ಹದಿನೇಳನೆಯ ಶತಮಾನವನ್ನು ಪ್ರತಿಭೆಯ ಶತಮಾನವೆಂದು ಪರಿಗಣಿಸಿದರೆ, ಹದಿನೆಂಟನೆಯ ಶತಮಾನವನ್ನು ಜ್ಞಾನೋದಯದ ಜ್ಞಾನಕೋಶದ ಶತಮಾನವೆಂದು ಪರಿಗಣಿಸಬಹುದು. ಈ ಶತಮಾನದ ಚಿಂತನೆಗಳು ಹೆಚ್ಚು ಕಡಿಮೆ ಹಿಂದಿನ ಶತಮಾನ ದಲ್ಲಾದ ಬೌದ್ದಿಕ ಬೆಳವಣಿಗೆಗಳಿಂದ ಹೆಚ್ಚು ಸ್ಫೂರ್ತಿಗೊಂಡು, ಅಂದಿನ ಚಿಂತನೆಗಳನ್ನು ಪ್ರತಿಪಾದಿಸುವುದು ಮತ್ತು ಅನುಷ್ಟಾನಗೊಳಿಸುವುದಾಗಿತ್ತು. ಯುರೋಪಿನ ಚಿಂತನಕಾರರು, ಅದರಲ್ಲೂ ಪ್ರಮುಖವಾಗಿ ಫ್ರಾನ್ಸಿನ ಚಿಂತನಕಾರರು ಹೆಚ್ಚಾಗಿ ವೈಜ್ಞಾನಿಕ ಕ್ರಾಂತಿಯ ಪಿತಾಮಹನೆನಿಸಿದ ಫ್ರಾನ್ಸಿನ ಬೇಕಾನ್‌ನ ಇಂಡಕ್ಟೀವ್ ಲಾಜಿಕ್ ಮತ್ತು ಡೆಕಾರ್ಟಿಯ ಗಣಿತ ವಿಧಾನಗಳಿಂದ ಹೆಚ್ಚು ಪ್ರಭಾವಿತಗೊಂಡಿದ್ದರು. ಡೆಕಾರ್ಟಿಯು ಬೌದ್ದಿಕ ಚಳವಳಿಯ ಪ್ರವರ್ತಕರಲ್ಲಿ ಒಬ್ಬನಾಗಿದ್ದನು.

ಹದಿನೆಂಟನೆಯ ಶತಮಾನದ ಪ್ರಮುಖ ಬೆಳವಣಿಗೆಯೆಂದರೆ ಜ್ಞಾನೋದಯ, ಅಥವಾ ಬೌದ್ದಿಕ ಚಳವಳಿ. ಇದು ಚಿಂತನೆಯಲ್ಲಿ ಕ್ರಾಂತಿಯನ್ನುಂಟು ಮಾಡಿ ಹಲವಾರು ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಧರ್ಮ, ದೇವರು, ವೈಚಾರಿಕತೆ ಮತ್ತು ಮನುಷ್ಯನಿಗೆ ಸಂಬಂಧಪಟ್ಟಂತೆ ಹೆಚ್ಚು ಪ್ರಭಾವ ಬೀರಿತು. ಮಾನವ ಹಿಂದೆ ನಂಬಲಾಗಿದ್ದ ಮತ್ತು ಪ್ರತಿಪಾದಿಸಲ್ಪಟ್ಟಿದ್ದ ವಿಷಯಗಳನ್ನು ಪರೀಕ್ಷೆಗೊಳಪಡಿಸಿ ಅವುಗಳ ಸತ್ಯಾಸತ್ಯತೆ ಗಳನ್ನು ತಿಳಿದುಕೊಂಡನು. ಮೊಟ್ಟಮೊದಲ ಬಾರಿಗೆ ಪುರೋಹಿತಶಾಹಿ ಚರ್ಚು ಮತ್ತು ನಿರಂಕುಶ ಪ್ರಭುತ್ವ ಬಲವಾದ ಟೀಕೆಗೊಳಪಟ್ಟವು. ಜ್ಞಾನೋದಯದ ಮೂಲವು ಗ್ರೀಕ್ ತತ್ವಜ್ಞಾನಿಗಳಿಂದ ಉಂಟಾಯಿತೆನ್ನಬಹುದು. ಹದಿನಾರನೆಯ ಶತಮಾನದಲ್ಲಿ ಜರ್ಮನಿಯ ಮಾರ್ಟಿನ್ ಲೂಥರ್ ಧಾರ್ಮಿಕ ಮತ್ತು ವೈಚಾರಿಕ ಕ್ಷೇತ್ರದಲ್ಲಿ ಬಂಡಾಯವನ್ನೆಬ್ಬಿಸಿದನು. ಇದಕ್ಕೆ ಇರೇಸಮನ್ ಹೆಚ್ಚು ಪುಷ್ಟಿ ನೀಡಿದ್ದನು. ಹದಿನೇಳನೆಯ ಶತಮಾನದ ಸಮಯಕ್ಕೆ ಇಡೀ ಯುರೋಪ್ ಸಮಾಜವು ವೈಚಾರಿಕತೆಯ ಪ್ರಭಾವಕ್ಕೊಳಗಾಗಿ, ಹದಿನೆಂಟನೆಯ ಶತಮಾನದಲ್ಲಿ ಅತ್ಯುನ್ನತ ಮಟ್ಟಕ್ಕೇರಿತು.

ಕ್ರೈಸ್ತ ಧರ್ಮವು ಹೊಸ ವಿಷಯ ಮತ್ತು ನಿರ್ಣಯಗಳಿಂದಾಗಿ ಪ್ರಬಲವಾದ ವಿರೋಧವನ್ನು ಎದುರಿಸಬೇಕಾಯಿತು. ಹದಿನೆಂಟನೆಯ ಶತಮಾನದ ಮೊದಲರ್ಧ ಭಾಗದಲ್ಲಿ ತೀವ್ರಗಾಮಿಗಳ ಚಿಂತನೆಗಳು ಧಾರ್ಮಿಕ ವಿಷಯದಲ್ಲಿ ಚರ್ಚೆಯನ್ನುಂಟು ಮಾಡಲು ದಾರಿ ಮಾಡಿಕೊಟ್ಟವು. ತೀವ್ರಗಾಮಿಗಳು ಬೇರೆ ನಾಗರಿಕತೆಯ ಸಮಾಜದ ಧರ್ಮಗಳನ್ನು ಅಂದರೆ ಈಜಿಪ್ಟಿನ ಸಿಯಾಮಿನ್ ಮತ್ತು ಚೀನಾದ ಸಮಾಜಗಳನ್ನು ಅಧ್ಯಯನ ಮಾಡಿದ ನಂತರ, ಇವು ಯಾವುದೇ ಸಂಘಟಿತ ಧರ್ಮ ಹೊಂದಿಲ್ಲವಾದರೂ ಸಮಾಜ, ಮಾನವ ಅತ್ಯಂತ ಸದ್ಗುಣವುಳ್ಳವರಾಗಿದ್ದುವೆಂದು ಅಭಿಪ್ರಾಯಪಟ್ಟರು. ಆದರೆ ಕ್ರೈಸ್ತ ಧರ್ಮವು ಪ್ರಕೃತಿಯ ನಿಯಮಗಳು ಮತ್ತು ವೈಜ್ಞಾನಿಕ ಪ್ರಯೋಗದ ಎದುರು ನಿಲ್ಲಲಾರದಾಯಿತು.

ಆಸ್ತಿಕವಾದದ ಉಗಮ

ಲಾರ್ಡ್ ಹರ್ಬರ್ಟ್ ತನ್ನ ಪುಸ್ತಕ ಡಿವೆಂಟೀಟ್‌ನಲ್ಲಿ ಸ್ವಾಭಾವಿಕ ಪ್ರಕೃತಿ ಧರ್ಮದ ಬಗ್ಗೆ ವ್ಯಾಖ್ಯಾನ ನೀಡಿದ್ದಾನೆ. ಅವನ ಪ್ರಕಾರ ಕೆಲವು ನಂಬಿಕೆಗಳು ಎಲ್ಲಾ ವಿಚೇಚನಾ ಶಕ್ತಿಯುಳ್ಳ ಜನತೆಯಿಂದ ಮಾನ್ಯ ಮಾಡಲ್ಪಡುತ್ತವೆ. ಒಂದೇ ದೇವರ ಅಸ್ತಿತ್ವದ ಮತ್ತು ಅವನ ಕಾರ್ಯಗಳಾದ ದುಷ್ಟ ಶಿಕ್ಷಕ, ಶಿಷ್ಟ ಪರಿಪಾಲನೆ ಮತ್ತು ಅವನನ್ನು ಒಲಿಸಿಕೊಳ್ಳುವುದು ಮಾನವನ ಸದ್ಗುಣಗಳಿಂದ ಸಾಧ್ಯ. ಇಂತಹ ವರ್ತನೆಯಿಂದ ಮಾನವನಿಗೆ ಇಹಲೋಕದಲ್ಲಷ್ಟೇ ಅಲ್ಲದೆ ಪರಲೋಕದಲ್ಲಿಯೂ ಸಹ ಮುಕ್ತಿ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾನೆ. ಈ ತತ್ವಗಳು ಥಾಮಸ್ ಪೈನೇ ಪುಸ್ತಕ ದಿ ಏಜ್ ಆಫ್ ರೀಜನ್ ಪ್ರಕಟವಾಗುವವರೆಗೂ ಹೆಚ್ಚು ಪ್ರಚಲಿತದಲ್ಲಿದ್ದವು.

ಆಸ್ತಿಕರು ದೇವರು, ಧರ್ಮ, ವಿವೇಚನೆ ಮತ್ತು ಪ್ರಕೃತಿ ನಿಯಮ ನಡುವಣ ಇದ್ದ ಸಮನ್ವಯತೆಯನ್ನು ಕಾಪಾಡಿಕೊಂಡಿದ್ದರು. ಇವರ ಪ್ರಕಾರ ಯಾವುದೇ ಧರ್ಮ, ತತ್ವವು ಸ್ವಾಭಾವಿಕ ವಿಜ್ಞಾನದ ಪದ್ಧತಿಯ ಮೇಲೆ ಆಧರಿಸಿರಬೇಕು. ಪ್ರಸಕ್ತ ಧರ್ಮವು ಯಾವುದೇ ವೈಜ್ಞಾನಿಕ ಸಿದ್ಧಾಂತದ ಮೇಲೆ ನಿಂತಿಲ್ಲ. ಹಾಗಾಗಿ ಅದರಲ್ಲಿ ನಂಬಿಕೆಯಿಡುವುದು ತಪ್ಪು ಎಂದು ಪ್ರತಿಪಾದಿಸಿದರು. ಕ್ರೈಸ್ತ ಧರ್ಮದ ಹಳೆಯ ಒಡಂಬಡಿಕೆಯು ತೀವ್ರ ಪರೀಕ್ಷೆ ಗೊಳಪಟ್ಟು, ಟೀಕೆಗೊಳಪಟ್ಟು, ಅದರಲ್ಲಿದ್ದ ಕೆಲವು ದೋಷಪೂರಿತ ಅಭಿಪ್ರಾಯಗಳು ತಿರಸ್ಕರಿಸ್ಪಟ್ಟವು. ಇದೇ ರೀತಿ ಆಸ್ತಿಕರು ಬೈಬಲನ್ನು ಸಹ ತಿರಸ್ಕರಿಸಿ, ದೇವರ ಪುನರ್ ಅವತಾರ ಅಂದರೆ ದೇವರು ಮಾನವ ರೂಪವನ್ನು ತಾಳಿದ್ದು ಮತ್ತು ಪವಾಡಗಳನ್ನು ಹಾಸ್ಯಾಸ್ಪದಗಳೆಂದು ಅಭಿಪ್ರಾಯ ಪಡಲಾಯಿತು. ಪವಾಡಗಳು ಪ್ರಕೃತಿ ನಿಯಮಕ್ಕೆ ವಿರುದ್ಧವಾದವುಗಳು. ಇದರಿಂದಾಗಿ ದೇವರು ತಾನೇ ಸೃಷ್ಟಿಸಿದ ನಿಯಮಗಳನ್ನು ತಾನೇ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯ ಪಡಲಾಯಿತು.

