೭ನೆಯ ಶತಮಾನದ ವೇಳೆಗೆ ಪರ್ಷಿಯಾದ ದೊರೆ ೨ನೆಯ ಕಾಸ್‌ರಾಸ್  ಮೆಸ ಪೊಟೇಮಿಯಾ, ಸಿರಿಯಾವರೆಗಿನ ಆರ್ಮೇನಿಯಾಗಳನ್ನು ಆಕ್ರಮಿಸಿಕೊಂಡನು. ಆಥಿಯಾಸ್ ಮತ್ತು ಡಮಾಸ್ಕಸ್‌ಗಳನ್ನು ಗೆದ್ದುಕೊಂಡನು. ಕ್ರಿ.ಶ.೬೧೪ರಲ್ಲಿ ಜೆರೂಸೆಲೆಮ್‌ನ್ನು, ಕ್ರಿ.ಶ.೬೧೫ರಲ್ಲಿ ಏಷ್ಯಾಮೈನರ್‌ನ್ನು ಆಕ್ರಮಿಸಿ ಕೊಂಡನು, ಮತ್ತು ಕಾನ್‌ಸ್ಟಂಟಿನೋಪಲ್‌ನ ವಿರುದ್ಧ ಸೈನ್ಯವನ್ನು ಕಟ್ಟಿದನು. ಕ್ರಿ.ಶ. ೬೧೭ರಲ್ಲಿ ಈಜಿಪ್ಟ್‌ನವರೆಗೂ ಯುದ್ಧವನ್ನು ಮುಂದುವರಿಸಿ, ಅಲೆಗ್ಸಾಂಡ್ರಿಯಾವನ್ನು ಆಕ್ರಮಿಸಿದನು. ಹೆರಾಕ್ಲಿಸ್‌ನ ನೇತೃತ್ವದಲ್ಲಿ ರೋಮನ್ನರು ಏಷ್ಯಾಮೈನರ್, ಸಿರಿಯಾ ಮತ್ತು ಈಜಿಪ್ಟ್‌ಗಳನ್ನು ವಾಪಸ್ಸು ಪಡೆದು ಕೊಂಡನು. ಕ್ರಮೇಣ ಜರ್ಮನ್ನರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಗಾಲ್ಫ್, ಫ್ರಾನ್ಸ್ ಎನಿಸಿಕೊಂಡಿತು. ಪ್ರಾಂಕ್‌ರ ಸಾಮ್ರಾಜ್ಯವಾದ ಫ್ರಾನ್ಸ್ ದೇಶವು ರೋಮ್‌ನಲ್ಲಿರುವ ಪೋಪ್‌ಗಳಿಂದ ‘‘ಚರ್ಚಿನ ಹಿರಿ ಮಗಳೆಂದು’ ಹೊಗಳಿಸಿಕೊಂಡಿತು ಮತ್ತು ಸ್ಪೆಯಿನ್ ದೇಶವು ಎರಡನೆಯ ಮಗಳಾಯಿತು. ೭ನೆಯ ಶತಮಾನದ ಹೊತ್ತಿಗೆ ಇಂಗ್ಲೆಂಡ್ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿತು. ಅಂದರೆ ಬ್ರಿಟಿನ್ ಕ್ರೈಸ್ತ ನಾಗರಿಕತೆಗೆ ತನ್ನನ್ನು ಒಡ್ಡಿಕೊಳ್ಳುವುದರ ಮೂಲಕ ಯುರೋಪಿನ ಚರಿತ್ರೆಯ ಮುಖ್ಯವಾಹಿನಿಗೆ ಪುನಃ ಸೇರಿಕೊಂಡಿತು.

ವೇಲ್ಸ್, ಐರ್‌ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡ್‌ನ ಸೆರ್ಲ್ಪಿ ಕ್ರೈಸ್ತರು ಕ್ಯಾಥೊಲಿಕ್ ಪಂಥದ ಅನುಯಾಯಿಗಳಾಗಿದ್ದರು, ಹಾಗೂ ಅವರ ಭಾಷೆ ಲ್ಯಾಟಿನ್ ಆಗಿತ್ತು. ೭ನೆಯ ಶತಮಾನದಲ್ಲಿ ಇಟಲಿಯ ಲಂಬಾರ್ಡರು ಕ್ರೈಸ್ತಧರ್ಮಕ್ಕೆ ಮತಾಂತರ ಗೊಂಡರು. ಇದೇ ಕಾಲದಲ್ಲಿ ಇಸ್ಲಾಂಧರ್ಮವು ಪೂರ್ವದಲ್ಲಿ ಉದಯವಾಯಿತು.

