ಮಾನವತಾವಾದ

ಹ್ಯೂಮನಿಸಂ ಅಥವಾ ಮಾನವತಾವಾದವು ರಿನೈಸಾನ್ಸಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವ್ಯಕ್ತಿ. ಮಾನವತಾವಾದದ ಮೂಲವನ್ನು ಕುರಿತ ಸಮಸ್ಯೆಯು ಬಹುಕಾಲದಿಂದಲೂ ಇತಿಹಾಸಕಾರರ ಮನಸ್ಸನ್ನು ಕಾಡುತ್ತಲೇ ಇದೆ. ಬರ್ಕ್‌ಹಾರ್ಟ್ ಮಾನವತಾವಾದದ ಹುಟ್ಟನ್ನು ನೂತನ ವ್ಯಕ್ತಿತತ್ವ ವಾದದ ಮಾತುಗಳಲ್ಲಿ ವಿವರಿಸಲು ಪ್ರಯತ್ನಿಸಿದನು. ವ್ಯಕ್ತಿ ವಾದವು ಗ್ರೀಸ್ ಮತ್ತು ರೋಮ್‌ಗಳ ಪ್ರಾಚೀನ ಕೃತಿಗಳ ಸತ್ವವನ್ನು ಅರಗಿಸಿಕೊಂಡಿತ್ತು. ಇತ್ತೀಚಿನ ವಿದ್ವಾಂಸರು ಅದರ ಮೊದಲ ಕುರುಹುಗಳನ್ನು ೧೪ನೆಯ ಶತಮಾನದ ನಗರ ರಾಜ್ಯಗಳಲ್ಲಿ ವಿಶೇಷವಾಗಿ ಫ್ಲಾರೆನ್ಸಿನಲ್ಲಿ ಕಂಡುಬಂದ ಪೌರಪ್ರಜ್ಞೆಯಲ್ಲಿ, ಇಟಲಿ ಸಾಮಾನ್ಯ ಜನರಿಗೆ ಕೊಡಲಾದ ಲ್ಯಾಟಿನ್ ಭಾಷಣಕಲೆಯ ಶಿಕ್ಷಣದಲ್ಲಿ ಕಂಡಿದ್ದಾರೆ. ವ್ಯಕ್ತಿ ವಾದದ ಜೊತೆಜೊತೆಗೆ ಕಾಣಸಿಗುವ ಮಾನವತಾವಾದವು ಜ್ಞಾನ ಸಂಪಾದನೆಗೆ ಭಾಷಾವಿಜ್ಞಾನ ಮತ್ತು ಗ್ರಂಥಸಂಪಾದನಾ ಶಾಸ್ತ್ರಗಳನ್ನು ಆಧಾರವಾಗಿ ಕೊಟ್ಟಿತು. ಆ ಪದವು ಬಂದದ್ದೇ ಮಧ್ಯಕಾಲದ ಕೊನೆಯ ವಿದ್ಯಾರ್ಥಿಗಳ ಆಡುಮಾತಿನಿಂದ. ಸ್ಟಡಿಯಾ ಹ್ಯುಮಾನಿಟಾಟಿಸ್, ಅಂದರೆ ಹ್ಯುಮೇನ್ ಲೆಟರ್ಸ್ ಆಫ್ ಲಿಬರಲ್ ಆರ್ಟ್ಸ್ ಪ್ರಾಧ್ಯಾಪಕನನ್ನು ಊಮನಿಸ್ಟಾ ಎಂದು ಕರೆಯುತ್ತಿದ್ದರು.

ಸ್ಟಡಿಯಾ ಹ್ಯುಮಾನಿಟಾಟಿಸ್ ಪಠ್ಯ ವಿಷಯಗಳಲ್ಲಿ ಭಾಷಣ ಕಲೆ, ನೈತಿಕ ತತ್ವಶಾಸ್ತ್ರ, ಇತಿಹಾಸ ಮತ್ತು ಕಾವ್ಯ ಸೇರಿದ್ದುವು. ಈ ಪಠ್ಯ ವಿಷಯಗಳು ಮಾನವೀಯ ಮೌಲ್ಯ ಗಳನ್ನು ಎತ್ತಿ ಹಿಡಿಯುತ್ತಿದ್ದವು ಮತ್ತು  ಪ್ರತಿಬಿಂಬಿಸುತ್ತಿದ್ದವು. ಈ ಹ್ಯೂಮನಿಸ್ಟರ ಆಸಕ್ತಿಯಿದ್ದದ್ದು ಪ್ರಾಚೀನ ಪರಂಪರೆಯ ಪುನಶ್ಚೇತನ, ಅಧ್ಯಯನ, ವ್ಯಾಖ್ಯಾನ ಮತ್ತು ಪ್ರಸಾರ. ಸಮಕಾಲೀನ ಲ್ಯಾಟಿನ್ನಿನ ಹಾಗೂ ತಾಯ್ನುಡಿಯ ಶೈಲಿಯನ್ನು ವಸ್ತುವನ್ನೂ ಬದಲಾಯಿಸುವ ಒಂದು ಉತ್ಕಟವಾದ ಬಯಕೆಯೂ ಅವರಲ್ಲಿ ಇದ್ದಿತು.  ಮತಧರ್ಮಶಾಸ್ತ್ರ ಮತ್ತು ಸೂಕ್ಷ್ಮತರ್ಕ ವಿಧಾನಗಳಿಗಿಂತ ಮಿಗಿಲಾಗಿ ನೈತಿಕವಾಗಿ ಮಾನವೀಯ ತತ್ವಕ್ಕೆ ಪ್ರಾಧಾನ್ಯ ಕೊಡುವ ಅಪೇಕ್ಷೆ ಇಲ್ಲಿ ವ್ಯಕ್ತವಾಯಿತು. ಪ್ರಾಚೀನ ಗ್ರೀಕಿನ ಅಧ್ಯಯನ-ಅಧ್ಯಾಪನಗಳನ್ನು ಕುರಿತ ಹೊಸ ಆಸಕ್ತಿ, ಕಲೆಯಲ್ಲಿ ಸಹಜತೆಯ ಕಡೆಗೆ ಖಚಿತವಾದ ಒಲವು ಕಂಡುಬಂದುವು.

ಹ್ಯೂಮನಿಸಂ ಒಂದು ಜಾತ್ಯತೀತವೂ ಪ್ರಯೋಗಶೀಲವೂ ಆದ ಆಂದೋಲನ. ಕ್ರೈಸ್ತ ಪುರೋಹಿತ ವರ್ಗದವರಿಗೆ ಅರಿಸ್ಟಾಟಲ್ ತರ್ಕದ ಮೂಲಕ ಮತಧರ್ಮಶಾಸ್ತ್ರವನ್ನು ಹೇಳುವ ಹಳೆಯ ಸಾಂಪ್ರದಾಯಿಕ ರೀತಿಯ ಶಿಕ್ಷಣವನ್ನು ನೀಡಲಾಗುತ್ತಿತ್ತು. ಈ ಜನರ ಭಾಷೆ, ಶೈಲಿ, ಕೊನೆಗೆ ಆಲೋಚನಾ ವಿಧಾನ ಕೂಡ ಅವರನ್ನು ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲು ಸಿದ್ಧಪಡಿಸುತ್ತಿರಲಿಲ್ಲ. ಏಕೆಂದರೆ ಕಾರ್ಯದರ್ಶಿಗೆ ಭಾಷಾ ಚಾತುರ್ಯ ಬಹಳ ಮುಖ್ಯ. ಇತರ ನೂತನ ಪಂಥಗಳ ಉತ್ತಮ ಭಾಷಾ ನೈಪುಣ್ಯ ಪಡೆದ ಕಾರ್ಯದರ್ಶಿಗಳೊಂದಿಗೆ ಅವರು ಪತ್ರವ್ಯವಹಾರ ನಡೆಸಬೇಕಾಗಿತ್ತು. ಈ ಪರಿಸ್ಥಿತಿಯಲ್ಲಿ ಮಾನವತಾವಾದದ ಪ್ರತಿಪಾದಕರು ತಮ್ಮ ಬರವಣಿಗೆಗೂ ಬೋಧನೆಗೂ ಒಂದು ಲೌಕಿಕ ಲಕ್ಷಣವನ್ನು ಕೊಟ್ಟಿದ್ದು ಅತ್ಯಂತ ಸಹಜವಾಗಿತ್ತು.

ಮಾನವತಾವಾದವು ಪ್ರಾಯೋಗಿಕವಾದದ್ದರಿಂದ, ಅದರ ವಿನ್ಯಾಸ ಖಚಿತವಾದ ಕಾರ್ಯನಿರ್ವಹಣೆಗೆ ಅನುಕೂಲಿಸುವಂತಿತ್ತು. ಕೊನೆಯ ಪಕ್ಷ ಪ್ರಾರಂಭದ ಹಂತಗಳಲ್ಲಿ ವಿದ್ವಾಂಸರು ತಮ್ಮ ಓದುಗರಿಗೆ ಸರಿಯಾಗಿ ಉಪದೇಶಿಸಿ, ತಮ್ಮ ಬೋಧನೆಯಂತೆ ಅವರು ನಡೆಯುವಂತೆ ಮಾಡಬೇಕಾಗಿತ್ತು. ಆದ್ದರಿಂದ ಲೇಖನ ಚಾತುರ್ಯ ಅವರಿಗೆ ಅತ್ಯಗತ್ಯವಾಗಿತ್ತು. ಅಲ್ಲದೆ, ವಿಷಯಗಳು ತುಂಬಾ ನಿರ್ದಿಷ್ಟವಾಗಿದ್ದು ರಾಜಕಾರಣ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಉಪಯೋಗಕ್ಕೆ ಬರುವಂಥದಾಗಬೇಕಾಗಿತ್ತು. ಸೂಕ್ತವಾದ ರೀತಿಯಲ್ಲಿ ವ್ಯಕ್ತಪಡಿಸಿದ ಪದಗಳು ಜನರ ಮೇಲೆ ಮತ್ತು ಘಟನೆಗಳ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಮಾನವತಾವಾದಿಗಳ ವಿಚಾರವಾಗಿತ್ತು.

ರಿನೈಸಾನ್ಸ್ ಮಾನವತಾವಾದದ ಘೋಷವಾಕ್ಯವಾಗಬಲ್ಲ ಒಂದು ಸೂಕ್ತಿಯಲ್ಲಿ ಪೆಟ್ರಾರ್ಕ್ ಹೀಗೆ ಹೇಳಿದನು. ‘‘ಸತ್ಯವನ್ನು ಅರಿಯುವುದಕ್ಕಿಂತಲೂ ಒಳಿತನ್ನು ಬಯಸುವುದೇ  ಮೇಲು. ಸತ್ಯವನ್ನು ಸಂಕಲ್ಪಿಸಬೇಕಾದರೆ ಮೊದಲು ಅದನ್ನು ಅರಿಯಬೇಕು.’’ ಪೆಟ್ರಾರ್ಕ್ ಜ್ಞಾನ ಸಂಪಾದನೆಯ ದಾರಿಯನ್ನು ತೆರೆದಿದ್ದನು. ಮನುಷ್ಯನು ಕೇಂದ್ರವಾದ್ದರಿಂದ, ಅವನ ಸಮಸ್ತ ಶಕ್ತಿ ಮತ್ತು ದೇಹ ಸೌಂದರ್ಯಗಳನ್ನು, ಅವನ ಇಂದ್ರಿಯಗಳು ಮತ್ತು ಭಾವನೆಗಳ ಸಮಸ್ತ ನೋವು ನಲಿವುಗಳನ್ನು, ಅವನ ವಿಚಾರಶಕ್ತಿಯ ಕ್ಷಣಿಕ ವೈಭವವನ್ನು ಅಧ್ಯಯನ ಮಾಡಲಾಯಿತು. ಇವೆಲ್ಲವೂ ಪ್ರಾಚೀನ ಗ್ರೀಸ್ ಮತ್ತು ರೋಮ್ ಕಲೆ ಮತ್ತು ಸಾಹಿತ್ಯಗಳಲ್ಲಿ ವಿಪುಲವಾಗಿಯೂ ಸಮರ್ಪಕವಾಗಿಯೂ ವ್ಯಕ್ತವಾಗಿವೆ. ಎಲ್ಲೆಲ್ಲೂ ಮಾವನತಾವಾದದ ಸೆಕ್ಯುಲರ್ ಬೆಳವಣಿಗೆಯ ವಾತಾವರಣವಿದ್ದುದರಿಂದ ಇತಿಹಾಸವು ಅದೇ ದೃಷ್ಟಿಯಿಂದ ಬೆಳೆಯಿತು. ಈ ಮಾನವತಾವಾದಿಗಳು ಗೊಂದಲಮಯವೂ ವಿಚಾರ ರಹಿತವೂ ಆದ ಮಧ್ಯಯುಗೀನ ಕಥನಗಳ ಸರಣಿಯನ್ನು, ಮೂಲಗಳನ್ನು ಸೂಕ್ಷ್ಮವಾಗಿ ಪರಿಸ್ಥಿತಿ ಸಾಮರಸ್ಯಗೊಳಿಸುವುದರ ಮೂಲಕ, ವಿಷಯವನ್ನು ಒಂದು ವ್ಯವಸ್ಥೆ ಮತ್ತು ಸ್ಪಷ್ಟತೆಗೆ ಅಳವಡಿಸುವುದರ ಮೂಲಕ ಕೊನೆಗೊಳಿಸಿದರು. ಇತಿಹಾಸದೊಂದಿಗೆ ಜೀವನ ಚರಿತ್ರೆಯನ್ನು ಬೆರೆಸಿ, ತಮ್ಮ ನಿರೂಪಣೆಯನ್ನು ಕಾರಣಗಳು ವಿಚಾರದ ಹರಿವು ಹಾಗೂ ಪರಿಣಾಮಗಳ ಒಂದು ನಿರ್ದಿಷ್ಟ ಹಂತಕ್ಕೆ ಮೇಲೇರಿಸಿ ಗತಕಾಲಕ್ಕೆ ತುಂಬಿ ಚೈತನ್ಯ ನೀಡಿ ಅದನ್ನು ಮಾನವೀಯಗೊಳಿಸಿದರು.

