ಫ್ಯಾಸಿಸ್ಟ್ ಸರ್ವಾಧಿಕಾರ

ಮುಸ್ಸೊಲೊನಿಯು ತನ್ನ ನಾಯಕತ್ವದಲ್ಲಿ ಫ್ಯಾಸಿಸ್ಟ್ ಸರ್ವಾಧಿಕಾರ ಸ್ಥಾಪನೆಯಾದ ಆರಂಭದ ವರ್ಷಗಳಲ್ಲಿ ಬಹು ಜಾಗರೂಕತೆಯಿಂದ ಕಾರ್ಯಕ್ರಮಗಳನ್ನು ಕೈಕೊಂಡನು. ದೇಶದಲ್ಲಿ ಅನಿಶ್ಚಿತತೆ ಮತ್ತು ಅಶಾಂತಿಯನ್ನು ಹೋಗಲಾಡಿಸಲು ಒಂದು ವರ್ಷದ ಮಟ್ಟಿಗೆ ತನಗೆ ಸರ್ವಾಧಿಕಾರ ನೀಡುವಂತೆ ಅರಸರನ್ನು ಮತ್ತು ಸಂಸತ್ತನ್ನು ಒತ್ತಾಯಿಸಿ ಒಪ್ಪಿಗೆ ಪಡೆದು ರಾಷ್ಟ್ರದ ಸರ್ವಾಧಿಕಾರವನ್ನು ತನ್ನಲ್ಲಿ ಕೇಂದ್ರೀಕರಿಸಿಕೊಂಡನು. ಅರಸ ಮತ್ತು ಸಂಪತ್ತನ್ನು(ಚೇಂಬರ್ ಆಫ್ ಡೆಪ್ಯುಟೀಸ್) ಮೂಲೆಗುಂಪು ಮಾಡಿದನು. ತನಗೆ ನಿಷ್ಟೆ ತೋರಿಸುವ ಫ್ಯಾಸಿಸ್ಟರನ್ನು ಆಡಳಿತದ ಉನ್ನತ ಹುದ್ದೆಗಳಿಗೆ ನೇಮಿಸಿದನು. ೧೯೨೩ರಲ್ಲಿ ಸುಸಜ್ಜಿತ ಸೈನ್ಯವನ್ನು ಕಟ್ಟಿ ಸೇನೆಯ ಅಧಿಕಾರಗಳು ಅರಸನಿಗೆ ನಿಷ್ಟೆಯಿಂದಿರುವ ಬದಲು ತನಗೆ ನಿಷ್ಟೆಯಿಂದಿರಬೇಕೆಂದು ಕರೆಕೊಟ್ಟನು.

ಈ ಕರೆಯಿಂದ ಪ್ರೇರಿತರಾದ ಸೈನ್ಯಾಧಿಕಾರಿಗಳು ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷದ ಅನುಯಾಯಿಗಳನ್ನು ಮತ್ತು ಮುಸ್ಸೊಲೊನಿಯನ್ನು ವಿರೋಧಿಸುವ ಶಕ್ತಿಗಳನ್ನು ಕೊಲೆ, ಸುಲಿಗೆ, ಬೆಂಕಿ ಹಚ್ಚುವುದು, ಇವುಗಳ ಮೂಲಕ ಧ್ವಂಸ ಮಾಡಿದನು. ಸಮಾಜ ವಾದಿ ಪಕ್ಷದ ಧುರೀಣ ಗಯಕೊಮೊಮಟ್ಟಿಯೊಟ್ಟಿ ಎಂಬಾತನನ್ನು ಫ್ಯಾಸಿಸ್ಟರು ಕೊಲೆ ಮಾಡಿದರೆನ್ನುವ ವದಂತಿ ಎಲ್ಲಾ ಕಡೆಗೂ ಹರಡಿತು. ೧೯೨೪ ಮತ್ತು ೧೯೨೮ರ ಚುನಾವಣೆಯಲ್ಲಿ ಫ್ಯಾಸಿಸ್ಟರೆ ಅತ್ಯಧಿಕ ಸಂಖ್ಯೆಯಲ್ಲಿ ಆರಿಸಿ ಬರುವಂತೆ ಮಾಡಲು ಚುನಾವಣೆ ಕಾನೂನನ್ನು ಮಾರ್ಪಡಿಸಿದನು. ಇದಕ್ಕೂ ಪೂರ್ವದಲ್ಲಿ ಅಂದರೆ ೧೯೨೫ರಲ್ಲಿ ಕಾನೂನು ರಚಿಸಿ ಫ್ಯಾಸಿಸ್ಟರನ್ನು ವಿರೋಧಿಸುವ ಪಕ್ಷಗಳನ್ನು ಸಂಘ ಸಂಸ್ಥೆಗಳನ್ನು ಪತ್ರಿಕೆಗಳನ್ನು ನಿಷೇಧಿಸಿದನು. ೧೯೨೭ರಲ್ಲಿ ಕಾರ್ಮಿಕರಿಗೆ ಸಂಬಂಧಪಟ್ಟ ಸನದು (ಚಾರ್ಟರ್) ಜಾರಿಗೊಳಿಸಿ ಉತ್ಪಾದನಾ ಕೇಂದ್ರಗಳ ಹಾಗೂ ಪ್ರಸಾರ ಮಾಧ್ಯಮಗಳ ಮೇಲೆ ನಿಯಂತ್ರಣ ಇಟ್ಟುಕೊಂಡನು. ಹಳ್ಳಿ ಮತ್ತು ಪಟ್ಟಣಗಳಲ್ಲಿನ ಪುರಸಭೆಗಳ ಸ್ವಾಯತ್ತತೆಯನ್ನು ರದ್ದುಗೊಳಿಸಿ, ಅವುಗಳ ಆಡಳಿತಕ್ಕಾಗಿ ಪೊಡೆಸ್ಪರ್ಸ ಎಂಬ ಆಡಳಿತಾಧಿಕಾರಿಗಳನ್ನು ನೇಮಿಸಿದನು. ೧೯೨೯ರಲ್ಲಿ ಚುನಾವಣೆಯಲ್ಲಿ ೨/೩ರಷ್ಟು ಫ್ಯಾಸಿಸ್ಟ್ ಪಕ್ಷದ ಅಭ್ಯರ್ಥಿಗಳು ಸಂಪತ್ತಿಗೆ ಆರಿಸಿ ಬಂದರು. ಇಂತಹ ಸಂಸತ್ತನ್ನೇ ವಿಸರ್ಜಿಸಿ ಸಂಸತ್ತಿನ ಸ್ಥಾನದಲ್ಲಿ ಗ್ರಾಂಡ ಕೌನ್ಸಿಲ್ ಎನ್ನುವ ಮಂಡಳಿ ರಚಿಸಿ ಅವರ ಸಹಾಯದಿಂದ ದೇಶದ ಆಡಳಿತವನ್ನು ನಡೆಸಿದನು. ಈ ಮಂಡಳಿಯ ಸದಸ್ಯರು ಫ್ಯಾಸಿಸ್ಟರಾಗಿದ್ದು ಮುಸ್ಸೊಲೊನಿಯ ನಾಯಕತ್ವದಲ್ಲಿ ಮಂತ್ರಿಗಳಾಗಿ ದೇಶ ಮತ್ತು ವಿದೇಶೀಯ ನೀತಿಗಳನ್ನು ರೂಪಿಸಿದರು. ಫ್ಯಾಸಿಸ್ಟ ಶಿಕ್ಷಕರು ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಗೊಂಡರು. ಈ ರೀತಿಯಾಗಿ ದೇಶದ ಸರ್ವಾಧಿಕಾರಗಳನ್ನು ಪಡೆದು ಜನಪ್ರಿಯ ನಾಯಕ ಅಂದರೆ ಡ್ಯೂಸ್(ಲೀಡರ್) ಎನ್ನುವ ಬಿರುದನ್ನು ಪಡೆದನು. ಹೀಗಾಗಿ ಮುಸ್ಸೊಲೊನಿ ಇಟಲಿಯಲ್ಲಿ ಸರ್ವಾಧಿಕಾರತ್ವ ಸ್ಥಾಪಿಸಿ ಪ್ರಜಾಪ್ರಭುತ್ವಕ್ಕೆ ಮಂಗಲ ಹಾಡಿದನು.

ಮುಸ್ಸೊಲೊನಿಯ ಆಂತರಿಕ ನೀತಿ

ಫ್ಯಾಸಿಸ್ಟ್ ಆಳ್ವಿಕೆಯಿಂದಾಗಿ ಇಟಲಿಯ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗಗಳಲ್ಲಿ ಆಮೂಲಾಗ್ರ ಬದಲಾವಣೆಗಳಾದವು. ಇಟಲಿಯನ್ನರ ಭಾವನೆಗಳನ್ನರಿತು ಮುಸ್ಸೊಲೊನಿಯು ಇಟಲಿಯನ್ನು ಅಭಿವೃದ್ದಿ ಮತ್ತು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿದನು. ರಾಜಕೀಯ ಅರಾಜಕತೆಯಿಂದಾಗಿ ಇಟಲಿಯಲ್ಲಿ ಸಂಭವಿಸಿದ ಆಂತರ್ಯುದ್ಧವನ್ನು ತಡೆದು ಅಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಂತೆ ಮಾಡಿದನು. ರಾಷ್ಟ್ರವಿರೋಧಿ ಮತ್ತು ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ಕಿತ್ತೆಸೆದನು. ತತ್ಪರಿಣಾಮವಾಗಿ ಆಡಳಿತ ಯಂತ್ರ ಚುರುಕುಗೊಂಡಿತು. ಹಣದ ಅಪಮೌಲ್ಯವನ್ನು ತಡೆದು ರಪ್ತುಗಳಿಗೆ ಉತ್ತೇಜನ ನೀಡಿ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಯನ್ನು ಹಾಕಿದನು. ಉತ್ಪನ್ನವನ್ನು ಹೆಚ್ಚಿಸಿ ಇಟಲಿಗೆ ಆರ್ಥಿಕ ಸ್ಥಿರತೆ ಕೊಡಲು ಕಾರ್ಪೋರೇಟ ರಾಜ್ಯವನ್ನು ನಿರ್ಮಿಸಿ ಮುಷ್ಕರ ಮತ್ತು ಬೀಗಮುದ್ರೆಗಳನ್ನು ನಿಷೇಧಿಸಿದನು. ಕಾರ್ಖಾನೆಗಳನ್ನು ರಾಷ್ಟ್ರೀಕರಣಗೊಳಿಸಿ ಉತ್ಪನ್ನಕ್ಕೆ ಪೋತ್ಸಾಹ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಿದನು. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಮಿಕ ಸನದನ್ನು ಜಾರಿಗೊಳಿಸಿ ಕಾರ್ಮಿಕರಿಗೆ ನಿರೀಕ್ಷಿತ ವೇತನ ಕೊಟ್ಟು ಅವರ ಭದ್ರತೆಗಾಗಿ ಜೀವವಿಮೆ ಸೌಲಭ್ಯಗಳನ್ನು ಒದಗಿಸಿಕೊಟ್ಟನು. ರಸ್ತೆ ಸಾರಿಗೆ ಸಂಪರ್ಕವನ್ನು ವೃದ್ದಿಗೊಳಿಸಿ ಹೈಡ್ರೊ ಎಲೆಕ್ಟ್ರಿಕ್ ಪವರ್ ಪ್ಲಾಂಟ್ಸ್‌ಗಳನ್ನು ಸ್ಥಾಪಿಸಿದನು. ಅನಕ್ಷರತೆಯನ್ನು ಹೋಗಾಲಾಡಿಸಲು ಫ್ಯಾಸಿಸ್ಟ್ ಶಿಕ್ಷಣವನ್ನು ಕಡ್ಡಾಯ ಗೊಳಿಸಿ ಪ್ರತಿಯೊಬ್ಬ ಇಟಲಿಯ ಪ್ರಜೆಗೆ ಮಿಲಿಟರಿ ತರಬೇತಿ ಕೊಡಿಸಿದನು. ಇಟಲಿಯ ಸಮಗ್ರತೆಯನ್ನು ಕಾಯ್ದುಕೊಳ್ಳಲು ಜರ್ಮನ್ ಮತ್ತು ಫ್ರಾನ್ಸ್ ಶಕ್ತಿಗಳಿಗನುಗುಣವಾದ ವಾಯುಸೇನೆ, ಭೂ ಸೇನೆ ಹಾಗು ನೌಕಾಪಡೆಗಳನ್ನು ಬಲಪಡಿಸಿದನು.

