ಎರಡು ಸಾವಿರ ವರುಷಗಳ ಮೊದಲೇ ಗ್ರೀಕ್ ತತ್ವಶಾಸ್ತ್ರಜ್ಞ ಅರಿಸ್ಟಾಟಲ್ ‘ನಾವೆಲ್ಲರೂ ರಾಜಕಾರಣ ಜೀವಿಗಳು’ ಎಂದು ನುಡಿದ ನಿತ್ಯ ಸತ್ಯವು ಎಂದೆಂದಿಗೂ ಒಪ್ಪಿಕೊಳ್ಳುವಂತಹುದಾಗಿದೆ. ರಾಜಕೀಯವು ಸಾಮಾಜಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾನವನ ಇತಿಹಾಸದೊಂದಿಗೆ ಬೆಳೆದು ಬಂದಿರುವ ವಿಚಾರವು ಎಲ್ಲರಿಗೂ ಗೊತ್ತು. ಎಲ್ಲ ಸಮಾಜಗಳಲ್ಲಿಯೂ ಸಂಪನ್ಮೂಲಗಳು ಬೇಡಿಕೆಗಿಂತ ಕಡಿಮೆಯಿದ್ದು ಅವುಗಳಿಗೆಂದು ಸ್ಪರ್ಧಿಸುವ ವ್ಯಕ್ತಿಗಳ ಸಂಖ್ಯೆ ಹೆಚ್ಚಿರುವುದರಿಂದ ‘ಯಾರು’ ಯಾವಾಗ ಎಷ್ಟನ್ನು ಪಡೆಯುತ್ತಾರೆ’ ಎಂಬ ಪ್ರಶ್ನೆ ಹಾಗೂ ಆ ಪ್ರಶ್ನೆಗೆ ಸಂಬಂಧಿಸಿದ ಕ್ರಿಯಾತ್ಮಕ ಪ್ರಕ್ರಿಯೆಗಳು ಸದಾ ಜೀವಂತವಿರುತ್ತವೆ. ಹೀಗೆ ನಡೆಯುವ ಅವಕಾಶಗಳ ಹಂಚಿಕೆಯ ಹಾಗೂ ಅದಕ್ಕೆ ಸಂಬಂಧಿಸಿದ ಸ್ಪರ್ಧೆಯ ಪ್ರಕ್ರಿಯೆಯನ್ನು ವಿಶಾಲವಾದ ಅರ್ಥದಲ್ಲಿ ‘ರಾಜಕೀಯ’ವೆಂದು ಹೇಳಬಹುದು. ರಾಜತಾಂತ್ರಿಕ ಸಂಸ್ಥೆಗಳು, ಅಧಿಕಾರದ ಹಂಚುವಿಕೆಯ ರೀತಿ-ನೀತಿಗಳು, ಹಾಗೂ ರಾಜನೀತಿಯ ನಡವಳಿಕೆಗಳು ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತವೆ; ಆದರೆ ರಾಜಕೀಯ ಪ್ರಕ್ರಿಯೆಯು ಮಾತ್ರ ವಿಶ್ವವ್ಯಾಪ್ತಿಯಾದುದು.

ಮಾನವನ ಚರಿತ್ರೆಯಲ್ಲಿ ಅಧಿಕಾರದ ಹಾಗೂ ಅವಕಾಶಗಳ ಹಂಚುವಿಕೆಯ ವಿವಿಧ ಬಗೆಗಳು ಕಂಡುಬರುವುದು ಸಹಜ. ವಿವಿಧ ಕಾಲಘಟ್ಟಗಳಲ್ಲಿ ಸಮಯ ಹಾಗೂ ಪರಿಸ್ಥಿತಿಗಳನ್ನು ಅನುಸರಿಸಿ ಅನೇಕ ಬಗೆಯ ಆಡಳಿತ ವ್ಯವಸ್ಥೆಗಳನ್ನು ಕಾಣಬಹುದು. ರಾಜ್ಯ, ರಾಷ್ಟ್ರ, ದೇಶ, ಸರಕಾರ, ಪಕ್ಷಗಳಂಥ ಅನೇಕ ಪರಿಕಲ್ಪನೆಗಳು ಹಾಗೂ ಆಡಳಿತದ ಮಾದರಿಗಳು ಸಮುದಾಯ ಇತಿಹಾಸದ ಪುಟಗಳನ್ನಲಂಕರಿಸಿವೆ. ರಾಜನೀತಿ ಶಾಸ್ತ್ರದ ಬಹುಮುಖ್ಯ ಅಂಗವಾಗಿ ಪ್ರಜೆಗಳನ್ನು ಆಡಳಿತದ ಬಂಧನಕ್ಕೊಳಪಡಿಸುವ ಸಂಸ್ಥೆಗಳು ಮತ್ತು ರಚನೆಗಳನ್ನು ಚರ್ಚಿಸಲಾಗುತ್ತಿದೆ. ಇಂಥ ಕೆಲವು ಪ್ರಮುಖ ಜನಾಡಳಿತದ ಮಾದರಿಗಳನ್ನು ಸ್ಥೂಲವಾಗಿ ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ. ಈ ಬರಹವು ಇಂಥ ಮಾದರಿಗಳ ಸಾಮಾನ್ಯ ವಿವರಗಳನ್ನು ನೀಡುವುದೇ ವಿನಃ ಇವುಗಳ ಕುರಿತಾದ ವಿಮರ್ಶಾತ್ಮಕ ದೃಷ್ಟಿಕೋನವನ್ನು ಸಾದರಪಡಿಸುವ ಉದ್ದೇಶ ಹೊಂದಿಲ್ಲ.

ರಾಷ್ಟ್ರವೆಂಬ ಪರಿಕಲ್ಪನೆಯು ತೀರ ಇತ್ತೀಚಿನದಾಗಿದ್ದು ಇದಕ್ಕೆ ಕೆಲವೇ ಶತಮಾನಗಳ ಇತಿಹಾಸವಿದೆ. ಇದಕ್ಕಿಂತ ಮೊದಲು ಆಳುವವರು ಸಾಧ್ಯವಾದಷ್ಟು ಹೆಚ್ಚು ಭೂಭಾಗವನ್ನು ಆಕ್ರಮಿಸಿ ಆ ಪ್ರದೇಶದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಲು ಮುಂದುವರಿಸಲು ಸದಾ ಯತ್ನ ನಡೆಸುತ್ತಿದ್ದರು. ಒಳಜಗಳಗಳು ಹಾಗೂ ಹೊರಗಿನ ದಾಳಿಗಳಿಂದಾಗಿ ಇಂಥ ಆಡಳಿತವು ಹೆಚ್ಚು ಕಾಲ ಮುಂದುವರಿಯುತ್ತಿರಲಿಲ್ಲ. ರೋಮ್‌ನಂತಹ ಪ್ರಾಚೀನ ಸಾಮ್ರಾಜ್ಯಗಳೂ ಸಹ ‘ನಗರ-ರಾಜ್ಯ’ ಮತ್ತು ಮಾಂಡಲಿಕ ರಾಜ್ಯಗಳ ನಡುವಿನ ಒಪ್ಪಂದದ ಆಧಾರದ ಮೇಲೆಯೇ ಸ್ಥಾಪಿಸಲ್ಪಟ್ಟಿದ್ದವು. ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆಯು ಬರುವ ಮೊದಲು ಎಂದರೆ, ಇತ್ತೀಚಿನವರೆಗೂ ರಾಜಸತ್ತೆಯು ವೈವಿಧ್ಯಮಯ ರೂಪಗಳಲ್ಲಿ ಅಭಿವ್ಯಕ್ತಿಗೊಂಡು ಇಂಥ ಎಲ್ಲ ಮಾದರಿಗಳೂ ತಮ್ಮ ಪ್ರದೇಶ, ಪರಿಸರ, ಸಂಸ್ಕೃತಿಗಳ ಚೌಕಟ್ಟಿನಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಹಬ್ಬಿದ್ದವು. ರಾಜಸತ್ತೆಯ ಇಂಥ ಕೆಲವು ವ್ಯವಸ್ಥೆಗಳ ಸಾಮಾನ್ಯ ಚಾರಿತ್ರಿಕ ಅವಲೋಕನವು ಈ ಲೇಖನದ ಉದ್ದೇಶವಾಗಿದೆ.

ಪ್ರಸ್ತುತ ಪ್ರಬಂಧವು ಕೆಳಗಿನ ರಾಜಕೀಯ ಆಡಳಿತದ ಮಾದರಿಗಳ ಸ್ಥೂಲ ವಿವರಣೆ ನೀಡುತ್ತದೆ.

