ಫ್ರೆಂಚ್ ಕ್ರಾಂತಿಯಿಂದಾಗಿ ಫ್ರಾನ್ಸ್‌ನಲ್ಲಿದ್ದ ಪ್ರಾಚೀನ ಆಳ್ವಿಕೆಯು ಕೊನೆ ಗೊಂಡು, ಸ್ವಾತಂತ್ರ್ಯ, ಒಗ್ಗಟ್ಟು ಮತ್ತು ಸಮಾನತೆಗಳ ನಿಯಮದ ಮೇಲೆ ಆಧರಿತವಾದ ಹೊಸ ವ್ಯವಸ್ಥೆಯೊಂದು ಸ್ಥಾಪಿತವಾಯಿತು. ೧೬ನೆಯ ಲೂಯಿ ಆಳ್ವಿಕೆಯಲ್ಲಿ ಬೂರ್ಬನ್ ರಾಜವಂಶವು ಪತನ ಹೊಂದಿದ ನಂತರ ರಾಷ್ಟ್ರೀಯ ಸಭೆಯು ಮಾನವನ ಹಕ್ಕುಗಳ ಬಗ್ಗೆ ಒಂದು ಪ್ರಕಟಣೆ ಹೊರಡಿಸಿತು. ರಾಜ್ಯವ್ಯವಸ್ಥೆಯನ್ನು ನಿಧಾನವಾಗಿ ವಿಸ್ತರಿಸಿ ರಚಿಸ ಲಾಯಿತು. ೧೭೯೧ರ ರಾಜ್ಯ ವ್ಯವಸ್ಥೆಯ ಮೂಲಕ, ೭೪೫ ಮಂದಿ ಸದಸ್ಯರನ್ನೊಳ ಗೊಂಡ ಸಭೆಗೆ ತಮ್ಮ ೨ ವರ್ಷಗಳ ಅವಧಿಗೆ ಚುನಾಯಿತಗೊಳ್ಳಲು, ಶಾಸನಾಧಿಕಾರದ ಹಕ್ಕನ್ನು ನೀಡಲಾಯಿತು. ನ್ಯಾಯಾಂಗದ ಹಕ್ಕನ್ನು ಸಂಪೂರ್ಣವಾಗಿ ಮಾರ್ಪಡಿಸಲಾಯಿತು. ಇದುವರೆವಿಗೂ ಫ್ರಾನ್ಸ್‌ನಲ್ಲಿ ಅಪರಿಚಿತವಾದ ‘ನ್ಯಾಯದರ್ಶಿ ವ್ಯವಸ್ಥೆ’ಯನ್ನು ಪ್ರಾರಂಭಿಸ ಲಾಯಿತು. ಹಾಗಾಗಿ ಒಂದು ಹಿರಿಯ ಕೇಂದ್ರೀಕೃತ ರಾಜ್ಯ ವ್ಯವಸ್ಥೆಯನ್ನು ಹೊಂದಿದ್ದ ಫ್ರಾನ್ಸ್ ದೇಶವು ವಿಕೇಂದ್ರೀಕೃತವಾಯಿತು. ಚರ್ಚೆಗೆ ಸಂಬಂಧಿಸಿದ ಭೂಮಿಯನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಲಾಯಿತು. ಚರ್ಚೆಗೆ ಸಂಬಂಧಿಸಿದ ಇನ್ನೊಂದು ಶಾಸನದಲ್ಲಿ ಪುರೋಹಿತ ವರ್ಗದ ವ್ಯವಸ್ಥೆಯಲ್ಲಿ ನಾಗರಿಕ ಸಮುದಾಯದ ಸೇರ್ಪಡೆ ಯಾಗಿತ್ತು.

ಶಾಸಕಾಂಗ ಸಭೆಯ ಮನೋವೃತ್ತಿಯಲ್ಲಿ ರಾಜಪ್ರಭುತ್ವದ ಅಂಶಗಳಿದ್ದುದರಿಂದ ಫ್ರಾನ್ಸ್ ದೇಶಕ್ಕೆ ತಾನೊಂದು ಗಣರಾಜ್ಯವಾಗುವ ಸಾಧ್ಯತೆಗಳಿರಲಿಲ್ಲ. ಆದರೆ ಪ್ರಾಚೀನ ಆಳ್ವಿಕೆಯ ವಿರುದ್ಧ ಒಂದು ಖಚಿತವಾದ ಮತ್ತು ನಿರ್ದಿಷ್ಟವಾದ ತಿರಸ್ಕಾರವಿತ್ತು. ನಂತರದಲ್ಲಿ ಪ್ರಪಂಚಕ್ಕೆ ತಿಳಿದುಬಂದ ಸ್ವದೇಶೀಯ ರಾಜಕೀಯದ ಹಲವು ಹೊಸ ಅಂಶಗಳು ಈ ಸಂದರ್ಭದಲ್ಲಿ ಪ್ರಕಟಗೊಳ್ಳುತ್ತಿದ್ದವು. ಹಲವು ರಾಜಕೀಯ ಸಂಘಗಳ ಅಸ್ತಿತ್ವದ ಸುಳಿವೂ ಕಾಣಸಿಗುತ್ತಿತ್ತು. ಜಾಕೋಬಿಯನ್ ಹಾಗೂ ಕಾರ್ಡೆಲಿಯರ್ ಸಂಘಗಳು ಅಂಥಹವುಗಳು. ಜಾಕೋಬಿಯನ್ ಸಂಘದಲ್ಲಿ ಸಭೆಯ ಹಾಗೂ ಬೇರೆ ಸದಸ್ಯರು ಮತ್ತು ಪ್ಯಾರಿಸ್‌ನ ನಾಗರಿಕರು ಸೇರಿಕೊಂಡಿದ್ದರು. ರಾಬಿಸ್ಪಿಯರನು ಅದರ ಅತ್ಯಂತ ಪ್ರಭಾವಶಾಲೀ ನಾಯಕನಾಗಿದ್ದನು. ಕ್ರಮೇಣ ಜಾಕೋಬಿಯನ್ ಸಂಘವು ರಾಷ್ಟ್ರೀಯ ಸಭೆಯ ಪ್ರತಿಸ್ಪರ್ಧಿಯಾಯಿತು. ಇನ್ನೊಂದು ಕಡೆ ಕಾರ್ಡಿಲಿಯರ್ ಸಂಘವು ಹೆಚ್ಚಿನ ಮಟ್ಟದಲ್ಲಿ ತೀವ್ರವಾದಿಯಾಗಿದ್ದಿತು. ಡಾಂಟನ್ನನು ಇದರ ನಾಯಕನಾಗಿದ್ದನು. ಈ ಎರಡೂ ಸಂಘಗಳು ಸಾರ್ವಜನಿಕರನ್ನು ಪ್ರಭಾವಿತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವು.

ಶಾಸಕಾಂಗ ಸಭೆಯಲ್ಲಿ ಗಿರಾಂಡಿಸ್ಟರೆಂಬ ಸದಸ್ಯರ ಗುಂಪೊಂದಿತ್ತು. ಜಾಕೋಬಿಯನ್ನರು ಹಾಗೂ ಗಿರೋಂಡಿಸ್ಟರದು ಸಂಪೂರ್ಣವಾಗಿ ಬೇರೆಯೇ ಗುಂಪುಗಳಾಗಿದ್ದಿತು ಮತ್ತು ಒಂದಕ್ಕೊಂದು ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದವು. ಈ ಸಂದರ್ಭದಲ್ಲಿ ಹಲವು ಹೊಸ ಗುಂಪುಗಳು ಸೇರಿಕೊಂಡು, ಸಂಘರ್ಷಪೂರ್ಣ ನಾಟಕದ ತಮ್ಮ ಪಾತ್ರಗಳನ್ನು ನಿಭಾಯಿಸಲು ತಯಾರಾಗಿದ್ದವು. ಇದರಿಂದ ವಾತಾವರಣದಲ್ಲಿ ಮಿಂಚಿನ ಅಂಶಗಳು ಸೇರ್ಪಡೆಯಾದವು. ಜನಸಮುದಾಯವು ರಾಜನನ್ನು ಸೆರೆಗೆ ದಬ್ಬಿದಾಗ ಫ್ರಾನ್ಸಿನಲ್ಲಿ ಬಿಸಿ ವಾತಾವರಣ ನಿರ್ಮಾಣವಾಯಿತು. ಇದು ಕುಖ್ಯಾತ ಸೆಪ್ಟೆಂಬರ್ ಕಗ್ಗೊಲೆಗೂ ಕಾರಣವಾಯಿತು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮರಾತ್‌ನಿಂದ ಪ್ರಚೋದನೆಗೊಂಡ ಸಮುದಾಯದ ಹಿಂಸಾತ್ಮಕ ಗುಂಪುಗಳು ದುರುಪಯೋಗಪಡಿಸಿಕೊಂಡವು.

