ವರ್ಸೈಲ್ಸ್ ಶಾಂತಿ ಒಪ್ಪಂದದ ಟೀಕೆ

ವರ್ಸೈಲ್ಸ್ ಒಪ್ಪಂದದ ಕರಾರುಗಳು ಜರ್ಮನಿಗೆ ಅತ್ಯಂತ ಕ್ರೂರವೂ ಅಪಮಾನಕರವೂ ಆಗಿದ್ದವು. ಫ್ರೆಡ್ರಿಕ್ ಮಹಾಶಯನ ಸಮಯದಿಂದ ಪಡೆದುಕೊಂಡಿದ್ದ ಯುರೋಪಿನ ಎಲ್ಲ ಸಂಸ್ಥಾನಗಳನ್ನು ಜರ್ಮನಿಯು ಕಳೆದುಕೊಂಡಿತು. ಒಟ್ಟಿನಲ್ಲಿ ಜರ್ಮನಿಯನ್ನು ಅಮಾನುಷವಾಗಿ ಶಿಕ್ಷಿಸಲಾಯಿತು, ನಿಶ್ಯಸ್ತ್ರಗೊಳಿಸಲಾಯಿತು ಮತ್ತು ಅವಮಾನಗೊಳಿಸ ಲಾಯಿತು.

೧. ಯುರೋಪಿನಲ್ಲಿ ರಾಷ್ಟ್ರೀಯತೆ ಮತ್ತು ಸ್ವ ಇಚ್ಛೆಗಳ ತತ್ವದ ಮೇಲೆ ಪ್ರಾಂತೀಯ ಪುನರ್ ಸಂಘಟನೆಗೊಳಿಸಲಾಯಿತು. ಆಸ್ಟ್ರಿಯಾವು ಈ ತತ್ವದಡಿಯಲ್ಲಿ ಯುಗೋ ಸ್ಲಾವಿಯಾ ಮತ್ತು ಜೆಕೋಸ್ಲಾವಾಕಿಯಾಗಳನ್ನು ಉಂಟುಮಾಡಿತು. ‘‘ಯುರೋಪನ್ನು ಬಾಲ್ಕನ್‌ನಂತೆ ಮಾಡಲಾಯಿತು. ಅಂದರೆ, ಅದು ಹಲವು ಹೋಳುಗಳಾಗಿ ಹರಿದು ಹಂಚಿಹೋಯಿತು.’’(ಜೆ.ಎಲ್.ಕಾರ್ವಿನ್)

೨. ಒಪ್ಪಂದದ ಕರಾರುಗಳು ಕ್ರೂರವೂ ಅವಮಾನಕರವೂ ಆಗಿದ್ದವು. ಅವುಗಳಲ್ಲಿ ಕೆಲವಂತು ಅಸಾಧ್ಯವೆನ್ನುವಷ್ಟು ಕಠಿಣವಾಗಿದ್ದವು.

೩. ವಿಮರ್ಶಕರ ಪ್ರಕಾರ ವರ್ಸೈಲ್ಸ್ ಒಪ್ಪಂದವು ಜರ್ಮನಿಯ ಜನತೆಯ ಮೇಲೇ ಹೇರಿದ ಒಪ್ಪಂದವಾಗಿತ್ತು. ‘‘ಹೇಳಿ ಬರೆಸಿದ’’ ಶಾಂತಿಯಾಗಿತ್ತು. ವಿಲ್ಸನನ ೧೪ ಅಂಶಗಳು ೧೪ ನಿರಾಶೆಗಳಾದವು. ಜರ್ಮನರು ಈ ಒಪ್ಪಂದವನ್ನು ಒಪ್ಪಿಕೊಳ್ಳುವ ಹಾಗಿರಲಿಲ್ಲವಾದರೂ ಬಲವಂತಕ್ಕೆ ಒಪ್ಪಿಕೊಂಡರು. ಆದರೆ ಮುಂದೆ ಹಿಟ್ಲರನು ಈ ಒಪ್ಪಂದವನ್ನು ಚೂರುಚೂರಾಗಿಸಿ ಸಿಡಿದು ನಿಂತನು.

೪. ಶಾಂತಿ ಒಪ್ಪಂದಗಳು ಸೇಡಿನ ಉದ್ದೇಶವನ್ನು ಹೊಂದಿದ್ದವು. ಗೆದ್ದ ರಾಷ್ಟ್ರಗಳು ಹೊಸದಾಗಿ ಅಸ್ತಿತ್ವಕ್ಕೆ ಬಂದ ಜರ್ಮನ್ ದೇಶದೊಂದಿಗೆ ಶಾಂತಿಯಿಂದ ವರ್ತಿಸಬೇಕಿತ್ತು. ಆದರೆ ಜರ್ಮನಿಯ ಬಗೆಗಿನ ಮಿತ್ರರಾಷ್ಟ್ರಗಳ, ಮುಖ್ಯವಾಗಿ ಫ್ರಾನ್ಸಿನ ಕೆಟ್ಟ ನಡವಳಿಕೆಗಳು ಜರ್ಮನಿಯ ಪ್ರಗತಿಗೆ ಅಡ್ಡಿಯಾದವು. ಈ ಹಿನ್ನೆಲೆಯಲ್ಲಿ ೧೯೩೩ ರಲ್ಲಿ ಹಿಟ್ಲರನು ಹೊಸ ಶಕ್ತಿಯಾಗಿ ಜರ್ಮನಿಯಲ್ಲಿ ರೂಪುಗೊಂಡನು. ಮಿತ್ರಕೂಟಗಳ ಈ ರೀತಿಯ ಶಾಂತಿ ಪ್ರಯತ್ನವು ಎರಡನೆಯ ಮಹಾಯುದ್ಧಕ್ಕೆ ದಾರಿಮಾಡಿತು. ಒಪ್ಪಂದವು ತನ್ನ ಒಡಲಿನಲ್ಲಿ ಎರಡನೆಯ ವಿಶ್ವ ಸಮರದ ವಿಷಬೀಜವನ್ನು ಹೊಂದಿತ್ತು.