೧. ರಾಜತ್ವ

೨. ಅಲ್ಪಸಂಖ್ಯಾಧಿಪತ್ಯ

೩. ಕುಲೀನಸತ್ತೆ

೪. ಧರ್ಮಸತ್ತೆ

೫. ಪ್ರಾಚೀನ ಗಣರಾಜ್ಯ

೬. ಪ್ರಜಾಪ್ರಭುತ್ವ

. ರಾಜತ್ವ

‘ರಾಜ’ ಎಂಬ ಪದದ ಇಂಗ್ಲಿಷಿನ ಸಮಪದವು ‘ಕಿಂಗ್’ ಎಂಬುದಾಗಿದ್ದು ಈ ಶಬ್ದದ ಮೂಲ ‘ಕಿನ್’(ಎಂದರೆ ‘ವೈಭವೋಪೇತ’ ಎಂಬ ಅರ್ಥದಲ್ಲಿ; ‘ಬಂಧು’ ಎಂಬ ಅರ್ಥದಲ್ಲಲ್ಲ) ಎನ್ನುವ ಪದದಲ್ಲಿ ಇದೆ. ‘ರಾಜತ್ವ’ ಅಥವಾ ‘ರಾಜ’ ಪದವಿಯನ್ನು ಹೊಂದಿದವನೇ ಅರಸನು. ಇಂಥ ವ್ಯಕ್ತಿಯು ಸಾಮ್ರಾಟ/ಚಕ್ರವರ್ತಿ ಪದವಿ ಯನ್ನು ಹೊರತುಪಡಿಸಿ ಉಳಿದೆಲ್ಲ ಅಧಿಕಾರ ವ್ಯವಸ್ಥೆಗಳಿಗಿಂತ ಹೆಚ್ಚಿನ ಶಕ್ತಿ ಹೊಂದಿರುತ್ತಾನೆ. ಭಾರತೀಯ ಆಡಳಿತ ಪರಂಪರೆಯಲ್ಲಿ ರಾಜನನ್ನು ಅತ್ಯುನ್ನತ ಹಾಗೂ ಅತಿ ಬಲಾಢ್ಯನೆಂದು ಗಣಿಸಲಾಗಿದೆ. ಅನೇಕ ಬಾರಿ ಇಂಥ ರಾಜರು ಸಾಮ್ರಾಟರ ಮಾಂಡಳಿಕ ರಾಜರಾಗಿದ್ದು ಸಾಮ್ರಾಜ್ಯದ ಒಳಗಿರುವ ತಮ್ಮ ಭೂಪ್ರದೇಶದಲ್ಲಿ ಪೂರ್ಣ ಅಧಿಕಾರ ಹೊಂದಿರುತ್ತಿದ್ದರು.

‘ರಾಜತ್ವ’ವು ಜಗತ್ತಿನ ಬಹುತೇಕ ಎಲ್ಲ ಸಮಾಜಗಳ ಇತಿಹಾಸದಲ್ಲಿಯೂ ಕಾಣ ಸಿಗುವ ಆಡಳಿತ ಪದ್ಧತಿ. ಮಧ್ಯಯುಗದ ಜರ್ಮನಿಯಲ್ಲಿ ರಾಜತ್ವವು ಐಚ್ಛಿಕ ವಾಗಿದ್ದುದು ಇತರ ಐತಿಹಾಸಿಕ ಸತ್ಯವಾದರೂ, ಇದೊಂದು ‘ಅಪವಾದ’ ಅಥವಾ ಅಪರೂಪದ ಉದಾಹರಣೆ. ಸಾಮಾನ್ಯವಾಗಿ ರಾಜತ್ವವು ವಂಶಪಾರಂಪರ್ಯವಾದುದು. ಪ್ರಾಚೀನ ಭಾರತದಲ್ಲಿ ಪ್ರಚಲಿತವಿದ್ದ ಹಾಗೆ ರಾಜತ್ವಕ್ಕೆ ಧಾರ್ಮಿಕ ಶಕ್ತಿಯು ಅರೋಪಿಸಲ್ಪಡಬಹುದು. ಇಂಥ ವ್ಯವಸ್ಥೆಯು ಅಖಂಡ ಹಾಗೂ ಪ್ರಶ್ನಾತೀತ ಅಧಿಕಾರವನ್ನು ಹೊಂದಿರಬಹುದು ಇಲ್ಲವೆ ಸಂವಿಧಾನಾತ್ಮಕ ಅಧಿಕಾರ ಪಡೆದಿರಬಹುದು. ಪ್ರಾಚೀನ ‘ಸ್ಪಾರ್ಟಾ’ದಲ್ಲಿ ಒಂದೇ ಭೂಪ್ರದೇಶವನ್ನು ಇಬ್ಬರು ರಾಜರು ಒಟ್ಟಾಗಿ ಆಳುತ್ತಿದ್ದ ‘ದ್ವಿ-ರಾಜತ್ವ’ದ ಉದಾಹರಣೆ ಇದೆಯಾದರೂ ಸಾಮಾನ್ಯವಾಗಿ ಒಂದೇ ಪ್ರದೇಶಕ್ಕೆ ಒಬ್ಬನೇ ರಾಜನಿರುವುದು ವಾಡಿಕೆ. ಎಷ್ಟೋ ಸಲ ರಾಜನು ಪ್ರಜೆಗಳು ಹಾಗೂ ದೈವೀಶಕ್ತಿಗಳ ನಡುವಿನ ಕೊಂಡಿಯಾಗಿ ಅಥವಾ ಮಧ್ಯವರ್ತಿಯಾಗಿ ಕಾರ್ಯ ನಡೆಸುವನೆಂದು ನಿರೀಕ್ಷಿಸಲಾಗುತ್ತಿತ್ತು. ಪ್ರಾಚೀನ ಸುಮೇರ್ ಮತ್ತು ಭಾರತದಲ್ಲಿ ರಾಜತ್ವದ ಕುರಿತಾದ ದೈವೀ ನಂಬಿಕೆಗಳು ಪ್ರಚಾರದಲ್ಲಿದ್ದುದನ್ನು ಇಲ್ಲಿ ಉದಾಹರಿಸ ಬಹುದು.

ರಾಜನೇ ದೇವರ ರೂಪವೆಂದೋ, ಪ್ರತಿನಿಧಿಯೆಂದೋ ಪ್ರಜೆಗಳು ನಂಬಿದ್ದು ಇತಿಹಾಸದಲ್ಲಿ ಕ್ವಚಿತ್ತೇನಲ್ಲ. ಸಂತಾನಕ್ಕೆ ಸಂಬಂಧಿಸಿದ ಪ್ರಜೆಗಳ ಧಾರ್ಮಿಕ ವಿಧಿಗಳಲ್ಲಿ ಅನೇಕ ಬಾರಿ ರಾಜನು ಕೇಂದ್ರ ಬಿಂದುವಾಗಿ ಕಾಣಿಸಿರುವುದನ್ನು ಸಂಸ್ಕೃತಿಗಳ ಇತಿಹಾಸವು ತಿಳಿಸುತ್ತದೆ. ಪ್ರಜೆಗಳ ಕಲ್ಯಾಣಕ್ಕಾಗಿ ರಾಜನು (ಅಥವಾ ರಾಜನ ಪರ್ಯಾಯ ವ್ಯಕ್ತಿಯು) ಯಜ್ಞದ ಬಲಿಯಾಗಿ ಮರಣವನ್ನಪ್ಪುವ ಪದ್ಧತಿಯು ಕೂಡ ಪ್ರಚಲಿತದಲ್ಲಿತ್ತು. ಈಜಿಪ್ಟ್ ಮೂಲದಿಂದ ಬೆಳೆದ ರಾಜನ್ ದೈವೀಶಕ್ತಿಯ ಕಲ್ಪನೆಯು ಗ್ರೀಕ್ ಸಂಸ್ಕೃತಿಯ ಉದ್ದಕ್ಕೂ  ಹರಡಿತ್ತು. ಇದೇ ಕಲ್ಪನೆಯು ನಂತರದ ರೋಮ್ ಚಕ್ರವರ್ತಿಗಳಿಂದಲೂ ಪ್ರಸಿದ್ದಿಗೆ ಬಂತು. ರೋಮ್‌ದ ಕ್ರೈಸ್ತ ಚಕ್ರವರ್ತಿಗಳು ತಾವು ದೇವದೂತರೆಂದೂ, ದೈವೀಶಕ್ತಿಯ ಪ್ರತಿನಿಧಿಗಳೆಂದೂ ವಾದಿಸಿ ಅಧಿಕಾರವನ್ನು ವಶದಲ್ಲಿಟ್ಟುಕೊಂಡಿದ್ದರು. ಮಧ್ಯಯುಗದಲ್ಲಿ ಪ್ರಚಲಿತವಿದ್ದ ರಾಜನೀತಿ ಸಿದ್ಧಾಂತದಲ್ಲಿ ರಾಜತ್ವವು ಪುರೋಹಿತ ಶಕ್ತಿಗೆ ಸಮನಾಗಿ ಪರಿಗಣಿಸಲ್ಪಟ್ಟಿದ್ದಿತ್ತು. ರಾಜನ ಪಟ್ಟಾಭಿಷೇಕ ವಿಧಿ ಭಾರತದ ರಾಜಕೀಯ ಸಂದರ್ಭದಲ್ಲಿ ವಿಶೇಷವೆನಿಸಿದ್ದರೆ, ಕಿರೀಟಧಾರಣೆಯ ಸಮಯದಲ್ಲಿ ‘ಎಣ್ಣೆ ಹನಿಸುವ ವಿಧಿ’ ಮಧ್ಯಯುಗದ ಐರೋಪ್ಯ ಸಮಾಜಗಳಲ್ಲಿ ಮಹತ್ವದ್ದೆನಿಸಿತ್ತು. ಹದಿನಾರರಿಂದ ಹದಿನೆಂಟನೆಯ ಶತಮಾನದ ಪ್ರಾರಂಭದವರೆಗೆ ಸಾರ್ವಭೌಮತ್ವಗಳು ರಾಷ್ಟ್ರೀಯ ಚರ್ಚ್ ಮತ್ತು ಇನ್ನಿತರ ಧಾರ್ಮಿಕ ಸಂಸ್ಥೆಗಳಿಂದ ತಮ್ಮ ಬಲ ಪಡೆದಿದ್ದವು. ಆದರೆ ಹದಿನೇಳನೆಯ ಶತಮಾನದಲ್ಲಿ ಇಂಗ್ಲೆಂಡಿನ ರಾಜತ್ವವು ಸಂವಿಧಾನಾತ್ಮಕ ಆಡಳಿತ ಶಕ್ತಿಯಾಗಿ ಮಾರ್ಪಡಿ ಸಲ್ಪಟ್ಟ ನಂತರ ಉಳಿದ ದೇಶಗಳೂ ಇದೇ ಮಾದರಿಯನ್ನು ಅನುಸರಿಸಿ ‘ರಾಜತ್ವದ ಶಕ್ತಿಯ ಮೂಲ ಸ್ತೋತ್ರವು ಪ್ರಜೆಗಳೇ ಹೊರತು ದೈವೀ ಶಕ್ತಿಯಲ್ಲ’ ಎಂಬ ವಿಚಾರವನ್ನು ಪ್ರಚುರ ಪಡಿಸಿದುವು.