ಪೋಪನೊಡನೆ ಸೌಹಾರ್ದತೆ

೧೮೭೦ ರಿಂದಲೂ ಇಟಲಿ ಮತ್ತು ಪೋಪನ ನಡುವೆ ಇದ್ದ ವಿವಾದವನ್ನು ಫ್ಯಾಸಿಸ್ಟ್ ಸರಕಾರವು ಸೌಹಾರ್ದಯುತವಾಗಿ ಬಗೆಹರಿಸಿತು. ಮುಸ್ಸೊಲೊನಿಯ ಫೆಬ್ರವರಿ ೧೧, ೧೯೨೯ರಂದು ಲ್ಯಾಟರಾನ್ ಒಪ್ಪಂದವನ್ನು ಮಾಡಿಕೊಂಡನು. ಈ ಒಪ್ಪಂದದ ಮುಖ್ಯಾಂಶ ಗಳೆಂದರೆ: ಮುಸ್ಸೊಲೊನಿಯ ಸಾರ್ವಭೌಮತ್ವವನ್ನು ಪೋಪನು ಒಪ್ಪಿದನು. ಇದಕ್ಕನುಗುಣವಾಗಿ ಇಟಲಿ ಸರ್ಕಾರವು ವ್ಯಾಟಿಕನ್ ಪ್ರದೇಶದಲ್ಲಿ ಪೋಪನ ಪರಮಾಧಿಕಾರ ವನ್ನು ಒಪ್ಪಿತು. ಫ್ಯಾಸಿಸ್ಟ ಸರಕಾರವು ರೋಮನ್ನು ಕ್ಯಾಥೊಲಿಕ್ ಧರ್ಮವನ್ನು ಇಟಲಿ ರಾಜ್ಯದ ಏಕೈಕ ಧರ್ಮವೆಂದು ಪರಿಗಣಿಸಿತು. ಫ್ಯಾಸಿಸ್ಟ ಸರ್ಕಾರವು ಒಪ್ಪಿಗೆ ಪಡೆದು ಬಿಷಪರ್ ಮತ್ತು ಧರ್ಮಪ್ರಚಾರಕರನ್ನು ನೇಮಕ ಮಾಡುವ ಅಧಿಕಾರ ವನ್ನು ಪೋಪನಿಗೆ ಕೊಡಲಾಯಿತು. ಆದರೆ ರಾಜಕೀಯ ವಿಚಾರಗಳಲ್ಲಿ ಧಾರ್ಮಿಕ ಪ್ರಭಾವ ಪ್ರವೇಶಿಸದಂತೆ ಷರತ್ತನ್ನು ಸರಕಾರ ವಿಧಿಸಿತು.

ಫ್ಯಾಸಿಸ್ಟ್ ಸರಕಾರದ ವಿದೇಶಿ ನೀತಿ

ಇಟಲಿ ದೇಶವನ್ನು ಮಹಾಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿ ಪ್ರಾಚೀನ ರೋಮನ್ ಸಾಮ್ರಾಜ್ಯದ ವೈಭವವನ್ನು ಪುನರುಜ್ಜೀವನಗೊಳಿಸುವ ಸಂಕಲ್ಪದಿಂದ ವಿದೇಶಾಂಗ ನೀತಿಯನ್ನು ಮುಸ್ಸೊಲೊನಿ ರೂಪಿಸಿದನು. ಯುದ್ಧದಿಂದ ಈ ಗುರಿಯನ್ನು ಸಾಧಿಸಲು ನಿರ್ಧರಿಸಿ ಆಕ್ರಮಣ ನೀತಿಯನ್ನು ಅನುಸರಿಸಿದನು. ಇಟಲಿಯಲ್ಲಿ ಮಿತಿಮೀರಿ ಬೆಳೆದ ಜನಸಂಖ್ಯೆಯಿಂದ ಆಹಾರ ಸಮಸ್ಯೆಯುಂಟಾಗಿತ್ತು. ಕಾರಣ ಉತ್ಪಾದನೆ ಹೆಚ್ಚಿಸಲು ಯುರೋಪಿನಲ್ಲಿಯ ವಸಾಹತುಗಳನ್ನು ಆಕ್ರಮಿಸಲು ನಿರ್ಧರಿಸಿದನು. ತತ್ಪರಿಣಾಮವಾಗಿ ಟರ್ಕಿ ದೇಶದ ಮೇಲೆ ಯುದ್ಧ ಸಾರಿ ಲೋಸಾನಿ ಒಪ್ಪಂದ ಮಾಡಿಕೊಂಡು ಮೆಡಿಟೇರಿಯನ್ ಸಮುದ್ರದ ಮೇಲೆ ಹಿಡಿತ ಸಾಧಿಸಿದನು. ಇಟಲಿಯನ್ನರಿಗೆ ಕೊಟ್ಟ ವಾಗ್ದಾನದಂತೆ ೧೯೨೪ರಲ್ಲಿ ಯುಗೋಸ್ಲಾವಿಯಾದ ಮೇಲೆ ದಾಳಿ ಮಾಡಿ ಮಿತ್ರರಾಷ್ಟ್ರಗಳು ಕೊಡಲು ನಿರಾಕರಿಸಿದ ಫಯೂಮಿ (ಕೋಟೆ) ವಶಪಡಿಸಿಕೊಂಡನು. ೧೯೩೯ರಲ್ಲಿ ಆರ್ಥಿಕ ನೆರವನ್ನು ನೀಡಿ ಅಲ್ಬಾನಿಯಾದಲ್ಲಿ ಇಟಲಿಯ ಪ್ರಭಾವವನ್ನು ಹೆಚ್ಚಿಸಿದನು, ಮುಂದೆ ಅಲ್ಬಾನಿಯಾ ಮುಸ್ಸೊಲೊನಿಯ ವಶವಾಯಿತು. ರಷ್ಯಾ ಜೊತೆ ವ್ಯಾಪಾರ ಸಂಬಂಧಗಳನ್ನು ವೃದ್ದಿಸಿ ಕೊಂಡನು. ಜರ್ಮನಿಯ ಹಿಟ್ಲರನಿಂದ ಉದ್ಭವಿಸಬಹುದಾದ ಯುದ್ಧಗಳನ್ನೆದುರಿಸಲು ಇಂಗ್ಲೆಂಡ್ ಮತ್ತು ಫ್ರಾನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡನು. ಚೀನಾ ದೇಶದ ಮಂಚೂರಿಯಾದ ಮೇಲೆ ಜಪಾನ್‌ದೇಶ ಕೈಕೊಂಡ ದಾಳಿಯಿಂದ ಪ್ರೇರಿತನಾಗಿ ಅಬ್ಸೀನಿಯಾವನ್ನು ಆಕ್ರಮಿಸಿಕೊಂಡನು. ಇಟಲಿಯ ಹಿತಾಸಕ್ತಿಗಳನ್ನು ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಿಂದ ರಕ್ಷಿಸುವ ದೃಷ್ಟಿಯಿಂದ ಮುಸ್ಸೊಲೊನಿಯ ರಾಷ್ಟ್ರ ಸಂಘದ ಸದಸ್ಯತ್ವವನ್ನು ತ್ಯಜಿಸಿ ಜರ್ಮನಿಯ ಮತ್ತು ಜಪಾನರ ನಿಷ್ಠಾವಂತ ಸ್ನೇಹಿತನಾಗಿ ಅವರೊಡನೆ ೧೯೩೭ರಲ್ಲಿ ‘‘ರೋಂ-ಬರ್ಲಿನ್ -ಟೊಕಿಯೊ ಆಕ್ಸಿಸ್ ’’ ಎಂಬ ಒಪ್ಪಂದ ಮಾಡಿಕೊಂಡನು. ಇದಕ್ಕೂ ಮುಂಚೆ ಸ್ಪೆಯಿನಿನಲ್ಲಿ ತಲೆದೋರಿದ್ದ ಅಂತರ್ಯುದ್ಧದಲ್ಲಿ ಹಸ್ತಕ್ಷೇಪ ನಡೆಸಿ ತನ್ನ ಸೈನ್ಯದ ನೆರವು ನೀಡಿ ಅಲ್ಲಿಯ ಜನರಲ್ ಫ್ರಾಂಕೊ ಅಧಿಕಾರಕ್ಕೆ ಬರುವಂತೆ ಮಾಡಿದನು. ಈ ರೀತಿಯಾಗಿ ಇಟಲಿ ದೇಶವನ್ನು ಶಕ್ತಿಯುತ ರಾಷ್ಟ್ರವನ್ನಾಗಿ ಮಾಡಿದ ಬೆನೆಟೊ ಮುಸ್ಸೊಲೋನಿ ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ ಜೊತೆಯಾಗಿ ಹೋರಾಡಿ ಮಿತ್ರರಾಷ್ಟ್ರಗಳಿಗೆ ಸೋತಾಗ ಫ್ಯಾಸಿಸ್ಟ್ ವಿರೋಧಿ ಗುಂಪೊಂದು ಮುಸ್ಸೊಲೊನಿ ಯನ್ನು ಬಂಧಿಸಿ ೧೯೪೫ರ ಏಪ್ರಿಲ್ ೨೮ರಂದು ಕೊಂದುಹಾಕಿತು. ಫ್ಯಾಸಿಸ್ಟ್ ತತ್ವ ಮುಸ್ಸೊಲೊನಿಯ ಮರಣದೊಂದಿಗೆ ನಿರ್ನಾಮವಾಯಿತು.

