ಫ್ರಾನ್ಸ್‌ನಲ್ಲಿ ಕ್ಯಾಲ್ವಿನ್‌ವಾದ ಜ್ವಿಂಗ್ಲಿಯ ಸುಧಾರಣೆಗಳಿಗೆ ಸಂಬಂಧಿಸಿದ ಸುಧಾರಕರು

ತೀವ್ರಗಾಮಿ ಸುಧಾರಣೆಯಲ್ಲಿ ಈ ಸುಧಾರಕರುಗಳು ತುಂಬ ಮುಖ್ಯರಾಗಿದ್ದರು. ತೀವ್ರಗಾಮಿಗಳು ತಮ್ಮ ಧರ್ಮ ಸುಧಾರಣೆಯನ್ನು ಹೊಸ ಒಡಂಬಡಿಕೆಗೆ ಸೀಮಿತಗೊಳಿಸಿಕೊಂಡು ಕೇವಲ ಮೂರು ಅಂಶಗಳನ್ನು ಮಾತ್ರ ತೀವ್ರವಾಗಿ ಪರಿಗಣಿಸಿದರು. ಅವು ಇಂದು ಅಮೆರಿಕದ ಚರ್ಚಿನ ಮಂತ್ರ ಮಾರ್ಗದರ್ಶಿಗಳಾಗಿವೆ. ೧. ಚರ್ಚು ಮತ್ತು ರಾಜ್ಯದ ವಿಭಜನೆ ೨. ಸ್ವಯಂ ಚರ್ಚು ಮತ್ತು ೩. ಧಾರ್ಮಿಕ ಸ್ವಾತಂತ್ರ್ಯ.

ಇವರು ತಮ್ಮನ್ನು ಅನಬ್ಯಾಪ್ಟಿಸ್ಟ್(ಪುನರ್ಜ್ಞಾನ ಸ್ನಾನವಾದಿಗಳು) ಎಂದು ಕರೆದು ಕೊಂಡರು. ಕಾರಣ ಬಾಲ್ಯ ಧರ್ಮದೀಕ್ಷೆಯನ್ನು ಇವರು ಧಿಕ್ಕರಿಸಿದರು ಮತ್ತು ಬಾಲ್ಯಾವಸ್ಥೆಯಲ್ಲಿ ಜ್ಞಾನದೀಕ್ಷೆಯಾಗಿದ್ದವರಿಗೆ ಪ್ರೌಢಾವಸ್ಥೆಯಲ್ಲಿ ಮತ್ತೆ ಇವರು ಜ್ಞಾನಸ್ನಾನ ದೀಕ್ಷೆ ಮಾಡಿಸಿದ್ದರು. ಇವರು ತಮ್ಮನ್ನು ತಾವು ಬೇಪ್ಟಿಸ್ಟ್ ಎಂದು ಕರೆದುಕೊಂಡರು ಮತ್ತು ಹಸುಮಕ್ಕಳಿಗೆ ಮಾಡಿಸಿದ ಜ್ಞಾನಸ್ನಾನ, ಧರ್ಮದೀಕ್ಷೆ ಆಗು ವುದಿಲ್ಲ ಎಂದು ಸಾರಿದರು. ಧರ್ಮದೀಕ್ಷೆಯಷ್ಟೇ ಮನುಷ್ಯನನ್ನು ಪುನಶ್ವೇತನ ಗೊಳಿಸಲಾರದು. ಅದು ಆಂತರಿಕ ಅನುಭವದ ಬಾಹ್ಯಸಂಕೇತ ಅಷ್ಟೇ, ಆತ್ಮದಲ್ಲಾದ ಪುನರ್ಜನ್ಮ – ಈ ಅನುಭವ ಪ್ರೌಢನಿಗೆ ಮಾತ್ರ ಸಾಧ್ಯ ಎಂಬುದು ಅವರ ಮುಖ್ಯ ಮಂತ್ರವಾಗಿತ್ತು. ಹೊಸ ಒಡಂಬಡಿಕೆಯ ಅನುಸಾರವಾಗಿ ಪ್ರಮಾಣವಚನ ಸ್ವೀಕರಿಸುವುದನ್ನು, ಹಿಂಸಾಚಾರವನ್ನು ಇವರು ಬಹಿಷ್ಕರಿಸಿದರು. ಇದು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಮಸ್ಯಾತ್ಮಕವಾಗಿತ್ತು. ಏಕೆಂದರೆ ಯಾವುದೇ ಸಮಾಜವು ಖಡ್ಗವನ್ನು ತ್ಯಜಿಸಿರಲಿಲ್ಲ. ಕ್ಯಾಥೋಲಿಕ್ಕರು ಮತ್ತು ಪ್ರಾಟೆಸ್ಟಂಟರು ಮೊದಲಾಗಿ ಇವರನ್ನು ಚಿತ್ರಹಿಂಸೆಗೊಳಿಸಿದರು. ಇವರ ಮೊದಲನೆಯ ನಾಯಕ ಫೆಲಿಕ್ಸ್ ಮೇನ್ಸ್ ೧೫೨೭ರಲ್ಲಿ ಜ್ಯೂರಿಚ್‌ನಲ್ಲಿ ನೀರಿನಲ್ಲಿ ಮುಳುಗಿ ಸತ್ತನು. ೧೫೨೯ರಲ್ಲಿ ಸ್ಪೆಯರ್‌ನ ಅಂತಾರಾಷ್ಟ್ರೀಯ ಸಭೆ ಅನ್‌ಬಾಪ್ಟಿಸ್ಟರನ್ನು ಸಾವಿನ ಶಿಕ್ಷೆಗೆ ಗುರಿಪಡಿಸಿತು. ಲೂಥರನ ಅನುಯಾಯಿಗಳೂ ಕೂಡ ಇವರ ವಿರುದ್ಧ ಇಲ್ಲಿ ಪ್ರತಿಭಟಿಸಿದರು. ಪ್ರಮುಖರಾದ ನಾಯಕರುಗಳು ಮರಣದಂಡನೆಯನ್ನು ಅನುಭವಿಸಿದ ನಂತರ ಅಷ್ಟೇನೂ ಸಮರ್ಥರಲ್ಲದವರು ನಾಯಕ ಪಟ್ಟವಹಿಸಿದರು ಮತ್ತು ಪ್ರಭುವಿನ ಮರು ಆಗಮನದ ದಿನವನ್ನು ಸಾರಿದರು. ಅನಬಾಸ್ಟಿಸ್ಟ್‌ರನ್ನು ಒಳಗೊಂಡ ಒಂದು ಗುಂಪು (೧೫೩೪) ವೆಸ್ಟ್ ಫೇಲಿಯ ನಗರವನ್ನು, ತನ್ನ ಧಾರ್ಮಿಕ ನೀತಿಗೆ ವಿರುದ್ಧವಾಗಿ ಕತ್ತಿಯನ್ನು ಬಳಸಿ, ತನ್ನ ವಶಕ್ಕೆ ತೆಗೆದುಕೊಂಡು ಬಹುಪತ್ನಿತ್ವವನ್ನು ಮರಳಿ ಜಾರಿಗೆ ತಂದಿತು. ಈ ನಗರವನ್ನು ಲೂಥರನ ಅನುಯಾಯಿಗಳು ಮತ್ತು ಕ್ಯಾಥೋಲಿಕ್ಕರು ತಮ್ಮ ವಶಕ್ಕೆ ಮತ್ತೆ ತೆಗೆದುಕೊಂಡು ಅನಬಾಸ್ಟಿಸ್ಟ್ ನಾಯಕರನ್ನು ಕೊಂದು ಹಾಕಿದರು. ತನ್ನ ಅನುಯಾಯಿಗಳ ಪಂಥವನ್ನೇ ಕ್ರಮೇಣ ಕಟ್ಟಿದ ಹಾಲೆಂಡಿನ ಮನ್ನೋಸಮೆನ್ಸ್ ಎಂಬುವವನು ಹಿಂಸಾಚಾರ ಮತ್ತು ಬಹುಪತ್ನಿತ್ವವನ್ನು ಧಿಕ್ಕರಿಸಿ ಮೂಲ ಧರ್ಮಪ್ರವಾದಿಗಳ ಬೋಧನೆಗಳಿಗೆ ಮರಳಿದನು. ಹಾಲೆಂಡ್‌ನಲ್ಲಿ ಸೈನಿಕ ಸೇವೆಗೆ ಈ ಪಂಥದವರನ್ನು ಸೇರಿಸಿಕೊಂಡಿದ್ದರಿಂದ, ಅಲ್ಲದೆ ಪೂರ್ವ ಯೂರೋಪ್ ಮತ್ತು ಅಮೆರಿಕಕ್ಕೆ ವಲಸೆ ಹೋದುದರಿಂದ ಮೆನ್ನೂನ ಅನುಯಾಯಿಗಳು ಜೀವ ಉಳಿಸಿಕೊಳ್ಳಲು ಸಾಧ್ಯವಾಯಿತು. ಜಕೋಬ್ ಹಟ್ಟರ್ ಎಂಬುವವನಿಂದ ಹಟ್ಟರ್ ಅನುಯಾಯಿಗಳು ಎಂಬ ಮತ್ತೊಂದು ಗುಂಪು ಮೋರೋವಿಯದ ಶಾಂತಪ್ರಿಯ ಜಮೀನುದಾರರ ಅನುಗ್ರಹದಿಂದಾಗಿ ಅಸ್ತಿತ್ವಕ್ಕೆ ಬಂತು. ಹಿಂಸಾಚಾರದಿಂದಾಗಿ ಈ ಗುಂಪುಗಳೂ ಕೂಡ ಅಮೆರಿಕ ಸಂಸ್ಥಾನಗಳಿಗೆ ವಲಸೆ ಹೋದವು. ಅರ್ನಿಶ್ ಪಂಥದ ಸ್ವಿಲ್ ಎನ್ನುವ ಒಂದು ಗುಂಪು ಕೂಡ ಅಮೆರಿಕದಲ್ಲಿ ಉಳಿದುಕೊಂಡಿತು. ಈ ಎಲ್ಲಾ ವಿಚಾರಗಳನ್ನು, ಇತ್ತೀಚಿನ ಇತಿಹಾಸದಲ್ಲಿ ವಿವಿಧ ರೀತಿಯಲ್ಲಿ ಹೊಂದಾಣಿಕೆಗೊಂಡು, ಬ್ರದರನ್ ಮತ್ತು ಕ್ವೇಕರ್ಸ್ ಪಂಥದವರಲ್ಲಿಯೇ ಅಲ್ಲದೆ, ಚರ್ಚಿಗೂ ಸರ್ಕಾರಕ್ಕೂ ಯಾವುದೇ ಸಂಬಂಧ ಇರಕೂಡದೆಂದು ಬಯಸುವ ಎಲ್ಲಾ ಪಂಥಗಳಲ್ಲೂ ಕಾಣಬಹುದಾಗಿದೆ.

ಲೂಥರನಿಗೆ ಸಂಬಂಧಿಸಿದ ಸುಧಾರಕರುಗಳು

ಬಹುಮುಖ್ಯವಾಗಿ ಇಬ್ಬರು ಪ್ರಧಾನರಾಗಿರುತ್ತಾರೆ. ಮೊದಲನೆಯದಾಗಿ ಕಾರ್ಲ್ ಸ್ಟ್ಯಾಡ್ಟ್ ಎಂಬುವವನು. ಧರ್ಮದಲ್ಲಿ ಕಲೆ ಮತ್ತು ಸಂಗೀತವು ಸಂಪೂರ್ಣವಾಗಿ ಬಹಿಷ್ಕಾರವಾಗಬೇಕೆಂದು ಮತ್ತು ಪವಿತ್ರ ಪೂಜಾ ಸ್ಥಳದಲ್ಲಿ ಕ್ರಿಸ್ತನ ದೇಹದ ಇರುವಿಕೆಯನ್ನು ಆಧ್ಯಾತ್ಮಿಕವಾಗಿ ಅರ್ಥೈಸಬೇಕೆಂದು ಹೇಳಿರುತ್ತಾನೆ. ಮೂರ್ತಿ ಆರಾಧನೆಗೆ ಸಂಬಂಧಿಸಿದಂತೆ ಅವನ ವಿಚಾರಧಾರೆ ದಂಗೆಯನ್ನು ಎಬ್ಬಿಸಿತು. ಲೂಥರನಂತೆ ಇವನು ಕೂಡ ಎಲ್ಲ ಸಾಮಾನ್ಯ ಜನರು ಧರ್ಮಾಧಿಕಾರಿಗಳು ಎಲ್ಲಾ ಕ್ರೈಸ್ತ ಪುರೋಹಿತರು ಮದುವೆಯಾಗಬೇಕೆಂದು ನಂಬಿದ್ದನು. ಧಾರ್ಮಿಕ ವಿರಾಮದ ದಿನವನ್ನು ಸರ್ವರೂ ಕಡ್ಡಾಯವಾಗಿ ಅನುಸರಿಸಬೇಕು. ಈ ವಿಷಯ ಧಾರ್ಮಿಕ ಶುದ್ದಿಯ ವಾದದ ಚಳವಳಿ ಯನ್ನು ನವೀಕರಿಸುತ್ತಿತ್ತು. ಈ ವಿಚಾರ ಆಧ್ಯಾತ್ಮವನ್ನು, ಆದರ್ಶವನ್ನು ಬೆಸೆಯುತ್ತಿತ್ತು. ಆಧ್ಯಾತ್ಮದಲ್ಲಿ ಉನ್ನತ ಸ್ಥಾನದಲ್ಲಿರುವವರು ಇಂದ್ರಿಯಗಳ ಮೂಲಕ ಗೋಚರಪಡಿಸಿ ಕೊಳ್ಳುವಂತಹ ಧಾರ್ಮಿಕ ಸಾಧನಗಳನ್ನು ಕೈಬಿಡಬೇಕು ಮತ್ತು ಕಾನೂನಿನ ಮುಖಾಂತರ ಸಾಮಾನ್ಯ ಜನರಿಂದಲೂ ಈ ಮಾರ್ಗ ಅನುಸರಿಸುವುದನ್ನು ಕಿತ್ತುಕೊಳ್ಳಬೇಕು ಎಂದು ಉಪದೇಶಿಸಿದನು.

