ತುಂಬ ಸಂಕುಚಿತ ಹಾಗು ಸಾಮಾನ್ಯ ಅರ್ಥದಲ್ಲಿ, ‘‘ಸುಧಾರಣೆ’’ ಅಂದರೆ ೧೬ನೆಯ ಶತಮಾನದಲ್ಲಿ ಪಾಶ್ಚಿಮಾತ್ಯ ಚರ್ಚನ್ನು ಇಬ್ಭಾಗ ಮಾಡಿದ ಆಧ್ಯಾತ್ಮಿಕ ಬಿಕ್ಕಟ್ಟಿಗೆ ಕೊಟ್ಟಿರುವ ಹೆಸರಾಗಿರುತ್ತದೆ. ಪುನರುತ್ಥಾನದ ಇತಿಹಾಸಕಾರನಾದ ಜಕೋಬ್ ಬರ್ಕ್‌ಹಾರ್ಟ್ಟ್ ಈ ಸುಧಾರಣಾ ಕಾಲವು ಚರ್ಚನ್ನು ನೆಲಸಮ ಮಾಡಿ ಪೋಪನ ಆಡಳಿತವನ್ನು ಉಳಿಸಿದೆ ಎಂದು ತೀರ್ಮಾನಿಸಿರುತ್ತಾನೆ.

ಸುಧಾರಣೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಸುಧಾರಣೆ ಏಕೆ ಅವಶ್ಯಕವಾಗಿತ್ತು ಮತ್ತು ಯಾವ ವಿಷಯಗಳಿಂದ ಪ್ರೇರಿತವಾಯಿತು ಎಂಬುದನ್ನೂ ಅರ್ಥಮಾಡಿ ಕೊಳ್ಳಬೇಕಾಗುತ್ತದೆ. ಕಾಂಸ್ಟಾಂಟೈನ್‌ನಿಂದ ಡಾಂಟೆಯವರೆಗೆ ಆರಂಭದ ಸುಮಾರು ಸಾವಿರ ವರ್ಷಗಳ ಕಾಲ ಕ್ರೈಸ್ತ ಧರ್ಮ ಮತ್ತು ಚರ್ಚು, ಜನರಿಗೆ ಮತ್ತು ರಾಜ್ಯಗಳಿಗೆ ಧರ್ಮದ ಕೊಡುಗೆಯನ್ನು ನೀಡುತ್ತಾ ಬಂದಿತ್ತು. ತನ್ನ ಅನುಯಾಯಿಗಳು ನೀಡುತ್ತಿದ್ದ ಸಾಂತ್ವನದಿಂದ, ತನ್ನ ಆಚರಣೆಗಳ ಮಾಂತ್ರಿಕತೆಯಿಂದ, ತನ್ನ ಅವಲಂಬಿಗಳ ಉದಾತ್ತ ನೀತಿಗಳಿಂದ, ತನ್ನ ನ್ಯಾಯಾಲಯಗಳ ಉನ್ನತ ತೀರ್ಪುಗಳಿಂದ ರೋಮನ್ ಸಾಮ್ರಾಜ್ಯದ ಅನಂತರದ ಕತ್ತಲ ಯುಗದಲ್ಲಿ ಶಾಂತಿ ಮತ್ತು ಶಿಸ್ತನ್ನು ನೀಡಿದ ಏಕೈಕ ವ್ಯವಸ್ಥೆ ಕ್ರೈಸ್ತ ಧರ್ಮವಾಗಿತ್ತು ಮತ್ತು ತನ್ನ ಔನ್ನತ್ಯದಲ್ಲಿತ್ತು. ಇಟಲಿ, ಗಾಲ್, ಬ್ರಿಟನ್ ಮತ್ತು ಸ್ಪೈಯಿನ್ ರಾಷ್ಟ್ರಗಳಲ್ಲಿ ಅನಾಗರಿಕತೆ ತುಂಬಿ ತುಳುಕುತ್ತಿದ್ದ ಸಮಯದಲ್ಲಿ ಯೂರೋಪ್ ಖಂಡದ ನಾಗರಿಕತೆಯನ್ನು ಉದ್ದೀಪನಗೊಳಿಸಿದ ಕೀರ್ತಿ ಕ್ರೈಸ್ತ ಧರ್ಮಕ್ಕೆ ಸೇರುತ್ತದೆ. ಸುಮಾರು ಸಾವಿರ ವರ್ಷಗಳ ಕಾಲ ಕ್ರೈಸ್ತ ಧರ್ಮವು ಯುರೋಪಿನ ವಿದ್ವಾಂಸರು, ಉಪಾಧ್ಯಾಯರು, ರಾಜತಂತ್ರಜ್ಞರು, ನ್ಯಾಯಾಧೀಶರನ್ನು ತರಬೇತುಗೊಳಿಸಿತ್ತು; ಮಧ್ಯ ಯುಗದ ರಾಜ್ಯಗಳು ಚರ್ಚನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದವು. ಯುರೋಪಿನಲ್ಲಿ ಕತ್ತಲಯುಗ ಕೊನೆಗೊಂಡಾಗ, ವಿಶ್ವವಿದ್ಯಾನಿಲಯಗಳು, ಗೋಥಿಕ್ ಮಾದರಿಯ ಗೋಪುರಾಕಾರದ ಚರ್ಚ್‌ಗಳನ್ನು ನಿರ್ಮಿಸಿ ಸದಾಚಾರ ಮತ್ತು ಬೌದ್ದಿಕತೆಗೆ ಚರ್ಚ್ ಆಶ್ರಯ ನೀಡಿತ್ತು. ಇದೆಲ್ಲಕ್ಕೂ ಮಿಗಿಲಾಗಿ, ಚರ್ಚು ತಾನು ಉತ್ತುಂಗ ಶಿಖರದಲ್ಲಿ ರಾರಾಜಿಸುತ್ತಿದ್ದಾಗ, ಐರೋಪ್ಯ ರಾಷ್ಟ್ರಗಳಿಗೆ ಅಂತರ ರಾಷ್ಟ್ರೀಯ ನೀತಿಗಳನ್ನು, ಸರಕಾರಗಳನ್ನು ಕಲ್ಪಿಸಿಕೊಟ್ಟಿತ್ತು. ಆಧ್ಯಾತ್ಮಿಕ ನಾಯಕತ್ವ ಮತ್ತು ದೈವಿಕ ನೆಲೆಯ ಮೇಲೆ ಚರ್ಚು ತನ್ನನ್ನೇ ಒಂದು ಅಂತರ ರಾಷ್ಟ್ರೀಯ ನ್ಯಾಯಾಲಯ ಎಂದು ಭಾವಿಸಿಕೊಂಡು, ಉಳಿದೆಲ್ಲ ರಾಷ್ಟ್ರಗಳು ನೈತಿಕವಾಗಿ ಅದಕ್ಕೆ ತಲೆಬಾಗುವಂತೆ ಮಾಡಿತ್ತು. ಏಳನೆಯ ಪೋಪ್ ಗ್ರೆಗೋರಿಯು ಕ್ರೈಸ್ತ ಐರೋಪ್ಯ ಗಣರಾಜ್ಯ ಎಂಬ ನೀತಿಯನ್ನು ರಚಿಸಿದ್ದನು. ಇದನ್ನು ಮತ್ತೆ ಚಕ್ರವರ್ತಿ ನಾಲ್ಕನೆಯ ಹೆನ್ರಿ ಮತ್ತು ಫ್ರೆಡರಿಕ್ ಬಾರ್ಬೋಸೊಸ್ಸ್, ಮೂರನೆಯ ಅಲೆಗ್ಸಾಂಡರ್‌ಗಳು ಬಲಪಡಿಸಿದರು. ಅನಂತರ ೧೧೯೮ರಲ್ಲಿ ಮೂರನೆಯ ಪೋಪ್ ಇನ್ನೋಸೆಂಟನು ಏಳನೆಯ ಪೋಪ್ ಗ್ರೆಗೊರಿಯ ಕನಸು ನನಸಾಗುವಂತೆ ಪೋಪ್‌ನ ಅಧಿಕಾರವನ್ನು ಮತ್ತು ಘನತೆಯನ್ನು ಹೆಚ್ಚಿಸಿದನು. ಆದರೆ ಈ ಬೃಹತ್ ಕಲ್ಪನೆ ಮನುಷ್ಯನಲ್ಲಿರುವ ಪ್ರಕೃತಿದತ್ತ ದೌರ್ಬಲ್ಯದಿಂದಾಗಿ ಕ್ರಮೇಣ ಮುರಿದುಬಿತ್ತು. ಶ್ರೀಮಂತ ರಾಷ್ಟ್ರವಾಗಿ ಬೆಳೆಯುತ್ತಿದ್ದ ಫ್ರಾನ್ಸಿನ ದೊರೆ ನಾಲ್ಕನೆಯ ಫಿಲಿಪ್ಪನು ತನ್ನ ದೇಶದ ಚರ್ಚಿನ ಆಸ್ತಿಯ ವಿಷಯದಲ್ಲಿ ಏಳನೆಯ ಬೋನಿಫೇಸ್ ಪೋಪನನ್ನು ಪ್ರಶ್ನಿಸಿದನು. ಪೋಪನನ್ನು ಸೆರೆ ಹಿಡಿದು ಬಂಧಿಸಲಾಗಿ ಮೂರು ದಿನಗಳ ನಂತರ ಸೆರೆಯಲ್ಲಿಯೇ ಪೋಪನು ಮರಣ ಹೊಂದಿದನು. ಹೀಗೆ ದೊರೆಗಳು ಪೋಪ್‌ಗಳ ವಿರುದ್ಧ ಎದ್ದ ದಂಗೆಯ ಫಲವಾಗಿ ಸುಧಾರಣಾ ಯುಗ ಆರಂಭವಾಯಿತು.

ಹದಿನಾಲ್ಕನೆಯ ಶತಮಾನದುದ್ದಕ್ಕೂ ಚರ್ಚು ರಾಜಕೀಯವಾಗಿ ಅವಮಾನವನ್ನು ಅನುಭವಿಸಿ ನೈತಿಕ ಅಧಃಪತನವನ್ನು ಹೊಂದಿತು. ಶ್ರದ್ಧೆ ಮತ್ತು ಭಕ್ತಿಯ ವಿರಾಟ್ ಸ್ವರೂಪದಲ್ಲಿ ಆರಂಭವಾದ ಚರ್ಚು, ಕ್ರಮೇಣ ಕೆಲವೇ ಹಿತಾಸಕ್ತಿಗಳ ಕೈ ಸೇರಿ ವೈಯಕ್ತಿಕ ಲಾಭ ಮತ್ತು ಹಣ ಮಾಡುವವರ ತವರಾಗಿ ಅಧೋಗತಿಗೆ ಇಳಿದಿತ್ತು.

ಸುಮಾರು ಒಂದು ಶತಮಾನದ ಹಿಂದೆಯೇ ಕ್ರಾಂತಿಕಾರಕ ಚಿಂತಕರುಗಳು ‘‘ಕೌನ್ಸಿಲಿಯರ್ ಚಳವಳಿಯ’’ ತಾತ್ವಿಕ ನೆಲೆಯನ್ನು ಸ್ಪಷ್ಟಪಡಿಸಿದ್ದರು. ಅದು ಜಯಗಳಿಸಿರಲಿಲ್ಲ. ಫ್ರಾನ್ಸ್‌ನ ದೊರೆ ಏಳನೆಯ ಚಾರ್ಲ್ಸ್ ಧರ್ಮಾಧಿಕಾರಿಗಳ, ಬುದ್ದಿಜೀವಿಗಳ ಮತ್ತು ವಕೀಲರುಗಳ ಸಭೆಯನ್ನು ಕರೆದನು. ಈ ಸಭೆಯು ಸಾಮಾನ್ಯ ಸಭೆಗಿಂತ ಉನ್ನತಾಧಿಕಾರವಿದೆ ಎಂದು ಸಮರ್ಥಿಸಿ ಕೊಂಡು, ಕೆಲವು ಕಟ್ಟಾಜ್ಞೆಗಳನ್ನು ವಿಧಿಸಿತು(ಬೋರ್ಜಸ್ ಕಟ್ಟಾಜ್ಞೆ ೧೪೩೮). ಧರ್ಮಾಧಿಕಾರಿಗಳನ್ನು ಸ್ಥಳೀಯ ಪುರೋಹಿತರುಗಳು ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಮತ್ತು ಈ ಬಗ್ಗೆ ರಾಜನೂ ಕೂಡ ಶಿಫಾರಸ್ಸು ನೀಡಬಹು ದಾಗಿದೆ. ಈ ಕಟ್ಟಾಜ್ಞೆಯ ಪರಿಣಾಮದಿಂದಾಗಿ ಗ್ಯಾಲಿಕನ್ ಚರ್ಚು ಹುಟ್ಟಿಕೊಂಡಿತು ಮತ್ತು ರಾಜನನ್ನು ಸ್ವತಂತ್ರನನ್ನಾಗಿ ಮತ್ತು ಪ್ರಮುಖನನ್ನಾಗಿ ಮಾಡಿತು. ಜರ್ಮನಿ ಮತ್ತು ಬೊಹೆಮಿದ್ ಈ ನಿಯಮವನ್ನೇ ಅನುಸರಿಸಿದವು. ಆದ್ದರಿಂದಾಗಿ ರೋಮನ್ ಚರ್ಚಿನ ಅಡಿಪಾಯವೇ ಮುರಿದು ಬಿದ್ದಂತಾಯಿತು.

