ಬಂಡವಾಳಶಾಹಿ ಪದ್ಧತಿಯ ಬೆಳವಣಿಗೆ

ಆಧುನಿಕ ಅರ್ಥವ್ಯವಸ್ಥೆಯ ಒಂದು ವೈಶಿಷ್ಟ್ಯಪೂರ್ಣ ಗುಣಲಕ್ಷಣವಾದ ಬಂಡವಾಳಶಾಹಿ ಪದ್ಧತಿಯು ವಾಣಿಜ್ಯ ಕ್ರಾಂತಿಯ ಫಲ. ಸಾಮಾನ್ಯವಾಗಿ ಬಂಡವಾಳಶಾಹಿ ಎಂಬುದು ಒಂದು ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪೊಂದು ರಚಿಸಿಕೊಂಡ ಬೃಹತ್ ಪ್ರಮಾಣದ ಒಂದು ವ್ಯಾಪಾರಿ ಸಂಸ್ಥೆ. ಕಚ್ಚಾವಸ್ತುಗಳು, ಉಪಕರಣಗಳು ಹಾಗೂ ಕಾರ್ಮಿಕರನ್ನು ನಿಯಮಿಸಿಕೊಂಡು, ಲಾಭಕ್ಕಾಗಿ ಹೆಚ್ಚ ಸರಕುಗಳನ್ನು ಉತ್ಪಾದಿಸಲು ಅಗತ್ಯವಾದ ಸಂಪತ್ತನ್ನು ಗಳಿಸುವುದು ಇದರ ಉದ್ದೇಶ. ಇದರ ಮುಖ್ಯ ಗುರಿ ಲಾಭ. ಈ ವ್ಯವಸ್ಥೆಯಿಂದ ಸಂಪತ್ತು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗಿ, ದೊಡ್ಡ ಪ್ರಮಾಣದ ಕೈಗಾರಿಕಾ ಉದ್ಯಮಗಳು ಹುಟ್ಟಿಕೊಳ್ಳುವುದು ಅನಿವಾರ್ಯವಾಯಿತು. ಇದರ ಜೊತೆಗೆ ಸಾಲ ಒದಗಿಸಲು, ಬ್ಯಾಂಕ್ ವ್ಯವಸ್ಥೆಯ ಸ್ಥಾಪನೆ ಮತ್ತು ಬಂಡವಾಳದ ಹರಿಯುವಿಕೆಯೂ ಅನಿವಾರ್ಯವಾಯಿತು. ಬಂಡವಾಳಶಾಹಿ ಪದ್ಧತಿಯ ಉಗಮದಿಂದ ಮಧ್ಯಯುಗದ ಲಕ್ಷಣಗಳುಳ್ಳ ಅರ್ಥವ್ಯವಸ್ಥೆಯು ಅಂತ್ಯಗೊಂಡಿತು. ಬಂಡವಾಳಶಾಹಿ ಪದ್ಧತಿಯು ಕೈಗಾರಿಕಾ ಬೆಳವಣಿಗೆಯನ್ನು ತೀವ್ರಗೊಳಿಸಿ, ಸಂಘವ್ಯವಸ್ಥೆ (ಗಿಲ್ಡ್)ಯನ್ನು ನಾಶಗೊಳಿಸಿತು.

ಕೈಗಾರಿಕಾ ಬಂಡವಾಳಶಾಹಿ ಪದ್ಧತಿಯ ಬೆಳವಣಿಗೆಯಿಂದ ಇಂಗ್ಲೆಂಡಿನಂತಹ ದೇಶಗಳಲ್ಲಿ ಅಧಿಕ ಸಂಪತ್ತು ಶೇಖರವಾಯಿತು. ಇಲ್ಲಿ ಸರಕುಗಳ ಅಧಿಕ ಉತ್ಪಾದನೆ ನಡೆಯಿತು. ಅದರಿಂದಾಗಿ ಅಗ್ಗದ ಹಾಗೂ ಪ್ರಮಾಣಬದ್ಧ ಸರಕುಗಳ ಬೃಹತ್ ಉತ್ಪಾದನೆ ಸಾಧ್ಯವಾಯಿತು. ಇದು ನಗರಗಳು ಮತ್ತು ದೊಡ್ಡ ಪಟ್ಟಣಗಳ ಉಗಮಕ್ಕೆ ಕಾರಣವಾಯಿತು. ಪರಿಣಾಮವಾಗಿ ಗ್ರಾಮೀಣ ಪರಿಸರದಿಂದ ನಗರ ವಲಯಗಳಿಗೆ ಜನರ ವರ್ಗಾವಣೆಯಾಯಿತು. ಇದು ಸುಖ ಮತ್ತು ಸೌಲಭ್ಯವನ್ನು ಒದಗಿಸಿದುದರಿಂದ ಮಾನವ ಕುಲಕ್ಕೇ ಒಂದು ‘ವರ’ವೆನಿಸಿಕೊಂಡಿತು. ಆದರೆ ಕಾರ್ಮಿಕರನ್ನು ಕಷ್ಟಕ್ಕೆ ಈಡು ಮಾಡಿತು. ಬಂಡವಾಳಗಾರನು ಕಾರ್ಮಿಕರ ಬಗ್ಗೆ ನಿರ್ದಯ ಮನೋಧರ್ಮವನ್ನು ಹೊಂದಿದ್ದನು. ಕಾರ್ಮಿಕನು ಯಂತ್ರದ ಗುಲಾಮನಾದನು. ಇತರ ಹಲವಾರು ಸಾಮಾಜಿಕ ಸಮಸ್ಯೆಗಳ ಜೊತೆಗೆ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಯಿತು.

ಬಂಡವಾಳಶಾಹಿ ಪದ್ಧತಿಯು ಕೇವಲ ದೇಶದೊಳಗಿನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಬದಲಾವಣೆ ತಂದದ್ದಷ್ಟೇ ಅಲ್ಲದೆ, ವಿದೇಶೀಯ ಸಂಬಂಧಗಳ ಮೇಲೂ ಪ್ರಭಾವ ಬೀರಿತು. ಕೈಗಾರಿಕಾಕ್ರಾಂತಿಯು ವಸಾಹತುಶಾಹಿ, ಸಾಮ್ರಾಜ್ಯಶಾಹಿ ಮತ್ತು ಯುದ್ಧಗಳಂತಹ ಅನೇಕ ಪಿಡುಗುಗಳಿಗೆ ಮೂಲವಾಯಿತು. ಬಂಡವಾಳಶಾಹಿಗಳು ಅವರ ಹೊಟ್ಟೆಬಾಕ ಯಂತ್ರಗಳಿಗೆ ಅಗ್ಗದ ಕಚ್ಚಾವಸ್ತುಗಳನ್ನು ಪೂರೈಸಲು ಮತ್ತು ಸಿದ್ಧ ವಸ್ತುಗಳಿಗೆ ಮಾರುಕಟ್ಟೆಗಳನ್ನು ಒದಗಿಸಲು, ಆ ಮೂಲಕ ಗಳಿಸಿದ ಅಧಿಕ ಲಾಭವನ್ನು ಉಪಯೋಗಿಸಿಕೊಂಡು ರಾಜಕೀಯ ಶಕ್ತಿಯನ್ನು ಸ್ವಾಧೀನಪಡಿಸಿಕೊಂಡರು. ಬ್ರಿಟನ್‌ನಲ್ಲಿ ಬಂಡವಾಳಶಾಹಿಗಳು ಸಂಸತ್ತಿನ (ಪಾರ್ಲಿಮೆಂಟ್) ಮೇಲೆ ಅಧಿಕಾರ ಸ್ಥಾಪಿಸಿದರು. ತಮ್ಮ ಇಚ್ಛೆಗೆ ಅನುಗುಣವಾಗಿ ಸರಕಾರದ ಮೇಲೆ ಪ್ರಭಾವವನ್ನು ಬೀರಿದರು. ತಮ್ಮ ಅನುಕೂಲಕ್ಕೆ ಹೊಂದುವಂತಹ ಕಾನೂನುಗಳನ್ನು ರಚಿಸಿದರು. ಇದೆಲ್ಲವೂ ಇಂಗ್ಲೆಂಡಿನಲ್ಲಿ ಹೊಸ ವಸಾಹತುಗಳ ನಿರ್ಮಾಣ ಹಾಗೂ ದೊಡ್ಡ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾಯಿತು.