ಥಾಮಸ್ ಮಂಟ್‌ಜರ್ ಎಂಬುವವನು ಅಪಾರವಾದ ಜಿಜ್ಞಾಸೆಗೆ ಗುರಿಯಾದವನು ಮತ್ತು ಆಳವಾಗಿ ಅಧ್ಯಯನ ನಡೆಸಿದ್ದವನು ಹಾಗೂ ಉರಿಯುವ ಬೆಂಕಿಯಂತೆ ನಾಯಕತ್ವದ ಗುಣವುಳ್ಳವನಾಗಿದ್ದನು. ಇವನು ಕ್ರೈಸ್ತ ಬಂಡಾಯದ ಪವಿತ್ರ ಸ್ವತಂತ್ರ್ಯ ಸಂಸ್ಥೆಯ ಸಿದ್ಧಾಂತವನ್ನು ಮೊದಲು ರಚಿಸಿದನು. ದೇವರ ಮುಕ್ತಿಗೆ ಪಾತ್ರರಾದವರನ್ನು ಗುರುತಿಸಬಹುದಾಗಿದೆ ಎಂದು ನಂಬಿದ್ದನು. ಈ ಜಗತ್ತಿನಲ್ಲಿ ದೇವರ ರಾಜ್ಯವನ್ನು ಮತ್ತು ಪವಿತ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕೆನ್ನುವುದು ಮತ್ತು ಕೆಟ್ಟದನ್ನು ನಿರ್ನಾಮ ಮಾಡಬೇಕೆಂಬುದೇ ಈತನ ಜೀವನದ ಪರಮ ಗುರಿಯಾಗಿತ್ತು. ಈ ದಿಸೆಯಲ್ಲಿ ಕೆಲಸ ಮಾಡುತ್ತಾ, ದೇವರ ಆಯ್ಕೆಗೆ ಗುರಿಯಾಗಿರುವವರು ನೋವನ್ನು ಅನುಭವಿಸಿರಬೇಕು ಮತ್ತು ಕ್ರಿಸ್ತನು ನಡೆದಿರುವ ಮಾರ್ಗವನ್ನು ಅನುಸರಿಸುತ್ತಾ ಶಿಲುಬೆಯತ್ತ, ಸತ್ವಪರೀಕ್ಷೆಯತ್ತ ನಡೆದರೆ ಜೀವನದಲ್ಲಿ ಜಯ ಲಭಿಸುತ್ತದೆ ಎಂದು ನಂಬಿದ್ದನು. ನೋವನ್ನು ಅನುಭವಿ ಸುವುದು, ನೋವನ್ನು ಪರರ ಮೇಲೆ ಹೇರುವುದು ಒಂದಕ್ಕೊಂದು ಸಮನಾದ ವಿಷಯ ವಲ್ಲ. ಮಂಟ್‌ಜನುರ ತನ್ನ ಬೋಧನೆಗಳನ್ನು ಜಾರಿಗೊಳಿಸುವಂತೆ ಸ್ಯಾಕ್ಸನ್ ಅರಸು ಕುಮಾರರನ್ನು ಆಗ್ರಹಿಸಿದನು. ಆದರೆ ಇವನ ಬೇಡಿಕೆಯನ್ನು ತಿರಸ್ಕರಿಸಿದುದೇ ಅಲ್ಲದೆ ಇವನನ್ನು ಉಚ್ಛಾಟನೆ ಕೂಡ ಮಾಡಲಾಯಿತು. ಸಹಾನುಭೂತಿಯಿಂದ ಇವನ ಮಾತು ಗಳನ್ನು ಕೇಳಿದ, ದಂಗೆಯೆದ್ದಿದ್ದ ರೈತರುಗಳ ಸಹಾಯದೊಡನೆ ಫ್ರಾಂಕನ್‌ಹೂಸನ್ ಎನ್ನುವ ಸ್ಥಳದಲ್ಲಿ ಯುದ್ಧ ನಡೆಸಿದನು. ರೈತರೆಲ್ಲ ಈ ಯುದ್ಧದಲ್ಲಿ ಸರ್ವನಾಶವಾದರು. ಮಂಟ್‌ಜರ್ ಸೆರೆಯಾಗಿ ನಂತರ ಶಿರಚ್ಛೇದನ ಅನುಭವಿಸಿದನು. ದೇವರ ವಾಣಿಗೆ ಬದಲಾಗಿ ಖಡ್ಗವನ್ನು ಹಿಡಿದ ಮಂಟ್‌ಜರ್ ನಂಥವರನ್ನು ಸ್ಮರಿಸುವುದು ಅಸಹ್ಯವಾದ ಕೆಲಸ ಎನ್ನುವುದು ಇವನ ಮೇಲೆ ಲೂಥರನ ಅಭಿಪ್ರಾಯವಾಗಿತ್ತು. ಆದರೆ ಮಾರ್ಕ್ಸ್ ವಾದಿಗಳು ಮಂಟ್‌ಜರ್‌ನನ್ನು ಸಮಾಜಕ್ರಾಂತಿಯ ಪ್ರವಾದಿ ಎಂದು ಎತ್ತರಕ್ಕೇರಿಸಿದ್ದಾರೆ.

ಫ್ರಾನ್ಸ್‌ನಲ್ಲಿ ಕ್ಯಾಲ್ವಿನ್ನನ ಪ್ರಭಾವ

ಲೂಥರನಿಗೆ ಅಥವಾ ಜ್ವಿಂಗ್ಲಿಗೆ ಸಮನಾಗುವಂತಹ ಮುಂದಾಳುಗಳು ಸುಧಾರಣೆ ಆರಂಭವಾದ ದಿನಗಳಲ್ಲಿ ಯಾರೂ ಇರಲಿಲ್ಲ. ಇವರ ಅರ್ಧಮಟ್ಟಕ್ಕಾದರೂ ನಿಲ್ಲುವ ಮಹಾ ಮಾನವವಾದಿ ಎಂದರೆ ಜಾನ್ ಜಾಕ್ಸ್ ಲುಫೆರ‌್ರೆ. ಇವನ ಹೆಸರು ಲ್ಯಾಟಿನ್ ಭಾಷೆಯಲ್ಲಿ ಫೇಬರ್ ಸ್ಪೆಪುಲೆನ್ಸಸ್ ಎಂದು ಕೂಡ ಇದೆ. ಇವನು ಬೈಬಲನ್ನು ಫ್ರೆಂಚ್‌ಗೆ ತರ್ಜುಮೆ ಮಾಡುವುದರ ಮೂಲಕ ಲೂಥರನಿಗೆ ಮೊದಲೆ ಫ್ರಾನ್ಸ್‌ನಲ್ಲಿ ಸುಧಾರಣೆ ಮುಂದುವರೆಯುವಂತೆ ಮಾಡಿದ್ದನು. ಕ್ರಿಯೆಗಳಿಗಿಂತ ಮಿಗಿಲಾಗಿ ನಂಬಿಕೆಯಿಂದ ಧಾರ್ಮಿಕ ಜೀವನವನ್ನು ನಡೆಸುವುದು ಉತ್ತಮ ಎಂದು ನಂಬಿದ್ದನು. ಇವನ ಶಿಷ್ಯನಾದ ಮೀಕ್ಸ್‌ನ ಬಿಷಪ್ ಗಿಲ್ಲಾಮ್ ಬ್ರಿಕನ್ನೆಟ್ ಎಂಬುವವನು ಸುಧಾರಣೆಯ ಬಗ್ಗೆ ಕೆಲಸ ವನ್ನು ತನ್ನ ಪ್ರಾಂತದಲ್ಲಿ ಕೈಗೊಂಡು, ಸುಧಾರಣೆಯ ಕಾಳಜಿವುಳ್ಳವರನ್ನು ಉತ್ತೇಜಿಸಿದನು. ಇವನು ಎಂದೂ ಕೂಡ ಕ್ಯಾಥೋಲಿಕ್ ಧರ್ಮವನ್ನು ಬಿಟ್ಟು ದೂರ ಸರಿದಿರಲಿಲ್ಲ. ಆದರೆ ಸುಧಾರಣೆಯ ಬೋಧಕರನ್ನು ಉತ್ತೇಜಿಸುವ ಬಗ್ಗೆ ವಿರೋಧ ಬಂದಾಗ ಸ್ವಲ್ಪ ಹಿಂಜರಿದಿದ್ದನು.

ಫ್ರಾನ್ಸ್‌ನ ದೊರೆ ಮೊದಲನೆ ಫ್ರಾನ್ಸಿಸ್ಸನಿಗೆ ಸುಧಾರಣೆಗಳ ಬಗ್ಗೆ ಒಂದೇ ತರಹದ ಧೋರಣೆ ಇರಲಿಲ್ಲ. ರಾಜಕೀಯ ಪರಿಸ್ಥಿತಿಗಳಿಗನುಗುಣವಾಗಿ ನಡೆದುಕೊಳ್ಳುತ್ತಿದ್ದನು. ಆದರೆ ಕ್ರಮೇಣ ಕ್ರೈಸ್ತ ಬಂಡಾಯವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದನು. ಜರ್ಮನಿಯಲ್ಲಿನ ರೈತರ ದಂಗೆ ಅವನನ್ನು ಚಿಂತಿಸುವಂತೆ ಮಾಡಿತ್ತು. ಹೊಸ ಧಾರ್ಮಿಕ ನಂಬಿಕೆಗಳು ತನ್ನ ರಾಜ್ಯದಲ್ಲೂ ಅರಾಜಕತೆಯನ್ನು ಹುಟ್ಟು ಹಾಕಬಹುದೆಂದು ಹೆದರಿದ್ದನು. ತನ್ನ ಆಳ್ವಿಕೆಯ ಅಂತಿಮ ದಿನಗಳಲ್ಲಿ ಧರ್ಮ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣವಾದ ಕಾನೂನುಗಳನ್ನು ಜನಗಳ ಮೇಲೆ ಹೇರಿದರೂ, ಬಂಡಾಯವಾದವು ಫ್ರಾನ್ಸ್‌ನಲ್ಲಿ ಮುಂದುವರೆಯುವುದನ್ನು ಇವನಿಂದ ತಡೆಗಟ್ಟಲಾಗಲಿಲ್ಲ.

ಅಧಿಕಾರ ವಿಕೇಂದ್ರೀಕರಣ ಫ್ರಾನ್ಸಿನಲ್ಲಿ ಅಷ್ಟೇನೂ ಉತ್ತಮವಾಗಿರಲಿಲ್ಲವಾದರೂ, ಕೆಲವೇ ಪ್ರಾಂತ್ಯಗಳು ಹೇಳಬಹುದಾದಷ್ಟು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದವು. ಉದಾ : ದಕ್ಷಿಣ ಪ್ರಾಂತದ ಮಿಡಿ ಮತ್ತು ನವರ‌್ರೆ ಎನ್ನುವ ಪ್ರದೇಶಗಳು. ಈ ಪ್ರದೇಶ ಗಳಲ್ಲೇ ಮೊದಲಿಗೆ ಕ್ರೈಸ್ತಧರ್ಮ ಬಂಡಾಯವಾದ ಆರಂಭವಾದದ್ದು. ಈ ದೃಷ್ಟಿಯಲ್ಲಿ ನೋಡಿದಾಗ ಫ್ರಾನ್ಸ್‌ನಲ್ಲಿನ ಸುಧಾರಣಾ ಚಳವಳಿ ಜರ್ಮನಿಗಿಂತ ಏನೂ ವಿಭಿನ್ನವಾಗಿರಲಿಲ್ಲ.