ಅಸ್ತಿಕವಾದವು ಮೊದಲು ಬ್ರಿಟನ್ನಿನಲ್ಲಿ ಪ್ರಾರಂಭವಾಗಿ ಹದಿನೆಂಟನೆಯ ಶತಮಾನದ ಹೊತ್ತಿಗೆ ಇಡೀ ಯೂರೋಪ್ ಖಂಡಕ್ಕೆ ಪಸರಿಸಿತು. ಫ್ರಾನ್ಸ್‌ನಲ್ಲಿ ಹದಿನಾಲ್ಕನೆ ಲೂಯಿ ಆಡಳಿತದಿಂದ ಬೇಸತ್ತ ಜನತೆ ಈ ತತ್ವದ ಕಡೆ ಹೆಚ್ಚು ಪ್ರೋ ಕೊಡಲಾರಂಭಿಸಿದರು. ಇಲ್ಲಿ ವಾಲ್ಟೇರ್ ಕ್ರೈಸ್ತ ಧರ್ಮದ ವಿರುದ್ಧ ಚಳವಳಿ ಪ್ರಾರಂಭಿಸಿದನು. ತನ್ನ ಪುಸ್ತಕವಾದ ಲೆಟರ್ಸ್ ಫಿಲಾಸಪಿಕ್ಸ್‌ನಲ್ಲಿ ಆಸ್ತಿಕವಾದವನ್ನು ಪ್ರತಿಪಾದಿಸಿದನು. ಇವನು ಪ್ರಕೃತಿಯಲ್ಲಿ ದೇವರನ್ನು ನೋಡಲಾರಂಭಿಸಿ, ನಂತರ ಆಸ್ತಿಕವಾದವು ಸಮಾಜದ ಭದ್ರ ವ್ಯವಸ್ಥೆಗೆ ಅವಶ್ಯಕವೆಂದು ಅಭಿಪ್ರಾಯಪಟ್ಟನು. ಇವನು ಕ್ರೈಸ್ತ ಪಾದ್ರಿಗಳನ್ನು ಕಟುವಾಗಿ ಟೀಕಿಸಿ, ಪ್ರತಿಯೊಬ್ಬ ಗೌರವಾನ್ವಿತ ಮತ್ತು ವಿವೇಚನಶಕ್ತಿಯುಳ್ಳ ವ್ಯಕ್ತಿಯು ಕ್ರೈಸ್ತ ಧರ್ಮವನ್ನು ವಿರೋಧಿಸಬೇಕು ಎಂದು ಅಭಿಪ್ರಾಯಪಟ್ಟನು.

ಜೀನ್ ಜಾಕಸ್ ರೋಸೋ ಸಹ ವಾಲ್ಟೇರ್ ರೀತಿ ಯುರೋಪಿನ ಧಾರ್ಮಿಕ ನಂಬಿಕೆ ಮತ್ತು ಸಿದ್ಧಾಂತಗಳನ್ನು ಕಟುವಾಗಿ ಟೀಕಿಸಲಾರಂಭಿಸಿದನು. ಅವನಿಗೆ ವಿವೇಚನೆಯು ಪ್ರಮುಖ ಅಸ್ತ್ರವಾಗಿ ಕಂಡುಬಂದಿತು. ತನ್ನ ಅಸ್ತಿತ್ವ ವಾದವನ್ನು ತನ್ನ ಕಾದಂಬರಿ ಇಮೇಲ್‌ನಲ್ಲಿ ಪ್ರತಿಪಾದಿಸಿದ್ದಾನೆ. ಫ್ರಾನ್ಸಿನಾದ್ಯಂತ ಚರ್ಚನ್ನು ವಿರೋಧಿಸುವ, ಪ್ರಶ್ನಿಸುವ ಚಳವಳಿಯು ಹರಡಿತು. ಅಲ್ಲಿಂದ ಇದು ಜರ್ಮನಿ ಮತ್ತು ಇಂಗ್ಲೆಂಡ್‌ನ ಅಮೆರಿಕಾದ ಕಾಲೋನಿಗಳಿಗೂ ಹರಡಿತು. ಹದಿನೆಂಟನೆಯ ಶತಮಾನದ ಅಂತ್ಯದವರೆಗೂ ಈ ಚಳವಳಿ, ಚಿಂತನೆಗಳು ಪ್ರಬಲವಾಗಿದ್ದವು. ಆದರೆ ಕೊನೆಯಲ್ಲಿ ಸಂಘಟನೆಯ ಕೊರತೆ, ಪವಿತ್ರ ಗ್ರಂಥವಿಲ್ಲದ್ದು ಮತ್ತು ಧೀಮಂತ ಮುಖಂಡನಿಲ್ಲದ ಕಾರಣ ಇದರ ಪ್ರಾಬಲ್ಯ ಕ್ರಮೇಣ ಕಡಿಮೆಯಾಗತೊಡಗಿತು.

ಸಂಘಟಿತ ಸಂಪ್ರದಾಯ ಸಮಾಜಗಳು ಅಸ್ತಿತ್ವವಾದದ ಹೊಡೆತಕ್ಕೆ ಈಡಾದಾಗ ಸ್ವಾಭಾವಿಕವಾಗಿ ಅವು ತಮ್ಮ ಪ್ರತಿಷ್ಠೆಗೋಸ್ಕರ ಅಸ್ತಿತ್ವವಾದವನ್ನು ವಿರೋಧಿಸಲಾರಂಬಿ ಸಿದವು. ತಮ್ಮ ನಂಬಿಕೆ ಮತ್ತು ನಿಲುವುಗಳನ್ನೇ ಪ್ರತಿಪಾದಿಸಲು ಚರ್ಚು ಮತ್ತು ಮುದ್ರಣಾಲಯವು ಹಲವಾರು ಗ್ರಂಥಗಳನ್ನು ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮದ ಭದ್ರತೆಗೆ ಪ್ರಕಟಿಸಿ, ಅಸ್ತಿತ್ವ ವಾದವನ್ನು ಹತ್ತಿಕ್ಕಲು ಮತ್ತು ಅದಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಬಹಿಷ್ಕರಿಸಲು, ಮುದ್ರಣದ ಮೇಲೆ ರಾಜ್ಯದ ಹತೋಟಿ ಸ್ಥಾಪಿಸಲಾಯಿತು. ಹೆರಸಿಯು (ಪಾಷಂಡ ವಾದ) ಪ್ರಮುಖ ಶಕ್ತಿಯಾಗಿ ಮಾರ್ಪಾಟಾಯಿತು. ಕ್ರೈಸ್ತರು ಮತ್ತು ಆಸ್ತಿಕರ ನಡುವೆ ವೈಚಾರಿಕ ವ್ಯತ್ಯಾಸಗಳಿದ್ದರೂ ಸಹ ಅಂತ್ಯದಲ್ಲಿ ಅವರು ದೇವರು ಸೃಷ್ಟಿ ಮತ್ತು ಅವನ ಅಸ್ತಿತ್ವವನ್ನು ಒಪ್ಪಿಕೊಳ್ಳಲಾರಂಭಿಸಿದರು.

ನಾಸ್ತಿಕವಾದ

ಇದೇ ಅವಧಿಯಲ್ಲಿ ನಾಸ್ತಿಕವಾದವು ಆಸ್ತಿಕ ವಾದಕ್ಕೆ ಬಲವಾದ ಪೆಟ್ಟು ಕೊಡಲಾರಂಭಿ ಸಿತು. ನಾಸ್ತಿಕವಾದವು ಭೌತಿಕವಾದದ ತಳಹದಿಯ ಮೇಲೆ ಆಧಾರಿತವಾದದ್ದು. ಇದರ ಪ್ರವರ್ತಕ ಎಷಿಕುರಸ್. ಹದಿನೇಳನೆಯ ಶತಮಾನದಲ್ಲಿ ಪಿಯರ್ಸ್‌ಗಸ್ಸೆಂದಿಯು ಇದನ್ನು ಮುಂದುವರಿಸಿದನು. ಡೆಕಾರ್ಟಿಯು ತನ್ನ ವಾದದಲ್ಲಿ ವಿಶ್ವವು ಆತ್ಮ, ಪ್ರಾಣ ಮತ್ತು ವಸ್ತುವಿನಿಂದ ಕೂಡಿದ್ದಾಗಿದೆ ಎಂದು ತಿಳಿಸಿದನು. ಹದಿನೆಂಟನೆಯ ಶತಮಾನದಲ್ಲಿ ವಿಜ್ಞಾನದ ಬೆಳವಣಿಗೆಯೊಂದಿಗೆ ಗಸ್ಸೆಂದಿಯ ವಾದವು ಮರು ಪ್ರಚಾರಗೊಂಡಿತು. ಇಂಗ್ಲೆಂಡಿನಲ್ಲಿ ಡೇವಿಡ್ ಹಾರ್ಟಲಿ ಜಾನ್‌ಲಾಕನ್ ವಾದವನ್ನು ಪುನಃ ಬರೆದು ಅದರಲ್ಲಿ ಮಾನವಿಕ ಜೀವನವನ್ನು ಭೌತಶಾಸ್ತ್ರದ ವಿಧಾನದಲ್ಲಿ ವಿವರಿಸಿದನು. ಫ್ರಾನ್ಸಿನಲ್ಲಿ ಲಾ ಮೆಟ್ರಿಯು ಮಾನವನನ್ನು ಸಹ ಇತರ ವಸ್ತುಗಳ ರೀತಿ ಚಲನ ಸಿದ್ಧಾಂತಕ್ಕೊಳಪಡಿಸ ಬಹುದೆಂದು ಅಭಿಪ್ರಾಯಪಟ್ಟನು. ನಾಸ್ತಿಕದಲ್ಲಿ ಬಹಳ ಪ್ರಬಲವಾದವೆಂದರೆ ಜರ್ಮನಿಯ ಬಾರನ್ ಡಿ ಹೊಲಿ ಬಾಚ್. ಇವನ ಪ್ರಕಾರ ಧರ್ಮವು ಮಾನವನನ್ನು ಅಧಃಪತನ ಗೊಳಿಸುವುದರಲ್ಲಿ ಪ್ರಮುಖವಾದದ್ದು.

ಸಂದೇಹವಾದ

ನಾಸ್ತಿಕವಾದದ ಜೊತೆಗೆ ಸಂದೇಹ ವಾದವು ಸಹ ಅಸ್ತಿತ್ವವಾದ ಮತ್ತು ಕ್ರೈಸ್ತ ಧರ್ಮಕ್ಕೆ ಬಲವಾದ ಪೆಟ್ಟು ಕೊಡಲಾರಂಭಿಸಿತು. ಇದು ಸಹ ಪ್ರಾಚೀನ ಕಾಲದಿಂದ ಮುಂದುವರಿದು ಬಂದ ತತ್ವವಾಗಿತ್ತು. ಪಿಯರಿ ಬೇಲೆಯ ಡಿಕ್ಸನೈರಿ ಈ ನಿಟ್ಟಿನಲ್ಲಿ ಅಮೋಘ ಜಯಗಳಿಸಿತು. ಇದರಲ್ಲಿ ಮುಖ್ಯವಾಗಿ ಧರ್ಮದ ಪಾಪಗಳನ್ನು ಎತ್ತಿ ಹಿಡಿಯಲಾಗಿತ್ತು. ಇದರಿಂದ ೨ನೆಯ ಫ್ರೆಡರಿಕ್, ಅಮೆರಿಕಾದ ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಥಾಮಸ್ ಜೆಷಕ್‌ಸನ್ ಹೆಚ್ಚು ಪ್ರಭಾವಿತಗೊಂಡರು. ವಾಲ್ಟೇರ್ ಸಹ ಇದರಿಂದ ಪ್ರಭಾವಿತಗೊಂಡು ತನ್ನ ಡಿಕ್ಸನರಿ ಫಿಲಾಸಫಿ ಪುಸ್ತಕವನ್ನು ಬರೆದನು. ಡೈಡರಾಟ್ ಮತ್ತು ಡೇವಿಡ್‌ಹ್ಯೂಮ್ ಸಹ ಬೇಲೇಯಿಂದ ಹೆಚ್ಚು ಪ್ರಭಾವಿತಗೊಂಡರು. ಹ್ಯೂಮ್ ತನ್ನ ಪುಸ್ತಕ ಡೈಯಲಾಗ್ಸ್ ಕನ್ಸರ‌್ನಿಂಗ್ ನ್ಯಾಚುರಲ್ ರಿಲಿಜಯನ್‌ನಲ್ಲಿ, ಮಾನವನ, ವ್ಯವಹಾರಗಳಿಂದ ಎಲ್ಲಾ ನಿಶ್ಚಯಗಳನ್ನು ಕಂಡು ಹಿಡಿದನು. ಕಾರ್ಯಕಾರಣ ಸಂಬಂಧದ ತಪ್ಪುಗಳು ಮತ್ತು ಮಾನವನ ವೈಚಾರಿಕತೆಗಳು ಕ್ರಮೇಣವಾಗಿ ಧಿಕ್ಕರಿಸಲ್ಪಟ್ಟವು. ನಂಬಿಕೆಯ ತತ್ವವು ಸಹ ತಿರಸ್ಕರಿಸಲ್ಪಟ್ಟಿತು. ಹ್ಯೂಮನ ಪ್ರಕಾರ ಆದಿಮಾನವನು ಭಯದಿಂದಾಗಿ ತನ್ನ ರಕ್ಷಣೆಗೋಸ್ಕರ ಹಲವಾರು ದೇವರುಗಳನ್ನು ಸೃಷ್ಟಿಸಿಕೊಂಡನು. ತದನಂತರ ಇದು ಏಕದೇವವಾದ ರೂಪ ತಾಳಿತು. ಇದರ ಪರಿಣಾಮವೆಂದರೆ, ದೇವರು ಸೃಷ್ಟಿಯ ಪ್ರಕಾರ ತನ್ನ ಎಲ್ಲಾ ಗುಣಗಳನ್ನು ಮಾನವನಿಗೆ ಬಳುವಳಿಯಾಗಿ ನೀಡಿದುದು. ಆದರೆ ನೈಜವಾಗಿ ಮಾನವ ತನ್ನ ಎಲ್ಲಾ ಗುಣಗಳನ್ನು, ರೂಪವನ್ನು ದೇವರಿಗೆ ಸೇರಿಸಿದ. ಸಂದೇಹವಾದವು ಸಹ ಏನನ್ನು ನಿಖರವಾಗಿ ತಿಳಿಸದೆ ಅಸ್ಪಷ್ಟತೆಯಿಂದ ಕೂಡಿತ್ತು.