ರಾಷ್ಟ್ರೀಯ ಒಕ್ಕೂಟವೇ ಮೂರನೆಯ ಕ್ರಾಂತಿಕಾರಿ ಸಂಘಟನೆ. ಇದು ೧೭೯೨ ರಿಂದ ೧೭೯೫ ರವರೆಗೂ ಅಸ್ತಿತ್ವದಲ್ಲಿತ್ತು. ೧೬ನೆಯ ಲೂಯಿಯನ್ನು ಹೊರದೂಡಿದ ನಂತರ ರಾಜಪ್ರಭುತ್ವದ ರದ್ಧತಿಯಿಂದ ಅನಿವಾರ್ಯವಾದ ಹೊಸ ಸಂವಿಧಾನದ ರಚನೆಯನ್ನು ಈ ಒಕ್ಕೂಟವು ಪ್ರೇರೇಪಿಸಿತು. ಜಾಕೋಬಿಯನ್ನರು ಹಾಗೂ ಗಿರೋಂಡಿಸ್ಟರ ನಡುವಿನ ಸಂಘರ್ಷದಿಂದ ೧೬ನೆಯ ಲೂಯಿಯನ್ನು ವಿಚಾರಣೆಗೆ ಗುರಿಪಡಿಸಿ ಮರಣದಂಡನೆ ವಿಧಿಸಲಾಯಿತು. ಈ ಮರಣ ದಂಡನೆಯ ತಕ್ಷಣದ ಪರಿಣಾಮವೆಂದರೆ ಶತ್ರುಗಳ ಸಂಖ್ಯೆ ಹೆಚ್ಚಿತು. ಜಾಕೋಬಿಯನ್ನರನ್ನು ಬೆಂಬಲಿಸುತ್ತಿದ್ದ ಜನಸಮುದಾಯವು ಈ ಸಂಘರ್ಷದಲ್ಲಿ ಸೇರಿಕೊಂಡು ಗಿರೋಂಡಿಸ್ಟರ ವಿರುದ್ಧದ ದಂಗೆಯನ್ನು ಸಂಘಟಿಸಿತು. ಈ ಸಂದಿಗ್ಧ ಪರಿಸ್ಥಿತಿಯನ್ನೆದುರಿಸಲು ಎಲ್ಲ ಅಡೆತಡೆಗಳನ್ನು ಎದುರಿಸಿ, ಫ್ರಾನ್ಸ್‌ನ ಅಭಿವೃದ್ದಿಗಾಗಿ ಒಂದು ಹಂಗಾಮಿ ಸರಕಾರವನ್ನು ರಚಿಸಲಾಯಿತು. ಆದರೆ ಈ ಸರಕಾರವು ಮುಂದೆ ಯಾವ ದೇಶವೂ ಕಾಣಲಾಗದಂತಹ ಪರಿಹಾಸ ಮಾದರಿಯ ಒಂದು ಭೀತಿಯ ಸಾಮ್ರಾಜ್ಯವನ್ನು ಅವಿಷ್ಕರಿಸಿತು.

ಈ ಸರಕಾರವು ಸಾರ್ವಜನಿಕ ಭದ್ರತೆಗಾಗಿ ಒಂದು ಸಮಿತಿ, ಒಂದು ಕ್ರಾಂತಿಕಾರಿ ನ್ಯಾಯಮಂಡಳಿ ಹಾಗೂ ಶಂಕಿತರಿಗಾಗಿ ಕಾನೂನುಗಳನ್ನು ರಚಿಸಿತು. ಲಿಯೋನ್ಸ್ ನಗರ ವನ್ನು ನಾಶಪಡಿಸಬೇಕು ಎನ್ನುವ ತೀರ್ಪನ್ನು ಈ ಸಭೆಯು ನೀಡಿತು. ವೆಂಡೀ ನಗರದ ಮೇಲೆ ಭೀಕರ ಕ್ರೌರ್ಯವನ್ನು ಎಸಗಲಾಯಿತು. ಕ್ರಾಂತಿಕಾರಿ ನ್ಯಾಯಪೀಠವು ಸಾವಿರಾರು ಜನರ ಶಿರಚ್ಛೇದ ಮಾಡಿತು. ಹೀಗೆ ಬಲಿಯಾದವರಲ್ಲಿ ಮದಾಮ್ ರೋಲಾನ್ ಸಹ ಒಬ್ಬನು. ‘‘ಭೀತಿಯ ಆಳ್ವಿಕೆ’’ಯ ನೇತಾರರಿಗೆ ದುರಂತ ಸಾವು ಕಾದಿತ್ತು. ರಾಬಿಸ್ಪಿಯರ್‌ನ್ನು ೧೭೯೪ರಲ್ಲಿ ಗಲ್ಲಿಗೇರಿಸಿದ ನಂತರ ಈ ಭೀತಿಯು ಅನುಷಂಗಿಕವಾಗಿ ಕೊನೆಗೊಂಡಿತು.

ಫ್ರಾನ್ಸ್ ಈಗ ನಿರಾಳವಾಗಿ ಉಸಿರಾಡಿತು. ಭೀತಿಯ ವಾತಾವರಣವು ನಿಧಾನವಾಗಿ ಕೊನೆಗೊಂಡು ಒಂದು ಸೌಮ್ಯ ಸಾಮ್ರಾಜ್ಯವು ಸ್ಥಾಪಿತವಾಯಿತು. ೧೮೯೫ರಲ್ಲಿ ಸಭೆಯು ಒಂದು ಹೊಸ ಸಂವಿಧಾನವನ್ನು ರೂಪಿಸಿತು. ಐದರು ಸದಸ್ಯರನ್ನು ಒಳಗೊಂಡ ವ್ಯವಸ್ಥಾಪಕ ಮಂಡಳಿಯ (ಡೈರೆಕ್ಟರಿ) ಕಾರ್ಯನಿರ್ವಾಹಕ ಅಧಿಕಾರವನ್ನು ನಡೆಸಬೇಕೆಂದು ತೀರ್ಮಾನಿಸಲಾಯಿತು. ಆದರೆ ೧೭೯೫ರ ಅಕ್ಟೋಬರಿನಲ್ಲಿ ಈ ಸಭೆಯು ಬರಬಾಸ್ತಾಗಿದೆ ಯೆಂದು ಸ್ವಯಂ ಘೋಷಿಸಿಕೊಂಡಿತು. ಈ ಸಭೆಯು ರಾಜಪ್ರಭುತ್ವದ ಶ್ರೇಷ್ಟನಾಡಿನಲ್ಲಿ ಗಣರಾಜ್ಯವನ್ನು ಘೋಷಿಸಿತು. ಐದು ಸಂವಿಧಾನಗಳಿಗಾಗಿ ಒಪ್ಪಿಗೆ ನೀಡಿತು, ರಾಜನನ್ನು ಗಲ್ಲಿಗೇರಿಸಿತು ಹಾಗೂ ಹಿಂಸೆಯ ಸಾಮ್ರಾಜ್ಯವನ್ನು ನಡೆಸಿತು. ಶಾಂತಿಯುತ ಬೆಳವಣಿಗೆಯ ಹಾದಿಯು ಸುಗಮವಾಗುವಂತೆ ಶ್ರಮಿಸಿತು. ನಿಯಮಗಳನ್ನು ಕಾಯಿದೆಯಾಗಿ ಪರಿವರ್ತಿಸಲು ಬೇಕಾಗುವ ಪೂರ್ವಭಾವಿಯಾದ ಕೆಲಸ ಕೈಗೆತ್ತಿಕೊಳ್ಳುವುದರ ಮೂಲಕ ಒಂದು ಭದ್ರವಾದ ಅಡಿಪಾಯವನ್ನು ಹಾಕಿತು. ಈ ಸಾಧನೆಯನ್ನೇ ಮುಂದೆ ನೆಪೋಲಿಯನ್ನನು ಪೂರ್ಣಗೊಳಿಸಿ ಪ್ರಖ್ಯಾತನಾದನು.

 

ಇದರ ವ್ಯವಸ್ಥಾಪಕ ಮಂಡಲಿ ೧೭೯೫ನೆಯ ಅಕ್ಟೋಬರ್‌ನಿಂದ ೧೭೯೯ನೇ ನವೆಂಬರ್ ವರೆಗೂ ಊರ್ಜಿತಗೊಂಡಿತು. ಗಣರಾಜ್ಯದ ಕಾರ್ಯನಿರ್ವಾಹಕ ಶಾಖೆಯಿಂದ ತನ್ನ ಹೆಸರನ್ನು ಆಯ್ದುಕೊಂಡಿತು. ನಿಲ್ಲದೆ ಮುಂದುವರೆದ ಯುದ್ಧವೇ ಇದರ ಮೊದಲ ದೊಡ್ಡ ಸಮಸ್ಯೆಯಾಯಿತು. ಗಣರಾಜ್ಯದ ವಿರುದ್ಧ ಇಂಗ್ಲೆಂಡ್, ಆಸ್ಟ್ರಿಯ ಮತ್ತು ಕಿರಿಯ ಜರ್ಮನ್ ರಾಜ್ಯಗಳು ಯುದ್ಧದಲ್ಲಿ ತೊಡಗಿದ್ದವು. ಹಾಗಾಗಿ ಈ ವ್ಯವಸ್ಥಾಪಕ ಮಂಡಲಿಗೆ ಯುದ್ಧವನ್ನು ಮುಂದುವರೆಸುವುದೇ ಒಂದು ಕರ್ತವ್ಯವಾಯಿತು. ಇಟಲಿಯ ವಿರುದ್ಧದ ಕಾರ್ಯಾಚರಣೆಯ ಜವಾಬ್ದಾರಿಯನ್ನು ಜನರಲ್ ಬೋನಾಪಾರ್ಟನೊಬ್ಬನೆ ತೆಗೆದುಕೊಂಡನು. ಈ ಹಂತದಲ್ಲಿ ನೆಪೋಲಿಯನ್ ಹಾಗೂ ಆತನ ಅಧಿಕಾರದ ಉತ್ಕರ್ಷವನ್ನು ಗುರುತಿಸಬಹುದು. ಈತ ಹುಟ್ಟಿದ್ದು ಕೊರ್ಸಿಕಾದ ಅಜಾಚಿಯಾದಲ್ಲಿ. ಇಂಗೋರ್ ವಾಲ್ಟೇರ್ ಹಾಗೂ ರೂಸೋರವರ ಬರಹಗಳು ಯುವ ನೆಪೋಲಿಯನ್‌ನ ಮೇಲೆ ಬಹಳಷ್ಟು ಪ್ರಭಾವ ಬೀರಿದವು. ಇಟಲಿಯ ವಿರುದ್ಧ ಯುದ್ಧ ನಡೆಸುತ್ತಿದ್ದ ಫ್ರೆಂಚ್ ಸೈನ್ಯದ ನಾಯಕತ್ವವನ್ನು ಇವನಿಗೆ ವಹಿಸಲಾಯಿತು.

