ಎರಡನೆಯ ಮಹಾಯುದ್ಧ ಕೊನೆಗೊಂಡ ನಂತರದ ಅರ್ಧಶತಮಾನದ ಅವಧಿಯಲ್ಲಿ ವಿಶ್ವವು ನಾಟಕೀಯವಾಗಿ ಬಹಳಷ್ಟು ಬದಲಾಯಿತು. ವಿಶ್ವದ ರಾಜಕೀಯ ರೂಪು-ರೇಶೆಗಳು ಸಂಪೂರ್ಣವಾಗಿ ಬದಲಾದವು. ಈ ಅವಧಿಯಲ್ಲಿ ವಿಶ್ವದ ಸಾಮ್ರಾಜ್ಯಶಾಹಿ ದಬ್ಬಾಳಿಕೆ ಹಾಗೂ ಅದರೊಂದಿಗೆ ಯುರೋಪ್ ಖಂಡದ ಸಾರ್ವಭೌಮತೆ ಕೂಡ ವಿನಾಶ ವನ್ನು ಕಂಡಿತು. ಸುಮಾರು ಐವತ್ತು ರಾಷ್ಟ್ರಗಳು ಸೇರಿ ೧೯೪೫ರಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಿದವು. ಸೋವಿಯತ್ ಒಕ್ಕೂಟದ ಪತನ ಹಾಗೂ ಏಷ್ಯಾ ಮತ್ತು ಆಫ್ರಿಕಾ ಖಂಡಗಳ, ಇದುವರೆಗೆ ವಸಾಹತುಗಳಾಗಿದ್ದ ರಾಷ್ಟ್ರಗಳಿಗೆ ಸ್ವಾತಂತ್ರ್ಯ – ಈ ಕಾರಣಗಳಿಂದಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಇಂದು ೧೯೦ರ ಗಡಿಯನ್ನು ಮುಟ್ಟಿದೆ.

ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ, ಜಪಾನ್ ಹಾಗೂ ಇಟಲಿ ರಾಷ್ಟ್ರಗಳು ಸೋಲನ್ನುಂಡವು. ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ತಮ್ಮ ಬೇರೆ ಬೇರೆ ಖಂಡಗಳಲ್ಲಿದ್ದ ಸಾಮ್ರಾಜ್ಯಗಳನ್ನು ಕಳೆದುಕೊಂಡವು. ಇದರಿಂದಾಗಿ ಕಳೆದ ಐವತ್ತು ವರ್ಷಗಳಿಂದ ವಿಶ್ವಶಕ್ತಿಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಸೋವಿಯತ್ ಒಕ್ಕೂಟ(ರಷ್ಯಾ)ಗಳು ಮೆರೆದವು; ವಿಶ್ವದ ರಾಜಕೀಯ, ಆರ್ಥಿಕ ಹಾಗೂ ಸೈನಿಕ ವ್ಯವಸ್ಥೆ ಹಾಗೂ ಬೆಳವಣಿಗೆಗಳ ಮೇಲೆ ಆದ್ಭುತ ನಿಯಂತ್ರಣ ಸಾಧಿಸಿದವು. ಅಲ್ಲದೆ ಯುದ್ಧದ ನಂತರ ಅಸ್ತಿತ್ವಕ್ಕೆ ಬಂದ ಎರಡು ಶಕ್ತಿ ಬಣಗಳು ನಾಯಕರಾದವು.

ಅಮೆರಿಕಾ ಸಂಯುಕ್ತ ಸಂಸ್ಥಾನವು ಪಾಶ್ಚಿಮಾತ್ಯ ಬಣದ(ವೆಸ್ಟರ್ನ್ ಬ್ಲಾಕ್) ನಾಯಕನಾದರೆ, ಸೋವಿಯತ್ ಒಕ್ಕೂಟವೂ ಪೌರ್ವಾತ್ವ ಬಣದ(ಈಸ್ಟರ್ನ್ ಬ್ಲಾಕ್) ನಾಯಕನಾಯಿತು. ಪಾಶ್ಚಿಮಾತ್ಯ ಬಣದಲ್ಲಿ ಪಶ್ಚಿಮ ಯುರೋಪ್, ಉತ್ತರ ಅಮೆರಿಕಾ ಮತ್ತು ಪೆಸಿಫಿಕ್ ರಾಷ್ಟ್ರಗಳು ಸೇರಿಕೊಂಡವು. ಈ ರಾಷ್ಟ್ರಗಳು ತಮ್ಮನ್ನು ‘‘ಮುಕ್ತ ಪ್ರಪಂಚ’’(ಫ್ರೀ ವರ್ಲ್ಡ್) ಎಂದು ಕರೆದುಕೊಂಡವು. ಈ ಬಣವನ್ನು ಬಂಡವಾಳಶಾಹಿ ಬಣವಂತಲೂ (ಕ್ಯಾಪಿಟಲಿಸ್ಟ್ ಬ್ಲಾಕ್) ಕರೆಯಲಾಗುತ್ತದೆ. ಸೋವಿಯತ್ ಒಕ್ಕೂಟವು ನಾಯಕನಾದ ಬಣವನ್ನು ಸಮಾಜವಾದಿ ಬಣವೆಂದೂ ಕರೆಯುತ್ತಾರೆ. ಪೂರ್ವ ಯುರೋಪಿನ ಹಲವು ರಾಷ್ಟ್ರಗಳು ಎರಡನೆಯ ಮಹಾಯುದ್ಧದ ನಂತರ, ಸೋವಿಯತ್ ಒಕ್ಕೂಟದ ಪ್ರಭಾವದಿಂದಾಗಿ ಕಮ್ಯೂನಿಸ್ಟ್ ಸರ್ಕಾರ ಹಾಗೂ ರಾಜ್ಯವ್ಯವಸ್ಥೆಯನ್ನು ಒಪ್ಪಿಕೊಂಡಿತು. ಆದ್ದರಿಂದ ಸಹಜವಾಗಿಯೇ ಪೂರ್ವ ಯೂರೋಪ್, ಸೋವಿಯತ್ ರಷ್ಯಾದ ತೆಕ್ಕೆಗೆ ಬಿದ್ದಿತು.

ಈ ಮೇಲಿನ ಎರಡು ಶಕ್ತಿ ಬಣಗಳಲ್ಲಾಗಲಿ ಅಥವಾ ರಾಷ್ಟ್ರಗಳ ಗುಂಪಿನಲ್ಲಾಗಲಿ ಹಲವಾರು ಬದಲಾವಣೆಗಳಾದರೂ ಕೂಡ, ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಸೋವಿಯತ್ ಒಕ್ಕೂಟಗಳ -ವಿಶ್ವದ ಅಗ್ರಮಾನ್ಯ ಮಿಲಿಟರಿ ಶಕ್ತಿಗಳಾಗಿ -ಸ್ಥಾನದಲ್ಲಿ ೧೯೮೦ರ ದಶಕದವರೆಗೆ ಯಾವುದೇ ಬದಲಾವಣೆಗಳಾಗಲಿಲ್ಲ.

