ನಿರಂಕುಶಪ್ರಭುತ್ವ ಒಂದು ರಾಜಕೀಯ ಸಿದ್ಧಾಂತ, ಸಂಪೂರ್ಣ ಅಧಿಕಾರ ಅರಸನಲ್ಲಿಯೇ ಕೇಂದ್ರೀಕೃತವಾಗಿದ್ದು ಅವನನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗೆ ಇರುವುದಿಲ್ಲ. ಅರಸ ಎಲ್ಲ ರೀತಿಯಲ್ಲಿಯೂ ಸಂಪೂರ್ಣನಾಗಿದ್ದು ದೇವರಿಗೆ ಸಮಾನ ನಾಗಿರುತ್ತಾನೆ. ಈ ರೀತಿಯ ಬೆಳವಣಿಗೆಯನ್ನು ನಾವು ಹದಿನೇಳು ಮತ್ತು ಹದಿನೆಂಟನೆಯ ಶತಮಾನದ ಯುರೋಪಿನ ಇತಿಹಾಸವನ್ನು ಅವಲೋಕಿಸುವಾಗ ಗಮನಿಸಲು ಸಾಧ್ಯ. ಕ್ರಿ.ಶ.೧೬೪೮ ರಿಂದ ೧೭೮೯ರವರೆಗಿನ ಅವಧಿಯನ್ನು ಯುರೋಪಿನಲ್ಲಿ ‘‘ನಿರಂಕುಶ ಪ್ರಭುತ್ವದ ಯುಗ’’ವೆಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ನಿರಂಕುಶಪ್ರಭುತ್ವ ಬಲವಾಗಿ ಬೇರೂರಿತ್ತು ಎನ್ನುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಇದು ಎಲ್ಲಾ ರಾಷ್ಟ್ರಗಳಲ್ಲಿಯೂ ಒಂದೇ ತರನಾಗಿ ರೂಪುಗೊಂಡಿರಲಿಲ್ಲ. ಒಂದು ರಾಷ್ಟ್ರದ ನಿರಂಕುಶಪ್ರಭುತ್ವ ಇನ್ನೊಂದು ರಾಷ್ಟ್ರಕ್ಕಿಂತ ಭಿನ್ನವಾದದ್ದಾಗಿತ್ತು. ಈ ಬದಲಾವಣೆ ಸಹಜ, ಏಕೆಂದರೆ ಅದು ಆಯಾ ದೇಶದ ಒಟ್ಟು ಪರಿಸ್ಥಿತಿಯನ್ನು ಅವಲಂಬಿಸಿಕೊಂಡಿರುತ್ತದೆ. ೧೭ ಮತ್ತು ೧೮ನೆಯ ಶತಮಾನಗಳಲ್ಲಿ ಯುರೋಪಿನ ಒಟ್ಟು ಸ್ಥಿತಿಗತಿಗಳಲ್ಲಿನ ಮೂಲಭೂತ ಬದಲಾವಣೆಗೆ ಮೂಲಕಾರಣ ಆರ್ಥಿಕ ರೂಪಾಂತರ. ಇದು ನೇರವಾಗಿ ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದ ಜನರೊಳಗೆ ಮನಸ್ತಾಪಕ್ಕೆ ಎಡೆಮಾಡಿಕೊಟ್ಟು ನಿರಂಕುಶಪ್ರಭುತ್ವದ ಹುಟ್ಟು ಮತ್ತು ಏಳಿಗೆಗೆ ಕಾರಣವಾಯಿತು.

ಹದಿನೇಳನೆಯ ಶತಮಾನ ನಿರಂಕುಶಪ್ರಭುತ್ವದ ಯುಗ ಎಂಬುದಾಗಿ ನಿರ್ಣಯವನ್ನು ಕೈಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಹದಿನೇಳನೆಯ ಶತಮಾನದ ಆರಂಭಕಾಲದಲ್ಲಿನ ಅರಸರುಗಳು ಸಮರ್ಥ ಆಡಳಿತಗಾರರಾಗಿರಲಿಲ್ಲ. ಅವರ ವೈಯಕ್ತಿಕ ವರ್ಚಸ್ಸು ಇಲ್ಲಿ ಚರ್ಚೆಗೊಳಪಡುವ ವಸ್ತುವಾಗುತ್ತದೆ. ಹದಿನೇಳನೆಯ ಶತಮಾನದ ಪ್ರಥಮಾರ್ಧವನ್ನು ‘‘ಮಂತ್ರಿಗಳಯುಗ’’ ಎಂದು ಕರೆದರೂ ತಪ್ಪಾಗಲಾರದು. ಅರಸರುಗಳು ಸಮರ್ಥ ಆಡಳಿತಗಾರರಾಗಿಲ್ಲವಾದ್ದರಿಂದ ಮಂತ್ರಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದರು. ಈ ವ್ಯವಸ್ಥೆ ಪ್ರಭುತ್ವ ವ್ಯವಸ್ಥೆಗೆ ತಾತ್ಕಾಲಿಕವಾಗಿ ಪೂರಕವಾಗಿದ್ದರೂ ಶಾಶ್ವತವಾದ ಪರಿಹಾರವಾಗಿರಲಿಲ್ಲ. ಏಕೆಂದರೆ ಮಂತ್ರಿಮಂಡಲದ ರಚನೆ ನಿರಂಕುಶಪ್ರಭುತ್ವದ ಮೂಲ ಉದ್ದೇಶಕ್ಕೆ ವಿರುದ್ಧವಾದದ್ದಾಗಿದೆ. ಬವೇರಿಯಾದ ಅರಸ ಎರಡನೆಯ ಫಿಲಿಫ್, ಸ್ಪೈಯಿನ್ ದೇಶದ ನಾಲ್ಕನೆಯ ಫಿಲಿಫ್, ಫ್ರಾನ್ಸ್‌ನ ಹದಿಮೂರನೆಯ ಲೂಯಿ, ಪೋಲೆಂಡ್ ದೇಶದ ಮೂರನೆಯ ಸಿಗಿಸ್‌ಮೂನ್ಡ್ ಇತ್ಯಾದಿ ಅರಸುಗಳು ನಿರಂಕುಶ ಪ್ರಭುತ್ವದ ಹರಿಕಾರರಾಗಿದ್ದರೂ ಸಮರ್ಥ ಆಡಳಿತಗಾರರಾಗಿರಲಿಲ್ಲ. ಕಲಾವಿದರಾಗಿ, ಹಾಡುಗಾರರಾಗಿ ಇಲ್ಲವೇ ಸಾಹಿತಿಗಳಾಗಿ ಇವರು ತಮ್ಮನ್ನು ಗುರುತಿಸಿಕೊಂಡಿದ್ದರು. ಇದು ಜನರನ್ನು ಪ್ರಭಾವಗೊಳಿಸಬಹುದೇ ವಿನಹ ಹತೋಟಿಯಲ್ಲಿಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಫ್ರಾನ್ಸ್‌ನಲ್ಲಿ ರಿಚಲಿಯೋ ಮತ್ತು ಮಜಾರಿನ್, ಸ್ಪೈಯಿನ್‌ನಲ್ಲಿ ಲೆರ್ಮ ಮತ್ತು ಆಲಿವೇರಸ್, ಇಂಗ್ಲೆಂಡ್‌ನಲ್ಲಿ ಬಕ್ಕಿಂಗ್‌ಹಾಮ್ ಮುಂತಾದ ವ್ಯಕ್ತಿಗಳ ಮಂತ್ರಿಗಳಾಗಿ ನೇಮಕಗೊಂಡು ತಾವು ಪ್ರತಿನಿಧಿಸುತ್ತಿದ್ದ ಅರಸು ಮನೆತನಗಳ ಭವಿಷ್ಯವನ್ನು ನಿಧರಿಸುವಷ್ಟು ಪ್ರಭಾವಶಾಲಿಗಳಾಗಿದ್ದರು.

