ಯುರೋಪಿನ ನವ ಶಿಲಾಯುಗ ಕಾಲ

ಸಾಂಪ್ರದಾಯಿಕವಾಗಿ ಯುರೋಪಿನ ನವಶಿಲಾಯುಗ ಬೆಳೆಗಳನ್ನು ಬೆಳೆದಿದ್ದು   ಪ್ರಾಣಿಗಳನ್ನು ಪಳಗಿಸುವುದರೊಂದಿಗೆ ಎಂದು ವಿವರಿಸಲಾಗಿದೆ. ಈ ಕಾಲದ ಸಂಸ್ಕೃತಿಯ ಪ್ರಮುಖ ಲಕ್ಷಣಗಳೆಂದರೆ, ಮಡಿಕೆ ಕುಡಿಕೆಗಳ ತಯಾರಿಸುವಿಕೆ, ನುಣುಪಾದ ಕಲ್ಲಿನ ಆಯುಧಗಳ ಗಳಿಕೆ, ವಸ್ತುಗಳ ಹೆಚ್ಚಳ ಮತ್ತು ಜನಸಂಖ್ಯಾಭಿವೃದ್ದಿ ಆಗಿದೆ. ಒಟ್ಟಾರೆ ಬಹಳ ಅಲ್ಪ ಕಾಲದಲ್ಲಿ ಹಲವು ಬದಲಾವಣೆಗಳನ್ನು ಈ ಯುಗದಲ್ಲಿ ನೋಡುತ್ತೇವೆ.

ಆ ಕಾಲದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಲು ಯುರೋಪ್ ಖಂಡ ವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.

ಎ. ಆಗ್ನೇಯ ಯುರೋಪ್

ಬಿ. ಉತ್ತರ ಯುರೋಪ್ ಮತ್ತು ಅಲ್ಪೈನ್ ವಲಯ

ಸಿ. ಮಧ್ಯ ಯುರೋಪ್

ಡಿ. ಪಶ್ಚಿಮ ಯುರೋಪ್

ಆಗ್ನೇಯ ಯುರೋಪ್ : ಯುರೋಪಿನ ನವಶಿಲಾಯುಗದ ಸಮುದಾಯಗಳು ಮೊದಲು ಗ್ರೀಸ್, ಬಾಲ್ಕನ್ ಮತ್ತು ಆಗ್ನೇಯ ಭಾಗಗಳಲ್ಲಿ ತಲೆದೋರಿದವು. ಉತ್ತರ ಪೂರ್ವದಲ್ಲಿ  ಸಸ್ಯಕೃಷಿ ಮತ್ತು ಪ್ರಾಣಿಗಳನ್ನು ಪಳಗಿಸಿದ ಕೇಂದ್ರಗಳಿಗೆ ಮೇಲಿನ ಪ್ರದೇಶಗಳು ನಿಕಟ ಸಂಪರ್ಕ ಹೊಂದಿದ್ದವು. ಮೇಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ಪ್ರಾರಂಭದ ವ್ಯವಸಾಯವನ್ನು ಇಂದಿನ ಆರು ಸಾವಿರ ವರ್ಷಗಳ ಹಿಂದಕ್ಕೆ ಕೊಂಡೊಯ್ಯಲಾಗಿದೆ. ಈ ಪ್ರದೇಶದಲ್ಲಿ ಮೊದಲು ಬೆಳೆದ ಬೆಳೆಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ಅಂತೋಲಿಯ ದಿಂದ ತರಲಾಗಿತ್ತು. ಉದಾಹರಣೆಗೆಹರಣೆಗೆ ಎಮ್ಮರ್, ಗೋಧಿ, ಆಡು ಮತ್ತು ಕುರಿ. ಇಲ್ಲಿ ಮೊದಲು ತಯಾರಿಸಿದ ಮಡಿಕೆ ಕುಡಿಕೆಗಳಲ್ಲೂ ಹತ್ತಿರ ಪೂರ್ವದೊಂದಿಗೆ  ಹೋಲಿಕೆ ಕಂಡುಬಂದಿದೆ. ಈ ಮೂಲಕ ವಸ್ತುಗಳನ್ನು ವಲಸೆ ಬಂದ ಜನ ಇಲ್ಲಿಗೆ ತಂದರೆ? ಅಥವಾ ಇಲ್ಲಿಯ ಮೂಲ ನಿವಾಸಿಗಳು ಅವುಗಳನ್ನು ಅಳವಡಿಸಿಕೊಂಡರೆ? ಎಂಬುದು ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆಗಳಾಗಿದೆ. ಆದರೆ ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಸ್ಥಳೀಯ ಅಳವಡಿಕೆಯ ವಾದವನ್ನು ಆಧಾರ ಗಳೊಂದಿಗೆ ದೃಢಪಡಿಸುತ್ತವೆ.

ಆಗ್ನೇಯ ಯುರೋಪಿನ ನವಶಿಲಾಯುಗದ ಸಮುದಾಯಗಳು ಬಿಸಿಲಿನಲ್ಲಿ ಒಣಗಿಸಿ ಮಾಡಿದ ಮಣ್ಣಿನ ಇಟ್ಟಿಗೆಗಳು ಆಯತಾಕಾರದಲ್ಲಿ ಕಟ್ಟಿದ ಮನೆಗಳಲ್ಲಿ ವಾಸಿಸುತ್ತಿದ್ದರು. ಈ ಮೊದಲು ತಿಳಿಸಿರುವಂತೆ ಆಗ್ನೇಯ ಯುರೋಪಿನ ನವಶಿಲಾಯುಗದ ನೆಲೆಗಳು ಕ್ರಿ.ಪೂ.೭೦೦೦ ವರ್ಷಗಳ ಹಿಂದೆ ಅಸ್ಥಿತ್ವದಲ್ಲಿದ್ದವು ಅಥವಾ ಇನ್ನು ಸ್ವಲ್ಪ ಹಿಂದೆಯೇ ಅಸ್ಥಿತ್ವದಲ್ಲಿದ್ದರಲಿಕ್ಕೂ ಸಾಕು. ಭೌಗೋಳಿಕವಾಗಿ ಮತ್ತು ಕಾಲಮಾನದ ದೃಷ್ಟಿಯಿಂದ ಯುರೋಪಿನ ಉಳಿದ ಪ್ರದೇಶಗಳಲ್ಲಿ ನವಶಿಲಾಯುಗದ ಈ ಲಕ್ಷಣಗಳು ಪ್ರಸರಿಸುವುದರಲ್ಲಿ ಅದು ಮೊದಲಿನದಾಗಿತ್ತು. ಆದರೆ ನವಶಿಲಾಯುಗದ ವಸಾಹತೀಕರಣದ ಪ್ರಕ್ರಿಯೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿತ್ತು.

ನವಶಿಲಾಯುಗದ ಸಂಸ್ಕೃತಿಯ ಅಂಶಗಳು ಯುರೋಪಿನಾದ್ಯಂತ ಹರಡುವುದರಲ್ಲಿ ಎರಡು ಪ್ರಮುಖ ಮಾರ್ಗಗಳನ್ನು ಗುರುತಿಸಬಹುದು. ಜನುಬಿ ಮತ್ತು ರೈನ್ ನದಿಗಳ ಕಣಿವೆಗಳ ಮುಖೇಣ (ಮಧ್ಯಯುರೋಪ್) ಹರಡಿದ್ದು ಒಂದು ಮಾರ್ಗವಾದರೆ, ಮತ್ತೊಂದು ಮಾರ್ಗ ದಕ್ಷಿಣ ತೀರದ ಮುಖೇನ ಮೆಡಿಟರೇನಿಯನ್ ಪ್ರದೇಶದ ಸ್ಥಳೀಯ ಸಮುದಾಯಗಳಲ್ಲಿ. ಬಂದರ್ ಮಿಕ್ ರೈತರು ಮಾಡಿದ ವಸಾಹತೀಕರಣ ಮೊದಲ ಮಾರ್ಗದೊಂದಿಗೆ ಸಮೀಕರಿಸಬಹುದಾಗಿದೆ. ಎರಡನೆ ಮಾರ್ಗದ ಮುಖೇನ ಸಾಕುಪ್ರಾಣಿಗಳು ಮತ್ತ ಕೃಷಿ ಮಾಡಿದ ಸಸ್ಯಗಳ ಹರಡುವಿಕೆ ಹಾಗೂ ಅಚ್ಚು ಗುರುತಿನ  ಮಡಿಕೆಗಳನ್ನು ಉದಾಹರಣೆಗೆಹರಿಸಬಹುದು.

ಬಂದರ್‌ಮಿಕ್ ಕೃಷಿಕರು

ಯುರೋಪಿನ ಆಗ್ನೇಯ ಭಾಗದ ದನುಬಿ ನದಿಕಣಿವೆ ಮತ್ತು ಹಂಗೇರಿಯನ್ ಬಯಲುಗಳಲ್ಲಿ ಕ್ರಿ.ಪೂ.೬೦೦ರ ಹೊತ್ತಿಗೆ ಮಡಿಕೆ ಕುಡಿಕೆಗಳು ಮತ್ತು ನವಶಿಲಾಯುಗದ ಇತರ ಲಕ್ಷಣಗಳು, ಕೃಷಿ ಆಧಾರಿತ ನೆಲೆಗಳಲ್ಲಿ ಸ್ಪಷ್ಟವಾಗಿ ಬೇರೂರಿರುವುದು ತಿಳಿಯು ತ್ತದೆ. ಈ ಸಂಸ್ಕೃತಿಯನ್ನು ಡನೂಬಿಯನ್ನರ ಸಂಸ್ಕೃತಿ ಎಂದು ಕರೆಯುತ್ತಾರೆ. ಮಧ್ಯ ಯುರೋಪಿನ ಈ ಕೃಷಿ ಆಧಾರಿತ ನೆಲೆಗಳನ್ನು ಆ ಜನರು ಮಡಿಕೆಗಳ ಮೇಲೆ ಗೀರಿ ಅಲಂಕರಿಸಿದ ಬಂಡರ್‌ಮಿಕ್ ಹೆಸರಿನಿಂದಲೇ ಗುರುತಿಸಲಾಗಿದೆ. ಈ ಸಂಸ್ಕೃತಿಯು ಮಧ್ಯ ಯುರೋಪಿನ ಪ್ರಮುಖ ನದಿ ಕಣಿವೆಗಳಲ್ಲಿ ಶೀಘ್ರವಾಗಿ ಹಬ್ಬುವುದರ ಜೊತೆಗೆ ಬಂದರ್‌ಮಿಕ್ ರೈತರು ಪೂರ್ವ ಫ್ರಾನ್ಸ್ ಮತ್ತು ಕೆಳಗಿನ ಪ್ರದೇಶಗಳಲ್ಲಿ ನೆಲೆಯೂರಿದರು. ಈ ಸಂಸ್ಕೃತಿ ದೊರೆತರೆಲ್ಲ ಅದು ಏಕರೂಪವಾಗಿರು ವುದರೊಂದಿಗೆ ಈ ಸಂಸ್ಕೃತಿಯನ್ನು ಆಗ್ನೇಯ ಪ್ರದೇಶದ ರೈತರ ವಸಾಹತುಕರಣದ ಚಲನೆಯೆಂದು ವಿವರಿಸಲಾಗಿದೆ.

