ಪಾಶ್ಚಿಮಾತ್ಯ ಸಂಸ್ಕೃತಿಯ ಐತಿಹಾಸಿಕ ದಾಖಲೆಗಳನ್ನು ಬಿಟ್ಟು ಹೋಗಿರುವ ಸಂಸ್ಕೃತಿಗಳಲ್ಲಿ ಒಂದಾಗಿದ್ದು ಯಾವ ಕಾರಣಕ್ಕೂ ಅತ್ಯಂತ ಪ್ರಾಚೀನವಾದುದಲ್ಲ. ಪ್ರಾಚೀನ ನಾಗರಿಕತೆಗಳು ಯೂರೋಪನ್ನು ಮತ್ತು ಪಶ್ಚಿಮವನ್ನು ಕೇವಲ ಅಲ್ಪಪ್ರಮಾಣ ದಲ್ಲಿ ಮಾತ್ರ ಮುಟ್ಟಲು ಸಾಧ್ಯವಾಯಿತು ಮತ್ತು ಅವುಗಳೂ ಈಜಿಪ್ಟ್, ಸಮೀಪದ ಪಶ್ಚಿಮ(ಪ್ಯಾಲೆಸ್ಟೈನ್ ಪ್ರದೇಶ) ಮತ್ತು ಚೀನಾದ ನದಿಕಣಿವೆಗಳಲ್ಲಿ ಕೇಂದ್ರಿಕೃತ ಗೊಂಡಿದ್ದವು. ಕ್ರಿ.ಪೂ.೧೦೦೦ದ ಈಚೆಗೆ ಗ್ರೀಕ್ ನಗರ-ರಾಜ್ಯಗಳು ಕಾಣಿಸಿಕೊಂಡಾಗ ‘ಯುರೋಪಿಯನ್’ ಎಂದು ಕರೆಸಿಕೊಳ್ಳುವ ನಾಗರಿಕತೆಯ ಉಗಮವಾಯಿತು. ಗ್ರೀಕರು ತಮ್ಮ ನೆರೆಹೊರೆಯ ನಾಗರಿಕತೆಗಳಿಂದ ಬಹಳಷ್ಟು ಪಡೆದುಕೊಂಡರು. ಆದರೆ ಹಾಗೆ ಪಡೆದುಕೊಂಡ ಅಂಶಗಳನ್ನು ಸೇರಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸುಮಾರು ಇಪ್ಪತ್ತೈದು ಸಾವಿರ ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಸಂಘಟನೆಯ ವಿಚಾರಗಳು, ಹಾಗೂ ಸ್ವರೂಪಗಳು ಮೊದಲಬಾರಿಗೆ ಪುರಾತನ ಗ್ರೀಸಿನಲ್ಲಿ ಕಾಣಿಸಿಕೊಳ್ಳುತ್ತವೆ. ರೋಮನ್ನರು ಮುಂದೆ ಮೆಡಿಟರೇನಿಯನ್ ಭಾಷೆಯಲ್ಲಿ ಮುಖ್ಯ ಜನಾಂಗವಾಗಿ ಗ್ರೀಕರನ್ನು ಅನುಸರಿಸಿದರು. ಅವರು ಕೂಡ ಗ್ರೀಕರಂತೆ, ತಮ್ಮ ಪೂರ್ವಿಕರಿಂದ (ಗ್ರೀಕರು) ಬೇಕಾ ದಷ್ಟು ಪಡೆದುಕೊಂಡರು; ಹಳೆಯದನ್ನು ಹೊಸರೀತಿಯಲ್ಲಿ ಪುನರ್ಸಂಘಟನೆ ಮಾಡಿದರು; ತಮ್ಮದೆ ಆದ ವಿಚಾರಗಳನ್ನು ಅವುಗಳಲ್ಲಿ ಮುಖ್ಯವಾಗಿ ಸರ್ಕಾರ ಪದ್ಧತಿ ಮತ್ತು ಕಾನೂನು ವ್ಯವಸ್ಥೆಯನ್ನು ಸೇರಿಸಿದರು. ರೋಮನ್ ಸಂಸ್ಕೃತಿಯು ಆಧುನಿಕ ಐರೋಪ್ಯ ರಾಷ್ಟ್ರಗಳ ನಾಗರಿಕತೆಯ ನೇರ ಪೂರ್ವಿಕ ಎಂದರೆ ತಪ್ಪಾಗಲಾರದು. ಗ್ರೀಕೊ-ರೋಮನ್ ನಾಗರಿಕತೆಯು ಪಾಶ್ಚಿಮಾತ್ಯವೂ ಅಲ್ಲ, ಐರೋಪ್ಯವು ಅಲ್ಲ, ಅದು ಮೆಡಿಟರೇನಿಯನ್ ಆಗಿದೆ.

ರೋಮನ್ ಸಂಸ್ಕೃತಿಯು ಹೇಗೆ ಗ್ರೀಕ್ ಸಂಸ್ಕೃತಿಯಿಂದ ಪ್ರಭಾವಿತರಾಗಿ ಬೆಳೆದು ರಾಜಕೀಯವಾಗಿ, ಆಡಳಿತಾತ್ಮಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೇರೆ ಬೇರೆ ಆವಿಷ್ಕಾರ ಗಳನ್ನು ಪಡೆಯಿತು ಮತ್ತು ಕ್ರಿ.ಶ.ನಾಲ್ಕು ಮತ್ತು ಐದನೆಯ ಶತಮಾನಗಳಲ್ಲಿ ಅದು ಯಾವ ರೀತಿಯಲ್ಲಿ ತೀವ್ರ ಬಿಕ್ಕಟಿಗೆ ಈಡಾಯಿತು ಎನ್ನುವುದು ಚರ್ಚೆಯ ವಿಷಯವಾಗಿದೆ. ರೋಮನ್ ಸಂಸ್ಕೃತಿಯು, ರೋಮ್ ಸಾಮ್ರಾಜ್ಯದ ಸ್ಥಾಪನೆಯ ನಂತರ ನಾಲ್ಕು ಮತ್ತು ಐದನೆಯ ಶತಮಾನಗಳಲ್ಲಿ ಬರ್ಬರ ಜನಾಂಗಗಳ ತೀವ್ರ ದಾಳಿಗಳಿಗೊಳಗಾಗಿ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಈ ಬಿಕ್ಕಟ್ಟಿನಿಂದ ಹೊರಬರಲಾರದೆ ಪಶ್ಚಿಮ ರೋಮ್ ಸಾಮ್ರಾಜ್ಯ ಪತನವಾಗಿ, ಸಾಂಸ್ಕೃತಿಕ ಏಳಿಗೆ ತೀವ್ರ ಹಿನ್ನಡೆಗೊಂಡದ್ದನ್ನು ಇಲ್ಲಿ ಅವಲೋಕಿಸ ಲಾಗಿದೆ.

ಪಶ್ಚಿಮದ ಡೇರಿಯಸ್‌ನಿಗಾಗಲಿ ಮ್ಯಾಸಿಡೋನಿಯಾದ ಅಲೆಗ್ಸಾಂಡರಿಗಾಗಲಿ ಅಥವಾ ಹೆಲೆನಿಕ್ ರಾಜರುಗಳಿಗಾಗಲಿ ಸಾಧ್ಯವಾಗದೇ ಇದ್ದ ಪುರಾತನ ಪ್ರಪಂಚದ ಏಕೀಕರಣವನ್ನು ಸಾಧಿಸಿದ ಕೀರ್ತಿ ರೋಮಿಗೆ ಸಲ್ಲುತ್ತದೆ. ಡೇರಿಯಸ್ ಅಥವಾ ಅಲೆಗ್ಸಾಂಡರನ ದಿನ ಗಳಲ್ಲಿ ಈ ಕಾರ್ಯವನ್ನು ಸಾಧಿಸಲು ರೋಮ್ ಖಂಡಿತವಾಗಿ ಶಕ್ತವಾಗಿರಲಿಲ್ಲ ಹಾಗೂ ಶಕ್ತವಾಗಿರಲೂ ಸಾಧ್ಯವಿರಲಿಲ್ಲ. ಏಕೆಂದರೆ ರೋಮ್ ಆಗ ಒಂದು ಸಣ್ಣ ನಗರವಾಗಿತ್ತು. ಒಳ್ಳೆಯ ಬಂದರಾಗಲಿ, ಉತ್ತಮ ವಾಣಿಜ್ಯವಾಗಲಿ ಇಲ್ಲದೆ ಇಟಲಿ ಪರ್ಯಾಯ ದ್ವೀಪದ ಒಂದು ಭಾಗವನ್ನು ಮಾತ್ರ ತನ್ನ ಹತೋಟಿಯಲ್ಲಿಟ್ಟುಕೊಂಡಿತ್ತು. ರೋಮಿನ ನಿವಾಸಿಗಳು ಗ್ರೀಕರ ದೃಷ್ಟಿಕೋನದಲ್ಲಿ, ನಿರಕ್ಷರಸ್ಥರೂ ಅಸಂಸ್ಕೃತರೂ ಆಗಿದ್ದರು. ಪಶ್ಚಿಮ ಮೆಡಿಟರೇನಿ ಯನ್ ಭಾಗವು ಹೆಚ್ಚು ಶ್ರೀಮಂತ, ಉನ್ನತ ಸಂಸ್ಕೃತಿಯನ್ನು ಹೊಂದಿದ್ದ ಹಾಗೂ ರೋಮಿನಷ್ಟು ಬಲಶಾಲಿಯಾಗಿದ್ದ ನಗರಗಳನ್ನು ಒಳಗೊಂಡಿತ್ತು. ಆದರೆ ಪೌರ್ವಾತ್ಯ ನಗರಗಳು ಹಾಗೂ ರಾಜ್ಯಗಳು ಮತ್ತಷ್ಟು ಮುಂದುವರಿದಿದ್ದವು. ಈ ವೇಳೆಯಲ್ಲಿ ಆದ ರೋಮಿನ ಅಪೂರ್ವ ಏಳಿಗೆ ಎಲ್ಲಾ ಕಾಲದ ಇತಿಹಾಸಕಾರರಿಗೆ ಒಂದು ಸೋಜಿಗವಾಗಿದೆ. ಗ್ರೀಕ್ ಇತಿಹಾಸಕಾರ ಪೊಲಿಬಿಯಾಸ್‌ನು ರೋಮಿನ ಬೆಳವಣಿಗೆಯನ್ನು ನೋಡಿದವನು. ರೋಮಿನ ವಿಸ್ತರಣೆ ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದ ಪೊಲಿಬಿಯಾಸ್ ಅದಕ್ಕೆ ರಾಜಕೀಯ ಅಂಶಗಳನ್ನು ಕಾರಣವಾಗಿ ನೀಡುತ್ತಾನೆ. ಉತ್ತಮ ಸಂವಿಧಾನದ ಅಸ್ತಿತ್ವ, ತನ್ನ ಮಿತ್ರರಾಜ್ಯಗಳ ರಾಜನಿಷ್ಠೆಯನ್ನು ಉಳಿಸಿಕೊಳ್ಳುವ ಪ್ರಜ್ಞೆ ರೋಮಿನ ಯಶಸ್ಸಿಗೆ ಕಾರಣ ಎನ್ನುತ್ತಾನೆ.