ಜರ್ಮನಿಯಲ್ಲಿ ನಾಜಿವಾದ: ನಾಜಿಸಂನ ಉದಯ

ಫ್ಯಾಸಿಸ್ಟ್‌ವಾದದಂತೆ ನಾಜಿವಾದವು ಪ್ರಥಮ ಜಾಗತಿಕ ಮಹಾಯುದ್ಧದ ಫಲವಾಗಿದೆ. ಬಿಸ್ಮಾರ್ಕನು ಸ್ಥಾಪಿಸಿದ ಜರ್ಮನ್ ಸಾಮ್ರಾಜ್ಯವು ಮಹಾಯುದ್ಧದ ನಂತರ ಬಿದ್ದು ಹೋಯಿತು. ಸಿಂಹಾಸನವನ್ನವಲಂಬಿಸಿದ್ದ ಕೈಸರ್ ವಿಲಿಯಂನು ಹಾಲೆಂಡಿಗೆ ಓಡಿಹೋದನು. ಈ ಸನ್ನಿವೇಶದಲ್ಲಿ ಸಮಾಜವಾದಿ ರಿಪಬ್ಲಿಕನ್ ಪಕ್ಷದವರು ತಾತ್ಕಾಲಿಕವಾಗಿ ಫೆಡರಿಕ್ ಇಬರ್ಟನ ನಾಯಕತ್ವದಲ್ಲಿ ಸರಕಾರವನ್ನು ರಚಿಸಿದರು. ೧೯೧೯ರಲ್ಲಿ ಜರ್ಮನಿ ವೀಮರ್ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಯಿತು. ಸುಮಾರು ಅರ್ಧ ಶತಮಾನದ ಕಾಲ ತನ್ನ ಬಲದಿಂದ ವಿಜಯೋನ್ಮತ್ತವಾಗಿದ್ದ ಮತ್ತು ವೈಯಕ್ತಿಕ ಶಕ್ತಿಯಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ಹೊಂದಿದ ಜರ್ಮನಿ ಪ್ರಥಮ ಮಹಾಯುದ್ಧದಲ್ಲಿ ಸೋತು ವಿನಾಶದ ಹಾದಿ ಹಿಡಿಯಿತು. ಯುದ್ಧದಲ್ಲಿ ಜರ್ಮನಿ ಅನುಭವಿಸಿದ ಅವಮಾನಕರವಾದ ಸೋಲು ಮತ್ತು ಯುದ್ಧದ ನಂತರ ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಬಲಾತ್ಕಾರವಾಗಿ ಹೊರಿಸಲ್ಪಟ್ಟ ವರ್ಸೇಲ್ಸ್ ಒಪ್ಪಂದ (೧೯೧೯) ಜರ್ಮನಿಯನ್ನು ಜರ್ಜರಿತಗೊಳಿಸಿದವು. ಅಪಾರ ರಾಷ್ಟ್ರಭಿಮಾನದಿಂದ ಬೀಗುತ್ತಿದ್ದ ಜರ್ಮನ್ ಜನತೆ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಂಪೂರ್ಣ ಹಾಳಾಯಿತು. ವಿಜೇತ ರಾಷ್ಟ್ರಗಳು ಜರ್ಮನಿಯ ಸೈನಿಕ ಶಕ್ತಿಯನ್ನು ನಾಶಪಡಿಸಲು ಅನೇಕ ಕ್ರಮಗಳನ್ನು ಕೈಕೊಂಡವು. ಜರ್ಮನಿ ವಸಾಹತುಗಳನ್ನು ಕಳೆದುಕೊಂಡಿತು. ಅಲ್ಲದೆ ಜರ್ಮನಿಯೇ ಯುದ್ಧಕ್ಕೆ ಹೊಣೆ ಎಂಬುದನ್ನು ಒಪ್ಪಿಕೊಳ್ಳುವಂತೆ ಮಾಡಿ ವಿಜೇತ ರಾಷ್ಟ್ರಗಳು ಅಪಾರ ಯುದ್ಧ ನಷ್ಟ ೬,೬೦೦,೦೦೦,೦೦೦ ಪೌಂಡ್ಸ್‌ಗಳನ್ನು ದಂಡರೂಪದಲ್ಲಿ ಜರ್ಮನಿ ಕೊಡಬೇಕೆಂದು ವಿಧಿಸಿದವು. ಯುದ್ಧದಲ್ಲಿ ಬಲವಾಗಿ ಪೆಟ್ಟು ತಿಂದ ಜರ್ಮನಿಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಸ್ಥಿರತೆ ಕುಸಿದು ಅಸಮಾನತೆ, ಅರಾಜಕತೆ ಕಾಣಿಸಿಕೊಂಡವು, ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳಿಂದ ಜರ್ಮನರು ಕಂಗಾಲಾದರು. ಜರ್ಮನ್ ಗಣರಾಜ್ಯದ ಅಧ್ಯಕ್ಷ ಫೆಡರಿಕ್ ಇಬರ್ಟನನ್ನು ಗಣರಾಜ್ಯದ ಪ್ರತಿನಿಧಿಗಳು ಅವಿವೇಕಿಯೆಂದು ಕರೆದು ವರ್ಸೇಲ್ ಒಪ್ಪಂದವನ್ನು ವಿಜೇತ ರಾಷ್ಟ್ರಗಳು ಜರ್ಮನಿಯ ಮೇಲೆ ಹೇರಲು ಈತನ ಸಮ್ಮತಿಯೇ ಕಾರಣವೆಂದು ದೋಷಾರೋಪಣೆ ಮಾಡಿದನು. ವರ್ಸೇಲ್ಸ್ ಒಪ್ಪಂದವನ್ನು ಪ್ರತಿಭಟಿಸುವ ಅನೇಕ ಗುಂಪುಗಳು ಜರ್ಮನಿಯಲ್ಲಿ(೧೯೧೯-೧೯೨೫) ಅಸ್ತಿತ್ವಕ್ಕೆ ಬಂದವು. ಅದರಲ್ಲಿ ಜರ್ಮನ್ ಕಾರ್ಮಿಕರ ಪಕ್ಷವೂ ಒಂದು. ೧೯೨೦ರಲ್ಲಿ ಇದರ ಹೆಸರನ್ನು ‘ರಾಷ್ಟ್ರೀಯ ಸಮಾಜವಾದಿ ಜರ್ಮನ್ ಕಾರ್ಮಿಕ ಪಕ್ಷ’ ಎಂದು ಬದಲಾಯಿಸಲಾಯಿತು. ಮುಂದೆ ಅಡಾಲ್ಫ್ ಹಿಟ್ಲರನ ನಾಯಕತ್ವದಲ್ಲಿ ಇದು ನಾಜಿ ಪಕ್ಷವಾಯಿತು.

ಅಡಾಲ್ಫ್ ಹಿಟ್ಲರ್ (೧೮೮೯೧೯೪೫)

ಅಡಾಲ್ಫ್ ಹಿಟ್ಲರನು ೧೮೮೯ರ ಏಪ್ರಿಲ್ ೨೦ ರಂದು ಸಾಮಾನ್ಯ ಸುಂಕದ ಅಧಿಕಾರಿಯ ಮಗನಾಗಿ ಬ್ರಾನಾಲ್ ಎಂಬಲ್ಲಿ ಜನಿಸಿದನು. ಹುಟ್ಟಿನಿಂದ ಈತನು ಆಸ್ಟ್ರಿಯಾ ನಾಗರಿಕನಾಗಿದ್ದನು. ಚಿಕ್ಕಂದಿನಲ್ಲಿ ತಂದೆತಾಯಿಗಳನ್ನು ಕಳೆದುಕೊಂಡು ತಬ್ಬಲಿ ಯಾದನು. ಜರ್ಮನ್ ರಾಷ್ಟ್ರೀಯತ್ವವು ಈತನಿಗೆ ಜೀವನದಲ್ಲಿ ಸ್ಫೂರ್ತಿಯ ಸೆಲೆಯಾಯಿತು. ಹೆಚ್ಚಿನ ಶಿಕ್ಷಣವನ್ನು ಪಡೆಯದೆ ಹಿಟ್ಲರನು ಆರಂಭದಲ್ಲಿ ಕಲೆಯ ಉಪಾಸಕನಾಗಿದ್ದನು. ೧೯೦೯ರಲ್ಲಿ ಕಲೆಯ ವಿಷಯದ ಬಗ್ಗೆ ಅಭ್ಯಾಸ ಮಾಡಲು ಅಂದರೆ ತನ್ನ ೧೮ನೆಯ ವಯಸ್ಸಿನಲ್ಲಿ ವಿಯನ್ನಾಕ್ಕೆ ತೆರಳಿದನು. ಅವಕಾಶಗಳಿಂದ ವಂಚಿತನಾದ ಹಿಟ್ಲರನು ಜರ್ಮನ್ನರ ಬಡತನ, ಅಪಮಾನ ಹಾಗು ಪ್ರತಿಷ್ಟೆಗಳ ಕುಸಿತಕ್ಕೆ ಯೆಹೂದಿಗಳೆ ಕಾರಣರೆಂದು ತಿಳಿದು ಅವರನ್ನು ದ್ವೇಷಿಸುವುದನ್ನು ಕಲಿತನು. ಯೆಹೂದ್ಯರ ಜೀವನವನ್ನು ಅಭ್ಯಸಿಸಿದ ನಂತರ ಅವರು ಜರ್ಮನ್ ರಾಷ್ಟ್ರೀಯತೆ ಹಾಗೂ ಜನಾಂಗ ಧೋರಣೆಯ ಬದ್ಧ ವೈರಿಗಳೆಂದು ಹಾಗೂ ಮಾನವತೆಯನ್ನು ಕೊನೆಗಾಣಿಸುವ ಆಲೋಚನೆಯನ್ನಿಟ್ಟು ಕೊಂಡು ಮಾರ್ಕ್ಸ್‌ವಾದದೊಂದಿಗೆ ಕಲೆತು ಹೊಂಚು ಹಾಕಿರುವರೆಂದು ಹಿಟ್ಲರ್ ದೃಢವಾಗಿ ನಂಬಿದನು. ೧೯೧೩ರಲ್ಲಿ ವಿಯನ್ನಾವನ್ನು ತೊರೆದು ಮ್ಯೂನಿಚ್ ನಗರಕ್ಕೆ ಬಂದು ಯೆಹೂದಿ ವಿರೋಧಿಗಳ ಅಸಮರ್ಥ ರಿಪಬ್ಲಿಕ್ ಪಕ್ಷದ ಮತ್ತು ಕಮ್ಯುನಿಸ್ಟರ ಅಪಾಯದ ಬಗ್ಗೆ ಜರ್ಮನರನ್ನು ಆಕರ್ಷಿಸಿ ಭಾಷಣಗಳನ್ನು ಪ್ರಾರಂಭಿಸಿದನು. ವಿರಾಮದ ವೇಳೆಯಲ್ಲಿ ತನ್ನ ವೃತ್ತಿ ಜೀವನಕ್ಕೆ ಪೋಷಕವಾಗಿದ್ದ ಮನೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದನು.

