ಕ್ರಾಂತಿಯ ರಕ್ಷಣೆ

‘‘ಯಾವುದೇ ಕ್ರಾಂತಿ ತನ್ನನ್ನು ತಾನೇ ರಕ್ಷಿಸಿಕೊಳ್ಳದಿದ್ದರೆ ಅದು ನಿಷ್ಪ್ರಯೋಜನ’’ ಎಂದರು ಲೆನಿನ್. ಅಕ್ಟೋಬರ್ ೨೫ರಂದು ಬೊಲ್‌ಶೆವಿಕರಿಗೆ ಪ್ರಭುತ್ವ ಹಸ್ತಾಂತರವಾದ ದಿನವೇ, ಪ್ರಧಾನಿ ಕೆರ್‌ನಸ್ಕಿ ಮತ್ತು ಸೇನಾಧಿಪತಿ ಕಾರ್ನಿಲೋವ್ ಪ್ರತಿಕ್ರಾಂತಿಯನ್ನು ಸಂಘಟಿಸಿದರು. ಅಕ್ಟೋಬರ್ ಕ್ರಾಂತಿ ಭೀಕರ ಆಂತರಿಕ ಯುದ್ಧವನ್ನು ಎದುರಿಸಬೇಕಾಯಿತು. ಅಕ್ಟೋಬರ್ ೩೦ ರಂದು ಇವರಿಬ್ಬರೂ ತಮ್ಮ ಸೇನೆಗಳೊಂದಿಗೆ ಪೆಟ್ರೋಗ್ರಾಡ್‌ನತ್ತ ನುಗ್ಗಿ ಬಂದರು. ಹಲವು ತಾಸುಗಳ ಕದನದಿಂದ ಪ್ರತಿಕ್ರಾಂತಿಗಳನ್ನು ಹಿಮ್ಮೆಟ್ಟಿಸಲಾಯಿತು. ನವೆಂಬರ್ ೧ ರಂದು ದಂಗೆಯನ್ನು ಅಡಗಿಸಲಾಯಿತು. ಕೆರೆನ್‌ಸ್ಕಿ ತಪ್ಪಿಸಿಕೊಂಡು ಹೋದರು. ಪ್ರತಿಕ್ರಾಂತಿಗಳನ್ನು ಪುನರ್‌ಸಂಘಟಿಸಲು ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಸೆರೆ ಹಿಡಿಯಲಾಯಿತು. ಇದು ಪೆಟ್ರೋಗ್ರಾಡ್‌ನ ಶ್ರಮಿಕ ವರ್ಗದ ಮೊದಲ ವಿಜಯ. ಹೊಸ ಪ್ರಭುತ್ವಕ್ಕೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಹಲವಾರು ವೈರಿಗಳು ಹುಟ್ಟಿಕೊಂಡರು. ಅದರ ವಿರುದ್ಧ ವಿವಿಧ ಪಿತೂರಿಗಳನ್ನು ಹೂಡಿದರು. ಸೋವಿಯತ್ ರಷ್ಯಾ ಶಾಂತಿಗಾಗಿ ಹಾತೊರೆಯಿತು. ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಿತ್ತು. ಅನಿವಾರ್ಯವಾಗಿ, ೧೯೧೭ರ ಡಿಸೆಂಬರ್ ೨ ರಂದು ರಷ್ಯಾವು ಜರ್ಮನಿಯೊಂದಿಗೆ ಅತ್ಯಂತ ಅವಮಾನಕಾರಿ ಹಾಗೂ ಅಸಮಾನತೆಯ ತಾತ್ಕಾಲಿಕ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಬೇಕಾಯಿತು. ಮೊದಲ ಜಾಗತಿಕ ಯುದ್ಧದಲ್ಲಿ ಎರಡು ವಿರುದ್ಧ ಬಣಗಳಲ್ಲಿದ್ದ ಬ್ರಿಟನ್, ಫ್ರಾನ್ಸ್, ಅಮೆರಿಕಾ, ಜಪಾನ್, ಇಟಲಿ ಸಾಮ್ರಾಜ್ಯಶಾಹಿಗಳು ಸಮಾಜವಾದಿ ಸೋವಿಯತ್ ರಷ್ಯಾದ ವಿಷಯದಲ್ಲಿ ಒಂದಾದವು. ರಷ್ಯಾದ ಕೌಕಾಸನ್, ಡೋನ್, ದ್ಯುಖಾನ್, ಒರೆನ್‌ಬರ್ಗ್ ಉಕ್ರೈನ, ಕ್ರಿಮಿಯಾ, ಸೈಬೀರಿಯಾ, ದೂರಪ್ರಾಚ್ಯ ಮೊದಲಾದ ಪ್ರದೇಶಗಳನ್ನು ತಮ್ಮೊಳಗೆ ಹಂಚಿಕೊಳ್ಳಲು ಹವಣಿಸಿದವು. ಈ ಪ್ರದೇಶಗಳ ಬಂಡವಾಳಶಾಹಿಗಳನ್ನು, ಶ್ರೀಮಂತ ಭೂಮಾಲಿಕರನ್ನು, ಝಾರ್ ಪರಿವಾರವನ್ನು, ಯುದ್ಧಕೋರರನ್ನು ಪ್ರತಿಕ್ರಾಂತಿಕಾರಿಗಳ ನೆರವಿಗಾಗಿ ಬರುವಂತೆ ಮಾಡಲು ಸಾಮ್ರಾಜ್ಯಶಾಹಿ ದೇಶಗಳು ಹಣಕಾಸು ಸೇರಿದಂತೆ ಎಲ್ಲಾ ಸಹಾಯಗಳನ್ನೂ ನೀಡಿದವು.

ಆದರೂ, ಹೊರಗಿನಿಂದ ಸಾಮ್ರಾಜ್ಯಶಾಹಿಗಳ ಮತ್ತು ಒಳಗಿನಿಂದ ಪ್ರತಿಕ್ರಾಂತಿಕಾರಿಗಳ ದಂಗೆಗಳನ್ನು ಅತ್ಯಂತ ನಿರ್ಣಾಯಕವಾಗಿ ಮತ್ತು ಸಾಹಸ ಶೌರ್ಯಗಳಿಂದ ಬೊಲ್ ಶೆವಿಕ್‌ರು ಎದುರಿಸಿದರು. ಅಕ್ಟೋಬರ್ ೨೫ ರಿಂದ ನವೆಂಬರ್ ೨ ರವರೆಗೆ ಕ್ರೆಮ್ಲಿನ್ ಹತ್ತಿರ ಮಾಸ್ಕೋದಲ್ಲಿ ಎರಡೂ ಪಡೆಗಳ ನಡುವೆ ಭೀಕರ ಕದನ ನಡೆಯಿತು. ಪೆಟ್ರೋಗ್ರಾಡ್‌ನ ಸೈನಿಕರು, ನಾವಿಕರು ಮತ್ತು ಬಾಲ್ಟಿಕ್ ಹಡಗು ಪಡೆಯವರು ಇವರ ನೆರವಿಗೆ ಧಾವಿಸಿದರು. ಅಪಾರ ಸಾವು-ನೋವುಗಳನ್ನು ಅನುಭವಿಸಿ ಬೊಲ್‌ಶೆವಿಕ್‌ರು ಜಯಶಾಲಿಗಳಾದರು. ಕೈಗಾರಿಕಾ ಕೇಂದ್ರಗಳಲ್ಲಿ ಅವರ ಪ್ರಭುತ್ವ ಸುಲಭವಾಗಿ ಸ್ಥಾಪಿತಗೊಂಡಿದೆ. ಈ ಮಧ್ಯ ಸೋವಿಯತ್‌ಗಳು ಬಾಲ್ಟಿಕ್ ರಾಜ್ಯಗಳಾದ ಎಸ್ಟೋನಿವಾ ಮತ್ತು ಲಾಟ್‌ವಿಯಾ ರಾಜ್ಯಗಳ ಬಹುಪಾಲನ್ನು ತಮ್ಮ ವಶಕ್ಕೆ ಪಡೆದುಕೊಂಡು, ಅಲ್ಲಿಂದ ಪೆಟ್ರೋಗ್ರಾಡ್ ಕಡೆ ಪ್ರತಿಕ್ರಾಂತಿಕಾರಿಗಳ ಸೈನ್ಯ ಸಾಗದಂತೆ ತಡೆದರು. ಬದಲು ಲೆಟಶ್ ಪಡೆಗಳು ೪೦೦೦೦ ರೈಫಲ್‌ಗಳೊಂದಿಗೆ ಪೆಟ್ರೋಗ್ರಾಡ್ ಕ್ರಾಂತಿಕಾರರ ನೆರವಿಗೆ ಬಂದರು. ಲೆಟಶ್ ಪಡೆ ಸೋವಿಯತ್‌ನ ಅತ್ಯಂತ ಸಮರ ಧೀರವಾದುದು. ಅಕ್ಟೋಬರ್ ೨೭ರಲ್ಲಿಯೇ ಕೀವ್‌ನ ಶಸ್ತ್ರಾಗಾರದಲ್ಲಿ ಪ್ರತಿಕ್ರಾಂತಿಕಾರಿಗಳ ದಾಳಿಗಳನ್ನು ಹಿಮ್ಮೆಟ್ಟಿಸ ಲಾಯಿತು. ತಾತ್ಕಾಲಿಕ ಸರಕಾರ ಇಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಕೂಡಿ ಹಾಕಿತು. ಅವೆಲ್ಲವುಗಳೂ ಕ್ರಾಂತಿಕಾರಿಗಳ ವಶವಾದವು.

