಾಸ್ತರು, ಗ್ರಾಹಕರು, ಮಾರಾಟಗಾರರು, ಯಥೇಚ್ಛ ಬಂಡವಾಳವಿರುವ ಉದ್ಯಮಗಳು ಮತ್ತು ಬಹಳ ಸಂಖ್ಯೆಯ ಕೆಲಸಗಾರರು ಹಾಗೂ ಕಾರ್ಮಿಕರು. ಈ ಕ್ಷೇತ್ರದಲ್ಲಿ ರೈಲುಮಾರ್ಗಗಳನ್ನು ಅಭಿವೃದ್ದಿಪಡಿಸಿದ್ದರಿಂದ ಬೇರೆ ಎಲ್ಲ ರೀತಿಯ ರಸ್ತೆಸಾರಿಗೆ ವಿಧಾನಗಳು ಹೆಸರಿಲ್ಲದಂತಾದವು. ರೈಲುಮಾರ್ಗಗಳನ್ನು ಆರಂಭಿಸಿದ್ದರಿಂದ ದೇಶದ ಒಳಭಾಗಗಳಿಗೆ ತಲುಪಲು ಸಾಧ್ಯವಾಯಿತು ಮತ್ತು ಅಪಾರ ಪ್ರಮಾಣದಲ್ಲಿ ಕಚ್ಚಾವಸ್ತುಗಳಾದ ಕಬ್ಬಿಣದ ಅದಿರು ಮತ್ತು ಕಲ್ಲಿದ್ದಲನ್ನು ದೂರದ ಪ್ರದೇಶಗಳಿಗೆ ಸಾಗಿಸಲು ಸಾಧ್ಯವಾಯಿತು.

ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆದ ಕೈಗಾರಿಕಾ ಯುಗದಲ್ಲಿ ಸಂಪರ್ಕ ಮಾಧ್ಯಮ ಗಳು ಮಹತ್ವದ ಪಾತ್ರ ವಹಿಸಿದವು. ಬ್ರಿಟನ್ನಿನ ‘‘ದಿ ಪಬ್ಲಿಕ್ ಪೆನ್ನಿ ಪೋಸ್ಟ್’’ (೧೮೪೦) ನಿಂದಾಗಿ ಆಧುನಿಕ ಅಂಚೆ ವ್ಯವಸ್ಥೆಯು ಆರಂಭಗೊಂಡಿತು. ೧೮೩೭ರಲ್ಲಿ ವಿದ್ಯುತ್ ಟೆಲಿಗ್ರಾಫ್ ವಿಧಾನವನ್ನು ಕಂಡುಹಿಡಿಯಲಾಯಿತು. ಇದು ಅತ್ಯಂತ ಕಡಿಮೆ ದರದಲ್ಲಿ ದೊರಕುತ್ತಿದ್ದುದರಿಂದ ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿ ಬಹಳ ಬೇಗ ಹರಡಿತು. ಸಂಪರ್ಕ ಸಾಧನಗಳ ಅಭಿವೃದ್ದಿಯಿಂದ ಶರವೇಗದಲ್ಲಿ ಸುದ್ದಿಗಳ ವಿನಿಯಮವಾಗಿ ೧೮೫೦ರ ನಂತರ ಅಸ್ತಿತ್ವಕ್ಕೆ ಬಂದ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚಾಯಿತು. ಜನಗಳು ಬೇರೆ ಬೇರೆ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಪತ್ರಿಕೆಗಳ ಪುಟಗಳಲ್ಲಿ ವ್ಯಕ್ತಪಡಿಸುತ್ತಿದ್ದುದರಿಂದ ರಾಜಕೀಯ ನಾಯಕರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತಿತ್ತು. ಕೆಲವೊಮ್ಮೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪತ್ರಿಕೆಗಳು ಸಹಾಯಕಾರಿಯೂ ಆಗಿದ್ದವು. ಆದ್ದರಿಂದ ಸಂಪರ್ಕ ಮಾಧ್ಯಮಗಳ ಬೆಳವಣಿಗೆಯು ರಾಜಕೀಯ ಚಟುವಟಿಕೆಗಳನ್ನು ಸಹ ಪ್ರಭಾವಿಸಿತು.