ಸಂಪ್ರದಾಯ ಕ್ರಿಶ್ಚಿಯನ್ನರ ದೃಷ್ಟಿಯಲ್ಲಿ ಹದಿನೆಂಟನೆಯ ಶತಮಾನದ ಬೆಳವಣಿಗೆಗಳು ದುಷ್ಟಶಕ್ತಿಗಳಿಂದ ಪ್ರೇರೇಪಿಸಲ್ಪಟ್ಟವು. ಫ್ರಾನ್ಸಿನ ಜೇನ್ನನಿಸ್ಟ್ ಬ್ಲೇಸ್ ಫಾಸ್ಕಲ್ ಪ್ರಕಾರ ಮಾನವನ ವೈಚಾರಿಕತೆಗೆ ಅಂತಿಮ ತತ್ವ ಜ್ಞಾನವನ್ನು ತಿಳಿಯುವ ಶಕ್ತಿಯಿಲ್ಲ. ಇದಕ್ಕೆ ನೈತಿಕ ಶಕ್ತಿ ಇರಬೇಕು. ನೈತಿಕ ಶಕ್ತಿಯಿಂದ ಮಾತ್ರ ದೈವ ಮತ್ತು ದೃಷ್ಟಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ವಿಶ್ವವು ತುಂಬಾ ವಿಶಾಲವಾದುದು, ಆದರೆ ಮಾನವ ನಿಕೃಷ್ಟ. ಮಾನವನ ಆತ್ಮಗಳು ದೇವರ ಮೇಲೆ ಅವಲಂಬಿಸಿವೆಯೆಂದು ತಿಳಿಸಿದನು. ಪಾಸ್ಕಲ್ ನಂತರ ಜಾನ್‌ವೆಸ್ಲಿಯು ಕ್ರೈಸ್ತ ಧರ್ಮವನ್ನು ಕಾಪಾಡಿದವರಲ್ಲಿ ಪ್ರಮುಖನಾದವನು. ಇವನ ಪ್ರಕಾರ ಮಾನವನ ವೈಚಾರಿಕತೆಯಿಂದ ದೇವರ ಪ್ರೀತಿಯನ್ನು ಸೃಷ್ಟಿಸುವುದು ಅಥವಾ ಸಂಪಾದಿಸುವುದು ಸಾಧ್ಯವಿಲ್ಲ. ಕ್ರೈಸ್ತನಲ್ಲಿ ನಂಬಿಕೆಯಿರುವವರನ್ನು ಅವನಿಂದ ಬೇರ್ಪಡಿಸುವುದು ಸಾಧ್ಯವಿಲ್ಲವೆಂದು ಸಾರಿದನು. ಈ ರೀತಿಯಲ್ಲಿ ಹದಿನೆಂಟನೆಯ ಶತಮಾನದ ಅಂತ್ಯದ ಹೊತ್ತಿಗೆ ಕ್ರೈಸ್ತ ಧರ್ಮವನ್ನು ವೈಜ್ಞಾನಿಕ ವಿಧಿವಿಧಾನಗಳಿಂದ ಮತ್ತು ವೈಚಾರಿಕತೆಗಳಿಂದ ಅರ್ಥೈಸುವ ಅಥವಾ ತಿಳಿಯುವ ರೀತಿಯನ್ನು ತಳ್ಳಿಹಾಕಲಾಯಿತು.

ಇದೇ ಸಮಯದಲ್ಲಿ ಮಾನವನ ಸ್ವಭಾವವನ್ನು ಹೊಸ ವಿಚಾರಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಪ್ರಯತ್ನವು ಕ್ಲಿಷ್ಟ ಸಮಸ್ಯೆಗಳನ್ನು ಉಂಟುಮಾಡಿತು. ಸಂಪ್ರದಾಯ ಕ್ರೈಸ್ತ ಧರ್ಮದ ಪ್ರಕಾರ ಮಾನವ ಹುಟ್ಟಿನಿಂದಲೇ ಪಾಪಗಳನ್ನು ಪಡೆದಿರುತ್ತಾನೆ. ಆದ್ದರಿಂದ ಮಾನವ ತನ್ನ ಪಾಪಗಳನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಪುಣ್ಯವನ್ನು ಪಡೆಯಲು ಕ್ರೈಸ್ತ ಧರ್ಮದಲ್ಲಿ ನಂಬಿಕೆಯಿಡಬೇಕು. ಆದರೆ ಪುನರುಜ್ಜೀವನ ನಂತರ ಈ ನಂಬಿಕೆ ಭಾವನೆಯು ತಿರಸ್ಕರಿಸಲ್ಪಟ್ಟು, ದೇವರು ತನ್ನ ಎಲ್ಲಾ ಒಳ್ಳೆಯ ಗುಣಗಳನ್ನು ಮಾನವನಿಗೆ ಹುಟ್ಟಿನಿಂದಲೇ ನೀಡಿದ್ದಾನೆ, ಹಾಗಾಗಿ ಮಾನವ ಹುಟ್ಟಿನಿಂದ ಪಾಪಿಯಲ್ಲ; ದೇವರ ಸೃಷ್ಟಿಯಲ್ಲಿ ಹುಟ್ಟಿನಿಂದ ಎಲ್ಲರೂ ಸಮಾನರೂ. ಆದರೆ ಅವನು ಬೆಳೆದ ಪರಿಸರ ದಿಂದಾಗಿ ಅವನು ಕೆಟ್ಟವನಾಗಬಹುದು ಅಥವಾ ಒಳ್ಳೆಯವನಾಗಬಹುದು. ಇದರಲ್ಲಿ ದೇವರ ಅಥವಾ ಪಾದ್ರಿಯ ಕೈವಾಡ ಅಥವಾ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲದಂತಾಯಿತು.

ಜಾನ್‌ಲಾಕ್ ತನ್ನ ತತ್ವಶಾಸ್ತ್ರದ ಪ್ರಮಾಣ ಪ್ರಮೇಯ ವಿಚಾರದಲ್ಲಿ ಮಾನವನ ಜ್ಞಾನದ ವ್ಯಾಪ್ತಿ ಮತ್ತು ಪರಿಮಿತಿಯನ್ನು ಮನಸ್ಸಿನ ಕಾರ್ಯಾಚಾರಣೆಯ ಮುಖಾಂತರ ತಿಳಿಯಲು ಪ್ರಯತ್ನಿಸಿದನು. ಇದರ ಪರಿಣಾಮವಾಗಿ ಇವನು ಅಂತ್ಯದಲ್ಲಿ ಮಾನವನ ಜ್ಞಾನಕ್ಕೆ ಕಡಿಮೆ ಮಿತಿಯಿದೆ ಎಂದು ತಿಳಿಸಿದನು. ಹದಿನೆಂಟನೆಯ ಶತಮಾನದ ಅತ್ಯಂತ ಶ್ರೇಷ್ಟ ಶಿಕ್ಷಕನಾದ ಲಾಕ್ ಪ್ರಕಾರ ಎಲ್ಲಾ ಜ್ಞಾನವು ಅನುಭವದಿಂದ ಉತ್ಪತ್ತಿಯಾದದ್ದು. ಹುಟ್ಟಿನಿಂದ ಯಾವ ವೈಚಾರಿಕತೆ, ವಿಚಾರಗಳು ಯಾರಿಗೂ ಬರುವುದಿಲ್ಲ. ಪ್ರತಿಯೊಂದು ಶಿಶುವು ಹುಟ್ಟುವಾಗ ಖಾಲಿ ಕಾಗದದ ಹಾಳೆಯಿದ್ದಂತೆ. ಅದರ ಮೇಲೆ ಹೊರಗಿನ ಶಕ್ತಿಗಳು, ಪರಿಸರ ವಿವಿಧ ರೀತಿಯ ಬರವಣಿಗೆಯನ್ನು ಮೂಡಿಸುತ್ತವೆ. ಆದರೆ ಲಾಕ್‌ನ ಅಭಿಪ್ರಾಯಗಳು ಬಿಷೆಪ್ ಬಿರ್ಕಲಿಯಿಂದ ಟೀಕೆಗೊಳಪಟ್ಟವು.

ಲಾಕ್‌ನ ಮಾನವ ತಪಾಸಣೆಯು ಅಂತರ ವಿಚಾರಗಳನ್ನು ಮತ್ತು ಅಂತರ ಜ್ಞಾನಗಳನ್ನು ಧೂಳಿಪಟ ಮಾಡಿತು. ಲಾಕ್ ಪ್ರಕಾರ ಪರಿಸರವು ಮಾನವನ ವೈಚಾರಿಕತೆಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಮಾನವನನ್ನು ಪ್ರಗತಿ ಪಥದಲ್ಲಿ ನಡೆಸಬೇಕೆಂದರೆ ಪರಿಸರವನ್ನು ಹಸನಾಗಿಡುವುದು ಮತ್ತು ಉದ್ಧಾರ ಮಾಡುವುದು. ಈ ರೀತಿಯಲ್ಲಿ ಜಾನ್ ಲಾಕ್‌ನು ತನ್ನ ಹೊಸ ವೈಚಾರಿಕತೆಯಿಂದ ಮಾನವನ ಅಧ್ಯಯನಕ್ಕೆ ಹೊಸ ತಿರುವು ನೀಡಿದನು.

