ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡಿನಲ್ಲಿ ಧಾರ್ಮಿಕ ಸುಧಾರಣೆ

ಇಂಗ್ಲೆಂಡಿನ ರಾಜ ಎಂಟನೆಯ ಹೆನ್ರಿಗೆ (೧೫೦೯-೧೫೪೭) ತನ್ನ ಹೆಂಡತಿ ಕ್ಯಾಥರೀನಳಿಂದ ಗಂಡು ಮಗು ಆಗಲಿಲ್ಲ. ಮಗಳು ರಾಜ್ಯಕ್ಕೆ ವಾರಸುದಾರಳಾಗಬಹುದಿತ್ತಾದರೂ ಹೆನ್ರಿಗೆ ರಾಜ್ಯಭಾರ ಮಾಡಲು ಮಗನಿಲ್ಲದಿದ್ದರೆ ಆಗಬಹುದಾದ ಕಲಹಗಳ ಅರಿವಿತ್ತು. ಕ್ಯಾಥರೀನಳಿಂದ ಹೆನ್ರಿ ವಿಚ್ಛೇದನ ಪಡೆಯಲು ಬಯಸಿದ. ಆದರೆ ಕ್ಯಾಥರೀನಳು ಏಳನೆಯ ಪೋಪ್ ಕ್ಲೆಮೆಂಟ್‌ನನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿದ್ದ ಚಕ್ರವರ್ತಿ ಐದನೆಯ ಚಾರ್ಲ್ಸ್‌ನ ಸಹೋದರಿಯಾಗಿದ್ದಳು. ಆದ್ದರಿಂದ ಹೆನ್ರಿಯು ವಿಚ್ಛೇದನಕ್ಕೆ ಅನುಮತಿ ಕೇಳಿದರೂ ಪೋಪ್ ಕೊಡಲಿಲ್ಲ. ೧೫೩೪ರಲ್ಲಿ ಎಂಟನೆಯ ಹೆನ್ರಿಯು ಪೋಪನ ಅಧಿಕಾರ ವನ್ನು ಧಿಕ್ಕರಿಸಿ, ರಾಜನೇ ಅಧ್ಯಕ್ಷನಾಗಿರುವ ಆಂಗ್ಲಿಕನ್ ಚರ್ಚನ್ನು ಸ್ಥಾಪಿಸಿದ.

ಹೆನ್ರಿಯು ಆಂಗ್ಲಿಕನ್ ಚರ್ಚನ್ನು ಸ್ಥಾಪಿಸಿದ್ದು ಒಂದು ರಾಜಕೀಯ ಕ್ರಿಯೆಯಾದರೂ ಅದು ಧಾರ್ಮಿಕ ಸುಧಾರಣೆಗೆ ಇಂಬುಕೊಟ್ಟಿತು. ಲೊಲ್ಲಾರ್ಡ್‌ಗಳು (ಜಾನ್‌ವೈಕ್ಲಿಫ್‌ನ ಅನುಯಾಯಿಗಳು), ಲೂಥರನ ಪಂಥದವರು ಮತ್ತು ಎರಾಸ್ಮಸ್‌ನ ಅನುಯಾಯಿಗಳು -ಎಲ್ಲರೂ ಸಹ ಧಾರ್ಮಿಕ ಸುಧಾರಣೆಗೆ ತಮ್ಮ ಕಾಣಿಕೆ ನೀಡಿದರು. ಮಠಗಳನ್ನು ಹತ್ತಿಕ್ಕಿದ್ದು, ಬೈಬಲ್ ಅನ್ನು ಬೇರೆ ದೇಶೀಯ ಭಾಷೆಗಳಿಗೆ ಭಾಷಾಂತರ ಮಾಡಿದ್ದು ಮತ್ತು ಚರ್ಚಿನ ಪಾದ್ರಿಗಳಿಗೆ ಮದುವೆಯಾಗುವ ಅನುಮತಿ ನೀಡಿದ್ದು -ಇವುಗಳು ಈ ಎಲ್ಲ ಚಳವಳಿಗಳಿಂದ ಆದ ಮುಖ್ಯ ಬದಲಾವಣೆಗಳು. ಪಾದ್ರಿಗಳಿಗೆ ಮದುವೆಯಾಗುವ ಅನುಮತಿಯನ್ನು ಹಿಂತೆಗೆದುಕೊಳ್ಳಲಾಯಿತಾದರೂ ಸುಧಾರಣೆಗಳಿಗೆ ಪ್ರತಿರೋಧ ಉಂಟಾಗಿದ್ದು ಬಹಳ ಕಡಿಮೆ ಎನ್ನಬಹುದು.

೧೫೪೭ರಲ್ಲಿ ಆರನೆಯ ಎಡ್ವರ್ಡನು ಪಟ್ಟಕ್ಕೆ ಬಂದ ನಂತರ ಸಿದ್ಧಾಂತಗಳು, ಪ್ರಾರ್ಥನೆಯ ರೀತಿ ನೀತಿಗಳು ಎಲ್ಲದರಲ್ಲಿ ಸುಧಾರಣೆಗಳು ಭರದಿಂದ ಸಾಗಿದವು. ಪ್ರಾರ್ಥನಾ ಪುಸ್ತಕ ಇತ್ಯಾದಿಗಳಲ್ಲಿ ಬದಲಾವಣೆಗಳು ಉಂಟಾದರೂ, ಧರ್ಮೋಪದೇಶಕರ ಬಗೆಗಿನ ನೀತಿನಿಯಮಗಳಲ್ಲಿ ಬದಲಾವಣೆ ತರಲು ಇಂಗ್ಲಿಷ್ ಶ್ರೀಮಂತ ವರ್ಗ ಪಾರ್ಲಿಮೆಂಟಿನಲ್ಲಿ ತಡೆ ಒಡ್ಡಿತು.

ಆರನೆಯ ಎಡ್ವರ್ಡ್‌ನ ಮರಣದ ನಂತರ ಕ್ಯಾಥೊಲಿಕ್ ಸಮುದಾಯದ ಮೇರಿ ರಾಜ್ಯವಾಳಲು ಆರಂಭಿದಳು. ಈಕೆ ಅಧಿಕಾರಕ್ಕೆ ಬಂದ ತಕ್ಷಣ ಬಹಳಷ್ಟು ಪ್ರಾಟೆಸ್ಟೆಂಟರು ದೇಶ ಬಿಟ್ಟು ಓಡಿಹೋದರು. ಇನ್ನು ಕೆಲವು ಹುತಾತ್ಮರಾದರು. ಇಂಗ್ಲೆಂಡ್‌ನಿಂದ ಬಹಿಷ್ಕೃತರಾದವರು ರಾಜಾಧಿಪತ್ಯದ ವಿರುದ್ಧ ದಂಗೆ ಏಳಲು ಜನರನ್ನು ಪೋತ್ಸಾಹಿಸಿದರು. ಜಿನಿವಾದಲ್ಲಿದ್ದವರಿಗೆ ಒಂದು ಮಾದರಿಯಾದ ಚರ್ಚ್‌ನ ಉದಾಹರಣೆ ಅವರೆದುರಿಗೆ ಇತ್ತು. ಬಹಿಷ್ಕೃತಗೊಂಡವರು ಜಾನ್ ಫಾಕ್ಸ್‌ನ ‘‘ಆಕ್ಟ್ಸ್ ಅಂಡ್ ಮಾನ್ಯುಮೆಂಟ್ಸ್’’ (ಇದು ಬುಕ್ ಆಫ್ ಮಾರ್ಟೈರ್ಸ್ ಎಂದು ಜನಪ್ರಿಯವಾಗಿದೆ) ಮತ್ತು ‘‘ಜಿನಿವಾ ಬೈಬಲ್’’ ಎಂಬ ಪುಸ್ತಕಗಳ ಮೂಲಕ ಧಾರ್ಮಿಕ ಸಿದ್ಧಾಂತಗಳನ್ನು ಪ್ರಭಾವಿಸಿದರು.

