ಈ ತಿಕ್ಕಾಟದಲ್ಲಿ ಹೊಮ್ಮಿದ ಮೂರು ಹಾದಿಗಳು ಹೀಗಿವೆ: ಆಗಿದ್ದ ಸಮಾಜವಾದಿ ವ್ಯವಸ್ಥೆಯ ಚೌಕಟ್ಟಿನೊಳಗೆ ಸಮಗ್ರ ತೀವ್ರ ಸುಧಾರಣೆಗಳನ್ನು ತರಲು ಪಕ್ಷದ ೨೭ನೆಯ ಮಹಾಧಿವೇಶನ ನಿರ್ಧರಿಸಿದ ಯೋಜನೆಗಳನ್ನು ಜಾರಿಗೆ ತರುವುದು ಒಂದು ಹಾದಿ. ಉತ್ತರ ಮತ್ತು ಪಶ್ಚಿಮ ಯುರೋಪಿನ ಸೋಶ್ಯಲಿಸ್ಟ್ ಪಕ್ಷಗಳ(ಸೋಶಿಯಲ್ ಡೆಮೊಕ್ರಾಟಿಕ್ ಎನ್ನುತ್ತಾರೆ ಇದಕ್ಕೆ) ಬಂಡವಾಳಶಾಹಿ-ಕಾರ್ಮಿಕ ವರ್ಗಗಳ ನಡುವೆ ಸಮಾಜಾಯಿಷಿ ಆಧರಿಸಿದ್ದು ಇನ್ನೊಂದು ಹಾದಿ. ‘ಮಾರುಕಟ್ಟೆ ಆರ್ಥಿಕ’ ಸ್ಥಾಪನೆಯ ಹೆಸರಿನಲ್ಲಿ ಬಂಡವಾಳಶಾಹಿ ಸ್ಥಾಪಿಸುವುದು ಮೂರನೆಯ ಹಾದಿ. ಎರಡನೆಯ ಹಾದಿ ಸಹ ಬಹಳ ಮಟ್ಟಿಗೆ ಬಂಡವಾಳಶಾಹಿ ವ್ಯವಸ್ಥೆಯ ಕಡೆಯೇ ವಾಲುತ್ತಿತ್ತು. ಗೋರ್ಬಚೆವ್ ಮೊದಮೊದಲು ಎರಡನೆಯ ಬಣದ ಪರವಾಗಿದ್ದರು. ಕ್ರಮೇಣ ಮೂರನೆಯ ಬಣ ಅಮೆರಿಕನ್ ಸರ್ಕಾರದ ಬೆಂಬಲದಿಂದ ಪ್ರಬಲವಾಗುತ್ತಿದ್ದಂತೆ ಅದರ ಒತ್ತಡಕ್ಕೆ ಒಳಗಾಗಿ ಹೊಯ್ದಡುತ್ತಿದ್ದರು. ಗ್ಲಾಸ್‌ನೋಸ್ತ್ ಮತ್ತು ಪೆರೆಸ್ಟ್ರೊಯಿಕಾದ ಹಲವು ಭಾಷ್ಯಗಳು ಅರ್ಥಗಳು ಒದಗಿಸಿದ ಅವಕಾಶಗಳ ದುರುಪಯೋಗ ಮಾಡಿ ಹಲವು ನಕಾರಾತ್ಮಕ ಪ್ರವೃತ್ತಿಗಳು ಮೂಡಿ ಬರಲಾರಂಭಿಸಿದವು. ಸಮಾಜವಾದದ ಸಮಸ್ಯೆಗಳಿಗೆ ಪರಿಹಾರ ಎಂದು ಒಂದೊಂದಾಗಿ ಬಂಡವಾಳಶಾಹಿ ಪಥ್ಯಗಳನ್ನು ಸೂಚಿಸಲಾಯಿತು. ಈ ನಕಾರಾತ್ಮಕ ಪ್ರವೃತ್ತಿಗಳು ಹಿಂದಿನ ಸಮಾಜವಾದಿ ಸಾಧನೆಗಳನ್ನೇ ಸಂಪೂರ್ಣವಾಗಿ ನಿರಾಕರಿಸುವ ಮಟ್ಟದವರೆಗೆ ತೀಕ್ಷ್ಣವಾಗಿ ವ್ಯಕ್ತಗೊಂಡವು. ಸೋವಿಯತ್ ಭೂತಕಾಲದ ಅ-ಚಾರಿತ್ರಿಕ (ಹಲವು ಬಾರಿ ಸತ್ಯಕ್ಕೆ ದೂರವಾದ) ಟೀಕೆ, ಪಾಶ್ಚಿಮಾತ್ಯ ದೇಶಗಳಿಗೆ ಸಂಬಂಧಿಸಿದ (ಬಂಡವಾಳಶಾಹಿ ವ್ಯವಸ್ಥೆ ಸೇರಿದಂತೆ) ಎಲ್ಲದರ ಬಗ್ಗೆ ಅಂಧವಿಶ್ವಾಸ ವ್ಯಾಪಕವಾಯಿತು. ಹಲವು ಬಾರಿ ಇಂತಹ ಮಾತುಗಳು ಪಕ್ಷದ, ಸರ್ಕಾರದ ಹಿರಿಯ ನಾಯಕರುಗಳಿಂದ ಬಂದು ಜನತೆಯನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದವು, ನಿಶ್ಯಸ್ತ್ರಗೊಳಿಸಿದವು. ಆರ್ಥಿಕ ನೀತಿಗಳಲ್ಲಿ ಯಾವುದೇ ಸ್ಪಷ್ಟ ದಿಕ್ಕು ಇಲ್ಲದಂತಾಯಿತು. ಹಳೆಯ ವ್ಯವಸ್ಥೆಯನ್ನು ‘ಕಮಾಂಡ್ ಆರ್ಥಿಕ’ ಎಂದು ಜರೆದು ಕಿತ್ತು ಹಾಕುವ ಭರದಲ್ಲಿ ಯೋಜನಾ ವ್ಯವಸ್ಥೆಯಲ್ಲಿ ತೀವ್ರ ಏರುಪೇರು ಆಯಿತು. ಸೋವಿಯತ್ ಆರ್ಥಿಕದ ಆಧಾರ ಸ್ತಂಭವಾಗಿದ್ದ ಯೋಜನೆಯೇ ಅಸ್ಥಿರವಾದಾಗ, ಸ್ವಾಭಾವಿಕವಾಗಿಯೇ ಇದು ಆರ್ಥಿಕ ಅರಾಜಕತೆ ತಂದಿತು. ಯೋಜನೆ ಮತ್ತು ಮಾರುಕಟ್ಟೆಯ ಸಾವಯವ ಸಂಬಂಧ ಗಮನದಲ್ಲಿಟ್ಟುಕೊಂಡು ಅಗತ್ಯ ಮಾರುಕಟ್ಟೆ ವಿಧಾನಗಳನ್ನು ರಚಿಸುವ ೨೭ನೆಯ ಮಹಾಧಿವೇಶನದ ನಿರ್ಣಯ ಮರೆತು, ಪೂರ್ಣ ಪ್ರಮಾಣದ ‘ಮಾರುಕಟ್ಟೆ ಆರ್ಥಿಕ’ ಜಾರಿಗೆ ತರುವ ಪ್ರಯತ್ನ ನಡೆಯಿತು.  ಅಮೆರಿಕನ್ ಆರ್ಥಿಕ ತಜ್ಞರ(ವಿಶ್ವಬ್ಯಾಂಕ್-ಐ.ಎಂ.ಎಸ್ ಸೇರಿದಂತೆ) ಪ್ರಭಾವ ಅತಿಯಾಗಿ, ಗೋರ್ಬಚೇವ್‌ನ ಹಲವು ನಿಕಟ ಸಲಹಾಗಾರರು ಆರ್ಥಿಕ ನೀತಿ ರೂಪಿಸುವ ಜವಾಬ್ದಾರಿಯನ್ನು ‘ಹೈಜಾಕ್’ ಮಾಡಿದರು. ‘ಮಾರುಕಟ್ಟೆ ಆರ್ಥಿಕತೆ’ ಜಾರಿಗೆ ತರುವುದರಲ್ಲಿ ‘ಬೆಲೆ ಸುಧಾರಣೆ’ಗಳು(ಎಲ್ಲಾ ಬೆಲೆ ಗಳನ್ನು ಮಾರುಕಟ್ಟೆಯೇ ನಿರ್ಧರಿಸುವ, ಬೆಲೆ ಮೇಲೆ ಇರುವ ಎಲ್ಲಾ ಸರ್ಕಾರಿ ನಿಯಂತ್ರಣ, ನಿರ್ಬಧಗಳನ್ನು ಕಿತ್ತುಹಾಕುವ) ಅಗತ್ಯ ಮೊದಲ ಹೆಜ್ಜೆ ಎನ್ನಲಾಯಿತು.

