ವಿಯೆನ್ನಾ ಕಾಂಗ್ರೆಸ್

ನೆಪೋಲಿಯನ್‌ನ ಸೋಲಿನಿಂದ ರಾಜನೀತಿ ನಿಪುಣರಿಗೆ ಮತ್ತು ರಾಯಭಾರಿಗಳಿಗೆ ಅತ್ಯಂತ ಜಟಿಲವಾದ ಮತ್ತು ಕಷ್ಟಕರವಾದ ಸಮಸ್ಯೆಗಳು ಎದುರಾದವು. ನೆಪೋಲಿಯನ್‌ನ ಆಳ್ವಿಕೆಯ ಪತನದ ನಂತರ ಯುರೋಪಿನ ಪುನರ್‌ರಚನೆಯು ಆಗಲೇಬೇಕಾಗಿತ್ತು. ಯುರೋಪಿನ ಚರಿತ್ರೆಯಲ್ಲೇ ಅತ್ಯಂತ ಶ್ರೇಷ್ಟಮಟ್ಟದ ರಾಯಭಾರಿಗಳ ಕೂಟವಾದ ವಿಯೆನ್ನಾದ ಸಭೆಯೊಂದರಲ್ಲಿ ಈ ಪುನರ್‌ರಚನೆಯ ಕೆಲಸವನ್ನು ಕೈಗೆತ್ತಿಕೊಳ್ಳಲಾಯಿತು. ಫ್ರಾನ್ಸ್ ದೇಶದಿಂದ ಒತ್ತಾಯಪೂರ್ವಕವಾಗಿ ಬಿಡಿಸಿಕೊಂಡ ಪ್ರಾಂತ್ಯಗಳನ್ನು ಹಂಚುವುದೇ ಈ ಸಭೆಯ ಬಹುಮುಖ್ಯ ಕೆಲಸವಾಗಿದ್ದಿತು. ಹಾಲೆಂಡ್ ದೇಶಕ್ಕೆ ಬೆಲ್ಜಿಯಂನ್ನು ಸೇರಿಸಲಾಯಿತು.

ರಷ್ಯಾದ ಚಕ್ರವರ್ತಿಯಾದ ಒಂದನೇ ಅಲೆಗ್ಸಾಂಡನ್‌ನು ತನಗೆ ವಾರ್ಸಾದ ಹಿರಿಯ ಸಂಸ್ಥಾನವು ಬೇಕೆಂದು ಕೇಳಿದನು. ಸಾಕೋನಿಯ ಶ್ರೀಮಂತ ರಾಜಮನೆತನದ ಮೇಲೆ ಪ್ರಷ್ಯಾವು ಕಣ್ಣಿಟ್ಟಿದ್ದು, ಡ್ರೆಸ್ಡೆನ್ ಮತ್ತು ಲಿಪ್‌ಜಿಗ್‌ಗಳು ತನಗೆ ಪರಿಹಾರವಾಗಿ ಸಿಗಬೇಕೆಂದು ಕೇಳಿಕೊಂಡನು. ಈ ಸಭೆಯಿಂದ ರಷ್ಯಾವು ಬಹಳಷ್ಟು ದೇಶಗಳನ್ನು ಸೇರಿ ಕೊಂಡಿತು. ಫಿನ್‌ಲ್ಯಾಂಡ್‌ನ್ನು ತನ್ನ ಬಳಿಯೇ ಉಳಿಸಿಕೊಂಡಿದ್ದಲ್ಲದೆ ಸ್ವೀಡನ್, ಬೆಸರಾಬಿಯಾ ಹಾಗೂ ವಾರ್ಸಾದ ಹಿರಿಯ ಸಂಸ್ಥಾನದ ಹೆಚ್ಚು ಭಾಗವನ್ನು ವಶಪಡಿಸಿ ಕೊಂಡಿತು.

ಆಸ್ಟ್ರಿಯಾವು ತನ್ನ ಪೋಲೆಂಡ್ ಪ್ರಾಂತ್ಯಗಳನ್ನು ಉಳಿಸಿಕೊಂಡಿತು ಮತ್ತು ನೆದರ್ಲ್ಯಾಂಡ್‌ಗೆ ಪರಿಹಾರವಾಗಿ ಉತ್ತರ ಇಟಲಿಯನ್ನು ಅಥವಾ ಲಂಬಾರ್ಡ-ವೆನಿಶಿಯನ್ ರಾಜ್ಯವನ್ನು ಪಡೆಯಿತು. ಫ್ರಾನ್ಸ್‌ನಿಂದ ವಹಿಸಿಕೊಂಡ ಬಹಳಷ್ಟು ಪ್ರಾಂತ್ಯ ಗಳನ್ನು ಮುಖ್ಯವಾಗಿ ಹಾಲೆಂಡ್, ಮಾಲ್ಟ, ಅಯೋನಿಯನ್ ದ್ವೀಪಗಳು, ಕೇಪ್ ವಸಾಹತು, ಸಿಲೋನ್ ಮತ್ತು ಇತರೆ ದ್ವೀಪಗಳನ್ನು ಇಂಗ್ಲೆಂಡ್ ಉಳಿಸಿಕೊಂಡಿತು. ಆಸ್ಟ್ರಿಯಾವು ಲಂಬಾರ್ಡ ಹಾಗೂ ವೆನಿಷಿಯಗಳನ್ನು ಪಡೆದುಕೊಂಡಿತು. ಪೋಪನ ರಾಜ್ಯಗಳೂ ಪುನರ್ ಸ್ಥಾಪಿತಗೊಂಡವು. ನಾರ್ವೆಯ ಆಳ್ವಿಕೆಯನ್ನು ಡೆನ್ಮಾರ್ಕಿನಿಂದ ಬೇರ್ಪಡಿಸಿ ಅದನ್ನು ಸ್ವೀಡನ್ ಜೊತೆಗೆ ಸೇರಿಸಲಾಯಿತು. ಸ್ಪೆಯಿನ್ ಹಾಗೂ ಪೋರ್ಚು ಗಲ್‌ನ ಪ್ರಾಂತ್ಯಗಳನ್ನು ಹಾಗೆಯೇ ಬಿಟ್ಟು ಬಿಡಲಾಯಿತು.

ಹೀಗೆ ವಿಯೆನ್ನಾದ ಸಭೆಯು ವೈಭವಶಾಲಿಗಳ ಸಭೆಯಾಗಿತ್ತು. ಇವರಿಗೆ ಫ್ರೆಂಚ್ ಕ್ರಾಂತಿಯು ಘೋಷಿಸಿದ ರಾಷ್ಟ್ರೀಯ ಹಾಗೂ ಪ್ರಜಾಪ್ರಭುತ್ವದ ಆಲೋಚನೆಗಳು ಗಹನವಾದದ್ದು, ಅನಿಷ್ಟವಾದದ್ದೂ ಆಗಿತ್ತು. ದೊರೆಗಳು ತಮಗಿಷ್ಟ ಬಂದ ರೀತಿಯಲ್ಲಿ ತಮ್ಮ ಆಸ್ತಿಯೆಂಬಂತೆ ಯುರೋಪನ್ನು ಪುನರ್‌ವಿಂಗಡಿಸಿದರು. ಒಕ್ಕೂಟವು ಸಹಿ ಮಾಡಿದ ವಿಯೆನ್ನಾದ ಈ ಸಂಧಿಯ ಜೊತೆ ೧೮೧೫ರಲ್ಲಿ ಇನ್ನೂ ಎರಡು ದಾಖಲೆಗಳು ಒಪ್ಪಿತವಾದವು. ೧. ಪವಿತ್ರ ಒಪ್ಪಂದ, ೨. ಕ್ಯಾಡ್ರಸಲ್ಸ್ ಒಪ್ಪಂದ.

ಇದರಲ್ಲಿ ಮೊದಲನೆಯ ಒಪ್ಪಂದವು ರಷ್ಯಾದ ಒಂದನೆಯ ಅಲೆಗ್ಸಾಂಡರನ ನೇತೃತ್ವದಲ್ಲಿ ನಡೆಯಿತು. ಇದರ ಐಕೈಕ ಮುಖ್ಯ ಅಂಶವೆಂದರೆ ರಷ್ಯ, ಪ್ರಷ್ಯಾ ಹಾಗೂ ಆಸ್ಟ್ರೀಯಾದ ರಾಜರು ತೋರುವ ಈ ಒಪ್ಪಂದದ ಲಕ್ಷಣ ಹಾಗೂ ನೀತಿಗಳಿಗೆ ವಿರುದ್ದ ವಾಗಿ ನಡೆಯುತ್ತಿದ್ದುದು.

೧೮೧೫ರಲ್ಲಿ ಜಾರಿಗೆ ಬಂದ ಮೈತ್ರಿಕೂಟಗಳಲ್ಲಿ ‘‘ಪವಿತ್ರ ಮೈತ್ರಿಕೂಟ’’ ಮತ್ತು ‘‘ಚತುರ್ ರಾಷ್ಟ್ರ ಮೈತ್ರಿಕೂಟ’’ಗಳು ಮುಖ್ಯವಾದವು. ಇವುಗಳಲ್ಲಿ ಅಧಿಕಾರವನ್ನು ಕಾಲಕಾಲಕ್ಕೆ ವಹಿಸಿಕೊಂಡು ತಮ್ಮ ಸಮಾನ ಆಶಯಗಳು ಹಾಗೂ ಯೂರೋಪಿನ ಅಗತ್ಯಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಅವಕಾಶ ನೀಡಲಾಯಿತು. ನಂತರದ ವರ್ಷಗಳಲ್ಲಿ ಈ ರೀತಿಯಾಗಿ ಸೇರಿದ ಸಭೆಗಳ ಮುಖಾಂತರ ಎಲ್ಲಾ ಕಡೆಗಳಲ್ಲೂ ದಬ್ಬಾಳಿಕೆ ನಡೆಸಲಾಯಿತು. ಪ್ರಮುಖವಾಗಿ ಆಸ್ಟ್ರಿಯಾ ಚಕ್ರಾಧಿಪತ್ಯದ ಕುಲಗುರುವಾದ ರಾಜಕುಮಾರ ಮೆಟರ್‌ನಿಕ್‌ನ ಪ್ರಭಾವವು ಅವರ ಆಲೋಚನಾ ಕ್ರಮಗಳ ಮೇಲೆ ನಿರ್ಣಾಯಕವಾಗಿದ್ದಿತು.

