ರೋಮನ್ ಸಾಮ್ರಾಜ್ಯ ದುರಂತವಾಗಿ ಕುಸಿದು ಬಿದ್ದ ಸ್ಪಷ್ಟ ಚಿತ್ರವನ್ನು ಎಡ್ವರ್ಡ್ ಗಿಬ್ಬನ್ ಅವರ ಅಮರ ಕೃತಿ ‘‘ದಿ ಡಿಕ್ಲೈನ್ ಅಂಡ್ ಫಾಲ್ ಆಫ್ ದಿ ರೋಮನ್ ಎಂಪೈರ್’’ (ರೋಮನ್ ಸಾಮ್ರಾಜ್ಯದ ಅವನತಿ ಮತ್ತು ಪತನ) ನೀಡುತ್ತದೆ. ಕ್ರಿಸ್ತಶಕ ೫ನೆಯ ಶತಮಾನದಲ್ಲಿಯೇ ರೋಮನ್ ಸಾಮ್ರಾಜ್ಯವನ್ನು ಬರ್ಬರರು ನಾಶಮಾಡಿದ್ದರಾದರೂ ಅದರ ಅವನತಿಗೆ ಕಾರಣಗಳು ವ್ಯವಸ್ಥೆಯಲ್ಲಿ ಅಡಗಿದ್ದವು. ಪ್ರಜಾತಂತ್ರ ಮಾದರಿಯ ವ್ಯವಸ್ಥೆಯಿಂದ ಸಾಮ್ರಾಜ್ಯ ವ್ಯವಸ್ಥೆಗೆ ಬದಲಾಗುವಾಗ ವಂಶಪಾರಂಪರ್ಯವಾಗಿ ಅಧಿಕಾರಕ್ಕೆ ಬರುವ ಪದ್ಧತಿಯನ್ನು ಒಪ್ಪಿಕೊಳ್ಳಲಾಯಿತು. ಈ ವ್ಯವಸ್ಥೆ ಯಶಸ್ವಿಯಾಗಲಿಲ್ಲ. ಈ ವ್ಯವಸ್ಥೆ ಯಶಸ್ವಿಯಾಗದ ಕಾರಣ ನಾಯಕನನ್ನು ಪ್ರಿಟೋರಿಯಾ ಗಾರ್ಡ್ ಅವರಿಂದ ಆಯ್ಕೆ ಮಾಡುವ ಪದ್ಧತಿ ಹುಟ್ಟಿಕೊಂಡಿತು. ಆದರೆ ಇದು ಲಂಚದ ವ್ಯವಸ್ಥೆಗೆ ಅವಕಾಶ ನೀಡಿತು. ಈ ಸಭೆಯ ಸದಸ್ಯರು ಚಕ್ರವರ್ತಿಯನ್ನು ಆಯ್ಕೆ ಮಾಡಲು ಅಪಾರ ಮೊತ್ತದ ಹಣವನ್ನು ಅಭ್ಯರ್ಥಿಗಳಿಂದ ವಸೂಲಿ ಮಾಡಲು ಶುರು ಮಾಡಿದರು. ಇದು ಚಕ್ರಾಧಿಪತ್ಯವನ್ನೇ ಹರಾಜಿಗಿಟ್ಟ ವ್ಯವಸ್ಥೆಯಾಗಿ ಪರಿಣಮಿಸಿತು. ಹೆಚ್ಚಿನ ಹಣ ಯಾರು ಕೊಡುವನೊ ಅವನು ಚಕ್ರವರ್ತಿಯಾಗುತ್ತಿದ್ದನು. ಪ್ರತಿಯಾಗಿ, ಚಕ್ರವರ್ತಿಗಳು ಸಾಮಾನ್ಯ ಜನರಿಂದ ಹಣ ಸುಲಿಗೆ ಮಾಡಿ ಸೈನ್ಯಕ್ಕೆ ಲಂಚ ಕೊಡುತ್ತಿ ದ್ದರು. ಇದರ ಜೊತೆಗೆ ರೋಮನ್ ಸಾಮ್ರಾಜ್ಯ ಎಷ್ಟು ವಿಶಾಲವಾಗಿತ್ತೆಂದರೆ ಒಬ್ಬ ವ್ಯಕ್ತಿಯಿಂದ ಇದನ್ನು ಆಳಲು ಸಾಧ್ಯವಾಗುತ್ತಿರಲಿಲ್ಲ. ಸಾಮಾಜಿಕ ವ್ಯವಸ್ಥೆ ನಾರುತ್ತಿತ್ತು. ಕೆಲವೇ ಜನರು ಐಷಾರಾಮ, ಆಡಂಬರದ ಜೀವನ ನಡೆಸುತ್ತಿದ್ದರು. ಆದರೆ ಸಾವಿರಾರು ಜನ ಬಡತನದಲ್ಲಿ ನರಳುತ್ತಿದ್ದರು. ಕ್ರಿಸ್ತಶಕ ೩ ಮತ್ತು ೪ನೆಯ ಶತಮಾನದ ರೋಮನ್ ಸಾಮ್ರಾಜ್ಯವು ಗುಲಾಮಗಿರಿ ವ್ಯವಸ್ಥೆಯ ಆಧಾರದ ಮೇಲೆ ಮಾತ್ರ ಉಳಿದುಕೊಂಡಿತ್ತು. ಸಾಮಾನ್ಯ ಜನರು ತೆರಿಗೆಗಳನ್ನು ಕೊಡುತ್ತಿದ್ದರು, ಗುಲಾಮರು ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಬಡತನ ಮತ್ತು ಶ್ರಮಜೀವನದ ಭಾರವನ್ನು ಹೊರಲಾಗದೆ ಇವರೂ ಕೂಡ ರಾಜಕೀಯದಲ್ಲಿ ಆಸಕ್ತಿಯನ್ನು ಕಳೆದುಕೊಂಡರು. ಬರ್ಬರರು ರೋಮನ್ ಸಾಮ್ರಾಜ್ಯವನ್ನು ದಾಳಿ ಮಾಡಿದಾಗ ಸಾಮಾನ್ಯ ಜನರ ವಿರೋಧವಿರಲಿಲ್ಲ. ರೋಮನ್ ಸಾಮ್ರಾಜ್ಯಕ್ಕಾಗಿ ಹೋರಾಡುವುದು ಅರ್ಥವಿಲ್ಲದ ಕೆಲಸ ಎಂದು ಭಾವಿಸಿದ್ದರು. ಕ್ರಿ.ಶ.೪೭೬ರಲ್ಲಿ ಪಶ್ಚಿಮ ಗೋಥ್ಸೆಗೆ ಸೇರಿದ್ದ ಓಡೋಸೆರ್ ಎಂಬುವವನು ರೋಮಿನ ಕಡೆಯ ಚಕ್ರವರ್ತಿಯಾದ ರೋಮಲಸ್ ಅಗಸ್ಟಸ್ ಅನ್ನು ಸೋಲಿಸಿ ತಾನೆ ಚಕ್ರಾಧಿಪತಿ ಎಂದು ಘೋಷಿಸಿದನು. ಪಶ್ಚಿಮ ಗೋಥಿನ ಓಸ್ಟೋಗೋತ್ ಜನರು ಥಿಯೋಡೋರಿಕ್‌ನ ನಾಯಕತ್ವದಲ್ಲಿ ಇಟಲಿಯನ್ನು ದಾಳಿ ಮಾಡಿ ಓಡೋಸೆರ್‌ನನ್ನು ಕೊಂದು ಕ್ರಿ.ಶ.೪೯೩ರಲ್ಲಿ ಓಷ್ಟೋಗೋಥಿಕ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಫ್ರೆಂಚರು ಗಾಲ್‌ನಲ್ಲಿ ಮತ್ತು ಸಾಕ್ಸನ್ನರು ಬ್ರಿಟನ್ನಿನಲ್ಲಿ ತಮ್ಮದೇ ಆದ ರಾಜ್ಯಗಳನ್ನು ಸ್ಥಾಪಿಸಿಕೊಂಡರು.

ಸ್ಕಿಪಿಯೊ ಆಫ್ರಿಕಾನಸ್, ಮೇರಿಯಸ್, ಸುಳ, ಪಾಂಪೆ, ಜೂಲಿಯಸ್ ಸೀಸರ್, ಅಗಸ್ಟಸ್ ಸೀಸರ್ ಮತ್ತು ಟ್ರೋಜನ್ನರ ಬೆವರಿನ ಶ್ರಮದಿಂದ ನಿರ್ಮಿಸಿದ್ದ ರೋಮನ್ ಸಾಮ್ರಾಜ್ಯವು ಸ್ಲಾವಿಕ್, ಅಟ್ಟಿಲ ಮತ್ತು ಜನ್ಸೆರಿಕ್‌ರಿಂದ ಅಧಃಪತನಗೊಂಡಿತು. ರೋಮನ್ ಸಾಮ್ರಾಜ್ಯದ ಮೇಲೆ ಕಗ್ಗತ್ತಲು ಕವಿಯಿತು ಎಂದು ಹೇಳಲಾಗಿದೆ. ಕ್ರಿ.ಶ. ೫ನೆಯ ಶತಮಾನದಿಂದ ೧೦ನೆಯ ಶತಮಾನದವರೆಗೂ ಪಶ್ಚಿಮ ಯೂರೋಪ್ ಬರ್ಬರ ರಾಜ್ಯಗಳಾಗಿ ವಿಂಗಡಿತವಾದವು. ಹಳೆಯ ರೋಮನ್ ಸಾಮ್ರಾಜ್ಯದ ಕಲಾಕೃತಿಗಳು, ಅಧ್ಯಯನ ಕೇಂದ್ರಗಳು ನಾಶವಾದವು. ವ್ಯಾಪಾರ ಮತ್ತು ವಾಣಿಜ್ಯ ಹಿಂದುಳಿಯಿತು. ರಸ್ತೆಗಳು ಮತ್ತು ಸೇತುವೆಗಳು, ನಾಟಕ ರಂಗಗಳು, ಮಂದಿರಗಳು ಮತ್ತು ಸ್ನಾನದ ಗೃಹಗಳೂ, ರೋಮನ್ ಸಾಮ್ರಾಜ್ಯದ ತಂತ್ರಜ್ಞಾನ ಮತ್ತು ರೋಮನ್ ಸಾಮ್ರಾಜ್ಯದ ಸಂಕೇತಗಳು ನಾಶ ಹೊಂದಿದವು. ಈಜಿಪ್ಟ, ಬೇಬಿಲೋನಿಯಾ, ಗ್ರೀಕ ಮತ್ತು ರೋಮನ್ನ ರಿಂದ ಕೃಷಿಗೊಂಡ ನಾಗರಿಕತೆ ನಾಶವಾಯಿತಾದರೂ, ಇದೊಂದು ತಾತ್ಕಾಲಿಕ ಗ್ರಹಣವಾಗಿತ್ತು. ರೋಮನ್ನರು ತಮಗೆ ಅಧೀನರಾಗಿದ್ದವರಾದರೂ ಜರ್ಮನಿಯ ಗೋಥರಿಗೆ ರೋಮನ್ನರಿಂದ ಕಲಿಯುವ ಶಕ್ತಿ ಮತ್ತು ಇಚ್ಛೆ ಇತ್ತು. ಆರಂಭದಲ್ಲಿಯೇ ಕ್ರಿಶ್ಚಿಯನ್ನರಾಗಿ ಮತಾಂತರ ಗೊಂಡಿದ್ದ ಗೋಥರಿಗೆ, ಯಾವುದೇ ಹಂತದಲ್ಲಿ ಗ್ರೀಕೋ-ರೋಮನ್ ಸಂಸ್ಕೃತಿಯನ್ನು ಒಪ್ಪಿಕೊಳ್ಳುವುದು ಸಾಧ್ಯವಾಯಿತು. ಜರ್ಮನಿಯ ಮತ್ತು ರೋಮನ್ ಎರಡೂ ಸಂಸ್ಕೃತಿಗಳ ಮಿಶ್ರತಳಿಯಾಗಿ ಯುರೋಪಿನ ಮಧ್ಯಯುಗದ ನಾಗರಿಕತೆ ಹುಟ್ಟಿಕೊಂಡಿತು.