೫. ಜರ್ಮನಿಯು ನಿಶ್ಯಸ್ತ್ರೀಕರಣಗೊಳ್ಳುವಾಗ, ಇತರ ಎಲ್ಲ ರಾಷ್ಟ್ರಗಳೂ ತನ್ನಂತೆ ನಿಶ್ಯಸ್ತ್ರೀಕರಣವನ್ನು ಪಾಲಿಸಬೇಕೆಂದು ಬಯಸಿತು. ಆದರೆ, ಇಂಗ್ಲೆಂಡಿನ ಹೊರತಾಗಿ ಇತರ ರಾಷ್ಟ್ರಗಳೆಲ್ಲ ಸಶಸ್ತ್ರವಾಗಿ ಉಳಿದವು. ಯುದ್ಧ ಸಾಮಗ್ರಿಗಳನ್ನು ಕಡಿಮೆಗೊಳಿಸಲು ಒಪ್ಪದೆ ಅವು ಭವಿಷ್ಯದಲ್ಲಿ ಮತ್ತೊಂದು ಯುದ್ಧಕ್ಕೆ ತಯಾರಿ ನಡೆಸುತ್ತಿವೆ ಎಂಬ ಭಾವನೆಯನ್ನು ಉಂಟು ಮಾಡಿದವು. ಇದು ಶಸ್ತ್ರಾಸ್ತ್ರ ಪೈಪೋಟಿಗೆ ಕಾರಣವಾಗಿ ೧೯೩೯ರ ಯುದ್ಧದಲ್ಲಿ ಫಲಿತವಾಯಿತು.

ರಾಷ್ಟ್ರ ಸಂಘ

ಪ್ರಥಮ ವಿಶ್ವ ಸಮರದಿಂದ ಸಂತ್ರಸ್ತವಾದ ಜಗತ್ತಿಗೆ ‘ರಾಷ್ಟ್ರ ಸಂಘ’ವು ವುಡ್ರೋವಿಲ್ಸನನ ಕೊಡುಗೆಯಾಗಿದೆ. ಅವನ ಹದಿನಾಲ್ಕು ಅಂಶಗಳ ಕಾರ್ಯಕ್ರಮಗಳಲ್ಲಿ ರಾಷ್ಟ್ರಸಂಘದ ಅಗತ್ಯವನ್ನು ಪ್ರಸ್ತಾಪಿಸಲಾಗಿತ್ತು. ಅವನು ಪ್ಯಾರಿಸ್‌ನ ಶಾಂತಿ ಸಮ್ಮೇಳನದಲ್ಲಿ ಈ ಅಂಶವನ್ನು ಪ್ರತಿಪಾದಿಸಿ ರಾಷ್ಟ್ರ ಸಂಘವು ರೂಪುಗೊಳ್ಳುವುದಕ್ಕೆ ಕಾರಣಕರ್ತನಾದನು. ಪ್ರಥಮ ವಿಶ್ವ ಸಮರದ ಘೋರ ಪರಿಣಾಮಗಳನ್ನು ಎದುರಿಸುತ್ತಿದ್ದ ರಾಷ್ಟ್ರಗಳಿಗೆ ಹೊಸತಾದ ಶಾಶ್ವತವಾದ ಶಾಂತಿ ನೆಲೆಗೊಳಿಸುವ ಕೆಲಸ ತುರ್ತಾಗಿ ಆಗಬೇಕಿತ್ತು. ಸ್ವತಃ ವಿಲ್ಸನ್ನನೇ ರಾಷ್ಟ್ರ ಸಂಘದ ರೂಪರೇಷೆಗಳನ್ನು ಮಾಡಿದ್ದನು. ೧೯೨೦ರ ಜನವರಿ, ೧೦ ರಲ್ಲಿ ರಾಷ್ಟ್ರಸಂಘ ತನ್ನ ಮೊದಲ ಸಭೆ ನಡೆಸಿತು. ಅದರ ಪ್ರಮುಖ ಕಛೇರಿಯು ಸ್ವಿಡ್ಜರ್ಲೆಂಡಿನ ಜಿನೀವಾದಲ್ಲಿದೆ.

ಧ್ಯೇಯೋದ್ದೇಶಗಳು

೧. ಯುದ್ಧ ಸಾಧ್ಯತೆಗಳನ್ನು ನಿವಾರಿಸಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಗಳನ್ನು ಸಾಧಿಸುವುದು, ನ್ಯಾಯ-ಗೌರವಗಳನ್ನು ವೃದ್ದಿಸುವುದು.

೨. ಜಗತ್ತಿನ ರಾಷ್ಟ್ರಗಳ ನಡುವೆ ಭೌತಿಕ ಮತ್ತು ಬೌದ್ದಿಕ ಸಹಕಾರವನ್ನು ವೃದ್ದಿಸುವುದು.

೩. ರಾಷ್ಟ್ರೀಯ ಮಿಲಿಟರಿ ಶಸ್ತಾಸ್ತ್ರಗಳನ್ನು ಕಡಿಮೆಗೊಳಿಸುವುದು.

೪. ಅಂತಾರಾಷ್ಟ್ರೀಯ ಒಪ್ಪಂದಗಳ ಅಡಿಯಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಶಾಂತಿಯುತ ಬದಲಾವಣೆಗಳನ್ನು ತರುವುದು.

೫. ಸಾಮಾಜಿಕ ಭದ್ರತೆಯ ತತ್ವದ ಆಧಾರದ ಮೇಲೆ ಸದಸ್ಯ ರಾಷ್ಟ್ರಗಳ ಪ್ರಾಂತೀಯ ಐಕ್ಯತೆ ಮತ್ತು ರಾಜಕೀಯ ಸ್ವಾತಂತ್ರ್ಯಗಳನ್ನು ಹೊರಗಿನ ಆಕ್ರಮಣಗಳಿಂದ ರಕ್ಷಿಸುವುದು.

೬. ಮ್ಯಾಂಡೇಟರಿ ಪದ್ಧತಿಯ ಉಸ್ತುವಾರಿ ನೋಡಿಕೊಳ್ಳುವ ಕೆಲಸವನ್ನು ವಹಿಸುವುದು ಮತ್ತು ಮಾನವ ಕಲ್ಯಾಣವನ್ನು ಉತ್ತೇಜಿಸುವುದು.

೭. ಸಂಘದ ಸಂವಿಧಾನವನ್ನು ವಿರೋಧಿಸುವ ರಾಷ್ಟ್ರಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು.

