ಮನುಷ್ಯನು ಲೌಕಿಕ ಜೀವನದಲ್ಲಿ ಸಾಮೂಹಿಕ ಬದುಕನ್ನು ಸಾಧ್ಯವಾಗಿಸಿ ಕೊಳ್ಳಲು ಬೇಕಾದ ವಾತಾವರಣವನ್ನು ಕಲ್ಪಿಸಿಕೊಡಲು ಹಾಗೂ ಅಂತಹ ಸಾಮೂಹಿಕ ಬದುಕಿಗೆ ಪ್ರತಿಕೂಲವಾದ ಮನುಷ್ಯನ ಸ್ವಭಾವ, ನಡವಳಿಕೆಗಳನ್ನು ನಿಗ್ರಹಿಸಲು ಅಗತ್ಯವಾದ ನಿಯಮಗಳನ್ನು ರೂಪಿಸುವುದು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆಯೆ ರಾಜ್ಯ. ಆದರೆ ಧರ್ಮ ಮನುಷ್ಯನ ಅಲೌಕಿಕ ಆಸೆಗಳನ್ನು ಪಾರಮಾರ್ಥಿಕ, ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಲು ಮನುಷ್ಯ ಕಂಡುಕೊಂಡ ಸಂಸ್ಥೆ. ಈ ಎರಡೂ ಸಂಸ್ಥೆಗಳು ಮಾನವನ ಬದುಕಿನ ಲೌಕಿಕ ಹಾಗೂ ಪಾರಮಾರ್ಥಿಕವೆಂಬ ಪ್ರಮುಖ ಆಯಮಗಳಿಗೆ ಸಂಬಂಧಿಸಿದಂತಹಗಳು. ಈ ಎರಡೂ ಆಯಾಮಗಳಿಗೆ ಆಧಾರವಾದ ಮೌಲ್ಯಗಳು ಪರಸ್ಪರ ಪೂರಕವಾದವುಗಳಾಗಿದ್ದರೆ ರಾಜ್ಯ ಹಾಗೂ ಧರ್ಮದ ನಡುವಿನ ಸಂಬಂಧ ಒಂದು ಸಮಸ್ಯಾತ್ಮಕವಾದ ಅಂಶವಾಗುತ್ತಿರಲಿಲ್ಲ. ಮಾನವನ ಮೌಕಿಕ ಆಶೋತ್ತರಗಳಿಗೂ ಆಧ್ಯಾತ್ಮಿಕ ತುಡಿತಗಳಿಗೂ ನಡುವೆ ಘರ್ಷಣೆ ಇರುವುದನ್ನು ನಾವು ಕಾಣುತ್ತೇವೆ. ಇದರ ಪರಿಣಾಮವಾಗಿಯೆ ಲೌಕಿಕ ಬದುಕನ್ನು ಪ್ರತಿನಿಧಿಸುವ ‘ರಾಜ್ಯ’ ಎಂಬ ಸಂಸ್ಥೆಗೂ ಆಧ್ಯಾತ್ಮಿಕ ಬದುಕನ್ನು ಪ್ರತಿನಿಧಿಸುವ ‘ಧರ್ಮ’ಕ್ಕೂ ನಡುವಿನ ಸಂಬಂಧದಲ್ಲಿನ ಘರ್ಷಣೆ ಇತಿಹಾಸದ ಒಂದು ಭಾಗವಾಗಿದೆ.

ರಾಜ್ಯ ಹಾಗೂ ಧರ್ಮದ ನಡುವಿನ ಸಮಸ್ಯೆಯ ಉಗಮವಾದದ್ದು ರೋಮ್‌ನಲ್ಲಿ. ಪ್ರಾರಂಭದಲ್ಲಿ ರಾಜನೆ ದೇವರ ಪ್ರತಿನಿಧಿ ಎಂದು ರಾಜತ್ವವನ್ನೆ ದೈವೀಕರಿಸಿದಾಗ ಯಾವ ಸಮಸ್ಯೆಯೂ ಇರಲಿಲ್ಲ. ಕಾಲಕ್ರಮೇಣ ರಾಜ್ಯದ ಚಟುವಟಿಕೆ ವಿಸ್ತಾರ ಹೆಚ್ಚಾಗುತ್ತಾ ಹೋಗಿ ಧಾರ್ಮಿಕ ಸಂಸ್ಥೆಗಳ ಉದ್ದೇಶ, ಗುರಿಗಳಿಗೆ ಪರ್ಯಾಯವಾದ ಒಂದು ಸಂಸ್ಥೆಯಾಗಿ ರಾಜ್ಯ ಬೆಳೆದಂತೆಲ್ಲ ಎರಡರ ನಡುವಿನ ಸಂಬಂಧದ ಪ್ರಶ್ನೆ ಸುಮಾರು ೧೨ ಶತಮಾನಗಳಷ್ಟು ಕಾಲದವರೆಗೆ ಚರ್ಚೆಗೀಡಾಯಿತು. ರೋಮ್‌ನ ಪ್ರಜೆಗಳು ಇತ್ತ ರಾಜ್ಯಕ್ಕೂ ಅತ್ತ ಧಾರ್ಮಿಕ ಸಂಸ್ಥೆಯಾದ ಇಗರ್ಜಿಗೂ ವಿಧೇಯರಾಗಿರಬೇಕಾಗಿತ್ತು. ಮನುಷ್ಯನ ಮೊದಲ ಆದ್ಯತೆ ದೇವರ ಪ್ರತಿನಿಧಿಯಾದ ಪೋಪ್‌ನಿಗೊ ಅಥವಾ ರಾಜ್ಯದ ಮುಖ್ಯಸ್ಥನಾದ ದೊರೆಗೊ ಎನ್ನುವ ಪ್ರಶ್ನೆ ಉದ್ಭವವಾಯಿತು. ಕ್ರೈಸ್ತಧರ್ಮ ರೋಮ್‌ನ ಲೌಕಿಕ ರಾಜ್ಯವ್ಯವಸ್ಥೆಯಿಂದ ಬೇರ್ಪಟ್ಟ ಒಂದು ಸ್ವತಂತ್ರ ಹಾಗೂ ರಾಜ್ಯಕ್ಕಿಂತ ಉತ್ತಮವಾದ ಸಂಸ್ಥೆ. ರಾಜ್ಯ ಹಾಗೂ ರಾಜ ತನ್ನ ಅಧೀನಕ್ಕೊಳಪಟ್ಟವರು ಎಂದು ಘೋಷಸಿಕೊಳ್ಳುವುದರೊಂದಿಗೆ ರಾಜ್ಯ ಹಾಗೂ ಇಗರ್ಜಿಯ ನಡುವಿನ ಸುದೀರ್ಘ ಕದನಕ್ಕೆ ನಾಂದಿಯಾಯಿತು. ಒಬ್ಬ ನಿಷ್ಠಾವಂತ ಕ್ರೈಸ್ತಧರ್ಮೀಯನಿಗೆ ತನ್ನ ಆಧ್ಯಾತ್ಮಿಕ ಸಾಧನೆಯೆ ಅಂತಿಮ ಗುರಿಯಾದಾಗ ಅದಕ್ಕೆ ಪ್ರತಿಕೂಲವಾದಂತಹ ಯಾವುದೇ ಕಾನೂನಿಗೆ, ಅದು ರಾಜ್ಯದ ಕಾನೂನಾದರೂ ಸರಿ, ವಿಧೇಯನಾಗಿರುವುದು ಅಸಾಧ್ಯದ ಮಾತಾಗಿತ್ತು. ದೇವರ ಹಾಗೂ ಅವರ ನಡುವಿನ ಸಂಬಂಧದಲ್ಲಿ ರಾಜ್ಯ ಮಧ್ಯ ಪ್ರವೇಶಿಸುವುದನ್ನು ಅವರು ಸಹಿಸುವುದು ಸಾಧ್ಯವಿರಲಿಲ್ಲ. ಈ ಮೊದಲೆ ತಿಳಿಸಿದಂತೆ ಕ್ರೈಸ್ತಧರ್ಮ ಜನರ ದಿನನಿತ್ಯದ ಬದುಕಿನ ವಿವರಗಳನ್ನು ನಿಯಂತ್ರಿಸುವಷ್ಟು ಪ್ರಬಲ ಸಂಸ್ಥೆಯಾಗಿ ಬೆಳೆಯುವ ಮೊದಲು ಈ ಸಮಸ್ಯೆ ಇರಲಿಲ್ಲ. ಈ ಕಾರಣದಿಂದಲೆ ರೋಮ್‌ನಲ್ಲಿ ಕ್ರೈಸ್ತ ಧರ್ಮ ಪ್ರವೇಶಿಸುವ ಮೊದಲೆ ಆ ರಾಜ್ಯದಲ್ಲಿ ಹಲವಾರು ಧಾರ್ಮಿಕ ನಂಬಿಕೆಗಳಿದ್ದರೂ ಅಲ್ಲಿಯ ಪ್ರಜೆಗಳಿಗೆ ತಮ್ಮ ಧಾರ್ಮಿಕ ನಂಬಿಕೆಗಳಿಗೂ, ಅದೇ ಸಮಯಕ್ಕೆ ರಾಜ್ಯದ ಕಾನೂನಿಗೂ ವಿಧೇಯರಾಗಿರುವುದರಲ್ಲಿ ಯಾವುದೇ ಗೊಂದಲ ಬರಲಿಲ್ಲ. ಒಬ್ಬ ವ್ಯಕ್ತಿ ರಾಜ್ಯದ ನಿಷ್ಠಾವಂತ ಪ್ರಜೆಯಾಗಿ ರಾಜ್ಯದ ಕಾನೂನು ಗಳಿಗೆ ವಿಧೇಯನಾಗಿದ್ದುಕೊಂಡು ತನ್ನ ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯ ಇತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ ರೋಮ್ ಸಾಮ್ರಾಜ್ಯ ಯಾವುದೇ ಧರ್ಮವನ್ನು ಒಂದು ಅಧಿಕೃತ ಧರ್ಮವೆಂದು ಪೋಷಿಸಿಕೊಳ್ಳದೆ ಇದ್ದುದರಿಂದ ಅಲ್ಲಿನ ಪ್ರಜೆಗಳು ತಾವು ನಂಬಿಕೆ ಇರಿಸಿದ ಹಲವಾರು ದೇವತೆಗಳನ್ನು ಪೂಜಿಸುತ್ತಿದ್ದರು ಹಾಗು ಬೇರೆ ಬೇರೆ ಗುಂಪುಗಳು ವಿವಿಧ ರೀತಿಯ ಧಾರ್ಮಿಕ ನಂಬಿಕೆಗಳನ್ನು ಹೊಂದಿದ್ದವರಾಗಿದ್ದರು. ಕ್ರೈಸ್ತಧರ್ಮ ಕಾಲಕ್ರಮೇಣ ರೋಮ್‌ನ ಅಧಿಕೃತ ಧರ್ಮವೆಂದು ಸ್ಥಾಪಿತವಾದಾಗ ಅದಕ್ಕೂ ಮೊದಲಿದ್ದ ಧಾರ್ಮಿಕ ಆಚರಣೆಯನ್ನು ಪಾಲಿಸುವವರನ್ನೆಲ್ಲ ಪೆಗಾನ್‌ಗಳೆಂದು ಕರೆದು ಮನುಷ್ಯ ಹಾಗೂ ದೇವರ ನಡುವಿನ ಸಂಬಂಧಗಳಿಗೆ ಕ್ರೈಸ್ತ ಧರ್ಮದ ವಿಧಿ ವಿಧಾನಗಳ ಆಚರಣೆಯೆ ಅಂತಿಮವಾದುದು ಎನ್ನುವ ನಂಬಿಕೆಯನ್ನು ಜನರಲ್ಲಿ ಪ್ರಚುರಪಡಿಸಿತು.