ಈ ಕೃಷಿಕರು ಈಗಿನ ಕಾಲದ ದೊಡ್ಡ ಹಳ್ಳಿಗಳನ್ನು ಹೋಲುವಂತಹ ಸಮುದಾಯಗಳಲ್ಲಿ ವಾಸಿಸುತ್ತಿದ್ದರು. ಅವರ ಮನೆಗಳು ತಳಪಾಯದಲ್ಲಿ ಆಯತಾಕಾರವಾಗಿದ್ದು ೩೦ ರಿಂದ ೪೦ ಮೀಟರ್ ಉದ್ದವಾಗಿರುತ್ತಿತ್ತು. ಹಿಂದಿನ ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಯ ಜಾಗ ದಲ್ಲಿ ಮರದಿಂದ ಕಟ್ಟಿದ ಹುಲ್ಲಿನ ಚಾವಣಿಗಳನ್ನು ಹೊಂದಿದ ಮನೆಗಳು ಕಂಡುಬಂದವು. ಆಗಾಗ ವಾಸದ ನೆಲೆಗಳ ಬದಲಾವಣೆಯೊಂದಿಗೆ ವ್ಯವಸಾಯದ ತಾಣಗಳೂ ಬದಲಾದವು. ಅವರ ಕೃಷಿಯಲ್ಲಿ ಎಮ್ಮರ್, ಗೋಧಿ ಮತ್ತು ಆಗಸೆ ನಾರಿನಂತಹ ಕಿರು ಬೆಳೆಗಳನ್ನು ಬೆಳೆಯುತ್ತಿದ್ದರು. ನಾಯಿ, ದನ, ಕುರಿ ಮತ್ತ ಮೇಕೆಗಳನ್ನು ಪಳಗಿಸಿದ್ದರು. ಅವರು ಶವಸಂಸ್ಕಾರ ಪದ್ಧತಿಯನ್ನು ಅನುಸರಿಸುತ್ತಿದ್ದು, ಅದರಲ್ಲಿ ಹೆಣಗಳನ್ನು ಪೂರ್ತಿಯಾಗಿ ಮುದುರಿಸಿ ಮಲಗಿಸಿದ ರೀತಿಯಲ್ಲಿ ಕಂಡುಬಂದಿದೆ.

ಉತ್ತರ ಯುರೋಪ್ ಮತ್ತು ಅಲ್ಪೈನ್ ಭೂವಲಯ : ಪಶ್ಚಿಮ ಸ್ವಿಜರ್‌ಲೆಂಡಿನಲ್ಲಿ ಮೊದಲು ಸರೋವರವಾಗಿದ್ದ ವಾವಿಲ್ ಹತ್ತಿರದ ತೀರದ ಹಳ್ಳಿಯೊಂದು ಮೊಟ್ಟ ಮೊದಲು ಅಲ್ಪೈನ್ ವಲಯದ ನವಶಿಲಾಯುಗ ಸಂಸ್ಕೃತಿಯ ನೆಲೆಯನ್ನು ಪ್ರತಿನಿಧಿಸುತ್ತದೆ. ಕ್ರಿ.ಪೂ.೫,೦೦೦ ಹಳೆಯದೆಂದು ಹೇಳಬಹುದಾದ ಬೇಳೆಕಾಳುಗಳು, ಪಳಗಿಸಿದ ಪ್ರಾಣಿಗಳು, ಆಯತಾಕಾರದ ಮರದ ಮನೆಗಳು ಹಾಗೂ ತಳ ದುಂಡಾಕಾರವಾಗಿರುವ ಮಡಿಕೆ ಕುಡಿಕೆ ಗಳು ಇವುಗಳೆಲ್ಲವೂ ಆ ನೆಲೆಗಳಲ್ಲಿ ದೊರೆತಿರುವ ಅವಶೇಷಗಳಾಗಿವೆ. ಇವು ನವ ಶಿಲಾಯುಗದ ಪ್ರಕೃತಿ ಲಕ್ಷಣಗಳಾಗಿದ್ದರೂ ಇಲ್ಲಿನ ಮತ್ತು ಉಳಿದ ಅಲ್ಪೈನ್ ಪ್ರದೇಶದ ಅರ್ಥ ವ್ಯವಸ್ಥೆ ದಕ್ಷಿಣ ಮತ್ತು ಮಧ್ಯ ಯುರೋಪಿನ ನವಶಿಲಾಯುಗದ ನೆಲೆಗಳಿಗಿಂತ ತುಂಬಾ ಭಿನ್ನವಾಗಿತ್ತು. ಇಂದಿನವರೆಗೂ ಮುಂದುವರೆದಿರುವಂತೆ ಅಲ್ಪೈನ್ ಆಹಾರಕ್ರಮದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ತುಂಬಾ ಪ್ರಮುಖ ಪಾತ್ರ ವಹಿಸಿದ್ದವು.

ಕ್ರಿ.ಪೂ.೪೦೦೦ ವರ್ಷಗಳ ಹಿಂದೆ ಉತ್ತರ ಯುರೋಪಿನ ಬಯಲು ಪ್ರದೇಶದ ಬೇಟೆಗಾರ ಮೀನುಗಾರ ಜನಸಮುದಾಯ, ದಾನುಬಿಯನ್ ಒಕ್ಕಲುಗಳ ಪ್ರಭಾವಕ್ಕೆ ಒಳಗಾಗಿರುವಂತೆ ತೋರುತ್ತದೆ. ಇದರ ಪರಿಣಾಮವಾಗಿ ಹೊಸ ಸಂಸ್ಕೃತಿಯೊಂದು  ಉದಯಿಸಿತು. ಇದರ ಮುಖ್ಯ ಲಕ್ಷಣವೇನೆಂದರೆ ಆ ಕಾಲದ ಜನರದು ಬೇಟೆಗಾರಿಕೆ, ಮೀನುಗಾರಿಕೆ ಮತ್ತು ಕೃಷಿಪ್ರಧಾನ ಆರ್ಥಿಕ ವ್ಯವಸ್ಥೆಯನ್ನು ಒಳಗೊಂಡಂತಹ ಸಂಸ್ಕೃತಿಯಾಗಿತ್ತು ಹಾಗೂ ಪ್ರಾಕ್ತನಾಶಾಸ್ತ್ರಧಾರಗಳು ಮೇಲಿನ ಸಂಸ್ಕೃತಿಯ ಕೆಲವು ಅಂಶಗಳನ್ನು ದೃಢಪಡಿಸುತ್ತದೆ. ಉದಾಹರಣೆಗೆಹರಣೆಗೆ ತಳಚೂಪಾದ ಮಡಿಕೆಗಳು ಹಾಗೂ ಫ್ಲಿಂಟ್ ಮತ್ತು ಕೊಂಬಿನಿಂದ ತಯಾರಿಸಲ್ಪಟ್ಟ ವಸ್ತುಗಳು ಮುಖ್ಯವಾದವು. ಒಟ್ಟಿನಲ್ಲಿ ಈ ಸಂಸ್ಕೃತಿಯ ಮಧ್ಯ ಶಿಲಾಯುಗದಿಂದ ಮುಂದುವರೆದ ಸಂಸ್ಕೃತಿಯ ಲಕ್ಷಣವಾಗಿದ್ದು ಇದರ ಪ್ರಾರಂಭದ ಕಾಲವನ್ನು ಸುಮಾರು ಕ್ರಿ.ಪೂ.೫೩೦೦ ವರ್ಷಗಳೆಂದು ಗುರುತಿಸ ಬಹುದಾಗಿದೆ. ಹಾಗೆಯೆ ಇದು ಅಂದಿನಿಂದ ಸುಮಾರು ೧,೦೦೦ ವರ್ಷಗಳವರೆಗೂ ಮುಂದುವರೆದಿರುವಂತೆ ಕಂಡುಬರುತ್ತದೆ.

ಅಂತೆಯೇ ಕ್ರಿ.ಪೂ.೪೦೦೦ ವರ್ಷಗಳ ಸುಮಾರಿಗೆ ಸ್ಕಾಂಡಿನೇವಿಯಾ ಪ್ರದೇಶ ಸಾಕು ಪ್ರಾಣಿಗಳ ಮತ್ತು ಕೃಷಿಯೊಂದಿಗೆ ನವಶಿಲಾಯುಗ ಕಾಲಕ್ಕೆ ಪರಿವರ್ತನೆಗೊಂಡಿತು. ಮತ್ತು ಅಲ್ಲಿನ ಜನರು ಒಂದು ಹೊಸ ಮಡಿಕೆ ತಯಾರಿಸಿದ ವಿಧಾನವನ್ನು ಪರಿಚಯಿಸಿದ್ದು ಅದು ಮುಂದೆ ಮಧ್ಯ ಯುರೋಪಿನಲ್ಲಿ ಅಭಿವೃದ್ದಿ ಹೊಂದಿತು.