ಪ್ರಾಂಕಿಶರ ರಾಜ್ಯ

ಪ್ರಾಂಕಿಶರು ಜರ್ಮೇನಿಯಾ (ಜರ್ಮನಿ)ದ ನಿವಾಸಿಗಳಾಗಿದ್ದು, ರೈನ್ ಮತ್ತು ದನುಬೆ ನದಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿದ್ದರು. ಇವರು ಟ್ಯುಟೋನಿಕ್ ಭಾಷೆಯನ್ನು ಮಾತನಾಡುತ್ತಿದ್ದರು. ಇವರಲ್ಲಿ ಸೆಕ್ಸೋನ್ಸ್, ವೆಂಡಾಲ್ಸ್, ಲಂಬಾರ್ಡ್, ಬರ್ಗುಂಡ್ಯಯನ್ನರು ಮುಂತಾದ ಬುಡಕಟ್ಟು ಜನಾಂಗಗಳಿದ್ದವು. ಇವರೆಲ್ಲರನ್ನೂ ಪ್ರಾಚೀನ ಗ್ರೀಕರು ‘ಬಾರ್ಬೇರಿಯನ್ನರು’ ಎಂಬುದಾಗಿ ಕರೆದಿದ್ದರು. ಏಕೆಂದರೆ ಇವರ‌್ಯಾರು ಗ್ರೀಕ್ ಭಾಷೆಯನ್ನು ಬಲ್ಲವರಾಗಿರಲಿಲ್ಲ. ಅದೇ ರೀತಿ ರೋಮನ್ನರೂ ಇವರನ್ನು ಬಾರ್ಬೇರಿಯನ್ನರು ಎಂಬುದಾಗಿ ಕರೆದದ್ದು ಇವರು ರೋಮನ್ ಸಾಮ್ರಾಜ್ಯದ ಹೊರಗಡೆ ಜೀವಿಸುತ್ತಿದ್ದುದಕ್ಕೆ. ರೋಮನ್ ಸಾಮ್ರಾಜ್ಯವನ್ನು ಇವರು ನಾಶಪಡಿಸಿದರು ಎನ್ನುವುದಕ್ಕಾಗಿ ಇವರನ್ನು ‘ಅನಾಗರಿಕರು’ ಎಂಬ ಹೆಸರಿನಿಂದಲೂ ಕರೆದರು. ಪ್ರಾಚೀನ ರೋಮನ್ ಸಾಮ್ರಾಜ್ಯವನ್ನು ಸಂಹರಿಸಿದವರಲ್ಲಿ ಪ್ರಾಂಕಿಶರೂ ಕೂಡ ತುಂಬ ಪ್ರಮುಖರಾದವರು. ಇವರು ಯುರೋಪಿನ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸುವವರಿದ್ದರು. ಮಧ್ಯ ಯೂರೋಪನ್ನು ಫ್ರಾಂಕಿಶರ ಸಂಸ್ಕೃತಿಯೂ ಆವರಿಸಿತು. ಕಾರಣ ಫ್ರಾಂಕಿಶರು ರೋಮನ್ನರ ಹಿರಿತನಕ್ಕೆ ಬಲಿಯಾಗದೆ ತಮ್ಮ ಯೋಧರ ಸದ್ಗುಣಗಳನ್ನು ಉಳಿಸಿಕೊಂಡಿದ್ದರು.

ರಾಜ ಕ್ಲೋರಿಸ್ಸನ (ಕ್ರಮೇಣ ಲೂಯಿಸ್ ಎಂದು ಬದಲಾಗಿದೆ) ನಾಯಕತ್ವದಲ್ಲಿ ಫ್ರಾಂಕರು ರೋಮನ್ ಸಾಮ್ರಾಜ್ಯವನ್ನು ಕ್ರಿ.ಶ.೪೮೬ರಲ್ಲಿ ಸೋಲಿಸಿದರು. ಇದರ ನಂತರ ಇವರ ಸಂಸ್ಕೃತಿ ಗಾಲ್‌ನ ಉದ್ದಗಲಕ್ಕೆ ಬೆಳೆಯಿತು. ಗಾಲ್ ಫ್ರಾನ್ಸ್ ಆಯಿತು, ಫ್ರೆಂಚರ ದೇಶವಾಯಿತು. ಕ್ಲೋರಿಸ್ಸನು ಮಧ್ಯಯುರೋಪಿನ ಸ್ವಲ್ಪ ಭಾಗವನ್ನು ಕೂಡ ಗೆದ್ದುಕೊಂಡನು. ಅಲೆಮನ್ನಿ ಎನ್ನುವ ಜರ್ಮನಿಯ ಬುಡಕಟ್ಟಿನವರನ್ನು ಸಂಪೂರ್ಣವಾಗಿ ಸೋಲಿಸಿದ ನಂತರ ಇವನು ಕ್ರೈಸ್ತ ಮತಸ್ಥನಾದನು. ಕಾರಣ ಯುದ್ಧದಲ್ಲಿ ತನಗೆ ಲಭಿಸಿದ ಜಯ ಕ್ರಿಸ್ತನ ಅನುಗ್ರಹದಿಂದ ಆಯಿತು ಎಂದು ನಂಬಿದ್ದನು. ಫ್ರಾಂಕಿಶ್ ವೀರ ಯೋಧರುಗಳು ತಮ್ಮ ನಾಯಕನ ಕೀಳುಮಟ್ಟದ ತೀರ್ಮಾನವನ್ನು ತೃಪ್ತಿಯಿಂದ ಒಪ್ಪಿ ಕೊಂಡರು. ಸ್ವತಂತ್ರವಾಗಿ ಉಳಿದಿದ್ದ ಬುಡಕಟ್ಟು ಜನಾಂಗಗಳ ಭಾಗಗಳನ್ನು ಇನ್ನೂ ತ್ವರಿತವಾಗಿ ಆಕ್ರಮಿಸಿಕೊಂಡನು. ಕ್ಲೋರಿಸನು ಯುದ್ಧಗಳಲ್ಲಿ ಬರ್ಬರವಾದ ಮತ್ತು ತೀರ ಕೆಳಮಟ್ಟದ ಸೇರ್ಪಡೆಯ ಮಾರ್ಗಗಳನ್ನು ಅನುಸರಿಸಿದನಾದರೂ, ಟೌಸನ ಗ್ರೆಗೋರಿ ತನ್ನ ಪುಸ್ತಕವಾದ, ‘‘ಹಿಸ್ಟರಿ ಆಫ್ ಫ್ರಾಂಕ್ಸ್ ’’ (ಫ್ರಾಂಕರ ಇತಿಹಾಸ)ನಲ್ಲಿ ‘‘ದೇವರ ಮುಂದೆ ನಿಷ್ಠೆಯಿಂದ ನಡೆದುಕೊಂಡದ್ದರಿಂದ ಇವನ ಎಲ್ಲಾ ಕಾರ್ಯಗಳಲ್ಲೂ ದೇವರು ಜಯವನ್ನು ಕೊಟ್ಟನು’’ ಎಂದು ಬರೆದಿದ್ದಾನೆ. ಇವನ ಕೆಳಮಟ್ಟದ ಧರ್ಮಶ್ರದ್ಧೆ ಸ್ಪೈಯಿನಿನ ಪಶ್ಚಿಮ ಗೋಥಿಕ್ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋಗುವಂತೆ ಮಾಡಿತು. ಫ್ರಾಂಕಿಶರ ಚರ್ಚ್‌ನಿಂದ ಇವನಿಗೆ ದೊರಕಿದ ಬೆಂಬಲದೊಡನೆ ಸ್ಪೈಯಿನಿನ ರಾಜ ಎರಡನೆ ಅಲರಿಕ್‌ನನ್ನೂ ವೋಗ್ ಯುದ್ಧದಲ್ಲಿ ಸೋಲಿಸಿದನಾದರೂ ಸ್ಪೈಯಿನನ್ನು ತನ್ನ ರಾಜ್ಯಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಲಿಲ್ಲ. ಕಾರಣ, ಮಹಾನ್ ಥಿಯೋಡೆರಿಕ್‌ನು ಪ್ರಬಲವಾಗಿ ಮಧ್ಯಪ್ರವೇಶ ಮಾಡಿ ಟ್ಯೂಟೋನಿಕ್ ರಾಜ್ಯಗಳ ನಡುವೆ ಸಮಾನಾವಾದ ಅಧಿಕಾರ ವ್ಯವಸ್ಥೆಯಿರುವುದನ್ನು ಬಯಸಿದನು.

ಕ್ರಿ.ಶ.೫೧೧ರಲ್ಲಿ ಕ್ಲೋರಿಸ್ ಮರಣ ಹೊಂದಿದನು. ಆ ನಂತರ ಸಾಮ್ರಾಜ್ಯವನ್ನು ಇವನ ನಾಲ್ಕು ಮಕ್ಕಳಿಗೆ ಸಮನಾಗಿ ಹಂಚಲಾಯಿತು. ಕ್ಲೋರಿಸ್‌ನ ಮೊದಲನೆಯ ಮಗ ಸಿಸ್ಸನ್ಸ್‌ನ ಕ್ಲೋಟೈನ್ ಎಂಬುವವನು ಕ್ರಿ.ಶ.೫೫೮ರಲ್ಲಿ ರಾಜ್ಯವನ್ನು ಒಂದುಗೂಡಿಸಿದ ನಾದರೂ ಕ್ರಿ.ಶ.೫೬೧ರಲ್ಲಿ ಮತ್ತೆ ರಾಜ್ಯವು ೪ ವಿಭಾಗಗಳಾಗಿ ಎರಡನೆಯ ವಿಭಜನೆ ಹೊಂದಿತು. ಕ್ಲಾರಿಬೆರ್ಟ್‌ನಿಗೆ ಪ್ಯಾರಿಸ್, ಚಿಲ್ಪೆಸಿಕ್‌ನಿಗೆ ನ್ಯೂಸ್ಟ್ರಿಯ, ಸಿಗಿಬೆರ್ಟ್‌ನಿಗೆ ಅಸ್ಟ್ರೇಶಿಯ ಮತ್ತು ಗ್ಯಾಂಟ್ರಾಮನಿಗೆ ಬರ್ಗಂಡಿ ದೊರೆಯಿತು. ಈ ನಾಲ್ಕು ರಾಜರುಗಳನ್ನು ಮರೋವರ್ಜಿಯನ್ ರಾಜರುಗಳೆಂದು ಕರೆಯಲಾಗಿದೆ. ಇವರ ಆಡಳಿತಾವಧಿಯಲ್ಲಿ ರಾಜ್ಯದ ತುಂಬ ಯುದ್ಧಗಳು ಮತ್ತು ಘರ್ಷಣೆಗಳಿದ್ದವು. ಇದರ ಜತೆಗೆ ಆಂತರಿಕ ಅವ್ಯವಸ್ಥೆಗಳು ಮತ್ತು ದಂಗೆಗಳು ಇದ್ದುದರಿಂದ ಫ್ರಾಂಕಿಶ್ ಸಾಮ್ರಾಜ್ಯದ ಹೊಂದಾಣಿಕೆ ಯನ್ನು ಮೆರೋವರ್ಜಿಯನ್ನರ ಆಳ್ವಿಕೆಯಲ್ಲಿ ಸಾಧಿಸಲಾಗಲಿಲ್ಲ. ಮಕ್ಕಳಿಗೆ ರಾಜ್ಯವನ್ನು ಹಂಚಿಕೊಡುವ ಫ್ರಾಂಕಿಶ್ ಪದ್ಧತಿ ರಾಜ್ಯದಲ್ಲಿ ಒಡಕನ್ನು ಮೂಡಿಸಿತು ಮತ್ತು ದುರ್ಬಲರನ್ನಾಗಿಸಿತು. ಕ್ಲೋರಿಸನ ನಂತರ ಸುಮಾರು ಎರಡು ಶತಮಾನಗಳ ಕಾಲ ಫ್ರಾಂಕ್‌ರ ಇತಿಹಾಸವು ವ್ಯರ್ಥ ಯುದ್ಧಗಳಲ್ಲಿ ಮತ್ತು ಭ್ರಾತೃದ್ವೇಷದಲ್ಲಿ ಮುಳುಗಿ ಹೋಯಿತು.

ಕರೋಲಿಂಜಿಯನ್ ಸಂತತಿ

ಅರಮನೆಯಲ್ಲಿನ ಕೆಲಸವನ್ನು ನೋಡಿಕೊಳ್ಳಲು ಮತ್ತು ರಾಜಮನೆತನದ ಆಸ್ತಿಪಾಸ್ತಿಗಳ ಉಸ್ತುವಾರಿ ನೋಡಿಕೊಳ್ಳಲು ಮೆರೋವಿಂಜಿಯನ್ ರಾಜರುಗಳು ಮೇಯರ್ಸ್ ಆಫ್ ದಿ ಪ್ಯಾಲೆಸ್ ಅರಮನೆಯ ಪಾಲಕರೆಂಬ ಅಧಿಕಾರಿಗಳನ್ನು ಇಟ್ಟುಕೊಂಡಿದ್ದರು. ರಾಜರು ಗಳ ಸೋಮಾರಿತನದಿಂದಾಗಿ ಮತ್ತು ದುರ್ಬಲತೆಯಿಂದಾಗಿ ಅರಮನೆಯ ಪಾಲಕರು ಹೆಚ್ಚು ಅಧಿಕಾರವುಳ್ಳವರಾಗಿ ಬೆಳೆದು ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರುವಂತಾದರು. ಸಭೆಗಳನ್ನು ನಡೆಸಿ ನ್ಯಾಯ ತೀರ್ಪು ಕೊಡುತ್ತಿದ್ದರು. ತಮ್ಮದೇ ಆದ ವಿಶೇಷ ಪಡೆಗಳನ್ನು ಸೃಷ್ಟಿಸಿಕೊಂಡರು. ತಮ್ಮ ಕ್ಷೇಮಕ್ಕೆಂದೇ ಈ ಪಡೆಗಳನ್ನು ಬಳಸಿಕೊಳ್ಳುತ್ತಿದ್ದರು.