ಅಕ್ಟೋಬರ್ ಕ್ರಾಂತಿಯು ೧೯೧೮ರ ಹೊಸ ವರ್ಷವನ್ನೂ ಪ್ರವೇಶಿಸಿತು. ಆ ವರ್ಷ ಭರವಸೆಯ ಹಾಗೂ ಆತಂಕದ ವರ್ಷವಾಯಿತು. ಅವರಲ್ಲಿ ಕೆಲವೇ ದಿನಗಳಿಗೆ ಸಾಕಾಗುವಷ್ಟು ಇಂಧನವಿತ್ತು. ನಂತರ ಕಾರ್ಖಾನೆಗಳನ್ನು ಮುಚ್ಚುವ ಅಪಾಯವಿತ್ತು. ಆದರೆ, ಹೊಸ ವರ್ಷದಲ್ಲಿ ಬಾಲ್ಟಿಕ್ ಹಡಗು ಪಡೆಯಿಂದ ೩೦೦೦ ಟನ್ ಕಲ್ಲಿದ್ದಲು ಬಂದಿತು. ಕೈಗಾರಿಕೆಗಳ ಚಕ್ರಗಳು, ಹಾಗೆಯೇ ಕ್ರಾಂತಿಯ ಚಕ್ರಗಳು ಪುನಃ ತಿರುಗಲಾರಂಭಿಸಿದವು. ಅಂತರ್‌ಯುದ್ಧ ನಡೆಯುತ್ತಿದ್ದಾಗಲೂ ಲೆನಿನ್ ಕ್ರಾಂತಿಕಾರಿಗಳನ್ನು ಅತ್ಯುನ್ನತ ಮಟ್ಟದ ನೈತಿಕತೆಗೆ ಏರಿಸಿದರು. ವರ್ಗ ವೈರಿಗಳು ಬಿಟ್ಟು ಹೋದ ಅರಮನೆಗಳು, ಕಟ್ಟಡಗಳು ಬೆಲೆಬಾಳುವ ಕಲಾಕೃತಿಗಳು ಹಾಗೂ ವಿವಿಧ ವಸ್ತು ವಿಶೇಷಗಳು ಸುರಕ್ಷಿತವಾಗಿರುವಂತೆ ಮತ್ತು ಅವುಗಳನ್ನು ತಮಗೆ ಚರಿತ್ರೆ ಒದಗಿಸಿಕೊಟ್ಟ ಬಳುವಳಿ ಎಂದು ತಿಳಿದು, ಮುಂದಿನ ಪೀಳಿಗೆಗಾಗಿ ಕಾದಿಡಲು ಕರೆ ನೀಡಿದರು. ಹೊಸ ಸರಕಾರದಲ್ಲಿ ಆಡಳಿತ, ಕೈಗಾರಿಕೆ, ಸಾರಿಗೆ, ಸಂಪರ್ಕ, ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ನಡೆಸಲು ಕಾರ್ಮಿಕರೇ ಕಲಿತುಕೊಂಡರು. ಭಾರೀ ಕೊರತೆ ಇರುವ ಜೀವನಾವಶ್ಯಕ ವಸ್ತುಗಳನ್ನು ಸುವ್ಯವಸ್ಥಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಜನರಿಗೆ ಒದಗಿಸ ಲಾಯಿತು. ಈ ಮೊದಲೇ ತಿಳಿಸಿದಂತೆ, ಸಾಕ್ಷರತಾ ಆಂದೋಲನವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಯಿತು. ಜನರ ಸಾಂಸ್ಕೃತಿಕ ಮಟ್ಟವನ್ನು ಏರಿಸಲಾಯಿತು.

ಆಂತರಿಕ ಯುದ್ಧದ ಮಧ್ಯವೂ ಸಂವಿಧಾನಾತ್ಮಕ ಸಂಸತ್ತಿಗೆ ಚುನಾವಣೆ ನಡೆಯಿತು. ಪೆಟ್ರೋಗ್ರಾಡ್‌ನ ೧೯ ಟಿಕೇಟುಗಳಿಗೆ ೧೯೧೭ರ ನವೆಂಬರ್ ೩೦ರಂದು ಪ್ರಕಟಿಸಿದ ಚುನಾವಣಾ ಫಲಿತಾಂಶದಲ್ಲಿ ೯೪೦,೭೪೩ ಮತಗಳು ಚಲಾಯಿಸಲ್ಪಟ್ಟಿದ್ದವು. ಅವುಗಳಲ್ಲಿ ಬೊಲ್‌ಶೆವಿಕರು : ೪೨೪,೦೨೭, ಕ್ಯಾಡೆಟ್‌ಗಳು : ೨೪೫,೦೦೬, ಎಡಪಂಥೀಯ ಸಮಾಜವಾದಿ ಕ್ರಾಂತಿಕಾರಿಗಳು : ೧೫೨,೨೩೦ ಮತಗಳನ್ನು ಗಳಿಸಿದ್ದವು. ಉಳಿದ ೧೫ ಪಕ್ಷಗಳು ಕನಿಷ್ಟ ೧೫೮ ರಿಂದ ಗರಿಷ್ಠ ೧೯೧೦೯ ಮತಗಳನ್ನು ಪಡೆದಿದ್ದವು. ಸಂವಿಧಾನಾತ್ಮಕ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕೈಗಾರಿಕಾ ಪ್ರದೇಶಗಳಿಂದ ಬೊಲ್‌ಶೆವಿಕರು ನಿರ್ಣಾಯಕ ಜಯಗಳಿಸಿದ್ದರು. ಅವರನ್ನು ಬಹುಪಾಲು ಕಾರ್ಮಿಕರು, ಅರ್ಧಾಂಶ ಸೈನಿಕರು ಬೆಂಬಲಿಸಿದ್ದರು. ೧೯೧೮ರ ಜನವರಿ ೫ ರಂದು ಸಂವಿಧಾನಾತ್ಮಕ ಸಂಸತ್ತಿನ ಅಧಿವೇಶನವನ್ನು ಕರೆಯಲಾಗಿತ್ತು. ಬಂಡವಾಳಶಾಹಿ ಪ್ರತಿನಿಧಿಗಳು ಅಲ್ಲಿ ಗದ್ದಲ ಮಾಡಿ ಸಭೆ ನಡೆಯದಂತೆ ಮಾಡಿದರು ಮತ್ತು ಸೋವಿಯತ್ ಪ್ರಭುತ್ವವನ್ನು ಮಾನ್ಯ ಮಾಡುವುದಿಲ್ಲ ಎಂದು ಬೊಬ್ಬೆ ಹಾಕಿದರು. ಅನಿವಾರ್ಯವಾಗಿ, ಬೊಲ್‌ಶೆವಿಕರು ಸಭಾತ್ಯಾಗ ಮಾಡಬೇಕಾಯಿತು. ಕ್ರಾಂತಿಯ ಮುನ್ನಡೆಯಲ್ಲಿ ಒಂದು ದಿನ ಹಾಳಾಯಿತು. ಜನವರಿ ೧೦ ರಂದು ಅಖಿಲ ರಷ್ಯಾ ಸೋವಿಯತ್‌ಗಳ ಮೂರನೆ ಅಧಿವೇಶನದಲ್ಲಿ ರಷ್ಯಾವನ್ನು ಕಾರ್ಮಿಕರ, ಸೈನಿಕರ ಮತ್ತು ರೈತರ ಪ್ರತಿನಿಧಿಗಳ ಸೋವಿಯತ್‌ಗಳ, ಗಣರಾಜ್ಯ ಎಂದು ಅಧಿಕೃತವಾಗಿ ಲೆನಿನ್ ಘೋಷಿಸಿದರು. ರಾಜ್ಯಪ್ರಭುತ್ವವನ್ನು ಈ ಸಂಸ್ಥೆಗಳಿಗೆ ಹಸ್ತಾಂತರಿಸಲಾಯಿತು. ಸಂವಿಧಾನಾತ್ಮಕ ಸಂಸತ್ ಸಭೆಗೆ ಬಂದ ಪ್ರತಿನಿಧಿಗಳ ಸಂಖ್ಯೆಗಿಂತ ಈ ಅಧಿವೇಶನಕ್ಕೆ ಬಂದ ಪ್ರತಿನಿಧಿಗಳ ಸಂಖ್ಯೆ ಇಮ್ಮಡಿಯಾಗಿತ್ತು.

ಈ ಮಧ್ಯೆ, ಸೋವಿಯತ್ ದೇಶ ಯುದ್ಧ ನಿರತ ದೇಶಗಳಿಗೆ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಲು ಮೇಲಿಂದ ಮೇಲೆ ಕರೆ ಕೊಟ್ಟಿತು. ಶಾಂತಿ ಒಪ್ಪಂದ ಆಗದಂತೆ ಪ್ರತಿಕ್ರಾಂತಿಕಾರಿಗಳು ಪ್ರಯತ್ನಿಸಿದರು. ಫೆಬ್ರವರಿ ೧೮ರಂದು ಜರ್ಮನ್ನರು ರಷ್ಯಾದೊಂದಿಗಿನ ತಾತ್ಕಾಲಿಕ ಶಾಂತಿ ಒಪ್ಪಂದವನ್ನು ಮುರಿದು ಪೂರ್ವರಂಗದಲ್ಲಿ ರಷ್ಯಾದ ಮೇಲೆ ದಾಳಿ ನಡೆಸಿದರು. ಮತ್ತೊಮ್ಮೆ ಶಾಂತಿ ಒಪ್ಪಂದ ಮಾಡಲು ಆತುನಿಯಾ, ಪೋಲೆಂಡ್, ಬೈಲೋ ರಷ್ಯಾದ ಒಂದು ಭಾಗ, ಲಾಟಿವಿಯಾ, ಎಸ್ಟೋಮಿಯಾ, ಟರ್ಕಿಸ್ತಾನ, ಕಾರ್ಸ, ಕರ್ಜಗಿಸ್ಥಾನ, ಬಾಟುಮ್, ಅರ್ಡಗಾನ್ ಪ್ರದೇಶಗಳನ್ನು ಮಿತ್ರ ರಾಷ್ಟ್ರಗಳಿಗೆ ಬಿಟ್ಟುಕೊಡಲು ಜರ್ಮನಿ ಇನ್ನಷ್ಟು ಕಠಿಣ ಶರತ್ತುಗಳನ್ನು ಹೇರಿತು. ಅನಿವಾರ್ಯವಾಗಿ, ಸೋವಿಯತ್ ರಷ್ಯಾ ಪುನಃ ಈ ಅವಮಾನಕಾರಿ ಹಾಗೂ ಅಸಮಾನತೆಯ ಒಪ್ಪಂದಕ್ಕೆ ಸಹಿ ಹಾಕಿತು. ಈ ಶಾಂತಿ ಒಪ್ಪಂದವನ್ನು ಮಾರ್ಚ್ ೧೪ ರಂದು ಮಾಸ್ಕೋದಲ್ಲಿ ಅನುಮೋದಿಸಲಾಯಿತು. ಜರ್ಮನ್ನರು ಈ ಎಲ್ಲಾ ಪ್ರದೇಶಗಳನ್ನು ಆಕ್ರಮಿಸಿದರು. ಇಷ್ಟರಲ್ಲಿ ಸೋವಿಯತ್ ದೇಶದ ರಾಜಧಾನಿಯನ್ನು ಪೆಟ್ರೋಗ್ರಾಡ್‌ನಿಂದ ಮಾಸ್ಕೋ ನಗರಕ್ಕೆ ಸ್ಥಳಾಂತರಿಸಲಾಗಿತ್ತು. ‘‘ಈ ಶಾಂತಿ ಒಪ್ಪಂದ ಸಹಿಸಲಾರದಷ್ಟು ದುರ್ದಮವಾಗಿತ್ತು. ಆದರೆ, ಭವಿಷ್ಯ ನಮ್ಮದಾಗಿದೆ. ಚರಿತ್ರೆ ನಾವು ಸರಿ ಎಂದು ತೋರಿಸಲಿದೆ’’ ಎಂದು ಲೆನಿನ್ ಆ ದಿನ ಬರೆದರು.

ದೇಶದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಪ್ರತಿಕ್ರಾಂತಿಕಾರಿಗಳ ದೊಡ್ಡ ಸೈನ್ಯವನ್ನು ಸಂಘಟಿಸಲಾಯಿತು. ಕೆಂಪು ಕ್ರಾಂತಿಯ ಬದಲು ಬಿಳಿ ಕ್ರಾಂತಿಯನ್ನು ಯಶಸ್ವಿಗೊಳಿಸಲು ಪಣ ತೊಡಲಾಯಿತು. ಅದಕ್ಕೆ ಎದುರಾಗಿ ಕೆಂಪು ಸೇನೆಯ ಬಲವನ್ನು ೮೦೦,೦೦೦ಕ್ಕೆ ಏರಿಸಲಾಯಿತು. ೧೯೧೮ರ ಜುಲೈ ೧೦ ರಂದು ಅಖಿಲ ರಷ್ಯಾ ಸೋವಿಯತ್ ಪ್ರತಿನಿಧಿಗಳ ಕಾಂಗ್ರೆಸ್ ಕೆಂಪು ಸೇನೆಯನ್ನು ಅಧಿಕೃತವಾಗಿ ಸ್ಥಾಪಿಸಿತು. ೧೯೧೮ರ ಒಂದು ಕರಪತ್ರದಲ್ಲಿ ಕೆಂಪು ಸೈನಿಕರು ತಮ್ಮ ತಾಯ್ನಡಿಗಾಗಿ ಹೋರಾಡಲು ಈ ರೀತಿ ಕರೆ ಕೊಡಲಾಗಿತ್ತು.

ಸಂಗಾತಿಗಳೇ, ನಮ್ಮಲ್ಲಿ ೬ ಜನರಲ್ಲಿ ಒಬ್ಬರಿಗೆ ಮಾತ್ರ ಒಂದು ರೈಫಲ್ ಇದೆ. ಬ್ರಿಟೀಷರ ಟ್ಯಾಂಕರ್ ಇಲ್ಲ, ಜರ್ಮನಿಯ ಯುದ್ಧ ವಿಮಾನಗಳಿಲ್ಲ; ಆದರೆ, ನಾವು ಪ್ರತಿಕ್ರಾಂತಿಕಾರಿಗಳನ್ನು ಖಂಡಿತವಾಗಿಯೂ ಮಟ್ಟಹಾಕು ತ್ತೇವೆ. ನಾವು ಕಾರ್ಮಿಕರ, ರೈತರ ಪ್ರಭುತ್ವಕ್ಕಾಗಿ ಹೋರಾಡುತ್ತಿದ್ದೇವೆ. ಸಂಗಾತಿಗಳೇ, ನಿಮ್ಮ ರೈಫಲ್‌ಗಳನ್ನು ಕಾಯ್ದುಕೊಳ್ಳಿ. ಅದು ದುಡಿಯುವ ಜನರನ್ನು ರಕ್ಷಿಸುವ ದಿವ್ಯಾಸ್ತ್ರ. ಪ್ರತಿಯೊಬ್ಬರಿಗೆ ಒಂದು ರೈಫಲ್ ಇಲ್ಲದ ಎಂತಹ ಸೈನ್ಯ ಇದು ಎಂದು ನೀವು ನಗಬಹುದು. ನೀವು ಓಡಿ ಹೋಗಬೇಡಿ, ರೈಫಲಿನ ಕೊನೆಯ ಗುಂಡು ಇರುವವರೆಗೆ ಹೋರಾಡಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳು ವಾಗಲೂ, ಹಿಂಜರಿಯವಾಗಲೂ ನೀವು ಸಾವಿರಾರು ಜನರನ್ನು ನಿಷ್ಪ್ರಯೋಜಕ ಸಾವಿನಿಂದ ರಕ್ಷಿಸುತ್ತಿರುವಿರಿ ಎಂದು ತಿಳಿಯಿರಿ.

೧೯೧೮ರ ಮಾರ್ಚ್ ೯ರಿಂದ ಸಾಮ್ರಾಜ್ಯಶಾಹಿಗಳು ರಷ್ಯಾದ ವಿವಿಧ ರಂಗಗಳಿಂದ ಪ್ರಾದೇಶಿಕ ಪ್ರತಿಕ್ರಾಂತಿಕಾರಿಗಳೊಂದಿಗೆ ದಾಳಿ ಪ್ರಾರಂಭಿಸಿದರು. ಈ ವರ್ಷದ ಬೇಸಿಗೆಯಲ್ಲಿ ಮುಕ್ಕಾಲುಪಾಲು ರಷ್ಯಾ ಇವರ ವಶದಲ್ಲಿತ್ತು. ಝಾರನ ಆಳ್ವಿಕೆಯಲ್ಲಿ ಪೂರ್ವ ರಷ್ಯಾದಲ್ಲಿ ೫೦೦೦೦ ಝಕ್ ಮತ್ತು ಸ್ಲಾವೋಕ್ ಪಡೆಗಳು ಝಕೊಸ್ಲೋವಾಕಿಯಾ ದಂಗೆಕಾರರಿಂದ ಆವರಿಸಿದ್ದವು. ಈ ಪಡೆಗಳನ್ನು ಸುರಕ್ಷಿತವಾಗಿ ತಮ್ಮ ತಾಯ್ನಡಿಗೆ ಮರಳಿಸಲು ಸೋವಿಯತ್ ಪಡೆಗಳು ಪ್ರಯತ್ನಿಸುತ್ತಿದ್ದವು. ಆದರೆ, ಸಾಮ್ರಾಜ್ಯಶಾಹಿಗಳು ಮಾಸ್ಕೋ ನಗರದ ಫ್ರೆಂಚ್ ರಾಜತಾಂತ್ರಿಕ ಕಚೇರಿಯಲ್ಲಿ ಈ ಸೇನಾಪಡೆ ತಮಗೆ ಸೇರುವಂತೆ ಭಾರೀ ಆಸೆ ಆಮೀಷಗಳನ್ನು ಒಡ್ಡಿದರು. ಆದರೆ, ಈ ಪಡೆಯವರು ಸೋವಿಯತ್‌ನ ಕೆಂಪು ಸೇನೆಗೆ ಸೇರುವುದಾಗಿ ಪತ್ರ ಮೂಲಕ ತಿಳಿಸಿ ತಮ್ಮ ಕ್ರಾಂತಿಕಾರಿ ಭ್ರಾತೃತ್ವವನ್ನು ಮೆರೆಸಿದರು. ಆಕ್ರಮಣಕಾರರು ಅಮಾನುಷ ದೌರ್ಜನ್ಯ ನಡೆಸಿದರು. ನಾಗರಿಕರ ಸಮೂಹ ಹತ್ಯೆ ಮಾಡಿದರು. ಕೆಲವರನ್ನು ಜೈಲಿಗೆ ಕಳುಹಿಸಿದರು. ಕೆಲವರನ್ನು ಸೈಬೀರಿಯಾದ ಕಾನ್‌ಸನ್‌ಟ್ರೇಶನ್ ಕ್ಯಾಂಪ್‌ಗೆ ರವಾನಿಸಿದರು. ವೈರಿ ಜಪಾನಿ ಸೇನೆ ಸೋವಿಯತ್ ಭೂಗತ ಕಾರ್ಯಕರ್ತರನ್ನು ಹಿಡಿದು ರೈಲ್ವೆಯ ಅಗ್ನಿಕುಂಡಕ್ಕೆ ಎಸೆದುಸುಟ್ಟಿತು. ಆಗಸ್ಟ್ ೩೦ ರಂದು ಲೆನಿನ್‌ರ ಮೇಲೆ ಮರಣಾಂತಿಕ ಬಾಂಬ್ ಸ್ಫೋಟಗಳಾದವು. ಸುದೈವದಿಂದ ಅವರನ್ನು ಸಕಾಲದಲ್ಲಿ ವೈದ್ಯರು ಚಿಕಿತ್ಸೆ ನಡೆಸಿ ಬದುಕಿಸಿದರು. ಪೆಟ್ರೋಗ್ರಾಡ್‌ನ ಸೋವಿಯತ್ ಮುಖ್ಯಸ್ಥರಾದ ಯುರಿಟ್ಸಕಿಯನ್ನು ಹತ್ಯೆ ಮಾಡಲಾಯಿತು.

