‘‘ರಿನೈಸಾನ್ಸ್’’ ಅಥವಾ ಪುನರುಜ್ಜೀವನ ಎಂಬ ಪದವನ್ನು ಸಾಮಾನ್ಯವಾಗಿ ೧೪ನೆಯ ಶತಮಾನದ ಮಧ್ಯಭಾಗದಲ್ಲಿ ಇಟಲಿಯಲ್ಲಿ ಪ್ರಾರಂಭವಾಗಿ ಯುರೋಪಿನ ಉಳಿದ ಭಾಗಗಳಲ್ಲಿ ಹರಡಿಕೊಂಡ ಒಂದು ಸಾಂಸ್ಕೃತಿಕ ಚಳವಳಿಯನ್ನು ನಿರ್ದೇಶಿಸಲು ಉಪಯೋಗಿಸಲಾಗುತ್ತದೆ. ಮೂಲತಃ ಅದು ಫ್ರೆಂಚ್ ಪದ. ಅದರ ಅಕ್ಷರಶಃ ಅರ್ಥ ‘‘ಮರುಹುಟ್ಟು’’ ಎಂಬುದಾಗಿ. ವ್ಯಕ್ತಿಯ ಜೀವನೇತಿಹಾಸದ ಒಂದು ಅನುಭವದಿಂದ ತೊಡಗಿ, ಒಂದು ಯುಗದ ಸಮಗ್ರ ಸಂಸ್ಕೃತಿಯ ಲಕ್ಷಣದವರೆಗೆ ವ್ಯಾಪಕ ವೈವಿಧ್ಯಮಯ ಅಂಶಗಳಿಗೆ ಈ ಉಕ್ತಿಯನ್ನು ಅಲಂಕಾರಿಕವಾಗಿ ಅನ್ವಯಿಸಲಾಗಿದೆ. ಹೀಗೆ ಎರಡೆರಡೂ ರೀತಿಯಲ್ಲಿ ಬಳಸಿರುವುದು ಗೊಂದಲಕ್ಕೆಡೆಗೊಟ್ಟಿದೆ. ಏಕೆಂದರೆ, ಒಂದು ಕಾಲಾವಧಿಯಾಗಿ ರಿನೈಸಾನ್ಸ್‌ನಲ್ಲಿ ಸಂಭವಿಸಿದುದೆಲ್ಲವೂ ಒಂದು ಸಾಂಸ್ಕೃತಿಕ ಮುದ್ರೆಯನ್ನು ಹೊತ್ತುಕೊಂಡಿದೆ ಎಂದು ತಪ್ಪಾಗಿ ಭಾವಿಸಲಾಗಿದೆ. ಅದು ೧೪ನೆಯ ಶತಮಾನದಲ್ಲಿ ಫ್ಲಾರೆನ್ಸ್ ನಗರದಲ್ಲಿ ಪ್ರಾರಂಭವಾಯಿತು. ಆಮೇಲೆ ನಿಧಾನವಾಗಿ ಹರಡಿತು. ರಿನೈಸಾನ್ಸ್ ಪರಿಕಲ್ಪನೆಯ ಸುತ್ತಲೂ ಎಷ್ಟು ವ್ಯಾಪಕವಾದ ಭಿನ್ನಾಭಿಪ್ರಾಯಗಳು ಬೆಳೆದು ನಿಂತಿವೆಯೆಂದರೆ, ಕೆಲವು ಸಾರಿ ಅವು ವಿದ್ವಾಂಸರ ಗಮನವನ್ನು ಐತಿಹಾಸಿಕ ವಾಸ್ತವಾಂಶಗಳಿಂದ ಬೇರೆ ಕಡೆಗೆ ಸೆಳೆದು ಬಿಡುವ ಅಪಾಯವಿದೆ. ರಿನೈಸಾನ್ಸ್ ಪರಿಕಲ್ಪನೆಯು ವಿಶೇಷವಾಗಿ ಬಲವಾದ ವಿರೋಧವನ್ನು ಕೆರಳಿಸಿದೆ. ಏಕೆಂದರೆ, ಸಂಸ್ಕೃತಿಯನ್ನು ಜಾಗ್ರತಗೊಳಿಸಬೇಕಾಗಿ ಬಂದ ಮಧ್ಯಯುಗವನ್ನು ಅದು ಹೀನೈಸುತ್ತದೆ.

ಪರಿಕಲ್ಪನೆಯ ಇತಿಹಾಸ

ಪುನರ್ಜನ್ಮದ ವಿಚಾರವೇನೂ ಹೊಸದಲ್ಲ. ಏಕೆಂದರೆ ಅದು ಸಾಂಪ್ರದಾಯಿಕ (ಕ್ಲಾಸಿಕಲ್) ಮತ್ತು ಕ್ರಿಶ್ಚಿಯನ್ ಸಾಹಿತ್ಯಕ ಮೂಲಗಳಲ್ಲಿ ಸಾಮಾನ್ಯವಾಗಿತ್ತು. ಗ್ರೀಕ್ ಮತ್ತು ರೋಮನ್ ಪುರಾಣ ಮತ್ತು ಧರ್ಮದಲ್ಲಿ, ವ್ಯಕ್ತಿಗಳಲ್ಲಿ ಹಠಾತ್ತನೆ ಮತ್ತು ಪವಾಡ ಸದೃಶವಾಗಿ ಪುನರುಜ್ಜೀವಿಸುವ ಅನೇಕಾನೇಕ ಸಂದರ್ಭಗಳು ಕಂಡುಬರುತ್ತವೆ. ಇನ್ನೂ ವ್ಯಾಪಕ ಪ್ರಮಾಣದಲ್ಲಿ ಇಡೀ ಸಮೂಹವನ್ನೇ ಹೊಸದುಗೊಳಿಸಬಹುದಾಗಿತ್ತು. ಮರಳಿ ಚಾಲ್ತಿಗೆ ತರಬಹುದಾಗಿದ್ದಿತು. ಕ್ರೈಸ್ತ ಧರ್ಮದೊಂದಿಗೆ ಈ ವಿಚಾರಗಳು ಆಧ್ಯಾತ್ಮಿಕ ಒತ್ತಡವನ್ನು ಪಡೆದುವು. ಇದು ಗಾಸ್ಪೆಲ್‌ಗಳ ಕಾಲದಿಂದ ಕ್ರಿಸ್ತನ ಆತ್ಮದ ಪುನರ್ಜನ್ಮವನ್ನು ಸೂಚಿಸಿತು. ಹೀಗೆ ಪ್ರಾಚೀನತೆಯು ಮಧ್ಯಯುಗಕ್ಕೆ ಒಂದು ಜಾತ್ಯತೀತ ಸಂಪ್ರದಾಯವನ್ನು ಬಳುವಳಿಯಾಗಿ ನೀಡಿತು. ಹಾಗೆಯೇ ಇನ್ನೊಂದು ಪರಂಪರೆ, ವ್ಯಕ್ತಿಯ ಮತ್ತು ಸಮಾಜದ ಅವತರಣ ಮತ್ತು ಪುನರುತ್ಥಾನ ಇವುಗಳನ್ನು ಕ್ರೈಸ್ತಧರ್ಮದಿಂದ ಪಡೆದುಕೊಂಡಿತು.

ಅಂತೂ ೧೪, ೧೫ ಮತ್ತು ೧೬ನೆಯ ಶತಮಾನಗಳಲ್ಲಿ ಸಂಸ್ಕೃತಿಯ ಪುನಶ್ಚೇತನದ ಪರಿಕಲ್ಪನೆ ಪ್ರಾರಂಭವಾಯಿತು. ಇಟಲಿಯ ವಿದ್ವಾಂಸರು ಮತ್ತು ಬರಹಗಾರರನ್ನು ಮಾನವತಾವಾದಿಗಳು ಎಂದು ಕರೆಯಲಾಗಿತ್ತು. ಮಾನವನಿಗೆ ಸಂಬಂಧಪಟ್ಟ ಎಲ್ಲವನ್ನೂ, ಅಂದರೆ ಮಾನವಿಕ ವಿಷಯಗಳ ಅಧ್ಯಯನದಲ್ಲಿ ಅವರು ತೊಡಗಿದ್ದರಿಂದ ಅವರನ್ನು ಮಾನವತಾವಾದಿಗಳೆಂದು ಕರೆಯಲಾಯಿತು. ಪ್ರಾಚೀನ ವಿಚಾರಗಳನ್ನು ೧೬ನೆಯ ಶತಮಾನದಲ್ಲಿ ಪುನರ್ ಸಂಶೋಧಿಸಲಾಯಿತು ಮಾತ್ರವಲ್ಲದೆ, ಗ್ರೀಕರಿಗಾಗಲಿ ರೋಮನರಿ ಗಾಗಲಿ ತಿಳಿದಿರದಿದ್ದ ಅನೇಕ ಸಾಧನೆಗಳು ಈ ಯುಗಕ್ಕೆ ಹೆಚ್ಚಿನ ಕಾಂತಿಯನ್ನು ಒದಗಿಸಿದವು. ನೂತನ ಭೂಪ್ರದೇಶಗಳನ್ನೂ ಜನರನ್ನೂ ಕಂಡುಹಿಡಿಯಲಾಯಿತು. ಮುದ್ರಣ ಮತ್ತು ಸಿಡಿಮದ್ದುಗಳಂತಹ ಆವಿಷ್ಕಾರಗಳು ಘಟಿಸಿದುವು. ಕ್ರೈಸ್ತ ಧರ್ಮಶೀಲತೆಗೆ ಮತ್ತು ಕ್ರೈಸ್ತ ಧರ್ಮದ ವಿಜಯಗಳಿಗೆ ಹೆಚ್ಚಿನ ಅವಕಾಶಗಳು ದೊರೆತುದಕ್ಕೆ ಆಧಾರಗಳಿರುವಂತೆ ತೋರುತ್ತದೆ.

೧೪ ಮತ್ತು ೧೫ನೆಯ ಶತಮಾನದ ಇಟಾಲಿಯನ್ ಪುನರುಜ್ಜೀವನದ ಕಾಲದಲ್ಲಿ ಇತಿಹಾಸ ಮತ್ತು ಐತಿಹಾಸಿಕ ಬೆಳವಣಿಗೆಯ ಒಂದು ನೂತನ ಪರಿಕಲ್ಪನೆಯು ಉದಿಸಿತು. ಪೆಟ್ರಾರ್ಕನಿಗೆ ರೋಮ್ ಇನ್ನೂ ಆದರ್ಶವಾಗಿದ್ದಿತು. ‘‘ಇತಿಹಾಸವೆನ್ನುವುದು ರೋಮಿನ ಪ್ರಶಂಸೆಯಲ್ಲದೆ ಬೇರೆ ಇನ್ನೇನು?’’ ಎಂದು ಅವನು ಕೇಳಿದನು. ಆದರೆ ರೋಮನ್ ಸಾಮ್ರಾಜ್ಯವು ಅಸ್ತವ್ಯಸ್ತವಾಗಿತ್ತು, ಶಿಥಿಲವಾಗಿತ್ತು, ಬರ್ಬರರ ಕೈಗೆ ಸಿಕ್ಕಿ ಹೆಚ್ಚು ಕಡಿಮೆ ಕ್ಷೀಣಿಸಿಹೋಗಿತ್ತು. ಅನಂತರ ಬಂದದ್ದು ಕತ್ತಲಯುಗ. ಈ ಶೋಚನೀಯ ಪರಿಸ್ಥಿತಿಯು ಬದಲಾವಣೆಗೊಳ್ಳದಿದ್ದರೂ ಪೆಟ್ರಾರ್ಕ್ ಆಶಾವಾದಿಯಾಗಿದ್ದನು. ಪೆಟ್ರಾರ್ಕ್‌ನ ಸಮಕಾಲೀನನಾಗಿದ್ದ ಬೋಕಾಸಿಯೋ, ಡಾಂಟೆಯ ಉದಯದಿಂದಾಗಿ ಬೆಳಕಿನ ಮೊದಲ ಕಿರಣವನ್ನು ಕಂಡನು. ೧೫ನೆಯ ಶತಮಾನದ ವೇಳೆಗೆ, ರೋಮಿನ ಪತನದ ಬೆನ್ನಹಿಂದೆಯೇ ಕಾಣಿಸಿಕೊಂಡ ಸುದೀರ್ಘ ಕತ್ತಲಯುಗದ ಸ್ಪಷ್ಟ ಚಿತ್ರವು ಮೂಡಿತ್ತು. ಅದರೊಳಗಿನಿಂದಲೇ, ಪ್ರಜ್ಞಾಪೂರ್ವಕವಾಗಿ ಪ್ರಾಚೀನರ ವಿಚಾರಗಳು ಮತ್ತು ಮೌಲ್ಯಗಳನ್ನೇ ಮತ್ತೆ ಹಿಡಿಯುವ ಮೂಲಕ ವರ್ತಮಾನ ಸ್ಥಿತಿಯು ಉದಯಿಸಿತು.