ರಾಜತ್ವ ಪರಿಕಲ್ಪನೆಯು ರಾಜಕೀಯ ಇತಿಹಾಸದಲ್ಲಿ ಅತಿ ಮಹತ್ವದ ವಿಚಾರಗಳಲ್ಲಿ ಒಂದೆನಿಸಿದೆ. ಯಾವುದೇ ಒಂದು ರಾಜಕೀಯ ಸಮುದಾಯವಿರಲಿ, ತನ್ನ ಒಳಗಿನ ದ್ವಂದ್ವಗಳನ್ನು, ವಿರೋಧಾಭಾಸಗಳನ್ನು ಮತ್ತು ಸಂಘರ್ಷಗಳನ್ನು ಬಗೆಹರಿಸಿಕೊಳ್ಳದೆ ಮುಂದುವರಿಯುವುದು ಅಸಾಧ್ಯ. ರಾಜನು ನ್ಯಾಯಾಧೀಶನಾಗಿ, ದುಷ್ಟ ಶಕ್ತಿಗಳನ್ನು ನಿಗ್ರಹಿಸುವವನಾಗಿ ಮಧ್ಯಯುಗದಲ್ಲಿ ಪ್ರಜೆಗಳ ಮೇಲೆ ಅಪಾರವಾದ ಪ್ರಭಾವ ಹೊಂದಿದ್ದನೆನ್ನುವುದು ನಿಸ್ಸಂದೇಹ. ಇವನಿಗೆ ಜನರ ಮೇಲೆ ಎಲ್ಲ ರೀತಿಯ ಒತ್ತಡ ಗಳನ್ನು ಹೇರುವ ಅಧಿಕಾರವಿತ್ತು. ರಾಜ್ಯವು ಯಾವ ಉದ್ದೇಶಕ್ಕಾಗಿ ದೇವರಿಂದ ಸೃಷ್ಟಿಸಲ್ಪಟ್ಟಿತ್ತೊ, ಆ ಮಹೋದ್ದೇಶದ ಸಾಧನೆಯ ಮಾರ್ಗದರ್ಶಿಯಾಗಿ ರಾಜನು ಪ್ರಜೆಗಳ ಮೇಲೆ ಪ್ರಭುತ್ವ ಪಡೆದಿರುತ್ತಿದ್ದನು. ಆಡಳಿತವನ್ನು ಒಂದು ಸತ್ಕಾರ್ಯವೆಂದು ಭಾವಿಸಲಾಗುತ್ತಿತ್ತು ಮತ್ತು ಈ ಸತ್ಕಾರ್ಯದಲ್ಲಿ ರಾಜನಿಗೆ ನೆರವಾಗುವ ಪ್ರಜೆಗಳನ್ನು ರಾಜದ್ರೋಹಿಗಳೆಂದು ಗಣಿಸಲಾಗುತ್ತಿತ್ತು. ರಾಜನು ಪ್ರಜೆಗಳ ಹಿತರಕ್ಷಕನು ಮತ್ತು ಉಳಿದವರಿಗಿಂತ ಶ್ರೇಷ್ಠನು ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದುದರಿಂದ ಪ್ರಜಾ ಪರಿಪಾಲನೆಯು ರಾಜನ ಒಂದು ಧಾರ್ಮಿಕ ಕರ್ತವ್ಯವಾಗಿ ವ್ಯಾಖ್ಯಾನಿಸಲ್ಪಡುತ್ತಿತ್ತು.

ರಾಜನ ಕರ್ತವ್ಯಗಳ ನಿರ್ವಹಣೆಯಲ್ಲಿ ಪ್ರಜೆಗಳು ಶ್ರದ್ಧೆ ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವೆಂದು ರಾಜರು ನಂಬಿದ್ದರು. ಜನರಲ್ಲಿ ಒಗ್ಗಟ್ಟಿನ ಕೊರತೆಯಾದಾಗ ರಾಜ್ಯಭಾರವು ಅಸಾಧ್ಯವೆಂದು ತಿಳಿಯಲಾಗಿತ್ತು. ರಾಜನು ಸಂಪೂರ್ಣ ನ್ಯಾಯ ನಿಷ್ಟುರನೂ ಹಾಗೂ ಪ್ರಜಾಹಿತರಕ್ಷಕನೂ ಎಂದು ಪರಿಗಣಿಸಲ್ಪಟ್ಟಿದ್ದರಿಂದ ಜನರು ರಾಜರಿಗೆ ಅತಿ ಹೆಚ್ಚಿನ ಅಧಿಕಾರವನ್ನು ನೀಡಿದ್ದರು. ರಾಜ್ಯದಲ್ಲಿದ್ದ ಎಲ್ಲಾ ಗೌರವಗಳೂ ಪ್ರಶಸ್ತಿಗಳೂ ಪದವಿಗಳೂ ಮತ್ತು ಸೌಲಭ್ಯಗಳೂ ರಾಜನಿಂದ ಮಾತ್ರವೇ ನೀಡಲ್ಪಡುತ್ತಿದ್ದು ಉಳಿದವರಿಗೆ ಅವನ್ನು ಕೊಡುವ ಅರ್ಹತೆ ಇರಲಿಲ್ಲ; ಸ್ವೀಕರಿಸುವ ಅರ್ಹತೆ ಮಾತ್ರವೇ ಇತ್ತು. ಮಂತ್ರಿಮಂಡಲದ ಆಯ್ಕೆ, ರಾಜ್ಯದ ಗಡಿಯ ರಕ್ಷಣೆ, ಆಂತರಿಕ ಶಾಂತಿ, ಶಿಕ್ಷಣ ಪ್ರಸಾರ, ಮಾಂಡಲಿಕರು/ಪಾಳೆಯಗಾರರು ಬಂಡೆದ್ದು ಜನಾಂದೋಲನವಾಗದಂತೆ ತಡೆಯುವದು, ಧಾರ್ಮಿಕ ಕರ್ತವ್ಯಗಳ ಪೂರ್ಣನಿರ್ವಹಣೆ ಮುಂತಾದವು ರಾಜನು ಮಾಡಲೇಬೇಕಾದ ಕಾರ್ಯಗಳೆಂದು ತಿಳಿಯಲ್ಪಟ್ಟಿದ್ದವು. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಅಧಿಕಾರ, ಗುಣ ಹಾಗೂ ಕರ್ತವ್ಯಗಳಲ್ಲಿ ರಾಜನು ಭೂಮಿಗೆ ಇಳಿದು ಬಂದ ಭಗವಂತನೆಂದು ತಿಳಿಯಲಾಗುತ್ತಿತ್ತು.

ತನಗೆ ಲಭ್ಯವಾಗಿದ್ದ ಅಪರಿಮಿತ ಅಧಿಕಾರದಿಂದಾಗಿ ರಾಜನು ಕೆಲವೊಮ್ಮೆ ಪ್ರಜಾ ಪೀಡಿತ ದೊರೆಯಾಗಿ, ಭಯೋತ್ಪಾದಕ ಶಕ್ತಿಯಾಗಿ ಬದಲಾದ ಉದಾಹರಣೆಗಳೂ ಇವೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಆಂದೋಲನಗಳು ಹುಟ್ಟಿಕೊಂಡು ಪ್ರಜೆಗಳು ಅಥವಾ ಮಾಂಡಲಿಕರು ರಾಜನನ್ನು ರಾಜಸತ್ತೆಯಿಂದ ಹೊರತಳ್ಳಿ ಹೊಸರಾಜನನ್ನು ಅಧಿಕಾರಕ್ಕೆ ತಂದ ಸಂದರ್ಭಗಳೂ ಅಪರೂಪವೇನಲ್ಲ.

