ಇಟಲಿಯ ಶರಣಾಗತಿ೧೯೪೩

ಸುಸಜ್ಜಿತ ಬ್ರಿಟಿಷ್ ಮತ್ತು ಅಮೆರಿಕನ್ ಪಡೆಗಳು ಅಮೆರಿಕಾದ ಸೇನಾಧಿಪತಿ ಜನರಲ್ ಹೋವರ್‌ನ ನೇತೃತ್ವದಲ್ಲಿ ಅಲ್ಜೀರಿಯಾದ ಸಮೀಪ ನೆಲೆಯಾದವು. ಶತ್ರು ಸೈನ್ಯವನ್ನು ಶರಣಾಗುವಂತೆ ಕೇಳಿಕೊಳ್ಳಲಾಯಿತು. ಹಾಗೆ ಉತ್ತರ ಆಫ್ರಿಕಾವು ವೈರಿಗಳಿಂದ ಮುಕ್ತವಾಯಿತು. ಬ್ರಿಟಿಷ್-ಅಮೆರಿಕನ್ ಸೈನ್ಯವು ಸಿಸಿಲಿಯನ್ನು ಆಕ್ರಮಿಸಿ ವಶಪಡಿಸಿ ಕೊಂಡವು. ಇಟಲಿಯ ಮುಖ್ಯ ಪ್ರದೇಶಗಳನ್ನು ದಾಟಿ ರೋಮಿನೆಡೆಗೆ ಸೈನ್ಯ ಬರಲಾರಂಭಿಸಿತು. ಇಟಲಿ ಶರಣಾಯಿತು. ಆದರೆ ಜರ್ಮನಿಯ ಸೈನ್ಯವು ಐದು ತಿಂಗಳು ಗಳಷ್ಟು ಕಾಲ ಪ್ರಬಲ ಪ್ರತಿರೋಧವನ್ನು ಒಡ್ಡಿತು. ಪಲಾಯನಗೈದ ಮುಸ್ಸೊಲೊನಿಯು ಫ್ಯಾಸಿಸ್ಟ್ ವಿರೋಧಿಗಳಿಂದ ದಾರುಣವಾಗಿ ಕೊಲೆಯಾದನು.

ಜರ್ಮನಿಯ ಶರಣಾಗತಿ೧೯೪೫

ಈ ನಡುವೆ, ಮಿತ್ರಕೂಟವು ದಕ್ಷಿಣ ಭಾಗದಿಂದ ಜರ್ಮನಿಯನ್ನು ಆಕ್ರಮಿಸಲು ಸಿದ್ಧವಾಗುತ್ತಿತ್ತು. ೧೯೪೪ರ ಜೂನ್ ೬ರಂದು ಜನರಲ್ ಹೋವರ್‌ನ ನೇತೃತ್ವದಲ್ಲಿ ದೊಡ್ಡ ಸೈನ್ಯ ನೋರ್ಮೆಂಡಿ ಎಂಬಲ್ಲಿ ನೆಲೆಹೂಡಿತು. ಜರ್ಮನ್ನರು ಹಿಂದಕ್ಕೆ ಸರಿದರು. ೧೯೪೪ರ ಆಗಸ್ಟ್‌ನಲ್ಲಿ ಪ್ಯಾರಿಸ್ಸನ್ನು ಮುಕ್ತಗೊಳಿಸಲಾಯಿತು. ಇದಾದ ಬಳಿಕ ಜರ್ಮನ್ನರು ಬೆಲ್ಜಿಯಂ ಹಾಗೂ ಹಾಲೆಂಡ್‌ಗಳಿಂದ ಕಾಲ್ಕಿತ್ತರು. ೧೯೪೪ರ ಕೊನೆಯಲ್ಲಿ ಮಿತ್ರ ಪಡೆಗಳು ಜರ್ಮನಿಯ ಬಹುತೇಕ ದಕ್ಷಿಣ ಭಾಗಗಳನ್ನು ವಶಪಡಿಸಿಕೊಂಡಿತ್ತು. ಈ ನಡುವೆ ರಷ್ಯನ್ ಸೈನ್ಯವು ಬರ್ಲಿನ್‌ನಲ್ಲಿ ಹೋರಾಡುತ್ತಿತ್ತು. ೧೯೪೫ರ ಮೇ ೭ರಂದು ಹಿಟ್ಲರನು ಆತ್ಮಹತ್ಯೆ ಮಾಡಿಕೊಂಡಾಗ ಜರ್ಮನಿಯು ಶರಣಾಯಿತು.

ಜಪಾನಿನ ಶರಣಾಗತಿ೧೯೪೫

ಇಟಲಿ ಮತ್ತು ಜರ್ಮನಿಗಳು ಶರಣಾಗಿದ್ದರೂ ಜಪಾನ್ ಇನ್ನೂ ಸೋಲದೆ ಯುದ್ಧದಲ್ಲಿ ನಿರತವಾಗಿತ್ತು. ಈಗ ಮಿತ್ರ ಪಕ್ಷಗಳು ಜಪಾನನ್ನು ಸೋಲಿಸುವ ಕಡೆಗೆ ಗಮನಹರಿಸಿದವು. ಬರ್ಮಾದ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ -ಭಾರತೀಯ ಪಡೆಗಳು ನಿರಂತರವಾಗಿ ಹೋರಾಡುತ್ತಿದ್ದವು. ಸೋಲೊಮೆನ್ಸ್, ಮರಿಯಾನಾ ಮತ್ತಿತರ ದ್ವೀಪಗಳು ನಾಶವಾದವು. ಕೂಡಲೇ ಶರಣಾಗುವಂತೆ ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸುವಂತೆ ಜಪಾನಿಗೆ ಅಂತಿಮ ಸೂಚನೆ ನೀಡಲಾಯಿತು. ಜಪಾನ್ ಸರಕಾರ ಈ ಮಾತನ್ನು ತಿರಸ್ಕರಿಸಿತು. ಆದ್ದರಿಂದ, ಅಮೆರಿಕಾವು ಯುದ್ಧವನ್ನು ಶೀಘ್ರವಾಗಿ ಕೊನೆ ಗೊಳಿಸಲು ಯೋಚಿಸಿ ಹಿರೋಷಿಮಾ ನಗರ ಮತ್ತು ನಾಗಸಾಕಿ ನಗರಗಳ ಮೇಲೆ ಅತ್ಯಂತ ಭೀಕರವಾದ ಅಣುಬಾಂಬುಗಳನ್ನು ಪ್ರಯೋಗಿಸಿತು. ಜಪಾನಿಯರ ಪಾಲಿಗೆ ೧೯೪೫ ಆಗಸ್ಟ್ ೬, ಮತ್ತು ೯, ದುರಂತದ ದಿನಗಳಾಗಿದ್ದವು. ಜಪಾನ್ ಮರುಮಾತಿಲ್ಲದೆ ಶರಣಾಗಬೇಕಾಯಿತು.