ಜಾನ್‌ಲಾಕ್‌ನು ಮೂಲತಃ ತತ್ವಶಾಸ್ತ್ರದ ಪ್ರಮಾಣೀಕರಣಕ್ಕೆ ಹೆಚ್ಚು ಒತ್ತು ಕೊಟ್ಟು, ಅಬೌದ್ದಿಕ ವಿಷಯಗಳಿಗೆ ಅಷ್ಟೊಂದು ಪ್ರಾಶಸ್ತ್ಯ ನೀಡಲಿಲ್ಲ. ಅಂದಿನ ಮುಖ್ಯ ವಿಷಯಗಳೆಂದರೆ ಮಾನವನ ಮನಸ್ಸು ಮತ್ತು ಭಾವನೆಗಳನ್ನು ಅಧ್ಯಯನ ಮಾಡುವುದು ಆಗಿತ್ತು. ವಿಚಾರವಾದದಿಂದಾಗಿ ಮಾನವನ ಒಳ್ಳೆಯ ಗುಣಗಳೆಂಬ ವಾದವು ನಂಬಲಾಗ ದಂತಾಯಿತು. ಡೇವಿಡ್ ಹ್ಯೂಮ್ ಸಂದೇಹವಾದದಿಂದ ಪರಿವರ್ತನೆಗೊಂಡು ಮಾನವೀಯತೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡನು. ಇವನ ಗೆಳೆಯ ಪ್ರಸಿದ್ಧ ಅರ್ಥಶಾಸ್ತ್ರಜ್ಞ ನಾದ ಆ್ಯಡಂ ಸ್ಮಿತನು ಕರುಣೆಯೆ ಮಾನವನ ಜೀವನದ ದಾರಿದೀಪವೆಂದು ಅರಿತುಕೊಂಡನು. ವಾಲ್ಟೇರ್ ಕೂಡ ಮಾನವನಲ್ಲಿ ಸ್ವಾಭಾವಿಕ ಒಳ್ಳೆಯ ಗುಣಗಳನ್ನು ಕಂಡನು. ತೀವ್ರಗಾಮಿ ಯಾದ ಮಾರೆಲ್ಲಿಯು ಸಹ ಒಳ್ಳೆಯತನವು ಎಲ್ಲಾ ವೈಚಾರಿಕತೆಯಿಂದ ಶ್ರೇಷ್ಠವಾದದ್ದೆಂದು ಅಭಿಪ್ರಾಯಪಟ್ಟನು. ಸಾಪ್ಟಸ್ಪರಿಯು ವೈಚಾರಿಕತೆ ಮತ್ತು ನೈತಿಕತೆ ಒಂದಕ್ಕೊಂದು ವಿರೋಧವಾದರೂ ಅವೆರಡೂ ಪ್ರಕೃತಿಯ ಕೊಡುಗೆಗಳಾಗಿವೆ ಎಂದು ತಿಳಿಸಿದನು. ಬಟ್ಲರ್ ಪರಿಜ್ಞಾನಕ್ಕೆ ತನ್ನದೇ ಆದ ವೈಚಾರಿಕ ಶಕ್ತಿಯಿದೆ ಎಂದು ತಿಳಿಸಿದ್ದನು. ಆದರೆ ಹದಿನೆಂಟನೆಯ ಶತಮಾನದ ಎರಡನೇ ಭಾಗದಲ್ಲಿ ಈ ಅಭಿಪ್ರಾಯಗಳು ತಿರಸ್ಕರಿಸಲ್ಪಡ ತೊಡಗಿದವು. ಆ್ಯಡಂ ಸ್ಮಿತ್‌ನು ಕರುಣೆ ಮತ್ತು ವೈಚಾರಿಕತೆ ನೈತಿಕತೆಯನ್ನು ರೂಪಿಸಬಲ್ಲವು ಎಂಬುದನ್ನು ಹೇಳಲಾರದಾದನು. ಹ್ಯೂಮ್ ಪ್ರಕಾರ ವೈಚಾರಿಕತೆಯು ಮನೋವಿಕಾರದ ಸೇವಕನಾಗಿರಬೇಕು. ವೈಚಾರಿಕತೆಗೆ ಯಾವುದೇ ರೀತಿಯ ಪ್ರಾಶಸ್ತ್ಯ ಸಿಗಬಾರದು. ರೊಸೋನ ಹಲವಾರು ಬರವಣಿಗೆಗಳು ಸಹ ವೈಚಾರಿಕತೆ ಮತ್ತು ಮನೋವಿಕಾರದ ನಡುವೆ ಮುಕ್ತ ಕಲಹವನ್ನು ಒಳಗೊಂಡಿದ್ದವು.

ಇದೇ ಸಮಯದಲ್ಲಿ ನೈತಿಕತೆಯ ಮೇಲಿನ ಚರ್ಚೆಯು ಒಂದು ಪ್ರಮುಖ ಸ್ವಾರಸ್ಯ ದೆಡೆಗೆ ಗಮನಹರಿಸಿತು. ಸಾಂಪ್ರದಾಯಿಕ ಕ್ರೈಸ್ತಧರ್ಮವು ಯಾವಾಗಲೂ ನರಕದ ಯಾತನೆಯನ್ನು ಮತ್ತು ಸ್ವರ್ಗದ ಸಂತೋಷವನ್ನು ಒತ್ತಿ ಹೇಳುತ್ತಿತ್ತು. ಜೀವನದ ಪ್ರಮುಖ ಗುರಿ ಸುಖಪಡುವುದು ಮತ್ತು ಯಾತನೆಗಳನ್ನು ದೂರವಿಡುವುದಾಗಿತ್ತು. ಜಾನ್ ಲಾಕ್ ಪ್ರಕಾರ ಸುಖದುಃಖಗಳು ಒಳ್ಳೆಯತನ ಮತ್ತು ಕೆಟ್ಟತನಗಳನ್ನು ಪ್ರೇರೇಪಿಸುತ್ತವೆ. ಈ ನಡವಳಿಕೆಗಳ ಮೇಲೆ ನಮ್ಮ ಭಾವೋದ್ರೇಕಗಳು ರೂಪುಗೊಳ್ಳುತ್ತವೆ. ಡೈಡರಾಟ್ ಮನೋವಿಕಾರಗಳನ್ನು ಹೊಗಳಿ ವೈಚಾರಿಕತೆಯನ್ನು ಅಲ್ಲಗಳೆದನು.

ಇದರಿಂದಾಗಿ ಕೆಲವರು ಸುಖವನ್ನು ಅನುಭವಿಸುವುದು ಒಂದು ರೀತಿಯಲ್ಲಿ ನೈತಿಕ ಧರ್ಮವೆಂದು ಭಾವಿಸಲಾರಂಭಿಸಿದರು. ಮಾನವನ ನಡವಳಿಕೆಗಳು ಮತ್ತು ನಿರ್ಧಾರಗಳು ಭೌತಿಕ ಚಲನೆಯ ಪರಿಣಾಮಗಳು. ಆದ್ದರಿಂದ ಮಾನವನ ಜೀವನದ ಮೇಲೆ ಯಾವುದೇ ರೀತಿಯ ನೈತಿಕತೆಯ ಹತೋಟಿಯಿರಬಾರದೆಂದು ಪರಿಗಣಿಸಲಾಯಿತು. ಆದರೆ ವೈಯಕ್ತಿಕ ದುರ್ನಡತೆಯ ಮೇಲೆ ಒಂದು ರೀತಿಯ ಕಡಿವಾಣ ಹಾಕಲಾಯಿತು. ಬೇರೆಯವರ ಜೊತೆ ವಾಸಿಸುವುದರಿಂದ ಪರಸ್ಪರ ಹೊಂದಾಣಿಕೆಯು ಬೆಳೆಯುತ್ತದೆ. ಹಾಗಾಗಿ ವೈಯಕ್ತಿಕ ಆಸಕ್ತಿ ಮತ್ತು ಸಾಮಾನ್ಯ ಒಳಿತಿನ ನಡುವೆ ಹೊಂದಾಣಿಕೆಯುಂಟಾಗುತ್ತದೆ. ಮಾಂಟೆಸ್ಕೊ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಸಾಮಾನ್ಯ ಒಳಿತಿನಲ್ಲಿ ವೈಯಕ್ತಿಕ ಲಾಭ ಪಡೆಯಲು ಪ್ರಯತ್ನಿಸು ತ್ತಾನೆ. ೧೭೩೦ರ ದಶಕದಲ್ಲಿ ವಿಚಾರವಾದಿಗಳು ಒಂದು ಪ್ರಸಿದ್ಧ ಹೇಳಿಕೆ ಹೊರಡಿಸಿದರು. ಅದೇನೆಂದರೆ ಅತಿ ಹೆಚ್ಚು ಜನರಿಗೆ ಅತಿ ಹೆಚ್ಚು ಸುಖ, ಲಾಭ ದೊರೆಕಿಸುವುದು. ಕ್ಲಾಡ್ ಎಡ್ರಿಯನ್ ಹೆಲ್ವಿಟಾಸ್ ತನ್ನ ಪುಸ್ತಕ ಡಿಲಸ್ಸಿರಿಟ್‌ನಲ್ಲಿ ಸ್ವಾರ್ಥಭಾವನೆಗಳಿಂದ ಕೂಡಿದ ವ್ಯಕ್ತಿಯನ್ನು ಹೇಗೆ ಸಮಾಜ ಜೀವಿ ಮಾಡುವುದು ಎಂಬುದನ್ನು ಚರ್ಚಿಸಿದ್ದಾನೆ. ಹಾಗೆಯೇ ಒಳ್ಳೆಯ ಕಾನೂನುಗಳಿಂದ ಮಾತ್ರ ಗುಣವಂತ ವ್ಯಕ್ತಿಗಳನ್ನು ರೂಪಿಸಬಹುದು. ಶಾಸಕರ ಮುಖ್ಯ ಕೆಲಸವೆಂದರೆ ವ್ಯಕ್ತಿಗಳನ್ನು ದಯಾಪರರು ಹಾಗೂ ಪರೋಪಕಾರಿ ಮತ್ತು ನ್ಯಾಯವಂತರಾಗಿ ಇತರರಿಗೆ ಇರುವುದು. ಇಂತಹ ವಿಚಾರಗಳಿಂದ ಸ್ಫೂರ್ತಿ ಪಡೆದ ಜೆರಿಮಿ ಬೆಂಥಾಮ್ ತನ್ನ ಸಿದ್ಧಾಂತವಾದ ಮುಕ್ತ ಮಾರುಕಟ್ಟೆ ರಚಿಸಿದನು.

ಮಾನವತಾವಾದ

ದೈವಾಸಕ್ತರ ಪ್ರಕೃತಿ ಧರ್ಮದ ಹುಡುಕುವಿಕೆಯಿಂದ, ಇಡೀ ಜಗತ್ತಿನ ಮಾನವ ಸ್ವಭಾವವನ್ನು ಅರಿಯಲು ನೆರವಾಯಿತು. ಈ ಅಧ್ಯಯನ ಯಾವುದೇ ದೇಶ, ಭಾಷೆಗಳಿಗೆ ಮಿಸಲಿರದೆ ಇಡೀ ಮನುಕುಲವನ್ನು ಒಳಗೊಂಡಿತ್ತು. ಡೇವಿಡ್ ಹ್ಯೂಮ್ ಪ್ರಕಾರ ಮಾನವನ ಕ್ರಿಯೆಗಳು, ಭಾವನೆಗಳು, ಸ್ವಭಾವಗಳು ಎಲ್ಲಾ ಕಾಲಕ್ಕೂ ಎಲ್ಲಾ ದೇಶಗಳಲ್ಲಿಯೂ ಒಂದೇ ರೀತಿ ಆಗಿರುತ್ತದೆ. ಇತಿಹಾಸದ ಅಧ್ಯಯನದಿಂದ ಈ ಸತ್ಯವನ್ನು ಅರಿಯಬಹುದು. ಇದರಿಂದಾಗಿ ಮಾನವನ ನಿರಂತರ ಮತ್ತು ಸರ್ವಕಾಲಿಕ ನಿಯಮಗಳನ್ನು ಅರಿಯುವಂತಾಯಿತು. ಎಲ್ಲಾ ಜನರ ಒಟ್ಟು ಅನುಭವಗಳು ಮತ್ತು ಪ್ರಕ್ರಿಯೆಗಳು ಮಾನವೀಯತೆಯನ್ನು ಉಂಟುಮಾಡಿತು. ಇದರ ಪರಿಣಾಮವಾಗಿ ವೈಚಾರಿಕೆ ಯನ್ನು ಒಪ್ಪಬಹುದಾಗಿತ್ತು. ಪ್ರಕೃತಿ ನಿಯಮದ ತತ್ವಗಳನ್ನು ಸಾಮಾಜಿಕ ಸಮಸ್ಯೆಗಳಿಗೆ ಅನ್ವಯಿಸತೊಡಗಿದಾಗ ಮಹತ್ವಪೂರ್ಣ ಬದಲಾವಣೆಯನ್ನುಂಟು ಮಾಡಲು ಪ್ರಾರಂಭ ವಾಯಿತು. ಅಂದಿನಿಂದ ಇದು ಹಿಂದಿನದಕ್ಕೆ ಹೆಚ್ಚು ಒತ್ತುಕೊಡದೆ ಮುಂದಿನದು ಹೇಗಿರಬೇಕು ಎಂಬುದನ್ನು ತಿಳಿಸಲಾರಂಭಿಸಿತು. ಹೀಗಾಗಿ ಜ್ಞಾನೋದಯವು ಕಠಿಣವೂ, ಸುಧಾರಣೆಯಾಗಿಯೂ ಮತ್ತು ಕ್ರಾಂತಿಕಾರಿಯಾಗಿಯೂ ಮಾರ್ಪಾಟಾಯಿತು.