ನಾಲ್ವರ ಕದನದಲ್ಲಿ ಅರಬ್ಬರು ಫ್ರಾನ್ಸ್ ಮತ್ತು ಸ್ಪೈಯಿನ್ ದೇಶಗಳ ಮೇಲೆ ದಾಳಿ ನಡೆಸಿದರು. ಕ್ರಿ.ಶ.೬೩೭ರಲ್ಲಿ ಅವರು ಪರ್ಷಿಯಾವನ್ನು ಗೆದ್ದಕೊಂಡರು. ೭ನೆಯ ಶತಮಾನದ ಅಂತ್ಯದಲ್ಲಿ ಸಿರಿಯಾ, ಮೆಸಪೊಟೇಮಿಯಾ, ಆರ್ಮೇನಿಯಾ, ಈಜಿಪ್ಟ್ ಮತ್ತು ಆಫ್ರಿಕಾದಲ್ಲಿನ ರೋಮನ್ ಸಾಮ್ರಾಜ್ಯಗಳನ್ನು ಅರಬ್ಬರು ಕೊನೆಗೊಳಿಸಿದರು. ಕ್ರಿ.ಶ.೮೦೨ರಲ್ಲಿ ಇಂಗ್ಲೀಷ್ ದೊರೆ ಎಗ್ಬರ್ಟನ್ ರಾಜನಾದನು ಮತ್ತು ಆ ಮೂಲಕ ಇತರೆ ಎಲ್ಲ ಆಂಗ್ಲೋ-ಸ್ಯಾಕ್ಸನ್ ರಾಜ್ಯಗಳ ಮೇಲೆ ಪ್ರಭುತ್ವ ಸ್ಥಾಪಿಸಿದನು. ಇದರ ಪರಿಣಾಮವಾಗಿ ಇಂಗ್ಲೆಂಡಿನ ಸಂಯುಕ್ತ ರಾಜ್ಯಗಳ(ಯು.ಕೆ.) ಸೃಷ್ಟಿಯಾಯಿತು.

ಚಾರ್ಲ್ಸ್ ಮ್ಯಾಗ್ಸಸ್‌ನ ತರುವಾಯ ಆತನ ಮಕ್ಕಳಾದ ಲೋಥರ್ , ಲೂಯಿ ಮತ್ತು ಚಾರ್ಲ್ಸ್‌ರು ಸಾಮ್ರಾಜ್ಯವನ್ನು ವಿಭಾಗಿಸಿದರು ಮತ್ತು ಕ್ರಿ.ಶ.೮೪೩ರಲ್ಲಿ ವರ್ಧಾನಿನ ಒಪ್ಪಂದವನ್ನು ಮುಕ್ತಾಯಗೊಳಿಸಿದರು. ಇದರ ಪ್ರಕಾರ ಲೋಥರನು ಚಕ್ರವರ್ತಿಯ ಬಿರುದನ್ನೂ ಜೊತೆಗೆ ಇಟಲಿ ಮತ್ತು ಆಲ್ಫ್ಸ್ ಹಾಗೂ ರೈನ್ ನದಿಯ ಮಧ್ಯದ ಒಂದು ಇಕ್ಕಟ್ಟಾದ ಪ್ರದೇಶವನ್ನು ಉಳಿಸಿಕೊಂಡನು. ರೈನ್ ನದಿಯ ವಾಯುವ್ಯ ದಿಕ್ಕಿನ ತೀರದ ಪ್ರದೇಶದಿಂದ ಹಿಡಿದು ಉತ್ತರ ಸಮುದ್ರದವರೆಗೂ ಇವನ ರಾಜ್ಯಭಾರವಿತ್ತು.

ಲೂಯಿಯನ್ನು ಬಾರ್ಬೇರಿಯನ್ನರು, ಸಾಕ್ಸನ್ನರು, ಧುರಿಂಜಿಯನ್ನರು ಮತ್ತು ಅಲಮನ್ಸರನ್ನೊಳಗೊಂಡಂತಿರುವ ಜರ್ಮನಿಯ ರಾಜನೆಂದು ಪರಿಗಣಿಸಲಾಯಿತು. ಮೂಲದ ಫ್ರಾನ್ಸ್ ದೇಶವನ್ನು ಚಾರ್ಲ್ಸ್‌ನಿಗೆ ನೀಡಲಾಯಿತು. ಅಣ್ಣತಮ್ಮಂದಿರ ನಡುವಿನ ವ್ಯಾಜ್ಯಗಳು ಜರ್ಮನಿಯಲ್ಲಿ ಸಾಕ್ಸನ್ನರ ದೊರೆಯ ಬದಲಾವಣೆ ಹಾಗೂ ಕೊನೆಗೆ ಬಾರ್ಬೇಯನ್ನರ ದಾಳಿಯಿಂದಾಗಿ ಚಾರ್ಲ್ಸ್‌ನ ಸಾಮ್ರಾಜ್ಯವು ೯ನೆಯ ಶತಮಾನದಲ್ಲಿ ನಿರ್ನಾಮವಾಯಿತು (ಕ್ರಿ.ಶ.೯೧೯).

