ಪ್ರಥಮ ವಿಶ್ವ ಸಮರದ ಕಷ್ಟನಷ್ಟಗಳಿಂದ ಇನ್ನೂ ಚೇತರಿಸಿಕೊಂಡಿರದ ಜಗತ್ತು ಕ್ರಿ.ಶ.೧೯೩೯ರಲ್ಲಿ ಮತ್ತೊಂದು ವಿಶ್ವ ಸಮರವನ್ನು ಕಂಡಿತು. ಪ್ರಥಮ ಮಹಾಯುದ್ಧ ಕ್ಕಿಂತಲೂ ಭೀಕರ ಪರಿಣಾಮಗಳನ್ನು ಜಗತ್ತು ಎದುರಿಸಿತು. ರಾಷ್ಟ್ರಸಂಘದ ಶಾಂತಿ ಪ್ರಯತ್ನಗಳು ವಿಫಲವಾಗಿ, ಪ್ರಬಲ ರಾಷ್ಟ್ರಗಳ ದ್ವೇಷ, ಅಸೂಯೆ, ಪ್ರತೀಕಾರ ಮನೋಭಾವ, ಹಿಂಸಾ ಪ್ರವೃತ್ತಿಗಳು ತಾಂಡವವಾಡಿದವು. ಈ ದಳ್ಳುರಿಯು ಜನಜೀವನವನ್ನು ದಹಿಸಿತು.

ದ್ವಿತೀಯ ಮಹಾಯುದ್ಧದ ಕಾರಣಗಳು

. ಜರ್ಮನ್ನರ ಸೇಡಿನ ಮನೋಭಾವ

ಪ್ರಥಮ ಮಹಾಯುದ್ಧದಲ್ಲಿ ಹೇಳ ಹೆಸರಿಲ್ಲದಂತಾಗಿದ್ದ ಜರ್ಮನಿಯು ಆ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮತ್ತೆ ಪೂರ್ಣವಾಗಿ ಚೇತರಿಸಿಕೊಂಡು, ಯುದ್ಧ ಸನ್ನದ್ಧವಾಗಿ ನಿಂತದ್ದು ವಿಧಿಯ ವಿಕಟ ವಿಡಂಬನೆಯೆನ್ನಬೇಕು. ಯಾವುದೇ ಮಾನದಂಡದಿಂದ ಜರ್ಮನಿಯ ಚೇತರಿಕೆ ಗಣನೀಯವಾದುದು. ವರ್ಸೈಲ್ಸ್ ಒಪ್ಪಂದವು ಜರ್ಮನಿಯನ್ನು ತೀವ್ರವಾಗಿ ಅವಮಾನಗೊಳಿಸಿತ್ತು. ಜರ್ಮನ್ನರಲ್ಲಿ ಈ ಬೆಂಕಿ ಒಳಗೊಳಗೇ ದಹಿಸುತ್ತಿತ್ತು. ಈ ಯುದ್ಧ ಅವರ ಆಯ್ಕೆಯದ್ದಾಗಿರಲಿಲ್ಲ; ಅನಿವಾರ್ಯ ಹಠವಾಗಿತ್ತು. ಅಮೆರಿಕಾದ ಅಧ್ಯಕ್ಷ ವುಡ್ರೋವಿಲ್ಸನ್ನನು ಶಾಂತಿ ಕರಾರುಗಳನ್ನು ಮುಂದಿಟ್ಟಾಗ ಜರ್ಮನಿಯು ಅದಕ್ಕೆ ಒಪ್ಪಲು ಸಿದ್ಧವಾಗಿತ್ತು. ಆದರೆ, ಪ್ಯಾರಿಸ್ ಶಾಂತಿ ಸಮಾವೇಶದಲ್ಲಿ ಚರ್ಚೆಗಳಾದ ನಂತರ ಮಿತ್ರಕೂಟವು ವಿಲ್ಸನನ ಶಾಂತಿ ಪ್ರಸ್ತಾವಗಳನ್ನು ತನ್ನ ಅನುಕೂಲಕ್ಕೆ ಬದಲಾಯಿಸಿ ಜರ್ಮನಿಯನ್ನು ಸಹಿ ಹಾಕುವಂತೆ ಒತ್ತಾಯಿಸಿತು. ಜರ್ಮನಿಯು ಅದಕ್ಕೆ ಒಪ್ಪದೇ ಹೋದರೆ ಮತ್ತೊಮ್ಮೆ ಯುದ್ಧ ಘೋಷಿಸುವ ಭಯವನ್ನು ಹುಟ್ಟಿಸಿತು. ಇಂತಹ ಅಸಹಾಯಕ ಸ್ಥೀತಿಯಲ್ಲಿ ಜರ್ಮನಿಯು ಅನಿವಾರ್ಯವಾಗಿ ವರ್ಸೈಲ್ಸ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಯುದ್ಧಾಪರಾಧಕ್ಕಾಗಿ ಜರ್ಮನಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಧನ ನೀಡುವಂತೆ ಒತ್ತಡ ಹೇರಲಾಯಿತು. ಜರ್ಮನಿಯು ಆ ಸ್ಥಿತಿಗೆ ಬರಲು ಸಾಧ್ಯವಿಲ್ಲ ಎಂಬುದು ಮಿತ್ರರಾಷ್ಟ್ರಗಳಿಗೆ ಚೆನ್ನಾಗಿ ತಿಳಿದಿತ್ತು. ಜರ್ಮನಿಯು ಇಂತಹ ಅವಕಾಶವನ್ನು ಎದುರು ನೋಡುತ್ತಿತ್ತು. ವರ್ಸೈಲ್ಸ್ ಒಪ್ಪಂದವೇ ಜರ್ಮನಿಯ ಸೇಡಿನ ಮನೋಭಾವಕ್ಕೆ ಪ್ರೇರಣೆಯಾಯಿತು.