ಮಂತ್ರಿಮಂಡಲದ ರಚನೆ, ವಿಭಾಗಗಳ ಆಡಳಿತ ಇವೆಲ್ಲಾ ಅರಸು ಮನೆತನಗಳ ಮೂಲಭೂತ ಸಿದ್ಧಾಂತಕ್ಕೆ ವಿರುದ್ಧವಾದದ್ದರಿಂದ ಹದಿನೇಳನೆಯ ಶತಮಾನದ ದ್ವಿತೀಯಾರ್ಧದಲ್ಲಿ ನೇರವಾಗಿ ಅರಸರುಗಳೇ ಆಳ್ವಿಕೆ ನಡೆಸಲು ಪ್ರಾರಂಭಿಸಿದರು. ಫ್ರಾನ್ಸ್‌ನಲ್ಲಿ ಹದಿನಾಲ್ಕನೆಯ ಲೂಯಿ; ಇಂಗ್ಲೆಂಡಿನ ಎರಡನೆಯ ಚಾರ್ಲ್ಸ್, ಒಂದನೆಯ ಲಿಯೋಪೋಲ್ಡ್ ಇವರುಗಳು ಮಂತ್ರಿಗಳನ್ನು ನೇಮಕ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದರು. ಇದು ನಿರಂಕುಶಪ್ರಭುತ್ವದ ಆಳ್ವಿಕೆಯ ಪ್ರಾರಂಭದ ಹಂತ. ಈ ಹಂತದಲ್ಲಿ ನಾವು ಗಮನಿಸಬಹುದಾದ ಬೆಳವಣಿಗೆಯೆಂದರೆ ಅರಸ ಸಂಬಂಧವಾದ ರಾಜಕೀಯ ವ್ಯವಸ್ಥೆ ಜನ ಸಂಬಂಧವಾದ ವ್ಯವಸ್ಥೆಯಾಗಿ ಮಾರ್ಪಾಡುಗೊಳ್ಳಲಾರಂಭಿ ಸಿದ್ದುದು. ಇದಕ್ಕೆ ಮುಖ್ಯ ಕಾರಣ ಯುರೋಪಿನ ಆರ್ಥಿಕ ಪರಿಸ್ಥಿತಿಯಲ್ಲಾದ ಬದಲಾವಣೆ. ಅಂದರೆ ಊಳಿಗಮಾನ್ಯ ಪದ್ಧತಿ ಹಿಡಿತದಲ್ಲಿದ್ದ ಯುರೋಪಿನ ಒಟ್ಟು ರಾಜಕೀಯ ವ್ಯವಸ್ಥೆ ಆಗ ತಾನೇ ಹುಟ್ಟುತ್ತಿದ್ದ ಮಧ್ಯಮ ವರ್ಗದ ಹೊಸ ವ್ಯವಸ್ಥೆಯತ್ತ ತನ್ನ ದಿಕ್ಕು ಬದಲಾಯಿಸಿದ್ದು. ಇದರಿಂದಾಗಿ ಊಳಿಗ ಪದ್ಧತಿಯ ಅರಸರುಗಳು ತಮ್ಮ ಅಧಿಕಾರವನ್ನು ಕಳೆದುಕೊಂಡು ಹೊಸ ಆಳ್ವಿಕೆ ರೂಪುಗೊಳ್ಳಲಾರಂಭಿಸಿತು.

ಕಾರ್ಲ್‌ಮಾರ್ಕ್ಸ್ ಮತ್ತು ಎಂಗೆಲ್ಸ್‌ರವರ ಪ್ರಕಾರ ನಿರಂಕುಶಪ್ರಭುತ್ವ ಒಂದು ರಾಜಕೀಯ ಪದ್ಧತಿ ಅಥವಾ ಬಂಡವಾಳದ ಪ್ರಾಬಲ್ಯತೆ. ಹದಿನಾಲ್ಕು ಮತ್ತು ಹದಿನೈದನೆಯ ಶತಮಾನದಲ್ಲಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ನೇರ ಫಲಿತಾಂಶವೇ ನಿರಂಕುಶ ರಾಷ್ಟ್ರಗಳ ಉಗಮ. ಯುರೋಪಿನ ಕೇಂದ್ರೀಕೃತ ರಾಜಮನೆತನಗಳು ಮಧ್ಯಯುಗೀನ ಸಾಮಾಜಿಕ ರಚನೆಯನ್ನೇ ಪ್ರತಿನಿಧಿಸುತ್ತಿದ್ದವು. ಎಂಗೆಲ್ಸ್‌ರವರು ದರ್ಪಿಷ್ಟ ರಾಜಪ್ರಭುತ್ವವನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ. ‘‘ಇದೊಂದು ಹಳೆಯ ಊಳಿಗ ಪದ್ಧತಿಯ ಶ್ರೀಮಂತ ವರ್ಗ ಹಾಗೂ ಹೊಸ ಮಧ್ಯಮ ವರ್ಗಗಳ ನಡುವಿನ ವರ್ಗ ಹೊಂದಾಣಿಕೆಯ ಉತ್ಪತ್ತಿ.’’ ಅಂದರೆ ಊಳಿಗಮಾನ್ಯ ಪದ್ಧತಿ ಮತ್ತು ಅದನ್ನು ವಿರೋಧಿಸುವ ಮಧ್ಯಮ ವರ್ಗದ ಎರಡೂ ಲಕ್ಷಣಗಳನ್ನು ಹೊಂದಿರುವ ನೂತನ ವ್ಯವಸ್ಥೆ. ದರ್ಪಿಷ್ಟ ರಾಜಪ್ರಭುತ್ವದ ಎಲ್ಲಾ ಲಕ್ಷಣಗಳು ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಗೆ ಪೂರಕವಾಗಿಯೇ ಇವೆ. ಊಳಿಗಮಾನ್ಯ ಉತ್ಪಾದನಾ ವ್ಯವಸ್ಥೆಯಿಂದ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಗೆ ಯುರೋಪಿನ ಒಟ್ಟು ಪರಿಸ್ಥಿತಿ ಬದಲಾಗುವ ಮೊದಲು ನಿರಂಕುಶಪ್ರಭುತ್ವ ಊಳಿಗ ವ್ಯವಸ್ಥೆಯನ್ನೇ ಅನುಸರಿಸುತ್ತಿದ್ದ ಶ್ರೀಮಂತವರ್ಗದ ಜನರ ಹತೋಟಿಯಲ್ಲಿತ್ತು. ಮಧ್ಯಮ ವರ್ಗದ ಕ್ರಾಂತಿಯ ಪ್ರವೇಶ ಒಟ್ಟು ಪರಿಸ್ಥಿತಿಯ ಮೇಲೆ ಆಮೂಲಾಗ್ರವಾದ ಬದಲಾವಣೆಯನ್ನು ತಂದಿತು. ರಾಜಪ್ರಭುತ್ವದ ಉಳಿವು ಹಾಗೂ ಭವಿಷ್ಯದ ದೃಷ್ಟಿಯಿಂದ ಶ್ರೀಮಂತ ಹಾಗೂ ಮಧ್ಯಮ ವರ್ಗದ ಜನರ ನಡುವೆ ಹೊಂದಾಣಿಕೆ ಏರ್ಪಡಿಸುವುದು ಅಂದಿನ ತುರ್ತುಗಳಲ್ಲಿ ಒಂದಾಗಿತ್ತು. ಆದ್ದರಿಂದಲೇ ನಿರಂಕುಶ ಪ್ರಭುತ್ವವನ್ನು ಶ್ರೀಮಂತವರ್ಗ ಹಾಗೂ ಮಧ್ಯಮವರ್ಗಗಳ ನಡುವಿನ ರಾಜಕೀಯ ಸಮತೋಲನವನ್ನು ಕಾಪಾಡಿಕೊಳ್ಳುವ ಸಾಧನವೆಂದು ಪರಿಗಣಿಸಲಾಯಿತು. ಆದರೆ ಈ ರಾಜಕೀಯ ಸಮತೋಲನ ಶಾಶ್ವತವಾಗಿರದೆ ತಾತ್ಕಾಲಿಕವಾದದ್ದಾಗಿತ್ತು. ಇಲ್ಲಿ ಸಮಸ್ಯೆಯನ್ನು ಸಂಕೀರ್ಣಗೊಳಿಸಿರುವ ಅಂಶಗಳೆಂದರೆ ಪರಸ್ಪರ ವೈಮನಸ್ಸು ಹಾಗೂ ಆರ್ಥಿಕತೆಯ ರೂಪಾಂತರ. ಕಾರ್ಲ್‌ಮಾರ್ಕ್ಸ್‌ರವರ ಮಾತಿನಲ್ಲಿಯೇ ಹೇಳುವುದಾದರೆ, ನಿರಂಕುಶಪ್ರಭುತ್ವದ ಲಕ್ಷಣಗಳು ಮುಖ್ಯವಾಗಿ ಬಂಡವಾಳವಾದಿ ಲಕ್ಷಣಗಳಾಗಿಯೇ ಗೋಚರಿಸುತ್ತವೆ. ಉದಾಹರಣೆಗೆ, ಶಾಶ್ವತ ಅಧಿಕಾರಶಾಹಿತ್ವ, ರಾಷ್ಟ್ರಿಯ ತೆರಿಗೆ ನೀತಿ, ಕಾನೂನು ವ್ಯವಸ್ಥೆ, ಏಕೀಕೃತ ಮಾರುಕಟ್ಟೆ ಹಾಗೂ ಶಾಶ್ವತ ಸೈನ್ಯ.

