ರೋಮನ್ನರ ನಾಗರಿಕ ಜೀವನವನ್ನು ಗ್ರೀಕರ ನಾಗರಿಕ ಜೀವನದ ಮುಂದುವರಿದ ಅಧ್ಯಾಯವೆನ್ನಬಹುದು. ಕಲಾ ವಿಭಾಗದಲ್ಲೂ ಗ್ರೀಕರ ಮಾದರಿಯೇ ರೋಮನ್ನರಿಗೆ ಆದರ್ಶವಾಗಿತ್ತು. ಕೊನೆಗೆ ರಾಜಕೀಯ ವ್ಯವಸ್ಥೆಯಲ್ಲೂ ಸಹ ರೋಮನ್ನರು ಗ್ರೀಕರನ್ನೇ ಅನುಸರಿಸಿ, ನಗರ ರಾಷ್ಟ್ರದಿಂದಲೇ ಆಡಳಿತ ಪ್ರಾರಂಭಿಸಿ ವಿಸ್ತಾರವಾದ ಸಾಮ್ರಾಜ್ಯವನ್ನು ಕಟ್ಟಿದರು. ರೋಮನ್ನರಲ್ಲಿ ಸ್ವಂತ ಕಲ್ಪನೆ ಯಾವ ಕ್ಷೇತ್ರದಲ್ಲೂ ಕಾಣಬರುತ್ತಿರಲಿಲ್ಲ. ಆದರೆ ಬೇರೆಯವರಿಂದ ಪಡೆದ ವಿಚಾರಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ವಿಚಾರದಲ್ಲಿ ರೋಮನ್ನರಿಗೆ ಸಮನಾದ ಬೇರೊಂದು ಸಮುದಾಯವಿಲ್ಲ. ರೋಮನ್ನರು ಜೀವನದ ಎಲ್ಲಾ ವಿಚಾರಗಳಲ್ಲಿಯೂ ತಮ್ಮ ಕೃತಿಗಳ ಉಪಯುಕ್ತತೆಯ ಕಡೆಗೆ ಗಮನ ಕೊಟ್ಟರು. ‘‘ರೋಮಿನ ನಿರ್ಮಾಣ ಒಂದು ದಿನದ ಕಾರ್ಯವಲ್ಲ’’ ಎಂಬ ನಾಣ್ನುಡಿ ಅವರು ತಾಳ್ಮೆಯಿಂದ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದುದನ್ನು ತಿಳಿಸುತ್ತದೆ. ಧಾರ್ಮಿಕ ಜೀವನದಲ್ಲಿ, ತತ್ವಶಾಸ್ತ್ರದಲ್ಲಿ, ಕಲೆಯಲ್ಲಿ, ಅವರು ರೂಢಿಯಲ್ಲಿಟ್ಟುಕೊಂಡಿದ್ದ ವಿಷಯ ಗಳೆಲ್ಲವೂ ಗ್ರೀಕರಿಂದ ಪಡೆದದ್ದೇ ಆಗಿತ್ತು. ಮುಂದೆ ರೋಮನ್ನರ ಗಮನ ವ್ಯಾಪಾರ ಜೀವನ, ಕಾನೂನು ನಿಬಂಧನೆಗಳು, ಸರ್ಕಾರ ವ್ಯವಸ್ಥೆ ಮತ್ತು ಯುದ್ಧ ಕಲೆಯ ಕಡೆಗೆ ತಿರುಗಿತು. ಈ ವಿಷಯದಲ್ಲಿ ಮಾತ್ರ ಅವರ ವ್ಯಕ್ತಿಗತ ಸಾಧನೆ ಕಂಡುಬರುತ್ತದೆ.

ರೋಂ ನಗರದ ಸ್ವರೂಪ ಮತ್ತು ವ್ಯಾಪ್ತಿ

ಯುರೋಪಿನ ದಕ್ಷಿಣ ಭಾಗದಲ್ಲಿ ಕಾಣುವ ಮೂರು ಮುಖ್ಯ ಪರ್ಯಾಯ ದ್ವೀಪಗಳಲ್ಲಿ ಇಟಲಿಯೂ ಒಂದು. ಇಟಲಿಯ ಮಧ್ಯಭಾಗವೇ ರೋಮನ್ನರ ಜನ್ಮ ಭೂಮಿಯಾಗಿತ್ತು. ರೋಮನ್ನರ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಗೆ ಬಂದ ಕಾಲದಲ್ಲಿ ಮೆಡಿಟರೇನಿಯನ್ ಸಮುದ್ರದ ತೀರವನ್ನೂ, ಆಫ್ರಿಕದ ಉತ್ತರ ಭಾಗವನ್ನೂ, ಈಶಾನ್ಯ ಪ್ರದೇಶವನ್ನೂ ಆಕ್ರಮಿಸಿತ್ತು. ಅಪೆನೈನ್ ಪರ್ವತ ದೇಶಕ್ಕೆ ಬೆನ್ನೆಲುಬಿನ ರೂಪದಲ್ಲಿ ಸಹಾಯಕವಾಯಿತು. ಆಲ್ಪ್ಸ್ ಪರ್ವತ ಅದನ್ನು ಉತ್ತರ ಯೂರೋಪಿನ ಮಧ್ಯಭಾಗದಿಂದ ಪ್ರತ್ಯೇಕಿಸುತ್ತದೆ. ಉತ್ತರ ಭಾಗದಲ್ಲಿ ಕಾಣುವ ಪೋ ನದಿಯ ಬಯಲು ಬಹಳ ಫಲವತ್ತಾಗಿದೆ. ದಕ್ಷಿಣದಲ್ಲಿ ಅತ್ಯಂತ ಅಪ್ರಯೋಜಕವಾದ ವಿಶಾಲ ಪ್ರದೇಶವಿದೆ. ಪಶ್ಚಿಮ ಭಾಗದಲ್ಲಿ ಉಪಯುಕ್ತ ರೇವುಗಳಿವೆ. ಟೈಬರ್ ನದಿಯ ಸುತ್ತಲಿನ ಪ್ರದೇಶವೇ ಹೆಚ್ಚು ಫಲವತ್ತಾಗಿ ಕಾಣುವ ಭಾಗ. ಪ್ರಪಂಚದ ಮಧ್ಯಭಾಗದಲ್ಲಿ ನೆಲೆಗೊಂಡ ರೋಮನ್ನರ ಚಕ್ರಾಧಿಪತ್ಯ ಅನೇಕ ನಾಗರಿಕತೆಗಳ ಮಿಲನಕ್ಕೆ ಯೋಗ್ಯ ಸ್ಥಳವಾಗಿತ್ತು. ಇದನ್ನು ಸಂಶೋಧನೆಯ ಮೂಲಕ, ನಾಗರಿಕ ಜೀವನ ಪ್ರಥಮ ಹಂತದಿಂದಲೂ ಆಗಿ ಹೋದುದಕ್ಕೆ ಗುರುತುಗಳನ್ನು ಕಂಡುಹಿಡಿಯಲಾಗಿದೆ. ಇಟಲಿಯಲ್ಲಿ ಹಳೆಯ ಶಿಲಾಯುಗದ ಮತ್ತು ಕಂಚು, ಕಬ್ಬಿಣ ಯುಗಗಳ ಅವಶೇಷಗಳೂ ದೊರೆತಿವೆ. ಕ್ರಿ.ಪೂ.