. ಜಪಾನಿನ ಸಾಮ್ರಾಜ್ಯಶಾಹಿತ್ವ

ಜರ್ಮನಿಯ ಮಹಾತ್ವಾಕಾಂಕ್ಷೆಯು ಪ್ರಥಮ ಮಹಾಯುದ್ಧದ ಕಾಲದಿಂದ ಹೆಚ್ಚಾಗತೊಡಗಿತು. ಜಪಾನ್ ಮತ್ತು ಚೀನಾಗಳು ಪ್ರಥಮ ಮಹಾಯುದ್ಧಗಳಲ್ಲಿ ಮಿತ್ರ ಕೂಟಗಳ ಪರವಾಗಿ ಹೋರಾಡಿದರೂ ಜಪಾನ್ ಮಾತ್ರವೇ ವಿಶೇಷ ಮನ್ನಣೆಗೆ ಪಾತ್ರ ವಾಯಿತು. ಜಪಾನ್ ತನ್ನ ನೌಕಾಬಲವನ್ನು ಅಭಿವೃದ್ದಿಪಡಿಸಲು ಆರಂಭಿಸಿತು. ಜಪಾನಿನ ಯುವಜನತೆ ಸರಕಾರದ ಈ ಪ್ರಯತ್ನಗಳನ್ನು ಬೆಂಬಲಿಸಿತು. ಕ್ರಿ.ಶ.೧೯೩೦ರ ವೇಳೆಗೆ ಜಪಾನಿನ ಶಕ್ತಿ ಅದ್ಭುತವಾಗಿ ಬೆಳೆದುಬಿಟ್ಟಿತ್ತು. ಕ್ರಿ.ಶ.೧೯೩೧ರಲ್ಲಿ ಮಂಚೂರಿಯಾದ ವಿಷಯದಲ್ಲಿ ತಲೆ ಹಾಕಿತು. ರಾಷ್ಟ್ರ ಸಂಘವನ್ನು ನಿರ್ಲಕ್ಷಿಸಿ ಮಂಚೂರಿಯಾವನ್ನು ಆಕ್ರಮಿಸಿ, ವಶಪಡಿಸಿಕೊಂಡಿತು. ಆದರೆ ಇಷ್ಟಕ್ಕೇ ಜಪಾನ್ ತೃಪ್ತವಾಗಲಿಲ್ಲ. ಜುಲೈ ೧೯೩೭ರಲ್ಲಿ ಯಾವುದೇ ಪೂರ್ವ ಸೂಚನೆಗಳಿಲ್ಲದೆ ಜಪಾನ್ ಮತ್ತು ಚೀನಾಗಳ ನಡುವೆ ಯುದ್ಧ ಪ್ರಾರಂಭವಾಯಿತು. ಚೀನಾದ ಪೀಕಿಂಗ್, ನೇನ್ ಕಿಂಗ್ ಮುಂತಾದ ನಗರಗಳು ಜಪಾನಿನ ವಶವಾದವು. ಎರಡನೆಯ ಮಹಾಯುದ್ಧ ಆರಂಭಗೊಂಡಾಗ ಸಿನೋ-ಜಪಾನ್ ಯುದ್ಧವು ಪ್ರಗತಿಯಲ್ಲಿತ್ತು. ಜಪಾನ್ ಕ್ರಿ.ಶ. ೧೯೪೧ರಲ್ಲಿ ಪರ್ಲ್ ಬಂದರನ್ನು ವಶಪಡಿಸಿಕೊಳ್ಳುವ ಮೂಲಕ ಯುದ್ಧಕ್ಕೆ ಪ್ರವೇಶಿಸಿತು. ಜಪಾನಿನ ವಿಸ್ತರಣಾಕಾಂಕ್ಷೆ, ಸಾಮ್ರಾಜ್ಯವಾದಗಳು ಯುದ್ಧಕ್ಕೆ ಕಾರಣವಾದವು. ಆ ಸ್ಥಿತಿಯಲ್ಲಿ ಶಾಂತಿಪಾಲನೆ ಅಸಾಧ್ಯವೇ ಆಗಿತ್ತು.

. ಯುರೋಪಿನಲ್ಲಿ ಸರ್ವಾಧಿಕಾರತ್ವದ ಏಳಿಗೆ

ಯುರೋಪಿನ ಯುದ್ಧೋತ್ತರ ಸ್ಥಿತಿಗತಿಗಳು ಸರ್ವಾಧಿಕಾರದ ಏಳಿಗೆಗೆ ನಿಸ್ಸಂಶಯವಾಗಿ ಪೂರಕ ಅಂಶಗಳಾದವು. ಯುದ್ಧಪೀಡಿತ ರಾಷ್ಟ್ರಗಳು ಸರ್ವಾಧಿಕಾರಿಗಳ ಬೆಳವಣಿಗೆಗೆ ನೆಲೆ ನೀಡಿದವು. ಪರಿಸ್ಥಿತಿಯನ್ನು ಸರಿಯಾಗಿಸುವ ಭರವಸೆಗಳೊಂದಿಗೆ ಇಟಲಿಯಲ್ಲಿ ಮುಸ್ಸೊಲೊನಿಯು ಅಧಿಕಾರಕ್ಕೆ ಬಂದನು. ರಷ್ಯಾದಲ್ಲಿ ಸ್ಟಾಲಿನ್ನನು ವೈಯಕ್ತಿಕ ಹಿತಾಸಕ್ತಿ ಗಳನ್ನು ಕಡೆಗಣಿಸಿ ರಾಷ್ಟ್ರದ ಪ್ರಗತಿಗೆ ಗಮನ ಕೊಡಬೇಕೆಂಬ ಆದೇಶದೊಂದಿಗೆ ಐದು ವರ್ಷಗಳ ಯೋಜನೆಯನ್ನು ಪ್ರತಿಪಾದಿಸಿದನು. ಜರ್ಮನಿಯಲ್ಲಿ ಹಿಟ್ಲರನು ಶಕ್ತಿಯಾಗಿ ಸರ್ವಾಧಿಕಾರಿಯಾಗಿ ಆಳ್ವಿಕೆಗೆ ಬಂದನು. ಜರ್ಮನಿಯ ‘ನಾಜಿಸಂ’ಮತ್ತು ಇಟಲಿಯ ‘ಫ್ಯಾಸಿಸಂ’ಗಳು ಇಡೀ ಜಗತ್ತನ್ನು ಯುದ್ಧ ಭೀತಿಗೆ ತಳ್ಳಿದವು. ಮುಸ್ಸೊಲೊನಿ ಮತ್ತು ಅವನ ಫ್ಯಾಸಿಸ್ಟ್ ಹಿಂಬಾಲಕರು ಹಳೆಯ ರೋಮ್ ಸಾಮ್ರಾಜ್ಯದ ವೈಭವವನ್ನು ಪುನರ್‌ಸ್ಥಾಪಿಸುವ ಆದರ್ಶವನ್ನು ಪ್ರತಿಪಾದಿಸಿದರು. ಸ್ಪೆಯಿನ್‌ನ ಒಳಜಗಳವು ಜನರಲ್ ಫ್ರಾಂಕೋ ಎಂಬ ಇನ್ನೋರ್ವ ಸರ್ವಾಧಿಕಾರಿಯ ಏಳ್ಗೆಗೆ ದಾರಿ ಮಾಡಿಕೊಟ್ಟಿತು. ಇಟಲಿಯ ಸ್ವಯಂಸೇವಕರು ಸ್ಪೆಯಿನ್‌ನ ಸಹಾಯಕ್ಕೆ ಬದ್ಧರಾದರು. ಹಾಗೆಯೇ ಪೋರ್ಚುಗಲ್ ಕೂಡ ಸರ್ವಾಧಿಕಾರದ ಬೆಳವಣಿಗೆಯನ್ನು ಕಂಡಿತು. ಹೀಗೆ, ಮಹಾತ್ವಾಕಾಂಕ್ಷೆ ಹೊಂದಿದ್ದ ಸರ್ವಾಧಿಕಾರಿಗಳ ಉದಯದಿಂದಾಗಿ ಯುರೋಪಿನ ವಿದ್ಯಾಮಾನಗಳು ತೀವ್ರ ಬದಲಾವಣೆ ಹೊಂದಿದವು.