ಫ್ರಾನ್ಸಿನಲ್ಲಿ ಲೆಫೆರ‌್ರೆ ಮತ್ತು ಬ್ರಕನ್ನೆಟ್‌ರ ಪ್ರಯತ್ನಗಳಿಂದಾಗಿ ಪರಿಸ್ಥಿತಿಯು ಸುಧಾರಣೆಗೆ ಹದವಾಗಿತ್ತು. ರಾಜ ಮೊದಲನೆಯ ಫ್ರಾನ್ಸಿಸ್ ಮತ್ತವನ ಆಂಗೌಲೆಮ್ಮೆಯ ತಂಗಿ ಮಾರ್ಗರೆಟ್ ಅಂಧಶ್ರದ್ಧೆಯ ಚಳವಳಿಕಾರರಿಂದ ಮಾನವೀಯ ಸುಧಾರಕರನ್ನು ರಕ್ಷಿಸಲು ಮಧ್ಯ ಪ್ರವೇಶ ಮಾಡುತ್ತಿದ್ದರು. ಫ್ರಾನ್ಸ್‌ನ ಉದ್ದಗಲಕ್ಕೆ ಲೂಥರನ ಗಾಳಿ ಬೀಸುತ್ತಿದ್ದ ಸಮಯದಲ್ಲಿ ಮೊದಲನೆಯ ಫ್ರಾನ್ಸಿಸ್ಸನು ತನ್ನ ನೀತಿಯಲ್ಲಿ ಏಕಾತ್ಮತೆಯನ್ನು ಅನುಸರಿಸದೆ ಸಮಯಕ್ಕೆ ತಕ್ಕಂತೆ, ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪೋಪನನ್ನು, ಟರ್ಕರನ್ನು, ಲೂಥರನ ಪ್ರಭಾವದ ಜರ್ಮನ್ನರನ್ನು ಅವಲಂಬಿಸುತ್ತಿದ್ದನು. ೧೫೩೪ರಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಪ್ಯಾರಿಸ್ ನಗರವನ್ನು ಆವರಿಸಿತು. ಗೋಡೆಗಳ ಮೇಲೆ ಚೀಟಿಗಳನ್ನು ಅಂಟಿಸಲಾಯಿತು ಮತ್ತು ಸಾರ್ವಜನಿಕರ ಮೇಲೆ ಹಲ್ಲೆ ಶುರುವಾಯಿತು. ಅನಂತರ ಈ ಪರಿಸ್ಥಿತಿಯನ್ನು ಕಠಿಣವಾಗಿ ಹತ್ತಿಕ್ಕುವಾಗ ಬ್ರಕನ್ನೆಟ್ಟ್‌ನು ರಾಜನಿಗೆ ಮಣಿದನು. ಫ್ಯಾರೆಲ್ -ಜಿನೀವಕ್ಕೆ, ಲೆಫೆರೆ-ಸ್ಟ್ರಾಸ್‌ಬರ್ಗ್‌ಗೆ ಕ್ಯಾಲ್ವಿನ್-ಬೇಸೆಲ್‌ಗೆ ಓಡಿ ಹೋದರು. ಮೊದಲನೆಯ ಫ್ರಾನ್ಸಿಸ್‌ನ ಮಗನಾದ ಮೊದಲನೆಯ ಹೆನ್ರಿಯ ಕಾಲದಲ್ಲಿ ಸುಧಾರಕರುಗಳ ಮೇಲಿನ ಹಿಂಸಾಚಾರ ಮತ್ತಷ್ಟು ಹೆಚ್ಚಾಯಿತು. ಒಂದು ವೇಳೆ ರಾಜ ಒಂದನೆಯ ಹೆನ್ರಿ ಸಾಯದಿದ್ದರೆ ಕ್ರೈಸ್ತ ಧರ್ಮ ಬಂಡಾಯವಾದಿಗಳ ಮೇಲಿನ ಹಿಂಸಾಚಾರ ಕಡಿಮೆಯಾಗುತ್ತಲೇ ಇರಲಿಲ್ಲ.

ಫ್ರಾನ್ಸಿನಲ್ಲಿ ಶ್ರೀಮಂತರುಗಳ ನಡುವಿನ ವೈರತ್ವ ಧಾರ್ಮಿಕ ಹೊಡೆದಾಟದ ರೂಪವನ್ನು ತಳೆದಿತ್ತು. ರಾಜಮನೆತನಕ್ಕೆ ಬೆಂಬಲವಾಗಿ ನಿಂತಿದ್ದ ಗೈಸ್‌ರ ಮನೆತನ ಕ್ಯಾಥೊಲಿಕ್ ಪಂಥಕ್ಕೆ ಸೇರಿತ್ತು ಮತ್ತು ಇವರು ಸ್ಪೈಯಿನ್ ದೇಶದವರ ಸಹಾಯ ಪಡೆಯಲು ಸಿದ್ಧನಿದ್ದರು. ಅಂತೆಯೇ ನೌಕಾಬಲದ ಅಧಿಪತಿಯಾಗಿದ್ದ ಕೊಲಿಗ್ನೆ ಕ್ರೈಸ್ತ ಬಂಡಾಯ ಪಂಥಕ್ಕೆ ಸೇರಿದವನಾಗಿದ್ದು, ಇಂಗ್ಲೆಂಡ್ ಮತ್ತು ಜರ್ಮನಿಯ ಸಹಾಯ ಪಡೆಯಲು ಸಿದ್ಧನಿದ್ದನು. ಎರಡನೆಯ ಫ್ರಾನ್ಸಿಸ್‌ನ ಅಧಿಕಾರವಧಿಯಲ್ಲಿ ಗೈಸ್‌ರ ಮನೆತನ ಉನ್ನತ ಮಟ್ಟಕ್ಕೇರಿತ್ತು. ಕಾರಣ ಎರಡನೆಯ ಫ್ರಾನ್ಸಿಸ್‌ನ ಹೆಂಡತಿ ಇವರ ಮನೆತನಕ್ಕೆ ಸೇರಿದವಳಾಗಿದ್ದಳು. ಕ್ರೈಸ್ತ ಬಂಡಾಯವಾದಿಗಳೂ ಅಂದರೆ ಪ್ರಾಟೆಸ್ಟಂಟರು, ಫ್ರಾನ್ಸಿನಲ್ಲಿ ಹುಗೆನಾಟ್ಸ್ ಎಂದೂ ಕೂಡ ಗುರುತಾಗಿದ್ದರು. ಇವರು ತಮಗೆ ಕಾದಿದ್ದ ಹಿಂಸಾಚಾರವನ್ನು ಪರಿಗಣಿಸಿ ಗೈಸ್ ಮನೆತನದ ಮುಖ್ಯರನ್ನು ಕೊಲೆ ಮಾಡಲು ಅಂಬಿಯೋಸ್ ಎಂಬಲ್ಲಿ ಸಂಚು ನಡೆಸಿದ್ದರು. ಆದರೆ ಈ ಸಂಚು ಸಫಲವಾಗಲಿಲ್ಲ. ಎರಡನೆ ಫ್ರಾನ್ಸಿಸ್ಸನು ಮರಣ ಹೊಂದಿದ ನಂತರ ಇವನ ಕಿರಿಯ ತಮ್ಮ ಒಂಬತ್ತನೆಯ ಚಾರ್ಲ್ಸ್ ಪಟ್ಟಕ್ಕೆ ಬಂದನು. ರಾಜಮಾತೆ ಕ್ಯಾಥರೀನ್ ಡಿ ಮೆಡಿಸಿ ಧರ್ಮದ ಹೆಸರಿನಲ್ಲಿ ಯುದ್ಧಗಳಾಗುವುದನ್ನು ತಡೆಗಟ್ಟಲು, ಕ್ರೈಸ್ತ ಬಂಡಾಯವಾದಿಗಳ ವಿಷಯವನ್ನು ತನ್ನ ಕೈಗೆತ್ತಿಕೊಂಡು ಅವರ ಬಗ್ಗೆ ಶಾಂತಿ ನೀತಿಯನ್ನು ತಳೆದು ಪ್ರತ್ಯೇಕವಾದ ಸ್ಥಳಗಳಿಗೆ ಸೀಮಿತವಾದಂತೆ ಸ್ವಲ್ಪ ಸ್ವಾತಂತ್ರ್ಯವನ್ನು ೧೫೬೨ರ ರಾಜಶಾಸನದ ಮೂಲಕ ನೀಡಿದಳು. ಗೊತ್ತುಪಡಿಸಿದ ಧಾರ್ಮಿಕ ವಿಧಿ ನಿಯಮಗಳನ್ನು ಬಿಟ್ಟು ಕ್ರೈಸ್ತ ಬಂಡಾಯವಾದಿಗಳು ತಮ್ಮದೇ ರೀತಿಯ ಆಚರಣೆ ವಿಧಿಗಳನ್ನು ನಡೆಸುತ್ತಿದ್ದಾರೆ ಎಂದು ಗೈಸ್‌ನ ಮನೆತನದ ಫ್ರಾಂಕಾಯಿಸ್ ಗೈಸ್‌ಗೆ ತಿಳಿದಾಗ ಯುದ್ಧ ಆರಂಭವಾಯಿತು. ಸುಮಾರು ಹತ್ತು ವರ್ಷಗಳ ಕಾಲ ಯುದ್ಧ ಉಗ್ರವಾಗಿಯೇ ನಡೆಯಿತು. ಇದನ್ನು ಕಂಡ ರಾಜಮಾತೆ ಕ್ಯಾಥರೀನಳು ತನ್ನ ಮಗಳಾದ ಮಾರ್ಗರೆಟ್ಟಳನ್ನು ನವರ‌್ರೆಯಾ ಜಾನ್ ಡಿ ಆಲ್ಬರ್ಟ್‌ನ ಮಗನಾದ, ಬೋರ್ಬನ್ ವಂಶಕ್ಕೆ ಸೇರಿದ ಮತ್ತು ಕ್ರೈಸ್ತ ಬಂಡಾಯವಾದಿಗಳ ಭರವಸೆಯೂ ಆಗಿದ್ದ, ಹೆನ್ರಿಗೆ ಕೊಟ್ಟು ಮದುವೆ ಮಾಡಿದಳು. ಮದುವೆಯ ಸಂದರ್ಭದಲ್ಲಿ ಕೋಲಿಗ್ನೆಯನ್ನು ಹತ್ಯೆ ಮಾಡಲು ಗೈಸ್‌ನ ಸಂಸ್ಥಾನಿಕ ಪ್ರಯತ್ನಪಟ್ಟನಾದರೂ ಸಫಲವಾಗಲಿಲ್ಲ. ಅನಂತರ ೧೫೭೨ರ ಆಗಸ್ಟ್ ತಿಂಗಳಲ್ಲಿ ಸೈಂಟ್ ಬಾರ್ಥಲೋಮಿಯೋ ಬಳಿ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ಗೈಸನು ಕ್ರೈಸ್ತ ಬಂಡಾಯವಾದಿಗಳ ಮುಖಂಡರೆಲ್ಲರನ್ನೂ ನಿರ್ನಾಮ ಮಾಡಲು ಪ್ರಯತ್ನಿಸಿದನು. ಇನ್ನೂ ಕೆಲವೆಡೆ ಇಂಥವೇ ಹತ್ಯಾಕಾಂಡ ನಡೆದವು. ಒಂಬತ್ತನೆಯ ಚಾರ್ಲ್ಸ್‌ನ ತಮ್ಮ ಮೂರನೆಯ ಹೆನ್ರಿ ೧೫೭೪ರಲ್ಲಿ ಪಟ್ಟಕ್ಕೆ ಬಂದನು. ನವರ‌್ರೆಯ ಬಂಡಾಯವಾದಿಗಳು ರಾಜನ ಜತೆ ಕೈಗೂಡಿಸುವುದರ ಮುಖಾಂತರ ಇವನು ರಾಜ್ಯಭಾರವನ್ನು ಸುಗಮವಾಗಿ ನಡೆಸಲು ಯತ್ನಿಸಿದನು. ಕ್ಯಾಥೋಲಿಕ್ ಕೋಮುವಾದಿ ಯೊಬ್ಬನು ರಾಜನನ್ನು ಕೊಲೆಗೈದನು. ನವರ‌್ರೆಯ ಹೆನ್ರಿಯು ನಾಲ್ಕನೆಯ ಹೆನ್ರಿಯಾದನು. ಆದರೆ ಇವನು ಕ್ರೈಸ್ತ ಬಂಡಾಯವಾದಿಯಾಗಿರುವ ತನಕವೂ ಪ್ಯಾರಿಸ್‌ನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಮತ್ತು ಫ್ರಾನ್ಸನ್ನು ಆಳಲು ಸಾಧ್ಯವಾಗಲಿಲ್ಲ. ಕ್ರೈಸ್ತ ಬಂಡಾಯವಾದಿ ಗಳೊಡನೆ ಸಹಿಷ್ಣುತೆ ಸಾಧಿಸುವ ಸಲುವಾಗಿ ರೋಮಿನ ಸಹಕಾರವನ್ನು ಪಡೆದುಕೊಂಡು ನೆಂಟಸ್ ಎಂಬಲ್ಲಿ, ೧೫೯೮ರಲ್ಲಿ ಒಂದು ಶಾಸನವನ್ನು ಹೊರಡಿಸಿದನು. ಇದರ ಪ್ರಕಾರ, ಕೆಲವೇ ಸ್ಥಳಗಳಲ್ಲಿ ಕ್ರೈಸ್ತ ಬಂಡಾಯವಾದಿಗಳು ತಮ್ಮ ಆರಾಧನೆಗಳನ್ನು ನಡೆಸಿಕೊಳ್ಳಲು ಮತ್ತು ಸಾರ್ವಜನಿಕ ಜೀವನವನ್ನು ನಡೆಸಲು ಹಕ್ಕನ್ನು ನೀಡಿದನು. ಈ ಕಾನೂನು ೧೬೮೫ ರವರೆಗೆ ಜಾರಿಯಲ್ಲಿದ್ದಿತು.