ಹ್ಯೂಮನಿಸ್ಟರು ಧರ್ಮವನ್ನು ಪರೀಕ್ಷಿಸಿದರು. ಉತ್ತಮ ಜೀವನಕ್ಕಾಗಿ ಶ್ರಮಿಸುತ್ತಾ, ಸ್ವಾರ್ಥ ಭಾವನೆಗಳಿಂದ ಘಾಸಿಗೊಳ್ಳುತ್ತಾ, ಅಮರತ್ವದ ಆಸೆ ಮತ್ತು ಪ್ರಾಪಂಚಿಕವಾದ ಕೀರ್ತಿಗಳ ನಡುವೆ ತಾಕಲಾಡುತ್ತಾ ಇರುವ ಮನುಷ್ಯನು ಬಹು ಜಟಿಲವಾದ ವ್ಯಕ್ತಿ ಯಾಗಿದ್ದನು. ಅವನು ವರ್ತಿಸುವ, ಇಚ್ಛಿಸುವ, ಸೃಷ್ಟಿಸುವ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವ ವ್ಯಕ್ತಿಯಾಗಿದ್ದನು. ಮಾನವತಾವಾದಿಗಳ ವಿಚಾರ ಬೇರೆಯಾಗಿತ್ತು. ಅದು ಮನುಷ್ಯನ ಇಚ್ಛಾಶಕ್ತಿ ಮತ್ತು ಭಾವನಾತ್ಮಕ ಮುಖಕ್ಕೆ ಪ್ರಾಧಾನ್ಯಕೊಟ್ಟಿತು. ವಿಚಾರಶಕ್ತಿ ಮುಖ್ಯ, ಆದರೆ ಅದು ಸೀಮಿತವಾದದ್ದು. ಅದು ಭಾವಾವೇಶಗಳನ್ನು ಗೆಲ್ಲಲಾರದು ಅಥವಾ ನಿತ್ಯ ರಹಸ್ಯಗಳನ್ನು ಪರಿಹರಿಸಲೂ ಆಗದು. ವಿಚಾರವು ಇಚ್ಛಾಶಕ್ತಿಗೆ ಅಧೀನವಾದದ್ದು, ಇಚ್ಛಾಶಕ್ತಿಯು ಮನುಷ್ಯನ ಭವಿಷ್ಯವನ್ನು ನಿರ್ಧರಿಸು ವಂತದ್ದು.

ಮಾನವತಾವಾದಿಗಳ ಪರಿಶ್ರಮವು ಬಹು ದೂರಸ್ಪರ್ಶಿಯಾದದ್ದು ಮತ್ತು ವೈವಿಧ್ಯ ಪೂರ್ಣವಾದದ್ದು. ಅವರು ಒಂದು ಹೊಸಬಗೆಯ ಶಿಕ್ಷಣ ರೂಪವನ್ನು ಸೃಷ್ಟಿಸಿದರು. ಅದು ಯೂರೋಪು ಮತ್ತು ಅಮೆರಿಕಾಗಳಲ್ಲಿ ಪ್ರಸ್ತುತ ಶತಮಾನದವರೆಗೂ ಪ್ರಭಾವಶಾಲಿಯಾಗಿಯೇ ಉಳಿಯಿತು.

ರಾಜಕೀಯ ಚಿಂತನೆ

ಪೆಟ್ರಾರ್ಕ್ ಮತ್ತು ಪಿಕೋ ನಡುವೆ ಬಂದ ಇಟಾಲಿಯನ್ ಚಿಂತಕರಲ್ಲಿ ಯಾರೂ ಮೂಲಚಿಂತಕರಲ್ಲ ಎಂದು ಹೇಳಲಾಗುತ್ತದೆ. ಅವರ ಹಿರಿಮೆಯಿದ್ದುದು ಅವರ ಅಭಿವ್ಯಕ್ತಿ ವಿಧಾನದಲ್ಲಿ, ತಾಂತ್ರಿಕ ವಿದ್ವತ್ ಕ್ಷೇತ್ರದಲ್ಲಿ ಅವರು ತೋರಿಸಿದ ಸಾಧನೆಯಲ್ಲಿ, ಪ್ರಾಚೀನ ಚಿಂತನೆಯ ವಿವಿಧ ವಿಷಯಗಳನ್ನು ಅವರು ಜನಪ್ರಿಯಗೊಳಿಸಿದ ಬಗೆಯಲ್ಲಿ. ಆದರೆ ಈ ಮಾತು ಇಟಲಿಯ ಅತ್ಯಂತ ಶ್ರೇಷ್ಠ ರಾಜಕೀಯ ತತ್ವಜ್ಞಾನಿ ನಿಕೊಲೋ ಮೆಕೆಯಾವೆಲ್ಲಿ(೧೪೬೯-೧೫೨೭) ವಿಷಯಕ್ಕೆ ಹೇಳಲು ಸಾಧ್ಯವಿಲ್ಲ. ಅವನು ಯಾವುದೇ ಒಂದು ಪಂಥಕ್ಕೆ ಸೇರಿದವನಲ್ಲ. ಅವನದೇ ಒಂದು ವಿಶಿಷ್ಟ ವರ್ಗವಾಯಿತು. ನಿಗೂಢ ವಾದ ವ್ಯಕ್ತಿತ್ವದ ಅವನು ವರ್ಗೀಕರಿಸಲಾಗದ ಒಂದು ಒಗಟು. ಅವನು ಇತಿಹಾಸಕಾರ, ರಾಜನೀತಿಜ್ಞ, ನಾಟಕಕಾರ, ದಾರ್ಶನಿಕ, ಸಿನಿಕ ಮತ್ತು ದೇಶಭಕ್ತ. ಕೈ ಹಾಕಿದ ಎಲ್ಲಾ ಕೆಲಸದಲ್ಲೂ ಸೋಲು ಕಂಡವನು. ಆದರೂ ಇತಿಹಾಸದಲ್ಲಿ ಎಲ್ಲರಿಗಿಂತ ಹೆಚ್ಚಾದ ಛಾಪನ್ನು ಉಳಿಸಿದನು. ರಾಜಕಾರಣದ ನೈತಿಕ ತಳಹದಿಯನ್ನು ಕುರಿತ ಹಿಂದಿನ ದೃಷ್ಟಿಗಳನ್ನು ಬುಡಮೇಲು ಮಾಡಲು ಅಥವಾ ನಿರುದ್ವೇಗದಿಂದ, ನೇರವಾಗಿ ರಾಜಕೀಯ ಜೀವನವನ್ನು ವೀಕ್ಷಿಸಲು ಬೇರೆ ಯಾರೂ ಮೆಕೆಯಾವೆಲ್ಲಿಯಷ್ಟು ಪ್ರಯತ್ನ ಮಾಡಲಿಲ್ಲ. ಅವನ ಬರವಣಿಗೆಗಳು ಇಟಲಿಯ ಅಸಂತುಷ್ಟ ಕಾಲವನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ೧೫ನೆಯ ಶತಮಾನದ ಕೊನೆಯ ವೇಳೆಗೆ ಇಟಲಿಯು ಅಂತರರಾಷ್ಟ್ರೀಯ ಕ್ಷೋಭೆಯಲ್ಲಿ ಸಿಲುಕಿತು. ಫ್ರಾನ್ಸ್ ಮತ್ತು ಸ್ಪೆಯಿನ್ ಎರಡೂ ದೇಶಗಳು ಇಟಲಿ ಪರ‌್ಯಾಯ ದ್ವೀಪದ ಮೇಲೆ ದಾಳಿಮಾಡಿ ಇಟಾಲಿಯನ್ ರಾಜ್ಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಶ್ರಮಪಡುತ್ತಿ ದ್ದವು. ೧೪೯೮ರಲ್ಲಿ ಮೆಕೆಯಾವೆಲ್ಲಿಯು ಆಗ ತಾನೆ ಸ್ಥಾಪನೆಗೊಂಡಿದ್ದ ಫ್ಲಾರೆನ್ಸ್ ಗಣರಾಜ್ಯದ ಎರಡನೆಯ ಚಾನ್ಸಲರ್ ಹಾಗೂ ಕಾರ್ಯದರ್ಶಿಯಾಗಿ ಸೇವೆಗೆ ಸೇರಿದನು. ರಾಜಕಾರಣ ವ್ಯವಹಾರಗಳಲ್ಲಿ ಆಳವಾಗಿ ಮುಳುಗಿದನು. ೧೫೧೨ರಲ್ಲಿ ಮೆಡಿಚಿಯು ಹಿಂದಿರುಗಿ ಬಂದು ಫ್ಲಾರೆನ್ಸ್ ಗಣರಾಜ್ಯವನ್ನು ಸೋಲಿಸಿದನು. ಮೆಕೆಯಾವೆಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡನು. ನಿರಾಶನಾಗಿ, ಕಹಿಯಾದ ಮನಸ್ಸಿನಿಂದ ಅವನು ತನ್ನ ಉಳಿದ ಜೀವನವನ್ನು ದೇಶಭ್ರಷ್ಟನಾಗಿ ಕಳೆದನು. ತನ್ನ ಸಮಯವನ್ನು ಮುಖ್ಯವಾಗಿ ಬರಹಕ್ಕೆ ಮೀಸಲಾಗಿಟ್ಟನು. ಮಾನವತಾವಾದದ ಸ್ವಯಂಪ್ರೇರಿತ ಮನೋವಿಜ್ಞಾನದಿಂದ ಆಕರ್ಷಿತನಾಗಿ, ಮಾನವ ಸ್ವಾತಂತ್ರ್ಯದಲ್ಲಿ ನಂಬುಗೆಯಿಟ್ಟುಕೊಂಡ ಅವನು ಪ್ರಾಚೀನತೆಯ, ವಿಶೇಷವಾಗಿ ರೋಮಿನ ಭಕ್ತನಾಗಿದ್ದನು. ರಾಜಕೀಯ ನಡವಳಿಕೆಯ ನಿಯಮಗಳನ್ನು ಅವನು ರೋಮಿನಿಂದ ಪಡೆದನು. ಲಿವಿಯನ್ನು ಕುರಿತ ಪ್ರವಚನಗಳಲ್ಲಿ ಅವನು ಪ್ರಾಚೀನ ರೋಮ್ ಗಣರಾಜ್ಯವನ್ನು ಎಲ್ಲಾ ಕಾಲಕ್ಕೂ, ಎಲ್ಲಾ ಇಟಲಿಯನ್ನರಿಗೂ ಮಾದರಿ ಎಂದು ಪ್ರಶಂಸಿಸಿದನು. ಏಕೆಂದರೆ ಇದರಿಂದ ಇಟಾಲಿಯನ್ನರು ತಮ್ಮ ನಾಗರಿಕ ಗುಣಗಳನ್ನು ಬೆಳೆಸಿಕೊಂಡು, ಬಾರ್ಬೇರಿಯನರ ಮುಷ್ಟಿಯಿಂದ ಬಿಡುಗಡೆ ಹೊಂದಲು ಸಹಾಯವಾಗು ತ್ತದೆ ಎಂದು ಅವನು ನಂಬಿದ್ದನು. ಸಾಂವಿಧಾನಿಕತೆ, ಸಮಾನತೆ, ಸ್ವಾತಂತ್ರ್ಯ, ಹೊರಗಿನ ಮಧ್ಯಪ್ರವೇಶವಿಲ್ಲದಿರುವಿಕೆ ಎಂಬ ಅರ್ಥದಲ್ಲಿ ದೇಶದ ಆಸಕ್ತಿಗಳಿಗೆ ಧರ್ಮವು ಅಧೀನವಾಗಿರಬೇಕೆಂಬ ನಂಬಿಕೆಯನ್ನು ಅವನು ಪ್ರಶಂಸಿಸಿದನು. ಆದರೆ ಅವನು ಬರೆದ ದಿ ಪ್ರಿನ್ಸ್ ಎಂಬ ಕೃತಿಯು ಸರಕಾರದ ನೀತಿಗಳನ್ನು, ನಡವಳಿಕೆಗಳನ್ನು, ಆಡಳಿತವನ್ನು ಆದರ್ಶ ರೂಪದಲ್ಲಿ ನಿರೂಪಿಸದೆ, ಅದು ಹೇಗಿದ್ದುವೋ ಹಾಗೆ ಚಿತ್ರಿಸಿದನು. ರಾಜನು ತಾನು ಆಳುತ್ತಿರುವ ದೇಶದ ಅಧಿಕಾರವನ್ನೂ, ಸುಭದ್ರತೆಯನ್ನೂ ಕಾಪಾಡಬೇಕು. ಅದು ಅವನ ಕರ್ತವ್ಯ. ನ್ಯಾಯ, ದಯೆ ಅಥವಾ ಒಪ್ಪಂದಗಳ ಪಾಲನೆ ಇವು ಯಾವುದೇ ಆಗಲಿ, ಅವನ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾದ ಪಕ್ಷದಲ್ಲಿ ಅದನ್ನು ಲಕ್ಷಿಸಬೇಕಾಗಿಲ್ಲ. ಮನುಷ್ಯನು ಸ್ವಹಿತದಿಂದ ಪ್ರೇರಿತನಾಗುತ್ತನಾದ್ದರಿಂದ ಅವನ ನಿಷ್ಠೆ ಮತ್ತು ವಿಶ್ವಾಸ ಎಲ್ಲಾ ಕಾಲಕ್ಕೂ ತನ್ನ ಕಡೆಗಿದೆ ಎಂದು ರಾಜನು ಭಾವಿಸಿಕೊಳ್ಳಬೇಕಾಗಿಲ್ಲ ಎಂದು ಮೆಕಿಯಾವೆಲ್ಲಿ ಹೇಳಿದನು. ಅವನಿಗೆ ಯಾವುದಾದರೂ ಒಂದು ಆದರ್ಶವಿದ್ದುದೇ ಆದರೆ ಅದು ಇಟಲಿಯ ಏಕೀಕರಣ. ಅದನ್ನು ನಿರ್ದಾಕ್ಷಿಣ್ಯ ವರ್ತನೆಯಿಂದ ಮಾತ್ರವೇ ಸಾಧಿಸಬಹುದಾಗಿತ್ತು. ರಾಜ್ಯಾಡಳಿತವು ಕಾಲರಹಿತವಾದ ನಿಯಮಗಳ ಆಧಾರವನ್ನು ಹೊಂದಿದೆಯೇ ಹೊರತು, ಕ್ರೈಸ್ತಧರ್ಮದ ನೀತಿಶಾಸ್ತ್ರದ ಮೇಲೆ ನಿಲ್ಲುವುದಿಲ್ಲ ಎಂಬುದು ಅವನ ಅಭಿಪ್ರಾಯವಾಗಿತ್ತು.

