ಇಪ್ಪತ್ತನೆಯ ಶತಮಾನವು ಎರಡು ಭೀಕರ ಮಹಾಯುದ್ಧಗಳನ್ನು ಕಂಡಿದೆ. ಮೊದಲ ಮಹಾಯುದ್ಧವು ೧೯೧೪ರ ಆಗಸ್ಟ್‌ನಲ್ಲಿ ಆರಂಭಗೊಂಡು ೧೯೧೮ರ ನವೆಂಬರ್‌ನಲ್ಲಿ ಕೊನೆಯಾಯಿತು. ಎರಡು ಸಂಗ್ರಾಮಗಳು ಕೆಲವೇ ಕೆಲವು ದೇಶಗಳಿಗೆ ಸೀಮಿತವಾಗಿರದೆ ವಿಶ್ವವ್ಯಾಪ್ತಿಯಾಗಿ ಭಯಾನಕ ಪರಿಣಾಮಗಳನ್ನು ಉಂಟು ಮಾಡಿದವು. ಆದುದರಿಂದ ಅವು ಜಾಗತಿಕ ಯುದ್ಧಗಳೆಂದು ಗುರುತಿಸಲ್ಪಟ್ಟಿವೆ.

ಪ್ರಥಮ ಮಹಾಯುದ್ಧದ ಕಾರಣಗಳು

೧. ಯುರೋಪಿನ ಮೇಲೆ ಸರ್ವಾಧಿಪತ್ಯವನ್ನು ಸಾಧಿಸುವ ಸಲುವಾಗಿ ಜರ್ಮನಿ ಹೊಂದಿದ್ದ ಮಹತ್ವಾಕಾಂಕ್ಷೆಯು ಪ್ರಥಮ ಮಹಾಯುದ್ಧಕ್ಕೆ ಮುಖ್ಯ ಕಾರಣವಾಯಿತು. ಯುರೋಪಿನ ಚಕ್ರಾಧಿಪತ್ಯದಲ್ಲಿ ೧೮೭೦ರ ಫ್ರಾಂಕೋ-ಜರ್ಮನ್ ಯುದ್ಧವು ಹೊಸಯುಗದ ಆರಂಭಿಕ ಅಂಶವಾಯಿತು. ಈ ಯುದ್ಧದ ಫಲಶ್ರುತಿಯಾಗಿ ಜರ್ಮನಿಯು ಏಕಶಕ್ತಿಯಾಗಿ ರೂಪುಗೊಂಡಿತು. ವಾಸ್ತವವಾಗಿ ತನ್ನ ಹುಟ್ಟಿನ ಕ್ಷಣದಿಂದಲೇ ಜರ್ಮನ್ ಸಾಮ್ರಾಜ್ಯವು ಜಗತ್ತಿನ ಅತ್ಯಂತ ಶಕ್ತಿಶಾಲಿ ಮಿಲಿಟರಿ ರಾಜ್ಯವಾಗಿತ್ತು. ೧೮೭೧ ರಿಂದ ೧೮೯೦ರ ತನಕ ಜರ್ಮನ್ ಸಾಮ್ರಾಜ್ಯದ ರೂವಾರಿ ಹಾಗೂ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಬಿಸ್ಮಾರ್ಕನು ಆ ಇಪ್ಪತ್ತು ವರ್ಷಗಳಲ್ಲಿ ನಿಸ್ಸಂಶಯವಾಗಿ ಯುರೋಪಿನ ಪ್ರಬಲಶಕ್ತಿಯಾಗಿದ್ದನು. ಅವನ ವಿದೇಶಾಂಗ ನೀತಿಯು ರಾಷ್ಟ್ರದ ಮಿಲಿಟರಿ ಔನ್ನತ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಅಭಿವೃದ್ದಿಪಡಿಸುವುದಾಗಿತ್ತು. ಜರ್ಮನಿಯ ಜನತೆ ತಾವೇ ವಿಶ್ವದ ಶ್ರೇಷ್ಠ ಜನಾಂಗವೆಂದೂ, ತಾವು ಮಾತ್ರವೇ ಜಗತ್ತನ್ನು ಆಳಲು ಅಧಿಕಾರವುಳ್ಳವರೆಂದೂ ನಂಬಿದ್ದರು. ಅದಕ್ಕೆ ಅಗತ್ಯವೆನಿಸುವ ಯಾವ ತ್ಯಾಗಕ್ಕೂ ಜರ್ಮನಿಯ ಯುವ ಜನಾಂಗ ಸನ್ನದ್ಧವಾಗಿತ್ತು. ಈ ರೀತಿಯ ಯುದ್ಧ ತಯಾರಿಯು ನಾಗರಿಕತೆಯ ವಿರುದ್ಧದ ಅಪರಾಧವಾಗಿರದೆ ರಾಷ್ಟ್ರದ ನೈತಿಕ ಇತಿಹಾಸಕ್ಕೆ ಉತ್ತಮ ಹಾಗೂ ಅವಶ್ಯವಾದ ಸಿದ್ಧೌಷಧವೆಂದೂ ಅವರು ನಂಬಿದ್ದರು.

೨. ಸಂಕುಚಿತ ರಾಷ್ಟ್ರೀಯತೆ ಅಥವಾ ಸ್ಪರ್ಧಾತ್ಮಕ ರಾಷ್ಟ್ರಭಕ್ತಿಯು ಪ್ರಥಮ ಮಹಾಯುದ್ಧದ ಇನ್ನೊಂದು ಮುಖ್ಯ ಕಾರಣವಾಗಿತ್ತು. ದೇಶದ ಬಗೆಗಿನ ಗಾಢಪ್ರೇಮ ಇತರ ದೇಶಗಳ ದ್ವೇಷವನ್ನು ಕಟ್ಟಿಕೊಂಡಿತು. ಜರ್ಮನ್ನರ ದೇಶಪ್ರೇಮವು ಫ್ರಾನ್ಸನ್ನು ದ್ವೇಷಿಸು ವಂತೆಯೂ, ಫ್ರೆಂಚರ ದೇಶಪ್ರೇಮವು ಜರ್ಮನಿಯನ್ನು ದ್ವೇಷಿಸುವಂತೆಯೂ ಮಾಡಿತು. ಸರ್ಬಿಯಾದ ಉಗ್ರ ರಾಷ್ಟ್ರೀಯತೆಯು ಸರ್ಬಿಯಾ ಮತ್ತು ಆಸ್ಟ್ರಿಯಾಗಳ ನಡುವೆ ಪರಿಸ್ಥಿತಿಯನ್ನು ಬಿಗಡಾಯಿಸಿತು.

೩. ಎರಡನೆಯ ಕೈಸರ್ ವಿಲಿಯಂನ ವರ್ತನೆಯೂ ಯುದ್ಧಕ್ಕೆ ಇನ್ನೊಂದು ಮಹತ್ವದ ಕಾರಣವಾಯಿತು. ಅವನ ರಾಜಕೀಯ ಅಪನಂಬಿಕೆ ಮತ್ತು ಹಿಂಸಾತ್ಮಕ ವಿಭ್ರಾಂತಿಗಳು ಯುರೋಪನ್ನು ಭೀತಿಯ ವಾತಾವರಣಕ್ಕೆ ತಳ್ಳಿತು. ಅವನ ಸಾರ್ವಜನಿಕ ಭಾಷಣಗಳ ಕೆಲವು ಮಾತುಗಳು ಹುಚ್ಚುತನದ ಪರಮಾವಧಿಯದಾಗಿದ್ದವು. ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವೆ ಯುದ್ಧ ಅನಿವಾರ್ಯವೆಂದೂ ಸೇವಕರು ಸೇವಕರಾಗಿಯೇ ಇರಲು ಹುಟ್ಟಿದವರು ಆಳ್ವಿಕೆ ನಡೆಸುವುದಕ್ಕಲ್ಲ ಎಂದೂ ಅವನು ಬೋಧಿಸುತ್ತಿದ್ದನು. ಕೈಸರನು ಹಠವಾದಿಯಾಗಿದ್ದನು. ಜರ್ಮನಿಯು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರ ವಾಗಬೇಕೆಂದು ಅವನು ಬಯಸಿದ್ದನು. ‘‘ವಿಶ್ವಶಕ್ತಿ ಇಲ್ಲವೇ ಅಳಿವು’’ ಎಂಬುದು ಅವನು ನಂಬಿದ್ದ ತತ್ವವಾಗಿತ್ತು.

