ಶೀತಲ ಸಮರದ ಮುಕ್ತಾಯ

ಈಗ ವಿಶ್ವವು ಶೀತಲ ಸಮರೋತ್ತರ ಕಾಲದಲ್ಲಿದೆ ಎಂದು ಈಗಾಗಲೇ ನೋಡಿದ್ದೇವೆ. ೧೯೫೦ರ ದಶಕದಿಂದಲೂ ಎರಡು ಶಕ್ತಿ ಬಣಗಳ ನಡುವೆ ಬಿಕ್ಕಟ್ಟನ್ನು ಶಮನಗೊಳಿಸಲು ಹಲವಾರು ಪ್ರಯತ್ನಗಳು ನಡೆಯುತ್ತಲೇ ಇತ್ತು. ಹಲವುಬಾರಿ ಈ ಎರಡೂ ಬಣಗಳು ‘‘ಒಪ್ಪಂದ’’ದ ಯುಗವನ್ನು ಪ್ರವೇಶಿಸಿವೆ ಎಂದು ಕಂಡುಬಂದಿತ್ತು. ಅಲಿಪ್ತ ಚಳವಳಿಯು ಇದರಲ್ಲಿ ಮಹತ್ತರ ಪಾತ್ರವಹಿಸಿತ್ತು. ಆದರೂ ಆಗಿಂದಾಗ್ಗೆ ಹೊಸ ಬಿಕ್ಕಟ್ಟುಗಳು ಹಾಗೂ ಮನಸ್ತಾಪಗಳು ಹುಟ್ಟಿಕೊಳ್ಳಲು ಪ್ರಾರಂಭಿಸಿದವು.

ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಜಗಳದ ದಾರಿಯಾಗಲಿ ಅಥವಾ ಸಂಪೂರ್ಣ ಯುದ್ಧದ ನೀತಿಯಾಗಲಿ ಯಾವುದನ್ನು ಸಾಧಿಸಲಾರದು ಎಂಬ ಜ್ಞಾನೋದಯ ಶೀತಲ ಸಮರದ ಮುಕ್ತಾಯಕ್ಕೆ ಕಾರಣವಾಯಿತು. ನ್ಯೂಕ್ಲಿಯರ್ ಯುದ್ಧದ ಪರಿಣಾಮಗಳ ಬಗ್ಗೆ ವಿಜ್ಞಾನಿಗಳ ವರದಿಗಳು ಮತ್ತು ಶಸ್ತ್ರಾಸ್ತ್ರ ಪೈಪೋಟಿಗಳ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದ ವಿರೋಧ ಇತ್ಯಾದಿಗಳು ‘‘ಡಿಟರೆಂಟ್’’(ಒಪ್ಪಂದ) ವಾತಾವರಣವನ್ನು ಸೃಷ್ಟಿಸಿ ಬಿಗಡನ್ನು ಕಡಿಮೆ ಮಾಡಿತು.

೧೯೬೦ರ ದಶಕದ ಆರಂಭದಿಂದಲೇ ಕಠಿಣ ಸೈನಿಕ ಒಕ್ಕೂಟಗಳು ಮುರಿದುಬೀಳುವ ಪ್ರವೃತ್ತಿಗಳನ್ನು ತೋರಿಸಲಾರಂಭಿಸಿತು. ೧೯೫೬ರಿಂದ ಸೋವಿಯತ್ ನಾಯಕರು ಶಾಂತಿಯುತ ಸಹಬಾಳ್ವೆಯ ಮೇಲೆ ಹೆಚ್ಚು ಒತ್ತು ಕೊಡಲಾರಂಭಿಸಿದರು. ೧೯೫೦ರ ದಶಕದ ಅಂತಿಮ ಭಾಗದಲ್ಲಿ ಕಮ್ಯೂನಿಸ್ಟ್ ಚಳವಳಿಯಲ್ಲಿ ಬಿರುಕು ಉಂಟಾಯಿತು. ಕಮ್ಯೂನಿಸಂನ ಪ್ರಸಾರದ ಸಿದ್ಧಾಂತವು ತನ್ನ ಮಹತ್ವವನ್ನು ಕಳೆದುಕೊಳ್ಳತೊಡಗಿತು. ಚೀನಾ ಮತ್ತು ಸೋವಿಯತ್ ಒಕ್ಕೂಟಗಳ ನಡುವಣ ವೈರತ್ವ ಕಮ್ಯೂನಿಸಂನ ಬಗ್ಗೆ ಇದ್ದ ಹೆದರಿಕೆಯನ್ನು ಕಡಿಮೆಗೊಳಿಸಿತು. ಅಲ್ಬೇನಿಯಾವು ೧೯೬೧ರಲ್ಲಿ ವಾರ್ಸಾ ಒಪ್ಪಂದದಿಂದ ಹಿಂದೆ ಸರಿಯಿತು. ರುಮೇನಿಯಾವು, ಸೋವಿಯತ್‌ನಿಂದ ಸ್ವತಂತ್ರವಾದ ಪಾತ್ರವಹಿಸಲು ಪ್ರಾರಂಭಿಸಿತು. ಅಮೆರಿಕಾ ನಾಯಕತ್ವದ ನ್ಯಾಟೋ ಮಿಲಿಟರಿ ಸಂಘಟನೆಯಲ್ಲಿ ಕೂಡ ಹಲವಾರು ಬದಲಾವಣೆಗಳಾಯಿತು. ಫ್ರಾನ್ಸ್ ದೇಶವು ನ್ಯಾಟೋದಿಂದ ೧೯೬೬ರಲ್ಲಿ ತನ್ನ ಸೈನಿಕ ಪಡೆಗಳನ್ನು ಹಿಂದೆಗೆದುಕೊಂಡಿತು. ಮತ್ತು ನ್ಯಾಟೋ ಸೈನ್ಯಪಡೆಗಳು ಹಾಗೂ ಸೈನಿಕ ನೆಲೆಗಳನ್ನು ಫ್ರಾನ್ಸ್‌ನಿಂದ ತೆಗೆದುಹಾಕಲಾಯಿತು.

