ರಷ್ಯಾದಲ್ಲಿ ೧೯೧೭ರಲ್ಲಿ ನಡೆದ ಅಕ್ಟೋಬರ್ ಕ್ರಾಂತಿ ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವದ ಹಾಗೂ ಅತ್ಯದ್ಭುತವಾದ ಘಟನೆಯಾಗಿದೆ. ಈ ಕ್ರಾಂತಿಯ ಮೂಲಕ ಸಮಾಜದ ಅತ್ಯಂತ ಕೆಳಸ್ತರದಲ್ಲಿದ್ದ ಮತ್ತು ಶತಮಾನಗಳಿಂದ ತೀವ್ರ ಶೋಷಣೆಗೊಳಗಾದ ದುಡಿಯುವ ಜನರ-ಕಾರ್ಮಿಕರ ಮತ್ತು ರೈತರ ಪ್ರಭುತ್ವವನ್ನು ಜಗತ್ತಿನಲ್ಲಿಯೇ ಮೊತ್ತ ಮೊದಲಬಾರಿಗೆ ರಷ್ಯದಲ್ಲಿ ಸ್ಥಾಪಿಸಲಾಯಿತು. ಅಲ್ಲಿಯವರೆಗೆ ಮಾನವ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಮತ್ತು ಜಗತ್ತಿನ ವಿವಿಧ ಪ್ರದೇಶಗಳಲ್ಲಿ ರಾಜಮಹಾರಾಜರು, ಚಕ್ರವರ್ತಿಗಳು, ರಾಜಪುರೋಹಿತರು, ಶ್ರೀಮಂತ ಭೂಮಾಲಿಕರು, ವ್ಯಾಪಾರೋದ್ಯಮಿಗಳು, ಬಂಡವಾಳಶಾಹಿಗಳು ರಾಜ್ಯಪ್ರಭುತ್ವದಲ್ಲಿ ರಾರಾಜಿಸಿದ್ದರು. ರಷ್ಯಾದಲ್ಲಿ ೧೯೧೭ರ ಫೆಬ್ರವರಿ ಕ್ರಾಂತಿಯಲ್ಲಿ ಝಾರ್ ಚಕ್ರವರ್ತಿಯ ಪ್ರಭುತ್ವವನ್ನು ಮತ್ತು ಅಕ್ಟೋಬರ್ ಕ್ರಾಂತಿಯನ್ನು ಬಂಡವಾಳಶಾಹಿ-ಭೂಮಾಲಿಕ ಪ್ರಭುತ್ವವನ್ನು ಪದಚ್ಯುತಿಗೊಳಿಸಿರುವುದು ಒಂದು ಐತಿಹಾಸಿಕ ಮಹತ್ವದ ದಾಖಲೆಯಾಗಿದೆ.

ಅಕ್ಟೋಬರ್ ಮಹಾನ್ ಕ್ರಾಂತಿಯ ಯಶಸ್ಸಿನ ತಾತ್ವಿಕ, ಸೈದ್ಧಾಂತಿಕ, ಪ್ರಾಯೋಗಿಕ, ಸಂಘಟನಾ ಹಾಗೂ ಚಾರಿತ್ರಿಕ ಹಿನ್ನೆಲೆಗಳನ್ನು ೧೯ನೇ ಶತಮಾನದ ಮಧ್ಯಕಾಲದಿಂದ ಕಾರ್ಮಿಕ ವರ್ಗದ ತತ್ವಜ್ಞಾನ ಎಂದೇ ಪ್ರಸಿದ್ದಿ ಪಡೆದ ಮಾರ್ಕ್ಸ್‌ವಾದದಲ್ಲಿ ಕಂಡುಕೊಳ್ಳಬೇಕಾಗಿದೆ. ಈ ಕಾಲಘಟ್ಟದಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಇತರ ಐರೋಪ್ಯ ದೇಶಗಳಲ್ಲಿ ಬಂಡವಾಳಶಾಹಿ ಸಮಾಜದ ದೌರ್ಜನ್ಯ, ದಾಳಿ, ದಬ್ಬಾಳಿಕೆ ಶೋಷಣೆಗಳ ಅಸಹನೀಯ ಪರಿಸ್ಥಿತಿಗಳನ್ನು ಕಿತ್ತೊಗೆಯಲು ಕಾರ್ಮಿಕರು ಕ್ರಾಂತಿಕಾರಿ ಹೋರಾಟಗಳಲ್ಲಿ ಧುಮುಕಿದ್ದರು. ಆಗ ಜರ್ಮನಿಯ ಇಬ್ಬರು ಪ್ರತಿಭಾವಂತ ಹಾಗೂ ಉತ್ಸಾಹಿ ತರುಣರಾದ ಕಾರ್ಲ್‌ಮಾರ್ಕ್ಸ್(೧೮೧೮-೧೮೮೩) ಮತ್ತು ಅವರ ಜೀವದ ಗೆಳೆಯ ಹಾಗೂ ನಿಕಟವರ್ತಿ ಫ್ರೆಡರಿಕ್ ಎಂಗೆಲ್ಸ್(೧೮೨೦-೧೮೯೫) ೧೮೪೮ರಲ್ಲಿ ತಮ್ಮ ಕಮ್ಯುನಿಸ್ಟ್ ಘೋಷಣೆಯಲ್ಲಿ (ಕಮ್ಯುನಿಸ್ಟ್ ಮ್ಯಾನಿಫೆಸ್ಟೊ) ಮೊತ್ತ ಮೊದಲಬಾರಿಗೆ ಸಮಾಜವಾದದ ಕನಸನ್ನು ನನಸು ಮಾಡುವ ವೈಜ್ಞಾನಿಕ ವಿಧಾನಗಳನ್ನು ತಿಳಿಸಿದರು ಮತ್ತು ‘‘ವೈಜ್ಞಾನಿಕ ಸಮಾಜವಾದ’’ವನ್ನು ಪ್ರತಿಪಾದಿಸಿದರು. ಈ ಘೋಷಣೆಯ ಮಿಲಿಯಾಂತರ ಪ್ರತಿಗಳು ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ರಷ್ಯಾ ದೇಶವೂ ಸೇರಿದಂತೆ ಜಗತ್ತಿನ ಶ್ರಮಿಕ ವರ್ಗಕ್ಕೆ ತಮ್ಮ ಬಂಧ ವಿಮೋಚನೆಗೆ ಜ್ಞಾನದೀಪವಾಗಿ, ದಿವ್ಯಾಸ್ತ್ರವಾಗಿ ದೊರಕಿದವು.

ಮುಂದೆ ಎಂಗೆಲ್ಸ್‌ರ ನೆರವಿನಿಂದ ಮಾರ್ಕ್ಸ್ ಶೋಷಣೆಯ ಮೂಲದ ಸಂಶೋಧನೆಯ ಬಂಡವಾಳ (ಕ್ಯಾಪಿಟಲ್) ಗ್ರಂಥವನ್ನು ರಚಿಸಿದರು. ಶೋಷಣೆಯನ್ನು ನಿರ್ಮೂಲ ಮಾಡಲು ನಡೆಸಬೇಕಾದ ಸಮಾಜವಾದಿ ಕ್ರಾಂತಿಗಾಗಿ ಕಾರ್ಮಿಕರ ಅಂತರಾಷ್ಟ್ರೀಯ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು. ಆದಿ ಸಮಾಜದಿಂದ ತನ್ನ ಕಾಲದವರೆಗೆ ವಿಶ್ವದಾದ್ಯಂತ ನಡೆದ ಎಲ್ಲಾ ಕ್ರಾಂತಿಗಳನ್ನು ವಿಶ್ಲೇಷಿಸಿದರು. ೧೬೪೮ರಲ್ಲಿ ಇಂಗ್ಲೆಂಡಿನಲ್ಲಿ ಮತ್ತು ೧೭೮೯ರಲ್ಲಿ ಫ್ರಾನ್ಸ್‌ನಲ್ಲಿ ಉದಯೋನ್ಮುಖ ಬಂಡವಾಳಶಾಹಿಗಳು ಕಾರ್ಮಿಕರ ನೆರವಿನಿಂದ ಅರಸೊತ್ತಿಗೆಯನ್ನು, ಪಾಳೆಯಗಾರಿ ಪ್ರಭುತ್ವವನ್ನು ಬೇರುಸಹಿತ ಕಿತ್ತುಹಾಕಿ ‘‘ಬಂಡವಾಳ ಪ್ರಜಾಪ್ರಭುತ್ವ’’ ಸ್ಥಾಪಿಸಿದುದರ ಅನುಭವಗಳನ್ನು ದಾಖಲಿಸಿದರು. ಆ ಸಂದರ್ಭಗಳಲ್ಲಿ ಮೂಡಿಬಂದ ‘‘ಸ್ವಾತಂತ್ರ್ಯ’’, ‘‘ಸಮಾನತೆ’’, ‘‘ಭ್ರಾತೃತ್ವ’’ ಧ್ಯೇಯದ ಉದ್ಘೋಷಗಳನ್ನು ಮುಂದೆ ಕಾರ್ಮಿಕವರ್ಗ ಬಂಡವಾಳಶಾಹಿ ಪ್ರಭುತ್ವವನ್ನು ಪದಚ್ಯುತಗೊಳಿಸಿ ಸಮಾಜವಾದಿ ಕ್ರಾಂತಿಯನ್ನು ಯಶಸ್ವಿಗೊಳಿಸಲು ಮೈಗೂಡಿಸಿಕೊಳ್ಳುವಂತೆ ಇವರು ಪ್ರೇರೇಪಿಸಿದರು. ೧೮೭೧ರಲ್ಲಿ ಕಾರ್ಮಿಕರ ನೇತೃತ್ವದಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕ್ರಾಂತಿಯಿಂದ ಮೊದಲಬಾರಿಗೆ ಸ್ಥಾಪಿಸಿದ ‘‘ಪ್ಯಾರಿಸ್ ಕಮ್ಯುನ್ ’’ ಶ್ರಮಿಕ ವರ್ಗದ ೭೦ ದಿನಗಳ ಪ್ರಭುತ್ವದ ಸೋಲು ಗೆಲುವುಗಳನ್ನು ವಿಶ್ಲೇಷಿಸಿ ಮುಂದಿನ ಕ್ರಾಂತಿಗಳಿಗೆ ಮಾರ್ಗದರ್ಶನ ನೀಡಿದರು. ೧೭೭೬ರಲ್ಲಿ ಬ್ರಿಟಿಷ್ ವಸಾಹತುವಿನಿಂದ ಸ್ವತಂತ್ರಗೊಂಡ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ‘‘ಬಂಡವಾಳಶಾಹಿ ಪ್ರಜಾಪ್ರಭುತ್ವ’’ ಸ್ಥಾಪನೆಗೊಂಡು, ೧೮೮೬ರಲ್ಲಿ ಕಾರ್ಮಿಕರು ತಮ್ಮ ಕೆಲಸದ ಅವಧಿಯನ್ನು ೮ ಗಂಟೆಗಳಿಗೆ ಸೀಮಿತಗೊಳಿಸಲು, ಚಿಕಾಗೋ ನಗರದಲ್ಲಿ ವೀರೋಚಿತವಾದ ‘‘ಮೇ ಹೋರಾಟ’’ ನಡೆಸಿದರು. ೧೮೮೯ರ ಮೇ ೧ ರಂದು ಜಗತ್ತಿನಾದ್ಯಂತ ಅಂತರ್‌ರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಪ್ರಾರಂಭ ವಾಯಿತು. ಇವೆಲ್ಲವುಗಳಿಂದ ‘‘ವೈಜ್ಞಾನಿಕ ಸಮಾಜವಾದ’’ ಸಿದ್ಧಾಂತ ಮತ್ತು ಪ್ರಯೋಗ ಇನ್ನಷ್ಟು ಶ್ರೀಮಂತವಾದವು.