ಇಂದು ರಾಜಸತ್ತೆಯನ್ನು ಅವಲಂಬಿಸಿದ ಆಡಳಿತವು ವಿರಳವಾಗಿದ್ದು ಅಳಿದುಳಿದ ರಾಜರು ಬಿರುದು ಮಾತ್ರವಾಗಿ ಅಥವಾ ಸಂವಿಧಾನಾತ್ಮಕ ಅಧಿಕಾರದ ಲಾಂಛನವಾಗಿ ಉಳಿದಿದ್ದಾರೆ. ರಾಜತ್ವವು ಮಾನವನ ಇತಿಹಾಸದ ರಂಜಕ ಭಾಗವಾಗಿ ಬಹುಕಾಲದವರೆಗೂ ದಾಖಲೆಗಳಲ್ಲಿ ಉಳಿಯುವುದರಲ್ಲಿ ಸಂದೇಹವಿಲ್ಲ. ಬ್ರಿಟನ್, ಜಪಾನ್, ಭಾರತ ಮುಂತಾದ ದೇಶಗಳಲ್ಲಿರುವ ‘ರಾಜಸತ್ತೆ’ಯು ಇಂದು ಒಂದು ಪರ್ಯಾಯ ಆಡಳಿತ ವ್ಯವಸ್ಥೆಯನ್ನು ಪ್ರತಿನಿಧಿಸುವುದಕ್ಕಿಂತ ಹೆಚ್ಚಾಗಿ, ಈ ಸಮಾಜಗಳಲ್ಲಿರುವ ಸಾಂಸ್ಕೃತಿಕ ರಾಜನೀತಿ ಪರಂಪರೆಯ ಅಭಿವ್ಯಕ್ತ ರೂಪವಾಗಿದೆ ಎನ್ನುವುದೇ ಹೆಚ್ಚು ಸೂಕ್ತವಾದೀತು.

. ಅಲ್ಪಸಂಖ್ಯಾಧಿಪತ್ಯ

ಅಲ್ಪ ಸಂಖ್ಯಾಧಿಪತ್ಯ ಅಥವಾ ಅತಿಬಲಾಢ್ಯರ ಚಿಕ್ಕಗುಂಪು ಎನ್ನುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸುವ ಹಾಗೂ ರಾಜಕೀಯ ವೈವಿಧ್ಯತೆಯನ್ನು ತಿರಸ್ಕರಿಸುವ ರಾಜಕೀಯ ಆಡಳಿತಾತ್ಮಕ ವ್ಯವಸ್ಥೆಗೆ ಒಂದು ಉದಾಹರಣೆ. ಜರ್ಮನಿಯು ರಾಜನೀತಿಜ್ಞ-ಸಮಾಜವಿಜ್ಞಾನಿಯಾದ ರಾಬರ್ಟ್ ಮಿಶೆಲ್ಸ್ (೧೯೧೧)ನು ತನ್ನ ದೇಶದ ಪ್ರಮುಖ ರಾಜಕೀಯ ಪಕ್ಷವಾದ ‘ಸೋಶಿಯಲ್ ಡೆಮಾಕ್ರೇಟ್ಸ್ ’ (ಸಮಾಜವಾದಿ ಪ್ರಜಾಪ್ರಭುತ್ವ) ಪಕ್ಷದಲ್ಲಿ ಕ್ರಿಯಾತ್ಮಕವಾಗಿದ್ದ ಅವಧಿಯಲ್ಲಿ ಕಂಡ ಕೆಲವು ಅವಲೋಕನಗಳ ಆಧಾರದ ಮೇಲೆ ಅಲ್ಪಸಂಖ್ಯಾಧಿಪತ್ಯದ ಕುರಿತು ಒಂದು ಸಿದ್ಧಾಂತವನ್ನೇ ಮಂಡಿಸಿದ್ದಾನೆ. ‘ಅಲ್ಪ ಸಂಖ್ಯಾಧಿಪತ್ಯವನ್ನು ಕಬ್ಬಿಣದ ಕಾನೂನು’ ಎಂಬ ಇವನ ಸಿದ್ಧಾಂತವನ್ನು ಅಲ್ಪಸಂಖ್ಯಾಧಿ ಪತ್ಯದ ರಾಜಕೀಯ ವಿಶ್ಲೇಷಣೆಯಲ್ಲಿ ಇಂದಿಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳ ಲಾಗುತ್ತಿದೆ.

ಅತಿಬಲಾಢ್ಯರ ಚಿಕ್ಕ ಗುಂಪಿನ ‘ಅಲ್ಪಸಂಖ್ಯಾಧಿಪತ್ಯ’ಕ್ಕೆ ದೀರ್ಘ ಇತಿಹಾಸವಿದೆ. ಗ್ರೀಕ್ ಮೂಲದ ‘ಓಲಿಗಾರ್ಕಿ’ ಎಂಬ ಪದದ ಶಾಬ್ದಿಕ ಅರ್ಥ ‘ಕೆಲವರ ಆಡಳಿತ’ ಎಂದು. ಕೃಷಿ ಸಮಾಜಗಳ ಪ್ರಾರಂಭಿಕ ಅವಸ್ಥೆಯಲ್ಲಿ ‘ಸರ್ವಾಧಿಕಾರ’ ಹಾಗೂ ‘ಕೆಲವರ ಅಧಿಕಾರ’ಗಳೇ ಸರಕಾರಗಳಾಗಿ ಮಾರ್ಪಡುತ್ತಿದ್ದವು. ಉದಾಹರಣೆಗೆ, ಹಿಂದೆ ಚರ್ಚಿಸಿದಂತೆ ಯುರೋಪಿನಲ್ಲಿ ಹಾಗೂ ಭಾರತದೆಲ್ಲೆಡೆಯಲ್ಲಿ ರಾಜನು ಇಡೀ ರಾಜ್ಯದ ಪೂರ್ಣ ಆಡಳಿತವನ್ನು ತನ್ನ ನೇರ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅನೇಕ ಬಾರಿ ಸಾಧ್ಯ ವಾಗುತ್ತಿರಲಿಲ್ಲ. ಆದ್ದರಿಂದ ದೂರ ಮತ್ತು ದುರ್ಗಮ ಕ್ಷೇತ್ರಗಳ ಆಡಳಿತವನ್ನು ಇಂತಹ ಅಲ್ಪಸಂಖ್ಯಾತ ಅತಿಬಲಾಢ್ಯರ ಕೈಗೆ ಒಪ್ಪಿಸಲಾಗುತ್ತಿತ್ತು. ಈ ಅತಿಬಲಾಢ್ಯ ವ್ಯಕ್ತಿಗಳು ಆಯಾ ಪ್ರಾಂತ್ಯಗಳಲ್ಲಿ ತಮ್ಮ ವಂಶ, ವರ್ಚಸ್ಸು ಮತ್ತು ಶಕ್ತಿಗೆ ಅನುಗುಣವಾಗಿ ಅಧಿಕಾರ ಹೊಂದಿದವರಾಗಿದ್ದು ಅನೇಕ ಬಾರಿ ಆ ಕ್ಷೇತ್ರಗಳ ಶ್ರೀಮಂತ ಭೂಮಾಲಿಕರೂ ಕೂಡ ಆಗಿರುತ್ತಿದ್ದರು. ಈ ಶ್ರೀಮಂತರ ನಡುವೆ ಆಡಳಿತಾತ್ಮಕ ಹೊಂದಾಣಿಕೆ ಇದ್ದು ಅವರು ಒಂದು ಚಿಕ್ಕ ಗುಂಪಾಗಿ ಜನರ ಮೇಲೆ ನಿಯಂತ್ರಣ ಪಡೆದಿರುತ್ತಿದ್ದರು.