ಇದು ‘ಶಾಕ್ ಚಿಕಿತ್ಸೆ’ (ಆರ್ಥಿಕಕ್ಕೆ ಶಾಕ್ ಮಾಡಿ ಏಕಾಏಕಿ ಬದಲಾಯಿಸುವ ವಿಧಾನ). ತೀವ್ರ ಬದಲಾವಣೆಗಳನ್ನು ವೇಗವಾಗಿ ತರಲು ಇದು ಅಗತ್ಯ. ಬೆಲೆ ಸುಧಾರಣೆಗಳನ್ನು ಜಾರಿ ಮಾಡಲಾಯಿತು. ಬೆಲೆಗಳು ಏರಿದವು. ಆಗಲೇ ಯೋಜನೆಯ ವ್ಯವಸ್ಥೆಯಲ್ಲಿ ತೀವ್ರ ಏರುಪೇರು ಆದ್ದರಿಂದ ಅಗತ್ಯ ವಸ್ತುಗಳ ಕೊರತೆ ಹೆಚ್ಚಿದವು. ಕೊರತೆಯಿಂದಾಗಿ ಬೆಲೆ ಇನ್ನಷ್ಟು ಏರಿದವು. ಆರ್ಥಿಕತೆಯಲ್ಲಿ ಬೆಲೆಗಳಲ್ಲಿ ಸರ್ಕಾರ ನಿಯಂತ್ರಣ/ನಿರ್ಬಂಧದ ಕ್ರಮಗಳನ್ನು ಈಗಾಗಲೇ ಹಿಂತೆಗೆದುಕೊಂಡಿದ್ದರಿಂದ ಸರ್ಕಾರ ಏನು ಮಾಡುವಂತಿರಲಿಲ್ಲ. ಆರಂಭಿಕ ‘ಶಾಕ್’ ನಂತರ ಪರಿಸ್ಥಿತಿ ಹತೋಟಿಗೆ ಬರುತ್ತದೆ ಎಂಬ ಗೋರ್ಬಚೇವ್ ಸಲಹಾಗಾರರ ಸಮಜಾಯಿಷಿ ಹುಸಿಯಾಯಿತು. ಕಾಂಗ್ರೆಸ್, ಸರ್ಕಾರ, ಯಾರಿಗೂ ಪರಿಸ್ಥಿತಿ ಮೇಲೆ ನಿಯಂತ್ರಣ ಇರಲಿಲ್ಲ. ಗೋರ್ಬಚೇವ್ ಅವರ ಕೆಲವು ಸಲಹೆಗಾರರು ಆರ್ಥಿಕ ನೀತಿಗಳನ್ನು ‘ಹೈಜಾಕ್’ ಮಾಡಿದ್ದರು. ಅವರನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ‘ಬೆಲೆ ಏರಿಕೆ-ಕೊರತೆ-ಇನ್ನಷ್ಟು ಬೆಲೆ ಏರಿಕೆ’ಯ ಚಕ್ರ ಸುತ್ತುತ್ತಿದ್ದಂತೆ ಕಾಳಸಂತೆ ಆರಂಭವಾಯಿತು. ಹಿಂದೆ ಸರ್ಕಾರಿ ಅಂಗಡಿಗಳಲ್ಲಿ ಇದ್ದ ಕ್ಯೂನಲ್ಲಿ ನಿಂತ ಮೇಲಾದರೂ ಸಿಗುತ್ತಿದ್ದ ಬ್ರೆಡ್ ಮತ್ತು ಇತರ ಅಗತ್ಯ ವಸ್ತುಗಳು ಈಗ ಕಾಳಸಂತೆಯ ದುಬಾರಿ ಬೆಲೆಯಲ್ಲೂ ಅಪರೂಪವಾದವು. ಅಗತ್ಯ ವಸ್ತುಗಳಲ್ಲಿ ವೈವಿಧ್ಯತೆ, ಧಂಡಿ ಲಭ್ಯತೆ, ಅಗ್ಗದ ಬೆಲೆ ನಿರೀಕ್ಷಿಸಿದ್ದ ಜನತೆಯಲ್ಲಿ ತೀವ್ರ ಅತೃಪ್ತಿ ಹರಡಿತು. ಈ ವರ್ಷಗಳಲ್ಲಿ ಬಂಪರ್ ಬೆಳೆ ಆಗಿದ್ದರೂ, ಆರ್ಥಿಕ ನಿರ್ವಹಣೆಯಲ್ಲಿ ಅರಾಜಕತೆಯಿಂದಾಗಿ ಸರ್ಕಾರ ಆಹಾರಧಾನ್ಯ ಆಮದು ಮಾಡುವಂತಾಯಿತು. ಪರಿಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಕೈಗಾರಿಕೆಯಲ್ಲಿ ಸ್ವಯಂ-ಜವಾಬ್ದಾರಿ ಪದ್ಧತಿ ಮತ್ತು ಕೃಷಿಯಲ್ಲಿ ಕುಟುಂಬಗಳಿಗೆ ಕಾಂಟ್ರಾಕ್ಟ್ ಕೊಡುವ ಪದ್ಧತಿ ಸಹ ಸರಿಯಾಗಿ ಜಾರಿ ಆಗದೆ ಅಥವಾ ಕೆಲಸ ಮಾಡದೆ ಉತ್ಪಾದನೆಯಲ್ಲಿ ಏರುಪೇರಿನ ತೀವ್ರ ಸಮಸ್ಯೆ ಉಂಟಾದವು. ಜನರಲ್ಲಿ ಹೊಸ ಆರ್ಥಿಕ ನೀತಿಗಳ ಬಗ್ಗೆ ಅತೃಪ್ತಿ ತೀವ್ರವಾಗಿ ಏರಿತು.

ಪ್ರಜಾಪ್ರಭುತ್ವೀಕರಣ ಸಹ ಆರಂಭಿಕ ಸಫಲತೆಯ ನಂತರ ಕುಂಟತೊಡಗಿತು. ದೇಶದ ಅಧ್ಯಕ್ಷ ಮತ್ತು ಪಕ್ಷದ ಮಹಾಕಾರ್ಯದರ್ಶಿಯಾಗಿ ಎಲ್ಲಾ ಅಧಿಕಾರ ಗೋರ್ಬಚೇವ್‌ರಲ್ಲಿ ಕೇಂದ್ರೀಕೃತವಾಯಿತು. ರಾಜ್ಯಗಳಲ್ಲೂ ಅಧ್ಯಕ್ಷರಲ್ಲಿ ಭಾರಿ ಅಧಿಕಾರ ಕೇಂದ್ರೀಕೃತವಾಯಿತು. ಪಕ್ಷದ ಕೇಂದ್ರ ಸರ್ಕಾರದಲ್ಲೂ, ಜನತಾ ಕಾಂಗ್ರೆಸ್‌ನಲ್ಲಿ, ಸೋವಿಯತ್‌ಗಳಲ್ಲಿ ಚರ್ಚೆ ಅಲಂಕಾರಿಕವಾಗಿತ್ತು. ಅಧ್ಯಕ್ಷರ ನಿಕಟವರ್ತಿ ವಿಶೇಷ ಸಲಹಾಗಾರರು ಎಲ್ಲಾ ಕ್ಷೇತ್ರಗಳಲ್ಲಿ ನೀತಿ-ನಿರ್ದೇಶನ ಆರಂಭಿಸಿದರು. ಗೋರ್ಬಚೇವ್ ಸುಗ್ರೀವಾಜ್ಞೆಗಳ ಮೂಲಕ ಆಳಲು ಆರಂಭಿಸಿದರು. ಪ್ರಜಾಪ್ರಭುತ್ವೀಕರಣದ ಹೆಸರಲ್ಲಿ ಇವೆಲ್ಲಾ ನಡೆಯುತ್ತಿದ್ದರೂ, ಇದನ್ನು ವಿರೋಧಿಸುವವರು ಯಾರು ಇರಲಿಲ್ಲ. ವಿರೋಧಿಸಿದರೆ ಅದನ್ನು ಕೇಳುವವರೂ ಇರಲಿಲ್ಲ. ಪಕ್ಷ, ಕಾಂಗ್ರೆಸ್, ಸೋವಿಯತ್ -ಎಲ್ಲವೂ ಹಲವು ದನಿಗಳಲ್ಲಿ ದಿನಕ್ಕೊಂದು ರೀತಿಯಲ್ಲಿ ಮಾತನಾಡಿ ಜನ ಮತ್ತು ಪಕ್ಷದ ಕಾರ್ಯಕರ್ತರು ತೀರಾ ಗೊಂದಲಕ್ಕೆ ಒಳಗಾದರು.

೧೯೯೦ರಲ್ಲಿ ಪಕ್ಷದ ೨೮ನೆಯ ಮಹಾಧಿವೇಶನದ ಹೊತ್ತಿಗೆ ಪಕ್ಷದ ಮುಂದೆ ಮೂರು ‘ವೇದಿಕೆ’ಗಳಿದ್ದವು. ಮೂರು ಬಣಗಳ ಹಾದಿಗಳು ಬೇರೆ ಬೇರೆಯಾಗಿ ಮೂರು ವೇದಿಕೆಗಳಾಗಿದ್ದವು. ೨೮ನೆಯ ಮಹಾಧಿವೇಶನದ ಮುಂದೆ ಸಾಮಾನ್ಯವಾಗಿ ಮಹಾ ಕಾರ್ಯದರ್ಶಿಯ ವರದಿಯ ರೂಪದಲ್ಲಿ ಒಂದು ವರದಿ ಇಡುವ ಬದಲು ಈ ಮೂರು ವೇದಿಕೆಗಳ ಕರಡು ವರದಿಗಳು ಚರ್ಚೆಗೊಳಗಾದವು. ತೀವ್ರ ಭಿನ್ನಾಭಿಪ್ರಾಯಗಳು ಇದ್ದದ್ದರಿಂದ ಒಂದು ‘ಚಿತ್ರಾನ್ನ’ದಂತಹ ನಿರ್ಣಯವನ್ನು ಮಹಾಧಿವೇಶನ ಅಂಗೀಕರಿಸಿತು. ಈ ನಿರ್ಣಯ ೨೭ನೆಯ ಮಹಾಧಿವೇಶನ ಹಲವು ಸರಿಯಾದ ನೀತಿ-ನಿರ್ದೇಶನಗಳಲ್ಲಿ ತೀವ್ರ ಬದಲಾವಣೆ ತಂದು ಪೂರ್ಣ ‘ಮಾರುಕಟ್ಟೆ ಆರ್ಥಿಕತೆ’(ಅಂದರೆ ಮೂರನೆಯ ಹಾದಿ)ಯ ಹಾದಿ ಹಿಡಿದಿತ್ತು. ಅಮೆರಿಕನ್ ಸಾಮ್ರಾಜ್ಯಶಾಹಿಯಿಂದ ಶಾಂತಿಗೆ ಅಪಾಯ ನಿರಾಕರಿಸುವ, ಯೋಜನೆಯ ವ್ಯವಸ್ಥೆಯನ್ನು ಕಳಚಿ ಹಾಕುವ, ಪಕ್ಷದ ಪಾತ್ರ ಕಡೆಗಣಿಸುವ, ಹಲವು ಪ್ರಮುಖ ಬದಲಾವಣೆಗಳು, ಪಕ್ಷದ ಸದಸ್ಯರಲ್ಲಿ ಜನತೆಯಲ್ಲಿ (೨೭ನೆಯ ಮಹಾಧಿವೇಶನ ಮಾಡಿದ್ದಂತೆ) ಉತ್ಸಾಹ, ಆಸಕ್ತಿ, ಮಾರ್ಗದರ್ಶನ ನೀಡುವುದರ ಬದಲು-ಗೊಂದಲ, ನಿರುತ್ಸಾಹ, ಪರಕೀಯತೆ ಉಂಟು ಮಾಡಿದವು.