ಬಾವೆರಿಯದ ಸೈನ್ಯವನ್ನು ೧೯೧೪ರಲ್ಲಿ ಸೇರಿದ ಹಿಟ್ಲರನು ಪ್ರಥಮ ಮಹಾಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಗಾಯಗೊಂಡನು. ಯುದ್ಧರಂಗದಲ್ಲಿ ತೋರಿದ ಸಾಹಸಕ್ಕಾಗಿ ಐರನ್ ಕ್ರಾಸ್ ಎಂಬ ಪದಕವನ್ನು ಗಳಿಸಿದನು. ಮ್ಯೂನಿಚ್ ನಗರದಲ್ಲಿ ಸ್ಥಾಪಿಸಲಾಗಿದ್ದ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ಕಾರ್ಮಿಕರ ಪಕ್ಷವನ್ನು ನಾಜಿ ಪಕ್ಷವನ್ನಾಗಿ ಮಾರ್ಪಡಿಸಿಕೊಂಡು ‘‘ಸ್ವಸ್ತಿಕ್’’ ಅನ್ನು ಪಕ್ಷದ ಚಿಹ್ನೆಯಾಗಿ ಮಾಡಿಕೊಂಡನು.

ಅಧಿಕಾರಗ್ರಹಣ

ಹಿಟ್ಲರನು ತನ್ನ ಪಕ್ಷದ ಮುಖಾಂತರ ನಾಜಿ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾಪ್ರಥಮ ಮಹಾಯುದ್ಧದಿಂದ ಸಂಭವಿಸಿದ ಜರ್ಮನಿಯ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಗೆ ಕಮ್ಯುನಿಸ್ಟರು ಆಳುವ ಸಮಾಜವಾದಿ ರಿಪಬ್ಲಿಕನ್ನರು ಮತ್ತು ಯಹೂದಿ ಪ್ರಜಾಪ್ರಭುತ್ವ ವಾದಿಗಳು ಕಾರಣವೆಂದು ತಿಳಿಸಿದನು. ಅಲ್ಲದೆ ತನ್ನ ಪಕ್ಷಕ್ಕೆ ಮಾತ್ರ ಜರ್ಮನಿಯನ್ನಾಳುವ ಶಕ್ತಿ ಸಾಮರ್ಥ್ಯಗಳಿರುವುದರಿಂದ, ಕಳೆದು ಹೋದ ಜರ್ಮನ್ ಸಾಮ್ರಾಜ್ಯದ ಪ್ರತಿಷ್ಟೆಯನ್ನು ಮತ್ತೆ ಸ್ಥಾಪಿಸಲು ಜನತೆಯ ಬೆಂಬಲ ಕೋರಿದನು. ಇಟಲಿಯಲ್ಲಿ ಅಗಾಧವಾಗಿ ಬೆಳೆಯುತ್ತಿದ್ದ ಮುಸ್ಸೊಲೊನಿಯ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಜರ್ಮನಿಯ ಅಭ್ಯುದಯ ಕ್ಕೋಸ್ಕರ ಶತ್ರು ಪಕ್ಷದವರನ್ನು ಮೆಟ್ಟಿಹಾಕಲು ಮುಸ್ಸೊಲೊನಿಯ ಕಪ್ಪು ಅಂಗಿಗಳ ಮಾದರಿಯಲ್ಲಿ ಜರ್ಮನಿಯಲ್ಲಿ ಹೋರಾಟಗಾರರ ಪಡೆ ಅಂದರೆ ಕಂದುಬಣ್ಣದ ಅಂಗಿಗಳ ಪಡೆಯನ್ನು(ಬ್ರೌನ್ ಶರ್ಟ್ಸ್) ನಿರ್ಮಿಸಿದನು.

೧೯೨೦ರಲ್ಲಿ ಜರ್ಮನಿಯ ಸರ್ವತೋಮುಖ ಅಭಿವೃದ್ದಿಗೆ ೨೫ ಅಂಶಗಳ ಕಾರ್ಯ ಕ್ರಮವನ್ನು ಪ್ರಕಟಿಸಿದನು. ವರ್ಸೇಲ್ಸ್ ಶಾಂತಿ ಒಪ್ಪಂದದ ಸಂಕೋಲೆಗಳಿಂದ ಜರ್ಮನಿಯನ್ನು ಬಿಡುಗಡೆ ಮಾಡುವುದು, ಯುದ್ಧದಿಂದ ಕಳೆದುಹೋದ ವಸಾಹತುಗಳನ್ನು ಪಡೆಯುವುದು, ಜರ್ಮನ್ ಜನಾಂಗದ ಆಳುವ ಶಕ್ತಿಯ ಶ್ರೇಷ್ಟತೆ ತೋರಿಸುವುದು, ಸ್ವಯಂ ನಿರ್ಣಯ ತತ್ವದ ಆಧಾರದ ಮೇಲೆ ವಿಶಾಲ ಜರ್ಮನಿಯನ್ನು ರಚಿಸುವುದು, ಕಳ್ಳ ಧನವನ್ನು ವಶಪಡಿಸಿಕೊಳ್ಳುವುದು, ದೊಡ್ಡ ಮಳಿಗೆಗಳನ್ನು ಮುರಿಯುವುದು, ಮತ್ತು ಅವುಗಳ ಆವರಣಗಳನ್ನು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಹಂಚುವುದು, ದೊಡ್ಡ ದೊಡ್ಡ ಟ್ರಸ್ಟ್‌ಗಳನ್ನು ರಾಷ್ಟ್ರೀಕರಣ ಮಾಡುವುದು, ಕಾರ್ಮಿಕರು ಲಾಭಗಳಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಇತ್ಯಾದಿ ಅಂಶಗಳನ್ನು ಹಿಟ್ಲರನು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದನು. ೧೯೨೩ರಲ್ಲಿ ತನ್ನ ಕ್ರಾಂತಿಕಾರಿ ಪಡೆಗಳ ಸಹಾಯದಿಂದ ‘‘ಮ್ಯೂನಿಚ್ ಬಾರ್ ಹಾಲ್’’ನ ಕ್ಷಿಪ್ರಕ್ರಾಂತಿ ಮೂಲಕ ಸರಕಾರವನ್ನು ಉರುಳಿಸಲು ಯತ್ನಿಸಿದನು. ಆದರೆ ಈತನ ತಂತ್ರ ಫಲಿಸದಿದ್ದುದರಿಂದ ಸರಕಾರವು ಹಿಟ್ಲರನನ್ನು ರಾಜ್ಯದ್ರೋಹದ ಆಪಾದನೆಗೊಳಪಡಿಸಿ ಆತನನ್ನು ಐದು ವರ್ಷದ ಶಿಕ್ಷೆಗೊಳಪಡಿಸಿತು. ಜರ್ಮನರ ಸಹಾನುಭೂತಿ ಗಳಿಸಿದ್ದ ಹಿಟ್ಲರನನ್ನು ಒಂದು ವರ್ಷದ ಶಿಕ್ಷೆಯ ನಂತರ ಜೈಲಿನಿಂದ ಬಿಡುಗಡೆ ಮಾಡಿತು. ಕಾರಾಗೃಹದ ಅವಧಿಯಲ್ಲಿ ‘‘ಮೈನ್ ಕಾಂಫ್’’(ನನ್ನ ಹೋರಾಟ) ಎನ್ನುವ ಗ್ರಂಥವನ್ನು ರಚಿಸಿದನು. ಇದು ನಾಜಿ ಸಿದ್ಧಾಂತದ ಮುಖ್ಯ ಲಕ್ಷಣಗಳು ಮತ್ತು ಅಖಂಡ ಜರ್ಮನಿಯನ್ನು ನಿರ್ಮಿಸುವ ಯೋಜನೆಯನ್ನು ತಿಳಿಸುತ್ತದೆ. ೧೯೨೪ರಲ್ಲಿ ಜೈಲಿನಿಂದ ಬಿಡುಗಡೆಯಾದ ಹಿಟ್ಲರನು ನಾಜಿ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ನಿರತನಾದನು. ೧೯೨೫ ರಿಂದ ೧೯೨೮ರವರೆಗೆ ಜರ್ಮನಿ ಶಾಂತಿ ಸಮೃದ್ದಿಯನ್ನು ಕಂಡಿತು. ೧೯೨೯ರಲ್ಲಿ ಯುರೋಪಿನಾದ್ಯಂತ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದರಿಂದ (ಗ್ರೇಟ್ ಡಿಪ್ರೆಷನ್) ವಿದೇಶಿ ಸಾಲಗಳ ಹೊರೆ ಹೆಚ್ಚಾಯಿತು. ಕೈಗಾರಿಕೆಗಳು ಮುಚ್ಚಲ್ಪಟ್ಟವು. ನಿರುದ್ಯೋಗ ಸಮಸ್ಯೆ ಹೆಚ್ಚಿತು. ಕಾರ್ಮಿಕರ ಸ್ಥಿತಿ ಅಧೋಗತಿಗಿಳಿಯಿತು. ೧೯೧೯ರ ಚುನಾವಣೆಯಲ್ಲಿ ಏಳುಸ್ಥಾನ ಮತ್ತು ೧೯೨೪ರ ಚುನಾವಣೆಯಲ್ಲಿ ೩೨ ಸ್ಥಾನ ಪಡೆದಿದ್ದ ನಾಜಿಪಕ್ಷವು ೧೯೩೨ರ ಚುನಾವಣೆಯಲ್ಲಿ ೨೩೦ ಸ್ಥಾನ ಪಡೆದು ಜರ್ಮನ್ ಸಂಸತ್ತಿನಲ್ಲಿ (ರಿಕ್ ಸ್ಟಾಗ್) ಅಧಿಕ ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿತು. ಈ ಸಂದರ್ಭದಲ್ಲಿ ಯಾವ ಪಕ್ಷವು ಬಹುಮತ ಪಡೆಯದಿದ್ದುದರಿಂದ ಮತ್ತು ಜರ್ಮನಿಯಲ್ಲುಂಟಾದ ರಾಜಕೀಯ ಅಭದ್ರತೆಯನ್ನು ಗುರುತಿಸಿ ಜರ್ಮನ್ ಗಣರಾಜ್ಯದ ಅಧ್ಯಕ್ಷನಾದ ಹಿಂಡೆನ್ ಬರ್ಗ್ ೧೯೩೩ರಲ್ಲಿ ಜರ್ಮನಿಯ ಆಡಳಿತ ಸೂತ್ರ ಹಿಡಿಯಲು ನಾಜಿ ಪಕ್ಷದ ನಾಯಕನಾದ ಹಿಟ್ಲರನ್ನು ಚಾನ್ಸಲರನ್ನಾಗಿ ನೇಮಿಸಿದನು.