ಯುರೋಪಿನ ಒಟ್ಟು ವ್ಯವಸ್ಥೆ ಊಳಿಗಮಾನ್ಯ ಪದ್ಧತಿಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಬದಲಾವಣೆ ಹೊಂದಿರುವ ಬಗೆಯನ್ನು ರೋಡ್ನೀ ಹಿಲ್ಟನ್ ಪೀಠಿಕೆ ಬರೆದಿರುವ ದಿ ಟ್ರಾನ್ಸಿಷನ್ ಫ್ರಮ್ ಫ್ಯುಡಾಲಿಸಮ್ ಟು ಕ್ಯಾಪಿಟಲಿಸಮ್ ಎಂಬ ಗ್ರಂಥದಲ್ಲಿ ವಿವರವಾಗಿ ಚಿತ್ರಿತವಾಗಿದೆ. ಈ ಗ್ರಂಥ ಒಂದು ಸಂವಾದದಂತಿದ್ದು ಇದರಲ್ಲಿ ಪೌಲ್ ಸ್ವೀಸಿ, ಮೌರಿಸ್ ಡೋಬ್, ಕ್ರಿಸ್ಟೋಪರ್ ಹಿಲ್, ಜೋರ್ಜ್ ಲೆಪಬ್ರೆವ್, ಎರಿಕ್ ಹಾಬ್ಸ್ ಬಾಮ್, ಹಿಲ್ಟನ್, ತಕಾಹಶಿ ಮತ್ತು ಜೋನ್ ಮಿರಿಂಗ್‌ಟಂನ್ ಇವರುಗಳ ವಿಮರ್ಶಾತ್ಮಕ ಲೇಖನಗಳಿವೆ. ಇವು ಯುರೋಪ್ ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ ವ್ಯವಸ್ಥೆಗೆ ಪರಿವರ್ತನೆ ಹೊಂದುತ್ತಿರುವ ಹಾದಿಯಲ್ಲಿ ನಿರಂಕುಶಪ್ರಭುತ್ವ ಒಂದು ಸಂಕೀರ್ಣ ಕಾಲಘಟ್ಟ ಎನ್ನುವ ವಾಸ್ತವವನ್ನು ವಿವರಿಸುತ್ತವೆ. ಯುರೋಪಿನ ರಾಜಕೀಯ ರಚನೆ ಕುರಿತಾಗಿಯೂ ವಿಮರ್ಶಾತ್ಮಕವಾಗಿ ಚಿಂತಿಸಲಾಗಿದೆ. ಮೌರಿಸ್ ಡೋಬ್‌ನ ಸ್ಟಡಿಸ್ ಇನ್ ದಿ ಡೆವಲಪ್‌ಮೆಂಟ್ ಆಫ್ ಕ್ಯಾಪಿಟಾಲಿಸಮ್ ಎಂಬ ಗ್ರಂಥ ಮಾರ್ಕ್ಸ್‌ಸ್ಟ್ ಸೈದ್ಧಾಂತಿಕ ಹಿನ್ನೆಲೆಯಲ್ಲಿಟ್ಟುಕೊಂಡು ಊಳಿಗಮಾನ್ಯ ಪದ್ಧತಿ, ನಿರಂಕುಶ ಪ್ರಭುತ್ವ ಹಾಗೂ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರೂಪಿಸಿದೆ. ನಿರಂಕುಶಪ್ರಭುಗಳ ಬಂಡವಾಳ ಕ್ರೋಢೀಕರಣ ಪ್ರಕ್ರಿಯೆ ಇಲ್ಲಿ ಚರ್ಚೆಗೊಳಗಾಗಿರುವ ಮುಖ್ಯ ವಸ್ತುವಾಗಿದೆ.