೪. ವಸಾಹತು ಮತ್ತು ವಾಣಿಜ್ಯ ಉತ್ಕರ್ಷದ ನಂತರ ವಸಾಹತುಗಳ ಅನ್ವೇಷಣೆ ಹಾಗೂ ವ್ಯಾಪಾರೋದ್ದಿಮೆಗಳ ಸಂಘರ್ಷ ಯುರೋಪಿನ ರಾಷ್ಟ್ರಗಳ ನಡುವೆ ಆರಂಭವಾಯಿತು. ಎಲ್ಲರನ್ನೂ ತೃಪ್ತಿಪಡಿಸುವಷ್ಟು ಸಂಪನ್ಮೂಲಗಳು ಇದ್ದುದರಿಂದ ಮೊದಮೊದಲಿಗೆ ಯಾವುದೇ ಸ್ಪರ್ಧೆಯಿರಲಿಲ್ಲ. ಆದರೆ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳನ್ನು ವಸಾಹತುಗೊಳಿಸಿದ ನಂತರ ಹೆಚ್ಚಿನ ಭೂಸಂಪತ್ತು ಅಲಭ್ಯವಾಯಿತು. ಇದು ಯುರೋಪಿನ ದೇಶಗಳ ನಡುವೆ ಸ್ಪರ್ಧೆಯನ್ನು ಉಂಟುಮಾಡಿತು. ಹೊಸ ಮಾರುಕಟ್ಟೆ ಗಳನ್ನು ಮತ್ತು ಕಚ್ಚಾವಸ್ತುಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ ಸ್ಪರ್ಧೆ ಅಧಿಕವಾಯಿತು. ಫ್ರಾಂಕೋ-ಜರ್ಮನ್ ಯುದ್ಧದ ನಂತರ ಜರ್ಮನಿಯು ಒಂದು ಮುಖ್ಯವಾದ ಉತ್ಪಾದಕ ರಾಷ್ಟ್ರವಾಯಿತು. ಶಿಕ್ಷಣ, ವೈಜ್ಞಾನಿಕ ಸಂಶೋಧನೆಗಳು ಮತ್ತು ರಾಜ್ಯದ ಅನುದಾನಿತ ಉದ್ಯಮಗಳು ಜರ್ಮನಿಯನ್ನು ಆರ್ಥಿಕ ಅಭಿವೃದ್ದಿಯೆಡೆಗೆ ಕೊಂಡೊಯ್ದವು. ಹಾಗಾಗಿ ಜರ್ಮನಿಯು ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ತೊಡಗಿತು. ಸಹಜವಾಗಿ ಈ ಬೆಳವಣಿಗೆಯು ಬ್ರಿಟಿಷ್ ಆರ್ಥಿಕ ವಲಯದಲ್ಲಿ ಭಯ ಮತ್ತು ಅಸೂಯೆಯ ವಾತಾವರಣವನ್ನು ಉಂಟುಮಾಡಿತು.

೫. ಮೊರೊಕ್ಕೋ ಬಿಕ್ಕಟ್ಟು ಪ್ರಥಮ ಮಹಾಯುದ್ಧದ ಇನ್ನೊಂದು ಕಾರಣವಾಗಿದೆ. ಫ್ರಾನ್ಸ್ ದೇಶದ ಮೊರೊಕ್ಕೋದಲ್ಲಿ ಮುಕ್ತ ವಹಿವಾಟು ನಡೆಸಲು ಬಯಸಿತ್ತು. ಫ್ರಾನ್ಸ್ ದೇಶವು ಈಜಿಪ್ಟನ್ನು ಇಂಗ್ಲೆಂಡಿನ ವಶಕ್ಕೆ ಒಪ್ಪಿಸಿ ಅದರ ವಿರೋಧವನ್ನು ನಿವಾರಿಸಿಕೊಂಡಿತು.

ಫ್ರಾನ್ಸ್‌ನ ವಿಸ್ತರಣವಾದಿಗಳು ಮೊರೊಕ್ಕೋದಲ್ಲಿ ನೆಲೆಯೂರಿ ಅದನ್ನು ಫ್ರೆಂಚ್‌ನ ಆಳ್ವಿಕೆಗೊಳಪಟ್ಟ ಪ್ರದೇಶವೆಂಬಂತೆ ಪರಿಗಣಿಸತೊಡಗಿದಾಗ ಮೊದಲನೆಯ ಮೊರೊಕ್ಕೋ ಬಿಕ್ಕಟ್ಟು ೧೯೦೫ (ಮಾರ್ಚ್ ೩೧)ರಲ್ಲಿ ಕಾಣಿಸಿಕೊಂಡಿತು. ಫ್ರಾನ್ಸಿನ ಸಖ್ಯ ರಾಷ್ಟ್ರ ವಾಗಿದ್ದ ರಷ್ಯಾದ ಮಿಲಿಟರಿ ದುರ್ಬಲತೆಯಿಂದಾಗಿ ಜರ್ಮನಿಯ ಆಕ್ರಮಣವನ್ನು ವಿರೋಧಿಸಲು ಫ್ರಾನ್ಸಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಅದು ಜರ್ಮನಿಗೆ ಶರಣಾಯಿತು, ಮತ್ತು ಮೊರೊಕ್ಕೋ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಕಾಂಗ್ರೆಸ್ಸಿಗೆ ಒಪ್ಪಿಸಲು ಒಪ್ಪಿಕೊಂಡಿತು. ಜನವರಿಯಿಂದ ೧೯೦೬ರ ಏಪ್ರಿಲ್ ತನಕ ಸ್ಪೆಯಿನ್‌ನ ಅಲ್ಗೆಸಿರಾಸ್‌ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಭೆಯಲ್ಲಿ ಮೊರೊಕ್ಕೋದ ಸಮಗ್ರತೆಯನ್ನು ಮತ್ತು ಸುಲ್ತಾನದ ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ವಾಗ್ದಾನವಾಯಿತು. ಸಹಿ ಹಾಕಿದ ರಾಷ್ಟ್ರಗಳ ವ್ಯಾಪಾರಸ್ಥರಿಗೆ ಮತ್ತು ಬಂಡವಾಳದಾರರಿಗೆ ಮುಕ್ತ ಅವಕಾಶದ ಭರವಸೆ ನೀಡಲಾಯಿತು.

ಮೊರೊಕ್ಕೋದ ಒಳಜಗಳ ಮತ್ತು ಫ್ರೆಂಚರ ವಿರುದ್ಧದ ದುರಾಕ್ರಮಣದಿಂದಾಗಿ ಫ್ರೆಂಚ್ ಸರಕಾರವು ೧೯೦೭ರ ಆಗಸ್ಟ್‌ನಲ್ಲಿ ಕಸಾಬ್ಲಾಂಕಾದಲ್ಲಿ ಭೂ ಸೈನ್ಯವನ್ನು ನಿಯಮಿಸಿತು. ಫ್ರೆಂಚ್ ಸರ್ಕಾರದ ಪಡೆಗಳು ಆ ಪ್ರದೇಶದಲ್ಲಿ ಶಾಶ್ವತವಾಗಿ ನೆಲೆಯೂರಿದ ವಿರುದ್ಧ ಜರ್ಮನಿಯು ಪ್ರತಿಭಟಿಸಿತು. ಅಂತಿಮವಾಗಿ ಈ ವಿವಾದವನ್ನು ಹೇಗ್ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ಮುಂದಕ್ಕೆ ಯಾವುದೇ ಅಪನಂಬಿಕೆಗಳು ಉಂಟಾಗದಂತೆ ಎಚ್ಚರ ವಹಿಸುವುದಾಗಿ ಫ್ರಾನ್ಸ್ ಮತ್ತು ಜರ್ಮನಿಗಳು ಒಪ್ಪಿಕೊಂಡವು.

