ಸುಮಾರು ೧೭ನೆಯ ಶತಮಾನದ ಭೌತಿಕ ಕ್ರಾಂತಿಯಲ್ಲಿ ನಾವು ಬೇಕನ್, ಡೆಕಾರ್ಟ್ ಮತ್ತು ಐಸಾಕ್ ನ್ಯೂಟನ್ ಇವರುಗಳ ಪ್ರಭಾವವನ್ನು ಕಾಣುತ್ತೇವೆ. ಡೆಕಾರ್ಟಿ ಆಧುನಿಕ ಐರೋಪ್ಯ ತತ್ವಜ್ಞಾನ ಸಿದ್ಧಾಂತದ ಪ್ರಾರಂಭಕಾರ ಎಂಬ ಬಿರುದಿಗೆ ಪಾತ್ರನಾದರೆ, ನ್ಯೂಟನ್ ಗಣಿತ ಮತ್ತು ಭೌತಶಾಸ್ತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಕ್ರಾಂತಿಯುತವಾದ ಬದಲಾವಣೆಯನ್ನು ತಂದ ಕೀರ್ತಿಗೆ ಪಾತ್ರನಾಗಿದ್ದಾನೆ.

ಆದರೆ ೧೮ನೆಯ ಶತಮಾನದಲ್ಲಿ ಮನುಷ್ಯನ ಸಂಬಂಧವನ್ನು(ಹ್ಯೂಮನ್ ರಿಲೇಶನ್‌ಶಿಪ್) ಅರಿಯುವ ನಿಟ್ಟಿನಲ್ಲಿ ತರ್ಕ(ರೀಜನ್)ಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಯಿತು. ತರ್ಕವನ್ನು ಆಧಾರವಾಗಿಟ್ಟು ಮನುಷ್ಯ ಸಂಬಂಧವನ್ನು ಕಲಿಯುವ ಈ ಪ್ರಯತ್ನದಿಂದಾಗಿ ಈ ಯುಗವನ್ನು ತರ್ಕ ಮತ್ತು ಭೌತಿಕ ಬದಲಾವಣೆಯ ಯುಗ ಎಂದು ಕರೆಯಬಹುದಾಗಿದೆ.

ಈ ಯುಗದ ವಿಶೇಷತೆಗಳಲ್ಲಿ ಧರ್ಮವನ್ನು, ಸತ್ಯವನ್ನು ಪ್ರಶ್ನಿಸುವುದು, ವಿವೇಚನೆಗೆ ಹೊಂದಿಕೊಳ್ಳದ ತರ್ಕದಲ್ಲಿ ನಂಬಿಕೆಯಿರದಿರುವುದು, ಪ್ರಕಟಗೊಳ್ಳದ ದೇವರು ಇರುವನೆಂಬ ನಂಬಿಕೆ (ಡಿಇಸಮ್) ಮತ್ತು ಸಾಹಿತ್ಯದಲ್ಲಿ ಹೊಸ ಬದಲಾವಣೆ ತರುವುದು ಇತ್ಯಾದಿ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲೇ ಫ್ರಾನ್ಸ್ ತತ್ವಜ್ಞಾನಿಗಳಾದ ವಾಲ್ಟೇರ್, ಡಿಡಿರೋಟ್, ರುಸ್ಸೊ ಮತ್ತು ಅವರ ಸಮಕಾಲೀನರಾದ ಜಾನ್ ಲಾಕ್ ಮತ್ತು ಫ್ರಾಂಕ್‌ಲೀನ್ ಇವರುಗಳು ಮನುಷ್ಯನ ಘನತೆ, ಗೌರವ ಮತ್ತು ಹಕ್ಕಿಗೆ ಹೊಸ ಆಯಾಮವನ್ನು ಕೊಟ್ಟಿದ್ದಾರೆ. ಈ ಬದಲಾವಣೆಯ ಪರಿಣಾಮದ ಸ್ವರೂಪ ಫ್ರಾನ್ಸ್‌ನಲ್ಲಿ ೧೭೮೯ನೆಯ ಇಸವಿಯಲ್ಲಿ ಕ್ರಾಂತಿ ನಡೆಯಿತು. ಇದೇ ರೀತಿಯ ಬದಲಾವಣೆಯನ್ನು ೧೯ನೆಯ ಶತಮಾನದ ಮಧ್ಯಭಾಗದಲ್ಲಿ ರಾಜಾರಾಮ್ ಮೋಹನ್‌ರಾಯ್ ಅವರು ಭಾರತದಲ್ಲಿ ಸಾಮಾಜಿಕ ಸುಧಾರಣೆಯ ಅಲೆಯನ್ನು ಎಬ್ಬಿಸಿ ಕ್ರಾಂತಿಯುತವಾದ ಬದಲಾವಣೆಯ ಕರ್ತೃ ಆಗಿದ್ದಾರೆ.

ಐರೋಪ್ಯ ತತ್ವಜ್ಞಾನಿಗಳು ಮತ್ತು ಬರಹಕಾರರ ಈ ಸುಧಾರಣಾ ಅಲೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಬದಲಾವಣೆ ತಂದಿತು ಎಂಬ ಮಾತೇನೂ ಅತಿಶಯೋಕ್ತಿಯಲ್ಲ. ಗಿಬ್ಬನ್ (೧೭೩೭-೧೭೯೪), ಗೋಥೆ (೧೭೪೯-೧೮೩೨), ಲೆಸ್ಸಿಂಗ್ (೧೭೨೯-೮೧) ಕ್ಯಾಂಟ್ (೧೭೨೯-೧೮೦೪), ಮೊಂಟೆಸ್ಕ್ಯೂ(೧೬೮೯-೧೭೫೫) ವಾಲ್ ಟೇರ್ (೧೬೯೪-೧೭೭೯) ಮತ್ತು ರುಸ್ಸೋ (೧೭೧೨-೧೭೭೮) ಸೇರಿ ಐರೋಪ್ಯ ವಿಚಾರಗಳಿಗೆ ಹೊಸ ಮೆರುಗನ್ನು ನೀಡಿದರು. ೧೮ನೆಯ ಶತಮಾನದ ಈ ರೀತಿಯ ಕ್ರಾಂತಿಯುತವಾದ ಬದಲಾವಣೆ ಸಾರ್ವತ್ರಿಕವಾಗಿದ್ದು ಚರ್ಚ್ ಮತ್ತು ರಾಜ್ಯಗಳಲ್ಲಿನ ಆಡಳಿತ ವ್ಯವಸ್ಥೆ ನ್ಯೂನತೆಗಳನ್ನು ಎತ್ತಿ ಹಿಡಿಯುವ ಮತ್ತು ಪ್ರಶ್ನಿಸುವ ಹೊಸ ವಿಚಾರಗಳು ಬೆಳೆಯಲು ಅವಕಾಶ ಮಾಡಿಕೊಟ್ಟಿತು.

ವಾಲ್ಟೇರ್, ಮೊಂಟೆಸ್ಕ್ಯೂ ಮತ್ತು ರುಸ್ಸೋ ಇವರು ತಮ್ಮ ದೇಶದ ಜನರ ಮೇಲೆ ಮಾತ್ರವಲ್ಲದೆ ಇತರ ದೇಶದ ಜನರ ಮೇಲೆ ಕೂಡ ಪ್ರಭಾವವನ್ನು ಬೀರಿದವರಾಗಿದ್ದಾರೆ. ಇವರ ಸಿದ್ಧಾಂತಗಳನ್ನು ಓದಿದ ಪರಿಣಾಮವಾಗಿ ಅಧಿಕಾರಶಾಹಿ ಆಡಳಿತ, ದಬ್ಬಾಳಿಕೆ ಮತ್ತು ಪಾದ್ರಿಗಳ ಅಸಂಪ್ರದಾಯಬದ್ಧ ನಡವಳಿಕೆಯ ವಿರುದ್ಧ ಹೋರಾಟ, ರಾಜಕೀಯ ಮತ್ತು ಸಾಮಾಜಿಕ ಸುಧಾರಣೆಗಳು ಅನಿವಾರ್ಯವಾಯಿತು. ಈ ಕಾಲದಲ್ಲಿ ಫ್ರಾನ್ಸ್ ದೇಶದಲ್ಲಿ ಅರಸನೇ ಎಲ್ಲಾ ಅಧಿಕಾರಗಳನ್ನು ತನ್ನ ಕೈಯಲ್ಲಿರಿಸಿಕೊಂಡು ತನಗೆ ಬೇಕಾದವರ ಮೇಲೆ ಕೃಪಾಕಟಾಕ್ಷವನ್ನು ತೋರಿಸುತ್ತಿದ್ದ. ಈ ರೀತಿಯಾಗಿ ಸಾಮಾನ್ಯ ಜನರಿಗೆ ಸರಕಾರದಲ್ಲಿ ಯಾವ ರೀತಿಯ ಅಸ್ತಿತ್ವ ಇರಲಿಲ್ಲ. ಜನಸಾಮಾನ್ಯರ ಸ್ವತಂತ್ರ್ಯವನ್ನು ರಕ್ಷಿಸುವ ಯಾವ ಮಾರ್ಗಗಳೂ ಅಲ್ಲಿರಲಿಲ್ಲ.

ಪ್ರಜ್ಞಾವಂತ (ಎನ್‌ಲೈಟಂಡ್ ಡೆಸಪಾಟ್) ರಾಜರುಗಳು ತತ್ವಜ್ಞಾನಿಗಳ ಪ್ರಭಾವಕ್ಕೆ ಒಳಗಾದರೂ, ತಮ್ಮ ಅಧಿಕಾರಶಾಹಿ ಧೋರಣೆಗಳಿಂದ ಹೊರಬರಲು ವಿಫಲರಾಗಿ ಜನರ ಒಲವನ್ನು ಕಳೆದುಕೊಂಡರು. ಜನರು ಬಯಸಿದ ಬದಲಾವಣೆಯನ್ನು ತರುವಂತಹ ಶಕ್ತಿ ಅವರಲ್ಲಿರಲಿಲ್ಲ. ಬೇರೆ ಯಾವ ವಿಧಿಯಿಲ್ಲದೆ ಜನರ ಬದಲಾವಣಾ ಒಲವು, ಕ್ರಾಂತಿ ಯನ್ನು ತರುವುದರಲ್ಲಿ ಯಶಸ್ಸಾಯಿತು. ವಾಲ್ಟೇರ್ ತನ್ನ ಹರಿತವಾದ ಮಾತುಗಳು ಮತ್ತು ಬರವಣಿಗೆಯ ಮೂಲಕ ಚರ್ಚ್ ಮತ್ತು ಪಾದ್ರಿಗಳ ದುರಾಡಳಿತವನ್ನು ಬೆಳಕಿಗೆ ತರುವಲ್ಲಿ ಸಫಲವಾದ.

೧೭೮೯ರ ಫ್ರಾನ್ಸ್ ಕ್ರಾಂತಿಯು ಕೆಲವು ಸಿದ್ಧಾಂತಗಳಿಗೆ ಬದ್ಧವಾಗಿದೆ. ಅವುಗಳಲ್ಲಿ ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವತೆ ಪ್ರಮುಖವಾಗಿದೆ. ಈ ಸಿದ್ಧಾಂತವು ಫ್ರಾನ್ಸ್‌ನ ಜನರ ದೇಶಾಭಿಮಾನವನ್ನು ಕೆರಳಿಸಿ ಬೂರ್ಬನ್ ಆಡಳಿತವನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನವನ್ನು ಮಾಡಿದೆಯಲ್ಲದೆ, ಇಲ್ಲಿಯ ತನಕ ಪುರಸ್ಕಾರಗಳು, ಮನ್ನಣೆಗಳನ್ನು ಪಡೆದುಕೊಂಡು ಬಂದ ಪಾಳೇಗಾರತನವನ್ನು ತೊಡೆದುಹಾಕುವ ದಿಟ್ಟ ಹೆಜ್ಜೆಯನ್ನು ಹಾಕಿ ರಾಜಕೀಯ, ಕಾನೂನು ಮತ್ತು ಸರಕಾರದ ಸ್ವರೂಪವನ್ನೇ ಬದಲಾಯಿಸಿದೆ.

