ವಿವಾಹ

ಗ್ರೀಕರಲ್ಲಿ ವಿವಾಹ ಪದ್ಧತಿ ಇತ್ತು. ಪ್ರೇಮಿಸಿ ವಿವಾಹವಾಗುವ ಕ್ರಮ ಇದ್ದರೂ, ಸರ್ವೆಸಾಮಾನ್ಯ ಹಿರಿಯರು ನೋಡಿ ವಿವಾಹ ಮಾಡುತ್ತಿದ್ದುದೇ ಅಧಿಕವಾಗಿತ್ತು. ವಿವಾಹಕ್ಕೆ ಮೊದಲು ನಿಶ್ಚಿತಾರ್ಥ ನಡೆಯುತ್ತಿತ್ತು. ನಿಶ್ಚಿತಾರ್ಥ ಇಲ್ಲದೆ ವಿವಾಹ ಸಿಂಧು ವಾಗುತ್ತಿರಲಿಲ್ಲ. ಗ್ರೀಕರಲ್ಲಿ ವರದಕ್ಷಿಣೆ ನೀಡುವ ಕ್ರಮವಿತ್ತು. ಇದು ಕನ್ಯಾಪಿತೃಗಳ ಶಕ್ತಿಯನ್ನು ಅವಲಂಬಿಸಿರುತ್ತಿತ್ತು. ವಿವಾಹದ ಸಂದರ್ಭದಲ್ಲಿ ಹಲವು ವಿಧಿಗಳನ್ನು ಆಚರಿಸಿ, ಕೊನೆಗೆ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗಿ ಕೆಲವು ಆಚರಣೆ ಗಳೊಂದಿಗೆ ಮನೆ ತುಂಬಿಸಿಕೊಳ್ಳಲಾಗುತ್ತಿತ್ತು.

ವಿವಾಹವಾದ ಪತ್ನಿಯೇ ಅಲ್ಲದೇ ಉಪಪತ್ನಿಯರೂ ಇರುತ್ತಿದ್ದರು. ಸಲ್ಲಾಪಗಳಿಗಾಗಿ ಆಸ್ಥಾನದ ಸ್ತ್ರೀಯರನ್ನು ಬಳಸುತ್ತಿದ್ದರು. ಉಪಪತ್ನಿಯರು ಆಮೋದ-ಪ್ರಮೋದಗಳಿ ಗಾಗಿದ್ದು, ಉತ್ತರಾಧಿಕಾರಿಯನ್ನು ಹೆತ್ತುಕೊಟ್ಟು ಮನೆಗಳನ್ನು ನೋಡಿಕೊಳ್ಳಲು ಪತ್ನಿಯ ಅವಶ್ಯಕತೆ ಇತ್ತು. ವಿದ್ಯಾವಂತ ಸ್ತ್ರೀಯರು ಅಪರೂಪವಾಗಿದ್ದರಿಂದ ಪತಿ-ಪತ್ನಿಯರ ನಡುವೆ ಬೌದ್ದಿಕ ಕಂದಕವೇರ್ಪಟ್ಟು ಪುರುಷರು ಇತರ ಸ್ತ್ರೀಯರ ಒಡನಾಟವನ್ನು ಬಯಸುತ್ತಿದ್ದರು. ಪುರುಷರು ಸುಮಾರು ೩೦ರ ವಯಸ್ಸಿನಲ್ಲಿ ವಿವಾಹವಾದರೆ, ಯುವತಿ ಯರಿಗೆ ೧೫ ವರ್ಷದ ಒಳಗೆ ವಿವಾಹ ಮಾಡುತ್ತಿದ್ದರು. ಸ್ತ್ರೀಯ ಯೌವನ ಬೇಗ ಕುಂದುವುದರಿಂದ, ವಿವಾಹದಲ್ಲಿ ಸ್ತ್ರೀ-ಪುರುಷರ ವಯಸ್ಸಿನಲ್ಲಿ ಸಾಕಷ್ಟು ಅಂತರವಿರುತ್ತಿತ್ತು. ವಿವಾಹ ಪೂರ್ವ ಲೈಂಗಿಕ ಸಂಬಂಧಗಳನ್ನು ಪ್ರಶ್ನಿಸುತ್ತಿರಲಿಲ್ಲ. ವೃದ್ಧ ಪುರುಷರ ಯುವ ಪತ್ನಿಯರೊಂದಿಗೆ ಪರಪುರುಷರು ಹಲವೊಮ್ಮೆ ಸಲಿಗೆಯಿಂದ ಇರುತ್ತಿದ್ದರು. ವಿವಾಹ ವಾಗದವರನ್ನು, ವಿವಾಹವನ್ನು ವಿಳಂಬ ಮಾಡಿದವರನ್ನು ಮತ್ತು ಮಕ್ಕಳಾಗದವರನ್ನು ಸಾರ್ವಜನಿಕವಾಗಿ ಅಣಕಿಸಿ ಹಂಗಿಸಲಾಗುತ್ತಿತ್ತು. ಗ್ರೀಕ್ ಸಮಾಜದಲ್ಲಿ ವಿವಾಹ ವಿಚ್ಛೇದನವಿದ್ದು ಅದು ಪುರುಷರಿಗೆ ಸುಲಭವಾಗಿತ್ತು. ಕಾರಣವನ್ನೆ ನೀಡದೆ ಪತಿ ತನ್ನ ಪತ್ನಿಯನ್ನು ವಿಚ್ಛೇದಿಸಬಹುದಾಗಿತ್ತು. ಸಾಮಾನ್ಯವಾಗಿ ಬಂಜೆತನ ವಿಚ್ಛೇದನಕ್ಕೆ ಕಾರಣ ವಾಗಿರುತ್ತಿತ್ತು. ಏಕೆಂದರೆ ವಿವಾಹದ ಉದ್ದೇಶವೇ ಸಂತಾನ ಪಡೆಯುವುದಾಗಿತ್ತು. ಪ್ರಾಚೀನ ಭಾರತದಲ್ಲಿದ್ದಂತೆ ಗ್ರೀಕರಲ್ಲಿಯೂ ನಿಯೋಗ ಪದ್ಧತಿ ಇತ್ತು. ಗಂಡನು ನಿರ್ವೀರ್ಯನಾದರೆ ಸಂಬಂಧಿಯಿಂದ ತನ್ನ ಪತ್ನಿಯಲ್ಲಿ ಮಗುವನ್ನು ಪಡೆಯಬಹುದಾಗಿತ್ತು. ಇದಕ್ಕೆ ಸಾರ್ವಜನಿಕ ಅಭಿಪ್ರಾಯದ ಬೆಂಬಲವೂ ಕಾನೂನಿನ ಮನ್ನಣೆಯೂ ಇದ್ದಿತು. ಹಾಗೆ ಹುಟ್ಟಿದ ಮಗನು ನಿರ್ವೀರ್ಯ ಗಂಡಸಿಗೆ (ತಂದೆ) ಮಗನ ಸ್ಥಾನದಲ್ಲಿ ಮಾಡ ಬೇಕಾದ ಧಾರ್ಮಿಕ ವಿಧಿಗಳನ್ನು, ಪಿತೃಕಾರ್ಯವನ್ನು ಮಾಡಬೇಕಾಗಿದ್ದಿತು. ಪತಿಯಿಂದ ಕ್ರೌರ್ಯ ಮತ್ತು ಸವತಿಯರು ಹೆಚ್ಚಿದರೆ ಪತ್ನಿಯೂ ಸಹ ಪತಿಯಿಂದ ವಿವಾಹ ವಿಚ್ಛೇದನವನ್ನು ಪಡೆಯಬಹುದಿತ್ತು.

ಗ್ರೀಕ್ ಸಮಾಜದಲ್ಲಿ ಸಲಿಂಗರತಿ ಇತ್ತು. ಸಲಿಂಗ ಕಾಮಿಗಳಿಂದ ಆಕರ್ಷಿತರಾದ ಪೌರರು ಅಥೆನ್ಸ್‌ನಲ್ಲಿ ತಮ್ಮ ಮತದಾನದ ಹಕ್ಕನ್ನು ಕಾಯಿದೆ ಪ್ರಕಾರ ಕಳೆದುಕೊಳ್ಳುತ್ತಿದ್ದರು. ಸಲಿಂಗ ಕಾಮಿಗಳನ್ನು ಸಾರ್ವಜನಿಕರು ಗೇಲಿ ಮಾಡುವುದರ ಮೂಲಕ ಸಹಿಸಿಕೊಳ್ಳುತ್ತಿದ್ದರು. ಆದರೆ ಕ್ರೀಟ್ ಮತ್ತು ಸ್ಪಾರ್ಟಾಗಳಲ್ಲಿ ಸಲಿಂಗರತಿಯ ಮೇಲೆ ಯಾವುದೇ ನಿರ್ಬಂಧ ಇರಲಿಲ್ಲ. ಸೂಳೆಗಾರಿಕೆ ಮತ್ತು ಮದ್ಯಪಾನದಂಥ ಸಾಮಾಜಿಕ ಪಿಡುಗುಗಳು ಗ್ರೀಕ್ ಸಮಾಜವನ್ನು ಭಾದಿಸಿದ್ದವು.

ಮಹಿಳೆಯರು

ಹೆರಡೊಟಸ್‌ನ ಬರವಣಿಗೆಯಲ್ಲಿ ಸ್ತ್ರೀ ಸಂಬಂಧಿ ವಿಚಾರಗಳು ಹೆಚ್ಚಾಗಿ ಕಂಡು ಬರುತ್ತವೆ. ಆದರೆ ಥುಸಿಡೈಡಿಸ್‌ನ ಬರವಣಿಗೆಗಳಲ್ಲಿ ಆಕೆಯ ವಿಚಾರ ವಿರಳ. ವಿಲ್ ಡ್ಯೂರೆಂಟರು ಅಭಿಪ್ರಾಯ ಪಡುವಂತೆ ‘‘ಗ್ರೀಕ್ ಸಾಹಿತ್ಯದಲ್ಲೆಲ್ಲಾ ಸ್ತ್ರೀಯರು ಮಾಡುವ ತಪ್ಪುಗಳ ಬಗ್ಗೆ ಪದೇ ಪದೇ ಉಲ್ಲೇಖಗಳಿವೆ.’’ ಉದಾರಿ ಪ್ಪೂಟಾರ್ಕನೂ ಸಹ ಥೂಸಿಡೈಡಿಸ್‌ನನ್ನು ಅನುಕರಿಸುತ್ತಾ ಕೊನೆಗೆ ‘‘ಒಬ್ಬಳು ಸಭ್ಯ ಸ್ತ್ರೀ ಹೇಗೆ ಮನೆಯೊಳಗೇ ಇರಬೇಕೋ (ನಾಲ್ಕು ಗೋಡೆಗಳ ನಡುವೆ) ಹಾಗೆಯೇ ಅವಳ ಹೆಸರೂ ಸಹ’’ ಎಂದು ಮುಗಿಸುತ್ತಾನೆ. ಇದು ಅಥೆನ್ಸ್ ನಲ್ಲಿದ್ದ ಸ್ಥಿತಿಯಾದರೆ, ಡೋರಿಯನ್ನರಲ್ಲಿ ಮತ್ತು ಸ್ಪಾರ್ಟನ್ನರಲಿ ಈ ಸ್ಥಿತಿ ಇರಲಿಲ್ಲ. ತಾಯಿಯ ಮುಖೇನ ಬರುತ್ತಿದ್ದ ಆಸ್ತಿ (ತಾಯಿ ಕಡೆಯಿಂದ) ನಿಂತ ನಂತರ ಮತ್ತು ಬದುಕನ್ನು ವ್ಯಾಪಾರೀ ಧೋರಣೆಯಿಂದ ನೋಡುವ ದೃಷ್ಟಿ ಬೆಳೆದು, ಸ್ತ್ರೀಯರನ್ನು ಉಪಯುಕ್ತತೆಯ ದೃಷ್ಟಿಯಿಂದ ಪುರುಷರು ಕಾಣುವಂತಾಗಿ, ಕೊನೆಗೆ ಸ್ತ್ರೀಯರನ್ನು ಗೃಹಕೃತ್ಯಕ್ಕೆ ಮಾತ್ರ ಅಥೆನ್ಸ್‌ನಲ್ಲಿ ಸೀಮಿತಗೊಳಿಸಿರುವಂತೆ ಕಾಣುತ್ತದೆ. ಪೌರ್ವಾತ್ಯ ಸ್ವರೂಪದ ವಿವಾಹವನ್ನು ಅನುಸರಿಸಿದ ಸಂದರ್ಭದಲ್ಲಿ ವಿವಾಹ ಕಾಲದಲ್ಲಿ ಗ್ರೀಕರೂ ಪರದಾ ಪದ್ಧತಿಯನ್ನು (ಅವಕುಂಠಣ) ಅಳವಡಿಸಿಕೊಳ್ಳುತ್ತಿದ್ದರು. ವಿವಾಹದ ನಂತರ ವಧು ತನ್ನವರನ್ನು ತೊರೆದು, ಬೇರೆ ವಾತಾವರಣಕ್ಕೆ ಹೊಂದಿಕೊಂಡು ಚಾಕರಿ ಮಾಡು ವುದರ ಜೊತೆಗೆ ಇತರರ ದೇವತೆಗಳನ್ನು ಪೂಜಿಸಬೇಕಾಗುತ್ತಿತ್ತು. ‘‘ಏನೇ ಆದರೂ ಅಥೆನ್ಸ್‌ನ ಸಾಮಾನ್ಯ ಪುರುಷ ತನ್ನ ಪತ್ನಿಯನ್ನು ಪ್ರೀತಿಸುತ್ತಾನೆ. ಈ ವಿಚಾರ ವನ್ನು ಅವನು ಮುಚ್ಚಿಡುವುದೂ ಇಲ್ಲ.’’ ಒಟ್ಟಾರೆ ಸಮಾಜದಲ್ಲಿ ಸ್ತ್ರೀಯರನ್ನು ಗೌರವ ಭಾವದಿಂದ ನೋಡಲಾಗುತ್ತಿತ್ತು.

ವೃದ್ಧಾಪ್ಯ

ಜೀವನ ಪ್ರೇಮಿಗಳಾಗಿದ್ದ ಗ್ರೀಕರು ವೃದ್ಧಾಪ್ಯಕ್ಕೆ ಅಂಜಿ ಖಿನ್ನರಾಗುತ್ತಿದ್ದರು. ಗ್ರೀಕರ ಇತಿಹಾಸದಲ್ಲಿ ವೃದ್ಧರ ಬಗ್ಗೆ ಇತರರಿಗಿದ್ದ ಸ್ವಾರ್ಥದ ಅನಾದರಣೆಯ ಬಗ್ಗೆ ಉಲ್ಲೇಖಗಳಿವೆ. ಸತ್ತ ವ್ಯಕ್ತಿಯನ್ನು ಸುಡುವ ಅಥವಾ ಹೂಳೂವ ಕ್ರಮ ಗ್ರೀಕರಲ್ಲಿತ್ತು. ಹಾಗೆ ಮಾಡದಿದ್ದರೆ ಸತ್ತ ವ್ಯಕ್ತಿಯ ಆತ್ಮ ಅಶಾಂತಿಯಿಂದ ಅರೆದು ಸಂಬಂಧಪಟ್ಟವರ ಮೇಲೆ ಸೇಡು ತೀರಿಸಿಕೊಳ್ಳುತ್ತದೆ ಎಂಬ ನಂಬಿಕೆ ಗ್ರೀಕರಲ್ಲಿತ್ತು. ಅಥವಾ ಸತ್ತ ವ್ಯಕ್ತಿ ಭೂತ-ಪ್ರೇತವಾಗಿ ಬಂದು ರೋಗ ರುಜಿನ, ಕೇಡನ್ನು ತಂದು ಸಸ್ಯ ಸಂಕುಲಗಳನ್ನು ನಾಶ ಮಾಡಬಹುದೆಂಬ ನಂಬಿಕೆಯೂ ಇತ್ತು. ಸತ್ತ ವ್ಯಕ್ತಿಯ ಶವಕ್ಕೆ ಸ್ನಾನ ಮಾಡಿಸಿ, ಸುಗಂಧ ಲೇಪಿಸಿ ಹೂಗಳಿಂದ ಸಿಂಗರಿಸಿ, ಕುಟುಂಬದ ಯೋಗ್ಯತಾನುಸಾರ ಸಾಧ್ಯವಾಗುವ ಉತ್ಕೃಷ್ಟ ಬಟ್ಟೆಯನ್ನು ಹೊದಿಸಿ, ಮಣ್ಣಿನ ಮಡಕೆ ಅಥವಾ ಮರದ ಶವಪೆಟ್ಟಿಗೆಯಲ್ಲಿಟ್ಟು, ರಸ್ತೆಯಲ್ಲಿ ಮೆರವಣಿಗೆಯಲ್ಲಿ ತರುವಾಗ, ಕಪ್ಪು ಬಟ್ಟೆಗಳನ್ನು ಉಟ್ಟು ಶೋಕಿಸುತ್ತಿದ್ದರು.  ಸ್ತ್ರೀಯರು ಎದೆ-ಬಾಯಿಗಳನ್ನು ಬಡಿದುಕೊಂಡು ರೋದಿಸುತ್ತಿದ್ದರು. ಶವಯಾತ್ರೆಯ ಸಂದರ್ಭದಲ್ಲಿ ಅಳುವ ವೃತ್ತಿ ಪರರನ್ನು ಹಣ ಕೊಟ್ಟು ಕರೆಸುವ ಕ್ರಮವೂ ಇತ್ತು. ಶೋಕಿಸುವವರು ಸಮಾಧಿಯ ಮೇಲೆ ಹೂಗುಚ್ಛಗಳನ್ನಿಟ್ಟು ಗೌರವವನ್ನು ಸೂಚಿಸುತ್ತಿದ್ದರು. ಕೊನೆಯಲ್ಲಿ ಎಲ್ಲರೂ ಸಂಸ್ಕಾರ ಭೋಜನಕ್ಕೆ ತೆರಳುತ್ತಿದ್ದರು.