೨೮ನೆಯ ಮಹಾಧಿವೇಶನದ ನಂತರವೂ ಮೂರು ಬಣಗಳ ನಡುವೆ ಭಿನ್ನಾಭಿಪ್ರಾಯ, ಅನೈಕ್ಯತೆ ಮುಂದುವರೆಯಿತು. ಸಮಾಜವಾದದ ವ್ಯವಸ್ಥೆಯ ಎಲ್ಲಾ ಸಾಧನೆಗಳನ್ನು, ವಿಧಾನಗಳನ್ನು ನಿರಾಕರಿಸುವ ತಿರಸ್ಕರಿಸುವ ಅದನ್ನು ಕಳಚು ಹಾಕುವ, ಬಂಡವಾಳಶಾಹಿ ಸ್ಥಾಪಿಸುವ ಮೂರನೆಯ ಬಣ ಪ್ರಬಲವಾಯಿತು. ಇದು ಸೋವಿಯತ್ ಒಕ್ಕೂಟವನ್ನು, ಸಮಾಜವಾದಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಅವಕಾಶಕ್ಕೆ ಕಾಯುತ್ತಿದ್ದ ವಿದೇಶಿ (ಮುಖ್ಯವಾಗಿ ಅಮೆರಿಕನ್) ಶಕ್ತಿಗಳಿಗೆ ಹಸ್ತಕ್ಷೇಪಕ್ಕೆ ಉತ್ತಮ ಅವಕಾಶ ಮಾಡಿಕೊಟ್ಟಿತು. ಮೂರನೆಯ ಬಣಕ್ಕೆ ಎಲ್ಲಾ ರೀತಿಯ ವಿದೇಶಿ ಬೆಂಬಲ ಒದಗಿಸಲಾಯಿತು. ಮೊದಲು ಮೂರನೆಯ ಬಣಕ್ಕೆ ವಿರುದ್ಧವಾಗಿದ್ದ ಗೊರ್ಬಚೇವ್‌ರನ್ನು – ವಿಶ್ವಶಾಂತಿ ಮತ್ತು ಜಾಗತಿಕ ಆರ್ಥಿಕ ವ್ಯವಸ್ಥೆ ಸೇರಲು ಐ.ಎಂ.ಎಫ್ ಸದಸ್ಯತ್ವ, ವಿದೇಶಿ ಬಂಡವಾಳ-ತಂತ್ರಜ್ಞಾನ ಹೂಡಿಕೆ -ಇವೆಲ್ಲವನ್ನೂ ‘ಹೆಚ್ಚು ಹೆಚ್ಚು ಮಾರುಕಟ್ಟೆ ಸುಧಾರಣೆ’ಗಳನ್ನು ಮಾಡುವವರೆಗೆ ಹಿಡಿದಿಡುವ ಬೆದರಿಕೆ ಮೂಲಕ ಮಣಿಸಲಾಯಿತು. ಈ ಮೂರನೆಯ ಬಣದ ನಾಯಕನಾಗಿ ಈ ಅವಧಿಯಲ್ಲಿ ಹೊಮ್ಮಿದ ಯೆಲ್ಸಿನ್ ರಷ್ಯಾದ ಅಧ್ಯಕ್ಷನಾಗಿ ಆಯ್ಕೆಯಾದ ನಂತರ ಈ ಬಣ ಪ್ರಬಲವಾಗುತ್ತಾ ಹೋಯಿತು. ಮೊದಲು ಗೊರ್ಬಚೇವ್ ಬೆಂಬಲಿಗನಾಗಿ ಮಾಸ್ಕೋ ಪಕ್ಷದ ಕಾರ್ಯದರ್ಶಿಯಾಗಿದ್ದ ಯೆಲ್ಸಿನ್ ಆಮೇಲೆ ಗೊರ್ಬಚೇವ್ ವಿರೋಧಿಯಾದ. ೧೯೮೭ರಲ್ಲಿ ಬಣಗಳ ತಿಕ್ಕಾಟದಲ್ಲಿ ಯೆಲ್ಸಿನ್‌ರನ್ನು ಮಾಸ್ಕೋ ಕಾರ್ಯದರ್ಶಿ ಸ್ಥಾನದಿಂದ ಬರ್ಖಾಸ್ತು ಮಾಡಲಾಗಿತ್ತು. ವಿದೇಶಿ, ಐ.ಎಂ.ಎಫ್ ಒತ್ತಡದಿಂದ ಹೆಚ್ಚು ಹೆಚ್ಚು ‘ಮಾರುಕಟ್ಟೆ ಸುಧಾರಣೆ’ ಮಾಡುತ್ತಾ ಹೋದ ಹಾಗೆ ಪರಿಸ್ಥಿತಿ ಕೆಡುತ್ತಾ ಹೋಯಿತು. ಆರ್ಥಿಕ ವ್ಯವಸ್ಥೆಯ ಚುಕ್ಕಾಣಿ ಹಿಡಿದಿದ್ದ ಗೋರ್ಬಚೇವ್ ಸಲಹೆಗಾರರಿಗೆ ಸೋವಿಯತ್ ಆರ್ಥಿಕ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬ ಅರಿವು ಇರಲಿಲ್ಲ. ಅದರ ನಿಜವಾದ ಸಮಸ್ಯೆಗಳ ಆಳ ಅಗಲಗಳ ಬಗ್ಗೆ ಪರಿಚಯವಿರಲಿಲ್ಲ. ಅವರ ಹಿಂದೆ ಇದ್ದ ಅಮೆರಿಕನ್ ಆರ್ಥಿಕ ತಜ್ಞರಿಗೂ ಅದು ಗೊತ್ತಿರಲಿಲ್ಲ. ಅವರಿಗೆ ಬೇಕಾಗೂ ಇರಲಿಲ್ಲ. ಅವರಿಗೆ ‘ಮಾರುಕಟ್ಟೆ ಸುಧಾರಣೆ’ ಹೆಸರಲ್ಲಿ ಏನಕೇನ ಪ್ರಕಾರೇಣ ಸಮಾಜವಾದಿ ವ್ಯವಸ್ಥೆ ನಾಶ ಮಾಡುವುದು, ಸೋವಿಯೆತ್ ಒಕ್ಕೂಟವನ್ನು ಬಲಹೀನ ಗೊಳಿಸುವುದು ಬೇಕಾಗಿತ್ತು. ಸೋವಿಯೆತ್ ಸಮಾಜದಲ್ಲಿ, ಆರ್ಥಿಕದಲ್ಲಿ ನಿಜವಾದ ಸುಧಾರಣೆಗಳನ್ನು ತರುವುದರಲ್ಲಿ ಅವರಿಗೆ ಬಹಳ ಆಸಕ್ತಿ ಇರಲಿಲ್ಲ. ಸ್ವಾಭಾವಿಕವಾಗಿಯೇ ಇಂತಹ ಸುಧಾರಣೆಗಳು ಸೋವಿಯೆತ್ ಸಮಾಜ ಮತ್ತು ಆರ್ಥಿಕತೆಯನ್ನು ಇನ್ನಷ್ಟು ತೀವ್ರ ಬಿಕ್ಕಟ್ಟಿಗೆ ತೆಗೆದುಕೊಂಡು ಹೋದವು.

ಸೋವಿಯತ್ ಒಕ್ಕೂಟ ಹಲವು ರಾಷ್ಟ್ರೀಯತೆ-ಜನಾಂಗಗಳ ಒಕ್ಕೂಟ. ಒಕ್ಕೂಟಕ್ಕೆ ಸೇರಿದ ೧೫ ಗಣರಾಜ್ಯಗಳಲ್ಲೂ ಹಲವು ರಾಷ್ಟ್ರೀಯತೆ-ಜನಾಂಗಗಳು ವಾಸಿಸುತ್ತಿದ್ದವು. ಗಣರಾಜ್ಯಗಳೊಳಗೆ ಸಹ ನಿರ್ದಿಷ್ಟ ರಾಷ್ಟ್ರೀಯತೆ-ಜನಾಂಗದವರೂ ಬಹುಸಂಖ್ಯಾತರಾಗಿ ಇರುವ ಪ್ರದೇಶಗಳನ್ನು ಸ್ವಾಯತ್ತ ಪ್ರದೇಶಗಳಾಗಿ ಪರಿಗಣಿಸಲಾಗಿತ್ತು. ಹಲವು ಶತಮಾನಗಳ ಕಾಲ ಝಾರ್ ಸಾಮ್ರಾಜ್ಯಶಾಹಿಯಿಂದ ದಮನ-ದಬ್ಬಾಳಿಕೆಗಳನ್ನು ಅನುಭವಿಸಿದ್ದ ಹಲವು, ರಾಷ್ಟ್ರೀಯತೆ ಜನಾಂಗಗಳಿಗೆ ಅಕ್ಟೋಬರ್ ಕ್ರಾಂತಿಯ ನಂತರ ‘‘ಝಾರ್‌ಶಾಹಿ ಸೆರೆಮನೆ’’ಯಿಂದ ವಿಮೋಚನೆ ಸಿಕ್ಕಿತು. ಈ ರಾಷ್ಟ್ರೀಯತೆ-ಜನಾಂಗಗಳು ಗುಂಪುಗಳು ಸೋವಿಯತ್ ಒಕ್ಕೂಟ(ಅದರಲ್ಲೂ ವಿಶೇಷವಾಗಿ ಹಿಂದುಳಿದವು ಉದಾ: ಮಧ್ಯ ಏಷ್ಯಾದ ಕಝಾಕಿಸ್ತಾನ, ತಾಝಕಿಸ್ತಾನ, ಉಝೆ್ಬುೀಕಿಸ್ತಾನ್ ಇತ್ಯಾದಿ) ಇದುವರೆಗೆ ಶತಮಾನಗಳ ಕಾಲ ಕಂಡಿರದ ಮುನ್ನಡೆ ಸಾಧಿಸಿದ್ದವು. ಅವುಗಳ ಸಂಸ್ಕೃತಿ, ಪರಂಪರೆ ವಿಕಾಸಗೊಳಿಸುವುದರ ಜತೆ ಸಾಮಾಜಿಕ ಆರ್ಥಿಕ ವಿಕಾಸವೂ ಆಗಿತ್ತು. ಆದರೆ ನೂರಕ್ಕೂ ಹೆಚ್ಚು ರಾಷ್ಟ್ರೀಯತೆ-ಜನಾಂಗೀಯ ಗುಂಪುಗಳು ಇರುವ ವಿಶಾಲವಾದ ಒಕ್ಕೂಟದ ಬೆಳವಣಿಗೆಯ ಈ ಹಂತದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುವುದು ಸಹಜವಾಗಿತ್ತು. ಆದರೆ ಸೋವಿಯತ್ ಒಕ್ಕೂಟದ ಆಗಿನ ಸ್ಥಿತಿಯಲ್ಲಿ ಸಮಸ್ಯೆ ಉಲ್ಬಣವಾಯಿತು. ಕಝೂಕಿಸ್ತಾನ, ಬಾಲ್ಟಿಕ್ ಪ್ರದೇಶ, ಅರ್ಮೆನಿಯಾ, ಅಜರ್ ಬೈಜಾನ್, ಜಾರ್ಜಿಯಾ ಮುಂತಾದ ಕಡೆ ಜನಾಂಗೀಯ-ರಾಷ್ಟ್ರೀಯತೆಯ ಹಲವು ತಿಕ್ಕಾಟಗಳು ಈ ಅವಧಿಯಲ್ಲಿ ನಡೆದವು. ಕೇಂದ್ರದ ವಿರುದ್ಧ ಪ್ರತಿಭಟನೆಗೆ ಈ ತಿಕ್ಕಾಟಗಳನ್ನು ಬಳಸಲಾಯಿತು. ಹಲವು ಬಂಡವಾಳಶಾಹಿ-ಸುಧಾರಣಾವಾದಿಗಳು ಇದನ್ನು ದುರ್ಬಳಕೆ ಮಾಡಿದರು. ಸಮಾಜವಾದಿ ಸಿದ್ಧಾಂತದ ಮೇಲೆ ದಾಳಿ, ಅವರ ಸೈದ್ಧಾಂತಿಕ ಪ್ರಭಾವ ಹಿಂದೆ ಸರಿಯುತ್ತಿದ್ದ ಹಿನ್ನೆಲೆಯಲ್ಲಿ ಧರ್ಮ, ಭಾಷೆ, ರಾಷ್ಟ್ರೀಯತೆ ಸೈದ್ಧಾಂತಿಕ ನಿರ್ವಾತದ ಜಾಗ ತುಂಬಿದವು. ಸಮಾಜವಾದಿ ಸಿದ್ಧಾಂತ ಬೇರೆ ಬೇರೆ ಧರ್ಮ, ಭಾಷೆ, ರಾಷ್ಟ್ರೀಯದವರನ್ನು ಒಂದುಗೂಡಿಸುತ್ತಿತ್ತು. ಆದರೆ ಧರ್ಮ-ಭಾಷೆ-ರಾಷ್ಟ್ರೀಯತೆಯನ್ನು ಸಿದ್ಧಾಂತವಾಗಿ ಅಂಗೀಕರಿಸಿದ ಚಳವಳಿಗಳು ಜನರ ನಡುವೆ ಒಡಕು ತಿಕ್ಕಾಟ, ಪ್ರತ್ಯೇಕತೆ ತಂದಿಟ್ಟವು.

