ದೇಶಿ ಭಾಷಾ ಸಾಹಿತ್ಯದ ಬೆಳವಣಿಗೆ

೧೫ನೆಯ ಶತಮಾನದ ಪೂರ್ತಿಯಾಗಿ ಸಾಹಿತ್ಯದ ಮಧ್ಯಯುಗೀನ ರೂಪಗಳೇ ಪ್ರಾಧಾನ್ಯವನ್ನು ಪಡೆದಿದ್ದುವು. ಮಧ್ಯಯುಗದ ಕೊನೆಗೆ ಆಶಾದಾಯಕವಾಗಿ ಪ್ರಾರಂಭವಾದರೂ ಸಾಹಿತ್ಯಕ ಸೃಜನಶೀಲತೆಯು ಲ್ಯಾಟಿನ್ ಪ್ರಾಬಲ್ಯದಿಂದ ಕುಂಠಿತವಾಯಿತು. ಇದರ ಫಲವಾಗಿ ದೇಶೀ ಭಾಷೆಗಳು ಸೊರಗಿದುವು. ಲೇಖಕರು ಒಂದು ವೇಳೆ ದೇಶೀ ಭಾಷೆಯಲ್ಲಿ ಬರೆದರೂ ಅದಕ್ಕೆ ಅವರು ಲ್ಯಾಟಿನನ್ನು ತುಂಬಿದರು. ಕೃತಕವಾಗಿ ಆಲಂಕಾರಿಕ ರೂಪಗಳನ್ನು ಅಡಕಿದರು. ಇದಕ್ಕೆ ೧೪ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಅಪವಾದವು ಕಂಡುಬಂದಿತು. ಅಲ್ಲಿ ವಿಲಿಯಂ ಲ್ಯಾಂಗ್ಲೆಂಡ್, ಜಾನ್ ಗೋವರ್ ಮತ್ತು ತುಂಬಾ ಮುಖ್ಯವಾಗಿ ಜಿಯೋಫ್ರಿ ಚಾಸರ್ ಇವರ ಕೃತಿಗಳಲ್ಲಿ ರಾಷ್ಟ್ರೀಯ ಸಾಹಿತ್ಯವು ವಿಜೃಂಭಿಸಿತು. ಕಷ್ಟಕ್ಕೆ ಸಿಲುಕಿದ ೧೫ನೆಯ ಶತಮಾನದಲ್ಲಿ ದುರ್ಬಲವಾದ ಅನುಕರಣಗಳು ಮಾತ್ರ ಸೃಷ್ಟಿಯಾದುವು. ಇದಕ್ಕೆ ಇನ್ನೊಂದು ಅಪವಾದ ಫ್ರಾನ್ಸಿನಲ್ಲಿ ಕಂಡುಬಂದ ಚರಿತ್ರೆಯ ರಚನೆ. ಈ ಲೇಖಕರಲ್ಲಿ ಮುಖ್ಯರಾದವರು ಜೀನ್ ಫ್ರಾಯಿರ್ಸ್ಟ್ ಮತ್ತು ಫಿಲಿಪ್ ಡಿ ಕಾಮಿನೆಸ್.

೧೬ನೆಯ ಶತಮಾನವು ರಾಷ್ಟ್ರೀಯ ಸಾಹಿತ್ಯದ ನಿಜವಾದ ಪುನರುಜ್ಜೀವನವನ್ನು ಕಂಡಿತು. ಆಗ ಸಂಭವಿಸಿದ ರಿಫಾರ್ಮೇಷನ್‌ನಲ್ಲಿ ಲೂಥರನು ಬೈಬಲನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿ, ರಾಷ್ಟ್ರಕ್ಕೆ ಅವರದೇ ಆದ ಒಂದು ಸಾಹಿತ್ಯವನ್ನು ನೀಡಿದನು. ಸ್ಪೆಯಿನಿನಲ್ಲಿ ಅನುಭಾವದ ಜೊತೆಗೆ ಸ್ಪ್ಯಾನಿಷ್ ನಾಟಕವೂ ವಿಕಾಸಗೊಂಡಿತು. ಧಾರ್ಮಿಕ ವಿವಾದಗಳು ಪ್ರಕೋಪಕ್ಕೆ ಹೋಗುತ್ತಿದ್ದಂತೆ, ಚರಿತ್ರಕಾರರು ತಮ್ಮ ತಮ್ಮ ನಿರೂಪಣೆಗಳನ್ನು ದೇಶೀಭಾಷೆಗಳಲ್ಲಿ ದಾಖಲಿಸುತ್ತಿದ್ದರು.

ಸುಧಾರಣೆ (ರಿಫಾರ್ಮೇಷನ್)ಯ ವಸ್ತುವನ್ನು ಒದಗಿಸಿದರೂ ಸಾಹಿತ್ಯಕ ವಿಧಾನಗಳನ್ನು, ಮಾದರಿಗಳನ್ನು ಒದಗಿಸಿದ್ದು ಇಟಲಿ. ಪೆಟ್ರಾರ್ಕನ ಸಾನೆಟ್‌ಗಳು ಫ್ರೆಂಚ್, ಇಂಗ್ಲಿಷ್ ಮತ್ತು ಸ್ಟ್ಯಾನಿಷ್ ಕವಿಗಳ ಮೇಲೆ ಪ್ರಭಾವ ಬೀರಿ ಅವರಿಗೆ ಪ್ರೇರಣೆಯನ್ನು ಒದಗಿಸಿದುವು. ರಿನೈಸಾನ್ಸಿನ ನಿಯೋ-ಕ್ಲಾಸಿಕಲ್ ನಾಟಕವು ನಿಧಾನವಾಗಿ ಮಧ್ಯಯುಗದ ನಿಗೂಢ ನಾಟಕವನ್ನು ಕೊನೆಗೊಳಿಸಿತು.

ಎಲ್ಲ ಆಂದೋಲನಗಳು, ಸಾಹಿತ್ಯಕ, ಬೌದ್ದಿಕ, ಧಾರ್ಮಿಕ ಚಳವಳಿಗಳನ್ನು ಅರಗಿಸಿ ಕೊಂಡ ಫ್ರಾಂಕಾಯ್ ರೆಬೆಲೇ ತನ್ನ ಗರ್ಗಾ ಚುಯಲ್ ಮತ್ತು ಪಂಟಾಗ್ರುಯಲ್ ಕೃತಿಗಳಲ್ಲಿ ಅವೆಲ್ಲವನ್ನೂ ಅಣಕವಾಡಿದನು. ಸ್ಪೆಯಿನಿನವನಾದ ಮಿಗುತ ಡಿ ಸರ್ವಾಟಿಸ್ ತನ್ನ ಸುಪ್ರಸಿದ್ಧ ಡಾನ್ ಕ್ವಿಕ್ಸೋಟ್ ಕೃತಿಯಲ್ಲಿ ತನ್ನ ದೇಶ ಬಾಂಧವರನ್ನು ಅವರ ಆದರ್ಶ ಮತ್ತು ವಾಸ್ತವಗಳಲ್ಲಿ ಸೆರೆಹಿಡಿದನು. ಇಂಗ್ಲೆಂಡಿನಲ್ಲಿ ಕ್ರಿಸ್ಟೋಫರ್ ಮಾರ್ಲೊ ಮತ್ತು ವಿಲಿಯಂ ಷೇಕ್ಸ್‌ಪಿಯರ್ ಇವರ ಪ್ರತಿಭೆಗಳು ಅರಳಿದುವು. ಅವರು ಮಾನವನ ಅಂತರಂಗದ ಆಳಗಳನ್ನು ಹೊಕ್ಕು ತಡಕಲು ರಿನೈಸಾನ್ಸ್ ನಾಟಕ ರೂಪಗಳನ್ನು ಬಳಸಿ ಕೊಂಡರು.

ವಿಜ್ಞಾನ ಮತ್ತು ತಂತ್ರಜ್ಞಾನ

ಮಧ್ಯಯುಗೀನ ವಿಚಾರದಲ್ಲಿ ದ್ರವ್ಯವು ನಾಲ್ಕು ಮೂಲವಸ್ತುಗಳಿಂದಾದದ್ದು ಎಂದು ಅಭಿಪ್ರಾಯಪಡಲಾಗಿದೆ. ಅವು ಯಾವುವೆಂದರೆ ಮಣ್ಣು, ಗಾಳಿ, ಬೆಂಕಿ ಮತ್ತು ನೀರು. ಇವು ನಿಸರ್ಗದ ವಸ್ತುಗಳನ್ನು ಗೋಚರಿಸುವಂತೆ ಮಾಡುತ್ತವೆ. ಪೃಥ್ವಿಯು ಕೇಂದ್ರವಾಗಿದ್ದು ಅದರ ಸುತ್ತ ಅನೇಕ ವಲಯಗಳಲ್ಲಿ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿವೆ. ಏಷ್ಯಾ, ಯುರೋಪ್, ಮತ್ತು ಆಫ್ರಿಕಾಗಳು ಭೂಮಿಯಾಗಿವೆ. ದಕ್ಷಿಣದ ವಲಯಗಳು ವಾಸಯೋಗ್ಯವಾಗಿಲ್ಲ. ಸೃಷ್ಟಿಯ ಕೇಂದ್ರವಾದ ಮನುಷ್ಯನು ನಾಲ್ಕು ರಸಧಾತುಗಳಿಂದಾಗಿ ದ್ದಾನೆ. ಅವು ಕೃಷ್ಣಪಿತ್ತ, ಹರಿತಪಿತ್ತ, ಶ್ಲೇಷ್ಮ ಮತ್ತು ರಕ್ತ. ಬ್ರಹ್ಮಾಂಡವು ಮಾನವ ಪ್ರಜ್ಞೆಯಿಂದ ಜೀವಂತವಾಗಿದೆ, ನಕ್ಷತ್ರಗಳು ಘಟನೆಗಳ ಮೇಲೆ ಮತ್ತು ಮನುಷ್ಯರ ಆದೃಷ್ಟದ ಮೇಲೆ ಪ್ರಭಾವವನ್ನು ಹೊಂದಿವೆ ಎಂಬಂಥ ವಿಚಾರಗಳನ್ನು ಹೆಚ್ಚಿನವರು ನಂಬಿದ್ದರು.