ಮಧ್ಯ ಯುರೋಪ್  (ಕ್ರಿ.ಪೂ.೪೫೦೦೩೫೦೦)

ಕ್ರಿ.ಪೂ.೪೫೦೦ ಹೊತ್ತಿಗೆ ಬಂದರ್‌ಮಿಕ್ ಕಾಲ ಮುಕ್ತಾಯವಾಯಿತು. ಮತ್ತು ಮಧ್ಯ ಯೂರೋಪಿನ ಬಹುಭಾಗಗಳಲ್ಲಿ ಏಕರೂಪ (ಸಂಸ್ಕೃತಿಯ, ನೆಲೆಗಳು) ಜೀವನಕ್ರಮ, ಹೆಚ್ಚು ಪ್ರದೇಶ ಸಂಸ್ಕೃತಿಯ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು. ಇವುಗಳನ್ನು ಅವರ ಮಡಿಕೆ ಕುಡಿಕೆಗಳ ಶೈಲಿಗಳಿಂದ ಗುರುತಿಸಲ್ಪಟ್ಟಿದ್ದು ಅದು ಕೆಲವು ನಿರ್ದಿಷ್ಟ ಗುಂಪುಗಳನ್ನು ಅಥವಾ ಸಂಸ್ಕೃತಿಗಳನ್ನು ನಿಷೇಧಿಸುತ್ತದೆ. ಹಂಗೇರಿ, ಯುಗೋಸ್ಲೋ ಝೆುಕ್ (ಝೆುಕಾಸ್ಲೋವಾಕಿಯಾ) ಮತ್ತು ಪೂರ್ವ ಜರ್ಮನ್ ಮುಖ್ಯ ಮುಂದುವರಿಕೆಯಾಗಿ ಲೆಂಗಯರ್ ಸಂಸ್ಕೃತಿ ಕಂಡುಬರುತ್ತದೆ. ಹಾಗೆಯೇ ರೈನ್‌ಲ್ಯಾಂಡ್ ಮತ್ತು ಪಶ್ಚಿಮ ಜರ್ಮನಿಯಲ್ಲಿ ಮುಖ್ಯವಾಗಿ ಕಂಡುಬಂದದ್ದು ರೋಸನ್ ಸಂಸ್ಕೃತಿ. ಈ ಸಂಸ್ಕೃತಿ ಮತ್ತು ವೈವಿಧ್ಯಪೂರ್ಣವಾದ ಬದಲಾವಣೆಗಳನ್ನು ಹೊಂದಿ ಸುಮಾರು ಕ್ರಿ.ಪೂ.೪೨೦೦ ಹೊತ್ತಿಗೆ ಕೆಲವೊಂದು ಹೊಸ ಸಂಸ್ಕೃತಿಗಳು ಹುಟ್ಟಿಕೊಂಡವು. ಅವುಗಳಲ್ಲಿ ಪ್ರಮುಖವಾದುವೆಂದರೆ ಪಶ್ಚಿಮದಲ್ಲಿ ಮೈಕೆಲ್ಲಾಬರ್ಗ್ ಹಾಗೂ ಟ್ರಿಚ್ಚರ್ ಬೆಕ್ಕರ್.

ಟ್ರಿಚ್ಚರ್ ಬೆಕ್ಕರ್ (ಟಿ.ಆರ್.ಬಿ) ಸಂಸ್ಕೃತಿ ಉತ್ತರ ಯುರೋಪಿನ ಮತ್ತು ಹಿಂದಿನ ಬಂದರ್‌ಮಿಕ್ ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿದ್ದರಿಂದ ಒಂದು ಪ್ರಮುಖ ಸಂಸ್ಕೃತಿಯು ಬೆಳವಣಿಗೆಯಾಗಿ ಮತ್ತು ಒಗ್ಗೂಡಿದ ಹಂತವಾಗಿ ಕಂಡುಬರುತ್ತದೆ. ಇಲ್ಲಿ ವಸ್ತುಗಳು ಮತ್ತು ಕಲ್ಪನೆಗಳು ಬಹುದೂರದವರೆಗೆ ಸಾಮಾನ್ಯವಾಗಿ ಸಾಗುತ್ತಿದ್ದವು. ಈ ಕಾಲಘಟ್ಟದಲ್ಲಿ ಟಿ.ಆರ್.ಬಿ. ಸಂಸ್ಕೃತಿಯ ಉತ್ತರದ ಗಡಿಯಲ್ಲಿ ಮೊಟ್ಟಮೊದಲ ಬಾರಿಗೆ ತಾಮ್ರದ ವಸ್ತುಗಳ ಬಳಕೆ ಕಂಡುಬರುತ್ತದೆ.

ಹೀಗೆ ಒಟ್ಟಾರೆ ಮಧ್ಯಯುರೋಪಿನಲ್ಲಿ ನವಶಿಲಾಯುಗ ಸಂಸ್ಕೃತಿಯ ಹಲವು ಸಾಮಾನ್ಯ ಬೆಳವಣಿಗೆಗಳು ಈ ಪ್ರದೇಶದಲ್ಲಿ ಕ್ರಿ.ಪೂ.೫೦೦೦ ಕೊನೆಯಲ್ಲಿ ಮತ್ತು ೪೦೦೦ ಮೊದಲಿನಲ್ಲಿ ಕಂಡುಬರುತ್ತದೆ. ಅವುಗಳಲ್ಲಿ ಕೆಲವು ಪ್ರಮುಖ ಬದಲಾವಣೆ ಗಳೆಂದರೆ.

ಅ. ಬಂದರ್‌ಮಿಕ್ ಚಟುವಟಿಕೆ ನದಿ ಕಣಿವೆಗಳ ಕೇಂದ್ರವನ್ನು ಮೀರಿ ವ್ಯವಸಾಯದ ತಾಣಗಳು ನಿಧಾನವಾಗಿ ಹಬ್ಬಿತ್ತು.

ಆ. ಮನೆಯ ನಿರ್ಮಾಣದಲ್ಲಿ ನಿಧಾನವಾಗಿ ಆದ ಬದಲಾವಣೆ

ಉದಾಹರಣೆಗೆ : ಮನೆಯ ಶೈಲಿಯಲ್ಲಿ ಆಯತಾಕಾರದ ಮತ್ತು ಸಮಾನಾಂತರ ಪಾರ್ಶ್ವಗಳ ಮನೆಗಳಿದ್ದರೆ, ಇವುಗಳ ಬದಲಾಗಿ ವಿಷಮ ಚತುರ್ಭುಜದ ಉದ್ದನೆಯ ಮನೆಗಳು ಬಳಕೆಯಲ್ಲಿ ಬಂದವು. ಈ ಬದಲಾವಣೆ ಬದಲಾದ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವುದರ ಜೊತೆಗೆ ಸಾಮಾಜಿಕ ಶ್ರೇಣಿಯಲ್ಲಾದ ಬದಲಾವಣೆಯನ್ನು ಪ್ರಾಯಶಃ ಪ್ರತಿನಿಧಿಸುತ್ತದೆ.

ಪಶ್ಚಿಮ ಯುರೋಪ್: ಪಶ್ಚಿಮ ಯುರೋಪಿನ ಮೇಲೆ ಮಧ್ಯ ಯುರೋಪಿನ ನವ ಶಿಲಾಯುಗ ಸಂಸ್ಕೃತಿಯ ಪ್ರಭಾವವಿತ್ತು. ಆದರೂ ಈ ಪ್ರಭಾವದೊಂದಿಗೆ ಇತರೆ ಅಂಶಗಳು ತಮ್ಮದೇ ಪಾತ್ರವಹಿಸಿದವು. ಇಲ್ಲಿ ದೊರೆತಿರುವ ಮಡಿಕೆ ಕುಡಿಕೆಗಳ ಆಧಾರದ ಮೇಲೆ ಅಲ್ಲಿ ಉಂಟಾಗಿರುವ ಪ್ರಭಾವವನ್ನು ಗುರುತಿಸಬಹುದಾಗಿದೆ. ಅಚ್ಚೊತ್ತಿದ ಮಡಿಕೆಗಳ ಉಪಯೋಗ ಕೃಷಿ ಮಾಡಿದ ಮರ ಗಿಡಗಳು ಮತ್ತು ಪಳಗಿದ ಪ್ರಾಣಿಗಳು ದಕ್ಷಿಣ ಐಬೀರಿಯಾ ಮತ್ತು ಮೆಡಿಟರೇನಿಯನ್ ಫ್ರಾನ್ಸಿನ ಸುತ್ತ ಕ್ರಿ.ಪೂ.೬೦೦೦ದ ಅವಧಿಯಲ್ಲಿ ಪ್ರಚಲಿತದಲ್ಲಿ ಬಂದವು. ಆದರೆ ಯುರೋಪಿನ ಇತರೆ ಪ್ರಮುಖ ಪ್ರದೇಶ ಗಳ ಪ್ರಭಾವಕ್ಕೊಳಗಾಗಿ ಕ್ರಿ.ಪೂ.೪೦೦೦ದ ಹೊತ್ತಿಗೆ ಬ್ರಿಟಿಷ್ ದ್ವೀಪಗಳಲ್ಲಿ ನವಶಿಲಾಯುಗ ಸಂಸ್ಕೃತಿ ಬೆಳೆಯಿತು.