ಇಟಲಿ ಪರ್ಯಾಯ ದ್ವೀಪವು ನಿರ್ದಿಷ್ಟವಾದ ಭೌಗೋಳಿಕ ಇರುವನ್ನು ಪಡೆದಿದ್ದರೂ ಅದರ ಮೇಲೆ ದಾಳಿ ಮಾಡಲು ಎಂದೂ ಕಷ್ಟವಾಗಿರಲಿಲ್ಲ. ರೋಮನ್ನರ ಪೂರ್ವಜನರು ಕ್ರಿ.ಪೂ.೨೦೦೦ರಲ್ಲಿ ರೋಮಿಗೆ ಬಂದಾಗ ಇಟಲಿಯ ಮಿಶ್ರ ಜನಾಂಗದಿಂದ ಕೂಡಿತ್ತು. ಕ್ರಮೇಣವಾಗಿ ರೋಮನ್ನರು ಅವರನ್ನು ತಮ್ಮಲ್ಲಿ ಮೇಳವಿಸಿಕೊಂಡರು.

ಇಟಲಿಯನ್ನು ಗೆದ್ದು ಸಾಗರೋತ್ತರ ವಿಸ್ತರಣೆಯನ್ನು ಮಾಡುತ್ತಾ ರೋಮನ್ನರು ಕ್ರಿ.ಪೂ.೧೪೬ರ ವೇಳೆಗೆ ಇಟಲಿ, ಸಿಸಿಲಿ, ಸಾರ್ಡಿನಿಯಾ, ಕೋರ್ಸಿಕಾ ಹಾಗೂ ಪಶ್ಚಿಮದಲ್ಲಿ ಸ್ಪೆಯಿನ್, ಉತ್ತರ ಆಫ್ರಿಕದ ಕೆಲವು ಭಾಗಗಳು ಹಾಗೂ ಗ್ರೀಸಿನ ಕೆಲವು ಭಾಗಗಳನ್ನು ಗೆದ್ದುಕೊಂಡು ತಮ್ಮ ಆಡಳಿತವನ್ನು ಹೇರಿದರು.

ಆದರೆ ರೋಮ್ ಸಾಮ್ರಾಜ್ಯದ ಸಮಸ್ಯೆಗಳು ಸಾಮ್ರಾಜ್ಯವು ಪೂರ್ಣಗೊಳ್ಳುವ ಬಹಳ ಮೊದಲೇ ಅಸ್ತಿತ್ವದಲ್ಲಿದ್ದವು. ಯಾವ ರೀತಿಯಲ್ಲಿ ನಗರ-ರಾಜ್ಯಗಳು ಸಂಸ್ಥೆಗಳನ್ನು ಈಗ ರೋಮಿನ ಹತೋಟಿಯಲ್ಲಿರುವ ವಿಶಾಲ ಭೂಭಾಗಗಳನ್ನು ಆಳಲು ಉಪಯೋಗಿಸಬೇಕು? ರೋಮಿನ ಜನರು ಹಾಗೂ ರೋಮಿನ ಪ್ರಜೆಗಳ ನಂಟಿಗೆ ಹಾಗೂ ವಿಧೇಯತೆಗಳನ್ನು ಪಡೆದು ಆಳುವ ನಾಯಕರನ್ನು ಹೇಗೆ ಸೃಷ್ಟಿಸಬೇಕು? ಬೃಹತ್ ಕೃಷಿ ಘಟಕಗಳ ಬೆಳವಣಿಗೆ, ಗ್ರಾಮೀಣ ಋಣಭಾದೆ, ವಾಣಿಜ್ಯ ಸುಲಿಗೆಯಾದ ಶತ್ರುಗಳಿಂದ ಹಾಗೂ ಕಪ್ಪಕಾಣಿಕೆ ಕೊಡುವ ಪ್ರಾಂತ್ಯಗಳಿಂದ ಹರಿದು ಬಂದ ಸಂಪತ್ತು ಸಹಸ್ರಾರು ಗುಲಾಮರ ಆಮದು ಇತ್ಯಾದಿಗಳು ಉಂಟುಮಾಡಿದ ತೀವ್ರತರದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳಿಗೆ ರೋಮ್ ಹಾಗೂ ಇಟಲಿಗಳು ಹೇಗೆ ಹೊಂದಿಕೊಳ್ಳಬೇಕು? ಸಾಮ್ರಾಜ್ಯವು ಗಣರಾಜ್ಯವೂ ಆಗಿದ್ದು, ಎಲ್ಲಿ ಪ್ರಧಾನ ಧರ್ಮವಾಗಲಿ, ದೇವ-ಸಾಮ್ರಾಟನಾಗಲಿ ಅಥವಾ ರಾಜ್ಯಮುಖ್ಯಸ್ಥನಾಗಲಿ ಇರಲಿಲ್ಲವೊ ಅಂತಹ ರೋಮಿನಲ್ಲಿ ಹೇಗೆ ವಿಧೇಯತೆಯ ಕೇಂದ್ರಬಿಂದುವನ್ನು ಕಂಡುಹಿಡಿಯಬೇಕು? ಈ ಪ್ರಶ್ನೆಗಳು ಕ್ರೈಸ್ತನ ನಂತರ ಮೊದಲೆರಡು ಶತಮಾನಗಳ ಕಾಲ ರೋಮನ್ನರನ್ನು ಕಾಡಿತು ಮತ್ತು ಅವುಗಳಿಗೆ ಅಂಶಿಕವಾಗಿ ಮಾತ್ರ ಉತ್ತರ ಕೊಡಲು ಅವರಿಗೆ ಸಾಧ್ಯವಾಯಿತು. ಇದರಿಂದುಂಟಾದ ಅತೃಪ್ತಿ, ಅಸಮಾಧಾನ ರೋಮನ್ ಗಣರಾಜ್ಯವನ್ನು ಹಾಗೂ ಅನೇಕತ್ವ ನಾಯಕತ್ವವನ್ನು ನಾಶಮಾಡಿತ್ತಲ್ಲದೆ, ಏಕವ್ಯಕ್ತಿ ನಾಯಕತ್ವದ ಸಾಮ್ರಾಜ್ಯ ಸೃಷ್ಟಿಗೆ ಅವಕಾಶ ಮಾಡಿಕೊಟ್ಟಿತು. ಜೂಲಿಯಸ್ ಸೀಜರ್‌ನಂತಹ ಸೈನಿಕ ನಾಯಕರನ್ನು ಸೃಷ್ಟಿಸಿದ ರೋಮನ್ ಗಣರಾಜ್ಯ ಅಗಸ್ಟಸ್ ಸೀಜರ್‌ನ(ಕ್ರಿ.ಪೂ.೨೭ – ಕ್ರಿ.ಶ.೧೪) ಕಾಲದಲ್ಲಿ ಸಾಮ್ರಾಜ್ಯವಾಗಿ ಸಾಂಸ್ಕೃತಿಕವಾಗಿ ಭೌಗೋಳಿಕ ವಿಸ್ತ್ರೀರ್ಣದಲ್ಲಿ ತನ್ನ ಔನ್ಯತ್ಯವನ್ನು ಮುಟ್ಟಿತ್ತಲ್ಲದೆ ಕ್ರಿ.ಶ.೧೮೦ರವರೆಗೆ ಆ ಪ್ರತಿಷ್ಠೆಯನ್ನು ಕಾಪಾಡಿಕೊಂಡಿತು.