ಈ ಪ್ರಭಾವದಿಂದ ಇತರೇ ಯುರೋಪಿಯನ್ ದೇಶಗಳೂ ಸಹ ವಸಾಹತುಗಳು, ಸಾಮ್ರಾಜ್ಯಗಳು, ಕಚ್ಛಾವಸ್ತು ಮತ್ತು ಮಾರುಕಟ್ಟೆಗಳಿಗಾಗಿ ಇಂತಹ ಸ್ಪರ್ಧೆಗೆ ಇಳಿದವು. ಹತ್ತಿ ಗಿರಣಿಗಳಲ್ಲಾದ ಕ್ರಾಂತಿಯಿಂದಾಗಿ ಬಂಡವಾಳಶಾಹಿ ಪದ್ಧತಿಯು ತೀವ್ರವಾಗಿ ಬೆಳೆಯಿತು. ಈಸ್ಟ್ ಇಂಡಿಯಾ ಕಂಪನಿಯಿಂದ ಹೊಸದಾಗಿ ಪರಿಚಯಿಸಲ್ಪಟ್ಟ ಹತ್ತಿ ಬಟ್ಟೆಗಳು ಯುರೋಪಿನಲ್ಲಿ ಅತ್ಯಂತ ಜನಪ್ರಿಯವಾಯಿತು. ಇದರಿಂದ ಹತ್ತಿ ಬಟ್ಟೆ ಗಳಿಗಾಗಿ ಬೇಡಿಕೆ ಅಧಿಕವಾಯಿತು.

ಇದರಿಂದಾಗಿ ಹೊಸ ಶೋಧನೆಗೆ ಮತ್ತು ಉದ್ಯಮಶೀಲತೆಗೆ ಸಾಕಷ್ಟು ಪ್ರತಿಫಲ ದೊರೆಯಿತು. ೧೭೩೩ರಷ್ಟು ಹಿಂದೆಯೇ ಜಾನ್‌ಕೆಯೆ ನೇಯ್ಗೆಯಲ್ಲಿ ‘ಹಾರುವ ಲಾಳಿ’ಯನ್ನು ಕಂಡುಹಿಡಿದಿದ್ದನು. ಇದರಿಂದ ಶೀಘ್ರ ಸಮಯದಲ್ಲಿ ಹೆಚ್ಚಿನ ಶ್ರಮವಿಲ್ಲದೆ ನೇಯ್ಗೆ ಸಾಧ್ಯವಾಯಿತು. ಜೇಮ್ಸ್ ಹಾರ್‌ಗ್ರೀಸ್‌ನ ‘ತಿರುಗುವ ಚೆನ್ನಿ’, ರಿಚರ್ಡ್ ಆರ್ಕ್‌ರೈಟ್‌ನ ‘ನೀರಿನ ಚೌಕಟ್ಟು’, ಸ್ಯಾಮ್ಯುಎಲ್ ಎರೋಂಜೋನ್‌ನ ‘ಹೇಸರಗತ್ತೆ’, ವಿಟ್ನಿಯ ಕಾಲಿನ್ ಟ್ರಿನ್(೧೭೯೩), ಕಾರ್ಟ್‌ರೈಟ್‌ನ ‘ಯಾಂತ್ರಿಕ ಮಗ್ಗ (೧೭೮೫) ಮತ್ತು ಉಣ್ಣೆ, ರೇಷ್ಮೆ ಹಾಗೂ ಲಿನನ್ ಬಟ್ಟೆಗಳ ಉತ್ಪಾದನೆಯಲ್ಲಿ ರೂಪಿಸಿದ ಹೊಸ ವಿಧಾನಗಳಿಂದ ನೇಯ್ಗೆ ಉತ್ಪಾದನೆಯು ಕನಿಷ್ಟ ೨೦೦ ಪಟ್ಟು ಹೆಚ್ಚಿತು. ಕಬ್ಬಿಣ, ಗಣಿ ಕೈಗಾರಿಕೆಗಳು ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾದವು. ೧೯ನೆಯ ಶತಮಾನದಲ್ಲಿ ವಸಾಹತುಗಳನ್ನು ಪಡೆಯಲು ಮತ್ತು ಅಗ್ಗದ ಹಾಗೂ ಪರಿಣಾಮಕಾರೀ ಮಾರುಕಟ್ಟೆಗಳನ್ನು ಪಡೆಯುವಲ್ಲಿ ಪ್ರಭಾವ ಬೀರಲು ಸಾಮ್ರಾಜ್ಯಶಾಹಿ ಶಕ್ತಿಗಳ ನಡುವೆ ಸ್ಪರ್ಧೆ ಉಂಟಾಯಿತು. ಕ್ರಮೇಣ ವಸಾಹತುಶಾಹಿಯ ಹಳೆಯ ಪರಿಕಲ್ಪನೆಯ ಕ್ಷೀಣಗೊಂಡು, ಒಂದು ಸಾಮ್ರಾಜ್ಯಶಾಹಿ ಪ್ರಭುವಿನ ನಿರ್ದಿಷ್ಟ ಕೈಗಾರಿಕಾ ಅಗತ್ಯಗಳಿಗಾಗಿ ಎಲ್ಲಾ ದೇಶಗಳೂ ಸೇವೆ ಸಲ್ಲಿಸುವಂತಹ ಸಾಮ್ರಾಜ್ಯಶಾಹಿ ಪದ್ಧತಿ ಬೆಳೆಯಿತು. ಈ ಪೈಪೋಟಿಗಳು ಪ್ರಾಪಂಚಿಕ ಘರ್ಷಣೆ ಮತ್ತು ವಿಶ್ವಯುದ್ಧಗಳಿಗೆ ಕಾರಣವಾಯಿತು. ಇದು ರಾಷ್ಟ್ರೀಯವಾದದ ಅಗತ್ಯಗಳನ್ನು ಪೂರೈಸಿ, ಅದರ ಮಿತಿಗಳನ್ನು ಮೀರುವಂತೆ ಮಾಡಿತು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಳು
ಗೆಲಿಲಿಯೋ
ನ್ಯೂಟನ್ಡಾರ್ವಿನ್ಐನ್‌ಸ್ಟಿನ್

ಮಧ್ಯಯುಗದಲ್ಲಿ ವಿಜ್ಞಾನವು ಸ್ವಲ್ಪ ಮಟ್ಟಿನ ಪ್ರಗತಿಯನ್ನು ಸಾಧಿಸಿತು. ಆದರೆ ಆಧುನಿಕ ವಿಜ್ಞಾನದ ನಿಜವಾದ ಚೈತನ್ಯವನ್ನು ನಾವು ಕಾಣುವುದು ಪುನರುತ್ಥಾನದ ಕಾಲದಲ್ಲಿ. ಮಧ್ಯಯುಗದಲ್ಲಿ ವಿಜ್ಞಾನವು ನಿರ್ಬಂಧಗಳಿಂದ ಕೂಡಿದ್ದ, ಜನಸಮೂಹದಲ್ಲಿ ಸಾಮಾನ್ಯವಾಗಿದ್ದ ಮೂಢನಂಬಿಕೆಗಳ ವಿರುದ್ಧ ಹೋರಾಡಿತು.

