ಭೂಹಿಡುವಳಿ ಪದ್ಧತಿ ಸಾಮಾಜಿಕ ವ್ಯವಸ್ಥೆಯೂ, ಒಂದು ಆರ್ಥಿಕ ವ್ಯವಸ್ಥೆಯೂ, ಮತ್ತು ಒಂದು ರೀತಿಯ ಸರಕಾರವು ಆಗಿತ್ತು. ಊಳಿಗಮಾನ್ಯ ಪದ್ಧತಿಯ ಉಗಮವನ್ನು ಅರ್ಥಮಾಡಿಕೊಳ್ಳಬೇಕಾದರೆ ಮಧ್ಯಯುಗದ ಯುರೋಪಿನ ಇತಿಹಾಸದ ಪ್ರತಿಪುಟವನ್ನು ಎಚ್ಚರಿಕೆಯಿಂದ ಓದಬೇಕಾಗುತ್ತದೆ. ಯಾವುದೇ ಒಂದು ರಾಜಕೀಯವಾದ ವ್ಯವಸ್ಥೆಯಿಲ್ಲದ ಬರ್ಬರರು ರೋಮನ್ ಸಾಮ್ರಾಜ್ಯ ವ್ಯವಸ್ಥೆಯನ್ನು ನುಚ್ಚುನೂರು ಮಾಡಿ ತಮ್ಮ ಅವ್ಯವಸ್ಥೆಯನ್ನು ಅಲ್ಲಿಗೆ ತುಂಬಿದರು. ಆದ್ದರಿಂದ ಗಲಭೆ ಯುರೋಪಿನ ಉದ್ದಗಲಕ್ಕೆ ಪೂರ್ಣವಾಗಿ ಆವರಿಸಿತು. ಆದರೆ, ಕ್ರೈಸ್ತಚರ್ಚು ಒಂದುಗೂಡಿಸುವ ಪ್ರಭಾವವನ್ನು ಎಲ್ಲಾ ಕ್ರೈಸ್ತರ ಮೇಲೆ ಮತ್ತು ಮತಾಂತರಗೊಂಡ ಎಲ್ಲ ಬರ್ಬರರ ಮೇಲೆ ಪ್ರಯೋಗಿಸಿತ್ತು. ಕರೋಲಿಂಜಿಯನ್ ಸಾಮ್ರಾಜ್ಯ ಸ್ವಲ್ಪ ಕಾಲದವರೆಗೆ ಯುರೋಪಿನಲ್ಲಿ ಅನಾಗರಿಕ ವ್ಯವಸ್ಥೆಯನ್ನು ಸುಧಾರಿಸಿತ್ತು. ಚಾರ್ಲ್‌ಮೇನನ ಸಾವಿನ ನಂತರ ಆಡಳಿತಕ್ಕೆ ಬಂದ ಅವಳ ಮಕ್ಕಳು ಲೂಯಿಸ್‌ದ ಪಾಯಸ್ ಮತ್ತು ಇನ್ನೂ ಪ್ರಭಾವಶಾಲಿಗಳಾದವರು ಸಾಮ್ರಾಜ್ಯವನ್ನು ಯುದ್ಧ ಮಾಡುವ ರಾಜ್ಯಗಳನ್ನಾಗಿ ಹರಿದು ಹಂಚಿದ್ದರು. ಸಾಮಾಜಿಕ ಪರಿಸ್ಥಿತಿಗಳು ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿದ್ದ ಮಧ್ಯ ಯುರೋಪಿನ ಮೇಲೆ ಪ್ರಾಚೀನ ರೋಮನ್ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ ಯಾವ ಪ್ರಭಾವವನ್ನೂ ಬೀರಿರಲಿಲ್ಲ. ಭದ್ರ ಸರಕಾರವಿಲ್ಲದ, ಕಾನೂನುಗಳೇ ಇಲ್ಲದ ಸಣ್ಣ ಪುಟ್ಟ ಪ್ರಾಂತ್ಯಗಳಲ್ಲಿ ಬಡಿದಾಟ, ಯುದ್ಧ, ಸಾಮಾಜಿಕ ಅಭದ್ರತೆ ಬಹುತೇಕ ಸಾಮಾನ್ಯ ಹಾಗೂ ಬಡಜನರು ಪ್ರತಿನಿತ್ಯ ಅನುಭವಿಸಬೇಕಾಗಿದ್ದ ವಿಧಿ ಬರಹವಾಗಿತ್ತು. ಇವರುಗಳಿಗೆ ಜೀವನ, ಬದುಕಿಗಾಗಿ ನಡೆಸಿದ ಒಂದು ಯುದ್ಧವಾಗಿತ್ತು. ಇಂಥಹ ಸಾಮಾಜಿಕ ಅಭದ್ರತೆಯಿಂದ ಮುಕ್ತಿಯನ್ನು ಬಯಸುವವರಿಗೆ ಉಳಿದಿದ್ದು ಒಂದೇ ದಾರಿ ಎಂದರೆ ಕೋಟೆ, ಕೊತ್ತಲ, ತಮ್ಮದೇ ಆದ ಸೈನ್ಯವನ್ನು ಇಟ್ಟುಕೊಂಡಿದ್ದ ಪ್ರಬಲರಾದ ಶ್ರೀಮಂತರಿಗೆ ಮಾರಿಕೊಳ್ಳುವುದು. ಇವರಿಗೆ ಕೊಡಬೇಕಾದ ಕಾಣಿಕೆಯೆಂದರೆ ದೋಚುವುದು. ಸಾಮಾನ್ಯ ಜನರು ತಮಗೆ ರಕ್ಷಣೆ ನೀಡಿದವರಲ್ಲಿ ವಿಧೇಯರಾಗಿ ಅವರ ಆಳುಗಳಾಗಿ ಉಳಿದುಕೊಂಡರು.

ಅತಿದೊಡ್ಡವರೆಂದರೆ ‘‘ನೋಬಲ್ಸ್’’ ಅಥವಾ ‘‘ಲಾರ್ಡ್ಸ್’’ ಆಗಿದ್ದರು. ಇವರಿಗೆ ಹೊಡೆದಾಟವು ಒಂದು ಆಟವೂ ಮತ್ತು ವ್ಯಾಪಾರವೂ ಆಗಿತ್ತು. ಇವರಿಗೆ ಅಡಿಯಾಳಾಗಿ ಕೆಲಸ ಮಾಡುತ್ತಿದ್ದವರೆಂದರೆ ಆಡಳಿತ ವ್ಯವಸ್ಥೆಯಲ್ಲಿದ್ದು, ಓದು ಬರಹ ಬಲ್ಲವರಾಗಿದ್ದು, ಲೆಕ್ಕವನ್ನು ಬರೆಯುತ್ತಿದ್ದ ಕರಣಿಕರು ಮತ್ತು ಸೇವಕರು. ರೈತ ಸಮುದಾಯ ಉತ್ತು ಬಿತ್ತು ಹದ ಮಾಡಿದ ಭೂಮಿಯನ್ನು ಭೂ ಒಡೆಯನಿಗೆ ನೀಡಿ ಪ್ರತಿಯಾಗಿ ರಕ್ಷಣೆ ಪಡೆಯುತ್ತಿತ್ತು.

ಭೂ ಒಡೆಯನಿಗಾಗಿ ರಣರಂಗದಲ್ಲಿ ಯುದ್ಧ ಮಾಡುತ್ತಿದ್ದ ಮತ್ತು ಯುದ್ಧಗಳಲ್ಲಿ ಸಹಾಯ ಮಾಡುತ್ತಿದ್ದ ಹಿಡುವಳಿದಾರರೂ ಕೂಡ ಇದ್ದರು. ಹಿಡುವಳಿದಾರರಿಗೆ ಭೂಮಿ ಯನ್ನು ನೀಡುವ ಪದ್ಧತಿಯನ್ನು ಇನ್‌ಪ್ಯೂಡೇಷನ್ ಎಂದು ಕರೆಯುತ್ತಿದ್ದರು. ಹೆಚ್ಚಿನ ಭೂಮಿಯನ್ನು ಭೂ ಒಡೆಯನಿಂದ ಪಡೆದು, ಅದನ್ನು ಅಧೀನರಾಗಿರುವ ಪರರಿಗೂ ಹಂಚುವುದನ್ನು ಸಬ್ ಇನ್‌ಪ್ಯೂಡೇಷನ್ ಎಂದು ಕರೆಯುತ್ತಿದ್ದರು. ಭೂ ಹಿಡುವಳಿದಾರರು  ತನ್ನ ಒಡೆಯನಿಗೆ ಹಿಡುವಳಿಯ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಸ್ಥಾನದಲ್ಲಿ ಸಹಕರಿಸಲು ಒಪ್ಪಿಗೆ ನೀಡುತ್ತಿದ್ದರು. ಯಾವಾಗಲಾದರೂ ತನ್ನ ಭೂ ಒಡೆಯ ಶತ್ರುಗಳ ಕೈಯಲ್ಲಿ ಬಂಧಿಯಾದಾಗ ಹಿಡುವಳಿದಾರರು ಹಣ ಕೊಟ್ಟು ಬಿಡಿಸಿಕೊಳ್ಳಬೇಕಾಗಿತ್ತು. ಒಡೆಯನ ಹಿರಿಯ ಮಗಳು ಮದುವೆಯಾಗುವಾಗ ಹಿಡುವಳಿದಾರರು, ಅವಳಿಗೆ ಬಳುವಳಿಯನ್ನು ಕೊಡುವ ಪದ್ಧತಿಯೂ ಇತ್ತು. ಅಂತೆಯೇ ಹಿಡುವಳಿದಾರನು, ಭೂ ಒಡೆಯನ ಹಿರಿಯ ಮಗ ‘‘ಧೀರ ರಕ್ಷಕ’’ ಆದಾಗ ಅವನಿಗೆ ರಕ್ಷಕ ಸಂಭಾವನೆ ನೀಡ ಬೇಕಿತ್ತು. ಹಿಡುವಳಿದಾರನು ‘‘ಹಿಡುವಳಿ ಬಾಕಿಗಳೆಂಬ’’ಹಕ್ಕುಗಳನ್ನು ಅನುಭವಿಸು ತ್ತಿದ್ದನು. ಹಿಡುವಳಿದಾರನು ಸತ್ತ ಮೇಲೆ ಅವನ ಮಗ ಈ ಸ್ಥಾನವನ್ನು ವಂಶ ಪಾರಂಪರ್ಯವಾಗಿ ಪಡೆಯಬಹುದಾಗಿತ್ತು. ಆದರೆ ಸಂಪ್ರದಾಯ ನಿಗದಿಸಿ ‘‘ವಿನಾಯಿತಿ’’ ತೆರಿಗೆಯನ್ನು ಕೊಡಬೇಕಿತ್ತು. ಹಿಡುವಳಿದಾರನ ಮಕ್ಕಳು ಚಿಕ್ಕವರಾಗಿದ್ದರೆ ಅವರು ವಯಸ್ಸಿಗೆ ಬರುವತನಕ ಭೂ ಒಡೆಯನೆ ನೋಡಿಕೊಳ್ಳಬೇಕಾಗಿತ್ತು. ಭೂ ಒಡೆಯ ಮತ್ತು ಹಿಡುವಳಿದಾರರಿಬ್ಬರೂ ಉನ್ನತ ಮಟ್ಟದ ಶ್ರೀಮಂತರಾಗಿರುತ್ತಿದ್ದರು.  ಹಿಡುವಳಿದಾರರಾಗುವವರಲ್ಲಿ ಯಾವುದೇ ಕೀಳರಿಮೆಯಿರಲಿಲ್ಲ. ಏಕೆಂದರೆ ರಾಜರುಗಳೂ ಕೂಡ ಕೆಲವೇ ಜಹಗೀರುಗಳಿಗೆ ಹಿಡುವಳಿದಾರರಾಗಿರುತ್ತಿದ್ದರು. ಮಧ್ಯಯುಗದಲ್ಲಿ ದೇವರು ಮೂರು ವರ್ಗಗಳನ್ನು ಸೃಷ್ಟಿಸಿದ್ದಾನೆ ಎಂಬುದು ಸರ್ವೇಸಾಮಾನ್ಯವಾದ ಮಾತಾಗಿತ್ತು; ಯುದ್ಧ ಮಾಡಲು ಶ್ರೀಮಂತರು(ನೋಬಲ್ಸ್), ಪ್ರಾರ್ಥಿಸಲು ಪುರೋಹಿತರು (ಕ್ಲರ್ಜಿ), ಕೆಲಸ ಮಾಡಲು ಸಾಮಾನ್ಯ ಜನರು. ಈ ಹೇಳಿಕೆ ಮಧ್ಯಯುಗದ ಯುರೋಪಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮತ್ತು ಊಳಿಗಮಾನ್ಯ ಪದ್ಧತಿಗಿದ್ದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