ಬರ್ಕ್‌ಹಾರ್ಟ್, ಮಿಚೆಲ್ ಮತ್ತು ಪುನರುಜ್ಜೀವನದ ಮೂಲ೧೯ನೆಯ ಶತಮಾನದ ದೃಷ್ಟಿಗಳು

೧೪ ಮತ್ತು ೧೫ನೆಯ ಶತಮಾನಗಳಲ್ಲಿ ನಡೆದ ಸಂಸ್ಕೃತಿಯ ಪುನರುಜ್ಜೀವನದ ಈ ಪರಿಕಲ್ಪನೆಯು ತಿಳಿವಳಿಕೆಯ ಕಾಲದಲ್ಲಿ ನೂತನ ಆಸಕ್ತಿಯನ್ನು ಉತ್ಪತ್ತಿ ಮಾಡಿತು. ಆದರೆ ನಿರ್ದಿಷ್ಟ ಕಾಲಾವಧಿಯಾಗಿ ರಿನೈಸಾನ್ಸ್ ಬಗೆಗೆ ಇನ್ನು ಕೆಲವೇ ಸೂಚನೆಗಳು ಕಂಡುಬಂದಿದ್ದುವು. ಪ್ರಾಚೀನತೆಯ ಪುನರುಜ್ಜೀವನದಿಂದಾಗಿ ಪಾಶ್ಚಾತ್ಯ ನಾಗರಿಕತೆಗೆ ಇತ್ಯಾತ್ಮಕವಾದ ಕೊಡುಗೆಯು ಸಂದಿದೆ ಎಂಬ ವಿಚಾರವು ಹರಳುಗಟ್ಟಿದ್ದು ೧೯ನೆಯ ಶತಮಾನದಲ್ಲಿ ಅಷ್ಟೆ. ಬೌದ್ದಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಶಾಲ ದೃಷ್ಟಿಗಳು, ಕಲೆ ಮತ್ತು ಸಾಹಿತ್ಯ ಇತಿಹಾಸಕಾರರಿಗೆ, ಅವರ ಕ್ಷೇತ್ರಗಳಿಗೂ ಸಮಗ್ರ ಇಟಾಲಿಯನ್ ಸಮಾಜಕ್ಕೂ ಇದ್ದಿರಬಹುದಾದ ಸಂಬಂಧಗಳನ್ನು ಕುರಿತು ಮನನ ಮಾಡಲು ಅವಕಾಶವನ್ನು ಕಲ್ಪಿಸಿದುವು. ಜಾನ್ ರಸ್ಕಿನ್ ಅಂತಹ ವಿಮರ್ಶಕರು, ಪುನರುಜ್ಜೀವನ ಕಾಲವನ್ನು ಕಲೆಯ ಇತಿಹಾಸದಲ್ಲಿ ಒಂದು ನಿರ್ದಿಷ್ಟವಾದ ಖಚಿತ ಕಾಲಾವಧಿ ಎಂದು ವರ್ಣಿಸಿದರು. ಈ ಮಧ್ಯೆ ಜರ್ಮನಿಯಲ್ಲಿ, ಮಾನವತಾವಾದ ಎಂಬ ಪದವನ್ನು, ಒಂದು ಬೌದ್ದಿಕ ಚಳವಳಿಯನ್ನು ಸೂಚಿಸುವಂತೆ ಬಳಸಲಾಯಿತು. ಅದರ ಪ್ರಾಮುಖ್ಯವು ಕ್ಲಾಸಿಕಲ್ ಶೈಲಿಯ ಮರುಕಳಿಕೆ ಎನ್ನುವುದಕ್ಕಿಂತಲೂ ಬಹಳ ಮುಂದೆ ಹೋಯಿತು. ‘‘ದಿ ರಿವೈನಲ್ ಆಫ್ ಕ್ಲಾಸಿಕಲ್ ಆ್ಯಂಟಿಕ್ವಿಟಿ’’(೧೮೫೯) ಎಂಬ ಜಾರ್ಗ್‌ವಾಯ್ಟನ ಕೃತಿಯು ಹ್ಯೂಮನಿಸ್ಟರನ್ನು, ವ್ಯಕ್ತಿ ವಿಶಿಷ್ಟತೆಯ ಲಕ್ಷಣವುಳ್ಳ ಒಂದು ನೂತನ ಸಾಹಿತ್ಯಕ ಸಂಸ್ಕೃತಿಯ ಪ್ರತಿನಿಧಿಗಳು ಎಂಬುದಾಗಿ ಪರಿಗಣಿಸಿತು. ವಾಯ್ಟನ ಕೃತಿಯು ಒಂದು ಮಹತ್ವಪೂರ್ಣವಾದ ಅಧ್ಯಯನವಾದರೂ ಅದು ರಿನೈಸಾನ್ಸ್ ಪರಿಕಲ್ಪನೆಯನ್ನು ಹಿಂದಕ್ಕೆ ಒಯ್ದಿತು. ಏಕೆಂದರೆ, ಅದು ಹ್ಯೂಮನಿಸ್ಟರ ಹಳೆಯ ಪರಂಪರೆಯಾಗಿತ್ತು. ತಮ್ಮ ಸಮಾಜದಲ್ಲಿರುವ ಇತ್ಯಾತ್ಮಕವಾದ ಸಮಸ್ತವನ್ನೂ ಅವರು ಸಾಹಿತ್ಯದ ಪುನಶ್ಚೇತನಕ್ಕೆ ಆರೋಪಿಸಿದ್ದರು. ಅದಕ್ಕೆ ಅವರೇ ಹೊಣೆಗಾರರಾಗಿದ್ದರು. ಈ ದಿಸೆಯಲ್ಲಿ ದಾರಿಹಾಕಿ ಕೊಟ್ಟವನು. ಜಿ.ಡಬ್ಲ್ಯೂ ಎಫ್. ಹೆಗಲ್. ಅವನು ಕ್ಲಾಸಿಕಲ್ ಪುನಶ್ವೇತನವನ್ನು ದರ್ಶಿಸಿ, ಅದೊಂದು ನೂತನವಾದ ಉದಾರ ಐತಿಹಾಸಿಕ ಯುಗದ ಅಭಿವ್ಯಕ್ತಿ ಎಂಬಂತೆ ಕಲ್ಪಿಸಿಕೊಂಡನು.

ರಿನೈಸಾನ್ಸ್‌ನ್ನು ಪ್ರಾಚೀನ ಜಗತ್ತಿನ ಮೌಲ್ಯಗಳ ಪುನರ್ ಜಾಗೃತಿ ಅಥವಾ ಮರುಜನ್ಮ ಎಂಬಂತೆ ನೋಡಿದ್ದೇ ಕ್ಲಾಸಿಕಲ್ ಆಯಿತು; ವಿಶೇಷವಾಗಿ, ಫ್ರೆಂಚ್ ಇತಿಹಾಸಕಾರ ಜೂಲ್ಸ್ ಮಿಚೆಲೆ ಮತ್ತು ಸ್ವಿಸ್ ಜಾಕೊಟ್ ಬರ್ಕ್‌ಹಾರ್ಟ್ ಇವರು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅದನ್ನು ರೂಪಿಸಿದ ಮೇಲೆ ಹಿಸ್ಟರಿ ಆಫ್ ಫ್ರಾನ್ಸ್ ಎಂಬ ತನ್ನ ಕೃತಿಯ ರಿನೈಸಾನ್ಸ್ ಎಂಬ ಏಳನೆಯ ಸಂಪುಟದಲ್ಲಿ ಮಿಚಿಲೆಯು ಪುನರುಜ್ಜೀವನವನ್ನು ಕುರಿತ ಆಧುನಿಕ ದೃಷ್ಟಿಯಲ್ಲಿ ಅಡಗಿರುವ ಬಹುತೇಕ ಅಂಶಗಳನ್ನು ಪ್ರಸ್ತಾಪಿಸಿದನು. ಅದು ನಿಸರ್ಗವನ್ನೂ ವಿಜ್ಞಾನವನ್ನೂ ನಿಷೇಧಿಸಿದ್ದ, ಮನುಷ್ಯನು ತನ್ನ ಸ್ವಾತಂತ್ರ್ಯವನ್ನು ತೊರೆದುಕೊಂಡಿದ್ದ ಮಧ್ಯಯುಗಕ್ಕೆ ವಿರುದ್ಧವಾದದ್ದು ಎಂದು ಅವನು ಹೇಳಿದನು. ಆಮೇಲೆ ಕೊಲಂಬಸ್‌ನಿಂದ ಕೋಪರ್ನಿಕಸ್ ಮತ್ತು ಗೆಲಿಲಿಯೋವರೆಗೆ ಮನುಷ್ಯನು ಭೂಮಿಯಿಂದ ಸ್ವರ್ಗದವರೆಗಿನ ಸಂಶೋಧನೆ ಮಾಡಿ ಮರಳಿ ತನ್ನಲ್ಲಿಗೇ ಹಿಂದಿರುಗಿದನು. ತನ್ನದೇ ಆತ್ಮವನ್ನು ಸಂಶೋಧಿಸುವುದರಲ್ಲಿ ಉದ್ಯುಕ್ತನಾದನು. ಮಿಚೆಲೆಗೆ ಮನುಷ್ಯನ ನೈತಿಕ ಸ್ವರೂಪವನ್ನು ಒಳಹೊಕ್ಕ ಮಾರ್ಟಿನ್ ಲೂಥರ್ ಮತ್ತು ಜಾನ್ ಕ್ಯಾಲ್ವಿನ್ ಹೇಗೆ ರಿನೈಸಾನ್ಸ್‌ಗೆ ಸೇರಿದ ವ್ಯಕ್ತಿಗಳೋ ಹಾಗೆಯೇ ನಿಸರ್ಗವನ್ನೂ ವಿಚಾರವನ್ನೂ ಕಲೆಯೊಂದಿಗೆ ಹೊಂದಾಣಿಕೆಗೊಳಿಸಿದ ಫಿಲಿಪೋ ಬುನೆಲೆಸ್ಟಿ ಮತ್ತು ಲಿಯೊನಾರ್ಡೊ ಡ ವಿಂಚಿಯಾಗಲಿ ಪ್ರಾಚೀನತೆಯ ಜ್ಞಾನವನ್ನು ಮರಳಿ ಉಜ್ಜೀವಿಸಿದ ಮಾನವತಾವಾದಿಗಳಾಗಲಿ ರಿನೈಸಾನ್ಸ್‌ಗೆ ಸೇರಿದವರೇ. ಒಂದು ಸುಪ್ರಸಿದ್ಧ ಉಕ್ತಿಯಲ್ಲಿ ಅವನು ರಿನೈಸಾನ್ಸನ್ನು ಕುರಿತು ಹೀಗೆ ಹೇಳಿದನು; ಅದು ‘‘….ಜಗತ್ತಿನ ಸಂಶೋಧನೆ ಮತ್ತು ಮಾನವನ ಸಂಶೋಧನೆ’’. ರಿನೈಸಾನ್ಸ್ ಎನ್ನುವುದು ಕೇವಲ ಒಂದು ಸಾಂಸ್ಕೃತಿಕ ಪುನರುಜ್ಜೀವನವಾಗದೆ, ಅದಕ್ಕಿಂತ ಹೆಚ್ಚಿನದು ಎಂದು ಹೇಳಿದ ಮೊತ್ತಮೊದಲನೆಯ ಇತಿಹಾಸಕಾರ ಮಿಚಿಲೆ. ವಾಸ್ತವವಾಗಿ ಅದು ಆಧುನಿಕ ಜಗತ್ತಿನ ಪ್ರಾರಂಭವನ್ನು ಕಂಡ ಐತಿಹಾಸಿಕ ಕಾಲವಾಯಿತು. ಮಿಚೆಲೆಯು ತನ್ನ ಗಮನವನ್ನು ಕೇಂದ್ರೀಕರಿಸಿದ್ದು ೧೫ನೆಯ ಶತಮಾನದ ಇಟಲಿಯಿಂದ ೧೬ನೆಯ ಶತಮಾನದ ಫ್ರಾನ್ಸಿನವರೆಗೆ. ೧೯ನೆಯ ಶತಮಾನದ ಉದಾರವಾದೀ ಫ್ರೆಂಚ್ ರಾಷ್ಟ್ರೀಯತೆ ಯಿಂದ ಸಮಗ್ರ ಪ್ರಭಾವಕ್ಕೆ ಒಳಪಟ್ಟ ಮಿಚೆಲೆಯು, ಯೂರೋಪನ್ನು ಮಧ್ಯಯುಗದ ಮಠೀಯ ಮತ್ತು ಊಳಿಗ ಬಂಧನದಿಂದ ವಿಮೋಚನೆಗೊಳಿಸಿದ ಫ್ರೆಂಚ್ ರಾಷ್ಟ್ರವನ್ನು ಚಿತ್ರಿಸಿದನು, ಅದು ತಾನೂ ತೊಡರಿಕೊಂಡಿದ್ದ ಸಮಕಾಲೀನ ಹೋರಾಟದ ಉಲ್ಲೇಖ ವಾಗಿತ್ತು.