ಫ್ರಾನ್ಸ್‌ನಲ್ಲಿ ಪ್ರತಿಕ್ರಿಯೆ ಹಾಗೂ ಕ್ರಾಂತಿ

೧೮೧೪ರಲ್ಲಿ ನೆಪೋಲಿಯನ್‌ನನ್ನು ವಶಪಡಿಸಿಕೊಂಡ ಒಕ್ಕೂಟವು ಬೂರ್ಬನ್ ಕುಟುಂಬದ ೧೮ನೆಯ ಲೂಯಿಯನ್ನು ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿತು. ಲೂಯಿಯು ಕಂಡುಕೊಂಡಂತೆ ಫ್ರಾನ್ಸ್‌ನಲ್ಲಿ ನಿರಂಕುಶ ಪ್ರಭುತ್ವದ ಕಾಲ ಮುಗಿದಿತ್ತು. ಪ್ರಭುತ್ವವು ಅಸ್ತಿತ್ವದಲ್ಲಿರಬೇಕಾದರೆ ಅದು ಸಂವಿಧಾನಬದ್ಧವಾಗಿರಬೇಕಾಗಿತ್ತು. ಅಲ್ಲದೆ ಕ್ರಾಂತಿಯಿಂದ ಒದಗಿದ ಹಲವಾರು ಲಾಭಗಳನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಹಾಗಿಲ್ಲದಿದ್ದರೆ ಈ ಪ್ರಭುತ್ವವು ಬಹಳಕಾಲ ಉಳಿಯಲಾರದು. ಇದನ್ನು ಮನಗಂಡ ದೊರೆಯು ಆ ಕಾಲದ ಮನೋಧರ್ಮದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ೧೮೧೪ರಲ್ಲಿ ಸಂವಿಧಾನಾತ್ಮಕ ಶಾಸನವನ್ನು ರೂಪಿಸಿದನು. ಈ ಸಂವಿಧಾನಾತ್ಮಕ ಶಾಸನವು ಫ್ರೆಂಚರ ನಾಗರಿಕ ಹಕ್ಕುಗಳ ಬಗ್ಗೆ ವಿವರ ನೀಡಿತು. ಇದು ಎಲ್ಲ ಫ್ರೆಂಚರೂ ಕಾನೂನಿನ ಮುಂದೆ ಸಮಾನರು ಎಂದು ಘೋಷಿಸಿತು ಮತ್ತು ಕ್ರಾಂತಿಯ ಮೂಲಭೂತ ತತ್ವಗಳಿಗೆ ರಕ್ಷಣೆ ನೀಡಿತು. ಹಾಗಾಗಿ ನಾಗರಿಕ ಮತ್ತು ಮಿಲಿಟರಿ ಹುದ್ದೆಗಳನ್ನು ಹೊಂದಲು ಎಲ್ಲರೂ ಸಮಾನವಾಗಿ ಅರ್ಹರು ಎಂದಾಯಿತು. ೧೮ನೆಯ ಲೂಯಿಯು ತನ್ನ ವ್ಯಕ್ತಿತ್ವವನ್ನು ಪರಿಸ್ಥಿತಿಗೆ ತಕ್ಕಂತೆ ಹೊಂದಿಸಿಕೊಂಡನು. ಈತನು ಹಲವು ವರ್ಷಗಳವರೆಗೂ ತೀವ್ರವಾದಿ ಪಕ್ಷವನ್ನು ತಡೆಹಿಡಿಯುವಲ್ಲಿ ಜಯಶೀಲನಾಗಿ, ಮಂದಗಾಮಿ ನೀತಿಗಳನ್ನು ಜಾರಿಗೆ ತರಲು ಶಕ್ತನಾಗಿದ್ದನು. ತೀವ್ರವಾದಿಗಳು ರಾಜನ ಮತ್ತು ನೀತಿಗಳನ್ನು ಜಾರಿಗೆ ತರಲು ಶಕ್ತನಾಗಿದ್ದನು. ಅದನ್ನು ನಾಶಪಡಿಸಲೇಬೇಕೆಂದು ತೀರ್ಮಾನಿಸಿದ್ದರು. ೧೮೨೪ರಲ್ಲಿ ೧೮ನೆಯ ಲೂಯಿಯು ಅಸುನೀಗಿ ಆತನ ಸಹೋದರನಾದ ಆರ್ಬೋಯಿಯ ಸರದಾರನು ಅಧಿಕಾರವನ್ನು ಮುಂದುವರಿಸಿದನು. ಇವನು ೧೦ನೆಯ ಚಾರ್ಲ್ಸ್‌ನಾದನು.

ಹೊಸರಾಜನ ವೈಶಿಷ್ಟ್ಯವು ಎಲ್ಲರಿಗೂ ತಿಳಿದುದೇ ಆಗಿತ್ತು. ಆತನು ಫ್ರಾನ್ಸ್‌ನಲ್ಲಿ ೧೮೧೪ ರಿಂದ ೩೦ರವರೆಗೆ ಪ್ರತಿಗಾಮಿಗಳ ನಂಬುಗೆಗಳಿಂದ ನಾಯಕನಾಗಿದ್ದನು. ತನ್ನ ಸಹೋದರನ ಉದಾರವಾದಕ್ಕೆ ವಿರೋಧಿಯಾಗಿದ್ದನು. ಈ ರಾಜನು ಒತ್ತು ನೀಡಿದ ಶಾಸನಗಳು ಹಾಗೂ ಅವು ಜಾರಿಗೊಂಡ ರೀತಿಯಿಂದ ಸರಕಾರದ ನಿಧಾನಗತಿಯ ರಾಜಕೀಯ ಹಾಗೂ ಸಾಮಾಜಿಕ ಆಲೋಚನೆಗಳು ವ್ಯಕ್ತವಾಗುತ್ತಿದ್ದವು. ಮತ್ತೊಂದು ಜನಪ್ರಿಯವಲ್ಲದ ಕಾನೂನು ಚರ್ಚ್‌ನ ಪರವಾಗಿದ್ದಿತು. ಬಹಳಷ್ಟು ಮಂದಿ ಫ್ರೆಂಚರು ರಾಜಕೀಯ ಮತ್ತು ಸಾಮಾಜಿಕ ಪ್ರಕ್ರಿಯೆಗಿಂತಲೂ ಪಾದ್ರಿಗಳ (ಚರ್ಚಿನ) ಪ್ರತಿಕ್ರಿಯೆಯ ಬಗ್ಗೆ ಹೆಚ್ಚು ಗಾಬರಿಗೊಂಡಿದ್ದರು. ಈ ಆಡಳಿತದ ಅತ್ಯಂತ ಪ್ರತಿಗಾಮಿ ಮಂತ್ರಿಯಾಗಿದ್ದ ಪೋಲಿನೆ ಅಧಿಕಾರ ಸ್ವೀಕರಿಸಿದ ನಂತರ ‘‘ಸಮಾಜವನ್ನು ಪುನರ್ ಸಂಘಟಿಸಬೇಕು, ಪಾದ್ರಿಗಳಿಗೆ ಹಿಂದಿದ್ದ ಪ್ರಾಶಸ್ತ್ಯವೇ ದೊರೆಯಬೇಕು, ಒಂದು ಬಲಿಷ್ಟ ನಿರಂಕುಶ ಪ್ರಭುತ್ವವನ್ನು ಸೃಷ್ಟಿಸಬೇಕು’’ ಎಂದು ಘೋಷಿಸಿದನು. ಆಗ ೧೦ನೆಯ ಚಾರ್ಲ್ಸ್ ಮತ್ತು ಆತನ ಪ್ರತಿನಿಧಿಗಳ ಮಂಡಲಿಯ ನಡುವೆ ಘರ್ಷಣೆ ಏರ್ಪಟ್ಟಿತು. ಇಂತಹ ಜನಪ್ರಿಯವಲ್ಲದ ಸಚಿವ ಸಂಪುಟವನ್ನು ತ್ಯಜಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಮುಂದೆ ನಡೆದ ಚುನಾವಣೆಯಲ್ಲಿ ರಾಜ ಹಾಗೂ ಅವನ ಮಂತ್ರಿಮಂಡಲವು ದಯನೀಯವಾದ ಸೋಲನ್ನು ಅನುಭವಿಸಿತು. ನಂತರ ೧೮೩೦ರಲ್ಲಿ ರಾಜನು ಪತ್ರಿಕಾ ಸ್ವಾತಂತ್ರ್ಯದ ವಜಾ, ಚುನಾವಣಾ ವ್ಯವಸ್ಥೆಯ ಅವಹೇಳನ ಹಾಗೂ ಪ್ರತಿನಿಧಿ ಮಂಡಲಿಯ ವಿಸರ್ಜನೆಯಂತಹ ಹಲವಾರು ಶಾಸನಗಳನ್ನು ಜಾರಿಗೊಳಿಸಿದನು. ನಂತರ ಈ ಶಾಸನಗಳ ಪ್ರಾಮುಖ್ಯತೆ ವ್ಯಕ್ತವಾಗುತ್ತಿದ್ದಂತೆ ಜನರ ಆಕ್ರೋಶವೂ ಹೊರಹೊಮ್ಮಿತು. ‘‘ಮಂತ್ರಿಮಂಡಲಕ್ಕೆ ಧಿಕ್ಕಾರ’’ ‘‘ಚಾರ್ಟರ್ ಸನ್ನದಿಗೆ ಜಯವಾಗಲಿ’’ ಎನ್ನುವ ಘೋಷಣೆಯೊಂದಿಗೆ ಜನರು ಗುಂಪುಗೂಡುತ್ತಿದ್ದರು. ೧೮೩೦ರ ಜುಲೈ ೨೮ರಂದು ಅಂತರ್ ಯುದ್ಧ ಪ್ರಾರಂಭವಾಯಿತು. ಇದೊಂದು ಮೂರುದಿನಗಳ ಪ್ರಖ್ಯಾತ ಯುದ್ಧವೆನಿಸಿತು.

ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ನಡುವಿನ ಅಂತಿಮ ತೀರ್ಮಾನವು ಗಣತಂತ್ರವಾದಿಗಳ ನಿಜನಾಯಕನಾದ ಸೇಫ್‌ಎಲೆಟಿಕ್‌ನ ಕೈಯಲ್ಲಿತ್ತು. ಕೊನೆಗೆ ಆತನು ತನ್ನ ಪ್ರಭಾವವನ್ನು ಲೂಯಿ ಫಿಲಿಪ್‌ನ ಮೇಲೆ ಬೀರಿದನು. ಜುಲೈ ಕ್ರಾಂತಿಯು ಹೀಗೆ ಒಂದು ಅನಿರೀಕ್ಷಿತವಾಗಿ ಹಾಗೂ ಕ್ಷಣಸ್ಫುರಣೆಯ ಕಾರ್ಯವಾಗಿತ್ತು. ಒಬ್ಬ ರಾಜನನ್ನು ಕೆಳಗೆ ಬೀಸಿ, ಮತ್ತೊಬ್ಬ ರಾಜನನ್ನು ಅಧಿಕಾರಕ್ಕೇರಿಸಿ ಶಾಸನವನ್ನು ಬದಲಿಸಲಾಯಿತು. ಬೂರ್ಬನ್ನರ ಬಿಳಿಧ್ವಜದ ನಂತರ ತ್ರಿವರ್ಣಧ್ವಜವು ಹಾರಾಡಿತು. ಹೀಗೆ ಶುರುವಾದದ್ದು ಲೂಯಿ ಫಿಲಿಪ್‌ನ ಆಳ್ವಿಕೆ.

