ಸಾಮಾಜಿಕ ಮತ್ತು ಆರ್ಥಿಕ ಜೀವನ

ರೋಮನ್ನರ ಮುಖ್ಯ ಉದ್ಯೋಗ ವ್ಯವಸಾಯವಾಗಿತ್ತು. ರೋಂ ನಗರ ವಿಸ್ತಾರವಾದಂತೆ ಚಿಕ್ಕ ಚಿಕ್ಕ ಹಿಡುವಳಿದಾರರು ಸಂಖ್ಯೆಯಲ್ಲಿ ಕಡಮೆಯಾಗುತ್ತಾ, ಜಹಗೀರುಗಳನ್ನು ಪಡೆದಿದ್ದವರ ಸಂಖ್ಯೆ ಅಧಿಕವಾಗುತ್ತಾ ಬಂತು. ರೋಮನ್ನರಲ್ಲಿ ಗುಲಾಮರ ಪ್ರಮುಖ ಪಾತ್ರವನ್ನು ಕಾಣುತ್ತೇವೆ. ಯಾವಾಗ ಚಿಕ್ಕ ಚಿಕ್ಕ ಹಿಡುವಳಿದಾರರು ವ್ಯವಸಾಯ ಕ್ಷೇತ್ರ ವನ್ನು ಬಿಟ್ಟು ಪಟ್ಟಣಗಳಲ್ಲಿ ಜೀವನೋಪಾಯವನ್ನು ಕಲ್ಪಿಸಿಕೊಂಡು ನೆಲೆಸಲು ಪ್ರಾರಂಭಿಸಿದರೋ ಆಗ ವ್ಯವಸಾಯಕ್ಕಾಗಿ ಗುಲಾಮರನ್ನು ಗೊತ್ತುಮಾಡಿಕೊಳ್ಳುವುದು ಅತ್ಯವಶ್ಯಕವಾಯಿತು. ರೋಮನ್ನರು ವ್ಯವಸಾಯ ಕ್ಷೇತ್ರದಲ್ಲಿ ತಮ್ಮದೇ ಆದ ಪದ್ಧತಿಯನ್ನು ಅನುಸರಿಸುತ್ತಿದ್ದುದನ್ನು ಕಾಣಬಹುದು. ಒಂದೇ ಬಗೆಯ ಬೆಳೆಯನ್ನು ಪ್ರತಿವರ್ಷವೂ ಬೆಳೆದಲ್ಲಿ ಭೂಮಿಯ ಸಾರ ಕಡಿಮೆಯಾಗುವುದರಿಂದ ವರ್ಷ ವರ್ಷವೂ ಬೇರೆ ಬೇರೆ ಬಗೆಯ ಬೆಳೆಯನ್ನು ಅವರು ಬೆಳೆಯುತ್ತಿದ್ದರು. ಭೂಮಿಯ ಸಾರವನ್ನು ಕಾಪಾಡಲು ಗೊಬ್ಬರವನ್ನು ಉಪಯೋಗಿಸುತ್ತಿದ್ದರು. ಬಾರ್ಲಿ, ಗೋಧಿ, ಮೆಕ್ಕೆಜೋಳ ಇವುಗಳನ್ನು ಬೆಳೆಯುತ್ತಿದ್ದರು. ಹಣ್ಣಿನ ತೋಟಗಳು, ಅದರಲ್ಲಿಯೂ ದ್ರಾಕ್ಷಿಯ ತೋಟ, ಅಂಜೂರದ ಹಣ್ಣುಗಳು ಮತ್ತು ಆಲೀವ್ ಬೆಳೆ ಇವು ಸಾಮಾನ್ಯವಾಗಿದ್ದವು. ಕುದುರೆಗಳ, ದನಕರು ಗಳ, ಆಡುಗಳ ಉಪಯೋಗ ರೂಢಿಯಲ್ಲಿತ್ತು. ರೋಮನ್ನರು ವ್ಯಾಪಾರವನ್ನು ಬಹಳ ಬೇಗ ಆರಂಭಿಸಿದ್ದರು. ಪಶ್ಚಿಮದಲ್ಲಿ ವ್ಯಾಪಾರ ಅಭಿವೃದ್ದಿಗೆ ಬರುವುದು ತಡವಾಯಿತು. ಅವರು ಗಾಜಿನ ಸಾಮಾನುಗಳನ್ನು, ದ್ರಾಕ್ಷಾರಸ, ಆಲೀವ್ ಹಣ್ಣುಗಳು ಮತ್ತು ಎಣ್ಣೆ, ಲೋಹಗಳು ಇವುಗಳನ್ನು ಹೆಚ್ಚಾಗಿ ಬೇರೆ ರಾಷ್ಟ್ರಗಳಿಗೆ ಸಮುದ್ರದ ಮೂಲಕ ರಪ್ತು ಮಾಡುತ್ತಿದ್ದರು. ಸಿದ್ಧ ವಸ್ತುಗಳನ್ನು, ಧಾನ್ಯವನ್ನು, ಬೆಲೆ ಬಾಳುವ ಹರಳುಗಳು, ರತ್ನಗಂಬಳಿ, ಮನೆಗೆ ಉಪಯೋಗಿಸುತ್ತಿದ್ದ ಪರದೆಗಳು, ಹತ್ತಿ ಬಟ್ಟೆಗಳು, ಮುತ್ತುಗಳನ್ನು ಅಮದು ಮಾಡಿಕೊಳ್ಳುತ್ತಿದ್ದರು. ತವರವನ್ನು ಬ್ರಿಟನ್ನಿನಿಂದಲೂ, ಉಳಿದ ಪಶ್ಚಿಮ ಯೂರೋಪಿನ ಭಾಗಗಳಿಂದ ಕಬ್ಬಿಣದ ಸಾಮಾನುಗಳನ್ನು, ಚರ್ಮ, ಮಾಂಸದ ಪದಾರ್ಥ ಗಳನ್ನು ತರಿಸಿಕೊಳ್ಳುತ್ತಿದ್ದರು. ಇವರು ಸಮುದ್ರ ವ್ಯಾಪಾರದಲ್ಲಿ ನುರಿತರಾಗಿದ್ದುದಕ್ಕೆ ರೋಮನ್ನರಲ್ಲಿ ಅನೇಕ ಖಾಸಗೀ ಹಡಗುಗಳು ಮತ್ತು ಸರ್ಕಾರಕ್ಕೆ ಸೇರಿದ ಹಡಗುಗಳು ಇದ್ದುದೇ ಉದಾಹರಣೆಯಾಗಿದೆ. ಕೈಗಾರಿಕಾ ಉದ್ಯಮಗಳಲ್ಲಿ ಜನರಿಗಿದ್ದ ಸ್ವಾತಂತ್ರ್ಯ ಕಡಿಮೆ. ಹಣಕಾಸಿನ ವ್ಯವಹಾರಕ್ಕೆ ಅಷ್ಟೇನೂ ಪ್ರಾಮುಖ್ಯತೆ ದೊರಕಿರಲಿಲ್ಲ. ಕ್ರಿ.ಪೂ. ೩೬೬ರವರೆಗೂ ರೋಮ್‌ನಲ್ಲಿ ನಾಣ್ಯ ಪದ್ಧತಿ ಇರಲಿಲ್ಲ. ನಾಣ್ಯಗಳು ರೂಢಿಗೆ ಬಂದ ಮೇಲೆ ಎರಡು ಬಗೆಯ ನಾಣ್ಯಗಳು ಮುಖ್ಯ ನಾಣ್ಯಗಳಂತೆ ರೂಢಿಗೆ ಬಂದವು. ಕಂಚು ಮತ್ತು ಬೆಳ್ಳಿಯ ಲೋಹಗಳನ್ನು ನಾಣ್ಯಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಿದ್ದುದು ಹೆಚ್ಚು. ದೇಶದಲ್ಲಿ ಆರಂಭವಾಗಿದ್ದ ಹಣಕಾಸಿನ ವ್ಯವಹಾರದ ಕೆಲಸವನ್ನು ನೋಡಿಕೊಳ್ಳಲು ಅಲ್ಲಿನ ಅಧಿಕಾರಿಗಳು ತಮ್ಮದೇ ಒಂದು ಗುಂಪನ್ನು ಆರಂಭಿಸಿಕೊಂಡಿದ್ದರು. ಅಲ್ಲಿನ ಕಮ್ಮಾರರು, ಚಮ್ಮಾರರು, ನೇಯ್ಗೆಯವರು, ಕಲ್ಲಿನ ಕೆಲಸ ಮಾಡುವವರು ಮತ್ತು ಕಸಾಯಿ ಅಂಗಡಿಯವರು ತಮ್ಮ ತಮ್ಮ ಗುಂಪುಗಳನ್ನು ಕಟ್ಟಿಕೊಂಡಿದ್ದುದನ್ನು ನಾವು ಕಾಣುತ್ತೇವೆ. ಸಾಮ್ರಾಜ್ಯವು ಪೂರ್ವದಿಕ್ಕಿಗೆ ಹರಡಿದ ಮೇಲೆ ವ್ಯವಸಾಯ ವಿಚಾರದಲ್ಲಿ ಅನೇಕ ಪೂರ್ವದೇಶದ ರೂಢಿಗಳು ರೋಮನ್ನರಲ್ಲಿ ಪ್ರಚಾರಕ್ಕೆ ಬಂದವು.

