ಹದಿನಾರನೆಯ ಶತಮಾನದ ಯುರೋಪಿನಲ್ಲಿ ಆದ ಮಹತ್ವದ ಬದಲಾವಣೆ ಗಳನ್ನು ಧಾರ್ಮಿಕ ಸುಧಾರಣೆ ಎಂದು ಹೆಸರಿಸಬಹುದಾಗಿದೆ. ಕ್ರೈಸ್ತ ಸಮುದಾಯದ ಪ್ರತಿಷ್ಠಿತ ವರ್ಗವು ತಮ್ಮ ಧರ್ಮದಲ್ಲಿ ಅದರ ಆದರ್ಶಗಳಿಗೆ ಅನುಗುಣ ವಾಗಿ ಮತ್ತು ಅಂದಿನ ಸಾಮಾಜಿಕ ಪರಿಸ್ಥಿತಿಗೆ ಹೊಂದುವಂತೆ ಬದಲಾವಣೆಗಳು ಆಗಬೇಕೆಂಬ ಅಭಿಪ್ರಾಯ ಹೊಂದಿತ್ತು. ಅಂದಿನ ಚರ್ಚುಗಳು ಮಧ್ಯಯುಗದ ಸ್ಥಿತಿಗೆ ಮರಳಿದಾಗ ಕ್ರೈಸ್ತಧರ್ಮದ ಪುರೋಹಿತವರ್ಗ, ಅದರ ಸಿದ್ಧಾಂತಗಳು ಮತ್ತು ಆಚರಣೆ, ನಂಬಿಕೆಗಳಲ್ಲಿ ಪರಿವರ್ತನೆಯಾಗಬೇಕೆಂಬ ಬಲವಾದ ಕೂಗು ಕೇಳಿಬಂತು. ಈ ರೀತಿಯ ಬೇಡಿಕೆಗಳು ಆಗ ತಾನೇ ತೀವ್ರಗೊಳ್ಳುತ್ತಿದ್ದ ರಾಷ್ಟ್ರೀಯತೆಯ ಕೂಗಿನೊಂದಿಗೆ ಸೇರಿಕೊಂಡಾಗ ಇದಕ್ಕೆ ಕ್ರೈಸ್ತಧರ್ಮದ ತೀವ್ರ ವಿರೋಧ ಉಂಟಾಯಿತು. ಇದೇ ನಂತರ ಪ್ರಾಟೆಸ್ಪೆಂಟ್ ಧಾರ್ಮಿಕ ಸುಧಾರಣಾವಾದ ಎಂದು ಹೆಸರಾಯಿತು. ಪ್ರಾಟೆಸ್ಟೆಂಟ್ ಚಳವಳಿಯು ಯಶಸ್ವಿಯಾಗು ತ್ತಿದ್ದಂತೆ ಕ್ಯಾಥೊಲಿಕ್ ಚರ್ಚು ತಾನೇ ಧಾರ್ಮಿಕ ಸುಧಾರಣೆಗಳಿಗೆ ಮುಂದಾಯಿತು. ಇದನ್ನು ಪ್ರಾಟೆಸ್ಟೆಂಟರು ಪ್ರತಿಸುಧಾರಣೆ ಎಂದು ಕರೆದರು. ಆದ್ದರಿಂದ ನಾವು ಕ್ರೈಸ್ತಧರ್ಮದಲ್ಲಿ ಧಾರ್ಮಿಕ ಸುಧಾರಣೆ, ಪ್ರಾಟೆಸ್ಟೆಂಟ್ ಧಾರ್ಮಿಕ ಸುಧಾರಣೆ ಮತ್ತು ಪ್ರತಿಸುಧಾರಣೆಗಳೆಲ್ಲವನ್ನೂ ಕಾಣಬಹುದು.

ಮೂಲತಃ ಚರ್ಚಿನಲ್ಲಾದ ಧಾರ್ಮಿಕ ಸುಧಾರಣೆಯನ್ನು ಎಲ್ಲ ಬಗೆಯ ಸರ್ವಾಧಿಕಾರಿ ಪ್ರವೃತ್ತಿಗಳು ಮತ್ತು ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯ ವಿರುದ್ಧ ಮಾನವ ಚೇತನಗಳು ನಡೆಸಿದ ಹೋರಾಟ ಎಂದು ಅರ್ಥೈಸಬಹುದು. ಆಗಿನ ಕ್ರಿಶ್ಚಿಯನ್ ಧಾರ್ಮಿಕ ವ್ಯವಸ್ಥೆಯು ರಾಜಕೀಯ ಶಕ್ತಿಗಳೊಂದಿಗೆ ಕೈಕೈ ಹಿಡಿದು ನಡೆಯುತ್ತಿತ್ತು. ರೋಮನ್ ಸಾಮ್ರಾಜ್ಯದಲ್ಲಿ ಅಧಿಕಾರಕ್ಕಾಗಿ ನಡೆದ ಹೋರಾಟಗಳು ಕಾನ್‌ಸ್ಟಾಂಟಿನೋಪಲ್‌ನಲ್ಲಿ ಕ್ರೈಸ್ತಧರ್ಮದ ಸ್ಥಾಪನೆಗೆ ಕಾರಣವಾದವು. ಆದ್ದರಿಂದ ಕ್ರೈಸ್ತಧರ್ಮವು ರೋಮನ್ ಸಾಮ್ರಾಜ್ಯದ ರಾಷ್ಟ್ರೀಯ ಧರ್ಮವಾಗಿ ಪರಿಣಮಿಸಿತು.

ಕ್ರೈಸ್ತಧರ್ಮವು ರೋಮನ್ ಸಾಮ್ರಾಜ್ಯದ ಅಧಿಕೃತ ಧರ್ಮವಾದ ಮೇಲೆ ಅದು ಎಲ್ಲ ಕ್ಷೇತ್ರದಲ್ಲಿ ಹರಡತೊಡಗಿತು. ಆದರೆ ಸ್ವಲ್ಪ ಕಾಲದಲ್ಲಿಯೇ ರೋಮ್ ಸಾಮ್ರಾಜ್ಯವು ಇಬ್ಭಾಗವಾಗಿ ಪತನದ ಹಾದಿ ಹಿಡಿಯಿತು. ಆಗ ಉಂಟಾದ ರಾಜಕೀಯ ಶೂನ್ಯತೆಯನ್ನು ತುಂಬಲು ಕ್ರೈಸ್ತ ಚರ್ಚುಗಳು ಕಾತರಗೊಂಡವು. ಚರ್ಚುಗಳ ಪುರೋಹಿತವರ್ಗವು ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟು ಅಧಿಕಾರ ಕೇಂದ್ರಗಳ ಸುತ್ತ ಸುಳಿದಾಡಲಾರಂಭಿಸಿತು. ಪೋಪ್‌ಗಳು ಚಕ್ರವರ್ತಿಗಳನ್ನು ನೇಮಿಸುವ ಹಂತಕ್ಕೆ ತಲುಪಿದರು. ರಾಜಕೀಯದ ಸೋಂಕು ಹತ್ತಿದ ಪುರೋಹಿತವರ್ಗವು ಒಂದು ಭ್ರಷ್ಟ, ಅನಾಚಾರದ ವ್ಯವಸ್ಥೆಯಾಗಿ ಮಾರ್ಪಟ್ಟಿತು.