ಕೈಗಾರಿಕಾ ಕ್ರಾಂತಿಯ ಪರಿಣಾಮಗಳು

ಕೈಗಾರಿಕಾ ಕ್ರಾಂತಿಯಿಂದ ಮುಖ್ಯವಾಗಿ ಪಾಶ್ಚಿಮಾತ್ಯ ದೇಶಗಳ ಸಂಪತ್ತು ಅಭಿವೃದ್ದಿ ಯಾಯಿತು. ಜನರ ಸ್ವಚ್ಛತೆಯ ಮಟ್ಟ, ಆರೋಗ್ಯ ಮತ್ತು ಸೌಕರ್ಯಗಳ ವಿಷಯದಲ್ಲಿ ಆಮೂಲಾಗ್ರ ಅಭಿವೃದ್ದಿಯಾಯಿತು. ಆರಂಭದಲ್ಲಿ ನಗರಗಳು, ಕೈಗಾರಿಕಾ ಪ್ರದೇಶಗಳು ಬಹಳ ವೇಗದಿಂದ ಬೆಳೆದು ಅಲ್ಲಿ ಕೂಲಿಕಾರರು, ಕಾರ್ಮಿಕರು ಕಿಕ್ಕಿರಿದ ಸಂಖ್ಯೆಯಲ್ಲಿ ತುಂಬಿದ್ದರಿಂದ ಕೆಲವೊಂದು ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಂಡವು. ವೇಗದಿಂದ ಬೆಳೆಯುತ್ತಿದ್ದ ಹೊಸ ಸಾಮಾಜಿಕ ವ್ಯವಸ್ಥೆಯ ಜೊತೆ ಸರಿಸಾಟಿಯಾಗಲು ಪಾರಂಪರಿಕ ಸಂಸ್ಥೆಗಳಿಗೆ ಸಾಧ್ಯವಿರಲಿಲ್ಲ. ಇದು ಒಂದು ಅರ್ಥದಲ್ಲಿ ಮಾರ್ಕ್ಸ್‌ನ ಸಿದ್ಧಾಂತವಾದ ಶೋಷಣೆಯನ್ನು ವಿರೋಧಿಸಲು ದುಡಿಯುವ ವರ್ಗದ ಕ್ರಾಂತಿಯನ್ನು ಸಾಧ್ಯವಾಗಿಸಿತು.

೧೮೪೮-೪೯ರ ನಂತರ ಹಲವಾರು ಸಾಮಾಜಿಕ ಆವಿಷ್ಕಾರಗಳು ಔದ್ಯೋಗಿಕ ಸಮಾಜದ ಸಮಸ್ಯೆಗಳನ್ನು ಹೆಚ್ಚಿಸಿದವು. ೧೮೪೦ರ ದಶಕದಲ್ಲಿ ನಗರ ಪೋಲೀಸ್ ವ್ಯವಸ್ಥೆಯ ಸ್ಥಾಪನೆಯಾಯಿತು. ಇದರಷ್ಟೇ ಮುಖ್ಯವಾಗಿ ಚರಂಡಿ ವ್ಯವಸ್ಥೆ, ಕಸವನ್ನು ಸಂಗ್ರಹಿಸಿ ಬೇರೆ ಕಡೆ ಸಾಗಿಸುವ ವ್ಯವಸ್ಥೆ, ಪಾರ್ಕುಗಳು, ಆಸ್ಪತ್ರೆಗಳು, ಆರೋಗ್ಯ ಮತ್ತು ಅಪಘಾತ ವಿಮಾ ಯೋಜನೆಗಳು, ಪಬ್ಲಿಕ್ ಸ್ಕೂಲುಗಳು, ಕಾರ್ಮಿಕ ಸಂಘಟನೆಗಳು, ಅನಾಥಾಶ್ರಮಗಳು, ಧರ್ಮಶಾಲೆಗಳು, ಜೈಲುಗಳು ಮತ್ತು ಹಲವಾರು ಉದಾರ ಸಂಘಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