ಜುಲೈ ಕ್ರಾಂತಿಯ ಪ್ರಭಾವವು ಇಡೀ ಯೂರೋಪಿನ ಮೇಲೆ ಅಂದರೆ ಪೋಲಾಂಡ್, ಜರ್ಮನ್, ಸ್ವಿಟ್ಜರ್‌ಲ್ಯಾಂಡ್, ಇಂಗ್ಲೆಂಡ್ ಮತ್ತು ನೆದರ್‌ಲ್ಯಾಂಡ್‌ಗಳ ಮೇಲೆ ಆಯಿತು. ಇದು ಜನಪ್ರಿಯ ಆಂದೋಲನಗಳಿಗೆ ಸಂಕೇತ. ಸ್ವಲ್ಪ ಸಮಯದವರೆಗೂ ೧೮೧೫ರಲ್ಲಿ ವಿಯೆನ್ನಾದಲ್ಲಿ ರಚಿಸಲ್ಪಟ್ಟ ಇಡೀ ಸಾಮಾಜಿಕ ಚೌಕಟ್ಟಿಗೆ ಆಪತ್ತೊದಗಿದಂತಾಯ್ತು. ೧೮೧೫ರ ಮತ್ತೊಂದು ಚಾತುರ‌್ಯಪೂರ್ಣ ರಚನೆಯನ್ನು ಕಿತ್ತುಹಾಕಲಾಯಿತು. ವಿಯೆನ್ನಾದ ಸಭೆಯು ಫ್ರಾನ್ಸ್‌ನ ಉತ್ತರಭಾಗದಲ್ಲಿ ಒಂದು ಕೃತ್ರಿಮವಾದ ರಾಜ್ಯ ವ್ಯವಸ್ಥೆಯನ್ನು ನೆದರ್‌ಲ್ಯಾಂಡ್‌ನ ರಾಜಪ್ರಭುತ್ವವನ್ನು ನಿರ್ಮಿಸಿತ್ತು. ಹಾಲೆಂಡ್‌ಗೆ ಅದರ ಬಲವರ್ಧನೆಗಾಗಿ ಬೆಲ್ಜಿಯಂನ ಪ್ರಾಂತ್ಯವನ್ನು ಸೇರಿಸಿಕೊಳ್ಳಲಾಗಿತ್ತು. ಇವೆರಡೂ ದೇಶಗಳ ಜನರು ವಿಧಿಯುಕ್ತ ವಾಗಿ ಒಬ್ಬ ರಾಜನ ಪ್ರಭುತ್ವದಡಿಯಲ್ಲಿ ಒಂದು ಗೂಡಿದರು. ಆದರೆ ಬೆಲ್ಜಿಯನ್ನರಿಗೆ ಡಚ್ಚರ ಜೊತೆಗೆ ಮೈತ್ರಿಯು ನಿರಾಶಾದಾಯಕವೂ, ಅತೃಪ್ತಿಕರವೂ ಆಗಿತ್ತು. ಡಚ್ ಭಾಷೆಯನ್ನು ಅನಗತ್ಯವಾಗಿ ವಿಶೇಷ ಹಕ್ಕೆಂಬಂತೆ ತಮ್ಮ ಮೇಲೆ ರಾಜನು ಹೇರಿದ್ದಕ್ಕಾಗಿ ಅಸಮ್ಮತಿ ಸೂಚಿಸಿದರು.

ಈ ಎಲ್ಲ ಉದ್ರೇಕಕಾರಿ ವಾತಾವರಣದ ನಡುವೆ ಜುಲೈ ಕ್ರಾಂತಿಯು ಕಿಡಿಯಂತೆ ಹೊತ್ತಿಕೊಂಡಿತು. ಕ್ರಾಂತಿಯು ಬಹುಬೇಗನೆ ಎಲ್ಲೆಡೆ ಹರಡಿತು. ರಾಜಪಡೆಗಳನ್ನು ಆಚೆಗೆ ನೂಕಲಾಯಿತು. ಹೀಗೆ ಯೂರೋಪಿನಲ್ಲಿ ಒಂದು ಹೊಸ ಸಾಮ್ರಾಜ್ಯ ಉದಯಿಸಿತು.

ಅಲೆಗ್ಸಾಂಡರನು ಪೋಲೆಂಡ ದೇಶವನ್ನು ಅದು ೧೮ನೆಯ ಶತಮಾನದ ಸಮಯದಲ್ಲಿ ಹೊಂದಿದ್ದ ಎಲ್ಲ ಸೌಕರ್ಯಗಳನ್ನು ಪುನಃಸ್ಥಾಪಿಸುವ ಉದ್ದೇಶ ಹೊಂದಿದ್ದ. ಆತನು ಪೋಲೆಂಡ್‌ನ್ನು ರಷ್ಯಾದ ಚಕ್ರಾಧಿಪತ್ಯದಿಂದ ಸಂಪೂರ್ಣವಾಗಿ ಹೊರತಾದ ಒಂದು ರಾಜ್ಯವಾಗಬೇಕೆಂದು ಒತ್ತಾಯಸಿದನು. ಆತನು ರಷ್ಯಾದ ಚಕ್ರವರ್ತಿಯೂ ಪೋಲೆಂಡಿನ ದೊರೆಯೂ ಆಗಬಯಸಿದ. ೧೮೧೫ರಲ್ಲಿ ಕಟ್ಟಿದ ಪೋಲೆಂಡ್‌ನ ರಾಜ್ಯವು ಐತಿಹಾಸಿಕ ಪೋಲೆಂಡ್‌ನ ಒಂದು ಭಾಗವಾಗಿ ಮಾತ್ರ ಉಳಿದುಕೊಂಡಿತ್ತು. ಅಲ್ಲದೆ ರಷ್ಯಾವು ಆಕ್ರಮಿಸಿದ್ದ ಎಲ್ಲ ಪೋಲಿಷ್ ಪ್ರಾಂತ್ಯಗಳನ್ನು ಒಳಗೊಂಡಿರಲಿಲ್ಲ. ರೋಮ್‌ನ ಕ್ಯಾಥೊಲಿಕ್ ಮತವು ಅಧಿಕೃತ ಧರ್ಮವೆಂದು ಪರಿಗಣಿತವಾಯಿತು. ಪೋಲಿಷ್ ಭಾಷೆಯನ್ನು ಅಧಿಕೃತಗೊಳಿಸಲಾಯಿತು. ಸರ್ಕಾರದ ಎಲ್ಲ ಉನ್ನತ ಹುದ್ಧೆಗಳಿಗೂ ರಷ್ಯನ್ನರನ್ನು ಬಿಟ್ಟು ಪೋಲಿಷ್ ಜನರನ್ನೇ ಆಯ್ಕೆ ಮಾಡಬೇಕಾಯಿತು. ಆದರೆ ರಷ್ಯಾದ ಸೈನ್ಯಬಲವು ಅತ್ಯಂತ ಪ್ರಬಲವಾಗಿದ್ದುದರಿಂದ ಪೋಲೆಂಡ್ ತನ್ನ ರಾಷ್ಟ್ರೀಯ ಸ್ವಾತಂತ್ರ್ಯವನ್ನು ಒಂಟಿಯಾಗಿ ಸಾಧಿಸಲಾಗುತ್ತಿರಲಿಲ್ಲ. ಹಾಗಾಗಿ ಪೋಲೆಂಡ್ ಜನರು ಹೊರದೇಶದ ಪಾರುಪತ್ಯವನ್ನು ಇದಿರುನೋಡುತ್ತಿದ್ದರು. ಆದರೆ ಆದಾವುದೂ ಘಟಿಸಲಿಲ್ಲ. ಇದೊಂದೇ ಒಬ್ಬಂಟಿಯಾಗಿ ರಷ್ಯಾದ ವಿರುದ್ಧ ಹೋರಾಡಬೇಕಾಯಿತು. ಯುದ್ಧವು ನಡೆಯುತ್ತಿದ್ದ ಹಾಗೆ ಸಮರ್ಪಕ ನಾಯಕತ್ವದ, ಸಂಘಟನೆಯ ಕೊರತೆಯಿಂದಾಗಿ ವಾರ್ಸಾವು ರಷ್ಯಾದೆದುರು ಸೋತಿತು. ಪ್ರತ್ಯೇಕ ರಾಜ್ಯವಾಗಿ ಉಳಿದುಕೊಳ್ಳಲಿಲ್ಲ. ಸಂವಿಧಾನವನ್ನು ರದ್ದುಗೊಳಿಸಿದ್ದೇ ಅಲ್ಲದೆ ದಂಗೆಕೋರರನ್ನು ಶಿಕ್ಷಿಸಲಾಯಿತು.

ಫ್ರೆಂಚರ ಹೊಸ ಅಧಿಪತಿಯಾದ ಲೂಯಿ ಫಿಲಿಫ್‌ನು ಪುನಃಸ್ಥಾಪನೆಯ ಅವಧಿಯಲ್ಲಿ ತನ್ನ ೫೯ನೆಯ ವರ್ಷಕ್ಕೆ ಕಾಲಿಟ್ಟಿದ್ದನು. ಪ್ಯಾರಿಸ್‌ನ ಮಧ್ಯಭಾಗದಲ್ಲಿರುವ ಪ್ರಖ್ಯಾತ ವೈಭವಪೂರ್ಣ ಅರಮನೆಯಲ್ಲಿ ವಾಸವಾಗಿದ್ದನು. ಹಲವು ಸಂಬಂಧಗಳನ್ನು ಬೆಳೆಸಿಕೊಂಡು ಅದರ ಗಟ್ಟಿತನಕ್ಕೆ ಒತ್ತು ನೀಡುತ್ತ ಮುಂದೆ ಎಂದಾದರೊಮ್ಮೆ ಉಪಯೋಗಕ್ಕೆ ಬರಬಹುದು ಎಂಬ ಆಸೆ ಇಟ್ಟುಕೊಂಡಿದ್ದನು. ಆದರೆ ಆತನ ಈ ಗಣತಂತ್ರೀಯ ಸರಳತನದ ಹಿಂದೆ ಸ್ವಂತದ ಅಧಿಕಾರ ದಾಹವೂ ಪ್ರಬಲವಾಗಿತ್ತು.

ಲೂಯಿ ಫಿಲಿಫ್‌ನ ಆಳ್ವಿಕೆಯ ಮೊದಲ ಅವಧಿಯು ಸಂಕಷ್ಟಗಳಿಂದ ಕೂಡಿತ್ತು. ಕ್ರಮಬದ್ಧತಾವಾದಿಗಳೂ, ಬೋನಾಪಾರ್ಟಿ ತತ್ವಾದಿಗಳು ಮತ್ತು ಗಣತಂತ್ರವಾದಿಗಳೂ ಅವನ ಶತ್ರುಗಳಾಗಿದ್ದರು. ಕ್ರಮಬದ್ಧವಾದಿಗಳು ೧೦ನೆಯ ಚಾರ್ಲ್ಸ್‌ನ ಹಕ್ಕುಗಳ ಬೆಂಬಲಿಗರಾಗಿದ್ದರು. ಅವರು ಲೂಯಿ ಫಿಲಪ್‌ನನ್ನು ಶಕ್ತಿವಂತ ನಾಯಕನೆಂದು ಪರಿಗಣಿಸಿದ್ದರು. ಆದರೆ ಗಣತಂತ್ರವಾದಿಗಳ ವಿರುದ್ಧದ ಲೂಯಿ ಫಿಲಿಫ್‌ನ ಹೋರಾಟವು ಇನ್ನೂ ತೀಕ್ಷ್ಣ ಸ್ವರೂಪದ್ದಾಗಿತ್ತು. ಬದಲಾಗುತ್ತಿದ್ದ ಪರಿಸ್ಥಿತಿಗಳನ್ನು ಕಂಡು ಗಣತಂತ್ರವಾದಿ ಗಳಿಗೆ ಬಹಳ ನಿರಾಶೆಯಾಯಿತು. ತಕ್ಷಣವೇ ಅವರು ಜುಲೈನ ರಾಜಪ್ರಭುತ್ವದ ಶತ್ರುಗಳಾದರು. ಅವರ ಬಂಡಾಯ ಗಂಭೀರ ಸ್ವರೂಪದ್ದಾಗಿದ್ದರೂ ಬಹುಬೇಗನೇ ಹತ್ತಿಕ್ಕಲಾಯಿತು. ಸರಕಾರವು ಈ ಪಕ್ಷವನ್ನು ಹತ್ತಿಕ್ಕಲು ಉಗ್ರವಾದ ಕ್ರಮಗಳನ್ನು ಅನುಸರಿಸಿತು. ಅವರ ಸಂಸ್ಥೆಗಳನ್ನು ಒಡೆದು ಸಂಘಟನೆಯ ಹಕ್ಕನ್ನು ಮೊಟಕುಗೊಳಿಸಿ, ಅದರ ಸಂಪಾದಕರನ್ನು ಶಿಕ್ಷೆಗೆ ಒಳಪಡಿಸಿತು. ಅವರ ವಾರ್ತಾಪತ್ರಿಕೆಗಳ ಮೇಲೆ ಭಾರೀ ದಂಡವನ್ನು ವಿಧಿಸಿ, ಅದರ ಪರವಾದ ಎಲ್ಲಾ ವಾದಗಳನ್ನು ಕಾನೂನು ಬಾಹಿರವೆಂದು ಘೋಷಿಸಲಾಯಿತು.