ಶೀತಲ ಸಮರದ ಅಂತ್ಯದ ಪ್ರಕ್ರಿಯೆ ಸುಲಭವಾದುದಾಗಿರಲಿಲ್ಲ. ಈಗಾಗಲೇ ನಾವು ಶೀತಲ ಸಮರವು ‘‘ಬಿಸಿಯುದ್ಧ’’ಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿದ್ದ ಹಲವಾರು ನಿದರ್ಶನಗಳನ್ನು ನೋಡಿದ್ದೇವೆ. ೧೯೫೬ರಲ್ಲಿ ಹಂಗೇರಿಯಲ್ಲಿ, ೧೯೬೮ರಲ್ಲಿ ಜೆಕೊಸ್ಲೋವಾಕಿಯಾದಲ್ಲಿ ದಂಗೆಗಳಾದಾಗ ಸೋವಿಯತ್ ಒಕ್ಕೂಟವು ಶಸ್ತ್ರಾಸ್ತ್ರ ಪ್ರವೇಶವನ್ನು ಮಾಡಿ ‘‘ಕಮ್ಯುನಿಸ್ಟ್’’ ಸರ್ಕಾರಗಳನ್ನು ರಕ್ಷಿಸಿತು. ಈಸ್ಟ್ ಜರ್ಮನಿಯ ಪೂರ್ವ ಹಾಗೂ ಪಶ್ಚಿಮ ಬರ್ಲಿನ್‌ಗಳ ನಡುವೆ ಗೋಡೆ ನಿರ್ಮಿಸಿ ಜನರ ಚಲನವಲನದ ಮೇಲೆ ನಿರ್ಬಂಧ ಹೇರಿದಾಗ, ೧೯೭೯ರಲ್ಲಿ ಸೋವಿಯತ್ ಒಕ್ಕೂಟ ಅಫಘಾನಿಸ್ತಾನಕ್ಕೆ ಸೇನೆಯನ್ನು ಕಳುಹಿಸಿದಾಗ, ಲ್ಯಾಟಿನ್ ಅಮೆರಿಕಾ, ಆಫ್ರಿಕಾ ಖಂಡಗಳ ರಾಷ್ಟ್ರಗಳಲ್ಲಿ ಅಮೆರಿಕಾವು ಸೋವಿಯತ್ ಪರ ಸರ್ಕಾರಗಳ ವಿರುದ್ಧ ಮಿಲಿಟರಿ ಸಂಚು ನಡೆಸಿದಾಗ ಶೀತಲ ಸಮರ ಮರುಕಳಿಸುತ್ತಿತ್ತು.

ನಿಶಸ್ತ್ರೀಕರಣದತ್ತ

ಮಾನವ ಜನಾಂಗಕ್ಕೆ ವಿನಾಶಕಾರಿಯಾದ ಭಾರಿ ಶಸ್ತ್ರಾಸ್ತ್ರಗಳ ನಾಶವೇ ಶಾಂತಿಗೆ ದಾರಿ ಮಾಡಿಕೊಡುವ ಏಕೈಕ ಅಂಶ. ಜನ ಸಾಮಾನ್ಯರ ಕಲ್ಪನೆಗೆ ನಿಲುಕದಷ್ಟು ಭೀಕರವಾದ ಹಾನಿಯನ್ನುಂಟು ಮಾಡುವ ಶಸ್ತ್ರಾಸ್ತ್ರಗಳ ಅಸ್ತಿತ್ವವೇ ಶಕ್ತಿಬಣಗಳ ನಡುವಿನ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿತ್ತು. ೧೯೬೦ರ ದಶಕದಲ್ಲಿ ಎರಡೂ ಶಕ್ತಿ ಬಣಗಳ ನಡುವೆ ತಿಕ್ಕಾಟ ಕಡಿಮೆಯಾದಾಗ ನಿಶಸ್ತ್ರೀಕರಣದ ಮಾತುಕತೆಗಳು ಪ್ರಾರಂಭವಾದವು ಮತ್ತು ಈ ದಿಸೆಯಲ್ಲಿ ಕೆಲವು ಸ್ವಾಗತಾರ್ಹ ಹೆಜ್ಜೆಗಳ್ನನಿಡಲಾಯಿತು. ೧೯೬೩ರಲ್ಲಿ ವಾತಾವರಣ ದಲ್ಲಾಗಲಿ ಬಾಹ್ಯಾಕಾಶದಲ್ಲಾಗಲಿ ಅಥವಾ ಸಮುದ್ರದೊಳಗಡೆಯಾಗಲಿ ಪರಮಾಣು ಪರೀಕ್ಷೆ ಮಾಡುವುದನ್ನು ನಿಷೇಧಿಸುವ ಒಪ್ಪಂದಕ್ಕೆ, ಅಮೆರಿಕ, ಸೋವಿಯತ್ ಒಕ್ಕೂಟ ಹಾಗೂ ಬ್ರಿಟನ್‌ಗಳು ಸಹಿ ಹಾಕಿದವು. ಅಲ್ಲದೆ ೧೯೭೨ರಲ್ಲಿ ಅಮೆರಿಕಾ ಮತ್ತು ಸೋವಿಯತ್ ಒಕ್ಕೂಟಗಳು ಸಾಲ್ಟ್(ಸ್ಟ್ರಟೆಜಿಕ್ ಆರ್ಮ್ಸ್ ಲಿಮಿಟೇಷನ್ ಟಾಕ್ಸ್) ಒಪ್ಪಂದಕ್ಕೆ ಸಹಿ ಹಾಕಿ ಕೆಲವು ಮಾದರಿಗಳ ಕ್ಷಿಪಣಿಗಳ ತಯಾರಿಕೆಯನ್ನು ನಿಲ್ಲಿಸಲು ನಿರ್ಧರಿಸಿದವು.