ಬರ್ಕ್‌ಹಾರ್ಟನು ರಿನೈಸಾನ್ಸನ್ನು ಕುರಿತು ತಳೆದ ದೃಷ್ಟಿಯು ಮೂಲಭೂತವಾಗಿ ಮಿಚಿಲೆಯದಕ್ಕಿಂತ ಭಿನ್ನವಾಗಿತ್ತು. ಅದು ಶುದ್ಧಾಂಗವಾಗಿ ಇಟಾಲಿಯನ್ ಆಗಿತ್ತು. ಆ ಮೂಲಕ ಅವನು ಹಳೆಯ ಸಂಪ್ರದಾಯಕ್ಕೆ ಹಿಂದಿರುಗಿದನು. ಅವನಿಗೆ ಮಧ್ಯಯುಗವನ್ನು ಕುರಿತು ವಿರೋಧವಿರಲಿಲ್ಲ. ರಿನೈಸಾನ್ಸ್ ಅವನ ಪ್ರಕಾರ ಮಧ್ಯಯುಗವೂ ಅಲ್ಲ, ಆಧುನಿಕ ಯುಗದ ಪ್ರಾರಂಭವೂ ಅಲ್ಲ, ಅದು ೧೪ನೆಯ ಶತಮಾನದಲ್ಲಿ ಪ್ರಾರಂಭವಾಗಿ ೧೬ನೆಯ ಶತಮಾನದಲ್ಲಿ ಕೊನೆಗೊಂಡ ನಿರ್ದಿಷ್ಟ ಕಾಲಾವಧಿ. ಅವನ ಅಮೋಘವಾದ ನಿರ್ಬಂಧ ‘ಡೀ ಕುಲ್ಟರ್ ಡೆರ್ ರಿನೈಸಾನ್ಸ್ ಇಮನ್ ಇಟಾಲಿಯೆನ್’’ (ದಿ ಸಿವಿಲೈಸೇಷನ್ ಆಫ್ ದಿ ರಿನೈಸಾನ್ಸ್ ಇನ್ ಇಟಲಿ-೧೮೬೦). ಈ ನೂತನ ನಾಗರಿಕತೆಯ ವಿಭಿನ್ನ ಮಾನಸಿಕ ಲಕ್ಷಣಗಳಲ್ಲಿ ಅವನಿಗೆ ಆಸಕ್ತಿಯಿದ್ದರೂ, ಅದರ ಎಲ್ಲಾ ಮುಖಗಳ ಆಂತರ್ಯದಲ್ಲಿ ಒಂದು ಏಕತೆಯ ಸೂತ್ರವು ಹಾಯ್ದಿರುವುದನ್ನು ಗುರುತಿಸುವನು. ವ್ಯಕ್ತಿ ವಿಶಿಷ್ಟತೆಯ ತತ್ವದ ತನ್ನ ವ್ಯಾಖ್ಯಾನದ ಸುತ್ತಲೂ ಉಜ್ವಲ ನಾಗರಿಕತೆಯ ತನ್ನ ಚಿತ್ರವನ್ನು ಕಟ್ಟಿದನು. ಅವನ ವಿವರಣೆಯ ಪ್ರಕಾರ, ೧೪ನೆಯ ಶತಮಾನದ ಇಟಲಿಯಲ್ಲಿನ ರಾಜಕೀಯ ಪರಿಸ್ಥಿತಿಯು ನೂತನ ಧೋರಣೆಯ ಬೆಳವಣಿಗೆಗೆ ತಕ್ಕ ಪರಿಸ್ಥಿತಿಯನ್ನು ಒದಗಿಸಿತ್ತು. ಚಕ್ರವರ್ತಿಗಳಿಗೂ ಪೋಪರಿಗೂ ನಡುವೆ ನಡೆದ ಬಲವಾದ ಹೋರಾಟಗಳು ಅವರನ್ನು ಸಂಪೂರ್ಣವಾಗಿ ಒಣಗಿಸಿ, ಬರಿದುಮಾಡಿಬಿಟ್ಟುವು, ಬಳಲಿಸಿದುವು. ಇಟಲಿ ಒಂದು ಹೊಸ ಪರಿಸ್ಥಿತಿಗೆ ಸಿಲುಕಿತು. ಫ್ಯೂಡಲಿಸಂ ಪಶ್ಚಿಮದಲ್ಲಿ ಬದಲಾವಣೆ ಹೊಂದಿ ಚಕ್ರಾಧಿಪತ್ಯಗಳಾಗಿ ರೂಪುಗೊಳ್ಳುತ್ತಿದ್ದಿತು. ಇಟಲಿಯೂ ಅನೇಕ ಸ್ವತಂತ್ರ ದೇಶಗಳೊಂದಿಗೆ ಒಂದಾಯಿತು. ಅವುಗಳಲ್ಲಿ ಕೆಲವು ಹಳೆಯವು, ಕೆಲವು ಈಚಿನವು, ಕೆಲವು ನಿರಂಕುಶಾಧಿಕಾರ ದಲ್ಲಿದ್ದವು, ಕೆಲವು ಗಣರಾಜ್ಯಗಳು, ಆದರೂ ಪ್ರತಿಯೊಂದೂ ಸ್ವತಂತ್ರವಾಗಿತ್ತು, ಅದರ ಮೇಲೆ ದಬ್ಬಾಳಿಕೆ ನಡೆಸುವ ಇನ್ನೊಂದು ಪ್ರಭುತ್ವವಿರಲಿಲ್ಲ. ಅಧಿಕಾರಕ್ಕೆ ಮಾತ್ರವೇ ಬೆಲೆಯಿದ್ದ ಈ ದೇಶಗಳಲ್ಲಿ ಬರ್ಕ್‌ಹಾರ್ಟನು ‘‘ಯೂರೋಪಿನ ಆಧುನಿಕ ರಾಜಕೀಯ ಸತ್ವವನ್ನು’’ ಕಂಡನು. ಅದು ‘‘ಕಡಿವಾಣವೇ ಇಲ್ಲದ ಅಹಂಕಾರದ ಕೆಟ್ಟ ಲಕ್ಷಣಗಳನ್ನು’’ ಪ್ರದರ್ಶಿಸುತ್ತಿದ್ದಿತು. ಆದರೆ ‘‘…..ರಾಜ್ಯವನ್ನು ಒಂದು ಕಲಾಕೃತಿಯಾಗಿ ರೂಪಿಸುತ್ತಿದ್ದಿತು.’’ ಇಲ್ಲಿ ಅಧಿಕಾರವು ವ್ಯಕ್ತಿಗತ ಸಾಮರ್ಥ್ಯದ ಒಂದು ಕಾರ್ಯವಾಗಿದ್ದಿತೇ ಹೊರತು ಶಾಸನ ಬದ್ಧವಾದ ಅಧಿಕಾರವಾಗಿರಲಿಲ್ಲ. ರಾಜಕೀಯ ರೂಪಗಳು ಶಾಸನ ಮತ್ತು ಸಂಪ್ರದಾಯ ಗಳಿಂದ ಮೂಡಿಬಂದಿರದೆ, ವ್ಯಕ್ತಿಗಳು ಆ ಸಂದರ್ಭಕ್ಕೆ ತಕ್ಕಂತೆ ರೂಪಿಸಿದವಾಗಿದ್ದುವು. ರಾಜ್ಯವು ಚಿಂತನೆಯ ಮತ್ತು ಲೆಕ್ಕಾಚಾರದ ಫಲವಾಗಿದ್ದ ಸಮಯದಲ್ಲಿ ರಚಿತವಾಗಿದ್ದವು. ಬರ್ಕ್‌ಹಾರ್ಟ್ ಬರೆದನು:

ರಿನೈಸಾನ್ಸಿನ ಏಕಮಾತ್ರ ಹಾಗೂ ಅತಿಮುಖ್ಯ ಲಕ್ಷಣವು ಈ ರಾಜ್ಯಗಳ ಲಕ್ಷಣಗಳಲ್ಲಿ ಅಂತರ್ಗತವಾಗಿದೆ. ಪುನರುಜ್ಜೀವನದ ಮುಖ್ಯ ಲಕ್ಷಣ ವ್ಯಕ್ತಿಗತತ್ವ. ವ್ಯಕ್ತಿಯ ವಿಕಾಸದಿಂದಾಗಿ…. ಜಗತ್ತಿನ ಸಂಶೋಧನೆ ಹಾಗೂ ಮಾನವನ ಸಂಶೋಧನೆಗಳು ಸಾಧ್ಯವಾದವು.

ಮಿಚೆಲ್ ಬೌದ್ದಿಕ ಸಾಧನೆಯ ಮೇಲೆ ಒತ್ತುಕೊಟ್ಟರೆ ಬರ್ಕ್‌ಹಾರ್ಟನು ಅದಕ್ಕೆ ಒಂದು ಸಾಮಾಜಿಕ ಮತ್ತು ರಾಜಕೀಯ ರುಚಿಯನ್ನು ಸೇರಿಸಿದನು. ಬರ್ಕ್‌ಹಾರ್ಟನಿಗೆ ಅದು ಪ್ರಾಚೀನತೆಯ ಪುನರುತ್ಥಾನ ಮಾತ್ರವಾಗಿರಲಿಲ್ಲ. ಇಟಾಲಿಯನ್ ಜನತೆಯ ಪ್ರತಿಭೆಯೊಂದಿಗೆ ಸಮ್ಮಿಲನ. ಅದು ಪಾಶ್ಚಾತ್ಯ ಪ್ರಪಂಚದ ವಿಜಯವನ್ನು ಸಾಧಿಸಿದೆ. ಮಿಚೆಲೆಯ ರಾಷ್ಟ್ರೀಯತೆಯನ್ನಾಗಲಿ, ಮಧ್ಯಯುಗದ ಬಗೆಗೆ ವಿರೋಧವನ್ನಾಗಲಿ ಬೆಳೆಸಿಕೊಳ್ಳದೆ ಬರ್ಕ್‌ಹಾರ್ಟನು ತನ್ನದೇ ರಾಷ್ಟ್ರೀಯತಾ ಪ್ರವೃತ್ತಿಗಳನ್ನು ಮಂಡಿಸಿದನು.