ಫ್ರಾನ್ಸ್ ದೇಶದ ಇತಿಹಾಸದಲ್ಲಿ ಕಂಡುಬರುವ ತತ್ವಜ್ಞಾನಿಗಳು ಇತಿಹಾಸಕಾರರು ಮತ್ತು ರಾಜಕೀಯ ವಿಜ್ಞಾನಿಗಳ ಬರವಣಿಗೆಗಳು ಕೇವಲ ಆ ದೇಶದ ಜನರ ಮನಸ್ಸಿನ ಮೇಲೆ ಪ್ರಭಾವ ಬೀರಿರುವುದಷ್ಟೇ ಅಲ್ಲದೆ ಇಡೀ ಯುರೋಪ್ ಖಂಡದ ಮೇಲೆ ತನ್ನ ಛಾಯೆಯನ್ನು ಬೀರಿದೆ. ವಾಲ್ಟೇರ್ ಮತ್ತು ರುಸ್ಸೋ ಮಿಲಿಯಗಟ್ಟಲೆ ಜನರ ಮನಸ್ಸನ್ನು ಗೆದ್ದರು. ವಾಲ್ಟೇರ್ ತನ್ನ ಹರಿತವಾದ ಮತ್ತು ದ್ವಂದ್ವಾರ್ಥ ಹೊಂದಿರುವ ಮಾತುಗಳಿಂದ ಬರವಣಿಗೆಯಿಂದ ಆಗಿನ ಸಾಮಾಜಿಕ ಅವ್ಯವಸ್ಥೆಯನ್ನು ಎತ್ತ ತೋರಿಸಿದರೆ, ರುಸ್ಸೋ ಜನರ ಹಕ್ಕುಗಳು ಮತ್ತು ಅಧಿಕಾರಗಳತ್ತ ಗಮನ ಸೆಳೆದ. ಈ ರೀತಿಯಾಗಿ ತತ್ವಜ್ಞಾನಿಗಳು ಬಡಜನರ ಶೋಷಣೆಯ ವಿರುದ್ಧ ತಮ್ಮ ಅಸಮಾಧಾನಗಳನ್ನು ತೋಡಿಕೊಂಡ ಪರಿಣಾಮವಾಗಿ ಸಾಮಾನ್ಯ ಜನರಲ್ಲೂ ಕೂಡ ಹೊಸ ಜಾಗ್ರತಿ ಮೂಡಿ ಬಂತು. ಈ ಜಾಗೃತಿ ಕ್ರಾಂತಿಯ ಸ್ವರೂಪವನ್ನು ತಳೆಯಿತು. ಜನರು ತಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕಬೇಕು ಎಂಬ ವಾದವನ್ನು ಪ್ರತಿಪಾದಿಸತೊಡಗಿದರು.

ಮೊಂಟೆಸ್ಕ್ಯೂ ಒಬ್ಬ ಪ್ರಭಾವಶಾಲಿ ತತ್ವಜ್ಞಾನಿಯಾಗಿದ್ದು ಆಂಗ್ಲ ಸಂಸ್ಕೃತಿ ಮತ್ತು ರಾಜಕೀಯ ವ್ಯವಸ್ಥೆಯಿಂದ ಪ್ರಭಾವಿತಗೊಂಡಿದ್ದ. ಅವನು ಇಂಗ್ಲೆಂಡಿನಲ್ಲಿ ಶಾಂತಿ ಸುಭಿಕ್ಷೆ ಇದ್ದರೆ ಅದು ಕೇವಲ ಆ ದೇಶದ ಉದಾರ ಸಂವಿಧಾನಾತ್ಮಕ ವ್ಯವಸ್ಥೆಯಿಂದ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಅದೇ ರೀತಿಯ ಸಂವಿಧಾನಾತ್ಮಕ ವ್ಯವಸ್ಥೆ ಫ್ರಾನ್ಸ್ ದೇಶದಲ್ಲೂ ಮೂಡಿಬರಬೇಕು ಎಂಬುದೇ ಮೊಂಟೆಸ್‌ಕ್ಕೂ ಅಭೀಷ್ಟೆ. ಅವನ ‘‘ಕಾನೂನಿನ ಮಹತ್ವ’’ (ಸ್ಪಿರಿಟ್ ಆಫ್ ಲಾಸ್) ಎಂಬ ಪುಸ್ತಕದಲ್ಲಿ ಆಂಗ್ಲ ಪ್ರಭಾವ ಎದ್ದು ಕಾಣುತ್ತದೆ. ೧೭೩೪ನೆಯ ಇಸವಿಯಲ್ಲಿ ಆತ ರೋಮನ್ ಸಾಮ್ರಾಜ್ಯದ ಶ್ರೇಷ್ಟತೆ ಮತ್ತು ಅದರ ಅವನತಿಯ ಬಗ್ಗೆ ಬರೆದ ಪುಸ್ತಕದಲ್ಲಿ ೧೬ನೆಯ ಶತಮಾನದಲ್ಲಿ ಜೀವಿಸಿದ್ದ ತತ್ವಜ್ಞಾನಿಯಾದ ಜೀನ್ ಬೋದಿನ್‌ನ ಮಾದರಿಯಲ್ಲಿ ಪರಿಸರವು ಮಾನವನ ನಡತೆ ಮತ್ತು ಆ ಪರಿಸರಕ್ಕೆ ಹೊಂದಿಕೊಳ್ಳುವ ಸರಕಾರವನ್ನು ನಿರ್ಧರಿಸುತ್ತದೆ ಎಂಬ ವಾದವನ್ನು ಮಂಡಿಸಲಾಗಿದೆ. ಪರಿಸರಕ್ಕೆ ಹೊಂದಿಕೊಳ್ಳದ ಅಧಿಕಾರಶಾಹಿ ಆಡಳಿತವೇ ರೋಮನ್ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತು ಎಂದು ಅಭಿಪ್ರಾಯ ಪಟ್ಟಿದ್ದಾನೆ. ಇದೇ ರೀತಿಯ ಸಿದ್ಧಾಂತವನ್ನೇ ಆಧಾರವಾಗಿಟ್ಟುಕೊಂಡು ಕಾನೂನಿನ ಮಹತ್ವ ಎಂಬ ಪುಸ್ತಕವನ್ನು ಬರೆದ. ಈ ಪುಸ್ತಕದಲ್ಲಿ ಅವನು ಯಾವ ರೀತಿಯಲ್ಲಿ ಕಾನೂನು ಆ ದೇಶದ ಸಂವಿಧಾನ ಚೌಕಟ್ಟಿನಲ್ಲಿ ಜನರ ನಡತೆ, ಹವಾಗುಣ, ಧರ್ಮ ಮತ್ತು ವಾಣಿಜ್ಯ ವ್ಯವಸ್ಥೆಗೆ ಪೂರಕವಾಗಿರಬೇಕು ಎಂಬುದನ್ನು ಪ್ರತಿಪಾದಿಸಿದ. ಅವನ ಪ್ರಕಾರ ಪ್ರಾಕೃತಿಕ ಲಕ್ಷಣಗಳು, ಹವಾಗುಣ, ಮಣ್ಣಿನ ಸಾರತೆ ಇವೆಲ್ಲ ಮನುಷ್ಯನ ಗುಣ ಲಕ್ಷಣಗಳನ್ನಷ್ಟೇ ಅಲ್ಲದೆ ಯಾವ ರೀತಿಯ ಸರಕಾರ ಬೇಕು(ರಾಜತ್ವ, ಕುಲೀನ ಪ್ರಭುತ್ವ(ಅರಿಸ್ಟೋಕ್ರೆಸಿ), ಗಣರಾಜ್ಯ ಇತ್ಯಾದಿ) ಎಂಬುದನ್ನು ನಿರ್ಧರಿಸುತ್ತದೆ. ಅದೇ ರೀತಿ ಅಧಿಕಾರಕ್ಕೆ ಬಂದ ಸರಕಾರ ಯಾವ ರೀತಿಯ ಕಾನೂನು ವ್ಯವಸ್ಥೆ ಜನರಿಗೆ ಬೇಕು ಎಂಬುದನ್ನು ನಿರ್ಧರಿಸುತ್ತದೆ.

ಪ್ರತಿಯೊಂದು ಸರಕಾರವೂ ತನ್ನದೇ ಆದ ವಿಶಿಷ್ಟ ಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಪ್ರತಿ ಸರಕಾರದ ಹಿಂದೆ ಜನರ ಪ್ರಭಾವ ಅಡಗಿರುತ್ತದೆ. ಸರಕಾರವು ಜನರ ಪ್ರಭಾವವನ್ನು ಕಳೆದುಕೊಂಡು ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳು ವಿರಳ; ಜನರ ಒಲವನ್ನು ಕಳೆದುಕೊಂಡ ಸರಕಾರದ ಬದಲಿಗೆ ಹೊಸ ಸರಕಾರ ಅಧಿಕಾರಕ್ಕೆ ಬರುತ್ತದೆ. ಕೇವಲ ಭಯದ ವಾತಾವರಣದಲ್ಲಿ ಅಧಿಕಾರಶಾಹಿ ದಬ್ಬಾಳಿಕೆಯ ಸರಕಾರ ಅಧಿಕಾರವನ್ನು ಮಾಡಬಹುದು. ಇಂತಹ ಸರಕಾರಕ್ಕೆ ಜನರ ಬೆಂಬಲ ಇರುವುದಿಲ್ಲವಾದರೂ ಆ ಸರಕಾರ ದಬ್ಬಾಳಿಕೆಯಿಂದ ದೇಶದ ರಾಜಕೀಯ ವ್ಯವಸ್ಥೆಯನ್ನು ಸಾಮಾಜಿಕ ವ್ಯವಸ್ಥೆಯನ್ನು, ವಿದ್ಯಾ ಇಲಾಖೆಯನ್ನು ತನ್ನ ಹದ್ದುಬಸ್ತಿನಲ್ಲಿರಿಸಿಕೊಂಡು ತನಗೆ ಅನುಕೂಲಕರವಾಗುವ ರೀತಿಯಲ್ಲಿ ಕಾನೂನನ್ನು ಸೃಷ್ಟಿಸಬಹುದು. ಇಂತಹ ರಾಜಕೀಯ ವ್ಯವಸ್ಥೆ ಮನುಷ್ಯನನ್ನು ಗುಲಾಮಗಿರಿಗೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ಪಟ್ಟಿದ್ದಾನೆ. ಗುಲಾಮಗಿರಿ, ಬಹುಪತ್ನಿತ್ವ ಮತ್ತು ಇಸ್ಲಾಂ ಧರ್ಮ ಇದ್ದ ಪ್ರದೇಶದಲ್ಲಿ ಅಧಿಕಾರಶಾಹಿ ಆಡಳಿತ ವ್ಯವಸ್ಥೆಗೆ ಒಳ್ಳೆಯ ಭವಿಷ್ಯವಿದೆ. ಇಸ್ಲಾಂ ಧರ್ಮದಲ್ಲಿ ಗುಲಾಮಗಿರಿ, ಬಹುಪತ್ನಿತ್ವಗಳಿಗೆ ಅವಕಾಶವಿರುವ ಕಾರಣ ಇಂತಹ ವಾತಾವರಣದಲ್ಲಿ ಅಧಿಕಾರಶಾಹಿ ಆಡಳಿತಕ್ಕೆ ಹೆಚ್ಚು ವಿರೋಧಗಳು ಬರಲಾರವು.