೧೯೮೯ರಲ್ಲಿ ಎಲ್ಲಾ ಗಣರಾಜ್ಯಗಳಲ್ಲಿ ಚುನಾವಣೆಗಳು ನಡೆದಾಗ ಹಲವು ಅಭ್ಯರ್ಥಿಗಳು ರಾಷ್ಟ್ರೀಯತೆ-ಜನಾಂಗೀಯ ನೆಲೆ ಮತ್ತು ಸಮಸ್ಯೆಗಳ ದುರ್ಬಳಕೆ ಮಾಡಿ ಬೆಂಬಲ ಗಳಿಸಿಕೊಳ್ಳಲು ಪ್ರಯತ್ನಸಿದರು. ಆ ಮೇಲೂ ಈ ಆಧಾರದ ಮೇಲೆ ಸ್ವಾತಂತ್ರ್ಯ-ಪ್ರತ್ಯೇಕತೆಗೆ ಜನರನ್ನು ಅಣಿಗೊಳಿಸಲು ಉತ್ತಮ ಆಯುಧವಾಯಿತು. ಆದ್ದರಿಂದ ಈ ಸಮಸ್ಯೆಗಳು ಉಲ್ಬಣಗೊಂಡವು. ಆರ್ಥಿಕ ಅರಾಜಕತೆ, ಭಾಷೆ-ರಾಷ್ಟ್ರೀಯತೆ ಜನಾಂಗೀಯ ಆಧಾರದ ಮೇಲೆ ವಿಭಜನೆಗೆ ಇನ್ನಷ್ಟು ಕುಮ್ಮಕ್ಕು ನೀಡಿತು. ಈ ಸಮಸ್ಯೆಗಳು ಉಲ್ಬಣಗೊಂಡ ಹಾಗೆ ಹಲವು ಕಡೆ ಕೇಂದ್ರ ಸರ್ಕಾರ ಬಲ ಪ್ರಯೋಗ ಮಾಡಬೇಕಾಯಿತು. ಸೈನ್ಯ ಕಳಿಸಬೇಕಾಯಿತು. ಗಣರಾಜ್ಯಗಳಲ್ಲಿ ಸ್ವಾಯತ್ತ ಪ್ರದೇಶಗಳಲ್ಲಿ ಪ್ರತ್ಯೇಕತಾವಾದ ತಲೆ ಎತ್ತಿದಾಗಲೂ ಇಂತಹುದೇ ಸನ್ನಿವೇಶ ಉಂಟಾಯಿತು. ಒಕ್ಕೂಟ ಮತ್ತು ಗಣರಾಜ್ಯಗಳ ಸರ್ಕಾರಗಳು ಕೆಲವೊಮ್ಮೆ ಈ ಪ್ರತ್ಯೇಕವಾದಿಗಳ ಜತೆ ಸಮಜಾಯಿಷಿ ಮಾಡಿಕೊಂಡವು. ರಾಷ್ಟ್ರೀಯ ಭಾಷೆ ಜನಾಂಗೀಯ ಆಧಾರದ ಮೇಲೆ ಸ್ವಾತಂತ್ರ್ಯ, ಪ್ರತ್ಯೇಕತೆಯ ಕೂಗು ಹೆಚ್ಚಾಗುತ್ತಿದ್ದ ಹಾಗೆ, ಈ ಬಗ್ಗೆ ಜನಮತ ಸಂಗ್ರಹ ಮಾಡಲು ನಿರ್ಧರಿಸಲಾಯಿತು. ಅದರಲ್ಲಿ ಒಕ್ಕೂಟ ಐಕ್ಯತೆ ಕಾಪಾಡಬೇಕೆಂಬ ಅಭಿಪ್ರಾಯಕ್ಕೆ ಸ್ಪಷ್ಟ ಬಹುಮತ ಸಿಕ್ಕಿತು. ಆದರೆ ಈ ನಡುವೆ ಗೊರ್ಬಚೇವ್ ನಾಯಕತ್ವ ಹೊಸ ಒಕ್ಕೂಟದ ಕರಡು ಸಿದ್ಧಪಡಿಸಿತು. ಈ ಒತ್ತಡದಲ್ಲಿ ಸಡಿಲ ಫೆಡರೇಷನ್ ಹೆಸರಲ್ಲಿ ಎಲ್ಲಾ ಅಧಿಕಾರಗಳನ್ನು ಗಣರಾಜ್ಯಗಳಿಗೆ ಕೊಡಲಾಗಿತ್ತು. ಜನರ ಬೆಂಬಲ ಪಡೆದು ಪ್ರತ್ಯೇಕತಾ ಶಕ್ತಿಗಳ ವಿರುದ್ಧ ಹೋರಾಡಿ ಒಕ್ಕೂಟ ಉಳಿಸಿಕೊಳ್ಳುವ ಬದಲು, ಅವುಗಳ ಒತ್ತಡಕ್ಕೆ ಗೋರ್ಬಚೇವ್ ನಾಯಕತ್ವ ಮಣಿದಿತ್ತು. ಕೇಂದ್ರ ಬಜೆಟ್ ಮೇಲೂ ಗಣರಾಜ್ಯಗಳಿಗೆ ವಿಟೋ ಅಧಿಕಾರ ಇತ್ತು. ಈ ಒಪ್ಪಂದದ ಕರಡು ಆಗಲೇ ವಿಘಟನೆಯ ಬೀಜ ಬಿತ್ತಿತ್ತು. ಇದು ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆದ ಜನಮತದ ಉಲ್ಲಂಘನೆ ಕೂಡ ಆಗಿತ್ತು.

ಪೆರೆಸ್ಟ್ರೊಯಿಕ ಮತ್ತು ಗ್ಲಾಸ್‌ನೋಸ್ತ್ ಹೊರ ಜಗತ್ತಿಗೆ ತೆರೆದುಕೊಳ್ಳುವ ತರಾತುರಿಯಲ್ಲಿ, ಸೋವಿಯತ್ ಒಕ್ಕೂಟದ ಪೂರ್ವ ಯುರೋಪಿನ ಸಮಾಜವಾದಿ ದೇಶಗಳ ಹಿತಾಸಕ್ತಿಗಳನ್ನು ಮರೆತುಬಿಟ್ಟಿತು. ಸೋವಿಯತ್ ಒಕ್ಕೂಟದ ಜತೆ ಪರಸ್ಪರ ಪ್ರಯೋಜನಕಾರಿ ಆರ್ಥಿಕ ರಾಜಕೀಯ ಸಂಬಂದ ಹೊಂದಿದ್ದ ಈ ದೇಶಗಳಲ್ಲಿ ಆಗಲೇ ಸಮಾಜವಾದಿ ವ್ಯವಸ್ಥೆಯಲ್ಲಿ ಸುಧಾರಣೆಗಳಿಗೆ ಒತ್ತಡ, ಆ ಸುಧಾರಣೆಗಳಿಗೆ ಪ್ರಯತ್ನ, ಆ ಪರಿಸ್ಥಿತಿಯನ್ನು ಬಳಸಿ ವಿದೇಶಿ ಹಸ್ತಕ್ಷೇಪ, ಸುಧಾರಣೆಗಳನ್ನು ಬಂಡವಾಳಶಾಹಿ ದಿಕ್ಕಿನಲ್ಲಿ ಒಯ್ಯುವ ಪ್ರಯತ್ನ-ಇವೆಲ್ಲಾ ನಡೆದಿತ್ತು. ಗೋರ್ಬಚೇವ್ ನಾಯಕತ್ವ ಪೂರ್ವ ಯುರೋಪಿನ ದೇಶಗಳ ಮಿಲಿಟರಿ ರಕ್ಷಣೆ ಸೋವಿಯತ್ ಒಕ್ಕೂಟದ ಮೇಲೆ ಭಾರ ಎಂಬಂತೆ ನಡೆದುಕೊಂಡಿತು. ಅವುಗಳ ಜತೆ ಇದ್ದ ಪರಸ್ಪರಾವಲಂಬನ ಸಹ ಕಡಿಮೆ ಮಾಡತೊಡಗಿತು. ಇದರಿಂದಾಗಿ ರಾಜಕೀಯವಾಗಿ ಸೋವಿಯತ್ ರೀತಿಯ ಸುಧಾರಣೆಗಳನ್ನು ಅಲ್ಲೂ ಮಾಡುವಂತೆ ಒತ್ತಡ ಬಂತು. ಸೋವಿಯತ್ ಒಕ್ಕೂಟ ಆರ್ಥಿಕ ಮತ್ತು ಮಿಲಿಟರಿ ಬೆಂಬಲ ಹಿಂತೆಗೆದುಕೊಳ್ಳುತ್ತಿದ್ದಂತೆ, ಅಲ್ಲಿನ ಕಮ್ಯುನಿಸ್ಟ್ ಸರ್ಕಾರಗಳು ಬಲಹೀನವಾದವು. ಆಗಲೇ ಹೆಪ್ಪುಗಟ್ಟಿ, ಗುಡ್ಡೆಯಾಗಿದ್ದ ಸಮಸ್ಯೆಗಳು; ಜನರ ಅತೃಪ್ತಿ, ಆಕ್ರೋಶಗಳನ್ನು ವಿರೋಧ ಪಕ್ಷಗಳು ಮತ್ತು ವಿದೇಶಿ ಶಕ್ತಿಗಳು ಉಪಯೋಗಿಸಿಕೊಂಡವು. ಒಂದಾದ ಮೇಲೊಂದರಂತೆ ಅಲ್ಲಿನ ಸರ್ಕಾರಗಳು ಉರುಳಿದವು. ಈ ಪ್ರಕ್ರಿಯೆಯ ಭಾಗವಾಗಿ ಬರ್ಲಿನ್ ಗೋಡೆ ಉರುಳಿ, ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿ ಐಕ್ಯವಾದವು. ಈ ಎಲ್ಲಾ ಘಟನೆಗಳು ನಡೆಯುತ್ತಿದ್ದಂತೆ ಸೋವಿಯತ್ ಕಮ್ಯುನಿಸ್ಟ್ ಪಕ್ಷ ಮತ್ತು ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ೧೯೯೧ರಲ್ಲಿ ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ದೇಶಗಳ ನಡುವೆ ನಿಕಟ ಆರ್ಥಿಕ-ರಾಜಕೀಯ ಸಂಬಂಧಗಳ ಸಂಘಟನಾ ರೂಪವಾಗಿದ್ದ ವಾರ್ಸಾ ಒಪ್ಪಂದ ಮತ್ತು ಕಾಮೆಕಾನ್ ವಾಣಿಜ್ಯ ಕೂಟವನ್ನು ಸಹ ವಿಸರ್ಜಿಸಲಾಯಿತು.