ಕೆಂಪು ಸೇನೆಯು ಕಾರ್ಮಿಕರ ಮತ್ತು ರೈತರ ಸೇನೆ. ಅದನ್ನು ಶಾಂತಿ ಕಾಲದಲ್ಲಿ ಕಟ್ಟಿದ್ದಲ್ಲ. ಬದಲು ಯುದ್ಧ ಕಾಲದಲ್ಲಿ ಅಲ್ಪಾವಧಿಯಲ್ಲಿ ಹೆಚ್ಚು ಪೂರ್ವ ತಯಾರಿ ಇಲ್ಲದೇ ಸಂಘಟಿಸಲಾಗಿತ್ತು. ಅದಕ್ಕೆ ಸೇರಿದ ಕಾರ್ಮಿಕರು, ರೈತರು ತಮ್ಮದೇ ಕನಸು ಕಾಣುತ್ತಿದ್ದರು. ತಾವು ಇಂಜನೀಯರ್ ಆಗಬೇಕು, ಡಾಕ್ಟರ್ ಆಗಬೇಕು, ಶಿಕ್ಷಕರಾಗಬೇಕು, ಕೃಷಿ ತಜ್ಞರಾಗಬೇಕು… ಎಂದು. ಅವರೆಲ್ಲರ ಕನಸುಗಳು ನನಸಾಗುವುದು ಕ್ರಾಂತಿ ಯಶಸ್ವಿಯಾದ ಮೇಲೆ ಎಂದು ಅವರು ತಿಳಿದಿದ್ದರು. ಅದಕ್ಕಾಗಿ ಅವರು ಹೋರಾಡಲು ಸಿದ್ಧವಾಗಿದ್ದರು. ಮಿಲಿಟರಿ ಶಾಲೆಗಳಿಗೆ ಹಾಜರಾಗುತ್ತಿದ್ದರು. ಸೋವಿಯತ್ ಸರಕಾರ ಝಾರನ ಕಾಲದ ಅನುಭವಸ್ಥ ಮಿಲಿಟರಿ ಅಧಿಕಾರಿಗಳನ್ನು ತನ್ನ ಕಡೆ ಸೆಳೆದುಕೊಳ್ಳಲು ಯಶಸ್ವಿಯಾಯಿತು. ಕೆಂಪು ಸೇನೆ ಸ್ಥಾಪಿಸಿದ ಒಂದೇ ವರ್ಷದಲ್ಲಿ ಅದು ೩೫೦೦ ಪರಿಣಿತ ಸೈನಿಕ ಅಧಿಕಾರಿಗಳನ್ನು ಒಳಗೊಂಡಿತ್ತು. ಅವರಲ್ಲಿ ಅನೇಕರು ಝಾರನ ಕಾಲದವರು. ಅವರಲ್ಲಿ ಹಲವರು ಶ್ರೇಷ್ಠ ಮಟ್ಟದ ಸೇನಾನಿಗಳೂ ಇದ್ದರು. ಜೊತೆಗೇ ಹಿಂದಿನ ಕಾರ್ಮಿಕರು, ರೈತರು, ಖಾಸಗಿ ಸೈನಿಕರು ಇಂದಿನ ಕೆಂಪು ಸೇನೆಯ ಪ್ರತಿಭಾವಂತ ಸೇನಾನಿಗಳಾಗಿ ಮೂಡಿ ಬಂದರು. ಅವರಲ್ಲಿ ಹಲವಾರು ಪ್ರಖ್ಯಾತರಾಗಿ ರಾಷ್ಟ್ರಪ್ರಶಸ್ತಿಗಳನ್ನೂ ಪಡೆದರು.

ಕ್ರಾಂತಿಯ ಅಂತಾರಾಷ್ಟ್ರೀಯತೆ

ರಷ್ಯಾದಲ್ಲಿ ನಡೆಯುತ್ತಿದ್ದುದು ಬಂಡವಾಳಶಾಹಿಗಳ ಸಾಮ್ರಾಜ್ಯಶಾಹಿಗಳ ಮತ್ತು ಕಾರ್ಮಿಕರ ನಡುವಿನ ಘೋರ ವರ್ಗ ಯುದ್ಧ. ಮುಂದೆ ಇಂತಹ ಯುದ್ಧಗಳಾಗದಿರಲಿ ಎಂದೇ ಕಾರ್ಮಿಕರು ಶಾಂತಿಗಾಗಿ ನಡೆಸುತ್ತಿದ್ದ ಯುದ್ಧ. ಅದುದರಿಂದಲೇ, ಜಗತ್ತಿನಾದ್ಯಂತ ಈ ಯುದ್ಧಕ್ಕೆ ಎಲ್ಲಾ ಶೋಷಿತರು, ಕಾರ್ಮಿಕರು, ರೈತರು, ಪ್ರಜಾಪ್ರಭುತ್ವವಾದಿಗಳು ಬೆಂಬಲಿಸಿದರು. ರಷ್ಯಾದ ಕ್ರಾಂತಿಯ ವಿಜಯದಿಂದ ಅವರ ಆಶೆಗಳು ಚಿಗುರುವ ಸಾಧ್ಯತೆಗಳಿವೆ. ಅವರ ದೇಶದಲ್ಲಿಯೂ ಬಂಡವಾಳಶಾಹಿ-ಭೂಮಾಲಿಕ ಪ್ರಭುತ್ವಗಳನ್ನು ಕಿತ್ತೊಗೆದು ಸಮಾಜವಾದಿ ಸಮಾಜ ಸ್ಥಾಪಿಸುವ ಮೂಲಕ ಶೋಷಣಾ ಮುಕ್ತರಾಗಿ ತಮ್ಮ ಸರ್ವಾಂಗೀಣ ಅಭಿವೃದ್ದಿಯನ್ನು ಸಾಧಿಸಬಹುದೆಂದು ಕನಸು ಕಾಣುತ್ತಿದ್ದರು. ಸಾಮ್ರಾಜ್ಯಶಾಹಿಗಳ ಬಿಗಿ ಮುಷ್ಟಿಯಿಂದ ಬಿಡುಗಡೆ ಪಡೆಯಬಹುದೆಂದು ಅವರು ನಿರೀಕ್ಷಿಸುತ್ತಿದ್ದರು.

ಸಹಜವಾಗಿಯೇ ರಷ್ಯಾದ ಯುದ್ಧಕ್ಕೆ ಶಸ್ತ್ರಾಸ್ತಗಳನ್ನು ಹಡಗುಗಳಿಗೆ ತುಂಬುವುದಿಲ್ಲ. ರಷ್ಯಾದಿಂದ ಸೇನೆ ವಾಪಸು ತೆಗೆದುಕೊಳ್ಳಿ ಎಂದು ಲಂಡನ್ ಬಂದರು ನೌಕರರು ಮುಷ್ಕರ ಹೂಡಿದರು. ರಷ್ಯಾದಲ್ಲಿ ಯುದ್ಧ ನಿಲ್ಲಿಸಿರಿ, ನಮ್ಮ ಮಕ್ಕಳನ್ನು-ಸೈನಿಕರನ್ನು ತಾಯ್ನಡಿಗೆ ವಾಪಸು ತರಿಸಿರಿ ಎಂದು ಅಮೆರಿಕಾದ ಕಾರ್ಮಿಕರು, ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ವೈಟ್‌ಗಾರ್ಡ್ಸ್ ಮತ್ತು ಆಕ್ರಮಣಕಾರರಿಗೆ ಇಂತಹ ಅಪೂರ್ವ ಅಂತರ್ ರಾಷ್ಟ್ರೀಯ ಸೌಹಾರ್ದತೆ ಅಕ್ಟೋಬರ್ ಕ್ರಾಂತಿಯನ್ನು ಬೆಂಬಲಿಸಿ ಸರಿಯಾದ ಸವಾಲಾಯಿತು. ಕೆಂಪು ಸೇನೆಯಲ್ಲಿ ವಿವಿಧ ಭಾಷೆಗಳ, ಜನಾಂಗಗಳ, ಸಂಸ್ಕೃತಿಗಳ ದೇಶಗಳ ಪಡೆಗಳಿದ್ದವು. ಯಾವ ಭಾಷೆಯಲ್ಲಿ ಸೇನಾಧಿಪತಿಗಳು ಆಜ್ಞೆ ಮಾಡಬೇಕೆಂದು ಪ್ರಶ್ನೆ ಬಂದಾಗ ಸೈನಿಕರು ಹೇಳುತ್ತಾರೆ. ‘‘ನೀವು ಯಾವುದೇ ಭಾಷೆಯಲ್ಲಿ ಆಜ್ಞಾಪಿಸಿರಿ. ನಮಗೆ ತಿಳಿಯುತ್ತದೆ, ನಿಮ್ಮ-ನಮ್ಮ ಭಾಷೆ ಒಂದೇ, ಕ್ರಾಂತಿಗೆ ಜಯವಾಗಲಿ’’ ಎಂದು.

ನಿರ್ಣಾಯಕ ವಿಜಯದತ್ತ

೧೯೧೮ರ ನವೆಂಬರ್ ೭ (ಹಳೆಯ ಕ್ಯಾಲೆಂಡರ್‌ನಲ್ಲಿ ಅಕ್ಟೋಬರ್ ೨೫ ಕ್ರಾಂತಿಯ ನಂತರ ಇಲ್ಲಿ ಹೊಸ ಕ್ಯಾಲೆಂಡರನ್ನು ಅಳವಡಿಸಲಾಯಿತು) ಅಕ್ಟೋಬರ್ ಕ್ರಾಂತಿಯ ಮೊದಲ ವರ್ಷ ‘‘ಕ್ರಾಂತಿ ಚಿರಾಯುವಾಗಲಿ’’ ಎಂದು ಅತ್ಯಂತ ವಿಶ್ವಾಸದಿಂದ ಪೆಟ್ರೋ ಗ್ರಾಡ್ ಮತ್ತು ದೇಶದ ಇತರ ಪ್ರದೇಶಗಳಲ್ಲಿ ಘೋಷಣೆಗಳು ಮೊಳಗಿದವು. ಉತ್ತರ ಕ್ಷೇತ್ರದಲ್ಲಿ ಕೆಂಪು ಸೇನೆೆ ವೈರಿಗಳನ್ನು ಮುನ್ನುಗ್ಗಲು ಬಿಡಲಿಲ್ಲ. ದಕ್ಷಿಣದಲ್ಲಿ ಅದು ಸೋಲು ಅನುಭವಿಸಿತು. ಗಂಭೀರ ಮಿಲಿಟರಿ ಪರಿಸ್ಥಿತಿ, ಹಸಿವು, ಸರ್ವನಾಶ, ವೈರಿಗಳ ಪಿತೂರಿಗಳು ಇವೆಲ್ಲವುಗಳನ್ನು ಎದುರಿಸುತ್ತಾ ಸೋವಿಯತ್ ಪ್ರಭುತ್ವ ಉಳಿದಿದೆ ಮತ್ತು ಕ್ರಾಂತಿ ಮುಂದುವರೆದಿದೆ. ಜರ್ಮನಿಯಲ್ಲಿ ನವೆಂಬರ್ ೯ ರಂದು ಅತ್ಯದ್ಭುತ ಎಂಬಂತೆ ಕಾರ್ಮಿಕರ ನೇತೃತ್ವದಲ್ಲಿ ಕ್ರಾಂತಿ ಸಂಭವಿಸಿತು. ‘‘ಎಲ್ಲಾ ಅಧಿಕಾರ ಸೋವಿಯತ್‌ಗಳಿಗೆ’’ ಎಂದು ಜಯಘೋಷಗಳು ಮೊಳಗಿದವು. ಜರ್ಮನಿಯ ಆಳುವ ವರ್ಗದವರು ತತ್ತರಿಸಿ ನಡುಗಿದರು. ಅರಸೊತ್ತಿಗೆ ಕುಸಿದು ಬಿತ್ತು. ವಿಲಿಯಂ ಕೈಸರ್ ಪದತ್ಯಾಗ ಮಾಡಿದರು. ಆದರೆ, ೧೯೧೯ರ ಮೇ ಹೊತ್ತಿಗೆ ಪ್ರತಿಗಾಮಿಗಳ ಕೈ ಮೇಲಾಯಿತು. ಜನತಾ ಗಣರಾಜ್ಯವನ್ನು ರಕ್ತದ ಮಡುವಿನಲ್ಲಿ ಕೆಡೆದು ಉರುಳಿಸಲಾಯಿತು. ಬಂಡವಾಳಶಾಹಿ ಗಣರಾಜ್ಯ ಸ್ಥಾಪಿಸಲಾಯಿತು. ೧೯೧೯ರ ಮಾರ್ಚ್ ೨೧ ರಂದು ಹಂಗೇರಿಯಲ್ಲಿ ಕ್ರಾಂತಿ ವಿಜಯ ಗಳಿಸಿತು. ಹಂಗೇರಿಯಲ್ಲಿ ಸೋವಿಯತ್‌ಗಳ ಗಣರಾಜ್ಯವನ್ನು ಘೋಷಿಸಲಾಯಿತು. ಅದು ಆಗಸ್ಟ್ ೧ರ ವರೆಗೆ ಮಾತ್ರ ಉಳಿಯಿತು.

