. ಧರ್ಮಸತ್ತೆ

ಎರಡು ಮಹತ್ವದ ಸಾಮಾಜಿಕ ಸಂಸ್ಥೆಗಳಾಗಿ ‘ಧರ್ಮ’ ಹಾಗೂ ‘ರಾಜಕೀಯ’ಗಳ ನಡುವಿನ ಸಂಬಂಧಗಳು ಸಾವಿರಾರು ವರ್ಷಗಳಿಂದಲೂ ಚಿಂತಕರ ಗಮನ ಸೆಳೆದಿದೆ. ‘ಧರ್ಮಸತ್ತೆ’ ಆಳ್ವಿಕೆಯ ಮಾದರಿಯು ಈ ಎರಡೂ ಸಂಸ್ಥೆಗಳು ಒಗ್ಗೂಡಿದ ಆಡಳಿತ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ.

‘ಧರ್ಮಸತ್ತೆ’ಯು ರಾಜಕೀಯ ಹಾಗೂ ಧಾರ್ಮಿಕ ಅಭಿರುಚಿ-ಅಭಿವ್ಯಕ್ತಿಗಳ ಮಾದರಿ. ಇಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಸೈನಿಕ ಕ್ರಿಯೆಗಳ ನಡುವಿನ ಅಂತರವು ಆಡಳಿತಾತ್ಮಕವಾಗಿ ಮಾಯವಾಗುತ್ತದೆ. ರಾಜನೀತಿಯ ದೈವೀಶಕ್ತಿಯ ಒಂದು ಅಭಿವ್ಯಕ್ತಿ ಮತ್ತು ಯುದ್ಧವು ಧಾರ್ಮಿಕ ಯುದ್ಧ ಎನ್ನುವ ವಿಚಾರಗಳು ಒಪ್ಪಿಕೊಳ್ಳಲ್ಪಡುತ್ತವೆ. ಧರ್ಮ ಮತ್ತು ರಾಜಕೀಯ ಶಕ್ತಿಗಳೆರಡೂ ಒಟ್ಟಾಗಿ ಒಬ್ಬ ಧಾರ್ಮಿಕ ಮುಖಂಡನಲ್ಲಿ ಅಥವಾ ಒಂದು ಧಾರ್ಮಿಕ ಗುಂಪಿನಲ್ಲಿ ಮೈಗೂಡಿ, ಈ ವ್ಯಕ್ತಿ ಅಥವಾ ಗುಂಪು ಆಡಳಿತದ ಚುಕ್ಕಾಣಿ ಹಿಡಿಯುವುದನ್ನು ‘ಧರ್ಮಸತ್ತೆ’ ಎಂದು ಕರೆಯಲಾಗುತ್ತದೆ. ‘ರಾಜತ್ವ’ದಲ್ಲಿ ರಾಜನಾದ ಒಬ್ಬ ವ್ಯಕ್ತಿಗೆ ಧಾರ್ಮಿಕ ಶಕ್ತಿಯು ಆರೋಪಿಸಲ್ಪಟ್ಟರೆ, ಧರ್ಮಸತ್ತೆಯಲ್ಲಿ ಒಬ್ಬ ಧಾರ್ಮಿಕ ಮುಂದಾಳು ರಾಜನಾಗಿ ಮಾರ್ಪಡುತ್ತಾನೆ. ಐತಿಹಾಸಿಕವಾಗಿ ಆಡಳಿತಗಾರನು ‘ಧರ್ಮರಾಜ’ (‘ಸೀಜರ್’)ನಾಗುವ ಉದಾಹರಣೆಗಳು ಜಗತ್ತಿನೆಲ್ಲೆಡೆ ದೊರೆಯುತ್ತವೆ. ಭಾರತದ ಚರಿತ್ರೆಯಲ್ಲಿ ಕೌಟಿಲ್ಯನಂತಹ ಬ್ರಾಹ್ಮಣನು ಆಡಳಿತದ ಮುಂದಾಳತ್ವ ವಹಿಸಿ ‘ನಂದ’ರ ವಿರುದ್ಧ ಧರ್ಮಯುದ್ಧ ಸಾರಿದರೆ, ಮಯೂರ ಶರ್ಮನು ‘ಮಯೂರವರ್ಮ’ನಾದ ಕಥೆ ಎಲ್ಲರೂ ತಿಳಿದದ್ದೇ ಆಗಿದೆ. ಇರಾನ್ ದೇಶದ ‘ಮೌಲ್ವಿ’ ಆಡಳಿತದ ಹಿನ್ನೆಲೆ ಯಾರಿಗೆ ಗೊತ್ತಿಲ್ಲ? ಯುರೋಪಿನ ಚರಿತ್ರೆಯಲ್ಲೂ ಇಂಥ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ರೋಮ್ ಸಾಮ್ರಾಜ್ಯದ ಅವಧಿಯಲ್ಲಿ (೩೧೩ ರಿಂದ ೩೯೫) ಮತ್ತು ಬೈಜಾಟಿನ್ ಸಾಮ್ರಾಜ್ಯದಲ್ಲಿ (೩೩೦-೧೪೫೩) ಇಂಥ ಧರ್ಮಸತ್ತೆಯ ಆಡಳಿತವನ್ನು ಗಮನಿಸುತ್ತೇವೆ. ಮುಸಲ್ಮಾನ್ ಧರ್ಮದಲ್ಲಿ ಇಂಥ ಆಡಳಿತವು ಬಹು ಸಾಮಾನ್ಯವಾದುದು. ಈ ಧರ್ಮದ ಮೂಲ ಪ್ರವಾದಿ ಮೊಹಮ್ಮದನು (೫೭೦-೬೩೨) ರಾಜಕೀಯ ಹಾಗೂ ಧಾರ್ಮಿಕ ಶಕ್ತಿಗಳೆರಡನ್ನೂ ಒಳಗೊಂಡ ಆಡಳಿತಗಾರನೆಂದು ಪ್ರಸಿದ್ಧನಾಗಿದ್ದನು. ಇಂದಿನ ಇರಾನ್ ದೇಶದ ಧರ್ಮಸತ್ತೆಯು ಮೊಹಮ್ಮದ ಪೈಗಂಬರನಿಂದ ಕೊಡಲ್ಪಟ್ಟ ಆಡಳಿತ ಕಲ್ಪನೆಯ ಒಂದು ಒಳ್ಳೆಯ ಉದಾಹರಣೆ ಎನಿಸಿದೆ.