ಹೀಗೆ ಪಶ್ಚಿಮದ ಸಾಮ್ರಾಜ್ಯ ಅಥವಾ ರೋಮನ್ನರ ಸಾಮ್ರಾಜ್ಯವು ಓಟೋವಿನ ರಾಜ್ಯಭಾರದಲ್ಲಿ ಕ್ರಿ.ಶ.೯೬೨ರಲ್ಲಿ ಪುನರ್‌ನಿರ್ಮಾಣವಾಗಿ ಕ್ರಿ.ಶ.೧೮೦೬ರವರೆಗೂ ಮುಂದುವರೆಯಿತು. ಆದರೆ ಇದು ಎಂದಿಗೂ ಚಾರ್ಲ್ಸ್‌ನ ಸಾಮ್ರಾಜ್ಯದಷ್ಟು ವ್ಯಾಪಕ ವಾಗಿರಲಿಲ್ಲ. ಇದು ಫ್ರಾನ್ಸ್ ಮತ್ತು ಸ್ಪೈಯಿನ್‌ಗಳನ್ನು ಒಳಗೊಂಡಿರಲಿಲ್ಲ. ಅದು ಜರ್ಮನ್ ಮತ್ತು ಇಟಲಿಯನ್ ದೇಶಗಳ ರೋಮನ್ ಸಾಮ್ರಾಜ್ಯ ಮಾತ್ರವಾಗಿತ್ತು.

ಬೈಜಾಂಟೈನ್ ಸಾಮ್ರಾಜ್ಯ

ಕ್ರಿ.ಶ.೩೪೦ ರಿಂದ ೧೪೫೩ ರವರೆಗಿನ ಸುಮಾರು ೧೧ ಶತಮಾನಗಳ ಅವಧಿಯಲ್ಲಿ ಕಾನ್‌ಸ್ಟಾಂಟಿನೋಪಲ್ ಅಥವಾ ಬೈಜಾಂಟೈನ್ ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ನಗರವೆಂದು ಪರಿಗಣಿತವಾಗಿತ್ತು. ಕ್ರಿ.ಶ.೧೦೫೪ರ ನಂತರ ಯುರೋಪಿನಲ್ಲಿ ೨ ಪ್ರತ್ಯೇಕವಾದ ಚರ್ಚುಗಳಿದ್ದವು. ೧. ಸಾಂಪ್ರದಾಯಿಕ ಚರ್ಚಿನಲ್ಲಿ ಅಧಿಕೃತ ಭಾಷೆ ಗ್ರೀಕ್ ಆಗಿದ್ದು ಅಲ್ಲಿನ ಪಿತೃಪ್ರಧಾನ ಪರಂಪರೆಯು ಬೈಜಾಂಟೈನ್ ಸಾಮ್ರಾಜ್ಯಕ್ಕೆ ಹಾಗೂ ಕಾನ್‌ಸ್ಟಾಂಟಿನೋಪಲ್‌ನ ಕುಲಪತಿಗೆ ತನ್ನ ಶ್ರದ್ಧೆಯನ್ನು ಹೊಂದಿಸಿಕೊಂಡಿತ್ತು. ೨. ಪವಿತ್ರ ರೋಮನ್ ಸಾಮ್ರಾಜ್ಯವನ್ನು ನಂಬಿಕೊಂಡಿದ್ದ ಕ್ಯಾಥೊಲಿಕ್ ಚರ್ಚ್ ರುಮೇನಿಯ, ಜರ್ಮನ್ ಮತ್ತು ಸಲ್ಟಿಕ್ ಜನಗಳನ್ನೊಳಗೊಂಡಿತ್ತು, ಇದರ ಅಧಿಕೃತ ಭಾಷೆ ಲ್ಯಾಟಿನ್ ಆಗಿದ್ದು, ತನ್ನ ಪರಂಪರೆಯನ್ನು ಪೋಪ್‌ಗೆ ಶ್ರದ್ಧೆಯಿಂದ ಒಪ್ಪಿಸಿಕೊಂಡಿತ್ತು.

ಊಳಿಗಮಾನ್ಯ ಪದ್ಧತಿಯು ಸಮಾಜದ ತಳಹದಿಯಾಗಿತ್ತು. ಧರ್ಮಯುದ್ಧಗಳು ನಡೆಯುತ್ತಿದ್ದವು. ಹೀಗೆ ಪೂರ್ವ ಮತ್ತು ಪಶ್ಚಿಮದ ಕ್ರೈಸ್ತಧರ್ಮಗಳ ನಡುವೆ ಸಂಘರ್ಷ ಹೆಚ್ಚಾಯಿತು. ಕ್ರಿ.ಶ.೧೨೬೧ರಲ್ಲಿ ನಿಸಾಕದ ಚಕ್ರವರ್ತಿಯು ಕಾನ್‌ಸ್ಟಾಂಟಿನೋಪಲನ್ನು ವಶಪಡಿಸಿಕೊಂಡು ಲ್ಯಾಟಿನ್ ಸಾಮ್ರಾಜ್ಯವನ್ನು ಕೊನೆಗೊಳಿಸಿದನು. ಕ್ರಿ.ಶ.೧೨೦೪ರಲ್ಲಿ ಲ್ಯಾಟಿನ್ನರು ಪುನಃ ತಮ್ಮ ಹತೋಟಿಯನ್ನು ಸ್ಥಾಪಿಸಿದರು. ಆದರೆ ೧೨೬೧ರಲ್ಲಿ ಮತ್ತೊಮ್ಮೆ ಗ್ರೀಕ್ ಆಡಳಿತವನ್ನು ಪುನರ್‌ಸ್ಥಾಪಿಸಲಾಯಿತು. ಆದರೆ ವೆನಿಸ್ ಪ್ರಭುತ್ವದಲ್ಲಿ ಕ್ರೀಟ್ ಮತ್ತು ಈಜಿಯನ್ ದ್ವೀಪಗಳನ್ನು ಹಾಗೂ ಗ್ರೀಕ್ ಪರ್ಯಾಯ ದ್ವೀಪದ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳಲಾಯಿತು. ಒಟ್ಟೋವಿನ ಸಾಮ್ರಾಜ್ಯದ ಸರಹದ್ದಿನಿಂದ ಕ್ರೈಸ್ತಧರ್ಮೀಯ ಬೈಜಾಂಟೈನ್ ಸಾಮ್ರಾಜ್ಯವು ವೃದ್ದಿಗೊಂಡಿತು. ಇದರಿಂದಾಗಿ ಸಂಕುಚಿತ ಗೊಂಡ ಏಷಿಯಾ ಮೈನರ್ ಪ್ರದೇಶವು ಕೊನೆಗೆ ತುರ್ಕರಿಗೆ ಶರಣಾಗತವಾಯಿತು. ಬಾಲ್ಕನ್ ಪರ್ಯಾಯ ದ್ವೀಪವನ್ನು ಎರಡು ಸ್ವತಂತ್ರ ರಾಜ್ಯಪ್ರಭುತ್ವಗಳಾದ ಯುಗೋಸ್ಲಾವಿಯಾ ಮತ್ತು ಬಲ್ಗೇರಿಯನ್ನರು ನಿಯಂತ್ರಿಸುತ್ತಿದ್ದರು. ಇಟಲಿ ಇಟಾಲಿಯನ್ನರ ಆಡಳಿತದಲ್ಲಿತ್ತು.