ಗ್ರೀಕರ ಧರ್ಮ

ಮೊದಲ ನೋಟಕ್ಕೆ ಗ್ರೀಕ್ ಧರ್ಮ ನೈತಿಕತೆಗೆ ಬಹುಮುಖ್ಯ ಪ್ರಭಾವವಾಗಿದ್ದಂತೆ ತೋರುವುದಿಲ್ಲ. ಅದರ ಧರ್ಮ ಅದರ ಮೂಲದಲ್ಲಿ ಒಂದು ‘ಮ್ಯಾಟಿಕ್’ ಆಗಿ ಕಾಣು ತ್ತದೆಯೇ ಹೊರತು ನೀತಿಯಾಗಿ ಅಲ್ಲ. ಕೊನೆಯವರೆಗೂ ಗ್ರೀಕ್ ಧರ್ಮ ಕರ್ಮತಂತ್ರಗಳ ಕರಾರುವಕ್ಕಾದ ಆಚರಣೆಯಾಗಿ ಕಾಣುತ್ತದೆಯೇ ವಿನಃ ಶೀಲಕ್ಕೆ ಹೆಚ್ಚಿನ ಮಹತ್ವಕೊಟ್ಟಂತೆ ತೋರುವುದಿಲ್ಲ. ಹೇಳಬೇಕೆಂದರೆ ಕೆಲವು ದೇವತೆಗಳು ಒಲಂಪಸ್ ಮೇಲೆ ಅಥವಾ ಭೂಮಿಯ ಮೇಲೆ ತಾವೇ ಗುಣಪೂರ್ಣರಾಗಿ ಅಥವಾ ಪ್ರಾಮಾಣಿಕರಾಗಿ ಕಂಡುಬರುವುದಿಲ್ಲ.

ಗ್ರೀಕರಲ್ಲಿ ಅತ್ಯಂತ ಕರ್ಮಠ ಆಸ್ತಿಕರು ಮತ್ತು ನಾಸ್ತಿಕರು ಇದ್ದರು. ಅಮುಖ್ಯ ದೇವತೆಗಳನ್ನು ಆಕಾಶ ದೇವತೆಗಳು, ಭೂದೇವತೆಗಳು ಫಲವತ್ತತೆಯ ದೇವತೆಗಳು, ಪ್ರಾಣ ದೇವತೆಗಳು ಮತ್ತು ಪಾತಾಳ ದೇವತೆಗಳೆಂದು ವಿಭಾಗಿಸಬಹುದು.

ಗ್ರೀಸ್‌ನ ದೊಡ್ಡ ದೇವತೆಗಳು ಒಲಂಪಸ್ ಬೆಟ್ಟದ ಮೇಲೆ ವಾಸಿಸುತ್ತಾರೆಂಬ ನಂಬಿಕೆ ಇತ್ತು. ಗ್ರೀಕರು ದೊಡ್ಡ ದೊಡ್ಡ ದೇಗುಲಗಳನ್ನು ನಿರ್ಮಿಸಿದರು. ಕ್ರಿ.ಪೂ.೭ನೇ ಶತಮಾನದ ತರುವಾಯ ಪ್ರತಿ ಗ್ರೀಕ್ ರಾಜ್ಯ ತನ್ನದೇ ಒಲಂಪಿಯನ್ ದೇವರನ್ನು ಹೊಂದಿತ್ತು. ಒಂದು ಶತಮಾನದ ನಂತರ ಡಯೋಸೈಸಿಸ್ ದೇವರ ಆರಾಧನೆ ಜನಪ್ರಿಯ ವಾಯಿತು. ಈ ದೇವರ ಪೂಜಾ ಸಂದರ್ಭದಲ್ಲಿ ಹೆಚ್ಚು ಗದ್ದಲ ಗಲಾಟೆಗಳು ಇದ್ದು, ಸ್ತ್ರೀಯರೂ ಸಹ ಹಾಡಿ ನರ್ತಿಸುತ್ತಿದ್ದರು. ಕಾಲಾನುಕ್ರಮದಲ್ಲಿ ‘ಆರ್ಫಿಕ್ ಧರ್ಮದ ವಿಕಾಸವನ್ನು ಕಾಣುತ್ತೇವೆ. ಈ ಧರ್ಮೀಯರು ಉಪವಾಸ, ವ್ರತಗಳೊಂದಿಗೆ ಪ್ರಾಪಂಚಿಕ ಭೋಗಳನ್ನು ತ್ಯಜಿಸುತ್ತಿದ್ದರು.

ಗ್ರೀಕ್ ದೇವತೆಗಳಲ್ಲೆಲ್ಲಾ ಪ್ರಮುಖ ಮತ್ತು ಪ್ರಖ್ಯಾತ ದೇವರೆಂದರೆ ಅಪೊಲೊ. ಇವನು ಶ್ರೀಮಂತರ ದೇವನಾಗಿದ್ದನು. ಪ್ರೀತಿ, ನ್ಯಾಯ, ಕರುಣೆ, ಔದಾರ್ಯಗಳ ಪ್ರತೀತನಾಗಿ ಅಪೋಲೋನನ್ನು ಪರಿಗಣಿಸಿದ್ದರ ಜೊತೆಗೆ ಅವನನ್ನು ನವಯುವಕನಾಗಿ, ಸಂಗೀತ-ಕ್ರೀಡೆಗಳ ಪ್ರವೀಣನಾಗಿ ಪರಿಭಾವಿಸಲಾಗಿತ್ತು. ಎಲ್ಲಾ ಜನರೂ ದೇವವಾಣಿಯನ್ನು ಕೇಳಲು ಡೆಲ್ಫಿಗೆ ಹೋಗುತ್ತಿದ್ದರು. ಡೆಲ್ಫಿಯಲ್ಲಿ ಪುರೋಹಿತರು ಜನರು ಕೇಳುವ ಪ್ರಶ್ನೆಗಳಿಗೆ ದೇವರಿಂದ ಉತ್ತರಗಳನ್ನು ಪಡೆದು ತಿಳಿಸುತ್ತಿದ್ದರು. ಕ್ರಿ.ಪೂ.೭೭೬ರಲ್ಲಿ ತಮ್ಮ ಧರ್ಮಕ್ಕೆ ಸಂಬಂಧಿಸಿದಂತೆ ಒಲಂಪಿಯಾದಲ್ಲಿ ಒಂದು ದೊಡ್ಡ ಹಬ್ಬವನ್ನು ಏರ್ಪಡಿಸಿದ್ದರು. ದೇವರ ಗೌರವಾರ್ಥ ಈ ಹಬ್ಬದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಜಯುಸ್ ಮತ್ತು ಅಥೆನಾ ದೇವತೆಗಳು ಗ್ರೀಕರ ಮತ್ತೆರಡು ಪ್ರಮುಖ ದೇವರುಗಳಾಗಿದ್ದರು.

ಇಷ್ಟೇ ಅಲ್ಲದೇ ಗ್ರೀಕರಲ್ಲಿ ನಾಗಪೂಜೆ ಮತ್ತು ಶಿಶ್ನ ಪೂಜೆಗಳೂ ಇದ್ದವು. ಯುದ್ಧಕ್ಕೆ ಮೊದಲು ಮತ್ತು ಬಹುಮುಖ್ಯ ಕಾರ್ಯಗಳಿಗೆ ಮೊದಲು ಪ್ರಾಣಿಗಳನ್ನು ಬಲಿಕೊಡುವ ಪದ್ಧತಿ ಗ್ರೀಕರಲ್ಲಿತ್ತು. ಹಂದಿ, ಬಸವ ಮತ್ತು ಕುರಿಗಳನ್ನು ದೇವರುಗಳ ಪ್ರೀತ್ಯಾರ್ಥ ಬಲಿಕೊಡುವ ಕ್ರಮವಿತ್ತು. ಕ್ರೈಸ್ತಧರ್ಮದ ಆಗಮನದವರೆವಿಗೂ ಪ್ರಾಣಿಗಳನ್ನು ಬಲಿಕೊಡುವ ಪದ್ಧತಿ ಗ್ರೀಸ್‌ನಲ್ಲಿ ಮುಂದುವರೆಯಿತು. ಅಲಿವ್ ಮರವನ್ನು ಜೀವವೃಕ್ಷ ವೆಂದು ಗ್ರೀಕರು ಪರಿಗಣಿಸಿದ್ದರು. ಮತ್ತು ಅದು ಅವರ ಜೀವನದ ಅವಿಭಾಜ್ಯ ಅಂಗವಾಗಿತ್ತು.

ಗ್ರೀಕರಲ್ಲಿಯೂ ಬಹುಬಗೆಯ ಮೂಢನಂಬಿಕೆಗಳು ಮನೆ ಮಾಡಿಕೊಂಡಿದ್ದವು. ಕೆಲವೊಮ್ಮೆ ಗ್ರೀಕರ ಆಚರಣೆಗಳು ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಬೇರೆಯೇ ಆಗಿರುತ್ತಿದ್ದವು. ಒಟ್ಟಾರೆ ಗ್ರೀಕ್ ಧರ್ಮವು ವಿಭಿನ್ನವೂ ತೊಡಕಿನದೂ ಆಗಿದ್ದು ಪೌರ್ವಾತ್ಯ ಧರ್ಮದಲ್ಲಿ ಕಂಡುಬರುವ ಸರ್ವಸ್ವತಂತ್ರ ಸೃಷ್ಟಿತತ್ವವನ್ನು ಅವರು ಅನುಸರಿಸಲಿಲ್ಲ.

ಆರ್ಥಿಕ ಜೀವನ

ಕೃಷಿಯು ಸಣ್ಣ ಪ್ರಮಾಣದ್ದಾಗಿದ್ದರೂ ಅದು ಸಾಮಾನ್ಯ ಗ್ರೀಕನ ಉದ್ಯೋಗವಾಗಿತ್ತು. ಅವರು ಗೋಧಿ, ಜವೆಗೋಧಿ ಬಟಾಣಿ, ಆಲೀವ್, ದ್ರಾಕ್ಷಿ, ಅಂಜೂರ ಮೊದಲಾದವುಗಳನ್ನು ಬೆಳೆಯುತ್ತಿದ್ದರು. ಅವರ ಆರ್ಥಿಕ ವ್ಯವಸ್ಥೆಯಲ್ಲಿ ಅಲೀವ್ ಬಹುಮುಖ್ಯ ಪಾತ್ರವನ್ನು ವಹಿಸಿತ್ತು. ಪೆಲೋಪೋನೀಶಿಯನ್ ಯುದ್ಧಗಳಲ್ಲಿ ಆಲೀವ್ ತೋಟಗಳು ನಾಶವಾದದ್ದ ರಿಂದ ಅಥೆನ್ಸ್‌ನ ಅವನತಿಯ ಅನಿವಾರ್ಯವಾಯಿತು. ಗ್ರೀಸ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ನೀರನ್ನು ಸಂಗ್ರಹಿಸಲು ವಿಶೇಷ ಗಮನ ಕೊಡಲಾಗಿತ್ತು.

ಗ್ರೀಸ್ ದೇಶವು ಅಮೃತಶಿಲೆ, ಕಬ್ಬಿಣ, ಸತುವು, ಬೆಳ್ಳಿ ಮೊದಲಾದ ಸ್ವಾಭಾವಿಕ ಸಂಪನ್ಮೂಲಗಳಿಗೆ ಹೆಸರುವಾಸಿಯಾಗಿತ್ತು. ಈ ಸಂಪನ್ಮೂಗಳನ್ನು ಅವರು ಪೂರ್ತಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಜೀತದಾಳುಗಳು(ಸ್ತ್ರೀಯರೂ ಸೇರಿದಂತೆ) ಗಣಿ ಕೈಗಾರಿಕೆ ಗಳಲ್ಲಿ ದುಡಿಯುತ್ತಿದ್ದರು. ಗಣಿಗಳಲ್ಲಿ ಅಹೋರಾತ್ರಿ ಕೆಲಸ ನಡೆಯುತ್ತಿದ್ದು ಕೆಲಸಗಾರರು ೧೦ ಗಂಟೆಯ ಶಿಪ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು.

ದ್ರಾಕ್ಷಾರಸ, ಆಲೀವ್ ಎಣ್ಣೆ ಮತ್ತು ಇತರ ಕೈಗಾರಿಕಾ ವಸ್ತುಗಳ ತಯಾರಿಕೆಯು ಅಧಿಕವಾದುದ್ದರಿಂದ ಈ ಸಿದ್ಧವಸ್ತುಗಳನ್ನು ಮಾರಲು ಮತ್ತು ತಮಗೆ ಅವಶ್ಯವಾದ ಪದಾರ್ಥಗಳನ್ನು ಕೊಂಡುಕೊಳ್ಳಲು ಅಸೋಟೋಲಿಯದ ಗ್ರೀಕರಿಗೆ ಮಾರುಕಟ್ಟೆಗಳನ್ನು ಹುಡುಕುವ ಅಗತ್ಯ ಉಂಟಾಯಿತು. ಇಟಲಿ ಮತ್ತು ಸಿಸಿಲಿ, ಬಾಲ್ಕನ್ ಪರ್ಯಾಯ ದ್ವೀಪ, ಜಲಸಂಧಿಗಳು ಮತ್ತು ಕಪ್ಪು ಸಮುದ್ರಗಳಿಂದ ಮೀನು ಮತ್ತು ಧಾನ್ಯಗಳನ್ನು ತರಿಸಿಕೊಳ್ಳುತ್ತಿದ್ದರು. ಅವರಿಗೆ ಅಗತ್ಯವಿದ್ದ ಬೆಳ್ಳಿ, ಚಿನ್ನ, ತಾಮ್ರ, ಕಬ್ಬಿಣ ಮೊದಲಾದ ವುಗಳನ್ನು ಇತರ ದೇಶಗಳಿಂದ ಪಡೆಯುತ್ತಿದ್ದರು. ತಮ್ಮ ನೆರೆಯವರಾದ ಏಷ್ಯಾ ಮೈನರ್‌ನ ಒಳ ಪ್ರದೇಶಗಳಿಂದ ಚರ್ಮ ಮತ್ತು ಉಣ್ಣೆಯನ್ನು ಅಧಿಕ ಪ್ರಮಾಣದಲ್ಲಿ ಅಮದು ಮಾಡಿಕೊಳ್ಳುತ್ತಿದ್ದರು. ಸಮುದ್ರಗಳ್ಳತನದಲ್ಲೂ ಅವರು ತೊಡಗಿದ್ದರು.