ಹಿಂದೆ ನಡೆದ ಎಲ್ಲ ಕ್ರಾಂತಿಗಳು ಸ್ವಯಂ ಪ್ರೇರಿತವಾಗಿದ್ದವೆಂದೂ, ಅನೇಕ ಸೋಲು ಗಳನ್ನು ಅನುಭವಿಸಿವೆಯೆಂದೂ, ಮುಂದೆ ಕಾರ್ಮಿಕರ ನೇತೃತ್ವದಲ್ಲಿ ನಡೆಯಲಿರುವ ಸಮಾಜವಾದಿ ಕ್ರಾಂತಿಗಳನ್ನು ಯೋಜನಾ ಬದ್ಧವಾಗಿ ನಡೆಸಿ ಯಶಸ್ವಿಗೊಳಿಸಬಹುದೆಂದೂ, ಅಂತಹ ಕ್ರಾಂತಿಗಳು ಯೂರೋಪಿನ ಅಭಿವೃದ್ದಿ ಹೊಂದಿದ ಬಂಡವಾಳಶಾಹಿ ದೇಶಗಳಲ್ಲಿ ಸಂಭವಿಸಲಿವೆ ಎಂದೂ ಮಾರ್ಕ್ಸ್ ನಿರೀಕ್ಷಿಸಿದ್ದರು. ಆದರೆ, ಅವರ ಜೀವಿತದ ಕೊನೆಯ ಕಾಲಘಟ್ಟದಲ್ಲಿ ಬಂಡವಾಳಶಾಹಿ ವಿಜ್ಞಾನ, ತಂತ್ರಜ್ಞಾನಗಳ ಗರಿಷ್ಠ ಬಳಕೆಯಿಂದ ಸಾಮ್ರಾಜ್ಯಶಾಹಿ ಮಟ್ಟಕ್ಕೆ ದೈತ್ಯಾಕಾರವಾಗಿ ಬೆಳೆದು ಬಂದಿತು. ಬಂಡವಾಳಶಾಹಿ ಪ್ರಭುತ್ವಗಳು ತಮ್ಮ ಆಂತರಿಕ ಆರ್ಥಿಕ-ರಾಜಕೀಯ ಬಿಕ್ಕಟ್ಟುಗಳ ಭಾರವನ್ನು ಜಗತ್ತಿನಾದ್ಯಂತ  ತಮ್ಮ ವಸಾಹತುಗಳ ಮೇಲೆ ಹೇರಿ ತಮ್ಮ ಪ್ರಭುತ್ವಗಳನ್ನು ಬಲಪಡಿಸಿಕೊಂಡವು. ೧೯ನೇ ಶತಮಾನದ ಕೊನೆಯಲ್ಲಿ ಮಾರ್ಕ್ಸ್‌ವಾದದಿಂದ ಪ್ರಭಾವಿತರಾದ ರಷ್ಯಾದ ವಿ.ಐ.ಲೆನಿನ್‌ರವರು(೧೮೭೦-೧೯೨೪) ಜಾಗತಿಕ ಸಾಮ್ರಾಜ್ಯಶಾಹಿ ಬಂಡವಾಳಶಾಹಿಯ ಅತ್ಯುನ್ನತ ಘಟ್ಟ ಎಂದೂ, ಅದರ ಅತಿ ದುರ್ಬಲ ಕೊಂಡಿಯಾದ ರಷ್ಯಾದಲ್ಲಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ರೈತವರ್ಗದ ಸಖ್ಯತೆಯೊಂದಿಗೆ ಪಾಳೆಯಗಾರಿ ಹಾಗೂ ಬಂಡವಾಳಶಾಹಿ ಪ್ರಭುತ್ವಗಳನ್ನು ಏಕಕಾಲದಲ್ಲಿ ಪದಚ್ಯುತಗೊಳಿಸಬಹುದೆಂದೂ ವ್ಯಾಖ್ಯಾನಿಸಿದರು.

ಸಾಮ್ರಾಜ್ಯಶಾಹಿಗಳು ತಮ್ಮ ಬಂಡವಾಳದ ಲಾಭಗಳಿಕೆಯ ಹೆಚ್ಚಳದ ಸ್ಪರ್ಧೆಗಾಗಿ, ಜಾಗತಿಕ ಮಾರುಕಟ್ಟೆ ಹಾಗೂ ವಸಾಹತುಗಳನ್ನು ತಮ್ಮೊಳಗೆ ಹಂಚಿಕೊಳ್ಳುವ ಸ್ಪರ್ಧೆಗಾಗಿ ಅನತಿ ಕಾಲದಲ್ಲಿಯೇ ಪರಸ್ಪರ ಯುದ್ಧಕ್ಕೆ ಇಳಿಯಲಿದ್ದಾರೆಂದೂ, ಅದು ಜಾಗತಿಕ ಯುದ್ಧವಾಗಿಯೇ ಪರಿಣಮಿಸಲಿದೆ ಎಂದೂ ಲೆನಿನ್ ಕಂಡುಕೊಂಡರು. ಆ ಯುದ್ಧ ಕಾಲದಲ್ಲಿ ಎಲ್ಲಾ ದೇಶಗಳ ಕಾರ್ಮಿಕರು ಹುಸಿ ರಾಷ್ಟ್ರಭಕ್ತಿ ತೋರಿಸದೆ, ಜಾಗತಿಕ ಯುದ್ಧ ಇಕ್ಕುಳದಲ್ಲಿ ಸಿಲುಕಿದ ಬಂಡವಾಳಶಾಹಿ ಪ್ರಭುತ್ವಗಳನ್ನು ಪದಚ್ಯುತಗೊಳಿಸಿ ತಮ್ಮ ದೇಶಗಳಲ್ಲಿ ಸಮಾಜವಾದಿ ಕ್ರಾಂತಿ ಯಶಸ್ಸುಗೊಳಿಸಲು ಕರೆಕೊಟ್ಟರು. ಕಾರ್ಮಿಕ ವರ್ಗಕ್ಕೆ ತನ್ನದೇ ಆದ ಪಕ್ಷ ಇರಬೇಕೆಂದೂ, ತನ್ನ ಬೆಂಬಲಕ್ಕಾಗಿ ಬಡರೈತರ ಸಖ್ಯತೆ ಬೆಳೆಸಿ ಕೊಳ್ಳಬೇಕೆಂದೂ ಬಂಡವಾಳಶಾಹಿಗಳು ಮತ್ತು ಅದರ ಬೆಂಬಲಿಗರು ಪ್ರತಿಕ್ರಾಂತಿ ನಡೆಸಬಹುದಾದುದರಿಂದ ಅವರನ್ನು ಯಾವುದೇ ದಯೆ ದಾಕ್ಷಿಣ್ಯ ಇಲ್ಲದೇ ನಿಗ್ರಹಿಸಲು ಮತ್ತು ಕ್ರಾಂತಿಯನ್ನು ರಕ್ಷಿಸಲು ಕಾರ್ಮಿಕರ-ರೈತರ ‘‘ಕೆಂಪು ಸೇನೆ’’ ಸಜ್ಜುಗೊಳಿಸಬೇಕೆಂದೂ ಲೆನಿನ್ ಕರೆ ನೀಡಿದರು. ಪ್ಯಾರಿಸ್ ಕಮ್ಯುನ್ ನಡೆಸಿದ ಕಾರ್ಮಿಕರಿಗೆ ಇವೆಲ್ಲವುಗಳ ಕೊರತೆ ಇದ್ದುದರಿಂದಲೇ ಸೋಲುಂಟಾಯಿತು ಎಂದು ತಿಳಿಸಿ ಹೇಳಿದರು. ಕ್ರಾಂತಿಯ ಮುಖ್ಯವಾಹಿನಿಯಲ್ಲಿ ಮೂಡಿಬರಬಹುದಾದ ಬಲಪರಿಷ್ಕರಣವಾದಿಗಳನ್ನು, ಆರ್ಥಿಕ ಬೇಡಿಕೆಗಳಿಗೆ ಮತ್ತು ಸಂಸದೀಯ ವಿಧಾನಗಳಿಗೆ ಜೋತು ಬೀಳುವವರನ್ನು, ಅವಸರದಲ್ಲಿ ಪಿತೂರಿಯಂತೆ ಕ್ರಾಂತಿಮಾಡಿ ಮುಗಿಸುವ ಸಾಹಸವಾದಿಗಳನ್ನು ಮತ್ತು ಒಂದೇ ದೇಶದಲ್ಲಿ ಸಮಾಜವಾದಿ ಕ್ರಾಂತಿ ಸಂಭವಿಸಲಾರದೆಂಬ ನಿರಾಶಾವಾದಿಗಳನ್ನೂ ಲೆನಿನ್ ನಿರ್ದಾಕ್ಷಿಣ್ಯವಾಗಿ ತರ್ಕಬದ್ಧವಾಗಿ ಖಂಡಿಸುತ್ತಾ ನಿಜವಾದ ಕ್ರಾಂತಿಕಾರಿಗಳಲ್ಲಿ ವಿಶ್ವಾಸ ತುಂಬಿಸಿದರು. ಈ ಮೂಲಕ ಲೆನಿನ್ ಮಾರ್ಕ್ಸ್‌ವಾದವನ್ನು ಇನ್ನಷ್ಟು ಶ್ರೀಮಂತಗೊಳಿಸಿದರು ಮತ್ತು ಪರಿಪೂರ್ಣಗೊಳಿಸಿದರು. ಸಹಜವಾಗಿಯೇ ೨೦ನೇ ಶತಮಾನದ ಪ್ರಾರಂಭದಿಂದ ಕಾರ್ಮಿಕ ವರ್ಗದ ತತ್ವಜ್ಞಾನವನ್ನು ‘‘ಮಾರ್ಕ್ಸ್‌ವಾದ ಲೆನಿನ್ ವಾದ’’ ಎಂದೇ ಗುರುತಿಸ ಲಾಗಿದೆ.