೧೦೦೦ ಹೊತ್ತಿಗೆ ಟೈಬರ್ ನದಿಯ ಉತ್ತರ ಭಾಗದಲ್ಲಿ ಎಟ್ರಸ್ಕನ್ ಜನರು ನೆಲಸಿ ಎಟ್ರೂರಿಯಾ ಎಂಬ ಭಾಗದ ಸ್ಥಾಪನೆಗೆ ಕಾರಣರಾದರು. ಇವರು ಒಳ್ಳೆಯ ಶಿಲ್ಪಿಗಳೂ, ತಂತ್ರಜ್ಞರೂ ಆಗಿದ್ದರು. ತ್ರಾಮವನ್ನೂ, ಕಬ್ಬಿಣವನ್ನೂ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಹಡಗುಗಳನ್ನು ಕಟ್ಟಿ ವ್ಯಾಪಾರ ಮಾಡಲು ಪ್ರಾರಂಭಿಸಿದ್ದರು. ಇಟಲಿಯಲ್ಲಿದ್ದ ಜನರು ಗ್ರೀಕರೊಂದಿಗೆ ಸಾಕಷ್ಟು ಸಂಬಂಧವನ್ನು ಹೊಂದಿದ್ದರೆಂಬುದನ್ನು ಅವರಲ್ಲಿ ಕಾಣುವ ಹೋಲಿಕೆಯಿಂದಲೇ ತಿಳಿಯಬಹುದು. ಜನಾಂಗದ ವಿಷಯದಲ್ಲಿ ಹೇಳಬೇಕಾದರೆ ಎಟ್ರಾಸ್ಕನ್ನರ ಗುಂಪು ಯಾವ ಮೂಲಜನಾಂಗಕ್ಕೆ ಸೇರಿದ್ದೆಂದು ನಿರ್ಧಾರವಾಗಿ ಹೇಳಲು ಅವಕಾಶವಿರುವುದು ಕಂಡು ಬರುವುದಿಲ್ಲ. ಕ್ರಿ.ಪೂ. ೨೦೦೦ ವೇಳೆಗೆ ಕೆಲವು ಮಂದಿ ಗ್ರೀಕರು ಇಟಲಿಗೆ ಹೋಗಿ ಕಾಲೋನಿಗಳನ್ನು ಸ್ಥಾಪಿಸಿದ್ದುಂಟು. ಈ ಮಧ್ಯೆ ಎಟ್ರಾಸ್ಕನ್ , ಇಟ್ಯಾಲಿಯನ್ ಮತ್ತಿತರ ಗುಂಪುಗಳ ಆಕ್ರಮಣ ನಡೆದಿತ್ತು. ಕೊನೆಗೆ ಲ್ಯಾಟಿನ್ ಗುಂಪು ಬಲಶಾಲಿಯಾಗಿ ಆಕ್ರಮಣ ಮಾಡಿ ಜಯಶಾಲಿಗಳಾಗಿದ್ದರು. ಹೀಗೆ ಬೇರೆ ಬೇರೆ ಗುಂಪುಗಳ ಸಂಮಿಶ್ರಣದ ಫಲವಾಗಿ ರೋಮನ್ನರೆನ್ನುವ ಒಂದು ಗುಂಪು ಸಿದ್ಧವಾಯಿತು. ಫೀನೀಷಿಯನ್ ಗುಂಪಿಗೆ ಪ್ರತಿನಿಧಿಯ ರೂಪದಲ್ಲಿ ಸಿದ್ಧವಾದ ಕಾರ್ಥೇಜ್ ಪಟ್ಟಣ, ರೋಮನ್ನರ ಪ್ರತಿಸ್ಪರ್ಧಿಯ ರೂಪದಲ್ಲಿ ರಾಜಕೀಯ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಘರ್ಷಣೆಗೆ ಕಾರಣವಾಗಿ ಕೆಲವು ಕಾಲ ಉಳಿದಿತ್ತು. ಈ ಸಂಘರ್ಷಣೆಯನ್ನು ಎದುರಿಸಿ ನಿಂತ ಮೇಲೆ ಸಾಮ್ರಾಜ್ಯದ ವಿಸ್ತಾರವನ್ನು ಕೈಗೊಳ್ಳಲಾಯಿತು.

ರೋಮನ್ನರ ಆಡಳಿತ ಪದ್ಧತಿ

ರೋಂ ನಗರದ ಸ್ಥಾಪನೆಯ ಬಗ್ಗೆ ಇರುವ ದಂತಕಥೆಯು ರೋಮ್ಯುಲಸ್ ಮತ್ತು ರೀಮಸ್ಸ್ ಎಂಬಿಬ್ಬರು ಸಹೋದರರು ರಾಜ್ಯದ ಸ್ಥಾಪನೆಗೆ ಮತ್ತು ವಿಸ್ತರಣೆಗೆ ಪ್ರಯತ್ನ ಪಟ್ಟವರೆಂದು ತಿಳಿಸುತ್ತದೆ. ವಿಧವಿಧವಾಗಿ ಹಂಚಿಹೋಗಿದ್ದಂತಹ ಎಲ್ಲಾ ಗುಂಪುಗಳನ್ನು ಒಂದುಗೂಡಿಸಿ ಅಲ್ಲಿ ರಾಜನ ಅಧಿಕಾರವನ್ನು ಸ್ಥಾಪಿಸಿದ ಕೀರ್ತಿಗೆ ಇವರು ಭಾಗಿಗಳಾಗಿದ್ದಾರೆ. ಇವರಿಂದ ಪ್ರಾರಂಭವಾದ ಲ್ಯಾಟಿನ್ನರ ಪ್ರಮುಖ ನಗರವಾದ ‘‘ರೋಂ’’ ಮೊದಲು ನಗರ ರಾಷ್ಟ್ರವಾಗಿದ್ದಿತು. ಈ ನಗರ ರಾಷ್ಟ್ರದ ಅಧಿಪತಿ ರಾಜನಾಗಿದ್ದನು. ಎಟ್ರಸ್ಕನ್ ಗುಂಪಿನವರ ಪ್ರಭಾವ ಹೆಚ್ಚಾಗಿದ್ದ ಸಮಯದವರೆಗೆ ನಗರ ರಾಜ್ಯ ಪದ್ಧತಿ ನಡೆದುಬಂದಿತು. ರಾಜರು ಚುನಾವಣೆಯ ಮೂಲಕ ನೇಮಿತರಾಗಿ ಹಿರಿಯರ ಸಭೆಯ ಸಹಾಯದಿಂದ ಆಳುತ್ತಿದ್ದರು. ಸಾಮಾನ್ಯ ಸಭೆ ಇದ್ದರೂ ಸಹ ಅದರ ಬೆಲೆ ಬಹಳ ದಿವಸದವರೆಗೂ ಗಣನೆಗೆ ಬಂದಿರಲಿಲ್ಲ. ಈ ಸಭೆಯಲ್ಲಿ ಇರುತ್ತಿದ್ದ ಪ್ರತಿನಿಧಿಗಳು ರಾಜ್ಯದ ಸಾಮಾಜಿಕ ಗುಂಪುಗಳ ಪ್ರತಿನಿಧಿಗಳಾಗಿದ್ದು ಅವರ ಸಲಹೆ ಕೇಳುವ ಪದ್ಧತಿಯಿತ್ತು. ಆದರೆ ಯಾವುದೇ ರೀತಿಯ ಕಾನೂನನ್ನು ರೂಢಿಸುವ ಅಧಿಕಾರವನ್ನು ಪಡೆದಿರಲಿಲ್ಲ. ಅದಲ್ಲದೆ ‘‘ಕಮಿಷಿಯಾ ಕ್ಯೂರಿಯಾಟ’’ ಎಂಬ ಮತ್ತೊಂದು ಸಭೆಯಿದ್ದಿತು. ಶ್ರೀಮಂತರ ಗುಂಪು ರಾಜನ ಅಧಿಕಾರದಲ್ಲಿ ಹೆಚ್ಚು ಪಾಲುಗೊಳ್ಳಲು ಪ್ರಾರಂಭಿಸಿತು. ರಾಜನ ಆಡಳಿತವು, ಸ್ವಾತಂತ್ರ್ಯ ಪ್ರಿಯರಾದ ರೋಮನ್ನರಿಗೆ ಕೆಲ ದಿವಸಗಳಲ್ಲಿಯೇ ದೋಷಮಯ ಎಂದು ಕಂಡುಬಂದು ಗಣರಾಜ್ಯದ ತತ್ವಗಳನ್ನು ರೂಢಿಗೆ ತರುವ ಪ್ರಯತ್ನವನ್ನು ನಡೆಸಿದರು.