೧೯೧೮ರ ನವೆಂಬರ್ ೧೧ ರಂದು ಒಂದು ರೈಲು ಬಂಡಿಯಲ್ಲಿ ಫ್ರಾನ್ಸ್ ಮತ್ತು ಜರ್ಮನಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಸೋವಿಯತ್ ರಷ್ಯಾವು ಜಾಗತಿಕ ಕ್ರಾಂತಿಕಾರಿ ಸನ್ನಿವೇಶದಲ್ಲಿ ತಾವು ವೈರಿಗಳೆಂಬುದನ್ನು ಮರೆಯಬೇಕೆಂದು ಅಭಿಪ್ರಾಯ ಪಟ್ಟರು. ಜರ್ಮನ್ ಪಶ್ಚಿಮ ರಾಷ್ಟ್ರಗಳಿಂದ ತನ್ನ ಸೇನೆಗಳನ್ನು ವಾಪಸ್ಸು ಪಡೆದು ಕೊಳ್ಳಬೇಕೆಂದೂ, ಜರ್ಮನ್ ಮಿತ್ರರಾಷ್ಟ್ರಗಳಿಗೆ ಭಾರಿ ಮೊತ್ತದ ಯುದ್ಧ ಪರಿಹಾರ ನೀಡಬೇಕೆಂದೂ ಒಪ್ಪಂದದಲ್ಲಿ ತಿಳಿಸಲಾಗಿತ್ತು. ಆದರೆ, ಜರ್ಮನ್ ಸೈನ್ಯವನ್ನು ರಷ್ಯಾದಿಂದ ವಾಪಸ್ಸು ತೆಗೆದುಕೊಳ್ಳದೇ ಅಲ್ಲಿ ಕ್ರಾಂತಿಯನ್ನು ಮುರಿಯುವ ಪ್ರಯತ್ನ ಮುಂದುವರೆಸಬೇಕೆಂದೂ ಅದರಲ್ಲಿ ಸ್ಪಷ್ಟಪಡಿಸಲಾಯಿತು. ಈ ಮೂಲಕ, ನಾಲ್ಕೂವರೆ ವರ್ಷಗಳ ದೀರ್ಘಕಾಲದ ಮೊದಲ ಜಾಗತಿಕ ಯುದ್ಧ ಮುಕ್ತಾಯವಾಯಿತು. ಗಣನೀಯವಾಗಿ ಬದಲಾದ ಅಂತರ್‌ರಾಷ್ಟ್ರೀಯ ಪರಿಸ್ಥಿತಿ ಸೋವಿಯತ್ ರಷ್ಯಾದ ಮೇಲೂ ಪರಿಣಾಮ ಬೀರಿದವು. ಜರ್ಮನಿಯ ಸೋಲಿನಿಂದಾಗಿ ಈ ಹಿಂದೆ ರಷ್ಯಾ ಅದರೊಂದಿಗೆ ಮಾಡಿಕೊಂಡ ಅವಮಾನಕಾರಿ ಒಪ್ಪಂದ ತನ್ನಿಂದ ತಾನೇ ಅವಸಾನ ಹೊಂದಿತು. ೧೯೧೮ರ ನವೆಂಬರ್ ಹಾಗೂ ಡಿಸೆಂಬರ್ ಮತ್ತು ೧೯೧೯ರ ಜನವರಿಯಲ್ಲಿ ಜರ್ಮನ್ ಆಕ್ರಮಿತ ಇಸ್ಟೋನಿಯಾ, ಲಾಟ್ಟಿಯಾ, ಆತುನಿಯಾ, ಬೈಲೊರಷ್ಯಾ ರಾಜ್ಯಗಳಲ್ಲಿ ಸೋವಿಯತ್ ಪ್ರಭುತ್ವವನ್ನು ಸ್ಥಾಪಿಸಲಾಯಿತು. ಈ ಎಲ್ಲಾ ರಾಜ್ಯಗಳಲ್ಲಿ ಕಾರ್ಮಿಕರು, ಸೈನಿಕರು, ರೈತರು ಸೋವಿಯತ್ ಪರ ನಿಂತರು. ‘ಭವಿಷ್ಯ ನಮ್ಮದು’ ಎಂಬ ಲೆನಿನ್‌ರ ಭವಿಷ್ಯವಾಣಿ ನಿಜವಾಯಿತು.

ಬ್ರಿಟನ್ ಮತ್ತು ಫ್ರಾನ್ಸ್ ಜರ್ಮನಿಯನ್ನು ಸೋಲಿಸಿ ತಮ್ಮ ಎಲ್ಲಾ ಶಕ್ತಿಗಳನ್ನು ಸೋವಿಯತ್ ರಷ್ಯಾದ ವಿರುದ್ಧ ಕ್ರೋಢೀಕರಿಸಿದವು. ಕಪ್ಪು ಸಮುದ್ರವನ್ನು ಪ್ರವೇಶಿಸಿ ರಷ್ಯಾದ ಕರಾವಳಿಯತ್ತ ಮುನ್ನುಗ್ಗಿದವು. ಆದರೆ ಬ್ರಿಟಿಷ್ ಮತ್ತು ಫ್ರೆಂಚ್ ಸೈನ್ಯಗಳಲ್ಲಿ ಕಾರ್ಮಿಕರು ಮತ್ತು ರೈತರೇ ಹೆಚ್ಚಾಗಿದ್ದಾರೆ ಮತ್ತು ಆ ಕಾರಣಕ್ಕಾಗಿ ಅವರು ಸೋವಿಯತ್ ಸಹೋದರರ ವಿರುದ್ಧ ಯುದ್ಧ ಮಾಡಲಾರರು ಎಂದು ಭರವಸೆ ಇತ್ತು. ಮಾಸ್ಕೋದಲ್ಲಿ ವಿದೇಶಿ ಕಮ್ಯುನಿಸ್ಟರ ಗುಂಪಿನಲ್ಲಿ ಫ್ರೆಂಚ್ ಕಮ್ಯುನಿಸ್ಟ್ ಪಕ್ಷದ ಒಬ್ಬ ಮಹಿಳಾ ಧುರೀಣಳೂ ಇದ್ದಳು. ಅವರೆಲ್ಲರೂ ಸೋವಿಯತ್ ಕ್ರಾಂತಿಯ ಯಶಸ್ಸಿಗೆ ಶ್ರಮಿಸಿದರು. ಪರಿಣಾಮವಾಗಿ, ಫ್ರೆಂಚ್ ಸೇನೆಯಲ್ಲಿ ದಂಗೆ ಎದ್ದಿತು. ಫ್ರಾನ್ಸ್ ದಂಗುಗೊಂಡಿತು. ಕೂಡಲೇ ತನ್ನ ಸೈನ್ಯವನ್ನು ವಾಪಸು ಕರೆಯಿಸಿಕೊಂಡಿತು. ಬ್ರಿಟಿಷ್ ಸೇನೆಯನ್ನು ಕೇಸ್ಪಿಯನ್ ಸಮುದ್ರ ತೀರದಿಂದ ವಾಪಸು ಕರೆಯಿಸಿಕೊಳ್ಳಲಾಯಿತು. ದಕ್ಷಿಣದ ಉಕ್ರೈನ್ ಮತ್ತು  ಕ್ರಿಮಿಯಾದಲ್ಲಿ ಸೋವಿಯತ್  ಪ್ರಭುತ್ವವನ್ನು ಮರುಸ್ಥಾಪಿಸಲಾಯಿತು. ಸೋವಿಯತ್ ರಷ್ಯಾದ ಶಾಂತಿದಾಹವನ್ನು ಸಾಮ್ರಾಜ್ಯಶಾಹಿಗಳು ಅರಿತುಕೊಂಡರು. ಫೆಬ್ರವರಿ ೧೯೧೯ರಲ್ಲಿ ಪ್ರಿನ್ಸಸ್ ದ್ವೀಪದಲ್ಲಿ ಕ್ರಾಂತಿಕಾರಿಗಳ ಹಾಗೂ ಪ್ರತಿಕ್ರಾಂತಿಕಾರಿಗಳ ಪ್ರತಿನಿಧಿಗಳನ್ನು ಕರೆಯಿಸಿ ಶಾಂತಿ ಮಾತುಕತೆಯ ನಾಟಕ ಆಡಿದರು. ಕ್ರಾಂತಿಯ ಮುನ್ನಡೆಯಲ್ಲಿ ಗೊಂದಲ ಉಂಟು ಮಾಡಲು ವಿಫಲ ಪ್ರಯತ್ನ ಮಾಡಿದರು.