ಲೆನಿನ್ ೧೮೯೫ರಷ್ಟರಲ್ಲಿಯೇ ಕಾರ್ಮಿಕ ವರ್ಗದ ವಿಮೋಚನೆಗಾಗಿ ಹೋರಾಟದ ಸಂಸ್ಥೆಯನ್ನು ರಚಿಸಿದರು. ನಂತರ ಮೂರು ವರ್ಷಗಳಲ್ಲಿ, ೧೮೯೮ರಲ್ಲಿ ರಷ್ಯಾದ ಸೋಶಿಯಲ್-ಡೆಮಾಕ್ರೆಟಿಕ್ ಲೇಬರ್‌ಪಾರ್ಟಿ(ಆರ್.ಎಸ್.ಡಿ.ಎಲ್.ಪಿ)ಯನ್ನು ಸ್ಥಾಪಿಸಿ ದರು. ಆ ಪಕ್ಷದಿಂದಲೇ ಬೊಲ್‌ಶೆವಿಕರು, ಕ್ರಾಂತಿಯ ಮುಖ್ಯವಾಹಿನಿಯ ಪರವಾದ ಬಹುಸಂಖ್ಯಾತರು ಮೂಡಿಬಂದರು. ಅದರಲ್ಲಿದ್ದ ಅಲ್ಪಸಂಖ್ಯಾತರನ್ನು, ಸಂಸದೀಯ ವಿಧಾನಕ್ಕೆ ಅಂಟಿಕೊಂಡವರನ್ನು ಮೆನಶೆವಿಕ್‌ರೆಂದೂ ಗುರುತಿಸಲಾಯಿತು. ೧೯೦೫ರಲ್ಲಿ ಜಪಾನ್ ರಷ್ಯಾದ ಮೇಲೆ ದಾಳಿ ನಡೆಸಿ ಸೋಲಿಸಿತು. ಬೊಲ್‌ಶೆವಿಕ್‌ರಿಗೆ ಝಾರ್ ಚಕ್ರವರ್ತಿಯ ಪ್ರಭುತ್ವದ ಅವಸಾನ ಸಮೀಪಿಸುತ್ತಿರುವುದು ತಿಳಿಯಿತು. ಆ ವರ್ಷವೇ ಬೊಲ್‌ಶೆವಿಕ್‌ರ ನೇತೃತ್ವದಲ್ಲಿ ಕಾರ್ಮಿಕರು ಮತ್ತು ರೈತರು ಬಂಡಾಯವೆದ್ದರು. ಆದರೆ, ಸಾಕಷ್ಟು ಪೂರ್ವ ತಯಾರಿ ಇಲ್ಲದೇ ಬಂಡಾಯ ವಿಫಲವಾಯಿತು. ಬೊಲ್‌ಶೆವಿಕ್ ಪಕ್ಷವನ್ನು ಕಾನೂನುಬಾಹಿರಗೊಳಿಸಲಾಯಿತು. ಅಸಂಖ್ಯಾತ ಕ್ರಾಂತಿಕಾರಿಗಳನ್ನು ಕೊಲೆ ಮಾಡಲಾಯಿತು. ಹಲವರನ್ನು ದೂರದ ಸೈಬೀರಿಯಾಕ್ಕೆ ಜೈಲುವಾಸಕ್ಕಾಗಿ ಕಳುಹಿಸಲಾಯಿತು. ಲೆನಿನ್ ಅವರನ್ನು ಗಡಿಪಾರು ಮಾಡಲಾಯಿತು. ಈ ವಿಫಲ ಕ್ರಾಂತಿಯ ಅನುಭವಗಳನ್ನು ಲೆನಿನ್ ವಿಶ್ಲೇಷಿಸಿ ಮುಂದಿನ ಕ್ರಾಂತಿಗೆ ಭೂಗತರಾಗಿಯೇ ತಯಾರಿ ನಡೆಸಿದರು. ೧೯೦೫-೦೭ರ ಕ್ರಾಂತಿಯ ಕಾಲದಲ್ಲಿ, ಪ್ರತಿ ಗ್ರಾಮ ಹಾಗೂ ಪಟ್ಟಣದ ಮಟ್ಟಗಳಲ್ಲಿ ರೈತರ ಹಾಗೂ ಕಾರ್ಮಿಕರ ಪ್ರಾತಿನಿಧ್ಯವುಳ್ಳ ಪ್ರಾದೇಶಿಕ ಸಮಿತಿಗಳನ್ನು – ಸೋವಿಯತ್‌ಗಳನ್ನು ರಷ್ಯಾ ದೇಶಾದ್ಯಂತ ಸ್ಥಾಪಿಸಲು ಬೊಲ್‌ಶೆವಿಕರು ಶ್ರಮಿಸಿದರು. ಮುಂದೆ ಈ ಸೋವಿಯತ್‌ಗಳೇ ಕ್ರಾಂತಿಯ ಕುಡಿಗಳಾಗಿ ಬೆಳೆದು ಬಂದವು.

ಮೊದಲೇ ತಿಳಿಸಿದಂತೆ, ಬೊಲ್‌ಶೆವಿಕ್ ಪಕ್ಷ ರಷ್ಯಾದ ಕಾರ್ಮಿಕರನ್ನು ಮತ್ತು ಅತ್ಯಂತ ಬಡ ರೈತರನ್ನು ಪ್ರತಿನಿಧಿಸಿತ್ತು. ಆ ಪಕ್ಷದ ಕಾರ್ಯಕ್ರಮದಲ್ಲಿ ಝಾರನ ನಿರಂಕುಶ ಅರಸೊತ್ತಿಗೆಯನ್ನು ಪದಚ್ಯುತಗೊಳಿಸುವುದು ಮತ್ತು ಬಂಡವಾಳಶಾಹಿ ವರ್ಗವನ್ನು ಪ್ರಭುತ್ವದಿಂದ ಕಿತ್ತು ಹಾಕುವುದು, ಅಂತಿಮವಾಗಿ ಶ್ರಮಿಕ ವರ್ಗದ – ಕಾರ್ಮಿಕರ ಹಾಗೂ ರೈತರ ಸಮಾಜವಾದಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು, ಕೈಗಾರಿಕಾ ಉತ್ಪಾದನಾ ಸಾಧನಗಳನ್ನು ಖಾಸಗೀ ಸ್ವಾಮ್ಯದಿಂದ ಸಾಮಾಜಿಕ ಸ್ವಾಮ್ಯಕ್ಕೆ ಹಸ್ತಾಂತರಿಸು ವುದು, ಭೂಮಾಲಿಕ ಪದ್ಧತಿಯನ್ನು ಅಳಿಸಿಹಾಕಿ ಉಳುವವನಿಗೆ ಹೊಲ ಕೊಡಿಸುವುದು, ಮತ್ತು ಈ ಎಲ್ಲಾ ವಿಧಾನಗಳಿಂದ ಜನಸಂಖ್ಯೆಯ ಶೇ.೯೫ರಷ್ಟಿರುವ ಕಾರ್ಮಿಕರಿಗೆ ಮತ್ತು ಬಡರೈತರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಾನತೆಗಳನ್ನು ಮತ್ತು ಸಮಾನ ಅವಕಾಶಗಳನ್ನು ಒದಗಿಸುವಂತೆ ಮಾಡುವುದು, ಅವರ ಸರ್ವಾಂಗೀಣ ಅಭಿವೃದ್ದಿ ಗಾಗಿ ಕಾರ್ಮಿಕ ವರ್ಗದ ಪ್ರಜಾಪ್ರಭುತ್ವ ಯೋಜನಾ ಬದ್ಧವಾಗಿ ಶ್ರಮಿಸುವುದು ಎಂದು ಪ್ರಸ್ತಾಪಿಸಲಾಗಿತ್ತು.

೨೦ನೇ ಶತಮಾನದ ಪ್ರಾರಂಭದಲ್ಲಿ ರಷ್ಯಾದಲ್ಲಿ ಬೊಲ್‌ಶೆವಿಕ್ ಪಕ್ಷದ ಹೊರತಾಗಿ ಹಲವಾರು ರಾಜಕೀಯ ಪಕ್ಷಗಳಿದ್ದವು. ಅವುಗಳಲ್ಲಿ ಮುಖ್ಯವಾದವುಗಳು ನಾಲ್ಕು. ಅವುಗಳ ಗುಣಲಕ್ಷಣಗಳು ಹೀಗಿವೆ.

. ಕೆಡೆಟ್ಸ : ರಾಜವಂಶ ಬೆಂಬಲಿತ ಉದಾರವಾದಿ ಬಂಡವಾಳಶಾಹಿ ಪಕ್ಷ, ಸಂಸದೀಯ ಪ್ರಜಾಪ್ರಭುತ್ವವಾದಿ ಪಕ್ಷ.

. ಪ್ರೊಗ್ರೆಸ್‌ಸಿಸ್ಟ್ಸ್ : ಪುರೋಗಾಮಿ ಪಕ್ಷ, ದೊಡ್ಡ ಬಂಡವಾಳಶಾಹಿಗಳು ರಾಷ್ಟ್ರಿಯ ಉದಾರವಾದಿ ಪಕ್ಷ.

. ಟ್ರುಡೋವಿಕ್ಸ್ (ಲೇಬರ್ ಗ್ರೂಪ್) : ಗ್ರಾಮೀಣ ಬಂಡವಾಳಶಾಹಿಗಳ ಪಕ್ಷ, ಸಹಕಾರಿ ಸಂಘಗಳಲ್ಲಿ ಆಸಕ್ತಿ.

. ಸೋಷಿಯಲಿಸ್ಟ್ ರೆವಲ್ಯೂಶನರೀಸ್ಟ್ಸ್ : ಸಮಾಜವಾದಿ – ಕ್ರಾಂತಿಕಾರಿಗಳ ಪಕ್ಷ, ನಗರ ಹಾಗೂ ಗ್ರಾಮೀಣ ಪುಟ್ಟ ಬಂಡವಾಳಶಾಹಿಗಳ ಪಕ್ಷ.

ಎಲ್ಲಾ ಸುಧಾರಣೆಗಳಿಗೆ ಅಡ್ಡ ಬರುತ್ತಿರುವ ಝಾರನ ಅರಸೊತ್ತಿಗೆಯನ್ನು ಎದುರಿಸಿ ರಷ್ಯಾದಲ್ಲಿ ಕ್ರಾಂತಿ ಮಾಡುವ ಯಾವುದೇ ರಾಜಕೀಯ ಪಕ್ಷ ಇಲ್ಲ ಎಂದು ಈ ನಾಲ್ಕು ಪಕ್ಷಗಳು ನಿರಾಸೆಗೊಂಡಿದ್ದವು.