ರೋಮನ್ ಚಕ್ರಾಧಿಪತ್ಯವು ತನ್ನ ಜೀವಿತಕಾಲದಲ್ಲಿ ಹೆಚ್ಚಿನ ಪಾಲು ಗಣರಾಜ್ಯದ ವ್ಯವಸ್ಥೆಯಲ್ಲಿಯೇ ಕಳೆಯಿತು. ಈ ವ್ಯವಸ್ಥೆಯ ಪ್ರಕಾರವಾಗಿ ರೋಮನ್ ಚಕ್ರಾಧಿಪತ್ಯದ ಪ್ರಮುಖನಾಗಿದ್ದವನು ‘‘ಕಾನ್‌ಸೆಲ್’’ ಎಂಬ ಅಧಿಕಾರಿ. ಈ ಅಧಿಕಾರಿಯ ಸ್ಥಾನವು ಚುನಾವಣೆಯ ಮೂಲಕ ಭರ್ತಿ ಮಾಡಲ್ಪಡುತ್ತಿತ್ತು. ಇಬ್ಬರು ಕಾನ್‌ಸೆಲ್ ಅಧಿಕಾರಿ ಗಳಿರುತ್ತಿದ್ದರು. ಇಬ್ಬರು ಅಧಿಕಾರಿಗಳನ್ನೇ ನಿಯಮಿಸುತ್ತಿದ್ದ ಉದ್ದೇಶ ಬಹಳ ಉಪ ಯುಕ್ತವಾಗಿದ್ದಿತು. ಒಬ್ಬ ಅಧಿಕಾರಿಯ ಅಭಿಪ್ರಾಯಗಳನ್ನು, ಮತ್ತೊಬ್ಬಾತ ವಿಮರ್ಶಿ ಸುವುದಕ್ಕೂ ಖಂಡಿಸುವುದಕ್ಕೂ ಅವನ ಸುಧಾರಣೆಗಳನ್ನು ಅಡ್ಡಿಪಡಿಸುವುದಕ್ಕೂ ಅಧಿಕಾರವಿದ್ದಿತು. ಇದರಿಂದ ಆಡಳಿತದ ಮುಖ್ಯ ಗುರಿಯಾದ ಪ್ರಜಾಹಿತವು ರೂಢಿಗೆ ಬರಲು ಅವಕಾಶವಿತ್ತು. ಆದರೆ ಅಧಿಕಾರಿಗಳು ಶ್ರೀಮಂತ ವರ್ಗದವರಾಗಿರುತ್ತಿದ್ದುದರಿಂದಲೇ ತಮ್ಮ ಗುಂಪಿನ ಹಿತವೇ ಅವರಲ್ಲಿ ಕಾಣಬರುತ್ತಿತ್ತು. ಮತ್ತಾವುದಾದರೂ ಅತ್ಯಂತ ಜಟಿಲ ಸಮಸ್ಯೆ ತಲೆದೋರಿದಾಗ ‘‘ಸೆನೆಟ್ ’’ ಮಹಾಸಭೆಯ ಅನುಮತಿ ಅವಶ್ಯಕವಾಗಿರುತ್ತಿತ್ತು. ಹೀಗೆಯೇ ಆ ಸಭೆಯ ಬೆಲೆ ಹೆಚ್ಚಿತು. ಒಂದು ವೇಳೆ ಯುದ್ಧ ಸಂಭವಿಸಿದಲ್ಲಿ, ದೇಶದ ಪರಿಸ್ಥಿತಿ ವಿಪರೀತವಾಗಿ ತೊಂದರೆಗೆ ಸಿಲುಕಿದ ಸಂದರ್ಭದಲ್ಲಿ ಚುನಾವಣೆಯ ಮೂಲಕ ಕಾನ್‌ಸೆಲ್ ಅಧಿಕಾರಿಗಳನ್ನು ನಿಯಮಿಸುವ ಬದಲು ‘‘ಡಿಕ್ಟೇಟರ್’’ ಅಥವಾ ‘‘ಸರ್ವಾ ಧಿಕಾರಿ’’ ಎಂದು ಕರೆಯಲ್ಪಡುತ್ತಿದ್ದ ಅಧಿಕಾರಿಯನ್ನು ನೇಮಕ ಮಾಡುವ ಪದ್ಧತಿ ಯಿತ್ತು. ರಾಜ್ಯದಲ್ಲಿ ಕಾಣಬರುತ್ತಿದ್ದ ಅಧಿಕಾರಿಯನ್ನು ನೇಮಕ ಮಾಡುವ ಪದ್ಧತಿಯಿತ್ತು. ರಾಜ್ಯ ದಲ್ಲಿ ಕಾಣಬರುತ್ತಿದ್ದ ಸೆಟ್ರೀಷಿಯನ್ ಮತ್ತು ಪ್ಲೆಬಿಯನ್ ಎಂಬ ಎರಡು ಗುಂಪಿನ ಪ್ರಜಾವರ್ಗದ ಮಧ್ಯೆ ತೋರುತ್ತಿದ್ದ ಅಧಿಕಾರವು ಹೆಚ್ಚಾದಂತೆ ವೈಷಮ್ಯವೂ ಉಂಟಾಗಿ ಪ್ಲೆಬಿಯನ್ನರೆಂಬ ಸಾಮಾನ್ಯರ ಗುಂಪು, ಸಮಾನ ಹಕ್ಕು ಬಾಧ್ಯತೆಗಳಿಗೆ ಹೋರಾಟ ನಡೆಸಿ ತಮ್ಮ ಪರವಾಗಿ ‘ಟ್ರಿಬ್ಯೂನ್’ ಎಂದು ಕರೆಯಲ್ಪಡುತ್ತಿದ್ದ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಅವಕಾಶ ಪಡೆದುಕೊಂಡರು. ಈ ಅಧಿಕಾರಿಗಳು ಪ್ಲೆಬಿಯನ್ನರ ರಕ್ಷಣೆಗಾಗಿ ಸೆನೆಟ್ ಸಭೆಯಲ್ಲಿ ಹೋರಾಡಬೇಕಾಗಿತ್ತು. ಚಕ್ರಾಧಿಪತ್ಯವು ವಿಸ್ತಾರವಾದಂತೆ ಅಧಿಕಾರಿಗಳ ಸಂಖ್ಯೆ ಹೆಚ್ಚಿತು. ಹಣಕಾಸಿನ ವ್ಯವಹಾರವನ್ನು ನೋಡಿಕೊಳ್ಳಲು ‘ಕ್ವೆಸ್ಟಸ್’  ಎಂಬ ಅಧಿಕಾರಿಗಳೂ, ನ್ಯಾಯತೀರ್ಮಾನದ ವಿಚಾರದಲ್ಲಿ ‘‘ಪ್ರೀಟಾರ್ಸ್’’  ಎಂಬ ಅಧಿಕಾರಿಗಳೂ, ತೆರಿಗೆಯ ವಸೂಲಿಯ ಮೇಲ್ವಿಚಾರಣೆಗಾಗಿ ‘‘ಸೆನ್ ಸಾರ್ಸ್’’ ಎಂಬ ಅಧಿಕಾರಿಗಳೂ ನೇಮಕರಾಗತೊಡಗಿದರು. ಸಾಮಾನ್ಯ ಜನರು ಶ್ರಿಮಂತ ರಂತೆ ಆಡಳಿತದಲ್ಲಿ ಸಮಾನವಾದ ಹಕ್ಕುಗಳನ್ನು ಪಡೆದುಕೊಳ್ಳಲು ನಡೆದ ಪ್ರಯತ್ನ ಕಾನೂನು ಸಂಗ್ರಹಣೆಯ ಘಟನೆಯಿಂದ ಪ್ರಾರಂಭವಾದುದಾಗಿರುತ್ತಿತ್ತು. ಕ್ರಿ.ಪೂ.೪೫೦ ರಲ್ಲಿ ಕಾನೂನು ಕುಗ್ಗುವಂತಾಯಿತು. ಆರಂಭದಲ್ಲಿ ಹನ್ನೆರಡು ಕಾನೂನುಗಳನ್ನು ತಾಮ್ರಪತ್ರಗಳ ಮೇಲೆ ಬರೆದು ಸಂಗ್ರಹಿಸಿದರು. ‘‘ಟ್ವೆಲ್ವ್ ಟೇಬಲ್ಸ್’’ಎಂಬ ಹೆಸರನ್ನು ಪಡೆದ ಈ ಕಾನೂನುಗಳ ಸಹಾಯದಿಂದಲೇ ಮುಂದೆ ರೋಮನ್ನರ ವಿಸ್ತಾರಗೊಂಡ ನ್ಯಾಯಪದ್ಧತಿಯೂ ಮತ್ತು ಇತ್ತೀಚಿನ ಪಾಶ್ಚಿಮಾತ್ಯ ದೇಶಗಳ ನ್ಯಾಯ ಪದ್ಧತಿಯು ಬೆಳೆಯುವುದನ್ನೂ ನಾವು ಕಾಣಬಹುದು. ಕಮೀಷಿಯೂ ಸಂಚಾರಿಯಾಟ ಎಂಬ ಸಭೆಯು ರಾಜಕೀಯದಲ್ಲಿ ಪ್ರಮುಖ ಸಭೆಯಾಗಿ ಮಾರ್ಪಟ್ಟಿತು. ಹನ್ನೆರಡು ಕಾನೂನುಗಳ ಜೊತೆಗೆ ಕ್ರಿ.ಪೂ.೩೬೭ರಲ್ಲಿ ನಡೆದಂತಹ ‘‘ಲೈಸಿನಿಯನ್’’ ಕಾನೂನಿನಿಂದ ರೋಮನ್ ಶ್ರೀಮಂತರಲ್ಲಿ ಇರಬಹುದಾದ ಕ್ಷೇತ್ರಗಳ ಪರಿಮಿತಿಯು ನಿಗದಿಯಾಗಿ ಭೂ ವ್ಯವಸ್ಥೆ ಬದಲಾವಣೆಯನ್ನು ಪಡೆಯಿತು. ಮುಂದುವರಿದಂತೆ ಕ್ರಿ.ಪೂ. ೩೧೩ರಲ್ಲಿ ಸಾಲ ಪಡೆದಂತಹ ವ್ಯಕ್ತಿಗೆ ಸಾಲಕೊಟ್ಟ ವ್ಯಕ್ತಿಯಿಂದ ಉಂಟಾಗುತ್ತಿದ್ದ ಬಂಧನವೂ ತಪ್ಪಿತು. ಈ ಸುಧಾರಣೆಗಳೇ ಮುಂದೇ ವಿಸ್ತಾರಗೊಂಡು ರೋಮನ್ನರ ಪ್ರಪಂಚದ ಇತಿಹಾಸದಲ್ಲಿ ತಮ್ಮ ಪ್ರಮುಖ ಕಾಣಿಕೆಯಾದ ನ್ಯಾಯಪದ್ಧತಿಯನ್ನು ಬಿಟ್ಟು ಹೋಗಲು ಕಾರಣವಾಯಿತು. ಪ್ಲೆಬಿಯನ್ನರ ವಿಜಯ ಕ್ರಿ.ಪೂ.೩೦೪ರಲ್ಲಿ ಸೆನೆಟ್ ಸಭೆಗೆ ಪ್ರವೇಶ ಪಡೆಯುವುದರೊಂದಿಗೆ ಸಂಪೂರ್ಣವಾಯಿತು.