ಯುರೋಪಿನ ಮೇಲೆ ತುರ್ಕರ ದಾಳಿ

ಕ್ರಿ.ಶ.೧೩೫೬ರಲ್ಲಿ ತುರ್ಕರು ಅಡ್ರಿಯೇನೋಪಲ್‌ನ್ನು ವಶಪಡಿಸಿಕೊಂಡು ಅದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಕ್ರಿ.ಶ.೧೩೮೭ರಲ್ಲಿ ‘ಸಲೋನಿ’ಯನ್ನು ವಶಪಡಿಸಿಕೊಂಡರು ಮತ್ತು ಯೂಗೋಸ್ಲಾವರನ್ನು ಸೋಲಿಸಿದರು. ೧೩೯೩ರಲ್ಲಿ ಬಲ್ಗೇರಿಯನ್ನರನ್ನು ಸೋಲಿಸಿ, ಕ್ರಿ.ಶ.೧೪೦೨ರಲ್ಲಿ ಕಾನ್‌ಸ್ಟಾಂಟಿನೋಪಲ್‌ಗೆ ಮುತ್ತಿಗೆ ಹಾಕಿದರು.

೧೫ನೆಯ ಶತಮಾನದಲ್ಲಿ ಒಟ್ಟೋವಿಯನ್ನರು ಕಾನ್‌ಸ್ಟಾಂಟಿನೋಪಲ್ ಒಂದನ್ನು ಹೊರತುಪಡಿಸಿ ಇಡೀ ಬಾಲ್ಕನ್ ಪರ್ಯಾಯ ದ್ವೀಪದ ಮೇಲೆ ಆಧಿಪತ್ಯವನ್ನು ಸ್ಥಾಪಿಸಿದ್ದರು. ಕ್ರಿ.ಶ.೧೪೫೩ರಲ್ಲಿ ಎರಡನೆಯ ಮಹಮ್ಮದ್‌ನು ಕಾನ್‌ಸ್ಟಾಂಟಿನೋಪಲ್‌ಗೆ ಮುತ್ತಿಗೆ ಹಾಕಿ, ಅದನ್ನು ವಶಪಡಿಸಿಕೊಂಡನು. ಇದು ಬೈಜಾಂಟೈನ್ ಸಾಮ್ರಾಜ್ಯದ ಕೊನೆಗಾಲವನ್ನು ಸೂಚಿಸಿತು.

ನೂರುವರ್ಷಗಳ ಯುದ್ಧ (ಕ್ರಿ.ಶ.೧೩೩೭೧೪೫೩)

ಇದು ಜಹಗೀರುದಾರಿ ಯುದ್ಧದಂತೆ ಪ್ರಾರಂಭವಾದರೂ ರಾಷ್ಟ್ರೀಯ ಯುದ್ಧವಾಗಿ ಕೊನೆಗೊಂಡಿತು. ಅಂತಿಮ ವಿಜಯ ಫ್ರೆಂಚರದಾಗಿತ್ತು. ೬ನೆಯ ಚಾರ್ಲ್ಸ್‌ಗೆ ಫ್ರಾನ್ಸ್ ಸಂಪೂರ್ಣವಾಗಿ ವಶವಾಯಿತು. ಕೇವಲ ಕಲಾಯ್ಸ ಪಟ್ಟಣ ಮಾತ್ರ ಇಂಗ್ಲಿಷರ ಬಳಿ ಉಳಿದುಕೊಂಡಿತು. ಈ ಯುದ್ಧಗಳ ನಂತರ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ನಿರಂಕುಶ ಪ್ರಭುತ್ವ ಮತ್ತು ಅಂತರ್ಯುದ್ಧಗಳು ಪ್ರಾರಂಭವಾಯಿತು.