ಲಂಡನ್ನಿನ ಪೆಪಿನ್ ಎಂಬುವವನು ಕ್ರಿ.ಶ.೬೧೨ರಲ್ಲಿ ಅಸ್ಟೇಸಿಯಾ ಅರಮನೆಯ ಪಾಲಕನಾದಾಗ, ಹೆಚ್ಚು ಪ್ರಬಲವಾಗಿ ಬೆಳೆದನು, ಹೆಚ್ಚು ಭೂಮಿಯನ್ನು ಸಂಪಾದಿಸಿದ್ದನು ಮತ್ತು ಹೆಚ್ಚು ಅಧಿಕಾರವುಳ್ಳವನಾಗಿದ್ದನು. ಇವನ ನಂತರ ಹೆರಿಸ್ಟಾಲಿನ್ ಪೆಪಿನ್ ಕ್ರಿ.ಶ.೬೮೭ರಲ್ಲಿ ಅರಮನೆಯ ಪಾಲಕನಾದನು. ಇವನು ಫ್ರಾಂಕರ ಇತಿಹಾಸಕ್ಕೆ ಹೊಸ ತಿರುವು ನೀಡಿದನು. ಇವನು ಯುದ್ಧ ಭೂಮಿಗೆ ಸೈನ್ಯವನ್ನು ಕೊಂಡೊಯ್ದು, ನ್ಯೂಸ್ಟ್ರಿಯನ್ನ ರನ್ನು ಟೆಸ್ಟ್ರಿ ಯುದ್ಧದಲ್ಲಿ ನಿರ್ಣಾಯಕವಾಗಿ ಸೋಲಿಸಿದನು ಮತ್ತು ಫ್ರಾಂಕರಿಗೆ ತಾತ್ವಿಕ ವಾಗಿಯಲ್ಲವಾದರೂ ಪ್ರಾಯೋಗಿಕವಾಗಿ ಇವನೇ ರಾಜನಾಗಿದ್ದನು. ಅರಮನೆಯ ಪಾಲಕರ ವೃತ್ತಿಗೆ ವಂಶಪಾರಂಪರ‌್ಯ ಪದ್ಧತಿಯನ್ನು ತಂದನು. ಫ್ರಾಂಕಿಶ್ ಆಡಳಿತವನ್ನು ಅಲೆಮೇನಿಯ, ತುರಿಂಜಿಯ ಮತ್ತು ಬವೇರಿಯಾಗಳಿಗೆ ವಿಸ್ತರಿಸಿದನು.

ಪೆಪಿನ್ನನ ಮರಣದ ನಂತರ, ಇವನ ಅನ್ಯ ಸಂಬಂಧದ ಮಗ ಚಾರ್ಲ್ ಮಾರ್ಟೆಲ್ ಎಂಬುವವನು ಕ್ರಿ.ಶ.೭೧೭ರ ದಂಗೆಯಲ್ಲಿ ಮೋಸದಿಂದ ಅಧಿಕಾರಕ್ಕೆ ಬಂದನು. ಪ್ರಬಲವಾದ ಒಂದು ಸೈನ್ಯವನ್ನು ಕಟ್ಟಿದನು; ಇದಕ್ಕೆ ಬೇಕಾದ ಹಣವನ್ನು ಚರ್ಚಿನ ಆಸ್ತಿ ಶ್ರೀಮಂತರಿಗೆ ಮಾರುವುದರಿಂದ ಸಂಪಾದಿಸಿದನು. ಮುಸ್ಲಿಮರು ಅಥವಾ ಸರಸೆನ್ಸರ ಮೇಲೆ ಯುದ್ಧ ಮಾಡಿದನು. ಕ್ರಿ.ಶ.೭೩೨ರಲ್ಲಿ ನಡೆದ ಟೌರ್ಸ ಯುದ್ಧದಲ್ಲಿ ಮುಸಲ್ಮಾನರನ್ನು ನಿರ್ಣಾಯಕವಾಗಿ ಸೋಲಿಸಿದನು. ಫ್ಯಾಂಕರನ್ನು ಅವರ ಸೆರೆಯಿಂದ ಬಿಡಿಸಿದನು. ಹೀಗಾಗಿ ಈ ಯುದ್ಧವು ಇವನಿಗೆೆ ಅಪಾರ ಕೀರ್ತಿ ಮತ್ತು ಪ್ರಾಬಲ್ಯವನ್ನು ತಂದುಕೊಟ್ಟಿತು. ಫ್ರಾಂಕಿಶ್ ಕ್ರಿಸ್ತ ಮತಸ್ಥರು. ಇದರಿಂದ ಆಪಾರ ತೃಪ್ತಿ, ಸಂತಸ ಪಟ್ಟರಾದರೂ, ಫ್ರಾಂಕರ ಚರ್ಚು ಇವನನ್ನು ಚರ್ಚಿನ ಆಸ್ತಿ ವಶಪಡಿಸಿಕೊಂಡದ್ದಕ್ಕಾಗಿ ಖಂಡಿಸಿತು.

ಕ್ರಿ.ಶ.೭೧೪ರಲ್ಲಿ ಚಾರ್ಲ್ ಮಾರ್ಟೆಲ್‌ನ ಮರಣಾನಂತರ ಪೆಪಿನ್ ದಿ ಶಾರ್ಟ್ ಮತ್ತು ಕಾಲೋಮ್ಯಾನ್ ಜೊತೆಯಾಗಿ ಅಧಿಕಾರಕ್ಕೆ ಬಂದರು. ಕಾಲೋಮ್ಯಾನ್ ‘‘ಮಾರ್ಟೆ ಕೆಸಿನೋ’’ ಎನ್ನುವ ಮಠಕ್ಕೆ ಹೊರಟು ಹೋದನು. ಪೆಪಿನ್ ರಾಜ್ಯ ವಿಸ್ತರಿಸುವ ಕಾರ್ಯದಲ್ಲಿ ತೊಡಗಿದನು. ಬವೇರಿಯದಲ್ಲಿನ ದಂಗೆಗಳನ್ನು ಅಡಗಿಸಿದನು ಮತ್ತು ಡಚ್ಚ್‌ನ ಮೇಲಿನ ಫ್ರಾಂಕರ ನಿಯಂತ್ರಣವನ್ನು ಬಿಗಿ ಮಾಡಿದನು. ತುಂಬ ಅನಾಗರಿಕವಾದ ಮತ್ತು ಅಂಧಶ್ರದ್ಧೆಯನ್ನು ಖಂಡಿಸಿ ಸಾಮಾನ್ಯ ಜನರ ನೈತಿಕ ಮಟ್ಟವನ್ನು ಉನ್ನತ ಸ್ಥಿತಿಗೆ ಏರಿಸಲಾಯಿತು. ಈ ವೇಳೆಗೆ ಎಲ್ಲಾ ಅಧಿಕಾರವು ಅರಮನೆಯ ಪಾಲಕನ ಕೈಯಲ್ಲಿ ಕೇಂದ್ರೀಕೃತವಾಗಿದ್ದ ಅಂಶವನ್ನು ಪರಿಗಣನೆಯಲ್ಲಿಟ್ಟುಕೊಂಡು, ಪೆಪಿನ್, ಪೋಪ್ ಝಕಾರಿಸ್‌ನಿಗೆ ರಾಜದೂತನನ್ನು ಕಳುಹಿಸಿ ಮೆರೋವಿಂಜಿಯಾದ ಕೈಗೊಂಬೆ ರಾಜನನ್ನು ಕೆಳಗಿಳಿಸುವ ಕ್ರಮಕ್ಕೆ ಒಪ್ಪಿಗೆ ಸೂಚಿಸಬೇಕೆಂದು ಕೇಳಿಕೊಂಡನು. ಪೆಪಿನ್ನನ ಕೋರಿಕೆಯನ್ನು ಒಪ್ಪಿಕೊಳ್ಳಲಾಯಿತು. ನಂತರ ಕ್ರಿ.ಶ.೭೫೧ರಲ್ಲಿ ಪೋಪ್ ಬೋನಿಫೇಸನು ಪೆಪಿನ್ನನನ್ನು ಫ್ರಾಂಕರ ರಾಜನನ್ನಾಗಿ ಮಾಡಿದನು. ಕರೋವಿಂಜಿಯನ್ ಕ್ರಾಂತಿ ಹೀಗೆ ಪೂರ್ಣಗೊಂಡಿತು. ಪೋಪ್ ಮತ್ತು ಫ್ರಾಂಕಿಶರ ನಡುವಿನ ಈ ಸಂಬಂಧ ಇನ್ನೂ ಗಾಢವಾಗಿ ಬೆಳೆಯಿತು ಹಾಗೂ ಪೆಪಿನ್ನನಿಗೆ ಪೋಪನು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಋಣ ತೀರಿಸುವ ಅವಕಾಶ ಬಂದಿತು.

ಪೋಪನ ಅಧಿಕಾರವನ್ನು ಮೊಟಕುಗೊಳಿಸಿ, ಇಟಲಿಯನ್ನು ಒಂದುಗೂಡಿಸಿ, ರೋಮನ್ನು ಮತ್ತೆ ಪಡೆಯುವ ಪ್ರಯತ್ನವನ್ನು ಲಂಬಾರ್ಡರು ಮಾಡಿದಾಗ, ಪೋಪ್ ಎರಡನೆಯ ಸ್ವೀಫನ್ನನು ಲಂಬಾರ್ಡಿಯದ ರಾಜ ಐಸ್ಟಲ್ಫ್‌ನನ್ನು ಅಡಗಿಸಲು ಪೆಪಿನನ್ನ ಸಹಾಯವನ್ನು ಕೇಳಿದನು. ಪೆಪಿನ್ನನು ಸಹಾಯವನ್ನು ಮಾಡಲು ಒಪ್ಪಿದನಲ್ಲದೆ ಪೋಪನು ಫ್ರಾಂಕಿಶ್ ವಸಾಹತುಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಸೈನ್ಯದ ಪಡೆಯನ್ನು ಕಳುಹಿಸಿ ಕೊಟ್ಟನು. ಪೆಪಿನ್ನನ ಸಹಾಯ ಮತ್ತು ಸ್ನೇಹ ಸೌಹಾರ್ದತೆಗಳಿಂದ ಮನೋಲ್ಲಾಸಗೊಂಡ ಪೋಪ್ ಎರಡನೆಯ ಸ್ಟೀಫನ್ನನು ಪೆಪಿನ್ನನಿಗೆ ಎರಡನೆಯ ಬಾರಿ ಕ್ರಿ.ಶ.೭೫೬ರಲ್ಲಿ ಪಟ್ಟಾಭಿಷೇಕ ಮಾಡಿಸಿದನು. ಇದರಿಂದ ಚರ್ಚ್ ಮತ್ತು ಫ್ರಾಂಕಿಶರ ಸಂಬಂಧ ಮತ್ತೂ ಬಲಗೊಂಡಿತು. ಮತ್ತೂ ಮುಂದುವರೆದು ಪೆಪಿನ್ ಎರಡು ಬಾರಿ ಐಸ್ವಲ್ಫ್‌ನ ಮೇಲೆ ಯುದ್ಧ ಮಾಡಿ ಕ್ರಿ.ಶ.೭೫೬ರಲ್ಲಿ ಆಲ್ಫ್ಸ್ ಪರ್ವತಗಳ ಕಣಿವೆಯಲ್ಲಿ ಅವನನ್ನು ಸೋಲಿಸಿದನು. ಇದರ ನಂತರ ಪೆಪಿನ್ನನು ‘‘ಪೆಪಿನ್ನನ ಸನ್ನದು’’ಎಂಬುದನ್ನು ಹೊರಡಿಸಿದನು. ಇದು ಪೋಪನ ರಾಜ್ಯಗಳೆಂಬ ಹೊಸ ರಾಜ್ಯಗಳನ್ನು ಸೃಷ್ಟಿಸಿತು. ಇದರ ಪರಿಣಾಮವಾಗಿ ಪೋಪರನ್ನು ಮಧ್ಯ ಇಟಲಿಯ ರಾಜಕೀಯ ಸಾರ್ವಭೌಮರನ್ನಾಗಿ ಮಾಡಲಾಯಿತು. ಈ ವ್ಯವಸ್ಥೆ ಕ್ರಿ.ಶ.೧೮೭೦ರವರೆಗೂ ಇತ್ತು. ಒಂದರ್ಥದಲ್ಲಿ ಹೇಳುವುದಾದರೆ ಇಂದಿನ ವ್ಯಾಟಿಕನ್ ನಗರ ಈ ಪೋಪರ ರಾಜ್ಯಗಳ ಪಳೆಯುಳಿಕೆಯ ಒಂದು ಉದಾಹರಣೆಯಾಗಿದೆ.