ಧರ್ಮಸತ್ತೆ ಮಾದರಿಯ ಆಡಳಿತವು ಸಾಮಾನ್ಯವಾಗಿ ಒಂದೇ ಧರ್ಮೀಯರಿರುವ ಸಮಾಜದಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಅನೇಕ ಧರ್ಮಗಳು ಬಳಕೆಯಲ್ಲಿದ್ದರೂ ಯಾವುದೋ ಒಂದು ಧಾರ್ಮಿಕ ತತ್ವಾದರ್ಶವು ಬಹುಸಂಖ್ಯಾತ ಸದಸ್ಯರಿಂದ ಒಪ್ಪಿಕೊಳ್ಳಲ್ಪಟ್ಟರೆ, ಅಲ್ಲಿ ಧರ್ಮಸತ್ತೆ ಮಾದರಿಯ ಆಡಳಿತವು ಸಾಧ್ಯ. ಆಧುನಿಕ ರಾಜಕೀಯ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮನಿರಪೇಕ್ಷತೆ ಮುಂತಾದವು ಧರ್ಮಸತ್ತೆಯ ಆಡಳಿತ ಮಾದರಿಗೆ ಸಮಸ್ಯೆಯನ್ನುಂಟು ಮಾಡುತ್ತವೆ. ವಿವಿಧ ಧಾರ್ಮಿಕ ನಂಬಿಕೆಗಳನ್ನು ಹೊಂದಿರುವ ಇಂದಿನ ಜಗತ್ತಿನಲ್ಲಿ ಜಾಗತಿಕ ಅಂತರ್ ಸಂಬಂಧಗಳು ಬಹುಮುಖ್ಯವಾಗಿರುವಾಗ ಧರ್ಮಸತ್ತೆ ಒಂದು ಯೋಗ್ಯವಾದ ಆಡಳಿತ ಮಾದರಿಯಾಗಿ ಕಾರ್ಯ ನಿರ್ವಹಿಸಲು ಶಕ್ತವಾಗಲಾರದು.

. ಪ್ರಾಚೀನ ಗಣರಾಜ್ಯ

ಪುರಾತನ ಗಣರಾಜ್ಯ ಆಡಳಿತ ಮಾದರಿಗೆ ಇಂದು ಐತಿಹಾಸಿಕ ಮಾದರಿಯೆಂದು ಮಾತ್ರವೇ ಗುರುತಿಸುವಿಕೆ ಇದೆ. ಹಾಗಿದ್ದರೂ ಗಣರಾಜ್ಯದ ಕಲ್ಪನೆ ಆಧುನಿಕ ರಾಜಕೀಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವುದರಿಂದ ಇಂದಿನ ಪ್ರಜಾಪ್ರಭುತ್ವ ಆಡಳಿತ ಪದ್ಧತಿಗೆ ಹಿನ್ನೆಲೆಯಾಗಿ ಪುರಾತನ ಗಣರಾಜ್ಯ ವ್ಯವಸ್ಥೆಯನ್ನು ನೋಡುವುದು ಸೂಕ್ತ ವೆನಿಸುತ್ತದೆ.

‘ಗಣರಾಜ್ಯ’ವೆಂದರೆ ಒಂದು ಜನಸಮೂಹದಿಂದ ಪ್ರತಿನಿಧಿಗಳು ಚುನಾಯಿತರಾದ ಜನರಿಗೆ ತಾತ್ವಿಕವಾಗಿ ಜವಾಬ್ದಾರರಾಗಿರುವ ಪ್ರಾತಿನಿಧಿಕ ಆಡಳಿತ ವ್ಯವಸ್ಥೆಯೆನ್ನಬಹುದು. ಇಂದಿನ ರಾಜಕೀಯ ಪ್ರಪಂಚದಲ್ಲಿ ಗಣರಾಜ್ಯ ಕಲ್ಪನೆಯು ಬಹುಮಹತ್ವ ಪಡೆದು ಬಳಕೆಯಲ್ಲಿದೆ. ಚಾರಿತ್ರಿಕವಾಗಿ ಈ ಆಡಳಿತ ವ್ಯವಸ್ಥೆಯ ಮೂಲವನ್ನು ರೋಮನ್ ಸಾಮ್ರಾಜ್ಯದಲ್ಲಿ ನೋಡಬಹುದು. ಪ್ರಾಚೀನ ರೋಮನ್ ಗಣರಾಜ್ಯವು ಇಂದಿನ ಗಣರಾಜ್ಯಕ್ಕಿಂತ ಭಿನ್ನವಾಗಿದ್ದು, ಮೂಲತಃ ಒಂದು ಶ್ರೀಮಂತ ಕುಲೀನಸತ್ತೆಯಾಗಿತ್ತು. ಇದು ಉತ್ತಮ ಕುಲವರ್ಗದ(ಪೇಟ್ರಿಶನ್ ಕ್ಲಾಸ್) ನಿಯಂತ್ರಣಕ್ಕೆ ಒಳಪಟ್ಟಿತ್ತು. ಪ್ರಾಚೀನ ಗ್ರೀಸ್‌ನ ಗಣರಾಜ್ಯದಲ್ಲಿ ಎಲ್ಲ ಪ್ರಜೆಗಳಿಗೂ ಆಡಳಿತಾಧಿಕಾರವು ತಾತ್ವಿಕವಾಗಿ ದತ್ತ ವಾಗಿತ್ತು. ಆದರೆ ರೂಢಿಯಲ್ಲಿ ಗ್ರೀಸ್‌ನ ಪ್ರಜಾಪ್ರಭುತ್ವದಲ್ಲಿ ನೇರವಾದ ಆಡಳಿತದ ಅಧಿಕಾರವಿದ್ದದ್ದು ಆಯ್ದ ಕೆಲವೇ ಜನವರ್ಗಕ್ಕೆ.

ಪ್ರಾಚೀನ ರೋಮ್ ಸರ್ಕಾರವನ್ನು ಚರಿತ್ರೆಕಾರರು ಪ್ರಪ್ರಥಮ ಗಣರಾಜ್ಯವೆಂದು ಕರೆದಿದ್ದಾರೆ. ಇಟ್ರಸ್ಕನ್ ದೊರೆಗಳನ್ನೂ ಟಾರ್ಕ್ವಿನ್‌ರನ್ನೂ ಹೊರಗೋಡಿಸಿದ ನಂತರ ಹಾಗೂ ಆಗಸ್ಟಸ್ ಸಾಮ್ರಾಟನ ಚಕ್ರಾಧಿಪತ್ಯವು ಸ್ಥಾಪನೆಯಾಗುವ ಮೊದಲು ಇದ್ದ ಆಡಳಿತ ವ್ಯವಸ್ಥೆಯೇ ಈ ಗಣರಾಜ್ಯವಾಗಿತ್ತು. ಇದರ ಎರಡು ಮುಖ್ಯ ಲಕ್ಷಣಗಳೆಂದರೆ ೧. ರಾಜತ್ವವಿಲ್ಲದಿರುವುದು, ಹಾಗೂ ೨. ಸರ್ಕಾರವು ಸಾಮೂಹಿಕ ಹಿತರಕ್ಷಣೆಗೆ ಇರುವುದು ಎಂದು ಚರಿತ್ರೆಯು ತಿಳಿಸುತ್ತದೆ. ಕೆಲವು ಇತಿಹಾಸಕಾರರು ಪ್ರಾಚೀನ ಗ್ರೀಸ್ ದೇಶದ ನಗರ-ರಾಜ್ಯವನ್ನೂ ಗಣರಾಜ್ಯವೆಂದು ಕರೆದಿದ್ದಾರೆ. ಅವರ ಅಭಿಮತದಂತೆ ಗ್ರೀಕ್ ಮಾದರಿಯ ನಗರ-ರಾಜ್ಯದಲ್ಲಿ ಗಣರಾಜ್ಯದ ಮೂಲತತ್ವಗಳಾದ ಸಮಾನಹಿತ ಮತ್ತು ಅಧಿಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಇವೆರಡೂ ಅಡಕವಾಗಿವೆ.