ಇಂಗ್ಲೆಂಡಿನಲ್ಲಿ ಟ್ಯೂಡರರ ರಾಜಪ್ರಭುತ್ವವು ಮೊದಲನೆಯ ಟ್ಯೂಟರ್ ೭ನೆಯ ಹೆನ್ರಿ (೧೪೮೫-ಕ್ರಿ.ಶ.೧೫೦೯)ಯಿಂದ ಆರಂಭಗೊಂಡಿತು. ಫ್ರಾನ್ಸ್‌ನ ರಾಜಪ್ರಭುತ್ವವು ೭ನೆಯ ಚಾರ್ಲ್ಸ್‌ನಿಂದ ಬಲಗೊಂಡಿತು.

೧೬ನೆಯ ಶತಮಾನದಲ್ಲಿ ಧಾರ್ಮಿಕ ಅಶಾಂತಿ ಮತ್ತು ಅಂತರ್ಯುದ್ಧಗಳಿಂದ ಫ್ರಾನ್ಸ್‌ನಲ್ಲಿ ನಿರಂಕುಶ ಪ್ರಭುತ್ವದ ಉಗಮವಾಯಿತು. ಇದು ೧೮ನೆಯ ಶತಮಾನದವರೆಗೂ ಮುಂದುವರೆಯಿತು.

ಸ್ಪೈಯಿನ್ : ಫರ್ಡಿನಾಂಡ್ ಮತ್ತು ಇಸಬೆಲಾರ ಜೋಡಿ ಆಳ್ವಿಕೆಯಲ್ಲಿ ನಿರಂಕುಶ ಪ್ರಭುತ್ವದ ಉಗಮವಾಯಿತು. ಇವರು ಸ್ಪಾನಿಷ್ ವಸಾಹತುಶಾಹಿ ಚಕ್ರಾಧಿಪತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದರು.

ಸ್ಕ್ಯಾಂಡಿನೇವಿಯಾ : ಸ್ಕ್ಯಾಂಡಿನೇವಿಯಾದಲ್ಲಿ ಕಲ್‌ನುರ್‌ದ ಸಂಯುಕ್ತ ಸಂಸ್ಥಾನವು (ಕ್ರಿ.ಶ.೧೩೯೭) ಡೆನ್ಮಾರ್ಕ್, ನಾರ್ವೆ ಮತ್ತು ಸ್ವೀಡನ್‌ನ ರಾಜ್ಯಗಳನ್ನು ಒಂದುಗೂಡಿಸಿತು. ಅದರೆ ೧೭ನೆಯ ಶತಮಾನದಲ್ಲಿ ಈ ಒಕ್ಕೂಟವು ವಿಫಲವಾಯಿತು. ಗುಸ್ತಾವುಸ್‌ವಾಸನ ಆಳ್ವಿಕೆಯಲ್ಲಿ ಸ್ವೀಡನ್ ಹಾಗೂ ಡೇನಿಷ್ ಆಳ್ವಿಕೆಯಲ್ಲಿ ನಾರ್ವೆಯು ಬೇರೆಯಾಯಿತು.

ಜರ್ಮನಿ ಮತ್ತು ಇಟಲಿ : ಪವಿತ್ರವಾದ ರೋಮನ್ ಸಾಮ್ರಾಜ್ಯವು ಹಾಬ್ಸ್‌ಬರ್ಗ್ ಕುಟುಂಬದ ಮುಖ್ಯಸ್ಥನಾಗಿದ್ದ ಮತ್ತು ಆಸ್ಟ್ರಿಯಾವನ್ನು ವಂಶಪಾರಂಪರ್ಯವಾಗಿ ಆಳುತ್ತಿದ್ದ ದುರ್ಬಲ ರೋಮನ್ ಚಕ್ರವರ್ತಿಯ ಕೈಕೆಳಗೆ ಇತ್ತು. ಇಟಲಿ ದೇಶವು ತನ್ನ ಗಣತಂತ್ರ ನಗರ ರಾಜ್ಯಗಳ ಆಳ್ವಿಕೆಯಿಂದ ನಿರಂಕುಶ ಹಾಗೂ ವಂಶಪಾರಂಪರ್ಯ ಆಳ್ವಿಕೆಯತ್ತ ಬದಲಾಗುವ ಮನೋಭಾವವನ್ನು ತೋರುತ್ತಿತ್ತು.

