‘‘ಕುರುಡು ಪ್ರಾಕೃತಿಕ ಶಕ್ತಿಗಳನ್ನು ಬಿಟ್ಟು, ಗ್ರೀಕ್ ಮೂಲವಲ್ಲದ ಯಾವುದೂ ಈ ಪ್ರಪಂಚದಲ್ಲಿ ಚಾಲನೆಯನ್ನು ಪಡೆದಿಲ್ಲ. ಮತ್ತು ಯಾವುದೇ ನಾಗರಿಕ ರಾಷ್ಟ್ರದ ಬೌದ್ದಿಕ ಚಟುವಟಿಕೆಯ ಕ್ಷೇತ್ರ ಗ್ರೀಕರ ವಸಾಹತು.’’ ೧೯ನೆಯ ಶತಮಾನದ ಅಂತ್ಯದಲ್ಲಿ ಹೆನ್ರಿಮೆಯು ಹೇಳಿದ ಈ ಮಾತು, ಪ್ರಾಚೀನ ಈಜಿಪ್ಷಿಯನ್, ಇಂಡಿಯನ್ ಮತ್ತು ಚೀನಿ ನಾಗರಿಕತೆಗಳ ಪರಿಚಯವಿರುವ ಯಾರಿಗಾದರೂ ಉತ್ಪ್ರೇಕ್ಷೆಯೆನಿಸಿದರೂ ಪ್ರಾಚೀನ ಗ್ರೀಕರ ಬಗ್ಗೆ ತಿಳಿಯಬೇಕೆನ್ನುವ ನಮ್ಮ ಕೌತುಕವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಪ್ರಾಚೀನ ಗ್ರೀಕರು ಚಿಂತಿಸದ ವಸ್ತು ವಿಷಯಗಳೆ ವಿರಳ. ಭೌಗೋಳಿಕ ಪ್ರದೇಶಾಧಾರಿತ ರಾಜ್ಯ ವ್ಯವಸ್ಥೆಯನ್ನು ಮನುಷ್ಯರ ನಡುವಿನ ಇತರ ಕೂಟಗಳಿಗಿಂತ  (ಸಂಘ) ಹೆಚ್ಚು ಮುಖ್ಯವೆಂದು ಗ್ರೀಕರು ಪರಿಗಣಿಸಿದರು. ಅಲ್ಲದೇ ಪ್ರಪಂಚ ಮತ್ತು ಮನುಷ್ಯ ಈ ಕುರಿತಂತೆ ನಿಗೂಢ ಕಾಣ್ಕೆಗಳ ಬದಲು ಪ್ರಾಕೃತಿಕ ನಿಯಮಗಳ ಮೂಲಕ ವಿವರಣೆ ನೀಡಲು ಯತ್ನಿಸಿದರು.

ಗ್ರೀಕರ ಚಿಂತನೆ, ರೋಮನ್ನರ ಕಾಯವೆ ಮತ್ತು ಕ್ರೈಸ್ತ ಧರ್ಮ ಯುರೋಪಿನ ಸಂಸ್ಕೃತಿಯ ಆಧಾರ ಸ್ತಂಭಗಳಾಗಿದ್ದರೂ ಅರ್ನಾಲ್ಡ ಟಯನ್‌ಬೀ ಅವರು ಅಭಿಪ್ರಾಯ ಪಡುವಂತೆ ‘‘ಗ್ರೀಕ್ ಸಮಾಜದ ಕಾಯದಲ್ಲಿ ಯುರೋಪಿನ ನಾಗರಿಕತೆಯು ಬೆಳೆಯಿತು.’’

ಆಧುನಿಕ ಕಾಲದಲ್ಲಿ ಯೂರೋಪಿಯನ್ನರ ವಸಾಹತುಶಾಹಿಯೊಂದಿಗೆ ಯುರೋಪ್ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದ ಗ್ರೀಕರ ಅನೇಕ ವಿಚಾರಗಳು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಪ್ರಚಲಿತವಾದವು. ಉದಾಹರಣೆಗೆ ಸ್ಕೂಲ್, ಜಮ್ನಾಷಿಯಂ, ಅರ್ಥಮೆಟಿಕ್, ಜಿಯೋಮಿಟ್ರಿ, ಹಿಸ್ಟರಿ, ರೆಠೋರಿಕ್, ಫಿಸಿಕ್ಸ್,  ಬಯೋಲಜಿ,  ಅನಾಟಮಿ, ಹೈಜಿನ್, ಥೆರಪಿ, ಕೋಸಮೆಟಿಕ್ಸ್, ಪೊಯರ್ಚಿ, ಮ್ಯೂಸಿಕ್, ಟ್ರಾಜಿಡಿ, ಕಾಮಿಡಿ, ಫಿಲಾಸಫಿ, ಥಿಯಾಲಜಿ, ಅಗ್ನೋಸಿಸಿಸಂ, ನೆಟ್ಟಿಸಿಸಂ, ಸ್ವಾಯಸಿಸಂ, ಎಪಿಕ್ಯೂರಿಯನಿಸಂ, ಎಥಿಕ್ಸ್, ಪೊಲಿಟಿಕ್ಸ್, ಐಡಿಯಲಿಸಂ, ಫಿಲಾನಧ್ರಪಿ, ಟಲ್‌ಸಿ, ಪ್ಲೂಟೋಕ್ರಸಿ, ಡೆಮೋಕ್ರಸಿ, ರಿಪಬ್ಲಿಕ್ ಮೊದಲಾದವುಗಳು. ಇಷ್ಟಾದರೂ, ಅಸಾಮಾನ್ಯ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದ್ದ ಈ ಗ್ರೀಕರು ಆಧುನಿಕ ಕಾಲದಲ್ಲಿ ಟರ್ಕಿಷ್ ಸಾಮ್ರಾಜ್ಯದ ಒಂದು ಭಾಗವಾಗಿ, ಸ್ವಾತಂತ್ರ್ಯವನ್ನು ಕಳೆದುಕೊಂಡು, ನರಳಿ, ಅನಂತರ ಹೋರಾಡಿ ಕ್ರಿಸ್ತ ಶಕ ೧೮೨೯ರಲ್ಲಿ ಸ್ವತಂತ್ರರಾಗಿ ನಳನಳಿಸಿದ್ದು ಇತಿಹಾಸದ ಒಂದು ಭಾಗವೇ.

