ಯುರೋಪ್ ಖಂಡದ ಮೇಲೆ ಅತ್ಯಂತ ಪ್ರಭಾವ ಬೀರಿದ ಅಂಶಗಳೆಂದರೆ, ಕ್ರೈಸ್ತಧರ್ಮ ಹಾಗೂ ಗ್ರೀಕ್ ಚಿಂತನೆ. ಪುರಾತನ ಗ್ರೀಕ್ ಚಿಂತಕರು ಬೌದ್ದಿಕ ಸಂಸ್ಕೃತಿಯ ಚರಿತ್ರೆಯಲ್ಲಿ ಅದರಲ್ಲೂ ರಾಜಕೀಯ ಹಾಗು ನ್ಯಾಯ ಚಿಂತನೆಯಲ್ಲಿ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ. ನಿಸರ್ಗ ಮತ್ತು ಸಮಾಜದ ಅಧ್ಯಯನಕ್ಕೆ ಒಂದು ಸೈದ್ಧಾಂತಿಕ ಅನುಸಂಧಾನದ ನೆಲೆಗಟ್ಟನ್ನು ಅವರು ಹಾಕಿಕೊಟ್ಟಿದ್ದಾರೆ. ಕಾಲ್ಪನಿಕ ಪರ್ಯಾ ಲೋಚನೆಗಳನ್ನು ಆಧರಿಸಿದ ಪೌರಾಣಿಕ ಲೋಕ ದೃಷ್ಟಿ ಮತ್ತು ನಿಗೂಢ ಭವಿಷ್ಯ ಜ್ಞಾನಗಳಿಂದ ವೈಚಾರಿಕ ಅರಿವು ಮತ್ತು ಅರಿವಿನ ವ್ಯಾಖ್ಯಾನದತ್ತ ಸ್ಥಿತ್ಯಂತರಗೊಳ್ಳುವುದನ್ನು ಸಾಧಿಸಿದ ಕೀರ್ತಿಯು ನ್ಯಾಯವಾಗಿ ಅವರಿಗೇ ಸಲ್ಲಬೇಕು.

ನಂಬುಗೆಗಿಂತಲೂ ಅರಿವಿನ ಅಗತ್ಯವಿದೆಯೆಂಬುದರಿಂದ ಮೊದಲುಗೊಂಡ ಪ್ರಭುತ್ವ, ನ್ಯಾಯ ಮತ್ತು ರಾಜಕೀಯಗಳಿಗೆ ಸಂಬಂಧಿಸಿದ ಮೂಲಭೂತ ಸಮಸ್ಯೆಗಳನ್ನು ಎತ್ತಿದ ವರಲ್ಲಿ ಈ ಗ್ರೀಕ್ ತತ್ವಜ್ಞಾನಿಗಳೇ ಮೊದಲಿಗರು. ಅವರು ಸೂಚಿಸಿದ ಪರಿಹಾರಗಳಲ್ಲಿ ರಾಜಕೀಯ ಚಿಂತನೆಯ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದ ಅನೇಕ ಅಂಶಗಳ ಮುನ್ಸೂಚನೆಗಳಿವೆ. ಅವು ನಮ್ಮ ಕಾಲದಲ್ಲಿ ಪ್ರಸ್ತುತ.

ಸಾಂಸ್ಕೃತಿಕ ಇತಿಹಾಸದಲ್ಲಿ ಗ್ರೀಕ್ ತತ್ವಜ್ಞಾನವು ಹೊಂದಿರುವ ವಿಶಿಷ್ಟ ಸ್ಥಾನದ ಬಗ್ಗೆ ಏಂಗೆಲ್ಸ್ ಹೀಗೆ ಹೇಳುತ್ತಾನೆ.

ಗ್ರೀಕ್ ಪರಿಗಣಿಸಿದಂತೆ ಆಧ್ಯಾತ್ಮವು ನಿರ್ದಿಷ್ಟ ಅಂಶಗಳಲ್ಲಿ ಔಚಿತ್ಯಪೂರ್ಣ ವಾಗಿದ್ದರೆ, ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ಗ್ರೀಕರು ಸಾಮಾನ್ಯ ಅಂಶಗಳಲ್ಲಿ ಔಚಿತ್ಯಪೂರ್ಣ ಧೋರಣೆ ಹೊಂದಿದ್ದಾರೆ. ಇತರೇ ಹಲವಾರು ಕ್ಷೇತ್ರಗಳಂತೆಯೇ ತತ್ವಶಾಸ್ತ್ರದಲ್ಲಿ ಮಾನವ ಅಧ್ಯಯನದ ಚರಿತ್ರೆಯಲ್ಲಿ ಅವರು ಪಡೆದುಕೊಂಡ ಸ್ಥಾನ ಅದ್ವಿತೀಯವಾದುದು. ಈ ಕಾರಣ ಕ್ಕಾಗಿಯೇ ಮತ್ತೆ ಮತ್ತೆ ತತ್ವಶಾಸ್ತ್ರಗಳಲ್ಲಿ ಇವರ ಸಾಧನೆಗಳನ್ನು ಎತ್ತಿ ಹಿಡಿಯುತ್ತಿದ್ದೇವೆ. ಮತ್ತೊಂದು ಕಾರಣವೇನೆಂದರೆ ಗ್ರೀಕ್ ತತ್ವಶಾಸ್ತ್ರದ ಹಲವು ಪ್ರಕಾರದ ಮೂಲಗಳು, ನಂತರದ ಪ್ರಾಪಂಚಿಕ ದೃಷ್ಟಿಕೋನಗಳ ಮಾದರಿಗಳನ್ನು ಹೋಲುತ್ತವೆ.

ಐನ್‌ಸ್ಟೈನ್ ಸಹ ಗ್ರೀಕರ ಕೊಡುಗೆಗಳನ್ನು ಮೆಚ್ಚಿಕೊಳ್ಳುತ್ತಾನೆ. ಅವನ ಪ್ರಕಾರ ಪಾಶ್ಚಾತ್ಯ ನಾಗರಿಕತೆಗೆ ಗ್ರೀಕರ ಶಾಶ್ವತ ಕೊಡುಗೆ ಎಂದರೆ ವೈಚಾರಿಕತೆಯ ಮೂಲಕ ಪ್ರಕೃತಿ ಮತ್ತು ಮನುಷ್ಯನನ್ನು ಮಣಿಸಬಹುದು ಎನ್ನುವುದು. ಗ್ರೀಕ್ ಪೂರ್ವ ಪ್ರಪಂಚದಲ್ಲಿ ಮುಂದುವರಿದ ಜನರು ತಾಳ್ಮೆಯ ಅವಲೋಕನದಿಂದಲೇ ಪ್ರಕೃತಿಯ ಹಲವಾರು ರಹಸ್ಯಗಳನ್ನು ಹೆಕ್ಕಿ ತೆಗೆದು, ಅವುಗಳನ್ನು ಲಾಭದಾಯಕ ಕಾರಣಗಳಿಗಾಗಿ ಬಳಸಿಕೊಳ್ಳುವುದರ ಮೂಲಕ ಬದುಕಲು ಕಲಿತರು. ಆದರೆ ಇಂತಹ ಪ್ರಾಯೋಗಿಕ ಜ್ಞಾನವು ಪೈಶಾಚಿಕ ಮತ್ತು ದಂತಕಥೆಗಳು, ಭಯಗಳು ಮತ್ತು ನಿರೀಕ್ಷೆಗಳು, ಶಿಕ್ಷೆಗಳು ಮತ್ತು ಬಹುಮಾನಗಳು ಇಂತಹವುಗಳ ನಿಕಟ ಸಂಬಂಧಗಳಿಂದ ಮುಕ್ತವಾಗಿರಲಿಲ್ಲ. ಈ ಗ್ರೀಕ್ ಪೂರ್ವದ ಪ್ರಕೃತಿಯ ಜ್ಞಾನ, ಭೌತಿಕ ಸಂಗತಿಗಳು ಸಾಮಾನ್ಯವಾದುವೂ ಸಾರ್ವತ್ರಿಕವೂ ನಿರೀಕ್ಷಿತವೂ ಆಗಿರುವ ಬದಲು ಅವಶ್ಯವಾಗಿ ವಿಶಿಷ್ಟವೂ ಅನನ್ಯವೂ ಅಸಂಖ್ಯವೂ ಆಗಿದ್ದಿತು. ಅಜೈವಿಕ ಸಂಗತಿಗಳ ಪುನರಾವರ್ತನೆ ಹೊಂದುವ ಕ್ರಮಗಳ ಬಗ್ಗೆ ಯೋಚಿಸಿದವರಲ್ಲಿ ಗ್ರೀಕರೇ ಮೊದಲಿಗರಲ್ಲ; ಆದರೆ ಅವಲೋಕನ ಹಾಗೂ ಅರಿವಿನ ಆಚೆಗೆ ಹೋಗಿ ಒಂದು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿದವರಲ್ಲಿ ಮೊದಲಿಗರು. ಪ್ರಪಂಚಕ್ಕೆ ದೊರಕಿದ ಈ ಹೊಸ ವಿಧಾನವು ಪಾಶ್ಚಾತ್ಯ ಬದುಕಿನ ವಿಭಿನ್ನ ಮೂಲಾಂಶಗಳಲ್ಲಿ ಒಂದಾಗಿದೆ. ಮಾನವ ಸಂಬಂಧಗಳಲ್ಲಿಯೂ ಸಹ ಗ್ರೀಕರ ಹೊಸತನ ಹಾಗೂ ಶೋಧಕ ಮನೋಭಾವಗಳು ಯಾವುದೋ ಒಂದು ನಿರ್ದಿಷ್ಟ ರಾಜಕೀಯ ಶಾಸ್ತ್ರದ ರಾಜಕೀಯದ ವೈಜ್ಞಾನಿಕ ಅಧ್ಯಯನವನ್ನು ಕಂಡು ಹಿಡಿದುದೇ ಆಗಿದೆ.

ಗ್ರೀಕರ ರಾಜಕೀಯ ಚಿಂತನೆಯನ್ನು ಸರಿಯಾಗಿ ವಿಶ್ಲೇಷಣೆ ಮಾಡಿದ ಯಾರಾದರೂ ಈ ಕೆಳಗೆ ತಿಳಿಸಿದ ವಿಶಿಷ್ಟವಾದ ಲಕ್ಷಣಗಳನ್ನು ಗಮನಿಸಬಹುದು.

ಅ. ವಿಚಾರದಿಂದ ಮನುಷ್ಯ ಹಾಗೂ ಪ್ರಕೃತಿಯನ್ನು ಮಣಿಸಬಹುದು ಎಂಬುದು ಗ್ರೀಕ್ ರಾಜಕೀಯ ಚಿಂತನೆಯ ಒಂದು ಅವಿನಾಶಿ ಲಕ್ಷಣ.

ಆ. ವಿಶ್ವವನ್ನು ನಿಯಂತ್ರಿಸುವ ಪ್ರಾಥಮಿಕ ತತ್ವಗಳು ಅಥವಾ ಪ್ರಮುಖ ನಿಯಮಗಳ ಬಗೆಗಿನ ಆಸಕ್ತಿಯೇ ಗ್ರೀಕ್ ಚಿಂತನೆಯ ಮತ್ತೊಂದು ಲಕ್ಷಣ. ತಾನು ಪರ್ಷಿಯಾದ ರಾಜನಾಗುವುದಕ್ಕಿಂತಲೂ ಒಂದು ಸಾಮಾನ್ಯ ನಿಯಮವನ್ನು ಕಂಡುಹಿಡಿಯುವುದರಲ್ಲೇ ತನ್ನ ಆದ್ಯತೆ ಇದೆ ಎಂದು ತತ್ವಜ್ಞಾನಿ ಘೋಷಿಸಿದ್ದ. ವಿಶ್ವವು ಒಂದು ಸೃಜನಾತ್ಮಕ ವಿಚಾರದಿಂದ ಉತ್ಪನ್ನವಾದುದು ಎಂಬುದು ಗ್ರೀಕರ ಕಲ್ಪನೆ. ವಿಶ್ವವನ್ನು ತಿಳಿಯ ಬೇಕಾದರೆ ಅದರ ನಿಯಂತ್ರಣ ತತ್ವಗಳನ್ನು ಹುಡುಕಬೇಕು ಎಂಬುದು ಅವರ ವಿಶ್ವಾಸ ವಾಗಿದ್ದಿತು. ಇಂತಹ ವಿವೇಚನೆಯಿಂದ ಕಾರ್ಯಕಾರಣ ಸಂಬಂಧಗಳನ್ನು ಹುಡುಕಲು ಸಾಧ್ಯವಾಯಿತು.

ಇ. ಈ ಭೂಮಿಯ ಮೇಲೆ ಹಲವು ಸಂಗತಿಗಳು ವಿಧಿನಿಯಮಗಳಿಂದ ನಿರ್ಧರಿತವಾಗಿದೆ ಹಾಗೂ ಆ ಕಾರಣಕ್ಕಾಗಿ ಅದು ಮನುಷ್ಯನ ನಿಯಂತ್ರಣವನ್ನು ಮೀರಿದೆ ಎಂಬುದು ಗ್ರೀಕರ ಬಲವಾದ ನಂಬುಗೆಯಾಗಿತ್ತು. ಈ ಧರ್ಮನಿಷ್ಟ ಹಿನ್ನೆಲೆಯಿಂದಾಗಿ ಗ್ರೀಕರು ಹೆಚ್ಚಾಗಿ ಅಂಜುತ್ತಿರಲಿಲ್ಲ. ಹಾಗಾಗಿ ಅವರು ಮಾನವನು ಕಾಣದ ಶಕ್ತಿಗಳ ಕೈವಾಡವಿದ್ದಾಗಲೂ ಸಮಾಜವನ್ನು ತಾನೇ ರೂಪಿಸಿಕೊಳ್ಳಲು ಹೊಂದಿರುವ ಸಾಮರ್ಥ್ಯದ ಬಗ್ಗೆ ಅತ್ಯಂತ ಆಸಕ್ತಿ ವಹಿಸಿದ್ದರು.