೧೫೫೮ರಲ್ಲಿ ಪ್ರಾಟೆಸ್ಟೆಂಟಳಾದ ಒಂದನೆಯ ಎಲಿಜಬೆತ್‌ಳ ಆಳ್ವಿಕೆ ಆರಂಭವಾದಾಗ ಮತ್ತೊಮ್ಮೆ ಸುಧಾರಣಾ ಚಳವಳಿ ಆರಂಭವಾಯಿತು. ಈಕೆ ‘‘ಆಕ್ಟ್ ಆಫ್ ಸುಪ್ರಿಮೆಸಿ’’ ಮತ್ತು ‘‘ಆಕ್ಟ್ ಆಫ್ ಯುನಿಫಾರ್ಮಿಟಿ’’ ಎಂಬ ಎರಡು ಕಾಯ್ದೆಗಳನ್ನು ಜಾರಿಗೆ ತಂದಳು. ಎರಡನೆಯ ಕಾಯ್ದೆಯು ಪಾದ್ರಿಯ ಅಧಿಕಾರ ವ್ಯಾಪ್ತಿಯ ಪ್ರದೇಶಗಳಲ್ಲೆಲ್ಲ  ಒಂದೇ ಪ್ರಾರ್ಥನಾ ಪುಸ್ತಕವನ್ನು ಬಳಸಬೇಕೆಂಬ ನಿಯಮವನ್ನು ಜಾರಿಗೆ ತಂದಿತು. ಕ್ಯಾಂಟರ್‌ಬರಿ ಮತ್ತು ಯಾರ್ಕ್‌ನ ಸಭೆಗಳು ಆಂಗ್ಲಿಕನ್ ಧರ್ಮವನ್ನು ೩೯ ಅಂಶಗಳಲ್ಲಿ ವಿವರಿಸಿದವು. ಒಂದೇ ಪ್ರಾರ್ಥನಾ ಪುಸ್ತಕ ಮತ್ತು ಇತರ ಶಿಸ್ತುಗಳನ್ನು ಪಾಲಿಸಲು ಸಾಧ್ಯವಾಗದೇ ಹೋದಾಗ ಸುಧಾರಕರು ತಮ್ಮ ಬೆಂಬಲಕ್ಕಾಗಿ ಪಾರ್ಲಿಮೆಂಟಿನ ಮೊರೆ ಹೋದರು.

ಜಾನ್‌ನಾಕ್ಸ್‌ನ ಪಾತ್ರ

ಸ್ಕಾಟ್‌ಲ್ಯಾಂಡ್ ಕಾಲ್ವಿನ್ ಪಂಥದತ್ತ ಸರಿಯಿತು. ಜಾನ್‌ನಾಕ್ಸ್‌ನು ಸ್ಕಾಟ್ಲೆಂಡಿನ ಮೇರಿಯನ್ನು ಧಿಕ್ಕರಿಸಿದ. ಯಾಕೆಂದರೆ ಅವನಿಗೆ ಟ್ಯೂಡರ್‌ನ ಮೇರಿ ಇಂಗ್ಲೆಂಡಿಗೆ ತಂದ ಸ್ಥಿತಿಯನ್ನೇ ಈಕೆ ಸ್ಕಾಟ್ಲೆಂಡಿಗೆ ತರಬಹುದೆಂಬ ಭಯ ಇತ್ತು.

ಜಾನ್‌ನಾಕ್ಸ್‌ನಿಗೆ ಸಾಮೂಹಿಕ ಪ್ರಾರ್ಥನೆ ಆಚರಿಸುವುದು ಸಂಪೂರ್ಣವಾಗಿ ಇಷ್ಟ ವಿರಲಿಲ್ಲ. ಇದು ಅವನಿಗೆ ಪೋಪ್‌ನ ಅಧಿಪತ್ಯ ಮತ್ತು ಕ್ಯಾಥೊಲಿಕ್ ಚರ್ಚ್‌ನ ಬಗ್ಗೆ ಇದ್ದ ತೀವ್ರ ವಿರೋಧವನ್ನು ಸೂಚಿಸುತ್ತದೆ.

ಆದರೆ ಈ ಸಮಯದಲ್ಲಿ ಬಹಳಷ್ಟು ಘಟನೆಗಳು ರೋಮ್‌ನಲ್ಲಿ ನಡೆಯುತ್ತಿದ್ದವು. ೧೫೪೨ರಲ್ಲಿ ಮೂರನೆಯ ಪೋಪ್ ಪಾಲ್ ರೋಮನ್ ಇಂಕ್ವಿಜಿಷನ್ ಅನ್ನು ಸ್ಥಾಪಿಸಿದ. ೪ನೆಯ ಪಾಲ್ ಎರಾಸ್ಮಸ್‌ನ ಎಲ್ಲ ಬರಹಗಳನ್ನು ಬಹಿಷ್ಕೃತ ಕೃತಿಗಳು ಎಂದು ಪಟ್ಟಿ ಮಾಡಿದ. ೧೫೪೫ರ ಟ್ರೆಂಟ್‌ನ ಸಮಾವೇಶ ಕ್ಯಾಥೊಲಿಕ್ ಪಂಥದಲ್ಲಿ ಇನ್ನಷ್ಟು ಬಲವಾದ ಕಟ್ಟುಪಾಡುಗಳನ್ನು ಆಚರಿಸಲು ಕಾರಣವಾಯಿತು.

ಪ್ಯೂರಿಟಾನಿಸಂನ ಉದಯ

ಒಂದನೆಯ ಎಲಿಜಬೆತ್ ಸಂಪ್ರದಾಯವಾದಿಯಾಗಿದ್ದರೂ ಧಾರ್ಮಿಕ ಸುಧಾರಣೆ ಈಕೆಯ ಅವಧಿಯಲ್ಲಿ ಬಲವಾಗಿ ನಡೆಯಿತು. ೧೬ನೆಯ ಶತಮಾನದ ಕೊನೆಯ ಭಾಗದಲ್ಲಿ ಹಾಗೂ ೧೭ನೆಯ ಶತಮಾನದ ಆದಿಭಾಗದಲ್ಲಿ ಇಂಗ್ಲಿಷ್ ಸಮಾಜದ ಮೇಲೆ ಪ್ರಾಟೆಸ್ಟೆಂಟರ ಪ್ರಭಾವ ಅಧಿಕವಾಯಿತು. ಈ ಪ್ರಕ್ರಿಯೆಯನ್ನು ಪ್ಯೂರಿಟಾನಿಸಂ (ಧರ್ಮಶುದ್ದಿವಾದ) ಎಂದು ಹೆಸರಿಸಲಾಗುತ್ತದೆ.

ಎಲಿಜಬೆತ್‌ಳ ಆಡಳಿತ ನೆಲೆಗೊಂಡ ನಂತರ ಪಾದ್ರಿಗಳು ಪ್ರಾರ್ಥನಾ ಸಮಯದಲ್ಲಿ ತಮಗೆ ಇಷ್ಟಬಂದ ಉಡುಪುಗಳನ್ನು ಉಡಲು ಆರಂಭಿಸಿದರು. ಆದರೆ ಇದಕ್ಕೆ ಸಂಪ್ರದಾಯವಾದಿಗಳಿಂದ ಆಕ್ಷೇಪಣೆ ಕಂಡುಬಂದ ನಂತರ, ಈಕೆ ೧೫೬೪ರಲ್ಲಿ ಮ್ಯಾಥ್ಯೂ ಪಾರ್ಕರ್‌ಗೆ ಚರ್ಚ್‌ನ ಪ್ರಾರ್ಥನಾ ವಿಷಯಗಳಲ್ಲಿ ಏಕರೂಪತೆ ತರಲು ಕ್ರಮ ಕೈಗೊಳ್ಳು ವಂತೆ ಸೂಚಿಸಿದಳು. ಪಾರ್ಕರ್ ನಿಗದಿಪಡಿಸಿದ ವೇಷಭೂಷಣಗಳನ್ನು ಉಡದೆ ವಿರೋಧ ವ್ಯಕ್ತಪಡಿಸಿದವರನ್ನು ‘‘ಪ್ಯೂರಿಟನ್’’ಗಳು ಅಥವಾ ‘‘ಪ್ರಿಸಿಶಿಯನ್’’ಗಳು ಎಂದು ಕರೆಯಲಾಯಿತು. ಯಾಕೆಂದರೆ ಇವರು ಬಟ್ಟೆ ಬರೆಗಳಂಥ ಸಾಮಾನ್ಯ ವಿಷಯ ಗಳಲ್ಲೂ ರಾಣಿಯ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು. ಮುಂದೆ ಈ ಪ್ಯೂರಿಟನ್ನರಿಂದ ಪ್ರಾಟೆಸ್ಟೆಂಟ್ ನೀತಿಶಾಸ್ತ್ರ ಹುಟ್ಟಲು ಕಾರಣವಾಯಿತು ಎಂದು ಮ್ಯಾಕ್ಸ್ ವೆಬರ್ ಗುರುತಿಸುತ್ತಾನೆ.