೧೪ನೆಯ ಶತಮಾನದ ವೇಳೆಗೆ ಪ್ಲೇಗ್, ಸಿಡುಬು ಹಾಗೂ ಯುದ್ಧಗಳ ನಡುವೆಯೂ ಯುರೋಪಿನ ಜನಸಂಖ್ಯೆ ಅಧಿಕವಾಗಿ ಬೆಳೆದಿತ್ತು. ಆರ್ಥಿಕ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳು ಉಂಟಾಗುತ್ತಿದ್ದವು. ವ್ಯಾಪಾರ ಉತ್ಪಾದನೆಗಳು ಕೃಷಿಯ ಮಹತ್ವವನ್ನು ಇಲ್ಲವಾಗಿಸಿದವು. ಅಲ್ಲಿಯವರೆಗೆ ಬಡ್ಡಿಯನ್ನು ತೆಗೆದುಕೊಳ್ಳುವುದು ಇನ್ನೊಬ್ಬರ ಕಷ್ಟದಲ್ಲಿ ಲಾಭ ಪಡೆದುಕೊಳ್ಳುವ ಕೆಟ್ಟ ಪದ್ಧತಿ ಎಂದು ನಂಬಲಾಗಿತ್ತು. ಆದರೆ ೧೫ನೆಯ ಶತಮಾನದ ಕೊನೆಗೆ ಫ್ರಾನ್ಸ್‌ನ ಆರ್ಚ್‌ಬಿಷಪ್ ಅಂಟೋನಿಯೋ ಮತ್ತು ಜರ್ಮನಿಯ ಗೇಬ್ರಿಯಲ್ ಬೈಲ್ ಇಬ್ಬರೂ ಬಡ್ಡಿಯನ್ನು ಲಾಭ ತರುವ ಉತ್ಪಾದನೆಗಳಲ್ಲಿ ಬಳಸು ವುದರಿಂದ ಸಮರ್ಥನೀಯ ಎಂದು ವಾದಿಸಿದರು. ಇದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಪರಿವರ್ತನೆಯಾಗಿ ಕೃಷಿ ಉತ್ಪನ್ನಗಳ ಬೆಲೆ ಏರಿತು. ಇದರಿಂದ ಸಮಾಜದ ಬಹಳ ವರ್ಗಗಳಿಗೆ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮತ್ತು ನಗರದ ಕೂಲಿಕಾರರಿಗೆ ತೊಂದರೆ ಉಂಟಾಯಿತು.

ಯುರೋಪಿನ ಇತಿಹಾಸದಲ್ಲಿ ಇದು ರಾಷ್ಟ್ರಿಯತೆಯ ಅಭಿವೃದ್ದಿಯ ಸಂದರ್ಭವಾಗಿದ್ದು ರಾಷ್ಟ್ರ ರಾಜ್ಯಗಳು ಸಹ ಆಗ ಅಸ್ತಿತ್ವಕ್ಕೆ ಬಂದವು. ಭೂಮಿಯಿಂದ ಆವೃತ್ತವಾದ ಪ್ರದೇಶಗಳು ಶಕ್ತಿಯುತ ರಾಷ್ಟ್ರೀಯ ರಾಜ್ಯಗಳಾಗಿ ರೂಪುಗೊಂಡವು ಮತ್ತು ಸಮುದ್ರದಿಂದ ಆವೃತವಾದ ಸಮುದಾಯಗಳು ಸಮುದ್ರದ ಆಚೆಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳಲು ಆರಂಭಿಸಿದವು. ಧಾರ್ಮಿಕ ಸುಧಾರಣೆ ಅಥವಾ ಪ್ರಾಟೆಸ್ಟೆಂಟ್ ಚಳವಳಿಯು ರೂಪುಗೊಂಡಿದ್ದು ಭೂಮಿಯಿಂದ ಆವೃತವಾದ ಇಂಥ ಶಕ್ತಿಶಾಲಿ ಪ್ರದೇಶಗಳಲ್ಲಿ. ಈ ಸಮುದಾಯಗಳಲ್ಲಿ, ರಾಷ್ಟ್ರೀಯತೆಯ ಹೆಸರಿನಲ್ಲಿ ಬೆಳೆಯುತ್ತಿದ್ದ ಪ್ರತ್ಯೇಕ ರಾಜಕೀಯ ಸಮೂಹದ ಕಲ್ಪನೆ ಮತ್ತು ತಾನೇ ರಾಜಕೀಯ ಅಧಿಕಾರದ ಕೇಂದ್ರ ಎಂದು ನಂಬಿದ್ದ ಪೋಪ್‌ನ ವರ್ತನೆಗೆ ಉಂಟಾದ ವಿರೋಧ ಇವುಗಳ ಪರಿಣಾಮವಾಗಿ ಲೂಥರ್ ಮತ್ತು ಕಾಲ್ವಿನ್ ಇವರುಗಳ ನೇತೃತ್ವದಲ್ಲಿ ಸುಧಾರಣಾ ಚಳವಳಿಯು ಆರಂಭಗೊಂಡಿತು.

ಸಮುದ್ರದಿಂದ ಆವೃತವಾದ ದೇಶಗಳಾದ ಸ್ಪೈನ್ ಮತ್ತು ಪೋರ್ಚುಗಲ್‌ನಂಥ ದೇಶಗಳಲ್ಲಿ ರಾಷ್ಟ್ರೀಯತೆಯ ಹೊರಗಿನ ಪ್ರಪಂಚವನ್ನು ಆವಿಷ್ಕರಿಸುವುದರಲ್ಲಿ ಮತ್ತು ವಸಾಹತುಶಾಹಿ ಆಳ್ವಿಕೆಯನ್ನು ವಿಸ್ತಾರಗೊಳಿಸುವ ಪ್ರಯತ್ನಗಳಲ್ಲಿ ವ್ಯಕ್ತವಾಯಿತು. ಸ್ಪೈನ್‌ನಿಂದ ಹೊರಟ ಕೊಲಂಬಸ್‌ನು ಭಾರತವನ್ನು ತಲುಪುವ ಉದ್ದೇಶದಿಂದ ಅಮೆರಿಕಾದ ಇರುವಿನ ಅರಿವಿಲ್ಲದೆ ಪಶ್ಚಿಮದ ಕಡೆ ಪ್ರಯಾಣ ಬೆಳೆಸಿದ. ಪೋರ್ಚುಗಲ್‌ನ ವಾಸ್ಕೋಡಿಗಾಮನು ಆಫ್ರಿಕಾವನ್ನು ಸುತ್ತು ಹಾಕಿ ೧೪೯೮ರಲ್ಲಿ ಭಾರತದ ಪಶ್ಚಿಮ ಕರಾವಳಿಯನ್ನು ತಲುಪಿದ. ನೆದರ್‌ಲ್ಯಾಂಡ್ ಸಹ ಇದೇ ರೀತಿಯ ಪ್ರಯತ್ನಗಳನ್ನು ನಡೆಸಿ ಪೂರ್ವದ ಕೆಲವು ಪ್ರದೇಶಗಳನ್ನು ವಸಾಹತು ಆಡಳಿತಕ್ಕೆ ಅಧೀನವಾಗಿಸಿತು. ಇತರ ಯುರೋಪಿನ ದೇಶಗಳಂತೆ ವೇಗವಾಗಿ ಅಲ್ಲದಿದ್ದರೂ ಫ್ರಾನ್ಸ್ ಸಹ ವಿಸ್ತಾರವಾದ ಭೂಭಾಗವನ್ನು ಆಕ್ರಮಿಸಿಕೊಂಡಿತು. ಹಾಗೆಯೇ ಇಂಗ್ಲೆಂಡ್ ಸಹ ಭೌಗೋಳಿಕ ಅನ್ವೇಷಣೆಯಲ್ಲಿ ಬಹಳ ಯಶಸ್ಸನ್ನು ಗಳಿಸಿತು.