ಹಳ್ಳಿಗಳು ನಗರ ಸಮಾಜಗಳಾಗಿ ಬೆಳೆದು, ರಾಜಮನೆತನಗಳ ಉದಯವಾಗಿ ಪ್ರಭುಗಳು ಪಟ್ಟಣ ಪ್ರದೇಶಗಳನ್ನು ನಿರ್ಮಿಸಿಕೊಂಡು ಕೋಟೆ-ಕೊತ್ತಲಗಳನ್ನು ರಚಿಸಿ ಕೊಂಡು, ಆಳುತ್ತಿರುವಾಗಲೂ ಬಲಾಢ್ಯರ ಚಿಕ್ಕ ಗುಂಪು ತನ್ನ ಅಧಿಪತ್ಯ ಶಕ್ತಿಯಿಂದ ಮಹತ್ವದ್ದೆನಿಸಿತ್ತು. ನಂತರದ ದಿನಗಳಲ್ಲಿ ರಾಜಕೀಯ ಪರಿವರ್ತನೆಗಳು ಉಂಟಾಗಿ ಪ್ರಜಾ ಪ್ರಭುತ್ವದಂತಹ ಕ್ರಾಂತಿಕಾರಿ ವ್ಯವಸ್ಥೆಗಳು ಹುಟ್ಟಿದವಾದರೂ ಆಡಳಿತದಲ್ಲಿ ನಿಜವಾದ ಜನತಾ ಪ್ರಾತಿನಿಧ್ಯಕ್ಕೆ ಅಲ್ಪಸಂಖ್ಯಾಧಿಪತ್ಯದ ಗುಂಪುಗಳೇ ಅಡ್ಡಿಯಾದವು. ರಾಜಕೀಯ ಪಕ್ಷಗಳ ನಿತ್ಯದ ಚಟುವಟಿಕೆಗಳಲ್ಲಿ ಬಲಾಢ್ಯರ ಚಿಕ್ಕ ಗುಂಪೊಂದು ಕಾಣಿಸಿಕೊಂಡು ಜನ ಪ್ರತಿನಿಧಿಗಳು ಸುಗಮವಾಗಿ ಕೆಲಸ ನಿರ್ವಹಿಸುವಲ್ಲಿ ಆಡಚಣೆಗಳನ್ನು ಉಂಟುಮಾಡುವುದನ್ನೇ ಮಿಶಲ್ಸ್ ‘ಅಲ್ಪಸಂಖ್ಯಾಧಿಪತ್ಯದ ಕಬ್ಬಿಣದ ಕಾನೂನು’ ಎಂದು ಬಣ್ಣಿಸಿ ಅಂತಹ ಅಡಚಣೆಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾನೆ. ಪಕ್ಷಗಳ ಪ್ರಮುಖರೇ ಸಭೆ ಕರೆಯುವ, ಸದಸ್ಯರನ್ನು ಕಲೆ ಹಾಕುವ, ಸಮೂಹ ಮಾಧ್ಯಮಗಳಿಗೆ ಸಂದರ್ಶನ ನೀಡುವ, ಹಾಗೂ ಜನರೆದುರು ಪಕ್ಷಗಳ ತತ್ವಾದರ್ಶಗಳನ್ನು ವಿವರಿಸುವ ಅಧಿಕಾರ ಪಡೆದಿರುವುದರಿಂದ ಇಂಥ ಪ್ರಮುಖರು ಪಕ್ಷದ ಕಾರ್ಯಕರ್ತರ ಮೇಲೆ ಮುಸುಕಿನ ತೆರೆ ಎಳೆಯುತ್ತಾರೆ. ಇವರು ತಮ್ಮ ಲಾಭಕ್ಕೆಂದು ತೆರೆಮರೆಯ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಅಧಿಕಾರಕ್ಕೆ ಬಂದ ತಕ್ಷಣವೇ ಆ ಅಧಿಕಾರದ ಕ್ರೋಢೀಕರಣ ಹಾಗೂ ಮುಂದುವರಿಕೆಯನ್ನು ತಮ್ಮ ಪ್ರಮುಖ ಧ್ಯೇಯವಾಗಿಸಿಕೊಳ್ಳುತ್ತಾರೆ. ಆಡಳಿತಾರೂಢ ಗುಂಪಿನ ಉಳಿದ ಸದಸ್ಯರ ನಿರುತ್ಸಾಹವು ಇಂಥ ಅಲ್ಪಸಂಖ್ಯಾಧಿಪತ್ಯದ ಚಟುವಟಿಕೆಗಳಿಗೆ ಪರೋಕ್ಷ ಬೆಂಬಲ ನೀಡುತ್ತದೆ. ಇದು ಮಿಶಲ್ಸ್ ಮಂಡಿಸಿದ ಆಧುನಿಕ ಅಲ್ಪಸಂಖ್ಯಾಧಿಪತ್ಯದ ವಿವರಣೆ.

ಸುಮಾರು ೮೫ ವರ್ಷಗಳ ಹಿಂದೆ ಮಂಡಿಸಲ್ಪಟ್ಟ ಮಿಶಲ್ಸ್‌ನ ಅಲ್ಪಸಂಖ್ಯಾಧಿಪತ್ಯದ ಸೈದ್ಧಾಂತಿಕ ವಾದವನ್ನು ನಂತರದ ಸಮಾಜಶಾಸ್ತ್ರೀಯ ಸಂಶೋಧನೆಗಳು ದೃಢಪಡಿಸಿವೆ. ಉದಾಹರಣೆಗೆ, ೧೯೫೦ರ ದಶಕದಲ್ಲಿ ‘ಲಿಪ್‌ಸೆಟ್’ ಎಂಬ ಅಮೆರಿಕಾದ ಸಮಾಜಶಾಸ್ತ್ರಜ್ಞನು ಈ ವಿಷಯವನ್ನು ಚರ್ಚಿಸುತ್ತಾ ‘ಸದಸ್ಯರು – ಕನಿಷ್ಠ ಬಹುಮಂದಿ ಸದಸ್ಯರು ಪಕ್ಷದ ಧ್ಯೇಯ ಧೋರಣೆಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗಲಷ್ಟೇ ಪ್ರಜಾಪ್ರಭುತ್ವ ಮಾದರಿಯ ಆಡಳಿತದ ಸಾಧ್ಯ; ಅದಿಲ್ಲವಾದಲ್ಲಿ ಆಡಳಿತವು ತನ್ನಿಂದ ತಾನೇ ಅಲ್ಪಸಂಖ್ಯಾಧಿಪತ್ಯವಾಗಿ ಬದಲಾಗುವುದು’ ಎಂದು ಅಭಿಪ್ರಾಯಪಡುತ್ತಾನೆ.

ಮಾನವ ಸಂಸ್ಕೃತಿಯ ಇತಿಹಾಸವನ್ನು ಗಮನಿಸಿದಾಗ ಅಲ್ಪಸಂಖ್ಯಾಧಿಪತ್ಯ ಮಾದರಿಯ ಆಡಳಿತವು ಕೃಷ್ಯೇತರ ವ್ಯವಸಾಯ ಮತ್ತು ಕೃಷಿ ಸಮಾಜದ ಪ್ರಾರಂಭದ ದಿನಗಳಲ್ಲಿ ಪ್ರಬಲವಾಗಿತ್ತೆಂಬುದನ್ನು ಕಾಣಬಹುದು. ಆಧುನಿಕ ಸಮಾಜದಲ್ಲಿ ಈ ಪದ್ಧತಿಯು ಮೇಲೆ ಚರ್ಚಿಸಿದಂತೆ ರೂಪಾಂತರಗೊಂಡು ಕೆಲಸ ಮಾಡುತ್ತದೆ. ಸಂಕೀರ್ಣವಾದ, ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯಿಂದ ದೊಡ್ಡದಾಗಿರುವ ರಾಷ್ಟ್ರದಲ್ಲಿ ಕೇಂದ್ರ ಸರ್ಕಾರಿ ಹಾಗೂ ರಾಜಕೀಯ ಪಕ್ಷಗಳು ದೇಶದ ಎಲ್ಲ ಭಾಗಗಳನ್ನೂ ಎಲ್ಲ ವ್ಯವಸ್ಥೆಗಳನ್ನೂ ಸ್ವತಃ ನಿಯಂತ್ರಿಸಲು ಸಾಧ್ಯವಾಗಲಾರದು. ಆಗ ಇಂಥ ಆಡಳಿತ ವ್ಯವಸ್ಥೆಗಳು ಸ್ಥಾನೀಯ ಮಟ್ಟದಲ್ಲಿ ಆಡಳಿತದ ಗುಂಪುಗಳನ್ನು ಮಾಡಿ ಪ್ರಾದೇಶಿಕ ವಿಷಯಗಳಲ್ಲಿ ಈ ಗುಂಪುಗಳಿಗೆ ಸ್ವಾಯತ್ತತೆ ನೀಡುತ್ತದೆ. ಇಂಥ ಸ್ಥಾನೀಯ ಗುಂಪುಗಳು ಕ್ರಮೇಣ ಅಲ್ಪಸಂಖ್ಯಾಧಿಪತ್ಯದ ರಚನೆ ಪಡೆದು ಆ ಪ್ರದೇಶಗಳನ್ನು ನೇರ ಹತೋಟಿಯಲ್ಲಿ ಇಟ್ಟುಕೊಳ್ಳುವುದೂ ಉಂಟು.

ಅಲ್ಪಸಂಖ್ಯಾಧಿಪತ್ಯ ಆಡಳಿತ ವ್ಯವಸ್ಥೆಯು ಬೇರೂರಬೇಕಾದರೆ ಕೆಲವು ಪೂರ್ವಭಾವೀ ಅಗತ್ಯತೆಗಳು ಪೂರೈಸಲ್ಪಡಬೇಕು. ಅಂಥ ಮಹತ್ವದ ಪೂರ್ವಭಾವೀ ಅವಶ್ಯಕತೆಗಳನ್ನು ಕೆಳಗಿನಂತೆ ಗುರುತಿಸಬಹುದು.

೧. ಪಕ್ಷದ-ಗುಂಪಿನ ಕೆಳಸ್ಥರದ ಸದಸ್ಯರಲ್ಲಿ ಗುಂಪಿನ ಕಾರ್ಯಗಳಲ್ಲಿ ನಿರಾಸಕ್ತಿ ಹಾಗೂ ನಿರುತ್ಸಾಹ.