ಇಪ್ಪತ್ತನೆಯ ಶತಮಾನದ ದೃಷ್ಟಿಕೋನಗಳು

ಮಧ್ಯಯುಗವೆಂದರೆ ಕತ್ತಲ ಮತ್ತು ಬರ್ಬರ ಯುಗ ಎಂಬ ದೃಷ್ಟಿ ಬಹಳ ಕಾಲ ಮುಂದುವರಿಯಿತು. ಮಧ್ಯಯುಗದ ಸಾಧನೆಗಳ ವಿಷಯವಾಗಿ ಉತ್ತಮ ತಿಳುವಳಿಕೆ, ಉತ್ತಮವಾದ ಅರಿವು ದೊರಕಿ ಈ ದೃಷ್ಟಿಯು ಈಗ ಬದಲಾಗಿದೆ. ಇತಿಹಾಸದ ನಿರ್ದಿಷ್ಟ ಕ್ಷೇತ್ರವನ್ನು ಅವಲಂಬಿಸಿ ಕೆಲವು ಇತಿಹಾಸಕಾರರು ಬೇರೆ ಬೇರೆ ರೀತಿಯ ಕಾಲವರ್ಗವನ್ನು ಸೂಚಿಸಿದ್ದಾರೆ. ಸಮಾಜ ರಚನೆಯ ಇತಿಹಾಸಕಾರರು ೧೪ರಿಂದ ೧೮ನೆಯ ಶತಮಾನದವರೆಗಿನ ಕಾಲವನ್ನು ಊಳಿಗಮಾನ್ಯೋತ್ತರ ಅಂದರೆ ಕ್ರಾಂತಿ ಪೂರ್ವ ಸಮಾಜದ ಕಾಲಾವಧಿ ಎಂದು ಕಂಡಿದ್ದಾರೆ. ವಿಚಾರಗಳ ಇತಿಹಾಸಕಾರರು ೧೭ನೆಯ ಶತಮಾನದ ವೈಜ್ಞಾನಿಕ ಕ್ರಾಂತಿಯು ಆಧುನಿಕ ಇತಿಹಾಸದ ಪ್ರಾರಂಭ ಎಂದು ಹೇಳುತ್ತಾರೆ. ಏಕೆಂದರೆ ಇಂದಿನ ನಮ್ಮ ನಾಗರಿಕತೆಗೆ ತಳಹದಿಯಾದ ಒಂದು ಚಿಂತನ ವಿಧಾನವನ್ನು ಒದಸಿಗಿತು. ಇನ್ನು ಇತರ ಇತಿಹಾಸಕಾರರು ಸುಧಾರಣೆಯಲ್ಲಿ ಅಂಥದೇ ಪ್ರಾರಂಭವನ್ನು ಗುರುತಿಸಿದ್ದಾರೆ.

ಕೆಲವು ಆರ್ಥಿಕ ಇತಿಹಾಸಕಾರರು, ವಿಶೇಷವಾಗಿ ಮಾರ್ಕ್ಸ್‌ವಾದಿಗಳು ೧೫ನೆಯ ಶತಮಾನದ ಕೊನೆಯ ಹಾಗೂ ೧೬ನೆಯ ಶತಮಾನದ ಮೊದಲಿನ ದಶಕಗಳು, ಬಂಡವಾಳಶಾಹಿ, ಬೂರ್ಷ್ವಾತನ, ಫ್ಯೂಡಲೇತರ ಮಾರುಕಟ್ಟೆ ಬಲವುಳ್ಳ ವರ್ಗದ ವಿಕಾಸದಲ್ಲಿ ನಿರ್ಣಾಯಕವಾದವು ಎಂದು ಭಾವಿಸುತ್ತಾರೆ. ಈ ಆರ್ಥಿಕ ಇತಿಹಾಸಕಾರರಲ್ಲೇ ಒಮ್ಮತವಿಲ್ಲ. ನಿರ್ದಿಷ್ಟವಾಗಿ ಮಾರ್ಕ್ಸಿಸ್ಟರು ಫ್ಯೂಡಲಿಸಂ ಎಂಬ ಪದದ ವಿಷಯದಲ್ಲಿ ಗೊಂದಲಗಳನ್ನು ಸೃಷ್ಟಿಸಿದ್ದಾರೆ. ಅದನ್ನು ಅವರು ೯ ರಿಂದ ೧೩ನೆಯ ಶತಮಾನದವರೆಗಿನ ಕಾಲಾವಧಿಯನ್ನು ಸೂಚಿಸಲು ಬಳಸುತ್ತಾರೆ. ಸ್ವಾಮಿಭಕ್ತಿ ಮತ್ತು ಸೈನಿಕ ಸಹಾಯ ಇವುಗಳ ಮೇಲೆ ಹಾಗೂ ಊಳಿಗ, ದಾಸ್ಯಗಳ ಮೇಲೆ ಅವಲಂಬಿಸಿದ ಒಂದು ಸಮಾಜ ರಚನೆಗೂ ಅದನ್ನು ಉಪಯೋಗಿಸುತ್ತಾರೆ. ದೊಡ್ಡ ಭೂಮಾಲಿಕರ ಪ್ರಾಧಾನ್ಯವುಳ್ಳ, ರೈತರಿಗೆ ದುಡಿಮೆಯಲ್ಲಿ ಸ್ವಾತಂತ್ರ್ಯ ವಿಕಾಸ, ಅವರು ಆರ್ಥಿಕವಾಗಿಯೂ ಸಾಮಾಜಿಕ ವಾಗಿಯೂ ಜಮೀನುದಾರರನ್ನು ಅವಲಂಬಿಸಿದ ಯಾವುದೇ ಒಂದು ಸಮಾಜವನ್ನು ಒಳಗೊಳ್ಳುವಂತೆ ಫ್ಯೂಡಲಿಸಂ ಎಂಬ ಪದವನ್ನು ಅವರು ವಿಸ್ತರಿಸಿದ್ದಾರೆ.

ಇನ್ನೊಬ್ಬ ಇತಿಹಾಸಕಾರ ಹಾನ್ಸ್ ಬೇರನ್, ಮಾನವತಾವಾದದ ರಾಜಕೀಯ, ಸಾಮಾಜಿಕ ಮತ್ತು ಐತಿಹಾಸಿಕ ಚಿಂತನೆಯ ಮೂಲ ಸ್ವರೂಪವನ್ನು ಮೌಲ್ಯಮಾಪನ ಮಾಡುವಲ್ಲಿ ಸಂಪೂರ್ಣವಾಗಿ ಬರ್ಕ್‌ಹಾರ್ಟನಿಗೆ ವಿರುದ್ಧವಾದ ನೆಲೆಯನ್ನು ತೋರಿಸುತ್ತಾನೆ. ರಿನೈಸ್ಸಾನ್ಸ್ ಸಂಸ್ಕೃತಿಗೆ ಕಾರಣ, ನಿರಂಕುಶ ರಾಜರ ಆಶ್ರಯಕ್ಕಿಂತಲೂ ಗಣರಾಜ್ಯ ಸ್ವಾತಂತ್ರ್ಯದ ಅನುಭವ ಎಂದು ಅವನು ಪರಿಗಣಿಸಿದನು. ಇನ್ನೂ ಬೇರೆ ಬೇರೆ ರಾಷ್ಟ್ರಗಳ ಸಂಸ್ಕೃತಿಗಳ ವಿಕಾಸವು ಸಮಾನಾಂತರವಾಗಿ ನಡೆಯಿತು ಎಂದು ಇತರ ಕೆಲವರು ಒತ್ತಾಯಪೂರ್ವಕವಾಗಿ ಹೇಳುತ್ತಾರೆ. ಅವರು ಹೇಳುವಂತೆ, ಫ್ರೆಂಚ್, ಜರ್ಮನ್ ಮತ್ತು ಒಂದು ಔತ್ತರೇಯ ಪುನರುಜ್ಜೀವನವು ಸಂಭವಿಸಿತು.

ಬರ್ಕ್‌ಹಾರ್ಟನನ್ನು ಕುರಿತ ಸಾಮಾನ್ಯ ಟೀಕೆ ಇದು. ಆತ ಹೇಳುವ ರಿನೈಸಾನ್ಸ್ ತೀರಾ ಹಠಾತ್ತನೆ ಕಾಣಿಸಿಕೊಳ್ಳುತ್ತದೆ, ತೀರಾ ತೀವ್ರವಾಗಿ ಮಧ್ಯಯುಗದಿಂದ ಬೇರೆಯಾಗುತ್ತದೆ. ಇದಕ್ಕೆ ಬದಲಾಗಿ ವ್ಯಾಲೇಸ್ ಕೆ.ಫರ್ಗ್ಯುಸನ್, ರಿನೈಸಾನ್ನನ್ನು ಮಧ್ಯಯುಗ ಮತ್ತು ಆಧುನಿಕ ಯುಗದ ನಡುವಣ ಸಂಧಿಕಾಲ ಎಂದು ವರ್ಣಿಸುತ್ತಾನೆ. ಆಗ ಫ್ಯೂಡಲ್ ಮತ್ತು ಮಧ್ಯಯುಗೀನ ಮಠೀಯತೆಯ ಅಂಶಗಳು ನಿಧಾನವಾಗಿ, ಆದರೆ ಸ್ಥಿರ ಗತಿಯಲ್ಲಿ ಪರಿವರ್ತನೆಗೊಳ್ಳುತ್ತಿದ್ದುವು. ಮೊದಲು ಇಟಲಿಯಲ್ಲಿ, ಆಮೇಲೆ ಯೂರೋಪಿನ ಇತರ ಭಾಗಗಳಲ್ಲಿ.