ಕ್ರೈಸ್ತಧರ್ಮ ರೋಮ್‌ನಲ್ಲಿ ಎಷ್ಟೆ ಪ್ರಬಲವಾಗಿ ಬೆಳೆದರೂ ಅದು ರಾಜ್ಯದ ಅಸ್ತಿತ್ವ ವನ್ನೆ ಕಡೆಗಣಿಸುವಂತಿರಲಿಲ್ಲ. ರೋಮ್‌ನ ಅವನತಿಯ ನಂತರ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕ್ರೈಸ್ತಧರ್ಮಕ್ಕೆ ಒಂದು ಸುಭದ್ರ ರಾಜ್ಯದ ಅವಶ್ಯಕತೆ ಕಂಡುಬಂದಿತು. ಅದಕ್ಕೆ ಬಹುಮುಖ್ಯ ಕಾರಣವೆಂದರೆ ರೋಮ್ ಪ್ರಜೆಗಳಿಗೆ ರೋಮ್‌ನ ಅವನತಿಯ ಕಾರಣ ತಮ್ಮ ಹಳೆಯ ದೇವತೆಗಳನ್ನು ಕಡೆಗಣಿಸಿದ್ದರಿಂದ ಎಂದು ಅನಿಸತೊಡಗಿದ್ದು. ಕ್ರೈಸ್ತ ಧರ್ಮದ ಪ್ರವೇಶದಿಂದಾಗಿಯೆ ತಾವೆಲ್ಲ ಹಳೆಯ ಸ್ಥಳೀಯ ಧಾರ್ಮಿಕ ವಿಧಿಗಳನ್ನು ಹಾಗೂ ದೇವತೆಗಳನ್ನು ಕಡೆಗಣಿಸುವಂತಾಯಿತು. ಆ ದೇವತೆಗಳ ಶಾಪದಿಂದಲೆ ರೋಮ್ ಸಾಮ್ರಾಜ್ಯ ಅವನತಿಯಾಯಿತು ಎನ್ನುವ ನಂಬಿಕೆ ಜನರಲ್ಲಿ ಬಲವಾದರೆ ಅದು ಕ್ರೈಸ್ತ ಧರ್ಮಕ್ಕೆ ಅಪಾಯ ಎಂದು ಮನಗಂಡ ಕೆಲವರು ರೋಮ್ ಸಾಮ್ರಾಜ್ಯಕ್ಕೂ ಕ್ರೈಸ್ತಧರ್ಮದ ಧಾರ್ಮಿಕ ಸಂಸ್ಥೆಯಾದ ಚರ್ಚೆಗೂ ನಡುವೆ ಇದ್ದ ಘರ್ಷಣೆಯನ್ನು ಕೊನೆಗೊಳಿಸಿ ಅದಕ್ಕೆ ಒಂದು ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ನಿರ್ಧರಿಸಿದರು. ಇದರ ಫಲವಾಗಿಯೆ ನಾಲ್ಕನೆ ಶತಮಾನದ ಮಧ್ಯಭಾಗದಲ್ಲಿ ಸಂತ ಅಗಸ್ಟೀನ್ (ಕ್ರಿ.ಶ.೩೫೪-೪೩೦) ಎನ್ನುವ ಧಾರ್ಮಿಕ ವಿದ್ವಾಂಸ ಧರ್ಮ ಮತ್ತು ರಾಜ್ಯದ ನಡುವಿನ ಸಂಬಂಧದ ಬಗ್ಗೆ ಒಂದು ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿದ : ಸಂತ ಆಗಸ್ಟೀನ್ ತನ್ನ ‘ಸಿಟಿ ಆಫ್ ಗಾಡ್’ ಎನ್ನುವ ಗ್ರಂಥದಲ್ಲಿ ಎರಡು ರಾಜ್ಯದ ಪ್ರತಿಪಾದನೆ ಮಾಡುತ್ತಾನೆ. ಒಂದು ದೇವರ ರಾಜ್ಯ ಹಾಗೂ ಮತ್ತೊಂದು ಲೌಕಿಕ ರಾಜ್ಯ. ಕ್ರೈಸ್ತಧರ್ಮದ ಧಾರ್ಮಿಕ ಸಂಸ್ಥೆಯಾದ ಚರ್ಚ್ ದೇವರ ರಾಜ್ಯದ ಒಂದು ಭಾಗವಾದರೆ, ದೊರೆಯ ಆಡಳಿತಕ್ಕೊಳಪಟ್ಟ ರೋಮ್ ಮಾನವರಾಜ್ಯದ ಪ್ರತೀಕ ಎಂಬುದು ಅವನ ವಾದ. ಸಂತ ಅಗಸ್ಟೀನ್‌ಗೆ ಒಂದು ರಾಜಕೀಯ ಸಿದ್ಧಾಂತವನ್ನು ಮಂಡಿಸುವ ಉದ್ದೇಶವಿರಲಿಲ್ಲ. ಚರ್ಚ್ ಹಾಗೂ ರಾಜ್ಯದ ನಡುವಿನ ಸಂಬಂಧವನ್ನು ಹೇಗೆ ಗ್ರಹಿಸಬೇಕು ಮತ್ತು ಒಂದು ಧಾರ್ಮಿಕ ಸಂಸ್ಥೆಯಾಗಿ ಚರ್ಚ್ ರಾಜ್ಯಕ್ಕಿಂತ ಹೇಗೆ ಉತ್ತಮವಾದುದು ಎಂದು ತಿಳಿಯಪಡಿಸುವುದೇ ಅವನ ‘ಸಿಟಿ ಆಫ್ ಗಾಡ್’ ಗ್ರಂಥದ ಮುಖ್ಯ ಉದ್ದೇಶವಾಗಿತ್ತು. ಅವನು ಒಬ್ಬ ಪಾದ್ರಿಯಾಗಿ ಚರ್ಚ್‌ಗೆ ನೇರವಾಗಿ ತನ್ನ ವಿಧೇಯತೆಯನ್ನು ತೋರಿಸುತ್ತಿದ್ದುದರಿಂದ ಚರ್ಚ್ ರಾಜ್ಯ ಕ್ಕಿಂತ ಮೇಲು ಎಂದು ವಾದಿಸುವುದು ಸಹಜವೇ ಆಗಿತ್ತು. ಆಗಸ್ಟೀನ್ ಹೇಳುವಂತೆ ಮನುಷ್ಯನಿಗೆ ರಾಜ್ಯದ ಅಗತ್ಯವಿದೆ. ಏಕೆಂದರೆ ಮಾನವ ದೇವರ ರಾಜ್ಯ ಪ್ರವೇಶಿಸಲು ಈ ಲೌಕಿಕ ಜಗತ್ತಿನ ಬದುಕಿನಲ್ಲಿ ಸರಿಯಾದ ಮಾರ್ಗದರ್ಶನ ಪಡೆಯಬೇಕು. ಆದರೆ ಮಾನವನ ಬದುಕಿನ ಅಂತಿಮ ಗುರಿಯಾದ ಅನಂತ ಶಾಂತಿಯನ್ನು ಪಡೆಯಲು ಅವಶ್ಯಕವಾಗಿರುವುದು ಚರ್ಚ್ ಆ ಗುರಿಯನ್ನು ಸಾಧಿಸುವುದು ರಾಜ್ಯದಿಂದ ಸಾಧ್ಯವಿಲ್ಲ. ಆದರೆ ಸರಿಯಾದ ರೀತಿಯಲ್ಲಿ ಬದುಕನ್ನು ಸಾಗಿಸಲು ರಾಜ್ಯ ಒಂದು ಸಾಧನವಾಗಬಹುದು ಅಷ್ಟೆ. ಯಾವ ರೀತಿಯ ಬದುಕು ದೇವರಿಗೆ ಪ್ರಿಯವಾದದ್ದು ಎಂದು ನಿರ್ಧರಿಸುವ ಅಧಿಕಾರ ಚರ್ಚ್‌ನ ಮುಖ್ಯಸ್ಥನಾದ ಪೋಪ್‌ಗೆ ಮಾತ್ರ ಇದೆ. ಪೋಪ್ ಈ ಉದ್ದೇಶಕ್ಕಾಗಿಯೆ ದೇವರಿಂದ ನೇಮಕನಾದವನು. ರಾಜ್ಯದ ಮುಖ್ಯಸ್ಥನಾದ ದೊರೆ ದೇವರಿಂದ ನೇಮಿಸ್ಪಟ್ಟವನಲ್ಲ. ಆದ್ದರಿಂದ ದೊರೆ ಪೋಪ್‌ನ ಆದೇಶದಂತೆ ರಾಜ್ಯಭಾರ ಮಾಡಬೇಕಾಗುತ್ತದೆ. ರಾಜ್ಯ ಹಾಗು ಚರ್ಚ್ ಈ ರೀತಿಯಲ್ಲಿ ಮಾನವನ ಬದುಕಿಗೆ ಅಗತ್ಯವಾದ ಎರಡು ಸಂಸ್ಥೆ ಗಳಾಗಿವೆ. ಈ ಎರಡು ಸಂಸ್ಥೆಗಳ ಉದ್ದೇಶ ಪರಸ್ಪರ ಪೂರಕವಾಗಿರಬೇಕೆ ಹೊರತು ಎರಡರ ನಡುವೆ ಯಾವುದೇ ರೀತಿಯ ವೈರುಧ್ಯವಿರಬಾರದು. ಹೀಗೆ ಆಗಸ್ಟೀನ್ ಎರಡೂ ಸಂಸ್ಥೆಗಳ ಅನಿವಾರ್ಯತೆಯನ್ನು ಸ್ಪಷ್ಟಪಡಿಸುತ್ತಲೆ ರಾಜ್ಯದ ಮೇಲಿನ ಚರ್ಚ್‌ನ ಅಧಿಪತ್ಯವನ್ನು ಪ್ರತಿಪಾದಿಸುತ್ತಾನೆ.