ಮನೋರಿಯಲ್ ಪದ್ಧತಿ

ಭೂಮಿಯನ್ನು ಉತ್ತು, ಬಿತ್ತು ವ್ಯವಸಾಯ ಮಾಡುತ್ತಾ ಅಲ್ಲೇ ವಾಸವಾಗಿದ್ದ ಮತ್ತು ಯಾವುದೇ ಸ್ವಾತಂತ್ರ್ಯವನ್ನೂ ಅನುಭವಿಸದ ಕೆಳವರ್ಗದ ಜನರೇ ಜೀತದಾಳುಗಳು. ಸರ್ಫ್ ಅಂದರೆ ಜೀತದಾಳು/ಗುಲಾಮನೆಂದರ್ಥ. ಒಡೆಯನ ಜಮೀನಿನ ಮೇಲೆ ದುಡಿಯುವುದು ಇವನ ಕೆಲಸ ಮತ್ತು ಒಡೆಯನ ಒಪ್ಪಿಗೆಯಿಲ್ಲದೆ ಕೆಲಸ ಬಿಡುವಂತಿರಲಿಲ್ಲ. ಒಡೆಯನ ಕೊತ್ತಲ, ಅದರ ಸುತ್ತಣ ಬೆಳೆಯುವ ಭೂಮಿ ಮತ್ತು ಇವನ ಕೈಕೆಳಗಿನ ಹಿಡುವಳಿ ದಾರರೆಲ್ಲರೂ ಕೂಡಿ ಇರುವ ಸ್ಥಾನವೇ ಮೆನಾರ್. ಜೀತದಾಳನ್ನು ಮತ್ತು ಭೂಮಾಲಿಕರನ್ನು ಭೂ ಒಡೆತನದಲ್ಲಿ ಹಿಡಿದಿಡುವ ಪದ್ಧತಿಯೇ ‘‘ಮನೋರಿಯಲ್ ಪದ್ಧತಿ’’. ‘ಮೆನಾರ್’ನಲ್ಲಿ ಅಥವಾ ‘ವಿಲ್ಲಾ’ದಲ್ಲಿ ಕೆಲಸ ಮಾಡುವ ಕೂಲಿಕಾರರನ್ನು ‘‘ವಿಲ್ಲೀನ್’’ ಎಂದು ಕರೆಯಲಾಗುತ್ತಿತ್ತು. ಇದೊಂದು ಶ್ರೇಣೀಕೃತ ವ್ಯವಸ್ಥೆಯಾಗಿತ್ತು. ಇದರ ಮೇಲ್ತುದಿಯಲ್ಲಿ ಪ್ರಭು ಇರುತ್ತಿದ್ದು, ಇವನು ರಾಜನನ್ನು ಬೇಕಾದರೆ ಎದುರು ಹಾಕಿಕೊಳ್ಳುವಷ್ಟು ಶಕ್ತಿಯುಳ್ಳವನಾಗಿರುತ್ತಿದ್ದನು. ಅಲ್ಲದೇ, ಯಾರೇ ಹಿಡುವಳಿದಾರ ಅಥವಾ ಜೀತದಾಳು ಇವನ ರಕ್ಷಾ ಪರಿಧಿಯನ್ನು ಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ಏಕೆಂದರೆ, ಹಾಗೆ ಹೊರಗೆ ಬಂದರೂ ಅಂತವರನ್ನು ಹೊರಗಿನ ಸಮಾಜ ಬೆಂಬಲಿಸುತ್ತಲೂ ಇರಲಿಲ್ಲ, ರಕ್ಷಿಸುತ್ತಲೂ ಇರಲಿಲ್ಲ.

ಮೂರು ವರ್ಗಗಳು

ಮಧ್ಯಯುಗದ ಯುರೋಪಿನ ಸಮಾಜ ಮೂರು ವರ್ಗಗಳನ್ನು ಅಥವಾ ಶ್ರೇಣಿಗಳನ್ನು ಹೊಂದಿತ್ತು : ಪುರೋಹಿತರು (ಚರ್ಚು), ಶ್ರೀಮಂತರು (ದಿ ನೊಬಿಲಿಟಿ) ಭೂ ಒಡೆಯರು ಮತ್ತು ಹಿಡುವಳಿದಾರರು ಮತ್ತು ಸಾಮಾನ್ಯ ಜನರು-ಜೀತದಾಳುಗಳು. ಬಿಷಪ್ಪರು ಮತ್ತು ಉಳಿದ ಚರ್ಚ್‌ನ ಅಧಿಕಾರಿಗಳು ಕೂಡ, ರಾಜನಂತೆ ಭೂಮಿಯನ್ನು ಹೊಂದಿರುತ್ತಿದ್ದು,  ಅದನ್ನು ಅವರು ಭೂ ಹಿಡುವಳಿದಾರರಿಗೆ ಹಂಚಿರುತ್ತಿದ್ದರು. ಆದ್ದರಿಂದ, ಪುರೋಹಿತರಿಗೆ ಮತ್ತು ಚರ್ಚಿನ ಅಧಿಕಾರಿಗಳಿಗೆ ಇಬ್ಬರು ಯಜಮಾನರಿದ್ದರು; ಒಂದೆಡೆ ಧರ್ಮಾತೀತ ಭೂ ಒಡೆಯನಾದ ರಾಜ, ಮತ್ತೊಂದೆಡೆ ಧಾರ್ಮಿಕ ಮುಖಂಡನಾದ ಪೋಪ್. ಈ ಇಬ್ಬಗೆಯ ಸ್ವಾಮಿನಿಷ್ಠೆ ಮಧ್ಯಯುಗದ ಯುರೋಪಿನ ಸಮಾಜದ ಬಹುತೇಕ ತಪ್ಪುಗಳಿಗೆ ಮತ್ತು ನೋವುಗಳಿಗೆ ಮೂಲವಾಗಿತ್ತು.

ಭೂಮಿಯಿಂದಲೇ ಎಲ್ಲಾ ಐಶ್ವರ್ಯವೂ ಅಂದಿನ ಕಾಲದಲ್ಲಿ ಬರಬೇಕಾಗಿದ್ದುದರಿಂದ ರಾಜನೇ ರಾಜ್ಯದ ಅತಿದೊಡ್ಡ ಭೂಮಾಲೀಕನಾಗಿರುತ್ತಿದ್ದ. ರಾಜ್ಯದ ಎಲ್ಲ ಭೂಮಿಯು ರಾಜನದಾಗಿತ್ತು. ರಾಜನು ತನ್ನ ಜಹಗೀರಿದಾರರಿಗೆ ಭೂ ಒಡೆತನವನ್ನು ವಹಿಸುತ್ತಿದ್ದನು. ರಾಜ ಮತ್ತು ಜಹಗೀರಿದಾರಿಕೆ ಮಧ್ಯ ಸಂಬಂಧ ‘‘ಹೊಮೇಜ್’’ ಸ್ವಾಮಿನಿಷ್ಠೆಯಾಗಿತ್ತು. ಸ್ವಾಮಿನಿಷ್ಠೆಯನ್ನು ತಕ್ಷಣದ ಒಡೆಯನಿಗೆ ತೋರಿಸಬೇಕಾಗಿತ್ತು, ಉಳಿದವರಿಗಲ್ಲ. ಈ ಸ್ವಾಮಿನಿಷ್ಠೆ ಸಮಾಜದಲ್ಲಿ ಒಂದು ದೊಡ್ಡ ನಾಶಕಾರಕ ಅಂಶವಾಗಿ ಕೆಲಸ ಮಾಡಿತು. ತುಂಬ ಪ್ರಬಲನಾದ ಒಬ್ಬ ಭೂ ಒಡೆಯ ರಾಜನನ್ನು ಎದುರಿಸಬೇಕಿದ್ದರೆ, ಅದನ್ನು ಬಹಳ ಸುಲಭವಾಗಿ ಮಾಡಬಹುದಿತ್ತು. ಏಕೆಂದರೆ ಭೂ ಒಡೆಯ ಮಾತ್ರ ರಾಜನಿಗೆ ನಿಷ್ಠೆ ತೋರಿಸಬೇಕಿತ್ತೇ ವಿನಹ ಇವನ ಕೈ ಕೆಳಗಿರುವ ಹಿಡುವಳಿದಾರರಲ್ಲ. ನಾರ್ಮಂಡಿಯ ಸಾಮಂತ ಫ್ರಾನ್ಸಿನ ರಾಜನ ಭೂ ಪ್ರಭುತ್ವದಲ್ಲಿ ಅಧೀನನಾಗಿದ್ದರೂ, ರಾಜನ ವಿರುದ್ಧ ಬಹಳ ಯುದ್ಧಗಳನ್ನು ಮಾಡಿ, ಜಯವನ್ನೂ ಸಾಧಿಸಿದ್ದನು. ನಾರ್ಮಂಡಿಯ ರಾಜ ಕ್ರಮೇಣ ಇಂಗ್ಲೆಂಡಿನ ರಾಜನಾದ ಕೂಡಲೇ, ಎಲ್ಲಾ ಭೂ ಮಾಲಿಕರು ನೇರವಾಗಿ ರಾಜನಿಗೆ ನಿಷ್ಠೆಯಿಂದಿರುವಂತೆ ಕ್ರಿ.ಶ.೧೦೮೬ರಲ್ಲಿ ನಿರ್ದೇಶಿಸಿದನು. ಈ ಮೂಲಕ ಊಳಿಗಮಾನ್ಯ ಪದ್ಧತಿಯ ಬಹಳ ಮುಖ್ಯವಾದ ತತ್ವವೊಂದನ್ನು ಮಾರ್ಪಾಡು ಮಾಡಿದನು.