ಇವೆಲ್ಲ ನ್ಯಾಯಸಮ್ಮತವಾದ ದೃಷ್ಟಿಗಳೇ. ಇವುಗಳ ಬಹುತ್ವವು ಇತಿಹಾಸ ರಚನಾ ಶಾಸ್ತ್ರದ ಒಂದು ಸಾಧನ ಎಂಬಂತೆ ಎಚ್ಚರಿಕೆಯನ್ನು ನೀಡಿದೆ. ಇತಿಹಾಸಜ್ಞರು ತಮ್ಮ ಬಳಿ ಇರುವ ಸಾಮಗ್ರಿಯನ್ನು ವ್ಯವಸ್ಥಿತಗೊಳಿಸಿ, ಸರಿಯಾಗಿ ಗ್ರಹಿಸಲು ಉಪಯೋಗಿಸಿದ ಒಂದು ವಿಧಾನವಷ್ಟೆ ಹೊರತು ಅದು ಐತಿಹಾಸಿಕ ಪ್ರಕ್ರಿಯೆಲ್ಲೇ ಅಂತರ್ಗತವಾದ ಒಂದು ವಿನ್ಯಾಸವಲ್ಲ. ಯೂರೋಪಿನ ಬಹುತೇಕ ಇತಿಹಾಸಕಾರರು ಹ್ಯೂಮನಿಸ್ಟ್ ಯೋಜನೆಗೆ ಜೋತುಹಾಕಿಕೊಂಡಿದ್ದಾರೆ. ಹೆಚ್ಚೆಂದರೆ, ಅನೇಕ ವೇಳೆ ಅದನ್ನು ತಮ್ಮ ಪೂರ್ವಕಲ್ಪನೆ ಗಳಿಗನುಗುಣವಾಗಿ ಅಥವಾ ಮೌಲ್ಯನಿರ್ಣಯಕ್ಕನುಗುಣವಾಗಿ ಬದಲಾಯಿಸಿರಬಹುದು. ಸಾಗರೋತ್ತರ ಪ್ರದೇಶಗಳಲ್ಲಿ ಯೂರೋಪಿನ ವಿಸ್ತರಣದ ಅಧ್ಯಯನವು ೧೫ನೆಯ ಶತಮಾನದ ಕೊನೆಯ ಹಾಗೂ ೧೬ನೆಯ ಶತಮಾನದ ಮೊದಲ ಯೂರೋಪಿಯನ್ ಇತಿಹಾಸದಲ್ಲಿ ನಿರ್ಣಾಯಕ ಬದಲಾವಣೆಯ ಪರಿಕಲ್ಪನೆಯನ್ನು ಖಂಡಿತವಾಗಿಯೂ ಬಲಪಡಿಸಿದೆ. ಜಾಗತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ, ಯೂರೋಪಿಯನ್ನರು ನೇರವಾಗಿ ರಾಜಕೀಯ ಪ್ರಭುತ್ವವನ್ನು ಸಾಧಿಸಿದ್ದ ಯುಗವು ಇಂದು ಕೊನೆಗೊಂಡಿದೆ. ಈಗ ಆ ಯುಗವನ್ನು ನಿರ್ದಿಷ್ಟ ಕಾಲಾವಧಿಯನ್ನಾಗಿ ಗುರುತಿಸಬಹುದು. ಇವೆಲ್ಲದರಿಂದ ಒಂದು ವಿಚಾರವು ಸ್ಪಷ್ಟವಾಗುವಂತೆ ತೋರುತ್ತದೆ. ವಿದ್ವಾಂಸರು ಎಷ್ಟೇ ಉತ್ಸಾಹದಿಂದ ಆಕ್ಷೇಪಣೆಗಳನ್ನು ಎತ್ತಿದರೂ, ರಿನೈಸಾನ್ಸಿನ ವಿಚಾರವಾಗಲಿ, ಆ ಪದವಾಗಲಿ ಐತಿಹಾಸಿಕ ಶಬ್ದ ಭಂಡಾರದಿಂದ ಕಣ್ಮರೆಯಾಗುವ ಲಕ್ಷಣವನ್ನು ತೋರುವುದಿಲ್ಲ.

ಇಟಲಿಯ ರಿನೈಸಾನ್ಸ್

ಪಶ್ಚಿಮದಲ್ಲಿ ರೋಮ್ ಸಾಮ್ರಾಜ್ಯವು ಪತನ ಹೊಂದಿದ ಕ್ಷಣದಿಂದಲೇ ಯೂರೋಪಿಯನ್ ಸಮಾಜದಲ್ಲಿ, ಕಳೆದು ಹೋದ ಪ್ರಾಚೀನ ಜಗತ್ತಿನ ನೆನಪುಗಳು, ಅದರ ವೈಭವದ ಕೆಲವು ಅಂಶಗಳನ್ನಾದರೂ ಮರಳಿ ಗಳಿಸಬೇಕೆಂಬ ಬಲವಾದ ಭಾವನೆ ಇವು ಹೆಚ್ಚಾಗಿ ನೆಲೆಗೊಂಡಿದ್ದುದು ವ್ಯಕ್ತವಾಯಿತು. ಮತ್ತೆ ಮತ್ತೆ ಅನೇಕ ‘‘ಪುನರುಜ್ಜೀವನ’’ ಗಳಾಗಿ ಅನುಕರಣೆಯ ಹಂಬಲವು ಮನುಷ್ಯನನ್ನು ನೂತನ ಸಾಧನೆಗಳ ಕಡೆಗೆ ಪ್ರಚೋದಿಸಿತು.

ಮಧ್ಯಯುಗದ ಕೊನೆಯ ಯೂರೋಪಿಯನ್ ಸಮಾಜವು ಇನ್ನೂ ಮೂಲತಃ ಕೃಷಿ ಸಮಾಜವೇ ಆಗಿತ್ತು. ಶೇಕಡಾ ೧೦ ಅಥವಾ ಹೆಚ್ಚೆಂದರೆ ಶೇ.೧೫ಕ್ಕಿಂತಲೂ ಕಡಿಮೆ ಜನರು ನಗರಗಳಲ್ಲಿ ಜೀವಿಸುತ್ತಿದ್ದರು. ಬಹುತೇಕ ನಗರಗಳು ಚಿಕ್ಕವು. ಈ ದೃಷ್ಟಿಯಿಂದ, ಒಂದು ಸಾವಿರ ವರ್ಷ ಹಿಂದಿನ ಗ್ರೀಕೋ-ರೋಮನ್ ಸಮಾಜದ ಇಸ್ಲಾಮಿಕ್, ಭಾರತೀಯ ಅಥವಾ ಚೀನಾ ಸಮಾಜಕ್ಕಿಂತ ಯೂರೋಪಿಯನ್ ಸಮಾಜವು ತುಂಬಾ ಬೇರೆಯೇನೂ ಆಗಿರಲಿಲ್ಲ. ೧೪ನೆಯ ಶತಮಾನದಲ್ಲಿ ಅನೇಕ ಊಳಿಗಮಾನ್ಯ ವ್ಯವಸ್ಥೆಗಳು ಕೇಂದ್ರೀಕೃತ ಚಕ್ರಾಧಿಪತ್ಯಗಳಾಗಿ ಪರಿವರ್ತಿತವಾಗುತ್ತಿದ್ದಾಗ, ಇಟಲಿಯು ಅನೇಕ ಸ್ವತಂತ್ರ ರಾಜ್ಯಗಳ ಪಂಕ್ತಿಯಲ್ಲಿ ಸೇರಿತು. ಈ ೨೦೦ ಅಥವಾ ೩೦೦ ಸ್ವತಂತ್ರ ಕಮ್ಯೂನು ಗಳು ಪ್ರಾಚೀನತೆಯ ರೋಗಕ್ಕೆ ಬಲಿಯಾದುವು, ದೊಡ್ಡವು ಚಿಕ್ಕವನ್ನು ನುಂಗಿದುವು. ಇದರ ಫಲವಾಗಿ, ನಿರಂತರ ಕಾದಾಟ, ರಾಜ್ಯ ವಿಸ್ತರಣಕ್ಕಾಗಿ ಯುದ್ಧ ಇಲ್ಲವೇ ಆಕ್ರಮಣದ ಭೀತಿಯ ಹಿನ್ನೆಲೆಯಲ್ಲಿ ಮೈತ್ರಿಗಳು ಅಥವಾ ಸಾಮಂತರಾಗಿರುವ ಒಪ್ಪಂದಗಳು ಸಂಭವಿಸಿದವು.

ಅವಿರತ ಜನಕ್ಷೋಭೆಗೆ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗದೆ ಇಟಲಿಯು ೧೪ನೆಯ ಶತಮಾನದಲ್ಲಿ ಗಣರಾಜ್ಯದಿಂದ ಏಕಾಧಿಪತ್ಯಕ್ಕೆ ಪರಿವರ್ತಿತವಾಗಲು ಬಯಸಿತು. ಸಿಗ್ನೋರ್, ಗಣ್ಯ ಅಥವಾ ಪ್ರಭುವು ಸಾಮಾನ್ಯವಾಗಿ ಸ್ಥಳೀಯ ಫ್ಯೂಡಲ್ ಕುಟುಂಬಕ್ಕೆ ಸೇರಿದವನು. ಬರ್ಕ್‌ಹಾರ್ಟ್ ಹೇಳುವುದಕ್ಕೆ ವಿರುದ್ಧವಾಗಿ ಪ್ರಜಾಸತ್ತೆಗಿಂತ ಮಿಗಿಲಾಗಿ ಆನುವಂಶೀಯ ನಾಯಕತ್ವವು ಅಂದಿನ ಸಾಮಾನ್ಯ ಸಂಗತಿಯಾಗಿತ್ತು. ದಕ್ಷಿಣದಲ್ಲಿ ವಿಶೇಷತಃ ನೇಪಲ್ಸಿನಲ್ಲಿ ಫ್ಯೂಡಲಿಸಂ ಭದ್ರವಾಗಿ ತಳವೂರಿತು. ಮಧ್ಯ ಮತ್ತು ಉತ್ತರ ಇಟಲಿಯನ್ನು ಫ್ಯೂಡಲ್ ಒಡೆತನ ಮತ್ತು ರಾಜಪ್ರಭುತ್ವ ಮೌಲ್ಯಗಳು ಮಧ್ಯಕಾಲೀನ ಸಮುದಾಯ ವ್ಯವಸ್ಥೆಗಳೊಂದಿಗೆ ಕೂಡಿ ವಿಶಿಷ್ಟವಾದ ರಿನೈಸಾನ್ಸ್ ಪರಿಸ್ಥಿತಿಯು ಕಾಣಿಸಿ ಕೊಂಡಿತು. ಅದು ಪರಸ್ಪರ ಸಂಘರ್ಷಿಸುವ ಪ್ರವೃತ್ತಿಗಳ ನಡುವಣ ಹೊಂದಾಣಿಕೆಯಾಗಿತ್ತು. ಫ್ಲಾರೆನ್ಸ್‌ನ ಟಸ್ಕನ್ ನಗರದಲ್ಲಿ ನೋಬಲರನ್ನು ರಾಜಕೀಯದಿಂದ ಹೊರಗಿಡಲಾಯಿತು. ಸಿಯೆನಾ, ಪೀಸಾ, ಲುಕ್ಕಾಳಲ್ಲೂ ಕೂಡ ಪಾರ್ಲಿಮೆಂಟರಿ ಗಣರಾಜ್ಯ ವ್ಯವಸ್ಥೆ ಹೆಚ್ಚು ಕಾಲ ಉಳಿಯಿತು. ವೆನಿಸ್ ತನ್ನ ಹೆಜ್ಜೆಯನ್ನು ಹಿಂದಕ್ಕೆ ತಿರುಗಿಸಿ, ಕೌನ್ಸಿಲುಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿತು. ಅಲ್ಲಿ ಎಂದೂ ಫ್ಯೂಡಲ್ ಗಣ್ಯ ವರ್ಗವಿರಲಿಲ್ಲ; ವಣಿಕ ಶ್ರೀಮಂತವರ್ಗವು ಆನುವಂಶಿಕ ಪ್ರಭುತ್ವವನ್ನು ಉಳಿಸಿಕೊಂಡು ಬಂದಿತ್ತು.