ಗೆಲಿಲಿಯೋ (೧೫೬೪೧೬೪೨)

ಇವರು ೧೬೦೯ರಲ್ಲಿ ದೂರದರ್ಶಕವನ್ನು ಕಂಡುಹಿಡಿದು, ಕೊಪರ್ನಿಕಸನ ಪೂರ್ವ ಸಿದ್ಧಾಂತಕ್ಕೆ ಹೊಸ ಪುರಾವೆಯನ್ನು ಒದಗಿಸಿ, ಹೀಗೆ ನಿರೂಪಿಸಿದನು, ‘ಆಕಾಶಕಾಯಗಳು ಭೂಮಿಯ ಸುತ್ತ ತಿರುಗುವುದಿಲ್ಲ. ಬದಲಾಗಿ ಅವು ಸೂರ್ಯನ ಸುತ್ತ ಪರಿಭ್ರಮಿಸುತ್ತವೆ. ಮೇಲಾಗಿ ಸೂರ್ಯ ಕೇವಲ ಭೂಮಿಯನ್ನಲ್ಲದೆ ಸೌರವ್ಯೆಹದ ಇತರ ಆಕಾಶಕಾಯಗಳನ್ನು ನಿಯಂತ್ರಿಸುತ್ತದೆ.’ ದೂರದರ್ಶಕದಿಂದ ಚಂದ್ರನ ಮೇಲೆ ಪರ್ವತಗಳಿರುವುದನ್ನು, ಶನಿಯ ಸುತ್ತ ಉಂಗುರಗಳಿರುವುದನ್ನು ಗುರುತಿಸಿದನು. ವಿಶ್ವವು ನೈಸರ್ಗಿಕ ನಿಯಮಗಳಿಂದ ನಿಯಂತ್ರಿಸಲ್ಪಟ್ಟಿದ್ದು ಅದಕ್ಕೊಂದು ಕ್ರಮಬದ್ಧ ವ್ಯವಸ್ಥೆ ಇರುವುದನ್ನು ಕಂಡುಕೊಂಡನು. ಅವನ ಸಂಶೋಧನೆಗಳು, ಚರ್ಚಿನ ನಂಬಿಕೆಗಳನ್ನು ಖಂಡಿಸುವಂತಹುವಾಗಿದ್ದವು. ಆದ್ದರಿಂದ ಗೆಲಿಲಿಯೋ ಮುಂದೆ ಪ್ರವಚನ ನೀಡುವುದನ್ನೂ ಬರೆಯುವುದನ್ನೂ ಪೋಪನ ನ್ಯಾಯಾಲಯವು ನಿಷೇಧಿಸಿತು.

ನ್ಯೂಟನ್ (೧೬೪೨೧೭೨೭)

ಎಲ್ಲಾ ಆಕಾಶಕಾಯಗಳ ಚಲನೆಯು ಗುರುತ್ವಾಕರ್ಷಣೆಯಿಂದ ನಿಯಂತ್ರಿಸಲ್ಪಟ್ಟಿರುತ್ತದೆ ಎಂಬುದನ್ನು ನ್ಯೂಟನ್ ನಿರೂಪಿಸಿದನು. ಎರಡು ಕಾಯಗಳ ನಡುವಿನ ಪರಸ್ಪರ ಆಕರ್ಷಣ ಶಕ್ತಿಯು ಭಿನ್ನವಾಗಿರುತ್ತದೆ. ಏಕೆಂದರೆ ಅವುಗಳ ದ್ರವ್ಯರಾಶಿಯ ಒಟ್ಟು ಮೊತ್ತ ಅವುಗಳ ನಡುವಿನ ಅಂತರದ ವರ್ಗಮಾನಕ್ಕೆ ವಿರುದ್ಧವಾಗಿರುತ್ತದೆ ಎಂಬುದು ಇವನ ಗುರುತ್ವಾಕರ್ಷಣ ಸಿದ್ಧಾಂತ.

ಚಾರ್ಲ್ಸ್ ಡಾರ್ವಿನ್(೧೮೦೯೧೮೮೨)

ಈತ ಒಬ್ಬ ವೈದ್ಯರ ಮಗ. ವೈದ್ಯವೃತ್ತಿಯನ್ನು ಡಾರ್ವಿನ್ನನೂ ಅವಲಂಬಿಸಬೇಕೆಂದು ತಂದೆ ಬಯಸಿದ್ದರೂ, ಡಾರ್ವಿನ್ ಪ್ರಕೃತಿ ವಿಜ್ಞಾನಕ್ಕೆ ತನ್ನ ಕಾಣಿಕೆಯನ್ನು ಸಲ್ಲಿಸಲು ಇಚ್ಛಿಸಿದನು. ಪ್ರಾಣಿಗಳ ಮತ್ತು ಸಸ್ಯಗಳ ಸಹಜ ಸಿದ್ಧ ಪರಿಸರ ಮತ್ತು ಒಗ್ಗಿಸಲ್ಪಟ್ಟ ಪರಿಸರದಲ್ಲಿನ ಬೆಳವಣಿಗೆಗಳ ವ್ಯತ್ಯಾಸಗಳ ಬಗ್ಗೆ, ಸಾಧ್ಯವಾದಷ್ಟು ಮಾಹಿತಿಗಳನ್ನು ಕಲೆಹಾಕಲು ಪ್ರಾರಂಭಿಸಿದ. ಇದರಿಂದ ಅವುಗಳ ಪರಿವರ್ತನೆಯ ಹಾಗೂ ಒಗ್ಗಿಸಿ ಕೊಳ್ಳುವಿಕೆಯ ಕಾರಣಗಳನ್ನು ಕಂಡುಹಿಡಿದನು. ತನ್ನ ಸಿದ್ಧಾಂತವನ್ನು ೧೮೫೯ರಲ್ಲಿ ರೂಪಿಸಿದನು. ಇದೇ ಮುಂದೆ ‘‘ಸ್ವಾಭಾವಿಕ ಆಯ್ಕೆಯ ಮೂಲಕ ಜೀವಿಗಳ ಉಗಮ’’ ಅಥವಾ ‘‘ಬದುಕಿನ ಹೋರಾಟದಲ್ಲಿ ಒಪ್ಪಿತವಾದ ತಳಿಗಳ ಸಂರಕ್ಷಣೆ’’(ದಿ ಅರಿಜಿನ್ ಆಫ್ ಸ್ಪೀಸಿಸ್ ಬ ಮೀನ್ಸ್ ಆಫ್ ನ್ಯಾಚುರಲ್ ಸೆಲೆಕ್ಷನ್ ಆರ್ ದಿ ಪ್ರಿಸರ್ವೇಷನ್ ಆಫ್ ಫೇವರ್ಡ್ ರೇಸಸ್ ಇನ್ ದಿ ಸ್ಟ್ರಗಲ್ ಫಾರ್ ಲೈಫ್) ಎಂಬ ಪುಸ್ತಕವು ವೈಜ್ಞಾನಿಕ ಬರವಣಿಗೆಯ ಒಂದು ಶಾಸ್ತ್ರೀಯ ಗ್ರಂಥವೆಂದು ಪರಿಗಣಿಸಲ್ಪಟ್ಟಿದೆ.