ಚಾರ್ಲ್‌ಮೇನ್‌ನ ಕಾಲ

ಮಧ್ಯಯುಗದ ಯುರೋಪಿನ ಇತಿಹಾಸದಲ್ಲಿ ತುಂಬ ಮುಖ್ಯರಾದ ವ್ಯಕ್ತಿಗಳಲ್ಲಿ ಚಾರ್ಲ್‌ಮೇನ್ ಅತಿ ಮುಖ್ಯನು. ಇವನು ಇತಿಹಾಸದಲ್ಲಿ ಚಾರ್ಲ್ ಮಹಾಶಯ ಎಂದು ಪ್ರಸಿದ್ಧನಾಗಿದ್ದಾನೆ. ಮಹಾನ್ ಶಿಲ್ಪಿ ಚಾರ್ಲ್‌ಮೇನನು ನಿರ್ಮಿಸಿದ ಸಾಮ್ರಾಜ್ಯವನ್ನು ಪುರಾತನ ರೋಮಿಗೆ ಮಾತ್ರ ಹೋಲಿಸಬಹುದಾಗಿದೆ. ಬಹುಮುಖ ಪ್ರತಿಭೆಯ ಈ ವ್ಯಕ್ತಿ ಮಧ್ಯಯುಗದಲ್ಲಿ ಹೊಸ ಸಂಸ್ಥೆಗಳು ಹುಟ್ಟಿಬರಲು ಭದ್ರ ಬುನಾದಿಯನ್ನು ಹಾಕಿದನು. ಇವನು ವಿದ್ಯಾಭ್ಯಾಸಕ್ಕೆ ನೀಡಿದ ಉತ್ತೇಜನ ಸಾಂಸ್ಕೃತಿಕ ಪುನರುತ್ಥಾನವನ್ನು ಉಂಟು ಮಾಡಿತು. ಇದನ್ನು ಕರೋಲಿಂಜಿಯನ್ ಪುನರುತ್ಥಾನ ಎಂದು ಬಣ್ಣಿಸಲಾಗಿದೆ. ಸಮಕಾಲೀನ ಜೀವನ ಚರಿತ್ರಕಾರನಾದ ಐನ್‌ಹಾರ್ಡ್ ಇವನನ್ನು ಶಕ್ತಿಶಾಲಿ, ಚಾಣಾಕ್ಷ, ಅಪರಿಮಿತ ಶಕ್ತಿ ಎಂದೆಲ್ಲ ಬಣ್ಣಿಸಿರುತ್ತಾನೆ.

ಪೆಪಿನ್ ಕ್ರಿ.ಶ.೭೬೮ರಲ್ಲಿ ಮೃತನಾದಾಗ, ಫ್ರಾಂಕಿಶ್ ಸಾಮ್ರಾಜ್ಯವನ್ನು ಇವನ ಮಕ್ಕಳಾದ ಚಾರ್ಲ್‌ಮೇನ್ ಮತ್ತು ಕಾಲೋನಿಯನ್ ಜತೆಗೂಡಿ ಆಳುತ್ತಿದ್ದರು. ಈ ಇಬ್ಬರು ಸೋದರರು ಘರ್ಷಣೆಯ ವ್ಯಕ್ತಿತ್ವದವರಾಗಿದ್ದು, ಒಬ್ಬರನ್ನೊಬ್ಬರು ಎಂದೂ ಮೆಚ್ಚಿಕೊಂಡವರಲ್ಲ. ಕ್ರಿ.ಶ.೭೭೧ರಲ್ಲಿ, ಒಂದು ವೇಳೆ ಕಾಲೋನಿಯನ್, ಅಕಾಲವಾಗಿ ಮೃತ್ಯವಿಗೆ ತುತ್ತಾಗದಿದ್ದರೆ ಒಂದು ಆಂತರಿಕ ಯುದ್ಧವೇ ಆರಂಭವಾಗುತ್ತಿತ್ತು. ಈ ಸಾವು ಚಾರ್ಲ್‌ಮೇನನನ್ನು ವಿಶಾಲವಾದ ಫ್ರಾಂಕಿಶ್ ಸಾಮ್ರಾಜ್ಯಕ್ಕೆ ಏಕೈಕ ಅಧಿಪತಿಯನ್ನಾಗಿ ಸೈನಾಡ್‌ನ ಮಾಡಿತು.

‘‘ಸ್ಯಾಕ್ಸನ್ನರು ಬರ್ಬರರಾಗಿದ್ದರು ಹಾಗೂ ಎಲ್ಬೆ ಮತ್ತು ಓಡರ್ ನದಿಗಳ ಪ್ರದೇಶಗಳಲ್ಲಿ ವಾಸವಾಗಿದ್ದರು. ಇವರು ಬುಡಕಟ್ಟಿನ ಮತ್ತು ಆದಿ ಮಾನವನ ಸಂಸ್ಕೃತಿ ಗಿಂತ ಮೇಲಕ್ಕೆ ಏರಿರಲಿಲ್ಲ’’ ಎಂದು ಟಾಸಿಟಸ್ ಬಣ್ಣಿಸಿದ್ದಾನೆ. ಫ್ರಾಂಕರಿಗೂ ಸ್ಯಾಕ್ಸನ್ನರಿಗೂ ಗಡಿಯಲ್ಲಿ ಯುದ್ಧ ಶಾಶ್ವತವಾಗಿ ನಡೆಯುತ್ತಿತ್ತು. ಸ್ಯಾಕ್ಸನ್ನರನ್ನು ಸೆರೆ ಹಿಡಿಯುವುದರ ಜತೆಗೆ ಕ್ರಿಶ್ಚಿಯನ್ನರಾಗಿ ಮಾಡಬೇಕೆನ್ನುವ ಆಸೆ ಚಾರ್ಲ್‌ಮೇನ್ನನು ಇವರ ಮೇಲೆ ಯುದ್ಧ ಮಾಡುವಂತೆ ಪ್ರೇರೇಪಿಸಿತು. ಆದ್ದರಿಂದ ಕ್ರಿ.ಶ.೭೭೨ ರಿಂದ ೭೭೪ರಲ್ಲಿ ಇವನು ಸ್ಯಾಕ್ಸನ್ನರನ್ನು ಸೋಲಿಸಿದನು, ಆದರೂ ಇದು ಪಾರ್ಶ್ವ ಸೋಲಾಗಿತ್ತು. ಕೆಲವೇ ವರ್ಷಗಳಲ್ಲಿ ಸ್ಯಾಕ್ಸನ್ನರು ದಂಗೆಯೆದ್ದರು ಮತ್ತು ಫ್ರಾಂಕಿಶ್ ಚರ್ಚಿಗೆ ತೊಂದರೆಯನ್ನುಂಟು ಮಾಡಿದರು. ಚಾರ್ಲ್‌ಮೇನ್ ಕ್ರಿ.ಶ.೭೮೨ರಲ್ಲಿ ಮತ್ತೆ ಸಾಕ್ಸನ್ನರ ಮೇಲೆ ದಾಳಿ ಮಾಡಿದನು. ಈ ದಾಳಿಯು ತುಂಬ ಕ್ರೂರ ಮತ್ತು ಕಠಿಣವಾಗಿತ್ತು. ಒಂದೇ ದಿನದಲ್ಲಿ ಸುಮಾರು ೪೫೦೦ ಸ್ಯಾಕ್ಸನ್ನರ ತಲೆಗಳನ್ನು ಕ್ರಿ.ಶ.೭೮೩ರಲ್ಲಿ ಕತ್ತರಿಸಿ ಹಾಕಿದನೆಂದು ಹೇಳಲಾಗಿದೆ. ಸಾವಿರಾರು ಜನರನ್ನು ಅಲ್ಲಿಂದ ಓಡಿಸಿ ಫ್ರಾಂಕಿಶರಿಗೆ ಹೊಸ ವಸಾಹತುವನ್ನು ನಿರ್ಮಿಸಿದನು. ಸ್ಯಾಕ್ಸನ್ನರಿಗೆ ಬಲವಂತವಾಗಿ ಕ್ರೈಸ್ತಧರ್ಮ ಬೋಧಿಸಿದನು, ಒಪ್ಪದವರಿಗೆ ಸಾವಿನ ಶಿಕ್ಷೆ ವಿಧಿಸಿದನು. ಇವನ ಕ್ರೂರವಾದ ವಿಧಾನಗಳು ಹೊಸ ಹೊಡೆದಾಟಕ್ಕೆ ದಾರಿ ಮಾಡಿಕೊಟ್ಟವು. ಇದರಿಂದ ಚಾರ್ಲ್‌ಮೇನನು ಬಲವಂತ ಮತ್ತು ಕ್ರೌರ್ಯತೆಗಳ ವ್ಯರ್ಥವನ್ನು ಅರ್ಥಮಾಡಿಕೊಂಡನು. ಆದ್ದರಿಂದ ಚಾರ್ಲ್‌ಮೇನನು ಸ್ಯಾಕ್ಸನ್ನರ ಬಗ್ಗೆ ತನ್ನ ನೀತಿಯನ್ನು ಸುಧಾರಿಸಿಕೊಂಡನು, ಹಾಗೂ ಕ್ರಿ.ಶ.೭೯೭ರಲ್ಲಿ ಒಂದು ಶಾಸನವನ್ನು ಹೊರಡಿಸಿ ಶಾಂತಿ ಮತ್ತು ಹೊಂದಾಣಿಕೆಯನ್ನು ಸ್ಥಾಪಿಸಲು ಸಾಧ್ಯವಾಗುವಂತೆ ಮಾಡಿದನು.

ಸ್ಪೈಯಿನಿನ ಮೇಲೆ ಚಾರ್ಲ್‌ಮೇನನು ಮಾಡಿದ ದಾಳಿಗೆ ಕ್ರೈಸ್ತರು ಮೊಹಮ್ಮದನ ಅನುಯಾಯಿಗಳ ಮೇಲೆ ಮಾಡಿದ ಧಾರ್ಮಿಕ ಯುದ್ಧದ ಮುಖವಾಡವಿದೆ. ಸರಗೊಸ್ಸದ ಬಳಿ ಇವನನ್ನು ತಡೆಯುವವರೆಗೂ ಸ್ಪೈನಿನ ಮೇಲಿನ ಇವನ ಯುದ್ಧವು ಸರಳ, ಸುಗಮವಾಗಿ ಸಾಗಿತ್ತು. ಸರಗೊಸ್ಸದ ಬಳಿ ರೇನ್ಸವಲ್ಲೆಸ್‌ನಲ್ಲಿ ರೊಲ್ಯಾಂಡ್ ಎನ್ನುವ ಬುಡಕಟ್ಟಿನ ಜನ ಫ್ರಾಂಕಿಶ್ ಸೈನ್ಯದ ಮೇಲೆ ಕ್ಷಿಪ್ರ ದಾಳಿ ನಡೆಸಿದರು. ಇದರಲ್ಲಿ ಚಾರ್ಲ್ ಮೇನನ ಸೈನ್ಯಾಧಿಕಾರಿ ಮಡಿದನು. ಇವನ ವೀರ ವ್ಯಕ್ತಿತ್ವದ ಸುತ್ತಮುತ್ತ ಕ್ರಮೇಣ ಶೌರ್ಯ, ಸಾಹಸ ಮತ್ತು ಪ್ರಣಯದ ಕಥೆಗಳು ಹುಟ್ಟಿಕೊಂಡವು.