ಫ್ರಾನ್ಸಿಸೋ ಗಿಸಿಯಾರ್ಡಿನಿ(೧೪೮೩-೧೫೪೦) ಯು ಮೆಕೆಯಾವೆಲ್ಲಿಯ ರಾಜಕೀಯ ನೈತಿಕತೆಯನ್ನು ರಾಜಕಾರಣವನ್ನು ಕುರಿತ ಅವನ ಕಾಳಜಿಯನ್ನೂ ಹಂಚಿಕೊಂಡನು. ಆದರೆ, ಪ್ರಾಚೀನ ರಾಜಕೀಯ ಪರಿಜ್ಞಾನವು ಇಂದು ಇಟಲಿಯ ಸ್ವಾತಂತ್ರ್ಯವನ್ನು ಸಾಧಿಸಿಕೊಡುತ್ತದೆ ಎಂಬ ವಿಷಯದಲ್ಲಿ ಅವನಿಗೆ ಸಂದೇಹವಿತ್ತು. ಫ್ಲಾರೆನ್ಸಿನಲ್ಲಿ ರೋಮನ್ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಗಿಸಿಯಾರ್ಡಿನಿಯು ಅತ್ಯುತ್ತಮವಾದ ಹ್ಯೂಮನಿಸ್ಟ್ ಸಂಪ್ರದಾಯದ ಶಿಕ್ಷಣವನ್ನು ಪಡೆದು ಬಹು ಬೇಗನೆಯೇ ದೇಶಸೇವೆಗೆ ತೊಡಗಿದನು. ಸಾರ್ವಜನಿಕ ಆಡಳಿತದ ವೃತ್ತಿ ಜೀವನವನ್ನು ಆರಿಸಿಕೊಂಡು, ಇತಿಹಾಸವನ್ನು ಬರೆದನು ಮತ್ತು ರಾಜಕೀಯವನ್ನು ಕುರಿತು ಚಿಂತನೆ ಮಾಡಿದನು. ಇವನು ಅಲೆಸ್ಸಾಂಡ್ರೋ ಡಿ ಮೆಡಿಚಿಯ ಕಾಲದಲ್ಲಿ ಮತ್ತು ಅವನ ಉತ್ತರಾಧಿಕಾರಿಗಳ ಕಾಲದಲ್ಲಿ ಬಹು ಉನ್ನತವಾದ ಪದವಿಗೇರಿದನು. ಫ್ಲಾರೆನ್ಸಿನ ಡ್ಯೂಕ್ , ಅಲೆಸ್ಸಾಂಡ್ರೋ ಡಿ ಮೆಡಿಚಿಯ ಹತ್ಯೆಯ ನಂತರ, ಅವನ ೧೭ ವರ್ಷದ ಮಗ ಕೋಸಿಮೊ ಡಿ ಮೆಡಿಚಿಯ ಆಳ್ವಿಕೆಯಲ್ಲೂ ತಾನು ಪದವಿಯಲ್ಲಿರಬೇಕೆಂದು ಬಯಸಿದ್ದನು. ಆದರೆ ತರುಣ ಡ್ಯೂಕನಿಗೆ ತನ್ನ ಅಧಿಕಾರದ ಮೇಲೆ ಇನ್ನೊಬ್ಬರ ನಿರ್ಬಂಧವಿರುವುದು ಇಷ್ಟವಾಗಲಿಲ್ಲ. ಪರಿಣಾಮವಾಗಿ, ಗಿಸಿಯಾರ್ಡಿನಿಯಾ ನಿರುದ್ಯೋಗಿಯಾದನು.

ಈ ಬಿಡುವಿನಿಂದಾಗಿ ಗಿಸಿಯಾರ್ಡಿನಿಯ ಶತಮಾನದ ಕೆಲವು ಅತ್ಯುತ್ತಮ ಕೃತಿಗಳನ್ನು ರಚಿಸಲು ಅವಕಾಶವಾಯಿತು. ಉತ್ತಮ ಗುಣಮಟ್ಟದ ಸಾಹಿತ್ಯಕ ಕೃತಿ ರಚನೆಯ ಶ್ರದ್ಧೆಗಳಿಂದಾಗಿ ೨೭ನೆಯ ವಯಸ್ಸಿನಲ್ಲಿಯೇ ಅವನು ಸ್ಟೋರಿಯ ಫ್ಲೋರೆಂಟಿನಾ ಎಂಬ ಕೃತಿಯನ್ನು ರಚಿಸಿದನು. ಅದು ಫ್ಲಾರೆನ್ಸ್ ಇತಿಹಾಸದ ಒಂದು ಭಾಗವಾಗಿ ೧೩೭೮ ರಿಂದ ೧೫೦೯ರ ಕಾಲಾವಧಿಯನ್ನು ನಿರೂಪಿಸುವ ಕೃತಿ. ವಿವರಗಳ ಸ್ಪಷ್ಟತೆ, ಮೂಲಗಳ ವಿಮರ್ಶಾತ್ಮಕ ಪರೀಕ್ಷೆ, ಕಾರಣಗಳ ಒಳಹೊಕ್ಕ ವಿಶ್ಲೇಷಣೆ, ಪಕ್ವವೂ, ನಿಷ್ಪಕ್ಷಪಾತವೂ ಆದ ನಿರ್ಣಯ, ಸೊಗಸಾದ ಇಟಾಲಿಯನ್ ಭಾಷೆಯಲ್ಲಿ ನಿರೂಪಣೆ ಇವುಗಳಿಂದ ಈ ಕೃತಿಯು ಮನೋಜ್ಞವಾಗಿದೆ. ೧೫೩೭ರಲ್ಲಿ ಒಂದೇ ವರ್ಷದಲ್ಲಿ ಹತ್ತು ಸಂಘಟಗಳ ತನ್ನ ಅತ್ಯುತ್ತಷ್ಟ ಕೃತಿ ಸ್ಟೋರಿಯಾ ಡಿ ಇಟಾಲಿಯಾವನ್ನು ರಚಿಸಿದನು. ಅದರ ಉಪಶೀರ್ಷಿಕೆ ಹಿಸ್ಟರಿ ಆಫ್ ವಾರ್ಸ್. ಅದು ಕೃತಿಯ ವಸ್ತುವನ್ನು ಸೈನ್ಯ ಮತ್ತು ರಾಜಕಾರಣಗಳಿಗೆ ಸೀಮಿತಗೊಳಿಸುತ್ತದೆ. ಅದೇ ಸಮಯಕ್ಕೆ ಈ ಕ್ಷೇತ್ರವು ಇಡೀ ಇಟಲಿಯ ಅಧ್ಯಯನವನ್ನು ಒಳಗೊಳ್ಳುತ್ತದೆ. ಯೂರೋಪಿಯನ್ ರಾಜಕೀಯ ವ್ಯವಸ್ಥೆಯನ್ನು ಸಮಗ್ರವಾಗಿ ನೋಡಿದ ಮೊದಲನೆಯ ಇತಿಹಾಸ ಕೃತಿ ಇದು. ಈ ಬೃಹತ್ ಇತಿಹಾಸವನ್ನು, ಅದ್ಭುತ ವಾದ ಸ್ಟೋರಿಯ ಫ್ಲೋರೆಂಟಿನಾವನ್ನು ಒಟ್ಟಾಗಿ ಪರಿಗಣಿಸಿದಾಗ, ಗಿಸಿಯಾರ್ಟಿನಿಯು ೧೬ನೆಯ ಶತಮಾನದ ಅತಿಶ್ರೇಷ್ಠ ಇತಿಹಾಸಕಾರನಾಗಿ ನಿಲ್ಲುತ್ತಾನೆ.

ಮನುಷ್ಯನು ಹೇಗಿದ್ದರು ಎಂಬುದನ್ನು ತೋರಿಸಿಕೊಟ್ಟ ಗಿಸಿಯಾರ್ಡಿನಿಯು ಇಂದಿನ ಪರಿಸ್ಥಿತಿಯನ್ನು ಅವರು ಹೇಗೆ ಮುಟ್ಟಿದರು ಎಂಬುದನ್ನು ವಿವರಿಸಲು ಇತಿಹಾಸವನ್ನು ರಚಿಸಿದನು. ಮಾನವನ ಘನತೆಯಿರುವುದು ತನ್ನ ಇಚ್ಛಾಶಕ್ತಿಯನ್ನು ಭವಿಷ್ಯಕ್ಕಾಗಿ ಬಳಸು ವುದರಲ್ಲಿ ಅಲ್ಲ ಎನ್ನುವ ಇವನು ಅದು ಚಿಂತನೆ ಮಾಡಲು ಮತ್ತು ತನ್ನ ವಿಧಿಯನ್ನು ಸಹಿಸಿಕೊಳ್ಳಲು ತನ್ನ ವಿಚಾರಶಕ್ತಿಯನ್ನು ಬಳಸುವುದರಲ್ಲಿದೆ ಎಂದು ಎಂದನು. ಗಿಸಿಯಾರ್ಡಿನಿಯು ತತ್ವಶಾಸ್ತ್ರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅವನ ಅಭಿಪ್ರಾಯ ದಲ್ಲಿ ಮನುಷ್ಯನು ಸಹಜವಾಗಿಯೇ ಸ್ವಾರ್ಥಿ, ಅನೀತಿಯುತ, ನಿಯಮಬಾಹಿರನಾಗಿರುತ್ತಾನೆ. ಪ್ರತಿಹಂತದಲ್ಲೂ, ತಿರುವಿನಲ್ಲೂ ಅವನನ್ನು ತಡೆಯಬೇಕು. ಧರ್ಮ ಈ ಗುರಿಯ ಒಂದು ದಾರಿ. ಆದರೆ ಧರ್ಮದ ಕ್ಷೇತ್ರದಲ್ಲಿರುವ ಭ್ರಷ್ಟಾಚಾರಿಗಳ ಬಗೆಗೆ ಅವನಿಗೆ ತಿರಸ್ಕಾರವಿತ್ತು. ಹಾಗೆಂದು ಅವನೇನೂ ನೈತಿಕವಾಗಿ ಬಹಳ ಮೇಲು ಮಟ್ಟದವನಲ್ಲ. ತಾತ್ಕಾಲಕ್ಕೆ ಯಾವುದು ಪರಮಾಧಿಕಾರದಲ್ಲಿದೆಯೇ ಅದಕ್ಕೆ ಹೊಂದಿಕೊಳ್ಳುವ ಅವನ ನೀತಿ ಸಂಹಿತೆಯು ಮೆಕಯಾವೆಲ್ಲಿಯು ಹೇಳಿದ ರೀತಿಯದು. ಗಿಸಿಯಾರ್ಡಿನಿಗೆ ಜನರಲ್ಲಾಗಲಿ, ಪ್ರಜಾ ಪ್ರಭುತ್ವದಲ್ಲಾಗಲಿ ನಂಬಿಕೆಯಿರಲಿಲ್ಲ. ಅವನ ಮನಸ್ಸು ಆ ಕಾಲದ ಸಂದೇಹಯುತ ಭ್ರಮನಿರಸನವನ್ನು ಸಂಕ್ಷೇಪವಾಗಿ ಹೇಳುತ್ತದೆ. ತೀರಾ ಸಿನಿಕನಾಗಿ, ತೀರಾ ನಿರಾಶಾವಾದಿ ಯಾಗಿದ್ದ ಅವನು ಅತ್ಯಂತ ಕುಶಾಗ್ರಮತಿಗಳಲ್ಲಿ ಒಬ್ಬನಾಗಿದ್ದನು ಮತ್ತು ಕ್ರಿಶ್ಚಿಯನ್ ಎನಿಸಿದ ರಾಜಕೀಯವಾಗಲಿ, ದರ್ಶನವಾಗಲಿ ಯಾವುದರಲ್ಲೇ ಆಗಲಿ ನಂಬಿಕೆ ಇರದ, ಯಾವುದೇ ಕನಸು ಕಾಣದ, ರಿನೈಸಾನ್ಸ್ ಕಾಲದ ಇಟಲಿಯ ಸಹಸ್ರಾರು ಜನರ ಪೈಕಿ ಇವನು ಒಬ್ಬನಾಗಿದ್ದನು.