ಆದರೆ ಈ ಹೊಂದಾಣಿಕೆಗಳು ಜರ್ಮನ್ ದೇಶಭಕ್ತರಿಗೆ ಮತ್ತು ಪ್ರಿನ್ಸ್ ವಾನ್ ಬುಲೋಗೆ ರುಚಿಸಲಿಲ್ಲ. ೧೯೧೧ರಲ್ಲಿ ಫ್ರಾನ್ಸ್ ದೇಶವು ಮೊರೊಕ್ಕೋದ ರಾಜಧಾನಿ ಫೆಜ್ ನಗರವನ್ನು ಆಕ್ರಮಿಸಿತು. ಜರ್ಮನಿ, ಫ್ರಾನ್ಸ್ ಗಳೆರಡರಲ್ಲಿಯೂ ಯುದ್ಧ ಸಿದ್ಧತೆಗಳು ತೀವ್ರಗೊಂಡವು. ಜಪಾನಿನ ಯುದ್ಧದ ನಂತರ ರಷ್ಯಾವು ಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಬ್ರಿಟೀಷ್ ವಿದೇಶಾಂಗ ಕಾರ್ಯದರ್ಶಿ ಎಡ್ವರ್ಡ್ ಕ್ರೇಯು ತನ್ನ ರಾಷ್ಟ್ರ ಫ್ರಾನ್ಸನ್ನು ಬೆಂಬಲಿಸುವುದಾಗಿ ಘೋಷಿಸಿದನು. ಜರ್ಮನಿಯು ಪೂರ್ಣ ವಾಗಿ ಯುದ್ಧವನ್ನು ಬಯಸಲಿಲ್ಲ ಮತ್ತು ಫ್ರಾಂಕೋ ಜರ್ಮನ್ ಸಮಾವೇಶವನ್ನು ಆಯೋಜಿಸುವುದರಲ್ಲಿ ತೃಪ್ತಿಪಟ್ಟಿತು. ಜರ್ಮನಿಯ ಮೇಲೆ ಫ್ರಾನ್ಸಿನ ಆಳ್ವಿಕೆ ಸ್ಥಾಪಿಸಿರುವುದನ್ನು ವಿರೋಧಿಸದಂತೆ ಜರ್ಮನಿಯು ಭರವಸೆ ನೀಡಿತು. ಮೊರೊಕ್ಕೋ ದಲ್ಲಿ ಮುಕ್ತ ಅವಕಾಶವನ್ನು ಕಾಯ್ದುಕೊಳ್ಳಲು ಫ್ರಾನ್ಸ್ ಒಪ್ಪಿಕೊಂಡಿತು. ಫ್ರಾನ್ಸ್ ಜಯಶಾಲಿಯಾದರೂ ಜರ್ಮನಿಯನ್ನು ದ್ವೇಷಿಸಿತು, ಜರ್ಮನಿಯ ದ್ವೇಷವನ್ನು ಕಟ್ಟಿಕೊಂಡಿತು.

೬. ಪೌರಾತ್ಯ ಸಮಸ್ಯೆಯು ಪ್ರಥಮ ಮಹಾಯುದ್ಧದ ಇನ್ನೊಂದು ಕಾರಣವಾಗಿದೆ. ಯುರೋಪಿನ ಶಕ್ತಿಗಳ ಸಂಘರ್ಷಾತ್ಮಕ ಹಿತಾಸಕ್ತಿಗಳಿಂದಾಗಿ ಬಾಲ್ಕನ್ ಸ್ಥಿತಿಯು ಭೀಕರಗೊಂಡಿತು. ಜರ್ಮನಿಯು ಬಾಲ್ಕನ್ ರಾಜ್ಯಗಳನ್ನು ಮತ್ತು ಅಟ್ಟೋಮನ್ ಸಾಮ್ರಾಜ್ಯವನ್ನು ಜರ್ಮನೀಕರಣಗೊಳಿಸಲು ಆಸಕ್ತವಾಗಿತ್ತು. ಹಾಗಾಗಿ ಪೂರ್ಣ ಸಾಮರಸ್ಯದಿಂದ ವರ್ತಿಸುತ್ತಿದ್ದ ಜರ್ಮನಿ ಮತ್ತು ಆಸ್ಟ್ರಿಯಾಗಳು ನಿಧಾನವಾಗಿ ಅವುಗಳ ರಾಜಕೀಯ ಮತ್ತು ಆರ್ಥಿಕ ಪ್ರಭಾವವನ್ನು ದಕ್ಷಿಣ-ಪೂರ್ವ ಯುರೋಪಿನಲ್ಲಿ ವಿಸ್ತರಿಸತೊಡಗಿದವು. ೧೮೯೮ರಲ್ಲಿ ಬರ್ಲಿನ್ ಮತ್ತು ವಿಯೆನ್ನಾದಿಂದ ಕಾನ್ ಸ್ಟಾಂಟಿನೋಪಲ್ ವರೆಗೆ ನೇರ ರೈಲ್ವೇ ಸಂಪರ್ಕ ಏರ್ಪಟ್ಟಿತು. ಏಷ್ಯಾಮೈನರ್ ಮತ್ತು ಯುಪ್ರಟೀಸ್, ಟೈಗ್ರೀಸ್‌ನ ಫಲವತ್ತಾದ ಕಣಿವೆಗಳ ಮೂಲಕ ಬಾಗ್ದಾದ್‌ವರೆಗೆ ರೈಲ್ವೇ ಹೆದ್ದಾರಿಯನ್ನು ನಿರ್ಮಿಸುವಲ್ಲಿ ಜರ್ಮನಿಯು ರಿಯಾಯಿತಿಯನ್ನು ಪಡೆಯಿತು. ಯುರೋಪಿನಿಂದ ಟರ್ಕರನ್ನು ಹೊರದಬ್ಬುವ ರಷ್ಯಾದ ನಿರ್ಧಾರಕ್ಕೆ ಟ್ಯುಟೋನಿಕ್ ಶಕ್ತಿಗಳು ಅಡ್ಡಿಯಾದವು. ಟ್ಯುಟೋನಿಕ್ ಶಕ್ತಿಗಳು ಟರ್ಕಿಯ ಸೈನ್ಯವನ್ನು ತರಬೇತುಗೊಳಿಸಲು ದಕ್ಷಿಣ-ಪೂರ್ವ ಯುರೋಪಿನಲ್ಲಿ ರಷ್ಯನ್ ಮತ್ತು ಬ್ರಿಟಿಷ್ ಎರಡರ ಪ್ರಭಾವವನ್ನು ಕಡಿಮೆಗೊಳಿಸುವಂತೆ ತನ್ನ ದೇಶವನ್ನು ತೊಡಗಿಸಲು ಟರ್ಕಿಯನ್ನು ಪ್ರೇರೇಪಿಸಿತು.