೮. ಆರೋಗ್ಯ, ಸಾಮಾಜಿಕ, ಆರ್ಥಿಕ ಮತ್ತು ವಾಣಿಜ್ಯ ಸಮಸ್ಯೆಗಳಿಗೆ ಸ್ಪಂದಿಸಿ ಅಂತಾರಾಷ್ಟ್ರೀಯ ಸಹಕಾರವನ್ನು ವೃದ್ದಿಸುವುದು.

ರಾಷ್ಟ್ರ ಸಂಘದ ಅಂಗಗಳು

. ಸಭೆ

ಅಸೆಂಬ್ಲಿಯು ಸಂಘದ ಆಯ್ದ ಸದಸ್ಯರನ್ನು ಒಳಗೊಂಡಿತ್ತು. ಪ್ರತಿಯೊಂದು ರಾಷ್ಟ್ರದಿಂದ ಮೂರು ಮಂದಿ ಪ್ರತಿನಿಧಿಗಳನ್ನು ಕಳಿಸಬಹುದಾಗಿತ್ತು. ಒಂದು ರಾಷ್ಟ್ರಕ್ಕೆ ಒಂದು ಮತ ನೀಡುವ ಅಧಿಕಾರವಿದ್ದಿತು. ಅಸೆಂಬ್ಲಿಯು ಜಿನೀವಾದಲ್ಲಿ ವರ್ಷಕ್ಕೊಂದು ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಸಭೆ ಸೇರುತ್ತಿತ್ತು. ವಿಶ್ವಶಾಂತಿ ಹಾಗೂ ಭದ್ರತೆಯ ಕುರಿತಾದ ಎಲ್ಲ ವಿಷಯಗಳನ್ನೂ ಅಸೆಂಬ್ಲಿಯಲ್ಲಿ ಚರ್ಚಿಸಬಹುದಿತ್ತು. ಅದರ ಮುಖ್ಯ ಕಾರ್ಯಗಳಲ್ಲಿ ಹೊಸ ಸದಸ್ಯರ ಪ್ರವೇಶವನ್ನು ನಡೆಸುವ, ಸಮಿತಿಗೆ ಅಶಾಶ್ವತ ಸದಸ್ಯರನ್ನು ನೇಮಿಸುವ, ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ಚುನಾಯಿಸುವ, ಮುಂಗಡ ಪತ್ರವನ್ನು ಪರಿಶೀಲಿಸುವ ಮತ್ತು ವಿಶ್ವಶಾಂತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಚರ್ಚಿಸುವ ಕಾರ್ಯಗಳು ಸೇರಿದ್ದವು. ಅಲ್ಲದೆ ವಿಶೇಷ ಅಧಿವೇಶನಗಳನ್ನು ಅಗತ್ಯ ಸಂದರ್ಭದಲ್ಲಿ ನಡೆಸಲಾಗುತ್ತಿತ್ತು.

. ಸಮಿತಿ

ಸಮಿತಿಯು ಶಾಸಕಾಂಗದಂತೆ ಕಾರ್ಯನಿರ್ವಹಿಸುತ್ತಿತ್ತು. ಸಂಯುಕ್ತ ಸಂಸ್ಥಾನಗಳು, ಅಮೆರಿಕಾ, ಫ್ರಾನ್ಸ್, ಇಟಲಿ ಮತ್ತು ಜಪಾನ್‌ಗಳನ್ನು ಮತ್ತು ಮೂರು ವರ್ಷಗಳ ಮಟ್ಟಿಗೆ ಚುನಾಯಿಸಿದ ನಾಲ್ಕು ಅಶಾಶ್ವತ ಸದಸ್ಯರನ್ನು ಸಮಿತಿಯು ಹೊಂದಿತ್ತು. ಸಮಿತಿಯ ಸದಸ್ಯ ಬಲವನ್ನು ಹೆಚ್ಚಿಸುವ ಅವಕಾಶವಿತ್ತು. ಅಮೆರಿಕಾವು ರಾಷ್ಟ್ರಸಂಘವನ್ನು ಸೇರಲು ನಿರಾಕರಿಸಿದ್ದರಿಂದ ಶಾಶ್ವತ ಹಾಗೂ ಅಶಾಶ್ವತ ಸದಸ್ಯರ ಪ್ರಮಾಣ ನಾಲ್ಕರಲ್ಲಿ ಉಳಿಯಿತು. ಅಶಾಶ್ವತ ಸದಸ್ಯರ ಸಂಖ್ಯೆ ಮುಂದಕ್ಕೆ ಹೆಚ್ಚಿತು. ಕೊನೆಯಲ್ಲಿ ಅದು ೧೧ ಸದಸ್ಯರನ್ನು ಹೊಂದಿತ್ತು. ಅನುಗುಣವಾಗಿ ೧೯೨೬ರಲ್ಲಿ ಜರ್ಮನಿಯ ಸೇರ್ಪಡೆಯೊಂದಿಗೆ ಶಾಶ್ವತ ಸದಸ್ಯ ಸಂಖ್ಯೆ ೪ ರಿಂದ ೫ಕ್ಕೇರಿತು. ರಷ್ಯಾದ ಸೇರ್ಪಡೆಯೊಂದಿಗೆ ೧೯೩೪ರಲ್ಲಿ ಶಾಶ್ವತ ಸದಸ್ಯ ಸಂಖ್ಯೆ ೬ಕ್ಕೇರಿತು. ಸಮಿತಿಯು ಸಭೆಗಿಂತ ಅಧಿಕ ಬಾರಿ ಕಲಾಪಗಳನ್ನು ನಡೆಸುತ್ತಿತ್ತು. ಹೊರಗಿನ ಅತಿಕ್ರಮಿಗಳಿಂದ ಸದಸ್ಯ ರಾಷ್ಟ್ರಗಳನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವುದು, ತನಗೆ ಒದಗಿಸಲಾದ ವಿಚಾರಗಳ ತನಿಖೆ ನಡೆಸುವುದು, ಶಸ್ತ್ರಾಸ್ತ ಸಂಗ್ರಹವನ್ನು ಕಡಿಮೆಗೊಳಿಸುವ ಯೋಜನೆಯನ್ನು ಹಾಕಿಕೊಳ್ಳುವುದು, ಮ್ಯಾಂಡೇಟರಿಗಳು ಸಲ್ಲಿಸಿದ ವಾರ್ಷಿಕ ವರದಿಗಳನ್ನು ಗಮನಿಸುವುದು ಮುಂತಾದ ಕೆಲಸಗಳನ್ನು ಸಮಿತಿಯು ನಿರ್ವಹಿಸುತ್ತಿತ್ತು.