ಪುನರುತ್ಥಾನದ ಕಾಲದ ಪೋಪ್‌ಗಳು ತುಂಬ ಧರ್ಮಶ್ರದ್ಧೆಯುಳ್ಳವರಾಗಿದ್ದರು. ಅಲ್ಲದೆ, ಪ್ರಪಂಚ ಬಹುತೇಕ ಜನರಿಗೆ ದುಃಖದ ನೆಲೆಯಾಗಿದ್ದರೂ, ದೆವ್ವದ ತವರಾಗಿ ದ್ದರೂ, ಅದು ಸುಂದರವಾಗಿಯೂ ಇದೆ, ಬದುಕಿಗೆ ಸಂತೋಷವನ್ನು ನೀಡುವಂತದ್ದಾಗಿದೆ ಎಂಬ ಪುನರುತ್ಥಾನದ ಚಿಂತನೆಯಲ್ಲಿ ನಂಬಿಕೆಯಿಟ್ಟಿದ್ದರಿಂದ ತಮ್ಮ ಧರ್ಮಾಧಿಕಾರವನ್ನು ಅತ್ಯಾನಂದದಿಂದ, ಸಂತೋಷದಿಂದ, ಐಷಾರಾಮವಾಗಿ ಕಳೆಯುವುದನ್ನು ಅಪರಾಧವೆಂದು ಭಾವಿಸಿರಲಿಲ್ಲ. ಈ ನೀತಿಯಿಂದಾಗಿ ಪೋಪ್‌ನ ಸ್ಥಾನವನ್ನು ಅಧಿಕಾರದ ಉತ್ತುಂಗ ಶಿಖರಕ್ಕೆ ಏರಿಸಿದ್ದರು. ಅದು ಕ್ರಮೇಣ ಜನರ ಕೋಪಕ್ಕೆ ಗುರಿಯಾಗಿ ಅನಾಥವಾಗಿತ್ತು.

ಚರ್ಚು ಮತ್ತೆ ತನ್ನ ಭವ್ಯತೆಯನ್ನು, ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿತಾದರೂ ಯುರೋಪಿನಲ್ಲಿ ಆಗುತ್ತಿದ್ದ ರಾಜಕೀಯ, ಆರ್ಥಿಕ ಮತ್ತು ಬೌದ್ದಿಕ ಬದಲಾವಣೆಗಳು ನಿಧಾನವಾಗಿ ಲ್ಯಾಟಿನ್ ಕ್ರೈಸ್ತ ಧರ್ಮದ ವ್ಯವಸ್ಥೆಯನ್ನು ಕಡೆಗಣಿಸಿದವು. ಜ್ಞಾನಾರ್ಜನೆಯ ಕೇಂದ್ರ ಬಿಂದುವಾಗಿದ್ದ ಚರ್ಚು ತಾನೇ ಸೃಷ್ಟಿಸಿದ ಬೌದ್ದಿಕ ವಾತಾವರಣ ಅದರ ಘನತೆಗೆ ಧಕ್ಕೆ ತರುತ್ತಿತ್ತು. ತಾನೇ ಸೃಷ್ಟಿಸಿದ ಅಲ್ಪ ಸಂಖ್ಯೆಯ ವಿದ್ಯಾವಂತರ ಚಿಂತನೆಗಳು ಚರ್ಚಿಗೆ ಸಂತೋಷ ನೀಡುವಂತಿರಲಿಲ್ಲ. ಧರ್ಮ ಶ್ರದ್ಧೆಯಿಲ್ಲದ ಒಂದೇ ವರ್ಗ ಎಂದು ಹೇಳಬಹುದಾದರೆ ಅದು ವರ್ತಕರುಗಳ ವರ್ಗವಾಗಿತ್ತು. ಏಕೆಂದರೆ ಐಶ್ವರ್ಯ ಎಲ್ಲಿ ಹೆಚ್ಚಾಗುತ್ತೋ ಅಲ್ಲಿ ಧರ್ಮಶ್ರದ್ಧೆ ಕಡಿಮೆಯಾಗುತ್ತದೆ. ಚರ್ಚು ಯುರೋಪಿನಲ್ಲಿ ಅದ್ಭುತವನ್ನು ಸ್ಥಾಪಿಸಿತು. ಆದರೆ ತನ್ನ ಧರ್ಮಯುದ್ಧದಲ್ಲಿ ಕಾನ್‌ಸ್ಟಾಂಟಿನೋಪಲನ್ನು ತುರ್ಕಿಗಳಿಗೆ ಸೋತ ನಂತರ ಅದರ ಘನತೆ ಕ್ಷೀಣಿಸಿತ್ತು. ಕ್ರೈಸ್ತ ದೇವರುಗಳಿದ್ದೂ ಈ ಸೋಲು ಹೇಗೆ ಉಂಟಾಯಿತು ಎಂಬ ಹೊಸ ಪ್ರಶ್ನೆಗೆ ಎಡೆಮಾಡಿ ಕೊಟ್ಟಿತು; ಅರ್ಥಾತ್, ಕ್ರಿಸ್ತ ದೇವರುಗಳಿದ್ದರೆ ಸೋಲುಂಟಾಗುತ್ತಿರಲಿಲ್ಲ; ದೇವರಿಲ್ಲ, ಜಯವೂ ಇಲ್ಲ. ಪುರಾತನ ಕಾಲದ ಪುಸ್ತಕಗಳು ಶೋಧವಾದುವು, ನಂತರ ಪ್ರಕಟವಾದುವು. ಇದರಿಂದಾಗಿ ಕ್ರೈಸ್ತ ಜಗತ್ತಿಗೆ ಮೊದಲೇ ತಿಳಿದಿದ್ದ ಜ್ಞಾನ ಪ್ರಪಂಚವೊಂದು ಜಗತ್ತಿನ ಬೆಳಕನ್ನು ಕಂಡಿತು. ಪರಿಣಾಮವಾಗಿ ಕ್ರೈಸ್ತ ಧರ್ಮದ ಬಗ್ಗೆ ಅಪನಂಬಿಕೆ ಮೂಡಲಾರಂಭಿಸಿತು.

ಮಾರ್ಟಿನ್ ಲೂಥರನಿಗಿಂತ ನಾಲ್ಕು ವರ್ಷ ಮುಂಚೆಯೇ ಮ್ಯಾಕಿವೆಲ್ಲಿ ಎಂಬುವವನು ‘‘ಜನರು ರೋಮನ್ ಚರ್ಚಿಗೆ, ಧರ್ಮದ ಮುಖಂಡನಿಗೆ ಸನಿಹವಿದ್ದಷ್ಟೂ ಅವರಲ್ಲಿ ಧಾರ್ಮಿಕತೆ ಕಡಿಮೆಯಾಗುತ್ತದೆ’’ ಎಂದು ಭವಿಷ್ಯ ನುಡಿದಿದ್ದನು.

ಚರ್ಚಿನಲ್ಲಿರುವ ಎಲ್ಲರೂ ಹಣವನ್ನು ಪ್ರೀತಿಸುತ್ತಿದ್ದರು. ೧೩ನೆಯ ಶತಮಾನದಲ್ಲಿ ಫ್ರಾನ್ಸಿಸ್ಕನ್ನರು, ಡೊಮೆನಿಕನ್ನರು, ಕಾರ್ಮೆಲೈಟರು, ಅಗಸ್ಟಿನಿಯನ್ನರು ಎಂಬ ನಾಲ್ಕು ಪ್ರಕಾರವಾದ ಧರ್ಮಭಿಕ್ಷುಗಳು ಹುಟ್ಟಿಕೊಂಡರು. ಇವರಲ್ಲಿ ಅಗಸ್ಟಿಯನ್ನರನ್ನು ಬಿಟ್ಟರೆ ಉಳಿದ ಪಂಥದವರೆಲ್ಲ ಧರ್ಮಶ್ರದ್ಧೆಯ ಹೆಸರಿನಲ್ಲಿ ಅಪರಾಧವನ್ನೇ ಎಸಗುತ್ತಿದ್ದರು.

ಲ್ಯಾಟಿನ್ ಕ್ರೈಸ್ತ ಜಗತ್ತಿನ ಉದ್ದಗಲಕ್ಕೆ ಚರ್ಚಿನ ಮುಖ್ಯಸ್ಥನಿಂದ ಹಿಡಿದು ಕೆಳಗಿನ ಅಧಿಕಾರಿಯವರೆಗೆ ಸುಧಾರಣೆಯಾಗಬೇಕೆಂದು ಸಾರ್ವಜನಿಕರು ದನಿ ಎತ್ತಿದರು. ಭಾವಾತೀತರಾದ ಇಟಲಿಯನ್ನರಲ್ಲಿ ಬ್ರೆಸ್ಸಿಯಾನದ ಆರ್ನಾಲ್ಡ್, [flwo]ೀರ್‌ನ ಜೋಚಿನ್, ಫ್ರಾನ್ಸ್‌ನ ಸವೋನರೋಲ ಎಂಬುವವರು ಈ ದಿಸೆಯಲ್ಲಿ ಕೆಲಸ ಮಾಡಿದರು. ಆದರೆ ಇವರಲ್ಲಿ ಇಬ್ಬರು ಬೆಂಕಿಗೆ ಆಹುತಿಯಾಗಬೇಕಾಯಿತು. ಸಾಮಾನ್ಯ ಸಭೆಗಳು ಚರ್ಚನ್ನು ಸುಧಾರಿಸಲು ಪ್ರಯತ್ನಪಟ್ಟವು. ಆದರೆ ಅಧಿಕಾರ ವ್ಯವಸ್ಥೆ ಮತ್ತು ಕಾರ್ಡಿನಲ್‌ಗಳು ಇವುಗಳನ್ನು ಮೆಟ್ಟಿಹಾಕಿದರು. ಜೀವನದ ಎಲ್ಲಾ ರಂಗದಲ್ಲೂ ಚರ್ಚಿನ ವಿರೋಧವನ್ನು ಕಾಣಬಹುದಿತ್ತು. ಸಾಹಿತ್ಯದಲ್ಲಂತೂ ತುಂಬಿ ತುಳುಕುತ್ತಿತ್ತು. ಇದು ದಿನ ಕಳೆದಂತೆ ಗಹನವಾಗಿ ಬೆಳೆದು, ಒಂದು ದಿನ ಚರ್ಚಿನ ಮೇಲಿನ ಗೌರವದ ಕಟ್ಟೆಯೊಡೆದು, ಸಂಪ್ರದಾಯ ಒಮ್ಮೆಗೆ ಸಿಡಿದು, ಯುರೋಪಿನ ಉದ್ದಗಲದಲ್ಲಿ, ಆಧುನಿಕ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡಿರದಂತಹ ಭಯಾನಕವಾದ ಧರ್ಮಕ್ರಾಂತಿಯೊಂದು ಹುಟ್ಟಿ ಯೂರೋಪನ್ನು ಪೂರ್ಣವಾಗಿ ವ್ಯಾಪಿಸಿತು.