ಅಂತಿಮವಾಗಿ ಹೇಳುವುದಾದರೆ. ಊಳಿಗಮಾನ್ಯ ಪದ್ಧತಿ ತುಂಬಾ ನಿಧಾನವಾಗಿ ಮತ್ತು ಸಹಜವಾಗಿ ಬೆಳೆದು ಬಂದ ಒಂದು ವ್ಯವಸ್ಥೆಯಾಗಿತ್ತು. ಹಾಗೆಯೇ ಹಳ್ಳಿಗಾಡಿನ ಸಮಾಜ ಎಲ್ಲಿಯತನಕ ಇತ್ತೋ ಅಲ್ಲಿಯತನಕ ಈ ವ್ಯವಸ್ಥೆಯೂ ಇತ್ತು. ಅಂದಿನ ಕಾಲದಲ್ಲಿ ಜನರು ವಿಸ್ತಾರವಾದ ಭೂ ಪ್ರದೇಶದಲ್ಲಿ, ದೂರ ದೂರದಲ್ಲಿ ವಾಸಿಸುತ್ತಿದ್ದರು. ಸರಿ ಯಾದ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಪಟ್ಟಣಗಳ ಬೆಳವಣಿಗೆ, ವಾಣಿಜ್ಯದ ಬೆಳವಣಿಗೆ, ಹೆಚ್ಚಾದ ಜನಸಂಪರ್ಕ ಮತ್ತು ಚಾಲನೆಗೊಂಡ ಸಮಾಜ, ಹಣ ಮತ್ತು ಆರ್ಥಿಕ ಬೆಳವಣಿಗೆ, ಇದೂ ಅಲ್ಲದೇ ಹೆಚ್ಚಾದ ರಾಜಪ್ರಭುತ್ವ, ಒಳಗೆ ಮತ್ತು ಸಾಗರದಾಚೆಗೂ ವಿಸ್ತಾರಗೊಂಡ ವಸಾಹತುಗಳು ಇವೇ ಮುಖ್ಯ ಕಾರಣಗಳಿಂದಾಗಿ ಊಳಿಗಮಾನ್ಯ ಪದ್ಧತಿ ಅಳಿಸಿ ಹೋಯಿತು.

ಮಧ್ಯಯುಗದ ಚರ್ಚು

ಮಧ್ಯಯುಗದ ಯುರೋಪಿನ ಚರ್ಚು ಬರೇ ಒಂದು ಧಾರ್ಮಿಕ ಸಂಸ್ಥೆಯಾಗಿರದೇ ಸಾಮಾಜಿಕ ಮತ್ತು ಶೈಕ್ಷಣೀಯ ಸೇವೆಗಳನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿತ್ತು. ಇದೂ ಅಲ್ಲದೇ, ನ್ಯಾಯ ತೀರ್ಮಾನ ಕೊಡುವ ಎಷ್ಟೋ ಕೆಲಸಗಳನ್ನು ಚರ್ಚು ನಡೆಸುತ್ತಿತ್ತು. ಚರ್ಚಿಗೆ ಅಪಾರವಾದ ಆಸ್ತಿ ಇತ್ತು. ಚರ್ಚಿನ ಆಸ್ತಿ ಎಷ್ಟಿತ್ತೆಂದರೆ, ಯುರೋಪಿನಲ್ಲಿ ವ್ಯವಸಾಯ ಮಾಡುತ್ತಿದ್ದ ಭೂಮಿಯಲ್ಲಿ ಮೂರನೆಯ ಒಂದು ಭಾಗದಷ್ಟು. ಇದು ದೇವರ ಹೆಸರಿನಲ್ಲಿ ದತ್ತಿಯಾಗಿ ಚರ್ಚಿನ ಅಧೀನದಲ್ಲಿತ್ತು.

ತುಂಬಾ ವಿಶಾಲವಾದ ಅರ್ಥದಲ್ಲಿ ಹೇಳುವುದಾದರೆ, ಚರ್ಚು ಕ್ರಿಸ್ತನಲ್ಲಿ ನಂಬಿಕೆ ಯುಳ್ಳವರ ಒಂದು ಕೂಟವಾಗಿತ್ತು. ಕ್ರಿಸ್ತನ ಅನುಯಾಯಿಗಳ ಈ ಸಮೂಹವನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿದೆ. ಒಂದು, ಪುರೋಹಿತರು. ಎರಡು, ಸಾಮಾನ್ಯ ಜನರು. ಚರ್ಚಿನ ಮತ್ತು ರಾಜ್ಯದ ಆಜ್ಞೆಯ ಪ್ರಕಾರ ಮಕ್ಕಳು ಹುಟ್ಟಿದ ಎರಡು ವಾರಗಳಲ್ಲಿ ಅವರ ಮಾತಾ-ಪಿತೃಗಳು ಬ್ಯಾಪ್ಟೈಸ್ ಮಾಡಿಸಬೇಕಿತ್ತು. ಅಂದರೆ ಧರ್ಮದೀಕ್ಷೆ ಕೊಡಿಸಬೇಕಾಗಿತ್ತು. ಪುರೋಹಿತರು ಚರ್ಚಿನ ಅಧಿಕಾರಿಗಳಾಗಿದ್ದರೆ, ಸಾಮಾನ್ಯ ಜನರು ಅವರ ಹಿಂಬಾಲಕರಾಗಿದ್ದರು. ಪುರೋಹಿತರು ವ್ಯಾಖ್ಯಾನಿಸಿದ ಹಾಗೆ ಮತ್ತು ಉದ್ಧರಿಸಿದ ರೀತಿಯಲ್ಲಿ ಸಾಮಾನ್ಯ ಜನರು ಕ್ರೈಸ್ತ ಧರ್ಮದ ಬೋಧನೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಧರ್ಮಕ್ಕೆ ಅವಿಧೇಯತೆ ತೋರಿಸುವುದಾಗಲೀ ಅಥವಾ ಧಾರ್ಮಿಕ ಕ್ರಿಯೆಗಳನ್ನು ವಿಭಿನ್ನ ರೀತಿಯಲ್ಲಿ ಆಚರಿಸುವುದನ್ನಾಗಲೀ ಮಾಡಿದರೆ ಅದು ಒಂದು ತೀವ್ರ ಅಪರಾಧವಾಗಿತ್ತು. ಇದಕ್ಕೆ ಶಿಕ್ಷೆಯನ್ನು ಚರ್ಚು ಮತ್ತು ರಾಜ್ಯ ನೀಡಬಹುದಿತ್ತು.

ಚರ್ಚಿನ ಅಧಿಕಾರಿಗಳು ಮತ್ತು ಪುರೋಹಿತರುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪುರೋಹಿತರು ಮತ್ತು ಧರ್ಮಾತೀತ ಪುರೋಹಿತರು ಕಾನೂನಿನ ನಿಯಮಗಳ ಚೌಕಟ್ಟಿನಲ್ಲಿ ಜೀವಿಸುತ್ತಿದ್ದರು. ಈ ಗುಂಪಿಗೆ ಸನ್ಯಾಸಿಗಳು ಮತ್ತು ಸನ್ಯಾಸಿನಿ ಗಳು ಸೇರಿರುತ್ತಿದ್ದರು. ಸನ್ಯಾಸಿಗಳು ಮತ್ತು ಸನ್ಯಾಸಿನಿಗಳು ತುಂಬಾ ಕಠಿಣವಾದ ಸನ್ಯಾಸ ಜೀವನವನ್ನು ನಡೆಸಬೇಕಾಗಿತ್ತು. ವಿವಿಧ ಆಧ್ಯಾತ್ಮಿಕ ಮಾರ್ಗಗಳನ್ನು ಬೋಧಿಸುವ ಹಲವು ಮಠಗಳು ಅಸ್ತಿತ್ವಕ್ಕೆ ಬಂದವು. ಹತ್ತನೆಯ ಶತಮಾನದ ಚರ್ಚು ಮತ್ತು ಮಠದ ಪದ್ಧತಿಗಳು ಸುಮಾರು ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ಕಂಡವು.

ಕ್ಯಾನನ್ಸ್ ಎಂಬುವ ಪುರೋಹಿತರುಗಳು, ಕ್ಯಾಥೆಡ್ರಲ್ ಚರ್ಚ್‌ನಲ್ಲಿ ನಡೆಯುವ ಪೂಜೆ, ಪುರಸ್ಕಾರಗಳಲ್ಲಿ ಬಿಷಪ್ಪರುಗಳಿಗೆ ಸರದಿಯಂತೆ ಸಹಕರಿಸುತ್ತಿದ್ದರು. ಒಂದು ಕ್ಯಾಥೆಡ್ರಲ್‌ಗೆ ಸಂಬಂಧಿಸಿದ ‘‘ಕ್ಯಾನನ್ಸ್’’ಗಳನ್ನು ಒಂದು ಚ್ಯಾಪ್ಟರ್ ಎಂದು ಕರೆಯುತ್ತಿ ದ್ದರು. ಪ್ರತೀ ಚ್ಯಾಪ್ಟರ್‌ಗೂ ಕೀನ್ ಎಂಬುವ ಮುಖ್ಯ ಅಧಿಕಾರಿಯಿರುತ್ತಿದ್ದನು. ಬಿಷಷ್ಪನನ್ನು ಆಯ್ಕೆ ಮಾಡುವ ಯೋಗ್ಯತೆ ಇದ್ದ ಕ್ಯಾನನ್ಸ್‌ಗಳನ್ನು ಸಫ್ರಗಾಂಡ್ ಎಂದು ಕರೆಯುತ್ತಿದ್ದರು. ಕ್ಯಾನನ್ನರಲ್ಲಿ ಎರಡು ಪಂಥಗಳಿದ್ದವು. ಆಗಸ್ಟೀನಿಯನ್ನರು ಮತ್ತು ಪ್ರೆಮಾನ್‌ಸ್ಟ್ರೆನ್ಸಿಯನ್ನರು.