ಪ್ರಾಚೀನ ಭಾರತದಲ್ಲಿಯೂ ಸಹ ಗಣರಾಜ್ಯ ಪದ್ಧತಿಯು ರಾಜತ್ವ ಹಾಗೂ ಅಲ್ಪಸಂಖ್ಯಾಧಿಪತ್ಯಗಳೊಂದಿಗೆ ಜಾರಿಯಲ್ಲಿತ್ತೆಂದು ಸಂಶೋಧಕರಾದ ಜಯಸ್ವಾಲ್, ಘೋಶಾಲ್, ಅಳ್ಟೇಕರ್ ಮುಂತಾದವರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚೀನ ಭಾರತದಲ್ಲಿ ‘ಗಣ’ ಎಂದು ಶಬ್ದಕ್ಕೆ ಖಚಿತವಾದ ರಾಜಕೀಯ ಮತ್ತು ಕಾನೂನು ಸಂಬಂಧಿ ಅರ್ಥವಿತ್ತು. ಪ್ರಾಚೀನ ಭಾರತದಲ್ಲಿ ಕಂಡುಬರುವ ಆಡಳಿತ ವ್ಯವಸ್ಥೆಗಳಾದ ಮಾಲವಗಣ, ಯೂಹೂದೇಯಗಣ ಮುಂತಾದವು ಸುವ್ಯವಸ್ಥಿತ ಆಡಳಿತ ಪದ್ಧತಿಗಳೆಂದು ದಾಖಲಿ ಸಲ್ಪಟ್ಟಿವೆ.

ಮಧ್ಯಯುಗದಲ್ಲಿ ಅಲ್ಲಲ್ಲಿ ಕೆಲವು ಗಣರಾಜ್ಯಗಳು ತಲೆ ಎತ್ತಿದ್ದನ್ನು ಕಾಣಬಹುದು. ಇಟಲಿಯ ನಗರ-ರಾಜ್ಯಗಳಾದ ವೆನಿಸ್ ಮತ್ತು ಪ್ಲಾರೆನ್ಸ್‌ಗಳಲ್ಲಿ ಗಣರಾಜ್ಯ ಸರ್ಕಾರಗಳು ಹೆಚ್ಚು ಪ್ರಬಲ ಹಾಗೂ ಸತ್ವಶಾಲಿ ಆಡಳಿತ ವ್ಯವಸ್ಥೆಯ ರೂಪಗಳೆನಿಸಿದವು. ಇವುಗಳಲ್ಲಿ ರಾಜರಹಿತ ಅಧಿಕಾರ ರಚನೆಯೇ ಮುಖ್ಯ ಅಂಶವಾಗಿ ಹೊರಹೊಮ್ಮಿದೆ. ಈ ಎರಡೂ ನಗರಗಳಲ್ಲಿ ಅಧಿಕಾರವು ಯಾವುದೇ ಒಬ್ಬ ವ್ಯಕ್ತಿಯ ಕೈಯಲ್ಲಿರದೆ ಹಲವು ಶ್ರೀಮಂತರಲ್ಲಿ ಅಡಕವಾಗಿತ್ತು. ಆದರೆ ಈ ಶ್ರೀಮಂತರು ಕೆಲವು ಮಟ್ಟಿಗೆ ತಮ್ಮ ಪ್ರಜಾವರ್ಗಗಳ ಹಿತರಕ್ಷಣೆಯ ನೇರ ಜವಾಬ್ದಾರಿ ವಹಿಸಿದ್ದರು. ನಂತರ ಇಂಗ್ಲೆಂಡಿನಲ್ಲಿ ಉಂಟಾದ ಕ್ರಾಮ್‌ವೆಲ್ ಬಂಡಾಯದ ಫಲವಾಗಿ ಆಡಳಿತಾರೂಢ ಅರಸೊತ್ತಿಗೆಯು ವಿರೋಧವನ್ನು ಎದುರಿಸಿತು. ಅದರ ಪರಿಣಮವಾಗಿ ಗಣರಾಜ್ಯ ತತ್ವಗಳು ಬೆಳಕಿಗೆ ಬಂದವು. ಈ ತತ್ವಗಳು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆಗೆ ಬುನಾದಿ ಹಾಕಿದವು.

. ಪ್ರಜಾಪ್ರಭುತ್ವ

‘ಪ್ರಜಾಪ್ರಭುತ್ವ’ ಮಾದರಿಯ ಆಳ್ವಿಕೆಯ ವ್ಯವಸ್ಥೆಗೆ ಅತ್ಯಂತ ರೋಚಕ ಇತಿಹಾಸ ಹಾಗೂ ಅತ್ಯಂತ ವರ್ಣಮಯ ವರ್ತಮಾನಗಳಿವೆ. ‘ಪ್ರಜಾಪ್ರಭುತ್ವ’ವೆಂಬ ಆಡಳಿತ ಮಾದರಿಯು ಪಶ್ಚಿಮದ ಸಾಂಸ್ಕೃತಿಕ-ರಾಜಕೀಯ ಸಂದರ್ಭದಲ್ಲಿ ಹುಟ್ಟುಕೊಂಡಿದ್ದು. ಈ ಶಬ್ದದ ಆಂಗ್ಲ ಮೂಲವಾದ ‘ಡೆಮಾಕ್ರಸಿ’ಎಂಬ ಪದದ ಶಾಬ್ದಿಕ ಅರ್ಥವೆಂದರೆ ‘ಜನರ ಆಳ್ವಿಕೆ’. ಇದರ ಆದರ್ಶರೂಪವೆಂದರೆ ಅಬ್ರಾಹಂ ಲಿಂಕನ್ ಹೇಳಿದಂತೆ ‘‘ಜನರೇ ಜನರಿಗಾಗಿ ಜನರಿಂದ ರಚಿಸಿಕೊಳ್ಳುವ ಆಡಳಿತ ವ್ಯವಸ್ಥೆ.’’