೧೯೧೯ರ ಕಾಲದಲ್ಲಿ ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ಹೊಸ ಆಕ್ರಮಣ ನಡೆಸಿದವು. ಅಡ್ಮಿರಲ್ ಕೊಲ್ಚಾಕ್‌ನ ನೇತೃತ್ವದಲ್ಲಿ ೪೦೦,೦೦೦ ಸೈನಿಕರ ಪಡೆಯನ್ನು ಜಮಾಯಿಸಲು ನೆರವಾದರು. ಪ್ರತಿಕ್ರಾಂತಿಕಾರಿಗಳು ಗೆದ್ದ ಮೇಲೆ ಅವನನ್ನೇ ರಷ್ಯಾದ ಸರ್ವಾಧಿಕಾರಿಯಾಗಿ ಮಾಡುವುದಾಗಿ ಭರವಸೆಕೊಟ್ಟರು. ಬಂಡವಾಳಶಾಹಿಗಳಿಗೆ ಸಾಮ್ರಾಜ್ಯಶಾಹಿಗಳಿಗೆ ಪ್ರಜಾಪ್ರಭುತ್ವದಲ್ಲಿ ಎಷ್ಟು ವಿಶ್ವಾಸ ಇದೆ ಎಂದು ಜಗತ್ತಿಗೆ ತಿಳಿಯಿತು. ಕೆಂಪು ಸೇನೆ ವಿವಿಧೆಡೆಗಳಲ್ಲಿ ಸಮರಧೀರ ಹೋರಾಟ ನಡೆಸಿ ಜಯಗಳಿಸುತ್ತ ಬಂದಿತು. ಕೊಲ್ಚಾಕ್‌ನನ್ನು ಉರಾಲ್‌ನಲ್ಲಿ ಮತ್ತು ಡೆನಿಕಿನ್‌ನನ್ನು ಮಾಸ್ಕೋದಲ್ಲಿ, ಯುಡಿವಿಚ್‌ನನ್ನು ಪೆಟ್ರೋಗ್ರಾಡ್‌ನಲ್ಲಿ ಸೋಲಿಸಿ ಕೆಡವಿತು. ಸೈಬೀರಿಯಾ, ದೂರ ಪೂರ್ವದಲ್ಲಿಯೂ ಕೆಂಪು ಸೈನ್ಯ ಜಯಭೇರಿ ಬಾರಿಸಿತು. ಈಗ ರಷ್ಯಾದ ಪೂರ್ವ, ದಕ್ಷಿಣ, ಉತ್ತರ ಭಾಗಗಳು ಸೋವಿಯತ್ ಪ್ರಭುತ್ವಕ್ಕೆ ಪುನಃ ಒಳಗಾದವು.

ಇದೇ ಸಂದರ್ಭ ಇಂಗ್ಲೆಂಡಿನಲ್ಲಿ ಶಸ್ತ್ರಾಗಾರಗಳಲ್ಲಿ ಕಾರ್ಮಿಕರು ಮುಷ್ಕರ ನಡೆಸಿ ದರು. ಈ ದೇಶದಿಂದ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಮತ್ತು ಟ್ಯಾಂಕರ್‌ಗಳನ್ನು ಸಾಗಿಸುವುದನ್ನು ತಡೆದರು. ೧೯೨೦ರ ಏಪ್ರಿಲ್ ೪ ರಂದು ಬ್ರಿಟಿಷರು ರಷ್ಯಾ ಬಿಟ್ಟು ಓಡಿ ಹೋಗ ಬೇಕಾಯಿತು. ಇಂಗ್ಲೆಂಡಿನ ಕಾರ್ಮಿಕರಂತೆಯೇ ಫ್ರಾನ್ಸ್, ನಾರ್ವೆ, ಹಂಗೇರಿ ಮೊದಲಾದ ದೇಶಗಳ ಕಾರ್ಮಿಕರು ಯುದ್ಧವಿರೋಧಿ ಚಳವಳಿ ನಡೆಸಿದರು ಮತ್ತು ರಷ್ಯಾದ ತಮ್ಮ ಸಹೋದರ ಸಂಗಾತಿಗಳಿಗೆ ಸೌಹಾರ್ದತೆ ನೀಡಿದರು. ೧೯೨೦ರ ಪ್ರಾರಂಭದಲ್ಲಿ ಮಿತ್ರರಾಷ್ಟ್ರಗಳ ಸೈನಿಕ ಪಡೆಗಳು ರಷ್ಯಾದಿಂದ ಕಾಲು ತೆಗೆಯಲಾರಂಭಿಸಿದವು.

ಆದರೂ ರಷ್ಯಾವನ್ನು ಧ್ವಂಸ ಮಾಡುವ ದುಃಸ್ಸಾಹಸ ಸಾಮ್ರಾಜ್ಯಶಾಹಿಗಳಲ್ಲಿ ಇನ್ನೂ ಜೀವಂತವಾಗಿತ್ತು. ೧೯೨೦ರ ಏಪ್ರಿಲ್‌ನಲ್ಲಿ ಪೋಲೆಂಡ್‌ನ ಬಂಡವಾಳಶಾಹಿ ಸೈನ್ಯ ಮತ್ತು ಬಾರೋನ್ ರೋಂಜೇವ್ ಇವೆರಡೂ ಸಾಮ್ರಾಜ್ಯಶಾಹಿಗಳ ಎರಡು ಕರಾಳ ಕೈಗಳು-ಕೀವ್, ಪೆಟ್ರೋಗ್ರಾಡ್, ಮಾಸ್ಕೋ ನಗರಗಳ ಮೇಲೆ ಮರುದಾಳಿ ನಡೆಸಿದವು. ಪುನಃ ಕೆಂಪುಸೇನೆ ಪೋಲಿಷ್ ಸೇನೆಯೊಡನೆ ಭೀಕರ ಕದನ ನಡೆಸಿ ಜಯಗಳಿಸಿತು. ಪೋಲಿಷ್ ಬಿಳಿಸೇನೆಯ ಸೋಲಿನಿಂದಾಗಿ ಪೋಲ್ಯಾಂಡ್‌ನ ಸ್ವಾತಂತ್ರ್ಯಕ್ಕೆ ಒಂದಿಷ್ಟು ಸೋವಿಯತ್‌ನಿಂದ ಧಕ್ಕೆ ಆಗಲಾರದೆಂದು ಬೊಲ್‌ಶೆವಿಕ್ ಕೇಂದ್ರಸಮಿತಿ ಘೋಷಿಸಿತು. ಸಮಾಜವಾದಿಗಳು ಎಂದಿಗೂ ಆಕ್ರಮಣಕಾರಿಗಳಲ್ಲ ಎಂಬುದನ್ನು ಈ ಘಟನೆ ಜಗತ್ತಿಗೆ ಎತ್ತಿ ತೋರಿಸಿತು. ದೇವರಿಗೂ ದಾಟಲಾಗದ ಸಿವಾಶ್ ಅಖಾತವನ್ನು ಕೆಂಪುಸೇನೆ ರಾತ್ರಿ ಹೊತ್ತಿಗೆ ನೀರಿಳಿತವಿದ್ದಾಗ ದಾಟಿತು. ಬಾರೊನ್ ರೊಂಜೇವ್‌ನ ಸೈನ್ಯವನ್ನು ಹಿಂದಿನಿಂದ ಮಿಂಚಿನಂತೆ ದಾಳಿ ನಡೆಸಿ ನುಚ್ಚುನೂರು ಮಾಡಿತು. ಈ ಮೂಲಕ, ೧೯೨೧ರಷ್ಟರಲ್ಲಿ ರಷ್ಯಾದಲ್ಲಿ ಆಂತರಿಕ ಯುದ್ಧ ಕೊನೆಗೊಂಡಿತು; ಸಾಮ್ರಾಜ್ಯಶಾಹಿಗಳ ಮಿತ್ರ ರಾಷ್ಟ್ರಗಳ ದುಷ್ಟಕೂಟ ಮತ್ತು ಆಂತರಿಕ ಬಂಡವಾಳಶಾಹಿ-ಭೂಮಾಲಿಕ ಪ್ರತಿಕ್ರಾಂತಿಕಾರಿಗಳು ಸಂಪೂರ್ಣವಾಗಿ ಸೋತರು.