ಹೀಗೆ ಸುಧಾರಣೆ ಮತ್ತು ಅಭಿವೃದ್ದಿ ಎರಡೂ ಭಿನ್ನ ಹಂತಗಳಲ್ಲಿ ನಡೆಯಿತು. ಒಂದನೆಯದಾಗಿ, ವ್ಯಕ್ತಿಗಳ ಶ್ರಮದಿಂದ, ಧಾರ್ಮಿಕ ಮಠಗಳ ಅನುಯಾಯಿಗಳಿಂದ  ಮತ್ತು ಸಾಮಾನ್ಯ ಸಭೆಗಳಿಂದ. ಎರಡನೆಯದಾಗಿ, ರೋಮನ್ ಕ್ಯಾಥೋಲಿಕ್ ಚರ್ಚಿ ನಿಂದ ಹೊರಬಂದ ಹೊಸ ಸಂಸ್ಥೆಗಳನ್ನು ಕಟ್ಟುವುದರ ಮೂಲಕ. ಉದಾ : ಅಲ್ಬಿಜೆನ್ಸರು ಮತ್ತು ವಾಲ್ಡನ್ನರು. ಆರಂಭದಲ್ಲಿ ಈ ಆತಂಕಕಾರಿ ಸಂಸ್ಥೆಗಳು ಹೆಚ್ಚು ಪರಿಣಾಮ ಕಾರಿಯಾಗಿರಲಿಲ್ಲ. ಏಕೆಂದರೆ ಇವು ಬಹು ಕಡಿಮೆ ಸಂಖ್ಯೆಯಲ್ಲಿ ಕ್ರೈಸ್ತರ ಮೇಲೆ ಪ್ರಭಾವ ಬೀರಿದ್ದವು. ೧೫ನೆಯ ಶತಮಾನ ಮುಗಿಯುತ್ತಾ ಬಂದಿತ್ತು. ಆದರೆ ಈ ಮೇಲಿನ ಸಂಸ್ಥೆಗಳಿಗೆ ಹೇಳಿಕೊಳ್ಳಬಹುದಾದಂತಹ ಯಶಸ್ಸು ಬಂದಿರಲಿಲ್ಲ. ಹೊಸದಾಗಿ ಬಂದ ಎಲ್ಲಾ ಪೋಪ್‌ಗಳು ಜ್ಞಾನಾರ್ಜನೆಗೆ ಮತ್ತು ಇಟಲಿಯ ರಾಜಕೀಯಕ್ಕೆ ಹೆಚ್ಚು ಗಮನ ಹರಿಸಿದ್ದರೆ ವಿನಃ ಚರ್ಚನ್ನು ಸುಧಾರಿಸಲು ಪ್ರಯತ್ನಪಡಲಿಲ್ಲ. ರೋಮನ್ ಕ್ಯಾಥೋಲಿಕ್ ಚರ್ಚಿನಲ್ಲಿ ಸುಧಾರಣೆ ಆಗಬೇಕೆಂದು ಬಯಸಿ, ಕ್ರಮೇಣ ಅದು ಸಾಧ್ಯವಿಲ್ಲದ ಕೆಲಸ ಎಂದು ತಿಳಿದು ಸುಮಾರಷ್ಟು ನಾಯಕರುಗಳು ಸಂಘಟಿತ ರೋಮನ್ ಕ್ಯಾಥೋಲಿಕ್ ಪಂಥದಿಂದ ಹೊರಬಂದಿದ್ದರು.

ಸುಧಾರಣೆಯನ್ನು ವಿಭಿನ್ನವಾಗಿ ಚರ್ಚಿಸಿದ್ದಾರೆ ಮತ್ತು ಅವಲೋಕಿಸಿದ್ದಾರೆ. ಇತಿಹಾಸ ಕಾರರು ಸಣ್ಣ ಪುಟ್ಟ ಘಟನೆಗಳನ್ನು, ಬದಲಾವಣೆಗಳನ್ನು ಬಳಸಿ ಬೃಹತ್ತಾದ ಚಳವಳಿಯ ಪರಿಣಾಮವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ಈ ಮಾರ್ಗವನ್ನು ಕೊಲೂಗೇಟರಿ ವಿಧಾನ ಎಂದು ಕರೆದಿದ್ದಾರೆ. ರೋಮನ್ ಕ್ಯಾಥೋಲಿಕ್ ಧರ್ಮದಲ್ಲಿ ಒಡಕು ಮೂಡಿತು; ಧರ್ಮಾತೀತ ಶಕ್ತಿಗಳು ಚರ್ಚಿನ ಮೇಲೆ ಅಧಿಕಾರ ಸ್ಥಾಪಿಸಿದುವು; ಕ್ಯಾಥೋಲಿಕ್ ಮಠಗಳ ಮತ್ತು ಭಜನಾ ಕೇಂದ್ರಗಳ ದಮನವಾಯಿತು; ಕ್ಯಾಥೋಲಿಕ್ ಪೂಜೆ, ಪುರೋಹಿತ ವರ್ಗ(Clergy) ಮತ್ತು ಸಾಮಾನ್ಯ ಜನರ ಕ್ರೈಸ್ತ ಬಂಡಾಯದ ಪಂಥವೊಂದು ಶುರುವಾಯಿತು.

ಸುಧಾರಣೆ ಜರ್ಮನಿಯಲ್ಲಿ ಮೊದಲು ಆರಂಭವಾಯಿತು. ಆದ್ದರಿಂದ ಜರ್ಮನ್ನರು ಇದನ್ನು ‘ಅಂತರಾಳದಿಂದ ಉಕ್ಕಿ ಬಂದ ಕುದಿ’ ಎಂದು ವರ್ಣಿಸಿಕೊಂಡಿದ್ದಾರೆ; ಉಳಿದವರಿಗೂ ಅಂತರಂಗವಿರುತ್ತದೆ ಎನ್ನುವುದನ್ನು ಅವರು ಮರೆಯಬಾರದಷ್ಟೆ. ಮತ್ತೊಂದು ಇತಿಹಾಸಕಾರರ ಗುಂಪು ಜನಾಂಗೀಯ ಮತ್ತು ಭೌಗೋಳಿಕ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಕ್ರೈಸ್ತ ಧರ್ಮ ಬಂಡಾಯವಾದವು ಯುರೋಪಿನ ಉತ್ತರ ಭಾಗಕ್ಕೂ ಮತ್ತು ರೋಮನ್ ಕ್ಯಾಥೋಲಿಕ್ ಧರ್ಮ ದಕ್ಷಿಣ ಭಾಗಕ್ಕೂ ಹೆಚ್ಚು ಸೀಮಿತವಾಗಿವೆ. ಆದರೆ ಯೂರೋಪ್ ಖಂಡವನ್ನು ಇಬ್ಬಾಗಿಸುವಂತಹ ಗೆರೆಯನ್ನೇನು ಎಳೆದಿಲ್ಲ.

ಜರ್ಮನಿಯಲ್ಲಿ ಸುಧಾರಣೆ

ಮಧ್ಯಯುಗದ ಚರ್ಚಿನಲ್ಲಿ ಉಂಟಾದ ಅಧಃಪತನದಿಂದ ಜರ್ಮನಿಗಾದಷ್ಟು ತೊಂದರೆ ಉಳಿದಾವ ರಾಷ್ಟ್ರಕ್ಕೂ ಆಗಲಿಲ್ಲ. ಪೋಪನ ದುರಾಡಳಿತದಿಂದ ಉಂಟಾದ ಈ ವಿಷಮ ಸ್ಥಿತಿಯಿಂದ ಜರ್ಮನ್ನರು ಪೋಪನನ್ನು ಅಭ್ಯುದಯದ ಮತ್ತು ಸ್ವಾತಂತ್ರ್ಯದ ಶತ್ರು ಎಂದು ಭಾವಿಸಿದರು. ಅಶಾಂತಿ ಎಲ್ಲೆಡೆ ಆವರಿಸಿತ್ತು ಮತ್ತು ಚಳವಳಿಯು ಮಂದಗತಿಯಲ್ಲಿ ಆರಂಭವಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರುಗಳ ನಡುವೆ ೧೫೧೭ರಲ್ಲಿ ನಡೆದ ಧಾರ್ಮಿಕ ಚರ್ಚೆಯ ಪ್ರತಿಫಲವೇ ಸುಧಾರಣೆ ಮತ್ತು ಸ್ಯಾಕ್ಸೋನಿಯ ಮೇಧಾವಿ ಎಲೆಕ್ಟರ್ ಫ್ರೆಡೆರಿಕ್, ೧೫೦೨ರಲ್ಲಿ ಆರಂಭ ಮಾಡಿದ ವಿಟ್ಟೆನ್ ಬರ್ಗ್ ವಿಶ್ವವಿದ್ಯಾನಿಲಯದ ಧರ್ಮಶಾಸ್ತ್ರ ವಿಭಾಗಕ್ಕೆ ೧೫೧೨ರಲ್ಲಿ ಮಾರ್ಟಿನ್ ಲೂಥರ್ ಸೇರಿದನು. ಮಾರ್ಟಿನ್ ಲೂಥರ್ ತುಂಬ ಬಡ ಕುಟುಂಬದಿಂದ ಬಂದವನು. ಇವನ ತಂದೆ ಕಾನೂನು ಶಾಸ್ತ್ರದಲ್ಲಿ ಪರಿಣಿತನಾಗಬೇಕೆಂದು ಬಯಸಿದ್ದನು. ಇವನ ಮನಸ್ಸಿನ ಮೇಲೆ ಚಿಕ್ಕ ವಯಸ್ಸಿನಲ್ಲಿಯೇ ಆಗಿದ್ದ ಧಾರ್ಮಿಕ ಅನುಭವದಿಂದಾಗಿ ಮತ್ತು ಅದಕ್ಕೆ ಆಕರ್ಷಿತನಾಗಿ ಮಾರ್ಟಿನ್ ಲೂಥರ್ ಎರ್‌ಪಟ್ ವಿಶ್ವವಿದ್ಯಾನಿಲಯವನ್ನು ಬಿಟ್ಟು ರೋಮನ್ ಕ್ಯಾಥೋಲಿಕ್ಕರ ನಾಲ್ಕು ಪಂಥಗಳಲ್ಲೊಂದಾದ ಅಗಸ್ಟನಿಯನ್ನರನ್ನು ಸೇರಿಕೊಂಡನು. ಮಾರ್ಟಿನ್ ಲೂಥರ್‌ನನ್ನು ೧೫೦೭ರಲ್ಲಿ ಪುರೋಹಿತನನ್ನಾಗಿ ಮಾಡಲಾ ಯಿತು. ಇದರ ಜತೆಗೆ ಧರ್ಮಶಾಸ್ತ್ರದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅವಕಾಶ ನೀಡಿ, ಬಹುತೇಕ ಜವಾಬ್ದಾರಿಯುತ ಸ್ಥಾನಗಳನ್ನು ನೀಡಲಾಯಿತು. ಇದೇ ಸಮಯದಲ್ಲಿ ರೋಮ್‌ಗೆ ಲೂಥರನು ಭೇಟಿಯಿತ್ತನು. ಇಲ್ಲಿ ಧಾರ್ಮಿಕ ಸ್ಥಿತಿಯನ್ನು ಕಂಡು ದಂಗು ಬಡಿದನು. ೧೫೧೨ರ ಆನಂತರದಲ್ಲಿ ಮಾರ್ಟಿನ್ ಬರೇ ಪ್ರವಚನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡನು.

ಮಾರ್ಟಿನ್ ಲೂಥರನು ೧೫೧೯ರಲ್ಲಿ ರಚಿಸಿದ ೯೫ ಪ್ರಬಂಧಗಳಲ್ಲಿ ಚರ್ಚಿನ ಸ್ಥಿತಿಗತಿ, ಪೋಪನ ಸ್ಥಾನಮಾನ, ಪೋಪನ ಅತಿಕ್ರಮಣ ಮತ್ತು ಕ್ರಿಶ್ಚಿಯನ್ನರು ತಮ್ಮ ಆತ್ಮವನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯ ಬಗ್ಗೆ ಬಹಿರಂಗವಾಗಿ ಚರ್ಚಿಸಿದ್ದನು. ಇದು ಅವನನ್ನು ವಿವಾದಾತ್ಮಕ ವ್ಯಕ್ತಿಯನ್ನಾಗಿ ಮಾಡಿತು.