ರಿನೈಸಾನ್ಸ್ ನಗರ ರಾಜ್ಯಗಳು ನೂತನ ಮತ್ತು ಸಾಂಪ್ರದಾಯಿಕ ಅಂಶಗಳೆರಡನ್ನೂ ಒಳಗೊಂಡಿದ್ದುವು. ಬದಲಾಗುತ್ತಿದ್ದ ರಾಜಕೀಯ ಮತ್ತು ಆರ್ಥಿಕ ದೃಶ್ಯದಿಂದ ಸರಕಾರವು ಬಾಧಿತವಾಯಿತು. ಇನ್ನೊಂದು ಕಡೆ ಮಾನವತಾವಾದದ ವಿಕಾಸವು ಪೌರತ್ವ, ದೇಶಭಕ್ತಿ ಮತ್ತು ಪೌರ ಇತಿಹಾಸಗಳ ಮೇಲೆ ಪ್ರಭಾವ ಬೀರಿತು. ಪೋಪ್ ನೆಲೆಯ ಸಾಮರ್ಥ್ಯದಲ್ಲಿ ಉಂಟಾದ ಇಳಿತದಿಂದಾಗಿ, ಇಟಲಿಯ ವ್ಯವಹಾರಗಳನ್ನು ನಿರ್ವಹಿಸಲು ಸಾಮ್ರಾಜ್ಯವು ಅಸಮರ್ಥವಾದುದರಿಂದಾಗಿ, ಪ್ರತಿಯೊಂದು ರಾಜ್ಯವೂ ತನ್ನದೇ ಗುರಿಗಳನ್ನು ಸಾಧಿಸಲು ಯತ್ನಿಸಿತು. ಆ ಗುರಿಗಳೆಂದರೆ ರಾಜ್ಯದ ಸುಭದ್ರತೆ ಮತ್ತು ಅಧಿಕಾರ. ಆಗ ಇದ್ದ ನಾಯಕತ್ವವನ್ನು ಕೆಲವು ಇಟಾಲಿಯನ್ ರಾಜ್ಯಗಳು ಮಿಕ್ಕವಕ್ಕಿಂತ ಪ್ರಬಲವಾದವು. ನಿರಂಕುಶ ದೊರೆ ಗಿಯಾಂಗಲೆಜೋ ಎಸ್ ಕೌಂಟಿ(೧೩೪೭-೧೪೦೨)ಯ ನೇತೃತ್ವದಲ್ಲಿ ಮಿಲಾನ್ ತನ್ನ ವೈಭವವನ್ನು ಉಳಿಸಿಕೊಂಡಿತು. ಎಸ್ ಕೌಂಟಿಯು ಮಿಲಾನಿನ ಆಡಳಿತವನ್ನು ಪಡುವಾವರೆಗೆ, ವೆನಿಸ್ ಬಾಗಿಲಿಗೆ, ದಕ್ಷಿಣ ಮುಖವಾಗಿ ಲುಕ್ಕಾ, ಪೀಸಾ ಮತ್ತು ವಿಯೆನಾವರೆಗೆ ಹರಡಿದನು. ಅವನು ಫ್ಲಾರೆನ್ಸನ್ನೂ ಗೆಲ್ಲುತ್ತಿದ್ದನು. ಅದು ವೈರಿಯಿಂದ ಮುತ್ತಲ್ಪಟ್ಟು ರಾಜ್ಯವಾಗಿ ಗಿಯಾಗಲೆಜ್ಜೇ ವಿಸ್ ಕೌಂಟಿಯ ೨೦ ವರ್ಷಗಳ ಆಳ್ವಿಕೆಗೆ ಸಿಕ್ಕಿ ನರಳಬೇಕಾಗಿತ್ತು. ಆದರೆ ವಿಸ್ ಕೌಂಟ ೧೪೦೨ರಲ್ಲಿ ಮೃತನಾದನು. ಈ ಮಧ್ಯ ಮಾಂಟುವಾದ ಮಾರ್ಕ್ವಿಸರು, ಫೆರಾರಾದ ಡ್ಯೂಕರು ಮತ್ತು ಇತರ ರಾಜರು ಹೆಚ್ಚು ದಕ್ಷವಾದ ಮಿಲಿಟರಿ ಶಕ್ತಿಯಿಂದ ತಮ್ಮ ಸಣ್ಣ ರಾಜ್ಯಗಳನ್ನು ಕಾಪಾಡಿಕೊಂಡಿದ್ದರು. ವಾಸ್ತವವಾಗಿ ದುರ್ಭೇದ್ಯವಾದ ದುರ್ಗ ನಗರಗಳಿಂದಲೂ, ಜಾಣತನದ ರಾಜಕಾರಣ ಕೌಶಲದಿಂದಲೂ ಅದನ್ನು ಅವರು ಸಾಧಿಸಿದ್ದರು.

೧೫ನೆಯ ಶತಮಾನದ ಮಧ್ಯಭಾಗದ ಇಟಲಿ ಪರ್ಯಾಯ ದ್ವೀಪವು ಒಳಸಂಚು, ಪಿತೂರಿ, ದಂಗೆ, ಯುದ್ಧ, ನಿಷ್ಠೆಯ ವರ್ಗಾವಣೆ ಇವುಗಳಿಂದ ಕುದಿಯುತ್ತಿತ್ತು. ಆಗ ಸಂಭವಿಸಿದ ಮುಖ್ಯ ಘಟನೆ ಏನೆಂದರೆ ವೆನಿಸ್ಸಿನ ವಿಸ್ತರಣ ಪ್ರಯತ್ನದ ವಿರುದ್ಧವಾಗಿ ಫ್ಲಾರೆನ್ಸ್ ಮತ್ತು ಮಿಲಾನ್‌ಗಳ ನಡುವೆ ಘಟಿಸಿದ ಮೈತ್ರಿ. ಫ್ಲಾರೆನ್ಸ್ ಗಣರಾಜ್ಯದ ಅನಧಿಕೃತ ನಾಯಕ ಕೋಸಿನೋ ಡಿ ಮೆಡಿಚಿ(೧೩೮೯-೧೪೬೪) ಪ್ರಾರಂಭಿಸಿದ ಈ ‘ರಾಜಕೀಯ ಕ್ರಾಂತಿ’ ಇಟಲಿಯಲ್ಲಿ ರಿನೈಸಾನ್ಸ್ ಕಾಲದಲ್ಲಿ ಕಂಡುಬಂದ ಅಧಿಕಾರ ಸಮತೋಲನ ರಾಜಕಾರಣದ ಅತ್ಯಂತ ಮಹತ್ವದ ನಿದರ್ಶನವಾಗಿತ್ತು. ಇಟಾಲಿಯನ್ ನಗರ ರಾಜ್ಯಗಳು ಸಮತೋಲನವನ್ನು ಸಾಧಿಸಿದುವು. ‘‘ಹಿರಿಯ ಐವರು’’(ನೇಪಲ್ಸ್‌ನ ರಾಜ, ಪೋಪ್, ಮಿಲಾನಿನ ಡ್ಯೂಕ್, ವೆನಿಸ್ ಮತ್ತು ಫ್ಲಾರೆನ್ಸ್‌ನ ಗಣರಾಜ್ಯಗಳು) ಈ ಸಮತೋಲನವನ್ನು ಉಳಿಸಿಕೊಳ್ಳಲು ಒಪ್ಪಿದರು.

ರಿನೈಸಾನ್ಸ್ ೧೪ನೆಯ ಶತಮಾನದಲ್ಲಿ ಫ್ಲಾರೆನ್ಸ್‌ನಲ್ಲಿ ಪ್ರಾರಂಭವಾಯಿತು ಎಂದು ಹೇಳಬಹುದು. ನೇಪಲ್ಸ್‌ನೊಂದಿಗೆ ಹೋರಾಟದಲ್ಲಿ ತೊಡಗುತ್ತಾ ಫ್ಲಾರೆನ್ಸ್ ನಗರವು ರಿನೈಸಾನ್ಸ್ ಮಾನವತಾವಾದದ ಕೇಂದ್ರವಾಯಿತು. ೧೩೭೫ರಲ್ಲಿ, ಫ್ಲಾರೆನ್ಸ್‌ನ ಚಾನ್ಸಲರ್ ಕೊಲೂಚಿ ಸಲೂಟಿಟಿ ಫ್ಲಾರೆನ್ಸ್ ನಿರಂಕುಶಾಧಿಕಾರದ ದಬ್ಬಾಳಿಕೆಗೆ ಎದುರಾದ ಸ್ವಾತಂತ್ರ್ಯದ ತಡೆಗೋಡೆ ಎಂದು ಪ್ರಶಂಸಿಸಿದನು. ೧೪೨೭ರಲ್ಲಿ ಚಾನ್ಸಲರ್ ಆಗಿದ್ದ ಲಿಯೋನಾರ್ಡೋ ಬ್ರುನಿಯು ತನ್ನ ಒಡೆಯನ ಮಾದರಿಯನ್ನೇ ಅನುಸರಿಸಿದನು. ಇವನು ಮಾನವತಾವಾದಿಗಳು ವಿಕಾಸಪಡಿಸಿದ್ದ ಗ್ರಂಥ ಸಂಪಾದನಾ ಶಾಸ್ತ್ರದ ವಿಧಾನಗಳನ್ನು ಇತಿಹಾಸಕ್ಕೆ ಅನ್ವಯಿಸಿದವನು. ತನ್ನ ಹಿಸ್ಟರಿ ಆಫ್ ದಿ ಫ್ಲಾರೆಂಟೈನ್ ಪೀಪಲ್ ಕೃತಿಯಲ್ಲಿ ಅವನು ಲಿಪಿಯನ್ನು ಅನುಕರಿಸಿದನು. ಮನುಷ್ಯನು ಪರಿಪೂರ್ಣತೆಯನ್ನು ಸಾಧಿಸುವುದು ರಾಜಕೀಯ ಸಮಾಜದಲ್ಲಿ ಮಾತ್ರ ಎಂದು ಅವನು ಖಚಿತವಾಗಿ ಹೇಳಿದನು. ಕೊಸಿಮೊ ಡಿ ಮೆಡಿಚಿ (೧೩೮೯-೧೪೬೪) ತನ್ನ ಕಾಲದ ಅತಿ ದೊಡ್ಡ ಫ್ಲಾರೆಂಟೈನ್ ಪೋಷಕ. ೧೪೩೪ರ ನಂತರ ನಗರದ ರಾಜಕೀಯದಲ್ಲಿ ಅವನು ಪ್ರಭಾವಶಾಲಿಯಾಗಿದ್ದನು. ಆದರೂ ಸಾಮಾನ್ಯವಾಗಿ ರಿನೈಸಾನ್ಸನ್ನು ‘‘ಭವ್ಯವ್ಯಕ್ತಿ’’ ಎಂದು ಕರೆಯುವ ಕೊಸಿಮೊ ಡಿ ಮೆಡಿಚಿಯೊಂದಿಗೆ ಅನೇಕ ಬಾರಿ ಸಮೀಕರಿಸಲಾಗುತ್ತಿತ್ತು. ಅವನ ಆಳ್ವಿಕೆಯು ಗಣರಾಜ್ಯಗಳ ಅವನತಿಯನ್ನು ಕಂಡಿತು. ವಿದ್ವಾಂಸರು ಅಷ್ಟು ಕ್ರಿಯಾಪರವಲ್ಲದ, ಹೆಚ್ಚು ಚಿಂತನಾತ್ಮಕವಾದ ಜೀವನ ಮಾರ್ಗವನ್ನು ಅನುಸರಿಸುವಂತಾಯಿತು. ಈ ಸಂದರ್ಭದಲ್ಲಿ ಮಾರ್ಸಿಲಿಯೋ ಫಿಸೆನೋ (೧೪೩೩-೯೯), ಪ್ಲೇಟೋ ಸಿದ್ಧಾಂತಗಳ ಮರುಕಳಿಕೆಯಲ್ಲಿ ಅಗ್ರೇಸರನಾದನು.