ಹಿಟ್ಲರನ ಸರ್ವಾಧಿಕಾರ

ಜರ್ಮನ್ ಗಣರಾಜ್ಯದ ಚಾನ್ಸಲರ್‌ನಾಗಿ ಅಧಿಕಾರವಹಿಸಿಕೊಂಡ ಹಿಟ್ಲರನು ಸರ್ವಾಧಿಕಾರ ಸ್ಥಾಪನೆಯ ದೃಷ್ಟಿಯಿಂದ ಪ್ರಜಾಸತ್ತಾತ್ಮಕ ಸಂವಿಧಾನ ಮತ್ತು ಸಂಸತ್ತನ್ನು ಕಡೆಗಣಿಸಿದನು. ನಾಜಿ ಪಕ್ಷವನ್ನು ಹೊರತುಪಡಿಸಿ ಇತರ ಎಲ್ಲ ರಾಜಕೀಯ ಪಕ್ಷಗಳನ್ನು ಸಂಘ ಸಂಸ್ಥೆಗಳನ್ನು ಮತ್ತು ಅವುಗಳ ವರ್ತಮಾನ ಪತ್ರಿಕೆಗಳನ್ನು ನಿಷೇಧಿಸಿದನು. ಹಿಟ್ಲರನ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯಾದ ಡಾಕ್ಟರ್ ಜೊಸೆಫ್ ಗೊಯೆಬೆಲ್ಸ್‌ನು ಹಿಟ್ಲರನ ನಾಜಿ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿ ಅವುಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಕಡ್ಡಾಯಗೊಳಿಸಿದನು. ‘ಹಿಟ್ಲರನ ಸೇವೆ ಮಾಡುವುದು ಜರ್ಮನಿಯ ಸೇವೆ ಮಾಡಿದಂತೆ; ಜರ್ಮನಿಯ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ’ ಎನ್ನುವ ಪ್ರಕಟನೆ ಹಾಗೂ ಭಿತ್ತಿಪತ್ರಗಳು ಜರ್ಮನಿಯಾದ್ಯಂತ ರಾರಾಜಿಸಿದವು. ೧೯೩೩ ಫೆಬ್ರವರಿ ೨೭ರಂದು ರಿಕ್ ಸ್ಟ್ಯಾಗ್ ಕಟ್ಟಡವನ್ನು (ಸಂಸತ್ತು) ಸುಟ್ಟಾಗ, ಹಿಟ್ಲರನು ತನಿಖೆಗೆ ಆಜ್ಞೆ ಮಾಡಿ ಈ ದುರಂತಕ್ಕೆ ಕಮ್ಯುನಿಷ್ಟರೆ ಕಾರಣವೆಂಬ ಆಪಾದನೆಯನ್ನು ರುಜುವಾತುಪಡಿಸಿ ಕಮ್ಯುನಿಸ್ಟರ ಹಾವಳಿ ಮತ್ತು ಪ್ರಭಾವವನ್ನು ನಾಶಮಾಡಿದನು. ಪರಿಣಾಮವಾಗಿ ನಾಜಿ ಪಕ್ಷವು ೧೯೩೩ರ ಚುನಾವಣೆಯಲ್ಲಿ ೨೮೮ ಸ್ಥಾನಗಳನ್ನು ಗಳಿಸಿ ರಿಕ್‌ಸ್ಟಾಗ್‌ನಲ್ಲಿ ಬಹುಮತ ಪಡೆಯಿತು. ‘‘ಆ್ಯಕ್ಟ್ ಆಫ್ ಆಥರೈಜೇಷನ್’’ ಎಂಬ ಮಸೂದೆಯನ್ನು ರಿಕ್‌ಸ್ಟಾಗ್ ಮುಂದೆ ತಂದು ಅದರ ಅನುಮತಿ ಪಡೆದು ಹಿಟ್ಲರನು ಸರ್ವಾಧಿಕಾರಿಯಾದನು.

ಸಂಸತ್ ಸದನಗಳ ಗಮನಕ್ಕೆ ತರದೆ ಹಿಟ್ಲರನ ಮಂತ್ರಿಮಂಡಲ ಶಾಸನಗಳನ್ನು ರಚಿಸಿತು. ೧೯೩೪ರ ಆಗಸ್ಟ್ ತಿಂಗಳಲ್ಲಿ ಗಣರಾಜ್ಯದ ಅಧ್ಯಕ್ಷ ಹಿಂಡನ್‌ಬರ್ಗ್ ಮರಣ ಹೊಂದಿದನು. ಕೂಡಲೆ ಹಿಟ್ಲರನು ತಾನೆ ಅಧ್ಯಕ್ಷನೆಂದು ಘೋಷಿಸಿ ಅಧಿಕಾರ ಸೂತ್ರವನ್ನೆಲ್ಲ ತನ್ನಲ್ಲಿ ಕೇಂದ್ರೀಕರಿಸಿಕೊಂಡು ಸರ್ವಾಧಿಕಾರಿಯಾದನು. ಎಲ್ಲ ಮಿಲಿಟರಿ ಅಧಿಕಾರಿಗಳು ಮಂತ್ರಿಗಳು ಮತ್ತು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಂಗ ಹಿಟ್ಲರನ ನಿರಂಕುಶ ಪ್ರಭುತ್ವವನ್ನು ಸಮ್ಮತಿಸಿದವು. ಜರ್ಮನಿಯಲ್ಲಿ ‘‘ಎಲೈಟೆ ಗಾರ್ಡ್’’ ಎಂಬ ವಿಶೇಷ ಗುಪ್ತಾಚಾರ ವಿಭಾಗವನ್ನು ತೆರೆದನು. ನಾಜಿ ಕಾರ್ಯಕರ್ತರ ರಕ್ಷಣೆಗೋಸ್ಕರ ಅರೆ ಸೈನಿಕ ದಳವನ್ನು ಸ್ಥಾಪಿಸಿದನು. ನಿರಂಕುಶ ಪ್ರಭುತ್ವದ ಸಂಕೇತವಾಗಿ ಫ್ಯೂರರ್ (ಪ್ರಶ್ನಾತೀತ ನಾಯಕ) ಎಂಬ ಬಿರುದು ಧರಿಸಿದನು.

ನಾಜಿ ವಾದದ ಮುಖ್ಯಾಂಶಗಳುಜರ್ಮನ್ ಜನಾಂಘದ ಶ್ರೇಷ್ಟತೆ

ನಾಜಿವಾದವು ಜರ್ಮನ್ ಜನಾಂಗ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಜನಾಂಗವೆಂದು ಪರಿಗಣಿಸಿತ್ತು. ಹಿಟ್ಲರನ ಅಭಿಪ್ರಾಯದಲ್ಲಿ ‘‘ಮಾನವ ಕುಲಗಳಲ್ಲಿ ಶ್ವೇತ ವರ್ಣಕುಲ ಶ್ರೇಷ್ಠವಾದದ್ದು. ಅದರಲ್ಲಿ ಟ್ಯೂಟನ್ ಪಂಗಡಕ್ಕೆ ಸೇರಿದವರು ಸರ್ವಶ್ರೇಷ್ಠರು. ಟ್ಯೂಟನ್ ಪಂಗಡಗಳಲ್ಲಿ ಜರ್ಮನ್ ಜನಾಂಗ ಅತ್ಯಂತ ಶ್ರೇಷ್ಠ’’ ಎಂಬುದಾಗಿತ್ತು. ಜರ್ಮನಿಯ ಸರ್ವ ಸಂಕಟಗಳಿಗೆ ಜರ್ಮನ್ ಜನಾಂಗಕ್ಕೆ ವಿರೋಧಿಗಳಾದ ಯಹೂದಿಗಳ ಅಸ್ತಿತ್ವವೇ ಕಾರಣ. ಇದರಿಂದ ಜರ್ಮನಿಯನ್ನು ರಕ್ಷಿಸುವುದು ನಾಜಿವಾದದ ಉದ್ದೇಶ ವಾಗಿತ್ತು. ಜರ್ಮನಿಯು ಇನ್ನೂ ಯುದ್ಧದಿಂದ ಸೋತಿಲ್ಲ. ಜರ್ಮನರೆಲ್ಲ ಒಂದಾಗಿ ಯಹೂದಿಗಳನ್ನು ಮತ್ತು ಕಮ್ಯುನಿಸ್ಟರನ್ನು ರಾಷ್ಟ್ರದಿಂದ ಹೊರದೂಡಿದರೆ ಜರ್ಮನಿಯ ಇತಿಹಾಸ ಮತ್ತು ಸಂಸ್ಕೃತಿಗೆ ಹೊಸ ಮಾನ್ಯತೆ ಮತ್ತು ಭವ್ಯತೆ ದೊರಕುತ್ತದೆಂದು ನಾಜಿವಾದಿಗಳು ನಂಬಿದ್ದರು. ಜರ್ಮನಿ ಯಾವಾಗಲೂ ಶ್ರೇಷ್ಟ ಹಾಗೂ ಸಾಹಸಿಗಳ ಜನಾಂಗವನ್ನು ಹೊಂದಬೇಕೆನ್ನುವ ದೃಷ್ಟಿಯಿಂದ ಯುದ್ಧಕ್ಕೆ ಹೆದರುವವರು ಮತ್ತು ರೋಗರುಜಿನಗಳಿಗೆ ತುತ್ತಾದವರು ಸಂತಾನೋತ್ಪತ್ತಿ ಮಾಡದೆ ಬಂಜೆತನದಿಂದ ಜೀವಿಸಬೇಕೆಂದು ತಿಳಿಸಿದನು.