ರೋಮ್ ನಗರದ ವಿಸ್ತಾರ

ಇಟಲಿ ಪರ್ಯಾಯ ದ್ವೀಪದಲ್ಲಿ ಸಣ್ಣ ನಗರ ರಾಷ್ಟ್ರದ ರೂಪದಲ್ಲಿ ಆರಂಭವಾದ ರೋಮ್ ಪಟ್ಟಣವು ‘‘ಪ್ರಪಂಚದ ರಾಣಿ’’ ಎಂಬ ಹೆಸರಿನಿಂದ ಮೆರೆಯುವಷ್ಟು ಸಂಪದ್ಯುಕ್ತವಾಗಿಯೂ ವಿಸ್ತಾರವಾಗಿಯೂ ಆದುದು ನಿಜವಾಗಿಯೂ ಆಸಕ್ತಿಯಿಂದ ಕೂಡಿದ ವಿಷಯ. ‘‘ಲ್ಯಾಟಯಂ’’ ಎಂಬ ಪ್ರದೇಶದಲ್ಲಿ ನಡೆದ ಅಕ್ರಮಣವನ್ನು ಎದುರಿ ಸುತ್ತಾ ಹೊರಟು ‘‘ಸ್ಯಾಮನೈಟ್’’ ಎಂಬ ಜನರನ್ನು ಸೋಲಿಸಿ ತಮ್ಮ ನಗರವನ್ನು ಶೈಶ ವಾವಸ್ಥೆಯಲ್ಲಿ ರಕ್ಷಿಸಿಕೊಂಡರು. ಕ್ರಿ.ಪೂ.೨೯೫ರ ವೇಳೆಗೆ ‘‘ಆರ್‌ನಸ್’’ಎಂಬ ನದಿಯ ಪ್ರದೇಶದಿಂದ ದಕ್ಷಿಣದಲ್ಲಿದ್ದ ಗ್ರೀಕ್ ಜನರ ವಸಾಹತುಗಳ ವ್ಯವಹಾರದ ಜೊತೆಯಲ್ಲಿ ರೋಮನ್ನರಿಗೂ ಗ್ರೀಕರಿಗೂ ಕದನವಾಯಿತು. ಆ ಗ್ರೀಕ್ ವಸಾಹತುಗಳನ್ನು ಎದುರಿಸಲು ರೋಮನ್ ಜನರು ಕಾರ್ಥೇಜ್ ಪಟ್ಟಣದ ನಿವಾಸಿಗಳ ಸಹಾಯವನ್ನು ಪಡೆದುಕೊಂಡರು. ಗ್ರೀಕರೊಡನೆ ನಡೆದ ಕದನದಲ್ಲಿ ರೋಮನ್ನರಿಗೆ ಜಯವಾಯಿತು. ರೋಮ್ ನಿವಾಸಿಗಳ ಅಧಿಕಾರವು ಹೆಚ್ಚಾಗುತ್ತಿದ್ದುದನ್ನು ಕಂಡ ಕಾರ್ಥೇಜ್ ಪಟ್ಟಣಿಗರು ತಮ್ಮ ವ್ಯಾಪಾರವನ್ನು ಕಾಪಾಡಿಕೊಳ್ಳುವುದಕ್ಕೆ ಯುದ್ಧ ಅನಿವಾರ್ಯ ಎಂದು ನಂಬಿ ರೋಮನರೊಡನೆ ಯುದ್ಧ ಹೂಡಿದರು. ಈ ಎರಡು ದೇಶಗಳ ಮಧ್ಯೆ ನಡೆದಂತಹ ಯುದ್ಧಕ್ಕೆ ‘‘ಪ್ಯೂನಿಕ್ ಯುದ್ಧ’’ಎಂಬ ಹೆಸರು ಬಂದಿದೆ. ಕ್ರಿ.ಪೂ.೨೪೬ ರವರೆಗೆ ಮೂರು ಬಾರಿ ರೋಮನ್ನರೂ, ಕಾರ್ಥೇಜಿನವರೂ ಯುದ್ಧವನ್ನು ಮಾಡಿದರು. ಮೊದಲಬಾರಿ ಕ್ರಿ.ಪೂ.೨೪೧ರಲ್ಲಿ ಕೊನೆಗೊಂಡ ಹೋರಾಟದಲ್ಲಿ ರೋಮನ್ನರು ಕಾರ್ಥೇಜಿಯನ್ನರನ್ನು ಪರಾಜಿತಗೊಳಿಸಿದರು. ಎರಡನೆಯ ಪ್ಯೂನಿಕ್ ಯುದ್ಧದಲ್ಲಿ ಕಾರ್ಥೇಜಿಯನ್ನರ ಕಡೆ ‘‘ಹ್ಯಾನಿಬಾರ್’’ ಎಂಬ ವೀರಯೋಧನು ಹೋರಾಟ ನಡೆಸಿ ರೋಮ್ ನಗರವನ್ನು ಇಟಲಿಯ ಉತ್ತರ ಭಾಗದಿಂದ ಆಕ್ರಮಿಸಲು ಪ್ರಯತ್ನಿಸಿದನು. ಆತನಿಗೆ ಸಮನಾಗಿ ರೋಮನರ ಕಡೆ ‘‘ಸಿಪಿಯೋ’’ ಎಂಬ ಸೈನ್ಯಾಧಿಕಾರಿ ಇದ್ದನು. ಸಿಪಿಯೋವಿನ ಆಕ್ರಮಣ ವನ್ನು ಎದುರಿಸ ಲಾರದೆ ಹ್ಯಾನಿಬಾರ್ ತನ್ನ ದೇಶಕ್ಕೆ ಹಿಂತಿರುಗಿದನು. ಕೊನೆಯದಾಗಿ ಕ್ರಿ.ಪೂ.೧೪೬ರಲ್ಲಿ ಮೂರನೆಯ ಪ್ಯೂನಿಕ್ ಯುದ್ಧದಲ್ಲಿ ಕಾರ್ಥೇಜ್ ನಗರವು ರೋಮನ್ನರ ವಶವಾಯಿತು. ಪೂರ್ವಭಾಗದಲ್ಲಿದ್ದ ಗ್ರೀಸಿನ ಪ್ರದೇಶಗಳನ್ನು ಆಕ್ರಮಿಸಲು ಪ್ರಯತ್ನಗಳಾದವು. ಆ ಪ್ರಯತ್ನದಿಂದ ರೋಮ್ ನಗರವು ಮೆಡಿಟರೇನಿಯನ್ ಸಮುದ್ರದ ಪೂರ್ವ ಪ್ರದೇಶಗಳಲ್ಲಿ ತನ್ನ ಚಕ್ರಾಧಿಪತ್ಯವನ್ನು ವಿಸ್ತರಿಸಿತು. ಮ್ಯಾಸಿಡೋನಿಯಾ ರೋಮನ್ನರ ವಶವಾಯಿತು. ಕಾರಿಂತ್ ಅವರ ಅಧೀನಕ್ಕೆ ಬಂದಿತು. ಮುಂದುವರಿದ ರೋಮನ್ನರು ಈಜಿಪ್ಟ್‌ನ್ನು ತಮ್ಮ ಅಧೀನ ಭಾಗವನ್ನಾಗಿ ಮಾಡಿಕೊಂಡರು. ರೋಮ್‌ನ ವಿಸ್ತರಣಾ ರೀತಿ ಮುಂದುವರಿಯುತ್ತಾ ಬಂದು ಕ್ರಿ.ಶ.೧೧೩ರ ಹೊತ್ತಿಗೆ ಅತ್ಯಂತ ವಿಶಾಲ ಭೂಭಾಗ ವನ್ನೊಳಗೊಳ್ಳುವಂತಾಯಿತು. ಜೂಲಿಯಸ್ ಸೀಸರನ ಅಧಿಕಾರ ನಡೆದ  ದಿನಗಳಲ್ಲಿಯೂ ಯೂರೋಪಿನಿಂದ ದೂರವಾಗಿ ಪಶ್ಚಿಮದಲ್ಲಿ ಬ್ರಿಟೀಷ್ ದ್ವೀಪಗಳಲ್ಲಿ ರೋಮನರ ಅಧಿಕಾರ ನೆಲೆಸಿತ್ತು.