ಸ್ಕಾಟ್ಲೆಂಡ್ ಮತ್ತು ಪೋಲೆಂಡಿನಲ್ಲಿದ್ದ ನಿರಂಕುಶ ಪ್ರಭುತ್ವ

ಪೋಲೆಂಡಿನಲ್ಲಿ ಶ್ರೀಮಂತರು ರಾಜ್ಯಭಾರವನ್ನು ನಡೆಸುತ್ತಿದ್ದು, ರಾಜಪ್ರಭುತ್ವಕ್ಕೆ ಚುನಾಯಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದರು. ಹಾಗಾಗಿ ವಂಶಪಾರಂಪರ್ಯ ಆಳ್ವಿಕೆ ಯನ್ನು ತಡೆಗಟ್ಟಿದ್ದರು. ೧೬ನೆಯ ಶತಮಾನದ ಉತ್ತರ ಭಾಗದಲ್ಲಿ ೬ನೆಯ ಜೇಮ್ಸ್‌ನ ಆಳ್ವಿಕೆಯಲ್ಲಿನ ಸ್ಕಾಟ್ಲೆಂಡ್ ದೇಶದಲ್ಲಿ ಶ್ರೀಮಂತ ಪ್ರಭುತ್ವದ ಉದಯವಾಯಿತು. (ಹಾಬ್ಸ್‌ಬರ್ಗ್‌ನ ಚಾರ್ಲ್ಸ್‌ನು ನೆದರ್ ಲ್ಯಾಂಡ್, ಸ್ಪೆಯಿನ್, ಸಿಸಿಲಿ ಮತ್ತು ದಕ್ಷಿಣ ಇಟಲಿಯ ಉತ್ತರಾಧಿಕಾರಿಯಾಗಿದ್ದನು.)

ಕ್ಯಾಟ್‌ಕ್ಯಾನ್ ಕ್ಯಾಂಬ್ರಿಸಿಸ್ ಒಪ್ಪಂದದ ನಂತರ (೧೫೬೯) ಮಿಲಾನ್ ಮತ್ತು ನೇಪಲ್ಸ್‌ಗಳು ಹಾಪ್ಸ್‌ಬರ್ಗ್‌ನಲ್ಲೇ ಉಳಿದುಕೊಂಡವು. ಆದರೆ ಜರ್ಮನ್ ನಗರಗಳಾದ ಮಿಡ್ಸ್‌ಟೌಲ್ ಮತ್ತು ವರ್ಧೂನ್‌ಗಳನ್ನು ಫ್ರೆಂಚರಿಗೆ ಒಪ್ಪಿಸಿದರು.

೧೭ನೆಯ ಶತಮಾನದಲ್ಲಿ ಇಂಗ್ಲೆಂಡ್

ರಾಣಿ ಎಲಿಜಬೆತ್‌ಳ ಮರಣಾನಂತರ ಕೊನೆಯ ಟ್ಯೂಡರ್ ಸಾಮ್ರಾಜ್ಯವು ಆಕೆಯ ದಾಯಾದಿ ಸ್ಕಾಟ್‌ಲ್ಯಾಂಡಿನ ೬ನೆಯ ಜೇಮ್ಸ್‌ಗೆ ಹಸ್ತಾಂತರಗೊಂಡಿತು. ಆತನಿಂದ ಸ್ಟುವರ್ಟ್ ಕುಟುಂಬದ ಆಳ್ವಿಕೆ ಪ್ರಾರಂಭವಾಯಿತು.

ಹಕ್ಕುಗಳ ವಿಜ್ಞಾಪನೆ (ಕ್ರಿ.ಶ.೧೬೨೮) : ಕ್ರಿ.ಶ.೧೬೪೨ರಲ್ಲಿ ನಡೆದ ಅಂತರ್ಯುದ್ಧದಲ್ಲಿ ರಾಜರು, ಸೈನಿಕರು ಮತ್ತು ಸಂಸತ್ತಿನ ಸದಸ್ಯರು ಆಲಿವರ್ ಕ್ರಾಮ್‌ವೆಲ್‌ನ ಸರ್ವಾಧಿಕಾರಕ್ಕೆ ಒಳಪಟ್ಟರು. ಕ್ರಿ.ಶ.೧೬೬೯ರಲ್ಲಿ ಚಾರ್ಲ್ಸ್ ದೊರೆಯು ಇಂಗ್ಲೆಂಡನ್ನು ಪ್ರಜಾಪ್ರಭುತ್ವವೆಂದು ಘೋಷಿಸಿದನು. ಆದರೆ ಆಲಿವರ್ ಕ್ರಾಮ್‌ವೆಲ್‌ನ ಆಳ್ವಿಕೆಯಿಂದ ೧೬೫೮ರಲ್ಲಿ ಈ ಪ್ರಜಾಪ್ರಭುತ್ವವು ಕುಸಿಯಿತು.

೨ನೆಯ ಚಾರ್ಲ್ಸ್ (ಕ್ರಿ.ಶ.೧೬೬೦-೮೫) ಮತ್ತು ೨ನೆಯ ಜೇಮ್ಸ್ (ಕ್ರಿ.ಶ.೧೬೮೫-೮೮) ಸ್ಟುವರ್ಟ್‌ನ ಕುಟುಂಬವನ್ನು ಪುನಃ ಸ್ಥಾಪಿಸಿದರು. ೧೬೮೮ರಲ್ಲಿ ನಡೆದ ಮಹಾಕ್ರಾಂತಿಯಿಂದಾಗಿ ನಿರಂಕುಶ ಪ್ರಭುತ್ವದ ಮೇಲೆ ಪ್ರಜಾಪ್ರಭುತ್ವದ ವಿಜಯ ಸಾಧ್ಯವಾಯಿತು.