ಆದರೆ ಚರಿತ್ರೆಯನ್ನು ಅವಲೋಕಿಸಿದರೆ ಇಂಥ ಆಡಳಿತ ವ್ಯವಸ್ಥೆ ಬಹುಶಃ ಯಾವುದೇ ಕಾಲದಲ್ಲಿಯೂ ನಿಜವಾಗಿ ಇದ್ದಿರಲಿಕ್ಕಿಲ್ಲ. ಗ್ರೀಕರ ‘ನಗರ-ರಾಜ್ಯ’ಕಲ್ಪನೆ ಹಾಗೂ ಹೊಸ ಇಂಗ್ಲೆಂಡ್‌ನ ಪ್ರಾರಂಭಿಕ ವರ್ಷಗಳ ನಗರಾಡಳಿತಗಳು ‘ಪ್ರಜಾಪ್ರಭುತ್ವ’ ಪದ್ಧತಿಯ ಆದರ್ಶ ಮಾದರಿಯನ್ನು ಹತ್ತಿರದಿಂದ ಹೋಲುತ್ತಿದ್ದವೆನ್ನ ಬಹುದು. ಅಥೆನ್ಸ್ ನಗರದ ನೇರ ಪ್ರಜಾಪ್ರಭುತ್ವವನ್ನು ಇಂಥ ಆದರ್ಶ ಪ್ರಜಾಪ್ರಭುತ್ವ ಮಾದರಿಯೆಂದು ಬಣ್ಣಿಸಲಾಗಿದೆ. ಹಾಗಿದ್ದರೂ ಸಹ ಈ ಎಲ್ಲಾ ಮಾದರಿಗಳಲ್ಲಿಯೂ ಕೆಲವು ವರ್ಗದ ಜನರಿಗೆ ಆಡಳಿತ ದಲ್ಲಿ ಭಾಗವಹಿಸಲು ಹಾಗೂ ಪ್ರಾತಿನಿಧ್ಯ ಪಡೆಯಲು ಅರ್ಹತೆಯಿರಲಿಲ್ಲ. ಉದಾಹರಣೆಗೆ : ಗ್ರೀಸ್ ದೇಶದ ಪ್ರಜಾಪ್ರಭುತ್ವದ ಮಹಿಳೆಯರು ಹಾಗೂ ಗುಲಾಮರಿಗೆ ಭಾಗವಹಿಸಲು ಅವಕಾಶವಿರಲಿಲ್ಲ; ಹೊಸ ಇಂಗ್ಲೆಂಡಿನ ಪ್ರಜಾಪ್ರಭುತ್ವ ಮಾದರಿಯಲ್ಲಿ ಮಹಿಳೆಯರನ್ನು ಆಡಳಿತದ ಭಾಗವಹಿಸುವಿಕೆಯಿಂದ ದೂರವಿಡಲಾಗಿತ್ತು. ಆದ್ದರಿಂದ ಹಿಂದಿನ ಪ್ರಜಾಪ್ರಭುತ್ವ ಆಳ್ವಿಕೆಯ ಮಾದರಿಗಳೆಲ್ಲವೂ ತಮ್ಮ ನೈಜ ಸ್ವರೂಪದಲ್ಲಿ ಅಲ್ಪಸಂಖ್ಯಾತರ ಆಡಳಿತ ವಾಗಿಯೇ ಬದಲಾಗಿದ್ದವೆೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ಔದ್ಯೋಗಿಕ ಕ್ರಾಂತಿಗಿಂತ ಮೊದಲು ಒಂದು ಕಲ್ಪನೆಯಾಗಿಯೂ ಕೂಡ ಪ್ರಜಾಪ್ರಭುತ್ವದ ಕ್ವಚಿತ್ತಾಗಿಯಷ್ಟೇ ಬಳಕೆಯಲ್ಲಿತ್ತು. ಆದರೆ ಹದಿನೆಂಟನೆಯ ಶತಮಾನದಲ್ಲಿ ನಡೆದ ಹೊಸ ಸಂಶೋಧನೆಗಳು, ಹೊಸ ಅವಿಷ್ಕಾರಗಳು ಹಾಗೂ ಹೊಸ ಭೂಭಾಗಗಳ ಶೋಧನೆಗಳು ವ್ಯಾಪಾರೀ ಹಾಗೂ ಮಧ್ಯಮ ವರ್ಗಗಳನ್ನು ಗಣನೀಯವಾಗಿ ಹೆಚ್ಚಿಸಿದ್ದಷ್ಟೇ ಅಲ್ಲದೆ ಹದಿನಾರನೆಯ ಶತಮಾನದಲ್ಲಿ ಪಶ್ಚಿಮದಲ್ಲಿ ನಡೆದ ಕ್ರೈಸ್ತಧರ್ಮದ ಸುಧಾರಣಾ ಚಳವಳಿಯಿಂದಾಗಿ, ಸರ್ವಾಧಿಕಾರಿ, ಪಟ್ಟಭದ್ರ, ಜಿಗುಟು ಸ್ವಭಾವವ ಧಾರ್ಮಿಕ ಧುರೀಣತ್ವವನ್ನು ಧಾರ್ಮಿಕ ರಂಗದಲ್ಲಿ ಸಾಮಾನ್ಯರು ನೇರವಾಗಿ ಎದುರಿಸಲು ಸಾಧ್ಯ ವಾಯಿತು. ತಂತ್ರಜ್ಞಾನದ ಮುನ್ನಡೆ ವಿಶೇಷವಾಗಿ ಯಂತ್ರಗಳ ಬಹುದೊಡ್ಡ ಪ್ರಮಾಣದ ಬಳಕೆಯಿಂದಾಗಿ ವ್ಯಾಪಾರೀ ವರ್ಗದ ಅಧಿಕ ಸಂಖ್ಯೆಯ ಬೆಳವಣಿಗೆಯೊಂದಿಗೆ ವಲಸೆಗಳು ಹಾಗೂ ಮಾರುಕಟ್ಟೆಗಳ ನಡುವೆ ಅಂತರ್ಸಬಂಧಗಳು ಅನಿವಾರ್ಯವಾದವು. ಜೊತೆಗೆ ಇವೆಲ್ಲವುಗಳನ್ನೂ ಸಮುದಾಯದ ಮಟ್ಟದಲ್ಲಿ ನಿಯಂತ್ರಿಸಿ ಮಾರ್ಗದರ್ಶನ ನೀಡುವ ಹಾಗೂ ಹತೋಟಿಯಲ್ಲಿಡುವ ಆಡಳಿತ ವ್ಯವಸ್ಥೆಯೂ ಸಹ ಅಗತ್ಯವಾಯಿತು. ಪ್ರಜಾಪ್ರಭುತ್ವದ ಸಾಂಸ್ಥಿಕ ಪರಿಕಲ್ಪನೆ ಇಂಥ ಸಂದರ್ಭದಲ್ಲಿ ರೂಪುಗೊಂಡು ಜಗತ್ತಿನೆಲ್ಲೆಡೆ ಪ್ರಸಾರ ಪಡೆಯಿತು. ಇಂದು ನಮ್ಮ ರಚನೆ, ಕಾರ್ಯ, ಪರಿಣಾಮಗಳ ದೃಷ್ಟಿಯಿಂದ ತುಂಬ ಭಿನ್ನವಾಗಿದ್ದರೂ, ಕೂಡ ಎಲ್ಲ ರಾಷ್ಟ್ರಗಳೂ ತಮ್ಮನ್ನು ಒಂದು ‘ಪ್ರಜಾಪ್ರಭುತ್ವ’ ಎಂದು ಕರೆದುಕೊಳ್ಳಲು ಉತ್ಸುಕವಾಗಿರುತ್ತವೆ. ಎಂದರೆ ‘ಪ್ರಜಾಸತ್ತೆ’ ಅಥವಾ ಪ್ರಜಾಪ್ರಭುತ್ವ ಮಾದರಿಯ ರಾಜಕೀಯ ಆಡಳಿತ ವ್ಯತ್ಯಸ್ಥೆಯ ಒಂದು ಆದರ್ಶ ಪರಿಕಲ್ಪನೆಯಾಗಿ ಪರಿಗಣಿಸಲ್ಪಟ್ಟು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ.