೧೭೯೬೯೭ ಇಟಲಿಯ ದಂಡಯಾತ್ರೆ

ಸೈನಿಕ ಸಮುದಾಯದ ದೃಷ್ಟಿಯಲ್ಲಿ ನೆಪೋಲಿಯನ್‌ನ ಇಟಲಿಯ ದಂಡಯಾತ್ರೆಯು ಇಂದಿಗೂ ಯುದ್ಧ ಕಲೆಯಲ್ಲಿ ಒಂದು ಉತ್ಕೃಷ್ಟ ಮಾದರಿಯೆಂದು ಪರಿಗಣಿಸಲ್ಪಟ್ಟಿದೆ. ಸುಮಾರು ಒಂದು ವರ್ಷದವರೆಗೂ ನಡೆದ ಈ ಯುದ್ಧವನ್ನು ‘‘ಅವನು ಬಂದ- ಅವನು ನೋಡಿದ- ಅವನು ಗೆದ್ದ’’ ಎಂಬ ನಾಣ್ಣುಡಿಯ ಮೂಲಕ ಸಂಕ್ಷೇಪವಾಗಿ ವಿವರಿಸಬಹುದು. ಅವನು ಸಾರ್ಡೀನಿಯಾ ಹಾಗೂ ಆಸ್ಟ್ರಿಯಾದ ಸಂಯುಕ್ತ ಸೈನ್ಯವನ್ನು ಎದುರಿಸಿ ಹೋರಾಡಿದನು. ಕೊನೆಗೆ ಸಾರ್ಡೀನಿಯಾದ ಸೈನ್ಯವು ಸಾವಾಯ್ ಮತ್ತು ನೀಸ್ ಪ್ರಾಂತ್ಯಗಳನ್ನು ಬಿಟ್ಟುಕೊಡುವುದರ ಮೂಲಕ ಶಾಂತಿಯ ಪ್ರಸ್ತಾಪ ಮಾಡಿತು. ನಂತರ ಬೋನಾಪಾರ್ಟನು ತನ್ನ ಗಮನವನ್ನು ಲಂಬಾರ್ಡಿಯನ್ನು ಹಿಡಿತದಲ್ಲಿಟ್ಟು ಕೊಂಡಿದ್ದ ಆಸ್ಟ್ರಿಯಾದ ಸೈನ್ಯದ ಕಡೆ ಹರಿಸಿದನು. ಆಗ ನಡೆಸಿದ ದಾಳಿಯಿಂದ ಮಿಲಾನ್‌ಗೆ ಅವನು ವಿಜಯದ ದಾಪುಗಾಲು ಹಾಕಿದನು. ಆಸ್ಟ್ರಿಯನ್ನರು ಅಡಗಿಕೊಂಡಿದ್ದ ಮಾಂಡುವಾ ಕೋಟೆಯನ್ನು ಆಕ್ರಮಿಸಿದನು ಹಾಗೂ ಅವರನ್ನು ನಾಲ್ಕು ಬಾರಿ ಸೋಲಿಸಿದನು.

ರಿವೋಲಿಯಲ್ಲಿ ಮತ್ತೊಂದು ಹಾತಾಶೆಯ ಕದನ ನಡೆಯಿತು. ಬೋನಾಪಾರ್ಟಿಯಿಂದ ಆಸ್ಟ್ರಿಯನ್ನರು ಅವಮಾನಕರ ಸೋಲನ್ನುಂಡು ನಿರ್ನಾಮಗೊಂಡರು. ಹೀಗೆ ಅವನ ಅದೃಷ್ಟವು ದಿಗಂತದಲ್ಲಿ ತನ್ನೆಲ್ಲ ಪ್ರಕಾಶದೊಂದಿಗೆ ಮಿನುಗಿತು. ಈ ದಂಡಯಾತ್ರೆಯ ನಂತರ ಅವನು ರಾಜ್ಯಗಳ ಸೃಷ್ಟಿಕರ್ತ ಹಾಗೂ ವಿನಾಶಕ ಎಂದೆನಿಸಿಕೊಂಡನು. ವೆನಿಸ್ ನಗರದ ಪ್ರಖ್ಯಾತ ಗಣರಾಜ್ಯವನ್ನು ಕೆಳಗೆ ಬೀಳಿಸಿದುದೇ ಆತನ ಅತ್ಯಂತ ಕುಪ್ರಸಿದ್ಧ ಕೆಲಸವೆಂದು ಪರಿಗಣಿಸಲಾಗಿದೆ. ಯೂರೋಪಿನಲ್ಲೇ ಅತ್ಯಂತ ಹಳೆಯ ಹಾಗೂ ಹೆಮ್ಮೆಯ ರಾಜ್ಯಗಳಲ್ಲೊಂದಾದ ವೆನಿಸ್ ನಗರವನ್ನು ಗೆದ್ದುಕೊಂಡಿದ್ದಲ್ಲದೆ, ಅದನ್ನು ರಾಜಕೀಯ ಕೌಶಲ್ಯದಾಟದಲ್ಲಿ ಒಂದು ದಾಳವನ್ನಾಗಿ ಉಪಯೋಗಿಸಿಕೊಂಡನು. ೧೭೯೭ರ ಏಪ್ರಿಲ್‌ನಲ್ಲಿ ಆಸ್ಟ್ರಿಯಾವು ‘ಕ್ಯಾಂಪೊಪೋರ್ಮಿಯೋದ’ದ ಕೊನೆಯ ಶಾಂತಿ ಒಪ್ಪಂದಕ್ಕೆ ಅಂದರೆ ಲಿಯೋಬಾನ್‌ನ ಶಾಂತಿಗೆ ಸಮ್ಮತಿಸಿತು.

ಈ ಒಪ್ಪಂದದ ಮೂಲಕ ಆಸ್ಟ್ರಿಯಾವು ಬೆಲ್ಜಿಯಂನಲ್ಲಿದ್ದ ತನ್ನ ಸ್ವತ್ತುಗಳನ್ನು ಫ್ರಾನ್ಸ್‌ಗೆ ಬಿಟ್ಟುಕೊಟ್ಟಿತು ಹಾಗೂ ರೈನ್ ನದಿಯ ಎಡದಂಡೆಯನ್ನು ತ್ಯಜಿಸಿತು. ಲಂಬಾರ್ಡಿಯಾದ ತನ್ನ ಹಕ್ಕುಗಳನ್ನು ವರ್ಜಿಸಿತು. ಬೋನಾಪಾರ್ಟಿಯು ಇಟಲಿಯನ್ನು ವಶಪಡಿಸಿಕೊಂಡಿದ್ದಷ್ಟೇ ಅಲ್ಲದೆ, ಲಾಭದ ಗಳಿಕೆಯಿಂದ ಅದನ್ನು ಕೊಳ್ಳೆ ಹೊಡೆದನು. ವೊಡೆನಾದ ಡ್ಯೂಕನನ್ನು ಹತ್ತು, ಜಿನಿವಾದ ಗಣರಾಜ್ಯವನ್ನು ಹದಿನೈದು ಹಾಗೂ ಪೋಪನನ್ನು ಇಪ್ಪತ್ತು ಮಿಲಿಯ ಫ್ರಾಂಕ್ ಕೊಡುವಂತೆ ಒತ್ತಾಯ ಹೇರಿದನು. ಇಟಲಿಯ ಕಲಾ ಸಂಪತ್ತನ್ನು ಸೂರೆಹೊಡೆದನು. ಇಟಲಿಯ ದಂಡಯಾತ್ರೆಯಲ್ಲಿನ ಈ ಕ್ಷಿಪ್ರ ‘ಜ್ಞಾನಾರ್ಜನೆ’ಯ ನಂತರ ಬೋನಾಪಾರ್ಟಿಯು ಪ್ಯಾರಿಸ್‌ಗೆ ಹಿಂದಿರುಗಿದನು.

ಕ್ಯಾಂಪೋಫೋರ್ಮಿಯಾದ ಶಾಂತಿ ಒಪ್ಪಂದದ ನಂತರ ಇಂಗ್ಲೆಂಡ್ ಮಾತ್ರವೆ ಯುದ್ಧದಲ್ಲಿ ಮುಂದುವರೆಯಿತು.

ತನ್ನ ಸರ್ಕಾರದಿಂದ ಇಂಗ್ಲೆಂಡ್‌ನ ರಾಜಪ್ರಭುತ್ವವನ್ನು ನಾಶಗೊಳಿಸಬೇಕು. ಅಥವಾ ಚುರುಕಾಗಿರುವ ಆ ದ್ವೀಪವಾಸಿಗಳಿಂದಲೇ ನಾಶ ಹೊಂದಬೇಕು. ನಮ್ಮ ಶಕ್ತಿಯನ್ನು ನೌಕಾಬಲದ ಮೇಲೆ ಕೇಂದ್ರೀಕರಿಸಿ, ಇಂಗ್ಲೆಂಡನ್ನು ನಿರ್ನಾಮಗೊಳಿಸಬೇಕು. ಇದಾದರೆ ಇಡೀ ಯೂರೋಪ್ ನಮ್ಮ ಕಾಲಿನ ಬಳಿ ಇರುತ್ತದೆ

ಎಂಬುದು ಬೋನಾಪಾರ್ಟಿಯ ಅಭಿಪ್ರಾಯವಾಗಿತ್ತು. ನಂತರ ವ್ಯವಸ್ಥಾಪಕ ಮಂಡಳಿಯು ಬೋನಾಪಾರ್ಟಿಯನ್ನು ಇಂಗ್ಲೆಂಡ್‌ನ ಸೈನ್ಯಕ್ಕೆ ದಂಡನಾಯಕನನ್ನಾಗಿ ಆರಿಸಿತು. ಅವನು ಈಜಿಪ್ಟಿನ ಮೇಲೆ ದಾಳಿ ನಡೆಸಲು ನಿರ್ಧರಿಸಿ ದನು. ಅದನ್ನೊಮ್ಮೆ ಆಕ್ರಮಿಸಿಕೊಂಡರೆ ಭಾರತದ ವಿರುದ್ಧದ ದಂಡಯಾತ್ರೆಗೆ ಅನುಕೂಲ ವಾಗುವಂತಹ ಮುಕ್ತದೇಶವೊಂದರ ಅವಕಾಶ ದೊರೆಯುವುದು ಎನ್ನುವ ಅಭಿಪ್ರಾಯವಿತ್ತು.