ಇಷ್ಟು ಹೊತ್ತಿಗಾಗಲೇ ಡಾರ್ವಿನ್ ಸಸ್ಯಗಳು ಮತ್ತು ಪ್ರಾಣಿಗಳ ಹೋರಾಟವನ್ನು ಕಂಡಿದ್ದನು. ಈ ಸನ್ನಿವೇಶದಲ್ಲಿ ಒಪ್ಪಿತವಾಗುವ ಜೈವಿಕ ವರ್ಗಗಳು ಸಂರಕ್ಷಿತಗೊಂಡು, ಒಪ್ಪಿತವಾಗದವು ನಾಶವಾಗುತ್ತದೆ ಎಂಬುದು ಅವನಿಗೆ ಹೊಳೆಯಿತು. ಇದು ಹೊಸ ಜೈವಿಕ ವರ್ಗದ ಉದಯಕ್ಕೆ ನಾಂದಿಯಾಯಿತು. ಈ ಪ್ರಕ್ರಿಯೆಯನ್ನು ಆತನು ‘ಸ್ವಾಭಾವಿಕ ಆಯ್ಕೆ’, ‘‘ಉಳಿವಿಗಾಗಿ ಹೋರಾಟ, ಬಲಶಾಲಿಯ ಉಳಿವು’’ ಎಂದು ಹೆಸರಿಸಿದನು.

ಅವನ ಪ್ರಕಾರ ಸ್ವಾಭಾವಿಕ ಆಯ್ಕೆಯ ರೂಪಾಂತರಕ್ಕೆ ಅತ್ಯಂತ ಪ್ರಮುಖ ಮಾಧ್ಯಮ. ‘‘ಪ್ರಾಣಿ ಮತ್ತು ಸಸ್ಯದ ವಿಕಾಸ’’ ಮತ್ತು ‘‘ಮಂಗನಿಂದ ಮಾನವ’’ ಎಂಬ ಅವನ ಸಿದ್ಧಾಂತಗಳು ವಿಕ್ಟೋರಿಯನ್ ಯುಗದ ಮತ್ತು ಬಿಷಪ್ ವಿಲ್‌ಬರ್ ಪೋರ್ಸ್‌ರ ಸ್ವಪ್ರತಿಷ್ಠೆಗೆ ಪ್ರಹಾರ ಮಾಡಿದಂತಾಯಿತು. ಬಿಷಪ್‌ರವರು ಡಾರ್ವಿನ್‌ನನ್ನು ಪರಿಹಾಸ್ಯ ಮಾಡಿ ಈ ಸಿದ್ಧಾಂತವನ್ನು ಲೇವಡಿ ಮಾಡಿದರು.

ಡಾರ್ವಿನ್ನನ ವಿಕಾಸವಾದವು ಮಾನ್ಯವಾಯಿತು. ಆದರೆ ಆತನ ಸಿದ್ಧಾಂತವು ಅಂತಿಮ ನಿರ್ಣಯವಲ್ಲ. ಅನಂತರ ಹಲವಾರು ಸಂಶೋಧನೆಗಳು ಈ ದಿಸೆಯಲ್ಲಿ ನಡೆದಿವೆ. ಆದರೆ ಆತನ ಸಿದ್ಧಾಂತದ ತಿರುಳು ಇಂದಿಗೂ ಪ್ರಸ್ತುತ.

ಐನ್‌ಸ್ಟಿನ್(೧೮೭೫೧೯೫೫)

ಇವನ ಸಾಪೇಕ್ಷ ಸಿದ್ಧಾಂತವು ೨೦ನೆಯ ಶತಮಾನದಲ್ಲಿ ಭೌತಶಾಸ್ತ್ರ ಅಧ್ಯಯನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಉಂಟುಮಾಡಿತು. ಈ ಸಾಪೇಕ್ಷ ಸಿದ್ಧಾಂತದ ಪ್ರಕಾರ ಕಾಲ ಮತ್ತು ದೇಶ (ಅವಕಾಶಗಳ ನಡುವೆ ಯಾವುದೇ ಪ್ರತ್ಯೇಕವಾದ ವ್ಯತ್ಯಾಸಗಳಿಲ್ಲ. ಅಂದರೆ ಕಾಲವು ಅವಕಾಶದ ನಾಲ್ಕನೆಯ ಆಯಾಮ) ಮತ್ತು ಭೌತಿಕತೆಯ ಅಂತಿಮ ಘಟ್ಟವೇ ಶಕ್ತಿ. ಆತನು ಹೇಳುವಂತೆ ವಸ್ತುವು ಶಕ್ತಿಯ ಒಂದು ರೂಪ ಮತ್ತು ಗುರುತ್ವಾಕರ್ಷಣೆಯು ವಸ್ತುವಿನ ಒಂದು ಲಕ್ಷಣ. ಸಾಪೇಕ್ಷ ಸಿದ್ಧಾಂತವು ಸೂಚಿಸುವಂತೆ ಬೆಳಕಿನ ಕಿರಣಗಳು ಗುರುತ್ವಾಕರ್ಷಣ ನಿಯಮಗಳಿಗೆ ಒಳಪಟ್ಟಿವೆ. ಇದರ ಪರಿಣಾಮವಾಗಿ ಗುರುತ್ವಾಕರ್ಷಣ ನಿಯಮಗಳು ಮತ್ತು ವಿದ್ಯುತ್-ಚಲನಶಾಸ್ತ್ರಗಳು ಒಂದಕ್ಕೊಂದು ಪೂರಕವಾಗಿದೆ. ಇದರ ಪ್ರಕಾರವಾಗಿ ಬೆಳಕು ಒಂದು ಸೆಕೆಂಡಿಗೆ ಸುಮಾರು ೧೮೬೦೦೦ ಮೈಲುಗಳಷ್ಟು ವೇಗವಾಗಿ ಚಲಿಸುತ್ತದೆ. ಈತನ ಸಂಶೋಧನೆಯಿಂದ ನ್ಯೂಟನ್ನಿನ ಕಲ್ಪನೆಗಳು ನೆಲಸಮವಾದವು. ಇವೆಲ್ಲ ತನಿಖೆಗಳು ಮತ್ತು ಸಂಶೋಧನೆಗಳಿಗೆ ಒಂದು ಗಟ್ಟಿಯಾದ ವೈಜ್ಞಾನಿಕ ಪ್ರಕ್ರಿಯೆಯ ತಳಹದಿ ಇದ್ದರೂ ವೇದಾಂತದ ಪಾಂಡಿತ್ಯವನ್ನೊಳ ಗೊಂಡಿರಲಿಲ್ಲ. ಹಾಗಾಗಿ ನಂತರದ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಾದ ಬೆಳವಣಿಗೆ ಗಳಿಂದಾಗಿ ಚರ್ಚಿನ ಪ್ರಭಾವವು ಕ್ಷೀಣಿಸಿ, ಸುಧಾರಣೆಗಳಿಗೆ ದಾರಿಮಾಡಿಕೊಟ್ಟಿತು.