ರಾಜ್ಯವು ಯಾವ ದಿನಗಳಲ್ಲಿ ಹೊರನೋಟಕ್ಕೆ ಅತ್ಯಂತ ವಿಶಾಲವಾದ ರಾಜ್ಯವೆನಿಸಿ ಕೊಂಡಿತೋ, ವೈಭವಯುತ ಜೀವನ ನಡೆಸುತ್ತಿತ್ತೋ ಆ ದಿನಗಳಲ್ಲಿಯೇ ಆ ರಾಜ್ಯದ ಅವನತಿಗೆ ಬೇಕಾಗುವ ಘಟನೆಗಳು ನಡೆಯುತ್ತಿದ್ದವು. ಈ ವಿಸ್ತಾರವನ್ನು ಕಂಡ ಕೆಲವೇ ದಿನಗಳಲ್ಲಿ ರೋಂ ಚಕ್ರಾಧಿಪತ್ಯ ಇಳಿಮುಖವಾಗುವುದಕ್ಕಾರಂಭವಾಯಿತು. ಸಾಮ್ರಾಜ್ಯ ವಿಸ್ತಾರವಾಗುತ್ತಿದ್ದ ಹಾಗೆಯೇ ಅದು ಹಿಂದಿನಂತೆ ಸರಳವಾದ ಗಣರಾಜ್ಯ ಪದ್ಧತಿಗೆ ಅಂಟಿಕೊಂಡಿರುವುದು ಸಾಧ್ಯವಿರಲಿಲ್ಲ. ಪರಿಸ್ಥಿತಿಗೆ ತಕ್ಕಂತೆ ಪ್ರತಿನಿಧಿಗಳ ಸಹಾಯದಿಂದ ನಡೆಯುವಂತಹ ವ್ಯವಸ್ಥೆಯನ್ನು ಅಧಿಕಾರಿಗಳು ಕೈಗೊಳ್ಳಲಿಲ್ಲ. ಇದರ ಫಲವಾಗಿ ರಾಜ್ಯವು ಒಡೆದು ಹೋಗುವ ಪರಿಸ್ಥಿತಿ ಬಂದು ಎಲ್ಲಾ ಮಟ್ಟದಲ್ಲೂ ಲಂಚ-ಅವ್ಯವಹಾರ ರೂಢಿಗೆ ಬಂದಿತು. ಸೆನೆಟ್ ಸಭೆ ಕೇವಲ ಶ್ರೀಮಂತ ಗುಂಪಿನ ಸೌಲಭ್ಯವನ್ನು ದೃಷ್ಟಿ ಯಲ್ಲಿಟ್ಟುಕೊಂಡು ಆಡಳಿತ ನಡೆಸುವ ಸಭೆಯಾಗಿ ಮಾರ್ಪಟ್ಟಿತು. ಆ ಸಮಯದಲ್ಲಿ ಕೆಲವು ಜನನಾಯಕರು ಆ ಸಭೆಯ ಪರಿವರ್ತನೆಗಾಗಿ ಪ್ರಯತ್ನಿಸಿದರು.

ಇಂತಹ ನಾಯಕರಲ್ಲಿ ಗ್ರಾಕೈ ಮನೆತನಕ್ಕೆ ಸೇರಿದ ‘‘ಟೈಬೀರಿಯಸ್ ಗ್ರಾಕಸ್’’ ಮತ್ತು ‘‘ಕೈಯಸ್ ಗ್ರಾಕಸ್’’ ಸಹೋದರರು ಸಭೆಯ ದೋಷಗಳನ್ನು ಸರಿಪಡಿಸುವುದರಲ್ಲಿ ತಮ್ಮ ಜೀವನವನ್ನೇ ಅರ್ಪಿಸಿದರು. ಟೈಬೀರಿಯಸ್ ಕ್ರಿ.ಪೂ.೧೩೩ರಲ್ಲಿ ಟ್ರೆಬ್ಯೂನ್ ಆಗಿ ಪದವಿಗೆ ಬಂದು ಸಭೆಯಲ್ಲಿ ಸುಧಾರಣೆಗಳನ್ನು ತರಲು ಪ್ರಯತ್ನಿಸಿದನು. ಆದರೆ ಅದು ಸಭೆಯ ಶ್ರೀಮಂತ ಸದಸ್ಯರಿಗೆ ಒಪ್ಪಿಗೆ ಆಗದೆ ಕೊಲೆಗೀಡಾದನು. ಆತನ ನಂತರ ಕೆಯಸ್ ಗ್ರಾಕಸ್ ನಾಯಕನಾಗಿ ನಿಂತು ಸಹೋದರನ ಕೆಲಸವನ್ನು ಮುಂದುವರಿಸಲು ಪ್ರಯತ್ನಪಟ್ಟನು. ಅತ್ಯಲ್ಪ ಕಾಲದಲ್ಲಿಯೇ ವಿಫಲಗೊಂಡು ಆತ್ಮಹತ್ಯೆಗೆ ಶರಣ ಹೋದನು. ಈತನ ನಂತರ ‘‘ಮೇರಿಯಸ್’’ ಎಂಬ ಸೇನಾಪತಿಯ ಕಾಲ ಆರಂಭವಾಯಿತು. ಉತ್ತರ ಆಫ್ರಿಕಾದಲ್ಲಿ ನಡೆದ ಯುದ್ಧದಲ್ಲಿ ಮೇರಿಯಸ್‌ನ ಜನನಾಯಕತೆ ಕಂಡುಬಂದಿತು. ಕ್ರಿ.ಪೂ. ೧೦೭ರಲ್ಲಿ ಕಾನ್ಸ್‌ಲ್ ಆಗಿ ಬಂದನು. ಸೈನ್ಯಾಧಿಪತಿಯಾಗಿ ಯಶಸ್ವಿಯಾದರೂ ರಾಜನೀತಿಜ್ಞನಂತೆ ಯಶಸ್ಸು ಪಡೆಯಲಾಗಲಿಲ್ಲ. ಸಣ್ಣಪುಟ್ಟ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳುವ ಆತನು ತನ್ನ ಸ್ವಭಾವದಲ್ಲಿ ಉತ್ತಮ ಅಧಿಕಾರಿಯಾಗುವುದಕ್ಕೆ ಸರಿಯಾದ ಅಧಿಕಾರ ವಿಲ್ಲವೆಂದು ಭಾವಿಸಿ ಅಧಿಕಾರವನ್ನು ಬಿಟ್ಟುಕೊಟ್ಟನು. ಮೇರಿಯಸ್‌ನ ನಾಯಕತ್ವವು ಕೊನೆಗೊಂಡ ಮೇಲೆ ರೋಂ ಸಾಮ್ರಾಜ್ಯದಲ್ಲಿ ಅಂತರ್ಯುದ್ಧ ನಡೆಯುವ ಪರಿಸ್ಥಿತಿ ಒದಗಿತ್ತು. ಈ ಸಮಯದಲ್ಲಿ ‘‘ಸಲ್ಲಾ’’ ಎಂಬ ಸರ್ವಾಧಿಕಾರಿಯು ನೇಮಕವಾದನು. ಕ್ರಿ.ಪೂ. ೮೨ರಲ್ಲಿ ನೇಮಕನಾದ ಈತನು ಹಿಂದಿನ ಮುಖಂಡರಂತೆ ಅಲ್ಲದೆ ಸೆನೆಟ್ ಸಭೆಯ ಮೂಲಕ ತನ್ನ ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಹೊರಟನು. ಸರ್ವಾಧಿಕಾರಿ ಯಾಗಿದ್ದ ಅಧಿಕಾರವನ್ನೆಲ್ಲಾ ಸೆನೆಟ್ ಸಭೆಗೆ ವಹಿಸಿಕೊಟ್ಟು ಅದರ ಬೆಂಬಲದ ಮೇಲೆ ತನ್ನ ಆಡಳಿತವನ್ನು ನಡೆಸಲು ಹೊರಟನು. ಈತ ಆಡಳಿತದಿಂದ ರೋಂ ನಗರದಲ್ಲಿ ನಡೆಯಬಹುದಾಗಿದ್ದ ಅಂತರ್ಯುದ್ಧವನ್ನು ತಡೆಗಟ್ಟಲಾಯಿತು. ಸಲ್ಲಾನ ತರುವಾಯ ‘‘ಪಾಂಪೆ’’ ಕ್ರಿ.ಪೂ.