ಐದನೆ ಶತಮಾನದಲ್ಲಿ ಚರ್ಚ್ ಹಾಗೂ ರಾಜ್ಯದ ನಡುವಿನ ಸಂಬಂಧ ಇನ್ನಷ್ಟು ಬಿಗಡಾಯಿಸಿತು. ಕ್ರೈಸ್ತಧರ್ಮವು ರೋಮ್ ರಾಜ್ಯದ ಅಧಿಕೃತ ಧರ್ಮವೆಂದು ಘೋಷಣೆಯಾಯಿತು. ಇದರೊಂದಿಗೆ ರಾಜ್ಯದಲ್ಲಿ ಚರ್ಚ್‌ಗೆ ಸಂಬಂಧಪಟ್ಟ ವ್ಯವಹಾರ ಗಳಲ್ಲಿ ದೊರೆ ತಲೆಹಾಕಬಾರದು, ತನ್ನ ಪರಿಧಿಯಲ್ಲಿ ಚರ್ಚ್ ಒಂದು ಸ್ವಾಯತ್ತ ಸಂಸ್ಥೆಯಾಗಿ ಸರ್ವಾಧಿಕಾರವನ್ನು ಹೊಂದಿದೆ ಎಂಬ ನಿಲುವನ್ನು ಪೋಪ್ ತಳೆದನು. ಚರ್ಚ್‌ನ ಅಧಿಕಾರಿಗಳ ಮೇಲೆ ರಾಜನಿಗೆ ಯಾವ ಅಧಿಕಾರವಿಲ್ಲ ಹಾಗೂ ಚರ್ಚ್‌ಗೆ ಸಂಬಂಧಪಟ್ಟ ಆಸ್ತಿಯ ಮೇಲೆ ತೆರಿಗೆಯನ್ನು ಹಾಕುವ ಅಧಿಕಾರ ರಾಜನಿಗಿಲ್ಲ ಎನ್ನುವ ಸಿದ್ಧಾಂತವನ್ನು ಮಂಡಿಸಲಾಯಿತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ಹಾನಿ ಯುಂಟಾಯಿತು. ಅಲ್ಲದೆ ರಾಜ್ಯದ ಕಾನೂನು ಯಾವುದೇ ರೀತಿಯಲ್ಲಾದರೂ ಚರ್ಚ್‌ನ ನಿಯಮಗಳಿಗೆ ವಿರುದ್ಧವಾಗಿದ್ದರೆ ಅದನ್ನು ಪ್ರಜೆಗಳು ಪಾಲಿಸಬಾರದು ಎನ್ನುವ ಹುಕುಂ ವಿಧಿಸಲಾಯಿತು. ಇದರಿಂದಾಗಿ ದೊರೆ ಕುಪಿತಗೊಂಡು ಚರ್ಚ್‌ನ ಅಧಿಕಾರದೊಂದಿಗೆ ತೀವ್ರ ಸಂಘರ್ಷಕ್ಕಿಳಿದನು. ಇದರಿಂದ ಉಂಟಾದ ಗೊಂದಲವನ್ನು ನಿವಾರಿಸಲು ಆಗಿನ ಪೋಪ್ ಗೆಲಿಸಿಯಸ್ ತನ್ನ ಒಂದು ಸಿದ್ಧಾಂತವನ್ನು ಪ್ರತಿಪಾದಿಸಿದನು. ಈ ಸಿದ್ಧಾಂತವೇ ‘ದ್ವಿಖಡ್ಗ ಸಿದ್ಧಾಂತ’ ಎಂದು ಪ್ರಸಿದ್ಧವಾಯಿತು. ಪೋಪ್ ಗೆಲಿಸಿಯಸ್‌ನ ದ್ವಿಖಡ್ಗ ಸಿದ್ಧಾಂತದ ಸಾರಾಂಶ ಈ ರೀತಿ ಇದೆ: ಏಸುಕ್ರಿಸ್ತನೆ ಸರ್ವರ ರಾಜ ಹಾಗೂ ಪುರೋಹಿತ. ಆದರೆ ಮನುಷ್ಯನ ದುರ್ಬಲತೆಯ ಅರಿವಿದ್ದ ಕೈಸ್ತ ಎರಡು ಅಧಿಕಾರಗಳನ್ನು ಸೃಷ್ಟಿಸುತ್ತಾನೆ. ಒಂದು, ಆಧ್ಯಾತ್ಮಿಕ ಅಧಿಕಾರ. ಎರಡು, ಲೌಕಿಕ ಅಧಿಕಾರ. ಆಧ್ಯಾತ್ಮಿಕ ಅಧಿಕಾರವನ್ನು ಚರ್ಚ್ ವಹಿಸಿಕೊಂಡರೆ, ಲೌಕಿಕ ಅಧಿಕಾರವನ್ನು ರಾಜ್ಯ ಪಡೆಯುತ್ತದೆ. ಈ ಎರಡೂ ಅಧಿಕಾರದ ಮೂಲ ದೇವರೆ ಆದರೂ ತಮ್ಮ ಅಧಿಕಾರದ ಉದ್ದೇಶವನ್ನು ಈಡೇರಿಸಲು ಈ ಎರಡೂ ಸಂಸ್ಥೆಗಳು ತಮ್ಮ ವಲಯದಲ್ಲಿ ಸ್ವತಂತ್ರವಾಗಿದ್ದು ಪರಮಾಧಿಕಾರವನ್ನು ಹೊಂದಿರುತ್ತವೆ. ಇದರರ್ಥ ಅವೆರಡೂ ಸಂಪೂರ್ಣ ಸ್ವಾವಲಂಬಿ ಸಂಸ್ಥೆಗಳು ಎಂದಲ್ಲ. ಅಂತಿಮ ಗುರಿ ದೇವರೆ ಆದ್ದರಿಂದ ಈ ಎರಡೂ ಸಂಸ್ಥೆಗಳನ್ನು ಅವನೇ ಸೃಷ್ಟಿಸಿದುದರಿಂದ ಎರಡೂ ಪರಸ್ಪರ ಅವಲಂಬಿತವಾಗಿರು ತ್ತವೆ. ಚರ್ಚ್ ರಾಜ್ಯವನ್ನು, ರಾಜ್ಯ ಚರ್ಚ್‌ನನ್ನು ಅವಲಂಬಿಸುವುದು ಅವುಗಳ ಸ್ಥಾಪನೆಯ ಉದ್ದೇಶದ ಈಡೇರಿಕೆಗಾಗಿ ಅಗತ್ಯವಾಗಿದೆ. ಪೋಪ್ ಗೆಲಿಸಿಯಸ್‌ನ ಈ ಸಿದ್ಧಾಂತ ಮೇಲುನೋಟಕ್ಕೆ ರಾಜ್ಯ ಹಾಗೂ ಚರ್ಚ್ ಎರಡೂ ಸಮಾನ ಸಂಸ್ಥೆಗಳೆಂದು ಪ್ರತಿಪಾದಿಸುವಂತೆ ಕಂಡು ಬಂದರೂ ಅವರ ವಾದದ ಇಂಗಿತ ಚರ್ಚ್ ರಾಜ್ಯಕ್ಕಿಂತ ಮೇಲು ಎನ್ನುವುದೇ ಆಗಿದೆ. ಏಕೆಂದರೆ ಅವನ ಪ್ರಕಾರ ಆಧ್ಯಾತ್ಮಿಕತೆಯೆ ಮನುಷ್ಯನ ಅಂತಿಮ ಗುರಿ. ಅದನ್ನು ಸಾಧಿಸುವ ಮಧ್ಯವರ್ತಿ ಚರ್ಚ್. ಇವನ ವಾದವನ್ನು ಉಪಯೋಗಿಸಿಕೊಂಡೆ ಮುಂದೆ ಪೋಪ್‌ವಾದಿಗಳು ರಾಜ್ಯದ ಮೇಲೆ ಚರ್ಚ್‌ನ ಅಧಿಪತ್ಯವನ್ನು ಸ್ಥಾಪಿಸಲು ಹೋರಾಟ ಪ್ರಾರಂಭಿಸಿದರು. ದ್ವಿಖಡ್ಗ ಸಿದ್ಧಾಂತದ ಒಂದು ಮುಖ್ಯ ಕೊರತೆ ಎಂದರೆ ರಾಜ್ಯ ಹಾಗೂ ಚರ್ಚ್ ನಡುವಿನ ಘರ್ಷಣೆಯ ಸಾಧ್ಯತೆಯನ್ನೆ ಅದು ಗಮನಿಸದೆ ಇದ್ದುದು.

ರಾಜ್ಯ ಹಾಗೂ ಧರ್ಮಗಳ ನಡುವಿನ ಸಂಬಂಧದಲ್ಲಿ ೧೦ ರಿಂದ ೧೨ನೇ ಶತಮಾನ ಗಳಲ್ಲಾದ ಯುರೋಪಿನ ರಾಜಕೀಯ ಬೆಳವಣಿಗೆ ಮಹತ್ತರವಾದುದು. ಯಾರು ಹೆಚ್ಚು ಅಧಿಕಾರವನ್ನು ಹೊಂದಿರುವವರು ಎನ್ನುವ ವಿಷಯದಲ್ಲಿ ರಾಜರುಗಳಿಗೂ ಹಾಗೂ ಪೋಪ್ ನಡುವೆ ತೀವ್ರವಾದ ಭಿನ್ನಾಭಿಪ್ರಾಯ ತಲೆದೋರಿತ್ತು. ಪೋಪ್‌ನ ಪರವಾಗಿ ಪೋಪ್‌ವಾದಿಗಳು ಸಮಸ್ತ ಅಧಿಕಾರವೂ ಚರ್ಚ್‌ನ ಅಧಿಕಾರಿಗಳಲ್ಲೆ ಕೇಂದ್ರಿಕೃತವಾಗಬೇಕೆಂಬ ವಾದವನ್ನು ಪ್ರಬಲವಾಗಿ ಮಂಡಿಸಲು ಪ್ರಾರಂಭಿಸಿದರು. ಈ ವೇಳೆಗಾಗಲೆ ರಾಜ್ಯದ ಕಾರ್ಯಕ್ಷೇತ್ರ ವಿಸ್ತಾರಗೊಂಡಿತ್ತು. ವಾಣಿಜ್ಯ ಹಾಗು ವ್ಯವಹಾರಗಳಲ್ಲಿ ರಾಜ್ಯ ಪ್ರಮುಖ ಪಾತ್ರವನ್ನು ವಹಿಸಲು ಪ್ರಾರಂಭಿಸಿತ್ತು. ವ್ಯಾಪಾರಗಳಲ್ಲಿ ತೊಡಗಿದ್ದ ಮಧ್ಯಮವರ್ಗದವರ ಸಾಧ್ಯತೆ ಜಾಸ್ತಿಯಾಗಿತ್ತು. ಅವರೆಲ್ಲ ನಿಧಾನವಾಗಿ ರಾಜ್ಯದ ಅಧಿಕಾರವಲಯದ ವಿಸ್ತರಣೆಗೆ ಬೆಂಬಲ ಸೂಚಿಸಲು ಪ್ರಾರಂಭಿಸಿದರು. ಮೊದಲು ರಾಜ್ಯದ ಪರ ವಾದಿಸುವ ಸಾಮ್ರಾಜ್ಯವಾದಿಗಳು ರಾಜ್ಯ ಹಾಗೂ ಚರ್ಚ್‌ಗಳಲ್ಲಿ ಯಾವುದೂ ಮತ್ತೊಂದಕ್ಕಿಂತ ಹೆಚ್ಚು ಅಧಿಕಾರವನ್ನು ಹೊಂದಿಲ್ಲ, ಅವೆರಡು ಸಮಾನವಾದ ಅಧಿಕಾರವನ್ನು ಹೊಂದಿವೆ ಎನ್ನುವ ಸೌಮ್ಯವಾದ ನಿಲುವನ್ನು ತಳೆದಿದ್ದರು. ನಂತರ ಅಂದರೆ ೧೧ನೇ ಶತಮಾನದ ಹೊತ್ತಿಗೆ ರಾಜನಿಗೆ ಹೆಚ್ಚು ಅಧಿಕಾರ ಇರುವುದು ಸೂಕ್ತ ಎನ್ನುವ ನಿಲುವನ್ನು ತಳೆದರು. ಈ ಘರ್ಷಣೆ ವಾಸ್ತವವಾಗಿ ಕೇವಲ ಕೆಲವೇ ಪ್ರದೇಶಕ್ಕೆ ಸೀಮಿತವಾಗಿತ್ತು. ಆದರೆ ತಮ್ಮ ನಿಲುವನ್ನು ಪ್ರಬಲವಾಗಿ ಮಂಡಿಸುವ ಉದ್ದೇಶದಿಂದ ಎರಡೂ ಗುಂಪಿನವರು ತಮ್ಮ ವಾದಕ್ಕೆ ಸಾರ್ವತ್ರಿಕತೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ರಾಜ್ಯ ಹಾಗೂ ಚರ್ಚ್‌ನ ನಡುವಿನ ಅಧಿಕಾರ ಹಂಚುವಿಕೆಯ ಸಮಸ್ಯೆ ಜಟಿಲವಾಗಲು ಮತ್ತೂ ಒಂದು ಕಾರಣವನ್ನು ಇಲ್ಲಿ ನಾವು ಗಮನಿಸಬೇಕಾಗುತ್ತದೆ. ಪೋಪ್ ಕೇವಲ ಚರ್ಚ್‌ನ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕಷ್ಟೇ ತನ್ನ ಕಾರ್ಯಕ್ಷೇತ್ರವನ್ನು ಮಿತಿಗೊಳಿಸಲಿಲ್ಲ. ಚರ್ಚಿನ ಹೆಸರಿ ನಲ್ಲಿ ಇದ್ದ ಭೂಮಿಯ ಸಮಸ್ತ ಒಡೆತನವನ್ನು ಹೊಂದಿ ಒಂದು ರೀತಿಯಲ್ಲಿ ಪೋಪ್ ಭಾರಿ ಭೂಮಾಲಿಕನೂ ಆಗಿದ್ದನು. ಇಲ್ಲಿ ಬಂದ ಸಮಸ್ಯೆ ಎಂದರೆ ಭೂಮಿಯ ಒಡೆತನಕ್ಕೆ ಸಂಬಂಧಿಸಿದ ರಾಜ್ಯದ ಕಾನೂನುಗಳು ಪೋಪ್‌ಗೂ ಅನ್ವಯಿಸುತ್ತದೆಯೆ ಎಂಬುದು. ಭೂಮಾಲಿಕನಾಗಿ ಪೋಪ್ ಸಹ ರಾಜ್ಯಕ್ಕೆ ತೆರಿಗೆಯನ್ನು ಸಲ್ಲಿಸಬೇಕು ಎನ್ನುವ ರಾಜ್ಯದ ಸಹಜ ನಿಲುವನ್ನು ಚರ್ಚ್‌ನ ಅಧಿಕಾರಿಗಳು ವಿರೋಧಿಸಿದರು. ಈ ವಿರೋಧವನ್ನು ರಾಜ ಹಗುರವಾಗಿ ಪರಿಗಣಿಸುವಂತಿರಲಿಲ್ಲ. ಏಕೆಂದರೆ ಶೈಕ್ಷಣಿಕ ಅವಕಾಶ ಚರ್ಚ್‌ನ ಅಧಿಕಾರಿಗಳಿಗೆ ಮಾತ್ರ ಇದ್ದುದರಿಂದ ಅವರು ಮಾತ್ರ ಓದು ಬರಹವನ್ನು ಬಲ್ಲವರಾಗಿದ್ದು, ರಾಜ್ಯದ ಆಡಳಿತದಲ್ಲಿ ಬಹು ಮುಖ್ಯ ಪಾತ್ರವನ್ನು ಅವರು ವಹಿಸುತ್ತಿದ್ದರು. ಈ ಅಧಿಕಾರಿಗಳನ್ನು ದೂರವಿರಿಸಿ ರಾಜ್ಯದ ಆಡಳಿತ ನಡೆಸುವುದು ರಾಜನಿಗೆ ಕಷ್ಟ ಸಾಧ್ಯವಾದ ಮಾತಾಗಿತ್ತು. ಅಧಿಕಾರಿಗಳ ನಿಷ್ಠೆ ಚರ್ಚಿನ ಕಾನೂನಿಗೆ ಇತ್ತು. ಯಾವುದೇ ಕಾನೂನು ಚರ್ಚಿನ ನೀತಿಗೆ ವಿರುದ್ಧವಾಗಿದ್ದರೆ ಅಂತಹ ಕಾನೂನನ್ನು ಜಾರಿಗೊಳಿಸುವಂತೆ ತಡೆಯುವ ಸಾಮರ್ಥ್ಯ ಅವರಿಗಿತ್ತು. ಆದ್ದರಿಂದ ಚರ್ಚ್‌ನ ಆಸ್ತಿಗೆ ಸಂಬಂಧಿಸಿದ ಯಾವುದೇ ನಿಯಮವನ್ನು ರಾಜ್ಯ ರೂಪಿಸು ವುದಕ್ಕೆ ಅವರು ವಿರೋಧವಾಗಿದ್ದರು. ಇತ್ತ ಜನರ ಬೆಂಬಲ ಬಾನ್ರಿಯಾದಂತೆಲ್ಲ ರಾಜ್ಯದ ಅಧಿಕಾರವನ್ನು ಧಿಕ್ಕರಿಸುವ ಚರ್ಚಿನ ಅಧಿಕಾರಿಗಳು ಅದರಲ್ಲೂ ಪ್ರಮುಖವಾಗಿ ಪೋಪ್‌ನ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನು ರಾಜ ಪ್ರದರ್ಶಿಸಲು ಪ್ರಾರಂಭಿಸಿದ. ಈ ಬೆಳವಣಿಗೆಯಿಂದ ರಾಜ್ಯ ಹಾಗೂ ಚರ್ಚ್ ನಡುವಿನ ಭಿನ್ನಾಭಿಪ್ರಾಯ ಒಂದು ಪರಾಕಾಷ್ಠೆಯ ಹಂತವನ್ನು ತಲುಪಿತು. ೧೦೭೬ರಲ್ಲಿ ಜರ್ಮನಿಯ ದೊರೆ ನಾಲ್ಕನೆ ಹೆನ್ರಿಗೂ ಏಳನೆ ಪೋಪ್ ಜಾರ್ಜ್‌ಗೂ ತೀವ್ರವಾದ ಭಿನ್ನಾಭಿಪ್ರಾಯ ತಲೆದೋರಿದಾಗ ದೊರೆ ಹೆನ್ರಿ ಪೋಪ್‌ನಿಗೆ ತನ್ನ ಅಧಿಕಾರ ಬಿಟ್ಟು ಕೆಳಗಿಳಿಯುವಂತೆ ಸೂಚಿಸಿದ. ಇದಕ್ಕೆ ಪ್ರತಿಯಾಗಿ ಪೋಪ್ ದೊರೆಯನ್ನು ದೇಶದಿಂದಲೆ ಹೊರಗಟ್ಟುವ ಆದೇಶ ನೀಡಿದನು. ಈ ಘಟನೆ ಮುಂದೆ ಸುಮಾರು ಇನ್ನೂರು ವರ್ಷಗಳ ಕಾಲ ರಾಜ್ಯ ಹಾಗೂ ಚರ್ಚ್‌ನ ನಡುವಿನ ಸಂಬಂಧಗಳ ಬಗ್ಗೆ ವಿವಿಧ ರೀತಿಯ ಸಿದ್ಧಾಂತಗಳ ಉಗಮಕ್ಕೆ ನಾಂದಿಯಾಯಿತು. ದೊರೆ ಹೆನ್ರಿಗೂ ಪೋಪ್ ಜಾರ್ಜ್‌ಗೂ ನಡೆದ ಈ ಸಮರದಲ್ಲಿ ಗೆಲುವು ದೊರಕಿದ್ದು ಪೋಪ್‌ಗೆ ಎನ್ನುವ ಅಂಶ ಚರ್ಚ್ ಎಷ್ಟು ಪ್ರಬಲವಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.