ದ್ವಿತೀಯ ಮಹಾಯುದ್ಧದ ಪರಿಣಾಮಗಳು

೧. ಐದು ವರ್ಷ ಮತ್ತು ಹತ್ತು ತಿಂಗಳ ಯುದ್ಧದ ಕಾರ್ಯಾಚರಣೆಯಲ್ಲಿ ಸುಮಾರು ೧೨ ಮಿಲಿಯನ್ ಸೈನಿಕರು ಮಡಿದರೆ, ೨೫ ಮಿಲಿಯನ್ ನಾಗರಿಕರು ರೋಗ ಮತ್ತು ಹಸಿವಿನಿಂದ ದಾರುಣವಾಗಿ ನರಳಿ ಸತ್ತರು. ೧,೬೦,೦೦೦ ಜನ ಜಪಾನೀಯರು ಹಿರೋಷಿಮಾ-ನಾಗಸಾಕಿಗಳ ಮೇಲೆ ಪ್ರಯೋಗಿಸಲಾದ ಅಣುಬಾಂಬಿನಿಂದ ಕೊಲ್ಲಲ್ಪ ಟ್ಟರು. ಅಮೆರಿಕಾವು ಸುಮಾರು ೩೫೦ ಬಿಲಿಯನ್ ಡಾಲರ್‌ಗಳನ್ನು ವೆಚ್ಚಮಾಡಿತು. ಇತರ ರಾಷ್ಟ್ರಗಳು ಸುಮಾರು ೧೦೦೦ ಬಿಲಿಯನ್ ಖರ್ಚು ಮಾಡಿದವು. ನಾಶದ ಪ್ರಮಾಣವನ್ನೆಲ್ಲ ಪರಿಗಣಿಸಿದರೆ ಆ ಮೊತ್ತ ಮತ್ತೊಂದು ೧೦೦೦ ಬಿಲಿಯನ್‌ಗಳಷ್ಟಾಗ ಬಹುದೆಂದು ಅಂದಾಜಿಸಲಾಗಿದೆ.

೨. ಅಸಂಖ್ಯ ನಾಗರಿಕರ ಪ್ರಾಣಗಳೊಂದಿಗೆ ಚೆಲ್ಲಾಟವಾಡಿದ, ನೈತಿಕತೆಯ ಅಧಃಪತನ ಹಾಗೂ ಯುದ್ಧಗಳ ಬಗೆಗೆ ವಿಶ್ವದ ಜನತೆ ಗಾಢ ವಿಷಾದವನ್ನು ಹೊಂದಿದವು. ಹಿರೋಷಿಮಾ, ನಾಗಸಾಕಿಗಳ ಮುಗ್ಧ ನಾಗರಿಕರ ಮೇಲೆ ಅಣುಬಾಂಬುಗಳನ್ನು ಪ್ರಯೋಗಿಸಿದ ಪಾಶವೀಕೃತ್ಯ, ಮಾನವತೆಗೆ ಹಿಂದೆಂದೂ ಬಗೆದಿರದ ಅಮಾನುಷ ಅಪರಾಧವಾಗಿತ್ತು.

೩. ಎರಡನೆಯ ಮಹಾಯುದ್ಧವು ದೇಶ ಮತ್ತು ಖಂಡಗಳ ಸ್ಥಾನಮಾನದಲ್ಲಿ ಬದಲಾವಣೆ ತಂದಿತು. ಅಗ್ರಮಾನ್ಯ ಶಕ್ತಿಗಳಾಗಿದ್ದ ಬ್ರಿಟನ್ ಮತ್ತು ಫ್ರಾನ್ಸ್‌ಗಳು ತಮ್ಮ ಸ್ಥಾನ ಕಳೆದುಕೊಂಡವು. ಯುದ್ಧದ ನಂತರದಲ್ಲಿ ಬ್ರಿಟನ್, ಜಪಾನ್‌ಗಳು ಅನೇಕ ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ಹೊಂದಿದ್ದವು.

೪. ಅಮೆರಿಕಾವು ವಿಶ್ವಶಕ್ತಿಯಾಗಿ ಹೊರಹೊಮ್ಮಿತು. ತನ್ನ ಸುವಿಶಾಲ ಸಂಪನ್ಮೂಲಗಳನ್ನು ಬಳಸಿಕೊಂಡು ಅಮೆರಿಕವೂ ಕೈಗಾರಿಕಾ ರಂಗದ ಮುಂಚೂಣಿಯಲ್ಲಿ ನಿಂತಿತು.

೫. ರಷ್ಯಾವು ಮತ್ತೊಂದು ಮುಖ್ಯ ಶಕ್ತಿಯಾಗಿ ರೂಪುಗೊಂಡಿತು. ಜರ್ಮನಿಯ ವಿರುದ್ಧ ಜಯ ಗಳಿಸುವಲ್ಲಿ ರಷ್ಯಾ ಪಾಲು ಪಡೆದಿದೆ.

೬. ಆಹಾರದ ಅಭಾವ, ಹಣದುಬ್ಬರ, ನಿರುದ್ಯೋಗ, ರೋಗ-ರುಜಿನ ಮುಂತಾದ ಪಿಡುಗುಗಳು ಯುದ್ಧದ ವಿಕಾರ ಫಲಗಳಾದವು.

೭. ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ವಸಾಹತುಶಾಹಿಯ ಅಂತ್ಯವನ್ನು ಯುದ್ಧೋತ್ತರ ಯುರೋಪ್ ಕಂಡಿತು. ಅಲ್ಲಿನ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವುಗಳ ಬೇಡಿಕೆ ಈಡೇರುವುದು ಅಗತ್ಯವಾಗಿತ್ತು. ಆಸ್ಟ್ರೋ-ಏಷಿಯನ್ ದೇಶಗಳು ಒಂದರ ಹಿಂದೆ ಒಂದರಂತೆ ಸ್ವತಂತ್ರವಾದವು.