ಕ್ರಿ.ಪೂ.ಎರಡನೆಯ ಶತಮಾನದಲ್ಲಿ ರೋಮನ್ ಸಾಮ್ರಾಜ್ಯವು ಪ್ರಾಚೀನ ಪ್ರಪಂಚವನ್ನು ದೀರ್ಘಕಾಲ ಕಾಡಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡ ಹಾಗೆ ಗೋಚರವಾಯಿತು. ಮೆಡಿಟರೇನಿಯನ್ ಸುತ್ತಮುತ್ತ ವಾಸಿಸುತ್ತಿದ್ದ ಜನಾಂಗಗಳನ್ನು ರಾಷ್ಟ್ರವಾಗಲು ಒಂದುಗೂಡಿಸಿ, ರೋಮನ್ ಸಾಮ್ರಾಜ್ಯವು ವಿಶಾಲ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಒದಗಿಸಿತು. ಆಡಳಿತ ಸುಧಾರಣೆ ಹಾಗೂ ರೋಮನ್ ಪೌರತ್ವದ ನೀಡಿಕೆ, ಇವುಗಳು ಅಧೀನ (ಸೋಲಿಸಲ್ಪಟ್ಟ) ಪ್ರಜೆಗಳಲ್ಲಿ ತಮ್ಮನ್ನು ಸೋಲಿಸಿದ ರೋಮನ್ ನಾಯಕರ ಬಗ್ಗೆ ಇದ್ದ ಸಿಟ್ಟನ್ನು ಕಡಿಮೆಗೊಳಿಸಿತು. ಲಕ್ಷೋಪಲಕ್ಷ ಜನರು ಒಂದೇ ಅಭಿರುಚಿಗಳನ್ನು ಹೊಂದಿದ್ದು ಒಂದೇ ಸಂಸ್ಕೃತಿಯನ್ನು ಹಂಚಿಕೊಳ್ಳತೊಡಗಿದರು. ಅಲ್ಲದೆ ಉದ್ಯಮಶೀಲ ವರ್ತಕರಿಗೆ ಈ ಅಧೀನ ಜನರು ಬೃಹತ್ ಮಾರುಕಟ್ಟೆಯನ್ನು ಒದಗಿಸಿದರು. ಮೂರನೆಯ ಶತಮಾನವು ಈ ಕಾರಣಗಳಿಗೋಸ್ಕರ ಹೆಚ್ಚು ಸಂಪದ್ಭರಿತ ಹಾಗೂ ಶಕ್ತಿಯುತ ರೋಮ್ ಸಾಮ್ರಾಜ್ಯವನ್ನು ಕಾಣಬೇಕಿತ್ತು. ಆದರೆ ಅದು ನಿರಂತರವಾಗಿ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.

ಮೂರನೆಯ ಶತಮಾನದ ಬಿಕ್ಕಟ್ಟಿನ ನಂತರ ಕೂಡ ರೋಮನ್ ಸಾಮ್ರಾಜ್ಯವು ಎರಡು ಮಹತ್ವದ ಸ್ವತ್ತನ್ನು ಹೊಂದಿತ್ತು; ಒಂದು, ಸುವ್ಯವಸ್ಥಿತ ಸೈನ್ಯ, ಇನ್ನೊಂದು ಸಂಘಟಿತ ನೌಕರಶಾಹಿ. ಈ ಎರಡು ಸಂಸ್ಥೆಗಳು ಇನ್ನೊಂದು ಶತಮಾನದವರೆಗೆ ರೋಮನ್ ಪ್ರಪಂಚದಲ್ಲಿ ಶಿಸ್ತು ಮತ್ತು ಏಕತೆಯನ್ನು ಕಾಪಾಡುವಲ್ಲಿ ಯಶಸ್ವಿಯಾದವು. ರೋಮನ್ ರಾಜ್ಯದ ಪುನರುತ್ಥಾನ ನಾಗರಿಕತೆಯ ಇತಿಹಾಸದ ಮೇಲೆ ಮಹತ್ತರ ಪರಿಣಾಮವನ್ನುಂಟುಮಾಡಿತು. ಏಕೆಂದರೆ ನಾಲ್ಕನೆಯ ಶತಮಾನದಲ್ಲಿ ಕ್ರೈಸ್ತಮತವು ಮತ್ತೆ ಒಂದಾದ ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವಾಗಿ ಪಾಶ್ಚಿಮಾತ್ಯ ಪ್ರಪಂಚ ದಲ್ಲಿ ದೃಢವಾದ ನೆಲೆಯನ್ನು ಪಡೆಯಿತು.

ಡಯೋಕ್ಲೇಟನ್ ಹಾಗೂ ಕಾಂನ್‌ಸ್ಟಾಂಟೈನ್ ಇವರ ಕಾಲದಲ್ಲಿ ಮತ್ತೆ ಪ್ರತಿಷ್ಠೆಯನ್ನು ಪಡೆದುಕೊಂಡ ರೋಮ್ ಸಾಮ್ರಾಜ್ಯ, ನಾಲ್ಕನೆಯ ಶತಮಾನದಲ್ಲಿ ಬರ್ಬರ ಜನಾಂಗಗಳ ಬೆದರಿಕೆಯನ್ನು ಎದುರಿಸಬೇಕಾಯಿತು. ಆದರೆ ಕಾಂನ್‌ಸ್ಟಾಂಟೈನ್‌ನ ಉತ್ತಾರಾಧಿಕಾರಿಗಳು ಆಗ ಅವಶ್ಯ ಬೇಕಾಗಿದ್ದ ಸೈನಿಕ ಗುಣಗಳನ್ನು ಹೊಂದಿದ್ದ ಕಾರಣ, ಅವರು ಸಾಮ್ರಾಜ್ಯ ವನ್ನು ಹಿಡಿದಿಟ್ಟು ಅದರ ಗಡಿಗಳನ್ನು ರಕ್ಷಿಸುವುದರಲ್ಲಿ ಯಶಸ್ವಿಯಾದರು.

ರೋಮ್ ಸಾಮ್ರಾಜ್ಯದ ಗಡಿಯಾಚೆಗೆ ಬರ್ಬರ ಜನಾಂಗಗಳ ಪ್ರಪಂಚವಿದ್ದು ಅದು ಯಾವತ್ತು ರೋಮನ್ ನಾಗರಿಕತೆಗೆ ಬೆದರಿಕೆಯಾಗಿತ್ತು. (ನಾಗರಿಕತೆ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ಬಹಳಷ್ಟು ಮುಂದುವರಿದಿದ್ದ ರೋಮನ್ನರಿಗೆ, ಈ ಹೊರಗಿನ ದಾಳಿಕೋರ, ಜರ್ಮನ್ ಜನಾಂಗಗಳು, ತಮ್ಮ ನಡೆ, ನುಡಿ, ಜೀವನ ಶೈಲಿ ಹಾಗೂ ತೋರಿಕೆಯಲ್ಲಿ ಅನಾಗರಿಕರೂ ಹಾಗೂ ಅಸಂಸ್ಕೃತರ ಹಾಗೆ ಕಂಡುಬಂದ ಕಾರಣ ಅವರನ್ನು ಬರ್ಬರ (ಬಾರ್ಬೇರಿಯನ್ಸ್)ರೆಂದು ಕರೆದರು. ರೋಮನ್ ರಾಜಕಾರಣಿಗಳು, ಉತ್ತರ ರೈನ್, ದನುಬೆ ನದಿಗಳ ತಟಗಳಲ್ಲಿ ವಾಸವಾಗಿದ್ದ ಈ ಸಮಾಧಾನಿ ಹಾಗೂ ಯುದ್ಧಕೋರ ಜನಾಂಗಗಳ ಬಗ್ಗೆ ಎಚ್ಚರವನ್ನಿಟ್ಟಿದ್ದರು ಹಾಗೂ ಜೂಲಿಯಸ್ ಸೀಜರ್‌ನ ಕಾಲದಿಂದಲೂ ಇವರನ್ನು ಹಿಂದೂಡಲು ಆಗಾಗ್ಗೆ ಸೈನ್ಯದ ಬಳಕೆಯಾಗುತ್ತಿತ್ತು. ನಾಲ್ಕನೆಯ ಶತಮಾನದವರೆಗೂ ರೋಮನ್ನರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದರು. ಆದರೆ ಸಾಮ್ರಾಜ್ಯದ ಅಧಃಪತನ ಪ್ರಾರಂಭವಾದಾಗ ಅದು ದುರ್ಬಲವಾಗತೊಡಗಿತು. ಮತ್ತು ಬರ್ಬರರ ದಾಳಿಗಳನ್ನು ಹಿಮ್ಮೆಟ್ಟಿಸುವುದು ಬಹಳ ಕಷ್ಟವಾಗತೊಡಗಿತು. ಈ ವೇಳೆಗಾಗಲೇ ಹಲವು ಜರ್ಮನ್ ಜನಾಂಗಗಳು ದೊಡ್ಡ ಸಂಖ್ಯೆಯಲ್ಲಿ ಶಾಂತಯುತವಾಗಿ ಸಾಮ್ರಾಜ್ಯವನ್ನು, ಸಣ್ಣ ಗುಂಪುಗಳಾಗಿ ಸೇರಿ ಸೈನ್ಯದಲ್ಲೊ ಅಥವಾ ಬೃಹತ್ ತೋಟಗಳಲ್ಲೊ ಕೆಲಸ ಮಾಡತೊಡಗಿದರು. ಸಾಮ್ರಾಜ್ಯದೊಳಗಡೆ ನೆಲೆಗೊಂಡ ನಂತರ ಬರ್ಬರ ವಲಸೆಗಾರರು ಕಾಲಕ್ರಮೇಣ ‘ರೋಮನೀಕರಣ’ಗೊಂಡರು. ಅವರ ಸಂಖ್ಯೆ ವೃದ್ದಿಸಿದಂತೆಲ್ಲಾ ಅದು ನಿಸ್ಸಂಶಯವಾಗಿ ರೋಮನ್ ನಾಗರಿಕತೆಯ ಸಾಮಾನ್ಯಮಟ್ಟ ಕೆಳಗಿಳಿಯಲು ಅನುವು ಮಾಡಿಕೊಟ್ಟಿತ್ತು. ರೋಮನ್ ಸಾಮ್ರಾಜ್ಯವು ಬರ್ಬರ ಜನಾಂಗಗಳ ನಿಧಾನಗತಿಯ ನುಸುಳುವಿಕೆಯನ್ನು ತನ್ನಲ್ಲಿ ಜೀರ್ಣಿಸಿಕೊಂಡರೂ ಅವರು ಬೃಹತ್ ಸಂಖ್ಯೆಯಲ್ಲಿ ಸಶಸ್ತ್ರರಾಗಿ ದಾಳಿಯಿಟ್ಟಾಗ, ಇಡೀ ರಾಷ್ಟ್ರಗಳನ್ನು ತನ್ನಲ್ಲಿ ಹೀರಿಕೊಳ್ಳುವ ಸಾಮರ್ಥ್ಯ ವಿಲ್ಲದಾಯಿತು. ಬೃಹತ್ ಪ್ರಮಾಣದ ದಾಳಿಗಳು ಕ್ರಿ.ಪೂ.೩೭೬ರಿಂದ ಪ್ರಾರಂಭವಾಯಿತು. ಆ ವರ್ಷ ವಿಸಿಗೋಥರು ತನುಬೆ ಗಡಿಯನ್ನು ದಾಟಿ ರೋಮ್ ಸಾಮ್ರಾಜ್ಯವನ್ನು ಪ್ರವೇಶಿಸಿದಾಗ, ಇತರ ಬುಡಕಟ್ಟು ಜನಾಂಗಗಳು ಕೂಡ ಉತ್ತರಗಡಿಯ ಎಲ್ಲಾ ಕಡೆಗಳಿಂದ ರೋಮಿನ ಮೇಲೆ ನುಗ್ಗಿಬರಲು ಪ್ರಾರಂಭಿಸಿದರು. ಪ್ರವಾಹದೋಪಾದಿಯಲ್ಲಿ ಬರ್ಬರರು ಉತ್ತರದ ಮುರಿದ ಗಡಿಯನ್ನು ದಾಟಿ ಮುಂದಿನ ನೂರುವರ್ಷಗಳವರೆಗೆ ರೋಮಿನೊಳಗಡೆ ಬರತೊಡಗಿದಾಗ ಆ ಪ್ರವಾಹದಲ್ಲಿ ಪಾಶ್ಚಿಮಾತ್ಯ ಸಾಮ್ರಾಜ್ಯವು ಮುಳುಗಿಹೋಯಿತು.