ಆದರೆ ದಕ್ಷಿಣದ ಇಟಲಿ ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ರೋಮನ್ ಸಾಮ್ರಾಜ್ಯದ ಅವಶೇಷಗಳು ಇನ್ನೂ ಉಳಿದಿದ್ದವು. ಅಲ್ಲಿನ ಪೋಪ್‌ಗಳು ರೋಮನ್ ಸಾಮ್ರಾಜ್ಯದ ನೆರಳನ್ನು ಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದರು. ಕ್ರೈಸ್ತಧರ್ಮದ ಅಧಿಕಾರದ ಕೇಂದ್ರವಾದ ಪೋಪ್‌ನ ಸ್ಥಾನ ಅತಿ ಹತ್ತಿರದಲ್ಲಿದ್ದರಿಂದ ಅಲ್ಲಿ ಧಾರ್ಮಿಕ ಸುಧಾರಣೆಯ ಪ್ರಯತ್ನಗಳಿಗೆ ಬೆಂಬಲ ಇರಲಿಲ್ಲ.

‘‘ಚರ್ಚು ತನ್ನನ್ನು ತಾನೇ ಪುನರ್ ರೂಪಿಸಿಕೊಳ್ಳುತ್ತದೆ’’ ಎಂಬುದು ಕ್ಯಾಥೊಲಿಕ್ ಚರ್ಚ್‌ನ ಅಧಿಕೃತ ನಿಲುವಾಗಿತ್ತು. ಸೇಂಟ್ ಪಾಲ್‌ನಿಂದ ಆರಂಭವಾಗಿ, ‘‘ಫಾದರ್ಸ್ ಆಫ್ ಚರ್ಚ್’’ಗಳವರೆಗೆ ಬಹಳಷ್ಟು ಪ್ರಮುಖ ವ್ಯಕ್ತಿಗಳು ಚರ್ಚ್‌ನಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ್ದನ್ನು ನಾವು ನೋಡಬಹುದು. ಆದರೆ ಈ ಪ್ರಯತ್ನಗಳಿಂದ ಚರ್ಚ್‌ನ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿಗಳ ಪ್ರಾಪಂಚಿಕ ಲೋಭ ಮತ್ತು ದುಷ್ಕೃತ್ಯಗಳನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಆಗ ತಾನೇ ರೂಪುಗೊಳ್ಳತ್ತಿದ್ದ ರಾಷ್ಟ್ರೀಯತೆಯ ಸಹ ಯೋಗದೊಂದಿಗೆ ಪ್ರಾಟೆಸ್ಟೆಂಟ್ ಚಳವಳಿಯು ಕ್ರೈಸ್ತ ಸಾಮ್ರಾಜ್ಯವನ್ನು ಇಬ್ಭಾಗವಾಗಿಸಿದರೂ ಮಹತ್ವದ ಬದಲಾವಣೆಯನ್ನು ತಂದಿತು. ೧೬ನೆಯ ಶತಮಾನದ ಧಾರ್ಮಿಕ ಸುಧಾರಣೆಯು ಚರ್ಚ್‌ನಲ್ಲಿ ಯಾವಾಗಲೂ ಆಗುತ್ತಿದ್ದ ಸುಧಾರಣೆಗಿಂತ ಭಿನ್ನವಾಗಿ ಕಾಣುವುದು ಈ ಹಿನ್ನೆಲೆಯಲ್ಲಿಯೇ.

ಮಧ್ಯಯುಗದ ಹಳೆಯ ಚರ್ಚ್‌ನ ಹಿನ್ನೆಲೆ

ಪ್ರಾಟೆಸ್ಟೆಂಟ್ ಧಾರ್ಮಿಕ ಚಳವಳಿಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ನಾವು ಮಧ್ಯಯುಗದ ಚರ್ಚ್‌ನ ಹಿನ್ನೆಲೆಯಲ್ಲಿ ನೋಡಬೇಕು. ಕ್ಯಾಥೊಲಿಕ್ ಇತಿಹಾಸಕಾರರು ಪ್ರಾಟೆಸ್ಟೆಂಟ್ ಧಾರ್ಮಿಕ ಸುಧಾರಣೆಗಿಂತ ಮೊದಲು ಬಹಳಷ್ಟು ಸುಧಾರಣೆಗಳು ಚರ್ಚ್‌ನಲ್ಲಿ ನಡೆದಿದ್ದವು ಎಂಬುದನ್ನು ತೋರಿಸುತ್ತಾರೆ. ಇನ್ನೊಂದು ಕಡೆ ಪ್ರಾಟೆಸ್ಪೆಂಟ್ ಇತಿಹಾಸಕಾರರು ತಮ್ಮ ಚಳವಳಿಯನ್ನು ಹಿಂದಿನ ಭ್ರಷ್ಟ ವ್ಯವಸ್ಥೆಗಿಂತ ಸಂಪೂರ್ಣ ವಿಭಿನ್ನ ಎಂದು ವ್ಯಾಖ್ಯಾನಿಸುತ್ತಾರೆ. ಆದ್ದರಿಂದ ಮಧ್ಯಯುಗದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ. ಆದರೆ ೧೫ನೆಯ ಶತಮಾನದಲ್ಲಿ ಆದ ಬದಲಾವಣೆಗಳು, ನಂತರ ಆದ ಸುಧಾರಣಾ ಚಳವಳಿಗಳಿಗೆ ನಾಂದಿ ಹಾಡಿದವು ಎಂಬುದು ನಿಜ. ಆಗ ಯೂರೋಪ್‌ನಲ್ಲಿ ಆದ ಬೆಳವಣಿಗೆಗಳು ಪೋಪ್‌ನ ಅಧಿಕಾರದ ದುರ್ಬಳಕೆ; ಪುರೋಹಿತರು, ಸನ್ಯಾಸಿಗಳು, ಸನ್ಯಾಸಿನಿಯರ ದುರ್ವತನೆಗಳ ವಿರುದ್ಧ ಉಂಟಾದ ಬೆಳವಣಿಗೆಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ರಾಷ್ಟ್ರೀಯತೆಯ ಚೈತನ್ಯ ವೃದ್ದಿಯಾಗು ತ್ತಿದ್ದಂತೆ ಪೋಪ್‌ನ ಅಧಿಕಾರದ ವ್ಯಾಪ್ತಿ ಕಡಿಮೆಯಾಯಿತು. ಪೋಪ್‌ಗಳು ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡಿನ ರಾಜಕೀಯದಲ್ಲಿ ಬಹಳ ಕಾಲ ಹಸ್ತಕ್ಷೇಪ ನಡೆಸಿದ್ದರು. ಅಲ್ಲಿನ ರಾಜರಿಗೆ ಕೆಲವೊಂದು ಹೊಸ ಅಧಿಕಾರಗಳು ದೊರಕಿದ್ದರಿಂದ ಅವರು ಪೋಪರ ವಿರುದ್ಧ ತಮ್ಮ ಅಧಿಕಾರವನ್ನು ಚಲಾಯಿಸತೊಡಗಿದರು.