ಆದರೆ ಈ ದಂಡಯಾತ್ರೆಯಲ್ಲಿ ವಿಪರೀತವಾದ ಅಪಾಯಗಳಿದ್ದವು. ಮೆಡಿಟರೇನಿಯನ್ ಪ್ರದೇಶದಲ್ಲಿ ಸೇನಾಧಿಪತಿ ನೆಲ್ಸನ್ನನು ಬಲಿಷ್ಟವಾದ ಇಂಗ್ಲೀಷ್ ನೌಕಾಪಡೆಯೊಂದಿಗೆ ತಯಾರಿದ್ದನು. ಟರ್ಕಿಯ ಸುಲ್ತಾನನು ಈಜಿಪ್ಟ್‌ನ ನಾಮಮಾತ್ರ ರಾಜನಾಗಿದ್ದನು. ಅಲೆಗ್ಸಾಂಡ್ರಿಯಾವನ್ನು ಆಕ್ರಮಿಸಿಕೊಂಡ ನಂತರ ಫ್ರೆಂಚ್ ಸೈನ್ಯವು ಕೈರೊಗೆ ಹೊರಟಿತು. ಮರಳುಗಾಡಿನ ಸುಡುನೆಲದ ಅಪಾಯಕಾರಿ ಪ್ರಯಾಣಕ್ಕೆ ಒಂದು ಉತ್ತೇಜಕ-ಹಿತಕರ ಅಂಶವಾಗಿ ಈ ಸೈನ್ಯಕ್ಕೆ ಮಾಮೆಲುಕ್‌ರ ಸಂಪೂರ್ಣ ಸೋಲು ನೆರವಾಯಿತು. ೧೭೯೮ರಲ್ಲಿ ನಡೆದ ‘ಪಿರಮಿಡ್ಡುಗಳ ಯುದ್ಧ’’ದಿಂದ ಕೈರೋ ಮೇಲೆ ಫ್ರೆಂಚರು ಹಿಡಿತ ಸಾಧಿಸಿದರು. ಆಗಸ್ಟಿನಲ್ಲಿ ನೆಲ್ಸನ್ನನು ಅಬುಕಿರ್ ಕೊಲ್ಲಿಯ ಬಂದರಿನಲ್ಲಿ ತಂಗಿದ್ದ ಫ್ರೆಂಚ್ ನೌಕಾಪಡೆಗೆ ಅಚ್ಚರಿಯ ಪೆಟ್ಟು ನೀಡಿದನು. ಈ ನೈಲ್ ಯುದ್ಧವು ಈ ಇಡೀ ಅವಧಿಯಲ್ಲೇ ನಡೆದ ಅತ್ಯಂತ ನಿರ್ಣಾಯಕ ಸಾಗರ ಯುದ್ಧಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಇದರಿಂದಲೇ ಬೋನಾಪಾರ್ಟಿಗೆ ಬ್ರಿಟೀಷರ ನೌಕಾಶಕ್ತಿಯ ಮೊದಲ ಪರಿಚಯವಾಯಿತು.

ಸಿರಿಯಾ ಮೇಲಿನ ದಂಡಯಾತ್ರೆ

ಟರ್ಕಿಯ ಸುಲ್ತಾನನು ತನ್ನ ಮೇಲೆ ಯುದ್ಧವನ್ನು ಸಾರಿದ್ದಾನೆಂದು ತಿಳಿದುಬಂದ ಕೂಡಲೇ ಬೋನಾಪಾರ್ಟಿಯು ೧೭೯೯ರಲ್ಲಿ ಸಿರಿಯಾವನ್ನು ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡನು. ಗಾಜಾ ಮತ್ತು ಟಫಾ ಕೋಟೆಗಳು ಕೈವಶವಾದವು. ಆದರೆ ಬ್ರಿಟೀಷರ ನೌಕಾಪಡೆಯ ಬಲದ ಮುಂದೆ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಲಾಗಲಿಲ್ಲ. ಹಲವು ವಾರಗಳ ನಂತರ ಅವನು ಅಬುಕಿರ್ ಕದನದಲ್ಲಿ ವಿಜಯಿಯಾದನು. ಈಜಿಪ್ಟಿನ ದಂಡಯಾತ್ರೆಯ ನಂತರ ಅವನು ಪ್ಯಾರಿಸ್ಸಿಗೆ ಹಿಂತಿರುಗಲು ನಿರ್ಧರಿಸಿದನು. ಪ್ಯಾರಿಸ್ ನಲ್ಲಿದ್ದ ಸರ್ಕಾರವು ಅತ್ಯಂತ ಅದಕ್ಷ ಹಾಗೂ ಭ್ರಷ್ಟಾಚಾರದಿಂದ ಕೂಡಿದ್ದನ್ನು ಕಂಡನು. ಹಿಂದಿದ್ದ ಸರ್ಕಾರವನ್ನು ‘‘ವಿಪ್ಲವಕಾರಿ ಸರ್ಕಾರ ಬದಲಾವಣೆ’’ಯ ಮೂಲಕ ಸೋಲಿಸಲಾಗಿತ್ತು.

ಭಾನುವಾರದಂದು, ೧೯ನೇ ಬುಮೈರ್ ಹಿರಿಯರ ಸಮಿತಿ ಹಾಗೂ ೫೦೦ ಸದಸ್ಯರ ಸಮಿತಿಯು ಸೇಂಟ್ ಕ್ಲಾಡ್‌ನ ಅರಮನೆಯಲ್ಲಿ ಸಭೆ ಸೇರಿತು. ಅಲ್ಲಿ ತೆಗೆದುಕೊಂಡ ತೀರ್ಮಾನಗಳೆಂದರೆ, ನಿರ್ದೇಶಕ ಮಂಡಲಿಯನ್ನು ಬರಖಾಸ್ತುಗೊಳಿಸುವುದು, ಪ್ಯಾರಿಸ್‌ನಲ್ಲಿ ರಾಯಭಾರಿ ಕಛೇರಿಯನ್ನು ಸ್ಥಾಪಿಸುವುದು. ಸಿಯೀಸ್, ಡ್ಯೂಕೋಸ್ ಮತ್ತು ಬೋನಾಪಾರ್ಟಿ ಯನ್ನು ಪ್ರತಿನಿಧಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ಗಣರಾಜ್ಯಕ್ಕೆ ನಿಷ್ಟೆ, ಸ್ವಾತಂತ್ರ್ಯಕ್ಕೆ ಆದ್ಯತೆ ಮತ್ತು ಪ್ರತಿನಿಧಿ ಪದ್ಧತಿಯ ಸರ್ಕಾರದ ಸ್ಥಾಪನೆಯೇ ಈ ಮೂವರು ನೀಡಿದ ಆಶ್ವಾಸನೆಯಾಗಿತ್ತು.

ಈ ರೀತಿಯಿಂದ ಒಬ್ಬ ಪ್ರಖ್ಯಾತ ಯುವ ಸೇನಾನಿಯ ‘ವಿಪ್ಲವಕಾರಿ ಸರ್ಕಾರ ಬದಲಾವಣೆಯ’’ ಮೂಲಕ ಅಧಿಕಾರವನ್ನು ಪಡೆದುಕೊಂಡರೂ, ಅದನ್ನು ಬಹಳ ಬೇಗನೆ ಕಳೆದುಕೊಳ್ಳುವಂತಾಯಿತು. ಕ್ರಾಂತಿಯ ನಂತರದ ನಾಲ್ಕನೆಯದಾದ ೧೭೯೯ರ ಸಂವಿಧಾನವು ರಚಿತವಾಗಿ ಕಾರ್ಯರೂಪಕ್ಕೆ ಬಂದಿತು. ಕಾರ್ಯನಿರ್ವಾಹಕ ಅಧಿಕಾರವನ್ನು ಮೂರು ಪ್ರತಿನಿಧಿಗಳಿಗೆ ವಹಿಸಲಾಯಿತು. ಇದರಲ್ಲಿ ಬೋನಾಪಾರ್ಟಿಯೇ ಮೊದಲಿಗ, ಆತನ ಪದವಿಯು ಬಹು ಉನ್ನತ ಮಟ್ಟದಲ್ಲಿದ್ದು, ಅದು ಬಹುಪಾಲು ದೈವಿಕ ಹಕ್ಕಿನಿಂದ ಕೂಡಿದ ರಾಜಪ್ರಭುತ್ವವನ್ನೇ ಹೋಲುತ್ತಿತ್ತು.

ಹೀಗೆ ತನ್ನ ದೇಶವನ್ನು ಓರಣವಾಗಿಟ್ಟುಕೊಂಡ ನಂತರ, ಆತನು ‘‘ಫ್ರಾನ್ಸ್‌ನ ಹೊರಶತ್ರುಗಳ ಮೇಲೆ ಗಮನ ಹರಿಸಿದನು. ಆಸ್ಟ್ರೀಯ, ಇಂಗ್ಲೆಂಡ್ ಹಾಗೂ ರಷ್ಯಗಳನ್ನು ಒಳಗೊಂಡ ಒಂದು ಒಕ್ಕೂಟವು ರಚನೆಗೊಂಡಿತು. ಆತನು ೧೮೦೦ರಲ್ಲಿ ಎರಡನೆಯ ಇಟಲಿ ದಂಡಯಾತ್ರೆಯ ನೇತೃತ್ವ ವಹಿಸಿದನು. ನೆಪೋಲಿಯನ್ ಹಾಗೂ ಆತನ ದಂಡನಾಯಕ ಮೋರಿಯೋ ಆಸ್ಟ್ರಿಯನ್‌ರನ್ನು ಸೋಲಿಸಿದರು. ಆಸ್ಟ್ರಿಯನ್ನರು ಉತ್ತರ ಇಟಲಿಯ ಭಾಗಗಳನ್ನು ಫ್ರೆಂಚರಿಗೆ ಬಿಟ್ಟುಕೊಡುವುದರ ಮೂಲಕ ಯುದ್ಧ ವಿರಾಮವನ್ನು ಘೋಷಿಸಿದರು. ೧೯೦೧ರಲ್ಲಿ ಆಸ್ಟ್ರಿಯನ್ನರು ಲೂನೆವಿಲ್ಲೆ ಒಪ್ಪಂದಕ್ಕೆ ಸಹಿಹಾಕಿ ಶಾಂತಿಯ ಪ್ರಸ್ತಾಪ ಮಾಡಿದರು.