ನಿರಂಕುಶ ಪ್ರಭುತ್ವ

ದೇಶದ ರಕ್ಷಣೆ ಮತ್ತು ಬೆಳವಣಿಗೆಗೆ ಫ್ಯಾಸಿಸ್ಟ್ ವಾದದಂತೆ ನಾಜಿವಾದವು ಏಕನಾಯಕ ಹಾಗೂ ಏಕಪಕ್ಷೀಯ ನಿರಂಕುಶ ಪ್ರಭುತ್ವದಲ್ಲಿ ನಂಬಿಕೆ ಇರಿಸಿತ್ತು. ಈ ದೃಷ್ಟಿಯಿಂದ ಹಿಟ್ಲರನು ತನ್ನ ‘ಸ್ಟಾರಂ ಟ್ರುಪರ್ಸ’ ಬಳಸಿ ನಾಜಿ ಪಕ್ಷವನ್ನು ವಿರೋಧಿಸು ವವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ, ಅಂಥವರನ್ನು ಗಡಿಪಾರು ಮಾಡಿದ್ದನ್ನು ಮತ್ತು ಲಕ್ಷಾಂತರ ಯಹೂದಿಗಳನ್ನು ಕೊಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಜರ್ಮನರಿಗೆ ಬೇಡವಾದ ವರ್ಸೇಲ್ಸ್ ಒಪ್ಪಂದವನ್ನು ತಿರಸ್ಕರಿಸಲು ಮತ್ತು ಶಿಕ್ಷಣ, ಬ್ಯಾಂಕು ಮತ್ತು ಉದ್ಯಮಗಳನ್ನು ರಾಷ್ಟ್ರೀಕರಿಸಿ ಜರ್ಮನ್ ದೇಶವನ್ನು ಬೃಹತ್ ಶಕ್ತಿಯುಳ್ಳದ್ದನ್ನಾಗಿ ಮಾಡಲು ನಿರಂಕುಶ ಪ್ರಭುತ್ವ ಅವಶ್ಯವೆಂಬುದು ನಾಜಿಗಳ ವಾದವಾಗಿತ್ತು.

ರಾಜ್ಯಕ್ಕೆ ಪ್ರಾಮುಖ್ಯ

ಹೆಗಲ್, ಕಾಂಟ್ ಮೊದಲಾದ ಆದರ್ಶವಾದಿಗಳ ತತ್ವಗಳಿಂದ ಪ್ರಭಾವಿತರಾದ ನಾಜಿವಾದಿಗಳು ವ್ಯಕ್ತಿಯು ರಾಜ್ಯಕ್ಕಾಗಿಯೆ ಹೊರತು, ರಾಜ್ಯ ವ್ಯಕ್ತಿಗಳಿಗಾಗಿ ಅಲ್ಲ. ಕಾರಣ ಎಲ್ಲಾ ವ್ಯಕ್ತಿಗಳು ಹಾಗೂ ಉತ್ಪಾದನಾ ಸಂಪನ್ಮೂಲ ಶಕ್ತಿಗಳು ಜರ್ಮನ್ ಸಾಮ್ರಾಜ್ಯಕ್ಕಾಗಿ ಸರ್ವತ್ಯಾಗಮಾಡಲು ಸಿದ್ಧರಿರಬೇಕು. ರಾಜ್ಯದ ವಿರುದ್ಧ ಮಾತನಾಡಲು ಯಾವ ವ್ಯಕ್ತಿಗಳಿಗೂ ಹಕ್ಕಿಲ್ಲವೆಂಬುದು ನಾಜಿಗಳ ವಾದವಾಗಿತ್ತು.

ಧರ್ಮವಿರೋಧ

ಜರ್ಮನರ ಭಾವನೆ, ವಿಚಾರ, ಅಭಿಪ್ರಾಯ ಮತ್ತು ನಡತೆಯಲ್ಲಿ ಏಕರೂಪತೆಯನ್ನು ಸಾಧಿಸುವ ದೃಷ್ಟಿಯಿಂದ ರಾಜಕೀಯದಲ್ಲಿ ಧರ್ಮ ಪ್ರವೇಶಿಸಬಾರದೆಂಬುದು ನಾಜಿಗಳ ವಾದವಾಗಿತ್ತು. ಹೀಗಾಗಿ ನಾಜಿಗಳು ಕ್ರೈಸ್ತಧರ್ಮಕ್ಕೆ ಮನ್ನಣೆ ನೀಡಲಿಲ್ಲ. ರೋಮನ್ ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟಂಟ್ ಧರ್ಮಗಳೆರಡೂ ನಾಜಿ ವಾದವನ್ನು ಮನ್ನಿಸಿದವು. ಹಿಟ್ಲರನು ಪರಮ ಗುರುವಾದನು. ಹಿಟ್ಲರನು ಕ್ರೈಸ್ತನಿಗಿಂತ ಶ್ರೇಷ್ಟವೆಂದು ನಾಜಿಗಳ ನಂಬಿಕೆಯಾಗಿತ್ತು.

ಹಿಟ್ಲರನು ತಪ್ಪು ಮಾಡದ ನಾಯಕ

ನಾಜಿಗಳ ಅಭಿಪ್ರಾಯದಲ್ಲಿ ಹಿಟ್ಲರ್ ತಪ್ಪು ಮಾಡದ ಶ್ರೇಷ್ಠ ನಾಯಕ. ಎಲ್ಲ ರಾಜ್ಯಾಧಿಕಾರಿಗಳು ಹಿಟ್ಲರನಿಗೆ ಸೇರಿವೆ. ಈತನ ಪಕ್ಷ, ಸರಕಾರ ಹಾಗು ರಕ್ಷಣಾಪಡೆಗಳ ನಾಯಕ. ಜರ್ಮನಿ ಜರ್ಮನ್ನರಿಗಾಗಿ ಎನ್ನುವ ಹಿಟ್ಲರ್ ಜರ್ಮನಿಯ ದೇವಮಾನವ. ಆತನದು ದಿವ್ಯವಾಣಿ. ಕಾರಣ ಆತನ ಪೂಜೆಯೆಂದರೆ ದೇಶ ಮತ್ತು ದೇವರ ಪೂಜೆಯೆಂದು ನಾಜಿಗಳು ಭಾವಿಸಿದ್ದರು.

ಪ್ರಜಾಪ್ರಭುತ್ವದ ವಿರೋಧ

ನಿರಂಕುಶ ಪ್ರಭುತ್ವಕ್ಕೆ ಅವಕಾಶ ಕಲ್ಪಿಸುವ ನಾಜಿಗಳು ಪ್ರಜಾಪ್ರಭುತ್ವ ಅದರ ತತ್ವಗಳು ಮತ್ತು ಸಂಸದೀಯ ಪದ್ಧತಿಯ ಕಾರ್ಯವಿಧಾನಗಳಲ್ಲಿ ನಂಬಿಕೆಯಿಲ್ಲದವ ರಾಗಿದ್ದರು.

ಯುದ್ಧ, ಉಗ್ರರಾಷ್ಟ್ರೀಯತೆ ಹಾಗೂ ಸಾಮ್ರಾಜ್ಯ ಪದ್ಧತಿ

ನಾಜಿಗಳು ಇವುಗಳಲ್ಲಿ ನಂಬಿಕೆಯುಳ್ಳವರಾಗಿದ್ದರು. ಬಲದ ಬಳಕೆಯನ್ನು ಉತ್ತೇಜಿಸಿದ ಹಿಟ್ಲರ್ ‘ಬಲವಿರುವವನು ಮಾತ್ರ ಬದುಕಿರಲಲು ಅರ್ಹನು’ ಎಂದು ಸಮರ್ಥಿಸಿದನು. ಜೀವರಾಶಿಯಲ್ಲಿ ಯಾವಾಗಲೂ ಹೋರಾಟ ನಡೆಯುತ್ತಿರುವುದು. ಈ ಹೋರಾಟದಲ್ಲಿ ಬಲವಾದ ರಾಜ್ಯಗಳು ಗೆಲ್ಲುತ್ತವೆ. ಬಲವಾದ ರಾಜ್ಯ ಸ್ಥಾಪನೆಗೆ ಉಗ್ರರಾಷ್ಟ್ರೀಯತೆ ಮತ್ತು ಯುದ್ಧವಾದವನ್ನು ಪ್ರತಿಯೊಬ್ಬರೂ ಸಮರ್ಥಿಸಿ ಹೋರಾಡಲು ಸಿದ್ಧರಾಗಬೇಕು. ಯುದ್ಧಬೇಡ ಎನ್ನುವವರಿಗೆ ಈ ಪ್ರಪಂಚದಲ್ಲಿ ಜೀವಿಸುವ ಹಕ್ಕು ಇಲ್ಲವೆಂದು ಸಾರಿದನು. ಅವಮಾನ ಮಾಡಿದ ರಾಷ್ಟ್ರಗಳ ಮೇಲೆ ಯುದ್ಧ ಸಾರಿ ಅವುಗಳನ್ನು ಜರ್ಮನ್ ವಸಾಹತುಗಳನ್ನಾಗಿ ಮಾಡಿಕೊಂಡು ಅವರ ಮೇಲೆ ಸೇಡು ತೀರಿಸಿಕೊಳ್ಳುವುದು ಜರ್ಮನ್ ಜನಾಂಗಕ್ಕೆ ಭೂಷಣವೆಂದು ಸಾರಿದನು.