ನಿರಂತರವಾಗಿ ಎರಡೂ ಶಕ್ತಿಬಣಗಳ ನಾಯಕ ರಾಷ್ಟ್ರಗಳೊಂದಿಗೆ ನಡೆಯುತ್ತಿದ್ದ ನಿಶಸ್ತ್ರೀಕರಣ ಮಾತುಕತೆಗಳಿಗೆ ಎಂಬತ್ತರ ದಶಕದಲ್ಲಿ ಸ್ವಲ್ಪ ತಡೆಯುಂಟಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನವು ಹೊಸ ರೀತಿಯ ಶಸ್ತ್ರ ವ್ಯವಸ್ಥೆಯನ್ನು ರೂಪಿಸಲು ಪ್ರಾರಂಭಿಸಿದ್ದೆ ಇದಕ್ಕೆ ಕಾರಣವಾಯಿತು. ಈ ಹೊಸ ರೀತಿಯ ಶಸ್ತ್ರ ವ್ಯವಸ್ಥೆಗೆ ಎಸ್.ಡಿ.ಐ.(ಸ್ಟಟೇಜಿಕ್ ಡಿಫೆನ್ಸ್ ಇನಿಶ್ಯೇಟಿವ್) ಅಥವಾ ಜನಪ್ರಿಯವಾಗಿ ‘ತಾರಯುದ್ಧಗಳ’ ಕಾರ್ಯಕ್ರಮ ಎಂದು ಕರೆಯಲಾಯಿತು. ಶಸ್ತ್ರಾಸ್ತ್ರ ಪೈಪೋಟಿಯನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನವಿದಾಯಿತು. ನ್ಯೂಕ್ಲಿಯರ್ ಬಾಂಬುಗಳ ಪ್ರಸರಣಕ್ಕೆ ತಡೆ ಹಾಕುವ ಒಪ್ಪಂದವೊಂದಕ್ಕೆ ೧೯೬೮ರಲ್ಲಿ ಕೆಲವು ರಾಷ್ಟ್ರಗಳು ಸಹಿ ಹಾಕಿದವು. ಇದನ್ನು ಎನ್.ಪಿ.ಟಿ.(ನ್ಯೂಕ್ಲಿಯರ್ ನಾನ್ ಪೊಲೀಪರೇಶನ್ ಟ್ರೀಟಿ) ಎಂದು ಕರೆಯುತ್ತಾರೆ. ಈ ಒಪ್ಪಂದವು ಪಕ್ಷಪಾತದಿಂದ ಕೂಡಿದ್ದರಿಂದ ಹಲವು ರಾಷ್ಟ್ರಗಳು ಭಾರತವು ಸೇರಿ, ಇದಕ್ಕೆ ಸಹಿ ಹಾಕಲು ನಿರಾಕರಿಸಿದವು. ಎನ್.ಪಿ.ಟಿ.ಯ ಮುಖ್ಯ ಉದ್ದೇಶವಿಷ್ಟೆ; ಯಾವ ರಾಷ್ಟ್ರಗಳು ಪರಮಾಣು ಶಕ್ತಿಯನ್ನು ಪಡೆದಿಲ್ಲವೊ ಅಂತಹ ರಾಷ್ಟ್ರಗಳು ಅವುಗಳನ್ನು ಎಂದಿಗೂ ಪಡೆಯದಂತೆ ನಿರ್ಬಂಧಿಸುವುದು. ಈ ಕಾರಣದಿಂದಾಗಿ ಯಾವ ರಾಷ್ಟ್ರಗಳು ಈಗಾಗಲೇ ಪರಮಾಣು ಬಾಂಬ್‌ಗಳನ್ನು ಹೊಂದಿದೆಯೊ ಅವುಗಳು ತಮ್ಮಲ್ಲಿರುವ ಬಾಂಬುಗಳನ್ನು ನಾಶಪಡಿಸುವ ಅವಶ್ಯಕತೆಯಿರು ವುದಿಲ್ಲ. ಈ ರೀತಿ ಪಕ್ಷಪಾತದಿಂದ ಕೂಡಿದ ಎನ್.ಪಿ.ಟಿ ಒಪ್ಪಂದವು ಇನ್ನೂ ಕೂಡ, ಶೀತಲ ಸಮರೋತ್ತರ ಕಾಲದಲ್ಲೂ ಅತ್ಯಂತ ವಿವಾದಾತ್ಮಕ ಹಾಗೂ ಚರ್ಚೆಯ ವಿಷಯವಾಗಿದೆ.

ಶೀತಲ ಸಮರೋತ್ತರ ಯುರೋಪ್

ಶೀತಲ ಸಮರವು ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಅಂತ್ಯಗೊಂಡಿತ್ತೆನ್ನಬಹುದು. ಶೀತಲ ಸಮರದ ಅಂತ್ಯ ಎರಡು ಮಿಲಿಟರಿ ಬಣಗಳ ನಡುವಿನ ಬಿಕ್ಕಟ್ಟು ಹಾಗೂ ಕಲಹದ ಅಂತ್ಯ ಎನ್ನಬಹುದು. ಆದರೆ ಇದರಿಂದಾಗಿ ಎರಡು ಪಂಗಡಗಳ ನಡುವಿನ ಸಂಶಯಗಳು, ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಯಿತು ಎನ್ನುವುದು ತಪ್ಪು. ಆದರೆ ಇಡೀ ಪ್ರಪಂಚವನ್ನು ಇನ್ನೊಂದು ಮಹಾಯುದ್ಧದ ಅಂಚಿಗೆ ನೂಕುವ ಸಾಧ್ಯತೆ ಖಂಡಿತವಾಗಿ ಕಡೆಮೆಯಾಯಿತು.

ಶೀತಲ ಸಮರದ ನಂತರ, ಯೂರೋಪಿನಲ್ಲಿ ನಾನಾ ರೀತಿಯ ಬೆಳವಣಿಗೆಗಳುಂಟಾದವು. ಯುರೋಪನ್ನು ಒಂದು ಭೌಗೋಳಿಕ ಘಟಕವಾಗಿ ಈ ಸಂದರ್ಭದಲ್ಲಿ ಅಧ್ಯಯನ ಮಾಡುವುದು ಕಷ್ಟ. ಪೂರ್ವ ಯುರೋಪ್ ಹಾಗೂ ಪಶ್ಚಿಮ ಯುರೋಪ್‌ನ ರಾಷ್ಟ್ರಗಳ ಮಧ್ಯೆ ಸೈದ್ಧಾಂತಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಭಿನ್ನತೆಯಿದ್ದು, ಬೇರೆ ಬೇರೆ ರೀತಿಯ ಬೆಳವಣಿಗೆಗಳು ನಡೆದಿರುವ ಕಾರಣ ನಾವು ಕೆಲವು ರಾಷ್ಟ್ರಗಳನ್ನು ವೈಯಕ್ತಿಕವಾಗಿ ಅಧ್ಯಯನ ಮಾಡಬೇಕಾಗಿದೆ.