ಸೆಪ್ಟೆಂಬರ್ ಕಾಯಿದೆಗಳು (೧೮೩೫) : ಜುಲೈ ರಾಜಪ್ರಭುತ್ವದ ನೈತಿಕ ಅಧಿಕಾರವನ್ನು ಈ ಕಾಯಿದೆಗಳು ಬಹುವಾಗಿ ದುರ್ಬಲಗೊಳಿಸಿತು. ಎಲ್ಲಾ ವಿರೋಧ ಪಕ್ಷಗಳನ್ನು ಮೂಲೆಗೆ ತಳ್ಳಿ ಶ್ರೀಮಂತ ಪ್ರಭುತ್ವವು ಫ್ರಾನ್ಸ್‌ನ್ನು ೧೮ ವರ್ಷಗಳ ಕಾಲ ಆಳಿತು. ೧೮೩೦-೧೮೪೦ ರವರೆಗಿನ ಅವಧಿಯು ಫ್ರಾನ್ಸಿನ ಸಂಸದೀಯ ಚರಿತ್ರೆಯಲ್ಲಿ ಅಸ್ಥಿರವಾದುದೆಂದು ಪರಿಗಣಿತವಾಗಿದೆ. ೧೮೪೦ರಿಂದ ೪೮ರವರೆಗೆ ಗಿಜೋಟ್ ಎಂಬುವನು ಫ್ರಾನ್ಸ್‌ನ ರಾಜಕೀಯ ಸಂಘಟನೆಯಲ್ಲಿ ಯಾವುದೇ ರೀತಿಯ ಬದಲಾವಣೆಯ ಅಗತ್ಯವನ್ನು ಒಪ್ಪಲಿಲ್ಲ. ಅವನು ೧೮೧೫ರ ಚಾರ್ಟರ್ ಕಾನೂನಿನ ಮೇಲೆಯೇ ನಂಬಿಕೆ ಇರಿಸಿದ್ದನು. ಇದರ ನಂತರದ ಯಾವುದೇ ಸುಧಾರಣೆಯು ಅನಗತ್ಯವೂ ಅಪಾಯಕಾರಿಯೂ ಆದುದು ಎಂದು ಭಾವಿಸಿದ್ದನು. ಆತನು ಮತದಾನದ ಹಕ್ಕನ್ನು ವಿಸ್ತರಿಸುವುದು ಮತ್ತು ಕಾರ್ಮಿಕ ವರ್ಗದ ಸುಧಾರಣೆಗಾಗಿ ಯಾವುದೇ ಕಾನೂನುಗಳನ್ನು ತರುವುದನ್ನು ವಿರೋಧಿಸುತ್ತಿದ್ದನು. ಈ ಹದಿನೆಂಟು ವರ್ಷಗಳ ಅವಧಿಯಲ್ಲಿ ಇದ್ದ ಕಾನೂನು ಜನರ ಅಗತ್ಯಗಳನ್ನು ಪೂರೈಸುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ.

ಗಿಜೋಟ್‌ನ ಇಂತಹ ನೀತಿಯು ಜಿಗುಟಾದ ಸಂಪ್ರದಾಯವಾಗಿದ್ದು ಇದನ್ನು ಉದಾರವಾದಿಗಳು ತೀವ್ರವಾಗಿ ವಿರೋಧಿಸಿದರು. ಜನಸಾಮಾನ್ಯರ ಪರಿಸ್ಥಿತಿಯನ್ನು ಕುರಿತು ಸಾಕಷ್ಟು ಬಿಸಿಯಾದ ಚರ್ಚೆಗಳು ನಡೆದವು. ಬಹಳಷ್ಟು ಬರಹಗಾರರು ಕೈಗಾರಿಕೆಯ ವ್ಯವಸ್ಥೆ ಮತ್ತು ಬಂಡವಾಳ ಹಾಗೂ ಕೂಲಿ ಸಂಬಂಧದಂತಹ ಸೂಕ್ಷ್ಮ ಪ್ರಶ್ನೆಗೆ ಸಂಬಂಧಿಸಿದಂತಹ ಒಂದು ಹೊಸ ಸಂಹಿತೆಯನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು. ಬಹುಸಂಖ್ಯಾತರ ಇಚ್ಛೆಗಳನ್ನು ಪೂರೈಸುವಲ್ಲಿ ಸಮಾಜದ ಪುರ್ನಸಂಘಟನೆಗಾಗಿ ಒಂದು ಸಮಾಜವಾದಿ ವ್ಯವಸ್ಥೆಯನ್ನು ಸಾರಿದವರಲ್ಲಿ ಸೈಂಟ್ ಸೈಮನ್ ಮೊದಲಿಗ. ಪ್ರಭುತ್ವವು ಉತ್ಪಾದನೆಯ ಸಾಧನಗಳ ಒಡೆತನ ಹೊಂದಿರಬೇಕು ಹಾಗೂ ‘‘ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರಮ ಮತ್ತು ಸೇವೆಗೆ ಅನುಗುಣವಾದ ಪ್ರತಿಫಲ’’ ಅನ್ನುವ ತತ್ವದ ಮೇಲೆ ಕೈಗಾರಿಕೆ ಯನ್ನು ವ್ಯವಸ್ಥೆಗೊಳಿಸಬೇಕು ಎಂದು ಆತನು ನಂಬಿದ್ದ. ಪ್ರಸ್ತುತವಿದ್ದ ಆರ್ಥಿಕ ಪರಿಸ್ಥಿತಿಯ ಕೆಡುಕುಗಳನ್ನು ಫ್ರಾನ್ಸಿನ ಕಾರ್ಮಿಕರಿಗೆ ತನ್ನ ಬರಹಗಳಿಂದ ಮನದಟ್ಟು ಮಾಡಲು ಪ್ರಯತ್ನಿಸಿದ. ಲೂಯಿಬ್ಲ್ಯಾಂಕ್ ಎಂಬ ಮತ್ತೊಬ್ಬ ಸಮಾಜವಾದದ ಬೆಂಬಲಿಗ ಎಲ್ಲರಿಗೂ ಉದ್ಯೋಗದ ಹಕ್ಕು ಇರಬೇಕು ಮತ್ತು ಪ್ರಭುತ್ವವು ಅದನ್ನು ಪೂರೈಸಬೇಕೆಂದು ಘೋಷಿಸಿದ. ಉದ್ಯಮಗಳನ್ನು ಸಂಘಟಿಸಿದಾಗ ಮಾತ್ರ ಇದು ಸಾಧ್ಯ. ಹೀಗೆ ಒಂದು ಸಮಾಜವಾದಿ ಪಕ್ಷದ ಉದಯವಾಯಿತು. ಇದು ಗಣರಾಜ್ಯ ವ್ಯವಸ್ಥೆ ಯಲ್ಲಿ ನಂಬಿಕೆಯಿರಿಸಿಕೊಂಡಿತ್ತು. ಆದರೆ ಇತರೇ ಗಣತಂತ್ರವಾದಿಗಳಿಗಿಂತ ಭಿನ್ನವಾಗಿತ್ತು. ಚುನಾವಣಾ ಮತ್ತು ಸಂಸದೀಯ ಸುಧಾರಣೆಗಳಿಗಾಗಿ ಬಹುವಾದ ಬೇಡಿಕೆ ಹುಟ್ಟಿಕೊಂಡಿತು. ಈ ಪರಿಸ್ಥಿತಿಯನ್ನೆದುರಿಸಲು ಒಂದು ಪಕ್ಷವು ಕ್ರಮೇಣ ರೂಪುಗೊಳ್ಳುತ್ತಾ ಹೋಯಿತು. ಪ್ರತಿನಿಧಿ ಸಭೆಯ ರಚನೆಯಲ್ಲಿ ಬದಲಾವಣೆ ಮತ್ತು ಮತದಾನದ ಹಕ್ಕಿನ ವಿಸ್ತರಣೆಗೆ ಸಂಸದೀಯ ಹಾಗೂ ಚುನಾವಣಾ ಸುಧಾರಣೆಗೆ ತಮ್ಮ ಬೇಡಿಕೆಯನ್ನು ಪಕ್ಷವು ಮುಂದಿಟ್ಟಿತು. ಇದನ್ನು ಸಾಬೀತುಗೊಳಿಸಲು ಬಹುಸಂಖ್ಯೆಯಲ್ಲಿ ಈ ಸುಧಾರಣಾ ಔತಣ ಕೂಟಗಳಲ್ಲಿ ಜನರು ಪಾಲ್ಗೊಂಡರು ಮತ್ತು ಸುಧಾರಣಾವಾದಿಗಳ ಭಾಷಣಗಳನ್ನು ಆಲಿಸಿದರು. ೧೮೪೮ರಲ್ಲಿ ಪ್ಯಾರಿಸ್ ನಗರದ ಮಧ್ಯಭಾಗದಲ್ಲಿ ಸಮಾವೇಶಗೊಂಡ ಇಂತಹ ಒಂದು ಸಭೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಇತರ ಜನರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಲಾಯಿತು. ಆ ಸಭೆಗೆ ನಾಯಕನೂ ಇರಲಿಲ್ಲ, ಒಂದು ನಿರ್ದಿಷ್ಟ ಗುರಿಯೂ ಇರಲಿಲ್ಲ. ಪ್ರಭುತ್ವವು ರಾಷ್ಟ್ರೀಯ ರಕ್ಷಣಾಪಡೆಗೆ ಹೇಳಿಕಳುಹಿಸಿದರೂ ಅವರು ಈ ಬಂಡಾಯಗಾರರ ಮೇಲೆ ದಾಳಿ ನಡೆಸಲು ಒಪ್ಪಲಿಲ್ಲ. ಸಭಿಕರು ‘‘ಸುಧಾರಣೆ ಚಿರಾಯುವಾಗಲಿ’’, ‘‘ಗಿಜೋಟ್‌ಗೆ ಧಿಕ್ಕಾರ’’ ಎಂದು ಒಕ್ಕೊರಲಿನಿಂದ ಕೂಗಿದರು. ಗಣತಂತ್ರವಾದಿಗಳು ಈ ಸಂದರ್ಭದಲ್ಲಿ ಬಂದು ಸೇರಿಕೊಂಡರು. ರಾಷ್ಟ್ರೀಯ ರಕ್ಷಣಾಪಡೆಯ ಮೇಲೆ ಗುಂಡು ಹಾರಿಸಲಾಯಿತು. ಹೀಗೆ ರಾಜ ಪ್ರಭುತ್ವವು ಅಂತ್ಯಗೊಂಡಿತು. ಸೇಡಿನ ಕೂಗು ಹಿಂಬಾಲಿಸಿತು. ಹೀಗೆ ದಂಗೆಯು ಪ್ರಾರಂಭವಾಯಿತು. ತನ್ನ ತೀವ್ರತೆಯಿಂದ ಮುಂದಿದ್ದ ಎಲ್ಲ ಅಡೆತಡೆಗಳನ್ನು ಧೂಳೀಪಟ ಮಾಡಿತು. ಹಿಂದಿದ್ದ ‘‘ಸುಧಾರಣೆ ಚಿರಾಯುವಾಗಲಿ’ ಎನ್ನುವ ಘೋಷಣೆಗೆ ಬದಲಾಗಿ ಈಗ ‘‘ಗಣತಂತ್ರ ಚಿರಾಯುವಾಗಲಿ’’ ಎಂದು ಕೇಳಹತ್ತಿತು.