ಸಾಮ್ರಾಜ್ಯಶಾಹಿಗಳೊಡನೆ ಹಣ, ಶಸ್ತ್ರಾಸ್ತ್ರ ಸಜ್ಜಿತ ಸೇನೆ, ಟ್ಯಾಂಕರುಗಳು, ವಿಮಾನಪಡೆಗಳು ಇದ್ದವು. ಆದರೆ ಗೆಲ್ಲಲಿಲ್ಲ. ರಷ್ಯಾದ ಅಕ್ಟೋಬರ್ ಕ್ರಾಂತಿಯ ವಿಜಯವು ಜಗತ್ತಿನಲ್ಲಿಯೇ ಒಂದು ಅದ್ಭುತ ಪವಾಡ ಎನ್ನುತ್ತಾರೆ ಯುಗಪುರುಷ ಲೆನಿನ್. ಆ ಪವಾಡವನ್ನು ನಡೆಸಿದವರು ಶತಮಾನಗಳಿಂದ ಶೋಷಣೆಗೊಳಗಾದ ಕಾರ್ಮಿಕರು ಮತ್ತು ರೈತರು ಮತ್ತು ಅವರಿಗೆ ಬೆಂಬಲ ನೀಡಿದ ಅಂತಾರಾಷ್ಟ್ರೀಯ ಶ್ರಮಿಕ ವರ್ಗದವರು. ‘‘ಒಂದು ರಾಷ್ಟ್ರದಲ್ಲಿ ಬಹುಪಾಲು ಜನರು ಕಾರ್ಮಿಕರು ಮತ್ತು ರೈತರಾಗಿದ್ದು, ಅವರು ಕಾರ್ಮಿಕ ವರ್ಗದ ಆಳ್ವಿಕೆಗಾಗಿ ಹೋರಾಡುತ್ತಿರುವುದನ್ನು ನೋಡುತ್ತಿರುವಾಗ ಅದರ ವಿಜಯವು ಅವರಿಗೆ ಮತ್ತು ಅವರ ಮಕ್ಕಳಿಗೆ, ಮಾನವ ಶ್ರಮದಿಂದ ಇದುವರೆಗೆ ಸೃಷ್ಟಿಸಿದ ಎಲ್ಲಾ ಸಂಸ್ಕೃತಿಯ ಸೌಲಭ್ಯಗಳೂ ಸಿಗುವುವು ಎಂದು ಖಾತರಿ ಇರುವುದರಿಂದ ಅಂತಹ ರಾಷ್ಟ್ರವನ್ನು ಯಾರು ನಾಶಗೊಳಿಸಲಾರರು’’ ಎನ್ನುತ್ತಾರೆ ಲಿನಿನ್. ಆದರೆ, ಈ ವಿಜಯಕ್ಕಾಗಿ ರಷ್ಯಾ ಭಾರಿ ಬೆಲೆ ತೆರಬೇಕಾಯಿತು. ದೇಶದ ಗ್ರಾಮಾಂತರ ಪ್ರದೇಶಗಳಲ್ಲಿ ಮಿಲಿಯಗಟ್ಟಲೆ ಜನ ಸಾವನ್ನಪ್ಪಿದರು. ವ್ಯವಸಾಯ ಮಾಡಲು ಜನರು ಇರಲಿಲ್ಲ. ಇದ್ದವರೂ ಕೆಂಪು ಸೇನೆಯಲ್ಲಿ ಸೇರಿ ಯುದ್ಧನಿರತರಾಗಿದ್ದರು. ಕೃಷಿ ಉತ್ಪಾದನೆ ಗಣನೀಯವಾಗಿ ಕುಸಿದಿತ್ತು. ಜನರು ಹಸಿವಿನಿಂದ ನರಳುತ್ತಿದ್ದರು. ೧೯೨೦ರಲ್ಲಿ ಬೃಹತ್ ಕೈಗಾರಿಕೆಗಳ ಉತ್ಪಾದನೆಯ ೧೯೧೩ರ ಉತ್ಪಾದನೆ ಕೇವಲ ಶೇ.೧೩.೮ರಷ್ಟಾಗಿತ್ತು. ಯುದ್ಧಕಾಲದಲ್ಲಿ ರಷ್ಯ ೧/೩ರಷ್ಟು ಚಿನ್ನದ ಠೇವಣಿ ಕಳೆದುಕೊಂಡಿತು. ೧೯೧೪ ರಿಂದ ೧೯೨೧ರವರೆಗೆ ೭ ವರ್ಷಗಳ ಕಾಲದಲ್ಲಿ ರಷ್ಯಾದ ಆರ್ಥಿಕ ವ್ಯವಸ್ಥೆ ಸಂಪೂರ್ಣ ನಾಶವಾಗಿತ್ತು. ಆ ನಷ್ಟವನ್ನು ಯುದ್ಧಕೋರ ಸಾಮ್ರಾಜ್ಯಶಾಹಿಗಳು ಭರ್ತಿ ಮಾಡುವಂತಿರಲಿಲ್ಲ.

ಆದರೂ ಯುದ್ಧ ಕಾಲದಲ್ಲಿ ಸಮಾಜವಾದಿ ಕೆಲಸ ಕಾರ್ಯಗಳೂ ನಡೆದಿದ್ದವು. ರೈತರಿಗೆ ಬೇಕಾದ ಸರಕು ಸಾಮಗ್ರಿಗಳನ್ನು, ಸಲಕರಣೆಗಳನ್ನು ಕಾರ್ಮಿಕರು ಮತ್ತು ಸೈನಿಕರು ಒದಗಿಸುತ್ತಿದ್ದರು. ಅದಕ್ಕೆ ಬದಲಾಗಿ ರೈತರು ತಮ್ಮ ಕಾರ್ಮಿಕ ಮತ್ತು ಸೈನಿಕ ಸಂಗಾತಿಗಳಿಗೆ ಆಹಾರ ಧಾನ್ಯಗಳನ್ನು ಒದಗಿಸುತ್ತಿದ್ದರು. ಕಾರ್ಮಿಕ-ರೈತ ಸಖ್ಯತೆಯ ಆಧಾರದಲ್ಲಿ ಕ್ರಾಂತಿ ಯಶಸ್ವಿಯಾಯಿತು. ೧೯೨೧ರಷ್ಟರಲ್ಲಿ ಸೋವಿಯತ್ ರಷ್ಯಾದಲ್ಲಿ ೨೪೪ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿತ್ತು. ೧೯೧೫ರಲ್ಲಿ ಕೇವಲ ೯೧ ಅಂತಹ ಸಂಸ್ಥೆಗಳಿದ್ದವು. ೧೩೦೦೦ ಶಾಲೆಗಳನ್ನು ತೆರೆಯಲಾಯಿತು. ಜನರ ಮಾತೃಭಾಷೆಗಳಲ್ಲಿ ಉಚಿತ ಶಿಕ್ಷಣ ನೀಡಲಾಯಿತು. ಹೊಸ ಸಮಾಜದ ಹೊಸ ಜೀವನದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾರ್ವತ್ರಿಕ ಶಿಕ್ಷಣದ ಅಗತ್ಯತೆಯನ್ನು ಅರಿತುಕೊಳ್ಳಲಾಯಿತು.

೧೯೨೨ರಲ್ಲಿ ಮಾಸ್ಕೋದಲ್ಲಿ ಆಂತರಿಕ ಯುದ್ಧದ ಕೊನೆಯ ಕುರುಹು ಕೂಡ ಅಳಿಯಿತು. ಕ್ರಾಂತಿಯು ತನ್ನನ್ನು ತಾನು ರಕ್ಷಿಸಿಕೊಂಡಿತು. ಮಾಸ್ಕೋದಲ್ಲಿ ಸೋವಿಯತ್ ಗಳ ಪ್ರತಿನಿಧಿಗಳು ರಷ್ಯಾವನ್ನು ‘‘ಯುನೈಟೆಡ್ ಸೋವಿಯತ್ ಸೋಶಲಿಸ್ಟ್ ರಿಪಬ್ಲಿಕ್ಸ್’’ (ಯು.ಎಸ್.ಎಸ್.ಆರ್.) ಎಂಬ ಘೋಷಣೆಗೆ ಸಹಿ ಹಾಕಿದರು. ಇದು ರಷ್ಯಾದ ಅಕ್ಟೋಬರ್ ಕ್ರಾಂತಿಯ ಫಲಶೃತಿ. ಕ್ರಾಂತಿ ಒಂದೆರಡು ತಿಂಗಳುಗಳಿಗಿಂತ ಹೆಚ್ಚು ಕಾಲ ಉಳಿಯಲಾರದು ಎಂದು ರಷ್ಯಾ ಕುರಿತಾದ ತಜ್ಞರು, ಪ್ರತಿಕಾಕರ್ತರು, ಪ್ರಚಾರಕರು, ಚರಿತ್ರಕಾರರು, ಸಮಾಜವಾದಿಗಳು ದೇಶವಿದೇಶಗಳಲ್ಲಿ ಅಭಿಪ್ರಾಯಪಟ್ಟಿದ್ದರು. ಆದರೆ, ಕ್ರಾಂತಿಗೆ ವಿಶ್ವದಾದ್ಯಂತ ಬೆಂಬಲ ದೊರಕಿತು. ಕ್ರಾಂತಿ ಚಿರಾಯುವಾಯಿತು. ೧೯೨೨ರಲ್ಲಿ ಜಿನೇವಾದಲ್ಲಿ ನಡೆದ ೩೪ ದೇಶಗಳ ಸಮ್ಮೇಳನದಲ್ಲಿ ರಷ್ಯಾ ಪಾಲ್ಗೊಂಡಿತು. ಜಾಗತಿಕ ಶಾಂತಿ ಹಾಗೂ ನಿಶ್ಯಸ್ತ್ರೀಕರಣಕ್ಕಾಗಿ ಪ್ರಸ್ತಾಪನೆ ಸಲ್ಲಿಸುವ ಮೂಲಕ ತನ್ನ ಮೊದಲ ಹೆಜ್ಜೆ ಇಟ್ಟಿತು.

 

ಮುಂದೆ ಯುದ್ಧಕಾಲದ ಆರ್ಥಿಕ ನೀತಿಯ ಬದಲು, ಹೊಸ ಆರ್ಥಿಕ ನೀತಿಯನ್ನು ಲೆನಿನ್ ಜಾರಿಗೊಳಿಸಿದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಪ್ರಾದೇಶಿಕ ಸಮತೋಲನ ಕಾಯ್ದುಕೊಂಡು ಶೀಘ್ರಗತಿಯಲ್ಲಿ ಆರ್ಥಿಕ ಅಭಿವೃದ್ದಿಯನ್ನು ಸಾಧಿಸ ಲಾಯಿತು. ಮಹಾನ್ ಕ್ರಾಂತಿಯನ್ನು ಯಶಸ್ವಿಗೊಳಿಸಿದವರಿಗೆ, ಮಹಾನ್ ಆರ್ಥಿಕ ಮತ್ತು ಸಾಂಸ್ಕೃತಿಕ ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸಲು ಸಾಧ್ಯವಾಯಿತು. ಶ್ರಮಿಕ ವರ್ಗದ ಸಮಾಜವಾದಿ ರಷ್ಯಾ ಜಗತ್ತಿನ ಅಗ್ರಗಣ್ಯ ರಾಷ್ಟ್ರವಾಗಿ ಎದ್ದು ಬಂದಿತು. ೧೯೨೦ರ ಅಕ್ಟೋಬರ್ ೬ ರಂದು ಖ್ಯಾತ ವೈಜ್ಞಾನಿಕ ಕಾದಂಬರಿಗಾರ ಎಚ್.ಜಿ.ವೆಲ್ಸ ಮಾಸ್ಕೋದಲ್ಲಿ ಲೆನಿನ್‌ರನ್ನು ಭೇಟಿ ಆದರು. ಆಗ ಲೆನಿನ್ ವಿದ್ಯುತೀಕರಣ ಕುರಿತು ಯೋಜನೆ ರೂಪಿಸುತ್ತಿರುವುದನ್ನು ತಿಳಿದು ಎಚ್.ಜಿ.ವೆಲ್ಸರು ಲೆನಿನ್‌ರನ್ನು ತನಗಿಂತಲೂ ಹೆಚ್ಚು ರೋಮಾಂಚಕಾರಿ ವೈಜ್ಞಾನಿಕ ಕಾದಂಬರಿಗಾರರೆಂದು ಉದ್ಗರಿಸಿದರು. ಇನ್ನು ಕೆಲವೇ ವರ್ಷಗಳಲ್ಲಿ ರಷ್ಯಾಕ್ಕೆ ಬಂದು ತಮ್ಮ ಯೋಜನೆಗಳು ಸಾಕಾರಗೊಳ್ಳುವುದನ್ನು ನೋಡಲು ಎಚ್.ಜಿ.ವೆಲ್ಸರಿಗೆ ಲೆನಿನ್‌ರು ತಿಳಿಸಿದರು.