ಎರಡನೆಯದಾಗಿ ಕೈಗಾರಿಕಾ ಕ್ರಾಂತಿಯಿಂದ ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚಳ ಉಂಟಾಯಿತು. ಯಾಕೆಂದರೆ ವೈದ್ಯಕೀಯ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳು, ಸಾರ್ವಜನಿಕ ಆರೋಗ್ಯ, ಆಹಾರ ಪದಾರ್ಥಗಳ ಸರಬರಾಜಿನಲ್ಲಿ ಆದ ಅಭಿವೃದ್ದಿ ಇತ್ಯಾದಿಗಳ ಕಾರಣದಿಂದ ಜನರ ಜೀವನ ಸ್ಥಿತಿ ಸುಧಾರಿಸಿತ್ತು. ಹಾಗೆಯೇ ಜನರ ಮರಣದ ಪ್ರಮಾಣವೂ ಕಡಿಮೆಯಾಗಿತ್ತು.

ಬಹಳ ಕಡಿಮೆ ಕಾಲದಲ್ಲಿಯೇ ಪಶ್ಚಿಮ ಯೂರೋಪಿನ ಕೈಗಾರಿಕಾ ಕ್ರಾಂತಿಯು ಫ್ರೆಂಚ್ ಕ್ರಾಂತಿಯು ಪ್ರತಿಪಾದಿಸಿದ ಉದಾರವಾದಿ ಮತ್ತು ಆಧುನೀಕರಣದ ತತ್ವಗಳನ್ನೇ ಎತ್ತಿಹಿಡಿಯಿತು ಮತ್ತು ಖಾಸಗಿ ಆಸ್ತಿಯನ್ನು ರಾಜ್ಯದ ಹಕ್ಕಿನಿಂದ ರಕ್ಷಿಸಿತು. ಆಸ್ತಿಯನ್ನು ಹೊಂದುವುದು ವೈಯಕ್ತಿಕ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯ, ಭವಿಷ್ಯದಲ್ಲಿ ಲಾಭದ ನಿರೀಕ್ಷೆ ಮತ್ತು ಬಂಡವಾಳವನ್ನು ಹೊಸ ರೀತಿಯ ಹಾಗೂ ಭರವಸೆ ಇಲ್ಲದ ಉದ್ಯಮಗಳಲ್ಲಿ ವಿನಿಯೋಗಿಸುವುದಕ್ಕೆ ಅಗತ್ಯ ಎಂದು ಭಾವಿಸಲಾಗಿತ್ತು. ಆದ್ದರಿಂದ ಯೂರೋಪಿನಲ್ಲಿ ಕೈಗಾರಿಕಾ ಕ್ರಾಂತಿಯು ಬಂಡವಾಳಶಾಹಿ ಸ್ವರೂಪದ್ದಾಗಿತ್ತು. ಈ ಮಧ್ಯೆ ಕೈಗಾರಿಕಾ ಕ್ರಾಂತಿಯ ಕಾರಣದಿಂದ ಯೂರೋಪ್ ಖಂಡವು ಪ್ರಪಂಚದ ಬೇರೆಲ್ಲ ಭಾಗಗಳಿಗಿಂತ ಬಲಿಷ್ಠವಾಯಿತು. ಇದರಿಂದಾಗಿ ಇಡೀ ಪ್ರಪಂಚವನ್ನು ವಸಾಹತುಶಾಹಿಯ ರೂಪದಲ್ಲಿ ಯೂರೋಪ್ ತನ್ನ ಹತೋಟಿಯಲ್ಲಿಟ್ಟುಕೊಂಡಿತು. ಇದಾದ ನಂತರ ಇಪ್ಪತ್ತನೆಯ ಶತಮಾನದ ವೇಳೆಗೆ ಬೇರೆಲ್ಲ ರಾಷ್ಟ್ರಗಳು ಪಾಶ್ಚಿಮಾತ್ಯ ದೇಶಗಳಿಗೆ ಸರಿಸಮಾನವಾಗಬೇಕೆಂಬ ಹಂಬಲದಿಂದ ತಮ್ಮಲ್ಲಿಯೂ ಬಹಳ ಬೇಗ ಕೈಗಾರಿಕೀಕರಣದ ಪ್ರಕ್ರಿಯೆಗೆ ಚಾಲನೆ ನೀಡಿದವು ಮತ್ತು ಜನರ ಜೀವನ ಮಟ್ಟವನ್ನು ಸುಧಾರಿಸಲು ತೀವ್ರ ಪ್ರಯತ್ನ ನಡೆಸಿದವು.