ಗ್ರೀಕರು ನೌಕಾಯಾನ, ಬ್ಯಾಂಕಿಂಗ್ ಮೊದಲಾದ ಸೇವೆಗಳನ್ನು ನಿರ್ವಹಿಸುತ್ತಿದ್ದರು. ಹಣದ ಬಳಕೆಯ ಹೆಚ್ಚಳದಿಂದಾಗಿ ಬ್ಯಾಂಕುಗಳು ಅಭಿವೃದ್ದಿಗೊಂಡವು. ಪ್ರತಿ ನಗರ ರಾಜ್ಯಕ್ಕೂ ತನ್ನದೇ ಆದ ನಾಣ್ಯ ಪದ್ಧತಿ ಇದ್ದರೂ ಅಥೆನ್ಸ್‌ನ ನಾಣ್ಯಗಳನ್ನು ಎಲ್ಲರೂ ಸ್ವೀಕರಿಸುತ್ತಿದ್ದರು. ಹಣವನ್ನು ವರ್ಗ ಮಾಡುವ ಉದ್ದೇಶಗಳಿಗಾಗಿ ಗ್ರೀಕ್ ಬ್ಯಾಂಕರ್‌ಗಳು ಜಮಾ ಪತ್ರ, ವಿನಿಮಯ ಪತ್ರ ಮತ್ತು ವ್ಯಕ್ತಿಗಳ ಖಾತೆಯಲ್ಲಿ ಪರಸ್ಪರ ಚುಕ್ತ ಮಾಡುವ ವಿಧಾನ, ಈ ವ್ಯವಹಾರಗಳನ್ನು ಪ್ರಾರಂಭಿಸಿದರು. ವ್ಯಾಪರ ವಸ್ತುಗಳು ನಿಯತ ಸ್ಥಾನವನ್ನು ತಲುಪದಿದ್ದರೆ ಆಧಾರ ಸಾಲವನ್ನು ತೀರಿಸಬೇಕಾಗಿರಲಿಲ್ಲ. ಅಪಾಯಗಳನ್ನು ನಿವಾರಿಸಲು ಪಡೆಯುತ್ತಿದ್ದ ಈ ವಿಮೆಯ ಕಂತಿನಲ್ಲಿ ವಿಮಾ ಯೋಜನೆಯ ಪ್ರಥಮ ಪ್ರಯತ್ನವನ್ನು ಕಾಣಬಹುದಾಗಿದೆ. ಡೆಲ್ಛಿಯಲ್ಲಿದ್ದ ಅಪೊಲೋ ದೇವಸ್ಥಾನ ಅಂತಾರಾಷ್ಟ್ರೀಯ ಬ್ಯಾಂಕಿನಂತೆ ಕೆಲಸ ನಿರ್ವಹಿಸುತ್ತಿತ್ತು. ಇದು ಪ್ರಾಚೀನ ಭಾರತದ ದೇವಾಲಯಗಳ ಬ್ಯಾಂಕಿಂಗ್ ಕೆಲಸವನ್ನೇ ನೆನಪಿಗೆ ತರುತ್ತದೆ. ವಿಶೇಷವೆಂದರೆ, ಗ್ರೀಕ್ ಸ್ತ್ರೀಯರು ಉತ್ಪಾದನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿದ್ದರೂ ವ್ಯಾಪಾರ ಮಾಡುವುದಕ್ಕೆ ಅವರಿಗೆ ಅನುಮತಿ ಇರಲಿಲ್ಲ.

ವರ್ಗಗಳು

ಗ್ರೀಕರಲ್ಲಿ ಜಾತಿ ಪದ್ಧತಿ ಇಲ್ಲದಿದ್ದರೂ ವರ್ಗಗಳು ಇದ್ದವು. ಯಾವುದೇ ಸ್ವತಂತ್ರ ವ್ಯಕ್ತಿ ಸ್ವಪ್ರಯತ್ನದಿಂದ ಮೇಲೇರಬಹುದಿತ್ತು. ಅಥೆನ್ಸ್ ಮತ್ತು ಥೀಬ್ಸ್‌ಗಳಲ್ಲಿ ಮನುಷ್ಯನೇ ಮನುಷ್ಯನನ್ನು ಶೋಷಿಸುತ್ತಿದ್ದುದು ರೋಮ್‌ಗಿಂತ ಕಡಿಮೆ ಇದ್ದರೂ, ಶೋಷಣೆ ಸಮಾಜದಲ್ಲಿ ಒಂದು ವಾಸ್ತವಾಂಶವಾಗಿತ್ತು. ಗಣಿಗಳನ್ನು ಹೊರತುಪಡಿಸಿ ಉಳಿದ ಉತ್ಪಾದನಾ ಕ್ಷೇತ್ರಗಳಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ ಅಷ್ಟು ತೀಕ್ಷ್ಣ ವರ್ಗ ವ್ಯತ್ಯಾಸ ಇರಲಿಲ್ಲ. ಸಾಮಾನ್ಯವಾಗಿ ಯಜಮಾನನೂ ಕೆಲಸಗಾರರೊಂದಿಗೆ ಕೆಲಸ ಮಾಡುತ್ತಿದ್ದರಿಂದ ಸಂಬಂಧ ಅಷ್ಟೇನೂ ವಿಷಮವಾಗಿರುತ್ತಿರಲಿಲ್ಲ.

ಒಬ್ಬ ಮನುಷ್ಯ ಒಂದು ತಿಂಗಳಿಗೆ ೧೨೦ ಡ್ರಾಕ್‌ಮಾಸ್ (೧೨೦ ಡಾಲರ್)ಗಳಲ್ಲಿ ನೆಮ್ಮದಿಯ ಬದುಕನ್ನು ನಡೆಸಬಹುದಿತ್ತು. ಆದರೆ ಕಾರ್ಮಿಕನೊಬ್ಬನಿಗೆ ತಿಂಗಳೊಂದಕ್ಕೆ ೩೦ ಡ್ರಾಕ್‌ಮಾಸ್ ಕೂಲಿ ಸಿಗುತ್ತಿದ್ದುದರಿಂದ ಅವನ ಜೀವನ ಸ್ಥಿತಿಯನ್ನು ಯಾರೂ ಊಹಿಸಬಹುದು. ‘ಬಡತನ ರೇಖೆಗಿಂತ ಕಡಿಮೆ ಇರುವುದು’ ಎಂಬ ನಮ್ಮ ಈಗಿನ ಕಲ್ಪನೆಗೆ ಆಗಿನ ಕಾರ್ಮಿಕರ ಸ್ಥಿತಿ ಪ್ರಾಯಶಃ ಹೊಂದುತ್ತಿತ್ತು. ಆದರೂ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ಕಾರ್ಮಿಕರಿಗೆ ನಾಮ ಮಾತ್ರ ಬೆಲೆಗೆ ಆಹಾರ ಧಾನ್ಯಗಳನ್ನು ಮಾರುತ್ತಿತ್ತು. ಗಮನಾರ್ಹ ಅಂಶವೆಂದರೆ

ಸ್ವಾತಂತ್ರ್ಯ ದೇವತೆ ಸಮಾನತೆಯ ದೇವತೆಗೆ ಗೆಳತಿಯಲ್ಲವೆಂಬುದು ವೇದ್ಯ ಅಂಶವಾಗಿದ್ದು, ಪ್ರಬಲರು ಇನ್ನೂ ಪ್ರಬಲರಾಗುತ್ತಿದ್ದರು. ಶ್ರೀಮಂತರು ಮತ್ತೂ ಧನಿಕರಾಗುತ್ತಿದ್ದರು; ಆದರೆ ಬಡವರು ಮಾತ್ರ ಇನ್ನೂ ಬಡವರಾಗಿ ಉಳಿಯುತ್ತಿದ್ದರು.

ಪರ್ಶಿಯ-ಗ್ರೀಸ್‌ಗಳ ನಡುವಿನ ಅತಿ ಕಹಿ ಯುದ್ಧಗಳಿಗಿಂತ ಅಥವಾ ಅಥೆನ್ಸ್-ಸ್ಪಾರ್ಟಾಗಳ ನಡುವಿನ ತಿಕ್ಕಾಟಗಳಿಗಿಂತ ಗ್ರೀಕ್ ರಾಜ್ಯಗಳಲ್ಲಿದ್ದ ವರ್ಗ-ವರ್ಗಗಳ ನಡುವಿನ ಸಂಘರ್ಷ ಅತ್ಯಂತ ಕಹಿಯ ವಾತಾವರಣವನ್ನು ನಿರ್ಮಿಸಿತು.

ಪ್ಲೇಟೋ ಕಮ್ಯುನಿಸಂ ಬಗ್ಗೆ ಮಾತನಾಡಿದ್ದರೂ, ಕ್ರಿ.ಪೂ.೫ನೇ ಶತಮಾನದ ಹೊತ್ತಿಗೆ ಜನನಾಯಕರು ಭೂತಕಾಲದಲ್ಲಿ ಎಲ್ಲರೂ ಅಸ್ತಿಪಾಸ್ತಿಗಳನ್ನು ಸಮಾನವಾಗಿ ಹೊಂದಿದ್ದ ಅನುಪಮ ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದರೆ ವಿನಾಹ ವಾಸ್ತವದಲ್ಲಿ ಆ ಸ್ಥಿತಿಯ ಸ್ಥಾಪನೆಗೆ ಎಳ್ಳಷ್ಟೂ ಪ್ರಯತ್ನಿಸುತ್ತಿರಲಿಲ್ಲ.

ಆಗ ಅರಿಸ್ಟೋಕ್ರಾಟಿಕ್ ಕಮ್ಯುನಿಸಂ ಬಗ್ಗೆ ಜನರ ಮನಸ್ಸಿನಲ್ಲಿ ಕಲ್ಪನೆ ಇತ್ತೇ ಹೊರತು, ರಾಜ್ಯದಿಂದ ಭೂಮಿಯ ರಾಷ್ಟ್ರೀಕರಣದ ಬಗ್ಗೆ ಅಲ್ಲ. ಆದರೆ ಪೌರರಲ್ಲಿ ಭೂಮಿಯನ್ನು ಸಮಾನವಾಗಿ ಹಂಚುವ ಕಲ್ಪನೆ ಆವರಿಗಿದ್ದಿತು. ಪ್ರಾಕ್ಸಗೋರ ಎಂಬ ಮಹಿಳಾ ಕಮ್ಯೂನಿಸ್ಟಳನ್ನು ಅರಿಸ್ಟೋಫನೀಸ್ ಅವಳ ಈ ಕೆಳಗಿನ ಮಾತಿನಿಂದ ನಮಗೆ ಪರಿಚಯಿಸುತ್ತಾನೆ.

ಪ್ರತಿಯೊಬ್ಬರಿಗೂ ಪ್ರತಿಯೊಂದರಲ್ಲಿಯೂ ಪಾಲಿಸಬೇಕು, ಮತ್ತು ಎಲ್ಲಾ ಆಸ್ತಿಗಳೂ ಎಲ್ಲರಿಗೂ ಸಾಮಾನ್ಯವಾಗಿರಬೇಕು. ಬಡವರು ಶ್ರೀಮಂತರೆಂಬ ಭೇದ ಇನ್ನು ಮುಂದೆ ಇರುವುದಿಲ್ಲ. ಕೆಲವರು ಸತ್ತರೆ ಹೂಳಲು ಸ್ಥಳವಿರದ ಪರಿಸ್ಥಿತಿಯಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ವಿಸ್ತಾರ ವ್ಯವಸಾಯ ಕ್ಷೇತ್ರದಲ್ಲಿ ಸುಗ್ಗಿ ಮಾಡುವುದನ್ನು ಇನ್ನು ಮುಂದೆ ಕಾಣುವುದಿಲ್ಲ… ಪ್ರತಿಯೊಬ್ಬರಿಗೂ ಏಕ ಪ್ರಕಾರ ಜೀವನ ಸ್ಥಿತಿ ಇರುವುದನ್ನು ನಾನು ಬಯಸುತ್ತೇನೆ…. ಹಣ, ಭೂಮಿ ಪ್ರತಿಯೊಂದೂ ಖಾಸಗೀ ಆಸ್ತಿಯಾಗಿರುವುದನ್ನು, ಎಲ್ಲರಿಗೂ ಸಾಮಾನ್ಯವಾಗಿರು ವಂತೆ ಮಾಡುವುದರೊಂದಿಗೆ ಪ್ರಾರಂಭಿಸುತ್ತೇನೆ. ಎಲ್ಲಾ ಸ್ತ್ರೀಯರೂ ಎಲ್ಲ ಪುರುಷರಿಗೂ ಸಾಮಾನ್ಯವಾಗಿ ಸೇರಿದವರಾಗಿರುತ್ತಾರೆ (ಸ್ತ್ರೀಯರೂ ಆಸ್ತಿಯೆಂಬ ಕಲ್ಪನೆ?).

ಆದರೆ ಯಾರು ಕೆಲಸ ಮಾಡುತ್ತಾರೆ? ಎಂದು ಬ್ಲಿಪೈರಸ್ ಕೇಳುವ ಪ್ರಶ್ನೆಗೆ ಪ್ರಾಕ್ಸ್‌ಗೋರಳ ಉತ್ತರ ‘‘ಗುಲಾಮರು.’’

ಗುಲಾಮಗಿರಿ

‘ವಿರಾಮ ರಹಿತ ಬದುಕಿನಲ್ಲಿ ಅಭಿರುಚಿಗಳಿಲ್ಲ, ಕಲಾಭಿರುಚಿ ಇಲ್ಲ ಮತ್ತು ನಾಗರಿಕತೆಯೇ ಇಲ್ಲ. ತರಾತುರಿಯಲ್ಲಿರುವ ಮನುಷ್ಯ ನಾಗರಿಕನಲ್ಲ’ ಎಂಬುದು ಪ್ರಾಚೀನ ಗ್ರೀಕರ ಅಭಿಪ್ರಾಯವಾಗಿತ್ತು. ಅಂದರೆ ಕೆಲವರಿಗಾಗಿ ಹಲವರು ದುಡಿಯಬೇಕಿತ್ತು ಎಂಬ ವಿಚಾರವನ್ನು ಇದು ಪರೋಕ್ಷವಾಗಿ ಪ್ರತಿಪಾದಿಸುತ್ತಿದೆ.

ಗ್ರೀಕ್ ಸಮಾಜದಲ್ಲಿ ನಾಗರಿಕರು (ಪೌರರು), ಮೆಟಿಕ್ಸ್, ಸ್ವತಂತ್ರಗೊಳಿಸಲ್ಪಟ್ಟವರು (ಗುಲಾಮರು) ಮತ್ತು ಗುಲಾಮರು ಎಂಬ ನಾಲ್ಕು ಪ್ರಭೇದಗಳಿದ್ದವು. ಅದರಲ್ಲಿ ಗುಲಾಮರ ಸ್ಥಿತಿ ತುಂಬಾ ಕರುಣಾಜನಕವಾಗಿತ್ತು. ಆಶ್ಚರ್ಯವೆಂದರೆ, ಜೀವನೋಪಾಯಕ್ಕಾಗಿ ದುಡಿಯುವುದು ಅಗೌರವವೆಂಬ ಭಾವನೆ ಪ್ರಾಚೀನ ಗ್ರೀಸ್‌ನಲ್ಲಿತ್ತು; ವೃತ್ತಿಪರ ಸಂಗೀತ, ಮೂರ್ತಿಶಿಲ್ಪ ಮತ್ತು ಚಿತ್ರಕಲಾ ಬೋಧನೆಗಳನ್ನು ಅನೇಕ ಗ್ರೀಕರು ‘ಕ್ಷುಲ್ಲಕ ವೃತ್ತಿ’ ಯೆಂದು ಪರಿಗಣಿಸಿದ್ದರು.