ಅರಿಸ್ಟಾಟಲನ ಭೌತವಿಜ್ಞಾನ, ಗಲೆನಿಯ ವೈದ್ಯ ವಿಜ್ಞಾನ, ಟಾಲೆಮಿಯ ಖಗೋಳವಿಜ್ಞಾನ ಮತ್ತು ಕ್ರಿಶ್ಚಿಯನ್ ಮತಧರ್ಮಶಾಸ್ತ್ರ ಇವು ಮನುಷ್ಯನ ಅರಿವಿನಲ್ಲಿ ಪ್ರಧಾನವಾದವು. ವಿಜ್ಞಾನದ ಬೆಳವಣಿಗೆಗೆ ತಡೆಯನ್ನುಂಟು ಮಾಡುವುದು ಜನರ ಮೂಢನಂಬಿಕೆಯೇ ಹೊರತು ಚರ್ಚಿನದಲ್ಲ. ಪ್ರಕಟಣೆಗಳ ಸೆನ್ಸಾರ್ ವಿಜ್ಞಾನಕ್ಕೆ ಒಂದು ತಡೆಯಾಗಲಿಲ್ಲ. ಕೌನ್ಸಿಲ್ ಆಫ್ ಟ್ರೆಂಡ್‌ಅನ್ನು ಅನುಸರಿಸಿ ಕಾಣಿಸಿಕೊಂಡ ಪ್ರತಿಸುಧಾರಣೆಯವರೆಗೂ ಇದು ಹೀಗೆಯೇ ಇತ್ತು. ೧೪ ಮತ್ತು ೧೫ನೆಯ ಶತಮಾನಗಳ ಉದ್ದಕ್ಕೂ ಇಟಲಿಯಲ್ಲಿ ಮತ ವಿಚಾರಣೆಯು ದುರ್ಬಲವಾಗೇ ಇತ್ತು. ಹಾಗಿದ್ದರೂ ಅಲ್ಲಿ ಶಿಕ್ಷಣವು ಬೇರೆ ಯಾವುದೇ ದೇಶಕ್ಕಿಂತ ತುಂಬಾ ಮುಂದುವರಿದಿತ್ತು. ಇಟಲಿಯ ಖಗೋಳ ವಿಜ್ಞಾನ, ನ್ಯಾಯಶಾಸ್ತ್ರ, ವೈದ್ಯ ವಿಜ್ಞಾನ ಮತ್ತು ಸಾಹಿತ್ಯ ಹತ್ತಾರು ನಾಡುಗಳ ವಿದ್ಯಾರ್ಥಿಗಳಿಗೆ ಕಲಿಯಬೇಕಾಗಿದ್ದ ವಿಷಯಗಳಾಗಿದ್ದವು.

ಹೀಗೆ ಅಂಧಶ್ರದ್ಧೆ ಮತ್ತು ಉದಾರವಾದಗಳ ಈ ವಾತಾವರಣದಲ್ಲಿ ವಿಜ್ಞಾನವು ಸ್ವಲ್ಪ ಮಾತ್ರ ಪ್ರಗತಿಯನ್ನು ತೋರಿಸಿದ್ದರೆ, ಅದಕ್ಕೆ ಕಾರಣ ಸಮಸ್ತ ಆಶ್ರಯವೂ ಕಥೆ ಮತ್ತು ಕಾವ್ಯಗಳಿಗೆ ದೊರಕಿದುದು. ಲಿಯೊನಾರ್ಡೋನಂತಹ ಒಬ್ಬ ವ್ಯಕ್ತಿಯು ಸಮಗ್ರವಾದ ವಿಶ್ವದೃಷ್ಟಿಯನ್ನು ಬೀರಬಲ್ಲವನಾಗಿದ್ದನು. ಅದೇ ಉತ್ಸಾಹಪೂರಿತ ಕುತೂಹಲದಿಂದ ಅವನು ಒಂದು ಡಜನ್ ವಿಜ್ಞಾನಗಳಲ್ಲಿ ಕೈಯಾಡಿಸಬಲ್ಲ ಸಮರ್ಥನಾಗಿದ್ದನು. ಆದರೆ ಅದಕ್ಕೆ ತಕ್ಕ ದೊಡ್ಡ ಪ್ರಯೋಗಾಲಯಗಳಿರಲಿಲ್ಲ. ವಿಚ್ಛೇದನ ಪರೀಕ್ಷೆ ಇನ್ನೂ ತಾನೆ ಆರಂಭ ಸ್ಥಿತಿಯಲ್ಲಿತ್ತು. ಜೀವಶಾಸ್ತ್ರ ಮತ್ತು ವೈದ್ಯಶಾಸ್ತ್ರಗಳಲ್ಲಿ ನೆರವಾಗಲು ಸೂಕ್ಷ್ಮ ದರ್ಶಕವಿರಲಿಲ್ಲ. ನಕ್ಷತ್ರಗಳನ್ನು ದೊಡ್ಡದಾಗಿ ತೋರಿಸಲು ದೂರದರ್ಶಕಗಳಿರಲಿಲ್ಲ. ರಿನೈಸಾನ್ಸ್ ತನ್ನ ಆತ್ಮವನ್ನು ಕಲೆಗೆ ನೀಡಿತು. ಸಾಹಿತ್ಯಕ್ಕೆ ಸ್ವಲ್ಪ ಉಳಿಸಿತು. ತತ್ವಶಾಸ್ತ್ರಕ್ಕೆ ಸ್ವಲ್ಪ ಉಳಿಸಿತು. ವಿಜ್ಞಾನಕ್ಕೆ ತೀರಾ ಅಲ್ಪ.

ರಿನೈಸಾನ್ಸ್ ಅವಧಿಯಲ್ಲಿ ಮನುಷ್ಯನ ಮನಸ್ಸಿನ ಮೇಲೆ ಮಧ್ಯಯುಗವು ಹೊಂದಿದ್ದ ಹಿಡಿತದ ಸ್ಥಾನದಲ್ಲಿ ಕೊಪರ್ನಿಕಸ್, ವಿಲಿಯಂ ಹಾರ್ವೇ, ಗೆಲಿಲಿಯೋ ಮತ್ತು ಐಸಾಕ್ ನ್ಯೂಟನ್ ಇವರ ಪರಿಕಲ್ಪನೆಗಳು ಮತ್ತು ಸಂಶೋಧನೆಗಳು ಬಂದು ನಿಂತುವು. ಇವರಲ್ಲಿ ರಿನೈಸಾನ್ಸ್ ಕಾಲದಲ್ಲಿ ಜನಿಸಿದವನು ಕೋಪರ್ನಿಕಸ್ ಒಬ್ಬನೇ. ವಿಜ್ಞಾನ ಪ್ರಗತಿ  ಬಹುತೇಕ ೧೭ನೆಯ ಶತಮಾನದ ಘಟನೆ. ಪ್ರಾಚೀನ ಗ್ರೀಕ್ ವಿಜ್ಞಾನ ಗ್ರಂಥಗಳ ಅನುವಾದಗಳನ್ನು, ಮೂಲಕೃತಿಗಳನ್ನು ಮಾನವತಾವಾದಿಗಳ ವಿದ್ವತ್ತು ಒದಗಿಸಿತು. ರಿನೈಸಾನ್ಸ್ ತತ್ವಜ್ಞಾನಿ ಜಕೋಪ ಝಬ್ರೆಲ್ಲಾನು ರೂಪಿಸಿದ ಅನುಗಮನ ಮತ್ತು ನಿಗಮನ ತರ್ಕ ವಿಧಾನಗಳ ಮೂಲಕ ವಿಜ್ಞಾನಿಗಳು ಕೆಲಸ ಮಾಡಿದರು.

ರಿನೈಸಾನ್ಸ್ ದಾಪುಗಾಲುಗಳನ್ನಿಟ್ಟಿದ್ದು ಗಣಿತ ವಿಜ್ಞಾನದಲ್ಲಿ. ಹ್ಯೂಮನಿಸ್ಟರು ಲಿಬರಲ್ ಕಲೆಗಳ ಅಧ್ಯಯನ ಪಟ್ಟಿಯಲ್ಲಿ ಅಂಕಗಣಿತವನ್ನು, ರೇಖಾಗಣಿತವನ್ನೂ ಸೇರಿಸಿದರು. ಒಂದು ಸಂಖ್ಯೆಯು ಜಗತ್ತನ್ನು ಆಳುತ್ತದೆ ಎಂದು ಲಿಯೊನಾರ್ಡೋ ಭಾವಿಸಿದನು. ೨೦ನೆಯ ಶತಮಾನದ ಒಬ್ಬ ವಿಜ್ಞಾನ ಇತಿಹಾಸಕಾರನು, ಆಗ ಬೀಜ ಗಣಿತವನ್ನು ಕುರಿತ ಆಸಕ್ತಿಯು ಜ್ವರದಂತೆ ಹರಡುತ್ತಿತ್ತು ಎಂದಿದ್ದಾನೆ. ಅಷ್ಟು ಮಾತ್ರ ವಲ್ಲ, ಪ್ರಥಮ ಶ್ರೇಣಿಯ ತಾತ್ವಿಕರನ್ನು ಅದು ಸೃಷ್ಟಿಸಿತು. ಅವರಲ್ಲಿ ಮುಖ್ಯರಾದವರು ನಿಕ್ಕೇಲಾ ತಾರ್ತಾಗ್ಲಿಯಾ ಮತ್ತು ಗಿರೋಲಾಮಾ ಕಾರ್ದಾನಾ. ತಾರ್ತಾಗ್ಲಿಯನು ಘನ ಸಮಸ್ಯೆಗಳನ್ನು ಬಿಡಿಸುವ ಒಂದು ವಿಧಾನವನ್ನು ಕಂಡುಹಿಡಿದನು. ಅದನ್ನು ಕಾರ್ದಾನಾನಿಗೆ ಕೊಟ್ಟನು. ಅವನು ಅದನ್ನು ತನ್ನದೇ ಎಂಬಂತೆ ಪ್ರಕಟಿಸಿದನು.

ಇಟಲಿಯ ಅವನತಿಯ ಈ ಕಾಲದಲ್ಲಿ ಸ್ವಲ್ಪ ಮಟ್ಟಿಗಾದರೂ ಗಣನೀಯ ಪ್ರಗತಿ ಕಂಡುಬಂದದ್ದು ವೈದ್ಯವಿಜ್ಞಾನದಲ್ಲಿ ಮಾತ್ರ. ಅದರ ತಳಹದಿ ರಿನೈಸಾನ್ಸ್ ಕಾಲಾವಧಿಯ ಅಂಗರಚನಾ ಶಾಸ್ತ್ರ. ಆಧುನಿಕ ಅನಾಟಮಿಯ ಪರಿಭಾಷೆಯೊಂದಿಗೆ ಸಂಬಂಧ ಹೊಂದಿರುವ ಹೆಸರುಗಳಾದ ವರೋಲಿ, ಊಸ್ಟಾಚಿಯೋ ಮತ್ತು ಫಾಲಿಯೋಪಿಯೋ ಈ ಸಂಕ್ಷಿಪ್ತ ಕಾಲಾವಧಿಗೆ ಸೇರಿದವರು. ಮಠೀಯರು ವೈದ್ಯರೊಂದಿಗೆ ಸಹಕರಿಸಿ, ಪರೀಕ್ಷೆಗಾಗಿ ಶವಗಳನ್ನು ಒದಗಿಸುತ್ತಿದ್ದರು. ಆಂಟೋನಿಯೋ ಬೆನಿವೆನಿ, ಅಲೆಸ್ಸಾಂಡ್ರೋ ಅಖಿಲೆನ್, ಅಲೆಸ್ಸಾಂಡ್ರೋ ಬೆನೆಡೆಟ್ಟ್ ಮತ್ತು ಮರ್ಕಂಟೇನಿಯೋ ಡೆಲ್ಲಾ ಡೊರೇ ಇಂತಹ ತಜ್ಞರು ಅನಾಟಮಿಯನ್ನು ಅರಬ್ಬೀ ‘‘ದಾಸ್ಯದಿಂದ’’ ಬಿಡುಗಡೆ ಮಾಡಿದರು. ಹೀಗಾಗಿ ಅವರು ಗಲೆನ್ ಮತ್ತು ಹಿಪ್ಪೊಕ್ರಿಟೀಸ್ ವರೆಗೆ ಹಿಂದಕ್ಕೆ ಹೋದರು. ಈ ಸಂದರ್ಭದಲ್ಲಿ ಅವರು ಪವಿತ್ರ ಪ್ರಮಾಣಗಳ ಉಸ್ತುವಾರದಾರರನ್ನು ಪ್ರಶ್ನಿಸಿದರು. ಇವರು ದೇಹದ ಒಳರಚನೆಯ ಪರಿಜ್ಞಾನಕ್ಕೆ ಒಂದೊಂದೇ ನರವನ್ನು, ಒಂದೊಂದೇ ಸ್ನಾಯುವನ್ನು, ಒಂದೊಂದೇ ಎಲುಬನ್ನು ಕೂಡಿಸುತ್ತಾ ಬಂದರು. ಶಸ್ತ್ರಚಿಕಿತ್ಸೆಯೂ ಪ್ರಾಚೀನ ಈಜಿಪ್ಟ್ ಮಟ್ಟದ ಸಾಮರ್ಥ್ಯದ ಹಂತಕ್ಕೆ ಏರಿತು.

ತಂತ್ರಜ್ಞಾನ

ಮಧ್ಯಯುಗದ ದೃಷ್ಟಿಕೋನಗಳ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾ ೧೫ ಮತ್ತು ೧೬ನೆಯ ಶತಮಾನದ ಎಂಜಿನಿಯರರು ಮತ್ತು ತಂತ್ರಜ್ಞರು ಅದ್ಭುತ ಸಾಧನೆಗಳನ್ನು ಮಾಡಿದರು. ಇದಕ್ಕೆ ಶುದ್ಧವಿಜ್ಞಾನ ತತ್ವಗಳಿಗಿಂತಲೂ, ಬದಲಾಗುತ್ತಿದ್ದ ಸಾಮಾಜಿಕ ಪರಿಸ್ಥಿತಿ ಹೆಚ್ಚು ಕಾರಣವಾಗಿತ್ತು. ಅತ್ಯಂತ ಮುಖ್ಯವಾದ ತಾಂತ್ರಿಕ ಬೆಳವಣಿಗೆಯೆಂದರೆ ಮುದ್ರಣಾಲಯ. ೧೫ನೆಯ ಶತಮಾನದಲ್ಲಿ ಜರ್ಮನಿಯಲ್ಲಿ ಬಿಡಿ ಅಕ್ಷರಗಳನ್ನು ಜೋಡಿಸಿ ಮುದ್ರಿಸುವ ಪದ್ಧತಿಯನ್ನು ಕಂಡುಹಿಡಿಯಲಾಯಿತು. ಇದರಲ್ಲಿ ತೊಡಗಿಸಿ ಕೊಂಡಿದ್ದವರು ಹಲವು ಮಂದಿಯಾದರೂ ಜೋಹಾನ್ ಗುಟಿನ್‌ಬರ್ಗ್‌ನನ್ನು ಅದರ ಸಂಶೋಧಕನೆಂದು ಕೊಂಡಾಡಲಾಗಿದೆ. ೧೨೫೦ ಮತ್ತು ೧೩೫೦ರ ನಡುವೆ ಚೈನಾದಿಂದ ಮರದ ಅಚ್ಚು ಮುದ್ರಣ ಬಂದಿತ್ತು. ಅರಬ್ಬರು ೧೨ನೆಯ ಶತಮಾನದಲ್ಲಿ ಕಾಗದ ತಯಾರಿಕೆಯನ್ನು ಸ್ಪೆಯಿನಿಗೆ ತಂದಿದ್ದರು. ನೂತನ ಮುದ್ರಣ ಮನೆಯ ಮೂಲ ಫ್ಲೆಮಿಷ್ ತೈಲವರ್ಣ ತಂತ್ರ. ಮೇನ್ ನಗರದ ಮೂವರು, ಗುಟೆನ್‌ಬರ್ಗ್ ಮತ್ತು ಅವನ ಸಮಕಾಲೀನರಾದ ಜೋಹಾನ್‌ಫಸ್ಟ್ ಮತ್ತು ಪೀಟರ್ ಶಾಫರ್ ಅಂತಿಮವಾಗಿ ಲೋಹದ ಅಚ್ಚುಮೊಳೆಗಳನ್ನು ಎರಕ ಹೊಯ್ದು, ಅವುಗಳನ್ನು ಮರದ ಚೌಕಟ್ಟಿನಲ್ಲಿ ಜೋಡಿಸಿ ಬಿಗಿಪಡಿಸಿದರು. ಈ ಸಂಶೋಧನೆಯು ಕಾಡುಗಿಚ್ಚಿನಂತೆ ವೇಗವಾಗಿ ಹರಡಿ ೧೪೬೭ರಲ್ಲಿ ಇಟಲಿಯನ್ನು ತಲುಪಿತು. ೧೪೭೦ರ ವರ್ಷಗಳಲ್ಲಿ ಹಂಗೇರಿ ಮತ್ತು ಪೋಲೆಂಡ್‌ಗಳಿಗೂ, ೧೪೮೩ ವೇಳೆಗೆ ಸ್ಕ್ಯಾಂಡಿನೇವಿಯಕ್ಕೂ ಕಾಲಿಟ್ಟಿತು. ೧೫೦೦ರ ವೇಳೆಗೆ ಯೂರೋಪಿನ ಮುದ್ರಣಾಲಯಗಳು ೬೦೦೦ ಪುಸ್ತಕಗಳನ್ನು ಮುದ್ರಿಸಿದ್ದುವು. ಮುದ್ರಣದ ಈ ಪ್ರಗತಿಯಿಂದ ಸಮೂಹ ಸಂಪರ್ಕದಲ್ಲಿ ಕ್ರಾಂತಿಯೇ ಆಯಿತು. ಅದಿಲ್ಲದೆ ರಿಫಾರ್ಮೇಷನ್ ಅನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿರಲಿಲ್ಲ.

ಭೌಗೋಳಿಕ ಸಂಶೋಧನೆಗಳು

ಭೌಗೋಳಿಕ ಸಂಶೋಧನೆ ಸುದೀರ್ಘವೂ, ಜಟಿಲವೂ ಹಾಗೂ ಅನೇಕ ಜನರನ್ನು ಒಳಗೊಂಡ ಒಂದು ಪ್ರಕ್ರಿಯೆ. ಅರಬ್ಬರಿಂದ ಪಡೆದ ನೌಕಾಯಾನ ಸಲಕರಣೆಗಳು, ಹಿಸ್ಟಾನಿಕ್ ಮತ್ತು ಪೂರ್ವ ಆಫ್ರಿಕಾದ ಯಹೂದಿಗಳು ತಯಾರಿಸಿದ ಖಗೋಳ ವೈಜ್ಞಾನಿಕ ಪಟ್ಟಿಕೆಗಳು ಮತ್ತು ಸಾಗರ ನಕ್ಷೆಗಳು, ಸ್ಪೆಯಿನಿನವರು ವಿನ್ಯಾಸ ಮಾಡಿದ ಚೌಕಾಕಾರದ ಕಾಲುವೆಗಳಿಂದ ಕೂಡಿದ ಹಡಗುಗಳು ಇವೆಲ್ಲವೂ ಇಟಾಲಿಯನ್ ನಾವಿಕರು ಸಂಶೋಧನೆಯ ಕ್ಷೇತ್ರದಲ್ಲಿ ಅದ್ಭುತ ಸಾಧನೆಗಳನ್ನು ಮಾಡಲು ಕಾರಣವಾದವು.