೧೫೭೦ರಲ್ಲಿ ಥಾಮಸ್ ಕಾರ್ಟ್‌ವ್ರೈಟ್ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಚರ್ಚ್ ಸರ್ಕಾರದ ಕುರಿತು ಹಲವಾರು ಉಪನ್ಯಾಸ ನೀಡಿದ. ಈತ ಆರ್ಚ್‌ಬಿಷಪ್ ಮತ್ತು ಬಿಷಪ್ ಇತ್ಯಾದಿಗಳ ವ್ಯವಸ್ಥೆಗಿಂತ ಕ್ರೈಸ್ತಧರ್ಮದ ಹಿರಿಯ ಪಾದ್ರಿಗಳ ನೇತೃತ್ವದ ಸರ್ಕಾರ  ಎಂದರೆ ಬಿಷಪ್ ಮತ್ತು ಡೀಕನ್ ಕ್ರೈಸ್ತ ಧರ್ಮಾಧಿಕಾರಿಗಳ ನಡುವಿನ ಶ್ರೇಣಿಯ ಹಿರಿಯ ಪಾದ್ರಿ) ಅಥವಾ ಪಾದ್ರಿಗಳು ಮತ್ತು ಜನಸಾಮಾನ್ಯರ ಸಮೂಹವನ್ನೊಳಗೊಂಡ ಸರ್ಕಾರವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಪ್ರಸ್ತಾಪಿಸಿದ. ಜಾನ್‌ಫೀಲ್ಡ್ ಮತ್ತು ಥಾಮಸ್ ವಿಲ್‌ಕಾಕ್ಸ್‌ರೂ ಸಹ ಕಾರ್ಟ್‌ವ್ರೈಟ್‌ನ ಪ್ರಸ್ತಾಪವನ್ನು ಬೆಂಬಲಿಸಿದರು. ಆದರೆ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಜಾನ್ ವಿಟ್ ಗಿಫ್ಟ್ ರಾಜಪ್ರಭುತ್ವಕ್ಕೆ ಸರಿ ಹೊಂದುವ ಪದ್ಧತಿಯನ್ನು ಬೆಂಬಲಿಸಿದ. ಆದರೆ ಬಹಳಷ್ಟು ಜನ ಪ್ಯೂರಿಟನ್ನರು ಬಿಷಪ್‌ಗಳ ಸರ್ಕಾರ ಪದ್ಧತಿಯನ್ನು ಅನುಮೋದಿಸಿದರು. ಇದರಿಂದ ದೂರಾದ ಕೆಲವು ಜನ ತಮ್ಮ ಪಾದ್ರಿಗಳನ್ನು ತಾವೇ ಆಯ್ಕೆ ಮಾಡಿಕೊಂಡು ಸಭೆಗಳನ್ನು ನಡೆಸಲಾರಂಭಿಸಿದರು. ಇವರನ್ನು ‘‘ಪ್ರತ್ಯೇಕವಾದಿಗಳು’’ ಎಂದು ಕರೆಯಲಾಯಿತು. ರಾಬರ್ಟ್ ಬ್ರೌನ್(ಮರಣ: ೧೬೩೩) ಇವರಲ್ಲಿ ಒಬ್ಬನಾಗಿದ್ದ.

ಬಹಿಷ್ಕೃತನಾಗಿದ್ದ ಕಾರ್ಟ್‌ವ್ರೈಟ್ ೧೫೮೫ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ ನಂತರ ಫೀಲ್ಡ್‌ನ ಜೊತೆ ಸೇರಿ ಪ್ರತ್ಯೇಕವಾದಿಗಳನ್ನು ತಿರಸ್ಕರಿಸಿ, ಬಿಷಪ್‌ಗಳ ನೇತೃತ್ವದ ಸರ್ಕಾರದ ವ್ಯವಸ್ಥೆಯ ಒಳಗೇ ಹಿರಿಯ ಪಾದ್ರಿಗಳ ನೇತೃತ್ವದ ಸರ್ಕಾರವನ್ನು ಸ್ಥಾಪಿಸಲು ಪ್ರಯತ್ನಿಸಿದ. ೧೫೮೩ರಲ್ಲಿ ಜಾನ್ ವಿಟ್‌ಗಿಫ್ಟ್ ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ ಆಗಿ ನೇಮಕವಾದ ನಂತರ ಪ್ರತ್ಯೇಕವಾದಿಗಳ ವಿರುದ್ಧ ಕ್ರಮ ಜರುಗಿಸಿ, ಪ್ಯೂರಿಟನ್ನರ ಪ್ರಮುಖ ನಾಯಕರನ್ನು ಬಂಧಿಸಿದ. ವಿಟ್‌ಗಿಫ್ಟ್‌ನ ಇಂಥ ಕಾರ್ಯನೀತಿ ಮತ್ತು ೧೫೮೮-೯೦ರಲ್ಲಿ ಫೀಲ್ಡ್ ಮುಂತಾದ ಇತರ ನಾಯಕರ ಮರಣ-ಇತ್ಯಾದಿ ಕಾರಣಗಳಿಂದ ಆಂಗ್ಲಿಕನ್ ಚರ್ಚನ್ನು ಪುನರ್‌ರೂಪಿಸಬೇಕೆನ್ನುವ ಪ್ಯೂರಿಟನ್ನರ ಮಹದುದ್ದೇಶ ನೆರವೇರಲಿಲ್ಲ. ಧರ್ಮ ಸುಧಾರಣೆಯ ಶಕ್ತಿಗಳು ಬೇರೆ ಬೇರೆ ರೂಪದಲ್ಲಿ ಚದುರಿಹೋದವು. ಇದರಿಂದ ಆಡಳಿತಾತ್ಮಕ ರಚನೆಯ ಮೇಲೆ ಯಾವ ಪರಿಣಾಮ ಉಂಟಾಗದಿದ್ದರೂ ಬಹಳಷ್ಟು ಜನ ಇನ್ನೂ ಉತ್ಸಾಹದಿಂದ ಸುಧಾರಣೆಯ ಸಂದೇಶವನ್ನು ಹರಡುತ್ತಿದ್ದರಿಂದ ಅದರ ಚೈತನ್ಯ ನಾಶವಾಗದೆ ಉಳಿಯಿತು.

೧೬೦೩ರಲ್ಲಿ ಸ್ಕಾಟ್ಲೆಂಡ್‌ನ ೪ನೆಯ ಜೇಮ್ಸ್‌ನಿಂದ ಸ್ಪೂವರ್ಟ್‌ಗಳ ಆಳ್ವಿಕೆ ಆರಂಭ ವಾಯಿತು. ೧೬೦೪ರಲ್ಲಿ ಜೇಮ್ಸ್‌ವಿಟ್‌ಗಿಫ್ಟ್‌ನ ನಂತರ ರಿಚರ್ಡ್ ಬ್ಯಾಂಕ್ರಾಫ್ಟ್‌ನನ್ನು ಕ್ಯಾಂಟರ್‌ಬರಿಯ ಅರ್ಚ್‌ಬಿಷಪ್‌ನನ್ನಾಗಿ ನೇಮಿಸಿದ ಮತ್ತು ಆಂಗ್ಲಿಕನ್ ಚರ್ಚನ್ನು ವಿರೋಧಿಸುತ್ತಿದ್ದ ಗುಂಪುಗಳ ವಿರುದ್ಧ ಕಾನೂನು ಕಟ್ಟಳೆಗಳನ್ನು ರಚಿಸಲು ಹುರಿದುಂಬಿಸಿದ. ಬಹಳಷ್ಟು ಜನ ಪಾದ್ರಿಗಳಿಗೆ ದೊರೆತಿದ್ದ ಸ್ಥಾನಗಳು ಇಲ್ಲದಂತಾದವು. ಕಾನೂನುಗಳನ್ನು ಪಾರ್ಲಿಮೆಂಟಿನಲ್ಲಿ ಪ್ರಸ್ತಾಪಿಸದೇ ಇದ್ದುದರಿಂದ ಪಾರ್ಲಿಮೆಂಟಿನ ಸದಸ್ಯರು ಪ್ಯೂರಿಟನ್ನರನ್ನು ಬೆಂಬಲಿಸಿದರು.

ಬಹಳಷ್ಟು ಪ್ರತ್ಯೇಕತಾವಾದಿ ಗುಂಪುಗಳು ರಾಜಿ ಒಪ್ಪಂದಕ್ಕೆ ಒಪ್ಪುವುದಿಲ್ಲ ಎಂಬುದು ಸ್ಪಷ್ಟವಾದ ನಂತರ ಒಂದು ಸಮೂಹವು ವಲಸೆ ಹೋಗಿ ನಂತರ ೧೬೨೦ರಲ್ಲಿ ಉತ್ತರ ಅಮೆರಿಕಾದಲ್ಲಿ ಪ್ಲೈಮೌತ್ ಕಾಲೋನಿಯನ್ನು ಸ್ಥಾಪಿಸಿತು.