ಇಂಗ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್‌ಗಳಲ್ಲಿ ಸುಧಾರಣೆ

ಇಂಗ್ಲೆಂಡ್‌ನಲ್ಲಿ ಸುಧಾರಣೆಯು ಧಾರ್ಮಿಕವಾಗಿರದೆ ಮೂಲತಃ ರಾಜಕೀಯವಾಗಿತ್ತು. ಅಂದರೆ ಇದು ಇಂಗ್ಲೆಂಡಿನ ರಾಜ ಮತ್ತು ಪೋಪನ ನಡುವಿನ ಜಗಳವಾಗಿತ್ತು. ಇಂಗ್ಲೆಂಡಿನ ರಾಜನು ತನ್ನ ದೇಶದ ಸಿಂಹಾಸನವನ್ನೇರಲು ಒಬ್ಬ ಉತ್ತರಾಧಿಕಾರಿಯನ್ನು ತರಬೇಕಾಗಿತ್ತು. ಫ್ರಾನ್ಸಿನಲ್ಲಿರುವಂತೆ ಸ್ತ್ರೀಯರು ಇಂಗ್ಲೆಂಡಿನಲ್ಲಿ ಪಟ್ಟವನ್ನೇರುವಂತಿರಲಿಲ್ಲ. ಎಂಟನೆಯ ಹೆನ್ರಿಯ ಹೆಂಡತಿ ಆರೆಗಾನಿನ ಕ್ಯಾಥರೀನ್ ಸುಮಾರಷ್ಟು ಮಕ್ಕಳನ್ನು ಹಡೆದಿದ್ದಳಾದರೂ ಬದುಕುಳಿದವಳು ರಾಜಕುಮಾರಿ ಮೇರಿ ಮಾತ್ರ. ಒಂದು ಮದುವೆಯನ್ನು ಅನೂರ್ಜಿತಗೊಳಿಸಬೇಕಿದ್ದರೆ ಮದುವೆಯಲ್ಲಿ ನಡೆದಿರಬಹುದಾದ ಒಂದು ತಪ್ಪನ್ನು ಮುಖ್ಯವಾಗಿ ತೋರಿಸಬೇಕಿತ್ತು. ಕ್ಯಾಥರೀನಳು ಹೆನ್ರಿಯ ತಮ್ಮನಾದ ಆರ್ಥರ್‌ನ ಜತೆ ಮೊದಲೇ ವಿವಾಹವಾಗಿದ್ದುದು ಇವಳ ಮದುವೆಯಲ್ಲಿದ್ದ ದೋಷವಾಗಿತ್ತು. ಇಂಗ್ಲೆಂಡಿನ ಶಾಸನದ ‘ಲೆವಿಟಿಕಸ್’ ಎನ್ನುವ ಪುಸ್ತಕದ ಪ್ರಕಾರ ಸತ್ತು ಹೋದ ಸಹೋದರನ ಪತ್ನಿಯೊಡನೆ ನಡೆಯುವ ವಿವಾಹ ಕಾನೂನು ಬಾಹಿರವಾದದ್ದು. ಆದರೆ, ಮದುವೆಯ ಸಂದರ್ಭದಲ್ಲಿ ಕಾನೂನನ್ನು ತಿದ್ದುಪಡಿ ಮಾಡಿ ಮದುವೆ ನಡೆಸಲಾಗಿತ್ತು. ಆದ್ದರಿಂದ ಸದ್ಯದ ಪ್ರಶ್ನೆ ದೈವದತ್ತವಾದ ಕಾನೂನುಗಳನ್ನು ಬದಲು ಮಾಡಲು, ಪೋಪನಿಗೆ ಅಧಿಕಾರವಿದೆಯೇ ಎನ್ನುವುದಾಗಿತ್ತು. ಅರ್ಥರ್‌ನ ಜೊತೆ ತನ್ನ ಮದುವೆ ಪೂರ್ಣವಾಗಿರಲಿಲ್ಲ. ಆದ್ದರಿಂದ ತನ್ನಿಂದ ಹೆನ್ರಿಗೆ ಯಾವ ತೊಂದರೆಯೂ ಆಗುವುದಿಲ್ಲ ಎನ್ನುವುದು ಈ ವಿಷಯದಲ್ಲಿ ಕ್ಯಾಥರೀನಳ ವಾದವಾಗಿತ್ತು. ಇದೂ ಅಲ್ಲದೆ, ಚಕ್ರವರ್ತಿ ಐದನೆಯ ಹೆನ್ರಿಯ ಚಿಕ್ಕಮ್ಮ ಕ್ಯಾಥರೀನ್ ಆಗಿದ್ದಳು ಹಾಗೂ ಪೋಪನು ಚಕ್ರವರ್ತಿಯ ಕೈಗೊಂಬೆ ಯಾಗಿದ್ದನು. ಈ ಪರಿಸ್ಥಿತಿಯಲ್ಲಿ ಕ್ಯಾಥರೀನಳು ನಿರ್ಗತಿಕಳಾಗುವುದು ಯಾರಿಗೂ ಇಷ್ಟವಿರಲಿಲ್ಲ. ಪೋಪ್ ಏಳನೆಯ ಕ್ಲೆಮಾಂತನು ಚಕ್ರವರ್ತಿಯ ಮನಸ್ಸನ್ನು ಅಸಂತೋಷ ಗೊಳಿಸಲು ಬಯಸಲಿಲ್ಲವಾದ್ದರಿಂದ ಈ ವಿಷಯದ ಮೇಲೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದನ್ನು ಎಷ್ಟೊಂದು ತಡ ಮಾಡಿದನೆಂದರೆ, ಎಂಟನೆಯ ಹೆನ್ರಿಯು ಎಲ್ಲಾ ವಿಷಯಗಳನ್ನು ತನ್ನ ಕೈಗೆತ್ತಿಕಂಡು, ಪೋಪನ ಅಧಿಕಾರವನ್ನು ಮೊಟಕುಗೊಳಿಸಿ, ೧೫೩೪ರಲ್ಲಿ ಒಂದು ಶಾಸನವನ್ನು ಜಾರಿಗೊಳಿಸಿ, ಆ ಮೂಲಕ ಆಂಗ್ಲಿಕನ್ ಚರ್ಚನ್ನು ತನ್ನ ಹತೋಟಿಗೆ ತೆಗೆದುಕೊಂಡು ರಾಜನೇ ಅದರ ಮುಖ್ಯಸ್ಥನೆಂದು ಘೋಷಿಸಿದನು. ಚರ್ಚಿನ ಧರ್ಮಗುರು ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ಪನು ಹೆನ್ರಿಯ ಮದುವೆಯನ್ನು ಆನ್ನೆ ಬೋಲೆಯನ್ ಎಂಬುವಳ ಜತೆ ನಡೆಸಿದನು. ಇವಳು ರಾಜಕುಮಾರಿ ಎಲಿಜಬೆತ್ತಳಿಗೆ ಜನ್ಮವಿತ್ತಳು. ರಾಜ ಹೆನ್ರಿಯು ಮತ್ತೋರ್ವ ರಾಣಿಯಿಂದ ಮಾತ್ರ ಗಂಡು ಮಗುವಿಗೆ ತಂದೆಯಾದನು. ಆ ಗಂಡು ಮಗನೇ ಕ್ರಮೇಣ ಆರನೆಯ ಎಡ್ವರ್ಡ್ ಅಗಿ ಅವನ ನಂತರ ಪಟ್ಟಕ್ಕೇರಿದನು.

ಹೆನ್ರಿಯ ಮುಖ್ಯ ಉದ್ದೇಶ ರಾಜಕೀಯವೇ ಆಗಿದ್ದರೂ ಅವನು ಚರ್ಚಿನ ವ್ಯವಸ್ಥೆ ಯಲ್ಲಿ ತಂದ ಬದಲಾವಣೆಗಳು ಕ್ರಮೇಣ ಚರ್ಚಿನಲ್ಲಿ ಧಾರ್ಮಿಕ ಬದಲಾವಣೆಗಳನ್ನು ತರಲು ಅನುವು ಮಾಡಿಕೊಟ್ಟಿತು. ಲೂಥರನ ಚಳವಳಿ ಮತ್ತು ಈರಾಸ್ಮಸ್‌ನ ಕ್ರೈಸ್ತ ಮಾನವೀಯತೆಯ ಪ್ರಭಾವ ಇದಕ್ಕೆ ಭಾಗಶಃ ಕಾರಣವಾಯಿತು. ಹೆನ್ರಿಯ ಆಡಳಿತಾವಧಿ ಯಲ್ಲಿ ಕ್ರೈಸ್ತ ಮಠಗಳ ಅಧಿಕಾರವು ಕಡಿತವಾಗಿತ್ತು. ಸ್ಥಳೀಯ ಭಾಷೆಯ ಬೈಬಲ್‌ಗಳು ಚರ್ಚಿನಲ್ಲಿ ಬಳಕೆಯಾದುವು. ಕ್ರೈಸ್ತ ಪುರೋಹಿತರುಗಳಿಗೆ ಮದುವೆಯಾಗುವ ಅವಕಾಶವಿತ್ತು (ಕ್ರಮೇಣ ತೆಗೆದು ಹಾಕಲಾಯಿತು). ಹೆನ್ರಿಯು ಯಾರ ಪರವನ್ನು ವಹಿಸದೆ ವಸ್ತುನಿಷ್ಟ ನಾಗಿದ್ದನು ಹಾಗೂ ತನ್ನ ಚರ್ಚಿನ ಕ್ರಾಂತಿಕಾರಕ ಸುಧಾರಣೆಯನ್ನು ಒಪ್ಪದ ಲೂಥರನ್ನು ಮತ್ತು ಚರ್ಚಿನ ಮೇಲಿನ ರಾಜಪ್ರಭುತ್ವವನ್ನು ಒಪ್ಪದ ಕ್ಯಾಥೋಲಿಕ್ಕರನ್ನು ಸುಟ್ಟು ಹಾಕಿದನು. ಹೀಗೆ ಅವನ ಶಿಕ್ಷೆಗೆ ಗುರಿಯಾದವರೆಂದರೆ ಜಾನ್ ಫಿಶರ್ ಮತ್ತು ಥಾಮಸ್ ಮೂರ್.