ಕ್ರಾಂತಿಯ ಮುನ್ನಡೆ

ಮುಂದೆ ಸಾಮ್ರಾಜ್ಯಶಾಹಿಗಳ ಆರ್ಥಿಕ ದಿಗ್ಬಂಧನಕ್ಕೊಳಗಾಗಿದ್ದರೂ ಸೋವಿಯತ್ ಒಕ್ಕೂಟ ಆರ್ಥಿಕ ವೈಜ್ಞಾನಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಗಳಿಸಿದ ಮಹತ್ವದ ಸಾಧನೆಗಳೂ ಅಕ್ಟೋಬರ್ ಕ್ರಾಂತಿಯ ಮುನ್ನಡೆಗಳೇ ಆಗಿವೆ. ಎರಡನೆಯ ಜಾಗತಿಕ ಯುದ್ಧದಲ್ಲಿ (೧೯೩೯-೪೫) ಸೋವಿಯತ್ ಒಕ್ಕೂಟ ಜಾಗತಿಕ ಫ್ಯಾಸಿಸಂ ಮತ್ತು ನ್ಯಾಜಿಸಂಗಳ ಮೇಲೆ ಸಾಧಿಸಿದ ವಿಜಯ, ಯುದ್ಧಾನಂತರ ಸಮಾಜವಾದದತ್ತ ಸಾಗಲು ಪೂರ್ವ ಯೂರೋಪಿನ ದೇಶಗಳು ಮತ್ತು ಚೀನಾ, ಕೊರಿಯಾ, ವಿಯಟ್ನಾಂ, ಕ್ಯೂಬಾ ಮೊದಲಾದ ದೇಶಗಳಲ್ಲಿ ನಡೆದ ಯಶಸ್ವಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಗಳು, ಭಾರತವೂ ಸೇರಿದಂತೆ ೧೫೦ಕ್ಕೂ ಹೆಚ್ಚು ವಸಾಹತು ರಾಷ್ಟ್ರಗಳೂ ಸಾಮ್ರಾಜ್ಯಶಾಹಿಗಳಿಂದ ವಿಮೋಚನೆಗೊಂಡು ಸ್ವಾತಂತ್ರ್ಯ ಗಳಿಸಿರುವುದು, ಸಾಮ್ರಾಜ್ಯಶಾಹಿಗಳು ತಮ್ಮ ಅಣ್ವಸ್ತ್ರಗಳನ್ನು ಪ್ರಯೋಗಿಸದೇ ಇರುವಂತೆ ಜಾಗತಿಕ ಶಾಂತಿ ಹಾಗೂ ನಿಶ್ಯಸ್ತ್ರೀಕರಣಕ್ಕಾಗಿ ನಡೆದ ಹೋರಾಟಗಳು ಇತ್ಯಾದಿ ಅಕ್ಟೋಬರ್ ಕ್ರಾಂತಿಯ ನಿರಂತರ ಮುನ್ನಡೆಗಳೇ ಆಗಿವೆ.

೧೯೮೦ರ ದಶಕದ ಕೊನೆಯಿಂದ ಜಾಗತಿಕ ಸಮಾಜವಾದಕ್ಕೆ ತೀವ್ರ ಹಿನ್ನಡೆಯಾಗಿರುವುದು ನಿಜ. ರಷ್ಯಾದಲ್ಲಿ ಸಮಾಜವಾದಿ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯೂರೋಪ್ ದೇಶಗಳಲ್ಲಿ ಸಮಾಜವಾದಿ ಪ್ರಭುತ್ವಗಳು ಅಲ್ಲಿನ ಅನೇಕ ಆಂತರಿಕ ಲೋಪದೋಷಗಳಿಂದ ಮತ್ತು ಸಾಮ್ರಾಜ್ಯಶಾಹಿಗಳ ಬಾಹ್ಯ ಒತ್ತಡಗಳಿಂದ ಅಳಿದುಹೋಗಿ, ಪುನಃ ಬಂಡವಾಳಶಾಹಿ ಪ್ರಭುತ್ವಗಳು ಅಧಿಕಾರಕ್ಕೆ ಬಂದಿರುವುದು ವಿಷಾದನೀಯವೇ ಸರಿ. ವಿಜ್ಞಾನ ತಂತ್ರಜ್ಞಾನಗಳ ಅದ್ಭುತ ಮುನ್ನಡೆಗಳಿಂದ ಉಂಟಾದ ಜೈವಿಕ ಹಾಗೂ ಮಾಹಿತಿ ತಂತ್ರಜ್ಞಾನಗಳ ಹೊಸ ಕ್ರಾಂತಿಕಾರಿ ಆವಿಷ್ಕಾರಗಳಿಂದ, ಶೇ.೧೫ರಷ್ಟೇ ಜನಸಂಖ್ಯೆ ಇರುವ ಅಭಿವೃದ್ದಿ ಹೊಂದಿದ ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ರಾಷ್ಟ್ರಗಳು ತಮ್ಮ ಬಹುರಾಷ್ಟ್ರೀಯ ಸಂಸ್ಥೆಗಳ ಮೂಲಕ ಸ್ವಾರ್ಥ ಸಾಧನೆಗಾಗಿ ಜಗತ್ತಿನ ಶೇ.೮೫ರಷ್ಟು ವ್ಯಾಪಾರೋದ್ಯಮಗಳ ಮತ್ತು ಸಂಪನ್ಮೂಲಗಳ ಮೇಲೆ ಸ್ವಾಮ್ಯ ರೂಪಿಸಿವೆ. ಪರಿಣಾಮವಾಗಿ ಜಗತ್ತಿನ ಶೇ.೮೫ ರಷ್ಟು ಜನಸಂಖ್ಯೆ ಇರುವ ಭಾರತವೂ ಸೇರಿದಂತೆ ನೂರಾರು ಅಭಿವೃದ್ದಿಶೀಲ ದೇಶಗಳು ಬಡತನ, ದಾರಿದ್ರ್ಯ, ನಿರುದ್ಯೋಗ, ಅನಾರೋಗ್ಯ, ಅನಕ್ಷರತೆಗಳಿಂದ ನರಳುವಂತಾಗಿದೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣ ಆಧಾರಿತ ಆರ್ಥಿಕ ನೀತಿಗಳಿಂದ ಈ ದೇಶಗಳನ್ನು ನವ ವಸಾಹತುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಆದುದರಿಂದ ಸಮಾಜವಾದ ಮತ್ತು ಸಾಮ್ರಾಜ್ಯಶಾಹಿಯ ನಡುವೆ, ಸಾಮ್ರಾಜ್ಯಶಾಹಿಗಳ ಹಾಗೂ ಅಭಿವೃದ್ದಿ ಹೊಂದುತ್ತಿರುವ ದೇಶಗಳ ನಡುವೆ, ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗಗಳ ನಡುವೆ, ಸಾಮ್ರಾಜ್ಯಶಾಹಿಗಳ ನಡುವೆ ಈಗಾಗಲೇ ಇರುವ ವೈರುದ್ಯಗಳು ತೀವ್ರಗೊಂಡಿವೆ. ಮಾನವ ಸಮಾಜದ ವಿಕಾಸದಲ್ಲಿ ಬಂಡವಾಳಶಾಹಿಯೇ ಕೊನೆಯದಾಗಲಾರದು. ನೂರೈವತ್ತು ವರ್ಷಗಳಿಗೂ ಹೆಚ್ಚು ಕಾಲದ ಮಾರ್ಕ್ಸ್‌ವಾದ -ಎಲ್ಲಾ ವಿಜ್ಞಾನಗಳ ವಿಜ್ಞಾನ ಇನ್ನಷ್ಟು ಶ್ರೀಮಂತವಾಗಿ ಬೆಳೆದು ಶೋಷಿತ ಜನರಿಗೆ ಮಾರ್ಗದರ್ಶನವಾಗುವ ಸಾಧ್ಯತೆಗಳು ಹೆಚ್ಚು.

 

ಪರಾಮರ್ಶನ ಗ್ರಂಥಗಳು

೧. ಜಾನ್ ರೀಡ್, ೧೯೮೭. ಜಗತ್ತನ್ನು ತಲ್ಲಣಗೊಳಿಸಿದ ೧೦ ದಿನಗಳು: ೧೯೧೯. ಕನ್ನಡಕ್ಕೆ: ಹರಿಶಂಕರ ಎಸ್.ಎನ್., ಬೆಂಗಳೂರು: ನವಕರ್ನಾಟಕ ಪ್ರಕಾಶನ

೨. ಸೊಬೊಲೆವ್ ಪಿ.ಎನ್. ಮತ್ತು ಇತರರು, ೧೯೬೪. ಅಕ್ಟೋಬರ್ ಕ್ರಾಂತಿಯ ಇತಿಹಾಸ, ಮಾಧವ ಮತ್ತು ಇತರರು(ಅನು), ಬೆಂಗಳೂರು: ನವಕರ್ನಾಟಕ ಪ್ರಕಾಶನ

೩. ಶ್ರೀಕಂಠಯ್ಯ ಎಲ್., ೧೯೫೭. ಕಮ್ಯೂನಿಸಂ, ಮೈಸೂರು: ಕನ್ನಡ ಗ್ರಂಥ ಮಾಲೆ, ಮೈಸೂರು ವಿಶ್ವವಿದ್ಯಾನಿಲಯ

೪. ಐಜಾಝ್, ಅಹಮ್ಮದ್ ಇರ್ಫಾನ್ ಹಬೀಬ್,  ಪ್ರಭಾತ್ ಪಟ್ನಾಯಕ್, ಎ ವರ್ಲ್ಡ್ ಟು ವಿನ್, ೧೯೯೯. ಕಮ್ಯುನಿಸ್ಟ್ ಘೋಷಣೆಯ ೧೫೦ನೆಯ ವರ್ಷಾಚರಣೆಯ ಪ್ರಕಟಣೆ,  ಪ್ರಕಾಶ ಕಾರಟ್(ಸಂ), ನವದೆಹಲಿ: ಲೆಫ್ಟ್ ವರ್ಡ್