ಹದಿನೆಂಟನೆಯ ಶತಮಾನದ ಯುರೋಪಿನ ನಿರಂಕುಶ ರಾಜಪ್ರಭುತ್ವವನ್ನು ಎರಡು ಗುಂಪುಗಳಾಗಿ ವಿಂಗಡಿಸಲು ಸಾಧ್ಯ. ರಷ್ಯಾ ಮತ್ತು ಪ್ರಷ್ಯಾ ಒಂದು ಗುಂಪಾದರೆ ಇಂಗ್ಲೆಂಡ್ ಇನ್ನೊಂದು ಗುಂಪು. ಫ್ರಾನ್ಸ್, ಸ್ಪೈಯಿನ್ ಹಾಗೂ ಹಾಬ್ಸಬರ್ಗ್ ಈ ದೇಶಗಳು ಮೊದಲೆರಡೂ ಗುಂಪುಗಳ ಮಧ್ಯದಲ್ಲಿ ನಿಲ್ಲುತ್ತವೆ. ಹದಿನೆಂಟನೆಯ ಶತಮಾನದ ಯುರೋಪಿನ ಇತಿಹಾಸವನ್ನು ಗಮನಿಸುವಾಗ ವೇದ್ಯವಾಗುವ ಅಂಶವೆಂದರೆ ತುಂಬಾ ಪ್ರಾಮುಖ್ಯವಾದ ಹಾಗೂ ಕುತೂಹಲಕಾರಿಯಾದ ಆಡಳಿತಾತ್ಮಕ ಇತಿಹಾಸ. ರಾಜಕೀಯ ಹಾಗೂ ಸಂವಿಧಾನಾತ್ಮಕ ಇತಿಹಾಸದ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ ವೆಂದೇ ಹೇಳಬೇಕಾಗುತ್ತದೆ. ಆಡಳಿತಾತ್ಮಕ ದಾಖಲೆಗಳು ಅರಸ ಹಾಗೂ ಆತನ ಸಚಿವರುಗಳ ನಡುವಿನ ಸಂಬಂಧಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತವೆ. ಅರಸನ ಕೃಪೆಗೆ ಪಾತ್ರರಾಗಲು ಮಂತ್ರಿಗಳ ನಡುವೆ ಸ್ಪರ್ಧೆ ಹಾಗೂ ವೈಮನಸ್ಸು ಇತ್ತು. ಈ ರೀತಿಯ ಬೆಳವಣಿಗೆ ಇಡೀ ದೇಶದ ಆಂತರಿಕ ಹಾಗೂ ವಿದೇಶಾಂಗ ನೀತಿಯಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದವು. ನೀತಿಯಲ್ಲಿ ಮಾರ್ಪಾಡುಗಳುಂಟಾದವು. ಇಂಗ್ಲೆಂಡಿ ನೊಡನಿದ್ದ ಹಗೆತನ ಮಾಯವಾಗಿ ಮೈತ್ರೀ ಭಾವನೆಗಳು ಮೂಡಲಾರಂಭಿಸಿದವು. ರಾಜ ಅಥವಾ ಮಂತ್ರಿ ತಮ್ಮ ಸ್ಥಾನದಿಂದ ಬದಲಾದಾಗ ಈ ರೀತಿಯ ಬದಲಾವಣೆಗಳು ಉಂಟಾಗುತ್ತಿದ್ದವು. ಒಂದನೆಯ ಕೇಥರಿನ್‌ನ ನಂತರ ಅಧಿಕಾರಕ್ಕೆ ಬಂದ ಕೌಂಟ್ ಬೆಸ್ಟುಜೇವ್ ಪ್ರಷ್ಯಾ ವಿರೋಧಿ ನೀತಿಯನ್ನು ಅನುಸರಿಸಿದ. ಇದೇ ರೀತಿಯ ಬೆಳವಣಿಗೆಗಳನ್ನು ನಾವು ಪ್ರಷ್ಯಾದಲ್ಲೂ ಕಾಣಲು ಸಾಧ್ಯ. ಎರಡನೆಯ ಫ್ರೆಡ್‌ರಿಕ್ ಅಧಿಕಾರಕ್ಕೆ ಬಂದ ತರುವಾಯವೇ ಪ್ರಷ್ಯಾ ಸಿಲೀಸಿಯಾದ ಮೇಲೆ ಯುದ್ಧ ಪ್ರಾರಂಭಿಸಿತು. ಈ ಎರಡೂ ರಾಷ್ಟ್ರಗಳಲ್ಲಿಯೂ ಸಾರ್ವಜನಿಕರ ಅಭಿಪ್ರಾಯಕ್ಕೆ ಯಾವ ಮನ್ನಣೆ ಅಥವಾ ಮೌಲ್ಯವೂ ಇರಲಿಲ್ಲ. ಸರಕಾರ ಒಂದು ವರ್ಗದ ಜನರ ಹತೋಟಿಯಲ್ಲಿತ್ತು.  ಅದು ಭೂಮಾಲಿಕ ಶ್ರೀಮಂತವರ್ಗ. ಆರಂಭದಲ್ಲಿ ಇಂಗ್ಲೆಂಡಿನಲ್ಲಿಯೂ ನಿರಂಕುಶ ರಾಜಪ್ರಭುತ್ವವೇ ದೇಶದ ರಾಜಕೀಯ ಜೀವನದ ಕೇಂದ್ರಬಿಂದುವಾಗಿತ್ತು. ಪಾರ‌್ಲಿಮೆಂಟ್ ಎನ್ನುವ ವ್ಯವಸ್ಥೆ ಅಸ್ತಿತ್ವದಲ್ಲಿದ್ದರೂ ರಾಜಮನೆತನದ ಹತೋಟಿಯಲ್ಲಿತ್ತು. ಹದಿನೇಳನೆಯ ಶತಮಾನದ ದ್ವಿತೀಯಾರ್ಧದಲ್ಲಿ ರೂಪುಗೊಂಡ ಮಧ್ಯಮವರ್ಗ ನಿರಂಕುಶ ಪ್ರಭುತ್ವಕ್ಕೆ ಬಲವಾದ ತಡೆಗೋಡೆಯಾಗಿ ಅವನತಿಯನ್ನು ಕಾಣುವಂತೆ ಮಾಡಿತು. ಈ ವಿಷಯ ಕುರಿತು ಲೇಖನದ ಮುಂದಿನ ಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಫ್ರಾನ್ಸ್ ದೇಶದಲ್ಲಿನ ರಾಜಪ್ರಭುತ್ವ ಈಗ ತಾನೇ ವಿವರಿಸಿದ ಹಾಗೆ ರಷ್ಯಾ, ಪ್ರಷ್ಯಾ ಹಾಗೂ ಇಂಗ್ಲೆಂಡಿನ ರಾಜಪ್ರಭುತ್ವದ ಕೆಲವೊಂದು ಲಕ್ಷಣಗಳನ್ನು ಒಳಗೊಂಡಿತ್ತು. ಫ್ರಾನ್ಸ್ ದೇಶದ ಅರಸರುಗಳು ಹೆಚ್ಚಿನ ವೈಯಕ್ತಿಕ ಅಧಿಕಾರವನ್ನು ಪಡೆದುಕೊಂಡುದ್ದು ನಿಜ. ದೇಶದಲ್ಲಿನ ಎಲ್ಲಾ ಆಡಳಿತಾತ್ಮಕ ಹಾಗೂ ಇನ್ನಿತರ ಚಟುವಟಿಕೆಗಳು ನೇರವಾಗಿ ಅರಸನಿಂದಲೇ ನಡೆಯಬೇಕಾಗಿತ್ತು. ಉದಾಹರಣೆಗೆ, ಫ್ರಾನ್ಸಿನ ಅರಸ ಹದಿನಾಲ್ಕನೆಯ ಲೂಯಿ ‘‘ನಾನೇ ರಾಷ್ಟ್ರ’’ ಎಂಬುದಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದ. ನಾವು ಸೂಕ್ಷ್ಮವಾಗಿ ಫ್ರಾನ್ಸಿನ ನಿರಂಕುಶ ಪ್ರಭುತ್ವವನ್ನು ಅವಲೋಕಿಸಿದಾಗ ಮಂತ್ರಿಗಳ ಹಾಗೂ ಪ್ರಾಂತೀಯ ಅಧಿಕಾರಿಗಳ ಒಳ ಹಾಗೂ ಹೊರ ರಾಜಕೀಯ ಗೋಚರಿಸುತ್ತದೆ. ಫ್ರಾನ್ಸ್‌ನಲ್ಲಿಯೂ ಹದಿನೆಂಟನೆಯ ಶತಮಾನದಲ್ಲಿ ಕ್ರಾಂತಿಯ ಛಾಯೆ ಮೂಡುತ್ತಿದ್ದಂತೆಯೇ ಪ್ರಾಂತ್ಯಾಧಿಕಾರಿಗಳು ಸ್ವತಂತ್ರವಾಗಿ ವ್ಯವಹರಿಸಲು  ಪ್ರಾರಂಭಿಸಿದರು. ಈ  ಅಧಿಕಾರದ ವಿಕೇಂದ್ರಿಕರಣ  ಫ್ರಾನ್ಸಿನ ನಿರಂಕುಶ ಪ್ರಭುತ್ವದ ಅವನತಿಯನ್ನು ಸೂಚಿಸಿತು.

ಲೇಖನದ ಮುಂದಿನ ಭಾಗದಲ್ಲಿ ಯುರೋಪಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಯಾವ ರೀತಿಯ ನಿರಂಕುಶಪ್ರಭುತ್ವ ಅಸ್ತಿತ್ವದಲ್ಲಿತ್ತು ಮತ್ತು ಅದರ ಸ್ವಭಾವ ಹಾಗೂ ವ್ಯಾಪ್ತಿಯ ಕುರಿತು ಚರ್ಚಿಸಲಾಗುವುದು. ಮುಖ್ಯವಾಗಿ ಇಂಗ್ಲೆಂಡ್, ಫ್ರಾನ್ಸ್, ಪ್ರಷ್ಯಾ, ರಷ್ಯಾ, ಸ್ಪೈನ್, ಪೋಲೆಂಡ್, ಅಸ್ಟ್ರಿಯಾ, ಸ್ವೀಡನ್, ಡಚ್ ಗಣರಾಜ್ಯ ಮುಂತಾದ ದೇಶಗಳಲ್ಲಿನ ಅಧಿಕಾರದ ಸ್ವರೂಪ ಹಾಗೂ ರಾಜಕೀಯ ಸಂಕೀರ್ಣತೆಯ ಕುರಿತು ಇಲ್ಲಿ ಚರ್ಚೆ ನಡೆಸಲಾಗಿದೆ.

ಇಂಗ್ಲೆಂಡಿನ ನಿರಂಕುಶಪ್ರಭುತ್ವದ ಕುರಿತು ಚರ್ಚಿಸುವಾಗ ಇದು ಯುರೋಪಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿ ಕಂಡುಬರುತ್ತದೆ. ಮಧ್ಯಯುಗೀನ ಇಂಗ್ಲೆಂಡಿನ ರಾಜಪ್ರಭುತ್ವ ಊಳಿಗಮಾನ್ಯ ಪದ್ಧತಿಯ ಬಿಗಿಮುಷ್ಟಿಯಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯ ವಾಗಿತ್ತು. ಊಳಿಗಮಾನ್ಯ ಪದ್ಧತಿ ಮಧ್ಯಯುಗೀನ ಯುರೋಪಿನ ಒಟ್ಟಾರೆ ಜನಜೀವನದ ಸಾಮಾನ್ಯ ಲಕ್ಷಣವಾಗಿ ಕಂಡುಬರುತ್ತದೆ. ಅರಸುಮನೆತನಗಳೂ ಈ ವ್ಯವಸ್ಥೆಯ ಚೌಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿರಲಿಲ್ಲವೆಂದೇ ಹೇಳಬಹುದು. ಇಂಗ್ಲೆಂಡಿನ ಮಧ್ಯಯುಗೀನ ರಾಜಪ್ರಭುತ್ವ ಬಲಿಷ್ಠವಾಗಿದ್ದಿದ್ದೇ ಅದು ಯುರೋಪ್ ಖಂಡದಲ್ಲಿ ಆಡಳಿತಾತ್ಮವಾಗಿ ತನ್ನ ಭೌಗೋಳಿಕ ಮೇರೆಗಳನ್ನು ವಿಸ್ತರಿಸಲು ಪ್ರೇರಣೆ ನೀಡಿದ್ದು. ಇಲ್ಲಿ ನಾವು ಇಂಗ್ಲೆಂಡಿನ ನಿರಂಕುಶಪ್ರಭುತ್ವದ ಇತಿಹಾಸವನ್ನು ಅವಲೋಕಿಸಿದರೆ ಅದು ನೋರ‌್ಮಾನ್ ಮತ್ತು ಆ್ಯಂಗೀವ್ನ್ ರಾಜವಂಶಗಳ ಆಳ್ವಿಕೆಯಿಂದಲೇ ಪ್ರಾರಂಭವಾಗಿದೆ ಎಂಬುದಾಗಿ ತಿಳಿದುಬರುತ್ತದೆ. ಈ ರಾಜವಂಶಗಳ ಆಳ್ವಿಕೆಯಲ್ಲಿ ಪಾರ್ಲಿಮೆಂಟ್ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿರಲಿಲ್ಲ.