೧೯೦೪ರ ಬಲ್‌ಗ್ರೇಡ್ ಕ್ರಾಂತಿಯು ಸರ್ಬಿಯಾದಲ್ಲಿ ಅಸ್ಟ್ರಿಯನ ರಾಜಪ್ರಭುತ್ವ ವನ್ನು ಕೊನೆಗೊಳಿಸಿ ಸರ್ಬ್‌ಜನರ ರಾಷ್ಟ್ರೀಯವಾದಿ ಪ್ರಚಾರಕ್ಕೆ ಬೆಂಬಲಿಗನಾಗಿದ್ದ ಮತ್ತು ರಷ್ಯಾಕ್ಕೆ ವಿಧೇಯನಾಗಿದ್ದ ಕಿಂಗ್ ಪೀಟರ್‌ನನ್ನು ಸಿಂಹಾಸನಕ್ಕೆ ತಂದಿತು. ಬೋಸ್ನಿಯಾದ ಆಕ್ರಮಣವು ಪ್ರಥಮ ಮಹಾಯುದ್ಧಕ್ಕೆ ಕಾರಣವಾಯಿತು. ೧೮೭೮ರ ಕಾಂಗ್ರೆಸ್ ಸಭೆಯು ಆಸ್ಟ್ರಿಯಾಕ್ಕೆ ಬೋಸ್ನಿಯಾ ಮತ್ತು ಹರ್ಜೆ ಗೋವಿನಾಗಳನ್ನು ಆಡಳಿತಕ್ಕಾಗಿಯಷ್ಟೆ ನೀಡಿತ್ತು ಆಕ್ರಮಣಕ್ಕಾಗಿ ಅಲ್ಲ. ಆದರೆ ೧೯೦೮ರಲ್ಲಿ ಟರ್ಕಿಯ ಆಂತರಿಕ ಕ್ರಾಂತಿಯ ಉಪಯೋಗ ಪಡೆದು ಆಸ್ಟ್ರೀಯಾ, ಹಂಗೇರಿಗಳು ಬೋಸ್ನಿಯಾ ಮತ್ತು ಹರ್ಜೆಗೋವಿನಾಗಳು ಸರ್ಬ್ ಮಾತಾಡುವ ಪ್ರಾಂತ್ಯಗಳನ್ನು ತನ್ನೊಳಗೆ ಸೇರಿಸಿಕೊಂಡವು. ಇದು ಸರ್ಬಿಯಾ ಮತ್ತು ಮೋಂಟೆನಿಗ್ರೋ ದೇಶಗಳಲ್ಲಿ ಸಿಟ್ಟು ಮತ್ತು ಅಸಮಾಧಾನ ಎಬ್ಬಿಸಿತು. ರಷ್ಯಾವು ಆ ಕೂಡಲೇ ಸರ್ಬ್ ರಾಷ್ಟ್ರಗಳಲ್ಲಿ ರಕ್ಷಿಸಲು ಮತ್ತು ಆಸ್ಟ್ರಿಯನ್ನರ ದುರಾಕ್ರಮಣ ತಡೆಯೊಡ್ಡಲು ಕ್ರಮಗಳನ್ನು ಕೈಗೊಂಡಿತು. ಹೀಗೆ ರಷ್ಯಾವು ಕಾರ್ಯನಿರತವಾದಾಗ ಆಸ್ಟ್ರಿಯಾ ಮತ್ತು ಹಂಗೇರಿಗಳಿಗೆ ಪೂರ್ಣ ಮಿಲಿಟರಿ ಬೆಂಬಲ ನೀಡುವ ತನ್ನ ಇರಾದೆಯನ್ನು ಜರ್ಮನಿಯು ಘೋಷಿಸಿತು. ರಷ್ಯಾವು ಜಪಾನ್ ಯುದ್ಧದಿಂದ ಪೂರ್ಣವಾಗಿ ಚೇತರಿಸಿಕೊಂಡಿರದ ಕಾರಣ ಸುಮ್ಮನಿರಬೇಕಾಯಿತು. ಹಾಗಿದ್ದರೂ ರಷ್ಯಾದ ಪ್ಯಾನ್ ಸ್ಲಾವಿಸ್ಟರು ಜರ್ಮನ್ನರ ಈ ಅವಮಾನವನ್ನು ಮರೆತಿರಲಿಲ್ಲ. ಭವಿಷ್ಯದಲ್ಲಿ ಇಂತಹ ಅವಮಾನ ಗಳನ್ನು ತಡೆಯಲು ರಷ್ಯಾವು ತನ್ನ ಸೈನ್ಯವನ್ನು ಪುನರ್ ಸಂಘಟಿಸಲು ಮತ್ತು ಶಸ್ತ್ರಾಸ್ತ್ರ ಸಿದ್ಧತೆಯಲ್ಲಿ ತೊಡಗಿತು.

೧೯೧೨-೧೩ರಲ್ಲಿ ಸರ್ಬಿಯಾ, ಮೊಂಟೆನಿಗ್ರೋ, ಬಲ್ಗೇರಿಯಾ, ಗ್ರೀಸ್‌ಗಳ ಬಾಲ್ಕನ್ ಸಂಸ್ಥಾನಗಳು ಟರ್ಕಿಯನ್ನು ಆಕ್ರಮಿಸಿ ಸೋಲಿಸಿದಾಗ ಈ ಸಮಸ್ಯೆಯು ಯುದ್ಧಕ್ಕೆ ಒಂದು ಕಾರಣವಾಯಿತು. ಈ ಸಮಯದಲ್ಲಿ ಆಕ್ರಮಿತ ಟರ್ಕಿಯ ಸಂಸ್ಥಾನಗಳನ್ನು ವಿಜಯಶಾಲಿ ರಾಷ್ಟ್ರಗಳು ಹೇಗೆ ಹಂಚಿಕೊಳ್ಳಬೇಕೆಂಬುದು ಪ್ರಶ್ನೆ ಯಾಯಿತು. ಸರ್ಬಿಯಾದ ಯುಗೋಸ್ಲಾನ್ ರಾಜ್ಯಗಳು ಮತ್ತು ಮೊಂಟೆನಿಗ್ರೋಗಳು ತಾವು ಬಯಸಿದಷ್ಟು ಸಂಸ್ಥಾನಗಳನ್ನು ವಶಪಡಿಸಿಕೊಳ್ಳುವುದನ್ನು ಆಸ್ಟ್ರಿಯಾ ಮತ್ತು ಹಂಗೇರಿಗಳು ಇಷ್ಟಪಡಲಿಲ್ಲ. ಆದರೆ ಅವರುಗಳಿಗೆ ರಷ್ಯಾದ ಬೆಂಬಲವಿತ್ತು. ಹಾಗಾಗಿ ರಷ್ಯಾ ಆಸ್ಟ್ರಿಯಾಗಳ ಯುದ್ಧ ಆರಂಭವಾಯಿತು. ಅದೃಷ್ಟವಶಾತ್, ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಸರ್ ಎಡ್ವರ್ಡ್ ಗ್ರೇ ತಮ್ಮ ಸಮ್ಮೇಳನ ಸರಣಿಗಳ ಹಾಗೂ ಸಮಯೋಜಿತ ಹೊಂದಾಣಿಕೆಗಳ ಮೂಲಕ ಈ ಯುದ್ಧವನ್ನು ತಡೆಯಲು ಸಫಲರಾದರು. ಇದರಿಂದಾಗಿ ತಮ್ಮ ಸಾಮ್ರಾಜ್ಯದ ಬಹುಪಾಲು ಭಾಗ ಕೈ ತಪ್ಪಿ ಹೋಗುವುದು ಎಂಬ ಭೀತಿಯಿಂದಾಗಿ ಜರ್ಮನ್ – ಆಸ್ಟ್ರೇಲಿಯಾಗಳು ಅಸಮಾಧಾನ ಗೊಂಡವು. ೧೯೧೩ರಲ್ಲಿ ಸರ್ಬಿಯಾದ ಆಕಾಂಕ್ಷೆಗೆ ತಡೆಯೊಡ್ಡಬೇಕೆಂದು ಆಸ್ಟ್ರಿಯಾವು ತನ್ನ ಮಿತ್ರ ರಾಷ್ಟ್ರಗಳಿಗೆ ರಹಸ್ಯ ಸೂಚನೆ ನೀಡಿತು.

೭. ಯುದ್ಧ ಸನ್ನದ್ಧತೆಯು ಪ್ರಥಮ ಮಹಾಯುದ್ಧದ ಇನ್ನೊಂದು ಕಾರಣ. ತತ್ಕಾಲಕ್ಕೆ ಶಾಂತಿ ನೆಲೆಸಿದ್ದರೂ ಯಾವ ಕ್ಷಣದಲ್ಲಿ ಯುದ್ಧ ಭುಗಿಲೇಳಬಹುದು ಎಂಬುದು ಯಾರಿಗೂ ತಿಳಿದಿರಲಿಲ್ಲ. ಪ್ರಬಲ ರಾಷ್ಟ್ರಗಳು ಅವಿರತವಾಗಿ ತಮ್ಮ ಸೈನ್ಯ ಬಲಗಳನ್ನು ಬಲಪಡಿಸಿಕೊಳ್ಳುತ್ತಿದ್ದವು. ೧೯೧೪ರ ಜೂನ್ ನಲ್ಲಿ ಪೆಟ್ರೋಗಾರ್ಡ್ ಪತ್ರಿಕೆಯು ‘‘ರಷ್ಯಾ ಸಿದ್ಧವಾಗಿದೆ, ಅಂತೆಯೇ ಫ್ರಾನ್ಸ್ ಕೂಡಾ ಸಿದ್ಧವಾಗಿದೆ’’ ಎಂದು ಘೋಷಿಸಿತು. ಅಲ್ಲದೆ ಈ ಸಮಯದಲ್ಲಿ ಪತ್ರಿಕೆಗಳೂ ಜನರಲ್ಲಿ ದ್ವೇಷ, ವಿಷ ಭಾವನೆಗಳನ್ನು ಬಿತ್ತಿದವು. ಅಲ್ಲದೆ ಎರಡೂ ರಾಷ್ಟ್ರಗಳ ಪತ್ರಿಕೆಗಳು ವಿವಾದಾಸ್ಪದ ವಿಷಯಗಳನ್ನೆತ್ತಿಕೊಂಡು ಪತ್ರಿಕಾ ಸಮರವನ್ನು ಪ್ರಾರಂಭಿಸಿದವು.