ಶೀತಲ ಸಮರ ಮತ್ತು ನಂತರದ ಬೆಳವಣಿಗೆಗಳು (೧೯೪೫೧೯೯೦)

ಎರಡನೆಯ ಮಹಾಯುದ್ಧದ ಅಂತ್ಯವಾದಲ್ಲಿಂದ ೧೯೯೦ರ ದಶಕದವರೆಗೆ, ಸುಮಾರು ನಲವತ್ತೈದು ವರ್ಷಗಳ ಅವಧಿಯಲ್ಲಿ ನಡೆದ ವಿವಿಧ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಸಮಾಜವಾದಿ ಹಾಗೂ ಬಂಡವಾಳಶಾಹಿ ಎಂಬುದಾಗಿ ವಿಂಗಡಿಸಲಾಗಿದೆ. ಈ ಎರಡೂ ಬಣಗಳು ತಮ್ಮ ಸೈದ್ಧಾಂತಿಕ ಗಡಿಯನ್ನು ಮೀರಿ ಹಲವಾರು ಮುಖ್ಯ ಬದಲಾವಣೆಗಳಿಗೊಳಗಾಯಿತು. ಮುಂದುವರಿದ ಬಂಡವಾಳಶಾಹಿ ವ್ಯವಸ್ಥೆಯಿದ್ದ ರಾಷ್ಟ್ರಗಳಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳಿಗೆ ಸರ್ವಮಾನ್ಯ ಮನ್ನಣೆಯಿತ್ತು. ಇದಕ್ಕೆ ಸ್ವಲ್ಪ ಮಟ್ಟಿಗೆ ಕಾರಣ ಕಾರ್ಮಿಕ ಸಂಘಗಳು ಹಾಗೂ ಸಮಾಜ ವಾದಿ ಚಳವಳಿಗಳು. ಇಂದು ಬಹಳಷ್ಟು ಮುಂದುವರಿದ ಬಂಡವಾಳಶಾಹಿ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರಗಳು ಜನೋಪಯೋಗಿ ನೀತಿಗಳನ್ನು ಅನುಸರಿಸುತ್ತಿವೆ. ಇದರಿಂದಾಗಿ ಎರಡನೇ ಮಹಾಯುದ್ಧದ ಪೂರ್ವದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಉಂಟುಮಾಡಿದ್ದ ಕಷ್ಟಕಾರ್ಪಣ್ಯಗಳು ಕಡಿಮೆಯಾಗಿದೆ.

ಪೂರ್ವ ಯುರೋಪಿನಲ್ಲಿ ಹಾಗೂ ತನ್ನಲ್ಲಿ ಸೋವಿಯತ್ ಒಕ್ಕೂಟ ಕಟ್ಟಿದ ಸಮಾಜ ವಾದಿ ವ್ಯವಸ್ಥೆಯನ್ನು, ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವಾದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆ ಎಂಬುದಾಗಿ ಭಾವಿಸಲಾಗಿತ್ತು. ಈ ಸಮಾಜವಾದಿ ವ್ಯವಸ್ಥೆ ಪತನಗೊಳ್ಳುವ ಮೊದಲು ಹಲವು ರೀತಿಯಲ್ಲಿ ಬದಲಾವಣೆಗೊಳಗಾಯಿತು. ಹೊಸದಾಗಿ ಸಮಾಜವಾದಿ ವ್ಯವಸ್ಥೆಯಿಂದ ಹೊರಬಂದ ರಾಷ್ಟ್ರಗಳು ತಮ್ಮ ರಾಜ್ಯಗಳ ಪುನರ್ ಸಂಘಟನೆಯಲ್ಲಿ ತೊಡಗಿವೆ. ಪ್ರಪಂಚದ ಇತರೆಡೆಯ ರಾಷ್ಟ್ರಗಳು ವಸಾಹತುಶಾಹಿ ಆಡಳಿತದಿಂದ ಬಿಡುಗಡೆ ಹೊಂದಿ ಸ್ವತಂತ್ರರಾಗಿದ್ದರೂ ಬಡತನ ಹಾಗೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿವೆೆ. ಪ್ರಪಂಚದ ಅರ್ಥವ್ಯವಸ್ಥೆ ಅಸಮಾನತೆಯಿಂದ ಕೂಡಿದ್ದು, ಇದು ಈ ರಾಷ್ಟ್ರಗಳ ಮುಂದುವರಿದ ಆರ್ಥಿಕ ದಿವಾಳಿತನಕ್ಕೆ ಕಾರಣವಾಗಿದೆ. ಹೀಗಾಗಿ ಈ ರಾಷ್ಟ್ರಗಳನ್ನು ಒಟ್ಟಾಗಿ ‘‘ಮೂರನೆಯ ವಿಶ್ವ’’ ಎಂದು ಕರೆಯಲಾಗುತ್ತಿದೆ.

ಎರಡನೆಯ ವಿಶ್ವಯುದ್ಧದ ನಂತರ ಸುಮಾರು ಐವತ್ತು ವರ್ಷಗಳ ಅವಧಿಯಲ್ಲಿ ಪ್ರಪಂಚದಲ್ಲಿ ಅಚ್ಚರಿಯನ್ನುಂಟು ಮಾಡುವಷ್ಟು ತಾಂತ್ರಿಕ ಬದಲಾವಣೆಗಳಾಗಿವೆ. ತಂತ್ರ ಕ್ಷೇತ್ರದಲ್ಲಾದ ಈ ಬದಲಾವಣೆಗಳು ಮುಖ್ಯವಾಗಿ ಅಭಿವೃದ್ದಿ ಹೊಂದಿದ್ದ ಬಂಡವಾಳಶಾಹಿ ರಾಷ್ಟ್ರಗಳ ಅರ್ಥವ್ಯವಸ್ಥೆಯ ಸ್ವರೂಪವನ್ನು ಬದಲಾಯಿಸಿವೆ. ಇದರಿಂದಾಗಿ ಅಮೆರಿಕಾ, ಜಪಾನ್ ಮತ್ತು ಜರ್ಮನಿ ರಾಷ್ಟ್ರಗಳು ಪ್ರಮುಖ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮಿವೆ. ಇದರ ಇನ್ನೊಂದು ಮುಖ್ಯ ಪರಿಣಾಮವೆಂದರೆ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಹಾಗೂ ‘ಮೂರನೆಯ ವಿಶ್ವ’ದ ನಡುವಣ ಅಂತರ ಹೆಚ್ಚಿದೆ ಹಾಗೂ ಹೆಚ್ಚುತ್ತಿದೆ.