ಡೊಮೆನಿಕ್ನರ ಧರ್ಮ ಸೇವಕ ಹಾಗೂ ಮೈಂಜ್‌ನ ಆರ್ಚ್‌ಬಿಷಪ್ಪನ ದಳ್ಳಾಳಿಯು ಆಗಿದ್ದ ಜೋಹನ್ ಟೆಟ್‌ಝೆುಲ್ ಎಂಬುವವನು, ಸಂತ ಪೀಟರನ ಹೆಸರಿನಲ್ಲಿ ರೋಮ್ ನಗರದಲ್ಲಿ ಚರ್ಚೊಂದನ್ನು ನಿರ್ಮಿಸಲು ಹಣ ಸಂಗ್ರಹಿಸಲು, ವಿಟ್ಟನ್‌ಬರ್ಗ್‌ಗೆ ಬಂದಿದ್ದ ಹಾಗೂ ಈ ಸಂದರ್ಭದಲ್ಲಿ ಅವನು ಆಡಿದ ಮಾತುಗಳನ್ನು ಕೇಳಿ ಗಾಬರಿ ಗೊಂಡ ಮಾರ್ಟಿನ್ ಲೂಥರ್ ವೈಯಕ್ತಿಕ ಆಶೋತ್ತರಗಳನ್ನು ಸಾರ್ವಜನಿಕವಾಗಿ ಮಾರಾಟಕ್ಕಿಡುವ ಪದ್ಧತಿಯ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕೆಂದು ಬಯಸಿದನು. ಆದರೆ ಸಾರ್ವಜನಿಕ ಚರ್ಚೆಯ ಬದಲಾಗಿ ಜೋಹನ್‌ಎಕ್ ಎನ್ನುವ ಲೀಸ್‌ಜಿಗ್‌ನ ಧರ್ಮಶಾಸ್ತ್ರಜ್ಞನು ಲೂಥರನ ಮೇಲೆ ಧರ್ಮವಿರೋಧಿ ಚಟುವಟಿಕೆಯ ಆಪಾದನೆಯನ್ನು ಹೊರಿಸಿದನು. ತನ್ನ ಮೇಲಿನ ಆಪಾದನೆಗಳಿಗೆ ಉತ್ತರ ಕೊಡಲು ಲೂಥರ್‌ನು ಸಿದ್ಧನಿದ್ದನಾದರೂ ಆಪಾದನೆಗಳಿಗೆ ಉತ್ತರ ಕೊಡಲು ತಿರಸ್ಕರಿಸಿದನು. ಆದರೆ ಆಗ್ಸ್ ಬರ್ಗ್‌ನ ಉನ್ನತಾಧಿಕಾರದ ಡೈಯಟ್ಟಿನ ಮುಂದೆ ಹಾಜರಾಗಲು ಒಪ್ಪಿದನು. ಪೋಪನ ಪ್ರತಿನಿಧಿಯಾಗಿ ವಿಚಾರಣೆಗೆ ಬಂದಿದ್ದ ಕಾರ್ಡಿನಲ್ ಕೆಜೆಟನ್ ಎಂಬುವವನು ಲೂಥರನನ್ನು ಅವಹೇಳನ ಮಾಡಿದನು. ಅನಂತರ ಲೂಥರ್ ವಿಟ್ಟೆನ್‌ಬರ್ಗ್‌ಗೆ ಹಿಂತಿರುಗಿ ಬೋಧನೆಯನ್ನು ಮುಂದುವರೆಸಿದನು.

ಪೋಪ್ ಹತ್ತನೆಯ ಲಿಯೋ, ಜನವರಿ ೨, ೧೫೧೨ರ ಘಟನೆಯಿಂದ ತೃಪ್ತನಾಗದೆ ಮತ್ತು ಧೈರ್ಯಗೆಡದೆ ಲೂಥರನನ್ನು ಮತ್ತೆ ಅವಮಾನಗೊಳಿಸುವ ಸಲುವಾಗಿ ‘ಬುಲ್ ಡಿಸಿಟ್ ಪಾಂಟಿಪೀಸಿಮ್ ರೋಮ್‌ನಂ’ ಎಂಬ ಆಜ್ಞೆಯನ್ನು ಹೊರಡಿಸಿದನು. ಅದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಲೂಥರನು ರಾಜ ಐದನೆಯ ಚಾರ್ಲ್ಸ್‌ನ ಮುಂದೆ ಹಾಜರಾಗ ಬೇಕಾಯಿತು. ರಾಜದ್ರೋಹದ ಆಪಾದನೆಯ ಮೇಲೆ ಲೂಥರ್‌ನನ್ನು ರಾಷ್ಟ್ರದಿಂದ ಬಹಿಷ್ಕರಿಸಲಾಯಿತು. ಆದರೆ, ಸ್ಯಾಕ್ರೋನಿಯ ಮೇಧಾವಿ ಫ್ರೆಡರಿಕ್, ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ಲೂಥರ್‌ನಿಗೆ, ವಾರ್ಟ್‌ಬರ್ಗ್‌ನ ಕೊತ್ತಲದಲ್ಲಿ ಆಶ್ರಯ ದೊರಕಿಸಿದನು. ಲೂಥರನು ಇಲ್ಲಿ ಬೈಬಲನ್ನು ಜರ್ಮನ್ ಭಾಷೆಗೆ ಅನುವಾದಿಸಿದನು. ಇದು ಕ್ರಮೇಣ ಪರಿಣಾಮಕಾರಿಯಾಗಿ ಕೆಲಸ ಮಾಡಿತು.

ತಾನೊಬ್ಬ ಸುಧಾರಕ, ತನ್ನ ಹಿಂದಿನ ಸುಧಾರಕರು ಜೀವನ ಕ್ರಮವನ್ನು ಪ್ರಶ್ನಿಸಿದ್ದಾರೆ, ತಾನು ಚರ್ಚಿನ ನೀತಿಗಳನ್ನು ಪ್ರಶ್ನಿಸುತ್ತಿದ್ದೇನೆ, ಇಷ್ಟೇ ವ್ಯತ್ಯಾಸ ಎಂದು ತನ್ನ ಬಗ್ಗೆ ಲೂಥರ್ ಹೇಳಿಕೊಂಡನು. ಮನುಷ್ಯ ತಾನು ಮಾಡಿದ ಪಾಪ ಕೃತ್ಯಗಳನ್ನು ಒಪ್ಪಿಕೊಳ್ಳು ವುದರಿಂದ, ಶಿಕ್ಷೆ ಅನುಭವಿಸುವುದರಿಂದ ಆ ತಪ್ಪುಗಳನ್ನು ತೊಡೆದು ಹಾಕಬಹುದು ಎನ್ನುವ ಚರ್ಚಿನ ವಿದ್ವಾಂಸಿಕ ನಿಲುವಿನಿಂದ ಸಂಪೂರ್ಣವಾಗಿ ಭ್ರಮನಿರಸನಾಗಿದ್ದನು. ತನ್ನ ಹತಾಶೆಯ ಸ್ಥಿತಿಯಲ್ಲಿಯೂ ಕೂಡ ಲೂಥರನು ಶ್ರದ್ಧೆಯುಳ್ಳವನಾಗಿದ್ದನು, ದೇವರ ಮತ್ತು ಕ್ರೈಸ್ತನ ಮುಂದೆ ತಾನೊಬ್ಬ ಸಾಮಾನ್ಯ ಮನುಷ್ಯ, ಕಣ ಎಂದು ನಂಬಿದ್ದನು. ದೇವರ ಕರುಣೆ ವರವಾಗಿ, ಕೊಡುಗೆಯಾಗಿ ಬರುವ ಸಾಮಾನ್ಯ ಮಾರ್ಗಗಳಿಗಿಂತ ಆಶ್ರಮ ಜೀವನ ಉನ್ನತವಾದದ್ದು ಎಂದು ನಂಬಿದ್ದನು. ಲೂಥರನು ಸನ್ಯಾಸಿಯಾಗಿದ್ದು, ಕಠಿಣವಾದ ಬ್ರಹ್ಮಚರ್ಯ ಜೀವನವನ್ನು ಅಳವಡಿಸಿಕೊಂಡನು. ತನ್ನಂತಹ ಪಾಪಿ, ಕುಬ್ಜ ಮನುಷ್ಯನೊಬ್ಬ ದೇವರ ಸಮಕ್ಷಮ ನ್ಯಾಯಸ್ಥಾನದಲ್ಲಿ ನಿಲ್ಲುವೆನೆಂಬ ಅಭಿಪ್ರಾಯ ಅವನಲ್ಲಿ ಎಂದೂ ಸುಳಿಯಲಿಲ್ಲ. ನಿರಂತರವಾಗಿ ತಪ್ಪನ್ನು ಒಪ್ಪಿಕೊಳ್ಳುತ್ತಲೇ ಇರುವುದು ಮನುಷ್ಯನನ್ನು ರೋಗಗ್ರಸ್ಥನನ್ನಾಗಿ ಮಾಡುತ್ತದೆ ಎನ್ನುವುದು ಅವನ ಅನುಭವವಾಗಿತ್ತು. ಮನುಷ್ಯನನ್ನು ದುರ್ಬಲನನ್ನಾಗಿ ಮತ್ತು ಅಸಹಾಯಕನನ್ನಾಗಿ ಮಾಡಿದ ನಂತರ ಅವನನ್ನು ನಾಶಮಾಡುವ ದೇವರನ್ನು ಅಮೂಲಾಗ್ರವಾಗಿ ಪ್ರಶ್ನಿಸಲು ಲೂಥರನು ಆರಂಭಿಸಿದನು. ಅರ್ಥಮಾಡಿ ಕೊಳ್ಳಲಾಗದ ದೇವರನ್ನು ಅವನು ದ್ವೇಷಿಸಲೂ ಆರಂಭಿಸಿದನು. ಸ್ಸಾಲ್ಮ್‌ಸ್ ಅನ್ನು ಓದಿದಾಗ ಅವನ ಮನಸ್ಸು ಸ್ವಲ್ಪ ಹಗುರವಾಯಿತು. ‘‘ನನ್ನ ದೇವರೇ, ನನ್ನ ದೇವರೇ, ನನ್ನ ದೇವರೇ, ನನ್ನನ್ನು ಏಕೆ ಕಡೆಗಣಿಸಿದ್ದೀಯೇ’’ ಎಂಬ ಮಾತುಗಳು ಸ್ಸಾಲ್ಮ್‌ಸ್‌ನ ೨೨ನೆಯ ಭಾಗದಲ್ಲಿತ್ತು. ಇದು ಲೂಥರನಿಗೆ ಒಂದು ರೀತಿಯ ದೈವವಾಣಿಯಾಗಿ ಕಂಡಿತು. ಯಾವ ಪಾಪವನ್ನೂ ಮಾಡದ ಕ್ರಿಸ್ತನು, ಪಾಪವನ್ನು ಎಸಗಿಸುವ ಮಾನವರ ಜತೆ ತನ್ನನ್ನು ತಾನು ಗುರುತಿಸಿಕೊಳ್ಳುವುದರ ಮೂಲಕ ದೇವರಿಗೂ ಮನುಷ್ಯನಿಗೂ ಅಂತರವಿದೆ ಎನ್ನುವುದನ್ನು ತೋರಿಸಿದ್ದನು. ಕಾಮನ ಬಿಲ್ಲಿನ ಮೇಲೆ ನ್ಯಾಯಾಧೀಶನಾಗಿ ಕುಳಿತಿದ್ದ ಕ್ರಿಸ್ತನು ಶಿಲುಬೆಯ ಮೇಲೆ ಅನಾಥನಾಗಿದ್ದನು. ಶಿಲುಬೆಯ ಮೇಲಿನ ಕ್ರಿಸ್ತನಲ್ಲಿ ಮನುಷ್ಯರ ಮೇಲಿನ ಕೋಪ ಮತ್ತವರ ಮೇಲಿನ ಕರುಣೆ ಒಂದುಗೂಡಿದೆ. ಆದ್ದರಿಂದಲೇ ಸದಾಚಾರವಿಲ್ಲದ, ಯೋಗ್ಯರಲ್ಲದ ಎಷ್ಟೋ ಜನರನ್ನು ದೇವರು ಕ್ಷಮಿಸುವುದು ಸಾಧ್ಯ ವಾಗುತ್ತದೆ. ಅನ್ಯಾಯವನ್ನು ಕ್ರಿಸ್ತನು ನ್ಯಾಯ ಸಮ್ಮತಗೊಳಿಸಿದ್ದನು. ಆದ್ದರಿಂದ ಮನುಷ್ಯ ಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ ದೇವರು ಕೊಟ್ಟಿದ್ದನ್ನು ನಂಬಿಕೆಯಿಂದ ಒಪ್ಪಿಸಿಕೊಳ್ಳುವುದು ಹಾಗೂ ಅವನಲ್ಲಿ ನಂಬಿಕೆಯಿಡುವುದು. ಈ ಮಾತುಗಳು ಸುಧಾರಣಾ ಕಾಲದ ಮುಖ್ಯ ಅಂಶಗಳಾದುವು.

ದೇವರು ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಚರ್ಚು ಒಂದು ಪುಸ್ತಕ ವ್ಯವಹಾರವನ್ನಾಗಿ ನೋಡುವ ರೀತಿ ಮತ್ತು ಚರ್ಚಿನವರಲ್ಲಿನ ಅತಿಯಾದ ಪ್ರಾಪಂಚಿಕತೆ ಲೂಥರನಲ್ಲಿ ಅಪಾರ ಕೋಪವನ್ನುಂಟುಮಾಡಿತ್ತು. ಅವನ ವಾದದಲ್ಲಿ ಮೂರು ಮುಖ್ಯ ಅಂಶಗಳಿದ್ದವು: ೧. ಹಣಕಾಸಿನ ಅವ್ಯವಹಾರ, ೨. ಸಿದ್ಧಾಂತಗಳಲ್ಲಿನ ಲೋಪದೋಷಗಳು, ೩. ಧಾರ್ಮಿಕ ಅವ್ಯವಹಾರಗಳು.