ಧರ್ಮಾತೀತ ಪುರೋಹಿತರುಗಳೆಂದರೆ ಮಠದಿಂದ ಹೊರಗಡೆ ಇರುವವರು. ಧರ್ಮಾತೀತ ಪುರೋಹಿತರುಗಳಲ್ಲಿ ಏಳು ಶ್ರೇಣಿಗಳಿದ್ದವು. ಬಿಷಪ್ಪನೇ ಈ ಶ್ರೇಣಿಯಲ್ಲಿ ಉನ್ನತ ಸ್ಥಿತಿಯಲ್ಲಿದ್ದವನು ಮತ್ತು ಮೊದಲನೆಯವನು, ಎರಡನೆಯವನು ಪುರೋಹಿತ. ಇನ್ನುಳಿದ ಕೆಳಗಿನವರುಗಳೆಂದರೆ ಕ್ರಮವಾಗಿ ಡೀಕನ್, ಅಕೋಲೈಟ್, ರೀಡರ್ಸ್‌, ಎಕ್ಸ್‌ರ್ಸಿಸ್ಟ್, ಉಪಾಧ್ಯಾಯರುಗಳು, ವಿದ್ಯಾರ್ಥಿಗಳು. ಬಿಷಪ್ಪನೇ ಚರ್ಚಿನ ಬಹಮುಖ್ಯವಾದ ಅಧಿಕಾರಿ. ಬಿಷಪ್ಪನಿಗೆ ಮಿಗಿಲಾದ ಇನ್ನೊಂದು ಕರಣಿಕ ವ್ಯವಸ್ಥೆಯಿರಲಿಲ್ಲ. ದೊಡ್ಡ ನಗರ ಕೇಂದ್ರಗಳಲ್ಲಿನ ಬಿಷಪ್ಪನನ್ನು ಆರ್ಚ್‌ಬಿಷಪ್ ಎಂದು ಕರೆಯುತ್ತಿದ್ದರು. ರೋಮ್, ಕಾನ್ಸ್‌ಸ್ಟಾಂಟಿನೋಪಲ್, ಆಂಟಿಯೋಪ್, ಈಫೆಸಸ್, ಅಲೆಕ್ಸಾಂಡ್ರಿಯಾ ಮತ್ತು ಜೆರೋಸಲೆಮ್ ಅಂತಹ ಸ್ಥಳಗಳಿಗೆ ಆರ್ಚ್ ಬಿಷಪ್ ಅಥವಾ ಮೆಟ್ರೊಪಾಲಿಟನ್ಸ್ ಆದವರಿಗೆ ಇನ್ನೂ ಹೆಚ್ಚಿನ ಗೌರವದ ಪ್ರೇಟ್ರಿಯಾರ್ಕ್ ಎನ್ನುವ ಬಿರುದು ಇರುತ್ತಿತ್ತು. ರೋಮ್ ಚರ್ಚಿನ ಬಿಷಪ್ ಚರ್ಚಿನ ಅಂತಿಮ ಮುಖ್ಯಾಧಿಕಾರಿಯಾಗಿದ್ದನು. ಪೋಪ್ ಇದರಲ್ಲಿ ಅಂತಿಮ ಧರ್ಮಾಧಿಕಾರಿ ಯಾಗಿದ್ದನು. ಕ್ರಿ.ಶ.೧೦೫೯ರ ನಂತರ ಕಾರ್ಡಿನಲ್‌ಗಳ ಕಾಲೇಜುಗಳಿಂದ ಪೋಪರನ್ನು ಆಯ್ಕೆ ಮಾಡುವ ಪದ್ಧತಿ ಹುಟ್ಟಿಕೊಂಡಿತು. ಚುನಾವಣೆಯು ಸ್ಕ್ರೂಟಿನಿ ಎನ್ನುವ ಕ್ರಮದಿಂದ ನಡೆಯುತ್ತಿತ್ತು. ಅಂದರೆ ತಮಗೆ ಒಪ್ಪಿಗೆಯಾದ ಅಭ್ಯರ್ಥಿಯ ಹೆಸರನ್ನು ಒಂದು ಕಾಗದ ಚೂರಿನ ಮೇಲೆ ಬರೆಯುವುದು, ನಂತರ ಎಣಿಸುವುದು. ಒಬ್ಬ ಪೋಪ್‌ನ ಅಂತಿಮ ಆಯ್ಕೆಯಾಗುವವರೆಗೂ, ಇದೇ ಕ್ರಮವನ್ನು ಅನುಸರಿಸುತ್ತಾ ಹೋಗಬೇಕಿತ್ತು. ಬಿಷಪ್ಪನ ಆಯ್ಕೆಗಳಲ್ಲಿ ಪೋಪನ ಅನುಮತಿಯು ಅವಶ್ಯಕವಾಗಿತ್ತು. ನೀತಿ ಮತ್ತು ನಂಬಿಕೆಯ ವಿಷಯಗಳಿಗೆ ಸಂಬಂಧಿಸಿದಂತೆ ಪೋಪನೇ ಅಂತಿಮ ಅಧಿಕಾರಿಯಾಗಿದ್ದನು.

ಬಿಷಪ್ಪನೇ ಶೈಕ್ಷಣಿಕ ಸೇವೆಗಳ ಮುಖ್ಯಸ್ಥ ಹಾಗೂ ಧರ್ಮದ ನ್ಯಾಯಾಲಯಗಳಲ್ಲಿ ಅಧಿಕಾರಿಯಾಗಿದ್ದನು. ‘‘ಆತ್ಮಗಳನ್ನು ಶುದ್ದಿಗೊಳಿಸಲು’’ ಇವನು ಜವಾಬ್ದಾರನಾಗಿರು ತ್ತಿದ್ದನು. ನ್ಯಾಯಗಳಿಗೆ ಸಂಬಂಧಿಸಿದ ಅಧಿಕಾರವನ್ನು ಬಿಷಪ್ಪನು ತನ್ನ ಕೆಳಗಿನ ಅಧಿಕಾರಿ ಯಾದ ಆರ್ಚ್‌ಡೀಕನ್ನನಿಗೆ ಒಪ್ಪಿಸುತ್ತಿದ್ದನು. ಸನ್ಯಾಸಿಗಳ ಮತ್ತು ಪುರೋಹಿತರ ಗುಣ ಗಳಿಗೆ ಸಂಬಂಧಿಸಿದಂತೆ ಉಸ್ತುವಾರಿಯನ್ನು ಬಿಷಪ್ಪನೇ ನೋಡುತ್ತಿದ್ದನಾದರೂ, ಇವನ ಇನ್ನೊಂದು ಅತಿ ಮುಖ್ಯವಾದ ಕೆಲಸ ಚರ್ಚಿನ ಆಸ್ತಿಯ ವ್ಯವಸ್ಥೆಯನ್ನು ನೋಡಿಕೊಳ್ಳುವುದು. ಚರ್ಚಿನ ಆಸ್ತಿಯನ್ನು ಉಳುವುದು, ಗಿರಣಿಗಳನ್ನು ನೋಡಿಕೊಳ್ಳುವುದು, ವ್ಯಾಪಾರ ಮತ್ತು ಸಾಗಣೆಯನ್ನು ನೋಡಿಕೊಳ್ಳುವುದು ಇವನ ಕೆಲಸವೇ ಆಗಿರುತ್ತಿತ್ತು. ವಸ್ತುಸ್ಥಿತಿ ಏನೆಂದರೆ, ಚರ್ಚು ಊಳಿಗಮಾನ್ಯ ಪದ್ಧತಿಗೆ ಅಂಟಿಕೊಂಡಿತ್ತು. ಸುಮಾರಷ್ಟು ಆಸ್ತಿಯು ಊಳಿಗಮಾನ್ಯ ಪದ್ಧತಿಗೆ ಒಳಪಟ್ಟಿತ್ತು ಮತ್ತು ಹಿಡುವಳಿದಾರ ಬಿಷಪ್ಪನೇ ಆಗಿದ್ದು, ಭೂ ಒಡೆಯನಿಗೆ ಸೇವೆ ಸಲ್ಲಿಸಬೇಕಿತ್ತು.

ಬಿಷಪ್ಪನ ನಂತರದ ಉನ್ನತ ಸ್ಥಾನವೆಂದರೆ ಪುರೋಹಿತನದಾಗಿತ್ತು. ಇವನಿಗೂ ಕ್ರೈಸ್ತ ಸಮುದಾಯಕ್ಕೂ ಅಥವಾ ಸಾಮಾನ್ಯ ಜನರಿಗೂ ನೇರ ಸಂಬಂಧವಿದ್ದುದರಿಂದ ಇವನು ತುಂಬ ಮುಖ್ಯವಾದ ವ್ಯಕ್ತಿಯಾಗಿದ್ದನು. ಪುರುಷರು ಮಾತ್ರ ಪುರೋಹಿತರಾಗಿರುತ್ತಿದ್ದರು. ಇವರ ಮುಖ್ಯ ಕೆಲಸ ಧಾರ್ಮಿಕ ಕರ್ಮವನ್ನು ಬೋಧಿಸುವುದಾಗಿತ್ತು. ಇವನ ಕೆಳಗಿನ ವರೆಲ್ಲ (ಶ್ರೇಣೀಯಲ್ಲಿ) ಪುರೋಹಿತನ ಸ್ಥಾನಕ್ಕಾಗಿ ಸಿದ್ಧತೆಯಲ್ಲಿರುವವರಾಗಿರು ತ್ತಿದ್ದರು. ಸಾಮಾನ್ಯ ಜನರ ವಿಷಯಗಳಿಗೆ ಸಂಬಂಧಿಸಿದಂತೆ ಡೀಕನ್ ಮತ್ತು ಉಪಡೀಕನ್ನರುಗಳು ಪುರೋಹಿತನಿಗೆ ಸಹಕರಿಸುತ್ತಿದ್ದರು. ಕ್ರಿ.ಶ.೮ನೆಯ ಶತಮಾನದ ವೇಳೆಗೆ ಅಕೋಲೈಟರು ಮತ್ತು ರೀಡರುಗಳು ಪ್ರಾಯೋಗಿಕವಾದ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದರು. ಉಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಧರ್ಮಾತೀತ ಪುರೋಹಿತ ಶ್ರೇಣಿಯಲ್ಲಿ ಕಡೆಯ ಸ್ಥಾನದವರೆಂದು ಪರಿಗಣಿಸಲ್ಪಟ್ಟಿದ್ದರು. ಉಪಡೀಕನ್ನಿನ ಕೆಳಗಿನವರಿಗೆ ಬ್ರಹ್ಮಚರ್ಯೆ ಅವಶ್ಯಕವಾಗಿರಲಿಲ್ಲ.

ಮಧ್ಯಯುಗದ ಯುರೋಪನ್ನು ಆವರಿಸಿದ್ದ ಅಸ್ಥಿರತೆ ಕ್ರೈಸ್ತ ಚರ್ಚು ಬೆಳೆಯಲು ಪೂರಕವಾಗಿ ಕೆಲಸ ಮಾಡಿತು. ಅಂದಿನ ದಿನಗಳಲ್ಲಿ ಬರ್ಬರತೆ ಮತ್ತು ಅಸ್ಪಷ್ಟತೆಗಳೇ ತುಂಬಿದ್ದ ಸಮಾಜದಲ್ಲಿ ತೃಪ್ತಿ ಮತ್ತು ನೆಮ್ಮದಿಯನ್ನು ಕಾಣಲು ಸಾಮಾನ್ಯ ಜನರು ಕ್ರೈಸ್ತ ಪುರೋಹಿತರುಗಳ ಮೊರೆ ಹೊಕ್ಕರು. ಮಧ್ಯ ಮತ್ತು ಪಶ್ಚಿಮ ಯುರೋಪಿನಲ್ಲಿ ಎಲ್ಲ ತರಹದ ಕ್ರೈಸ್ತ ಧರ್ಮ ಪ್ರಭಾವಗಳಿಗೆ ರೋಮ್ ಕೇಂದ್ರವಾಗಿತ್ತು. ರೋಮ್ ನಗರಕ್ಕೂ ಸಂತ ಪೀಟರ್ ಮತ್ತು ಸಂತ ಪಾಲರಿಗೂ ಇದ್ದ ಸಂಬಂಧದಿಂದಾಗಿ ಮತ್ತು ಸಂತ ಪೀಟರ್ ರೋಮ್ ಚರ್ಚಿನ ಮೊದಲ ಬಿಷಪ್ ಆಗಿದ್ದರಿಂದ ರೋಮಿನ ಬಿಷಪ್ಪಿಗೆ ಗೌರವ ಹೆಚ್ಚಾಗಿತ್ತು. ‘ಸ್ವರ್ಗದ ಬಾಗಿಲಿನ ಬೀಗದ ಕೈ ಸಂತ ಪೀಟರ್‌ನಲ್ಲಿದೆ’ ಎನ್ನುವ ಭಯದಿಂದ ಇದ್ದ ಧರ್ಮಶ್ರದ್ಧೆಯ ಕ್ರಿಶ್ಚಿಯನ್ನರು, ಅವನ ಉತ್ತರಾಧಿಕಾರಿಗಳನ್ನು ಅಪಾರ ಗೌರವ ದಿಂದಲೇ ಕಾಣುತ್ತಿದ್ದರು.