ಪಶ್ಚಿಮ ಯುರೋಪಿನ ನವಶಿಲಾಯುಗ ವಿಸ್ತೃತ ವ್ಯವಸಾಯಕ್ಕೆ ಪ್ರಸಿದ್ಧವಾಗಿರದೆ, ಬೃಹತ್ ಶಿಲಾ ಸ್ಮಾರಕಗಳ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಇವುಗಳು ಪ್ರಮುಖವಾಗಿ ಸ್ವಿಜರ್ಲೆಂಡ್, ಫ್ರಾನ್ಸಿನ ಬ್ರಿಟಿಷ್ ದ್ವೀಪಗಳು ಮತ್ತು ಐಬೀರಿಯದಲ್ಲಿ ದೊರೆತಿದೆ. ಅವರ ಬೃಹತ್ ಶಿಲಾ ಸಂಸ್ಕೃತಿಯ ಸ್ಮಾರಕಗಳ ಅಧ್ಯಯನ ನಮಗೆ ಅವರ ಶವಸಂಸ್ಕಾರ ವಿಧಿಗಳನ್ನು ಮತ್ತು ಸಾರ್ವಜನಿಕ ವಿಧಿ ಚಟುವಟಿಕೆಗಳನ್ನು ತಿಳಿಯಲು ಸಹಾಯಕವಾಗಿದೆ. ನಮಗೆ ತಿಳಿದಿರುವ ಬೃಹತ್ ಶಿಲಾ ಸ್ಮಾರಕಗಳೆಂದರೆ ಕ್ರಿ.ಪೂ.೩೦೦೦ಕ್ಕಿಂತ ಸುಮಾರಿಗೆ ಸೇರುವ ರೋಗ್ ಸಮಾಧಿಗಳು. ಈ ಕೋಣೆ ಸಮಾಧಿಗಳನ್ನು ನೈಸರ್ಗಿಕ ಬಂಡೆಗಳಿಂದ ಕೊರೆಯಲ್ಪಟ್ಟಿರುವುದು ಒಂದು ವಿಧವಾದರೆ, ಇನ್ನೊಂದು ವಿಧಾನದಲ್ಲಿ ಅವರು ದೊಡ್ಡ ದೊಡ್ಡ ಕಲ್ಲುಗಳನ್ನು ಜೋಡಿಸಿ ಅದರ ಸುತ್ತ ಚಿಕ್ಕ ಪುಟ್ಟ ಕಲ್ಲುಗಳ ಸಾಲುಗಳನ್ನು ಇರಿಸಿ ಮಾಡಿರುವಂತಹದಾಗಿದೆ. ಈ ಶವ ಸಂಸ್ಕಾರ ಸ್ಮಾರಕಗಳೇ ಅಲ್ಲದೆ ಈ ಜನರು ದೊಡ್ಡ ಕಲ್ಲಿನ ಕಂಬಗಳು ಅಥವಾ ಏಕ ಶಿಲಾ ಸಮಾಧಿ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು. ಜೊತೆಗೆ ವಿಸ್ತಾರದ ಕಲ್ಲುಗಳನ್ನು ಮತ್ತು ದುಂಡನೆಯ ಸ್ಮಾರಕಗಳನ್ನು ದೊಡ್ಡ ಪ್ರಮಾಣದಲ್ಲಿ ರಚಿಸುತ್ತಿದ್ದರು.

ಉತ್ತರ ಮಧ್ಯ ಮತ್ತು ಪೂರ್ವ ಯುರೋಪಿನಲ್ಲಿ ಕ್ರಿ.ಪೂ.ಮೂರನೆಯ ಸಹಸ್ರದ ಕೊನೆಯ ಶತಮಾನಗಳಲ್ಲಿ ಮತ್ತು ಎರಡನೆ ಸಹಸ್ರದ ಪ್ರಾರಂಭದ ಶತಮಾನಗಳಲ್ಲಿ ಹೆಚ್ಚು ಬೃಹತ್ ಶಿಲಾಯುಗ ಸಂಸ್ಕೃತಿಯ ಅಳವಡಿಕೆಯನ್ನು ನೋಡುತ್ತೇವೆ. ಈ ಕಾಲ ದಲ್ಲಿ ಮಿಶ್ರ ವ್ಯವಸಾಯ ಜೀವನಾಧಾರವಾಗಿತ್ತು ಮತ್ತು ಜಾರಿಯಲ್ಲಿದ್ದ ಹಗುರವಾದ ನೇಗಿಲುಗಳನ್ನು ಉಪಯೋಗಿಸುತ್ತಿದ್ದರ ಬಗ್ಗೆ ಆಧಾರಗಳಿವೆ. ಈ ಕಾಲದಲ್ಲಿ ಸಾಮೂಹಿಕ ಸಮಾಧಿ ಕಟ್ಟಡಗಳನ್ನು ಕಟ್ಟಿಸುವುದನ್ನು ನಿಲ್ಲಿಸಿದರು.

ಯುರೋಪಿನಾದ್ಯಂತ ನವಶಿಲಾಯುಗದ ಅಂಶಗಳು ಪಸರಿಸಿದ ಎರಡು ಪ್ರಮುಖ ಮಾರ್ಗಗಳೆಂದರೆ ಅ. ಪ್ರಮುಖ ನದಿ ಕಣಿವೆಗಳು, ಆ. ಮೆಡಿಟರೇನಿಯನ್ ಸಮುದ್ರ ತೀರ. ಈ ಎರಡೂ ಆಟ್ಲಾಂಟಿಕ್ ಗಡಿಯಲ್ಲಿ ಮತ್ತೆ ಸಂಧಿಸುತ್ತವೆ. ಬಂದರ್‌ಮಿಕ್ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿದ್ದ ಸಂದರ್ಭದಲ್ಲಿ ಬ್ರಿಟಿಷ್ ದ್ವೀಪಗಳಲ್ಲಿ ಪ್ರಮುಖ ಸಂಬಂಧ ಯುರೋಪಿನ ಭೂಖಂಡದಲ್ಲಿನ ಅಕ್ಕಪಕ್ಕದ ಪ್ರದೇಶಗಳೊಂದಿಗೆ ಇತ್ತು. ಐಬೇರಿಯಾದಲ್ಲಿ ನವಶಿಲಾಯುಗದ ಸಂಸ್ಕೃತಿಯ ಲಕ್ಷಣಗಳ ಪ್ರಮುಖ ಪ್ರಭಾವಗಳು ಮೆಡಿಟರೇನಿಯನ್ ವಲಯದ ಕಡೆಯಿಂದ ಕಂಡುಬರುತ್ತದೆ. ಫ್ರಾನ್ಸ್‌ನಲ್ಲಿ ಮೆಡಿಟರೇನಿಯನ್ ಹಾಗೂ ಮಧ್ಯ ಯುರೋಪಿನ ಲಕ್ಷಣಗಳೆರಡೂ ಒಟ್ಟಾಗಿ ಪಾತ್ರ ನಿರ್ವಹಿಸುವಂತೆ ಕಾಣುತ್ತದೆ. ಈ ಎಲ್ಲಾ ಪಶ್ಚಿಮ ಯುರೋಪಿನ ಪ್ರದೇಶಗಳಲ್ಲಿ ನವಶಿಲಾಯುಗಕ್ಕೆ ಆದ ಪರಿವರ್ತನೆ ಸಾಂಸ್ಕೃತಿಕ ಬದಲಾವಣೆಯ ಪ್ರಕ್ರಿಯೆಯಾಗಿತ್ತು. ಇನ್ನು ಉಳಿದಿದ್ದು ಎದ್ದು ಕಾಣುವ ಅವರ ಬೃಹತ್ ಶಿಲಾ ಸಮಾಧಿ ಅವರ ಸಂಸ್ಕೃತಿಯ ಮುಖ್ಯ ಅವಶೇಷಗಳಾಗಿದ್ದು ಅದಕ್ಕೆ ಸರಿಸಮವಾದ ಅವಶೇಷಗಳು ಮಧ್ಯ ಯುರೋಪ್ ಮತ್ತು ಸ್ಥಳೀಯ ಮಧ್ಯ ಶಿಲಾಯುಗ ಕಾಲದಲ್ಲೂ ಕಂಡುಬರುವುದಿಲ್ಲ. ಒಟ್ಟಿನಲ್ಲಿ ಪಶ್ಚಿಮ ಯುರೋಪಿನ ನವಶಿಲಾಯುಗ ಸಂಸ್ಕೃತಿಯ ಸಮುದಾಯಗಳು ತಮ್ಮದೇ ಆದ ಸ್ವಂತಿಕೆಯನ್ನು ಹೊಂದಿದ್ದು, ಇದರಿಂದಲೇ ಅವರು ತಮ್ಮ ವಿಶೇಷ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ರೂಢಿಸಿಕೊಳ್ಳುವುದು ಸಾಧ್ಯವಾಯಿತು.

ಯುರೋಪಿನಲ್ಲಿ ತಾಮ್ರದ ಬಳಕೆಯ ಪ್ರಾರಂಭ

ಯುರೋಪಿನಾದ್ಯಂತ ಇನ್ನೂ ವ್ಯವಸಾಯ ಹಬ್ಬುತ್ತಿದ್ದಾಗ ಮೊದಲು ಯುರೋಪಿನ ದಕ್ಷಿಣ ಭಾಗದಲ್ಲಿ ತಾಮ್ರಲೋಹದ ಉಪಯೋಗ ಪ್ರಾರಂಭವಾಯಿತು. ಕ್ರಿ.ಪೂ. ೩೦೦೦ರಲ್ಲಿ ಮಿಶ್ರ ಲೋಹದ ಬಳಕೆ ಬರುವವರೆಗೂ ತಾಮ್ರದ ಉಪಯೋಗ ಮುಂದು ವರೆಯಿತು. ಈ ತಾಮ್ರದ ಲೋಹದ ಉದ್ಯಮ ಮುಖ್ಯವಾಗಿ ಬಾಲ್ಕನ್ ಪ್ರದೇಶಕ್ಕೆ ಮತ್ತು ಕಾರ್‌ಪೇಥಿಯಾ ಪ್ರದೇಶಗಳಿಗೆ ಸಮೇತವಾಗಿತ್ತು. ಇದೇ ಸಂದರ್ಭದಲ್ಲಿ ನವಶಿಲಾಯುಗದ ಸಂಸ್ಕೃತಿ ಯುರೋಪಿನ ಇತರ ಭಾಗದಲ್ಲಿ ಅಸ್ತಿತ್ವದಲ್ಲಿತ್ತು. ಬಾಲ್ಕನ್ ಪ್ರದೇಶದ ಸಂಸ್ಕೃತಿ ಕೇವಲ ತಾಮ್ರ ಮತ್ತು ಚಿನ್ನದ ಲೋಹದ ಉದ್ಯಮಗಳಿಗೆ ಮಾತ್ರ ಹೆಸರುವಾಸಿಯಾಗಿರದೆ ಚಿತ್ರಕಲೆಯಿಂದ ಕುಡಿದ ಮಡಿಕೆ ಕುಡಿಕೆಗಳಿಗೂ ಪ್ರಸಿದ್ಧವಾಗಿತ್ತು. ಪ್ರಾರಂಭದ ಕಾಲದಲ್ಲಿ ಯುರೋಪ್ ಸಂಸ್ಕೃತಿ ಪ್ರತ್ಯೇಕವಾಗಿ ಬೆಳೆದಂತಿದೆ. ಕ್ರಿ.ಪೂ. ೩೦೦೦ದ ಉತ್ತರಾರ್ಧದ ಹೊತ್ತಿಗೆ ಅದು ದೊಡ್ಡ ಸಮುದಾಯದ ರಚನೆ ಮತ್ತು ಬೆಳವಣಿಗೆಯನ್ನು ಕಂಡಿತು. ವ್ಯವಸಾಯದ ಜೊತೆಯಲ್ಲಿ ಆ ಜನರು ಪ್ರಾಣಿಗಳ ಸಾಕಾಣಿಕೆಯಲ್ಲಿ ತಜ್ಞರಾಗಿದ್ದರು. ಅಲ್ಲದೆ ಪಶ್ಚಿಮ ಯುರೋಪಿನಲ್ಲಿ ಬೃಹತ್ ಶಿಲಾ ಸಮಾಧಿ ಸ್ಮಾರಕಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದರು. ಯುರೋಪಿನ ವಿವಿಧ ಭಾಗ ಗಳಲ್ಲಿ ಉಪಯೋಗದೊಂದಿಗೆ ನಿಖರವಾದ ಹೊಸ ಕೃಷಿ ನೆಲೆಗಳು ಅಭಿವೃದ್ದಿ ಹೊಂದಿದವು.