೨. ಇಂಥ ಸದಸ್ಯರಲ್ಲಿ ತಮ್ಮ ಕೆಲಸಕ್ಕೆ, ತಮಗೆ ಸರಿಯಾದ ಪ್ರೋ ಮತ್ತು ಅಗತ್ಯವಾದ ಗುರುತಿಸುವಿಕೆ ಕೊಡಲ್ಪಡುತ್ತಿಲ್ಲವೆಂಬ ನಿರಾಶೆ.

೩. ಆಂತರಿಕ ಸಂಘರ್ಷಗಳು ವಿಚಾರಗಳಿಗೆ ಸಂಬಂಧಿಸದೆ ಗುಂಪಿನ ಸದಸ್ಯರ ನಡುವೆ ವೈಯಕ್ತಿಕ ಕಲಹಗಳಾಗಿ ಮಾರ್ಪಡುವುದು.

ಅಲ್ಪಸಂಖ್ಯಾಧಿಪತ್ಯದಲ್ಲಿ ಪ್ರಜಾಪ್ರಭುತ್ವದಲ್ಲಿರುವಂತೆ ಸರ್ಕಾರವು ಪ್ರಜೆಗಳಿಗೆ ಪೂರ್ಣ ಹೊಣೆಯಾಗಿರಬೇಕೆಂಬ ತಾತ್ವಿಕ ನಿರ್ಬಂಧವಿಲ್ಲ. ಪ್ರಾಚೀನ ಗ್ರೀಸಿನ ಥೀಬ್ಸ್, ಮೆಗಾರ್, ಕಾರಿಂತ್‌ಗಳಲ್ಲಿ ಇಂಥ ಸರ್ಕಾರಗಳಿದ್ದುದನ್ನು ನಾವು ಗಮನಿಸುತ್ತೇವೆ. ಕುಲೀನ ಸತ್ತೆಯೇ ಕ್ರಮೇಣ ಅಲ್ಪಸಂಖ್ಯಾಧಿಪತ್ಯವಾಗಿ ಮಾರ್ಪಡುವುದೆಂಬ ಅಭಿಪ್ರಾಯವಿದೆ ಯಾದರೂ ಅವೆರಡಕ್ಕೂ ಖಚಿತವಾದ ವ್ಯತ್ಯಾಸವಿದೆ. ಅಲ್ಪಸಂಖ್ಯಾಧಿಪತ್ಯ ವ್ಯವಸ್ಥೆಯು ಶ್ರೀಮಂತಾಧಿಪತ್ಯ; ಅಲ್ಲಿ ಆಡಳಿತ ವರ್ಗವು ತನ್ನ ಹಿತ, ಮೇಲ್ಮೆಗಳಿಗಾಗಿ ಅಧಿಕಾರದ ಭದ್ರತೆಗಾಗಿ ಮಾತ್ರ ವ್ಯವಹರಿಸುತ್ತದೆ. ಕುಲೀನ ಸತ್ತೆಯಲ್ಲಿ ಆಡಳಿತವು ‘ಉತ್ತಮ’ರ ಕೈಯಲ್ಲಿರುವುದರಿಂದ ಸಾರ್ವಜನಿಕರ ಹಿತಚಿಂತನೆಯೇ ಅದರ ಗುರಿಯಾಗಿರುತ್ತದೆ. ಇಂಥ ಕುಲೀನ ಸತ್ತೆಯ ವಿವರಗಳನ್ನು ಮುಂದಿನ ಪರಿಚ್ಛೇದದಲ್ಲಿ ವಿವರಿಸಲಾಗಿದೆ.

. ಕುಲೀನಸತ್ತೆ

‘ಕುಲೀನಸತ್ತೆ’ ಎಂಬ ಕನ್ನಡ ಪದದ ಮೂಲ ಇಂಗ್ಲೀಷ್ ಶಬ್ದವು ‘ಅರಿಸ್ಟಾಕ್ರಸಿ’. ಈ ಶಬ್ದವು ಗ್ರೀಕ್ ಮೂಲದ ‘ಅರಿಸ್ಟೋ’ (ಎಂದರೆ, ಅತ್ಯುತ್ಕೃಷ್ಟ) ಎಂಬ ಪದದಿಂದ ಬಂದುದಾಗಿದೆ. ಪರ್ಯಾಯವಾಗಿ ಹೇಳಬೇಕೆಂದರೆ, ಕುಲೀನಸತ್ತೆಯನ್ನು ‘ವಿಶೇಷವಾಗಿ ಆರಿಸಲ್ಪಟ್ಟ ಕೆಲವರ ಆಳ್ವಿಕೆ’ ಎಂದು ಸುಲಭವಾಗಿ ವ್ಯಾಖ್ಯಾನಿಸಬಹುದು. ಇದನ್ನು ಸ್ಪಷ್ಟ ಶಬ್ದಗಳಲ್ಲಿ ವಿವರಿಸುವಾಗ ಹುಟ್ಟಿದ ಕುಟುಂಬ, ಸಂಪತ್ತು, ಅಂತಸ್ತು ಹಾಗೂ ಸಹಜ ಸಾಮರ್ಥ್ಯದಿಂದಾಗಿ ಜನರಿಂದ ಆಡಳಿತಕ್ಕೆಂದು ಒಪ್ಪಿಕೊಳ್ಳಲ್ಪಡುವ ಚಿಕ್ಕಗುಂಪನ್ನು ಕುಲೀನಸತ್ತೆ ಎನ್ನಬಹುದು. ಕುಲೀನಸತ್ತೆಯನ್ನು ಹೊಂದಿದ ಚಿಕ್ಕಗುಂಪು ತನ್ನನ್ನು ಉಳಿದ ಸಾಮಾನ್ಯ ಪ್ರಜೆಗಳಿಗಿಂತ ಮೇಲೆಂದು ಗುರುತಿಸಿಕೊಂಡು ತನ್ನ ಇಂಥ ವರ್ಚಸ್ಸನ್ನು ಕಾಯ್ದುಕೊಳ್ಳಲು ಸದಾ ಹೋರಾಟ ನಡೆಸುತ್ತಲೇ ಇರುತ್ತದೆ. ಕುಲೀನಸತ್ತೆಯನ್ನು ಸರಕಾರದ ಉಳಿದ ಮಾದರಿಗಳಿಗೆ ಹೋಲಿಸಿದಾಗ ಈ ವರ್ಗವು ಹೇಗೆ ಸಾಮಾನ್ಯ ಪ್ರಜಾವರ್ಗವನ್ನು ತನ್ನ ನಿರಂಕುಶ ಆಡಳಿತದ ಒಳಸುಳಿಗೆ ಸೆಳೆಯುತ್ತದೆ ಎಂಬುದು ಮನದಟ್ಟಾಗುತ್ತದೆ. ಸಾಮುದಾಯಿಕ ಆಡಳಿತದ ಧೋರಣೆ ಮತ್ತು ಕಾರ್ಯ ನೀತಿಯ ದೃಷ್ಟಿಯಿಂದ ವಿಶೇಷ ಗುಣಗಳನ್ನು ಹೊಂದಿರುವರೆಂದು ಹೇಳಲಾಗುವ ಕೆಲವೇ ವ್ಯಕ್ತಿಗಳು ಆಡಳಿತ ರಚಿಸುವುದನ್ನು ಕುಲೀನಸತ್ತೆ ಎಂಬುದಾಗಿ ಕರೆಯಬಹುದು.