ಕಲೆ ಮತ್ತು ಸಾಹಿತ್ಯ

ರಾಜಕಾರಣದಲ್ಲೂ ಬುದ್ದಿಮತ್ತೆಯಲ್ಲೂ ಆಗುತ್ತಿದ್ದ ಬೆಳವಣಿಗೆಗಳಿಂದಾಗಿ ಪ್ರಾಚೀನತೆ ಮತ್ತು ಸಾಹಿತ್ಯಕ ಪ್ರೇರಣೆ ಎರಡೂ ಜೊತೆ ಜೊತೆಯಾಗಿಯೇ ಸಾಗಿದ್ದುವು. ಆಲ್ಬರ್ಟಿನೋ ಮುಸ್ಸಾಟೋ, ಲೊವಾಟೋ ಲೊವಟಿ, ಪೊಲಿಶಿಯನ್ ಮತ್ತು ಪಾಂಟೆನೋ ಇವರು ಲಲಿತವಾದ ಮತ್ತು ಶಕ್ತಿಶಾಲಿಯಾದ ಲ್ಯಾಟಿನ್ ಕಾವ್ಯ ಹಾಗೂ ನಾಟಕಗಳನ್ನು ಬರೆದರು. ಇತರರು ಪತ್ರಸಾಹಿತ್ಯ, ಪ್ರಬಂಧ, ಸಂಭಾಷಣೆ, ನಿಬಂಧ, ಇತಿಹಾಸ ಇತ್ಯಾದಿ ಪ್ರಕಾರ ಗಳನ್ನು ಪ್ರಾಚೀನ ಕೃತಿಗಳ ಮಾದರಿಯಲ್ಲಿ ರಚಿಸಿದರು. ಇಟಾಲಿಯನ್, ಪ್ರೊವೆನ್ ಕಾಲ್, ಕ್ಯಾಸ್ಟಿಲಾನ್ ಇತ್ಯಾದಿ ಭಾಷೆಗಳು ಮಧ್ಯಯುಗದಲ್ಲಿ ಸಾಧಿಸಿದ್ದ ಪ್ರಗತಿ ಮತ್ತು ಬೆಳವಣಿಗೆ ಸ್ಥಗಿತಗೊಂಡು ೧೫ನೆಯ ಶತಮಾನದಲ್ಲಿ ಪ್ರಾಚೀನ ಗ್ರೀಸ್ ಮತ್ತು ರೋಮ್ ಸಾಹಿತ್ಯಗಳ ಬಗೆಗೆ ನೂತನೋತ್ಸಾಹ ಚಿಮ್ಮಿತು. ವಿದ್ವಾಂಸರು ಬರಹಗಾರರು ರಾಷ್ಟ್ರಭಾಷೆಯನ್ನು ಅಲಕ್ಷಿಸಿ ಕ್ಲಾಸಿಕಲ್ ಲ್ಯಾಟಿನ್ ಮತ್ತು ಗ್ರೀಕ್ ಬರೆಯುವುದರಲ್ಲಿ ಆಸಕ್ತರಾದರು. ಪೆಟ್ರಾರ್ಕನೇ ಇಟಾಲಿಯನ್ನಿನಲ್ಲಿ ಸೊಗಸಾದ ಸಾನೆಟ್‌ಗಳನ್ನು ಬರೆದಿದ್ದರೂ ಅವುಗಳ ಬಗ್ಗೆ ಅವನಿಗೆ ಗೌರವವಿರಲಿಲ್ಲ. ವಾಸ್ತವಿಕವಾಗಿ ಆತ ತನ್ನ ಲ್ಯಾಟಿನ್ ಬರವಣಿಗೆಯ ಬಗೆಗೆ ಹೆಮ್ಮೆ ಪಟ್ಟುಕೊಂಡನು. ಅವನ ಅನುಯಾಯಿಗಳು ಅವನನ್ನೇ ಅನುಸರಿಸಿ ದೇಶಭಾಷೆಗಳು ಒರಟು, ಅನಾಗರಿಕ ಎಂದು ತಿರಸ್ಕರಿಸಿದರು. ೧೬ನೆಯ ಶತಮಾನದ ಪ್ರಾರಂಭದಲ್ಲಿ ವಿದ್ವಾಂಸ ಇರಾಸ್ಮಸ್ ಒಂದಿಲ್ಲೊಂದು ಕ್ಲಾಸಿಕಲ್ ಭಾಷೆಯಲ್ಲಿ ತನ್ನ ಮುಖ್ಯ ಕೃತಿಗಳನ್ನು ರಚಿಸುತ್ತಿದ್ದನು. ೧೬ನೆಯ ಶತಮಾನ ಪೂರ್ತಿಯಾಗಿ ರಾಷ್ಟ್ರೀಯ ವಿದ್ವೇಷಗಳು, ಬಹುದೂರದ ಸಂಶೋಧನೆಗಳು, ಬಂಡವಾಳಶಾಹೀ ಚಟುವಟಿಕೆ ಗಳು, ಸಾಮಾಜಿಕ, ಧಾರ್ಮಿಕ ಅಶಾಂತಿ ಎಷ್ಟು ತೀವ್ರವಾಗಿದ್ದುವೆಂದರೆ ಕ್ಲಾಸಿಕಲ್ ಭಾಷೆಗಳೂ ಉಳಿದುಕೊಳ್ಳುವುದು ಕಷ್ಟವಾಯಿತು. ಸಾಮಾನ್ಯರಿಗೆ ಮತ್ತು ಮೇಲುವರ್ಗದ ವರಿಗೆ ಈ ಪ್ರಾಚೀನ ಕೃತಿಗಳ ಬಗೆಗೆ ವಿಶೇಷವಾಗಿ ತಿಳಿ ಹೇಳಬೇಕಾಯಿತು. ಏಕೆಂದರೆ ಅವರಿಗೆ ಅವುಗಳ ಬಗೆಗೆ ಏನೂ ತಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ದೇಶಭಾಷೆಯಲ್ಲಿ ರಾಷ್ಟ್ರೀಯ ಸಾಹಿತ್ಯದ ಅಗತ್ಯವು ಕಾಣಿಸಿಕೊಂಡಿತ್ತು.

೧೬ನೆಯ ಶತಮಾನದ ರಾಷ್ಟ್ರೀಯ ಸಾಹಿತ್ಯದ ವಸ್ತು ಬಹಳ ವೈವಿಧ್ಯಪೂರ್ಣವಾಗಿತ್ತು. ಜನಸಾಮಾನ್ಯರ ತಿಳಿವಳಿಕೆಗಾಗಿ ಅನೇಕ ಧಾರ್ಮಿಕ ನಿಬಂಧಗಳು, ಭಕ್ತಿ ಸಾಹಿತ್ಯ ಕೃತಿಗಳು, ಸ್ತೋತ್ರದ ಪುಸ್ತಕಗಳು ಮತ್ತು ಬೈಬಲ್ ಅನುವಾದಗಳು ಬಂದುವು. ೧೬ನೆಯ ಶತಮಾನದಲ್ಲಿ ಧಾರ್ಮಿಕವಾಗಿ ಪ್ರಾಟೆಸ್ಟೆಂಟ್ ಪಂಥವು ಮೇಲೆ ಬಂದದ್ದು, ಮತ್ತು ಮತ ಸುಧಾರಣೆ (ರಿಫಾರ್ಮೇಷನ್)ಗಳು ದೇಶಭಾಷೆಯಲ್ಲಿ ವಿಪುಲವಾಗಿ ವಿವಾದಾಸ್ಪದ ಸಾಹಿತ್ಯವನ್ನು ಸೃಷ್ಟಿಸಲು ಪ್ರೇರಕವಾದುವು. ತೆಗಳಲು ಅಥವಾ ಪ್ರಭಾವ ಬೀರಲು ಈ ಸಾಹಿತ್ಯ ವಿಪುಲ ಪ್ರಮಾಣದಲ್ಲಿ ಸೃಷ್ಟಿಯಾಯಿತು.

ದೇಶಭಾಷೆಯಲ್ಲಿ ರಾಷ್ಟ್ರೀಯ ಸಾಹಿತ್ಯ ರಚನೆ ಬೃಹತ್ ಪ್ರಮಾಣದಲ್ಲಿ ಕಂಡುಬಂದುದು ರಾಜಕಾರಣ, ಇತಿಹಾಸ ಮತ್ತು ಪ್ರವಾಸ ಕ್ಷೇತ್ರಗಳಲ್ಲಿ. ಉದಾಹರಣೆಗೆ, ಮೆಕೆಯಾವೆಲ್ಲಿಯ ಪ್ರಿನ್ಸ್ ಮತ್ತು ಫ್ಲಾರೆಂಟೈನ್ ಇತಿಹಾಸ; ಗಿಸಿಯಾರ್ಡಿನಿಯ ಇಟಲಿಯ ಇತಿಹಾ; ಸರ್ ಥಾಮಸ್ ಮೋರನ ಯುಟೋಪಿಯ(ಇಂಗ್ಲಿಷಿನಲ್ಲಿ); ಬರ್ಟಿಲೋಮ್ ಡಿಲಾಸ್ ಕಾಸರ್‌ನು ಸ್ಪ್ಯಾನಿಷ್‌ನಲ್ಲಿ ಬರೆದ ಇಂಡೀಸ್ ಇತಿಹಾಸ ಇತ್ಯಾದಿ.

ಮನೋಹರವಾದ, ಕ್ಲಾಸಿಕಲ್ ಅಲ್ಲದ ಗದ್ಯ ಶೈಲಿಯ ಬೆಳವಣಿಗೆಯು ಮಾನವತಾ ವಾದದ ಮುಖ್ಯ ಸಾಹಿತ್ಯಕ ಸಾಧನೆ. ಪತ್ರಸಾಹಿತ್ಯ ಅದರ ವಿಶಿಷ್ಟ ಪ್ರಕಾರ. ಸುದೀರ್ಘ ಚರ್ಚೆಗಳಿದ್ದರೆ ಅದಕ್ಕಾಗಿ ಹ್ಯೂಮನಿಸ್ಟರು ಒಂದು ನಿಬಂಧವನ್ನೇ, ಸಂಭಾಷಣೆಯನ್ನೇ ರಚಿಸುತ್ತಿದ್ದರು. ಗಂಭೀರವಾದ ವಿಷಯಗಳ ಚರ್ಚೆಗಾಗಿ ಸಾಹಿತ್ಯಕ ಕಲ್ಪನೆಯನ್ನು ಸಂಭಾಷಣೆಗೆ ಕೂಡಿಸಲಾಯಿತು. ೧೫೨೮ರಲ್ಲಿ ಇಟಾಲಿನಾದಲ್ಲಿ ಬಲ್ದಾಸರೇ ಕ್ಯಾಸ್ಟಿಗ್ಲಿ ಯೋನ್ ರಚಿಸಿದ ದಿ ಕೋರ್ಟಿಯರ್ ಕೃತಿಯನ್ನು ಉದಾಹರಣೆಯಾಗಿ ಹೇಳಬಹುದು. ಪ್ರೇಮದ ಲಲಿತವಾದ ಚರ್ಚೆ, ಸಭ್ಯ ನಡವಳಿಕೆ, ಸುಸಂಸ್ಕೃತ ಸಭ್ಯನ ಆದರ್ಶ ಶಿಕ್ಷಣ ಇವು ಈ ಕೃತಿಯಲ್ಲಿ ಮಿಳಿತವಾಗಿವೆ.

ಲ್ಯಾಟಿನ್ ಮತ್ತು ಇಟಾಲಿಯನ್‌ಗಳ ನಡುವೆ ಉಳಿವು-ಅಳಿವು ಹೋರಾಟ ೧೪ನೆಯ ಶತಮಾನದಲ್ಲಿ ಪ್ರಾರಂಭವಾಯಿತು. ಮಾನವತಾವಾದಿಗಳು ಇಟಾಲಿಯನ್ ಭಾಷೆಗೆ ಮಾರಕ ವೈರಿಗಳಾದರು. ಡಾಂಟೆ, ಪೆಟ್ರಾಕ್ಸ್ ಮತ್ತು ಬೇಕಾಸಿಯೋಗಳಿದ್ದರೂ ಅದರ ಬೆಳವಣಿಗೆಯನ್ನು ಅಡಗಿಸಿಬಿಟ್ಟರು. ಮೆಕೆಯಾವೆಲ್ಲಿ, ಅರಿಸ್ಟೋ ಮತ್ತು ಕ್ಯಾಸ್ಟಿಗ್ಲಿಯೋನ್ ದೇಶೀಭಾಷೆಯಲ್ಲಿ ಬರೆದದ್ದು ದೇಶೀಭಾಷೆಗಳ ವಿಜಯವನ್ನು ರಿನೈಸಾನ್ಸ್ ಸಂಸ್ಕೃತಿಗೂ ಅದರ ದೇಶೀಯ ಬೇರುಗಳಿಗೂ ನಡುವೆ ಸಂಪರ್ಕ ಉಳಿಸಿದುದನ್ನು ಸೂಚಿಸುತ್ತದೆ.

ಪ್ರಥಮದರ್ಜೆಯ ಇಟಾಲಿಯನ್ ಕಾವ್ಯವು ೧೫ನೆಯ ಶತಮಾನದ ಬಹುಪಾಲಿನುದ್ದಕ್ಕೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇದರಿಂದ ಅನೇಕ ಇತಿಹಾಸಕಾರರು ‘‘ಇಲಾಬುವಾನ್ ಸೆಕೊಲೊ’’ ಭಾಷೆಯ ಮಹಾಯುಗವು ಕಳೆದುಹೋದುದಕ್ಕಾಗಿ ವಿಷಾದಿಸುವಂತೆ ಮಾಡಿದೆ. ಹ್ಯೂಮನಿಸ್ಟ್ ಕ್ಲಾಸಿಸಿಸಂ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಅದು ಕೊನೆಗೊಂಡಿತು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಕಾವ್ಯ ರಚನಶೀಲತೆಯ ಕೊರತೆ ಕಂಡುಬರುತ್ತದೆ. ಲೋರೆಂಜೋ ಡಿ ಮೆಡಿಚಿಯೊಂದಿಗೆ ಪೋಷಣೆಯ ಕಾಲ ಮುಗಿಯಿತೆಂದು ಅಭಿಪ್ರಾಯಪಡಲಾಗಿದೆ. ಬಹಳ ಪ್ರಭಾವಿಯಾಗಿದ್ದ ಲೊರೆಂಜೋ ೧೫ನೆಯ ಶತಮಾನದ ಕೊನೆಯಲ್ಲಿ ಫ್ಲಾರೆನ್ಸನ್ನು ಆಳುತ್ತಿದ್ದನು. ಅವನು ತನ್ನ ಕಾಲದ ಶ್ರೇಷ್ಠ ಕವಿಗಳಲ್ಲಿ ಒಬ್ಬನು. ಅವನು ಪೆಟ್ರಾರ್ಕನ ಪ್ರಭಾವವನ್ನು ತೋರಿಸಿದನು. ಆದರೆ ತನ್ನ ಪ್ರತಿಭೆಯಿಂದ ಅದನ್ನು ಪರಿಷ್ಕರಿಸಿದನು. ಅವನ ಕಾವ್ಯವು ಬಹುಮುಖಿಯಾದ ಮಾನವನ ರಿನೈಸ್ಸಾನ್ಸ್ ಆದರ್ಶವನ್ನು ಸಂಗ್ರಹಿಸಿಕೊಡುತ್ತದೆ. ಅವನ ಕಾವ್ಯಗಳಲ್ಲಿ ಕಾಡಿನ ದೃಶ್ಯಗಳು ಮತ್ತು ಬೇಟೆಯ ದೃಶ್ಯಗಳ ವರ್ಣನೆ ಹೇಗೆ ಅವನು ಸಾರ್ವಜನಿಕ ಗಲಿಬಿಲಿ ಜೀವನದಿಂದ ಬಿಡುಗಡೆ ಹೊಂದಲು ಬಯಸಿದ್ದನು ಎಂಬುದನ್ನು ಸೂಚಿಸುತ್ತವೆ.