ಚರ್ಚಿನ ಕಾರ್ಯಕ್ರಮಗಳು

ಮಧ್ಯಯುಗದಲ್ಲಿ ಚರ್ಚು ಹಲವಾರು ಕೆಲಸಗಳನ್ನು ಮಾಡುತ್ತಿತ್ತು. ಚರ್ಚು ಒಂದು ಧಾರ್ಮಿಕ ಸಂಸ್ಥೆಯಾಗಿ ಮುಕ್ತಿಯ ವಿಷಯಕ್ಕೆ ಸಂಬಂಧಿಸಿದ ಮತ್ತು ಸಾಮಾನ್ಯ ಜನರಿಗೆ ನೆಮ್ಮದಿ ಮತ್ತು ಸಂತಸವನ್ನು ನೀಡುವ ಧಾರ್ಮಿಕ ಕರ್ಮ ಬೋಧೆಯನ್ನು ಮಾಡುವ ಅಧಿಕಾರವನ್ನೂ ಹೊಂದಿತ್ತು. ಪಾಪಗಳನ್ನು ಕ್ಷಮಿಸುವ ಮತ್ತು ಮುಕ್ತಿಯನ್ನು ನೀಡುವ ಕೆಲಸವನ್ನು ನಿರ್ವಹಿಸುತ್ತಿತ್ತು. ಪಾಪದಿಂದ ಬಿಡುಗಡೆಯನ್ನು ನೀಡಿದ ನಂತರ ಪುರೋಹಿತನು ಪ್ರಾಯಶ್ಚಿತ್ತವನ್ನು, ಶಿಕ್ಷೆಯನ್ನು ನಿರ್ಧರಿಸುತ್ತಿದ್ದನು. ಉಪವಾಸ ಮತ್ತು ಪ್ರಾರ್ಥನೆ ಸಣ್ಣಪುಟ್ಟ ತಪ್ಪುಗಳಿಗೆ ನೀಡುವ ಶಿಕ್ಷೆಗಳಾಗಿದ್ದವು. ಯಾತ್ರೆಯ ಶಿಕ್ಷೆಯನ್ನು ಸಾಮಾನ್ಯವಾಗಿ ದೊಡ್ಡ ತಪ್ಪುಗಳನ್ನು ಮಾಡಿದವರಿಗೆ ವಿಧಿಸಲಾಗುತ್ತಿತ್ತು. ಸಾಮಾಜಿಕವಾಗಿ ಹೇಳುವುದಾದರೆ, ಧಾರ್ಮಿಕ ನಿಯಮಗಳು ಮತ್ತು ಪಾಲನೆಗಳ ನಡುವೆ ಚರ್ಚು ಒಂದು ಸೇತುವೆಯಾಗಿತ್ತು. ಧಾರ್ಮಿಕ ಕರ್ಮಬೋಧೆಯ ಮುಖಾಂತರ ಆಗುವ ಮದುವೆಯೇ ಮಧ್ಯಯುಗದ ಕಾನೂನುಬದ್ಧವಿವಾಹವಾಗಿತ್ತು. ಮದುವೆಯನ್ನು ‘‘ಚರ್ಚಿನ ಕಣ್ಮುಂದೆಯೇ’’ ನಡೆಸಲಾಗು ತ್ತಿತ್ತು ಮತ್ತು ಪುರೋಹಿತನೇ ಈ ಮದುವೆಯನ್ನು ಊರ್ಜಿತವೆಂದು ಹೇಳುವ ಸಾಕ್ಷಿಯಾಗಿದ್ದನು.

ಇಂದು ಆಧುನಿಕ ರಾಜ್ಯಗಳು ಏನನ್ನು ಮಾಡುತ್ತಿವೆಯೋ ಆ ಎಲ್ಲಾ ಸಾಮಾಜಿಕ ಸೇವೆಗಳನ್ನು ಮಾಡುವ ವಿಶೇಷವಾದ ಒಂದು ವ್ಯವಸ್ಥೆ ಮಧ್ಯಯುಗದ ಚರ್ಚು ಮಾಡುತ್ತಿತ್ತು. ರಸ್ತೆಗಳನ್ನು ನಿರ್ಮಿಸುವುದು, ಸೇತುವೆಗಳನ್ನು ಕಟ್ಟುವುದು, ಅಸಹಾಯಕರಿಗೆ ಆಹಾರ ನೀಡುವುದು ಮತ್ತು ಬಡವರಿಗೆ ದಾನ ನೀಡುವುದು ಚರ್ಚಿನ ಕೆಲಸವಾಗಿತ್ತು. ಚರ್ಚಿನ ಆಸ್ತಿಪಾಸ್ತಿಗಳಿಂದ ಸಂದಾಯವಾದ ಮೂರನೆಯ ಒಂದು ಭಾಗವನ್ನು ಬಡವರ ಮೇಲೆ, ಅನಾಥಾಲಯ ಮತ್ತು ಮುಂತಾದ ಸಾಮಾಜಿಕ ಸೇವೆಗಳ ಮೇಲೆ ಖರ್ಚು ಮಾಡಲಾಗುತ್ತಿತ್ತು. ಆಸ್ಪತ್ರೆಗಳನ್ನು ನಡೆಸುತ್ತಿದ್ದ ಮತ್ತು ರೋಗಿಗಳನ್ನು ಶುಶ್ರೂಷೆ ಮಾಡುತ್ತಿದ್ದ ಒಂದೇ ಸಂಸ್ಥೆಯೆಂದರೆ, ಚರ್ಚಾಗಿತ್ತು.

ಶಿಕ್ಷಣವನ್ನು ಧರ್ಮಕ್ಕೆ ಪೂರಕವಾದ ಅಂಶ ಎಂದು ಪರಿಗಣಿಸಲಾಗಿತ್ತು. ಚರ್ಚು ಶಾಲೆಗಳನ್ನು ತೆರೆದು, ಪಠ್ಯಕ್ರಮವನ್ನು ಗೊತ್ತುಮಾಡಿ, ಬೋಧಕರುಗಳನ್ನು ನೇಮಿಸುತ್ತಿತ್ತು. ಆರಂಭಿಕ ಶಿಕ್ಷಣವು ಮಠಗಳಲ್ಲಿಯೇ ನಡೆಯುತ್ತಿತ್ತು. ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಆಶ್ರಮಗಳಲ್ಲಿ ಪಾಠ ಹೇಳಲಾಗುತ್ತಿತ್ತು. ಆರಾಧನಾ ಮಂದಿರದ ಶಾಲೆಗಳಲ್ಲಿ ಸ್ವತಂತ್ರ ಕಲೆಗಳ ಅಧ್ಯಯನಕ್ಕೆ ಉತ್ತೇಜನ ನೀಡಲಾಗುತ್ತಿತ್ತು. ಇವುಗಳಲ್ಲಿ ಧರ್ಮಶಾಸ್ತ್ರ, ಔಷಧಿ, ಕಾನೂನು ಮುಂತಾದವುಗಳು ೧೩ನೆಯ ಶತಮಾನದ ವೇಳೆಗೆ ವಿಶ್ವವಿದ್ಯಾನಿಲಯಗಳ ವಸ್ತು ವಿಷಯವಾಗುವ ಮಟ್ಟಕ್ಕೆ ಬೆಳೆದವು.

ಮಧ್ಯಯುಗದ ಯುರೋಪಿನಲ್ಲಿ ನ್ಯಾಯಿಕ ತೀರ್ಮಾನಗಳನ್ನು ಕೂಡ ಚರ್ಚು ನಿಭಾಯಿಸುತ್ತಿತ್ತು. ಅಪರಾಧ ಮತ್ತು ನಾಗರಿಕ ಕಟ್ಟಳೆಗಳನ್ನು ಚರ್ಚಿನ ನ್ಯಾಯಾಲಯಕ್ಕೆ ತರಲು ಅವಕಾಶವಿತ್ತು. ಸೇವಾ ಮನೋಭಾವದ ಧೋರಣೆ ಮತ್ತು ನಿಜವಾದ ಧರ್ಮಪ್ರಸಾರದ ಶ್ರದ್ಧೆ ಚರ್ಚಿನ ಮತ್ತು ಆಶ್ರಮಗಳ ಗೌರವ, ಘನತೆಯನ್ನು ಸಮಾಜದ ದೃಷ್ಟಿಯಲ್ಲಿ ಹೆಚ್ಚಿಸಿತ್ತು. ಈ ಸಂದರ್ಭದಲ್ಲಿ ಸಂತ ಬೇಸಿಲ್ (ಸು. ೩೩೦-೩೭೦), ಸಂತ ಬೆನಿಡಿಕ್ಟ್(ಸು.೪೮೦-೫೪೩), ಸಂತ ಅಗಸ್ಟೈನ್(ಸು.೬೭೩-೭೩೩)ಮತ್ತು ಸಂತ ಬೆರ್ನಾರ್ಡ್ ಗಳ ಸೇವೆಯನ್ನು ಸ್ಮರಿಸಬಹುದಾಗಿದೆ. ಇಲ್ಲಿ ಈ ಮಹಾನುಭಾವರುಗಳು ಆರಂಭಿಸಿದ ಮಠಗಳ ಚಳವಳಿ ಕ್ರೈಸ್ತ ಧರ್ಮವನ್ನು ಯುರೋಪಿನಲ್ಲಿ ಪ್ರಚಾರ ಮಾಡುವುದರಲ್ಲಿ ಮತ್ತು ಸಮಾಜ ಸೇವೆಯನ್ನು ಹುಟ್ಟು ಹಾಕುವುದರಲ್ಲಿ ಸಹಕಾರಿಯಾಯಿತು.

ಧರ್ಮ ಯುದ್ಧಗಳು

ಪೌರಾತ್ಯ ಮತ್ತು ಪಾಶ್ಚಿಮಾತ್ಯ ನಾಗರಿಕತೆಗಳ ನಡುವೆ ಆರಂಭವಾದ ಯುದ್ಧವೇ ಧರ್ಮಯುದ್ಧಗಳು. ಪರ್ಸಿಯನ್ನರು ಗ್ರೀಸನ್ನು ದಾಳಿ ಮಾಡಿದಂದಿನಿಂದ ಇದು ಆರಂಭ ವಾಯಿತು. ಇದು ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ನಡುವಿನ ಗುದ್ದಾಟದ ಹಂತವೂ ಆಗಿದೆ. ಕ್ರಿ.ಶ.೭ನೆಯ ಮತ್ತು ೮ನೆಯ ಶತಮಾನಗಳಲ್ಲಿ ಇಸ್ಲಾಂ ಧರ್ಮವು ದಮನಕಾರಿ ಯಾಗಿತ್ತು. ಸ್ಪೈಯಿನ್ ರಾಜ್ಯವನ್ನು ಸಂಪೂರ್ಣವಾಗಿ ಗೆದ್ದುಕೊಂಡು ಮುಸಲ್ಮಾನರು ಫ್ರಾನ್ಸಿನ ಮಧ್ಯಭಾಗಕ್ಕೆ ಪ್ರವೇಶ ಮಾಡಿದ್ದರು. ಟೌರ್ಸ್‌ನಲ್ಲಿ ನಡೆದ ಯುದ್ಧದ ನಂತರ ಇವರನ್ನು ಹಿಂದಕ್ಕೆ ಅಟ್ಟಲಾಯಿತು. ಧರ್ಮಯುದ್ಧಗಳು ಕ್ರೈಸ್ತಮತೀಯರು ಮಾಡಿದ ಪ್ರತಿ ದಮನಕಾರವಾಗಿದೆ. ಕ್ರಿಸ್ತನ ಅನುಯಾಯಿಗಳು ಕ್ರೈಸ್ತ ಧರ್ಮ ಒಂದೇ ನಿಜವಾದ ಧರ್ಮ ಎಂದೂ, ಉಳಿದ ಧರ್ಮಗಳು ಪೊಳ್ಳು ಹಾಗೂ ಮೂರ್ತಿ ಆರಾಧನೆಯದೆಂದು ತಿಳಿದಿದ್ದರು. ನಿಜವಾದ ಕ್ರೈಸ್ತ ಧರ್ಮೀಯರು ತಮ್ಮ ಧರ್ಮಾಚರಣೆ ಯಲ್ಲಿ ಮುಕ್ತಿ ಅಡಗಿದೆ ಎಂದು ಭಾವಿಸಿದ್ದರು. ಧರ್ಮಪ್ರಚಾರ ವೊಂದರಿಂದಲೇ ಧರ್ಮವನ್ನು ಕಾಪಾಡಿಸಿಕೊಳ್ಳುವುದು ಅಸಾಧ್ಯವಾದಾಗಲೆಲ್ಲ ಕತ್ತಿ ಮತ್ತು ಶಕ್ತಿಯನ್ನು ಬಳಸುವುದು ನ್ಯಾಯಸಮ್ಮತವಾದದ್ದೆಂದು ನಂಬಿದ್ದರು. ಆದ್ದರಿಂದ ಮಧ್ಯಯುಗದ ಯುರೋಪಿನಲ್ಲಿ ಧರ್ಮಯುದ್ಧಗಳು ‘‘ಚರ್ಚಿನ ಹೋರಾಟ’’ ಎಂಬ ತತ್ವವನ್ನು ಹೊಂದಿದ್ದವು.