ರಾಜನನ್ನು ಗೌರವ ದೃಷ್ಟಿಯಿಂದ ನೋಡಿಕೊಳ್ಳುವುದು ರಾಜತ್ವದ ಲಕ್ಷಣ. ರಾಜನ ಘನತೆ, ಗೌರವಗಳನ್ನು ಕಾಪಾಡುವ ದೃಷ್ಟಿಯಿಂದಲೇ ಆ ದೇಶದ ಕಾನೂನು ವ್ಯವಸ್ಥೆ ಸೃಷ್ಟಿಯಾಗುತ್ತದೆ. ಕುಲೀನರು, ಪುರಸ್ಕಾರಗಳನ್ನು ಹೊಂದಿದವರನ್ನು ತಮ್ಮ ಬೆಂಬಲಕ್ಕೆ ತೆಗೆದುಕೊಂಡು ಸಾಮಾನ್ಯ ಜನರಿಗೆ ವ್ಯಾಪಾರದಲ್ಲಾಗಲಿ ಅಥವಾ ಯಾವುದೇ ವ್ಯವಸ್ಥೆ ಯಲ್ಲಾಗಲೀ(ಸಾಮಾಜಿಕ, ರಾಜಕೀಯ) ಸ್ಥಾನಮಾನ ನೀಡದೆ ಕೇವಲ ತಮ್ಮ ಅಧಿಕಾರದಲ್ಲಿ ಉಳಿಸುವ ನಿಟ್ಟಿನಲ್ಲಿ ಕಾನೂನನ್ನು ಸೃಷ್ಟಿ ಮಾಡುವ ರಾಜತ್ವದ ಸರಕಾರದಲ್ಲಿ ಗೌರವವೇ ಮೂಲಭೂತ ಲಕ್ಷಣವಾಗಿದೆ. ಇಂತಹ ಸರಕಾರ ವಿಸ್ತೀರ್ಣದಲ್ಲಿ ದೊಡ್ಡದಿರುವ, ಕೆಥೋಲಿಕ್ ಧರ್ಮವನ್ನು ಹೊಂದಿರುವ, ಒಳ್ಳೆಯ ಮಧ್ಯಮ ಹವಾಗುಣ ಹೊಂದಿರುವ ದೇಶದಲ್ಲಿ ಕಂಡುಬರುತ್ತದೆ. ಇಂತಹ ರಾಜಕೀಯ ವ್ಯವಸ್ಥೆ ೧೮ನೆಯ ಶತಮಾನದಲ್ಲಿ ಫ್ರಾನ್ಸ್ ದೇಶದಲ್ಲಿ ಕಂಡುಬರುತ್ತಿತ್ತು. ಬೂರ್ಬನ್ ರಾಜರುಗಳು ದಬ್ಬಾಳಿಕೆಯಿಂದ ಅಧಿಕಾರವನ್ನು ಮಾಡುತ್ತಿದ್ದರು.

ಕುಲೀನರ ಆಡಳಿತ ವ್ಯವಸ್ಥೆಯ ಬಂಡವಾಳ ಆಧುನಿಕತೆಯಾಗಿರುತ್ತದೆ. ಹಾಗಾಗಿ ಆ ವ್ಯವಸ್ಥೆಯಲ್ಲಿ ಹೆಚ್ಚು ಅಧಿಕಾರ, ಸಂಪತ್ತು, ಗೌರವ, ಜನರ ಗುಣ ನಡತೆ ಕಾನೂನಿನ ಪೂರಕವಾಗಿದ್ದು ಬದಲಾವಣೆಗೆ ಕಾನೂನಿನ ಬೆಂಬಲ ಇರುತ್ತದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವವೇ ಬಂಡವಾಳ, ಮೊಂಟೆಸ್‌ಕ್ಕೂ ಪ್ರಕಾರ ದೇಶಾಭಿಮಾನ, ಸಮಾನತೆ, ಭ್ರಾತೃತ್ವತೆ, ಪ್ರಜಾಪ್ರಭುತ್ವ ಅಥವಾ ಗಣರಾಜ್ಯ ಸರಕಾರದ ಮುಖ್ಯ ಲಕ್ಷಣಗಳಾಗಿವೆ. ಈ ರೀತಿಯಾಗಿ ಗೌರವ ರಾಜತ್ವದ ಮುಖ್ಯ ಲಕ್ಷಣವಾದರೆ ರಾಜಕೀಯ ಪ್ರಭಾವವೇ ಗಣರಾಜ್ಯ ಸರಕಾರದ ಮುಖ್ಯ ಲಕ್ಷಣ. ಗಣರಾಜ್ಯ ಅಥವಾ ಪ್ರಜಾಪ್ರಭುತ್ವ ಸರಕಾರವನ್ನು ಹೊಂದಿರುವ ದೇಶ ತನ್ನ ಕಾನೂನು ವ್ಯವಸ್ಥೆಯ ಮೂಲಕ ವಿದ್ಯಾಸಂಸ್ಥೆಯ ಮತ್ತು ಒಳ್ಳೆಯ ಮಾದರಿ ಮೂಲಕ ಜನರಲ್ಲಿ ಏಕತೆ, ಸಮಾನತೆ ಮತ್ತು ದೇಶಾಭಿಮಾನದ ಮಂತ್ರವನ್ನು ಬೀರಬೇಕು ಮತ್ತು ರಾಜಕೀಯ ವ್ಯವಸ್ಥೆ ಎಷ್ಟು ಚೊಕ್ಕವಾಗಿರಬೇಕೆಂದರೆ ಎಲ್ಲಾ ಪ್ರಜೆಗಳೂ ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮನ್ನು ಅಥವಾ ತಮ್ಮ ಪ್ರತಿನಿಧಿಗಳ ಮೂಲಕ ಸರಕಾರದಲ್ಲಿ ತೊಡಗಿಸಿ ಕೊಳ್ಳು ವಂತಾಗಿರಬೇಕು. ವ್ಯಕ್ತಿಗೆ ವಿಶೇಷ ಸ್ಥಾನಮಾನ ಇರಬಾರದು. ಮೇಲ್ವರ್ಗ, ಕೆಳವರ್ಗ ಎಂಬ ಬೇಧ ಇರಬಾರದು. ಅಧಿಕಾರದ ದುರುಪಯೋಗ ನಡೆಯದಂತೆ ಅಡೆ-ತಡೆಗಳನ್ನು ನಿರ್ಮಿಸ ಬೇಕೆಂದು ಅಭಿಪ್ರಾಯಪಟ್ಟಿದ್ದಾನೆ.

ಮೊಂಟೆಸ್ಕ್ಯೂ ತನ್ನ ಕಾಲದ ವ್ಯವಸ್ಥೆಗಳನ್ನು ಖಂಡಿಸಿದ್ದರೂ ಮಧ್ಯಮ ಮಾರ್ಗಿ ಯಾಗಿದ್ದಾನೆ. ಅವನ ದೃಷ್ಟಿಯಲ್ಲಿ ಚೈನಾ, ರಷ್ಯಾ ನಿರಂಕುಶ ಆಡಳಿತವನ್ನೂ ಫ್ರಾನ್ಸ್ ರಾಜತ್ವವನ್ನು ಹೊಂದಿದ್ದರೆ ಜಿನೇವಾ ಒಂದು ಗಣರಾಜ್ಯವಾಗಿದೆ. ಹಾಗಾಗಿ ವ್ಯವಸ್ಥೆಗಳ ಬಗ್ಗೆ ಚಿಂತನೆ ಮಾಡಿದರೂ ಮಾದರಿ ಸರಕಾರ ಇಂತಹುದೇ ಆಗಬೇಕು ಎಂಬ ಸಾಮಾನ್ಯ ಸಿದ್ಧಾಂತವನ್ನು ನೀಡಲಿಲ್ಲ. ಈ ನಿಟ್ಟಿನಲ್ಲಿ ಹೇಳುವುದಾದರೆ ಆತನು ತನ್ನ ದೇಶದ ಸರಕಾರಿ ವ್ಯವಸ್ಥೆಯನ್ನು ತನ್ನ ತಾತ್ವಿಕವಾದ ವಿವಾದಗಳ ಸರಣಿಯ ಮತ್ತು ಅವಲೋಕನಗಳ ಮುಖಾಂತರ ಮಾಡಿದ್ದಾನೆಯೇ ಹೊರತು ಐತಿಹಾಸಿಕ ಬದಲಾವಣೆಯನ್ನು ತಿಳಿದು ಅಲ್ಲ. ಮೊಂಟೆಸ್‌ಕ್ಯೂನಿಗೆ ಪ್ರಕೃತಿಯನ್ನು ನೆಚ್ಚಿಕೊಂಡಿರುವ ಮನುಷ್ಯನಲ್ಲಿ ಹೆಚ್ಚು ನಂಬಿಕೆ ಇರದಿದ್ದರೂ ಆತನು ಬರೆದ ಕಾನೂನಿನ ಮಹತ್ವಕ್ಕೆ ೧೮ನೆಯ ಶತಮಾನದಲ್ಲಿ ಹೆಚ್ಚಿನ ಮನ್ನಣೆ ಇತ್ತು.

ಮೊಂಟೆಸ್ಕ್ಯೂ ನಡೆಸಿರುವ ಸಮೀಕ್ಷೆಯಿಂದ ತಿಳಿಯುವ ವಿಷಯವೇನೆಂದರೆ ದೊಡ್ಡ ಗಾತ್ರದ ದೇಶಗಳಿಗೆ ರಾಜತ್ವವೇ ಹೇಳಿ ಮಾಡಿಸಿದ ಸರಕಾರವಾಗುವುದಾದರೆ ಸಣ್ಣ ಗಾತ್ರದ ದೇಶಗಳಿಗೆ ಗಣರಾಜ್ಯವೇ ಅತ್ಯಂತ ಸೂಕ್ತ ಸರಕಾರವಾಗಿದೆ. ಇಂತಹ ಸರಕಾರ ಗಳಿಂದಲೇ ಸ್ವಾತಂತ್ರ್ಯವನ್ನು ಕಾಪಾಡಲಿಕ್ಕೆ ಸಾಧ್ಯ. ಯಾವುದೇ ಸರಕಾರ ಅಧಿಕಾರದ ದುರುಪಯೋಗವನ್ನು ಮಾಡದೆ ನಿಷ್ಟೆಯಿಂದ ಆಡಳಿತ ಮಾಡಿದರೆ ಮಾತ್ರ ಸ್ವಾತಂತ್ರ್ಯವು ಉಳಿಯಲಿಕ್ಕೆ ಸಾಧ್ಯ. ಅಧಿಕಾರದ ದುರುಪಯೋಗ ನಡೆಯದಂತೆ ನೋಡಿಕೊಳ್ಳಲು ಸರಕಾರದ ಆಡಳಿತದಲ್ಲಿ ಕೆಲವು ಅಡೆತಡೆಗಳು ಇರುವುದು ಅನಿವಾರ್ಯ(ಚೆಕ್ಸ್ ಆ್ಯಂಡ್ ಬ್ಯಾಲನ್ಸ್).