ಕ್ರಿ.ಪೂ.೪೦೦೦ದ ಕೊನೆಯ ಭಾಗದಲ್ಲಿ ಹತ್ತಿರ ಪೂರ್ವದಲ್ಲಾದ ನಗರೀಕರಣ ಮತ್ತು ವ್ಯಾಪಾರಾಭಿವೃದ್ದಿಯ ಅಂತಿಮ ಪರಿಣಾಮಗಳು ಯುರೋಪಿನಲ್ಲಿ ಕಾಣಿಸಿಕೊಂಡವು. ಅಂತಿಮ ಪರಿಣಾಮಗಳು ಕಾರ್‌ಫೇಥ್ ಮತ್ತು ಬಾಲ್ಕನ್ ಪ್ರದೇಶಗಳಲ್ಲಿ ಹೆಚ್ಚು ನೇರವಾಗಿ ಕಾಣಿಸಿಕೊಂಡಿದ್ದು ಅಲ್ಲಿನ ಮಡಿಕೆ ಕುಡಿಕೆ ಶೈಲಿಯಿಂದ ಗೊತ್ತಾಗುತ್ತದೆ.

ಹೊರ ಯುರೋಪಿನಲ್ಲಿ ಮತ್ತು ವಿಶೇಷವಾಗಿ ದೂರದ ಉತ್ತರ ಮತ್ತು ಪಶ್ಚಿಮದಲ್ಲಿ ಈ ಮಾರ್ಪಾಡು ನಿಧಾನವಾಗಿ ಒಳಹೊಕ್ಕವಾದರೂ ಪ್ರಾರಂಭದಲ್ಲಿ ಅಸ್ತಿತ್ವದಲ್ಲಿದ್ದ ಸಾಂಸ್ಕೃತಿಕ ನಮೂನೆಗಳನ್ನು ಬದಲಿಸಲಿಲ್ಲ. ದಕ್ಷಿಣ ಐಬೀರಿಯಾದಲ್ಲಿ ದೊರೆಯುತ್ತಿದ್ದ ತಾಮ್ರ ನಿಕ್ಷೇಪಗಳ ಕಾರಣ ಸರಳವಾದ ತಾಮ್ರ ಲೋಹ ಶೋಧನ ವಿಧಾನ ಅವರಿಗೆ ತಿಳಿದಿದ್ದು ಬೃಹತ್ ಶಿಲಾಯುಗ ಸಮಾಧಿ ಸ್ಮಾರಕಗಳಲ್ಲಿ ದೊರೆಯುವ ತಾಮ್ರ ವಸ್ತುಗಳೊಡನೆ ಹೋಲಿಸಿದಾಗ ಅದು ದೃಢಪಡುತ್ತದೆ. ಒಟ್ಟಿನಲ್ಲಿ ಯುರೋಪಿನ ಸಂಸ್ಕೃತಿಗಳ ಸ್ವರೂಪದಲ್ಲಿ ತಾಮ್ರಯುಗ ಹೀಗೆ ಮೂಲಭೂತ ಬದಲಾವಣೆಗಳಿಗೆ ಕಾರಣವಾಯಿತು.

ಯುರೋಪಿನ ಕಂಚಿನ ಯುಗ

ಕಂಚಿನ ಯುಗ ಯುರೋಪಿನಲ್ಲಿ ಕ್ರಿ.ಪೂ.೨೩೦೦ರ ಸುಮಾರಿನಿಂದ ಕ್ರಿ.ಪೂ.೮೦೦ರ ಸುಮಾರಿನವರೆಗೆ ಇತ್ತು. ಈ ಕಾಲದಲ್ಲಿ ತಾಮ್ರದೊಂದಿಗೆ ಬೇರೆ ಬೇರೆ ಲೋಹಗಳನ್ನು ಬೆರೆಸಿ ಮಿಶ್ರಲೋಹ ತಯಾರಿಸುವುದನ್ನು ಕಲಿತರು. ಅದರಲ್ಲೂ ವಿಶೇಷವಾಗಿ ತಾಮ್ರಕ್ಕೆ ಸತುವನ್ನು ಮಿಶ್ರ ಮಾಡಿ ಕಂಚಿನಂತಹ ಗಟ್ಟಿ ಲೋಹವನ್ನು ತಯಾರಿಸುವ ಕಲೆ ಅವರಿಗೆ ಗೊತ್ತಿತ್ತು. ಹೀಗೆ ಈ ಕಾಲದಲ್ಲಿ ಲೋಹಶಾಸ್ತ್ರ ವಿಫಲವಾಗಿ ಅಭಿವೃದ್ದಿ ಹೊಂದಿತು. ಯುರೋಪಿನ ವಿಶಾಲ ಮತ್ತು ವಿವಿಧ ಭೌಗೋಳಿಕ ಪ್ರದೇಶಗಳು ಕಂಚಿನ ಯುಗದ ವಿವಿಧ ಗುಂಪಿನ ಜನಗಳಿಗೆ ಮತ್ತು ಸಂಸ್ಕೃತಿಗಳಿಗೆ ಆಸರೆ ನೀಡಿದ್ದರೂ, ಎಲ್ಲಾ ಪ್ರದೇಶಗಳಲ್ಲಿ ಸಂಸ್ಕೃತಿಗಳಲ್ಲಿ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ಕಾಣಬಹುದಾಗಿದೆ.

ಹೊಸ ಲೋಹಗಳ ಬಳಕೆಯೊಂದಿಗೆ ಬದಲಾವಣೆಗಳು ಕಂಡುಬಂದಿದ್ದು ಮಾತ್ರವಲ್ಲದೆ ಅವರ ಆರ್ಥಿಕ ಸಾಮಾಜಿಕ ಬದುಕಿನಲ್ಲೂ ಬದಲಾವಣೆಗಳು ಕಾಣಿಸಿಕೊಂಡವು. ಉದಾಹರಣೆಗೆ. ಸಮಾಜದಲ್ಲಿ ಶ್ರೇಣೀಕರಣ ವ್ಯವಸ್ಥೆ ಇತ್ತು. ಅವರಲ್ಲಿ ದೊರಕಿರುವ ವಿವಿಧ ಶವಸಂಸ್ಕಾರ ಪದ್ಧತಿಗಳಲ್ಲಿ ಹಾಗೂ ಅವುಗಳಲ್ಲಿ ದೊರೆತಿರುವ ಶವಸಾಮಗ್ರಿಗಳನ್ನು ಅಭ್ಯಸಿಸಿದಾಗ ತಿಳಿದುಬರುತ್ತದೆ. ಹಾಗೆಯೇ ಅವರಲ್ಲಿ ಜನಸಂಖ್ಯೆಯ ಹೆಚ್ಚಳ ಉಂಟಾಗಿದ್ದು ವ್ಯಾಪಾರ ಮತ್ತು ವಾಣಿಜ್ಯವು ವೃದ್ದಿಯಾಯಿತು. ನೀರು ಮತ್ತು ಭೂಮಿಯ ಮುಖೇನ ವ್ಯಾಪಾರ ಸಂಪರ್ಕವು ಅಭಿವೃದ್ದಿ ಹೊಂದಿತು. ದಿಬ್ಬಗಳ ಮೇಲೆ ನಿರ್ಮಾಣವಾದ ಕೋಟೆಗಳಿಂದ ರಕ್ಷಿತ ನೆಲೆಗಳು ಅಧಿಕವಾಗುವುದ ರೊಂದಿಗೆ ಆ ಕಾಲದ ಜನಜೀವನದಲ್ಲಿ ಗಮನೀಯ ಬದಲಾವಣೆಯನ್ನು ಕಾಣುತ್ತೇವೆ. ಈ ರಕ್ಷಿತ ನೆಲೆಗಳ ಸುತ್ತ ಮರದ ಚೌಕಟ್ಟಿರುವ ಮಣ್ಣಿನ ಕೋಟೆಗಳು ಕಂಡುಬಂದಿವೆ. ಸರಿಯಾದ ಅಭ್ಯಾಸದ ಅನುಕೂಲಕ್ಕಾಗಿ ಯುರೋಪಿನ ಕಂಚಿನ ಯುಗವನ್ನು ಮೂರು ನಿರಂತರ ಭಾಗಗಳಾಗಿ ವಿಂಗಡಿಸಬಹುದು. ಕ್ರಿ.ಪೂ.೧೫೦೦ ರಿಂದ ೧೨೦೦ರ ಕಾಲಘಟ್ಟದಲ್ಲಿ ಪ್ರಾರಂಭಿಕ, ಮಧ್ಯಮ ಮತ್ತು ನಂತರದ ಭಾಗಗಳನ್ನು ಪ್ರತ್ಯೇಕಿಸಬಹುದು.