೮. ಎರಡನೆಯ ಮಹಾಯುದ್ಧದ ಐತಿಹಾಸಿಕ ಫಲವೆಂದರೆ ವಿಶ್ವಸಂಸ್ಥೆಯ ಹುಟ್ಟು. ರಾಷ್ಟ್ರ ಸಂಘವು ತನ್ನ ಉದ್ದೇಶಗಳಲ್ಲಿ ಬಹುತೇಕ ವಿಫಲವಾಗಿದ್ದಿತು. ಆದರೂ, ಶಾಂತಿ, ವಿಶ್ವಕಲ್ಯಾಣ, ಅಂತರರಾಷ್ಟ್ರೀಯ ಸಾಮರಸ್ಯ, ಸಹಕಾರ, ಸಂಘಟಿತ ಅಭಿವೃದ್ದಿ ಮೊದಲಾದ ರಾಷ್ಟ್ರ ಸಂಘದ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ದುಡಿಯುತ್ತಿರುವ ವಿಶ್ವಸಂಸ್ಥೆಯು ದ್ವಿತೀಯ ಮಹಾಯುದ್ಧದ ನಂತರ ಅಸ್ತಿತ್ವಕ್ಕೆ ಬಂದಿರುವುದು ಬಹುಮುಖ್ಯ ವಿಚಾರವಾಗಿದೆ.

ವಿಶ್ವಸಂಸ್ಥೆ

ಇಪ್ಪತ್ತನೆಯ ಶತಮಾನದ ಆದಿ ಮತ್ತು ಮಧ್ಯಭಾಗದಲ್ಲಿ ನಡೆದ ಎರಡು ವಿಶ್ವ ಸಮರಗಳು (ವಿಶೇಷವಾಗಿ ಎರಡನೆಯ ವಿಶ್ವಸಮರ) ಜಗತ್ತಿನ ಜನತೆ ಶಾಂತಿಗಾಗಿ ತುಡಿಯುವಂತೆ ಮಾಡಿದವು. ಯುದ್ಧದ ಪರಿಣಾಮಗಳು ಅತ್ಯಂತ ಘೋರವಾಗಿದ್ದವು ಮತ್ತು ಅಪರಿಮಿತ ಕಷ್ಟ ನಷ್ಟಗಳನ್ನು ಉಂಟುಮಾಡಿದ್ದವು. ಅಮೆರಿಕಾದ ರೂಸ್‌ವೆಲ್ಟ್, ರಷ್ಯಾದ ಸ್ವಾಲಿನ್, ಬ್ರಿಟನ್ನಿನ ವಿನ್ಸೆಂಟ್ ಚರ್ಚಿಲ್ ಮುಂತಾದ ನಾಯಕರು ಡಿಸೆಂಬರ್ ೧೯೪೩ರಲ್ಲಿ ಸಭೆ ಸೇರಿ ಜಗತ್ತನ್ನು ಭಯಮುಕ್ತಗೊಳಿಸುವ ಸಲುವಾಗಿ ಮಾತುಕತೆ ನಡೆಸಿದರು. ಆ ಬಳಿಕವೂ ಹಲವೆಡೆಗಳಲ್ಲಿ ಇಂತಹ ಸಭೆಗಳು ನಡೆದು ವಿಶ್ವಸಂಸ್ಥೆಯ ರೂಪರೇಷೆ ಸಿದ್ಧವಾದವು. ಕ್ರಿ.ಶ.೧೯೪೫ರ ಜೂನ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ವಿಶ್ವಸಂಸ್ಥೆಯ ಕಾರ್ಯಸೂಚಿಗೆ ಸಹಿ ಹಾಕಲಾಯಿತು. ಅದರಂತೆ ಕ್ರಿ.ಶ.೧೯೪೫ರ ಅಕ್ಟೋಬರ್ ೨೪ ರಂದು ಅಧಿಕೃತವಾಗಿ ವಿಶ್ವಸಂಸ್ಥೆಯು ಸ್ಥಾಪಿತವಾಯಿತು. ವಿಶ್ವಸಂಸ್ಥೆಯು ನ್ಯೂಯಾರ್ಕ್‌ನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಅಂತರ ರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆ, ರಾಷ್ಟ್ರ ರಾಷ್ಟ್ರಗಳ ನಡುವೆ ಪರಸ್ಪರ ಸೌಹಾರ್ದ ಸಹಕಾರವನ್ನು ಬೆಳೆಸುವುದು, ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ವಿಚಾರಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಅಂತರರಾಷ್ಟ್ರೀಯ ಸಹಕಾರವನ್ನು ಸಾಧಿಸುವುದು, ಜನಾಂಗ, ಲಿಂಗ ಭಾಷೆ, ಮತ, ಯಾವ ತಾರತಮ್ಯವೂ ಇರದೆ ಎಲ್ಲರ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಗೌರವಿಸುವುದು ಇತ್ಯಾದಿ ಈ ಎಲ್ಲ ಉದ್ದೇಶಗಳು ವಿಶ್ವಸಂಸ್ಥೆಯ ಸ್ಥಾಪನೆಯ ಹಿಂದಿವೆ. ತನ್ನ ಆಶಯಗಳನ್ನು ಒಪ್ಪಿಕೊಳ್ಳುವ ಯಾವುದೇ ರಾಷ್ಟ್ರಕ್ಕೂ ವಿಶ್ವಸಂಸ್ಥೆಯ ಮುಕ್ತ ಅವಕಾಶವಿತ್ತು. ಯಾವುದೇ ರಾಷ್ಟ್ರದ ಪ್ರವೇಶವನ್ನು ಒಪ್ಪಿಕೊಳ್ಳುವ ಇಲ್ಲವೇ ನಿರಾಕರಿಸುವ ಕೆಲಸವು ಭದ್ರತಾ ಸಮಿತಿಯ ಮುಂದಿರುತ್ತದೆ.

