ಫ್ರಾನ್ಸಿನಲ್ಲಿ ೧೭೮೯ರಲ್ಲಿ ಜರುಗಿದ ಕ್ರಾಂತಿ ಚರಿತ್ರೆ ರಚನಾಶಾಸ್ತ್ರದ ದೃಷ್ಟಿಯಿಂದ ಮಹತ್ವಪೂರ್ಣ ಘಟನೆಯೆನಿಸಿದೆ. ಈ ಕ್ರಾಂತಿಯ ಸ್ವರೂಪದ ಕುರಿತು ಅನೇಕ ವಾದ-ವಿವಾದಗಳು ಈಗಾಗಲೇ ನಡೆದಿದೆ ಮತ್ತು ನಡೆಯುತ್ತಿದೆ. ಕ್ರಾಂತಿಯ ಹುಟ್ಟು, ಬೆಳವಣಿಗೆ ಮತ್ತು ಸಂದರ್ಭಕ್ಕನುಗುಣವಾಗಿ ಅದು ಪಡೆದುಕೊಂಡ ವಿವಿಧ ಆಯಾಮಗಳು ಇತಿಹಾಸಕಾರರಿಗೆ ಸಂಶೋಧನೆಯ ವಸ್ತುವಾಗಿದೆ. ಈ ಕ್ರಾಂತಿಯನ್ನು ಪರಿಪೂರ್ಣವಾಗಿ ಸಾಮಾಜಿಕ ಕ್ರಾಂತಿಯೆಂದು ಕೆಲವರು, ಮತ್ತಿತರರು ಇದನ್ನು ರಾಜಕೀಯ ಕ್ರಾಂತಿಯೆಂದು ವಾದಿಸುತ್ತಾರೆ. ಕ್ರಾಂತಿಯ ಸ್ವರೂಪಕ್ಕೆ ಸಂಬಂಧಪಟ್ಟಂತೆ ವಿದ್ವಾಂಸರುಗಳಲ್ಲಿ ಒಮ್ಮತವಿಲ್ಲ. ಫ್ರಾನ್ಸಿನ ಕ್ರಾಂತಿಯನ್ನು ಶ್ರೀಮಂತ ವರ್ಗದ ಕ್ರಾಂತಿ, ಮಧ್ಯಮ ವರ್ಗದ ಕ್ರಾಂತಿ, ಸಾಮಾನ್ಯ ವರ್ಗದ ಕ್ರಾಂತಿ, ಪ್ರಜಾಪ್ರಭುತ್ವವಾದಿ ಕ್ರಾಂತಿ ಮುಂತಾಗಿ ಬೇರೆ ಬೇರೆ ಸೈದ್ಧಾಂತಿಕ ಚೌಕಟ್ಟುಗಳ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಲೇಖನದಲ್ಲಿ ಈ ರೀತಿಯ ವ್ಯಾಖ್ಯಾನಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಏಕೆಂದರೆ ಕ್ರಾಂತಿಯ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ತಾತ್ವಿಕ ಕಾರಣಗಳು ಹಾಗೂ ಕ್ರಾಂತಿ ಬೆಳೆದು ಬಂದ ಬಗೆಯ ಸಾಂಪ್ರದಾಯಿಕ ವಿಶ್ಲೇಷಣೆಯ ಗಡಿಯನ್ನು ದಾಟುವ ಅಗತ್ಯ ವಿದೆ. ಕ್ರಾಂತಿಯ ನಿಜ ಸ್ವರೂಪವನ್ನು ಅರಿತುಕೊಳ್ಳಲು ಈ ರೀತಿಯ ಮರು ವ್ಯಾಖ್ಯಾನಿ ಸುವ ಪ್ರಕ್ರಿಯೆಯು ಅನಿವಾರ್ಯವೂ ಹೌದು.

ಫ್ರಾನ್ಸಿನ ಕ್ರಾಂತಿಯ ಸ್ವರೂಪ ಕುರಿತು ಚರ್ಚೆ ನಡೆಸುವಾಗ ಇದೊಂದು ಸುಧಾರಣೆ ಯಂತೆಯೂ ಕಂಡುಬರುತ್ತದೆ. ಸುಧಾರಣೆಗೆ ಕ್ರಾಂತಿಯ ಅಗತ್ಯವಿದ್ದರೂ ಇವೆರಡೂ ಬೇರೆ ಬೇರೆಯವೇ ಆಗಿವೆ. ಪ್ರಜ್ಞಾವಂತ ಅರಸರುಗಳ ಆಳ್ವಿಕೆ ಮತ್ತು ಕ್ರಾಂತಿಯ ಸಮಯದಲ್ಲಾದ ಬದಲಾವಣೆಗಳನ್ನು ಗಮನಿಸುವಾಗ ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ಹದಿನೆಂಟನೆಯ ಶತಮಾನದ ಯುರೋಪನ್ನು ‘ಪ್ರಜ್ಞಾವಂತ ರಾಜಪ್ರಭುತ್ವದ ಯುಗ’ ಎಂಬುದಾಗಿಯೂ ಕರೆಯಲಾಗಿದೆ. ಈ ಪ್ರಜ್ಞಾವಂತ ಅರಸರುಗಳು ಮತ್ತು ಮಂತ್ರಿಗಳು ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು. ಈ ಸುಧಾರಣೆಗಳು ತತ್ವಜ್ಞಾನಿಗಳ ಸಿದ್ಧಾಂತಗಳಲ್ಲಿ ಅಡಕವಾಗಿರುವ ಅಂಶಗಳೇ ಆಗಿದ್ದವು. ಈ ಸುಧಾರಣೆಗಳು, ನಿರಂಕುಶ ಆಡಳಿತವೂ ಇದ್ದುದರಿಂದಾಗಿ ಅಷ್ಟೊಂದು ಸುಲಭವಾಗಿ ಜಾರಿಗೆ ಬರುವಂತಿರಲಿಲ್ಲ. ಇದಕ್ಕೆ ಕ್ರಾಂತಿಯ ಅನಿವಾರ್ಯತೆ ಇತ್ತು. ಕ್ರಾಂತಿಯುದ್ದಕ್ಕೂ ಪ್ರಜ್ಞಾವಂತ ಅರಸರುಗಳು ಯೋಜಿತ ಸುಧಾರಣೆಯನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜಾರಿಗೆ ತರುವ ಪ್ರಯತ್ನವೇ ನಡೆಯುತ್ತಿತ್ತು ಎಂಬುದಾಗಿಯೂ ವ್ಯಾಖ್ಯಾನಿಸಬಹುದು. ರಾಷ್ಟ್ರೀಯ ಏಕತೆ, ಆಡಳಿತದ ಸುಧಾರಣೆ, ಸವಲತ್ತುಗಳನ್ನು ರದ್ದುಪಡಿಸುವುದು, ಗುಲಾಮ ಪದ್ಧತಿ ಮತ್ತು ಊಳಿಗಮಾನ್ಯ ಪದ್ಧತಿ ಯನ್ನು ರದ್ದುಗೊಳಿಸುವುದು, ಸಂವಿಧಾನಾತ್ಮಕ ನೀತಿಗಳನ್ನು ಜಾರಿಗೆ ತರುವುದು, ಚುನಾವಣೆಗಳನ್ನು ನಡೆಸುವುದು ಇವೇ ಮುಂತಾದ ಉದ್ದೇಶವನ್ನು ಕ್ರಾಂತಿ ಹೊಂದಿತ್ತು. ಇದು ಪ್ರಜ್ಞಾವಂತ ಅರಸರುಗಳ ಪ್ರಣಾಳಿಕೆಯೂ ಆಗಿತ್ತು.