ಪೂರ್ವ ಯುರೋಪಿನ ದೇಶಗಳಲ್ಲಿ ಸಮಾಜವಾದಿ ಸರ್ಕಾರಗಳ ಪತನ, ಸೋವಿಯತ್ ಗಣರಾಜ್ಯಗಳಲ್ಲಿ ಸ್ವಾತಂತ್ರ್ಯ ಮತ್ತು ಪ್ರತ್ಯೇಕತೆಯ ಕೂಗಿಗೆ ಕುಮ್ಮಕ್ಕು ಕೊಟ್ಟಂತಾಯಿತು. ಯೆಲ್ಸಿನ್ ಎಲ್ಲಾ ಗಣರಾಜ್ಯಗಳಿಗೆ ಆರ್ಥಿಕ ಸ್ವಾತಂತ್ರ್ಯ ಸಾರ್ವಭೌಮತೆ ಬೇಕು ಎಂದು ಒತ್ತಾಯಿಸಹತ್ತಿದ್ದರು. ಆರ್ಥಿಕ ನೀತಿಗಳ ಬಗ್ಗೆ ಚರ್ಚೆ ವಿವಾದ ನಡೆಯುತ್ತಿದ್ದಂತೆ, ಒಕ್ಕೂಟ ಮತ್ತು ಗಣರಾಜ್ಯಗಳ ನಡುವೆ ಈ ಭಿನ್ನಾಭಿಪ್ರಾಯ ಪರಸ್ಪರ ವಿರುದ್ಧ ಕಾನೂನುಗಳನ್ನು ಪಾಸು ಮಾಡುವುದರಲ್ಲಿ ವ್ಯಕ್ತವಾದವು ೧೯೯೧ರಲ್ಲಿ ರಷ್ಯಾ ಗಣರಾಜ್ಯ ‘ಮಾರುಕಟ್ಟೆ ಆರ್ಥಿಕ ನೀತಿ’ ಬಗ್ಗೆ ಕಾನೂನು ಮಾಡಿತು. ಅಧ್ಯಕ್ಷ ಯೆಲ್‌ಸಿನ್ ರಷ್ಯಾದಲ್ಲಿ ಇದ್ದ ಸೋವಿಯೆತ್ ಒಕ್ಕೂಟದ ಸಂಸ್ಥೆಗಳ ಅನುದಾನ ಕಡಿತ ಮಾಡಿದರು. ಸೋವಿಯತ್ ಒಕ್ಕೂಟಕ್ಕೆ ಮತ್ತು ಸಮಾಜವಾದಿ ವ್ಯವಸ್ಥೆಗೆ ಅಪಾಯವಿದೆ ಎಂದು ಸೋವಿಯತ್ ಕಮ್ಯುನಿಸ್ಟ್ ಪಕ್ಷದ ನಾಯಕತ್ವಕ್ಕೆ ಅನಿಸಿತ್ತು. ಇದನ್ನು ತಡೆಯಬೇಕು ಎಂದು ಕೆಲವು ನಾಯಕರು ಮಿಲಿಟರಿ ಕಾರ್ಯಾಚರಣೆ ನಡೆಸಿ ಕ್ಷಿಪ್ರ ಕ್ರಾಂತಿಯ ಪ್ರಯತ್ನ ಮಾಡಿದರು. ಅಧ್ಯಕ್ಷ ಗೋರ್ಬಚೇವ್‌ರನ್ನು ಅವರು ಹೋಗಿದ್ದ ವಿಹಾರ ಧಾಮದಲ್ಲಿ ಬಂಧಿಸಲಾಯಿತು. ಕ್ರಾಂತಿಕಾರಿ ಮಂಡಳಿ ಅಧಿಕಾರ ವಹಿಸಿಕೊಂಡಿತು. ಯೆಲ್ಸಿನ್ ಈ ಕಾರ್ಯಾಚರಣೆ ವಿರುದ್ಧ ತಮ್ಮ ಬೆಂಬಲಿಗರನ್ನು ಸಂಘಟಿಸಿದರು. ಬೀದಿ ಕಾಳಗ ನಡೆಯಿತು. ಕ್ರಾಂತಿಕಾರಿ ಮಂಡಳಿಯ ಪರವಾಗಿ ಜನ ಬೀದಿಗಿಳಿಯಲಿಲ್ಲ. ಆದ್ದರಿಂದ ಈ ಪ್ರಯತ್ನ ವಿಫಲವಾಯಿತು. ಗೋರ್ಬಚೇವ್ ಅವರು ಕ್ರಾಂತಿಕಾರಿ ಮಂಡಳಿಯ ಸದಸ್ಯರಿಗೆ ಈ ಕ್ಷಿಪ್ರ ಕ್ರಾಂತಿ ನಡೆಸುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಇಂತಹ ಕಾರ್ಯಾಚರಣೆ ಅಗತ್ಯ ಎಂದು ಅವರ ಅಭಿಪ್ರಾಯವೂ ಅಗಿತ್ತಂತೆ. ಆದರೆ ಅವರ ವಿಫಲತೆ ನಂತರ, ಯೆಲ್ಸಿನ್ ಕೈ ಮೇಲಾಯಿತು. ಯೆಲ್ಸಿನ್ ಏಕಪಕ್ಷೀಯವಾಗಿ ಅಧಿಕಾರ ವಹಿಸಿಕೊಂಡರು. ಆಗಲೇ ಮಾಸ್ಕೋದಲ್ಲಿ ಯೆಲ್ಸಿನ್‌ರೇ ಅಧಿಕಾರ ಚಲಾಯಿಸುತ್ತಿದ್ದರು. ಅವರು ರಷ್ಯಾದಲ್ಲಿ ಸೋವಿಯೆತ್ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿ, ಅದರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಸುಗ್ರೀವಾಜ್ಞೆ ಹೊರಡಿಸಿದರು. ಯೆಲ್ಸಿನ್ ಸಂಘಟಿಸಿದ ಗಣರಾಜ್ಯಗಳ ಅಧ್ಯಕ್ಷರುಗಳು ಸಮಾವೇಶದಲ್ಲಿ ಸೋವಿಯತ್ ಒಕ್ಕೂಟ ವಿಸರ್ಜನೆ, ಸ್ವತಂತ್ರ ಗಣರಾಜ್ಯಗಳ ಕಾಮನ್ ವೆಲ್ತ್ ಎಂಬ ಸಡಿಲವಾದ ಫೆಡರೇಷನ್ ರಚನೆಯಾದ ಬಗ್ಗೆ ಘೋಷಣೆ ಮಾಡಲಾಯಿತು. ಈ ವೇಗದ ರಾಜಕೀಯ ಬೆಳವಣಿಗೆಗಳಿಂದ ಅಪ್ರತಿಭರಾದ ಗೋರ್ಬಚೇವ್ ರಾಜೀನಾಮೆ ಕೊಟ್ಟರು. ಒಕ್ಕೂಟದ ಸುಪ್ರೀಮ್ ಸೋವಿಯೆತ್ತನ್ನು ವಿಸರ್ಜಿಸಲಾಯಿತು.

ಹೀಗೆ ೨೦ನೆಯ ಶತಮಾನದ ಉದ್ದಕ್ಕೂ ಚರಿತ್ರೆಯ ಹಲವು ಮೈಲಿಗಲ್ಲುಗಳನ್ನು ಸೃಷ್ಟಿಸಿದ್ದ ಸೋವಿಯತ್ ಒಕ್ಕೂಟ ಹಠಾತ್ತಾಗಿ ಚರಿತ್ರೆಯ ಭಾಗವಾಯಿತು. ಸೋವಿಯತ್ ಒಕ್ಕೂಟದ ಹುಟ್ಟು, ವೇಗದ ಬೆಳವಣಿಗೆ, ಹಠಾತ್ ವಿಘಟನೆ-೨೦ನೆಯ ಶತಮಾನದ ವಿಸ್ಮಯಗಳಲ್ಲೊಂದಾಯಿತು.