ಸಾಮಾಜಿಕ ಜೀವನದಲ್ಲಿ ರೋಮನ್ನರು ಗ್ರೀಕರಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಪ್ರಿಯತೆಯನ್ನು ತೋರಿಸಿದ್ದರು. ಸಮಾಜದಲ್ಲಿ ವ್ಯವಸಾಯ ಕ್ಷೇತ್ರವನ್ನು ಪಡೆದಿದ್ದ ಶ್ರೀಮಂತ ವರ್ಗ ಉಳಿದ ವರ್ಗಗಳಿಗಿಂತ ಬಲಯುಕ್ತವಾಗಿತ್ತು. ಗಣರಾಜ್ಯವು ಚಕ್ರಾಧಿಪತ್ಯ ವಾಗಿ ಬದಲಾಯಿಸಿದಾಗ ಸಮಾಜದ ಜೀವನದಲ್ಲಿ ಪರಿವರ್ತನೆ ಉಂಟಾಯಿತು. ಸೆನೆಟ್ ಸಭೆಗಾಗಲೀ, ಸಮಾಜ ಜೀವನದ ಮತ್ತಾವ ಸಂಸ್ಥೆಗೇ ಆಗಲಿ ಸದಸ್ಯರಾಗಬೇಕಾದರೆ ಆಸ್ತಿಯ ಅರ್ಹತೆ ಬೇಕಾಗಿತ್ತು. ಉದ್ಯೋಗವನ್ನು ಪಡೆಯುವುದರಲ್ಲೂ ಜನರಿಗೆ ಸಮಾನ ಅವಕಾಶ ಹೆಚ್ಚಾಗಿ ದೊರಕಿರಲಿಲ್ಲ. ಒಟ್ಟಿನಲ್ಲಿ ಸಮಾಜದಲ್ಲಿ ವರ್ಗದ ಅಂತರವು ಹೆಚ್ಚಾಗಿ ಕಾಣುತ್ತಿತ್ತು. ಕುಟುಂಬದಲ್ಲಿ ತಂದೆಯು ಅಪರಿಮಿತ ಅಧಿಕಾರ ಪಡೆದಿದ್ದನು. ತನ್ನ ಕುಟುಂಬದ ಉಪಜೀವನದ ರಕ್ಷಣೆಗಾಗಲೀ ಅಥವಾ ಅಳಿವಿಗಾಗಲೀ ಆತನಿಗೇ ಹೆಚ್ಚಿನ ಅಧಿಕಾರವಿದ್ದಿತು. ರಾಜ್ಯದಲ್ಲಿ ರಾಜನ ಅಧಿಕಾರ ಎಷ್ಟು ದರ್ಪಯುತವಾಗಿರುತ್ತಿತ್ತೋ ತಂದೆಯ ಅಧಿಕಾರ ಮನೆಯಲ್ಲಿ ಅಷ್ಟೇ ಇದ್ದಿತು. ಮನೆತನಕ್ಕೆ ಸಲ್ಲಿಸುತ್ತಿದ್ದ ಗೌರವ ಬಹಳ ಹೆಚ್ಚಿನದಾಗಿರುತ್ತಿತ್ತು. ಸಮಾಜದಲ್ಲಿ ಸ್ತ್ರೀಯರಿಗೆ ಗೌರವ ಸಲ್ಲುತ್ತಿತ್ತು. ಜೊತೆಗೆ ಅವರಿಗೆ ಹೆಚ್ಚಿನ ಸ್ವಾತಂತ್ರ್ಯವೂ ಇತ್ತು. ಗ್ರೀಸಿನ ಸ್ತ್ರೀಯರಂತಲ್ಲದೆ ರೋಮಿನ ಸ್ತ್ರೀಯರು ಎಲ್ಲಾ ಸಮಾರಂಭಗಳಲ್ಲೂ ಪಾಲುಗೊಳ್ಳುವುದಾಗಲೀ ಸ್ವತಂತ್ರವಾಗಿ ವ್ಯವಹಾರವನ್ನು ನಡೆಸುವುದಾಗಲೀ ಸಾಧ್ಯವಾಗಿತ್ತು.