ಈ. ಸಮಾಜದಲ್ಲಿದ್ದ ಸ್ವಾತಂತ್ರ್ಯದಿಂದಾಗಿ ಯಾವುದೇ ರೀತಿಯ ನಿರ್ಬಂಧಗಳಿಲ್ಲದೆ ಗ್ರೀಕರಿಗೆ ಬೌದ್ದಿಕವಾಗಿ ಚಿಂತಿಸಲು, ಪರಿಶೀಲಿಸಲು ಅವಕಾಶವಿದ್ದಿತು. ಕ್ಯಾಟಲಿನ್ ಹೇಳುವಂತೆ ಗ್ರೀಕರು ಪ್ರಜಾಪ್ರಭುತ್ವ, ಬರವಣಿಗೆ ಹಾಗೂ ಚಿಂತನೆಯ ಸ್ವಾತಂತ್ರ್ಯ, ಸ್ತ್ರೀವಾದ, ಗರ್ಭಪಾತ, ವಿರಾಮದ ಸಮಸ್ಯೆಗಳಂತಹ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚಿಸುತ್ತಿದ್ದರು.

ಉ. ಗ್ರೀಕರ ಅಭಿಪ್ರಾಯದಲ್ಲಿ ಮಾನವರು ಪ್ರಕೃತಿ ಮತ್ತು ಸಕಾರಣಗಳಿಗನುಗುಣವಾಗಿ ಬದುಕಬೇಕು. ಮಾನವರಿಗೆ ವಿಚಾರಶಕ್ತಿ ಇರುವುದರಿಂಧ ಅವರ ಸೌಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಅವರ ಕರ್ತವ್ಯವಾಗಿದೆ. ಅವರು ಬದುಕುವುದಷ್ಟೇ ಅಲ್ಲ, ಚೆನ್ನಾಗಿ ಬದುಕಬೇಕು ಎನ್ನುವ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಈ ಗುರಿ ಸಾಧನೆಗೆ ಸಾಮಾಜಿಕ ಮತ್ತು ರಾಜಕೀಯ ಬದುಕು ಅತ್ಯಗತ್ಯ. ಮಾನವನಂತೆಯೇ ರಾಜ್ಯವೂ ಸಹ ಪ್ರಕೃತಿಯ ಒಂದು ಕೊಡುಗೆಯಾಗಿದೆ ಎಂಬುದು ಅವರ ಅಭಿಪ್ರಾಯ. ಆದ್ದರಿಂದ ಮಾನವನು ಸ್ವಾಭಾವಿಕವಾಗಿ ಒಂದು ಸಾಮಾಜಿಕ ಮತ್ತು ರಾಜಕೀಯ ಪ್ರಾಣಿಯಾಗಿದ್ದಾನೆ.

ಊ. ಗ್ರೀಕರ ಕಲ್ಪನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ರಾಜ್ಯದ ಒಂದು ಅವಿಭಾಜ್ಯ ಅಂಗವಾಗಿರುವುದರಿಂದ ಪ್ರತಿಯೊಬ್ಬ ನಾಗರಿಕನೂ ಸಕ್ರಿಯವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳಲೇಬೇಕು.

ಋ. ರಾಜ್ಯದ ಮೂಲಕವೇ ಮಾನವನು ಅತ್ಯುಚ್ಛ ಗುರಿಗಳನ್ನು ಸಾಧಿಸಲು ಸಾಧ್ಯವಾಗು ವುದರಿಂದ, ರಾಜ್ಯವು ಕೈಗೊಳ್ಳುವ ಎಲ್ಲಾ ಚಟುವಟಿಕೆಗಳಲ್ಲೂ ತಾರ್ಕಿಕ ಮಿತಿಗಳನ್ನು ಹಾಕಲಾಗದು. ಅವರು ರಾಜ್ಯ ಮತ್ತು ರಾಜ್ಯಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಿ, ರಾಜ್ಯ ಮತ್ತು ರಾಜ್ಯನೀತಿಯನ್ನು ಅಧ್ಯಯನ ಮಾಡಿದ್ದರಿಂದ ರಾಜ್ಯಶಾಸ್ತ್ರವನ್ನು ಅವರು ಶ್ರೇಷ್ಠ ವಿಜ್ಞಾನವೆಂದು ಪರಿಗಣಿಸುತ್ತಿದ್ದರು.

ಗ್ರೀಕ್ ಚಿಂತನೆಯ ಪರಂಪರೆ ಎಂದರೆ ನಾವು ಅರ್ಥಮಾಡಿಕೊಳ್ಳುವುದು ಅವರಲ್ಲಿ ಸಾಕ್ರೆಟೀಸ್, ಪ್ಲೇಟೋ, ಅರಿಸ್ಟಾಟಲ್ ನಂತಹ ತತ್ವಜ್ಞಾನಿಗಳು ಚಿಂತಕರು ಇರುತ್ತಾರೆ ಎಂದು. ಆದರೆ ವಾಸ್ತವವಾಗಿ ಗ್ರೀಸ್‌ನಲ್ಲಿ ಸಾಕ್ರೆಟಿಸ್, ಅರಿಸ್ಟಾಟಲ್‌ರ ಹಿಂದೆಯೇ ಬಹಳಷ್ಟು ಜನ ತತ್ವಜ್ಞಾನಿಗಳಿದ್ದರು. ಅವರು ಸಪ್ತ ಋಷಿಗಳು, ಪೈಥಾಗೊರಸ್ ಮತ್ತು ಅವನ ಪಂಥದವರು, ಹಿರಾಕ್ಲಟಸ್, ಡೆಮಾಕ್ರಟೀಸ್ ಹಾಗೂ ಸೋಪೋವಾದಿಗಳು. ಆದರೆ ಈ ಲೇಖನದಲ್ಲಿ ಸಾಕ್ರೆಟಿಸ್, ಅರಿಸ್ಟಾಟಲ್, ಸೋಪೋಕ್ಲಿಸ್‌ರ ಕೊಡುಗೆಗಳನ್ನು ಮಾತ್ರ ಗಮನಿಸುತ್ತೇವೆ. ಏಕೆಂದರೆ ಅವರ ಅದ್ಭುತ ಪ್ರಭಾವವು ಪಶ್ಚಿಮದಲ್ಲಿ ನಂತರದ ತತ್ವಜ್ಞಾನಿಗಳ ಮೇಲೂ, ನಂತರ ಆ ಸಮಾಜದ ಮೇಲೂ ಬೀರಿತ್ತು.

ಸಾಕ್ರೆಟೀಸ್‌ನು(೪೬೯-೩೯೯ ಕ್ರಿ.ಪೂ) ಮನುಕುಲದ ಬೌದ್ದಿಕ ಚರಿತ್ರೆಯಲ್ಲಿ ಅತ್ಯಂತ ಗಮನಾರ್ಹ ವ್ಯಕ್ತಿಗಳಲ್ಲೊಬ್ಬ. ಸುಮಾರು ಎರಡೂವರೆ ಸಾವಿರ ವರ್ಷಗಳ ಅವಧಿಗೂ ಮೀರಿ ಆತನ ಕೀರ್ತಿ ಹರಡಿತ್ತು ಹಾಗೂ ವ್ಯಕ್ತಿತ್ವವು ನಿಗೂಢವಾಗಿತ್ತು. ಸಾಕ್ರೆಟೀಸ್‌ನು ‘‘ಗ್ರೀಕ್ ತತ್ವಶಾಸ್ತ್ರದ ಜನಕ’’ ಮತ್ತು ‘‘ವಿವೇಕಿ’’ ಎಂದು ಯುವ ಮಾರ್ಕ್ಸ್ ತನ್ನ ‘‘ಡೆಮಕ್ರೀಟ್ ಮತ್ತು ಮಕ್ಸೂರ್‌ಸ್‌ರ ಪ್ರಕೃತಿಯ ತತ್ವಶಾಸ್ತ್ರಗಳಲ್ಲಿಯ ಭಿನ್ನತೆ’’ ಎಂಬ ಪ್ರಬಂಧದಲ್ಲಿ ಹೀಗೆ ಬಣ್ಣಿಸುತ್ತಾ ಬರೆಯುತ್ತಾನೆ.

ಹಿಂದಿನ ತತ್ವಶಾಸ್ತ್ರಕಾರರಂತೆಯೇ ಆತನೊಬ್ಬ ಗಟ್ಟಿಯಾದ ವ್ಯಕ್ತಿ. ಆದರೆ ಆತ್ಮನಿಷ್ಠೆಯ ವಿಷಯದಲ್ಲಿ ಆತನು ತನ್ನೊಳಗೇ ಆವರಿಸಿಕೊಳ್ಳದೆ ದೇವತೆಗಳ ಪ್ರತಿರೂಪದಂತಿರದೆ, ಮಾನವ ರೂಪಿಯಾಗಿ, ನಿಗೂಢತೆ ಇಲ್ಲದೆ ಸ್ಪಷ್ಟ ಮತ್ತು ಕಾಂತಿಯುತವಾಗಿ, ಕಾವ್ಯಜ್ಞಾನಿಯಂತಲ್ಲದೆ ಸ್ನೇಹಪರ ಮಾನವನಾಗಿ ಬಾಳಿದ್ದನು.

‘‘ಸಾಕ್ರೆಟೀಸ್‌ನು ಪಶ್ಚಿಮದ ರಾಜಕೀಯ ತತ್ವಶಾಸ್ತ್ರದ ಪಿತಾಮಹನಂತೆಯೂ ಹಾಗೂ ವೈಚಾರಿಕ ನೀತಿಶಾಸ್ತ್ರದ ಜನಕದಂತೆಯೂ ಇದ್ದನೆಂದು’’ ಜಾರ್ಜ್ ಕಾಟ್ಲಿಸ್‌ನು ಪರಿಗಣಿಸುತ್ತಾನೆ. ‘‘ನಾನೇನು ಅರಿತಿಲ್ಲವೆಂಬುದೇ ನಾನು ಅರಿತಿರುವ ಸಂಗತಿ’’ ಎನ್ನುವುದು ಆತನ ತತ್ವಶಾಸ್ತ್ರದ ಮೊದಲ ಅಂಶ. ತನ್ನದೇ ಆದ ವಿಶಿಷ್ಟ ರೀತಿಯ ಪಾಟೀ ಸವಾಲಿನ ಪದ್ಧತಿಯ ಮೂಲಕ ಬೇರೆಯವರು ಎಷ್ಟು ಅಜ್ಞಾನಿಗಳು ಎಂದು ಅವರಿಗೆ ತೋರಿಸುವುದು ತನ್ನ ಕರ್ತವ್ಯವೆಂದು ಬಗೆದಿದ್ದನು. ಸಂದೇಹವಾದಿ ಮತ್ತು ವಿಚಿಕಿತ್ಸಕ ಮನೋಭಾವವನ್ನು ಹೊಂದಿದ್ದು, ಯಾವುದನ್ನೂ ನಂಬುಗೆಯಿಂದ ಅಂಗೀಕರಿಸುವುದಕ್ಕೆ ಬದಲಾಗಿ ಎಲ್ಲವೂ ವಿಚಾರ ಪೂರ್ವಕವಾಗಿ ತಂತಾನೇ ಪಡೆದುಕೊಳ್ಳುತ್ತವೆ-ಎಂದು ತತ್ವಜ್ಞಾನಿಗೆ ಯಾವಾಗಲೂ ಇರಬೇಕಾದ ಈ ಅಂಶದ ಪ್ರತಿನಿಧಿಯಂತಿದ್ದನು. ಆತನ ಪ್ರಕಾರ ತತ್ವಜ್ಞಾನವು ಸಂದೇಹ ಪಡುವುದನ್ನು ಕಲಿಯುವುದರ ಮೂಲಕ ಅದರಲ್ಲೂ ತಾವು ಬೆಳಸಿಕೊಂಡ ನಂಬುಗೆಗಳು, ಸೂತ್ರಗಳು, ತತ್ವಗಳ ಬಗ್ಗೆ ಸಂದೇಹ ಪಡುವುದರ ಮೂಲಕ ಪ್ರಾರಂಭವಾಗುತ್ತದೆ. ಬೆಳಸಿಕೊಂಡ ನಂಬುಗೆಗಳು ಹೇಗೆ ಖಚಿತತೆ  ಪಡೆದುಕೊಳ್ಳುತ್ತವೆಯೋ ಯಾರಿಗೆ ಗೊತ್ತು? ಮತ್ತು ಅದು ಚಿಂತನೆಯ ದಿರಿಸಿನಲ್ಲಿ ಅಡಗಿದ ನಮ್ಮ ಗುಪ್ತ ಆಸೆಯೇನೋ? ಮನಸ್ಸು ಹಿಂತಿರುಗಿ ತನ್ನನ್ನು ತಾನೇ ಶೋಧಿಸಿಕೊಳ್ಳುವವರೆಗೂ ಅದು ನಿಜವಾದ ತತ್ವಶಾಸ್ತ್ರವಾಗಲಾರದು. ‘ನಿನ್ನನ್ನು ತಿಳಿ’ ಎನ್ನುವುದೇ ಸಾಕ್ರೆಟೀಸ್‌ನ ಅಗ್ರಹವಾಗಿತ್ತು.