ಜಾನ್‌ಲಾಕ್‌ನ ವಿಚಾರವಾದ ಪರಿಸರವು ಮಾನವನನ್ನು ರೂಪಿಸಿದ್ದು ಎಂಬುದು ಪ್ರಬಲವಾದ ಸ್ಫೂರ್ತಿಯನ್ನು ನೀಡಿ ಪ್ರಚಲಿತದಲ್ಲಿದ್ದ ದೋಷಗಳನ್ನು ನಿರ್ಮೂಲನ ಮಾಡಲು ಅನುವು ಮಾಡಿಕೊಟ್ಟಿತು. ಹಿಂದಿನ ಚಿಂತನೆಗಳು, ಭಾವನೆಗಳು, ತತ್ವಗಳು ಮಾನವನ ಸುಖದುಃಖಗಳಿಗೆ ಅಸಂಬಂಧಗಳಾಗಿ ಕಂಡುಬಂದವು. ಮೇಲಾಗಿ ವೈಯಕ್ತಿಕ ಸ್ವಾತಂತ್ರ್ಯವು ಹೆಚ್ಚು ಉಪಯೋಗಕಾರಿಯಾಗಿ ಕಂಡುಬಂದಿತು. ಇದರಿಂದ ಅಮಾನವೀ ಯತೆಯು ತೀಕ್ಷ್ಣವಾದ ಟೀಕೆಗೊಳಪಟ್ಟಿತು. ಯುರೋಪಿನ ಬಡಜನತೆಯು ಈ ಚಿಂತನೆ ಗಳಿಗೆ ಹೆಚ್ಚು ಆಕರ್ಷಿಸಲ್ಪಟ್ಟಿತು. ದೈವಾಸಕ್ತರು ಮತ್ತು ನಾಸ್ತಿಕರು ಇಬ್ಬರೂ ಸಹ ಗುಲಾಮಗಿರಿಯನ್ನು ಖಂಡಿಸಿ, ಅದರ ನಿರ್ಮೂಲನೆಗಾಗಿ ಶ್ರಮಿಸತೊಡಗಿದರು. ಧಾರ್ಮಿಕ ತೀವ್ರಗಾಮಿಗಳು ಮತ್ತು ಸಂಪ್ರದಾಯ ಕ್ರಿಶ್ಚಿಯನರು ಸಹ ವಿಶ್ವ ಭಾತೃತ್ವಕ್ಕೆ ಹೆಚ್ಚು ಒಟ್ಟು ಕೊಡಲಾರಂಭಿಸಿದರು. ಇದಕ್ಕೆ ತೊಡಕಾಗಿದ್ದುದು ನಿರಂಕುಶ ಪ್ರಭುತ್ವ ಅಥವಾ ರಾಜ್ಯ. ಇದು ಯಾವಾಗಲೂ ಜನತೆಯ ವಿಧೇಯತೆ ಮತ್ತು ಅದರ ರಕ್ತ, ಶ್ರಮವನ್ನೇ ಬಯಸುತ್ತಿತ್ತು. ರಾಷ್ಟ್ರೀಯತೆಯ ಭಾವನೆಯು ಎಲ್ಲಾ ವರ್ಗದ ಜನತೆಯನ್ನು ಒಂದಾಗಿಸಲು ಮತ್ತು ಅದರಿಂದ ಶಾಂತಿ ಮತ್ತು ಸಹಬಾಳ್ವೆ ನಡೆಸಲು ಕರೆ ನೀಡಲಾರಂಭಿಸಿತು. ಅಬ್ಬ್ ಡಿ ಸೈಂಟ್ ಪಿಯರ್ಸ್ ೧೭೧೩ರಲ್ಲಿ ಯುರೋಪಿನಾದ್ಯಂತ ಶಾಂತಿ ಸುವ್ಯವಸ್ಥೆಯನ್ನು ಯುದ್ಧ ನಿರ್ಮೂಲನ ಮಾಡುವುದರಿಂದಾಗಿ ಸ್ಥಾಪಿಸಲು ಶ್ರಮಿಸಿದನು.

ರಾಜಕೀಯ ಚಿಂತನೆಗಳು

ಧರ್ಮ ಸುಧಾರಣಾ ಚಳವಳಿಯು ಆರಂಭಿಕ ಸಮಾಜವಾದದಿಂದ ಹಿಡಿದು ನಿರಂಕುಶ ರಾಜಪ್ರಭುತ್ವದವರೆಗೂ ಹಲವಾರು ಸಿದ್ಧಾಂತಗಳನ್ನು ನೀಡಿತು. ಬ್ರಿಟಿಷ್ ಬಿಷೆಪ್‌ರವರು ಮತ್ತು ೧೪ನೆಯ ಲೂಯಿ ನಡುವೆ ಇದ್ದ ವಿಶೇಷ ಸಂಬಂಧವನ್ನು ಒತ್ತಿ ಹೇಳಿದನು. ಆದರೆ ಪ್ರಕೃತಿ ನಿಯಮವು ರಾಜ್ಯದ ಸ್ವರೂಪ, ಸಾಮಾಜಿಕ ಒಪ್ಪಂದ ಮತ್ತು ಸ್ವಾಭಾವಿಕ ಹಕ್ಕುಗಳನ್ನು ಹೆಚ್ಚಾಗಿ ಮರುಕಳಿಸುತ್ತಿದ್ದವು. ಈ ಸಿದ್ಧಾಂತಗಳು ತೀವ್ರಗಾಮಿತ್ವದ ಕಡೆ ಹೆಚ್ಚು ಒತ್ತು ಕೊಡಲಾರಂಭಿಸಿದವು. ಥಾಮಸ್ ಹಾಬ್ಸ್ ಪ್ರಕೃತಿಯ ಕಾನೂನಿನಿಂದ ಪ್ರಾರಂಭಿಸಿ ಲೌಕಿಕ ಸರ್ವಾಧಿಕಾರ ಸ್ಥಾಪಿಸುವ ಕಡೆಗೆ ಪ್ರಯತ್ನಿಸಿದನು. ಇವನ ಪ್ರಕಾರ ಮಾನವ ತನ್ನ ಜೀವಿತದಲ್ಲಿ ಕಷ್ಟಗಳನ್ನು ಕಡಿಮೆ ಮಾಡಿಕೊಂಡು ಹೆಚ್ಚು ಸುಖ ಅನುಭವಿಸುವುದಾಗಿತ್ತು. ವ್ಯಕ್ತಿಯು ಸುಖವಾಗಿರಲು ತನ್ನ ಎಲ್ಲಾ ಸ್ವಾತಂತ್ರ್ಯಗಳನ್ನು ಓರ್ವ ಸರ್ವಾಧಿಕಾರಿಗೆ ಒಪ್ಪಿಸಬೇಕಾಯಿತು. ಇದರಿಂದಾಗಿ ಸರ್ವಾಧಿಕಾರಿಯು ಹೆಚ್ಚು ಪ್ರಬಲನೂ ಹಾಗೂ ಮಿತಿಯಲ್ಲದ ಅಧಿಕಾರ ಹೊಂದಿ ರಾಜ್ಯಕ್ಕೆ ಮತ್ತು ಜನತೆಗೆ ಶಾಂತಿ, ನೆಮ್ಮದಿ ಮತ್ತು ಪ್ರಗತಿಯೆಡೆಗೆ ಶ್ರಮಿಸುತ್ತಾನೆ.

ಅರ್ಧ ಶತಮಾನದ ನಂತರ ಜಾನ್‌ಲಾಕ್ ಹಾಬ್ಸನ ಪ್ರಬಲ ವೈಯಕ್ತಿಕತೆಯನ್ನು ಮತ್ತು ಅವನ ರಾಜ್ಯದ ಸ್ವರೂಪ, ಭಾವನೆಯನ್ನು ಕೇವಲ ಅನುಕೂಲಕ್ಕಾಗಿಯೇ ಹೊರತು ಅದು ದೈವಾಂಶ ಸಂಸ್ಥೆಯಲ್ಲವೆಂದು ಒಪ್ಪಿಕೊಂಡನು. ತನ್ನ ಪುಸ್ತಕ ಟುಟ್ರಿಯ ಟೈಸನ್ ಆಫ್ ಗೌರ್ನಮೆಂಟ್‌ನಲ್ಲಿ ರಾಜ್ಯದ ಸ್ವರೂಪವು ಮಾನವನ ಒಳ್ಳೆಯ ಅಭಿಪ್ರಾಯಗಳಿಂದ ಕೂಡಿದುದಾಗಿದೆ ಎಂದನು. ಪ್ರಕೃತಿ ನಿಯಮವು ಮಾನವನಿಗೆ ಹಲವು ಹಕ್ಕುಗಳನ್ನು ನೀಡಿದೆ. ಅದರಲ್ಲಿ ಪ್ರಮುಖವಾದವು ಜೀವಿಸುವುದು. ವ್ಯಕ್ತಿ ಸ್ವಾತಂತ್ರ್ಯ ಮತ್ತು ಆಸ್ತಿ ಹೊಂದುವುದು. ಈ ಹಕ್ಕುಗಳು ಕೆಲವು ತೊಡಕುಗಳನ್ನು ಸಮಸ್ಯೆಗಳನ್ನೇ ಉಂಟು ಮಾಡುವಲ್ಲಿ ನೆರವಾದವು. ಲಾಕ್ ಪ್ರಕಾರ ರಾಜ್ಯ ಸರ್ಕಾರವು ಜನತೆಯ ಸರ್ವ ಸಮ್ಮತ ಒಪ್ಪಿಗೆಯಿಂದ ರಚನೆಗೊಂಡು ಬಹುಮತದ ತೀರ್ಪಿನ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಈ ತತ್ವದ ಪ್ರಕಾರ ನಿರಂಕುಶಾಧಿಕಾರಕ್ಕೆ ಎಳ್ಳಷ್ಟು ಆದ್ಯತೆಯಿಲ್ಲ. ಲಾಕ್‌ನ ಮುಖ್ಯ ಉದ್ದೇಶ ೨ನೆಯ ಚಾರ್ಲ್ಸ್‌ನ ತಮ್ಮನ ಆಳ್ವಿಕೆಯನ್ನು ವಿರೋಧಿಸುವುದಾಗಿತ್ತು. ಇವನ ಚಿಂತನೆಗಳು ತತ್ವಗಳಿಂದಾಗಿ ಇಂಗ್ಲೆಂಡಿನಲ್ಲಿ ಪ್ರಸಿದ್ಧ ಕ್ರಾಂತಿಯಾಗಿ ನಿರಂಕುಶ ಪ್ರಭುತ್ವವನ್ನು ನಿರ್ಮೂಲನ ಮಾಡಿ ಸಂವಿಧಾನಾತ್ಮಕ ರಾಜಪ್ರಭುತ್ವವನ್ನು ಸ್ಥಾಪಿಸುವಲ್ಲಿ ಇಂಗ್ಲೆಂಡ್ ಜನತೆ ಯಶಸ್ವಿಯಾಯಿತು. ಲಾಕ್‌ನ ಕ್ರಾಂತಿಕಾರಿ ಪಥವು ಕ್ರಾಂತಿಯ ಕವಚವಾಗಿ ಮಾರ್ಪಾಟಾಯಿತು.