ಲೂಯಿ ಫಿಲಿಫ್‌ನನ್ನು ಕೆಳಗಿಳಿಸಿ, ಆತನ ಮೊಮ್ಮಗನನ್ನು ಪಟ್ಟಕ್ಕೇರಿಸಲಾಯಿತು. ಆದರೆ ಗಣತಂತ್ರವಾದಿಗಳು ಹಾಗೂ ಸಮಾಜವಾದಿಗಳು ಪ್ರಾಂತೀಯ ಸರ್ಕಾರವನ್ನು ಸೃಷ್ಟಿಸಲು ಶಕ್ತರಾಗಿದ್ದರು. ಇದರಲ್ಲಿ ಎರಡೂ ಪಕ್ಷಗಳ ನಾಯಕರಿದ್ದರು. ಹೀಗೆ ಜನರ ನಂಬುಗೆಯ ಆಧಾರದ ಮೇಲೆ ಎರಡನೆಯ ಗಣತಂತ್ರವು ಘೋಷಿಸಲ್ಪಟ್ಟಿತು.

೧೮೪೮ರ ಮೊದಲ ಭಾಗದಲ್ಲಿ ಮಧ್ಯಯುರೋಪ್ ಅಶಾಂತಿ, ಅಸಮಾಧಾನ ಮತ್ತು ಕಾತುರದ ಸ್ಥಿತಿಯಲ್ಲಿತ್ತು. ಎಲ್ಲೆಡೆಯೂ ಜನರು ಹಳೆಯ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಹೊಂದಿದ್ದರು. ಅವರಿಗೆ ಬದಲಾವಣೆಯ ಅಗತ್ಯವಿತ್ತು. ಕ್ರಾಂತಿಯ ಕೆಚ್ಚಿನಿಂದ ಕೂಡಿದ ಜನಮನವು ಜರ್ಮನಿ, ಇಟಲಿ ಮತ್ತು ಆಸ್ಟ್ರಿಯಾಗಳಲ್ಲಿ ಉತ್ತೇಜನಕಾರಕವಾಗಿತ್ತು. ೧೮೪೮ರ ಫ್ರೆಂಚ್ ಕ್ರಾಂತಿ ಆ ಶತಮಾನದ ಅತ್ಯಂತ ತೀವ್ರವಾದ ಅಶಾಂತಿಯನ್ನು ಉಂಟು ಮಾಡುವಂತಹುದಾಗಿತ್ತು. ಕ್ರಾಂತಿಗಳು ಒಂದೆಡೆ ಬಾಲ್ಟಿಕ್ ಸರೋವರದಿಂದ ಮೆಡಿಟರೇನಿಯನ್ ಸಮುದ್ರದವರೆಗೂ ಇನ್ನೊಂದೆಡೆ ರಷ್ಯನ್ ಸರಹದ್ದಿನವರೆಗೂ ಹರಡಿತ್ತು. ಈ ಕ್ರಾಂತಿಯ ಕೇಂದ್ರಬಿಂದು ಸ್ಥಾಪಿತ ವ್ಯವಸ್ಥೆಯ ಕೋಟೆಯಾದ ವಿಯೆನ್ನಾ ಆಗಿತ್ತು. ಕ್ರಾಂತಿಯ ಶಿಕ್ಷಣದ ಕಿಡಿಯು ಹಂಗೇರಿಯಿಂದ ಪ್ರಾರಂಭವಾಯಿತು. ಇಲ್ಲಿ ಬಹಳ ವರ್ಷಗಳ ಕಾಲ ರಾಷ್ಟ್ರೀಯತೆ ಹಾಗೂ ಸುಧಾರಣಾ ಚಳವಳಿಗಳು ನಡೆಯುತ್ತಿದ್ದವು. ಹಂಗೇರಿಯಲ್ಲಿದ್ದ ಸಂಸ್ಥೆಗಳು ಮಧ್ಯಯುಗೀಯವಾಗಿದ್ದವು. ಪಶ್ಚಿಮ ಯೂರೋಪಿನ ಚಿಂತನೆಗಳಿಂದ ಪ್ರಭಾವಿತಗೊಂಡ ಒಂದು ಉದಾರವಾದಿ ಹಾಗೂ ಪ್ರಜಾಪ್ರಭುತ್ವವಾದೀ ಪಕ್ಷವು ಹಂಗೇರಿಯ ಪ್ರಖ್ಯಾತ ನಾಯಕರಲ್ಲೊಬ್ಬನಾದ ಲೂಯಿ ಕೊಸುಥ್‌ನ ನೇತೃತ್ವದಲ್ಲಿ ಬೆಳೆದಿತ್ತು. ಕೊಸುಥ್‌ನು ತನ್ನ ಕಾಲದ ಪ್ರಜಾಪ್ರಭುತ್ವವಾದಿ ಚಿಂತನೆಗಳ ಸಾಕಾರ ಮೂರ್ತಿಯೇ ಆಗಿದ್ದನು. ರಾಷ್ಟ್ರೀಯ ಬದುಕಿನ ಎಲ್ಲಾ ರಂಗಗಳಲ್ಲೂ ಸುಧಾರಣೆಗಳನ್ನು ತರಲು ಶ್ರಮಿಸಿದ್ದನು. ಶ್ರೀಮಂತರ ಮೇಲೆ ತೆರಿಗೆ ಹೇರಬೇಕೆನ್ನುವುದು, ಎಲ್ಲ ರಾಷ್ಟ್ರೀಯ ಖರ್ಚುವೆಚ್ಚಗಳ ಮೇಲೂ ನಿಯಂತ್ರಣ ಸಾಧಿಸುವುದು, ಪತ್ರಿಕೆಗಳಿಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ನೀಡುವುದು ಆತನ ಧ್ಯೇಯವಾಗಿತ್ತು. ಲೂಯಿ ಫಿಲಿಫ್‌ನ ಸುದ್ದಿಯು ಮಿಂಚಿನಂತೆ ಹರಡಿತು. ಕೊಸುಥ್‌ನ ತೀಕ್ಷ್ಣವಾದ ಭಾಷಣಗಳು ಆ ಸಂದರ್ಭದ ಭಾವನೆಗಳನ್ನು ವ್ಯಕ್ತಪಡಿಸುವಂತಹುದಾಗಿತ್ತು. ಹತ್ತು ದಿನಗಳ ನಂತರ ಹೆಚ್ಚಿನ ಮಟ್ಟದಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರೇ ಸಂಘಟಿಸಿದಂತಹ ಒಂದು ದಂಗೆಯು ವಿಯೆನ್ನಾದಲ್ಲಿ ಪ್ರಾರಂಭವಾಯಿತು. ಗುಂಪು ಚಕ್ರವರ್ತಿಯ ಅರಮನೆಗೆ ನುಗ್ಗಿ, ಸಭಾಂಗಣಕ್ಕೆ ಮುತ್ತಿಗೆ ಹಾಕಿ ‘‘ಮೆಟರ್ನಿಕ್‌ಗೆ ಧಿಕ್ಕಾರ’’ ಎಂಬ ಘೋಷಣೆಗಳನ್ನು ಕೂಗಿತು. ಕೊಸುಥ್‌ನ ಭಾಷಣೆಗಳ ದಾಳಿಯಲ್ಲಿ ಹಂಗೇರಿಯು ವಿಯೆನ್ನಾದ ಮೇಲೆ ತನ್ನ ಪ್ರಭಾವವನ್ನು ಬೀರಿತು. ವಿಯೆನ್ನಾದ ಜನರ ಕ್ರಿಯೆಗಳು ಹಂಗೇರಿಯ ಮೇಲೆ ತನ್ನ ಪ್ರಭಾವವನ್ನು ಬೀರಿತು. ಮಾರ್ಚ್ ಕಾನೂನುಗಳು ಹಂಗೇರಿಯನ್ನು ಆಧುನೀಕರಣಗೊಳಿಸುವ ದಿಸೆಯಲ್ಲಿದ್ದವು. ಅವು ಹಿಂದಿದ್ದ ನಿರಂಕುಶ ಪ್ರಭುತ್ವದ ರಾಜಕೀಯ ವ್ಯವಸ್ಥೆಯನ್ನು ಧೂಳೀಪಟ ಮಾಡಿದವು. ಪತ್ರಿಕಾ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ನ್ಯಾಯ ತೀರ್ಮಾನದ ಮೂಲಕ ಶಿಕ್ಷೆಯಂತಹ ವ್ಯವಸ್ಥೆಗಳು ಸ್ಥಾಪಿತಗೊಂಡವು. ಹಂಗೇರಿಯ ಈ ಉದಾಹರಣೆಯನ್ನು ಬೊಹೀಮಿಯಾ ದೇಶವು ಬಹಳ ಬೇಗ ಅನುಸರಿಸಿತು. ಬೊಹೀಮಿ ಯಾದಲ್ಲಿ ಮುಖ್ಯವಾಗಿ ಎರಡು ಜನಾಂಗಗಳಿದ್ದವು. ಅಲ್ಪಸಂಖ್ಯಾತರಾದ ಜರ್ಮನ್ನರು ವಿದ್ಯಾವಂತರಾಗಿದ್ದರು. ಆದರೆ ಬಹುಸಂಖ್ಯಾತರು ಬಡವರಾಗಿದ್ದರು. ಅವರು ಹಂಗೇರಿಯನ್ನರಂತೆಯೇ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.