ಜರ್ಮನ್ ಜನಾಂಗಗಳ ಪ್ರಭಾವ, ಈಗಾಗಲೇ ಕ್ರೈಸ್ತಮತದ ಪ್ರಚಾರದಿಂದಾಗಿ ಮೂಲದಲ್ಲಿ ಬದಲಾಗತೊಡಗಿದ ರೋಮ್ ಸಂಸ್ಕೃತಿಯ ಮೇಲೆ ಬೀಳತೊಡಗಿತು. ಜರ್ಮನರ ಅಥವಾ ಟಿಟಾನ್‌ರ ಮೂಲಸ್ಥಾನವು ಆಧುನಿಕ ಜರ್ಮನಿಯ ಉತ್ತರ ಭಾಗದಲ್ಲಿರುವ ಬಾಲ್ಟಿಕ್ ತೀರ ಮತ್ತು ಸ್ಕಾಂಡಿನೇವಿಯಾ ಪರ್ಯಾಯ ದ್ವೀಪದ ದಕ್ಷಿಣ ಭಾಗದ ಸಮುದ್ರತೀರವಿರಬಹುದೆಂದು ನಿರ್ಧರಿಸಲಾಗಿದೆ. ಅವರ ಜನಸಂಖ್ಯೆ ವೃದ್ದಿಗೊಂಡಂತೆ ನಿಧಾನವಾಗಿ ಪಶ್ಚಿಮದಲ್ಲಿ ಉತ್ತರ ಸಮುದ್ರದವರೆಗೆ, ದಕ್ಷಿಣ, ಆಗ್ನೇಯ ಹಾಗೂ ನೈಋತ್ಯದಲ್ಲಿ ರೈನ್ ಮತ್ತು ದನುಬೆ ನದಿಯವರೆಗೆ ಪ್ರಸರಿಸಿದರು. ಅವರು ಜೂಲಿಯಸ್ ಸೀಜರನ ಕಾಲದಲ್ಲಿ ರೈನ್‌ನ ಉತ್ತರಕ್ಕಿರುವ ಎಲ್ಲಾ ಭೂ ಭಾಗಗಳನ್ನು ಗೆದ್ದುಕೊಂಡರು. ರೋಮನ್ ವ್ಯಾಪಾರದೊಡನೆ ಅವರಿಗಿದ್ದ ಸಂಬಂಧದಿಂದ ಅವರಿಗೆ ಉತ್ತಮವಾದ ಪರಿಕರಗಳು, ಆಯುಧಗಳು ದೊರೆತ ಕಾರಣ ಜೀವನ ನಿರ್ವಹಣೆ ಸುಲಭವಾಗಿ ಜನಸಂಖ್ಯೆ ವೇಗವಾಗಿ ವೃದ್ದಿಸಲು ಕಾರಣವಾಯಿತು. ಸಾಮ್ರಾಜ್ಯದ ಗಡಿಯಾಚೆಗೆ ಜನಸಂಖ್ಯೆಯ ಒತ್ತಡ ಜಾಸ್ತಿಯಾದಂತೆ ಜರ್ಮನ್ನರು ರೋಮಿನೊಳಗಡೆ ಬಂದರಲ್ಲದೆ ಅಲ್ಲಿಯೆ ವೃತ್ತಿನಿರತರಾದರು. ಕಾನ್‌ಸ್ಟಾಂಟ್‌ಟೈನ್‌ನ ವೇಳೆಗೆ ಬರ್ಬರ ಜನಾಂಗಗಳ ಸಂಖ್ಯೆ ಸೈನ್ಯದಲ್ಲಿ ಜಾಸ್ತಿಯಾಯಿತ್ತಲ್ಲದೆ ಮುಂದಿನ ಎರಡು ಶತಮಾನಗಳಲ್ಲಿ ಮುಖ್ಯವಾಗಿ ಪಶ್ಚಿಮದಲ್ಲಿ ಸಾಮ್ರಾಜ್ಯದ ಸೈನ್ಯದಲ್ಲಿ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಹೆಚ್ಚಿನವರು ಜರ್ಮನ್ನರಾಗಿದ್ದರು. ಶಾಂತರೀತಿಯಲ್ಲಿ ಕೃಷಿಕರಾಗಿ ಸಾಮ್ರಾಜ್ಯಕ್ಕೆ ಬಂದವರಲ್ಲಿ ಕೆಲವರಿಗೆ ರಾಜ್ಯವೇ ಭೂಮಿಯನ್ನು ನೀಡಿತು. ಮತ್ತೆ ಕೆಲವರು ಬೃಹತ್ ಖಾಸಗಿ ಎಸ್ಟೇಟ್‌ಗಳಲ್ಲಿ ಗೇಣಿಯಾಳುಗಳಾಗಿ ಸೇರಿಕೊಂಡರು. ಇದರಿಂದಾಗಿ ಅರ್ಧಗುಲಾಮರಾದ ಕೃಷಿ ಕೆಲಸಗಾರರ ಸಂಖ್ಯೆ ವೃದ್ದಿಯಾಯಿತು. ಇನ್ನು ಕೆಲವರು ಬುಡಕಟ್ಟು ಗುಂಪುಗಳಾಗಿ ಮಿತ್ರರಾಗಿ (ಪೊಡೆರಾಟಿ) ಪ್ರವೇಶಿಸಿದಾಗ ಅವರಿಗೂ ಭೂಮಿಯನ್ನು ಕೊಡಲಾಯಿತು ಹಾಗೂ ಭವಿಷ್ಯದ ದಾಳಿಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಅವರು ಸಹಾಯ ಮಾಡಬೇಕೆಂಬ ಷರತ್ತನ್ನು ವಿಧಿಸಲಾಯಿತು. ಬರ್ಬರ ಜನಾಂಗದ ವಲಸೆ ರೋಮನ್ ಸಂಸ್ಕೃತಿಯ ಸಾಮಾನ್ಯಮಟ್ಟವನ್ನು ಕೆಳತಂದರೂ ಬೃಹತ್ ದಾಳಿಗಳಿಂದುಂಟಾಗುವ ಆಘಾತವನ್ನು ಕಡಿಮೆ ಮಾಡಿತು. ಏಕೆಂದರೆ ಈ ವೇಳೆಗಾಗಲೇ ರೋಮನ್ ಪ್ರಾಂತ್ಯಗಳು ಜರ್ಮನ್ ಪದ್ಧತಿಗಳ ಪರಿಚಯವನ್ನು ಮಾಡಿಕೊಂಡಿತ್ತು. ಅಲ್ಲದೆ ಸ್ವಲ್ಪಮಟ್ಟಿಗೆ ರೋಮನೀಕರಣ ಗೊಂಡು ನೆಲೆನಿಂತ ತಮ್ಮದೇ ಜನಾಂಗಗಳನ್ನು ದಾಳಿಕೋರರು ಕಂಡಾಗ ದಾಳಿಗಳ ಹಾಗೂ ಲೂಟಿಯ ತೀವ್ರತೆಯನ್ನು ಕಡಿಮೆ ಮಾಡಿದರು.