ರಾಷ್ಟ್ರೀಯತೆಯ ಪ್ರಜ್ಞೆ ವಿಕಾಸವಾಗುತ್ತಿದ್ದ ಸಂದರ್ಭದಲ್ಲಿ ಬಹಳಷ್ಟು ಜನ ತತ್ವಜ್ಞಾನಿಗಳು ಕ್ಯಾಥೊಲಿಕ್ ಧರ್ಮವನ್ನು ಅದರೊಳಗಿದ್ದುಕೊಂಡೇ ವಿಮರ್ಶೆಗೆ ಗುರಿ ಪಡಿಸಿದರು. ವಿಲಿಯಂ ಓಕ್ ಹ್ಯಾಮ್ ಹನ್ನೆರಡನೆಯ ಪೋಪ್ ಜಾನ್‌ನನ್ನು ಧರ್ಮ ಬಾಹಿರ ವ್ಯಕ್ತಿ(ಪಾಷಂಡಿ) ಎಂದು ಕರೆದಿದ್ದಲ್ಲದೆ, ಪೋಪ್‌ನ ಅಧಿಕಾರ ಮತ್ತು ರಾಜ್ಯಾ ಧಿಪತ್ಯ ಎರಡೂ ಬೇರೆ ಬೇರೆಯಾದ ಕ್ಷೇತ್ರಗಳೆಂದು ಸೂಚಿಸಿದ. ಪೋಪನ ಪಾಷಂಡಿತನದಿಂದ ಚರ್ಚ್‌ಗಳನ್ನು ರಕ್ಷಿಸಲು ರಾಜರಿಗೆ ಮತ್ತು ಸಾಮಾನ್ಯ ಮನುಷ್ಯರಿಗೆ ಕರೆ ನೀಡಿದ. ಜಾನ್ ವೈಕ್ಲಿಫ್ ಇಂಗ್ಲೆಂಡಿನಲ್ಲಿ ರಾಷ್ಟ್ರೀಯತೆಯನ್ನು ಚರ್ಚ್‌ನ ಸುಧಾರಣೆಗಾಗಿ ಬಳಸಿದ ಮತ್ತು ೧೩೮೦ರಲ್ಲಿ ಬೈಬಲ್ ಅನ್ನು ಭಾಷಾಂತರ ಮಾಡಿ ಅದನ್ನು ರಾಜರಿಗೆ, ಪ್ರಜೆಗಳಿಗೆ ಎಲ್ಲರಿಗೂ ದೊರಕುವಂತೆ ಮಾಡಿದ.

ಇಟಲಿಯ ಲೊರೆಂಜೊ ವಲ್ಲಾ(೧೪೦೭-೫೭) ಪೋಪ್‌ನ ರಾಜಕೀಯ ಅಧಿಕಾರದ ಹಕ್ಕುಗಳನ್ನು ಪ್ರಶ್ನಿಸಿದ. ಜೊಹಾನೆಸ್ ರೆಂಕ್ಲಿನ್(೧೪೫೫-೧೫೨೨) ಎಂಬಾತ ಗ್ರೀಕ್ ಮತ್ತು ಹೀಬ್ರೂ ಗ್ರಂಥಗಳನ್ನು ಅಧ್ಯಯನ ಮಾಡಿ ವಿದ್ವಾಂಸರು ಚರ್ಚ್‌ಗಳನ್ನು ಪ್ರಶ್ನಿಸಬಹುದೆಂದು ತೋರಿಸಿಕೊಟ್ಟ. ಹಾಲೆಂಡಿನ ಎರಾಸ್ಮಸ್ ತನ್ನ ಜ್ಞಾನ ಮತ್ತು ಬರಹಗಳಿಂದ ಚರ್ಚ್‌ನ ಆಚರಣೆಗಳನ್ನು ಖಂಡಿಸಿದ.

ಇದರೊಂದಿಗೆ ಆಗ ಬೆಳೆಯುತ್ತಿದ್ದ ಆಧ್ಯಾತ್ಮ ವಾದವು ಚರ್ಚ್‌ನ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡಿತು. ಆಧ್ಯಾತ್ಮವಾದಿಗಳಿಗೆ ಅತೀಂದ್ರಿಯ ಶಕ್ತಿ ಇರಬಹುದೆಂದು ಜನ ನಂಬಿದ್ದರು. ೧೩೨೭-೨೮ರಲ್ಲಿ ಮರಣ ಹೊಂದಿದ ಮೈಸ್ಟರ್ ಎಕ್‌ಹಾರ್ಟ್ ಮತ್ತು ೧೩೬೧ರಲ್ಲಿ ಕಾಲವಾದ ಜೊಹಾನ್ ಟಾಲರ್ ಇಬ್ಬರಿಗೂ ಚರ್ಚ್‌ನ ಆಚರಣೆಗಳಿಗೆ ಅನುಸಾರವಾಗಿ ಸಂಸ್ಕಾರ ನೆರವೇರಲಿಲ್ಲ. ಅವರ ಅನುಯಾಯಿಗಳು ತಮ್ಮ ಆಧ್ಯಾತ್ಮಿಕ ಸಾಧನೆಗಳಿಗಾಗಿ ಅವನತಿಯ ಅಂಚಿನಲ್ಲಿದ್ದ ಪುರೋಹಿತ ವರ್ಗವನ್ನು ಅವಲಂಬಿಸಲಿಲ್ಲ.

ಧಾರ್ಮಿಕ ಸುಧಾರಕರು ಚರ್ಚ್‌ನ ಉನ್ನತ ಸ್ಥಾನಗಳಲ್ಲಿದ್ದ ವ್ಯಕ್ತಿಗಳಿಗಲ್ಲದೆ ಸಾಮಾನ್ಯ ಕ್ಯಾಥೊಲಿಕ್ ಜನಗಳಿಗೂ ಸುಧಾರಣೆಯ ಅಗತ್ಯವನ್ನು ಮನವರಿಕೆ ಮಾಡಿ ಕೊಟ್ಟರು. ಅವರು ಮೇರಿಯ ಬಗ್ಗೆ ಮತ್ತು ಧರ್ಮಗ್ರಂಥಗಳ ಬಗ್ಗೆ ಜನರಲ್ಲಿದ್ದ ಮಿತಿ ಮೀರಿದ ಭಕ್ತಿಯನ್ನು ಮನುಷ್ಯನ ವಿವೇಚನೆ ಹಾಗೂ ಬೈಬಲ್‌ನ ಆಧ್ಯಾತ್ಮಿಕತೆಗೆ ಹೊರತಾದದ್ದು ಎಂದು ತೋರಿಸಿಕೊಟ್ಟರು.

೧೪ನೆಯ ಶತಮಾನದಲ್ಲಿ ವ್ಯಾಪಕವಾಗಿದ್ದ ಪ್ಲೇಗ್‌ನಂಥ ಸಾಂಕ್ರಾಮಿಕ ರೋಗಗಳಿಂದ ಭೀತರಾಗಿದ್ದ ಜನಗಳ ಮನಸ್ಸಿನಲ್ಲಿ ಚರ್ಚಿನ ಅಧಿಕಾರಿಗಳು ನರಕದ ಶಿಕ್ಷೆ, ಮನುಷ್ಯ ಜೀವನದ ಅನಿಶ್ಚಿತತೆ ಇತ್ಯಾದಿಗಳ ಬಗ್ಗೆ ಉಪದೇಶ ನೀಡುತ್ತ ಇನ್ನಷ್ಟು ಭಯ ಭೀತರನ್ನಾಗಿಸಿದರು. ಇದರಿಂದ ಪಾರಾಗಲು ಕ್ಷಮಾಪತ್ರಗಳನ್ನು ಮಾರಾಟ ಮಾಡಲು ಚರ್ಚ್ ಆರಂಭಿಸಿತು. ಇವುಗಳ ಮಾರಾಟದಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯ ಗಳಿಗೆ ಬಳಸಿದರೂ, ಕ್ಷಮಾಪತ್ರಗಳನ್ನು ಮಾರುವುದಕ್ಕಾಗಿಯೇ ನರಕದ ಭಯವನ್ನು ಉದ್ದೇಶಪೂರ್ವಕವಾಗಿ ಜನರ ಮನಸ್ಸಿನಲ್ಲಿ ತುಂಬಲಾಗುತ್ತಿತ್ತು. ೧೬ನೆಯ ಶತಮಾನದ ವೇಳೆಗೆ ಯುರೋಪಿನ ಬಹುಭಾಗದಲ್ಲಿ ಕ್ಯಾಥೊಲಿಕ್ ಧರ್ಮವು ತರಲಾಗದ ಸುಧಾರಣೆಗಳಿಗಾಗಿ ವ್ಯಾಪಕ ಒತ್ತಾಯ ಕಂಡುಬಂತು.