ವಿಯೆನ್ನಾದ ಪಶ್ಚಿಮಕ್ಕಿರುವ ಆಸ್ಟ್ರಿಯಾದ ಪ್ರಾಂತ್ಯಗಳು ಸರಿಸುಮಾರು ಇಂತಹುದೇ ಬೇಡಿಕೆಗಳನ್ನು ಹೊಂದಿದ್ದವು. ಇಂತಹ ಅಸಹಾಯಕ ಪರಿಸ್ಥಿತಿಗೆ ಮುಖ್ಯವಾಗಿ ಇಟಲಿ ಯಲ್ಲಿದ್ದ ಕಠಿಣ ಪರಿಸ್ಥಿತಿಯೇ ಕಾರಣವಾಗಿತ್ತು. ೧೮೧೫ರಲ್ಲಿ ಲಂಬಾರ್ಡಿ ಮತ್ತು ವೆನಿಶಿಯಾವು ಹಾಫ್ಸ್‌ಬರ್ಗ್ ಕುಟುಂಬದವರಿಂದ ಆಳಲ್ಪಟ್ಟಿತು. ಇಂತಹ ವಿದೇಶೀಯ ಆಡಳಿತಕ್ಕೆ ಜನರ ವಿರೋಧವಿತ್ತು. ಇದೇ ರೀತಿ ಟಸ್ಕನಿ ಮತ್ತು ಪೋಪನ ಆಡಳಿತದಲ್ಲಿದ್ದ ಇತರೇ ಇಟಲಿಯ ರಾಜ್ಯಗಳೂ ಸಹ ಜನಪ್ರಿಯ ಒತ್ತಡಕ್ಕೆ ಸಿಲುಕಿದ್ದವು. ಇದೇ ರೀತಿ ಜರ್ಮನಿಯಲ್ಲೂ ಸಹ ಸೈನಿಕ ಆಡಳಿತದ ದಿನಗಳಿದ್ದವು. ಪ್ರಷ್ಯಾದ ರಾಜನು ಒಂದು ಸಂವಿಧಾನವನ್ನು ರಚಿಸುವ ಭರವಸೆ ನೀಡಿದ್ದನು. ಆದರೆ ಬರ್ಲಿನ್‌ನ ಜನರು ದಂಗೆ ಯೆದ್ದರು. ಇದರ ಫಲವಾಗಿ ಹಲವಾರು ಮುಳ್ಳು ಬೇಲಿಗಳೆದ್ದವು. ರಾಜನು ಜರ್ಮನಿಯ ಏಕೀಕರಣದ ಪ್ರಯತ್ನಕ್ಕಾಗಿ ನಾಯಕತ್ವವನ್ನು ವಹಿಸಿಕೊಳ್ಳುವ ಭರವಸೆಯನ್ನು ಸಹ ನೀಡಿದ್ದನು. ೧೮೪೮ರ ಮಾರ್ಚ್ ಕೊನೆಯ ವೇಳೆಗೆ ಎಲ್ಲೆಡೆಯೂ ಹಬ್ಬಿದ್ದ ಕ್ರಾಂತಿಯು ಸಫಲವಾಯಿತು. ಒಂದು ತಲೆಮಾರಿನವರೆಗೂ ಸರಕಾರದ ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟು ಕೊಂಡಿದ್ದ ಪ್ರಖ್ಯಾತ ಮಾರ್ಚ್ ದಿನಗಳು ನಿರ್ನಾಮವಾದವು. ಆಸ್ಟ್ರಿಯಾ ಚಕ್ರಾಧಿಪತ್ಯವು ಇದ್ದ ಎಲ್ಲೆಡೆಯಲ್ಲೂ ಅಂದರೆ ಜರ್ಮನಿ ಮತ್ತು ಇಟಲಿಗಳಲ್ಲಿ ಕ್ರಾಂತಿಯು ಸಫಲ ವಾಯಿತು. ಹಂಗೇರಿ ಮತ್ತು ಬೋಹೀಮಿಯಾಗಳಿಗೆ ಹೆಚ್ಚಿನ ಮಟ್ಟದ ರಿಯಾಯಿತಿಗಳು ದೊರೆತವು. ಲಂಬಾರ್ಡಿ, ವೆನೀಶಿಯಾ ಚಕ್ರಾಧಿಪತ್ಯವು ತಾನು ಆಸ್ಟ್ರಿಯಾದಿಂದ ಮುಕ್ತ ನಾಗಿದ್ದೇನೆ ಎಂದು ಘೋಷಿಸಿಕೊಂಡಿತು.

ಕ್ರಾಂತಿಯ ಗೆಲುವು ಸೀಮಿತ ಅವಧಿಯದ್ದಾಗಿತ್ತು. ಆಸ್ಟ್ರಿಯಾವು ಪುನರುತ್ಥಾನದ ಸೂಚನೆಗಳನ್ನು ತೋರಿಸಿತು. ಆಸ್ಟ್ರಿಯಾದ ಜನಾಂಗಗಳ ನಡುವಿನ ಹಾಗೂ ಸೈನಿಕ ಶಕ್ತಿಯ ನಡುವಿನ ವೈರುಧ್ಯದಲ್ಲಿ, ಅದರ ಮುಕ್ತಿಯು ಅಡಗಿತ್ತು. ೧೮೪೮ರಲ್ಲಿ ವಿಂಡೀಸ್ ಚಗಾರ್ಸ್‌ನು ಪ್ರೇಗ್ ರಾಜಪ್ರಭುತ್ವದ ಸೇನೆಯ ದಂಡನಾಯಕನಾಗಿದ್ದನು. ಆತನು ಪ್ರೇಗ್ ನಗರವನ್ನು ಧೂಳೀಪಟ ಮಾಡಿ ಸರ್ವಾಧಿಕಾರಿಯಾದನು.

ಇಟಲಿಯಲ್ಲಿಯೂ ಸಹ ಸೇನೆಯು ವಿಜಯ ಸಾಧಿಸಿತು. ಮೊದಲಿನ ಉತ್ಸಾಹದ ಚಿಲುಮೆಯ ನಂತರ ಇಟಾಲಿಯನ್ನರು ಈರ್ಷ್ಯೆ ಹಾಗೂ ಭಿನ್ನಾಭಿಪ್ರಾಯಗಳಿಂದ ಅವರ ಒಗ್ಗಟ್ಟು ಛಿದ್ರವಾಯಿತು. ಟಸ್ಕನಿ, ನೇಪಲ್ಸ್ ಹಾಗೂ ಪೋಪ್ ಆಡಳಿತದ ರಾಜ್ಯಗಳ ರಾಜರು ರಾಷ್ಟ್ರೀಯ ಧ್ಯೇಯಗಳನ್ನು ಬಿಟ್ಟುಕೊಟ್ಟರು. ಆಸ್ಟ್ರೀಯಾದ ಪ್ರತಿಗಾಮಿ ಗುಂಪು ಬೊಹೀಮಿಯಾ ಮತ್ತು ಇಟಲಿಗಳಲ್ಲಿ ಸೇನೆಯ ಭಾಗಶಃ ಗೆಲುವಿನಿಂದ ಬಲಿಷ್ಟರಾಗಿ, ರಾಜ್ಯಗಳ ಮೇಲೆ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದರು. ಇದರಿಂದಾಗಿ ಫರ್ಡಿನಾಂಡನು ತನ್ನ ಪದವಿಯನ್ನು ಕಳೆದುಕೊಳ್ಳಬೇಕಾಯಿತು. ೧೮೪೮ರಲ್ಲಿ ಆತನ ಸೋದರಳಿಯನಾದ ೧ನೆಯ ಫ್ರಾನ್ಸಿಸ್ ಜೋಸೆಫ್‌ನು ಅಧಿಕಾರ ವಹಿಸಿಕೊಂಡನು. ಈತನ ಪ್ರಭುತ್ವವು ಬಹಳ ಕಾಲದವರೆಗೆ ಗಮನಾರ್ಹ ಘಟನೆಗಳಿಂದ ಕೂಡಿದ್ದುದಾಗಿತ್ತು.

೧೮೪೯ರಲ್ಲಿ ಹಂಗೇರಿಯಲ್ಲಿ ಮಹಾಯುದ್ಧ ಪ್ರಾರಂಭವಾಯಿತು. ರಷ್ಯಾದ ಜಾರ್ ದೊರೆ ಒಂದನೆಯ ನಿಕೊಲಸ್ ಕಳುಹಿಸಿದ ಬೃಹತ್ ಸೇನೆಯನ್ನು ಹೊಂದಿದ ಆಸ್ಟ್ರಿಯಾವು ಹಂಗೇರಿಯ ಮೇಲೆ ಆಕ್ರಮಣ ನಡೆಸಿತು. ಅವರ ಸ್ವಾತಂತ್ರ್ಯ ಚಳವಳಿಯನ್ನು ಬೇರು ಸಹಿತ ಕಿತ್ತು ಹಾಕಿತು. ಕೊಸುಥ್ ಮತ್ತು ಇತರೇ ನಾಯಕರುಗಳನ್ನು ತೀವ್ರವಾಗಿ ಶಿಕ್ಷೆಗೆ ಗುರುಪಡಿಸಿ ಸೆರೆಮನೆಗೆ ತಳ್ಳಲಾಯಿತು.

ಇದೇ ಸಂದರ್ಭದಲ್ಲಿ ಆಸ್ಟ್ರಿಯಾದ ಸೈನಿಕ ಶಕ್ತಿಯ ಸಹಾಯದಿಂದ ಇಟಲಿಯನ್ನು ಸಹ ಮತ್ತೆ ಕೈವಶ ಮಾಡಿಕೊಳ್ಳಲಾಯಿತು. ೧೮೪೮ರಲ್ಲಿ ಸಾರ್ಡೀನಿಯಾದ ದೊರೆ ಚಾರ್ಲ್ಸ್ ಆಲ್ಬರ್ಟ್‌ನ ನಾಯಕತ್ವದಲ್ಲಿ ಆಸ್ಟ್ರಿಯಾದ ವಿರುದ್ಧ ಇಟಾಲಿಯನ್ನರ ದಂಗೆ ಆರಂಭವಾಯಿತು. ಚಾರ್ಲ್ಸ್ ಆಲ್ಬರ್ಟ್‌ನು ೧೮೪೯ರಲ್ಲಿ ವಸಂತ ಋತುವಿನಲ್ಲಿ ಆಸ್ಟ್ರಿಯಾದ ವಿರುದ್ಧದ ಹೋರಾಟದಲ್ಲಿ ನಾಯಕತ್ವ ವಹಿಸಿದ್ದನು. ಆದರೆ ಅವರಲ್ಲಿ ಒಗ್ಗಟ್ಟಿರಲಿಲ್ಲ. ಇತರೇ ರಾಜ್ಯಗಳಿಂದಲೇ ಸಹಾಯ ಸಿಗಲಿಲ್ಲ. ನಂತರ ಅವನು ೨ನೆಯ ವಿಕ್ಟರ್ ಇಮ್ಯಾನುಯಲ್‌ಗೆ ತನ್ನ ಸಿಂಹಾಸನವನ್ನು ಬಿಟ್ಟುಕೊಡಬೇಕಾಯಿತು. ೧೮೪೯ರಲ್ಲಿ ಫ್ಲಾರೆನ್ಸ್, ರೋಮ್ ಹಾಗೂ ವೆನಿಸ್ಸಿನ ಗಣರಾಜ್ಯಗಳು ಒಂದಾದ ಮೇಲೊಂದರಂತೆ ಸೋಲಿಸಲ್ಪಟ್ಟಿತು. ೧೮೪೮ರ ಉಜ್ವಲ ಆಶಾಕಿರಣಗಳು ಶೀಘ್ರವಾಗಿ ನಂದಿಹೋದವು. ಆಸ್ಟ್ರಿಯಾದ ಸೈನ್ಯಬಲವು ಪುನಃ ಸ್ಥಾಪಿತವಾಯಿತು.