೧೫೨೦ರ ಬೇಸಿಗೆಯಲ್ಲಿ ಸುಧಾರಣೆಯ ಬಹುದೊಡ್ಡ ಪ್ರಣಾಳಿಕೆಗಳನ್ನು ಹೊರತಂದನು. ಜರ್ಮನಿ ರಾಷ್ಟ್ರದ ಆಳುವ ವರ್ಗಕ್ಕೆ ಸೇರಿದ ಕ್ರೈಸ್ತ ಮತೀಯರಿಗೊಂದು ಭಾಷಣ ಎನ್ನುವುದು ಜರ್ಮನಿಯ ಆಳುವ ವರ್ಗದವರನ್ನು ಮತ್ತು ಚಕ್ರವರ್ತಿಯನ್ನು ಧರ್ಮ ಪ್ರವರ್ತಕರ ಕಾಲದ ಸರಳ ಜೀವನಕ್ಕೆ ಮತ್ತು ಬಡತನಕ್ಕೆ ಮರಳುವಂತೆ ಕರೆಯೊಂದನ್ನು ನೀಡಿತ್ತು. ಈ ಭಾಷಣದ ಹೆಸರು ‘ದಿ ಬೆಬಿಲೋನ್ಯನ್ ಕ್ಯಾಪ್ಟಿವಿಟಿ’ ಅಂದರೆ ಬ್ಯಾಬಿಲೋನಿಯಾದ ಬಂಧನ. ಧರ್ಮೋಪದೇಶವು ಚರ್ಚಿನ ಖೈದಿಯಾಗಿದೆ ಎಂಬುವುದು ಇದರರ್ಥವಾಗಿತ್ತು. ಧರ್ಮೋಪದೇಶಗಳನ್ನು ಪ್ರಾಯೋಗಿಕವಾಗಿ ನೋಡಿದ ಲೂಥರನು ಅವುಗಳನ್ನು ಏಳರಿಂದ ಎರಡಕ್ಕೆ ಇಳಿಸಿದನು. ತನ್ನ ಧರ್ಮೋಪದೇಶವನ್ನು ಕ್ರಿಸ್ತನೇ ಆರಂಭಿಸಿದ ಒಂದು ಆಚರಣೆ ಎಂದು ವ್ಯಾಖ್ಯಾನಿಸಿಕೊಂಡನು. ದೀಕ್ಷಸ್ನಾನ ಅಥವಾ ಜ್ಞಾನಸ್ನಾನ ಮತ್ತು ಪ್ರಭು ಭೋಜನ ಸಂಸ್ಕಾರ ಮಾತ್ರ ಕರಾರುವಾಕ್ಕಾಗಿ ಧರ್ಮೋಪದೇಶ ಅಥವಾ ಧಾರ್ಮಿಕ ಕರ್ಮ ಆಗಿವೆ, ಉಳಿದಂತೆ ಪಶ್ಚಾತ್ತಾಪ ಕೇವಲ ಪಾಪ ನಿವೇದನೆ ಮಾತ್ರ. ದ್ರಾಕ್ಷಾರಸ ಮತ್ತು ರೊಟ್ಟಿ(ಕ್ರೈಸ್ತ ಧರ್ಮದಲ್ಲಿ ಪಾರಮಾರ್ಥದ ಹಿನ್ನೆಲೆಯಿರುವ ಈ ವಸ್ತುಗಳು) ಸಾಮಾನ್ಯ ಜನರಿಗೂ ಸಿಗಬೇಕು ಎಂದು ವಾದಿಸಿದನು. ಲೂಥರನು ಆರಾಧನೆಯಲ್ಲಿ ಅತಿ ದೊಡ್ಡ ಆಕ್ರಮಣವನ್ನು ಮಾಡಿದನು. ಪ್ರಭು ಭೋಜನ ಸಂಸ್ಕಾರವಿಲ್ಲದೆ, ಪಾದ್ರಿ ಒಬ್ಬನಿಂದಲೇ ಸತ್ತವರಿಗೆ ಆರಾಧನೆ ನಡೆಯಬಾರದು. ಏಕೆಂದರೆ ಪ್ರಭು ಭೋಜನ ಕ್ರಿಸ್ತನಲ್ಲಿ ನಂಬಿಕೆಯಿರುವವರನ್ನೆಲ್ಲ ಒಳಗೊಂಡಿರುತ್ತದೆ. ಅವನ ಇನ್ನೂ ಮುಖ್ಯವಾದ ವಾದವೆಂದರೆ ವಸ್ತು ಸ್ಥಿತಿ ಬದಲಾವಣೆಯ ಉಪದೇಶವನ್ನು  ಸಂಪೂರ್ಣವಾಗಿ ಅಲ್ಲಗಳೆದಿರುವುದು. ವಸ್ತು ಸ್ಥಿತಿ ಬದಲಾವಣೆ ಉಪದೇಶವೆಂದರೆ -ರೊಟ್ಟಿ ಮತ್ತು ದ್ರಾಕ್ಷಾರಸಗಳು, ಕ್ರಿಸ್ತನ ರಕ್ತ ಮತ್ತು ಮಾಂಸ ಎನ್ನುವ ಕ್ಯಾಥೋಲಿಕ್ಕರ ನಂಬಿಕೆ. ಇದು ಕ್ರೈಸ್ತ ಧರ್ಮ ಮಠಗಳ ವಿಧಿತದಿಂದಾಗಿ ಕ್ರಿಸ್ತನ ರಕ್ತ ಮಾಂಸವಾಗುವುದು ಸಾಧ್ಯವಿಲ್ಲ ಎಂದು ವಾದಿಸಿದನು.

ಇದರ ಅರ್ಥ ಕ್ರಿಸ್ತನ ದೇಹವು ಪೂಜೆಯ ಪವಿತ್ರ ಸ್ಥಾನದಲ್ಲಿ ಇರಲಿಲ್ಲ ಎಂದಲ್ಲ. ಬದಲಾವಣೆ ಏನೂ ಆಗದಿದ್ದ ಪಕ್ಷದಲ್ಲಿ ಕ್ರಿಸ್ತನ ದೇಹವು ಪೂಜೆಯ ಪವಿತ್ರ ಸ್ಥಾನದಲ್ಲಿರಲು ಸಾಧ್ಯವಿಲ್ಲ. ಇದು ಹೀಗಾಗದಿರಲು ಕಾರಣ ಕ್ರಿಸ್ತನ ದೇಹ ಎಲ್ಲೆಡೆಯೂ ಇದೆ ಎಂಬ ಕಾರಣಕ್ಕಲ್ಲ. ಎಲ್ಲೆಡೆಯೂ ಇದ್ದರೆ, ವಿಶೇಷವಾಗಿ ಇಲ್ಲೇಕೆ? ಇದು ಏಕೆಂದರೆ, ಮಾನವನ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ದೇವರು ಎರಡು ಪ್ರಕಾರವಾಗಿ ತನ್ನ ಆತ್ಮ ಬಹಿರಂಗವಾಗುವುದನ್ನು ವಿಧಿಸಿದ್ದಾನೆ. ಒಂದು ಅವನ ವಾಕ್ಯವನ್ನು ಉಪದೇಶಿಸು ವುದರಿಂದ ಮತ್ತು ಇನ್ನೊಂದು, ಧಾರ್ಮಿಕ ಕರ್ಮ ಬೋಧನೆಯಿಂದ. ಇಲ್ಲಿ ದೇವರಲ್ಲಿ ನಂಬಿಕೆಯಿಡುವವನ ಕಣ್ಣುಗಳು ತೆರೆಯಲ್ಪಡುತ್ತವೆ. ಈ ಅಭಿಪ್ರಾಯ ಪೌರೋಹಿತ್ಯದ ಪ್ರಾಬಲ್ಯವನ್ನು ಮೊಟಕುಗೊಳಿಸುತ್ತದೆ. ಏಕೆಂದರೆ- ಪುರೋಹಿತನ ನುಡಿಗಳಿಂದ ಕ್ರಿಸ್ತನ ದೇಹವನ್ನು ಪವಿತ್ರ ಪೂಜಾಸ್ಥಾನಕ್ಕೆ ತರಲಾಗುವುದಿಲ್ಲ. ಆದ್ದರಿಂದ ಪೋಪನನ್ನು ಹಿರಿಯ ನನ್ನಾಗಿ ಮಾಡುವ ಪೌರೋಹಿತ್ಯದ ಶ್ರೇಣೀಕೃತ ಸಮಾಜವು ಇಲ್ಲವಾದಂತಾಗುತ್ತದೆ.

ಲೂಥರನು ಬೈಬಲ್ಲನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿದ ವಿಷಯ ಕೆಲವರಿಗೆ ಸಮಾಧಾನ ತಂದರೆ ಮತ್ತೆ ಕೆಲವರಿಗೆ ಅಸಮಾಧಾನ ತಂದಿತ್ತು. ದೇವರು ಒಬ್ಬ ಸರ್ವಾಧಿ ಕಾರಿಯಂತೆ ಪೂರ್ವನಿಯೋಜಿತವಾಗಿ ಮನುಷ್ಯರನ್ನು ಒಳ್ಳೆಯವರು ಮತ್ತು ಕೆಟ್ಟವರೆಂದು ಸೃಷ್ಟಿಸಿರುತ್ತಾನೆ ಮತ್ತು ತನ್ನ ವ್ಯಾಖ್ಯಾನ ಸರಿಯಾಗಿದೆ ಎನ್ನುವ ಲೂಥರನ ವಾದದಿಂದ ಸುಮಾರಷ್ಟು ಮುಕ್ತ ಮನಸ್ಸಿನ ಕ್ಯಾಥೊಲಿಕ್ ಸುಧಾರಕರು ಹಿಂದೆ ಸರಿದರು. ಜರ್ಮನಿಯ ರಾಷ್ಟ್ರೀಯ ಚಳವಳಿಯು ಮುರಿದು ಬಿದ್ದಿತು. ಇದಕ್ಕೂ ಮಿಗಿಲಾಗಿ, ಲೂಥರನ ಪ್ರಭಾವ ವಲಯದಲ್ಲೇ ವಿವಿಧ ರೀತಿಯ ಕ್ರೈಸ್ತ ಬಂಡಾಯವಾದಗಳು ಹುಟ್ಟಿಕೊಂಡವು. ಇವು ಗಳನ್ನು ಬಹುತೇಕವಾಗಿ ವಾಮ ಪಂಥೀಯ ಸುಧಾರಣೆ ಅಥವಾ ತೀವ್ರಗಾಮಿ ಸುಧಾರಣೆ ಎಂದು ಬಣ್ಣಿಸಲಾಗಿದೆ.

ಉತ್ತರ ಜರ್ಮನಿಯಲ್ಲಿ ಲೂಥರನ ವಾದ ಬಹು ವೇಗವಾಗಿ ಹಬ್ಬಿತು. ಸುಮಾರು ೧೫೫೫ರ ವೇಳೆಗೆ ಉತ್ತರದ ರಾಜಕುಮಾರರು ಲೂಥರನ ಚರ್ಚ್ ವ್ಯವಸ್ಥೆಗೆ ಸೇರ‌್ಪಟ್ಟರು. ಸ್ಕಾಂಡಿನೇವಿಯನ್ ರಾಷ್ಟ್ರಗಳಾದ ಡೆನ್ಮಾರ್ಕ್, ನಾರ್ವೆ, ಸ್ಟೀಡನ್, ಐಸ್ಲೆಂಡ್ ಮುಂತಾದವು ಗಳು ಲೂಥರನ ಬೋಧನೆಯನ್ನೇ ನಿಜವಾದ ಧರ್ಮವೆಂದು ತಿಳಿದು ಅಳವಡಿಸಿಕೊಳ್ಳಲು ಆರಂಭಿಸಿದವು. ರಾಜಕುಮಾರರೇ ಪ್ರಥಮವಾಗಿ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ವಹಿಸಿದ್ದರಿಂದ ಹಾಗೂ ವಿಶೇಷವಾಗಿ ಪೋಪನ ಹಣಕಾಸಿನ ನೀತಿಯನ್ನು ವಿರೋಧಿಸಿದ್ದರಿಂದ, ಇವರೇ ಲೂಥರನ ಆರಂಭದ ಬೆಂಬಲಿಗರಾಗಿದ್ದರು.