ರಿನೈಸಾನ್ಸ್ ಸಂಶೋಧನೆಯು ಪ್ರಾರಂಭವಾದದ್ದು ಪೋರ್ಚುಗೀಸರು ಮೊರಾಕೋದ ಸೆಂಟೋವನ್ನು ಗೆದ್ದುದರಿಂದ (೧೪೧೫). ಇದು ಆಫ್ರಿಕಾದ ದಕ್ಷಿಣ ಕರಾವಳಿಯಲ್ಲಿ ಹಡಗುಗಳನ್ನು ಕಳುಹಿಸಿ ಕೊಡಲು ಹೆನ್ರಿಗೆ ಒಂದು ಆಧಾರ ದೊರಕಿದಂತಾಯಿತು. ೧೪೬೦ರಲ್ಲಿ ಅವನು ಮಡಿದನು. ಆ ವೇಳೆಗೆ ಹೆನ್ರಿಯ ಹಡಗುಗಳು ಗಿನಿಯಾ ಕರಾವಳಿ ಯನ್ನು ತಲುಪಿದ್ದುವು. ೧೪೮೭ರ ವೇಳೆಗೆ ಬಾರ್ಥಾಲೋಮ್ಯು ಡಯಾಸ್ ಗುಡ್ ಹೋಪ್ ಭೂಶಿರಕ್ಕೆ ಹೋಗಿದ್ದನು. ೧೪೯೮ರಲ್ಲಿ ವಾಸ್ಕೋಡಿಗಾಮನು ಭಾರತದ ಮಲಬಾರ್ ಕರಾವಳಿಯಲ್ಲಿ, ಸಂಬಾರ ವಸ್ತುಗಳಿಗಾಗಿ ಬಂದರು ಹಾಕಿ ಹಡಗು ನಿಲ್ಲಿಸಿದ್ದನು.

ಸ್ಪರ್ಧೆಗೆ ತುಸು ತಡವಾಗಿ ಬಂದು, ಮಿಕ್ಕವರ ಸಮಕ್ಕೆ ಬರಲು ಸ್ಪೆಯಿನಿನ ಫರ್ಡಿನೆಂಡ್ ಮತ್ತು ಇಸೆಬೆಲ್ಲಾ ೧೪೯೨ರಲ್ಲಿ ಜೆನೋಯೇಸ್ ಕ್ರಿಸ್ಟೋಫರ್ ಕೊಲಂಬಸನನ್ನು ಅಟ್ಲಾಂಟಿಕ್ ಸಾಗರದ ಮೂಲಕ ಇಂಡೀಸ್ ಕಡೆಗೆ ಕಳುಹಿಸಿದರು. ಕೊಲಂಬಸನು ಕೆರಿಬಿಯನ್ ಪ್ರದೇಶಕ್ಕೆ ನಾಲ್ಕು ಸಾರಿ ಯಾನ ಮಾಡಿದನು. ದೂರ ಪ್ರಾಚ್ಯಕ್ಕೆ ತಾನು ದಾರಿಯನ್ನು ಕಂಡು ಹಿಡಿದಿರುವುದಾಗಿ ನಂಬಿದನು. ಆದರೆ ಅಮೆರಿಗೊ ವೆಸ್‌ಪುಸಿ ೧೫೦೧-೩ರಲ್ಲಿ ನಡೆಸಿದ ನೌಕಾಯಾನಗಳಿಂದ ನಕ್ಷಾಕಾರರಿಗೆ ಮತ್ತು ವಿದ್ವಾಂಸರಿಗೆ ಒಂದು ವಿಷಯವು ಮನವರಿಕೆಯಾಯಿತು. ಅದೇನೆಂದರೆ ಯೂರೋಪಿಗೂ ಏಷ್ಯಕ್ಕೂ ನಡುವೆ ಒಂದು ವಿಶಾಲವಾದ ಭೂಭಾಗವಿದೆ, ಅದು ಇಂಡಿಯಾ ಅಲ್ಲ. ರೋಡ್ರಿಗೋ ಡಿ. ಸಾಂತೇರಾ ಬರೆದಂತೆ, ‘‘ಭಾರತಕ್ಕೆ ಎದುರಾಗಿರುವ ಇದುವರೆಗೆ ನಮಗೆ ತಿಳಿದಿರದ ಒಂದು ಜಗತ್ತಿನ ಭಾಗವಾಗಿದೆ.’’ ಅದೇ ವರ್ಷ, ದಕ್ಷಿಣದಲ್ಲಿ ಮಾರ್ಗವೊಂದನ್ನು ಕಾಣಲು ಅಸಮರ್ಥವಾಗಿ ವೆಸ್ಪೂಸಿ ಅದನ್ನು ‘‘ನೂತನ ಜಗತ್ತು’’ ಎಂದು ಕರೆದನು. ೧೫೧೩ರಲ್ಲಿ ವಾಸ್ಕೋನ್ಯೂನಿಜ್ ಡೆ ಬಲ್ಬೋವಾ ಪೆಸಿಫಿಕ್ ಸಾಗರವನ್ನು ಕಂಡುಹಿಡಿದನು. ೧೫೨೧ರಲ್ಲಿ ಫರ್ಡಿನೆಂಡ್ ಮೆಗೆಲಾನ್ ಪಶ್ಚಿಮದ ಮಾರ್ಗವನ್ನು ಕಂಡುಕೊಂಡನು. ಅದರ ಮೂಲಕ ಅಮೆರಿಕದ ದಕ್ಷಿಣ ತುದಿಯನ್ನು ಸುತ್ತಿಕೊಂಡು ಕೊಲ್ಲಿಯ ಮೂಲಕ ಸಾಗಿದನು. ಇಂದು ಆ ಕೊಲ್ಲಿಗೆ ಅವನ ಹೆಸರೇ ಇದೆ. ಫಿಲಿಪೀನರು ಮೆಗೆಲಾನನನ್ನು ಕೊಂದರು. ಆದರೆ ಅವನ ಸಿಬ್ಬಂದಿಯು ಗೋಳದ ಸುತ್ತ ನೌಕಾಯಾನ ಮಾಡುವ ಸಾಹಸವನ್ನು ಪೂರ್ಣ ಗೊಳಿಸಿದರು. ಪಶ್ಚಿಮಗೋಳಾರ್ಧ ಮತ್ತು ಪೆಸಿಫಿಕ್ ಪ್ರದೇಶಗಳ ನಕ್ಷೆ ತಯಾರಿಕೆ, ಭೂಗೋಳವನ್ನು ಕುರಿತ ಪ್ರಾಚೀನ ಜ್ಞಾನಕ್ಕೆ ಸವಾಲಾಯಿತು. ಪರಿಣಾಮವಾಗಿ, ಭೂಗೋಳ ಕುರಿತ ಪ್ರಾಚೀನ ಜ್ಞಾನವನ್ನು ಇವರು ತಿರಸ್ಕರಿಸಿದರು. ಅದರೊಂದಿಗೆ, ಪ್ರಾಚೀನತೆಯು ಯೂರೋಪಿನ ಮನಸ್ಸುಗಳ ಮೇಲೆ ಅಧಿಕೃತವಾಗಿ ಪ್ರಭಾವವನ್ನೂ ಚಲಾಯಿಸಿತು ಎಂಬ ದೃಷ್ಟಿಯೂ ಬಹುಭಾಗ ಕಣ್ಮರೆಯಾಯಿತು.