ಯುದ್ದ ಕೈದಿಗಳು ಗುಲಾಮಗಿರಿಗಾಗಿ ನಡೆದ ಆಕ್ರಮಣದಲ್ಲಿ ಸಿಕ್ಕವರು, ಬಾಹ್ಯ ಒಡನಾಟ ಇಲ್ಲದೆ ಚಿಕ್ಕಂದಿನಿಂದ ಸಾಕಲ್ಪಟ್ಟ ತಬ್ಬಲಿಗಳು, ಅಪರಾಧಿಗಳು ಮತ್ತು ನಿಷ್ಕ್ರಿಯ ಸೋಮಾರಿಗಳನ್ನು ಗುಲಾಮರನ್ನಾಗಿಸುತ್ತಿದ್ದರು. ಪ್ರಾಚೀನ ಗ್ರೀಕರು ಇತರರನ್ನು ಸ್ವಾಭಾವಿಕ ಗುಲಾಮರೆಂದು ಪರಿಗಣಿಸಿದ್ದರು. ಕಾರಣ ಇತರರು ರಾಜನಿಗೆ ಸಂಪೂರ್ಣ ವಿಧೇಯರಾಗಿರುತ್ತಾರೆಂಬುದೇ ಆ ನಂಬಿಕೆಗೆ ಬುನಾದಿ. ಗ್ರೀಕ್ ವ್ಯಾಪಾರಿಗಳು ಗುಲಾಮರನ್ನು ಮಾರುಕಟ್ಟೆಗಳಲ್ಲಿ ಕೊಂಡು ಬೇರೆ ಬೇರೆ ನಗರಗಳಲ್ಲಿ ಲಾಭಕ್ಕೆ ಮಾರಾಟ ಮಾಡುವ ಕ್ರಮವೂ ಇತ್ತು. ಗುಲಾಮರನ್ನು ಕೊಂಡು – ಮಾರುವ ದಂಧೆಯಲ್ಲಿದ್ದ ಮೆಟಿಕ್ಸ್ ಗುಂಪಿನ ವ್ಯಾಪಾರಿಗಳು ಅತ್ಯಂತ ಶ್ರೀಮಂತರಾಗಿದ್ದರು. ಅಥೆನ್ಸ್‌ನ ಪೇಟೆಯಲ್ಲಿ ತಮ್ಮನ್ನು ಕೊಳ್ಳುವ ಗಿರಾಕಿಗಳ ಮುಂದೆ ಗುಲಾಮರು ಪರೀಕ್ಷೆಗಾಗಿ ಯಾವುದೇ ಕಾಲದಲ್ಲೂ ನಗ್ನರಾಗಿ ನಿಲ್ಲಲು ಸಿದ್ಧರಿದ್ದರು. ಪ್ರತಿ ಗುಲಾಮನ ಕಿಮ್ಮತ್ತು ‘ಅರ್ಧಮಿನ’ದಿಂದ ‘ಹತ್ತುಮಿನ’ದವರೆಗಿತ್ತು. ಅಂದರೆ ೫೦ ರಿಂದ ೧೦೦ ಡಾಲರ್ ಆಗುತ್ತಿತ್ತು. ಅಥೆನ್ಸ್‌ನ ಸರ್ಕಾರ ಗುಲಾಮರನ್ನು, ಕಾರಕೂನರಾಗಿ, ಸೇವಕರಾಗಿ, ಗಾಣ ಅಧಿಕಾರಿಗಳಾಗಿ, ಪೋಲೀಸ್ ಪೇದೆಗಳಾಗಿ ನೇಮಿಸಿ ಅವರಿಗೆ ಬಟ್ಟೆ, ಭತ್ಯೆ ನೀಡುವುದರ ಜೊತೆಗೆ ಎಲ್ಲಿ ಬೇಕಿದ್ದರೂ ವಾಸಿಸಲು ಅನುಮತಿ ನೀಡಿತ್ತು. ಸ್ತ್ರೀ-ಪುರುಷರು ಗುಲಾಮರನ್ನು ಕೊಂಡು ಅವರ ಶ್ರಮವನ್ನು ನೇರವಾಗಿ ಬಳಸಿಕೊಳ್ಳುವ ಅಥವಾ ಗುಲಾಮರನ್ನು ಮನೆ, ಕಾರ್ಖಾನೆ, ಗಣಿ ಮೊದಲಾದ ಸ್ಥಳಗಳಿಗೆ ‘ಶ್ರಮ ಎರವಲಾಗಿ’ ಕೊಟ್ಟು ತುಂಬ ಲಾಭ ಸಂಪಾದಿಸುತ್ತಿದ್ದರು. ತೀರಾ ಬಡ ಗ್ರೀಕನೂ (ಪೌರ) ಒಬ್ಬ ಅಥವಾ ಇಬ್ಬರು ಗುಲಾಮರನ್ನು ಹೊಂದಿರುತ್ತಿದ್ದನು. ಶ್ರೀಮಂತರ ಮನೆಗಳಲ್ಲಿ ವಿಪರೀತ ಗುಲಾಮರಿರುತ್ತಿದ್ದರು. ಗ್ರಾಮಾಂತರ ಗ್ರೀಸ್‌ನಲ್ಲಿ ಗುಲಾಮರ ಸಂಖ್ಯೆ ಕಡಿಮೆ ಇತ್ತು, ಅಂದರೆ ನಗರಗಳಲ್ಲೇ ಅಧಿಕವಾಗಿತ್ತು. ಗಂಡು ಗುಲಾಮ ಹೊರಗೆ ದುಡಿದರೆ, ಹೆಣ್ಣು ಗುಲಾಮಳು ಮನೆಯಲ್ಲಿ ದುಡಿಯುವುದು ಸಾಮಾನ್ಯ ಕ್ರಮವಾಗಿತ್ತು.

ಗುಲಾಮರು ತಮ್ಮ ಮಕ್ಕಳನ್ನು ಬೆಳೆಸುವುದನ್ನು ಧಣಿಗಳು ಇಷ್ಟಪಡುತ್ತಿರಲಿಲ್ಲ. ಏಕೆಂದರೆ ಮಗುವೊಂದನ್ನು ಸಾಕಲು ತಗಲುವ ಖರ್ಚಿಗಿಂತ ಬೇರೆ ಗುಲಾಮರನ್ನು ಕೊಳ್ಳುವುದೇ ಹೆಚ್ಚು ಲಾಭದಾಯಕವಾಗಿತ್ತು. ಅಂದರೆ ಗುಲಾಮರು ತಮ್ಮ ಮಕ್ಕಳನ್ನು ಬೆಳಸುವ ಸ್ವಾತಂತ್ರ್ಯದಿಂದಲೂ ವಂಚಿತರಾಗಿದ್ದಾರೆಂದು ಇದರಿಂದ ವೇದ್ಯವಾಗುತ್ತದೆ. ಗುಲಾಮರು ಸರಿಯಾಗಿ ನಡೆದುಕೊಳ್ಳದಿದ್ದರೆ ಅವರಿಗೆ ಛಡಿ ಏಟು ಬೀಳುತ್ತಿತ್ತು. ಪೌರನೊಬ್ಬ ದಂಡಿಸುವಾಗ ಗುಲಾಮನು ಸುಮ್ಮನಿರಬೇಕಿತ್ತು. ಆದರೆ, ಗುಲಾಮರನ್ನು ಕೊಲ್ಲುವ ಅಧಿಕಾರ ಅವರ ಧಣಿಗಳಿಗಿರಲಿಲ್ಲ. ವಿಧೇಯರಾಗಿದ್ದ ಗುಲಾಮರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು. ಗುಲಾಮರ ಗಳಿಕೆಗೆ ತೆರಿಗೆ ಇರಲಿಲ್ಲ. ಗುಲಾಮರು ಸೈನ್ಯದಲ್ಲಿ ಸೇವೆ ಸಲ್ಲಿಸಬೇಕಾಗಿರಲಿಲ್ಲ. ಸಾಮಾನ್ಯವಾಗಿ ಗುಲಾಮರ ಮೇಲ್ವಿಚಾರಣೆಯಯನ್ನು ನೋಡಿಕೊಳ್ಳಲು ಪೂರ್ವಾಶ್ರಮದಲ್ಲಿ ಗುಲಾಮನಾಗಿದ್ದ ವ್ಯಕ್ತಿಯೇ ಹೆಚ್ಚು ಸೂಕ್ತವೆಂದು ಭಾವಿಸಲಾಗಿತ್ತು. ಮುಪ್ಪು, ರೋಗ ಮತ್ತು ಕೆಲಸ ಇಲ್ಲದಂಥ ಸಂದರ್ಭದಲ್ಲಿ ಯಜಮಾನ  ಗುಲಾಮರನ್ನು ಸಾಮಾನ್ಯವಾಗಿ ಹೊರ ಹಾಕುತ್ತಿರಲಿಲ್ಲ. ಯಜಮಾನ ತನ್ನ ಮುಪ್ಪಿನ ಮತ್ತು ಸಾವಿನ ಸಂದರ್ಭದಲ್ಲಿ ಅನೇಕ ಗುಲಾಮರನ್ನು ಸ್ವತಂತ್ರಗೊಳಿಸಿದ ಉದಾಹರಣೆಗಳೂ ಇವೆ. ಏನೇ ಆದರೂ ಗುಲಾಮಗಿರಿ ಸಮರ್ಥನೀಯವೆನಿಸುವುದಿಲ್ಲ. ಪ್ರಾಚೀನ ಗ್ರೀಸ್‌ನಲ್ಲಿದ್ದ ಗುಲಾಮರ ಸಂಖ್ಯೆಯನ್ನು ೧,೫೦,೦೦೦ರಿಂದ ೪,೭೦,೦೦೦ವೆಂದು ವಿವಿಧ ಹೇಳಿಕೆಗಳಿಂದ ಅಂದಾಜು ಮಾಡಬಹುದಾಗಿದೆ.

ಗ್ರೀಕರು ಗ್ರೀಕರನ್ನೆ ಗುಲಾಮರನ್ನಾಗಿಸಿಕೊಳ್ಳುವುದನ್ನು ಪ್ಲೇಟೋ ಖಂಡಿಸುತ್ತಾನೆ. ಆದರೆ ಉಳಿದವರನ್ನು ಗುಲಾಮರನ್ನಾಗಿಸಿಕೊಳ್ಳುವುದಕ್ಕೆ ಅವನ ತಕರಾರಿಲ್ಲ. ಕಾರಣ ಇತರರ ಮಾನಸಿಕ-ಬೌದ್ದಿಕ ಬಡತನ. ಅರಿಸ್ಟಾಟಲ್ ಗುಲಾಮರನ್ನು ಜೀವಂತ ಉಪಕರಣಗಳಂತೆ ನೋಡುತ್ತಾನೆ. ಅವನ ಅಭಿಪ್ರಾಯದಲ್ಲಿ ‘‘ಚಿಕ್ಕ ಪುಟ್ಟ ಕೆಲಸವನ್ನೂ ಸ್ವಯಂಚಾಲಿತ ಯಂತ್ರಗಳು ಮಾಡುವ ಕಾಲ ಬರುವವರೆಗೆ ಗುಲಾಮಗಿರಿ ಒಂದಿಲ್ಲೊಂದು ರೂಪದಲ್ಲಿ ಮುಂದುವರೆಯುತ್ತದೆ.’’ ಪ್ಲೇಟೋ ಮತ್ತೊಮ್ಮೆ ಹೇಳಿದಂತೆ ‘‘ಅದೃಷ್ಟವಶಾತ್ ನಾನು ಗ್ರೀಕನಾಗಿ ಜನಿಸಿದ್ದೇನೆ. ಬಾರ್ಬೀರಿಯನ್ ಅಲ್ಲ (ಗ್ರೀಕೇತರರು). ಪುರುಷನಾಗಿ ಜನಿಸಿದ್ದೇನೆ, ಸ್ತ್ರೀಯಾಗಿ ಅಲ್ಲ. ಸ್ವತಂತ್ರ ಪೌರನಾಗಿ ಜನಿಸಿದ್ದೇನೆ, ಗುಲಾಮನಾಗಿ ಅಲ್ಲ.’’ ಇದರಿಂದ ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಪರಿಸ್ಥಿತಿ ಮತ್ತು ಗುಲಾಮರ ಶೋಚನೀಯ ಸ್ಥಿತಿ ಯಾರಿಗಾದರೂ ಅರಿವಾಗುತ್ತದೆ.

ಫ್ರೆಂಚ್ ಕ್ರಾಂತಿಯ ಮುಂಭರದಲ್ಲಿ ಜೀವಿಸಿದ್ದ ರೊಸೊ ಅಭಿಪ್ರಾಯಪಟ್ಟಂತೆ ‘‘ದೇವರು ಭೂಮಿಗೆ ಎಲ್ಲಾ ಮನುಷ್ಯರನ್ನು ಸ್ವತಂತ್ರರನ್ನಾಗಿ ಕಳುಹಿಸಿದ್ದಾನೆ ಮತ್ತು ಪ್ರಕೃತಿ ಯಾವ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಲ್ಲ.’’ ಆದ್ದರಿಂದ ಮನುಷ್ಯ, ಮನುಷ್ಯನನ್ನೇ ಗುಲಾಮನನ್ನಾಗಿಸಿಕೊಳ್ಳುವ ನೈತಿಕ ಹಕ್ಕು ಎಲ್ಲಿದೆ? ಆಧುನಿಕ ಕಾಲದಲ್ಲಿಯೂ ಗುಲಾಮಗಿರಿ ನಿರ್ಮೂಲನೆಗಾಗಿ ನಡೆದ ಹೋರಾಟಗಳು ನಮ್ಮ ಹೃದಯಗಳನ್ನು ನೊಂದು ಬಂದವರ ಪರವಾಗಿ ಕಲಕುತ್ತವೆ.

ಗ್ರೀಕರ ತತ್ವಜ್ಞಾನ

ಗ್ರೀಕರ ತತ್ವಜ್ಞಾನ ಜಗದ್ವಿಖ್ಯಾತವಾಗಿದೆ. ಅವರ ಚಿಂತನೆ ಅವರ ತತ್ವಜ್ಞಾನದಲ್ಲಡಗಿದೆ. ಅವರ ಚಿಂತನೆಗಳು ಏಕಪ್ರಕಾರವಾಗಿರದೆ ವೈವಿಧ್ಯಮಯವಾಗಿದ್ದವು. ಗ್ರೀಕ್ ಚಿಂತಕರಲ್ಲಿ ಸೋಫಿಸ್ಟ್ ಅಥವಾ ಬುದ್ದಿವಂತ ಜನರು ಮೊದಲಿಗರು. ಪ್ರಭಾವ ಬೀರುವಂತೆ ಮಾತನಾಡುವುದು, ಬರವಣಿಗೆ, ವಾಕ್ಚಾತುರ್ಯ, ಅಲಂಕಾರ ಶಾಸ್ತ್ರ, ಗಣಿತ, ರೇಖಾಗಣಿತ, ಖಗೋಳಶಾಸ್ತ್ರ ಮುಂತಾದುವನ್ನು ಅವರು ಜನರಿಗೆ ತಿಳಿಸಿದರು. ಅವರು ಜಾಣರೂ ತರ್ಕ ಮಾಡುವುದರಲ್ಲಿ ಚತುರರೂ ಆಗಿದ್ದರು. ಜ್ಞಾನವು ಅಸ್ವತಂತ್ರ, ಆದರೆ ಮಾನವನಿಗೆ ಸಾಪೇಕ್ಷವಾಗಿರುತ್ತದೆ ಎಂದು ವಾದಿಸಿದರು. ಅಂತೆಯೇ ಒಳ್ಳೆಯದು ಮತ್ತು ಕೆಟ್ಟದ್ದು ಸಹ ಪರಿಪೂರ್ಣವಾದವುಗಳಲ್ಲ. ಅವು ಮಾನವನ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎಂದು ಅವರು ತಿಳಿಸಿದರು.

ಸಾಕ್ರೆಟಿಸ್ (ಕ್ರಿ.ಪೂ.೪೬೯ಕ್ರಿ.ಪೂ.೩೯೯)

ಇವನನ್ನು ಸಾಮಾನ್ಯವಾಗಿ ಪ್ರಪಂಚದ ಮೊದಲ ‘ವಿಚಾರವಾದಿ’ಯೆಂದು ಕರೆಯಲಾಗಿದೆ. ಅವನ ಸಮಕಾಲೀನ ಗ್ರೀಸ್‌ನಲ್ಲಿ ಅವನಷ್ಟು ಪ್ರೀತಿಸಲ್ಪಟ್ಟ ಮತ್ತು ದ್ವೇಷಕ್ಕೊಳಗಾದ ವ್ಯಕ್ತಿ ಮತ್ತೊಬ್ಬನಿರಲಿಲ್ಲ.