ಕ್ರಾಂತಿಯ ಕಿಡಿಗಳು

ಲೆನಿನ್ ನಿರೀಕ್ಷಿಸಿದಂತೆ, ೧೯೧೪ರ ಜೂನ್ ೧೫ರಂದು ಸಾಮ್ರಾಜ್ಯಶಾಹಿಗಳ ಮಧ್ಯೆ ಮೊದಲಬಾರಿಗೆ ಭೀಕರ ಜಾಗತಿಕ ಯುದ್ಧ ಪ್ರಾರಂಭವಾಯಿತು. ಒಂದೆಡೆ ಜರ್ಮನಿ, ಆಸ್ಟ್ರಿಯಾ, ಹಂಗೇರಿ ಮತ್ತು ಟರ್ಕಿ; ಇನ್ನೊಂದೆಡೆ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ. ಎರಡೂ ಬಣಗಳು ಅನುಕ್ರಮವಾಗಿ ೭,೯೯೨,೦೦೦ ಮತ್ತು ೧೦,೧೧೯,೦೦೦ ಸೈನಿಕ ಪಡೆಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜಿತವಾಗಿದ್ದವು. ೧೯೧೮ರವರೆಗೆ ಮುಂದುವರೆದ ಈ ಮಹಾಯುದ್ಧದಲ್ಲಿ ೧೫೦ ಕೋಟಿ ಜನಸಂಖ್ಯೆ ಇವರು ೩೮ ರಾಷ್ಟ್ರಗಳು ಭಾಗವಹಿಸಿದ್ದವು. ಈ ಭೀಕರ ಯುದ್ಧದಲ್ಲಿ ೯೫ ಲಕ್ಷ ಜನರು ಸಾವಿಗೀಡಾದರು. ೨೦೦ ಲಕ್ಷ ಜನರು ಗಾಯಗೊಂಡರು ಮತ್ತು ೩೫ ಲಕ್ಷ ಜನರು ಖಾಯಂ ಅಂಗವಿಕಲರಾದರು. ಜನರು ಅಪಾರ ಆಸ್ತಿಪಾಸ್ತಿಗಳನ್ನು ಮತ್ತು ಉತ್ಪಾದನಾ ಸಂಪನ್ಮೂಲಗಳನ್ನು ಕಳೆದುಕೊಂಡರು. ನಿರುದ್ಯೋಗ, ಬೆಲೆ ಏರಿಕೆಗಳ ಬೇಗೆಯಿಂದ ಅವರು ತತ್ತರಿಸಿದರು. ಆದರೆ, ಈ ಯುದ್ಧದ ರಕ್ತಕುಂಡಗಳಿಂದಲೇ ಶಸ್ತ್ರಾಸ್ತ್ರಗಳನ್ನು, ಆಹಾರ ಪದಾರ್ಥಗಳನ್ನು, ಔಷಧಗಳನ್ನು, ಸಾರಿಗೆ ಸಂಪರ್ಕಗಳನ್ನು ಸರಬರಾಜು ಮಾಡುತ್ತಿದ್ದ ಎಲ್ಲಾ ದೇಶದ ವ್ಯಾಪಾರೋದ್ಯಮಿಗಳು, ಮುಖ್ಯವಾಗಿ ಯುದ್ಧದ ಕೊನೆಯಲ್ಲಿ ಬಂದು ಸೇರಿದ ಅಮೆರಿಕಾ ಸಂಯುಕ್ತ ಸಂಸ್ಥಾನದವರು ಅಪಾರ ಲಾಭಗಳಿಸಿ ಕೋಟ್ಯಾಧೀಶರಾದರು.

ಈ ಮಧ್ಯೆ ರಷ್ಯಾದಲ್ಲಿ ೧೯೧೧ ರಿಂದ ೧೯೧೭ರವರೆಗೆ ಲಕ್ಷಾಂತರ ಕಾರ್ಮಿಕರ ಮುಷ್ಕರಗಳ ಸರಮಾಲೆಯಿಂದ ಕ್ರಾಂತಿಯ ಕಿಡಿಗಳು ಸಿಡಿಯಲಾರಂಭಿಸಿದವು. ರಾಜಧಾನಿ ಪೆಟ್ರೋಗ್ರಾಡ್‌ನಲ್ಲಿ ೧೯೧೭ರ ಫೆಬ್ರವರಿ ೧೦ ರಂದು ಕಾರ್ಮಿಕರು ಮತ ಪ್ರದರ್ಶನ ಮಾಡಿದರು. ೧೪ ರಂದು ೫೮ ಕೈಗಾರಿಕಾ ಸಂಸ್ಥೆಗಳ ೯೦,೦೦೦ ಕಾರ್ಮಿಕರು ಸಲಕರಣೆಗಳ ವಿನ್ಯಾಸ ನಡೆಸಿದರು. ೨೩ ರಂದು ನಡೆದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೆಂಬಲಿಸಿ ೧೨೮,೦೦೦ ಕಾರ್ಮಿಕರು ಮುಷ್ಕರ ನಡೆಸಿದರು. ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರು ‘‘ಯುದ್ಧಕ್ಕೆ ಧಿಕ್ಕಾರ’’ ‘‘ನಮಗೆ ಅನ್ನ ಕೊಡಿ’’ ‘‘ಮಹಿಳೆ ಯರಿಗೆ ಮತದಾನದ ಹಕ್ಕು ಕೊಡಿ’’ ಎಂದು ಗಗನ ಮುಟ್ಟುವಂತೆ ಘೋಷಣೆಗಳನ್ನು ಕೂಗಿದರು. ೨೪ ರಂದು ಮುಷ್ಕರನಿರತ ಕಾರ್ಮಿಕರ ಸಂಖ್ಯೆ ೨೧೪,೦೦೦ಕ್ಕೇರಿತು. ೨೫ ರಿಂದ ರಾಜಕೀಯ ಸಾರ್ವತ್ರಿಕ ಮುಷ್ಕರ ಪ್ರಾರಂಭವಾಯಿತು. ೨೬ ರಂದು ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಮಿಕರ ಮತ್ತು ಪೋಲೀಸರ – ಸೈನಿಕರ ನಡುವೆ ರಕ್ತ ಸಿಂಚಿತ ಘರ್ಷಣೆ ಗಳಾದವು. ಕಾರ್ಮಿಕರನ್ನು ಬೆಂಬಲಿಸಿ ಮಹಿಳೆಯರೂ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಹೋರಾಟ ನಿಲ್ಲಿಸಲು ಝಾರನ ಮಿಲಿಟರಿ ಅಧಿಕಾರಿ ನೀಡಿದ ಆದೇಶವನ್ನು ತಿರಸ್ಕರಿಸ ಲಾಯಿತು. ಯುದ್ಧರಂಗದಿಂದ ಬರಿಗಾಲಿನ, ಕೆಸರು ಮತ್ತು ರಕ್ತತಪ್ತ ಕಾಲುಗಳಿಂದ, ಖಾಯಿಲೆಗಳಿಂದ ಹಾಗೂ ಹಸಿವಿನಿಂದ ಯುದ್ಧ ಟ್ರೆಂಚ್‌ಗಳಲ್ಲಿ ನರಳುತ್ತಿರುವ ಸಾವಿರಾರು ಸೈನಿಕರು ಹಿಂದಿರುಗುತ್ತಿದ್ದರು. ಅವರು ತಮಗೆ ಓದಲು ಏನಾದರೂ ಕೊಡಿ ಎಂದು ಬೊಲ್‌ಶೆವಿಕರನ್ನು ಕೇಳುತ್ತಿದ್ದರು. ಅಕ್ಟೋಬರ್ ೨೭ ಮತ್ತು ೨೮ರಂದು ೪೫೪,೦೦೦ ಸೈನಿಕರು ಸಾರ್ವತ್ರಿಕ ಮುಷ್ಕರನಿರತ ಕಾರ್ಮಿಕರನ್ನು ಕೂಡಿಕೊಂಡರು ಮತ್ತು ಕ್ರಾಂತಿಕಾರಿಗಳ ಶಕ್ತಿಯನ್ನು ಹೆಚ್ಚಿಸಿದರು.

ಫೆಬ್ರವರಿ ೨೭ರಂದು ಪೆಟ್ರೋಗ್ರಾಫ್ ಸೋವಿಯತ್‌ಗೆ ಕಾರ್ಮಿಕರ ಮತ್ತು ಸೈನಿಕರ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಜನರು ಹೊಸತಾಗಿ ಆಯ್ಕೆಗೊಂಡ ಸೋವಿಯತ್‌ಗೆ ಸಂಪೂರ್ಣ ಅಧಿಕಾರ ನೀಡಿ ಬೆಂಬಲಿಸಿದರು. ಅದೇ ದಿನ ರಾತ್ರಿ ಡೂಮಾದ-ಸಂಸದೀಯ ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಲಾಯಿತು. ಝಾರನ ಕಾಲದ ಸಂಸತ್ತಿನಲ್ಲಿದ್ದ ಬಂಡವಾಳಶಾಹಿ ಪರವಾದ ಪ್ರತಿನಿಧಿಗಳು ಹೊರಗಿನ ಕ್ರಾಂತಿಕಾರಕ ಪರಿಸ್ಥಿತಿಯ ಲಾಭ ಪಡೆದರು. ಮಾರ್ಚ್ ೨ ರಂದು ಸಂಸದೀಯ ಸಮಿತಿಯ ಮೂಲಕ ಝಾರನೊಂದಿಗೆ ಸಂಧಾನ ನಡೆಸಿ, ಅವನು ಸಿಂಹಾಸನ ತ್ಯಾಗ ಮಾಡುವಂತೆ ಮನವೊಲಿಸಿದರು. ಮಿಂಚಿನ ವೇಗದಲ್ಲಿ ಸಂಸದೀಯ ಸಮಿತಿ, ಅಸ್ಥಿರತೆಯಿಂದ ಇದ್ದ ಪೆಟ್ರೋಗ್ರಾಡ್ ಸೋವಿಯತ್‌ನ ಕೆಲವು ಪ್ರತಿನಿಧಿಗಳ ನೆರವಿನಿಂದ, ತಾತ್ಕಾಲಿಕ ಸರಕಾರವನ್ನು ರಚಿಸಿಯೇ ಬಿಟ್ಟರು. ಝಾರನ ಬದಲಿಗೆ ಕ್ರಾಂತಿವಿರೋಧಿ ಬಂಡವಾಳಶಾಹಿಗಳು ಪ್ರತಿನಿಧಿಗಳ ಪ್ರಭುತ್ವ ಅಧಿಕಾರಕ್ಕೆ ಬರುವಂತಾಯಿತು. ನಾಮಫಲಕವಷ್ಟೇ ಬದಲಾಯಿತು. ತೋರಿಕೆಗೆ ತಾತ್ಕಾಲಿಕ ಸರಕಾರದ ಮಂತ್ರಿಮಂಡಲವೂ ‘‘ಕ್ರಾಂತಿಗೆ ಜಯವಾಗಲಿ’’, ‘‘ನಾವು ಜನರ ಜೊತೆಗಿದ್ದೇವೆ’’ ‘‘ಪ್ರಜಾಪ್ರಭುತ್ವ-ಭ್ರಾತೃತ್ವ-ಸಮಾನತೆ ಚಿರಾಯುವಾಗಲಿ’’ ಎಂದು ಘೋಷಿಸಿದರು. ಆದರೆ, ಫೆಬ್ರವರಿ ಕ್ರಾಂತಿಯ ಮೂಲಕ ೩೦೦ ವರ್ಷಗಳ ದೀರ್ಘಕಾಲದ ಕ್ರೂರ, ಜನ ವಿರೋಧಿ ರೋಮೊನೋವ್ ವಂಶದ ಆಳ್ವಿಕೆ ಕೊನೆಗೊಂಡಿರುವುದು ನಿಜವಾಯಿತು.