ಇಟಲಿ ಮತ್ತು ಆಸ್ಟ್ರಿಯಾಗಳಲ್ಲಿ ಈ ಘಟನೆಗಳು ಸಂಭವಿಸುತ್ತಿದ್ದ ಹಾಗೆ ಜರ್ಮನಿ ಯಲ್ಲಿ ಸಹ ಉದಾರವಾದಿಗಳ ಗೆಲುವು ಸೋಲಿನತ್ತ ವಾಲುತ್ತಿತ್ತು. ಅವರೆಲ್ಲರ ಆಸೆಗಳು ಫ್ರಾಂಕ್‌ಫರ್ಟ್‌ನಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಆಧರಿಸಿತ್ತು. ಈ ಫ್ರಾಂಕ್‌ಫರ್ಟ್ ಅಧಿವೇಶನವು ಒಂದು ನೈಜ ಜರ್ಮನ್ ರಾಷ್ಟ್ರಕ್ಕಾಗಿ ಹುಟ್ಟಿದ ಜನಪ್ರಿಯ ಬೇಡಿಕೆಗೆ ಎಡೆಮಾಡಿಕೊಟ್ಟಿತು. ಆದರೆ ಜರ್ಮನಿಯ ರಾಜರುಗಳು ಅದರಲ್ಲೂ ಪ್ರಷ್ಯಾ ಮತ್ತು ಆಸ್ಟ್ರಿಯಾದ ರಾಜರುಗಳ ವಿರೋಧದಿಂದಾಗಿ ಫ್ರಾಂಕ್‌ಫರ್ಟ್ ಸಮಾವೇಶವು ಸೋಲನ್ನು ಕಂಡಿತು. ಪ್ರಷ್ಯಾದ ದೊರೆಯಾದ ೪ನೆಯ ಫೆಡ್ರಿಕ್ ವಿಲಿಯಂನು ಸಂಯುಕ್ತ ಜರ್ಮನಿಯ ಚಕ್ರಾಧಿಪತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದುದರಿಂದ ಗೊಂದಲ ವೇರ್ಪಟ್ಟಿತು.

ಫ್ರಾಂಕ್‌ಫರ್ಟ್ ಅಧಿವೇಶನದ ವೈಫಲ್ಯವು ಒಂದು ದೊಡ್ಡ ನಿರಾಸೆಯನ್ನು ಉಂಟುಮಾಡಿತು. ಪ್ರಷ್ಯಾದ ದೊರೆಯು ಫ್ರಾಂಕ್‌ಫರ್ಟ್ ಒಪ್ಪಂದವು ನೀಡಿದ ಸಂಯುಕ್ತ ಜರ್ಮನಿಯ ನಾಯಕತ್ವವನ್ನು ನಿರಾಕರಿಸಿದನು. ಅವರ ಎಲ್ಲಾ ಶ್ರಮವನ್ನು ನಿಷ್ಫಲಗೊಳಿಸಿ ದನು. ೧೮೧೫ರ ಹಳೆಯ ಜರ್ಮನ್ ಒಕ್ಕೂಟವು ೧೮೪೮ರಲ್ಲಿ ರದ್ದಾಗಿದ್ದು ಅದರ ರದ್ಧತಿಯು ಈಗ ಪುನಃ ಅಸ್ತಿತ್ವಕ್ಕೆ ಬರಬೇಕೆಂದು ಆಸ್ಟ್ರಿಯಾ ಒತ್ತಾಯಿಸಿತು. ಮಧ್ಯಕಾಲದ ಯೂರೋಪಿನಲ್ಲಿ ಈ ಶತಮಾನದ ಮಧ್ಯದಲ್ಲಿ ಒದಗಿದ ಶಾಶ್ವತ ಪರಿಣಾಮಗಳು ಅತ್ಯಲ್ಪ. ಎಲ್ಲೆಡೆಯಲ್ಲಿಯೂ ಹಳೆಯ ಪ್ರಭುತ್ವಗಳು ಹುಟ್ಟಿಕೊಂಡವು. ೧೮೪೮ರಲ್ಲಿ ಚಾರ್ಲ್ಸ್ ಆಲ್ಬರ್ಟ್‌ನಿಂದ ಪಡೆದುಕೊಂಡ, ಸಂವಿಧಾನಾತ್ಮಕ ಅಸ್ತಿತ್ವವನ್ನು ಪಡೆದ ಸಾರ್ಡೀನಿಯಾವು ಒಂದು ನೈಜ ಸಂಸದೀಯ ಸರಕಾರವನ್ನು ಸ್ಥಾಪಿಸಿತು. ಇಟಲಿಯಲ್ಲಿ ಇಂತಹುದು ಇದೊಂದೇ ಆಗಿತ್ತು. ೧೮೫೦ರಲ್ಲಿ ಅಂತಿಮವಾಗಿ ರೂಪಿಸಿ ಪ್ರಷ್ಯಾದ ರಾಜನು ಹೊರಡಿಸಿದ ಸಂವಿಧಾನದಲ್ಲಿ ಉದಾರವಾದೀ ಅಂಶಗಳು ಹೆಚ್ಚಾಗಿರಲಿಲ್ಲ. ನಂತರದಲ್ಲಿ ಎರಡು ಹಂತಗಳ ವ್ಯವಸ್ಥೆ ಹೊಂದಿದ್ದ ಸಂಸತ್ತು ಕಾರ್ಯರೂಪಕ್ಕೆ ಬಂದಿತು. ಈ ಸಂವಿಧಾನ ಚುನಾವಣೆಗೆ ಇದ್ದ ಮತದಾರರ ವಿಭಜನೆಯ ವ್ಯವಸ್ಥೆ ಮತ್ತು ತೆರಿಗೆ ಪದ್ಧತಿಯು ಮಹಾಯುದ್ಧವು ಮುಗಿಯುವವರೆಗೂ ಮುಂದುವರಿದಿತ್ತು.

ಎರಡನೆಯ ಗಣರಾಜ್ಯ

೧೮೪೮ರ ಕ್ರಾಂತಿಯ ಮುಖಾಂತರ ಹುಟ್ಟಿದ ಗಣರಾಜ್ಯವು ನಾವು ಗಮನಿಸಿದಂತೆ ಕೇವಲ ೫ ವರ್ಷಗಳ ಕಾಲ ಅಂದರೆ ೧೮೫೨ರವರೆಗೆ ಅಸ್ತಿತ್ವದಲ್ಲಿತ್ತು. ಈ ಅವಧಿಯಲ್ಲಿ ಹಂಗಾಮಿ ಸರ್ಕಾರ (ಇದು ಮೊದಲಿಗೆ ಗಣರಾಜ್ಯದ ಸಂವಿಧಾನವನ್ನು ರಚಿಸಿತು) ಮತ್ತು ರಾಷ್ಟ್ರೀಯ ಸಂಸದೀಯ ಸಭೆ ಹಾಗೂ ನಂತರದಲ್ಲಿ ಆ ಸಂವಿಧಾನವು ಸೃಷ್ಟಿಸಿದ ಶಾಸಕಾಂಗ ಸಭೆ ಮತ್ತು ಅಧ್ಯಕ್ಷರಿಂದ ಆಡಳಿತ ನಡೆಸಲ್ಪಟ್ಟಿತು. ಈ ಹಂಗಾಮಿ ಸರಕಾರವು ಮೊದಲಿನಿಂದಲೂ ಎರಡು ಅಂಗಗಳನ್ನು ಒಳಗೊಂಡಿತ್ತು. ಲಾಮರ್ಟೈನ್‌ನ ನೇತೃತ್ವದಲ್ಲಿದ್ದ ಹಿರಿಯ ಸದಸ್ಯರು ಗಣತಂತ್ರವಾದಿಗಳಾಗಿದ್ದರು. ಎರಡನೆಯ ವಿಭಾಗದಲ್ಲಿ ಗಣತಂತ್ರದಲ್ಲಿ ನಿಜವಾಗಿ ನಂಬಿಕೆಯಿದ್ದ ಲೂಯಿ ಬ್ಲಾಂಕ್‌ನ ನೇತೃತ್ವದ ಗುಂಪಿದ್ದಿತು.

ಹಂಗಾಮಿ ಸರ್ಕಾರವು ಸಮಾಜವಾದಿಗಳು ಮತ್ತು ಸಮಾಜವಾದಿ ವಿರೋಧಿಗಳೆಂಬ ಎರಡು ಬಣಗಳಾಗಿ ವಿಭಜನೆಗೊಂಡಿದ್ದವು. ಆಂತರಿಕ ವಿರೋಧಗಳಿಂದ ಒಳಗೊಂಡ ಇಂತಹ ಒಕ್ಕೂಟವು ನಿಷ್ಕ್ರಿಯವಾಯಿತು. ಗಣರಾಜ್ಯದ ಬೇಡಿಕೆಗಾಗಿ ಲಾಮರ್ಟೈನ್‌ನು ಮಾಡಿದ ಭಾಷಣ ಎಷ್ಟು ಉತ್ತೇಜನಕಾರಿ ಮತ್ತು ಅದ್ಭುತವಾಗಿತ್ತೆಂದರೆ, ಎಲ್ಲಾ ಕಾರ್ಮಿಕರು ಸ್ವತಃ ತಾವಾಗಿಯೇ ಕೆಂಪು ಧ್ವಜದ ಕೆಳಗೆ ಸೇರಿದರು. ರಾಷ್ಟ್ರೀಯ ಕಾರ್ಯಾಗಾರಗಳು, ಆಧುನಿಕ ಕೈಗಾರಿಕಾ ವ್ಯವಸ್ಥೆಯ ಕಾರ್ಮಿಕರ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುತ್ತವೆ ಎಂಬ ಆಶಯವುಳ್ಳವರಿಗೆ ಅತೀವ ನಿರಾಸೆಯಾಯಿತು. ಸರಕಾರವು ಚಮ್ಮಾರರು, ಬಡಗಿಗಳು, ಕಮ್ಮಾರರಂತಹ ವಿವಿಧ ಕುಶಲಕರ್ಮಿಗಳ ಗುಂಪನ್ನು ಮಾತ್ರ ನಿರ್ಮಿಸಿತು. ಅವರು ಸೈನಿಕರಂತೆ ಸಂಘಟಿತರಾಗಿದ್ದರು. ಇಂತಹ ರಾಷ್ಟ್ರೀಯ ಕಾರ್ಯಾಗಾರಗಳಿಗೆ ಬಂದು ಸೇರುತ್ತಿದ್ದ ಜನರ ಸಂಖ್ಯೆ ಮಿತಿಮೀರಿತು. ಎಲ್ಲರಿಗೂ ಸಾಕಾಗುವಷ್ಟು ಕೆಲಸ ಇಲ್ಲದುದರಿಂದ ಕೆಲಸದ ದಿನಗಳನ್ನು ಕಡಿಮೆ ಮಾಡಲಾಯಿತು. ಇದು ಸಮಾಜವಾದಿ ಆಂದೋಲನಗಳು ಹುಟ್ಟಲು ಒಳ್ಳೆಯ ಬುನಾದಿ ದೊರಕಿಸಿಕೊಟ್ಟಿತು. ಹೊಸ ಸಂವಿಧಾನವು ರಚಿತವಾಗುವವರೆಗೂ ಈ ಹಂಗಾಮಿ ಸರ್ಕಾರವು ಕೇವಲ ತಾತ್ಕಾಲಿಕ ಸಂಘಟನೆಯಾಗಿ ಉಳಿಯಿತು. ೧೮೪೮ರಲ್ಲಿ ಸೇರಿದ ರಾಷ್ಟ್ರೀಯ ಸಂಸದೀಯ ಸಭೆಯಲ್ಲಿ ಸಾರ್ವತ್ರಿಕ ಮತದಾನದ ಹಕ್ಕನ್ನು ದೃಢಪಡಿಸಿತು.