ಊಳಿಗಮಾನ್ಯ ಪದ್ಧತಿಯ ಉಗಮ

ಮಧ್ಯಯುಗದ ಯುರೋಪಿಯನ್ ಸಮಾಜಕ್ಕೆ ಆಧಾರವಾಗಿದ್ದ ಊಳಿಗಮಾನ್ಯ ಪದ್ಧತಿಯ ಮೂಲಗಳು ಕತ್ತಲಯುಗದಲ್ಲಿವೆ. ರೋಮನ್ ಸಾಮ್ರಾಜ್ಯವಾಗಲೀ ಅಥವಾ ಜರ್ಮನಿಯ ರಾಜಮನೆತನವಾಗಲೀ ಬರ್ಬರ ದಾಳಿ ಮತ್ತು ಯುದ್ಧಗಳನ್ನು ತಡೆಗಟ್ಟಲು ಬೇಕಾಗುವ ರಕ್ಷಣೆಯನ್ನು ಒದಗಿಸುವಷ್ಟು ಶಕ್ತವಾಗಿರಲಿಲ್ಲ. ಹಾಗಾಗಿ ಬಡ, ದುರ್ಬಲ ಮತ್ತು ಸಣ್ಣ ಜಮೀನುದಾರರು ಬಲಶಾಲಿ ಶ್ರೀಮಂತರು ಹಾಗೂ ದೊಡ್ಡ ಜಮೀನು ದಾರರೊಂದಿಗೆ ಪರಸ್ಪರ ವಿಮೆಯ ಒಪ್ಪಂದಗಳನ್ನು ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ತಮಗೆ ರಕ್ಷಣೆಯನ್ನು ಪಡೆದುಕೊಂಡರು. ಅಂಧಯುಗದ ಫ್ರಾನ್ಸ್ ಮತ್ತು ರೋಮನ್ ಸಾಮ್ರಾಜ್ಯಗಳಲ್ಲಿ ‘‘ರಕ್ಷಣ ಮತ್ತು ಸೇವೆಯ ವ್ಯವಸ್ಥೆಯು’’ ಸಾಮಾನ್ಯ ಲಕ್ಷಣವಾಗಿತ್ತು.

ಊಳಿಗಮಾನ್ಯ ಪದ್ಧತಿಯಲ್ಲಿ ಇಂತಹ ಖಾಸಗೀ ಒಪ್ಪಂದಗಳು ಭೂಮಿಯ ಒಡೆತನ ಹಾಗೂ ಅನುಭೋಗದ ಬಗೆಗಿನ ಒಪ್ಪಂದವಾಗಿತ್ತು. ಇಂತಹ ವ್ಯವಸ್ಥೆಯಲ್ಲಿ ಒಬ್ಬ ನಿರ್ಬಲ ವ್ಯಕ್ತಿಯು ತನ್ನ ಜಮೀನಿನ ಒಡೆತನವನ್ನು ಬಲಿಷ್ಟ ನೆರೆಯವನಿಗೆ ಒಪ್ಪಿಸಿಕೊಟ್ಟು, ಅದೇ ಜಾಗದಲ್ಲಿ ತಾನೊಬ್ಬ ಕೂಲಿಯಾಳಾಗಿಯೋ ಅಥವಾ ಗೇಣಿದಾರನಾಗಿಯೋ ಬಾಳುತ್ತಿದ್ದನು. ಕಾಲಕ್ರಮೇಣ ಪಶ್ಚಿಮ ಯುರೋಪಿನ ಪ್ರಭುತ್ವಗಳು, ರಾಜರು, ಚಕ್ರವರ್ತಿಗಳಲ್ಲದೆ ನಗರಗಳು ಮತ್ತು ಚರ್ಚುಗಳೂ ಸಹ ಈ ಜಮೀನ್ದಾರಿ ಒಪ್ಪಂದಗಳಿಗೆ ಒಳಗಾಗಿದ್ದವು. ಸರ್ವಸ್ವತಂತ್ರರಾದ ಮಹಾರಾಜರೂ ಈ ಶ್ರೀಮಂತರಿಗೆ ಅವರ ಸ್ಥಿರಾಸ್ತಿ ಹಾಗೂ ಹಕ್ಕು ಬಾಧ್ಯತೆಗಳ ಒಡೆತನವನ್ನು ಕಿಂಚಿತ್ತೂ ಮುಕ್ಕಾಗದಂತೆ ಬಿಟ್ಟುಕೊಡಲು ತಯಾರಿದ್ದರು. ಹಾಗಾಗಿ ಜಮೀನ್ದಾರಿ ಪದ್ಧತಿಯು ಭೂಮಿಯ ಗೇಣಿಪದ್ಧತಿಯ ಮೇಲೆ ಆಧರಿತವಾಗಿತ್ತು. ಜೊತೆಗೆ ಶ್ರೀಮಂತರಿಂದ ದೊರಕಿದ ಸೈನಿಕ ಸಹಾಯದಿಂದ ಹಿಡುವಳಿ ದಾರನು ವಾರ್ಷಿಕ ಹಣ ಪಾವತಿಯ ಮೂಲಕ ಗೌರವ ಸಲ್ಲಿಸಬೇಕಾಗಿತ್ತು. ಜಮೀನ್ದಾರಿ ಸಮಾಜವು ಸಾಮಾನ್ಯ ಜನರ ಮೇಲೆ ಹಲವು ಕರ್ತವ್ಯಗಳನ್ನು, ನಿಯಮಗಳನ್ನು ವಿಧಿಸಿತ್ತು. ಇದು ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಾಗಿತ್ತು.

೧೨ನೆಯ ಶತಮಾನದ ಹೊತ್ತಿಗೆ ಊಳಿಗಮಾನ್ಯ ಪದ್ಧತಿಯಲ್ಲಿ ಬಿರುಕು ಕಾಣಿಸಿ ಕೊಂಡಿತು. ತನ್ನೆಲ್ಲ ಕೊರತೆಗಳ ನಡುವೆ ಈ ಸಮಾಜವು ಕಾಲದ ಗತಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಅದು ಹಂತಹಂತವಾಗಿ ಅವನತಿ ಹೊಂದಲು ಪ್ರಾರಂಭಿಸಿತು. ಅದರ ಅವನತಿಗೆ ಈ ಕೆಳಗಿನ ಕಾರಣಗಳನ್ನು ಕೊಡಬಹುದು.