ವಿಶ್ವಸಂಸ್ಥೆಯ ಅಂಗಗಳು

೧. ಸಾಮಾನ್ಯ ಸಭೆ

೨. ಭದ್ರತಾ ಸಮಿತಿ

೩. ಆರ್ಥಿಕ ಮತ್ತು ಸಾಮಾಜಿಕ ಸಮಿತಿ

೪. ಧರ್ಮದರ್ಶಿ ಸಮಿತಿ

೫. ಅಂತರರಾಷ್ಟ್ರೀಯ ನ್ಯಾಯಾಲಯ

೬. ಪ್ರಧಾನ ಕಛೇರಿ

. ಸಾಮಾನ್ಯ ಸಭೆ

ಆರಂಭದಲ್ಲಿ ೫೦ ಮಂದಿ ಸ್ಥಾಪಕ ಸದಸ್ಯರನ್ನು ಹೊಂದಿದ್ದ ಸಾಮಾನ್ಯ ಸಭೆಯು ೧೯೯೨ರಲ್ಲಿ ೧೮೯ ಸದಸ್ಯರನ್ನು ಹೊಂದಿತ್ತು. ನಿಯಮದಂತೆ ಸಾಮಾನ್ಯ ಸಭೆಯು ವರ್ಷಕ್ಕೊಂದು ಬಾರಿ ಸಭೆ ಸೇರುತ್ತದೆ. ವಿಶ್ವಸಂಸ್ಥೆಯ ಎಲ್ಲ ಸದಸ್ಯರೂ ಈ ಸಾಮಾನ್ಯ ಸಭೆಯ ಸದಸ್ಯರಾಗಿರುತ್ತಾರೆ. ವಿಶ್ವಸಂಸ್ಥೆಯ ಒಟ್ಟು ಕಾರ್ಯಗಳನ್ನು ಚರ್ಚಿಸುವ, ಪುನರ್‌ಪರಿಶೀಲಿಸುವ, ಮೇಲುಸ್ತುವಾರಿ ವಹಿಸುವ, ವಿಮರ್ಶಿಸುವ ಅಧಿಕಾರವನ್ನು ಸಾಮಾನ್ಯ ಸಭೆ ಹೊಂದಿರುತ್ತದೆ. ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಗಳ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ಅದು ನೀಡುತ್ತದೆ. ಸಂಸ್ಥೆಯ ಹಣಕಾಸು ವಿಚಾರಗಳನ್ನು ನೋಡಿಕೊಳ್ಳುತ್ತದೆ. ಸದಸ್ಯ ರಾಷ್ಟ್ರಗಳಿಂದ ತಲಾ ಐದು ಮಂದಿ ಪ್ರತಿನಿಧಿಗಳನ್ನು ಸಾಮಾನ್ಯ ಸಭೆಗೆ ಕಳುಹಿಸಬಹುದಾಗಿದ್ದು, ಒಂದು ರಾಷ್ಟ್ರಕ್ಕೆ ಒಂದು ಮತದಾನದ ಅವಕಾಶವಿರುತ್ತದೆ. ವರ್ಷಕ್ಕೊಮ್ಮೆ ಸಭೆ ಸೇರುವುದಾದರೂ ಕೆಲವು ಮುಖ್ಯ ಸಂದರ್ಭಗಳಲ್ಲಿ ವಿಶೇಷ ಅಧಿವೇಶನಗಳೂ ನಡೆಯುತ್ತವೆ.

. ಭದ್ರತಾ ಸಮಿತಿ

ಭದ್ರತಾ ಸಮಿತಿಯು ವರ್ಷದಲ್ಲಿ ಹಲವು ಸಲ ಸಭೆ ಸೇರುತ್ತದೆ. ಅದರಲ್ಲಿ ೧೧ ಮಂದಿ ಸದಸ್ಯರಿರುತ್ತಾರೆ. ೫ ಮಂದಿ ಸದಸ್ಯರು ಶಾಶ್ವತ ಸದಸ್ಯರಾಗಿದ್ದರೆ, ಉಳಿದ ೬ ಮಂದಿ ಅಶಾಶ್ವತ ಸದಸ್ಯರು ೨ ವರ್ಷಗಳ ಮಟ್ಟಿಗೆ ಸಾಮಾನ್ಯ ಸಭೆಯಿಂದ ಅರಿಸಲ್ಪಟ್ಟವರಾಗಿರುತ್ತಾರೆ. ಬ್ರಿಟನ್, ಅಮೆರಿಕಾ, ಫ್ರಾನ್ಸ್, ರಷ್ಯಾ ಮತ್ತು ಚೈನಾಗಳು ಶಾಶ್ವತ ಸದಸ್ಯರಾಗಿದ್ದವು. ೧೯೬೫ರ ವೇಳೆಗೆ ಅಶಾಶ್ವತ ಸದಸ್ಯರ ಸಂಖ್ಯೆಯನ್ನು ಆರರಿಂದ ಹತ್ತಕ್ಕೇರಿಸಲಾಯಿತು. ಹಾಗಾಗಿ ಭದ್ರತಾ ಸಮಿತಿಯ ಒಟ್ಟು ಬಲ ಆರರಿಂದ ಹತ್ತಕ್ಕೇರಿತು. ಯಾವುದೇ ನಿರ್ಣಯವು ಜಾರಿಗೆ ಬರಬೇಕಿದ್ದಲ್ಲಿ ೯/೧೫ ಮತಗಳು ಬೀಳಬೀಕಿತ್ತು. ಅಂತರ ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಕಾರ್ಯಕ್ರಮಗಳು ಈ ಸಮಿತಿಯ ಪ್ರಧಾನ ಕರ್ತವ್ಯವಾಗಿದೆ. ತನ್ನ ವಾರ್ಷಿಕ ವರದಿಯನ್ನು ಭದ್ರತಾ ಸಮಿತಿಯು ಸಾಮಾನ್ಯ ಸಭೆಗೆ ಒಪ್ಪಿಸಬೇಕಾಗುತ್ತದೆ. ತನ್ನ ಸಮರ್ಥ ಅಧಿಕಾರಗಳನ್ನು ಉಪಯೋಗಿಸಿಕೊಂಡು ಶಾಂತಿಯುತ ವಿಧಾನಗಳಿಂದ ಅಂತರ ರಾಷ್ಟ್ರೀಯ ವಿವರಗಳನ್ನು ಭದ್ರತಾ ಮಂಡಳಿಯು ಪರಿಹರಿಸುತ್ತದೆ. ಯಾವುದೇ ರಾಷ್ಟ್ರವು ತೀರ್ಮಾನಗಳ ಉಲ್ಲಂಘನೆ ಮಾಡಿದಲ್ಲಿ ದಿಗ್ಭಂದನೆ ವಿಧಿಸುವುದು, ಸೈನಿಕ ಕಾರ್ಯಚಾರಣೆ ನಡೆಸುವುದು ಅಥವಾ ಉಳಿದ ದೇಶಗಳ ಸಂಬಂಧವನ್ನು ಆ ದೇಶದಿಂದ ಕಡಿದು ಹಾಕುವುದು ಈ ಯಾವುದೇ ರೀತಿಯಲ್ಲಿ ವರ್ತಿಸುವ ಅಧಿಕಾರವನ್ನು ಭದ್ರತಾ ಸಮಿತಿ ಹೊಂದಿದೆ.