ರೋಮನ್ನರ ಕಲಾ ಚಟುವಟಿಕೆ

ಕ್ರಿಸ್ತಪೂರ್ವದಲ್ಲಿ ರೋಮನ್ನರು ಗ್ರೀಕ್ ಜನರ ಹಾವ-ಭಾವ ನಡೆ-ನುಡಿ-ಉಡುಗೆ-ತೊಡಿಗೆಗಳ ತಳಹದಿಯ ಮೇಲೆ ಸಾಗಿದ್ದರೆಂಬುದನ್ನು ನೆನಪಿನಲ್ಲಿಟ್ಟಲ್ಲಿ ಅವರ ಮುಂದಿನ ಮಾದರಿ ಏನೆಂಬುದನ್ನು ಸುಲಭವಾಗಿ ಊಹಿಸಬಹುದು. ಅದರಲ್ಲಿಯೂ ಮೊದಮೊದಲು ಅವರ ಕಲ್ಪನೆ ಗ್ರೀಕರ ಮಾದರಿಯನ್ನು ಬಿಟ್ಟು ಬೇರೆ ಕಡೆಗೆ ಹೋಗಲೇ ಇಲ್ಲ. ‘‘ಪಾಂಪೆ’’ ಎಂಬ ಪಟ್ಟಣದಲ್ಲಿ ಸಂಶೋಧನೆ ನಡೆದಾಗ ಅನೇಕ ಗುರುತುಗಳು ಸಿಕ್ಕಿವೆ. ರೋಮ್ ನವರಿಂದ ನಿರ್ಮಿತವಾದ ಕಟ್ಟಡಗಳ ವಿಗ್ರಹಗಳಲ್ಲಿ ಗ್ರೀಕರ ಪದ್ಧತಿಯು ಹೆಚ್ಚಿನ ಪ್ರಮಾಣದಲ್ಲಿ ಒಂದೇಯಾಗಿತ್ತು. ಆದರೆ ರೋಮನ್ನರಲ್ಲಿದ್ದ ಉಪಯುಕ್ತತೆಯ ದೃಷ್ಟಿ ಅವರ ಕಲಾಕೃತಿಗಳಲ್ಲಿಯೂ ಕಾಣಬರುತ್ತದೆ. ಅಲಂಕಾರಕ್ಕಾಗಿ ಮಾಡಲ್ಪಡುತ್ತಿದ್ದ ಕೆಲಸ ರೋಮನ್ನರ ದೃಷ್ಟಿಯಲ್ಲಿ ಅನಿವಾರ್ಯವೆಂಬುದಾಗಿರಲಿಲ್ಲ. ಕೆಲಸ ಪೂರೈಸಿದ ಮೇಲೆ ಅಲಂಕಾರದ ಕಡೆಗೆ ಸ್ವಲ್ಪ ಗಮನ ಕೊಡುತ್ತಿದ್ದರು. ಸ್ತಂಭಗಳ, ಕಮಾನುಗಳ ಉಪಯೋಗ ಸಾಕಷ್ಟಿತ್ತು. ಕಮಾನುಗಳ ಉಪಯೋಗದ ಆಧಾರದ ಮೇಲೆಯೇ ಮಧ್ಯಯುಗದಲ್ಲಿ ಯೂರೋಪಿನಲ್ಲಿ ‘‘ಗಾಥಿಕ್’’ ಎಂಬ ಹೆಸರಿನಲ್ಲಿ ಕಟ್ಟಡದ ಹೊಸ ಮಾದರಿಯೊಂದನ್ನು ಬಳಸಿಕೊಳ್ಳು ವಂತಾಯಿತು. ವಾಸ್ತುಶಿಲ್ಪದಲ್ಲಿಯೂ ಸಹ ರೋಮನ್ನರ ವಿಶೇಷ ಕಾಣಿಕೆಯು ಕಂಡು ಬರುತ್ತದೆ. ಇಂದಿಗೂ ಸಹ ಅವರ ನೆನಪಿಗಾಗಿ ಉಳಿದಿರುವ ಕಟ್ಟಡ ಗಳೆಂದರೆ ಸೇತುವೆಗಳು, ಅಣೆಕಟ್ಟೆಗಳು, ರಸ್ತೆಗಳು, ಸಾರ್ವಜನಿಕ ಸ್ನಾನದ ಗೃಹಗಳು, ಅರಮನೆಗಳು ಇತ್ಯಾದಿ. ರೋಮನ್ನರು ಹೆಚ್ಚಾಗಿ ಸಾಮಾನ್ಯ ವ್ಯಕ್ತಿಗಳ ವಿಗ್ರಹಗಳನ್ನು ಮಾಡಿದ್ದುಂಟು. ರೋಮನ್ನರು ಚಿತ್ರಕಲೆಯ ಬಳಕೆಗೆ ಅತ್ಯಲ್ಪ ಗಮನ ನೀಡಿದರು. ಆದರೆ ಅವರ ಉದ್ದೇಶ ಹೆಚ್ಚಾಗಿ ಸೌಂದರ್ಯೋಪಾಸನೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ವಿಷಯಗಳ ಪ್ರಸಾರವೆನ್ನಬಹುದು. ಕಟ್ಟಡ ನಿರ್ಮಾಣದ ಜೊತೆಗೆ ರಸ್ತೆಗಳ ನಿರ್ಮಾಣ, ಸೇತುವೆಗಳು ಮತ್ತು ಅಣೆಕಟ್ಟುಗಳನ್ನು ಕಟ್ಟುವುದು, ಈ ವಿಷಯದಲ್ಲಿ ರೋಮನ್ನರನ್ನು ಮೀರಿಸುವ ಜನಾಂಗವೇ ಇರಲಿಲ್ಲವೆನ್ನಬಹುದು. ಧಾರ್ಮಿಕ ವಿಷಯಗಳ ಬೆಂಬಲದ ಮೇಲೆ ನಿರ್ಮಿತವಾದ ಕಟ್ಟಡಗಳು ಕಡಿಮೆ. ಕ್ರಿಸ್ತಪೂರ್ವದಲ್ಲಿಯೇ ರೋಮನ್ನರ ರಸ್ತೆಗಳ ಬಗ್ಗೆ ಒಂದು ನಾಣ್ಣುಡಿ ಜಾರಿಯಲ್ಲಿತ್ತಂತೆ. ಅದೆಂದರೆ ‘‘ಎಲ್ಲಾ ಹೆದ್ದಾರಿಗಳೂ ರಾಜಧಾನಿಯಾದ ರೋಮಿಗೆ ಕೊಂಡೊಯ್ಯುತ್ತವೆ’’. ಈ ಮಾತಿಗೆ ಸರಿಯಾಗಿಯೇ ವಿಶಾಲವಾದ ಸಾಮ್ರಾಜ್ಯದ ಬೇರೆ ಬೇರೆ ಭಾಗಗಳನ್ನು ರಾಜಧಾನಿಯೊಂದಿಗೆ ಕೂಡಿಸುವುದಕ್ಕಾಗಿ ವಿಸ್ತಾರವಾದ ರಸ್ತೆಗಳು ನಿರ್ಮಿತವಾದವು. ನೀರಾವರಿಯ ಕೆಲಸದ ಸಹಾಯಕ್ಕಾಗಿ, ಸೈನ್ಯದ ಸಾಗಾಣಿಕೆಗಾಗಿ ಅಲ್ಲಲ್ಲಿ ಅಣೆಕಟ್ಟುಗಳು, ಸೇತುವೆಗಳು ಕ್ರಮವಾಗಿ ಕಟ್ಟಲ್ಪಟ್ಟವು. ರೋಮನ್ನರು ವಾಸ್ತು ಶಿಲ್ಪಕ್ಕೆ ಹೆಸರುವಾಸಿಯಾದದ್ದು ನಗರ ರಾಷ್ಟ್ರವು ಗಣರಾಜ್ಯವಾಗಿ, ಗಣರಾಜ್ಯವು ಚಕ್ರಾಧಿಪತ್ಯವಾಗಿ ಮಾರ್ಪಟ್ಟಂತಹ ಕಾಲದಲ್ಲಿ. ಪಾಂಪೆ ಎಂಬಲ್ಲಿ ನಡೆದ ಸಂಶೋಧನೆಯ ಮೂಲಕ ಕೆಲವು ಕಟ್ಟಡಗಳ ಮಾದರಿ ದೊರಕಿದೆ. ಅದರಲ್ಲಿ ನಾಟಕ ಶಾಲೆಯೊಂದು ಉದಾಹರಣೆಗೆ ‘‘ಪೋರಂ’’ಎಂದು ಕರೆಯಲ್ಪಟ್ಟ, ಭಾಷಣಗಳನ್ನು ಏರ್ಪಡಿಸುತ್ತಿದ್ದ, ವ್ಯಕ್ತಿಗಳನ್ನು ವಿಚಾರಣೆಗೆ ಗುರಿಮಾಡುತ್ತಿದ್ದ ದೊಡ್ಡ ಸಭಾಂಗಣವು ರೋಮನ್ನರ ವಾಸ್ತುಶಿಲ್ಪದ ಮುಖ್ಯ ಅಂಗವಾಗಿದೆ. ‘‘ಕಲೋಸಿಯಂ’’  ಎಂಬ ಹೆಸರಿನಲ್ಲಿ ಕರೆಯಲ್ಪಡುವ ಕ್ರೀಡಾಂಗಣದಂತೆ ಉಪಯೋಗವಾಗುವ ವಿಶಾಲ ಕಟ್ಟಡ ರೋಮನ್ನರ ವಾಸ್ತುಶಿಲ್ಪದ ಅತ್ಯುತ್ತಮ ಮತ್ತು ವಿಶಿಷ್ಟ ಕೃತಿಯಾಗಿದೆ. ಯುದ್ಧದ ಘಟನೆಗಳ ನೆನಪಿಗಾಗಿ ನಿರ್ಮಿತವಾದ ಕಮಾನಿನಂತಹ ಕಟ್ಟಡವೂ ಮುಖ್ಯವಾಗಿದೆ. ಇದು ಅತ್ಯಂತ ಬೃಹದಾಕಾರದ್ದಾಗಿಯೂ, ಪ್ರಸಿದ್ಧ ಕಟ್ಟಡವಾಗಿಯೂ ಇದೆ. ಅವರ ಶಿಲ್ಪಕಲೆಯಲ್ಲಿ ನೈಜತೆ ಮತ್ತು ಹಾವಭಾವಗಳ ಸರಿಯಾದ ಪ್ರದರ್ಶನ ಚೆನ್ನಾಗಿ ಕಂಡುಬರುತ್ತದೆ. ‘‘ಅಪರಿಚಿತನಾದ ರೋಮನ್ ಪ್ರಜೆ’’ಎಂಬ ಹೆಸರು ಪಡೆದಿರುವ ರೋಂ ಯುವಕನ ವಿಗ್ರಹ ಅವರ ಶಿಲ್ಪದ ಉದಾಹರಣೆಯಾಗಿದೆ. ಗ್ರೀಕರ ಮಾದರಿಯನ್ನು ಬಿಟ್ಟು ಹೊರಟ ಶಿಲ್ಪಿಗಳು ಕೆಲವೇ ದಿನಗಳಲ್ಲಿ ತಮ್ಮ ವ್ಯಕ್ತಿಗತ ಸಾಧನೆಯ ಮುಕ್ತಾಯವನ್ನು ಕಂಡರು. ಪಾಂಪೆ ಎಂಬಲ್ಲಿ ಸಿಕ್ಕಿರುವ ವಿಗ್ರಹ, ಚಿತ್ರಗಳು ಮಾತ್ರ ಪೌರಾಣಿಕ ವಸ್ತುಗಳನ್ನು ಅನುಸರಿಸಿ ನಿರ್ಮಿತವಾಗಿವೆ ಎಂದರೆ ತಪ್ಪಾಗಲಾರದು. ಪ್ರಕೃತಿ ದೃಶ್ಯಗಳನ್ನು ಚಿತ್ರಿಸುವುದರಲ್ಲಿ ರೋಮನ್ನರು ಗ್ರೀಕರಿಗಿಂತ ಮುಂದುವರಿದಿದ್ದರು. ಆದರೆ ಲೋಹದ ಕೆಲಸದಲ್ಲಿ ಅವರು ಗ್ರೀಕರಿಗಿಂತ ಹೆಚ್ಚಿನ ಅಭಿವೃದ್ದಿಯನ್ನು ಸಾಧಿಸಲಾಗದಿದ್ದುದು ಕಂಡುಬರುತ್ತದೆ.