ಇಂಗ್ಲೆಂಡ್ ರಾಜಕೀಯ ಕ್ಷೇತ್ರದಲ್ಲಿ ಕ್ಷಿಪ್ರ ಮಾರ್ಪಾಟಿಗೆ ಈಡಾಗಿದ್ದರೆ, ಇತರ ಯುರೋಪಿನ ರಾಷ್ಟ್ರಗಳು ಇನ್ನೂ ಮಧ್ಯಯುಗೀನ ರಾಜಕೀಯ ತತ್ವಗಳಿಗೆ ಸಿದ್ಧಾಂತಗಳಿಗೆ ಅಂಟಿಕೊಂಡಿದ್ದವು. ಜರ್ಮನಿಯಲ್ಲಿ ಕೆಲವು ಗುಂಪಿನ ಜನತೆ ಮಾತ್ರ ನಿಯಮಬದ್ಧ ಚಿಂತನೆಗಳಿಗೆ ತತ್ವಗಳಿಗೆ ಗಮನ ಹರಿಸಲಾರಂಭಿಸಿದರು. ಫ್ರಾನ್ಸಿನಲ್ಲಿ ಬೂರ್ಬನ್ ಆಳ್ವಿಕೆಯು ಸಂಪೂರ್ಣವಾಗಿ ಊಳಿಗಮಾನ್ಯದ ಬೇರುಗಳನ್ನು ಕಿತ್ತು ಹಾಕಲಾಗಲಿಲ್ಲ. ಮೇಲಾಗಿ ಕ್ಯಾಥೊಲಿಕ್ ಕ್ರೈಸ್ತ ಧರ್ಮಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದರಿಂದ ರಾಜ್ಯದ ಸರ್ವಾಧಿಕಾರವು ಸಹ ಕ್ರೈಸ್ತ ಧರ್ಮದ ರೀತಿಯಲ್ಲಿಯೇ ಟೀಕೆಗೊಳಪಟ್ಟಿತು. ರಾಜಕೀಯ ಚಿಂತಕರಿಗೆ ಇದರ ಪರಿಣಾಮಗಳು ಬಹಳ ಅಪಾಯಕಾರಿಯಾಗಿ ಕಂಡುಬಂದವು.

ವಾಲ್ಟೇರ್ ತನ್ನ ಜೀವನವಿಡೀ ಉದಾರವಾದಿ ರಾಜಪ್ರಭುತ್ವಕ್ಕೆ ಪ್ರೋ ಸಂವಿಧಾನಾತ್ಮಕ ಸರ್ಕಾರವನ್ನು ವಿರೋಧಿಸಿದನು. ಇವನಿಗೆ ಜನಪ್ರಿಯ ಗಣರಾಜ್ಯಗಳಲ್ಲಿ ನಂಬಿಕೆಯಿರಲಿಲ್ಲ. ಹಾಗಾಗಿ ಇವನು ತತ್ವಜ್ಞಾನಿ ರಾಜನಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದನು. ಮಧ್ಯಯುಗೀನ ನ್ಯಾಯಾಲಯಗಳು ಶ್ರೀಮಂತರಿಂದ ವಿರೋಧಿಸಲ್ಪಟ್ಟವು. ಮಾಂಟೆಸ್ಕೊ ಅಧಿಕಾರ ವಿಭಜನೆಗೆ ಪ್ರಾಶಸ್ತ್ಯ ಕೊಟ್ಟರೂ ಸಹ ಅವನು ಶ್ರೀಮಂತ ವರ್ಗಕ್ಕೆ ಸೇರಿದವ ನಾದ್ದರಿಂದ, ಶ್ರೀಮಂತ ವರ್ಗಕ್ಕೆ ಸರ್ಕಾರದಲ್ಲಿ ಹೆಚ್ಚು ಪ್ರಾಧಾನ್ಯತೆಯಿರಬೇಕೆಂದು ಒತ್ತು ನೀಡಿದನು. ಇವನಿಗೂ ಸಹ ಜನಸಾಮಾನ್ಯರ ಸರ್ಕಾರದಲ್ಲಿ ನಂಬಿಕೆಯಿರಲಿಲ್ಲ. ಇದಕ್ಕಾಗಿಯೇ ಏನೋ ಅವನು ಬ್ರಿಟಿಷ್ ಶ್ರೀಮಂತ ಸಭೆಯನ್ನು ಅತಿ ಎತ್ತರದಲ್ಲಿ ಎತ್ತಿ ಹಿಡಿದಿದ್ದನು. ಡೈಡರಾಟ್ ಪ್ರಕಾರ ಹದಿನಾಲ್ಕನೆಯ ಲೂಯಿ ಸೇರಿ ಎಲ್ಲಾ ರಾಜರು ತಪ್ಪುಗಳಿಂದ ಕೂಡಿದ್ದರು. ಆದರೆ ಅವನು ಎಲ್ಲಿಯೂ ರಾಜಪ್ರಭುತ್ವದ ಬಗ್ಗೆ ತನ್ನ ಅನುಮಾನಗಳನ್ನು ಅಭಿಪ್ರಾಯಗಳನ್ನು ಹೇಳಿಕೊಂಡಿರಲಿಲ್ಲ. ಇದೇ ಅವಧಿಯಲ್ಲಿ ಇಡೀ ಯುರೋಪ್ ಖಂಡದಲ್ಲಿ ಸ್ಪೈಯಿನ್‌ನಿಂದ ಹಿಡಿದು ರಷ್ಯಾದವರೆಗೂ ಹೊಸ ಗಾಳಿ, ಅಲೆ ಬೀಸಲಾರಂಭಿಸಿತು. ಮಾನವನ ಬಯಕೆಯಾದ ಸುಧಾರಣೆಗಳು ಪ್ರಬಲ ಆಡಳಿತ, ರಾಜರಿಂದ ಎಂಬುದು ಅರಿವಾಯಿತು. ಪ್ರಮುಖ ರಾಜಧಾನಿಗಳಲ್ಲಿ ರಾಜರುಗಳು ತಮ್ಮ ಆಡಳಿತ ಸರ್ಕಾರವನ್ನು ಪುನರ್ರಚಿಸತೊಡಗಿದರು. ತೆರಿಗೆಗಳು, ಮತ್ತಿತರ ಹೊರೆಯನ್ನು ವಾಣಿಜ್ಯ ಕ್ಷೇತ್ರದಲ್ಲಿ ತೆಗೆದು ಹಾಕಲಾರಂಭಿಸಿದರು. ಹಾಗೂ ಕಾನೂನಿನ ಕಟ್ಟುಪಾಡುಗಳನ್ನು ಸಹ ಕುಂಠಿತಗೊಳಿಸಿದರು. ಆದರೆ ಫ್ರಾನ್ಸ್ ಮತ್ತಿತರ ರಾಷ್ಟ್ರಗಳಲ್ಲಿ ನಿರಂಕುಶ ಪ್ರಭುತ್ವದ ಇನ್ನೊಂದು ಮುಖವಾದ ಯುದ್ಧ ಮತ್ತು ಆಕ್ರಮಣಗಳನ್ನು ಜನತೆ ಅರಿತುಕೊಳ್ಳಲಾಗಲಿಲ್ಲ.

ಕ್ರಿ.ಶ.೧೭೬೨ರಲ್ಲಿ ರೂಸೊ ತನ್ನ ಪುಸ್ತಕ ಸಾಮಾಜಿಕ ಒಪ್ಪಂದದಲ್ಲಿ ನೈತಿಕ ಶಕ್ತಿಯುಳ್ಳ ವ್ಯಕ್ತಿಗತವಾದ ಸಮಾಜವನ್ನು ಕಟ್ಟಲು ಉದ್ದೇಶಿಸಿದನು. ಈ ಸಮಾಜದಲ್ಲಿ ವ್ಯಕ್ತಿಯ ವೈಯಕ್ತಿಕತೆಗೆ, ಸ್ವಾತಂತ್ರ್ಯಕ್ಕೆ ಕುಂದು ಬಾರದಂತೆ, ನೈತಿಕತೆಗೆ ಹೆಚ್ಚು ಒತ್ತು ಕೊಡಲಾಯಿತು. ರೊಸೋ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ತನ್ನ ಹಕ್ಕು ಮತ್ತು ಅಧಿಕಾರವನ್ನು ಸಾಮಾನ್ಯ ಒಪ್ಪಂದಕ್ಕೆ ವಹಿಸಿಕೊಟ್ಟು ಇದರಲ್ಲಿ ತಾನು ಸಹ ಅವಿಭಾಜ್ಯ ಅಂಗವಾಗಿರುತ್ತಾನೆ. ಇಂತಹ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಅಧಿಕಾರ ಕರ್ತವ್ಯಗಳ ನಡುವಣ ವ್ಯತ್ಯಾಸವನ್ನು ವ್ಯಾಖ್ಯಾನಿಸಲಾಯಿತು. ಹಾಗೂ ಸಮಾಜದ ಕರ್ತವ್ಯಗಳನ್ನು ಸಹ ಗೊತ್ತುಪಡಿಸಲಾಯಿತು. ರೂಸೊ ಪ್ರಕಾರ ವ್ಯಕ್ತಿಯು ತಾನು ಒಪ್ಪಂದದ ನಂತರವೂ ಮೊದಲಿನಂತೆಯೇ ಸ್ವತಂತ್ರನಾಗಿ ಉಳಿಯುತ್ತಾನೆ. ಆದರೆ ನಂತರದ ಓದುಗರು, ವಿಮರ್ಶಕರು ಸಾಮಾಜಿಕ ಒಪ್ಪಂದದಲ್ಲಿ ಸರ್ವಾಧಿಕಾರದ ಅಂಶಗಳನ್ನು ಕಾಣಲಾರಂಭಿಸಿ ದರು. ರೊಸೋ ಜಾನ್‌ಲಾಕ್‌ನ ತತ್ವಗಳನ್ನು ಆಧರಿಸಿ ಸ್ವಾತಂತ್ರ್ಯದ ಕರಡನ್ನು ಸಿದ್ಧಪಡಿಸಿದನು. ಒಂದು ದಶಕದ ನಂತರ ಫ್ರಾನ್ಸ್‌ನ ಕ್ರಾಂತಿಕಾರರು ಅಮೆರಿಕನ್ನರಿಂದ ಮತ್ತಷ್ಟು ಪ್ರಭಾವಿತರಾಗಿ ತಮ್ಮದೇ ಆದ ಕರಡನ್ನು ಸಿದ್ಧಪಡಿಸಿ ಅದರಲ್ಲಿ ರೊಸೋನ ಸಾಮಾನ್ಯ ಒಪ್ಪಿಗೆ ಮತ್ತು ರಾಷ್ಟ್ರದ ಸಾರ್ವಭೌಮತ್ವಕ್ಕೆ ಹೆಚ್ಚು ಆದ್ಯತೆ ನೀಡಿದರು. ಅಟ್ಲಾಂಟಿಕ್ ಸಮುದ್ರದ ತೀರ ಪ್ರದೇಶಗಳಲ್ಲಿ ಅಂದರೆ ಅಮೆರಿಕಾ ಮತ್ತು ಯುರೋಪ್‌ನಲ್ಲಿ ಜನಪ್ರಿಯ ಸರ್ಕಾರದ ಬಗ್ಗೆ ಮೂಲಭೂತ ಪ್ರಶ್ನೆಗಳು ಕೇಳಿಬರಲಾರಂಭಿಸಿದವು. ಇದಲ್ಲದೆ ಮತವನ್ನು ಯಾರು ಚಲಾಯಿಸಬೇಕು ಎಂಬುದರ ಬಗ್ಗೆಯೂ ಹೆಚ್ಚು ಚರ್ಚೆ ಗಳು ಪ್ರಾರಂಭವಾದವು.