ಯುರೋಪಿಯನ್ ಕಮ್ಯುನಿಸಂನ ಪತನ

ಪೂರ್ವಯುರೋಪಿನ ರಾಷ್ಟ್ರಗಳ ಎರಡನೆಯ ಮಹಾಯುದ್ಧದ ಕಾಲದಲ್ಲಿ ಜರ್ಮನಿ ಹಾಗೂ ಇಟಲಿಗಳ ದಾಳಿಯಿಂದ ನರಳಿದಾಗ, ಸೋವಿಯತ್ ಒಕ್ಕೂಟವು ಅವುಗಳನ್ನು ವಿಮೋಚನೆಗೊಳಿಸಿತು. ಈ ರಾಷ್ಟ್ರಗಳು ರಷ್ಯಾ ದೇಶದ ‘‘ಉಪಗ್ರಹ’’ಗಳಾಗಿ ವಾರ್ಸಾ ಒಪ್ಪಂದಕ್ಕೆ ಸೇರಿಕೊಂಡವು. ಕಮ್ಯುನಿಸ್ಟ್ ಸರ್ಕಾರಗಳನ್ನು ಹೊಂದಿದ್ದ ಕಾರಣ ಈ ರಾಷ್ಟ್ರಗಳಿಗೆ ‘‘ಯುರೋಪಿಯನ್ ರಿಕವರಿ ಪೋಗ್ರಾಂ’’ ನಡಿಯಲ್ಲಿ ಹಣಕಾಸಿನ ನೆರವು ಸಿಗಲಿಲ್ಲ. ಇದರಿಂದಾಗಿ ಅವು ಸೋವಿಯತ್ ಒಕ್ಕೂಟದ ಮೇಲೆ ಹೆಚ್ಚು ಅವಲಂಬಿತ ವಾದವು. ಆದರೆ ಸೋವಿಯತ್ ಅರ್ಥ ವ್ಯವಸ್ಥೆಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಆರ್ಥಿಕ ವ್ಯವಸ್ಥೆಯಷ್ಟು ಸಮೃದ್ದಿಯಾಗದೆ ಇದ್ದ ಕಾರಣ, ಸೋವಿಯತ್ ಒಕ್ಕೂಟಕ್ಕೆ ತನ್ನ ‘‘ಉಪಗ್ರಹ’’ ರಾಷ್ಟ್ರಗಳನ್ನು ಆರ್ಥಿಕವಾಗಿ ಪ್ರೋ ಶಕ್ತಿಯಿರಲಿಲ್ಲ. ಪೂರ್ವ ಯುರೋಪ್ ಇದರ ಪರಿಣಾಮವಾಗಿ ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯಾಗಿಯೇ ಮುಂದುವರಿಯಿತು. ಆದರೂ ಕೂಡ ಖಾಸಗಿ ಕ್ಷೇತ್ರಗಳಲ್ಲಿ ಆರ್ಥಿಕ ಶಕ್ತಿಯ ಕೇಂದ್ರೀಕರಣ ದಿಂದ ಉಂಟಾಗುವ ದುಷ್ಪರಿಣಾಮಗಳು ಮಾಯವಾಗಿ, ಆಳುವ ವರ್ಗಗಳ ಹಾಗೂ ದೊಡ್ಡ ಜಮೀನುದಾರರ ಹಿಡಿತ ಸಂಪೂರ್ಣವಾಗಿ ಈ ರಾಷ್ಟ್ರಗಳಲ್ಲಿ ಅಳಿದುಹೋದವು.

ಕಮ್ಯುನಿಸಂನ ಅಂತ್ಯ ಆರಂಭವಾಗುವ ಮೊದಲ ಸಂಕೇತ ದೊರೆತದ್ದು ೧೯೮೦ರಲ್ಲಿ, ಪೋಲೆಂಡಿನಲ್ಲಿ. ಅಲ್ಲಿನ ಕಾರ್ಮಿಕರು ‘ಸಾಲಿಡಾರಿಟಿ’ ಎಂಬ ಕಮ್ಯುನೀಷ್ಟೆತರ ಕಾರ್ಮಿಕ ಸಂಘವನ್ನು ಲೆಸ್ ವಲೆಂಸಾ ಎಂಬ ಮುಖಂಡನ ನಾಯಕತ್ವದಲ್ಲಿ ಸ್ಥಾಪಿಸಿದರು. ಹೆಚ್ಚಿನ ವೇತನ, ಚಳವಳಿಯ ಹಕ್ಕು, ವಿಸ್ತೃತ ರಾಜಕೀಯ ಹಕ್ಕುಗಳು ಇತ್ಯಾದಿಗಳು ಕಾರ್ಮಿಕರ ಮುಖ್ಯ ಬೇಡಿಕೆಗಳಾಗಿದ್ದವು. ‘‘ಸಾಲಿಡಾರಿಟಿ’’ಯ ಚಳವಳಿಯನ್ನು ಹತ್ತಿಕ್ಕುವುದಾಗಿ ರಷ್ಯಾದ ನಾಯಕ ಬ್ರೆಝೆ್ನುೀವ್ ಬೆದರಿಕೆ ಹಾಕಿದರೂ, ಅವರು ಸೈನ್ಯವನ್ನು ಕಳುಹಿಸಿಲಿಲ್ಲ. ‘‘ಸಾಲಿಡಾರಿಟಿ’’ಯು ಉಳಿದು ಬೆಳೆಯಿತು. ಆದರೆ ಬ್ರೇಜ್ನಿವ್ ೧೯೭೯ರಲ್ಲಿ ಕುಸಿಯುತ್ತಿದ್ದ ಕಮ್ಯೂನಿಸ್ಟ್ ಸರ್ಕಾರವನ್ನು ರಕ್ಷಿಸಲು ಅಫಘಾನಿಸ್ತಾನಕ್ಕೆ ಸೋವಿಯತ್ ಸೈನ್ಯವನ್ನು ಕಳುಹಿಸಿದ್ದರು.