೧. ರಾಷ್ಟ್ರೀಯವಾದ, ಪ್ರಜಾಪ್ರಭುತ್ವದಂತಹ ಭಾವನೆಗಳ ಉಗಮ, ಅದರಲ್ಲೂ ಸ್ವಾತಂತ್ರ್ಯ ಮತ್ತು ಸಮಾನತೆಯ ನೀತಿಗಳ ಮುಂದೆ ಊಳಿಗಮಾನ್ಯ ಸಮಾಜದ ಉಳಿವು ಬಹಳ ಮಟ್ಟಿಗೆ ಅಸಾಧ್ಯವಾಗಿತ್ತು.

೨. ಬಲಶಾಲಿ ಚಕ್ರಾಧಿಪತ್ಯದ ಬೆಳವಣಿಗೆಯೂ ಜಹಗೀರುದಾರರ ಸಾಮರ್ಥ್ಯವನ್ನು ಕುಸಿಯುವಂತೆ ಮಾಡಿತು. ಉದಾಹರಣೆಗೆ ಬ್ರಿಟನ್ನಿನ ೬ನೆಯ ಹೆನ್ರಿ ದೊರೆಯು ಶ್ರೀಮಂತರ ಪ್ರಭಾವವನ್ನು ನಾಶಗೊಳಿಸುವ ಹಲವಾರು ಉಪಾಯಗಳನ್ನು ಯೋಜಿಸಿದ್ದನು.

೩. ಜಮೀನ್ದಾರಿ ಯುಗದ ಯುರೋಪಿನ ಎಲ್ಲೆಡೆಯಲ್ಲೂ ದಮನಕಾರೀ ಪ್ರವೃತ್ತಿಯ ಜಹಗೀರುದಾರರ ವಿರುದ್ಧ ಅಭಿಪ್ರಾಯ ಬೆಳೆದಿತ್ತು.

೪. ಮಧ್ಯಮ ವರ್ಗದ ಬೆಳವಣಿಗೆಯು ಒಂದು ಸುಭದ್ರ ಸರಕಾರ ಕಟ್ಟುವುದಕ್ಕೆ ಅನುಕೂಲಕರವಾಗಿದ್ದುದರಿಂದ ಜಮೀನುದಾರರ ಹಿಡಿತ ದುರ್ಬಲವಾಯಿತು. ರಾಜರಿಗೆ ಮಧ್ಯಮ ವರ್ಗದಿಂದ ಸಂಪೂರ್ಣ ಸಹಕಾರ ದೊರಕಿತು.

೫. ಸಿಡಿಮದ್ದಿನ ಆವಿಷ್ಕಾರ ಮತ್ತು ಬಳಕೆಯು ರಾಜಮನೆತದ ಏಕಸ್ವಾಮ್ಯದಲ್ಲಿದ್ದುದರಿಂದ ಜಹಗೀರುದಾರರು ನಿಸ್ಸಹಾಯಕರಾದರು. ಜಹಗೀರುದಾರರನ್ನು ಕಾಪಾಡುತ್ತಿದ್ದ ಕೋಟೆಗಳನ್ನು ಈಗ ಸಿಡಿಮದ್ದಿನಿಂದ ನುಚ್ಚುನೂರು ಮಾಡಬಹುದಾಗಿತ್ತು.

೬. ಪಟ್ಟಣ ಮತ್ತು ನಗರಗಳ ಬೆಳವಣಿಗೆಯೂ ಸಹ ಜಮೀನ್ದಾರಿ ಪದ್ಧತಿಯನ್ನು ದುರ್ಬಲಗೊಳಿಸಿತು.

೭. ಸರಕು ವಿನಿಮಯ ಪದ್ಧತಿಯು ಇಳಿಮುಖಗೊಂಡಿದ್ದು ಮತ್ತು ಹಣಕಾಸು ವ್ಯವಹಾರದ ಅರ್ಥ ವ್ಯವಸ್ಥೆಯ ಪ್ರಾರಂಭವಾದದ್ದರಿಂದಲೂ ಜಮೀನ್ದಾರಿ ಪದ್ಧತಿಯು ದುರ್ಬಲ ಹೊಂದಿತು. ಜನರು ತಮ್ಮ ಯಜಮಾನರಿಗೆ ಅರಿವಾಗದಂತೆ ಅಕ್ಕಪಕ್ಕದ ಪಟ್ಟಣಗಳಿಗೆ ತಮ್ಮ ಸರಕುಗಳನ್ನು ಹಣಕ್ಕಾಗಿ ಮಾರಬಹುದಾಗಿತ್ತು.

೮. ಸಾಮಾನ್ಯವಾಗಿ ಶ್ರೀಮಂತರು ಬಗೆಹರಿಯದ ಯುದ್ಧಗಳಲ್ಲಿ ಮುಳುಗಿರುತ್ತಿದ್ದುದರಿಂದ ಅಂತಿಮವಾಗಿ ದುರ್ಬಲರಾದರು. ಮುಸಲ್ಮಾನರ ವಿರುದ್ಧದ ಅವರ ಹೋರಾಟಗಳು ಅವರ ಆರ್ಥಿಕ ದಿವಾಳಿತನಕ್ಕೆ ಕಾರಣವಾಯಿತು. ಈ ಶ್ರೀಮಂತರಿಗೆ ಪಟ್ಟಣ ಹಾಗೂ ನಗರಗಳು ಭಾರೀ ಮೊತ್ತಗಳನ್ನು ಪಾವತಿಸಿ ಸ್ವಾತಂತ್ರ್ಯವನ್ನು ಒದಗಿಸಿಕೊಟ್ಟಿತು. ಇದರಿಂದ ಸಮಾಜದ ಮೇಲಿನ ಜಮೀನ್ದಾರಿ ಪದ್ಧತಿಯ ಅಧಿಕಾರವನ್ನು ಅವರು ಕಳೆದುಕೊಳ್ಳಬೇಕಾಯಿತು.

೯. ಮಧ್ಯಕಾಲದ ಪೂರ್ವಘಟ್ಟದಲ್ಲಿನ ಪ್ರಗತಿಗಾಮಿ ಶಕ್ತಿಗಳು ಜಮೀನ್ದಾರಿ ಪದ್ಧತಿಯ ಮುಂದುವರಿಕೆಯನ್ನು ಇನ್ನಷ್ಟು ಕಷ್ಯಸಾಧ್ಯವಾಗಿಸಿತು. ಶಾಂತಿ, ರಕ್ಷಣೆ ಹಾಗೂ ಗೇಣಿ ಪದ್ಧತಿಯ ಅಗತ್ಯ ಕಂಡುಬರಲಿಲ್ಲ. ಹಾಗಾಗಿ ಊಳಿಗಮಾನ್ಯ ಪದ್ಧತಿಯು ತೊಲಗಲೆ ಬೇಕಾಯಿತು.