ರಷ್ಯಾದಲ್ಲಿ ಈಗ ಎರಡು ಪ್ರಭುತ್ವಗಳಿರುವುದನ್ನು ಲೆನಿನ್ ಗುರುತಿಸಿದರು. ಒಂದನೆಯದು ಬಂಡವಾಳಶಾಹಿಗಳ ತಾತ್ಕಾಲಿಕ ಸರಕಾರ ಮತ್ತು ಎರಡನೆಯದು ಪೆಟ್ರೋಗ್ರಾಡ್ ಸೋವಿಯತ್‌ನದ್ದು. ಎರಡನೇ ಪ್ರಭುತ್ವದ ಮೂಲಕ ಮುಂದಿನ ದಿನಗಳಲ್ಲಿ ಸಮಾಜವಾದಿ ಕ್ರಾಂತಿಯನ್ನು ಯಶಸ್ಸುಗೊಳಿಸುವ ಜವಾಬ್ದಾರಿ ಇತ್ತು. ಪೆಟ್ರೋಗ್ರಾಡ್ ಸೋವಿಯತ್ ಕಾರ್ಮಿಕರ ಕೆಲಸದ ಅವಧಿಯನ್ನು ೮ ಗಂಟೆಗಳಿಗೆ ನಿಗದಿಗೊಳಿಸಿತು. ತಾತ್ಕಾಲಿಕ ಸರಕಾರ ಈ ಆದೇಶವನ್ನು ವಿರೋಧಿಸುವ ಸ್ಥಿತಿಯಲ್ಲಿರಲಿಲ್ಲ. ಏಪ್ರಿಲ್ ೩ ರಂದು ಲೆನಿನ್ ಪೆಟ್ರೋಗ್ರಾಡ್‌ಗೆ ವಾಪಸ್ಸಾದರು. ಮುಂದಿನ ಕ್ರಾಂತಿಯ ನೇತೃತ್ವ ವಹಿಸಿದರು. ಕ್ರಾಂತಿ ಮುಂದಿನ ಹಂತದಲ್ಲಿ ಲೆನಿನ್ ಜನರ ಮುಂದೆ ಅತ್ಯಂತ ಸರಳ-ಸುಲಭವಾದ ಘೋಷಣೆಗಳನ್ನು ಇಟ್ಟರು. ಸೈನಿಕರಿಗೆ ಶಾಂತಿ, ಕಾರ್ಮಿಕರಿಗೆ ಆಹಾರ, ರೈತರಿಗೆ ಭೂಮಿ ಮತ್ತು ಎಲ್ಲರಿಗೂ ಸ್ವಾತಂತ್ರ್ಯ ಎಂದರು ತಾತ್ಕಾಲಿಕ ಸರಕಾರ ಜನರ ಯಾವುದೇ ಬೇಡಿಕೆಗಳನ್ನು ಈಡೇರಿಸಲಾರದು ಎಂದು ಲೆನಿನ್ ತಿಳಿಸಿದರು. ಪೆಟ್ರೋಗ್ರಾಡ್ ಮತ್ತು ರಷ್ಯಾದ ಎಲ್ಲಾ ಪ್ರದೇಶಗಳಲ್ಲಿ ನೂರಾರು ಸಾವಿರಾರು ಸಭೆಗಳು, ಭಾಷಣಗಳು ನಡೆದವು. ಭಿತ್ತಿಪತ್ರಗಳ, ಕರಪತ್ರಗಳ, ವಾರ್ತಾಪತ್ರಗಳ ಮೂಲಕ ಪ್ರಚಾರ ಪ್ರಕ್ಷೋಭೆಗಳು ಏರ್ಪಟ್ಟವು.

ತಾತ್ಕಾಲಿಕ ಸರಕಾರ ತನ್ನ ನೆಲೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಹಲವು ಬಾರಿ ಅದರ ಮಂತ್ರಿಮಂಡಲವನ್ನು ಬದಲಾಯಿಸಲಾಯಿತು. ಆಗಸ್ಟ್‌ನ ಪ್ರಾರಂಭದಲ್ಲಿ ಕೆರೆನ್‌ಸ್ಕಿ ತಾತ್ಕಾಲಿಕ ಸರಕಾರದ ಪ್ರಧಾನಿಯಾದನು. ಕೋರ್ನಿಲೋವ್ ಮುಖ್ಯ ಸೇನಾಧಿಪತಿಯಾದನು. ಇಬ್ಬರೂ ಕ್ರಾಂತಿಯ ಬೆಂಬಲಿಗರೆಂದು ಹೇಳುತ್ತಾ, ಬೊಲ್ ಶೆವಿಕ್‌ರನ್ನು ಸದೆಬಡಿಯಲು ಮಿಲಿಟರಿ ಸರ್ವಾಧಿಕಾರವನ್ನು ಪ್ರತಿಪಾದಿಸುತ್ತಿದ್ದರು. ತಾತ್ಕಾಲಿಕ ಸರಕಾರ ಮುಷ್ಕರಗಳನ್ನು, ಮತಪ್ರದರ್ಶನಗಳನ್ನು, ಸಭೆ ಸಮಾವೇಶಗಳನ್ನು ನಿರ್ದಯದಿಂದ ಹತ್ತಿಕ್ಕುತ್ತಿತ್ತು. ಬೊಲ್‌ಶೆವಿಕ್‌ರ ವಿರುದ್ಧ ಭಾರಿ ಅಪಪ್ರಚಾರ ನಡೆಸುತ್ತಿತ್ತು. ತಾನೇ ಕ್ರಾಂತಿಯ ರಕ್ಷಕ ಎಂದು ಹೇಳಿಕೊಳ್ಳುತ್ತಿತ್ತು. ೧೯೧೭ರ ಜುಲೈ ನಲ್ಲಿ ತಾತ್ಕಾಲಿಕ ಸರಕಾರ ಪ್ರತಿಕ್ರಾಂತಿಗಳಿಂದ ತುಂಬಿ ತುಳುಕುತ್ತಿತ್ತು. ಲೆನಿನ್-ಬೊಲ್ ಶೆವಿಕರು ಅದರ ಅಧಿಕಾರವನ್ನು ಮಾನ್ಯ ಮಾಡುವುದನ್ನು ಬಿಟ್ಟು ಬಿಟ್ಟರು. ಅಧಿಕಾರವೆಲ್ಲ ಸೋವಿಯತ್‌ಗಳಿಗೇ ಎಂದು ಘೋಷಿಸಲಾಯಿತು. ತಡಮಾಡದೇ ತಾತ್ಕಾಲಿಕ ಸರಕಾರ ಬೊಲ್‌ಶೆವಿಕ್ ಪಕ್ಷವನ್ನು ಕಾನೂನುಬಾಹಿರಗೊಳಿಸಿತು. ಲೆನಿನ್‌ರನ್ನು ದಸ್ತಗಿರಿ ಮಾಡಲು ಪ್ರಯತ್ನಿಸಿತು. ಅಂದಿನಿಂದ ಮುಂದಿನ ಕ್ರಾಂತಿಗಾಗಿ ಭೂಗತ ಕಾರ್ಯಾಚರಣೆಗಳು ಪ್ರಾರಂಭವಾದವು. ಅದರ ‘‘ಪ್ರಾವ್ಡಾ’’ ಪತ್ರಿಕೆಯು ಎಲ್ಲಾ ದಮನಕಾರಿ ಕಾರ್ಯಕ್ರಮಗಳನ್ನೂ ವಿರೋಧಿಸುತ್ತಾ, ಬೇರೆ ಬೇರೆ ಹೆಸರುಗಳಿಂದ ಕ್ರಾಂತಿಕಾಲದ ಉದ್ದಕ್ಕೂ ಪ್ರಕಟಗೊಂಡು ಕ್ರಾಂತಿಯ ಯಶಸ್ವಿಗೆ ಮಾರ್ಗದರ್ಶಿಯಾಯಿತು. ಜುಲೈ ೨೬ ರಿಂದ ಆಗಸ್ಟ್ ೩ರ ವರೆಗೆ ಪೆಟ್ರೋಗ್ರಾಡ್‌ನಲ್ಲಿ ನಡೆದ ಬೊಲ್‌ಶೆವಿಕ್ ಪಕ್ಷದ ೬ನೇ ಅಧಿವೇಶನದಲ್ಲಿ ಮುಂದಿನ ರಾಷ್ಟ್ರೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವಾಗ ಕ್ರಾಂತಿಯ ವಿಜಯಕ್ಕಾಗಿ ಜನರನ್ನು ಸಶಸ್ತ್ರ ಬಂಡಾಯ ಹೂಡುವಂತೆ ತಯಾರುಗೊಳಿಸಬೇಕೆಂದೂ ಠರಾವನ್ನು ಅಂಗೀಕರಿಸಲಾಯಿತು.