ಈಗ ಫ್ರಾನ್ಸ್ ದೇಶವು ಕೇವಲ ಇಂಗ್ಲೆಂಡ್‌ನ ವಿರುದ್ಧ ಮಾತ್ರ ಯುದ್ಧ ಮುಂದು ವರೆಸಿತು. ಫ್ರೆಂಚ್ ನೌಕಾಪಡೆಯನ್ನು ಇಂಗ್ಲೆಂಡ್ ಸೋಲಿಸಿತಲ್ಲದೆ, ಅದರ ಬಹುತೇಕ ವಸಾಹತುಗಳನ್ನು ವಶಪಡಿಸಿಕೊಂಡಿತು. ಕೊನೆಗೆ ಅದು ಶಾಂತಿ ಒಪ್ಪಂದ ಕುರಿತು ಸಮಾಲೋಚನೆ ನಡೆಸಲು ಮುಂದೆ ಬಂದಿತು. ೧೯೦೨ರಲ್ಲಿ ಅಮೀನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಫ್ರಾನ್ಸ್‌ನ ಗಣರಾಜ್ಯದ ಅಸ್ತಿತ್ವವನ್ನು ಒಪ್ಪಿಕೊಳ್ಳುವುದರೊಂದಿಗೆ ಇಂಗ್ಲೆಂಡ್ ಎಲ್ಲಾ ಫ್ರೆಂಚ್ ವಸಾಹತುಗಳನ್ನು ಪುನರ್ ಸ್ಥಾಪಿಸಿತು.

ಕ್ರಾಂತಿ ಸಾಧನೆಯ ಬಹುಪಾಲು ಅಂಶವನ್ನು ಪ್ರತಿನಿಧಿ ಹಾಗೂ ರಾಜಪ್ರಭುತ್ವಗಳು ಕಾಪಾಡಲು ಪ್ರಯತ್ನಿಸಿದವು. ‘ಪ್ರತಿಭೆಗೆ ತೆರೆದ ವೃತ್ತಿ’ ಅನ್ನುವ ತತ್ತ್ವಕ್ಕೆ ಬೋನಾಪಾರ್ಟಿಯು ಬದ್ಧನಾಗಿದ್ದನು. ಅವನ ಆಳ್ವಿಕೆಯಲ್ಲಿ ಯಾವುದೇ ರೀತಿಯ ಕೃತ್ರಿಮ ಅಡೆತಡೆಗಳಿರಲಿಲ್ಲ. ಯಾರೇ ಆಗಲಿ, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉನ್ನತ ಸ್ಥಾನಗಳಿಗೆ ಬರಬಹುದಾಗಿತ್ತು. ಪ್ರಭುತ್ವಕ್ಕೆ ಎಷ್ಟು ವಿಧೇಯತೆಯಿಂದ ಇದ್ದಾನೆ ಎನ್ನುವ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಸೇವೆಯು ಒಪ್ಪಿತವಾಗುತ್ತಿತ್ತು. ಮೊರೆಂಗೊ ತರುವಾಯ ಮತ್ತು ಶಾಂತಿಸ್ಥಾಪನೆಯ ಸಣ್ಣ ಅವಧಿಯಲ್ಲಿ ಬೋನಾಪಾರ್ಟಿಯು ಪ್ರತಿನಿಧಿಯಾಗಿ ನಡೆಸಿದ ಚಟುವಟಿಕೆಗಳು ನಿರಂತರ ವಾಗಿಯೂ, ದೂರದೃಷ್ಟಿಯುಳ್ಳದ್ದಾಗಿಯೂ ಇದ್ದವು. ಅವನು ಧಾರ್ಮಿಕ ಭಿನ್ನಾಭಿಪ್ರಾಯ ಗಳನ್ನು ನಿವಾರಿಸುವಲ್ಲಿ ತೊಡಗಿಸಿಕೊಂಡಿದ್ದನು. ವಲಸೆ ಬಂದವರ ವಿರುದ್ಧವಿದ್ದ ಕಾನೂನುಗಳನ್ನು ಸಡಿಲಗೊಳಿಸಿದನು. ಒಟ್ಟಿನಲ್ಲಿ ಆತನು ಸ್ವತಃ ಯಾವುದೇ ಧಾರ್ಮಿಕ ಭಾವನೆಗಳಿಲ್ಲದೆ, ಕೇವಲ ರಾಜಕೀಯ ಭಾವನೆಗಳಿಗೆ ಮಾತ್ರ ಸ್ಪಂದಿಸುತ್ತಿದ್ದನು. ಆತನೇ ಹೇಳಿಕೊಳ್ಳುವಂತೆ ‘‘ಈಜಿಪ್ಟಿನಲ್ಲಿ ಮಹಮ್ಮದೀಯನಾಗಿಯೂ ಫ್ರಾನ್ಸ್‌ನಲ್ಲಿ ಕ್ಯಾಥೋಲಿಕ್ ನಾಗಿಯೂ’’ ಇರುತ್ತಿದ್ದನು.

ಕ್ಯಾಥೊಲಿಕ್ ಧರ್ಮವನ್ನು ಫ್ರೆಂಚ್ ಸಮುದಾಯದ ಬಹುಭಾಗವು ಒಪ್ಪಿಕೊಂಡಿತ್ತು ಹಾಗೂ ಮುಕ್ತ ಪ್ರಚಾರಕ್ಕೂ ಅವಕಾಶವಿತ್ತು. ಮೊದಲನೆಯ ಪ್ರತಿನಿಧಿಯು ಬಿಷಪ್‌ರನ್ನು ನೇಮಿಸಿಕೊಳ್ಳುತ್ತಿದ್ದು, ಅವರು ರಾಜ್ಯದ ಮುಖ್ಯಸ್ಥರ ಮುಂದೆ ನಿಷ್ಟೆಯ ಪ್ರಮಾಣ ವಚನ ಸ್ವೀಕರಿಸಬೇಕಾಗಿತ್ತು.

ಆತನು ನೆಪೋಲಿಯನ್ ನಿಯಮವನ್ನು ಜಾರಿಗೆ ತಂದನು. ಇದರಲ್ಲಿ ೨೦ ಮಂದಿ ಶುದ್ಧ ಫ್ರೆಂಚರಿದ್ದು ಕಾನೂನಿನ ಒಂದು ಸಂಸ್ಥೆಯನ್ನು ಹೊಂದಿದ್ದು, ಸ್ಪಷ್ಟ, ಸಮರ್ಪಕವಾದ ಹಾಗೂ ತರ್ಕಬದ್ಧ ವ್ಯವಸ್ಥೆಯನ್ನು ಹೊಂದಿತ್ತು. ಫ್ರಾನ್ಸ್‌ನ ಬ್ಯಾಪ್ ವ್ಯವಸ್ಥೆ ಹಾಗೂ ಗೌರವ ಸೈನ್ಯದಳವನ್ನು ಜಾರಿಗೆ ತಂದನು. ಪ್ರತಿನಿಧಿತ್ವದ ಈ ಕಾಲಘಟ್ಟವು ಬೋನಾಪಾರ್ಟಿಯ ಜೀವನ ಕ್ರಮದಲ್ಲಿ ಅತ್ಯಂತ ಉಪಯುಕ್ತವಾದ ಒಂದು ಅಂಶವಾಗಿತ್ತು. ಆತನ ದೇಶದ ಒಳಿತಿಗಾಗಿ ಅತ್ಯಂತ ಲಾಭದಾಯಕವಾಗಿತ್ತು.

ಹಲವು ದಿನಗಳ ತರುವಾಯ ನೆಪೋಲಿಯನ್ ತನ್ನ ಪರಾಕ್ರಮವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟನು. ೧೮೦೨ರಲ್ಲಿ ಹತ್ತು ವರ್ಷಗಳ ಕಾಲ ತನ್ನ ಪ್ರತಿನಿಧಿತ್ವವನ್ನು ಮುಂದುವರೆಸಿದ್ದು, ಅದನ್ನು ಜೀವನಪರ್ಯಾಂತ ಇರುವಂತೆ ಬದಲಾಯಿಸಿಕೊಂಡನು. ೧೮೦೪ರಲ್ಲಿ ತನ್ನನ್ನು ‘ಫ್ರಾನ್ಸ್‌ನ ಚಕ್ರವರ್ತಿ’ ಎಂದು ಘೋಷಿಸಿಕೊಳ್ಳುವುದರ ಮೂಲಕ ಉಳಿದ ಮತ್ತೊಂದು ಕ್ರಮವನ್ನು ಪೂರೈಸಿದನು. ‘‘ನಾನು ಭೂಮಿಯಲ್ಲಿ ಬಿದ್ದಿದ್ದ ಫ್ರಾನ್ಸ್‌ನ ಕಿರೀಟವನ್ನು ಕಂಡುಹಿಡಿದೆ ಮತ್ತು ಅದನ್ನು ನನ್ನ ಕತ್ತಿಯಿಂದ ಹಿಡಿದೆತ್ತಿದೆ’’ ಎಂದು ಹೇಳಿಕೊಂಡನು.