ನಾಲ್ಕನೆಯ ಶತಮಾನದಲ್ಲಿ ಕಂಡುಬರುವ ಜರ್ಮನ್ ಬರ್ಬರ ಜನಾಂಗಗಳಲ್ಲಿ ಮುಖ್ಯವಾದುವುವೆಂದರೆ ಫ್ರಾಂಕರು, ಅಲಮನ್ನರು, ಸ್ಯಾಶ್ಸನ್ನ್‌ರು, ಆಂಗ್ಲರು, ಜೂಟರು, ಲರ್ಗುಡಿಯನ್ನರು, ವಂಡಾಲರು, ಲೊಂಬಾರ್ಡರು, ಗೋಥರು-ವಿಸಿಗೋಥರು (ಪಶ್ಚಿಮ ಗೋಥರು) ಹಾಗೂ ಓಸ್ಟ್ರಗೋಥರು (ಪೂರ್ವಗೋಥರು) ಮುಂತಾದವರು. ಕ್ರೈಸ್ತಮತದ ಪ್ರಭಾವಕ್ಕೊಳಗಾದವರು ಇವರಲ್ಲಿ ಕೆಲವರು, ಮುಖ್ಯವಾಗಿ ವಿಸಿಗೋಥರು.

ವಿಸಿಗೋಥರು ನಾಲ್ಕನೆಯ ಶತಮಾನದ ಕೊನೆಯ ಭಾಗದಲ್ಲಿ ರೋಮ್ ಸಾಮ್ರಾಜ್ಯದ ಮೇಲೆ ದಾಳಿಯನ್ನು ಪ್ರಾರಂಭಿಸಿದರು. ಏಷ್ಯಾದ ಬರ್ಬರ ಜನಾಂಗಗಳಲ್ಲೊಂದಾದ ಹೂಣರು ಪಶ್ಚಿಮದ ಕಡೆ ನುಗ್ಗಿದಾಗ ಪೂರ್ವದ ಓಸ್ಟ್ರಗೋಥರು ಸೋತುಹೋದರು. ಮುಂದುವರಿದ ಹೂಣರ ದಾಳಿಯ ಬೆದರಿಕೆಯು ವಿಸಿಗೋಥರನ್ನು ಬಾಧಿಸಿದಾಗ ಅವರು ರೋಮನ್ ಸಾಮ್ರಾಜ್ಯದಲ್ಲಿ ಆಶ್ರಯ ಪಡೆಯಲು ನಿರ್ಧರಿಸಿ ರೋಮನ್ನರಿಂದ ಅನುಮತಿ ಯನ್ನು ಬೇಡಿದಾಗ ಈಗಾಗಲೆ ದುರ್ಬಲರಾಗಿದ್ದ ರೋಮನ್ನರಿಗೆ ನಿರಾಕರಿಸಲು ಸಾಧ್ಯ ವಾಗಲಿಲ್ಲ. ಆದರೆ ಒಳನುಗ್ಗಿದ ವಿಸಿಗೋಥರನ್ನು ರೋಮನ್ನರು ನೆಲೆನಿಲ್ಲಿಸುತ್ತಿದ್ದಂತಹ ಸಂದರ್ಭದಲ್ಲಿ ಆ ಶೋಷಣೆಯಿಂದ ರೋಷಗೊಂಡ ವಿಸಿಗೋಥರು ದಂಗೆ ಎಂದು ಸೂರೆಗೆಯ್ಯಲು ಪ್ರಾರಂಭಿಸಿದರಲ್ಲದೆ ಪೂರ್ವ ರೋಮ್ ಸಾಮ್ರಾಜ್ಯದ ದೊರೆ ವಲೇನ್ಸ್ ನನ್ನು ಹಾಗೂ ಅವರ ಸೈನ್ಯದ ಮೂರನೆಯ ಎರಡು ಭಾಗವನ್ನು ಸಂಹರಿಸಿದರು. ಈ ರೀತಿ ಇತಿಹಾಸದಲ್ಲಿ ಮೊದಲಬಾರಿಗೆ ಅತಿಥಿಗಳಾಗಿ ಬಂದ ಬರ್ಬರರು ಹೆಚ್ಚು ಕಡಿಮೆ ಅಜೇಯರಾಗಿದ್ದ ರೋಮನ್ ಸೈನ್ಯವನ್ನು ನಾಶಮಾಡಿದರು.

ಮುಂದೆ ಪೂರ್ವದ ಸಾಮ್ರಾಟನಾದ ಥಿಯೋಡೊಸಿಯಸನ ಕಾಲದಲ್ಲಿ ಸ್ವಲ್ಪಮಟ್ಟಿಗಿನ ಶಾಂತಿ ಇದ್ದರೂ ಅವನ ನಂತರ ರೋಮನ್ ಸಾಮ್ರಾಜ್ಯವು ಗೊಂದಲದ ಸುಳಿಗೆ ಸಿಕ್ಕಿತು. ವಿಸಿಗೋಥರು ತಮ್ಮ ನಾಯಕ ಅಲಾರಿಕ್‌ನ ನಾಯಕತ್ವದಲ್ಲಿ ಪೂರ್ವ ರೋಮನ್ ಸಾಮ್ರಾಜ್ಯದಲ್ಲಿ ಗಲಭೆ ಎಬ್ಬಿಸಲು ಪ್ರಾರಂಭಿಸಿ ಪಶ್ಚಿಮದತ್ತ ಚಲಿಸಿ ಇಟಲಿಯ ಮೇಲೆ ದಾಳಿನಡೆಸಿದರು ಹಾಗೂ ಸ್ವಲ್ಪ ಕಾಲದಲ್ಲಿ ಅಂದರೆ ಕ್ರಿ.ಶ.೪೧೦ರಲ್ಲಿ ರೋಮ್ ನಗರವನ್ನು ಮುತ್ತಿಗೆ ಹಾಕಿ ಅದನ್ನು ಸಂಪೂರ್ಣ ಸುಲಿಗೆ ಮಾಡಿದರು. ಮತ್ತೊಮ್ಮೆ ರೋಮ್ ಸಾಮ್ರಾಜ್ಯದಲ್ಲಿ ಭೀತಿಯ ಅಲೆ ಸೃಷ್ಠಿಯಾಯಿತು. ಹಲವಾರು ವರ್ಷಗಳಿಂದ ರೋಮ್ ನಗರವು ಸಾಮ್ರಾಜ್ಯದ ನಿಜವಾದ ರಾಜಧಾನಿಯಾಗಿರದಿದ್ದರೂ ಅದು ಸಾಮ್ರಾಜ್ಯದ ಚೆನ್ಹೆಯಾಗಿತ್ತು. ಆದ್ದರಿಂದ ರೋಮಿನ ಪತನ ಸಾಮ್ರಾಜ್ಯದ ಪ್ರತಿಷ್ಟೆಗೆ ಬಿದ್ದ ದೊಡ್ಡ ಹೊಡೆತವಾಗಿತ್ತು(ಪ್ರಾಚೀನ ಧರ್ಮಗಳನ್ನು ಹಾಗೂ ದೇವತೆಗಳನ್ನು ಬಿಟ್ಟು, ಕ್ರೈಸ್ತ ಪಂಥವನ್ನು ಅಪ್ಪಿಕೊಂಡಿದ್ದೆ ರೋಮಿನ ಮೇಲೆ ದಾಳಿ ನಡೆಯಲು ಕಾರಣ ವಾಯಿತು ಎಂಬ ನಂಬಿಕೆ ಹರಡತೊಡಗಿತು. ಸೈಂಟ್ ಆಗಸ್ಟಿನ್‌ನನ್ನು ತನ್ನ ಪುಸ್ತಕ ‘ದೇವರನಗರ’ದಲ್ಲಿ ಮೇಲಿನ ಆರೋಪವನ್ನು ತಳ್ಳಿಹಾಕಿ ಕ್ರೈಸ್ತಮತವನ್ನು ಬಲವಾಗಿ ಸಮರ್ಥಿಸಿಕೊಳ್ಳುವುದನ್ನು ಕಾಣಬಹುದು).

ಅಲಾರಿಕ್‌ನ ಮರಣನಂತರ ವಿಸಿಗೋಥರು ಗಾಲ್ (ಫ್ರಾನ್ಸ್) ಪ್ರದೇಶಕ್ಕೆ ಮುಂದುವರಿ ದರಲ್ಲದೆ ಸ್ಪೆಯಿನ್‌ನಲ್ಲಿದ್ದ ವಂಡಾಲರನ್ನು, ಸಾಮ್ರಾಜ್ಯದ ಮಿತ್ರರಾಗಿ ಸೋಲಿಸಿದರು. ಗಾಲ್‌ನಲ್ಲಿ ವಿಸಿಗೋಥರ ರಾಜ್ಯವು ಮುಂದೆ ಆರನೆಯ ಶತಮಾನದಲ್ಲಿ ಫ್ರಾಂಕರು ಬರುವವರೆಗೂ ಮುಂದುವರಿಯಿತು. ಮತ್ತು ಸ್ಪೆಯಿನ್‌ನಲ್ಲಿ ಮಹಮ್ಮದಿಯರು ಬರುವವರೆಗೆ ಮುಂದುವರಿಯಿತು.