ಎರಡನೆಯ ವಿಶ್ವಯುದ್ಧದ ನಂತರದ ಕಾಲವು ಬಿಕ್ಕಟ್ಟು ವೈಷಮ್ಯ ಹಾಗೂ ಹೋರಾಟದ ಕಾಲವಾಗಿತ್ತು. ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ಬಣಗಳ ನಡುವಿನ ತಿಕ್ಕಾಟ ಬಹು ವರ್ಷಗಳ ಕಾಲ ನಡೆದು ಅದನ್ನು ‘ಶೀತಲ ಸಮರ’ ಎಂದು ಕರೆಯಲಾಗಿದೆ. ಇದರೊಡನೆ ವಿನಾಶಕಾರಿ ಶಸ್ತ್ರಾಸ್ತ್ರಗಳ ತಯಾರಿಕೆಯ ಪೈಪೋಟಿಯೂ ಸೇರಿಕೊಂಡು ಬಿಕ್ಕಟ್ಟು ತೀವ್ರವಾಯಿತು. ಇದರ ಪರಿಣಾಮವಾಗಿ ಎರಡೂ ಶಕ್ತಿಬಣಗಳಿಗೆ ಸೇರಿದ ಕೆಲವು ರಾಷ್ಟ್ರಗಳ ಮಧ್ಯೆ ಯುದ್ಧಗಳು ನಡೆದವು. ಆದರೆ ಈ ಯುದ್ಧಗಳು ಸ್ಥಳೀಯ ಯುದ್ಧ ಗಳಾಗಿ ಮುಂದುವರಿದು ಅಂತ್ಯಗೊಂಡದ್ದು ಮಾನವ ಜನಾಂಗದ ಅದೃಷ್ಟವೆನ್ನಬಹುದು. ವಿಶ್ವವು ಹಲವು ಬಾರಿ ಈ ರೀತಿಯ ತಿಕ್ಕಾಟಗಳಿಂದಾಗಿ ಮತ್ತೊಂದು ವಿಶ್ವಯುದ್ಧದ ಅಂಚಿಗೆ ಬಂದಿತ್ತೆಂದರೆ ಅಚ್ಚರಿಯಾಗದಿರದು.

ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಸ್ವತಂತ್ರ ರಾಷ್ಟ್ರಗಳ ಉದಯ ಯುದ್ಧೋತ್ತರ ಯೂರೋಪಿನ ಒಂದು ಮುಖ್ಯ ಲಕ್ಷಣ. ಈ ರಾಷ್ಟ್ರಗಳು ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳೊಂದಿಗೆ ಸೇರಿ ಪ್ರಪಂಚದ ರಾಜಕೀಯದಲ್ಲಿ ಸ್ವತಂತ್ರ ಪಾತ್ರವಹಿಸಲು ನಿರ್ಧರಿಸಿದವು. ಶೀತಲ ಸಮರದ ಕಾಲದಲ್ಲಿ ಯಾವುದೇ ಶಕ್ತಿ ಬಣಕ್ಕೆ ಸೇರಲು ನಿರಾಕರಿಸಿದ ಈ ರಾಷ್ಟ್ರಗಳಿಂದಾಗಿ ಶಾಂತಿಯ ವಾತಾವರಣ ಸ್ವಲ್ಪ ಮಟ್ಟಿಗೆ ಪ್ರಾಪ್ತಿಯಾಯಿತು. ಈ ರಾಷ್ಟ್ರಗಳು ಒಟ್ಟಾಗಿ ಆಲಿಪ್ತ ಆಂದೋಳನವನ್ನು ಪ್ರಾರಂಭಿಸಿದವು. ಅಲಿಪ್ತ ಆಂದೋಳನವು ಪ್ರಪಂಚದಲ್ಲಿ ಬಿಕ್ಕಟ್ಟನ್ನು ಕಡಿಮೆ ಮಾಡಿತಲ್ಲದೆ ವಸಾಹತುಶಾಹಿ ಸಾಮ್ರಾಜ್ಯವಾದ ಹಾಗೂ ಜನಾಂಗ ವಿಭೇದ ನೀತಿ ಮುಂತಾದವುಗಳ ವಿನಾಶಕ್ಕೆ ಮಹತ್ತರ ಕಾಣಿಕೆ ನೀಡಿತು; ಅಭಿವೃದ್ದಿಯ ವಿಷಯವನ್ನು ಒಂದು ಅಂತರರಾಷ್ಟ್ರೀಯ ವಿಷಯವನ್ನಾಗಿ ಮಾಡಿತು.

೧೯೬೦ರ ದಶಕದಿಂದ ಆಗಿಂದಾಗ್ಗೆ ಅಲ್ಲಲ್ಲಿ ಶಾಂತಿಪರ್ವದ ಕಾಲಗಳು ಬಂದಿದೆ ಹಾಗೂ ಸ್ವಲ್ಪ ಮಟ್ಟಿಗಿನ ಬಿಕ್ಕಟ್ಟಿನ ಶಮನ ಉಂಟಾಗಿದೆ. ಆದರೆ ೧೯೯೦ರ ದಶಕದ ಪ್ರಪಂಚ ಖಂಡಿತವಾಗಿಯೂ ಶೀತಲ ಸಮರೋತ್ತರ ಪ್ರಪಂಚ ಎಂದರೆ ತಪ್ಪಾಗಲಾರದು. ಇದು ನಿಜವಾಗಿಯೂ ಶಾಂತ, ಬಿಕ್ಕಟ್ಟು-ರಹಿತ, ಪ್ರಪಂಚದ ಆರಂಭದ ಚಿನ್ಹೆಯೇ ಎಂದು ಹೇಳಲು ಸ್ವಲ್ಪ ಕಷ್ಟವಾದರೂ ಶೀತಲ ಯುದ್ಧದ ಎಲ್ಲಾ ಲಕ್ಷಣಗಳು ಮಾಯವಾಗಿವೆ ಎಂದರೆ ತಪ್ಪಾಗಲಾರದು. ಭಯಾನಕ ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಸಂಗ್ರಹ ನಿಂತು, ನಿಶಸ್ತ್ರೀಕರಣ ನಡೆದು ನಿಜವಾದ ಅಂತರರಾಷ್ಟ್ರೀಯ ಸಹಕಾರದ ಮೂಲಕ ಯುದ್ಧಗಳನ್ನು ತಡೆಹಿಡಿದರೆ ಮಾತ್ರ ಶಾಂತಿಯನ್ನು ಚಿರವಾಗಿ ಸ್ಥಾಪಿಸಬಹುದು.