ಭೌಗೋಳಿಕ ಹಿನ್ನೆಲೆ

ಪ್ರಾಚೀನ ಗ್ರೀಕರು ತಮ್ಮ ನಾಡನ್ನು ‘ಹೆಲ್ಲಾಸ್ ’ ಎಂದೂ ತಮ್ಮನ್ನು ‘ಹೆಲನ್ಸ್’  (ಹೆಲನಿಸ್ ) ಎಂದು ಕರೆಯುತ್ತಿದ್ದರು. ಗ್ರೀಸ್ ದಕ್ಷಿಣ ಯುರೋಪಿನಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿರುವ ಒಂದು ಪರ್ಯಾಯ ದ್ವೀಪ. ಏಜಿಯನ್ ಸಮುದ್ರವು ಗ್ರೀಸನ್ನು ಏಷ್ಯಾ ಮೈನರಿನಿಂದ ಬೇರ್ಪಡಿಸಿದೆ. ಏಜಿಯನ್ ಸಮುದ್ರದಲ್ಲಿ ಅನೇಕ ದ್ವೀಪಗಳಿವೆ. ಬೆಟ್ಟಗಳೂ ಸಹ ಗ್ರೀಕನ್ನು ವಿವಿಧ ಪ್ರದೇಶಗಳಾಗಿ ವಿಭಾಗಿಸಿವೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶಗಳು ತಮ್ಮ ತಮ್ಮ ಸಾರೂಪ್ಯತ್ವವನ್ನು ಕಾಪಾಡಿಕೊಂಡು ತಮಗೆ ಸೂಕ್ತವಾದ ರೀತಿಯಲ್ಲಿ ಬೆಳೆದವು. ಪರ್ಷಿಯಾ ಮತ್ತು ಭಾರತ ದೇಶಗಳ ಮೇಲೆ ದಾಳಿ ನಡೆಸಿದ ಜನರ ಹಾಗೆ ಗ್ರೀಕರು ಸಹ ಇಂಡೋ ಯುರೋಪಿಯನ್ನರಾಗಿದ್ದರು. ಕ್ರಿಸ್ತಪೂರ್ವ ೮ನೇ ಶತಮಾನದ ವೇಳೆಗೆ ಅವರು ‘ಡೋರಿಯನ್ನರು’, ‘ಅಯೋಲಿಯನ್ನರು’ ಮತ್ತು ‘ಅಯೋನಿಯನ್ನರು’ ಎಂದು ಮೂರು ಪಂಗಡಗಳಾಗಿ ವಿಭಜಿಸಲ್ಪಟ್ಟಿದ್ದರು. ಸ್ಪಾರ್ಟಾ, ಅಥೆನ್ಸ್, ಕಾರಿಂಥ್, ಥೀಟ್ಸ್, ಅಯಿಗೋಸ್, ಯಪಿಸಸ್ ಮತ್ತು ಮಿಲಟಸ್ ಗ್ರೀಕ್ ಸಂಸ್ಕೃತಿಯ ಪ್ರಮುಖ ಕೇಂದ್ರಗಳಾಗಿದ್ದವು.

ಭೂಗೋಳವು ಜನರ ವ್ಯಕ್ತಿತ್ವ ಮತ್ತು ಜೀವನದ ಮೇಲೆ ಪರಿಣಾಮ ಉಂಟು ಮಾಡುತ್ತದೆಂಬುದೂ ಮತ್ತು ಆ ಜನತೆ ತಮ್ಮ ದೇಶದ ಇತಿಹಾಸದ ಮೇಲೆ ಪ್ರಭಾವ ಬೀರುವರೆಂಬುದೂ ಸ್ವತಃ ಸಿದ್ಧಸತ್ಯಾಂಶವಾಗಿದೆ. ಪರ್ವತ ಪ್ರದೇಶವಾಗಿರುವ ಗ್ರೀಸ್ ದೇಶವು ಕೃಷಿಗೆ ಯೋಗ್ಯವಾಗಿರಲಿಲ್ಲ. ಆದರೆ ನೌಕಾವಿದ್ಯೆಗೆ ಇರುವ ಸಹಜ ಸೌಕರ್ಯಗಳು ಈ ಕೊರತೆಯನ್ನು ನೀಗಿವೆ. ಏಜಿಯನ್ ಸಮುದ್ರದಲ್ಲಿ ಪುಟ್ಟ ದ್ವೀಪಗಳಿದ್ದವು. ಈ ದ್ವೀಪ ನಿವಾಸಿಗಳು ಒಳ್ಳೆಯ ನಾವಿಕರಾಗಲೂ ಮತ್ತು ಸಾಹಸಿಗಳಾಗಲು ಉತ್ತೇಜನವಿತ್ತಿತು. ಸಮುದ್ರ ತೀರದಲ್ಲಿರುವ ಸ್ವಾಭಾವಿಕ ಬಂದರುಗಳು ಸಮುದ್ರ ವ್ಯಾಪಾರಕ್ಕೆ ಉತ್ತೇಜನ ಕೊಟ್ಟವು. ಇದು ಜನರ ಆರ್ಥಿಕ ಅಭಿವೃದ್ದಿಗೆ ಕಾರಣವಾಯಿತು. ಗ್ರೀಸ್ ದೇಶ ಮತ್ತು ಜನರು ಸಣ್ಣ ಸಣ್ಣ ಭಾಗಗಳಾಗಿ ವಿಭಾಗಿಸಲ್ಪಡಲು ಪರ್ವತ ಶ್ರೇಣಿಗಳು ಮತ್ತು ಭೂಮಿ ಯನ್ನು ಸಮುದ್ರ ಗರಗಸದ ಮಾದರಿಯಲ್ಲಿ ಕೊರೆದಿರುವುದೂ ಕಾರಣವಾಗಿದೆ. ಇದರಿಂದಾಗಿ ಈ ಜನರು ಯಾವ ಸಂಪರ್ಕವೂ ಇಲ್ಲದೇ ಪ್ರತ್ಯೇಕವಾಗಿ ಜೀವಿಸಬೇಕಾಯಿತು. ಈ ಹಿನ್ನೆಲೆಯು ‘ಪೋಲಿಸ್’ ಅಥವಾ ನಗರ ರಾಜ್ಯಗಳ ಉದಯಕ್ಕೆ ಸೂಕ್ತ ವಾತಾವರಣ ವನ್ನು ಕಲ್ಪಿಸಿತು. ಪುರಾತನ ಗ್ರೀಸ್ ದೇಶವು ಅಮೃತ ಶಿಲೆಯನ್ನು ಒದಗಿಸಿತು. ಸಮುದ್ರ ಹಾಗೂ ಅಮೃತಶಿಲೆ ಇವುಗಳು ಗ್ರೀಕರು ಉತ್ಕಷ್ಟವಾದ ನಾಗರಿಕತೆಯನ್ನು ಸ್ಥಾಪಿಸಲು ಸಹಾಯಕವಾದವು.

ಐತಿಹಾಸಿಕ ಹಿನ್ನೆಲೆ

ಆರ್ಯರ ಆಗಮನಕ್ಕೆ ಪೂರ್ವದಲ್ಲಿ ಗ್ರೀಕ್ ದ್ವೀಪಗಳಲ್ಲಿ ಏಜಿಯನ್ ನಾಗರೀಕತೆಯು ಅಭಿವೃದ್ದಿಯಲ್ಲಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿದ್ದವರನ್ನು ‘ಮಿನೋಯನ್ಸ್’ ಎಂದೂ ಕರೆಯುತ್ತಿದ್ದರು. ಈ ನಾಗರಿಕತೆಯು ಮೊದಲಿಗೆ ಕ್ರೀಟ್‌ನಲ್ಲಿ ಬೆಳೆಯಿತು. ಪೌರಾಣಿಕ ದೊರೆಯ ಹೆಸರಿನ ಮೇಲೆ ಕ್ರೀಟನ್ನು ‘ಮಿಸೋಸ್’ ಎಂದು ಕರೆಯುತ್ತಿದ್ದುದರಿಂದ ಅಲ್ಲಿನ ನಾಗರಿಕತೆಗೆ ‘ಮಿಸೋಯನ್’ ನಾಗರಿಕತೆಯೆಂದು ಹೆಸರಾಯಿತು. ಅಲ್ಲಿನ ಗೋರಿಗಳಲ್ಲಿ ದೊರೆತಿರುವ ಸುಂದರವಾದ ಕತ್ತಿಗಳು, ಚೂರಿಗಳು, ಆಭರಣಗಳು, ದಂತದ ಕೆತ್ತನೆಗಳು ಮತ್ತು ಪುಷ್ಪ ಕುಂಭಗಳು ಈ ನಾಗರಿಕತೆಯ ಹಿರಿಮೆಯನ್ನು ಸ್ಪಷ್ಟಪಡಿಸುತ್ತವೆ.