ಟ್ಯೂಡರ್ ವಂಶ ಮತ್ತು ಸ್ಟುವರ್ಟ್ ವಂಶಗಳು ಇಂಗ್ಲೆಂಡಿನ ನಿರಂಕುಶಪ್ರಭುತ್ವಕ್ಕೆ ಹೊಸ ಆಯಾಮಗಳನ್ನು ಕಲ್ಪಿಸಿದರೂ ಪಾರ್ಲಿಮೆಂಟಿನೊಡನೆ ಉಂಟಾದ ಆಂತರಿಕ ಕಲಹದಿಂದಾಗಿ ನಿರಂಕುಶ ಆಡಳಿತವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಪಾರ್ಲಿಮೆಂಟ್ ಅರಸರುಗಳ ಅಧಿಕಾರವನ್ನು ಪ್ರಶ್ನಿಸುವ ಹಾಗೂ ನಿಯಂತ್ರಿಸುವಷ್ಟು ಸಾಮರ್ಥ್ಯವನ್ನು ಹಂತಹಂತವಾಗಿ ಪಡೆದುಕೊಂಡಿತು. ಒಂದನೆಯ ಎಡ್ವರ್ಡ್‌ನ ನಂತರದ ಯಾವ ಅರಸರೂ ಪಾರ್ಲಿಮೆಂಟಿನ ಅನುಮತಿ ಇಲ್ಲದೆ ಹೊಸ ಸೌಲಭ್ಯಗಳನ್ನು ಹೊಂದುವಂತಿರಲಿಲ್ಲ. ಈ ಅಂಶವನ್ನು ಜಿ.ಪಿ.ಕೂಪರ್ ತಮ್ಮ ‘‘ಡಿಫರೆನ್ಸಸ್ ಬಿಟ್ ವೀನ್ ಇಂಗ್ಲೀಷ್ ಆ್ಯಂಡ್ ಕಾಂಟಿನೆಂಟಲ್ ಗವರ್ನ್‌ಮೆಂಟ್ಸ್ ಇನ್ ದಿ ಆರ್ಲೀ ಸೆವೆಂಟೀನ್ತ್ ಸೆಂಚುರಿ’’ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ಒಂದನೆಯ ಚಾರ್ಲ್ಸ್‌ನ ಅವಧಿಯಲ್ಲಿಯೇ ಆಂತರಿಕ ಕಲಹ ಪ್ರಾರಂಭಗೊಂಡಿತ್ತು. ಚರ್ಚ್ ಮತ್ತೊಮ್ಮೆ ಇಂಗ್ಲೆಂಡಿನ ರಾಜಕೀಯ ಜೀವನದ ಕೇಂದ್ರಬಿಂದುವಾಗಿ ತನ್ನನ್ನು ಶುದ್ದೀಕರಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದೇ ವಿರೋಧಕ್ಕೆ ಎಡೆಮಾಡಿಕೊಟ್ಟಿತು ಎಂಬುದು ಇತಿಹಾಸಕಾರರ ವಾದವಾಗಿದೆ. ಈ ವಿರೋಧಿಸುವ ಪ್ರಕ್ರಿಯೆಯಲ್ಲಿ ಪಾಲುಗೊಂಡಿದ್ದವರು ವ್ಯಾಪಾರಸ್ಥರು ಹಾಗೂ ಶ್ರೀಮಂತ ಮಧ್ಯಮ ವರ್ಗದ ಜನರು. ಈ ವರ್ಗದ ಜನರು ತಮ್ಮ ಆರ್ಥಿಕ ಚಟುವಟಿಕೆಯಿಂದಾಗಿ ಇಂಗ್ಲೆಂಡಿನಲ್ಲಿ ಪ್ರಭಾವಶಾಲಿ ವರ್ಗವಾಗಿ ರೂಪುಗೊಂಡು ಪಾರ್ಲಿಮೆಂಟಿನಲ್ಲಿ ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳುವಷ್ಟು ಸಮರ್ಥರಾಗಿದ್ದರು.

ಈ ಬೆಳವಣಿಗೆ ನೇರವಾಗಿ ಇಂಗ್ಲೆಂಡಿನ ರಾಜವಂಶ ಹಾಗೂ ಪಾರ್ಲಿಮೆಂಟಿನೊಡನೆ ಕಲಹ ಏರ್ಪಡುವಂತೆ ಮಾಡಿತು. ಆಲಿವರ್ ಕ್ರೋಮ್‌ವೆಲ್, ಎರಡನೆಯ ಚಾರ್ಲ್ಸ್ ಹಾಗೂ ಎರಡನೆಯ ಜೇಮ್ಸ್‌ನ ಅವಧಿಯಲ್ಲಿ ಆಂತರಿಕ ಕಲಹ ಉತ್ತುಂಗಕ್ಕೇರಿತ್ತು. ಕ್ರಿ.ಶ.೧೬೮೮ರಲ್ಲಿ ರಕ್ತರಹಿತ ಕ್ರಾಂತಿ ನಡೆದು ಸ್ಟುವರ್ಟ್ ರಾಜವಂಶದ ಆಳ್ವಿಕೆ ಕೊನೆಗೊಂಡಿತು. ಪಾರ್ಲಿಮೆಂಟ್ ಇಂಗ್ಲೆಂಡಿನಲ್ಲಿ ಸಂಪೂರ್ಣ ಅಧಿಕಾರವನ್ನು ಪಡೆದು ಕೊಂಡಿತು. ಡಚ್‌ನ ರಾಜಕುಮಾರ ವಿಲ್ಯಮ್‌ನನ್ನು ಹೊಸ ಸಂವಿಧಾನಾತ್ಮಕ ಅರಸನನ್ನಾಗಿ ನೇಮಕ ಮಾಡಲಾಯಿತು. ಇದರಿಂದಾಗಿ ಪಾಶ್ಚಿಮಾತ್ಯ ಯುರೋಪಿನ ಬಲಿಷ್ಠ ರಾಷ್ಟ್ರವಾಗಿ ಇಂಗ್ಲೆಂಡ್ ರೂಪುಗೊಂಡರೂ ನಿರಂಕುಶ ಪ್ರಭುತ್ವ ಬಹುಬೇಗನೆ ತನ್ನ ಅಂತ್ಯವನ್ನು ಕಂಡುಕೊಂಡಿತು. ಯುರೋಪಿನ ಬಿಟ್ಟು ಇತಿಹಾಸವನ್ನು ಗಮನಿಸಿದರೆ ಇಂಗ್ಲೆಂಡಿನ ನಿರಂಕುಶಪ್ರಭುತ್ವ ದೌರ್ಬಲ್ಯಗಳಿಂದ ಕೂಡಿದ್ದು ಮತ್ತು ಅಲ್ಪ ಅವಧಿಯದ್ದಾಗಿತ್ತೆಂದು ತೋರುತ್ತದೆ. ನಿರಂಕುಶಪ್ರಭುತ್ವ ಬೆಳವಣಿಗೆ ಹೊಂದುವ ಹಾದಿಯಲ್ಲೇ ಮಧ್ಯಮ ವರ್ಗದ ಕ್ರಾಂತಿಗೆ ಸಿಲುಕಿ ಅವನತಿಯನ್ನು ಹೊಂದಿತು ಅಥವಾ ಬೆಳವಣಿಗೆಯ ಹಂತದಲ್ಲೇ ಮುಗ್ಗರಿಸಿತು. ಇಂಗ್ಲೆಂಡಿನ ಪ್ರಜಾಸತ್ತಾತ್ಮಕ ಬೆಳವಣಿಗೆಗಳು ಯುರೋಪಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಒಂದು ಅಪವಾದದಂತಿದ್ದರೂ ಯುರೋಪಿನಾದ್ಯಂತ ಹೊಸ ಅರಿವಿನ ಸೃಷ್ಟಿಗೆ ದಾರಿಮಾಡಿಕೊಟ್ಟಿರುವುದಂತು ನಿಜ.