ಈ ಕಾರಣದಿಂದ ಇಡೀ ಪಾಶ್ಚಿಮಾತ್ಯ ಜಗತ್ತಿನಲ್ಲಿ ಹೊಲದಿಂದ ಕಾರ್ಖಾನೆಗೆ, ಹಳ್ಳಿಯಿಂದ ನಗರಗಳಿಗೆ ಪಲ್ಲಟ ಹೊಂದುವ ಸ್ಥಿತಿ ಉಂಟಾಯಿತು. ಇದರ ಪರಿಣಾಮವಾಗಿ ಜನರ ಜೀವನ ಶೈಲಿಯಲ್ಲಿಯೂ, ನವಶಿಲಾಯುಗದಿಂದ ಒಂದು ಹೊಸ ಬಗೆಯ ಜೀವನ ಕ್ರಮಕ್ಕೆ ಬದಲಾಗುವ ಅಗತ್ಯ ಕಂಡುಬಂತು. ೧೮೩೫ರವರೆಗೆ ಇಂಗ್ಲೆಂಡಿನಲ್ಲಿ ನಗರಗಳಿಗೆ ಹೋಗಿ ನೆಲೆಸುವ ವಿಷಯದ ಬಗ್ಗೆ ಯಾವುದೇ ನಿಯಮಿತ ಕಾನೂನು ಇರಲಿಲ್ಲ. ಇಂಗ್ಲೆಂಡಿನ ನಗರ ವ್ಯವಸ್ಥೆಯು ಪ್ರಷ್ಯಾ ಅಥವಾ ಫ್ರಾನ್ಸ್‌ಗಿಂತಲೂ ಹಿಂದುಳಿದ ಸ್ಥಿತಿಯಲ್ಲಿತ್ತು. ಮಧ್ಯಕಾಲದ ಸ್ವರೂಪದ ಹೊರತಾಗಿ ಈ ನಗರಗಳಿಗೆ ಯಾವುದೇ ರೀತಿಯ ಅಸ್ತಿತ್ವ ಇರಲಿಲ್ಲ. ಅಲ್ಲಿ ಸರಿಯಾದ ಅಧಿಕಾರಿಗಳು, ತೆರಿಗೆಯನ್ನು ವಸೂಲು ಮಾಡುವ ವಿಧಾನಗಳು ಮತ್ತು ಕಾನೂನನ್ನು ರೂಪಿಸುವ ಅಧಿಕಾರಿಗಳು ಯಾವುದೂ ಸರಿಯಾದ ಕ್ರಮದಲ್ಲಿ ಇರಲಿಲ್ಲ. ಆದ್ದರಿಂದ ಮ್ಯಾಂಚೆಸ್ಟರ್ ಮತ್ತು ಅಂತಹ ಇತರ ಕೈಗಾರಿಕಾ ನಗರಗಳಿಗೆ ವೇಗದಿಂದ ಆಗುತ್ತಿದ್ದ ನಗರೀಕರಣದ ಸಮಸ್ಯೆಗಳು, ಪೋಲೀಸ್ ರಕ್ಷಣೆ, ನೀರು, ಚರಂಡಿ ವ್ಯವಸ್ಥೆ ಮತ್ತು ಕಸವನ್ನು ವ್ಯವಸ್ಥಿತವಾಗಿ ಬೇರೆಡೆಗೆ ಸಾಗಿಸಬೇಕಾದಂತಹ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂದು ತಿಳಿಯಲಿಲ್ಲ. ಜನ ನಗರಗಳಿಗೆ ವಲಸೆ ಹೋಗಿದ್ದರಿಂದ ಸರಿಯಾಗಿ ನಿರ್ಮಿಸಿದ ಮತ್ತು ಒತ್ತೊತ್ತಾಗಿ ಒಂದರ ಪಕ್ಕ ಒಂದು ಕಟ್ಟಿದ ಮನೆಗಳು ಇತ್ಯಾದಿಗಳಿಂದ ಗಂಭೀರವಾದ ವಸತಿ ಸಮಸ್ಯೆಯೂ ಉಂಟಾಯಿತು.