೧೮೦೪ ರಿಂದ ೧೮೧೪ರವರೆಗೆ ನೆಪೋಲಿಯನ್ ಯುಗವು ೧೦ ವರ್ಷಗಳ ಕಾಲ ಉಳಿಯಿತು. ಅದೊಂದು ಅವಿರತ ಸಂಗ್ರಾಮಗಳಿಂದಲೂ, ಸುದೀರ್ಘವಾದ ವಿಸ್ಮಯಕಾರಕ ವಿಜಯಗಳಿಂದಲೂ ಕೂಡಿದ ಕಾಲಘಟ್ಟವಾಗಿತ್ತು. ಆದರೆ ಅತಿಶಯವಾದ ಸೋಲಿನಿಂದ ಕೊನೆಗೊಂಡಿತು. ನೆಪೋಲಿಯನ್ನನು ಅಲೆಗ್ಸಾಂಡರ್, ಸೀಸರ್, ಚಾರ್ಲ್‌ಮ್ಯಾನ್ ಮಟ್ಟದ ಚರಿತ್ರೆಯ ಅತ್ಯಂತ ಸಮರ್ಥ ಜಯಶಾಲಿ ಆಡಳಿತಗಾರನೆಂದು ಪರಿಗಣಿಸಲ್ಪಡು ತ್ತಾನೆ. ಕೆಲಸವೆಂದರೆ ನೆಪೋಲಿಯನ್ನನಿಗೆ ಬಹಳ ಪ್ರೀತಿ. ‘‘ಕೆಲಸ ನನ್ನ ಮೂಲಧಾತು ಗಳಲ್ಲೊಂದು. ಅದಕ್ಕಾಗಿಯೇ ನಾನು ಹುಟ್ಟಿದೆ ಮತ್ತು ಸಜ್ಜುಗೊಂಡೆ’’ ಎನ್ನುತ್ತಾನೆ.

ನೆಪೋಲಿಯನ್ ಒಂದು ರಾಜಾಸ್ಥಾನವನ್ನು ಸ್ಥಾಪಿಸಿ, ಒಂದು ಅತ್ಯುತ್ತಮ ಸಮಾರಂಭ ವನ್ನು ನಾರ್ಟ್‌ಡಾಮ್‌ನಲ್ಲಿ ಏರ್ಪಡಿಸಿಕೊಂಡು, ಆದರೆ ಪ್ರಭುವಾಗಿ ಅಧಿಕಾರವಹಿಸಿ ಕೊಂಡನು. ಈ ಪ್ರಭುತ್ವದ ಚರಿತ್ರೆಯ ೧೦ ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಯುದ್ಧಗಳು ನಡೆಯುತ್ತಿದ್ದವು. ಇಂಗ್ಲೆಂಡಿನಿಂದ ನಿರ್ದೇಶಿತಗೊಂಡ ನೌಕಾಪಡೆ ಹಾಗೂ ನೆಪೋಲಿಯನ್‌ನು ನಿರ್ದೇಶಿಸಿದ ಸೈನಿಕ ಪಡೆಗಳ ನಡುವೆ ನಡೆದ ಹೋರಾಟವೇ ಇದರ ಎದ್ದುಕಾಣುವ ಅಂಶ. ೧೮೦೪ರಲ್ಲಿ ಫ್ರಾನ್ಸ್‌ನ ವಿರುದ್ಧದ ಒಕ್ಕೂಟವು ರಚಿತವಾಯಿತು. ಕ್ಯಾಂಫೋ ಪೋರ್ಮಿಯೊ ಹಾಗೂ ಲೂನೆವಿಲ್ಲೆಯ ಒಪ್ಪಂದಗಳಿಂದ ಲಭ್ಯವಾದ ಫ್ರಾನ್ಸ್‌ನ ವಿಸ್ತರಣೆ ಯಿಂದ ಇಂಗ್ಲೆಂಡ್‌ಗೆ ಮತ್ಸರ ಹುಟ್ಟಿತು. ೧೮೦೩ರಲ್ಲಿ ಈ ಎರಡು ದೇಶಗಳ ನಡುವೆ ಯುದ್ಧ ಪ್ರಾರಂಭವಾಯಿತು. ನೆಪೋಲಿಯನ್ನನು ಜರ್ಮನಿಯ ಹಿಡಿತದಲ್ಲಿದ್ದ ಹನೋವರ್‌ನ್ನು ವಶಪಡಿಸಿಕೊಂಡನು. ಈ ಮಧ್ಯೆ ಇಂಗ್ಲೆಂಡ್, ರಷ್ಯಾ ಮತ್ತು ಆಸ್ಟ್ರಿಯಾದ ಒಕ್ಕೂಟವು ರಚಿತವಾಯಿತು.

ಆಸ್ಟ್ರಿಯಾದ ವಿರುದ್ಧ ನೆಪೋಲಿಯನ್ನನು ಮೂರನೆಯ ದಂಡಯಾತ್ರೆಯನ್ನು ಪ್ರಾರಂಭಿಸಿದನು. ೧೮೦೫ರ ದಂಡಯಾತ್ರೆಯು ನೆಪೋಲಿಯನ್ನನ ಮತ್ತೊಂದು ಅನುಪಮ ಸಾಧನೆಯಾಯಿತು. ಇದು ಆಸ್ಟರ್‌ಲಿಟ್ಜ್ ಯುದ್ಧಕ್ಕೆ ಕಾರಣವಾಯಿತು. ಇದರ ಫಲಿತಾಂಶವು ನಿರ್ಣಾಯಕವೂ ಅಪಾಯಕವೂ ಆಗಿದ್ದು ಮೈತ್ರಿಕೂಟವನ್ನು ಸದೆ ಬಡಿಯಿತು. ಆಸ್ಟ್ರಿಯನ್ನರು ನೆಪೋಲಿಯನ್ ನಿರ್ದೇಶಿಸಿದ ‘‘ಪ್ರೆಸ್‌ಬರ್ಗ್‌ನ ಸಂಧಿ’’ಯ ಮೂಲಕ ಶಾಂತಿಗೆ ಒಪ್ಪಿದರು. ಆತನು ಆಸ್ಟ್ರಿಯವನ್ನು ಮೂರನೆಯ ಸಾರಿಗೆ ಘೋರವಾಗಿ ಬಗ್ಗು ಬಡಿದನು. ಆಸ್ಟ್ರಿಯ ಮತ್ತು ಡಾಲ್ಮಶಿಯಾಗಳು ನೆಪೋಲಿಯನ್‌ನ ವಶವಾದವು.

ಆಸ್ಟ್ರಿಯಾದ ದಂಡಯಾತ್ರೆಯಿಂದ ಕೌಟುಂಬಿಕ ಲಾಭಗಳನ್ನು ಹೊರತುಪಡಿಸಿ ಉಂಟಾದ ಮತ್ತೊಂದು ಮುಖ್ಯ ಪರಿಣಾಮವೆಂದರೆ ಜರ್ಮನಿಯ ಪರಿವರ್ತನೆ. ಪ್ಯಾರಿಸ್ ನಗರವು ೧೮೦೩ರಿಂದ ಜರ್ಮನ್ ರಾಜಕೀಯದ ಹಾಗೂ ಒಳಸಂಚುಗಳ ಕೇಂದ್ರ ಸ್ಥಾನವಾಗಿತ್ತು. ಇದರ ಪರಿಣಾಮವಾಗಿ ೧೮೦೬ರಲ್ಲಿ ಬವರಿಯಾ ಹಾಗು ವೊಟೆಂಬರ್ಗ್ ಮತ್ತು ಇತರೆ ಜರ್ಮನ್ ಪ್ರಾಂತ್ಯಗಳ ಹೊಸ ರಾಜರು ಜರ್ಮನಿಯ ಚಕ್ರವರ್ತಿಯೊಂದಿಗೆ ಇದ್ದ ತಮ್ಮ ಮೈತ್ರಿಯನ್ನು ನಿರಾಕರಿಸಿ ‘‘ರೈನ್ ಒಕ್ಕೂಟ’’ವನ್ನು ರಚಿಸಿಕೊಂಡರು. ಆ ಮೂಲಕ ನೆಪೋಲಿಯನ್ನನನ್ನು ‘ರಕ್ಷಕನೆಂದು ಗುರುತಿಸಿಕೊಂಡು’ ತಮ್ಮ ಆಕ್ರಮಣದ ಮತ್ತು ರಕ್ಷಣೆಯ ಒಪ್ಪಂದಗಳನ್ನು ಮಾಡುವುದರೊಂದಿಗೆ ಆತನಿಗೆ ವಿದೇಶೀಯ ನೀತಿಯ ಮೇಲೆ ಅಧಿಕಾರವನ್ನು ನೀಡಿದರು.