೧೯೮೨ರಲ್ಲಿ ಬ್ರೇಜ್ನಿವ್ ತೀರಿಕೊಂಡರು. ಅವರ ನಂತರ ವಯೋವೃದ್ಧ ನಾಯಕರ ನೇಕರು ರಷ್ಯಾದ ಗಾದಿಗೆ ಬಂದರು. ಅವರು ಬಹಳಷ್ಟು ಕಾಲ ಅಧಿಕಾರದಲ್ಲಿ ಉಳಿಯ ಲಿಲ್ಲ. ಈ ವೇಳೆಗೆ ಅಫಘಾನಿಸ್ತಾನದಲ್ಲಿ ರಷ್ಯಾದ ಮಧ್ಯಪ್ರದೇಶಕ್ಕೆ ತೀವ್ರ ಪ್ರತಿರೋಧ ಕಂಡುಬಂದು ಅದೊಂದು ಗೆಲ್ಲಲಾರದ ಯುದ್ಧವಾಗಿ ಪರಿವರ್ತನೆಗೊಂಡಿತು.

ರಷ್ಯಾದಲ್ಲಿ ೧೯೮೫ರಲ್ಲಿ ಬಹಳಷ್ಟು ಯುವ ಹಾಗೂ ಪ್ರಗತಿಶೀಲ ಚಿಂತನೆಯ, ಸುಧಾರಣವಾದಿ ನಾಯಕ ಅಧಿಕಾರಕ್ಕೆ ಬಂದನು. ಮಿಖೈಲ್ ಗೋರ್ಬಚೇವ್ ಆ ನಾಯಕ ನಾಗಿದ್ದು ಉದಾರ ನೀತಿಯ ಸರ್ಕಾರವನ್ನು ಸ್ಥಾಪಿಸಿದನು. ‘‘ಗ್ಲಾಸ್‌ನೋಸ್ಟ್’’ (ಮುಕ್ತ ಚಿಂತನೆ) ಹಾಗೂ ‘‘ಪೆರೆಸ್ಟ್ರೋಯಿಕ’’(ಪುನರ್ಸಂಘಟನೆ) ನೀತಿಗಳು ಆತನ ಸರ್ಕಾರದ ತಳಹದಿಯಾಯಿತು. ಇದನ್ನು ಸೋವಿಯತ್ ಒಕ್ಕೂಟದ ಎರಡನೇ ಕ್ರಾಂತಿ ಎನ್ನುತ್ತಾರೆ.

ಗ್ಲಾಸ್‌ನೋಸ್ಟ್ ಎಂದರೆ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವಿಷಯದ ಬಗ್ಗೆ ಮುಕ್ತ ಹಾಗೂ ವಾಸ್ತವಿಕ ಚರ್ಚೆ ಹಾಗೂ ನಾಗರಿಕ ಹಕ್ಕುಗಳ ಮೇಲಣ ನಿರ್ಬಂಧಗಳ ನಿರ್ಮೂಲನ. ಇದರಿಂದಾಗಿ ಕಮ್ಯೂನಿಸ್ಟ್ ಪಕ್ಷದ ಹಿಂದಿನ ಹಿಡಿತ ಸಡಿಲಗೊಂಡು ೧೯೯೦ರಲ್ಲಿ ಕಮ್ಯೂನಿಸ್ಟೇತರ ಪಕ್ಷಗಳು ಅಸ್ತಿತ್ವಕ್ಕೆ ಬರಲು ಅವಕಾಶವಾಯಿತು.

ಪೆರೆಸ್ಟ್ರೋಯಿಕ, ಸೋವಿಯತ್ ಅರ್ಥವ್ಯವಸ್ಥೆಯನ್ನು ಸುಧಾರಿಸುವತ್ತ ಒಂದು ಪ್ರಯತ್ನ. ಆದರೆ ಈ ನೀತಿಯು ಬಹಳಷ್ಟು ಯಶಸ್ಸನ್ನು ಗಳಿಸಲಿಲ್ಲ. ವಿದೇಶಾಂಗ ನೀತಿಯಲ್ಲಿ ಕೂಡ ಗೋರ್ಬಚೆವ್ ಕಾಲದಲ್ಲಿ ಕೆಲವು ದೊಡ್ಡ ಬದಲಾವಣೆಗಳಾದವು. ಸಮಾಜವಾದಿ ಸರ್ಕಾರಗಳ ಅಸ್ತಿತ್ವಕ್ಕೆ ಆಂತರಿಕವಾಗಿ ಅಥವಾ ಬಾಹ್ಯವಾಗಿ ಬೆದರಿಕೆಗಳು ಬಂದಾಗ ಆ ಸರ್ಕಾರಗಳ ರಕ್ಷಣೆಗಾಗಿ ಮಧ್ಯ ಪ್ರವೇಶ ಮಾಡುವುದು ಇನ್ನೊಂದು ಸಮಾಜವಾದಿ ಸರ್ಕಾರದ ಕರ್ತವ್ಯ ಎಂದು ಸಾರಿದ ಬ್ರೆಜ್ನೀವ್ ನೀತಿಗೂ, ಇದರ ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡ ಗೋರ್ಬಚೆವ್ ನೀತಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅದರಂತೆಯೇ ೧೯೮೯ರಲ್ಲಿ ಅಫಘಾನಿಸ್ತಾನದಿಂದ ರಷ್ಯಾದ ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಯಿತು.