ಅರಿಸ್ಟಾಟಲನು ಹೇಳುವಂತೆ ಮಾನವೀಯ ಸಮಸ್ಯೆಗಳಲ್ಲಿ ಸಾಕ್ರೆಟೀಸನಿಗಿರುವ ಆಸಕ್ತಿಗೆ ಆತನು ಅಪೋಲೋನ ಡೆಲ್‌ಫಿಯನ್ ದೇವಾಲಯದ ಮೇಲೆ ಕೆತ್ತಲಾಗಿದ್ದ ‘‘ನಿನ್ನನ್ನು ತಿಳಿ’’ ಎಂಬ ಪ್ರಖ್ಯಾತ ಸೂಕ್ತಿಯನ್ನು ಕಂಡದ್ದೇ ಕಾರಣವಾಗಿದೆ. ಅದು ಸಾಕ್ರೆಟೀಸ್‌ನ ಮೇಲೆ ಎಷ್ಟು ಮಹತ್ವದ ಪರಿಣಾಮವನ್ನು ಬೀರಿತ್ತೆಂದರೆ ಆತನು ಪ್ರಾಕೃತಿಕ ವಿಜ್ಞಾನವನ್ನು ತಿರಸ್ಕರಿಸಿ, ನೈತಿಕ ತತ್ವಶಾಸ್ತ್ರದ ಅಧ್ಯಯನವನ್ನು ಕೈಗೆತ್ತಿಕೊಂಡದ್ದು, ನಂತರ ತನ್ನ ಬದುಕಿನಲ್ಲೇ ಇದೊಂದು ಸ್ಥಿತ್ಯಂತರದ ಗಳಿಗೆ ಎಂದು ಬಗೆದಿದ್ದನು. ಸಾಕ್ರೆಟಿಸ್‌ನು ಆತ್ಮದ ನೈಜ ಶೋಧಕನಾಗಿದ್ದ. ಚಾರ್ವಾಕರ ಬೋಧನೆಗಳಲ್ಲಿ ‘‘ನಿನ್ನನ್ನು ದೃಢಪಡಿಸಿಕೋ’’ ಎನ್ನುವ ಧೋರಣೆಗಳಿದ್ದರೆ, ಸಾಕ್ರೆಟಿಸ್‌ನ ಬದುಕು ಹಾಗೂ ಬರಹಗಳಲ್ಲಿ ‘‘ನಿನ್ನನ್ನು ತಿಳಿ’’ ಎನ್ನುವ ಆದರ್ಶವೇ ತುಂಬಿತ್ತು. ನಿನ್ನ ಮನಸ್ಸನ್ನೇ ತಿಳಿದುಕೋ ಅನ್ನುವುದೇ ಆತನ ವ್ಯಾಖ್ಯಾನವಾಗಿತ್ತು. ಆ ತಾರ್ಕಿಕ ಸ್ಪಷ್ಟತೆಗೆ ಮತ್ತು ಬೌದ್ದಿಕ ಪ್ರಾಮಾಣಿಕತೆಗೆ ಒತ್ತಾಸೆ ನೀಡಲು ಸಾಕ್ರೆಟಿಸ್‌ನು ಇವುಗಳ ಮೇಲೆಯೇ ನೈತಿಕ ಆರೋಗ್ಯ ಹಾಗೂ ರಾಜಕೀಯ ಮುಕ್ತಿಯು ನಿಂತಿದೆ ಎಂಬ ದೃಢ ಸಂಕಲ್ಪದಲ್ಲಿ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದನು. ಇದೇ ರೀತಿಯೇ ಮಾನವರೆಲ್ಲರೂ ಬದುಕಿನ ಕರ್ತವ್ಯಗಳನ್ನು ಶ್ರದ್ಧೆ ಯಿಂದ ವಿಶ್ಲೇಷಣೆ ಮಾಡಿಕೊಂಡು, ತಮ್ಮ ಉದ್ದೇಶಗಳ ಒಂದು ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕೆಂಬುದು ಆತನ ಆಕಾಂಕ್ಷೆಯಾಗಿತ್ತು. ನೈತಿಕ ಆರೋಗ್ಯದ ಇಂತಹ ಬೆಳವಣಿಗೆಯೊಂದಿಗೆ ರಾಜಕೀಯ ಒಗ್ಗೂಡಿಸಿದ್ದು, ಆ ಬೆಸುಗೆಯು ಪ್ಲೇಟೋನ ರಾಜಕೀಯ ಸಿದ್ಧಾಂತಗಳ ಮೇಲೆ ಪ್ರಭಾವ ಬೀರಿವೆ.

ಸಾಕ್ರೆಟಿಸ್‌ನು ತನ್ನ ಇನ್ನೊಂದು ಜನಪ್ರಿಯ ಎರಡು ಅರಿವುಗಳ ಸಿದ್ಧಾಂತ ಅಥವಾ ‘‘ಸದ್ಗುಣವೇ ಅರಿವು’’ ಎನ್ನುವ ಸಿದ್ಧಾಂತದಿಂದಲೂ ಗುರುತಿಸಲ್ಪಡುತ್ತಾನೆ ಮತ್ತು ಪ್ರಖ್ಯಾತನಾಗಿದ್ದಾನೆ. ಇದು ಪ್ಲೇಟೋನ ರಾಜಕೀಯ ಚಿಂತನೆಯಲ್ಲಿ ಒಂದು ಮೈಲಿಗಲ್ಲಾ ಗಿದೆ. ಸಾಕ್ರೆಟಿಸ್‌ನು ಹೇಳುವಂತೆ ಎರಡು ರೀತಿಯ ತಿಳಿವಳಿಕೆಗಳಿವೆ. ಒಂದು ರೀತಿಯದು ಅಭಿಪ್ರಾಯ ಮತ್ತು ನಂಬುಗೆಗಳನ್ನು ಆಧರಿಸಿದ್ದು ಸುವ್ಯಕ್ತವಾಗಿದೆ. ಇನ್ನೊಂದು ನಿಜವಾದ ಅರಿವು. ಈ ನೈಜ ಅರಿವನ್ನಾಧರಿಸಿದ ಸದ್ಗುಣವು ಸುಭದ್ರವಾಗಿದ್ದು, ಅಭಿಪ್ರಾಯವನ್ನಾಧರಿಸಿದ ಸದ್ಗುಣವು ಅಭದ್ರ ಅಥವಾ ಚಂಚಲವಾಗಿದ್ದು ಅದು ಶೀಘ್ರವಾಗಿ ಮರೆತು ಹೋಗ ಬಹುದಂತಹದ್ದು.

ಪ್ರಸ್ತುತದಲ್ಲಿ ಸಾಕ್ರೆಟೀಸನಿಗಿಂತಲೂ ಹೆಚ್ಚಾಗಿ ಆತನ ಶಿಷ್ಯನಾದ ಪ್ಲೇಟೋ ಸ್ಮರಣೆ ಯಲ್ಲಿದ್ದಾನೆ. ಅಥೆನ್ಸಿನ ಒಂದು ಶ್ರೀಮಂತ ಕುಟುಂಬದಲ್ಲಿ ಕ್ರಿ.ಪೂ. ೪೨೭ರಲ್ಲಿ ಜನಿಸಿದ ಪ್ಲೇಟೋ ಕ್ರಿ.ಪೂ.೩೪೬ರವರೆಗೂ ಜೀವಿಸಿದ್ದನು. ಆತನ ಪೂರ್ವನಾಮವು ಅರಿಸ್ಟೋಕ್ಲೆಸ್ ಎಂದಿತ್ತು. ನಂತರ ‘ಪ್ಲೇಟೋ’ ಎಂಬ ಅಡ್ಡ ಹೆಸರು ಬಂದದ್ದು ಆತನ ವಿಸ್ತಾರವಾದ ಭುಜಗಳು ಹಾಗೂ ಹುಬ್ಬುಗಳ ವೈಶಾಲ್ಯದಿಂದ. ಕ್ರಿ.ಪೂ. ೪೦೭ರಲ್ಲಿ ಸಾಕ್ರೆಟಸ್‌ನ ಮಾರ್ಗದರ್ಶನದಲ್ಲಿ ತತ್ವಶಾಸ್ತ್ರವನ್ನು ಕಲಿಯಲು ಆತನ ಬಳಗಕ್ಕೆ ಪ್ಲೇಟೋ ಸೇರಿಕೊಂಡನು. ಸಾಕ್ರೆಟಿಸ್‌ನ ಪ್ರಭಾವದಿಂದ ಆತನು ಒಬ್ಬ ಶ್ರೇಷ್ಟ ಜ್ಞಾನ ಪ್ರೇಮಿಯಾದನು. ಮೊದಲಿ ನಿಂದಲೂ ಆತನು ಅಥೆನ್ಸ್‌ನಲ್ಲಿ ಒಂದು ರಾಜಕೀಯ ವೃತ್ತಿಯನ್ನು ಆಯ್ದುಕೊಳ್ಳಲು ನಿರ್ಧರಿಸಿದ್ದನು. ಆದರೆ ಸಾಕ್ರೆಟಿಸ್‌ನ ಸಾವಿನಿಂದಾಗಿ ತಂತ್ರಜ್ಞಾನವನ್ನು ಅಭ್ಯಾಸ ಮಾಡುವ ಕಸುಬಿಗೆ ಸೇರಿಕೊಂಡನು. ಸಾಕ್ರೆಟಿಸ್‌ನ ದುರಂತ ಸಾವು ಪ್ಲೇಟೋನ ಚಿಂತನೆಯ ಎಲ್ಲಾ ಹಂತದಲ್ಲು ತನ್ನ ಪ್ರಭಾವ ಬೀರಿದೆ. ಅದು ಆತನು ಪ್ರಜಾಪ್ರಭುತ್ವದ ವಿರುದ್ಧ ಎಷ್ಟರ ಮಟ್ಟಿಗೆ ತಿರಸ್ಕಾರ ಬೆಳೆಯುವಂತೆ, ಗುಂಪಿನ ವಿರುದ್ಧ ದ್ವೇಷ ಬೆಳೆಯುವಂತೆ ಮಾಡಿ ತೆಂದರೆ ಆತನ ಶ್ರೀಮಂತ ಮನೆತನ ಮತ್ತು ಬೆಳವಣಿಗೆಗಳೂ ಸಹ ಆತನನ್ನು ಬೆಳೆಸಲಿಲ್ಲ. ಪ್ರಜಾಪ್ರಭುತ್ವವನ್ನು ನಾಶಪಡಿಸಲೇಬೇಕೆಂಬ ಹಾಗೂ ಅದರ ಬದಲಾಗಿ ಅತ್ಯುತ್ಕೃಷ್ಟರ ಮತ್ತು ಜ್ಞಾನಿಗಳ ಸಾಮ್ರಾಜ್ಯ ತರಬೇಕೆಂಬ ದೃಢ ನಿಶ್ಚಯ ಹುಟ್ಟಿತು. ಇಂತಹ ಜ್ಞಾನಿಗಳನ್ನು ಮತ್ತು ಅತ್ಯುತ್ಕೃಷ್ಟರನ್ನು ಕಂಡುಹಿಡಿಯುವ ಮಾರ್ಗೋಪಾಯವನ್ನು ಪತ್ತೆ ಹಚ್ಚಿ, ಅದನ್ನು ಆಳ್ವಿಕೆಗೆ ಸಿದ್ಧಗೊಳಿಸಿ ಹುರಿದುಂಬಿಸುವ ಕಾರ್ಯವೇ ಆತನಿಗೆ ಒಂದು ಮಹತ್ವದ ಸಮಸ್ಯೆಯಾಯಿತು.

ಸಾಕ್ರೆಟಿಸ್‌ನ ಜೀವ ಉಳಿಸಲು ಪ್ಲೇಟೋ ಅತಿ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ, ಅಥೆನ್ಸ್‌ನ ಪ್ರಜಾಪ್ರಭುತ್ವವಾದಿ ನಾಯಕರು ಆತನನ್ನು ಶಂಕೆಯಿಂದ ಗಮನಿಸುತ್ತಿದ್ದರು. ಆತನು ಅಥೆನ್ಸ್‌ನಲ್ಲಿ ಬದುಕುವುದು ದುಸ್ತರವಾಯಿತು. ತನ್ನ ಸ್ನೇಹಿತರ ಸಲಹೆಯಂತೆ ಸಾಕ್ರೆಟಿಸ್ ಕ್ರಿ.ಪೂ.೩೯೯ರಲ್ಲಿ ದೀರ್ಘವಾದ ಪ್ರವಾಸ ಹೊರಟನು. ಈಜಿಪ್ಟ್ , ಸಿಸಿಲಿ, ಇಟಲಿ ಮುಂತಾದ ಹಲವಾರು ದೇಶಗಳ ಪ್ರವಾಸವನ್ನು ಈ ಸಂದರ್ಭದಲ್ಲಿ ಮಾಡಿದನೆಂದು ಹೇಳಲಾಗುತ್ತದೆ. ಪ್ರಯಾಣದ ಸಂದರ್ಭದಲ್ಲಿ ಗಂಗಾನದಿಯ ತೀರ ಪ್ರದೇಶಕ್ಕೆ ಬಂದು ಹಿಂದೂಗಳ ನಿಗೂಢ ಧ್ಯಾನಗಳನ್ನು ಕಲಿತನೆಂದು ಹೇಳಲಾಗಿದ್ದರೂ ಅದಕ್ಕೆ ಯಾವ ಪುರಾವೆಗಳೂ ದೊರೆತಿಲ್ಲ. ಹಲವಾರು ದೇಶಗಳ, ಜನರ ಜ್ಞಾನಸಂಪರ್ಕದಿಂದಾಗಿ ಪ್ರೌಢತ್ವವನ್ನು ಪಡೆದ ೪೦ ವರ್ಷದ ಸಾಕ್ರೆಟಿಸ್ ಕ್ರಿ.ಪೂ.೩೮೭ರಲ್ಲಿ ಅಥೆನ್ಸಿಗೆ ಹಿಂದಿರುಗಿದನು. ಮರಗಳ ನೆರಳಿನಲ್ಲಿ ನಾಲ್ಕು ಗೋಡೆಗಳ ಆಚೆ ತನ್ನ ‘‘ಅಕಾಡಮಿ’’ಯನ್ನು ಕಂಡುಕೊಂಡನು.