ಜಮೀನ್ದಾರಿ ಪದ್ಧತಿಯು ಸಾರ್ವತ್ರಿಕವಾಗಿದ್ದರೂ ಅದೊಂದು ನಿರ್ದಿಷ್ಟ ವ್ಯವಸ್ಥೆ ಯಾಗಿರಲಿಲ್ಲ. ಅದನ್ನು ಆಧರಿಸಿದ ಒಪ್ಪಂದಗಳು ಸದಾ ಬದಲಾಗುತ್ತಲೇ ಇದ್ದವು. ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ, ಒಂದು ಸ್ಥಿರಾಸ್ತಿಗೂ ಇನ್ನೊಂದಕ್ಕೂ, ಒಬ್ಬ ವ್ಯಕ್ತಿಗೂ ಇನ್ನೊಬ್ಬ ವ್ಯಕ್ತಿಗೂ ಕಾಣುವ ವಿವರ-ವ್ಯತ್ಯಾಸಗಳು ಅಸಂಖ್ಯ. ಆದರೆ ಊಳಿಗಮಾನ್ಯ ಪದ್ಧತಿಯ ಆಚರಣೆಯ ಹಂತದಲ್ಲಿ ಹಲವು ಸಾಮಾನ್ಯ ಅಂಶಗಳಿದ್ದವು. ೧೫ನೆಯ ಶತಮಾನದ ವೇಳೆಗೆ ಇದು ಬಹುಪಾಲು ಎಲ್ಲಾ ದೇಶಗಳಲ್ಲಿಯೂ ಕೊನೆಗೊಂಡಿತು. ಆದರೆ ಫ್ರಾನ್ಸ್, ರಷ್ಯಾ ಮತ್ತು ಇತರೆ ಹಲವು ದೇಶಗಳಲ್ಲಿ ಮುಂದೆಯೂ ಸ್ವಲ್ಪಕಾಲ ಉಳಿದುಕೊಂಡಿತು.

ಯುರೋಪಿನ ವಿಸ್ತರಣೆ

ಕ್ರಿಶ್ಚಿಯನ್ ಶಕೆಯ ಮೊದಲ ನಾಲ್ಕು ಶತಮಾನಗಳಲ್ಲಿ ರೋಮನ್ ಸಾಮ್ರಾಜ್ಯವು ಉತ್ತರ ಸೀಮೆಯ ರೈನ್ ಮತ್ತು ಡಾನ್ಯೂಬ್ ನದಿಗಳವರೆಗೆ ಹರಡಿತ್ತು. ದಕ್ಷಿಣ ಭಾಗದಲ್ಲಿ ಹೆಚ್ಚು ಭೂಭಾಗಗಳಿರಲಿಲ್ಲ. ಉತ್ತರ ಯುರೋಪಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟಿನ ಜನಾಂಗದವರು ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಿದ್ದರು. ಗ್ರೀಕರು ಮತ್ತು ರೋಮನ್ನರು ಇಂಥವರನ್ನು ಅಸಂಸ್ಕೃತರೆಂದು ಗುರುತಿಸುತ್ತಿದ್ದರು.

ಇಂಥ ಅಸಂಸ್ಕೃತರಲ್ಲಿ ಜರ್ಮನ್ನರು ಪ್ರಮುಖರು. ಇವರು ಯುರೋಪಿನ ವಾಯುವ್ಯ ಪ್ರಾಂತ್ಯದಲ್ಲಿ ವಾಸವಾಗಿದ್ದು, ತಮ್ಮ ವಸಾಹತನ್ನು ಈಶಾನ್ಯದಲ್ಲಿ ಫಿನ್ ಲ್ಯಾಂಡ್‌ವರೆಗೂ, ಸ್ವಾವ್‌ರನ್ನು ಬಗ್ಗುಬಡಿದು ಆಗ್ನೇಯ ದಿಕ್ಕಿಗೂ, ಸೆಲ್ವರನ್ನು ಸೋಲಿಸಿ ದಕ್ಷಿಣ ಹಾಗೂ ಆಗ್ನೇಯ ದಿಕ್ಕಿಗೂ ಹಬ್ಬಿಸಿಕೊಂಡಿದ್ದರು. ಅದು ರೋಮನ್ ಗಣರಾಜ್ಯವು ಚಕ್ರಾಧಿಪತ್ಯವಾಗಿ ಪರಿವರ್ತಿತವಾಗುತ್ತಿದ್ದ ಕಾಲ. ರೋಮನ್ ಚಕ್ರಾಧಿಪತಿಗಳು ಉತ್ತರದ ಅನಾಗರಿಕರ ಆಕ್ರಮಣದ ವಿರುದ್ಧ ರೈನ್ ಮತ್ತು ಡಾನ್ಯೂಬ್ ನದಿಗಳ ಆಸುಪಾಸಿನ ಸ್ಥಳಗಳನ್ನು ಭದ್ರಪಡಿಸಿಕೊಂಡಿದ್ದರು.

ಮೊದಲನೆಯದರಿಂದ ನಾಲ್ಕನೆಯ ಶತಮಾನದವರೆಗೂ ಅವರು ರೋಮನ್ ಸಾಮ್ರಾಜ್ಯದೊಳಗೆ ವಲಸೆ ಬಂದು ಅಲ್ಲಿಯೇ ಸ್ಥಿರವಾಗಿ ನೆಲಸಿದರು. ಆದರೆ ೫ನೆಯ ಶತಮಾನದಲ್ಲಿ ಜರ್ಮನ್ನರು ರೋಮನ್ ಸಾಮ್ರಾಜ್ಯದ ಪಶ್ಚಿಮ ಪ್ರಾಂತ್ಯದಲ್ಲಿ ತಮ್ಮ ರಾಜ್ಯವನ್ನು ಸ್ಥಾಪಿಸಿಕೊಂಡರು.

ಫ್ರಾಂಕ್‌ರೆನ್ನುವ ಜರ್ಮನ್ ಬುಡಕಟ್ಟಿನವರು ರೈನ್ ನದಿಯ ಉತ್ತರ ದಿಕ್ಕಿನಲ್ಲಿ ಡೆನ್‌ಮಾರ್ಕ್‌ನವರೆಗೂ ತಮ್ಮ ನೆಲೆಗಳನ್ನು ಹೊಂದಿದ್ದರು. ಅಲೀಮನ್ನರೂ, ಬರ್ಗುಂಡಿ ಯನ್ನರು ದಕ್ಷಿಣ ಜರ್ಮನಿಯ ಹಂಗೇರಿ ಮತ್ತು ಡ್ಯಾನ್ಯುಬ್ ನದಿಯ ಮೇಲ್ದಂಡೆಯಲ್ಲಿರುವ ಹಂಗೇರಿ ಮತ್ತು ಆಸ್ಟ್ರೀಯಾದ ಮೈದಾನಗಳಿಗೆ ಹೊಂದಿಕೊಂಡಂತೆ ಇರುವ ಮುಖ್ಯ ವ್ಯಾಂಡಲ್‌ನ ಕಣಿವೆಯಲ್ಲಿ ವಾಸವಾಗಿದ್ದರು. ಸೇವನ್ನರು, ಎಲ್ಬ್‌ನ ದಿಯ ದಂಡೆಯಲ್ಲೂ, ಹೊಂಬಾರ್ಡರು ಓದರ್ ನದಿಯ ದಂಡೆಯಲ್ಲೂ, ಪಶ್ಚಿಮದ ಗೋಥರು ಡ್ಯಾನ್ಯುಬ್ ನದಿಯ ಉತ್ತರ ಕೆಳದಂಡೆಯಲ್ಲಿಯೂ(ರುಮೇನಿಯಾ), ಪೂರ್ವದ ಗೋಥರು ಕಪ್ಪು ಸಮುದ್ರದ ಉತ್ತರ ಭಾಗದಲ್ಲಿಯೂ ವಾಸವಾಗಿದ್ದರು.