ಕ್ರಾಂತಿ ನಡೆದರೂ ಫ್ರಾನ್ಸಿನಲ್ಲಿ ರಾಜಪ್ರಭುತ್ವ ಕೊನೆಗೊಳ್ಳಲಿಲ್ಲ. ೧೬ನೆಯ ಲೂಯಿಯ ಮರಣದ ನಂತರ ರಾಜಪ್ರಭುತ್ವ ಫ್ರಾನ್ಸಿನಿಂದ ಮರೆಯಾಗುವ ಸಾಧ್ಯತೆ ಇದ್ದರೂ ೧೮ನೆಯ ಲೂಯಿ ಹೊಸ ಸಂವಿಧಾನಾತ್ಮಕ ಸುಧಾರಣೆಯೊಡನೆ ಅಧಿಕಾರಕ್ಕೆ ಬಂದ. ಕ್ರಾಂತಿಯ ಶಿಶುವೇ ಆಗಿದ್ದ ನೆಪೋಲಿಯನ್ ಬೊನಾಪಾರ್ಟೆ ಕ್ರಾಂತಿಯ ತತ್ವಗಳನ್ನು ಗಾಳಿಗೆ ತೂರಿದ್ದ. ನಂತರ ಬಂದ ಲೂಯಿ ಫಿಲಿಪ್ಪಿ ಮತ್ತು ಮೂರನೆಯ ನೆಪೋಲಿಯನ್ ಸರ್ವಾಧಿಕಾರಿಗಳೇ ಆಗಿದ್ದರು. ಅಂದರೆ ೧೭೮೯ರಲ್ಲಿ ನಡೆದ ಕ್ರಾಂತಿ ಕೊನೆಗೊಂಡಿರುವುದು ೧೮೭೧ರಲ್ಲಿ. ೧೮೭೧ರಲ್ಲಿ ನಡೆದ ಸೆಡಾನ್ ಯುದ್ಧದಲ್ಲಿ ಮೂರನೆಯ ನೆಪೋಲಿಯನ್ ಪ್ರಷ್ಯಾದ ವಿರುದ್ಧ ಸೋತಾಗ ಫ್ರಾನ್ಸನ್ನು ಗಣರಾಜ್ಯವೆಂದು ಘೋಷಿಸಲಾಯಿತು. ಇದು ಕ್ರಾಂತಿಯ ಉದ್ದೇಶವಾಗಿತ್ತು. ೧೭೮೯ರ ಕ್ರಾಂತಿಯಿಂದಾಗಿ ಫ್ರಾನ್ಸಿನಲ್ಲಿ ಅಸ್ತಿತ್ವದಲ್ಲಿದ್ದ ಸರಕಾರದ ಸ್ವರೂಪದಲ್ಲಿ ಬದಲಾವಣೆಯಾಯಿತು. ಅಂದರೆ ನಿರಂಕುಶ ರಾಜಪ್ರಭುತ್ವದಿಂದ ಸಂವಿಧಾನಾತ್ಮಕ ರಾಜಪ್ರಭುತ್ವಕ್ಕೆ ಒಟ್ಟು ವ್ಯವಸ್ಥೆ ಪರಿವರ್ತನೆಗೊಂಡಿತು. ರಾಜಪ್ರಭುತ್ವ ಹೊಸ ರೂಪವನ್ನು ಪಡೆದುಕೊಂಡಿತು. ಇಲ್ಲಿ ರಾಜಪ್ರಭುತ್ವದ ಎಲ್ಲಾ ಧೋರಣೆಗಳು ಆದೇಶದಂತಿರದೆ ಹೊಂದಾಣಿಕೆಯ ರೂಪದ್ದಾಗಿದ್ದವು. ಇಲ್ಲಿ ನಾವು ಗಮನಿಸಬೇಕಾದ ಬಹುಮುಖ್ಯವಾದ ಅಂಶವೆಂದರೆ ಕ್ರಾಂತಿಯ ಸಂದರ್ಭದಲ್ಲಿ ಅಧಿಕಾರವನ್ನು ಪಡೆದುಕೊಂಡ ಮಧ್ಯಮ ವರ್ಗದ ರಾಜಕೀಯ. ಇತಿಹಾಸಕಾರರು ಈ ಬೆಳವಣಿಗೆಯನ್ನು ಮಧ್ಯಮ ವರ್ಗದ ರಾಜಪ್ರಭುತ್ವವೆಂದೇ ಕರೆದಿದ್ದಾರೆ. ಜನಸಾಮಾನ್ಯರಿಗೆ ಫ್ರಾನ್ಸಿನಲ್ಲಿದ್ದ ಹಳೆಯ ವ್ಯವಸ್ಥೆ ಮತ್ತು ಹೊಸ ಮಧ್ಯಮ ವರ್ಗದಲ್ಲಿ ವ್ಯತ್ಯಾಸವನ್ನು ಕಾಣಲು ಸಾಧ್ಯವಾಗಲಿಲ್ಲ. ಇದು ಊಳಿಗಮಾನ್ಯ ವ್ಯವಸ್ಥೆ ಸಡಿಲಗೊಂಡು ಬಂಡವಾಳಶಾಹಿ ವ್ಯವಸ್ಥೆಯ ಆಗಮನದ ಹಂತವಾಗಿತ್ತು. ಈ ಅಂಶವನ್ನು ಆಲ್ಬರ್ಟ್ ಸಬೂಲ್‌ರವರ ಅಂಡರ್‌ಸ್ಟಾಂಡಿಂಗ್ ದಿ ಫ್ರೆಂಚ್ ರೆವಲ್ಯೂಷನ್ ಗ್ರಂಥದಲ್ಲಿ ಗಮನಿಸಬಹುದು.

ಫ್ರಾನ್ಸಿನಲ್ಲಿ ಪಾದ್ರಿಗಳು ಮತ್ತು ಶ್ರೀಮಂತ ವರ್ಗದವರು ವಿಶೇಷ ಹಕ್ಕುಬಾಧ್ಯತೆಗಳನ್ನು ಅನುಭವಿಸುತ್ತಿದ್ದರು. ಫ್ರಾನ್ಸ್‌ನ ಒಟ್ಟು ಜನಸಂಖ್ಯೆಯಲ್ಲಿ ಇವರು ಅಲ್ಪಸಂಖ್ಯಾತರಾಗಿದ್ದರೂ ಬಹುಪಾಲು ಭೂಮಿ ಹಾಗೂ ಸಂಪತ್ತು ಇವರ ಅಧೀನದಲ್ಲಿದ್ದವು. ಊಳಿಗಮಾನ್ಯ ವ್ಯವಸ್ಥೆ ಇನ್ನೂ ಬಿಗಿಯಾಗಿಯೇ ಇತ್ತು. ಆದರೆ ಶ್ರೀಮಂತವರ್ಗ ಹೊಂದಿದ್ದ ಅಧಿಕಾರ ಮತ್ತು ಸವಲತ್ತು ಬೂರ್ಬನ್ ಅರಸರುಗಳಿಗೆ ತಮ್ಮ ವಂಶಪಾರಂಪರ್ಯದ ಆಳ್ವಿಕೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ತಡೆಗೋಡೆಯಾಗಿ ಪರಿಣಮಿಸಿತು. ಶ್ರೀಮಂತ ವರ್ಗದ ಅಧಿಕಾರವನ್ನು ಸೀಮಿತಗೊಳಿಸುವ ಉದ್ದೇಶದಿಂದ ರಾಜಪ್ರಭುತ್ವ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡಿತು. ಇದು ವಿರೋಧದ ರೂಪದಲ್ಲಿರದೆ ಹೊಂದಾಣಿಕೆಯ ಅಥವಾ ಓಲೈಸುವ ರೀತಿಯದ್ದಾಗಿತ್ತು. ಶ್ರೀಮಂತವರ್ಗದ ರಾಜಕೀಯ ಅಧಿಕಾರ ಮತ್ತು ಸವಲತ್ತುಗಳನ್ನು ಕಸಿದುಕೊಂಡು ಸಾಮಾಜಿಕ ಸವಲತ್ತುಗಳನ್ನು ನೀಡಲಾಯಿತು. ಈ ವ್ಯವಸ್ಥೆ ರಾಜಪ್ರಭುತ್ವದ ಸಾಮರ್ಥ್ಯವನ್ನು ಅವಲಂಬಿಸಿಕೊಂಡಿರುತ್ತಿತ್ತು. ೧೪ನೆಯ ಲೂಯಿಯ ಆಳ್ವಿಕೆಯ ಸಂದರ್ಭದಲ್ಲಿ ಈ ಪ್ರಯತ್ನವನ್ನು ಮಾಡಲಾಯಿತು. ಶ್ರೀಮಂತ ವರ್ಗದ ವಿರೋಧವನ್ನು ತಪ್ಪಿಸಲು ಅವರನ್ನು ಕೋರ್ಟಿನ ಸದಸ್ಯರನ್ನಾಗಿ ಮಾಡಲಾಯಿತು. ಆದರೆ ೧೪ನೆಯ ಲೂಯಿಯ ಮರಣದ ನಂತರ ರಾಜಕೀಯ ಸ್ಥಿತಿಗತಿಗಳು ಬದಲಾದವು. ೧೫ನೆಯ ಲೂಯಿ ಮತ್ತು ೧೬ನೆಯ ಲೂಯಿ ಶ್ರೀಮಂತ ವರ್ಗದ ಜನರನ್ನು ಹಿಡಿತದಲ್ಲಿಟ್ಟುಕೊಳ್ಳುವಷ್ಟು ಸಮರ್ಥರಾಗಿರಲಿಲ್ಲ. ಈ ಸಂದರ್ಭದಲ್ಲಿಯೇ ಶ್ರೀಮಂತ ವರ್ಗದವರು ನಿರಂಕುಶ ಪ್ರಭುತ್ವವನ್ನು ವಿರೋಧಿಸಿ ಅಧಿಕಾರದಲ್ಲಿ ಸಮಾನ ಹಕ್ಕನ್ನು ಪ್ರತಿಪಾದಿಸಿದರು. ಅರಸರ ಆಳ್ವಿಕೆಯ ವಿರುದ್ಧ ಶ್ರೀಮಂತ ವರ್ಗದ ಹೋರಾಟ ಇಲ್ಲಿಂದಲೇ ಪ್ರಾರಂಭಗೊಂಡಿತು. ಈ ಬದಲಾವಣೆಯನ್ನೇ ಫ್ರಾನ್ಸಿನ ಕ್ರಾಂತಿ ಶ್ರೀಮಂತ ವರ್ಗದ ಕ್ರಾಂತಿಯಾಗಿ ಪ್ರಾರಂಭಗೊಂಡಿತು ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಆದರೆ ಇದನ್ನು ಕ್ರಾಂತಿ ಎಂಬುದಾಗಿ ಕರೆಯಲು ಸಾಧ್ಯವಿಲ್ಲ. ಏಕೆಂದರೆ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಈಡೇರಿಸುವುದೇ ಶ್ರೀಮಂತ ವರ್ಗದ ಉದ್ದೇಶವಾಗಿತ್ತು.