ಈ ಮೇಲೆ ತಿಳಿಸಿದ ಘಟನೆಯ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಸಿದ್ಧಾಂತಗಳು ಮಂಡಿತವಾದವು. ಜಾನ್ ಆಫ್ ಸಾಲಿಸ್‌ಬರಿ(೧೧೨೦-೧೧೮೦) ಎನ್ನುವ ವಿದ್ವಾಂಸ ಪೋಪ್ ಗೆಲಿಸಿಯಸ್‌ನ ದ್ವಿಖಡ್ಗ ಸಿದ್ಧಾಂತವನ್ನು ಹೆಚ್ಚು ಕಡಿಮೆ ಪುನರುಚ್ಚರಿಸುತ್ತಾನೆ. ಅವನ ಪ್ರಕಾರ ಎರಡು ಖಡ್ಗಗಳು(ಲೌಕಿಕ ಹಾಗೂ ಆಧ್ಯಾತ್ಮಿಕ) ಚರ್ಚೆಗೆ ಸೇರಿದಂತಹವು ಗಳು. ಜನರ ಲೌಕಿಕ ಬದುಕು ಅವರ ಪಾರಮಾರ್ಥಿಕ ಗುರಿಗೆ ಸಹಾಯಕ ಎನ್ನುವುದನ್ನು ಅವನು ಅಲ್ಲಗೆಳೆಯುವುದಿಲ್ಲ. ಹಾಗೆಯೇ ಲೌಕಿಕ ಬದುಕನ್ನು ಸಾಧ್ಯಗೊಳಿಸಲು ರಾಜ್ಯದ ಹಾಗೂ ರಾಜನ ಮಹತ್ವವನ್ನು ಅವನು ಗುರುತಿಸುತ್ತಾನೆ. ಆದರೆ ಸಾಲಿಸ್‌ಬರಿಯ ಪ್ರಕಾರ ರಾಜ ತನ್ನ ಅಧಿಕಾರವನ್ನು ದೇವರಿಂದ ನೇರವಾಗಿ ಪಡೆಯುವುದಿಲ್ಲ. ಆ ಅಧಿಕಾರ ಅವನಿಗೆ ದೊರೆಯುವುದು ಚರ್ಚ್‌ನ ಮೂಲಕ. ಈ ವಾದದ ಇಂಗಿತವೆಂದರೆ ಚರ್ಚ್‌ನ ಮುಖ್ಯಸ್ಥನಾದ ಪೋಪ್‌ನ ನಿರ್ದೇಶನದಂತೆ ರಾಜ ರಾಜ್ಯಭಾರ ಮಾಡಬೇಕು ಎನ್ನುವುದು. ಸಾಲಿಸ್‌ಬರಿಯ ನಂತರ ಬಂದ ಸಂತ ಥಾಮಸ್ ಅಕ್ಟಿನಾಸ್(೧೨೨೬-೧೨೭೪) ಎನ್ನುವ ಮತ್ತೊಬ್ಬ ಧಾರ್ಮಿಕ ಮುಖಂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಅಮೂರ್ತವಾದ ಸಿದ್ಧಾಂತವನ್ನು ‘ಸುಮ್ಮ ಥಿಯಾಲಜಿಕಲ್’ ಎನ್ನುವ ಗ್ರಂಥದಲ್ಲಿ ಪ್ರತಿಪಾದಿಸುತ್ತಾನೆ. ಇವನ ಸಿದ್ಧಾಂತಕ್ಕೆ ಪ್ರಮುಖ ಪ್ರೇರಣೆ ಎಂದರೆ ಆಗ ಯುರೋಪಿನಲ್ಲಿ ಹುಟ್ಟಿಕೊಳ್ಳುತ್ತಿದ್ದ ತತ್ವಶಾಸ್ತ್ರ. ಧಾರ್ಮಿಕ ಸಿದ್ಧಾಂತಕ್ಕೆ ಭಿನ್ನವಾದ ರೀತಿಯಲ್ಲಿ ತತ್ವಶಾಸ್ತ್ರ ತನ್ನ ನೆಲೆಯನ್ನು ಗುರುತಿಸಿಕೊಳ್ಳುತ್ತಿತ್ತು. ಧಾರ್ಮಿಕತೆ ಕೇವಲ ನಂಬಿಕೆ, ನಿಷ್ಟೆಯ ಆಧಾರದ ಮೇಲೆ ನಿಂತಿದ್ದರೆ ತತ್ವಶಾಸ್ತ್ರ ತನ್ನ ಅಸ್ತಿತ್ವವನ್ನು ವೈಚಾರಿಕತೆಯ ನೆಲೆಯ ಮೇಲೆ ಕಂಡುಕೊಳ್ಳುತ್ತಿತ್ತು. ಯಾವುದನ್ನು ವೈಚಾರಿಕತೆಯಿಂದ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ತತ್ವಶಾಸ್ತ್ರ, ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆ ಕಾಲದಲ್ಲಿ ತತ್ವಶಾಸ್ತ್ರದ ಹೊಸ ಹೊಸ ಪ್ರತಿಪಾದಕರು ಬಂದಂತೆಲ್ಲ ಧಾರ್ಮಿಕ ಮುಖಂಡರಿಗೆ ಮುಜುಗರನ್ನುಂಟುಮಾಡುವ ಪರಿಸ್ಥಿತಿ ಉಂಟಾಗುತ್ತಿತ್ತು. ಆಗ ಹುಟ್ಟಿ ಕೊಳ್ಳುತ್ತಿದ್ದ ವಿಶ್ವವಿದ್ಯಾನಿಲಯಗಳು ಇಂತಹ ತತ್ವಶಾಸ್ತ್ರಜ್ಞರ ಹುಟ್ಟಿನ ಮೂಲವಾಗಿದ್ದವು. ಚರ್ಚ್‌ವಾದಿಗಳಿಗೆ ಇವರನ್ನು ಎದುರಿಸುವುದು ಒಂದು ರೀತಿಯಲ್ಲಿ ರಾಜನನ್ನು ಎದುರಿಸುವುದಕ್ಕಿಂತಲು ಕಷ್ಟವಾಗಿತ್ತು. ಅಕ್ಟಿನಾಸ್‌ನ ಸುಮ್ಮ ಥಿಯಾಲಿಜಿಕಲ್ ಈ ಸವಾಲನ್ನು ಎದುರಿಸುವ ದಿಕ್ಕಿನಲ್ಲಿ ಒಂದು ಪ್ರಯತ್ನ ಅಷ್ಟೆ. ಅಕ್ಟಿನಾಸ್‌ನ ವಾದದಂತೆ ತತ್ವಶಾಸ್ತ್ರ ವೈಚಾರಿಕತೆಯ ನೆಲೆಯನ್ನು ಆಧರಿಸಿದೆ, ಧರ್ಮದ ನೆಲೆ ನಂಬಿಕೆ ಹಾಗೂ ನಿಷ್ಟೆ. ಈ ಎರಡೂ ಮಾನವನ ಬದುಕಿನ ಎರಡು ಆಯಾಮಗಳು. ಆದರೆ ವೈಚಾರಿಕತೆ ಮಾನವನ ಎಲ್ಲಾ ಸಮಸ್ಯೆಗಳಿಗೂ ಉತ್ತರವನ್ನು ಕಂಡುಕೊಳ್ಳುವುದಿಲ್ಲ. ಅವನ ಬದುಕಿನ ಅಂತಿಮ ಗುರಿಯಾದ ಅನಂತಶಾಂತಿ ದೊರಕುವುದು ದೇವರ ಸಾನ್ನಿಧ್ಯ ದಲ್ಲಿ ಮಾತ್ರ. ಅದನ್ನು ಸಾಧ್ಯವಾಗಿಸುವುದು ನಂಬಿಕೆ ಹಾಗೂ ಅಚಲ ನಿಷ್ಠೆಯ ಆಧಾರದ ಮೇಲೆ ನಿಂತಿರುವ ಧರ್ಮ. ಆದ್ದರಿಂದ ತತ್ವಶಾಸ್ತ್ರ ಧರ್ಮವನ್ನು ಅವಲಂಬಿಸಬೇಕು, ಅಂತೆಯೇ ರಾಜ್ಯ ಚರ್ಚ್‌ನ್ನು ಅವಲಂಬಿಸಬೇಕು.