೧೯೧೭ರ ಆಗಸ್ಟ್ ೨೧ರಿಂದ ೩೧ರ ವರೆಗೆ ಸೇನಾನಾಯಕ ಕೊರ್ನಿಲೋವ್ ತನ್ನ ಸೇನೆಯನ್ನು ಪೆಟ್ರೋಗ್ರಾಡ್‌ಗೆ ಸಾಗಿಸಿತು. ರಷ್ಯಾದಲ್ಲಿ ಮಿಲಿಟರಿ ಸರ್ವಾಧಿಕಾರ ಸ್ಥಾಪಿಸಲು ಪ್ರಯತ್ನಿಸಿದನು. ಆದರೆ, ಬೊಲ್‌ಶೆವಿಕ್‌ರ ಕ್ರಾಂತಿಸೇನೆ ಮಿಲಿಟರಿ ದಂಗೆಯನ್ನು ವಿಫಲಗೊಳಿಸಿತು. ಇದರಿಂದ ಬೊಲ್‌ಶೆವಿಕ್‌ರ ಪ್ರತಿಷ್ಠೆ ದೇಶಾದ್ಯಂತ ಹೆಚ್ಚಿತು. ಜನರಿಗೆ ತಾತ್ಕಾಲಿಕ ಸರಕಾರದ ಗುಣಲಕ್ಷಣಗಳು ಇನ್ನಷ್ಟು ಸ್ಪಷ್ಟವಾದವು. ಅವರು ಕ್ರಾಂತಿಕಾರರನ್ನು ಹೆಚ್ಚು ಹೆಚ್ಚು ಬೆಂಬಲಿಸತೊಡಗಿದರು. ಇದೇ ಸಂದರ್ಭ ಜನರ ಪಡಿತರವು ಎರಡು ವಾರಗಳಲ್ಲಿ ಆರು ಪಟ್ಟು ಕಡಿತಗೊಂಡಿತು. ಒಬ್ಬ ಮಹಿಳೆಯ ವೇತನ ೩೫ ರೂಬಲ್ ಗಳಾಗಿದ್ದು, ಚಳಿಗಾಲದ ಒಂದು ಜೊತೆ ಬೂಟ್ಸಿಗೆ ೧೦೦ ರೂಬಲಗಳಷ್ಟು ಬೆಲೆ ಇತ್ತು. ಚಳಿಗಾಲದಲ್ಲಿ ಜನರು ಭಾರೀ ಕಷ್ಟ-ಕಾರ್ಪಣ್ಯಗಳಿಗೊಳಗಾಗಿ ಬೊಲ್‌ಶೆವಿಕ್‌ರ ಬೆಂಬಲ ಕುಗ್ಗುವುದೆಂದು ಪ್ರತಿಕ್ರಾಂತಿಕಾರಿಗಳು ನಿರೀಕ್ಷಿಸಿದ್ದರು. ಆದರೆ, ದುಃಸ್ಥಿತಿಗಳಿಂದ ಜನರು ತಾತ್ಕಾಲಿಕ ಸರಕಾರದಿಂದಲೇ ಬಹಳ ದೂರ ಸರಿಯುವಂತಾಯಿತು.

ಕ್ರಾಂತಿಯ ಬಿರುಗಾಳಿ

೧೯೧೭ರ ಅಕ್ಟೋಬರ್‌ನ ಪ್ರಾರಂಭದಲ್ಲಿ ಲೆನಿನ್ ಫಿನ್‌ಲ್ಯಾಂಡ್‌ನಿಂದ ಮೈಮರೆಸಿ ಕೊಂಡು ಪುನಃ ಪೆಟ್ರೋಗ್ರಾಡ್‌ಗೆ ಬಂದರು. ಮುಂದಿನ ಸಶಸ್ತ್ರ ಬಂಡಾಯಕ್ಕೆ ಒಂದು ಸ್ಪಷ್ಟ ಯೋಜನೆ ರೂಪಿಸಿದರು. ಅಕ್ಟೋಬರ್ ೧೦ ರಂದು ಬೊಲ್‌ಶೆವಿಕ್ ಪಕ್ಷದ ಕೇಂದ್ರ ಸಮಿತಿ ಈ ಯೋಜನೆಯ ಆಧಾರದಲ್ಲಿ ಒಂದು ಠರಾವನ್ನು ಅಂಗೀಕರಿಸಿತು. ಅದರಂತೆ ಕ್ರಾಂತಿಕಾರಿ ಮಿಲಿಟರಿ ಕೇಂದ್ರವನ್ನು ಸ್ಥಾಪಿಸಲಾಯಿತು. ಪೆಟ್ರೋಗ್ರಾಡ್‌ಗೆ ಮುನ್ನುಗ್ಗುವ ಸೈನ್ಯ ಮತ್ತು ಅದಕ್ಕೆ ಬೆಂಬಲವಾಗಿ ಬಾಲಿಸ್ಟಿಕ್ ಹಡಗು ಪಡೆಯ ನಾವಿಕರು ಹಾಗೂ ಮಾರ್ಚ್ ೧೯೧೭ರಲ್ಲಿಯೇ ಸ್ಥಾಪಿತವಾದ ಕೆಂಪು ಸೇನೆ-ರೆಡ್ ಗಾರ್ಡ್ಸ್‌ನ ಮುಂಚೂಣಿಯಲ್ಲಿ, ಸ್ಥಳೀಯ ಕ್ರಾಂತಿಕಾರಿ ಮಿಲಿಟರಿ ಸಮಿತಿಗಳು, ಆಯಕಟ್ಟಿನ ಸಂಸ್ಥೆಗಳಾದ ಟೆಲಿಗ್ರಾಫ್, ಟೆಲಿಫೋನ್ ಆಫೀಸ್‌ಗಳಿಗೆ ಮತ್ತು ರೈಲ್ವೆ ಸ್ಟೇಶನ್‌ಗಳಿಗೆ ಕ್ರಾಂತಿಕಾರಿ ಸೇನೆಗಳನ್ನು ರವಾನಿಸುವುದು ಮುಂತಾದ ಎಲ್ಲಾ ಸಿದ್ಧತೆಗಳೂ ನಡೆದವು. ಕಾರ್ಮಿಕರು ಕೈಗಾರಿಕೆಗಳ ಆಡಳಿತದವರನ್ನು ಕಿತ್ತು ಹಾಕಿ ತಾವೇ ವಹಿಸಿಕೊಂಡರು. ಸೈನಿಕರು ಯುದ್ಧದ ೪ನೇ ವರ್ಷದ ಚಳಿಗಾಲದ ಟ್ರೆಂಚ್ ಜೀವನ ಸಹಿಸಲಾರದೇ ಬೃಹತ್ ಸಂಖ್ಯೆಯಲ್ಲಿ ಬಂದು ಕ್ರಾಂತಿಕಾರಿಗಳನ್ನು ಕೂಡಿಕೊಂಡರು. ರೈತರು ಭೂಮಾಲಿಕರನ್ನು ಓಡಿಸಿ, ಅವರ ಭೂ ಹಿಡುವಳಿಗಳನ್ನು ಮತ್ತು ವ್ಯವಸಾಯ ಸಲಕರಣೆಗಳನ್ನು ತಮ್ಮೊಳಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ತುಳಿತಕ್ಕೆ ಒಳಗಾದ ರಷ್ಯಾದ ವಿವಿಧ ರಾಷ್ಟ್ರೀಯತೆಗಳ ಜನರಿಗೆ ಹೊಸ ಗರಿ ಬಂದಂತಾಯಿತು. ಎಲ್ಲಾ ರಾಷ್ಟ್ರೀಯತೆಗಳಿಗೆ ಸಮಾನತೆ ಮತ್ತು ಅವುಗಳಿಗೆ ಸ್ವಾತಂತ್ರ್ಯ, ರಾಜ್ಯ ರಚಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಬೊಲ್‌ಶೆವಿಕರು ಭರವಸೆ ನೀಡಿದರು. ಅವರು ಕಾರ್ಮಿಕರ ಮತ್ತು ರೈತರ ಹೋರಾಟಗಳೊಂದಿಗೆ ಐಕ್ಯರಂಗ ರಚಿಸಿಕೊಂಡರು.

ರಷ್ಯಾದ ಆರ್ಥಿಕತೆ ಸಂಪೂರ್ಣ ಕುಸಿದು ಬೀಳತೊಡಗಿತು. ಬಂಡವಾಳಶಾಹಿ ಪಕ್ಷಗಳು ನಿಸ್ಸಹಾಯಕವಾದವು. ಆಳುವ ವರ್ಗದವರು ಸಂಭವಿಸುತ್ತಿರುವ ಅನಾಹುತಗಳನ್ನು ತಡೆಯಲು ಅಸಮರ್ಥರಾದರು. ತಾತ್ಕಾಲಿಕ ಸರಕಾರ ನಿರ್ವೀರ್ಯಗೊಂಡಿತು. ಅನಿವಾರ್ಯವಾಗಿ, ಅಂತಿಮ ಘಟ್ಟದಲ್ಲಿ ಪುಟ್ಟ ಬಂಡವಾಳಶಾಹಿಗಳ ಪಕ್ಷಗಳು ತಮ್ಮ ಕಾರ್ಯಕ್ರಮಗಳು ಜಾರಿಗೊಳ್ಳಲಾರವೆಂದು ಮನಗಂಡು, ಬೊಲ್‌ಶೆವಿಕ್‌ರನ್ನು ಮತ್ತು ಅವರ ವಸ್ತುನಿಷ್ಟ ಕಾರ್ಯಕ್ರಮವನ್ನು ಬೆಂಬಲಿಸಿದರು. ಪೆಟ್ರೋಗ್ರಾಡ್‌ನ ರಸ್ತೆಗಳಲ್ಲಿ ಎರಡು ಜಗತ್ತುಗಳ ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗಗಳ ನಡುವೆ ನೇರ ಸಂಘರ್ಷಗಳು ಪ್ರಾರಂಭಗೊಂಡವು. ನಗರಸಭೆ ಕುಸಿದುಬಿದ್ದಿತು. ಅರಾಜಕತೆ ಉಂಟಾಗಿ ಕೊಲೆ ದರೋಡೆಗಳು ಹೆಚ್ಚಾದವು. ಕಾರ್ಮಿಕರು ನಗರದ ರಸ್ತೆಗಳಲ್ಲಿ ರಾತ್ರಿ ಗಸ್ತು ತಿರುಗುತ್ತಾ ಅಪರಾಧಿಗಳನ್ನು ಮತ್ತು ಕೊಲೆಗಡುಕರನ್ನು ಓಡಿಸುತ್ತಿದ್ದರು. ಅವರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಕ್ರಾಂತಿಸೈನ್ಯಕ್ಕೆ ಜಮಾಯಿಸುತ್ತಿದ್ದರು. ಆಗಲೇ ಕಾರ್ಮಿಕರ, ಸೈನಿಕರ, ರೈತರ ಪ್ರತಿನಿಧಿಗಳ ಸೋವಿಯತ್‌ಗಳ ಅಖಿಲ ರಷ್ಯಾ ಅಧಿವೇಶನ ಪ್ರಾರಂಭವಾಗುವುದಿತ್ತು. ದೇಶದ ಮೂಲೆ ಮೂಲೆಗಳಿಂದ ಬಂದ ಪ್ರತಿನಿಧಿಗಳು ತಮ್ಮ ಹೆಸರುಗಳನ್ನು ನೊಂದಾಯಿಸಬೇಕಾಗಿತ್ತು. ಕೆರೆನ್‌ಸ್ಕಿ ಸರಕಾರ ಬೊಲ್‌ಶೆವಿಕರ ವಿರುದ್ಧ ಭಾರಿ ಅಪಪ್ರಚಾರ ನಡೆಸುತ್ತಲೇ ಇತ್ತು. ತನ್ನ ಉಳಿವಿಗೆ ಏನೂ ಧಕ್ಕೆ ಆಗಲಾರದೆಂಬ ಭ್ರಮೆಯಲ್ಲಿತ್ತು. ಅಕ್ಟೋಬರ್ ೨೩ರ ರಾತ್ರಿ ‘ರಾಬೊಚಿ’(ಪ್ರಾವ್ಡಾದ ಇನ್ನೊಂದು ಹೆಸರು) ಪತ್ರಿಕಾ ಕಾರ್ಯಾಲಯಕ್ಕೆ ತನ್ನ ಸೈನಿಕರನ್ನು ನುಗ್ಗಿಸಿ ಮರುದಿನ ಪತ್ರಿಕೆ ಪ್ರಕಟವಾಗದಂತೆ ವಿಫಲ ಪ್ರಯತ್ನ ಮಾಡಲಾಯಿತು. ತಾತ್ಕಾಲಿಕ ಸರಕಾರದ ಸೇನೆ ಪೆಟ್ರೋಗ್ರಾಡ್‌ಗೆ ಬರದಿರುವಂತೆ ತಡೆಯಲು ಕ್ರಾಂತಿಕಾರಿಗಳನ್ನು ಸಜ್ಜುಗೊಳಿಸಿದರು. ತಾತ್ಕಾಲಿಕ ಸರಕಾರವು ಸೇತುವೆಗಳನ್ನು ಉರುಳಿಸಲು ಪ್ರಯತ್ನಿಸಿತು. ಆದರೆ, ಕೆಂಪು ಸೇನೆ ಅವುಗಳನ್ನು ರಕ್ಷಿಸಿತು. ಕ್ರಾಂತಿಯ ಕೇಂದ್ರಾಲಯ ಇದ್ದ ಸ್ಮೊಲ್ನಿ ಸಂಸ್ಥೆಯ ಬಳಿ ಕ್ರಾಂತಿಕಾರಿ ಸೇನೆಗಳು ಬೃಹತ್ ಪ್ರಮಾಣದಲ್ಲಿ ಜಮಾಯಿಸತೊಡಗಿದವು.