ರೋಮನ್ನರ ಧರ್ಮ

ಕ್ರಿಸ್ತಪೂರ್ವದಲ್ಲಿ ರೋಮನ್ನರು ಇಟಾಲಿಯನ್ನರ ಗುಂಪಿಗೆ ಸೇರಿದವರಾಗಿ ಹೊರಗಿನವರ ಸಂಪರ್ಕವನ್ನು ಪಡೆಯದೇ ಇದ್ದಂತಹ ಕಾಲದಲ್ಲಿ ಕುಟುಂಬ ದೇವತೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಕಂಡುಬರುತ್ತಿತ್ತು. ಪಿತೃದೇವತೆಯ ಪೂಜೆ ರೂಢಿಯಲ್ಲಿತ್ತು. ವ್ಯವಸಾಯವನ್ನೇ ಮುಖ್ಯ ಕಸುಬನ್ನಾಗಿಟ್ಟುಕೊಂಡಿದ್ದ ಕಾಲದಲ್ಲಿ ಅವರು ಪೊಮೋನಾ, ಸಿರಿಸ್ ಮತ್ತು ಪೆಲೆಸ್ ಎಂಬ ದೇವತೆಗಳನ್ನು ಪೂಜಿಸುತ್ತಿದ್ದರು. ಆರಾಧನೆಯ ಸಂದರ್ಭ ದಲ್ಲಿ ಮನೆಗೆ ಹಿರಿಯನಾಗಿದ್ದ ತಂದೆಯೇ ಎಲ್ಲಾ ಕಾರ್ಯಗಳನ್ನೂ ನಡೆಸುತ್ತಿದ್ದನು. ನಗರ ರಾಷ್ಟ್ರಗಳು ಬೆಳೆದು ಹೊರಗಿನ ಜನರೊಂದಿಗೆ ಸಂಪರ್ಕ ಪ್ರಾರಂಭವಾದ ಮೇಲೆ ಹೊಸ ದೇವಿ-ದೇವತೆಗಳ ಪೂಜೆ ನಡೆಯುತ್ತಿತ್ತು. ಮಾರ್ಸೆ ಎಂಬ ಯುದ್ಧಕ್ಕೆ ಅಧಿದೇವತೆಯಾದ ದೇವರ ಪೂಜೆ ಹೀಗೆ ಪರಿಚಿತವಾದುದರಲ್ಲಿ ಒಂದು. ಕೊನೆಗೆ ಎಲ್ಲಾ ದೇವ-ದೇವತೆಗಳನ್ನು ಹಿಂದೆ ಸರಿಸಿ ಪ್ರಖ್ಯಾತವಾದ ದೇವರೆಂದರೆ ‘‘ಜ್ಯೂಪಿಟರ್’’. ಪೂಜಾಪದ್ಧತಿ ಬೆಳೆದ ಹಾಗೆ ಪುರೋಹಿತರ ಪ್ರಾಬಲ್ಯ ಸ್ಥಾಪಿತವಾದರೂ ಅವರೆಂದೂ ಅತಿ ಪ್ರಬಲರಾಗಲಿಲ್ಲ. ರಾಜ್ಯದ ಅಧಿದೇವತೆಯಾದ ಜ್ಯೂಪಿಟರ್‌ನನ್ನು ಗೌರವಿಸಲು ಆಗಾಗ್ಗೆ ಸಮಾರಂಭಗಳು ನಡೆಯುತ್ತಿದ್ದುದುಂಟು. ಪುರೋಹಿತ ವರ್ಗದವರ ಅನುಕೂಲಕ್ಕಾಗಿ ಒಂದು ಪಾಠಶಾಲೆ ಸಿದ್ಧವಾಯಿತು. ಎಟ್ರಸ್ಕೇನ್ ಗುಂಪಿನವರು ರೂಢಿಯಲ್ಲಿಟ್ಟುಕೊಂಡಿದ್ದ ‘‘ಮಿನಾರ್ವಾ’’ ಮತ್ತು ‘‘ಡಿಯಾನಾ’’ ಎಂಬ ದೇವತೆಗಳ ಪೂಜೆಯೂ ಹೆಚ್ಚಾಗಿ ಪ್ರಚಾರ ಗೊಂಡಿತ್ತು. ರೋಮನ್ನರಲ್ಲಿ ಧರ್ಮವು ಬಹಳ ಕಾಲ ಅತ್ಯಂತ ಮೇಲ್ಮಟ್ಟದ ತತ್ವ ವಿಷಯವನ್ನು ಹೊಂದಿರಲಿಲ್ಲ. ಆದರೆ ಅವರ ಧರ್ಮದಲ್ಲಿ ಕಾಣಬರುತ್ತಿದ್ದ ಆಚರಣೆಗಳಲ್ಲಿ ಬೇರೆ ಬೇರೆ ಅರ್ಥವನ್ನು ಹೊಂದಿದ್ದ ಪದ್ಧತಿಗಳು ಕೆಲವಿದ್ದರೂ, ಅವುಗಳನ್ನು ಪ್ರಕಟಿಸಲು ಅನುಸರಿ ಸುತ್ತಿದ್ದ ಆಚರಣೆಗಳು ಹಾಸ್ಯಾಸ್ಪದವಾಗಿಯೂ, ಅರ್ಥಹೀನವಾಗಿಯೂ ಇದ್ದುವು. ಜೀವನದಲ್ಲಿ ಹೊಸ ಹೊಸದನ್ನು ತಿಳಿಯುವ ಪ್ರಯತ್ನ ಅವರಲ್ಲಿ ನಡೆದ ದ್ದೆಂದರೆ ಕೇವಲ ಪೂರ್ವದ ದೇಶಗಳ ಸಂಪರ್ಕವಾದ ಮೇಲೆ. ಅದರಿಂದಾಗಿ ಎರಡನೆಯ ವಿಭಾಗದ ರೂಪದಲ್ಲಿ ‘‘ಮಿತ್ರೇಯಿಸಂ’’ ಎಂಬ ಧಾರ್ಮಿಕ ಗುಂಪಿನ ಪ್ರಾರಂಭವನ್ನು ಕಾಣುತ್ತೇವೆ. ಈ ಹೊಸಪದ್ಧತಿ ಬಳಕೆಗೆ ಬಂದ ಮೇಲೆ ಅದುವರೆಗೂ ಉಳಿದುಬಂದಿದ್ದ ಕೆಲವು ಅರ್ಥಹೀನವಾದ ಪದ್ಧತಿಗಳನ್ನು ಕೊನೆಗಾಣಿಸಿದ್ದುಂಟು. ಜನರಲ್ಲಿ ಅನುಭವಿಸದ ಗುಂಪು (ವಂಚಿತವಾದಂತಹ) ಪ್ರಾರಂಭವಾಯಿತು. ಇದರೊಂದಿಗೆ ಮೂವತ್ತು ಸಣ್ಣ ಶಾಖೆಗಳನ್ನೊಳಗೊಂಡ ‘‘ಗ್ನಾಸ್ಟಿಸಿಸಂ’’ಎಂಬ ಮತ್ತೊಂದು ಗುಂಪು ಮೊದಲಾಗಿತ್ತು. ಈ ಗುಂಪಿನ ಅನುಯಾಯಿಗಳು ಎರಡು ಮುಖ್ಯ ನಂಬಿಕೆಗಳನ್ನಿಟ್ಟು ಕೊಂಡಿದ್ದರು.