ಸುಧಾರಣೆಯು ರಾಜಕುಮಾರ ಆರನೆಯ ಎಡ್ವರ್ಡ್‌ನ ಕಾಲದಲ್ಲಿ ಇನ್ನೂ ಬಂಡಾಯ ತರವಾದ ಉಗ್ರ ರೂಪವನ್ನು ತಳೆಯಿತು. ಸಾಮಾನ್ಯ ಪ್ರಾರ್ಥನಾ ಪುಸ್ತಕವನ್ನು ಎರಡು ಸಂಪಾದನೆಗಳಲ್ಲಿ ಬಳಕೆಗೆ ತರಲಾಯಿತು. ಇವನ ನಂತರ ಸ್ಪೈಯಿನಿನ ಎರಡನೆಯ ಫಿಲಿಪ್ಸ್‌ನನ್ನು ವಿವಾಹವಾದ ರಾಜಕುಮಾರಿ ಮೇರಿಯು ಪಟ್ಟಕ್ಕೇರಿದಳು. ಇವಳು ಚರ್ಚಿ ನಲ್ಲಿ ಮತ್ತೆ ಕ್ಯಾಥೋಲಿಕ್ ಧರ್ಮವನ್ನು ಜಾರಿಗೊಳಿಸಿದಳು ಮತ್ತು ಸುಮಾರು ೨೮೮ ಮಂದಿ ಆಂಗ್ಲಿಕನ್ ಚರ್ಚಿನ ನಾಯಕರನ್ನು ಬಹಿರಂಗವಾಗಿ ಸುಟ್ಟು ಹಾಕಿಸಿದಳು. ಹೀಗೆ ಸತ್ತವರಲ್ಲಿ ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ಪನೂ ಸೇರಿದ್ದನು. ೧೫೫೮ರಲ್ಲಿ ಎಲಿಜಬೆತ್ ರಾಣಿಯು ಸಿಂಹಾಸನಾರೂಢಳಾಗುವುದರ ಜತೆಗೆ ಮಿತವಾದ ಕ್ರೈಸ್ತ ಬಂಡಾಯವಾದವನ್ನು ಬೆಳೆಸಿದಳು. ಈ ಮಿತ ಬಂಡಾಯವಾದಕ್ಕೆ ದೇಶೀಯ ಅಂಶಗಳು ಸೇರಿಕೊಂಡು, ರಾಷ್ಟ್ರೀಯವಾದ ಚರ್ಚೊಂದು ಬೆಳೆಯಲು ಸಾಧ್ಯವಾಯಿತು. ಎಲಿಜಬೆತ್ ರಾಣಿಯ ಆಡಳಿತಾವಧಿ ಸುಮಾರು ೪೫ ವರ್ಷಗಳಾದರೆ, ಮೇರಿಯದು ಕೇವಲ ಐದು ವರ್ಷ ವಾಗಿತ್ತು. ಎಲಿಜಬೆತ್ ರಾಣಿಯ ಉದ್ದೇಶ ರಾಜಕೀಯವಾಗಿತ್ತು. ಪೋಪನಿಗೆ ಎಲಿಜಬೆತ್ತಳ ಮೇಲೆ ಬಹಿಷ್ಕಾರ ಹಾಕಲು ಮತ್ತು ಇವಳ ಪ್ರಜೆಗಳನ್ನು ಚರ್ಚಿನಿಂದ ಹೊರಹಾಕಲು ಸ್ವಾತಂತ್ರ ಇತ್ತು. ಆದ್ದರಿಂದ ಪೋಪನಿಗೆ ವಿಧೇಯತೆ ತೋರುವುದು ಎಂದರೆ ರಾಣಿಯನ್ನು ತಿರಸ್ಕರಿಸಿದಂತೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲಿಜಬೆತ್ ರಾಣಿಯ ಆಳ್ವಿಕೆ ನಡೆಯಿತು.

ಇತಿಹಾಸದ ದೃಷ್ಟಿಯಲ್ಲಿ ತುಂಬ ಪ್ರಭಾವಿಯುತನೂ ಮತ್ತು ಶಕ್ತಿಶಾಲಿಯೂ ಆದ ಜಾನ್‌ಸನ್ ಎಂಬುವವನು ಸ್ಕಾಟ್‌ಲೆಂಡಿನಲ್ಲಿ ಧಾರ್ಮಿಕ ಸುಧಾರಣೆಯನ್ನು ಮಾಡಿದವರಲ್ಲಿ ಅತಿ ಮುಖ್ಯನಾದವನು. ಸುಮಾರು ೧೫೦೫ ರಿಂದ ೧೫೧೫ರೊಳಗೆ ಹ್ಯಾಡಿಂಗ್ಟನ್ ಎಂಬಲ್ಲಿ ಜನ್ಮ ತಳೆದ ಇವನನ್ನು ಪಾದ್ರಿಯನ್ನಾಗಿ ಮಾಡಲಾಗಿತ್ತು. ಧಾರ್ಮಿಕ ಸುಧಾರಣೆಯ ಇತಿಹಾಸವೆಂಬ ತನ್ನ ಆತ್ಮ ಕಥನದಲ್ಲಿ ಇವನ ಯೌವ್ವನ ಕಾಲದ ಬಗ್ಗೆ ಏನನ್ನೂ ಬರೆಯಲಾಗಿಲ್ಲ. ಆದರೆ ಏಕಾಕಿ ಇವನನ್ನು ಜಾರ್ಜ್ ವಿಷಾರ್ಟ್ ಎಂಬುವವನ ಪರಮಶಿಷ್ಯನೆಂದೂ ಮತ್ತು ಅವನ ಕೆಚ್ಚೆದೆಯ ಅಂಗರಕ್ಷಕನಾಗಿದ್ದನು ಎಂಬುದಾಗಿ ಪರಿಚಯ ಮಾಡಿಕೊಡಲಾಗಿದೆ. ವಿಷಾರ್ಟ್‌ನ ಬಂಧನವಾದ ನಂತರ ನಾಕ್ಸ್ ಅಲೆಮಾರಿ ಯಾದನು ಮತ್ತು ಧರ್ಮ ಅನ್ವೇಷಣೆಯಲ್ಲಿ ಪೋಪನ ರಾಯಭಾರಿಯಾದ ಬೀಟನ್‌ನನ್ನು ಕೊಲೆ ಮಾಡಿದ ಗುಂಪಿಗೆ ಸೇರಿಕೊಂಡನು. ಈ ಗುಂಪಿನ ಜನರು ಇವನೇ ತಮ್ಮ ನಾಯಕನಾಗಬೇಕು ಎಂದು ಬಯಸಿದಾಗ ಒಪ್ಪಿಕೊಂಡನು. ಮೈನವಿರೇಳುವಂತೆ ಮಾಡುವ ಇವನ ಬೋಧನೆಯನ್ನು ಅವರೆಂದೂ ಕೇಳೇ ಇರಲಿಲ್ಲ. ರೋಮನ್ ಚರ್ಚು ಸೈತಾನದ ದೇವಸ್ಥಾನ ಮತ್ತು ಬೈಬಲ್ಲಿನ ಭವಿಷ್ಯ ದರ್ಶನದ ಭಾಗದಲ್ಲಿ ಬಣ್ಣಿಸಲಾಗಿರುವ ಭಯಾನಕವಾದ ಪ್ರಾಣಿ ಎಂದು ಚರ್ಚನ್ನು ಖಂಡಿಸಿದನು.

ಮನುಷ್ಯನು ತನ್ನ ನಂಬಿಕೆಯಿಂದ ಮತ್ತು ಕ್ರಿಸ್ತನು ಶಿಲುಬೆಯ ಮೇಲೆ ಎಲ್ಲ ಜನರಿಗಾಗಿ ಸುರಿಸಿದ ರಕ್ತದಿಂದಾಗಿ ಮುಕ್ತಿಯನ್ನು ಪಡೆಯುತ್ತಾನೆ ಎನ್ನುವ ಲೂಥರನ ವಾದದಲ್ಲಿ ನಂಬಿಕೆಯಿಟ್ಟಿದ್ದನು. ಫ್ರಾನ್ಸ್ ದೇಶದ ನೌಕಾಬಲದಲ್ಲಿ ಹುಟ್ಟು ಹಾಕುವ ಗುಲಾಮನಾಗಿ ಕೆಲಸ ಮಾಡಿದ ನಂತರ, ನಾಕ್ಸ್ ಬಂಡಾಯ ಕ್ರೈಸ್ತರ ಪುರೋಹಿತನಾಗಿ ಇಂಗ್ಲೆಂಡಿನಲ್ಲಿ ಸೇವೆ ಸಲ್ಲಿಸಿದನು. ೧೫೫೧ರಲ್ಲಿ ಆರನೆಯ ಎಡ್ವರ್ಡ್‌ನ ಸಮ್ಮುಖದಲ್ಲಿ ನಾರ್ಥಂಬರ್-ಲ್ಯಾಂಡ್‌ನಲ್ಲಿ ಭಾಷಣ ಮಾಡುವಾಗ ತುಂಬ ಆಚಾರವಂತರಾಗಿರುವ ರಾಜಕುಮಾರರುಗಳೇ ಅನಾಚಾರವನ್ನು ಆಚರಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿದನು. ಸಂಸ್ಥಾನಿಕನು ಇವನ ಬಾಯಿ ಮುಚ್ಚಿಸಲು ಪ್ರಯತ್ನಪಟ್ಟರೂ ಸಫಲವಾಗಿಲಿಲ್ಲ. ಆದರೆ ಮೇಲೆ ಟ್ಯೂಕರ್ ಅತಿ ಭಯಾನಕಳಾಗಿದ್ದಳು. ನಾಕ್ಸ್ ಜಿನೀವ ನಗರಕ್ಕೆ ಓಡಿ ಹೋದನು. ಅವನ ಮುಖ ತುಂಬ ಭಯಾನಕವಾಗಿದ್ದರಿಂದ(ಜಿನೀವ ನಗರದಲ್ಲಿ ನಾಗರಿಕರನ್ನು ಆಯ್ಕೆ ಮಾಡುವ ರೀತಿ ಜಾರಿಯಲ್ಲಿ ಇದ್ದುದರಿಂದ), ಇವನನ್ನು ನಗರದಿಂದ ಹೊರಹಾಕಿದರು. ಸ್ಕಾಟ್‌ಲ್ಯಾಂಡಿನಲ್ಲಿ ಕ್ಯಾಥೋಲಿಕ್ಕಳಾದ ಮೇರಿ ಸ್ಟುರ್ಟ್‌ಳ ಆಡಳಿತಾವಧಿಯಲ್ಲಿ ಬರ್ಬರತೆ ನಡೆಯಬಹುದೆಂದು ನಿರೀಕ್ಷಿಸಿ ಅವಳ ಶಾಸನಗಳನ್ನು ಉಲ್ಲಂಘಿಸಿದನು. ಇವನೋರ್ವ ಸಾಮಾನ್ಯ ಮನುಷ್ಯನಾಗಿದ್ದರೂ, ಸ್ಕಾಟ್‌ಲ್ಯಾಂಡೆಲ್ಲವೂ ತನ್ನ ವೈಯಕ್ತಿಕ ಸ್ವತ್ತು ಎನ್ನುವ ಧಾಟಿಯಲ್ಲಿ ರಾಣಿಯನ್ನು ಮಾತನಾಡಿಸಿದನು. ೧೫೬೦ಕ್ಕೆ ಮೊದಲು ಕೆಳ ಪ್ರದೇಶಗಳು ಜಾನ್ ಕ್ಯಾಲ್ವಿನ್ನನ ಧರ್ಮಾಚರಣೆಗೆ ಮತಾಂತರಗೊಂಡಿದ್ದವು. ಸಮಾನ ಪದವಿಯುಳ್ಳ ಆಡಳಿತಾಧಿಕಾರಿಗಳನ್ನೊಳಗೊಂಡ ಅಧಿಕಾರ ವ್ಯವಸ್ಥೆಯನ್ನು ಚರ್ಚಿಗೆ ಕಲ್ಪಿಸಲಾಗಿತ್ತು. ಚರ್ಚಿಗೆ ಒಂದು ಸಾಮಾನ್ಯ ಸಭೆಯು ಇತ್ತು. ಈ ಸಭೆಗೆ, ಸಂಸತ್ತಿಗೆ ಇರುವಷ್ಟೇ ಅಧಿಕಾರವಿತ್ತು. ತನ್ನ ಮತಿಹೀನತೆಯಿಂದಾಗಿ ಮತ್ತು ಅಪರಾಧಗಳಿಂದಾಗಿ ಮೇರಿಯು ಇಂಗ್ಲೆಂಡಿನಲ್ಲಿ ಪ್ರಾಣ ರಕ್ಷಣೆ ಪಡೆಯಬೇಕಾದ ದುಸ್ಥಿತಿ ಒದಗಿ ಬಂತು. ಮೇರಿಯ ದೆಸೆಯಿಂದಾಗಿ ಎಲಿಜಬೆತ್ ರಾಣಿಯನ್ನು ಕೊಲೆ ಮಾಡಲು ಸಂಚುಗಳು ನಡೆದವು. ಕಡೆಗೆ ಸ್ಕಾಟ್‌ಲ್ಯಾಂಡಿನಲ್ಲಿ ಸಂಸತ್ತು ಅಸ್ತಿತ್ವಕ್ಕೆ ಬಂತು. ಇದರಿಂದಾಗಿ ಕ್ರಮೇಣ ಇಂಗ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್‌ಗಳು ಒಂದಾಗಲು ಸಾಧ್ಯವಾಯಿತು.