ಆಧುನಿಕ ಪ್ರಜಾಪ್ರಭುತ್ವವು ‘ಪ್ರಾತಿನಿಧಿಕ ತತ್ವ’ವನ್ನು ಆಧರಿಸಿ ನಿಂತಿದೆ. ಇಂಥ ಒಂದು ವ್ಯವಸ್ಥೆಯಲ್ಲಿ ಜನರು ತಮ್ಮ ಅಧಿಕಾರವನ್ನು ತಮ್ಮನ್ನು ಪ್ರತಿನಿಧಿಸುವ ‘ಪ್ರಜಾ ಪ್ರತಿನಿಧಿ’ಗಳಿಗೆ ನಿಗದಿತ ಸಮಯಾವಧಿಗೆಂದು ಹಸ್ತಾಂತರಗೊಳಿಸಿರುತ್ತಾರೆ. ಪ್ರಜಾ ಪ್ರಾತಿನಿಧ್ಯವನ್ನು ಹೊಂದಿರುವ ಭಾರತ, ಅಮೆರಿಕಾ ಸಂಯುಕ್ತ ಸಂಸ್ಥಾನ, ಕೆನಡಾ, ಫ್ರಾನ್ಸ್‌ದಂತಹ ರಾಷ್ಟ್ರಗಳಲ್ಲಿ ನಾವು ಕೆಳಗಿನ ಕೆಲವು ಮಹತ್ವದ ಅಂಶಗಳನ್ನು ಗುರುತಿಸಲು ಸಾಧ್ಯವಾಗುವುದು.

. ವ್ಯಕ್ತಿನಿಷ್ಠತೆ

ಪ್ರಜಾಪ್ರಭುತ್ವ ವ್ಯವಸ್ಥೆಯ ಆಳ್ವಿಕೆಯಲ್ಲಿ ವ್ಯಕ್ತಿ (ಪ್ರಜೆ)ಯು ಕೇಂದ್ರಬಿಂದುವಾಗಿ ಮಾರ್ಪಡುತ್ತಾನೆ. ವರ್ಗ, ಬುಡಕಟ್ಟು, ಭಾಷೆ, ಸಂಸ್ಕೃತಿ, ಜಾತಿಗಳಂಥ ಅಂಶಗಳ ಭೇದವಿಲ್ಲದೆ ಪ್ರಜೆಗಳೆಲ್ಲರೂ ಸಮಾನರು ಎಂಬ ಅಂಶವನ್ನು ಈ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ.

. ಸಂವಿಧಾನಾತ್ಮಕ ಸರಕಾರ

ಪ್ರಜಾಪ್ರಭುತ್ವ ಮಾದರಿಯ ಸರಕಾರಗಳೆಲ್ಲವೂ ಕಾಯ್ದೆ-ಕಾನೂನುಗಳ ಆಧಾರದ ಮೇಲೆ ನಡೆಯುತ್ತವೆ. ಇಂಥ ಕಾನೂನುಗಳು ಲಿಖಿತ ರೂಪದಲ್ಲಿ ಇರಬಹುದು. ಯಾವುದೇ ರೂಪದಲ್ಲಿದ್ದರೂ ಇವು ವ್ಯಕ್ತಿ, ಸರಕಾರ ಹಾಗೂ ಸಮಾಜಗಳಿಗಿಂತ ಉನ್ನತ ಸ್ಥಾನದಲ್ಲಿದ್ದು, ದೇಶದ ಅಧಿಕಾರಕ್ಕೆ ಸಂಬಂಧಿಸಿ ಎಲ್ಲ ಚಟುವಟಿಕೆ-ವಿಚಾರಗಳನ್ನೂ ನಿಯಂತ್ರಿಸುತ್ತವೆ. ಭಾರತೀಯ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತಾವು ಲಿಖಿತ ಸಂವಿಧಾನವನ್ನು ಹೊಂದಿದ್ದು, ಇದು ನಮ್ಮ ರಾಷ್ಟ್ರದ ಮೂಲಭೂತ ಕಾನೂನು ಹಾಗೂ ಉಳಿದೆಲ್ಲಾ ಕಾಯ್ದೆಗಳ ತಳಪಾಯ ಎಂದು ಗಣಿಸಲ್ಪಡುತ್ತದೆ.

. ಆಡಳಿತ ಪದ್ಧತಿಗೆ ಜನರ ಒಪ್ಪಿಗೆ ಅಗತ್ಯ

ಪ್ರಜಾಪ್ರಭುತ್ವದ ಬಹುಮಹತ್ವದ ಅಂಶವೆಂದರೆ ಚುನಾವಣೆ. ನಿಗದಿತ ಕಾಲದಲ್ಲಿ ಚುನಾವಣಾ ಪ್ರಕ್ರಿಯೆಯ ಮೂಲಕ ಜನರು ತಮ್ಮ ಅಭಿಪ್ರಾಯಗಳ ತಳಹದಿಯ ಮೇಲೆ ಪ್ರತಿನಿಧಿಗಳನ್ನು ಅರಿಸುತ್ತಾರೆ. ಇಂಥ ಪ್ರಜಾಪ್ರತಿನಿಧಿಗಳು ಸಾಮಾನ್ಯ ಮತದಾರಿಗೆ ಬಾಧ್ಯಸ್ಥರಾಗಿರಬೇಕಾಗುತ್ತದೆ. ಚುನಾವಣೆಗಳು ಅಧಿಕಾರದ ಹಂಚುವಿಕೆ ಹಾಗೂ ಉಪಯೋಗದ ಅವಧಿಯನ್ನು ಸಹ ನಿರ್ಣಯಿಸುತ್ತವೆ.

. ಪ್ರಜಾನಿಷ್ಠ ವಿರೋಧಿ ಪಕ್ಷ

ಪ್ರಜಾಸತ್ತೆಯಂಥ ಆಡಳಿತ ಪದ್ಧತಿಯಲ್ಲಿ ಕನಿಷ್ಠ ಎರಡಾದರೂ ರಾಜಕೀಯ ಪಕ್ಷಗಳು ಇರುವುದು ಅಗತ್ಯ. ಆಡಳಿತರೂಢ ಪಕ್ಷದ ಹೊರತಾಗಿರುವ ಪಕ್ಷಗಳು ಜನನಿಷ್ಟ ವಿರೋಧಿ ಪಕ್ಷಗಳಾಗಿ ಕೆಲಸ ಮಾಡುತ್ತವೆ. ಆದ್ದರಿಂದ ಅಧಿಕಾರವನ್ನು ಪಡೆದಿರುವ ಪಕ್ಷಕ್ಕಿಂತ ಭಿನ್ನ ಧೋರಣೆಯುಳ್ಳ ಪ್ರಜೆಗಳಿಗೂ ವಿರೋಧಿಪಕ್ಷದ ಮೂಲಕ ಆಡಳಿತದಲ್ಲಿ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಮಾನ್ಯವಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ಪಕ್ಷಗಳು ವಿರೋಧಿ ಪಕ್ಷಗಳನ್ನು ನಿಯಂತ್ರಿಸುವಲ್ಲಿ ಸೈನ್ಯ, ಪೋಲೀಸ್ ಅಥವಾ ಉಳಿದ ಬಲ ಪ್ರಯೋಗವನ್ನು ಅವಲಂಬಿಸಿರುವುದಿಲ್ಲ.