ಕ್ರಿ.ಶ.೭೮೭ರಲ್ಲಿ ಬವೇರಿಯವು ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಯತ್ನಿಸಿತು. ಸಂತ ಕೊಲಂಬನ್ ಮತ್ತು ಉಳಿದ ಐರ್‌ಲ್ಯಾಂಡಿನ ಧರ್ಮಪ್ರಚಾರಕರು ಬವೇರಿಯದವರನ್ನು ಕ್ರೈಸ್ತರಾಗಿ ಮತಾಂತರಗೊಳಿಸಿದ್ದರು. ಬವೇರಿಯಾದವರು ಒಂದು ಮಾದರಿಯ ಸೆಲ್ಟಿಕ್ ಆಚರಣೆಗಳನ್ನು ಅಳವಡಿಸಿಕೊಂಡಿದ್ದರು. ಈ ಸೆಲ್ಟಿಕ್ ಪದ್ಧತಿಗಳನ್ನು ಸಂತ ಬೋನಿಫೇಸನ ಅಧ್ಯಕ್ಷತೆಯಲ್ಲಿ ಸುಧಾರಣೆಗಳಿಂದ, ಪೆಪಿನ್ನನ ಸಹಕಾರವನ್ನು ಬಳಸಿಕೊಂಡು ಬಹಿಷ್ಕರಿಸಲಾಗಿತ್ತು. ಇದರಿಂದಾಗಿ ಅತೃಪ್ತಿ ಹೊಗೆಯಾಡಲಾರಂಭಿಸಿ, ಫ್ರಾಂಕಿಶರ ಮತ್ತು ಬವೇರಿಯನ್ನರ ಹೊಂದಾಣಿಕೆಯು ಕಷ್ಟಸಾಧ್ಯವಾಯಿತು. ಚಾರ್ಲ್‌ಮೇನನ ಇಟಲಿ ಬಗ್ಗೆ ಧೋರಣೆಯನ್ನು ಬವೇರಿಯಾದ ಸಾಮಂತ ರಾಜ ಟಸ್ಸಿಲೋ ಕೂಡ ತುಂಬ ಉಗ್ರವಾಗಿ ವಿರೋಧಿಸಿದನು. ಟಸ್ಸಿಲೋನ ದಂಗೆಯನ್ನು ಹತ್ತಿಕ್ಕಲಾಗಿ, ಕ್ರಮೇಣ ಟಸ್ಸಿಲೋನನ್ನು ಬಂಧಿಸಿ, ಫ್ರಾಂಕಿಶರ ಅಧಿಕಾರವನ್ನು ಅವನ ಮೇಲೆ ಹೇರಲಾಯಿತು.

ಚಾರ್ಲ್‌ಮೇನನ ಗಡಿ ನೀತಿಯು ದೂರದೃಷ್ಟಿ ಮತ್ತು ಚೇತೋಹಾರಿಯದಾಗಿತ್ತು. ಅದರ ರಾಜ ಮಾರ್ಕ್‌ಫ್ರೆಂಟಿಯರ್‌ನನ್ನು ಕೊಂದು, ಸ್ಲಾವ್ಸ್‌ಗಳನ್ನು ಚಾರ್ಲ್‌ಮೇನನು ಸದೆಬಡಿದ ಪರಿಣಾಮವಾಗಿ ತೆರಿಂಜಿಯ ಮತ್ತು ಬೊಹೆಮಿಯ ಎಂಬ ಹೊಸ ರಾಜ್ಯಗಳು ಸೃಷ್ಟಿಯಾದವು. ನಾರ್ಸ್‌ಮನ್ನರ ದಾಳಿಗಳನ್ನು ಎದುರಿಸಲು ಡೇನಿಶ್‌ಮಾರ್ಕ್ (ಡೆನ್ಮಾರ್ಕ್) ಅನ್ನು ಸಂಘಟಿಸಲಾಯಿತು. ಪೋಪ್ ಮೂರನೆಯ ಸ್ಟೀಫನ್ನನ ಶತ್ರುವಾಗಿದ್ದ ಲಂಬಾರ್ಡಿಯ ರಾಜ ಡೆಸಿಡೇರಿಯಸ್‌ನ ಮಗಳು ಡೆಸಿಡೆರಟಳನ್ನು ಚಾರ್ಲ್‌ಮೇನನು ಮದುವೆಯಾದನು. ಇದರಿಂದಾಗಿ ಪೋಪ್ ಮತ್ತು ಚಾರ್ಲ್‌ಮೇನರ ನಡುವಿನ ಸಂಬಂಧಕ್ಕೆ ಮೋಡ ಮುಸುಕಿತು. ಚಾರ್ಲ್‌ಮೇನನು ಡೆಸಿಡೆರಟಳನ್ನು ಓಡಿಸಲಾಗಿ ಬಹುಬೇಗ ಅವನ ಮತ್ತು ಪೋಪನ ಸಂಬಂಧ ಹಿಂದಿನ ಸ್ಥಿತಿಗೆ ಮರಳಿತು. ಈ ಸ್ಥಿತಿಯನ್ನು ಸಹಿಸಲಾಗದೆ, ಚಾರ್ಲ್‌ಮೇನನ ಮೃತ ತಮ್ಮನಾದ ಕಾರ್ಲೋನಿಯನ್ನಿನ ಮಕ್ಕಳ ಹಕ್ಕು ಬಾಧ್ಯತೆಗಳ ವಿಷಯವನ್ನು ಮೂಲವಾಗಿಟ್ಟುಕೊಂಡು ಮಾವ ಡೆಸಿಡೇರಿಯಸ್ಸನು ಫ್ರಾಂಕಿಶರಲ್ಲಿ ಆಂತರಿಕ ದಂಗೆಯನ್ನು ಸೃಷ್ಟಿಸಲು ಪ್ರಯತ್ನಪಟ್ಟಾಗ, ಚಾಲ್ ಮೇರ್ನನು ಕ್ರಿ.ಶ.೭೪೪ರಲ್ಲಿ ಡೆಸಿಡೇರಿಯಸ್ಸನನ್ನು ಸೋಲಿಸಿ ಲಂಬಾರ್ಡಿಯನ್ನು ತನ್ನ ಸಂಸ್ಥಾನವನ್ನಾಗಿ ಮಾಡಿಕೊಂಡನು. ಮೂರನೆಯ ಸ್ಟೀಫನ್ನನ ನಂತರ ಪೋಪನಾದ ಒಂದನೆಯ ಹ್ಯಾಡ್ರಿಯನ್ನನ ಬಹುದಿನಗಳ ಬಯಕೆಯೂ ಇದಾಗಿತ್ತು. ಏಕೆಂದರೆ ಡೆಸಿಡೇರಿಯಸ್ಸನು ಪೋಪನ ಪ್ರದೇಶಗಳಾದ ಫೆರ್ರಾ, ಕೊಮಾಚಿಯ ಮತ್ತು ಪಿಯಾಂಜವನ್ನು ಆಕ್ರಮಿಸಿಕೊಂಡಿದ್ದನು.

ಪೋಪನ ಅಧಿಕಾರ ವ್ಯವಸ್ಥೆಗೆ ಹೊಸದಾಗಿ ಬಂದಿದ್ದ ಒಂದನೆಯ ಹ್ಯಾಡ್ರಿಯನ್ನನಿಗೆ ಅಧಿಕಾರ, ಆಸ್ತಿ ಮತ್ತು ಅಭಯಹಸ್ತಗಳು ತಾನಾಗಿಯೇ ಬಂದವು. ಸಹಜವಾಗಿಯೇ ಗುಂಪುಗಾರಿಕೆ ಮತ್ತು ಪಕ್ಷಪಾತಗಳು ಪೋಪನ ಆಯ್ಕೆಯ ವಿಷಯದಲ್ಲಿ ಕೆಲಸ ಮಾಡಲು ಆರಂಭವಾದವು. ಆದ್ದರಿಂದ ಮೂರನೆ ಲಿಯೋ ಪೋಪನಾದಾಗ ಒಂದನೆಯ ಹ್ಯಾಡ್ರಿಯನ್ ಮಾಡಿದ್ದ ಚರ್ಚಿನ ಎಲ್ಲಾ ನೇಮಕಾತಿಗಳನ್ನು ಸಾರಾಸಗಟಾಗಿ ಕಿತ್ತೊಗೆದನು. ಇದು ಅತೃಪ್ತಿಯನ್ನು ಮತ್ತು ಗಲಭೆಯನ್ನು ಹುಟ್ಟುಹಾಕಿತು. ಇದರ ಪರಿಣಾಮವಾಗಿ ಪೋಪ್ ಮೂರನೆಯ ಲಿಯೋನ ಮೇಲೆ ದಾಳಿ ನಡೆದು ಇವನನ್ನು ಕ್ರಿ.ಶ.೭೯೯ರಲ್ಲಿ ದುಸ್ತರನಾಗಿ ದಂಡಿಸಲಾಗಿತ್ತು. ತನ್ನ ಬೆಂಗಲಿಗರ ಸಹಾಯದಿಂದ ಮೂರನೆ ಲಿಯೋ ಚಾರ್ಲ್‌ಮೇನನನ್ನು ಕಂಡು ತನ್ನನ್ನು ರಕ್ಷಿಸುವಂತೆ ಮತ್ತು ಕಳೆದುಹೋಗಿರುವ ಪದವಿಗೆ ಮತ್ತೆ ಕೂರಿಸುವಂತೆ ಮೊರೆಹೊಕ್ಕನು. ಸಹಾಯವನ್ನೇ ಅಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆಯನ್ನು ವಿಧಿಸುವುದಾಗಿಯೂ ಕೂಡ ಚಾರ್ಲ್‌ಮೇನನು ಆಶ್ವಾಸನೆಯಿತ್ತನು. ಪೋಪನೊಡನೆ ಅಂಗರಕ್ಷಕರನ್ನು ಕಳುಹಿಸಿ ಕೊಟ್ಟನಲ್ಲದೆ ಕ್ರಿ.ಶ.೮೦೦ರಲ್ಲಿ ಪೋಪ್ ಮೂರನೆ ಲಿಯೋನ ಮೇಲಾಗಿರುವ ಗಲಭೆಗಳನ್ನು ತಿಳಿದುಕೊಳ್ಳಲು ಚಾರ್ಲ್‌ಮೇನನು ಖುದ್ದಾಗಿ ರೋಮಿಗೆ ಬಂದನು.

ವಿವರವಾಗಿ ವಿಷಯವನ್ನು ಕೇಳಿದ ಚಾರ್ಲ್‌ಮೇನನಿಗೆ ತಪ್ಪಿತಸ್ಥರು ಪಶ್ಚಾಲಿಸ್ ಮತ್ತು ಕ್ಯಾಂಪನಸ್ ಎಂದು ತಿಳಿಯಿತು. ಇವರಿಗೆ ಮೊದಲು ಮರಣದಂಡನೆ ವಿಧಿಸಿ, ಕ್ರಮೇಣ ಕ್ಷಮೆ ನೀಡಲಾಯಿತು. ಚಾರ್ಲ್‌ಮೇನನ ಈ ಔದಾರ್ಯ ಪೋಪ್ ಮೂರನೆಯ ಲಿಯೋನಿಗೆ ಇವನ ಮೇಲಿನ ಅಭಿಮಾನವನ್ನು ಇನ್ನೂ ಹೆಚ್ಚಸಿತು; ಚಾರ್ಲ್‌ಮೇನನು ಕ್ರಿ.ಶ.೮೦೦ರ ಕ್ರಿಸ್‌ಮಸ್ ಹಬ್ಬಕ್ಕೆ ರೋಮಿಗೆ ಬಂದು ಸಂತ ಪೀಟರನ ಚರ್ಚ್‌ನಲ್ಲಿ ದೇವರ ಮುಂದೆ ತಲೆಬಾಗಿಸಿ ನಿಂತಾಗ ಮೂರನೆಯ ಲಿಯೋ ಇವನಿಗೆ ಕಿರೀಟಧಾರಣೆ ಮಾಡಿ ಚಕ್ರವರ್ತಿ ಎಂದು ಸಾರುವುದರ ಜೊತೆಗೆ ಕೈ ಮುಗಿದು ನಿಂತನು. ಇದು ಚಾರ್ಲ್ ಮೇನನಲ್ಲಿ ಅತ್ಯಾಶ್ಚರ್ಯವನ್ನು ಉಂಟು ಮಾಡಿತು ಎಂದು ಐನ್‌ಹಾರ್ಡ್ ಬರೆದಿರುತ್ತಾನೆ. ಸೀಸರನ ಅನಂತರ ರೋಮ್ ಸಾಮ್ರಾಜ್ಯಕ್ಕೆ ಚಕ್ರಾಧಿಪತಿಯಾಗುವುದನ್ನು ಚಾರ್ಲ್‌ಮೇನನು ನಿಜವಾಗಿಯೂ ಬಯಸಿದ್ದನು ಮತ್ತು ಬೈಜಾಂಟೈನಿ ಅಧಿಕಾರದ ಒಪ್ಪಿಗೆ ಪಡೆಯಲು ಕಾನ್‌ಸ್ಟಾಂಟಿನೋಪಲ್‌ನ ಜತೆ ಸಂಧಾನ, ಮಾತುಕತೆಗಳನ್ನು ನಡೆಸಲು ಆರಂಭಿಸಿದ್ದನು. ಬೈಜಾಂಟೈನಿನ ಸ್ಥಿತಿಗಳು ತುಂಬ ಹದಗೆಟ್ಟಿದ್ದರಿಂದ ಇದರ ಒಪ್ಪಿಗೆಯೂ ಕೂಡ ಇವನಿಗೆ ಸಿಕ್ಕಿತು. ಪರಿಣಾಮವಾಗಿ ಪಶ್ಚಿಮ ಯೂರೋಪ್ ಮತ್ತೆ ಚೇತರಿಸಿಕೊಂಡಿತು. ಇಷ್ಟೆಲ್ಲ ಆದರೂ, ಚಾರ್ಲ್‌ಮೇನನಿಗೆ ಪೋಪ ಮೂರನೆಯ ಲಿಯೋ ಕಿರೀಟಧಾರಣೆ ಮಾಡಿದ್ದುದು ಇಷ್ಟವಾಗಿರಲಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಕಾರಣ, ಇವನಿಗೆ ಚಕ್ರವರ್ತಿಯಾಗಲು ಇಷ್ಟವಿರಲಿಲ್ಲ ಎಂದಲ್ಲ, ಆದರೆ ಹೀಗೆ ಪೋಪನು ಕಿರೀಟ ಧಾರಣೆ ಮಾಡುವುದರಿಂದ ಚಕ್ರವರ್ತಿಯ ಉನ್ನತ ಅಧಿಕಾರವನ್ನು ಕೊಡುವ ಹಕ್ಕು, ಅಧಿಕಾರ ಪೋಪನ ಕೈಯಲ್ಲಿದೆ ಅಥವಾ ಅವನ ಇಚ್ಛೆಯಾಗಿದೆ ಎಂದು ಬರುತ್ತಿದ್ದ ಅಭಿಪ್ರಾಯವು ಚಾರ್ಲ್‌ಮೇನನಿಗೆ ಇಷ್ಟವಾಗಿರಲಿಲ್ಲ.