ಶೀತಲಯುದ್ಧ

ಎರಡನೆಯ ಮಹಾಯುದ್ಧ ಪ್ರಗತಿಯಲ್ಲಿರುವಾಗಲೇ ಮಿತ್ರರಾಷ್ಟ್ರಗಳಾದ ಬ್ರಿಟನ್, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟಗಳು ಆಗಿಂದಾಗ್ಗೆ ಸಮ್ಮೇಳನವನ್ನು ನಡೆಸಿ ಯುದ್ಧ ನಂತರದ ಯುರೋಪಿನ ಪರಿಸ್ಥಿತಿ, ಹಾಗೂ ವಿಮೋಚನೆಗೊಂಡ ರಾಷ್ಟ್ರಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದವು. ಟೆಹರಾನ್, ಯಾಲ್ಟಾ ಹಾಗೂ ಪೋಟ್ಸ್ ಡ್ಯಾಂ ಮುಂತಾದ ಸ್ಥಳಗಳಲ್ಲಿ ವಿಚಾರ ವಿನಿಮಯಗಳು ನಡೆದವು. ೧೯೪೭ರ ವೇಳೆಗೆ ಮಾತುಕತೆಗಳು ಮುಗಿದು ಶತ್ರುರಾಷ್ಟ್ರಗಳಾದ ಇಟಲಿ, ರುಮೇನಿಯಾ, ಬಲ್ಗೇರಿಯಾ, ಹಂಗೇರಿ ಮತ್ತು ಫಿನ್‌ಲೆಂಡ್‌ಗಳೊಡನೆ ಮಿತ್ರರಾಷ್ಟ್ರಗಳು ಒಪ್ಪಂದಗಳನ್ನು ಮಾಡಿಕೊಂಡವು. ೧೯೫೫ರಲ್ಲಿ ಆಸ್ಟ್ರೀಯ ದೇಶದೊಡನೆ ಒಪ್ಪಂದ ವೇರ್ಪಟ್ಟು ಮಿತ್ರ ರಾಷ್ಟ್ರಗಳ ಸೈನ್ಯ ಅಲ್ಲಿಂದ ಹಿಂದೆ ಸರಿಯಿತು. ಜರ್ಮನಿ ಮತ್ತು ಜಪಾನ್ ದೇಶಗಳಿಗೆ ಸಂಬಂಧಿಸಿದಂತೆ ಸೋವಿಯತ್ ಒಕ್ಕೂಟ ಮತ್ತು ಉಳಿದ ಮಿತ್ರ ರಾಷ್ಟ್ರಗಳ ನಡುವೆ ಯಾವುದೇ ಒಪ್ಪಂದ ಆಗುವುದು ಕಷ್ಟವಾಯಿತು. ಆದರೂ ಪಾಶ್ಚಿಮಾತ್ಯ ರಾಷ್ಟ್ರಗಳು ಜಪಾನ್‌ನೊಡನೆ, ಸೋವಿಯತ್ ಒಕ್ಕೂಟದ ಪ್ರತಿಭಟನೆಯ ಮಧ್ಯೆ, ಒಪ್ಪಂದವೊಂದಕ್ಕೆ ಸಹಿ ಹಾಕಿದವು. ಆದರೆ ಜರ್ಮನಿಯ ಭವಿಷ್ಯದ ವಿಷಯದಲ್ಲಿ ಈ ಎರಡು ಗುಂಪುಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯಗಳುಂಟಾಗಿ ಅದು ನಿರಂತರ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿತು. ಈ ರೀತಿ ಯುದ್ಧ ನಂತರ, ಯುದ್ಧಕಾಲೀನ ಒಕ್ಕೂಟ ಗಳು ಮುರಿದು ಬಿದ್ದು, ಶೀತಲಸಮರದ ಕಾಲ ಅಥವಾ ‘‘ಶಸ್ತ್ರಾಸ್ತ್ರ ಶಾಂತಿ’’ ಪ್ರಾರಂಭವಾಯಿತು.

ಶೀತಲ ಸಮರದ ಆರಂಭ

ಇತಿಹಾಸಕಾರರು ಶೀತಲ ಸಮರದ ಮೂಲವನ್ನು ೧೯೧೭ರ ರಷ್ಯಾದ ಬೋಲ್ಷೆವಿಕ್ ಕ್ರಾಂತಿಗೆ ಕೊಂಡೊಯ್ಯುತ್ತಾರೆ. ರಷ್ಯಾದಲ್ಲಿ ಕ್ರಾಂತಿಯಾದ ನಂತರ ಸ್ಥಾಪಿತವಾದ ಸೋವಿಯತ್ ಸರ್ಕಾರವನ್ನು ನಾಶಮಾಡಲು ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಸೈನ್ಯವನ್ನು ಕಳುಹಿಸಿದವು. ಆದರೆ ವಿದೇಶಿ ಮಧ್ಯಪ್ರವೇಶ ವಿಫಲವಾಗಿ ಅದು ೧೯೨೦ರಲ್ಲಿ ಕೊನೆಗೊಂಡಿತು. ಅನಂತರ ಈ ರಾಷ್ಟ್ರಗಳು ಸೋವಿಯತ್ ಒಕ್ಕೂಟದ ಮೇಲೆ ರಾಜತಾಂತ್ರಿಕ ಬಹಿಷ್ಕಾರವನ್ನು ವಿಧಿಸಿದವು. ಸೋವಿಯತ್ ದೇಶದ ಅಸ್ತಿತ್ವವನ್ನು ಮನ್ನಿಸಿ ಅದರೊಡನೆ ರಾಜತಾಂತ್ರಿಕ ಸಂಬಂಧವೇರ್ಪಡಿಸಲು ಇತರ ರಾಷ್ಟ್ರಗಳಿಗೆ ಹಲವಾರು ವರ್ಷಗಳೇ ಹಿಡಿಯಿತು. ಫ್ಯಾಸಿಸ್ಟ್ ಶಕ್ತಿಗಳು ಜರ್ಮನಿಯಲ್ಲಿ ಮೇಲುಗೈ ಪಡೆದ ನಂತರ ಜರ್ಮನಿಯ ಆಕ್ರಮಣಕಾರಿ ನೀತಿಯು ಸೋವಿಯತ್ ಒಕ್ಕೂಟದತ್ತ ಕೇಂದ್ರೀಕರಿಸಬಹು ದೆಂದು ಪಾಶ್ಚಿಮಾತ್ಯ ಶಕ್ತಿಗಳು ಯೋಜನೆ ಹಾಕಿದವು ಮತ್ತು ಶತ್ರುರಾಷ್ಟ್ರಗಳ ಪಕ್ಷ ಗಳೊಂದಿಗೆ ಹೊಂದಾಣಿಕೆಯ ನೀತಿಯನ್ನು ಅನುಸರಿಸಲು ಪ್ರಾರಂಭಿಸಿದವು. ಸೋವಿಯತ್ ಒಕ್ಕೂಟದ ಮೇಲೆ ನಡೆಯುವ ಆಕ್ರಮಣವನ್ನು ತಡೆಯಲು ಅದರೊಡನೆ ಯಾವುದೇ ಒಪ್ಪಂದಕ್ಕೆ ಬರಲು ಅವು ನಿರಾಕರಿಸಿದವು.

ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಮೇಲೆ ಜರ್ಮನಿಯ ಆಕ್ರಮಣದ ನಂತರ, ಸೋವಿಯತ್ ಒಕ್ಕೂಟ – ಬ್ರಿಟನ್ – ಅಮೆರಿಕಾ ದೇಶಗಳ ಒಕ್ಕೂಟ ರಚನೆಯಾಯಿತು. ಈ ಒಕ್ಕೂಟದಿಂದಾಗಿಯೇ ಅಂತಿಮವಾಗಿ ಜರ್ಮನಿ ಮತ್ತು ಶತ್ರು ಪಕ್ಷಗಳ ಸೋಲಾಯಿತು. ಮಿತ್ರರಾಷ್ಟ್ರಗಳ ಒಕ್ಕೂಟವು ಯುದ್ಧ ಚಾಲ್ತಿಯಲ್ಲಿರು ವಾಗಲೂ, ಆಂತರಿಕ ಬಿಕ್ಕಟ್ಟುಗಳಿಂದ ಮುಕ್ತವಾಗಿರಲಿಲ್ಲ. ಯುರೋಪಿನ ಭವಿಷ್ಯದ ಬಗ್ಗೆ ಅಮೆರಿಕಾ-ಬ್ರಿಟನ್‌ಗಳು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳ ಬಗ್ಗೆ ಸೋವಿಯತ್ ಒಕ್ಕೂಟಕ್ಕೆ ಭಿನ್ನಾಭಿಪ್ರಾಯವಿತ್ತು. ಉದಾಹರಣೆಗೆ ಪೋಲೆಂಡಿನ ಬಗ್ಗೆ ಎರಡೂ ಪಂಗಡಕ್ಕೂ ಭಿನ್ನಾಭಿಪ್ರಾಯ ವಿತ್ತು. ಇಂತಹ ಕೆಲವು ಸಂಶಯಗಳನ್ನು ಟೆಹರಾನ್, ಯಲ್ಟಾ ಮತ್ತು ಪೋಟ್ಸ್ ಡ್ಯಾಂ ಸಭೆಗಳಲ್ಲಿ ಪರಿಹರಿಸಿಕೊಂಡರೂ ಸೋವಿಯತ್ ಒಕ್ಕೂಟದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಿಗಿದ್ದ ಸಂಶಯಗಳು ಹಾಗೆಯೇ ಉಳಿದವು. ಸೋವಿಯತ್ ಒಕ್ಕೂಟವು ಜರ್ಮನಿ ಹಾಗೂ ಪೂರ್ವ ಯೂರೋಪಿನಲ್ಲಿ ಗಳಿಸಿದ ವಿಜಯವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅತೃಪ್ತ ಭಾವನೆಗಳನ್ನು ಉಂಟುಮಾಡಿತು. ಸೋವಿಯತ್ ಸೈನ್ಯವು ಬರ್ಲಿನ್‌ನ್ನತ್ತ ಮುನ್ನುಗ್ಗುತ್ತಿದ್ದಂತೆ ಬ್ರಿಟನ್ ಎಚ್ಚರಗೊಂಡಿತ್ತಲ್ಲದೆ, ಅದನ್ನು ತಡೆಯಲು ಬ್ರಿಟನ್ನಿನ ಪ್ರಧಾನಿ ಚರ್ಚಿಲ್ ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟ್‌ರ ಮೇಲೆ ಒತ್ತಡವನ್ನು ತಂದಿದ್ದರು.

ಪೂರ್ವ ಯುರೋಪಿನಲ್ಲಿ ಕಮ್ಯುನಿಸ್ಟ್ ಸರ್ಕಾರಗಳು

ಪೂರ್ವ ಯುರೋಪಿನಲ್ಲಿಯ ಘಟನಾವಳಿಗಳು ಪಶ್ಚಿಮ ಯುರೋಪಿನ ರಾಷ್ಟ್ರಗಳಿಗೆ ಕಮ್ಯುನಿಸಂನ ಬಗ್ಗೆ ಯುದ್ಧ ಪೂರ್ವ ಭೀತಿಗಳನ್ನು ಪುನರ್ಜೀವಗೊಳಿಸಿತು. ಯಾಲ್ಟಾ ರಂಗ ಸಭೆಯಲ್ಲಿ ಬ್ರಿಟನ್, ಅಮೆರಿಕಾ ಹಾಗೂ ಸೋವಿಯತ್ ಒಕ್ಕೂಟಗಳು ಒಟ್ಟಾಗಿ ‘‘ವಿಮೋಚಿತ ಯುರೋಪಿನ ಬಗ್ಗೆ ಘೋಷಣೆ’’ಯೊಂದನ್ನು ಹೊರಡಿಸಿತು. ಈ ಘೋಷಣೆಯ ಪ್ರಕಾರ ಮೇಲಿನ ಮೂರು ಮಿತ್ರ ರಾಷ್ಟ್ರಗಳು ವಿಮೋಚಿತವಾದ ಯುರೋಪಿನ ರಾಷ್ಟ್ರಗಳಲ್ಲಿ ಮುಕ್ತ ಚುನಾವಣೆಗಳ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಬೇಕಿತ್ತು. ಸೋವಿಯತ್ ಸೈನ್ಯ ಶಕ್ತಿಯಿಂದ ಬಿಡುಗಡೆ ಹೊಂದಿದ ರಾಷ್ಟ್ರಗಳಲ್ಲಿ ಕಮ್ಯೂನಿಸ್ಟರೇ ಮೇಲುಗೈ ಸಾಧಿಸಿ ಕೆಲವೇ ವರ್ಷಗಳಲ್ಲಿ ಸರ್ಕಾರ ಸ್ಥಾಪಿಸಿದರು. ಪೋಲೆಂಡ್, ಜೆಕೊಸ್ಲೋವಾಕಿಯಾ, ಬಲ್ಗೇರಿಯಾ, ರುಮೇನಿಯಾ, ಹಂಗೇರಿ, ಯುಗೋಸ್ಲಾವಿಯಾ ಹಾಗೂ ಅಲ್ಬೇನಿಯಾ ರಾಷ್ಟ್ರಗಳಲ್ಲಿ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಕಮ್ಯೂನಿಸ್ಟ್‌ರ ಮೇಲುಗೈಯನ್ನು ಬಂಡವಾಳಶಾಹಿ ರಾಷ್ಟ್ರಗಳಾದ ಬ್ರಿಟನ್ ಹಾಗೂ ಅಮೆರಿಕಾಗಳು ತಮ್ಮ ‘‘ಮುಕ್ತ ಪ್ರಪಂಚ’’ದ ಕಲ್ಪನೆಗೆ ಅಪಾಯದ ಸಂಕೇತವಾಗಿ ಭಾವಿಸಿದರು. ಜರ್ಮನಿಯಲ್ಲಿ ನಡೆದ ಬೆಳವಣಿಗೆಗಳು ಕೂಡ ಈ ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯಗಳು ಉಲ್ಬಣಗೊಳ್ಳಲು ಕಾರಣವಾಯಿತು. ನಾಲ್ಕು ಭಾಗವಾದ ಜರ್ಮನಿಯಲ್ಲಿ ಪೂರ್ವ ಭಾಗದಲ್ಲಿ ಕಮ್ಯೂನಿಸ್ಟ್ ಆಳ್ವಿಕೆಯು ಪಶ್ಚಿಮ ಜರ್ಮನಿಯಲ್ಲಿ ಪ್ರಜಾಪ್ರಭುತ್ವ ಆಳ್ವಿಕೆಯು ಅಸ್ತಿತ್ವಕ್ಕೆ ಬಂದಿತು. ಇದೇ ವೇಳೆಗೆ ಕಮ್ಯೂನಿಸ್ಟರು ಅಧಿಕಾರಕ್ಕೆ ಬರುವುದನ್ನು ತಡಯಲು ಗ್ರೀಸಿಗೆ ಅಮೆರಿಕಾ ದೇಶವು ಕೋಟ್ಯಾಂತರ ರೂಪಾಯಿಗಳನ್ನು ಚೆಲ್ಲಲು ಪ್ರಾರಂಭಿಸಿತು. ಈ ‘ಘನ’ ಕಾರ್ಯದಲ್ಲಿ ಟರ್ಕಿಯೂ ತನ್ನ ಸಹಕಾರವನ್ನು ನೀಡಿತು.