ಈ ಮೊದಲೆ ತಿಳಿಸಿದಂತೆ ೧೩ನೇ ಶತಮಾನದಲ್ಲಿ ಮಹತ್ತರ ಬದಲಾವಣೆಗಳಾದವು. ಇಟಲಿಯು ಈ ಬದಲಾವಣೆಗೆ ಹೊರತಾಗಿರಲಿಲ್ಲ. ವಾಣಿಜ್ಯ ಹಾಗೂ ಹಣಕಾಸು ವ್ಯವಹಾರಗಳ ಬೆಳವಣಿಗೆಯಿಂದಾಗಿ ನಗರಗಳು ಹುಟ್ಟಿಕೊಂಡವು. ಇದು ಒಂದು ರೀತಿ ಯಲ್ಲಿ ಕೈಗಾರಿಕಾ ಕ್ರಾಂತಿಗೂ ಮೊದಲಿನ ಬಂಡವಾಳಶಾಹಿ ವ್ಯವಸ್ಥೆಯ ಹುಟ್ಟಿಗೆ ಕಾರಣವಾಯಿತು. ಈ ವ್ಯವಸ್ಥೆಗೆ ಪೂರಕವಾದ ಲೌಕಿಕವಾದ ನಗರಗಳಲ್ಲಿ ಜನಪ್ರಿಯ ವಾಯಿತು. ವ್ಯಾಪಾರ ವ್ಯವಹಾರಗಳನ್ನು ಅವಲಂಬಿಸಿದ ಇಟಲಿಯ ಮಧ್ಯಮವರ್ಗದ ಜನರಿಗೆ ರಾಜ್ಯದ ಅವಶ್ಯಕತೆ ಹಿಂದಿಗಿಂತ ಹೆಚ್ಚಾಗಿತ್ತು. ಆದ್ದರಿಂದ ರಾಜ್ಯದ ಅಸ್ತಿತ್ವವನ್ನು ಬಲಪಡಿಸುವ ಸಿದ್ಧಾಂತದ ಅಗತ್ಯ ಕಂಡುಬಂದಿತು. ಇದರ ಪರಿಣಾಮವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಚರ್ಚಿನ ಪ್ರಭಾವ ಮುಂದುವರಿದರೂ ನಗರ ಪ್ರದೇಶಗಳಲ್ಲಿ ಲೌಕಿಕವಾದಕ್ಕೆ ಬೆಂಬಲ ಜಾಸ್ತಿಯಾಯಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಾವು ವಿದ್ವಾಂಸ ಡಾಂಟೆ (೧೨೬೫-೧೩೨೧)ಯವರ ವಿಚಾರಗಳನ್ನು ಗಮನಿಸಬೇಕು. ಡಾಂಟೆ ‘ಆನ್ ಮೊನಾರ್ಕಿ’ ಎನ್ನುವ ಗ್ರಂಥದಲ್ಲಿ ರಾಜ್ಯದ ಅಧಿಕಾರದ ಬಗ್ಗೆ ಹಿಂದಿನವರಿಗಿಂತ ಸ್ವಲ್ಪ ಭಿನ್ನವಾದ ಅಭಿಪ್ರಾಯವನ್ನು ಮಂಡಿಸುತ್ತಾರೆ. ಮೊತ್ತ ಮೊದಲ ಬಾರಿಗೆ ರಾಜ್ಯ ತನ್ನ ಅಧಿಕಾರಕ್ಕೆ ಚರ್ಚನ್ನು ಅವಲಂಬಿಸಿಲ್ಲ ಎನ್ನುವ ನಿಲುವನ್ನು ಇವರು ತಳೆಯುತ್ತಾರೆ. ಆದರೆ ಚರ್ಚ್‌ನ ಮಹತ್ವವನ್ನು ಇವರು ಅಲ್ಲಗಳೆಯುವುದಿಲ್ಲ. ಡಾಂಟೆಯವರ ಪ್ರಕಾರ ಮಾನವ ದ್ವಿಮುಖ ಸ್ವಭಾವದವನಾಗಿದ್ದಾನೆ. ದೇಹ ಹಾಗೂ ಆತ್ಮ ಅವನ ಎರಡು ಅವಿಭಾಜ್ಯ ಅಂಗಗಳು. ಈ ಎರಡು ಅಂಗಗಳು ತಮ್ಮದೇ ಆದ ಗುರಿಯನ್ನು ಹೊಂದಿವೆ. ದೇಹಕ್ಕೆ ಸಂಬಂಧಪಟ್ಟ ಗುರಿಯೆಂದರೆ ಲೌಕಿಕ ಜೀವನದಲ್ಲಿ ಸುಖವಾದ ಬದುಕು ಹಾಗೂ ಆತ್ಮಕ್ಕೆ ಸಂಬಂಧಿಸಿದ ಗುರಿ ಸ್ವರ್ಗ. ಇದರಲ್ಲಿ ಮೊದಲನೆಯ ಗುರಿಯನ್ನು ವೈಚಾರಿಕತೆಯಿಂದ ಹಾಗೂ ತತ್ವಶಾಸ್ತ್ರದ ನೆಲೆಯಿಂದ ಕಂಡುಕೊಳ್ಳಬಹುದು. ಎರಡನೆಯ ಗುರಿಯನ್ನು ಸಾಧಿಸಲು ಸಾಧ್ಯವಾಗುವುದು ನಂಬಿಕೆ, ವಿಶ್ವಾಸ ಹಾಗೂ ಧರ್ಮಶಾಸ್ತ್ರಗಳ ಸಹಾಯದಿಂದ. ಈ ದೃಷ್ಟಿಯಿಂದ ರಾಜ್ಯ ಹಾಗೂ ಚರ್ಚ್ ಪರಸ್ಪರ ವಿರುದ್ಧವಾದ ಗುರಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಅವೆರಡರ ಗುರಿಗಳು ಒಂದೇ ಆಗಿರುವುದರಿಂದ ಎರಡರ ಅಸ್ತಿತ್ವವೂ ಸಮಾನ ಮಹತ್ವವನ್ನು ಹೊಂದಿರುತ್ತದೆ. ಈ ಎರಡೂ ಸಂಸ್ಥೆಗಳು ತಮ್ಮ ತಮ್ಮ ವಲಯಗಳಲ್ಲಿ ಸ್ವತಂತ್ರ ಸಂಸ್ಥೆಗಳು. ಹೀಗೆ ಹೇಳಿದ ಡಾಂಟೆ ಮತ್ತೊಂದು ಮಹತ್ವದ ಹೇಳಿಕೆಯನ್ನು ನೀಡುತ್ತಾನೆ. ಅದೆಂದರೆ ರಾಜ್ಯ ಚರ್ಚ್ ಹುಟ್ಟುವ ಮೊದಲೆ ತನ್ನ ಆಧಿಕಾರವನ್ನು ಪಡೆದಿತ್ತು ಎಂದು. ಡಾಂಟೆಯ ಈ ಹೇಳಿಕೆ ಆ ಕಾಲದಲ್ಲಿ ಜನರ ಬದಲಾಗುತ್ತಿದ್ದ ಮನೋಧರ್ಮದ ದ್ಯೋತಕವಾಗಿತ್ತು. ಸಂತ ಅಗಸ್ಟೀನ್ ರಾಜ್ಯ ಮಾನವನ ದೌರ್ಬಲ್ಯ ಹಾಗೂ ಪಾಪಗಳ ಕಾರಣದಿಂದ ಹುಟ್ಟಿಕೊಂಡ ಸಂಸ್ಥೆ ಎಂದು ಹೇಳಿದರೆ, ಸಂತ ಅಕ್ಟಿನಾಸ್ ರಾಜ್ಯ ಉಗಮವಾದದ್ದು ಮಾನವನ ಸಾಮಾಜಿಕ ಅಗತ್ಯಗಳ ಪೂರೈಕೆಗಾಗಿ ಎಂದು ಹೇಳುತ್ತಾನೆ. ಡಾಂಟೆ ಈ ಎರಡೂ ತತ್ವಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಾನೆ. ಅಂದರೆ ರಾಜ್ಯ ಮಾನವ ದೌರ್ಬಲ್ಯದ ಪ್ರತೀಕವೂ ಹೌದು ಹಾಗೆಯೆ ಸಾಮಾಜಿಕ ಅಗತ್ಯಗಳ ಪೂರೈಕೆಗೆ ಸಹಜವಾಗಿ ಹುಟ್ಟಿಕೊಂಡ ಸಂಸ್ಥೆಯೂ ಹೌದು. ಈ ಕಾರಣದಿಂದಲೆ ರಾಜ್ಯಕ್ಕೆ ಮಾನವನನ್ನು ದೌರ್ಬಲ್ಯದಿಂದ ಮುಕ್ತಗೊಳಿಸುವ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ಚರ್ಚ್‌ನೊಡನೆ ರಾಜ್ಯ ಸಹಕರಿಸಬೇಕು. ಆದರೆ ರಾಜ್ಯ ತನ್ನ ಕೆಲಸವನ್ನು ನಿರ್ವಹಿಸಲು ಚರ್ಚ್‌ನ ಮಧ್ಯವರ್ತಿತನದ ಅಗತ್ಯವಿಲ್ಲ. ಈ ವಾದ ಡಾಂಟೆಯ ಕಾಲದಲ್ಲಿ ಒಂದು ಕ್ರಾಂತಿಕಾರಿ ವಿಚಾರ ಸರಣಿಯಾಗಿತ್ತು.

೧೩ನೇ ಶತಮಾನದಲ್ಲಿ ಆದ ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ ಫ್ರಾನ್ಸ್ ಹಾಗೂ ಇಂಗ್ಲೆಂಡಿನಲ್ಲಿ ರಾಜನಿಗೂ ಪೋಪ್‌ಗೂ ನಡುವೆ ನಡೆದ ಸಮರ. ಜರ್ಮನಿಯಲ್ಲಿ ದೊರೆ ನಾಲ್ಕನೆ ಹೆನ್ರಿ ಹಾಗೂ ಪೋಪ್ ಏಳನೆ ಚರ್ಚ್‌ಗೂ ನಡುವೆ ೧೦೭೬ರಲ್ಲಿ ನಡೆದ ಘರ್ಷಣೆಯ ತರುವಾಯ ಜರ್ಮನಿಯ ಸಾಮ್ರಾಜ್ಯದ ಮೇಲೆ ಚರ್ಚ್ ತನ್ನ ಸಂಪೂರ್ಣ ಹಿಡಿತವನ್ನು ಸಾಧಿಸಿತ್ತು. ಇಂಗ್ಲೆಂಡ್ ಹಾಗೂ ಫ್ರಾನ್ಸ್‌ನಲ್ಲಿ ಪರಿಸ್ಥಿತಿ ಬೇರೆಯದೆ ಆಗಿತ್ತು. ಆ ಸಮಯದಲ್ಲಿ ಅತ್ಯಂತ ಪ್ರಭಾವಿ ಕೊನೆಯ ಪೋಪ್ ಎನಿಸಿಕೊಂಡ ಪೋಪ್ ಬೋನಿಫೇಸ್(೧೨೯೪-೧೩೦೩) ರಾಜ್ಯಕ್ಕೆ ಚರ್ಚ್‌ನ ಆಸ್ತಿಯ ಮೇಲೆ ಹಾಗೂ ಚರ್ಚಿನ ಅಧಿಕಾರಿಗಳು ಹೊಂದಿದ ಆಸ್ತಿಯ ಮೇಲೆ ತೆರಿಗೆ ವಿಧಿಸುವ ಯಾವುದೇ ಹಕ್ಕಿಲ್ಲ ಎನ್ನುವ ಆಜ್ಞೆ ಹೊರಡಿಸಿದ. ಈ ಆಜ್ಞೆಯಿಂದ ರೊಚ್ಚಿಗೆದ್ದ ಇಂಗ್ಲೆಂಡ್‌ನ ದೊರೆ ಒಂದನೆ ಎಡ್ವರ್ಡ್ ಹಾಗೂ ಫ್ರಾನ್ಸ್‌ನ ರಾಜ ನಾಲ್ಕನೆ ಫಿಲಿಫ್ ಚರ್ಚ್‌ನ ಅಧಿಕಾರದ ವಿರುದ್ಧ ದಂಗೆ ಎದ್ದರು. ೧೩೦೦ರಲ್ಲಿ ನಡೆದ ಮೊದಲನೆ ಕ್ರೈಸ್ತಧರ್ಮ ಮಹೋತ್ಸವದಲ್ಲಿ ಪೋಪ್ ಬೋನಿಫೇಸ್ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಜಗತ್ತಿನ ಸಾಮ್ರಾಟ ತಾನೇ ಎಂದು ಘೋಷಿಸಿ, ಲೌಕಿಕ ಹಾಗೂ ಆಧ್ಯಾತ್ಮಿಕ ಎರಡೂ ಅಧಿಕಾರಗಳು ಚರ್ಚ್‌ನ ಅಧಿಪತ್ಯಕ್ಕೆ ಒಳಪಡುತ್ತವೆ ಎಂದು ಆಜ್ಞೆಯನ್ನು ಹೊರಡಿಸಿದ. ಈ ಆಜ್ಞೆಯನ್ನು ‘ಯುನಮ್ ಸ್ಯಾಂಕ್ಟಮ್’ ಎಂದು ಕರೆಯಲಾಗಿದೆ. ಈ ಆಜ್ಞೆಯ ಪ್ರಕಾರ ರಾಜ ತಪ್ಪಿತಸ್ಥನಾದರೆ ಅವನನ್ನು ಶಿಕ್ಷಿಸುವ ಅಧಿಕಾರ ಪೋಪ್‌ಗಿದೆ. ಆದರೆ ಪೋಪ್‌ನ ಮೇಲೆ ರಾಜನಿಗೆ ಯಾವ ಅಧಿಕಾರವೂ ಇರುವುದಿಲ್ಲ. ಒಂದು ವೇಳೆ ಪೋಪ್ ತಪ್ಪು ಮಾಡಿದರೆ ಅವನನ್ನು ಶಿಕ್ಷಿಸುವ ಅಧಿಕಾರ ಇರುವುದು ದೇವರಿಗೆ ಮಾತ್ರ.