. ಪ್ರಧಾನ ಕಛೇರಿ

ರಾಷ್ಟ್ರ ಸಂಘದ ಪ್ರಧಾನ ಕಛೇರಿಯ ಸ್ವಿಡ್ಜರ್‌ಲ್ಯಾಂಡಿನ ಜಿನೀವಾದಲ್ಲಿತ್ತು. ಪ್ರಧಾನ ಕಾರ್ಯದರ್ಶಿಯು ಅದರ ಮುಖ್ಯಸ್ಥನಾಗಿದ್ದು ಕಛೇರಿಯು ಬೇರೆ ಬೇರೆ ರಾಷ್ಟ್ರಗಳನ್ನು ಪ್ರತಿನಿಧಿಸುವ ಬಹುಸಂಖ್ಯೆಯ ಅಧಿಕಾರಗಳನ್ನು ಹೊಂದಿದ್ದಿತು. ರಾಷ್ಟ್ರಸಂಘವು ನಡೆಸುವ ವ್ಯವಹಾರಗಳ ಎಲ್ಲ ದಾಖಲೆಗಳೂ ಕಾರ್ಯಾಲಯದ ಕಾರ‌್ಯವ್ಯಾಪ್ತಿಗೆ ಬರುತ್ತಿದ್ದವು. ತನ್ನ ವ್ಯವಹಾರಗಳ ಪತ್ರ ಸಂಪರ್ಕ ನಡೆಸುವುದು, ದಾಖಲೆ ಸಂಗ್ರಹಣೆ, ಅಂತಾರಾಷ್ಟ್ರೀಯ ಒಡಂಬಡಿಕೆಗಳ ಪ್ರತಿಗಳನ್ನು ಕಾಯ್ದಿರಿಸುವುದು, ಇವೇ ಮುಂತಾದ ಕೆಲಸಗಳು ಪ್ರಧಾನ ಕಛೇರಿಯಲ್ಲಿ ನಡೆಯುತ್ತಿದ್ದವು. ೧೯೨೦ ರಿಂದ ೧೯೩೩ರ ತನಕ ಸರ್ ಎಡಿಕ್ ಡ್ರೂಮೆಂಡ್, ೧೯೩೩ ರಿಂದ ೧೯೪೦ರವರೆಗೆ ಫ್ರಾನ್ಸಿನ ಜೋಸೆಫ್ ಅವೆನೋಲ್ ಮತ್ತು ೧೯೪೦ರಲ್ಲಿ ಐರ್ಲೆಂಡಿನ ಸೀನ್‌ಲೆಸ್ಟರ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು.

. ಅಂತಾರಾಷ್ಟ್ರೀಯ ನ್ಯಾಯಾಲಯ

೧೯೨೨ರಲ್ಲಿ ಹಾಲೆಂಡಿನ ಹೇಗ್ ಎಂಬಲ್ಲಿ ಅಂತಾರಾಷ್ಟ್ರಿಯ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ರಾಷ್ಟ್ರ ಸಂಘದ ಸದಸ್ಯ ರಾಷ್ಟ್ರಗಳ, ಮತ್ತಿತರ ಕಾನೂನು ಸಂಬಂಧಿ ಅಂತಾರಾಷ್ಟ್ರೀಯ ವಿಚಾರಗಳನ್ನು ಈ ನ್ಯಾಯಾಲಯವು ಕೈಗೆತ್ತಿಕೊಂಡು ತೀರ್ಪು ಹೊರಡಿಸುತ್ತಿತ್ತು. ಅಸೆಂಬ್ಲಿ, ಕೌನ್ಸಿಲ್‌ಗಳೂ ನ್ಯಾಯಾಲಯದ ಮಾರ್ಗದರ್ಶನ ಪಡೆಯುತ್ತಿದ್ದವು. ನ್ಯಾಯಾಲಯವು ಅಸೆಂಬ್ಲಿ ಮತ್ತು ಕೌನ್ಸಿಲ್‌ಗಳಿಂದ ೯ ವರ್ಷಗಳ ಕಾಲಾವಧಿಗೆ ಅರಿಸಲ್ಪಟ್ಟ ೧೫ ಸದಸ್ಯರನ್ನು ಒಳಗೊಂಡಿತ್ತು. ಶಾಂತಿ ಪ್ರಯತ್ನಗಳಿಗೆ ಒಡಂಬಡದ ರಾಷ್ಟ್ರಗಳ ವಿರುದ್ಧ ಮಿಲಿಟರಿ ಮತ್ತು ನೌಕಾ ಕಾರ್ಯಾಚರಣೆಗೆ ನ್ಯಾಯಾಲಯವು ಆದೇಶ ನೀಡಬಹುದಾಗಿತ್ತು.

. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ

೧೯೧೯ರಲ್ಲಿ ಜಿನಿವಾದಲ್ಲಿ ಸ್ಥಾಪಿಸಲಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಪ್ರಧಾನ ಕಛೇರಿಯು ಜಿನೀವಾದಲ್ಲಿತ್ತು. ಅದೊಂದು ಸ್ವಾಯತ್ತ ಸಂಸ್ಥೆಯಾಗಿತ್ತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಸಾಮಾನ್ಯ ಸಭೆ, ಆಡಳಿತಾಂಗ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಕಛೇರಿಗಳನ್ನು ಒಳಗೊಂಡಿತ್ತು. ಸಾಮಾನ್ಯ ಸಭೆಯು ತಲಾ ನಾಲ್ಕು ಮಂದಿ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳನ್ನೂ ಒಳಗೊಂಡಿತ್ತು. ಅವರು ಕಾರ್ಮಿಕರ ಹಲವರು ಸಮಸ್ಯೆಗಳನ್ನು ಚರ್ಚಿಸಿ, ಕಾರ್ಮಿಕರ ಅಭಿವೃದ್ದಿ ಕಾರ್ಯ ವಿಧಾನಗಳನ್ನು ರೂಪಿಸುತ್ತಿದ್ದರು. ಆಡಳಿತಾಂಗವು ೩೨ ಸದಸ್ಯರ ನ್ನೊಳಗೊಂಡ ಅಂತಾರಾಷ್ಟ್ರೀಯ ಕಾರ್ಮಿಕ ಕಛೇರಿಗೆ ನಿರ್ದೇಶಕನೊಬ್ಬನನ್ನು ಆಯ್ಕೆ ಮಾಡುತ್ತಿತ್ತು. ಅಂತಾರಾಷ್ಟ್ರೀಯ ಕಾರ್ಮಿಕ ಕಛೇರಿಯು ಕಾರ್ಮಿಕ ಸ್ಥಿತಿಗತಿಗಳ ಬಗೆಗೆ ಮಾಹಿತಿ ಸಂಗ್ರಹಿಸುತ್ತಿತ್ತು, ನಿಯತಾಲಿಕೆಗಳನ್ನು ಪ್ರಕಟಿಸುತ್ತಿತ್ತು. ಕಾರ್ಮಿಕ ಸಂಸ್ಥೆಯು ಜಗತ್ತಿನಾದ್ಯಂತದ ಕಾರ್ಮಿಕರ, ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಸ್ಥಿತಿಗತಿಗಳನ್ನು ಸುಧಾರಿಸಲು ಶ್ರಮಿಸುತ್ತಿತ್ತು.