ಜೀವನ

ಕ್ರಿ.ಪೂ. ೪೬೯ರಲ್ಲಿ ಸಾಕ್ರಟಿಸ್ ಅಥೆನ್ಸ್‌ನಲ್ಲಿ ಜನಿಸಿದನು. ಅವನ ತಂದೆ ಒಬ್ಬ ಕಲ್ಲುಕುಟಿಗ. ತಾಯಿ ಸೂಲಗಿತ್ತಿ. ಅವನಲ್ಲಿ ಸದಾ ತುಡಿಯುತ್ತಿದ್ದ ಹಾಸ್ಯವೆಂದರೆ ತಾನು ತನ್ನ ತಾಯಿಯ ಉದ್ಯೋಗವನ್ನು ಮುಂದುವರೆಸಿ ಜನರು ತಮ್ಮ ಅನಿಸಿಕೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಸೂಲಗಿತ್ತಿಯಂತೆ(ಬೌದ್ದಿಕ) ಕೆಲಸ ಮಾಡುವುದು. ಅವನು ವ್ಯಾಯಾಮಕ್ಕೆ ಹೆಚ್ಚಿನ ಗಮನಕೊಟ್ಟು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದ. ಪಿಲೋಪೋನೇಶಿಯನ್ ಯುದ್ಧದಲ್ಲಿ ಭಾಗವಹಿಸಿ ಉತ್ತಮ ಯೋಧನೆಂದು ಹೆಸರು ಮಾಡಿದ್ದ. ಜಾನ್ ತಿಪ್ ಎಂಬುವವಳನ್ನು ವಿವಾಹವಾಗಿದ್ದ. ಸಂಸಾರವನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವನ ಪತ್ನಿ ಅವನನ್ನು ನಿಂದಿಸುವುದನ್ನು ಸಾಕ್ರಟಿಸ್ ಶಾಂತನಾಗಿ ಸ್ವೀಕರಿಸುತ್ತಿದ್ದ. ಪತಿ-ಪತ್ನಿ ಸಂಬಂಧ ಸಾಮರಸ್ಯವಿಲ್ಲದೆ ಸಾಕ್ರೆಟಿಸ್‌ನಿಗೆ ಮತ್ತೊಬ್ಬ ಪತ್ನಿ ಇದ್ದಂತೆ ತೋರುತ್ತದೆ (ಯುದ್ಧದಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದರಿಂದ ತಾತ್ಕಾಲಿಕವಾಗಿ ಬಹುಪತ್ನಿತ್ವವನ್ನು ಕಾಯಿದೆ ಪ್ರಕಾರ ಮನ್ನಿಸಲಾಗಿತ್ತು).

ಹೆಚ್ಚಿನ ವಸ್ತುಗಳನ್ನು ಸಂಚಯಿಸುವುದರಲ್ಲಿ ಸಾಕ್ರೆಟಿಸ್‌ನಿಗೆ ನಂಬಿಕೆ ಇರಲಿಲ್ಲ. ವರ್ಷಪೂರ್ತಿ ಅಚ್ಚುಕಟ್ಟಾಗಿರದ ಅದೇ ಬಟ್ಟೆಗಳನ್ನು ಧರಿಸುತ್ತಿದ್ದನು. ಕಾಲಿಗೆ ಚಪ್ಪಲಿ ಹಾಕದೇ ಬರೀ ಕಾಲಿನಲ್ಲಿಯೇ ನಡೆಯುತ್ತಿದ್ದನು. ಒಮ್ಮೆ ಮಾರುಕಟ್ಟೆಯಲ್ಲಿ ಮಾರಾಟಕ್ಕಿದ್ದ ಅಪಾರ ವಸ್ತುಗಳನ್ನು ಕಂಡು ‘‘ನನಗೆ ಬೇಡವಾದ ವಸ್ತುಗಳು ಎಷ್ಟೊಂದಿದೆ’’ ಅಂದನಂತೆ. ‘‘ತನ್ನ ಬಡತನವೇ ಎಷ್ಟೊಂದು ಶ್ರೀಮಂತವಾಗಿದೆ’’ ಎಂದು ಉದ್ಗಾರ ತೆಗೆದಂತೆ, ಆತ್ಮ ಸಂಯಮ, ಸಜ್ಜನಿಕೆಗಳು ಅವನಲ್ಲಿ ತುಂಬಿದ್ದರೂ ಅವನೇನೂ ಸಂತನಾಗಿರಲಿಲ್ಲ. ಸಂತೋಷಕ್ಕಾಗಿ, ಯೋಚನೆಗಳನ್ನು ಮರೆಯಲು ಕುಡಿಯುತ್ತಿದ್ದ. ಆದರೆ ಕುಡುಕನಾಗಿರಲಿಲ್ಲ. ಒಳ್ಳೆಯ ಸಹವಾಸವನ್ನು ಅವನು ಬಯಸುತ್ತಿದ್ದರೂ, ಧನಿಕರ ಮತ್ತು ರಾಜರ ಆಹ್ವಾನ ಹಾಗೂ ಕಾಣಿಕೆಗಳನ್ನು ತಿರಸ್ಕರಿಸುತ್ತಿದ್ದ. ಭೋಗಕ್ಕಾಗಿ ಗುಣವನ್ನು ಬಿಟ್ಟುಕೊಟ್ಟವನಲ್ಲ ಮತ್ತು ಒಳಿತು-ಕೆಡಕುಗಳಿಗಿರುವ ವ್ಯತ್ಯಾಸವನ್ನು ಬೇಗ ಗುರುತಿಸುತ್ತಿದ್ದ. ಪ್ಲೇಟೋ ತಿಳಿಸಿರುವಂತೆ ‘‘ಅತ್ಯಂತ ಬುದ್ದಿವಂತ, ನ್ಯಾಯ ಪಕ್ಷಪಾತಿ ಮತ್ತು ತನಗೆ ತಿಳಿದಂತೆ ಗೊತ್ತಿರುವ ಮನುಷ್ಯರಲ್ಲೆಲ್ಲಾ ಅತ್ಯಂತ ಉತ್ತಮನಾದವನು’’ ಸಾಕ್ರೆಟಿಸ್ ಆಗಿದ್ದ.

ಸಾಕ್ರೆಟಿಸ್‌ನ ವಿಚಾರಧಾರೆ

ಸಾಕ್ರೆಟಿಸ್ ಧಾರ್ಮಿಕ ವ್ಯಕ್ತಿಯಲ್ಲದಿದ್ದರೂ ಧರ್ಮದ ವಿರುದ್ಧ ಒಡಕು ಮಾತು ಗಳನ್ನಾಡುತ್ತಿರಲಿಲ್ಲ. ತನ್ನ ನಗರ ದೇವತೆಗಳಿಗೆ ಕೇವಲ ಸೌಜನ್ಯಕ್ಕಾಗಿ ಸೇವೆ ಸಲ್ಲಿಸು ತ್ತಿದ್ದ, ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದ. ಬಾಹ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮೊದಲು ‘‘ನಿನ್ನನ್ನು ನೀನು ತಿಳಿ’’ ಎಂಬುದು ಅವನ ನಂಬಿಕೆಯಾಗಿತ್ತು. ಎಲ್ಲಾ ಅಧ್ಯಯನಗಳಿಗಿಂತ ಮನುಷ್ಯನ ಕುರಿತ ಅಧ್ಯಯನ ಮತ್ತು ಸಮಾಜದಲ್ಲಿ ಅವನು ಹೇಗೆ ಬಾಳಬೇಕೆಂದು ತಿಳಿಯುವುದೇ ಅತ್ಯಂತ ಮಹತ್ವದ ಅಧ್ಯಯನವೆಂದು ಅವನು ಸಾರಿದನು. ಟೀಕೆಗೊಳಗಾದ ಬದುಕು, ಬದುಕಲೇ ಅಯೋಗ್ಯ ವೆಂದನು. ಧಾರ್ಮಿಕತೆಯೇ ಇಲ್ಲದೆ ನೀತಿವಂತಿಕೆ ಸಾಧ್ಯವಿಲ್ಲವೆ ಎಂದು ಸಾಕ್ರೆಟಿಸ್ ಪ್ರಶ್ನಿಸಿದನು. ದೇವರ ಕಲ್ಪನೆಯೇ ಇರದೆ ನೈತಿಕತೆ ಇರಲು ಸಾಧ್ಯವಿಲ್ಲವೇ? ಎಂದು ಕೇಳಿದನು. ಧರ್ಮಮುಕ್ತ ಮತ್ತು ನೈತಿಕ ಸಂಹಿತೆ ನಾಗರಿಕತೆಯ ಚಿಂತನಾ ಸ್ವಾತಂತ್ರ್ಯವನ್ನು ಉಳಿಸಲು ಸಾಧ್ಯವೆ ಎಂದು ಪ್ರಶ್ನಿಸಿದನು. ಜ್ಞಾನವೇ ಅತ್ಯುತಷ್ಟವಾದದ್ದು, ಮತ್ತು ಅಜ್ಞಾನವೇ ವ್ಯಸನವೆಂದನು. ಅತ್ಯುತ್ತಮವಾದದ್ದೆ ಸಂತೋಷ. ಅದಕ್ಕೆ ಮೂಲವೇ ಜ್ಞಾನ ಎಂಬುದು ಅವನ ನಂಬಿಕೆಯಾಗಿತ್ತು.

ಸಾಕ್ರೆಟಿಸ್ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದು, ಶ್ರೀಮಂತ ಪ್ರಭುತ್ವವನ್ನು (ಅರಿಸ್ಟೋಕ್ರಸಿ) ಪ್ರತಿಪಾದಿಸಿದನು. ಜ್ಞಾನ ಮತ್ತು ದಕ್ಷತೆ ಮಾತ್ರ ಅಥೆನ್ಸ್‌ನ ಸರ್ಕಾರವನ್ನು ಉಳಿಸೀತು ಎಂದನು. ಪ್ರಶ್ನಿಸದೆ ಏನನ್ನು ಸ್ವೀಕರಿಸದಿರುವಂತೆ ಸಾಕ್ರೆಟಿಸ್ ತನ್ನ ಶಿಷ್ಯರಿಗೆ ತಿಳಿಸಿದನು. ಇಷ್ಟಾದರೂ ಅಥೆನ್ಸ್‌ನ ಬಹುಸಂಖ್ಯಾತರಿಗೆ ಅವನ ವಿಚಾರಗಳು ಕಿರಿಕಿರಿಯುಂಟು ಮಾಡಿದವು. ಧರ್ಮದಲ್ಲಿಲ್ಲದೆ ಮನಸಾಕ್ಷಿಯಲ್ಲಿ ನೈತಿಕತೆಯನ್ನು ಹುಡುಕುವಂತೆ ಅವನು ಹೇಳಿದ್ದು ಅನೇಕರನ್ನು ರೇಗಿಸಿತು. ಸಾಕ್ರೆಟಿಸ್‌ನ ಮನುಷ್ಯ ಪ್ರಧಾನ ಅಧ್ಯಯನ, ವಿಜ್ಞಾನದ ಅಧ್ಯಯನ ಮತ್ತು ಬೆಳವಣಿಗೆಗೆ ಮಾರಕವಾಯಿತು.

ಆ ಕಾಲದಲ್ಲಿದ್ದ ಅಧಾರ್ಮಿಕತೆಗೆ ಕಿರಿಯರು, ಹಿರಿಯರ ಬಗೆಗೆ ಹೊಂದಿದ್ದ ಅವಿಧೇಯತೆಗೆ ಮತ್ತು ವಿದ್ಯಾವಂತ ಜನಾಂಗದಲ್ಲಿದ್ದ ನೈತಿಕ ಅಧಃಪತನಕ್ಕೆ ಸಾಕ್ರೆಟಿಸ್ ನನ್ನು ಗುರಿ ಮಾಡಿ ಕೊನೆಗೆ ಮರಣದಂಡನೆ ವಿಧಿಸಿದರು. ವಿಚಾರಣೆಯ ಸಂದರ್ಭದಲ್ಲಿ ಸಾಕ್ರೆಟಿಸ್ ಕೇಳಿದ ಒಂದೇ ಪ್ರಶ್ನೆಯೆಂದರೆ ‘‘ಸಮಾಜವನ್ನು ನಾನು ಭ್ರಷ್ಟಗೊಳಿಸಿರುವೆನೆಂದು ಹೇಳುವುದಾದರೆ ನನ್ನನ್ನು ಭ್ರಷ್ಟಗೊಳಿಸಿದವರು ಯಾರು’’? ಕಾರಾಗೃಹದಲ್ಲಿದ್ದಾಗ ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ಅವನು ಹಾಗೆ ಮಾಡಲಿಲ್ಲ. ಕಾರಣ ಸಾಕ್ರೆಟಿಸ್ ತನ್ನ ತತ್ವಗಳಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದು ಮಾತ್ರವಲ್ಲದೆ ಅಮೋಘ ನೈತಿಕ ಶಕ್ತಿಯನ್ನು ಹೊಂದಿದ್ದ. ಕೊನೆಗೆ ಅಂಜದೆ, ಅಳುಕದೆ, ದುಃಖಿಸದೆ ಹೆಮ್ಲಾಕ್ ವಿಷವನ್ನು ಕುಡಿದು ಶಾಂತಿಯಿಂದಲೇ ಪ್ರಾಣಬಿಟ್ಟ. ಆಗ ಅವನಿಗೆ ೭೦ ವರ್ಷ. ತನ್ನ ಪ್ರಾಣಕ್ಕಿಂತ ತನ್ನ ತತ್ವ ಕೊನೆಗೂ ಮುಖ್ಯವಾಯಿತು.

ಪ್ಲೇಟೊ (ಕ್ರಿ.ಪೂ.೪೨೭೩೪೭)

ಸಾಕ್ರೆಟಿಸ್‌ನ ಶಿಷ್ಯನಾದ ಪ್ಲೇಟೋ ತತ್ವಜ್ಞಾನವನ್ನು ಉಪದೇಶಿಸಲು ಒಂದು ವಿದ್ವತ್ ಪರಿಷತ್ತನ್ನು ಸ್ಥಾಪಿಸಿದನು. ಸಾಕ್ರೆಟಿಸ್‌ನ ರಾಜಕೀಯ ಚಿಂತನೆಗಳನ್ನು ಬರೆದಿಟ್ಟನು. ಏಕೆಂದರೆ ಸಾಕ್ರೆಟಿಸ್ ಸ್ವತಃ ಏನನ್ನೂ ಬರೆಯಲಿಲ್ಲ. ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆಯನ್ನು ಅವನು ಬರೆದ ಎರಡು ಗ್ರಂಥಗಳಾದ ‘ರಿಪಬ್ಲಿಕ್’ ಮತ್ತು ‘ಲಾಸ್’ ಗಳಲ್ಲಿ ಕಾಣಬಹುದು. ಪರಿಷತ್ ವಿಧಾನದ ಶಿಕ್ಷಣದಲ್ಲಿ ತರಬೇತಿ ಹೊಂದಿದ್ದ ‘‘ಪೋಷಕರು’’ ಮಾತ್ರ ರಾಜ್ಯವನ್ನು ಆಳಬೇಕೆಂದು ಸೂಚಿಸಿದನು. ಅಲ್ಲದೇ ಈ ಪೋಷಕರು ಸ್ವಂತ ಆಸ್ತಿ-ಪಾಸ್ತಿ ಏನನ್ನೂ ಹೊಂದದೆ ಕುಟುಂಬ ರಹಿತರಾಗಿ ನಿಸ್ವಾರ್ಥದಿಂದ ರಾಜ್ಯವಾಳಬೇಕೆಂದು ಸೂಚಿಸಿದನು. ಸ್ವಯಂ ಪರಿಪೂರ್ಣ ವಸ್ತುಗಳು ಮತ್ತು ಉತ್ಕೃಷ್ಟ ಕಲ್ಪನೆಗಳಿವೆಯೆಂದು ಪ್ಲೇಟೋ ಹೇಳಿದನು. ‘ಕಮ್ಯುನಿಸಂ’ ಎಂಬ ಪದವನ್ನು ಮೊದಲು ಬಳಸಿದವನು ಪ್ಲೇಟೋ. ಆದರೆ, ಆ ಪದವನ್ನು ಕಾರ್ಲ್‌ಮಾರ್ಕ್ಸ್‌ರ ಅರ್ಥದಲ್ಲಿ ಬಳಸಿಲ್ಲ. ಇವನು ಒಬ್ಬ ಪ್ರಖ್ಯಾತ ಕಲಾವಿಮರ್ಶಕನೂ ಆಗಿದ್ದ.