ವೈಕ್ಲಿಪ್ ಮತ್ತು ಹಝ್‌ನಿಂದ ಹುಟ್ಟಿಕೊಂಡಿದ್ದ ಚರ್ಚಿನ ತೀವ್ರಗಾಮಿವಾದವನ್ನು ಲೂಥರನ ವಾದ ಪೂರ್ಣವಾಗಿ ತಿರಸ್ಕರಿಸಿತ್ತು. ಸ್ವಿಸ್ ದೇಶದ ಸಮಾಜ ಸುಧಾರಕನಾದ ಆಲ್ರಿಜ್ ಜ್ವಿಂಗ್ಲಿ(೧೪೮೪-೧೫೩೧) ಮತ್ತು ಸ್ವಿಟ್ಜರ್‌ಲ್ಯಾಂಡ್‌ನಿಂದ ಹಿಡಿದು ಫ್ರಾನ್ಸ್, ನೆದರ್‌ಲ್ಯಾಂಡ್, ಬ್ರಿಟಿಷ್ ದ್ವೀಪಗಳಿಗೆ ಚರ್ಚಿನ ಸುಧಾರಣೆಯನ್ನು ಹಬ್ಬಿಸಿದ ಜಾನ್ ಕಾಲ್ವಿನ್ ಅವರುಗಳು ವೈಕ್ಲಿಫ್ ಮತ್ತು ಹಝ್‌ನಿಂದ ಪ್ರಭಾವಿತರಾಗಿದ್ದರು.

ಲೂಥರನಿಗೆ ಮಾನವವಾದದೊಡನೆ ಸಂಪರ್ಕವಾಗಲಿ ಅಥವಾ ಅದರ ಬಗ್ಗೆ ಅನುಕಂಪವಾಗಲಿ ಇರಲಿಲ್ಲ. ಆದರೆ ಜ್ವಿಂಗ್ಲಿಯು ತನ್ನ ಇಡೀ ಜೀವಮಾನವನ್ನು ಗ್ರೀಕ್ ಮತ್ತು ಲ್ಯಾಟಿನ್‌ನ ಶ್ರೇಷ್ಠ ಸಾಹಿತ್ಯ ಮತ್ತು ಉತ್ತಮ ಗ್ರಂಥಗಳನ್ನು ಓದುವುದಕ್ಕೆ ಮುಡುಪಾಗಿಟ್ಟಿದ್ದನು. ಜ್ವಿಂಗ್ಲಿಯು ಉತ್ತಮ ವಿಚಾರವಂತನಾಗಿದ್ದನು ಮತ್ತು ಅವನ ಪ್ರಕಾರ ಪ್ರಭು ಭೋಜನವು ಮೊದಲನೆಯ ಪವಿತ್ರ ಗುರುವಾರವನ್ನು ಪುನರ್‌ಚಿತ್ರಿಸುವ ಸಂಕೇತವಾಗಿದೆಯೇ ವಿನಃ, ಕ್ರಿಸ್ತನು ಈ ಧಾರ್ಮಿಕ ಕರ್ಮದಲ್ಲಿ ನಿಜವಾಗಿ ಪ್ರತ್ಯಕ್ಷ ವಾಗಿರುವುದಿಲ್ಲ. ಸ್ಥಳೀಯ ಚರ್ಚುಗಳು ಧರ್ಮಾವಲಂಬಿಗಳ ಸಮುದಾಯವಾಗಿವೆ ಎಂಬುದನ್ನು ಜ್ವಿಂಗ್ಲಿಯು ಪ್ರಮುಖವಾಗಿ ಪರಿಗಣಿಸಿದ್ದನು. ೧೪೨೩ರ ವೇಳೆಗೆ ಸ್ವಿಟ್ಜರ್ ಲ್ಯಾಂಡಿನ ಜೂರಿಚ್‌ನಲ್ಲಿರುವ ಕ್ಯಾಂಟನ್‌ನಲ್ಲಿ ಇವನ ಬೆಂಬಲಿಗರು ಹುಟ್ಟಿಕೊಂಡರು. ಜ್ವಿಂಗ್ಲಿಯು ಲೂಥರನ ಪವಿತ್ರ ಐಕ್ಯತೆಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲಿಲ್ಲ ಹಾಗೂ ತನ್ನ ಚಳವಳಿಯನ್ನು ಸಮರ್ಥಿಸಿಕೊಂಡನು. ಜೂರಿಜ್‌ಅನ್ನು ರಕ್ಷಿಸುವ ಯುದ್ಧದಲ್ಲಿ ಜ್ವಿಂಗ್ಲಿಯು ಮಡಿದನಾದರೂ ಅವನ ನಾಯಕತ್ವ ವ್ಯರ್ಥವಾದುದಲ್ಲ. ಅವನ ನಂತರ ಬಂದವರು ಚಳವಳಿಯನ್ನು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮುಂದುವರೆಸಿ ಮತ್ತು ಕ್ರಮೇಣವಾಗಿ ಜ್ಯೂರಿಚ್‌ನ ಚರ್ಚನ್ನು ಜಾನ್ ಕಾಲ್ವಿನ್ ತನ್ನ ನಾಯಕತ್ವದಲ್ಲಿ ಸ್ಥಾಪಿಸಿದ್ದ, ಸುಧಾರಿತ ಚರ್ಚಿನ ಜತೆ ಒಂದುಗೂಡಿಸಿದನು.

ತನ್ನ ಬೋಧನೆಗಳಲ್ಲಿ ಜ್ವಿಂಗ್ಲಿಯು ಸಾಮಾನ್ಯ ತರದ ಧರ್ಮ ದುರುಪಯೋಗವನ್ನು ಖಂಡಿಸಿದ್ದನು ಮತ್ತು ಹಳೆಯ ವ್ಯವಸ್ಥೆಯು ಸಂಪೂರ್ಣವಾಗಿ ಮುರಿದು ಬೀಳುವಂತೆ ತೀವ್ರಗಾಮಿಯ ಧರ್ಮಶಾಸ್ತ್ರವನ್ನು ಘೋಷಿಸಿದನು. ಲೂಥರನಂತೆ ಇವನೂ ಕೂಡ ಮನುಷ್ಯ ಮತ್ತು ದೇವರ ನಡುವಿನ ಸಂಬಂಧಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದನು ಮತ್ತು ಆಚರಣೆಗಳು ಮತ್ತು ವ್ರತಗಳು ಶುದ್ದಿಗೊಳ್ಳಬೇಕು ಎಂದು ಒತ್ತಾಯಿಸಿದ್ದನು. ಲೂಥರನಿ ಗಿಂತ ಜ್ವಿಂಗ್ಲಿಯು ತುಸು ವಿಭಿನ್ನವಾಗಿದ್ದನು ಮತ್ತು ಗತಕಾಲದ ಸಂಪ್ರದಾಯಗಳಿಂದ ಧರ್ಮ ಸಂಪೂರ್ಣವಾಗಿ ಬೇರ್ಪಡಿಸಬೇಕು, ಪ್ರತಿಮೆಗಳ ಸಂಹಾರವಾಗಬೇಕು ಮತ್ತು ಆರಾಧನೆಯ ನಿರಾಕರಣೆ ಆಗಬೇಕೆಂದು ಬಯಸಿದನು. ಜ್ವಿಂಗ್ಲಿಯ ಧರ್ಮಶಾಸ್ತ್ರವು ಸಂಪೂರ್ಣವಾಗಿ ‘‘ಆಧ್ಯಾತ್ಮಿಕ’’ವಾದುದ್ದಾಗಿತ್ತು. ಅವನ ಪ್ರಕಾರ ಮುಕ್ತಿ ಒಂದು ಅಂತರಂಗದ ಅನುಭವವಾಗಿತ್ತು. ಇದರಲ್ಲಿ ಧಾರ್ಮಿಕ ಕರ್ಮಕ್ಕಾಗಲಿ ಮತ್ತು ಆಚರಣೆಗಳಾಗಲಿ ಯಾವುದೇ ಪಾತ್ರವಿಲ್ಲ. ಜನವರಿ ೧೫೨೩ರಲ್ಲಿ ಅವನ ಪ್ರವಚನಗಳ ಸತ್ವಪರೀಕ್ಷೆ ನಡೆಯಿತು. ಅದರಲ್ಲಿ ಅವನು ಯಶಸ್ವಿಯಾಗುವ ವೇಳೆಗೆ ಇವನ ಪ್ರವಚನಗಳು ಅಪಾರವಾಗಿ ಅಶಾಂತಿಯನ್ನು ಉಂಟುಮಾಡಿದ್ದವು. ಇವನ ಯಶಸ್ವಿನ ನಂತರ ಜ್ಯೂರಿಚ್‌ನ ಚರ್ಚು ಸಂಪೂರ್ಣವಾಗಿ ಸುಧಾರಿಸಲ್ಪಟ್ಟಿತು.

ಲೂಥರ್ ಮತ್ತು ಜ್ವಿಂಗ್ಲಿಯ ವಾದದ ನಡುವಿನ ವ್ಯತ್ಯಾಸಗಳು ತುಂಬ ಪ್ರಮುಖ ವಾದವು. ಇವುಗಳ ತಿಕ್ಕಾಟದಿಂದ ಇವೆರಡು ಚಳವಳಿಗಳ ಮೂಲಭೂತವಾದ ಅಂಶಗಳು ಹೊರಬಂದವು. ಕ್ರಿಸ್ತನ ಅಂತಿಮ ಭೋಜನವು ಈ ಎರಡು ಚಳವಳಿಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ರಹಸ್ಯ ಕೇಂದ್ರವಾಗಿತ್ತು. ಲೂಥರ್ ಮತ್ತು ಜ್ವಿಂಗ್ಲಿ ಅವರುಗಳು ವಸ್ತುಸ್ಥಿತಿ ಬದಲಾವಣೆ ಧರ್ಮಗ್ರಂಥಗಳಲ್ಲಿ ಪುರಾವೆಗಳಿಲ್ಲದೆ ಪುರೋಹಿತರು ಸೃಷ್ಟಿಸಿರುವ ಒಂದು ಮೋಡಿಯ ವಿಷಯವಾಗಿದೆ ಎಂದು ಪರಿಗಣಿಸಿದ್ದರು. ‘‘ಇದು ನನ್ನ ದೇಹ’’ ಎನ್ನುವ ಕ್ರಿಸ್ತನ ಮಾತುಗಳ ಮೇಲೆ ಲೂಥರನು ಹೆಚ್ಚು ಒತ್ತು ನೀಡಿದ್ದರಿಂದ, ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಕ್ರಿಸ್ತನ ಮಾಂಸ ಮತ್ತು ರಕ್ತವಿದೆ ಎಂಬುವ ವಿಷಯದಲ್ಲಿ, ಯಾವುದೇ ಆಧಾರವಿಲ್ಲದಿದ್ದರೂ, ಅವನಿಗೆ ನಂಬಿಕೆಯಿತ್ತು. ಧಾರ್ಮಿಕ ಕರ್ಮವು ಕ್ರಿಸ್ತನ ದೇಹ ಮತ್ತು ರಕ್ತವನ್ನು ಹೊಂದಿದ್ದು, ಇದನ್ನು ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಕಾಣಬಹುದಾಗಿದೆ ಎಂದೂ ಕೂಡ ನಂಬಿದ್ದನು. ಕ್ರಿಸ್ತನ ದೇಹ ಮತ್ತು ರಕ್ತದ ಅಂಶ ಗಳನ್ನು ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಕಾಣುವ ಲೂಥರನ ದೃಷ್ಟಿಯು ಸೃಷ್ಟಿಯ ಪ್ರಕ್ರಿಯೆಯಲ್ಲಿ ಆದಿಯಿಂದಲೂ, ಕ್ರಿಸ್ತನ ಅಂಶ ಎಲ್ಲೆಲ್ಲಿಯು ಅಡಗಿದೆ ಎನ್ನುವ ನಂಬಿಕೆಯಿಂದ ಬಂದುದ್ದಾಗಿತ್ತು. ಈ ಉಪದೇಶದಲ್ಲಿ ತೊಂದರೆಗಳಿದ್ದವು. ಆದ್ದರಿಂದ ಜ್ವಿಂಗ್ಲಿಯು ಕ್ರಿಸ್ತನ ಅಂಶವು ಭೌತಿಕವಾಗಿ ಪ್ರತ್ಯಕ್ಷವಾಗಿದೆ ಎನ್ನುವ ವಿಷಯವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದನು.