. ಆರ್ಥಿಕ ಮತ್ತು ಸಾಮಾಜಿಕ ಸಮಿತಿ

ಆರಂಭದಲ್ಲಿ ಮೂರು ವರ್ಷಗಳ ಕಾಲಾವಧಿಗೆ ಚುನಾಯಿತರಾಗಿದ್ದ ೧೮ ಮಂದಿ ಸದಸ್ಯರನ್ನು ಆರ್ಥಿಕ-ಸಾಮಾಜಿಕ ಸಮಿತಿ ಹೊಂದಿತ್ತು. ಕ್ರಿ.ಶ.೧೯೬೫ರಲ್ಲಿ ಈ ಸಂಖ್ಯೆ ೨೭ಕ್ಕೆ ಏರಿತು. ವರ್ಷದಲ್ಲಿ ಸಾಮಾನ್ಯವಾಗಿ ಸಮಿತಿಯು ಮೂರು ಬಾರಿ ಸಭೆ ಸೇರುತ್ತದೆ. ಅಂತರರಾಷ್ಟ್ರೀಯ ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಮತ್ತಿತರ ವಿಷಯಗಳ ಅಧ್ಯಯನ ನಡೆಸುವುದು ಇವೇ ಮೊದಲಾದವು ಆರ್ಥಿಕ-ಸಾಮಾಜಿಕ ಸಮಿತಿಯ ಮುಖ್ಯ ಕಾರ್ಯವಾಗಿದೆ. ಹಣಕಾಸಿನ ಆಯೋಗ, ಜನಸಂಖ್ಯೆಯ ಆಯೋಗ, ಮಾನವ ಹಕ್ಕುಗಳ ಆಯೋಗ ಮುಂತಾದ ಆಯೋಗಗಳನ್ನು ಈ ಸಮಿತಿಯು ನೋಡಿಕೊಳ್ಳುತ್ತದೆ.

. ಧರ್ಮದರ್ಶಿ ಸಮಿತಿ

ರಾಷ್ಟ್ರಸಂಘವು ಹೊಂದಿದ್ದ ಮ್ಯಾಂಡೇಟ್ ಪದ್ಧತಿಯ ಸುಧಾರಿತ ರೂಪವಾಗಿದೆ ಧರ್ಮದರ್ಶಿ ಸಮಿತಿ. ವಿಶ್ವಸಂಸ್ಥೆಯ ಅಧೀನದಲ್ಲಿರುವ ಪ್ರದೇಶಗಳ ಆಡಳಿತ ವಹಿಸು ವುದು, ಅಭಿವೃದ್ದಿ ಕಾರ್ಯಗಳನ್ನು ನಡೆಸುವುದು ಧರ್ಮದರ್ಶಿ ಸಮಿತಿಯ ಪ್ರಧಾನ ಕಾರ್ಯಗಳಾಗಿವೆ. ಅಲ್ಲಿನ ಸಮಸ್ಯೆಗಳನ್ನು ಸಮೀಕ್ಷಿಸಿ ಅವುಗಳನ್ನು ಪರಿಹರಿಸಲು ಸಮಿತಿ ಸೂಕ್ತ ಕ್ರಮ ಕೈಗೊಳ್ಳುತ್ತದೆ. ವಿಶ್ವಸಂಸ್ಥೆಯಿಂದ ಪಡೆದ ಪ್ರದೇಶಗಳಲ್ಲಿ ಆಳ್ವಿಕೆ ನಡೆಸುವ ರಾಷ್ಟ್ರಗಳು, ಪ್ರದೇಶಗಳನ್ನು ಹೊಂದಿರದ ಸದಸ್ಯ ರಾಷ್ಟ್ರಗಳು ಮತ್ತು ಸಾಮಾನ್ಯ ಸಭೆಯಿಂದ ಮೂರು ವರ್ಷಗಳ ಕಾಲಾವಧಿಗೆ ಆರಿಸಲ್ಪಟ್ಟ ರಾಷ್ಟ್ರಗಳು ಹೀಗೆ ಮೂರು ವಿಧದ ಸದಸ್ಯತ್ವವನ್ನು ಧರ್ಮದರ್ಶಿ ಸಮಿತಿ ಹೊಂದಿರುತ್ತದೆ.

. ಅಂತಾರಾಷ್ಟ್ರೀಯ ನ್ಯಾಯಾಲಯ

ಅಂತಾರಾಷ್ಟ್ರೀಯ ನ್ಯಾಯಾಲಯವು ಸಾಮಾನ್ಯ ಸಭೆಯಿಂದ ಚುನಾಯಿತರಾದ ೧೫ ಮಂದಿ ಪರಿಣತ ಸದಸ್ಯರನ್ನು(ನ್ಯಾಯಾಧೀಶರನ್ನು) ಹೊಂದಿದೆ. ಒಂದು ಸದಸ್ಯ ರಾಷ್ಟ್ರದ ಒಬ್ಬರು ಮಾತ್ರವೇ ಒಂದು ಬಾರಿಗೆ ನ್ಯಾಯಾಧೀಶರಾಗುವ ಅವಕಾಶವಿರುತ್ತದೆ. ಹಾಲೆಂಡಿನ ಹೇಗ್‌ನಲ್ಲಿ ಅಂತರ ರಾಷ್ಟ್ರೀಯ ನ್ಯಾಯಾಲಯದ ಪ್ರಧಾನ ಕಛೇರಿಯಿದೆ. ಅಂತರ ರಾಷ್ಟ್ರೀಯ ಕಾನೂನು ಸಮಸ್ಯೆಗಳನ್ನು ಪರಿಶೀಲಿಸಿ, ತೀರ್ಮಾನ ನೀಡುವುದು ಇದರ ಮುಖ್ಯ ಕೆಲಸ. ಅಲ್ಲದೆ ಸಾಮಾನ್ಯ ಸಭೆ ಭದ್ರತಾ ಸಮಿತಿ ಮತ್ತು ಉಪಾಂಗಗಳಿಗೆ ನ್ಯಾಯಾಲಯವು ಕಾನೂನು ಸಲಹೆ ನೀಡುತ್ತದೆ. ನ್ಯಾಯಾಧೀಶರ ಕಾರ್ಯಾವಧಿ ೯ ವರ್ಷಗಳಾಗಿರುತ್ತದೆ.