ಹಕ್ಕುಗಳ ಸೂಚಿ (ಕ್ರಿ.ಶ.೧೬೮೩) ಮತ್ತು ರಾಜಕೀಯ ಪಕ್ಷಗಳ ಉದಯ

೧೮ನೆಯ ಶತಮಾನದ ಹೊತ್ತಿಗೆ ಇಂಗ್ಲೆಂಡ್‌ನಲ್ಲಿ ಆಧುನಿಕ ರಾಜಕೀಯ ಪಕ್ಷಗಳ ವ್ಯವಸ್ಥೆ ಮತ್ತು ಮಂತ್ರಿಮಂಡಲದ ವ್ಯವಸ್ಥೆಯಿಂದ ಕೂಡಿದ ಒಂದು ನಿಯಮಿತ ರಾಜಪ್ರಭುತ್ವವಿತ್ತು.

ಫ್ರೆಂಚ್ ರಾಜಪ್ರಭುತ್ವ

೧೭ನೆಯ ಶತಮಾನದಲ್ಲಿ ಫ್ರಾನ್ಸ್ ಸಿಂಹಾಸನವನ್ನು ಬೂರ್ಬನ್ ಕುಟುಂಬವು ಪಡೆದುಕೊಂಡಿತು.

೧. ನಾಲ್ಕನೆಯ ಹೆನ್ರಿ(ಕ್ರಿ.ಶ.೧೫೮೯-೧೬೧೦)ಯು ಬಲಶಾಲಿ ಹಾಗೂ ಜನಪ್ರಿಯನಾಗಿದ್ದನು.

೨. ೧೩ನೆಯ ಲೂಯಿ (ಕ್ರಿ.ಶ.೧೬೧೦-೧೬೪೩) ನಿರ್ಬಲ ಹಾಗೂ ಅದಕ್ಷನಾಗಿದ್ದನು.

೩. ೧೪ನೆಯ ಲೂಯಿ (ಕ್ರಿ.ಶ.೧೬೪೩-೧೭೧೫)ಯ ಆಡಳಿತವನ್ನು ಮಜರಿನ್ ನಿಯಂತ್ರಿಸುತ್ತಿದ್ದನು. ಮಜರಿನ್‌ನ ಮರಣಾನಂತರ ೧೪ನೆಯ ಲೂಯಿ ಆಡಳಿತ ವಹಿಸಿಕೊಂಡು ಅಪ್ಪಟ ನಿರಂಕುಶ ಆಳ್ವಿಕೆ ನಡೆಸಿದನು.

೪. ೧೪ನೆಯ ಲೂಯಿಯ ಅಬ್ಬರದ ಪ್ರಭುತ್ವದಲ್ಲಿ ೩೦ ವರ್ಷಗಳ ಕಾಲ ಯುದ್ಧ ನಡೆಸಿದನು.

೫. ೧೫ನೆಯ ಲೂಯಿ (ಕ್ರಿ.ಶ.೧೭೧೫-೧೭೭೪)ಯ ನಿರಂಕುಶ ಪ್ರಭುತ್ವ ಆಳ್ವಿಕೆಯು ಜನ ಬೆಂಬಲವನ್ನು ಕಳೆದುಕೊಂಡಿತು.

೬. ೧೬ನೆಯ ಲೂಯಿಯ (ಕ್ರಿ.ಶ.೧೭೭೪-೧೭೭೫) ಕಾಲದಲ್ಲಿ ೧೭೮೯ರ ಕ್ರಾಂತಿಯ ಮುಖಾಂತರ ಪ್ರಭುತ್ವವು ಕೊನೆಗೊಂಡಿತು.

ರಷ್ಯಾ : ರಷ್ಯಾ ದೇಶವು ಮಸ್ಕಾನಿಮ್ ಸರದಾರರಿಂದ ಬೆಳವಣಿಗೆ ಹೊಂದಿತು. ಅದು ಉತ್ತರಕ್ಕೆ ಬಿಳಿ ಸಮುದ್ರದವರೆಗೂ, ದಕ್ಷಿಣಕ್ಕೆ ಕಾಸ್ಪಿಯನ್ ಸಮುದ್ರದವರೆಗೂ, ಪೂರ್ವಕ್ಕೆ ಸೈಬೀರಿಯಾದವರೆಗೂ ಹಬ್ಬಿತ್ತು. ಹಾಗಾಗಿ ಈ ಸರದಾರರು ಜಾರ್ (ತ್ಸಾರ್) ಎಂಬ ಬಿರುದಿನೊಂದಿಗೆ ಖ್ಯಾತರಾದರು. ಇವರಲ್ಲಿ ಮೊದಲಿಗರು ರೋಮನೋವ್ ಕುಟುಂಬದವರು. ಈ ರೋಮನೋವ್ ಕುಟುಂಬದಲ್ಲಿ ಅಪ್ಪಟ ನಿರಂಕುಶ ಪ್ರಭುವಾದ ಪೀಟರನು ಪ್ರಖ್ಯಾತನಾಗಿದ್ದನು. ಖ್ಯಾತಿಯಲ್ಲಿ ಕ್ಯಾಥರಿನ್‌ಗೆ ನಂತರದ ಸ್ಥಾನ. ಕ್ಯಾಥರೀನ್‌ನ ಆಳ್ವಿಕೆಯಲ್ಲಿ ರಷ್ಯಾ ದೇಶವು ಕಪ್ಪು ಸಮುದ್ರದವರೆಗೂ ವಿಸ್ತಾರಗೊಂಡಿತ್ತು. ಕ್ರಿ.ಶ.೧೭೯೫ರಲ್ಲಿ ಪ್ರಷ್ಯಾವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಯಿತು. ನಂತರ ಇದು ಮೊದಲನೆ ಫ್ರೆಡ್ರಿಕ್ ದೊರೆಯ ಆಳ್ವಿಕೆಯಲ್ಲಿ ಒಂದು ಸ್ವತಂತ್ರ ರಾಜ್ಯವಾಯಿತು.