ಗ್ರೀಕ್ ಮತ್ತು ಎಗ್ರಾನ್

ಹೀಗೆ ಗ್ರೀಕ್, ಕ್ರೇಟ್ ಮತ್ತು ಸೈಕ್ಲೋಡ್ಸ್‌ಗಳಲ್ಲಿ ಯಾವಾಗಲೂ ಪ್ರಾರಂಭದ ಕಂಚಿನ ಯುಗದಲ್ಲಿ ಲೋಹದ ವಸ್ತುಗಳಿಗೆ ಕೊರತೆ ಇತ್ತು. ಆದರೆ ಟ್ರೇ ೧ ಮತ್ತು ೧೧ರಲ್ಲಿ ಈ ಲೋಹ ವಿಪುಲವಾಗಿ ದೊರಕುತ್ತಿದ್ದು ಈ ಪ್ರದೇಶದ ನಿಪುಣತೆ ಹೊಂದಿದ ಲೋಹಗಾರರಿಗೆ ಆಧಾರ ನೀಡಿತ್ತು. ಆದರೆ ಏಜಿಯಿನ್ ಪ್ರದೇಶಕ್ಕೆ ಸತು ಲೋಹ ಹೇಗೆ ಪ್ರವೇಶಿತೆಂಬುದನ್ನು ಇನ್ನೂ ಉತ್ತರಿಸಬೇಕಾಗಿದೆ. ಏಕೆಂದರೆ ಈವರೆವಿಗೂ ಈ ಭಾಗದಲ್ಲಿ ಸತು ಲೋಹದ ನಿಕ್ಷೇಪದ ಬಗ್ಗೆ ಮಾಹಿತಿ ದೊರೆತಿಲ್ಲ. ಪ್ರಾಯಶಃ ವ್ಯಾಪಾರದ ಮುಖೇನ ಅದನ್ನು ಆಮದು ಮಾಡಿಕೊಂಡಿರಬಹುದೆಂದು ಊಹಿಸಲಾಗಿದೆ. ಇಂತಹ ವ್ಯಾಪಾರ ಸಂಪರ್ಕದ ಮೂಲಕವೇ ಚಿನ್ನ-ಬೆಳ್ಳಿ, ಲೇಪಿಸ್-ಲೇಜುಲಿ ಹಾಗು ಸಿದ್ಧ ವಸ್ತುಗಳು ಕೂಡ ಬಂದಿರಬಹುದಾಗಿದೆ. ಇದರೊಂದಿಗೆ ಕುಶಲತೆಗಳಲ್ಲಿ ನಿಷ್ಣಾತತೆ ಮತ್ತು ದಾಖಲಿಸಲ್ಪಟ್ಟಿರುವ ಉತ್ತಮ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ಪಾತ್ರೆಗಳನ್ನು ನೋಡಬಹುದು.

ಏಜಿಯನ್ ತೀರದಲ್ಲಿ ಉತ್ತಮ ಬಂದರುಗಳನ್ನು ಹಾಗೂ ಪರ್ಯಾಯ ವ್ಯಾಪಾರಿ ಮಾರ್ಗಗಳನ್ನು ಹೊಂದಿದ್ದವು. ಆದ್ದರಿಂದ ದ್ವೀಪದಿಂದ ದ್ವೀಪಕ್ಕೆ ವರ್ಷದ ಹೆಚ್ಚಿನ ಕಾಲ ಸಂಪರ್ಕವಿರುವುದು ಕಂಡುಬಂದಿದೆ. ಗ್ರೀಸ್ ಮತ್ತು ಏಜಿಯನ್‌ಗಳಲ್ಲಿ ವ್ಯಾಪಾರ ಜಾಲ ಹೊಸ ಹೊಸ ವಸ್ತುಗಳ ಮತ್ತು ವಿಚಾರಗಳ ಆಗಮನಕ್ಕೆ ಕಾರಣವಾಯಿತು.

ನಗರ ಜೀವನದ ಆರಂಭ, ಸಾಂಸ್ಕೃತಿಕ ವೈವಿಧ್ಯತೆ ಕಾರಣವಾದುದ್ದಲ್ಲದೆ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಯಲ್ಲಿ ಸಂಕೀರ್ಣತೆಯನ್ನು ಉಂಟು ಮಾಡಿತ್ತು. ಭವ್ಯ ನಾಗರಿಕತೆಯಿದ್ದ ಕ್ರೇಟ್‌ನಲ್ಲಿ ಇದು ದಾಖಲಾಗಿರುವಷ್ಟು ಇನ್ನೆಲ್ಲಿಯೂ ಆಗಿಲ್ಲ. ಇದಕ್ಕೆ ವಿರುದ್ಧವಾಗಿ ವಿಗ್ರಾನ್ ಮುಖ್ಯ ಪ್ರದೇಶ ನಾಗರಿಕತೆಯ ಬೆಳವಣಿಗೆಯಲ್ಲಿ ಹಿಂದೆ ಬಿದ್ದಿತು. ಕ್ರೇಟ್‌ನ ಈ ನಾಗರಿಕತೆ ಏಜಿಯನ್ ಪ್ರದೇಶವನ್ನು ಮಾತ್ರವಲ್ಲದೆ ಪೂರ್ವ ಮೆಡಿಟರೇನಿಯನ್ ಪ್ರದೇಶವನ್ನು ಆವರಿಸಿಕೊಂಡಿತು.

ಮಿನೋವಾ ಮತ್ತು ಮೈಸೀನಿಯಾ ನಾಗರಿಕತೆ

ಮುಖ್ಯ ಗ್ರೀಕ್ ಭೂಮಿ ಹಾಗೂ ಉಳಿದ ದ್ವೀಪಗಳಿಂದ ಕ್ರೇಟ್ ನಾಗರಿಕತೆಯ ಇತಿಹಾಸಪೂರ್ವ ಕಂಚಿನ ಯುಗವನ್ನು ಬೇರ್ಪಡಿಸಲು ಮಿನೋವನ್ ಎಂಬ ಪದವನ್ನು ಬಳಸಲಾಗಿದೆ. ಕ್ರೇಟ್ ಭೂಭಾಗ ಪರ್ವತಮಯವಾಗಿದ್ದು ಸ್ವಲ್ಪವೇ ಫಲವತ್ತಾದ ಭೂಮಿಯಿಂದ ಕೂಡಿತ್ತು. ಆದ್ದರಿಂದ ವ್ಯವಸಾಯ ಯೋಗ್ಯ ಭೂಮಿ ಸೀಮಿತವಾಗಿತ್ತು. ಅಲ್ಲಿನ ವ್ಯವಸಾಯ ಚಟುವಟಿಕೆಗಳಲ್ಲಿ ಮುಖ್ಯವಾಗಿ ಧಾನ್ಯಗಳು ಹಾಗೂ ಹಣ್ಣುಗಳನ್ನು  ನೋಡುತ್ತೇವೆ. ಏಕೆಂದರೆ ಇಲ್ಲಿ ಮೆಡಿಟರೇನಿಯನ್ ಪರಿಸರವಿದೆ.

ಮಿನೋವನ್ ಎಂದು ಕರೆಯಲ್ಪಡುವ ಈ ಕಂಚಿನ ಯುಗ ಸಾಮಾನ್ಯವಾಗಿ ಕ್ರಿ.ಪೂ. ೩೦೦೦ ದಿಂದ ಕ್ರಿ.ಪೂ.೧೦೦೦ ವರೆಗೆ ವ್ಯಾಪಿಸಿತ್ತು. ಆ ಸಂದರ್ಭದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳೆಂದರೆ ಕ್ರಿ.ಪೂ.೧೯೦೦ರಲ್ಲಿ ನೋಸ್ಸಸ್ ಅರಮನೆಗೆ ಬುನಾದಿಯನ್ನು ಹಾಕಿದ್ದು ಕ್ರಿ.ಪೂ.೧೫೦೦ರಲ್ಲಿ ಥೆರಾ ಅಗ್ನಿಪರ್ವತ ಸಿಡಿದಿದ್ದು ಮತ್ತು ಕ್ರಿ.ಪೂ.೧೩೭೫ರಲ್ಲಿ  ಅರಮನೆಯ ನಾಶ, ಇವುಗಳನ್ನು ಕರಾರುವಕ್ಕಾಗಿ ಈಜಿಪ್ಟಿನ ಪಂಚಾಂಗದಿಂದ ಲೆಕ್ಕ ಹಾಕಬಹುದಾಗಿದೆ. ಇದಕ್ಕೆ ಕಾರಣ ಅವರಿಗೆ ಈಜಿಪ್ಟಿನೊಂದಿಗಿದ್ದ ಸಂಬಂಧ.

ಕಂಚಿನ ಯುಗದ ಆರಂಭವೆಂದು ಗುರುತಿಸಬಹುದಾದ ತಂತ್ರಜ್ಞಾನದ ಪ್ರಗತಿಯನ್ನು ಏಷ್ಯ ಮೈನರ್‌ನ ಪ್ರದೇಶದಿಂದ ವಿದೇಶಿ ವಲಸೆಗಾರರು ತಂದಿರಬಹುದು ಎಂದು ಊಹಿಸಲಾಗಿದೆ. ಇದಕ್ಕೆ ಮೂಲಾಧಾರವೆಂದರೆ ಅಲ್ಲಿ ಸಿಕ್ಕಿರುವ ಮಡಿಕೆಗಳ ಆಕಾರ ಮತ್ತು ಆಕೃತಿಗಳು. ಮಿನೋವಾ ಸಮಾಜವನ್ನು ಸಾಲಾಗಿ ಅನೇಕ ಚಿಕ್ಕ ರಾಜ ಮತ್ತು ಆರ್ಥಿಕ ಘಟಕಗಳಾಗಿ ವಿಭಾಗಿಸಲ್ಪಟ್ಟಿತ್ತು. ಅಂದಿನ ಕಾಲದ ಅನೇಕ ಸಮಾಧಿಗಳನ್ನು ಶವಸಾಮಗ್ರಿ ಗಳೊಂದಿಗೆ ಅನ್ವೇಷಣೆ ಮಾಡಲಾಗಿದೆ. ಅಲ್ಲಿನ ಶವಸಾಮಗ್ರಿಗಳಲ್ಲಿ ಕಂಡುಬಂದಿರುವ ಪ್ರಮುಖ ವಸ್ತುಗಳೆಂದರೆ ಆಭರಣಗಳು, ಪಾತ್ರೆಗಳ ಮೇಲೆ ಕೆತ್ತಿರುವ ಪೂಜಾ ಚಿತ್ರಗಳು ಮುಂತಾದವು.