ಕಾಲ್ವಿನ್ ಪಂಥದ ಸಾಮಾನ್ಯ ತತ್ವಗಳು ಪ್ಯೂರಿಟನ್ನರು ಹಾಗೂ ಪ್ಯೂರಿಟನ್ನರಲ್ಲದ ವರನ್ನು ಒಂದುಗೂಡಿಸಿದವು. ಆದರೆ ಇದು ಮೊದಲನೆಯ ಚಾರ್ಲ್ಸ್ ದೊರೆಯ ಕಾಲದಲ್ಲಿ ಛಿದ್ರಗೊಂಡಿತು. ಪ್ರಾರ್ಥನಾ ವಿಧಿಗಳು ಹಾಗೂ ಸಂಘಟನೆಯ ವಿಷಯದಲ್ಲಿ ಪ್ಯೂರಿಟನ್ ವಿರೋಧಿ ತತ್ವಗಳು ಕಾಲ್ವಿನಿಸಂ ವಿರೋಧಿ ತತ್ವಗಳಾಗಿ ಪರಿಣಮಿಸಿ, ಕ್ರಮೇಣ ಇಂಗ್ಲೆಂಡಿನ ಚರ್ಚ್‌ನ ಸಿದ್ಧಾಂತಗಳು ಕಾಲ್ವಿನಿಸಂನಿಂದ ಬೇರ್ಪಟ್ಟು ಕ್ಯಾಥೊಲಿಕ್ ಪಂಥದ ತತ್ವಗಳಿಗೆ ಹತ್ತಿರವಾಗತೊಡಗಿದವು. ೧೬೨೪ರಲ್ಲಿ ರಿಚರ್ಡ್ ಮಾಂಟೆಗ್ಯೂ ಕಾಲ್ವಿನಿಸಂ ಅನ್ನು ಹಾಗೂ ಸಾರ್ವತ್ರಿಕ ಮೋಕ್ಷಕ್ಕಾಗಿ ಆರ್ಮೇನಿಯನಿಸಂ ಅನ್ನು ಪಾಲಿಸುವಂತೆ ಸೂಚಿಸಿದ. ಜೇಕಬ್ ಅರ್ಮೇನಿಯನ್‌ನ (೧೫೬೦-೧೬೦೯) ಅನುಯಾಯಿ ಗಳನ್ನು ಅರ್ಮೇನಿಯನ್‌ಗಳು ಎನ್ನುತ್ತಾರೆ. ಆರ್ಮೇನಿಯಸ್ ಕಾಲ್ವಿನ್ ಸಿದ್ಧಾಂತವನ್ನು, ಅದು ಮನುಷ್ಯನಿಗೆ ಸ್ವಾತಂತ್ರ್ಯದ ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಿದ. ಆರ್ಮೇನಿಯನ್ನರು ಧರ್ಮಶಾಸ್ತ್ರದಲ್ಲಿ ತರ್ಕ, ವಿವೇಚನೆಗೆ ಪ್ರಾಮುಖ್ಯತೆ ನೀಡಿದರು. ಇಂಗ್ಲೆಂಡಿನ ಆರ್ಮೇನಿಯನ್ನರು ಧಾರ್ಮಿಕ ವಿಧಿಗಳು ಹಾಗೂ ಪ್ರಾರ್ಥನಾ ವಿಧಿಗಳಿಗೆ ಹೆಚ್ಚು ಮಹತ್ವ ನೀಡಿದರು. ೧೬೨೮ರಲ್ಲಿ ಪ್ಯೂರಿಟನ್ನರ ಪ್ರಬಲ ನೆಲೆಯಾದ ಲಂಡನ್ನಿನಲ್ಲಿಯೇ ಪ್ಯೂರಿಟನ್ ವಿರೋಧಿ ಚಟುವಟಿಕೆಗಳು ಆರಂಭವಾದವು. ಇದರಿಂದ ಪ್ರತ್ಯೇಕತಾವಾದಿಗಳಲ್ಲದವರ ಪರಿಸ್ಥಿತಿ ಕಷ್ಟಕರವಾಯಿತು.

೧೬೩೩ರಲ್ಲಿ ಲ್ಯಾಂಡ್ ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ ಆದ ನಂತರ ಪ್ರಮುಖ ಹುದ್ದೆಗಳಿಗೆ ಆರ್ಮೇನಿಯನ್ನರನ್ನು ನೇಮಿಸಿದ. ಅವನು ಸ್ಕಾಟ್ಲೆಂಡಿನಲ್ಲಿ ಸಾಮಾನ್ಯ ಪ್ರಾರ್ಥನಾ ಪುಸ್ತಕವನ್ನು ಅಳವಡಿಸಿದ. ಇದರ ಪರಿಣಾಮವಾಗಿ ದಂಗೆಗಳು ಆರಂಭವಾಗಿ ಅಲ್ಲಿ ಪ್ಯೂರಿಟನಿಸಂನ ಪುನರ್‌ಸ್ಥಾಪನೆಗೆ ಕಾರಣವಾಯಿತು. ಚಾರ್ಲ್ಸ್‌ನ ಶಕ್ತಿ ಸ್ಕಾಟ್ ಗಳಿಗೆ ಸರಿಸಮನಾಗಿರಲಿಲ್ಲವಾದ್ದರಿಂದ ಅವರು ಉತ್ತರ ಇಂಗ್ಲೆಂಡ್ ಅನ್ನು ಆಕ್ರಮಿಸಿಕೊಂಡು ಪರಿಹಾರಕ್ಕೆ ಒತ್ತಾಯಿಸಿದರು. ಖಜಾನೆ ಬರಿದಾದಾಗ ಚಾರ್ಲ್ಸ್ ಪಾರ್ಲಿಮೆಂಟಿನ ಅಧಿವೇಶನವನ್ನು ಕರೆದ. ಈ ಸಂದರ್ಭವು ಕಾಲ್ವಿನ್ ಪಂಥದವರಿಗೆ ತಮ್ಮ ಅಸ್ತಿತ್ವವನ್ನು ಸ್ಥಾಪಿಸುವ ಅವಕಾಶ ತಂದುಕೊಟ್ಟಿತು.

ಚಾರ್ಲ್ಸ್ ಆರ್ಮೇನಿಯನ್ನರಿಗೆ ಹೆಚ್ಚು ಅನುಕೂಲಕಾರಿಯಾಗಿಯೇ ಆಗಿ ಮುಂದುವರಿದುದರ ಫಲವಾಗಿ ೧೬೪೨ರಲ್ಲಿ ಆಂತರಿಕ ಯುದ್ಧ ಆರಂಭವಾಯಿತು. ಇದು ಪ್ಯೂರಿಟನ್ ಕ್ರಾಂತಿಯ ಭಾಗವೇ ಆಗಿದ್ದು ಕೊನೆಯಲ್ಲಿ ಪ್ರಾಟೆಸ್ಟೆಂಟ್ ಪಂಥ ಹಾಗೂ ಇಂಗ್ಲಿಷ್ ಸಮಾಜವನ್ನು ಇಬ್ಭಾಗ ಮಾಡಿತು.

ವೆಸ್ಟ್‌ಮಿನಿಸ್ಟರ್‌ನಲ್ಲಿ ಪಾರ್ಲಿಮೆಂಟ್ ನೂರು ಜನ ಪಾದ್ರಿಗಳ ಸಮಿತಿಯ ಸಭೆ ಯನ್ನು ಕರೆಯಿತು. ಅವರು ೧ ಜುಲೈ ೧೬೪೩ರಿಂದ ಐದು ವರ್ಷಗಳ ಕಾಲದ ಸರಿಯಾದ ರೀತಿಯ ಚರ್ಚ್ ಸರ್ಕಾರವನ್ನು ಸ್ಥಾಪಿಸುವುದರ ಬಗ್ಗೆ ಚರ್ಚೆ ನಡೆಸಿದರು. ಅವರು ತಿದ್ದುಪಡಿ ಹೊಂದಿದ ಬಿಷಪ್ ಪ್ರಭುತ್ವದ ಮಾದರಿಯನ್ನು ಅಳವಡಿಸಿಕೊಳ್ಳಬಹುದಾಗಿತ್ತು. ಆದರೆ ಪಾರ್ಲಿಮೆಂಟು ಸ್ಕಾಟ್ಲೆಂಡಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದರಿಂದ ಪಾದ್ರಿಗಳ ನೇತೃತ್ವದ ಸರ್ಕಾರವನ್ನು ಅನುಮೋದಿಸಿದರು.