ಐರೋಪ್ಯ ಖಂಡದ ಉದ್ದಗಲಕ್ಕೆ ನಡೆಯುತ್ತಿದ್ದ ಧಾರ್ಮಿಕ ಸುಧಾರಣೆಯ ಚಳವಳಿ ಇಂಗ್ಲೆಂಡಿನಲ್ಲಿ ನಿಜವಾದ ಅರ್ಥದಲ್ಲಿ ಶುರುವಾದದ್ದು ೧೭ನೆಯ ಶತಮಾನದಲ್ಲಿ ಮಾತ್ರ. ಏಕೆಂದರೆ, ಸಾಮಾನ್ಯ ಜನರು ಧಾರ್ಮಿಕ ವಿಷಯಗಳಲ್ಲಿ ವಿಪರೀತವಾಗಿ ಪಾಲ್ಗೊಂಡು ಹತ್ತು ಹಲವಾರು ಪಂಥಗಳಾಗಿ ಹರಿದು ಹಂಚಿ ಹೋಗಿದ್ದು ಇದೇ ಕಾಲದಲ್ಲಿ. ಇಂಗ್ಲೆಂಡಿನ(ಬಾಪ್ಟಿಸ್ಟರು) ದೀಕ್ಷಾವಾದಿಗಳು ಬಾಲ್ಯದಲ್ಲಿ ಕ್ರೈಸ್ತ ಧರ್ಮ ದೀಕ್ಷೆ ಕೊಡುವುದನ್ನು ತಿರಸ್ಕರಿಸಿದರು ಹಾಗೂ ಜಾನ್‌ಫಾಕ್ಸ್‌ನ ಹಿಂಬಾಲಕರಾದ ಕ್ಪೇಕರ್ಸ್ ಮಿತ್ರ ಮಂಡಲಿಯವರು ಯುದ್ಧ ಮತ್ತು ಪ್ರಮಾಣವಚನ ಸ್ವೀಕರಿಸುವುದನ್ನು ತಿರಸ್ಕರಿಸಿದ್ದರು. ಐದನೆಯ ರಾಜಪ್ರಭುತ್ವದ ಜನರು ಶಸ್ತ್ರಾಸ್ತ್ರ ದಂಗೆಯನ್ನು ಆಹ್ವಾನಿಸಿದ್ದರು. ಧರ್ಮ ದೀಕ್ಷಾವಾದಿಗಳು, ಕ್ರೈಸ್ತಮತದ ನ್ಯಾಯ ನಿರ್ಣಯಾಧಿಕಾರಿಗಳು ಮನಃಪೂರ್ವಕವಾಗಿ ಒಪ್ಪಿ, ನಂಬಿಕೆಯಿರುವವರು ಮಾತ್ರ ಚರ್ಚಿನಲ್ಲಿ ಸೇರಬೇಕು ಎನ್ನುವ ವ್ಯವಸ್ಥೆಗಾಗಿ ಒತ್ತಾಯಪಡಿಸಿದ್ದರು. ಆದರೆ ಇವರೆಲ್ಲರೂ ಕೂಡ ಇಂಗ್ಲಿಷ್ ಚರ್ಚಿನಲ್ಲಿ ಪೋಪನ ಅಧಿಕಾರ ವ್ಯವಸ್ಥೆಯನ್ನು ತೀವ್ರವಾಗಿ ಪ್ರಶ್ನಿಸಿದ್ದರು.

ಈ ಭಿನ್ನವಾದ ವಾದಗಳು ಬಹುಧರ್ಮೀಯ ಸಮಸ್ಯೆಗೆ ಎಡೆಮಾಡಿಕೊಟ್ಟವಲ್ಲದೆ, ರಾಷ್ಟ್ರದಲ್ಲಿ ಆಂತರಿಕ ಯುದ್ಧ ಆರಂಭವಾಗಲು ಕಾರಣವಾದವು. ಇದು ಕ್ರಮೇಣ ಧಾರ್ಮಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂಥ್ರ್ಯವನ್ನು ಮೊಟಕುಗೊಳಿಸಬೇಕೆನ್ನುವ ಬೇಡಿಕೆಗೆ ದಾರಿಮಾಡಿಕೊಟ್ಟಿತು.

ದಂಗೆಯು ತನ್ನದೇ ಆದ ರೀತಿ ರಿವಾಜುಗಳಲ್ಲಿ ನಡೆಯುತ್ತದೆ. ಇದು ಇಂಗ್ಲೆಂಡಿನಲ್ಲೂ ನಡೆಯಿತು. ಮೊದಲಿಗೆ ರಾಜನು ದುಷ್ಟ ಸಲಹೆಗಾರರಿಂದ ಸುತ್ತುವರಿದಿದ್ದಾನೆ ಎನ್ನುವ ಮಾತು ಹೆಚ್ಚಿತು. ಅನಂತರ ರಾಜನನ್ನು ಸಂಸತ್ತು (ಪಾರ್ಲಿಮೆಂಟ್) ನಿಯಂತ್ರಿಸಬಹುದಾಗಿದೆ ಎಂಬ ಅಭಿಪ್ರಾಯ ಬಂತು. ನಂತರ ಸಂಸತ್ತು ಉನ್ನತವಾದದ್ದು, ಇದಕ್ಕೆ ರಾಜನ ಜೀವವನ್ನು ಬೇಕಾದರೂ ತೆಗೆಯುವ ಹಕ್ಕಿದೆ ಎಂಬ ಅಭಿಪ್ರಾಯ ಹುಟ್ಟಿಬಂತು. ಒಂದನೆಯ ಚಾರ್ಲ್ಸ್‌ನ ಮರಣ ದಂಡನೆಯಾದ ನಂತರ, ಒಂದನೆಯ ಜೇಮ್ಸ್‌ನ ಉತ್ತರಾಧಿಕಾರಿ ಕ್ರಾಂವೆಲ್ ಎಂಬುವನು ರಾಷ್ಟ್ರೀಯ ಧರ್ಮ ವ್ಯವಸ್ಥೆಯೊಂದನ್ನು ಸ್ಥಾಪಿಸಿದನು. ಇವನು ಸ್ಥಾಪಿಸಿದ ವ್ಯವಸ್ಥೆಯಲ್ಲಿ ಮೂರು ಮುಖ್ಯವಾದ ಅಂಶಗಳಿದ್ದವು: ಪ್ರೆಸ್ಟಿಟೇರಿಯನ್ಸ್, ಕಾಂಗ್ರಿಗೇಷನಲಿಸ್ಟ್, ಬಾಪ್ಟಿಸ್ಸ್ ಅಂದರೆ ಕ್ರಮವಾಗಿ, ಸಮಾನ ಪದವಿಯ ಮಠದ ಹಿರಿಯರು, ಕ್ರೈಸ್ತ ಧರ್ಮ ನ್ಯಾಯಾಧಿಕಾರಿಗಳು ಮತ್ತು ದೀಕ್ಷಾವಾದಿಗಳು. ಕ್ಯಾಥೋಲಿಕ್ಕರನ್ನು ಮತ್ತು ಕ್ರೈಸ್ತ ಧರ್ಮದಲ್ಲಿ ಒಂದೇ ದೇವರೆಂದು ವಾದಿಸುವ ಯುನಿಟೇರಿಯನ್ನರನ್ನು, ಕ್ಪೇಕರ್ಸ್- ಜಾನ್ ಫಾಕ್ಸ್‌ನ ಅನುಯಾಯಿಗಳನ್ನು ಪ್ರಮಾಣವಚನ ಸ್ವೀಕರಿಸಲು ಧಿಕ್ಕರಿಸಿದ ತಾತ್ವಿಕ ನೆಲೆಯ ಮೇಲೆ ಧರ್ಮದಿಂದ ಹೊರಗಿಡಲಾಯಿತು.

ಎರಡನೆಯ ಚಾರ್ಲ್ಸ್‌ನ ಆಡಳಿತಾವಧಿಯು ತಾಳ್ಮೆ ಮತ್ತು ಸಹಿಷ್ಣುತೆಯ ಆಧಾರದ ಮೇಲೆ ಶುರುವಾದ ಕೂಡಲೆ ಮುರಿದು ಬಿತ್ತು. ಕಾರಣ, ಕ್ಯಾಥೋಲಿಕ್ಕರನ್ನು ಧರ್ಮಕ್ಕೆ ಸೇರ್ಪಡೆ ಮಾಡಿದ್ದನ್ನು ಜನರು ಸಹಿಸಲಿಲ್ಲ. ಸ್ಪಷ್ಟ ಮತ್ತು ನಿರ್ದಿಷ್ಟವಾದ ಶಾಸನವು ವಿಲಿಯಂ ಮತ್ತು ಮೇರಿಯರ ಕ್ರಾಂತಿಕಾರಕ ಕಾಲದಲ್ಲಿ ೧೬೮೮ರಲ್ಲಿ ಬಂತು. ಎಲ್ಲಾ ಇಂಗ್ಲೀಷ್ ಜನರನ್ನು ಒಂದೇ ಚರ್ಚಿನ ಅಡಿಯಲ್ಲಿ ತರುವ ಆದರ್ಶವನ್ನು ಕೈಬಿಟ್ಟು ಇಂಗ್ಲೆಂಡಿನ ಚರ್ಚು ಸ್ಥಾಪಿತವಾಯಿತು ಮತ್ತು ಇದರ ವಿರೋಧಿಗಳ ಬಗ್ಗೆ ಸಹಿಷ್ಣುತೆಯನ್ನು ತಳೆಯಲಾಯಿತು. ಆದರೆ ಕ್ಯಾಥೋಲಿಕ್ಕರಿಗೆ ಸ್ವಾತಂತ್ರ್ಯವು ೧೮೨೯ರವರೆಗೂ ಸಿಗಲಿಲ್ಲ.

ಸುಧಾರಣೆಯ ವಿಸ್ತರಣೆ ಸ್ಕಾಂಡಿನೇವಿಯ

ಸುಮಾರು ಕ್ರಿ.ಶ.೧೫೦೦ರ ವೇಳೆಗೆ ಜನರ ಧರ್ಮಶ್ರದ್ಧೆ ಸ್ಕಾಂಡಿನೇವಿಯಾದ ಚರ್ಚನ್ನು ಆರ್ಥಿಕವಾಗಿ ಶ್ರೀಮಂತಗೊಳಿಸಿತ್ತು. ಡೆನ್ಮಾರ್ಕ್‌ನಲ್ಲಿ ಅರ್ಧದಷ್ಟು ಭೂಮಿಯ ಒಡೆತನ ಚರ್ಚ್‌ನದಾಗಿತ್ತು. ಕೂಪನ್ ಹೇಗನ್ ಒಂದು ಧಾರ್ಮಿಕ ಜಹಗೀರಾಗಿತ್ತು. ಪುರೋಹಿತರು ಮತ್ತು ಶ್ರೀಮಂತರು ನೆಲ ಕಂದಾಯ ಕೊಡುವುದರಿಂದ ಮುಕ್ತರಾಗಿದ್ದರು. ಪುರೋಹಿತರು ಆರಾಧನೆಗಳನ್ನು, ಪೂಜೆಗಳನ್ನು ನಡೆಸುವವರಾದ್ದರಿಂದ ಅವರಿಗೆ ತೆರಿಗೆ ವಿನಾಯಿತಿ ಸಿಕ್ಕಿತ್ತು. ಶ್ರೀಮಂತರು ತಮ್ಮ ಯುದ್ಧವನ್ನು ತಾವೇ ತಮ್ಮ ಖರ್ಚಿನಿಂದ ನಡೆಸುವವರಾದ್ದರಿಂದ ಅವರಿಗೂ ತೆರಿಗೆ ವಿನಾಯಿತಿ ದೊರೆತಿತ್ತು. ವರ್ತಕರು, ಪುರೋಹಿತರ ಮತ್ತು ಶ್ರೀಮಂತರ ವಿರುದ್ಧ ಸ್ಪರ್ಧಿಸಬೇಕಾಗಿತ್ತು.