ಬೈಜಾಂಟೈನ್ ಸಾಮ್ರಾಜ್ಯವು ಪತನವಾದ ನಂತರ ಧರ್ಮಯುದ್ಧಗಳಿಗೆ ಮೂಲ ವಾತಾವರಣ ಸೃಷ್ಟಿಯಾಯಿತು. ಬಾರ್ಬೇರಿಯನ್ನರ ವಿರುದ್ಧ ಕೊನೆಗಾಣದ ಯುದ್ಧವು ಅಪಾರವಾದಷ್ಟು ಜೀವಿಗಳನ್ನು ಬಲಿ ತೆಗೆದುಕೊಂಡಿತು. ಇದರ ಜತೆಗೆ ಪರ್ಷಿಯನ್ನರ ಜತೆಗಿನ ಇವರ ಯುದ್ಧ ಮುಗಿದಿತ್ತು. ದೊರೆತನಗಳ ನಡುವಿನ ಬಡಿದಾಟಗಳು ಕಾಲದಿಂದ ಕಾಲಕ್ಕೆ ಮುಂದುವರೆದು ಅಪಾರವಾದ ನಷ್ಟವನ್ನು ಮಾಡಿದ್ದವು. ಧಾರ್ಮಿಕ ಜಗಳಗಳು ಕ್ರೈಸ್ತ ವೈದಿಕತೆಯ ಒಗ್ಗಟ್ಟನ್ನು ನಾಶಪಡಿಸುತ್ತಿದ್ದವು. ರಾಜಪ್ರಭುತ್ವದ ಮಧ್ಯ ಪ್ರವೇಶದಿಂದಾಗಿ ಕಾನ್‌ಸ್ಟಾಂಟಿನೋಪಲ್ಲಿನ ಆರ್ಚ್ ಬಿಷಪ್ ಪೆಟ್ರಿಯಾರ್ಕ್‌ನಿಗೆ ಪಶ್ಚಿಮ ಯುರೋಪಿನಲ್ಲಿನ ಪೋಪ್‌ನಂತೆ ಅಧಿಕಾರ ಚಲಾಯಿಸಲು ಆಗಲಿಲ್ಲ. ಭಾರವಾದ ತೆರಿಗೆ ವಸೂಲಿಯಿಂದಾಗಿ ಆದಾಯದ ಮೂಲಗಳು ಮುಗ್ಗರಿಸಿದವು. ಇಂತಹ ತೆರಿಗೆ ಗಡಿಯಲ್ಲಿ ನಡೆಯುತ್ತಿರುವ ಯುದ್ಧಗಳ ಖರ್ಚನ್ನು ನೋಡಿಕೊಳ್ಳಲು ಅವಶ್ಯಕವಾಗಿತ್ತು.

ಅರಬ್ಬರ ಸಾಮ್ರಾಜ್ಯ ವಿಸ್ತಾರಗೊಂಡಿದ್ದಾಗ ಟರ್ಕರು ಅವರ ಅಡಿಯಾಳುಗಳಾಗಿದ್ದರು. ಆದರೆ ಅರಬ್ಬರ ಸಾಮ್ರಾಜ್ಯ ಪತನಗೊಂಡ ನಂತರ ಟರ್ಕರು ಮತ್ತೆ ತಲೆಯೆತ್ತಿದರು. ಅರಬ್ಬರ ವಿರುದ್ಧ ನಡೆದ ದಂಗೆಯಲ್ಲಿ ಸೆಲ್ಜುಕ್ ಟರ್ಕರ ನಾಯಕನಾಗಿದ್ದನು. ಈ ದಂಗೆಯು ಯಶಸ್ವಿಯಾದ ನಂತರ ಟರ್ಕರು ತಮ್ಮನ್ನು ತಾವು ‘‘ಸೆಲ್ಜುಕ್ ಟರ್ಕ್’’ ಎಂದು ಕರೆದುಕೊಂಡರು. ಸೆಲ್ಜುಕನ ಮೊಮ್ಮಗ ಬಾಗ್ದಾದಿನ ಖಲಿಫತ್‌ನನ್ನು ಸೋಲಿಸಿದನು ಮತ್ತು ಇವನ ಮಗ ಪೂರ್ವ ರೋಮನ್ ಚಕ್ರವರ್ತಿಯನ್ನು ಕ್ರಿ.ಶ.೧೦೦೭ರಲ್ಲಿ ಮಂಜಿಕೆರ್ಟ್ ಎನ್ನುವಲ್ಲಿ ಸೋಲಿಸಿದನು. ಈ ಘಟನೆಯ ನಂತರ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಶತ್ರುಗಳಂತೆ ಬೆಳೆಯಲು ಆರಂಭಿಸಿದವು. ಈ ಪರಿಸ್ಥಿತಿಯು ಮುಂದಿನ ಮಧ್ಯಯುಗದ ಯುರೋಪಿನ ನಾಗರಿಕತೆಯನ್ನು ರೂಪಿಸಿತು. ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದ ಸ್ಥಳಗಳಲ್ಲಿ ಕ್ರಿಶ್ಚಿಯನ್ನರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಹಾಗೂ ಟರ್ಕರು ಕ್ರಿಶ್ಚಿಯನ್ನರ ಮೇಲೆ ದಬ್ಬಾಳಿಕೆ ಮತ್ತು ಹಿಂಸಾಚಾರ ನಡೆಸುತ್ತಿದ್ದಾರೆ ಎಂಬುವ ಕಥೆಗಳು ಯುರೋಪಿನ ತುಂಬ ಹಬ್ಬಿದವು. ಜೆರುಸಲೆಮಿಗೆ ಬರುತ್ತಿದ್ದ ಯಾತ್ರಾರ್ಥಿಗಳನ್ನು ಕೂಡ ಒಳಗೆ ಬರಲು ಅವಕಾಶ ನೀಡಿರಲಿಲ್ಲ. ಪೋಪ್ ಎರಡನೆಯ ಉರ್ಬನ್ ಎಂಬುವ ವನು ಕ್ರೈಸ್ತ ಧರ್ಮ ಉಳಿಸಿ, ಜೀಸಸನ ಪಂಥವನ್ನು ಉಳಿಸಿ ಎಂದು ಕೂಗೆಬ್ಬಿಸಿ ದನು. ಈ ಕರೆಗೆ ಪೂರ್ವ ರೋಮನ್ ಸಾಮ್ರಾಜ್ಯದ ಚಕ್ರವರ್ತಿ ಒಂದನೇ ಅಲೆಸ್ಯೂಸ್ ಕೂಡ ದನಿಗೂಡಿಸಿದನು.

ಪೋಪನು ಕ್ರಿ.ಶ.೧೦೯೫ರಲ್ಲಿ ಕರೆದಿದ್ದ ‘‘ಕ್ಲೆರ್ಮಾಂತ್’’ ಎನ್ನುವ ಸಭೆಯಲ್ಲಿ ಅಲ್ಲಾನ ಅನುಯಾಯಿಗಳಾದ ಮುಸಲ್ಮಾನರ ವಿರುದ್ಧ ಯುದ್ಧ ಮಾಡುವಂತೆ ಕ್ರೈಸ್ತ ಮತಸ್ಥರಿಗೆ ಕರೆ ನೀಡಿದನು. ಪವಿತ್ರ ಭೂಮಿಗಾಗಿ ಯುದ್ಧ ಮಾಡಬಯಸುವ ಎಲ್ಲ ಯೋಧರಿಗೂ ಶಿಲುಬೆಯನ್ನು ಹಂಚಲಾಯಿತು. ಅಂದಿನಿಂದ ಅವರನ್ನು ‘‘ಧರ್ಮ ಯೋಧರು’’(ಕ್ರುಸೇಡರ್ಸ್‌) ಎಂದೂ ಅವರ ಸಾಹಸಮಯ ಹೋರಾಟವನ್ನು ‘‘ಧರ್ಮ ಯುದ್ಧ’’ (ಕ್ರೂಸೇಡ್ಸ್) ಎಂದೂ ಕರೆಯಲಾಯಿತು.

ಕ್ರಿ.ಶ.೧೧ ರಿಂದ ೧೩ನೆಯ ಶತಮಾನದವರೆಗಿನ ಮಧ್ಯಯುಗದಲ್ಲಿ ಸುಮಾರು ೯ ಧರ್ಮಯುದ್ಧಗಳು ನಡೆದವು. ಕೆಲವು ಧರ್ಮಯುದ್ಧಗಳು ಯಶಸ್ವಿಯಾದವು, ಕೆಲವು ಸೋತವು. ಇನ್ನೂ ಕೆಲವು ಯುದ್ಧಗಳು ಧರ್ಮಯೋಧರಲ್ಲಿದ್ದ ದೈವಿಕತೆ ಹಾಗೂ ಸ್ವಾರ್ಥವನ್ನು ಹೊರಗೆಡವಿದವು.

ಕ್ರಿ.ಶ.೧೦೯೫-೧೦೯೯ರಲ್ಲಿ ಕಟ್ಟಕಡೆಯ ಧರ್ಮಯುದ್ಧ ನಡೆಯಿತು. ಈ ಯುದ್ಧವನ್ನು ಗಾಡ್‌ಫ್ರೆಡಿ ಬುಯಿಲಾನ್, ನಾರ್ಮಡಿಯ ರಾಬರ್ಟ್ ಮತ್ತು ಬೊಹೆಮಂಡ್ ಟೆಂಕ್ರಿಡ್ ಎಂಬುವ ಶ್ರೀಮಂತರುಗಳು ಮಾಡಿದರು. ಇವರು ಟರ್ಕರನ್ನು ಸೋಲಿಸಿ ಜೆರುಸಲೇಮನ್ನು ಕ್ರಿ.ಶ.೧೦೯೯ರಲ್ಲಿ ವಶಪಡಿಸಿಕೊಂಡರು.