ಅಕ್ಟೋಬರ್ ೨೪ರ ಸಂಜೆ ತಲೆಮರೆಸಿಕೊಂಡಿದ್ದ ಲೆನಿನ್ ಮತ್ತೆ ನೇರವಾಗಿ ಕ್ರಾಂತಿಯ ನಾಯಕತ್ವ ವಹಿಸಲು ಬಹಿರಂಗವಾಗಿ ಹೊರಬಂದರು. ಬೊಲ್‌ಶೆವಿಕ್ ಪಕ್ಷದ ಕೇಂದ್ರ ಸಮಿತಿಗೆ ಆ ದಿನ ಬರೆದ ಪತ್ರದಲ್ಲಿ ಬಂಡಾಯಕ್ಕೆ ಸಮಯಪಕ್ವವಾಗಿದೆ. ಇನ್ನು ತಡಮಾಡ ಬಾರದು, ಅಖಿಲ ರಷ್ಯಾ ಸೋವಿಯತ್‌ಗಳ ೧ನೇ ಅಧಿವೇಶನಕ್ಕಾಗಿ ಕಾಯುವ ಅಗತ್ಯ ಇಲ್ಲ ಎಂದರು. ಅಧಿವೇಶನದ ಮರುದಿನ ೨೫ರಂದು ಪ್ರಾರಂಭವಾಗುವಾಗಲೇ ಬಂಡಾಯದ ಕಾರ್ಯಾಚರಣೆ ಮಾಡಬೇಕೆಂದೂ ಅಧಿಕಾರ ತಮ್ಮ ಕೈಗೆ ಬಂದಿದೆ ಎಂದು ಅಧಿವೇಶನ ದಲ್ಲಿಯೇ ಘೋಷಿಸಬಹುದು ಎಂದೂ ತಿಳಿಸಿದರು. ಕೆಲವರು ಕ್ರಾಂತಿ ಯಾವಾಗ ನಡೆಯಬೇಕು ಎಂದು ಅಧಿವೇಶನದಲ್ಲಿಯೇ ಚರ್ಚಿಸಿ ನಿರ್ಧರಿಸಲು ಬಯಸಿದ್ದರು. ಹಾಗಾಗಿದ್ದರೆ, ಕೆರೆನ್‌ಸ್ಕಿ ಸರಕಾರಕ್ಕೆ ಬಂಡಾಯದ ಕುರಿತು ಮುನ್ಸೂಚನೆ ನೀಡಿದಂತಹ ಪ್ರಮಾದವಾದೀತೆಂದೂ, ತಡ ಮಾಡಿದರೆ ಕ್ರಾಂತಿಯ ಉದ್ದೇಶವೇ ವಿಫಲವಾದೀತೆಂದೂ, ತಾತ್ಕಾಲಿಕ ಸರಕಾರಕ್ಕೆ ಒಂದು ಹೊಡೆತ ಕೊಟ್ಟರೆ ಅದು ಕುಸಿದು ಬೀಳುವುದೆಂದೂ ಲೆನಿನ್ ದೃಢ ವಿಶ್ವಾಸ ಹೊಂದಿದ್ದರು.

ಅಕ್ಟೋಬರ್ ೨೫ರಂದು ೧.೨೫ಗಂಟೆಯಿಂದ, ಅಂದರೆ ಮಧ್ಯರಾತ್ರಿಯಿಂದ ಬಂಡಾಯ ಕಾರ್ಯಾಚರಣೆ ಪ್ರಾರಂಭವಾಯಿತು. ನಿಮಿಷ-ನಿಮಿಷಗಳಲ್ಲಿ ಬೆಳಿಗ್ಗೆ ೮ ಗಂಟೆಯ ಒಳಗಾಗಿ ಪೂರ್ವ ಯೋಜನೆಯಂತೆ ಅಂಚೆಯ ಕೇಂದ್ರ ಕಛೇರಿ, ರೈಲ್ವೆ ಸ್ಟೇಶನ್, ವಿದ್ಯುತ್ ಸ್ಟೇಶನ್, ಸ್ಟೇಟ್ ಬ್ಯಾಂಕ್, ಕೇಂದ್ರ ಟೆಲಿಫೋನ್ ವಿನಿಮಯ ಕಛೇರಿ ಇತ್ಯಾದಿ ಗಳು ಸೇರಿದಂತೆ ಇಡೀ ಪೆಟ್ರೋಗ್ರಾಡ್ ನಗರ ಕ್ರಾಂತಿಕಾರಿಗಳ ಕೈವಶವಾಯಿತು. ೨೫ರ ಮುಂಜಾನೆ ಕ್ರೂಯಿಸರ್ ಯುದ್ಧ ಹಡಗಿನಿಂದ ತಾತ್ಕಾಲಿಕ ಸರಕಾರದ ಚಳಿಗಾಲದ ಅರಮನೆಗೆ ಒಂದೇ ಒಂದು ಹುಸಿ ಗುಂಡನ್ನು ಹಾರಿಸಲಾಯಿತು. ಕ್ರಾಂತಿಕಾರಿಗಳು ಮನಸ್ಸು ಮಾಡಿದ್ದರೆ ಅರಮನೆಯನ್ನು ಮತ್ತು ಅಲ್ಲಿದ್ದವರನ್ನೆಲ್ಲಾ ಸುಟ್ಟು ಬೂದಿ ಮಾಡಬಹುದಿತ್ತು. ಆದರೆ, ಅದು ಅವರ ಉದ್ದೇಶವಾಗಿರಲಿಲ್ಲ. ಪ್ರತಿಕ್ರಾಂತಿಕಾರಿಗಳ ಅಧಿಕಾರವನ್ನು ಸ್ತಬ್ಧಗೊಳಿಸುವುದಷ್ಟೆ ಅವರ ಗುರಿಯಾಗಿತ್ತು. ೨೫ರ ಮುಂಜಾನೆ ಲೆನಿನ್ ‘‘ರಷ್ಯಾದ ನಾಗರಿಕರಿಗೆ ಒಂದು ಮನವಿ’’ ಪ್ರಕಟಿಸಿದರು. ಅದನ್ನು ಕ್ರಾಂತಿಕಾರಿ ಮಿಲಿಟರಿ ಕೇಂದ್ರ ಸಮಿತಿ ಅಂಗೀಕರಿಸಿತು. ಅದರಲ್ಲಿ ‘‘ನಡುಗಾಲ ಸರಕಾರವನ್ನು ಪದಚ್ಯುತಗೊಳಿಸಲಾಗಿದೆ. ಜನರ ಕೈಗೆ-ಕಾರ್ಮಿಕರಿಗೆ ಮತ್ತು ರೈತರಿಗೆ ಅಧಿಕಾರ ಬಂದಿದೆ. ಯಾವ ಉದ್ದೇಶಕ್ಕಾಗಿ ಜನರು ದೀರ್ಘಕಾಲದಿಂದ ಹೋರಾಡುತ್ತಿದ್ದರೋ ಅದು ಸಫಲವಾಗಿದೆ. ಕ್ರಾಂತಿ ಚಿರಾಯುವಾಗಲಿ’’ ಎಂದು ಬರೆದಿದ್ದರು. ೨೬ ರಂದು ಬೆಳಿಗ್ಗೆ ೨.೧೦ ಗಂಟೆಗೆ ತಾತ್ಕಾಲಿಕ ಸರಕಾರದ ಮಂತ್ರಿಗಳನ್ನು ದಸ್ತಗಿರಿ ಮಾಡಲಾಯಿತು. ಅರಮನೆಯಲ್ಲಿ ಅಧಿಕಾರಿಗಳನ್ನು ಮತ್ತು ಸೈನಿಕರನ್ನು ನಿಶ್ಯಸ್ತ್ರೀಕರಿಸಿ ಬಿಟ್ಟುಬಿಡಲಾಯಿತು. ಪ್ರಧಾನಿ ಕೆರೆನ್‌ಸ್ಕಿ ಹೆಣ್ಣುವೇಷ ಧರಿಸಿ ತಲೆತಪ್ಪಿಸಿಕೊಂಡು ಹೋದರು. ಇದು ಕ್ರಾಂತಿಯ ವಿಜಯದ ಪ್ರಾರಂಭ.