೫ನೆಯ ಶತಮಾನದ ಅಂತ್ಯದ ವೇಳೆಗೆ ಜರ್ಮನರು ತಮ್ಮ ಅಧಿಪತ್ಯವನ್ನು ಇಟಲಿ, ಗಾಲ್ಫ್, ಬ್ರಿಟನ್, ಸ್ಪೆಯಿನ್ ಮತ್ತು ಉತ್ತರ ಆಫ್ರಿಕಾದ ಬಹುಭಾಗಗಳಲ್ಲಿ ಸ್ಥಾಪಿಸಿ ಕೊಂಡಿದ್ದರು. ಜರ್ಮನ್ನರ ಆಡಳಿತದಲ್ಲಿದ್ದ ಈ ಎಲ್ಲಾ ಪ್ರಾಂತ್ಯಗಳೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ರೋಮನೀಕರಣಗೊಂಡಿದ್ದವು.

೬ನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯವು ಪಶ್ಚಿಮ ಮೆಡಿಟರೇನಿಯನ್ ಭಾಗದಲ್ಲಿ ಜರ್ಮನ್ನರನ್ನು ಸೋಲಿಸುವುದರ ಮೂಲಕ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸಿ, ತನ್ನ ಅಧಿಕಾರವನ್ನು ಪುನಃ ಸ್ಥಾಪಿಸಿಕೊಂಡಿತು. ಜಸ್ಟೀನಿಯನ್ ಚಕ್ರವರ್ತಿಯ ಅವಧಿಯಲ್ಲಿ (ಕ್ರಿ.ಶ.೫೨೭-೫೬೮) ಕ್ರಿ.ಶ.೫೩೩ರಲ್ಲಿ ಇಟಲಿ ಮತ್ತು ಕ್ಯಾಥೋಜ್‌ಗಳನ್ನು ಮತ್ತೆ ಆಕ್ರಮಿಸಿಕೊಂಡನು. ಆದರೆ ಆರನೆಯ ಶತಮಾನದ ಉತ್ತರಾರ್ಧದ ವೇಳೆಗೆ ಇಟಲಿ ಮತ್ತು ಆಫ್ರಿಕಾಗಳು ಪುನಃ ಜರ್ಮನ್ನರ ಪಾಲಾದವು. ಮಧ್ಯ ಏಷ್ಯಾದ ಅಲೆಮಾರಿಗಳು ನೈರುತ್ಯ ಸೈಬೀರಿಯಾ, ಮಂಗೋಲಿಯಾ, ತುರ್ಕಿಸ್ಥಾನ (ರಷ್ಯಾ ಮತ್ತು ಚೈನಾ) ಮತ್ತು ಈಶಾನ್ಯ ಪರ್ಷಿಯಾಕ್ಕೆ ಆಗಿಂದಾಗ್ಗೆ ಭೇಟಿಕೊಡುತ್ತಿದ್ದರು. ಇವರು ಹೂಣರ ನೇತೃತ್ವದಲ್ಲಿ ಪೂರ್ವಭಾಗದಿಂದ ರೋಮನ್ನರ ಸಾಮ್ರಾಜ್ಯದ ಮೇಲೆ ಒತ್ತಡ ಹೇರುತ್ತಿದ್ದರು.

ಜರ್ಮನ್ನರು ಹಾಗೂ ಸ್ಲಾವರು ಸಹ ಇದರ ಪರಿಣಾಮವನ್ನು ಎದುರಿಸಬೇಕಾಯಿತು. ೬ನೆಯ ಶತಮಾನದಲ್ಲಿ ಸ್ಲಾವರು ಮೆಸಲೋನಿಯ ಮೇಲೆ ಆಕ್ರಮಣ ಮಾಡಿ ಕಾನ್ ಸ್ಟಾಂಟಿನೋಪಲ್‌ನ ಚಕ್ರವರ್ತಿಗೆ ಭಯ ಹುಟ್ಟಿಸಿದ್ದರು. ಜಸ್ಟೀನಿಯನ್ ದೊರೆಯು ಇವರ ವಿರುದ್ಧ ಹೋರಾಡಿದ್ದನು. ಅವನ ಮರಣಾನಂತರ ಸ್ಲಾವರು ೭ನೆಯ ಶತಮಾನದ ಹೊತ್ತಿಗೆ ಕ್ರಮೇಣ ಬಾಲ್ಕನ್ ಪರ್ಯಾಯ ದ್ವೀಪದಲ್ಲಿ ಶಾಶ್ವತ ನೆಲೆಯನ್ನು ಸ್ಥಾಪಿಸಿದ್ದರು.

೭ನೆಯ ಶತಮಾನದಲ್ಲಿ ರೋಮನ್ ಚಕ್ರಾಧಿಪಾತ್ಯವು ಬಹಳಷ್ಟು ಕುಗ್ಗಿತು. ಜರ್ಮನ್ನರು ಗಾಲ್ಫ್, ಬ್ರಿಟನ್ ಹಾಗೂ ಸ್ಪೆಯಿನ್ ದೇಶಗಳನ್ನು ಆಕ್ರಮಿಸಿದ್ದರು. ಇಟಲಿಯು ಒಂದು ಹೊಸ ಸ್ವತಂತ್ರ ಲಂಬಾರ್ಡ್ ಸಾಮ್ರಾಜ್ಯದ ತವರಾಯಿತು. ಸ್ಲಾವರು ಇಲಿರಿಯಾ, ಮೆಸಲೋನಿಯಾ, ಗ್ರೀಸ್ ಹಾಗೂ ಇನ್ನಿತರ ದೇಶಗಳನ್ನು ಗೆದ್ದುಕೊಂಡರು. ೭ನೆಯ ಶತಮಾನದ ವೇಳೆಗೆ ಕಾನ್‌ಸ್ಟಂಟಿನೋಪಲ್‌ನ ಚಕ್ರವರ್ತಿಯು ಹಿಂದೆ ಗೆದ್ದಿದ್ದ ಆಫ್ರಿಕಾವನ್ನು ಕಳೆದುಕೊಂಡನು ಮತ್ತು ಏಷ್ಯಾ ಪ್ರಾಂತ್ಯದ ಬಹುಭಾಗಗಳು ಅಂತಿಮವಾಗಿ ರೋಮನ್ ಸಾಮ್ರಾಜ್ಯಕ್ಕೆ ಸೇರಿಕೊಂಡಿತು. ಪರ್ಷಿಯಾ ಮತ್ತು ರೋಮ್‌ಗಳ ನಡುವಿನ ಯುದ್ಧ ೬ನೆಯ ಶತಮಾನದ ಹೊತ್ತಿಗೆ ತೀವ್ರಗೊಂಡಿತು. ಪರ್ಷಿಯನ್ನರು ಜೋರೋಸ್ಟರ್ ಧರ್ಮವನ್ನು ಮತ್ತು ರೋಮನ್ನರು ಕ್ರೈಸ್ತಧರ್ಮವನ್ನು ಬೆಂಬಲಿಸಿದರು. ನಂತರ ಕ್ರೈಸ್ತ ಧರ್ಮವು ರೋಮ್‌ನ ರಾಷ್ಟ್ರಧರ್ಮವಾಯಿತು.