ಸಾಮಾಜಿಕವಾಗಿ ಸ್ಥಾನಮಾನಗಳಿದ್ದರೂ ರಾಜಕೀಯವಾಗಿ ಶ್ರೀಮಂತ ವರ್ಗದ ಎಲ್ಲಾ ಸವಲತ್ತುಗಳನ್ನು ಕಿತ್ತುಕೊಳ್ಳಲಾಗಿತ್ತು. ಈ ಕಾರಣಕ್ಕಾಗಿಯೇ ಬೂರ್ಬನ್ ಅರಸರುಗಳ ನಿರಂಕುಶ ಪ್ರಭುತ್ವವನ್ನು ವಿರೋಧಿಸಿ ಅಧಿಕಾರದಲ್ಲಿ ಸಮಪಾಲನ್ನು ಅಥವಾ ಸಮಾನ ಹಕ್ಕನ್ನು ಪ್ರತಿಪಾದಿಸಲಾಯಿತು. ಇಲ್ಲಿ ಊಳಿಗಮಾನ್ಯ ಪದ್ಧತಿಯ ಮುಂದುವರಿಕೆಯೂ ಪ್ರಮುಖ ಅಂಶವಾಗಿತ್ತು. ಅರಸ ಕೇಂದ್ರಿತ ವ್ಯವಸ್ಥೆ ೧೬ನೆಯ ಲೂಯಿಯ ಆಳ್ವಿಕೆಯ ಸಂದರ್ಭದಲ್ಲಿ ಸಡಿಲವಾಗಿದ್ದರಿಂದಾಗಿ ಶ್ರೀಮಂತ ವರ್ಗ ಅಧಿಕಾರವನ್ನು ಪಡೆಯಲು ಹಾತೊರೆಯುತ್ತಿತ್ತು. ಇವರು ಅಧಿಕಾರ ಮತ್ತು ಸ್ವಾತಂತ್ರ್ಯದ ಜತೆಗೇ ಸವಲತ್ತುಗಳನ್ನೂ ಯಾಚಿಸುತ್ತಿದ್ದರು. ಈ ಉದ್ದೇಶಕ್ಕಾಗಿಯೇ ಎಸ್ಟೇಟ್ ಜನರಲ್ಸ್‌ನ ಸಭೆ ಕರೆಯುವುದನ್ನು ಶ್ರೀಮಂತ ವರ್ಗ ವಿರೋಧಿಸಿತು. ಏಕೆಂದರೆ ಎಸ್ಟೇಟ್-ಜನರಲ್ಸ್ ನ ಸಭೆಯನ್ನು ಕರೆದರೆ ಮೂರನೆಯ ಎಸ್ಟೇಟ್ ತನ್ನ ಹಕ್ಕನ್ನು ಪ್ರತಿಪಾದಿಸುತ್ತದೆ ಮತ್ತು ಬೇಡಿಕೆಗಳನ್ನು ಮುಂದೊಡ್ಡುತ್ತದೆ. ಈ ಕಾರಣಕ್ಕಾಗಿಯೇ ೧೬೧೪ರಿಂದ ಎಸ್ಟೇಟ್-ಜನರಲ್ಸ್‌ನ ಸಭೆಯನ್ನು ಫ್ರಾನ್ಸಿನಲ್ಲಿ ಕರೆದಿರಲಿಲ್ಲ. ಆದರೆ ೧೭೮೯ರಲ್ಲಿ ಮೂರನೆಯ ಎಸ್ಟೇಟ್‌ನ ಒತ್ತಡಕ್ಕೆ ಮಣಿದು ಸಭೆಯನ್ನು ಕರೆಯಬೇಕಾಯಿತು. ಇದನ್ನು ಶ್ರೀಮಂತವರ್ಗ ಬಲವಾಗಿ ವಿರೋಧಿಸಿತಾದರೂ ಅದರ ವಿರೋಧ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಆದರೆ ಈ ಸಭೆ ಮೂರನೆಯ ಎಸ್ಟೇಟ್ ತಮ್ಮ ಪ್ರಣಾಳಿಕೆಯನ್ನು ರೂಪಿಸುವುದಕ್ಕೆ ಸಹಕಾರಿ ಯಾಯಿತು. ಈ ಹಿನ್ನೆಲೆಯಿಂದಾಗಿ ಕ್ರಾಂತಿಯ ಆರಂಭದ ದಿನಗಳಲ್ಲಿ ವ್ಯಕ್ತವಾದ ವಿರೋಧವನ್ನು ಶ್ರೀಮಂತ ವರ್ಗದ ವಿರೋಧ ಎಂಬುದಾಗಿ ಇತಿಹಾಸಕಾರರು ಪ್ರತಿಪಾದಿಸಿದ್ದಾರೆ. ಸಾಗ್ನೇಕ್ ತನ್ನ ‘‘ದ ಹಿಸ್ಟರಿ ಆಫ್ ಫ್ರಾನ್ಸ್’’ ಎಂಬ ಗ್ರಂಥದಲ್ಲಿ ಫ್ರಾನ್ಸಿನ ಕ್ರಾಂತಿ ಶ್ರೀಮಂತವರ್ಗದ ಕ್ರಾಂತಿಯಾಗಿ ಪ್ರಾರಂಭವಾಯಿತು ಎಂಬುದಾಗಿ ವಿವರಿಸುತ್ತಾನೆ. ಇದೇ ರೀತಿಯ ಅಭಿಪ್ರಾಯಗಳನ್ನು ಬಾರ್ನೆವ್, ತಿಯರ್ಸ್, ಗಿಸೆಟ್ ಮುಂತಾದ ವಿದ್ವಾಂಸರ ಗ್ರಂಥಗಳಲ್ಲೂ ಕಾಣಬಹುದು.