ಮೊಂಟೆಸ್ಕ್ಯೂ ಪ್ರಕಾರ ಇಂಗ್ಲೆಂಡಿನಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಪ್ರತ್ಯೇಕವಾಗಿರುವುದರಿಂದ ಅಲ್ಲಿನ ಜನರು ಸ್ವಾತಂತ್ರ್ಯವನ್ನು ಅನುಭವಿಸುವವರಾಗಿದ್ದಾರೆ. ಅದೇ ರೀತಿಯ ವ್ಯವಸ್ಥೆಯನ್ನು ಫ್ರಾನ್ಸ್‌ನಲ್ಲೂ ತರಬೇಕೆನ್ನುವುದೇ ಅವನ ವಾದ. ಸರಕಾರದ ಪ್ರತಿಯೊಂದು ಅಂಗವೂ ಮತ್ತೊಂದು ಅಂಗದಿಂದ ಸ್ವತಂತ್ರವಾಗಿರಬೇಕು. ಒಂದು ಅಂಗದ ಮೇಲೆ ಮತ್ತೊಂದು ಅಂಗಕ್ಕೆ ಅಧಿಕಾರ ಇರಬಾರದು. ಶಾಸಕಾಂಗ ಮತ್ತು ಕಾರ್ಯಾಂಗ ಒಬ್ಬ ವ್ಯಕ್ತಿಯನ್ನು ಹೊಂದಿಕೊಂಡಿದ್ದರೆ ಅಂತಹ ಅಪವಿತ್ರ ಸಂಬಂಧದಿಂದ ಸ್ವಾತಂತ್ರ್ಯಕ್ಕೆ ಧಕ್ಕೆ ಇದೆ. ಇಂತಹ ವ್ಯವಸ್ಥೆಯಲ್ಲಿ ಆ ಸರಕಾರ ನಡೆಸುವ ರಾಜ ಅಥವಾ ಶಾಸಕಾಂಗ ಸಭೆ ಕಠಿಣವಾದ, ದಮನೀಯ ಕಾನೂನುಗಳನ್ನು ಜಾರಿಗೊಳಿಸುವ ಸಾಧ್ಯತೆಗಳಿವೆ. ಜನರ ಜೀವ ಮತ್ತು ಸ್ವಾತಂತ್ರ್ಯ ಇಂತಹ ಅಡೆ-ತಡೆಯಿಲ್ಲದ ಸರಕಾರದ ಕೈಯಲ್ಲಿ ಸಿಕ್ಕಿ ಬಳಲುವುದು ಖಂಡಿತ. ಅದೇ ರೀತಿ ನ್ಯಾಯಾಂಗ ಮತ್ತು ಶಾಸಕಾಂಗ ಒಟ್ಟು ಸೇರಿದರೆ ಕಾನೂನು ಪರಿಪಾಲನೆ ಮಾಡುವ ನ್ಯಾಯಾಧೀಶನೇ ಶಾಸಕನಾಗಿರುತ್ತಾನೆ. ಇಂತಹ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗುವುದು ಅಲಭ್ಯ. ಹಾಗೇ ಕಾರ್ಯಾಂಗ ಮತ್ತು ನ್ಯಾಯಾಂಗ ಒಂದಾಗಿದ್ದರೆ ನ್ಯಾಯಾಧೀಶನೇ ಕ್ರೂರಿಯಾಗಿ ವರ್ತಿಸುವ ಎಲ್ಲಾ ಸಾಧ್ಯತೆಗಳಿವೆ. ಈ ರೀತಿಯ ಅಧಿಕಾರದ ದುರುಪಯೋಗವನ್ನು ತಡೆಗಟ್ಟಲು ಮೊಂಟೆಸ್‌ಕ್ಕೂ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಪ್ರತ್ಯೇಕತೆಯನ್ನು ಬೆಂಬಲಿಸಿದ್ದಾನೆ. ಮೊಂಟೆಸ್ ಕ್ಕೂ ಮಂಡಿಸಿರುವ ಈ ಸಿದ್ಧಾಂತಕ್ಕೆ ಮಾರು ಹೋದ ಅಮೆರಿಕದ ಸಂವಿಧಾನ ಕರ್ತೃ ಮಡೀಸನನು ‘‘ಮೊಂಟೆಸ್‌ಕ್ಯೂ ಯಾವಾಗಲೂ ಸಲಹೆ ಕೇಳುವ ಒಬ್ಬ ಪ್ರವಾದಿ’’ ಎಂದು ಬಣ್ಣಿಸಿದ್ದಾನೆ. ಆದರೆ ಸರಕಾರದ ನಡವಳಿಕೆಯಲ್ಲಿ ಈ ರೀತಿಯ ಖಡಾಖಂಡಿತವಾದ ಪ್ರತ್ಯೇಕತೆ (ಸಪರೇಶನ್ ಆಪ್ ಪವರ್ಸ್) ಸಾಧ್ಯವಿಲ್ಲದ ವಿಷಯವಾಗಿದೆ. ಅಮೆರಿಕಾದಲ್ಲೂ ಖಡಾಖಂಡಿತವಾದ ಪ್ರತ್ಯೇಕತೆ ಇಲ್ಲದಿದ್ದರೂ ಕೆಲವು ಅಡೆ-ತಡೆಗಳಿದ್ದು (ಚೆಕ್ಸ್ ಅಂಡ್ ಬ್ಯಾಲನ್ಸ್) ತನ್ಮೂಲಕ ಅಧಿಕಾರದ ದುರುಪಯೋಗವನ್ನು ತಡೆಯುವ ವ್ಯವಸ್ಥೆ ಇದೆ. ಭಾರತದ ಪಾರ್ಲಿಮೆಂಟಲಿ ವ್ಯವಸ್ಥೆಯಲ್ಲಿ ಶಾಸಕಾಂಗವು ಕೇವಲ ಶಾಸಕಾಂಗಕ್ಕೆ ಸಂಬಂಧಿಸಿದ ವಿಷಯಕ್ಕೆ ಸೀಮಿತವಾಗಿರುವುದಾದರೆ ಸಂವಿಧಾನದ ಖಂಡ (ಆರ್ಟಿಕಲ್) ೫೩ರ ಪ್ರಕಾರ ಕಾರ್ಯಾಂಗ ಅಧಿಕಾರವು ರಾಷ್ಟ್ರಪತಿಗಳ ಕೈಯಲ್ಲಿದೆ. ಆದರೆ ನಿಜವಾದ ಅಧಿಕಾರವನ್ನು ನಡೆಸುವ ಅಧಿಕಾರ ಇರುವುದು ಜನರಿಂದ ಚುನಾಯಿತಗೊಂಡ ಪ್ರತಿನಿಧಿ ಗಳು ಪ್ರತಿನಿಧಿಸುವ ಶಾಂಸಕಾಂಗ ಸಭೆಯ ಸದಸ್ಯರನ್ನು ಹೊಂದಿರುವ ಕ್ಯಾಬಿನೆಟ್‌ಗೆ.

ಇಂಗ್ಲೆಂಡ್‌ನ ಬಗ್ಗೆ ಮೊಂಟೆಸ್‌ಕ್ಯೂ ಹೇಳುವ ಪ್ರಕಾರ ಅಲ್ಲಿ ಕೆಳಮನೆ (ಹೌಸ್ ಆಫ್ ಕಾಮನ್ಸ್) ಜನರನ್ನು ಪ್ರತಿನಿಧಿಸಿದರೆ, ಮೇಲ್ಮನೆ (ಹೌಸ್ ಆಫ್ ಲಾರ್ಡ್) ಕುಲೀನರನ್ನು (ಲಾರ್ಡ್, ಪಿಯರ್ಸ್), ಗೌರವಸ್ಥರನ್ನು ಹೊಂದಿರುತ್ತದೆ. ಅದೇ ರೀತಿ ರಾಜನ ಅಧಿಕಾರವನ್ನು ಶಾಸಕಾಂಗ ತನ್ನ ಹಿಡಿತದಲ್ಲಿ ಇರಿಸಿದರೆ, ಹಣಕಾಸಿನ ಮೇಲೆ ಹಾಗೂ ವಿಟೋ ಅಧಿಕಾರ ಚಲಾಯಿಸುವ ಹಕ್ಕನ್ನು ರಾಜನಿಗೆ ಕಾಯ್ದಿರಿಸಲಾಗಿದೆ. ಹಾಗೇ ಅವನಿಂದ ನೇಮಕಗೊಂಡ ಕ್ಯಾಬಿನೆಟ್ ಅವನಿಗೆ ಜವಾಬ್ದಾರಿಯುತವಾಗಿದೆ. ಮೊಂಟೆಸ್ ಕ್ಕೂ ಆ ದೇಶದ ಹೆಬಿಯಸ್ ಕಾರ್ಪಸ್ ಕಾಯ್ದೆ, ಕ್ರಿಮಿನಲ್ ಕಾಯ್ದೆ ಬಗ್ಗೆ ಕೂಡ ಹೇಳಿದ್ದಾನೆ. ಅವನ ಆಂಗ್ಲ ಸಂವಿಧಾನದ ಮೇಲಿನ ವ್ಯಾಮೋಹ ಎಷ್ಟರ ಮಟ್ಟಿಗಿತ್ತೆಂದರೆ ಕೆಲವೊಂದು ಬಾರಿ ಇಂಗ್ಲೆಂಡಿನ ವ್ಯವಸ್ಥೆಗಳನ್ನೂ ಮೀರಿ ಬಣ್ಣಿಸಿದ್ದಾನೆ. ಇಂಗ್ಲೆಂಡಿನ ಸರಕಾರದಲ್ಲಿ ಕೂಡಾ ಮೊಂಟೆಸ್‌ಕ್ಕೂ ಹೇಳಿದ ರೀತಿಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಪ್ರತ್ಯೇಕವಾಗಿಲ್ಲ. ಅಲ್ಲಿ ಕೂಡ ಪಾರ್ಲಿಮೆಂಟರಿ ಸರಕಾರ ಅಸ್ತಿತ್ವದಲ್ಲಿರು ವುದರಿಂದ ಕಾರ್ಯಾಂಗ ಪಾರ್ಲಿಮೆಂಟ್‌ನ ಹತೋಟಿಯಲ್ಲಿದ್ದು ತನ್ನ ಕಾರ್ಯಭಾರ ಮಾಡಬೇಕಾಗಿದೆ. ಅಲ್ಲಿ ಲಾರ್ಡ್ ಚ್ಯಾನ್ಸಿಲರನು ಮೇಲ್ಮನೆಯ ಅಧ್ಯಕ್ಷನೂ ಹಾಗೂ ಕ್ಯಾಬಿನೇಟ್ ಸದಸ್ಯತ್ವವನ್ನು ಹೊಂದಿರುತ್ತಾನೆ. ಹಾಗಾಗಿ ಖಡಾಖಂಡಿತವಾಗಿ ಪ್ರತ್ಯೇಕತೆ ಸಾಧ್ಯವಿಲ್ಲ. ಆದರೂ ಅಲ್ಲಿನ ಜನರು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಕಾರಣ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಸ್ವತಂತ್ರವಾಗಿ ತನ್ನ ಕಾರ್ಯಭಾರವನ್ನು ನಿಭಾಯಿಸುತ್ತದೆ. ಅಷ್ಟು ಮಾತ್ರವಲ್ಲದೆ ಅಲ್ಲಿನ ಜನರು ದೇಶದ ಕಾನೂನಿಗೆ ತಲೆ ಬಾಗುತ್ತಾರೆ. ಕಾನೂನು ದೃಷ್ಟಿಯಿಂದ ಯಾರೂ ಕೂಡ ಮೇಲು ಕೀಳು ಎಂಬ ಮಾತಿಲ್ಲ. ಎಲ್ಲರಿಗೂ ಒಂದೇ ರೀತಿಯ ಶಿಕ್ಷೆ ಹಾಗೂ ನ್ಯಾಯವನ್ನು ಕೊಡಲಾಗುತ್ತದೆ. ಅದೇ ರೀತಿ ಭಾರತ, ಜಪಾನ್, ಫ್ರಾನ್ಸ್ ದೇಶದಲ್ಲೂ ಖಡಾಖಂಡಿತವಾದ ಪ್ರತ್ಯೇಕತೆ ಇಲ್ಲದಿದ್ದರೂ ಜನರು ಸ್ವತಂತ್ರವನ್ನು ಸಂವಿಧಾನಾತ್ಮಕ ಅಧಿಕಾರವಾಗಿ ಅನುಭವಿಸುತ್ತಿದ್ದಾರೆ.