ರಿನೈಸಾನ್ಸ್ ಕಲೆ ಮತ್ತು ವಾಸ್ತುಶಿಲ್ಪ

ಕಲೆಯ ಇತಿಹಾಸದಲ್ಲಿ ರಿನೈಸಾನ್ಸ್ ಅತ್ಯಂತ ಮಹತ್ವದ ಕಾಲ ಎಂದು ಸಾಂಪ್ರದಾಯಿಕ ವಾಗಿ ಗುರುತಿಸಲಾಗಿದೆ. ಕಲೆಗಳಲ್ಲಿ ವರ್ಣಚಿತ್ರಕಲೆ ಅತಿ ಶ್ರೇಷ್ಠವಾದದ್ದೆಂಬುದರಲ್ಲಿ ಸಂದೇಹವಿಲ್ಲ. ಮಾನವೀಯ ಪರಿಸ್ಥಿತಿಗಳು ಮತ್ತು ಅನುಭವ ರಿನೈಸಾನ್ಸ್ ಕಲೆಯ ಬೇರು. ವರ್ಣಕಲೆಯನ್ನು ಕುರಿತ ನಿರ್ಬಂಧದಲ್ಲಿ ಆಲ್ಬರ್ಟಿಯ ಚಿತ್ರದಲ್ಲಿ ಕಥನದ ಪ್ರಾಮುಖ್ಯ ಎಷ್ಟೆಂಬುದನ್ನು ಚರ್ಚಿಸುತ್ತಾನೆ. ಕುಟುಂಬ, ಧರ್ಮ, ವರ್ಗ, ರಾಜಕೀಯ ನಿಷ್ಠೆ ಅಥವಾ ಇನ್ನಾವುದೇ ಅಂಶಗಳಿಗೆ ಸಚಿತ್ರವಾಗಿ ಸಂಬಂಧಗೊಂಡ ಮಾವನ ಜೀವಿಗಳು ಕಲೆಯ ವಸ್ತುವಾಗಿ ಪ್ರಾಧಾನ್ಯ ಪಡೆಯುತ್ತಾರೆ. ಕಲೆಯು ದೈವಿಕತೆ ಮತ್ತು ಅಮಾನುಷಕತೆಗಳಿಂದ ಸಹ ಸಂಬಂಧಿಯಾದ ಜೀವನ ಮತ್ತು ಜ್ಞಾನಗಳ ಕಡೆಗೆ ತಿರುಗಿತು. ರಿನೈಸಾನ್ಸಿನಲ್ಲಿ ಅತ್ಯಮೂಲ್ಯ ಪರಿಕಲ್ಪನೆಯೆನಿಸಿದ ಮಾನವಾನುಭಾವವು ಇಲ್ಲಿ ಕೇಂದ್ರವಸ್ತುವಾಯಿತು. ಈ ಮಾನವಾನುಭವವನ್ನು ಕಲೆಯಲ್ಲಿ ಸಾಧಿಸಲು ರಿನೈಸಾನ್ಸ್ ಕಲಾವಿದರು ಕಣ್ಣು ಏನನ್ನು ನೋಡಿತೋ ಅದನ್ನು ಹಾಗೆಯೇ ಪುನರುತ್ಪಾದಿಸುವ ತಂತ್ರವನ್ನು ಬೆಳೆಸಿಕೊಂಡರು. ಎರಡು ಆಯಾಮಗಳ ತಲವಿದ್ದ ರೇಖಾತ್ಮಕ ಅಭಿವ್ಯಕ್ತಿಯು ಈಗ ೧೫ನೆಯ ಶತಮಾನದ ಪ್ರಾರಂಭದಲ್ಲಿ ಬ್ರುನೆಲ್ಲೆಶ್ಚಿ ತಮ್ತು ಆಲ್ಬರ್ಟಿ ಇವರ ಕೃತಿಗಳಲ್ಲಿ ಮೂರು ಆಯಾಮಗಳದ್ದಾಗಿ ಪರಿವರ್ತಿತವಾಯಿತು. ಹಾಗೆಯೇ ಕಲಾವಿದರು ಪ್ರಕೃತಿಯನ್ನು ಇನ್ನು ಉತ್ತಮವಾಗಿ ಅಭಿವ್ಯಕ್ತಿಸಲು ಸಹಾಯಕವಾಗುವಂತೆ ಅಂಗರಚನಾ ಶಾಸ್ತ್ರ, ಜೀವಶಾಸ್ತ್ರ ಮೊದಲಾದ ವಿಜ್ಞಾನಗಳನ್ನು ಅಧ್ಯಯನ ಮಾಡಲು ತೊಡಗಿದರು. ಹೀಗೆ ನೈಸರ್ಗಿಕತೆಯು ರಿನೈಸಾನ್ಸ್ ಕಲೆಯ ಕೇಂದ್ರ ವಸ್ತುಗಳಲ್ಲಿ ಒಂದಾಯಿತು. ವ್ಯಕ್ತಿಚಿತ್ರಗಳು ಹೆಚ್ಚು ಪ್ರಖರವೂ ಸಜೀವವೂ ಆದವು. ೧೫ನೆಯ ಶತಮಾನದ ಕೊನೆಯ ವೇಳೆಗೆ ಪೂರ್ತಿ ಗುಂಡಾದ ಎದೆ ಪ್ರತಿಮೆಗಳನ್ನು ಮತ್ತು ಹಿತ್ತಾಳೆಯ ಅಶ್ವಾರೋಹಿ ವಿಗ್ರಹಗಳನ್ನು ಮತ್ತೆ ಸೃಷ್ಟಿಸಲಾಯಿತು. ಪ್ರಕೃತಿ ದೃಶ್ಯದ ನಿರೂಪಣೆಯೂ ಸತ್ಯ ಸಮೀಪವಾಯಿತು.

ಪ್ರಾಚೀನತೆಯು ವಾಸ್ತುಶಿಲ್ಪಕ್ಕೂ ಸ್ಫೂರ್ತಿಯನ್ನು ನೀಡಿತು. ಬ್ರುನೆಲೆಶ್ಚಿ ಮತ್ತು ಆಲ್ಬರ್ಟಿ ಪ್ರಾಚೀನ ಅವಶೇಷಗಳನ್ನು ಅಳತೆ ಮಾಡಿ, ಅವುಗಳನ್ನು ಹೇಗೆ ಕಟ್ಟಲಾಗಿತ್ತು ಎಂದು ನಿಯಂತ್ರಿಸಲು ಖಚಿತವಾಗಿ ರೋಮಿಗೆ ಪ್ರಯಾಣ ಮಾಡಿದರು. ರೋಮನ್ ವಾಸ್ತುಶಿಲ್ಪ ವಿಟ್ರೂವಿಯಸನ ಟೆಕ್ಸ್ಟ್‌ಬುಕ್ಸ್ ಆನ್ ಆರ್ಕಿಟೆಕ್ಚರ್ ಕೃತಿಯು ಮರಳಿ ಈ ವಾಸ್ತುಶಿಲ್ಪಗಳಿಗೆ ಅವರ ಸಂಶೋಧನೆಯ ಕೆಲಸಕ್ಕೆ ಅಗತ್ಯವಾದ ತಾತ್ವಿಕ ತಳಹದಿಯನ್ನು ವೈಜ್ಞಾನಿಕವಾಗಿ ಪೂರೈಸಿತು. ಇದರ ಫಲವಾಗಿ ರಿನೈಸಾನ್ಸ್ ಕಾಲದ ಕಟ್ಟಡಗಳು ಪ್ರಾಚೀನ ಭಾಷೆಯನ್ನು ಅರಗಿಸಿಕೊಂಡುವು. ಅವುಗಳ ಅಳತೆಯು ಮಾನವ ಶರೀರದ ಅಳತೆಗೆ ಹೊಂದುವ ಪ್ರಮಾಣದಲ್ಲಿತ್ತು. ಅಥವಾ ತರಬೇತಿ ಪಡೆದ, ಮಾನವತಾವಾದದ ರೀತಿಯ ಶಿಕ್ಷಣವನ್ನು ಪಡೆದ ವೈಚಾರಿಕ ಮತಿಯುಳ್ಳ ವಿದ್ಯಾವಂತ ದಾನಿಗಳಿಗೆ ಹಾಗೂ ವೀಕ್ಷಕರಿಗೆ ಗಣಿತೀಯ ಗುಣಗಳಿಂದ ಆಕರ್ಷಕವಾಗಿದ್ದುವು.

೧೫ನೆಯ ಶತಮಾನದ ಕಲಾವಿದರು ನೆರಳು-ಬೆಳಕಿನ ಪರಿಣಾಮದಲ್ಲೂ ಪ್ರಯೋಗ ಮಾಡಿದರು. ಮೊದಲಬಾರಿಗೆ ಅವರು ಮಾನವ ದೇಹದ ಅಂಗರಚನಾಶಾಸ್ತ್ರವನ್ನು ಅಂಗಾಂಗ ಪ್ರಮಾಣಗಳನ್ನು ಅಧ್ಯಯನ ಮಾಡಿದರು. ತೈಲವರ್ಣಗಳ ಬಳಕೆಯೂ ೧೫ನೆಯ ಶತಮಾನದಲ್ಲಿ ಕಂಡುಬಂದಿತು. ಖಾಸಗಿ ಸಂಪತ್ತು ಅಧಿಕವಾದುದರಿಂದ ಕಲೆಯು ಧರ್ಮದ ವಲಯದ ನಿರ್ಬಂಧದಿಂದ ಮುಕ್ತವಾಯಿತು. ಧಾರ್ಮಿಕ ವಸ್ತುಗಳ ಜೊತೆಗೆ ಧಾರ್ಮಿಕವಲ್ಲದ ವಸ್ತುಗಳು ಬೆರೆತುಕೊಂಡುವು. ಮಾನವಾತ್ಮದ ಸುಪ್ತ ರಹಸ್ಯವನ್ನು ಬಯಲುಪಡಿಸುವಂತೆ ವ್ಯಕ್ತಿಚಿತ್ರಗಳ ನಿರ್ಮಾಣ ನಡೆಯಿತು.

ಬಹುತೇಕ ವರ್ಣಚಿತ್ರಕಾರರು ಫ್ಲಾರೆನ್ಸಿನಿಂದ ಬಂದವರು. ಇವರಲ್ಲಿ ಪ್ರಮುಖನಾದವನು ಮೊದಲಿನ ಮಸಾಚಿಯೋ (೧೪೦೧-೧೪೨೮). ಇವನು ರೇಖೆಗಳನ್ನು ನೆರಳುಗಳ ಪರಿಣಾಮವನ್ನು ಬಳಸಿಕೊಂಡು ಪ್ರಕೃತಿಯನ್ನು ಅನುಕರಿಸಿದನು. ಅವನ ಟ್ರಿನಿಟಿ ಹಾಗೂ ಎಕ್ಸ್‌ಪಲ್‌ಶನ್ ಆಫ್ ಆ್ಯಡಂ ಎಂಡ್ ಈವ್ ಫ್ರಂ ದಿ ಗಾರ್ಡನ್ ಬಹಳ ಮಹತ್ವದ ಕಲಾಕೃತಿಗಳು.