ರಾಷ್ಟ್ರಸಂಘವು ಸಮಾಜಸೇವೆ, ಆರೋಗ್ಯ ಸಮಸ್ಯೆ, ಸಾಮಾಜಿಕ ಪಿಡುಗುಗಳು, ಅಂತಾರಾಷ್ಟ್ರೀಯ ವ್ಯಾಪಾರದ ನಿಯಂತ್ರಣ, ಯುದ್ಧ ಸಂತ್ರಸ್ತ ದೇಶಗಳ ಆರ್ಥಿಕ ಸ್ಥಿತಿ ಯನ್ನು ಉತ್ತಮಪಡಿಸುವುದು, ಸಾಂಕ್ರಾಮಿಕಗಳು ಹರಡದಂತೆ ತಡೆಯುವುದು, ಬೌದ್ದಿಕ ಸಹಕಾರ, ಗುಲಾಮಗಿರಿ ನಿವಾರಣೆ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಹಿತರಕ್ಷಣೆ ಮೊದಲಾದ ಕೆಲಸಗಳನ್ನು ನೋಡಿಕೊಳ್ಳುವುದಕ್ಕಾಗಿ ರಾಷ್ಟ್ರಸಂಘವು ಹಲವು ಪ್ರಯತ್ನಗಳನ್ನು ಮಾಡಿತು.

ರಾಷ್ಟ್ರ ಸಂಘದ ಸಾಧನೆಗಳು

ರಾಷ್ಟ್ರಸಂಘವು ಅನೇಕ ಸಣ್ಣಪುಟ್ಟ ವಿವಾದಗಳನ್ನು ಪರಿಹರಿಸಿತು. ೧೯೨೪-೨೫ರಲ್ಲಿ ಇರಾಕ್-ಟರ್ಕಿಗಳ ವಿವಾದವನ್ನು ಪರಿಹರಿಸಲು ರಾಷ್ಟ್ರ ಸಂಘವು ಆಯೋಗವೊಂದನ್ನು ನೇಮಿಸಿತು. ಅದರ ಆದೇಶವನ್ನು ಎರಡೂ ರಾಷ್ಟ್ರಗಳು ಒಪ್ಪಿಕೊಂಡವು. ೧೯೨೫ರಲ್ಲಿ ಬಲ್ಗೇರಿಯಾ, ಗ್ರೀಸ್‌ಗಳ ನಡುವೆ ಗಡಿ ವಿವಾದ ಏರ್ಪಟ್ಟಿತು. ಗ್ರೀಸ್ ತನ್ನ ಸೈನ್ಯವನ್ನು ಬಲ್ಗೇರಿಯಾದ ನೆಲದಿಂದ ಹಿಂತೆಗೆದುಕೊಳ್ಳುವಂತೆ ಮತ್ತು ಕಾನೂನುಬದ್ಧವಲ್ಲದ ಆಕ್ರಮಣಕ್ಕಾಗಿ ಅದು ಬಲ್ಗೇರಿಯಾಕ್ಕೆ ಪರಿಹಾರವನ್ನು ನೀಡುವಂತೆ ರಾಷ್ಟ್ರ ಸಂಘ ಆದೇಶಿಸಿತು.

ರಾಷ್ಟ್ರ ಸಂಘವು ಪೋಲೆಂಡ್ ಮತ್ತು ಲಿಥುವೇನಿಯಾಗಳ ಮಧ್ಯ ಪ್ರವೇಶಿಸಿ ಅವುಗಳ ನಡುವಿನ ಆತಂಕವನ್ನು ಕಡಿಮೆಗೊಳಿಸಿತು. ಉತ್ತರ ಸಿಲೇಸಿಯಾದಲ್ಲಿನ ಗಡಿಗಳ ಬಗ್ಗೆ ಪೋಲೆಂಡ್ ಮತ್ತು ಜರ್ಮನಿಗಳ ನಡುವಿನ ವಿವಾದಕ್ಕೆ ಪರಿಹಾರವೊದಗಿಸಿತು. ಆಲೆಂಡ್ ದ್ವೀಪಗಳ ಕುರಿತ ಫಿನ್ಲೆಂಡ್ ಮತ್ತು ಸ್ವೀಡನ್‌ಗಳ ನಡುವಿನ ವಿವಾದಕ್ಕೆ ಪರಿಹಾರ ನೀಡಿತು. ಅಲ್ಬೇನಿಯಾದಿಂದ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಸರ್ಬಿಯಾದ ಮೇಲೆ ಒತ್ತಾಯ ಹೇರಿತು. ಗ್ರೀಕೋ-ಇಟಾಲಿಯನ್ ಸಂಘರ್ಷವನ್ನು ನಿವಾರಿಸಿತು. ೧೯೩೩ರಲ್ಲಿ ಪೆರು ಮತ್ತ ಕೊಲಂಬಿಯಾಗಳ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿತು.