ಕ್ರಿ.ಶ.೧೧೪೭ರಿಂದ ೧೧೪೯ರವರೆಗೆ ಎರಡನೆಯ ಧರ್ಮಯುದ್ಧವು ನಡೆಯಿತು. ಝಂಗಿ ಎಂಬುವವನ ಪ್ರಬಲವಾದ ನಾಯಕತ್ವದಲ್ಲಿ ಮುಸಲ್ಮಾನರು ತಲೆಯೆತ್ತಿದರು. ಝಂಗಿಯು ೨೫ನೆಯ ಡಿಸೆಂಬರ್ ೧೧೪೪ರಲ್ಲಿ ಎಡಿಸ್ಸ ಎಂಬ ಸ್ಥಳವನ್ನು ಆಕ್ರಮಿಸಿ ಕೊಂಡನು. ಇದನ್ನು ಕಡ್ಡಾಯವಾಗಿ ವಿರೋಧಿಸಲಾಯಿತು ಮತ್ತು ಕ್ಲಿವಿಯಾದ ಸಂತ ಬೆರ್ನಾರ್ಡ್ ಎಂಬುವನು ಇದರ ವಿರುದ್ಧ ಕರೆಯೊಂದನ್ನು ನೀಡಿದಾಗ, ಜರ್ಮನಿಯ ಚಕ್ರವರ್ತಿ ಮೂರನೆ ಕಾನ್ರಾಡ್ ಮತ್ತು ಫ್ರಾನ್ಸ್‌ನ ರಾಜ ಏಳನೆಯ ಲೂಯಿ ಕರೆಗೆ ಓಗೊಟ್ಟು ಧಾರ್ಮಿಕ ಜವಾಬ್ದಾರಿಯನ್ನು ಹೊತ್ತುಕೊಂಡರು. ಇವರುಗಳ ಮಧ್ಯ ತಮ್ಮದೇ ಆದ ಸಮಸ್ಯೆಗಳಿದ್ದುದರಿಂದ ಟರ್ಕಿಯ ಝಂಗಿಯನ್ನು ನೇರವಾಗಿ ಯುದ್ಧಕ್ಕೆ ಕರೆಯದೇ ಬೈಜಾಂಟೈನ್ ಚಕ್ರಾಧಿಪತ್ಯದ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದರು. ಏಷಿಯಾ ಮೈನರ್, ಪ್ಯಾಲೆಸ್ಟೈನ್‌ನಲ್ಲಿ ಇವರಿಗೆ ಹೆಚ್ಚಿನ ಜಯ ಲಭಿಸಲಿಲ್ಲ. ಇದೊಂದು ದೊಡ್ಡ ವೈಫಲ್ಯವಾಗಿತ್ತು.

ಈ ಮಧ್ಯ, ನೂರ್-ಉದ್ದೀನ್ ಮತ್ತು ಸಲಉದ್ದಿನ್‌ರ ನಾಯಕತ್ವದಡಿಯಲ್ಲಿ ಮುಸಲ್ಮಾನರು ತುಂಬ ಬಿರುಸಾಗಿ ತಲೆಯೆತ್ತಿದರು. ಇವರು ಈಜಿಪ್ಟ್ ಮತ್ತು ಬಾಗ್ದಾದನ್ನು ಗೆದ್ದುಕೊಂಡರು. ಕ್ರಿ.ಶ.೧೧೮೭ನೇ ಅಕ್ಟೋಬರ್ ೭ರಂದು ಜೆರುಸೆಲೇಮನ್ನು ಕೂಡ ವಶಪಡಿಸಿಕೊಂಡರು. ಪೋಪ್ ಮೂರನೆ ಉರ್ಬನ್ ಈ ನೋವಿನಿಂದ ಸತ್ತನೆಂದು ಹೇಳಲಾಗಿದೆ. ಮತ್ತೆ ಇವನ ಉತ್ತರಾಧಿಕಾರಿ ಏಳನೆ ಗ್ರಿಗೋರಿ ಧರ್ಮಯುದ್ಧಕ್ಕೆ ಕರೆ ನೀಡಿ, ಎಲ್ಲಾ ಕ್ರೈಸ್ತರು ಪವಿತ್ರನಗರವನ್ನು ಮರಳಿಪಡೆಯುವ ತನಕ ಯುದ್ಧಮಾಡಬೇಕೆಂದು ಹೇಳಿದನು. ಈ ಮೂರನೆಯ ಧರ್ಮ ಯುದ್ಧವನ್ನು ಇಂಗ್ಲೆಂಡಿನ ರಾಜ ಒಂದನೆ ರಿಚರ್ಡ್ ಮತ್ತು ಫ್ರಾನ್ಸಿನ ರಾಜ ಎರಡನೆಯ ಫಿಲಿಪ್ (ಅಗಸ್ಟಸ್) ಮತ್ತು ಕೆಂಪುಗಡ್ಡದ ಚಕ್ರವರ್ತಿ ಫ್ರೆಡರಿಕ್ ಬಾರ್‌ಬೋರಸ್ಸರು ಜತೆಗೂಡಿ ನಡೆಸಿದರು. ಚಕ್ರವರ್ತಿಯು ರಸ್ತೆಯಲ್ಲಿ ಮಡಿದನು. ಫಿಲಿಪ್ ಮತ್ತು ರಿಚರ್ಡ್ ಜಗಳವಾಡಿಕೊಂಡ ಪರಿಣಾಮವಾಗಿ ಫಿಲಿಪ್ಪನು ಮಧ್ಯದಾರಿಯಿಂದಲೇ ಫ್ರಾನ್ಸಿಗೆ ಮರಳಿದನು. ರಿಚರ್ಡ್ ಯುದ್ಧದಲ್ಲಿ ಕಾದಾಡಿದನಾದರೂ ಜೆರುಸಲೇಂ ಅನ್ನು ಮರಳಿಪಡೆಯಲಾಗದೆ, ಸಲಉದ್ದೀನನ ಜತೆ ಒಂದು ಒಪ್ಪಂದವನ್ನು ಮಾಡಿಕೊಂಡು ಹಿಂತಿರುಗಿದನು. ಜಯ ಎಂಥದ್ದೇ ಆಗಿರಬಹುದು, ಇದು ಸಾಧ್ಯವಾದದ್ದು ಮೂರನೆಯ ಧರ್ಮಯುದ್ಧದಲ್ಲಿ ಮಾತ್ರ. ಇದಕ್ಕೆ ಕಾರಣ ಒಂದನೇ ರಿಚರ್ಡ್‌ನ ಚಾಣಾಕ್ಷತನ ಮತ್ತು ಸಲಉದ್ದೀನನ ಔದಾರ್ಯತೆ.

ಕ್ರಿ.ಶ.೧೨೦೨ ರಿಂದ ೧೨೦೪ರ ನಡುವೆ ನಾಲ್ಕನೆಯ ಧರ್ಮಯುದ್ಧವು ನಡೆಯಿತು. ಚಾಂಪೇನಿನ ಥಿಯೋಬಾಲ್ಡ್, ನ್ಯೂಯೆಲಿಯ ಫೆಲ್ಕ್ ಮತ್ತು ವಿಲ್ಲೆಲರ್ಡೌನ್ ಎಂಬುವ ಶ್ರೀಮಂತರುಗಳು ಈ ಯುದ್ಧವನ್ನು ಮಾಡಿದರು. ಈ ಕರೆಯನ್ನು ಪೋಪ್ ಮೂರನೆಯ ಇನ್ನೋಸೆಂಟ್ ನೀಡಿದ್ದನು. ಈಜಿಪ್ಟ್‌ನ ಮಾರ್ಗವಾಗಿ ಹೊರಟರಾದರೂ, ಇವರನ್ನು ಹಿಮ್ಮೆಟ್ಟಿಸಲಾಗಿ, ಇವರು ಬೈಜಾಂಟೈನಿನ ರಾಜಧಾನಿಯನ್ನು ವಶಪಡಿಸಿಕೊಂಡರು. ಜೆರುಸಲೇಮನ್ನು ವಶಪಡಿಸಿಕೊಳ್ಳುವ ಬದಲು ಕಾನ್ಸ್‌ಸ್ಟಾಂಟಿನೋಪಲ್‌ನ್ನು ಧ್ವಂಸ ಮಾಡಿದರು. ಈ ಧರ್ಮಯುದ್ಧವನ್ನು ‘‘ಮಕ್ಕಳ ಯುದ್ಧ’’ ಎಂದು ಕರೆದಿದ್ದಾರೆ. ಸಾವಿರಾರು ಮಕ್ಕಳು ಒಟ್ಟುಗೂಡಿಕೊಂಡು ಇಸ್ಲಾಂ ಸೈನ್ಯದ ವಿರುದ್ಧ ಯುದ್ಧ ಮಾಡಲು ಹೊರಟರು. ಜರ್ಮನಿಯಲ್ಲಿ ಒಂದುಗೂಡಿಸಲಾಗಿದ್ದ ಒಂದು ಮಕ್ಕಳ ತಂಡವು ಕೆಲೋನಿನ ನಿಕೋಲಸ್ಸನ ನಾಯಕತ್ವದಲ್ಲಿ ಯುದ್ಧ ಭೂಮಿಗೆ ಹೋಯಿತು. ಮತ್ತೊಂದು ಗುಂಪು ಕ್ಲಾಯ್ಸೆನ ಸ್ಟೀಫನ್ ಎಂಬುವವನ ನಾಯಕತ್ವದಲ್ಲಿ ಫ್ರಾನ್ಸಿನಿಂದ ಬಂದಿತ್ತು. ಇವರು ಇಟಲಿ ಅಥವಾ ಮಾರ್ಸಿಲಸ್ ಕಡೆಗೆ ಮಂತ್ರಗಳನ್ನು ಮತ್ತು ಪ್ರಾರ್ಥನೆಗಳನ್ನು ಹೇಳುತ್ತ ಹೊರಟರು. ಅವರ ದುಃಖ ದಾರುಣವಾದುದಾಗಿತ್ತು. ಹಸಿವಿನಿಂದ ಮತ್ತು ರಕ್ಷಣೆಯಿಲ್ಲದೆ ನೂರಾರು ಮಕ್ಕಳು ಸಾವನ್ನಪ್ಪಿದರು. ಮಾರ್ಸಲಿಸ್ ಅಥವಾ ಜಿನೀವ ತಲುಪಿದವರು ಮುಸಲ್ಮಾನ ಗುಲಾಮ ವ್ಯಾಪಾರಿಗಳ ಕೈಗೆ ಸಿಕ್ಕಿಬಿದ್ದು, ಈಜಿಪ್ಟಿನ ಮತ್ತು ಸಿರಿಯಾದ ಮಾರುಕಟ್ಟೆಗಳಲ್ಲಿ ಮಾರಾಟವಾದರು. ಪೋಪನ ಆಶೀರ್ವಾದವನ್ನು ಪಡೆಯಲು ರೋಮಿಗೆ ಮರಳಿದ ಕೆಲವರನ್ನು ಪೋಪ್ ಮೂರನೆಯ ಇನ್ನೊಸೆಂಟ್ ಮನೆಗೆ ಮರಳುವಂತೆ ಒತ್ತಾಯಿಸಿದನು. ನಾಲ್ಕನೆಯ ಧರ್ಮಯುದ್ಧವು ಒಂದು ದುರಂತ ಕಥೆ ಎನ್ನುವುದು ಮಧ್ಯಯುಗದ ಕ್ರೌರ್ಯತೆಗೆ ಹಿಡಿದ ಕನ್ನಡಿಯಾಗಿದೆ. ಮಕ್ಕಳನ್ನು ತಪ್ಪು ದಾರಿಗೆಳೆದ, ಧರ್ಮದ, ತತ್ವದ ಹೆಸರಿನಲ್ಲಿ ತ್ಯಾಗವನ್ನು ಬಯಸಿದ ಕಠೋರವಾದ ಮಾನವ ತಪ್ಪಾಗಿತ್ತು. ಇದೊಂದು ದುಃಖದ ಮತ್ತು ನಾಚಿಕೆಯ ದುರಂತವಾಗಿತ್ತು.