೧. ಮನುಷ್ಯನಲ್ಲಿರುವ ಜಡತ್ವ ಸಾಮಾನ್ಯವಾಗಿ ಆತನನ್ನು ದುಷ್ಕೃತ್ಯದೆಡೆಗೆ ಆಕರ್ಷಿಸು ವುದೆಂದೂ

೨. ವಿಶೇಷ ರೀತಿಯ ಜ್ಞಾನವಿಲ್ಲದೆ ಮೋಕ್ಷ ದೊರಕಲಾರದೆಂದೂ ನಂಬಿಕೆಯನ್ನು ಇಟ್ಟು ಕೊಂಡಿದ್ದರು.

ಆಗಸ್ಟಸ್ ಸೀಸರನ ಕಾಲಕ್ಕೆ ‘‘ಇಂಪೀರಿಯಲ್ ಕಲ್ಟ್’’ ಎಂಬ ರೂಪದಲ್ಲಿ ಚಕ್ರವರ್ತಿ ಯನ್ನು ದೇವರೆಂದು ಆರಾಧಿಸುವ ಗುಂಪು ಮೊದಲಾಯಿತು.

ಕ್ರಿ.ಪೂ.೪ನೆಯ ಶತಮಾನದಿಂದಾಚೆಗಿನ ರೋಮನ್ನರ ತತ್ವಶಾಸ್ತ್ರ

ರೋಮನ್ನರಲ್ಲಿ ಕಂಡುಬಂದ ವ್ಯವಹಾರ ಕುಶಲತೆ ಯಾವುದೇ ಮಟ್ಟದ ತತ್ವಜ್ಞಾನವು ಆಳವಾಗಿರಲು ಆಸ್ಪದ ಕೊಟ್ಟಿರಲಿಲ್ಲ. ತತ್ವಜ್ಞಾನವನ್ನೆಲ್ಲಾ ಗ್ರೀಸಿನಿಂದಲೇ ಕೊಡುಗೆಯಾಗಿ ಪಡೆದದ್ದು. ‘‘ಪಶ್ಚಿಮದ ಸಾಕ್ರಟೀಸ್’’ ಎಂದು ಹೆಸರು ಪಡೆದಿದ್ದ ‘‘ಕ್ರೇಟೋ’’ (ಕ್ರಿ.ಪೂ. ೨೩೪ ರಿಂದ ೧೪೮) ಎಂಬಾತನೇ ರೋಮನ್ನರ ಮೊದಲನೆಯ ತತ್ವಜ್ಞ. ರೋಮನ್ನರು ಗ್ರೀಕರನ್ನು ಅನುಸರಿಸುತ್ತಿದ್ದ ವಿಚಾರಗಳನ್ನು ಆತನು ಖಂಡಿಸಿ ತಮ್ಮ ಪೂರ್ವೀಕರಾದ ಲ್ಯಾಟಿನ್ ಗುಂಪಿನವರ ಪದ್ಧತಿಯನ್ನು ಮತ್ತು ಅದರ ಸರಳತೆಯನ್ನು ರಕ್ಷಿಸಿ ಅದನ್ನು ಮುಂದುವರೆಸಿಕೊಳ್ಳುವಂತೆ ಉಪದೇಶಿಸಿದನು. ಗ್ರೀಕರಲ್ಲಿ ರೂಢಿಗೆ ಬಂದಿದ್ದ ಎಪಿಕ್ಯೂರಿ ಯನ್ ತತ್ವಗಳು ಮತ್ತು ಸ್ಟೋಯಿಕ್ ತತ್ವಗಳು ಕ್ರಮೇಣ ರೋಂನಲ್ಲಿ ಹರಡಿದವು. ಶಿಸ್ತಿನ ಯೋಧರಂತೆ ಇರಲು ಬಯಸುತ್ತಿದ್ದ ರೋಮನ್ನರಿಗೆ ಸ್ಟೋಯಿಕ್ ತತ್ವವೇ ಹೆಚ್ಚು ಪ್ರಿಯವಾಯಿತು. ಪೆನೇಷಿಯನ್ ಎನ್ನುವಾತ ಆ ತತ್ವಗಳನ್ನು ರೋಮನ್ನರಿಗೆ ಪರಿಚಯ ಮಾಡಿಕೊಟ್ಟನು. ಪ್ರಚಾರದಲ್ಲಿದ್ದ ಕೆಲವು ದಂತಕಥೆಗಳು ಸುಳ್ಳೆಂದು ಸಾರಿ ಏಕಬ್ರಹ್ಮೋ ಪಾಸನೆಗೆ ಬೇಕಾಗುವ ಮನೋಧರ್ಮವನ್ನು ಬೆಳೆಸಲು ಪ್ರಯತ್ನಪಟ್ಟನು. ಲ್ಯುಕ್ರೇಷಿಯನ್ ಎಂಬುವನು ಎಪಿಕ್ಯೂರ್ ಎಂಬ ಗ್ರೀಕ್ ಹೇಳಿಕೆಯನ್ನು ರೋಮನ್ನರಲ್ಲಿ ಹರಡಿದನು. ರೋಮನ್ನರ ಕೊಡುಗೆಯ ರೂಪದಲ್ಲಿ ತತ್ವಶಾಸ್ತ್ರದ ಯಾವ ಅಂಶವೂ ಕಾಣುವುದಿಲ್ಲ. ಭಾಷಣಕಾರನೆಂದು ಪ್ರಸಿದ್ಧನಾದ ‘‘ಸಿಸಿರೋ’’ ಎಂಬ ದಾರ್ಶನಿಕನು ವಿಶ್ವಕೋಶ ಒಂದನ್ನು ರಚಿಸಿ ರೋಮನ್ನರ ತತ್ವಶಾಸ್ತ್ರದ ವಿಷಯವನ್ನು ಸಂಗ್ರಹಿಸಿಟ್ಟನು ಎಂಬುದು ರೋಮ್‌ನವರ ತತ್ವಶಾಸ್ತ್ರದ ಬೆಳವಣಿಗೆಯಲ್ಲಿ ತಿಳಿದುಬರುತ್ತದೆ.