. ಮೌಲ್ಯಗಳ ಸಂಘರ್ಷ, ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ

ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳು ಒಂದು ಬಗೆಯ ಮೌಲ್ಯವನ್ನು ಪ್ರತಿಪಾದಿಸಿದರೆ, ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಾಗಳು ಅದಕ್ಕೆ ತೀರಾ ವಿಭಿನ್ನವಾದ ಮೌಲ್ಯಗಳನ್ನು ಎತ್ತಿ ಹಿಡಿಯಿತು. ಈ ಎರಡು ವಿಧದ ಮೌಲ್ಯಗಳ ಸಂಘರ್ಷವೆನ್ನಬಹುದು. ಎರಡನೆಯ ಮಹಾಯುದ್ಧವನ್ನು ಸರ್ವಾಧಿಕಾರಿ ಮುಸ್ಸೊಲೊನಿಯ ಈ ಎರಡು ಬಣಗಳ ಸಂಘರ್ಷದ ಕುರಿತು ಹೀಗೆ ಹೇಳಿದ್ದನು, ‘‘ಈ ಎರಡು ಬೇರೆ ಬೇರೆ ಜಗತ್ತುಗಳ ನಡುವಿನ ಯುದ್ಧದಲ್ಲಿ ಸಂಧಾನವೆನ್ನುವುದು ಸಾಧ್ಯವೇ ಇಲ್ಲ. ಒಂದೋ ನಾವಿರಬೇಕು ಇಲ್ಲ ಅವರಿರಬೇಕು.’’ ಈ ಎರಡು ಮೌಲ್ಯಗಳ ವ್ಯತ್ಯಾಸವು, ರಾಷ್ಟ್ರದಲ್ಲಿ ವ್ಯಕ್ತಿಯು ಹೊಂದಿರಬೇಕಾದ ಸ್ಥಾನಮಾನಗಳ ಮೇಲೆ ಅವಲಂಬಿತವಾಗಿದೆ. ಪ್ರಜಾಪ್ರಭುತ್ವ ವ್ಯಕ್ತಿಗೆ ಸಾಕಷ್ಟು ಹೆಚ್ಚಿನ ಪ್ರಾಧಾನ್ಯ ನೀಡುತ್ತದೆ. ರಾಷ್ಟ್ರದ ಚಟುವಟಿಕೆಗಳ ಪ್ರಯೋಜನಗಳು ಅಂತಿಮವಾಗಿ ವ್ಯಕ್ತಿಗೆ ಸಲ್ಲುತ್ತದೆ ಎಂದು ಅದು ನಂಬುತ್ತದೆ. ಸರ್ವಾಧಿಕಾರದಲ್ಲಿ ವ್ಯಕ್ತಿ ಸ್ವಾತಂತ್ರ್ಯ ತೀರಾ ಅಲ್ಪ. ರಾಷ್ಟ್ರದ ಧೋರಣೆ ಇಲ್ಲಿ ಮುಖ್ಯ. ರಾಷ್ಟ್ರದಿಂದ ಪ್ರಯೋಜನ ಹೊಂದುವುದನ್ನು ಅದು ನಿರಾಕರಿಸುತ್ತದೆ. ಈ ಎರಡು ಮೌಲ್ಯಗಳು ಆಧ್ಯಾತ್ಮಿಕ, ಪ್ರಾಂತೀಯ ಮತ್ತು ಆರ್ಥಿಕ ಯಾವುದೇ ವಿಚಾರದಲ್ಲಿ ವಿಭಿನ್ನ ಧ್ರುವಗಳಾದವು. ಬ್ರಿಟನ್ ಮತ್ತು ಫ್ರಾನ್ಸ್‌ಗಳು ಮಾತ್ರವೇ ಯಾಕಾಗಿ ದೊಡ್ಡ ದೊಡ್ಡ ವಸಾಹತುಗಳನ್ನು ಹೊಂದಿರಬೇಕು. ನಾವೂ ಹೊಂದಬಾರದೇಕೆ ಎಂಬುದು ಜರ್ಮನ್ನರ ಪ್ರಶ್ನೆಯಾಯಿತು. ಅವರು ಜಗತ್ತಿನ ಅತ್ಯಂತ ಶ್ರೇಷ್ಠ ಕುಲಜರು ತಾವೇ ಎಂದು ನಂಬಿದ್ದರು. ಹಾಗಾಗಿ, ಎರಡನೆಯ ಮಹಾಯುದ್ಧವನ್ನು ವಿಚಾರಗಳ ಸಂಘರ್ಷವೆಂದೂ ಕರೆಯಬಹುದು.

. ಪ್ರಜಾತಂತ್ರ ರಾಷ್ಟ್ರಗಳ ದೌರ್ಬಲ್ಯ

ಕ್ರಿ.ಶ.೧೯೨೦ರ ಬಳಿಕ ಗ್ರೇಟ್ ಬ್ರಿಟನ್ ಯುರೋಪಿನ ರಾಜಕೀಯದಿಂದ ಪ್ರತ್ಯೇಕವಾಗಿ ನಿಲ್ಲುವ ತತ್ವವನ್ನು ಅನುಸರಿಸತೊಡಗಿತು ಮತ್ತು ಶಾಂತಿಪಾಲನೆಯ ಬದ್ಧತೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ಯುರೋಪಿನ ವಿದೇಶಾಂಗ ವಿಚಾರಗಳಿಗಿಂತ ಹೆಚ್ಚಾಗಿ ತನ್ನ ಆಂತರಿಕ ವ್ಯಾಪಾರೋದ್ದಿಮೆಗಳ ಬಗೆಗೆ ಹೆಚ್ಚಿನ ಗಮನ ನೀಡಲಾರಂಭಿಸಿತು. ಆದರೆ ಫ್ರಾನ್ಸಿನ ವಿಚಾರದಲ್ಲಿ ಹಾಗಾಗಲಿಲ್ಲ. ಜರ್ಮನಿಯ ವಿರುದ್ಧ ವಿಜಯ ಸಾಧಿಸಿದ ಮೇಲೆ ಫ್ರಾನ್ಸ್, ಜರ್ಮನಿಯ ವಿಷಯವಾಗಿ ಭಯಪಟ್ಟುಕೊಳ್ಳತೊಡಗಿತು. ಜರ್ಮನಿಯ ಜನಸಂಖ್ಯೆ ಹೆಚ್ಚುತ್ತಿದೆಯೆಂದೂ, ತನ್ನ ಜನಸಂಖ್ಯೆ ಕಡಿಮೆಯಾಗುತ್ತಿದೆಯೆಂದೂ ಅದು ಭಾವಿಸಲಾರಂಭಿಸಿತು. ಎಲ್ಲಕ್ಕಿಂತ ಹೆಚ್ಚಾಗಿ, ಕ್ರಿ.ಶ.೧೯೧೯ರಲ್ಲಿ ತನಗಾದ ಅವಮಾನಕ್ಕೆ ಜರ್ಮನಿಯು ಸೇಡು ತೀರಿಸುವ ಸಾಧ್ಯತೆಗಳಿದ್ದವು. ಫ್ರಾನ್ಸ್ ದೇಶವು ಬ್ರಿಟನ್ ಮತ್ತು ಅಮೆರಿಕಾಗಳಿಂದ ಭದ್ರತೆಯನ್ನು ಅಪೇಕ್ಷಿಸಿತು. ಅದನ್ನು ಗಳಿಸಲು ಫ್ರಾನ್ಸ್ ಅಶಕ್ಯವಾದಾಗ, ಅದು ಪೋಲೆಂಡ್, ಬೆಲ್ಜಿಯಂ, ಜೆಕೋಸ್ಲಾವಾಕಿಯಾ ಮುಂತಾದ ಸಣ್ಣ ರಾಷ್ಟ್ರಗಳೊಡನೆ ಮೈತ್ರಿ ಬೆಳೆಸಿಕೊಂಡಿತು. ದುರದೃಷ್ಟವಶಾತ್ ಫ್ರಾನ್ಸಿನ ಮೈತ್ರಿಯು ಲಾಭಕ್ಕಿಂತ ಹೆಚ್ಚಾಗಿ ನಷ್ಟವನ್ನೇ ಉಂಟುಮಾಡಿತು. ಸ್ವತಃ ಗ್ರೇಟ್‌ಬ್ರಿಟನ್ ಯುದ್ಧಕ್ಕೆ ಸಿದ್ಧವಿರಲಿಲ್ಲ. ಪರಿಣಾಮವಾಗಿ ಕ್ರಿ.ಶ.೧೯೩೮ರವರೆಗೆ ತಮ್ಮ ಉದ್ದೇಶಗಳನ್ನು ಸಾಧಿಸಲು ಕಟಿಬದ್ಧರಾಗಿದ್ದ ಆಕ್ರಮಣಕಾರರನ್ನು ನಿಯಂತ್ರಿಸಲು ಏನೂ ಮಾಡಲಾಗಲಿಲ್ಲ.