. ಪ್ರಧಾನ ಕಾರ್ಯಾಲಯ

ಪ್ರಧಾನ ಕಾರ್ಯದರ್ಶಿಯು ಕಾರ್ಯಾಲಯದ ಮುಖ್ಯಸ್ಥನಾಗಿರುತ್ತಾನೆ. ಭದ್ರತಾ ಮಂಡಳಿಯ ಆದೇಶದಂತೆ ಸಾಮಾನ್ಯ ಸಭೆಯು ಐದು ವರ್ಷಗಳ ಕಾರ್ಯಾವಧಿಗೆ ಆರಿಸುತ್ತದೆ. ಪ್ರಧಾನ ಕಾರ್ಯದರ್ಶಿಯ ಅಧೀನದಲ್ಲಿ ವಿವಿಧ ರಾಷ್ಟ್ರಗಳ ಅನೇಕ ಅಧಿಕಾರಿಗಳಿರುತ್ತಾರೆ. ಸಭೆಗಳನ್ನು ಏರ್ಪಡಿಸುವುದು, ನಿರ್ಧಾರಗಳನ್ನು ಮತ್ತು ದಾಖಲೆ ಗಳನ್ನು ಸಂಗ್ರಹಿಸುವುದು ಇವೆಲ್ಲ ಕೆಲಸಗಳು ಪ್ರಧಾನ ಕಛೇರಿಯಲ್ಲಿ ನಡೆಯುತ್ತವೆ. ಈ ಕಾರ್ಯಾಲಯವು ನ್ಯೂಯಾರ್ಕ್‌ನಲ್ಲಿದೆ.

ವಿಶ್ವಸಂಸ್ಥೆಯ ಕೆಲವು ಉಪಾಂಗಗಳು

೧. ಅಂತರರಾಷ್ಟ್ರೀಯ ಕಾರ್ಮಿಕ ಸಂಘ

೨. ಅಂತರರಾಷ್ಟ್ರೀಯ ಹಣಕಾಸು ನಿಧಿ

೩. ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ದಿ ಬ್ಯಾಂಕ್

೪. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘ

೫. ಸಾರ್ವತ್ರಿಕ ಅಂಚೆ ಸಂಸ್ಥೆ

೬. ಆಹಾರ ಮತ್ತು ಕೃಷಿ ಸಂಸ್ಥೆ

೭. ಅಂತರರಾಷ್ಟ್ರೀಯ ದೂರ ಸಂಪರ್ಕ ಸಂಸ್ಥೆ

೮. ವಿಶ್ವ ಆರೋಗ್ಯ ಸಂಸ್ಥೆ ಇತ್ಯಾದಿ.

ವಿಶ್ವಸಂಸ್ಥೆಯ ಸಾಧನೆ

ವಿಶ್ವಸಂಸ್ಥೆಯು ತನ್ನ ಉದ್ದೇಶದಂತೆ ಸಾಕಷ್ಟು ರಾಜಕೀಯಕ್ಕೆ ಸಂಬಂಧಿಸಿದಂತೆ ಮಹತ್ತ್ವದ ಸಾಧನೆಗಳನ್ನು ಮಾಡಿದೆ. ರಾಷ್ಟ್ರ ಸಂಘವು ಈ ನಿಟ್ಟಿನಲ್ಲಿ ಅಷ್ಟೊಂದು ಸಫಲತೆಯನ್ನು ತೋರಲಿಲ್ಲ. ವಿಶ್ವಸಂಸ್ಥೆಯು ಅದನ್ನು ಸಮರ್ಥವಾಗಿ ನಿರ್ವಹಿಸಿತು. ಬ್ರಿಟನ್ ಸಿರಿಯಾವನ್ನು ಆಕ್ರಮಿಸಿದಾಗ, ಫ್ರಾನ್ಸ್ ಲೆಬನಾನ್‌ನನ್ನು ಆಕ್ರಮಿಸಿದಾಗ, ರಷ್ಯಾವು ಇರಾನನ್ನು ಆಕ್ರಮಿಸಿದಾಗ, ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ ಆಕ್ರಮಣವನ್ನು ನಿಲ್ಲಿಸುವಂತೆ ಆಜ್ಞೆ ನೀಡಿತು. ಡಚ್ಚರ ಕೈಯಿಂದ ಇಂಡೋನೇಷಿಯಾವನ್ನು ಸ್ವತಂತ್ರಗೊಳಿಸಿತು. ಇಸ್ರೇಲ್ ಹಾಗೂ ಅರಬ್ಬರ ನಡುವೆ ಭೀಕರ ಸಮರ ನಡೆಯುತ್ತಿದ್ದಾಗ ವಿಶ್ವಸಂಸ್ಥೆಯು ಪ್ರವೇಶಿಸಿ ಯುದ್ಧವನ್ನು ನಿಲ್ಲಿಸಿತು. ಭಾರತದ ವಿರುದ್ಧ ಪಾಕಿಸ್ತಾನವು ಪಿತೂರಿ ನಡೆಸಿ ಹಲವು ಬಾರಿ ಆಂತರಿಕ ದಂಗೆಗಳಿಗೆ ಪ್ರೇರಣೆ ನೀಡಿತು. ವಿಶ್ವಸಂಸ್ಥೆ ಭಾರತ-ಪಾಕ್ ನಡುವೆ ಕದನವಿರಾಮ ಏರ್ಪಡಿಸಿತಾದರೂ ಕಾಶ್ಮೀರ ಗಡಿ ಸಮಸ್ಯೆ ಇತ್ಯರ್ಥವಾಗದೆ ಇನ್ನೂ ಹಾಗೇ ಉಳಿದಿದೆ. ಇತ್ತೀಚೆಗೆ ಪಾಕಿಸ್ತಾನಿ ಪಡೆಗಳು ಪರೋಕ್ಷವಾಗಿ ಆಕ್ರಮಣ ನಡೆಸಿದಾಗ ಭಾರತದ ಸೈನ್ಯ ಪಡೆಗಳು ಅದನ್ನು ಹಿಂದಕ್ಕೆ ಅಟ್ಟಿದ್ದು ಇತಿಹಾಸವಾಗಿದೆ. ಚೀನಾದೊಂದಿಗೆ ಸೇರಿಕೊಂಡು ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಮೇಲೆ ಆಕ್ರಮಣ ನಡೆಸಿದಾಗ ವಿಶ್ವಸಂಸ್ಥೆಯು ದಕ್ಷಿಣ ಕೊರಿಯಾದ ರಕ್ಷಣೆಗೆ ನಿಂತು ಅದಕ್ಕೆ ಸೈನಿಕ ನೆರವು ನೀಡಿತು. ಹೀಗೆ ವಿಶ್ವದಾದ್ಯಂತ ರಾಜಕೀಯ ಸಮಸ್ಯೆಗಳಿಗೆ, ಯುದ್ಧಗಳಿಗೆ ವಿಶ್ವಸಂಸ್ಥೆಯು ನೀಡಿದ ಪರಿಹಾರ, ತಂದುಕೊಟ್ಟ ಕದನ ವಿರಾಮಗಳು ಗಣನೀಯವಾಗಿವೆ.