ಮಾನವ ಸಂಸ್ಕೃತಿಯ ಇತ್ತೀಚಿಗಿನ ಇತಿಹಾಸವನ್ನು ಅಧ್ಯಯನ ಮಾಡಿದಾಗ ಪ್ರಜಾಪ್ರಭುತ್ವ ಮಾದರಿಯ ಸರಕಾರವು ಯಶಸ್ವಿಯಾಗಲು ಕೆಲವು ಪೂರಕ ಅಂಶಗಳನ್ನು ಕಾಣಬಹುದಾಗಿದೆ. ಈ ಎಲ್ಲಾ ಅಂಶಗಳೂ ಪ್ರಜಾಸತ್ತೆಯ ಉಳಿಯುವಿಕೆಯಲ್ಲಿ ಇರಲೇ ಬೇಕೆಂದೇನೂ ಅಲ್ಲವಾದರೂ ಇವು ಈ ಮಾದರಿಯ ಜನಸತ್ತೆಯ ಮುಂದು ವರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎನ್ನುವುದಂತೂ ಖಚಿತ. ಆದ್ದರಿಂದ ಈ ಅಂಶಗಳನ್ನು ನಾವು ಪ್ರಜಾಸತ್ತೆಯ ಪೂರ್ವಭಾವೀ ಅವಶ್ಯಕತೆಗಳು ಎಂದು ಕರೆಯಬಹುದು. ಅವು ಯಾವುದೆಂದರೆ :

. ಉತ್ತಮ ಮಟ್ಟದ ಆರ್ಥಿಕಾಭಿವೃದ್ದಿ: ಪ್ರಸಿದ್ಧ ಸಮಾಜಶಾಸ್ತ್ರಜ್ಞ ಲಿಪಸೆಟ್ (೧೯೫೯) ಅವರು ಮಾಡಿದ ನಲವತ್ತೆಂಟು ರಾಷ್ಟ್ರಗಳ ಅಧ್ಯಯನದ ನಂತರ ಪ್ರಜಾಪ್ರಭುತ್ವ ಸಂಸ್ಥೆಗಳು ಹಾಗೂ ಉತ್ತಮ ಅರ್ಥಿಕಾಭಿವೃದ್ದಿಯ ಮಟ್ಟಗಳ ನಡುವೆ ಧನಾತ್ಮಕ ಸಂಬಂಧವಿರುವುದು ದೃಢಪಟ್ಟಿದೆ. ಈ ಸಂಬಂಧಗಳ ಕಾರಣಗಳು ಸಂಕೀರ್ಣವಾಗಿದ್ದರೂ ಎರಡೂ ಅಂಶಗಳು ಈ ನಿಟ್ಟಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಮೊದಲನೆಯದಾಗಿ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುವ ಸಮಾಜವು ಸಹಜವಾಗಿಯೇ ನಗರೀಕರಣ ಗೊಂಡಿರುವ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ರಾಷ್ಟ್ರವಾಗಿರುತ್ತದೆ. ಇಂಥ ಸಮಾಜದಲ್ಲಿ ನಾಗರಿಕರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬೇಕಾಗಿರುವ ಮೂಲಭೂತ ಅಂಶಗಳು ಹುಟ್ಟಿಕೊಳ್ಳುತ್ತವೆ. ಎರಡನೆಯದಾಗಿ, ಆರ್ಥಿಕ ಅಭಿವೃದ್ದಿಯು ಸಾಮಾಜಿಕ ಹಾಗೂ ರಾಜಕೀಯ ಸ್ಥಿರತೆಗಳನ್ನು ತರುವಲ್ಲಿ ಸಹಯಕಾರಿ. ಇಂಥ ಸ್ಥಿರತೆ ಪ್ರಜಾಪ್ರಭುತ್ವ ಮಾದರಿಯ ಆಳ್ವಿಕೆಗೆ ಬಹು ಅಗತ್ಯವಾದುದು.

. ಸರಕಾರದ ಶಕ್ತಿಯ ಮೇಲೆ ಹಿಡಿತ: ಸರಕಾರದ ಶಕ್ತಿ-ಅಧಿಕಾರಗಳ ಮೇಲೆ ಸಾಮಾಜಿಕ ಸಂಸ್ಥೆಗಳ ನಿಯಂತ್ರಣವಿದ್ದಾಗಲಷ್ಟೇ ಪ್ರಜಾಸತ್ತೆ ಯಶಸ್ವಿಯಾಗಲು ಸಾಧ್ಯ. ಇಂಥ ನಿಯಂತ್ರಣಗಳು ಭಿನ್ನ ಮಾದರಿಯವಾಗಿರಬಹುದು. ಉದಾಹರಣೆಗೆ, ರಾಜಕೀಯ ಪಕ್ಷಗಳ ಮೇಲೆ ಕಾನೂನಿನ ಅಂಕುಶ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಮೂಹ ಮಾಧ್ಯಮಗಳು, ಭ್ರಷ್ಟ ಅಧಿಕಾರಿಗಳನ್ನು ಶಿಕ್ಷಿಸುವಲ್ಲಿ ಸಂವಿಧಾನಾತ್ಮಕ ರಕ್ಷಣೆಗಳು, ನಿರ್ಭೀತ ನ್ಯಾಯಾಂಗ ಇತ್ಯಾದಿ.

. ಸಮಾಜದಲ್ಲಿ ಪ್ರಮುಖ ಸೀಳುಗಳಿಲ್ಲದಿರುವುದು: ಸಾಮಾಜಿಕ ಸ್ಥಿರ ವಿನ್ಯಾಸವು ಜಗತ್ತಿನ ಎಲ್ಲ ಸಮಾಜಗಳಲ್ಲಿಯೂ ಕಂಡುಬರುವ ಒಂದು ಜಾಗತಿಕ ಸತ್ಯ. ಆದರೂ ಯಾವ ಸಮಾಜದಲ್ಲಿ ಅಡಿಯಿಂದ ಮುಡಿಯವರೆಗೆ ಲಂಬಾಂತರವಾಗಿ ಇಬ್ಭಾಗವಾಗಿರುವ ಗುಂಪುಗಳಿರುವವೋ ಅಂಥ ಸಮಾಜದಲ್ಲಿ ಪ್ರಜಾಪ್ರಭುತ್ವವು ಪೂರ್ಣಯಶಸ್ವಿ ಯಾಗುವುದು ಅಸಂಭವನೀಯ. ಸ್ಪಷ್ಟವಾಗಿ ಇಬ್ಬಾಗಿಸಲ್ಪಟ್ಟ ಸಮಾಜದಲ್ಲಿ ಪರಸ್ಪರರನ್ನು ವಿರೋಧಿಸುವ ಗುಂಪುಗಳು ತಮ್ಮಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಒಪ್ಪುವುದಿಲ್ಲ. ವಿರೋಧಿ ಗುಂಪುಗಳು ಯಾವ ಹಂತದಲ್ಲಿಯೂ ಪರಸ್ಪರರ ವಿಚಾರಗಳನ್ನು ಗೌರವಿಸಿ ಭಿನ್ನತೆಯನ್ನು ಒಪ್ಪಿಕೊಳ್ಳದಿದ್ದರೆ ಪ್ರಜಾಸತ್ತಾತ್ಮಕತೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಿಲ್ಲ.