ಪವಿತ್ರ ರೋಮನ್ ಚಕ್ರಾಧಿಪತ್ಯದ ಪತನದ ನಂತರ (೧೮೦೬) ಜರ್ಮನ್ನರ ನಾಗರಿಕ ಬದುಕಿನ ಮೇಲೆ ಫ್ರೆಂಚರ ಯೋಜನಾ ರೀತಿಗಳು ಪ್ರಭಾವ ಬೀರಿದವು. ಈ ರೀತಿಯ ವಿದೇಶಿಯ ಆಳ್ವಿಕೆಯಿಂದಾಗಿ ಜರ್ಮನ್ನರು ಆತ್ಮಗೌರವವನ್ನು ಕಳೆದುಕೊಂಡರು. ನಂತರದ ದಾಳಿ ಪ್ರಷ್ಯಾದ ಮೇಲಾಯಿತು. ಟಿನಾ ಮತ್ತು ಆವರ್‌ಸ್ಟಾಡ್ಟ್‌ಗಳಲ್ಲಿ ಪ್ರಷ್ಯನ್ನರು ಪರಾಭವಗೊಂಡರು. ಸಾವಿರಾರು ಜನ ಪ್ರಷ್ಯನ್ನರನ್ನು ಸೆರೆಹಿಡಿಯಲಾಯಿತು ಹಾಗೂ ನಂತರದ ದಿನಗಳಲ್ಲಿ ದೇಶವನ್ನು ಫ್ರೆಂಚ್ ಸೈನ್ಯಾಧಿಕಾರಿಗಳು ವಶಪಡಿಸಿಕೊಂಡರು. ಹೀಗೆ ಕುಸಿತವು ಪೂರ್ಣಗೊಂಡಿತು. ಅಕ್ಟೋಬರ್ ೨೫ರಂದು ನೆಪೋಲಿಯನ್‌ನು ಬರ್ಲಿನ್ ನಗರಕ್ಕೆ ವಿಜಯಶಾಲಿಯಾಗಿ ಪ್ರವೇಶ ಮಾಡಿದನು. ಅಲ್ಲಿಂದಲೇ ಆತನು ಬರ್ಲಿನ್ ಶಾಸನಗಳನ್ನು ಹೊರಡಿಸಿದನು. ಇದರ ಪ್ರಕಾರ ಬ್ರಿಟೀಷ್ ದ್ವೀಪಗಳಿಗೆ ದಿಗ್ಭಂಧನ ವಿಧಿಸಲಾಯಿತು.

ನಂತರದ ದಾಳಿ ರಷ್ಯಾದ ಮೇಲಾಯಿತು. ಪೋಲಾಂಡಿನ ಆ ಪ್ರದೇಶದ ಮುಖ್ಯ ಪಟ್ಟಣವಾದ ವಾರ್ಸಾಕ್ಕೆ ಹೋಗುವ ಹಾದಿಯಲ್ಲಿ ಎಲಾನ್ ಹಾಗೂ ಫ್ರೈಡ್‌ಲ್ಯಾಂಡ್‌ನ ಬಳಿ ಎರಡು ಪ್ರಮುಖ ಯುದ್ಧಗಳಾದವು. ವೈಸ್‌ರಾಯನು ಎಷ್ಟು ನಿರ್ಣಾಯಕ ಅಭಿಪ್ರಾಯವನ್ನು ಹೊಂದಿದ್ದನೆಂದರೆ, ಜಾರ್‌ನಾದ ಒಂದನೆಯ ಅಲೆಗ್ಸಾಂಡರನು ಶಾಂತಿ ಒಪ್ಪಂದಕ್ಕೆ ಸಮ್ಮತಿಸಿದನು. ಇಬ್ಬರು ದೊರೆಗಳು ಸೇರಿ ಟಿಲ್ಸಿತ್ ಒಪ್ಪಂದವನ್ನು ಮಾಡಿಕೊಂಡರು. ಹೀಗೆ ನೆಪೋಲಿಯನ್‌ನು ರಷ್ಯಾನ್ನರ ಮೇಲೆ ವಿಜಯ ಸಾಧಿಸಿದನು. ಅಲೆಗ್ಸಾಂಡರನು ತಾನೇ ಸ್ವತಃ ಮುಂದೆ ಬಂದು ಘನಶತ್ರುಗಳಾದ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಮಧ್ಯವರ್ತಿಯಾಗಿ ವ್ಯವಹರಿಸಿದನು.

ಪ್ರಷ್ಯ ದೇಶವು ಎಲ್ಬ್ ನದಿಯ ಪಶ್ಚಿಮ ದಂಡೆಯಲ್ಲಿರುವ ಎಲ್ಲಾ ಪ್ರದೇಶವನ್ನು ಬಿಟ್ಟುಕೊಟ್ಟಿತು. ಜರ್ಮನಿಯ ಪ್ರದೇಶಗಳನ್ನು ತೆಗೆದುಕೊಂಡು, ನೆಪೋಲಿಯನ್‌ನು ವೆಸ್ಟ್‌ಫೇಲಿಯಾ ಎಂಬ ಹೊಸ ಸಂಸ್ಥಾನವನ್ನು ರಚಿಸಿ, ಅದನ್ನು ತನ್ನ ಸಹೋದರ ಚೆರೋಮ್‌ಗೆ ನೀಡಿದನು. ಪ್ರಷ್ಯಾದ ಪೂರ್ವಪ್ರಾಂತ್ಯಗಳು ಕುಗ್ಗಿದವು. ಈಗ ಇಂಗ್ಲೀಷರು ಮಾತ್ರ ಶತ್ರುಗಳಾಗಿ ಉಳಿದಿದ್ದರು. ಟಿಲ್ಸಿತ್‌ನ ತರುವಾಯ ಇಂಗ್ಲೆಂಡ್ ಮಾತ್ರ ಎಂದಿಗೂ ಫ್ರಾನ್ಸ್‌ನ ಶತ್ರುವಾಗಿ ಉಳಿದಿತ್ತು. ಆತನು ತನ್ನ ಗಮನವನ್ನು ಇಂಗ್ಲೆಂಡ್‌ನ ಮೇಲೆ ಕೇಂದ್ರೀಕರಿಸಿದನು. ಸಾಗರದ ಮಹಾರಾಣಿಯಂತೆ ಮೆರೆದು ೧೮೦೫ರಲ್ಲಿ ನಡೆದ ಟ್ರಗಾಲ್ಗರ್ ಯುದ್ಧದಲ್ಲಿ ಫ್ರೆಂಚ್‌ನ ನೌಕಾಪಡೆಯನ್ನು ನಾಶಗೊಳಿಸಿತ್ತು. ಹಾಗಾಗಿ ಆತನಿಗೆ ಇಂಗ್ಲೆಂಡ್‌ನ್ನು ಸೋಲಿಸುವ ಇತರೆ ಮಾರ್ಗಗಳನ್ನು ಹುಡುಕುವ ಒತ್ತಾಸೆ ಇದ್ದೇ ಇತ್ತು. ಆದರೆ ಹೇಗೆಂಬುದೇ ಸಮಸ್ಯೆಯಾಯಿತು. ಬರ್ಲಿನ್ ಶಾಸನದ ಪ್ರಕಾರ ನೆಪೋಲಿಯನ್‌ನು ಬ್ರಿಟೀಷ್ ದ್ವೀಪಗಳಿಗೆ ದಿಗ್ಭಂಧನ ವಿಧಿಸಿ ಅದರ ಜೊತೆ ಯಾವುದೇ ರೀತಿಯ ವ್ಯಾಪಾರಿ ಸಂಬಂಧಗಳಿಗೂ, ಪತ್ರ ವ್ಯವಹಾರಗಳಿಗೂ ನಿರ್ಬಂಧವನ್ನು ಹೊರಿಸಿ, ಫ್ರಾನ್ಸ್‌ನಲ್ಲಿ ದೊರಕಿದ ಎಲ್ಲ ಇಂಗ್ಲಿಷ್ ಸರಕುಗಳನ್ನು ಮುಟ್ಟುಗೋಲು ಹಾಕಿಕೊಂಡು ನಾಶಗೊಳಿಸಿದನು. ಇದೊಂದು ರೀತಿಯ ಆರ್ಥಿಕ ಯುದ್ಧವಾಗಿತ್ತು. ಎಲ್ಲೆಡೆಯಲ್ಲೂ ಯೂರೋಪಿನ ವ್ಯವಸ್ಥೆಯನ್ನು ಜಾರಿಗೊಳಿಸಿ ಇಂಗ್ಲೆಂಡ್ ದೇಶದ ನಿರ್ನಾಮವಾಗುವ ರೀತಿಯನ್ನು ಅಳವಡಿಸಿದನು. ನೆಪೋಲಿಯನ್‌ನು ಈ ರೀತಿ ದಿಗ್ಭಂಧನವನ್ನು ಜಾರಿ ಗೊಳಿಸುವಲ್ಲಿ ಬಾರಿಬಾರಿಗೂ ಆಕ್ರಮಣ ಮಾಡಬೇಕಾಯಿತು. ಈ ನೀತಿಯಿಂದಾಗಿ ಪೋರ್ಚುಗಲ್ ಮತ್ತು ಸ್ಪೇನ್ ದೇಶಗಳಲ್ಲಿ ಪ್ರಖ್ಯಾತ ಹಾಗೂ ವಿಪತ್ಕಾರಿ ದುಸ್ಸಾಹಸಗಳಿಗೆ ಬಲಿಯಾಗಬೇಕಾಯಿತು. ಪೋರ್ಚುಗಲ್ ದೇಶವು ಇಂಗ್ಲೆಂಡ್ ನೊಂದಿಗೆ ಆಪ್ತವಾದ ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳನ್ನು ಹೊಂದಿದ್ದು ಈ ದಿಗ್ಭಂದನಕ್ಕೆ ಒಪ್ಪಿಗೆ ನೀಡಲಿಲ್ಲ.