. ಮಿಲಿಟರಿ ಪೈಪೋಟಿ

ಮಿಲಿಟಲಿ ಸನ್ನದ್ಧತೆಯೂ ಪ್ರಥಮ ಮಹಾಯುದ್ಧಕ್ಕೆ ಒಂದು ಕಾರಣವಾಗಿತ್ತು. ಮಿಲಿಟರಿ ಪೈಪೋಟಿಯನ್ನು ಕಡಿಮೆಗೊಳಿಸುವುದು ಮತ್ತು ಜಗತ್ತಿನಲ್ಲಿ ಶಾಂತಿಯನ್ನು ಕಾಪಾಡುವ ಉದ್ದೇಶಗಳಿಂದ ರಾಷ್ಟ್ರಸಂಘವು ಪ್ರಥಮ ಮಹಾಯುದ್ಧದ ಬಳಿಕ ಅಸ್ತಿತ್ವಕ್ಕೆ ಬಂದಿತ್ತು. ವರ್ಸೈಲ್ಸ್ ಒಪ್ಪಂದವು ಜರ್ಮನಿಯನ್ನು ನಿಶ್ಯಸ್ತ್ರಗೋಳಿಸಿತ್ತು. ಎಲ್ಲ ಶಕ್ತಿಗಳೂ ನಿಶ್ಯಸ್ತ್ರೀಕರಣಕ್ಕೆ ಬದ್ಧವಾಗಿರಬೇಕೆಂದು ಜರ್ಮನಿಯು ಬಯಸಿತು. ಆದರೆ ಗ್ರೇಟ್‌ಬ್ರಿಟಿನ್ ಹೊರತಾಗಿ ಬೇರಾವ ದೇಶವೂ ಈ ತತ್ವಕ್ಕೆ ಬದ್ಧವಾಗಲಿಲ್ಲ. ಫಲಿತಾಂಶವೆಂಬಂತೆ, ಜರ್ಮನಿಯಲ್ಲಿ ಹಿಟ್ಲರನು ಆಡಳಿತ ಚುಕ್ಕಾಣಿ ಹಿಡಿದಾಗ ಅವನು ಜರ್ಮನ್ ನೌಕಾದಳ, ಭೂ ಸೇನೆ ಮತ್ತು ವಾಯುಪಡೆಗಳನ್ನು ಬಲಪಡಿಸಲು ತೊಡಗಿ ದನು. ಕ್ರಿ.ಶ.೧೯೩೫ರಲ್ಲಿ ಕಡ್ಡಾಯ ಮಿಲಿಟರಿ ವ್ಯವಸ್ಥೆಯನ್ನು ಜರ್ಮನಿಯಲ್ಲಿ ಜಾರಿಗೆ ತರಲಾಯಿತು. ಇಟಲಿ ಮತ್ತು ಜಪಾನ್‌ಗಳು ಮಿಲಿಟರಿ ಪ್ರಾಬಲ್ಯವನ್ನು ಪಡೆಯುತ್ತಿದ್ದವು. ಇಂತಹ ರಾಷ್ಟ್ರಗಳ ಮಿಲಿಟರಿ ಸಿದ್ಧತೆಯಿಂದಾಗಿ ಪ್ರಜಾತಂತ್ರ ರಾಷ್ಟ್ರಗಳೂ ತಮ್ಮ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಂಡವು. ವಿಶೇಷವಾಗಿ ಕ್ರಿ.ಶ.೧೯೩೦ರ ಬಳಿಕ ಈ ಬೆಳವಣಿಗೆ ಗಳಾದವು. ಅಂತಿಮವಾಗಿ ಮಿಲಿಟರಿ ಪೈಪೋಟಿಯು ಶಸ್ತ್ರಾಸ್ತ್ರ ಯುದ್ಧಕ್ಕೆ ಕಾರಣವಾಯಿತು.

. ವಸಾಹತು, ಕಚ್ಚಾವಸ್ತು, ಮಾರುಕಟ್ಟೆಗಳಿಗಾಗಿ ಪೈಪೋಟಿ

ಯುರೋಪಿನ ಹಲವು ರಾಷ್ಟ್ರಗಳು ಕಚ್ಚಾವಸ್ತುಗಳ ಸಂಪನ್ಮೂಲವನ್ನು ನಿಯಂತ್ರಿಸು ತ್ತಿದ್ದವು. ಯುರೋಪಿನ ಹೊರಗೆ ಸುಮಾರು ಕಾಲು ಭಾಗದ ವಿಶ್ವದ ಪ್ರಾಂತ್ಯಗಳನ್ನು ಬ್ರಿಟನ್ ನಿಯಂತ್ರಿಸುತ್ತಿತ್ತು. ಫ್ರಾನ್ಸ್, ಬೆಲ್ಜಿಯಂ ಮತ್ತು ನೆದರ್ಲೆಂಡ್‌ಗಳೂ ವಿಶಾಲವಾದ ವಸಾಹತು ಸಾಮ್ರಾಜ್ಯಗಳನ್ನು ಹೊಂದಿದ್ದವು. ಆದರೆ ಜರ್ಮನಿ ಮತ್ತು ಇಟಲಿಗಳು ವಸಾಹತುಗಳ ಬೇಟೆಯಲ್ಲಿ ಹಿಂದುಳಿದಿದ್ದವು. ರಾಜಕೀಯ ಏಕೀಕರಣದ ನಂತರ ಅವುಗಳು ಆಂತರಿಕ ಭದ್ರತೆಯೆಡೆಗೆ ಗಮನಕೊಡುವುದರಲ್ಲಿ ಮಗ್ನವಾಗಿದ್ದವು. ಅವು ವಸಾಹತುಗಳ ಹುಡುಕಾಟದಲ್ಲಿ ತೊಡಗಿದ್ದ ವೇಳೆಗಾಗಲೇ ಮುಖ್ಯ ಪ್ರದೇಶಗಳು ಇನ್ನಿತರ ದೇಶಗಳ ವಶವಾಗಿದ್ದವು. ಆದ್ದರಿಂದ ಅವುಗಳ ವಸಾಹತು ಪ್ರಾಬಲ್ಯವು ಸಂಘರ್ಷಕ್ಕೆ ಪ್ರೇರಣೆಯಾಯಿತು. ಇಟಲಿ, ಜರ್ಮನಿ ಮತ್ತು ಜಪಾನ್‌ಗಳು ‘ವಸಾಹತು ಹೊಂದಿರದ’ ಗುಂಪಾಯಿತು. ತಮ್ಮ ಕೈಗಾರಿಕೆ ಮತ್ತು ಭೌಗೋಳಿಕ ಅಗತ್ಯಗಳನ್ನು ಪೂರೈಸಬಲ್ಲ ಪ್ರಾಕೃತಿಕ ಸಂಪನ್ಮೂಲಗಳಿಲ್ಲದೆ ಆ ದೇಶಗಳು ಪ್ರತ್ಯೇಕವಾಗಿ ಉಳಿಯ ಬೇಕಾಯಿತು.