ಫೆರಾರಾದಲ್ಲಿ, ಆಳುವ ಎಸ್ಟೆ ಕುಟುಂಬದ ಆಶ್ರಯದಲ್ಲಿ ಸಾಹಿತ್ಯ ಮತ್ತು ಕಲೆ ಪ್ರವರ್ಧಮಾನಕ್ಕೆ ಬಂದಿತು. ೧೫ನೆಯ ಶತಮಾನವು ಮುಗಿಯುವಷ್ಟರಲ್ಲಿ ಕೊನೆಯ ಪಕ್ಷ ಒಬ್ಬ ಮಹಾಕವಿಯನ್ನು ನೀಡಿತು. ಅವನೇ ಮಾಟ್ಕೊ ಬುಯಿಯಾರ್ದೊ. ಅವನು ರೋಲೆಂಡಿನ ಮಹಾಕಾವ್ಯವಾದ ಆರ್ಲಂಡೋ ಇನ್ನಾಮೋರಾಟೋ ಎನ್ನುವ ಕೃತಿಯ ಲೇಖಕ. ೧೬ನೆಯ ಶತಮಾನದ ಕೆಲವು ದೇಶೀಭಾಷಾ ಬರವಣಿಗೆಗಳು ಪೇಗನ್ ಪುನರುಜ್ಜೀವನದ ಬೆಳಕಿನಲ್ಲಿ ಕಲ್ಪಿತವಾದವು. ಅವು ಕ್ಲಾಸಿಕಲ್ ಹ್ಯೂಮನಿಸಂನಿಂದ ಹುಟ್ಟಿದವು. ಮಧ್ಯಯುಗವನ್ನು ಕುರಿತ ಹ್ಯೂಮನಿಸ್ಟರ ತಿರಸ್ಕಾರ ಎಷ್ಟೇ ಇರಲಿ, ರಿನೈಸಾನ್ಸಿನ ಇಟಾಲಿಯನ್ನರು, ತಮ್ಮ ಮಧ್ಯಯುಗದ ಪರಂಪರೆಯ ಕ್ಲಾಸಿಸಂನ್ನು ಮೂಲೋತ್ಪಾಟನ ಮಾಡಲು ಬಿಡಲಿಲ್ಲ.

ಉತ್ತರ ಯುರೋಪ್‌ನಲ್ಲಿ ರಿನೈಸಾನ್ಸ್

ಇಟಲಿಯಲ್ಲಿ ಹುಟ್ಟಿದ ರಿನೈಸಾನ್ಸ್ ಇತರ ಯೂರೋಪಿಯನ್ ದೇಶಗಳಿಗೆ ಸುಮಾರು ೧೫೦೦ರ ನಂತರ ಹರಡಿದ್ದುದು ಅನಿವಾರ್ಯವಾಗಿತ್ತು. ಇಟಲಿ ಮತ್ತು ಉತ್ತರ ಯೂರೋಪು ಹೆಚ್ಚು ಹೆಚ್ಚು ನಿಕಟವಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಕಲಾವಿದರು ಇಟಲಿಯ ಕೇಂದ್ರಗಳಿಗೆ ಬರುವುದೂ ಹೆಚ್ಚಾಯಿತು. ಜರ್ಮನಿಯಿಂದ ರೊಡೋಲ್ಫಸ್ ಅಗ್ರಕೋಲಾ, ಕೊನ್ರಾಡಸ್ ಸೆಲ್ಟಿಸ್ ಮತ್ತು ಆಲ್‌ಬ್ರೆಕ್ಟ್ ಡ್ಯೂರಾರ್, ಫ್ರಾನ್ಸಿನಿಂದ ಜಾಕ್ಯೂಸ್ ಲಾಫೆರೆ ಡಿ ಇಟಾಪ್ಲೆಸ್, ಇಂಗ್ಲೆಂಡಿನಿಂದ ವಿಲಿಯಂ ಗ್ರೋಸಿನ್ ಮತ್ತು ಥಾಮಸ್ ಲಿನಾಕ್ರೆ ಬಂದರು. ಅದೇ ಸಮಯಕ್ಕೆ ಇಟಾಲಿಯನ್ ವಿದ್ವಾಂಸರು ಆಲ್ಫ್ಸ್ ಪರ್ವತದ ಉತ್ತರಕ್ಕೆ ಲಾಭದಾಯಕವಾದ ಉದ್ಯೋಗಗಳನ್ನು, ಬರವಣಿಗೆಯನ್ನು ಇಷ್ಟಪಟ್ಟು ಆಲಿಸುವ ಶ್ರೋತೃಗಳನ್ನು ಪಡೆದರು. ಈ ಬಗೆಯ ಅಂತರ-ವಿನಿಮಯವು ಬೆಳೆದು ೧೫೦೦ರ ಸುತ್ತಮುತ್ತಲಲ್ಲಿ ಉತ್ತರ ಯೂರೋಪಿನ ಬಹುಭಾಗವು ಸಾಕಷ್ಟು ಸಂಪದ್ಭರಿತವೂ, ರಾಜಕೀಯವಾಗಿ ಸುಭದ್ರವೂ ಆಗಿ ಕಲೆ ಮತ್ತು ಸಾಹಿತ್ಯ ಕೃಷಿಗೆ ಹಿತಕರವಾದ ವಾತಾವರಣವನ್ನು ಒದಗಿಸಿತು. ಇವೆಲ್ಲದರ ನಡುವೆ ಇಟಾಲಿಯನ್ ನಾಗರಿಕತೆಯ ಜ್ಞಾನಮಾಧ್ಯಮದ ಮೇಲೆ ತೀವ್ರವಾದ ಹೊಡೆತದ ನಿರ್ಣಾಯಕವಾದ ಘಟನೆಯೆಂದರೆ ಫ್ರೆಂಚ್ ಧಾಳಿ.

ಎಂಟನೆಯ ಚಾರ್ಲ್ಸ್ ಇಟಲಿಯ ಮೇಲೆ ದಾಳಿ ಮಾಡುತ್ತಾನೆ ಎಂಬುದಾಗಿ ೧೪೯೪ರಲ್ಲೇ ಸವೊನರೋಲನು ಭವಿಷ್ಯ ನುಡಿದಿದ್ದನು. ಅದು ಭಗವಂತನೇ ಒದಗಿಸುವ ಶುದ್ದೀಕರಣ ಕ್ರಿಯೆ ಎಂದು ಅವನು ಸ್ವಾಗತಿಸಿದ್ದನು. ಸ್ವತಃ ರಾಜ ಎಂಟನೆಯ ಚಾರ್ಲ್ಸ್‌ನೇ ಅದನ್ನು ನಂಬಿದ್ದನು. ೧೪೯೪ ಸೆಪ್ಟೆಂಬರಿನಲ್ಲಿ ಅವನು ಅಪೆನೈನ್ಸ್ ದಾಟಿ ಇಟಲಿಗೆ ನುಗ್ಗಿದನು. ನೇಪಲ್ಸ್ ರಾಜ್ಯವನ್ನು ಫ್ರೆಂಚ್ ಚಕ್ರಾಧಿಪತ್ಯಕ್ಕೆ ಕೂಡಿಸಿಕೊಳ್ಳಲು ದೃಢಸಂಕಲ್ಪ ಮಾಡಿದ್ದನು. ಅವನು ದೈವಾಂಶ ಸಂಭೂತನಾದ ಎರಡನೆಯ ಚಾರ್ಲಿಮೇನ ಎಂದು ಫ್ರೆಂಚ್ ಮತ್ತು ಇಟಾಲಿಯನ್ ಪ್ರವಾದಿಗಳು ಭವಿಷ್ಯ ಹೇಳಿರುವುದನ್ನು ಅನೇಕರು ನಂಬಿದರು. ನೇಪಲ್ಸ್ ರಾಜ್ಯವನ್ನು ಗೆದ್ದುಕೊಳ್ಳುವುದೇನೋ ಅವನಿಗೆ ಸುಲಭವಾಯಿತು. ಆದರೆ ಅದನ್ನು ಉಳಿಸಿಕೊಳ್ಳುವುದು ಬಹು ಕಷ್ಟವಾಯಿತು. ಸ್ಥಳೀಯವಾದ ಬಂಡಾಯಗಳಿಂದ ಅವನು ಹೆದರಿದನು. ಜೊತೆಗೆ ಹೊಸದೊಂದು ಇಟಾಲಿಯನ್ ಮೈತ್ರಿಕೂಟದ ರಚನೆ, ಸಿಸಿಲಿಯಲ್ಲಿ ಸ್ಪ್ಯಾನಿಷ್ ಸೈನ್ಯಗಳ ಒಗ್ಗೂಡಿಕೆಗಳಿಂದಲೂ ಭೀತನಾಗಿ ೧೪೯೫ರ ವಸಂತ ಋತುವಿನಲ್ಲಿ ನೇಪಲ್ಸ್‌ನಿಂದ ಹೊರಟು ಹೋದವನು ಮತ್ತೆ ಹಿಂದಿರುಗಲಿಲ್ಲ.  ಇದರ ಪರಿಣಾಮವಾಗಿ ಸವೊನರೊಲೂನನ್ನು ಸುಳ್ಳು ಭವಿಷ್ಯ ಹೇಳಿದ ಪ್ರವಾದಿ ಮತ್ತು ಕಪಟಿ ಪ್ರವಾದಿ ಎಂದು ಆಪಾದಿಸಿ, ಅವನನ್ನು ಹಿಡಿದು ಚಿತ್ರಹಿಂಸೆಗೊಳಪಡಿಸಿ, ೧೪೯೮ರಲ್ಲಿ ನೇಣಿಗೆ ಹಾಕಿ ಸುಡಲಾಯಿತು.

ಫ್ರೆಂಚ್ ಸೈನಿಕರು ಇಟಲಿಯ ದೃಶ್ಯಗಳನ್ನು ನೋಡಿ ದಿಗ್ಭಮೆಗೊಂಡು ಮರಳಿದರು. ತಮ್ಮೊಂದಿಗೆ ಸಿಫಿಲಿಸ್ ರೋಗವನ್ನು ಕೂಡ ಕೊಂಡೊಯ್ದರು. ೧೫ನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಈ ರೋಗವು ಸಾಂಕ್ರಾಮಿಕವಾಗಿ ಯೂರೋಪಿನಾದ್ಯಂತ ಹರಡಿತು. ಮೊದಲನೆಯ ಫ್ರೆಂಚ್ ದಾಳಿಯ ನಂತರದ ವರ್ಷಗಳಲ್ಲಿ ಯೂರೋಪಿನ ಬೇರೆ ಬೇರೆ ಭಾಗಗಳಿಂದ ಸೇರಿಸಿಕೊಳ್ಳಲಾಗಿದ್ದ ಯೋಧರು ಇಟಲಿಯ ನಾಗರಿಕ ಜೀವನವನ್ನು ನೋಡಿ ಆನಂದಿಸುವ ಅವಕಾಶವನ್ನು ಪಡೆದರು. ಆ ಮುಂದಿನ ದಶಕಗಳಲ್ಲಿ ಇಟಲಿಯ ವೈಭವ ಮತ್ತು ಬೆಂಕಿಯ ಹೊಗೆಯ ನಡುವೆ ಕೊಳ್ಳೆ ಹೊಡೆಯುವ ಕೆಲಸ ಅವಿರತವಾಗಿ ನಡೆದು ೧೫೨೭ರಲ್ಲಿ ಅದು ಶಿಖರವನ್ನು ಮುಟ್ಟಿತು. ಆಗ ಸ್ಪ್ಯಾನಿಷ್ ಮತ್ತು ಜರ್ಮನ್ ಕೂಲಿ ಯೋಧರು ಕಾರ್ಡಿನಲ್‌ರ ಅರಮನೆಗಳನ್ನು ಲೂಟಿ ಮಾಡಿದರು ಮತ್ತು ಸಿಸ್ಟಿನ್ ಚಾಪೆಲ್‌ನಲ್ಲಿ ತಮ್ಮ ಕುದುರೆಗಳನ್ನು ಕಟ್ಟಿದರು.