ಫ್ರಾನ್ಸ್‌ನ ನಿರಂಕುಶಪ್ರಭುತ್ವ ಹದಿನಾಲ್ಕನೆಯ ಲೂಯಿಯ ಅವಧಿಯಲ್ಲಿ ಉತ್ತುಂಗಕ್ಕೇರಿತ್ತು ಎಂಬುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಫ್ರಾನ್ಸ್ ಎನ್ನುವ ಭೌಗೋಳಿಕ ಭೂಪ್ರದೇಶ ಹದಿನಾಲ್ಕನೆಯ ಲೂಯಿಯ ಹೆಸರಿನಲ್ಲಿ ಗುರುತಿಸಲ್ಪ ಡುತ್ತಿತ್ತು. ಇಲ್ಲಿ ರಾಷ್ಟ್ರ ಎನ್ನುವ ಕಲ್ಪನೆ ಪ್ರಾಮುಖ್ಯವೆನಿಸುವುದಿಲ್ಲ. ಒಬ್ಬ ವ್ಯಕ್ತಿ ರಾಷ್ಟ್ರಕ್ಕೆ ಸಮನಾಗಿರುತ್ತಾನೆ. ನಾನೇ ರಾಷ್ಟ್ರ ಎಂಬುದಾಗಿ ಹದಿನಾಲ್ಕನೆಯ ಲೂಯಿ ಸ್ವಯಂ ಘೋಷಿಸಿಕೊಂಡಿದ್ದ. ಇವನ ಆಳ್ವಿಕೆಯನ್ನು ವೈಭವದ ರಾಜಪ್ರಭುತ್ವವೆಂದೂ ಕರೆಯಲಾಗಿದೆ. ಆದರೆ ಇದು ಆರ್ಥಿಕ ದಿವಾಳಿತನಕ್ಕೆ ಎಡೆಮಾಡಿಕೊಟ್ಟು ಫ್ರಾನ್ಸಿನ ನಿರಂಕುಶಪ್ರಭುತ್ವ ಹಂತಹಂತವಾಗಿ ಕುಸಿಯಲು ಪ್ರಾರಂಭಿಸಿದ್ದನ್ನು ನಾವು ಫ್ರಾನ್ಸ್‌ನ ಇತಿಹಾಸದಿಂದ ತಿಳಿಯಲು ಸಾಧ್ಯ. ಈ ಪ್ರಕ್ರಿಯೆಗೆ ಹದಿನೈದನೆಯ ಲೂಯಿ ಹಾಗೂ ಹದಿನಾರನೆಯ ಲೂಯಿ ನೇರವಾಗಿ ಬಲಿಯಾಗುತ್ತಾರೆ.

ಬೂರ್ಬನ್ ವಂಶದ ಅರಸ ನಾಲ್ಕನೆಯ ಹೆನ್ರಿಯ ಮರಣದ ನಂತರ ತಲೆದೋರಿದ ಅರಾಜಕತೆಯನ್ನು ಹೋಗಲಾಡಿಸಿ ಫ್ರಾನ್ಸ್‌ನಲ್ಲಿ ಬೂರ್ಬನ್ ವಂಶದ ಆಳ್ವಿಕೆಯನ್ನು ಪುನರ್‌ಸ್ಥಾಪಿಸಿದ ವ್ಯಕ್ತಿ ರಿಚಲ್ಯೂ. ಇವನು ಹದಿಮೂರನೆಯ ಲೂಯಿಯ ಪರವಾಗಿ ಆಳ್ವಿಕೆ ನಡೆಸುತ್ತಿದ್ದ. ಫ್ರಾನ್ಸಿನ ನಿರಂಕುಶಪ್ರಭುತ್ವ ಅಲ್ಲಿನ ಪ್ರಧಾನಮಂತ್ರಿಗಳಿಂದಲೇ ಪ್ರಾರಂಭಗೊಂಡಿತು ಎನ್ನುವ ಅಂಶವೂ ವೇದ್ಯವಾಗುತ್ತದೆ. ಇದರಿಂದಾಗಿಯೇ ನಿರಂಕುಶ ಪ್ರಭುತ್ವದ ಆಳ್ವಿಕೆಯ ಜೊತೆ ಜೊತೆಗೇ ಸಂವಿಧಾನಾತ್ಮಕ ಬೆಳವಣಿಗೆಗಳೂ ಕಂಡುಬರಲು ಪ್ರಾರಂಬಿಸಿದವು. ಇದು ಸಹಜ ಬೆಳವಣಿಗೆ ಎಂದೆನಿಸುತ್ತದೆ. ಹದಿನಾಲ್ಕನೆಯ ಲೂಯಿಯ ಆಳ್ವಿಕೆಯ ಪ್ರಥಮಾರ್ಧದಲ್ಲಿ ಮಜಾರಿನ್ ಎಂಬ ಮಂತ್ರಿ ಆತನ ಪರವಾಗಿ ಆಳ್ವಿಕೆ ನಡೆಸುತ್ತಿದ್ದ. ಇವನು ರಿಚಲ್ಯೂವಿನ ಮಾದರಿಯನ್ನೇ ಅನುಸರಿಸಿ ಫ್ರಾನ್ಸ್‌ನಲ್ಲಿ ಬಲಿಷ್ಟ ವಾದ ನಿರಂಕುಶ ಪ್ರಭುತ್ವ ರೂಪುಗೊಳ್ಳುವುದಕ್ಕೆ ಪ್ರಾಮುಖ ಕಾರಣನಾದ. ಇವನ ಪ್ರಕಾರ ಅರಸರು ದೇವರ ಜೀವಂತ ಪ್ರತಿಮೆ. ಹದಿನಾಲ್ಕನೆಯ ಲೂಯಿ ತನ್ನ ವೈಯಕ್ತಿಕ ಆಳ್ವಿಕೆಯನ್ನು ಪ್ರಾರಂಭಿಸಿದ್ದು ಕ್ರಿ.ಶ.೧೬೬೧ರಿಂದ. ಇವನ ಆಳ್ವಿಕೆಯಲ್ಲಿ ಕೋಲ್ಬರ್ಟ್ ಪ್ರಧಾನಮಂತ್ರಿಯಾಗಿದ್ದರೂ ರಿಚಲ್ಯೂವಿನಷ್ಟು ಅಧಿಕಾರ ಚಲಾಯಿಸಲು ಸಾಧ್ಯವಾಗು ತ್ತಿರಲಿಲ್ಲ. ಏಕೆಂದರೆ ಅರಸ ಸ್ವತಹ ತಾನೇ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದ. ಆದರೂ ಸಂಪೂರ್ಣವಾಗಿ ತನ್ನ ಆಳ್ವಿಕೆಯನ್ನು ಯುದ್ಧಗಳಿಗಾಗಿಯೇ ಮೀಸಲಿಟ್ಟ. ಹದಿನಾಲ್ಕನೆಯ ಲೂಯಿಗೆ ಕೋಲ್ಬರ್ಟ್‌ನ ಆರ್ಥಿಕ ನೀತಿಗಳು ಬೆಂಬಲ ನೀಡುತ್ತಿದ್ದವು.