ಆಯತಾಕಾರದ ತಳ ವಿನ್ಯಾಸ ಹೊಂದಿದ, ಬಿಸಿಲಿನಲ್ಲಿ ಒಳಣಗಿಸಿದ ಮಣ್ಣು ಇಟ್ಟಿಗೆಗಳಿಂದ ಕಟ್ಟಿದ ಗುಡಿಸಲುಗಳಲ್ಲಿ ಅವರು ವಾಸಿಸುತ್ತಿದ್ದುದು ಕಂಡುಬರುತ್ತದೆ. ಆ ಮನೆಗಳಲ್ಲಿ ಉಗ್ರಾಣಗಳು ಹಾಗೂ ಮಲಗುವ ಕಟ್ಟೆಗಳು ಇರುತ್ತಿದ್ದವು. ನೋಸ್ಸಸ್  ಮೊದಲ ಅರಮನೆಯನ್ನು ಅಂದಾಜು ೩೯೦೦ ವರ್ಷಗಳ ಹಿಂದೆ ಕಟ್ಟಿರಬೇಕು. ಆಯತಾಕಾರದ ತೆರೆದ ಅಂಗಳದ ಸುತ್ತ ನಿರ್ಮಾಣವಾಗಿದ್ದ ಅನೇಕ ದೊಡ್ಡ ಕೊಠಡಿಗಳನ್ನು ಹೊಂದಿದ ದೊಡ್ಡ ಕಟ್ಟಡ ಆದಾಗಿತ್ತು. ನೆಲೆಗಳಲ್ಲಿ ವಿವಿಧ ಸ್ತರಗಳಲ್ಲಿ ದೊರೆತಿರುವ ಮಡಿಕೆ ಕುಡಿಕೆಗಳ ಶೈಲಿಯ ಆಧಾರದ ಮೇಲೆ ಮಿನೋವಾದ ನಾಗರಿಕತೆಯ ಒಂಬತ್ತು ಸಾಂಸ್ಕೃತಿಕ ಕಾಲಘಟ್ಟಗಳನ್ನು ಗುರುತಿಸಲಾಗಿದೆ. ಆ ಕಾಲದಲ್ಲಿ ಸಮುದ್ರದ ಮುಖೇನ ಈಜಿಪ್ಟ್ ಸೈಪ್ರೆಸ್ ಮತ್ತು ಸಮೀಪ ಪ್ರಾಶ್ಚ್ಯದೊಂದಿಗೆ ವಿಸ್ತೃತ ಸಂಪರ್ಕವನ್ನು ಬೆಳೆಸಿಕೊಳ್ಳಲಾಗಿತ್ತು.

ಗ್ರೀಸ್‌ನಲ್ಲೇ ಮಿನೋವನ್ನರು ಸಾಂಸ್ಕೃತಿಕವಾಗಿ ಹಿರಿದಾದ ಸ್ಥಾನ ಪಡೆದರು ಎಂಬುದಕ್ಕೆ ಅರ್ಥವೆಂದರೆ ಅವರ ಕಲೆಯನ್ನು ಉಳಿದವರು ಅನುಸರಿಸಿ ದ್ವೀಪಾದ್ಯಂತ ಅಳವಡಿಸಿಕೊಂಡರು. ಇದಕ್ಕೆ ಮೇಲು ವರ್ಗದ ಜನರೂ ಹೊರತಾಗಿರಲಿಲ್ಲ.

ಅಲ್ಲಿನ ಪೂಜಾ ಚಿತ್ರಗಳು ಮತ್ತು ಸಾಮಗ್ರಿಗಳನ್ನು ಆಧರಿಸಿ ಮಿನೋವಾದ ನಾಗರಿಕತೆಯಲ್ಲಿ ಧರ್ಮ ಒಂದು ಪ್ರಮುಖ ಪಾತ್ರ ವಹಿಸಿರುವಂತೆ ಕಂಡುಬರುತ್ತದೆ. ಅವರು ಫಲವತ್ತತೆಯ ಆರಾಧನೆ ಮತ್ತು ಪ್ರಕೃತಿ ಪೂಜೆಯನ್ನು ಮಾಡುತ್ತಿದ್ದರು. ಮಿನೋವಾದ ಧರ್ಮ ಬಹುದೇವತಾರಾಧನೆ ಹೊಂದಿತ್ತೆ ಅಥವಾ ಏಕ ದೇವತಾರಾಧನೆಯನ್ನು ಹೊಂದಿತ್ತೆ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದ್ದರೂ ಖಂಡಿತವಾಗಿಯೂ ಸ್ತ್ರೀ ದೇವತೆಯ ಆರಾಧನೆ ಮುಖ್ಯ ಪಂಥದ ವಿಷಯವಾಗಿದ್ದು, ಈ ದೇವತೆ ಬಹುರೂಪಿ ಆಗಿದ್ದಳು.

ಅಂತ್ಯದಲ್ಲಿ ಮಿನೋವನ್ನರು ಪ್ರಕೃತಿಯ ವಿಕೋಪಕ್ಕೆ ಒಳಗಾಗಿ ನಾಶ ಹೊಂದಿದರು. ಇಷ್ಟಾದರೂ ಈ ನಾಗರಿಕತೆ ಕ್ರಿ.ಪೂ.೧೦೦೦ದ ವರೆಗೆ ಉಳಿದು ಬಂತು.

ಕೊಲಿನ್ ರೆನ್ ಪೂರ‌್ಯೃ (೧೯೭೩) ಮಿನೋವಾದ ಸಮಾಜವನ್ನು ಮತ್ತು ಅದರ ನಂತರ ಅಸ್ತಿತ್ವಕ್ಕೆ ಬಂದ ಗ್ರೀಕ್ ಮುಖ್ಯ ಪ್ರದೇಶದ ಮೈಸೀನಿಯನ್ನರ ಸಮಾಜವನ್ನು ನಾಗರಿಕತೆಗಳೆಂದು ವಿವರಿಸುತ್ತಾನೆ. ಇದಕ್ಕೆ ಅವನು ನೀಡುವ ಸಮಜಾಯಿಸಿ ಅಂದರೆ ಆ ಕಾಲದಲ್ಲಿದ್ದ ಸಂಕೀರ್ಣ ಸಾಮಾಜಿಕ ಪದ್ಧತಿ. ಅರಮನೆಯ ರೂಪದಲ್ಲಿದ್ದ ಭವ್ಯ ವಾಸ್ತುಶಿಲ್ಪ, ವಿಸ್ತಾರವಾದ ಸಮಾಧಿಗಳು, ಅವರ ಆರ್ಥಿಕ ಹೆಚ್ಚುವರಿ, ಅವರ ದೂರದ ವ್ಯಾಪಾರಿ ಚಟುವಟಿಕೆಗಳು, ಅವರ ಸುಧಾರಿಸಿದ ಕಲೆ ಮತ್ತು ಲೋಹಗಾರಿಕೆ, ಹಾಗೂ ಆಹಾರದ ಪುನರ್ ಹಂಚಿಕೆಯ ರೀತಿಗಳು ಮುಂತಾದವುಗಳಾಗಿವೆೆ. ಈ ಎರಡೂ ಸಂಸ್ಕೃತಿಯ ಜನರು ಭವ್ಯವಾದ ಕಟ್ಟಡಗಳನ್ನು ನಿರ್ಮಿಸಲಿಲ್ಲ ಹಾಗೂ ನಗರಗಳಲ್ಲಿ ವಾಸಿಸಲಿಲ್ಲ. ರೆನ್ ಪೂರ‌್ಯೃ ಪ್ರಕಾರ ಈ ಎರಡು ನಾಗರಿಕತೆ ಸ್ಥಳೀಯ ಸಾಮಾಜಿಕ ಬದಲಾವಣೆ ಮತ್ತು ಪ್ರಾಪಂಚಿಕ ವಿಷಯದ ಅಭಿವೃದ್ದಿಯ ಫಲಿತಾಂಶವಾಗಿ ಉದಯಿಸಿದವೇ ಹೊರತು ಹೊರಗಡೆಯ ಜನಸಂಖ್ಯೆಯ ಚಟುವಟಿಕೆಯಿಂದ ಅಲ್ಲ ಬ್ರಿಯಾನ್ ಎಂ. ಫೆಗನ್ ಮೊದಲು ಊಹೆ ಮಾಡಿದ್ದಂತೆ ಹೊಸ ಜನ ಗ್ರೀಸ್‌ಗೆ ಉತ್ತರದಿಂದ ಬಂದರು ಅಥವಾ ಅನಟೊಲಿಯಾದ ಹೊಸ ಸಾಂಸ್ಕೃತಿಕ ವಿಚಾರಗಳು ಅಥವಾ ಪೂರ್ವದ ಮೆಡಿಟರೇನಿಯನ್ ಪ್ರದೇಶದ ಜನ ಈ ಸಂಸ್ಕೃತಿಯ ಉದಯಕ್ಕೆ ಕಾರಣರಾದರು ಎಂಬುದಕ್ಕಿಂತ ಮೇಲಿನ ಸಿದ್ಧಾಂತ ಸಂಪೂರ್ಣವಾಗಿ ಬೇರೆಯೇ ಆಗಿದೆ.

ಮೈಸೀನಿಯನ್ನರು

ಕ್ರಿ.ಪೂ.೧೭೦೦ ರಿಂದ ಕ್ರಿ.ಪೂ.೧೬೦೦ ಒಳಗೆ ಗ್ರೀಸ್‌ನ ಪ್ರಮುಖ ಪ್ರದೇಶದಲ್ಲಿ ಮೈಸೀಯನ್ನರ ಸಂಸ್ಕೃತಿ ಉದಯಿಸಿತು. ಕ್ರಿ.ಪೂ.೧೪೦೦ರ ಹೊತ್ತಿಗೆ ಈ ಸಂಸ್ಕೃತಿಯ ಪ್ರಭಾವ ಏಜಿಯನ ಸಮುದ್ರದ ಎಲ್ಲಾ ದ್ವೀಪಗಳಲ್ಲಿ ಹಾಗೂ ಏಷ್ಯ ಮೈನರ್‌ನ ತೀರ ಪ್ರದೇಶಗಳಲ್ಲಿ ಹಬ್ಬಿತು. ಕ್ರಿ.ಪೂ.೧೨೦೦ ರಿಂದ ೧೧೦೦ರ ನಡುವೆ ಸಂಸ್ಕೃತಿಯು ಅವನತಿ ಹೊಂದಿತು.