೧೬೪೯ರಲ್ಲಿ ಆಲಿವರ್ ಕ್ರಾಮ್‌ವೆಲ್‌ನ ನೇತೃತ್ವದಲ್ಲಿ ಆದ ಬಹುಧರ್ಮೀಯ ಒಪ್ಪಂದವು ಇಂಗ್ಲೆಂಡ್‌ನ ಧಾರ್ಮಿಕ ಸುಧಾರಣೆಯನ್ನು ಬೇರೆಲ್ಲ ದೇಶಗಳ ಸುಧಾರಣೆಗಿಂತ ಹೆಚ್ಚು ಪ್ರಭಾವಶಾಲಿಯಾಗಿಸಿತು. ಚರ್ಚುಗಳು ಹಿರಿಯಪಾದ್ರಿಗಳು, ಬ್ಯಾಪ್ಟಿಸ್ಟರು ಮತ್ತು ಇತರರ ನೇತೃತ್ವದಲ್ಲಿ ನಡೆಯಲಾರಂಭಿಸಿದವು. ಇಂಗ್ಲೆಂಡಿನಲ್ಲಿ ಯಹೂದಿಗಳಿಗೆ ಇರಲು ಅವಕಾಶ ನೀಡಲಾಯಿತಾದರೂ, ರೋಮನ್ ಕ್ಯಾಥೊಲಿಕರಿಗೆ ಹಾಗೂ ಏಕದೇವವಾದಿಗಳಿಗೆ  ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇರಲಿಲ್ಲ. ಪಾರ್ಲಿಮೆಂಟು ಸಾಮಾನ್ಯ ಪ್ರಾರ್ಥನಾ ಪುಸ್ತಕವನ್ನು ಮಾನ್ಯ ಮಾಡಲಿಲ್ಲ. ಆದರೆ ಕ್ವೇಕರ್ಸ್ ಎಂದು ಹೆಸರಾದ ಗೆಳೆಯರ ಗುಂಪು ಶಿಕ್ಷೆಗೆ ಒಳಪಟ್ಟಿದ್ದರಿಂದ ಅದು ಪ್ಯೂರಿಟನ್ನರ ಸುಧಾರಣೆಯ ಮಿತಿಯನ್ನು ಸೂಚಿಸುತ್ತದೆ.

ಪುನರ್ ನಿರ್ಮಾಣ ಯು (೧೬೬೦೮೫)

೧೬೫೮ರಲ್ಲಿ ಕ್ರಾಮ್‌ವೆಲ್‌ನ ಮರಣದ ನಂತರ ಇಂಗ್ಲೆಂಡ್‌ನ ರಾಜ್ಯಾಡಳಿತ ಅಲ್ಲೋಲ ಕಲ್ಲೋಲಗೊಂಡಿತು. ಪ್ಯೂರಿಟನ್ನರೂ ಸಹ ಎರಡನೇ ಚಾರ್ಲ್ಸ್‌ನನ್ನು ಪುನರ್ ಸ್ಥಾಪಿಸಬೇಕೆಂದು ಬಯಸಿದರು. ಅವನು ಕೆಲವು ಬದಲಾವಣೆಗಳನ್ನು ತರಬೇಕೆಂದಿದ್ದರೂ ಬಿಷಪ್‌ಗಳ ಪ್ರಭುತ್ವದ ವಿಷಯದಲ್ಲಿ ಪ್ಯೂರಿಟನ್ನರಿಗೆ ಏನೂ ಮಾಡಲಾಗಲಿಲ್ಲ. ೧೬೬೨ರ ಮೇ ೧೯ರಂದು ‘‘ಆ್ಯಕ್ಟ್ ಆಫ್ ಯುನಿಫಾರ್ಮಿಟಿ’’ ಎಂಬ ಕಾಯಿದೆಯನ್ನು ಕವೇಲಿಯರ್ ಪಾರ್ಲಿಮೆಂಟ್ ಅಂಗೀಕರಿಸಿತು. ಇದಕ್ಕೆ ಬಹಳಷ್ಟು ಪಾದ್ರಿಗಳಿಗೆ ಮತ್ತೊಮ್ಮೆ ಧರ್ಮದೀಕ್ಷೆ ಮತ್ತು ಸಾಮಾನ್ಯ ಪ್ರಾರ್ಥನಾ ಪುಸ್ತಕದ ಸಂಪೂರ್ಣ ಸ್ವೀಕೃತಿ ಅಗತ್ಯವಾಗಿತ್ತು. ೧೬೬೦ ಮತ್ತು ೧೬೬೨ರ ನಡುವೆ ಆ್ಯಕ್ಟ್ ಆಫ್ ಯುನಿಫಾರ್ಮಿಟಿಯನ್ನು ಒಪ್ಪದ ೨೦೦೦ ಪ್ಯೂರಿಟನ್ ಮಂತ್ರಿಗಳನ್ನು ತಮ್ಮ ಸ್ಥಾನಗಳಿಂದ ತೆಗೆದು ಹಾಕಲಾಯಿತು.

ಚಾರ್ಲ್ಸ್‌ನ ತಮ್ಮ, ರೋಮನ್ ಕ್ಯಾಥೊಲಿಕ್ ಪಂಥದ ೨ನೆಯ ಜೇಮ್ಸ್ (೧೬೮೫-೮೮)ನ ಅಲ್ಪಕಾಲದ ಅಧಿಕಾರದ ಅವಧಿಯಲ್ಲಿ ಇಂಗ್ಲಿಷ್ ಪ್ರಾಟೆಸ್ಟೆಂಟರು ಒಂದಾಗಿ ೧೯೮೮ರಲ್ಲಿ ‘‘ಗ್ಲೋರಿಯಸ್ ರೆವಲ್ಯೂಷನ್’’ನ ಉದಯವಾಯಿತು. ಕೊನೆಯದಾಗಿ ಪ್ಯೂರಿಟನ್ನರ ಎಲ್ಲ ಪ್ರಯತ್ನಗಳಿಗೆ ಪಾರ್ಲಿಮೆಂಟಿನಿಂದಾಗಲಿ ಅಥವಾ ಹೊಸ ರಾಜರಿಂದಾಗಲಿ ಬೆಂಬಲ ಸಿಗಲಿಲ್ಲ. ೧೬೮೯ರ ‘‘ಆಕ್ಟ್ ಆಫ್ ಟಾಲರೇಷನ್’’ ಇಂಗ್ಲೆಂಡಿನ ಧಾರ್ಮಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಚರ್ಚನ್ನು ಬಿಷಪ್ ಪ್ರಭುತ್ವದ ಅಡಿಯಲ್ಲಿ ನಿರ್ವಹಿಸುವ ಹಾಗೂ ವಿರೋಧಿ ಗುಂಪುಗಳಿಗೆ ಅನುಮತಿಯ ಮೂಲಕ ಚರ್ಚುಗಳನ್ನು ನಡೆಸಲು ಅವಕಾಶ ನೀಡಿತು. ಇಂಗ್ಲಿಷ್ ರಾಷ್ಟ್ರವನ್ನು ಇನ್ನೂ ಸುಧಾರಣೆಗೆ ಒಳಪಡಿಸಬೇಕೆಂಬ ಪ್ಯೂರಿಟನ್ನರ ಉದ್ದೇಶವು ಮುಂದೆ ಸಂಪೂರ್ಣವಾಗಿ ಧಾರ್ಮಿಕತಾ ವಾದದ ವೈಯಕ್ತಿಕ ಆಧ್ಯಾತ್ಮಿಕ ಅಗತ್ಯಗಳ ರೂಪದಲ್ಲಿ ಅಥವಾ ವಿಚಾರವಾದಿ ಯುಗದ ಪ್ರಾಪಂಚಿಕ ಅಗತ್ಯಗಳ ರೂಪದಲ್ಲಿ ಪರಿವರ್ತನೆಗೊಂಡಿತು.

ಉತ್ತರ ಅಮೆರಿಕಾದಲ್ಲಿ ಪ್ಯೂರಿಟನಿಸಂನ ಬೆಳವಣಿಗೆ

ಪ್ಯೂರಿಟನ್ ಧರ್ಮದ ತತ್ವಗಳು, ಕಾಲ್ವಿನ್ ಸಿದ್ಧಾಂತ ಹಾಗೂ ವ್ಯವಸ್ಥೆಯ ದಬ್ಬಾಳಿಕೆಗಳ ಮಿಶ್ರ ಫಲವಾಗಿ ಪ್ಯೂರಿಟನ್ ಜನಾಂಗಗಳು ವಲಸೆ ಹೋಗತೊಡಗಿದವು. ಉತ್ತರ ಅಮೆರಿಕಾದ ಹಲವಾರು ವಸಾಹತುಗಳು ಇದರ ಫಲವಾಗಿ ಹುಟ್ಟಿದವು. ವರ್ಜೀನಿಯಾದ ಜೇಮ್ಸ್ ಟೌನ್, ಮೆಸಾಚುಸೆಟ್ಸ್ ಕೊಲ್ಲಿ, ಪ್ಲೈಮೌತ್, ಕಾನೆಕ್ಟಿಕಟ್, ನ್ಯೂ ಹೇವನ್, ರೋಡ್ ದ್ವೀಪ, ಪೆನ್ನಿಸಿಲ್ವೇನಿಯಾ, ಮೇರಿಲ್ಯಾಂಡ್ ಇತ್ಯಾದಿಗಳು ೧೭ನೆಯ ಶತಮಾನದ ಆಧಿಭಾಗದಲ್ಲಿ ಪ್ಯೂರಿಟನ್ನರ ಆಳ್ವಿಕೆಗೆ ಒಳಪಟ್ಟಿದ್ದವು. ಅಮೆರಿಕಾದ ಎಲ್ಲ ವಸಾಹತುಗಳೂ ಪ್ಯೂರಿಟನ್ನರ ಪ್ರಭಾವಕ್ಕೆ ಒಂದಲ್ಲ ಒಂದು ರೀತಿ ಒಳಗಾಗಿದ್ದವು.