ವಂಡಾಲರು ಪೂರ್ವ ಜರ್ಮನಿಯ ಕಡೆಯಿಂದ ಕ್ರಿ.ಶ.೪೦೬ರಲ್ಲಿ ಸ್ಪೆಯಿನ್‌ಗೆ ನುಗ್ಗಿ ದಾಗ ರೋಮನ್ನರ ಹಾಗೂ ವಿಸಿಗೋಥರ ವಿರೋಧದಿಂದಾಗಿ ಅಲ್ಲಿ ನೆಲೆ ನಿಲ್ಲಲಾಗದೆ, ಉತ್ತರ ಆಫ್ರಿಕದ ಕಡೆ ಪ್ರಯಾಣಿಸಿ ಹಲವು ಪಟ್ಟಣಗಳನ್ನು ಲೂಟಿಗೈದು, ಕಾರ್ಥೇಜನ್ನು ವಶಪಡಿಸಿಕೊಂಡರು. ಇದರಿಂದಾಗಿ ರೋಮನ್ ಸಾಮ್ರಾಜ್ಯವು ಉತ್ತರ ಆಫ್ರಿಕಾದ ತನ್ನ ಪ್ರಾಂತ್ಯಗಳನ್ನು ಅವರಿಗೆ ಬಿಟ್ಟುಕೊಡಬೇಕಾಯಿತು. ನೆಲೆನಿಂತ ವಂಡಾಲರು ಕಾರ್ಥೇಜ್ ಕೇಂದ್ರದಿಂದ ಮೆಡಿಟರೇನಿಯನ್ ತೀರದಲ್ಲಿ ರೋಮನ್ ವ್ಯಾಪಾರವನ್ನು, ಬಂದರು ನಗರಗಳನ್ನು ಕೊಳ್ಳೆ ಹೊಡೆಯ ತೊಡಗಿದರು. ಈ ರೀತಿಯ ವ್ಯವಸ್ಥಿತ ದರೋಡೆಯು ಸಾಮ್ರಾಜ್ಯದಲ್ಲಿ ಕುಸಿಯುತ್ತಿದ್ದ ವ್ಯಾಪಾರಕ್ಕೆ ಮಾರಣಾಂತಿಕ ಹೊಡೆತವನ್ನು ನೀಡಿತು. ಅಲ್ಲದೆ ಆಫ್ರಿಕದಿಂದ ಬರುತ್ತಿದ್ದ ಕಾಳು ಹಾಗೂ ತೆರಿಗೆಗಳು ನಿಂತು ಹೋದ ಕಾರಣ ಮೊದಲೇ ದುರ್ಬಲವಾಗಿದ್ದ ಸಾಮ್ರಾಜ್ಯದ ಖಜಾನೆಯು ಬರಿದಾಗತೊಡಗಿತು. ವಂಡಾಲರ ರಾಜ್ಯವು ಕ್ರಿ.ಶ.೫೩೪ರವರೆಗೆ ಸುಮಾರು ನೂರು ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದು ಜಸ್ಟಿನಿಯನ್‌ನ ಸೈನ್ಯದಿಂದ ನಾಶವಾಯಿತು.

ಸಾಮ್ರಾಜ್ಯದಲ್ಲಿ ಈ ವೇಳೆಗೆ ಪೂರ್ವದಲ್ಲಿ ಹೂಣರ ದಾಳಿಯ ಸಾಧ್ಯತೆ ಹೆಚ್ಚಾಗ ತೊಡಗಿತು. ಅವರ ದೊರೆ ಅಟ್ಟಿಲನ ನಾಯಕತ್ವದಲ್ಲಿ ಕ್ರಿ.ಶ.೪೫೧ರಲ್ಲಿ ಹೂಣರು ಗಾಲ್‌ನ ಮೇಲೆ ದಾಳಿ ನಡೆಸಿದರು. ಇದು ಪಶ್ಚಿಮದಲ್ಲಿ ಭೀತಿಯ ಅಲೆಯನ್ನೆಬ್ಬಿಸಿತು. ಅಟ್ಟಿಲನ ದಾಳಿಯು, ರೋಮನ್ನರು ಹಾಗೂ ಜರ್ಮನ್ ಬರ್ಬರರು ಸಂಘಟಿತರಾಗಲು ಪ್ರೇರೇಪಿಸಿತ್ತಲ್ಲದೆ, ಅಟ್ಟಿಲನನ್ನು ಹಿಮ್ಮಟ್ಟುವಂತೆ ಮಾಡಿತು. ಈ ಸಂಘಟಿತ-ಪ್ರತಿರೋಧದಲ್ಲಿ ರೋಮ್ ಸಾಮ್ರಾಜ್ಯದ ಪರವಾಗಿ ರೋಮನ್ನರ ಮಿತ್ರರು, ಬರ್ಗು ಡಿಯನ್ನರು, ವಿಸಿಗೋಥರು ಪಾಲ್ಗೊಂಡಿದ್ದರು. ಗಾಲ್‌ನಿಂದ ಹಿಮ್ಮೆಟ್ಟಿದ ಅಟ್ಟಿಲ, ಉತ್ತರ ಇಟಲಿಯನ್ನು ಸೂರೆಗೈದನು. ಆದರೆ, ಅಸಹಾಯಕ ರೋಮ್ ನಗರದ ಮೇಲೆ ದಾಳಿ ಮಾಡದೆ ರಾಜಧಾನಿ ಹಂಗೇರಿಗೆ ಹಿಂದಿರುಗಿ ಅಲ್ಲಿಯೇ ಕ್ರಿ.ಶ.೪೫೩ರಲ್ಲಿ ಮರಣಹೊಂದಿದನು.

ಅಟ್ಟಿಲನ ಕಣ್ಮರೆಯಿಂದ ರೋಮನ್ನರು ನೆಮ್ಮದಿಯ ನಿಟ್ಟುಸಿರು ಬಿಟ್ಟರೂ ಆ ನೆಮ್ಮದಿ ಬಹಳ ದಿನಗಳುಳಿಯಲಿಲ್ಲ. ರೋಮನ್ ರಾಜಮನೆತನದಲ್ಲಿ ಉಂಟಾದ ರಾಜಕೀಯ ಗೊಂದಲವು ಉತ್ತರ ಆಫ್ರಿಕಾದ ವಂಡಾಲರನ್ನು ರೋಮಿನ ಮೇಲೆ ದಾಳಿಯಿಡುವಂತೆ ಪ್ರೇರೇಪಿಸಿತು. ವಂಡಾಲರು ಕಾಥೇಜ್‌ನಿಂದ ಸಮುದ್ರದಾಟಿ ಯಾವುದೇ ಪ್ರತಿರೋಧವಿಲ್ಲದೆ ರೋಮ್ ನಗರವನ್ನು ಪ್ರವೇಶಿಸಿ ಅದನ್ನು ಎರಡು ವಾರಗಳ ಕಾಲ ಲೂಟಿ ಮಾಡಿದರು. ಕ್ರೈಸ್ತ ಗುರು ಪೋಪ್ ಒಂದೆನೆಯ ಲಿಯೋನ ಮಧ್ಯ ಪ್ರವೇಶ ದಿಂದಾಗಿ ರೋಮ್ ನಗರದ ನಾಗರಿಕರ ಪ್ರಾಣಕ್ಕೆ ಹಾನಿಯುಂಟಾಗಲಿಲ್ಲ.