೮. ಆಸ್ಟ್ರಿಯಾದ ಆರ್ಚ್‌ಡ್ಯೂಕನ ಕಗ್ಗೊಲೆಯು ಪ್ರಥಮ ವಿಶ್ವ ಸಮರದ ತತ್‌ಕ್ಷಣದ ಮತ್ತು ಸ್ಫೋಟಕ ಕಾರಣವಾಯಿತು. ೧೯೧೪ರ ಜೂನ್ ೨ ರಂದು ಬೋಸ್ನಿಯಾದ ಸೆರಾಜಿವೊ ಪಟ್ಟಣಕ್ಕೆ ಭೇಟಿ ನೀಡಿದ ಆಸ್ಟ್ರಿಯಾದ ಯುವರಾಜ ಆರ್ಚ್‌ಡ್ಯೂಕ್ ಫ್ರಾನ್ಸಿಸ್ ಫರ್ಡಿನಂಡ್ ಮತ್ತು ಅವನ ಪತ್ನಿಯನ್ನು ಇಬ್ಬರು ಯುಗೋಸ್ಲಾವಿಯನ್ನರು ಕೊಲೆಗೈದರು. ಕೊಲೆಯಾದ ಫ್ರಾನ್ಸಿಸನು ಆಸ್ಟ್ರಿಯಾದ ಚಕ್ರವರ್ತಿ ಫ್ರಾನ್ಸಿಸ್ ಜೋಸೆಫ್‌ನ ಅಳಿಯ ಹಾಗೂ ಉತ್ತರಾಧಿಕಾರಿಯಾಗಿದ್ದ ಕಾರಣ ಈ ಘಟನೆಯು ಆಸ್ಟ್ರಿಯಾದ ಪರಿಸ್ಥಿತಿಯನ್ನು ವಿಷಮ ಸ್ಥಿತಿಗೆ ತಂದೊಡ್ಡಿತು. ಕೊಲೆಗಾರರು ಆಸ್ಟ್ರಿಯನ್ನರಾದರೂ ಅವರು ಸರ್ಬಿಯಾ ಜನಾಂಗಕ್ಕೆ ಸೇರಿದವರಾಗಿದ್ದರು. ಅಲ್ಲದೆ ಸರ್ಬಿಯಾದೊಂದಿಗಿನ ಆಸ್ಟ್ರಿಯನ್ನರ ಸಂಬಂಧ ಉತ್ತಮವಾಗಿರದ ಕಾರಣ ಈ ಕುರಿತು ಸರ್ಬಿಯಾಕ್ಕೆ ಶಿಕ್ಷೆಯಾಗುವುದು ಅನಿವಾರ್ಯವೆಂದು ಆಸ್ಟ್ರಿಯನ್ನರು ಭಾವಿಸಿದರು.

ವಾಸ್ತವವಾಗಿ ಕೊಲೆಗಾರರು ಆಸ್ಟ್ರೋ-ಹಂಗೇರಿಗೆ ಸೇರಿದವರಾಗಿದ್ದರು. ಆಸ್ಟ್ರಿಯಾದ ಒಬ್ಬ ಗೂಢಚಾರನ ಮೂಲಕ ಈ ಕೊಲೆಯ ಹಿನ್ನೆಲೆಯಲ್ಲಿ ಸರ್ಬಿಯಾದ ಕೈವಾಡವಿಲ್ಲವೆಂದು ರುಜುವಾತಾದರೂ, ಆಸ್ಟ್ರಿಯಾದ ವಿದೇಶಾಂಗ ಮಂತ್ರಿ ಕೌಂಟ್ ಬರ್ಕ್ ಟೋಲ್ಡನು ಈ ವಿಷಯವನ್ನು ಮುಚ್ಚಿಟ್ಟು ಜನರಲ್ಲಿ ಸರ್ಬಿಯಾವೇ ಅಪರಾಧಿಯೆಂಬ ಭಾವನೆಯು ಬೆಳೆಯುವಂತೆ ಮಾಡಿದನು. ಅವನ ಉದ್ದೇಶದ ಪ್ರಕಾರ ಈ ವಿಚಾರವು ಸರ್ಬಿಯಾವನ್ನು ಶಿಕ್ಷಿಸಲು ಆಸ್ಟ್ರಿಯಾಕ್ಕೆ ಪೂರಕ ಕಾರಣವಾಗುವುದಲ್ಲದೆ ಸರ್ಬಿಯವನ್ನು ಶಾಶ್ವತವಾಗಿ ವಿಕಲಾಂಗಗೊಳಿಸಲು ಇದೇ ಸೂಕ್ತ ಸುಸಂದರ್ಭ ಎಂಬುದಾಗಿತ್ತು.

೧೯೧೪ರ ಜುಲೈ ೨೩ರಂದು ಕೌಂಟ್ ಬರ್ಕ್ ಟೋಲ್ಡನು ಆಸ್ಟ್ರಿಯನ್ ವಿರೋಧಿ ಪತ್ರಿಕೆಗಳನ್ನು, ಪ್ರಕಟಣೆಗಳನ್ನು, ಶಿಕ್ಷಕರನ್ನು, ಪಠ್ಯಪುಸ್ತಕಗಳನ್ನು ಬಹಿಷ್ಕರಿಸುವ ಬೇಡಿಕೆಗಳನ್ನು ಒಳಗೊಂಡ ಅಂತಿಮ ಸೂಚನೆಯನ್ನು ಸರ್ಬಿಯಾಕ್ಕೆ ಕಳಿಹಿಸಿದನು. ವಾಸ್ತವವಾಗಿ ಇದು ಸರ್ಬಿಯಾದ ಸ್ವಾತಂತ್ರ್ಯವನ್ನು ಕಸಿಯುವ ಹುನ್ನಾರವಾಗಿತ್ತು. ಸರ್ಬಿಯಾವು ಈ ಸೂಚನೆಗೆ ೪೮ ಗಂಟೆಗಳೊಳಗೆ ಉತ್ತರಿಸಬೇಕಿತ್ತು. ತನ್ನ ರಾಷ್ಟ್ರೀಯ ಗೌರವಕ್ಕೆ ಕುಂದು ತರುವ ಸೂಚನೆಗಳೆಂಬ ಕಾರಣದಿಂದ ಸರ್ಬಿಯಾವು ೧೯೧೪ರ ಜುಲೈ ೨೫ ರಂದು ಅದರಲ್ಲಿನ ಕೆಲವು ಬೇಡಿಕೆಗಳನ್ನು ತಿರಸ್ಕರಿಸಿತು. ಆದರೆ ಈ ಪ್ರಶ್ನೆಗಳನ್ನು ಹೇಗ್ ನ್ಯಾಯಾಲಯದ ಅಥವಾ ಪ್ರಮುಖ ರಾಷ್ಟ್ರಗಳ ಮುಂದಿಡುವುದಾಗಿ ಒಪ್ಪಿಕೊಂಡಿತು. ರಷ್ಯಾ ಮತ್ತು ಇಂಗ್ಲೆಂಡ್‌ಗಳು ಮಾತುಕತೆಗೆ ಸಮಯಾವಕಾಶ ಬೇಡಲು ಹೇಳಿಕೊಂಡವು. ಆಸ್ಟ್ರಿಯಾವು ಈ ಉತ್ತರವನ್ನು ಪಲಾಯನವಾದ ಹಾಗೂ ಅತೃಪ್ತಿಕರವೆಂದು ಪರಿಗಣಿಸಿ ಸರ್ಬಿಯಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡು ಜುಲೈ ೨೮ ರಂದು ಯುದ್ಧ ಘೋಷಣೆ ಮಾಡಿತು.