ಸುಮಾರು ಕ್ರಿ.ಪೂ.೧೧೧೦ರಲ್ಲಿ ಗ್ರೀಕರು ಉತ್ತರದಿಂದ ನುಗ್ಗಿ ಅಲ್ಲಿನ ಮೊದಲ ಸಂಸ್ಕೃತಿಯನ್ನು ಮುಗಿಸಿ, ಟೆರನೀಯರು ಮತ್ತು ಮೈಸೀನಿಯರನ್ನು ನಾಶ ಮಾಡಿದರು. ಏಜಿಯನ್ ನಾಗರಿಕತೆಯ ಅವಶ್ಯವಾದ ಭಾವಗಳನ್ನು ಅಳವಡಿಸಿಕೊಂಡು ಒಂದು ಹೊಸ ನಾಗರಿಕತೆಯನ್ನು ಬೆಳೆಸಿದರು. ಇದು ಗ್ರೀಕ್ ನಾಗರಿಕತೆಯೆಂದು ಹೆಸರಾಗಿದೆ. ಕಾಲಾನುಕ್ರಮ ದಲ್ಲಿ ಗ್ರೀಕರು ಒಂದು ವರ್ಣಮಾಲೆಯನ್ನು ರಚಿಸುವುದರ ಜೊತೆಗೆ ಹಣದ ಚಲಾವಣೆ ಯನ್ನು ಜಾರಿಗೆ ತಂದರು. ಕ್ರಿ.ಪೂ.೬೭೦ರಲ್ಲಿ ಅವರ ಮೊದಲ ಟಂಕಸಾಲೆ ಸ್ಥಾಪಿತವಾಯಿತು.

ಗ್ರೀಕರು ಕ್ರಮವಾದ ಜೀವನವನ್ನು ಆರಂಭಿಸಿದರು. ಕೃಷಿ ಅವರ ಮುಖ್ಯ ಕಸುಬಾಯಿತು. ಅವರು ಸುಮಾರು ಕ್ರಿ.ಪೂ.೧೦೦೦ದ ವೇಳೆಗೆ ಏಜಿಯನ್ ಸಮುದ್ರದಾಟಿ ಏಷ್ಯಾ ಮೈನರ್ ವರೆಗೆ ವಿಸ್ತರಿಸಿದರು. ಕ್ರಿ.ಪೂ.೭೫೦ ರಿಂದ ೫೫೦ರ ನಡುವಿನಲ್ಲಿ ಅವರು ದೂರದಲ್ಲಿರುವ ಕಪ್ಪು ಸಮುದ್ರದ ತೀರದಲ್ಲೂ ಮತ್ತು ಮೆಡಿಟರೇನಿಯನ್ ಸಮುದ್ರದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲೂ ಗ್ರೀಕ್ ನಗರಗಳನ್ನು ಸ್ಥಾಪಿಸಿದರು. ಈ ಕಾಲದಲ್ಲಿ ಶ್ರೀಮಂತ ಆಳ್ವಿಕೆ ತುಂಬಾ ಗಮನಾರ್ಹ ಅಂಶವಾಗಿದೆ. ಆದರೆ ಮೇಲೇರುತ್ತಿದ್ದ ವರ್ತಕರು ಮತ್ತು ಶ್ರೀಮಂತರ ನಡುವೆ ಸ್ಪರ್ಧೆ ನಡೆದು ವರ್ತಕರ ಕೈಮೇಲಾಯಿತು.

ಟೈರೆಂಟ್ಸ್  (ನಿರಂಕುಶ ಪ್ರಭುಗಳು)

ಶ್ರೀಮಂತರ ಪತನದೊಂದಿಗೆ ಗ್ರೀಕ್ ಚರಿತ್ರೆಯಲ್ಲಿ ರಾಜಕೀಯವಾಗಿ ಎರಡನೇ ಹಂತ ಆರಂಭವಾಯಿತು. ಇದೇ ನಿರಂಕುಶ ಪ್ರಭುಗಳ ಆಳ್ವಿಕೆಯ ಆರಂಭ. ಪ್ರಭುತ್ವಕ್ಕಾಗಿ ನಡೆಯುತ್ತಿದ್ದ ಸತತ ಹೋರಾಟದಲ್ಲಿ ಸಾಹಸಗಾರನಾದ ನಾಯಕನು ದಂಗೆ, ಪಿತೂರಿಗಳನ್ನು ನಡೆಸಿ, ಅಧಿಕಾರವನ್ನು ಕಸಿದುಕೊಳ್ಳುವ ಅವಕಾಶವಾಯಿತು. ಅಧಿಕಾರಕ್ಕೆ ಬಂದ ಅಂಥ ನಾಯಕನನ್ನು ಗ್ರೀಕರು ನಿರಂಕುಶ ಪ್ರಭು ಎಂದು ಕರೆಯುತ್ತಿದ್ದರು. ಗ್ರೀಕರ ಪ್ರಕಾರ ಟೈರೆಂಟ್ ಬಂದ ವ್ಯಕ್ತಿ ಅರ್ಥವೇ ಹೊರತು, ಕ್ರೂರಿ ಅಥವಾ ನಿರ್ದಯಿಯಾದವನು ಎಂದಲ್ಲ. ಬೇರೆ ಹೇಳುವುದಾದರೆ ಈ ಪದ ಸಮುಚ್ಛಯವು ಆಡಳಿತಗಾರನ ಸ್ವಭಾವವನ್ನು ಸೂಚಿಸುತ್ತಿರಲಿಲ್ಲ. ಕೆಲವರು ಸಮರ್ಥ ಆಡಳಿತಗಾರರಾಗಿದ್ದು ಪ್ರಜೆಗಳ ಹಿತಕ್ಕಾಗಿ ಶ್ರಮಿಸಿದರು. ಅವರಲ್ಲಿ ಇಬ್ಬರು ಪ್ರಸಿದ್ಧರಾಗಿದ್ದರು. ಅವರೆಂದರೆ ಕಾರಿಂಥನ್ ಪೆರಿಯಾಂಡರ್ (ಕ್ರಿ.ಪೂ.೬೨೫-೫೮೫) ಮತ್ತು ಅಥೆನ್ಸ್‌ನ ಪಿಸಿಸ್ಟ್ರಾಟಸ್. ನಿರಂಕುಶ ಪ್ರಭುಗಳ ಆಳ್ವಿಕೆಯು ವರ್ತಕ ಮತ್ತು ಕೈಕಸುಬು ವರ್ಗದವರಿಗೆ ಅನುಕೂಲಕರವಾಗಿತ್ತು. ಆದರೆ ಈ ಆಳ್ವಿಕೆಯು ಬಹುಕಾಲ ಉಳಿಯಲಿಲ್ಲ. ಕ್ರಿ.ಪೂ.೫೦೦ರ ಹೊತ್ತಿಗೆ ಗ್ರೀಸ್‌ನ ಎಲ್ಲೆಡೆಯಲ್ಲಿಯೂ ಈ ರೀತಿಯ ಆಳ್ವಿಕೆಯು ನಾಶ ಹೊಂದಿ ಪ್ರಜಾಪ್ರಭುತ್ವದ ಸ್ಥಾಪನೆಗೆ ಎಡೆ ಮಾಡಿಕೊಟ್ಟಿತು.