ಪಾಶ್ಚಿಮಾತ್ಯ ರೋಮ್ ಸಾಮ್ರಾಜ್ಯ ಈಗ ಪತನದತ್ತ ದಾಪುಗಾಲನಿಕ್ಕತೊಡಗಿತು. ಪ್ರಾಂತ್ಯಗಳಲ್ಲಿ ಉಳಿದಿದ್ದ ರೋಮನ್ ಆಡಳಿತದ ಕುರುಹುಗಳು ಮಾಯವಾಗತೊಡಗಿದವು. ಇಟಲಿಯ ನಿಜವಾದ ಆಡಳಿತಗಾರರಾಗಿ ಬರ್ಬರ ಸೈನ್ಯಾಧಿಕಾರಿಗಳು ಮೇಲೇರತೊಡಗಿದರು. ಬರ್ಬರ ಸೈನ್ಯಾಧಿಕಾರಿಗಳಾಗಿದ್ದ ಸ್ಟಿಲಿಕೋ ಹಾಗೂ ಏಟಿಯಸ್‌ರಿಂದ ಸ್ಫೂರ್ತಿ ಪಡೆದು ಆಳತೊಡಗಿದ ಇವರು, ತಮಗಿಷ್ಟ ಬಂದಂತೆ ಸಾಮ್ರಾಟರನ್ನು ಸೃಷ್ಟಿಸಿ ಬೇಡವೆನಿಸಿದಾಗ ಕಿತ್ತೆಸೆಯತೊಡಗಿದರು. ಅಂತಿಮವಾಗಿ ಕ್ರಿ.ಶ.೪೭೬ರಲ್ಲಿ ದನುಬೆಯ ಉತ್ತರದ ಬರ್ಬರರ ಸೈನ್ಯದ ನಾಯಕನಾಗಿದ್ದ ಒಡವಕಾರ್‌ನು ನಾಮಮಾತ್ರ ಸಾಮ್ರಾಟನಾಗಿದ್ದ ಪಶ್ಚಿಮ ರೋಮ್ ರಾಜ್ಯದ ದೊರೆ ರೊಮ್ಸಲಸ್ ಅಗಸ್ಟಲಸ್‌ನನ್ನು ಕಿತ್ತೆಸೆದು ತಾನೇ ಸರ್ಕಾರ ನಡೆಸತೊಡಗಿದನು. ಆದರೆ ಹೆಸರಿಗೆ ಮಾತ್ರ ಪೂರ್ವ ಸಾಮ್ರಾಜ್ಯದ ದೊರೆಯ ಸಾರ್ವಭೌಮತ್ವವನ್ನು ಒಪ್ಪಿಕೊಂಡನು (ಕಾನ್‌ಸ್ಟಾಂಟಟೈನ್‌ನು ೩೦೭-೩೩೭). ರೋಮ್ ಸಾಮ್ರಾಜ್ಯದ ಪೂರ್ವ ಪ್ರಾಂತ್ಯಗಳ ಮೇಲೆ ಯಶಸ್ವಿಯಾಗಿ ಹತೋಟಿಯನ್ನಿಟ್ಟುಕೊಳ್ಳುವ ಉದ್ದೇಶದಿಂದ ಪ್ರಾಚೀನ ಗ್ರೀಕ್ ನಗರ ಬೈಜಾಂಟಿಯಮ್‌ನ್ನು ಇನ್ನೊಂದು ರಾಜಧಾನಿಯನ್ನಾಗಿ ಮಾಡಿದನು. ಅವನ ಮರಣಾನಂತರ ಬೈಜಾಂಟಿಯಮ್ ಕಾನ್ ಸ್ಟಾಂಟಿನೋಪಲ್ ಎಂದು ಕರೆಯಲ್ಪಟ್ಟು ಪೂರ್ವ ರೋಮ್ ಸಾಮ್ರಾಜ್ಯದ ರಾಜಧಾನಿ ಯಾಯಿತು. ವಾಸ್ತವಿಕವಾಗಿ ಒಡವಕಾರ್‌ನು ಒಬ್ಬ ಸ್ವತಂತ್ರ್ಯ ಆಡಳಿತಗಾರನಾಗಿದ್ದನು. ಈ ರೀತಿ ಪಶ್ಚಿಮದಲ್ಲಿ ರೋಮ್ ಸಾಮ್ರಾಜ್ಯ ಅಸ್ತಂಗತವಾಯಿತು. ರೊಮ್ಸಲಸ್‌ನ ಕಿತ್ತೆಸೆಯುವಿಕೆ ರೋಮ್ ಸಾಮ್ರಾಜ್ಯದ ಪತನವನ್ನು ಸೂಚಿಸುತ್ತದೆ.

ಯೂರೋಪಿನ ಬೇರೆ ಕಡೆಗಳಲ್ಲಿ ಇದೇ ವೇಳೆಗೆ ಕೆಲವು ಬದಲಾವಣೆಗಳಾದವು. ಹೂಣರ ದಾಳಿಯ ಬೆದರಿಕೆ ಕಡಿಮೆಯಾದಂತೆ ಪೂರ್ವದಲ್ಲಿದ್ದ ಒಸ್ಟ್ರೊಗೋಥರು ಅವರ ನಾಯಕ ಥಿಯೋಡೋರಿಕ್‌ನ ನಾಯಕತ್ವದಲ್ಲಿ ರೋಮಿನ ಮೇಲೆ ದಾಳಿ ಮಾಡಿದರು ಮತ್ತು ರೋಮಿನ ನಾಯಕ ಒಡವಕಾರನನ್ನು ಕೊಂದು ಕ್ರಿ.ಶ.೪೮೯ರಲ್ಲಿ ಇಟಲಿಯ ಮೇಲೆ ತಮ್ಮ ಪ್ರಭುತ್ವವನ್ನು ಸಾಧಿಸಿದರು. ಥಿಯೋಡೋರಿಕ್‌ನು ಸುಮಾರು ಮೂವತ್ತಮೂರು ವರ್ಷಗಳ ಕಾಲ ಇಟಲಿಗೆ (ಪಶ್ಚಿಮ ರೋಮ್ ಸಾಮ್ರಾಜ್ಯಕ್ಕೆ) ನ್ಯಾಯಪರ ಹಾಗೂ ಸೌಮ್ಯ ಸರ್ಕಾರವನ್ನು ಒದಗಿಸಿದನು. ಅವನ ನಾಯಕತ್ವದಲ್ಲಿ ಶಾಂತಿ, ಭದ್ರತೆ ಹಾಗೂ ಆರ್ಥಿಕ ಪುನರುಜ್ಜೀವನವನ್ನು ರೋಮ್ ಕಂಡಿತು. ಓಸ್ಟೊಗೋಥರ ರಾಜ್ಯವು ಮುಂದೆ ಜಸ್ಟಿನಿಯನ್‌ನ ದಾಳಿಯಿಂದ ನಾಶವಾಯಿತು.

ಇದೇ ವೇಳೆಗೆ, ಬಹಳಷ್ಟು ಸಮಯ, ಯೂರೋಪಿನ ಮುಖ್ಯವಾಹಿನಿಯಿಂದ ದೂರ ವಿದ್ದ ಬ್ರಿಟಿನ್‌ನಿಂದ ರೋಮನ್ನರು ಕ್ರಿ.ಶ.ಐದನೆಯ ಶತಮಾನದಲ್ಲಿ ತಮ್ಮ ಸೈನ್ಯವನ್ನು ಗಾಲ್ ಹಾಗೂ ಇಟಲಿಯ ರಕ್ಷಣೆಗಾಗಿ ವಾಪಾಸು ಕರೆಸಿಕೊಂಡಾಗ ಬ್ರಿಟನ್ನರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಯಿತು. ಮುಂದಿನ ಎರಡು ಶತಮಾನಗಳಲ್ಲಿ ಈ ದ್ವೀಪವು ರೋಮನ್ನರ ಅರಿವಿಗೆ ನಿಲುಕದಂತೆ, ಉತ್ತರ ಪೂರ್ವ ಜರ್ಮನ್ ರಾಷ್ಟ್ರಗಳ ಅಂದರೆ ಜೂಟರು, ಆಂಗ್ಲರು ಹಾಗೂ ಸ್ಯಾಕ್ಸನ್ನ್‌ರ ದಾಳಿಗೊಳಗಾಗಿ ಇಂಗ್ಲಿಷ್ ಜನರ ಅಸ್ತಿತ್ವಕ್ಕೆ ಅಡಿಗಲ್ಲು ಹಾಕಲ್ಪಟ್ಟಿತು. ಆದರೆ ಅದುವರೆಗೆ ರೋಮನೀಕರಣಕ್ಕೊಳಗಾಗಿದ್ದ ಸೆಲ್ಟರು ಒಂದೊ ನಾಶವಾದರು ಇಲ್ಲವೆ ವೇಲ್ಸ್ ಮತ್ತು ಕಾರ್ನ್‌ವಾಲ್‌ಗೆ ಓಡಿಸಲ್ಪಟ್ಟರು. ಅವರ ಪ್ರಭಾವ ಯಾವುದೇ ರೀತಿಯಲ್ಲಿ ದಾಳಿಕೋರರ ಧರ್ಮ, ಭಾಷೆ ಅಥವಾ ಸ್ವಭಾವಗಳ ಮೇಲೆ ಬೀಳಲಿಲ್ಲ. ಈ ರೀತಿ ಇಂಗ್ಲೆಂಡಿನ ಮೇಲಿನ ಬರ್ಬರರ ದಾಳಿ ಇತರರ ದಾಳಿ ಗಳಿಗಿಂತ ಹೆಚ್ಚು ಯಶಸ್ವಿಯಾಯಿತು.

 

ಪ್ರಾಂಕರು ಬರ್ಬರ ಜನಾಂಗಗಳಲ್ಲಿ ಅತ್ಯಂತ ಪ್ರಮುಖರಾದವರು. ಐದನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಒಗ್ಗೂಡಿದ ಪ್ರಾಂಕ್ ಬುಡಕಟ್ಟು ಜನಾಂಗಗಳು ಗಾಲ್‌ನ ಮೇಲೆ ದಾಳಿ ಪ್ರಾರಂಭಿಸಿ ಆರನೆಯ ಶತಮಾನದ ಆರಂಭದಲ್ಲಿ ಮುಕ್ತಾಯಗೊಳಿಸಿದವು.