ಪೋಪ್ ಬೋನಿಫೇಸ್‌ನ ಈ ಸವಾಲನ್ನು ಎದುರಿಸಲು ಫ್ರಾನ್ಸ್‌ನ ನಾಲ್ಕನೆ ಫಿಲಿಪ್ ಸಿದ್ಧನಾದ. ಫಿಲಿಪ್ ದೊರೆ ಇಡಿ ಚರ್ಚಿನ ಅಧಿಕಾರವನ್ನೆ ಪ್ರಶ್ನಿಸಲು ಹೋಗದೆ ಪೋಪ್‌ನ ಮೇಲೆ ಹಲವಾರು ಆಪಾದನೆಗಳನ್ನು ಹೊರಿಸಿ ಅದರ ವಿಚಾರಣೆಗೆ ಚರ್ಚಿನ ಸಾಮಾನ್ಯ ಸಮಿತಿಯ ಮುಂದೆ ಪೋಪ್‌ನನ್ನು ಹಾಜರುಪಡಿಸಬೇಕೆಂದು ಕೋರಿದ. ಸಾಮಾನ್ಯ ಸಮಿತಿಯು ಪೋಪ್‌ನನ್ನು ತಪ್ಪತಸ್ಥ ಎಂದು ಘೋಷಿಸಿತು. ಈ ಸಮಯಕ್ಕಾಗಲೆ ಪೋಪ್ ಬುದ್ದಿಜೀವಿಗಳ ನಗರವಾಸಿಗಳ, ವಿಶ್ವವಿದ್ಯಾನಿಲಯಗಳ ಬೆಂಬಲವನ್ನು ಕಳೆದುಕೊಂಡಿದ್ದ. ಅವರೆಲ್ಲರ ಸಹಾನುಭೂತಿ ಫಿಲಿಫ್ ದೊರೆಯ ಕಡೆಗಿತ್ತು.

೧೧ನೆಯ ಶತಮಾನದ ಆದಿಭಾಗದಲ್ಲಿ ನಡೆದ ಪೋಪ್ ಹಾಗೂ ಜರ್ಮನಿಯ ದೊರೆಯ ನಡುವಿನ ಕದನಕ್ಕೂ ೧೩ನೇ ಶತಮಾನದಲ್ಲಿ ನಡೆದ ಕದನಕ್ಕೂ ಒಂದು ಬಹುಮುಖ್ಯ ವ್ಯತ್ಯಾಸವಿದೆ. ೧೧ನೆಯ ಶತಮಾನದಲ್ಲಿ ರಾಜ್ಯ ಚರ್ಚ್‌ಗಿಂತ ಸಂಪೂರ್ಣ ಭಿನ್ನವಾದ ಅಸ್ತಿತ್ವವನ್ನು ಇನ್ನೂ ಗುರುತಿಸಿಕೊಂಡಿರಲಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ವಾಗಿ ರಾಜ್ಯ ಜನರ ಅಗತ್ಯಗಳನ್ನು ಪೂರೈಸುವ ಅನಿವಾರ್ಯ ಸಂಸ್ಥೆಯಾಗಿ ಬೆಳೆದಿರಲಿಲ್ಲ. ಆ ಕಾರಣದಿಂದಾಗಿ ಆಗ ಪೋಪ್‌ಗೆ ಗೆಲುವಾಗಿದ್ದು ಸಹಜವೇ ಆಗಿತ್ತು. ಆದರೆ ೧೩ನೆಯ ಶತಮಾನದ ಹೊತ್ತಿಗೆ ಜನರ ದಿನನಿತ್ಯದ ಬದುಕಿನ ಮೇಲೆ ಚರ್ಚ್ ಪ್ರಮಾಣ ಕಡಿಮೆ ಯಾಗುತ್ತಾ ಹೋಯಿತು. ಪರ‌್ಯಾಯವಾಗಿ ರಾಜ್ಯ ತನ್ನ ಕಾರ‌್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತ ಹೋದಂತೆ ಜನರಿಗೆ ಅದೊಂದು ಅನಿವಾರ್ಯ ಸಂಸ್ಥೆ ಎನ್ನುವ ನಂಬಿಕೆ ಬೆಳೆಯುತ್ತಾ ಹೋಯಿತು. ಇದರ ಜೊತೆಗೆ ಮತ್ತೊಂದು ಪ್ರಮುಖ ಅಂಶವನ್ನು ನಾವು ಗಮನಿಸಬೇಕು. ಪೋಪ್ ಕೇವಲ ಧಾರ್ಮಿಕ ಆಚರಣೆಗೆ ತನ್ನ ಕಾರ್ಯ ಚಟುವಟಿಕೆಯನ್ನು ಸೀಮಿತ ಗೊಳಿಸಿಕೊಳ್ಳದೆ ಲೌಕಿಕ ವ್ಯವಹಾರಗಳಲ್ಲೂ ತಲೆಹಾಕಲು ಪ್ರಾರಂಭಿಸಿ ಕ್ರಮೇಣ ಭ್ರಷ್ಟವಾಗುತ್ತಾ ಹೋದದ್ದು ಜನರಿಗೆ ಆ ಸಂಸ್ಥೆಯ ಮೇಲೆ ನಂಬಿಕೆ ಹೋಗಲು ಕಾರಣವಾಯಿತು. ಫ್ರಾನ್ಸ್‌ನ ದೊರೆಗೂ ಪೋಪ್ ಬೋಸಿಫೇಸ್‌ಗೂ ನಡುವೆ ಕದನವು ರಾಜ್ಯ ಹಾಗೂ ಧರ್ಮಗಳ ನಡುವೆ ಹೊಸ ಹೊಂದಾಣಿಕೆಗೆ ನಾಂದಿಯಾಯಿತು. ಈ ಘಟನೆಯ ನಂತರ ಅಧಿಕಾರ ವಹಿಸಿಕೊಂಡ ಹೊಸ ಪೋಪ್ ಐದನೆಯ ಕ್ಲೆಮೆಂಟ್ ರಾಜ್ಯದ ಅಧಿಕಾರವನ್ನು ಗುರುತಿಸಿ ಚರ್ಚ್ ಹಾಗೂ ರಾಜ್ಯಗಳ ನಡುವೆ ಹೊಸ ಹೊಂದಾಣಿಕೆ ಮಾಡಿಕೊಂಡನು.

ರಾಜ್ಯ ಕ್ರಮೇಣ ಹೆಚ್ಚು ಅಧಿಕಾರವನ್ನು ಪಡೆಯುವಂತಾಗಿ ಧಾರ್ಮಿಕ ಆಚರಣೆಗೂ ರಾಜ್ಯದ ಚಟುವಟಿಕೆಗೂ ಯಾವುದೇ ಸಂಬಂಧವಿರಬಾರದು ಎನ್ನುವ ಹೊಸ ಲೌಕಿಕವಾದದ  ಉಗಮಕ್ಕೆ ಕಾರಣವಾದ ಯುರೋಪಿನಲ್ಲಿ ಕಂಡುಬಂದ ಮತ್ತೊಂದು ಬೆಳವಣಿಗೆ ಪ್ರೊಟೆಸ್ಟೆಂಟ್ ಚಳವಳಿ. ಈ ಚಳವಳಿ ರೋಮ್‌ನ ಕ್ಯಾಥೊಲಿಕ್ ಚರ್ಚಿನ ಬುಡವನ್ನೆ ಅಲುಗಾಡಿಸಿಬಿಟ್ಟಿತ್ತು. ಈ ಚಳವಳಿ ಪ್ರಾರಂಭವಾಗುವವರೆಗೂ ಇಡೀ ಜಗತ್ತಿನ ಕ್ರೈಸ್ತ ಧರ್ಮದ ಅನುಯಾಯಿಗಳಿಗೆ ಏಕೈಕ ಧರ್ಮ ಸಂಸ್ಥೆ ಎನಿಸಿಕೊಂಡಿದ್ದ ರೋಮನ್ ಕ್ಯಾಥೋಲಿಕ್ ಚರ್ಚ್ ಆ ಸ್ಥಾನವನ್ನು ಕಳೆದುಕೊಳ್ಳಲಾರಂಭಿಸಿತು. ಕ್ರಮೇಣ ಹಲವಾರು ಧರ್ಮಸಂಸ್ಥೆಗಳು ಹುಟ್ಟಿಕೊಂಡವು. ರೋಮ್‌ನ ಚರ್ಚ್ ಹೀಗೆ ಹುಟ್ಟಿಕೊಂಡ ಹಲವಾರು ಸಂಸ್ಥೆಗಳಲ್ಲಿ ಒಂದು ಸಂಸ್ಥೆ ಮಾತ್ರ ಎನ್ನವ ಪರಿಸ್ಥಿತಿ ಉಂಟಾಯಿತು. ಈ ಪರಿಸ್ಥಿತಿಯಲ್ಲಿ ರಾಜ್ಯದ ಅವಶ್ಯಕತೆಗೆ ಒಂದು ಹೊಸ ವ್ಯಾಖ್ಯಾನ ನೀಡಿದವರನ್ನು ಮಾರ್ಷಿಲಿಯೋ ಪಡುವ(೧೨೭೫-೧೩೪೩) ಮಧ್ಯಕಾಲೀನ ಯುಗದ ರಾಜ್ಯದ ಕಲ್ಪನೆಯ ಪ್ರವರ್ತಕ ಎಂದು ಕರೆಯಲ್ಪಟ್ಟಿದ್ದಾನೆ. ಅವನು ತನ್ನ ದಿ ಡಿಫೆಂಡರ್ ಆಫ್ ಪೀಸ್  ಎನ್ನುವ ಗ್ರಂಥದಲ್ಲಿ ರಾಜ್ಯದ ಬಗ್ಗೆ ಹೊಸ ವ್ಯಾಖ್ಯಾನ ನೀಡುತ್ತಾನೆ. ಜನರ ಒಪ್ಪಿಗೆಯ ಆಧಾರದ ಮೇಲೆ ರಾಜ್ಯದ ಅಸ್ತಿತ್ವ ನಿಂತಿದೆ ಎನ್ನುವ ಹೊಸ ಸಿದ್ಧಾಂತವನ್ನು ಅವರು ಮುಂದಿಡುತ್ತಾನೆ. ಅವನ ಪ್ರಕಾರ ರಾಜ್ಯದ ಕಾನೂನಿನ ಮೂಲ ಜನರ ಒಪ್ಪಿಗೆ. ಚರ್ಚ್ ಸಹ ಜನರ ಒಪ್ಪಿಗೆ ಪಡೆಯದೆ ಯಾವುದೆ ನೀತಿ ನಿಯಮಗಳನ್ನು ರೂಪಿಸುವಂತಿಲ್ಲ. ದೈವಿಕ ಕಾನೂನು ಮಾನವ ನಿರ್ಮಿತ ಕಾನೂನಿಗಿಂತ ಹೆಚ್ಚಿನದು ಹೌದು, ಆದರೆ ದೈವಿಕ ಕಾನೂನನ್ನು ರಚಿಸುವ ಹಕ್ಕು ಚರ್ಚೆಗಿಲ್ಲ. ಅದರ ಮೂಲ ಬೈಬಲ್ ಮಾತ್ರ. ರಾಜನ ಆಳ್ವಿಕೆ ಜನರ ಇಚ್ಛೆಯನುಸಾರ ಇರಬೇಕು. ಏಕೆಂದರೆ ಅವನ ಅಧಿಕಾರದ ಮೂಲ ದೈವಿಕವಾದುದಲ್ಲ. ಜನರು ಅವನನ್ನು ರಾಜನನ್ನಾಗಿ ಚುನಾಯಿಸಿರುವುದರಿಂದಲೆ ಅವನು ಅಧಿಕಾರ ಪಡೆಯುತ್ತಾನೆ. ಚರ್ಚ್ ಬೈಬಲ್ಲಿಗನು ಗುಣವಾಗಿ ತನ್ನ ಅಧಿಕಾರವನ್ನು ಚಲಾಯಿಸಬೇಕು. ತಾನೇ ತಾನಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಅದಕ್ಕಿಲ್ಲ. ಯಾವುದೇ ವ್ಯಕ್ತಿ ಧರ್ಮಬಾಹಿರನಾದರೆ ಅವನಿಗೆ ಶಿಕ್ಷೆ ಮೇಲಿನ ಜಗತ್ತಿನಲ್ಲಿಯೆ ಹೊರತು ಚರ್ಚಿಗೆ ಅಧಿಕಾರ ಇಲ್ಲ. ನಾಗರಿಕ ಅಪರಾಧಕ್ಕೆ ಶಿಕ್ಷೆ ನೀಡುವ ಹಕ್ಕು ರಾಜ್ಯಕ್ಕಿರುತ್ತದೆ. ಪಡುವ ಹೇಳುವಂತೆ ಚರ್ಚ್ ರಾಜ್ಯದ ಒಂದು ಇಲಾಖೆ ಮಾತ್ರ. ಚರ್ಚ್‌ಗಳು ಎಷ್ಟಿರಬೇಕು ಎಂದು ನಿರ್ಧರಿಸುವ ಹಕ್ಕು ನಾಗರಿಕ ಸರ್ಕಾರಕ್ಕೆ ಮಾತ್ರ ಸೇರಿದ್ದು, ಅಲ್ಲದೆ ಚರ್ಚ್ ಅನಗತ್ಯ ಆಸ್ತಿಯನ್ನು ಹೊಂದುವಂತಿಲ್ಲ. ಪಾದ್ರಿಗಳನ್ನು ಹಾಗೂ ಇತರೆ ಅಧಿಕಾರಿಗಳನ್ನು ಸಾಕಲು ಎಷ್ಟು ಬೇಕೊ ಅಷ್ಟು ಆಸ್ತಿಯನ್ನು ಮಾತ್ರ ಉಳಿಸಿಕೊಂಡು ಹೆಚ್ಚಿನ ಆಸ್ತಿಯನ್ನು ಸರ್ಕಾರಕ್ಕೆ ಕೊಡಬೇಕು.

ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಮಾರ್ಷಲಿಯೊ ಪಡುವ ವಾದಿಸುತ್ತಿದ್ದುದು ರಾಜ್ಯಕ್ಕೆ ಹೆಚ್ಚು ಅಧಿಕಾರ ಕೊಡಬೇಕು ಎಂದಲ್ಲ. ಅವನ ಮುಖ್ಯ ಕಳಕಳಿ ಪೋಪ್ ಹಾಗೂ ಚರ್ಚ್ ಜನರ ನಂಬಿಕೆಯನ್ನು ಕಳೆದುಕೊಳ್ಳುವಂತಾಗಬಾರದು ಎಂದು. ಪೋಪ್ ಹಾಗೂ ಚರ್ಚಿನ ಅಧಿಕಾರಿಗಳು ತಮ್ಮ ವ್ಯಾಪ್ತಿ ಹಾಗೂ ಸರಳತೆಯನ್ನು ಮೀರಿ ವ್ಯವಹರಿ ಸುತ್ತಿದ್ದುದರಿಂದಲೆ ಚರ್ಚ್ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಎಂದು ನಂಬಿದ್ದ ಅವನು ಚರ್ಚ್‌ನ ಘನತೆಯನ್ನು ಪುನರ್ ಪ್ರತಿಷ್ಠಾಪಿಸುವುದಕ್ಕೆ ಮಾಡಿದ ಪ್ರಾಮಾಣಿಕ ಪ್ರಯತ್ನ ಅವನ ಗ್ರಂಥ. ಅವನ ಉದ್ದೇಶ ಏನೇ ಇದ್ದರೂ ಅವನ ವಿಚಾರಧಾರೆ ಬದಲಾಗುತ್ತಿದ್ದು ಚರ್ಚ್ ಹಾಗೂ ರಾಜ್ಯದ ಸ್ಥಾನಮಾನಗಳನ್ನು ತೋರಿಸುತ್ತದೆ. ಮುಂದೆ ಉದಾರವಾದಿ ರಾಜ್ಯಗಳು ಧರ್ಮನಿರಪೇಕ್ಷತೆಯ ನಿಲುವನ್ನು ತೆಗೆದುಕೊಳ್ಳಲು ಕಾರಣವಾದ ಮೂಲವನ್ನು ನಾವು ಇಲ್ಲಿ ಕಂಡುಕೊಳ್ಳಬಹುದು.

ರಾಜ್ಯದ ಅಧಿಕಾರದ ಲೌಕಿಕ ಸಮರ್ಥನೆಯ ವಿಪರೀತಾವಸ್ಥೆಯನ್ನು ನಾವು ೧೫ ಹಾಗೂ ೧೬ನೆಯ ಶತಮಾನದಲ್ಲಿ ಮೆಕೆವಲ್ಲಿ (೧೪೬೯-೧೫೨೭) ಎನ್ನುವ ಇಟಲಿಯ ಶ್ರೇಷ್ಠಚಿಂತಕನ ದಿ ಪ್ರಿನ್ಸ್ ಎನ್ನುವ ಗ್ರಂಥದಲ್ಲಿ ಕಾಣಬಹುದು. ರಾಜನ ಅಧಿಕಾರಕ್ಕೆ ಯಾವ ಮಿತಿಯೂ ಇರಬಾರದು ಎನ್ನುವುದು ಇವನ ವಾದ. ಹಾಗೂ ಅಧಿಕಾರ ಗಳಿಕೆ ಇವನ ಪ್ರಕಾರ ಬೇರೆ ಯಾವುದೋ ಗುರಿ ಸಾಧನೆಯ ಸಾಧನ ಮಾತ್ರವಲ್ಲ. ಅದೇ ಒಂದು ಪ್ರಮುಖ ಗುರಿ. ಈ ಗುರಿ ಸಾಧನೆಗೆ ಯಾವ ಸಾಧನವನ್ನಾದರೂ ಬಳಸಬಹುದು. ಇಲ್ಲಿ ಧರ್ಮಕ್ಕಾಗಲಿ, ಚರ್ಚ್‌ಗಾಗಲೀ ಯಾವುದೇ ಸ್ಥಾನವಿಲ್ಲ. ಮುಂದೆ ಥಾಮಸ್ ಹಾಬ್ಸ್, ಜಾನ್ ಲಾಕ್ ಹಾಗೂ ರೂಸ್ಸೊ ಸಾಮಾಜಿಕ ಒಪ್ಪಂದ ಸಿದ್ಧಾಂತಗಳು ರಾಜ್ಯದ ಉಗಮಕ್ಕೆ ಧರ್ಮವನ್ನು ಹೊರತುಪಡಿಸಿದ ವ್ಯಾಖ್ಯಾನವನ್ನೆ ಕೊಡುತ್ತಾರೆ. ಇಪ್ಪತ್ತನೆ ಶತಮಾನದ ಹೊತ್ತಿಗೆ ಬಂಡವಾಳಶಾಹಿ ವ್ಯವಸ್ಥೆ ಒಂದು ಕಡೆ, ಮತ್ತೊಂದು ಕಡೆ ಸಮತಾವಾದಿ ವ್ಯವಸ್ಥೆಗಳು ಬಲಗೊಂಡಂತೆಲ್ಲ ಧರ್ಮ ಹಾಗೂ ರಾಜ್ಯದ ನಡುವೆ ಇರುವ ಸಂಬಂಧದ ಬಗ್ಗೆ ಹೊಸ ಹೊಸ ವ್ಯಾಖ್ಯಾನಗಳು ಹುಟ್ಟಿಕೊಳ್ಳತೊಡಗಿದವು. ಮಾಕ್ಸ್ ರ್ ಸಿದ್ಧಾಂತದಿಂದ ಪ್ರಭಾವಿತವಾದ ಸಮತಾವಾದಿ ವ್ಯವಸ್ಥೆಗಳು ಧರ್ಮ ಎನ್ನುವುದು ಜನರ ಶೋಷಣೆಯ ಒಂದು ಸಾಧನ ಎಂದು ಪರಿಗಣಿಸಿ, ಧರ್ಮವನ್ನು ಸಂಪೂರ್ಣ ರಾಜ್ಯದಿಂದ ಉತ್ಪಾದಿಸುವ ನಿಲುವನ್ನು ತೆಗೆದುಕೊಂಡವು(ಇತ್ತೀಚಿನ ದಿನಗಳಲ್ಲಿ ಕಮ್ಯುನಿಸ್ಟ್ ರಾಷ್ಟ್ರಗಳು ಈ ಬಗ್ಗೆ ಮರುಚಿಂತನೆ ನಡೆಸಿವೆ. ಈಗ ನಾವು ಹಲವು ಗಡಿಗಳಲ್ಲಿ ಕಮ್ಯುನಿಸ್ಟ್ ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಪ್ರಜೆಗಳಿಗೆ ಕೊಟ್ಟಿರುವುದನ್ನು ನಾವು ಕಾಣಬಹುದು). ಬಂಡವಾಳಶಾಹಿ ವ್ಯವಸ್ಥೆಯ ಪ್ರಭಾವದಲ್ಲಿ ಹುಟ್ಟಿಕೊಂಡ ಉದಾರವಾದಿ ರಾಜ್ಯಗಳು ಧರ್ಮ ವ್ಯಕ್ತಿಯ ವೈಯಕ್ತಿಕ ನಂಬಿಕೆಗೆ ಸಂಬಂಧಿಸಿದ ಪ್ರಶ್ನೆಯಾದ್ದರಿಂದ ಅದರಲ್ಲಿ ರಾಜ ಪ್ರವೇಶಿಸಬಾರದು, ಆದರೆ ಸಾರ್ವಜನಿಕ ವ್ಯವಹಾರಗಳಲ್ಲಿ ಧರ್ಮ ಯಾವುದೇ ಪಾತ್ರ ವಹಿಸಬಾರದು ಎನ್ನುವ ನಿಲುವನ್ನು ತೆಗೆದುಕೊಂಡಿವೆ. ಈ ಸಮಸ್ಯೆ ಬರುವುದು ಹಲವಾರು ಧರ್ಮಗಳನ್ನು ಅನುಸರಿಸುವ ರಾಷ್ಟ್ರಗಳಲ್ಲಿ. ಉದಾರವಾದಿ ರಾಜ್ಯಗಳ ಈ ನಿಲುವನ್ನೆ ಧರ್ಮನಿರಪೇಕ್ಷತೆ  ಎಂದು ಕರೆಯಲಾಗುತ್ತದೆ. ಈ ‘ಸೆಕ್ಯುಲರ್’ ಎನ್ನುವ ಪದಕ್ಕೆ ಹಲವಾರು ವ್ಯಾಖ್ಯಾನಗಳನ್ನು ನೀಡಲಾಗಿದೆ. ಬೇರೆ ಬೇರೆ ಸಾಮಾಜಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ‘ಧರ್ಮನಿರಪೇಕ್ಷತೆ’ ಎನ್ನುವುದು ಬೇರೆ ಬೇರೆ ಅರ್ಥವನ್ನು ಪಡೆದುಕೊಳ್ಳುತ್ತದೆ. ಪ್ರಸ್ತುತದಲ್ಲಿ ಹಲವು ರಾಜ್ಯಗಳು(ಮುಖ್ಯವಾಗಿ ಇಸ್ಲಾಂ ರಾಷ್ಟ್ರಗಳು) ಒಂದು ಧರ್ಮವನ್ನು ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಿಕೊಂಡಿರುವುದನ್ನು ನಾವು ನೋಡಬಹುದು. ಇಂತಹ ರಾಷ್ಟ್ರಗಳಲ್ಲಿ ಧಾರ್ಮಿಕ ಹಾಗು ಲೌಕಿಕ ಅಧಿಕಾರಗಳ ನಡುವೆ ಅಂತಹ ವ್ಯತ್ಯಾಸವನ್ನು ನಾವು ಕಾಣುವುದಿಲ್ಲ.