ರಾಜಸತ್ತೆ ಹಾಗೂ ಅಲ್ಪಸಂಖ್ಯಾಧಿಪತ್ಯದ ಹಾಗೆಯೇ ಕುಲೀನಸತ್ತೆಯೂ ಕೂಡ ವರ್ಣರಂಜಿತ ಇತಿಹಾಸ ಹೊಂದಿದೆ. ಇಂತಹ ಅಧಿಕಾರ ವ್ಯವಸ್ಥೆಯಲ್ಲಿ ಶಕ್ತಿಹೊಂದಿರುವ ಈ ಚಿಕ್ಕಗುಂಪು ರಕ್ತ ಸಂಬಂಧ, ಕುಟುಂಬ, ಸಂಪತ್ತು, ಶಿಕ್ಷಣ, ಜನಾಕರ್ಷಕ ವ್ಯಕ್ತಿತ್ವ, ದೈಹಿಕ ಶಕ್ತಿ ಮುಂತಾದ ಮಹತ್ವದ ಅಂಶಗಳನ್ನು ಜನರ ಮುಂದಿಟ್ಟು ರಾಜಕೀಯ ಅಧಿಕಾರದ ಕಡಿವಾಣವನ್ನು ಕೈಗೆತ್ತಿಕೊಳ್ಳುತ್ತದೆ. ಅನೇಕ ಬಾರಿ ಕುಲೀನಸತ್ತೆಯನ್ನು ಹೊಂದಿರುವ ಗುಂಪು ತನ್ನಲ್ಲಿರುವುದೆಂದು ಹೇಳಲಾದ ಪ್ರತಿಭೆ, ಬುದ್ದಿಮತ್ತೆ, ನಿಷ್ಣಾತತೆ ಗಳನ್ನು ಬದಿಗೊತ್ತಿ ಶ್ರೀಮಂತಿಕೆ, ದರ್ಪ, ಕುಟುಂಬದ ಘನತೆಗಳನ್ನೇ ಎತ್ತಿಹಿಡಿದು ಅಲ್ಪಸಂಖ್ಯಾಧಿಪತ್ಯವಾಗಿ ಪರ್ಯವಸಾನಗೊಂಡಿರುವ ಮಾದರಿಗಳೂ ಇವೆ. ಇನ್ನೂ ಕೆಲವೊಮ್ಮೆ ಇಂತಹ ಕುಲೀನ ಸತ್ತೆಯು ತನ್ನ ‘ಕುಲೀನತೆ’ಯನ್ನು ಕಳೆದುಕೊಂಡು ರೋಗಗ್ರಸ್ಥವೂ ದುರ್ಬಲವೂ ಆದ ಆಡಳಿತ ವ್ಯವಸ್ಥೆಯಾಗಿ ಮಾರ್ಪಟ್ಟು ಜನಸಮೂಹದ ಶೋಷಣೆಯ ಕೆಲಸದಲ್ಲಿಯೋ ಅಥವಾ ಅರಾಜಕತೆಯ ಗೊಂದಲದಲ್ಲಿಯೋ ಕೊನೆಗೊಂಡಿದ್ದನ್ನು ನಾವು ಕಾಣಬಹುದು. ಹಾಗೆ ನೋಡಿದರೆ. ಆಧುನಿಕ ರಾಜಕೀಯದಲ್ಲಿ ಸೈದ್ಧಾಂತಿಕ-ವೈಚಾರಿಕ ಸ್ಥರದಲ್ಲಿ ಕುಲೀನಸತ್ತೆ ಮತ್ತು ಅಲ್ಪಸಂಖ್ಯಾಧಿಪತ್ಯಗಳಲ್ಲಿ ಸ್ಪಷ್ಟವಾಗಿ ಜಾರಿಗೆ ಬರುತ್ತಿದ್ದಂತೆಯೇ ‘ಅತಿ ಬುದ್ದಿವಂತ ಹಾಗೂ ಅತ್ಯುತ್ತಮ ವ್ಯಕ್ತಿಗಳ ಸರಕಾರವು’ ರೂಪಾಂತರಗೊಂಡು ‘ಅತ್ಯಂತ ಶ್ರೀಮಂತ, ಅಲ್ಪಸಂಖ್ಯಾತರ ಸರ್ಕಾರ’ವಾಗಿ ಬದಲಾಗುವುದನ್ನು ನೋಡಬಹುದು.

ಇಂಥ ರೂಪಾಂತರಕ್ಕೆ ಕಾರಣವಿಲ್ಲದಿಲ್ಲ. ರಾಜತ್ವ, ಪ್ರಜಾಪ್ರಭುತ್ವ, ಸರ್ವಾಧಿಕಾರಗಳಂತೆ ಕುಲೀನಸತ್ತೆಯೂ ತನ್ನದೇ ಆದ ಸ್ವತಂತ್ರ ರೂಪದಲ್ಲಿ ಜಾರಿಯಲ್ಲಿ ಇದ್ದ ದಾಖಲೆಗಳು ಇಲ್ಲ. ಬದಲಾಗಿ ಈ ಪದ್ಧತಿಯು ಏಕಚಕ್ರಾಧಿಪತ್ಯದ ನೆರಳಿನಲ್ಲಿಯೇ ಬೆಳೆಯಿತಲ್ಲದೇ ಅನುವಂಶೀಯತೆ ಮತ್ತು ಸಂಪತ್ತುಗಳ ಜೊತೆಗೆ ರಾಜಾಶ್ರಯವನ್ನು ಒಂದು ಪ್ರಮುಖ ಗುಣಲಕ್ಷಣವಾಗಿ ಹೊಂದಿತ್ತು. ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಆಸ್ಟ್ರೀಯಾ-ಹಂಗೇರಿ, ಸ್ಪೈಯಿನ್ ಮತ್ತು ರಷ್ಯಾಯಾ ದೇಶಗಳನ್ನು ಇಲ್ಲಿ ಉದಾಹರಿಸಬಹುದು. ಬಂಡವಾಳ ಹಾಗು ಕುಲೀನತೆಯೇ ಪ್ರಧಾನವೆಂದು ಗಣಿಸಿದ ಈ ಎಲ್ಲ ರಾಜಕೀಯ ವ್ಯವಸ್ಥೆಗಳೂ ಜನಾಂದೋಲನದಿಂದಾಗಿ ಹೊರಗೆಸೆಯಲ್ಪಟ್ಟಂತವು. ಪ್ರಜಾಪ್ರಾತಿನಿಧ್ಯದ ಮೌಲ್ಯಗಳಿಗೆ ತಾತ್ವಿಕವಾಗಿ ವಿರೋಧಿಯಾಗಿದ್ದ ಕುಲೀನಸತ್ತೆಯು ವಂಶಪಾರಂಪರ‌್ಯವಾಗಿ ಬಂದ ಶ್ರೀಮಂತಿಕೆ ಹಾಗೂ ಅಂತಸ್ತುಗಳ ವರ್ಚಸ್ಸು ಆಡಳಿತದಲ್ಲಿ ಕಡಿಮೆಯಾಗಿ ಜನಪ್ರಿಯ ಸರಕಾರಗಳು ಸ್ಥಾಪಿತವಾಗುತ್ತಿರುವಂತೆ ಸಮಸ್ಯೆಗಳನ್ನು ಎದುರಿಸಿತು. ತನ್ನ ಆಡಳಿತಾತ್ಮಕ ಸಾಂಸ್ಥಿಕ ರೂಪವನ್ನು ಕಳೆದುಕೊಂಡು ರಾಜಕೀಯ ಚಿಂತನೆಯಲ್ಲಿ ಒಂದು ಅನುಪಯುಕ್ತ ಮತ್ತು ಪೂರ್ವಾಗ್ರಹ ಪೀಡಿತ ಆಡಳಿತ ವ್ಯವಸ್ಥೆಯೆಂದು ಪರಿಗಣಿಸಲ್ಪಟ್ಟಿತು. ಆದ್ದರಿಂದಲೇ ಇಂದಿನ ರಾಜಕೀಯ ಮೌಲ್ಯಗಳು ಮತ್ತು ತತ್ವಾದರ್ಶಗಳು ಕುಲೀನಸತ್ತೆಯಂತಹ ಸರ್ಕಾರದ ವ್ಯವಸ್ಥೆಯನ್ನು ಮಾನ್ಯ ಮಾಡುವುದಿಲ್ಲ.

ಕುಲೀನಸತ್ತೆಯು ಈ ಕೆಳಗಿನ ವಿಶೇಷ ಗುಣಲಕ್ಷಣಗಳನ್ನು ಹೊಂದಿರುತ್ತದೆ.

೧. ಕುಲೀನಸತ್ತೆಯು ಒಂದು ಸಾಮಾನ್ಯವಾದ ಹಾಗೂ ನೈಸರ್ಗಿಕ ಆಡಳಿತ ಪದ್ಧತಿಯೆಂದು ಪರಿಗಣಿಸಲ್ಪಟ್ಟಿದೆ. ಇದಕ್ಕೆ ಕಾರಣಗಳನ್ನು ಹೊಸದಾಗಿ ಹುಡುಕಬೇಕಿಲ್ಲ. ಸಮಾಜದ ಸದಸ್ಯರಲ್ಲಿ ಶ್ರೇಷ್ಠ, ಸಾಮಾನ್ಯ ಮತ್ತು ಕನಿಷ್ಠರೆಂಬ ಗುಂಪುಗಳನ್ನು ನಿಸರ್ಗವೇ ಮಾಡಿದ್ದೆಂದೂ, ತಮ್ಮ ಬುದ್ದಿವಂತಿಕೆ ಹಾಗೂ ಮೇಲ್ಮೆಯಿಂದ ಶ್ರೇಷ್ಠರು ಉಳಿದೆರಡು ಗುಂಪುಗಳನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವುದು ಸಹಜವೆಂದು ಜಗತ್ತಿನೆಲ್ಲೆಡೆ ನಂಬಲಾಗುತ್ತಿದೆ. ಇಂಥ ಶ್ರೇಷ್ಠರು ಉಳಿದವರಿಗಿಂತ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಈ ಅಲ್ಪಸಂಖ್ಯಾತ ಗುಂಪುಗಳು ಬಹುಸಂಖ್ಯಾತ ಸಾಮಾನ್ಯರನ್ನು ಆಳುವುದು ನಿಸರ್ಗದ ನಿಯಮವೆನ್ನುವುದು ಈ ವಾದದ ತಿರುಳು.