ಹದಿನಾಲ್ಕನೆಯ ಲೂಯಿ ಎಷ್ಟೇ ಸಮರ್ಥ ಅರಸನಾಗಿದ್ದರೂ ಆತನ ಆಳ್ವಿಕೆಯುದ್ದಕ್ಕೂ ಶ್ರೀಮಂತ ವರ್ಗದ ಹಾಗೂ ಮಧ್ಯಮ ವರ್ಗದ ಜನರ ನಡುವಿನ ತಿಕ್ಕಾಟ ನಡೆದೇ ಇತ್ತು. ಇಲ್ಲಿ ನಾವು ಊಳಿಗಮಾನ್ಯ ಪದ್ಧತಿಯ ಮುಂದುವರಿಕೆಯನ್ನು ಗಮನಿಸಲು ಸಾಧ್ಯ. ರಾಷ್ಟ್ರ ಎನ್ನುವ ಕಲ್ಪನೆ ಅಮೂರ್ತ ರೂಪದಲ್ಲಿದ್ದರೂ ಆ ಭಾವನೆ ರೂಪುಗೊಳ್ಳುವುದಕ್ಕೆ ಮತ್ತು ಬಲಗೊಳ್ಳುವುದಕ್ಕೆ ಪೂರಕವಾದ ಅಂಶಗಳನ್ನು ಹದಿನಾಲ್ಕನೆಯ ಲೂಯಿಯ ಆಳ್ವಿಕೆಯಲ್ಲೇ ಗಮನಿಸಲು ಸಾಧ್ಯ. ಫ್ರಾನ್ಸಿನ ರಾಜಕೀಯ ವ್ಯವಸ್ಥೆಯ ಒಳಹೊಕ್ಕು ನೋಡಿದಾಗ ಊಳಿಗ ದೊರೆಗಳು ಹೆಚ್ಚಿನ ಅಧಿಕಾರ ಹಾಗೂ ಸವಲತ್ತುಗಳನ್ನು ಹೊಂದಿರುತ್ತಿದ್ದದ್ದು ಕಂಡು ಬರುತ್ತದೆ. ಇದು ಅರಾಜಕತೆಗೆ ಎಡೆಮಾಡಿಕೊಟ್ಟು ರಾಷ್ಟ್ರ ಎನ್ನುವ ಸಂಸ್ಥೆ ರೂಪುಗೊಳ್ಳು ವುದಕ್ಕೆ ನೇರವಾಗಿ ಕಾರಣವಾಯಿತು. ಕ್ರಿ.ಶ.೧೭೮೯ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಮಹಾ ಕ್ರಾಂತಿಯ ಬೀಜ ಮೊಳಕೆಯೊಡೆಯಲು ಪ್ರಾರಂಭಿಸಿದ್ದು ಈ ಅವಧಿಯಲ್ಲಿಯೇ. ಕುಲೀನ ವರ್ಗದ ಜನರ ವಿರೋಧವನ್ನು ಅರ್ಥೈಸಿಕೊಂಡ ಹದಿನಾಲ್ಕನೆಯ ಲೂಯಿ ಅವರನ್ನೆಲ್ಲಾ ತನ್ನ ಸಭಾಸದರನ್ನಾಗಿ ಮಾಡಿ ಅವರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದ. ಮಧ್ಯಮವರ್ಗದ ಜನರು ಅಪಾರ ಸಂಪತ್ತನ್ನು ಗಳಿಸಿ ಅಧಿಕಾರ ಮತ್ತು ಸವಲತ್ತುಗಳನ್ನು ಪಡೆಯಲು ಹಂಬಲಿಸುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಸಾಮಾನ್ಯ ಜನರ ಬೆಂಬಲವು ಸಿಕ್ಕಿತು. ಹೆಚ್ಚು ಹೆಚ್ಚು ಪೇಟೆ-ಪಟ್ಟಣಗಳು ಅಸ್ತಿತ್ವಕ್ಕೆ ಬರಲಾರಂಭಿಸಿದವು. ಈ ನಗರೀಕರಣ ಪ್ರಕ್ರಿಯೆ ಫ್ರಾನ್ಸಿನ ಆರ್ಥಿಕತೆಯ ಮೇಲೆ ಅದರಲ್ಲೂ ಮುಖ್ಯವಾಗಿ ಮಧ್ಯಮವರ್ಗದ ಜನರ ಆರ್ಥಿಕ ಮಟ್ಟವನ್ನು ಮೇಲಕ್ಕೇರಿಸಿತು. ಈ ಆರ್ಥಿಕತೆಯಲ್ಲಿನ ಬದಲಾವಣೆ ಊಳಿಗಮಾನ್ಯ ಪದ್ಧತಿಯ ಅವನತಿಗೆ ಕಾರಣವಾಗಿರುವುದು ಸಹಜವೆನಿಸುತ್ತದೆ. ಹದಿನೆಂಟನೆಯ ಶತಮಾನದ ದ್ವಿತೀಯಾರ್ಧದಲ್ಲಿ ಬೂರ್ಬನ್ ರಾಜವಂಶದ ಆಳ್ವಿಕೆ ಕೊನೆಗೊಳ್ಳುವುದಕ್ಕೂ ಇದೇ ಪ್ರಮುಖ ಕಾರಣ. ಫ್ರಾನ್ಸ್‌ನ ಅಲಕ್ಷಿತ ವರ್ಗದ ಜನರು ತಮ್ಮ ಮೂಲಭೂತ ಬೇಡಿಕೆಗಳನ್ನು ಈಡೇರಿಸು ವುದಕ್ಕೋಸ್ಕರ ಮಧ್ಯಮ ವರ್ಗದೊಡನೆ ಸೇರಿಕೊಂಡು ಕ್ರಾಂತಿ ಗಟ್ಟಿಯಾಗಿ ಬೇರೂರುವಂತೆ ಮಾಡುತ್ತಾರೆ. ಇದರಿಂದಾಗಿ ಹದಿನಾಲ್ಕನೆಯ ಲೂಯಿಯಿಂದ ಪ್ರಾರಂಭಗೊಂಡ ವೈಭವದ ರಾಜಪ್ರಭುತ್ವ ಅನೇಕ ಚಾರಿತ್ರಿಕ ತಿರುವುಗಳನ್ನು ಪಡೆದುಕೊಂಡು ಕ್ರಿ.ಶ.೧೭೮೯ರ ಹೊತ್ತಿಗೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಕ್ರಾಂತಿಗೆ ಸಿಲುಕಿ ಅವನತಿಯನ್ನು ಹೊಂದಿತು.

ಪ್ರಷ್ಯಾ ದೇಶದಲ್ಲಿ ಹೊಹೆನ್‌ಜೊಲೆರೆನ್ಸ್ ವಂಶದ ಅರಸರು ಆಳ್ವಿಕೆ ನಡೆಸುತ್ತಿದ್ದರು. ಈ ವಂಶದ ಪ್ರಸಿದ್ಧ ಅರಸ ಎರಡನೆಯ ಫ್ರೆಡ್‌ರಿಕ್. ಇವನ ಆಳ್ವಿಕೆಯ ಅವಧಿ ಕ್ರಿ.ಶ.೧೭೪೦ ರಿಂದ ೧೭೮೬ರವರೆಗೆ. ಫ್ರೆಂಚ್ ದಾರ್ಶನಿಕ ವೊಲ್ಟೆರ್ ಫ್ರೆಡ್‌ರಿಕ್‌ನ ಆಳ್ವಿಕೆಯನ್ನು ಉದಾರವಾದಿ ನಿರಂಕುಶಪ್ರಭುತ್ವ ಎಂಬುದಾಗಿ ಕರೆದಿದ್ದಾನೆ. ರಾಜಪ್ರಭುತ್ವದ ಅಧಿಕಾರದ ಸ್ವರೂಪವನ್ನು ಗಮನಿಸಿ ನಿರಂಕುಶ, ಉದಾರವಾದಿ ಹಾಗೂ ಪ್ರಜ್ಞಾವಂತ ಎಂಬುದಾಗಿ ಸರಕಾರದ ವಿವಿಧ ಮಾದರಿಗಳನ್ನು ವರ್ಗೀಕರಿಸಬಹುದು. ಈ ಹಿನ್ನೆಲೆಯಿಂದಲೇ ವೋಲ್ಟೆರ್ ಫ್ರೆಡ್‌ರಿಕನ ಆಳ್ವಿಕೆಯನ್ನು ಉದಾರವಾದಿ ನಿರಂಕುಶಪ್ರಭುತ್ವ ಎಂಬುದಾಗಿ ಕರೆದಿರಬೇಕು. ಫ್ರೆಡ್‌ರಿಕನನ್ನು ‘ಮಹಾಶಯ’ ಎಂಬುದಾಗಿಯೂ ಯುರೋಪಿನ ಇತಿಹಾಸದಲ್ಲಿ ಗುರುತಿಸಲಾಗಿದೆ. ಇವನ ಆಳ್ವಿಕೆಯಲ್ಲಿ ನಡೆದ ಪ್ರಮುಖ ಘಟನೆಗಳೆಂದರೆ ಕೇಂದ್ರೀಕೃತ ಅಧಿಕಾರಶಾಹಿಯ ಧೋರಣೆ ಮತ್ತು ಸಿಲೀಸಿಯಾ ಯುದ್ಧ. ಇವೆರಡೂ ಪ್ರತಿಷ್ಠೆಯ ಪ್ರಶ್ನೆ ಹಾಗೂ ಪ್ರಭುತ್ವದ ಮುಂದುವರಿಕೆಯ ಸಂಕೀರ್ಣ ಘಟ್ಟವಾಗಿದ್ದು ಫ್ರೆಡ್‌ರಿಕ್ ತುಂಬಾ ಚಾಣಾಕ್ಷತನದಿಂದ ನಿಭಾಯಿಸುವಲ್ಲಿ ಯಶಸ್ವಿಯಾದ.