ಶೀತಲ ಸಮರದಲ್ಲಿ ಇನ್ನೊಂದು ಮುಖ್ಯ ಘಟ್ಟ ಎಂದರೆ ಗ್ರೀಸಿನಲ್ಲಿ ನಡೆದ ನಾಗರಿಕ ಕ್ಷೋಭೆ. ಕಮ್ಯೂನಿಸ್ಟರ ಪ್ರಾಬಲ್ಯವನ್ನು ಮುರಿದು ರಾಜಪ್ರಭುತ್ವದ ಮುಂದುವರಿಕೆಗೆ ಬ್ರಿಟನ್ ಮತ್ತು ಅಮೆರಿಕಾ ಪ್ರಯತ್ನಿಸಿದಾಗಿ ಈ ನಾಗರಿಕ ಕ್ಷೋಭೆ ಪ್ರಾರಂಭವಾಯಿತು. ೧೯೪೭ರಲ್ಲಿ ಬ್ರಿಟನ್ ತನ್ನ ಸೈನ್ಯವನ್ನು ಹಿಂದೆಗೆದುಕೊಂಡಿತು. ಕಮ್ಯೂನಿಸ್ಟ್‌ರ ಏಳಿಗೆ ಯನ್ನು ಹತ್ತಿಕ್ಕುವುದೇ ಮುಖ್ಯವಾದ ಉದ್ದೇಶವಾಗಿದ್ದ ಕಾರಣ ಅಮೆರಿಕಾ ಗ್ರೀಸ್‌ನ್ನು ಪ್ರವೇಶಿಸಿ ನಾಗರಿಕ ಯುದ್ಧವನ್ನು ತಡೆಗಟ್ಟುವ ಪ್ರಯತ್ನ ಮಾಡಿದಾಗ, ಅಮೆರಿಕಾ ಹಾಗೂ ಸೋವಿಯತ್ ಒಕ್ಕೂಟದ ಮಧ್ಯೆ ಶೀತಲ ಯುದ್ಧವೇ ಪ್ರಾರಂಭವಾಯಿತು.

ಟ್ರೂಮನ್ ಸಿದ್ಧಾಂತ

೧೯೪೫-೪೭ರ ಅವಧಿಯನ್ನು ಶೀತಲ ಸಮರದ ಆರಂಭದ ಕಾಲವೆಂದು ಪರಿಗಣಿಸುತ್ತಾರೆ. ಇದಕ್ಕೆ ಮುನ್ನುಡಿ ಬರೆದವನು ವಿನ್‌ಸ್ಟನ್ ಚರ್ಚಿಲ್. ಅಲ್ಲದೆ ಅವನು ಪೂರ್ವ ಯುರೋಪಿನ ರಾಷ್ಟ್ರಗಳು ಹಾಗೂ ಪಶ್ಚಿಮ ಯುರೋಪಿನ ಮಧ್ಯೆ ‘ಕಬ್ಬಿಣದ ಪರದೆ’ ಸೃಷ್ಟಿಯಾಗಿರುವುದನ್ನು ಹೇಳುತ್ತಾನೆ. ಅಲ್ಲದೆ ಪೂರ್ವ ಯುರೋಪಿನ ರಾಷ್ಟ್ರಗಳಲ್ಲಿ ಕಮ್ಯುನಿಸ್ಟ್ ಸರ್ಕಾರಗಳನ್ನು ಅಸ್ತಿತ್ವಕ್ಕೆ ತಂದು ಅವುಗಳ ಮೇಲೆ ಹತೋಟಿ ಸಾಧಿಸಿದ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು ಅವನು ಬ್ರಿಟನ್ ಹಾಗೂ ಅಮೆರಿಕಾ ಗಳ ನಡುವೆ ರಾಜಕೀಯ ಹಾಗೂ ಸೈನಿಕ ಒಕ್ಕೂಟದ ರಚನೆಗೆ ಕರೆಕೊಡುತ್ತಾನೆ. ಈ ವೇಳೆಗೆ ಗ್ರೀಸ್ ಸರ್ಕಾರಕ್ಕೆ ಕಮ್ಯುನಿಸ್ಟರ ವಿರುದ್ಧವಾಗಿ ಹೋರಾಡಲು ಬಲ ನೀಡಲು ಅದಕ್ಕೆ ೪೦೦ ಮಿಲಿಯನ್ ಡಾಲರ್ ಮೊತ್ತದ ಸೈನಿಕ ಹಾಗೂ ಆರ್ಥಿಕ ಸಹಾಯ ನೀಡಲು ಅಮೆರಿಕಾದ ಅಧ್ಯಕ್ಷ ಟ್ರೂಮನ್ ನಿರ್ಧರಿಸಿದನು. ಇದನ್ನು ‘‘ಟ್ರೂಮನ್ ಸಿದ್ಧಾಂತ’’ ಎಂದು ಕರೆಯುತ್ತಾರೆ. ಟ್ರೂಮನ್ ಸಿದ್ಧಾಂತವು, ‘ಕಮ್ಯುನಿಸ್ಟ್ ಸಿದ್ಧಾಂತವು ‘‘ಮುಕ್ತಪ್ರಪಂಚ’’ದ ವ್ಯವಸ್ಥೆಗೆ ದೊಡ್ಡ ಬೆದರಿಕೆ’ ಎಂದು ಸಾರಿತು. ಅಲ್ಲದೆ ಕಮ್ಯೂನಿಸಂನ ಪ್ರಸಾರದ ತಡೆಯೇ ಇದರ ಮುಖ್ಯ ಗುರಿಯಾಯಿತು. ಈ ಸಿದ್ಧಾಂತ ಮುಂದೆ ಅಮೆರಿಕಾದ ವಿದೇಶಾಂಗ ನೀತಿಯ ಮೂಲತತ್ವವಾಗಿ, ಸುಮಾರು ನಲವತ್ತು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. ಶೀತಲ ಸಮರವು ಬಿಗಡಾಯಿಸಲು ಟ್ರೂಮನ್ ಸಿದ್ದಾಂತವು ‘ಅಪಾರ’ ಕೊಡುಗೆಯನ್ನಿತ್ತಿತ್ತೆಂದರೆ ಅತಿಶಯೋಕ್ತಿಯಾಗಲಾರದು.