ರಷ್ಯಾವು ಈಗ ಸರ್ಬಿಯಾದ ಹಿರಿ ಸಹೋದರಂತೆ  ವರ್ತಿಸಿ, ಸ್ಲಾವ್ ರಾಜಧಾನಿಯನ್ನು  ಆಕ್ರಮಿಸದಿರುವಂತೆ ಆಸ್ಟ್ರಿಯಾವನ್ನು ಎಚ್ಚರಿಸಿತು. ಯುದ್ಧಕ್ಕಾಗಿ ಎಂಬಂತೆ ರಷ್ಯಾವು ತನ್ನೆಲ್ಲ ಸೈನ್ಯದ ಒಗ್ಗೂಡುವಿಕೆಗೆ ಆಜ್ಞಾಪಿಸಿತು. ಜರ್ಮನಿಯು ಆಸ್ಟ್ರಿಯಾದ ನೆರವಿಗೆ ನಿಂತು ಯುದ್ಧ ಸಿದ್ಧತೆ ಕೊನೆಗೊಳಿಸುವಂತೆ ರಷ್ಯಾವನ್ನು ಕೇಳಿಕೊಂಡಿತು. ಆದರೆ ರಷ್ಯಾವು ಅದನ್ನು ತಿರಸ್ಕರಿಸಿತು. ಆದ್ದರಿಂದ ಜರ್ಮನಿಯು ರಷ್ಯಾದ ಮೇಲೆ ೧೯೧೪ರ ಅಗಸ್ಟ್ ೧ರಂದು ಯುದ್ಧ ಘೋಷಿಸಿತು. ಫ್ರಾನ್ಸ್ ದೇಶವು ರಷ್ಯಾದ ಪರವಾಗಿದ್ದುದರಿಂದ, ಅದು ರಷ್ಯಾಕ್ಕೆ ಸಹಾಯ ಮಾಡಲಿರುವುದೇ ಎಂದು ಜರ್ಮನಿಯು ಫ್ರೆಂಚ್ ಸರ್ಕಾರದಿಂದ ಉತ್ತರ ಬಯಸಿತು. ಫ್ರಾನ್ಸ್ ದೇಶವು ತಟಸ್ಥವಾಗಿರಲು ಒಪ್ಪದಾದಾಗ ಜರ್ಮನಿಯು ಅದರ ಮೇಲೆ ೧೯೧೪ರ ಆಗಸ್ಟ್ ೩ರಂದು ಯುದ್ಧ ಘೋಷಿಸಿತು. ಜರ್ಮನಿಯು ಆಸ್ಟ್ರಿಯಾದ, ರಷ್ಯಾವು ಸರ್ಬಿಯಾದ ಬೆಂಬಲಕ್ಕೆ ನಿಂತಾಗ ಇಟಲಿ, ಫ್ರಾನ್ಸ್, ಬ್ರಿಟನ್, ಅಮೆರಿಕಾ, ಜಪಾನ್ ಮುಂತಾದ ರಾಷ್ಟ್ರಗಳು ಯುದ್ಧ ಕಣಕ್ಕಿಳಿದವು. ಒಂದು ಬಣದಲ್ಲಿ ಆಸ್ಟ್ರಿಯಾ, ಜರ್ಮನಿ, ಬಲ್ಗೇರಿಯಾ, ಟರ್ಕಿಗಳಂತಹ ದೇಶಗಳಿದ್ದರೆ ಅವುಗಳ ವಿರುದ್ಧದ ಬಣದಲ್ಲಿ ರಷ್ಯಾ, ಫ್ರಾನ್ಸ್, ಬ್ರಿಟನ್, ಅಮೆರಿಕಾ, ಜಪಾನ್ , ಕೆನಡಾ, ಚೈನಾ ಮತ್ತಿತರ ರಾಷ್ಟ್ರಗಳಿದ್ದವು.

ಜರ್ಮನಿ, ಆಸ್ಟ್ರಿಯಾ-ಹಂಗೇರಿ ಮತ್ತು ರಷ್ಯಾಗಳೇ ಪ್ರಥಮ ಮಹಾಯುದ್ಧದ ಮುಖ್ಯ ಕಾರಣಗಳೆಂದರೂ, ಒಟ್ಟಿನಲ್ಲಿ ಈ ಕೆಳಗಿನ ಮೂಲಭೂತ ಕಾರಣಗಳೂ ಮುಖ್ಯವಾಗಿವೆ-

೧. ಅಂತಾರಾಷ್ಟ್ರೀಯ ಅರಾಜಕತೆ.

೨. ಪ್ರಾಂತ್ಯಗಳ ಬಗೆಗಿನ ರಾಷ್ಟ್ರೀಯ ಸಮಸ್ಯೆಗಳು.

೩. ಯುದ್ಧವೆಂದರೆ ‘ಬಲಶಾಲಿಯ ಉಳಿವು’ ಎಂಬ ತಪ್ಪುಭಾವನೆ.

೪. ರಾಷ್ಟ್ರೀಯ ಘನತೆಯ ತಪ್ಪು ಗ್ರಹಿಕೆ.

೫. ಮಿಲಿಟರಿ ಪ್ರಾಬಲ್ಯ.

೬. ನೌಕಾ ಪ್ರಾಬಲ್ಯ.

೭. ರಹಸ್ಯ ರಾಜತಾಂತ್ರಿಕ ಒಪ್ಪಂದಗಳು ಇತ್ಯಾದಿ.

ಯುದ್ಧದ ನಡೆ

ಪ್ರಥಮ ಜಾಗತಿಕ ಯುದ್ಧವು ಭೂ, ಜಲ ಮತ್ತು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಯುದ್ಧ ವಿಮಾನಗಳನ್ನು ಉಪಯೋಗಿಸಿಕೊಂಡ ಯುದ್ಧವಾಗಿದೆ. ಜರ್ಮನಿಯು ಹೊಸ ಮತ್ತು ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು, ಯುದ್ಧ ವಾಹನಗಳನ್ನು, ಮಾರಕ ಶೆಲ್ ಗಳನ್ನು, ವಿಷಾನಿಲ, ಮೆಷಿನ್‌ಗನ್‌ಗಳನ್ನು ಬಳಸಿಕೊಂಡಿತು. ಜರ್ಮನಿಯ ಜಲಾಂತರ್ಗಾಮಿ ಗಳು ಮಿತ್ರ ರಾಷ್ಟ್ರಗಳ ನೌಕೆಗಳನ್ನು ನಾಶಪಡಿಸಿದವು. ಬೇಕಾಬಿಟ್ಟಿ ಬಾಂಬ್‌ಗಳನ್ನು ವಿಮಾನಗಳ ಮೂಲಕ ಪ್ರಯೋಗಿಸಲಾಯಿತು. ಹೀಗೆ ಯುದ್ಧವು ಭೀಕರವಾಗಿ ಅಸಂಖ್ಯ ಜನರನ್ನು ಬಲಿ ತೆಗೆದುಕೊಂಡಿತು. ಆರಂಭದಲ್ಲಿ ಜರ್ಮನಿ ಜಯಶಾಲಿಯಾಗುತ್ತ ಬಂತು. ಅನಂತರ ನೌಕಾ ಪ್ರಾಬಲ್ಯ ಮತ್ತು ಸಮೃದ್ಧತೆಯಿಂದಾಗ ಮಿತ್ರ ರಾಷ್ಟ್ರಗಳ ಕೈಮಿಗಿಲಾಯಿತು. ಅಮೆರಿಕಾದ ಪ್ರವೇಶದ ಬಳಿಕವಂತೂ ಮಿತ್ರರಾಷ್ಟ್ರಗಳ ಯಶಸ್ಸು ನಿಶ್ಚಿತವಾಯಿತು. ಜರ್ಮನಿಯು ಹೀನಾಯ ಸೋಲನ್ನನುಭವಿಸಿತು ಮತ್ತು ನವೆಂಬರ್ ೧೯೧೮ರಲ್ಲಿ ಬೇಷರತ್ತಾಗಿ ಶರಣಾಯಿತು.