ಕ್ರಿ.ಶ.೧೨೧೭ರಿಂದ ೧೨೨೧ರವರೆಗೆ ನಡೆದ ಐದನೆ ಧರ್ಮಯುದ್ಧದ ಮುಂದಾಳತ್ವವನ್ನೂ ರಾಜ ಎರಡನೆಯ ಫ್ರೆಡರಿಕ್ ವಹಿಸಿದ್ದು, ಇದು ಪೋಪರುಗಳ ಮತ್ತು ಹೊಹೆನ್‌ಸ್ಟೆಫೆನ್ ಚಕ್ರವರ್ತಿಗಳ ನಡುವೆ ನಡೆದ ಬಡಿದಾಟವಾಗಿತ್ತು. ಇವನು ಸಾಧಿಸಿದನೆಂದು ಹೇಳಲಾಗಿರುವ ಎಲ್ಲಾ ವಿಜಯಗಳು ಈಜಿಪ್ಟಿನ ಚಕ್ರವರ್ತಿ ಎರಡನೆಯ ಫ್ರೆಡರಿಕನಿಗೆ ವೈಯಕ್ತಿಕವಾಗಿ ನೀಡಿರುವ ರಿಯಾಯಿತಿಗಳಾಗಿವೆ.

ಫ್ರಾನ್ಸಿನ ಒಂಭತ್ತನೆ ಲೂಯಿ ಕ್ರಿ.ಶ.೧೨೪೮ರಲ್ಲಿ ಮತ್ತು ಕ್ರಿ.ಶ.೧೨೭೦ರಲ್ಲಿ ಕ್ರಮವಾಗಿ ಧರ್ಮಯುದ್ಧಗಳ ನಾಯಕತ್ವವನ್ನು ವಹಿಸಿದ್ದನು. ಇವರ ಮುಖ್ಯ ಉದ್ದೇಶ ಈಜಿಪ್ಟನ್ನು ಸೇರ್ಪಡೆ ಮಾಡಿಕೊಂಡು, ಅದನ್ನು ಸಿರಿಯ ಮತ್ತು ಪ್ಯಾಲೆಸ್ಟೈನಿನ ಮೇಲೆ ದಾಳಿ ಮಾಡಲು ಮುಖ್ಯ ಪ್ರದೇಶವನ್ನಾಗಿ ಬಳಸಿಕೊಳ್ಳುವುದಾಗಿತ್ತು. ಮೊದಲನೆಯ ಯುದ್ಧದಲ್ಲಿ ೯ನೆಯ ಲೂಯಿಯನ್ನು ಸೆರೆಹಿಡಿಯಲಾಗಿ, ದುಬಾರಿ ದಂಡಕೊಟ್ಟು ಬಿಡಿಸಿ ಕೊಳ್ಳಲಾಯಿತು. ಆದರೆ ಕ್ರಿ.ಶ.೧೨೭೦ರ ಯುದ್ಧದಲ್ಲಿ ೯ನೆಯ ಲೂಯಿ ಮಡಿದನು. ಇದು ಧರ್ಮಯುದ್ಧಗಳ ಕಾಲಕ್ಕೆ ಅಂತ್ಯವನ್ನು ಹಾಕಿತು.

ಇನ್ನೆರಡು ಧರ್ಮಯುದ್ಧಗಳು ಕಾಲದ ದೃಷ್ಟಿಯಿಂದ ಅಷ್ಟೇನೂ ಮುಖ್ಯವಾದವುಗಳಲ್ಲ. ಮುಸಲ್ಮಾನ ಅಧಿಕಾರವನ್ನು ಕೆಳಗಿಳಿಸಲು ಮಾಡಿದ ನಾಮಮಾತ್ರ ಪ್ರಯತ್ನಗಳಾಗಿದ್ದು, ವೈಫಲ್ಯಗಳಾಗಿವೆ. ೧೩ನೆಯ ಶತಮಾನದ ಕಡೆಯ ವೇಳೆಗೆ ಧರ್ಮಯುದ್ಧಗಳಿಂದ ಸಂಪಾದಿಸಿದ್ದ ಎಲ್ಲಾ ವಸಾಹತುಗಳು ಮತ್ತೆ ಕೈ ಬಿಟ್ಟು ಹೋಗಿದ್ದವು.

ಎಲ್ಲಾ ಧರ್ಮಯುದ್ಧಗಳು ತಮ್ಮ ಮುಖ್ಯ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿದ್ದವು. ಧರ್ಮಯುದ್ಧಗಳು ಬೈಜಾಂಟೈನ್ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಅಪಾರವಾಗಿ ಶ್ರಮಿಸಿದವು. ಹಾಗೆ ಮಾಡಿದಿದ್ದರೆ ೧೧ನೆಯ ಶತಮಾನದಲ್ಲಿ ಟರ್ಕರು ದಾಳಿ ಮಾಡುವ ಮೊದಲೇ ಬೇರೆಯವರ ಕೈವಶವಾಗುತ್ತಿತ್ತು. ರಾಜಮನೆತನದ ಪದ್ಧತಿ ಮತ್ತು ರಾಷ್ಟ್ರೀಯತಾ ಮನೋಭಾವನೆ ಹುಟ್ಟಿಕೊಂಡದ್ದು ಪಶ್ಚಿಮ ರಾಷ್ಟ್ರಗಳ ಉಳಿಗಾಲಕ್ಕೆ ಸಹಾಯಮಾಡಿತು. ಒಂದು ಸಾಮಾಜಿಕ ವ್ಯವಸ್ಥೆಯಾಗಿ ಊಳಿಗಮಾನ್ಯ ಪದ್ಧತಿ ದುರ್ಬಲವಾಗುತ್ತಾ ಬಂದಂತೆ ಪೋಪನ ಸ್ಥಾನಮಾನ ಮತ್ತು ಚರ್ಚಿನ ಅಧಿಕಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು.

ಧರ್ಮಯುದ್ಧಗಳಿಂದಾದ ಆರ್ಥಿಕ ಆದಾಯಗಳು ತುಂಬ ಪ್ರಾಮುಖ್ಯದ ವಿಷಯ ಗಳಾಗಿವೆ. ವಾಣಿಜ್ಯ ಚೇತರಿಸಿಕೊಂಡಿತು ಮತ್ತು ಹೊಸ ನಗರಗಳು ಹಾಗೂ ಹೊಸ ವಾಣಿಜ್ಯ ಕೇಂದ್ರಗಳು ಹುಟ್ಟಿಕೊಂಡವು. ಶ್ರೀಮಂತಗೊಂಡ ಭೌಗೋಳಿಕ ಅರಿವು ಏಶಿಯಾದ ಮತ್ತು ಪೌರ್ವಾತ್ಯ ರಾಷ್ಟ್ರಗಳ ಸಂಸ್ಕೃತಿ ಪಶ್ಚಿಮಕ್ಕೆ ಪರಿಚಯವಾಯಿತು. ಕ್ರೈಸ್ತ ಯುರೋಪಿನ ಬೌದ್ದಿಕ ಎಲ್ಲೆ ಇನ್ನೂ ವಿಶಾಲವಾಯಿತು. ಅರಬ್ಬಿನ ವಿಜ್ಞಾನ ಪಾಶ್ಚಿ ಮಾತ್ಯ ರಾಷ್ಟ್ರಗಳನ್ನು ಪ್ರವೇಶಿಸಿತು. ಮುಸಲ್ಮಾನರು ಮತ್ತು ಕ್ರೈಸ್ತರ ನಡುವೆ ಧಾರ್ಮಿಕ ಸಹಿಷ್ಣುತೆ ಬೆಳೆಯುವಂತೆ ಮಾಡಿತು.

ಮಧ್ಯಯುಗದ ಯುರೋಪಿನಲ್ಲಿ ಸೃಷ್ಟಿಯಾದ ಸಾಮಾಜಿಕ ವ್ಯವಸ್ಥೆ ಮತ್ತು ವಾತಾವರಣ ಮುಂದೆ ಎಷ್ಟೋ ಬೆಳವಣಿಗೆಗಳಿಗೆ ಬುನಾದಿಯನ್ನು ಹಾಕಿಕೊಟ್ಟಿತು. ಈ ಕಾಲವು ಅಧ್ಯಯನಕ್ಕೆ ಯೋಗ್ಯವಾದ ವಿಷಯವಾಗಿ ಹೊಸ ಸಂಸ್ಥೆಗಳ ಮತ್ತು ಪದ್ಧತಿ ಗಳನ್ನು ಅಭಿವೃದ್ದಿಗೊಳಿಸಲು ಸಾಧ್ಯವಾಗಿ, ಅವುಗಳೆಲ್ಲ ಕ್ರಮೇಣ ಐರೋಪ್ಯ ಇತಿಹಾಸದ ಅವಿಭಾಜ್ಯ ಅಂಗಗಳಾದವು. ಹೊಸ ಮಾದರಿಯ ಸಾಹಿತ್ಯ ಬೆಳವಣಿಗೆಯನ್ನು ಕಂಡಿತು ಹಾಗೂ ನವಶೈಲಿಯ ವಾಸ್ತುಶಿಲ್ಪವೂ ಕೂಡ ಈ ಕಾಲದಲ್ಲೇ ಅಭಿವೃದ್ದಿಗೊಂಡಿತು. ಈ ಸಾಹಿತ್ಯ ಮತ್ತು ವಾಸ್ತುಶಿಲ್ಪವೆರಡೂ ಕೂಡ ಧಾರ್ಮಿಕ ರೀತಿಯವಾಗಿದ್ದವು. ಮಧ್ಯಯುಗವು ಐರೋಪ್ಯ ಇತಿಹಾಸದಲ್ಲಿ ತನ್ನದೇ ಆದ ವಿಶೇಷತೆಯನ್ನು ಉಳಿಸಿಕೊಂಡಿದೆ ಎಂದು ಹೇಳಬಹುದಾಗಿದೆ.

 

ಪರಾಮರ್ಶನ ಗ್ರಂಥಗಳು

೧. ಜಾನ್ ಬೌಲ್. ೧೯೭೯. ಎ ಹಿಸ್ಟರಿ ಆಫ್ ಯುರೋಪ್: ಎ ಕಲ್ಚರಲ್ ಆ್ಯಂಡ್ ಪಾಲಿಟಿಕಲ್ ಸರ್ವೆ, ಲಂಡನ್.

೨. ಸ್ಟೀಪನ್ ಜೆ.ಲೀ. ೧೯೮೮. ಆಸ್ಪೆಕ್ಟ್ಸ್ ಆಫ್ ಯುರೋಪಿಯನ್ ಹಿಸ್ಟರಿ, ಲಂಡನ್: ರೂಟ್ಲೇಜ್.