ಮೊಂಟೆಸ್‌ಕ್ಯೂನ ಕಾಲದಲ್ಲಿ ಸರಕಾರದ ಮುಖ್ಯ ಗುರಿ ದೇಶವನ್ನು ವೈರಿಗಳಿಂದ ರಕ್ಷಿಸುವುದು, ಕಾನೂನು ಪರಿಪಾಲನೆ ಮಾಡುವುದು, ಸಾಮಾಜಿಕ ನ್ಯಾಯ ಕೊಡುವುದು ಇತ್ಯಾದಿ. ಆ ಕಾಲದಲ್ಲಿ ಹೆಚ್ಚಿನ ಸರಕಾರಗಳು ಅಧಿಕಾರಶಾಹಿ ರಾಜರುಗಳ ಕೈಯಲ್ಲಿತ್ತು. ಸುಖೀ ರಾಜ್ಯದ ಕಲ್ಪನೆ ಆ ಕಾಲದಲ್ಲಿ ಇನ್ನೂ ಪ್ರಬುದ್ಧಮಾನ ಪರಿಸ್ಥಿತಿಗೆ ಬಂದಿರಲಿಲ್ಲ. ಆದರೆ ಇಂದಿನ ಕಾಲದಲ್ಲಿ ಸುಖೀ ರಾಜ್ಯದ (ವೆಲ್‌ಫೇರ್ ಸ್ಟೇಟ್) ಕಲ್ಪನೆಗೆ ಬಹಳಷ್ಟು ಮಹತ್ವವಿದೆ. ಹಾಗಾಗಿ ಕಾರ್ಯಾಂಗ ಹೆಚ್ಚಿನ ಅಧಿಕಾರದಿಂದ ಮತ್ತು ಜವಾಬ್ದಾರಿಯುತವಾಗಿ ಕಾರ್ಯ ಮಾಡಬೇಕಾಗಿದೆ. ಅಷ್ಟೇ ಅಲ್ಲದೆ ರಾಜಕೀಯ ಪಕ್ಷಗಳ ಬೆಳವಣಿಗೆಯಿಂದಾಗಿ ಕಾರ್ಯಾಂಗವನ್ನು ಶಾಸಕಾಂಗದಿಂದ ಪ್ರತ್ಯೇಕಿಸುವ ಮಾತು ದೂರವಾಗಿ ಉಳಿದು ಅದರ ಬದಲಾಗಿ ಈ ಎರಡೂ ಅಂಗಗಳು ಒಂದಕ್ಕೊಂದು ಹೊಂದಾಣಿಕೆಯಿಂದ ವರ್ತಿಸುವ ಕಾಲ ಒದಗಿ ಬಂದಿದೆ.

ವಾಲ್ಟೇರ್ ಫ್ರಾನ್ಸ್ ದೇಶದ ಮತ್ತೊಬ್ಬ ಖ್ಯಾತ ತತ್ವಜ್ಞಾನಿ. ಆತನು ಕೂಡ ಸಾಮಾಜಿಕ ಸುಧಾರಣೆಗೆ ಬದ್ಧವಾಗಿದ್ದು ಸಾಮಾಜಿಕ ಮತ್ತು ರಾಜಕೀಯ ಕುಂದು ಕೊರತೆಗಳನ್ನು ತನ್ನ ಹರಿತವಾದ ಮಾತುಗಳ ಮೂಲಕ ಪ್ರಕಟಪಡಿಸಿದ್ದಾನೆ. ಅವನಿಗೆ ಚರ್ಚ್‌ನಲ್ಲಿನ ಪಾದ್ರಿಗಳು ನಡೆಸುವ ಅವ್ಯವಹಾರಗಳ ಬಗ್ಗೆ ಅಸಮಾಧಾನವಿತ್ತು. ಅದೇ ರೀತಿಯಲ್ಲಿ ಆತ ರಾಜನ ದೈವದತ್ತವಾದ ಅಧಿಕಾರಗಳ ಬಗ್ಗೆ(ಡಿವೈನ್ ಓರಿಜಿನ್ ಥಿಯರಿ) ಕೂಡ ವಿರೋಧಿಯಾಗಿದ್ದ. ಧರ್ಮದ ವಿಷಯದಲ್ಲಿ ಆತ ಧರ್ಮ ಸಹಿಷ್ಣುತೆಯ ಬಗ್ಗೆ ಹೇಳಿ ದ್ದಾನೆ. ಅದರ ಸಾಮಾಜಿಕ ಪುನರ್ ನಿರ್ಮಾಣದ ಬಗ್ಗೆ ಯಾವ ಮಾತೆತ್ತಿಲ್ಲ. ಅವನ ಪ್ರಕಾರ ಫ್ರಾನ್ಸ್ ದೇಶಕ್ಕೆ, ಅಧಿಕಾರಶಾಹಿ ರಾಜತ್ವಕ್ಕೆ ಅವನು ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟುಕೊಂಡಿರಲಿಲ್ಲ. ಪ್ರಜಾಪ್ರಭುತ್ವ ಅಥವಾ ಗಣರಾಜ್ಯದ ಬಗ್ಗೆ ಇರುವ ತಿರಸ್ಕಾರವು ಎಷ್ಟಿತ್ತೆಂದರೆ ಅವನ ಮಾತಿನಲ್ಲೇ ಹೇಳುವುದಾದರೆ ‘‘ನಾನು ಒಂದು ಸಿಂಹದ ಅಧಿಕಾರದ ಕೆಳಗೆ ಇರಲು ಬಯಸುತ್ತೇನೆ ವಿನಹ ನೂರು ಇಲಿಗಳು ಮಾಡುವ ಅಧಿಕಾರದ ಕೆಳಗೆ ಅಲ್ಲ.’’ ಆದರೂ ಫ್ರಾನ್ಸ್ ದೇಶದ ಜನರ ಮೇಲೆ ವಾಲ್ಟೇರ್ ಪ್ರಭಾವ ಬಹಳಷ್ಟಿತ್ತು.

ಇವನ ವಾದ ಥಾಮಸ್ ಹಾಬ್ಸ್ ಮತ್ತು ಜಾನ್‌ಲಾಕ್ ಮಂಡಿಸಿರುವ ವಾದಕ್ಕಿಂತ ಭಿನ್ನವಾಗಿದೆ. ಹಾಬ್ಸನು ಅಧಿಕಾರಶಾಹಿ ರಾಜತ್ವದ ಪ್ರತಿಪಾದಿಯಾಗಿದ್ದಾನೆ. ಅವನು ಬರೆದ ಅವಿಯಾತನ್(೧೬೫೧) ರಾಜನ ದೈವದತ್ತವಾದ ಅಧಿಕಾರಗಳ ಬಗ್ಗೆ ಹೊಸ ಆಯಾಮಾನವನ್ನು ಕೊಟ್ಟಿದೆ. ಅವನ ಪ್ರಕಾರ ಎಲ್ಲಿ ಪ್ರಾಕೃತಿಕ ಸಂಪತ್ತು ಕಡಿಮೆಯಾಗಿರುತ್ತದೆ ಮತ್ತು ಜನಸಂಖ್ಯೆ ವಿಪುಲವಾಗಿರುತ್ತದೆಯೋ ಅಂಥ ಪ್ರದೇಶದಲ್ಲಿ ಜೀವನಕ್ಕಾಗಿ ಸ್ಪರ್ಧೆ ಅನಿವಾರ್ಯವಾಗುತ್ತದೆ. ಮನುಷ್ಯ ತಾನು ಬದುಕುವ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಸಂಪತ್ತನ್ನು ಪಡೆಯಲು ಹವಣಿಸುತ್ತಾನೆ. ಅವನ ಈ ಮೇಲೆ ಇಲ್ಲದ ಆಶೆಯನ್ನು ತಡೆಗಟ್ಟಬೇಕಾದರೆ ಅಲ್ಲಿ ಅವನಿಗಿಂತ ಅಧಿಕಾರವುಳ್ಳ ರಾಜನ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ. ಈ ರೀತಿಯಾಗಿ ಹಾಬ್ಸ್ ಅಧಿಕಾರಶಾಹಿ ರಾಜತ್ವದ ಬಗ್ಗೆ ಹೇಳಿದ್ದಾನೆ. ಆದರೆ ವಾಲ್ಟೇರ್ ಜನರ ಸ್ವಾತಂತ್ರ್ಯವನ್ನು ಉಳಿಸುವ ಮತ್ತು ದಮನಕಾರಿ ಕಾನೂನುಗಳಿಂದ ಜನರನ್ನು ರಕ್ಷಿಸುವ ದೃಷ್ಟಿಯಿಂದ ಸಂವಿಧಾನಾತ್ಮಕವಾದ ರಾಜತ್ವವನ್ನು ಬಯಸಿದ್ದಾನೆ. ಜಾನ್‌ಲಾಕ್‌ನು ಯಾವ ಸರಕಾರ ತನ್ನ ಇತಿ ಮಿತಿಗಳನ್ನು ಅರಿತು ಸಂವಿಧಾನಾತ್ಮಕವಾಗಿ ವರ್ತಿಸಿ ಜನರ ಅಧಿಕಾರಗಳನ್ನು ರಕ್ಷಿಸುತ್ತದೆ ಅಂಥ ಸರಕಾರವನ್ನು ಬಯಸಿದ್ದಾನೆ. ಈ ನಿಟ್ಟಿನಲ್ಲಿ ಸರಕಾರವನ್ನು ಆಂತರಿಕವಾಗಿ ತಡೆಗಟ್ಟುವ, ಆರೋಗ್ಯಕರವಾದ ಅಡೆ-ತಡೆಗಳ ಬಗ್ಗೆ ವಾದಿಸಿದ್ದಾನೆ.

ಎಲ್ಲಾ ತತ್ವಜ್ಞಾನಿಗಳ ಪ್ರಭಾವಕ್ಕಿಂತ ರುಸ್ಸೋ ಪ್ರಭಾವ ಜಾಸ್ತಿಯಾಗಿತ್ತು ಎಂಬ ಮಾತೇನು ಅತಿಶಯೋಕ್ತಿಯಲ್ಲ. ಆತನನ್ನು ಫ್ರಾನ್ಸ್ ಕ್ರಾಂತಿಯ ಪ್ರವಾದಿ ಎಂದೂ ಕರೆಯುವುದುಂಟು. ಆತನೊಬ್ಬ ಕ್ರಾಂತಿಕಾರಿ ತತ್ವಜ್ಞಾನಿಯಾಗಿದ್ದು ಫ್ರಾನ್ಸ್ ದೇಶದ ಸಮಕಾಲೀನ ರಾಜಕೀಯ ವ್ಯವಸ್ಥೆಗೆ ಬದಲಾದ ಹೊಸ ಬದಲಾವಣೆಯನ್ನು ಕೊಡಲು ಪ್ರಯತ್ನಿಸಿದ್ದಾನೆ. ತನ್ನ ಪುಸ್ತಕ ‘‘ಸಾಮಾಜಿಕ ಒಪ್ಪಂದದಲ್ಲಿ’’ (ಸೋಶಿಯಲ್ ಕಾಂಟ್ರಾಕ್ಟ್) ಸಾಮಾಜಿಕ ಕುಂದು ಕೊರತೆಗಳ ಬಗ್ಗೆ ಮಾತಾಡುತ್ತಾ ಪ್ರಾರಂಭದಲ್ಲಿ ಪ್ರಪಂಚದಲ್ಲಿ ಹುಟ್ಟಿದ ಮನುಷ್ಯ ಸಂತೋಷಿಯಾಗಿದ್ದ. ಆದರೆ ನಾಗರಿಕತೆ ಅವನನ್ನು ಕೆಡಿಸಿತು ಮತ್ತು ಅವನಲ್ಲಿ ಅನೈತಿಕತೆಯನ್ನು ತುಂಬಿಸಿತು. ಅನೈತಿಕತೆ ಅವನಲ್ಲಿ ತುಂಬುವ ಮೊದಲು ಸ್ವಾತಂತ್ರ್ಯವನ್ನು, ಸಮಾನತೆಯನ್ನು ಹೊಂದಿದ್ದ. ಆದರೆ ಶ್ರೀಮಂತ, ಬಡವನ ನಡುವಿನ ಅಂತರದ ಕೃಷಿ ಹಾಗೂ ಔದ್ಯೋಗೀಕರಣ ಬೆಳೆದಂತೆ ಸಮಾಜ ಮತ್ತು ಸರಕಾರ ವ್ಯವಸ್ಥಿತಗೊಂಡು ಶ್ರೀಮಂತರ ಅಧಿಕಾರ ಮತ್ತು ಸ್ಥಾನಮಾನಗಳನ್ನು ಕಾಪಾಡುವ ಪ್ರಯತ್ನ ನಡೆಯಿತು. ಇದು ಅಸಮಾನತೆಯ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು. ಇದು ಮನುಷ್ಯನ ಎಲ್ಲಾ ದುಃಖಗಳಿಗೂ ಮೂಲ ಕಾರಣವಾಯಿತು. ಇದರ ಪರಿಣಾಮ ಶ್ರೀಮಂತರು ಬಡವರನ್ನು ಶೋಷಣೆ ಮಾಡಲು ಪ್ರಾರಂಭಿಸಿದರು.