ಈ ಮೂರು ರಾಷ್ಟ್ರಗಳಲ್ಲಿಯೂ, ಡೆನ್ಮಾರ್ಕ್‌ನ ರಾಜ ಒಂದನೆಯ ಕ್ರಿಶ್ಚಿಯನ್ ಎಂಬುವವನು ಪುನರ್‌ನವೀಕರಿಸಿದ ಸ್ಕಾಂಡಿನೇವಿಯಾದ ಕಾಲ್ಮರ್ ಒಕ್ಕೂಟಕ್ಕೆ ಬೆಂಬಲ ವಿತ್ತು. ಆದರೆ ಸ್ವೀಡನ್‌ನಲ್ಲಿ ಪಟ್ಟಣಿಗರದಿಂದ ಮತ್ತು ರೈತರಿಂದ ಕೂಡಿದ್ದ ರಾಷ್ಟ್ರೀಯ ಪಕ್ಷವು ಸ್ಕಾಂಡಿನೇವಿಯಾದ ಒಕ್ಕೂಟವನ್ನು ತಿರಸ್ಕರಿಸಿದುದೇ ಅಲ್ಲದೇ, ಕಿರಿಯನಾದ ಸ್ಪೆನ್‌ಸ್ಟೂರ್ ಎಂಬುವನನ್ನು ಸ್ವತಂತ್ರ ಸ್ವೀಡನ್ನಿನ ಸಾಮಂತನೆಂದು ಸಾರಿತು. ಉಪ್ಪಸಾಲದ ಆರ್ಚ್‌ಬಿಷಪ್ ಗುಸ್ಟಾವ್ ಟ್ರೋಲೆ ಸ್ಕಾಂಡಿನೇವಿಯಾದ ಒಕ್ಕೂಟವನ್ನು ಸಮರ್ಥಿಸಿ ಕೊಂಡಿದ್ದನು. ಇದೇ ಕಾರಣಕ್ಕಾಗಿ ಸ್ಟೆನ್‌ಸ್ಟೂರ್ ಇವನನ್ನು ಕಿತ್ತೊಗೆದಿದ್ದನು. ಪೋಪನಾದ ಹತ್ತನೆಯ ಲಿಯೋ ಗುಸ್ಟಾವ್‌ನನ್ನು ಅವನ ಸ್ಥಾನದಲ್ಲಿಯೇ ಉಳಿಸು ಎಂಬದು ಆಜ್ಞೆ ಮಾಡಿದನು. ಸ್ಟೆನ್‌ಸ್ಟೂರ್ ಕೇಳದಿದ್ದಾಗ, ಡೆನ್ಮಾರ್ಕಿನ ರಾಜ ಎರಡನೆಯ ಕ್ರಿಶ್ಚಿಯನ್ನನಿಗೆ ಸ್ವೀಡನ್ನನ್ನು ದಾಳಿ ಮಾಡಿ ಸಾಮಂತ ರಾಜನನ್ನು ಶಿಕ್ಷಿಸುವಂತೆ ಪೋಪನು ಕೆಲಸ ವಹಿಸಿದ್ದನು. ಎರಡನೆಯ ಕ್ರಿಶ್ಚಿಯನ್ನನ ಮೊದಲನೇ ಪ್ರಯತ್ನ ಫಲ ನೀಡಲಿಲ್ಲ. ಆದರೆ ಅವನು ಸುಮಾರು ಜನರನ್ನು ಸಂಧಿಯ ಒತ್ತೆಯಾಳುಗಳನ್ನಾಗಿ ತನ್ನೊಡನೆ ಕೂಪ್‌ನ್‌ಹೇಗನ್ನಿಗೆ ಕರೆದೊಯ್ದನು. ಗುಸ್ಟಾವುಸ್ ಈ ಒತ್ತೆಯಾಳುಗಳಲ್ಲಿ ಒಬ್ಬನು. ಕ್ರಮೇಣ ಇವನೇ ಸ್ವೀಡನನ್ನು ಸ್ವತಂತ್ರಗೊಳಿಸಿದನು. ಕ್ರಿಶ್ಚಿಯನ್ನನು ತನ್ನ ಎರಡನೆ ಪ್ರಯತ್ನದಲ್ಲಿ ಸಫಲವಾದನು. ಸ್ಟೆನ್‌ಸ್ಟೂರ್ ಇದರಲ್ಲಿ ಮಡಿದನು. ಕ್ರಿಸ್ಚಿಯನ್ನನು ಸ್ವೀಡನ್ನಿನ ಹೊಸ ರಾಜನನ್ನು ಪಟ್ಟಾಭಿಷೇಕ ಮಾಡಿದನು. ಸ್ಟಾಕ್‌ಹೋಮ್‌ನಲ್ಲಿ ಸ್ಟೆನ್‌ಸ್ಟೂರ್‌ನನ್ನು ಬೆಂಬಲಿಸುತ್ತಿದ್ದವರ ಕಗ್ಗೊಲೆಯಾಯಿತು. ಈ ಘಟನೆ ‘‘ಸ್ಟಾಕ್ ಹೋಂನ ಮಹಾ ರಕ್ತಪಾತವೆಂದು’’ ಇತಿಹಾಸದಲ್ಲಿ ಸ್ಥಾನ ಪಡೆದಿದೆ. ಆದರೆ ಈ ರಕ್ತಪಾತವು ಚರ್ಚಿನ ಗೌರವವನ್ನು ಸಾಮಾನ್ಯ ಜನರ ದೃಷ್ಟಿಯಲ್ಲಿ ನೆಲಕ್ಕೆ ಕಚ್ಚಿಸಿತು.

ಗುಸ್ಟಾವುಸ್ ತಲೆ ತಪ್ಪಿಸಿಕೊಂಡನು. ಸ್ಟಾಕ್‌ಹೋಮಿನ ರೈತರಿಗೆ ರಕ್ತಪಾತದ ವಿಷಯವೆಲ್ಲ ತಿಳಿಯಿತು. ರಾಜನು ಸ್ವೀಡನ್ನಿನಲ್ಲಿ ಪ್ರಯಾಣ ಮಾಡಿ ದಾರಿಯುದ್ದಕ್ಕೂ ನೇಣುಗಂಬ ಕಟ್ಟಿಸುವನೆಂಬ ಗುಮಾನಿ ಹಬ್ಬಿತ್ತು. ಹೊಸ ತೆರಿಗೆಗಳನ್ನು ವಿಧಿಸಲಾಯಿತು. ಆರ್ಚ್‌ಬಿಷಪ್ ಗುಸ್ಟಾವ್ ಮೋರ ಪ್ರಾಂತ್ಯದ ಜನರನ್ನು ಕೂಡಿಕೊಂಡು ವೆಸ್ಟರೆಸ್ ಮತ್ತು ಉಪ್ಪಸಾಲವನ್ನು ವಶಪಡಿಸಿಕೊಂಡನು. ಈ ರೀತಿಯಾಗಿ ಒಂದಾದ ಮೇಲೊಂದರಂತೆ ಎಲ್ಲಾ ಪ್ರಾಂತಗಳು ಜೂನ್ ೭, ೧೫೨೩ರೊಳಗೆ ಗುಸ್ತಾವುಸ್‌ನ ವಶಕ್ಕೆ ಬಂದವು. ಈ ಪ್ರದೇಶಗಳಿಗೆ ಗುಸ್ತಾವುಸ್ಸನೇ ರಾಜನೆಂದು ಘೋಷಿಸಲಾಯಿತು.

ರಾಷ್ಟ್ರದ ಹಣಕಾಸಿನ ಪರಿಸ್ಥಿತಿ ಆರೋಗ್ಯಕರವಾಗಿರಲಿಲ್ಲ. ಶ್ರೀಮಂತರು ಮಾತ್ರ ಏನಾದರು ಮಾಡುವ ಸ್ಥಿತಿಯಲ್ಲಿದ್ದರು. ರಾಜನು ಇವರ ಸಹಾಯ ಕೇಳಿದರೂ ಏನೂ ಪ್ರಯೋಜನವಾಗಲಿಲ್ಲ. ಈ ವೇಳೆಗಾಗಲೆ ಲೂಥರನ ವಾದವನ್ನು ಸ್ವೀಡನ್ನಿನಲ್ಲಿ ಪ್ರಚಾರ ಮಾಡಲಾಗಿತ್ತು. ಇದರ ಜತೆಗೆ ಸ್ಟಾಕ್‌ಹೋಮಿನ ಸೈಂಟ್ ನಿಕೋಲಸ್ ಚರ್ಚಿನಲ್ಲಿದ್ದ ಓಲಂಪೆಟ್ರಿ ಎಂಬುವವನು ಲೂಥರನ ವಾದವನ್ನು ಸಮರ್ಥಿಸಿಕೊಂಡಿದ್ದನು. ಪೆಟ್ರಿ ಮತ್ತು ಅವನ ತಮ್ಮ ಲಾರನ್ಸಿಯಸ್‌ರನ್ನು ಸ್ವೀಡಿಸ್ ಭಾಷೆಗೆ ಬೈಬಲ್ಲನ್ನು ತರ್ಜುಮೆ ಮಾಡಲು ನೇಮಿಸಲಾಗಿತ್ತು. ಇದು ರಾಷ್ಟ್ರೀಯ ಭಾಷೆ ಮತ್ತು ಧರ್ಮದ ಕಲ್ಪನೆ ಬೆಳೆಯಲು ಸಹಕಾರಿಯಾಯಿತು. ಪುರೋಹಿತರಿಂದ ಗುಸ್ಟಾವುಸ್ಸನು ಆಸ್ತಿಯನ್ನು ವಶಪಡಿಸಿ ಕೊಂಡನು. ಸ್ವೀಡನ್ನಿನ ಪೂಜಾರಿಗಳಿಗೆ ಮದುವೆಯಾಗುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟನು. ಏಳನೆಯ ಕ್ಲೆಮಾಂತ್ ಪೋಪನು ಇದನ್ನು ಸಹಿಸಲಿಲ್ಲವಾದರೂ, ಗುಸ್ಟಾವುಸ್ಸನು ಸುಮಾರಷ್ಟು ಸುಧಾರಣೆಗಳನ್ನು ಮಾಡಿದ್ದನು. ೧೫೨೭ರಲ್ಲಿ ವಸ್ಟೇರ್ಸ್‌ನ ಸಭೆಯಲ್ಲಿ ಸುಧಾರಣೆಯನ್ನು ಬಹಿರಂಗವಾಗಿ ಘೋಷಿಸಿದನು. ಜನಸಾಮಾನ್ಯರಿಗೆ ಸಹಾಯ ಮಾಡುವಂತೆ ಚರ್ಚನ್ನು ಕೇಳಿಕೊಂಡನು. ಸಭೆಯು ಈ ವಿಷಯದ ಬಗ್ಗೆ ಚರ್ಚೆ ನಡೆಸಿತು. ತನ್ನ ಸುಧಾರಣೆಗಳನ್ನು ಒಪ್ಪಿಕೊಳ್ಳದಿದ್ದರೆ ರಾಜ ಪದವಿಗೆ ರಾಜಿನಾಮೆ ನೀಡಿ ರಾಷ್ಟ್ರ ಬಿಟ್ಟು ಹೋಗುತ್ತೇನೆಂದು ಸಭೆಯಲ್ಲಿ ಬೆದರಿಕೆ ಹಾಕಿದನು. ಬೇರೆ ದಾರಿಯಿಲ್ಲದೆ ಸಭೆಯು ಕಡೆಗೆ ಗುಸ್ಟಾವುಸ್ಸನ ಸುಧಾರಣೆಗಳನ್ನು ಒಪ್ಪಿಕೊಂಡಿತು. ಸುಧಾರಣೆಯಿಂದಾಗಿ ಸ್ವೀಡನ್ನಿನ ಧರ್ಮವು ರಾಷ್ಟ್ರೀಕೃತವಾಯಿತು ಮತ್ತು ರಾಜ್ಯವು ಚರ್ಚಿನ ಮೇಲೆ ಜಯವನ್ನು ಸಾಧಿಸಿತು.