ಅರಿಸ್ಟಾಟಲ್

ಅರಿಸ್ಟಾಟಲ್ ಪ್ಲೇಟೋನ ಆತ್ಮೀಯ ಶಿಷ್ಯ ಮತ್ತು ಅಲೆಗ್ಸಾಂಡರ್‌ನ ಉಪಾಧ್ಯಾಯ ನಾಗಿದ್ದ. ಅವನನ್ನು ‘‘ಚಲಿಸುವ ವಿಶ್ವವಿದ್ಯಾನಿಲಯ’ ಎಂದು ಕರೆಯುತ್ತಿದ್ದರು. ಅರಿಸ್ಟಾಟಲ್ ಸಂವಿಧಾನಾತ್ಮಕ ಸರ್ಕಾರವನ್ನು ಬೆಂಬಲಿಸಿದನು. ಪ್ರಜೆಗಳು ಮಾಡಿದ ಕಾಯಿದೆಗಳು ಸರ್ಕಾರದ ಮೂಲವಾಗಿರಬೇಕೆಂಬುದು ಅವನ ಅಭಿಪ್ರಾಯ. ಮಾನವರು ಸಮಾಜ ಜೀವಿಗಳು. ಅವರು ರಾಜ್ಯವನ್ನು ರಚಿಸುವುದು ಸ್ವಾಭಾವಿಕ. ರಾಜ್ಯಗಳು ಎಲ್ಲರ ಹಿತರಕ್ಷಣೆಗಾಗಿ ಮಾನವನ ನೈತಿಕ ವಿಕಾಸಕ್ಕಾಗಿ ಹುಟ್ಟಿವೆ ಎಂದು ತಿಳಿಸಿದನು. ತರ್ಕಶಾಸ್ತ್ರ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಅಲಂಕಾರ ಶಾಸ್ತ್ರ, ನೀತಿ ಶಾಸ್ತ್ರ ಮುಂತಾದ ವಿಸ್ಮಯಗೊಳಿಸುವ ವಿಭಿನ್ನ ವಿಷಯಗಳ ಮೇಲೆ ಗ್ರಂಥಗಳನ್ನು ರಚಿಸಿದನು. ಅರಿಸ್ಟಾಟಲ್ ನನ್ನು ರಾಜಕೀಯ ಶಾಸ್ತ್ರದ ಪಿತಾಮಹನೆಂದು ಕರೆದಿದ್ದಾನೆ.

ಗ್ರೀಕರಲ್ಲಿ ಇತಿಹಾಸ ಪ್ರಜ್ಞೆ

ಇತಿಹಾಸವನ್ನು ಒಂದು ಸ್ವತಂತ್ರ ಶಾಸ್ತ್ರವಾಗಿ ಮೊದಲು ಬೆಳೆಸಿದವರು ಗ್ರೀಕರು. ಮನುಷ್ಯನ ಗತಕಾಲದ ಬದುಕನ್ನು ಕುರಿತು ವಸ್ತುನಿಷ್ಟವಾಗಿ ಬರೆಯಲು ಗ್ರೀಕರು ಮೊದಲು ಪ್ರಾರಂಭಿಸಿದರು. ಕ್ರಿ.ಪೂ.೫ನೇ ಶತಮಾನದಲ್ಲಿ ಬದುಕಿದ್ದ ಹೆರಡೋಟಸ್ ನನ್ನು ಇತಿಹಾಸದ ಪಿತಾಮಹನೆಂದು ಕರೆಯುತ್ತಾರೆ. ಚರಿತ್ರೆಯನ್ನು ಗದ್ಯರೂಪದಲ್ಲಿ ಮೊದಲು ಬರೆದವನು ಹೆರಡೋಟಸ್ . ಇವನು ಬರೆದ ‘ಹಿಸ್ಟರೀಸ್’ ಪುಸ್ತಕ ಈಜಿಪ್ಟ್ ಮತ್ತು ಪರ್ಶಿಯಾಗಳ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಇವನ ನಂತರ ಇತಿಹಾಸವನ್ನು ಇನ್ನು ಪ್ರಬುದ್ಧವಾಗಿ ಬರೆದವನು ಥೂಸಿಡೈಡಿಸ್. ಹೆರಡೋಟಸ್‌ಗೂ ಮತ್ತು ಇವನಿಗೂ ಸುಮಾರು ೫೦ ವರ್ಷಗಳ ಅಂತರವನ್ನು ಕಾಣಬಹುದು. ಥೂಸಿಡೈಡಿಸ್ ಬರೆದ ‘‘ಪಿಲೊಪೋನೇಶಿಯನ್ ಯುದ್ಧ’’ಎಂಬ ಗ್ರಂಥದಲ್ಲಿ ಇತಿಹಾಸ ರಚನಾಕ್ರಮ ಕುರಿತ ಹೆರಡೋಟಸ್‌ನ ಪ್ರಬುದ್ಧತೆ ಇವನಲ್ಲೂ ಕಾಣಬಹುದು. ಒಟ್ಟಾರೆ ಗ್ರೀಕರು ಪ್ರಾರಂಭಿಸಿದ ಇತಿಹಾಸ ರಚನಾ ಕಲೆ ಅನಂತರ ಬೇರೆ ಬೇರೆ ಕಡೆಗಳಿಗೆ ಪ್ರವಹಿಸಿತು.

ಪ್ರಾಚೀನ ಗ್ರೀಸ್‌ನಲ್ಲಿ ವಿಜ್ಞಾನ

ವಿಜ್ಞಾನವನ್ನು ಧರ್ಮಶಾಸ್ತ್ರದಿಂದ ಬೇರ್ಪಡಿಸಿ, ಸ್ವತಂತ್ರ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಾರಂಭಿಸಿದ ಕೀರ್ತಿ ಗ್ರೀಕರಿಗೆ ಸಲ್ಲುತ್ತದೆ. ಮಿಲಿಟಸ್‌ನ ಥೆಲ್ಸ್ ಎಂಬಾತನು ಗ್ರಹಣಗಳನ್ನು ಕರಾರುವಾಕ್ಕಾಗಿ ಪ್ರತಿಪಾದಿಸಿದನಲ್ಲದೆ ರೇಖಾಗಣಿತವನ್ನು ಪ್ರಚಾರಕ್ಕೆ ತಂದನು. ಪೈಥಾಗೊರಸ್ (ಕ್ರಿ.ಪೂ.೫೮೨-೫೦೨) ಗಣಿತ ಶಾಸ್ತ್ರಜ್ಞನಾಗಿದ್ದನು. ರೇಖಾ ಗಣಿತದಲ್ಲಿ ಪ್ರಮೇಯಗಳ ಮತ್ತು ಪ್ರಮಾಣಗಳ ವಿಧಾನ ಗಳನ್ನು ಪ್ರಚಾರಕ್ಕೆ ತಂದನು. ಇಂದಿಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಫೈಥಾಗರಸ್‌ನ ಪ್ರಮೇಯವನ್ನು ಪ್ರಮಾಣ ಪಡಿಸಿದನು.

ಮನುಷ್ಯನು ಮೀನಿನಿಂದ ಉದ್ಭವಿಸಿದನು. ಆಕಾಶದ ಅಂಗಗಳಿಂದ ಆವರಿಸಲ್ಪಟ್ಟ ಭೂಮಿಯು ಬಾಹ್ಯಾಕಾಶದಲ್ಲಿ ನೇತಾಡುತ್ತಿದೆ ಎಂದು ಅನ್ ಮ್ಯಾಂಡರ್ (ಕ್ರಿ.ಪೂ.೬೧೧-೫೪೭) ಅಭಿಪ್ರಾಯಪಟ್ಟನು. ಅನಕ್ಸ್‌ಗೊರಸ್ (ಕ್ರಿ.ಪೂ.೫೦೦-೪೨೮) ಪ್ರಾಣಿಗಳನ್ನು ಕೊಯ್ದು ಅವುಗಳ ಅಂಗರಚನೆಗಳನ್ನು ಅಧ್ಯಯನ ಮಾಡಿದನು. ಅನಕ್ಸ್‌ಗೊರಸ್ ಮತ್ತು ಎಪಿಡೋಕ್ಲೀಸರು ವಿಕಾಸವಾದದ ರೂಪುರೇಷೆಗಳನ್ನು ಎಳೆದಿದ್ದರು. ಹಿಮೊರ‌್ರೇಟ್ಸ್ (ಕ್ರಿ.ಪೂ.೪೬೦-೩೭೭) ವೈದ್ಯಶಾಸ್ತ್ರದ ಪಿತಾಮಹನಾಗಿದ್ದಾನೆ. ರೋಗಗಳು ಬರಲು ಹಾಗೂ ಗುಣವಾಗಲು ಸ್ವಾಭಾವಿಕ ಸಂಗತಿಗಳು ಕಾರಣವೇ ವಿನಃ ಅಲೌಕಿಕ ಕಾರಣಗಳಲ್ಲವೆಂದು ತಿಳಿಸಿದನು. ಮನಸ್ಸನ್ನು ಆಲೋಚನೆಯ ಕೇಂದ್ರವೆಂದು ತಿಳಿಸಿ, ಆಪ್ಟಿಕ್‌ನವರನ್ನು ಮೊದಲು ಗುರುತಿಸಿ ನಿದ್ದೆಯನ್ನು ವಿವರಿಸಿದವನು ಹಿಮೊರ‌್ರೇಟ್ಸ್. ‘‘ಕಾಪಸ್ ಹಿಪಪೊಕ್ರಟಿಕಂ’’ ಕ್ರಿ.ಪೂ.೫ನೇ ಶತಮಾನದಿಂದ ಕ್ರಿ.ಪೂ.೨ನೇ ಶತಮಾನದವರೆಗೆ ಅನೇಕ ಲೇಖಕರಿಂದ ಬರೆಯಲ್ಪಟ್ಟ ಗ್ರಂಥ. ಇಂದಿಗೂ ಎಲ್ಲಾ ವೈದ್ಯ ಪದವೀಧರರು ಸ್ವೀಕರಿಸುವ ‘‘ಹಿಮೋಕ್ರಟ್ಸ್ ಪ್ರಮಾಣ ವಚನ’’ ಪ್ರಖ್ಯಾತವಾಗಿದೆ. ವೈದ್ಯರು ಅನುಸರಿಸ ಬೇಕಾದ ನೀತಿನಿಯಮಾವಳಿಗಳು ಆ ಪ್ರಮಾಣವಚನ ದಲ್ಲಿ ಅಡಕವಾಗಿದೆ. ಏಟ್ನಾದ ಎಂಪಿಡೋಕ್ಲಿಸ್ ಪ್ರಕಾರ  ನಿರಂತರ ಚಲನೆಯಲ್ಲಿರುವ ಆಗೋಚರ ಅಣುಗಳ ಆಕಸ್ಮಿಕ ಜೋಡಣೆಗಳಿಂದ ಎಲ್ಲಾ ವಸ್ತುಗಳು ಉಂಟಾಗುತ್ತವೆ. ಮತ್ತೆ ಗ್ರೀಕ್ ಗಣಿತಜ್ಞರು ತ್ರಿಕೋಣಮಿತಿ ಮತ್ತು ಕ್ಯಾಲ್‌ಕ್ಯುಲನ್‌ಗಳ ಬುನಾದಿಯನ್ನು ಹಾಕಿದರು. ಶಂಕುವಿನ ಪರಿಚ್ಛೇದಗಳ ಅಧ್ಯಯನವನ್ನು ಪ್ರಾರಂಭಿಸಿ ಪೂರ್ಣಗೊಳಿಸಿದರು. ಮೂರು ಆಯಾಮಗಳ ಜ್ಯಾಮಿತಿಯನ್ನು ಗ್ರೀಕರು ಸಾಪೇಕ್ಷವಾಗಿ ಎಂಥ ಪರಿಪೂರ್ಣ ಗೊಯ್ದರೆಂದು ಡೆಕಾರ್ಟ್, ಪ್ಯಾಸ್ಕಲ್ ಮತ್ತು ಇರ‌್ಯಾಟೋಸ್ಥೀನ್ಸ್ ಮೊದಲಾದವರು ಭೂಮಿಯನ್ನು ಅಳೆದು ನಕ್ಷೆ ತಯಾರಿಸುವವರೆಗೆ ಜ್ಯಾಮಿತಿಯು ಗ್ರೀಕರು ತಲುಪಿದ ಹಂತದಲ್ಲಿಯೇ ಇತ್ತು. ಅರಿಸ್ಟಾಟಲ್ ಮತ್ತು ಥಿಯೋ ಪ್ರಾಸ್ತಸರು ಪ್ರಾಣಿ ಹಾಗೂ ಸಸ್ಯ ಪ್ರಪಂಚವನ್ನು ವರ್ಗೀಕರಿಸಿದುದೇ ಅಲ್ಲದೇ ವಿಜ್ಞಾನದ ಶಾಖೆಗಳಾದ ಪವನಶಾಸ್ತ್ರ, ಪ್ರಾಣಿಶಾಸ್ತ್ರ, ಭ್ರೂಣಶಾಸ್ತ್ರ ಮತ್ತು ಸಸ್ಯಶಾಸ್ತ್ರಗಳನ್ನು ಹೆಚ್ಚಿನಂಶ ರೂಪಿಸಿದ್ದರು. ಭೌತಶಾಸ್ತ್ರದಲ್ಲಿ ಅರ್ಕಿಮಿಡಿಸ್ ಒಬ್ಬ ಪ್ರಖ್ಯಾತ ವಿಜ್ಞಾನಿಯಾಗಿದ್ದ.

ಗ್ರೀಕ್ ಸಾಹಿತ್ಯ

ಸಾಹಿತ್ಯ ಕ್ಷೇತ್ರದಲ್ಲಿಯೂ ಗ್ರೀಕರ ಕೊಡುಗೆ ಉಜ್ವಲವಾಗಿದೆ : ಬುದ್ದಿ ಹಾಗೂ ಸೌಂದರ್ಯಶಾಸ್ತ್ರಗಳ ಕ್ಷೇತ್ರದಲ್ಲಿ ಪ್ರಾಯಶಃ ಗ್ರೀಕರು ಮಹಾಸೌಭಾಗ್ಯವಂತರಾಗಿದ್ದರು. ವಾಸ್ತವವಾಗಿ ಈ ಎರಡು ಕ್ಷೇತ್ರಗಳಲ್ಲಿಯೂ ಸರ್ವಕಾಲದಲ್ಲಿಯೂ ಅತ್ಯಂತ ಪ್ರಖ್ಯಾತವೆನಿಸಿದ ಸಾಧನೆಗಳು ಗ್ರೀಕರಿಂದ ಬಂದವು. ಹೋಮರ್ ಗ್ರೀಕ್ ಕವಿಗಳಲ್ಲಿ ಮೊದಲಿಗ. ‘‘ಇಲಿಯಡ್’’ ಮತ್ತು ‘‘ಒಡೆಸಿ’’ ಎಂಬ ಎರಡು ಮಹಾಕಾವ್ಯಗಳನ್ನು ರಚಿಸಿದ. ಇವನು ಕ್ರಿ.ಪೂ. ೯ನೇ ಶತಮಾನದಲ್ಲಿ ಜೀವಿಸಿದ್ದನು. ಗ್ರೀಸ್‌ನ ಶಾಲೋಪಾಧ್ಯಾಯ ಎಂದು ಕರೆಸಿಕೊಂಡ. ಹೋಮರನ ಕೃತಿಗಳ ಹಸ್ತಕೌಶಲ ಹಾಗೂ ಕಲಾಕೌಶಲ್ಯದ ಹಂಚಿಕೆಯಲ್ಲಿ ಹೆಮ್ಮೆಯನ್ನು ತೋರುತ್ತವೆ. ಅವು ಗೌರವ, ಧೈರ್ಯ, ಶಿಸ್ತು ಮತ್ತು ದೇಶಪ್ರೇಮ ಇವುಗಳನ್ನು ಸದ್ಗುಣಗಳೆಂದು ಸ್ಥಾಪಿಸಿವೆ. ಅಲ್ಲದೆ ದೇವರ ಕೃಪೆಯನ್ನು ಪಡೆಯುವುದರಲ್ಲಿ ಮಾನವ ಮತ್ತು ಅವನ ಶಕ್ತಿಯನ್ನು ಶ್ಲಾಘಿಸಿವೆ.