ಕೇಂದ್ರೀಕೃತ ಅಧಿಕರಶಾಹಿಯ ಧೋರಣೆ ಆಂತರಿಕ ಸಮಸ್ಯೆಯಾಗಿದ್ದು ನಿರಂಕುಶ ಪ್ರಭುತ್ವವನ್ನು ಗಟ್ಟಿಗೊಳಿಸುವ ಅಂಶವಾಗಿದೆ. ಶ್ರೀಮಂತ ವರ್ಗದ ಅಧೀನದಲ್ಲಿದ್ದ ಅನೇಕ ಪ್ರಾಂತ್ಯಗಳನ್ನು ಕೇಂದ್ರದೊಡನೆ ವಿಲೀನಗೊಳಿಸುವ ಉದ್ದೇಶದಿಂದ ಮತ್ತು ಒಂದು ಬಲಿಷ್ಟ ಹಾಗೂ ಸ್ಥಿರವಾದ ಸೈನ್ಯವನ್ನು ಹೊಂದುವ ಉದ್ದೇಶಕ್ಕಾಗಿ ಕೇಂದ್ರೀಕೃತ ಅಧಿಕಾರಶಾಹಿ ಧೋರಣೆಯ ಅಗತ್ಯತೆ ಮತ್ತು ಜರೂರು ಫ್ರೆಡ್‌ರಿಕನಿಗೆ ಕಂಡುಬಂತು. ದೇಶದ ಪ್ರಗತಿಗೆ ಸರಕಾರದ ಹಸ್ತಕ್ಷೇಪ ಅನಿವಾರ್ಯ ಎಂಬ ಧೋರಣೆಯನ್ನು ಫ್ರೆಡ್‌ರಿಕ್ ಹೊಂದಿದ್ದ. ಅಂದರೆ ಆಡಳಿತದ ಪ್ರತಿಯೊಂದು ಮಜಲುಗಳಲ್ಲೂ ಸರಕಾರ ನೇರ ಹಸ್ತಕ್ಷೇಪ ನಡೆಸಿದರೆ ಮಾತ್ರ ಆರ್ಥಿಕ ಪ್ರಗತಿ ಸಾಧ್ಯ ಎಂಬ ಮನೋಭಾವನೆಯನ್ನು ಹೊಂದಿದ್ದ. ಫ್ರೆಡ್‌ರಿಕ್‌ನ ಆಳ್ವಿಕೆಯಲ್ಲಿ ಕೃಷಿ ಮತ್ತು ಕೈಗಾರಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ನೀತಿಗಳನ್ನು ರೂಪಿಸಲಾಗುತ್ತಿತ್ತು. ಧಾರ್ಮಿಕ ಗಲಭೆಗಳೇ ಮುಖ್ಯವಾಗಿದ್ದು ಅಂದಿನ ಯುರೋಪಿನ ಪರಿಸ್ಥಿತಿಯಲ್ಲಿ ಪ್ರಷ್ಯಾ ಮಾತ್ರ ಒಂದು ಅಪವಾದದಂತಿತ್ತು.

ಪ್ರಷ್ಯಾದ ವಿದೇಶಾಂಗ ನೀತಿಯಲ್ಲಿ ಪ್ರಮುಖವಾಗಿ ಚರ್ಚೆಗೆ ಆಸ್ಪದವಾಗಿರುವ ಸಂಗತಿ ಸಿಲೀಸಿಯಾ ವಿವಾದಕ್ಕೆ ಸಂಬಂಧಪಟ್ಟದ್ದು. ಇದನ್ನು ಸಪ್ತ ವಾರ್ಷಿಕ ಯುದ್ಧವೆಂದೇ ಕರೆಯಲಾಗಿದೆ. ಯುರೋಪಿನ ಅನೇಕ ದೇಶಗಳೂ ಈ ಯುದ್ಧದಲ್ಲಿ ಪರೋಕ್ಷವಾಗಿ ಭಾಗಿಗಳಾಗಿದ್ದವು. ಪ್ರಷ್ಯಾ ಹಾಗೂ ಆಸ್ಟ್ರೀಯಾ ದೇಶಗಳ ನಡುವೆ ನಡೆದ ಈ ಯುದ್ಧದಲ್ಲಿ ಪ್ರಷ್ಯಾ ಜಯಶಾಲಿಯಾಗಿ ಸಿಲೀಸಿಯಾವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತು. ಸಿಲೀಸಿಯಾ ಪ್ರಕರಣ ಯುರೋಪ್ ಖಂಡದ ಎಲ್ಲಾ ದೇಶಗಳ ಗಮನ ಸೆಳೆದದ್ದು ಮಾತ್ರವಲ್ಲದೆ ಫ್ರೆಡೆರಿಕ್ ಒಬ್ಬ ಉತ್ತಮ ರಾಜ್ಯತಂತ್ರಜ್ಞ ಎಂಬುದನ್ನು ಸಾಬೀತುಪಡಿಸಿತು. ಇಲ್ಲಿ, ನಾವು ಚರ್ಚಿಸಬೇಕಾದ ಅಂಶವೆಂದರೆ ಪ್ರಷ್ಯಾ ಸಿಲೀಸಿಯಾಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಕೊಡಲು ಇದ್ದ ಕಾರಣ. ಯುರೋಪಿನ ಇತರ ರಾಷ್ಟ್ರಗಳಾದ ಇಂಗ್ಲೆಂಡ್, ಸ್ವೀಡನ್, ಸ್ಪೈನ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳಂತೆ ಪ್ರಷ್ಯಾಕ್ಕೆ ಅನುಕೂಲಕರವಾದ ಭೌಗೋಳಿಕ ಪರಿಸರ ಇರಲಿಲ್ಲ. ಭೌಗೋಳಿಕತೆಯು ಒಂದು ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಮಹತ್ತರ ಪ್ರಭಾವವನ್ನು ಬೀರುತ್ತದೆ ಎನ್ನುವ ವಸ್ತುನಿಷ್ಠ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇದು ಇತಿಹಾಸದ ಅಧ್ಯಯನದಿಂದ ತಿಳಿದು ಬರುವ ಸಂಗತಿಯಾಗಿದೆ. ಸಿಲೀಸಿಯಾ, ರೈನ್‌ಲ್ಯಾಂಡ್ ಮತ್ತು ವೆಸ್ಟ್ ಫಾಲಿಯಾಗಳು ಪ್ರಷ್ಯಾಕ್ಕೆ ಸೇರ್ಪಡೆಗೊಂಡ ನಂತರ ಸಾಕಷ್ಟು ಸಂಪನ್ಮೂಲಗಳು ಒದಗಿ ಪ್ರಷ್ಯಾದಲ್ಲಿ ರಾಜಪ್ರಭುತ್ವ ಭದ್ರವಾಗಿ ನೆಲೆಯೂರಲು ಕಾರಣವಾಯಿತು. ಇದರಿಂದಾಗಿಯೇ ಆಸ್ಟ್ರೀಯಾದ ರಾಣಿ ಮಾರಿಯಾ ತೆರೇಸಾ ಹಾಗೂ ಫ್ರೆಡ್‌ರಿಕ್‌ರೊಳಗೆ ಮನಸ್ತಾಪ ಉಂಟಾಗಿದ್ದು.