ಸಾಂದ್ರೋ ಬೊಟ್ಟಿಚೆಲ್ಲಿ (೧೪೪೪-೧೫೧೦) ಕೂಡ ಮಸಾಚಿಯೋನನ್ನೇ ನೇರವಾಗಿ ಅನುಸರಿಸಿದನು. ಕ್ಲಾಸಿಕಲ್ ಹಾಗೂ ಧಾರ್ಮಿಕ ವಸ್ತುಗಳನ್ನು ಅವರು ಚಿತ್ರಿಸಿದನು. ಸ್ತ್ರೀ ನಗ್ನ ಚಿತ್ರಗಳಿಗೆ ಅವನು ಪ್ರಸಿದ್ಧನಾಗಿದ್ದಾನೆ. ಆದರೆ ಅವನ ಬಹುಮುಖ್ಯ ಕೊಡುಗೆಯು ನಿಯೋ-ಪ್ಲೇಟಾನಿಸ್ಟ್ ದರ್ಶನದಿಂದ ಮೂಡಿಬಂದುದು. ಅವನ ಪ್ರಸಿದ್ಧವಾದ ಎರಡು ಚಿತ್ರಗಳೆಂದರೆ, ದಿ ಅಲೆಗೊರಿ ಆಫ್ ದಿ ಸ್ಟ್ರಿಂಗ್ ಹಾಗೂ ದಿ ಬರ್ತ್ ಆಫ್ ವೀನಸ್. ಇದು ಪ್ರಾಚೀನ ಪ್ರೇಮದೇವತೆ ವೀನಸ್ ಅಥವಾ ಅಫ್ರೊಡೈಟೆಯನ್ನು ಕುರಿತ ನೂತನ ಫ್ಲೇಟೋ ಸಿದ್ಧಾಂತದ ಪರಿಕಲ್ಪನೆಗಳನ್ನು ಚಿತ್ರಿಸುತ್ತದೆ. ಆಮೇಲೆ ಅವನ ಸವೋನರೊಲಾನ ಪ್ರಭಾವಕ್ಕೆ ಒಳಗಾದನು.

ಕಲಾವಿದರಲ್ಲಿ ಅತ್ಯಂತ ಶ್ರೇಷ್ಠನಾದವನು ಲಿಯೊನಾರ್ಡೋ ಡ ವಿಂಚಿ (೧೪೫೨-೧೫೧೯). ವಾಸ್ತವವಾಗಿ ಅವನು ರಿನೈಸಾನ್ಸ್ ಮನುಷ್ಯನ ಸಾಕಾರವಾಗಿದ್ದನು. ಅವನೊಬ್ಬ ಚಿತ್ರ ಕಲಾವಿದ, ವಾಸ್ತುಶಿಲ್ಪಿ, ಸಂಗೀತಗಾರ, ಗಣಿತಜ್ಞ, ಎಂಜಿನಿಯರ್ ಮತ್ತು ಸಂಶೋಧಕ. ಅವನ ಚಿತ್ರಕಲೆಯು ಇಟಲಿಯಲ್ಲಿ ರಿನೈಸಾನ್ಸಿನ ಅತ್ಯುನ್ನತ ಹಂತವನ್ನು ತೊಡಗಿತು. ನಿಸರ್ಗವಾದಿಯಾಗಿ, ಚಿತ್ರಕಲೆಯನ್ನು ಕುರಿತ ಅವನ ವಿಧಾನ ಎಷ್ಟು ಸಾಧ್ಯವೋ ಅಷ್ಟು ಪ್ರಕಾರವಾಗಿ ನಿಸರ್ಗವನ್ನು ಅನುಕರಿಸುವುದು. ಶವಪರೀಕ್ಷೆಗೂ ಮಾನವಮೃತ ದೇಹಗಳನ್ನು ಪಡೆದು ಅನಾಟಮಿಯ ಬಹು ಸೂಕ್ಷ್ಮ ವಿವರಗಳುಳ್ಳ ಚಿತ್ರವನ್ನು ಬರೆಯಲು ಅವನು ಶಕ್ತನಾದನು. ಅವನ ಅತ್ಯಂತ ಶ್ರೇಷ್ಠ ಕಲಾಕೃತಿಗಳು ವರ್ಜಿನ್ ಆಫ್ ದಿ ರಾಕ್ಸ್, ದಿ ಲಾಸ್ಟ್ ಸಪ್ಪರ್ ಮತ್ತು ಮೋನಾಲಿಸಾ ಎಂಬುದಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ.

ಸುಮಾರು ೧೪೯೦ನೆ ಇಸವಿ ರಿನೈಸಾನ್ಸಿನ ಉನ್ನತ ಹಂತದ ಪ್ರಾರಂಭ ಎಂದು ಹೇಳಬಹುದು. ಆಗಲೇ ವೆನೇಷಿಯನ್ ಪಂಥವು ಉದಯಿಸಿತು. ಅದರ ಮುಖ್ಯ ಸದಸ್ಯರು ಗಿಯೋವನಿ ಬೆಲ್ಲಿನಿ(೧೪೨೬-೧೫೨೬), ಜಿಯೋರ್ಚಿಯೋನ್(೧೪೭೮-೧೫೧೦) ಮತ್ತು ಟಿಟಿಯನ್(೧೪೭೭-೧೫೭೬). ಈ ಲೇಖಕರ ಬಹುತೇಕ ಕೃತಿಗಳು ತಿನೇಷಿಯನ್ ಪಂಥದ ವಾಣಿಜ್ಯ ವ್ಯವಸ್ಥೆಯು ಪ್ರವರ್ಧಮಾನಕ್ಕೆ ಬರುತ್ತಿದ್ದುದನ್ನೂ ಅದ್ದೂರಿಯ ಜೀವನ ಮತ್ತು ಭೋಗಾಸಕ್ತಿಗಳನ್ನೂ ಪ್ರತಿಬಿಂಬಿಸಿದುವು. ಫ್ಲಾರೆಂಟೈನ್ ಪಂಥದ ಲಕ್ಷಣವಾದ ದಾರ್ಶನಿಕ ಹಾಗೂ ಮನೋವೈಜ್ಞಾನಿಕ ವಸ್ತುಗಳಲ್ಲಿ ಅವರಿಗೆ ಕಾಳಜಿ ಇರಲಿಲ್ಲ. ಇಂದ್ರಿಯಗಳಿಗೆ ಆಕರ್ಷಕವಾಗುವ ಗುಣ ಇಲ್ಲಿ ಮುಖ್ಯವಾಗಿತ್ತು. ನೈಸರ್ಗಿಕ ದೃಶ್ಯಗಳಲ್ಲದೆ ಆಭರಣಗಳ ಕೃತಕ ವೈಭವ, ಗಾಢವರ್ಣದ ಸ್ಯಾಟಿನ್ ಇವುಗಳ ಬಳಕೆಯಲ್ಲಿ ಅವರಿಗೆ ತುಂಬಾ ಆಸಕ್ತಿಯಿತ್ತು. ಅವರು ನಿರ್ಮಿಸಿದ ವ್ಯಕ್ತಿಚಿತ್ರಗಳು ಶ್ರೀಮಂತವಾಗಿದ್ದುವು ಮತ್ತು ಶಕ್ತಿಯುತವಾಗಿದ್ದುವು. ರೂಪ ಮತ್ತು ಅರ್ಥಗಳು ಬಣ್ಣಕ್ಕೆ ಅಧೀನವಾದುವು. ಮಧ್ಯಯುಗದಲ್ಲಿ ಬೈಜಾಂಟಿಯಂ ಮೂಲಕ ಇಳಿದು ಬಂದ ಪೌರ್ವಾತ್ಯ ಪ್ರಭಾವ ಕಂಡುಬಂದದ್ದು ಇಲ್ಲಿಯೇ.

ಮಿಕ್ಕ ರಿನೈಸಾನ್ಸ್ ಕಲಾವಿದರು ೧೬ನೆಯ ಶತಮಾನದಲ್ಲಿ ತಮ್ಮ ಸಾಧನೆಯನ್ನು ತೋರಿಸಿದರು. ಅವರಲ್ಲಿ ಅರ್ಬಿನೋದ ರಾಫೇಲ್ (೧೪೮೩-೧೫೨೦) ಮುಖ್ಯನಾದವನು. ಅವನ ಶೈಲಿಯ ಆಕರ್ಷಣೆಗೆ ಬಹುಮಟ್ಟಿಗೆ ಕಾರಣ ಅವನಲ್ಲಿದ್ದ ಉದಾತ್ತ ಮಾನವತಾವಾದ. ಅವನು ಮಾನವರನ್ನು ಸಮಚಿತ್ತ ವೃತ್ತಿಯ, ಜ್ಞಾನಿಗಳಾದ, ಗಂಭೀರ ಸ್ವಭಾವದ ವ್ಯಕ್ತಿಗಳಾಗಿ ಚಿತ್ರಿಸಿದನು. ಲಿಯೋನಾರ್ಡೋನಿಂದ ಪ್ರಭಾವಿತನಾಗಿದ್ದರೂ ರಾಫೇಲನು ಹೆಚ್ಚು ಸಾಂಕೇತಿಕವೂ ಆಲಂಕಾರಿಕವೂ ಆದ ವಿಧಾನವನ್ನು ಅನುಸರಿಸಿದನು. ಅವನ ಡಿಸ್ಪ್ಯೂಟಾ ಕೃತಿಯು, ಸ್ವರ್ಗದಲ್ಲಿನ ಚರ್ಚು ಮತ್ತು ಈ ಲೋಕದಲ್ಲಿನ ಚರ್ಚುಗಳ ನಡುವೆ ಇರುವ ತಾತ್ವಿಕ ಸಂಬಂಧವನ್ನು ಸಂಕೇತಿಸಿತು. ಅವನ ಸ್ಕೂಲ್ ಆಫ್ ಅಥೆನ್ಸ್ ಎನ್ನುವುದು ಪ್ಲೇಟೋನ ಮತ್ತು ಅರಿಸ್ಟಾಟಲ್‌ನ ದರ್ಶನಗಳ ನಡುವಣ ಸಂಘರ್ಷದ ರೂಪಕ ಅಭಿವ್ಯಕ್ತಿ. ರಾಫೇಲ್ ವ್ಯಕ್ತಿಚಿತ್ರಗಳಿಗೆ ಮತ್ತು ಕನ್ಯೆ ಮೇರಿಯ ಚಿತ್ರಗಳಿಗೆ ಪ್ರಸಿದ್ಧನಾಗಿದ್ದಾನೆ. ಮೇರಿ ಚಿತ್ರಗಳಿಗೆ ಒಂದು ವಿಶೇಷ ಮಾರ್ದವತೆಯನ್ನು ಅವನು ಕೊಟ್ಟನು. ಲಿಯೊನಾರ್ಡೋ ಚಿತ್ರಿಸಿದ ತೊಡಕಾದ ‘‘ಮೆಡೋನಾ’’ ಚಿತ್ರಗಳಿಗಿಂತ ಅವು ಬಹುಮಟ್ಟಿಗೆ ಬೇರೆಯಾಗಿದ್ದುವು.