ಈ ಸಂದರ್ಭದಲ್ಲಿ ನುರಿತ ಕೆಲಸಗಾರರಿಗೆ ಒಮ್ಮೊಮ್ಮೆ ಕೆಲಸವೇ ಸಿಕ್ಕುತ್ತಿರಲಿಲ್ಲ, ಸಿಕ್ಕರೂ ಅತ್ಯಂತ ಕಡಿಮೆ ಕೂಲಿ ದೊರೆಯುತ್ತಿತ್ತು. ಎಲ್ಲಾ ಕೆಲಸಗಳಲ್ಲಿ ಹೆಂಗಸರು ಮತ್ತು ಮಕ್ಕಳಿಗೆ ಹೆಚ್ಚಿನ ಆದ್ಯತೆ ದೊರೆಯಿತು. ಎಲ್ಲವೂ ಯಂತ್ರಗಳ ಸಹಾಯದಿಂದ ನಡೆಯುತ್ತಿದ್ದರಿಂದ ಮನುಷ್ಯರ ಅಗತ್ಯ ಬಹಳ ಕಡಿಮೆ ಇತ್ತು. ಇಂತ ಸಂದರ್ಭದಲ್ಲಿ ಹೆಂಗಸರು, ಮಕ್ಕಳನ್ನು ಬಹಳ ಸುಲಭವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದಾಗಿತ್ತು. ಅವರಿಂದ ಶೋಷಣೆಗೆ ಯಾವ ವಿರೋಧವೂ ಬರುವಂತಿರಲಿಲ್ಲ. ಹದಿನಾಲ್ಕು ಗಂಟೆಗಳ ದೀರ್ಘ ದುಡಿಮೆ, ಕೆಟ್ಟ ವಾತಾವರಣದಲ್ಲಿ ಕೆಲಸ ಮತ್ತು ಕಡಿಮೆ ಬಿಡುವು ಇವುಗಳು ಹತ್ತೊಂಬತ್ತನೆಯ ಶತಮಾನದ ಕೂಲಿಕಾರರ ನಿತ್ಯದ ಅನುಭವಗಳಾಗಿದ್ದವು. ಇದರೊಂದಿಗೆ ಕೆಲಸವು ಅತ್ಯಂತ ಕಷ್ಟದಾಯಕವಾಗಿದ್ದು ಕೆಲಸಗಾರನಲ್ಲಿ ಒಂದು ಬಗೆಯ ಪರಕೀಯ ಭಾವನೆಯನ್ನು ಹುಟ್ಟಿಸುತ್ತಿತ್ತು. ಕೂಲಿಕಾರರು ಮತ್ತು ಕಾರ್ಮಿಕ ವರ್ಗದ ಜನ ಕೈಗಾರಿಕಾ ಕ್ರಾಂತಿಯ ಆರಂಭದ ದಿನಗಳಲ್ಲಿ ಸಂಘಟಿತರಾಗದೇ ಇದ್ದುದರಿಂದ ಕಡಿಮೆ ವೇತನ ಪಡೆಯುವುದು ಕೈಗಾರಿಕೀಕರಣ ಪ್ರಕ್ರಿಯೆಯ ಭಾಗವೇ ಆಗಿತ್ತು.