ಯಾವಾಗ ಕಮ್ಯುನಿಸ್ಟ್ ರಾಷ್ಟ್ರಗಳಿಗೆ ತಮ್ಮ ಮೇಲಿನ ನಿರ್ಬಂಧಗಳು ಸಡಿಲವಾಗುತ್ತಿದೆ ಎಂದು ಕಂಡುಬಂದಿತೋ ಆಗ ಕಮ್ಯುನಿಸ್ಟೇತರ ಶಕ್ತಿಗಳು ಉತ್ತೇಜಿತರಾಗಿ ಯೂರೋಪಿ ನಲ್ಲಿ ಕಮ್ಯುನಿಸ್ಟ್ ಸರ್ಕಾರಗಳನ್ನು ಕಿತ್ತೆಸೆಯಲು ಪ್ರಾರಂಭಿಸಿದರು. ಇಡೀ ಕಮ್ಯುನಿಸ್ಟ್ ಒಕ್ಕೂಟ ವ್ಯವಸ್ಥೆ ಅನಿರೀಕ್ಷಿತ ವೇಗದಲ್ಲಿ ಕುಸಿಯತೊಡಗಿತು. ಸೋವಿಯತ್ ಒಕ್ಕೂಟದ ಅವಿಭಾಜ್ಯ ಅಂಗಗಳಾಗಿದ್ದ ಹದಿನೈದು ಸ್ವಾಯತ್ತ ಗಣರಾಜ್ಯಗಳು ಒಕ್ಕೂಟ ವ್ಯವಸ್ಥೆಯಿಂದ ಹೊರಬಂದು ಸ್ವತಂತ್ರವಾದುವು. ೧೯೯೦ರಲ್ಲಿ ‘‘ಸಾಲಿಡಾರಿಟಿ’’ಯು ಅಧಿಕಾರಕ್ಕೆ ಬರುವುದರ ಮೂಲಕ ಪೋಲೆಂಡಿನಲ್ಲಿ ಸಮಾಜವಾದಿ ವ್ಯವಸ್ಥೆ ಮಾಯವಾಗಿ ಪ್ರಜಾಪ್ರಭುತ್ವ ಅಧಿಕಾರಕ್ಕೆ ಬಂದಿತು. ೧೯೮೯ರಲ್ಲಿ ಹಂಗೇರಿಯ ಕಮ್ಯೂನಿಸ್ಟ್ ಪಾರ್ಟಿಯು ತನ್ನ ಹೆಸರನ್ನು ಬದಲಾಯಿಸಿ ಕೊಂಡಿತು ಮತ್ತು ಚುನಾವಣೆಯಲ್ಲಿ ಸೋಲನ್ನುಂಡಿತು. ಜೆಕೋಸ್ಲೊವಾಕಿಯಾದಲ್ಲಿ ಸುಧಾರಣ ಚಳವಳಿಯು ೧೯೮೯ರಲ್ಲಿ ಪ್ರಾರಂಭವಾಯಿತು. ಇದರ ಪರಿಣಾಮವಾಗಿ ಕಮ್ಯೂನಿಸ್ಟ್ ಪಕ್ಷ ವಿಸರ್ಜನೆಗೊಂಡಿತ್ತಲ್ಲದೆ ‘ವಕ್ಲಾವ್ ಹೇವಲ್’ ಎಂಬ ಸಾಹಿತಿ ೧೯೮೯ರ ಡಿಸೆಂಬರ್‌ನಲ್ಲಿ ಅಧ್ಯಕ್ಷನಾಗಿ ಆಯ್ಕೆಯಾದರು. ೧೯೯೦ರ ಆಗಸ್ಟ್‌ನಲ್ಲಿ ಬಲ್ಗೇರಿಯಾವು ಮೊದಲ ಕಮ್ಯುನಿಸ್ಟೇತರ ನಾಯಕನನ್ನು ಆಯ್ಕೆ ಮಾಡಿತು. ರುಮೇನಿಯಾದಲ್ಲಿ, ೧೯೮೯ರ ಡಿಸೆಂಬರಿನಲ್ಲಿ, ಅಲ್ಲಿಯವರೆಗೆ ಆ ದೇಶವನ್ನು ಉಗ್ರ ಮುಷ್ಟಿಯಲ್ಲಿಟ್ಟುಕೊಂಡು ಆಳಿದ ಸರ್ವಾಧಿಕಾರಿ ನಿಕೋಲೆಚೆಚೆಸ್ಕ್ಸೂ, ಪತ್ನಿ ಸಮೇತವಾಗಿ ವಧಿಸಲ್ಪಟ್ಟನು. ೧೯೯೨ರ ಫೆಬ್ರವರಿಯಲ್ಲಿ ಕಮ್ಯುನಿಸ್ಟೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಇತರೆಡೆಗಳಂತೆ ಯುಗೋಸ್ಲಾವಿಯಾದಲ್ಲೂ ೧೯೯೦ರ ವೇಳೆಗೆ ಕಮ್ಯುನಿಸ್ಟ್ ಸರ್ಕಾರ ಪತನವಾಯಿತು. ೧೯೯೨ರ ಆರಂಭದಲ್ಲಿ ಯುಗೋಸ್ಲೋವಿಯಾದ ರಾಜ್ಯಗಳಾದ ಕ್ರೊವೇಶಿಯಾ, ಸ್ಲೋವೆನಿಯಾ, ಮ್ಯಾಸಿಮೋನಿಯಾ ಹಾಗೂ ಬೋಸ್ನಿಯಾ- ಹರ್ಜೇಗೋ ವಿನಾಗಳು ಯುಗೋಸ್ಲಾವಿಯಾದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡವು. ಸರ್ಬಿಯ ಹಾಗೂ ಮಾಂಟೆನೇಗ್ರೊಗಳು ಸೇರಿ ಹೊಸ ಯುಗೋಸ್ಲಾವಿಯಾ ರಾಜ್ಯವನ್ನು ರಚಿಸಿ ಕೊಂಡವು. ಬೋಸ್ನಿಯಾ-ಹರ್ಜೆಗೋವಿನಾ ರಾಜ್ಯ ತನ್ನ ಸ್ವಾತಂತ್ರ್ಯವನ್ನು ಘೋಷಿಸಿ ಕೊಂಡದ್ದು ಬೋಸ್ನಿಯಾದ ಸರ್ಬರಿಗೆ ಸರಿಹೋಗದೆ ಅವರು ಸರ್ಬಿಯಾದ ನೆರವಿನಿಂದ, ಬೋಸ್ನಿಯಾದ ಮುಸ್ಲಿಂರನ್ನು ಹತ್ತಿಕ್ಕುವ ಕಾರ್ಯಚರಣೆಯನ್ನು ಪ್ರಾರಂಭಿಸಿದರು. ಇದರಿಂದಾಗಿ ಪೂರ್ವ ಯುರೋಪಿನ ಈ ಭಾಗ ಈಗಲೂ ಹಿಂಸಾ ಘಟನೆಗಳನ್ನು ಅನುಭವಿಸುತ್ತಿರುವುದನ್ನು ನಾವು ಕಾಣಬಹುದು.