ವರ್ಸೈಲ್ಸ್ ಒಪ್ಪಂದ೧೯೧೯

ವಿಜೇತ ಮಿತ್ರರಾಷ್ಟ್ರಗಳು ಶಾಂತಿ ಸ್ಥಾಪನೆಯ ಕರಾರುಗಳನ್ನು ನಿವಾರಿಸಲು ೧೯೧೯ರ ಜನವರಿ ೧೮ರಂದು ಪ್ಯಾರಿಸ್‌ನಲ್ಲಿ ಸಭೆ ಸೇರಿದವು. ಮೂವತ್ತೆರಡು ರಾಷ್ಟ್ರಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಪ್ರಧಾನ ಮಂತ್ರಿಗಳು, ರಾಜಕೀಯ ಮುಖಂಡರು, ವಿದೇಶಾಂಗ ಮಂತ್ರಿಗಳು ಮತ್ತು ರಾಯಭಾರಿಗಳು ಸೇರಿದ್ದರು. ಅಮೆರಿಕಾದ ವುಡ್ರೋವಿಲ್ಸನ್, ಇಂಗ್ಲೆಂಡಿನ ಲ್ಯಾಯ್ಡಾ ಜಾರ್ಜ್, ಫ್ರಾನ್ಸಿನ ಜಾರ್ಜ್ ಕ್ಲೆಮೆನ್ಸಿಯೋ, ಇಟಲಿಯ ಒರ್ಲೆಡೋ, ಗ್ರೀಸ್‌ನ ವೆನಿಜೆಲೋಸ್, ಜಪಾನಿನ ಮಾರ್ಕ್ವಿಸ್ ಸೇನೋಯ್ ಅವರಲ್ಲಿ ಮುಖ್ಯರಾಗಿದ್ದರು. ಶ್ರೇಷ್ಠ ಆದರ್ಶವಾದಿಯೂ, ಶಾಂತಿಪ್ರಿಯನೂ ಆಗಿದ್ದ ವುಡ್ರೋವಿಲ್ಸನ್‌ನು ನಡೆದ ಯುದ್ಧವನ್ನು ‘‘ಯುದ್ಧ ಕೊನೆಗೊಳಿಸಲು ನಡೆದ ಯುದ್ಧ’’ವೆಂದು ಪರಿಗಣಿಸಿ, ಜಗತ್ತನ್ನು ಪ್ರಜಾಪ್ರಭುತ್ವಕ್ಕೆ ಅನುವಾಗುವಂತೆ ಮಾಡಬೇಕೆಂದು ಬಯಸಿದ್ದನು. ಅವನು ತನ್ನ ಹದಿನಾಲ್ಕು ಅಂಶಗಳ ಕಾರ್ಯಯೋಜನೆಯನ್ನು ಮುಂದಿರಿಸಿದನು. ಆದರೆ ಕ್ಲೆಮೆನ್ಸಿಯೋ, ಲ್ಯಾಯ್ಡಾ ಜಾರ್ಜ್ ಮುಂತಾದ ನಾಯಕರು ಜರ್ಮನಿಯನ್ನು ಇನ್ನೂ ದ್ವೇಷಿಸುತ್ತಿದ್ದರು. ‘‘ಕೈಸರನನ್ನು ಗಲ್ಲಿಗೇರಿಸಿ’’, ‘‘ಜರ್ಮನ್ನರು ಯುದ್ಧದ ಫಲವುಣ್ಣಲಿ’’ ‘‘ಜರ್ಮನರು ನಾಶವಾಗಲಿ’’ ಎಂಬುದು ಅವರ ಘೋಷಣೆಗಳಾದವು. ಯುದ್ಧವೇ ಒಂದು ದುರಂತವಾಗಿತ್ತು, ಆದರೆ ಅದರ ನಂತರದ ಶಾಂತಿ ಒಪ್ಪಂದಗಳು ಇನ್ನೂ ಹೆಚ್ಚಿನ ದುರಂತವಾಗಿತ್ತು. ಅಂತಿಮವಾಗಿ ಐದು ಒಪ್ಪಂದಗಳು ರೂಪುಗೊಂಡವು. ಅವು ಜರ್ಮನಿಯೊಂದಿಗೆ ವರ್ಸೈಲ್ಸ್ ಒಪ್ಪಂದ, ಆಸ್ಟ್ರಿಯಾದೊಂದಿಗೆ ಸೈಂಟ್ ಜರ್ಮೇನ್ ಒಪ್ಪಂದ, ಹಂಗೇರಿಯಾದೊಂದಿಗಿನ ಟ್ರಿಯೊನಾನ್ ಒಪ್ಪಂದ, ಬಲ್ಗೇರಿಯಾದೊಂದಿಗಿನ ನೆವಿಲ್ಲೀ ಒಪ್ಪಂದ ಮತ್ತು ಟರ್ಕಿಯೊಂದಿಗೆ ಸರ್ವ್ಸ್ ಮತ್ತು ಲೌಸಾನ್ ಒಪ್ಪಂದ.

ವರ್ಸೈಲ್ಸ್ ಒಪ್ಪಂದದ ಕರಾರುಗಳು

ಜರ್ಮನಿಯೊಡನೆ ಶಾಂತಿಯ ಕರಾರುಗಳನ್ನು ವರ್ಸೈಲ್ಸ್ ಒಪ್ಪಂದವು ಒಳಗೊಂಡಿತ್ತು. ಮಿತ್ರರಾಷ್ಟ್ರಗಳೊಡನೆ ಚರ್ಚಿಸಲು ಜರ್ಮನಿಗೆ ಯಾವುದೇ ಅವಕಾಶ ಕೊಡದೆ, ಪ್ರಸ್ತಾಪಗಳನ್ನು ಸ್ವೀಕರಿಸುವಂತೆ, ಕೊನೆಯದಾಗಿ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ವರ್ಸೈಲ್ಸ್ ಒಪ್ಪಂದಕ್ಕೆ ೧೯೧೯ರ ಜೂನ್ ೨೮ರಂದು ಸಹಿ ಹಾಕಲಾಯಿತು.

೧. ಜರ್ಮನಿಯು ತನ್ನ ಪ್ರಾಂತ್ಯಗಳನ್ನು ಫ್ರಾನ್ಸಿಗೆ ಬಿಟ್ಟುಕೊಡಬೇಕಾಗಿ ಬಂತು. ಅಲ್ಸೇಸ್ ಮತ್ತು ಲೊರೈಸ್ ಪ್ರಾಂತ್ಯಗಳನ್ನು ಫ್ರಾನ್ಸ್ ಪಡೆದುಕೊಂಡಿತು. ೧೫ ವರ್ಷಗಳ ತನಕ ಜರ್ಮನಿಯು ಖನಿಜ ಸಂಪದ್ಭರಿತವಾದ ಸ್ಹಾರ್ ಕಣಿವೆಯನ್ನು ಫ್ರಾನ್ಸಿಗೆ ಬಿಟ್ಟಕೊಡಬೇಕಾಯಿತು.

೨. ರಷ್ಯಾದಿಂದ ಪ್ರತ್ಯೇಕಗೊಂಡು ಪೋಲೆಂಡ್ ಪ್ರತ್ಯೇಕ ರಾಷ್ಟ್ರವಾಯಿತು. ಪ್ರಷ್ಯಾ ಮತ್ತು ಆಷ್ಟ್ರಿಯಾಗಳನ್ನು ಸ್ವತಂತ್ರ ಸಂಸ್ಥಾನಗಳನ್ನಾಗಿಸಲಾಯಿತು. ಪೋಸೆನ್ ಮತ್ತು ಪಶ್ಚಿಮ ಪ್ರಷ್ಯಾದ ದೊಡ್ಡ ಭಾಗವನ್ನು ಪೋಲೆಂಡ್ ಪಡೆಯಿತು. ಡೇನ್‌ಜಿಗ್ ನಗರವನ್ನು ‘ಮುಕ್ತ ನಗರ’ವೆಂದು ಘೋಷಿಸಲಾಯಿತು.

೩. ಡೇನ್‌ಜಿಗ್ ನಗರವನ್ನು ಜರ್ಮನಿಯಿಂದ ಮುಕ್ತ ನಗರವೆಂದು ಪ್ರತ್ಯೇಕಿಸಿ ರಾಷ್ಟ್ರ ಸಂಘದ ಮೇಲುಸ್ತುವಾರಿಗೆ ವಹಿಸಲಾಯಿತು. ಡೇನಜಿಗ್ ನಗರದಲ್ಲಿ ಪೋಲೆಂಡ್ ವಿಶೇಷ ಹಕ್ಕುಗಳನ್ನು ಪಡೆಯಿತು.

೪. ಜರ್ಮನಿಯು ಸಾಗರೋತ್ತರ ವಸಾಹತುಗಳ ಮೇಲೆ ಹತೋಟಿ ಕಳೆದುಕೊಂಡಿತು. ರೈನ್ ಭೂ ಪ್ರದೇಶವನ್ನು ನಿಶ್ಯಸ್ತ್ರೀಕರಣಗೊಳಿಸಬೇಕಾಗಿ ಬಂತು.