ಮುಕ್ತ ವ್ಯಾಪಾರ ಸಿದ್ಧಾಂತವನ್ನು ಸರ್ಕಾರವು ವ್ಯಾಪಾರದ ವ್ಯವಹಾರಗಳಲ್ಲಿ ಅಡ್ಡ ಬರದಂತೆ ತಡೆಯಲು ಅಳವಡಿಸಿಕೊಳ್ಳಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ಉದಾರವಾದ ಮತ್ತು ಸಮಾಜವಾದದಂತಹ ಹೊಸ ಸಿದ್ಧಾಂತಗಳು ಹುಟ್ಟಿಕೊಂಡವು. ಈ ಸಿದ್ಧಾಂತಗಳು ಆರ್ಥಿಕ ಕ್ಷೇತ್ರಗಳಲ್ಲಿ ಆದ ಬದಲಾವಣೆಗಳನ್ನು ವಿವರಿಸಲು ಯತ್ನಿಸಿದವು. ಹಾಗೆಯೇ ಆಗಿನ ಕೆಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಕ್ಕಾಗಿ ಮತ್ತು ಆರ್ಥಿಕ ಬದಲಾವಣೆಗಳಿಗೆ ಅನುಗುಣವಾಗಿ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರುವುದಕ್ಕಾಗಿ ಈ ಸಿದ್ಧಾಂತಗಳು ರೂಪುಗೊಂಡವು. ಆದ್ದರಿಂದ ಈ ಕೈಗಾರಿಕಾ ಕ್ರಾಂತಿಯ ಅವಧಿಯ ಎರಡನೆಯ ಭಾಗದಲ್ಲಿ ಇಡೀ ಪ್ರಪಂಚವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಶಕ್ತಿಗಳನ್ನು ಹತೋಟಿಗೆ ತರಲು ಬಹಳ ವ್ಯವಸ್ಥಿತವಾದ ಪ್ರಯತ್ನಗಳು ನಡೆದವು. ತಮ್ಮ ಪ್ರಭಾವದಿಂದ ಸಮಾಜದ ಕೆಲವು ವರ್ಗಗಳನ್ನು ನಿರಂತರವಾಗಿ ರೂಪಿಸುತ್ತಿದ್ದ ಶಕ್ತಿಗಳನ್ನು ನಿಯಂತ್ರಿಸಲು ಈ ಹೊಸ ಚಿಂತನೆಗಳು ಸಹಾಯಕವಾದವು. ಐವತ್ತು ವರ್ಷಗಳಲ್ಲಿ ಅಂದರೆ ೧೮೩೨ರ ಮಹಾ ಸುಧಾರಣೆ ಮಸೂದೆ ಬರುವವರೆಗೆ, ಸಾಮಾಜಿಕ ಪರಿಣಾಮಗಳ ದೃಷ್ಟಿಯಲ್ಲಿ ಕೈಗಾರಿಕಾ ಕ್ರಾಂತಿಯು ಬಹಳ ಅಪಾಯಕಾರಿಯಾಗಿತ್ತು. ಅದು ನಗರ ಗ್ರಾಮಗಳೆರಡರಲ್ಲೂ ಹಳೆಯ ಇಂಗ್ಲಿಷ್ ಸಮಾಜದ ಧರ್ಮ ನಿಷ್ಠೆಯನ್ನು ಹಾಗೂ ಅದರ ಸ್ವರೂಪವನ್ನು ನಾಶಪಡಿಸಿತು. ಈ ಅಂಶಗಳನ್ನು ಅದು ಹೊಸ ಯಂತ್ರ ನಾಗರಿಕತೆಯ ಸಮಾಜಕ್ಕೆ ರಕ್ಷಿಸಿ ತರಲಾಗಲಿಲ್ಲ. ಸರ್ಕಾರವು ಎಲ್ಲ ರೀತಿಯ ಕಾಯಿದೆ ಬದ್ಧ ಹಾಗೂ ರಾಜಕೀಯ ಬದಲಾವಣೆಗಳಿಗೆ ‘‘ಜಾಕೋಬಿಯನ್’’ ಎಂಬ ಹಣೆಪಟ್ಟಿ ಹಚ್ಚಿ ನಿರ್ಬಂಧ ಹೇರಿತು ಮತ್ತು ಆರ್ಥಿಕ ಕ್ರಾಂತಿಗೆ ಮಾತ್ರ ಪ್ರಾಮುಖ್ಯತೆ ನೀಡಿತು. ಇದರ ಪರಿಣಾಮವಾಗಿ ೧೮೩೨ರ ಹೊತ್ತಿಗೆ ಜನಗಳ ರಾಜಕೀಯ, ಸ್ಥಳೀಯ ಆಡಳಿತ, ಶೈಕ್ಷಣಿಕ ಅಗತ್ಯಗಳು ಕೊನೆಗೆ ಆರೋಗ್ಯ ಸಂಬಂಧಿ ಅಗತ್ಯಗಳನ್ನು ಪೂರೈಸಲೂ ಸಹ ಯಾವುದೇ ಅವಕಾಶ ಇರಲಿಲ್ಲ. ಇವರಲ್ಲಿ ಬಹಳಷ್ಟು ಜನರಿಗೆ ಕನಿಷ್ಟ ಉಡಲು ಬಟ್ಟೆ, ತಿನ್ನಲು ಆಹಾರವೂ ಸಿಗುತ್ತಿರಲಿಲ್ಲ. ಕಾನೂನು ವ್ಯವಸ್ಥೆ ಇತ್ಯಾದಿಗಳು ಒಂದು ದಿಕ್ಕಿನಲ್ಲಿ ಚಲಿಸಿದರೆ, ಆಗಿನ ಸಮಾಜ ಅದರ ಆರ್ಥಿಕ ಸ್ಥಿತಿಗತಿಗಳು ಇನ್ನೊಂದು ದಿಕ್ಕಿನಲ್ಲಿ ಚಲಿಸುತ್ತಿದ್ದವು.