ಜ್ಞಾನೋದಯದ ಚಿಂತನೆಗಳ ಪ್ರಮುಖ ವಾಹಿನಿಯು ಲಾಕ್‌ನ ತತ್ವವಾದ ವೈಯಕ್ತಿಕ ಆಸ್ತಿಯನ್ನು ಹೊಂದುವುದು ಪ್ರಕೃತಿ ದತ್ತವಾದ ಹಕ್ಕು ಎಂಬುದನ್ನು ಪ್ರಶ್ನಿಸಲಿಲ್ಲ. ಆದರೂ ರೋಸೋ ಡೇವಿಡ್ ಹ್ಯೂಮ್ ರೀತಿ ಇದಕ್ಕೆ ಸಮ್ಮತಿ ನೀಡಲಿಲ್ಲ. ರೊಸೋ ಇದಕ್ಕೆ ಯಾವುದೇ ರೀತಿಯ ಪರಿಹಾರ ಸೂಚಿಸದಿದ್ದರೂ ರಾಜಕೀಯ ಪ್ರಜಾಪ್ರಭುತ್ವವು ಆರ್ಥಿಕ ಸಮಾನತೆಯಿಂದ ಕೂಡಿರದಿದ್ದರೆ, ಅಂತಹ ಪ್ರಜಾಪ್ರಭುತ್ವವು ನಿಜವಾದ ಪ್ರಜಾಪ್ರಭುತ್ವವಲ್ಲ ಹಾಗೂ ಅಂತಹ ಸರ್ಕಾರವು ಸಮರ್ಪಕವಾಗಿ ಕಾರ್ಯ ನಿರ್ವಹಿಸು ವುದಿಲ್ಲವೆಂದು ಅಭಿಪ್ರಾಯ ಪಟ್ಟನು. ಹದಿನೆಂಟನೆಯ ಶತಮಾನದ ಎರಡನೆಯ ಭಾಗದಲ್ಲಿ ಕೆಲವು ರಾಜಕೀಯ ತಜ್ಞರು ರೊಸೋ ವಿಚಾರಗಳನ್ನು ಮತ್ತಷ್ಟು ದೃಢೀಕರಿಸಿದರು. ಕ್ರಿ.ಶ.೧೭೭೫ರಲ್ಲಿ ಮಾರೆಲ್ಲಿಯೂ ಪ್ರಪಂಚದ ಎಲ್ಲಾ ವಿಧದ ಕ್ರೌರ್ಯದ ಮೂಲಬಿಂದು ಆಸ್ತಿಯೆಂದು (ಸಂಪತ್ತು) ತಿಳಿಸಿ ಹಾಗೆಯೇ ಅದನ್ನು ಪರಿಹರಿಸಲು ಸಲಹೆಯನ್ನು ನೀಡಿದನು. ಅದೇನೆಂದರೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಸರ್ವರ ಏಳಿಗೆಗೆ ಶ್ರಮಿಸಬೇಕು ದುಡಿಯಬೇಕು. ಅದೇ ರೀತಿ ತಾನು ತನ್ನ ಸಾಮರ್ಥ್ಯಕ್ಕನು ಸಾರವಾಗಿ ಹಿಂದಕ್ಕೆ ಪಡೆಯಬೇಕು ಎಂದು ತಿಳಿಸಿದನು. ಎರಡು ದಶಕಗಳ ನಂತರ ಅಬ್ಬೆ ಡಿ ಮಾಬ್ಲಿಯು ಸಮಾನತೆಯು ಪ್ರಕೃತಿಯ ನಿಯಮವೆಂದು ಅಭಿಪ್ರಾಯಪಟ್ಟು ಇವನು ಸಹ ಮಾರೆಲ್ಲಿ ಜೊತೆಗೂಡಿ ಆಸ್ತಿಯು ಮಾನವನ ಸುವರ್ಣ ಯುಗವನ್ನು ನಾಶ ಮಾಡಿತೆಂದು ತಿಳಿಸಿದನು. ನಂತರ ನೊಯಲ್ ಬೇಬೋಫನು ಪ್ರಕೃತಿಯ ನಿಜವಾದ ಸಮಾನತೆಯನ್ನು ಪಡೆಯಲು ಕ್ರಾಂತಿಯಲ್ಲಿ ಮತ್ತೊಂದು ಕ್ರಾಂತಿಯನ್ನುಂಟುಮಾಡಲು ಯತ್ನಿಸಿದನು. ಇಂಗ್ಲೆಂಡಿನಲ್ಲಿ ವಿಲಿಯಂ ಗಾಡ್‌ವಿನ್ ಪ್ರಕೃತಿ ನಿಯಮದ ಸಮಾನತೆಯನ್ನು ಆಧರಿಸಿ ತನ್ನ ವೈಚಾರಿಕತೆ ತತ್ವದಲ್ಲಿ ಆಸ್ತಿಯನ್ನು ಟೀಕಿಸುವುದರ ಜೊತೆಗೆ ರಾಜ್ಯ ಮತ್ತು ವಿವಾಹ ಎಂಬ ಸಂಘಟನೆಗಳನ್ನು ಸಹ ಖಂಡಿಸಿದನು. ಆದರೆ ಇಂತಹ ವಿಚಾರಗಳು, ವಾದಗಳು ಹೆಚ್ಚು ಕಾಲ ಹೆಚ್ಚು ಜನರಿಂದ ಪೋತ್ಸಾಹ ಪಡೆಯದೆ ತನ್ನ ತೀವ್ರತೆಯನ್ನು ಕಳೆದುಕೊಂಡಿತು.

ಆರ್ಥಿಕ ಸಿದ್ಧಾಂತಗಳು

ಜ್ಞಾನೋದಯದ ಚಿಂತನೆಗಳು ಮಾನವನ ಆರ್ಥಿಕ ಜೀವನದ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಿದವು. ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರದ ರಾಜ್ಯದ ಮಧ್ಯಸ್ಥಿಕೆ ಯಿಂದಾಗಿ ವ್ಯಕ್ತಿಗತ ಖಾಸಗಿ ಆರ್ಥಿಕ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿತ್ತು. ಇದರಿಂದ ಬೇಸತ್ತ ಮಧ್ಯಮವರ್ಗವು ತನ್ನ ವಿರೋಧವನ್ನು ಸರ್ಕಾರದ ಮೇಲೆ ತೋರಿಸಲಾರಂಭಿಸಿತು. ಫ್ರಾನ್ಸಿನಲ್ಲಿ ಹದಿನಾಲ್ಕನೆಯ ಲೂಯಿನ ಯುದ್ಧಗಳಿಂದಾಗಿ ಅಲ್ಲಿಯ ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿತು. ಇದನ್ನು ಸುಧಾರಿಸಲು ಕೆಲವು ವಿಚಾರವಾದಿಗಳು ಮುಖ್ಯವಾಗಿ ಬಾಯ್ಸ ಗಿಲ್ಬರ್ಟನು ರಾಜ್ಯದ ಮಧ್ಯಸ್ತಿಕೆಯು ಪ್ರಕೃತಿ ನಿಯಮದ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಸರಿಪಡಿಸಲು ಮುಕ್ತ ಮಾರುಕಟ್ಟೆ ಮತ್ತು ಖಾಸಗಿ ಬಂಡವಾಳದ ಪಾತ್ರ ಸೂಕ್ತವಾದ ಮಾರ್ಗವೆಂದು ಅಭಿಪ್ರಾಯ ಪಟ್ಟನು. ಈ ಸಿದ್ಧಾಂತದ ಆಧಾರದ ಮೇಲೆ ಹದಿನೆಂಟನೆಯ ಲೂಯಿಸ್‌ನ ವೈದ್ಯನಾದ ಫ್ರಾಂಕಾಯೆನ್ ಕ್ರಿಸಾನಿಯು ಪ್ರಕೃತಿ ಸಂಪತ್ತನ್ನು ಅಧ್ಯಯನ ಮಾಡುವ ಶಾಲೆಯನ್ನು ಸ್ಥಾಪಿಸಿದನು. ಈ ಶಾಲೆಯ ತತ್ವಗಳಿಂದ ವೈಯಕ್ತಿಕ ಖಾಸಗಿ ಹಿತಾಸಕ್ತಿಯಲ್ಲಿ ಹೆಚ್ಚು ಗಮನಕೊಟ್ಟರೂ ಪ್ರಕೃತಿಯ ನಿಯಮವಾದ ಸಾಮರಸ್ಯತೆಗೆ ಹೆಚ್ಚು ಆಸಕ್ತಿ ತೋರಿಸುವಂತಾಯಿತು. ಇದರಿಂದಾಗಿ ಸಾರ್ವಜನಿಕ ಅಭಿವೃದ್ದಿಗೆ ಖಾಸಗಿ ಬಂಡವಾಳದ ಪಾತ್ರ ಅತ್ಯಂತ ಪರಿಣಾಮಕಾರಿಯಾಗಿ ಕಂಡುಬಂದಿತು. ಆ್ಯಡಂ ಸ್ಮಿತನು ತನ್ನ ಪುಸ್ತಕ ವೆಲ್ತ್ ಆಫ್ ನೇಶನ್ಸ್‌ನಲ್ಲಿ ಫಿಜಿಯೋ ಕ್ರಾಟ್ಸ್‌ರು ಭೂಮಿಯ ಮೇಲೆ ತೋರಿಸಿದ ವಿಶೇಷ ಮಹತ್ವವನ್ನು ಖಂಡಿಸಿದನು. ಸ್ಮಿತನು ಖಾಸಗಿ ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚು ಗಮನ ನೀಡದೆ, ಪ್ರಕೃತಿ ಸ್ವಾತಂತ್ರ್ಯದ ವ್ಯವಸ್ಥೆಯನ್ನು ಒತ್ತಿ ಹೇಳಿದನು. ಇವನ ಪ್ರಕಾರ ರಾಜ್ಯ ಸರ್ಕಾರವು ದುರ್ಬಲರ ಹಿತಾಸಕ್ತಿ ಗಳನ್ನು ಪ್ರಬಲರಿಂದ ರಕ್ಷಿಸುವುದು ಪ್ರಮುಖವಾಗಿತ್ತು. ಇವನ ಮುಖ್ಯ ಉದ್ದೇಶವು ಸ್ವತಂತ್ರ ವ್ಯಕ್ತಿಯು ತನ್ನ ಹಣೆಯ ಬರಹವನ್ನು ತಾನೇ ರೂಪಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿತ್ತು. ಇವನ ತತ್ವಗಳು ಮುಂದಿನ ತಲೆಮಾರಿನವರಿಗೆ ತುಂಬಾ ಆದರ್ಶವಾಗಿ ಕಂಡುಬಂದವು.

ಹದಿನೆಂಟನೆಯ ಶತಮಾನದ ಅಂತ್ಯದ ಹೊತ್ತಿಗೆ ಸಾಮಾಜಿಕ ಅಸಂತುಷ್ಟಿ ಹೆಚ್ಚಾದಂತೆ ವೈಜ್ಞಾನಿಕ ಮತ್ತು ಭೌದ್ದಿಕ ಚಿಂತನೆಗಳು ಸದ್ದುಗದ್ದಲವಿಲ್ಲದೆ ಮಾನವನ ಸರ್ವಾಂಗೀಣ ಭೌತಿಕ ಪ್ರಗತಿಯ ಕಡೆಗೆ ಗಮನಹರಿಸಿತು. ಇಂತಹ ಜ್ಞಾನವನ್ನು ಒಳ್ಳೆಯದು ಮತ್ತು ಕೆಟ್ಟದ್ದಕ್ಕೂ ಉಪಯೋಗಿಸಿಕೊಳ್ಳಬಹುದಾಗಿತ್ತು. ಭವಿಷ್ಯದ ಪ್ರಗತಿಯು ಆಳವಾದ ಪ್ರಗತಿಪರ ವಿಚಾರಗಳಿಂದ ಮಾತ್ರ ಸಾಧ್ಯವೆಂಬ ಅರಿವು ಸಹ ಮೂಡತೊಡಗಿತು. ಹದಿನಾರನೆಯ ಲೂಯಿಯ ಮಂತ್ರಿಯಾದ ಟರ್ಗೊಟ್ ಪ್ರಕಾರ ಅನಾಗರಿಕ ಕಾಲದಲ್ಲಿಯೂ ಸಹ ಮಾನವ ಸಮಾಜದ ಪ್ರಗತಿಯೆಡೆಗೆ ನಿಧಾನವಾಗಿ ಸರಿಯಾದ ಮಾರ್ಗದಲ್ಲಿ ನಡೆದುಬಂದಿದ್ದಾನೆ. ಭವಿಷ್ಯದಲ್ಲಿಯೂ ಸಹ ಈ ಪ್ರಗತಿ ಮುಂದುವರಿಯುತ್ತದೆಂಧು ಅಭಿಪ್ರಾಯ ಪಟ್ಟಿದ್ದಾನೆ. ಟರ್ಗೋಟ್‌ನ ಸ್ನೇಹಿತ ಕಂಡೋರ್ಸಟ್ ಕೂಡ ಇದೇ ಅಭಿಪ್ರಾಯವನ್ನು ಮುಂದುವರಿಸಿ, ಪರಿಪೂರ್ಣತೆಯ ಕಡೆಗೆ ಇಟ್ಟ ಹೆಜ್ಜೆಯನ್ನು ಹಿಂದೆಗೆಯಬಾರದೆಂದು ತಿಳಿಸಿದನು. ಇವನ ಪ್ರಸಿದ್ಧ ಹೇಳಿಕೆಯೇನೆಂದರೆ ಸ್ವತಂತ್ರ ಮಾನವನ ಮೇಲೆ ಸೂರ್ಯನ ಬೆಳಕು ಬೀಳುವುದು. ಮಾನವರಿಗೆ ಯಾವ ಯಜಮಾನರು ಇರುವುದಿಲ್ಲ. ಆದರೆ ಅವನ ವೈಚಾರಿಕತೆ ಮಾತ್ರ ಅವನ ಯಜಮಾನ. ಅಂತಹ ಕಾಲ ಸನ್ನಿಹಿತವಾಗಿದೆ ಎಂಬುದು.