ಸ್ಪೈನ್ ದೇಶದಲ್ಲಿ ಮರೆಮಾಚುವ ನಾಟಕ, ನಿಂದನೆ, ಬೆದರಿಕೆಯಂತಹ ಆಟವನ್ನಾಡಿ ಇಡೀ ರಾಜ ಪರಿವಾರವನ್ನೇ ಕಿತ್ತೊಗೆದನು. ಚಾರ್ಲ್ಸ್‌ನು ತನ್ನ ಸಿಂಹಾಸನವನ್ನು ನೆಪೋಲಿಯನ್‌ಗೆ ಒಪ್ಪಿಸಿದನು. ಫರ್ಡಿನಾಂಡ್ ಮತ್ತು ಅವನ ಸೋದರನನ್ನು ಸೆರೆಮನೆಗೆ ತಳ್ಳಲಾಯಿತು. ನಂತರ ಆತನ ಸಹೋದರನಾದ ಜೋಸೆಫ್‌ನಿಗೆ ಪಟ್ಟ ಕಟ್ಟಲಾಯಿತು. ಆದರೆ ನಂತರ ನೆಪೋಲಿಯನ್ ಹೇಳಿಕೊಂಡಂತೆ, ಈ ಸ್ಪೆಯಿನ್ ದೇಶದ ಹುಣ್ಣು ಆತನನ್ನು ಹಾಳುಮಾಡಿತು. ಸ್ಪೆಯಿನ್‌ನಲ್ಲಿ ಆತನು ಎದುರಿಸಿದ ವಿರೋಧಗಳೇ ತೀರಾ ಬೇರೆ ರೀತಿಯದಾಗಿದ್ದವು. ಇತರೆ ದೇಶಗಳಲ್ಲಾದರೋ ಆತನು ಯುದ್ಧ ಹೂಡುತ್ತಿದ್ದುದು ಆಯಾ ಸರ್ಕಾರಗಳ ವಿರುದ್ಧವಾಗಿತ್ತು. ಆದರೆ ಸ್ಪೆಯಿನ್‌ನಲ್ಲಿ ಅದು ಜನರ ವಿರುದ್ಧವೇ ಆಯಿತು. ಸ್ಪೆಯಿನ್ ದೇಶೀಯರು ಯುದ್ಧ ಮಾಡುತ್ತಿದ್ದ ರೀತಿಯೇ ಭಿನ್ನವಾಗಿತ್ತು. ಅದು ಆ ದೇಶದ ಭೂಲಕ್ಷಣಗಳಿಂದ ನಿರ್ಧರಿತವಾಗಿದ್ದು ಇದನ್ನೆದುರಿಸಲು ನೆಪೋಲಿಯನ್‌ನಿಗೆ ಅಸಾಧ್ಯವಾಗಿ ಅತ್ಯಂತ ಅನಾಹುತಕಾರಿಯಾಗಿ ಪರಿಣಮಿಸಿತು. ನಂತರದಲ್ಲಿ ಆತನು ಸ್ಪೆಯಿನ್‌ನ ಮೇಲೆ ತನ್ನ ಪ್ರಭುತ್ವವನ್ನು ಭದ್ರವಾಗಿ ಸಾಧಿಸಬಹುದಿತ್ತು. ಆದರೆ ಫ್ರಾನ್ಸ್ ನಲ್ಲಿ ಆತಂಕಕಾರಿ ಪರಿಸ್ಥಿತಿ ಇದ್ದುದರಿಂದ ವಾಪಸ್ಸಾಗಲೇ ಬೇಕಾಯಿತು.

ಬವೇರಿಯಾದಲ್ಲಿ ೧೮೦೯ರಲ್ಲಿ ಆಸ್ಟ್ರಿಯಾದ ಜೊತೆ ಯುದ್ಧ ನಡೆಸಿ, ಅದನ್ನು ನಾಲ್ಕನೆಯ ಸಾರಿ ಗೆದ್ದುಕೊಂಡನು. ನಂತರ ವಾಗ್ರಾಂ ನಡೆಸಿದನು. ಇದಾದ ನಂತರ ವಿಯೆನ್ನಾದ ಸಂಧಿ ಪ್ರಸ್ತಾಪಕ್ಕೆ ಸಹಿ ಹಾಕಲಾಯಿತು. ಆತನು ಆಸ್ಟ್ರಿಯಾದ ಮೇರಿ ಲೂಯಿಯೊಂದಿಗೆ ಮದುವೆ ಪ್ರಸ್ತಾಪ ಮಾಡಿದನು. ಈಗ ನೆಪೋಲಿಯನ್‌ನು ತನ್ನ ಸಾಮ್ರಾಜ್ಯದ ಮೇಲೆ ನೇರ ಆಳ್ವಿಕೆ ನಡೆಸುತ್ತಿದ್ದನು. ೧೮೦೯ರಲ್ಲಿ ಇಟಲಿಯ ಉಳಿದ ಪೋಪನಿಗೆ ಸಂಬಂಧಿಸಿದ ಎಲ್ಲಾ ರಾಜ್ಯಗಳನ್ನು ಸೇರಿಸಿಕೊಂಡನು. ಯೂರೋಪಿನ ಇಷ್ಟು ದೊಡ್ಡ ಭಾಗಕ್ಕೆ ಚರಿತ್ರೆಯಲ್ಲಿ ಯಾವ ರಾಜನೂ ಎಂದೂ ಪ್ರಭುತ್ವ ಸಾಧಿಸಿರಲಿಲ್ಲ. ಕೇವಲ ಇಂಗ್ಲೆಂಡ್ ಮಾತ್ರ ಹೊರತಾಗಿತ್ತು.

ಬೆಳೆಯುತ್ತಿದ್ದ ರಾಷ್ಟ್ರೀಯತೆಯ ಸ್ಫೂರ್ತಿ, ಟೆನಾದ ಸೋಲಿನ ನಂತರದಲ್ಲಿ ಬರಹಗಾರರಿಂದ ಪ್ರೇರಿತಗೊಂಡ ಪ್ರಷ್ಯಾದ ಪುನರ್ಸಂಘಟನೆ ಹಾಗೂ ಯುರೋಪಿನ ದಿಗ್ಭಂಧನದ ಸಲುವಾಗಿ ಫ್ರಾನ್ಸ್ ಹಾಗೂ ಪ್ರಷ್ಯಾಗಳ ನಡುವೆ ಇದ್ದ ಮೈತ್ರಿಯಲ್ಲಿ ಬಂದ ಬಿರುಕು-ಇವಿಷ್ಟು ಅಂಶಗಳು ಈ ಸಂರಚನೆಯನ್ನು ಬಲಹೀನಗೊಳಿಸಿದವು.

೧೮೧೨ರಲ್ಲಿ ರಷ್ಯಾದ ವಿರುದ್ಧ ದಂಡಯಾತ್ರೆ ಪ್ರಾರಂಭವಾಯಿತು. ಆದರೆ ರಷ್ಯಾವು ಹಿಂದಕ್ಕೆ ಸರಿಯುವ ಮತ್ತು ನೆಪೋಲಿಯನ್ ಪ್ರಾಕೃತಿಕವಾಗಿ ಕಷ್ಟ ನಷ್ಟಗಳನ್ನು ಅನುಭವಿಸುವಂಥ ನೀತಿಯನ್ನು ಅನುಸರಿಸಿದ್ದರಿಂದ ಇದು ದಯನೀಯ ಸೋಲನ್ನು ಕಂಡಿತು. ಲಿಪ್‌ಜಿಗ್ ಕದನ ಅಥವಾ ‘‘ರಾಷ್ಟ್ರಗಳ ಕದನ’’ (೧೮೦೩)ರಲ್ಲಿ ಬೋನಾಪಾರ್ಟಿಯ ಭವಿಷ್ಯವು ಅಂತ್ಯಗೊಂಡಿತು. ಆಸ್ಟ್ರಿಯ, ಪ್ರಷ್ಯಾ ಹಾಗೂ ರಷ್ಯಾದ ಜಂಟಿ ಶಕ್ತಿ ಆತನಿಗೆ ಭಾರಿಪೆಟ್ಟು ನೀಡಿತು. ಆದರೂ ಆತನಿಗೆ ಎಲ್ಬಾವನ್ನು ಮಾತ್ರ ಆಳುವ ಅಧಿಕಾರ ದೊರಕಿತು.

ನೆಪೋಲಿಯನ್ನನು ರಾಜ್ಯ ತ್ಯಜಿಸಿದ ದಿನದಂದೇ ೧೮ನೇಯ ಲೂಯಿ (ಬೂರ್ಬನ್ ದೊರೆ)ಯು ಸಿಂಹಾಸನಾಧೀಶನಾದನು. ಇದಕ್ಕೆ ಮುನ್ನ ನೆಪೋಲಿಯನ್ನನು ಸುಮಾರು ೧೦ ತಿಂಗಳ ಕಾಲ ತನ್ನ ಪುಟ್ಟ ಸಾಮ್ರಾಜ್ಯದಲ್ಲಿದ್ದನು. ಪ್ಯಾರಿಸ್‌ಗೆ ಹಿಂದಿರುಗಿದ ನಂತರ ‘‘ನೂರು ದಿನಗಳ ಕಾಲ’’ ಆಳ್ವಿಕೆ ನಡೆಸಿದನು. ನೆಪೋಲಿಯನ್ ಮತ್ತು ಆತನ ಖ್ಯಾತಿಗಳೆರಡೂ ಕೊನೆಗೊಮ್ಮೆ ‘‘ವಾಟರ್‌ಲೂ ಕದನ’’(೧೮೧೫)ದೊಂದಿಗೆ ಸಮಾಸ್ತಿ ಹೊಂದಿದವು. ದುರಾದೃಷ್ಟಕರವಾಗಿ ಸೋಲುವುದರೊಂದಿಗೆ ಆಸ್ಪರ್‌ಲಿಟ್ಜ್‌ನ ಸೂರ್ಯನು ಕೊನೆಯ ಬಾರಿಗೆ ಅಸ್ತಂಗತನಾದನು. ಆತನು ಪ್ಯಾರಿಸ್‌ಗೆ ಓಡಿಹೋಗಿ ನಂತರ ಅಲ್ಲಿಂದ ಸಂಯುಕ್ತ ಸಂಸ್ಥಾನಕ್ಕೆ ಹೋದನು. ಆಮೇಲೆ ಆತನನ್ನು ಬ್ರಿಟಿಷ್ ಪಡೆಗಳು ಸೆರೆಹಿಡಿದು ಸೆಂಟ್ ಹೆಲೆನಾಗೆ ಸಾಗಿಸಲಾಯಿತು. ಅಲ್ಲಿ ಕನಿಷ್ಟ ಹಾಗೂ ಹೀನಮಟ್ಟದ ಕಣ್ಗಾವಲಿನಲ್ಲಿದ್ದು, ಆರು ವರ್ಷಗಳ ನಂತರ ಹೊಟ್ಟೆಯ ಕ್ಯಾನ್ಸರ್‌ನಿಂದ ಅಸುನೀಗಿದನು.