ಭಾರತದಲ್ಲಿ ಧರ್ಮ ಹಾಗೂ ರಾಜ್ಯ ನಡುವಿನ ಸಂಬಂಧ ತುಂಬಾ ವಿಶಿಷ್ಟವಾದ ಇತಿಹಾಸವನ್ನು ಹೊಂದಿದೆ. ಹಿಂದೂ ರಾಜಕೀಯ ಚಿಂತನೆಯಲ್ಲಿ ಧರ್ಮ ಹಾಗೂ ರಾಜ್ಯವನ್ನು ಬೇರ್ಪಡಿಸುವ ಪ್ರಶ್ನೆಯೆ ಉದ್ಭವಿಸಿಲ್ಲ. ವರ್ಣಾಶ್ರಮ ಧರ್ಮದ ರಕ್ಷಣೆಯೆ ರಾಜ್ಯದ ಗುರಿ ಮತ್ತು ರಾಜನ ಅಧಿಕಾರದ ಮೂಲವಾಗಿತ್ತು. ವರ್ಣಾಶ್ರಮ ಧರ್ಮದ ಪ್ರಕಾರ ಇಡೀ ಜನಸಮುದಾಯವನ್ನು ನಾಲ್ಕು ವರ್ಣಗಳಾಗಿ ವಿಂಗಡಿಸಿ ಪ್ರತಿ ವರ್ಣದ ಜನರೂ ತಮಗೆ ನಿಗದಿಸಲ್ಪಟ್ಟ ವೃತ್ತಿ ಹಾಗೂ ಕರ್ತವ್ಯಗಳನ್ನು ನಿರ್ವಹಿಸುವಂತೆ ನೋಡಿಕೊಳ್ಳುವುದು ರಾಜನ ಜವಾಬ್ದಾರಿಯಾಗಿತ್ತು. ಇಲ್ಲಿ ಧರ್ಮ ಎನ್ನುವುದು ಆಯಾ ವರ್ಣಕ್ಕೆ ವಹಿಸಿದ ಕರ್ತವ್ಯಗಳಾಗಿದ್ದವು. ರಾಜ ಒಬ್ಬ ಕ್ಷತ್ರಿಯ ವರ್ಣಕ್ಕೆ ಸೇರಿದವನಾದ್ದರಿಂದ ಅವನು ಕ್ಷತ್ರಿಯನಾಗಿ ಅನುಸರಿಸಬೇಕಾದ ವಿಶಿಷ್ಟ ಕರ್ತವ್ಯಗಳಿದ್ದವು. ಅದನ್ನು ರಾಜ ಧರ್ಮ ಎಂದು ಕರೆಯಲಾಗಿದೆ. ರಾಜಧರ್ಮ ಜನಸಾಮಾನ್ಯರು ಅನುಸರಿಸುವ ಧರ್ಮಕ್ಕಿಂತ ವಿಶಿಷ್ಟವಾಗಿದ್ದು ಇದು ಕಾಲದಿಂದ ಕಾಲಕ್ಕೆ ಬೇರೆ ಬೇರೆ ರೀತಿಯ ವ್ಯಾಖ್ಯಾನವನ್ನು ಪಡೆದಿದೆ. ಮಹಾಭಾರತದ ರಾಜಧರ್ಮದ ಬಗ್ಗೆ ವಿವರವಾದ ವ್ಯಾಖ್ಯಾನವನ್ನು ಭೀಷ್ಮನು ನೀಡುತ್ತಾನೆ. ಅದರಂತೆ ರಾಜನು ಅನುಸರಿಸಬೇಕಾದ ಧರ್ಮ ಎಲ್ಲ ಕಾಲದಲ್ಲೂ ಒಂದೇ ರೀತಿಯದಾಗಿರುವುದಿಲ್ಲ. ಕಾಲ, ದೇಶಗಳಲ್ಲಿ ಆದ ಬದಲಾವಣೆಗೆ ತಕ್ಕಂತೆ ಧರ್ಮವೂ ಬದಲಾಗುತ್ತದೆ. ಜನಸಾಮಾನ್ಯರಿಗೆ ಯಾವುದು ಅಧರ್ಮವಾಗುತ್ತದೊ ಅದು ರಾಜನಿಗೆ ಧರ್ಮವಾಗುತ್ತದೆ. ಆ ಧರ್ಮದ ಈ ರೀತಿಯ ವ್ಯಾಖ್ಯಾನದಲ್ಲಿ ಅದು ಯುರೋಪಿನ ‘ರಿಲಿಜಿಯನ್’ ಎನ್ನುವ ಅರ್ಥ ಪಡೆದುಕೊಳ್ಳು ವುದಿಲ್ಲ. ಅಲ್ಲದೆ ಇಲ್ಲಿ ಧರ್ಮದ ಉಸ್ತುವಾರಿಯು ಸಮಸ್ತ ಜವಾಬ್ದಾರಿಯನ್ನು ವಹಿಸಿಕೊಂಡ ರಾಜ್ಯಕ್ಕಿಂತ ಭಿನ್ನವಾದ ಸಂಸ್ಥೆಯ ಅಗತ್ಯತೆ ಕಂಡುಬರುವುದಿಲ್ಲ. ಧರ್ಮದ ಬಗೆಗಿನ ಅಂತಿಮ ವ್ಯಾಖ್ಯಾನ ನೀಡುವ ಅಧಿಕಾರ ಜ್ಞಾನಿಗಳಾದ ಬ್ರಾಹ್ಮಣರಿಗೆ ಇತ್ತು ಎಂದಾಗಲೂ ಅವರಿಗೆ ಧರ್ಮವನ್ನು ಆಚರಣೆಗೆ ತರಲು ಬಲಪ್ರಯೋಗವನ್ನು (ಇದನ್ನು ಹಿಂದೂ ಚಿಂತನೆಯಲ್ಲಿ ‘ದಂಡ’ ಎಂದು ಕರೆಯಲಾಗಿದೆ) ಮಾಡುವ ಅಧಿಕಾರವಿರಲಿಲ್ಲ. ಅಧಿಕಾರ ಕ್ಷತ್ರಿಯನಾದ ರಾಜನಿಗೆ ಮಾತ್ರ ಇತ್ತು. ಆದರೆ ರಾಜನಿಗೆ ಯಾವುದು ಧರ್ಮ ಮತ್ತು ಯಾವುದು ಅಧರ್ಮ ಎನ್ನುವುದನ್ನು ನಿರ್ಧರಿಸುವ ಅಧಿಕಾರವಿರಲಿಲ್ಲ. ಈ ರೀತಿ ರಾಜ್ಯಭಾರ ನಡೆಸುವ ಹೊಣೆ ಕ್ಷತ್ರಿಯರು ಹಾಗೂ ಬ್ರಾಹ್ಮಣರ ಹೊಂದಾಣಿಕೆಯಿಂದ ಕೂಡಿತ್ತು. ಇಲ್ಲಿ ಯುರೋಪಿನಲ್ಲಿ ಆದಂತೆ ಯಾವುದೇ ರೀತಿಯ ಘರ್ಷಣೆಗೆ ಅವಕಾಶ ವಿರಲಿಲ್ಲ. ಅದಕ್ಕೆ ಕಾರಣ ಆ ಮೊದಲೆ ತಿಳಿಸಿದಂತೆ ಲೌಕಿಕ ಜಗತ್ತನ್ನು ಪ್ರತಿನಿಧಿಸುವ ಸಂಸ್ಥೆ ಹಾಗೂ ಆಧ್ಯಾತ್ಮಿಕ ಜಗತ್ತನ್ನು ಪ್ರತಿನಿಧಿಸುವ ಸಂಸ್ಥೆ ಎನ್ನುವ ಪರ್ಯಾಯವಾದ ಹಾಗೂ ವಿಭಿನ್ನವಾದ ಸಂಸ್ಥೆಗಳು ಬೆಳೆಯದೆ ಇದ್ದುದು. ಭಾರತದಲ್ಲಿಯೇ ಕಂಡುಬರುವ ಬೌದ್ಧ ರಾಜ್ಯವ್ಯವಸ್ಥೆಯಲ್ಲೂ ಸಹ ನಾವು ಈ ಘರ್ಷಣೆಯನ್ನು ಕಾಣುವುದಿಲ್ಲ. ಬೌದ್ಧಧರ್ಮ ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಳ್ಳದಿದ್ದರೂ ಸಹ ಆ ಧರ್ಮದ ‘ಚಕ್ರವರ್ತಿ’ಯ ಪರಿಕಲ್ಪನೆಯಲ್ಲಿ ಧರ್ಮಕ್ಕಿಂತ ಬೇರೆಯದೇ ಆದ ಲೌಕಿಕ ಅಧಿಕಾರದ ಸಮರ್ಥನೆ ಇಲ್ಲ. ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ ಸಾರ್ವಭೌಮನಾದರೂ ಸಹ ಧಾರ್ಮಿಕ ವಿಚಾರಗಳಲ್ಲಿ ಅವನು ಮೊದಲೆ ನಿಗದಿಪಡಿಸಿದ ಚೌಕಟ್ಟಿನೊಳಗೆ ವ್ಯವಹರಿಸಬೇಕಾಗಿತ್ತು. ಬೌದ್ಧಧರ್ಮದಲ್ಲಿ ಹಿಂದೂ ಧರ್ಮದಲ್ಲಿರುವಂತೆ ರಾಜ ದೈವದತ್ತ ಅಧಿಕಾರ ಪಡೆದವನು ಎನ್ನುವ ಕಲ್ಪನೆ ಇಲ್ಲದಿದ್ದರೂ ಧಾರ್ಮಿಕ ನಂಬಿಕೆಗಳನ್ನು ಅವನು ರಕ್ಷಿಸಬೇಕು ಎನ್ನುವುದು ಆ ಧರ್ಮದ ನಿಲುವಾಗಿತ್ತು.

ಭಾರತಕ್ಕೆ ಇಸ್ಲಾಂಧರ್ಮದ ಅನುಯಾಯಿಗಳಾದ ರಾಜರುಗಳ ಪ್ರವೇಶದ ನಂತರವೂ ಯಾವುದೇ ಧರ್ಮ ರಾಜ್ಯದ ಅಧಿಕೃತ ಧರ್ಮ ಎಂದು ಘೋಷಿತವಾಗಲಿಲ್ಲ. ದೆಹಲಿಯ ಸುಲ್ತಾನರು ತಾತ್ವಿಕವಾಗಿ ಇಸ್ಲಾಂ ರಾಜ್ಯಧರ್ಮ ಎಂದು ಒಪ್ಪಿಕೊಂಡರೂ ಆಚರಣೆಯಲ್ಲಿ ರಾಜ್ಯ ಧರ್ಮಸಹಿಷ್ಣುತೆಯನ್ನು ಅನುಸರಿಸುವುದು ಅನಿವಾರ್ಯವಾಗಿತ್ತು. ಇಲ್ಲಿ ರಾಜ್ಯ ಹಾಗೂ ಧರ್ಮದ ಸಂಬಂಧದ ಬಗ್ಗೆ ಸಮಸ್ಯೆ ಉದ್ಭವವಾದದ್ದು ಆಧುನಿಕ ಪ್ರಜಾಪ್ರಭುತ್ವ ಮಾದರಿ ಸಂಬಂಧದಲ್ಲಿ. ಯುರೋಪಿನ ‘ಧರ್ಮನಿರಪೇಕ್ಷ’ ಕಲ್ಪನೆಯನ್ನು ಇಲ್ಲಿಯೂ ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ಮಾಡಿದ ಪ್ರಯತ್ನದ ಫಲವಾಗಿ ಇಂದು ರಾಜ್ಯ ಹಾಗೂ ಧರ್ಮಗಳ ಸಂಬಂಧದ ಬಗ್ಗೆ ಹೊಸ ಹೊಸ ವ್ಯಾಖ್ಯಾನಗಳು ಹುಟ್ಟಿಕೊಳ್ಳುತ್ತವೆ. ರಾಜ್ಯದ ಒಳಗಿರುವ ಎಲ್ಲ ಧರ್ಮಗಳಿಂದಲೂ ಸಮಾನ ದೂರವನ್ನು ಕಾಪಾಡಿಕೊಳ್ಳುವ ರಾಜ್ಯದ ನೀತಿಯನ್ನು ‘ಧರ್ಮನಿರಪೇಕ್ಷತೆ’ ಎಂದು ಕರೆಯಲಾಗುತ್ತದೆ.

 

ಪರಾಮರ್ಶನ ಗ್ರಂಥಗಳು

೧. ಜಾರ್ಜ್ ಷಭ್ಯನ್, ೧೯೭೩. ಹಿಸ್ಟರಿ ಆಫ್ ಪೊಲಿಟಿಕಲ್ ಥಿಯರೀಸ್, ನ್ಯೂಡೆಲ್ಲಿ : ಐ.ಬಿ.ಹೆಚ್.

೨. ವಿಲಿಯಂ ಐಬನ್ ಸ್ಪೈನ್, ೧೯೬೦. ಗ್ರೇಟ್ ಪೊಲಿಟಿಕಲ್ ಥಿಂಕರ್ಸ್, ಫ್ರಂ ಪ್ಲೇಟೊ ಟು ದಿ ಪ್ರೆಸೆಂಟ್, ನ್ಯೂಡೆಲ್ಲಿ : ಐ.ಬಿ.ಹೆಚ್.

೩. ಅಲ್ಟೇಕರ್ ಎ.ಎಸ್., ೧೯೮೪. ಸ್ಟೇಟ್ ಆ್ಯಂಡ್ ಗವರ್ನ್‌ಮೆಂಟ್ ಇನ್ ಏನ್ಸಿಯಂಟ್ ಇಂಡಿಯಾ, ದೆಹಲಿ : ಮೋತಿಲಾಲ್ ಬನಾರಾಸಿದಾಸ್.

೪. ಶರ್ಮ ಆರ್.ಎಸ್., ೧೯೯೨. ಆಸ್ಟೆಕ್ಟ್ಸ್ ಆಫ್ ಪೊಲಿಟಕಲ್ ಐಡಿಯಾಸ್ ಆ್ಯಂಡ್ ಇನ್‌ಸ್ಟಿಟ್ಯೂಷನ್ಸ್ ಇನ್ ಎನ್ಸಿಯಂಟ್ ಇಂಡಿಯಾ, ದೆಹಲಿ : ಮೋತಿಲಾಲ್ ಬನಾರಾಸಿದಾಸ್.