ನಾಜಿ ಸರ್ಕಾರದ ಆಂತರಿಕ ನೀತಿ

ಸರ್ವಾಧಿಕಾರಿ ಹಿಟ್ಲರನು ಎಲ್ಲ ಪ್ರತ್ಯೇಕ ಪ್ರಾಂತೀಯ ಸರಕಾರಗಳನ್ನು ರದ್ದುಗೊಳಿಸಿ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಜರ್ಮನಿಯಲ್ಲಿ ಜಾರಿಗೆ ತಂದನು. ಬರ್ಲಿನ್ ಆಡಳಿತ ಕೇಂದ್ರವಾಯಿತು. ಶಿಕ್ಷಣ ಸಂಸ್ಥೆಗಳಲ್ಲಿ ನಾಜಿ ತತ್ವಗಳನ್ನು ಜಾರಿಗೊಳಿಸಿದ್ದರಿಂದ ಜರ್ಮನ್ನೇತರರು ರಚಿಸಿದ ಗ್ರಂಥಗಳನ್ನು ನಿಷೇಧಿಸಲಾಯಿತು. ಕಮ್ಯುನಿಸ್ಟ್ ಮತ್ತು ಯಹೂದಿಗಳ ರಾಜಕೀಯ ಶಕ್ತಿ ಸಂಘಟನೆಗಳನ್ನು ನಿಷೇಧಿಸಿ ಅವರನ್ನು ಗುಲಾಮರನ್ನಾಗಿ ಮಾಡಿದನು. ಅವರ ಪೌರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಅವರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಅವರು ಜರ್ಮನ್ ದೇಶವನ್ನು ಬಿಟ್ಟು ಹೋಗುವಂತೆ ಮಾಡಿದನು. ಹಿಟ್ಲರನ ತತ್ವ ವಿರೋಧಿಸುವ ಯಹೂದಿಗಳ ಕಗ್ಗೊಲೆಯಾಯಿತು. ಸೈನಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದನು. ಹಿಟ್ಲರನು ಲಕ್ಷಗಟ್ಟಲೆ ಜರ್ಮನರನ್ನು ಸೈನ್ಯಕ್ಕೆ ಸೇರಿಸಿಕೊಂಡು ಸೈನ್ಯವನ್ನು ಬಲಪಡಿಸಿದನು.

ಆರ್ಥಿಕ ರಂಗದಲ್ಲಿ ಜರ್ಮನಿ ಪ್ರಗತಿ ಸಾಧಿಸಿತು. ಔದ್ಯಮಿಕ ಶಾಂತಿಯನ್ನು ಸ್ಥಾಪಿಸಿ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ‘‘ಜರ್ಮನ್ ಲೇಬರ್ ಫ್ರಂಟ್ ’’ ಸ್ಥಾಪಿಸಿದನು. ಮುಷ್ಕರ ಮತ್ತು ಬೀಗದ ಮುದ್ರೆಗಳನ್ನು ನಿಷೇಧಿಸಿದನು. ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಬಂಜರು ಭೂಮಿಯನ್ನು ಕೃಷಿಗೆ ಯೋಗ್ಯವಾದ ಭೂಮಿಯನ್ನಾಗಿ ಪರಿವರ್ತಿಸಿದನು. ಭೂಮಿಯ ಇಳುವರಿಯನ್ನು ಹೆಚ್ಚಿಸಲು ಆಧುನಿಕ ಯಂತ್ರೋಪಕರಣಗಳನ್ನು ಮತ್ತು ರಸಗೊಬ್ಬರಗಳನ್ನು ರೈತರಿಗೆ ಒದಗಿಸಿದನು. ಹಾಲು ಕೊಡುವ ಉತ್ತಮ ತಳಿಯ ಆಕಳು ಗಳನ್ನು ವಿವಿಧ ಭಾಗಗಳಿಂದ ತರಿಸಿ ಹಾಲಿನ ಉತ್ಪನ್ನವನ್ನು ಹೆಚ್ಚಿಸಿದನು. ಜರ್ಮನಿಗೆ ಆವಶ್ಯವಿದ್ದ ಹತ್ತಿ ಬಟ್ಟೆ, ರಬ್ಬರ್, ಕಬ್ಬಿಣ, ಉಕ್ಕು, ನಿಕಲ್, ಪಾದರಸ ಮೊದಲಾದ ವಸ್ತುಗಳನ್ನು ಮಾತ್ರ ವಿದೇಶಗಳಿಂದ ಆಮದು ಮಾಡಿಕೊಂಡನು. ಶಸ್ತ್ರಾಸ್ತ್ರಗಳನ್ನು ತಯಾರಿಸಲು ಮತ್ತು ಕಚ್ಚಾವಸ್ತುಗಳನ್ನುಪಯೋಗಿಸಿ ದೇಶಕ್ಕೆ ಬೇಕಾಗಿದ್ದ ವಸ್ತು ಸಾಮಗ್ರಿಗಳನ್ನು ತಯಾರಿಸಲು ಪ್ರೋ ಕೊಡುವುದರ ಮೂಲಕ ಉದ್ಯೋಗಾವ ಕಾಶಗಳನ್ನು ಹೆಚ್ಚಿಸಿದನು. ಮಾನವ ಶಕ್ತಿಗಳನ್ನು ಪೋಲಾಗದಂತೆ ರಚಾನಾತ್ಮಕ ಕಾರ್ಯ ಕ್ರಮಗಳಿಗೆ ಬಳಸಿಕೊಂಡು ಹಿಟ್ಲರನು ಅಧಿಕಾರ ಸ್ವೀಕರಿಸಿದ ಐದು ವರ್ಷಗಳಲ್ಲಿ ಜರ್ಮನ್ ದೇಶ ಸ್ವಾವಲಂಬಿ ದೇಶವಾಯಿತು. ತತ್ಪರಿಣಾಮವಾಗಿ ಸರ್ವಾಧಿಕಾರಿ ಹಿಟ್ಲರನು ಜನಮನವನ್ನು ಗೆದ್ದನು.

ಹಿಟ್ಲರನ ವಿದೇಶಾಂಗ ನೀತಿವರ್ಸೇಲ್ಸ್ ಒಪ್ಪಂದದ ಉಲ್ಲಂಘನೆ

ಪ್ರಥಮ ಮಹಾಯುದ್ಧದಲ್ಲಿ ತೇಜೋವಧೆಯನ್ನನುಭವಿಸಿದ್ದ ಜರ್ಮನಿಗೆ ಅಂತಾರಾಷ್ಟ್ರೀಯತೆ ಪ್ರತಿಷ್ಟೆಯನ್ನು ದೊರಕಿಸಿ ಕೊಡುವ ಗುರಿಯೊಂದಿಗೆ ಹಿಟ್ಲರನು ತನ್ನ ವಿದೇಶಾಂಗ ನೀತಿಯನ್ನು ರೂಪಿಸಿದನು. ಅಧಿಕ ಸಂಖ್ಯೆಯಲ್ಲಿ ಆಧುನಿಕ ವಿಮಾನಗಳನ್ನು ಯುದ್ಧ ನೌಕೆಗಳನ್ನು ನಿರ್ಮಿಸಿದನು. ನವೀನ ಶಸ್ತ್ರಾಸ್ತ್ರಗಳನ್ನು ಹೊಂದುವ ದೃಷ್ಟಿಯಿಂದ ೧೯೩೩ರಲ್ಲಿ ಜಿನೀವಾ ನಿಶಸ್ತ್ರೀಕರಣ ಸಮ್ಮೇಳನದಿಂದ ಹೊರಬಂದು ರಾಷ್ಟ್ರ ಸಂಘದ ಜೊತೆ ಸಂಬಂಧವನ್ನು ಕಡಿದುಕೊಂಡನು. ಬಲಾತ್ಕಾರವಾಗಿ ಜರ್ಮನಿಯ ಮೇಲೆ ಹೇರಿದ್ದ ವರ್ಸೇಲ್ಸ್ ಒಪ್ಪಂದವನ್ನು ಉಲ್ಲಂಘಿಸಿ ಸಮರದ ಮೂಲಕ ಆಸ್ಟ್ರಿಯಾ ಜೆಕೊಸ್ಲೋವಾಕಿಯಾ ಮತ್ತು ಪೊಲೆಂಡ್‌ಗಳನ್ನು ವಶಪಡಿಸಿಕೊಂಡು ಜರ್ಮನ್ ಜನಾಂಗದ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸುವುದು ಹಿಟ್ಲರನ ಗುರಿಯಾಗಿತ್ತು. ಫ್ರಾನ್ಸ್ , ಇಂಗ್ಲೆಂಡ್ ಮತ್ತು ರಷ್ಯಾದೇಶಗಳು ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಗಮನಿಸಿ ಅವರಿಗೆ ಸಮನಾದ ಮಾರಕ ಶಸ್ತ್ರಾಸ್ತಗಳನ್ನು ಉತ್ಪಾದಿಸಲು ಕ್ರಮ ಕೈಕೊಂಡನು. ಈ ಹಿನ್ನೆಲೆಯಲ್ಲಿ ವರ್ಸೇಲ್ಸ್ ಒಪ್ಪಂದ ಉಲ್ಲಂಘನೆ ಘೋಷಣೆ ಮಾಡಿ ಯುರೋಪಿನ ರಾಷ್ಟ್ರಗಳನ್ನು ಚಕಿತಗೊಳಿಸಿದನು. ಹಿಟ್ಲರನು ತನ್ನ ಸೈನ್ಯಕ್ಕೆ ರೈನ್‌ಲ್ಯಾಂಡ್‌ನ್ನು ವಶಪಡಿಸಿಕೊಳ್ಳಲು ಆಜ್ಞಾಪಿಸಿದನು. ಜರ್ಮನಿಯ ವಸಾಹತುಗಳನ್ನು ತಕ್ಷಣವೇ ಹಿಂದಿರುಗಿಸಬೇಕೆಂದು ಮಿತ್ರ ರಾಷ್ಟ್ರಗಳಿಗೆ ಸೂಚಿಸಿದನು.

ಸ್ಪೆಯಿನ್ ಅಂತಃಕಲಹ

ಸ್ಪೆಯಿನಿನಲ್ಲಿ ೧೯೩೬ರ ಚುನಾವಣೆಯಲ್ಲಿ ಕನ್‌ಜರ್‌ವೇಟಿವ್ ಪಕ್ಷ ಮತ್ತು ಪ್ರೊಗ್ರೆಸ್ಸಿವ್ ಪಕ್ಷಗಳು ಸಮಬಲವನ್ನು ಪಡೆದು ಪ್ರಜಾಪ್ರಭುತ್ವ ಸರಕಾರವನ್ನು ನಡೆಸುವಲ್ಲಿ ವಿಫಲಗೊಂಡಾಗ ಅಲ್ಲಿ ಅಂತರ್ಯುದ್ಧ ಪ್ರಾರಂಭವಾಯಿತು. ಸ್ಪೆಯಿನಿನ ಆಂತರಿಕ ವಿಷಯಗಳಲ್ಲಿ ಯಾರೂ ಮಧ್ಯಪ್ರದೇಶಿಸಬಾರದೆನ್ನುವ ಬ್ರಿಟನ್ ಮತ್ತು ಫ್ರಾನ್ಸ್ ಸರಕಾರಗಳ ಸೂಚನೆಯನ್ನು ಧಿಕ್ಕರಿಸಿ, ಹಿಟ್ಲರ್ ಮತ್ತು ಇಟಲಿಯ ಮುಸ್ಸೊಲೊನಿ ಸ್ಪೆಯಿನಿನಲ್ಲಿ ಸರ್ವಾಧಿಕಾರಿ ಶಕ್ತಿಯನ್ನು ಬೆಳೆಸಲು ಅಲ್ಲಿಯ ಜನರಲ್ ಫ್ರಾಂಕೊನಿಗೆ ಸೈನಿಕ ನೆರವು ನೀಡಿ ಆತನನ್ನು ಅಧಿಕಾರಕ್ಕೆ ತಂದನು.