ಉಪಸಂಹಾರ

ಐದನೆಯ ಶತಮಾನದ ಕೊನೆಯ ಭಾಗದಲ್ಲಿ ಪಾಶ್ಚಿಮಾತ್ಯ ಯುರೋಪಿನಲ್ಲಿ ರೋಮನ್ ಸರ್ಕಾರವು ಸಂಪೂರ್ಣವಾಗಿ ಮಾಯವಾಯಿತು ಮತ್ತು ಅದರ ಸ್ಥಾನವನ್ನು ಬೇರೆ ಬೇರೆ ಬರ್ಬರ ರಾಜ್ಯಗಳು ಆಕ್ರಮಿಸಿದವು. ಒಸ್ಟ್ರೊಗೋಥರು ಇಟಲಿಯನ್ನು, ವಂಡಾಲರು ಉತ್ತರ ಆಫ್ರಿಕವನ್ನು, ಅಂಗ್ಲೋ ಸ್ಯಾಕ್ಸನ್ನ್‌ರು ಬ್ರಿಟನ್‌ನನ್ನು, ವಿಸಿಗೋಥರು ನೈಋತ್ಯ ಗಾಲ್ ಹಾಗೂ ಸ್ಪೆಯಿನ್‌ನ್ನು, ಬರ್ಗುಡಿಯನ್ನರು ಆಗ್ನೆಯ ಗಾಲನ್ನೂ, ಪ್ರಾಂಕರು ಉಳಿದ ಗಾಲ್ ಪ್ರದೇಶವನ್ನು ಆಳತೊಡಗಿದರು. ಇವರಲ್ಲಿ ಕೇವಲ ಪ್ರಾಂಕರು ಹಾಗೂ ಆಂಗ್ಲೊ-ಸ್ಯಾಕ್ಸನ್‌ರು ಮಾತ್ರ ತಮ್ಮ ಪ್ರದೇಶಗಳ ಮೇಲೆ ಹತೋಟಿಯನ್ನುಳಿಸಿ ಕೊಂಡರು. ಉಳಿದವರು ಕ್ರಮೇಣವಾಗಿ ತಮ್ಮ ರಾಜಕೀಯ ಅನನ್ಯತೆಯನ್ನು, ಕೆಲವು ಬಾರಿ ಜನಾಂಗೀಯ ಪ್ರತ್ಯೇಕತೆಯನ್ನು ಕೂಡ ಕಳೆದುಕೊಂಡು ತಾವು ಯಾರ ಮಧ್ಯೆ ವಾಸಿಸುತ್ತಿದ್ದರೊ ಅವರಲ್ಲಿ ಕರಗಿ ಹೋದರು.

ಕ್ರಿ.ಶ.೪೭೬ರಲ್ಲಿ ನಡೆದ ಪಶ್ಚಿಮ ರೋಮ್ ಸಾಮ್ರಾಟನ ಉಚ್ಛಾಟನೆಯನ್ನು ಸಾಮ್ರಾಜ್ಯದ ಪತನದೊಡನೆ ಸಮೀಕರಿಸಲಾಗಿದೆ. ಆದರೆ ಇತಿಹಾಸಕಾರರ ಅಭಿಪ್ರಾಯ ಅರ್ಥಹೀನವಾದುದು. ಏಕೆಂದರೆ ಪಶ್ಚಿಮದಲ್ಲಿ ಪತನವಾಗಲು ಏನೂ ಉಳಿದಿರಲಿಲ್ಲ ಮತ್ತು ಪೂರ್ವದಲ್ಲಿ ಸಾಮ್ರಾಜ್ಯವು ಶಕ್ತಿಶಾಲಿಯಾಗಿ ಉಳಿದು ಬೆಳೆಯಿತು. ಆದರೂ ಲ್ಯಾಟಿನ್ ಮಾತನಾಡುತ್ತಿದ್ದ ಸಾಮ್ರಾಜ್ಯದ ಭಾಗ, ಜರ್ಮನ್ ಆಳ್ವಿಕೆಗೆ ಒಳಪಟ್ಟಾಗ ಇತಿಹಾಸದಲ್ಲಿ ಒಂದು ಮುಖ್ಯ ಘಟ್ಟ ಆರಂಭವಾಯಿತು. ಸರ್ಕಾರ ಮತ್ತು ಕಾನೂನುಗಳ ಮೂಲತತ್ವಗಳು ಲ್ಯಾಟಿನ್ ಪಶ್ಚಿಮದಿಂದ ಬಂದಿತು. ಒಂದು ಸಾಮ್ರಾಜ್ಯ, ಯಾವುದು ಹೆಚ್ಚಾಗಿ ಗ್ರೀಕ್ ಆಗಿತ್ತೊ, ಅದು ರೋಮನ್ ಸಾಮ್ರಾಜ್ಯವಾಗಿರಲು ಸಾಧ್ಯವಿರಲಿಲ್ಲ. ಲ್ಯಾಟಿನ್ನರು ಜರ್ಮನ್ನರ ಆಳ್ವಿಕೆಯಲ್ಲಿ ಬರ್ಬರದ ಸಂಸ್ಕೃತಿಯನ್ನು ಅಳವಡಿಸಿಕೊಂಡರು. ಅದೇ ಪೂರ್ವ ರೋಮನ್ ಸಾಮ್ರಾಜ್ಯದ ಗ್ರೀಕರು ಹೆಚ್ಚುಹೆಚ್ಚು ಏಷ್ಯಾದ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದರು. ಹೀಗಾಗಿ ರೋಮನ್ ಪ್ರಪಂಚದ ಎರಡು ಭಾಗಗಳು, ಒಂದರಿಂದ ಇನ್ನೊಂದು ದೂರ ದೂರ ಕೊಚ್ಚಿ ಹೋಗಿ ಪೂರ್ವ ಮತ್ತು ಪಶ್ಚಿಮ ಎಂದು ಎರಡು ಹೋಳಾದವು.

ಹಾಗಾದರೆ, ಸಾಮ್ರಾಜ್ಯದಲ್ಲಿ ಆವಿರ್ಭವಿಸಿದ್ದ ಸಂಸ್ಕೃತಿಯು ಪಶ್ಚಿಮದಲ್ಲಿ ಏಕೆ ನಾಶವಾಯಿತು? ಮತ್ತು ಪೂರ್ವದಲ್ಲೇಕೆ ಉಳಿಯಿತು? ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಪೂರ್ವ ಸಾಮ್ರಾಜ್ಯವು ಕೂಡ ಒಂದೇ ರೀತಿಯ ಸಾಮಾಜಿಕ ರೋಗಗಳಿಂದ ನರಳುತಿತ್ತು. ಒಟ್ಟಾರೆ ಹೇಳುವುದಾದರೆ, ಪೂರ್ವದ ಸಾಮ್ರಾಜ್ಯಕ್ಕೆ ಭೌಗೋಳಿಕ ಅಂಶಗಳು, ಆರ್ಥಿಕ ಹಾಗೂ ಆಧ್ಯಾತ್ಮಿಕ ಅಂಶಗಳ ನೆರವು, ಪಶ್ಚಿಮಕ್ಕಿಂತ ಹೆಚ್ಚಿತ್ತು. ಪರ್ಶಿಯಾವು ತಟಸ್ಥವಾಗಿದ್ದು, ಏಷ್ಯಾಮೈನರ್, ಸಿರಿಯಾ ಹಾಗೂ ಈಜಿಪ್ಟ್‌ಗಳು ಕಾಂನ್‌ಸ್ಟಾಂಟಿನೋಪಲ್ ನಿಂದ ರಕ್ಷಿತವಾಗಿದ್ದವು. ಕ್ರೈಸ್ತ ಧರ್ಮದ ಹರಡುವಿಕೆ ಕೂಡ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು ಜನರಲ್ಲಿ ಧಾರ್ಮಿಕ ಕಾಳಜಿಯನ್ನುಂಟು ಮಾಡಿತು.

ಆದರೆ ಪೂರ್ವ ಸಾಮ್ರಾಜ್ಯವು ಬಹಳಷ್ಟು ದಿನ ಬರ್ಬರರ ದಾಳಿಯಿಂದ ತಪ್ಪಿಸಿ ಕೊಳ್ಳಲು ಆಗಲಿಲ್ಲ. ಮುಂದೆ ಅರಬ್ಬರ ಮಹಾದಾಳಿಗಳು ಅದನ್ನು ದುರ್ಬಲ ಗೊಳಿಸಿದವು. ಇಲ್ಲಿದ್ದ ಮೂಲ ಸಮಸ್ಯೆಯೆಂದರೆ ಸಾಮ್ರಾಜ್ಯದ ಬಹಳ ಕಡಿಮೆ ನಾಗರಿಕರು ತಮ್ಮ ಪ್ರಾಚೀನ ನಾಗರಿಕತೆಯು ರಕ್ಷಣೆಗೆ ಅರ್ಹವೆಂದು ಭಾವಿಸಿದ್ದರು. ಹಾಗೆ ನೋಡಿದರೆ ದಾಳಿಕೋರರ ಒಟ್ಟು ಸಂಖ್ಯೆ ಎಂದೂ ರೋಮನ್ನರ ಒಟ್ಟು ಸಂಖ್ಯೆಯನ್ನು ಮೀರಿರಲಿಲ್ಲ. ಅದು ಸಾಧ್ಯವೂ ಇರಲಿಲ್ಲ. ದಾಳಿಕೋರರು ಅಲ್ಪ ಸಂಖ್ಯಾತರಾಗಿದ್ದರು. ಆದುದರಿಂದ ರೋಮ್ ಸಾಮ್ರಾಜ್ಯದ ಪತನ ಕ್ರಿ.ಶ.೪೭೬ರ ಒಂದು ರಾಜಕೀಯ ಉಪಕಥೆಯಲ್ಲ. ಅದು ಬದಲು ನಾಗರಿಕತೆಯ ಇತಿಹಾಸದಲ್ಲಿ ಒಂದು ಭೀಕರ ಬಿಕ್ಕಟ್ಟು ಎನ್ನಬಹುದು.

 

ಪರಾಮರ್ಶನ ಗ್ರಂಥಗಳು

೧. ಡೆವಿಸ್ ನಾರ್ಮನ್. ೧೯೯೬. ಯುರೋಪ್ ಎ ಹಿಸ್ಟರಿ, ಆಕ್ಸ್‌ಫರ್ಡ್.

೨. ಎಡ್ವಡ್ ಗಿಬ್ಬನ್, ಡಿಕ್ಲೈನ್ ಆ್ಯಂಡ್ ಫಾಲ್ ಆಫ್ ದಿ ರೋಮನ್ ಎಂಪೈರ್, ಲಂಡನ್.