ಮಹಾಕಾವ್ಯಗಳ ನಂತರ ಭಾವಗೀತೆ, ದುರಂತ ಮತ್ತು ಸುಖಾಂತ ರೂಪದ ಸಾಹಿತ್ಯ ರಚನೆ ಪ್ರಾರಂಭವಾಯಿತು. ಭಾವಗೀತೆಗಳಲ್ಲಿ ಪ್ರೇಮಗೀತೆಗಳು, ಶೋಕ ಗೀತೆಗಳು ಮತ್ತು ಚಾಟು ಪದ್ಯಗಳು ಸೇರಿವೆ. ‘ಗಾನದೇವರು’ ಎಂಬ ಸಮಕಾಲೀನರು ಪರಿಗಣಿಸಿದ್ದಾಗ ಪಿಂಡಾರ ಆ ಕಾಲದ ಪ್ರಸಿದ್ಧ ಭಾವಕವಿಯಾಗಿದ್ದನು. ಇತಿಹಾಸದ ಪ್ರಥಮ ಕವಯತ್ರಿಯಾದ ಸಾಪೊ(ಕ್ರಿ.ಪೂ.೬ನೇ ಶತಮಾನ) ಹೋಮರ್‌ನಷ್ಟೇ ಮೆಚ್ಚುಗೆಯನ್ನು ಗಳಿಸಿದ್ದಳು. ಪ್ಲೇಟೋ ಆಕೆಯನ್ನು ಹತ್ತನೇ ಕಾವ್ಯ ದೇವತೆ ಎಂದು ಕರೆದಿದ್ದಾನೆ. ‘ಡ್ರಾಮ’ ಎಂಬ ಪದವನ್ನು ಮೊದಲು ಬಳಸಿದವರು ಗ್ರೀಕರು. ನಾಟಕ ಕ್ಷೇತ್ರದಲ್ಲಿ(ಅದರಲ್ಲೂ ರುದ್ರನಾಟಕ) ಗ್ರೀಕರ ಸಾಧನೆ ಅತ್ಯಂತ ವಿಶಿಷ್ಟವೂ ಹಾಗೂ ಉಜ್ವಲವೂ ಅಗಿದೆ. ನಾಟಕಕಾರರಲ್ಲಿ ಮೊದಲು ಪ್ರಖ್ಯಾತನೆಂದರೆ ಈಸ್ಕಿಲಾನ್(ಕ್ರಿ.ಪೂ.೫ನೇ ಶತಮಾನ). ಇವನು ಬರೆದ ಎಪ್ಪತ್ತು ನಾಟಕಗಳಲ್ಲಿ ಕೇವಲ ಏಳು ಮಾತ್ರ ಉಳಿದಿವೆ. ಇವುಗಳಲ್ಲಿ ಅತ್ಯಂತ ಪ್ರಖ್ಯಾತವಾದುದು ‘ಪ್ರೊಮಿಡಿಯಸ್ ಬಾಂಡ್’. ‘ಅಗಮೆಮ್ನಾನ್’ ಇವನ ಇನ್ನೊಂದು ಪ್ರಸಿದ್ಧ ನಾಟಕ. ಸೊಮೊಕ್ಲಿಸ್ ಮತ್ತೋರ್ವ ಪ್ರಖ್ಯಾತ ರುದ್ರನಾಟಕಕಾರ. ಇವನು ೧೧೩ ನಾಟಕಗಳನ್ನು ಬರೆದರೂ ಕೇವಲ ಏಳು ನಾಟಕಗಳು ಮಾತ್ರ ದೊರೆತಿವೆ. ಜೀವನದಲ್ಲಿ ಇವನು ಸಂಪತ್ತು, ಸೌಂದರ್ಯ, ಬುದ್ದಿ ಮತ್ತು ಆರೋಗ್ಯವನ್ನು ಪಡೆದ ಸೌಭಾಗ್ಯಶಾಲಿಯಾಗಿದ್ದ. ಜೊತೆಗೆ ಸಂಗೀತಗಾರನೂ, ಕುಸ್ತಿಪಟುವೂ ಆಗಿದ್ದು, ಅಭಿನಯ ದಲ್ಲಿ ಚತುರನಾಗಿದ್ದನು. ಅಥೆನ್ಸ್‌ನ ರಾಜ್ಯ ಪೆರಿಕ್ಲಿಸ್‌ನ ಆತ್ಮೀಯ ಸ್ನೇಹಿತನೂ ಆಗಿದ್ದು ಯುದ್ಧದಲ್ಲಿ ಪಾಲ್ಗೊಳ್ಳುತ್ತಿದ್ದನು. ನಿರಂತರವಾಗಿ ೩೦ ವರ್ಷಗಳ ಕಾಲ ನಾಟಕ ರಂಗ ವನ್ನು ಆಳಿದನು. ‘ಈಡಿಪಸ್ ದಿ ಕಿಂಗ್’, ‘ಅಂತಿಗೊನೆ’, ‘ಎಲಿಕ್ಟ್ರಾ’ ಮತ್ತು ‘ಈಡಿಪಸ್ ಆಟ್ ಕಲೋನಸ್’ ಇವನ ಜಗದ್ವಿಖ್ಯಾತ ನಾಟಕಗಳು. ಮನೋವಿಜ್ಞಾನದಲ್ಲಿ ಬಳಸುವ ‘ಈಡಿಪಸ್ ಕಾಂಪ್ಲೆಕ್ಸ್’ ಮತ್ತು ‘ಎಲಿಕ್ಟ್ರಾಕಾಂಪ್ಲೆಕ್ಸ್’ಗಳು ಇವನ ನಾಟಕಗಳಿಂದಲೇ ತೆಗೆದುಕೊಂಡವುಗಳು.

ಯೂರಿಪಿಡಿಸ್

ಇವನು ಮೂಲತಃ ಒಬ್ಬ ರಮ್ಯ ಕವಿಯಾದುದರಿಂದ, ತತ್ವಶಾಸ್ತ್ರದ ಕಡೆಗೆ ಆಗಾಗ್ಗೆ ಇವನು ಗಮನಹರಿಸಿದ್ದರಿಂದ ಅವನು ರಚಿಸಿದ ನಾಟಕಗಳು ಪರಿಪೂರ್ಣತೆಯನ್ನು ಪಡೆಯಲಿಲ್ಲವೆಂದು ಅಭಿಪ್ರಾಯ ಪಡಲಾಗಿದೆ. ಯೂರಿಪಿಡಿಸ್ ಒಟ್ಟು ೭೫ ನಾಟಕಗಳನ್ನು ರಚಿಸಿದನು. ಇವುಗಳಲ್ಲಿ ೧೮ ಉಳಿದು ಬಂದಿದೆ. ‘ಮೀಡಿಯ’ ‘ಹಿಮೊಲೈಟಸ್’ ಮತ್ತು ‘ದಿ ಟ್ಯೂಜಾನ್ ವಿಮೆನ್’ ಇವನು ಬರೆದ ಪ್ರಖ್ಯಾತ ನಾಟಕಗಳು. ಅರಿಸ್ಟೋವೆನಿಸ್ ಪ್ರಾಚೀನ ಗ್ರೀಸ್‌ನಲ್ಲಿ ಸುಖಾಂತ ನಾಟಕಗಳನ್ನು ಬರೆದ ನಾಟಕಕಾರನಾಗಿದ್ದ. ಇಂದು ಸಹ ಸಾಹಿತ್ಯದಲ್ಲಿ ಬಳಸುವ ಲಿರಿಕ್, ಓಡ್, ನೊವೆಲ್, ಎಸ್ಸೆ, ಓರೇಶನ್, ಬಯಾಗ್ರಫಿ ಮೊದಲಾದವುಗಳು ಗ್ರೀಕರಿಂದ ಬಂದವುಗಳು.

ಕಲೆ ಮತ್ತು ವಾಸ್ತುಶಿಲ್ಪ

ಪ್ರಾರಂಭದಲ್ಲಿ ಗ್ರೀಕರ ಕಲೆಯು ಈಜಿಪ್ಟಿಯನ್ ಮತ್ತು ಸಿರಿಯನ್ ಶೈಲಿಗಳಿಂದ ಪ್ರಭಾವಿತವಾದರೂ ಕ್ರಿ.ಪೂ.೬ನೆಯ ಶತಮಾನದಿಂದ ಸ್ವತಂತ್ರ ಸ್ಥಾನಮಾನವನ್ನು ಕಂಡುಕೊಂಡಿತು. ಗ್ರೀಕ್ ಕಲಾಪದ್ಧತಿಯಲ್ಲಿ ಮುಖ್ಯವಾಗಿ ಮೂರು ಪ್ರಧಾನ ಶೈಲಿಗಳನ್ನು ಗುರುತಿಸಬಹುದು. ಡೋರಿಕ್ , ಅಯೋನಿಕ್ ಮತ್ತು ಕೊರಿಂಥಿಯನ್ ಇವೇ ಆ ಮೂರು ಶೈಲಿಗಳು. ಈ ಮೂರು ಶೈಲಿಗಳಲ್ಲೂ ದೇವಾಲಯಗಳನ್ನು ನಿರ್ಮಿಸಿದರು. ಡೋರಿಕ್ ಶೈಲಿಯು ಸರಳವಾಗಿದ್ದರೆ, ಅಯೊನಿಕ್ ಮತ್ತು ಕೊರಿಂಥಿಯನ್ ಶೈಲಿಗಳು ಹೆಚ್ಚು ಅಲಂಕಾರಗಳಿಂದ ಕೂಡಿದ್ದವು. ಮೂರ್ತಿಶಿಲ್ಪವನ್ನು ಗ್ರೀಕರು ಮೂಲಭೂತವಾಗಿ ಶೃಂಗಾರದ ಸಾಧನವಾಗಿ ಬಳಸಿದರು.

ಗ್ರೀಕರು ಹೊಂದಿದ್ದ ದೇವಾಲಯದ ಕಲ್ಪನೆ ಪೌರ್ವಾತ್ಯ ದೇಶಗಳಿಗಿಂತ ಭಿನ್ನವಾಗಿತ್ತು. ಅವರ ಪ್ರಕಾರ ದೇವಾಲಯವು ದೇವರ ಅವಾಸಸ್ಥಾನವಾಗಿರಲಿಲ್ಲ. ಬದಲಾಗಿ ದೈವಾಂಶವುಳ್ಳ ಮತ್ತು ಆಶ್ಚರ್ಯಕರವಾದ ವಸ್ತುವಿನ ಗೌರವ ಸೂಚಕವಾಗಿತ್ತು. ಅವರ ಪ್ರಾಚೀನ ದೇವಾಲಯಗಳಲ್ಲಿ ಡೋರಿಕ್ ಶೈಲಿಯಲ್ಲಿರುವ ಅಥವಾ ದೇವಾಲಯ ಮತ್ತು ಪಾರ್ಥಿಯಾನ್ ಹೆಚ್ಚು ಪ್ರಸಿದ್ಧವಾಗಿವೆ.

ಪೆರಿಕ್ಲಿಸ್‌ನ ಕಾಲದಲ್ಲಿ ಅಕ್ರೊಪೊಲಿಸ್‌ನಲ್ಲಿ ಕಟ್ಟಿಸಿದ ಈ ದೇವಾಲಯವು ಈ ಭಗ್ನಾವಸ್ಥೆಯಲ್ಲಿದ್ದರೂ ಸಹ, ಗ್ರೀಕ್ ವಾಸ್ತುಶಿಲ್ಪದ ಉತ್ತಮ ರಚನೆಯಾಗಿದೆ. ಅದರ ಹತ್ತಿರದಲ್ಲಿಯೇ ಕಟ್ಟಿಸಿರುವ ‘ಇರೆಕ್ಲಿಥಿಯಂ’ ಅಯೋನಿಕ್ ಶೈಲಿಯಲ್ಲಿದೆ. ಅಥೆನ್ಸ್ ನಲ್ಲಿರುವ ಲಿಫಿಕ್ರೆಟಸ್‌ನ ಸ್ಮಾರಕ ಕಾರಿಂಥಿಯನ್ ಶೈಲಿಯಲ್ಲಿದೆ. ಹೆಲನಿಕ್ ವಾಸ್ತುಶಿಲ್ಪವು ಹೆಚ್ಚಾಗಿ ಲೌಕಿಕ ಕಟ್ಟಡಗಳಲ್ಲಿ ಕಾಣಬರುತ್ತದೆ.

ಪ್ರಾಚೀನ ಗ್ರೀಕರು ಮಾನವ ಮತ್ತು ಮಾನವ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಆದ್ದರಿಂದ ಕಲಾಕಾರರು ಮನುಷ್ಯನನ್ನು ಸ್ವಾಭಾವಿಕವಾಗಿ ರಚಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಿದರು. ಅವರಿಗೆ ಮಾನವ ದೇಹದ ಅಂಗರಚನೆಯ ಪೂರ್ಣ ಪರಿಚಯವಿದ್ದಿತು. ಮಾನವನಂತೆಯೇ ರಚಿಸುವ ಕಾಲ ನೈಪುಣ್ಯತೆಯನ್ನು ಅವರು ಪಡೆದಿ ದ್ದರು. ಒಲಿಂಪಿಕ್ ಕ್ರೀಡೆಗಳ ಸಂದರ್ಭದಲ್ಲಿ ಬತ್ತಲಾಗಿ ಭಾಗವಹಿಸುತ್ತಿದ್ದ ಕ್ರೀಡಾ ಪಟುಗಳ ಅಂಗಸೌಷ್ಠವವೂ ಗ್ರೀಕ್ ಕಲಾಕಾರರಿಗೆ ಸ್ಫೂರ್ತಿ ನೀಡಿತು. ಹೆಲನ್ ಶಿಲ್ಪಗಳು ಶ್ರೇಷ್ಠತೆಗೆ ಹೆಸರಾಗಿವೆ. ಪರ್ಗಮಮ್‌ನಲ್ಲಿರುವ ‘ಡಯಿಂಗ್ ಗಾಲ್’, ರೋಡ್ಸ್‌ನಲ್ಲಿರುವ ‘ಲವೊಕೂನ್’ ಮತ್ತು ‘ವಿಕ್ಟರಿ ಆಫ್ ಸಮೋಕ್ರೇಸ್’ ಮತ್ತು ಅಲೆಗ್ಸಾಂಡ್ರಿಯನ್ ಶಾಲೆಯ ‘ವೀನಸ್ ಅಫ್ಠ್‌ಮಿಲೊ’’ ಈ ಪ್ರತಿಮೆಗಳು ನಿರುಪಮ ರಚನೆಗಳಾಗಿವೆ. ‘ಲವೊಕೋನ್’ ಪ್ರತಿಮೆಯನ್ನು ಮೈಕೆಲಾಂಜಲೊ ಕಲಾಕೌತುಕವೆಂದು ಕರೆದು ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾನೆ. ಭಾರತದ ಮೇಲೆ ಅಲೆಗ್ಸಾಂಡರ್‌ನ ಆಕ್ರಮಣದ ನಂತರ ಬ್ಯಾಕ್ಟ್ರಿಯಾದಲ್ಲಿ ನೆಲೆಸಿದ್ದ ಗ್ರೀಕರ ಪ್ರಭಾವಕ್ಕೆ ಭಾರತದ ಗಾಂಧಾರಕಲೆಯೂ ಒಳಗಾಯಿತು.

ಗ್ರೀಕರು ಚಿತ್ರಕಲೆಯನ್ನು ಮೊದಲು ಪುಷ್ಪಕರಂಡಕಗಳ ಮೇಲೆ ಪ್ರಾರಂಭಿಸಿದರು. ಹೆಲಿನಿಸ್ಟಿಕ್ ಕಾಲದಲ್ಲಿ ಕಲಾಕಾರನು ಸೃಷ್ಟಿಯ ರಮ್ಯನೋಟಕ್ಕೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದ್ದರಿಂದ ಚಿತ್ರಗಳು ಹೆಚ್ಚು ಅಲಂಕೃತವಾಗಿದ್ದವು. ಕ್ರಮೇಣ ಗ್ರೀಕರ ಚಿತ್ರಕಲೆಯು ಹೆಚ್ಚು ಐಹಿಕವೂ ಅಲಂಕೃತವೂ ಆಯಿತು.