ನಗರ ರಾಜ್ಯಗಳು

ಗ್ರೀಕ್ ಭಾಷೆಯಲ್ಲಿ ‘ಪೋಲಿಸ್ ’ ಎಂದರೆ ನಗರರಾಜ್ಯ. ‘ಪೋಲೀಸ್ ’ ಪದದಿಂದಲೇ ‘ಪೊಲಿಟಿಕ್ಸ್’ ಎಂಬ ಪದ ಬಂದಿರುವುದು. ಪ್ರಾಚೀನ ಗ್ರೀಸ್‌ನಲ್ಲಿ ಹಲವು ನಗರ ರಾಜ್ಯಗಳಿದ್ದರೂ ಅಥೆನ್ಸ್ ಮತ್ತು ಸ್ಪಾರ್ಟಾಗಳು ತುಂಬಾ ಮುಖ್ಯವಾಗಿ ಕಂಡುಬರುತ್ತವೆ. ಪ್ರತಿ ನಗರ ರಾಜ್ಯದಲ್ಲೂ ಒಂದೇ ಒಂದು ನಗರವಿದ್ದು, ಆ ನಗರದ ಸುತ್ತ ಇನ್ನೂರು ಅಥವಾ ಮುನ್ನೂರು ಚದುರ ಮೈಲಿ ಕೃಷಿ ಭೂಮಿ ಇರುತ್ತಿತ್ತು. ಈ ನಗರ ರಾಜ್ಯಗಳ ಬೆಳವಣಿಗೆಯು ಒಕ್ಕೂಟ ರಾಷ್ಟ್ರದ ಸ್ಥಾಪನೆಗೆ ಆಡಚಣೆಯಾಯಿತು. ಪ್ರತಿ ರಾಜ್ಯದ ಜನರ ಚಲನವಲನಗಳು ಅವರವರ ರಾಜ್ಯಕ್ಕೆ ಸೀಮಿತವಾಗಿತ್ತು. ಅವರು ತಮ್ಮ ರಾಜ್ಯಕ್ಕೆ ನಿಷ್ಠವಾಗಿದ್ದರೇ ವಿನಃ ಸಹ ಇಡೀ ರಾಷ್ಟ್ರಕ್ಕಲ್ಲ. ಪ್ರತಿ ನಗರ ರಾಜ್ಯ ತನ್ನದೇ ಆದ ವಿಶಿಷ್ಟ ಸಾಮಾಜಿಕ, ಆರ್ಥಿಕ ಬದುಕನ್ನು ಬೆಳೆಸಿಕೊಂಡಿತ್ತು.

ಅಥೆನ್ಸ್ ನಗರರಾಜ್ಯ

ಕ್ರಿ.ಪೂ.೪೯೦ರ ಮ್ಯಾರಾಥಾನ್ ಕದನದಲ್ಲಿ ಪರ್ಶಿಯರನ್ನರನ್ನು ಸೋಲಿಸಿದ ನಂತರ ಅಥೆನ್ಸ್ ತುಂಬ ಮುಖ್ಯವಾದ ನಗರರಾಜ್ಯವಾಗಿ ಬೆಳೆಯಿತು. ಮೊದಲಿಗೆ ಅಲ್ಲಿ ರಾಜತ್ವ ಇತ್ತು. ನಂತರ ಶ್ರೀಮಂತ ಪ್ರಭುತ್ವ ಅಥವಾ ಕುಲೀನರ ಸರ್ಕಾರ ಸ್ಥಾಪನೆಯಾಯಿತು. ಶ್ರೀಮಂತರು (ಅರ್ಕನರು) ಒಂದು ವರ್ಷದ ಅವಧಿಗೆ ಕುಲೀನರಿಂದ ಚುನಾಯಿಸಲ್ಪಡು ತ್ತಿದ್ದರು. ಅವರ ಆಳ್ವಿಕೆಯಲ್ಲಿ ಬಡ ರೈತ ವರ್ಗದವರು ಅತೃಪ್ತರಾಗಿ ಹೊಸ ಸುಧಾರಣೆ ಗಳಿಗೆ ಒತ್ತಾಯಿಸಿದರು.

ಕ್ರಿ.ಪೂ.೬೨೪ರಲ್ಲಿ ಕಾನೂನುಗಳನ್ನು ಸೂಕ್ತೀಕರಿಸುವ ಕಾರ್ಯವನ್ನು ಡ್ರೇಕೋ ಎಂಬಾತನಿಗೆ ವಹಿಸಲಾಯಿತು. ಕ್ರಿ.ಪೂ.೬೨೧ರಲ್ಲಿ ಅವುಗಳನ್ನು ಬರೆಯಲಾಯಿತು. ಡ್ರೇಕೋನ ಸಂಹಿತೆಯು ಬಹಳ ನಿರ್ದಯವಾಗಿತ್ತು. ಆದ್ದರಿಂದ ೩೦ ವರ್ಷಗಳ ನಂತರ ಕ್ರಿ.ಪೂ.೫೯೪ರಲ್ಲಿ ಸುಧಾರಣೆಗಳನ್ನು ತರಲು ಸೋಲಾಸ್ ಎಂಬಾತನು ಆರ್ಕನ್ ಆಗಿ ಚುನಾಯಿತನಾದನು. ಆತನು ಋಣಂ ಗುಲಾಮಗಿರಿಯನ್ನು ನಿರ್ಮೂಲನಗೊಳಿಸಿದನು. ಅಥೆನ್ಸ್‌ಗೆ ಹೊಸ ಸಂವಿಧಾನವನ್ನು ಕೊಟ್ಟನು. ಕಾಯಿದೆಗಳನ್ನು ಮಾಡುವ ಮತ್ತು ಅಂಗೀಕರಿಸುವ ಕಾರ್ಯದಲ್ಲಿ ಭಾಗವಹಿಸಲು ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದನು. ಆದರೆ ಸರ್ಕಾರದ ಹತೋಟಿಯು ಮಾತ್ರ ಶ್ರೀಮಂತರ ಕೈಯಲ್ಲಿಯೇ ಉಳಿಯಿತು.

ಸೋಲಾಸ್ ನಿವೃತ್ತನಾದ ಮೇಲೆ ಅರಾಜಕತೆ ಉಂಟಾಯಿತು. ನಿರಂಕುಶ ಪ್ರಭುವಾದ ಪಿಸಿಸ್ಟ್ರಾಟಿಸ್ ಅಧಿಕಾರಕ್ಕೆ ಬರಲು ಇದು ಸಹಾಯಕವಾಯಿತು. ಆತನ ಮರಣಾನಂತರ ಪುನಃ ಅರಾಜಕತೆಯುಂಟಾಯಿತು. ಈ ಅರಾಜಕತೆಯನ್ನು ಕ್ರೈಸ್ತನೀಸನು ಕೊನೆಗಾಣಿಸಿದನು. ಗ್ರೀಕ್ ಪ್ರಜಾಪ್ರಭುತ್ವದ ಪಿತಾಮಹನೆಂದು ಗೌರವಿಸಲ್ಪಡುವ ಕ್ರೈಸ್ತನೀಸನು ಗಮನಾರ್ಹ ವಾದ ಸುಧಾರಣೆಗಳನ್ನು ಜಾರಿಗೆ ತಂದನು. ರಾಜ್ಯವನ್ನು ಪುನರ್ ವ್ಯವಸ್ಥೆಗೊಳಿಸಿ ಅದನ್ನು ಮತ್ತಷ್ಟು ಪ್ರಜಾಸತ್ತೆಯಾಗಿಸಿದನು. ಬುಡಕಟ್ಟಿನ ಆಧಾರದ ಮೇಲೆ ರಚಿಸಲ್ಪಡುತ್ತಿದ್ದ ಸರ್ಕಾರವನ್ನು ಕೊನೆಗಾಣಿಸಿದನು. ಸಂವಿಧಾನವನ್ನು ವಿಸ್ತರಿಸಿ, ಪ್ರಜೆಗಳ ಸಭೆಯನ್ನು ಬಲಪಡಿಸಿ, ಸರದಿಯ ಪ್ರಕಾರ ಅಧಿಕಾರವನ್ನು ನೇಮಿಸಿದನು.