೫. ಉತ್ತರ ಫ್ರಾನ್ಸಿನ ಕಲ್ಲಿದ್ದಲು ಗಣಿಗಳನ್ನು ನಾಶಪಡಿಸಿದ್ದಕ್ಕಾಗಿ ಪರಿಹಾರವೆಂಬಂತೆ ಜರ್ಮನಿಯು ಸ್ಹಾರ್ ಪ್ರದೇಶದ ಕಲ್ಲಿದ್ದಲು ಗಣಿಗಳ ಅಧಿಕಾರವನ್ನು ಶಾಶ್ವತವಾಗಿ ಫ್ರಾನ್ಸಿಗೆ ಒಪ್ಪಿಸಬೇಕಾಯಿತು.

೬. ಮೋರ್ಸೆನೆಟ್, ಇಯೋಪೆನ್, ಮಲ್ಮೆಡಿ ಪ್ರದೇಶಗಳು ಬೆಲ್ಜಿಯಂಗೆ ಸೇರ್ಪಡೆಯಾದವು.

೭. ಮೆಮೆಲ್ ನಗರವು ಲಿಥುವೇನಿಯಾಕ್ಕೆ ಸೇರ್ಪಡೆಗೊಂಡಿತು.

೮. ಮೇಲಿನ ಸಿಲೇಸಿಯಾದ ಭಾಗವನ್ನು ಜೆಕೋಸ್ಲಾವಾಕಿಯಾ ಪಡೆದುಕೊಂಡಿತು.

೯. ಉತ್ತರ ಶೆಲ್ಸ್‌ಂಗ್ ಪ್ರದೇಶವು ಡೆನ್ಮಾರ್ಕಿಗೆ ಹಸ್ತಾಂತರವಾಯಿತು.

೧೦. ಯುರೋಪಿನ ಭೂ ಪ್ರಾಂತ್ಯಗಳನ್ನಲ್ಲದೆ, ಜರ್ಮನಿಯು ಸಾಗರೋತ್ತರ ವಸಾಹತು ಗಳನ್ನೂ ಕಳೆದುಕೋಂಡಿತು. ಈ ವಸಾಹತುಗಳ ಆಡಳಿತ ಉಸ್ತುವಾರಿಯನ್ನು ‘ಮ್ಯಾಂಡೇಟ್ ಪದ್ಧತಿ’ಯಂತೆ ಮಿತ್ರರಾಷ್ಟ್ರಗಳು ನೋಡಿಕೊಳ್ಳಲಾರಂಭಿಸಿದವು.

೧೧. ಜರ್ಮನಿಯ ಮಿಲಿಟರಿ ಶಕ್ತಿಯನ್ನು ಶಾಶ್ವತವಾಗಿ ಕೆಡವಿ ಹಾಕಲು ಪ್ರಯತ್ನಗಳು ನಡೆದವು. ಶಸ್ತ್ರಾಸ್ತ್ರ ಉತ್ಪಾದನೆಯ ಮೇಲೆ ನಿಯಂತ್ರಣ ಹೇರಲಾಯಿತು. ಯುದ್ಧ ಸಾಮಗ್ರಿಗಳ ಆಮದು ರಫ್ತು ವ್ಯಾಪಾರವನ್ನು ತಡೆಹಿಡಿಯಲಾಯಿತು.

೧೨. ಜರ್ಮನಿಯು ಅತಿ ಸಣ್ಣ ಪ್ರಮಾಣದಲ್ಲಿ ನೌಕಾಪಡೆಯನ್ನು ಹೊಂದಬಹುದಾಗಿತ್ತು. ಜಲಾಂತರ್ಗಾಮಿಗಳಿಗೆ ಅವಕಾಶವಿರಲಿಲ್ಲ. ಜರ್ಮನಿಯು ತನ್ನೆಲ್ಲಾ ಯುದ್ಧನೌಕೆಗಳನ್ನು ನಾಶಪಡಿಸಬೇಕಿತ್ತು. ಇಲ್ಲವೇ ವ್ಯಾಪಾರೋದ್ದೇಶಗಳಿಗಾಗಿ ಬಳಸಬೇಕಿತ್ತು ಅಥವಾ ಮಿತ್ರಕೂಟಕ್ಕೆ ಹಸ್ತಾಂತರಿಸಬೇಕಿತ್ತು.

೧೩. ಜರ್ಮನಿಯ ದೊರೆಯಾಗಿದ್ದ ಎರಡನೆಯ ವಿಲಿಯಂನ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಯಿತು. ನ್ಯಾಯಾಲಯದಲ್ಲಿ ಇದು ನಿರ್ಣಯವಾಗ ಬೇಕಿತ್ತಾದರೂ ಮಿತ್ರಕೂಟಕ್ಕೆ ಆತನನ್ನು ಹಸ್ತಾಂತರಿಸಲು ಹಾಲೆಂಡ್ ಸರ್ಕಾರವು ತಿರಸ್ಕರಿಸಿದ ಕಾರಣ ಅದು ಸಾಧ್ಯವಾಗಲಿಲ್ಲ.

೧೪. ಪ್ರಥಮ ಮಹಾಯುದ್ಧಕ್ಕೆ ಜರ್ಮನಿಯು ತಾನೇ ಕಾರಣವೆಂದು ಒಪ್ಪಿಕೊಳ್ಳಬೇಕಾಯಿತು. ಯುದ್ಧದ ಸಂದರ್ಭದಲ್ಲಿ ಪಡೆದ ಹಣವನ್ನು ಜರ್ಮನಿಯು ಶೇ.೫ರ ಬಡ್ಡಿಯೊಂದಿಗೆ ಬೆಲ್ಜಿಯಂಗೆ ಪರಿಹಾರವಾಗಿ ನೀಡಬೇಕಾಯಿತು.

೧೫. ಫ್ರಾಂಕೋ-ಪ್ರಷ್ಯನ್ ಯುದ್ಧದಲ್ಲಿ ಫ್ರಾನ್ಸ್‌ನಿಂದ ವಶಪಡಿಸಿಕೊಂಡಿದ್ದ ಕಲಾಕೃತಿಗಳನ್ನು, ಮತ್ತಿತರ ಮೌಲ್ಯಯುತ ವಸ್ತುಗಳನ್ನು ಜರ್ಮನಿ ಹಿಂತಿರುಗಿಸಬೇಕಾಯಿತು.

೧೬. ಜರ್ಮನಿಯು ೫೪ ಬಿಲಿಯನ್ ಡಾಲರ್‌ಗಳನ್ನು ಯುದ್ಧಪರಿಹಾರವಾಗಿ ನೀಡಬೇಕೆಂದು ಆಜ್ಞಾಪಿಸಲಾಯಿತು.

೧೭. ಒಪ್ಪಂದದ ಕರಾರಿನಂತೆ ಜರ್ಮನಿಯು ಬೆಲ್ಜಿಯಂ, ಪೋಲೆಂಡ್ , ಜೆಕೋಸ್ಲಾವಾಕಿಯಾ ಮತ್ತು ಜರ್ಮನ್-ಆಸ್ಟ್ರಿಯಾಗಳ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು.

೧೮. ಬ್ರೆಸ್ಟ್ ಲಿಟೋವ್‌ಸ್ಕ್ ಮತ್ತು ಬುಖರೆಸ್ಟ್‌ಗಳಲ್ಲಿ ರಷ್ಯಾ ಮತ್ತು ರುಮೇನಿಯಾ ಗಳೊಡನೆ ಮಾರ್ಚ್ ೧೯೧೮ರಲ್ಲಿ ಸಹಿ ಹಾಕಿದ ಒಪ್ಪಂದಗಳನ್ನು ಅಸಿಂಧುವೆಂದು ಪರಿಗಣಿಸಲು ಜರ್ಮನಿಯು ಒಪ್ಪಿಗೆ ನೀಡಬೇಕಾಯಿತು. ಪೂರ್ವ ಯುರೋಪಿನ ವ್ಯವಹಾರಗಳಲ್ಲಿ ಹೊಸ ವ್ಯವಸ್ಥೆ ತರಲು ಮಿತ್ರಕೂಟಕ್ಕೆ ಅದು ಅನುಮತಿ ನೀಡಿತು.

೧೯. ಜರ್ಮನಿಯು ತನ್ನ ಯುದ್ಧಾಪರಾಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯ ಹೇರಲಾಯಿತು.