ಚಾರ್ಲ್‌ಮೇನನು ಬಹಳ ದೊಡ್ಡ ಆಡಳಿತಗಾರನಾಗಿದ್ದನು. ಆಡಳಿತವನ್ನು ಸುಧಾರಿಸಲು ‘‘ಕ್ಯಾಪಿಟುಲರೀಸ್’’ ಎನ್ನುವ ಶಾಸನಗಳನ್ನು ಹೊರಡಿಸಿದನು. ರಾಜ್ಯದ ಆದಾಯದ ಮೂಲಗಳನ್ನು ಬಹುತೇಕವಾಗಿ ಹೆಚ್ಚಿಸಿದನು. ರಾಜಮನೆತನಗಳ ಆಸ್ತಿಪಾಸ್ತಿಗಳಿಂದ ಆದಾಯವನ್ನು ಸೃಷ್ಟಿಸಿದನು; ತೆರಿಗೆ ಮತ್ತು ಸುಂಕ, ನ್ಯಾಯಸ್ಥಾನಗಳಲ್ಲಿ ವಿಧಿಸಿದ ದಂಡ, ರಾಜ್ಯವಶಮಾಡಿಕೊಳ್ಳುವುದರಿಂದ, ದಂಡಯಾತ್ರೆಗಳಿಂದ, ಶ್ರೀಮಂತರ, ಪುರೋಹಿತರ ಉಡುಗೊರೆಗಳಿಂದ ಮತ್ತು ಇನ್ನೂ ಮುಂತಾದ ಮಾರ್ಗಗಳಿಂದ ಬರುತ್ತಿದ್ದ ಆದಾಯಗಳಿಂದ ರಾಜ್ಯದ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಿದ್ದನು. ತನ್ನ ಅರಮನೆಯನ್ನು ತನಗೆ ಇಷ್ಟವಾದ ಅಚೆನ್ ಅಂದರೆ ಐಲಾ ಚಾಪೆಲ್ಲ ಎನ್ನುವಲ್ಲಿ ನಿರ್ಮಿಸಿಕೊಂಡಿದ್ದನು. ಸರ್ಕಾರದ ಆಡಳಿತ ಕ್ರಮವನ್ನು ಸುಗಮವಾಗಿ ನಡೆಸಲು ಸುಮಾರು ಅಧಿಕಾರಿಗಳನ್ನು ನೇಮಿಸಿದ್ದನು. ಸಾಮಾನ್ಯ ಜನರು ಮತ್ತು ಪುರೋಹಿತರಿಂದ ಕೂಡಿದ ‘‘ಮೇಫೀಲ್ಡ್ಸ್’’ ಎನ್ನುವ ವಾರ್ಷಿಕ ಸಭೆಗಳನ್ನು ರಾಜ್ಯದ ಮತ್ತು ಧಾರ್ಮಿಕ ವಿಷಯಗಳನ್ನು ಚರ್ಚಿಸಲು ಕರೆದನು. ಕಂಟ್ರಿ(ಪ್ರದೇಶ) ಆಡಳಿತದ ಮುಖ್ಯ ಘಟಕವಾಗಿತ್ತು. ಇದನ್ನು ಒಬ್ಬ ಗ್ರಾಫ್ ಎನ್ನುವ ಕೌಂಟ್‌ನು ನಿರ್ವಹಿಸಿದ್ದನು. ಕಂಟ್ರಿಗಳನ್ನು (ಒಂದು ಪ್ರದೇಶವನ್ನು) ನೂರು ಘಟಕಗಳಾಗಿ ವಿಂಗಡಿಸಿ ಇದನ್ನು ಸಂಟನೈರಿ ಅಥವಾ ‘‘ನೂರು ಜನರು’’ ಎಂಬುದರ ಕೈಯಲ್ಲಿ ಇಟ್ಟಿದ್ದನು. ನಿರಂತರ ಮೇಲ್ವಿಚಾರಣೆಗೆ ಅನುಕೂಲವಾಗುವಂತೆ ಸಾಮ್ರಾಜ್ಯವನ್ನು ಸರ್ಕ್ಯೂಟ್‌ಗಳಾಗಿ ವಿಂಗಡಿಸಿದ್ದನು. ಈ ಸರ್ಕ್ಯೂಟ್‌ಗಳನ್ನು ‘‘ಮಿಸ್ಸಿ ಡೊಮಿನಸಿ’’ ಎನ್ನುವ ಅಧಿಕಾರಿಗಳು ವೀಕ್ಷಿಸುತ್ತಿದ್ದರು.

ಚಾರ್ಲ್‌ಮೇನ್ ಒಬ್ಬ ಅವಿದ್ಯಾವಂತನಾದರೂ ವಿದ್ಯಾಭ್ಯಾಸದ ಕಡೆಗೆ ಅಪಾರವಾದ ಗಮನ ಹರಿಸಿದನು. ಕಲಿಕೆಗೆ ಮತ್ತು ವಿದ್ಯಾಭ್ಯಾಸಕ್ಕೆ ಬಹಳ ಉತ್ತೇಜನ ನೀಡಿದನು. ವಿದ್ವಾಂಸರುಗಳು ತನ್ನ ಸುತ್ತ ಸದಾ ಇರುವುದನ್ನು ಬಯಸುತ್ತಿದ್ದನು. ವಿದ್ಯಾವಂತ ಪುರೋಹಿತ ಜನರಿಗೆ ಒಂದು ಶಾಸನವನ್ನು ಹೊರಡಿಸಿ ಅವರು ‘‘ಕೀಳು ಸ್ಥಿತಿಯಲ್ಲಿರುವ ಮಕ್ಕಳ ಜತೆಯಲ್ಲೆ ಅಲ್ಲದೆ ಸ್ವತಂತ್ರ ಜನರ (ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ) ಮಕ್ಕಳ ಜತೆಯೂ ನಿರರ್ಗಳವಾಗಿ ಸಂಪರ್ಕ ಇಟ್ಟುಕೊಳ್ಳುವಂತೆ’’ ಆಜ್ಞಾಪಿಸಿದನು. ‘‘ಶಾಲೆಗಳನ್ನು ತೆರೆದು, ಅಲ್ಲಿ ಗಂಡುಮಕ್ಕಳಿಗೆ ಓದುವುದು, ಬರೆಯುವುದು ಮತ್ತು ಸ್ಸಾಲ್ಮ್‌ನ ಜ್ಞಾನವನ್ನು, ಹಾಡುಗಳನ್ನು, ಋತುಮಾಸದ ದಿನಗಳನ್ನು ಮತ್ತು ವ್ಯಾಕರಣ ಕಲಿಸಬೇಕೆಂದು’’ ನಿರ್ದೇಶನ ನೀಡಿದ್ದನು ಮತ್ತು ‘‘ಎಲ್ಲಾ ಸಾಮಾನ್ಯ ಜನರು ದೇವರ ಪ್ರಾರ್ಥನೆ ಮತ್ತು ಧರ್ಮವನ್ನು ಕಲಿತಿರಬೇಕು’’ ಎಂದು ಆಜ್ಞೆಯಿತ್ತಿದ್ದನು. ಅವಿದ್ಯಾವಂತ ನಾಗಿದ್ದೂ, ಸರಿಯಾದ ವಿದ್ಯಾಭ್ಯಾಸವಿಲ್ಲದಿದ್ದರೂ ವಿದ್ಯೆಯನ್ನು ಹೇಗೆ ಗೌರವಿಸಬೇಕೆಂದು ಚಾರ್ಲ್‌ಮೇನನಿಗೆ ತಿಳಿದಿತ್ತು. ಆದ ಕಾರಣ ಇವನಲ್ಲಿದ್ದ ‘‘ವಿದ್ಯೆಯ ದಾಹ’ ಮನುಕುಲ ಉದ್ಧಾರದ ಎಲ್ಲಾ ಅಂಶಗಳಿಗಿಂತ ಮುಖ್ಯವಾದದ್ದು. ಗ್ರೀಕ್ ಮತ್ತು ರೋಮನ್ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಟ್ಟ ಖ್ಯಾತಿ ಚಾರ್ಲ್‌ಮೇನನದ್ದು.

ಕರೋಲಿಂಜಿಯನ್ ಸಾಮ್ರಾಜ್ಯದ ಪತನ

ಕ್ರಿ.ಶ.೮೧೪ರಲ್ಲಿ ಚಾರ್ಲ್‌ಮೇನನು ಮೃತಪಟ್ಟ ನಂತರ ಇವನ ಮಗ (ದೈವ ಭಕ್ತ) ಲೂಯಿಸ್ ಇಡೀ ಸಾಮ್ರಾಜ್ಯದ ಆಳ್ವಿಕೆಗೆ ಬಂದನು. ಸುಸಂಸ್ಕೃತ ಮತ್ತು ನಾಗರಿಕನೂ ಆದ ಈತನ ಪ್ರಜೆಗಳು ತುಂಬ ಅನಾಗರಿಕರಾಗಿದ್ದರು. ಸಾಮ್ರಾಜ್ಯವನ್ನು ವಿಂಗಡಿಸುವ ಸಲುವಾಗಿ ತನ್ನ ಮೇಲೆ ಇಟಲಿಯಲ್ಲಿ ದಂಗೆಯೆದ್ದಿದ್ದ ಲಂಬಾರ್ಡಿಯದ ರಾಜ ತನ್ನ ಮಲ ಸಹೋದರ ರಾಜ ಬರ್ನಾರ್ಡ್‌ನನ್ನು ಶಿಕ್ಷಿಸಿ, ಸಾಮ್ರಾಜ್ಯವನ್ನು ವಿಭಜಿಸಲಾಗುವುದಿಲ್ಲ ಎಂದು ತೀರ್ಪಿತ್ತನು. ಲೂಯಿಸನಿಗೆ ಪೋಪನ ಮೇಲೆ ಗೌರವ ಭಕ್ತಿಯಿದ್ದರೂ ಸಾಮ್ರಾಜ್ಯಕ್ಕೆ ಆತನೇ ಅಧಿಪತಿ ಎಂದು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಪೋಪನು ಧಾರ್ಮಿಕ ವಿಷಯಗಳಲ್ಲಿ ಮಾತ್ರ ಸಾರ್ವಭೌಮ, ಆದರೆ ಸಾಮ್ರಾಜ್ಯದ ಆಸ್ತಿ, ವಸಾಹತು ಪ್ರದೇಶಗಳಿಗೆ ಸಂಬಂಧಿಸಿದಾಗ ಅವನೊಬ್ಬ ಸಾಮಂತನಷ್ಟೇ ಎಂಬ ಅಭಿಪ್ರಾಯವುಳ್ಳವ ನಾಗಿದ್ದನು. ಈ ವಿಷಯ ರಾಜ್ಯ ಮತ್ತು ಚರ್ಚಿನ ನಡುವೆ ಎಂದು ವಿವಾದವಾಗಿಯೇ ಲೂಯಿಸ್ ಬದುಕಿರುವವರೆಗೆ ಉಳಿದಿತ್ತು.