ಧಾರ್ಮಿಕತಾವಾದ

ಇಂಗ್ಲೆಂಡಿನ ಪ್ಯೂರಿಟನ್ ಸಿದ್ಧಾಂತವು ಬಾಕ್ಸ್‌ಟರ್, ಬೇಯ್‌ಲಿ, ಬನ್‌ಯನ್‌ಗಳ ಕೃತಿಗಳಿಂದ ಯುರೋಪಿನ ಭೂಖಂಡವನ್ನು ತಲುಪಿತು. ಧಾರ್ಮಿಕತೆಯು ಒಂದು ಚಳವಳಿಯಾಗಿ ಹಾಲ್ ವಿಶ್ವವಿದ್ಯಾನಿಲಯಗಳಂಥ ಕೇಂದ್ರಗಳಿಂದ ಶಾಲೆಗಳಿಗೆ, ಪ್ರಾರ್ಥನಾ ಸಮೂಹಗಳಿಗೆ ತಲುಪಿತು. ಇದು ವ್ಯಕ್ತಿಗಳ ಧಾರ್ಮಿಕತೆಗೆ ಹಾಗೂ ಚರ್ಚ್‌ನ ಒಳಗೆ ಇದ್ದ ಗುಂಪುಗಳ ಧಾರ್ಮಿಕತೆಗೆ ಪ್ರೋ ನೀಡಿತು ಮತ್ತು ಪ್ರಾರ್ಥನೆ ಮಾಡುವ, ಬೈಬಲ್ ಅನ್ನು ಓದುವ, ನೈತಿಕ ವಿಷಯಗಳನ್ನು ಪರಿಶೀಲಿಸುವ ಮತ್ತು ಉದಾರ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸಿತು. ೧೬೬೯ರಲ್ಲಿ ಫಿಲಿಪ್ ಜೇಕಬ್ ಸ್ಪೆನ್ಸರ್ (೧೬೩೫-೧೭೦೫) ನೀಡಿದ ಧರ್ಮೋಪದೇಶವು ಒಂದು ಗುಂಪನ್ನು ಸ್ಥಾಪಿಸಲು ಕಾರಣವಾಯಿತು. ಈ ಗುಂಪನ್ನು ‘ಧಾರ್ಮಿಕ ವಾದಿಗಳು’ ಎಂದು ಕರೆಯಲಾಯಿತು. ತನ್ನ ‘ಪಿಯಾ ಡೆಸಿಡಿರಿಯಾ’ ಎಂಬ ಕೃತಿಯಲ್ಲಿ ಸ್ಪೆನ್ಸರ್ ಅಧಿಕಾರಿವರ್ಗ, ಪಾದ್ರಿಗಳು ಮತ್ತು ಜನಸಮೂಹಗಳೆಲ್ಲವನ್ನೂ ಟೀಕಿಸಿದ ಮತ್ತು ಒಂದು ಪವಿತ್ರ ಚರ್ಚನ್ನು ಸ್ಥಾಪಿಸಲು ಕರೆ ನೀಡಿದ. ೧೬೯೪ರಲ್ಲಿ ಸ್ಪೆನ್ಸರ್‌ನಿಂದ ಹಾಲ್‌ನಲ್ಲಿ ಸ್ಥಾಪಿಸಲಾದ ಹೊಸ ವಿಶ್ವವಿದ್ಯಾನಿಲಯವು ಧಾರ್ಮಿಕತೆಯ ಕೇಂದ್ರವಾಯಿತು. ಸ್ಪೆನ್ಸರ್‌ನ ಮರಣದ ನಂತರ ಹರ್ಮನ್ ಫ್ರಾಂಕ್ (೧೬೬೩-೧೭೨೭) ಧಾರ್ಮಿಕತಾ ಚಳವಳಿಯ ಕೇಂದ್ರವಾದ ಹಾಲ್ ವಿಶ್ವವಿದ್ಯಾನಿಲಯದ ಪರಿಸರದಲ್ಲಿ ಬೆಳೆಸಿದ ಸಂಸ್ಥೆಗಳು ಧಾರ್ಮಿಕತೆಯ ಚಳವಳಿಯನ್ನು ಜೀವಂತವಾಗಿಟ್ಟವು.

೧೮ನೆಯ ಶತಮಾನದಲ್ಲಿ ಧಾರ್ಮಿಕತೆಯು ಮಧ್ಯ ಯುರೋಪ್ ಮತ್ತು ಇಂಗ್ಲೆಂಡ್ ಗಳಿಗೆ ಹಬ್ಬಿತು. ಇದರಲ್ಲಿ ಗ್ರಾಫ್‌ವಾನ್ ಜಿಂಗೆಂಡಾರ್ಫ್‌ನ ಪಾತ್ರ ಮುಖ್ಯ ವಾದದ್ದು. ಅವನು ‘‘ಕ್ರಿಸ್ತನ ಕ್ಷಮೆಯಲ್ಲಿ ಹೆಚ್ಚಿನ ನಂಬಿಕೆಯನ್ನು ಇಡಬೇಕೆಂದು’’ ಸೂಚಿಸಿದ. ೧೭೨೨ರಲ್ಲಿ ಜಿಂಗೆಂಡಾರ್ಫ್ ಮೊರೆವಿಯನ್ ನಿರಾಶ್ರಿತರನ್ನು ಸೇರಿಸಿ ‘‘ಬೊಹಿಮಿಯನ್ ಬ್ರದರನ್ ’’ ಎಂಬ ಗುಂಪನ್ನು ಹುಟ್ಟುಹಾಕಿದ. ಈ ಮೊರಾವಿಯನ್ನರು ಇಂಗ್ಲೆಂಡಿನಲ್ಲಿ ಕ್ರೈಸ್ತಧರ್ಮ ಪ್ರಚಾರಕ್ಕೆ ಇಂಬುಕೊಟ್ಟರು. ಈ ಮೊರಾವಿಯನ್ನರಲ್ಲಿಯೇ ಒಬ್ಬನಾದ ಜಾನ್‌ವೆಸ್ಲಿಯು ‘‘ಮೆಥಾಡಿಸಂ’’ ಪಂಥವನ್ನು ಆರಂಭಿಸಿದ.

ಮೆಥಾಡಿಸಂ

ಮೆಥಾಡಿಸಂ ಪಂಥವು ಈ ಹೆಸರನ್ನು ಪಡೆಯಲು ಅದು ಅನುಸರಿಸಿದ ಬೈಬಲ್‌ನ ಕ್ರಮಬದ್ಧ ಅಧ್ಯಯನ ಮತ್ತು ಶಿಸ್ತುಬದ್ಧ ಪ್ರಾರ್ಥನಾ ವಿಧಾನಗಳು ಕಾರಣವಾದವು. ಇಂಗ್ಲೆಂಡಿನ ಜಾನ್ ವೆಸ್ಲಿಯ ನೇತೃತ್ವದಲ್ಲಿ ಮೆಥಾಡಿಸ್ಟ್ ಪಂಥವು ಒಂದು ಚಳವಳಿಯಾಗಿ ಬೆಳೆಯಿತು. ಅದಕ್ಕೆ ಜರ್ಮನಿಯ ಧಾರ್ಮಿಕವಾದವೂ ಒತ್ತಾಸೆಯಾಗಿತ್ತು. ಜಾನ್ ವೆಸ್ಲಿಯು ವಿದ್ಯಾರ್ಥಿಗಳ ಗುಂಪೊಂದರ ಸದಸ್ಯನಾಗಿ ನಿಯಮಿತವಾಗಿ ಬೈಬಲ್‌ನ ಅಧ್ಯಯನ ಮಾಡುವುದು, ಧಾರ್ಮಿಕ ಸಮಾವೇಶಗಳಲ್ಲಿ ಸತತವಾಗಿ ಭಾಗಿಯಾಗುವುದು ಮತ್ತು ಆರ್ಕ್ಸ್‌ಫರ್ಡ್‌ನ ಕೊಳಕು ಜೈಲುಗಳಿಗೆ ಭೇಟಿ ನೀಡುವುದು ಇತ್ಯಾದಿ ಚಟುವಟಿಕೆ ಗಳಲ್ಲಿ ಭಾಗಿಯಾಗಿದ್ದಾಗ, ಅವನಿಗೆ ಮೆಥಾಡಿಸ್ಟ್ ಪಂಥವನ್ನು ಸ್ಥಾಪಿಸುವ ಯೋಚನೆ ಬಂತು. ನಂತರ ಮೊರಾವಿಯನ್ ಸಮಾವೇಶವೊಂದರಲ್ಲಿ ಅದಕ್ಕೊಂದು ಸ್ಪಷ್ಟ ರೂಪ ಸಿಕ್ಕಿತು. ೧೭೪೪ರಲ್ಲಿ ಉಪದೇಶಕರ ಮೊದಲ ಸಮಾದೇಶವು ಜರುಗಿತು. ಸ್ವಲ್ಪ ದಿನಗಳಲ್ಲೇ ಅದು ಒಂದು ವಾರ್ಷಿಕ ಕಾರ್ಯಕ್ರಮವಾಗಿ ಮೆಥಾಡಿಸ್ಟ್ ಪಂಥದ ನಿರ್ವಾಹಕ ಶಕ್ತಿಯಾಯಿತು. ೧೭೮೪ರಲ್ಲಿ ಅದಕ್ಕೊಂದು ಸಂವಿಧಾನ ರಚನೆಯಾಗಿ ಇಂಗ್ಲೆಂಡಿನ ಚರ್ಚು ಮಾಡಲು ಸಾಧ್ಯವಾಗದೇ ಇದ್ದುದನ್ನು ಸಾಧಿಸುವ ಹಂತಕ್ಕೆ ಬೆಳೆಯಿತು.