ರೋಮಿನಲ್ಲಿ ಈ ಚಳವಳಿಯು ಸಾಂಸ್ಕೃತಿಕ ಆಶಯಗಳೊಂದಿಗೆ ಹಾಗೂ ಪೋಪರ ಆಶೀರ್ವಾದದಿಂದ ಬೆಳೆಯತೊಡಗಿತು. ೧೫ನೆಯ ಶತಮಾನದ ಆದಿಭಾಗದಲ್ಲಿ ರೋಂ ಒಂದು ಅಲಕ್ಷಿತವಾದ, ಶಿಥಿಲಗೊಂಡ ನಗರವಾಗಿದ್ದರೂ ಅಲ್ಲಿ ಪೋಪ್ ಮಾರ್ಟಿನನು (೧೪೧೭-೩೧) ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡನು. ಅವನ ನಂತರ ಬಂದವರೂ ಅದನ್ನು ಮುಂದುವರಿಸಿದರು. ನಾಲ್ಕನೆಯ ಪೋಪ್ ಯುಜೀನಿಯಸನ (೧೪೩೧-೪೭) ಗ್ರೀಕ್ ಮತ್ತು ರೋಮನ್ ಚರ್ಚುಗಳನ್ನು ಒಂದುಗೂಡಿಸಬೇಕೆಂಬ ಉದ್ದೇಶದಿಂದ ಒಂದು ಕೌನ್ಸಿಲಿನ ಸಭೆಯನ್ನು ಸೇರಿಸಿದ್ದು ಆ ಕಾಲದ ಮುಖ್ಯ ಘಟನೆ ಯಾಗಿದೆ. ಗ್ರೀಕ್ ಭಾಷೆಯು ಲ್ಯಾಟಿನಿನಷ್ಟು ಮುಖ್ಯವಾಗಿರಲಿಲ್ಲ. ಲೊರೊನ್ಜೋ ವಲ್ಲಾ (೧೪೦೭-೫೭) ತನ್ನ ಎಗೆನಾನ್ಷಿಯೇ ಕೃತಿಯಲ್ಲಿ ಗ್ರೀಕ್ ಭಾಷೆಯನ್ನು ವಿಶ್ವಭಾಷೆ ಎಂದು ಪ್ರಶಂಸಿಸುತ್ತಾನೆ. ಯಾವುದರ ಆಧಾರದ ಮೇಲೆ ಪೋಪನ ಅಧಿಕಾರವು ತನ್ನ ಪ್ರಭುತ್ವವನ್ನು ಸ್ಥಾಪಿಸಿತ್ತು. ಕಾನ್‌ಸ್ಟೆಂಟೈನನ್ನು ಕಾಣಿಕೆಯಾಗಿತ್ತ ದಾಖಲೆಯು ಸುಳ್ಳು, ಮೋಸ ಎಂದು ತೋರಿಸಿ ಕೊಟ್ಟದ್ದು ಅವನ ಇನ್ನೊಂದು ಸಾಧನೆಯಾಗಿತ್ತು. ಮೆಡಿಚಿ ಪೋಪ್ ೧೦ನೆಯ ಲಿಯೋ(೧೫೧೩-೨೧)ನ ಕಾಲದಲ್ಲಿ ರೋಮನ್ ರಿನೈಸಾನ್ಸ್ ತನ್ನ ಶಿಖರವನ್ನು ಮುಟ್ಟಿತು. ಆಗ ಪೋಪ್ ಸಂಬಂಧದ ಕಟ್ಟಡಗಳ ಹಾಗೂ ಖಾಸಗಿ ಕಟ್ಟಡಗಳ ನಿರ್ಮಾಣ ಕಾರ್ಯ ತಡೆಯಿಲ್ಲದೆ ಮುಂದುವರಿಯಿತು. ಚಿತ್ರಕಲೆ, ಶಿಲ್ಪಗಳು ಮತ್ತು ಗ್ರಂಥಾಲಯಗಳೂ ಅಭಿವೃದ್ದಿಗೊಂಡವು. ಏಳನೆಯ ಕ್ಲೆಮೆಂಟ್‌ನ (೧೫೨೩-೩೪) ಕಾಲದಲ್ಲಿ ರೋಮನ್‌ನ ಪತನದ ಮೂಲಕ ಚರ್ಚಿನ ಸುಧಾರಣೆ ಅಲಕ್ಷಿತವಾಯಿತು. ರಿನೈಸಾನ್ಸ್ ಮೂರನೆಯ ಪಾಂಟಿಫಿಕೇಟ್ ಕಾಲದವರೆಗೂ ಕೊನೆಗೊಳ್ಳಲಿಲ್ಲ (೧೫೩೪-೫೦). ಹಿಂದಿನಯುಗದ ಸಾಂಸ್ಕೃತಿಕ ಮೌಲ್ಯಗಳ ವಿರುದ್ಧವಾಗಿ ಪ್ರತಿಕ್ರಿಯೆ ಆಗ ವ್ಯಕ್ತವಾಯಿತು.

ನೇಪಲ್ಸನಲ್ಲಿ ಐದನೆಯ ಅಲ್ಫಾನ್ಸೋನಂತಹವರ ಕೈಕೆಳಗೆ ಅಲ್ಪಕಾಲಿಕವಾದರೂ ರಿನೈಸಾನ್ಸ್ ಮಹತ್ವಪೂರ್ಣವಾಗಿತ್ತು. ಅವನ ಆಳ್ವಿಕೆಯಲ್ಲಿ ಅರ್ಥವ್ಯವಸ್ಥೆಯು ಉತ್ತಮ ಗೊಂಡಿತು. ಅವನ ಆಶ್ರಯದಲ್ಲಿ ಲೊರೆನ್ಜೊವಲ್ಲಾ (೧೪೦೭-೫೭) ಜೀವಿಸಿದ್ದನು. ಇವನ ಉದಾತ್ತ ಪರಂಪರೆಯನ್ನು ಇವನ ಮಗ ಫೆರಂಟೇ ಮುಂದುವರಿಸಿದನು. ಅವನ ಗ್ರಂಥ ಸಂಗ್ರಹವು ಇಟಲಿಯಲ್ಲೇ ಸುಪ್ರಸಿದ್ಧವಾಯಿತು. ಮಾನವತಾವಾದಿಯೂ, ದಕ್ಷ ಪೌರ ಅಧಿಕಾರಿಯೂ ರಾಜಕಾರಣಿಯೂ ಆದ ಗಿಯೋವನಿ ಪೊಂಟಾನಾ (೧೪೨೬-೧೫೦೩) ಬಹಳ ಮುಖ್ಯವಾದ ವ್ಯಕ್ತಿಯಾಗಿದ್ದನು. ನಿರಂಕುಶಾಧಿಕಾರಿ ಗಿಯಂಗಲೆಜೋ ವಿಸ್ಕಾಂಟಿ (೧೩೪೭-೧೪೦೨)ಯ ಆಳ್ವಿಕೆಯಲ್ಲಿ ಮಿಲಾನಿನ ಜನರು ಮೊದಲಬಾರಿಗೆ ರಿನೈಸಾನ್ಸಿನ ಪ್ರಭಾವವನ್ನು ಅನುಭವಿಸಿದರು. ಈ ಕಾಲದಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ರಮವಲ್ಲದೆ, ಪೇವಿಯಾ ವಿಶ್ವವಿದ್ಯಾನಿಲಯಕ್ಕೆ ಅಧಿಕೃತ ಪ್ರೋ ನೀಡಲಾಯಿತು. ಆದರೆ ಮಿಲಾನಿನ ಪುನರುಜ್ಜೀವನವನ್ನು ೧೪೯೪ರಲ್ಲಿ ಡ್ಯೂಕ್ ಆದ ಲೊಡೊವಿಕೊ ಸ್ಟೋರ್ಜಾ ಇಲ್ ಮೊರೋನೊಂದಿಗೆ ವಿಶೇಷವಾಗಿ ಸಮೀಕರಿಸಿ ನೋಡಲಾಗಿದೆ. ಇವನ ಪತ್ನಿ ಬಿಯಾಟ್ರಿಸ್ ಡಿಯೇಟೇ ಇವನಿಗೆ ಆಶ್ರಯ ನೀಡಿ ಪ್ರೋ ಅವನ ಆಸ್ಥಾನ ವನ್ನು ಅಲಂಕರಿಸಿದ್ದವರಲ್ಲಿ ಮುಖ್ಯರಾದವರು ಲಿಯೊನಾರ್ಡೊಡಾವಿಂಚಿ ಮತ್ತು ಬ್ರಮಾಂಟೆ. ಆದರೆ ಈ ಉಜ್ವಲವಾದ ಯುಗವು ೧೪೯೭ರಲ್ಲಿ ಬಿಯಾಟ್ರಿಸ್ ಮರಣ ಹೊಂದಿದುದರಿಂದಲೂ ಹಾಗೂ ೧೫೦೦ರಲ್ಲಿ ಫ್ರೆಂಚರು ಆಕ್ರಮಿಸಿಕೊಂಡುದರಿಂದಲೂ ಸಮಾಪ್ತಿ ಹೊಂದಿತೆಂದು ಅಭಿಪ್ರಾಯಪಡಲಾಗಿದೆ.

ಲಿಯೊನೆಲ್ಲಾಡಿ ಎಸ್ಟೇಯ ನೇತೃತ್ವದಲ್ಲಿ ಫೆರಾರಾ, ಇಟಾಲಿಯನ್ ಕಾವ್ಯದ ಬಹುದೊಡ್ಡ ಕೇಂದ್ರವಾಯಿತು. ಆರ್ಲಾಡೋ ಫ್ಯೂರಿಸೋ ಖ್ಯಾತಿಯ ಅರಿಸ್ಟೋ (೧೪೭೪-೧೫೩೩) ಇಲ್ಲಿ ಜೀವಿಸಿದ್ದನು. ಮಾಂಟುವಾದಲ್ಲಿ ಲೊಡೊವಿಕೊ ಗೊನ್ಜಾಗಾ (೧೪೪೪-೭೮) ಅರ್ಬಿನೋದಲ್ಲಿ ಫೆಡರಿಗೋಡ ಮಾಂಟಿಫೆಲ್ಟ್ರೋ (೧೪೪೪-೮೨) ರಿನೈಸಾನ್ಸಿನ ಮುಖ್ಯ ಪೋಷಕರಾಗಿದ್ದರು.

ಬೇರೆ ಸ್ಥಳಗಳಿಗಿಂತ ತಡವಾಗಿ, ಅಂದರೆ ೧೫ನೆಯ ಶತಮಾನದ ಕೊನೆಯ ವೇಳೆಗೆ ಚಳವಳಿಯು ವೆನಿಸ್ ತಲುಪಿತು. ಅದು ಗ್ರಂಥೋಧ್ಯಮದ ಮುಖ್ಯ ಕೇಂದ್ರವಾಯಿತು. ಆ ಕಾಲದ ಪರಿಣತ ಮುದ್ರಕರಲ್ಲಿ ಮುಖ್ಯನಾದವನು ಆಲ್ಡಸ್ ಮನೂಷಿಯಸ್ (೧೪೫೦-೧೫೭೫).