ನಿರಂಕುಶಾಧಿಕಾರ

 

ಹದಿನೆಂಟನೆಯ ಶತಮಾನದ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ನಿರಂಕುಶ ರಾಜ್ಯಪ್ರಭುತ್ವ. ಇದರ ಪ್ರಕಾರ ಸರ್ಕಾರದ ಇಡೀ ಸೂತ್ರವು ಏಕೈಕ ವ್ಯಕ್ತಿಯಲ್ಲಿ ಕೇಂದ್ರಿಕೃತವಾಗಿರುವುದು. ಇಂತಹ ಅಧಿಕಾರವು ಯಾವ ಶಕ್ತಿಯಿಂದಾಗಲಿ, ವ್ಯಕ್ತಿಯಿಂದಾಗಲಿ ಅಥವಾ ಸಂಘಸಂಸ್ಥೆಯಿಂದಾಗಲಿ ಪ್ರಶ್ನಿಸಲು ಅರ್ಹವಲ್ಲ. ಹದಿನೇಳನೆಯ ಮತ್ತು ಹದಿನೆಂಟನೆಯ ಶತಮಾನದಲ್ಲಿ ಫ್ರಾನ್ಸನ್ನು ಆಳಿದ ಹದಿನಾಲ್ಕನೆಯ ಲೂಯಿ ಇದಕ್ಕೆ ಸೂಕ್ತ ಉದಾಹರಣೆ. ಇವನ ಪ್ರಕಾರ ರಾಜನೇ ರಾಜ್ಯ, ರಾಜ್ಯವೆಂದರೆ ರಾಜ ದೊರೆ. ಇದರ ಮುಂದಿನ ಬೆಳವಣಿಗೆಯೇ ಇಪ್ಪತ್ತನೆಯ ಶತಮಾನದ ಫ್ಯಾಸಿಸ್ಟ್; ನಾಜೀ ಮತ್ತು ಕಮ್ಯೂನಿಸ್ಟ್ ಸರ್ಕಾರಗಳು. ನಿರಂಕುಶಧಿಕಾರವು ಮೊದಲು ಸ್ಪೈನ್, ನಂತರ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಇಂಗ್ಲೆಂಡಿನಲ್ಲಿ ಹೆಚ್ಚು ಸಫಲವಾಗಲಿಲ್ಲ. ಆದರೆ ಫ್ರಾನ್ಸಿನಲ್ಲಿ ಬೋರ್ಬನ್ ಸಂತತಿಯ ಕಾಲದಲ್ಲಿ ಹೆಚ್ಚು ಯಶಸ್ವಿಯಾಯಿತು. ಈ ವ್ಯವಸ್ಥೆಗೆ ಮೂಲ ಆಧಾರವೆಂದರೆ ಅಲ್ಲಿಯ ದೊರೆಗಳು ತಾಳಿದ್ದ ನಿಲುವು, ಧೋರಣೆಗಳು. ಏನೆಂದರೆ ಅವರ ಅಧಿಕಾರವು ದೇವರಿಂದ ಕೊಟ್ಟದ್ದು. ಅಂದರೆ ಅವರ ಅಧಿಕಾರ ದೇವರ ಕೃಪೆಯಿಂದ ಬಂದುದು. ಹಾಗೇ ಅವರು ದೈವಾಂಶ ಸಂಭೂತರು ಮತ್ತು ಅವರ ಅಧಿಕಾರ ಕೆಳಮಟ್ಟದಲ್ಲಿ ಜನತೆಯಿಂದ ಬಂದಿಲ್ಲವಾದ್ದರಿಂದ ದೊರೆಗಳು ಜನತೆಗೆ ಜವಾಬ್ದಾರರಲ್ಲ. ಕೇವಲ ದೇವರಿಗೆ ಮಾತ್ರ ಜವಾಬ್ದಾರರು. ಇದಕ್ಕೆ ತಾತ್ವಿಕ ಹಿನ್ನೆಲೆಯು ಪೂರಕವಾಗಿದ್ದರಿಂದ ತಮ್ಮನ್ನು ಸರ್ವ ಸ್ವತಂತ್ರರನ್ನಾಗಿ ರೂಪಿಸಿಕೊಂಡು, ತದನಂತರ ಚರ್ಚನ್ನು ಸಹ ತಮ್ಮ ಅಧೀನದಲ್ಲಿಟ್ಟುಕೊಳ್ಳಲಾರಂಭಿಸಿದರು. ರೋಸೋ ತನ್ನ ಕೃತಿಗಳಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಒತ್ತು ಕೊಟ್ಟರೂ ಸಹ ಅವನ ಸಾಮಾನ್ಯ ಒಪ್ಪಂದದಲ್ಲಿ  ಏಕ ವ್ಯಕ್ತಿಯ ಆಳ್ವಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದಾನೆ.

ಚಳವಳಿಗಳು

ಹದಿನೆಂಟನೆಯ ಶತಮಾನದ ಈ ಎಲ್ಲಾ ಬೆಳವಣಿಗೆಗಳು ಅಂದರೆ ಒಂದು ಕಡೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಅಸಮಾಧಾನ ಮತ್ತು ಅಸಮಾನತೆ ಹಾಗೂ ಇನ್ನೊಂದೆಡೆ ವೈಜ್ಞಾನಿಕ ಮತ್ತು ವೈಚಾರಿಕತೆಯ ಬೆಳವಣಿಗೆಯಿಂದ ಸಮಾಜದಲ್ಲಿ ಚಳವಳಿಗಳು ಕ್ರಾಂತಿಗಳು ಯುರೋಪಿನಾದ್ಯಂತ ಹರಡಿದವು. ಅದರಲ್ಲಿ ಪ್ರಮುಖ ವಾದವುಗಳು ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಫ್ರಾನ್ಸಿನ ಕ್ರಾಂತಿ. ಅಮೆರಿಕಾದ ಕ್ರಾಂತಿಕಾರರು ಫ್ರೆಂಚ್ ದಾರ್ಶನಿಕರು ತತ್ವಜ್ಞಾನಿಗಳಿಂದ ಪ್ರೇರೇಪಿತರಾಗಿ ಬ್ರಿಟಿಷರ ಆಳ್ವಿಕೆಯನ್ನು ಅಂತ್ಯಗೊಳಿಸಿ ಸಂವಿಧಾನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಸರ್ಕಾರವನ್ನು ಸ್ಥಾಪಿಸಿದರು. ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಫ್ರಾನ್ಸಿನ ಯೋಧರು ಈ ಪ್ರಸಿದ್ಧ ಕ್ರಾಂತಿಯಿಂದ ಸ್ಫೂರ್ತಿಗೊಂಡು ಅಂತಹದೇ ಕ್ರಾಂತಿಯನ್ನು ತಮ್ಮ ನೆಲದಲ್ಲಿಯೂ ಮಾಡಿ ನಿರಂಕುಶಪ್ರಭುತ್ವವನ್ನು ಕೊನೆಗಾಣಿಸಿ, ಮಾನವನ ಹಕ್ಕುಗಳನ್ನು ಎತ್ತಿ ಹಿಡಿಯುವುದಕ್ಕೆ ಪ್ರಯತ್ನಿಸಿದರು. ಇದರ ಪರಿಣಾಮವೇ ಫ್ರಾನ್ಸಿನ ಮಹಾಕ್ರಾಂತಿ. ಈ ಕ್ರಾಂತಿಯ ಮುಖ್ಯ ಉದ್ದೇಶ ಮಾನವ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ಹೊಂದುವುದು. ಈ ನಿಟ್ಟಿನಲ್ಲಿ ಫ್ರೆಂಚ್ ಕ್ರಾಂತಿಕಾರರು ಮುಂದುವರಿದು ಬೂರ್ಬನ್‌ಗೆ ಸಂತತಿಯ ಹದಿನಾರನೆಯ ಲೂಯಿನನ್ನು ಅವನ ಪತ್ನಿಯನ್ನು ಹಾಗೂ ಕ್ರಾಂತಿ ವಿರೋಧಿಗಳನ್ನು ಗಿಲೋಟಿನ್ ಯಂತ್ರಕ್ಕೆ ಆಹುತಿ ನೀಡಿದರು. ಇದರಿಂದಾಗಿ ಫ್ರಾನ್ಸಿನಲ್ಲಿ ತಾತ್ಕಾಲಿಕವಾಗಿ ನಿರಂಕುಶ ರಾಜಪ್ರಭುತ್ವ ಕೊನೆಗೊಂಡಿತು. ಆದರೆ ಈ ಶತಮಾನದ ಅಂತ್ಯದ ಸಮಯಕ್ಕೆ ಫ್ರಾನ್ಸ್ ಮತ್ತೊಮ್ಮೆ ನೆಪೋಲಿಯನ್ ರೂಪದಲ್ಲಿ ರಾಜಪ್ರಭುತ್ವಕ್ಕೆ ಮರಳಿತು.

ಉಪಸಂಹಾರ

ಒಟ್ಟಾರೆ ಹೇಳುವುದಾದರೆ ಹದಿನೆಂಟನೆಯ ಶತಮಾನದ ತೀವ್ರಗಾಮಿಗಳು ಹಾಗೂ ವಿಚಾರವಾದಿಗಳು ಮಧ್ಯಯುಗದ ಸಂಘಸಂಸ್ಥೆಗಳು, ಅಧಿಕಾರ, ಆಡಳಿತ ಮತ್ತು ನಂಬಿಕೆ, ಸಂಪ್ರದಾಯ ಕ್ರೈಸ್ತಧರ್ಮದಲ್ಲಿ ಇದ್ದ ನಂಬಿಕೆಗಳನ್ನು ಕಿತ್ತೊಗೆದು ನಿರ್ಮೂಲನ ಮಾಡಿ, ಅದರ ಸ್ಥಳದಲ್ಲಿ ಮಾನವೀಯತೆ, ಪ್ರಜಾಪ್ರಭುತ್ವ ಮತ್ತು ಸಮಾನತೆಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದರು. ಈ ವಿಚಾರಗಳು ಸುಮಾರು ಅರ್ಧ ಶತಮಾನ ಕಾಲ ಪ್ರತಿಕ್ರಿಯಾ ವಾದಿಗಳ ಕಪಿಮುಷ್ಟಿಯಿಂದ ಮುಕ್ತಿಗೊಳ್ಳಲಿಲ್ಲ. ಆದರೆ ಹತ್ತೊಂಬತ್ತನೆಯ ಶತಮಾನದ ಎರಡನೆಯ ಭಾಗದಲ್ಲಿ ೧೮ನೆಯ ಶತಮಾನದ ವೈಚಾರಿಕತೆಯ ಮತ್ತೊಮ್ಮೆ ಹೊಸ ರೂಪ, ಶಕ್ತಿ ಪಡೆದು ಹೊಸ ಶತಮಾನವನ್ನೇ ಪ್ರಾರಂಭಿಸಿತು.

 

ಪರಾಮರ್ಶನ ಗ್ರಂಥಗಳು

೧. ಬಾರ್ನೆಸ್ ಎಚ್.ಇ., ೧೯೩೭. ಆ್ಯನ್ ಇಂಟಲೆಕ್ವ್ಟ್‌ಲ್ ಆ್ಯಂಡ್ ಕಲ್ಚರಲ್ ಹಿಸ್ಟರಿ ಆಫ್ ದ ವೆಸ್ಟರ್ನ್ ವರ್ಲ್ಡ್, ಸಂ.೨, ನ್ಯೂಯಾರ್ಕ್.

೨. ಅರ್ನೆಸ್ಟ್ ಕ್ಯಾಸಿರಾರ್, ೧೯೫೧. ದಿ ಫಿಲಾಸಪಿ ಆಫ್ ದಿ ಎನ್‌ಲೈಟನ್‌ಮೆಂಟ್, ಪ್ರಿನ್‌ಸಿಟಾನ್.               .

೩. ನಾರ್ಮನ್ ಹಾಮ್‌ಪ್ಸನ್, ೧೯೬೮. ದಿ ಎನ್‌ಲೈಟನ್‌ಮೆಂಟ್, ಪೆಂಗ್ವಿನ್ ಬುಕ್ಸ್.