ಎಂಟನೆಯ ಚಾರ್ಲ್ಸ್ ನಡೆಸಿದ ಇಟಲಿಯ ದಂಡಯಾತ್ರೆ ಮಧ್ಯಯುಗದ ಒಬ್ಬ ಅರಸನ ರೊಮಾಂಟಿಕ್ ಸಾಹಸವೆ ಸರಿ. ಅದರೆ ಇದಕ್ಕೆ ಸರಿಯಾದ ಯೋಜನೆಯಿರಲಿಲ್ಲ. ಅದು ಅವನ ಪ್ರಜೆಗಳ ಅಗತ್ಯಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿತ್ತು. ರಾಜರು ಮುಂದಿನ ಹಲವು ಶತಮಾನಗಳ ಕಾಲ ಹೀಗೆ ವರ್ತಿಸಿದರು ಎಂಬುದನ್ನು ಇಲ್ಲಿ ನೆನಪಿನಲ್ಲಿಡಬೇಕು. ಇಟಲಿಯ ಮೇಲೆ ನಡೆದ ಫ್ರೆಂಚ್ ದಾಳಿಯು ಆಧುನಿಕ ಯುಗದ ಪ್ರಾರಂಭ ಎಂಬುದಾಗಿ ಇತಿಹಾಸಕಾರರು ಹೇಳಿದ ತೀರ್ಪುಗಳನ್ನು ಒಪ್ಪಿಕೊಳ್ಳುವುದಕ್ಕೆ ಮುಂಚೆ ಇದನ್ನು ತಿಳಿದುಕೊಳ್ಳಬೇಕು. ಏನೇ ಇರಲಿ, ಈ ದಾಳಿಯು ಯೂರೋಪಿನ ರಾಜಕಾರಣದಲ್ಲಿ ಹೊಸ ಅಲೆಯ ಆರಂಭವನ್ನಂತೂ ಗುರುತಿಸಿತು. ಫ್ರಾನ್ಸಿನ ವೆಲೋಯಿ ರಾಜರು ಮತ್ತು ಜರ್ಮನಿಯ ಹಾಬ್ಸ್‌ಬರ್ಗರೂ ಇಟಲಿಯ ರಾಜ್ಯಗಳನ್ನು ಪಗಡೆಕಾಯಿಗಳಂತೆ ಬಳಸಿಕೊಂಡು ಪರಸ್ಪರ ಕಚ್ಚಾಡಿದರು. ಮುಂದಿನ ಅರವತ್ತು ವರ್ಷಗಳ ಕಾಲ ಹೆಚ್ಚು ಕಡಿಮೆ ಪ್ರತಿಯೊಬ್ಬ ಫ್ರೆಂಚ್ ದೊರೆಯೂ ಎಂಡನೆಯ ಚಾರ್ಲ್ಸ್‌ನ ವಿಫಲ ಸಾಹಸದಿಂದ ಪಾಠವನ್ನು ಕಲಿಯದೆ, ಇಟಲಿಯನ್ನು ಗೆಲ್ಲುವ ಕನಸು ಕಂಡರು. ದಕ್ಷಿಣದತ್ತ ಹಾದಿಯು ತೆರೆದಿದೆ, ವಿಜಯವು ಬಹು ಸುಲಭವಾಗಿದೆ ಎಂದು ಭಾವಿಸಿದರು. ಇಟಾಲಿಯನ್ ರಾಜಕಾರಣದ ಸ್ವಯಂ ಆಡಳಿತವನ್ನು ನಾಶಮಾಡಿ ಇಟಲಿಯ ರಾಜ್ಯ ವ್ಯವಸ್ಥೆಯನ್ನೇ ಕೊನೆಗೊಳಿಸಿದರು. ಸದ್ಯದಲ್ಲೇ ರೂಪುಗೊಳ್ಳಲಿದ್ದ ಬೃಹತ್ ಯೂರೋಪಿಯನ್ ರಾಜ್ಯವ್ಯವಸ್ಥೆಯೊಳಗೆ ಅವನ್ನು ವಿಲೀನಗೊಳಿಸಿದರು. ಮೊದಲು ಇಟಾಲಿಯನ್ನರೇ ರೂಪಿಸಿದ್ದ ಶಕ್ತಿ ಸಮತೋಲನ ರಾಜಕಾರಣವನ್ನು ಅದರ ಸದಸ್ಯರು ಈಗ ಅನುಸರಿಸಿದರು. ಅದರ ಜೊತೆಗೆ ಗೂಢಚರ್ಯೆ ಮಾಡಿ ಮಾಹಿತಿ ಸಂಗ್ರಹಿಸುತ್ತಿದ್ದ ರಾಯಭಾರಿಗಳನ್ನು ಉಪಯೋಗಿಸಿಕೊಂಡರು. ಇದೂ ಇಟಾಲಿಯನ್ನರ ತಂತ್ರವೇ. ಯುದ್ಧ ಕಲೆಯಲ್ಲೂ ಇಟಾಲಿಯನ್ನರು ಯುರೋಪಿನಲ್ಲೇ ಶ್ರೇಷ್ಠರಾಗಿದ್ದರು. ಕೂಲಿ ಹತ್ಯಕಾರಿಗಳನ್ನು ಬಳಸುವುದರಲ್ಲಿ ದುರ್ಗಗಳು ಮತ್ತು ಬಯಲು ಕೋಟೆಗಳಲ್ಲಿ ಮತ್ತು ಫಿರಂಗಿಗಳನ್ನು ಹೂಡಲು ಅವರು ಅಪ್ರತಿಮರಾಗಿದ್ದರು. ಆದರೆ ಮುಂದೆ ಅವರಿಂದ ಕಲಿತ ಶಿಷ್ಯರು ಅವರನ್ನು ಸೋಲಿಸಿದರು. ೧೪೯೪ರ ವೇಳೆಗೆ ಫ್ರೆಂಚ್ ಪಡೆ ಈ ವಿದ್ಯೆ ಪಡೆದು ಅತ್ಯುತ್ಕೃಷ್ಟವೆನಿಸಿತು. ಕತ್ತಿ ಕಾಳಗದ ದಳವನ್ನು ಸೈಯಿನಿನವರು ಬೆಳೆಸಿಕೊಂಡಿದ್ದರು. ಜೊತೆಗೆ ಪರಿಣಾಮಕಾರಿಯಾಗಿ ದುರ್ಗ ನಿರ್ಮಾಣ, ಶಸ್ತ್ರಸಜ್ಜಿಕೆಗಳನ್ನು ಅವರು ಇಟಾಲಿಯನ್ನರಿಂದಲೂ ಸ್ವಿಸ್ ಜನರಿಂದಲೂ ಕಲಿತು ರೂಢಿಸಿಕೊಂಡಿದ್ದರು.

ಈ ಬಗೆಯ ಹಳೆಯ-ಹೊಸದರ ಮಿಶ್ರ ವಿಧಾನಗಳು ಇಟಲಿಯ ವಿಜಯದ ಪ್ರಯತ್ನಗಳಲ್ಲಿ ಪದೇ ಪದೇ ವಿಫಲವಾದವು. ಮಧ್ಯಯುಗದ ವೀರ-ಪರಾಕ್ರಮಗಳ ದಾಳಿ ಹಿಡಿದ ರಾಜರು ರಿನೈಸಾನ್ಸ್ ಕಾಲದ ಯುದ್ಧ ಮತ್ತು ಸಂಧಿಗಳ ತಂತ್ರವನ್ನು ಅನುಸರಿಸಿ ದರು. ೧೬ನೆಯ ಶತಮಾನದ ದಂಡಯಾತ್ರೆಗಳ ಪ್ರಮಾಣವು ಹೊಸ ಬಗೆಯವಾಗಿದ್ದುವು. ಏಕೆಂದರೆ, ಅರಸರ ಬಳಿ ಈಗ ವಿಪುಲವಾಗಿ ಜನ ಬಲವಿತ್ತು, ಸಂಪನ್ಮೂಲವಿತ್ತು. ಯೂರೋಪಿನಾದ್ಯಂತ ‘‘ನೂತನ ಚಕ್ರವರ್ತಿಗಳು’’ ಎಂದು ಹೆಸರು ಗೊಂಡ ಈ ರಾಜರು ಬಹುಕಾಲದ ಅನಿಶ್ಚಯತೆಯ ನಂತರ ತಮ್ಮ ಪ್ರಭುತ್ವವನ್ನು ಸ್ಥಿರಪಡಿಸುತ್ತಿದ್ದರು.

೧೫ನೆಯ ಶತಮಾನದ ಕೊನೆಯ ವೇಳೆಗೆ ವೆಲೊಯಿ ರಾಜರು ಫ್ರೆಂಚ್ ನೆಲದಿಂದ ಇಂಗ್ಲಿಷರನ್ನು ಹೊರಗಟ್ಟಿದ್ದರು. ಆ ಮೂಲಕ ೧೦೦ ವರ್ಷಗಳ ಯುದ್ಧಕ್ಕೆ ತೆರೆಬಿದ್ದಿತು. ಬರ್ಗಂಡಿ ಮತ್ತು ಬ್ರಿಟನ್ನಿನ ಡಚ್ ಫಲವತ್ತಾದ ಪ್ರದೇಶಗಳು ಫ್ರಾನ್ಸಿಗೆ ಸೇರಿಹೋಗಿ, ಫ್ರೆಂಚ್ ರಾಜ್ಯವು ಅಟ್ಲಾಂಟಿಕ್ ಮತ್ತು ಇಂಗ್ಲಿಷ್ ಕಡಲ್ಗಾಲುವೆಯಿಂದ ಐರ್‌ನೀಸ್ ಮತ್ತು ರ‌್ಹೈನ್‌ವರೆಗೆ ವ್ಯಾಪಿಸಿತು. ಈ ವಿಶಾಲವಾದ ಪ್ರದೇಶವನ್ನು ಆಳಲು ಒಂದು ದಕ್ಷ ವ್ಯವಸ್ಥೆಯನ್ನು ಮಾಡಲಾಯಿತು. ಯುದ್ಧಕಾಲದ ತೆರಿಗೆಗಳು ಈಗ ಖಾಯಂ ಆದುವು. ಅಧಿಕಾರಿಗಳು ದೇಶಾದ್ಯಂತ ಸಂಚರಿಸುತ್ತಾ ಕ್ರೈಸ್ತಪಾದ್ರಿ ವರ್ಗದಿಂದ ತೆರಿಗೆಗಳನ್ನು ವಸೂಲು ಮಾಡಲು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರು ಆದರೆ ಫ್ರಾನ್ಸ್‌ಗೆ ಸಂಪೂರ್ಣ ಕೇಂದ್ರೀಕರಣವನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದರೂ ಬೋಡಿನ್ ತನ್ನ ಸಿಕ್ಸ್‌ಬುಕ್ಸ್ ಆಫ್ ದಿ ಕಾಮನ್‌ವೆಲ್ತ್‌ನಲ್ಲಿ ಫ್ರಾನ್ಸಿನ ರಾಜನೇ ಪರಮ ಪ್ರಭುವೆಂದೂ, ಏಕೆಂದರೆ ಒಟ್ಟಾಗಿ ತನ್ನ ಪ್ರಜೆಗಳೆಲ್ಲರಿಗೂ, ವಿಶೇಷವಾಗಿ ಪ್ರತಿಯೊಬ್ಬರಿಗೂ ನ್ಯಾಯವನ್ನು ಕೊಡುವ ಅಧಿಕಾರ ಅವನಿಗೊಬ್ಬನಿಗೇ ಇದೆಯೆಂದೂ ಬರೆದನು.

ಬೋಡಿನ್ ಹೀಗೆ ಬರೆಯಲು ಇನ್ನೊಬ್ಬ ನಿರಂಕುಶ ದೊರೆ ಸ್ಪೆಯಿನಿನ ಫಿಲಿಪನೂ ಪ್ರೇರಕನಾಗಿರಬಹುದು. ಎರಡನೆಯ ಫಿಲಿಪ್ ಬಂದದ್ದು ಯೋಧ ಕುಲದಿಂದ. ಆದರೂ ಅವನು ತನ್ನ ದಿನಗಳನ್ನು ಸಿಸಿಲಿ, ನೇಪಲ್ಸ್, ಮಿಲಾನ್, ಪೆರು, ಮೆಕ್ಸಿಕೋ ಮತ್ತು ಫಿಲಿಪೀನ್ಸ್‌ಗಳಲ್ಲಿದ್ದ ತನ್ನ ಗವರ್ನರುಗಳು ಕಳಿಸುತ್ತಿದ್ದ ಪತ್ರಗಳನ್ನು ಓದುವುದರಲ್ಲಿ, ಬರೆಯುವುದರಲ್ಲಿ ‘‘ರಾಜನಾದ ನಾನು’’ ಎಂದು ಸಹಿಮಾಡಿ ಅವರಿಗೆ ಕಳಿಸುವುದರಲ್ಲಿ ಕಳೆದನು. ಈ ಬೃಹತ್ ಸಾಮ್ರಾಜ್ಯವು ಸ್ಥಾಪನೆಗೊಂಡದ್ದು ೧೪೬೯ರಲ್ಲಿ. ಆಗ ಆರಗಾನಿನ ಎರಡನೆಯ ಫರ್ಡಿನೆಂಡ್ ಮತ್ತು ಕ್ಯಾಸ್ಟಿಲೆಯ ಇಸಬೆಲಾ ಕೂಡ ಎರಡೂ ಹಿಸ್ಟಾನಿಕ್ ರಾಜ್ಯಗಳನ್ನು ಒಂದುಗೂಡಿಸಿ ಒಂದು ರಾಜವಂಶದಿಂದ ಆಳತೊಡಗಿದರು. ಕ್ಯಾಸ್ಟಿಲ್ ಮತ್ತು ಆರಗಾನ್ ಭಾಗೀದಾರಿಕೆ ಅಷ್ಟು ಹಿತಕರವಾಗಲಿಲ್ಲ. ಒಂದು ಕಡೆ ಶುಷ್ಕ ನೆಲದ ಕುರುಬ ಹಾಗೂ ಚರ್ಚಿನ ಭೂಮಾಲಿಕ ವರ್ಗವು ಇನ್ನೊಂದು ಕಡೆ ಯೂರೋಪಿನೊಂದಿಗೆ ಪ್ರಬಲವಾದ ಸಂಬಂಧಗಳನ್ನು ಹೊಂದಿದ್ದ ಕ್ಯಾಸ್ಟಿಲೆಯ ಗಣಿಗಾರ ವರ್ಗಗಳು ಒಂದು ರಾಷ್ಟ್ರವಾಗಿ ಒಂದುಗೂಡಬೇಕಾದ ಅನಿವಾರ್ಯವಿತ್ತು. ಇದರಿಂದ ಅವರಿಗೆ ಜಾಗತಿಕ ಪ್ರಾಧಾನ್ಯ ದೊರಕುತ್ತಿತ್ತು. ಆದರೆ ಅವರು ಅದಕ್ಕೆ ಸಿದ್ಧರಾಗಿರಲಿಲ್ಲ.

೧೫ನೆಯ ಶತಮಾನದ ಕೊನೆಯ ದಶಕದಲ್ಲಿ ಸ್ಪೇನಿಯರ್ಡರು ಉತ್ತರದಲ್ಲಿ ನವರೆ ರಾಜ್ಯವನ್ನು ಜಯಿಸಿದರು. ಸ್ಪೆಯಿನಿನಲ್ಲಿದ್ದ ಕೊನೆಯ ಮುಸ್ಲಿಂ ಕೋಟೆ ಗ್ರನಾಡಾ ರಾಜ್ಯದ ಮೇಲೆ ಕೂಡ ಅವರು ದಾಳಿ ಮಾಡಿದರು. ಮುಸ್ಲಿಮರು ಮತ್ತು ಯೆಹೂದ್ಯರಿಗೆ ಮತಾಂತರ ಹೊಂದಿ ಇಲ್ಲವೇ ಗಡೀಪಾರು ಶಿಕ್ಷೆ ಅನುಭವಿಸಿ ಎಂದು ಹೇಳುವುದರ ಮೂಲಕ ಧಾರ್ಮಿಕ ಏಕೀಕರಣವನ್ನು ಸಾಧಿಸಲು ಪ್ರಯತ್ನಿಸಿದರು. ಒಂದು ನೂತನ ಮತೀಯ ವಿಚಾರಣಾ ವ್ಯವಸ್ಥೆಯನ್ನೂ ಏರ್ಪಡಿಸಲಾಯಿತು. ಅದನ್ನು ರಾಜನ ಕಡೆಯಿಂದ ನಿಯಂತ್ರಿಸಲಾಯಿತು. ದೇಶದ ಎಲ್ಲೆಗಳನ್ನು ಹೊಸದಾಗಿ ರೂಪಿಸಿದ್ದರಿಂದ, ಕೊಲಂಬಸನನ್ನು ಸಂಶೋಧನೆಯ ಮೇಲೆ ಸಮುದ್ರಯಾನಕ್ಕೆ ಕಳಿಸಲಾಯಿತು. ಅದರಿಂದ ಪಶ್ಚಿಮಾರ್ಧ ಗೋಳವು ಮುಕ್ತವಾಗಿ ತೆರೆದಂತಾಯಿತು. ಅಂತಿಮವಾಗಿ ಹಾಬ್ಸ್‌ಬರ್ಗ್ ನೊಂದಿಗೆ ಸ್ಪೈಯಿನಿನವರು ವಿವಾಹ ನಡೆಸಿ ಹೊಸ ಸಂಬಂಧವನ್ನು ಕುದುರಿಸಿಕೊಂಡರು ಯೂರೋಪಿ ಯನ್ ರಾಜಕಾರಣದ ಹೃದಯಕ್ಕೆ ಸ್ಪೆಯಿನ್ ಸೇರಿಕೊಂಡಂತಾಯಿತು.