ರಾಜಕೀಯ ರಂಗದಲ್ಲಿ ಮಾಡಿರುವಷ್ಟೇ ಮಹತ್ವದ ಸಾಧನೆಗಳನ್ನು ರಾಜಕೀಯೇತರ ಕ್ಷೇತ್ರಗಳಲ್ಲಿಯೂ ವಿಶ್ವಸಂಸ್ಥೆಯು ಸಾಧಿಸಿದೆ ಎನ್ನುವುದು ಅದರ ಬಗ್ಗೆ ಅಭಿಮಾನ ಮೂಡಿಸುವ ವಿಚಾರ. ಅದರ ಹಲವು ಉಪಾಂಗಗಳಾಗಿರುವ ಯುನೆಸ್ಕೋ, ಕಾರ್ಮಿಕ ಸಂಸ್ಥೆ, ಆರೋಗ್ಯ ಸಂಸ್ಥೆ, ಹಣಕಾಸು ನಿಧಿ, ಐಬಿಆರ್‌ಡಿ ಮುಂತಾದವುಗಳು ತಮ್ಮ ಧ್ಯೇಯೋದ್ದೇಶಗಳಲ್ಲಿ ವಿಫಲವಾಗಿಲ್ಲ. ಯೂನಿಸೆಫ್ ಮಹಿಳಾ ಮತ್ತು ಶಿಶು ಅಭಿವೃದ್ದಿ ಕೆಲಸದಲ್ಲಿ ತೊಡಗಿ, ಆಹಾರ, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಅದರ ವೈದ್ಯಕೀಯ ಸೇವೆಯು(ಉದಾ : ಇಂಡೋನೇಷ್ಯಾದಲ್ಲಿ) ಗಣನೀಯವಾದುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿಯನ್ನು ಉಳಿಸುವ ನಿಟ್ಟಿನಲ್ಲಿ ವೈಜ್ಞಾನಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯ, ಕಾರ್ಯಕ್ರಮಗಳನ್ನು ಯುನೆಸ್ಕೋ ನಡೆಸುತ್ತಿದೆ. ಅರಿವನ್ನು ವಿಸ್ತರಿಸುವ ಕರಪತ್ರ, ನಿಯತಕಾಲಿಕೆ, ಪುಸ್ತಕಗಳನ್ನು ಪ್ರಕಟಿಸುತ್ತಿದೆ. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ. ವಿಶ್ವ ಕಾರ್ಮಿಕ ಸಂಸ್ಥೆಯು ವಿಶ್ವದೆಲ್ಲೆಡೆ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದೇಶ, ಪ್ರದೇಶಗಳಲ್ಲಿ ಸಾಂಕ್ರಾಮಿಕ ಮತ್ತಿತರ ರೋಗಗಳನ್ನು ತಡೆಹಿಡಿಯಲು, ಔಷಧ ಪೂರೈಸಲು ಒಟ್ಟಾರೆಯಾಗಿ ಜೀವನ ಕ್ರಮವನ್ನು ಉತ್ತಮಗೊಳಿಸಲು ದುಡಿಯುತ್ತಿದೆ. ಈ ರೀತಿಯಲ್ಲಿ ವಿಶ್ವಸಂಸ್ಥೆಯು ಮಾನವ ಕಲ್ಯಾಣ ವನ್ನು ಧ್ಯೇಯವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ.

ವಿಶ್ವಸಂಸ್ಥೆಯಲ್ಲಿನ ದೋಷಗಳು

ತನ್ನ ಸಾಧನೆಗಳ ಹೊರತಾಗಿಯೂ ವಿಶ್ವಸಂಸ್ಥೆ ಕೆಲವಾರು ದೋಷಗಳನ್ನು ಹೊಂದಿದೆ. ರಾಷ್ಟ್ರ ಸಂಘದಂತೆಯೇ ವಿಶ್ವಸಂಸ್ಥೆಯಲ್ಲಿ ಶಕ್ತಿಶಾಲಿ ರಾಷ್ಟ್ರಗಳು ಹೆಚ್ಚಿನ ಅಧಿಕಾರ ಚಲಾಯಿಸುತ್ತವೆ. ಅವುಗಳು ಮಾತ್ರವೇ ವಿಶೇಷಾಧಿಕಾರ ಹೊಂದಿವೆ. ವಿಶ್ವಸಂಸ್ಥೆಯು ಅವುಗಳ ವಿಚಾರದಲ್ಲಿ ಆದೇಶ ಹೊರಡಿಸಲು, ನಿಯಂತ್ರಿಸಲು ಶಕ್ತವಾಗಿಲ್ಲ.

ವಿಶ್ವಸಂಸ್ಥೆಯ ಕಾರ್ಯದಲ್ಲಿ ವಿಶೇಷ ಸಾಮರ್ಥ್ಯವಿರಲಿಲ್ಲ. ಶಕ್ತರಾಷ್ಟ್ರಗಳು ಸೋವಿಯೆತ್ ಮತ್ತು ಅಮೆರಿಕನ್ ಬಣಗಳಾಗಿ ಒಡೆದಿದ್ದವು. ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಅವರ ಉದ್ದೇಶವಾಗಿರದೆ ಪರಸ್ಪರ ದಮನಗೊಳಿಸಲು ಪ್ರಯತ್ನಿಸು ವುದೇ ಆಗಿದ್ದಿತು. ಅವುಗಳ ತತ್ವಾದರ್ಶಗಳು ಪೂರ್ಣವಾಗಿ ಭಿನ್ನಭಿನ್ನವಾಗಿದ್ದು ವಿಶ್ವಸಂಸ್ಥೆಯ ಸಭೆಗಳಲ್ಲಿ ಯಾವಾಗಲೂ ವಾಗ್ಯುದ್ಧವಾಗುತ್ತಿದ್ದವು.