ಭಕ್ತಿಶ್ರದ್ಧೆಯ ಲೂಯಿಸ್ ಕ್ರಿ.ಶ.೮೪೦ರಲ್ಲಿ ಸತ್ತನಂತರ, ಸಿಂಹಾಸನಕ್ಕಾಗಿ ಇವನ ಮಕ್ಕಳಲ್ಲಿ ಆರಂಭವಾದದ್ದು ಯುದ್ಧ, ಕ್ರಿ.ಶ.೮೪೩ರಲ್ಲಿ ವರ್ಡುನ್ನಲ್ಲಿ ನಡೆದ ಒಪ್ಪಂದದಿಂದ ಅಂತ್ಯವಾಯಿತು. ಈ ಒಪ್ಪಂದದ ಪ್ರಕಾರ ರ‌್ಹೈನ್ ಪ್ರದೇಶ, ಸುಮಾರು ಮಧ್ಯ ಯುರೋಪಿನ ಪ್ರದೇಶ ಮತ್ತು ಚಕ್ರವರ್ತಿ ಎಂಬ ಬಿರುದು ಲೋಥೈರ್ ಎಂಬುವವನಿಗೆ ದೊರಕಿತು. ಇವನ ಮಲ ತಮ್ಮ ಚಾರ್ಲ್ಸ್ ದಿ ಬೋಲ್ಡ್ ನಿಗೆ ಆಧುನಿಕ ಫ್ರಾನ್ಸ್ ಎಲ್ಲವೂ ಸಿಕ್ಕಿದರೆ, ಜರ್ಮನಿಯ ಲೂಯಿಸನಿಗೆ ಜರ್ಮನಿಯ ಎಲ್ಲ ಭಾಗಗಳು ದೊರೆತವು. ಕ್ರಿ.ಶ.೮೫೫ರಲ್ಲಿ ಲೊಥೈರ್‌ನ ಸಾವಿನ ನಂತರ ಮಧ್ಯ ಯೂರೋಪು ಮತ್ತೆ ವಿಭಜನೆ ಗೊಂಡಿತು. ಚಾರ್ಲ್ಸ್‌ನನ್ನು ಕ್ರಿ.ಶ.೮೯೫ರಲ್ಲಿ ಪಟ್ಟಕ್ಕೇರಿಸಲಾಯಿತು. ಇದಾದ ಸ್ವಲ್ಪ ಸಮಯದಲ್ಲೆ ಜರ್ಮನಿಯನ್ನು ಆಳುತ್ತಿದ್ದ ಜರ್ಮನ್ನಿನ ಲೂಯಿಸ್ ಸತ್ತ ಕೂಡಲೆ ಆ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಚಾರ್ಲ್ಸ್‌ನು ಪ್ರಯತ್ನ ಪಟ್ಟನು. ಚಾರ್ಲ್ಸನ ಈ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಘರ್ಷಣೆ ಮತ್ತು ದಂಗೆಗಳು ತಲೆಯೆತ್ತಿದವು. ಕರೋಲಿಂಜಿ ಯನ್ ಸಾಮ್ರಾಜ್ಯದಲ್ಲಿ ಸಂಯುಕ್ತ ಸಂಸ್ಥಾನದ ಲಕ್ಷಣಗಳನ್ನು ಕಾಣಬಹುದಾಗಿತ್ತು. ಒಂಬತ್ತನೆಯ ಶತಮಾನವು ತುಂಬ ಮುಖ್ಯವಾದ ಬದಲಾವಣೆಗಳ ಕಾಲವಾಗಿತ್ತು. ಕ್ರಿ.ಶ.೮೧೪ ರಿಂದ ೮೭೭ರ ವರೆಗೆ ನಾರ್ಸರು ಮತ್ತು ಆಂತರಿಕ ಗಲಭೆಗಳ ಒಟ್ಟಾರೆಯ ಪರಿಣಾಮದಿಂದಾಗಿ ಕರೋಲಿಂಜಿಯನ್ ಸಾಮ್ರಾಜ್ಯವು ಬಿರುಕು ಬಿಡಲು ಆರಂಭಿಸಿತು. ಕೇಂದ್ರೀಕೃತ ಸರ್ಕಾರ ಮುರಿದುಬಿತ್ತು. ಇದರಿಂದಾಗಿ ದಿನನಿತ್ಯದ ವ್ಯಾಪಾರ ವ್ಯವಹಾರಗಳನ್ನು ನಡೆಸಿಕೊಳ್ಳಲು ಸಮಾಜವು ತನ್ನದೇ ಆದ ಪದ್ಧತಿಗಳನ್ನು ಸೃಷ್ಟಿಸಿಕೊಂಡಿತು, ಇದರ ಒಟ್ಟಾರೆ ಪರಿಣಾಮವಾಗಿ ಭೂಮಾಲಿಕ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು.

ಪವಿತ್ರ ರೋಮನ್ ಸಾಮ್ರಾಜ್ಯ

ಕರೋಲಿಂಜಿಯನ್ ವಂಶದ ಕಟ್ಟಕಡೆಯ ರಾಜನೆಂದರೆ ಲೂಯಿಸ್ ದಿ ಚೈಲ್ಡ್ (ಕ್ರಿ.ಶ.೮೯೯-೯೧೧). ಇವನು ಚಾರ್ಲ್‌ಮೇನ ಮತ್ತು ಅರ್ನಫ್ ಎಂಬುವವರ ಅಕ್ರಮ ಸಂಬಂಧದಿಂದ ಹುಟ್ಟಿದವನಾಗಿದ್ದನು. ಇವನ ಸಾವಿನ ನಂತರ ಸ್ಯಾಕ್ಸನ್ನರು ಮತ್ತು ಉಳಿದ ಜರ್ಮನ್ ಶ್ರೀಮಂತರು ಫ್ರೆಂಕೋನಿಯಾದ ಸಾಮಂತನಾಗಿದ್ದ ಕಾನ್ರಾಡ್ (ಕ್ರಿ.ಶ.೯೧೧-೯೧೮) ಅನ್ನು ಮುಂದಿನ ರಾಜನಾಗಿ ಆಯ್ಕೆ ಮಾಡಿದರು. ತುಂಬ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದ ಸಾಮಂತ ರಾಜರುಗಳ ಮೇಲೆ ಪುನಃ ರಾಜ ಮನೆತನದ ಅಧಿಕಾರವನ್ನು ಸ್ಥಾಪಿಸಲು ಈತ ತನ್ನೆಲ್ಲ ಕಾಲವನ್ನು ಕಳೆದನು. ಆದರೆ ಅಪಾರವಾಗಿ ಬೆಳೆದು ನಿಂತಿದ್ದ ಪ್ರಾಂತೀಯತೆಯಿಂದ ಮತ್ತು ದ್ವೇಷ, ಅಸೂಯೆಗಳಿಂದ ಸೋತನು. ಕ್ರಿ.ಶ.೯೧೮ರಲ್ಲಿ ಕಾನ್ರಾಡನು ಸತ್ತ ನಂತರ ಹೆನ್ರಿ ದಿ ಫೌಲರ್ ಎಂಬುವವನು ಅಧಿಕಾರಕ್ಕೆ ಬಂದು ಡೇನರಿಂದ ಸಾಮ್ರಾಜ್ಯವನ್ನು ರಕ್ಷಿಸಿದನು. ಸಾವಿನ ಮಂಚದಿಂದ ಇವನ ತಂದೆ ಕಾನ್ರಾಡ್ ಶ್ರೀಮಂತ ಜಮೀನುದಾರರ ಆಂತರಿಕ ವಿಷಯಗಳಲ್ಲಿ ಪಾಲ್ಗೊಳ್ಳದಿರಲು ಹೇಳಿದ ಬುದ್ದಿವಾದವನ್ನು ಅಕ್ಷರಶಹ ಪಾಲಿಸಿದನು. ಹೀಗಾಗಿ, ಜರ್ಮನಿಯ ಶ್ರೀಮಂತರ ಮೇಲೆ ಇವನ ಅಧಿಕಾರ ಬರೇ ತಾತ್ವಿಕವಾಗಿತ್ತು ಹಾಗೂ ಅವರ ಆಂತರಿಕ ವಿಷಯಗಳಲ್ಲಿ ತಲೆಹಾಕುವುದರಿಂದ ದೂರ ಸರಿದಿದ್ದನು.

ಹೆನ್ರಿ ದ ಫೌಲರ್‌ನ ನಂತರ ಅಟ್ಟೋ, (ಅಟ್ಟೋ ದಿ ಗ್ರೇಟ್) ‘‘ಸಾರ್ವಭೌಮ ಅಟ್ಟೋ’’ (ಕ್ರಿ.ಶ.೯೩೬-೯೭೩) ಎಂದು ಕರೆಯಲಾಗಿರುವವನು ಅಧಿಕಾರಕ್ಕೆ ಬಂದನು. ಇವನು ಸಿಂಹಾಸನಕ್ಕೆ ಬರುವ ವಿಷಯದಲ್ಲಿ ಅಪಾರ ವಿರೋಧಗಳು ಮತ್ತು ಸಮಸ್ಯೆಗಳಿದ್ದವು. ಇವನ ಮಲ ತಮ್ಮ ತಾಂಕ್ಮಾರ್ ಎಂಬುವವನು ಕೂಡ ವಿರೋಧಿಸಿದ್ದನು. ಇವನನ್ನು ದುರಾಸೆಯ ಶ್ರೀಮಂತರುಗಳು ಮತ್ತು ಶ್ರೀಮಂತ ಡೇನರು ಕೂಡ ಬೆಂಬಲಿಸಿದ್ದರು. ಆದರೆ ಅಟ್ಟೋ, ಜರ್ಮನಿಯ ಇತಿಹಾಸ ಕಂಡ ಮಹಾ ಆಳ್ವಿಕೆದಾರನಾದ್ದರಿಂದ  ಎಲ್ಲಾ ವಿರೋಧಗಳನ್ನು, ದಂಗೆಯನ್ನು ಕಾನ್ರಾಡ್ ದ ರೆಡ್ ಎಂಬುವ ರಾಜಮನೆತನದವನ ಬೆಂಬಲದಿಂದ ಸದೆಬಡಿದನು. ರಾಜಮನೆತನದವರ ಪೂರ್ಣ ಬೆಂಬಲವನ್ನು ಪಡೆದುಕೊಂಡು ಯಾವ ದಂಗೆಗಳೂ ಇಲ್ಲದೆ ಶಾಂತಿಯುತವಾದ ವಾತಾವರಣವನ್ನು ಸೃಷ್ಟಿಸಿದನು. ಸಾಮ್ರಾಜ್ಯದ ಪೂರ್ವ ದಿಕ್ಕಿನಲ್ಲಿ ದಾಳಿ ಮಾಡುತ್ತಿದ್ದ ಮ್ಯೊಗ್ಯಾರ್ಸ್ ಎಂಬುವವರನ್ನು ಇಂದಿನ ಆಧುನಿಕ ಹಂಗೇರಿಯಲ್ಲಿ ನೆಲೆಯೂರುವಂತೆ ಮಾಡಿದನು. ಜರ್ಮನಿಯನ್ನು ಏಕೀಕರಣಗೊಳಿಸಲು ಅಪಾರವಾಗಿ ಪ್ರಯತ್ನಪಟ್ಟನಾದರೂ ಇಟಲಿಯ ವಿಷಯವಾಗಿ ತಳೆದ ನಿಲುವು ಅದಕ್ಕೆ ಆಸ್ಪದ ಕೊಡಲಿಲ್ಲ.