ಅಥೆನ್ಸ್ ಪೆರಿಕ್ಲಿಸ್ (ಕ್ರಿ.ಪೂ.೪೬೨-೪೨೯)ನ ಕಾಲದಲ್ಲಿ ಸುವರ್ಣ ಯುಗವನ್ನು ಕಂಡಿತು. ಅಥೆನ್ಸ್‌ನ ಪ್ರಸಿದ್ದಿಯು ತನ್ನ ಪರಾಕಾಷ್ಠೆಯನ್ನು ಮುಟ್ಟಿತು. ‘‘ಅತಿ ಮೇಧಾವಿ ಯಾದ ಪ್ರಜಾತಂತ್ರ ನಾಯಕ’’ ಅಥವಾ ‘ಅಥೆನ್ಸ್‌ನ ರಾಜಕೀಯ ಯಜಮಾನ’ ಎಂಬುದಾಗಿ ಆತನನ್ನು ಕರೆಯುತ್ತಿದ್ದರು. ಆತನು ಅನೇಕ ರಾಜಕೀಯ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದನು. ಅಥೆನ್ಸ್‌ನಲ್ಲಿ ನೇರ ಪ್ರಜಾಪ್ರಭುತ್ವದ ಬೆಳವಣಿಗೆಗೆ ಆತನ ಕೊಡುಗೆ ಮಹತ್ವದ್ದಾಗಿದೆ. ಚುನಾಯಿತರಾದ ಹಿರಿಯರ ಕೂಟವು ತನ್ನ ಹೆಚ್ಚಿನ ಅಧಿಕಾರವನ್ನು ಕಳೆದುಕೊಂಡಿತು. ವರ್ಷಕ್ಕೊಮ್ಮೆ ಅದೃಷ್ಟದಿಂದ ಚುನಾಯಿಲ್ಪಡುತ್ತಿದ್ದ ೫೦೦ ಸದಸ್ಯರ ಮಂಡಳಿಯು ಆಡಳಿತವನ್ನು ನಿರ್ವಹಿಸುತ್ತಿತ್ತು. ಸಾರ್ವಜನಿಕರ ಸೇವೆಗೆ ಸಂಬಳವನ್ನು ನಿಗದಿಪಡಿಸಿದನು. ಪೆರಿಕ್ಲಿಸ್‌ನ ಕಾಲದಲ್ಲಿ ಅಥೆನ್ಸ್ ರಾಜಕೀಯವಾಗಿ ಮಾತ್ರವಲ್ಲದೇ ಸಾಹಿತ್ಯ, ಕಲೆ, ವಾಸ್ತುಶಿಲ್ಪ ಮೊದಲಾದ ಕ್ಷೇತ್ರಗಳಲ್ಲಿ ಸರ್ವೋತ್ಕಷ್ಟತೆಯನ್ನು ಸಾಧಿಸಿತು. ಪೆರಿಕ್ಲಿಸ್ ನಾಮಕರಣ ಮಾಡಿದಂತೆ, ಅಥೆನ್ಸ್ ಯತಾರ್ಥವಾಗಿ ‘ಹೆಲಾಸ್’ನ ಪಾಠಶಾಲೆ ಆಗಿತ್ತು.

ಸಾರ್ಕೆಟಸ್, ಪ್ಲೇಟೋ, ಅರಿಸ್ಟಾಟಲ್ ಮೊದಲಾದ ಚಿಂತಕರು, ದಾರ್ಶನಿಕರು ಮತ್ತು ವಿಚಾರವಂತರು ಅಥೆನ್ಸ್‌ಗೆ ಸೇರಿದವರಾಗಿದ್ದರು. ಅಥೆನಿಯನ್ನರು, ಸ್ಪಾರ್ಟಾದವರಂತೆ ದೈಹಿಕ ಬಲಕ್ಕೇ ಹೆಚ್ಚಿನ ಮಹತ್ವ ಕೊಡದೇ ಚಿಂತನ-ಮಂಥನ, ವ್ಯಕ್ತಿ ಸ್ವಾತಂತ್ರ್ಯ, ಸೌಂದರ್ಯಪ್ರಜ್ಞೆ ಮೊದಲಾದವುಗಳಿಗೂ ಆದ್ಯತೆಯನ್ನು ನೀಡಿದ್ದರು. ಪೆರಿಕ್ಲಿಸ್‌ನ ಮಾತಿನಲ್ಲಿ ಹೇಳುವುದಾದರೆ ‘‘ನಾವು ಸೌಂದರ್ಯೋಪಾಸಕರಾದರೂ ಅಭಿರುಚಿಗಳಲ್ಲಿ ಸರಳರು ಮತ್ತು ಪೌರುಷವನ್ನು ಕ್ಷಿಣಿಸಲು ಬಿಡದೆ ಮನಸ್ಸನ್ನು ಸಂಸ್ಕರಿಸುವವರು.’’

ಸ್ಪಾರ್ಟಾ ನಗರರಾಜ್ಯ

ಸ್ಪಾರ್ಟಾದಲ್ಲಿ ಆಳುವವರು ಅಲ್ಪಸಂಖ್ಯಾತರಾಗಿದ್ದರು. ಇದರ ಪರಿಣಾಮವಾಗಿ ಆ ರಾಜ್ಯವು ಸೈನ್ಯಾಡಳಿತಕ್ಕೆ ಒಳಪಟ್ಟ ರಾಜ್ಯದಂತೆ ವ್ಯವಸ್ಥಿತವಾಗಿತ್ತು. ಸ್ಪೌರ್ಟ್‌ನ್ನರು ಶಾರೀರಿಕ ಬೆಳವಣಿಗೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. ಇವರು ಸೈನಿಕ ವಿಚಾರಗಳಿಗೇ ಹೆಚ್ಚು ಮಹತ್ವ ನೀಡಿದ್ದರಿಂದ ಅಥೆನೀಯರ ಭಾವನಾಶಕ್ತಿ ಹಾಗೂ ಮುಂದಾಳುತನವನ್ನು ಹೊಂದಿರಲಿಲ್ಲ.

ಸ್ಪಾರ್ಟಾ ರಾಜ್ಯವು ಸೈನ್ಯವನ್ನು ಅವಲಂಬಿಸಿತ್ತು. ಈ ಕಾರಣದಿಂದಾಗಿ ಅಲ್ಲಿನ ಪ್ರಜೆಗಳು ತಮ್ಮ ಏಳನೇ ವರ್ಷದಿಂದಲೇ ಕಠಿಣವಾದ ತರಬೇತಿಯನ್ನು ಪಡೆಯಬೇಕಾಗಿತ್ತು. ಈ ತರಬೇತಿಯು ೧೨ ವರ್ಷಗಳ ಅವಧಿಯದಾಗಿತ್ತು. ತರಬೇತಿಯ ನಂತರ ಅವರು ತಮ್ಮ ೬೦ನೇ ವಯಸ್ಸಿನವರೆಗೆ ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕಿತ್ತು. ಸಹನೆ, ಧೈರ್ಯ, ಶಿಸ್ತು ಮತ್ತು ಸೈನಿಕ ಸಾಮರ್ಥ್ಯ ಇವುಗಳನ್ನು ಬೆಳೆಸುವುದು ಇದರ ಗುರಿಯಾಗಿತ್ತು. ಸ್ತ್ರೀಯರೂ ಸಹ ದೈಹಿಕ ಶಿಕ್ಷಣವನ್ನು ಪಡೆಯಬೇಕಿತ್ತು. ಪುರುಷರಂತೆ ಸ್ತ್ರೀಯರೂ ಕ್ರೀಡೆಗಳಲ್ಲಿ ಹಾಗೂ ಸೈನಿಕ ವಿಚಾರಗಳಲ್ಲಿ ತರಬೇತಿ ಪಡೆಯಬೇಕಿತ್ತು. ಈ ರೀತಿಯ ಸೈನಿಕವಾದ ಸ್ಪಾರ್ಟನ್ನರನ್ನು ಗ್ರೀಸ್‌ನಲ್ಲೇ ಅತ್ಯುತ್ತಮ ಸಿಪಾಯಿಗಳನ್ನಾಗಿ ಮಾಡಿತು. ಆದರೆ ಅವರು ಮನಸ್ಸು ಹಾಗೂ ಆತ್ಮದ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಳ್ಳಲಾರದೇ ಹೋದರು. ಆದ್ದರಿಂದ ಗ್ರೀಕರ ಕಲೆ ಮತ್ತು ನಾಗರಿಕತೆಗೆ ಸ್ಪಾರ್ಟನ್ನರ ಕೊಡುಗೆ ಇಲ್ಲವಾಗಿದೆ.