ಬಾರ್ನೆವ್ ತನ್ನ ಇನ್‌ಟ್ರುಡಕ್ಷನ್ ಟು ದಿ ಫ್ರೆಂಚ್ ರೆವಲ್ಯೂಷನ್ ಗ್ರಂಥದಲ್ಲಿ ಶ್ರೀಮಂತ ವರ್ಗ ಹುಟ್ಟುಹಾಕಿದ ಅನೇಕ ಊಳಿಗಮಾನ್ಯ ಸಂಸ್ಥೆಗಳು ಹೊಸ ವ್ಯವಸ್ಥೆಯ ಆಗಮನವನ್ನು ತಡೆಹಿಡಿದ ಬಗೆಯನ್ನು ಚರ್ಚಿಸುತ್ತಾನೆ. ಇಲ್ಲಿ ಹೊಸ ವ್ಯವಸ್ಥೆಯೆಂದರೆ ಕಾರ್ಲ್‌ಮಾರ್ಕ್ಸರವರ ‘ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ’ ಮತ್ತು ‘ದಾಸ್ ಕ್ಯಾಪಿಟಲ್’ ನಲ್ಲಿ ಚರ್ಚಿಸಿರುವಂತಹ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿ. ಅಂದರೆ ಸಂಪತ್ತು ಮತ್ತು ಅಧಿಕಾರದ ಮರುಹಂಚುವಿಕೆ ಎಂದರ್ಥ. ಫ್ರಾನ್ಸಿನ ಕ್ರಾಂತಿಯನ್ನು ಸಾಮಾಜಿಕ ಹಿನ್ನೆಲೆಯಿಂದ ಲೆಪಬ್ರೆವ್, ಬಾರ್ನೆವ್, ಜೂರಿಸ್, ಆಲರ್ಡ್, ಮಥಾಯಿಸ್ ಮುಂತಾದ ಅನೇಕ ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಇವರ ಪ್ರಕಾರ ಫ್ರಾನ್ಸಿನ ಕ್ರಾಂತಿ ಹಿಂದಿನಿಂದಲೇ ನಡೆದು ಬಂದ ಆರ್ಥಿಕ ಮತ್ತು ಸಾಮಾಜಿಕ ವಿಕಸನದ ಪರಿಣಾಮ. ಈ ಪ್ರಕ್ರಿಯೆ ನಿರಂತರವಾಗಿದ್ದು ಇದು ಮಧ್ಯಮ ವರ್ಗವು ಅಧಿಕಾರ ಮತ್ತು ಸಂಪತ್ತನ್ನು ಹೊಂದುವಂತೆ ಮಾಡಿತು. ಆದರೆ ಈ ರೀತಿಯ ವ್ಯಾಖ್ಯಾನಗಳನ್ನು ಆರ್.ಆರ್.ಪಾಮರ್, ಆಲ್‌ಫ್ರಡ್ ಕೋಬ್ಬನ್ ಮುಂತಾದ ವಿದ್ವಾಂಸರು ವಿರೋಧಿಸಿದರು.

ಆರ್.ಆರ್. ಪಾಮರ್ ತನ್ನ ದಿ ಏಜ್ ಆಫ್ ದಿ ಡೆಮೋಕ್ರಾಟಿಕ್ ರೆವಲ್ಯೂಷನ್ ಎಂಬ ಗ್ರಂಥದಲ್ಲಿ ಜಿಯಾನ್ ಜೂರಿಸ್‌ನಿಂದ ಜೋರ್ಜ್ ಲೆಪಬ್ರೆವ್ ವರೆಗಿನ ಇತಿಹಾಸ ವನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಾನೆ. ಇವನು ಫ್ರೆಂಚ್ ಕ್ರಾಂತಿ ಊಳಿಗಮಾನ್ಯ ವಿರೋಧಿ ಮತ್ತು ಮಧ್ಯಮ ವರ್ಗದ ಸ್ವರೂಪದ್ದು ಎನ್ನುವ ವಾದವನ್ನು ಒಪ್ಪುವುದಿಲ್ಲ. ಅದೇ ರೀತಿ ರಾಷ್ಟ್ರೀಯ ಕ್ರಾಂತಿ ಎನ್ನುವ ವಾದವನ್ನೂ ತಳ್ಳಿ ಹಾಕುತ್ತಾನೆ. ಪಾಮರ್‌ನ ಪ್ರಕಾರ ಫ್ರಾನ್ಸಿನ ಕ್ರಾಂತಿ ಪ್ರಜಾಪ್ರಭುತ್ವವಾದಿ ಕ್ರಾಂತಿ ಅಥವಾ ಅಟ್ಲಾಂಟಿಕ್ ಕ್ರಾಂತಿ. ಫ್ರಾನ್ಸಿನಲ್ಲಾದ ಬದಲಾವಣೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ರಾಜಕೀಯ ಬದಲಾವಣೆಯ ಪ್ರತಿಫಲನ ಎಂಬ ತತ್ವವನ್ನು ಮಂಡಿಸುತ್ತಾನೆ. ಇದು ಪ್ರಥಮ ಬಾರಿಗೆ ಅಮೆರಿಕಾದಲ್ಲಿನ ಬ್ರಿಟೀಷ್ ವಸಾಹತು ನೆಲೆಗಳಲ್ಲಿ ೧೭೬೩ರಿಂದ ಪ್ರಾರಂಭಗೊಂಡಿತು. ಇಲ್ಲಿ ಅಟ್ಲಾಂಟಿಕ್ ಮಹಾಸಾಗರ ಮಹತ್ವದ ಪಾತ್ರವನ್ನು ವಹಿಸಿತು. ಫ್ರಾನ್ಸಿನಲ್ಲಿ ಕ್ರಾಂತಿ ಆರಂಭವಾಗುವ ಮೊದಲು ಸ್ವಿಟ್ಜರ್‌ಲ್ಯಾಂಡ್, ನೆದರ್‌ಲ್ಯಾಂಡ್ ಮತ್ತು ಐರ್ಲೆಂಡ್‌ಗಳಲ್ಲಿ ಕ್ರಾಂತಿ ಕಾಣಿಸಿ ಕೊಂಡಿತ್ತು. ಇಲ್ಲಿ ಪ್ರಜಾಸತ್ತಾತ್ಮಕ ಬೆಳವಣಿಗೆಗಳು ಕಂಡುಬಂದವು. ಈ ಕಾರಣಕ್ಕಾಗಿ ಫ್ರಾನ್ಸಿನ ಕ್ರಾಂತಿಯನ್ನು ಪ್ರಜಾಪ್ರಭುತ್ವವಾದಿ ಅಥವಾ ಅಟ್ಲಾಂಟಿಕ್ ಕ್ರಾಂತಿ ಎಂಬುದಾಗಿ ಗುರುತಿಸಲಾಗಿದೆ. ಪಾಮರ್‌ರವರ ಪ್ರಕಾರ ಈ ಬೆಳವಣಿಗೆಯ ಲಾಭವನ್ನು ಪಡೆದುಕೊಂಡವರು ಮಧ್ಯಮ ವರ್ಗದ ಜನರು. ಆದ್ದರಿಂದಲೇ ಮಧ್ಯಮ ವರ್ಗದ ಕ್ರಾಂತಿ ಸ್ವಾಭಾವಿಕವಾಗಿತ್ತು ಮತ್ತು ಇದು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಕ್ರಾಂತಿಯ ಆಮದು ಮಾತ್ರ ಆಗಿದೆ ಎನ್ನುವ ನಿಲುವನ್ನು ಪಾಮರ್‌ರವರು ತಳೆಯುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಫ್ರಾನ್ಸಿಗಿಂತ ಭಿನ್ನವಾಗಿತ್ತು ಎನ್ನುವ ಅಂಶವನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾಗು ತ್ತದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸಿನ ಕ್ರಾಂತಿಯನ್ನು ಅಟ್ಲಾಂಟಿಕ್ ಕ್ರಾಂತಿ ಅಥವಾ ಪ್ರಜಾಪ್ರಭುತ್ವವಾದಿ ಕ್ರಾಂತಿ ಎನ್ನುವ ನಿರ್ಣಯವನ್ನು ಕೈಗೊಳ್ಳುವುದು ತಪ್ಪಾಗುತ್ತದೆ.