೧೪ನೆಯ ಶತಮಾನದ ಇಟಲಿಯಲ್ಲಿ ಕಂಡುಬಂದ ಮಹತ್ವಪೂರ್ಣ ಸುಧಾರಣೆಗಳಲ್ಲಿ ಒಂದು ಗ್ರೀಸ್ ಮತ್ತು ರೋಮ್ ನಾಗರಿಕತೆಗಳನ್ನು ಕುರಿತ ನೂತನ ದೃಷ್ಟಿ ಬೆಳೆದದ್ದು. ಇಟಾಲಿಯನ್ನರು ಇದನ್ನು ಲಾರನಾಸಿಟಾ, ಪುರ್ಜನ್ಮ ಎಂದು ಕರೆದರು. ಏಕೆಂದರೆ ಅದು ಅವರಿಗೆ ೧೦೦೦ ವರ್ಷಗಳ ಬರ್ಬರ ಯುಗದ ನಂತರ ಪ್ರಾಚೀನ ಚೈತನ್ಯದ ಪುನರುತ್ಥಾನ ವಾಗಿತ್ತು. ಇಟಾಲಿಯನ್ ಚೇತನದ ಪ್ರಖರವಾದ ಸೂರ್ಯನ ಬೆಳಕು ಉತ್ತರದ ದಟ್ಟ ಕಾವ್ಯವನ್ನು ಹರಿಯಿಸಿತು; ಸ್ತ್ರೀ ಪುರುಷರು ಸೌಂದರ್ಯವನ್ನು ಅದರ ಸಕಲ ರೂಪಗಳಲ್ಲಿ ಸವಿದು, ಪುನರುಜ್ಜೀವನದ ಆನಂದವನ್ನು ವಾತಾವರಣದ ತುಂಬ ತುಂಬುವುದರಲ್ಲಿದ್ದರು. ಹೀಗೆ ಹೇಳಿದವರು ತಮ್ಮ ಕಾಲದಲ್ಲೇ ವಾಸ್ತವ ‘‘ಪುನರ್ಜನ್ಮ’’ವು ಸಂಭವಿಸಿದುದನ್ನು ಕಣ್ಣಾರೆ ಕಂಡರು. ವಾಸ್ತವವಾಗಿ ರಿನೈಸಾನ್ಸ್‌ಗೆ ಕೇವಲ ಪ್ರಾಚೀನತೆಯ ಮರುಕಳಿಕೆಗಿಂತ ಮಿಗಿಲಾದ ಅಂಶಗಳು ಅಗತ್ಯವಾದುವು. ಬೂರ್ಷ್ವಗಳಿಂದ ಹಣವನ್ನು ಕಿತ್ತಕೊಂಡರು, ಲೆಕ್ಕಾಚಾರ ಹಾಕಿ ಕಾರ್ಮಿಕರಿಗೆ ಸಾಕಷ್ಟು ಕೊಡದ ಮ್ಯಾನೇಜರುಗಳಿಂದ, ಪೂರ್ವದ ಕಡೆಗೆ ನೌಕಾಯಾನ ಮಾಡುವವರಿಂದ, ಆಲ್ಫ್ಸ್ ಮೊದಲಾದವುಗಳನ್ನು ಬಹು ಕಷ್ಟಪಟ್ಟು ದಾಟಿ ಹೋಗುವವರಿಂದ, ಚರ್ಚುಗಳಿಂದ, ಲೇವಾದೇವಿಗಾರರಿಂದ ಹಣವನ್ನು ವಸೂಲು ಮಾಡಿ ಪ್ರಾಚೀನತೆಗೆ ಮರುಹುಟ್ಟು ನೀಡಿದ ಗ್ರಂಥಗಳನ್ನು ಕೊಳ್ಳಲು ಅದನ್ನು ವಿನಿಯೋಗಿಸಿದರು. ವಿಶ್ವವಿದ್ಯಾಲಯಗಳು ಬೆಳೆದವು; ಜ್ಞಾನ, ದರ್ಶನಗಳು ವಿಸ್ತಾರವಾದವು; ಹೊರ ಜಗತ್ತಿನೊಂದಿಗೆ ಸಂಪರ್ಕ ಹೆಚ್ಚಿತು. ಇವುಗಳಿಂದಾಗಿ ಇಟಾಲಿಯನ್ ಮನಸ್ಸು ಚರ್ಚಿನ ಸಂಕೋಲೆಗಳನ್ನು ಕಳಚಿಹಾಕಿತು. ಈ ನಿರ್ಬಂಧಗಳಿಂದ ಮುಕ್ತನಾದ ಇಟಾಲಿಯನ್ನನು ಗಂಡಸಿನಲ್ಲಿ, ಹೆಂಗಸಿನಲ್ಲಿ ಸೌಂದರ್ಯವನ್ನು ಕಂಡು ಸವಿದನು. ೧೫ ಮತ್ತು ೧೬ನೆಯ ಶತಮಾನಗಳಲ್ಲಿ ರಚನಶೀಲನಾದನು. ಆಮೇಲೆ ನೈತಿಕ ಗೊಂದಲ, ಕ್ಷೀಣಗೊಂಡ ವ್ಯಕ್ತಿವಿಶಿಷ್ಟತೆ ಮತ್ತು ರಾಷ್ಟ್ರೀಯ ಗುಲಾಮಗಿರಿಗಳಿಂದ ದೇಶ ಹಾಳಾಯಿತು. ಈ ಎರಡೂ ಅತಿರೇಕಗಳ ನಡುವಣ ಮಧ್ಯಂತರವೇ ರಿನೈಸಾನ್ಸ್.

ಇಟಾಲಿಯನ್ ಪುನರುಜ್ಜೀವನದ ಕೇಂದ್ರ ವ್ಯಕ್ತಿ ಪೆಟ್ರಾರ್ಕ್(೧೩೦೪-೭೪). ಗಡೀಪಾರಾಗಿದ್ದ ಫ್ಲಾರೆನ್ಸಿನ ನೋಟರಿಯೊಬ್ಬನ ಮಗನಾದ ಅವನು ಯೂರೋಪಿನ ಮೊದಲ ಸ್ವತಂತ್ರ ಸಾಹಿತಿಗಳಲ್ಲಿ ಒಬ್ಬನಾದನು. ಕಳೆದ ರೋಮನ್ ಪ್ರಾಚೀನತೆಯಿಂದ ಇತ್ತೀಚಿನ ತನ್ನ ಕಾಲದವರೆಗಿನ ಅವಧಿಯನ್ನು ಕತ್ತಲಯುಗವೆಂಬುದಾಗಿ ಮೊದಲು ಕಲ್ಪಿಸಿಕೊಂಡವನೇ ಪೆಟ್ರಾರ್ಕ್. ಆ ಪರಿಸ್ಥಿತಿಯನ್ನು ಬದಲಾಯಿಸಿಬಿಡಬಹುದು ಎಂಬ ಆಶಾವಾದ ಅವನಲ್ಲಿರಲಿಲ್ಲವಾದರೂ, ಪ್ರಾಚೀನತೆಯ, ಅದರ ನುಡಿಯ, ಸಾಹಿತ್ಯಕ ಶೈಲಿಯ, ನೈತಿಕ ಚಿಂತನೆಯ ಮರು ಅಧ್ಯಯನ ಮಾಡಬೇಕೆಂದು ಅವನು ಕರೆಕೊಟ್ಟನು. ಪ್ರಾಚೀನ ನಾಗರಿಕತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ, ಪ್ರಾಚೀನತೆಯ ಒಲವಿರುವ ಅಧ್ಯಯನ ಕಡ್ಡಾಯವಾಗಬೇಕು. ಅಂದರೆ, ಭಾಷೆಯ ಅಧ್ಯಯನದ ಮೇಲೆ ಹೆಚ್ಚು ಒತ್ತಡ ಬಿದ್ದಿತು. ಏಕೆಂದರೆ ಪ್ರಾಚೀನರನ್ನು ಅರ್ಥಮಾಡಿಕೊಳ್ಳಬೇಕಾದರೆ ಭಾಷೆಯೇ ಸಂಪರ್ಕ ಮಾಧ್ಯಮಗಳ ಮೂಲ. ಆದ್ದರಿಂದ ವ್ಯಾಕರಣದ ಅಭ್ಯಾಸ, ಪ್ರಾಚೀನ  ಬರಹಗಾರರ ಅನುಕರಣೆಗಳು (ಭಾಷಾ ದೃಷ್ಟಿಯಿಂದ) ಇವು ಪೆಟ್ರಾರ್ಕನ ಕಾರ್ಯಕ್ರಮದ ತಳಹದಿಯಾದುವು. ಮುಂದಿನದು ಮಾತುಗಾರಿಕೆ. ಅವನಿಗೆ, ಅದು ಒಂದು ನಿರರ್ಗಳ ಶೈಲಿಯನ್ನು ಹೊಂದಿರುವುದು ಮಾತ್ರವಲ್ಲ, ಒಲಿಸುವಿಕೆಯ ಶಕ್ತಿಯೂ ಮಾತ್ರವಲ್ಲ, ಅದು ಎರಡರ ಸಮ್ಮಿಲನ. ಭಾಷೆಯನ್ನೂ ಭಾಷಣ ಕಲೆಯನ್ನೂ ಒಟ್ಟಿಗೆ ಅಧ್ಯಯನ ಮಾಡುವವನು ಒಂದು ನೈತಿಕ ಸದುದ್ದೇಶದಿಂದ ಹಾಗೆ ಮಾಡುತ್ತಾನೆ. ‘‘ಸತ್ಯವನ್ನು ತಿಳಿದುಕೊಳ್ಳವುದಕ್ಕಿಂತಲೂ ಒಳಿತನ್ನು ಸಂಕಲ್ಪಿಸುವುದು ಮೇಲು’’ ಎಂಬ ಅವನ ಮಾತು ಇಲ್ಲಿ ಮುಖ್ಯವಾಗುತ್ತದೆ. ಹೀಗೆ ಪೆಟ್ರಾರ್ಕನು ರಿನೈಸಾನ್ಸಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಚರ್ಚಿಸಿದನು. ಮಾನವ ರಚನಶೀಲತೆಯ ವಿಷಯದಲ್ಲಿ ಪ್ರಾಚೀನತೆಯು ಪರಾಕಾಷ್ಠೆಯಾದರೆ ಕತ್ತಲಯುಗವು ಅದರ ಪಾತಾಳ. ಸಂಸ್ಕೃತಿಯ ಪುನರುಜ್ಜೀವನ ಹಾಗೂ ಸಮಾಜದ ಸುಧಾರಣೆ ಇವು ಪ್ರಾಚೀನತೆಯ ಅಧ್ಯಯನವನ್ನು ಅವಲಂಬಿಸಿವೆ ಎಂದು ಅವನು ನಿರೂಪಿಸಿದನು. ಈ ವಿಚಾರಗಳೇ ೧೫ನೆಯ ಶತಮಾನದ ಮಾನವತಾವಾದಿಗಳ ಅತ್ಯಂತ ಗಾಢವಾದ ನಂಬಿಕೆಗಳಾದುವು. ಪೆಟ್ರಾರ್ಕನ ಸಮಕಾಲೀನನಾದ ಬೊಕಾಸಿಯೋನ ಕಾಣಿಕೆಯು ಬಹಳ ಮುಖ್ಯವೇ ಆಗಿತ್ತು. ಸತ್ತು ಹೋಗಿದ್ದ ಕಾವ್ಯಶಕ್ತಿಯನ್ನು ಮರಳಿ ಬದುಕಿಸಿದವನು ಅವನು ಎಂದು ವಾಸ್ತವವಾಗಿ ಹೇಳಬಹುದು. ಗಿಯೋವನಿ ಬೊಕಾಸಿಯೋ (೧೩೧೩-೧೩೭೫), ಪ್ರಾಚೀನ ಜಗತ್ತಿನ ಆಳವಾದ ಪರಿಜ್ಞಾನವನ್ನು ಪಡೆಯಲು ಇಚ್ಛಿಸಿದನು. ಪ್ರಸಿದ್ಧವಾದ ಡಿಕೆಮರಾನ್ (೧೩೫೩) ಅಲ್ಲದೆ ಇತರ ಕೆಲವು ಮುಖ್ಯವಾದ ಕೃತಿಗಳನ್ನು ಲ್ಯಾಟಿನ್ನಿನಲ್ಲಿ ಬರೆದನು. ಪ್ರಾಚೀನ ಪುರಾಣ ಪ್ರಪಂಚ, ಆ ನಾಯಕರು ಮತ್ತು ರಾಜರ ವಿಧಿಗಳನ್ನು ಕುರಿತು ಅವನು ಬರೆದನು. ಆದರೆ ಮುಂದಿನ ಮಾನವತಾವಾದಿಗಳು ಪೆಟ್ರಾರ್ಕನಿಗಿಂತ ಹೆಚ್ಚು ಆಶಾವಾದಿಗಳಾಗಿದ್ದರು. ಅವರ ಕಾರ್ಯಕ್ರಮಗಳಿಗೆ, ವ್ಯವಹಾರಗಳಿಗೆ ಜನತೆಯಿಂದ ಅಪಾರವಾದ ಗೌರವ ದೊರಕಿತು.