ಯುರೋಪಿನ ರಾಷ್ಟ್ರಗಳು ತಮ್ಮ ಸಿದ್ಧವಸ್ತುಗಳು ಹೊರದೇಶಗಳಿಗೆ ಹರಿದು ಹೋಗ ದಂತೆ ಪ್ರತಿಬಂಧಕಗಳನ್ನು ಏರ್ಪಡಿಸಿದವು. ಕ್ರಿ.ಶ.೧೯೨೯-೩೦ರ ಮಹಾ ಆರ್ಥಿಕ ಹಿಂಜರಿತದ ಸಮಯದಲ್ಲಂತೂ ಸಮಸ್ಯೆ ತೀವ್ರವಾಯಿತು. ವಸಾಹತುಗಳ ಮತ್ತು ದೇಶಗಳ ಬಾಹ್ಯ ವ್ಯಾಪಾರಗಳಿಗೆ ತಡೆಯೊಡ್ಡಿದವು. ಸ್ವದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಿಸುವ ಸಲುವಾಗಿ ಜನರಲ್ಲಿ ಒತ್ತಾಯ ತರುವ ಪ್ರಯತ್ನಗಳಾದವು. ವಸ್ತುಗಳನ್ನು ಮಾರಾಟ ಮಾಡುವ ಮತ್ತು ಅಗತ್ಯ ಕಚ್ಛಾವಸ್ತುಗಳನ್ನು ಗಳಿಸುವಲ್ಲಿ ವಿಫಲವಾದಾಗ ಕೆಲವು ದೇಶಗಳ ಆರ್ಥಿಕ ಸ್ಥಿತಿ ಉಸಿರು ಕಟ್ಟುವಂತಾಯಿತು. ಅವಶ್ಯವೆನಿಸುವಷ್ಟು ಸಂಪನ್ಮೂಲಗಳನ್ನು ಪಡೆಯಲು ಅಸಮರ್ಥವಾದಾಗ ಈ ಮೂರು ರಾಷ್ಟ್ರಗಳು (ಇಟಲಿ, ಜರ್ಮನಿ ಮತ್ತು ಜಪಾನ್) ಬಲವನ್ನು ಉಪಯೋಗಿಸಿ ಈ ಕೆಲಸಕ್ಕೆ ಇಳಿದವು. ಪರಿಣಾಮವಾಗಿ ಜಪಾನ್ ಮಂಚೂರಿಯಾವನ್ನು ಆಕ್ರಮಿಸಿತು. ಇಟಲಿ ಇಥಿಯೋಪಿಯಾ ವನ್ನು ವಶಪಡಿಸಿಕೊಂಡಿತು. ಆಸ್ಟ್ರಿಯಾ ಹಿಟ್ಲರನ ವಶವಾಯಿತು.

. ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಸ್ಯೆ

ಕಾಲಾನುಕ್ರಮದಲ್ಲಿ ಅಸಂಖ್ಯಾತ ವಲಸೆಗಳಿಂದಾಗಿ ಹಲವಾರು ರಾಷ್ಟ್ರೀಯರು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸಮ್ಮಿಶ್ರವಾಗಿದ್ದುದು ಮುಖ್ಯ ಸಮಸ್ಯೆಯನ್ನುಂಟು ಮಾಡಿತು. ಅಲ್ಪಸಂಖ್ಯಾತ ಗುಂಪುಗಳ ಜನ ಸುಮಾರು ೩೦ ಮಿಲಿಯನ್‌ಗಳಷ್ಟಿದ್ದರು. ಈ ಅಲ್ಪಸಂಖ್ಯಾತರು ವಿದೇಶಗಳಲ್ಲಿ ಬದುಕುವುದನ್ನು ಹೆಚ್ಚು ಇಷ್ಟಪಡಲಿಲ್ಲ. ಅವರು ತಮ್ಮ ಮಾತೃಭೂಮಿಯ ಸಂಬಂಧವನ್ನು ಕಡಿದುಕೊಳ್ಳುವ ಹಾಗಿರಲಿಲ್ಲ. ಪೂರಕವಾಗಿ ಮಾತೃರಾಷ್ಟ್ರಗಳು ಅವರ ಪುನರ್ ಸಂಘಟನೆಗೆ ಉತ್ತೇಜನ ನೀಡಿದವು. ಜರ್ಮನಿಯ ನಾಜೀಗಳು ಸ್ವನಿರ್ಧಾರದ ಈ ತತ್ವವನ್ನು ಪೂರ್ಣವಾಗಿ ಉಪಯೋಗಿಸುವ ಸಾಧ್ಯತೆಗಳನ್ನು ಬಳಸಿಕೊಂಡು ೩.೫ ಮಿಲಿಯನ್ ಜರ್ಮನ್ನರಿಂದ (ಜಿಕೋಸ್ಲಾವಾಕಿಯಾದ) ಸುಡೆನಾನ್ ಜಿಲ್ಲೆಗಳನ್ನು ಮತ್ತು ಆಸ್ಟ್ರಿಯಾವನ್ನು ಅಕ್ರಮಿಸಿ ಸಮರ್ಥಿಸಿಕೊಂಡವು. ಕ್ರಿ.ಶ.೧೯೩೯ರಲ್ಲಿ ಜರ್ಮನಿಯು ತನ್ನ ಅಲ್ಪಸಂಖ್ಯಾತರನ್ನು ಹೊಂದಿದ್ದ ಪೋಲೆಂಡನ್ನು ಆಕ್ರಮಿಸಲು ಅದೇ ಕಾರಣವನ್ನು ಬಳಸಿಕೊಂಡಿತು.

ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿನ ಒಪ್ಪಂದಕ್ಕೆ ಸಹಿ ಹಾಕುವಂತೆ ಮಿತ್ರಪಕ್ಷಗಳು ಆಸ್ಟ್ರಿಯಾ, ಹಂಗೇರಿ, ಪೋಲೆಂಡ್, ಗ್ರೀಸ್, ರುಮೇನಿಯಾ, ಜೆಕೋಸ್ಲಾ ವಾಕಿಯ ಮತ್ತು ಯುಗೋಸ್ಲಾವಾಕಿಯ -ಈ ಏಳು ರಾಷ್ಟ್ರಗಳನ್ನು ಒತ್ತಾಯಿಸಿದವು. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಒಪ್ಪಂದಗಳಿಗೆ ನ್ಯಾಯ ದೊರಕಲಿಲ್ಲ. ಆದುದರಿಂದ ಅಲ್ಪಸಂಖ್ಯಾತ ಗುಂಪುಗಳು ಅತಂತ್ರವಾದವು. ಮಾತೃದೇಶಗಳೊಡನೆ ಒಂದಾಗುವ ಅವುಗಳ ಬಯಕೆ ಬಲವಾಯಿತು.

. ರಾಷ್ಟ್ರ ಸಂಘದ ವಿಫಲತೆ

ರಾಷ್ಟ್ರಸಂಘವು ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸಿದ್ದಿದ್ದರೆ ಯಾವುದೇ ನಿಟ್ಟಿ ನಿಂದಲೂ ಯುದ್ಧ ಘೋಷಣೆಯಾಗುತ್ತಿರಲಿಲ್ಲ. ಜಗತ್ತಿನ ಜನರ ನಿರೀಕ್ಷೆಯ ಮಟ್ಟಕ್ಕೆ ರಾಷ್ಟ್ರ ಸಂಘವು ಏರಲಿಲ್ಲ. ಬಹುಮುಖ್ಯ ವಿಚಾರಗಳ ಕುರಿತಂತೆ ಪ್ರಬಲ ರಾಷ್ಟ್ರಗಳ ಸಹಯೋಗ ಮತ್ತು ಸಹಕಾರಗಳಿಲ್ಲದೆ, ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಅಂತರ ರಾಷ್ಟ್ರೀಯ ವ್ಯವಸ್ಥೆಯಾಗಿದ್ದ ರಾಷ್ಟ್ರ ಸಂಘದ ಪ್ರಶಂಸಾರ್ಹತೆ ಶಕ್ತಿಗುಂದ ಲಾರಂಭಿಸಿತು. ಇಟಲಿ, ಜಪಾನ್ ಮತ್ತು ಜರ್ಮನಿಗಳು ಆಕ್ರಮಣಕಾರಿ ನಿಲುವು ತಳೆದು ರಾಷ್ಟ್ರ ಸಂಘವನ್ನು ಟೀಕಿಸತೊಡಗಿದವು. ಶಕ್ತರಾಷ್ಟ್ರಗಳ ಹಠಸಾಧನೆಯಿಂದ ಜಾಗತಿಕ ನಿಶ್ಯಸ್ತ್ರೀಕರಣದ ಉದ್ದೇಶದಲ್ಲಿ ರಾಷ್ಟ್ರಸಂಘ ವಿಫಲವಾಯಿತು. ಶಸ್ತ್ರಸಜ್ಜಿತ ದೇಶಗಳನ್ನು ತಡೆಯುವ ರಾಷ್ಟ್ರ ಸಂಘದ ಪ್ರಯತ್ನಗಳು ಕೈಗೂಡಲಿಲ್ಲ. ಜರ್ಮನಿಯು ರಹಸ್ಯವಾಗಿ ಮಾರಕ ಆಯುಧಗಳನ್ನು ಉತ್ಪಾದಿಸಲು ತೊಡಗಿತು. ೧೯೩೫ರ ಒಪ್ಪಂದದ ಮೂಲಕ ಬ್ರಿಟನ್ ಜರ್ಮನಿಗೆ ತನ್ನ ನೌಕಾಬಲವನ್ನು ಹೆಚ್ಚಿಸಿಕೊಳ್ಳಲು ಒಪ್ಪಿಗೆ ನೀಡಿತು. ವಾಸ್ತವವಾಗಿ ವರ್ಸೈಲ್ಸ್ ಒಪ್ಪಂದದ ಸಂದರ್ಭದಲ್ಲಿ ಜರ್ಮನಿಯಂತೆಯೇ ತಾವೂ ನಿಶಸ್ತ್ರರಾಗುವ ಭರವಸೆಯನ್ನು ನೀಡಲಾಗಿತ್ತು. ಈ ಭರವಸೆಯನ್ನು ರಾಷ್ಟ್ರಸಂಘವು ಉಳಿಸಿಕೊಳ್ಳಲಾಗಲಿಲ್ಲ.

ಮಂಚೂರಿಯಾ ಮತ್ತು ಅಬಿಸೀನಿಯಾಗಳ ಸಮಸ್ಯೆಗಳನ್ನು ಬಗೆಹರಿಸಲಾರದ ಸೋಲಿನ ಮೂಲಕ ರಾಷ್ಟ್ರ ಸಂಘವು ತನ್ನ ಪೂರ್ಣ ವೈಫಲ್ಯವನ್ನು ಸಾಬೀತುಪಡಿಸಿತು. ಸಣ್ಣ ಹಾಗೂ ದೊಡ್ಡ ರಾಷ್ಟ್ರಗಳು ಸಂಘದ ವಿಶ್ವಾಸ ಕಳೆದುಕೊಂಡವು. ಇಟಲಿಯ ಕಾರ್ಯಾಚರಣೆಯು ರಾಷ್ಟ್ರ ಸಂಘಕ್ಕೆ ಮಾರಕವಾದ ಹೊಡೆತ ನೀಡಿತು. ರಾಷ್ಟ್ರ ಸಂಘವು ಸದಸ್ಯ ರಾಷ್ಟ್ರಗಳು ತಮ್ಮೊಳಗೆ ಹೊಡೆದಾಡುವುದನ್ನು ತಡೆಗಟ್ಟದು ಎಂಬುದನ್ನೂ, ಇಟಲಿಯು ‘ಶಕ್ತನ ಉಳಿವು’ ಎಂಬುದನ್ನೂ ಸಾಮೂಹಿಕ ಭದ್ರತೆಯೆಂಬುದು ಬೆಲೆಯಿಲ್ಲದ ಕನಸೆಂದೂ ಸಾಬೀತುಪಡಿಸಿತು.

ಎರಡನೆಯ ವಿಶ್ವಸಮರದ ನಡೆ

೧೯೩೯ರ ಸೆಪ್ಟೆಂಬರ್ ೧ ರಂದು ಜರ್ಮನಿಯು ಪೋಲೆಂಡನ್ನು ಆಕ್ರಮಿಸು ವುದರೊಂದಿಗೆ ದ್ವಿತೀಯ ಮಹಾಯುದ್ಧ ಆರಂಭವಾಯಿತು. ಎಲ್ಲ ಪ್ರತಿರೋಧಗಳನ್ನು ಮುರಿದು ಪೋಲೆಂಡಿನ ರಾಜಧಾನಿಯಾದ ‘ವಾರ್ಸೊ’ ಜರ್ಮನಿಯ ವಶವಾಯಿತು. ಆ ಬಳಿಕ ಹಿಟ್ಲರನು ನಾರ್ವೆ, ಅನಂತರ ಡೆನ್ಮಾರ್ಕ್, ಹಾಲೆಂಡ್, ಬೆಲ್ಜಿಯಂ, ಫ್ರಾನ್ಸ್ ಒಂದರ ಹಿಂದೆ ಒಂದನ್ನು ವಶಪಡಿಸಿಕೊಳ್ಳುತ್ತಾ ಸಾಗಿದನು. ಬ್ರಿಟಿನ್ ತನ್ನ ಪಡೆಗಳನ್ನು ಹಿಂತೆಗೆದುಕೊಂಡಾಗ ಫ್ರಾನ್ಸಿಗೆ ಜರ್ಮನಿಯನ್ನು ಎದುರಿಸಲಾಗಲಿಲ್ಲ. ಅದು ಜೂನ್ ೫ ರಂದು ಬೇಷರತ್ತಾಗಿ ಶರಣಾಯಿತು. ಮುಸ್ಸೊಲೊನಿಯ ನೇತೃತ್ವದಲ್ಲಿ ಇಟಲಿಯು ಜರ್ಮನಿಯೊಂದಿಗೆ ಕೈಗೂಡಿಸಿತು.