೧೭೫೩ರಲ್ಲಿ ಬರೆದ ಅಸಮಾನತೆಯ ಮೂಲ ಎಂಬ ಪುಸ್ತಕದಲ್ಲಿ ರುಸ್ಸೋ ಯಾವ ರೀತಿಯಲ್ಲಿ ಸ್ವಾರ್ಥಿ ಜನರು ಬಡವರನ್ನು ಶೋಷಣೆ ಮಾಡಿದರು ಎಂಬ ವಿಷಯದ ಬಗ್ಗೆ ಹೇಳಿದ್ದಾನೆ. ಶ್ರೀಮಂತ ತನ್ನ ಸ್ವಾರ್ಥಕ್ಕಾಗಿ ಬಡವನನ್ನು ದುಡಿಸುತ್ತಾ ಅವನಿಂದಲೇ ತನ್ನ ಒಡೆತನವನ್ನು ಒಪ್ಪಿಕೊಳ್ಳುವಂತೆ ಮಾಡಿದ ಪರಿಣಾಮವಾಗಿ ಖಾಸಗಿ ಆಸ್ತಿ ಜಾರಿಗೆ ಬಂತು. ಇದರೊಂದಿಗೆ ಅಸಮಾನತೆ ಇನ್ನೂ ಜಾಸ್ತಿಯಾಯಿತು. ಶ್ರೀಮಂತ ಇನ್ನೂ ಶ್ರೀಮಂತನಾಗುತ್ತಾ ಮುಂದುವರಿದ.

ಥಾಮಸ್ ಹಾಬ್ಸ್ ಹೇಳುವಂತೆ ಪ್ರಾರಂಭದಲ್ಲಿ ‘ತಾಕತ್ತೆ ಹಕ್ಕಾಗಿತ್ತು’. ಈ ಹಂತ ದಲ್ಲಿ ಮನುಷ್ಯ ಪ್ರಾಣಿಯ ಹಾಗೆ ವರ್ತಿಸುತ್ತಾ ಏಕಾಂಗಿ ಜೀವನವನ್ನು ನಡೆಸುತ್ತಿದ್ದ. ಜಾನ್ ಲಾಕ್ ಹೇಳುವಂತೆ

ಪ್ರಪಂಚದ ಪ್ರಾರಂಭದಿಂದಲೂ ಮನುಷ್ಯ ಸುಖೀ ಜೀವನ ವನ್ನು ಅನುಭವಿಸುತ್ತಿದ್ದ. ಪ್ರಾಕೃತಿಕ ಕಾನೂನು ಆತನಲ್ಲಿ ಬದುಕುವ ಹಕ್ಕನ್ನು, ಆಸ್ತಿ ಹೊಂದುವ ಅಧಿಕಾರವನ್ನು ಮತ್ತು ಸ್ವತಂತ್ರವಾಗಿ ತಿರುಗಾಡುವ ಹಕ್ಕನ್ನೂ ದಯಪಾಲಿಸಿತ್ತು. ಆ ಹಂತದಲ್ಲಿ ಈ ಹಕ್ಕುಗಳನ್ನು ಪ್ರತಿಪಾದಿಸುವ ಅಧಿಕಾರವನ್ನು ಹೊಂದಿರುವ ಸರಕಾರಗಳಾಗಲೀ ಅಥವಾ ಈ ಹಕ್ಕುಗಳ ಮಿತಿ ಮೀರಿದ ಬಳಕೆಯ ಮೇಲೆ ನಿಗಾ ಇಡುವ ಮತ್ತು ಆ ಹಕ್ಕುಗಳ ವ್ಯಾಪ್ತಿಯನ್ನು ತಿಳಿಸುವ ನ್ಯಾಯಾಧಿಕಾರಿಯಾಗಲೀ ಇರಲಿಲ್ಲ. ಪ್ರತಿಯೊಬ್ಬನೂ ಕೂಡ ತನಗೆ ತೋಚಿದ ರೀತಿಯಲ್ಲಿ ಈ ಹಕ್ಕುಗಳನ್ನು ಅನುಭವಿಸುತ್ತ ಈ ಹಕ್ಕುಗಳ ಉಲ್ಲಂಘನೆಗೆ ಮೂಲ ಕಾರಣವಾಗಿ ಜಗಳಕ್ಕೆ ನಾಂದಿ ಹಾಡಿದ.

ರುಸ್ಸೋ ಹೇಳುವಂತೆ

ಮನುಷ್ಯ ಪ್ರಾರಂಭದಿಂದಲೂ ಸುಖಿಯಾಗಿದ್ದು ಸಮಯ ಕಳೆದಂತೆ, ಜನಸಂಖ್ಯೆ ಹೆಚ್ಚಾದಂತೆ, ಸ್ವಂತ ಆಸ್ತಿಯ ವ್ಯಾಮೋಹ ಬೆಳೆದಂತೆ ಜಗಳಗಂಟಿತನವನ್ನು ಬೆಳೆಸಿ, ಕಡೆಗೆ ತನ್ನ ಮೇಲೆ ತನಗೇ ಜಿಗುಪ್ಸೆ ಬಂದು ಈ ಸಮಸ್ಯೆಗಳ ಪರಿಹಾರ ಎಂಬಂತೆ ಒಂದು ಒಡಂಬಡಿಕೆಗೆ ಮುಂದಾದ. ಈ ಒಡಂಬಡಿಕೆಯ ಪ್ರಕಾರ ತನ್ನ ಹಕ್ಕುಗಳು ಮತ್ತು ಅಧಿಕಾರಗಳನ್ನು ಸಮಾಜಕ್ಕೆ ಒಪ್ಪಿಸಿ ಪ್ರಾಕೃತಿಕ ವ್ಯವಸ್ಥೆಯ ಮೇಲೆ ತೆರೆ ಎಳೆದ.

ರುಸ್ಸೋ ಹೇಳುವಂತೆ ‘‘ಮನುಷ್ಯ ಸ್ವತಂತ್ರವಾಗಿ ಹುಟ್ಟಿದರೂ ಸಂಕೋಲೆಯಿಂದ ಬಂಧಿತನಾಗಿದ್ದಾನೆ.’’ ಈ ರೀತಿಯ ಮಾತುಗಳಿಂದ ಆತ ಸಮಾಜದ ಅವ್ಯವಸ್ಥೆಯ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾನೆ. ಆತ ನಾವು ಮತ್ತೆ ಪ್ರಕೃತಿಯ ಮಡಿಲಿಗೆ ಹೋದಲ್ಲಿ ಮಾತ್ರ ಈ ರೀತಿಯ ಬಂಧನದಿಂದ ಮತ್ತು ಕೆಟ್ಟು ಹೋದ ಸಾಮಾಜಿಕ ವ್ಯವಸ್ಥೆಯಿಂದ ಹೊರಬರಲು ಸಾಧ್ಯ ಎಂದು ಪ್ರತಿಪಾದಿಸಿದ್ದಾನೆ. ಪ್ರಕೃತಿಯ ಮಡಿಲಿನಲ್ಲಿ ಸ್ವರ್ಗ ಸುಖವನ್ನು ಅನುಭವಿಸುತ್ತಿದ್ದ ಮನುಷ್ಯ ಕ್ರಮೇಣ ಕಾಲ ಕಳೆದಂತೆ ಕೋಪ ಆಕ್ರೋಶಗಳನ್ನು ತನ್ನಲ್ಲಿ ತುಂಬಿಕೊಂಡು ತನ್ನ ಸ್ವಾರ್ಥ ಸಾಧನೆಗೋಸ್ಕರ ಬೇರೆಯವರ ಮೇಲೆ ದ್ವೇಷ ಕಾರುವ ಮನೋಭಾವವನ್ನು ತಳೆದ. ಅವನಲ್ಲಿರುವ ಸರಳತೆ ಮಾಯವಾಗಿ ತಾನು ತನ್ನದು ಎಂಬ ಭಾವನೆ ಬೆಳೆಯಿತು. ದಿನ ಕಳೆದಂತೆ ಯುದ್ಧಗಳು ಕೊಲೆ, ದರೋಡೆ ಪ್ರಾಪಂಚಿಕವಾಯಿತು. ಈ ರೀತಿಯ ಅನಾಹುತಗಳಿಂದ ತನ್ನನ್ನು ರಕ್ಷಿಸಲು ಸಾಮಾಜಿಕ ಒಪ್ಪಂದಕ್ಕೆ ಮೊರೆ ಹೋದ. ಈ ಒಪ್ಪಂದದ ಪ್ರಕಾರ ತನ್ನ ಕೆಲವು ಸಾಮಾಜಿಕ ಅಧಿಕಾರ, ಹಕ್ಕುಗಳನ್ನು ಸಮಾಜಕ್ಕೆ ಒಪ್ಪಿಸಿದ. ಇದನ್ನು ರುಸ್ಸೋ ಜನರಲ್ ವಿಲ್ ಎಂದು ಕರೆದಿದ್ದಾನೆ. ಜನರಲ್ ವಿಲ್ ಎಲ್ಲ ಜನರ ಉದ್ಧಾರವನ್ನು ಬಯಸುವ ಮತ್ತು ದೇಶದ ಏಳಿಗೆಗೋಸ್ಕರ ತನ್ನ ಸ್ವಂತ ಹಿತಾಸಕ್ತಿಗಳನ್ನು ಕಡೆಗಣಿಸುವ ಮನೋಭಾವವನ್ನು ಪಡೆದಿತ್ತು. ಒಬ್ಬ ವ್ಯಕ್ತಿ ಸೂಚಿಸಲು ಸಾಧ್ಯವಿಲ್ಲ ಬದಲಾಗಿ ಇಡೀ ಸಮಾಜವೇ ಮುಂದೆ ಬರಬೇಕು ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾನೆ.

ರುಸ್ಸೋ ತನ್ನ ವ್ಯಾಖ್ಯಾನದಲ್ಲಿ ಜನರಲ್ ವಿಲ್ ವನ್ನು ಎಲ್ಲರ ಪ್ರತ್ಯಯದೊಂದಿಗೆ ಕಾಮನ್ ವಿಲ್ ಸೇರಿಸಿದ್ದಾನೆ. ಮೊದಲನೆಯ ವಿಲ್ ಸಾಮಾನ್ಯ ಜನರ ಹಿತಾಸಕ್ತಿಗಳ ಬಗ್ಗೆ ಗಮನಕೊಟ್ಟರೆ ಎರಡನೆಯ ವಿಲ್ ಖಾಸಗಿ ಹಿತಾಸಕ್ತಿಗಳ ಬಗ್ಗೆ ಗಮನ ಕೊಡಬೇಕಾಗಿದೆ. ರುಸ್ಸೋ ಇಂಡಿವೀಜುವಲ್ ವಿಲ್‌ಗೆ ಹೆಚ್ಚು ಗಮನಕೊಡದಿರುವುದು ಇಲ್ಲಿ ವ್ಯಕ್ತವಾಗಿದೆ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಮರಣ ದಂಡನೆ ಶಿಕ್ಷೆಯನ್ನು ಅಥವಾ ಜೀವಾವಧಿ ಶಿಕ್ಷೆಯನ್ನು ಕೊಡುವ ಅಧಿಕಾರವಿರುವುದು ಕೇವಲ ಸರಕಾರಕ್ಕೆ(ನ್ಯಾಯಾಂಗ ವ್ಯವಸ್ಥೆಗೆ ಅನುಗುಣವಾಗಿ). ಆದರೆ ರುಸ್ಸೋ ಸಾಮಾನ್ಯ ಸೂಚ್ಯ ಪ್ರತ್ಯಯದ ಮುಖೇನ ಜನಸಾಮಾನ್ಯ ಪ್ರತ್ಯಯದ ಒಮ್ಮತದ ಮೇರೆಗೆ ಕೊಡುವ ಶಿಕ್ಷೆ ಇದಾಗಿದೆ ಎಂದು ಹೇಳಿದ್ದಾನೆ. ಅದೇ ರೀತಿ ಪ್ರಕೃತಿಯ ಮಡಿಲಿನಲ್ಲಿ ಇರುವಾಗ ಮಾನವ ಸ್ವರ್ಗ ಸುಖವನ್ನು ಅನುಭವಿಸುತ್ತಿದ್ದ ಎಂದು ಹೇಳುವ ಮಾತುಗಳು ಕೂಡ ಅಷ್ಟೇನೂ ಸಮಂಜಸವಲ್ಲ. ಸಮಸ್ಯಗಳೇನೋ ಇತ್ತು, ಆದರೆ ಹದ್ದುಮೀರಿ ಹೋಗುವ ಹಂತಕ್ಕೆ ತಲುಪಿರಲಿಲ್ಲ. ಹಾಗೇ ಅವನು ಹೇಳುವಂತೆ  ಆ್ಯಕ್ಚ್ವಲ್ ವಿಲ್ ಮತ್ತು ರಿಯಲ್‌ವಿಲ್‌ಗಳ ನಡುವಿನ ಅಂತರವನ್ನು ಕೂಡ ತಪ್ಪಾಗಿ ಗ್ರಹಿಸಿಕೊಂಡಿರುವುದು ಕಂಡುಬರುತ್ತದೆ. ಅವನು ಹೇಳಿದ ರೀತಿಯಲ್ಲಿ ತಪ್ಪು ಮಾಡಿದುದಕ್ಕೆ ಶಿಕ್ಷೆಯನ್ನು ಕೊಟ್ಟಾಗ ನಿಜವಾದ ವಿಲ್ ಸಮರ್ಥನೆ ನೀಡುವುದಾದರೂ ಆ್ಯಕ್ಚ್ವಲ್ ವಿಲ್ ಸಮರ್ಥನೆ ನೀಡುವುದಿಲ್ಲವೆಂದು ಮಾಡಿಕೊಂಡಿರುವ ವಿಭಜನೆಗಳು ಕೇವಲ ಕೃತಕತೆಯನ್ನು ಸೂಚಿಸುವುದಾಗಿದೆ.