ಆಲ್‌ಫ್ರೆಡ್ ಕೋಬ್ಬನ್ ಫ್ರಾನ್ಸಿನ ಸಂಪ್ರದಾಯವಾದಿ ವಿಚಾರಧಾರೆಯನ್ನು ವಿರೋಧಿಸಿ ದನು. ಕೋಬ್ಬನ್‌ನು ಪಾಮರ್‌ನಂತೆಯೇ ಊಳಿಗಮಾನ್ಯ ವಿರೋಧಿ ಮತ್ತು ಮಧ್ಯಮ ವರ್ಗದ ಕ್ರಾಂತಿ ಎಂಬ ಸಿದ್ಧಾಂತವನ್ನು ಒಪ್ಪುವುದಿಲ್ಲ. ಇಲ್ಲಿ ಚರ್ಚೆಗೆ ಬರುವ ವಸ್ತುಗಳೆಂದರೆ ಊಳಿಗಮಾನ್ಯ ವಿರೋಧಿ ಮತ್ತು ಶ್ರಿಮಂತ ವರ್ಗದ ವಿರೋಧಿ ಹಾಗೂ ಇದು ನಿಜವಾಗಿಯೂ ಮಧ್ಯಮ ವರ್ಗ ಮತ್ತು ಬಂಡವಾಳಶಾಹಿತ್ವದ ಸಮಾಜವಾಗಿ ರೂಪುಗೊಂಡಿದೆಯೇ ಎನ್ನುವ ಸಂಗತಿ. ಬಾರ್ನೆವ್, ತಿಯರ್ಸ್, ಗಿಸೆಟ್‌ರವರ ಬರಹ ಗಳಲ್ಲಿ ಕಂಡುಬರುವ ವರ್ಗ ಹೋರಾಟದ ಕಲ್ಪನೆಯನ್ನು ಕೋಬ್ಬನ್ ಒಪ್ಪುವುದಿಲ್ಲ. ಏಕೆಂದರೆ ಇವನ ಪ್ರಕಾರ ಫ್ರಾನ್ಸಿನ ಕ್ರಾಂತಿ ಆರಂಭವಾಗುವ ಮೊದಲೇ ಊಳಿಗಮಾನ್ಯ ಪದ್ಧತಿ ಕೊನೆಗೊಂಡಿತ್ತು. ಕ್ರಾಂತಿ ಬಂಡವಾಳಶಾಹಿ ವ್ಯವಸ್ಥೆಯ ಕೆಲಸವಲ್ಲ. ಇದು ಮಧ್ಯಮ ವರ್ಗದ ಜನರ ಕೆಲಸ. ಇಲ್ಲಿ ಕೋಬ್ಬನ್‌ನು ಬಂಡವಾಳಶಾಹಿ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗ ಎಂಬ ವಿಭಜನೆಯನ್ನು ಮಾಡುತ್ತಾನೆ. ಇವನು ಫ್ರಾನ್ಸಿನ ಕ್ರಾಂತಿ ಮಧ್ಯಮ ವರ್ಗದ ಕ್ರಾಂತಿ ಎಂಬುದನ್ನು ಒಪ್ಪುತ್ತಾನೆ. ಆದರೆ ಇವರು ಬಂಡವಾಳ ಶಾಹಿಗಳಲ್ಲ. ಕೋಬ್ಬನ್‌ನ ಪ್ರಕಾರ ಫ್ರಾನ್ಸಿನ ಕ್ರಾಂತಿ ರಾಜಕೀಯ ಕ್ರಾಂತಿಯಾಗಿ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದಿತೇ ವಿನಾ ಸಾಮಾಜಿಕ ಕ್ರಾಂತಿಯಾಗಿ ರಾಜಕೀಯ ಸುಧಾರಣೆಗಳನ್ನು ಜಾರಿಗೆ ತಂದಿಲ್ಲ.

ಫ್ರಾನ್ಸಿನ ಕ್ರಾಂತಿಯನ್ನು ಮಧ್ಯಮ ವರ್ಗದ ಕ್ರಾಂತಿ ಎಂಬ ನೆಲೆಯಲ್ಲಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಲೆಪಬ್ರೆವ್, ಟೋಕಿವೆಲ್ಲೆ, ಆಲ್ಬರ್ಟ್ ಸಬೂಲ್ ಮುಂತಾದ ವಿದ್ವಾಂಸರು ಮಧ್ಯಮ ವರ್ಗದ ಕ್ರಾಂತಿಯ ಸ್ವರೂಪದ ಕುರಿತು ಚರ್ಚೆ ನಡೆಸಿದ್ದಾರೆ. ಮಧ್ಯಮ ವರ್ಗ ಫ್ರಾನ್ಸಿನ ಕ್ರಾಂತಿಯ ಸಂದರ್ಭದಲ್ಲಿ ಹುಟ್ಟಿದ ವರ್ಗವಲ್ಲ. ಇದಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಆದರೆ ೧೭೮೯ರಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ಮಧ್ಯಮ ವರ್ಗ ತನ್ನ ಹಕ್ಕನ್ನು ಪ್ರತಿಪಾದಿಸುವಂತೆ ಪ್ರಚೋದನೆ ನೀಡಿತು. ಇಲ್ಲೂ ಶ್ರೀಮಂತ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗ ಎಂದು ವಿಂಗಡನೆ ಮಾಡಬೇಕಾಗುತ್ತದೆ. ಕೆಳಮಧ್ಯಮ ವರ್ಗ ಸಾಮಾನ್ಯ ವರ್ಗದೊಡನೆ ಸೇರಿಕೊಂಡರೆ, ಶ್ರೀಮಂತ ಮಧ್ಯಮ ವರ್ಗ ನೊಬಿಲಿಟಿಯ ಸ್ಥಾನಮಾನಕ್ಕೆ ಹಾತೊರೆಯುತ್ತಿತ್ತು. ಮಧ್ಯಮ ವರ್ಗ ಸಂಪತ್ತನ್ನು ಹೊಂದಿದ್ದರೆ ಅಧಿಕಾರವನ್ನು ಹೊಂದಿರಲಿಲ್ಲ. ಶ್ರೀಮಂತವರ್ಗ ಅಧಿಕಾರವನ್ನು ಹೊಂದಿದ್ದು ಸಾಕಷ್ಟು ಸಂಪತ್ತು ಇರಲಿಲ್ಲ. ಇದೇ ಫ್ರಾನ್ಸಿನಲ್ಲಿ ಅಸಮಾನತೆ ಉಂಟಾಗಲು ಪ್ರಮುಖ ಕಾರಣ. ೧೮ನೆಯ ಶತಮಾನದಲ್ಲಿ ಮಧ್ಯಮ ವರ್ಗ ಫ್ರಾನ್ಸಿನ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆಗಳ ಮೇಲೆ ಹಿಡಿತವನ್ನು ಸಾಧಿಸಿತ್ತು. ತತ್ವಜ್ಞಾನಿಗಳ ಪ್ರಭಾವದಿಂದಾಗಿ ತಮ್ಮ ಬೇಡಿಕೆಗಳನ್ನು ಬಲವಾಗಿ ಪ್ರತಿವಾದಿಸತೊಡಗಿತು.