ಮುಂದಿನ ದಶಕಗಳಲ್ಲಿ ಕ್ಯಾಸ್ಟಿಲಿಯ ಮಧ್ಯಮ ವರ್ಗದವರು ಅಮೆರಿಕನ್ ಇಂಡಿಯನರ ನೆಲ ಮತ್ತು ದುಡಿಮೆಗಳಿಂದ ಅಪಾರವಾಗಿ ಸಂಪತ್ತನ್ನು ಶೇಖರಿಸಿಕೊಂಡರು. ಇತರರು ತಮ್ಮ ರಾಜ್ಯ ಮೊದಲನೆಯ ಚಾರ್ಲ್ಸ್‌ನೊಂದಿಗೆ ಸೈನ್ಯದಲ್ಲಿ ಸೇರಿಕೊಂಡು ನಡೆದರು ಇಲ್ಲವೆ ನೌಕಾಯಾನ ಮಾಡಿದರು. ಈ ಚಾರ್ಲ್ಸ್‌ನೂ ಐದನೆಯ ಚಾರ್ಲ್ಸ್ ನಂತೆಯೇ ೧೫೧೯ರಲ್ಲಿ ತನ್ನ ೧೯ನೆಯ ವಯಸ್ಸಿನಲ್ಲೇ ಪವಿತ್ರ ರೋಮನ್ ಚಕ್ರವರ್ತಿಯಾಗಿ ಆಯ್ಕೆಯಾದನು. ಅವನು ಸ್ಪ್ಯಾನಿಷ್ ಮತ್ತು ಹ್ಯಾಬ್ಸ್‌ಬರ್ಗ್ ಸಾಮ್ರಾಜ್ಯಗಳನ್ನು ಬಳುವಳಿಯಾಗಿ ಪಡೆದಿದ್ದನು. ಈ ವಿಶಾಲವಾದ ಸಾಮ್ರಾಜ್ಯದ ಆಡಳಿತವನ್ನು ನಿರ್ವಹಿಸಲು ಅವನು ದಿನದಿನವೂ ಹೆಚ್ಚುತ್ತಾ ಹೋದ ವೈಸರಾಯಿಗಳು, ಗವರ್ನರರು, ನ್ಯಾಯಾಧೀಶರು, ಸೈನ್ಯ ಕ್ಯಾಪ್ಟನ್‌ಗಳು, ಕ್ಲಾರ್ಕುಗಳ ಪಡೆ -ಇವರಿಂದ ಕೂಡಿದ ಆಡಳಿತ ಶಾಹಿಯ ಅಧ್ಯಕ್ಷತೆ ವಹಿಸುತ್ತಿದ್ದನು. ಹೊಸದಾಗಿ ಸೇರಿಕೊಂಡ ಭೂಭಾಗವನ್ನು ೧೫೨೪ರ ನಂತರ ಪ್ರತ್ಯೇಕವಾದ ಒಂದು ಇಂಡೀಸ್ ಮಂಡಳಿಯು ಆಳುತ್ತಿತ್ತು. ಮೆಕ್ಸಿಕೋದ ಆ ಬೆಳ್ಳಿಗಣಿಯನ್ನು ತೆರೆದ ಮೇಲೆ ಇವರಿಗೆ ಅಮೆರಿಕವು ಭಾರೀ ಸಂಪತ್ತನ್ನು ಒದಗಿಸಿತು. ಆದರೆ ಅವರ ಐದನೆ ಒಂದು ಭಾಗವನ್ನು ಚಕ್ರವರ್ತಿಯು ತೆಗೆದುಕೊಳ್ಳುತ್ತಿದ್ದನು. ಅದನ್ನು ಒಡನೆಯೇ ಸಾಲಿಗರಿಗೆ ಪಾವತಿ ಮಾಡಲಾಗುತ್ತಿತ್ತು. ಏಕೆಂದರೆ ಚಾರ್ಲ್ಸನು ಸಾಲವೆತ್ತಿಯೋ, ತೆರಿಗೆ ವಿಧಿಸಿಯೋ ಸಂಗ್ರಹಿಸಿದ ಹಣವನ್ನೆಲ್ಲಾ ಅವನು ಇಟಲಿ ಮತ್ತು ಬರ್ಗಂಡಿಗಳಲ್ಲಿ ಫ್ರೆಂಚರ ವಿರುದ್ಧವಾದ ಯುದ್ಧಗಳಲ್ಲಿ ಖರ್ಚು ಮಾಡಿಬಿಟ್ಟಿರುತ್ತಿದ್ದನು. ಹಾಗೆಯೇ ಜರ್ಮನಿಯಲ್ಲಿ ಪ್ರಾಟೆಸ್ಟೆಂಟ್ ರಾಜರ ವಿರುದ್ಧ, ಮೆಡಿಟರೇನಿಯನ್ನಿನಲ್ಲಿ ಟರ್ಕರ ವಿರುದ್ಧ ಯುದ್ಧಗಳಾಗುತ್ತಿದ್ದುವು. ಆದರೆ ೧೫೫೫ ವೇಳೆಗೆ ಚಾರ್ಲ್ಸನ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ಪರಿಣಾಮವಾಗಿ ಅವನು ಈಗ ತನ್ನ ಬಿರುದುಗಳನ್ನು ತೊರೆಯತೊಡಗಿದನು. ಅವನ ಮಗ ಫಿಲಿಪ್ ಸ್ಪೆಯಿನ್ ಮತ್ತು ನೆದರ್‌ಲ್ಯಾಂಡನ್ನು ಪಡೆದನು. ಅವನ ಸಹೋದರ ಫರ್ಡಿನೆಂಡನಿಗೆ ಜರ್ಮನಿ ಮತ್ತು ಸಾಮ್ರಾಟ ಪದವಿ ದೊರಕಿತು. ಸೈನಿಕರ ಮತ್ತು ನಾವಿಕರ ವೇತನಗಳನ್ನು ಅಮೆರಿಕಾದ ಬೆಳ್ಳಿಯಿಂದ ಪಾವತಿ ಮಾಡಲಾಯಿತು. ಆದರೆ ಸ್ಪ್ಯಾನಿಷ್ ಸೈನ್ಯವು ಯುದ್ಧರಂಗದಲ್ಲೂ ಯುದ್ಧನೌಕೆಗಳು ಸಮುದ್ರದ ಮೇಲೂ ಇರುವಂತೆ ನೋಡಿಕೊಳ್ಳಲಾಯಿತು. ಇವರಿಗೆ ವಸ್ತುಗಳನ್ನು, ಸೇವೆಯನ್ನು ಬಹುತೇಕ ವಿದೇಶೀಯರು ಪೂರೈಸುತ್ತಾ ಅದರ ಫಲವನ್ನೂ ಬಾಚಿಕೊಳ್ಳು ತ್ತಿದ್ದರು. ಆದರೂ ಶತಮಾನದ ಮಿಕ್ಕ ಅವಧಿಯಲ್ಲಿ ಸ್ಪೆಯಿನ್ ಪ್ರಪಂಚದ ಕಣ್ಣೂ ಕುಕ್ಕಿತು. ಹಣಕಾಸಿನ ಕೊರತೆಯ ವಿಷಯ ಯಾರಿಗೂ ಗೋಚರವಾಗಲಿಲ್ಲ. ಏಕೆಂದರೆ, ಬಂದ ಅರಸರೆಲ್ಲ ಧೈರ್ಯವಂತರಾದ ದಿಟ್ಟ ರಾಜರು. ಇತರ ಸ್ಥಳಗಳಲ್ಲಿ ಅಂದರೆ ಎಂಟನೆಯ ಹೆನ್ರಿಯ ಇಂಗ್ಲೆಂಡಿನಿಂದ ಮೂರನೆಯ ಐವಾನನ ಮಸ್ಕೊವೈಟ್ ರಾಜ್ಯದವರೆಗೆ ಒಂದು ಕೇಂದ್ರೀಕೃತ ರಾಜ್ಯಭಾರ ವ್ಯವಸ್ಥೆಯು ಬೆಳೆದುಬಂದಿತು. ನೂತನ ಚಕ್ರಾಧಿಪತ್ಯವು ಯೂರೋಪಿನಾದ್ಯಂತ ಬೀಸಿದ ಒಂದು ಭಾರೀ ಅಲೆ. ಅದಕ್ಕೆ ಒಂದು ನಿರ್ದಿಷ್ಟ ಕಾರಣವನ್ನು ಕೊಡಲು ಸಾಧ್ಯವಿರಲಿಲ್ಲ. ಅದು ಆರ್ಥಿಕ ಸಾಮಾಜಿಕ ಮತ್ತು ಜನಸಂಖ್ಯಾತ್ಮಕ ಕಾರಣಗಳ ಒಂದು ಮಿಶ್ರಣವಾಗಿತ್ತು. ಅದರಿಂದಾಗಿ ನೂತನ ಶಕ್ರಿಯ ಉದಯವಾಗಿತ್ತು. ಅದು ನೈಸರ್ಗಿಕವಾದ ಬೆಳವಣಿಗೆಯ ಆವರ್ತನದ ತಿರುವು ಎಂಬುದಾಗಿ ಕೆಲವು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಆದರೆ ೧೪ನೆಯ ಶತಮಾನದಲ್ಲಿ ಮತ್ತು ೧೫ನೆಯ ಶತಮಾನದ ಪ್ರಾರಂಭದಲ್ಲಿ ವ್ಯಕ್ತವಾದ ಆರ್ಥಿಕ ಕುಸಿತವು ಅದನ್ನು ತಿದ್ದುಪಡಿ ಮಾಡಿತು. ಈ ಸಂದರ್ಭದಲ್ಲೇ ಕ್ಷಾಮಗಳು ಮತ್ತು ಸಾಂಕ್ರಾಮಿಕಗಳ ಮೂಲಕ ಯೂರೋಪಿನ ಜನತೆ ತಲ್ಲಣಿಸಿತ್ತು. ಈಗ ನೂತನವಾದ ಬೆಳವಣಿಗೆ ಪ್ರಾರಂಭವಾಯಿತು.

ಸಹಜವಾಗಿಯೇ ಮೊತ್ತ ಮೊದಲು ಅಧಿಕವಾಗುತ್ತಿದ್ದ ಆಹಾರದ ಬೇಡಿಕೆಯನ್ನು ಪೂರೈಸಬೇಕಾಯಿತು. ಪ್ರಚಲಿತವಾಗಿದ್ದ ಉತ್ಪಾದನಾ ವಿಧಾನಗಳ ಜೊತೆಗೆ ನೂತನ ವಿಧಾನಗಳನ್ನು ಬಳಕೆಗೆ ತರಲಾಯಿತು. ಉಣ್ಣೆ, ಕಾಳು ಮೊದಲಾದ ವಾಣಿಜ್ಯ ಬೆಳೆಗಳ ಕಡೆಗೆ ಒಲವು ಹೆಚ್ಚಿದ್ದು, ಬಂಡವಾಳ ಹೂಡಿಕೆ ಮತ್ತು ಗುಲಾಮ ಚಾಕರಿಯ ರದ್ಧತಿ ಇವೆಲ್ಲವುಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಜಹಗೀರು ಪದ್ಧತಿಯು ಇನ್ನಷ್ಟು ಕುಂಠಿತವಾಯಿತು. ಆದರೆ ಪೂರ್ವ ಯೂರೋಪಿನಲ್ಲಿ ಹಿಂದೆ ಸ್ವತಂತ್ರರಾಗಿದ್ದ ರೈತರು ಈಗ ವಿಸ್ತಾರಗೊಳ್ಳುತ್ತಿದ್ದ ಪಾಶ್ಚಾತ್ಯ ಮಾರುಕಟ್ಟೆಗೆ ಆಹಾರ ಧಾನ್ಯಗಳನ್ನು ಪೂರೈಸುವ ಸಲುವಾಗಿ ದುಡಿಯ ತೊಡಗಿದರು. ಯುದ್ಧಸಾಮಗ್ರಿಗಳ ಉತ್ಪಾದನೆ ಅಧಿಕವಾಯಿತು. ಹೊಸದಾದ ಗಣಿಗಾರಿಕೆ ಮತ್ತು ಲೋಹ ಉದ್ಯಮಗಳ ಕಡೆಗೆ ಶ್ರೀಮಂತರು ಆಕರ್ಷಿತರಾದರು. ಮಧ್ಯಜರ್ಮನಿ, ಹಂಗರಿ ಮತ್ತು ಆಸ್ಟ್ರಿಯಗಳ ಕಬ್ಬಿಣ, ತಾಮ್ರ, ಚಿನ್ನ ಮತ್ತು ಬೆಳ್ಳಿ ನಿಕ್ಷೇಪಗಳು ಭಾರೀ ಪ್ರಮಾಣದ ಬಂಡವಾಳ ಹೂಡಿಕೆಗೆ ಅವಕಾಶವನ್ನು ಒದಗಿಸಿದುವು.