ಸಶಸ್ತ್ರ ಬಂಡಾಯ ತುತ್ತತುದಿಯಲ್ಲಿರುವಾಗ, ಸೋವಿಯತ್‌ಗಳ ಅಧಿವೇಶನ ೨೫ರ ರಾತ್ರಿಯಿಂದ ೨೭ರ ಬೆಳಗಿನವರೆಗೆ ನಡೆಯಿತು. ಅಧಿವೇಶನದಲ್ಲಿ ಜಗತ್ತಿನ ಮೊತ್ತಮೊದಲ ಕಾರ್ಮಿಕರ ಮತ್ತು ರೈತರ ಸರಕಾರವನ್ನು ರಚಿಸಲಾಯಿತು. ಜನರ ಕಮಿಸಾರರ ಮಂಡಳಿ ಯನ್ನು ಸ್ಥಾಪಿಸಲಾಯಿತು. ಲೆನಿನ್ ನೂತನ ಸರಕಾರದ ಮುಖ್ಯಸ್ಥರಾಗಿ ಆಯ್ಕೆಗೊಂಡರು. ಜನರ ಕಮಿಸಾರರ ಮಂಡಳಿಯ ನಿಯಂತ್ರಣ ಮತ್ತು ಅವರನ್ನು ಬದಲಾಯಿಸುವ ಹಕ್ಕು ಅಖಿಲ ರಷ್ಯಾ ಕಾರ್ಮಿಕರ, ರೈತರ, ಸೈನಿಕರ ಸೋವಿಯತ್‌ಗಳ ಪ್ರತಿನಿಧಿಗಳಿಗೆ ಮತ್ತು ಅದರ ಕೇಂದ್ರ ಸಮಿತಿಗೆ ಪರಮಾಧಿಕಾರ ನೀಡಲಾಯಿತು. ಮುಂದೆ ಸೋವಿಯತ್ ಜನರು ತಮ್ಮನ್ನು ತಾವೇ ಆಳಿಕೊಳ್ಳುವಂತಹ ಸಮಾಜವಾದಿ ಪ್ರಜಾಪ್ರಭುತ್ವದ ಕಾರ್ಯಾಚರಣೆ ಪ್ರಾರಂಭವಾಯಿತು. ೨೭ರಂದೇ ಶಾಂತಿ ಕುರಿತು, ಭೂ ಸಂಬಂಧದ ಬದಲಾವಣೆ ಕುರಿತು, ಕೈಗಾರಿಕೆಗಳ ರಾಷ್ಟ್ರೀಕರಣ ಕುರಿತು ಹಲವು ಆದೇಶಗಳನ್ನು ಘೋಷಿಸಲಾಯಿತು. ನೂರಾರು ವರ್ಷಗಳ ಝಾರ ಆಳ್ವಿಕೆಯಲ್ಲಿ ಮತ್ತು ಅಲ್ಪಕಾಲದ ತಾತ್ಕಾಲಿಕ ಸರಕಾರದ ಆಳ್ವಿಕೆಯಲ್ಲಿ ಮಾಡಲಾಗದಿದ್ದುದನ್ನು, ಸೋವಿಯತ್ ಸರಕಾರ ಒಂದೇ ದಿನದಲ್ಲಿ ನೆರವೇರಿಸಿತು.

ಝಾರನ ಕಾಲದಲ್ಲಿ ಸಂಸತ್ತಿನ ೪೦೦ ಸದಸ್ಯರಲ್ಲಿ ಕೇವಲ ೧೦-೧೨ ಕಾರ್ಮಿಕರ ಪ್ರತಿನಿಧಿಗಳಿದ್ದರು. ರೈತರ ಪ್ರತಿನಿಧಿಗಳು ಇನ್ನೂ ಕಡಿಮೆ. ಹೊಸ ಸರಕಾರದಲ್ಲಿ ಎಲ್ಲಾ ಸ್ಥಾನಗಳೂ ಕಾರ್ಮಿಕರ ಮತ್ತು ರೈತರ ಪ್ರತಿನಿಧಿಗಳಿಗೆ ದೊರೆಯಿತು. ಶೋಷಕರು-ಸ್ವಂತ ದುಡಿಮೆ ಇಲ್ಲದೇ ಆದಾಯ ಉಳ್ಳವರು ದೇಶದ ಶೇ.೨ರಷ್ಟೇ ಇದ್ದು ಅವರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಯಿತು. ಆದರೆ, ಶೇ.೯೦ರಷ್ಟಿರುವ ಕಾರ್ಮಿಕರಿಗೆ ಮತ್ತು ರೈತರಿಗೆ ಮತದಾನದ ಹಕ್ಕನ್ನು ನೀಡಲಾಯಿತು. ಕಾಲಕ್ರಮೇಣ ಹಿಂದಿನ ಆಳ್ವಿಕೆಯ ಕಾಲದ ಬುದ್ದಿಜೀವಿಗಳು, ಅಧಿಕಾರಿಗಳು, ಮಿಲಿಟರಿ ತಜ್ಞರು, ಮಾಜಿ ಬಂಡವಾಳಶಾಹಿಗಳು ಹೊಸ ಪ್ರಭುತ್ವದ ನೆರವಿಗೆ ಬಂದರು. ಇವೆಲ್ಲವುಗಳಿಂದ ಸೋವಿಯತ್ ಪ್ರಭುತ್ವ ಜನರ-ಕಾರ್ಮಿಕರ ಮತ್ತು ರೈತರ ಪ್ರಭುತ್ವ ಎಂದು ಜನರಿಗೆ ವಿಶ್ವಾಸ ಬಂದಿತು. ಆದುದರಿಂದಲೇ ಮುಂದಿನ ದಿನಗಳಲ್ಲಿ ಕ್ರಾಂತಿಯ ರಕ್ಷಣೆಗೆ ಅವರು ಕಂಕಣಬದ್ಧರಾದರು.

೧೯೧೭ರ ನವೆಂಬರ್ ೨ ರಂದು ಸೋವಿಯತ್ ಸರಕಾರ ರಷ್ಯಾದ ಜನರ ಹಕ್ಕುಗಳ ಬಗ್ಗೆ ಘೋಷಿಸಿತು. ರಾಷ್ಟ್ರೀಯತೆಗಳ ಪ್ರಶ್ನೆಯನ್ನು ಪರಿಹರಿಸಲು ಮುಖ್ಯ ಸೂತ್ರಗಳನ್ನು ಘೋಷಿಸಿತು. ಇವುಗಳ ಮುಖ್ಯಾಂಶಗಳು :

೧. ರಷ್ಯಾದ ಎಲ್ಲಾ ಜನರಿಗೆ ಸಮಾನತೆ ಮತ್ತು ಸಾರ್ವಭೌಮತೆ.

೨. ರಷ್ಯಾದಲ್ಲಿ ನೆಲೆ ನಿಂತಿರುವ ರಾಷ್ಟ್ರೀಯ ಅಲ್ಪಸಂಖ್ಯಾತರ ಮತ್ತು ಜನಾಂಗೀಯ ಗುಂಪುಗಳಿಗೆ ಅಭಿವೃದ್ದಿಗೆ ಮುಕ್ತ ಅವಕಾಶ.

೩. ರಷ್ಯಾದ ದೂರ ಪ್ರಾಚ್ಯದ ಎಲ್ಲಾ ದುಡಿಯುವ ಮುಸ್ಲಿಂಗೆ ಅವರ ರಾಷ್ಟ್ರೀಯತೆಯ, ಸಾಂಸ್ಕೃತಿಕ ಸಂಸ್ಥೆಗಳ, ಸಂಪ್ರದಾಯಗಳ, ನಂಬಿಕೆಗಳ ಸ್ವಾತಂತ್ರ್ಯ. ಅವುಗಳನ್ನು ಯಾರೂ ಬದಲು ಮಾಡಲಾರರೆಂದು ಆಶ್ವಾಸನೆ. ತಮ್ಮ ಬದುಕನ್ನು ಸಾಗಿಸಲು ಅವರಿಗೆ ಸಂಪೂರ್ಣ ಸ್ವಾತಂತ್ರ್ಯ.

೪. ರಾಷ್ಟ್ರೀಯ, ಧಾರ್ಮಿಕ ವಿಶೇಷ ಸವಲತ್ತುಗಳಿಗೆ ಮತ್ತು ಅಡೆತಡೆಗಳಿಗೆ ನಿಷೇಧ.

೫. ರಷ್ಯಾದ ಯಾವುದೇ ಪ್ರದೇಶದ ಜನರಿಗೆ ಸ್ವಯಂ ನಿರ್ಧಾರದ ಹಕ್ಕು. ರಷ್ಯಾದಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗಿ ರೂಪಿಸಿಕೊಳ್ಳಲು ಹಕ್ಕು. ಇದರಿಂದ ೩೧-೧೨-೧೯೧೭ರಂದು ಫಿನ್‌ಲ್ಯಾಂಡ್ ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಯಿತು.

೬. ಶತಮಾನಗಳಿಂದ ತಮ್ಮ ಇತಿಹಾಸ, ಪರಂಪರೆ, ವೀರಕತೆಗಳನ್ನು ಮೌಖಿಕವಾಗಿ ವರ್ಗಾಯಿಸುತ್ತಾ ಬಂದ ಜನರಿಗೆ, ಲಿಪಿ ಇಲ್ಲದೇ ಮತ್ತು ಲಿಖಿತ ಸಾಹಿತ್ಯವಿಲ್ಲದೇ ಇರುವ ಜನರಿಗೆ, ಅವರವರ ಭಾಷೆಗಳಲ್ಲಿ ಹೊಸ ಲಿಪಿಗಳನ್ನು ಒದಗಿಸಿಕೊಟ್ಟು ಶಿಕ್ಷಣ ಸೌಲಭ್ಯಗಳನ್ನು ನೀಡುವುದು. ಅವರು ಮುಂದೆ ಪ್ರತಿಭಾವಂತ ಇಂಜಿನೀಯರುಗಳಾಗಿ, ವೈದ್ಯರಾಗಿ, ಶಿಕ್ಷಕರಾಗಿ, ಬರಹಗಾರರಾಗಿ ಬೆಳೆದು ಬರಲು ಪೂರ್ಣ ಅವಕಾಶ.

೭. ದೊಡ್ಡ ಪ್ರಮಾಣದಲ್ಲಿ ಸಾಕ್ಷರತಾ ಆಂದೋಲನ. ಜನರ ಶಾಲೆಗಳನ್ನು ತೆಗೆದು ಎಲ್ಲರೂ ಉಚಿತವಾಗಿ ತಮ್ಮ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ. ಇದರಲ್ಲಿ ಲೆನಿನ್ ಮೊದಲುಗೊಂಡು ಎಲ್ಲ ಬೊಲ್‌ಶೆವಿಕರಿಗೂ, ಸುಶಿಕ್ಷಿತರಿಗೂ ಸಾಕ್ಷರತಾ ಆಂದೋಲನದಲ್ಲಿ ಪ್ರಮುಖ ಪಾತ್ರ.

ಮುಂದೆ ಈ ಎಲ್ಲಾ ಅಂಶಗಳನ್ನು ಒಳಗೊಂಡು ಅಖಿಲ ರಷ್ಯಾ ಸೋವಿಯತ್‌ಗಳ ೫ನೇ ಅಧಿವೇಶನದಲ್ಲಿ ಒಂದು ಹೊಸ ಸಂವಿಧಾನವನ್ನು ಅಂಗೀಕರಿಸಲಾಯಿತು.