ವಿಘಟನೆಯ ನಂತರದ ಕುಸಿತ ಮತ್ತು ಚೇತರಿಕೆ (೧೯೯೧೨೦೦೬)

ಸೋವಿಯತ್ ಒಕ್ಕೂಟದ ವಿಭಜನೆಯೊಂದಿಗೆ ಅದರ ಉತ್ತಾರಾಧಿಕಾರಿಗಳಾಗಿ ೧೫ ದೇಶಗಳು ಹುಟ್ಟಿಕೊಂಡವು. ಅತಿ ದೊಡ್ಡ ದೇಶವಾದ ರಷ್ಯಾ ಅಲ್ಲದೆ; ಪೂರ್ವ ಯುರೋಪಿನ-ಉಕ್ರೇನ್, ಬೆಲರಸ್ (ಹಿಂದಿನ ಬೈಲೋರಷ್ಯಾ), ಮೊಲ್ಡೊವಾ; ಕಕೇಶಿಯನ್ ಪ್ರದೇಶದ ದೇಶಗಳಾದ-ಜಾರ್ಜಿಯಾ, ಅರ್ಮೆನಿಯಾ, ಅಜರ್ ಬೈಜಾನ್; ಮಧ್ಯ ಏಷ್ಯಾದ-ಕಝಾಕಿಸ್ತಾನ, ಕಿರ್ಜಿಗಿಸ್ತಾನ್, ತಾಜಕಿಸ್ತಾನ್, ಉಜ್ಬೇಕಿಸ್ತಾನ್, ತುರ್ಕೆ ಮಾನಿಸ್ತಾನ್; ಬಾಲ್ಟಿಕ್ ಪ್ರದೇಶದ ಎಸ್ಟೋನಿಯಾ, ಲಿಥುವಾನಿಯಾ, ಲ್ಯಾಟಿವಿಯಾ;- ಆ ೧೫ ದೇಶಗಳು. ಬಾಲ್ಟಿಕ್ ಪ್ರದೇಶದ ೩ ದೇಶಗಳು ಮತ್ತು ತುರ್ಕೇಮಾನಿಸ್ತಾನ ಬಿಟ್ಟರೆ ಇತರ ೧೧ ದೇಶಗಳು ಸಿ.ಐ.ಎಸ್(ಸ್ವತಂತ್ರ ದೇಶಗಳು ಮಹಾ ಒಕ್ಕೂಟ) ಎಂಬ ಸಡಿಲವಾದ ಒಕ್ಕೂಟದಲ್ಲಿ ಪಾಲ್ಗೊಂಡಿವೆ. ಆದರೆ ಕೆಲವು ವಿಷಯಗಳ ಬಗ್ಗೆ ಸಂಯೋಜನೆ ಬಿಟ್ಟರೆ, ಇವೆಲ್ಲಾ ಸ್ವತಂತ್ರ-ಸಾರ್ವಭೌಮ ದೇಶಗಳಾಗಿವೆ. ಕೆಲವು ವರ್ಷಗಳ ಒಳಗೆ ಪೂರ್ವ ಯರೋಪಿನ ಮತ್ತು ಮಾಜಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಗಣರಾಜ್ಯಗಳ ನಡುವೆ ಇದ್ದ ಪರಸ್ಪರಾವಲಂಬನೆಯ ಸಂಬಂಧಗಳು- ವಿದ್ಯುತ್, ರೈಲು, ಹೆದ್ದಾರಿ, ರಕ್ಷಣೆಗಳ ಜಾಲ; ರಫ್ತು-ಆಮದು ವ್ಯಾಪಾರ; ಕಚ್ಚಾ ಸಾಮಗ್ರಿಗಳ ಮೂಲ: ಉತ್ಪನ್ನಗಳಿಗೆ ಮಾರುಕಟ್ಟೆ-ಸಡಿಲವಾದವು ಅಥವಾ ಹೆಚ್ಚು ಕಡಿಮೆ ಇಲ್ಲವಾದವು. ಹಲವು ಪೂರ್ವ ಯುರೋಪಿನ ದೇಶಗಳು ಪಾಶ್ಚಿಮಾತ್ಯ ದೇಶಗಳನ್ನು ಮಾರುಕಟ್ಟೆಯಾಗಿ ಬಯಸಿದವು. ಆದರೆ ಕಚ್ಚಾವಸ್ತು, ಮೂಲ ಸೌಕರ್ಯಗಳಿಗೆ ಮಾಜಿ ಸೋವಿಯತ್ ದೇಶಗಳನ್ನು ಅವಲಂಬಿಸಿದ್ದವು. ವಿದ್ಯುತ್ ಶಕ್ತಿ, ತೈಲ, ಗ್ಯಾಸ್‌ಗಳಲ್ಲಿ ರಷ್ಯಾ ಮತ್ತು ಕೆಲವು ಮಾಜಿ ಸೋವಿಯೆತ್ ದೇಶಗಳು ಮೂಲ ಪೂರೈಕೆ ಮಾಡುವ ದೇಶಗಳಾಗಿದ್ದವು. ಎಲ್ಲಾ ಕಡೆ ‘ಮಾರುಕಟ್ಟೆ ಆರ್ಥಿಕತೆ’ ಜಾರಿಯಾಗುತ್ತಿದ್ದಂತೆ. ಅವುಗಳ ಹಿಂದಿನ ಬೆಲೆಯಲ್ಲಿ ಭಾರಿ ವ್ಯತ್ಯಾಸಗಳಾದವು. ಎಲ್ಲಾ ದೇಶಗಳು, ಸರ್ಕಾರಗಳು ತಮಗೆ ಲಾಭವಾಗುವ ಸಂಬಂಧಗಳನ್ನು ಉಳಿಸುತ್ತಾ, ನಷ್ಟ ತರುವ ಸಂಬಂಧಗಳನ್ನು ತತ್‌ಕ್ಷಣ ಕಳಚಿ ಹಾಕುವ ತರಾತುರಿಯಲ್ಲಿದ್ದರು. ಹಲವು ಇಂತಹ ನಿರ್ಧಾರಗಳನ್ನು ಈ ಹೊಸ ದೇಶಗಳಿಗೆ ಸಾಲ ನೀಡುವ ಐ.ಎಂ.ಎಫ್, ವಿಶ್ವಬ್ಯಾಂಕ್‌ಗಳು, ಪಾಶ್ಚಿಮಾತ್ಯ ದೇಶಗಳು ಹೊರಿಸಿದವು. ಪ್ರತ್ಯೇಕ ದೇಶವಾಗಿ(ಒಂದು ಒಕ್ಕೂಟ, ಬಣದ ಭಾಗವಾಗಿ ಇರದೆ) ಈ ಹೊಸ ದೇಶಗಳ ಚೌಕಾಶಿ ಸಾಮರ್ಥ್ಯ ಸೀಮಿತವಾಗಿತ್ತು.

ಒಟ್ಟಾರೆಯಾಗಿ ಮೊದಲ ೫-೬ ವರ್ಷಗಳಲ್ಲಿ ಎಲ್ಲಾ ದೇಶಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಆದರೆ ಒಟ್ಟಾರೆಯಾಗಿ ಪೂರ್ಣ ಪ್ರಮಾಣದ ಆರ್ಥಿಕ ಅಲ್ಲೋಲ ಕಲ್ಲೋಲಗಳಾದವು. ಒಂದೇ ವರ್ಷದಲ್ಲಿ ಒಟ್ಟು ಉತ್ಪಾದನೆ ಹಿಂದಿನ ವರ್ಷದ ಶೇಕಡ ೮೬ರ ಮಟ್ಟಕ್ಕೆ ಕುಸಿಯಿತು. ಹೆಚ್ಚಿನ ದೇಶಗಳಲ್ಲಿ ಹಲವು ವರ್ಷಗಳ ಕಾಲ ಕುಸಿಯುತ್ತಾ ಹೋಯಿತು. ಒಟ್ಟು ಉತ್ಪಾದನೆಯಲ್ಲಿ ಆದ ನಷ್ಟದ ಅರ್ಧಭಾಗ ಒಕ್ಕೂಟ ಮತ್ತು ಪೂರ್ವ ಯುರೋಪ್ ಸಮಾಜವಾದಿ ಕೂಡ ಬಿದ್ದು ಹೋದದ್ದರ ನೆಯರ ಫಲವಾಗಿತ್ತು. ೨೦೦೪ರ ಹೊತ್ತಿಗೆ ಕೂಡ, ಕೇವಲ ಆರು ದೇಶಗಳ(ಮೂರು ಬಾಲ್ಟಿಕ್ ದೇಶಗಳು, ಅರ್ಮೇನಿಯಾ, ಬೆಲರಸ್, ಕಝಾಕಿಸ್ತಾನ) ಒಟ್ಟು ಉತ್ಪಾದನೆ ೧೯೯೧ರ(ವಿಘಟನೆ ಪೂರ್ವ) ಉತ್ಪಾದನೆಯ ಮಟ್ಟ ಮುಟ್ಟಿವೆ. ಅಂದರೆ ಉಳಿದ ೯ ದೇಶಗಳು ೧೯೯೧ರ ಉತ್ಪಾದನೆಯ ಮಟ್ಟ ಇನ್ನೂ ತಲುಪಿಲ್ಲ. ಹೆಚ್ಚಿನ ದೇಶಗಳು ಸೂಪರ್ ಹಣದುಬ್ಬರ ಕಂಡವು. ೧೯೯೨ರಲ್ಲಿ ರಷ್ಯಾ ಶೇಕಡಾ ೨೪೫ ಹಣದುಬ್ಬರ ಕಂಡಿತು. ಒಕ್ಕೂಟದ ಮತ್ತು ಸಮಾಜವಾದಿ ಬಣದ ವಿಘಟನೆಯ ಆರ್ಥಿಕ ಪರಿಣಾಮ ಅಷ್ಟು ಭೀಕರವಾಗಿತ್ತು. ರಷ್ಯಾದ ಅಧ್ಯಕ್ಷ ಯೆಲ್ಸಿನ್ ಸೋವಿಯತ್ ವಿಘಟನೆಯ ಕೊನೆಯ ವರ್ಷಗಳಲ್ಲಿ ಇತರ ಗಣರಾಜ್ಯಗಳಿಗೆ ಮಾದರಿಯಾಗಿದ್ದರು. ರಷ್ಯಾದಲ್ಲಿ ಯೆಲ್ಸಿನ್ ಪೂರ್ಣ ಪ್ರಮಾಣದ ಬಂಡವಾಳಶಾಹಿ ಬೆಳೆಸುವ ಪ್ರಯತ್ನದಲ್ಲಿದ್ದರು. ಈ ಪ್ರಯತ್ನದಲ್ಲಿ ತಮ್ಮಲ್ಲಿ ಎಲ್ಲಾ ಅಧಿಕಾರಗಳನ್ನು ಕೇಂದ್ರೀಕರಿಸಿ, ಸರ್ವಾಧಿಕಾರಿಯಂತೆ ವರ್ತಿಸುವುದು, ಸುಗ್ರೀವಾಜ್ಞೆಗಳಿಂದ ಆಳುವುದು-ಇದು ಅವರ ವೈಶಿಷ್ಟವಾಗಿತ್ತು. ಇವೆಲ್ಲವೂ ಇತರ ಗಣರಾಜ್ಯಗಳಿಗೆ ಮಾದರಿ ಯಾಯಿತು. ಹೆಚ್ಚಿನವರು ಯೆಲ್ಸಿನ್ ಹಾದಿ ತುಳಿದರು.