ಹೊಸ ಪ್ರಪಂಚವನ್ನು ಕಟ್ಟುವ ಮತ್ತು ಒಂದು ಹೊಸ ರೀತಿಯ ಸಮಾಜವನ್ನು ಕಟ್ಟುವ ಪ್ರಯತ್ನಗಳು ಈ ಅವಧಿಯ ಎರಡನೆಯ ಭಾಗದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿವೆ.

 

ಪರಾಮರ್ಶನ ಗ್ರಂಥಗಳು

೧. ವಿಲಿಯಂ ಮ್ಯಾಕನೀಲ್ ಹೆಚ್., ೧೯೭೧. ಎ ವರ್ಲ್ಡ್ ಹಿಸ್ಟರಿ, ಓ.ಯು.ಪಿ, ಯು.ಎಸ್.ಎ.

೨. ಕೊಲ್ಟನ್ ಜೋಯೆಲ್ ಮತ್ತು ಪಾಮರ್ ಆರ್., ೧೯೭೮. ಎ ಹಿಸ್ಟರಿ ಆಫ್ ವರ್ಲ್ಡ್, ಯು.ಎಸ್.ಎ., ಆಲ್‌ಫ್ರೆಡ್ ನಾಫ್.

೩. ಎರಿಕ್ ಹಾಬ್ಸ್‌ವಾಮ್, ೧೯೯೨. ದಿ ಏಜ್ ಆಫ್ ರೆವಲ್ಯೂಷನ್, ೧೭೮೯೧೮೪೮, ಕಲ್ಕತ್ತಾ.