. ನಿರಾಕರಣೆಯ ಸಹಿಷ್ಣುತೆ : ವಿಮರ್ಶೆ ಹಾಗೂ ಟೀಕೆಗಳನ್ನು ಒಪ್ಪಿಕೊಳ್ಳಲಾರದ ಪಕ್ಷ-ಪಂಗಡಗಳಿದ್ದಾಗ ಪ್ರಜಾಪ್ರಭುತ್ವವು ಮುಂದುವರಿಯಲು ಸಾಧ್ಯವಿಲ್ಲ. ಆಡಳಿತ ಪಕ್ಷಗಳು ಹಾಗೂ ವಿರೋಧ ಪಕ್ಷಗಳು ಎರಡೂ ನಿರಾಕರಣೆಯನ್ನು ಒಪ್ಪಿ ಗೌರವಿಸಿದಾಗಲೇ ವಿವಿಧ ಅಭಿಪ್ರಾಯಗಳನ್ನು ಹೊಂದಿರುವ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಹಾಗೂ ಅದನ್ನು ನಿಯಂತ್ರಿಸುವ ಜನಶಾಹಿ ರಾಜಕೀಯ ವ್ಯವಸ್ಥೆ ಸಾಧ್ಯವಾಗುವುದು. ಅಲ್ಲದೆ ಕೇವಲ ‘ಬಹುಮತ’ವಿರುವ ಕಾರಣದಿಂದ ಉಳಿದ ‘ಅಲ್ಪಮತ’ಗಳಿಸಿರುವ ವಿರೋಧಿ ಪಕ್ಷಗಳ ಅಭಿಪ್ರಾಯವನ್ನು ಕಡೆಗಣಿಸುವುದರಿಂದ ಸಮಾಜದ ಹಲವು ಗುಂಪುಗಳ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡದಂತಾಗುವುದರಿಂದ ಪ್ರಜಾಸ್ತತಾತ್ಮಕ ರಾಜಕೀಯವು ವಿಫಲವಾಗುವುದು.

. ಮಾಹಿತಿಯ ಲಭ್ಯತೆ: ಯಶಸ್ವೀ ಪ್ರಜಾಪ್ರಭುತ್ವದ ಅಡಿಗಲ್ಲು ನಾಗರಿಕರಿಗೆ ಮಾಹಿತಿಯ ದೊರಕುವಿಕೆಯೆಂದು ಹೇಳಬಹುದು. ಅಗತ್ಯದ ಮಾಹಿತಿಯು ದೊರಕಿದಾಗಲಷ್ಟೇ ಪ್ರಜೆಗಳು ವಿವಿಧ ಪರ್ಯಾಯ ದಾರಿಗಳಲ್ಲಿ ತಮಗೆ ಸೂಕ್ತವೆನಿಸಿದ್ದನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ ವಾಕ್‌ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯಗಳು ಪ್ರಜಾ ಪ್ರಭುತ್ವಕ್ಕೆ ಪೂರ್ವಭಾವೀ ಅವಶ್ಯಕತೆಗಳು.

. ಅಧಿಕಾರದ ವಿಕೇಂದ್ರೀಕರಣ: ಸಮಾಜದ ಅಧಿಕಾರಗಳು ಬೇರೆ ಬೇರೆ ಗುಂಪುಗಳಲ್ಲಿ ಹಂಚಲ್ಪಟ್ಟಿದ್ದು ಯಾವುದೇ ಒಂದು ಗುಂಪು ಸರ್ವಾಧಿಕಾರವನ್ನು ಹೊಂದಿಲ್ಲದಿದ್ದಲ್ಲಿ, ಅಂತಹ ಸಮಾಜದಲ್ಲಿ ಪ್ರಜಾಪ್ರಭುತ್ವವು ಯಶಸ್ವಿಯಾಗುವ ಸಂಭವ ಹೆಚ್ಚು. ಆದ್ದರಿಂದಲೇ ಭಾರತೀಯ ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗಗಳೆಂಬ ಬೇರೆ ಬೇರೆ ಶಾಖೆಗಳು ಆದ ಅಧಿಕಾರ ಕಕ್ಷೆಗಳನ್ನು ಹೊಂದಿವೆ.

ಈ ಎಲ್ಲವೂ ಪ್ರಜಾಪ್ರಭುತ್ವಕ್ಕೆ ಪೂರ್ವಭಾವೀ ಅಂಶಗಳೇ ಹೊರತೂ ಈ ಎಲ್ಲ ಅಂಶಗಳಿರದೆ ಪ್ರಜಾಪ್ರಭುತ್ವವು ಸಾಧ್ಯವೇ ಇಲ್ಲ ಎನ್ನಲಾಗದು. ಮತ್ತೊಂದು ವಿಷಯ ವನ್ನೂ ಕೂಡ ಸೂಕ್ಷ್ಮವಾಗಿ ಪ್ರಸ್ತಾಪಿಸುವುದು ಅಗತ್ಯ. ಅನೇಕರು ಅಂದುಕೊಂಡಂತೆ ಪ್ರಜಾಪ್ರಭುತ್ವವು ಯಾವಾಗಲೂ ಬಹುಮತ ಪಕ್ಷದ ಸರಕಾರವನ್ನೇ ರಚಿಸುತ್ತದೆ ಎಂಬ ಅಂಶ ಯಾವಾಗಲೂ ಸತ್ಯವಲ್ಲ. ಬಹುಪಕ್ಷಗಳುಳ್ಳ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜೆಗಳ ಮತಗಳು ಅನೇಕ ಪಕ್ಷಗಳ ನಡುವೆ ಹಂಚಿ-ಹೋಗುವುದರಿಂದ ಅತಿಹೆಚ್ಚು ಮತ ಪಡೆದ ಪಕ್ಷ ಹಾಗೂ ಅಭ್ಯರ್ಥಿ ಆಯ್ಕೆಯಾಗುವುದು ಸಾಮಾನ್ಯ. ಇಂಥ ಎಲ್ಲ ಸಂದರ್ಭಗಳಲ್ಲಿಯೂ ಅತ್ಯಧಿಕ ಮತಗಳಿಸಿದ ಅಭ್ಯರ್ಥಿ ಹಾಗೂ ಪಕ್ಷಗಳು ಬಹುಮತ ಗಳಿಸದೆ ಇರುವ ಸಂದರ್ಭಗಳು ಇರುತ್ತವೆ. ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ಇದನ್ನು ಅನೇಕ ಬಾರಿ ಕಾಣುತ್ತೇವೆ. ಆದ್ದರಿಂದಲೇ ಅಮೆರಿಕಾ ದೇಶದಂಥ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ನಾವು ಎರಡೇ ಪಕ್ಷಗಳ ಸ್ಪರ್ಧೆಯನ್ನು ಕಾಣಬಹುದು.

ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಕೆಲವು ನ್ಯೂನ್ಯತೆಗಳಿದ್ದರೂ ಸಹ ಉಳಿದ ರಾಜಕೀಯ ಆಡಳಿತ ಪದ್ಧತಿಗಳಿಗೆ ಹೋಲಿಸಿದಾಗ ಇದು ಜನಮನವನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುವ ಶಕ್ತಿ ಹೊಂದಿದೆ. ಆಧುನಿಕ ರಾಷ್ಟ್ರಗಳ ಚರಿತ್ರೆಯಲ್ಲಿ ಈ ವ್ಯವಸ್ಥೆಯ ವ್ಯಾಖ್ಯೆಯು ದೇಶದಿಂದ ದೇಶಕ್ಕೆ, ಸಮಾಜದಿಂದ-ಸಮಾಜಕ್ಕೆ ವ್ಯತ್ಯಾಸವಾಗಿದ್ದರೂ ತನ್ನ ಒಡಲಿನಲ್ಲಿ ವೈವಿಧ್ಯತೆಯನ್ನು ಪ್ರತಿನಿಧಿಸುವ ಶಕ್ತಿ ಪಡೆದಿರುವುದರಿಂದ ಔದ್ಯಮಿಕ ಆಧುನಿಕ ಸಮಾಜದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯು ಎಲ್ಲ ಸ್ಥರಗಳಲ್ಲಿಯೂ ಒಂದು ಸಕಾರಾತ್ಮಕ ರಾಜಕೀಯ ಮೌಲ್ಯವಾಗಿ ಪರಿಗಣಿಸಲ್ಪಟ್ಟಿದೆ.

ಉಪಸಂಹಾರ

ಮಾನವ ಸಂಸ್ಕೃತಿಯ ಬೆಳವಣಿಗೆಯುದ್ದಕ್ಕೂ ಅಧಿಕಾರದ ಹಂಚಿಕೆ, ನಿರ್ವಹಣೆ ಹಾಗೂ ಬಳಕೆಗಳು ತಮ್ಮ ಸಂಕೀರ್ಣತೆಯಿಂದಾಗಿ ವೈವಿಧ್ಯಮಯ ಚರ್ಚೆ ಹಾಗೂ ಪ್ರಯೋಗಗಳಿಗೆ ಒಳಗಾಗಿವೆ. ಅಧಿಕಾರ ಹಾಗೂ ಅವಕಾಶಗಳ ಆಡಳಿತವು ಇತಿಹಾಸದ ಎಲ್ಲ ಘಟ್ಟಗಳಲ್ಲಿಯೂ ಅತಿ ಮಹತ್ವದ್ದೆನಿಸಿದೆ. ಈ ಲೇಖನದಲ್ಲಿ ವಿವರಿಸಲ್ಪಟ್ಟ ಎಲ್ಲ ರಾಜಕೀಯ ಆಳ್ವಿಕೆಯ ಮಾದರಿಗಳೂ ಇಂದಿನ ಆಧುನಿಕ ರಾಜಕಾರಣದ ಸ್ವರೂಪಕ್ಕೆ ತಮ್ಮ ಕಾಣಿಕೆ ನೀಡಿವೆ. ಜನರನ್ನು, ಒಂದು ಭೌಗೋಳಿಕ ಪ್ರದೇಶದ ಚೌಕಟ್ಟಿನೊಳಗೆ, ವ್ಯಾಖ್ಯಾನಿಸಲ್ಪಟ್ಟ ಆಡಳಿತದ ನಿಯಮಗಳಿಗೆ ಅನುಸಾರವಾಗಿ, ಆಳ್ವಿಕೆಗೆ ಒಳಪಡಿಸುವ ವಿವಿಧ ಮಾದರಿಗಳಾಗಿ ಈ ಎಲ್ಲ ರಾಜಕೀಯ ಪ್ರಬೇಧಗಳೂ ಬಹಳ ಮಹತ್ವದವು. ಈ ಎಲ್ಲ ಮಾದರಿಗಳಲ್ಲಿಯೂ ಗುಣ-ದೋಷಗಳಿವೆ, ಎಲ್ಲವಕ್ಕೂ ಪ್ರತ್ಯೇಕವಾದ ಇತಿಮಿತಿ ಗಳಿವೆ. ಇಂದು ನಮ್ಮ ಎದುರಿಗಿರುವ ಪ್ರಜಾಪ್ರಾತಿನಿಧಿಕ ಆಡಳಿತ ವ್ಯವಸ್ಥೆಯು ಈ ಎಲ್ಲ ಆಳ್ವಿಕೆಗಳಿಂದ ಸಾಕಷ್ಟು ಪ್ರಭಾವಿಸಲ್ಪಟ್ಟಿದ್ದು, ಇಂಥ ಆಡಳಿತ ಪದ್ಧತಿಗಳ ಅನೇಕ ಅಂಶಗಳನ್ನು ಪ್ರತಿಫಲಿಸುತ್ತವೆ.

ಇಂದು ನಮಗೆ ಈ ರಾಜಕೀಯ ಆಳ್ವಿಕೆಯ ವ್ಯವಸ್ಥೆಗಳಲ್ಲಿ ಅನೇಕ ದೋಷಗಳೂ, ದೌರ್ಬಲ್ಯಗಳೂ ಕಾಣಬಹುದು. ಆದರೆ ಈ ಎಲ್ಲ ವಿಷಯಗಳನ್ನು ಸಮಕಾಲೀನ ಪ್ರಜ್ಞೆಯಿಂದ ನೋಡಿ ವಿಶ್ಲೇಷಿಸುವುದು ಅತಿ ಅಗತ್ಯ. ಇವೆಲ್ಲ ಮಾನವ ಸಮಾಜವು ತನ್ನ ಅಭಿವೃದ್ದಿಯ ಹಾದಿಯಲ್ಲಿ ಸಾಮುದಾಯಿಕ ಐಕ್ಯಮತ್ಯವನ್ನು ಗಳಿಸಲು, ಉಳಿಸಲು ಮಾಡಿದ, ಮಾಡುತ್ತಿರುವ ರಾಜಕೀಯ ಪ್ರಯೋಗಗಳು.

 

ಪರಾಮರ್ಶನ ಗ್ರಂಥಗಳು

೧. ರೈಸ್, ಇ.ಎಫ್., ೧೯೭೦. ದಿ ಪೌಂಡೇಶನ್ಸ್ ಆಫ್ ಅರ‌್ಲಿ ಮಾಡರ್ನ್ ಯುರೋಪ್, ಲಂಡನ್.

೨. ಮೆಕ್‌ನಿಲ್ ಡಬ್ಲ್ಯು ಹೆಚ್., ೧೯೮೬. ಹಿಸ್ಟರಿ ಆಫ್ ವೆಸ್ಟರ್ನ್ ಸಿವಿಲೈಜೇಶನ್, ಚಿಕಾಗೋ.