೭೦ರಲ್ಲಿ ಕಾನ್‌ಸೆಲ್ ಪದವಿಯನ್ನು ಪಡೆದು ರೋಮನರ ಆಡಳಿತಗಾರ ನಾಗಿ ಬಂದನು. ಪೂರ್ವ ಪ್ರದೇಶಗಳಲ್ಲಿ ಪಾಂಪೆ ನೆಲೆಸಿದ್ದಾಗ ರೋಂ ಪ್ರದೇಶದಲ್ಲಿ ‘‘ಜೂಲಿಯಸ್ ಸೀಸರ್’’ ಪ್ರಸಿದ್ದಿಗೆ ಬರತೊಡಗಿದನು. ಸೀಸರ್, ಪಾಂಡೆ ಮತ್ತು ಕ್ರಾಸೆಸ್ ಎಂಬ ಮೂವರಿಗೂ ಅಧಿಕಾರದ ಹಂಚಿಕೆ ನಡೆದು ಆಳಬೇಕೆಂದು ಒಪ್ಪಿಗೆಯಾಯಿತು. ಸೀಸರ್ ಎಲ್ಲರಿಗಿಂತ ಪ್ರಬಲನಾದುದನ್ನು ಕಂಡು ಪಾಂಪೆ ಸೆನೆಟ್ ಸಭೆಯಲ್ಲಿ ಎತ್ತಿಕಟ್ಟಿ ಸೀಸರನನ್ನು ಅಡ್ಡಿಪಡಿಸಿದನು. ಇದರ ಪರಿಣಾಮವಾಗಿ ಸೀಸರ್ ಉದ್ರೇಕಗೊಂಡು ಪಾಂಪೆಯನ್ನು ಸೋಲಿಸಿ ತಾನೊಬ್ಬನೇ ಅಧಿಕಾರವನ್ನು ಪಡೆಯುವಂತಾಯಿತು. ಈತನ ಹೆಚ್ಚಿನ ಪ್ರಾಬಲ್ಯವೇ ಬ್ರೂಟಸ್‌ನನ್ನೂ, ಉಳಿದ ರೋಮನರನ್ನೂ ಸೀಸರನ ಕೊಲೆಗೆ ಪ್ರೇರೇಪಿಸಿತು. ಅನಂತರ ಆಂಟೋನಿ, ಲಿಪಿಸಸ್, ಆಕ್ಟೇವಿಯಸ್ ಈ ಮೂವರು ಮುಖಂಡರು ಅಧಿಕಾರವನ್ನು ಉಳಿಸಿಕೊಂಡರು. ಈ ಮೂವರಲ್ಲಿ ಆಕ್ಟೇವಿಯಸ್ ಹೆಚ್ಚು ಪ್ರಬಲನಾಗಿ ‘‘ಅಗಸ್ಟಸ್’’ ಎಂಬ ಬಿರುದನ್ನು ಉಪಯೋಗಿಸಿಕೊಂಡು ರೋಮ್ ಸಾಮ್ರಾಜ್ಯದ ಅಧಿಪತಿಯಾದನು. ಅಗಸ್ಟಸ್ ಎಂಬ ಪದವು ಗಾಂಭೀರ್ಯ ಎಂಬ ಅರ್ಥ ಕೊಡುವುದು. ಆತನಿಗೆ ‘‘ಪ್ರಿನ್‌ಸೆಪ್’’ ಎಂಬ ಮತ್ತೊಂದು ಪದವನ್ನು ಉಪಯೋಗಿಸುವ ವಾಡಿಕೆಯಿತ್ತು. ಈ ಪದಕ್ಕೆ ಪ್ರಥಮ ನಾಗರಿಕನೆಂಬ ಅರ್ಥ ಬರುವುದು. ‘‘ಇಂಟರೇಟಕ್’’ ಅಂದರೆ ವಿಜಯಿಯಾದ ಸೇನಾಧಿಪತಿಯಂತೆ ಈತನನ್ನು ಗೌರವಿಸುತ್ತಿದ್ದರು.

ಆಗಸ್ಟ್‌ಸ್ ಸೀಸರ್ ಕ್ರಿ.ಪೂ.೨೭ರಿಂದ ಕ್ರಿ.ಶ.೧೪ ರವರೆಗೆ ರೋಮ್ ಸಾಮ್ರಾಜ್ಯಕ್ಕೆ ಸಲ್ಲಿಸಿದ ಸೇವೆ ಮುಖ್ಯವಾಗಿದೆ. ಅಗಸ್ಟಸ್ ಸೀಸರ್‌ನ ಆಳ್ವಿಕೆ, ರೋಮ್ ಸಾಮ್ರಾಜ್ಯದಲ್ಲಿ ತೆರೆಯ ಮರೆಯಲ್ಲಿ ನಡೆದ ಸರ್ವಾಧಿಕಾರಿಯ ಆಡಳಿತ ಎನ್ನುವಂತಿತ್ತು. ರಾಜ ತನ್ನದೇ ಆದ ಅಭಿಪ್ರಾಯವನ್ನು ಇಟ್ಟುಕೊಂಡಿದ್ದರೂ, ಆತನು ಸೆನೆಟ್ ಸಭೆಯನ್ನು ಮುಂದಿಟ್ಟು ಕೊಂಡು ಆಳ್ವಿಕೆ ನಡೆಸಿದುದರಿಂದ ರೋಮ್ ಪ್ರಜೆಗಳ ಮನಸ್ಸಿನಲ್ಲಿ ಸರ್ವಾಧಿಕಾರದ ಅಭಿಪ್ರಾಯ ಬರಲಿಲ್ಲ. ಪ್ರಾಂತ್ಯಾಧಿಕಾರದಲ್ಲಾಗಲೀ, ಕೆಂದ್ರ ಸರ್ಕಾರದಲ್ಲಾಗಲೀ ಆಡಳಿತ ಕ್ರಮ ಸ್ವಲ್ಪವೂ ಏರುಪೇರಾಗದಂತೆ ವ್ಯವಸ್ಥೆ ನಡೆಸಿದನು. ಪ್ರತಿಯೊಂದು ಪ್ರಾಂತ್ಯಗಳಿಗೆ ಗೌರ‌್ನರುಗಳನ್ನು ನೇಮಿಸಿ ರಾಜ್ಯದಲ್ಲಿ ಹಣವು ಪೋಲಾಗದಂತೆ ಎಚ್ಚರಿಕೆ ವಹಿಸಿದನು. ರೋಮನ್ನರ ದಿಗ್ವಿಜಯವನ್ನು ಸಾರುವಂತಹ ಕಟ್ಟಡಗಳ ನಿರ್ಮಾಣಕ್ಕಾಗಿ ಆ ದಿನಗಳಲ್ಲಿ ಕಂಡುಬಂದ ರೋಮನ್ ಕಲಾವಿದರಿಗೆ ಬೆಂಬಲಿಗನಾಗಿ ನಿಂತನು. ಇವೆಲ್ಲ ಸಾಧನೆಗಳಿಂದಾಗಿ ಆತನ ಆಡಳಿತದ ಕಾಲವನ್ನು ‘‘ಸುವರ್ಣಯುಗ’’ ಎಂದು ಕರೆಯಲಾಗಿದೆ. ಇಷ್ಟಾದರೂ ಅಗಸ್ಟಸ್ ಸೀಸರ್ ತಾನು ರಾಜನೆಂದು ಮಾತ್ರ ಸಾರಲಿಲ್ಲ. ಅಲ್ಲದೆ ರೋಮನ್‌ರಲ್ಲಿ ವಂಶಾನುಗತವಾಗಿ ಬರುವ ರಾಜತ್ವದಲ್ಲಿ ಗೌರವವಿಲ್ಲವೆಂಬುದು ಆತನಿಗೆ ಅರಿವಾಗಿತ್ತು. ಹಾಗಿದ್ದೂ ಸಹ ವಂಶಾನುಗತವಾಗಿ ಅಧಿಕಾರ ಪಡೆದ ಯಾವ ರಾಜನಿಗೂ ಕಡಿಮೆಯಿಲ್ಲದಂತೆ ಆಳ್ವಿಕೆ ನಡೆಸಿ ಮರೆಯಾದನು. ಆತನ ನಂತರದಲ್ಲಿ ಬಂದವರು ಕ್ರಮೇಣ ರಾಜತ್ವದ ಸ್ಥಾಪನೆಗೆ ಅವಕಾಶಕೊಟ್ಟರು. ಸೀಸರನ ಕಾಲದಿಂದಲೇ ಸಾಮ್ರಾಜ್ಯದಲ್ಲಿ ರಾಜ್ಯಾಡಳಿತ ಪದ್ಧತಿ ಬಲವಾಗಿ ಬೇರೂರಿತು. ಈ ಪದ್ಧತಿ ಮುಂದುವರಿದು ‘‘ಡಯೊಕ್ಲಿಟಿಯನ್’’  ಎಂಬುವನ ಕಾಲದಲ್ಲಿ ಪೂರ್ವ ದೇಶಗಳ ರಾಜ್ಯಾಡಳಿತ ಪದ್ಧತಿ ಅನುಸರಿಸಲ್ಪಟ್ಟಿತು. ‘‘ಕಾನ್ ಸ್ಟೆಂಟೈನ್’’ ಚಕ್ರವರ್ತಿಯ ಕಾಲಕ್ಕೆ ಚಕ್ರವತಿಯನ್ನು