೧೭೮೯ರಲ್ಲಿ ರಾಷ್ಟ್ರೀಯ ಸಭೆ ರಚನೆಗೊಂಡ ನಂತರ ಸಂವಿಧಾನವನ್ನು ರಚಿಸಲಾಯಿತು. ೧೭೯೧ರ ಸಂವಿಧಾನವನ್ನು ಮಧ್ಯಮ ವರ್ಗದ ಸಂವಿಧಾನ ಎಂಬ ಹೆಸರಿನಿಂದ ಕರೆಯ ಲಾಯಿತು. ಏಕೆಂದರೆ ಸಂವಿಧಾನವನ್ನು ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ರಚಿಸಿ ಕೊಳ್ಳಲಾಯಿತು. ೧೭೯೩ ಮತ್ತು ೧೭೯೫ರ ಸಂವಿಧಾನಗಳೂ ಇದೇ ಮಾದರಿ ಯದ್ದಾಗಿವೆ. ಮಧ್ಯಮ ವರ್ಗದ ಜನರು ಶ್ರೀಮಂತ ವರ್ಗದಂತೆ ಅಧಿಕಾರ ಮತ್ತು ಸ್ವಾತಂತ್ರ್ಯವನ್ನು ಮಾತ್ರ ಕೇಳುತ್ತಿರಲಿಲ್ಲ. ಶ್ರೀಮಂತ ವರ್ಗದ ಅತಿಯಾದ ಸವಲತ್ತುಗಳನ್ನು ರದ್ದುಪಡಿಸುವುದು ಮತ್ತು ಸಮಾನ ಹಕ್ಕನ್ನು ಪಡೆಯುವುದೂ ಇವರ ಪ್ರಣಾಳಿಕೆಯಲ್ಲಿ ಸೇರಿಕೊಂಡಿತ್ತು. ಬಾರ್ನೆವ್ ತನ್ನ ಇಂಟ್ರಡಕ್ಷನ್ ಟು ದಿ ಫ್ರೆಂಚ್ ರೆವಲ್ಯೂಷನ್ ಗ್ರಂಥದಲ್ಲಿ ಮಧ್ಯಮ ವರ್ಗದ ಕ್ರಾಂತಿಯ ಕುರಿತು ಚರ್ಚಿಸುವಾಗ ಈ ವಿವರಗಳನ್ನು ಮಂಡಿಸುತ್ತಾನೆ. ಮಧ್ಯಮ ವರ್ಗಕ್ಕೆ ತನ್ನ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಇತರ ವರ್ಗಗಳೊಡನೆ ಹೊಂದಾಣಿಕೆಯನ್ನು ಏರ್ಪಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಶ್ರೀಮಂತ ವರ್ಗದೊಡನೆ ಅಧಿಕಾರಕ್ಕಾಗಿ ಹೊಂದಾಣಿಕೆ ನಡೆಸಲು ಪ್ರಯತ್ನಿಸುತ್ತಿತ್ತು. ಆದರೆ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದ್ದರಿಂದ ಸಾಮಾನ್ಯ ವರ್ಗದ ಜನರ ಬೆಂಬಲವನ್ನು ಪಡೆದುಕೊಂಡಿತು. ಆಲೆನ್ ಡಿ. ಟೋಕಿವೆಲ್ಲೆ ತನ್ನ ದಿ ಏನ್‌ಶ್ಯಾನ್ ಆಂಡ್ ದ ರೆವಲ್ಯೂಷನ್ ಗ್ರಂಥದಲ್ಲಿ ಈ ರೀತಿಯ ಹೊಂದಾಣಿಕೆಯ ಕುರಿತು ವಿವರಿಸುತ್ತಾನೆ.

ಮಧ್ಯಮ ವರ್ಗದ ಕ್ರಾಂತಿಯ ಕುರಿತು ಚರ್ಚಿಸುವಾಗ ಫ್ರಾನ್ಸಿನ ಒಟ್ಟು ವ್ಯವಸ್ಥೆ ಊಳಿಗಮಾನ್ಯ ಪದ್ಧತಿಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಪರಿವರ್ತನೆ ಹೊಂದಿರುವ ಬಗೆ ಪ್ರಾಮುಖ್ಯವೆನಿಸುತ್ತದೆ. ಕಾರ್ಲ್‌ಮಾರ್ಕ್ಸ್ ತನ್ನ ‘ಕ್ಯಾಪಿಟಲ್’ನಲ್ಲಿ ಈ ಪರಿವರ್ತನೆ ಎರಡು ರೀತಿಯಲ್ಲಿ ನಡೆಯುವ ಸಾಧ್ಯತೆಗಳಿವೆ ಎನ್ನುತ್ತಾನೆ. ಒಂದು ಕ್ರಾಂತಿಕಾರಿ ಬದಲಾವಣೆಯಾದರೆ ಇನ್ನೊಂದು ಹೊಂದಾಣಿಕೆಯ ಸ್ವರೂಪದ್ದು. ಹಳೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸಿ ಪರಿವರ್ತನೆ ಹೊಂದುವುದು ಕ್ರಾಂತಿಕಾರಿ ಬದಲಾವಣೆಯಾದರೆ, ಹಳೆಯ ಉತ್ಪಾದನಾ ವ್ಯವಸ್ಥೆಯನ್ನು ಗರ್ಭೀಕರಿಸಿಕೊಂಡು ಅಸ್ತಿತ್ವಕ್ಕೆ ಬರುವ ಹೊಸ ಬಂಡವಾಳಶಾಹಿ ಸಮಾಜ ಹೊಂದಾಣಿಕೆಯ ಸ್ವರೂಪದ್ದಾಗಿರು ತ್ತದೆ. ಇದರ ಕುರಿತಾಗಿ ಅನೇಕ ವಾಗ್ವಾದಗಳು ನಡೆದವು. ಆಲ್ಬರ್ಟ್ ಸಬೂಲ್‌ರವರ ಪ್ರಕಾರ ಫ್ರಾನ್ಸಿನ ಕ್ರಾಂತಿ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆಯನ್ನು ತಂದಿತು. ಈ ಪರಿವರ್ತನೆಗೆ ಆರ್ಥಿಕ ಕಾರಣಗಳಲ್ಲದೆ ಸಾಮಾಜಿಕ ರಚನೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಂಶಗಳೂ ಕಾರಣಗಳಾಗುತ್ತವೆ ಎನ್ನುವ ವಾಸ್ತವಾಂಶವನ್ನು ಗಮನಿಸಬೇಕಾಗುತ್ತದೆ.