ತನ್ನ ಅಗಾಧ ಪಾಂಡಿತ್ಯ ಹಾಗೂ ಅನುಭವಗಳಿಂದ ಪ್ಲೇಟೋ ಬರೆದ ‘‘ದಿ ರಿಪಬ್ಲಿಕ್’’ ಗ್ರಂಥವನ್ನು ಜಗತ್ತಿನಾದ್ಯಂತ ಎಲ್ಲಾ ಕಾಲಕ್ಕೂ ಅತ್ಯಂತ ಶ್ರೇಷ್ಟವಾದ ಪುಸ್ತಕವೆಂದು ಪರಿಗಣಿಸಲಾಗುತ್ತಿದೆ. ‘ರಿಪಬ್ಲಿಕ್’ ಗ್ರಂಥದ ಸಾಹಿತ್ಯಿಕ ರೂಪ ‘ಸಂವಾದ’ ಮಾದರಿಯದಾಗಿದ್ದು, ಇದರಲ್ಲಿ ಸಾಕ್ರೆಟಿಸ್‌ನು ನಿರೂಪಕನೂ ಮತ್ತು ಮುಖ್ಯ ಪಾತ್ರ ಧಾರಿಯೂ ಆಗಿದ್ದಾನೆ. ವಾಸ್ತವವಾಗಿ ಸಂಭಾಷಣೆ ಮುಂದುವರಿಯುತ್ತಾ ಹೋದಂತೆ, ಸಂಭಾಷಣೆಯಲ್ಲಿ ಪಾಲ್ಗೊಂಡ ಇತರರು ಹೆಚ್ಚು, ಹೆಚ್ಚಾಗಿ ಮೌನದಿಂದಲೇ ತಲೆಯಾಡಿಸಿ ಸಮ್ಮತಿ ಸೂಚಿಸುತ್ತಿದ್ದುದರಿಂದ ಅದೊಂದು ಸ್ವಗತ ಭಾಷಣದಂತೆ ಆಗುತ್ತದೆ. ಇದರಿಂದಾಗಿ ಸಾಕ್ರೆಟಿಸ್ ತನ್ನ ವಾದ ಸರಣಿಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತಿದ್ದನು. ಈ ಸಂಭಾಷಣೆಯು ಶ್ರೀಮಂತ ನಿವೃತ್ತ ವ್ಯಾಪಾರಿಯಾದ ಸೆಫಲಸ್ ಎಂಬುವನ ಮನೆಯಲ್ಲಿ ಪ್ರಾರಂಭವಾಗುತ್ತದೆ. ಈ ಸಂಭಾಷಣೆಯಲ್ಲಿ ಸೆಫಲಸ್‌ನ ಮಗ ಪಾಲಿಮೆರಾಕಸ್, ಪ್ಲೇಟೋನ ಇಬ್ಬರು ಹಿರಿಯ ಸೋದರರಾದ ಗ್ಲಾಕನ್ ಮತ್ತು ಅಡಿಮೆಂಟಾಸ್ ಮತ್ತು ಒಬ್ಬ ನಾಸ್ತಿಕ ಭಾಗವಹಿಸುತ್ತಾರೆ.

ಈ ಚರ್ಚೆಯು ಬಹುಬೇಗನೆ ‘ರಿಪಬ್ಲಿಕ್’ನ ಕೇಂದ್ರ ಪ್ರಶ್ನೆಯಾದ ‘ನ್ಯಾಯವೆಂದರೇನು?’ ಎಂಬುದರ ಕಡೆಗೆ ತಿರುಗುತ್ತದೆ. ಅದನ್ನು ಮೊದಲು ಸೆಫಲಿಸ್‌ನು ತನ್ನ ದೀರ್ಘವಾದ ಪ್ರಾಯೋಗಿಕ ಅನುಭವಗಳ ಆಧಾರದ ಮೇಲೆ ಹೀಗೆ ವ್ಯಾಖ್ಯಾನಿಸುತ್ತಾನೆ: ‘‘ನ್ಯಾಯ ಎಂದರೆ ಪ್ರಾಮಾಣಿಕತೆ ಮತ್ತು ದೇವತೆಗಳು ಮತ್ತು ಮಾನವರಿಗೆ ಸಲ್ಲಬೇಕಾದ್ದನ್ನು ಸಲ್ಲಿಸುವುದು.’’ ಪ್ಲೇಟೋ ಇದನ್ನು ಟೀಕಿಸುತ್ತಾನೆ. ಅವನ ಟೀಕೆಗೆ ಹಲವಾರು ಕಾರಣಗಳಿದ್ದವು. ಈ ಸೂತ್ರಕ್ಕೆ ಅಂಟಿಕೊಂಡಿರುವುದು ಔಚಿತ್ಯದ ತತ್ವವನ್ನು ಹಲವೊಮ್ಮೆ ವಿರೋಧಿಸಿದಂತಾಗುತ್ತದೆ ಮತ್ತು ಈ ಸೂತ್ರವನ್ನು ಬದುಕಿನ ದೃಢವಾದ ಸಾರ್ವತ್ರಿಕ ನೀತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಹುಚ್ಚು ಹಿಡಿದ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳನ್ನು ಪ್ರಯೋಗಿಸುವುದು ಉಚಿತವಲ್ಲ. ಪಾಲಿಮೆರಾಕಸ್‌ನು ಮುಂದೆ ‘ನ್ಯಾಯ’ವನ್ನು ‘ತನ್ನ ಸ್ನೇಹಿತರಿಗೆ ನೆರವಾಗುವುದು, ಶತ್ರುಗಳಿಗೆ ತೊಂದರೆ ಕೊಡುವುದು’ ಎಂಬರ್ಥವನ್ನು ಸೂಚಿಸುತ್ತಾನೆ. ಆದರೆ ಪ್ಲೇಟೋ ಈ ವ್ಯಾಖ್ಯಾನವನ್ನು ನಿರಾಕರಿಸುತ್ತಾನೆ. ಏಕೆಂದರೆ ಸ್ನೇಹಿತರಿಗೆ ಒಳಿತನ್ನು, ಶತ್ರುಗಳಿಗೆ ಕೆಡುಕನ್ನು ಮಾಡಬೇಕೆಂದು ಹೇಳುವುದು ಬಹಳ ಸುಲಭ. ಆದರೆ ಸ್ನೇಹಿತರಂತೆ ಕಂಡುಬರುವ ಆದರೆ ಶತ್ರುವಾಗಿರುವವನ ಬಗ್ಗೆ ಹೇಗೆ ತೀರ್ಮಾನಿಸುವುದು. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಶತ್ರುವಿಗೆ ಕೆಡುಕನ್ನು ಉಂಟು ಮಾಡುವುದು ಎನ್ನುವ ವಾದ ನೈತಿಕತೆಯ ಮೂಲಭೂತ ಕಲ್ಪನೆಗೆ ಹೊಂದಿಕೊಳ್ಳುವುದಿಲ್ಲ.

ಈ ಹಂತದಲ್ಲಿ ತ್ರ್ಯಾಸಿಮ್ಯಾಕಸ್‌ನು ಸಂವಾದದಲ್ಲಿ ಭಾಗವಹಿಸುತ್ತಾ, ‘ನ್ಯಾಯ ಎಂದರೆ ಬಲಿಷ್ಟ ಗುಂಪಿನ ಇಚ್ಚೆಗೆ ಅನುಗುಣವಾಗಿ ಇರುವುದು’ ಎಂಬ ಅಭಿಪ್ರಾಯವನ್ನು ಮಂಡಿಸುತ್ತಾನೆ. ಪ್ಲೇಟೋ ಒಂದು ಉದಾಹರಣೆಯ ಮೂಲಕ ಈ ವಾದವನ್ನು ಖಂಡಿಸುತ್ತಾನೆ. ಪ್ಲೇಟೋನ ಸಮಕಾಲೀನನಾದ ಪ್ರಸಿದ್ಧ ಆಟಗಾರನಾದ ಪೌಲಿಡಾಮಸ್‌ನ ಇಚ್ಛೆ ಗೋಮಾಂಸ ತಿನ್ನುವುದಾಗಿತ್ತು. ಹಾಗಾಗಿ ಪೌಲಿಡಾಮಸ್‌ನು ಇತರರ ಬಾಯಿಗೆ ಗೋಮಾಂಸವನ್ನು ತುರುಕುವುದು ನ್ಯಾಯವಾಗುತ್ತದೆ. ನೈತಿಕವಾಗಿ ಇದು ತಪ್ಪು. ಆದ್ದರಿಂದ ಇದನ್ನು ನ್ಯಾಯವೆಂದು ಪರಿಗಣಿಸಲಾಗದು.

ಈ ಸಂದರ್ಭದಲ್ಲಿ ಎಲ್ಲಾ ವ್ಯಾಖ್ಯಾನಗಳನ್ನು ಖಂಡಿಸುತ್ತ, ಟೀಕಿಸುತ್ತಾ ಇದ್ದುದರಿಂದ ಪ್ಲೇಟೋನನ್ನು ಎಲ್ಲರೂ ನ್ಯಾಯವನ್ನು ವ್ಯಾಖ್ಯಾನಿಸಬೇಕೆಂದು ಆಗ್ರಹಪಡಿಸಿದರು. ಪ್ಲೇಟೋನ ಪ್ರಕಾರ ನ್ಯಾಯ ಎಂದರೆ ‘‘ತನ್ನ ಕರ್ತವ್ಯದ ಪರಿಧಿಯೊಳಗೆ ಏಕಾಗ್ರತೆ ಸಾಧಿಸುವ ಕೌಶಲ್ಯ ಮತ್ತು ಇತರರ ಪರಿಧಿಯೊಳಗೆ ಪ್ರವೇಶಿಸದಿರುವುದು.’’ ಪ್ಲೇಟೋನ ನ್ಯಾಯದ ಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆತನು ಮಾನವ ಹಾಗೂ ಸಾಮಾಜಿಕ ರಚನೆಗಳ ನಡುವೆ ಸಾದೃಶ್ಯಗಳನ್ನು ನೀಡುತ್ತಾನೆಂಬುದನ್ನು ಗಮನಿಸಬೇಕು. ಆತನ ಪ್ರಕಾರ ಮಾನವ ಸಂರಚನೆಯಲ್ಲಿ ವಿಚಾರ, ಚೈತನ್ಯ ಮತ್ತು ಆಕಾಂಕ್ಷೆ ಎಂಬ ಮೂರು ಮೂಲ ಧಾತುಗಳಿರುತ್ತವೆ. ಮನಶಾಸ್ತ್ರೀಯವಾಗಿ ಈ ಮೂರು ಗುಣಗಳು ಮೂರು ಪ್ರಮುಖ ಶಕ್ತಿಗಳನ್ನು ಸೂಚಿಸುತ್ತವೆ. ಇದರಲ್ಲಿ ಆಕಾಂಕ್ಷೆ ಅಥವಾ ಪೋಷಕ ಸಾಮರ್ಥ್ಯ ಅವನು ಊಹಿಸುವಂತೆ ವಪೆಯ ಕೆಳಗೆ ಇದ್ದು, ಸ್ಫೂರ್ತಿಯು ಎದೆಯಲ್ಲಿ ನೆಲಸಿದ್ದು, ಅರಿಯುವ ಅಥವಾ ಯೋಚಿಸುವ ವಿವೇಕ ಅಥವಾ ವಿಚಾರವು ತಲೆಯ ಭಾಗದಲ್ಲಿರುತ್ತದೆ. ಈ ಮೂರು ಮೂಲಧಾತುಗಳಿಗೆ ಪೂರಕವಾಗಿ ಮಾನವ ರಚನೆಯಲ್ಲಿ ಮೂರು ವರ್ಗಗಳಿರುತ್ತವೆ. ವಿಚಾರವನ್ನು ಪ್ರತಿನಿಧಿಸುವ ತಾತ್ವಿಕ ಅಥವಾ ಆಳುವ ವರ್ಗ, ಚೈತನ್ಯವನ್ನು ಪ್ರತಿನಿಧಿಸುವ ಸೈನಿಕ ವರ್ಗ ಹಾಗೂ ಅಕಾಂಕ್ಷೆಯನ್ನು ಪ್ರತಿನಿಧಿಸುವ ರೈತರು, ಕುಶಲಕರ್ಮಿಗಳು ಹಾಗೂ ಇತರರು ಇರುತ್ತಾರೆ. ಹೀಗೆ ಮಾನವ ಮತ್ತು ಸಾಮಾಜಿಕ ರಚನೆಗಳನ್ನು ಸೇರಿಸಿ, ಬೆಸೆಯುತ್ತಾ, ಪ್ರತಿಯೊಂದು ಸಾಮಾಜಿಕ ವರ್ಗದಿಂದಲೂ ಕ್ರಿಯಾತ್ಮಕ ವೈಶಿಷ್ಟ್ಯವು ಬದುಕಿನ ಹಂತಗಳಲ್ಲಿ ತನಗೆ ನಿಗದಿತಗೊಳಿಸಲಾದ ಹಂತದಲ್ಲಿ ವೈಶಿಷ್ಟ್ಯವನ್ನು ಕಾಪಾಡಿಕೊಂಡಿರಬೇಕೆಂದು ಬಯಸುತ್ತಾನೆ ಎಂದು ಪ್ಲೇಟೋ ಒತ್ತಿ ಹೇಳುತ್ತಾನೆ. ಹೀಗೆ ಇವರ ಆಧಾರದ ಮೇಲೆ ನ್ಯಾಯವನ್ನು ಪ್ಲೇಟೋ ವ್ಯಾಖ್ಯಾನಿಸುತ್ತಾನೆ.