ದೇವರೆಂದು ಆರಾಧಿಸುವಷ್ಟು ಮಟ್ಟಿಗೆ ಸಾಮ್ರಾಟನ ಸ್ಥಾನ ಭದ್ರವಾಗಿತ್ತು. ಆತನ ಹೆಸರು ಅತ್ಯುತ್ತಮ ಚಕ್ರವರ್ತಿಗಳಲ್ಲಿ ಒಬ್ಬನಾಗಿ ಉಳಿದಿರುವುದು. ಅಷ್ಟು ಹೊತ್ತಿಗೆ ರೋಮನ್ ಸಾಮ್ರಾಜ್ಯವು ತನ್ನ ಬೆಳವಣಿಗೆಯ ಪರಾಕಾಷ್ಟತೆಯನ್ನು ಮುಟ್ಟಿತು. ಪಶ್ಚಿಮ ರಾಜ್ಯಗಳನ್ನು ವಶಪಡಿಸಿ ಕೊಂಡಿದ್ದುದೂ ಅಲ್ಲದೆ ಪೂರ್ವದಲ್ಲಿಯೇ ವಿಶಾಲವಾದ ರಾಜ್ಯಕ್ಕೆ ಅವರು ಒಡೆಯರೆನಿಸಿ ಕೊಂಡಿದ್ದರು. ಆದ್ದರಿಂದಲೇ ಪೂರ್ವದ ಪ್ರದೇಶಗಳ ಆಡಳಿತದ ಸೌಲಭ್ಯ ಕ್ಕಾಗಿಯೇ ಒಂದು ಮುಖ್ಯ ಪಟ್ಟಣದ ಅವಶ್ಯಕತೆಯು ತಲೆದೋರಿತ್ತು. ಅದಕ್ಕಾಗಿ ಕಾನ್‌ಸ್ಟೆಂಟೈನ್ ತನ್ನ ಹೆಸರಿನಲ್ಲಿ ‘‘ಕಾನ್‌ಸ್ಟಾಂಟಿನೋಪಲ್’’ ಎಂಬ ಹೊಸ ಪಟ್ಟಣದ ಸ್ಥಾಪನೆಗೆ ಕಾರಣನಾದನು. ಕಾನ್‌ಸ್ಟೆಂಟೈನನ ಆಡಳಿತ ಮುಗಿದ ದಿನಗಳಲ್ಲಿ ಮಧ್ಯ ಯುರೋಪಿನಲ್ಲಿ ನಡೆದ ಬದಲಾವಣೆಯೊಂದು ರೋಮನ್ ಸಾಮ್ರಾಜ್ಯದ ಮೇಲೆಯೂ ಪರಿಣಾಮವನ್ನುಂಟು ಮಾಡಿತು. ಅಲ್ಲಿಂದ ಬೇರೆ ಬೇರೆ ಪ್ರದೇಶಗಳಿಗೆ ಹೊರಟು ಬಂದ ಗಾಥ್ಸ್ ಮತ್ತು ವಿಸಿಗಾಥ್ಸ್ ಗುಂಪಿನ ಜನರು ರೋಮ್ ಸಾಮಾಜ್ಯದ ಪ್ರದೇಶಗಳನ್ನು ವಶಪಡಿಸಿ ಕೊಳ್ಳಲಾರಂಭಿಸಿದರು. ರೋಮಿನ ವೈಭವ ಮತ್ತೊಮ್ಮೆ ‘‘ಜಸ್ಟಿನಿಯನ್’’ ಚಕ್ರವರ್ತಿಯ ಕಾಲಕ್ಕೆ ಪುನರುಜ್ಜೀವನ ಕಾಣುವಂತಾಯಿತು. ರಾಜ್ಯದ ಎಲ್ಲೆಯಲ್ಲಿ ರಕ್ಷಣಾ ಪಡೆಗಳನ್ನು ಏರ್ಪಡಿಸಿ ಪೂರ್ವ ಮತ್ತು ಪಶ್ಚಿಮ ವಿಭಾಗಗಳನ್ನು ಒಂದುಗೂಡಿಸಿ, ಆಡಳಿತದಲ್ಲಿ ಉತ್ತಮ ವ್ಯವಸ್ಥೆಯನ್ನು ತಂದು ಅವರ ವೈಭವವನ್ನು ಹಿಡಿದಿಡಲು ಪ್ರಯತ್ನಿಸಿದನು. ಆತನ ಮರಣದ ಸಮಯಕ್ಕೆ ಖಜಾನೆಯು ಬರಿದಾಗಿ ದೇಶದ ಒಳಭಾಗದಲ್ಲಿ ವ್ಯವಸ್ಥೆ ಹದಗೆಟ್ಟಿತು. ಜಸ್ಟಿನಿಯನ್ನನ ಅನಂತರ ರೋಂ ಸಾಮ್ರಾಜ್ಯದ ಖಜಾನೆಯು ಬರಿದಾಗಿ ದೇಶದ ರಾಜಕೀಯ ಕ್ಷೇತ್ರವು ಅವನತಿಯಾಗುವ ಲಕ್ಷಣಗಳು ಹೆಚ್ಚಾಗಿ ಕಂಡುಬಂದವು.

ರಾಜಕೀಯ ಜೀವನದಲ್ಲಿ ಅವರು ಮುಂದಿನ ಜನಾಂಗಗಳಿಗೆ ಒದಗಿಸಿಕೊಟ್ಟ ಕಾಣಿಕೆಗಳೆಂದರೆ ವ್ಯಾಪಕವಾದ ಸಾಮ್ರಾಜ್ಯ, ಅದನ್ನು ಸಾಧಿಸುವುದರಲ್ಲಿ ನಾಗರಿಕ ಮತ್ತು ಆಡಳಿತಗಾರರ ಹೊಣೆ ಏನೆಂಬುದು, ವ್ಯವಸ್ಥಿತ ಆಡಳಿತ ಕ್ರಮ, ಎಲ್ಕಕ್ಕೂ ಮಿಗಿಲಾಗಿ ಅನೇಕ ಶತಮಾನಗಳ ಕಾಲ ಯುರೋಪಿನ ಜನರಿಗೆ ಮಾದರಿಯಾಗಿ ಉಳಿದ ನ್ಯಾಯ ನಿಬಂಧನೆಗಳು, ಕ್ರಿ.ಪೂ.೫ನೆಯ ಶತಮಾನದಲ್ಲಿ ಕೇವಲ ಹನ್ನೆರಡು ಕಾನೂನುಗಳ ರೂಪದಲ್ಲಿದ್ದುದು ಬದಲಾವಣೆಯಾಗಿ ಅನೇಕ ಹೊಸ ತೀರ್ಮಾನಗಳನ್ನೊಳಗೊಂಡ ಸಂಗ್ರಹಣೆಯಾಯಿತು. ಈ ನಿಬಂಧನೆಗಳ ಅರ್ಥವಿವರಣೆಗಾಗಿ ನ್ಯಾಯಮೂರ್ತಿಗಳ ಅವಶ್ಯಕತೆ ತಲೆದೋರಿತು. ನ್ಯಾಯವು ನಿಷ್ಪಕ್ಷಪಾತವಾಗಿ ದೊರಕಬೇಕೆಂಬ ಇಚ್ಛೆಯಿಂದ ಹೊಸ ಏರ್ಪಾಡುಗಳು ಹುಟ್ಟಿಕೊಂಡವು. ನ್ಯಾಯಶಾಸ್ತ್ರದಲ್ಲಿ ವಿಶೇಷ ರೀತಿಯ ಪರಿಚಯ ಪಡೆದ ಜನರು ತೀರ್ಮಾನ ಕೊಡುವ ಮೊದಲು ಚರ್ಚೆ ನಡೆಸುವುದಕ್ಕಾಗಿ ಪಂಚಾಯತಿ ಗಳಿರುತ್ತಿದ್ದವು. ಇದಕ್ಕಾಗಿಯೇ ತರಬೇಕಾದ ‘‘ಪೌಲಸ್’’, ‘ಉಲ್ಪಿಯನ್’ ಮತ್ತು ‘ಪೇಟಸ್’ ಎಂಬ ಪ್ರಮುಖ ಪಂಚಾಯಿತರ ಹೆಸರುಗಳನ್ನು, ಅತ್ಯಂತ ಮುಖ್ಯವಾದ ‘‘ಪೆಪಿನಿಯಸ್’’ಎಂಬ ನ್ಯಾಯ ಶಾಸ್ತ್ರಜ್ಞನನ್ನು ನಾವು ಈ ಗುಂಪಿನಲ್ಲಿ ಕಾಣಬಹುದು. ಪಂಚಾಯಿತಿದಾರರ ಸಹಾಯದಿಂದ ಪೇಟರ್ಸ್ ಎಂಬ ಅಧಿಕಾರಿಗಳು ನ್ಯಾಯ ತೀರ್ಮಾನ ಮಾಡುತ್ತಿದ್ದರು. ಇಂದಿಗೂ ಸಹ ಪಾಶ್ಚಿಮಾತ್ಯ ನ್ಯಾಯಪದ್ಧತಿಗೆ ರೋಮನ್ನರ ಈ ಕಾನೂನು