ಫ್ರಾನ್ಸಿನ ಕ್ರಾಂತಿಯನ್ನು ಸಾಮಾನ್ಯ ವರ್ಗದ ಕ್ರಾಂತಿ ಎಂಬ ರೀತಿಯಲ್ಲೂ ಅಧ್ಯಯನ ನಡೆಸಲಾಗಿದೆ. ಕ್ರಾಂತಿಯ ಆರಂಭದಿಂದ ಡೈರೆಕ್ಟರಿಯ ಆಳ್ವಿಕೆಯವರೆಗೆ ಅಂದರೆ ರಾಷ್ಟ್ರೀಯ ಸಭೆ, ಶಾಸಕಾಂಗ ಸಭೆ ಮತ್ತು ರಾಷ್ಟ್ರೀಯ ಸಮಿತಿಯ ಆಳ್ವಿಕೆಯ ಸಂದರ್ಭ ಗಳಲ್ಲಿ ಫ್ರಾನ್ಸಿನ ಸಾಮಾನ್ಯವರ್ಗ ನಿರ್ಣಾಯಕ ಪಾತ್ರವನ್ನು ವಹಿಸಿತ್ತು. ಜಾಕೋಬಿನ್ ಕ್ಲಬ್, ಕಾರ್ಡಿಲಿಯರ್ ಕ್ಲಬ್ ಮತ್ತು ಪ್ಯಾರಿಸ್ ಕಮ್ಯೂನ್ ಸಾಮಾನ್ಯ ವರ್ಗದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದವು. ಫ್ರಾನ್ಸಿನ ಬಡ ಜನರನ್ನು ಸಾನ್‌ಸ್ಕಿಲ್ಯೋಟ್ಸ್ ಎಂಬ ಹೆಸರಿ ನಿಂದ ಕರೆಯಲಾಗಿದೆ. ಇದು ಸಾನ್‌ಸ್ಕಿಲ್ಯೋಟಿಸಂ ಎಂಬ ಸಿದ್ಧಾಂತವಾಗಿ ರೂಪುಗೊಂಡಿತು. ಇದರಲ್ಲಿ ರೈತರು, ಕೈಗಾರಿಕಾ ಕಾರ್ಮಿಕರು, ಕುಶಲಕರ್ಮಿಗಳು, ನಗರವಾಸಿಗಳು, ಕೆಳಮಧ್ಯಮ ವರ್ಗದ ಜನರು, ಸಣ್ಣಪುಟ್ಟ ವ್ಯಾಪಾರಿ ಮಳಿಗೆಗಳನ್ನು ಹೊಂದಿದವರು ಇವರೆಲ್ಲಾ ಸೇರಿಕೊಂಡಿದ್ದರು. ಇವರೆಲ್ಲರನ್ನೂ ಒಟ್ಟಾಗಿ ಸಾನ್‌ಸ್ಕಿಲ್ಯೋಟ್ಸ್ ಎಂದು ಕರೆಯಲಾಗಿದೆ. ಜಾರ್ಜ್ ರೂದೆ ತನ್ನ ಕ್ರೌಡ್ ಇನ್ ದಿ ಫ್ರೆಂಚ್ ರೆವಲ್ಯೂಷನ್ ಗ್ರಂಥದಲ್ಲಿ ಸಾಮಾನ್ಯ ವರ್ಗದ ಭಾಗವಹಿಸುವಿಕೆಯ ಕುರಿತು ಕೂಲಂಕಷವಾಗಿ ವಿವರಿಸಿದ್ದಾನೆ. ರೂದೆಯ ಪ್ರಕಾರ ೧೭೮೯ರ ಕ್ರಾಂತಿ ಸಾಮಾನ್ಯವರ್ಗದ ಜನರ ಕ್ರಾಂತಿ. ಇವರ ಮುಖ್ಯ ಬೇಡಿಕೆಯೆಂದರೆ ನ್ಯಾಯ, ಭೂಮಿ ಮತ್ತು ಆಹಾರ. ಮಧ್ಯಮ ವರ್ಗದ ಜನರಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಪರವಾಗಿ ಹೋರಾಡುವ ಜನವರ್ಗದ ಅಗತ್ಯವಿತ್ತು. ಇದಕ್ಕಾಗಿಯೇ ಸಾನ್‌ಸ್ಕಿಲ್ಯೋಟ್ಸ್‌ನೊಡನೆ ಹೊಂದಾಣಿಕೆ ಮಾಡಿಕೊಂಡಿತು. ಮಧ್ಯಮ ವರ್ಗ ಫಾನ್ಸ್‌ನ್ನು ಸುಧಾರಿಸುವ ಪ್ರಯತ್ನವನ್ನು ಮಾಡತೊಡಗಿತು. ಸಾರ್ವಜನಿಕರ ಹಿತಾಸಕ್ತಿಗಳನ್ನು ಕಾಪಾಡುವ ಬ್ಯಾನರ್‌ನೊಡನೆ ತನ್ನ ಕಾರ್ಯವನ್ನು ಪ್ರಾರಂಭಿಸಿತು. ಇದರಿಂದಾಗಿಯೇ ಫ್ರಾನ್ಸ್‌ನ ಸಾಮಾನ್ಯವರ್ಗ ಮಧ್ಯಮ ವರ್ಗದ ಕಡೆಗೆ ಹೆಚ್ಚು ಆಕರ್ಷಿತವಾಯಿತು. ಆದರೆ ನೊಬಿಲಿಟಿಯಂತೆಯೇ ಮಧ್ಯಮ ವರ್ಗವೂ ಅಧಿಕಾರದಲ್ಲಿ ಸಮಪಾಲು ಪಡೆಯುವುದಕ್ಕೋಸ್ಕರವೇ ಹೋರಾಟ ನಡೆಸುತ್ತಿದ್ದುದು ಸಾನ್‌ಸ್ಕಿಲ್ಯೋಟ್ಸ್‌ಗೆ ಪ್ರಾರಂಭಿಕ ಹಂತದಲ್ಲಿ ತಿಳಿಯಲಿಲ್ಲ. ತಿಳಿಯುವಷ್ಟು ಹೊತ್ತಿಗೆ ಮಧ್ಯಮ ವರ್ಗ ಹಳೆಯ ವ್ಯವಸ್ಥೆಯ ಊಳಿಗಮಾನ್ಯ ಪದ್ಧತಿಯಷ್ಟೇ ಬಲಿಷ್ಠವಾಗಿ ಸಂಘಟನೆಗೊಂಡಿತ್ತು.

ಫ್ರಾನ್ಸಿನಲ್ಲಿ ಕ್ರಾಂತಿ ಯಶಸ್ವಿಯಾಗುವುದಕ್ಕೆ ಮೂಲ ಕಾರಣ ಜನಸಾಮಾನ್ಯರ ಹೋರಾಟ. ಬ್ಯಾಸ್ಟಿಲ್ ಸೆರೆಮನೆಯ ಪತನ ಮತ್ತು ವರ್ಸೆಲ್ಸ್ ಮೇಲೆ ಮಹಿಳೆಯರ ಮುತ್ತಿಗೆ ಅಥವಾ ರೊಟ್ಟಿಯ ಹಗರಣ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಇ.ಎಲ್.ಐಸೆನ್ ಸ್ಪೈನ್ ಪ್ರಕಾರ ಫ್ರಾನ್ಸಿನ ಕ್ರಾಂತಿಯ ರೂವಾರಿಗಳು ಜನಸಾಮಾನ್ಯರು ಮತ್ತು ಈ ಕ್ರಾಂತಿಯಲ್ಲಿ ಮಧ್ಯಮ ವರ್ಗ ಪ್ರಮುಖ ಪಾತ್ರವನ್ನು ವಹಿಸಲಿಲ್ಲ. ಕಾರ್ಲ್‌ಮಾರ್ಕ್ಸ್ ಈ ಕ್ರಾಂತಿಯನ್ನು ವರ್ಗಹೋರಾಟ ಅಥವಾ ಆಂತರಿಕ ಕಲಹವನ್ನಾಗಿ ವಿವರಿಸಿದ್ದಾನೆ. ಇಲ್ಲಿ ವರ್ಗ ಹೋರಾಟ ಸಾನ್‌ಸ್ಕಿಲ್ಯೋಟ್ಸ್ ಮತ್ತು ಬಂಡವಾಳಶಾಹಿ ಮಧ್ಯಮ ವರ್ಗದ ನಡುವೆ ನಡೆಯಿತು. ಮಾರ್ಕ್ಸ್ ತನ್ನ ದಿ ಸಿವಿಲ್ ವಾರ್ ಇನ್ ಫ್ರಾನ್ಸ್ ಎಂಬ ಲೇಖನ ದಲ್ಲಿ ಈ ಕುರಿತು ಚರ್ಚಿಸಿದ್ದಾರೆ. ಲೆನಿನ್ ಮಾರ್ಕ್ಸ್‌ನ ವಾದವನ್ನೇ ಮುಂದುವರಿಸುತ್ತಾ ‘ಪ್ಯಾರಿಸ್ ಕಮ್ಯೂನ್’ ಕಾರ್ಮಿಕ ಕ್ರಾಂತಿಯ ಪ್ರಯತ್ನದ ಫಲವೆನ್ನುತ್ತಾನೆ. ಇವನ ಪ್ರಕಾರ ಪ್ಯಾರಿಸ್ ಕಮ್ಯೂನ್ ಫ್ರಾನ್ಸಿನ ಕ್ರಾಂತಿಯ ದಿಕ್ಕನ್ನೇ ಬದಲಾಯಿಸಿತು ಮತ್ತು ೧೯೧೭ರಲ್ಲಿ ರಷ್ಯಾದಲ್ಲಿ ಕಮ್ಯೂನಿಸ್ಟ್ ಸರಕಾರ ಅಸ್ತಿತ್ವಕ್ಕೆ ಬರುವುದಕ್ಕೆ ಫ್ರಾನ್ಸಿನ ಕ್ರಾಂತಿಕಾರಿ ಧೋರಣೆಗಳೇ ಪ್ರಮುಖ ಕಾರಣ. ಸಾನ್‌ಸ್ಕಿಲ್ಯೋಟಿಸಂನ ತತ್ವಗಳು ಮಾರತ್, ಹಿಬರ್ಟ್, ಬೇಬ್ಯಪ್, ಬ್ಲಾಂಕಿ ಮತ್ತು ಲೆನಿನ್ ಇವರುಗಳ ಸಿದ್ಧಾಂತಗಳಲ್ಲಿ ಮುಂದು ವರಿಯಿತು.