ರಷ್ಯಾದಲ್ಲಿ ಅಧ್ಯಕ್ಷ ಯೆಲ್ಸಿನ್‌ಗೂ, ಸೋವಿಯತ್ ಅವಧಿಯಲ್ಲಿ ಚುನಾಯಿತವಾಗಿದ್ದ ಡೂಮಾ(ಪಾರ್ಲಿಮೆಂಟ್)ಗೂ ಸತತ ತಿಕ್ಕಾಟ ನಡೆಯಿತು. ಪಾರ್ಲಿಮೆಂಟ್ ಅಧ್ಯಕ್ಷ ಯೆಲ್ಸಿನ್ ರ ಬಂಡವಾಳಶಾಹಿ ವ್ಯವಸ್ಥೆ ಕಟ್ಟುವ, ಹಳೆಯ ವ್ಯವಸ್ಥೆಯನ್ನು ತರಾತುರಿಯಲ್ಲಿ ಕಿತ್ತು ಹಾಕುವ ಪ್ರಯತ್ನಗಳಿಗೆ ತೀವ್ರ ಅಡೆತಡೆಗಳನ್ನು ಒಡ್ಡಿತು. ಕಮ್ಯುನಿಸ್ಟ್ ಪಕ್ಷದ ಸದಸ್ಯರು ಬಹುಸಂಖ್ಯೆಯಲ್ಲಿದ್ದ ಪಾರ್ಲಿಮೆಂಟ್ ಹಲವು ನೀತಿಗಳನ್ನು ಮಂಜೂರು ಮಾಡಲಿಲ್ಲ. ಈ ತಿಕ್ಕಾಟ ತೀವ್ರವಾಗಿ ಯೆಲ್ಸಿನ್ ಪಾರ್ಲಿಮೆಂಟ್ ಸದಸ್ಯರನ್ನು ಮಣಿಸಲು ಸೈನ್ಯ ಕಳುಹಿಸಿದರು. ಸೈನ್ಯ ಪಾರ್ಲಿಮೆಂಟ್‌ನ್ನು ಸುತ್ತುವರೆದು. ಹಲವು ದಿನಗಳ ಕಾಲ ಮುಖಾಮುಖಿ ಮುಂದುವರೆಯಿತು. ಯೆಲ್ಸಿನ್ ತಮ್ಮ ಸರ್ವಾಧಿಕಾರ ಬಳಸಿ ಡೂಮಾವನ್ನು ವಿಸರ್ಜಿಸಿದರು. ಅಧ್ಯಕ್ಷರಿಗೆ ಅಪಾರ ಅಧಿಕಾರ ಕೊಡುವ ಹೊಸ ಸಂವಿಧಾನ ಜಾರಿಗೆ ಬಂತು. ರಷ್ಯಾದಲ್ಲಿ ಈ ಹೊತ್ತಿಗೆ ಯೆಲ್ಸಿನ್‌ರದ್ದೇ ಒಂದು ಪಕ್ಷ. ಕಮ್ಯುನಿಸ್ಟ್ ಪಕ್ಷ, ಅರೆ-ಫ್ಯಾಸಿಸ್ಟ್ ಜನಾಂಗವಾದಿ ಪಕ್ಷ. ಮತ್ತು ಇತರ ಬಂಡವಾಳಶಾಹಿಪರ (ಗೋರ್ಬಚೇವ್ ಮುಖ್ಯ ಸಲಹಾಗಾರನಾಗಿದ್ದ ಗೈದರ್‌ನ ಪಕ್ಷ ಸೇರಿದಂತೆ) ಪಕ್ಷಗಳು ಇದ್ದವು. ೧೯೯೫ರಲ್ಲಿ ನಡೆದ ಚುನಾವಣೆಗಳಲ್ಲಿ ಕಮ್ಯುನಿಸ್ಟ್‌ರು ಅತಿ ದೊಡ್ಡ ಪಕ್ಷ (ಮೂರನೆಯ ಒಂದು ಭಾಗ ಬಹುಮತ)ವಾಗಿ ಹೊಮ್ಮಿದರು. ಆದರೂ ಅಧ್ಯಕ್ಷರಿಗೆ ಇದ್ದ ಹೆಚ್ಚಿನ ಅಧಿಕಾರದಿಂದಾಗಿ, ಯೆಲ್ಸಿನ್ ತಮಗೆ ಮನಬಂದ ನೀತಿಗಳನ್ನು ಜಾರಿಗೆ ತಂದರು. ನೀತಿಗಳನ್ನು ಮನಬಂದಂತೆ ಬದಲಿಸಿದರು.

೧೯೯೬ರಲ್ಲಿ ಹೊಸ ಸಂವಿಧಾನ ಪ್ರಕಾರ ನಡೆದ ಚುನಾವಣೆಯಲ್ಲಿ ಯೆಲ್ಸಿನ್ ಪುನರಾಯ್ಕೆಯಾದರು. ಆದರೆ ರಾಜಕೀಯ ಸ್ಥಿರತೆ ಇರಲಿಲ್ಲ. ಯೆಲ್ಸಿನ್ ಅಧ್ಯಕ್ಷರಾಗಿ ಇದ್ದಷ್ಟು ದಿನ ಪ್ರಧಾನಿಗಳು, ಮಂತ್ರಿಮಂಡಲಗಳು ಬಹಳ ವೇಗವಾಗಿ ಬದಲಾಗುತ್ತಿದ್ದವು. ಈ ಸಂವಿಧಾನದ ಪ್ರಕಾರ ಅಧ್ಯಕ್ಷರು ಪ್ರಧಾನಿಯನ್ನು ನೆಯಮಿಸುವುದು. ಪ್ರಧಾನಿ ಮಂತ್ರಿ ಮಂಡಲ ರಚಿಸಿ ಪಾರ್ಲಿಮೆಂಟಿನ ಮಂಜೂರಾತಿ ಪಡೆಯಬೇಕಿತ್ತು. ಹಲವು ಬಾರಿ ಡೊಮಾ ಮಂಜೂರಾತಿ ಇಲ್ಲದೆ ಯೆಲ್ಸಿನ್ ಬದಲಾವಣೆ ಮಾಡಬೇಕಾಗುತ್ತಿತ್ತು. ಯೆಲ್ಸಿನ್ ಆಡಳಿತ ಆರ್ಥಿಕ ಕ್ಷೇತ್ರದಲ್ಲಿ ವೈಫಲ್ಯಗಳನ್ನು (ಅದು ತಮ್ಮದೇ ನೀತಿಗಳಿಂದ ಆಗಿದ್ದರೂ) ಪ್ರಧಾನಿ ಮತ್ತು ಮಂತ್ರಿಮಂಡಲದ ಮೇಲೆ ಹೊರಿಸಿ, ಸರ್ಕಾರವನ್ನು ವಜಾ ಮಾಡುತ್ತಿದ್ದರು. ೧೯೯೮ರಲ್ಲಿ ತೀವ್ರ ರಾಜಕೀಯ-ಆರ್ಥಿಕ ಬಿಕ್ಕಟ್ಟು ಎರಡೂ ಬಂತು. ಹದಿನೆಂಟು ತಿಂಗಳಲ್ಲಿ ಐದು ಪ್ರಧಾನಿ ಮತ್ತು ಇನ್ನೂ ಹೆಚ್ಚು ಮಂತ್ರಿ ಮಂಡಲಗಳ ಬದಲಾವಣೆ ಆಯಿತು. ಚೆಚನ್ಯಾದಲ್ಲಿ ರಷ್ಯಾದ ವಿರುದ್ಧ ಪ್ರತ್ಯೇಕತೆ ಒತ್ತಾಯಕ್ಕೆ ಸಶಸ್ತ್ರ ಬಂಡಾಯ ಆರಂಭವಾಗಿತ್ತು. ಚೆಚನ್ಯಾಕ್ಕೆ ವಿದೇಶಿ ಸಹಾಯ ಬರುತ್ತಿದೆ. ಅವರು ಭಯೋತ್ಪಾದಕರು ಎಂದೆಲ್ಲಾ ಯೆಲ್ಸಿನ್ ಗುಡುಗಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಚೆಚನ್ಯಾ ಬಂಡಾಯಗಾರರು ಸ್ವಾತಂತ್ರ್ಯ ಹೋರಾಟಗಾರರು ಎನ್ನಲಾಯಿತು. ಯೆಲ್ಸಿನ್ ವಿದೇಶ ನೀತಿಯಲ್ಲಿ ಸೈದ್ಧಾಂತಿಕವಾಗಿ ಅಮೆರಿಕಾ ಜತೆ ಅತ್ಯಂತ ನಿಕಟವಾಗಿದ್ದರೂ, ಚೆಚನ್ಯಾದಂತಹ ಸಮಸ್ಯೆಗಳನ್ನು ಅಮೆರಿಕ ಬಳಸದೆ ಇರಲಿಲ್ಲ. ೧೯೯೫ ಆಗಸ್ಟ್‌ನಲ್ಲಿ ಪುಟಿನ್ ಪ್ರಧಾನಿಯಾಗಿ ನೆಯಮಕರಾದರು. ಭಾರಿ ರಾಜಕೀಯ ಅಸ್ಥಿರತೆ, ತಾಕಲಾಟಗಳ ನಂತರ ತೀವ್ರ ಅನಾರೋಗ್ಯ ಮತ್ತು ವಿರೋಧ ಎದುರಿಸುತ್ತಿದ್ದ ಯೆಲ್ಸಿನ್ ರಾಜೀನಾಮೆ ಕೊಟ್ಟರು.