ತಪ್ಪಿತಸ್ಥ ದೇಶವನ್ನು ಶಿಕ್ಷಿಸಲು ಯಾವುದೇ ವಿಶೇಷಾಧಿಕಾರವೂ ಭದ್ರತಾ ಸಮಿತಿಗಿಲ್ಲ. ರಾಷ್ಟ್ರಗಳನ್ನು ರಕ್ಷಿಸುವ ಸಲುವಾಗಿ ತನ್ನದೇ ಆದ ಪ್ರಬಲ ಸೈನಿಕ ಬಲವನ್ನು ವಿಶ್ವ ಸಂಸ್ಥೆಯು ಹೊಂದಿಲ್ಲ.

ಸದಸ್ಯ ರಾಷ್ಟ್ರಗಳನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಮಾನತೆ ಮತ್ತು ಸಾರ್ವತ್ರಿಕವಾದ ಅಂಶವಿಲ್ಲ. ಸದಸ್ಯರಾಗಲು ಬಯಸುವ ರಾಷ್ಟ್ರಗಳಿಗೆ ಆ ಆರ್ಹತೆ, ಸಾಮರ್ಥ್ಯವಿದೆಯೇ ಎಂಬುದನ್ನು ಪರೀಕ್ಷಿಸುವ ಮತ್ತು ಅವು ಶಾಂತಿಪ್ರಿಯ ರಾಷ್ಟ್ರವೇ ಎಂದು ಗಮನಿಸುವ ಅಧಿಕಾರವನ್ನು ಭದ್ರತಾ ಮಂಡಳಿಗೆ ವಹಿಸಲಾಗಿತ್ತು. ಇಲ್ಲಿಯೂ ಪ್ರಬಲ ರಾಷ್ಟ್ರಗಳ ತಾರತಮ್ಯ ಧೋರಣೆ ಕೆಲಸ ಮಾಡುತ್ತಿತ್ತು.

ಮುಖ್ಯ ಕಾರ್ಯದರ್ಶಿಯನ್ನು ನೇಮಕಗೊಳಿಸುವ ವಿಧಾನವೂ ದೋಷಪೂರಿತವಾದುದು ಎನ್ನಲಾಗಿದೆ. ಪ್ರಬಲ ಶಕ್ತಿಗಳಿಗೆ ಆಯ್ಕೆ ಹಿಡಿಸದೇ ಹೋದಾಗ ಆ ಸ್ಥಾನ ಖಾಲಿ ಬೀಳುವ ಸಾಧ್ಯತೆಗಳಿವೆ.

ಇಂತಹ ಸಣ್ಣಪುಟ್ಟ ಕಂದುಕೊರತೆಗಳಿದ್ದರೂ ಮನುಷ್ಯನ ಮೂಲಭೂತ ವಿಷ ಪ್ರವೃತ್ತಿಗಳಂತಿರುವ ಹಿಂಸಾಪ್ರಿಯತೆ ಮತ್ತು ಯುದ್ಧಗಳ ಭೀತಿಯಿಂದ ಜಗತ್ತನ್ನು ರಕ್ಷಿಸುವ ಸಲುವಾಗಿ ಇರುವ ಏಕೈಕ ಅಧಿಕೃತ ಅಶಾಕಿರಣವಾಗಿದೆ ವಿಶ್ವಸಂಸ್ಥೆ. ಈ ಐವತ್ತು ವರ್ಷಗಳಲ್ಲಿ ತನ್ನ ಸಾಧನೆಗಳಿಂದ ಎಷ್ಟೋ ಸಂಭಾವ್ಯ ಯುದ್ಧಗಳನ್ನು ನಿವಾರಿಸಿ, ಇನ್ನೆಷ್ಟೋ ವಿವಾದಗಳಿಗೆ ಶಾಶ್ವತ ತೆರೆಯೆಳೆದಿದೆ. ಕೆಲವು ಸಮಸ್ಯೆಗಳು ಇನ್ನೂ ಹಾಗೇ ಉಳಿದುಕೊಂಡಿರುವುದಾದರೆ ಅದಕ್ಕೆ ವಿಶ್ವಸಂಸ್ಥೆಯೇ ಹೊಣೆಗಾರನಲ್ಲ. ಹೀಗಿದ್ದೂ ವಿಶ್ವಸಂಸ್ಥೆ ತನ್ನ ಬಲವನ್ನು ವಿಸ್ತರಿಸುವ ಅಗತ್ಯವಿದೆ. ಕೆಲವೇ ಕೆಲವು ಬಲಗಳ ಹಿಡಿತ ದಿಂದ ಮುಕ್ತನಾಗಿ, ನಿಷ್ಪಕ್ಷಪಾತವಾಗಿ ತೀರ್ಮಾನ ನೀಡುವಲ್ಲಿ ಇನ್ನೂ ಹೆಚ್ಚಿನ ಸ್ಥೈರ್ಯ ತೋರಬೇಕಿದೆ. ವಿಚಾರ ವಿನಿಮಯದ ಮಾಧ್ಯಮ ಮಾತ್ರವಾಗಿರದೆ ಶಾಂತಿ ಸ್ಥಾಪನೆಯ ಕಾರ್ಯರೂಪದಲ್ಲಿ ಸಾಕಾರಗೊಳ್ಳಬೇಕು. ವಿಶ್ವಸಂಸ್ಥೆಯ ಸಣ್ಣಪುಟ್ಟ ದೋಷಗಳನ್ನು ವೈಫಲ್ಯವೆನ್ನಲಾಗದು. ಒಟ್ಟಿನಲ್ಲಿ ವಿಶ್ವಸಂಸ್ಥೆಯ ಭವಿಷ್ಯವು ಮಾನವೀಯತೆಯ ಭವಿಷ್ಯ ಹಾಗೂ ಅಳಿವು ಉಳಿವಿನ ಪ್ರಶ್ನೆ ಎಂಬುದರಲ್ಲಿ ಸಂದೇಹವಿಲ್ಲ.

 

ಪರಾಮರ್ಶನ ಗ್ರಂಥಗಳು

೧. ಟೈಲರ್ ಎ.ಜೆ.ಪಿ. ೧೯೬೧. ದಿ ಆರಿಜಿನ್ ಆಫ್ ದಿ ಸೆಕೆಂಡ್ ವರ್ಲ್ಡ್ ವಾರ್, ಲಂಡನ್

೨. ಕ್ಯಾಲ್‌ವೊಕಾರೆಸ್ ಪಿ., ೧೯೬೮. ವರ್ಲ್ಡ್ ಪಾಲಿಟಿಕ್ಸ್ ಸಿನ್ಸ್ ೧೯೪೫.