ಲೂಥರನ ಪಾತ್ರ

ಆರಂಭದಲ್ಲಿ ಈ ಕ್ಷಮಾಪತ್ರಗಳನ್ನು ಚರ್ಚ್ ವಿಧಿಸಿದ ಶಿಕ್ಷೆಗಳಿಂದ ಪಾರಾಗಲು ಬಳಸಲಾಗುತ್ತಿತ್ತು. ನಂತರ ಇವುಗಳನ್ನು ಪ್ರಾಯಶ್ಚಿತ್ತದ ಸ್ಥಳ ಮತ್ತು ಪಶ್ಚಾತ್ತಾಪದ ವಿಧಿಗಳನ್ನು ದೂರವಾಗಿಸುವ ರಹದಾರಿಗಳಂತೆ ಬಳಸಲಾರಂಭಿಸಿದ ಮೇಲೆ ಮಾರ್ಟಿನ್ ಲೂಥರನಂಥ ಧರ್ಮನಿಷ್ಟ ವ್ಯಕ್ತಿಗೆ ಇದರ ವಿರುದ್ಧ ಹೋರಾಡದೆ ಬೇರೆ ಮಾರ್ಗವಿರಲಿಲ್ಲ.

ಮಾರ್ಟಿನ್ ಲೂಥರ್‌ನು ವಿಟೆನ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿ ದ್ದಾಗ ಮೇಯ್‌ನ್ಜ್‌ನ ಆರ್ಚ್‌ಬಿಷಪ್ ಆಗಿದ್ದ ಆಲ್ಬರ್ಟ್ ಕ್ಷಮಾಪತ್ರಗಳನ್ನು ಮಾರಾಟಮಾಡಲು ಎಲ್ಲ ಕಡೆ ಕಳುಹಿಸಿದ್ದ. ಲೂಥರ್ ಅಲ್ಲಿ ಪ್ರಾಧ್ಯಾಪಕನಾಗಿದ್ದರ ಜೊತೆಗೆ ಸ್ಥಳೀಯ ಪಾದ್ರಿಯೂ ಆಗಿದ್ದರಿಂದ, ಅಲ್ಲಿನ ಜನ ಕ್ಷಮಾಪತ್ರಗಳನ್ನು ಒಂದಾದ ಮೇಲೊಂದರಂತೆ ಕೊಳ್ಳುವುದನ್ನು ಕಂಡು ವಿಚಲಿತನಾದ. ೧೫೧೭ರಲ್ಲಿ ೯೫ ಪ್ರಬಂಧಗಳನ್ನು ಬರೆದು ಪೋಪ್‌ನ ಆರ್ಥಿಕ ದುರ್ವ್ಯವಹಾರ ಹಾಗೂ ಕ್ರೈಸ್ತಧರ್ಮದ ಸಿದ್ಧಾಂತಗಳು ದುರುಪಯೋಗದ ವಿರುದ್ಧ ಹೋರಾಟ ಆರಂಭಿಸಿದ. ಅವನ ಪ್ರಕಾರ ಪ್ರಾಯಶ್ಚಿತ್ತದ ಸ್ಥಳದ ಬಗ್ಗೆ ಪೋಪ್‌ಗೆ ಯಾವ ಅಧಿಕಾರವು ಇರಲಿಲ್ಲ. ಬೈಬಲ್ ಒಂದೇ ಚರ್ಚ್‌ನ ಮಹತ್ವದ ಅಂಶ ಎಂದು ಹೇಳಿದ್ದರಿಂದ, ಪೋಪ್ ಅವನನ್ನು ಧರ್ಮಬಾಹಿರ ವ್ಯಕ್ತಿ ಎಂದು ಘೋಷಿಸಿ ಬಹಿಷ್ಕಾರದ ಆಜ್ಞೆ ಹೊರಡಿಸಿದ.

ಪೋಪ್‌ಗಳ ಲೈಂಗಿಕ ದುರಾಚಾರಗಳು, ಸುಲಿಗೆ ಇತ್ಯಾದಿಗಳಿಂದ ರೋಸಿ ಹೋಗಿದ್ದ ಎಲ್ಲ ಬಗೆಯ ಜನರಿಂದ ಲೂಥರ್‌ಗೆ ಬೆಂಬಲ ದೊರೆಯಿತು. ಇಂಗ್ಲೆಂಡ್, ಫ್ರಾನ್ಸ್, ಸ್ಪೈನ್, ರೋಟರ್ ಡ್ಯಾಂ, ನೇಫಲ್ಸ್ ಎಲ್ಲ ದೇಶಗಳ ಪ್ರಮುಖರು ಲೂಥರ್‌ಗೆ ಪ್ರೋ ನೀಡಿದರು.

ಧಾರ್ಮಿಕ ಸುಧಾರಣೆಯ ತನ್ನ ಪ್ರಣಾಳಿಕೆ ‘‘ದಿ ಅಡ್ರೆಸ್ ಟು ದಿ ಕ್ರಿಶ್ಚಿಯನ್ ನೊಬಿಲಿಟಿ ಆಫ್ ದಿ ಜರ್ಮನ್ ನೇಷನ್’’ನಲ್ಲಿ ಲೂಥರ್ ಕ್ರಿಶ್ಚಿಯನ್ ಚಕ್ರವರ್ತಿಗಳು, ರಾಜರಿಂದ ಚರ್ಚಿನಲ್ಲಿ ಸುಧಾರಣೆ ಸಾಧ್ಯ ಎಂದು ವಾದಿಸಿದ. ದೇವರಲ್ಲಿ ನಂಬಿಕೆ ಇಟ್ಟ ಎಲ್ಲರೂ ಪಾದ್ರಿಗಳೇ ಆಗುವುದರಿಂದ, ಸಾಮಾನ್ಯ ಮನುಷ್ಯನೂ ಸಹ ವೃತ್ತಿಯಿಂದ ಅಲ್ಲದಿದ್ದರೂ ಆಧ್ಯಾತ್ಮಿಕ ನೆಲೆಯಲ್ಲಿ ಪಾದ್ರಿ ಎಂದು ಹೇಳಿದ. ಇದರಿಂದ ಧರ್ಮ ಗುರುವಿಗೂ ಅಥವಾ ಪಾದ್ರಿಗೂ ಮತ್ತು ಸಾಮಾನ್ಯ ಮನುಷ್ಯನಿಗೂ ಯಾವ ಅಂತರವೂ ಇಲ್ಲ. ಇದರ ಪರಿಣಾಮವೇನೆಂದರೆ ರಾಜನೊಬ್ಬ ವೃತ್ತಿಯಿಂದ ಪಾದ್ರಿಯಲ್ಲದಿದ್ದರೂ ಚರ್ಚಿನಲ್ಲಿ ಸುಧಾರಣೆ ತರಲು ಯೋಗ್ಯನಾಗುತ್ತಾನೆ ಎಂದು ಹೇಳಿದ.