ಪೋಪನ ಸಾಮ್ರಾಜ್ಯ ತುಂಬ ದುಸ್ಥಿತಿಯಲ್ಲಿತ್ತು; ಈ ಸಮಯವು ಇಟಲಿಯ ಆಂತರಿಕ ಸಮಸ್ಯೆಗಳಲ್ಲಿ ಕೈ ಹಾಕುವುದಕ್ಕೆ ಯೋಗ್ಯವಾಗಿತ್ತು. ಕಾರಣ, ಪೋಪನ ಸ್ಥಾನಮಾನ, ಗೌರವ ತುಂಬ ಅಧೋಗತಿಯಲ್ಲಿತ್ತು. ಕ್ರಿ.ಶ.೯೫೧ರಲ್ಲಿ ಅಟ್ಟೊ ಉತ್ತರ ಇಟಲಿಗೆ ಪ್ರವೇಶಿಸಿ ಲಂಬಾರ್ಡಿಯನ್ನು ಗೆದ್ದುಕೊಂಡು ಅಲ್ಲಿನ ಅರಸನಾದ ಮತ್ತು ಅಲ್ಲಿನ ಹಿಂದಿನ ಅರಸನ ಪತ್ನಿ ಅಡಿಲೈಡ್‌ಳನ್ನು ಮದುವೆಯಾದ. ಕ್ರಿ.ಶ.೯೬೨ರಲ್ಲಿ ರೋಮಿಗೆ ಆಗಮಿಸಿ ಹಳೆಯ ಸಾಮ್ರಾಜ್ಯದ ರೀತಿನೀತಿಗಳನ್ನು ಜೀವಂತಗೊಳಿಸಿದನು. ಪೋಪ್ ೧೨ನೆಯ ಜೋಹ್‌ನು ಅಟ್ಟೋ ಮತ್ತು ರಾಣಿ ಅಡಿಲೈಡ್‌ರಿಗೆ ಕಿರೀಟಧಾರಣೆ ಮಾಡಿ ಚಕ್ರವರ್ತಿ ಮತ್ತು ಚಕ್ರವರ್ತಿನಿಯೆಂದು ಘೋಷಿಸಿದನು. ಇದರಿಂದಾಗಿ ‘‘ಪವಿತ್ರ ರೋಮನ್ ಸಾಮ್ರಾಜ್ಯ’’ ಅಸ್ತಿತ್ವಕ್ಕೆ ಬಂತು. ‘‘ಪವಿತ್ರ’’ವಾದುದು ಏಕೆಂದರೆ ಪೋಪನ ನೇರವಾದ ಸಂಬಂಧ ಇದರಲ್ಲಿತ್ತು.

ಪವಿತ್ರ ರೋಮನ್ ಸಾಮ್ರಾಜ್ಯವು ಸಾವಿರ ವರುಷಗಳ ಕಾಲ ಅಂದರೆ ನೆಪೋಲಿಯನ್ ಇದನ್ನು ಸುಮಾರು ಕ್ರಿ.ಶ.೧೮೦೬ರಲ್ಲಿ ತೆಗೆದು ಹಾಕುವ ತನಕ ಉಳಿದುಕೊಂಡು ಬಂತು. ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಗಳೆಲ್ಲ ಜರ್ಮನಿಯವರೇ ಆಗಿದ್ದರು. ಆದ್ದರಿಂದಲೇ ಜರ್ಮನಿ೯ಯ ಶ್ರೀಮಂತರುಗಳ ಮೇಲೆ ಚಕ್ರವರ್ತಿಯ ಅಧಿಕಾರ ಬರೇ ತೋರ್ಪಡೆಯದಾಗಿತ್ತು. ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರಾಧಿಪತ್ಯಕ್ಕೆ ಆಯ್ಕೆಯ ಪದ್ಧತಿ ಹುಟ್ಟಿಕೊಂಡಿತು. ಚಕ್ರಾಧಿಪತಿಯನ್ನು ಆರಿಸುವವರು ಜರ್ಮನಿಯ ಶ್ರೀಮಂತರಾಗಿ ದ್ದರು. ಎಲಕ್ಟರ್ಸ್ ಹಾಗೂ ಈ ಶ್ರೀಮಂತರುಗಳ ಆಸ್ತಿಪಾಸ್ತಿಗಳು ‘ಎಲೆಕ್ಟೋರೇಟ್ಸ್ ’ ಆಗಿ ಚುನಾವಣೆಯ ಕ್ಷೇತ್ರಗಳಾದವು.

ಭೂಹಿಡುವಳಿ ಪದ್ಧತಿ

ಭೂಹಿಡುವಳಿ ಪದ್ಧತಿಯನ್ನು ಹೀಗೆ ವ್ಯಾಖ್ಯಾನಿಸಬಹುದಾಗಿದೆ : ‘‘ಭೂ ಹಿಡುವಳಿಯ ಮತ್ತು ವೈಯಕ್ತಿಕ ಕರಾರುಗಳ ಆಧಾರದ ಮೇಲೆ, ಸರ್ಕಾರದ ಕೆಲಸಗಳನ್ನು ಖಾಸಗಿಯಾಗಿ ನಡೆಸುವ, ಸಮಾಜದ ಸ್ವಯಂಪ್ರೇರಿತವಾದ ಒಂದು ಸಂಘಟನೆ’’. ಊಳಿಗಮಾನ್ಯ ಪದ್ಧತಿಯು ರೋಮನ್ ಸಾಮ್ರಾಜ್ಯದ ಕೊನೆಯ ದಿನಗಳಲ್ಲಿ ಹುಟ್ಟಿತೆಂದು ತಿಳಿಯ ಬಹುದಾಗಿದೆ. ದೊಡ್ಡ ಹಿಡುವಳಿದಾರರ ವಿರುದ್ಧ ಸ್ಪರ್ಧಿಸಲಾಗದೆ, ತೆರಿಗೆಯ ಹೊರೆಯನ್ನು ಹೊರಲಾಗದೆ ಸಣ್ಣ ಹಿಡುವಳಿದಾರರು ತಮ್ಮ ಭೂಮಾಲಿಕೆಯ ಹಕ್ಕನ್ನು ಶ್ರೀಮಂತ ಹಾಗೂ ಪ್ರಭಾವಶಾಲಿ ಹಿಡುವಳಿದಾರರಿಗೆ ಒಪ್ಪಿಸಿದರು. ಇದಾದ ನಂತರ ತಾವು ಸಲ್ಲಿಸುವ ಸೇವೆ ಮತ್ತು ಬೆಳೆಯಲ್ಲಿ ಒಂದು ಭಾಗವನ್ನು ಕೊಡುವುದರ ಆಧಾರದ ಮೇಲೆ ಭೂಮಿಯ ಮೇಲಿನ ಹಕ್ಕನ್ನು ಪಡೆದುಕೊಂಡರು. ಖಾಸಗಿ ಭೂಮಾಲಿಕರು ತೆಗೆದುಕೊಳ್ಳುವ ನಿರ್ಧಾರಗಳು ಅಂತಿಮವಾಗಿದ್ದವು. ಗುಲಾಮ-ಗೇಣಿದಾರರು ತಾವು ಬೆಳೆದದ್ದರಲ್ಲಿ ಒಂದು ಭಾಗವನ್ನು ಭೂಮಾಲಿಕರಿಗೆ ಇಲ್ಲವೇ ಸರಕಾರಕ್ಕೆ ಕೊಡಬೇಕಾಗಿತ್ತು.

ಅಂತೆಯೇ, ಭೂಹಿಡುವಳಿದಾರ ಪದ್ಧತಿ ದುರ್ಬಲರು ಹಾಗೂ ಬಡವರು, ಶ್ರೀಮಂತರಿಗೆ ತಮ್ಮನ್ನು ತಾವು ಅಡವಿಟ್ಟುಕೊಂಡ ಕಾರಣದಿಂದಾಗಿ ಹುಟ್ಟಿಕೊಂಡಿತು. ತೆರಿಗೆ ವಸೂಲು ಮಾಡುವುದರಿಂದ, ದರೋಡೆಗಳಿಂದ ಹಾಗೂ ನ್ಯಾಯಾಲಯದಲ್ಲಿನ ಅನ್ಯಾಯಗಳಿಂದ ತಪ್ಪಿಸಿಕೊಳ್ಳಲು ಬಹುತೇಕ ಬಡವರು ಶ್ರೀಮಂತರಿಗೆ ತಮ್ಮನ್ನು ತಾವು ಅಡವಿಟ್ಟುಕೊಂಡು, ಶ್ರೀಮಂತನು ನೀಡಿದ ರಕ್ಷಣೆಗೆ ಪ್ರತಿಯಾಗಿ ಗೊತ್ತುಪಡಿಸಿದ ಕೆಲವೇ ಕೆಲಸಗಳನ್ನು ಮಾಡುತ್ತಿದ್ದರು.

ಹಿಡುವಳಿದಾರಿಕೆ ಒಂದು ರೀತಿಯಲ್ಲಿ ಒಂದು ತರಹದ ಸರಕಾರ ಮತ್ತು ರಾಜಕೀಯ ವ್ಯವಸ್ಥೆ ಎಂದೇ ಹೇಳಬಹುದಾಗಿದೆ. ಭೂಮಾಲಿಕ ಅಥವಾ ಭೂ ಒಡೆಯ ತನ್ನ ಹಿಡುವಳಿದಾರರಿಗೆ ಸರ್ಕಾರದ ಪ್ರತಿನಿಧಿಯಾಗಿರುತ್ತಿದ್ದನು. ಇವನು ತನ್ನದೇ ಆದ ಸೈನ್ಯವನ್ನು ಇಟ್ಟುಕೊಂಡಿದ್ದನು. ಇದಕ್ಕಾಗಿ ತೆರಿಗೆಯನ್ನು ವಸೂಲು ಮಾಡುತ್ತಿದ್ದನು. ಸಂಯುಕ್ತ ನ್ಯಾಯಾಲಯದಲ್ಲಿ ನ್ಯಾಯ ಕೊಡುತ್ತಿದ್ದನು. ಕಾನೂನಿನ ವ್ಯಾಪ್ತಿಯಿಂದ ವಿನಾಯಿತಿಯನ್ನು ನೀಡುವ ಪದ್ಧತಿಯು ಹುಟ್ಟಿಕೊಂಡ ಪರಿಣಾಮವಾಗಿ, ಭೂ ಒಡೆಯರ ಸರ್ಕಾರಿ ಅಧಿಕಾರ ಹೆಚ್ಚಾಗಿ ಬೆಳೆಯಿತೆಂದು ತಿಳಿಯಬಹುದಾಗಿದೆ. ಮೆರೋವಿಂಜಿಯನ್ನರ ಆಳ್ವಿಕೆಯ ಕಾಲದಿಂದಲೂ ಈ ವ್ಯವಸ್ಥೆ ಇತ್ತು. ರಾಜನು ಕಾನೂನು ವಿನಾಯಿತಿಯ ಪತ್ರವೊಂದನ್ನು ನೀಡುತ್ತಿದ್ದನು. ಪರಿಣಾಮವಾಗಿ ಇದನ್ನು ಪಡೆದವರಿಗೆ ಆ ಪತ್ರದಲ್ಲಿ ಹೇಳಲಾಗಿರುವ ವಿಷಯಗಳಲ್ಲಿ ರಾಜ್ಯದ ಕಾನೂನುಗಳಿಂದ ಯಾವುದೇ ಹಸ್ತಕ್ಷೇಪವಿರು ತ್ತಿರಲಿಲ್ಲ. ಈ ಸವಲತ್ತುಗಳು ಮೂಲವಾಗಿ ಪತ್ರ ಪಡೆದವನಿಗೆ ಮಾತ್ರ ಅನ್ವಯಿಸುತ್ತಿತ್ತು ಮತ್ತು ಸೀಮಿತವಾಗಿತ್ತು. ಆದರೆ ರಾಜಮನೆತನದಂತೆ ಈ ಸವಲತ್ತು ಕೂಡ ವಂಶ ಪಾರಂಪರ್ಯವಾಗಿ ಸಿಗಬೇಕು ಎನ್ನುವ ತತ್ವದ ಬೆಳವಣಿಗೆಯನ್ನು ತಡೆಯಲಾಗಲಿಲ್ಲ. ಚಾರ್ಲ್‌ಮೇನನ ಕಾಲವನ್ನು ಬಿಟ್ಟು, ಇನ್ನುಳಿದ ಕಾರೋಲಿಂಜಿಯನ್ನರ ಅವಧಿಯಲ್ಲಿ ವ್ಯಕ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಾನೂನು ವಿನಾಯಿತಿಯನ್ನು ಪಡೆಯುವುದು, ಗಣನೀಯವಾಗಿ ಹೆಚ್ಚಾಯಿತು. ಕಡೆಯ ಕರೋಲಿಂಜಿಯನ್ನರ ಆಳ್ವಿಕೆಯಲ್ಲಿ ಎಲ್ಲಾ ನಿಯಮಗಳ ಕಡ್ಡಾಯವನ್ನು ತೂರಿ ಬಿಡಲಾಗಿತ್ತು. ಸುಮಾರು ಜನರು ಯಾವ ಒಂದು ಪತ್ರದ ಅನುಮತಿಯೂ ಇಲ್ಲದೆ ಈ ಸವಲತ್ತನ್ನು ಕಬಳಿಸಿಕೊಂಡಿದ್ದರು.