ರಿನೈಸಾನ್ಸ್ ಉಚ್ಛ್ರಾಯದ ಕೊನೆಯ ಕಲಾವಿದ ಮೈಕೇಲೆಂಜಲೋ (೧೪೭೫-೧೫೬೪). ಇವನು ಫ್ಲಾರೆನ್ಸಿನವನು. ಇವನೊಬ್ಬ ಆದರ್ಶವಾದಿ ಮತ್ತು ನಿಯೋಪ್ಲೇಟಾನಿಸಂ ಅನುಸರಿಸಿದವನು. ಹಾಗಾಗಿ, ಶಾಶ್ವತವಾದ, ಅಮೂರ್ತವಾದ ಸತ್ಯಗಳನ್ನು ಅಭಿವ್ಯಕ್ತಿಸು ವುದರಲ್ಲಿ ಅವನಿಗೆ ತುಂಬಾ ಆಸಕ್ತಿಯಿತ್ತು. ಅವನ ವರ್ಣಚಿತ್ರಗಳ ಕೇಂದ್ರ ಮಾನವ ಆಕೃತಿ. ಕಟ್ಟುಮಸ್ತಾದ, ಬೃಹತ್ ಶರೀರದ, ಭವ್ಯ ನಿಲುವಿನ ಮನುಷ್ಯನನ್ನು ಅವನ ಕೃತಿಗಳಲ್ಲಿ ನೋಡಬಹುದು. ಅವನ ಅತಿಶ್ರೇಷ್ಠ ರಚನೆಗಳು ಚಿತ್ರಿತವಾದ ಸ್ಥಳ ರೋಮಿನ ಸಿಸ್ಟೈನ್ ಚಾಪಲ್ ಚಾವಣಿಯ ಮೇಲೆ. ‘‘ಜೆನಿಸಿಸಿ’’ ದೃಶ್ಯಗಳನ್ನು ನಿರೂಪಿಸುವ ಭವ್ಯವಾದ ಭಿತ್ತಿಚಿತ್ರಗಳನ್ನು ಅವನು ಚಿತ್ರಿಸಿದ್ದಾನೆ. ಈ ಎಲ್ಲ ಚಿತ್ರಪಟ್ಟಿಕೆಗಳೂ ಒಬ್ಬ ತರುಣ ಕಲಾವಿದನು ಪ್ರಾಚೀನ ಗ್ರೀಕ್ ಸೌಂದರ್ಯಶಾಸ್ತ್ರಕ್ಕೆ, ಸಾಮರಸ್ಯ, ಘನತೆ, ಗಂಭೀರ ಸಂಯಮ ಇವುಗಳಿಗೆ ಬದ್ಧನಾಗಿರುವುದನ್ನು ಸೂಚಿಸುತ್ತವೆ. ಕಾಲು ಶತಮಾನದ ನಂತರ ಅವನು ಸಿಸ್ಪೈನ್ ಚಾಪಲ್‌ಗೆ ಹಿಂದಿರುಗಿದಾಗ ಅವನ ಶೈಲಿ ಮತ್ತು ಭಾವಗಳು ನಾಟಕೀಯವಾಗಿ ಬದಲಾಗಿದ್ದುವು. ೧೫೩೬ರಲ್ಲಿ ಅಟ್ಲಾಸ್ ಗೋಡೆಯ ಮೇಲೆ ಬೃಹದಾಕಾರದ ಒಂದು ಭಿತ್ತಿ ಚಿತ್ರ ಲಾಸ್ಟ್ ಜಡ್ಜ್‌ಮೆಂಟ್ ಅನ್ನು ಮೈಕೇಲೆಂಜಲೋ ರಚಿಸಿದನು. ಅದರಲ್ಲಿ ಬಿಗುವಾದ, ವಿಕೃತವಾದ ಒಂದು ಶೈಲಿ, ಮಾನವತೆಯನ್ನು ಕುರಿತ ನಿರಾಶಾಯುತ ಪರಿಕಲ್ಪನೆಯುಳ್ಳ, ಹೆದರಿಕೆಯಿಂದ ಜರ್ಜರಿತವಾದ, ಅಪರಾಧಿ ಭಾವದಿಂದ ಕುಗ್ಗಿಹೋದ ಮುದುಕನ ಚಿತ್ರವನ್ನು ಸಂವಹಿಸುವುದಕ್ಕಾಗಿ ಆ ಶೈಲಿಯನ್ನು ರೂಪಿಸಿದ್ದನು.

ಸಂಗೀತ

ವರ್ಣಚಿತ್ರ ಮತ್ತು ಶಿಲ್ಪಕಲೆಗಳ ಜೊತೆಗೆ ರಿನೈಸಾನ್ಸ್ ಪರಿಶ್ರಮದ ಅತ್ಯುಜ್ವಲವಾದ ಇನ್ನೊಂದು ಮುಖ ಸಂಗೀತ. ಮಧ್ಯಕಾಲೀನ ಕ್ರೈಸ್ತ ಪ್ರಪಂಚದಲ್ಲಿ ವಿಕಾಸಗೊಂಡಿದ್ದ ಸ್ವತಂತ್ರ ಸಂಗೀತವು ಸಹಜವಾಗಿ ಹರಿದುಬಂದಿತು. ಚರ್ಚಿನ ಸೇವೆಯಲ್ಲಿ ತರಬೇತಿ ಪಡೆದಿದ್ದವರ ನಾಯಕತ್ವವು ದೊರಕಿತು. ಆದರೆ ಸೆಕ್ಯುಲರ್ ಸಂಗೀತಕ್ಕೂ ಈಗ ಮನ್ನಣೆ ದೊರಕಿತು. ಪವಿತ್ರ ಧಾರ್ಮಿಕ ಸಂಗೀತಕ್ಕೆ ರಂಗನ್ನು ಭಾವವಶತೆಯನ್ನು ಲೌಕಿಕ ಸಂಗೀತವು ತುಂಬಿತು. ೧೪ನೆಯ ಶತಮಾನದಲ್ಲಿ ರಿನೈಸಾನ್ಸ್ ಪೂರ್ವ ಅಥವಾ ರಿನೈಸಾನ್ಸ್ ಪ್ರಾರಂಭಿಕವಾದ ಸಂಗೀತ ಚಳವಳಿ ಅರ್ಸ್‌ನೋವಾ(ನೂತನ ಕಲೆ) ಇಟಲಿ ಮತ್ತು ಫ್ರಾನ್ಸ್‌ಗಳಲ್ಲಿ ಪ್ರಚುರವಾಗಿತ್ತು. ಅಸಾಮಾನ್ಯ ಸಂಗೀತ ರಚನೆಕಾರರಲ್ಲಿ ಪ್ರಮುಖರಾದವರು- ಫ್ರಾನ್ಸಿಸ್ಕೋ ಲ್ಯಾಂಡಿನಿ(ಸು.೧೩೨೫-೧೩೯೭) ಮತ್ತು ಗಿಲೋಮ್ ಡಿ ಮಚಾಟ್ (೧೩೦೦-೧೩೭೭). ಅರ್ಸ್‌ನೋವಾಕ್ಕೆ ಸೇರಿದ ಮಾರ್ಡಿಗಲ್‌ಗಳು, ಬ್ಯಾಲಡ್‌ಗಳು, ಹಾಡುಗಳು ಶ್ರೀಮಂತವಾದ ಸೆಕ್ಯುಲರ್ ಸಂಗೀತದ ಹಿನ್ನೆಲೆಯಾಗಿದ್ದಕ್ಕೆ ಸಾಕ್ಷಿಯಾಗಿವೆ. ಆದರೆ ತುಂಬ ಸಂಕೀರ್ಣವಾದ ಆದರೆ ನವುರಾದ ಸ್ವರ ಸಂವಾದ ಶೈಲಿಯನ್ನು ಬೈಬಲ್ ವಚನಗಳ ಹಾಡುಗಾರಿಕೆಗೆ ಅಳವಡಿಸಿದ್ದು ಆ ಕಾಲದ ಅತಿಶ್ರೇಷ್ಠ ಸಾಧನೆಯಾಗಿದೆ.