ಸಂಗ್ರಹಣೆಯ ವಿಸ್ತಾರ ತಳಹದಿಯಾಗಿದೆ. ಹೆಚ್ಚಾಗಿ ರೋಮನ್ನರ ನ್ಯಾಯ ಪದ್ಧತಿಯು ‘‘ವೈಯಕ್ತಿಕ ಆಸ್ತಿ’’ ಮತ್ತು ಅದರ ರಕ್ಷಣೆಯ ವಿಚಾರವನ್ನು ಒಳಗೊಂಡಿದೆ. ವೈಯಕ್ತಿಕ ಆಸ್ತಿಯ ಜೊತೆಗೆ ಸಮಾಜದ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಸೇರುವಂತೆಯೂ ಆಸ್ತಿಯನ್ನು ರಕ್ಷಿಸಿಕೊಳ್ಳುವ ಅವಕಾಶ ರೋಮನ್ನರಿಂದಲೇ ದೊರಕಿತು. ಸಮಾಜದ ಒಪ್ಪಂದದ ಮೂಲಕ ವ್ಯವಹಾರ ನಡೆಸುವ ಪದ್ಧತಿಯನ್ನು ಇದರಲ್ಲಿ ಕಾಣಬಹುದಾಗಿತ್ತು. ಮೊಟ್ಟ ಮೊದಲಾಗಿ ಈ ಕಾನೂನುಗಳನ್ನು ಬರೆದಿಡುವ ಪದ್ಧತಿಯ ಪ್ರಯತ್ನ ಕ್ರಿ.ಶ.೪ನೇ ಶತಮಾನದಲ್ಲಿ ಕಂಡುಬರುತ್ತದೆ. ಈ ಬಗೆಯ ಸಂಗ್ರಹಣೆಯಲ್ಲಿ ಎರಡನೆಯ ಮೆಟ್ಟಿಲೆಂದರೆ ‘‘ಥಿಯೊಡೋಸಿಯನ್ ಕೋಡ್’’ಎಂಬ ಹೆಸರು ಪಡೆದ ಕಾನೂನು ಸಂಗ್ರಹಣೆಯ ಪ್ರಯತ್ನ. ಈ ಸಂಗ್ರಹಣೆಯಲ್ಲಿ ಜರ್ಮನ್ ಪದ್ಧತಿಯ ಕೆಲವು ಹೇಳಿಕೆಗಳು ಸೇರಿರುವುದು ಕಂಡುಬರುತ್ತದೆ. ಆದರೆ ಅದು ಜಸ್ಟೀನಿಯನ್ ಚಕ್ರವರ್ತಿಯ ಕಾಲಕ್ಕೆ ಸರಿಯಾದ ರೂಪವನ್ನು ಪಡೆಯಿತು. ‘‘ಜಸ್ಟಿನಿಯನ್’’ ‘‘ಟ್ರೈಬೋನಿಯನ್’’ ಎಂಬ ಅಧ್ಯಕ್ಷನ ಅಧೀನದಲ್ಲಿ ಒಂದು ಸಮಿತಿಯನ್ನು ಸ್ಥಾಪಿಸಿ ನ್ಯಾಯಶಾಸ್ತ್ರಗಳ ರಚನೆಗೆ ಆಜ್ಞೆ ಮಾಡಿದನು. ಮೊದಲನೆಯದಾಗಿ ‘‘ದಿ ಕೋಡ್’’ಎಂಬುದರಲ್ಲಿ ರಾಜಾಜ್ಞೆಗಳೆಲ್ಲವೂ ಬರೆಯಲ್ಪಟ್ಟಿವೆ. ಎರಡನೆಯದಾಗಿ ‘‘ದಿ ಡೆಜೆಸ್ಟ್’’ ಎಂಬ ಗ್ರಂಥದಲ್ಲಿ ಕಾನೂನುಗಳ ವಿಮರ್ಶೆಯನ್ನು ಕಾಣಬಹುದಾಗಿದೆ. ನ್ಯಾಯಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ಗ್ರಂಥವು ತುಂಬ ಉಪಯುಕ್ತವಾಗಿದೆ. ಮೂರನೆಯದಾಗಿ ‘‘ನಾವೆಲ್ಸ್’’ ಎಂದು ಕರೆಯಲ್ಪಟ್ಟ ಗ್ರಂಥದಲ್ಲಿ ‘‘ದಿ ಕೋಡ್’’ ಎಂಬ ಕಾನೂನುಗಳ ಮಾರ್ಪಾಡುಗಳನ್ನು, ಅವುಗಳಲ್ಲಿ ಕಾಣಬಹುದಾದ ಅನಿರ್ದಿಷ್ಟ ಪದಗಳ ಬಗ್ಗೆ ಹೊಸ ವಿವರಣೆಯನ್ನು ಕಾಣಬಹುದು. ನಾಲ್ಕನೆಯದಾದ ‘‘ಕಾರ್‌ಪಸ್ ಜೂರಿಸ್ ಸಿವಿಲಿಸ್’’ ಎಂಬ ವಿಭಾಗದಲ್ಲಿ ರೋಮನ್ನರ ಪೌರಜೀವನದ ಅಧ್ಯಯನಕ್ಕೆ ತಕ್ಕ ವಿಷಯಗಳು ಸಂಗ್ರಹವಾಗಿವೆ. ಆಧುನಿಕ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಸಿದ್ಧವಾಗಿರುವ ‘‘ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯ’’ ಎಂಬ ಪದಗಳ ಆರಂಭದ ಉಪಯೋಗವನ್ನೂ ರೋಮನ್ನರ ಕಾನೂನುಗಳಲ್ಲಿ ಕಾಣಬಹುದು. ರೋಮನ್ನರು ಪ್ರಪಂಚಕ್ಕೆ ಸಲ್ಲಿಸಿರುವ ವಿಶಿಷ್ಟ ಕಾಣಿಕೆ ಎಂದರೆ ನ್ಯಾಯ ನಿಬಂಧನೆಗಳೆಂದು ಹೇಳುವ ರೂಢಿಯಿದೆ. ರೋಮ್ ಸಾಮ್ರಾಜ್ಯ ಅನಾಗರಿಕ ಎನ್ನಿಸಿಕೊಂಡು ಜನರ ಆಕ್ರಮಣಕ್ಕೆ ತುತ್ತಾಗಿ ಹರಿದು ಹಂಚಿಹೋದ ಮೇಲೆ, ಸರ್ಕಾರ ನಿಯಮಿತವಾಗಿರುವ ಪ್ರದೇಶದಲ್ಲಿ ಮಾತ್ರವೇ ಅಧಿಕಾರವನ್ನು ಹೊಂದಿದಂತೆ ಇದ್ದರೂ ಈ ಕಾನೂನುಗಳು ಮಾತ್ರ ತಮ್ಮ ಪ್ರಭಾವವನ್ನು ಒಂದೇ ರೀತಿಯಲ್ಲಿ ಉಳಿಸಿಕೊಂಡಿದ್ದವು. ವಿಶ್ವ ಸರ್ಕಾರ ಸ್ಥಾಪನೆಗೆ ಇನ್ನೂ ಪ್ರಯತ್ನಗಳು ನಡೆಯುತ್ತಿರುವುದುಂಟು. ಹಾಗಿದ್ದೂ ಕ್ರಿಸ್ತಪೂರ್ವದಲ್ಲೇ ಅಸಮಾನ ರೀತಿಯಲ್ಲಿ ವಿಸ್ತಾರ ಸಾಮ್ರಾಜ್ಯವನ್ನು ಕಟ್ಟಿ ಅದರ ಆಡಳಿತವನ್ನು ಸಮರ್ಪಕಗೊಳಿಸಿ, ರೋಮ್‌ನವರು ತಮ್ಮ ಮತ್ತೊಂದು ವಿಶೇಷ ರೀತಿಯ ಸಾಧನೆಯನ್ನು ವ್ಯಕ್ತಪಡಿಸಿದರು. ಇವೆರಡು ಆಧಾರಗಳ ಮೇಲೆ ಇವರ ಉಳಿದ ಸಾಧನೆಗಳು ನಿಂತಿವೆ ಎಂದರೆ ಸ್ವಲ್ಪವೂ ದೋಷವಾಗಲಾರದು.