ರೊಟ್ಟಿ ಮತ್ತು ದ್ರಾಕ್ಷಾರಸವನ್ನು ಜ್ವಿಂಗ್ಲಿಯು ಸಾಂಕೇತಿಕವಾಗಿ ಮಾತ್ರ ನೋಡಲು ಸಿದ್ಧನಿದ್ದನು. ಮುಕ್ತಿ ನಂಬಿಕೆಯಿಂದ ಬರುತ್ತದೆ ಮತ್ತು ದೈವವಿಲಾಸ ಧಾರ್ಮಿಕ ಕರ್ಮದ ಮುಖಾಂತರವಾಗಿ ಧರ್ಮನಂಬಿಕೆಯುಳ್ಳವನ ಅಂತರಂಗವನ್ನು ಪ್ರವೇಶಿಸುತ್ತದೆ. ಇದರಲ್ಲಿ ಯಾವುದೇ ಭೌತಿಕ ಮಾರ್ಗವಿರುವುದಿಲ್ಲ ಎಂಬುದು ಜ್ವಿಂಗ್ಲಿಯ ನಂಬಿಕೆಯಾಗಿತ್ತು. ಈ ವಿವಾದಗಳು ಚಳವಳಿಯಲ್ಲಿ ಭಾಗವಹಿಸುತ್ತಿರುವ ಹಿಂಬಾಲಕರಿಗೆ ತುಂಬ ಮುಖ್ಯವಾದ ವಿಷಯಗಳಾಗಿದ್ದವು. ಹೀಗೆ ಪ್ರಭು ಭೋಜನದ ವಿಷಯ ಸುಧಾರಣಾ ಚಳವಳಿಯ ಉದ್ದಗಲಕ್ಕೆ ಹರಡಿಕೊಂಡಿತ್ತು. ಮುಂದಿನ ೧೫೦ ವರ್ಷಗಳಲ್ಲಿ ಈ ಧರ್ಮಶಾಸ್ತ್ರ ಏನನ್ನೆಲ್ಲ ನಾಶಪಡಿಸಿತು ಮತ್ತು ಎಷ್ಟು ಜೀವಗಳನ್ನು ಆಹುತಿ ತೆಗೆದುಕೊಂಡಿತು ಎನ್ನುವುದನ್ನು ನಾವು ಇಲ್ಲಿ ಮುಖ್ಯವಾಗಿ ಗುರುತಿಸಬೇಕಾಗುತ್ತದೆ.

ಕ್ಯಾಲ್ವಿನ್‌ವಾದ

ಕ್ರೈಸ್ತ ಧರ್ಮದ ಮತ್ತೊಂದು ಬಂಡಾಯವಾದ ಜಾನ್ ಕ್ಯಾಲ್ವಿನ್‌ನ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಇವನು ಫ್ರಾನ್ಸ್ ದೇಶಕ್ಕೆ ಸೇರಿದವನಾಗಿದ್ದನು ಮತ್ತು ಮಾನವ ಶಾಸ್ತ್ರ ಮತ್ತು ಕಾನೂನು ಶಾಸ್ತ್ರದಲ್ಲಿ ಅಧ್ಯಯನ ನಡೆಸಿದ್ದನು. ಜ್ವಿಂಗ್ಲಿಯಂತೆ ಇವನೂ ಕೂಡ ಧರ್ಮ ಮತ್ತು ರಾಜಕೀಯ ವ್ಯವಸ್ಥೆಗಳೆರಡೂ ಒಂದೇ ಸಮುದಾಯವಾಗಿ ವಿಲೀನ ಗೊಳ್ಳಬೇಕು ಎಂದು ಬಯಸಿದ್ದನು. ಧರ್ಮವನ್ನು ರಕ್ಷಿಸುವುದರ ಜತೆಗೆ ಮೂರ್ತಿ ಆರಾಧನೆ, ದೇವರ ಹೆಸರಿನಲ್ಲಿ ಆಗುವ ಅನ್ಯಾಯ, ಧರ್ಮ ಪ್ರವಚನಗಳಲ್ಲಿ, ಧರ್ಮಶಾಸ್ತ್ರ ವ್ಯಾಖ್ಯಾನಗಳಲ್ಲಿ, ಪತ್ರಗಳಲ್ಲಿ, ತನ್ನ ಮತ್ತು ಜಿನೀವ ನಗರ ಸಭೆಯ ನೇರ ಸಂಬಂಧದಲ್ಲಿ, ಇನ್ನೂ ಮುಖ್ಯವಾಗಿ ತನ್ನ ಪ್ರಮುಖ ಗ್ರಂಥವಾದ ಕ್ರೈಸ್ತ ಧರ್ಮಸಂಸ್ಥೆಗಳು ಅನ್ನುವಲ್ಲಿ ನಿಜವಾದ, ಪ್ರಾಯೋಗಿಕವಾದ, ಬೌದ್ದಿಕವಾದ ಮತ್ತು ಕ್ರೈಸ್ತ ಧರ್ಮಕ್ಕೆ ಕ್ರಮವಾದ ಒಂದು ತಳಹದಿಯನ್ನು ನಿರ್ಮಿಸಲು ಹೋರಾಟ ನಡೆಸಿದ್ದಾನೆ. ಜ್ವಿಂಗ್ಲಿಯು ಆಶಾವಾದಿಯಾದರೆ, ಕ್ಯಾಲ್ವಿನ್ ಮನುಷ್ಯನು ಹುಟ್ಟಿನಿಂದ ಪಾಪಿಯಾದ್ದರಿಂದ ಭಯ ಭಕ್ತಿ ಮೂಡಿಸುವ ಭಗವಂತನನ್ನು ಎದುರಾಗಬೇಕಾಗುತ್ತದೆ ಎಂದು ನಂಬಿದ್ದನು. ಎಲ್ಲಾ ಮಧ್ಯವರ್ತಿಗಳು, ದೇವತೆಗಳು, ಸಂತರು ಈ ಹೋರಾಟದ ಮುನ್ನವೇ ಕಾಣೆಯಾದರು. ಒಂದು ವೇಳೆ, ಮನುಷ್ಯನಿಗೆ ಭರವಸೆ ಎನ್ನುವುದೊಂದಿದ್ದರೆ ಅದು ಕ್ರಿಸ್ತನ ತ್ಯಾಗದಿಂದ ಮಾತ್ರ. ಏಕೆಂದರೆ ಮನುಷ್ಯರಲ್ಲಿ ಅಪೂರ್ಣವಾದ, ದೋಷಾಯುಕ್ತವಾದ ಎಲ್ಲವೂ ಕ್ರಿಸ್ತನ ಪಾವಿತ್ರತೆಯಲ್ಲಿ ಅಡಕವಾಗಿದೆ. ಕ್ರಿಸ್ತನ ಪಾವಿತ್ರತೆ ಮನುಷ್ಯನ ಒಳಿತಿಗಾಗಿ ಇದೆ. ಈ ಹೋರಾಟದಲ್ಲಿ ಮಾನವನ ಪ್ರಯತ್ನಗಳು ಅಲ್ಪವಾದವು. ಎಲ್ಲಾ ಮನುಷ್ಯರು ಮುಕ್ತಿಗಾಗಿ ಇಲ್ಲವೇ ನಾಶಕ್ಕಾಗಿಯೇ ಪೂರ್ವನಿಯೋಜಿತವಾಗಿ ಸೃಷ್ಟಿಯಾಗಿದ್ದಾರೆ ಎನ್ನುವ ಈ ವಾದವು ಲೂಥರನ ಅಭಿಪ್ರಾಯಕ್ಕೆ ಹತ್ತಿರವಾಗಿರುತ್ತದೆ. ಮನುಷ್ಯನು ತನ್ನೊಳಗೆ ಮತ್ತು ಪ್ರಪಂಚದಲ್ಲಿ ದೇವರ ಯುದ್ಧವನ್ನು ಮಾಡಬೇಕಾಗಿರುವುದರಿಂದ, ಮನುಷ್ಯನ ಬದುಕು ಪೂರ್ವ ನಿಯೋಜಿತವಾಗಿ ಬರುತ್ತದೆ, ಅದು ನಿರ್ಲಿಪ್ತತೆಯಿಂದ ಬಂದಿರುವುದಿಲ್ಲ ಎನ್ನುವುದು ಕ್ಯಾಲ್ವಿನ್ನನ ವಾದವಾಗಿತ್ತು. ಸಂಗೀತ ಮತ್ತು ಸಾಹಿತ್ಯಗಳ ವಿಷಯದಲ್ಲಿ ಕ್ಯಾಲ್ವಿನ್ನನು ಮಧ್ಯಮ ಮಾರ್ಗ ಹಿಡಿದಿದ್ದನು. ದೇವರ ಸ್ತೋತ್ರಗಳನ್ನು ಸಾಮೂಹಿಕವಾಗಿ ಹಾಡುವುದನ್ನು ಇವನು ಉತ್ತೇಜಿಸಿದನು. ಇದು ಕ್ರಮೇಣ ಫ್ರಾನ್ಸ್‌ನ ಹ್ಯೂಗ್ಯೂನಾಟ್ಸ್‌ರಲ್ಲಿ, ಸ್ಕಾಟ್‌ಲ್ಯಾಂಡಿನ ಪ್ರಿಸ್ಬಿಟೇರಿಯನ್ಸ್‌ನಲ್ಲಿ ಮತ್ತು ಅಮೆರಿಕದಲ್ಲಿ ಒಂದು ಪ್ರಮುಖ ಅಂಶವಾಗಿ ಬೆಳೆಯಿತು. ಸಂತರ ಮತ್ತು ಶಿಲುಬೆಯ ಮೇಲಿನ ಕ್ರಿಸ್ತನ ಪ್ರತಿಮೆಯ ವಿಷಯಗಳು ಕಲೆಗೆ ಸಂಬಂಧಪಟ್ಟಿದ್ದರಿಂದ ಇವು ಸರಳವಾಗಿರಬೇಕೆಂದು ಬಯಸಿದನು.

ಲೂಥರನ ಮಾರ್ಗದಲ್ಲೇ ಕ್ಯಾಲ್ವಿನ್ನನು ಮೂಲವಾಗಿ ಮುಂದುವರಿದಂತೆ ಕಂಡು ಬಂದರೂ, ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸಗಳಿವೆ. ನಂಬಿಕೆಯಿಂದ ಭಗವಂತನ ಸಮರ್ಥನೆ ಆರಂಭವಾಗುವುದಿಲ್ಲ ಅದು ಜ್ಞಾನದಿಂದ ಆಗುತ್ತದೆ. ಲೂಥರನು ಭಗವಂತನ ಕ್ರೌರ್ಯಗಳಿಗೆ ಕ್ರಿಸ್ತನ ಕರುಣೆಯಲ್ಲಿ ನೆಮ್ಮದಿಯನ್ನು ಕಂಡನು. ಭಗವಂತನ ಭಯಾನಕ ತೀರ್ಪುಗಳು ಆಯ್ದವರ ಮೇಲೆ ಬೀಳುವುದಿಲ್ಲವಾದ್ದರಿಂದ ಕ್ಯಾಲ್ವಿನ್ನನು ಇನ್ನು ಶಾಂತವಾಗಿ ಭಗವಂತನ ಭಯಾನಕ ತೀರ್ಪುಗಳ ಮೇಲೆ ಧ್ಯಾನ ನಡೆಸುವಂತವನಾಗಿದ್ದನು.

ಭಗವಂತನ ಆಯ್ಕೆಗೆ ಯಾರು ಅರ್ಹರು ಎನ್ನುವುದನ್ನು ತಿಳಿಯುವುದು ಲೂಥರನಿಗೆ ಅಸಾಧ್ಯವಾದ ಕೆಲಸವಾಗಿತ್ತು. ಅವನಿಗೆ ತನ್ನಲ್ಲಿಯೇ ಭರವಸೆಯಿರಲಿಲ್ಲ. ಆದ್ದರಿಂದ ತನ್ನ ಜೀವನದ ಉದ್ದಕ್ಕೂ ನಂಬಿಕೆಗಾಗಿ ಮತ್ತು ಭರವಸೆಗಾಗಿ ಹೋರಾಟ ನಡೆಸಿದನು. ಕ್ಯಾಲ್ವಿನ್ ಮತ್ತೊಂದೆಡೆ ಪರೀಕ್ಷೆಗಳನ್ನು ನಡೆಸಿದನು. ಕ್ಯಾಲ್ವಿನ್ನನಿಗೆ ಹೊಸ ಹುಟ್ಟು ಅಥವಾ ಜನ್ಮದ ಅನುಭವ ಬೇಕಾಗಿರಲಿಲ್ಲ. ಏಕೆಂದರೆ ಇವುಗಳು ಮನುಷ್ಯನಲ್ಲಿ ಆಗಲೇ ಇರುವಂತವು ಮತ್ತು ಅನುಭವಕ್ಕೆ ಲಭ್ಯವಾಗುವಂತವು. ಕ್ರಮೇಣ ಕ್ಯಾಲ್ವಿನ್ನನ ವಾದ ಅವನ ಮುಖ್ಯ ವಿಚಾರ ಸರಣಿಯಿಂದ ದೂರ ಸರಿದು, ಚರ್ಚ್‌ನ ಚುನಾವಣೆಯಲ್ಲಿ ಅಂಕಗಳನ್ನು ಗಳಿಸುವ ವಿಷಯಗಳಿಗೆ ಸೀಮಿತವಾಗಿ ಬೆಳೆಯಿತು. ಮೂರು ಪರೀಕ್ಷೆಗಳು ಕ್ಯಾಲ್ವಿನ್ನನಿಗೆ ಮುಖ್ಯವಾಗಿದ್ದವು: ನಂಬಿಕೆಯಿಂದ ನಡೆದುಕೊಳ್ಳುವುದು, ಕಠಿಣವಾದ ಶಿಸ್ತುಗಳಿಂದ ಕೂಡಿದ ಕ್ರೈಸ್ತ ವಿಭಾಗ ಮತ್ತು ಧಾರ್ಮಿಕ ಕರ್ಮ. ಒಬ್ಬ ವ್ಯಕ್ತಿ ಈ ಮೂರು ವಿಷಯಗಳಲ್ಲಿ ಸಮರ್ಥನಾಗಿದ್ದರೆ ಅವನ ಆಯ್ಕೆ ಪೂರ್ವನಿಯೋಜಿತವಾಗಿದೆ ಎಂಬುದು ಖಚಿತವಾದಂತೆ ಎನ್ನುವುದು ಕ್ಯಾಲ್ವಿನ್ನನ ನಂಬಿಕೆಯಾಗಿತ್ತು.