ಪೂರ್ವ ಯುರೋಪಿನಲ್ಲಿ ರಾಜರುಗಳು ದುರ್ಬಲರಾಗಿದ್ದರಿಂದ, ಶ್ರೀಮಂತರು ಪ್ರಬಲರಾಗಿದ್ದರಿಂದ ತೀವ್ರಗಾಮಿಯ ಹಲವಾರು ಮಾದರಿಯ ಕ್ರೈಸ್ತ ಬಂಡಾಯವಾದಗಳು ಬೆಳೆಯುವುದಕ್ಕೆ ಇದು ಪ್ರಾಶಸ್ತ್ಯವಾದ ಸ್ಥಳವಾಗಿತ್ತು. ಕೆಲವೇ ನಗರಗಳಿದ್ದವು ಮತ್ತು ಅನೇಕ ಧಾರ್ಮಿಕ ಪಂಥಗಳು ಅಸ್ತಿತ್ವದಲ್ಲಿದ್ದವು. ಜರ್ಮನಿಯಿಂದ ಬಂದ ಲೂಥರ್ ವಾದಿಗಳನ್ನು ಪೋಲಂಡ್ ಒಪ್ಪಿಕೊಂಡಿತ್ತು. ಇದರ ಜತೆಗೆ ಇಟಲಿಯ ತ್ರಿಮೂರ್ತಿ ವಾದದ ವಿರೋಧಿಗಳೂ ಕೂಡ ಪೋಲ್ಯಾಂಡಿಗೆ ವಲಸೆ ಬಂದರು. ಪೋಲೆಂಡಿನ ರಾಣಿ ಬೋನ ಸ್ಪೋರ್ಜ್ ಇಟಲಿಯವಳಾದುದ್ದರಿಂದ ಇವರಿಗೆ ಪ್ರಾಣರಕ್ಷಣೆ ನೀಡಿದ್ದಳು. ಕ್ಯಾಲ್ವಿನಿಸ್ಟರ ವಲಸೆಯೂ ಕೂಡ ಇನ್ನೂ ಬೃಹತ್ತಾಗಿತ್ತು. ಇದು ಪೋಲೆಂಡಿಗೆ ಮಾತ್ರ ಸೀಮಿತವಾಗಿರದೆ ಇಡೀ ಯೂರೋಪನ್ನೇ ಆವರಿಸಿತ್ತು. ಧರ್ಮ ಸುಧಾರಣೆ ಸೀಮಿತವಾಗಿರದೆ ಇಡೀ ಯುರೋಪನ್ನೇ ಆವರಿಸಿತ್ತು. ಧರ್ಮ ಸುಧಾರಣೆ ಜರ್ಮನಿಯದಾಗಲಿ ಅಥವಾ ಫ್ರಾನ್ಸ್‌ನದಾಗಲಿ ಆಗಿರಲಿಲ್ಲವಾದ್ದರಿಂದ ಕ್ರೈಸ್ತ ಬಂಡಾಯವಾದದ ವೈವಿಧ್ಯತೆಗಳು ಎಲ್ಲ ಜನರ ಮನ್ಸಸನ್ನು ಸೆಳೆದಿದ್ದವು. ಪೋಲೆಂಡಿನ ರಾಜಧಾನಿಯಾದ ವಾರ್ಸಾದಲ್ಲಿ ೧೫೭೩ರಲ್ಲಿ ಪ್ಯಾಕ್ಸ್‌ಅಸ್ಸಿಡೆಂಟಿಯಂ- ‘‘ಭಿನ್ನಾಭಿಪ್ರಾಯವುಳ್ಳವರ ಶಾಂತಿ’’ ಎಂಬ ಜಪ್ಪಂದವೂ ಜರುಗಿತ್ತು. ಕ್ಯಾಥೋಲಿಕ್ಕರೂ ಲೂಥರನ್ನರೂ ಕ್ಯಾಲ್ವಿನಿಸ್ಟರೂ ಮತ್ತು ಬೊಹೊಮಿಯನ್ನರು ಶಾಂತಿ ಮತ್ತು ಸಹಿಷ್ಣುತೆಯಿಂದ ಬಾಳುವೆ ನಡೆಸುವಂತೆ ಒಪ್ಪಂದವು ಆಜ್ಞಾಪಿಸಿತು.

ಇಟಲಿ ಮತ್ತು ಸ್ಪೈಯಿನಿನಲ್ಲಿ ಸುಧಾರಣೆ ಅಷ್ಟೇನೂ ಪರಿಣಾಮಕಾರಿಯಾಗಲಿಲ್ಲ. ಸ್ಪೈಯಿನಿನಲ್ಲಿ ಕ್ರಿಶ್ಚಿಯನ್ನರು ಸುಮಾರು ನೂರು ವರ್ಷಗಳ ಕಾಲ ಯಹೂದಿಗಳನ್ನು ಮತ್ತು ಅರಬ್ ಬರ್ಬರ ಸಂತತಿಯಿಂದ ಬಂದ ಮುಸಲ್ಮಾನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಅಥವಾ ಸ್ಪೈಯಿನ್‌ನಿಂದ ಅವರನ್ನು ಹೊರ ಓಡಿಸಲು ನಡೆಸಿದ ಪ್ರಯತ್ನಗಳ ಸುತ್ತಮುತ್ತವೇ ಸುಧಾರಣೆಯ ವಿಷಯವು ಅಂಟಿಕೊಂಡಿತ್ತು.

ಕ್ರಿಶ್ಚಿಯನ್ನರಾಗಿ ಮತಾಂತರಗೊಂಡವರಲ್ಲಿದ್ದ ಯಹೂದಿ ಆಚರಣೆಗಳನ್ನು ಸಂಪೂರ್ಣ ವಾಗಿ ತೊಡೆದು ಹಾಕಲು ೧೪೮೨ರಲ್ಲಿ ಕ್ರೈಸ್ತ ಧರ್ಮ ವಿರೋಧಿ ಚಟುವಟಿಕೆಗಳ ವಿಚಾರಣೆಯನ್ನು ಜಾರಿಗೊಳಿಸಲಾಯಿತು. ಕ್ರಿಶ್ಚಿಯನ್ನರಲ್ಲದ ಯಹೂದಿಗಳನ್ನು ೧೪೯೨ರಲ್ಲಿ ರಾಷ್ಟ್ರದಿಂದ ಹೊರಹಾಕಲಾಯಿತು. ಇದರಿಂದ ಗ್ರ್ಯಾನೆಡ ಮುರಿದು ಬಿತ್ತು. ಅರಬ್ ಬರ್ಬರ ಸಂತತಿಯಿಂದ ಮತಾಂತರಗೊಂಡ ಮುಸಲ್ಮಾನರನ್ನು, ಮತಾಂತರಗೊಳ್ಳದವರನ್ನು ನೂರು ವರ್ಷಗಳ ನಂತರ ರಾಷ್ಟ್ರದಿಂದ ಹೊರ ಹಾಕಲು ಇದೇ ತಂತ್ರವನ್ನು ಬಳಸಲಾಯಿತು. ಈ ಪ್ರಕ್ರಿಯೆ ಯಶಸ್ವಿಯಾಯಿತು. ೧೬ನೆಯ ಶತಮಾನದ ಆದಿಭಾಗದಲ್ಲಿ ರಾಜಕೀಯ ಒತ್ತಡಗಳು ಕಡಿಮೆಯಾದುವು. ಒಂದು ದಶಕದ ಕಾಲ ಈರಾಸ್ಮಸ್‌ನ ಉದಾರವಾದವು ಸ್ಪೈಯಿನ್ ದೇಶದಲ್ಲಿ ೧೫೨೦ರವರೆಗೂ ಸುಸ್ಥಿತಿಯಲ್ಲಿತ್ತು. ಆದರೆ ಲೂಥರನ ವಾದ ಸ್ಪೈಯಿನ್‌ಗೆ ಹಬ್ಬಲು ಆರಂಭವಾದಾಗ ಜನರ ಮೇಲೆ ಹತೋಟಿಯನ್ನು ಹೇರಲಾಯಿತು.

ಇಟಲಿಯಲ್ಲಿ ರಾಜಕೀಯ ಹೊಂದಾಣಿಕೆಯೇ ಶೂನ್ಯವಾಗಿತ್ತು. ಇಲ್ಲಿ ಐದು ಮುಖ್ಯ ರಾಜ್ಯಗಳಿದ್ದವು. ಅವುಗಳೆಂದರೆ ಫ್ಲಾರೆನ್ಸ್, ಮಿಲನ್, ವೆನಿಸ್, ನೇಪಲ್ಸ್ ಮತ್ತು ರೋಮ್. ರೋಮಿನ ಆಧ್ಯಾತ್ಮಿಕ ಪ್ರಭುತ್ವ ಈ ನಗರಗಳ ಮೇಲೆ ಇದ್ದುದರಿಂದ ಒಂದು ತೆರಹನಾದ ಹೊಂದಾಣಿಕೆಯನ್ನು ಕಾಣಬಹುದಾಗಿತ್ತಾದರೂ, ರೋಮಿಗೆ ಯಾವ ನಗರ ರಾಜ್ಯವೂ ಗುಲಾಮನಂತೆ ನಡೆದುಕೊಳ್ಳುತ್ತಿರಲಿಲ್ಲ. ಮಧ್ಯಯುಗದ ಕಡೆಯ ದಿನಗಳಲ್ಲಿ, ಧರ್ಮ ವಿರೋಧಿ ಮತ್ತು ಪ್ರತ್ಯೇಕತಾವಾದದ ಚಳವಳಿಗಳು ಇಟಲಿಯಲ್ಲಿ ಹಬ್ಬಿದವು. ಆದರೆ ಅವುಗಳನ್ನು ಹತ್ತಿಕ್ಕಲಾಗಿತ್ತು. ಇಟಲಿಯನ್ನರಿಗೆ ಇಂತಹ ದಂಗೆಗಳು ಅನರ್ಥವೆಂದು ಕಂಡಿರಬೇಕು. ಇದಕ್ಕೂ ಮಿಗಿಲಾಗಿ ಕ್ರೈಸ್ತ ಭಿಕ್ಷುಗಳು ನೀತಿ ಸಂಹಿತೆಯನ್ನು ಬೋಧಿಸುತ್ತಿದ್ದರು. ಕಪುಚಿನ್, ಥಿಯಾಟೈನ್ಸ್ ಮತ್ತು ಜೆಸುಯಿಟ್ಸ್ ಎಂಬ ಮೂರು ಪಂಥಗಳು ಪೋಪನ ಆಶೀರ್ವಾದದಿಂದ ಬಲಶಾಲಿಯಾಗಿ ಬೆಳೆದ ಕ್ರೈಸ್ತ ಬಂಡಾಯವಾದವನ್ನು ಹತ್ತಿಕ್ಕಲು ಪ್ರಯತ್ನಪಟ್ಟವು. ಆದರೂ ಕ್ರೈಸ್ತ ಬಂಡಾಯವಾದ ಇಟಲಿಯಲ್ಲಿ ಬೆಳೆಯುವುದನ್ನು ತಪ್ಪಿಸಲಾಗಲಿಲ್ಲ.

ಧಾರ್ಮಿಕ ಸುಧಾರಣೆ ಒಂದು ಚಳವಳಿಯಾಗಿ, ವೈಯಕ್ತಿಕವಾಗಿ ರಾಜಕೀಯ ಸ್ವಾತಂತ್ರ್ಯವನ್ನು, ಸಾರ್ವಜನಿಕವಾಗಿ ಸಾಮಾಜಿಕ ಸ್ವಾತಂತ್ರ್ಯವನ್ನು ತಂದುಕೊಟ್ಟಿತು. ಇದರಿಂದಾಗಿ ಮದುವೆಯ ವಿಷಯಗಳಲ್ಲಿ ಸುಮಾರಷ್ಟು ಹೊಸ ಕಾನೂನುಗಳು ಬಂದುವು. ಇವು ಸಾಮಾನ್ಯ ಜನರ ಜೀವನವನ್ನು ಸರಳ ಮತ್ತು ಮಾನವೀಯವನ್ನಾಗಿಸಿದವು. ಬೈಬಲ್ಲನ್ನು ಆಳವಾಗಿ ಅಭ್ಯಸಿಸಲಾಯಿತು. ಬೈಬಲ್ ಏನನ್ನು ಒಳಗೊಂಡಿದೆ ಎನ್ನುವ ಕಾರಣಕ್ಕಾಗಿಯೇ ಅದನ್ನು ಓದಲಾಯಿತು. ಮನುಷ್ಯನ ಚಿಂತಿಸುವ ಶಕ್ತಿಗೆ ಗೌರವ ಮತ್ತು ಮೌಲ್ಯ ಪ್ರಾಪ್ತವಾಯಿತು. ಹೀಗೆ ಸುಧಾರಣೆಯ ಕಾಲ ಮಾನವನ ಬೆಳವಣಿಗೆಗೆ ಮತ್ತು ಪ್ರಗತಿಗೆ ಭದ್ರ ಬುನಾದಿಯನ್ನು ರಚಿಸಿತು.

 

ಪರಾಮರ್ಶನ ಗ್ರಂಥಗಳು

೧. ಎಲ್ಟನ್, ಜೆ.ಆರ್., ರಿಫಾರ್‌ಮೇಷನ್ ಯುರೋಪ್ : ೧೫೧೭೧೫೯೯.

೨. ಚಾಡ್ವಿಕ್, ಓವೆಲ್, ದಿ ರಿಫಾರ್‌ಮೇಷನ್.

೩. ಗ್ರಿಮ್, ಆರ್.ಜೆ., ದಿ ರಿಫಾರ್‌ಮೇಷನ್ ಎರಾ : ೧೫೦೦೧೬೫೦.

೪. ದಿ ನ್ಯೂ ಕೇಂಬ್ರಿಡ್ಜ್ ಮಾಡರ್ನ್ ಹಿಸ್ಟರಿ, ಸಂ.೨, ದಿ ರಿಫಾರ್‌ಮೇಷನ್ ೧೫೨೦-          ೧೫೨೯’.

೫. ವಿಲಿಯನ್ಸ್ ಜೆ.ಎಚ್., ದಿ ರ‌್ಯಾಡಿಕಲ್ ರಿಫಾರ್‌ಮೇಷನ್.