೧೯೮೯ರ ಬದಲಾವಣೆಯ ಗಾಳಿಯ ಸುಳಿಗೆ ಸಿಕ್ಕಿ ನಡೆದ ಇನ್ನೊಂದು ಮಹತ್ತರ ಘಟನೆ ಎಂದರೆ ಜರ್ಮನಿಗಳ ಏಕೀಕರಣ. ೧೯೮೯ರ ನವೆಂಬರ್‌ನಲ್ಲಿ ಬರ್ಲಿನ್ ಗೋಡೆಯನ್ನು ತೆರೆದಿಡುವುದಕ್ಕೆ ಪೂರ್ವ ಜರ್ಮನಿ ಸರ್ಕಾರ ನಿರ್ಧರಿಸಿತು. ೧೯೯೦ರಲ್ಲಿ ಪೂರ್ವ ಜರ್ಮನಿ ಸರ್ಕಾರವು (ಕಮ್ಯೂನಿಸ್ಟ್ ಸರ್ಕಾರ), ತಾನು, ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ಏಕೀಕರಣದ ಪರವಾಗಿದ್ದೇನೆಂದು ಘೋಷಿಸಿತು. ಇದರ ಫಲವಾಗಿ ಪೂರ್ವ ಜರ್ಮನಿ(ಜರ್ಮನ್ ಡೆಮೊಕ್ರಾಟಿಕ್ ರಿಪಬ್ಲಿಕ್) ಮತ್ತು ಪಶ್ಚಿಮ ಜರ್ಮನಿ (ಫೆಡರಲ್ ಜರ್ಮನ್ ರಿಪಬ್ಲಿಕ್)ಗಳು ಒಟ್ಟಾಗಿ ಒಂದು ಏಕೀಕೃತ ಜರ್ಮನಿಯು ೧೯೯೦ರ ಅಕ್ಟೋಬರ್ ಮೂರರಂದು ಅಸ್ತಿತ್ವಕ್ಕೆ ಬಂದಿತು. ಪ್ರಜಾಪ್ರಭುತ್ವ ವ್ಯವಸ್ಥೆಯು ಜನರಿಚ್ಛೆಯಂತೆ ಸ್ಥಾಪಿತವಾಯಿತು.

ಪೂರ್ವ ಯುರೋಪಿನಲ್ಲಿ ಎಲ್ಲಾ ಕಮ್ಯೂನಿಸ್ಟ್ ಸರ್ಕಾರಗಳು ಉರುಳಿ ಬಿದ್ದಾಗ, ಅವುಗಳ ರಕ್ಷಣೆಗೆಂದೇ ಸೃಷ್ಟಿಯಾಗಿದ್ದ ವಾರ್ಸಾ ಒಪ್ಪಂದ ಕೂಡ ತನ್ನ ಅವಶ್ಯಕತೆಯನ್ನು, ಮಹತ್ವವನ್ನು ಕಳೆದುಕೊಂಡು ೧೯೯೧ರಲ್ಲಿ ವಿಸರ್ಜಿಸಲ್ಪಟ್ಟಿತು. ಪೂರ್ವ ಯುರೋಪಿನಲ್ಲಿ ಶೀತಲ ಸಮರೋತ್ತರ ಕಾಲದಲ್ಲಿ ಮೇಲ್ಕಂಡ ಬದಲಾವಣೆ ಗಳು ನಡೆಯುತ್ತಿದ್ದರೆ, ಪಶ್ಚಿಮ ಯುರೋಪಿನಲ್ಲಿ ಇನ್ನೊಂದು ರೀತಿಯ ಬದಲಾವಣೆಗಳು ರೂಪುಗೊಳ್ಳುತ್ತಿದ್ದವು.

ಯುರೋಪಿನ ಒಗ್ಗಟ್ಟು

ಪಶ್ಚಿಮ ಯುರೋಪಿನ ಏಕೀಕರಣಕ್ಕಾಗಿ ಚಳವಳಿಯೊಂದು ಎಂಬತ್ತರ ದಶಕದಲ್ಲಿ ಬಲಗೊಂಡಿತು. ಈ ದಿಶೆಯಲ್ಲಿ ಮೊದಲ ಹೆಜ್ಜೆ ಇಟ್ಟ ರಾಷ್ಟ್ರ ವೆಂದರೆ ಫ್ರಾನ್ಸ್. ತಾನು ಏಕೀಕೃತ ಪಶ್ಚಿಮ ಯುರೋಪಿನ ಸ್ವಾಭಾವಿಕ ನಾಯಕನೆಂದು ಫ್ರಾನ್ಸ್ ನಂಬಿತ್ತು. ಏಕೀಕರಣದ ಪ್ರಕ್ರಿಯೆಯಲ್ಲಿ ಮೊದಲ ಘಟ್ಟ ೧೯೫೭ರಲ್ಲಿ ರಚಿಸಲ್ಪಟ್ಟ ಐರೋಪ್ಯ ಆರ್ಥಿಕ ಸಮುದಾಯ. ಇದರಲ್ಲಿದ್ದ ರಾಷ್ಟ್ರಗಳೆಂದರೆ ಫ್ರಾನ್ಸ್, ಪಶ್ಚಿಮ ಜರ್ಮನಿ, ಬೆಲ್ಜಿಯಂ, ಹಾಲೆಂಡ್, ಲುಕ್ಸೆಂಬರ್ಗ್ ಹಾಗೂ ಇಟಲಿ. ಈ ರಾಷ್ಟ್ರಗಳು ಸೇರಿ ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸ್ಥಾಪಿಸಿದವು. ಈ ಸಮುದಾಯಕ್ಕೆ ಮುಂದೆ ಇಂಗ್ಲೆಂಡ್, ಡೆನ್ಮಾರ್ಕ್ ಹಾಗೂ ಐರ್ಲೆಂಡ್‌ಗಳು ಸೇರಿಕೊಂಡವು. ತೀರ ಇತ್ತೀಚೆಗೆ ಗ್ರೀಸ್, ಸ್ಪೇನ್ ಹಾಗೂ ಪೋರ್ಚುಗಲ್‌ಗಳು ಕೂಡ ಸೇರಿಕೊಂಡವು. ತಮ್ಮ ಸಂಘಟನೆಯ ಆಡಳಿತಕ್ಕಾಗಿ ಐರೋಪ್ಯ ಪಾರ್ಲಿಮೆಂಟ್‌ನ್ನು ಕೂಡ ರಚಿಸಿಕೊಂಡವು.