ಮ್ಯಾಂಡೇಟರಿ ಪದ್ಧತಿಯ ಸಮರ್ಥ ಕಾರ್ಯಚರಣೆಯು ರಾಷ್ಟ್ರಸಂಘದ ಅತ್ಯಂತ ಮುಖ್ಯ ಸಾಧನೆಯೆಂಬ ಹೆಗ್ಗಳಿಕೆ ಪಾತ್ರವಾಗಿದೆ. ರಾಷ್ಟ್ರಸಂಘವು ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳಲ್ಲಿ ಮ್ಯಾಂಡೇಟರಿ ಶಕ್ತಿಯಾಗಿ ನೇಮಿಸಿ, ಅಧಿನ ರಾಷ್ಟ್ರಗಳು ಸ್ವಾತಂತ್ರ್ಯಕ್ಕೆ ಅರ್ಹರಾಗುವ ತನಕ ಅವುಗಳ ಒಳಿತನ್ನು ಬಯಸಿತು. ೧೯೨೦ರಲ್ಲಿ ಅಧೀನರ ಪ್ರಗತಿ ಪರಿಶೀಲಿಸಲು ಮ್ಯಾಂಡೇಟರಿ ಆಯೋಗವನ್ನು ನೇಮಿಸಲಾಯಿತು.

ಆರ್ಥಿಕ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲಾಯಿತು. ಅನೇಕ ಮಾನವೀಯ ಕಾರ್ಯಕ್ರಮಗಳನ್ನು ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಯಿತು. ಸ್ತ್ರೀಯರ ಮಾರಾಟವನ್ನು ತಡೆಗಟ್ಟುವುದು, ನಿರಾಶ್ರಿತರ ಪುನರ್ವಸತಿ, ಮಕ್ಕಳ ಹಿತರಕ್ಷಣೆ, ಮಲೇರಿಯಾದಂತಹ ಸಾಂಕ್ರಾಮಿಕಗಳ ನಿವಾರಣೆ ಇವೆ ಮೊದಲಾದ ಕೆಲಸಗಳನ್ನು ರಾಷ್ಟ್ರ ಸಂಘವು ಮಾಡಿತು. ಯುದ್ಧದಿಂದ ಕಷ್ಟ ನಷ್ಟಗಳಿಗೆ ಗುರಿಯಾದ ದೇಶಗಳಿಗೆ ಆರ್ಥಿಕ ಸಹಕಾರ ಒದಗಿಸಿತು. ಸಾರ್ ಮತ್ತು ಡೇನ್‌ಜಿನ್ ನಗರಗಳ ಆಡಳಿತವನ್ನು ಪರಿಣಾಮಕಾರಿ ಯಾಗಿ ನಡೆಸಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮಪಡಿಸುವಲ್ಲಿ ಮಹತ್ತರ ಕೆಲಸ ಮಾಡಿತು. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಬೌದ್ದಿಕ ಸಹಕಾರ ವೃದ್ದಿಸುವಲ್ಲಿ ಸಂಘವು ಕೆಲಸ ಮಾಡಿತು. ರಾಷ್ಟ್ರಸಂಘವು ಪೂರ್ವ ಮತ್ತು ಮಧ್ಯಯುರೋಪಿನಲ್ಲಿ ವಾಸಿಸುತ್ತಿದ್ದ ಮೂರು ಕೋಟಿ ರಾಷ್ಟ್ರೀಯ ಅಲ್ಪಸಂಖ್ಯಾತ ಸದಸ್ಯರನ್ನು ನೋಡಿಕೊಂಡಿತು. ಜಗತ್ತಿನಾದ್ಯಂತ ಪ್ರಪ್ರಥಮಬಾರಿಗೆ ಜನರಲ್ಲಿ ಅಂತರ ರಾಷ್ಟ್ರೀಯ ಸಹಕಾರದ ಚಿಂತನೆಯನ್ನು ಹರಡಿತು. ಗುಲಾಮಗಿರಿಯನ್ನು ತಡೆಗಟ್ಟುವ ಪ್ರಯತ್ನ ಮಾಡಿತು. ಹೀಗೆ ರಾಷ್ಟ್ರಸಂಘವು ವಿವಿಧ ನೆಲೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿತು.

ರಾಷ್ಟ್ರಸಂಘದ ವಿಫಲತೆ

ತನ್ನೆಲ್ಲ ಸಾಧನೆಗಳ ಹೊರತಾಗಿಯೂ ಜಗತ್ತಿನಲ್ಲಿ ಶಾಂತಿಯನ್ನು ಪುನರ್ ಸ್ಥಾಪಿಸುವ ತನ್ನ ಮೂಲಭೂತ ಉದ್ದೇಶದಲ್ಲೇ ರಾಷ್ಟ್ರ ಸಂಘ ವಿಫಲವಾಯಿತು. ಎರಡು ದಶಕಗಳ ಅದರ ಪ್ರಯತ್ನದ ಹೊರತಾಗಿಯೂ ೧೯೩೭ರಲ್ಲಿ ಜಗತ್ತು ಮತ್ತೊಮ್ಮೆ ಯುದ್ಧವನ್ನು ಎದುರಿಸಬೇಕಾಯಿತು. ಆ ಹೊತ್ತಿಗಾಗಲೇ ರಾಷ್ಟ್ರ ಸಂಘದ ವ್ಯವಸ್ಥೆ ಪೂರ್ಣವಾಗಿ ಕುಸಿಯಲು ಆರಂಭವಾಗಿತ್ತು.

೧. ವರ್ಸೈಲ್ಸ್ ಒಪ್ಪಂದವು ರಾಷ್ಟ್ರ ಸಂಘದ ವಿಫಲತೆಗೆ ಕಾರಣವಾದುದು ದುರಾದೃಷ್ಟ ವೆನ್ನಬೇಕು. ಹಲವು ಮುಖ್ಯ ರಾಷ್ಟ್ರಗಳು ಈ ಒಪ್ಪಂದವನ್ನು ಸೇಡು ತೀರಿಸುವ ಸದಾವಕಾಶವೆಂದು ಭಾವಿಸಿ ಅದೇ ರೀತಿಯಲ್ಲಿ ವರ್ತಿಸಿತು. ಹಾಗಾಗಿ ಶಾಂತಿ ಸ್ಥಾಪನೆಯ ಮೂಲೋದ್ದೇಶ ಮರೆಯಾಗಿ ಸೋತ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ನಡೆಸುವ ಶಕ್ತರಾಷ್ಟ್ರಗಳ ದ್ವೇಷ ದುರಾಕ್ರಮಣಗಳೇ ಮುಖ್ಯವಾದವು. ಆದ್ದರಿಂದ ರಾಷ್ಟ್ರಸಂಘ ವಿಫಲವಾಯಿತು.