ಬರ್ಲಿನ್ ದಿಗ್ಭಂದನ ಹಾಗೂ ಜರ್ಮನಿಯ ವಿಭಜನೆ(೧೯೪೮-೪೯)ಗಳು ಶೀತಲ ಸಮರದ ಆರಂಭದ ಕಾಲಗಳಲ್ಲಿ ನಡೆದ ಕೆಲವು ಮುಖ್ಯ ಘಟನೆಗಳು. ಬರ್ಲಿನ್ ದಿಗ್ಭಂದನ ವಿಶ್ವವನ್ನು ಇನ್ನೊಂದು ಮಹಾಯುದ್ಧದ ಅಂಚಿಗೆ ಕೊಂಡೊಯ್ದಿತ್ತು. ಈ ಸಮಯದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಸೈನಿಕ ಒಕ್ಕೂಟವೊಂದು ಅಮೆರಿಕಾದ ನಾಯಕತ್ವದಲ್ಲಿ ಸೃಷ್ಟಿಯಾಯಿತು. ೧೯೪೯ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ಹಾಗೂ ಯುರೋಪಿನ ಮುಖ್ಯ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಬಿಲ್ಜಿಯಂ, ಲುಕ್ಸೆಂಬರ್ಗ್, ಹಾಲೆಂಡ್, ನಾರ್ವೆ, ಡೆನ್ಮಾಕ್, ಪೋರ್ಚುಗಲ್, ಇಟಲಿ, ಐಲ್ಯಾಂಡ್ ಮತ್ತು ಕೆನಡಾಗಳು ಸೇರಿ ನ್ಯಾಟೋ(ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಶನ್) ಎಂಬ ಸೈನಿಕ ಒಕ್ಕೂಟವನ್ನು ಕಟ್ಟಿಕೊಂಡವು. ಈ ಒಕ್ಕೂಟದ ಮೂಲಕ ಪಾಶ್ಚಿಮಾತ್ಯ ರಾಷ್ಟ್ರಗಳು, ಯೂರೋಪಿನಲ್ಲಿ ‘‘ರಷ್ಯಾದ ವಿಸ್ತರಣೆಯನ್ನು ಹಾಗೂ ಕಮ್ಯೂನಿಸಂನ ಪ್ರಸಾರವನ್ನು ಪಡೆಯಲು ಬೃಹತ್ ಪ್ರಮಾಣದಲ್ಲಿ ಸಶಸ್ತ್ರೀಕರಣ ಹಾಗೂ ಸೈನಿಕೀಕರಣವನ್ನು ಪ್ರಾರಂಭಿಸಿದರು. ಮುಂದಿನ ಆರು ವರ್ಷಗಳಲ್ಲಿ ಅಮೆರಿಕಾವು ನ್ಯಾಟೋ ರಾಷ್ಟ್ರಗಳಿಗೆ ಬೃಹತ್ ಸೈನಿಕ ನೆರವನ್ನು ನೀಡಿತು. ೧೯೫೨ರಲ್ಲಿ ಗ್ರೀಸ್ ಮತ್ತು ಟರ್ಕಿ ರಾಷ್ಟ್ರಗಳು ನ್ಯಾಟೋದ ಸದಸ್ಯರಾದವು.

೧೯೫೫ರಲ್ಲಿ ಪಶ್ಚಿಮ ಜರ್ಮನಿಯ ನ್ಯಾಟೋವನ್ನು ಸೇರಿಕೊಂಡಾಗ ಸೋವಿಯತ್ ಒಕ್ಕೂಟ ಹಾಗೂ ಪೂರ್ವ ಯೂರೋಪಿನ ಕಮ್ಯೂನಿಸ್ಟ್ ರಾಷ್ಟ್ರಗಳು ಒಟ್ಟಾಗಿ ತಮ್ಮದೇ ಆದ ಸೈನಿಕ ಒಕ್ಕೂಟವನ್ನು ರಚಿಸಿಕೊಂಡವು. ಅದನ್ನು ‘‘ವಾರ್ಸಾ ಒಪ್ಪಂದ’’ವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಶೀತಲ ಸಮರವು ಯುರೋಪಿನಿಂದ ಪ್ರಪಂಚದ ಇತರೇ ಭಾಗಗಳಿಗೂ ಕೂಡ ಹರಡಲಾರಂಭಿಸಿತು. ಇದೇ ಅವಧಿಯಲ್ಲಿ ಶೀತಲ ಸಮರಕ್ಕೆ ಹೊಸ ತಿರುವೊಂದನ್ನು ನೀಡಿದ ಇನ್ನೊಂದು ಅಂಶವೆಂದರೆ ಎರಡು ಶಕ್ತಿ ಬಣಗಳ ನಡುವೆ ಶಸ್ತ್ರಾಸ್ತ್ರ ಪೈಪೋಟಿ. ೧೯೪೫ರಲ್ಲಿ ಅಮೆರಿಕಾವು ಅಣುಬಾಂಬನ್ನು ಸ್ಫೋಟಿಸಿ ಪರಮಾಣು ರಾಷ್ಟ್ರವಾಯಿತು. ಇದಾದ ನಾಲ್ಕು ವರ್ಷಗಳ ನಂತರ ಸೋವಿಯತ್ ಒಕ್ಕೂಟವು ನ್ಯೂಕ್ಲಿಯರ್ ಬಾಂಬನ್ನು ತಯಾರಿಸಿ ಪರೀಕ್ಷೆ ನಡೆಸಿದಾಗ ಅಮೆರಿಕಾದ ಏಕಸ್ವಾಮ್ಯಕ್ಕೆ ದಕ್ಕೆಯಾಯಿತ್ತಲ್ಲದೆ, ತೀವ್ರ ರೀತಿಯ ಶಸ್ತ್ರಾಸ್ತ್ರ ಪೈಪೋಟಿಗೆ ಅದು ಎಡೆಮಾಡಿಕೊಟ್ಟಿತು.

ಶೀತಲ ಸಮರವು ಬಿಗಡಾಯಿಸುತ್ತಿದ್ದ ಇದೇ ಸಂದರ್ಭದಲ್ಲಿ ಎರಡು ಶಕ್ತಿ ಬಣಗಳ ನಡುವೆ ಪರಸ್ಪರ ಗೂಢಚಾರಿಕೆ ಹಾಗೂ ಮಿಲಿಟರಿ ರಹಸ್ಯಗಳು ಕದಿಯಲ್ಪಡುತ್ತಿರುವ ಆರೋಪಗಳ ವಿನಿಯಮವಾಗತೊಡಗಿತು. ಕಮ್ಯೂನಿಸ್ಟ್ ಗೂಢಚಾರರು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸೇರಿಕೊಂಡು ಮಿಲಿಟರಿ ರಹಸ್ಯಗಳನ್ನು ಕದಿಯುತ್ತಿದ್ದಾರೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಸೋವಿಯತ್ ಒಕ್ಕೂಟದ ಮೇಲೂ ಹಾಗೂ ಇದೇ ಆರೋಪವನ್ನು ಕಮ್ಯೂನಿಸ್ಟ್ ರಾಷ್ಟ್ರಗಳು ಬಂಡವಾಳಶಾಹಿ ರಾಷ್ಟ್ರಗಳ ಮೇಲೂ ಮಾಡತೊಡಗಿದವು. ಈ ರೀತಿ ಗೂಢಚಾರಿಕೆಯ ಹೆದರಿಕೆಯೂ ಎರಡು ಶಕ್ತಿ ಬಣಗಳ ನಡುವೆ ತೀವ್ರ ಸಂಶಯ ಹಾಗೂ ಬಿಕ್ಕಟ್ಟನ್ನುಂಟುಮಾಡಿತು.