ತನ್ನ ಇನ್ನೊಂದು ಚಿಕ್ಕ ಪುಸ್ತಕ ‘‘ಬ್ಯಾಬಿಲೋನಿಯನ್ ಕ್ಯಾಪ್ಟಿವಿಟಿ’’ಯಲ್ಲಿ ಚರ್ಚು ಕೆಲವು ಆಚರಣೆಗಳನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಪ್ರತಿಪಾದಿಸಿದ. ಡಿಸೆಂಬರ್ ೧೯, ೧೫೨೦ರಂದು ಮಾರ್ಟಿನ್ ಲೂಥರನು ಪೋಪ್ ಹೊರಡಿಸಿದ ಬಹಿಷ್ಕಾರದ ಆಜ್ಞೆಯನ್ನು ಬಹಿರಂಗವಾಗಿ ಸುಟ್ಟು ಹಾಕಿದ. ಲೂಥರನ ವಿರುದ್ಧ ಬಹಿಷ್ಕಾರದ ಆಜ್ಞೆ ಹೊರಟನಂತರ ಅವನ ಸ್ನೇಹಿತ ಹಾಗೂ ಸಲಹೆಗಾರ ಫ್ರೆಡರಿಕ್ ಅವನನ್ನು ಒಂದು ವರ್ಷದವರೆಗೆ ಅಡಗಿಸಿಟ್ಟ. ಲೂಥರ್ ಈ ಸಮಯದಲ್ಲಿ ಗ್ರೀಕ್‌ನಿಂದ ಹೊಸ ಒಡಂಬಡಿಕೆಯನ್ನು ಜರ್ಮನ್‌ಗೆ ಅನುವಾದಿಸಿದ. ಇದರಿಂದಾಗಿ ಲೂಥರ್‌ಗೆ ಅಪಾರ ಬೆಂಬಲ ದೊರೆಯಿತು.

ಕೆಲವು ಉದಾರವಾದಿ ಕ್ಯಾಥೊಲಿಕ್ ಸುಧಾರಕರಾದ ಎರಾಸ್ಮಸ್ ಮುಂತಾದವರು ಬೈಬಲ್ ಅನ್ನು ವ್ಯಾಖ್ಯಾನಿಸುವಂಥ ಎದೆಗಾರಿಕೆಯನ್ನು ತೋರಿದ ಲೂಥರ್‌ನನ್ನು ಕಂಡು ಅಚ್ಚರಿಗೊಳಗಾದರು. ಲೂಥರನು ಕ್ರಿಸ್ತನ ತತ್ವಗಳನ್ನು ರಕ್ಷಿಸುವುದಕ್ಕಾಗಿ ಖಡ್ಗದ ಬಳಕೆಯನ್ನು ವಿರೋಧಿಸಿದ. ದೇವರ ದಯೆ ಹಾಗೂ ಕ್ರಿಸ್ತನಲ್ಲಿ ಭಕ್ತಿ ಎರಡಕ್ಕೂ ಯಾವ ಅಸ್ತ್ರಗಳ ಅಗತ್ಯವಿಲ್ಲ ಎಂದು ಅವನು ನಂಬಿದ್ದ.

ಕೇಂದ್ರೀಕೃತ ವ್ಯವಸ್ಥೆಯಿಂದ ದೂರ ಸರಿಯುವ ಪ್ರಯತ್ನವಾಗಿ ರೂಪುಗೊಂಡ ರಾಷ್ಟ್ರೀಯತೆಯು ರಾಷ್ಟ್ರೀಯ ಹಾಗೂ ಧಾರ್ಮಿಕ ಪ್ರಾಬಲ್ಯವನ್ನು ವಿರೋಧಿಸಿತು. ಜರ್ಮನ್ ರಾಷ್ಟ್ರೀಯತೆಯ ಚಳವಳಿಯ ಪತನದ ನಂತರ ರಾಷ್ಟ್ರೀಯತೆಯ ಸಹಯೋಗದಲ್ಲಿಯೇ ಹುಟ್ಟಿದ್ದ ಪ್ರಾಟೆಸ್ಟೆಂಟ್ ಚಳವಳಿಯೂ ಸಹ ಮುಂದೆ ಬೇರೆ ಬೇರೆ ಕವಲುಗಳಾಗಿ ಮುಖ್ಯವಾಗಿ ವ್ಯಕ್ತಿವಾದವಾಗಿ ಬೆಳೆಯಿತು.

ಈ ಮಧ್ಯೆ ಸ್ವಿಟ್ಜರ್‌ಲ್ಯಾಂಡ್‌ನ ಸ್ವಿಂಗ್ಲಿಯು ತನ್ನ ದೇಶದಲ್ಲಿ ಪ್ರಾಟೆಸ್ಟೆಂಟ್ ಚಳವಳಿಯ ನೇತೃತ್ವ ವಹಿಸಿದ. ಅರಸರಿಂದ ಸದಾ ಕಿರುಕುಳಕ್ಕೆ ಒಳಗಾಗಿದ್ದ ಹಳೆಯ ಚರ್ಚ್ ವ್ಯವಸ್ಥೆಗೆ ಹಿಂತಿರುಗುವುದು ಸಾಧ್ಯವಿಲ್ಲವಾದ್ದರಿಂದ ಹೊಸ ಇಸ್ರೇಲನ್ನು ಕಟ್ಟಬೇಕೆಂದು ಅಭಿಪ್ರಾಯಪಟ್ಟ. ಈ ಹೊಸ ಇಸ್ರೇಲನ್ನು ಕಟ್ಟಲು ರಾಜಕೀಯ, ಆಧ್ಯಾತ್ಮಿಕ ಶಕ್ತಿಗಳೆರಡನ್ನೂ ಬಳಸಬೇಕೆಂಬುದು ಆತನ ನಂಬಿಕೆಯಾಗಿತ್ತು.

ಕಾಲ್ವಿನ್‌ನ ಪಾತ್ರ

ಫ್ರಾನ್ಸ್‌ನ ಜಾನ್‌ಕಾಲ್ವಿನ್ (೧೫೦೯-೬೪) ಕಾನೂನು ಮತ್ತು ಮಾನವಿಕ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದ. ಪ್ರಾಟೆಸ್ಟೆಂಟ್ ಚಳವಳಿಯತ್ತ ಆಕರ್ಷಿತನಾದ ಮೇಲೆ ಫ್ರಾನ್ಸ್ ನಲ್ಲಿ ಇರಲಾಗದೆ ಬಾಸೆಲ್‌ಗೆ ಪ್ರಯಾಣ ಬೆಳೆಸಿದ. ಅಲ್ಲಿ ತನ್ನ ೨೭ನೆಯ ವಯಸ್ಸಿನಲ್ಲಿ ತನ್ನ ಪ್ರಸಿದ್ಧ ಪ್ರಥಮ ಪುಸ್ತಕ ‘‘ಇನ್‌ಸ್ಟಿಟ್ಯೂಟ್ಸ್ ಆಫ್ ದಿ ಕ್ರಿಶ್ಚಿಯನ್ ರಿಲಿಜನ್’’ (೧೫೩೬) ಅನ್ನು ಹೊರತಂದ. ಇದು ಕ್ರಮೇಣ ಪ್ರಾಟೆಸ್ಟೆಂಟ್ ತತ್ವಶಾಸ್ತ್ರದ ಆಕರ ಗ್ರಂಥ ವಾಯಿತು. ಈತನೂ ಸಹ ದೈವದಲ್ಲಿ ನಂಬಿಕೆಯನ್ನು ಸಮರ್ಥಿಸಿದ ಹಾಗೂ ಬೈಬಲ್‌ನ ಅಧಿಕಾರವನ್ನು ಎತ್ತಿಹಿಡಿದ. ಅವನ ಪ್ರಕಾರ ಕ್ರಿಸ್ತನು ಎಲ್ಲ ಕಡೆ ಇರುವವನಾಗಿದ್ದ. ಕಾಲ್ವಿನ್‌ನು ಸಾಮೂಹಿಕವಾಗಿ ಪ್ರಾರ್ಥನೆ, ಸ್ತೋತ್ರಪಠಣ ಮಾಡುವುದನ್ನು ಪ್ರತಿಪಾದಿಸಿದ.