ಉತ್ತರ ಯುರೋಪಿನ ಮಾನವತಾವಾದ (ಹ್ಯೂಮನಿಸಂ)

ಸ್ಥೂಲವಾಗಿ ಹೇಳುವುದಾದರೆ ಉತ್ತರ ಯೂರೋಪಿನ ರಿನೈಸಾನ್ಸ್ ಕಡಿಮೆ ಪ್ರಮಾಣದಲ್ಲಿ ಸೆಕ್ಯುಲರ್ ಆಗಿತ್ತು. ಉತ್ತರ ಭಾಗದ ಮಾನವತಾವಾದವು ಮೂಲ ಸತ್ವದಲ್ಲಿ ಮತ್ತು ಉದ್ದೇಶದಲ್ಲಿ ಕ್ರಿಶ್ಚಿಯನ್ ಆಗಿತ್ತು. ಇದು ಇಟಾಲಿಯನ್ ಮಾನವತಾ ವಾದದ ಸೆಕ್ಯುಲರ್ ಮಾದರಿಗೆ ವಿರುದ್ಧವಾಗಿದ್ದದ್ದು. ಕ್ರಿಶ್ಚಿಯನ್ ಹ್ಯೂಮನಿಸಂ ಕೇವಲ ಒಂದು ವಿದ್ವತ್ ಕಾರ್ಯಕ್ರಮಕ್ಕಿಂತ ಮಿಗಿಲಾದುದಾಗಿತ್ತು. ತಳಹದಿಯಲ್ಲಿ ಅದು ಕ್ರಿಶ್ಚಿಯನ್ ಜೀವನ ವಿಧಾನ. ಮಾನವತಾವಾದವು ಭಾಷಾತ್ಮಕ, ಐತಿಹಾಸಿಕ ಮತ್ತ ನೈತಿಕ ಒಲವಿನಲ್ಲೇ ತಳವೂರಿ ನಿಂತಿತ್ತು. ಗಾಸ್ಪೆಲನ್ನು ಕ್ರೈಸ್ತ ಧಾರ್ಮಿಕತೆಯ ಕೇಂದ್ರವನ್ನಾಗಿ ಮಾಡಿ, ತಾವು ಜನಸಾಮಾನ್ಯರ ಅಗತ್ಯಗಳನ್ನು ಪೂರೈಸುತ್ತಿರುವುದಾಗಿ ಹ್ಯೂಮನಿಸ್ಟರು ನಂಬಿದ್ದರು. ಮತ ಸಿದ್ಧಾಂತವು ಸರಳವಾದ ನಂಬಿಕೆಯ ಅತಿ ಶುಷ್ಕ ಬೌದ್ದಿಕ ನಿರೂಪಣೆ ಎಂದು ಅವರು ಖಂಡಿಸಿದರು. ಒಬ್ಬ ಪಾದ್ರಿಯ ಮೂಲಕವಾಗಿ ನಡೆಸುವ ಮತೀಯ ಆಚರಣೆಯ ಮಟ್ಟಕ್ಕೆ ಧರ್ಮವು ಇಳಿಯುವುದನ್ನು ಅವರು ಖಂಡಿಸಿದರು. ಅವಶೇಷಗಳಿಗಾಗಿ ಹಂಬಲಿಸುವುದನ್ನು ಮತ್ತು ಅದರಿಂದ ತೃಪ್ತಿಪಡುವುದನ್ನು ಹ್ಯೂಮನಿಸ್ಟರು ತಮ್ಮ ಬರವಣಿಗೆಗಳ ಮೂಲಕವಾಗಿ ಖಂಡಿಸಿದರು. ಕ್ರಿಶ್ಚಿಯನ್ ಹ್ಯೂಮನಿಸ್ಟರ ಪ್ರಕಾರ ಕ್ರೈಸ್ತಧರ್ಮಗಳ ಮೂಲನಿಯಮ ಪ್ರೇಮತತ್ವ. ಕ್ರಿಸ್ತನಲ್ಲಿ ಕಂಡುಬಂದ ಮಾನವ ಪ್ರೇಮ. ಇದು ಗಾಸ್ಪೆಲ್‌ಗಳ ಮೂಲಕ ನಮಗೆ ತಿಳಿದುಬರುತ್ತದೆ. ಪ್ರೇಮ, ಶಾಂತಿ ಮತ್ತು ಸರಳತೆಗಳು ಒಬ್ಬ ಉತ್ತಮ ಕ್ರಿಶ್ಚಿಯನನ್ನು ರೂಪಿಸುತ್ತವೆ ಎಂದು ಅವರು ತಿಳಿದಿದ್ದರು.

ಡೆಸಿಡೇರಿಯಸ್ ಇರಾಸ್ಮಸ್‌ನು(ಸು. ೧೪೬೭-೧೫೩೬) ಉತ್ತರಭಾಗದ ರಿನೈಸಾನ್ಸಿನ ಕೇಂದ್ರವ್ಯಕ್ತಿ. ರಾಷ್ಟ್ರೀಯ ಗಡಿಗಳನ್ನು ದಾಟಿ ಪ್ರಖ್ಯಾತಿ ಪಡೆದ ಒಬ್ಬ ಶ್ರೇಷ್ಠ ವ್ಯಕ್ತಿ. ಉತ್ತಮ ಕ್ರಿಶ್ಚಿಯನನ ಈ ಪ್ರೇಮತತ್ವವನ್ನು ಅವನು ಮೃದುವಾದ ಹಾಸ್ಯದೊಂದಿಗೆ, ಕೆಲವೊಮ್ಮೆ ಚುಚ್ಚುವ ಹಾಸ್ಯದೊಂದಿಗೆ ಬೆರೆಸಿ ಅಭಿವ್ಯಕ್ತಿಸಿದನು. ೧೫೦೫ರಲ್ಲಿ ಅವರು ರಚಿಸಿದ ಪ್ರೈಸ್ ಆಫ್ ಫಾಲೀ ಎಂಬ ಕೃತಿಯು ಶುಷ್ಕ ಪಾಂಡಿತ್ಯವನ್ನೂ, ಮತ ಧರ್ಮ ಔನತ್ಯವನ್ನು ನಗೆಪಾಟಲು ಮಾಡಿತು. ಕಲೊಕೀಸ್(೧೫೧೮) ಎಂಬ ಕೃತಿಯಲ್ಲಿ ಅವನು ಸಮಕಾಲೀನ ಧಾರ್ಮಿಕ ಆಚರಣೆಗಳನ್ನು ವಿಡಂಬನಾತ್ಮಕ ಪರೀಕ್ಷೆಗೆ ಒಡ್ಡಿದನು. ಗಾಸ್ಪೆಲ್‌ಗಳ ಸರಳವಾದ ಬೋಧನೆಯನ್ನು ಮರೆತುದರ ಫಲವಾಗಿಯೇ ತನ್ನ ಕಾಲದ ಸಮಾಜವು ಭ್ರಷ್ಟಾಚಾರ ಮತ್ತು ಅನೈತಿಕತೆಗಳಲ್ಲಿ ಮುಳುಗಿ ಹೋಗಿದೆ ಎನ್ನುವುದು ಇರಾಸ್ಮಸನ ಕ್ರಿಶ್ಚಿಯನ್ ಮಾನವತಾವಾದಿ ನಂಬಿಕೆಗಳ ಸಾರಾಂಶವಾಗಿತ್ತು. ಶಿಕ್ಷಣ ಮತ್ತು ಸರಿಯಾದ ರೀತಿಯಲ್ಲಿ ಮನಮುಟ್ಟುವಂತೆ ಮಾತನಾಡಿದರೆ ಈ ಸತ್ಯವನ್ನು ಜನರು ಮನಗಾಣುತ್ತಾರೆ ಎಂದು ಅವನೂ ಅವನ ಅನುಯಾಯಿಗಳೂ ದೃಢವಾಗಿ ನಂಬಿದ್ದರು. ಸೈದ್ಧಾಂತಿಕ ವ್ಯತ್ಯಾಸಗಳಲ್ಲಿ ಅವರಿಗೆ ಆಸಕ್ತಿಯಿರದಿದ್ದರೂ ಅವರು ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳದಾದರು. ಏಕೆಂದರೆ ರಿಫಾರ್ಮೇಷನ್ ಕೂಡ ಆ ವೇಳೆಗೆ ಯೂರೋಪನ್ನು ಆವರಿಸಿತ್ತು. ಇರಾಸ್ಮಸ್ ಮತ್ತು ಅವನ ಅನುಚರರನ್ನು ಕ್ಯಾಥೋಲಿಕರು ಹಾಗೂ ಪ್ರಾಟಿಸ್ಟೆಂಟರಿಬ್ಬರೂ ಸಂದೇಹ ದೃಷ್ಟಿಯಿಂದಲೇ ನೋಡಿದರು.

ಜನಸಾಮಾನ್ಯರಲ್ಲಿ ಕ್ರಿಶ್ಚಿಯನ್ ಮಾನವತಾವಾದವು ಅನೇಕ ರೂಪಗಳಲ್ಲಿ ವ್ಯಕ್ತ ವಾಯಿತು. ಅವುಗಳಲ್ಲಿ ಅನುಭಾವ ಮುಖ್ಯವಾದದ್ದು. ೧೪ನೆಯ ಶತಮಾನದಲ್ಲಿ ಆನುಭಾವಿಕ ಉತ್ಸಾಹದ ಒಂದು ಅಲೆಯು ರ‌್ಹೈನ್ ನದಿಯುದ್ದಕ್ಖೂ ಪ್ರವಹಿಸಿ, ಸ್ತ್ರೀ ಪುರುಷನನ್ನು ದಿವ್ಯಶಕ್ತಿಯ ಉತ್ಕಟವಾದ ನೇರ ಅನುಭವದ ಆವೇಶಕ್ಕೆ ಒಳಪಡಿಸಿತು. ಮೇಸ್ಟರ್ ಎಕ್‌ಹಾರ್ಟ್ ಬೋಧಿಸಿದ ಜೀವನ ವಿಧಾನವನ್ನು ಅನುಸರಿಸುತ್ತಿದ್ದ ಡೊಮಿನಿಕನ್ ಪಂಥದವರ ಗುಂಪುಗಳಲ್ಲಿ ಅದು ಕೇಂದ್ರೀಕೃತವಾಯಿತು. ಕೆಲವರು ಡೊಮಿನಿಕನ್ ಪಂಥವನ್ನು ಸೇರಿಕೊಂಡರು. ಇತರರು ಒಟ್ಟಾಗಿ ‘‘ದೇವರ ಮಿತ್ರರು’’ ಎಂಬ ಹೆಸರಿನ ಗುಂಪಾದರು. ಈ ವಲಯದ ಅಜ್ಞಾತ ವ್ಯಕ್ತಿಯ ದಿ ಜರ್ಮನ್ ಥಿಯಾಲಜಿ ಎಂಬ ಕೃತಿಯು ಹೊರಬಂದಿತು. ಬೈಬಲ್ ಮತ್ತು ಸಂತ ಆಗಸ್ಟೈನನ ಬರವಣಿಗೆಗಳ ಹೊರತು ಬೇರಾವುದರಿಂದಲೂ ಪಡೆಯದಷ್ಟು ಮಾಹಿತಿಯನ್ನು ಮಾನವನ ಮತ್ತು ಭಗವಂತನ ಬಗೆಗೆ ಈ ಕೃತಿಯಿಂದ ತಾನು ಪಡೆದುಕೊಂಡುದಾಗಿ ಲೂಥರ್ ಹೇಳಿರುವುದು ಗಮನಾರ್ಹವಾಗಿದೆ.

ನೆದರ್‌ಲ್ಯಾಂಡ್ಸ್‌ನಲ್ಲಿ ಅನುಭಾವಿಕ ಪ್ರೇರಣೆ ಜಾಗ್ರತಗೊಂಡದ್ದು ಗೆರ್‌ಹಾರ್ಡ್ ಗ್ರೂಟ್‌ನಿಂದ. ಅವನು ಸನ್ಯಾಸಿಯೂ ಅಲ್ಲ, ಪಾದ್ರಿಯೂ ಅಲ್ಲ. ಆದರೆ ನಿಜವಾದ ಆಧ್ಯಾತ್ಮಿಕ ಸಂಯೋಗವು ನೈತಿಕ ಸದ್ವರ್ತನೆಯೊಂದಿಗೆ ಬೆರೆತಿರಬೇಕು ಎಂದು ಅವನು ಬೋಧಿಸಿದನು. ಅವನು ಮರಣಹೊಂದಿದಾಗ, ಅವನ ಅನುಯಾಯಿಗಳು ಬ್ರೆದರನ್ ಆಫ್ ದಿ ಕಾಮನ್ ಲೈಫ್ ಎಂಬ ತಂಡವನ್ನು ಕಟ್ಟಿಕೊಂಡರು. ಇದು ಜರ್ಮನಿಯ ಮೂಲಕ ಹರಡಿತು. ಅದಕ್ಕೆ ಮಠೀಯವಾದ ಬದಲಿಯೊಂದನ್ನು ಆರ್ಡರ್ ಆಫ್ ಕ್ಯಾನನ್ಸ್ ರೆಗ್ಯುಲರ್ ಆಫ್ ಸೇಂಟ್ ಅಗಸ್ಟೈನ್ ಎಂದು ಸ್ಥಾಪಿಸಲಾಯಿತು. ಇದನ್ನು ವಿಂಡ್‌ಶೀಮ್ ಕಾಂಗ್ರಿಗೇಶನ್ ಎಂದು ಕರೆಯಲಾಯಿತು. ಇರಾಸ್ಮಸ್ ಮತ್ತು ಲೂಥರ್ ಈ ಎರಡೂ ಪಂಥಗಳಿಂದ ಜನರು ಪ್ರಯೋಜನ ಪಡೆದರು. ಅತ್ಯಂತ ಪ್ರಭಾವಶಾಲಿಯಾದ ಧಾರ್ಮಿಕ ಗ್ರಂಥಗಳಲ್ಲಿ ಒಂದು ಪ್ರಕಟವಾದದ್ದು ಈ ಸಮಯದಲ್ಲೇ. ಅದು ಥಾಮಸ್ ಕೆಂಪಿಸ್‌ನದೆಂದು ಹೇಳಲಾದ ದಿ ಇಮಿಟೇಷನ್ ಆಫ್ ಕ್ರೈಸ್ಟ್ ಎನ್ನುವುದು.

ಇಮಿಟೇಷನ್ ಕೃತಿಯಿಂದಾಗಿ ತನ್ನ ಬದುಕನ್ನು ಬದಲಾಯಿಸಿಕೊಂಡ ಒಬ್ಬ ವ್ಯಕ್ತಿ ಇಗ್ನೇಷಿಯಸ್ ಲಯೋಲಾ. ಸ್ಪೆಯಿನಿನವನಾದ ಇವನು ಸೊಸೈಟಿ ಆಫ್ ಜೀಸಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದನು. ಸ್ಪೆಯಿನಿನ ಅನುಭಾವಿಗಳಲ್ಲಿ ಕೆಲವರು ಸಕ್ರಿಯ ಸುಧಾರಕ ರಾಗಿದ್ದರು. ಅವರು ವಿಪುಲವಾಗಿ ಬರೆಯುತ್ತಿದ್ದರು. ಸೇಂಟ್ ಜಾನ್ ಆಫ್ ದಿ ಕ್ರಾಸ್ ಎನ್ನುವವನ ಆನುಭಾವಿಕ ಕಾವ್ಯವು ಸ್ಪ್ಯಾನಿಷ್ ಸಾಹಿತ್ಯದ ಅಪೂರ್ವ ಕೃತಿಗಳಲ್ಲಿ ಒಂದಾಗಿದೆ.