೨. ಪ್ರಬಲ ರಾಷ್ಟ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳು ರಾಷ್ಟ್ರ ಸಂಘವು ವಿಫಲವಾಗಿತ್ತು. ೧೯೩೧ರಲ್ಲಿ ಜಪಾನ್ ಮಂಚೂರಿಯಾವನ್ನು ಆಕ್ರಮಿಸಿದಾಗ, ಇಟಲಿಯು ೧೯೩೫ರಲ್ಲಿ ಅಬೆಸೀನಿಯಾವನ್ನು ಆಕ್ರಮಿಸಿದಾಗ, ೧೯೩೧ರಲ್ಲಿ ಜಪಾನ್ ಮಂಚೂರಿಯಾವನ್ನು ಆಕ್ರಮಿಸಿದಾಗ, ಇಟಲಿಯು ೧೯೩೫ರಲ್ಲಿ ಅಬೆಸೀನಿಯಾವನ್ನು ಆಕ್ರಮಿಸಿದಾಗ, ೧೯೩೮ರಲ್ಲಿ ಜರ್ಮನಿಯು ಆಸ್ಟ್ರೀಯಾವನ್ನು ಮತ್ತು ೧೯೩೯ರಲ್ಲಿ ಪೋಲೆಂಡ್‌ನ್ನು, ರಷ್ಯಾವು ೧೯೩೯ರಲ್ಲಿ ಫಿನ್ಲೆಂಡನ್ನು ಆಕ್ರಮಿಸಿದಾಗ, ರಾಷ್ಟ್ರ ಸಂಘದ ದೌರ್ಬಲ್ಯ ಸಂಪೂರ್ಣ ಬದಲಾಯಿತು. ಪ್ರಬಲ ಆಕ್ರಮಣಕಾರಿ ರಾಷ್ಟ್ರಗಳು ಒಂದರ ಹಿಂದೆ ಒಂದರಂತೆ (ಜಪಾನ್, ಜರ್ಮನಿಗಳು ೧೯೩೩ರಲ್ಲಿ, ಇಟಲಿ ೧೯೩೭ರಲ್ಲಿ) ರಾಷ್ಟ್ರ ಸಂಘದಿಂದ ಹೊರಬಿದ್ದವು. ೧೯೪೦ರ ವೇಳೆಗೆ ಪ್ರಬಲ ರಾಷ್ಟ್ರಗಳ ಪೈಕಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಾತ್ರ ಸಂಘದಲ್ಲಿ ಉಳಿದಿದ್ದವು. ಹೀಗೆ ಮುಖ್ಯ ಶಕ್ತಿಗಳಿಲ್ಲದೆ ರಾಷ್ಟ್ರ ಸಂಘವು ದುರ್ಬಲವಾಗಿ ಅವನತಿ ಹೊಂದಬೇಕಾಯ್ತು.

೩. ಇಟಲಿ, ಜರ್ಮನಿ ಮತ್ತು ಜಪಾನ್‌ಗಳಲ್ಲಿ ಸರ್ವಾಧಿಕಾರದ ಬೆಳವಣಿಗೆಯು ರಾಷ್ಟ್ರ ಸಂಘದ ಯಶಸ್ಸಿನ ಅವಕಾಶಗಳನ್ನು ಕುಂಠಿತಗೊಳಿಸಿತು.

೪. ಹೊರಗಿನ ಆಕ್ರಮಣಗಳಾದಾಗ ರಾಷ್ಟ್ರ ಸಂಘದಿಂದ ತಮಗೆ ರಕ್ಷಣೆ ಸಿಗುವುದೆಂಬ ಧೈರ್ಯ ವಿಶ್ವಾಸವನ್ನು ಸಣ್ಣ ಪುಟ್ಟ ರಾಷ್ಟ್ರಗಳು ಕಳೆದುಕೊಂಡವು.

೫. ‘ಸಾಮೂಹಿಕ ಹೊಣೆಗಾರಿಕೆ’ಯ ತತ್ವ ಕಾರ್ಯರೂಪದಲ್ಲಿ ಬರಲಿಲ್ಲ. ಮಂಚೂರಿಯಾ ಮತ್ತು ಅಬೆಸೀನಿಯಾಗಳ ಸಮಸ್ಯೆಗಳಿಗೆ ಸಂಬಂಧಿಸಿ ಜಪಾನ್ ಮತ್ತು ಇಟಲಿಗಳೊಂದಿಗೆ ಎಲ್ಲ ರಾಷ್ಟ್ರಗಳೂ ಕೈಜೋಡಿಸಿದ್ದರೆ ಆಕ್ರಮಣಗಳನ್ನು ತಡೆಯಬಹುದಾಗಿತ್ತು ಮತ್ತು ರಾಷ್ಟ್ರ ಸಂಘದ ಘನತೆ ಹೆಚ್ಚುತ್ತಿತ್ತು.

೬. ರಾಷ್ಟ್ರಸಂಘವು ಅತ್ಯಂತ ಸಣ್ಣ ಪ್ರಮಾಣದಲ್ಲಿ ಮಾತ್ರ ಮಿಲಿಟರಿ ಮತ್ತು ಆಡಳಿತಾತ್ಮಕ ಶಕ್ತಿಯನ್ನು ಹೊಂದಿತ್ತು. ಆದ್ದರಿಂದ ಬಂಡುಕೋರ ಸಂಸ್ಥಾನಗಳ ಮೇಲೆ ಹತೋಟಿ ಸಾಧಿಸಲು ಅದು ವಿಫಲವಾಯಿತು.

೭. ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಮನೋಭಾವವಿರಲಿಲ್ಲ. ಅವುಗಳು ಪರಸ್ಪರ ಅಪನಂಬಿಕೆ, ಅವಿಶ್ವಾಸ, ಸಂದೇಹ, ಭಯ ಹೊಂದಿದ್ದವು. ಸಂಘದ ಉದ್ದೇಶಗಳಿಗೆ ಕೆಲವು ರಾಷ್ಟ್ರಗಳು ಬದ್ಧರಾಗಿ ಉಳಿಯಲಿಲ್ಲ.