ಬ್ರಿಟಿನ್‌ನೊಡನೆ ಯುದ್ಧ ೧೯೪೦೪೧

ಜರ್ಮನಿಯ ವ್ಯಾಪಕ ಬಾಂಬ್ ದಾಳಿ ಮತ್ತು ಜಲಾಂತರ್ಗಾಮಿಗಳ ಬಳಕೆಯಿಂದಾಗಿ ದೊಡ್ಡ ಮೊತ್ತದ ನೌಕಾಪಡೆಗಳು ನಾಶವಾದವು. ಹಿಟ್ಲರ್‌ನು ಭೀಕರ ವಾಯು ದಾಳಿಯಿಂದ ಬ್ರಿಟನ್‌ನಲ್ಲಿ ವ್ಯಾಪಕ ಕಷ್ಟ-ನಷ್ಟಗಳನ್ನು ಉಂಟುಮಾಡಿದನು. ಕೈಗಾರಿಕಾ ವಲಯಗಳು ಮತ್ತು ಬಂದರುಗಳು ಮತ್ತು ಸ್ವತಃ ಲಂಡನ್ ನಗರವೇ ಬಾಂಬ್ ದಾಳಿಗೆ ತುತ್ತಾಗಿ ಆಸಂಖ್ಯಾತ ಜನರನ್ನು ಬಲಿತೆಗೆದುಕೊಂಡಿತು. ಇಷ್ಟಾದರೂ ವಿನ್‌ಸ್ಟಂಟ್ ಚರ್ಚಿಲ್ಲರ ಮಿಂಚಿನ ಕಾರ್ಯಾಚರಣೆಯಿಂದ ಬ್ರಿಟನ್ ಕೂಡಲೇ ಚೇತರಿಸಿಕೊಂಡಿತು. ‘‘ದೇಶಕ್ಕಾಗಿ ಬೇರೇನೂ ಕೊಡಬೇಕಾಗಿಲ್ಲ. ರಕ್ತ, ಶ್ರಮ, ಕಣ್ಣೀರು ಮತ್ತು ಬೆವರು ಇಷ್ಟು ನೀಡಿದರೆ ಸಾಕು’’ ಎಂಬ ಕರೆ ಬ್ರಿಟನ್ನಿನಲ್ಲಿ ವಿದ್ಯುತ್ ಸಂಚಾರವನ್ನುಂಟುಮಾಡಿತು. ‘‘ನಾವೇ ಸೋತೆವೆಂದಾದರೆ ಬೇರೆ ಯಾರು ಗೆಲ್ಲುವವರು’’ ‘‘ಸೋಲುವ ಸಾಧ್ಯತೆಗಳಲ್ಲಿ ನಾವು ಆಸಕ್ತರಾಗಿಲ್ಲ, ಸೋಲೆನ್ನುವುದೇ ಅಸ್ತಿತ್ವದಲ್ಲಿಲ್ಲ’’ ಇವೆಲ್ಲಾ ಅದರ ಧ್ಯೇಯಗಳಾದವು. ವ್ಯಾಪಕ ನಷ್ಟಗಳ ಹೊರತಾಗಿಯೂ ಬ್ರಿಟನ್ ಕೆಚ್ಚೆದೆಯಿಂದ ಹೋರಾಡಿತು. ಬ್ರಿಟನನ್ನು ಬಗ್ಗುಬಡಿಯಲ್ಲಿ ಜರ್ಮನ್ನರ ವಿಫಲತೆ ಅಂತಿಮವಾಗಿ ಜರ್ಮನಿಯ ಸೋಲಿಗೆ ಕಾರಣವಾಯಿತು.

ಉತ್ತರ ಆಫ್ರಿಕಾ ಕಾರ್ಯಾಚರಣೆಯಲ್ಲಿ ಇಟಲಿಯ ಸೋಲು

ಫ್ರಾನ್ಸಿನ ಪತನಾನಂತರ ಇಟಲಿಯು ಮಿತ್ರಕೂಟದ ಮೇಲೆ ಯುದ್ಧ ಘೋಷಿಸಿತು. ಉತ್ತರ ಆಫ್ರಿಕಾದ ಬ್ರಿಟಿಷ್ ವಸಾಹತುಗಳನ್ನು ಮತ್ತು ಈಜಿಪ್ಟ್ ಮತ್ತು ಸೂಯೆಜ್ ಕಾಲುವೆಗಳನ್ನು ವಶಪಡಿಸಿಕೊಳ್ಳಲು ಮುಸ್ಸೊಲೊನಿಯು ಬಯಸಿದ್ದನು. ಇಲ್ಲಿ ಇಟಲಿ ಸೋಲಲಾರಂಭಿಸಿದಾಗ ಜರ್ಮನಿಯು ಅದರ ಸಹಾಯಕ್ಕೆ ನಿಂತು ಮೊದಮೊದಲಿಗೆ ಜಯಗಳಿಸಿತು. ಆದರೆ ಕ್ರಿ.ಶ.೧೯೪೨ರಲ್ಲಿ ಬ್ರಿಟನ್ ಯಶಸ್ಸು ಗಳಿಸುವುದರೊಂದಿಗೆ ಅದು ಯುದ್ಧದ ಮುಖ್ಯ ತಿರುವುಗಳಲ್ಲೊಂದಾಯಿತು. ಮುಸ್ಸೊಲೊನಿಯು ‘ಆಫ್ರಿಕಾದ ಜೂಜಾಟ’ದಲ್ಲಿ ಸೋಲೊಪ್ಪಿದನು.