ಜಿನಿವಾದಲ್ಲಿ ನಡೆದ ಕೆಲವು ಘಟನೆಗಳು ಕಾಲ್ವಿನ್‌ಗೆ ತನ್ನ ಧಾರ್ಮಿಕ ತತ್ವಗಳನ್ನು ಪ್ರತಿಪಾದಿಸುವ ಅವಕಾಶ ತಂದುಕೊಟ್ಟವು. ಜಿನಿವಾದ ಬಿಷಪ್ ಮತ್ತು ಡ್ಯೂಕರ ದುರಾಚಾರದ ವರ್ತನೆಯನ್ನು ಸಹಿಸಲಾಗದೆ ಅಲ್ಲಿನ ಜನ ಅವರನ್ನು ದೂರ ಇಟ್ಟಿದ್ದರು. ಇದರಿಂದ ಪ್ರಾಟೆಸ್ಟೆಂಟ್ ಉಪದೇಶಕರು, ಅವರು ಸ್ವಿಟ್ಜರ್‌ಲ್ಯಾಂಡ್‌ನ ಪ್ರಾಟೆಸ್ಟೆಂಟ್ ಒಕ್ಕೂಟವನ್ನು ಸೇರದಿದ್ದರೂ, ಜಿನಿವಾದಲ್ಲಿ ಕ್ರೈಸ್ತಧರ್ಮ ಪ್ರಚಾರ ಮಾಡಲು ಸಾಧ್ಯವಾಯಿತು. ಆ ಸಂದರ್ಭದಲ್ಲಿ ಗ್ವಿಲಾಮೆ ಫಾರೆಲ್ ಎಂಬ ಸ್ವಭಾವತಃ ಜಗಳ ಗಂಟನಾಗಿದ್ದ ಪ್ರಚಾರಕ ಬಂದು ಉಗ್ರ ರೂಪದಲ್ಲಿ ಜನರನ್ನು ಸಂಘಟಿಸತೊಡಗಿದ. ಜನರನ್ನು ನಿಯಂತ್ರಣದಲ್ಲಿಡುವುದು ಅವನಿಗೆ ಸಾಧ್ಯವಾಗದಿದ್ದಾಗ ಕಾಲ್ವಿನ್‌ನ ಸಹಕಾರ ಕೇಳಿದ. ಹೀಗೆ ಜಾನ್ ಕಾಲ್ವಿನ್‌ನಿಗೆ ಜಿನೀವಾವನ್ನು ಶಾಂತಿಯುತ ಪರಿಸ್ಥಿತಿಗೆ ಕೊಂಡೊಯ್ಯುವ ಅವಕಾಶ ದೊರಕಿತು. ಕಾಲ್ವಿನ್ ಅದನ್ನು ದೇವಸದೃಶ ನಗರವನ್ನಾಗಿ ಪರಿವರ್ತಿಸಿದ. ಅದು ಎಲ್ಲ ರೀತಿಯಲ್ಲಿ ಥಾಮಸ್ ಮೂರ್‌ನ ಯುಟೋಪಿಯಾವನ್ನು ಹೋಲುತ್ತಿತ್ತು. ಹಲವಾರು ಅಂಶಗಳು ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾದವು. ಆ ನಗರದಲ್ಲಿ ಧರ್ಮವಿರೋಧಿಗಳನ್ನು ಹೊರಗಿಡಲಾಗಿತ್ತು. ಪ್ರಾಟೆಸ್ಟೆಂಟ್ ಧರ್ಮವನ್ನು ಒಪ್ಪದ ಕ್ಯಾಥೊಲಿಕ್ ಸಮುದಾಯದವರನ್ನು ನಗರದಿಂದ ಬಹಿಷ್ಕರಿಸಲಾಗಿತ್ತು. ನಗರದ ಜನಸಂಖ್ಯೆ ಚಿಕ್ಕದಾಗಿದ್ದು ಸ್ಥಳೀಯರು ೧೩,೦೦೦ ಸಂಖ್ಯೆಯಲ್ಲಿದ್ದರು. ಇದಕ್ಕೆ ಫ್ರಾನ್ಸ್, ಇಟಲಿ, ಸ್ಪೈನ್ ಮತ್ತು ಇಂಗ್ಲೆಂಡಿನಿಂದ ಬಂದ ೬೦೦೦ ನಿರಾಶ್ರಿತರು ಸೇರಿಕೊಂಡರು. ಇದರಿಂದ ಚರ್ಚ್‌ನ ಪರಿವರ್ತನೆ, ರಾಜ್ಯ ಮತ್ತು ಸಮುದಾಯ ಎಲ್ಲವನ್ನೂ ಒಂದು ಮಾಡಲು ಸಾಧ್ಯವಾಯಿತು.

ಯುರೋಪಿನಲ್ಲಿ ಧಾರ್ಮಿಕ ಸುಧಾರಣಾ ಚಳವಳಿ

೧೬ನೆಯ ಶತಮಾನದ ವೇಳೆಗೆ ಉತ್ತರ ಯುರೋಪಿನ ಎಲ್ಲ ಕಡೆ ಲೂಥರನ ಪಂಥ ಪ್ರಚಲಿತವಾಗಿತ್ತು. ವರ್ಟನ್‌ಬರ್ಗ್, ಬ್ರಾಂಡನ್‌ಬರ್ಗ್, ಸ್ಯಾಕ್ಸೊನಿ, ಬ್ರೇಯ್ನಶ್ವಿಗ್, ಪ್ರಷ್ಯಾ, ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್, ಲಿವೋನಿಯಾ, ಎಸ್ಮೊನಿಯಾ, ಆಸ್ಟ್ರಿಯಾ ಮತ್ತು ಮೊರಾವಿಯಾಗಳಲ್ಲಿ ಲೂಥರನ ಪ್ರಭಾವ ಹಬ್ಬಿತ್ತು. ಪೂರ್ವ ಯೂರೋಪ್‌ನಲ್ಲಿ ಪ್ರಾಟೆಸ್ಟೆಂಟ್ ವಾದದ ಬೇರೆ ಬೇರೆ ಪಂಥಗಳು ಬೆಳೆಯತೊಡಗಿದವು. ಡಾನ್‌ಜಿಗ್ ಮತ್ತು ಹಾಬ್ಸ್‌ಬರ್ಗ್‌ನ ಬಹಳಷ್ಟು ಜನ ಲೂಥರ್‌ವಾದಿಗಳು, ಕ್ರೈಸ್ತಧರ್ಮದ ಮುಖ್ಯ ತತ್ವ ಟ್ರಿನಿಟಿ(ತ್ರಿಮೂರ್ತಿ)ಯನ್ನು ವಿರೋಧಿಸುವ ಇಟಲಿಯ ಧರ್ಮ ಸುಧಾರಕರು, ಮತ್ತು ಕೆಲವು ಕಾಲ್ವಿನ್‌ವಾದಿಗಳು ಪೂರ್ವಜರ್ಮನಿಗೆ ವಲಸೆ ಹೋದರು. ಜರ್ಮನಿಗೆ ಲೂಥರನ ಸಿದ್ಧಾಂತವು ಹೆಚ್ಚು ಆಪ್ತವಾಗಲು ಕಾರಣ ಅದು ಜರ್ಮನಿಯದೂ ಅಲ್ಲ, ಹಾಗೇ ಫ್ರಾನ್ಸ್‌ನದೂ ಆಗಿರಲಿಲ್ಲ. ೧೫೭೩ರ ವಾರ್ಸಾ ಒಪ್ಪಂದವು ರೋಮನ್ ಕ್ಯಾಥೊಲಿಕರಿಗೆ, ಲೂಥರ್‌ವಾದಿಗಳಿಗೆ ಮತ್ತು ಕಾಲ್ವಿನ್‌ವಾದಿಗಳಿಗೆ ಸಹಾನುಭೂತಿ ತೋರಿತು. ಆದರೆ ಅದರಲ್ಲಿ ಇಟಲಿಯಿಂದ ಬಂದ ಸೊಸಿನಿಯನ್‌ರಿಗೆ ಯಾವ ಸ್ಥಾನವೂ ಇರಲಿಲ್ಲ. ಟರ್ಕಿಯು ಮೊಹಾಕರ ಯುದ್ಧದಲ್ಲಿ ಜಯ ಗಳಿಸಿದಾಗ ಹಂಗೇರಿಯು ಇಬ್ಭಾಗವಾಯಿತು. ಲೂಥರನ ಅನುಯಾಯಿಗಳು, ಕಾಲ್ವಿನ್‌ವಾದಿಗಳು, ಕ್ರೈಸ್ತಧರ್ಮದ ಟ್ರಿನಿಟಿ ಸಿದ್ಧಾಂತವನ್ನು ವಿರೋಧಿಸುವವರಿಗೆ ಅಲ್ಲಿ ಸ್ಥಾನವಿತ್ತು. ಏಕೆಂದರೆ ಅಲ್ಲಿನ ನಿಶ್ಯಕ್ತ ಸರ್ಕಾರ ಅವರನ್ನು ವಹಿಸಿಕೊಂಡಿತ್ತು.

ಆದರೆ ಧಾರ್ಮಿಕ ಸುಧಾರಣೆಯು ಇಟಲಿ ಅಥವಾ ಸ್ಪೈಯಿನ್‌ನಲ್ಲಿ ತನ್ನ ದೃಢವಾದ ನೆಲೆಯನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಹಲವಾರು ಕಾರಣಗಳಿದ್ದವು. ಸ್ಪೈಯಿನ್ ತನ್ನ ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಏಕೀಕರಣವನ್ನು ಅಲ್ಲಿನ ಧರ್ಮಶ್ರದ್ಧೆ ಇಲ್ಲದವರು, ಯಹೂದಿಗಳು ಮತ್ತು ನೀಗ್ರೋಗಳನ್ನು ಮತಾಂತರ ಮಾಡುವುದರ ಮೂಲಕ ಅಥವಾ ಬಹಿಷ್ಕರಿಸುವುದರ ಮೂಲಕ ಸಾಧಿಸಲು ಪ್ರಯತ್ನಿಸಿತು. ೧೪೮೨ರಲ್ಲಿ ಯಹೂದಿ ಆಚರಣೆಗಳನ್ನು ತೊಡೆದುಹಾಕಲು ಇಂಕ್ವಿಜಿಷನ್ ಅನ್ನು ಪ್ರಾರಂಭಿಸಲಾಯಿತು. ೧೪೯೨ರಲ್ಲಿ ಕ್ರಿಶ್ಚಿಯನ್ನರಲ್ಲದ ಯಹೂದಿಗಳನ್ನು ಬಹಿಷ್ಕರಿಸಲಾಯಿತು. ಗ್ರನಾಡಾವನ್ನು ಆಕ್ರಮಿಸಿಕೊಂಡ ಮೇಲೆ ಅಲ್ಲಿ ಮೇಯ್‌ಸ್ಕೊಸ್ ಮತ್ತು ಮತಾಂತರ ಹೊಂದಿದ ನಿಗ್ರೋಗಳ ವಿಷಯದಲ್ಲೂ ಇದೇ ನೀತಿಯನ್ನು ಅನುಸರಿಸಲಾಯಿತು. ೧೫೨೦ರ ದಶಕದಲ್ಲಿ ಇದು ಯಶಸ್ವಿಯಾದ ಮೇಲೆ ಸ್ಪೈಯಿನಿನ ವಾತಾವರಣ ತಿಳಿಯಾಯಿತು. ಜನ ಬಹಳ ಸಂತೋಷದಿಂದ ಇದ್ದರು. ಉತ್ತರ ಮತ್ತು ಪೂರ್ವ ಯೂರೋಪ್‌ಗಳು ರಾಷ್ಟ್ರೀಯತೆ ಮತ್ತು ಧಾರ್ಮಿಕ ಸುಧಾರಣೆಗಳೆರಡನ್ನೂ ಬೆರೆಸುವ ಯತ್ನ ನಡೆಸುತ್ತಿದ್ದಾಗ ಸ್ಪೈಯಿನ್ ಬಲಶಾಲಿಯಾಗಿ, ಒಗ್ಗಟ್ಟಿನಿಂದ ಹೊಸ ಖಂಡಗಳನ್ನು ಅವಿಷ್ಕರಿಸುವ ಪ್ರಯತ್ನ ನಡೆಸುತ್ತಿತ್ತು. ಸ್ಪೈಯಿನ್‌ನಲ್ಲಿ ಲೂಥರನ ಚಳವಳಿ ಹಬ್ಬತೊಡಗಿದಾಗ ದಮನಕಾರಿ ಶಕ್ತಿಗಳು ಬೆಳೆಯತೊಡಗಿದವು.

ಇಟಲಿಯ ಕಥೆ ಇದಕ್ಕಿಂತ ಸ್ವಲ್ಪ ಭಿನ್ನವಾಗಿತ್ತು. ಅದು ಬೇರೆ ಬೇರೆ ಪಂಥಗಳನ್ನು, ಪಾಷಂಡಿತನವನ್ನು ಮಧ್ಯಯುಗದ ಕೊನೆಯಲ್ಲಿ ಕಂಡಿತ್ತು. ಆದರೆ ಅವುಗಳನ್ನು ಒಂದಾದ ಮೇಲೊಂದರಂತೆ ಹತ್ತಿಕ್ಕಲಾಯಿತು. ಪ್ರಾಟೆಸ್ಟೆಂಟ್‌ವಾದದೊಂದಿಗೆ ಕಾಪೂಜಿನ್‌ಗಳು, ಥಿಯಾಟಿನ್‌ಗಳು ಮತ್ತು ಜೆಸ್ಸೂಟ್‌ಗಳು ಪ್ರತಿಕ್ರಿಯೆ ಆರಂಭಿಸಿದರು. ವೆನಿಸ್, ಲುಕ್ಕಾ ಮತ್ತು ನೇಪಲ್ಸ್ ಗಳಲ್ಲಿ ಪ್ರಾಟೆಸ್ಟೆಂಟ್ ವಾದ ಬೆಳೆಯಿತು. ೧೫೪೨ರ ಇಂಕ್ವಿಜಿಷನ್‌ನಿಂದ ಅವರು ತಮ್ಮಷ್ಟಕ್ಕೆ ಇರುವ, ವಲಸೆ ಹೋಗುವ ಅಥವಾ ಕೊಲ್ಲಲ್ಪಡುವ ಹಾಗೆ ಆಯಿತು. ಇಟಲಿ ಮತ್ತು ಸ್ಪೈಯಿನ್‌ನಲ್ಲಿ ಕ್ರೈಸ್ತಧರ್ಮದ ಟ್ರಿನಿಟಿ ತತ್ವವನ್ನು ವಿರೋಧಿಸುವವರ ಸಿದ್ಧಾಂತವು ಬಹಳ ಪ್ರಖರವಾಗಿದ್ದರೂ ಅದು ಬೆಳೆಯಲಿಲ್ಲ.