ರುಸ್ಸೋ ಬರೆದ ಸಾಮಾಜಿಕ ಒಪ್ಪಂದ ಒಂದು ರಾಜಕೀಯ ಸಾಧ್ಯತೆ ಮತ್ತು ಲೋಕ ಪ್ರಿಯ ಭಾವನೆಗಳನ್ನು ಕೆರಳಿಸುವ ಸಾಧನವಾಗಿದೆ. ಫ್ರಾನ್ಸ್ ದೇಶದ ಜನರ ಭಾವನೆಗಳನ್ನು ಕೆರಳಿಸಿ ಸರಕಾರದ ವಿರುದ್ಧ ನಡೆದ ಹೋರಾಟದಲ್ಲಿ ಒಂದು ಪ್ರಮುಖ ಅಸ್ತ್ರವಾಗಿ ಪರಿಣಮಿಸಿದ್ದೇನೂ ಸುಳ್ಳಲ್ಲ. ಇದನ್ನು ನೆಪೋಲಿಯನ್ ಕೂಡ ಒಪ್ಪಿದ್ದಾನೆ. ನೆಪೋಲಿಯನ್ ಹೇಳುವಂತೆ ‘‘ಒಂದು ವೇಳೆ ಫ್ರಾನ್ಸ್‌ನಲ್ಲಿ ರುಸ್ಸೋ ಹುಟ್ಟದಿದ್ದಲ್ಲಿ ಫ್ರಾನ್ಸ್‌ನ ಜನರು ಕ್ರಾಂತಿಯುತವಾದ ಬದಲಾವಣೆಯನ್ನು ಕಾಣುತ್ತಿರಲಿಲ್ಲ’’ ಎಂಬ ಮಾತು ರುಸ್ಸೋನ ತತ್ವಗಳ ಪ್ರಭಾವವನ್ನು ಸೂಚಿಸುತ್ತದೆ. ಆತನ ಎಲ್ಲಾ ಕೃತಿಗಳು ಕ್ರಾಂತಿಯುತ ಭಾವನೆಗಳ ತಾಣವಾಗಿದ್ದು ಪ್ರಜಾಪ್ರಭುತ್ವ ಅಥವಾ ಗಣರಾಜ್ಯದ ಅವಶ್ಯಕತೆಯನ್ನು ಪ್ರತಿಬಿಂಬಿಸು ವಂತಿತ್ತು. ಅವನ ಪ್ರಕಾರ ಗಣರಾಜ್ಯವು ಒಂದು ಮಾದರೀ ಸರಕಾರವಾಗಿದ್ದು ಅದರಲ್ಲಿ ಜನರು ತಮ್ಮ ಮತವನ್ನು ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾನೆ. ಈ ಹೊಸ ತತ್ವಗಳು ೧೮ನೆಯ ಶತಮಾನದ ಜನರಲ್ಲಿ ಕುಲೀನರು ಮತ್ತು ಪುರೋಹಿತ ವರ್ಗಕ್ಕೆ ಸೇರಿದವರು ಅನುಭವಿಸುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಾನ ಮಾನಗಳನ್ನು ಪ್ರಶ್ನಿಸುವ ಪ್ರಜ್ಞಾವಂತ ಭಾವನೆಗಳನ್ನು ಮೂಡಿಸಿತು ಎಂಬ ಮಾತುಗಳು ಉತ್ಪೇಕ್ಷೆಯಲ್ಲ.

ರುಸ್ಸೋ ಹೇಳಿದ ಸಾಮಾಜಿಕ ಒಪ್ಪಂದವು ರಾಜನ ದೈವದತ್ತ ಅಧಿಕಾರಗಳ ವಿರುದ್ಧ ವಾದ ಬಂಡಾಯವಾಗಿದೆ(ಡಿವೈನ್ ಓರಿಜಿನ್ ಥಿಯರಿ). ರಾಜ್ಯಗಳ ಕರ್ತೃ ದೇವರಲ್ಲ, ಬದಲಾಗಿ ಪರಿಸ್ಥಿತಿಯ ಒತ್ತಡಗಳಿಗೆ ಸಿಕ್ಕಿ ಜನರು ರಾಜನೊಂದಿಗೆ ಮಾಡಿ ಕೊಂಡ ಒಪ್ಪಂದವಾಗಿದೆ ಎಂದು ಅಭಿಪ್ರಾಯಿಸಿದ್ದಾನೆ.

ಜಾನ್ ಲಾಕ್ ಹೇಳಿದ ಪ್ರಕಾರ ಸಾಮಾಜಿಕ ಒಪ್ಪಂದ ನಾಗರಿಕ ಸಮಾಜಕ್ಕೆ ಕಾರಣ ವಾದರೆ, ಸರಕಾರದ ಒಪ್ಪಂದ ನಾಗರಿಕ ಸಮಾಜಕ್ಕೆ ಕಾರಣವಾದರೆ, ಸರಕಾರದ ಒಪ್ಪಂದ (ಗವರ್ನಮೆಂಟ್ ಕಾಂಟ್ರಾಕ್ಸ್) ಸರಕಾರದ ರಚನೆಗೆ ಕಾರಣವಾಗಿದೆ. ನಾಗರಿಕ ಹಕ್ಕುಗಳನ್ನು, ಆಸ್ತಿಯ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಸಮಾಜ ರಚನೆಯಾಗಿದೆ. ಆದರೆ ಸಮಾಜ ರಚನೆಯಾಗುವ ಹಂತದಲ್ಲಿ ಮನುಷ್ಯ ತನ್ನ ಎಲ್ಲಾ ಹಕ್ಕುಗಳನ್ನು ತ್ಯಾಜ್ಯ ಮಾಡದೆ ಕೆಲವು ಹಕ್ಕುಗಳನ್ನು ಮಾತ್ರ ಬಿಟ್ಟು ಕೊಟ್ಟಿರುತ್ತಾನೆ. ಯಾರು ಈ ಒಡಂಬಡಿಕೆಯ ವಿರುದ್ಧ ಹೋಗುತ್ತಾನೋ ಅವನನ್ನು ಕಾನೂನು ರೀತ್ಯ ಶಿಕ್ಷಿಸುವ ಹಕ್ಕನ್ನು ಸಮಾಜ ಪಡೆದಿರುತ್ತದೆ. ಈ ನಿಟ್ಟಿನಲ್ಲಿ ಸಮಾಜ ಕೆಲವೊಂದು ಅಧಿಕಾರಗಳನ್ನು ಸರಕಾರ ನಡೆಸುವ ಕೇವಲ ಕೆಲವು ಜನರ ಕೈಗೆ ಹಸ್ತಾಂತರಿಸಿರುತ್ತದೆ. ಇಂತಹ ವ್ಯವಸ್ಥೆಯನ್ನು ಸರಕಾರದ ಒಪ್ಪಂದ ಎಂದು ಲಾಕ್ ಕರೆದಿದ್ದಾನೆ. ಆದರೆ ಲಾಕ್‌ನು ರುಸ್ಸೋ ಹೇಳುವಂತೆ ಲೋಕಪ್ರಿಯ ಸಾರ್ವಭೌಮತೆಯ ಬಗ್ಗೆ ಹೆಚ್ಚು ಒತ್ತು ಕೊಡದಿರು ವುದನ್ನು ನಾವು ಕಾಣುತ್ತೇವೆ(ಪಾಪ್ಯುಲರ್ ಸಾವ್‌ರೆಂಟಿ).

ರುಸ್ಸೋ ತನ್ನ ಸಿದ್ಧಾಂತದಲ್ಲಿ ಸರಕಾರ ಮತ್ತು ಜನರ ಸಾರ್ವಭೌಮ ಅಧಿಕಾರಗಳ ನಡುವೆ ಅಂತರವನ್ನು ಕಂಡಿದ್ದಾನೆ. ಅವನ ಪ್ರಕಾರ ಸರಕಾರ ಎಂಬುದು ಕಾರ್ಯಾಂಗ ಅಧಿಕಾರಗಳನ್ನು ಹೊಂದಿದ್ದು, ಸಾರ್ವಭೌಮ ಜನರ ಹಿತಾಸಕ್ತಿಗಳನ್ನು ಕಾಪಾಡುವ ಒಂದು ಪ್ರತಿನಿಧಿಯಾಗಿದೆ. ಕಾನೂನು, ಕಟ್ಟಳೆಗಳನ್ನು ತರುವ ಅಧಿಕಾರವನ್ನು ಕೂಡ ಹೊಂದಿರುತ್ತದೆ. ಅಲ್ಲಿ ಎಲ್ಲಾ ಅಧಿಕಾರಗಳು ಜನಸಾಮಾನ್ಯನ ಅಪೇಕ್ಷೆಯಂತೆ ನಡೆಯುವ ವ್ಯವಸ್ಥೆಯಿದ್ದು ಜನಸಾಮಾನ್ಯನೇ ಸಾರ್ವಭೌಮನಾಗಿದ್ದು ಸಾರ್ವಭೌಮ ಅಧಿಕಾರಗಳನ್ನು ಅನುಭವಿಸುತ್ತಿರಬೇಕು ಎಂದಿದ್ದಾನೆ. ಅಂತಹ ವ್ಯವಸ್ಥೆಯಲ್ಲಿ ಸರಕಾರವು ಜನಸಾಮಾನ್ಯರ ಹಿಡಿತದಲ್ಲೇ ಇದ್ದು ಹದ್ದುಮೀರಿ ಹೋಗುವ ಸಾಧ್ಯತೆಗಳಿಲ್ಲ. ರುಸ್ಸೋ ತನ್ನ ಸಿದ್ಧಾಂತ ದಲ್ಲಿ ರಾಜನ ಸಾರ್ವಭೌಮತೆಯ ಬದಲಾಗಿ ಜನಸಾಮಾನ್ಯರ ಸಾರ್ವಭೌಮತೆಯನ್ನು ಪ್ರತಿಪಾದಿಸುವನಾಗಿದ್ದಾನೆ. ಅವನಿಗೆ ನೇರ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದಿತೇ ವಿನಹ ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಲ್ಲ.