ರೋಮನ್ನರ ಸಾಹಿತ್ಯ

ಪ್ರಪಂಚದ ಜನತೆಗೆ ರೋಮನ್ನರು ತಮ್ಮದಾಗಿ ಕೊಟ್ಟಿರುವ ಅಮೂಲ್ಯ ಅಂಶಗಳೆಂದರೆ ರೋಮನ್ನರ ಕಾನೂನು, ವ್ಯಾಸ್ತುಶಿಲ್ಪದಲ್ಲಿ ಅವರ ವ್ಯಾವಹಾರಿಕ ಕುಶಲತೆ, ಸಾಮ್ರಾಜ್ಯದ ವಿಸ್ತರಣೆ, ಅವರ ಆಡಳಿತ ಮತ್ತು ಲ್ಯಾಟಿನ್ ಭಾಷೆ. ಅನೇಕ ಭಾಷೆಗಳ ಮಾತೃವಾಗಿ ಲ್ಯಾಟಿನ್ ಭಾಷೆ ಉಳಿದಿದೆ. ಅವರು ರಚಿಸಿರುವ ಗ್ರಂಥಗಳಲ್ಲಿ ಐತಿಹಾಸಿಕ ಘಟನೆಯನ್ನು ತಿಳಿಸುವ ಗ್ರಂಥಗಳು ಉತ್ತಮವೆನಿಸಿದೆ. ಪಶ್ಚಿಮ ದೇಶಗಳಲ್ಲಿ ಐತಿಹಾಸಿಕ ಗ್ರಂಥಗಳನ್ನು ಬರೆದಿಟ್ಟವರಲ್ಲಿ ಗ್ರೀಕರೇ ಮೊದಲನೆಯವರಾದರೂ ಅವರಲ್ಲಿ ಉತ್ಪ್ರೇಕ್ಷೆ ಕಾಣುತ್ತಿತ್ತು. ಜೂಲಿಯಸ್ ಸೀಸರ್ ಅತ್ಯುತ್ತಮ ಐತಿಹಾಸಿಕ ಬರಹಗಾರನಾಗಿದ್ದಾನೆ. ಅವನು ‘ಅಂತರ್ಯುದ್ಧಗಳು’ ಎಂಬ ಪುಸ್ತಕವನ್ನೂ ಬರೆದಿದ್ದಾನೆ. ‘ಗ್ಯಾಲಿಕ್ ಯುದ್ಧಗಳು’ ಎಂಬ ಹೆಸರಿನ ಗ್ರಂಥದಲ್ಲಿ ಸ್ವಂತ ಅನುಭವಗಳನ್ನು ಬರೆದಿದ್ದಾನೆ. ಆತನಾದ ಮೇಲೆ ‘‘ಸಾಲ್ಲಸ್ಟ್’’ ಮತ್ತು ‘‘ಲಿವಿ’’ ಎನ್ನುವ ಇತಿಹಾಸಕಾರರು ಕಾಣಿಸಿಕೊಂಡು ಮರೆಯಾದರು. ಲಿವಿಯಿಂದ ಬರೆಯಲ್ಪಟ್ಟ ‘‘ರೋಮನ್ನರ ಇತಿಹಾಸವು’’ಪೂರ್ಣವಾಗಿಲ್ಲ. ‘ಟ್ಯಾಸಿಟಸ್’ ಎಂಬ ಮತ್ತೊಬ್ಬ ಇತಿಹಾಸಜ್ಞ ರೋಂ ನಗರದ ಕೊನೆಯ ದಿನಗಳ ಬಗ್ಗೆ ಗ್ರಂಥವನ್ನು ಬರೆದಿದ್ದಾನೆ. ಸಾಹಿತ್ಯದ ಉಳಿದ ಭಾಗಗಳಲ್ಲಿ ಅದರಲ್ಲೂ ಮಹಾಕಾವ್ಯವನ್ನು ಬರೆದ ವಿಚಾರದಲ್ಲಿ ‘‘ವರ್ಜಿಲ್’’ನ ಹೆಸರು ಇಂದಿಗೂ ಸಹ ನೆನಪಿನಲ್ಲಿ ಉಳಿದಿದೆ. ಆತನು ‘‘ಔರ್ಜಿಕ್ಸ್’’ ಮತ್ತು ‘‘ಏನಿಯಾಡ್’’ ಎಂಬ ಹೆಸರಿನಲ್ಲಿ ಕವಿತೆಗಳನ್ನು ರಚಿಸಿದ್ದಾನೆ.

ರೋಮನ್ನರ ವಿದ್ಯಾಭ್ಯಾಸ

ರೋಮನ್ನರು ವಿದ್ಯಾಭ್ಯಾಸದ ಬಗ್ಗೆ ಬಹಳ ಕಾಲ ಸರಿಯಾದ ಗಮನ ಕೊಟ್ಟಿರಲಿಲ್ಲ. ಅವರು ಪಡೆದ ವಿದ್ಯಾಭ್ಯಾಸವೆಲ್ಲಾ ಗ್ರೀಕರಿಂದ ಪಡೆದುದ್ದೇ ಆಗಿತ್ತು. ವಿದ್ಯೆಯ ಬೆಲೆಯನ್ನು ತಾವಾಗಿ ಅರಿಯದಿದ್ದ ರೋಮನ್ನರು ತಿಳಿವಳಿಕೆ ಬಂದೊಡನೆ ಅದನ್ನು ಗೌರವಿಸಲು ಮೊದಲು ಮುಂದೆ ಬಂದರು. ಶ್ರೀಮಂತರು ತಮ್ಮ ಮಕ್ಕಳನ್ನು ಗ್ರೀಸಿಗೆ ಕಳುಹಿಸಿ ವಿದ್ಯಾರ್ಜನೆಗೆ ಏರ್ಪಾಡು ಮಾಡಿದರು. ಕ್ಯಾಟೋ ಮತ್ತು ವ್ಯಾರೋ ಎಂಬ ಮುಖಂಡರು ಲ್ಯಾಟಿನ್ ಭಾಷೆಯನ್ನು ಉಪಯೋಗಿಸಿಕೊಂಡು ಅನೇಕ ಗ್ರಂಥಗಳನ್ನು ಬರೆದರು. ಭಾಷೆ, ಅಲಂಕಾರಶಾಸ್ತ್ರ, ವ್ಯಾಕರಣ, ಧರ್ಮ ಮತ್ತು ರೋಮನ್ನರ ಜೀವನ ಪದ್ಧತಿ ಈ ವಿಚಾರಗಳು ಸಾಮಾನ್ಯ ಅಧ್ಯಯನದ ವಿಷಯಗಳಾಗಿದ್ದವು. ರೋಮನ್ನರ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟವರಲ್ಲಿ ‘‘ಸಿಸಿರೋ’’ ಗಣ್ಯನಾಗಿದ್ದಾನೆ. ನಾಗರಿಕ ಕರ್ತವ್ಯದ ವಿಷಯಗಳು ವಿದ್ಯಾಭ್ಯಾಸದ ಒಂದು ಅಂಗವಾಗಿರಬೇಕೆಂದು ಈತನ ಅಭಿಪ್ರಾಯವಾಗಿತ್ತು. ರೋಮನ್ನರು ಭಾಷಣ ಕಲೆಗೂ ಪ್ರಾಮುಖ್ಯತೆ ಕೊಟ್ಟಿದ್ದರು. ಈ ಪ್ರಯತ್ನಗಳಿಂದಾಗಿ ರೋಮನ್ ಸಾಮ್ರಾಜ್ಯವನ್ನು ‘‘ಹೇಡ್ರಿಯನ್’’ಎಂಬಾತ ಆಳುತ್ತಿದ್ದಾಗ ಪ್ರಥಮ ವಿಶ್ವವಿದ್ಯಾಲಯವೊಂದು ಸ್ಥಾಪಿತವಾಯಿತು.