ಕತ್ತಲಯುಗ

ಭದ್ರವಾಗಿ ನೆಲೆಯೂರಿದ್ದ ಎಲ್ಲಾ ಜರ್ಮನರಿಗಿಂತಲೂ ಫ್ರಾಂಕರೇ ಪ್ರಮುಖವಾಗಿ ಆಡಳಿತ ನಡೆಸುತ್ತಿದ್ದರು. ಆದರೆ ಕಾಲಕ್ರಮೇಣ ಈ ರಾಜ್ಯವು ಬಹುಭಾಗಗಳಾಗಿ ಬೇರ್ಪಟ್ಟವು. ಒಡೆಯರು ನಿರ್ಬಲರಾಗಿದ್ದುದರಿಂದ ಅರಮನೆಯ ಪಾಲಕನೇ ಪ್ರಾಮುಖ್ಯತೆ ಪಡೆದಿದ್ದನು. ಅಧಿಕಾರವು ಆತನ ಮಗನಾದ ಚಾರ್ಲ್ಸ್ ಮಾರೈಲ್‌ಗೆ ಹಸ್ತಾಂತರವಾಯಿತು. ನಂತರ ಆತನ ಮಗನಾದ ಪೆಪಿನ್‌ಗೆ ದೊರೆಯಿತು. ಕೆರೋಲಿಂಗಿಯನ್ ರಾಜವಂಶವೆಂಬ ಹೊಸ ಮನೆತನವನ್ನು ಸ್ಥಾಪಿಸಿದನು. ಆತನ ಮಗನಾದ ಚಾರ್ಲ್ಸ್ ಮ್ಯಾಗ್ನೆ (ಕ್ರಿ.ಶ.೭೪೨-೮೧೪)ಯ ಕಾಲದಲ್ಲಿ ಪೋಪರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಾತುರರಾಗಿದ್ದರು. ಆಗಲೇ ಕ್ರೈಸ್ತ ಪ್ರಪಂಚದಲ್ಲಿ ಟ್ವಾಯ್ ಚಕ್ರಾಧಿಪತ್ಯವು ಸ್ಥಾಪಿತವಾಯಿತು. ಪೂರ್ವಕ್ಕೆ ಕಾನ್‌ಸ್ಟಾಂಟಿನೋಪಲ್‌ನ್ನು ಪಶ್ಚಿಮಕ್ಕೆ ಐಕ್ಸ್‌ನ್ನು ರಾಜಧಾನಿಯಾಗಿಸಿಕೊಂಡರು. ಪೂರ್ವದ ಸಾಮ್ರಾಜ್ಯದಲ್ಲಿ ಬಹಪಾಲು ಬಿಜಾಂಟೈನರು ಎಂದು ಹೇಳುವ ಗ್ರೀಕರೇ ಇದ್ದರು. ಪಶ್ಚಿಮಕ್ಕೆ ಇದ್ದುದು ಪವಿತ್ರ ರೋಮನ್ ಸಾಮ್ರಾಜ್ಯ.

೮ನೆಯ ಶತಮಾನದ ಕೊನೆಗೆ ಈ ಎರಡು ರೋಮನ್ ಸಾಮ್ರಾಜ್ಯಗಳು ಬ್ರಿಟಿಷ್ ದ್ವೀಪಗಳು ಮತ್ತು ಸ್ಪೆಯಿನ್‌ಗಳನ್ನು ಹೊರತುಪಡಿಸಿ ದಕ್ಷಿಣ ಹಾಗೂ ಮಧ್ಯಯುರೋಪಿನ ಬಹಳಷ್ಟು ಭಾಗಗಳನ್ನು ಆಕ್ರಮಿಸಿಕೊಂಡಿತ್ತು.

 

ಪರಾಮರ್ಶನ ಗ್ರಂಥಗಳು

೧. ಜಾಕಬ್ ಮಾರ್ಗರೇಟ್ ಸಿ., ೧೯೮೮. ದಿ ಕಲ್ಚರಲ್ ಮೀನಿಂಗ್ ಆಫ್ ದಿ ಸೈಂಟಿಫಿಕ್ ರೆವಲ್ಯೂಶನ್, ನ್ಯೂಯಾರ್ಕ್

೨. ಸ್ಟೀಫನ್ ಜೆ.ಲೀ., ೧೯೮೮, ಆಸ್ಪೆಕ್ಟ್ಸ್ ಆಫ್ ಯುರೋಪಿಯನ್ ಹಿಸ್ಟರಿ, ಲಂಡನ್: ರೂಟ್ಲೆಜ್.