‘ಗಣರಾಜ್ಯ’ದಲ್ಲಿ ಆದರ್ಶದ ಅಥವಾ ಉತ್ತಮ ರಾಜ್ಯವ್ಯವಸ್ಥೆ ವಿಚಾರ ಸರಣಿಯನ್ನು ಕಟ್ಟುವ ಪ್ರಯತ್ನ ಮಾಡುತ್ತಾನೆ. ಪ್ಲೇಟೋ ದೃಷ್ಟಿಯಲ್ಲಿ ರಾಜ್ಯ ವ್ಯವಸ್ಥೆ ಎನ್ನುವುದು ವ್ಯಕ್ತಿಯ ಒಂದು ವಿಸ್ತೃತ ರೂಪವೇ ಆಗಿದೆ. ಈ ಹಿಂದೆ ವಿವರಿಸಿದಂತೆ ಮಾನವ ರಚನೆಯು ಮೂರು ಮೂಲಧಾತುಗಳನ್ನೊಳಗೊಂಡ ರೀತಿಯಲ್ಲೇ, ರಾಜ್ಯವ್ಯವಸ್ಥೆಯೂ ಇದೆ. ವ್ಯಕ್ತಿಗಳ ಒಳ್ಳೆಯ ಬದುಕೇ ಇಂತಹ ವ್ಯವಸ್ಥೆಯ ಗುರಿಯಾಗಿದೆ. ಪ್ಲೇಟೋನ ಆದರ್ಶ ರಾಜ್ಯವ್ಯವಸ್ಥೆಯು ಮೂರು ಹಿರಿಯ ನಿಯಮಗಳ ಆಧಾರದ ಮೇಲೆ ಕಟ್ಟಲಾಗಿದ್ದು ಅವುಗಳನ್ನು ಅಡಿಪಾಯದ ಕಲ್ಲುಗಳೆಂದೂ ಹೇಳಬಹುದು.

ಅ. ಗಂಡಸರು ಮತ್ತು ಹೆಂಗಸರು ವಿವಿಧ ರೀತಿಯಲ್ಲಿ ವರ್ತಿಸುತ್ತಾರೆ. ಇದನ್ನು ಹೇಗೆ ವಿಂಗಡಿಸುವುದು? ಇದು ವಿದ್ಯಾಭ್ಯಾಸದ ಮೂಲಕ ಮಾತ್ರ ಸಾಧ್ಯವಾಗುತ್ತದೆ.

ಆ. ವೈಚಾರಿಕ ಹಾಗೂ ಚೈತನ್ಯಮಯ ವರ್ಗಗಳಲ್ಲಿ ಖಾಸಗಿ ಕುಟುಂಬ ಮತ್ತು ಆಸ್ತಿಯನ್ನು ರದ್ದುಗೊಳಿಸುವುದು.

ಇ. ತತ್ವಜ್ಞಾನಿ ರಾಜರ ಆಳ್ವಿಕೆ.

ಇಂತಹ ಒಂದು ಆದರ್ಶ ರಾಜ್ಯವ್ಯವಸ್ಥೆಯಲ್ಲಿರುವ ಒಬ್ಬ ಆದರ್ಶ ನಾಗರಿಕನು ಈ ಕೆಳಕಂಡ ಗುಣಗಳನ್ನು ಹೊಂದಿರುತ್ತಾನೆ.

೧. ದೈಹಿಕ ಸೌಂದರ್ಯ

೨. ಬೌದ್ದಿಕ ತೀಕ್ಷ್ಣತೆ

೩. ಜ್ಞಾನದಾಹ ಮತ್ತು ಸಾಮರ್ಥ್ಯ ಹಾಗೂ ಚುರುಕಾದ ಚಾತುರ್ಯ

೪. ಸೌಂದರ್ಯ ಕಾಣ್ಕೆ

೫. ದೋಷದ ಬಗೆಗಿನ ದ್ವೇಷ

೬. ತನ್ನ ಸಹವರ್ತಿಗಳ ಬಗ್ಗೆ ಪ್ರೀತಿ.

ಆದರ್ಶರಾಜ್ಯದ ಮೊದಲ ಸೂತ್ರವಾದ ಶಿಕ್ಷಣವನ್ನು ಮತ್ತೊಮ್ಮೆ ಅವಲೋಕಿಸಿದಾಗ ಪ್ಲೇಟೋ ಅದರ ಅಗತ್ಯ ಮತ್ತು ಮಹತ್ವದ ಕುರಿತು ಹೀಗೆನ್ನುತ್ತಾನೆ.

೧. ದೋಷಯುಕ್ತ ಸಮಾಜವನ್ನು ಪುನರ್‌ರೂಪಿಸುವ ಆಸೆಯನ್ನು ಶಿಕ್ಷಣವು ಜೀವಂತ ವಾಗಿಸುತ್ತದೆ.

೨. ಸಾರ್ವಜನಿಕ ಕರ್ತವ್ಯ ಪಾಲಿಸುವಾಗ ಬೇಕಾಗುವ ತಾದ್ಯಾತ್ಮ್ಯ ಮತ್ತು ಶ್ರೇಷ್ಠತೆಯ ಚೈತನ್ಯವನ್ನು ಶಿಕ್ಷಣವು ಸೃಷ್ಟಿಸುತ್ತದೆ.

೩. ಶಿಕ್ಷಣವು ಮಾನವನಲ್ಲಿ ಶಿಸ್ತಿನ ಜೀವನ, ಬದುಕಿನ ಮೂಲಭೂತ ಅಗತ್ಯಗಳು, ಸತ್ಯದ ಬಗ್ಗೆ ಪ್ರೀತಿ ಇತ್ಯಾದಿಗಳನ್ನು ಧ್ಯಾನಿಸುವ ಜೀವನ ಇತ್ಯಾದಿಗಳನ್ನು ಒದಗಿ ಸುತ್ತದೆ.

೪. ಶಿಕ್ಷಣದ ಮೂಲಕ ರಾಜ್ಯವ್ಯವಸ್ಥೆಯು ಅಪರಾಧಗಳನ್ನು ತಡೆಹಿಡಿದು, ನ್ಯಾಯ ಹಾಗೂ ಔಚಿತ್ಯಪೂರ್ಣ ಕ್ರಿಯೆಗಳನ್ನು ನಿರ್ವಹಿಸಬಹುದು.

೫. ವ್ಯಕ್ತಿಯು ತನ್ನನ್ನು ತಾನು ಅರಿತುಕೊಳ್ಳಲು ಶಿಕ್ಷಣ ಸಹಕಾರಿ.

೬. ವ್ಯಕ್ತಿಯು ಸಮಾಜದಲ್ಲಿ ಸುಸಂಗತವಾಗಿ ಎಲ್ಲರೊಡನೆ ಬೆರೆಯಲು, ಸಮಾಜಕ್ಕೆ ಉಪಕಾರಿಯಾಗಲೂ ಸಹಕಾರಿಯಾಗುತ್ತದೆ.

ಪ್ಲೇಟೋವಿನ ಶಿಕ್ಷಣ ಪದ್ಧತಿಯು ಅತ್ಯಂತ ಕ್ರಮಬದ್ಧವಾಗಿದ್ದು, ಸಮಾಜದ ಎಲ್ಲಾ ವರ್ಗದ ಸ್ತ್ರೀ ಹಾಗೂ ಪುರುಷರಿಗೆ ಮುಕ್ತವಾಗಿದ್ದಿತು. ಶಿಕ್ಷಣವು ಎರಡು ಕ್ರಮದ್ದಾಗಿತ್ತು. ಶಾರೀರಿಕ ಹಾಗೂ ಬೌದ್ದಿಕ. ನಂತರ ಇದನ್ನು ಮತ್ತೆ ಎರಡು ಭಾಗವಾಗಿ ವಿಂಗಡಿಸಬಹುದು.

. ಪ್ರಾಥಮಿಕ ಶಿಕ್ಷಣ

ಪ್ರಾಥಮಿಕ ಶಿಕ್ಷಣವು ೧೦ನೆಯ ವಯಸ್ಸಿನಲ್ಲಿ ಪ್ರಾರಂಭವಾಗಿ, ೧೭ ರಿಂದ ೨೦ ವರ್ಷದವರೆಗೂ ಮುಂದುವರೆಯುತ್ತದೆ. ಶಾರೀರಿಕ ಬೆಳವಣಿಗೆಗಾಗಿ ಶಾರೀರಿಕ ವ್ಯಾಯಾಮ ಮತ್ತು ಅಂಗಸಾಧನೆ ಮುಂತಾದವು ಗಳಿದ್ದವು. ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಆಹಾರ ಮತ್ತು ಅದರ ವಿಧಗಳ ಬಗ್ಗೆಯೂ ಹೇಳಿಕೊಡಲಾಗುತ್ತಿತ್ತು. ಬೌದ್ದಿಕ ಬೆಳವಣಿಗೆಯಲ್ಲಿ ಸಂಗೀತ ಕಲಿಕೆಯು ಅಗತ್ಯ. ಏಕೆಂದರೆ ಇದು ಸಾಂಸ್ಕೃತಿಕ ಬೆಳವಣೆಗೆಗೆ ಸಹಕಾರಿ. ಸಂಗೀತದ ಮೂಲಕ ಮಹಾಕಾವ್ಯಗಳನ್ನು ಓದಲು, ಅರ್ಥೈಸಲು(ಅಭಿನಯ ಮತ್ತು ಸಂಗೀತ)ಸಹಕಾರಿ. ಉದಾತ್ತ ನಾಯಕರ, ವೀರರ ಕುರಿತ ಕಾವ್ಯಗಳನ್ನು, ಸಣ್ಣ ಕಥೆಗಳನ್ನು ಕಲಿಸಬೇಕೆಂಬುದರ ಬಗ್ಗೆ ಬಹಳ ನಿಖರವಾಗಿದ್ದ. ಪ್ಲೇಟೋ ಹೇಡಿಗಳ ಮತ್ತು ಖಳನಾಯಕನನ್ನು ಕುರಿತು ಕಲಿಸಬಾರದು ಎಂದು ಖಡಾಖಂಡಿತವಾಗಿ ವಾದಿಸುತ್ತಿದ್ದ.

. ಉನ್ನತ ಶಿಕ್ಷಣ

೨೦ನೆಯ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಒಂದು ಅರ್ಹತಾ ಪರೀಕ್ಷೆ ಯನ್ನು ನಡೆಸಲಾಗುತ್ತಿತ್ತು. ಅನುತ್ತೀರ್ಣರಾದವರನ್ನು ಆಕಾಂಕ್ಷ ವರ್ಗದ ಸದಸ್ಯರೆಂದು ಪರಿಗಣಿಸಲಾಗುತ್ತಿತ್ತು. ಉನ್ನತ ಶಿಕ್ಷಣವು ೨೦ ರಿಂದ ೩೦ ಮತ್ತು ೩೦ ರಿಂದ ೩೫ ವಯೋಮಿತಿಯ ಎರಡು ವರ್ಗಗಳದ್ದಾಗಿತ್ತು. ೨೦ರಿಂದ ೩೦ರ ವಯೋಮಾನದ ಶಿಕ್ಷಣವು ಕ್ರಮಬದ್ಧವೂ ವೈಜ್ಞಾನಿಕ ರೀತಿಯದೂ ಆಗಿತ್ತು. ಅಲ್ಲಿ ಅಂಕಗಣಿತ, ರೇಖಾಗಣಿತ(ರೇಖಾಗಣಿತವನ್ನು ಸರಳ ಹಾಗೂ ಘನವಾದ ರೇಖಾಗಣಿತವೆಂದು ಎರಡು ಭಾಗವೆಂದು ವಿಭಾಗಿಸಲಾಗಿತ್ತು. ಪ್ಲೇಟೊ ಘನರೇಖಾಗಣಿತಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದ) ಮತ್ತು ಖಗೋಳಶಾಸ್ತ್ರಗಳನ್ನು ಬೋಧಿಸಲಾಗುತ್ತಿತ್ತು.