ಗ್ರೀಕರು ಸಂಗೀತ ಮತ್ತು ನೃತ್ಯಕ್ಕೂ ಮಹತ್ವ ನೀಡಿದ್ದರು. ಸಂಗೀತವು ಸ್ಫೂರ್ತಿದಾಯಕ ವಾಗಿರುವುದಕ್ಕಿಂತಲೂ ವೃತ್ತಿದಾಯಕವಾಗಿತ್ತು. ಒಟ್ಟಾರೆ ಗ್ರೀಕ್ ಕಲೆಯಲ್ಲಿ ನಾವು ಸ್ವಭಾವದ ಅಧ್ಯಯನ ಮತ್ತು ಆತ್ಮದ ಚಿತ್ರಗಳ ಅಭಾವವವನ್ನು ಕಾಣುತ್ತೇವೆ. ದೈಹಿಕ ಸೌಂದರ್ಯ ಹಾಗೂ ಆರೋಗ್ಯದ ಬಗ್ಗೆ ಗ್ರೀಕ್ ಕಲೆಗಿರುವ ವ್ಯಾಮೋಹ ಅದನ್ನು ಪಕ್ವತೆಯಲ್ಲಿ ಈಜಿಪ್ಟ್‌ನ ಪೌರುಷಯುಕ್ತ ಶಿಲ್ಪ ಅಥವಾ ಚೀನಾದ ಅಭಿಜ್ಞ ವರ್ಣಚಿತ್ರಗಳಿಗಿಂತ ಕಡಿಮೆಯಾಗಿಸಿದೆ.

ಕ್ರೀಡೆಗಳು

ಧರ್ಮ ಗ್ರೀಸನ್ನು ಒಂದುಗೂಡಿಸುವುದರಲ್ಲಿ ವಿಫಲವಾದರೂ, ಈ ದಿಶೆಯಲ್ಲಿ ಆಗಿಂದಾಗ್ಗೆ ಕ್ರೀಡೆಗಳು ಯಶಸ್ವಿಯಾದವು. ಕ್ರೀಡೆಗಳ ಸಮಯದಲ್ಲಿ ಗ್ರೀಕರು ಆರೋಗ್ಯ, ಸೌಂದರ್ಯ ಮತ್ತು ಶಕ್ತಿಗಳನ್ನು ತಮ್ಮ ಧರ್ಮವಾಗಿ ಆಚರಿಸುವುದನ್ನು ಕಾಣುತ್ತೇವೆ. ಪ್ರಾಚೀನ ಕಾಲದಲ್ಲಿ ಯುದ್ಧವು ದೈಹಿಕಬಲ ಮತ್ತು ಯುಕ್ತಿಯನ್ನು ಮುಖ್ಯವಾಗಿ ಅವಲಂಬಿಸಿದ್ದರಿಂದ ಅವುಗಳನ್ನು ಗಳಿಸುವುದು ಕ್ರೀಡೆಗಳ ಮುಖೇನ ಸಾಧ್ಯವಾಗುತ್ತಿತ್ತು. ಜೊತೆಗೆ ಕ್ರೀಡೆಗಳಿಂದ ಸ್ಥಾನ ಮಾನ ಪ್ರಸಿದ್ದಿಗಳೂ ಲಭ್ಯವಾಗುತ್ತಿದ್ದವು.

ಗ್ರೀಕ್ ಕ್ರೀಡೆಗಳು ಖಾಸಗೀ, ಸ್ಥಳೀಯ, ಮುನಿಸಿಪಲ್ ಮತ್ತು ಪಾನ್‌ಹೆಲೆನಿಕ್ ಮಟ್ಟ ದಲ್ಲಿ ನಡೆಯುತ್ತಿದ್ದವು. ಗ್ರೀಕ್ ಕ್ರೀಡೆಗಳಲ್ಲಿ ಅತ್ಯಂತ ಮುಖ್ಯವಾದದ್ದು ಒಲಂಪಿಕ್ಸ್ ಕ್ರೀಡಾಕೂಟ. ಇದು ಕ್ರಿ.ಪೂ. ೭೭೬ರಲ್ಲಿ ಒಲಂಪಿಯಾದಲ್ಲಿ ಪ್ರಾರಂಭವಾಯಿತು. ಸ್ವತಂತ್ರವಾಗಿ ಜನಿಸಿದ ಗ್ರೀಕರು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹರಾಗುತ್ತಿದ್ದರು. ಸ್ಥಳೀಯ ಮತ್ತು ಮುನಿಸಿಪಲ್ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ೧೦ ತಿಂಗಳ ಕಠಿಣ ತರಬೇತಿ ನೀಡಿ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕಳುಹಿಸುತ್ತಿದ್ದರು. ಒಲಂಪಿಯಾಕ್ಕೆ ಬಂದಾಗ ಅವರನ್ನು ಪರೀಕ್ಷಿಸಲಾಗುತ್ತಿತ್ತು ಹಾಗೂ ಎಲ್ಲಾ ಕ್ರೀಡಾಪಟುಗಳೂ ತಾವು ಕ್ರೀಡಾ ನಿಯಮಗಳಿಗೆ ಬದ್ಧರಾಗುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದರು. ಇಷ್ಟಾದರೂ ಕ್ರೀಡೆಗಳು ಸಂಪೂರ್ಣ ಕ್ರೀಡಾ ಮನೋಭಾವದಿಂದಲೇ ನಡೆಯುತ್ತಿದ್ದವೆಂದು ಹೇಳಲಾಗುವುದಿಲ್ಲ.

ವಯಸ್ಸು ಮತ್ತು ಸ್ಥಾನದ ಭೇದವಿಲ್ಲದೇ ಎಲ್ಲಾ ಕ್ರೀಡಾಪಟುಗಳೂ ಹೆಚ್ಚಿನ ಸಂದರ್ಭದಲ್ಲಿ ನಗ್ನರಾಗಿರುತ್ತಿದ್ದರು. ಇದಕ್ಕೆ ಒಮ್ಮೊಮ್ಮೆ ಅಪವಾದವೂ ಇರುತ್ತಿತ್ತು. ದಿನಪೂರ್ತಿ ಕ್ರೀಡಾಂಗಣದಲ್ಲಿ ಸುಮಾರು ೪೫೦೦೦ ಪ್ರೇಕ್ಷಕರು, ಕೀಟಗಳು, ಸೆಖೆ, ಬಾಯಾರಿಕೆಯ ಹಂಗು ತೊರೆದು ಹ್ಯಾಟ್ ಧರಿಸದೇ ಕ್ರೀಡೆಗಳನ್ನು ವೀಕ್ಷಿಸುತ್ತಿದ್ದರು. ‘ಉದ್ದಜಿಗಿತ’, ಡಿಸ್ಕಸ್ ಎಸೆತ, ಜಾವಲಿನ್ ಎಸೆತ, ಸ್ಟೇಡಿಯಂ ಸುತ್ತ ಓಡುವುದು, ಕುಸ್ತಿ, ಬಾಕ್ಸಿಂಗ್, ರಥಗಳ ಸ್ಪರ್ಧೆ ಇತ್ಯಾದಿ ತುಂಬಾ ಮುಖ್ಯ ಆಕರ್ಷಣೆಯಾಗಿದ್ದವು. ಮೊಲ-ಕುದುರೆಗಳ ಜೊತೆ ಓಟದಲ್ಲಿ ಸ್ಪರ್ಧಿಸಿ ಗೆದ್ದ ವೀರರ ಕಥೆಗಳೂ ಸಾಕಷ್ಟಿವೆ.

ಮ್ಯಾರಥಾನ್

ಕ್ರಿ.ಪೂ.೪೯೦ರಲ್ಲಿ ಗ್ರೀಕರಿಗೂ ಪರ್ಶಿಯನ್ನರಿಗೂ ನಡೆದ ಮ್ಯಾರಥಾನ್ ಕದನದಲ್ಲಿ ಗ್ರೀಕರಿಗೆ ಜಯ ಲಭಿಸಿತು. ಆ ಕದನದಲ್ಲಿ ಸುಮಾರು ೧ ಲಕ್ಷ ಪರ್ಶಿಯನ್ನರೂ, ೨೦ ಸಾವಿರ ಗ್ರೀಕರೂ ಭಾಗವಹಿಸಿದ್ದರು. ಗ್ರೀಕರಿಗೆ ದೊರೆತ ಈ ವಿಜಯದ ಸಂತೋಷ ಸುದ್ದಿಯನ್ನು ಯುದ್ಧಭೂಮಿಯಾದ ಮ್ಯಾರಥಾನ್‌ನಿಂದ ಅಥೆನ್ಸ್‌ವರೆಗೆ ೨೪ ಮೈಲಿದೂರ ಓಡಿ ಹೋಗಿ ಪೆಯ್ದಿ ಪೈಡಸ್ ಎಂಬು ಸೈನಿಕ ತಿಳಿಸಿದ ನಂತರ ಕುಸಿದು ಸತ್ತ. ಪ್ರಾಚೀನ ಕಾಲದಲ್ಲಿ ಮ್ಯಾರಥಾನ್ ಓಟ ಇರಲಿಲ್ಲ. ಆದರೆ, ಈಗ ಆ ಸೈನಿಕನ ಗೌರವಾರ್ಥ ಮ್ಯಾರಥಾನ್ ಓಟ ಒಲಂಪಿಕ್ಸ್‌ನಲ್ಲಿದೆ. ಒಲಂಪಿಕ್ಸ್ ಕ್ರೀಡಾಕೂಟ ತುಂಬ ರಂಜನೀಯವೂ, ರೋಮಂಚಕವೂ ಆಗಿರುತ್ತಿತ್ತು.

ಸಮಾರೋಪ

ಜೀವನ ಹಾಗೂ ಸಂಸ್ಕೃತಿಯ ಎಲ್ಲಾ ಅಂಶಗಳಿಗೂ ಸಂಬಂಧಿಸಿದ ಒಂದು ಶ್ರೀಮಂತ ಆಸ್ತಿಯನ್ನು ಗ್ರೀಕರು ನಮಗೆ ಬಿಟ್ಟಿದ್ದಾರೆ. ಸರ್ಕಾರ ಜನತೆಗೆ ಜವಾಬ್ದಾರವಾಗಿರಬೇಕೆಂಬುದು, ಜೂರಿ ಪದ್ಧತಿ, ಆಲೋಚನೆ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಬರವಣಿಗೆಯ ಸ್ವಾತಂತ್ರ್ಯ, ಸಭೆ-ಸಮಾರಂಭಗಳ ಹಕ್ಕು, ಪೂಜಾ ಸ್ವಾತಂತ್ರ್ಯಗಳೇ ಅಲ್ಲದೇ ಪ್ರಜಾಪ್ರಭುತ್ವ, ಸರ್ವಾಧಿಕಾರಗಳೇ ಮೊದಲಾದವುಗಳು ಗ್ರೀಕರ ಕಾಲದಿಂದ ಬಂದವುಗಳು. ನಮಗೆ ಪರಿಚಯವಾಗಿರುವ ಸ್ಕೂಲ್, ಯೂನಿವರ್ಸಿಟಿ, ಜಿಮ್ಯಾಸಿಯಂ, ಸ್ಟೇಡಿಯಂ, ಅಥ್ಲೆಟಿಕ್ಸ್, ಒಲಂಪಿಕ್ಸ್, ಕ್ರೀಡೆಗಳು ಇತ್ಯಾದಿ ಗ್ರೀಕರ ಕಾಲದಿಂದ ಬಂದಿವೆ.

ವಾಸ್ತವವಾದ (ರಿಯಾಲಿಸಂ), ನಾಮಮಾತ್ರವಾದ (ನಾಮಿನಾಲಿಸಂ), ಆದರ್ಶವಾದ (ಐಡ್ಯಾಲಿಸಂ), ಭೌತವಾದ (ಮೆಟೀರ್ಯಾಲಿಸಂ), ಏಕದೇವತಾವಾದ (ಮೊನೋತೀಯಿಸಂ), ನಿರೀಶ್ವರವಾದ (ಅಥೀಯಿಸಂ), ಸ್ತ್ರೀವಾದ (ಫೆಮಿನಿಸಂ), ಕಮ್ಯುನಿಸಂ (ಕಮ್ಯುನಿಸಂ), ಕ್ಯಾಂಟಿಯನ್ ವಿಮರ್ಶೆ, ಕೋಪನೆಹೇರ್‌ನ ನಿರಾಶಾವಾದ, ರೊಸೊನ ಅದಿಮವಾದ,  ನೀಶೆ ನಿತ್ಯಾತೀತತೆ, ಸ್ಪೆನ್ಸ್‌ರ್‌ನ ಸಂಯೋಜನವಾದ, ಫ್ರಾಯ್ಡನ ಮನೋವಿಶ್ಲೇಷಣೆ ಇವೆಲ್ಲವನ್ನೂ ತತ್ವಶಾಸ್ತ್ರದ ಜನ್ಮ ಭೂಮಿಯಾದ ಗ್ರೀಸ್‌ನಲ್ಲಿ ಕಾಣಬಹುದು.

ಆಧುನಿಕ ಯುಗದ ಮುಂಜಾವಿನಲ್ಲಿ ಕಾಣಿಸಿಕೊಂಡ ಯುರೋಪಿನ ಪುನರುಜ್ಜೀವನ  ಕಾಲದ ಚಿಂತನೆಗಳಿಗೆ ಪ್ರಾಚೀನ ಗ್ರೀಕರ ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪಗಳು ಸ್ಫೂರ್ತಿ ನೀಡಿ ಮನುಷ್ಯನನ್ನು ಮಾನಸಿಕ ಬೌದ್ದಿಕ ಬರಡುತನದಿಂದ ಮುಕ್ತಿಗೊಳಿಸಿದವು. ಯಾವುದೇ ನಾಗರಿಕತೆ ಸಾಯುವುದಿಲ್ಲ. ಅದು ವಲಸೆ ಹೋಗುತ್ತದೆ. ಅದು ತನ್ನ ಮೂಲ ನೆಲೆ ಮತ್ತು ಸ್ವರೂಪವನ್ನು ಬದಲಿಸುತ್ತದೆ. ಆದರೆ ನಿರಂತರವಾಗಿ ಮುಂದುವರೆಯುತ್ತಿದೆ. ಹಾಗೇ ಪ್ರಾಚೀನ ಗ್ರೀಕರ ಸಂಘ ಸಂಸ್ಥೆಗಳು ನಾಶವಾದರೂ ಅವರ ಆಲೋಚನೆ ಮತ್ತು ಸಂಸ್ಕೃತಿಗಳು ಮುಂದುವರೆದಿವೆ.

 

ಪರಾಮರ್ಶನ ಗ್ರಂಥಗಳು

೧. ವಿಲ್ ಡ್ಯುರಾಂಟ್, ದಿ ಸ್ಟೋರಿ ಆಫ್ ಸಿವಿಲೈಸೇಷನ್ : ಪಾರ್ಟ್-II ದಿ ಲೈಫ್ ಆಫ್ ಗ್ರೀಸ್.

೨. ರೀಲ್ಲೀ ಕೆವಿನ್, ರೀಡಿಂಗ್ಸ್ ಇನ್ ವರ್ಲ್ಡ್ ಸಿವಿಲೈಸೇಷನ್ಸ್, ವಾಲ್ಯುಮ್-I ದಿ ಗ್ರೇಟ್ ಡ್ರೆಡೀಷನ್ಸ್(ಎರಡನೆಯ ಆವೃತ್ತಿ).

೩. ಎನ್‌ಸೈಕ್ಲೋಪೀಡಿಯಾ ಬ್ರಿಟೇನಿಕಾ, ಸಂಪುಟ ೧೦.

೪. ಶೆಟ್ಟರ್ ಎಸ್., ವರ್ಲ್ಡ್ ಹಿಸ್ಟರಿ ಲ್ಯಾಂಡ್ ಮಾರ್ಕ್ಸ್ ಇನ್ ಹ್ಯೂಮನ್  ಸಿವಿಲೈಸೇಷನ್.