ವಿಜ್ಞಾನ ಮತ್ತು ಶಿಲ್ಪ

ವೈಜ್ಞಾನಿಕ ವಿಷಯಗಳಲ್ಲಿ ರೋಮನ್ನರು ಸಾಧಿಸಿದ್ದು ಬಹಳ ಕಡಿಮೆ. ‘‘ಫ್ಲಿನೀ ದಿ ಎಲ್ಡರ್’’ ಎಂಬಾತನು ‘‘ನೈಸರ್ಗಿಕ ಚರಿತ್ರೆ’’ ಎಂಬ ಗ್ರಂಥದಲ್ಲಿ ಸಸ್ಯಗಳ, ಪ್ರಾಣಿಗಳ ವಿಚಾರವಾಗಿ ಬರೆದಿರುವನು. ಸರಳವಾದ ರೇಖಾಗಣಿತದ ಜ್ಞಾನವನ್ನು ಉಪಯೋಗ ಮಾಡಿಕೊಳ್ಳುತ್ತಿದ್ದರು. ‘‘ಸ್ಟ್ರಾಬೊ’’ಎಂಬ ಮತ್ತೊಬ್ಬ ವಿದ್ವಾಂಸನು ಭೂಗೋಳಶಾಸ್ತ್ರದ ಮೇಲೆ ಒಂದು ಗ್ರಂಥ ಬರೆದಿರುವನು. ‘ಟಾಲೆಮಿ’ ಎಂಬಾತನು ‘ತ್ರಿಕೋನಮಿತಿ’ ಎಂಬ ಗಣಿತ ವಿಭಾಗದ ಬಗ್ಗೆ ಪ್ರಾರಂಭದ ತತ್ವಗಳನ್ನು ತಿಳಿಯಪಡಿಸಿದನು. ಅವನು ಇದರ ಜೊತೆಗೆ ಭೂಗೋಳ ಮತ್ತು ಜ್ಯೋತಿಷ್ಯದಲ್ಲಿ ವಿದ್ವಾಂಸನಾಗಿದ್ದನೆಂದು ತಿಳಿದುಬರುತ್ತದೆ. ರೋಮನ್ ಚಕ್ರವರ್ತಿಗಳ ಹೆಸರಿನ ಮೇಲೆ ತಿಂಗಳುಗಳನ್ನು ಗೊತ್ತುಮಾಡಲಾಗಿತ್ತು. ಸೌರಮಾನ ಪದ್ಧತಿಯನ್ನನುಸರಿಸಿ ೩೬೫ ದಿನಗಳಿಂದಲೂ ಮತ್ತು ಅಧಿಕ ದಿನದಿಂದಲೂ ಕೂಡಿದ್ದ ಪಂಚಾಂಗವು ಕ್ರಿ.ಪೂ. ೪೫ರಲ್ಲಿ ರೂಢಿಗೆ ಬಂದಿತು. ವೈದ್ಯಕೀಯದಲ್ಲಿ ಮಾತ್ರ ರೋಮನ್ನರ ವಿಶೇಷ ರೀತಿಯ ಸಾಧನೆಯೊಂದು ಆಸ್ಪತ್ರೆಗಳ ಸ್ಥಾಪನೆಯ ಮೂಲಕ ನಿಚ್ಚಳವಾಗಿ ಕಂಡುಬಂದಿದೆ. ಡೈಯೋಸ್ಕೋರಿಡಸ್ ಮತ್ತು ಸೆಲ್ಸಸ್ ಇವರು ಮೊದಮೊದಲ ಮುಖ್ಯ ವೈದ್ಯರುಗಳಾಗಿದ್ದರು ಎಂದು ತಿಳಿದುಬರುತ್ತದೆ. ‘‘ಫ್ರಾಂಟನಸ್’’ ಎಂಬಾತನು ಎಂಜಿನಿಯರ್‌ಗಳಿಗೆ ಸಹಾಯವಾಗುವಂತೆ ‘‘ಅಣೆಕಟ್ಟುಗಳು’’ ಎಂಬ ಹೆಸರಿನಲ್ಲಿ ಒಂದು ಗ್ರಂಥವನ್ನು ರಚಿಸಿದನು. ಇದು ಇಂದಿಗೂ ಸಹ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ.

 

ಪರಾಮರ್ಶನ ಗ್ರಂಥಗಳು

೧. ಕೃಷ್ಣಸ್ವಾಮಿ ಅಯ್ಯಂಗಾರ್ ಬಿ.ಎಸ್., ರೋಮ್ ಚಕ್ರಾಧಿಪತ್ಯದ ಚರಿತ್ರೆ, ಮೈಸೂರು.

೨. ಕೃಷ್ಣಸ್ವಾಮಿ ಅಯ್ಯಂಗಾರ್ ಬಿ.ಎಸ್., ಗ್ರೀಸ್ ದೇಶದ ಚರಿತ್ರೆ, ಮೈಸೂರು: ಗೀತಾ ಬುಕ್ ಹೌಸ್.

೩. ಡೋನಾಲ್ಡ್  ಮೇಕಾಜಿಎ., ಏನ್ಸಿಯೆಂಟ್ ಸಿವಿಲಿಜೇಷನ್, ಲಂಡನ್.

೪. ಜೇಮ್ಸ್ ಜಿ.ಎಸ್., ಎ ಹಿಸ್ಟರಿ ಆಫ್ ವರ್ಲ್ಡ್ ಸಿವಿಲೈಜೇಶನ್,  ದೆಹಲಿ.