ಅಖಂಡ ಭರವಸೆಯನ್ನು ಸಾಧಿಸಿದ ವ್ಯಕ್ತಿಯಿಂದ ಅಪಾರವಾದ ಶಕ್ತಿಯು ಹೊಮ್ಮುತ್ತದೆ. ಆ ಶಕ್ತಿಯಿಂದ ಪ್ರಪಂಚದಲ್ಲಿ ಭಗವಂತನ ಹಿರಿಮೆಯನ್ನು ಸಾರಬಹುದು ಮತ್ತು ಪವಿತ್ರವಾದ ಪ್ರಜಾಪ್ರಭುತ್ವ ಸಾಮ್ರಾಜ್ಯವನ್ನು ಸ್ಥಾಪಿಸಬಹುದು. ಅಮೆರಿಕ ಸಂಸ್ಥಾನಗಳಲ್ಲಿ ಇದು ಸರ್ವೇಸಾಮಾನ್ಯವಾದ ಮಾತಾಯಿತು. ಸುಧಾರಣೆಗೊಂಡ ಚರ್ಚು ದೇವರ ಸಾಮ್ರಾಜ್ಯವೆಂದು ತಿಳಿಯಲಾಗಿತ್ತು. ಕ್ಯಾಲ್ವಿನ್ನನಿಗೆ ತನ್ನ ಆದರ್ಶಗಳನ್ನು ಈಡೇರಿಸಿಕೊಳ್ಳಲು ಒಳ್ಳೆಯ ಅವಕಾಶವಿತ್ತು. ಆರಂಭದಲ್ಲಿ ಅದು ಕಡಿಮೆ ಪ್ರಮಾಣದಲ್ಲಿ ಸಾಧ್ಯವಾಗಿತ್ತು. ಜಿನೀವ ನಗರವು ಇತ್ತೀಚೆಗೆ ಅಲ್ಲಿನ ಬಿಷಪ್‌ನನ್ನು ಮತ್ತು ಸವೋಯ್ ನಗರದ ಸಂಸ್ಥಾನಿಕ(duke)ನನ್ನು ಹೊರಗೆ ಹಾಕಿತ್ತು. ಆದರೆ, ಬಂಡಾಯದ ತವರಾದ ಬೆರ್ನ್ ನಗರವು ಸ್ವಾತಂತ್ರ್ಯದ ಚಳವಳಿಯಲ್ಲಿ ಸವೋಯ್ ನಗರಕ್ಕೆ ಸಹಾಯ ಮಾಡಿದ್ದರೂ, ಅದು ಇನ್ನೂ ಸ್ವಿಟ್ಜರ್‌ಲ್ಯಾಂಡಿನ ಬಂಡಾಯ ಸಂಯುಕ್ತ ಸಂಸ್ಥಾನಕ್ಕೆ ಸೇರಿರಲಿಲ್ಲ. ಬಂಡಾಯದ ಧರ್ಮ ಪ್ರವಾಚಕರುಗಳು ಬರ್ನಿಯನ್ನರ ಮೂಲಕ ಜಿನೀವ ನಗರವನ್ನು ಸುವಾರ್ತೆಗಳ ಬೋಧನೆಯಿಂದ ಮುಳುಗಿಸಿದ್ದರು. ಇದೇ ವೇಳೆಗೆ ಆಂತರಿಕ ಯುದ್ಧವಾಗುವ ಸಾಧ್ಯತೆಗಳೂ ಇದ್ದವು. ಯುದ್ಧ ಪ್ರಿಯನಾದ ಮತ್ತು ಧರ್ಮಬೋಧಕನೂ ಆದ ಗಿಲ್ಲೇಮ್ ಫಾತೆಲ್ ಎಂಬುವವನು ನಾಯಕತ್ವವನ್ನು ವಹಿಸಲಾಗದೆ ಜಿನೀವವನ್ನು ಹಾದು ಹೋಗುತ್ತಿದ್ದ ಕ್ಯಾಲ್ವಿನ್ನನ್ನು ಹಿಡಿದು ಬಲವಂತವಾಗಿ ನಾಯಕತ್ವದ ಪಟ್ಟ ಕಟ್ಟಿಸಿದನು. ಇದು ಅವನ ದೈವ ಪ್ರೇರಣೆಯಾಗಿತ್ತು. ಆಮೇಲೆ ಸುಮಾರು ವರ್ಷಗಳ ಹೋರಾಟದ ಜೀವನವನ್ನು ನಡೆಸಿ ಒಮ್ಮೆ ರಾಷ್ಟ್ರದಿಂದ ಉಚ್ಛಾಟಿತನಾಗಿ ಮತ್ತೆ ಹಿಂತಿರುಗಿ, ತನ್ನ ಜೀವನದ ಕಡೆಯ ಎರಡು ದಶಕಗಳವರೆಗೂ ಸಬಲನಾಗಿದ್ದು ಜಿನೀವ ನಗರಕ್ಕೆ ನಾಯಕತ್ವವನ್ನು ನೀಡಿದನು. ಜಾನ್ ನಾಕ್ಸ್ ಎಂಬುವವನು ಇವನ ಕಾಲದ ಜಿನೀವ ನಗರವನ್ನು ‘‘ಧರ್ಮಪ್ರವರ್ತಕರ ನಂತರ ಮತ್ತೊಂದು ಸುಂದರವಾದ ನಗರ’’ ಎಂದು ಪರಿಗಣಿಸಿದನು. ಥಾಮಸ್ ಮೂರ್ ತನ್ನ ಸ್ವರ್ಗದ ಕಲ್ಪನೆಯಲ್ಲಿ ಕಂಡಿರುವ ಅಂಶಗಳೆಲ್ಲವನ್ನು ಜಿನೀವ ನಗರವು ಅಂದು ಹೊಂದಿತ್ತು.

ಇವೆಲ್ಲ ಘರ್ಷಣೆಗಳ ನಡುವೆಯೂ ಈ ಕಾರ್ಯಕ್ರಮವು ಸಾಧ್ಯವಾಗಲು ಕಾರಣ ಜಿನೀವ ನಗರದಲ್ಲಿ ನಾಗರಿಕರನ್ನು ಆಯ್ಕೆ ಮಾಡಲು ಇದ್ದ ಪದ್ಧತಿ. ಕ್ಯಾಲ್ವಿನ್ನನ ಬೋಧನೆ ಯಲ್ಲಿ ನಂಬಿಕೆಯಿಲ್ಲದ ಎಲ್ಲಾ ಕ್ಯಾಥೋಲಿಕ್ಕರು ನಗರವನ್ನು ಯಾವ ಮುಲಾಜಿಲ್ಲದೆ ಬಿಡಬೇಕಿತ್ತು. ಅಲ್ಲಿಯೇ ಉಳಿದುಕೊಂಡಿವರಿಗೆ ಚರ್ಚಿನಿಂದ ಬಹಿಷ್ಕಾರ, ಆ ನಂತರ ಆರು ತಿಂಗಳಲ್ಲಿ ಅವರು ಹೊರ ಹೋಗದಿದ್ದರೆ, ಈ ಬಹಿಷ್ಕಾರ ನಗರದಿಂದ ಉಚ್ಛಾಟನೆ ಮಾಡಿದಷ್ಟೇ ತೀವ್ರವಾಗುತ್ತಿತ್ತು. ದೀರ್ಘವಾದ ಹೋರಾಟ ನಡೆದ ನಂತರ ಬಹಿಷ್ಕಾರ ಹಾಕುವುದು ಚರ್ಚಿನ ಅಧಿಕಾರಕ್ಕೆ ಒಳಪಟ್ಟಿತ್ತು. ರಾಜಕೀಯ ಕಾರಣಗಳಿಗಾಗಿ ಈ ಮೊದಲು ರಾಜ್ಯವು ಬಹಿಷ್ಕಾರ ಹಾಕುತ್ತಿದ್ದು, ಅಪಾರ ನೋವನ್ನು ಅನುಭವಿಸಿತ್ತು. ಆದ್ದರಿಂದ ಚರ್ಚೆಗೆ ಬಹಿಷ್ಕಾರ ಹಾಕುವ ಅಧಿಕಾರ ಕೊಡಲು ರಾಜ್ಯವು ಹಿಂಜರಿದಿತ್ತು. ಸ್ಟ್ರಾಸ್‌ಬರ್ಗ್ ಮತ್ತು ಬೇಸೆಲ್ ನಗರಗಳ ಬಂಡಾಯ ಚರ್ಚುಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದಾಗ ಕ್ಯಾಲ್ವಿನ್ ಯಶಸ್ವಿಯಾಗಿದ್ದನು. ಇದರ ಪರಿಣಾಮವಾಗಿ ಚರ್ಚಿನ ಕೃಪೆಗೆ ಯಾರು ಪಾತ್ರನಾಗುವುದಿಲ್ಲವೋ ಅವನು ಸಮುದಾಯದಲ್ಲಿ ಒಬ್ಬ ಸದಸ್ಯನಾಗಿ ಇರಲು ಸಾಧ್ಯವಿರಲಿಲ್ಲ. ಅಯ್ಕೆ ಮಾಡಿದ ೧೩ ಸಾವಿರ ಜನಗಳುಳ್ಳ ಜಿನೀವ ಪ್ರದೇಶವು ಫ್ರಾನ್ಸ್, ಇಟಲಿ, ಸ್ಪೈಯಿನ್ ಮತ್ತು ಸ್ವಲ್ಪ ಕಾಲದ ತನಕ ಇಂಗ್ಲೆಂಡಿನಿಂದ ಧರ್ಮದ ಹಿಂಸಾಚಾರ ತಡೆಯಲಾಗದೆ ವಲಸೆ ಬಂದ ಸುಮಾರು ೬,೦೦೦ ನಿರಾಶ್ರಿತರುಗಳಿಂದ ಇನ್ನೂ ಬಲಗೊಂಡಿತು. ಹೀಗಾಗಿ ಜಿನೀವದಲ್ಲಿ ಚರ್ಚು, ರಾಜ್ಯ ಮತ್ತು ಸಮುದಾಯ ಒಂದೇ ಆಗಿರಲು ಸಾಧ್ಯವಾಯಿತು. ಮಂತ್ರಿಗಳ ಮತ್ತು ನ್ಯಾಯಾಧೀಶರ ಕಾರ್ಯವಿಧಾನದಲ್ಲಿ ವ್ಯತ್ಯಾಸಗಳಿದ್ದಾಗ್ಯೂ ಹೊಸ ಇಸ್ರೇಲಿಗೆ ಜಿನೀವ ನಗರವನ್ನು ಹೋಲಿಸಿರುವುದು ತುಂಬ ಗಮನಾರ್ಹವಾದ ವಿಷಯ. ಏಕೆಂದರೆ ಜಿನೀವ ನಗರದಲ್ಲಿ ಆಂತರಿಕ ಐಕ್ಯತೆ ತೀವ್ರಗೊಳಿಸಬೇಕಾಗಿದ್ದ ಸಂದರ್ಭದಲ್ಲಿ ಸವೋಯ್ ಮತ್ತು ಆಲ್ಪದ ಸಂಸ್ಥಾನಿಕರುಗಳು ಹಳೆಯ ಪ್ಯಾಲೆಸ್ಟ್ರೇನಿನ ಕೇನನ್ನರಂತೆ ಬದ್ಧ ವೈರಿಗಳಾಗಿ ಕಾದಾಡುತ್ತಿದ್ದರು.