ಶೀತಲ ಸಮರದ ತೀವ್ರ ಬಿಗಡಾಯಿಸುವಿಕೆ: ಬ್ರಿಂಕ್‌ಮ್ಯಾನ್‌ಶಿಪ್ ಹಾಗೂ ಡಿಟರೆನ್ಸ್ ಸಿದ್ಧಾಂತಗಳು

ಐವತ್ತರ ದಶಕದಲ್ಲಿ ಅಮೆರಿಕಾದ ವಿದೇಶಾಂಗ ನೀತಿಯ ಮೇಲೆ ಅಪಾರ ಪ್ರಭಾವ ಬೀರಿದವರು ಅದರ ವಿದೇಶಾಂಗ ಕಾರ್ಯದರ್ಶಿ ಜಾನ್ ಪೋಸ್ಟರ್ ಡಲ್ಲೇಸ್ (೧೯೫೩-೧೯೫೯). ಕಮ್ಯೂನಿಸಂನ ಹಾಡುವಿಕೆಯನ್ನು ತಡೆಯಲು ಅಮೆರಿಕಾವು ಅನುಸರಿಸುತ್ತಿರುವ ನೀತಿಯು ದುರ್ಬಲವಾದುದು, ಅದಕ್ಕಿಂತ ಉಗ್ರವಾದ ನೀತಿಯನ್ನು ರಷ್ಯಾದ ವಿರುದ್ಧ ಅನುಸರಿಸಬೇಕು. ಕಮ್ಯೂನಿಸ್ಟ್ ಸರ್ವಾಧಿಕಾರತ್ವದಿಂದ ರಾಷ್ಟ್ರಗಳನ್ನು ವಿಮೋಚನೆಗೊಳಿಸುವ ಉಗ್ರನೀತಿ ಅಮೆರಿಕಾದ್ದಾಗಬೇಕು ಎಂದು ಅವನು ಕರೆಕೊಡುತ್ತಾನೆ; ಕೆಲವು ಬಹಳ ಅಪಾಯಕಾರಿಯಾದ ಸಿದ್ಧಾಂತಗಳನ್ನು ಅವನು ಮುಂದಿಡುತ್ತಾನೆ. ನ್ಯೂಕ್ಲಿಯರ್ ಶಕ್ತಿಯನ್ನು ಉಪಯೋಗಿಸಿ ‘‘ಬೃಹತ್ ಪ್ರಮಾಣದಲ್ಲಿ ಇದಿರೇಟನ್ನು’’ ಕಮ್ಯೂನಿಸ್ಟರಿಗೆ ಉಣಿಸುವ ಸಿದ್ಧಾಂತ ಬೋಧಿಸುತ್ತಾನೆ. ಇನ್ನೊಂದು ಸಿದ್ಧಾಂತವೆಂದರೆ ‘‘ಬ್ರಿಂಕ್‌ಮ್ಯಾನ್ ಶಿಪ್’’. ಇದರರ್ಥ  ಸೋವಿಯತ್ ಒಕ್ಕೂಟವನ್ನು ಯುದ್ಧದ ಅಂಚಿಗೆ ತಳ್ಳಿ, ಯುದ್ಧ ವನ್ನು ಮಾಡದೆ ಸೋವಿಯತ್ ಒಕ್ಕೂಟದಿಂದ ರಿಯಾಯಿತಿಗಳನ್ನು ಸೆಳೆದುಕೊಳ್ಳುವ ತಂತ್ರ. ಇದೇ ಸಂದರ್ಭದಲ್ಲಿ ‘‘ಡಿಟರೆನ್ಸ್’’ ಸಿದ್ಧಾಂತವು ಮಹತ್ವವನ್ನು ಪಡೆದು ಪರಮಾಣು ಬಾಂಬುಗಳ ಉತ್ಪಾದನೆಗೆ ವಿವಿಧ ರಾಷ್ಟ್ರಗಳು ಪ್ರಯತ್ನಿಸುವಂತೆ ಮಾಡಿತು. ತನ್ನಲ್ಲಿ ಪರಮಾಣು ಶಕ್ತಿ ಇದ್ದಲ್ಲಿ ಇನ್ನೊಂದು ಪರಮಾಣು ರಾಷ್ಟ್ರ ತನ್ನ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ; ಏಕೆಂದರೆ ದಾಳಿ ಮಾಡಿದ ರಾಷ್ಟ್ರಕೂಡ ದಾಳಿಯನ್ನನುಭವಿಸಿದ ರಾಷ್ಟ್ರದ ಪರಮಾಣೂ ದಾಳಿಯಿಂದ ನಾಶವಾಗುವ ಸಾಧ್ಯತೆ ಇದೆ ಎಂಬ ಅಂಶ ‘‘ಡಿಟರೆಂಟ್’’(ತಡೆ) ಆಗಿ ವರ್ತಿಸುವ ಕಾರಣದಿಂದಾಗಿ ‘ಡಿಟರೆಂಟ್’ ಸಿದ್ಧಾಂತವು ಹಲವು ರಾಷ್ಟ್ರಗಳಲ್ಲಿ ಪರಮಾಣು ಶಸ್ತ್ರ ಪೈಪೋಟಿಗೆ ಎಡೆಮಾಡಿಕೊಟ್ಟಿತು. ೧೯೫೦ರ ನವೆಂಬರ್‌ನಲ್ಲಿ ಅಮೆರಿಕಾವು ಮೊದಲ ಹೈಡ್ರೋಜನ್ ಬಾಂಬನ್ನು ಪರೀಕ್ಷಿಸಿತು. ೧೯೫೩ರ ಆಗಸ್ಟ್‌ನಲ್ಲಿ ರಷ್ಯಾ ಕೂಡ ಇದರ ಪರೀಕ್ಷೆ ನಡೆಸಿತು. ೧೯೫೭ರಲ್ಲಿ ಬ್ರಿಟನ್, ಕ್ರಮೇಣ ಫ್ರಾನ್ಸ್ ಹಾಗೂ ಚೀನಾ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸಿ ‘ಡಿಟರೆಂಟ’ಗಳನ್ನು ಪಡೆದುಕೊಂಡವು.

ಇಲ್ಲಿ ನಾವು ಯೂರೋಪಿನಲ್ಲಿ ಮಾತ್ರ ಹೇಗೆ ಶೀತಲ ಸಮರ ಪ್ರಾರಂಭವಾಗಿ ವಿವಿಧ ರೀತಿಯಲ್ಲಿ ಪರಿಣಾಮಗಳನ್ನು ಬೀರಿತು ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿರುವುದರಿಂದ ಇತರೇ ಖಂಡಗಳಲ್ಲಿ ಶೀತಲ ಸಮರ ಹರಡಿದ ಬಗ್ಗೆ ಬೆಳಕು ಚೆಲ್ಲಿಲ್ಲ.