ಸಾನ್‌ಸ್ಕಿಲ್ಯೋಟ್ಸ್ ಬೆಂಬಲವನ್ನು ಪಡೆದುಕೊಂಡು ಅಧಿಕಾರ ಗಳಿಸಿಕೊಂಡ ಮಧ್ಯಮ ವರ್ಗ ನಂತರ ತನ್ನ ಹಿಂದಿನ ಧೋರಣೆಯನ್ನು ಬದಲಾಯಿಸಿಕೊಂಡಿತು. ಸಾಮಾನ್ಯವರ್ಗದ ಜನರ ಸಮಸ್ಯೆಗಳ ಕುರಿತು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ. ರೊಬಿಸ್‌ಪಿಯರ್‌ನ ಮರಣದ ನಂತರ ಸಾನ್‌ಸ್ಕಿಲ್ಯೋಟ್ಸ್ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು. ಇದನ್ನು ರಾಷ್ಟ್ರೀಯ ಸಮಿತಿಯ ಆಳ್ವಿಕೆಯ ಕೊನೆಯ ಅವಧಿಯಲ್ಲಿ ಗಮನಿಸಬಹುದು. ಇದನ್ನು ಥರ್ಮಿಡೋರಿಯನ್ ಪ್ರತಿಕ್ರಿಯೆ ಎಂಬುದಾಗಿ ಕರೆಯಲಾಗಿದೆ. ಜಾಕೋಬಿನ್ ಆಳ್ವಿಕೆ ಕೊನೆಯಾದ ನಂತರ ಮಧ್ಯಮ ವರ್ಗದ ಪುನರಾಗಮನ ಸಾನ್‌ಸ್ಕಿಲ್ಯೋಟ್ಸ್‌ಗೆ ಆತಂಕದ ಪರಿಸ್ಥಿತಿಯನ್ನು ಮೂಡಿಸಿತು. ಇವರ ಪ್ರತಿಕ್ರಿಯೆಯನ್ನು ಸುಲಭವಾಗಿ ಹಿಮ್ಮೆಟ್ಟಿಸಿದ ಮಧ್ಯಮ ವರ್ಗ ಮತ್ತೊಮ್ಮೆ ಫ್ರಾನ್ಸಿನಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆರಂಭಿಸಿತು.

ಜಾರ್ಜ್ ಲೆಪಬ್ರೆವ್ ತನ್ನ ಸೊಶ್ಯಲಿಸ್ಟ್ ಹಿಸ್ಟರಿ ಆಫ್ ದಿ ಫ್ರೆಂಚ್ ರೆವಲ್ಯೂಷನ್ ಗ್ರಂಥದಲ್ಲಿ ಫ್ರಾನ್ಸಿನ ಕ್ರಾಂತಿಯನ್ನು ರೈತರ ಹೋರಾಟ ಎಂಬುದಾಗಿ ಕರೆಯುತ್ತಾನೆ. ಲೆಪಬ್ರೆವ್ ಮಾರ್ಕ್ಸಿಸ್ಟ್ ಅಧ್ಯಯನ ವಿಧಾನವನ್ನು ಅಳವಡಿಸಿಕೊಂಡಿದ್ದ. ಇವನ ಪ್ರಕಾರ ಫ್ರಾನ್ಸಿನ ಕ್ರಾಂತಿಗೆ ಪ್ರಮುಖ ಕಾರಣ ಆರ್ಥಿಕ ಅಂಶಗಳು. ಇವನು ಫ್ರಾನ್ಸಿನ ಕೃಷಿಕರ ಮತ್ತು ನಗರವಾಸಿಗಳ ಜೀವನಕ್ರಮದ ಕುರಿತು ಅಧ್ಯಯನ ನಡೆಸಿದ್ದಾನೆ. ೧೭೮೯ ರಿಂದ ೧೭೯೨ರವರೆಗೆ ನಡೆದ ರೈತ ಚಳವಳಿಗಳು ಬಂಡವಾಳ ಕ್ರೋಢೀಕರಣದ ಉದ್ದೇಶ ಹೊಂದಿದ್ದ ಮಧ್ಯಮ ವರ್ಗಕ್ಕೆ ಸಹಕಾರಿಯಾಯಿತು ಎನ್ನುತ್ತಾನೆ. ಸಾನ್‌ಸ್ಕಿಲ್ಯೋಟ್ಸ್ ಊಳಿಗಮಾನ್ಯ ಪದ್ಧತಿಯನ್ನು ರದ್ದುಗೊಳಿಸುವುದಕ್ಕಾಗಿ ಮಧ್ಯಮ ವರ್ಗದ ಜತೆ ಸೇರಿಕೊಂಡಿತು. ಲೆಪಬ್ರೆವ್‌ನ ಪ್ರಕಾರ ಫ್ರಾನ್ಸಿನ ಕ್ರಾಂತಿಯ ಹೃದಯದಲ್ಲಿರುವುದು ರೈತರ ಕ್ರಾಂತಿ. ಊಳಿಗಮಾನ್ಯ ಪದ್ಧತಿಯನ್ನು ರದ್ದುಗೊಳಿಸಿದರೂ ರೈತರಿಗೆ ಭೂಮಿಯನ್ನು ನೀಡಲಿಲ್ಲ. ಇಲ್ಲಿ ಮುಖ್ಯವಾಗಿ ನೋರ್ಡ್ ರೈತ ಹೋರಾಟವನ್ನು ಉದಾಹರಿಸಬಹುದು. ಇದರ ಉದ್ದೇಶ ಊಳಿಗಮಾನ್ಯ ವ್ಯವಸ್ಥೆಯನ್ನು ರದ್ದುಗೊಳಿಸುವುದು ಮತ್ತು ಶ್ರೀಮಂತ ವರ್ಗದ ಜನರ ಅಧಿಕಾರವನ್ನು ಕುಂಠಿತಗೊಳಿಸುವುದು. ಆದರೆ ರೈತ ಹೋರಾಟಗಳು ಮಧ್ಯಮ ವರ್ಗದ ಇಬ್ಬಗೆಯ ನೀತಿಯಿಂದಾಗಿ ಹೆಚ್ಚಿನ ಯಶಸ್ಸನ್ನು ಪಡೆಯಲಿಲ್ಲ. ಫ್ರಾನ್ಸಿನ ಕ್ರಾಂತಿಯ ಕುರಿತಾದ ಈ ಎಲ್ಲಾ ಅಧ್ಯಯನಗಳು ಕ್ರಾಂತಿಯ ಸ್ವರೂಪವನ್ನು ಅರ್ಥೈಸಿಕೊಳ್ಳುವುದಕ್ಕೆ ಹಾಗೂ ಹೊಸ ದೃಷ್ಟಿಕೋನದಿಂದ ನೋಡುವುದಕ್ಕೆ ಸಹಕಾರಿ ಯಾಗುತ್ತದೆ.

 

ಪರಾಮರ್ಶನ ಗ್ರಂಥಗಳು

೧. ಕೋಬ್ಬನ್      ಎ., ೧೯೬೪. ದಿ ಸೋಶ್ಯಲ್ ಇಂಟರ್‌ಪ್ರಿಟೇಷನ್ ಆಫ್ ಫ್ರೆಂಚ್ ರೆವಲ್ಯೂಷನ್,  ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್.

೨. ಜೋನ್ಸ್ ಪಿ., ೧೯೮೮. ದಿ ಪೆಸೆಂಟ್ರೀ  ಇನ್ ದಿ ಫ್ರೆಂಚ್ ರೆವಲ್ಯೂಷನ್,  ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೩. ಆಲ್ಬರ್ಟ್ ಸಬೂಲ್, ೧೯೮೯. ಅಂಡರ್‌ಸ್ಟಾಂಡಿಂಗ್ ದಿ ಫ್ರೆಂಚ್ ರೆವಲ್ಯೂಷನ್,  ನ್ಯೂಡೆಲ್ಲಿ: ಪೀಪಲ್ಸ್ ಪಬ್ಲಿಷಿಂಗ್ ಹೌಸ್.

೪. ಲೂಯಿಸ್ ಗ್ವಿನ್ನಿ, ೧೯೯೩, ದಿ ಫ್ರೆಂಚ್ ರೆವಲ್ಯೂಷನ್ರಿ ಥಿಂಕಿಂಗ್ ದಿ ಡಿಬೇಟ್, ನ್ಯೂಯಾರ್ಕ್: ರೌಟ್ಲೇಡ್ಜ್.