ಪ್ರಧಾನಿ ಪುಟಿನ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ೨೦೦೦ ಮಾರ್ಚ್‌ನಲ್ಲಿ ಪುಟಿನ್ ಅಧ್ಯಕ್ಷರಾಗಿ ಆಯ್ಕೆಯಾದರು. ಪುಟಿನ್ ಅಧ್ಯಕ್ಷರಾಗಿ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ರಷ್ಯಾದಾದ್ಯಂತ ಚೆಚನ್ಯಾ ಉಗ್ರಗಾಮಿಗಳ ಭಯೋತ್ಪಾದಕ ಕೃತ್ಯಗಳನ್ನು ಎದುರಿಸಬೇಕಾಯಿತು. ೨೦೦೩ ಚುನಾವಣೆಯಲ್ಲಿ ಪುಟಿನ್ ರಚಿಸಿದ ಪಕ್ಷಕ್ಕೆ ಭಾರಿ ಬಹುಮತ ಬಂತು. ೨೦೦೪ರಲ್ಲಿ ಪುಟಿನ್ ಅಧ್ಯಕ್ಷರಾಗಿ ಪುನಾರಾಯ್ಕೆಯಾದರು. ಈ ಅವಧಿಯ ಪಾರ್ಲಿಮೆಂಟು, ಅಧ್ಯಕ್ಷೀಯ ಚುನಾವಣೆಗಳಲ್ಲಿ ಕಮ್ಯನಿಸ್ಟ್ ಪಕ್ಷ ಹಿಂದಿನ ಅವಧಿಗೆ ಹೋಲಿಸಿದರೆ ಬಲಹೀನವಾಯಿತು. ಅಧ್ಯಕ್ಷ ಪುಟಿನ್, ಯೆಲ್ಸಿನ್‌ಗೆ ಹೋಲಿಸಿದರೆ ಆರ್ಥಿಕ ನೀತಿಗಳಲ್ಲಿ, ವಿದೇಶಿ ನೀತಿಯಲ್ಲಿ ಹೆಚ್ಚೆಚ್ಚು ಸ್ವತಂತ್ರ ನೀತಿ (ಅಮೆರಿಕದ ಪ್ರಭಾವ ಒತ್ತಡಕ್ಕೆ ಮಣಿಯದೆ)ಗಳನ್ನು ಅನುಸರಿಸಲು ಆರಂಭಿಸಿದರು. ರಷ್ಯಾದ ಸ್ವಾತಂತ್ರ್ಯ ಸಾರ್ವಭೌಮತೆಗೆ ಒತ್ತು ಕೊಡಲಾರಂಭಿಸಿತು.

ಇತರ ಗಣರಾಜ್ಯಗಳಲ್ಲಿ ಹೆಚ್ಚು ಕಡಿಮೆ ೧೯೮೯ ಸೋವಿಯತ್ ಅವಧಿಯ ಗಣರಾಜ್ಯದಲ್ಲಿ ಆಯ್ಕೆಯಾದ ಅಧ್ಯಕ್ಷರು, ಪಾರ್ಲಿಮೆಂಟ್ ವ್ಯವಸ್ಥೆ ಹೆಚ್ಚು ಕಡಿಮೆ ಮುಂದುವರೆಯಿತು. ಕೆಲವು ಕಡೆ ಕಮ್ಯುನಿಸ್ಟ್ ಪಕ್ಷಗಳ ನಾಯಕರು ತಮ್ಮ ಪಕ್ಷದ ಹೆಸರು ಅಥವಾ ಸ್ವಭಾವ (ಅಥವಾ ಎರಡೂ) ಬದಲಾಯಿಸಿ ಅಧಿಕಾರದಲ್ಲಿ ಮುಂದುವರೆದಿದ್ದರು. ಕೆಲವು ಕಡೆ ರಾಷ್ಟ್ರೀಯತೆ-ಜನಾಂಗ ಪ್ರದೇಶ ಆಧಾರಿತ ಹೊಸ ಪಕ್ಷಗಳು ಹುಟ್ಟಿಕೊಂಡಿದ್ದವು. ಈ ಹೊಸ ಪಕ್ಷಗಳು ಕೆಲವು ಕಡೆ ಅಧಿಕಾರ ವಹಿಸಿಕೊಂಡಿದ್ದವು. ಕೆಲವು ಕಡೆ ಪಾಶ್ಚಿಮಾತ್ಯ ಮಾದರಿಯ ಆರ್ಥಿಕ-ರಾಜಕೀಯ ವ್ಯವಸ್ಥೆ ಬೆಂಬಲಿಸುವ, ವಿದೇಶಿ ಸಂಪರ್ಕ ಇರುವ ಪಕ್ಷಗಳು ಹುಟ್ಟಿಕೊಂಡವು. ಅವುಗಳು ಮತ್ತು ಆಗಿನ ಆಳುವ ಪಕ್ಷಗಳ ನಡುವೆ ಚುನಾವಣೆಯಲ್ಲಿ ಮತ್ತು ಆ ನಂತರವೂ ರಾಜಕೀಯ ಹಣಾಹಣಿ ನಡೆಯುತ್ತಿತ್ತು. ಅಮೆರಿಕಾ ಹೆಚ್ಚು ಕಡಿಮೆ ಎಲ್ಲಾ ಸ್ವತಂತ್ರ ದೇಶಗಳಲ್ಲಿ ತನಗೆ ಅನುಕೂಲಕರವಾದ (ಕನಿಷ್ಟ ವಿರೋಧವಿಲ್ಲದ, ಸಾಧ್ಯವಾದರೆ ಬಾಲಬಡುಕ), ಸರ್ಕಾರ, ಅಧ್ಯಕ್ಷರುಗಳನ್ನು ಹೊಂದಲು ಈ ಅವಧಿಯಲ್ಲಿ ಮುಕ್ತವಾಗಿ ಹಸ್ತಕ್ಷೇಪ ಮಾಡಿತು – ಪ್ರಜಾಪ್ರಭುತ್ವವನ್ನು ಬೆಂಬಲಿಸುವ ನೆಪದಲ್ಲಿ. ಅಥವಾ ಅಧಿಕಾರದಲ್ಲಿರುವ ಪಕ್ಷ, ವ್ಯಕ್ತಿಗಳನ್ನು ಲಂಚ-ಸವಲತ್ತು-ಧನ ಸಹಾಯಗಳಿಂದ ಗೆದ್ದುಕೊಂಡಿದೆ. ತಮ್ಮ ಹಿತಾಸಕ್ತಿಗೆ ವಿರೋಧವಾಗಿರುವ ದೇಶಗಳಲ್ಲಿ ಸರ್ಕಾರ ಬದಲಾಯಿಸಲು ವ್ಯಾಪಕ ಹಸ್ತಕ್ಷೇಪ ಮಾಡಿದೆ.

ಇದಕ್ಕಾಗಿ ‘ಬಣ್ಣ ಬಣ್ಣದ ಕ್ರಾಂತಿ’ಯ ಯೋಜನೆ ಹಾಕಿ ಜಾರಿಗೆ ತಂದಿದೆ. ಇಂತಹ ಕ್ರಾಂತಿಗೆ ಹಲವು ವರ್ಷಗಳ ತಯಾರಿ ನಡೆಯುತ್ತದೆ. ಸಾಮಾನ್ಯವಾಗಿ ಇಂತಹ ಬಣ್ಣದ ಕ್ರಾಂತಿಗಳು ಚುನಾವಣೆಯ ಸಮಯದಲ್ಲಿ ಆಗಿವೆ. ಸಾಮಾನ್ಯವಾಗಿ ವಿರೋಧ ಪಕ್ಷ ಒಂದನ್ನು ಅಥವಾ ಪ್ರಮುಖ ನಾಯಕನನ್ನು ಆರಿಸಿಕೊಳ್ಳಲಾಗುತ್ತದೆ -‘ಕ್ರಾಂತಿ’ಯ ನಂತರ ಅಧಿಕಾರಕ್ಕೆ ತರಲು. ಈಗಿರುವ ಅಧಿಕಾರದಲ್ಲಿದ್ದ ಪಕ್ಷ-ವ್ಯಕ್ತಿಯ ಮೇಲೆ ಆಪಾದನೆ-ದಾಳಿ, ಅಧಿಕಾರಕ್ಕೆ ಬರಬೇಕಾಗಿರುವವನ ಬಗ್ಗೆ ಗುಣಗಾನ-ಪ್ರಚಾರ ಆರಂಭವಾಗುತ್ತದೆ. ಇದಕ್ಕಾಗಿ ಇರುವ ಪತ್ರಿಕೆ, ಟಿ.ವಿ.ಚಾನೆಲ್‌ಗಳನ್ನು ಕೊಳ್ಳಲಾಗುತ್ತದೆ. ಇಲ್ಲವೆ ಸ್ಥಾಪಿಸಲಾಗು ತ್ತದೆ. ವಿದ್ಯಾರ್ಥಿ-ಯುವಕರ, ಸ್ವಯಂ-ಸೇವಕರ ಸಂಘಟನೆಯ ಪಡೆ ಕಟ್ಟಲಾಗುತ್ತದೆ. ಚುನಾವಣೆಯ ಮೊದಲು ಸಮೀಕ್ಷೆಗಳನ್ನು ನಡೆಸಿ ಬೇಕಾದ ಫಲಿತಾಂಶಕ್ಕೆ ‘ನಿರೀಕ್ಷೆ’ ಆರಂಭವಾಗುತ್ತದೆ. ಚುನಾವಣೆಯ ಸಮಯದಲ್ಲೂ ಸ್ವತಂತ್ರ ಪಾಶ್ಚಿಮಾತ್ಯ ವೀಕ್ಷಕರು, ಅಂತಾರಾಷ್ಟ್ರೀಯ ಪಾರ್ಲಿಮೆಂಟರಿ ತಂಡದ ಹೆಸರಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಯುತ್ತದೆ. ಚುನಾವಣೆಯಲ್ಲಿ ಬೇಕಾದ ಫಲಿತಾಂಶ ಬಂದರೆ ಸರಿ. ಇಲ್ಲದಿದ್ದರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ‘ಸ್ವತಂತ್ರ’ ಮಾಧ್ಯಮಗಳು, ವೀಕ್ಷಕರು, ಅಂತಾರಾಷ್ಟ್ರೀಯ ಪಾರ್ಲಿಮೆಂಟರಿ ತಂಡದ ನಾಯಕರು ‘ತೀರ್ಪು’ ಕೊಡುತ್ತಾರೆ. ಅದಕ್ಕೂ ಮಣಿಯದಿದ್ದರೆ ಭಾರಿ ‘ಜನತಾ ಹೋರಾಟ’ ಆರಂಭವಾಗುತ್ತದೆ. ಲಕ್ಷಾಂತರ ಜನ ಟೆಂಟುಗಳ ಜತೆ ಅಧಿಕಾರದ ಕೇಂದ್ರವಾದ ಪಾರ್ಲಿಮೆಂಟು ಅಥವಾ ಅಧ್ಯಕ್ಷೀಯ ಭವನದ ಸುತ್ತ ಬೀಡು ಬಿಡುತ್ತಾರೆ. ಇಷ್ಟು ಹೊತ್ತಿಗೆ ಜಗತ್ತಿನ ಸುತ್ತ ಈ ‘ಭಾವೀ ಕ್ರಾಂತಿ’ಯ ನೆಯರ ಪ್ರಸಾರ ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಸರ್ಕಾರಗಳು ಇಷ್ಟು ಹೊತ್ತಿಗೆ ಮಣಿಯುತ್ತವೆ. ಸರ್ಕಾರಗಳು ಬಲಪ್ರಯೋಗಕ್ಕೆ ಇಳಿದರೆ ಅದಕ್ಕೂ ಸಿದ್ಧತೆ ಇರುತ್ತದೆ.