ಸ್ಪಾರ್ಟನ್ನರ ಸರ್ಕಾರವು ರಾಜಸತ್ತೆಯಾಗಿದ್ದರೂ, ವಾಸ್ತವವಾಗಿ ಅದು ಕೆಲವರ ಪ್ರಭುತ್ವವಾಗಿತ್ತು.  ಸ್ಪಾರ್ಟಾವನ್ನು ಇಬ್ಬರು ರಾಜರು ಆಳುತ್ತಿದ್ದರೂ ೨೮ ಸದಸ್ಯರನ್ನೊಳ ಗೊಂಡ ಜಿರೂಸಿಯ ಅಥವಾ ಹಿರಿಯರ ಸಭೆಯು ಶಾಸನಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುತ್ತಿತ್ತು. ಅನಂತರ ಪೂರ್ಣ ಪ್ರಜಾ ಹಕ್ಕುಗಳನ್ನು ಹೊಂದಿದ್ದ ಮತ್ತು ಮೇಲು ವರ್ಗದ ಸದಸ್ಯರನ್ನೊಳಗೊಂಡ ‘ಅಪೆಲ್ಲಾ’ ಅಥವಾ ಜನರ ಸಭೆಗೆ ಅವುಗಳನ್ನು ಕಳುಹಿಸಲಾಗುತ್ತಿತ್ತು. ಇಮೊರೇಟ್ ಅಥವಾ ಮೇಲ್ವಿಚಾರಕರ ಮಂಡಳಿಯಲ್ಲಿ ಮುಖ್ಯ ಅಧಿಕಾರವು ಕೇಂದ್ರೀಕೃತವಾಗಿತ್ತು. ಸರ್ಕಾರದ ಆಡಳಿತದ ಮೇಲ್ವಿಚಾರಣೆಗಾಗಿ ಪ್ರಜೆಗಳಿಂದ ವರ್ಷಕ್ಕೊಮ್ಮೆ ಚುನಾಯಿತರಾದ ಐದು ಮಂದಿ ‘ಇಪೋರ್ಸ್ ’ ಅಥವಾ ಮೆಜಿಸ್ಟ್ರೇಟರು ಗಳಿರುತ್ತಿದ್ದರು. ಅವು ರಾಜನು ಅಂಕೆ ಮೀರದಂತೆ ನೋಡಿಕೊಳ್ಳುತ್ತಿದ್ದರು.

ಸಮಾಜ

ಇಲ್ಲಿ ವಿಶೇಷವಾಗಿ ಅಥೆನ್ಸ್‌ನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಬರೆಯಲಾಗಿದೆ ಯಾದರೂ ಅನೇಕ ಅಂಶಗಳು ಗ್ರೀಸ್‌ನ ಇತರೆಡೆಗಳಲ್ಲಿ ಸಾಮಾನ್ಯವಾಗಿದ್ದವು.

ಶೈಶವ

ಪ್ರತಿಯೊಬ್ಬರಿಗೂ ಮಕ್ಕಳನ್ನು ಹೊಂದಬೇಕೆಂಬ ನಿರೀಕ್ಷೆ ಇತ್ತು. ಮಕ್ಕಳಿರದವರನ್ನು ಮೂದಲಿಸಿ, ಅಣಕಿಸುವ ಪರಿಪಾಠವೂ ಇತ್ತು. ಮಕ್ಕಳಿರದವರು ದತ್ತು ಸ್ವೀಕರಿಸುವುದನ್ನು ಸಮಾಜ ಒಪ್ಪಿಕೊಂಡಿತ್ತು. ಜನಸಂಖ್ಯೆಯನ್ನು ನಿಯಂತ್ರಿಸುವ ಹಾಗೂ ಭೂಮಿಯ ಮರು ವಿಭಜನೆಯನ್ನು ತಡೆಗಟ್ಟಲು ಶಿಶುವಧೆ ಕಾಯಿದೆ ಮತ್ತು ಸಾರ್ವಜನಿಕ ಅಭಿಪ್ರಾಯ ಸಮ್ಮತಿಸಿತ್ತು. ಕುಟುಂಬ ನಿಯಂತ್ರಣ ಕ್ರಮಗಳನ್ನು ಗ್ರೀಕರು ಅನುಸರಿಸುತ್ತಿದ್ದರ ಬಗ್ಗೆ ಯಾವ ಪುರಾವೆಯೂ ದೊರಕಿಲ್ಲ. ವೃದ್ಧರಿಂದ ಹುಟ್ಟಿದ ಮತ್ತು ದುರ್ಬಲ ಮಕ್ಕಳನ್ನು ಮುಗಿಸುವಂತೆ ಪ್ಲೇಟೋ ತಿಳಿಸುತ್ತಾನೆ. ಆದರೆ, ಅರಿಸ್ಟಾಟಲ್ ಶಿಶುಹತ್ಯೆಗಿಂತ ಗರ್ಭಸ್ರಾವವನ್ನು ಅನುಮೋದಿಸುತ್ತಾನೆ. ವೈದ್ಯಕೀಯ ಪಿತಾಮಹ ಹಿಪೊಕ್ರೇಟ್ಸ್‌ನ ವೈದ್ಯಕೀಯ ನೀತಿ ಗರ್ಭಸ್ರಾವವನ್ನು ನಿಷೇಧಿಸುತ್ತದೆ. ಇಷ್ಟಾದರೂ ನಿಷ್ಣಾತ ಗ್ರೀಕ್ ದಾದಿಯರು ಈ ಕೆಲಸವನ್ನು ಮಾಡುತ್ತಿದ್ದರು.