೩೦ನೆಯ ವಯಸ್ಸಿನಲ್ಲಿ, ಎರಡನೇ ಹಂತದ ಅರ್ಹತಾ ಪರೀಕ್ಷೆಯನ್ನು ನಡೆಸಲಾಗು ತ್ತಿದ್ದು, ಅದರಲ್ಲಿ ಉತ್ತೀರ್ಣರಾದವರಿಗೆ ಮುಂದಿನ ೫ ವರ್ಷಗಳ ಉನ್ನತ ಶಿಕ್ಷಣವನ್ನು ನೀಡಲಾಗುತ್ತಿತ್ತು. ಇಲ್ಲಿ ತತ್ವಶಾಸ್ತ್ರ, ತರ್ಕಶಾಸ್ತ್ರಗಳ ಬಗ್ಗೆ ಕಲಿಸಲಾಗುತ್ತಿತ್ತು. ಜೊತೆಗೆ ಉನ್ನತ ಮಟ್ಟದ ಸೈನಿಕ ತರಬೇತಿಯನ್ನು ನೀಡಲಾಗುತ್ತಿತ್ತು. ಅಂತಿಮವಾಗಿ ೩೫ ರಿಂದ ೫೦ ರವರೆಗಿನ ವಯಸ್ಸಿನವರೆಗೆ ೧೪ ವರ್ಷಗಳ ನಂತರ ಉತ್ತೀರ್ಣರಾದವರನ್ನು ಸರ್ಕಾರ ದಲ್ಲಿ ಸೈನ್ಯದಲ್ಲಿ ಪ್ರತ್ಯಕ್ಷ ಅನುಭವ ನೀಡುವುದರ ಮೂಲಕ ಪರೀಕ್ಷಿಸುತ್ತಿದ್ದರು. ೫೦ನೆಯ ವಯಸ್ಸಿನಲ್ಲಿ ಈ ಪರೀಕ್ಷೆಗಳನ್ನು ಎದುರಿಸಿ ಯಶಗಳಿಸಿದವರು ರಾಜರಾಗಲು ಅರ್ಹರಾಗುತ್ತಿದ್ದರು.

ಆಸ್ತಿ ಹಾಗೂ ಸಾಮೂಹಿಕ ಒಡೆತನ ಆದರ್ಶರಾಜ್ಯದ ಎರಡನೆಯ ಅಂಶ. ಪೋಷಕ ವರ್ಗಗಳಿಗೆ ಆಸ್ತಿ ಹಾಗೂ ಕುಟುಂಬದ ಮೇಲೆ ಸಮತಾವಾದವನ್ನು ಅನ್ವಯಿಸುವಲ್ಲಿ ಪ್ಲೇಟೋಗೆ ಇದ್ದ ಉದ್ದೇಶಗಳೆಂದರೆ:

೧. ಸಮತಾವಾದವು ಆತ್ಮವನ್ನು ಒಂದು ಪ್ರತ್ಯೇಕ ಘಟಕವೆಂದು ಪರಿಗಣಿಸುವ ಹುಸಿಕಲ್ಪನೆಯನ್ನು ನಾಶಗೊಳಿಸಿ, ಸಾಮಾಜಿಕ ಪೂರ್ಣತ್ವದ ಒಂದು ಅವಿಚ್ಛಿನ್ನ ಹಾಗೂ ಉಪಯುಕ್ತ ಅಂಗವೆಂಬ ಪರಿಕಲ್ಪನೆಯನ್ನು ಮೂಡಿಸುತ್ತದೆ.

೨. ನೈಪುಣ್ಯತೆಗೆ ಅವಕಾಶ ಮಾಡಿಕೊಡುವಂತಹ ಮನಸ್ಸು ಮತ್ತು ಆಸಕ್ತಿಗಳು ನಾಶವಾಗುವುದನ್ನು ಇದು ತಪ್ಪಿಸುತ್ತದೆ.

೩. ಕುಟುಂಬದಲ್ಲಿ ಹೆಂಗಸರಿಗೆ ಸ್ವಾತಂತ್ರ್ಯವನ್ನೂ, ವಿಮುಕ್ತಿಯನ್ನೂ ನೀಡುತ್ತದೆ.

ಎರಡು ಸ್ವರೂಪಗಳನ್ನೊಳಗೊಂಡ ಪ್ಲೇಟೋನ ಸಮತಾವಾದವು ವಿಚಾರ ಮತ್ತು ಚೈತನ್ಯಮಯ ವರ್ಗವನ್ನು ಮಾತ್ರ ಬೆಂಬಲಿಸುತ್ತದೆ. ಮೊದಲನೆಯದು ಮನೆ, ಭೂಮಿ ಕಾಣಿಕೆ, ಹಣ ಮತ್ತು ಇಂತಹವುಗಳೆಲ್ಲವನ್ನು ಒಳಗೊಂಡಂತಹ ಸ್ವಂತ ಆಸ್ತಿಯ ರದ್ಧತಿ. ಎರಡನೆಯದು ಕುಟುಂಬ ವ್ಯವಸ್ಥೆಯ ರದ್ಧತಿ. ಇದರಿಂದ ಏಕ ಸಂಗಾತಿವುಳ್ಳ ಶಾಶ್ವತ ಲೈಂಗಿಕ ಸಂಬಂಧಗಳು ರದ್ದಾಗುತ್ತವೆ. ಇದಕ್ಕೆ ಬದಲಾಗಿ ಪ್ರಭುಗಳ ಅಣತಿಯ ಮೇರೆಗೆ ಉತ್ತಮ ಸಂತತಿಯನ್ನು ಪಡೆಯಲು ಒಂದು ನಿಯಮಿತ ಪೋಷಣಾ ವ್ಯವಸ್ಥೆಯನ್ನು ಬೆಳೆಸುವುದು. ಪೋಷಕ ವರ್ಗದ ಸದಸ್ಯರು ಆಕಾಂಕ್ಷ ವರ್ಗವು ನೀಡುವ ಕೊಡುಗೆ ರೂಪದ ಸಂಬಳದ ಮೇಲೇಯೇ ಬದುಕಬೇಕು. ಅವರು ಸಾರ್ವಜನಿಕ ಪಾಳಯದಲ್ಲಿ ಬದುಕಬೇಕು. ಇವುಗಳಿಗೆ ಯಾವಾಗಲೂ ಮುಕ್ತ ಹಾಗೂ ಸಾರ್ವಜನಿಕ ಪ್ರವೇಶ ವಿರುತ್ತದೆ. ಈ ರೀತಿಯಾಗಿ ಪ್ಲೇಟೋವಿನ ಸಮತಾವಾದದ ವ್ಯವಸ್ಥೆಯು ಒಂದು ಹೊಸ ಸಾಮಾಜಿಕ ಶಿಸ್ತನ್ನು ಕಂಡುಕೊಳ್ಳುತ್ತದೆ. ಇದರಲ್ಲಿ ಪೋಷಕ ವರ್ಗವು ತಮ್ಮ ಕುಟುಂಬ ಹಾಗೂ ಆಸ್ತಿಗಳನ್ನು ಒಪ್ಪಿಸಿಕೊಟ್ಟು, ಸಮತಾವಾದಕ್ಕೆ ಅರ್ಪಿಸಿಕೊಳ್ಳುತ್ತಾರೆ.

ಇನ್ನೊಂದು ಅಂಶವೆಂದರೆ ತತ್ವಜ್ಞಾನಿ ದೊರೆಯ ಆಡಳಿತ. ಆಶಕ್ತ, ಸ್ವಾರ್ಥ ರಾಜಕಾರಣಿಗಳ ಆಡಳಿತದಿಂದ ಬೇಸತ್ತಿದ್ದ ಪ್ಲೇಟೋ ಉತ್ತಮ ದಕ್ಷ ಆಡಳಿತಕ್ಕೆ ತತ್ವಜ್ಞಾನಿ ದೊರೆಯೇ ಸರಿ ಎಂದು ಚಿಂತಿಸಿದ್ದ. ‘‘ತತ್ವಜ್ಞಾನಿಯು ರಾಜನಾಗುವುದು ಅಥವಾ ಈ ಪ್ರಪಂಚದ ರಾಜರು ಅಥವಾ ದೊರೆಗಳು ತಾತ್ವಿಕ ಪ್ರೇರಣೆಯನ್ನು ಹೊಂದಿಲ್ಲದಿದ್ದರೆ ನಗರಗಳು ಅವರ ಕೆಡಕುಗಳಿಂದ ಮುಕ್ತವಾಗಲು ಸಾಧ್ಯವಿಲ್ಲ’’ ಎಂದು ಪ್ಲೇಟೋ ಬರೆಯುತ್ತಾನೆ. ಪ್ಲೇಟೋವು ತತ್ವಜ್ಞಾನಿಯೆಂದರೆ ಜ್ಞಾನವನ್ನು ನಿಷ್ಠೆಯಿಂದ ಅರಸುವ ವ್ಯಕ್ತಿಯಲ್ಲ; ಬದಲಾಗಿ ಅದನ್ನು ಪಡೆದನು. ತತ್ವಶಾಸ್ತ್ರದ ಆಡಳಿತವೆಂದರೆ ಪಾಂಡಿತ್ಯದ ಆಡಳಿತ ಅಥವಾ ಪ್ರಜ್ಞೆಯ ಆಡಳಿತ. ತತ್ವಜ್ಞಾನಿಗಳು ದೊರೆಗಳಾಗುವ ಸರ್ಕಾರದ ಸ್ವರೂಪವನ್ನು ನೈಜ ಶಿಷ್ಟ ಪ್ರಭುತ್ವ ಅಥವಾ ಶ್ರೇಷ್ಠತೆಯ ನಿರಂಕುಶ ಪ್ರಭುತ್ವ ಎಂದು ಕರೆಯಬಹುದು. ಅವರು ತಮ್ಮ ವೈಯಕ್ತಿಕ ಸಂತೋಷಗಳನ್ನು ತ್ಯಜಿಸಿ, ಜನರ ಏಳಿಗೆಗಾಗಿ ಸರ್ವಸ್ವವನ್ನೂ ಅರ್ಪಿಸುತ್ತಾರೆ. ಒಬ್ಬ ತತ್ವಜ್ಞಾನಿ ದೊರೆಯ ಬದುಕು ಕ್ರಿಯೆ ಹಾಗೂ ಧ್ಯಾನಗಳಿಂದ ಕೂಡಿರುತ್ತದೆ. ಆತನು ಪ್ರಾಮಾಣಿಕನಾಗಿ, ಶಿಸ್ತುಬದ್ಧನಾಗಿ, ವಿವೇಕವಂತನಾಗಿ, ಅವ್ಯರ್ಥನಾಗಿ, ಶುದ್ಧನಾಗಿದ್ದು ಒಳ್ಳೆಯ ಗುಣಗಳನ್ನು ಪಡೆದಿರುತ್ತಾನೆ.

ಈ ಆದರ್ಶ ರಾಜ್ಯದ ವಾದವು ಬಹುವಾಗಿ ಟೀಕೆಗೊಳಗಾಯಿತು. ಇದಕ್ಕೂ ಮಿಗಿಲಾದ ಸಿರಾಕ್ಯೂಬ್‌ನ ಎರಡನೆಯ ಡೈನೋಶಿಯಸ್‌ನ ಅಧಿಪತ್ಯದಲ್ಲಿ ಸಿಸಿಲಿಯ ದೊರೆಗಳನ್ನು ತತ್ವಜ್ಞಾನಿ ದೊರೆಗಳನ್ನಾಗಿ ತಯಾರು ಮಾಡುವ ಪ್ಲೇಟೋನ ರಾಜಕೀಯ ಪ್ರಯೋಗಗಳು ಸಂಪೂರ್ಣವಾಗಿ ಸೋಲುಂಡವು. ತನ್ನ ‘ಗಣರಾಜ್ಯ’ದಲ್ಲಿನ ಅತಿಯಾದ ಆದರ್ಶದಿಂದ ಉಂಟಾದ ದೋಷಗಳನ್ನು ಮನಗಂಡು, ಆತನು ‘‘ರಾಜಕೀಯ ಮುತ್ಸದ್ದಿ ಹಾಗೂ ನಿಯಮಗಳು’’ ಎಂಬ ಇನ್ನೊಂದು ಮೇರುಕೃತಿಯ ರಚನೆಗೆ ತೊಡಗಿದನು. ಇದರಲ್ಲಿ ಆದರ್ಶ ರಾಜ್ಯದ ಒಂದು ಹೊಸ ವಾದಸರಣಿಯನ್ನು ಮುಂದಿಡಲು ಪರಿಷ್ಕೃತ ಪ್ರಯತ್ನ ನಡೆಸಿದನು. ಈ ವಾದದಲ್ಲಿ ಕೆಳಕಂಡ ವಿಶಿಷ್ಟ ಲಕ್ಷಣಗಳಿವೆ.

ಅ. ಕಾನೂನಿನ ಪ್ರಾಧಾನ್ಯತೆ

ಆ. ರಾಜ್ಯದ ಭೂಪ್ರದೇಶದ ಪರಿಸ್ಥಿತಿ

ಇ. ರಾಜ್ಯದ ಜನಸಂಖ್ಯೆ

ಈ. ಆಸ್ತಿಯ ವ್ಯವಸ್ಥೆ ಹಾಗೂ ರಾಜ್ಯದ ಅರ್ಥಶಾಸ್ತ್ರ

ಉ. ಕುಟುಂಬ ಮತ್ತು ಮದುವೆಯ ಪದ್ಧತಿ

ಊ. ರಾಜ್ಯದ ರಾಜಕೀಯ ವ್ಯವಸ್ಥೆ

ಋ. ಶಿಕ್ಷಣ ವ್ಯವಸ್ಥೆ

ಎ. ಧರ್ಮ

ಮತ್ತೊಬ್ಬ ಮಹತ್ವದ ಗ್ರೀಕ್ ರಾಜಕೀಯ ಚಿಂತನೆಂದರೆ ಅರಿಸ್ಟಾಟಲ್ . ಈತನನ್ನು ರಾಜಕೀಯ ವಿಜ್ಞಾನದ ಜನಕನೆಂದು ಪರಿಗಣಿಸಲಾಗುತ್ತಿದೆ. ಕ್ರಿ.ಪೂ.೩೮೪ರಲ್ಲಿ ಥ್ರಾಸ್ ನಲ್ಲಿರುವ ಕಾಲ್ಸಿಡೈಸ್ ಪರ್ಯಾಯ ದ್ವೀಪದ ಪೂರ್ವತೀರ ಪ್ರದೇಶದಲ್ಲಿ ಇರುವ ಸ್ಲನೀರ ಎಂಬ ಒಂದು ಗ್ರೀಕ್ ಕಾಲೋನಿಯಲ್ಲಿ ಜನಿಸಿದನು. ಶ್ರೇಷ್ಠ ಚಿಂತಕನಾದ ಈತ ಅಲೆಗ್ಸಾಂಡರ್ ಚಕ್ರವರ್ತಿಯ ಗುರುವಾಗಿದ್ದನು. ಪ್ಲೇಟೋನಂತೆ ಅರಿಸ್ಟಾಟಲ್ ಸಹ ‘ಲೈಸಿಯಂ’ ಎನ್ನುವ ಸಂಸ್ಥೆಯೊಂದನ್ನು ಹುಟ್ಟುಹಾಕಿದನು. ಇಲ್ಲಿ ಎಲ್ಲ ಪ್ರಜೆಗಳೂ ಅಭ್ಯಾಸ ಮಾಡುತ್ತಿದ್ದರು ಹಾಗೂ ಕಲಿಯುತ್ತಿದ್ದರು. ‘ರಾಜಕೀಯ’ ಎಂಬುದು ಆತನ ಒಂದು ಉತ್ಕೃಷ್ಟ ರಾಜಕೀಯ ಗ್ರಂಥ. ತನ್ನ ಬಳಿಗೆ ಬಂದವರೆಲ್ಲರಿಗೂ ಆತನು ದಾರಿ ದೀಪವಾಗುತ್ತಿದ್ದನು. ಈ ಗ್ರಂಥವು ಪ್ರಪಂಚದ ರಾಜಕೀಯ ಶಾಸ್ತ್ರಜ್ಞರೆಲ್ಲರಿಗೂ ಪ್ರೇರಣೆ ಯೊದಗಿಸಿದೆ. ‘ಪಾಲಿಟಿಕ್ಸ್’ ಗ್ರಂಥವು ರಾಜಕೀಯ ತತ್ವಶಾಸ್ತ್ರದ ಕ್ರಮಬದ್ಧವಾದ ಅಧ್ಯಯನವಾಗಿರದೆ, ಆಡಳಿತ ಕಲೆಯ ಬಗ್ಗೆ ನಿರೂಪಿಸುವ ಒಂದು ಗ್ರಂಥವಾಗಿದೆ. ಆತನು ಆಯ್ದುಕೊಂಡಿರುವ ಸಾಮಾನ್ಯ ಸೂತ್ರ ವಿಧಾನವು ವಿಶ್ಲೇಷಣಾತ್ಮಕ ವೈಜ್ಞಾನಿಕವೂ ನಿರೀಕ್ಷಣಾತ್ಮಕವೂ ತೌಲನಿಕವೂ ಆಗಿರುವುದಲ್ಲದೆ, ಮೂಲಸಂಕಲ್ಪವಾದಿಯೂ ಆದು ದಾಗಿದೆ. ಮೂಲಸಂಕಲ್ಪವಾದವೆಂದರೆ ವಸ್ತು ವಿಷಯಗಳ ಅಂತಿಮ ಕಾರಣಗಳ ಬಗ್ಗೆ ವಿವರಣೆ ನೀಡುವ ಸಿದ್ಧಾಂತ. ಈ ವಿಧಾನದ ಆಧಾರದ ಮೇಲೆ ಅರಿಸ್ಟಾಟಲನು ಅನೇಕ ರಾಜಕೀಯ ನಿಯಮಗಳನ್ನು ರಚಿಸಿದನು. ಅವುಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ನೀಡಲಾಗಿದೆ.

ತನ್ನ ಗುರುವಾದ ಪ್ಲೇಟೋವಿನ ಪ್ರಭಾವದಿಂದ ಅರಿಸ್ಟಾಟಲನು ಸಹ ಆದರ್ಶ ಅಥವಾ ಉತ್ಕೃಷ್ಟ ರಾಜ್ಯದ ಸಿದ್ಧಾಂತವನ್ನು ರೂಪಿಸಿದ. ಅವನ ಪ್ರಕಾರ ಒಂದು ಉತ್ತಮ ರಾಜ್ಯದಲ್ಲಿ ಈ ಕೆಳಕಂಡ ಅಂಶಗಳು ಇರುವುದು.

೧. ಆದರ್ಶ ಜನಸಂಖ್ಯೆ

೨. ಗಡಿ ಮಿತಿ

೩. ರಾಜ್ಯದ ಪರಿಸ್ಥಿತಿ

೪. ಪ್ರಜೆಗಳ ಸ್ವಭಾವ

೫. ರಾಜ್ಯದ ಭಾಗಗಳು

೬. ಆದರ್ಶ ರಾಜ್ಯದಲ್ಲಿ ಕಾರ್ಯ ಹಂಚಿಕೆ

ಈ ಅಂಶಗಳನ್ನು ವಿವರಿಸುವಾಗ ಅರಿಸ್ಟಾಟಲನು ‘‘ಸುವರ್ಣ ಮಧ್ಯಮ ಸೂತ್ರ’’ವನ್ನು ಅನುಸರಿಸುತ್ತಾನೆಂಬುದನ್ನು ಗಮನಿಸಬೇಕು. ಆದರ್ಶರಾಜ್ಯದಲ್ಲಿ ಒಬ್ಬ ನಾಗರಿಕನು ನ್ಯಾಯಾಂಗದ ವ್ಯವಸ್ಥೆಯಲ್ಲಿ ಹಾಗೂ ಅಂತಹ ಆಡಳಿತದ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾನೆ. ಅರಿಸ್ಟಾಟಲನು ನಾಗರಿಕನಾಗಲು ಒಬ್ಬ ವ್ಯಕ್ತಿಯು ಹೊಂದಿರಬೇಕಾದ ಅರ್ಹತೆಗಳನ್ನು ಖಚಿತವಾಗಿ ಸೂಚಿಸುತ್ತಾನೆ. ಅವೆಂದರೆ:

ಅ. ಆತನು ಆಸ್ತಿವಂತನಾಗಿದ್ದು ಬಿಡುವಿನ ಕಾಲವನ್ನು ಹೊಂದಿರಬೇಕು.

ಆ. ಆತನು ತನ್ನ ಜೀವನೋಪಾಯಕ್ಕಾಗಿ ಇತರರನ್ನು ಅವಲಂಬಿಸಿರಬಾರದು.

ಇ. ಆತನು ಯಾವುದೇ ರೀತಿಯ ಭೌತಿಕ ಮತ್ತು ಆರ್ಥಿಕ ತೊಂದರೆಗಳಿಂದ ಮುಕ್ತ ನಾಗಿರಬೇಕು.

ಈ ರೀತಿಯ ಅರ್ಹತೆಗಳನ್ನು ಗಮನಿಸಿದರೆ, ಯಂತ್ರಕರ್ಮಿಗಳು, ಕಾರ್ಮಿಕರು, ಗುಲಾಮರು, ನಾಗರಿಕರಾಗಲು ಸಾಧ್ಯವಿಲ್ಲವೆಂದು ತೀರ್ಮಾನಿಸಬಹುದು. ಹೆಂಗಸರೂ ಸಹ ನಾಗರಿಕರಾಗಲು ಸಾಧ್ಯವಿಲ್ಲ. ಏಕೆಂದರೆ ಮೊದಲು ಅವರು ಪೋಷಕರನ್ನು, ನಂತರ ಉದ್ಯೋಗದ ಮಾಲಿಕರನ್ನು, ಮದುವೆಯ ನಂತರ ಗಂಡನನ್ನು ಆಧರಿಸಿರುತ್ತಾರೆ.

ಗುಲಾಮಿ ಪದ್ಧತಿಯ ಬಗ್ಗೆ ಹೇಳುವುದಾದರೆ, ಅರಿಸ್ಟಾಟಲನು ಗುಲಾಮರ ಅಗತ್ಯ ವನ್ನು ಪ್ರತಿಪಾದಿಸಿ, ಸಮರ್ಥಿಸುತ್ತಾನೆ. ಆದರೆ ಹಾಗೆ ಬೆಂಬಲಿಸುವಾಗ, ಆರ್ಟಿಕ್ ಗುಲಾಮರನ್ನು ಮಾತ್ರ ಪರಿಗಣಿಸುತ್ತಾನೆಯೇ ಹೊರತು ಏಷ್ಯಾ ಮೈನರ್‌ನ ಗುಲಾಮರನ್ನಲ್ಲ. ಏಕೆಂದರೆ ಅವರನ್ನು ಪ್ರಾಣಿಗಳಂತೆಯೇ ಅಮಾನವೀಯವಾಗಿ ನೋಡಿಕೊಳ್ಳುತ್ತಿತ್ತು. ಆದರೆ ಆರ್ಟಿಕ್‌ನ ಗುಲಾಮರನ್ನು ಮಾನವೀಯವಾಗಿ ಪೋಷಿಸಿಕೊಂಡು, ಅವರನ್ನು ಒಡೆಯರ ಮನೆಗಳಲ್ಲಿ ತಮ್ಮ ಕುಟುಂಬದ ಸದಸ್ಯರಂತೆಯೇ ಪರಿಗಣಿಸುತ್ತಿದ್ದರು.

‘ಪಾಲಿಟಿಕ್ಸ್’ನ ಮೊದಲನೆಯ ಭಾಗದಲ್ಲಿ ಆತನು ಗುಲಾಮಿ ಪದ್ಧತಿಯನ್ನು ವಿವರಿಸುತ್ತಾನೆ. ಆತನು ಹೇಳುವಂತೆ ‘‘ಪ್ರತಿಯೊಂದು ಕಲೆಗೂ ಸರಿಯಾದ ಉಪಕರಣಗಳ ಅಗತ್ಯವಿರುತ್ತದೆ’’. ಅದೇ ರೀತಿ ಮನೆಯನ್ನು ನೋಡಿಕೊಳ್ಳಲು ಸಜೀವ ಹಾಗೂ ನಿರ್ಜೀವವಾದ ಎರಡು ರೀತಿಯ ಆಸ್ತಿಗಳು ಬೇಕಾಗುತ್ತದೆ. ಸಜೀವ ಆಸ್ತಿಯೆಂದರೆ ಪ್ರಾಣಿಗಳು ಹಾಗೂ ಗುಲಾಮರು. ನಿರ್ಜೀವ ಆಸ್ತಿಯೆಂದರೆ ಪೀಠೋಪಕರಣಗಳು, ಪಾತ್ರೆ ಪಗಡಿಗಳು, ಉಪಕರಣಗಳು, ಭೂಮಿ ಇತ್ಯಾದಿಗಳು. ಇವೆರಡೂ ಒಡೆಯನ ಮಾಲಿಕತ್ವ ಹಾಗೂ ನಿಯಂತ್ರಣದಲ್ಲಿರುತ್ತವೆ. ಆದ್ದರಿಂದ ಗುಲಾಮನು ಒಡೆಯನ ಆಸ್ತಿ.

ಅರಿಸ್ಟಾಟಲನು ಗುಲಾಮಿ ಪದ್ಧತಿಯನ್ನು ಪ್ರಕೃತಿಯ ನಿಯಮಗಳಿಗನುಸಾರವಾಗಿ ಸಮರ್ಥನೆ ಮಾಡುತ್ತಾನೆ. ಆತನು ಹೇಳುವ ಹಾಗೆ ಹಲವರು ತಮ್ಮ ಹುಟ್ಟಿನಿಂದಲೇ ಪಾರತಂತ್ರರಾಗಿರುತ್ತಾರೆ. ಮತ್ತೆ ಕೆಲವರು ಆಳುವವರಾಗಿರುತ್ತಾರೆ. ಪ್ರಕೃತಿಯಲ್ಲಿ ಸಾರ್ವತ್ರಿಕವಾಗಿ ಉತ್ತಮ ಮತ್ತು ಅಧಮ, ಮಾನವ ಮತ್ತು ಪ್ರಾಣಿ, ಹೆಣ್ಣು ಮತ್ತು ಗಂಡು, ವಿವೇಕ ಮತ್ತು ಆಕಾಂಕ್ಷೆ ಎನ್ನುವ ವಿಭಿನ್ನತೆ ಇದ್ದೇ ಇರುತ್ತದೆ. ಸಂಗೀತದಲ್ಲಿ ಸಹ ಒಂದು ಪ್ರಭಾವೀ ತಂತು ಇರುತ್ತದೆ. ಅಧಮರನ್ನು ಉತ್ತಮರು ಆಳುವುದರಿಂದ ಇಬ್ಬರಿಗೂ ಲಾಭವಿದೆ.

‘‘ಕ್ರಾಂತಿಗಳ ಸೂತ್ರ’’ ಎನ್ನುವುದು ಅರಿಸ್ಟಾಟಲನ ಮತ್ತೊಂದು ರಾಜಕೀಯ ಸೂತ್ರ. ಆತನು ಹೇಳುವಂತೆ, ಒಬ್ಬ ರಾಜಕೀಯ ಮುತ್ಸದ್ದಿಯ ಪ್ರಮುಖ ಆಡಳಿತ ಕರ್ತವ್ಯವೆಂದರೆ, ಆಂತರಿಕ ಭದ್ರತೆಯನ್ನು ನೀಡುವುದು ಹಾಗೂ ಸರ್ಕಾರದ ವ್ಯವಸ್ಥೆಯು ಹದಗೆಡದಂತೆ ಕಾಪಾಡುವುದು. ಮುತ್ಸದ್ದಿ ಹಾಗೂ ರಾಜಕೀಯ ಪಂಡಿತರು, ರಾಜಕೀಯ ವ್ಯವಸ್ಥೆಯ ವೈದ್ಯರಿದ್ದಂತೆ. ಅವರು ರಾಜಕೀಯ ವ್ಯವಹಾರವನ್ನು ಸರಿಯಾಗಿ ಪರಿಶೀಲಿಸಿ, ಪರಿಹಾರಗಳನ್ನು ಸೂಚಿಸುತ್ತಾರೆ. ಅರಿಸ್ಟಾಟಲನ ಪ್ರಕಾರ ನಾಲ್ಕು ರೀತಿಯ ಕ್ರಾಂತಿಗಳು ಸಂಭವಿಸುತ್ತವೆ.

ಅ. ಸಂವಿಧಾನದಲ್ಲಿ ಬದಲಾವಣೆ ತರುವಂತಹ ಕ್ರಾಂತಿಯು ಮೊದಲನೆಯ ವಿಧಾನ..

ಆ. ಎರಡನೆಯದರಲ್ಲಿ ಬದಲಾವಣೆಯು ಸಂವಿಧಾನದ ಮೇಲೆ ಪರಿಣಾಮ ಬೀರುವಂತ ಹುದಾಗಿರುವುದಿಲ್ಲ. ಆದರೆ ಬೇರೆಯವರು ಆಡಳಿತವನ್ನು ತಮ್ಮ ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಾರೆ.

ಇ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಸಣ್ಣ ಬದಲಾವಣೆಯನ್ನು ತರುವಂತಹುದು ಮೂರನೆಯ ವಿಧಾನ.

ಈ. ಪ್ರಸ್ತುತ ಸಂವಿಧಾನದ ಒಂದು ಅಂಶವನ್ನು ಬದಲಾಯಿಸುವುದು ನಾಲ್ಕನೆಯ ವಿಧಾನ.

ಕ್ರಾಂತಿಯು ಸಂಭವಿಸುವ ಕಾರಣಗಳನ್ನು ವಿಶ್ಲೇಷಿಸುತ್ತಾ ಅರಿಸ್ಟಾಟಲನು ಎರಡು ವಿಭಾಗಗಳನ್ನು, ಗುರುತಿಸುತ್ತಾನೆ.

ಅ. ಸಾಮಾನ್ಯ ಆ. ನಿರ್ದಿಷ್ಟ. ನಿರ್ದಿಷ್ಟ ವಿಭಾಗದಲ್ಲಿ ಇರುವ ಒಂದೇ ಕಾರಣವೆಂದರೆ ಸಮಾನತೆಯ ಅಕಾಂಕ್ಷೆ. ಅಧಮರು ಸಮಾನರಾಗಲು ಕ್ರಾಂತಿ ನಡೆಸಿದರೆ ಸಮಾನರು ಶ್ರೇಷ್ಟರಾಗಲು ಬಯಸುತ್ತಾರೆ. ಈ ನಿರ್ದಿಷ್ಟ ವಿಭಾಗದಲ್ಲಿ ಏಳು ಕಾರಣಗಳಿವೆ.

ಅ. ಉದ್ಧಟತನ ಮತ್ತು ಧನಲಾಭ

ಆ. ಪ್ರೀತಿ ಮತ್ತು ಶ್ರೇಷ್ಠತೆ

ಇ. ಹೆದರಿಕೆ

ಈ. ರಾಜ್ಯದ ಹಲವು ವಿಭಾಗಗಳಲ್ಲಿ ಅಸಮಾನ ಬೆಳವಣಿಗೆ

ಉ. ಚುನಾವಣೆಯ ಒಳಸಂಚುಗಳು

ಊ. ಅವಿಧೇಯ ವ್ಯಕ್ತಿಗಳಿಗೆ ಅಧಿಕಾರ ನೀಡಿಕೆಯಲ್ಲಿ ಬೇಜವಾಬ್ದಾರಿ

ಋ. ತಿರಸ್ಕಾರ

ಸಂಭವಿಸಬಹುದಾದ ಯಾವುದೇ ರೀತಿಯ ಕ್ರಾಂತಿಯನ್ನು ಸಹ ತಡೆಗಟ್ಟಬಹುದು. ಕ್ರಾಂತಿಯ ಸೂತ್ರಗಳಲ್ಲಿ ಪರಿಹಾರಗಳೂ ಅಡಕವಾಗಿವೆ. ಅರಿಸ್ಟಾಟಲನು ಸೂಚಿಸುವ ಪರಿಹಾರಗಳ ಪಟ್ಟಿ ಹೀಗಿದೆ:

ಅ. ಅಂತಹ ಕೆಡಕುಗಳು ಹುಟ್ಟುವಾಗಲೇ ಎಚ್ಚರಿಕೆಯಿಂದ ವ್ಯವಹರಿಸುವುದು ಮೊದಲನೆಯ ಉತ್ತಮ ಪರಿಹಾರ.

ಆ. ಆಳುವ ವರ್ಗಗಳು ಯಾರು ಸರಕಾರದಲ್ಲಿ ಭಾಗವಹಿಸುವುದಿಲ್ಲವೋ ಅಂತಹವನ ಮೇಲೆ ಅವಿಚಾರವೆಸಗಬಾರದು. ಬದಲಾಗಿ ಅವರಲ್ಲಿ ಮಾರ್ಗದರ್ಶಕ ಚೈತನ್ಯವನ್ನು ತುಂಬಬೇಕು.

ಇ. ಆಳುವ ವರ್ಗದ ಸಂಖ್ಯಾಬಲವು ಅತಿ ಹೆಚ್ಚಾದರೆ, ಅಧಿಕಾರದ ಅವಧಿಯನ್ನು ಕಡಿತ ಗೊಳಿಸಿದಾಗ ಅದು ಅನುಕೂಲಕರ ಪರಿಣಾಮವನ್ನು ಬೀರುತ್ತದೆ.

ಈ. ಭಯೋತ್ಪಾದನೆಯನ್ನು ಹುಟ್ಟು ಹಾಕುವುದರ ಮೂಲಕ ದೂರದ ಆತಂಕಗಳನ್ನು ಹತ್ತಿರದಿಂದ ತೋರಿಸುವುದರ ಮೂಲಕ ಜನರ ದೇಶಭಕ್ತಿಯನ್ನು ತಾರಕಸ್ಥಾಯಿಯಲ್ಲಿ ಉಳಿಸಬೇಕು.

ಉ. ಸರ್ಕಾರ ಹಾಗೂ ಅಧಿಕಾರಿಗಳು ಭ್ರಷ್ಟರಾಗುವುದನ್ನು ತಪ್ಪಿಸಬೇಕು.

ಊ. ಸರ್ಕಾರದ ಕಾರ್ಯ ವಿಧಾನದ ಬಗ್ಗೆ ತಿಳುವಳಿಕೆ ನೀಡುವುದು.

ಪ್ರಾಚೀನ ಗ್ರೀಕರು ಪಶ್ಚಿಮದ ರಾಜಕೀಯ ಚಿಂತನೆಗೆ ಒಂದು ಸರಿಯಾದ ಬುನಾದಿ ಯನ್ನು ಹಾಕಿದವರು ಎಂದು ಅಂತಿಮವಾಗಿ ಹೇಳಬಹುದು. ಪ್ಲೇಟೋನ ರಾಜಕೀಯ ಆಲೋಚನೆಗಳನ್ನು ಅತಿ ಆದರ್ಶದ ಅಪ್ರಾಯೋಗಿಕ ಕಲ್ಪನೆಗಳೆಂದು ಟೀಕಿಸಿದರೂ, ಇನ್ನೂ ಬಹಳಷ್ಟು ರಾಜಕೀಯ ಚಿಂತಕರು ಆತನಿಗೆ ಅಭಾರಿಯಾಗಿದ್ದಾರೆ. ಉದಾಹರಣೆಗೆ : ಸಿಸಿರೋನ ಎರಡು ಪ್ರಖ್ಯಾತ ಕೃತಿಗಳಾದ ‘ದಿ ರಿಪಬ್ಲಿಕ್ ಮತ್ತು ದಿ ಲೆಜಿಬಸ್’ ಪ್ಲೇಟೋನ ಗಣರಾಜ್ಯ ಕೃತಿಯನ್ನು ಹೋಲುತ್ತವೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯು ಬಹು ವಿಧವಾಗಿ ಪ್ಲೇಟೋನ ಶಿಕ್ಷಣದ ಸೂತ್ರವನ್ನು ಹೋಲುತ್ತದೆ. ಅದೇ ರೀತಿ ಅರಿಸ್ಟಾಟಲನ ತತ್ವಶಾಸ್ತ್ರವು ಅನೇಕ ರೀತಿಯ ಆಲೋಚನಾ ಸರಣಿಗಳ ಮೇಲೆ ಪ್ರಭಾವ ಬೀರಿದೆ ಯೆಂಬುದನ್ನು ನಾವು ಕಾಣಬಹುದು. ಪ್ರೊ.ಡ್ಯಾನಿಂಗ್ ಹೇಳುವಂತೆ ‘‘ಅತ್ಯಂತ ವಿಭಿನ್ನವಾದ ವ್ಯವಸ್ಥೆಗಳಾದ ವೇದಾಂತದ ಮಧ್ಯಯುಗ, ಮಿಲಿಟರಿ ಆಡಳಿತದ ರೋಂ ಆಗಲಿ, ಭೌತಿಕವಾದಿ ನವೀನಯುಗದ ಸಮಾಜವಾಗಲಿ, ರಾಜಕೀಯ ವ್ಯವಸ್ಥೆಯ ಅವಶ್ಯಕ ಅಂಶಗಳ ಹಾಗೂ ವಿಶದೀಕರಣಗೊಳ್ಳುವ ಕ್ರಿಯೆಗಳು ಹಾಗೂ ಯತಾರ್ಥವಾದ ವಿವರಣೆಗಳಲ್ಲಿ ಅರಿಸ್ಟಾಟಲನ ವಿಶ್ಲೇಷಣ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.’’ ಮಧ್ಯಯುಗದ ರಾಜಕೀಯ ಚಿಂತನೆಯಲ್ಲಿ ರಾಜ್ಯವ್ಯವಸ್ಥೆಯ ಈ ಚರ್ಚಿನ ಬೆಂಬಲಿಗರು ತಮ್ಮ ಸ್ಪೂರ್ತಿಯನ್ನು ಅರಿಸ್ಟಾಟಲನ ಬರಹಗಳಿಂದ ಪಡೆದುಕೊಂಡಿದ್ದರು. ಆಧುನಿಕ ಯುಗದಲ್ಲಿ ಮೆಕವಿಲೆಯು ಅರಿಸ್ಟಾಟಲನ ರಾಜಕೀಯ ಚಿಂತನೆಯಿಂದ ಬಹುವಾಗಿ ಪ್ರಭಾವಿತವಾಗಿದ್ದ ಮತ್ತು ಆತನ ‘‘ರಾಜಕುಮಾರ’’ ಗ್ರಂಥವನ್ನು ಅರಿಸ್ಟಾಟಲನ ಕ್ರಾಂತಿಯ ಸೂತ್ರದ ಮೇಲಿನ ವ್ಯಾಖ್ಯಾನವೆಂದು ಪರಿಗಣಿಸಲಾಗುತ್ತದೆ. ಹೀಗೆ ಪ್ರಾಚೀನ ಗ್ರೀಕ್ ರಾಜಕೀಯ ಚಿಂತಕರ ಬಹಳಷ್ಟು ರಾಜಕೀಯ ಪರಿಕಲ್ಪನೆಗಳು ೨೦ನೆಯ ಶತಮಾನದ ರಾಜಕೀಯ ಚಿಂತನೆಯ ಪ್ರಮುಖ ಅಂಶಗಳಾಗಿವೆ.

 

ಪರಾಮರ್ಶನ ಗ್ರಂಥಗಳು

೧. ಫ್ರೆಡರಿಕ್ ಏಂಗಲ್ಸ್, ೧೯೭೪. ಡೈಲೆಕ್ಟಿಕ್ಸ್ ಆಫ್ ನೇಚರ್, ಮಾಸ್ಕೋ.

೨. ವಿಲ್ ಡ್ಯೂರಾಂಟ್, ೧೯೫೪. ದಿ ಸ್ಟೋರಿ ಆಫ್ ಫಿಲಾಸಫಿ, ಯು.ಎಸ್.ಎ.