ನಮ್ಮ ದೇಶದ ಸಂವಿಧಾನದಲ್ಲಿ ತಿಳಿಸಿರುವಂತೆ ಭಾರತ ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು ಜನಸಾಮಾನ್ಯನು ಸಾರ್ವಭೌಮತೆಯ ಕೇಂದ್ರ ಬಿಂದುವಾಗಿದ್ದಾನೆ. ರುಸ್ಸೋ ಹೇಳುವ ಸರಕಾರವು ಎಲ್ಲಾ ಜನರ ಆಶೆ ಆಕಾಂಕ್ಷೆಗಳ ಪ್ರತಿಬಿಂಬವಾಗಿದ್ದು ಅಂತಹ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ಚುನಾಯಿತ ಸರಕಾರವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಸಾರ್ವಭೌಮನೇ ಹೊರತು ಗುಲಾಮನಲ್ಲ. ಈ ವ್ಯವಸ್ಥೆಯಲ್ಲಿ ಆತ ಸ್ವಾತಂತ್ರ್ಯ, ಸಮಾನತೆ ಮತ್ತು ಆಸ್ತಿಯನ್ನು ಹೊಂದುವ ಹಕ್ಕನ್ನು ಪಡೆದಿರುತ್ತಾನೆ.

ರುಸ್ಸೋ ಪ್ರಜಾಪ್ರಭುತ್ವದ ಆರಾಧಕನಾಗಿದ್ದು ನೇರ ಪ್ರಜಾಪ್ರಭುತ್ವವನ್ನು ಬಯಸಿದ್ದಾನೆ. ಆದರೆ ಪರೋಕ್ಷ ಪ್ರಜಾಪ್ರಭುತ್ವವನ್ನು ಹೊಂದಿರುವ ಸರಕಾರಗಳೂ ಕೂಡ ಪ್ರಜಾ ಪ್ರಭುತ್ವವನ್ನು ಕಾಪಾಡಲು ಸಮರ್ಥವಾಗಿರುತ್ತದೆ. ಉದಾಹರಣೆಗೆ ಭಾರತದಲ್ಲಿನ ಪಂಚಾಯತ್ ರಾಜ್ಯ ವ್ಯವಸ್ಥೆ.

ಫ್ರಾನ್ಸ್‌ನ ಜನರು ರುಸ್ಸೋ ತತ್ವಗಳಿಂದ ಪ್ರಭಾವಿತಗೊಂಡು ೧೬ನೆಯ ಲೂಯಿಯ ಅಧಿಕಾರಶಾಹಿ ಆಡಳಿತದ ವಿರುದ್ಧ ದಂಗೆ ಎದ್ದು ರಾಜತ್ವವನ್ನು ಅಂತ್ಯಗೊಳಿಸಿ ಜನ ಸಾಮಾನ್ಯರ ಹಕ್ಕುಗಳನ್ನು ಪ್ರತಿಪಾದಿಸುವ ಹೊಸ ಸಂವಿಧಾನ ಮತ್ತು ಸರಕಾರದ ರಚನೆಗೆ ಕಾರ್ಯೋನ್ಮುಖರಾದ ಮಾತುಗಳು ಐತಿಹಾಸಿಕ ಸತ್ಯವಾಗಿದೆ. ಹಾಗೇ ಅಮೆರಿಕ ದೇಶ ಕೂಡಾ ಜನಸಾಮಾನ್ಯನ ಹಕ್ಕುಗಳನ್ನು ಕಾಪಾಡಲು ಮತ್ತು ದಬ್ಬಾಳಿಕೆಯನ್ನು ತಡೆಗಟ್ಟಲು ಸಂವಿಧಾನಾತ್ಮಕವಾದ ರಕ್ಷಣೋಪಾಯವನ್ನು ತೆಗೆದುಕೊಂಡಿರುವುದು ತಿಳಿದ ವಿಷಯ ವಾಗಿದೆ. ಅಮೆರಿಕ ದೇಶದ ಸ್ವಾತಂತ್ರ್ಯ ಘೋಷಣೆಯ ಸಾರಾಂಶ ಈ ಕೆಳಗಿನಂತಿದೆ.

ಎಲ್ಲಾ ಜನರು ಸಮಾನರಾಗಿದ್ದು ಯಾರೂ ಕಸಿದುಕೊಳ್ಳದ ಅಧಿಕಾರಗಳನ್ನು ಹೊಂದಿದ್ದು, ಈ ಅಧಿಕಾರಗಳನ್ನು ಪಡೆಯಲು ಜನರ ಪ್ರತಿನಿಧಿಗಳನ್ನೊಳ ಗೊಂಡ ಸರಕಾರವನ್ನು ರಚಿಸಿ, ಅದರ ಮೂಲಕ ಜನಸಾಮಾನ್ಯರ ಸಮ್ಮತಿಗನುಗುಣವಾಗಿ ಅಧಿಕಾರವನ್ನು ನಡೆಸುವಂತಿರ ಬೇಕು. ಯಾವ ಸರಕಾರವೇ ಆಗಲಿ ಜನರು ಹಕ್ಕುಗಳನ್ನು ಬದಲಾಯಿಸುವ ಅಥವಾ ತೊಡೆದು ಹಾಕುವ ಪ್ರಯತ್ನ ಮಾಡಿದ್ದಲ್ಲಿ ಅಂತ ಸರಕಾರವನ್ನು ತೆಗೆದು ಹಾಕಿ ಅದರ ಬದಲಾಗಿ ಜನಸಾಮಾನ್ಯರ ಹಕ್ಕುಗಳನ್ನು ಕಾಪಾಡುವ ಸರಕಾರವನ್ನು ರಚಿಸದಿದ್ದಲ್ಲಿ ಜನರು ತಮ್ಮ ಸುಖ ಸಂತೋಷಗಳನ್ನು ಕಳೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.

ರುಸ್ಸೋ ತತ್ವಗಳು ಗುಲಾಮಗಿರಿಯಿಂದ ಬಳಲುವ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಅಧಿಕಾರಶಾಹಿ ಮತ್ತು ಪರದೇಶಿಯ ಆಡಳಿತದಾರರ ವಿರುದ್ಧ ಹೋರಾಡುವ ಸಂಕಲ್ಪವನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಉದಾಹರಣೆಗೆ ತೆಗೆದುಕೊಳ್ಳು ವುದಾದರೆ ನೆದರ್‌ಲ್ಯಾಂಡ್‌ನ ಜನರು ಸ್ಪೆಯಿನ್ ವಿರುದ್ಧ ಹೋರಾಡಿ ತಮ್ಮ ಕಳೆದುಹೋದ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದಾರೆ. ಸ್ಪೆಯಿನ್ ಮತ್ತು ಇಟಲಿ ಕೂಡ ರುಸ್ಸೋ ತತ್ವಗಳಿಂದ ಪ್ರಭಾವಿತಗೊಂಡಿತ್ತು.

ಸ್ವಾತಂತ್ರ್ಯದ ಬಗ್ಗೆ ವ್ಯಾಖ್ಯಾನ ಮಾಡುತ್ತಾ ರುಸ್ಸೋ ಹೇಳಿರುವಂತೆ

ದೇಶಗಳು ಗಾತ್ರದಲ್ಲಿ ದೊಡ್ಡಾದಾದಂತೆ ಜನರು ಅನುಭವಿಸುವ  ಸ್ವಾತಂತ್ರ್ಯ ತನ್ನ ಗಾತ್ರವನ್ನು ಕುಗ್ಗಿಸಿಕೊಳ್ಳುತ್ತದೆ. ಸ್ವಾತಂತ್ರ್ಯ ಅಂದರೆ ರಾಜಕೀಯ ಅಧಿಕಾರಗಳನ್ನು ಪಡೆಯುವ ಸ್ವಾತಂತ್ರ್ಯವೇ ವಿನಾ ರಾಜಕೀಯ ಹಿಡಿತದಿಂದ ಮುಕ್ತಗೊಳ್ಳುವುದಿಲ್ಲ. ಇಂಥ ಸ್ವಾತಂತ್ರ್ಯ ಕೇವಲ ಸಣ್ಣ ಮತ್ತು ನೇರ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಗಳಲ್ಲಿ ಕಂಡು ಬರುತ್ತದೆ

ಎಂದು ಅಭಿಪ್ರಾಯಿಸಿದ್ದಾನೆ.

ಕಾನೂನು ಒಂದು ಪಂಗಡ ಅಥವಾ ಒಂದು ಗುಂಪಿನ ಅಭಿಪ್ರಾಯವಾಗಿರದೆ ಇಡೀ ದೇಶದ ಅಭಿಪ್ರಾಯವನ್ನು ಹೊಂದಿರುತ್ತದೆ. ಹಾಗಾಗಿ ಕಾನೂನನ್ನು ಜನರ ಅಭಿಪ್ರಾಯಗಳ ಸೂಚಕ ಎಂದು ಕರೆಯುವುದರಲ್ಲಿ ಯಾವ ತಪ್ಪಿಲ್ಲ. ದೇಶದ ಹಿತಾಸಕ್ತಿಗೋಸ್ಕರ ತನ್ನ ಸ್ವಂತ ಹಿತಾಸಕ್ತಿಗಳನ್ನು ಬದಿಗೊತ್ತಿ ಕಾನೂನಿಗೆ ತಲೆಬಾಗಿ ಸಮಾಜದ ಶ್ರೇಯಸ್ಸಿ ಗೋಸ್ಕರ ತ್ಯಾಗಮಾಡಿ ತನಗೆ ಸಿಗಬೇಕಾದ ಸ್ಥಾನಮಾನಗಳು ಮತ್ತು ಹಕ್ಕುಗಳನ್ನು ಪಡೆದು ಸ್ವಾತಂತ್ರ್ಯವನ್ನು ಅನುಭವಿಸುವ ಮಾತುಗಳು ಇಲ್ಲಿ ವ್ಯಕ್ತವಾಗಿವೆ.

ಈ ರೀತಿಯಾಗಿ ಮೊಂಟೆಸ್‌ಕ್ಕೂ ೧೭೯೧ರ ಸಂವಿಧಾನಕ್ಕೆ ಕಾರಣಕರ್ತನಾದರೆ, ವಾಲ್ಟೇರ್ ಪಾದ್ರಿಗಳ ಸಂವಿಧಾನದ ಉದಯಕ್ಕೆ ಕಾರಣವಾಗಿದ್ದಾನೆ. ಅದೇ ರೀತಿ ರುಸ್ಸೋ ಏಕಾಂಗಿಯಾಗಿ ಪ್ರಜಾಪ್ರಭುತ್ವ ಅಧಿಕಾರಗಳ ಬಗ್ಗೆ ಕೂಗಿ ಹೇಳಿದ ಮಹಾನ್ ವ್ಯಕ್ತಿಯಾಗಿದ್ದಾನೆ.

 

ಪರಾಮರ್ಶನ ಗ್ರಂಥಗಳು

೧. ಲೂಯಿ ಗೋಟ್‌ಶಾಕ್, ಇರಾ ಆಫ್ ದಿ ಫ್ರೆಂಚ್ ರೆವಲ್ಯೂಷನ್(೧೭೧೫೧೮೧೫).

೨. ಬ್ರಿಟೇನಿಕಾ ಎನ್‌ಸೈಕ್ಲೋಪೀಡಿಯಾ, ೧೯೮೧, ೧೫ನೆಯ ಆವೃತ್ತಿ

೩. ಡೇವಿಡ್ ಥಾಮ್ಸ್‌ನ್, ೧೯೬೬. ಯುರೋಪ್ ಸಿನ್ಸ್ ನೆಪೋಲಿಯನ್, ಪೆಲಿಕಾನ್

೪. ಕೆಟಲ್ಬ್ ಸಿ.ಡಿ.ಎಂ., ೧೭೮೯. ಎ ಹಿಸ್ಟರಿ ಆಫ್ ಮಾಡರ್ನ್ ಟೈಮ್ಸ್