ಸಾಮಾನ್ಯವಾಗಿ ಹತ್ತನೇ ದಿನ ಅಥವಾ ಅದಕ್ಕೆ ಮೊದಲು ಮಗುವನ್ನು ಆಧರಿಸಿ ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಲಾಗುತ್ತಿತ್ತು. ಆಗ ಕೆಲವು ಧಾರ್ಮಿಕ ವಿಧಿಗಳನ್ನು ಆಚರಿಸುತ್ತಿದ್ದರು. ಜೊತೆಗೆ ಮಗುವಿಗೆ ಉಡುಗೊರೆಗಳನ್ನು ಕೊಡುತ್ತಿದ್ದರು. ಮಗುವಿಗೆ ನಾಮಕರಣ ಮಾಡುತ್ತಿದ್ದರು. ಗ್ರೀಕರಲ್ಲಿ ಸಾಮಾನ್ಯವಾಗಿ ಒಂದೇ ಹೆಸರಿರುತ್ತಿದ್ದರೂ, ಮನೆಯಲ್ಲಿ ಹುಟ್ಟಿದ ಹಿರಿಯ ಗಂಡು ಮಗುವಿಗೆ ಅಜ್ಜನ ಹೆಸರನ್ನು (ತಂದೆಯ ತಂದೆ) ಇಡುವ ಕ್ರಮ ಇತ್ತು. ಮಗುವನ್ನು ಪ್ರೀತ್ಯಾದರಗಳಿಂದ ಪಾಲಿಸುತ್ತಿದ್ದರು. ಮಕ್ಕಳಿಗೆ ಅನೇಕ ಆಟಿಕೆಗಳನ್ನು ಕೊಟ್ಟು ರಂಜಿಸುತ್ತಿದ್ದರು. ಆದರೆ ಗುಲಾಮರಿಗೆ ಮಾತ್ರ ತಮ್ಮ ಮಕ್ಕಳನ್ನು ಸಾಕುವ ಅಧಿಕಾರವಿರಲಿಲ್ಲ.

ಅತಿಥಿ ಸತ್ಕಾರ

ಗ್ರೀಕರಲ್ಲಿ ಅತಿಥಿ ಸತ್ಕಾರಕ್ಕೆ ಮಹತ್ವ ಕೊಡಲಾಗಿತ್ತು. ಆಗಂತುಕರನ್ನು ಆಧರಿಸಲಾಗು ತ್ತಿತ್ತು. ಪರಿಚಯದವರಿಂದ, ಸ್ನೇಹಿತರಿಂದ ಪತ್ರ ತಂದವರನ್ನು ಚೆನ್ನಾಗಿ ನೋಡಿಕೊಳ್ಳ ಲಾಗುತ್ತಿತ್ತು. ಆಹ್ವಾನದ ಮೇಲೆ ಬಂದ ಅತಿಥಿಗಳಿಗೆ ಹೆಚ್ಚಿನ ಮಾನ್ಯತೆ ಮತ್ತು ಸವಲತ್ತು ಗಳು ದೊರೆಯುತ್ತಿದ್ದವು. ಅಂತಹ ಅತಿಥಿಗಳು ಹೊರಟು ಹೋಗುವಾಗ ನೆನಪಿನ ಕಾಣಿಕೆಗಳನ್ನು ನೀಡುತ್ತಿದ್ದರು.

ವಿದ್ಯಾಭ್ಯಾಸ

‘ವಿದ್ಯೆ ಇರದವರು ಸತ್ತಂತೆ’ ಎಂಬ ನಂಬಿಕೆ ಗ್ರೀಕ್ ಚಿಂತಕರಲ್ಲಿತ್ತು. ಸ್ವತಂತ್ರ ಗ್ರೀಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಿದ್ದರು. ಪ್ಲೆಟೋ ಸರ್ಕಾರಿ ಶಾಲೆಗಳನ್ನು ಪ್ರತಿಪಾದಿಸಿದರೂ, ಖಾಸಗೀ ಶಾಲೆಗಳೇ ಹೆಚ್ಚು ಅಸ್ತಿತ್ವದಲ್ಲಿದ್ದವು. ಪ್ರಾಯಶಃ ಇದಕ್ಕೆ ಕಾರಣ ಶಿಕ್ಷಣ ಕ್ಷೇತ್ರದಲ್ಲೂ ಸ್ಪರ್ಧೆ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆಂಬ ಕಲ್ಪನೆ ಅಥೆನಿಯರದಾಗಿತ್ತು.

ವೃತ್ತಿಪರ ಶಿಕ್ಷಕರು ನಡೆಸುತ್ತಿದ್ದ ಶಾಲೆಗಳಿಗೆ ಸ್ವತಂತ್ರವಾಗಿ ಜನಿಸಿದ ಗಂಡು ಮಕ್ಕಳನ್ನು ಅವರ ೬ನೆಯ ವರ್ಷದಲ್ಲಿ ಕಳುಹಿಸಿ ವಿದ್ಯಾರಂಭ ಮಾಡುತ್ತಿದ್ದರು. ಸ್ಕೂಲ್ ಗಳಲ್ಲಿ ಡೆಸ್ಕಗಳಿರುತ್ತಿರಲಿಲ್ಲ. ಕೇವಲ ಚೆಂಚುಗಳು ಮಾತ್ರ ಇರುತ್ತಿದ್ದವು. ಶಿಕ್ಷಕರು ಆತ್ಮೀಯತೆಯಿಂದ ಎಲ್ಲಾ ವಿಷಯಗಳನ್ನೂ ಬೋಧಿಸುತ್ತಿದ್ದರು. ಸಾಮಾನ್ಯವಾಗಿ ಕಲಿಕೆ ಯಲ್ಲಿ ಓದುವುದು, ಬರೆಯುವುದು, ಸಂಗೀತ, ಜೆಮ್ನಾಸ್ಟಿಕ್ಸ್, ಚಿತ್ರ ಬರೆಯುವುದು ಇತ್ಯಾದಿ ವಿಷಯಗಳಿರುತ್ತಿದ್ದವು. ಈಜಲು ಬಾರದ, ಕುಸ್ತಿ ಕಲಿಯದ, ಬಿಲ್ಲಿಗೆ ಹೆದೆಯೇರಿಸಿ ಬಾಣಬಿಡಲು ಬಾರದ ಯಾವುದೇ ವ್ಯಕ್ತಿಯನ್ನು ವಿದ್ಯಾವಂತನೆಂದು ಕರೆಯುತ್ತಿರಲಿಲ್ಲ.

ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮನೆಯಲ್ಲೇ ನಡೆಯುತ್ತಿತ್ತು. ‘ಅವರಿಗೆ’ ‘ಗೃಹವಿಜ್ಞಾನ’ ವನ್ನು ಕಲಿಸುತ್ತಿದ್ದರು. ಆದರೆ, ಸ್ಪಾರ್ಟಾದಲ್ಲಿ ಮಾತ್ರ ಪರಿಸ್ಥಿತಿ ಬೇರೆಯೇ ಆಗಿತ್ತು. ಸಾಮಾನ್ಯವಾಗಿ ತಾಯಂದಿರೇ ಅಥವಾ ಕೆಲವೊಮ್ಮೆ ದಾದಿಯರು ಹೆಣ್ಣು ಮಕ್ಕಳಿಗೆ ಓದುವುದು, ಬರೆಯುವುದು, ನೂಲುವುದು, ನೇಯುವುದು, ಕಸೂತಿ ಮಾಡುವುದು, ಸಂಗೀತಾಭ್ಯಾಸ, ವಾದ್ಯಗಳನ್ನು ನುಡಿಸುವುದು, ಅಡಿಗೆ ಮಾಡುವುದು ಇತ್ಯಾದಿಗಳನ್ನು ಕಲಿಸುತ್ತಿದ್ದರು.

ಯುವಕರಿಗೆ ಉನ್ನತ ವಿದ್ಯಾಭ್ಯಾಸವನ್ನು ವೃತ್ತಿಪರ ವಾಗ್ಮಿಗಳು ಮತ್ತು ಸೋಫಿಸ್ಟ್ ಗಳು ನೀಡುತ್ತಿದ್ದರು. ಇಲ್ಲಿ ಭಾಷಣಕಲೆ, ವಿಜ್ಞಾನ, ತತ್ವಜ್ಞಾನ ಮತ್ತು ಇತಿಹಾಸವನ್ನು ಮುಖ್ಯವಾಗಿ ಬೋಧಿಸುತ್ತಿದ್ದರು. ಹದಿನಾರು ವರ್ಷದ ಪ್ರಾಯದಿಂದ ಯುವಕರಿಗೆ ಹೆಚ್ಚಿನ ದೈಹಿಕ ವಿದ್ಯಾಭ್ಯಾಸವನ್ನು ನೀಡಲಾಗುತ್ತಿತ್ತು.