ರೋಂಬರ್ಲಿನ್ಟೊಕಿಯೊ ಆ್ಯಕ್ಸಿಸ್

ರಷ್ಯಾದಿಂದ ಒದಗಬಹುದಾದ ಅಪಾಯವನ್ನು ಲಕ್ಷಿಸಿ ಹಿಟ್ಟರನು ಜಪಾನ್ ದೇಶದೊಂದಿಗೆ ೧೯೩೯ರಲ್ಲಿ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡನು. ಇದನ್ನು ಆ್ಯಂಟಿ ಕೊಮಿಂಟರ್ನ್ ಒಪ್ಪಂದವೆಂದು ಕರೆಯುತ್ತಾರೆ. ಇಟಲಿಯು ೧೯೩೭ರಲ್ಲಿ ಈ ಒಪ್ಪಂದಕ್ಕೆ ಸೇರಿಕೊಂಡಿತು. ಆಗ ಈ ಒಪ್ಪಂದದ ಹೆಸರನ್ನು ರೋಂ-ಬರ್ಲಿನ್-ಟೊಕಿಯೊ ಆ್ಯಕ್ಸಿಸ್ ಎಂದು ಕರೆಯಲಾಯಿತು. ಮಿಶ್ರರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾಗಳನ್ನು ಬಗ್ಗಬಡಿಯುವುದು ಈ ಒಪ್ಪಂದದ ಉದ್ದೇಶವಾಗಿತ್ತು.

ಆಸ್ಟ್ರಿಯಾದ ಮೇಲೆ ದಾಳಿ

ಆಸ್ಟ್ರಿಯಾವು ಮಹಾಯುದ್ಧ ಪೂರ್ವದಲ್ಲಿ ಜರ್ಮನಿಯ ಅವಿಭಾಜ್ಯ ಅಂಗವಾಗಿತ್ತು. ಯುದ್ಧದ ನಂತರ ಪ್ಯಾರಿಸ್ ಒಪ್ಪಂದದ ಪ್ರಕಾರ ಇದು ಸ್ವತಂತ್ರ ರಾಜ್ಯವಾಗಿತ್ತು. ಶುಶಿನಿಗ್ ಇಲ್ಲಿಯ ಚಾನ್ಸಲರ್ ಆಗಿ ಆಳುತ್ತಿದ್ದನು. ಈತನು ಆಸ್ಟ್ರಿಯಾದಲ್ಲಿ ಜರ್ಮನ್ ಜನಾಂಗದವರಿಗೆ ಕಿರುಕುಳ ಕೊಡುತ್ತಿದ್ದಾನೆಂದು ಅಪವಾದ ಹೊರಿಸಿ, ಅಲ್ಲಿಯ ನಾಜಿ ಅನುಯಾಯಿಗಳು ಅರಾಜಕತೆಯನ್ನು ಸೃಷ್ಟಿಸಿದರು. ಆಸ್ಟ್ರೀಯಾದಲ್ಲಿರುವ ನಾಜಿಗಳ ಹಿತವನ್ನು ಕಾಪಾಡುವ ನೆಪದಲ್ಲಿ ೧೯೩೮ರಲ್ಲಿ ಮಾರ್ಚ್ ೧೨ರಂದು ಜರ್ಮನ್ ಸೇನಾಪಡೆಗಳು ಆಸ್ಟ್ರಿಯಾದ ಮೇಲೆ ದಾಳಿ ಮಾಡಿದವು. ಶುಶಿನಿಗ್‌ನನ್ನು ಬಂಧಿಸಲಾಯಿತು. ಆಸ್ಟ್ರೀಯಾವನ್ನು ಜರ್ಮನಿಯ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು.

ಜೆಕೊಸ್ಲೊವಾಕಿಯಾದ ಮೇಲೆ ಆಕ್ರಮಣ

ಜೆಕೊಸ್ಲೊವಾಕಿಯಾದ ದೊಡ್ಡ ಪ್ರದೇಶವಾದ ಬೊಹೆನಿಯಲ್ಲಿ ೩೨ ದಶಲಕ್ಷ ಸುಡೇಟನ್ ಜರ್ಮನ್ನರು ವಾಸವಾಗಿದ್ದರು. ಇವರೆಲ್ಲರು ಹಿಟ್ಲರನ ಅಭಿಮಾನಿಗಳು. ಇವರು ತಮ್ಮ ಪ್ರದೇಶಕ್ಕೆ ಸ್ವಯಂ ಆಡಳಿತವನ್ನು ಕೊಡಬೇಕೆಂದು ಜೆಕೊಸ್ಲೊವಾಕಿಯಾ ಸರಕಾರವನ್ನು (ಮಸಾರಿಕ್ ಸರಕಾರ) ಒತ್ತಾಯಿಸಿದರು. ಅಲ್ಲದೆ ಫ್ರಾನ್ಸ್‌ನೊಂದಿಗೆ ಸಂಬಂಧವನ್ನು ಕಡಿದುಕೊಂಡು ಜರ್ಮನಿಯೊಂದಿಗೆ ಸ್ನೇಹ ಬೆಳೆಸಬೇಕೆಂಬ ಬೇಡಿಕೆಯನ್ನು ಇಟ್ಟರು. ಜೆಕೊಸ್ಲೊವಾಕಿಯ ಸರಕಾರ ಈ ಬೇಡಿಕೆಗಳನ್ನು ನಿರಾಕರಿಸಿದಾಗ ಹಿಟ್ಲರನು ಚೆಕೊಸ್ಲೊವಾಕಿಯದ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದನು. ಯುದ್ಧದ ದುರಂತವನ್ನು ತಪ್ಪಿಸಲು ೧೯೩೮ರಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಚೇಂಬರ್‌ಲಿನ್ ಈ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ ಹಿಟ್ಲರನನ್ನು ತೃಪ್ತಿ ಪಡಿಸಲು ಜೆಕೊಸ್ಲೊವಾಕಿಯ ಸರಕಾರವನ್ನು ಮ್ಯೂನಿಚ್ ಒಪ್ಪಂದಕ್ಕೆ ಸಹಿಹಾಕಲು ಒಪ್ಪಿಸಿದನು. ಈ ಒಪ್ಪಂದದ ಪ್ರಕಾರ ಜೆಕೊಸ್ಲೊವಾಕಿಯಾಕ್ಕೆ ಸೇರಿದ್ದ ಸುಡೇಟನ್ನರ್ ಪ್ರದೇಶವು ಜರ್ಮನಿಯ ವಶವಾಯಿತು. ಯುದ್ಧ ವಿಜಯಗಳಿಂದ ಉತ್ಸಾಹಗೊಂಡಿದ್ದ ಹಿಟ್ಲರನು ಆರು ತಿಂಗಳ ನಂತರ ಇಡೀ ಜೆಕೊಸ್ಲೊವಾಕಿಯಾವನ್ನು ವಶಪಡಿಸಿಕೊಂಡನು. ನಂತರ ಲಿಥೇನಿಯಾವನ್ನು ಬೆದರಿಸಿ ಮೆಮಲ್ ನಗರವನ್ನು ವಶಪಡಿಸಿಕೊಂಡನು. ೧೯೩೯ರ ಸೆಪ್ಟೆಂಬರ್‌ನಲ್ಲಿ ಪೋಲೆಂಡ್‌ನ ಮೇಲೆ ದಾಳಿಮಾಡಲು ಸಿದ್ಧನಾದಾಗ ಯುರೋಪ್ ಖಂಡದ ಫ್ರಾನ್ಸ್, ಬ್ರಿಟನ್, ರಷ್ಯಾ ಮತ್ತು ಅಮೆರಿಕ ದೇಶಗಳು ಹಿಟ್ಲರನ ಅತಿಯಾದ ಆಕ್ರಮಣಗಳನ್ನು ಒಟ್ಟಾಗಿ ಎದುರಿಸಲು ನಿರ್ಧರಿಸಿದವು. ಇದರಿಂದ ಎರಡನೆಯ ಮಹಾಯುದ್ಧ ಅನಿವಾರ್ಯವಾಯಿತು. ಈ ಯುದ್ಧದಲ್ಲಿ ಜರ್ಮನಿ ಸೋತಾಗ ಸರ್ವಾಧಿಕಾರಿ ಹಿಟ್ಲರನು ೧೯೪೫ರಲ್ಲಿ ಆತ್ಯಹತ್ಯೆ ಮಾಡಿಕೊಂಡನು.

 

ಪರಾಮರ್ಶನ ಗ್ರಂಥಗಳು

೧. ದಿ ನ್ಯೂ ಎನ್‌ಸೈಕ್ಲೋಪಿಡಿಯಾ ಬ್ರಿಟಾನಿಕಾ, ಸಂಪುಟ ೧೨.

೨. ಹೆಝನ್ ಸಿ.ಡಿ, ೧೯೭೮. ಆಧುನಿಕ ಯುರೋಪ್,  ಘಟಪಣದಿ ಎಸ್.ಜಿ.(ಅನು), ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

೩. ಲಿಪ್ಸನ್ ಈ., ೧೯೮೦. ಯುರೋಪ್ ಇನ್ ದಿ ನೈಂಟೀಥ್ ಆ್ಯಂಡ್ ಟ್ವೆಂಟೀಥ್ ಸೆಂಚುರಿ, ನ್ಯೂಡೆಲ್ಲಿ: ಎಲಿಯಡ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್.

೪. ರಾವ್ ವಿ.ಬಿ, ೧೯೮೫. ಹಿಸ್ಟರಿ ಆಫ್ ಮಾಡರ್ನ್ ಯುರೋಪ್, ನ್ಯೂಡೆಲ್ಲಿ: ಸ್ಪೆರ್ಲಿಂಗ್ ಪಬ್ಲಿಷರ್ಸ್, ಪ್ರೈವೆಟ್ ಲಿಮಿಟೆಡ್,