ಈ ಸಭೆಯು ಪ್ಯಾರಿಸ್‌ನ ಸಮಾಜವಾದಿಗಳನ್ನು ತೀವ್ರವಾಗಿ ವಿರೋಧಿಸಿತು. ಮುಂಬರಲಿರುವ ಸಂಘರ್ಷದ ಕ್ಷಿಷ್ಟ ಪರಿಸ್ಥಿತಿಯನ್ನು ಮನಗಂಡಿತು. ಜನರಲ್ ಕಾವಿಗ್ನಾಕ್‌ನಿಗೆ ಸಭೆಯು ಸರ್ವಾಧಿಕಾರಿಯ ಅಧಿಕಾರವನ್ನು ನೀಡಿತು. ಪ್ಯಾರಿಸ್ ಸುಂದರ ರಸ್ತೆಗಳು, ಗಾಬರಿಗೊಳಿಸುವ ಮುಳ್ಳುಬೇಲಿಗಳ ಹಂದರದಿಂದ ಕೂಡಿತ್ತು. ಹೀಗೆ ಮಂದಗಾಮಿ ಗಣತಂತ್ರವಾದಿಗಳು ಸಮಾಜವಾದಿ ಗಣತಂತ್ರವಾದಿಗಳ ಮೇಲೆ ನಿಶ್ಚಯವಾದ ಜಯಗಳಿಸಿದ್ದರು. ಕಾವಿಗ್ನಾಕ್ ಸರ್ವಾಧಿಕಾರತ್ವ ಅಕ್ಟೋಬರ್‌ರವರೆಗೆ ಮುಂದುವರಿಯಿತು. ಎರಡನೆಯ ಗಣರಾಜ್ಯವು ಸೇನೆಯ ಅಂಕೆಯಲ್ಲಿತ್ತು. ಸಮಾಜವಾದಿ ಆಂದೋಲನದ ಪರಿಣಾಮಗಳು ದೊಡ್ಡ ಪ್ರಮಾಣದಲ್ಲಿದ್ದವು. ಸಮಾಜವಾದಿಗಳನ್ನು ಹತ್ತಿಕ್ಕಿದ ನಂತರ ಸಂಸದೀಯ ಸಭೆಯು ಸಂವಿಧಾನವನ್ನು ರಚಿಸಲು ತೊಡಗಿತು. ಒಂದು ಗಣರಾಜ್ಯವನ್ನು ಫ್ರಾನ್ಸ್‌ನ ಖಚಿತ ಸ್ವರೂಪದ ಸರಕಾರವೆಂದು ಘೋಷಿಸಿತು. ಕಾರ್ಯ ನಿರ್ವಾಹಕರನ್ನು ಅಧ್ಯಕ್ಷರು ನಾಲ್ಕು ವರ್ಷದ ಅವಧಿಗಾಗಿ ಚುನಾಯಿಸಬೇಕಾಗಿದ್ದಿತು. ಅತನನ್ನು ಮತದಾರರೇ ನೇರವಾಗಿ ಚುನಾಯಿಸಬೇಕಾಗಿತ್ತು. ಪ್ರಖ್ಯಾತ ನೆಪೋಲಿಯನ್ನನ ಸೋದರಳಿ ಯನಾದ ಲೂಯಿ ನೆಪೋಲಿಯನ್ ಬೋನಾಪಾರ್ಟಿಯನ್ನು ಅಧ್ಯಕ್ಷನನ್ನಾಗಿ ಚುನಾಯಿಸ ಲಾಯಿತು. ಆತನು ಹಿಂದೆ ಹಾಲೆಂಡ್‌ನ ರಾಜನಾಗಿದ್ದ ಲೂಯಿಯ ಮಗ ನಾಗಿದ್ದನು. ಇದಕ್ಕೂ ಹಿಂದೆ ಆತನು ಫ್ರಾನ್ಸ್‌ನ್ನು ಆಳಲು ಪ್ರಯತ್ನ ನಡೆಸಿದ್ದನು. ಆದರೆ ಇದನ್ನು ಸಾಧಿಸಿದ ಬಗ್ಗೆ ಯಾವ ದಾಖಲೆಗಳೂ ಇಲ್ಲ. ಸಂಸದೀಯ ಸಭೆಗೆ ಆತನು ಆಯ್ಕೆ ಗೊಂಡನು. ನೆಪೋಲಿಯನ್ನನ ಹೆಸರಿನಿಂದಾಗಿ ರೈತಾಪಿ ಜನರೆಲ್ಲರ ಮತಗಳೂ ಅವನಿಗೇ ಸಿಕ್ಕಿತು. ೧೮೪೮ರಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಆತನೊಬ್ಬ ವಚನಬದ್ಧ ಅಭ್ಯರ್ಥಿಯಾಗಿದ್ದನು.

ಲೂಯಿ ಬೋನಾಪಾರ್ಟಿಯು ಆಯ್ಕೆಯಾದ ನಂತರ ಪ್ರಜಾಪ್ರಭುತ್ವವಾದಿ ಗಣತಂತ್ರಕ್ಕೆ ನಿಷ್ಟನಾಗಿ ಉಳಿಯುತ್ತೇನೆಂದು ಸಭೆಗೆ ಪ್ರಮಾಣ ನೀಡಿದನು ಮತ್ತು ‘‘ನನ್ನ ಕರ್ತವ್ಯಗಳ ಬಗ್ಗೆ ನಾನು ಸ್ಪಷ್ಟವಾಗಿ ತಿಳಿದಿದ್ದೇನೆ’’ ಎಂದು ಹೇಳಿದನು. ಮೂರು ವರ್ಷಗಳ ಅವಧಿಗಾಗಿ ಪ್ರಮಾಣವಚನ ಸ್ವೀಕರಿಸಿದನು ಮತ್ತು ಅಧಿಕಾರದಲ್ಲಿ ಉಳಿಯಲು ಇಚ್ಛಿಸಿದನು. ಒಂದನೆಯ ನೆಪೋಲಿಯನ್ನನ ಜೀವನ ಚರಿತ್ರೆಯ ಒಂದಂಶವನ್ನು ತೆಗೆದುಕೊಂಡು ಕ್ಷಿಪ್ರಕ್ರಾಂತಿಯ ಮುಖಾಂತರ ಅಧಿಕಾರವನ್ನು ಗಳಿಸಿದನು. ಶಾಸಕಾಂಗ ಭವನವನ್ನು ಆಕ್ರಮಿಸಲು ಕಾಲಾಳು ಪಡೆಯನ್ನು ಕಳುಹಿಸಿದನು. ಅಧ್ಯಕ್ಷರ ಧ್ಯೇಯಗಳನ್ನು ವಿವರಿಸುವ ಜಾಹಿರಾತುಗಳನ್ನು ಪ್ಯಾರಿಸ್ಸಿನ ಎಲ್ಲ ಗೋಡೆಗಳ ಮೇಲೂ ಅಂಟಿಸಿದನು. ಜನಪ್ರಿಯ ದಂಗೆಗಳ ಪಡೆಗಳನ್ನು ಎದುರಿಸಲು, ಅನಿರೀಕ್ಷಿತ ಸಂದರ್ಭಗಳಿಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಮರೆಯಲಿಲ್ಲ. ಆತನು ಪೋಲೀಸರ ವ್ಯವಸ್ಥೆ ಹಾಗೂ ಮುದ್ರಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹತೋಟಿಯಲ್ಲಿಟ್ಟುಕೊಂಡಿದ್ದನು. ೩ನೆಯ ತಾರೀಖಿನಂದು ಮುಳ್ಳುಬೇಲಿಗಳನ್ನು ನಿರ್ಮಿಸಲಾಯಿತು. ೪ರಂದು ಬೋಲ್ವಾರ್ಡ್‌ರ ಪ್ರಖ್ಯಾತ ನರಮೇಧ ನಡೆಯಿತು. ಈ ಕ್ಷಿಪ್ರಕ್ರಾಂತಿಯು ಸಫಲವಾಯಿತು. ನೆಪೋಲಿಯನ್ನನನ್ನು ವಿರೋಧಿಸಿದವರೆಲ್ಲರನ್ನು ಗಡೀಪಾರು ಮಾಡಲಾಯಿತು ಅಥವಾ ಸೆರೆಮನೆಗೆ ತಳ್ಳಲಾಯಿತು. ಎಲ್ಲಾ ವಿರೋಧಿ ನಾಯಕತ್ವವನ್ನು ರದ್ದು ಮಾಡಿದ ನಂತರ ಆತನು ಸಂವಿಧಾನವನ್ನು ಪುನಃರಚಿಸುವ ಜವಾಬ್ದಾರಿಯನ್ನು ತನಗೇ ನೀಡಬೇಕೆಂದು ಕೇಳಿಕೊಂಡನು.

ಈ ಗಣರಾಜ್ಯವು ಒಂದು ವರ್ಷಕಾಲ ಮುಂದುವರಿದು, ನಂತರ ನಿಷ್ಕ್ರಿಯವಾಯಿತು. ಫ್ರಾನ್ಸಿನ ಜನರಿಗೆ ಚಕ್ರಾಧಿಪತ್ಯದ ಗೌರವವನ್ನು ಪುನಃಸ್ಥಾಪಿಸುವ ಪ್ರಶ್ನೆಯ ಬಗ್ಗೆ ಮತದಾನ ಮಾಡಲು ಅನುಮತಿ ನೀಡಲಾಯಿತು ಹಾಗೂ ಲೂಯಿ ನೆಪೋಲಿಯನ್ ಬೋನಾಪಾರ್ಟಿಯನ್ನು ೩ನೆಯ ನೆಪೋಲಿಯನ್ ಎಂಬ ಹೆಸರಿನಲ್ಲಿ ಚಕ್ರವರ್ತಿಯನ್ನಾಗಿ ಘೋಷಿಸಲಾಯಿತು. ಹೀಗೆ ಎರಡನೆಯ ಸಾಮ್ರಾಜ್ಯವು ಸ್ಥಾಪಿತವಾಯಿತು. ಒಬ್ಬ ಪ್ರಜ್ಞಾವಂತ ಹಾಗೂ ಉದಾರವಾದಿಗೆ ನಿರಂಕುಶ ವ್ಯಕ್ತಿಯು ಒಂದು ಸರಕಾರವನ್ನು ಘೋಷಿಸಿದ. ಪುನರ್‌ರಚನೆಯ ಕಾರ್ಯವು ಭರದಿಂದ ಸಾಗಿತು ಹಾಗೂ ರಾಷ್ಟ್ರೀಯ ಜನಜೀವನವು ಆರೋಗ್ಯಪೂರ್ಣವಾಯಿತು. ಚರಿತ್ರೆಯ ಈ ಎರಡನೆಯ ಚಕ್ರಾಧಿಪತ್ಯವನ್ನು ಎರಡು ಕಾಲಘಟ್ಟಗಳಲ್ಲಿ ವಿವರಿಸಲಾಗಿದೆ. ೧೮೫೨-೬೦ರವರೆಗಿನ ಅನಿಯಮಿತ ನಿರಂಕುಶ ಪ್ರಭುತ್ವ ಮತ್ತು ೧೮೬೦-೧೮೭೦ರವರೆಗಿನ ಉದಾರವಾದದ ಬೆಳವಣಿಗೆ.