ಸಾಮಾನ್ಯವಾಗಿ ಇವರು ಯುದ್ಧಪ್ರಿಯರಾಗಿದ್ದರೆಂದು ನಂಬಲಾಗಿದ್ದು ಗ್ರೀಸ್‌ನ ಮುಖ್ಯ ಭೂಮಿಯಲ್ಲಿದ್ದ ಕೋಟೆಗಳಲ್ಲಿ ವಾಸಿಸುತ್ತಿದ್ದರು. ಉತ್ಪಾದನೆಯ ಹೆಚ್ಚಳದ ಕಾರಣದಿಂದ ಅವರ ಸಮಾಜವನ್ನು ಸ್ತರಗಳಾಗಿ ವಿಭಾಗಿ ಸಿದ್ದರು. ಅವರ ಸೈನಿಕ ಮುಖ್ಯರನ್ನು ಕಂಬಗಳಿಂದ ಕೂಡಿದ ಸಮಾಧಿಗಳಲ್ಲಿ ಹುಗಿಯು ತ್ತಿದ್ದರು. ಈ ಸಮಾಧಿಗಳಲ್ಲಿ ತಾಮ್ರ ಮತ್ತು ಚಿನ್ನದಿಂದ ಸಿಂಗರಿಸಿದ ಆಯುಧಗಳು ಇರುತ್ತಿದ್ದವು. ಜೊತೆಗೆ ಮೃತನ ಮುಖವನ್ನು ಹೋಲುವ ಚಿನ್ನದ ಮುಖವಾಡವೂ ಇರುತ್ತಿದ್ದವು. ಅವರು ಹೊಂದಿದ್ದ ದೂರದ ವ್ಯಾಪಾರಿ ಸಂಪರ್ಕಗಳಿಂದಲೂ ಹೇರಳ ಆರ್ಥಿಕ ಅಭಿವೃದ್ದಿಯಾಯಿತು. ಅವರ ರಾಜರುಗಳ ನಿಷ್ಣಾತ ರಥಸಾರಥಿಗಳಾಗಿದ್ದರು ಹಾಗೂ ಉತ್ತಮ ಕುದುರೆ ಸವಾರರು ಆಗಿದ್ದರು.

ಮೈಸೀನಿಯನ್ನರು ಒಂದು ಲಿಪಿಯನ್ನು ಬಳಸುತ್ತಿದ್ದರು. ಆದರೆ ಈ ಬರವಣಿಗೆ ಪದ್ಧತಿಯನ್ನು ಕಂಡುಹಿಡಿದವರು ಮಿನೋವನ್ನರು. ಏನೇ ಆದರೂ ಮೈಸೀನಿಯನ್ನರು ಈ ಬರವಣಿಗೆ ಪದ್ಧತಿಯನ್ನು ಅಭಿವೃದ್ದಿಪಡಿಸಿದರು. ಲೀನ್ಯಾರ್ ಬಿ ಎಂದು ಕರೆಯಲ್ಪಡುವ ಗ್ರೀಸ್ ಭಾಷೆಯಲ್ಲಿ ಬರೆಯಲ್ಪಟ್ಟ ಲಿಪಿಯನ್ನು ಬಳಸಿದರು. ಅದೊಂದು ಸರಳ ಚಿತ್ರ ಲಿಪಿಯಾಗಿತ್ತು.

ಮೈಸೀನಿಯನ್ನರು ಕುರಿತಂತೆ ಕಾವ್ಯಗಳು ರಚನೆಯಾದವು. ಹೋಮರನ ಮಹಾಕಾವ್ಯ ಗಳಲ್ಲಿ ತಿಳಿಸಿರುವ ಗ್ರೀಕರು ಮತ್ತು ಪ್ರಾಕ್ತನ ಶಾಸ್ತ್ರದಲ್ಲಿ ನಮೂದಿಸಿರುವ ಮೈಸೀನಿಯಾದ ಸಂಬಂಧದ ನಡುವೆ ಪ್ರಬಲ ಆಸಕ್ತಿ ಮೂಡುತ್ತದೆ. ಅನೇಕ ಪ್ರಾಕ್ತನಶಾಸ್ತ್ರಜ್ಞರು ಅಭಿಪ್ರಾಯ ಪಡುವಂತೆ ಮೈಸೀನಿಯನ್ನರ ಮತ್ತು ಆರಂಭದ ಗ್ರೀಕರ ನಡುವೆ ಹೋಮರನ ಬರವಣಿಗೆಗಳು ಸಾಂಸ್ಕೃತಿಕ ಮುಂದುವರಿಕೆಯ ಸಾಕ್ಷಿಗಳಾಗಿವೆ.

ಗ್ರೀಸ್‌ನ ಮುಖ್ಯ ಪ್ರದೇಶದಲ್ಲಿ ಮಧ್ಯ ಹೆಲಿಡ್ಯರ್ ಎಂದು ಕರೆಯಲ್ಪಡುವ ಮಧ್ಯ  ಕಂಚಿನಯುಗದ ವಿಸ್ತರಣೆಯೆ ಮೈಸೀನಿಯಾದ ಸಂಸ್ಕೃತಿ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯ ಹೆಲಿಡಿಕ್ ಮತ್ತು ನಂತರ ಹೆಲಿಡಿಕ್ ಯುಗಗಳ ಪರಿವರ್ತನೆ ಏಜಿಯನಾ ದ್ವೀಪಗಳು ಮತ್ತು ಕ್ರೇಟೆ ಜೊತೆ ವಿಸ್ತೃತ ಸಂಬಂಧಗಳೊಂದಿಗೆ ಗುರುತಿಸಲಾಗಿದೆ. ಅವರ ನೆಲೆಗಳು ಹೆಚ್ಚು ದೊಡ್ಡದಾಗುವುದರ ಜೊತೆಗೆ ಸಂಕೀರ್ಣವೂ ಆದವು. ಹಲವು ನೆಲೆ ಗಳಲ್ಲಿ ಸರಳ ಕೋಟೆಗಳ ನಿರ್ಮಾಣವನ್ನು ಗುರುತಿಸಲಾಗಿದೆ ಹಾಗೆ ವಿಸ್ತೃತವಾದ ಸಮಾಧಿಗಳನ್ನು ಪತ್ತೆ ಹಚ್ಚಲಾಗಿದೆ.

ಮೈಸೀನಿಯಾ ನಾಗರಿಕತೆ ಅವನತಿ ಹೊಂದಲು ಕಾರಣಗಳೇನೆಂದರೆ ಕುಸಿದ ವ್ಯಾಪಾರ, ಪೂರ್ವ ಮೆಡಿಟರೇನಿಯನ್ ರಾಜಕೀಯ, ಭೌಗೋಳದಲ್ಲಿ ಅಸಮತೋಲನೆ ಹಾಗೂ ಸಾಮಾಜಿಕ ಜೀವನದಲ್ಲಿ ಉಂಟಾದ ವೈರುಧ್ಯಗಳು. ಕ್ರಿ.ಪೂ.೧೦೫೦ರ ಹೊತ್ತಿಗೆ ಮೈಸೀನಿಯಾ ಸಂಸ್ಕೃತಿಯ ಎಲ್ಲಾ ಪ್ರಮುಖ ಅಂಶಗಳು ಕಾಣೆಯಾದವು. ಪರಿಣಾಮವಾಗಿ ಅಲ್ಲಿ ಆರ್ಥಿಕ ಅವನತಿಯಾಗಿ ಅವರ ನೆಲೆಗಳು ಕೇವಲ ಉಳಿವಿಗಾಗಿ ದುಡಿಯುವ ಮಟ್ಟಕ್ಕೆ ತಲುಪಿದವು. ಕುಶಲ ವಸ್ತುಗಳ ಉತ್ಪಾದನೆ ಸ್ಥಗಿತವಾಯಿತು. ಜನಸಂಖ್ಯೆಯು ನಾಶವಾಗುತ್ತಾ ಬಂದಿತು. ಈ ಸ್ಥಿತಿ ಸಾಮಾನ್ಯ ಕ್ರಿ.ಪೂ. ೮ನೆಯ ಶತಮಾನದಲ್ಲಿ ಅಭಿಜಾತ ಗ್ರೀಕ್ ನಗರ ರಾಜ್ಯಗಳು ಉದಯವಾಗುವವರೆಗೆ ಇತ್ತು. ಗ್ರೀಕರ ಹಲವು ವ್ಯವಸಾಯ ಯೋಗ್ಯ ಫಲವತ್ತಾದ ಭೂಮಿಗಳು ಬೆಟ್ಟಗುಡ್ಡಗಳಿಂದ ಬೇರ್ಪಟ್ಟಿದ್ದವು. ಏಜಿಯನ್ ದ್ವೀಪದ ಮತ್ತು ಗ್ರೀಕ್ ಮುಖ್ಯ ಪ್ರದೇಶದ ವ್ಯಾಪಾರಿಗಳು ಮತ್ತು ಸಮುದ್ರ ವರ್ತಕರು ರಾಜ್ಯಗಳ ಒಂದು ಕಾರ್ಯಜಾಲವನ್ನು ರೂಪಿಸಿದರು. ಈ ಪ್ರಯುಕ್ತ ನಗರ ರಾಜ್ಯಗಳಲ್ಲಿ ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಪರ್ಧೆ ಉಂಟಾಯಿತು. ಈ ನಗರ ರಾಜ್ಯಗಳಲ್ಲಿ ಅಥೆನ್ಸ್ ದೊಡ್ಡ ಮತ್ತು ಸಂಪದ್ಭರಿತ ನಗರ ರಾಜ್ಯವಾಗಿತ್ತು.

 

ಪರಾಮರ್ಶನ ಗ್ರಂಥಗಳು

೧. ಗೋರ್ಡನ್ ಚೈಲ್ಡ್, ೧೯೬೪. ವಾಟ್ ಹೆಪ್ಪನ್ಡ್ ಇನ್ ಹಿಸ್ಟರಿ, ಲಂಡನ್: ಪೆಂಗ್ವಿನ್ ಬುಕ್ಸ್.

೨. ವಿಲ್ ಡ್ಯುರಾಂಟ್, ೧೯೫೪. ಅವರ್ ಓರಿಯಂಟಲ್ ಹೆರಿಟೇಜ್, ದಿ ಸ್ಟೋರಿ ಆಫ್ ಸಿವಿಲೈಸೇಷನ್, ಭಾಗ-೧, ನ್ಯೂಯಾರ್ಕ್: ಸೈಮನ್.

೩. ಗ್ರಹಾಮ್ ಕ್ಲರ್ಕ್, ೧೯೯೭. ವರ್ಲ್ಡ್ ಪ್ರಿ ಹಿಸ್ಟರಿ ಇನ್ ನ್ಯೂ ಪರ್‌ಸ್ಪೆಕ್ಟಿವ್, ಮೂರನೆಯ ಆವೃತ್ತಿ, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್.