೮. ರಾಷ್ಟ್ರಸಂಘವು ಬ್ರಿಟನ್, ಫ್ರಾನ್ಸ್, ಇಟಲಿ, ಜಪಾನ್‌ಗಳ ಪ್ರಭುತ್ವದಲ್ಲಿ ಸಣ್ಣ ರಾಷ್ಟ್ರಗಳು ದನಿ ಕಳೆದುಕೊಂಡವು.

೯. ಶಕ್ತಿಶಾಲಿ ರಾಷ್ಟ್ರಗಳ ಸ್ವಾರ್ಥ ಹಾಗೂ ಸಂಘರ್ಷಾತ್ಮಕ ಹಿತಾಸಕ್ತಿಗಳು ರಾಷ್ಟ್ರಸಂಘದ ವೈಫಲ್ಯಕ್ಕೆ ಮೂಲಕಾರಣವಾದವು.

೧೦. ಅಮೆರಿಕಾವು ರಾಷ್ಟ್ರಸಂಘದಲ್ಲಿಲ್ಲವಾದುದು ಸಂಘದ ನೈತಿಕ ಸ್ಥೈರ್ಯದ ತುಂಬಲಾರದ ನಷ್ಟವೆನಿಸಿತು. ಅಮೆರಿಕಾದ ಅಧ್ಯಕ್ಷನಾಗಿದ್ದ ವುಡ್ರೋವಿಲ್ಸನ್‌ನ ಶಾಂತಿ ಪ್ರಯತ್ನದ ಫಲವಾಗಿ ರಾಷ್ಟ್ರ ಸಂಘವು ಅಸ್ತಿತ್ವಕ್ಕೆ ಬಂದಿತ್ತು. ಆದರೆ ಅಮೆರಿಕಾದ ಸೆನೆಟ್ ವರ್ಸೈಲ್ಸ್ ಒಪ್ಪಂದವನ್ನು ತಿರಸ್ಕರಿಸಿದ ಕಾರಣ ಅಮೆರಿಕಾವನ್ನು ರಾಷ್ಟ್ರಸಂಘದ ಸಕ್ರಿಯ ಸದಸ್ಯನನ್ನಾಗಿ ಮಾಡಬೇಕೆಂಬ ವಿಲ್ಸನನ ಕನಸು ನನಸಾಗಲಿಲ್ಲ.

೧೧. ರಾಷ್ಟ್ರಸಂಘದ ಮುಖ್ಯ ಶಕ್ತಿಗಳು ತಮ್ಮ ಸಾರ್ವಭೌಮತ್ವದ ಬಗ್ಗೆ ನಂಬಿಕೆಯಿರಿಸಿದ್ದವು. ಮಾತ್ರವಲ್ಲ, ಅವುಗಳ ಆಕ್ರಮಣಗಳ ವಿರುದ್ಧ ಸಂಘವು ದನಿಯೆತ್ತುವುದನ್ನು ಅವು ಸಹಿಸಲಿಲ್ಲ. ಆದ್ದರಿಂದ ಇಟಲಿ, ಜರ್ಮನಿ, ಜಪಾನ್‌ಗಳಂತಹ ಪ್ರಬಲ ರಾಷ್ಟ್ರಗಳು ರಾಷ್ಟ್ರ ಸಂಘವನ್ನು ತ್ಯಜಿಸಿ ಹೊರಬಂದವು.

೧೨. ಶಕ್ತರಾಷ್ಟ್ರಗಳು ತಮ್ಮ ಸ್ವಾರ್ಥಕ್ಕಾಗಿ ರಾಷ್ಟ್ರ ಸಂಘವನ್ನು ದುರುಪಯೋಗ ಪಡಿಸಿಕೊಂಡವು. ಯುರೋಪಿನಲ್ಲಿ ಶಕ್ತಿಯ ಸಮತೋಲನಕ್ಕಾಗಿ ಬ್ರಿಟನ್ ಬಯಸಿದರೆ, ಜರ್ಮನಿಯ ಆಕ್ರಮಣ ತಡೆಯಲು ಇರುವ ಭದ್ರತೆಯೆಂಬಂತೆ ಫ್ರಾನ್ಸ್ ಭಾವಿಸಿತು.

೧೩. ವಿಜೇತ ರಾಷ್ಟ್ರಗಳ ಪರ ವಹಿಸಿದ್ದ ಶಾಂತಿ ಒಪ್ಪಂದಗಳು ಏಕಮುಖವಾಗಿ ಇದ್ದುದ ರಿಂದ ಸೋತ ರಾಷ್ಟ್ರಗಳು ರಾಷ್ಟ್ರ ಸಂಘವನ್ನು ಪ್ರಬಲ ರಾಷ್ಟ್ರಗಳ ಪರವಾದ ಸಂಸ್ಥೆಯೆಂಬಂತೆ ನೋಡತೊಡಗಿದವು.

 

ಹೀಗೆ ರಾಷ್ಟ್ರ ಸಂಘವು ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವ ತನ್ನ ಪ್ರಾಥಮಿಕ ಉದ್ದೇಶ ದಲ್ಲಿಯೇ ವಿಫಲವಾಯಿತು. ಜಗತ್ತನ್ನು ಎರಡನೆಯ ಮಹಾಯುದ್ಧದಿಂದ ರಕ್ಷಿಸಲು ರಾಷ್ಟ್ರ ಸಂಘಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿದ್ದರೂ ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಅದರ ಪ್ರಯತ್ನ, ಸೇವೆ ಗಣನೀಯವಾಗಿ ಉಳಿದಿದೆ. ಅವು ಮುಂದಿನ ರಚನಾತ್ಮಕ ಕಾರ್ಯಗಳ ಬೆಳವಣಿಗೆಗೆ ಪ್ರೇರಣೆಯಾದವು ಎಂಬುದು ಮತ್ತಷ್ಟು ಮಹತ್ವದ ವಿಚಾರವಾಗಿದೆ.

 

ಪರಾಮರ್ಶನ ಗ್ರಂಥಗಳು

೧. ಕಿಂಗ್ ಸಿ.(ಸಂ), ೧೯೭೨. ದಿ ಫಸ್ಟ್ ವರ್ಲ್ಡ್ ವಾರ್, ಲಂಡನ್

೨. ಹೆನಿಗ್ ಆರ್.(ಸಂ), ೧೯೭೩. ದಿ ಲೀಗ್ ಆಪ್ ನೇಶನ್ಸ್, ಎಡಿನ್‌ಬರ್ಗ್