೧೫ನೆಯ ಶತಮಾನದಲ್ಲಿ ಫ್ರೆಂಚ್, ಫ್ಲೆಮಿಷ್ ಮತ್ತು ಇಟಾಲಿಯನ್ ಸಂಯೋಜನೆ ಯನ್ನು ಸಂಗೀತದಲ್ಲಿ ಗುರುತಿಸಬಹುದು. ಬರ್ಗಂಡಿಯ ಡ್ಯೂಕನ ಆಸ್ಥಾನದಲ್ಲಿ ಈ ಸಂಯೋಜನೆಯ ಉಗಮವಾಯಿತು. ರೋಲಾಂಡ್ ಡಿ ಲಾಸಸ್ (೧೫೩೨-೧೫೯೪) ಆ ಕಾಲದ ಅತ್ಯಂತ ಶ್ರೇಷ್ಠ ಪ್ರತಿಭಾವಂತ ಸಂಗೀತಕಾರನಾಗಿದ್ದ ಮತ್ತು ಇಟಾಲಿಯವನಾದ ನಿಯೋವನಿ ಪೀರ್ಲುಗಿಡ ಪ್ಯಾಲೆಸ್ಟ್ರಿನಾ (ಸು. ೧೫೨೫-೧೫೯೪). ಇವರುಗಳನ್ನು ೧೬ನೆಯ ಶತಮಾನದ ದ್ವಿತೀಯಾರ್ಧದಲ್ಲಿ ರಾಷ್ಟ್ರೀಯ ಫ್ರಾಂಕೋ-ಫ್ಲೆಮಿಷ್ ಶೈಲಿಯ ಮುಂದಾಳು ಗಳು ಎನ್ನಲಾಗಿದೆ. ನಿಯೋವನಿಯು ರೋಮಿನಲ್ಲಿ ಪೋಪರ ಆಶ್ರಯದಲ್ಲಿ ಕ್ಯಾಥೋಲಿಕ್ ಚರ್ಚಿನ ಸರ್ವಿಸ್‌ಗಳಿಗಾಗಿ ಸಮೂಹ ಗಾಯನವನ್ನು ರಚಿಸಿದನು. ತುಂಬ ಸಂಕೀರ್ಣವಾದ ಪೊಲಿಪೋನಿಕ್ ಸಮೂಹಗಾಯನ ಅವನ ವೈಶಿಷ್ಟ್ಯವಾಗಿತ್ತು. ೧೬ನೆಯ ಶತಮಾನದ ಇಂಗ್ಲೆಂಡಿನಲ್ಲಿ ವಿಲಿಯಂ ಬಿರ್ಡ್(೧೫೪೩-೧೬೨೩) ಪ್ರಸಿದ್ಧನು. ಅವನು ರಿನೈಸಾನ್ಸ್ ಕಾಲದ ಶ್ರೇಷ್ಟ ಫ್ಲೆಮಿಷ್ ಮತ್ತು ಇಟಾಲಿಯನ್ ಕೃತಿಕಾರರಿಗೆ ಸಮನಾಗಿದ್ದನು.

ಉಪಸಂಹಾರವಾಗಿ ಹೀಗೆ ಹೇಳಬಹುದು: ರಿನೈಸಾನ್ಸಿನ ಪರಿಕಲ್ಪನೆಯು ಮಿಚೆಲೆಗಾಗಲಿ ಬರ್ಕ್‌ಹಾರ್ಟಿನಿಗಾಗಲಿ ಕೊನೆಗೆ ರಿನೈಸಾನ್ಸಿನ ಮಾನವವಾದಿಗಳಿಗಾಗಲಿ ಮಿತಿಯಾಗಲಿಲ್ಲ. ಮಧ್ಯಯುಗವನ್ನು ಕತ್ತಲಯುಗವೆಂದು ಕರೆಯುವ ಕಾಲ ಈಗಿಲ್ಲ. ರಿನೈಸಾನ್ಸ್ ಮಧ್ಯ ಯುಗದ ಕತ್ತಲಿನಿಂದ ದಿಢೀರನೆ ಹುಟ್ಟಿಬರಲಿಲ್ಲ. ಮಧ್ಯಯುಗ ಸಮಾಜದ ನಾಗರಿಕ ಸ್ಥಿತಿಗತಿ, ಅತಿ ಸೂಕ್ಮವಾದ ಬೌದ್ದಿಕ ಪರಿಸರ ಇವುಗಳಿಂದ ಜೈವಿಕವಾಗಿ ವಿಕಾಸಗೊಂಡಿತು ಎಂಬ ಅರಿವು ಬೆಳೆಯಿತು.

ಇಂದು ರಿನೈಸಾನ್ಸ್ ಇಟಲಿಯಿಂದ ಯುರೋಪಿನ ಇತರ ಕೇಂದ್ರಗಳಿಗೆ ತನ್ನ ಆಸಕ್ತಿ ಯನ್ನು ವರ್ಗಾಯಿಸಿದೆ. ಇಂದಿನ ಪರಿಕಲ್ಪನೆಯ ರಿನೈಸಾನ್ಸಿನಲ್ಲಿ ನೂತನ ಸಾಮ್ರಾಜ್ಯಗಳ ಬೆಳವಣಿಗೆ, ಮುದ್ರಣದ ವಿಕಾಸ, ಹೊಸ ಭೂಭಾಗಗಳ ಸಂಶೋಧನೆ, ೧೬ನೆಯ ಶತಮಾನದ ಆರ್ಥಿಕ ಚೇತರಿಕೆ ಇವೆಲ್ಲ ಸೇರಿವೆ. ಆದರೂ ಬೌದ್ದಿಕ ದಿಗಂತದಲ್ಲಿ ಇಟಲಿಯು ತನ್ನ ಪ್ರಭುತ್ವವನ್ನು ಉಳಿಸಿಕೊಳ್ಳುತ್ತದೆ. ಏಕೆಂದರೆ, ಆಧುನಿಕ ಸಂಸ್ಕೃತಿಯ ಮೇಲೆ ಆಗಿರುವ ಇಟಾಲಿಯನ್ ಮಾನವತಾವಾದದ ಪ್ರಭಾವವನ್ನು ಎಷ್ಟು ಮಾತ್ರಕ್ಕೂ ಅವಗಣಿಸುವಂತಿಲ್ಲ. ಲೌಕಿಕ ಸಂಸ್ಕೃತಿ, ನಾಗರಿಕ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ದಿ, ಇವು ಕಾಣಿಸಿಕೊಂಡಂತೆ, ಬೌದ್ದಿಕ, ಕಲಾ ಮತ್ತು ಧಾರ್ಮಿಕ ಜೀವನದ ಮಠೀಯ ನಾಯಕತ್ವವು ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಾ ಹೋಯಿತು. ಧಾರ್ಮಿಕ ಜೀವನವು ತುಂಬಾ ಕಟ್ಟುನಿಟ್ಟಿನದಾಗಿತ್ತು. ಸಾಮಾನ್ಯರಿಗೆ ಅದನ್ನು ಅನುಸರಿಸುವುದು ಸಾಧ್ಯವಾಗುತ್ತಿರಲಿಲ್ಲ. ಹ್ಯೂಮನಿಸಂ ಎನ್ನುವುದು ಒಂದು ಕ್ರಾಂತಿ, ಒಂದು ಸೆಕ್ಯುಲರ್ ಜೀವನ ಕ್ರಮದ ಸಮರ್ಥನೆಯಾಯಿತು. ಇಚ್ಛಾಶಕ್ತಿಯನ್ನು ಹ್ಯೂಮನಿಸ್ಟರು ಒತ್ತಿ ಹೇಳಿದರು. ಮನುಷ್ಯನ ಜೀವನವು ‘ಪಾತ್ರಧಾರಿ’ಯದೇ ಹೊರತು ಬೇರೆ ಯಾರಿಂದಲೋ ಅಭಿನೀತವಾದ ಪಾತ್ರವಲ್ಲ ಎಂದು ಹೇಳಿದರು.

ರಿನೈಸಾನ್ಸ್ ಮತ್ತು ರಿಫಾರ್ಮೇಷನ್ ಎರಡೂ ಆಧುನಿಕ ಜೀವನದ ಎರಡು ಚಿಲುಮೆಗಳು. ಮನಸ್ಸನ್ನು ನಿರ್ಬಂಧದಿಂದ ಮುಕ್ತಿಗೊಳಿಸಿದುದಕ್ಕಾಗಿ, ಸುಂದರಗೊಳಿಸಿದ್ದ ಕ್ಕಾಗಿ ಜನತೆ ರಿನೈಸಾನ್ಸಿಗೆ ಋಣಿಯಾಗಿರಬೇಕು; ಹಾಗೆಯೇ ಧಾರ್ಮಿಕ ನಂಬಿಕೆಯನ್ನೂ, ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಕ್ಕಾಗಿ ರಿಫಾರ್ಮೇಷನ್‌ಗೆ ಅಭಾರಿಯಾಗಿರಬೇಕು.

 

ಪರಾಮರ್ಶನ ಗ್ರಂಥಗಳು

೧. ಬೇರನ್ ಹ್ಯಾನ್ಸ್,೧೯೬೬. ದಿ ಕ್ರೈಸಿಸ್ ಆಫ್ ದಿ ಅರ್ಲಿ ಇಟಾಲಿಯನ್ ರಿನೈಸಾನ್ಸ್, ೨ನೆಯ ಆವೃತ್ತಿ.

೨. ಜೇಕಬ್ ಬರ್ಕ್‌ಹಾರ್ಟ್, ೧೯೫೧. ದಿ ಸಿವಿಲೈಸೇಷನ್ ಆಫ್ ದಿ ರಿನೈಸಾನ್ಸ್ ಇನ್ ಇಟಲಿ, ೨ನೆಯ ಆವೃತ್ತಿ.

೩. ಡೋನಿಸ್ ಹೇ, ೧೯೫೭, ದಿ ನ್ಯೂ ಕೇಂಬ್ರಿಡ್ಜ್ ಮಾಡರ್ನ್ ಹಿಸ್ಟರಿದಿ ರಿನೈಸಾನ್ಸ್ (೧೪೯೩೧೫೨೦).

೪. ಕ್ರಿಸ್ಟೆಲರ್, ಪಾಲ್ ಆಸ್ಕರ್, ೧೯೬೧-೬೫. ರಿನೈಸಾನ್ಸ್ ಥಾಟ್, ೨ನೆಯ ಸಂಪುಟ.