೨. ಕುಲೀನಸತ್ತೆ ಆಡಳಿತವು ಕ್ಷಿಪ್ರ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ಪ್ರೋ ವುದಿಲ್ಲ. ಇಂಥ ಆಡಳಿತದಲ್ಲಿ ಬದಲಾವಣೆಗಳು ಅತ್ಯಂತ ನಿಧಾನ ಗತಿಯಲ್ಲಿದ್ದು, ಮೂಲಭೂತ ಪರಿವರ್ತನೆಗಳು ಸಾಮಾಜಿಕ ರಚನೆಗೆ ಅಪಾಯಕಾರಿ ಯೆಂದೂ ಗ್ರಹಿಸಲಾಗುತ್ತದೆ. ಆದ್ದರಿಂದ ಸಾಮಾಜಿಕ ಸಾಂಸ್ಕೃತಿಕ-ಆರ್ಥಿಕ ಸಂಪ್ರದಾಯ ಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವಲ್ಲಿ ಕುಲೀನಸತ್ತೆಯು ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದಲೇ ಈ ಆಳ್ವಿಕೆಯಲ್ಲಿ ಸಂಶೋಧನೆ, ಅನ್ವೇಷಣೆ ಮತ್ತು ಹೊಸಪ್ರಯೋಗಗಳಿಗೆ ಅಷ್ಟಾಗಿ ಪ್ರೋ ಸಿಗದಿರುವುದನ್ನು ಗಮನಿಸಬಹುದು.

೩. ಕುಲೀನಸತ್ತೆಯಲ್ಲಿ ಗುಂಪುಗಾರಿಕೆ ಮತ್ತು ಗುಂಪು ಕಲಹಗಳಿಗೆ ಅವಕಾಶವಿಲ್ಲದ ಪ್ರಯುಕ್ತ ಆಡಳಿತದಲ್ಲಿ ಹೆಚ್ಚಿನ ಸ್ಥಿರತೆ ಇರುತ್ತದೆ. ಎಂದರೆ ಕುಲೀನಸತ್ತೆಯ ಸರಕಾರವು ತೌಲನಿಕವಾಗಿ ಸ್ಥಿರವಾದ ಸರ್ಕಾರವಾಗಿರುತ್ತದೆ.

೪. ಕುಲೀನಸತ್ತೆಯಲ್ಲಿ ವ್ಯಕ್ತಿಗಳ ‘ಗುಣಾತ್ಮಕ’ ಅಂಶಗಳಿಗೆ ಮಹತ್ವ ನೀಡಲಾಗುವುದು. ಉದಾಹರಣೆಗೆ ಜವಾಬ್ದಾರಿಯ ಕೆಲಸಗಳಿಗೆ ಜನರನ್ನು ನೇಮಿಸುವಾಗ ಬಹುಮತದಂತಹ ನೀತಿ ಅನ್ವಯವಾಗುವುದಿಲ್ಲ. ಬದಲಾಗಿ ವ್ಯಕ್ತಿಗಳಲ್ಲಿರುವ ವಿಶೇಷ ಗುಣ ಹಾಗೂ ಅರ್ಹತೆಗಳು ಪರಿಗಣಿಸಲ್ಪಡುತ್ತವೆ.

೫. ಕುಲೀನಸತ್ತೆಯು ರಾಜಕೀಯ ಸ್ಥಿರತೆಗೆ ಹೆಚ್ಚಿನ ಲಕ್ಷ್ಯ ನೀಡುವುದರಿಂದಾಗಿ ಸರ್ಕಾರದ ಧೋರಣೆಗಳಲ್ಲಿ, ಗುರಿ ನೀತಿಗಳಲ್ಲಿ ನಿರಂತರತೆ ಇದ್ದು ಆಡಳಿತಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯ. ಎಂದರೆ ಕುಲೀನಸತ್ತೆಯಲ್ಲಿ ಹಿಂದಿಗಿಂತ ಅತಿ ಭಿನ್ನ ವಾದ ಧ್ಯೇಯ ಧೋರಣೆಗಳ ಅನುಸರಣೆಯನ್ನು ನಿರೀಕ್ಷಿಸಲಾಗದು.

ಕುಲೀನಸತ್ತೆಯು ಆಡಳಿತದ ಒಂದು ಮಾದರಿಯಾಗಿ ಕೆಲವು ಮಿತಿ ಮತ್ತು ದೌರ್ಬಲ್ಯಗಳನ್ನು ಹೊಂದಿದೆ. ಮೊದಲನೆಯದಾಗಿ, ಈ ವಿಧಾನದಲ್ಲಿ ಸ್ಫುಟವಾಗಿ ಎದ್ದು ಕಾಣುವ ಒಂದು ದೊಡ್ಡ ಕೊರತೆಯೆಂದರೆ ಸಂಕುಚಿತ ಹಾಗೂ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆ. ಈ ಕೊರತೆಯಿಂದಾಗಿ ಕುಲೀನಸತ್ತೆಯು ಸಾಮಾನ್ಯ ಜನರಿಂದ ದೂರವಿರುವ ಪ್ರತ್ಯೇಕತಾ ವಾದವನ್ನು ಆಡಳಿತದಲ್ಲಿ ರೂಢಿಗೆ ತಂದಿದೆ.

ಎರಡನೆಯ ಸಮಸ್ಯೆಯೆಂದರೆ ಈ ಆಳ್ವಿಕೆಯಲ್ಲಿ ಶ್ರೀಸಾಮಾನ್ಯನ ಬುದ್ದಿವಂತಿಕೆ, ಪರಿಣತಿ ಮತ್ತು ಕ್ರಿಯಾಶಕ್ತಿಗಳಿಗೆ ಸಾಕಷ್ಟು ಪ್ರೋ ಅವಕಾಶಗಳು, ದೊರೆಯದ ಕಾರಣ ಪ್ರಜೆಗಳು ಹತಾಶರಾಗುವ ಸಂಭವವಿರುತ್ತದೆ. ಮೂರನೆಯ ಹಾಗೂ ಅತೀ ಮಹತ್ವದ ದೋಷವು ಈ ಮಾದರಿಯ ಸತ್ತೆಯ ‘ಆನುವಂಶೀಯತೆ’ ತತ್ವದಲ್ಲಿದೆ. ‘ಶ್ರೇಷ್ಟತೆಯು ಅನುವಂಶೀಯವಲ್ಲ ಹಾಗೂ ಬುದ್ದಿವಂತಿಕೆಯು ಸಮಾಜದ ವಿವಿಧ ಸ್ಥರಗಳಲ್ಲಿ ಹಂಚಲ್ಪಟ್ಟಿರುತ್ತದೆ’ ಎಂಬ ಸೈದ್ಧಾಂತಿಕ ವಾದಕ್ಕೆ ಮನ್ನಣೆ ದೊರೆಯದೆ ಇರುವುದು ಈ ಆಡಳಿತ ನಮೂನೆಯ ದೊಡ್ಡ ದೌರ್ಬಲ್ಯವೆನಿಸಿದೆ. ನಾಲ್ಕನೆಯದಾಗಿ, ಕುಲೀನಸತ್ತೆಯು ಸ್ವಪ್ರತಿಷ್ಠೆಯ ಆಡಂಬರ ಮತ್ತು ಪ್ರದರ್ಶನಗಳಲ್ಲಿ ನಂಬಿಕೆ ಇಡುವುದ ರಿಂದಾಗಿ ಸಾರ್ವಜನಿಕ ಸಂಪನ್ಮೂಲಗಳ ಅನಗತ್ಯ ಹಾಗೂ ದುಂದು ವೆಚ್ಚವಾಗಿ ಪ್ರಜೆಗಳು ಹಾನಿಯನ್ನು ಎದುರಿಸಬೇಕಾಗುತ್ತದೆ. ಕೊನೆಯದಾಗಿ, ನೈಸರ್ಗಿಕ ಅಸಮಾನತೆ ತತ್ವವನ್ನು ಆಧಾರವಾಗಿ ಇಟ್ಟುಕೊಂಡ ಇಂಥ ಸರ್ಕಾರವು ಆ ತತ್ವವನ್ನು ಸೈದ್ಧಾಂತಿಕವಾಗಿ ಪ್ರಶ್ನಿಸಿದ ಕೂಡಲೇ ಕುಸಿದು ಬೀಳುವ ಸಂಭವವಿರುತ್ತದೆ.

ಇಷ್ಟೆಲ್ಲ ಮಿತಿಗಳನ್ನು ಹೊಂದಿದ್ದರೂ ಕುಲೀನಸತ್ತೆಯು ಆಳ್ವಿಕೆಯ ಒಂದು ಮಾದರಿ ಯಾಗಿ ಸಾಕಷ್ಟು ಪ್ರಸಿದ್ದಿ ಪಡೆದಿದೆ. ಆಧುನಿಕ ಪ್ರಜಾಪ್ರಭುತ್ವದಂತಹ ಆಳ್ವಿಕೆಯ ನಮೂನೆಯಲ್ಲಿಯೂ ‘ಕುಲೀನಸತ್ತೆಯ’ ತತ್ವಗಳೂ, ಅಲ್ಪಸಂಖ್ಯಾಧಿಪತ್ಯದ ನಿಯಮಗಳೂ ಎಡೆಬಿಡದೆ ಅನ್ವಯಿಸಲ್ಪಡುತ್ತವೆ. ಎಂದರೆ ಆಳ್ವಿಕೆಯ ಈ ಮಾದರಿಗಳು ಇಂದಿಗೂ ಜನರ ಆಡಳಿತದಲ್ಲಿ ತಮ್ಮ ವರ್ಚಸ್ಸನ್ನು ಹೊಂದಿವೆ ಎಂಬುದರಲ್ಲಿ ಸಂದೇಹವಿಲ್ಲ.