೧೭೬೮ರಲ್ಲಿ ಮೆಥಾಡಿಸ್ಟರು ನ್ಯೂಯಾರ್ಕ್‌ನಲ್ಲಿ ಮೊದಲ ಚರ್ಚನ್ನು ಸ್ಥಾಪಿಸಿದರು. ನಂತರ ಈ ಪಂಥವು ಅಮೆರಿಕಾದಲ್ಲಿ ನಿಧಾನಕ್ಕೆ ವ್ಯಾಪಿಸತೊಡಗಿ ಅಲ್ಲಿ ಭದ್ರಸ್ಥಾನ ಪಡೆಯಿತು. ಹಾಗೆಯೇ ಸ್ವಿಟ್ಜರ್‌ಲ್ಯಾಂಡಿನಲ್ಲಿ ಸಹ ತನ್ನ ಪ್ರಭಾವವನ್ನು ಬೀರಲಾರಂಭಿಸಿತು.

ಮೆಥಾಡಿಸಂ ಪಂಥವು, ಪ್ರಾಟೆಸ್ಟೆಂಟ್ ಸಂಪ್ರದಾಯವಾದಿಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಭಾವನಾ ಪ್ರಧಾನವಾದ ಮತ್ತು ಪ್ರಜ್ಞೆಗೆ ಸಂಬಂಧಿಸಿದ ಅಂಶಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು. ದಯೆ ಮತ್ತು ನೈತಿಕ ಶ್ರದ್ಧೆಗಳಿಗೆ ಇವರು ನೀಡಿದ ಪ್ರಾಮುಖ್ಯತೆ ಪ್ಯೂರಿಟನ್ನರಲ್ಲಿ ಇದ್ದರೂ ಈ ವಿಷಯಗಳಿಗೆ ತೀವ್ರ ವಿರೋಧ ಕಂಡುಬಂದಿದ್ದರಿಂದ ನಿಧಾನಕ್ಕೆ ಇವು ಮರೆಯಾದವು. ಇಂಗ್ಲಿಷ್ ಮೆಥಾಡಿಸ್ಟರು ಪ್ರಾಟೆಸ್ಟೆಂಟರಿಗಿಂತ ಆಂಗ್ಲಿಕನ್ ಚರ್ಚ್‌ಗೆ ಹೆಚ್ಚು ಹತ್ತಿರವಾಗತೊಡಗಿದರು. ಇದರಿಂದ ಪ್ರಾರ್ಥನಾ ಸ್ತ್ರೋತ್ರಗಳನ್ನು ಇಂಗ್ಲೆಂಡಿನ ಚರ್ಚುಗಳು, ಧಾರ್ಮಿಕ ಸಮಾವೇಶಗಳು ಮತ್ತು ಬ್ಯಾಪ್ಟಿಸ್ಟರು ಒಪ್ಪುವಂತಾಯಿತು. ಜಾನ್‌ವೆಸ್ಲಿಯು ಕಾಲ್ವಿನ್‌ವಾದಿಯಾಗಿರದಿದ್ದರೂ ವೇಲ್ಸ್‌ನ ಮೇಥಾಡಿಸ್ಟರು ಕಾಲ್ವಿನ್‌ವಾದವನ್ನು ಒಪ್ಪಿಕೊಂಡದ್ದರಿಂದ ಅವರನ್ನು ಕಾಲ್ವಿನ್‌ವಾದಿ ಮೆಥಾಡಿಸ್ಟರು ಎಂದು ಕರೆಯಲಾಯಿತು.

ವಿಚಾರವಾದ (ಆರ್ಮಿನಿಯನಿಸಂ)

ಪ್ರಾಟೆಸ್ಟೆಂಟ್ ಪಂಥದ ಮೇಲೆ ವಿಚಾರವಾದದ ಪ್ರಭಾವವನ್ನು ೧೬ನೆಯ ಶತಮಾನದ ಕಾಲ್ವಿನ್‌ವಾದದ ವಿಮರ್ಶೆಯಲ್ಲಿಯೇ ಕಾಣಬಹುದು. ಲೆಯ್‌ಡನ್, ನೆದರ್ಲ್ಯಾಂಡ್ಸ್‌ಗಳಲ್ಲಿ ಜಾಕಬ್ಸ್ ಅರ್ಮಿನಿಯಸ್ (೧೫೬೦-೧೬೦೯)ನು ಕಾಲ್ವಿನ್‌ನ ಪೂರ್ವನಿರ್ಧಾರಿತ ವಿಧಿಯ ಪರಿಕಲ್ಪನೆಯನ್ನು ವಿರೋಧಿಸಿದ. ಕಾಲ್ವಿನ್‌ನನ್ನು ವಿರೋಧಿಸಿದವರೆಲ್ಲರನ್ನೂ ಆರ್ಮಿನಿಯನ್ ಗಳು ಎಂದು ಕರೆಯಲಾಯಿತಾದರೂ ಹಾಲೆಂಡ್ ಮತ್ತು ಇಂಗ್ಲೆಂಡ್‌ನ ಕೆಲವು ಆರ್ಮಿನಿಯನ್ ಗುಂಪುಗಳು ಕಾಲ್ವಿನ್‌ನನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಧರ್ಮಶಾಸ್ತ್ರದಲ್ಲಿ ಹೆಚ್ಚು ವಿಚಾರವಾದವನ್ನು ಅಳವಡಿಸಿಕೊಂಡಿದ್ದರು.

೧೭ನೆಯ ಶತಮಾನದ ವಿಚಾರವಾದಿ ಚಳವಳಿಯು ತತ್ವಶಾಸ್ತ್ರವನ್ನು(ಬೇಕನ್, ಡೆಕಾರ್ಟೆ ಹೇಳುವಂತೆ) ಧರ್ಮಶಾಸ್ತ್ರಕ್ಕಿಂತ ಬೇರೆಯದಾದ ಹಾಗೂ ಸ್ವತಂತ್ರವಾದ ಶಾಸ್ತ್ರವನ್ನಾಗಿ ರೂಪಿಸಿತು. ಐಸಾಕ್ ನ್ಯೂಟನ್ನನು(೧೬೪೨-೧೭೨೭) ವೈಚಾರಿಕತೆಯ ಶಕ್ತಿಯನ್ನು ಬಳಸಿಕೊಳ್ಳುವಂತೆ ಜನರಿಗೆ ಕರೆನೀಡಿದ. ಸ್ಪಿನೋಜಾ, ಲೈಬ್‌ನ್ಜ್, ಲಾಕ್ ಮುಂತಾದವರು ಸಹ ವೈಚಾರಿಕತೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಗಮನ ನೀಡಿದರು. ಆರಂಭದಲ್ಲಿ ವಿರೋಧ ಕಂಡುಬಂದರೂ ೧೭೫೪ರ ವೇಳೆಗೆ ವಿಚಾರವಾದಿಗಳು ಧಾರ್ಮಿಕವಾದಿಗಳನ್ನು ಮೂಲೆಗುಂಪಾಗಿಸಿದರು.