ಒಟ್ಟಾರೆ ಬೋಧನೆ – ಚಿಂತನೆ, ಸಂಯಮ, ಶಿಸ್ತು, ಆತ್ಮ ಗೌರವ, ದೇಶಪ್ರೇಮ, ಪ್ರಧಾನವಾಗಿದ್ದು ಆ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದ ಯುವಕರು ತಮ್ಮ ೨೧ನೇ ವಯಸ್ಸಿಗೆ ರಾಜ್ಯದ ಪೌರರಾಗುತ್ತಿದ್ದರು.

ಗ್ರೀಕರ ದೈಹಿಕ ನಿಲುವು

ಕ್ರಿ.ಪೂ.೫ನೇ ಶತಮಾನದಲ್ಲಿ ಗ್ರೀಕರು ಮಧ್ಯ ಎತ್ತರದ ಗಡ್ಡಧಾರಿಗಳಾಗಿದ್ದರು. ಎಲ್ಲರೂ ಸರ್ವಾಂಗ ಸುಂದರರೆಂದು ಹೇಳಲು ಬರುವುದಿಲ್ಲ. ಗ್ರೀಕರು ಸಾಮಾನ್ಯವಾಗಿ ಕಪ್ಪು ಕೂದಲಿನವರಾಗಿದ್ದು ಕೆಲವು ವರ್ಣೀಯರಾಗಿದ್ದರು. ಆದರೂ ಕೆಲವು ಕೆಂಗೂದಲಿ ನವರು ಇರುತ್ತಿದ್ದರು. ಬಿಳಿಕೂದಲಿಗೆ ಬಣ್ಣ ಹಚ್ಚಿ ಕಪ್ಪಾಗಿಸುವ ಅಥವಾ ಕೆಂಚಗಾಗಿಸುವ ಕ್ರಮ ಹಲವು ಗ್ರೀಕರಲ್ಲಿ ಇತ್ತು. ಇದರ ಉದ್ದೇಶ ತಮ್ಮ ವಯಸ್ಸನ್ನು ಮುಚ್ಚಿಕೊಳ್ಳುವುದೇ ಆಗಿತ್ತು. ಕೂದಲಿನ ರಕ್ಷಣೆಗಾಗಿ ಮತ್ತು ಬೆಳವಣಿಗೆಗಾಗಿ ಸ್ತ್ರೀ-ಪುರುಷರು ಕೂದಲಿಗೆ ಎಣ್ಣೆ ಸವರುತ್ತಿದ್ದರು. ಇಂಥ ಎಣ್ಣೆಗೆ ಸುಗಂಧ ದ್ರವ್ಯಗಳನ್ನು ಬೆರೆಸುತ್ತಿದ್ದರು. ಕ್ರಿ.ಪೂ. ೬ನೇ ಶತಮಾನದಲ್ಲೂ ಸ್ತ್ರೀ-ಪುರುಷರು ತಲೆಗೂದಲನ್ನು ಉದ್ದ ಬೆಳೆಸಿ ಹಿಂದುಗಡೆ ಕಟ್ಟುತ್ತಿದ್ದರು. ಸ್ತ್ರೀಯರು ಕೂದಲನ್ನು ಕಟ್ಟಲು ಟೇಪ್‌ಗಳನ್ನು ಬಳಸಿ ತಮ್ಮ ಹಣೆಯನ್ನು ಒಡವೆಗಳಿಂದ ಸಿಂಗರಿಸುತ್ತಿದ್ದರು. ವ್ಯಾರಥಾನ್ ಕದನದ ನಂತರ ಪುರುಷರು ತಮ್ಮ ಉದ್ದ ಕೂದಲನ್ನು ಕತ್ತರಿಸಲು ಪ್ರಾರಂಭಿಸಿದರು. ಅಲೆಗ್ಸಾಂಡರ್‌ನ ತರುವಾಯ ಗಡ್ಡ-ಮೀಸೆಗಳನ್ನು ಬೋಳಿಸುವುದು ರೂಢಿಗೆ ಬಂದಿತು. ಯಾವುದೇ ಗ್ರೀಕ್ ಗಡ್ಡ-ಮೀಸೆ ಯನ್ನು ಹೊಂದಿರುತ್ತಿದ್ದ ಅಥವಾ ಎರಡನ್ನೂ ಬೋಳಿಸಿರುತ್ತಿದ್ದ, ಕೇವಲ ಮೀಸೆಯನ್ನು ಬಿಡುವ ಕ್ರಮ ಗ್ರೀಕರಲ್ಲಿರಲಿಲ್ಲ. ಗಡ್ಡವಿದ್ದಲ್ಲಿ ಅಚ್ಚುಕಟ್ಟಾಗಿ ಟ್ರಿಮ್ ಮಾಡಿರುತ್ತಿದ್ದರು.

ಸ್ಥಿತವಂತ ಸ್ತ್ರೀಯರು ಹಲವಾರು ಕನ್ನಡಿಗಳು, ಹೆರಪಿನ್‌ಗಳು, ನೇಪ್ಟಿಪಿನ್‌ಗಳು, ಬಾಚಣಿಗೆಗಳು, ಸುಗಂಧದ ಕರಂಡಕಗಳು ಮತ್ತು ಲೇಪನದ ಕ್ರೀಮ್‌ಗಳ ಭರಣಿಗಳನ್ನು ಹೊಂದಿರುತ್ತಿದ್ದರು. ತುಟಿಗಳಿಗೆ ಮತ್ತು ಕಪೋಲಗಳಿಗೆ ಬಣ್ಣ ಹಚ್ಚಿ ರಂಗು ಬರಿಸುತ್ತಿದ್ದರು. ಹುಬ್ಬುಗಳನ್ನು ತೀಡಿ ತಿದ್ದಿ ಕಣ್ ಕೂದಲನ್ನು ಇನ್ನೂ ಕಪ್ಪಾಗಿಸುವ ಸೌಂದರ್ಯ ಪ್ರಜ್ಞೆ ಅವರಲ್ಲಿತ್ತು. ಹೆಂಗಸರು ಕೈಕಡಗ, ಕಂಠಾಭರಣ, ಕಿವಿಯುಂಗುರ, ಸರ ಮತ್ತು ಬ್ರೂಚಸ್ ಗಳನ್ನು ಒಡವೆಗಳಾಗಿ ಧರಿಸುತ್ತಿದ್ದರೆ, ಗಂಡಸರು ಕನಿಷ್ಟ ಒಂದು ಉಂಗುರವನ್ನಾದರೂ ಧರಿಸುತ್ತಿದ್ದರು. ಕುಲೀನರು ಮಾತ್ರ ದಿನಂಪ್ರತಿ ಒಂದೆರಡು ಬಾರಿ ಸ್ನಾನ ಮಾಡುತ್ತಿದ್ದರು. ಬಟ್ಟೆಗಳನ್ನು ಹೊಲಿಯದೆ ಒಂದನ್ನುಟ್ಟು ಮತ್ತೊಂದನ್ನು ಹೊದೆಯುತ್ತಿದ್ದರು. ನಗರದಿಂದ ನಗರಕ್ಕೆ ಈ ವಿಚಾರದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಇದೇ ಕ್ರಮ ಅವ್ಯಾಹತವಾಗಿ ಮುಂದುವರೆದಿತ್ತು.