ರಷ್ಯಾದ ಮೇಲೆ ಜರ್ಮನಿಯ ಆಕ್ರಮಣ

೧೯೪೧ರಲ್ಲಿ ಹಿಟ್ಲರನು ಯಾವುದೇ ಪೂರ್ವ ಸೂಚನೆಗಳನ್ನು ನೀಡದೆ ಏಕಾಏಕಿ ರಷ್ಯಾವನ್ನು ಆಕ್ರಮಿಸಿದನು. ಜರ್ಮನಿಯು ರಷ್ಯಾದ ಮೇಲೆ ಸುಲಭ ಜಯ ಸಾಧಿಸಿ. ಉಕ್ರೇನ್ ಮತ್ತು ಕಾಕಸಸ್‌ಗಳಿಂದ ಆಹಾರ ಮತ್ತು ತೈಲ ಪೂರೈಕೆಗಳನ್ನು ಗಳಿಸಬಹುದೆಂದು ಊಹಿಸಿತ್ತು. ಜರ್ಮನಿಯ ದಾಳಿ ಆರಂಭವಾದಾಗ ರಷ್ಯಾದ ವಿದೇಶಾಂಗ ಮಂತ್ರಿ ಮೋಲೊಟೋವ್ ರಷ್ಯಾದ ಜನತೆಗೆ ಕರೆ ನೀಡಿದನು

ಈ ಯುದ್ಧವನ್ನು ನಮ್ಮ ಮೇಲೆ ಹೇರಿದವರು ಜರ್ಮನಿಯ ಜನವರ್ಗವಲ್ಲ, ಶ್ರಮಿಕರೂ ಅಲ್ಲ, ರೈತರು ಬುದ್ದಿಜೀವಿಗಳು ಯಾರೂ ಅಲ್ಲ. ಅವರ ಕಷ್ಟಗಳನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ ಫ್ರೆಂಚ್, ಜೆಕೋಸ್ಲಾವಾಕಿಯಾ, ಪೋಲೆಂಡ್, ಸೈಬೀರಿಯಾ, ನಾರ್ವೆ, ಬೆಲ್ಜಿಯಂ, ಡೆನ್ಮಾರ್ಕ್, ಹಾಲೆಂಡ್, ಗ್ರೀಸ್ ಮತ್ತಿತರ ದೇಶಗಳನ್ನು ಗುಲಾಮರನ್ನಾಗಿ ಮಾಡಿ ಜರ್ಮನಿಯ ರಕ್ತಪಿಪಾಸುಗಳಾಗಿರುವ ನಾಜೀ ನಾಯಕರು ತಮ್ಮ ಮೇಲೆ ಯುದ್ಧ ಹೇರಿದ್ದಾರೆ… ನಮ್ಮದು ನ್ಯಾಯ ಯುತ ಹೋರಾಟ, ವೈರಿಗಳನ್ನು ಸೋಲಿಸಬೇಕು. ವಿಜಯ ಪತಾಕೆ ನಮ್ಮದಾಗಬೇಕು.

ರಷ್ಯಾವು ಜರ್ಮನಿಯ ಆಕ್ರಮಣಕ್ಕೊಳಗಾದಾಗ ರಷ್ಯಾಕ್ಕೆ ಬಂದ ಕ್ರಿಪ್ಸ್‌ಮಿಷೆನ್ ಅದರ ಯಶಸ್ವಿಗೆ ಕಾರಣವಾಯಿತು. ಇಂಗ್ಲೆಂಡ್ ಮತ್ತು ರಷ್ಯಾಗಳ ನಡುವೆ ಏರ್ಪಟ್ಟ ಒಪ್ಪಂದದ ಪ್ರಕಾರವಾಗಿ ನವೆಂಬರ್ ೧೯೪೧ರಲ್ಲಿ ಅಧ್ಯಕ್ಷ ಎಫ್.ಡಿ. ರೂಸ್‌ವೆಲ್ಪ್ ರಷ್ಯಾದ ಜನತೆಗೆ ಶುಭಾಶಯ ತಿಳಿಸಿದನು ಮತ್ತು ರಷ್ಯಾದ ಸಹಾಯಕ್ಕೆಂದು ೧೦೦೦ ಮಿಲಿಯನ್ ಡಾಲರ್‌ಗಳನ್ನು ದೇಣಿಗೆ ನೀಡಿದನು. ರಷ್ಯಾವು ಬೃಹತ್ ಪ್ರಮಾಣದ ಟ್ಯಾಂಕ್‌ಗಳನ್ನು, ವಿಮಾನಗಳನ್ನು, ಮೋಟಾರು ಕಾರುಗಳನ್ನು ಮತ್ತಿತರ ಯುದ್ಧ ಸಾಮಾಗ್ರಿ ಗಳನ್ನು ಪಡೆದುಕೊಂಡಿತು. ರಷ್ಯನ್ನರು ಜರ್ಮನಿಯ ವಿರುದ್ಧ ಧೈರ್ಯದಿಂದ ಹೋರಾಡಿದರು. ಜರ್ಮನಿಯು ತೀವ್ರವಾದ ಆಘಾತಕ್ಕೊಳಗಾಗಬೇಕಾಯಿತು. ಅದರ ಸೈನ್ಯಬಲ ೩,೩೦,೦೦೦ ರಿಂದ ೧೨,೦೦೦ಕ್ಕೆ ಇಳಿಯಿತು. ಇದು ಜರ್ಮನಿಯ ಪತನದ ಆರಂಭವಾಗಿತ್ತು.

ಪರ್ಲ್‌ಹಾರ್ಬರ್ ಮೇಲೆ ಜಪಾನಿನ ದಾಳಿ

ಅಮೆರಿಕಾದ ನೌಕಾಕೇಂದ್ರವಾಗಿದ್ದ ಪೆಸಿಫಿಕ್ ಸಾಗರದ ಪರ್ಲ್‌ಹಾರ್ಬರ್ ಮೇಲೆ ದಾಳಿ ಮಾಡಲು ಜಪಾನ್ ಸಜ್ಜಾಗುತ್ತಿತ್ತು. ಡಿಸೆಂಬರ್ ೭, ೧೯೪೧ ರಂದು ಜಪಾನ್ ಆ ಪ್ರದೇಶವನ್ನು ಆಕ್ರಮಿಸಿತು. ಜಪಾನಿನ ವಿಮಾನಗಳಿಂದ ಅನಿರೀಕ್ಷಿತವಾಗಿ  ಆಕ್ರಮಣವಾದು ದರಿಂದ ಅಮೆರಿಕಾದ ಎಂಟು ಸುಸಜ್ಜಿತ ಯುದ್ಧ ಹಡಗುಗಳು ಮತ್ತು ಹಲವು ನೌಕೆಗಳು ಧ್ವಂಸವಾದವು. ಕೋಪಗೊಂಡ ಅಮೆರಿಕಾವು ತನ್ನ ತಾಟಸ್ಥ್ಯವನ್ನು ಕೊನೆಗೊಳಿಸಿ ಜಪಾನಿನ ಮೇಲೆ ಯುದ್ಧ ಘೋಷಿಸಿತು. ಜರ್ಮನಿ ಮತ್ತು ಇಟಲಿಗಳು ಜಪಾನಿನ ಮೇಲೆ ಯುದ್ಧ ಘೋಷಿಸಿತು. ಜರ್ಮನಿ ಮತ್ತು ಇಟಲಿಗಳು ಜಪಾನಿನ ಪರವಾಗಿ ಅಮೆರಿಕಾದ ವಿರುದ್ಧ ಯುದ್ಧಕ್ಕೆ ನಿಂತವು. ಜಪಾನೀಯರು ಇನ್ನೆರಡು ಬ್ರಿಟಿಷ್ ನೌಕೆಗಳನ್ನು ಮುಳುಗಿಸಿದರು. ಅನಂತರ ಹಾಂಗ್‌ಕಾಂಗ್, ಮಲಯಾ, ಸಿಂಗಪೂರ್, ಬರ್ಮಾ, ಡಚ್, ಫಿಲಿಪೈನ್ಸ್ ಮುಂತಾದ ಪ್ರದೇಶಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡರು.