ಈ ಚಕ್ರಾಧಿಪತ್ಯದ ರಾಜಕೀಯ ಸಂಸ್ಥೆಗಳು ರಾಯಭಾರಿತ್ವದ ಮೇಲೆ ಆಧಾರಿತವಾಗಿತ್ತು. ವ್ಯವಸ್ಥೆಯು ವಿಸ್ತೃತ ರೂಪದಲ್ಲಿತ್ತು. ಸಾರ್ವತ್ರಿಕ ಮತದಾನದ ನೀತಿಯನ್ನು ಉಳಿಸಿಕೊಳ್ಳ ಲಾಯಿತು. ಶಾಸಕಾಂಗ ಮತ್ತು ಸೆನೆಟ್‌ಗಳಿದ್ದವು. ಗಣತಂತ್ರವಾದಿಗಳ ದಮನ ನೀತಿಯನ್ನು ಈ ಹೊಸ ರಾಜನು ಅಳವಡಿಸಿಕೊಂಡಿದ್ದನು. ರಾಜಕೀಯದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಎಲ್ಲ ಚಟುವಟಿಕೆಗಳನ್ನು ಒಬ್ಬ ನಿರಂಕುಶ ಪ್ರಭುವಾಗಲಿ, ಪ್ರತಿಗಾಮಿಯಾಗಲಿ ಹತ್ತಿಕ್ಕು ತ್ತಾನೆ. ಆದರೆ ನೆಪೋಲಿಯನ್ ಒಬ್ಬ ಪ್ರಗತಿಗಾಮಿ. ಅದೊಂದು ವ್ಯಾಪಾರಿ ವಹಿವಾಟಿನ ಹಾಗೂ ಅದೃಷ್ಟದ ಕಾಲಘಟ್ಟವಾಗಿತ್ತು. ಪ್ಯಾರಿಸ್ ನಗರವು ಆಧುನೀಕರಣಗೊಂಡಿತು.

೧೮೪೫೬ರ ವೇಳೆಗೆ ೩ನೆಯ ನೆಪೋಲಿಯನ್ನನು ತನ್ನ ಅಧಿಕಾರದ ಪರಮೋಚ್ಛ ಸ್ತರದಲ್ಲಿದ್ದನು. ಇತರ ಎಲ್ಲ ಸಾಮ್ರಾಜ್ಯಗಳೂ ಈ ಚಕ್ರಾಧಿಪತ್ಯವನ್ನು ಅಂಗೀಕರಿಸಿದ್ದವು. ಈ ಚಕ್ರವರ್ತಿಯು ಇಂಗ್ಲೆಂಡನ್ನು ಮಿತ್ರಕೂಟವನ್ನಾಗಿಸಿಕೊಂಡು ರಷ್ಯಾದ ವಿರುದ್ಧ ಯುದ್ಧದಲ್ಲಿ ಜಯಶಾಲಿಯಾದನು. ಅವನ ಬೆಂಬಲಕ್ಕೆ ಯೂರೋಪಿನ ಅತ್ಯುತ್ತಮ ಸೇನೆಯೂ ಇದ್ದಿತು. ಈ ಚಕ್ರಾಧಿಪತ್ಯವು ತನ್ನ ಕ್ಷಿತಿಜವನ್ನು ತಲುಪಿಯಾಗಿತ್ತು. ಆತನು ಈ ಸಂದರ್ಭದಲ್ಲಿ ಅಪಾಯಕಾರೀ ಮತ್ತು ಪ್ರದರ್ಶಕ ವಿದೇಶೀ ನೀತಿಯನ್ನು ಅಳವಡಿಸಿಕೊಂಡಿದ್ದನು. ಇದರ ಫಲಿತಾಂಶಗಳು ತೊಡಕುಂಟು ಮಾಡುವಂತಹುದು. ೧೮೫೯ರಲ್ಲಿ ಆತನು ಭಾಗವಹಿಸಿದ ಇಟಾಲಿಯನ್ ಯುದ್ಧದಿಂದ ಗಂಭೀರ ಸ್ವರೂಪದ ತೊಂದರೆಗಳು ಪ್ರಾರಂಭವಾದವು. ೧೮೬೦-೭೦ರ ವರೆಗಿದ್ದ ಎರಡನೆಯ ಚಕ್ರಾಧಿಪತ್ಯವನ್ನು ಅರ್ಥ ಮಾಡಿಕೊಳ್ಳಲು ೩ನೆಯ ನೆಪೋಲಿಯನ್ನನು ಆಧುನಿಕ ಇಟಲಿಯನ್ನು ಕಟ್ಟಲು ಪಟ್ಟ ಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು. ಇದರ ಪರಿಣಾಮಗಳು ಅತ್ಯಂತ ಅನಿರೀಕ್ಷಿತವೂ, ದೂರಗಾಮಿತ್ವವನ್ನು ಹೊಂದಿದ್ದು ವಿನಾಶಕಾರಿಯೂ ಆದುದಾಗಿತ್ತು.

ಇಟಲಿ ಸಾಮ್ರಾಜ್ಯದ ಸ್ಥಾಪನೆ

ಇಟಲಿಯು ಚಿಕ್ಕರಾಜ್ಯಗಳ ನಾಡಾಗಿತ್ತು. ಒಂದು ಸ್ಥಿರ ಸರ್ಕಾರವಿಲ್ಲದ ಇಟಲಿಯು ಆಸ್ಟ್ರಿಯಾದ ದಬ್ಬಾಳಿಕೆಗೆ ಒಳಪಟ್ಟಿತ್ತು. ೧೮೪೮-೪೯ರಲ್ಲಿ ನಡೆದ ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಳು ವಿಫಲಗೊಂಡಿದ್ದವು. ಲಂಬಾರ್ಡಿ ಮತ್ತು ವೆನಿಶಿಯಾದ ಸಾಮ್ರಾಜ್ಯಗಳನ್ನು ಆಸ್ಟ್ರಿಯಾ ಆಳುತ್ತಿತ್ತು. ಸಾರ್ಡೀನಿಯಾದ ದೊರೆ ಮಾತ್ರ ನಿಜವಾಗಿಯೂ ಸ್ವತಂತ್ರ ನೀತಿಯನ್ನು ಅನುಸರಿಸುತ್ತಿದ್ದನು. ರಾಷ್ಟ್ರೀಯತೆಯ ಮತ್ತು ಸ್ವಾತಂತ್ರ್ಯದ ಭಾವನೆಗಳಿಗೆ ಎಲ್ಲಿಯೂ ಮಾನ್ಯತೆ ಸಿಕ್ಕಿರಲಿಲ್ಲ.

ಇಟಾಲಿಯನ್ನರ ಅಂತರಾಳದ ಅಕಾಂಕ್ಷೆಗಳಿಗೆ ಕೊನೆಗೂ ಒಂದು ಸ್ಪಷ್ಟವಾದ, ದಿಟ್ಟವಾದ ಹಾಗೂ ರೋಮಾಂಚಕಾರಿಯಾದ ಧ್ವನಿ ಜೋಸೆಫ್ ಮ್ಯಾಜಿನಿಯಿಂದ ದೊರೆಯಿತು. ಇಟಲಿಯ ರಿಸಾರ್ಜಿಮೆಂಟೋ(ರಾಷ್ಟ್ರೀಯ ಚಳವಳಿ) ಅಥವಾ ಪುನರುತ್ಥಾನದ ಸ್ಫೂರ್ತಿಯ ನೆಲೆ ಮತ್ತು ಶಕ್ತಿಯು ಇವನಾಗಿದ್ದರು. ಆತನ ಎಲ್ಲಾ ಚಟುವಟಿಕೆಗಳು ಸಾಹಿತ್ಯಿಕ ಮತ್ತು ಬದುಕಿನತ್ತ ವಾಲಿದ್ದವು. ತನ್ನ ಕ್ರಾಂತಿಕಾರಿ ಚಟುವಟಿಕೆಗಳಿಗೆ ಆತನು ‘ಕಾರ್ಬೋನಾರಿ’ಗೆ ಸೇರಿದನು. ೧೮೩೧ರಲ್ಲಿ ಮ್ಯಾಜಿನಿಯು ‘‘ಯುವ ಇಟಲಿ’’ಎಂಬ ಸಂಘವನ್ನು ಸ್ಥಾಪಿಸಿ, ಆ ಮೂಲಕ ನವ ಇಟಲಿಯ ನಿರ್ಮಾಣಕ್ಕೆ ಪ್ರಯತ್ನಿಸಿದನು. ಇದೊಂದು ರಹಸ್ಯ, ಗುಪ್ತ ಸಂಘಟನೆಯಾಗಿದ್ದು, ಶೈಕ್ಷಣಿಕವೂ, ಆದರ್ಶವಾದಿಯೂ ಆಗಿದ್ದು, ಮ್ಯಾಜಿನಿಯ ಬೆಂಬಲಕ್ಕಿತ್ತು. ಇಟಲಿಯ ಸ್ವಾತಂತ್ರ್ಯ ಮತ್ತು ಏಕೀಕರಣದ ವಾದವು ಒಂದು ಹೊಸ ಧರ್ಮವೇ ಆಗಿದ್ದು ಎಡಪಂಥೀಯರ ಭಾವನೆಗಳಿಗೆ ಸ್ಪಂದಿಸುವಂತಿತ್ತು. ಸಂಪೂರ್ಣ ತ್ಯಾಗವನ್ನು, ಆದರ್ಶಕ್ಕಾಗಿ ಸಮರ್ಪಣಾ ಮನೋಭಾವವನ್ನು ಹೊಂದಿದ್ದ ಯುವಜನರಿಂದ ಕೂಡಿತ್ತು. ಎಲ್ಲ ರಾಷ್ಟ್ರೀಯ ಚಳವಳಿಗಳು ಅನಾಮಧೇಯ ಜನರಿಂದಲೇ ಪ್ರಾರಂಭವಾಗುತ್ತದೆ. ‘‘ಅವರು ಯಾವುದೇ ಪ್ರಭಾವವೂ ಇಲ್ಲದೆ ಕಾಲ ಮತ್ತು ಕಷ್ಟಗಳ ಪರಿವೆ ಇಲ್ಲದೆ ನಂಬಿಕೆ ಮತ್ತು ಛಲಗಳಿಂದ ಕೂಡಿರುತ್ತಾರೆ’’ ಎಂಬುದು ನಾಯಕನಾದ ಮ್ಯಾಜಿನಿಯ ನಂಬುಗೆಯಾಗಿತ್ತು. ಈ ಸಂಘದ ಕಾರ್ಯಕ್ರಮವು ಅತ್ಯಂತ ಸ್ಪಷ್ಟವೂ ಸಂಪೂರ್ಣವೂ ಆಗಿದ್ದಿತು. ‘‘ಮೊದಲು ಆಸ್ಟ್ರಿಯಾದ ಆಳ್ವಿಕೆಯನ್ನು ಕೊನೆಗಾಣಿಸಬೇಕು. ಇದಕ್ಕಾಗಿ ಯುದ್ಧವನ್ನು ಎಷ್ಟು ತ್ವರಿತವಾಗಿ ಮಾಡ ಬೇಕಾದರೂ ಒಳ್ಳೆಯದು.’’ ಆತನು ಗಣತಂತ್ರವಾದಿ ಚಿಂತನೆಗಳಿಗೆ ಹಾಗೂ ಗಣತಂತ್ರವಾದಿ ಸರ್ಕಾರದ ರಚನೆಗೆ ಬದ್ಧನಾಗಿದ್ದನು. ಒಕ್ಕೂಟಕ್ಕಾಗಿ ಇರುವ ಎಲ್ಲಾ ವಾದಗಳೂ ಐಕ್ಯತೆಗಾಗಿ ಇರುವ ವಾದಗಳೇ ಆಗಿದ್ದವು. ‘‘ಇಟಲಿ ಮತ್ತು ಇಟಲಿಯ ಎಲ್ಲಾ ರಾಜ್ಯಗಳಿಗಾಗಿ ಮಾತ್ರ ದನಿಯೆತ್ತಿರಿ’’ ಎನ್ನುತ್ತಿದ್ದ. ಇವನು ಇಟಲಿಯ ಮುಖ್ಯ ನಿರ್ಮಾಪಕರಲ್ಲಿ ಒಬ್ಬನಾಗಿದ್ದ. ಆದರೆ ಮ್ಯಾಜಿನಿಯ ಇಚ್ಛೆ ಮತ್ತು ಭರವಸೆಗಳ ನಡುವೆಯೂ ಇಟಲಿಯು ಗಣತಂತ್ರವಾಗಲಿಲ್ಲ. ಏಕೆಂದರೆ ಈ ಪರ್ಯಾಯ ದ್ವೀಪದ ವಾಯುವ್ಯ ಭಾಗದಲ್ಲಿ ಒಬ್ಬ ನಿರಂಕುಶ ಪ್ರಭುವು ಆಳುತ್ತಿದ್ದು, ಅಲ್ಲಿ ರಾಜಪ್ರಭುತ್ವವು ಪ್ರಾಮುಖ್ಯತೆ ಪಡೆದಿತ್ತು. ಅತ್ಯಂತ ಪ್ರಾಮಾಣಿಕ ರಾಜನೆಂದು ಹೆಸರು ಗಳಿಸಿದ ವಿಕ್ಟರ್ ಇಮ್ಯಾನುಯಲ್‌ನೇ ಆ ರಾಜ. ಇಮ್ಯಾನುಯಲ್‌ನಿಗೆ ಸರದಾರನಾದ ಕೌಂಟ್-ಡಿ-ಕೆವೂರ್ ಒಬ್ಬ ಮುಖ್ಯಮಂತ್ರಿ ಯಾಗಿದ್ದು, ತನ್ನ ಉದಾರವಾದಿ ಅಭಿಪ್ರಾಯವನ್ನು ಮುಕ್ತವಾಗಿ ಅಭಿವ್ಯಕ್ತಪಡಿಸುವ ವನಾಗಿದ್ದು, ಮುಂದೆ ಚಳವಳಿಯ ನೇತಾರನಾದನು. ಈ ಮಧ್ಯೆ ಅತನು ಇಂಗ್ಲೀಷ್ ಸಂಸದೀಯ ವ್ಯವಸ್ಥೆಯನ್ನು ಮಾದರಿಯಾಗಿಟ್ಟುಕೊಂಡು ತನ್ನ ದೇಶಕ್ಕೆ ಸರಿಹೊಂದುವ ವ್ಯವಸ್ಥೆಯನ್ನು ಹೊರ ದೇಶಕ್ಕೆ ಹೋಗಿ ಅಧ್ಯಯನ ಮಾಡಿದ. ಇಟಲಿ ‘‘ಸ್ವಾತಂತ್ರ್ಯದ ಮೂಲಕವೇ ತನ್ನನ್ನು ನಿರ್ಮಿಸಿಕೊಳ್ಳಬೇಕು’’ ಎಂದು ಅವನು ಅಭಿಪ್ರಾಯಪಟ್ಟನು. ಮೊದಲನೆಯ ಸಂಸತ್ತಿಗೆ ಅವನು ಚುನಾಯಿಸಲ್ಪಟ್ಟು, ೧೮೫೦ರಲ್ಲಿ ಮಂತ್ರಿಮಂಡಲದಲ್ಲಿ ಆಯ್ಕೆಯಾದನು. ೧೮೫೨ರಲ್ಲಿ ಪ್ರಧಾನಿಯಾದನು. ಕೆವೂರನ ಆಲೋಚನೆಗಳು ಮ್ಯಾಜಿನಿಯ ಆಲೋಚನೆಗಿಂತ ವಿಭಿನ್ನವಾಗಿತ್ತು. ಕೆವೂರನ ಆಲೋಚನೆಯು ವ್ಯವಹಾರಿಕವೂ ಇತ್ಯಾತ್ಮಕವೂ ಆಗಿದ್ದು ಮ್ಯಾಜಿನಿಯಂತೆ ಕಾವ್ಯಾತ್ಮಕವೂ ಕಾಲ್ಪನಿಕವಾದದ್ದೂ ಆಗಿರಲಿಲ್ಲ. ಕೆವೂರ್‌ನು ಇಟಲಿಯ ಐಕ್ಯತೆ ಮತ್ತು ಸ್ವಾತಂತ್ರ್ಯವನ್ನು ಬಯಸಿದ್ದನು. ಇತರೆ ದೇಶಭಕ್ತರಂತೆ ಇವನೂ ಕೂಡ ಆಸ್ಟ್ರಿಯನ್ನರನ್ನು ಇಟಲಿಯಿಂದ ಹೊರದೂಡಬೇಕೆಂದು ಬಯಸಿದ್ದನು.

ಇಟಲಿಯ ಸ್ವಾತಂತ್ರ್ಯ ಹಾಗೂ ಐಕ್ಯತೆ ಕಾರ್ಯವನ್ನು ಸಾಧಿಸಲು ಸೆವಾಯ್ ಕುಟುಂಬ ಮತ್ತು ಪೀಡ್‌ಮಾಂಟ್‌ನ ರಾಜಪ್ರಭುತ್ವ ಮಾತ್ರ ನಾಯಕತ್ವ ವಹಿಸಿಕೊಳ್ಳಲು ಸಾಧ್ಯ. ನಿಜವಾದ ರಾಜ್ಯ ವ್ಯವಸ್ಥೆಯೆಂದರೆ ಸಂವಿಧಾನಾತ್ಮಕ ರಾಜಪ್ರಭುತ್ವ ಎಂಬುದು ಕೆವೂರ್‌ನ ನಂಬಿಕೆಯಾಗಿತ್ತು. ಪೀಡ್‌ಮಾಂಟ್‌ನ್ನು ಒಂದು ಮಾದರಿ ರಾಜ್ಯವನ್ನಾಗಿಸಬೇಕು ಎಂಬುದು ಅವನ ಆಶಯವಾಗಿತ್ತು. ಆರ್ಥಿಕ ಸಂಪನ್ಮೂಲಗಳನ್ನು ಅಭಿವೃದ್ದಿಪಡಿಸುವುದು, ಕೃಷಿಯನ್ನು ಆಧುನೀಕರಣಗೊಳಿಸುವುದು ಮತ್ತು ರೈಲು ರಸ್ತೆಯನ್ನು ಕಟ್ಟುವುದಕ್ಕಾಗಿ ಶ್ರಮಿಸಿದನು.

ಪ್ರತಿಯೊಂದು ಆಶಯದ ಮೂಲಕ ಪ್ರತಿಯೊಂದು ಕಾರ್ಯವನ್ನು ನಿರ್ಧರಿಸುವುದು ಮತ್ತು ಆ ಮೂಲಕ ಹೆಚ್ಚಿನ ಶಕ್ತಿಯನ್ನು ಪಡೆಯುವುದು, ಈ ನಾಯಕನ ಬದುಕಿನ ಸತತವಾದ ಮುಂದಾಲೋಚನೆಯ ಮೂಲಭೂತ ಉದ್ದೇಶ. ಇಂತಹ ಗ್ರಹಿಕೆಗೆ ನಿಲುಕದ, ದುಸ್ಸಾಧ್ಯವಾದ ಗುರಿಯತ್ತ ಸಾಗುವಾಗ ಅತಿಯಾದ ಕೌಶಲ್ಯವನ್ನು ತೋರಿಸಿದನು. ಕೆವೂರ್‌ನಿಗೆ ಇಂಗ್ಲೆಂಡ್ ಅಥವಾ ಫ್ರಾನ್ಸಿನ ಬೆಂಬಲದ ಅಗತ್ಯವಿತ್ತು. ಇಡೀ ಯೂರೋಪಿ ನಲ್ಲೇ ಫ್ರಾನ್ಸ್ ದೇಶವು ಅತ್ಯುತ್ತಮ ಸೇನೆಯನ್ನು ಹೊಂದಿತ್ತು. ೨ನೆಯ ನೆಪೋಲಿಯನ್ ಒಬ್ಬ ಮಹತ್ವಾಕಾಂಕ್ಷೆಯ ಮನುಷ್ಯ. ‘ಇಷ್ಟವಿರಲಿ, ಇಲ್ಲದಿರಲಿ ನಮ್ಮ ಭವಿಷ್ಯ ಪ್ರಾನ್ಸಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದನು. ಅವನು ೩ನೆಯ ನೆಪೋಲಿಯನ್ನನ ಜೊತೆಗೆ ಸಮೀಕರಿಸಿಕೊಂಡಿದ್ದನು. ಕ್ರೀಮಿಯನ್ ಯುದ್ಧವು ಒಂದು ಅವಕಾಶವನ್ನು ಒದಗಿಸಿಕೊಟ್ಟಿತು. ೧೮೫೧ರಲ್ಲಿ ಪೀಡ್‌ಮಾಂಟ್ ರಷ್ಯಾದೊಡನೆ ಕಾದಾಡುವುದಕ್ಕೆ ಬದಲಾಗಿ ಅನಿರ್ಬಂಧಿತ ಹಾಗೂ ಅಪಾಯಕಾರಿಯಾದ ಒಪ್ಪಂದವನ್ನು ಫ್ರಾನ್ಸ್ ಹಾಗೂ ಇಂಗ್ಲೆಂಡ್ ಜೊತೆ ಮಾಡಿಕೊಂಡಿತು.

ಮೂರನೆಯ ನೆಪೋಲಿಯನ್ನನು ಕೆವೂರ್‌ನನ್ನು ಪಾಂಬ್ಲಿಯರ್ಸ್‌ಗೆ ಬರಮಾಡಿಕೊಂಡನು. ಇಟಲಿಗೆ ಆಲ್ಫ್ಸ್‌ನಿಂದ ಅಡ್ರಿಯಾಟ್ರಿಕ್‌ವರೆಗೆ ಸ್ವಾತಂತ್ರ್ಯ ಕೊಡಲು ನಿರ್ಧರಿಸಿದನು. ಪೋಪನ ಆಳ್ವಿಕೆಯಿರುವ ರಾಜ್ಯದ ಒಂದು ಭಾಗವಾಗಿ ಪೀಡ್‌ಮಾಂಟ್‌ಗೆ ಲಂಬಾರ್ಡಿ ಮತ್ತು ವೆನಿಶಿಯಾಗಳನ್ನು ನೀಡಬೇಕು. ನಂತರ ಪೋಪನನ್ನು ಅಧ್ಯಕ್ಷನನ್ನಾಗಿಸಿ, ಇಟಲಿಯ ರಾಜ್ಯಗಳ ಒಂದು ಒಕ್ಕೂಟವನ್ನು ರಚಿಸಬೇಕು. ಸವಾಯ್‌ಯನ್ನು ಫ್ರಾನ್ಸ್‌ಗೆ ನೀಡಬೇಕು ಎಂದು ತೀರ್ಮಾನಿಸಲಾಯಿತು.

ನೆಪೋಲಿಯನ್‌ನ ಸಂತತಿಗೆ ಅವಹೇಳನವನ್ನು ಉಂಟು ಮಾಡಿದಂತಹ ೧೮೧೫ರ ಈ ಒಪ್ಪಂದವನ್ನು ೩ನೆಯ ನೆಪೋಲಿಯನ್ ಮುರಿಯಲು ನಿರ್ಧರಿಸಿದನು. ಆ ಮೂಲಕ ಆತನು ಚಕ್ರಾಧಿಪತ್ಯದ ವೈಭವವನ್ನು ಮತ್ತೆ ಪಡೆಯಬಹುದೆಂಬ, ತನ್ನ ಸರಹದ್ದನ್ನು ವಿಸ್ತರಿಸಬಹುದೆಂದು ಆಸೆ ಪಟ್ಟನು.

ಫ್ರಾಂಕೋಸಾರ್ಡೀನಿಯನ್ಆಸ್ಟ್ರಿಯನ್ ಯುದ್ಧ (೧೮೫೯)

೧೮೫೯ರಲ್ಲಿ ಒಂದೆಡೆ ಆಸ್ಟ್ರಿಯಾ ಮತ್ತು ಪೀಡಮಾಂಟ್ ಹಾಗೂ ಇನ್ನೊಂದೆಡೆ ಫ್ರಾನ್ಸ್ ಇವೆರಡರ ನಡುವೆ ಯುದ್ಧವು ಸಂಭವಿಸಿತು. ಫ್ರಾನ್ಸ್, ಮ್ಯಾಜೆಂಟಾ ಮತ್ತು ಸಾಲ್‌ಫಿನೋದ ಮಹಾಯುದ್ಧಗಳಲ್ಲಿ ವಿಜಯಶಾಲಿಯಾಯಿತು. ಲಂಬಾರ್ಡಿಯು ಸಂಪೂರ್ಣವಾಗಿ ಕೈವಶವಾಯಿತು ಮತ್ತು ಮಿಲಾನ್ ನಗರವನ್ನು ವಶಪಡಿಸಿಕೊಳ್ಳಲಾಯಿತು. ವಿಜಯದ ಅಲೆಯ ಮೇಲೆ ಕುಳಿತಿದ್ದ ನೆಪೋಲಿಯನ್ನನು ವಿಲ್ಲಾಫ್ರಾಂಕ್ ಎಂಬಲ್ಲಿ ಆಸ್ಟ್ರಿಯಾದ ಚಕ್ರವರ್ತಿಯ ಜೊತೆ ಮಾತನಾಡಲು ನಿರ್ಧರಿಸಿದನು. ಅಲ್ಲಿ ಒಂದು ಪ್ರಖ್ಯಾತ ಯುದ್ಧವಿರಾಮವನ್ನು ಘೋಷಿಸಲಾಯಿತು. ಲಂಬಾರ್ಡಿಯನ್ನು ಪೀಡ್‌ಮಾಂಟ್‌ಗೆ ವರ್ಗಾಯಿಸಲಾಯಿತು. ವೆನಿಶಿಯಾವು ಆಸ್ಟ್ರಿಯಾದಲ್ಲಿ ಉಳಿಯಬೇಕಾಯಿತು.

ಇಟಾಲಿಯನ್ನರಿಗೆ ಈ ಶಾಂತಿ ಒಪ್ಪಂದವು ತೀವ್ರವಾದ ನಿರಾಸೆಯನ್ನುಂಟು ಮಾಡಿತು. ನೆಪೋಲಿಯನ್ನನ ನಂಬಿಕೆ ದ್ರೋಹಕ್ಕೆ ಕೋಪಗೊಂಡು ಕೆವೂರನು ಕುಪಿತನಾಗಿ ಸಂಯಮ ಕಳೆದುಕೊಂಡು ತನ್ನ ಅಧಿಕಾರವನ್ನು ಕಿತ್ತೆಸೆದನು. ನೆಪೋಲಿಯನ್ನನು ಇಟಲಿಗೋಸ್ಕರ ಅವನು ಅಂದುಕೊಂಡದ್ದನ್ನೆಲ್ಲ ಕಾರ್ಯಗತ ಗೊಳಿಸಲಾಗಲಿಲ್ಲ. ಆದರೆ ಲಂಬಾರ್ಡಿ ಮತ್ತು ಪೀಡ್‌ಮಾಂಟ್‌ನ್ನು ಗಳಿಸಿಕೊಟ್ಟಿದ್ದು ಒಂದು ಮುಖ್ಯ ಸೇವೆಯಾಯಿತು. ಆದರೆ ಕೇವಲ ಫ್ರಾನ್ಸ್ ಮತ್ತು ಆಸ್ಟ್ರಿಯಾದ ಚಕ್ರವರ್ತಿಗಳಿಂದ ಮಾತ್ರ ಇಟಲಿಯ ಭವಿಷ್ಯ ನಿರ್ಧಾರವಾಗುವಂತಿರಲಿಲ್ಲ. ಯುದ್ಧವು ನಡೆಯುತ್ತಿದ್ದಾಗ ಮೊಡೇನಾ, ಫಾರ್ಮ ಮತ್ತು ಟಸ್ಕನಿಯ ರಾಜರುಗಳನ್ನು ಜನರ ದಂಗೆಗಳಿಂದ ಮತ್ತು ರೋಮಾಗ್ನದ ಮೇಲಿನ ಪೋಪನ ಅಧಿಕಾರಗಳಿಂದಾಗಿ ಕೆಳಗೆ ಬೀಳಿಸಲಾಗಿತ್ತು. ೧೮೬೦ರಲ್ಲಿ ವಿಕ್ಟರ್ ಇಮ್ಯಾನುಯಲ್‌ನು ತನಗೆ ನೀಡಿದ ಪ್ರಭುತ್ವವನ್ನು ಒಪ್ಪಿಕೊಂಡನು ಮತ್ತು ವಿಸ್ತಾರಗೊಂಡ ಚಕ್ರಾಧಿಪತ್ಯದ ಮೊದಲನೆಯ ಸಂಪತ್ತಿನ ಅಧಿವೇಶನ ಟುರಿನ್‌ನಲ್ಲಿ ನಡೆಯಿತು. ಇಟಲಿಗೆ ಸಂಬಂಧಿಸಿದಂತೆ ಹೇಳುವುದಾದರೆ ಇದು ೧೮೧೫ರ ಒಪ್ಪಂದಗಳನ್ನು ಕಸದ ಬುಟ್ಟಿಗೆ ಎಸೆಯಿತು. ಆ ಸಭೆಯಲ್ಲಿ ಕೈಗೊಂಡ ನಿರ್ಧಾರವು ರಾಷ್ಟ್ರದ ನಿರ್ಮಾಣದ ಒಂದು ಭೌಗೋಳಿಕ ಅಭಿವ್ಯಕ್ತಿ ಮಾತ್ರವಾಗಿತ್ತು.

ಈ ಒಪ್ಪಂದದ ಮೇಲೆ ೩ನೆಯ ನೆಪೋಲಿಯನ್ನನು ತನಗಾಗಿ ಸವಾಯ್ ಮತ್ತು ನೀಸ್ ಪ್ರದೇಶಗಳನ್ನು ಪಡೆದುಕೊಂಡನು. ವಿಲ್ಲಾಫ್ರಾಂಕಾದ ಶಾಂತಿ ಒಪ್ಪಂದವೂ ಎಂದಿಗೂ ಕಾರ್ಯಗತವಾಗಲಿಲ್ಲ. ಪೋಪನ ಆಡಳಿತದ ದೊಡ್ಡ ಭಾಗವಾಗಿದ್ದ ವೆನೀಶಿಯಾ ಮತ್ತು  ನೇಪಲ್ಸ್‌ನ ಚಕ್ರಾಧಿಪತ್ಯಗಳು ಇನ್ನೂ ಪರಿಧಿಯ ಆಚೆಗೇ ಇದ್ದವು. ೧೮೬೦ರಲ್ಲಿ ಮೊದಲಲ್ಲಿ ಸಿಸಿಲಿಯನ್ನರು ತಮ್ಮ ಹೊಸ ರಾಜನಾದ ಎರಡನೆಯ ಫ್ರಾನ್ಸಿಸ್‌ನ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದರು. ಈ ಬಂಡಾಯವು ಗ್ಯಾರಿಬಾಲ್ಡಿಯಂತಹ, ಈಗಾಗಲೇ ಪ್ರಖ್ಯಾತನಾದ ಆದರೆ ತನ್ನ ದೇಶಕ್ಕಾಗಿ ಅದ್ಭುತ ಸಾಧನೆಯನ್ನು, ಸೇವೆಯನ್ನು ಮಾಡಲು ಕಾದು ಕುಳಿತಿದ್ದ ವ್ಯಕ್ತಿಗೆ ಒಳ್ಳೆಯ ಅವಕಾಶವನ್ನು ದೊರಕಿಸಿಕೊಟ್ಟಿತು. ಈಗಾಗಲೇ ಪ್ರಖ್ಯಾತನಾಗಿದ್ದ ಸೈನಿಕ ಮುಖಂಡನಿಗೆ, ಅಜೇಯ ಧೈರ್ಯಶಾಲಿಯೆನ್ನುವಂತಹ ಅರೆ ಪೌರಾಣಿಕ ವ್ಯಕ್ತಿತ್ವವು ದೊರಕಿತು. ಇವನು ಮೊದಲು ‘ಯಂಗ್ ಇಟಲಿ’ಯ ಸದಸ್ಯನಾಗಿದ್ದನು. ಹಲವಾರು ಯುದ್ಧಗಳಲ್ಲಿ ಭಾಗವಹಿಸಿದ್ದನು. ಪ್ರಖ್ಯಾತ ಇಟಲಿಯ ಸೈನ್ಯದ ಜೊತೆಗೂಡಿದ್ದನು. ಬಹಳ ವರ್ಷಗಳವರೆಗೆ ಗ್ಯಾರಿಬಾಲ್ಡಿಯು ಸಮುದ್ರಯಾನ ಮಾಡುತ್ತಾ, ಪೆರುವಿನ ನೌಕಾಪಡೆಗೆ ದಂಡನಾಯಕನಾಗಿದ್ದನು. ಸ್ವಯಂಸೇವಕರ ನಾಯಕನಾಗಿ ಆಸ್ಟ್ರಿಯಾದ ವಿರುದ್ಧ ಯುದ್ಧಕ್ಕೆ ಧುಮುಕಿದ ನಂತರ ಇವನ ಖ್ಯಾತಿಯು ಹೆಚ್ಚಿತು. ೧೮೬೦ರಲ್ಲಿ ಸಿಸಿಲಿಯ ಮೇಲೆ ದಂಡಯಾತ್ರೆ ಮತ್ತು ನೇಪಲ್ಸ್‌ನ ಚಕ್ರಾಧಿಪತ್ಯದ ಮೇಲೆ ಮಾಡಿದ ದಾಳಿಗಳು ಅವನ ಬದುಕಿನ ಅತ್ಯಂತ ಮಹತ್ವದ ಘಟನೆಗಳಾಗಿದ್ದವು. ನಂತರ ಸ್ವತಃ ತಾನೇ ಎರಡನೇ ಫ್ರಾನ್ಸಿಸ್ ರಾಜನ ವಿರುದ್ಧ ನಡೆಸಲಾದ ದಂಗೆಯಲ್ಲಿ ಸಿಸಿಲಿಯನ್ನರ ಸಹಾಯಕ್ಕಾಗಿ ತಾನೇ ಮುಂದಾದನು.

೧೮೬೦ರ ಮೇ ತಿಂಗಳಿನಲ್ಲಿ ‘‘ಸಾವಿರದಳ’’ ಅಥವಾ ‘‘ಕೆಂಪು ಅಂಗಿಗಳು’’ ಜಿನೀವಾ ದಿಂದ ಎರಡು ಉಗಿ ಹಡಗುಗಳ ಮೂಲಕ ದಾಳಿಯನ್ನು ಪ್ರಾರಂಭಿಸಿದರು. ನೇಪಲ್ಸ್‌ನ ದೊರೆಯು ದೊಡ್ಡ ಸೇನೆಯನ್ನು ನಿಯಮಿಸಿದನು. ಹಲವು ವಾರಗಳ ದಂಡಯಾತ್ರೆಯ ನಂತರ ಸಾಹಸಪೂರ್ಣ ಹೋರಾಟದಿಂದ, ಈ ದ್ವೀಪದ ಅಧಿಪತಿಯಾಗಿ ಮೆರೆದನು. ಕೆಚ್ಚೆದೆಯಿಂದ ವಿಜಯ ಸಾಧ್ಯವಾಯಿತು. ಸಿಸಿಲಿಯಲ್ಲಿ ಆತನು ಎರಡನೆ ವಿಕ್ಟರ್ ಇಮ್ಯಾನುಯಲ್ ಎಂಬ ಬಿರುದಿನಿಂದ ಸರ್ವಾಧಿಕಾರಿಯಾದನು.

ನಂತರ ಗ್ಯಾರಿಬಾಲ್ಡಿಯು ಜಲಸಂಧಿಗಳನ್ನು ದಾಟಿ, ಮೂಲ ಪ್ರದೇಶಕ್ಕೆ ಬಂದು ನೇಪಲ್ಸ್‌ನ ಸಂಪೂರ್ಣ ರಾಜ್ಯಗಳನ್ನು ಗೆಲ್ಲುವ ದೃಢಸಂಕಲ್ಪ ಮಾಡಿಕೊಂಡನು. ಆದರೆ ನೆಪೋಲಿಯನ್ನನ ರಾಜ್ಯವನ್ನು ಗೆಲ್ಲಲಾಗಲಿಲ್ಲ. ಬದಲಾಗಿ ಅದೇ ನಾಶವಾಯಿತು. ಸೆಪ್ಟೆಂಬರ್ ೬ರಂದು ಎರಡನೆಯ ಫ್ರಾನ್ಸಿಸ್‌ನು ನೇಪಲ್ಸ್‌ನ್ನು ತೊರೆದು ಗಯಾಟಕ್ಕೆ ಹೋದನು. ಮಾರನೆಯದಿನ ಗ್ಯಾರಿಬಾಲ್ಡಿಯು ತನ್ನ ೫ ಮಂದಿ ಸಹಾಯಕರೊಂದಿಗೆ ರೈಲಿನಲ್ಲಿ ನೇಪಲ್ಸ್‌ಗೆ ಬಂದನು. ರೋಮ್ ನಗರವನ್ನು ಮುತ್ತಿಗೆ ಹಾಕುವುದು ಆತನ ಮುಂದಿನ ಉದ್ದೇಶವಾಗಿತ್ತು. ಕೆವೂರ್‌ಗೆ ಮುಂದಿನ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿ ತೋರಿತು. ರೋಮನ್ನು ಫ್ರೆಂಚ್ ಸೈನ್ಯವು ವಶಪಡಿಸಿಕೊಂಡಿತು. ಆದ್ದರಿಂದ ಕೆವೂರ್‌ನು ಮಧ್ಯೆಪ್ರವೇಶಿಸಿ, ಈ ಸಂದರ್ಭವನ್ನು ಗ್ಯಾರಿಬಾಲ್ಡಿಯ ಹಿಡಿತದಿಂದ ಬಿಡಿಸಿಕೊಂಡು ತಾನೇ ಮುನ್ನಡೆಸಿ, ತನ್ನ ಭವಿಷ್ಯವನ್ನು ನಿರ್ಧರಿಸಿಕೊಳ್ಳಲು ನಿರ್ಧರಿಸಿದನು. ಪೋಪನ ಆಡಳಿತವಿರುವ ರಾಜ್ಯಗಳ ಮೇಲೆ ವಿಕ್ಟರ್ ಇಮ್ಯಾನುಯಲ್‌ನು ಸೈನ್ಯದ ಸಮೇತ ಹೋದನು. ಆದರೆ ಅದನ್ನು ರೋಂನವರೆಗೂ ನಡೆಸಲಾಗಲಿಲ್ಲ. ಏಕೆಂದರೆ ಮೂರನೆಯ ನೆಪೋಲಿಯನ್‌ಗೆ ಗಟ್ಟಿಯಾದ ಕ್ಯಾಥೊಲಿಕ್ ಬೆಂಬಲ ಫ್ರಾನ್ಸ್‌ನಲ್ಲಿ ಇದ್ದುದು ಅವನಿಗೆ ತಿಳಿದಿತ್ತು. ಹಾಗಾಗಿ ಪೋಪನ ರಾಜಧಾನಿಯನ್ನು ಕೈವಶಮಾಡಿಕೊಳ್ಳಲು ಸಾಧ್ಯವಾಗದೆಂದು ಅರಿತಿದ್ದನು. ವಿಕ್ಟರ್ ಇಮ್ಯಾನುಯಲ್ಲನು ಇಟಲಿಯ ರಾಜನೆಂದು ಘೋಷಿಸಲ್ಪಟ್ಟನು. ಕ್ಯಾಸ್ಟೆಲ್ ಪಿಡಾರ್ಡೋನಲ್ಲಿ ವಿಕ್ಟರ್ ಇಮ್ಯಾನುಯಲ್ಲನು ಪೋಪನ ಸೈನ್ಯವನ್ನು ಸೋಲಿಸಿದನು. ನಂತರ ಆತನು ನೇಪಲ್ಸ್‌ನ ಪ್ರದೇಶವನ್ನು ಪ್ರವೇಶಿಸಿದನು. ಗ್ಯಾರಿಬಾಲ್ಡಿಯು ಈ ಮಟ್ಟದವರೆಗೂ ತಂದಿದ್ದ ವಿಜಯವನ್ನು ವಿಕ್ಟರ್ ಇಮ್ಯಾನುಯಲ್ ಪೂರೈಸಿದನು. ೧೮೬೧ರ ಫೆಬ್ರವರಿ ೧೮ರಂದು ವೆನಿಶಿಯಾ ಮತ್ತು ರೋಂಗಳನ್ನು ಹೊರತುಪಡಿಸಿ, ಉಳಿದೆಲ್ಲ ಇಟಲಿಯ ಭಾಗಗಳನ್ನು ಪ್ರತಿನಿಧಿಸುವ ಒಂದು ಹೊಸ ಸಂಸತ್ತಿನ ಅಧಿವೇಶನವು ಟುರಿನ್‌ನಲ್ಲಿ ಸೇರಿತು. ಸಾರ್ಡೀನಿಯಾದ ರಾಜಪ್ರಭುತ್ವವು ಇಟಲಿಯ ರಾಜಪ್ರಭುತ್ವಕ್ಕೆ ಎಡೆಮಾಡಿಕೊಟ್ಟಿತು. ವಿಕ್ಟರ್ ಇಮ್ಯಾನುಯಲ್‌ನು ‘‘ದೇವರ ಅನುಗ್ರಹದಿಂದ ಮತ್ತು ದೇಶದ ಸಂಕಲ್ಪ ಬಲದಿಂದ, ಇಟಲಿಯ ರಾಜನೆಂದು’’ ಘೋಷಿಸಲ್ಪಟ್ಟನು.

ಈ ಹೊಸ ರಾಜಪ್ರಭುತ್ವವು ಸುಮಾರು ೨ ಮಿಲಿಯನ್‌ದಷ್ಟು ಜನಸಂಖ್ಯೆಯನ್ನು ಒಳಗೊಂಡಿತ್ತು. ಆದರೆ ಇಟಲಿಯ ರಾಜಪ್ರಭುತ್ವವು ಮಾತ್ರ ಇನ್ನೂ ಅಸಂಪೂರ್ಣವಾಗಿಯೇ ಉಳಿದಿತ್ತು. ವೆನಿಶೀಯಾವು ಇನ್ನೂ ಆಸ್ಟ್ರಿಯಾದ ಹಿಡಿತದಲ್ಲಿಯೇ ಇದ್ದಿತು. ರೋಂ ಸಹ ಇನ್ನೂ ಪೋಪನ ಆಡಳಿತದಲ್ಲಿಯೇ ಇದ್ದಿತು. ‘‘ರೋಮನ್ನು ಒಳಗೊಳ್ಳದೆ ಇಟಲಿಯ ಅಸ್ತಿತ್ವವಿಲ್ಲ’’ವೆಂಬುದು ಕೆವೂರ್‌ನ ಅಭಿಪ್ರಾಯ ವಾಗಿತ್ತು. ಪೋಪ್ ಹಾಗೂ ಕ್ಯಾಥೊಲಿಕ್ ಪ್ರಪಂಚವನ್ನು ಎಲ್ಲೆಡೆಯೂ ಒಂದುಗೂಡಿಸಿ, ಹೊಸ ರಾಜಪ್ರಭುತ್ವಕ್ಕೆ ರೋಂ ನಗರಕ್ಕೆ ರಾಜಧಾನಿಯಾಗಿ ಮಾನ್ಯತೆ ಗಳಿಸಿಕೊಡುವ ಒಂದು ವಿಧಾನವನ್ನು ರೂಪಿಸಿದ್ದನು. ತನ್ನ ಜೀವಿತಾವಧಿಯಲ್ಲಿ ಕೆವೂರ್‌ನು ತನ್ನ ಮೂಲಭೂತ ರಾಜಕೀಯ ತತ್ವಕ್ಕೆ ಅಂದರೆ ಸಂಸತ್ತಿನ ಮೂಲಕ ನಡೆಯುವ ಸರ್ಕಾರ ಹಾಗೂ ಸಂವಿಧಾನಾತ್ಮಕ ಸುಧಾರಣೆ ಗಳಿಗೆ ಬದ್ಧನಾಗಿದ್ದನು. ‘‘ನನ್ನ ಮೂಲಕ್ಕೆ ನಾನೆಂದೂ ಮೋಸ ಮಾಡುವುದಿಲ್ಲ. ನಾನು ಬದುಕಿರುವವರೆಗೂ ನನ್ನ ತತ್ವಗಳನ್ನೆಂದೂ ನಿರಾಕರಿಸುವುದಿಲ್ಲ, ನಾನು ಸ್ವಾತಂತ್ರ್ಯ ಮಾತೆಯ ಪುತ್ರ. ನಾನೇನಾಗಿರುವೆನೋ ಅದಕ್ಕೆಲ್ಲವೋ ಆಕೆಯೇ ಕಾರಣ’’ ಎಂದು ಬರೆದುಕೊಂಡಿದ್ದಾನೆ.

ಜರ್ಮನಿಯ ಏಕೀಕರಣ

೧೮೪೮ ಹಾಗೂ ೧೯೪೯ರಲ್ಲಿ ಜರ್ಮನಿಯ ಉದಾರವಾದಿ ಶಕ್ತಿಗಳು, ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಸಿದ್ದವು. ಆದರೆ ಫ್ರಾಂಕ್ ಫರ್ಟ್‌ನ ಸಂಸತ್ತಿನ ಕಾರ್ಯವನ್ನು ಮುಂಚೂಣಿಯಲ್ಲಿದ್ದ ಆಸ್ಟ್ರಿಯಾ ಹಾಗೂ ಪ್ರಷ್ಯಾದ ದೊರೆಗಳು ತಿರಸ್ಕರಿಸಿದ್ದರು ಮತ್ತು ನಿಷ್ಕ್ರಿಯಗೊಳಿಸಿದ್ದರಿಂದ ಹಳೆಯ ಒಕ್ಕೂಟವನ್ನೇ ಪುನರ್ ಸ್ಥಾಪಿಸಲಾಯಿತು.

೧೮೬೧ರಲ್ಲಿ ವಿಲಿಯಂನು ಪ್ರಷ್ಯಾದ ದೊರೆಯಾದನು. ಪ್ರಷ್ಯಾದ ಸೈನ್ಯ ಬಲವನ್ನು ವೃದ್ದಿಗೊಳಿಸಬೇಕೆಂದು ನಂಬಿದ್ದ ಆತನು ಅದನ್ನು ದ್ವಿಗುಣಗೊಳಿಸುವ ಒಂದು ಯೋಜನೆ ಯನ್ನು ತಯಾರಿಸಿದನು. ಸಂಸತ್ತಿಗೆ ಅಗತ್ಯವಾದ ಗುರಿಗಳಿಗಾಗಿ ಆಗ್ರಹ ಪಡಿಸಿದನು. ರಾಜಪ್ರಭುತ್ವ ಮತ್ತು ಪ್ರತಿನಿಧಿ ಸಭೆಗಳ ನಡುವೆ ಒಂದು ಕಹಿಯಾದ, ಸುದೀರ್ಘವಾದ ವಿವಾದವೇರ್ಪಟ್ಟಿತು. ಇಡೀ ಸಂಸತ್ತನ್ನೇ ನಿಷೇಧಗೊಳಿಸಬೇಕಾದ ಪರಿಸ್ಥಿತಿಯೊದಗಿತು. ಆದರೆ ಆತನು ಸಂವಿಧಾನವನ್ನು ಬೆಂಬಲಿಸುವ ಪ್ರಮಾಣವಚನ ಸ್ವೀಕರಿಸಿದ್ದರಿಂದ ಹಾಗೆ ಮಾಡಲಾಗಲಿಲ್ಲ. ಬದಲಾಗಿ ಪದವಿಯನ್ನೇ ತ್ಯಾಗಮಾಡಲು ಸಿದ್ಧನಾದನು. ೧೮೬೨ರಲ್ಲಿ ಒಟ್ಟೋವನ್ ಬಿಸ್ಮಾರ್ಕ್‌ನನ್ನು ಮಂತ್ರಿಮಂಡಲದ ಅಧ್ಯಕ್ಷನನ್ನಾಗಿ ನೇಮಿಸಿಕೊಳ್ಳಲಾಯಿತು. ಹೀಗೆ ಯುರೋಪಿನ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಆ ವ್ಯಕ್ತಿಯು ಆ ಶತಮಾನದಲ್ಲೇ ಸ್ವಂತಿಕೆ ಹಾಗೂ ಅಸಾಧಾರಣ ವ್ಯಕ್ತಿತ್ವವುಳ್ಳವರಲ್ಲಿ ಒಬ್ಬನಾಗಿದ್ದನು. ಕೆವೂರ್‌ನು ತನ್ನ ದೇಶವು ಹೇಗಾಗಬೇಕೆಂಬುದಕ್ಕೆ ಇಂಗ್ಲೆಂಡ್‌ನ ಮಾದರಿಯನ್ನು ಕಂಡುಕೊಳ್ಳುತ್ತಿದ್ದ. ಆಗ ಬಿಸ್ಮಾರ್ಕ್‌ನ ರಾಜಕೀಯ ಚಿಂತನೆಗಳು, ಪ್ರಷ್ಯಾದ ರಾಜಪ್ರಭುತ್ವದಲ್ಲಿ ಆತನು ಇರಿಸಿದ್ದ ಅಪಾರ ನಂಬುಗೆಯ ಮೇಲೆ ಕೇಂದ್ರೀಕೃತವಾಗಿದ್ದವು. ಪ್ರಷ್ಯಾವನ್ನು ಖ್ಯಾತಿಗೊಳಿಸಿದ್ದು ಅದರ ದೊರೆಗಳೇ ಹೊರತು ಅದಕ್ಕೆ ಅಲ್ಲಿಯ ಜನರದ್ದೇನೂ ಕೊಡುಗೆ ಇರಲಿಲ್ಲ. ಬಿಸ್ಮಾರ್ಕ್‌ನು ಪ್ರಜಾಪ್ರಭುತ್ವವನ್ನು ಸಂಸತ್ತು ಹಾಗೂ ಸಂವಿಧಾನಗಳಷ್ಟೇ ತೀವ್ರವಾಗಿ ದ್ವೇಷಿಸುತ್ತಿದ್ದನು. ‘‘ಪ್ರಷ್ಯಾದ ಗೌರವವು ಎಲ್ಲಕ್ಕಿಂತಲು ಮಿಗಿಲಾಗಿ ಪ್ರಜಾಪ್ರಭುತ್ವದ ಜೊತೆಗೆ ಯಾವುದೇ ರೀತಿಯ ಅವಮಾನಕಾರೀ ಸಂಬಂಧವನ್ನು ಇರಿಸಿಕೊಳ್ಳದಿರುವುದೇ ಆಗಿದೆ’’ ಎಂದಿದ್ದನು. ಆಸ್ಟ್ರಿಯಾದ ವಿರುದ್ಧ ತೀಕ್ಷ್ಣವಾದ ಭಾವನೆಗಳನ್ನು ಹೊಂದಿದ್ದನು.

೧೮೬೨ರಲ್ಲಿ ಆತನು ಪ್ರಷ್ಯಾ ಮಂತ್ರಿಮಂಡಲದ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡನು. ಈ ಸಂದರ್ಭದಲ್ಲಿ ರಾಜ ಹಾಗೂ ಸಂಸತ್ತುಗಳು ಪರಸ್ಪರ ಕೋಪಗ್ರಸ್ಥ ವಿವಾದದಲ್ಲಿ ತೊಡಗಿದ್ದವು. ಈ ಘರ್ಷಣೆಯ ಸುಮಾರು ೪ ವರ್ಷಗಳ ಕಾಲ ಮುಂದುವರಿಯಿತು. ಈ ಅವಧಿಯು ನಿಜವಾಗಿಯೂ ಸರ್ವಾಧಿಕಾರದ್ದಾಗಿತ್ತು. ಸಂಸತ್ತು ಸೋತಿತು. ಸೈನ್ಯದ ಹೆಚ್ಚಳ ಸಾಧ್ಯವಾಯಿತು. ಆದರೆ ಸೈನ್ಯವೆನ್ನುವುದು ಗುರಿ ಸಾಧನೆಯ ಒಂದು ಮಾರ್ಗ ಮಾತ್ರ. ಪ್ರಷ್ಯಾದ ಮೂಲಕ ಹಾಗೂ ಅದರ ಒಳಿತಿಗಾಗಿ ಜರ್ಮನಿಯ ಏಕೀಕರಣವನ್ನು ಸಾಧಿಸುವುದೇ ಬಿಸ್ಮಾರ್ಕ್‌ನ ಅಭಿಪ್ರಾಯವಾಗಿತ್ತು. ಅವನ ಪ್ರಕಾರ ಏಕೀಕರಣವನ್ನು ಯುದ್ಧದ ಮೂಲಕ ಸಾಧಿಸಬಹುದಾಗಿತ್ತು. ಭಾಷಣಗಳಿಂದಾಗಲೀ, ಬಹುಸಂಖ್ಯಾತ ಮತಗಳಿಂದಾಗಲೀ, ಸದ್ಯದ ಮಹತ್ವದ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ೧೮೪೮ ಮತ್ತು ೧೮೪೯ರಲ್ಲಿ ಇಂತಹ ದೊಡ್ಡ ತಪ್ಪನ್ನೆಸಗಲಾಯಿತು. ರಕ್ತ ಹಾಗೂ ಕತ್ತಿಗಳಿಂದ ಮಾತ್ರ ಇದನ್ನು ಸಾಧಿಸಬಹುದು ಎಂದು ಅವನು ತನ್ನ ಜೀವನದ ಅತ್ಯಂತ ಪ್ರಖ್ಯಾತ ಭಾಷಣವೊಂದರಲ್ಲಿ ಹೇಳಿದ್ದಾನೆ.

ಪ್ರಷ್ಯಾದ ಮೂರು ಯುದ್ಧಗಳು

ಜರ್ಮನಿಯ ಸಾಮ್ರಾಜ್ಯವು ‘ರಕ್ತ ಮತ್ತು ಕತ್ತಿ’ಯ ನೀತಿಯನ್ನು ಅಳವಡಿಸಿಕೊಂಡೇ ಕಟ್ಟಲ್ಪಟ್ಟಿತು. ಇದನ್ನು ಪ್ರಷ್ಯಾವು ೯ ವರ್ಷದ ಸಣ್ಣ ಅವಧಿಯಲ್ಲಿ ಮೂರು ಯುದ್ಧಗಳ ಮೂಲಕ ಸಾಧಿಸಿತು. ೧. ೧೮೬೪ರಲ್ಲಿ ಡೆನ್ಮಾರ್ಕಿನ ವಿರುದ್ಧ ನಡೆದ ಯುದ್ಧ, ೨. ೧೮೬೬ರಲ್ಲಿ ಆಸ್ಟ್ರಿಯಾ ವಿರುದ್ಧ ನಡೆದ ಯುದ್ಧ ಮತ್ತು ೩. ೧೮೭೦ರಲ್ಲಿ ಫ್ರಾನ್ಸ್‌ನ ವಿರುದ್ಧ ನಡೆದ ಯುದ್ಧ. ಇದರಲ್ಲಿ ಮೊದಲ ಯುದ್ಧವು ಷ್ಲೇಷ್‌ವಿಗ್ ಮತ್ತು ಹೋಲ್‌ಸ್ಪೈನ್ ಭವಿಷ್ಯವನ್ನು ನಿರ್ಧರಿಸುವಂತಹ ಅತ್ಯಂತ ಜಟಿಲ ಸಮಸ್ಯೆಯಿಂದ ಹುಟ್ಟಿಕೊಂಡಿತು. ಇವೆರಡೂ ಡೆನ್ಮರ್ಕಿನ ಪರ್ಯಾಯ ದ್ವೀಪದಲ್ಲಿರುವ ರಾಜ್ಯಗಳು. ಹೋಲ್‌ಸ್ಟೈನ್‌ನಲ್ಲಿ ಜರ್ಮನ್ ಜನರಿದ್ದರು ಮತ್ತು ಷ್ಲೇಷ್‌ವಿಗ್‌ನಲ್ಲಿ ಡೇನರು ಹಾಗೂ ಜರ್ಮನರೂ ಇದ್ದರು. ಇವೆರಡೂ ರಾಜ್ಯಗಳು ಡೆನ್ಮಾರ್ಕಿನ ಜೊತೆ ಒಂದುಗೂಡಿದ್ದವು.

ಈ ಪರಿಸ್ಥಿತಿಯಲ್ಲಿ ಪ್ರಷ್ಯಾದ ಉನ್ನತಿಗೆ ಒಂದು ಅವಕಾಶವಿದೆಯೆಂದು ಬಿಸ್ಮಾರ್ಕನು ಕಂಡುಕೊಂಡನು. ಇದು ಆಸ್ಟ್ರಿಯಾದ ಮೇಲೆ ಯುದ್ಧ ನಡೆಸಬಹುದಾಗಿದ್ದ ಸ್ಥಿತಿಯಾಗಿತ್ತು. ಮೇಲಿನ ಸಮಸ್ಯೆಗೆ ಪರಿಹಾರವೆಂಬಂತೆ ಆತನು ಆಸ್ಟ್ರಿಯಾವು ಪರ್ಷಿಯಾದೊಡನೆ ಸಹಕರಿಸುವಂತೆ ಪ್ರೇರೇಪಿಸಿದನು. ಅವು ಡೆನ್ಮಾರ್ಕಿಗೆ ತೀರ್ಮಾನ ತೆಗೆದುಕೊಳ್ಳಲು ಅಂತಿಮ ಅವಕಾಶ ನೀಡಿದವು. ಇವೆರಡೂ ದೇಶಗಳ ತೀರ್ಮಾನಕ್ಕೊಪ್ಪದ ಡೇನರು ಯುದ್ಧವನ್ನು ಘೋಷಿಸಿದರು. ಇದರಲ್ಲಿ ಆಸ್ಟ್ರಿಯಾ ಮತ್ತು ಪ್ರಷ್ಯಾಗಳು ಸುಲಭವಾಗಿ ಜಯ ಗಳಿಸಿದವು. ಆದರೆ ಈ ವಿಜಯದ ತೀರ್ಮಾನಕ್ಕಾಗಿಯೇ ಇವೆರಡೂ ಶಕ್ತಿಗಳು ಬಡಿದಾಡಿದವು. ಕೊನೆಗೆ ೧೮೬೬ರ ಜೂನ್‌ನಲ್ಲಿ ಯುದ್ಧ ಪ್ರಾರಂಭವಾಯಿತು. ಹೀಗೆ ಒಂದೇ ಜನಾಂಗದ ಜನರ ನಡುವೆ ಅಧಿಕಾರಕ್ಕಾಗಿ ನಡೆಯುವ ತನ್ನ ಕನಸಿನ ಕಲಹವನ್ನು ಬಿಸ್ಮಾರ್ಕನು ನನಸಾಗಿಸಿದನು. ಇದನ್ನು ಏಳುವಾರಗಳ ಯುದ್ಧವೆಂದು ಹೇಳುತ್ತಾರೆ. ಇದು ಪ್ರೇಗ್‌ನಲ್ಲಿ ಖಚಿತವಾದ ಶಾಂತಿ ಒಪ್ಪಂದದೊಂದಿಗೆ ಮುಕ್ತಾಯವಾಯಿತು. ಪ್ರಷ್ಯಾಕ್ಕೆ ಒಂದು ಮುಖ್ಯವಾದ ಬೆಂಬಲ ಇಟಲಿಯಿಂದ ದೊರಕಿತ್ತು. ಅದಿಲ್ಲದೆ ವಿಜಯ ಸಾಧಿಸಲಾಗುತ್ತಿರಲಿಲ್ಲ. ವೆನಿಶಿಯಾ ಇಟಲಿಯ ವಶವಾಯಿತು. ಆಸ್ಟ್ರಿಯಾ ಸೋತಿತು.

ಪ್ರಷ್ಯಾದ ಪಡೆಗಳು ಉತ್ತರ ಜರ್ಮನ್, ಹನೋವರ್, ಡ್ರೆಸ್ಡೆನ್ ಮತ್ತು ಕ್ಯಾಸೆಲ್ ಗಳನ್ನು ವಶಪಡಿಸಿಕೊಂಡವು. ಉತ್ತರ ಜರ್ಮನಿಯನ್ನರ ಮೇಲೆ ಸಂಪೂರ್ಣವಾಗಿ ಪ್ರಷ್ಯಾವು ಹಿಡಿತ ಸಾಧಿಸಿತು. ಏಳುವಾರಗಳ ಯುದ್ಧದ ಪರಿಣಾಮಗಳು ಅತ್ಯಂತ ಮಹತ್ವದ್ದಾಗಿದ್ದವು. ಆಸ್ಟ್ರಿಯಾವು ವೆನಿಶಿಯಾವನ್ನು ಇಟಲಿಗೆ ಬಿಟ್ಟುಕೊಡಬೇಕಾಯಿತು. ಅದು ಜರ್ಮನ್ ಒಕ್ಕೂಟದ ಹೊರಗುಳಿಯಬೇಕಾಯಿತು ಹಾಗೂ ಒಂದು ಹೊಸ ಒಕ್ಕೂಟವನ್ನು ಸ್ಥಾಪಿಸುವುದಕ್ಕಾಗಿ ಪ್ರಷ್ಯಾಕ್ಕೆ ಅವಕಾಶ ನೀಡಬೇಕಾಯಿತು.

ಹನೋವರ್‌ನ ರಾಜಪ್ರಭುತ್ವ ನಾಸ್ಸೋ, ಹೆಸ್ಸ-ಕ್ಯಾಸೆಲ್, ಪ್ರಾಂಕ್‌ಪರ್ಟ್ ನಗರ, ಷ್ಲೇಷ್‌ವಿಗ್ ಮತ್ತು ಹೋಲ್‌ಸ್ಟೈನ್ ರಾಜ್ಯಗಳು ಪ್ರಷ್ಯಾದ ರಾಜಪ್ರಭುತ್ವದಲ್ಲಿ ಸೇರಿಕೊಂಡವು. ಈಗ ನಿರ್ಮಾಣವಾದ ಉತ್ತರ ಜರ್ಮನಿಯ ಒಕ್ಕೂಟದಲ್ಲಿ ರೈನ್ ನದಿಯ ಉತ್ತರ ಭಾಗದ ಜರ್ಮನಿಯ ಎಲ್ಲಾ ಪ್ರದೇಶಗಳೂ ಸೇರಿದ್ದವು. ಇದರ ನಿರ್ಮಾಣವನ್ನು ಬಿಸ್ಮಾರ್ಕ್‌ನು ವಹಿಸಿಕೊಂಡನು. ಈ ಒಕ್ಕೂಟಕ್ಕೆ ಪ್ರಷ್ಯಾದ ರಾಜನು ಅಧ್ಯಕ್ಷನಾದನು. ಒಂದು ಒಕ್ಕೂಟ ಸಮಿತಿಯಲ್ಲಿ ವಿವಿಧ ರಾಜ್ಯಗಳಿಂದ ದೊರೆಗಳು ಕಳುಹಿಸಿದ ಪ್ರತಿನಿಧಿಗಳಿದ್ದರು. ಜನರಿಂದ ಚುನಾಯಿತನಾದ ಒಬ್ಬ ರೀಚ್‌ಸ್ಟಾಗ್  ಇದ್ದನು. ೧೮೬೭ರ ಜುಲೈನಲ್ಲಿ ಹೊಸ ಸಂವಿಧಾನವು ಅಸ್ತಿತ್ವಕ್ಕೆ ಬಂದಿತು. ಉತ್ತರ ಜರ್ಮನಿಯ ಒಕ್ಕೂಟವು ಕೇವಲ ನಾಲ್ಕು ವರ್ಷಗಳು ಮಾತ್ರ ಅಸ್ತಿತ್ವದಲ್ಲಿತ್ತು. ನಂತರ ೧೮೭೦ರಲ್ಲಿ ನಡೆದ ಫ್ರಾಂಕೋ ಪ್ರಷ್ಯಾದ ಯುದ್ಧದಲ್ಲಿ ಅದನ್ನು ಜರ್ಮನಿಯ ಚಕ್ರಾಧಿಪತ್ಯವು ವಹಿಸಿಕೊಂಡಿತು.

೧೮೬೬ರ ಅವಧಿಯು ಪ್ರಷ್ಯಾ, ಆಸ್ಟ್ರಿಯಾ, ಫ್ರಾನ್ಸ್ ಹಾಗೂ ಆಧುನಿಕ ಯೂರೋಪಿನ ಚರಿತ್ರೆಯಲ್ಲೇ ಒಂದು ತಿರುವು ಪಡೆಯಿತು. ತನ್ನ ಶಕ್ತಿಯಿಂದಾಗಿ ಪ್ರಷ್ಯಾವು ಇಡೀ ಯೂರೋಪ್‌ಗೆ ಅಚ್ಚರಿ ಮೂಡಿಸಿತು. ಅದು ಪ್ರಬಲವಾದ ಸೈನ್ಯವನ್ನು, ಪ್ರಬಲರಾದ ನಾಯಕರನ್ನೂ ಹೊಂದಿತ್ತು. ಮೂರನೆಯ ನೆಪೋಲಿಯನ್‌ನ ಪ್ರಭಾವವು ಈಗ ಕುಂಠಿತ ಗೊಂಡಿತು. ಫ್ರಾನ್ಸ್‌ಗಾಗಿ ಆತನು ಏನನ್ನೂ ಸಾಧಿಸಲಾಗದಿದ್ದರೂ, ಹೊಸ ಒಕ್ಕೂಟವು ಮೈನ್ ನದಿಯ ದಕ್ಷಿಣ ಭಾಗಕ್ಕೆ ವಿಸ್ತರಿಸಬಾರದೆಂದು ಒತ್ತಾಯಿಸುತ್ತಿದ್ದನು. ಇದು ಪ್ರಷ್ಯಾಕ್ಕೆ ಕಿರಿಕಿರಿಯನ್ನುಂಟು ಮಾಡಿತು.

ಮೂರನೆಯ ನೆಪೋಲಿಯನ್ನನು ಈ ಸಂದರ್ಭದಲ್ಲಿ ಮತ್ತೊಂದು ಗಂಭೀರ ಸ್ವರೂಪದ ತಪ್ಪನ್ನೆಸಗಿದನು. ಆತನ ಮೆಕ್ಸಿಕೋದ ಸಾಹಸಕಾರ್ಯವು ಅತ್ಯಂತ ಅನಗತ್ಯವೂ ದುಸ್ಸಾಹಸದ್ದೂ ಆಗಿತ್ತು. ಮೆಕ್ಸಿಕೋ ದೇಶವು ಒಂದು ಗಣತಂತ್ರವಾಗಿತ್ತು. ಆದರೆ ಅದರಲ್ಲಿದ್ದ ಒಂದು ಗುಂಪು ಗಣತಂತ್ರವನ್ನು ಸೋಲಿಸಲು ತಯಾರಾಗಿತ್ತು. ಫ್ರೆಂಚರಿಂದ ಪ್ರೇರಿತರಾಗಿ ಅವರ ನಿರ್ದೇಶನದಲ್ಲಿ ಫ್ರಾನ್ಸಿಸ್ ಜೋಸೆಫ್‌ನ ಸಹೋದರನಾದ ಆಸ್ಟ್ರಿಯಾದ ಆರ್ಕ್‌ಡ್ಯೂಕ್ ಮಾಕ್ಸ್‌ಮಿಲಾನ್‌ಗೆ ಪ್ರಭುತ್ವವನ್ನು ನೀಡಬೇಕೆಂದು ತೀರ್ಮಾನಿಸಲಾಯಿತು.

ಮೂರನೆಯ ನೆಪೋಲಿಯನ್‌ನ ಬುದ್ದಿವಂತಿಕೆಯಿಂದಾಗಿ ಈ ಉದ್ದೇಶವು ಸಂಪೂರ್ಣವಾಗಿ ನಾಶವಾಗಬೇಕಾಗಿದ್ದಿತು. ಗೆರಿಲ್ಲಾ ಯುದ್ಧವು ಪ್ರಾರಂಭವಾಯಿತು. ನೆಪೋಲಿಯನ್ನನು ಈ ದೇಶದ ಜೊತೆ ಸೆಣಸುವಂತಹ ಸಾಹಸವನ್ನು ಕೈಗೆತ್ತಿಕೊಳ್ಳಲು ಸಿದ್ಧನಿರಲಿಲ್ಲ. ಆದ್ದರಿಂದ ತನ್ನ ಸೈನ್ಯವನ್ನು ಮೆಕ್ಸಿಕೋದಿಂದ ಹಿಂತೆಗೆಯುವ ವಾಗ್ದಾನ ನೀಡಿದನು. ಮಾಕ್ಸ್‌ಮಿಲಾನನು ಬಹಳ ಕಾಲದವರೆಗೆ ಚಕ್ರವರ್ತಿಯಾಗಿ ಉಳಿಯಲು ಸಾಧ್ಯವಾಗಲಿಲ್ಲ. ೧೮೬೭ರಲ್ಲಿ ಅವನನ್ನು ಹಿಡಿದು ಗುಂಡಿಕ್ಕಿ ಕೊಲ್ಲಲಾಯಿತು.

ಇದು ಫ್ರಾನ್ಸ್‌ನ ಚಕ್ರವರ್ತಿಗೆ ಅಮೂಲ್ಯ ಪಾಠವಾಯಿತು. ಅವನ ಆಶ್ರಿತನೊಬ್ಬನು ಅವನನ್ನು ತ್ಯಜಿಸಿದ್ದರಿಂದ ಯೂರೋಪಿನ ಮುಂದೆ ಆತನ ನೈತಿಕ ಸ್ಥೈರ್ಯ ಮಂಕಾಯಿತು. ಸ್ವದೇಶದಲ್ಲಿ ಆತನ ಗೌರವ ಕಡಿಮೆಯಾಯಿತು. ಹಲವಾರು ಸುಧಾರಣೆಗಳನ್ನು ಜಾರಿಗೆ ತಂದು ನೆಪೋಲಿಯನ್ನನು ಉದಾರವಾದಿಗಳ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿದ.

ಮೂರನೆಯ ನೆಪೋಲಿಯನ್ನನ ಚಕ್ರಾಧಿಪತ್ಯದ ಸುತ್ತಲೂ ಕಾರ್ಮೋಡಗಳು ಕವಿದಿದ್ದವು. ಆಂತರಿಕ ತೊಂದರೆಗಳೂ ಹೆಚ್ಚಿದವು. ಆದರೆ ಹೊರದೇಶೀಯ ಸಂಬಂಧಗಳೇ ಆತನಿಗೆ ಕಳವಳಕಾರಿಯಾದವು. ಈ ಅಪಾಯದ ಸಂಕೇತ ಫ್ರಾನ್ಸ್‌ನ ಎಲ್ಲೆಡೆಗೂ ಹರಡಿತು. ‘ಸಡೋವದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು’ ಎನ್ನುವ ಕೂಗು ಕೇಳಿಬಂತು.

೧೮೬೬ ರಿಂದ ೧೮೭೦ರವರೆಗೆ ಫ್ರಾನ್ಸ್ ಮತ್ತು ಪ್ರಷ್ಯಾ ದೇಶಗಳ ಜನರ, ಸರ್ಕಾರಗಳ ಮನಸ್ಸಿನಲ್ಲಿ, ಕೊನೆಗೆ ಇಬ್ಬರ ನಡುವೆಯೂ ಯುದ್ಧ ನಡೆದೇ ತೀರಬೇಕೆಂಬ ವಿಚಾರ ಮೂಡಿತು. ಬಿಸ್ಮಾರ್ಕ್‌ನು ಜರ್ಮನಿಯ ಏಕೀಕರಣವನ್ನು ಪೂರೈಸುವ ರೀತಿಯೆಂಬಂತೆ ಈ ಯುದ್ಧವನ್ನು ಸ್ವಾಗತಿಸಿದನು. ಫ್ರಾಂಕೋ-ಪ್ರಷ್ಯನ್ ಯುದ್ಧವು ಯಾರೂ ಇದಿರು ನೋಡದ ರೀತಿಯಲ್ಲಿ ಯೂರೋಪಿನ ಮೇಲೆ ಬಿರುಗಾಳಿ ಮಳೆಯಂತೆ ಆರಂಭವಾಯಿತು. ಸ್ಪೆಯಿನ ಚಕ್ರಾಧಿಪತ್ಯವು ಖಾಲಿಯಾಗಿಯೇ ಉಳಿದಿತ್ತು. ಈ ವಿಷಯವು ಪ್ಯಾರಿಸ್‌ಗೆ ತಲುಪಿತು ಹಾಗೂ ಪ್ರಷ್ಯಾದ ರಾಜನ ಸಂಬಂಧಿಕನಾದ ಹೋಹೆನ್‌ಜೋಲೆರನ್ ಲಿಯೋಪೋಲ್ಡ್‌ನು ಸ್ಪೆಯಿನಿನ ರಾಜಮನೆತನವನ್ನು ಧರಿಸಿದನು. ಆದರೆ ಇವನ ಉಮೇದುವಾರಿಕೆಗೆ ಬಿಸ್ಮಾರ್ಕನ ಬೆಂಬಲವಿದ್ದಿತು.

ಪ್ರಷ್ಯಾದ ರಾಜನು ಆತನ ಹೋಹೆನ್‌ಜೊಲೆರನ್‌ನ ಉಮೇದುವಾರಿಕೆಯು ಪುನಃ ಮುಂದುವರಿಯದಿರುವ ಭರವಸೆ ನೀಡಬೇಕೆಂದು ಫ್ರಾನ್ಸ್‌ನ ಮಂತ್ರಿಮಂಡಲವು ಒಂದು ಹೊಸ ಬೇಡಿಕೆಯನ್ನಿಟ್ಟಿತು. ಇಲ್ಲಿ ಬಿಸ್ಮಾರ್ಕ್‌ಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿತು ಮತ್ತು ಅವನು ಅದನ್ನು ಸಂತೋಷವಾಗಿ ಮತ್ತು ನಿರ್ದಯವಾಗಿ ಉಪಯೋಗಿಸಿಕೊಂಡು, ಫ್ರೆಂಚರು ಯುದ್ಧವನ್ನು ಪ್ರಕಟಿಸುವಂತೆ ಪ್ರೇರೇಪಿಸಿದನು. ಇಷ್ಟೇ ಸಾಲದೆಂಬಂತೆ ಎರಡೂ ದೇಶಗಳ ಪತ್ರಿಕೆಗಳು ಸುಳ್ಳು, ನಿಂದಾತ್ಮಕ ಹಾಗೂ ರೊಚ್ಚಿಗೆಬ್ಬಿಸುವಂತಹ ಸುದ್ದಿಗಳನ್ನೇ ಅಚ್ಚು ಮಾಡಿದವು.

ಫ್ರಾನ್ಸ್‌ನ ಚರಿತ್ರೆಯಲ್ಲಿಯೇ ಈ ಯುದ್ಧವು ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಿತು. ಪ್ರಷ್ಯಾದ ದಾಳಿಗೆ ಬವೆರಿಯಾ, ಸೇಡವ್ ಹಾಗೂ ವ್ರಟ್ಟಂಬರ್ಗ್‌ಗಳು ಸೇರಿಕೊಂಡವು. ಫ್ರಾನ್ಸ್‌ನ ಸೈನ್ಯವು ತೀರಾ ಕೆಳದರ್ಜೆಯಲ್ಲಿ ಅಣಿಗೊಂಡಿತ್ತು. ಸಂಖ್ಯಾ ಬಲದಲ್ಲಾಗಲೀ, ಸೇನಾಧಿಪತಿಗಳ ತಾಕತ್ತಿನಲ್ಲಾಗಲೀ, ಪ್ರಷ್ಯಾದ ಸೈನ್ಯಕ್ಕಿಂತಲೂ ಕೆಳಮಟ್ಟದಲ್ಲಿತ್ತು. ಜರ್ಮನ್ನರು ರೈನ್ ನದಿಯನ್ನು ದಾಟಿ ಆಲ್ಸೇಸ್ ಮತ್ತು ಲೊರೈನ್‌ಗಳಿಗೆ ಮುತ್ತಿಗೆ ಹಾಕಿ ಭೀಕರ ಕಾಳಗದ ನಂತರ ಜಯಶೀಲರಾದರು.

ಸೆಡಾನಿನಲ್ಲಿ ಮತ್ತೊಂದು ಫ್ರೆಂಚ್ ಸೈನ್ಯವನ್ನು ಸೋಲಿಸಲಾಯಿತು ಹಾಗೂ ಅವರನ್ನು ಜರ್ಮನ್ನರು ಸೆರೆಹಿಡಿದರು. ನೆಪೋಲಿಯನ್ ಸಹ ಒಬ್ಬ ಯುದ್ಧ ಕೈದಿಯಾದ. ಫ್ರೆಂಚರು ಸೋತರು. ಈ ಅನಾಹುತದ ತೀವ್ರತೆ ಜಗತ್ತಿನಲ್ಲೆಲ್ಲಾ ಮಾರ್ದನಿಗೊಂಡಿತು. ಫ್ರೆಂಚರಿಗೀಗ ಸೈನ್ಯವಿರಲಿಲ್ಲ. ಒಂದು ಭಾಗವಾಗಲೇ ಸೆಡಾನ್‌ನಲ್ಲಿ ಶರಣಾಗತವಾಗಿತ್ತು. ಮತ್ತೊಂದು ಭಾಗವನ್ನು ಮೆಟ್ಜ್‌ನಲ್ಲಿ ಬಂಧಿಸಿದ್ದರು. ಜನರ ಗುಂಪು ಮುತ್ತಿಗೆ ಹಾಕಿ ‘‘ಚಕ್ರಾಧಿಪತ್ಯಕ್ಕೆ ಧಿಕ್ಕಾರ, ಗಣತಂತ್ರ ಚಿರಾಯುವಾಗಲಿ’’ ಎಂಬ ಘೋಷಣೆಗಳನ್ನು ಹಾಕಿದರು.

ಪ್ರಾಂಕೋ-ಜರ್ಮನ್ ಯುದ್ಧವು ಆರು ತಿಂಗಳ ಕಾಲ ನಡೆಯಿತು. ಇದು ಚಕ್ರಾಧಿಪತ್ಯ ಹಾಗೂ ಗಣತಂತ್ರವೆಂಬ ಎರಡು ಅವಧಿಗಳಲ್ಲಾಗಿದೆ. ಚಕ್ರಾಧಿಪತ್ಯವು ಕೊನೆಗೊಂಡು ಚಕ್ರಾಧಿಪತಿಯು ಜರ್ಮನಿಯಲ್ಲಿ ಕೈದಿಯಾದನು. ಜರ್ಮನ್ನರು ಪ್ಯಾರಿಸ್‌ಗೆ ನುಗ್ಗಿದರು. ಕಾದಾಟ ನಾಲ್ಕು ತಿಂಗಳವರೆಗೆ ನಡೆಯಿತು. ಪ್ರಷ್ಯನ್ ಸೇನೆಗೆ ಸಂಪೂರ್ಣವಾಗಿ ಶರಣಾದ ಫ್ರಾನ್ಸ್ ೧೮೭೧ರ ಮೇ ೧೦ರಂದು ಫ್ರಾಂಕ್‌ಫರ್ಟ್ ಒಪ್ಪಂದಕ್ಕೆ ಸಹಿ ಹಾಕಿತು. ಬಿಸ್ಮಾರ್ಕನು ಶಾಂತಿ ಒಪ್ಪಂದದ ಕರಾರುಗಳನ್ನು ರೂಪಿಸಿದನು. ಈ ಕರಾರುಗಳು ಫ್ರಾನ್ಸ್‌ಗೆ ಅವಮಾನಕಾರಿಯಾದ, ನೋವಿನ ರೀತಿಯದ್ದಾಗಿದ್ದವು. ಒಪ್ಪಂದದ ಪ್ರಕಾರ ಫ್ರಾನ್ಸ್ ತನ್ನ ದೇಶಗಳಾದ ಆಲ್ಸೇಸ್, ಲೊರೈನ್ ಹಾಗೂ ಮೆಟ್ಜ್ ಕೋಟೆಯನ್ನು ಪ್ರಷ್ಯಾಕ್ಕೆ ಬಿಟ್ಟುಕೊಡಬೇಕಾಯಿತು. ಅದೇ ರೀತಿ ಯುದ್ಧದ ಎಲ್ಲಾ ಖರ್ಚು ವೆಚ್ಚಗಳನ್ನೂ ನೋಡಿಕೊಳ್ಳಬೇಕಾಯಿತು.

ಫ್ರಾಂಕೋ-ಪ್ರಷ್ಯಾನ್ ಯುದ್ಧ ಇಟಲಿಯ ಏಕೀಕರಣವನ್ನು ಪೂರ್ಣಗೊಳಿಸಿತು. ವಿಕ್ಟರ್ ಇಮ್ಯಾನ್ಯೂಯಲ್ ರೋಮ್‌ಗೆ ಪ್ರವೇಶಿಸಿ ಪೋಪನನ್ನು ಸಿಂಹಾಸನದಿಂದ ಕೆಳಗಿಳಿಸಿದನು. ಫ್ರಾನ್ಸ್ ಈ ಸಂದರ್ಭದಲ್ಲಿ ಅಸಹಾಯಕವಾಗಿತ್ತು. ರೋಮ್ ಇಟಲಿ ಯೊಂದಿಗೆ ಐಕ್ಯವಾಗಿ ರಾಜಧಾನಿಯಾಯಿತು.

ಈ ಯುದ್ಧದ ಪ್ರಮುಖ ಪರಿಣಾಮವೆಂದರೆ ಜರ್ಮನಿಯ ಏಕೀಕರಣ ಪೂರ್ಣ ಗೊಂಡಿರುವುದು ಮತ್ತು ಹೊಸ ಜರ್ಮನ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿರುವುದು. ಉತ್ತರ ಜರ್ಮನಿಯ ಒಕ್ಕೂಟದಿಂದ ಹೊರಗುಳಿದಿದ್ದ ದಕ್ಷಿಣ ಜರ್ಮನಿಯ ಉಳಿದೆಲ್ಲಾ ರಾಜ್ಯಗಳು ಈ ಯುದ್ಧದ ನಂತರ ಉತ್ತರ ಜರ್ಮನ್ ಒಕ್ಕೂಟಕ್ಕೆ ಸೇರಿಕೊಂಡವು. ಇದರಿಂದಾಗಿ ಜರ್ಮನಿಯ ಏಕೀಕರಣ ಪೂರ್ಣಗೊಂಡಿತು. ೧೮೭೧ರ ಜನವರಿ ೧೮ರಂದು ವರ್ಸೇಲ್ಸ್‌ನ ಅರಮನೆಯಲ್ಲಿ ಒಂದನೇ ವಿಲಿಯಂ ಜರ್ಮನಿಯ ಚಕ್ರವರ್ತಿಯಾಗಿ ಅಧಿಕಾರವಹಿಸಿಕೊಂಡನು.

೧೮೬೬ರ ಯುದ್ಧ ಆಸ್ಟ್ರಿಯಾವನ್ನು ಜರ್ಮನಿ ಮತ್ತು ಇಟಲಿಯಿಂದ ಹೊರನಡೆಯುವಂತೆ ಮಾಡಿತು. ೧೮೭೦ರ ಯುದ್ಧ ಜರ್ಮನಿ ಮತ್ತು ಇಟಲಿಯ ಏಕೀಕರಣವನ್ನು ಪೂರ್ಣಗೊಳಿಸಿತು. ಬರ್ಲಿನ್ ಜರ್ಮನಿಯ ರಾಜಧಾನಿಯಾದರೆ, ರೋಮ್ ಇಟಲಿಯ ರಾಜಧಾನಿಯಾಯಿತು.

 

ಪರಾಮರ್ಶನ ಗ್ರಂಥಗಳು

೧. ಆಲ್ಬರ್ಟ್ ಸಬೂಲ್, ೧೯೮೯. ಅಂಡರ್‌ಸ್ಟಾಂಡಿಂಗ್ ದಿ ಫ್ರೆಂಚ್ ರೆವಲ್ಯೂಷನ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್.

೨. ಡೇವಿಡ್ ಥಾಮ್ಸ್‌ನ್, ೧೯೬೬, ಯುರೋಪ್ ಸಿನ್ಸ್ ನೆಪೋಲಿಯನ್, ಪೆಲಿಕಾನ್.

೩. ಮ್ಯಾಕ್‌ಸ್ಮಿತ್ ಡಿ., ೧೯೬೮. ದಿ ಮೇಕಿಂಗ್ ಆಫ್ ಇಟಲಿ, ಲಂಡನ್.

೪. ಹಾಲ್‌ಬಾರ್ನ್ ಹೆಚ್., ೧೯೬೯, ಎ ಹಿಸ್ಟರಿ ಆಫ್ ಮಾಡರ್ನ್ ಜರ್ಮನಿ.