ಈ ಎಲ್ಲಾ ಬೆಳವಣಿಗೆಗಳಿಂದ ಪಶ್ಚಿಮ ಯುರೋಪ್ ಒಂದು ಬಲಶಾಲಿಯಾದ ರಾಜಕೀಯ ಘಟಕವಾಗಿ ಹೊರಹೊಮ್ಮುವ ಸಾಧ್ಯತೆ ನಿಜವಾಗಿದೆ. ಈಗಾಗಲೇ ಇ.ಇ.ಸಿ. ರಾಷ್ಟ್ರಗಳಲ್ಲಿ ಒಂದೇ ನಾಣ್ಯ ಪದ್ಧತಿಯನ್ನು ತರುವ ಪ್ರಯತ್ನ ನಡೆದಿದೆ. ಇ.ಇ.ಸಿ ರಾಷ್ಟ್ರಗಳಲ್ಲಿ ಪ್ರವಾಸ ಮಾಡುವ ಐರೋಪ್ಯರಿಗೆ ಪಾಸ್‌ಪೋರ್ಟನ್ನು ರದ್ದು ಮಾಡುವ ಚಿಂತನೆ ಅನುಷ್ಟಾನವಾಗುವ ಸಾಧ್ಯತೆಯಿದೆ. ಜರ್ಮನಿಯು ಅತ್ಯಂತ ಬಲಶಾಲಿಯಾದ ಆರ್ಥಿಕ ಶಕ್ತಿಯಾಗಿ ಇ.ಇ.ಸಿ. ಸೇರಿದೆ. ವಸಾಹತುಗಳನ್ನು, ಸಾಮ್ರಾಜ್ಯಗಳನ್ನು ಹಾಗೂ ಅಪಾರ ವ್ಯಾಪಾರ-ವಾಣಿಜ್ಯಗಳನ್ನು ಕಳೆದುಕೊಂಡರೂ, ಪಶ್ಚಿಮ ಯುರೋಪಿನ ರಾಷ್ಟ್ರಗಳು ಒಟ್ಟಿಗೆ ಸೇರಿ, ಶೀತಲ ಸಮರೋತ್ತರ ಕಾಲದಲ್ಲಿ ಪ್ರಪಂಚದಲ್ಲಿ ಹೊಸಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇದರಿಂದಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಮೇಲೆ ಯುರೋಪಿನ ಆರ್ಥಿಕ ಅವಲಂಬನೆ ಕಡಿಮೆಯಾಗಿದೆ ಮತ್ತು ವಿಶ್ವ ರಾಜಕೀಯದಲ್ಲಿ ಸ್ವತಂತ್ರ್ಯವಾಗಿ ವ್ಯವಹರಿಸುವ ತಾಕತ್ತು ಗಳಿಸಿಕೊಂಡಿದೆ.

ಈ ರೀತಿ ಶೀತಲ ಸಮರೋತ್ತರ ಕಾಲದಲ್ಲಿ ಯುರೋಪಿನಲ್ಲಿ ಬಹುತೇಕ ಬದಲಾವಣೆ ಗಳು, ಅಚ್ಚರಿಯೆನಿಸುವಷ್ಟು ಶಾಂತ ರೀತಿಯಲ್ಲಿ ನಡೆಯಿತ್ತಲ್ಲದೆ ಯುರೋಪ್ ಇಂದು ಒಂದು ವಿಶ್ವ ಶಕ್ತಿಯಾಗಿ ಹೊರಹೊಮ್ಮುತ್ತಿದೆ.

 

ಪರಾಮರ್ಶನ ಗ್ರಂಥಗಳು

೧. ಗೋರ್ಬಚವ್ ಎಂ.ಎಸ್., ೧೯೮೬. ಪೀಸ್ ಹ್ಯಾಸ್ ನೋ ಆಲ್ಟರ್‌ನೇಟೀವ್, ಸ್ಪೀಚಸ್, ಆರ್ಟಿಕಲ್ಸ್, ನ್ಯೂಡೆಲ್ಲಿ: ಇಂಟರ್‌ವ್ಯೆಸ್.

೨. ಮಾರ್ಟನ್ ಮತ್ತು ಜೆರಾಲ್ಡ್ ಸೆಗಲ್(ಸಂ), ೧೯೮೪. ಸೋವಿಯತ್ ಸ್ಟ್ರ್ಯಾಟಜಿ ಟ್ಡುವರ್ಡ್ ವೆಸ್ಟರ್ನ್  ಯುರೋಪ್, ಲಂಡನ್.

೩. ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ೧೯೮೮. ಚೇಂಜಿಂಗ್ ಪರ್ ಸೆಷ್ಷನ್ಸ್ ಆಫ್ ಇಂಟರ್‌ನೇಷನಲ್ ರಿಲೇಶನ್ಸ್, ದೆಹಲಿ

೪. ಸುಬ್ರಮಣ್ಯಂ ಕೆ.(ಸಂ), ೧೯೮೮. ದಿ ಸೆಕೆಂಡ್ ಕೋಲ್ಡ್ ವಾರ್, ದೆಹಲಿ