ಧಾರ್ಮಿಕ ಸುಧಾರಣೆ ಫಲಿತಾಂಶಗಳು

ಪ್ರಾಟೆಸ್ಟೆಂಟರ್ ಚಳವಳಿಯ ರೂಪದಲ್ಲಿ ವ್ಯಕ್ತಗೊಂಡ ಕ್ರೈಸ್ತ ಧರ್ಮದ ಸುಧಾರಣಾ ಪ್ರಕ್ರಿಯೆಯು ೧೬ನೆಯ ಶತಮಾನದ ಯುರೋಪಿನಲ್ಲಿ ನಡೆದ ಘಟನೆಗಳಿಗೆ ಸೀಮಿತ ವಾಗಲಿಲ್ಲ. ಅದು ಕ್ಯಾಥೊಲಿಕ್ ಚರ್ಚ್‌ನ ಮೇಲೆ ಪರಿಣಾಮ ಬೀರಿತು. ನಂತರ ಅದು ಕ್ಯಾಥೊಲಿಕ್ ಚರ್ಚನ್ನು ಬಿಟ್ಟವರ ಮೇಲೆಯೂ ಸಹ ಬೇರೆ ಬೇರೆ ಸನ್ನಿವೇಶಗಳಲ್ಲಿ ಪ್ರಭಾವಿಸಿತು. ಜರ್ಮನಿಯ ಮತ್ತು ಸ್ಕ್ಯಾಂಡಿನೇವಿಯಾದ ದೇಶಗಳ ಲೂಥರನ ಚರ್ಚುಗಳು; ಸ್ವಿಟ್ಜರ್ಲೆಂಡ್, ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಸ್ಕಾಟ್ಲೆಂಡ್ ಮತ್ತು ಪ್ಯೂರಿಟನ್ನರ ಹೊಸ ಇಂಗ್ಲೆಂಡ್‌ನ ಸುಧಾರಿತ ಚರ್ಚುಗಳು ಮತ್ತು ಆಂಗ್ಲಿಕನ್ ಚರ್ಚು -ಇವು ಮೂರನ್ನೂ ಈ ಪ್ರಕ್ರಿಯೆಯಿಂದ ಉಂಟಾದ ಮೂರು ಮುಖ್ಯ ಧಾರೆಗಳು ಎನ್ನಬಹುದು. ಇದರ ಜೊತೆಗೆ ಬ್ಯಾಸ್ಟಿಸ್ಟ್, ಕ್ವೇಕರ್ಸ್, ಫ್ರೆಂಡ್ಸ್ ಇತ್ಯಾದಿ ಹೆಸರಿನ ಕೆಲವು ಸಣ್ಣ ಪ್ರಮಾಣದ, ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಅದಮ್ಯ ಸ್ವಾತಂತ್ರ್ಯದ ಮನೋಭಾವವನ್ನು ಸೂಚಿಸುವ ಸಣ್ಣ ತೊರೆಗಳನ್ನೂ ಕಾಣಬಹುದು. ೧೯೫೦ರಲ್ಲಿ ಅಮೆರಿಕಾ ಒಂದರಲ್ಲೇ ಸುಮಾರು ೨೫೦ರಷ್ಟು ಇಂಥ ಖರ್ಚುಗಳು, ವರ್ಗಗಳು ಅಥವಾ ಗುಂಪುಗಳು ಇದ್ದವು.

ಕ್ರೈಸ್ತಧರ್ಮದ ಏಕತೆಯ ಸಂದೇಶ ಮತ್ತು ಹೆಚ್ಚು ಸಂಖ್ಯೆಯ ಚರ್ಚುಗಳು ಇವೆರಡು ವೈರುಧ್ಯಗಳ ನಡುವೆಯೂ ಪ್ರಾಟೆಸ್ಟೆಂಟ್ ಚಳವಳಿಯು ಇಡೀ ಕ್ರಿಶ್ಚಿಯನ್ ಚರ್ಚನ್ನು ಸಂಘಟಿಸುವ ನಿಟ್ಟಿನಲ್ಲಿ ಬ್ರಿಟಿಷ್ ಕೌನ್ಸಿಲ್ ಆಫ್ ಚರ್ಚಸ್ ಮತ್ತು ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ ಎಂಬಂಥ ಸಂಘಟನೆಗಳನ್ನು ಹುಟ್ಟುಹಾಕಿತು. ೧೩ನೆಯ ಪೋಪ್ ಜಾನ್‌ನ ಆಯ್ಕೆಯ ನಂತರ, ಎರಡನೆಯ ವ್ಯಾಟಿಕನ್ ಕ್ಯಾಥೊಲಿಕ್ ಚರ್ಚ್ ಸಹ ಈ ಚಳವಳಿಯಲ್ಲಿ ಆಸಕ್ತಿ ತೋರಿಸಿತು.

ಧಾರ್ಮಿಕ ಸುಧಾರಣೆಯು, ಅದರಲ್ಲೂ ಮುಖ್ಯವಾಗಿ ಪ್ರಾಟೆಸ್ಟೆಂಟ್ ಗುಂಪುಗಳ ನೇತೃತ್ವದಲ್ಲಿ ನಡೆದ ಧಾರ್ಮಿಕ ಸುಧಾರಣೆಯು, ಮನುಷ್ಯನಲ್ಲಿರುವ ಸ್ವಾತಂತ್ರ್ಯದ ಅಪರಿಮಿತ ಹಂಬಲ, ಚೈತನ್ಯದ ಸಂಕೇತವಾಗಿ ಜಗತ್ತಿಗೆ ಕಂಡುಬಂತು. ಇದನ್ನು ಚಾಡ್ವಿಕ್ ಓವೆನ್ (೧೯೯೦-೨೩) ಹೇಳುವ ಮಾತುಗಳಲ್ಲೇ ಹೇಳಬಹುದು.

ಧಾರ್ಮಿಕ ಸುಧಾರಣೆಯು ಯುರೋಪನ್ನು ಧರ್ಮದ ನೆಲೆಯಲ್ಲಿ ಒಡೆಯಿತಾದರೂ ಸಹಿಷ್ಣುತೆಯನ್ನು ಪಾಲಿಸಲು ಕರೆ ನೀಡಿತು. ಮೊದಲು ಜನ ಇದನ್ನು ಸರಿ ಎಂದು ಒಪ್ಪಲು ತಯಾರಿರಲಿಲ್ಲ. ಧರ್ಮದಲ್ಲಿ ಭಿನ್ನತೆ, ಪಂಗಡಗಳು ಉಂಟಾದರೆ ಸಮಾಜವು ಚದುರಿ ಹೋಗುವುದೆಂದು ಜನ ನಂಬಿದ್ದರು. ಕ್ಯಾಥೊಲಿಕ್ ಪ್ರಜೆಗಳು ಪ್ರಾಟೆಸ್ಟೆಂಟ್ ಪ್ರಭುಗಳಿಗೆ ಹಾಗೆಯೇ ಪ್ರಾಟೆಸ್ಟೆಂಟ್ ಪ್ರಜೆಗಳು ಕ್ಯಾಥೊಲಿಕ್ ಅರಸರಿಗೆ ಹೇಗೆ ಅವಿಧೇಯರಾಗಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಬೇರೆ ಬೇರೆ ಧರ್ಮಗಳು ಎಂದರೆ ಆಂತರಿಕ ಯುದ್ಧ ಅಥವಾ ಬೇರೆ ಬೇರೆ ರಾಜ್ಯಗಳು ಎಂಬ ಭಾವನೆಯಿತ್ತು. ಆದರೆ ನಿಧಾನಕ್ಕೆ ಅವರಿಗೆ ಪ್ರಪಂಚ ಹೇಗೆ ಬದಲಾಗಿದೆ ಎಂಬುದು ಅರಿವಿಗೆ ಬಂತು. ಹಳೆಯ ಕಾಲದಲ್ಲಿ ರಾಜ್ಯಪ್ರಭುತ್ವ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಠಿಣವಾಗಿರಬೇಕಿತ್ತು. ಈಗಿನ ಪರಿಸ್ಥಿತಿಯಲ್ಲಿ ಅದು ಸಹಿಷ್ಣುತೆಯ ಪಾಠ ಕಲಿಯದಿದ್ದರೆ ತನ್ನ ಪತನಕ್ಕೆ ಸಿದ್ಧವಾಗಿರಬೇಕು.

 

ಪರಾಮರ್ಶನ ಗ್ರಂಥಗಳು

೧. ಕಾರ್ಲ್ ಆರ್ಮಿನಿಯಸ್ ಬ್ಯಾಂಗ್ಸ್, ೧೯೮೫. ಎ ಸ್ಪಡಿ ಇನ್ ದಿ ಡಚ್ ರಿಫಾರ್ಮೇಷನ್.

೨. ಡೇವಿಡ್ ಬ್ಯಾರೆಟ್ ಬಿ.(ಸಂ), ೧೯೮೨. ವರ್ಲ್ಡ್ ಕ್ರಿಶ್ಚಿಯನ್ ಎನ್‌ಸೈಕ್ಲೊಪೀಡಿಯಾ.

೩. ವಿಲಿಯಂ  ಬಾವ್‌ಸ್ಮಾ ಜೆ.,  ಜಾನ್ ಕಾಲ್ವಿನ್, ೧೯೮೮. ಎ ಸಿಕ್ಸ್‌ಟೀನ್ತ್ ಸೆಂಚುರಿ ಪೋರ್ಟ್‌ರೇಟ್.

೪. ಬೊಡೆನ್ ಸೀಕ್, ಜೂಲಿಯಸ್, ೧೯೬೫. ದಿ ಎನ್‌ಸೈಕ್ಲೊಪೀಡಿಯಾ ಆಫ್ ದಿ ಲೂಥರನ್ ಚರ್ಚ್.